Saturday, November 10, 2018

ಚೆಲ್ಲಿತು ಎಣ್ಣೆ, ಮುರಿಯಿತು ಕೈ, ಲಭಿಸಿತು ಪರಿಹಾರ...

ಚೆಲ್ಲಿತು ಎಣ್ಣೆ, ಮುರಿಯಿತು ಕೈ, ಲಭಿಸಿತು ಪರಿಹಾರ...

ಗ್ರಾಹಕರ ಸುಖ ದುಃಖ  

ಯಾವುದೇ ಒಂದು ವಸ್ತುವನ್ನು ಮಾರಾಟ ಮಾಡುವ ಜಾಗ ಶುಚಿಯಾಗಿಯೂ ಅಪಾಯ ರಹಿತವೂ ಆಗಿರಬೇಕು. ಇದು ಮಾರಾಟಗಾರನ ಹೊಣೆಗಾರಿಕೆಯೂ ಹೌದು. ಇಂತಹ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿಭಾಯಿಸದೇ ಇದ್ದುದರ ಪರಿಣಾಮವಾಗಿ ಏನಾದರೂ  ಅಪಾಯ ಸಂಭವಿಸಿ ಗ್ರಾಹಕನಿಗೆ ತೊಂದರೆಯಾದರೆ?

ಚಿಂತಿಸಬೇಕಾಗಿಲ್ಲ. ಗ್ರಾಹಕ  ಸಂರಕ್ಷಣಾ ಕಾಯ್ದೆ ನಿಮ್ಮ ನೆರವಿಗೆ ಬರುತ್ತದೆ. ತನ್ನ ಮುಂದೆ ಬಂದ ಇಂತಹ ಪ್ರಕರಣ ಒಂದರಲ್ಲಿ ಬೆಂಗಳೂರು ನಗರ  ಜಿಲ್ಲಾ ಗ್ರಾಹಕ ನ್ಯಾಯಾಲಯವು ಅರ್ಜಿದಾರರಿಗೆ ನ್ಯಾಯ ಒದಗಿಸಿದ ಪ್ರಕರಣ ಇದು..

ಪ್ರಕರಣದಲ್ಲಿ ಅರ್ಜಿದಾರರು: ಎಸ್. ಗೋವಿಂದನ್, ಬಾಪೂಜಿ ಬಡಾವಣೆ, ಬೆಂಗಳೂರು.
ಪ್ರತಿವಾದಿ: ಮ್ಯಾನೇಜರ್, ಫುಡ್ ವರ್ಲ್ಡ್. ಆರ್.ಪಿ..ಸಿ ಲೇಔಟ್, ವಿಜಯನಗರ, ಬೆಂಗಳೂರು.

ಅರ್ಜಿದಾರ ಗೋವಿಂದನ್ ಅವರು18-6-2010ರಂದು ಸಂಜೆ 6.30 ಗಂಟೆಗೆ ಪ್ರತಿವಾದಿ ಸಂಸ್ಥೆ ಫುಡ್ ವರ್ಲ್ಡ್‌ಗೆ ದಿನಸಿ ಹಾಗೂ ಇತರ ವಸ್ತುಗಳ ಖರೀದಿ ಸಲುವಾಗಿ ಹೋಗಿದ್ದರು.

ಫುಡ್ ವರ್ಲ್ಡ್ ಹವಾ ನಿಯಂತ್ರಿತ  ತಾಣವಾಗಿದ್ದು ತರಕಾರಿ, ದಿನಸಿ ವಸ್ತುಗಗಳು, ಬೇಕರಿ ವಸ್ತುಗಳು, ಎಣ್ಣೆ, ಸೌಂದರ್ಯ ಸಾಧನಗಳು, ಡಿಢೀರ್ ಆಹಾರ ವಸ್ತುಗಳು ಇತ್ಯಾದಿ  ಎಲವನ್ನೂ ಪೊಟ್ಟಣಗಳಲ್ಲಿ ತುಂಬಿ ಕವಾಟುಗಳಲ್ಲಿ ಇಡುವುದು ವಾಡಿಕೆ. ಗ್ರಾಹಕರು ಅಲ್ಲೇ ಇರಿಸಲಾಗುವ ಪುಟ್ಟ  ಕೈಗಾಡಿಯೊಂದನ್ನು ಒಯ್ದು ತಮಗೆ ಬೇಕಾದ ಸಾಮಗ್ರಿಗಳನ್ನು ತಾವೇ ಆಯ್ಕೆ ಮಾಡಿ, ಕೈಗಾಡಿಯಲ್ಲಿ ತುಂಬಿಕೊಂಡು ಕ್ಯಾಷಿಯರ್ ಬಳಿಗೆ ಒಯ್ಯಬೇಕು. ಅಲ್ಲಿ ಅದನ್ನು ತೂಕ ಮಾಡಿ ಬಿಲ್ ಮಾಡಲಾಗುತ್ತದೆ. ಗ್ರಾಹಕ ನಗದು ರೂಪದಲ್ಲಿ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಬಿಲ್ ಪಾವತಿ ಮಾಡಬೇಕು.

ಆದಿನ ಅರ್ಜಿದಾರ ಗೋವಿಂದನ್ ಫುಡ್ ವರ್ಲ್ಡ್‌ನೊಳಕ್ಕೆ ಹೋದಾಗ ಒಂದು ಕಡೆಯಲ್ಲಿ ನೆಲದ ಮೇಲೆ ಎಣ್ಣೆ ಚೆಲ್ಲಿತ್ತು. ಆದರೆ ಎಣ್ಣೆ ಚೆಲ್ಲಿದ್ದ ಜಾಗದಲ್ಲಿ ಯಾವುದೇ ಎಚ್ಚರಿಕೆಯ ಬರಹವನ್ನು ಬರೆದಿಟ್ಟಿರಲಿಲ್ಲ. ಬದಲಿಗೆ ಚೆಲ್ಲಿದ ಎಣ್ಣೆಯನ್ನು ಮುಚ್ಚಿಡಲಾಗಿತ್ತು.

ಗೋವಿಂದನ್ ಅವರು ತಮಗೆ ಬೇಕಾದ ವಸ್ತುಗಳನ್ನು ಹುಡುಕುತ್ತಾ ಯಾವುದೇ ಅರಿವೂ ಇಲ್ಲದೆ ಚೆಲ್ಲಿದ್ದ ಎಣ್ಣೆಯ ಮೇಲೆ ಹಾಕಿದ್ದ ಹೊದಿಕೆಯ ಮೇಲೆ ಕಾಲಿಟ್ಟರು. ಅದು ಜಾರಿದ ಪರಿಣಾಮವಾಗಿ ಬಿದ್ದರು. ಬಿದ್ದ ಏಟಿಗೆ ಅವರ ಎಡಗೈಯ ಮಣಿಕಟ್ಟು ಮೂಳೆಗೆ ಏಟು ಬಿದ್ದು ಬಿರುಕು ಉಂಟಾಯಿತು. ಗೋವಿಂದನ್ ಅವರು ಚಿಕಿತ್ಸೆಗೆ ವೆಚ್ಚ ಮಾಡುವುದರ ಜೊತೆಗೆ ಮಾನಸಿಕ ಕ್ಲೇಶಕ್ಕೂ ಒಳಗಾದರು. ದಿನನಿತ್ಯದ ಕೆಲಸಗಳನ್ನು ಮಾಡುವುದಕ್ಕೆ ಅಡಚಣೆಯಾಯಿತು. ಹೀಗಾಗಿ ತಮಗೆ 50,000 ರೂಪಾಯಿಗಳ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಗೋವಿಂದನ್ ಅವರು ಪ್ರತಿವಾದಿಗೆ ಪತ್ರ ಬರೆದರು.

ಆದರೆ ಪ್ರತಿವಾದಿಯು ಕೊರಿಯರ್ ಮೂಲಕ ಕಳುಹಿಸಲಾದ ಪತ್ರವನ್ನು ಪಡೆದುಕೊಳ್ಳಲು ನಿರಾಕರಿಸಿದರು.

ಪರಿಹಾರ ಹಾಗೂ ವೈದ್ಯಕೀಯ ವೆಚ್ಚ ಭರಿಸುವಂತೆ ಅರ್ಜಿದಾರರು ಪರಿಪರಿಯಾಗಿ ಮನವಿ ಮಾಡಿದರು. ಪ್ರತಿವಾದಿ ಅದಕ್ಕೆ ಸೊಪ್ಪು ಹಾಕಲಿಲ್ಲ. ಕಡೆಗೆ ಬೇಸತ್ತ ಅರ್ಜಿದಾರರು ಸೇವಾಲೋಪದ ಆರೋಪ ಹೊರಿಸಿ ಗ್ರಾಹಕ ನ್ಯಾಯಾಲಯದ ಕಟ್ಟೆ ಏರಿದರು.

ಅಧ್ಯಕ್ಷ ಬಿ.ಎಸ್. ರೆಡ್ಡಿ, ಸದಸ್ಯರಾದ ಎಂ. ಯಶೋದಮ್ಮ ಮತ್ತು  . ಮುನಿಯಪ್ಪ ಅವರನ್ನು  ಒಳಗೊಂಡ ಪೀಠವು ಪ್ರತಿವಾದಿಗೆ ನೋಟಿಸ್ ಜಾರಿ ಮಾಡಿತು. ಪ್ರತಿವಾದಿ ನೋಟಿಸ್‌ಗೆ ಉತ್ತರಿಸಲಿಲ್ಲ, ನ್ಯಾಯಾಲಯಕ್ಕೂ ಹಾಜರಾಗಲಿಲ್ಲ.

ಅರ್ಜಿದಾರ ಗೋವಿಂದನ್ ಅವರು ಪ್ರಮಾಣಪತ್ರದ ಜೊತೆಗೆ ತಾವು ಅಂಗಡಿಯ ಒಳಕ್ಕೆ ಹೋಗಿದ್ದ ದಿನಾಂಕ 18-6-2010 ದಿನಾಂಕದ ಇನ್‌ವಾಯ್ಸೆನ ಪ್ರತಿ, ಪರಿಹಾರ ನೀಡುವಂತೆ ಆಗ್ರಹಿಸಿ ಬರೆದ 25-6-2010 ಪತ್ರ, ಕೊರಿಯರ್ ಹಿಂಬರಹ, ವಾಪಸ್ ಬಂದ ಕೊರಿಯರ್ ಲಕೋಟೆ, ರವಿ ಕಿರ್ಲೋಸ್ಕರ್ ಸ್ಮಾರಕ ಆಸ್ಪತ್ರೆಯಿಂದ ನೀಡಲಾದ 24-7-2010 ದಿನಾಂಕದ ವೈದ್ಯಕೀಯ ಪ್ರಮಾಣ ಪತ್ರ ಇತ್ಯಾದಿ ದಾಖಲೆ ಹಾಜರು ಪಡಿಸಿದ್ದನ್ನು ನ್ಯಾಯಾಲಯ ಗಮನಿಸಿತು. ಪ್ರತಿವಾದಿ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದುದರಿಂದ ಅರ್ಜಿದಾರರೊಬ್ಬರ ವಾದವನ್ನೂ ಆಲಿಸಿತು.

ಫುಡ್ ವರ್ಲ್ಡ್ ಅಂಗಡಿಯಲ್ಲಿ ಬಿದ್ದ ಮರುದಿನ 19-6-2010ರಂದು ಅರ್ಜಿದಾರರು ರವಿ ಕಿರ್ಲೋಸ್ಕರ್ ಆಸ್ಪತ್ರೆಗೆ ಹೋದಾಗ ಎಕ್ಸ್‌ರೇ ತೆಗೆದುಕೊಂಡು ವೈದ್ಯಕೀಯ ತಪಾಸಣೆ ಮಾಡಲಾಗಿತ್ತು. ಆಗ ಮೂಳೆ ಮುರಿದುದು ಬೆಳಕಿಗೆ ಬಂದು ಒಂದು ತಿಂಗಳ ಕಾಲ ಪ್ಯಾಸ್ಟರ್ ಆಫ್ ಪ್ಯಾರಿಸ್ ಹಾಕಬೇಕಾಗಿ ಬಂದಿತ್ತು.
ಆಸ್ಪತ್ರೆಯ  ಸರ್ಜನ್ ಡಾ. ಕೆ.ಎಸ್. ವೆಂಕಟೇಶ್ ಅವರು ನೀಡಿದ ವೈದ್ಯಕೀಯ ಪ್ರಮಾಣ ಪತ್ರ ಹಾಗೂ ಇತರ ಸಾಕ್ಷ್ಯಾಧಾರಗಳು, ಪ್ರತಿವಾದಿ ಪಾಲಿನ ಸೇವಾಲೋಪವನ್ನು ದೃಢಪಡಿಸುತ್ತವೆ ಎಂಬ ತೀರ್ಮಾನಕ್ಕೆ ಬಂದ ನ್ಯಾಯಾಲಯ ಅರ್ಜಿದಾರರು  ಪರಿಹಾರಕ್ಕೆ ಅರ್ಹರಾಗಿದ್ದಾರೆ ಎಂಬ ನಿಲುವು ತಾಳಿತು.

ಅರ್ಜಿದಾರರು 50,000 ರೂಪಾಯಿಗಳ ಪರಿಹಾರಕ್ಕೆ ಆಗ್ರಹಿಸಿದ್ದನ್ನು ಉಲ್ಲೇಖಿಸಿದ ನ್ಯಾಯಾಲಯ, ಆದರೆ ಇಷ್ಟೊಂದು ಪರಿಹಾರ ಕೇಳಲು  ಅರ್ಜಿದಾರರು ಯಾವುದೇ ಆಧಾರಗಳನ್ನೂ ನೀಡಿಲ್ಲ ಎಂದು ವಿಶ್ಲೇಷಿಸಿದರು.

ಎಲ್ಲ ಹಿನ್ನೆಲೆಯಲ್ಲಿ 10,000 ರೂಪಾಯಿಗಳ ಪರಿಹಾರವನ್ನು ನಾಲ್ಕು ವಾರಗಳ  ಒಳಗೆ ನೀಡುವಂತೆಯೂ, ತಪ್ಪಿದಲ್ಲಿ ಆದೇಶದ ದಿನದಿಂದ ಹಣಪಾವತಿಯಾಗುವರೆಗೂ ವಾರ್ಷಿಕ ಶೇಕಡಾ 9 ಬಡ್ಡಿಯನ್ನೂ ಸೇರಿಸಿಕೊಂಡು ಪರಿಹಾರವನ್ನು ಪಾವತಿ ಮಾಡುವಂತೆ ಗ್ರಾಹಕ ನ್ಯಾಯಾಲಯವು ಪ್ರತಿವಾದಿಗೆ ಆದೇಶ ಮಾಡಿತು.



No comments:

Post a Comment