Wednesday, November 29, 2017

ಇಂದಿನ ಇತಿಹಾಸ History Today ನವೆಂಬರ್ 29

ಇಂದಿನ ಇತಿಹಾಸ History Today ನವೆಂಬರ್ 29


2017: ಮೊರ್ಬಿ (ಗುಜರಾತ್‌): ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)ಯನ್ನು "ಗಬ್ಬರ್ಸಿಂಗ್ಟ್ಯಾಕ್ಸ್‌' ಎಂದು ಹೀಯಾಳಿಸಿದ್ದ ಕಾಂಗ್ರೆಸ್ಉಪಾಧ್ಯಕ್ಷ ರಾಹುಲ್ಗಾಂಧಿ ಅವರಿಗೆ ಮಾತಿನೇಟು ಕೊಟ್ಟಿರುವ ಪ್ರಧಾನಿ ನರೇಂದ್ರ ಮೋದಿ, "ದೇಶ ಲೂಟಿ ಮಾಡಿದ ಜನರಿಗೆ ಡಕಾಯಿತರ ಹೆಸರುಗಳೇ ನೆನಪಿಗೆ ಬರುತ್ತವೆ' ಎಂದು ಕಿಡಿಕಾರಿದರು. ಗುಜರಾತ್ಚುನಾವಣೆಯಲ್ಲಿ ಪಟೇಲರ ಹಿಡಿತವಿರುವ ಮೊರ್ಬಿಯಲ್ಲಿ ನಡೆದ ಬೃಹತ್ಪ್ರದರ್ಶನದಲ್ಲಿ ಮಾತನಾಡಿದ ಮೋದಿ, ಜಿಎಸ್ಟಿ ಬಗ್ಗೆ ರಾಹುಲ್ಅವರ ಇತ್ತೀಚಿನ ವಿಶ್ಲೇಷಣೆ, ಘೋಷಣೆಗಳ ವಿರುದ್ಧ ಹರಿಹಾಯ್ದರು. ಅಲ್ಲದೆ ರಾಹುಲ್ಅವರ ಗಬ್ಬರ್ಸಿಂಗ್ಟ್ಯಾಕ್ಎಂಬ ಹೋಲಿಕೆಯ ಬದಲಾಗಿ, ಗ್ರ್ಯಾಂಡ್ಸ್ಟುಪಿಡ್ಥಾಟ್ಎಂದು ವ್ಯಂಗ್ಯವಾಡಿದರು. "ತಾವು ಅಧಿಕಾರಕ್ಕೆ ಬಂದರೆ ಸದ್ಯಕ್ಕಿರುವ ಜಿಎಸ್ಟಿಯ ನಾಲ್ಕು ತೆರಿಗೆ ಹಂತಗಳನ್ನು ತೆಗೆದುಹಾಕಿ, ಶೇ. 18 ಒಂದೇ ತೆರಿಗೆ ಅಳ ವಡಿಸುವುದಾಗಿ ರಾಹುಲ್ಹೇಳಿದ್ದಾರೆ. ಇದು ಜಾರಿಗೆ ಬಂದರೆ ಒಂದು ಕೆಜಿ ಉಪ್ಪಿಗೂ 5 ಕೋಟಿ ರೂ. ಮೌಲ್ಯದ ಐಷಾರಾಮಿ ಕಾರಿಗೂ ಒಂದೇ ತೆರಿಗೆ ಕಟ್ಟಬೇಕಾಗುತ್ತದೆ. ಹೀಗಾದಾಗ ಅಗತ್ಯ ವಸ್ತುಗಳ ಬೆಲೆ ಏರಿ, ಸಿಗರೇಟು, ಮದ್ಯದ ಬೆಲೆ ಇಳಿಕೆಯಾಗುತ್ತದೆ. ಇದು ರಾಹುಲ್ಗಾಂಧಿಯವರ "ಗ್ರ್ಯಾಂಡ್ಸ್ಟುಪಿಡ್ಥಾಟ್‌' (ಜಿಎಸ್ಟಿ) ಎಂದು ವ್ಯಂಗ್ಯವಾಡಿದರು. ಸರ್ದಾರರ ಹಠ: ಜವಾಹರಲಾಲ್ನೆಹರೂ ವಿರುದ್ಧ ಹರಿಹಾಯ್ದ ಅವರು, "ನಮ್ಮ ಮೊದಲ ಪ್ರಧಾನಿ ಜವಾಹರಲಾಲ್ನೆಹರೂ, ಸೋಮನಾಥ ದೇಗುಲ ಕಟ್ಟಲು ಒಪ್ಪಿರಲಿಲ್ಲ. ಸರ್ದಾರ್ಪಟೇಲ್ಹಠದಿಂದ ದೇಗುಲ ನಿರ್ಮಾಣವಾಯಿತು' ಎಂದರು. ಹಿಂದೆ ಸೌರಾಷ್ಟ್ರ ಬರಗಾಲದಿಂದ ತತ್ತರಿಸಿ ದ್ದಾಗ, ಕಾಂಗ್ರೆಸ್ಇಲ್ಲಿ ಪಂಪ್ಸೆಟ್ನೀಡಿ ಸುಮ್ಮನಾಗಿತ್ತು. ಆದರೆ, ಬಿಜೆಪಿ ನರ್ಮದಾ ನದಿಯಿಂದ ದೊಡ್ಡ ಪೈಪುಗಳ ಮೂಲಕ ನೀರು ಹರಿಸಿದೆ ಎಂದು ನೆನಪಿಸಿದರು. ಇಂದಿರಾ ಮತ್ತು ಕಚೀìಪು!: ಇಂದಿರಾ ಗಾಂಧಿಯವರನ್ನು ಟೀಕಿಸಿದ ಮೋದಿ, "ಮೊರ್ಬಿಯಲ್ಲಿ 1979ರಲ್ಲಿ ಮಚ್ಚು ಅಣೆಕಟ್ಟು ಒಡೆದು ಸಾವಿರಾರು ಮಂದಿ ಸಾವನ್ನಪ್ಪಿದ್ದಾಗ ಅಲ್ಲಿಗೆ ಭೇಟಿ ನೀಡಿದ್ದ ಇಂದಿರಾ ಬೆನ್‌, ಪ್ರಾಂತ್ಯ ದಲ್ಲೆಲ್ಲ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಶವಗಳ ಕೊಳೆತ ವಾಸನೆ ಸಹಿಸಿಕೊಳ್ಳದೆ ತಮ್ಮ ಮೂಗನ್ನು  ಕರವಸ್ತ್ರದಿಂದ ಮುಚ್ಚಿ ಕೊಂಡಿದ್ದರು. ಮರುಕ ಹುಟ್ಟಿಸುತ್ತಿದ್ದ ಸನ್ನಿವೇಶ ಅವರ ಪಾಲಿಗೆ ನರಕವಾಗಿದ್ದರೆ, ತಿಂಗಳುಗಟ್ಟಲೆ ಅಲ್ಲಿನ ಬೀದಿಬೀದಿಗಳಲ್ಲಿ ಆರೆಸ್ಸೆಸ್‌, ಜನಸಂಘದ ಸ್ವಯಂ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ ನಮಗೆ ಅದು ಮಾನವತೆಯ ಸುಗಂಧವಾಗಿತ್ತು'' ಎಂದರು.


2017: ಧರ್ಮಸ್ಥಳ: ಆ್ಯಕ್ಸೆಸ್ಇಂಡಿಯಾ ನೀಡುವ ಪ್ರತಿಷ್ಠಿತ ಇನ್ಕ್ಲೂಸಿವ್ಫೈನಾನ್ಸ್ಇಂಡಿಯಾ ಪ್ರಶಸ್ತಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರನ್ನು ಆಯ್ಕೆ ಮಾಡಲಾಯಿತು. ಮೈಕ್ರೋಫೈನಾನ್ಸ್ವಲಯದಲ್ಲಿ ಅತ್ಯುನ್ನತ ಸೇವೆ ಸಲ್ಲಿಸಿದ ಮತ್ತು ವಲಯದ ಅಭಿವೃದ್ಧಿಗೆ ಮಹತ್ವದ ಕಾಣಿಕೆ ನೀಡಿದ ವ್ಯಕ್ತಿಗಳು ಮತ್ತು ಸಂಘ ಸಂಸ್ಥೆಗಳಿಗೆ ನೀಡುವ ಮಹತ್ವದ ಪ್ರಶಸ್ತಿ ಇದಾಗಿದ್ದು, ಕಳೆದ 9 ವರ್ಷಗಳಿಂದ ನೀಡಲಾಗುತ್ತಿದೆ. ಹಿಂದೆ ಮೈಕ್ರೋ ಫೈನಾನ್ಸ್ಪ್ರಶಸ್ತಿ ಎಂದು ಹೆಸರಾಗಿದ್ದ ಗೌರವಕ್ಕೆ ಎಚ್ಎಸ್ಬಿಸಿ ಸಹಕಾರ ನೀಡುತ್ತಿದೆ.

2017: ದಾವಣಗೆರೆದಾವಣಗೆರೆ ನಗರದ ದಾವಣಗೆರೆ-ಹರಿಹರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಎನ್.ಎಂ.ಜೆ.ಬಿ. ಆರಾಧ್ಯ (85) ಅವರು ರಾತ್ರಿ ನಿಧನರಾದರು. ಮೃತರು ಇಬ್ಬರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದರು. ಆರಾಧ್ಯ ಅವರು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಾಗಿದ್ದರು. ‘ಸಹಕಾರ ರಂಗದಲ್ಲಿ ಅಧಿಕಾರದ ಕುರ್ಚಿ ಮೇಲೆ ಕೂತವರು ಪ್ರತಿ ಕ್ಷಣವೂ ಸಂಸ್ಥೆಯ ಅಭಿವೃದ್ಧಿಯ ಬಗ್ಗೆ ಚಿಂತಿಸಬೇಕು. ಎಂತಹ ಸಂದರ್ಭದಲ್ಲೂ ಸ್ವಾರ್ಥಕ್ಕೆ ಅವಕಾಶ ನೀಡಬಾರದು. ಸಮಗ್ರ ದೃಷ್ಟಿಯ ಇಚ್ಛಾಶಕ್ತಿ ಇರಬೇಕು. ಸಹಕಾರ ಸಂಸ್ಥೆಯನ್ನು ಕಟ್ಟಿದಾಗ ಜನರು ಠೇವಣಿ ಇಡುವ ಮುನ್ನ ಯಾರು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ ಎಂಬುದನ್ನೂ ಗಮನಿಸುತ್ತಾರೆ. ನಂಬಿಕೆ ವಿಶ್ವಾಸದ ಮೇಲೆ ಎಲ್ಲ ಸಹಕಾರ ಸಂಸ್ಥೆಗಳ ಭವಿಷ್ಯ ನಿಂತಿರುತ್ತದೆ. ನಂಬಿಕೆಯೇ ಸಹಕಾರ ಕ್ಷೇತ್ರದ ಬುನಾದಿ. ಅದನ್ನು ಹಾಳು ಮಾಡಿದರೆ ಸಂಸ್ಥೆ ಅವಸಾನದತ್ತ ಸಾಗಿತೆಂದೇ ಅರ್ಥಎಂದು ನಂಬಿದ್ದವರು ಎನ್‌.ಎಂ.ಜೆ.ಬಿ.ಆರಾಧ್ಯ.  
 

2016: ಜಮ್ಮು/ ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನಗ್ರೊಟಾ ಕಂಟೋನ್ಮೆಂಟ್ ಪ್ರದೇಶದಲ್ಲಿ 
ಸಂಭವಿಸಿದ ಭೀಕರ ಗುಂಡಿನ ಕದನದಲ್ಲಿ ಇಬ್ಬರು ಸೇನಾ ಅಧಿಕಾರಿಗಳು ಮತ್ತು ಐವರು ಯೋಧರು ಸೇರಿದಂತೆ ಒಟ್ಟು 7 ಮಂದಿ ಭಾರತೀಯ ಯೋಧರು ಹುತಾತ್ಮರಾದರೆ, 6 ಭಯೋತ್ಪಾದಕರನ್ನು ಸೈನಿಕರು ಹತ್ಯೆಗೈದರು. ಗುಂಡಿನ ಘರ್ಷಣೆ ಸಂಜೆಯ ವೇಳೆಗೆ ಅಂತ್ಯಗೊಂಡಿದ್ದು, ಶೋಧ ಕಾರ್ಯಾಚರಣೆ ಮುಂದುವರೆದಿವೆ ಎಂದು ವರದಿಗಳು ಹೇಳಿದವು. ಇತ್ತೀಚಿನ ತಿಂಗಳುಗಳಲ್ಲಿ ಸೇನಾ ಸವಲತ್ತಿನ ಮೇಲೆ ನಡೆದಿರುವ ಎರಡನೇ ದಾಳಿ ಇದು.. ಸೇನಾ ಶಿಬಿರಕ್ಕೆ  ಪರಿಸ್ಥಿತಿ ನಿಯಂತ್ರಣಕ್ಕಾಗಿ ವಿಶೇಷ ಪಡೆಗಳನ್ನು ರವಾನಿಸಲಾಯಿತು.  ಸೈನಿಕರು ಹುತಾತ್ಮರಾಗಿರುವ ಬಗ್ಗೆ ರಕ್ಷಣಾ ಪಿಆರ್ಒ  ಮನಿಷ್ ಮೆಹ್ತಾ ಅವರು ರಾತ್ರಿ ಮಾಹಿತಿ ನೀಡಿದರು. ನಗ್ರೋಟಾದಿಂದ 70 ಕಿಮೀ ದೂರದ ಸಾಂಬಾ ಜಿಲ್ಲೆಯ ರಾಮಗಢ ಉಪವಿಭಾಗದ ಚಮಿಲಿಯಾಲ್ ಪ್ರದೇಶದಲ್ಲಿ ಸಂಭವಿಸಿದ ಇನ್ನೊಂದು ಗುಂಡಿನ ಘರ್ಷಣೆಯಲ್ಲಿ 4 ಮಂದಿ ನುಸುಳುಕೋರರನ್ನು ಕೊಲ್ಲಲಾಗಿದ್ದು, ಒಬ್ಬ ಡಿಐಜಿ ಸೇರಿದಂತೆ ಆರು ಮಂದಿ ಬಿಎಸ್ಎಫ್ ಯೋಧರು ಗಾಯಗೊಂಡರು. ನಗ್ರೋಟಾ ದಾಳಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಲಾಗಿದೆ. ದಾಳಿ ನಾಗರಿಕ ಪ್ರದೇಶಗಳನ್ನು ಗುರಿಯಾಗಿರಿಸಿ ನಡೆದ ದಾಳಿಯಲ್ಲ ಎಂದು ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಹೇಳಿದರು. ಮೂರರಿಂದ ನಾಲ್ಕು ಮಂದಿ ಇದ್ದ ಭಯೋತ್ಪಾದಕರ ಗುಂಪು ನಸುಕಿನ 3ರಿಂದ 5 ಗಂಟೆ ನಡುವಣ ವೇಳೆಯಲ್ಲಿ ಸೇನಾ ಶಿಬಿರದ ಮೇಲೆ ದಾಳಿ ನಡೆಸಿತು ಎಂದು ವರದಿಗಳು ಹೇಳಿದವು.
 2016: ಮೆಡಿಲ್ಲಿನ್: ಕಿರಿಯ ದರ್ಜೆಯ ಫುಟ್ಬಾಲ್ ಆಟಗಾರರನ್ನು ಹೊತ್ತೊಯ್ಯುತ್ತಿದ್ದ ವಿಮಾನ
ಕೊಲಂಬಿಯಾ ಸಮೀಪ ಪತನಗೊಂಡಿತು. ವಿಮಾನದಲ್ಲಿದ್ದವರಲ್ಲಿ 76 ಮಂದಿ ಸಾವನ್ನಪ್ಪಿದ್ದು, ಐವರನ್ನು ರಕ್ಷಿಸಲಾಗಿದೆ ಎಂದು ಮೆಡಿಲ್ಲಿನ್ ವ್ಯಾಪ್ತಿಯ ಪೊಲೀಸರು ಮಾಹಿತಿ ನೀಡಿದರು.  ವಿಮಾನದಲ್ಲಿ ಆಟಗಾರರು, ತಂಡದ ಅಧಿಕಾರಿಗಳು ಹಾಗೂ ವಿಮಾನ ಸೇವಾ ಸಿಬ್ಬಂದಿ ಸೇರಿ ಒಟ್ಟು 81 ಮಂದಿ ಸದಸ್ಯರು ಇದ್ದರು. ವಿಮಾನ ಬ್ರೆಜಿಲಿನಿಂದ ಕೊಲಂಬಿಯಾ ಕಡೆಗೆ ಪ್ರಯಾಣ ಬೆಳೆಸಿತ್ತು.  ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ ಎಂದು ಪ್ರಾಥಮಿಕ ವರದಿ ತಿಳಿಸಿತು. ಅಪಘಾತಕ್ಕೆ ತುತ್ತಾದ ವಿಮಾನ ಬ್ರಿಟಿಷ್ ಏರೋಸ್ಪೇಸ್ ಸಂಸ್ಥೆಗೆ  ಸೇರಿದ್ದಾಗಿದ್ದು, ಮಧ್ಯಾಹ್ನ 3.30 ಸುಮಾರಿಗೆ ಪ್ರಯಾಣ ಬೆಳೆಸಿತ್ತು. ತತ್ ಕ್ಷಣದ ಮಾಹಿತಿಯಂತೆ ಇಂಧನ ಕೊರತೆಯಿಂದಾಗಿ ದುರಂತ ಸಂಭವಿಸಿರಬೇಕೆನ್ನುವ ಶಂಕೆ ವ್ಯಕ್ತಗೊಂಡಿತು.
2016 : ನವದೆಹಲಿ: ಭ್ರಷ್ಟಾಚಾರ, ಕಪ್ಪುಹಣ, ನಕಲಿ ನೋಟು ಮಟ್ಟಹಾಕಲು ಅಧಿಕ ಮುಖಬೆಲೆಯ
ನೋಟುಗಳ ರದ್ಧತಿ ಆದೇಶ ಹೊರಡಿಸಲಾದ ನವೆಂಬರ್ 8ರಿಂದ ಡಿಸೆಂಬರ್ 31ರವರೆಗಿನ ತಮ್ಮ ಬ್ಯಾಂಕ್ ಖಾತಾ ವಹಿವಾಟುಗಳ ಸಂಪೂರ್ಣ ವಿವರವನ್ನು ಸಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿಯ ಎಲ್ಲ ಸಂಸತ್ ಸದಸ್ಯರು, ಶಾಸಕರಿಗೆ ಸೂಚನೆ ನೀಡಿದರು.  ತಮ್ಮ ಎಲ್ಲ ಬ್ಯಾಂಕಿಂಗ್ ವ್ಯವಹಾರಗಳ ವಿವರವನ್ನು ಜನವರಿ 1 ಒಳಗಾಗಿ ಬಿಜೆಪಿಯ ಎಲ್ಲ ಸಂಸತ್ ಸದಸ್ಯರು ಮತ್ತು ಎಲ್ಲ ರಾಜ್ಯಗಳ ವಿಧಾನ ಮಂಡಲಗಳ ಸದಸ್ಯರು ಪಕ್ಷದ ಅಧ್ಯಕ್ಷ ಅಮಿತ್ ಷಾ ಅವರಿಗೆ ಸಲ್ಲಿಸಬೇಕು ಎಂದು ಪ್ರಧಾನಿ ಸೂಚಿಸಿದರು. ನೋಟು ರದ್ದು ವಿಚಾರ ಬಗ್ಗೆ ಬಿಜೆಪಿ ಪ್ರಮುಖರಿಗೆ ಮುಂಚಿತವಾಗಿಯೇ ಮಾಹಿತಿ ನೀಡಲಾಗಿತ್ತು. ಆದ್ದರಿಂದ ಅವರು ತಮಗೆ ಬೇಕಾದ ಬಂದೋಬಸ್ತ್ ಮಾಡಿಕೊಂಡಿದ್ದಾರೆ ಎಂದು ವಿರೋಧ ಪಕ್ಷಗಳು ನಿರಂತರವಾಗಿ ಆಪಾದಿಸುತ್ತಿದ್ದು, ಹಿನ್ನೆಲೆಯಲ್ಲಿ ಮೋದಿ ಸೂಚನೆ ಮಹತ್ವ ಪಡೆಯಿತು.
 2016: ಗಾಂಧಿನಗರ: ಕಪ್ಪು ಹಣ, ಭ್ರಷ್ಟಾಚಾರ ಮತ್ತು ನಕಲಿ ನೋಟು ನಿಗ್ರಹಕ್ಕಾಗಿ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ರದ್ದು ನಿರ್ಣಯದ ಬಳಿಕ ಗುಜರಾತ್ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಪ್ರಚಂಡ ವಿಜಯ ಸಾಧಿಸಿತು. ಮಹಾರಾಷ್ಟ್ರದ ಚುನಾವಣೆಗಳಲ್ಲಿ ಹಿಂದಿನ ದಿನ ವಿಜಯಗಳಿಸಿದ ವರದಿಗಳ ಬೆನ್ನಲ್ಲೇ ಈದಿನ ಗುಜರಾತಿನಲ್ಲೂ ಬಿಜೆಪಿ ಪ್ರಚಂಡ ಜಯಭೇರಿ ಭಾರಿಸಿತು. ಗುಜರಾತಿನ 16 ಜಿಲ್ಲೆಗಳ ನಗರಸಭೆ, ಜಿಲ್ಲಾ ಪಂಚಾಯತಿಗಳ 126 ಸ್ಥಾನಗಳ ಪೈಕಿ 109 ಸ್ಥಾನಗಳನ್ನು ಬಿಜೆಪಿ ಗೆದ್ದಿತು. ಇವುಗಳ ಪೈಕಿ 40 ಸ್ಥಾನಗಳನ್ನು ಪಕ್ಷವು ಕಾಂಗ್ರೆಸ್ಸಿನಿಂದ ಕಿತ್ತುಕೊಂಡಿತು.  ಕಾಂಗ್ರೆಸ್ ಪಕ್ಷವು ಕೇವಲ 17 ಸ್ಥಾನಗಳನ್ನು ಗೆಲ್ಲಲು ಶಕ್ತವಾಯಿತು. ಇನ್ನೊಂದು ವರ್ಷದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಬೇಕಾಗಿರುವ ಗುಜರಾತಿನಲ್ಲಿ ಈದಿನದ ಚುನಾವಣಾ ಫಲಿತಾಂಶ ಬಿಜೆಪಿಗೆ ಬಲು ದೊಡ್ಡ ಹುಮ್ಮಸ್ಸನ್ನು ತಂದುಕೊಟ್ಟಿತು. ಭಾರತದ ಜನತೆ ನೋಟು ನಿಷೇಧವನ್ನು ಬೆಂಬಲಿಸಿದ್ದಾರೆ. ಎರಡು ರಾಜ್ಯಗಳಲ್ಲಿ ನಡೆದಿರುವ ಚುನಾವಣಾ ಫಲಿತಾಂಶಗಳು ದೇಶದ ಹಾಲಿ ಅಭಿಮತವನ್ನು ವ್ಯಕ್ತ ಪಡಿಸಿವೆ. ಜನತೆ ನಮ್ಮೊಂದಿಗಿದ್ದಾರೆ ಎಂಬುದರ ಅರಿವು ನಮಗೆ ಆಗಿದೆ ಎಂದು ಕೇಂದ್ರ ಸಚಿವ ಪ್ರಕಾಶ ಜಾವಡೇಕರ್ ನುಡಿದರು. ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಬಿಜೆಪಿಯು 147 ನಗರಸಭೆ ಮತ್ತು 17ಪಂಚಾಯತುಗಳ 3705 ಸ್ಥಾನಗಳ ಪೈಕಿ 851 ಸ್ಥಾನಗಳನ್ನು ಗೆದ್ದಿತ್ತು.
 2016: ನವದೆಹಲಿ: ಮದುವೆಯಾಗಿರಲಿ ಅಥವಾ ಮದುವೆಯಾಗಿರದೇ ಇರಲಿ, ಪುತ್ರನಿಗೆ ತನ್ನ ಹೆತ್ತವರ ಸ್ವಯಾರ್ಜಿತ ಮನೆಯಲ್ಲಿ ವಾಸಿಸುವ ಕಾನೂನುಬದ್ಧ ಹಕ್ಕು ಇಲ್ಲ, ಅವರ ಕೃಪೆಯ ಮೇರೆಗೆ ಮಾತ್ರವೇ ಆತ ಮನೆಯಲ್ಲಿ ವಾಸವಾಗಿರಬಹುದು ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿತು.  ಸೌಹಾರ್ದಯುತ ಬಾಂಧವ್ಯ ಇರುವವರೆಗೂ ಹೆತ್ತವರು ಮಗನಿಗೆ ತಮ್ಮ ಸ್ವಯಾರ್ಜಿತ ಮನೆಯಲ್ಲಿ ವಾಸವಾಗಿರಲು ಅವಕಾಶ ನೀಡಬಹುದು. ಆದರೆ ಅದರ ಅರ್ಥ ಜೀವಮಾನಪೂರ್ತಿ ಆತನ ಹೊರೆಯನ್ನು ಪಾಲಕರು ಹೊತ್ತುಕೊಳ್ಳಬೇಕು ಎಂದು ಅಲ್ಲ ಎಂದು ಹೈಕೋರ್ಟ್ ಸ್ಪಷ್ಟ ಪಡಿಸಿತು. ವಿಚಾರಣಾ ನ್ಯಾಯಾಲಯವು ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಒಬ್ಬ ವ್ಯಕ್ತಿ ಮತ್ತು ಆತನ ಪತ್ನಿ ಮಾಡಿದ್ದ ಮೇಲ್ಮನವಿಯನ್ನು ವಜಾ ಮಾಡುತ್ತಾ ದೆಹಲಿ ಹೈಕೋರ್ಟ್ ಮಹತ್ವದ ತೀರ್ಪನ್ನು ನೀಡಿತು. ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯವು ಮೇಲ್ಮನವಿದಾರನ ಹೆತ್ತವರ ಪರವಾಗಿ ತೀರ್ಪು ನೀಡಿತ್ತು. ತಮ್ಮ ಸ್ವಾಧೀನದಲ್ಲಿ ಇರುವ ಮನೆಯ ಮಹಡಿಯನ್ನು ತೆರವುಗೊಳಿಸುವಂತೆ ತನ್ನ ಪುತ್ರ ಹಾಗೂ ಸೊಸೆಗೆ ನಿರ್ದೇಶನ ನೀಡಬೇಕು ಎಂದು ಕೋರಿ ಹೆತ್ತವರು ವಿಚಾರಣಾ ನ್ಯಾಯಾಲಯದಲ್ಲಿ ಖಟ್ಲೆ ಹೂಡಿದ್ದರು. ಪಾಲಕರಿಬ್ಬರು ಹಿರಿಯ ನಾಗರಿಕರಾಗಿದ್ದು, ತಮ್ಮ ಜೊತೆಗೆ ವಾಸವಾಗಿರುವ ಮಗ ಮತ್ತು ಸೊಸೆ ತಮ್ಮ ಜೀವನವನ್ನು ನರಕವನ್ನಾಗಿ ಮಾಡಿದ್ದಾರೆ ಎಂದು ಹೆತ್ತವರು ನ್ಯಾಯಾಲಯದಲ್ಲಿ ದೂರಿದ್ದರು. ತಮಗೆ ತೊಂದರೆ ಕೊಡುತ್ತಿದ್ದ ಹಿನ್ನೆಲೆಯಲ್ಲಿ ತಮ್ಮ ಸ್ವಯಾರ್ಜಿತ ಆಸ್ತಿಯನ್ನು ತೆರವುಗೊಳಿಸುವಂತೆ ಪೊಲೀಸರಿಗೆ ದೂರು ನೀಡಿದ್ದಲ್ಲದೆ, ಸಾರ್ವಜನಿಕ ಪ್ರಕಟಣೆಯನ್ನು ನೀಡಲಾಗಿತ್ತು. ಬಳಿಕ ಅವರ ಕಿರುಕುಳ ಜಾಸ್ತಿಯಾಯಿತು ಎಂದು ಹೆತ್ತವರು ನ್ಯಾಯಾಲಯಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಆಪಾದಿಸಿದ್ದರು.
 2016: ನವದೆಹಲಿ: ಮೊಹಾಲಿಯಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ 8 ವಿಕೆಟ್ ಜಯ ಸಾಧಿಸಿತು. ಇದರೊಂದಿಗೆ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 2-0 ಮುನ್ನಡೆ ದಾಖಲಿಸಿತು. ತನ್ನ ಸೆಕೆಂಡ್ ಇನಿಂಗ್ಸಿನಲ್ಲಿ  238 ರನ್ ಗಳಿಸುವ ಮೂಲಕ ಇಂಗ್ಲೆಂಡ್ ನೀಡಿದ 103 ರನ್ ಗುರಿಯನ್ನು ಭಾರತ ಅನಾಯಾಸವಾಗಿ ಸಾಧಿಸಿತು. ಪಾರ್ಥಿವ್ ಪಟೇಲ್ ಅವರು 67 ರನ್ನುಗಳೊಂದಿಗೆ ಅಜೇಯವಾಗಿ ಉಳಿದರು. ರವಿಂದ್ರ ಜಡೇಜಾ ಅವರು ಮ್ಯಾನ್ ಆಫ್ ದಿ ಮ್ಯಾಚ್ ಹೆಗ್ಗಳಿಕೆಗೆ ಪಾತ್ರರಾದರು.

2016:  ನವದೆಹಲಿ: ವೈರಲ್ ಜ್ವರದಿಂದ ಅಸ್ವಸ್ಥರಾದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ದೆಹಲಿಯ ಸರ್ ಗಂಗಾರಾಮ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆಗಸ್ಟ್ ತಿಂಗಳಲ್ಲೂ ವೈರಲ್ ಜ್ವರ ಪರಿಣಾಮವಾಗಿ ಸೋನಿಯಾ ಗಾಂಧಿ ಅವರು ಹಲವಾರು ದಿನಗಳ ಕಾಲ ಆಸ್ಪತ್ರೆಗೆ ದಾಖಲಾಗಿದ್ದರು.
 2016: ಬೆಂಗಳೂರು: ದೇಶಾದ್ಯಂತ ತಲ್ಲಣ ಮೂಡಿಸಿದ್ದ 1.37 ಕೋಟಿ ರೂ. ಲೂಟಿ ಪ್ರಕರಣದ ಪ್ರಮುಖ ಆರೋಪಿ ಡಾಮ್ನಿಕ್ ಸೆಲ್ವರಾಜ್ ರಾಯ್ ನನ್ನು ಪೊಲೀಸರು  ಮುಂಜಾನೆ ಬಂಧಿಸಿದರು. ಬಾಣಸವಾಡಿಯಲ್ಲಿ ಪತ್ನಿ ಎಲ್ವಿನ್ಳನ್ನು ಬಂಧಿಸಿದ ಬೆನ್ನಲ್ಲೇ ಡಾಮ್ನಿಕ್ ರಾಯ್ನನ್ನೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾದರು.  ಬಂಧನಕ್ಕೊಳಗಾದ ಎಲ್ವಿನ್ಳಿಂದ ಪೊಲೀಸರು ಸೋಮವಾರವೇ 79.08 ಲಕ್ಷ ರೂ. ಜಪ್ತಿಮಾಡಿ, ತೀವ್ರ ವಿಚಾರಣೆಗೆ ಒಳಪಡಿಸಿದ್ದರು. ಅಲ್ಲದೇ ಲೂಟಿಗೆ ಒಂದು ವಾರ ಮೊದಲೇ ಸ್ಕೆಚ್ ಹಾಕಲಾಗಿತ್ತು ಎನ್ನುವುದನ್ನು ಒಪ್ಪಿಕೊಂಡಿದ್ದಾಳೆ ಎಂದು ಪೊಲೀಸರು ಹೇಳಿದರು. ಖಚಿತ ಮಾಹಿತಿ ಮೇರೆಗೆ ಸ್ಥಳದಲ್ಲಿ ಕಾದು ಕುಳಿತಿದ್ದ ಪೊಲೀಸರು ಕೆ.ಆರ್.ಪುರದ ಟಿನ್ ಫ್ಯಾಕ್ಟರಿ ಬಳಿ ಬಂಧಿಸಿದರು. ನವೆಂಬರ್ 23ರಂದು ಮಧ್ಯಾಹ್ನ ಕೆ.ಜಿ.ರಸ್ತೆ ಬ್ಯಾಂಕ್ ಆಫ್ ಇಂಡಿಯಾ ಆವರಣದಿಂದ 1.37 ಕೋಟಿ ರೂ. ತುಂಬಿದ್ದ ವಾಹನದೊಂದಿದೆ ಡಾಮ್ನಿಕ್ ಪರಾರಿಯಾಗಿದ್ದ. ಇದಾಗಿ ಕೆಲವೇ ಗಂಟೆಗಳಲ್ಲಿ ತನ್ನ ಪತ್ನಿ ಮತ್ತು ಮಗನೊಂದಿಗೆ ರಾಜ್ಯದಿಂದಲೇ ಕಾಲುಕಿತ್ತಿದ್ದ.
2016: ಮುಂಬೈ: ಮಹಿಳೆಯರು ದರ್ಗಾಗಳಿಗೆ ಪ್ರವೇಶ ಪಡೆಯಲು ಸ್ವತಂತ್ರರು ಎಂದು ಸುಪ್ರೀಂ ಕೋರ್ಟ್ತೀರ್ಪು ಪ್ರಕಟಿಸಿದ ನಂತರ ಈದಿನ  80 ಮಂದಿ ಮುಸ್ಲಿಂ ಮಹಿಳಾ ಹೋರಾಟಗಾರರ ಗುಂಪು ಪ್ರಖ್ಯಾತ ಹಾಜಿ ಅಲಿ ದರ್ಗಾ ಪ್ರವೇಶಿಸಿತು. ಮಹಿಳೆಯರು ದರ್ಗಾಗಳಿಗೆ ಪ್ರವೇಶ ಪಡೆಯುವುದು ಸಾಮಾನ್ಯವಾಗಬೇಕು. ದರ್ಗಾ ಪ್ರವೇಶಿಸಿ ನಮ್ಮ ಪ್ರಾರ್ಥನೆಯನ್ನು ಸಲ್ಲಿಸುವುದು ನಮ್ಮ ಹಕ್ಕುಎಂದು ಭಾರತೀಯ ಮುಸ್ಲಿಂ ಮಹಿಳಾ ಆಂದೋಲನದ ಸಹ ಸಂಸ್ಥಾಪಕಿ ನೂರ್ಜಹಾನ್ಎಸ್ ನಯಾಜ್ ಹೇಳಿದರು. ಸುಪ್ರೀಂ ಕೋರ್ಟ್ಅಕ್ಟೋಬರ್‌ 24 ರಂದು ದರ್ಗಾಗಳು ಮಹಿಳೆಯರಿಗೆ ಪ್ರವೇಶ ಅವಕಾಶ ಕಲ್ಪಿಸಬೇಕು ಎಂದು ತೀರ್ಪು ನೀಡಿತ್ತು. ಸಮುದಾಯದ ನಾಯಕರು ಹಾಗು ಟ್ರಸ್ಟ್ಮುಖ್ಯಸ್ಥರು ಸಾಂಪ್ರದಾಯಿಕ ನೀತಿನಿಯಮಗಳಲ್ಲಿ ಬದಲಾವಣೆಗಳನ್ನು ತರುವ ಮತ್ತು ಮಹಿಳೆಯರಿಗೆ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸುವ ಸಲುವಾಗಿ ನಾಲ್ಕು ವಾರಗಳ ಅವಕಾಶ ನೀಡುವಂತೆ ಕೇಳಿಕೊಂಡಿದ್ದರು. ‘ನಮ್ಮ ಹೋರಾಟ ಸಮಾನತೆಗಾಗಿ ಅದು ಕೊನೆಯಾಗುವುದು ಲಿಂಗ ತಾರತಮ್ಯಗಳ ಅಂತ್ಯದ ಜೊತೆಗೆ ಸುಪ್ರೀಂ ಕೋರ್ಟ್ತೀರ್ಪಿನಿಂದಾಗಿ ದರ್ಗಾ ಪ್ರವೇಶದ ಅವಕಾಶ ದೊರೆತಿರುವುದು ಸಂತಸ ತಂದಿದೆಎಂದು ನಯಾಜ್ ತಿಳಿಸಿದರು.

2016: ವರ್ಬೇನಿಯಾಇಟೆಲಿಯ ಪೀಡ್ಮೌಂಟ್ ಪ್ರದೇಶದಲ್ಲಿ ಕ್ರಿ.. 1899 ನವೆಂಬರ್‌ 29
ರಂದು ಜನಿಸಿದ ಎಮ್ಮಾ ಮೊರಾನೋ ಎಂಬುವವರು ಜಗತ್ತಿನ ಅತ್ಯಂತ ಹಿರಿಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 117ನೇ ವರ್ಷದ ಜನುಮದಿನದ ಸಂಭ್ರಮದಲ್ಲಿರುವ ಈಕೆ 19 ನೇ ಶತಮಾನದ ಏಕೈಕ ವ್ಯಕ್ತಿಯೆಂಬ ಗರಿಮೆಯನ್ನೂ ಹೊಂದಿದ್ದಾರೆ. ಮೊದಲ ಮಹಾಯುದ್ದ ಕಾಲದಲ್ಲಿ ರಕ್ತದ ಕೊರತೆಸಮಸ್ಯೆಯಿಂದ ಬಳಲಿದ್ದ ಎಮ್ಮಾ ತಮ್ಮ15ನೇ ವಯಸ್ಸಿನಿಂದಲೇ ಮಿತ ಆಹಾರ ಕ್ರಮವನ್ನು ರೂಢಿಸಿಕೊಂಡು, ಪ್ರತಿನಿತ್ಯವೂ ಕೇವಲ ಮೂರು ಮೊಟ್ಟೆ ಹಾಗೂ ಅಲ್ಪ ಪ್ರಮಾಣದ ಹಣ್ಣು ತರಕಾರಿಯನ್ನು ಸೇವಿಸುವುದರೊಂದಿಗೆ ಉತ್ತಮ ಆರೋಗ್ಯವನ್ನು ಕಾಪಾಡಿಕೊಂಡಿದ್ದಾರೆ. ‘ಪ್ರತಿನಿತ್ಯ ಅಲ್ಪ ಪ್ರಮಾಣದ ತರಕಾರಿ, ಹಣ್ಣು  ಹಾಗೂ ಮೊಟ್ಟೆಯ ಜೊತೆಗೆ ರಾತ್ರಿ ವೇಳೆಗೆ ಸ್ವಲ್ಪ ಚಿಕನ್ಸವಿಯುತ್ತಾರೆ. ಕೇವಲ ಮಿತ ಆಹಾರ ಸೇವನೆಯ ಹೊರತಾಗಿಯೂ ಉತ್ತಮ ಆರೋಗ್ಯ ಕಾಪಾಡಿಕೊಂಡಿರುವುದು ಆಶ್ಚರ್ಯದ ಸಂಗತಿಎಂದು ಎಮ್ಮಾ ಅವರ ಆರೋಗ್ಯದ ಗುಟ್ಟು ಬಿಚ್ಚಿಟ್ಟರು ಕಳೆದ 27 ವರ್ಷದಿಂದ ಹಿರಿಯಜ್ಜಿಗೆ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸೆ ನೀಡುತ್ತಿರುವ ಕಾರ್ಲೋ ಬಾವ. ತಮ್ಮ 39ನೇ ವಯಸ್ಸಿನಲ್ಲಿ ಸಾಂಸಾರಿಕ ಜೀವನದಲ್ಲಿ ಬೇಸರಗೊಂಡು ಪತಿಯಿಂದ ದೂರಾಗಿ ಒಬ್ಬಂಟಿಗರಾಗಿ  ಜೀವನ ಮುಂದುವರಿಸಿದ ಎಮ್ಮಾ 26ನೇ  ವಯಸ್ಸಿನಲ್ಲಿ ವಿವಾಹವಾಗಿದ್ದರು.

2014: ಬೆಂಗಳೂರು: ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಿರ್ವಿುಸಿರುವ ಡಾ. ರಾಜ್ ಸ್ಮಾರಕವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಈದಿನ ಲೋಕಾರ್ಪಣೆ ಮಾಡಿದರು. ಸಮಾಧಿಯಿಂದ ತುಸು ದೂರದಲ್ಲಿ ಪ್ರತಿಷ್ಠಾಪನೆಗೊಂಡಿರುವ ಡಾ. ರಾಜ್ ಅವರ ಕಂಚಿನ ಪುತ್ಥಳಿಯನ್ನು ಅನಾವರಣ ಮಾಡಲಾಯಿತು. ಡಾ. ರಾಜ್​ಕುಮಾರ್ ನಡೆದು ಬಂದ ಹಾದಿ ಚಿತ್ರ ಸಂಪುಟ ಪುಸ್ತಕವನ್ನು ಸೂಪರ್ ಸ್ಟಾರ್ ರಜನಿಕಾಂತ್ ಬಿಡುಗಡೆ ಮಾಡಿದರು ಮತ್ತು ರಾಜ್​ಕುಮಾರ್ ಕುರಿತ ಸಾಕ್ಷ್ಯಚಿತ್ರವನ್ನು ಮೆಗಾಸ್ಟಾರ್ ಚಿರಂಜೀವಿ ಬಿಡುಗಡೆ ಮಾಡಿದರು. ರಾಜ್ಯ ಸರ್ಕಾರದ ಸಚಿವರು, ಶಾಸಕರು, ಲೋಕಸಭಾ ಸದಸ್ಯರು, ಚಿತ್ರರಂಗದ ಗಣ್ಯರು ಹಾಜರಿದ್ದರು.

2014: ಕೈರೋ: ಈಜಿಪ್ಟಿನ ಪದಚ್ಯುತ ಅಧ್ಯಕ್ಷ ಹೊಸ್ನಿ ಮುಬಾರಕ್‌ ವಿರುದ್ಧ ದಾಖಲಾಗಿದ್ದ ಕೊಲೆ ಪ್ರಕರಣ ಸಾಬೀತಾಗದ ಹಿನ್ನೆಲೆಯಲ್ಲಿ ಸ್ಥಳೀಯ ನ್ಯಾಯಾಲಯ ಅವರನ್ನು ದೋಷಮುಕ್ತಗೊಳಿಸಿತು. 2011ರಲ್ಲಿ ನಡೆದ ಕ್ಷಿಪ್ರಕ್ರಾಂತಿಯ ವೇಳೆ ನೂರಾರು ಪ್ರತಿಭಟನಕಾರರನ್ನು ಹತ್ಯೆಗೈದ ಆರೋಪವನ್ನು ಮುಬಾರಕ್‌ ವಿರುದ್ಧ ಹೊರಿಸಲಾಗಿತ್ತು. ಈ ಹಿಂದೆ ನ್ಯಾಯಾಲಯ ಮುಬಾರಕ್‌ ವಿರುದ್ಧದ ಆರೋಪವನ್ನು ಎತ್ತಿ ಹಿಡಿದು ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಇದೇ ವೇಳೆ ಮುಬಾರಕ್‌ ಅವರ
ಕಮಾಂಡರ್‌ಗಳನ್ನೂ ದೋಷಮುಕ್ತಿಗೊಳಿಸಿರುವ ನ್ಯಾಯಾಧೀಶ ಕಾಮೆಲ್‌ ಅಲ್‌-ರಶೀದ್ ಅವರು ಇಸ್ರೇಲಿಗೆ ಗ್ಯಾಸ್‌ನ್ನು ರಫ್ತು ಮಾಡಿದ ಹಿನ್ನೆಲೆಯಲ್ಲಿ ಹೊರಿಸಲಾಗಿದ್ದ ಭಷ್ಟಾಚಾರ ಪ್ರಕರಣದಲ್ಲಿಯೂ ಮುಬಾರಕ್‌ ಅವರನ್ನು ನಿರ್ದೋಷಿ ಎಂದು ಸಾರಿದರು. ಹೋಸ್ನಿ ಮುಬಾರಕ್‌ ಅವರ ಸಂಪುಟದಲ್ಲಿ ಒಳಾಡಳಿತ ಖಾತೆಯ ಸಚಿವರಾಗಿದ್ದ ಹಬೀಬ್‌ ಅಲ್‌-ಅಡ್ಲಿà ಸೇರಿದಂತೆ ಮುಬಾರಕ್‌ ಅವರ ಏಳು ಮಂದಿ ಮಾಜಿ ಕಮಾಂಡರ್‌ಗಳ ವಿರುದ್ಧ ದಾಖಲಿಸಲಾಗಿದ್ದ ಸರಕಾರ ವಿರೋಧಿ ಪ್ರತಿಭಟನಕಾರರ ಹತ್ಯೆ ಪ್ರಕರಣದಲ್ಲಿ ಅಮಾಯಕರಾಗಿದ್ದಾರೆ ಎಂದು ನ್ಯಾಯಾಧೀಶರು ತೀರ್ಪಿತ್ತರು. ಮುಬಾರಕ್‌ ಅವರ ಈರ್ವರು ಪುತ್ರರ ವಿರುದ್ಧ ದಾಖಲಾಗಿದ್ದ ಎಲ್ಲಾ ಭ್ರಷ್ಟಾಚಾರ ಪ್ರಕರಣಗಳಿಂದಲೂ ನ್ಯಾಯಾಲಯ ದೋಷಮುಕ್ತಗೊಳಿಸಿತು. 2011ರಲ್ಲಿ ನಡೆದ ಕ್ರಾಂತಿಯ ವೇಳೆ ಸರಕಾರ ವಿರೋಧಿ ಪ್ರತಿಭಟನಕಾರರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ 2012ರ ಜೂನ್‌ನಲ್ಲಿ ಮುಬಾರಕ್‌ ಮತ್ತವರ ಸಹಚರರನ್ನು ದೋಷಿಗಳೆಂದು ಸಾರಿದ್ದ ನ್ಯಾಯಾಲಯ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು. ಈ ತೀರ್ಪಿನ ವಿರುದ್ಧ ಮುಬಾರಕ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಇದೀಗ ನ್ಯಾಯಾಲಯ ಪುರಸ್ಕರಿಸಿ ಕೆಳ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ರದ್ದುಗೊಳಿಸಿದ್ದೇ ಅಲ್ಲದೆ ದೋಷಮುಕ್ತಗೊಳಿಸಿತು. ಆದರೆ ಸಾರ್ವಜನಿಕ ನಿಧಿಯನ್ನು ದುರುಪಯೋಗಪಡಿಸಿಕೊಂಡ ಪ್ರಕರಣದಲ್ಲಿ ಮುಬಾರಕ್‌ ಇದೀಗ ದಕ್ಷಿಣ ಕೈರೋದ ಹೊರಭಾಗದಲ್ಲಿರುವ ಮಿಲಿಟರಿ ಆಸ್ಪತ್ರೆಯಲ್ಲಿ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ.

2014: ರಾಯ್ಸೆನ್: ಮಧ್ಯಪ್ರದೇಶದ ಭೋಪಾಲ್​ನ ರಾಯ್ಸೆನ್ ಕೈಗಾರಿಕಾ ಪ್ರದೇಶದಲ್ಲಿ ಕ್ಲೋರಿನ್ ಅನಿಲ ಸೋರಿಕೆಯಾಗಿ 39 ಕಾರ್ವಿುಕರು ಅಸ್ವಸ್ಥಗೊಂಡ ಘಟನೆ ಈದಿನ ಮಧ್ಯಾಹ್ನ ಘಟಿಸಿತು. ಘಟನೆಯಲ್ಲಿ ಅಸ್ವಸ್ಥಗೊಂಡವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ದೃಷ್ಟಿಯ ಮೇಲೆ ಪರಿಣಾಮ ಬೀರಿರುವ ಸಾಧ್ಯತೆ ಇದೆ ಎನ್ನಲಾಯಿತು. ಅನಿಲ ಸೋರಿಕೆಯಾಗಿ ಕೆಲ ಗಂಟೆಗಳಲ್ಲೇ ಕಣ್ಣು ಉರಿ ಮತ್ತು ವಾಂತಿ ಸಮಸ್ಯೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಎಲ್ಲಾ ಕಾರ್ವಿುಕರನ್ನು ಆಸ್ಪತ್ರೆಗೆ ಸೇರಿಸಲಾಯಿತು ಎಂದು ಸ್ಥಳೀಯರು ಮಾಹಿತಿ ನೀಡಿದರು.

2014: ಬೀಜಿಂಗ್: ಕ್ಸಿನ್​ಜಿಯಾಂಗ್​ನ ವಾಯವ್ಯ ಭಾಗದಲ್ಲಿರುವ ಸಾಕೆ ಕೌಂಟಿಯಲ್ಲಿ ಉಗ್ರಗಾಮಿಗಳ ಬಾಂಬ್ ದಾಳಿಯಲ್ಲಿ ದಾಳಿಕೋರರು ಸೇರಿ 15ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದರು. 10ಕ್ಕೂ ಹೆಚ್ಚು ಮಂದಿ ತೀವ್ರವಾಗಿ  ಗಾಯಗೊಂಡರು. ವಾಹನದಲ್ಲಿ ಸ್ಥಳಕ್ಕೆ ಆಗಮಿಸಿದ ದಾಳಿಕೋರರು ಜನಸೇರುವ ಸಮಯ ನೋಡಿ ಈ ಕೃತ್ಯವೆಸಗಿದರು. ದಾಳಿಯಲ್ಲಿ ಸಾವನ್ನಪ್ಪಿರುವವರಲ್ಲಿ 10ಕ್ಕೂ ಹೆಚ್ಚು ಮಂದಿ ದಾಳಿಕೋರರು ಸೇರಿದ್ದಾರೆ ಎನ್ನಲಾಯಿತು. ಉಯಿಗರ್ ಮುಸ್ಲಿಮ ಸಮೂದಾಯದವರೇ ಹೆಚ್ಚಿರುವ ಈ ಭಾಗದಲ್ಲಿ ವಲಸಿಗರಾದ ಹಾನ್ ಚೀನಿಸ್ ಮತ್ತು ಸ್ಥಳೀಯರ ನಡುವೆ ಸಂಘರ್ಷವಿದ್ದು, ಈ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಯಿತು. ಈಸ್ಟ್ ಟರ್ಕಿಸ್ಥಾನ್ ಇಸ್ಲಾಮಿಕ್ ಕೂಡ ಹಿಂಸಾತ್ಮಕ ದಾಳಿ ನಡೆಸಿದ ಉದಾಹರಣೆಗಳಿದ್ದು, ಈಗ ಈ ಸಂಘಟನೆ ಕೂಡ ನಡೆಸಿರಬಹುದಾದ ಸಾಧ್ಯತೆ ಇದೆ ಎಂದು ಶಂಕಿಸಲಾಯಿತು.

2014:ನವದೆಹಲಿ: ಹಾಡಹಗಲೇ ಖಾಸಗಿ ಬ್ಯಾಂಕ್​ನ ವಾಹನದ ಮೇಲೆ ದಾಳಿ ನಡೆಸಿದ ದುಷ್ಕರ್ವಿುಗಳು 1.5 ಕೋಟಿಯಷ್ಟು ಹಣವನ್ನು ದೋಚಿದ ಘಟನೆ ನವದೆಹಲಿಯಲ್ಲಿ ನಡೆದಿದ್ದು, ದೆಹಲಿಯ ಪ್ರಮುಖ ನಗರಗಳಲ್ಲಿ ನಾಕಾಬಂದಿ ಹಾಕಲಾಯಿತು. ಘಟನೆ ಜನತೆಯಲ್ಲಿ ಸಾಕಷ್ಟು ಭಯ ಹುಟ್ಟಿಸಿತು. ಎಟಿಎಂಗೆ ಹಣ ಭರ್ತಿ ಮಾಡಲೇಂದು ಬಂದಿದ್ದ ವಾಹನದ ಮೇಲೆ ದಾಳಿ ನಡೆಸಿದ ದರೋಡೆಕೋರರು ತಡೆಯಲು ಬಂದ ಬ್ಯಾಂಕ್ ಮತ್ತು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದರು. ಆದರೂ ಜೀವದ ಹಂಗಿಲ್ಲದೇ ಅವರನ್ನು ತಡೆಯಲು ಮುಂದಾದಾಗ ಹಠಾತ್ ಗುಂಡಿನ ದಾಳಿ ನಡೆಸಿ ಅಂದಾಜು ಒಂದುವರೆ ಕೋಟಿ ರೂ. ದೋಚಿ ಪರಾರಿಯಾದರು


2014: ಹುಬ್ಬಳ್ಳಿ:  ಹುಬ್ಬಳ್ಳಿ ನಗರದ ಚುಕ್​ಬುಕ್ ಸಂಸ್ಥೆಯಿಂದ ಜೂ.28ರಂದು ಆಯೋಜಿಸಿದ್ದ ದೇಶದ ಅತೀ ಉದ್ದನೆಯ ಮಕ್ಕಳ ರೈಲು ಬಂಡಿಯು 2015ರ ಲಿಮ್ಕಾ ರಾಷ್ಟ್ರೀಯ ದಾಖಲೆ ಪುಸ್ತಕದ ಪ್ರಶಂಸೆಗೆ ಪಾತ್ರವಾಯಿತು. ನಗರದ ವಿವಿಧ ಶಾಲೆಗಳ 6ರಿಂದ 12 ವರ್ಷದ 1,600 ಮಕ್ಕಳು ಗೋಕುಲ ರಸ್ತೆಯಲ್ಲಿ 700 ಮೀ. ಉದ್ದದ ರೈಲಿನಂತೆ ಸಂಚರಿಸಿ ಈ ಸಾಧನೆಗೆ ಕಾರಣರಾಗಿದ್ದಾರೆ ಎಂದು ಸಂಸ್ಥೆಯ ಸಹ ಸಂಸ್ಥಾಪಕ ಅರುಣ ಚಿಕ್ಕೊಪ್ಪ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. ಮಕ್ಕಳ ಒಳ ಉಡುಪುಗಳ ತಯಾರಿಕೆ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಚುಕ್​ಬುಕ್ ಸಂಸ್ಥೆ ಈ ವಿಶಿಷ್ಟ ಕಾರ್ಯಕ್ರಮ ಮೂಲಕ ಹುಬ್ಬಳ್ಳಿಗೆ ಕೀರ್ತಿ ತಂದಿದ್ದು, ಇನ್ನು ಮುಂದೆ ಸಂಸ್ಥೆಯ ಲಾಭಾಂಶದಲ್ಲಿ ಶೇ.10 ಹಣವನ್ನು ಸಮಾಜ ಸೇವೆಗೆ ಮೀಸಲಿಡಲಾಗುವುದು ಎಂದು ಚಿಕ್ಕೊಪ್ಪ ಹೇಳಿದರು.

2014: ಬೆಂಗಳೂರು: ಬೆಲ್ಜಿಯಂನ ವೆಂಡಿ ಜಾನ್ಸ್ ಐಬಿಎಸ್​ಎಫ್ ವಿಶ್ವ ಸ್ನೂಕರ್ ಚಾಂಪಿಯನ್​ಷಿಪ್​ನ ಮಹಿಳಾ ವಿಭಾಗದಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಇದರಿಂದ ವೆಂಡಿ ಜಾನ್ಸ್ 3ನೇ ಬಾರಿಗೆ ವಿಶ್ವ ಸ್ನೂಕರ್ ಚಾಂಪಿಯನ್ ಕಿರೀಟಕ್ಕೆ ಮುತ್ತಿಕ್ಕಿದರು. ಈ ಮೊದಲು 2006 ಹಾಗೂ 2012ರಲ್ಲಿ ಪ್ರಶಸ್ತಿ ಗೆದ್ದಿದ್ದರು. ಶ್ರೀ ಕಂಠೀರವ ಒಳಾಂಗಣ ಸ್ಟೇಡಿಯಂನಲ್ಲಿ ಈದಿನ ನಡೆದ 7 ಫ್ರೇಮ್ಳ ಫೈನಲ್ ಪಂದ್ಯದಲ್ಲಿ ವೆಂಡಿ ಜಾನ್ಸ್ 5-2 (31-76, 72-2, 25-65, 74-35, 72-32, 82-23, 60-31)ರಿಂದ ರಷ್ಯಾದ ಅನಾಸ್ತೇಷಿಯಾ ನೆಚಾವೆಯಾ ವಿರುದ್ಧ ಜಯ ಸಾಧಿಸಿದರು. 1998ರಿಂದಲೂ ಬೆಲ್ಜಿಯಂನ ಸ್ನೂಕರ್​ನಲ್ಲಿ ಪಾರಮ್ಯ ಮೆರೆಯುತ್ತಿರುವ ವೆಂಡಿ ಜಾನ್ಸ್, ಅಲ್ಲಿನ ರಾಷ್ಟ್ರೀಯ ಚಾಂಪಿಯನ್​ಷಿಪ್​ನಲ್ಲಿ ಸತತವಾಗಿ 4 ಬಾರಿಗೆ ಸೇರಿದಂತೆ ಒಟ್ಟು 12 ಬಾರಿ ಚಾಂಪಿಯನ್​ಪಟ್ಟ ಅಲಂಕರಿಸಿದ್ದಾರೆ.

2014: ಇಸ್ಲಾಮಾಬಾದ್‌: ಪಾಕಿಸ್ಥಾನದ ವಾಯವ್ಯ ಪ್ರಾಂತ್ಯದಲ್ಲಿನ ಉಗ್ರರ ಅಡಗುದಾಣಗಳನ್ನು ಗುರಿಯಾಗಿಸಿ ಪಾಕಿಸ್ಥಾನಿ ವಾಯುಪಡೆಯ ಸಮರ ವಿಮಾನಗಳು ನಡೆಸಿದ ವಾಯು ದಾಳಿಗಳಿಗೆ ಕನಿಷ್ಠ 11 ಉಗ್ರರು ಬಲಿಯಾದರು. ಖೈಬರ್‌ ಬುಡಕಟ್ಟು ಜಿಲ್ಲೆಯ ತಿರಾಹ್‌ ಕಣಿವೆ ಪ್ರದೇಶದಲ್ಲಿನ ತಾಲಿಬಾನಿಗಳೊಂದಿಗೆ ನಂಟು ಹೊಂದಿರುವ ಉಗ್ರರ ಹಲವು ಅಡಗುದಾಣಗಳನ್ನು ಗುರಿಯಾಗಿಸಿ ಪಾಕಿಸ್ಥಾನ ಸೇನೆಯ ಸಮರ ವಿಮಾನಗಳು ದಾಳಿ ನಡೆಸಿದುವು. ತಾರಿಕ್‌ ಅಫ್ರಿದಿ ಉಗ್ರಗಾಮಿ ಗುಂಪಿಗೆ ಸೇರಿದ ಎಂಟು ಮಂದಿ ಉಗ್ರರು ಮತ್ತು ಲಷ್ಕರೆ ಇಸ್ಲಾಮ್‌ಗೆ ಸೇರಿದ ಮೂವರು ಉಗ್ರರು ಈ ದಾಳಿಯಲ್ಲಿ ಹತರಾದರು. ಈ ಪ್ರದೇಶದಲ್ಲಿನ ಉಗ್ರರ ಹಲವಾರು ಅಡಗುದಾಣಗಳನ್ನು ಸಂಪೂರ್ಣವಾಗಿ ನಾಶ ಪಡಿಸಲಾಗಿದೆ ಎಂದು ಭದ್ರತಾ ಪಡೆಯ ಅಧಿಕಾರಿಗಳು ತಿಳಿಸಿದರು.

2008: ಎರಡೂವರೆ ದಿನಗಳ ಕಾಲ ಮುಂಬೈ ಮಹಾನಗರವನ್ನು ಭಯದ ನೆರಳಿಗೆ ತಳ್ಳಿದ್ದ ಭಯೋತ್ಪಾದಕರನ್ನು ಸತತ ಕಾರ್ಯಾಚರಣೆ ಬಳಿಕ ಈದಿನ ಬೆಳಿಗ್ಗೆ 8ರ ಹೊತ್ತಿಗೆ ಸಂಪೂರ್ಣ ಸದೆ ಬಡಿಯುವಲ್ಲಿ ಕಮಾಂಡೋಗಳು ಯಶಸ್ವಿಯಾದರು. ಅಮೆರಿಕದ ಅವಳಿ ಕಟ್ಟಡ ನಾಶದ ರೀತಿಯಲ್ಲಿ ತಾಜ್ ಹೋಟೆಲನ್ನೇ ಸಂಪೂರ್ಣ ಧ್ವಂಸಗೊಳಿಸುವ ಮತ್ತು ಕನಿಷ್ಠ 5 ಸಾವಿರ ಜನರನ್ನು ಕೊಲ್ಲುವ ಹುನ್ನಾರವನ್ನು ಉಗ್ರರು ರೂಪಿಸಿದ್ದು ಇದರೊಂದಿಗೇ ಬಯಲಿಗೆ ಬಂತು. ತಾಜ್ ಹೋಟೆಲಿನಲ್ಲಿ ಕೇವಲ ಒಬ್ಬ ಉಗ್ರ ಮಾತ್ರ ಇದ್ದಾನೆ ಎಂಬ ನಂಬಿಕೆಯನ್ನು ಹುಸಿಗೊಳಿಸಿ, ಮೂವರು ಉಗ್ರರನ್ನು ಅತ್ಯಂತ ಯೋಜನಾ ಬದ್ಧವಾಗಿ ಮುಗಿಸುತ್ತ ಬಂದ ಎನ್‌ಎಸ್‌ಜಿ ಕಮಾಂಡೋಗಳು, ಬೆಳಿಗ್ಗೆ 8 ಗಂಟೆಯ ಹೊತ್ತಿಗೆ ವಿಜಯದ ನಗೆ ಬೀರಿದರು. ಉಗ್ರರ ಅಟ್ಟಹಾಸಕ್ಕೆ ಸಿಲುಕಿ 22 ಮಂದಿ ವಿದೇಶಿಯರು, 15 ಮಂದಿ ಮಹಾರಾಷ್ಟ್ರ ಪೊಲೀಸರು, ಇಬ್ಬರು ಎನ್‌ಎಸ್‌ಜಿ ಕಮಾಂಡೋಗಳು, 141 ಮಂದಿ ನಾಗರಿಕರ ಸಹಿತ ಒಟ್ಟು 183 ಮಂದಿ ಪ್ರಾಣ ಕಳೆದುಕೊಂಡು 327 ಮಂದಿ ಗಾಯಗೊಂಡರು.

2008: ಮುಂಬೈ ನಗರದಲ್ಲಿ ನಡೆದ 60 ಗಂಟೆಗಳ ಕಾಲದ ಭಯೋತ್ಪಾದನಾ ದಾಳಿಯಿಂದಾಗಿ, ದೇಶದ ಈ ವಾಣಿಜ್ಯ ರಾಜಧಾನಿಗೆ ರೂ 4000 ಕೋಟಿ ಯಷ್ಟು ನಷ್ಟದ ಹೊಡೆತ ಬಿದ್ದಿದೆ ಎಂದು  ಉದ್ಯಮ ಪರಿಣತರು ತಿಳಿಸಿದರು.

2008: ಕರ್ನಾಟಕ ರಾಜ್ಯವನ್ನು ತಲ್ಲಣಗೊಳಿಸಿದ್ದ 2000ನೇ ಇಸವಿಯ ಸರಣಿ ಇಗರ್ಜಿ (ಚರ್ಚ್) ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿ 11 ಆರೋಪಿಗಳಿಗೆ ಮರಣದಂಡನೆ ವಿಧಿಸಿತು. ಉಳಿದ 12 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ನ್ಯಾಯಾಧೀಶರಾದ ಎಸ್.ಎಂ.ಶಿವನಗೌಡರ್ ತೀರ್ಪು ನೀಡಿದರು. ಭಯೋತ್ಪಾದನೆ ಪ್ರಕರಣದಲ್ಲಿ 11 ಮಂದಿಗೆ ಮರಣದಂಡನೆ ವಿಧಿಸಿರುವುದು ಇದೇ ಮೊದಲು. ದೀನದಾರ್ ಅಂಜುಮನ್ ಸಂಘಟನೆಯ ಸದಸ್ಯರಾದ ಆರೋಪಿಗಳು ಬೆಂಗಳೂರು, ಗುಲ್ಬರ್ಗ, ಹುಬ್ಬಳ್ಳಿಯ ಇಗರ್ಜಿಗಳಲ್ಲಿ (ಚರ್ಚ್) ಸ್ಫೋಟ ನಡೆಸಿದ್ದರು. ಶಿಕ್ಷೆಗೆ ಒಳಗಾದವರ ವಿರುದ್ಧ ಭಾರತೀಯ ದಂಡ ಸಂಹಿತೆಯ 121 (ದೇಶದ ವಿರುದ್ಧ ಸಮರ) ಮತ್ತು ಇತರ ಕಲಮುಗಳ ಅಡಿ ಪ್ರಕರಣ ದಾಖಲಿಸಲಾಗಿತ್ತು. 'ಇದೊಂದು ಐತಿಹಾಸಿಕ ತೀರ್ಪು. ಇದರ ಮೂಲಕ ಸಮಾಜಘಾತುಕರಿಗೆ ನ್ಯಾಯಾಧೀಶರು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಮುಂಬೈ ಸ್ಫೋಟ ಘಟನೆಯ ಹಿನ್ನೆಲೆಯಲ್ಲಿ ಈ ತೀರ್ಪು ಮಹತ್ವದ್ದು' ಎಂದು ವಿಶೇಷ ಪಬಿಕ್ಲ್ ಪ್ರಾಸೆಕ್ಯೂಟರ್ ಎಚ್.ಎನ್. ನಿಲೋಗಲ್ ಹೇಳಿದರು. ಸರಣಿ ಇಗರ್ಜಿ (ಚರ್ಚ್) ಸ್ಪೋಟ ಪ್ರಕರಣದ ತನಿಖಾ ತಂಡಕ್ಕೆ 8 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿದೆ ಎಂದೂ ಅವರು ಹೇಳಿದರು. ಹಾಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಆರ್.ಶ್ರೀಕುಮಾರ್, ಗುಪ್ತಚರದಳ ಎಡಿಜಿಪಿ ಜ್ಯೋತಿ ಪ್ರಕಾಶ್ ಮಿರ್ಜಿ, ಸಿಓಡಿ ಐಜಿಪಿ ಎಚ್.ಸಿ.ಕಿಶೋರಚಂದ್ರ, ಬೆಂಗಳೂರು ನಗರ ಹೆಚ್ಚುವರಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ಎಂ.ಆರ್.ಪೂಜಾರ್, ಮೈಸೂರು ನಗರ (ಕಾನೂನು ಮತ್ತು ಸುವ್ಯವಸ್ಥೆ) ಡಿಸಿಪಿ ವಿ.ಎಸ್.ಡಿಸೋಜ, ಗುಪ್ತದಳ ಮಂಗಳೂರು ಎಸ್ಪಿ ಮಹಂತೇಶ್, ನಿವೃತ್ತ ಡಿವೈಎಸ್ಪಿ ಹಿರೇಮಠ್, ನಿವೃತ್ತ ಎಸ್ಪಿ ಅಪ್ಪಣ್ಣ ಅವರ ತಂಡ ಪ್ರಕರಣದ ತನಿಖೆ ನಡೆಸಿತ್ತು. ಸರಣಿ ಇಗರ್ಜಿ (ಚರ್ಚ್) ಸ್ಫೋಟ ಪ್ರಕರಣಕ್ಕೆ ಮರಣದಂಡನೆಗೆ ಗುರಿಯಾದವರು: ಬೆಂಗಳೂರಿನ ಮಹಮ್ಮದ್ ಇಬ್ರಾಹಿಂ (40), ಅಮಾನತ್ ಹುಸೇನ್ ಮುಲ್ಲಾ (58), ಚಿಕ್ಕಬಳ್ಳಾಪುರದ ಅಬ್ದುಲ್ ರಹಮಾನ್ ಸೇಠ್ (50), ಹುಬ್ಬಳ್ಳಿಯ ಸೈಯದ್ ಮುನಿರುದ್ದೀನ್ ಮುಲ್ಲಾ (40), ಆಂಧ್ರಪ್ರದೇಶದವರಾದ ಹಸ್ನುಜಾಮಾ (55), ಶೇಖ್ ಹಷಂ ಅಲಿ (30), ಮಹಮ್ಮದ್ ಶಫುದ್ದೀನ್ (37), ಮಹಮ್ಮದ್ ಅಖಿಲ್ ಅಹಮ್ಮದ್ (29), ಇಜಹಾರ್ ಬೇಗ್ (32), ಸೈಯದ್ ಅಬ್ಬಾಸ್ ಅಲಿ (28), ಮಹಮ್ಮದ್ ಖಾಲಿದ್ ಚೌದರಿ (32). ಜೀವಾವಧಿ ಶಿಕ್ಷೆಗೆ ಗುರಿಯಾದವರು: ಚಿಕ್ಕಬಳ್ಳಾಪುರದ ಮಹಮ್ಮದ್ ಸಿದ್ದಿಕಿ (45), ಆಂಧ್ರಪ್ರದೇಶದ ಮಹಮ್ಮದ್ ಡಿ ಫಾರೂಕ್ ಅಲಿ (30), ಅಬ್ದುಲ್ ಹಬೀಬ್ (48), ಷಂಷುಜಮಾ (49), ಶೇಖ್ ಫರ್ದೀನ್ ವಲಿ (45), ಸೈಯದ್ ಅಬ್ದುಲ್ ಖಾದರ್ ಜಿಲಾನಿ (36), ಮಹಮ್ಮದ್ ಜಿಯಾಸುದ್ದೀನ್ (35), ಹುಬ್ಬಳ್ಳಿಯ ರಿಷ್ ಹಿರೇಮಠ್ (40), ಕೊಕಟನೂರಿನ ಬಷೀರ್ ಅಹಮ್ಮದ್ (52), ಮಹಾರಾಷ್ಟ್ರದ ಮಹಮ್ಮದ್ ಹುಸೇನ್ (45), ಭಟಕುರ್ಕಿಯ ಸಾಂಗಿ ಬಲಬಾಷಾ (45) ಮತ್ತು ಮೀರಾಸಾಬ್ ಕೌಜಲಗಿ (49). ತಲೆಮರೆಸಿಕೊಂಡ ಭಯೋತ್ಪಾದಕರು: ಜಿಯಾವುಲ್ ಹಸನ್ ಮತ್ತು ಆತನ ಮಕ್ಕಳಾದ ಸೈಯದ್ ಖಾಲಿದ್ ಪಾಷಾ, ಜಯೇದ್ ಉಲ್ ಹಸನ್, ಶಬಿ ಉಲ್ ಹಸನ್, ಖಲೀಲ್ ಪಾಷಾ ಇವರು ಪಾಕಿಸ್ಥಾನದಲ್ಲಿ ತಲೆ ಮರೆಸಿಕೊಂಡಿದ್ದಾರೆ ಎಂದು ನಂಬಲಾಯಿತು. ಶೇಖ್ ಅಮಿರ್ ಮತ್ತು ಚಾಹಬ್ ಸಹ ನಾಪತ್ತೆಯಾದವರಲ್ಲಿ ಒಬ್ಬ.

2008: ನಿಶಾ ಚಂಡ ಮಾರುತದ ಪರಿಣಾಮವಾಗಿ  ತಮಿಳುನಾಡಿನಲ್ಲಿ ಐದು ದಿನಗಳಿಂದ ಸುರಿದ ಭಾರಿ  ಮಳೆಗೆ ಈವರೆಗೆ  ಒಟ್ಟು 103 ಜೀವಗಳು ಬಲಿಯಾಗಿವೆ ಎಂದು ತಮಿಳುನಾಡು ಮುಖ್ಯಮಂತ್ರಿ ಎಂ. ಕರುಣಾನಿಧಿ ಹೇಳಿದರು. ಭಾರಿ ಮಳೆಗೆ 450ಕ್ಕೂ ಹೆಚ್ಚು ಜಾನುವಾರುಗಳೂ ಪಾಣ ಕಳೆದುಕೊಂಡಿದ್ದು, 50,890 ಮನೆಗಳು ಹಾನಿಗೊಂಡಿವೆ ಎಂದು ಅವರು ನುಡಿದರು.

2008: ಬ್ರೆಜಿಲ್ ದೇಶಾದ್ಯಂತ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 100ಕ್ಕೆ ಏರಿತು.

2008:  ದಕ್ಷಿಣ ಆಫ್ಘಾನಿಸ್ಥಾನದಲ್ಲಿ ಆಫ್ಘನ್ ಯೋಧರು ಹಾಗೂ ಅಮೆರಿಕ ನೇತೃತ್ವದ ಜಂಟಿ ಪಡೆಗಳು ನಡೆಸಿದ ವಾಯು ಮತ್ತು ಭೂಮಿಯ ಮೇಲಿನ ದಾಳಿಗಳಲ್ಲಿ  ಒಬ್ಬ ಕಮಾಂಡರ್ ಸೇರಿದಂತೆ 53 ತಾಲಿಬಾನ್ ಉಗ್ರರು ಮೃತರಾದರು.

2007: ಪಾಕಿಸ್ಥಾನದ ಅಧ್ಯಕ್ಷರಾಗಿ ಜನರಲ್ ಪರ್ವೇಜ್ ಮುಷರಫ್ ಅವರು ಸತತ ಎರಡನೇ ಅವಧಿಗಾಗಿ ಇಸ್ಲಾಮಾಬಾದಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಐವಾನ್- ಎ -  ಅಧ್ಯಕ್ಷರ ಅರಮನೆಯಲ್ಲಿ ಮುಖ್ಯ ನ್ಯಾಯಮೂರ್ತಿ ಅಬ್ದುಲ್ ಹಮೀದ್ ದೋಗರ್ ಅವರು ಮುಷರಫ್ ಅವರಿಗೆ ಅಧಿಕಾರ ಗೌಪ್ಯತೆಯ ಪ್ರಮಾಣ ವಚನವನ್ನು ಬೋಧಿಸಿದರು. ಅಂತಾರಾಷ್ಟ್ರೀಯ ಹಾಗೂ ದೇಶದಲ್ಲಿ ಒತ್ತಡಗಳು ಹೆಚ್ಚಾದ ಹಿನ್ನೆಲೆಯಲ್ಲಿ ಮುಷರಫ್ ಅವರು ಇದಕ್ಕೆ ಒಂದು ದಿನ ಮೊದಲು ಸೇನಾ ಮುಖ್ಯಸ್ಥನ ಹುದ್ದೆಯನ್ನು ತೊರೆದಿದ್ದರು.

2007: ಕಂಪೆನಿಯ ಮುಖ್ಯಸ್ಥರ ವಿರುದ್ಧ ಜನಾಂಗೀಯ ನಿಂದನೆ ಆರೋಪ ದಾಖಲಿಸಿದ್ದ ಭಾರತೀಯ ಮೂಲದ ಕಾಲ್ ಸೆಂಟರ್ ಉದ್ಯೋಗಿ ನಾರ್ಥ್ಯಾಂಪ್ಟನ್  ನಿವಾಸಿ ಚೇತನ್ ಕುಮಾರ್ ಮೆಶ್ರಾಮ್ ಅವರಿಗೆ ಪರಿಹಾರವಾಗಿ 5 ಸಾವಿರ ಪೌಂಡುಗಳನ್ನು ನೀಡಲು ಸಂಬಂಧಿಸಿದ ಕಂಪೆನಿಗೆ ನಾರ್ಥ್ಯಾಂಪ್ಟನ್ ಜನಾಂಗೀಯ ಸಮಾನತೆ ಮಂಡಳಿ ಲಂಡನ್ನಿನಲ್ಲಿ ಆದೇಶಿಸಿತು. ಬ್ರಿಟಿಷರಂತೆ ಇಂಗ್ಲಿಷಿನಲ್ಲಿ ಮಾತನಾಡದ ಕಾರಣವೊಡ್ಡಿ ಕಂಪೆನಿಯ ಮುಖ್ಯಸ್ಥರು ತನ್ನನ್ನು ಕೆಲಸದಿಂದ ಕಿತ್ತುಹಾಕಿರುವುದಾಗಿ ಚೇತನ್ ಕುಮಾರ್ ಮೆಶ್ರಾಮ್ ಅವರು ಮಂಡಳಿಗೆ ದೂರು ಸಲ್ಲಿಸಿದ್ದರು.

2007: ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಗೆ ಪ್ರತೀಕಾರವಾಗಿ 1984ರಲ್ಲಿ ನಡೆದ ಸಿಖ್ ವಿರೋಧಿ ದಂಗೆಯಲ್ಲಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ಪಾತ್ರದ ಕುರಿತು ಸಾಕ್ಷ್ಯ ಹೇಳುವುದಾಗಿ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ ಜಸ್ಬೀರ್ ಸಿಂಗ್ ಪ್ರಕಟಿಸಿದರು. ಇದರಿಂದ ಇಡೀ ಪ್ರಕರಣಕ್ಕೆ ಹೊಸ ತಿರುವು ಲಭಿಸಿತು. ಸಿಖ್ಖರ ವಿರುದ್ಧ ದೌರ್ಜನ್ಯ, ಹಲ್ಲೆಗೆ ಪ್ರಚೋದನೆ ನೀಡಿದ್ದರು ಎಂಬ ಆರೋಪ ಟೈಟ್ಲರ್ ಮೇಲಿದ್ದು, ಅಕ್ಟೋಬರ್  ತಿಂಗಳಲ್ಲಷ್ಟೇ ಸಿಬಿಐ ಅವರ ವಿರುದ್ಧ ತನಗೆ ಯಾವುದೇ ಸಾಕ್ಷ್ಯ ಲಭಿಸಿಲ್ಲ ಎಂದು ಹೇಳಿತ್ತು.

2007: ಅಖಿಲ ಭಾರತ ವೈದ್ಯ ವಿಜ್ಞಾನ ಸಂಸ್ಥೆ (ಏಮ್ಸ್) ನಿರ್ದೇಶಕ ಪಿ.ವೇಣುಗೋಪಾಲ್ ನಿವೃತ್ತಿ ವಯೋಮಿತಿಯನ್ನು 65 ವರ್ಷಕ್ಕ್ಕೆ ನಿಗದಿಗೊಳಿಸುವ ವಿವಾದಾತ್ಮಕ ಮಸೂದೆ ವಿರೋಧಿಸಿ ಆರಂಭಿಸಿದ್ದ ತಮ್ಮ ಮುಷ್ಕರವನ್ನು ಏಮ್ಸ್ ವೈದ್ಯರು ಹೈಕೋರ್ಟ್ ಆದೇಶದ ಮೇರೆಗೆ ಹಿಂತೆಗೆದುಕೊಂಡರು.

2007:  ಮಿತ `ವೈನ್' ಸೇವನೆ ಹೃದಯಕ್ಕೆ ಒಳ್ಳೆಯದು ಎಂಬ ಮಾತಿದೆ. ಆದರೆ ಈ ತೆರನಾದ `ವೈನ್' ಸೇವನೆಯು ಮಹಿಳೆಯರ ರಕ್ತನಾಳದ ಉರಿಯನ್ನು ತಂಪಾಗಿ ಇಡುತ್ತದಂತೆ..! ಸ್ಪೇನ್ ದೇಶದ ಸಂಶೋಧಕರು ಒಂದು ತಿಂಗಳ ಕಾಲ ನಡೆಸಿದ ಪ್ರಯೋಗವೊಂದರಲ್ಲಿ ಕಂಡುಬಂದ ಸತ್ಯಾಂಶವಿದು. ಕೆಲವು ಮಹಿಳೆಯರಿಗೆ ನಿತ್ಯವೂ ಎರಡು ಲೋಟಗಳಷ್ಟು `ಕೆಂಪು ವೈನ್' ಅನ್ನು ನಾಲ್ಕು ವಾರಗಳ ಕಾಲ ನೀಡಲಾಯಿತು. ಆ ಒಂದು ತಿಂಗಳ ನಂತರ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರ ರಕ್ತದಲ್ಲಿ ಉರಿ ಉಂಟು ಮಾಡುವ ಅಂಶದಲ್ಲಿ ಗಣನೀಯ ಇಳಿತ  ಕಂಡುಬಂದಿತು.

2007: ಕನ್ನಡ ಪುಸ್ತಕ ಪ್ರಾಧಿಕಾರದ 2006ನೇ ಸಾಲಿನ `ಪುಸ್ತಕ ಸೊಗಸು' ಬಹುಮಾನಕ್ಕೆ ಆಯ್ಕೆಯಾದ 4 ಕೃತಿಗಳ ಪೈಕಿ ಮೊದಲ ಬಹುಮಾನವು ಬೆಂಗಳೂರಿನ ಅಸೀಮ ಪ್ರತಿಷ್ಠಾನ ಪ್ರಕಾಶಿಸಿದ ಹರೀಶ್ ಆರ್. ಭಟ್ ಮತ್ತು ಪ್ರಮೋದ್ ಸುಬ್ಬರಾವ್ ಅವರ `ಪಕ್ಷಿ ಪ್ರಪಂಚ' ಪುಸ್ತಕದ ಪಾಲಾಯಿತು. ಬೆಂಗಳೂರಿನ ಚಾರ್ವಾಕ ಪ್ರಕಾಶನ ಹೊರತಂದ ಈರಪ್ಪ ಎಂ. ಕಂಬಳಿ ಅವರ `ಚಾಚಾ ನೆಹರು ಮತ್ತು ಈಚಲು ಮರ' ಕೃತಿಗೆ 2ನೇ ಬಹುಮಾನ, ಅಂಕಿತ ಪುಸ್ತಕ ಹೊರತಂದ ಜಯಂತ ಕಾಯ್ಕಿಣಿ ಅವರ `ಶಬ್ದತೀರ' ಕೃತಿಗೆ 3ನೇ ಬಹುಮಾನ ಹಾಗೂ ಅಭಿನವ ಪ್ರಕಾಶನ ಹೊರತಂದ ಭಾಗೀರಥಿ ಹೆಗಡೆ ಅವರ `ಗುಬ್ಬಿಯ ಸ್ವರ್ಗ' ಕೃತಿಗೆ ಮಕ್ಕಳ ಪುಸ್ತಕ ಬಹುಮಾನ ಲಭಿಸಿತು.

2007: ಸರ್ಕಾರಕ್ಕೆ ಪಾವತಿ ಮಾಡಬೇಕಾದ ಸುಮಾರು 20.3 ಕೋಟಿ ರೂಪಾಯಿಯ ವಾಣಿಜ್ಯ ತೆರಿಗೆ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಚಿತ್ರನಟ ಹಾಗೂ ನಿರ್ದೇಶಕ ಸಂಜಯ್ ಖಾನ್ ಅವರು ನಿರ್ದೇಶಕರಾಗಿರುವ ನಗರದಲ್ಲಿನ `ವರ್ಲ್ಡ್ ರೆಸಾರ್ಟ್' ಕಂಪೆನಿಗೆ ಕರ್ನಾಟಕ ಹೈಕೋರ್ಟ್ ಒಂದು ಲಕ್ಷ ರೂಪಾಯಿ ದಂಡ ವಿಧಿಸಿತು.

2007: ವಿದೇಶ ಯಾತ್ರೆ ಹಾಗೂ ವಿದೇಶ ವಾಸಕ್ಕೆ ಶಾಸ್ತ್ರ ಹಾಗೂ ಸಂಪ್ರದಾಯಗಳಲ್ಲಿ ವಿರೋಧವಿರುವುದರಿಂದ ಯಾವುದೇ ಕಾರಣಕ್ಕೂ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥರು ಪರ್ಯಾಯ ವೇಳೆ ಕೃಷ್ಣನ ಪೂಜೆ ಮಾಡುವಂತಿಲ್ಲ ಎಂದು ಉಡುಪಿ ಅಷ್ಟಮಠಗಳ ಯತಿಗಳು ತಾಕೀತು ಮಾಡಿದರು. ಕೃಷ್ಣಮಠದಲ್ಲಿ ತುರ್ತುಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದ ಪೇಜಾವರ ಮಠಾಧೀಶ ವಿಶ್ವೇಶತೀರ್ಥರು, ವಿದೇಶ ಯಾತ್ರೆ ಮಾಡಿದವರಿಗೆ ಕೃಷ್ಣನ ಪೂಜೆಗೆ ಈ ತನಕ ಅವಕಾಶ ನೀಡಲಾಗಿಲ್ಲ. ಆ ನಿಯಮವನ್ನು ಪುತ್ತಿಗೆ ಶ್ರೀಗಳೂ ಪಾಲಿಸಬೇಕಾಗಿದೆ ಎಂದು ಹೇಳಿದರು.

2007: ದೇಶದ ಎರಡನೇ ಅತಿದೊಡ್ಡ ಬ್ಯಾಂಕ್ ಐಸಿಐಸಿಐ ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಕೆ. ವಿ. ಕಾಮತ್ ಅವರನ್ನು  ಫೋಬ್ಸ್  ಏಷ್ಯಾ `ವರ್ಷದ ಉದ್ಯಮಿ' ಎಂಬುದಾಗಿ ಗುರುತಿಸಿತು.

2006: ಇಂಡೋನೇಷ್ಯದ ಮೊಲುಕಾಸ್ ದ್ವೀಪದ ಸಾಗರ ತಳದಲ್ಲಿ ಬೆಳಗ್ಗೆ 7 ಗಂಟೆ ವೇಳೆಗೆ ಶಕ್ತಿಶಾಲಿ ಭೂಕಂಪ ಸಂಭವಿಸಿತು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.1ರಷ್ಟಿತ್ತು.

2006: ತಮಿಳುನಾಡಿನ ಮದುರೈಯಲ್ಲಿ ಜನಿಸಿದ ಚಿತ್ರಾ ಭರೂಚ ಅವರು ಬಿಬಿಸಿಯ ಪ್ರಪ್ರಥಮ ಮಹಿಳಾ ಮುಖ್ಯಸ್ಥೆಯಾಗಿ ನೇಮಕಗೊಂಡರು. ಬಿಬಿಸಿ ಅಧ್ಯಕ್ಷ ಮೈಕೆಲ್ ಗ್ರೇಡ್ ರಾಜೀನಾಮೆ ಕಾರಣ ಭರೂಚ ಅವರು ಹಂಗಾಮಿ ಮುಖ್ಯಸ್ಥೆಯಾಗಿ ಅಧಿಕಾರ ವಹಿಸಿಕೊಂಡರು.

2006: ಭಾರತೀಯ ಕ್ರಿಕೆಟ್ ತಂಡದ ಮಾಜಿ ಟೆಸ್ಟ್ ಆಟಗಾರ ಹನುಮಂತ ಸಿಂಗ್ (67) ಮುಂಬೈಯಲ್ಲಿ ನಿಧನರಾದರು.

2006: ವೈಜ್ಞಾನಿಕ ಸಂಶೋಧನೆಗಳಿಗಾಗಿ ಪ್ರತಿವರ್ಷ ನೀಡಲಾಗುವ ಜಿ.ಡಿ. ಬಿರ್ಲಾ ಪ್ರಶಸ್ತಿಗೆ ಬೆಂಗಳೂರಿನ ಭಾರತೀಯ ವಿಜ್ಞಾನ ಮಂದಿರದ ಭೌತಶಾಸ್ತ್ರ ವಿಜ್ಞಾನಿ ಪ್ರೋ. ಶ್ರೀರಾಮ್ ರಾಮಸ್ವಾಮಿ ಆಯ್ಕೆಯಾದರು.

2006: ಮಣಿಪಾಲ ಕೆ.ಎಂ.ಸಿ.ಯ ಪ್ರಾಕ್ತನ ವಿದ್ಯಾರ್ಥಿ, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಡಾ. ರಾಧಾಕೃಷ್ಣ ಸುಧಾಕರ ಶಾನಭಾಗ ಅವರು ಇಂಗ್ಲೆಂಡಿನ ಮ್ಯಾಜಿಸ್ಟ್ರೇಟ್ ಹುದ್ದೆಗೆ ನೇಮಕಗೊಂಡರು. ಇಂಗ್ಲೆಂಡಿನ ಲಾರ್ಡ್ ಚಾನ್ಸಲರ್ ಅವರು ಈ ನೇಮಕ ಮಾಡಿದ್ದು, ಇಂಗ್ಲೆಂಡಿನಲ್ಲಿ ಈ ಹ್ದುದೆಗೆ ನೇಮಕ ಗೊಂಡ ಪ್ರಥಮ ಕನ್ನಡಿಗ ಎಂಬ ಹೆಗ್ಗಳಿಕೆಗೆ ಶಾನಭೋಗ ಪಾತ್ರರಾದರು.

2006: ಕೇರಳದ ನಿಲಕ್ಕಲ್ ಎಕ್ಯುಮಾನಿಕಲ್ ಟ್ರಸ್ಟ್ ಸ್ಥಾಪಿಸಿದ ಧಾರ್ಮಿಕ ಸದ್ಭಾವನಾ ಪ್ರಶಸ್ತಿಗೆ ಖ್ಯಾತ ಸಾಹಿತಿ ಡಾ. ಯು.ಆರ್. ಅನಂತಮೂರ್ತಿ ಮತ್ತು ಆರ್ಚ್ ಬಿಷಪ್ ಮಾರ್ ಜೋಸೆಫ್ ಪೊವಾಥಿಲ್ ಆಯ್ಕೆಯಾದರು.

2005: ಕುದುರೆಮುಖ ಕಬ್ಬಿಣದ ಅದಿರು ಗಣಿಯನ್ನು 2005ರ ಡಿಸೆಂಬರ್ 31ರ ಒಳಗೆ ಕಾಯಂ ಆಗಿ ಮುಚ್ಚುವಂತೆ ಕರ್ನಾಟಕ ಸರ್ಕಾರಕ್ಕೆ ನೀಡಿದ ಆದೇಶವನ್ನು ಪುನರ್ವಿಮರ್ಶಿಸಬೇಕು ಎಂದು ಕೋರಿ ಕುದುರೆಮುಖ ಶ್ರಮಶಕ್ತಿ ಸಂಘಟನೆ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿತು.

2005: ಬೆಂಗಳೂರು ಕಾನೂನು ವಿಶ್ವ ವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕ ಡಾ. ಶ್ರೀಪಾದ್ ಗಣಪ ಭಟ್ ಅವರು ಕೇರಳದ ಎರ್ನಾಕುಳಂನಲ್ಲಿ ಸ್ಥಾಪನೆಗೊಂಡಿರುವ ನ್ಯಾಷನಲ್ ಯುನಿವರ್ಸಿಟಿ ಆಫ್ ಅಡ್ವಾನ್ಸಡ್ ಲೀಗಲ್ ಸ್ಟಡೀಸ್ನ ಪ್ರಥಮ ಕುಲಪತಿಯಾಗಿ ನೇಮಕಗೊಂಡರು.

2005: ದೂರದರ್ಶಿತ್ವ, ವೈಯಕ್ತಿಕ ಪ್ರತಿಭೆ ಹಾಗೂ 21ನೇ ಶತಮಾನದಲ್ಲಿ ವಿಶ್ವಶಾಂತಿಯೆಡೆಗೆ ತೋರಿದ ಆಸಕ್ತಿಗಾಗಿ ಪಾಕಿಸ್ಥಾನದ ಮಾಜಿ ಪ್ರಧಾನಿ, ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ಅಧ್ಯಕ್ಷೆ ಬೆನಜೀರ್ ಭುಟ್ಟೋ ಅವರಿಗೆ 2005ರ ಸಾಲಿನ `ವಿಶ್ವ ಸಹಿಷ್ಣುತೆ ಪ್ರಶಸ್ತಿ'ಯನ್ನು ಜರ್ಮನಿಯ ಬರ್ಲಿನ್ನಿನಲ್ಲಿ ಪ್ರದಾನ ಮಾಡಲಾಯಿತು. ರಷ್ಯಾದ ಮಾಜಿ ಅಧ್ಯಕ್ಷ ಮಿಖಾಯಿಲ್ ಗೊರ್ಬಚೆವ್ ಪ್ರಶಸ್ತಿ ಪ್ರದಾನ ಮಾಡಿದರು.

2005: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷರಾಗಿ ಕೇಂದ್ರ ಸಚಿವ ಶರದ್ ಪವಾರ್ ಆಯ್ಕೆಯಾದರು. ಹಾಲಿ ಅಧ್ಯಕ್ಷ ಜಗನ್ ಮೋಹನ್ ದಾಲ್ಮಿಯಾ ಬಣದ ರಣಬೀರ್ ಸಿಂಗ್ ಮಹೇಂದ್ರ ಅವರು ಪವಾರ್ ಕೈಯಲ್ಲಿ ಸೋಲು ಅನುಭವಿಸಿದರು.

2005: ಹಿರಿಯ ಯಕ್ಷಗಾನ ಹಾಸ್ಯ ಕಲಾವಿದ ವೇಣೂರು ಸುಂದರ ಆಚಾರ್ಯ (65) ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾದರು.

2001: ಖ್ಯಾತ ಗಾಯಕ ಜಾರ್ಜ್ ಹ್ಯಾರಿಸನ್ ತಮ್ಮ 58ನೇ ವಯಸ್ಸಿನಲ್ಲಿ ಲಾಸ್ ಏಂಜೆಲಿಸ್ನಲ್ಲಿ ಗಂಟಲ ಕ್ಯಾನ್ಸರ್ ಪರಿಣಾಮವಾಗಿ ನಿಧನರಾದರು.

1993: ಭಾರತೀಯ ಕೈಗಾರಿಕೋದ್ಯಮಿ ಹಾಗೂ ಭಾರತದಲ್ಲಿ ವಿಮಾನಯಾನದ ಮೊದಲಿಗರಾದ ಜೆ. ಆರ್. ಡಿ. ಟಾಟಾ (http://en.wikipedia.org/wiki/J._R._D._Tata) ಅವರು ಜಿನೇವಾದಲ್ಲಿ ತಮ್ಮ 89ನೇ ವಯಸ್ಸಿನಲ್ಲಿ ನಿಧನರಾದರು. ಪ್ಯಾರಿಸ್ಸಿನ ಅತ್ಯಂತ ದೊಡ್ಡದಾದ ಹಾಗೂ ಹೆಸರುವಾಸಿಯಾದ ಪೇರೆ ಲಾಚೈಸ್ನ ರುದ್ರಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಬಲ್ಜಾಕ್, ಪಿಸ್ಸಾರೊ, ಚೋಪಿನ್ ಮತ್ತು ಸರಾಹ ಬೆರ್ನಾರ್ಡ್ ಅವರ ಸಾಲಿನಲ್ಲೇ ಟಾಟಾ ಸಮಾಧಿಯನ್ನೂ ನಿರ್ಮಿಸಲಾಯಿತು.

1988: ಪ್ರಧಾನಿ ಸ್ಥಾನಕ್ಕೆ ರಾಜೀವಗಾಂಧಿ ರಾಜೀನಾಮೆ ನೀಡಿದರು.

1977: ಭಾರತದ ಮೈಕೆಲ್ ಫರೀರಾ ಅವರು ತಮ್ಮ ಮೂರು ವಿಶ್ವ ಬಿಲಿಯರ್ಡ್ಸ್ ಅಮೆಚೂರ್ ಚಾಂಪಿಯನ್ ಶಿಪ್ ಗಳ ಪೈಕಿ ಮೊದಲನೆಯದನ್ನು ಮೆಲ್ಬೋರ್ನಿನಲ್ಲಿ ಗೆದ್ದುಕೊಂಡರು. 1981ರಲ್ಲಿ ನವದೆಹಲಿಯಲ್ಲಿ ಹಾಗೂ 1983ರಲ್ಲಿ ಮಾಲ್ಟಾದಲ್ಲೂ ಅವರು ವಿಶ್ವ ಬಿಲಿಯರ್ಡ್ಸ್ ಹವ್ಯಾಸಿ ಚಾಂಪಿಯನ್ ಶಿಪ್ ಗಳನ್ನು ತಮ್ಮ ಹೆಗಲಿಗೆ ಏರಿಸಿಕೊಂಡರು.

1977: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಈ ದಿನವನ್ನು ಅಂತಾರಾಷ್ಟ್ರೀಯ ಸಾಮರಸ್ಯ ದಿನವಾಗಿ ಆಚರಿಸಲು ಪ್ರಾರಂಭಿಸಿತು. ಈ ದಿನ ಪ್ಯಾಲೆಸ್ಟೈನ್ ವಿಭಜನೆ ಕರಡನ್ನು ಸಭೆ ಅಂಗೀಕರಿಸಿತು. ಸ್ವತಂತ್ರ ಯಹೂದ್ಯ ಮತ್ತು ಅರಬ್ ರಾಜ್ಯವಾಗಿ ಪ್ಯಾಲೆಸ್ಟೈನನ್ನು  ವಿಭಜಿಸಲಾಯಿತು. ಪ್ಯಾಲೆಸ್ಟೈನ್ ಜನರಿಗೆ ಸ್ವಾತಂತ್ರ್ಯ ಹಾಗೂ ಪ್ರಜಾಪ್ರಭುತ್ವ ಲಭಿಸಿತು.

1960: ಸಾಹಿತಿ ಚಂದ್ರಿಕಾ ಪುರಾಣಿಕ ಜನನ.

1951: ಭಾಷಾಶಾಸ್ತ್ರ, ಕನ್ನಡ ಶೈಲಿ ಶಾಸ್ತ್ರದಲ್ಲಿ ವಿದ್ವಾಂಸರಾದ ಡಾ. ಬಿ. ಮಲ್ಲಿಕಾರ್ಜುನ ಅವರು ಆರ್. ಭದ್ರಣ್ಣ- ತಾಯಮ್ಮ ದಂಪತಿಯ ಮಗನಾಗಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ಜನಿಸಿದರು.

1947: ಪ್ಯಾಲೆಸ್ಟೈನನ್ನು ಅರಬರು ಮತ್ತು ಯಹೂದ್ಯರ ಮಧ್ಯೆ ವಿಭಜನೆ ಮಾಡಲು ಕರೆ ನೀಡುವ ಗೊತ್ತುವಳಿಯನ್ನು ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯು ಅಂಗೀಕರಿಸಿತು.

1945: ಯುಗೋಸ್ಲಾವಿಯಾವು ಗಣರಾಜ್ಯವಾಯಿತು.

1924: ಇಟಲಿಯ ಖ್ಯಾತ ಒಪೇರಾ ಗಾಯಕ ಗಿಯಾಕೊಮೊ ಪುಸ್ಸಿನಿ ಗಂಟಲ್ ಕ್ಯಾನ್ಸರ್ ಪರಿಣಾಮವಾಗಿ ಬ್ರಸ್ಸೆಲ್ಸಿನಲ್ಲಿ ತಮ್ಮ 65ನೇ ವಯಸ್ಸಿನಲ್ಲಿ ಮೃತರಾದರು. ಲಾ ಬೊಹೇಮ್ ಮತ್ತು ಮ್ಯಾಡೇಮ್ ಬಟರ್ ಫ್ಲೈ ಹಾಡುಗಳು ಅವರಿಗೆ ಖ್ಯಾತಿ ತಂದುಕೊಟ್ಟಿದ್ದವು.

(ಸಂಗ್ರಹ: ನೆತ್ರಕೆರೆ ಉದಯಶಂಕರ)