Sunday, August 28, 2016

‘ಧ್ಯಾನ ಚಂದ’ ಈತನ ‘ಹಾಕಿ’ ಬಲು ಚೆಂದ..! Hockey Mantrik Dhyan Chand.!

 ‘ಧ್ಯಾನ ಚಂದ’ ಈತನ ‘ಹಾಕಿ’
ಬಲು ಚೆಂದ..!
 Hockey Mantrik Dhyan Chand.!

ಭಾರತೀಯ ತರುಣನಿಗೆ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ದೊಡ್ಡ ಹುದ್ದೆಯ ಆಮಿಷ ತೋರಿಸಿದ್ದ... ವಿಯೆನ್ನಾದಲ್ಲಿ ಈತನನ್ನು ನಾಲ್ಕು ಕೈಗಳಿರುವ ದೇವತೆಯಂತೆ ಚಿತ್ರಿಸುವ ಪ್ರತಿಮೆ ನಿಲ್ಲಿಸಲಾಗಿದೆ... ಆಗಸ್ಟ್ 29 ಈತನ ಜನ್ಮದಿನ.... ಈತನ ಗೌರವಾರ್ಥ ಈದಿನವನ್ನು ಭಾರತದ `ರಾಷ್ಟ್ರೀಯ ಕ್ರೀಡಾ ದಿನ'ವಾಗಿ ಆಚರಿಸಲಾಗುತ್ತದೆ. ಈತ ಯಾರು ಗೊತ್ತೆ?

ನೆತ್ರಕರೆ ಉದಯಶಂಕರ

ಇದು 80 ವರ್ಷಗಳ ಹಿಂದಿನ ಘಟನೆ. ಇಸವಿ: 1936. ಜರ್ಮನಿಯ ಬರ್ಲಿನ್ನಿನಲ್ಲಿ ಒಲಿಂಪಿಕ್ ಕ್ರೀಡಾಕೂಟ ನಡೆದಿತ್ತು. ಭಾರತದ ಹಾಕಿ ತಂಡ ಕೂಟದಲ್ಲಿ ಪಾಲ್ಗೊಂಡಿತ್ತು. ಸ್ಪರ್ಧೆಯ ಎಲ್ಲ ಐದು ಪಂದ್ಯಗಳಲ್ಲಿ ಭಾರತೀಯ ತಂಡ ಪಟ ಪಟನೆ ಜಯ ಸಂಪಾದಿಸಿತು. ತಂಡ ಪಡೆದ 38 ಗೋಲುಗಳಲ್ಲಿ ಹನ್ನೊಂದು ಗೋಲುಗಳು ಒಬ್ಬನೇ ಒಬ್ಬ ವ್ಯಕ್ತಿಯ `ಬೆತ್ತ'ದಿಂದ (ಸ್ಟಿಕ್) ಬಂದಿದ್ದವು.

ನೋಡುತ್ತಿದ್ದವರೆಲ್ಲ ಮೂಕ ವಿಸ್ಮಿತರಾಗಿದ್ದರು. ಮೂವತ್ತೊಂದರ ಹರೆಯದ ತರುಣನ `ಬೆತ್ತ'ದಲ್ಲಿ ಅದೇನು ಮಾಂತ್ರಿಕ ಶಕ್ತಿ ಇತ್ತೋ! ಆತನ ಕೌಶಲ್ಯ, ಚೆಂಡನ್ನು ಕುಟ್ಟುವ ಕಲೆ ಪ್ರೇಕ್ಷಕರಲ್ಲಿ ವಿದ್ಯುತ್ ಸಂಚಾರ ಉಂಟು ಮಾಡುತ್ತಿತ್ತು. ಮೈದಾನದ ಯಾವುದೇ ಮೂಲೆಯ್ಲಲ್ದಿದರೂ ಚೆಂಡನ್ನು ತನ್ನ ಗುರಿಯತ್ತ ಅಟ್ಟುತ್ತಿದ್ದ ತರುಣನ ಚಾಕಚಕ್ಯತೆ ಜರ್ಮನ್ನರನ್ನು ದಂಗು ಬಡಿಸಿತ್ತು.

ಆತನ `ಬೆತ್ತ'ದಲ್ಲಿ ಚೆಂಡನ್ನು ನಿಯಂತ್ರಿಸಬಲ್ಲಂತಹ `ಅಯಸ್ಕಾಂತ' ಇಲ್ಲವೇ ಬೇರೇನಾದರೂ ವಸ್ತುವನ್ನು ಬಚ್ಚಿಡಲಾಗಿದೆ ಎಂಬ ಸಂಶಯವೂ ಜರ್ಮನ್ನರಿಗೆ ಬಂತು! ಆತನ ಬೆತ್ತವನ್ನು ತೆಗೆದುಕೊಂಡು ತಡಕಾಡಿದ್ದಷ್ಟೇ ಅಲ್ಲ, ಬೇರೆ ಬೆತ್ತವನ್ನು ನೀಡಿ ಅದರಲ್ಲಿ ಆಡುವಂತೆಯೂ ಮಾಡಲಾಯಿತು.

ಆದರೆ ತರುಣ ಅದಕ್ಕೆ ಬೆಚ್ಚಲಿಲ್ಲ. ಬದಲಾದ `ಬೆತ್ತ' ಆತನನ್ನು ನೆಲಕಚ್ಚಿಸಲಿಲ್ಲ. ಗೋಲುಗಳು ಹಿಂದಿನ `ಬೆತ್ತ' ಗತಿಯಲ್ಲೇ ಉರುಳತೊಡಗಿದವು.

ಕೊನೆಯ ಪಂದ್ಯದಲ್ಲಿ ಆತ ಜರ್ಮನಿಯ ವಿರುದ್ಧ ಆರು ಗೋಲುಗಳನ್ನು ಬಾರಿಸಿದ. ಜರ್ಮನ್ನರ ಸಹನೆಯ ಕಟ್ಟೆ ಒಡೆಯಿತು. ಅವರು ಅಡ್ಡದಾರಿಗೆ ಇಳಿದರು. ಜರ್ಮನ್ ಗೋಲ್ ಕೀಪರ್ ಬಾರಿಸಿದ ಏಟಿಗೆ ತರುಣನ ಹಲ್ಲೊಂದು ಕಿತ್ತು ಬಂತು.

ಈಗ ತರುಣ `ಹಲ್ಲು ಕಿತ್ತ ಹಾವು'! ಪ್ರಥಮ ಚಿಕಿತ್ಸೆ ಪಡೆದು ಆಟಕ್ಕೆ ಮರಳಿದ. ಆದರೆ ಆತ ಭುಸುಗುಡಲಿಲ್ಲ. ಬದಲು ತನ್ನ ತಂಡಕ್ಕೆ ಹೆಚ್ಚು ಗೋಲು ಬಾರಿಸದಂತೆ ಸೂಚನೆ ನೀಡಿದ.

`
ಚೆಂಡನ್ನು ನಿಯಂತ್ರಿಸುವ ಮೂಲಕವೇ ನಾವು ಅವರಿಗೆ ಪಾಠ ಕಲಿಸಬೇಕು'- ಇದು ಆತನ ಬಾಯಿಯಿಂದ ಹೊರಟ ಮಾತು. ಭಾರತೀಯ ತಂಡದ ಆಟಗಾರರು ಅತ್ಯಂತ ಸಹನೆಯೊಂದಿಗೆ, ಆದರೆ ಜರ್ಮನ್ನರು ಬೆಚ್ಚಿ ಬೀಳುವಂತೆ ಆಟ ಮುಂದುವರಿಸಿದರು. ಚೆಂಡನ್ನು ಜರ್ಮನ್ ಸರ್ಕಲ್ವರೆಗೂ ಒಯ್ದು ಹಠಾತ್ತನೆ ಹಿಂದಕ್ಕೆ ಹಾರಿಸುತ್ತಾ ಆಡತೊಡಗಿದ ಭಾರತೀಯ ತಂಡಕ್ಕೆ ತರುಣನೇ ಸ್ಫೂರ್ತಿಯ ಚಿಲುಮೆಯಾಗಿದ್ದ. ಕಡೆಗೂ ತಂಡ ಜರ್ಮನಿಯನ್ನು 8-1 ಗೋಲುಗಳಿಂದ ಸೋಲಿಸಿ ಒಲಿಂಪಿಕ್ ಸ್ವರ್ಣವನ್ನು ಗೆದ್ದುಕೊಂಡಿತು.

ಸುದ್ದಿ ಜರ್ಮನಿಯ ಆಗಿನ ನಾಯಕ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಗೆ ತಲುಪಿತು. ಯುವಕನ ಚಾಕಚಕ್ಯತೆಗೆ ಬೆರಗಾದ ಹಿಟ್ಲರ್ ಆತನಿಗೆ ಒಂದು `ಮಹಾನ್ ಆಮಿಷ'ವನ್ನೇ ಒಡ್ಡಿದ: `ಜರ್ಮನಿಗೆ ವಲಸೆ ಬರುವುದೇ ಆದಲ್ಲಿ ನಿನಗೆ ಕರ್ನಲ್ ಹುದ್ದೆ ನೀಡುವೆ'.

ತರುಣನ ಧಮನಿಗಳಲ್ಲಿ ದೇಶಭಕ್ತಿಯ ನೆತ್ತರು ಹರಿಯುತ್ತಿತ್ತು. ಆತನ ಕಣ್ಣುಗಳಲ್ಲಿ ್ಲಇದ್ದುದು ಒಂದೇ ಕನಸು- ಭಾರತ ಹಾಕಿಯಲ್ಲಿ ಅಪ್ರತಿಮ ರಾಷ್ಟ್ರವಾಗಬೇಕು. ಹಿಟ್ಲರನ ಆಹ್ವಾನವನ್ನು ಆತ ನಯವಾಗಿಯೇ ತಿರಸ್ಕರಿಸಿದ.

ತರುಣನೇ ಭಾರತದ `ಹಾಕಿ ಮಾಂತ್ರಿಕ' ಧ್ಯಾನ್ ಚಂದ್.

ಧ್ಯಾನ್ ಚಂದ್ ಹುಟ್ಟಿ ಇಂದಿಗೆ (ಆಗಸ್ಟ್ 29) ಸರಿಯಾಗಿ 111 ವರ್ಷ. 1905ರಲ್ಲಿ ಅಲಹಾಬಾದಿನಲ್ಲಿ ಸುಬೇದಾರ್ ಸೋಮೇಶ್ವರ ದತ್ ಪುತ್ರನಾಗಿ ಹುಟ್ಟಿದ ಧ್ಯಾನ್ ಚಂದ್ ಬೆಳೆದದ್ದು ಝಾನ್ಸಿಯಲ್ಲಿ. ಅಪ್ಪ ಸೇನೆಯಲ್ಲಿ ಇದ್ದುದರಿಂದ ಝಾನ್ಸಿಯಲ್ಲಿ ಇದ್ದಾಗಲೇ ಬ್ರಿಟಿಷ್ ಸೇನಾ ಅಧಿಕಾರಿಗಳ ಜೊತೆ ಆಡುತ್ತಾಡುತ್ತಲೇ ಆತ `ಹಾಕಿ' ಆಟದ ಪಟ್ಟುಗಳನ್ನು ಕರಗತ ಮಾಡಿಕೊಂಡ.

1922
ರಲ್ಲಿ ಸಿಪಾಯಿಯಾಗಿ ಸೇನೆಯ ಭಾರತೀಯ ರೆಜಿಮೆಂಟಿಗೆ ಸೇರಿಕೊಂಡದ್ದು ಹಾಕಿ ಆಟದಲ್ಲಿ ಇನ್ನಷ್ಟು ಪರಿಣತಿ ಸಾಧಿಸಲು ಧ್ಯಾನ್ ಚಂದ್ ಗೆ ನೆರವಾಯಿತು. ಉನ್ನತ ಅಧಿಕಾರಿಗಳ ಗಮನ ಸೆಳೆದ ಆತನಿಗೆ ಅಂತರ ಪ್ರಾಂತೀಯ ಚಾಂಪಿಯನ್ ಶಿಪ್ ಗಳಲ್ಲಿ ಪಾಲ್ಗೊಳ್ಳಲು ಅವಕಾಶ ಸಿಕ್ಕಿತು.

ತಾರುಣ್ಯದ ಜೊತೆಗೆ ಆಟದಲ್ಲಿ ಕರಗತ ಮಾಡಿಕೊಂಡಿದ್ದ ಕೌಶಲ್ಯಗಳು ಧ್ಯಾನ್ ಚಂದ್ ಅದೃಷ್ಟವನ್ನು ಖುಲಾಯಿಸಿದವು. 1926ರಲ್ಲಿ ನ್ಯೂಜಿಲೆಂಡಿನ ಪಂದ್ಯಗಳಲ್ಲಿ ಭಾರತೀಯ ತಂಡಕ್ಕೆ ಧ್ಯಾನ್ ಚಂದ್ ಆಯ್ಕೆ ಆಯಿತು. ಪ್ರವಾಸ ಧ್ಯಾನ್ ಚಂದ್ ಗೆ ಸಾಕಷ್ಟು ಖ್ಯಾತಿ ತಂದುಕೊಟ್ಟಿತು. ವಾಪಸಾಗುವ ಮಾರ್ಗದಲ್ಲಿ ತಂಡ ಆಸ್ಟ್ರೇಲಿಯಾದಲ್ಲೂ ಪಂದ್ಯಗಳಲ್ಲಿ ಪಾಲ್ಗೊಂಡಿತು.

1928
ರಲ್ಲಿ ಆಮ್ ಸ್ಟರ್ ಡ್ಯಾಮ್ ಒಲಿಂಪಿಕ್ಸಿಗೆ ಧ್ಯಾನ್ ಚಂದ್ ಒಳಗೊಂಡ ಭಾರತೀಯ ತಂಡ ಆಯ್ಕೆಯಾಯಿತು. ಪಾಕ್ ಸ್ಟೋನ್ ಫೆಸ್ಟಿವಲಿನಲ್ಲೂ ತಂಡ ಹತ್ತು ಪಂದ್ಯಗಳಲ್ಲಿ ಆಡಿತು. ಪಂದ್ಯಗಳಲ್ಲಿ ಭಾರತೀಯ ತಂಡ ಗೆದ್ದ 72 ಗೋಲುಗಳಲ್ಲಿ 36 ಗೋಲುಗಳನ್ನು ಪಡೆದುಕೊಂಡ ಧ್ಯಾನ್ ಚಂದ್ ಮಿಂಚಿದ್ದೇ ಮಿಂಚಿದ್ದು.

ಆಮ್ ಸ್ಟರ್ ಡ್ಯಾಮ್ ಒಲಿಂಪಿಕ್ಸಿನಲ್ಲಿ 23 ಗೋಲುಗಳನ್ನು ಪಡೆದು ದಾಖಲೆ ನಿರ್ಮಿಸಿದರೆ, ಎದುರಾಳಿ ಆಸ್ಟ್ರಿಯಾ, ಬೆಲ್ಜಿಯಂ, ಡೆನ್ಮಾರ್ಕ್ ಹಾಗೂ ಪೋಲಂಡ್ ಗಳು ಒಂದು ಗೋಲು ಪಡೆಯಲೂ ಶಕ್ತವಾಗಲಿಲ್ಲ. ಸಂದರ್ಭದಲ್ಲಿ ಆಡಿದ ಅದ್ಭುತ ಆಟ ಧ್ಯಾನ್ ಚಂದ್ ಗೆ `ಹಾಕಿ ಬೆತ್ತದ ಮಾಂತ್ರಿಕ' (ಜಗ್ಲರ್ ವಿದ್ ಹಾಕಿ ಸ್ಟಿಕ್) ಎಂಬ ಹೆಸರನ್ನು ಸಂಪಾದಿಸಿಕೊಟ್ಟಿತು.

ಬಳಿಕ ಧ್ಯಾನ್ ಚಂದ್ ನೇತೃತ್ವದಲ್ಲಿ ನಡೆದದ್ದು ವಸ್ತುಶಃ ಭಾರತದ `ಹಾಕಿ ದಂಡಯಾತ್ರೆ' ಎಂದರೆ ಅತಿಶಯೋಕ್ತಿ ಏನಲ್ಲ. 1932 ಲಾಸ್ ಏಂಜೆಲಿಸ್ ಒಲಿಂಪಿಕ್ಸಿನಲ್ಲಿ ಹಾಕಿಯ್ಲಲಿ ಪಾಲ್ಡೊಂಡಿದ್ದುದು ಭಾರತ, ಜಪಾನ್ ಮತ್ತು ಅಮೆರಿಕ. ಇಲ್ಲಿ ಧ್ಯಾನ್ ಚಂದ್ ಜೊತೆಗೆ ಅವರ ಸಹೋದರ ರೂಪ್ ಸಿಂಗ್ ಕೂಡಾ ಮಿಂಚಿದರು. ಜಪಾನ್ ವಿರುದ್ಧದ ಆಟದಲ್ಲಿ ಧ್ಯಾನ್ ಚಂದ್ 4 ಗೋಲು ಪಡೆದರೆ, ರೂಪ್ ಸಿಂಗ್ ಪಾಲು 3 ಗೋಲು. ಅಮೆರಿಕ ವಿರುದ್ಧದ ಎರಡನೇ ಪಂದ್ಯದಲ್ಲಿ ಭಾರತ ಪಡೆದ 24 ಗೋಲುಗಳಲ್ಲಿ ಸಹೋದರರ ಪಾಲು 18 ಗೋಲುಗಳು.

ಲಾಸ್ ಏಂಜೆಲಿಸ್ ನಿಂದ ವಾಪಸಾಗುವ ಮಾರ್ಗದಲ್ಲಿ ಸಿಲೋನ್ (ಈಗಿನ ಶ್ರೀಲಂಕಾ), ಸಿಂಗಪುರ, ಜಪಾನ್, ಜರ್ಮನಿ ಮತ್ತು ಯುರೋಪಿನ ಕೆಲವು ರಾಷ್ಟ್ರಗಳಲ್ಲಿ ಆಡಿದ 35 ಪಂದ್ಯಗಳ ಪೈಕಿ 33 ಪಂದ್ಯಗಳಲ್ಲಿ ಭಾರತದ್ದೇ ಜಯಭೇರಿ.

1935
ರಲ್ಲಿ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡಿಗೆ ಭೇಟಿ ನೀಡಿದ ಭಾರತ ತಂಡ 48 ಪಂದ್ಯಗಳನ್ನು ಆಡಿತು. ಪಂದ್ಯಗಳಿಗೆ ಭಾರತೀಯ ತಂಡದ ನಾಯಕನಾಗಿ ಸರ್ವಾನುಮತದ ಆಯ್ಕೆ ಧ್ಯಾನ್ ಚಂದ್. ಪ್ರವಾಸದಲ್ಲಿ ಭಾರತ ಗಳಿಸಿದ 584 ಗೋಲುಗಳಲ್ಲಿ ಧ್ಯಾನ್ ಚಂದ್ ಪಡೆದ ಗೋಲುಗಳ ಸಂಖ್ಯೆ 200. ಶ್ರೇಷ್ಠ ಕ್ರಿಕೆಟ್ ಆಟಗಾರ ಡಾನ್ ಬ್ರಾಡ್ಮನ್ ಅವರು ಸಮಯದಲ್ಲೇ ಧ್ಯಾನ್ ಚಂದ್ ಅವರನ್ನು ಮೆಚ್ಚಿಕೊಂಡರು.
1936
ಬರ್ಲಿನ್ ಒಲಿಂಪಿಕ್ ಕ್ರೀಡಾಕೂಟ ಧ್ಯಾನ್ ಚಂದ್ ಕೌಶಲ್ಯ ಪ್ರದರ್ಶನದ ಕ್ಲೈಮ್ಯಾಕ್ಸ್. ಸಂದರ್ಭದಲ್ಲೇ ಜರ್ಮನ್ ಸರ್ವಾಧಿಕಾರಿ ಹಿಟ್ಲರ್ ಧ್ಯಾನ್ ಚಂದ್ `ಮಾಂತ್ರಿಕತೆ'ಗೆ ಮರುಳಾದದ್ದು.

`
ಕ್ರಿಕೆಟ್ ಆಟದಲ್ಲಿ ಶ್ರೇಷ್ಠ ಆಟಗಾರರೆಂದು ಗ್ರೇಸ್, ಹಾಬ್ಸ್, ಬ್ರಾಡ್ಮನ್ ಮತ್ತಿತರರನ್ನು ಹೆಸರಿಸಬಹುದು. ಆದರೆ ಹಾಕಿಯಲ್ಲಿ ಅಂತಹ ಅಸದೃಶ ಆಟಗಾರ ಎಂದರೆ ಧ್ಯಾನ್ ಚಂದ್ ಒಬ್ಬರೇ' ಎಂದು ಅವರ ಜೊತೆಗೆ ಆಟವಾಡಿದ್ದ ಕರ್ನಲ್ ಆಲಿ ಇಕ್ತಿದಾರ್ ಶಹಾ `ವರ್ಲ್ಡ್ ಹಾಕಿ ಮ್ಯಾಗಜಿನ್' ನಲ್ಲಿ 1970ರಷ್ಟು ಹಿಂದೆಯೇ ಬರೆದಿದ್ದರು.

ನಲ್ವತ್ತರ ದಶಕದಲ್ಲಿ ಧ್ಯಾನ್ ಚಂದ್ ಸೇನೆಯಲ್ಲಿ ಮೇಜರ್ ಪದವಿಗೆ ಏರಿದರು. 1956ರಲ್ಲಿ ಅವರಿಗೆ `ಪದ್ಮಭೂಷಣ' ಪ್ರಶಸ್ತಿ ಲಭಿಸಿತು. ಪಾಟಿಯಾಲದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಸ್ಪೋರ್ಟ್ಸಿನಲ್ಲಿ ಕೆಲಕಾಲ ಚೀಫ್ ಹಾಕಿ ಕೋಚ್ ಆಗಿ ಸೇವೆ ಸಲ್ಲಿಸುವ ಮೂಲಕ ಹಲವಾರು ಆಟಗಾರರಿಗೆ ಅವರು ಮಾರ್ಗದರ್ಶನ ಕೂಡಾ ಮಾಡಿದರು. ಪುತ್ರ ಅಶೋಕ್ ಕುಮಾರ್ ಅವರನ್ನು ಹಾಕಿ ಪಟುವಾಗಿ ರೂಪಿಸಿದ ಧನ್ಯತೆ ಕೂಡಾ ಅವರದು.

1979
ಡಿಸೆಂಬರ್ 3ರಂದು ಮೇಜರ್ ಧ್ಯಾನ್ ಚಂದ್ ನಿಧನರಾದರು. ಅವರ ಮೊದಲ ಪುಣ್ಯತಿಥಿ ಸಂದರ್ಭದಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡುವ ಮೂಲಕ ಭಾರತ ಸರ್ಕಾರ ತನ್ನ ಗೌರವ ಸಲ್ಲಿಸಿತು.. ಅದಕ್ಕಿಂತಲೂ ದೊಡ್ಡ ಗೌರವವಾಗಿ ಅವರ ಹುಟ್ಟು ಹಬ್ಬವನ್ನು ಭಾರತದಲ್ಲಿ `ರಾಷ್ಟ್ರೀಯ ಕ್ರೀಡಾ ದಿನ'ವಾಗಿ ಆಚರಿಸಲಾಗುತ್ತಿದೆ.

ಇವೆಲ್ಲವನ್ನೂ ಮೀರುವಂತಹ ಗೌರವ ಧ್ಯಾನ್ ಚಂದ್ ಗೆ ವಿಯೆನ್ನಾದಲ್ಲಿ ಲಭಿಸಿದೆ. ಅದೇನು ಗೊತ್ತೇ? ಅಲ್ಲಿನ ಸ್ಪೋರ್ಟ್ಸ್ ಕ್ಲಬ್ ಒಂದು ಧ್ಯಾನ್ ಚಂದ್ ಅವರ ಅದ್ಭುತ ಪ್ರತಿಮೆಯೊಂದನ್ನು ನಿಲ್ಲಿಸಿದೆ. ಪ್ರತಿಮೆಗೆ ನಾಲ್ಕು ಕೈಗಳು. ಅವುಗಳಲ್ಲಿ ನಾಲ್ಕು `ಹಾಕಿ ಸ್ಟಿಕ್' ಗಳು. ವಿಯೆನ್ನೀಯರ ದೃಷ್ಟಿಯಂತೆ ಧ್ಯಾನ್ ಚಂದ್ ಒಬ್ಬ ದೇವತೆ. ಏಕೆಂದರೆ ಎರಡು ಕೈಗಳು ಉಳ್ಳ ಸಾಮಾನ್ಯ ಮನುಷ್ಯ ಒಂದು ಬೆತ್ತದಿಂದ (ಸ್ಟಿಕ್) ಅಷ್ಟೊಂದು ಚೆನ್ನಾಗಿ ಆಟ ಆಡಲು ಸಾಧ್ಯವೇ ಇಲ್ಲ..!

ಈಗ ಹೇಳಿ, ಜನ್ಮ ದಿನದ ಹೊತ್ತಿನ್ಲಲಾದರೂ ಮೇಜರ್ ಧ್ಯಾನ್ ಚಂದ್ ಗೆ ಒಂದು `ಸೆಲ್ಯೂಟ್' ಹೊಡೆಯದೇ ಇದ್ದರೆ ನಾವು ಕೃತಘ್ನರಾಗಲಾರೆವೇ?

English Summary: Dictator of Germany Adolph Hitler offered him topmost post in his army, many suspected that his Hockey Stick contained magnet! His birthday is being observed as "National Sports Day of India'. In Vienna one sports club has erected his statue showing him as God with 4 hands. He he is Hockey Mantrik Dhyan Chand. Nethrakere Udaya Shankara remembers him on the occasion of his birthday.

First Posted 29th August 2008 by PARYAYA

Labels: Sports