Showing posts with label ಗ್ರಾಹಕ ನ್ಯಾಯಾಲಯ. Show all posts
Showing posts with label ಗ್ರಾಹಕ ನ್ಯಾಯಾಲಯ. Show all posts

Saturday, October 3, 2026

PARYAYA: ಸಮಯದ ಬೆಲೆ: ಚಿತ್ರಮಂದಿರಕ್ಕೆ ಪಾಠ ಕಲಿಸಿದ ವಕೀಲ!

ಸಮಯದ ಬೆಲೆ: ಚಿತ್ರಮಂದಿರಕ್ಕೆ ಪಾಠ ಕಲಿಸಿದ ವಕೀಲ!

ಅದು ಹೈದರಾಬಾದಿನ ತಡ ರಾತ್ರಿ. ಕೆಲಸದ ಒತ್ತಡದಿಂದ ಕೊಂಚ ನಿರಾಳರಾಗಲು ವಕೀಲರೊಬ್ಬರು ಪಿವಿಆರ್‌  (PVR) ಸಿನಿಮಾದಲ್ಲಿ ರಾತ್ರಿ 10:35 ರ ಪ್ರದರ್ಶನಕ್ಕೆ ಟಿಕೆಟ್‌ ಬುಕ್ ಮಾಡಿದ್ದರು. ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಚಿತ್ರಮಂದಿರ ತಲುಪಿದ ಅವರು, ಸಿನಿಮಾ ಸರಿಯಾದ ಸಮಯಕ್ಕೆ ಶುರುವಾಗುತ್ತದೆ ಎಂದು ಭಾವಿಸಿದ್ದರು.

ಆದರೆ, ಪರದೆಯ ಮೇಲೆ ಸಿನಿಮಾ ಬರುವ ಬದಲು ಒಂದರ ಮೇಲೊಂದರಂತೆ ವಾಣಿಜ್ಯ ಜಾಹೀರಾತುಗಳು ಮತ್ತು ಮುಂಬರುವ ಸಿನಿಮಾಗಳ ಟ್ರೇಲರ್‌ಗಳು ಪ್ರಸಾರವಾಗತೊಡಗಿದವು. ರಾತ್ರಿ 10:35 ಕ್ಕೆ ಪ್ರಾರಂಭವಾಗಬೇಕಿದ್ದ ಸಿನಿಮಾ ಸುಮಾರು 17 ನಿಮಿಷ ತಡವಾಗಿ ಪ್ರಾರಂಭವಾಯಿತು!

ಇದರಿಂದಾಗಿ, ರಾತ್ರಿ 2 ಗಂಟೆಗೆ ಮನೆ ತಲುಪಬೇಕಿದ್ದ ವಕೀಲರು, ಮನೆಗೆ ತಲುಪುವಷ್ಟರಲ್ಲಿ ಸಮಯ ರಾತ್ರಿ 3 ಗಂಟೆಯಾಗಿತ್ತು. ತಡರಾತ್ರಿ ಪ್ರಯಾಣಿಸುವುದು ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿ. ಜೊತೆಗೆ ಅವರ ಮರುದಿನದ ಕೆಲಸಗಳೆಲ್ಲವೂ ಏರುಪೇರಾದವು.

"ಇದು ಸಣ್ಣ ಅಡಚಣೆಯಲ್ಲ. ಪ್ರೇಕ್ಷಕರನ್ನು ಬಂದಿಗಳನ್ನಾಗಿ ಮಾಡಿ, ಅವರ ಅಮೂಲ್ಯ ಸಮಯವನ್ನು ಸಿನಿಮಾ ಮಂದಿರ ತನ್ನ ಸ್ವಂತ ಲಾಭಕ್ಕಾಗಿ ದುರುಪಯೋಗಪಡಿಸಿಕೊಂಡಿದೆ!" ಎಂದು ನಿರ್ಧರಿಸಿದ ವಕೀಲರು, ಜಿಲ್ಲಾ ಗ್ರಾಹಕ ನ್ಯಾಯಾಲಯದ (District Consumer Disputes Redressal Commission) ಬಾಗಿಲು ಬಡಿದರು.

ಪಿವಿಆರ್‌ (PVR) ಮುಂದಿಟ್ಟ ವಾದಗಳೇನು?

ನ್ಯಾಯಾಲಯದಲ್ಲಿ ಪಿವಿಆರ್‌ (PVR) ಆಡಳಿತ ಮಂಡಳಿಯು ತನ್ನನ್ನು ಸಮರ್ಥಿಸಿಕೊಳ್ಳಲು ಈ ಕೆಳಗಿನ ಕಾನೂನು ವಾದಗಳನ್ನು ಮಂಡಿಸಿತು:

  1. ಸಂವಿಧಾನದ ವಿಧಿ 19(1)(g): ವ್ಯಾಪಾರ ಮತ್ತು ವಹಿವಾಟು ನಡೆಸುವ ಮೂಲಭೂತ ಹಕ್ಕು ನಮಗಿದೆ.
  2. ಮಾಲೀಕತ್ವದ ಹಕ್ಕು: ಸಿನಿಮಾ ಮಂದಿರಗಳು ಖಾಸಗಿ ಸ್ವತ್ತು, ಸಾರ್ವಜನಿಕ ಹಿತಾಸಕ್ತಿಗೆ ಧಕ್ಕೆಯಾಗದಂತೆ ತಮ್ಮ ನಿಯಮಗಳನ್ನು ರೂಪಿಸುವ ಹಕ್ಕು ನಮಗಿದೆ ಎಂದು ಸುಪ್ರೀಂ ಕೋರ್ಟ್ ತೀರ್ಪನ್ನು ಉಲ್ಲೇಖಿಸಿತು.
  3. ಸಾರ್ವಜನಿಕ ಹಿತಾಸಕ್ತಿ: ನಾವು ಪ್ರಸಾರ ಮಾಡಿದ ಜಾಹೀರಾತುಗಳಲ್ಲಿ ಸಾಕ್ಷರತೆ, ಕೃಷಿ, ನಾರಿಯರ ಕಲ್ಯಾಣ ಮತ್ತು ಸ್ವಚ್ಛತೆಯಂತಹ ಸಮಾಜಮುಖಿ ವಿಷಯಗಳಿದ್ದವು. ಆದ್ದರಿಂದ ಸೇವೆಯಲ್ಲಿ ಯಾವುದೇ ಕೊರತೆಯಾಗಿಲ್ಲ ಎಂಬ ವಾದವನ್ನು ಅದು ಮುಂದಿಟ್ಟಿತು.

ಗ್ರಾಹಕ ನ್ಯಾಯಾಲಯದ ಏನು ಹೇಳಿತು?

ಪಿವಿಅರ್‌ (PVR) ಮಂಡಿಸಿದ ವಾದಗಳನ್ನು ಸಂಪೂರ್ಣವಾಗಿ ಗ್ರಾಹಕ ನ್ಯಾಯಾಲಯ ತಳ್ಳಿಹಾಕಿತು.

·         ಸಾರ್ವಜನಿಕ ಹಿತಾಸಕ್ತಿ ಪ್ರದರ್ಶನದ ಮಿತಿ: ಸಮಾಜಮುಖಿ ಮಾಹಿತಿಯ ಚಿತ್ರಗಳು ಗರಿಷ್ಠ 2 ನಿಮಿಷಗಳಷ್ಟು ಮಾತ್ರ ಇರಬೇಕು ಹಾಗೂ ಸಿನಿಮಾ ಪ್ರಾರಂಭವಾಗುವ 10 ನಿಮಿಷಗಳ ಒಳಗಾಗಿ ಪ್ರಸಾರವಾಗಬೇಕು.

·         ಅನುಚಿತ ವ್ಯಾಪಾರ ಪ್ರಕ್ರಿಯೆ: ಚಿತ್ರಮಂದಿರಕ್ಕೆ ಬಂದ ಪ್ರೇಕ್ಷಕರನ್ನು ಬಲವಂತವಾಗಿ ಜಾಹೀರಾತು ನೋಡುವಂತೆ ಮಾಡಿ ವಾಣಿಜ್ಯ ಲಾಭಗಳಿಸುವುದು ಅನುಚಿತ ವ್ಯಾಪಾರ (Unfair Trade Practice) ಆಗುತ್ತದೆ-

ಎಂಬ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ (Ministry of Information and Broadcasting) ನಿಯಮಾವಳಿಗಳನ್ನು ನ್ಯಾಯಾಲಯ ಎತ್ತಿಹಿಡಿಯಿತು.

ನ್ಯಾಯಾಲಯದ ಆದೇಶ

ಅಂತಿಮವಾಗಿ ನ್ಯಾಯಾಲಯವು ಈ ಕೆಳಗಿನ ಆದೇಶವನ್ನು ನೀಡಿತು:

  • ₹20,000 - ದೂರುದಾರರಿಗೆ ಅನುಭವಿಸಿದ ಕಿರುಕುಳ ಮತ್ತು ತೊಂದರೆಗಾಗಿ ಪರಿಹಾರ.
  • ₹5,000 - ದೂರಿನ ಕಾನೂನು ವೆಚ್ಚವಾಗಿ ವಕೀಲರಿಗೆ ನೀಡಬೇಕು.
  • ₹50,000 - ದಂಡದ ರೂಪದಲ್ಲಿ (Punitive Damages) ಜಿಲ್ಲಾ ಗ್ರಾಹಕ ಕಲ್ಯಾಣ ನಿಧಿಗೆ (District Consumer Welfare Fund) ಪಾವತಿಸಬೇಕು.
  • ಶಾಶ್ವತ ತಡೆ: ನಿಯಮ ಮೀರಿದ ಸುದೀರ್ಘ ಜಾಹೀರಾತು ಪ್ರದರ್ಶನವನ್ನು ತಕ್ಷಣವೇ ಸ್ಥಗಿತಗೊಳಿಸಬೇಕು.

ಬೆಂಗಳೂರಿನಲ್ಲೂ ನಡೆದಿತ್ತು ಇಂತಹುದೇ ಘಟನೆ!

ಇದೇ ರೀತಿಯ ಘಟನೆ 2023 ರಲ್ಲಿ ಬೆಂಗಳೂರಿನಲ್ಲಿ  ಕೂಡಾ ನಡೆದಿತ್ತು. ಅಭಿಷೇಕ್ ಎಂಬ ಗ್ರಾಹಕರು 'ಸಾಮ್ ಬಹಾದ್ದೂರ್' ಸಿನಿಮಾ ನೋಡಲು ಹೋದಾಗ ಸುಮಾರು 25 ನಿಮಿಷಗಳ ಕಾಲ ಸುದೀರ್ಘ ಜಾಹೀರಾತುಗಳನ್ನು ಹಾಕಲಾಗಿತ್ತು. ಇದರಿಂದ ಅವರ ಕೆಲಸದ ವೇಳಾಪಟ್ಟಿ ಹಾಳಾಗಿತ್ತು.

2025 ರ ಫೆಬ್ರವರಿಯಲ್ಲಿ ತೀರ್ಪು ನೀಡಿದ್ದ ಬೆಂಗಳೂರು ಗ್ರಾಹಕ ನ್ಯಾಯಾಲಯವು PVR ಮತ್ತು Inox ಸಂಸ್ಥೆಗಳಿಗೆ ₹20,000 ಪರಿಹಾರ, ₹8,000 ಕಾನೂನು ವೆಚ್ಚ ಹಾಗೂ ₹1 ಲಕ್ಷ ರೂಪಾಯಿಗಳನ್ನು ಗ್ರಾಹಕ ಕಲ್ಯಾಣ ನಿಧಿಗೆ ದಂಡವಾಗಿ ಪಾವತಿಸಬೇಕು ಎಂದು ಆದೇಶಿಸಿತ್ತು. ಆದರೆ, ಟಿ ಕೆ ಟ್ ಬುಕಿಂಗ್ ಆ್ಯಪ್ 'BookMyShow' ಗೆ ಸಿನಿಮಾ ಪ್ರದರ್ಶನದ ಸಮಯದ ಮೇಲೆ ನಿಯಂತ್ರಣವಿಲ್ಲದ ಕಾರಣ ಅದನ್ನು ಈ ಪ್ರಕರಣದಿಂದ ಖುಲಾಸೆಗೊಳಿಸಲಾಗಿತ್ತು.

ಈ ಕಥೆಯಿಂದ ತಿಳಿಯಬೇಕಾದ ಕಾನೂನು ಅರಿವು:

  1. ಗ್ರಾಹಕರ ಸಮಯವೂ ಅಮೂಲ್ಯ: ನೀವು ಹಣ ನೀಡಿ ಖರೀದಿಸುವುದು 'ಸಿನಿಮಾ ನೋಡಲು' ಹೊರತು 'ಜಾಹೀರಾತು ವೀಕ್ಷಿಸಲು' ಅಲ್ಲ.
  2. ಸೇವೆಯ ಕೊರತೆ (Deficiency of Service): ನಿಯಮಿತ ಸಮಯಕ್ಕೆ ಸೇವೆ ನೀಡದಿರುವುದು ಅಥವಾ ಭರವಸೆ ನೀಡಿದ ಸಮಯವನ್ನು ಉಲ್ಲಂಘಿಸುವುದು ಗ್ರಾಹಕ ರಕ್ಷಣೆ ಕಾಯ್ದೆ-2019 ರ ಪ್ರಕಾರ ಶಿಕ್ಷಾರ್ಹ ಅಪರಾಧ.
  3. ಗ್ರಾಹಕರ ಹಕ್ಕು ಚಲಾಯಿಸಿ: ಸಿನಿಮಾ ಮಂದಿರಗಳು ಅಥವಾ ಯಾವುದೇ ಸಂಸ್ಥೆಗಳು ನಿಮ್ಮ ಹಕ್ಕುಗಳನ್ನು ಉಲ್ಲಂಘಿಸಿದರೆ, ಟಿಕೆಟ್, ಸಮಯದ ವಿಡಿಯೋ/ಫೋಟೋ ಇತ್ಯಾದಿ ನಿಯಮಿತ ದಾಖಲೆಗಳೊಂದಿಗೆ ಗ್ರಾಹಕ ನ್ಯಾಯಾಲಯವನ್ನು ಉಚಿತವಾಗಿ ಅಥವಾ ಕಡಿಮೆ ವೆಚ್ಚದಲ್ಲಿ ಸುಲಭವಾಗಿ ಸಂಪರ್ಕಿಸಬಹುದು.

-          ನೆತ್ರಕೆರೆ ಉದಯಶಂಕರ

PARYAYA: ಸಮಯದ ಬೆಲೆ: ಚಿತ್ರಮಂದಿರಕ್ಕೆ ಪಾಠ ಕಲಿಸಿದ ವಕೀಲ!:   ಸಮಯ ದ ಬೆಲೆ : ಚಿತ್ರಮಂದಿರಕ್ಕೆ ಪಾಠ ಕಲಿಸಿದ ವಕೀಲ! ಅ ದು ಹೈದರಾಬಾ ದಿನ ತಡ ರಾತ್ರಿ. ಕೆಲಸದ ಒತ್ತಡದಿಂದ ಕೊಂಚ ನಿರಾಳರಾಗಲು ವಕೀಲರೊಬ್ಬರು ಪಿವಿಆರ್‌  (PVR) ಸ...

Saturday, July 5, 2025

PARYAYA: ಚಿಕಿತ್ಸೆಯಲ್ಲಿ ವಿಳಂಬ ಸೇವಾಲೋಪ: ಖಾಸಗಿ ವೈದ್ಯರಿಗೆ ₹20 ಲ...

 ಚಿಕಿತ್ಸೆಯಲ್ಲಿ ವಿಳಂಬ ಸೇವಾಲೋಪ: ಖಾಸಗಿ ವೈದ್ಯರಿಗೆ ₹20 ಲಕ್ಷ ದಂಡ

ತಿರುವಾರೂರು: ತಿರುವಾರೂರು ಜಿಲ್ಲಾ ಗ್ರಾಹಕ ನ್ಯಾಯಾಲಯವು (ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ವೇದಿಕೆ) ಒಂದು ಮಹತ್ವದ ಆದೇಶ ಹೊರಡಿಸಿದೆ. ಚಿಕಿತ್ಸೆಯಲ್ಲಿ ವಿಳಂಬವಾದುದನ್ನು ಸೇವಾ ನ್ಯೂನತೆ ಎಂಬುದಾಗಿ ಪರಿಗಣಿಸಿ ಸರ್ಕಾರಿ ವೈದ್ಯರೊಬ್ಬರ ತಂದೆಯ ಸಾವಿಗೆ ಕಾರಣರಾದುದಕ್ಕಾಗಿ ₹20 ಲಕ್ಷ ಪರಿಹಾರ ನೀಡುವಂತೆ ಖಾಸಗಿ ವೈದ್ಯರೊಬ್ಬರಿಗೆ ಆದೇಶ ನೀಡಿದೆ.

ಪ್ರಕರಣದ ಹಿನ್ನೆಲೆ

ಈ ಪ್ರಕರಣವು 2022ರಲ್ಲಿ ನಡೆದ ಘಟನೆಗೆ ಸಂಬಂಧಿಸಿದೆ. ಸರ್ಕಾರಿ ವೈದ್ಯರ ತಂದೆ, 67 ವರ್ಷದವರಾಗಿದ್ದು, ಅವರಿಗೆ ಕ್ಷಯ ರೋಗಕ್ಕೆ ಚಿಕಿತ್ಸೆಯಾಗಿ 2022ರ ಜುಲೈನಲ್ಲಿ ಬೆನ್ನುಮೂಳೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.

ಶಸ್ತ್ರಚಿಕಿತ್ಸೆ ಆದ ಕೆಲವೇ ವಾರಗಳಲ್ಲಿ ಅವರ ಆರೋಗ್ಯ ಹದಗೆಟ್ಟಿತು. ಆಗ ಅವರ ಮಗ 2022ರ ಆಗಸ್ಟ್ 8ರಂದು ರಕ್ತದ ಮಾದರಿಗಳನ್ನು ತಿರುವಾರೂರಿನ ಖಾಸಗಿ ಲ್ಯಾಬೋರೇಟರಿಗೆ ಕಳುಹಿಸಿದ್ದರು.

ಚಿಕಿತ್ಸೆಯಲ್ಲಿ ವಿಳಂಬ ಮತ್ತು ಸಾವು

ಪರೀಕ್ಷಾ ವರದಿಗಳಲ್ಲಿ ಅವರಿಗೆ ಕಾಮಾಲೆ (jaundice) ಇರುವುದು ದೃಢಪಟ್ಟಿತು. ಕೂಡಲೇ, 2022ರ ಆಗಸ್ಟ್ 9ರಂದು ಬೆಳಗ್ಗೆ ಸುಮಾರು 9:30ಕ್ಕೆ ತಿರುವಾರೂರಿನ ಕಮಲಾಲಯಂ ಟ್ಯಾಂಕ್ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಆಸ್ಪತ್ರೆಗೆ ದಾಖಲಾದ ನಂತರ, ರೋಗಿಯ ರಕ್ತದ ಮಾದರಿಗಳನ್ನು ಮತ್ತೆ ಸಂಗ್ರಹಿಸಿ ಅದೇ ಲ್ಯಾಬೋರೇಟರಿಗೆ ಮಧ್ಯಾಹ್ನ 3:30ರ ವೇಳೆಗೆ ಕಳುಹಿಸಲಾಯಿತು.

ಈ ನಡುವೆ, ರೋಗಿಯ ಸ್ಥಿತಿ ಇನ್ನಷ್ಟು ಬಿಗಡಾಯಿಸಿತು. ಖಾಸಗಿ ವೈದ್ಯರು ಆಗಸ್ಟ್ 9ರ ರಾತ್ರಿ ರೋಗಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಿದರು. ತಕ್ಷಣ ತಿರುಚಿಯಲ್ಲಿರುವ ಮತ್ತೊಂದು ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದುಕೊಂಡು ಹೋಗಲು ಸಲಹೆ ನೀಡಿದರು.

ರೋಗಿಯನ್ನು ತಕ್ಷಣ ತಿರುಚಿಗೆ ಕರೆದೊಯ್ದು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ದುರದೃಷ್ಟವಶಾತ್ ಆಗಸ್ಟ್ 14ರಂದು ಅವರು ಮೃತರಾದರು.

ಗ್ರಾಹಕ ನ್ಯಾಯಾಲಯದ ಮೊರೆ

ತಿರುವಾರೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಲ್ಲಿ ಆದ 'ವಿಳಂಬ'ದಿಂದ ಅಸಮಾಧಾನಗೊಂಡ ಸರ್ಕಾರಿ ವೈದ್ಯರು, ಈ ವರ್ಷದ ಜನವರಿಯಲ್ಲಿ ತಿರುವಾರೂರು ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದರು. ಖಾಸಗಿ ವೈದ್ಯರ 'ಸೇವಾ ನ್ಯೂನತೆ'ಯಿಂದ ತಮಗೆ ಉಂಟಾದ ಮಾನಸಿಕ ತೊಂದರೆ ಮತ್ತು ಒತ್ತಡಕ್ಕೆ ಪರಿಹಾರ ನೀಡುವಂತೆ ಕೋರಿದರು.

ಗ್ರಾಹಕ ನ್ಯಾಯಾಲಯವು ಚೆನ್ನೈಯ ರಾಜೀವ್ ಗಾಂಧಿ ಸರ್ಕಾರಿ ಜನರಲ್ ಆಸ್ಪತ್ರೆಯ ಹೆಪಟಾಲಜಿಸ್ಟ್‌ಗಳ (ಯಕೃತ್ ತಜ್ಞರು) ತಂಡದಿಂದ ಅಭಿಪ್ರಾಯಗಳನ್ನು ಪಡೆದುಕೊಂಡಿತು. ತಜ್ಞರ ವರದಿಗಳು ಮತ್ತು 2022ರ ಆಗಸ್ಟ್‌ 14ರಂದು ರೋಗಿಯ ಮರಣಕ್ಕೆ ಕಾರಣವಾದ ಘಟನೆಗಳ ವಿವರಗಳನ್ನು ಪರಿಶೀಲಿಸಿದ ನಂತರ, ಅಧ್ಯಕ್ಷರಾದ ಮೋಹನ್‌ದಾಸ್ ಮತ್ತು ಸದಸ್ಯರಾದ ಬಾಲು ನೇತೃತ್ವದ ನ್ಯಾಯಾಲಯವು, ಖಾಸಗಿ ವೈದ್ಯರಿಂದ 'ಸೇವಾ ನ್ಯೂನತೆ' ಆಗಿದೆ ಎಂದು ತೀರ್ಮಾನಿಸಿತು.

ನ್ಯಾಯಾಲಯದ ಆದೇಶ

ಆದ್ದರಿಂದ, ನ್ಯಾಯಾಲಯವು ಸರ್ಕಾರಿ ವೈದ್ಯರಿಗೆ ₹20 ಲಕ್ಷ ಪರಿಹಾರದ ಜೊತೆಗೆ, ವ್ಯಾಜ್ಯದ ವೆಚ್ಚವಾಗಿ ₹10,000 ಪಾವತಿ ಮಾಡುವಂತೆ ಖಾಸಗಿ ಆ ವೈದ್ಯರಿಗೆ ಆಜ್ಞಾಪಿಸಿತು. 

PARYAYA: ಚಿಕಿತ್ಸೆಯಲ್ಲಿ ವಿಳಂಬ ಸೇವಾಲೋಪ: ಖಾಸಗಿ ವೈದ್ಯರಿಗೆ ₹20 ಲ...:   ಚಿಕಿತ್ಸೆಯಲ್ಲಿ ವಿಳಂಬ ಸೇವಾಲೋಪ: ಖಾಸಗಿ ವೈದ್ಯರಿಗೆ ₹20 ಲಕ್ಷ ದಂಡ ತಿ ರುವಾರೂರು: ತಿರುವಾರೂರು ಜಿಲ್ಲಾ ಗ್ರಾಹಕ ನ್ಯಾಯಾಲಯ ವು ( ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹ...

Saturday, November 10, 2018

ಚೆಲ್ಲಿತು ಎಣ್ಣೆ, ಮುರಿಯಿತು ಕೈ, ಲಭಿಸಿತು ಪರಿಹಾರ...

ಚೆಲ್ಲಿತು ಎಣ್ಣೆ, ಮುರಿಯಿತು ಕೈ, ಲಭಿಸಿತು ಪರಿಹಾರ...

ಗ್ರಾಹಕರ ಸುಖ ದುಃಖ  

ಯಾವುದೇ ಒಂದು ವಸ್ತುವನ್ನು ಮಾರಾಟ ಮಾಡುವ ಜಾಗ ಶುಚಿಯಾಗಿಯೂ ಅಪಾಯ ರಹಿತವೂ ಆಗಿರಬೇಕು. ಇದು ಮಾರಾಟಗಾರನ ಹೊಣೆಗಾರಿಕೆಯೂ ಹೌದು. ಇಂತಹ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿಭಾಯಿಸದೇ ಇದ್ದುದರ ಪರಿಣಾಮವಾಗಿ ಏನಾದರೂ  ಅಪಾಯ ಸಂಭವಿಸಿ ಗ್ರಾಹಕನಿಗೆ ತೊಂದರೆಯಾದರೆ?

ಚಿಂತಿಸಬೇಕಾಗಿಲ್ಲ. ಗ್ರಾಹಕ  ಸಂರಕ್ಷಣಾ ಕಾಯ್ದೆ ನಿಮ್ಮ ನೆರವಿಗೆ ಬರುತ್ತದೆ. ತನ್ನ ಮುಂದೆ ಬಂದ ಇಂತಹ ಪ್ರಕರಣ ಒಂದರಲ್ಲಿ ಬೆಂಗಳೂರು ನಗರ  ಜಿಲ್ಲಾ ಗ್ರಾಹಕ ನ್ಯಾಯಾಲಯವು ಅರ್ಜಿದಾರರಿಗೆ ನ್ಯಾಯ ಒದಗಿಸಿದ ಪ್ರಕರಣ ಇದು..

ಈ ಪ್ರಕರಣದಲ್ಲಿ ಅರ್ಜಿದಾರರು: ಎಸ್. ಗೋವಿಂದನ್, ಬಾಪೂಜಿ ಬಡಾವಣೆ, ಬೆಂಗಳೂರು.
ಪ್ರತಿವಾದಿ: ಮ್ಯಾನೇಜರ್, ಫುಡ್ ವರ್ಲ್ಡ್. ಆರ್.ಪಿ..ಸಿ ಲೇಔಟ್, ವಿಜಯನಗರ, ಬೆಂಗಳೂರು.

ಅರ್ಜಿದಾರ ಗೋವಿಂದನ್ ಅವರು18-6-2010ರಂದು ಸಂಜೆ 6.30 ಗಂಟೆಗೆ ಪ್ರತಿವಾದಿ ಸಂಸ್ಥೆ ಫುಡ್ ವರ್ಲ್ಡ್‌ಗೆ ದಿನಸಿ ಹಾಗೂ ಇತರ ವಸ್ತುಗಳ ಖರೀದಿ ಸಲುವಾಗಿ ಹೋಗಿದ್ದರು.

ಫುಡ್ ವರ್ಲ್ಡ್ ಹವಾ ನಿಯಂತ್ರಿತ  ತಾಣವಾಗಿದ್ದು ತರಕಾರಿ, ದಿನಸಿ ವಸ್ತುಗಗಳು, ಬೇಕರಿ ವಸ್ತುಗಳು, ಎಣ್ಣೆ, ಸೌಂದರ್ಯ ಸಾಧನಗಳು, ಡಿಢೀರ್ ಆಹಾರ ವಸ್ತುಗಳು ಇತ್ಯಾದಿ  ಎಲವನ್ನೂ ಪೊಟ್ಟಣಗಳಲ್ಲಿ ತುಂಬಿ ಕವಾಟುಗಳಲ್ಲಿ ಇಡುವುದು ವಾಡಿಕೆ. ಗ್ರಾಹಕರು ಅಲ್ಲೇ ಇರಿಸಲಾಗುವ ಪುಟ್ಟ  ಕೈಗಾಡಿಯೊಂದನ್ನು ಒಯ್ದು ತಮಗೆ ಬೇಕಾದ ಸಾಮಗ್ರಿಗಳನ್ನು ತಾವೇ ಆಯ್ಕೆ ಮಾಡಿ, ಕೈಗಾಡಿಯಲ್ಲಿ ತುಂಬಿಕೊಂಡು ಕ್ಯಾಷಿಯರ್ ಬಳಿಗೆ ಒಯ್ಯಬೇಕು. ಅಲ್ಲಿ ಅದನ್ನು ತೂಕ ಮಾಡಿ ಬಿಲ್ ಮಾಡಲಾಗುತ್ತದೆ. ಗ್ರಾಹಕ ನಗದು ರೂಪದಲ್ಲಿ ಅಥವಾ ಕ್ರೆಡಿಟ್ ಕಾರ್ಡ್ ಮೂಲಕ ಬಿಲ್ ಪಾವತಿ ಮಾಡಬೇಕು.

ಆದಿನ ಅರ್ಜಿದಾರ ಗೋವಿಂದನ್ ಫುಡ್ ವರ್ಲ್ಡ್‌ನೊಳಕ್ಕೆ ಹೋದಾಗ ಒಂದು ಕಡೆಯಲ್ಲಿ ನೆಲದ ಮೇಲೆ ಎಣ್ಣೆ ಚೆಲ್ಲಿತ್ತು. ಆದರೆ ಎಣ್ಣೆ ಚೆಲ್ಲಿದ್ದ ಜಾಗದಲ್ಲಿ ಯಾವುದೇ ಎಚ್ಚರಿಕೆಯ ಬರಹವನ್ನು ಬರೆದಿಟ್ಟಿರಲಿಲ್ಲ. ಬದಲಿಗೆ ಚೆಲ್ಲಿದ ಎಣ್ಣೆಯನ್ನು ಮುಚ್ಚಿಡಲಾಗಿತ್ತು.

ಗೋವಿಂದನ್ ಅವರು ತಮಗೆ ಬೇಕಾದ ವಸ್ತುಗಳನ್ನು ಹುಡುಕುತ್ತಾ ಯಾವುದೇ ಅರಿವೂ ಇಲ್ಲದೆ ಚೆಲ್ಲಿದ್ದ ಎಣ್ಣೆಯ ಮೇಲೆ ಹಾಕಿದ್ದ ಹೊದಿಕೆಯ ಮೇಲೆ ಕಾಲಿಟ್ಟರು. ಅದು ಜಾರಿದ ಪರಿಣಾಮವಾಗಿ ಬಿದ್ದರು. ಬಿದ್ದ ಏಟಿಗೆ ಅವರ ಎಡಗೈಯ ಮಣಿಕಟ್ಟು ಮೂಳೆಗೆ ಏಟು ಬಿದ್ದು ಬಿರುಕು ಉಂಟಾಯಿತು. ಗೋವಿಂದನ್ ಅವರು ಚಿಕಿತ್ಸೆಗೆ ವೆಚ್ಚ ಮಾಡುವುದರ ಜೊತೆಗೆ ಮಾನಸಿಕ ಕ್ಲೇಶಕ್ಕೂ ಒಳಗಾದರು. ದಿನನಿತ್ಯದ ಕೆಲಸಗಳನ್ನು ಮಾಡುವುದಕ್ಕೆ ಅಡಚಣೆಯಾಯಿತು. ಹೀಗಾಗಿ ತಮಗೆ 50,000 ರೂಪಾಯಿಗಳ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಗೋವಿಂದನ್ ಅವರು ಪ್ರತಿವಾದಿಗೆ ಪತ್ರ ಬರೆದರು.

ಆದರೆ ಪ್ರತಿವಾದಿಯು ಕೊರಿಯರ್ ಮೂಲಕ ಕಳುಹಿಸಲಾದ ಈ ಪತ್ರವನ್ನು ಪಡೆದುಕೊಳ್ಳಲು ನಿರಾಕರಿಸಿದರು.

ಪರಿಹಾರ ಹಾಗೂ ವೈದ್ಯಕೀಯ ವೆಚ್ಚ ಭರಿಸುವಂತೆ ಅರ್ಜಿದಾರರು ಪರಿಪರಿಯಾಗಿ ಮನವಿ ಮಾಡಿದರು. ಪ್ರತಿವಾದಿ ಅದಕ್ಕೆ ಸೊಪ್ಪು ಹಾಕಲಿಲ್ಲ. ಕಡೆಗೆ ಬೇಸತ್ತ ಅರ್ಜಿದಾರರು ಸೇವಾಲೋಪದ ಆರೋಪ ಹೊರಿಸಿ ಗ್ರಾಹಕ ನ್ಯಾಯಾಲಯದ ಕಟ್ಟೆ ಏರಿದರು.

ಅಧ್ಯಕ್ಷ ಬಿ.ಎಸ್. ರೆಡ್ಡಿ, ಸದಸ್ಯರಾದ ಎಂ. ಯಶೋದಮ್ಮ ಮತ್ತು  ಎ. ಮುನಿಯಪ್ಪ ಅವರನ್ನು  ಒಳಗೊಂಡ ಪೀಠವು ಪ್ರತಿವಾದಿಗೆ ನೋಟಿಸ್ ಜಾರಿ ಮಾಡಿತು. ಪ್ರತಿವಾದಿ ನೋಟಿಸ್‌ಗೆ ಉತ್ತರಿಸಲಿಲ್ಲ, ನ್ಯಾಯಾಲಯಕ್ಕೂ ಹಾಜರಾಗಲಿಲ್ಲ.

ಅರ್ಜಿದಾರ ಗೋವಿಂದನ್ ಅವರು ಪ್ರಮಾಣಪತ್ರದ ಜೊತೆಗೆ ತಾವು ಅಂಗಡಿಯ ಒಳಕ್ಕೆ ಹೋಗಿದ್ದ ದಿನಾಂಕ 18-6-2010ರ ದಿನಾಂಕದ ಇನ್‌ವಾಯ್ಸೆನ ಪ್ರತಿ, ಪರಿಹಾರ ನೀಡುವಂತೆ ಆಗ್ರಹಿಸಿ ಬರೆದ 25-6-2010ರ ಪತ್ರ, ಕೊರಿಯರ್ ಹಿಂಬರಹ, ವಾಪಸ್ ಬಂದ ಕೊರಿಯರ್ ಲಕೋಟೆ, ರವಿ ಕಿರ್ಲೋಸ್ಕರ್ ಸ್ಮಾರಕ ಆಸ್ಪತ್ರೆಯಿಂದ ನೀಡಲಾದ 24-7-2010ರ ದಿನಾಂಕದ ವೈದ್ಯಕೀಯ ಪ್ರಮಾಣ ಪತ್ರ ಇತ್ಯಾದಿ ದಾಖಲೆ ಹಾಜರು ಪಡಿಸಿದ್ದನ್ನು ನ್ಯಾಯಾಲಯ ಗಮನಿಸಿತು. ಪ್ರತಿವಾದಿ ನ್ಯಾಯಾಲಯಕ್ಕೆ ಹಾಜರಾಗದೇ ಇದ್ದುದರಿಂದ ಅರ್ಜಿದಾರರೊಬ್ಬರ ವಾದವನ್ನೂ ಆಲಿಸಿತು.

ಫುಡ್ ವರ್ಲ್ಡ್ ಅಂಗಡಿಯಲ್ಲಿ ಬಿದ್ದ ಮರುದಿನ 19-6-2010ರಂದು ಅರ್ಜಿದಾರರು ರವಿ ಕಿರ್ಲೋಸ್ಕರ್ ಆಸ್ಪತ್ರೆಗೆ ಹೋದಾಗ ಎಕ್ಸ್‌ರೇ ತೆಗೆದುಕೊಂಡು ವೈದ್ಯಕೀಯ ತಪಾಸಣೆ ಮಾಡಲಾಗಿತ್ತು. ಆಗ ಮೂಳೆ ಮುರಿದುದು ಬೆಳಕಿಗೆ ಬಂದು ಒಂದು ತಿಂಗಳ ಕಾಲ ಪ್ಯಾಸ್ಟರ್ ಆಫ್ ಪ್ಯಾರಿಸ್ ಹಾಕಬೇಕಾಗಿ ಬಂದಿತ್ತು.
ಆಸ್ಪತ್ರೆಯ  ಸರ್ಜನ್ ಡಾ. ಕೆ.ಎಸ್. ವೆಂಕಟೇಶ್ ಅವರು ನೀಡಿದ ವೈದ್ಯಕೀಯ ಪ್ರಮಾಣ ಪತ್ರ ಹಾಗೂ ಇತರ ಸಾಕ್ಷ್ಯಾಧಾರಗಳು, ಪ್ರತಿವಾದಿ ಪಾಲಿನ ಸೇವಾಲೋಪವನ್ನು ದೃಢಪಡಿಸುತ್ತವೆ ಎಂಬ ತೀರ್ಮಾನಕ್ಕೆ ಬಂದ ನ್ಯಾಯಾಲಯ ಅರ್ಜಿದಾರರು  ಪರಿಹಾರಕ್ಕೆ ಅರ್ಹರಾಗಿದ್ದಾರೆ ಎಂಬ ನಿಲುವು ತಾಳಿತು.

ಅರ್ಜಿದಾರರು 50,000 ರೂಪಾಯಿಗಳ ಪರಿಹಾರಕ್ಕೆ ಆಗ್ರಹಿಸಿದ್ದನ್ನು ಉಲ್ಲೇಖಿಸಿದ ನ್ಯಾಯಾಲಯ, ಆದರೆ ಇಷ್ಟೊಂದು ಪರಿಹಾರ ಕೇಳಲು  ಅರ್ಜಿದಾರರು ಯಾವುದೇ ಆಧಾರಗಳನ್ನೂ ನೀಡಿಲ್ಲ ಎಂದು ವಿಶ್ಲೇಷಿಸಿದರು.

ಈ ಎಲ್ಲ ಹಿನ್ನೆಲೆಯಲ್ಲಿ 10,000 ರೂಪಾಯಿಗಳ ಪರಿಹಾರವನ್ನು ನಾಲ್ಕು ವಾರಗಳ  ಒಳಗೆ ನೀಡುವಂತೆಯೂ, ತಪ್ಪಿದಲ್ಲಿ ಈ ಆದೇಶದ ದಿನದಿಂದ ಹಣಪಾವತಿಯಾಗುವರೆಗೂ ವಾರ್ಷಿಕ ಶೇಕಡಾ 9 ಬಡ್ಡಿಯನ್ನೂ ಸೇರಿಸಿಕೊಂಡು ಪರಿಹಾರವನ್ನು ಪಾವತಿ ಮಾಡುವಂತೆ ಗ್ರಾಹಕ ನ್ಯಾಯಾಲಯವು ಪ್ರತಿವಾದಿಗೆ ಆದೇಶ ಮಾಡಿತು.