Showing posts with label Articles. Show all posts
Showing posts with label Articles. Show all posts

Thursday, November 14, 2024

PARYAYA: ಈಗ ಕೆನಡಾದ ಟ್ರೂಡೋ ಬುಡಕ್ಕೇ ಬಂತು …...!

ಈಗ ಕೆನಡಾದ ಟ್ರೂಡೋ ಬುಡಕ್ಕೇ ಬಂತು …...!

ಮ್ಮೆಲ್ಲ ಸಮಸ್ಯೆಗಳಿಗೂ ಭಾರತವೇ ಮೂಲ ಎಂಬುದಾಗಿ ಹೇಳುತ್ತಾ ಭಾರತದ ವಿರುದ್ಧ ಕೆಂಗಣ್ಣು ಬೀರುತ್ತಿದ್ದ ಖಲಿಸ್ಥಾನಿ ಉಗ್ರಗಾಮಿಗಳು ಇದೀಗ ಕೆನಡಾದ ಸ್ಥಳೀಯರ ಬುಡಕ್ಕೇ ಬತ್ತಿ ಇಡಲು ಹೊರಟಿದ್ದಾರೆ. ಕೆನಡಾದ ಸ್ಥಳೀಯರನ್ನೇ ಇಂಗ್ಲೆಂಡಿಗೆ ಅಟ್ಟುವ ಯೋಚನೆ ಮಾಡಹೊರಟಿದ್ದಾರೆ.

ʼತಲೆಗೆ ಹಾಕಿಕೊಂಡ ನೀರು ಬೇರೆ ಎಲ್ಲಿಗೂ ಹೋಗುವುದಿಲ್ಲ, ತನ್ನ ಕಾಲ ಬುಡಕ್ಕೇ ಇಳಿಯುತ್ತದೆʼ ಎಂಬ ಸತ್ಯ ಕೆನಡಾ ಪ್ರಧಾನ ಮಂತ್ರಿ ಜಸ್ಟಿನ್‌ ಟ್ರುಡೋ ಅರಿವಿಗೆ ಈಗಲಾದರೂ ಬರಲಾರಂಭ ಆಗಿರಬಹುದು.

ಏನಿದು ವಿಚಾರ ಎಂಬ ಪ್ರಶ್ನೆ ಎದ್ದಿರಬಹುದಲ್ಲವೇ?

ಖಲಿಸ್ಥಾನಿ ಉಗ್ರಗಾಮಿಗಳು ಇದೀಗ ಕೆನಡಾದ ಸ್ಥಳೀಯರನ್ನೇ ಆಕ್ರಮಣಕಾರರು ಎಂಬುದಾಗಿ ಕರೆದು 'ಇಂಗ್ಲೆಂಡ್ಯುರೋಪಿಗೆ ವಾಪಸಾಗಿʼ ಎಂದು ಹೇಳಲು ಹೊರಟಿದ್ದಾರೆ.

ಖಲಿಸ್ಥಾನಿ ಉಗ್ರಗಾಮಿಗಳ ಹೊರ ವರಸೆ ಇದೀಗ ಅಲ್ಲಿ ನಡೆದ ʼನಗರ ಕೀರ್ತನ್‌ʼ ಕಾರ್ಯಕ್ರಮದ ಎರಡು ನಿಮಿಷಗಳ ವಿಡಿಯೋ ಒಂದರಲ್ಲಿ ಬೆಳಕಿಗೆ ಬಂದಿದೆ. ಈ ಕಾರ್ಯಕ್ರಮದ ಮೆರವಣಿಗೆಯಲ್ಲಿ ಖಲಿಸ್ಥಾನಿ ಉಗ್ರಗಾಮಿಗಳು ತಮ್ಮ ಧ್ವಜಗಳನ್ನು ಪ್ರದರ್ಶಿಸುತ್ತಾ ʼ “ಇದು ಕೆನಡಾನಮ್ಮದೇ ದೇಶ. ನೀವು [ಕೆನಡಿಯನ್ನರು] ಹಿಂತಿರುಗಿ, ಇಂಗ್ಲೆಂಡಿಗೆ, ಯುರೋಪಿಗೆ ಹೋಗಿ" ಎಂದು ಧ್ವನಿವರ್ಧಕದಲ್ಲಿ ಕೂಗಿ ಹೋಗಿ ಹೇಳುತ್ತಿರುವ ದೃಶ್ಯದ ಈ ವಿಡಿಯೋ ಇದೀಗ ವೈರಲ್ ಆಗಿದೆ.

ಭಾರತೀಯ ಗುಪ್ತಚರ ಮೂಲಗಳು ಈ ಘಟನೆಯನ್ನು ಕೆನಡಾದ "ಹೊಸ ಸಾಮಾನ್ಯ ಸ್ಥಿತಿ" ಎಂದು ಕರೆದಿವೆ. ಖಲಿಸ್ಥಾನಿಗಳು ನಿಧಾನವಾಗಿ ದೇಶದ ಎಲ್ಲಾ ಕ್ಷೇತ್ರಗಳನ್ನೂ "ವಶಪಡಿಸಿಕೊಳ್ಳುತ್ತಿದ್ದಾರೆಸರಿಯಾದ ಕಣ್ಗಾವಲು ಇಲ್ಲ. ಹೀಗಾಗಿ ಈ ಗುಂಪುಗಳು ಸ್ಥಳೀಯ ಕೆನಡಿಯನ್ನರಿಂದಲೂ ನಿಯಂತ್ರಣವನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಿವೆ. ಹಿಂದೂಗಳಿಂದ ರಕ್ಷಣೆ ಒದಗಿಸಲು ಹಣ ಕೀಳಲಾಗುತ್ತದೆ. ಈಗ ಸ್ಥಳೀಯ ಕೆನಡಿಯನ್ನರಿಗೆ ಅವರ ಕಾಲೋನಿಗಳಲ್ಲೇ ಬೆದರಿಕೆ ಇದೆʼ ಎಂದು ಭಾರತೀಯ ಗುಪ್ತಚರ ಮೂಲಗಳು ಹೇಳಿವೆ.

ಕಳೆದ ವರ್ಷ ಭಾರತವು ʼಭಯೋತ್ಪಾದಕʼ ಎಂಬುದಾಗಿ ಘೋಷಿಸಿದ್ದ ಖಲಿಸ್ಥಾನಿ ಸಹಾನುಭೂತಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ನಂತರ ಭಾರತ ಮತ್ತು ಕೆನಡಾ ನಡುವಿನ ಸಂಬಂಧಗಳು ಹದಗೆಟ್ಟಿವೆ.

ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರು ಜೂನ್ 2023 ರಲ್ಲಿ, ನಿಜ್ಜರ್ ಹತ್ಯೆಯಲ್ಲಿ ಭಾರತೀಯ ಏಜೆಂಟರು ಮತ್ತು ಭಾರತ ಸರ್ಕಾರದ ನೇರ ಪಾತ್ರವಿದೆ ಎಂದು ಆಪಾದಿಸಿ ಆ ಕುರಿತು ತನಿಖೆಗೆ ಆಜ್ಞಾಪಿಸಿದ್ದರು. ಈ ಘಟನೆಯ ಬಳಿಕ ಉಭಯ ದೇಶಗಳೂ ಪರಸ್ಪರರ ಉನ್ನತ ರಾಜತಾಂತ್ರಿಕರನ್ನು ಹೊರಹಾಕಿದ್ದವು.

ಭಾರತವು ತನ್ನ ಮೇಲಿನ ಆರೋಪಗಳನ್ನು ತಳ್ಳಿಹಾಕಿದೆ.  ಟ್ರೂಡೊ ಭಾರತದ ವಿರುದ್ಧ ಸಂಚು ಹೂಡುತ್ತಿರುವಖಲಿಸ್ಥಾನಿಗಳಿಗೆ ಆಶ್ರಯ ನೀಡುತ್ತಿದೆ ಎಂದು ಆರೋಪಿಸಿದೆ.

ಇದೇ ವೇಳೆಯಲ್ಲಿ ಕೆನಡಾ ನೆಲದಲ್ಲಿ ಹಿಂದೂಗಳ ಮೇಲೆ ಖಲಿಸ್ಥಾನಿಗಳಿಂದ ಹಲ್ಲೆ ನಡೆಯುತ್ತಿದೆ. ಇತ್ತೀಚಿಗೆಕೆನಡಾದಲ್ಲಿ ಹಿಂದೂಗಳ ಮೇಲೆ ದಾಳಿ ಘಟನೆಗಳೂ ನಡೆದಿವೆ. ದೇವಸ್ಥಾನದಲ್ಲಿ ಹಿಂದೂ  ಭಕ್ತರ ಮೇಲೆ ಹಲ್ಲೆ ನಡೆದಿದೆ. ದೇವಾಲಯಗಳಲ್ಲಿ ಹಿಂದೂ ಭಕರ ಮೇಲಿನ "ಉದ್ದೇಶಪೂರ್ವಕ ದಾಳಿ"ಯನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಹೇಳಿಕೆಯನ್ನೂ ನೀಡಿದ್ದಾರೆ.

ಕೆನಡಾದಲ್ಲಿ ನಡೆಯಲಿರುವ ಮುಂದಿನ ವರ್ಷದ ಚುನಾವಣೆಯಲ್ಲಿ ಸಂಸದ ಜಗ್ಮೀತ್ ಸಿಂಗ್ ಅವರ ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಪ್ರಧಾನಿ ಟ್ರೂಡೊ ಖಲಿಸ್ತಾನಿ ಗುಂಪುಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಭಾರತೀಯ ಗುಪ್ತಚರ ಮತ್ತು ಸರ್ಕಾರಿ ಏಜೆನ್ಸಿಗಳು ಅಭಿಪ್ರಾಯಪಟ್ಟಿವೆ. ತನ್ನ ಜನಪ್ರಿಯತೆಯ ಶ್ರೇಯಾಂಕದಲ್ಲಿ ಕುಸಿತವಾಗಿರುವುದನ್ನು ಕಂಡಿರುವ ಟ್ರೂಡೋ, ತನ್ನ ಸರ್ಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ ಎಂದು ಬಹಿರಂಗ ಪಡಿಸಿವೆ. ಆ ಬಳಿಕ ತನ್ನ ಭಾರತ ವಿರೋಧೀ ಆರೋಪಗಳು ಕೇವಲ ಗುಪ್ತಚರ ಮಾಹಿತಿ ಮಾತ್ರ ಅದಕ್ಕೆ ಯಾವುದೇ ದೃಢವಾದ ಪುರಾವೆಗಳಿಲ್ಲ" ಎಂದು ಟ್ರೂಡೋ ಒಪ್ಪಿಕೊಂಡಿದ್ದರು.

 “ಟ್ರೂಡೊ ಅವರು ತಾನು ಹೇಗೆ ಐಎಸ್‌ಐ ಮತ್ತು ಖಲಿಸ್ಥಾನಿಗಳ ಕೈಗೊಂಬೆಯಾಟ  ಗೊಂಬೆಯಾಟ ಆಡುತ್ತಿದ್ದೇನೆ ಎಂಬುದನ್ನು ಅರ್ಥ ಮಾಡಿಕೊಳ್ಳದೆ, ಎಲ್ಲದಕ್ಕೂ ಭಾರತದ ಮೇಲೆ ಗೂಬೆ ಕೂರಿಸುವ ಮೂಲಕ ಬಾಲಿಶ ರೀತಿಯಲ್ಲಿ ವರ್ತಿಸುತ್ತಿದ್ದಾರೆ. ಈ ಆರೋಪಗಳು ದ್ವಿಪಕ್ಷೀಯ ಸಂಬಂಧಗಳನ್ನು ಹಾಳುಮಾಡುತ್ತಿವೆ ಮತ್ತು ಅವರ ವೈಯಕ್ತಿಕ ಇಮೇಜ್ ಅನ್ನು ಹಾಳುಮಾಡುತ್ತಿವೆ ಎಂದು ಗುಪ್ತಚರ ಮೂಲಗಳು ಹೇಳಿದ್ದವು.

ಕೆನಡಾದಲ್ಲಿನ ಖಲಿಸ್ತಾನಿಗಳ ಹೊಸ ಹುನ್ನಾರವನ್ನು ತೋರಿಸುವ ವಿಡಿಯೋ ಇಲ್ಲಿದೆ.


ವಿಡಿಯೋದ ʼಎಕ್ಸ್‌ʼ ಕೊಂಡಿ ನೋಡಲು ಇಲ್ಲಿ ಕ್ಲಿಕ್‌ ಮಾಡಿ:
https://twitter.com/i/status/1856837451697844720

PARYAYA: ಈಗ ಕೆನಡಾದ ಟ್ರೂಡೋ ಬುಡಕ್ಕೇ ಬಂತು …...!: ಈಗ ಕೆನಡಾದ ಟ್ರೂಡೋ ಬುಡಕ್ಕೇ ಬಂತು …...! ತ ಮ್ಮೆಲ್ಲ ಸಮಸ್ಯೆಗಳಿಗೂ ಭಾರತವೇ ಮೂಲ ಎಂಬುದಾಗಿ ಹೇಳುತ್ತಾ ಭಾರತದ ವಿರುದ್ಧ ಕೆಂಗಣ್ಣು ಬೀರುತ್ತಿದ್ದ ಖಲಿಸ್ಥಾನಿ ಉಗ್ರಗಾಮಿ...

PARYAYA: ಅಪ್ನಾ ಘರ್:‌ ಕನಸು ಕರ್ನಾಟಕದಲ್ಲಿ ಮುರುಟುತ್ತಿದೆಯೇ?

 ಅಪ್ನಾ ಘರ್:‌ ಕನಸು ಕರ್ನಾಟಕದಲ್ಲಿ ಮುರುಟುತ್ತಿದೆಯೇ?

“‘ಪ್ನಾ ಘರ್ ಹೋಅಪ್ನಾ ಅಂಗನ್ ಹೋಈಸ್ ಖವಾಬ್ ಮೇ ಹರ್ ಕೋಯಿ ಜೀತಾ ಹೈಇನ್ಸಾನ್ ಕೆ ದಿಲ್ ಕಿ ಯೇ ಚಾಹತ್ ಹೈ ಕಿ ಏಕ್ ಘರ್ ಕಾ ಸಪ್ನಾ ಕಭಿ ನಾ ಚೂಟೇ' (ಸ್ವಂತ ಮನೆ ಇರಲಿಸ್ವಂತ ಅಂಗಳ ಇರಲಿ ಎಂಬ ಕನಸು ಪ್ರತಿಯೊಬ್ಬ ಮನುಷ್ಯನ ಹೃದಯದಲ್ಲೂ ವಾಸವಾಗಿರುತ್ತದೆ. ಎಂದಿಗೂ ಕಳೆದುಹೋಗದ ಮನೆಯ ಕನಸು- ಇದು ಎಂದಿಗೂ ಮರೆಯಾಗದ ಹಂಬಲ).

“‘Apna ghar ho, apna aangan ho, is khawab mein har koi jeeta hai; Insaan ke dil ki ye chahat hai ki ek ghar ka sapna kabhi naa choote’ (To have one’s own home, one’s own courtyard – this dream lives in every heart. It’s a longing that never fades, to never lose the dream of a home)."

೨೦೨೪ ನವೆಂಬರ್‌ ೧೩ರ ಬುಧವಾರ ಬುಲ್‌ ಡೋಜರ್‌ ಓಡಿಸಿ ಮನೆ ಕೆಡವಿ ಹಾಕುವ ಸರ್ಕಾರಿ ಸಿಬ್ಬಂದಿಯ ಕ್ರಮವನ್ನು ಅಮಾನ್ಯಗೊಳಿಸಿದ ಸುಪ್ರೀಂಕೋರ್ಟ್‌ ತೀರ್ಪಿನ ಪೀಠಿಕೆ ಭಾಗದಲ್ಲಿ ನ್ಯಾಯಮೂರ್ತಿ ಬಿ.ಆರ್.‌ ಗವಾಯಿ ಅವರು ಉಲ್ಲೇಖಿಸಿರುವ ಹಿಂದಿ ಕವಿ ಪ್ರದೀಪ್‌ ಅವರ ಕವನದ ಸಾಲುಗಳಿವು.

ಆದರೆ, ಸ್ವಂತ ಸೂರು, ಸ್ವಂತ ಮನೆ, ಸ್ವಂತ ಆಸ್ತಿ ಹೊಂದುವ ಅದಕ್ಕಾಗಿ ಅವುಗಳನ್ನು ಖರೀದಿಸಲು ತುದಿಗಾಲ ಮೇಲೆ ನಿಂತಿರುವ ಸಹಸ್ರಾರು ಮಂದಿಯ ಕನಸು ಕರ್ನಾಟಕದಲ್ಲಿ ಮುರುಟಿಹೋಗುತ್ತಿದೆಯೇ? ಎಂಬ ಪ್ರಶ್ನೆ ರಾಜ್ಯದ ಹಲವರ ಮನಸ್ಸಿನಲ್ಲಿ ಮೂಡಿದ್ದರೆ ವಿಶೇಷವೇನೂ ಅಲ್ಲ. ಏಕೆಂದರೆ ಕಳೆದ ಎರಡು ತಿಂಗಳುಗಳಿಂದ ಕರ್ನಾಟಕದಲ್ಲಿ ಮನೆ, ಆಸ್ತಿ ಖರೀದಿಸಬಯಸಿದವರ ಕನಸುಗಳು ಈಡೇರುತ್ತಿಲ್ಲ, ಅವರ ಕ್ರಯಪತ್ರಗಳು ನೋಂದಣಿ ಆಗುತ್ತಿಲ್ಲ.

ಪತ್ರಿಕಾ ವರದಿಗಳ ಪ್ರಕಾರ ಇದಕ್ಕೆ ಕಾರಣ ಸರ್ಕಾರ ಜಾರಿಗೊಳಿಸಿರುವ ನೀತಿ. ಯಾವುದೇ ಆಸ್ತಿ ಖರೀದಿ, ಮಾರಾಟಕ್ಕೆ ಇ-ಖಾತೆ ಕಡ್ಡಾಯ ಎಂಬ ನಿಯಮ. ಮಾರಾಟ- ಖರೀದಿ ಕ್ರಯಪತ್ರ ನೋಂದಣಿ ದಿನಾಂಕದವರೆಗಿನ ಇ-ಖಾತೆ ಇರಲೇಬೇಕು ಎಂಬ ಆದೇಶ.

ಆದರೆ ಬೆಂಗಳೂರಿನ ಬಿಬಿಎಂಪಿಯಿಂದ ಹಿಡಿದು, ಹಳ್ಳಿಗಳ ಗ್ರಾಮ ಪಂಚಾಯಿತಿ, ಪುಟ್ಟ ಪಟ್ಟಣ, ನಗರಗಳ ನಗರಸಭೆಯವರೆಗೂ ಇ-ಖಾತೆ ನೀಡಲು ಸಾಧ್ಯವಾಗುತ್ತಿಲ್ಲ ಎಂಬುದು ಸಿಬ್ಬಂದಿಯ ಅಳಲು. ಅದಕ್ಕೆ ಅವರು ನೀಡುತ್ತಿರುವ ಕಾರಣ – ಹಿಂದೆ ಭೂಮಿ ತಂತ್ರಾಂಶ ಇತ್ತು. ಆಗ ಎಲ್ಲವೂ ಸರಳವಾಗಿತ್ತು. ಸರ್ಕಾರ ಈಗ ಹೊಸದಾಗಿ ಕಾವೇರಿ ತಂತ್ರಾಂಶವನ್ನು ಅಳವಡಿಸಿದೆ. ಈ ತಂತ್ರಾಂಶದ ಜೊತೆಗೆ ನಮ್ಮ ಕಂಪ್ಯೂಟರ್‌ ವ್ಯವಸ್ಥೆ ಹೊಂದಾಣಿಕೆ ಅಥವಾ ಸಂಯೋಜನೆ ಆಗುತ್ತಿಲ್ಲ ಎಂಬುದು ಅವರ ಅಳಲು.

ಹೀಗೇಕೆ? ಎಂಬ ಪ್ರಶ್ನೆಗೆ ಲಭಿಸುವ ಉತ್ತರ – ಹಿಂದೆ ಖಾತೆಗಳನ್ನು ಕೈಗಳಲ್ಲೇ ಬರೆದು ಸಹಿ, ಮೊಹರು ಹಾಕಿ ಕೊಟ್ಟರೆ ಸಾಕಿತ್ತು. ಆದರೆ ಈಗ ಖಾತೆಗಳನ್ನು ಇ-ಸ್ವತ್ತು ಇಲ್ಲವೇ ಇ-ಆಸ್ತಿ ತಂತ್ರಾಂಶದ ಮೂಲಕವೇ ಪಡೆಯಬೇಕು. ಆದರೆ ಇ-ಸ್ವತ್ತು ಇಲ್ಲವೇ ಇ-ಆಸ್ತಿ ಮೂಲಕ ಖಾತೆ ಪಡೆಯಲು ಅದಕ್ಕೆ ಸಬ್‌ ರಿಜಿಸ್ಟ್ರಾರ್‌ ಕಚೇರಿಯಿಂದ ನೀಡಲಾಗುವ ಋಣಭಾರ ಪತ್ರ ಲಗತ್ತಿಸಲ್ಪಡಬೇಕು. ಆದರೆ ಅದು ಕಾವೇರಿ ತಂತ್ರಾಂಶ ಮೂಲಕ ತಾನೇ ತಾನಾಗಿ ಇ-ಸ್ವತ್ತು ಇಲ್ಲವೇ ಇ-ಆಸ್ತಿ ದಾಖಲೆಗಳ ಜೊತೆಗೆ ಸಂಯೋಜನೆಯಾಗಬೇಕು. ಆದರೆ, ಸಬ್‌ ರಿಜಿಸ್ಟ್ರಾರ್‌ ಕಚೇರಿಯ ಕಾವೇರಿ ತಂತ್ರಾಂಶದ ಜೊತೆಗೆ ನಮ್ಮ ತಂತ್ರಾಂಶಗಳನ್ನು ಜೋಡಿಸಲು ನೀಡಬೇಕಾದ ಕೋಡ್‌ ಈವರೆಗೂ ಸರಿಯಾಗಿ ಎಲ್ಲ ಪಂಚಾಯತ್‌, ನಗರಸಭೆಗಳಿಗೆ ಸಿಕ್ಕಿಲ್ಲ ಎಂಬುದು ಉಡುಪಿಯ ನಗರಸಭೆಯ ಸಿಬ್ಬಂದಿಯೊಬ್ಬರ ಹೇಳಿಕೆ.

ಕಳೆದೆರಡು ತಿಂಗಳುಗಳಲ್ಲಿ ಈ ಸಂಯೋಜನೆಯ ಅಭಾವದ ಪರಿಣಾಮವಾಗಿ ಸಹಸ್ರಾರು ಕ್ರಯಪತ್ರಗಳು ನೋಂದಣಿಯಾಗದೆ ಸರ್ಕಾರಕ್ಕೆ ಕೋಟಿಗಟ್ಟಲೆ ರೂಪಾಯಿ ನಷ್ಟವಾಗಿರುವ ಬಗ್ಗೆ ಸಾಕಷ್ಟು ಪತ್ರಿಕೆಗಳಲ್ಲಿ ವರದಿಗಳು ಬಂದಿವೆ.

ಕಾವೇರಿ ತಂತ್ರಾಂಶವು ಕೇಂದ್ರ ಸರ್ಕಾರದ ಎನ್‌ ಐಸಿ ರೂಪಿಸಿದ ತಂತ್ರಾಂಶಗಳ ಜೊತೆಗೂ ಹೊಂದಾಣಿಕೆಯಾಗದ ಪರಿಣಾಮವಾಗಿ ಕೇಂದ್ರ ಸರ್ಕಾರದಿಂದ ಗ್ರಾಮ ಪಂಚಾಯತಿಗಳಿಗೆ ಬರಬೇಕಾದ ಅನುದಾನ ಕೂಡಾ ಕೂಡಾ ರಾಜ್ಯಕ್ಕೆ ಬಂದಿಲ್ಲ ಎಂದು ಪಂಚಾಯತ್‌ ರಾಜ್‌ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಉಮಾ ಮಹದೇವನ್‌ ಕೆಲ ಸಮಯದ ಹಿಂದೆ ಹೇಳಿದ್ದರು.

ಅಂದರೆ ರಾಜ್ಯ ಸರ್ಕಾರ ಜಾರಿಗೆ ತಂದಿರುವ ತಂತ್ರಾಂಶಗಳು ರಾಜ್ಯದಲ್ಲೇ ಬಿಬಿಎಂಪಿ, ನಗರಸಭೆ, ಪಂಚಾಯತಿಗಳ ಜೊತೆಷ್ಟೇ ಅಲ್ಲ, ಕೇಂದ್ರ ಸರ್ಕಾರದ ತಂತ್ರಾಂಶಗಳ ಜೊತೆಗೂ ಸಮರ್ಪಕವಾಗಿ ಹೊಂದಾಣಿಕೆ ಅಥವಾ ಸಂಯೋಜನೆ ಆಗುತ್ತಿಲ್ಲ ಎಂದಾಯಿತು. ಇದರಿಂದಾಗಿಯೇ ಇ-ಖಾತೆ ನೀಡಲು ಸಮಸ್ಯೆಯಾಗುತ್ತಿದೆ, ಪರಿಣಾಮವಾಗಿ ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಲ್ಲಿ ಆಸ್ತಿ ವಿಕ್ರಯ, ಖರೀದಿ ಕ್ರಯಪತ್ರಗಳ ನೋಂದಣಿ ಆಗುತ್ತಿಲ್ಲ ಎಂದಾಯಿತು.

ಆದರೆ ಇದೇ ವೇಳೆಯಲ್ಲಿ ಇನ್ನೊಂದು ವಿದ್ಯಮಾನವೂ ಇದರ ಜೊತೆಗೆ ತಳಕು ಹಾಕಿಕೊಂಡಂತೆ ಕಾಣುತ್ತಿದೆ. ವರ್ಷದ ಹಿಂದೆ ನಕಲಿ ದಾಖಲೆಗಳ ನೋಂದಣಿಗೆ ತಡೆ ಹಾಕಲು ರಾಜ್ಯ ಸರ್ಕಾರವು ನೋಂದಣಿ ಕಾಯ್ದೆಗೆ ಮಹತ್ವದ ತಿದ್ದುಪಡಿಯೊಂದನ್ನು ಮಾಡಿ ಕಾಯ್ದೆ ರೂಪಿಸಿತ್ತು. ಈ ಕಾಯ್ದೆಗೆ ರಾಷ್ಟ್ರಪತಿಯವರು ಇತ್ತೀಚೆಗೆ ತಮ್ಮ ಅನುಮೋದನೆ ನೀಡಿದ್ದರು. ಈ ಅನುಮೋದನೆ ಬಳಿಕ ಅದನ್ನು ರಾಜ್ಯಪತ್ರದಲ್ಲೂ ಪ್ರಕಟಿಸಲಾಗಿದ್ದು ಅದೀಗ ಕಾನೂನಾಗಿ ಜಾರಿಗೊಂಡಿದೆ.

ಈ ಕಾನೂನನ್ನು ವಿರೋಧಿಸಿ ಸಬ್‌ ರಿಜಿಸ್ಟ್ರಾರ್‌ ಗಳು ರಾಜ್ಯವಾಪಿ ಮುಷ್ಕರ ಆರಂಭಿಸಿದ್ದರು. ಈ ಮುಷ್ಕರದ ಸ್ಥಿತಿ ಏನಾಗಿದೆ ಎಂಬುದು ಆ ನಂತರ ಪತ್ರಿಕೆಗಳಲ್ಲಿ ವರದಿ ಬಂದಿಲ್ಲ. ಈ ಮುಷ್ಕರ ಕೂಡಾ ಕ್ರಯಪತ್ರಗಳ ನೋಂದಣಿ ಸ್ಥಗಿತದ ಹಿಂದೆ ಕೆಲಸ ಮಾಡಿರಬಹುದೇ ಎಂಬ ಅನುಮಾನವೂ ಇದೆ.

ಅಂತೂ ಇಂತೂ ಕುಂತಿ ಮಕ್ಕಳಿಗೆ ವನವಾಸ ಎಂಬ ಗಾದೆಯಂತೆ, ಕಾರಣ ಏನೇ ಇದ್ದರೂ ಸ್ವಂತ ಮನೆ, ಸ್ವಂತ ನಿವೇಶನ, ಸ್ವಂತ ಆಸ್ತಿ ಹೊಂದುವ ಹಲವರ ಕನಸಿಗೆ ಮಾತ್ರ ನಿತ್ಯ ತಣ್ಣೀರು ಅಭಿಷೇಕವಾಗುತ್ತಿದೆ.

ಸರ್ಕಾರ ಈ ಸಮಸ್ಯೆ ಬಗೆ ಹರಿಸಲು ವಿವಿಧ ಇಲಾಖಾ ಅಧಿಕಾರಿಗಳನ್ನು ಒಳಗೊಂಡ ʼಜಂಟಿ ಕಾರ್ಯಪಡೆʼ ರಚಿಸುವ ನಿರ್ಧಾರವನ್ನು ಬುಧವಾರ (೧೩.೧೧.೨೦೨೪) ಕೈಗೊಂಡಿದೆ. ವರದಿ ಕೊಡಲು ಕಾರ್ಯಪಡೆಗೆ ಎರಡು ತಿಂಗಳ ಗಡುವು ನೀಡಲಾಗಿವೆ ಎನ್ನುತ್ತಿವೆ ವರದಿಗಳು.

ಆದರೆ ಜ್ವಲಂತ ಪ್ರಶ್ನೆ ಇದಲ್ಲ. ಈಗಾಲೇ ಕ್ರಯಪತ್ರಗಳನ್ನು ಸಿದ್ಧ ಪಡಿಸಿಕೊಂಡು, ಬ್ಯಾಂಕುಗಳಿಂದ ಸಾಲ ಮಂಜೂರು ಮಾಡಿಸಿಕೊಂಡು ಕ್ರಯಪತ್ರಗಳ ನೋಂದಣಿಗಾಗಿ ಕಾದುಕುಳಿತಿರುವ ಸಹಸ್ರಾರು ಮಂದಿ ಈಗ ಏನು ಮಾಡಬೇಕು? ಕಾರ್ಯಪಡೆಯ ವರದಿ ಬರುವವರೆಗೆ, ಅದನ್ನು ಸರ್ಕಾರ ಪರಿಶೀಲಿಸುವವರೆಗೆ, ಅದನ್ನು ಜಾರಿಗೆ ತರಲು ಕ್ರಮಗಳನ್ನು ಕೈಗೊಳ್ಳುವವರೆಗೆ ʼಚಾತಕ ಪಕ್ಷಿಗಳಂತೆʼ ಕಾಯುತ್ತಾ ಕೂರಬೇಕೇ?

ಅಥವಾ ತುರ್ತಾಗಿ ಅಂತಹ ಮಂದಿಗೆ ನಗರಸಭೆ/ ಪುರಸಭೆಗಳಿಂದ ʼತಾತ್ಕಲಿಕ ಖಾತೆʼ ನೀಡಿ ನಂತರ ಅದಕ್ಕೆ ಇ-ಖಾತೆ ಸೇರ್ಪಡೆ ಮಾಡಲು ವ್ಯವಸ್ಥೆ ಮಾಡುವ ಮೂಲಕ ಸರ್ಕಾರ ಈ ಸಮಸ್ಯೆ ಬಗೆಹರಿಸುತ್ತದೆಯೇ?

ಈ ಪ್ರಶ್ನೆ/ ಸಮಸ್ಯೆಯನ್ನು ಬಗೆ ಹರಿಸಬೇಕಾದದ್ದು ಈಗಿನ ತುರ್ತು ಅಗತ್ಯ.

(ಚಿತ್ರಗಳ ಸಮೀಪ ನೋಟಕ್ಕೆ ಅವುಗಳನ್ನು ಕ್ಲಿಕ್‌ ಮಾಡಿರಿ.  ವಿಡಿಯೋ ನೋಡಲು ಕೆಳಗೆ ಕ್ಲಿಕ್‌ ಮಾಡಿರಿ.)

-ನೆತ್ರಕೆರೆ ಉದಯಶಂಕರ

PARYAYA: ಅಪ್ನಾ ಘರ್:‌ ಕನಸು ಕರ್ನಾಟಕದಲ್ಲಿ ಮುರುಟುತ್ತಿದೆಯೇ?:   ಅಪ್ನಾ ಘರ್:‌ ಕನಸು ಕರ್ನಾಟಕದಲ್ಲಿ ಮುರುಟುತ್ತಿದೆಯೇ? “‘ ಅ ಪ್ನಾ ಘರ್ ಹೋ , ಅಪ್ನಾ ಅಂಗನ್ ಹೋ , ಈಸ್ ಖವಾಬ್ ಮೇ ಹರ್ ಕೋಯಿ ಜೀತಾ ಹೈ ; ಇನ್ಸಾನ್ ಕೆ ದಿಲ್ ಕಿ ಯೇ ...

Sunday, September 12, 2021

PARYAYA: ಪಶ್ಚಿಮ ಘಟ್ಟ: ಹೀಗೊಂದು ದೃಶ್ಯ ಕಾವ್ಯ…

ಪಶ್ಚಿಮ ಘಟ್ಟ: ಹೀಗೊಂದು  ದೃಶ್ಯ ಕಾವ್ಯ…


ಪಶ್ಚಿಮ ಘಟ್ಟ- ದಕ್ಷಿಣ ಭಾರತದ ಕಾಶ್ಮೀರವೆಂದರೆ ತಪ್ಪಲ್ಲ. ಪಶ್ಚಿಮ ಘಟ್ಟದ ಕಾನನಗಳ ಮಧ್ಯೆ ಚಾರಣ, ಪಯಣ ಒಂದು ಅಪೂರ್ವ ಅನುಭವ.

ಬೆಟ್ಟಗುಡ್ಡಕಣಿವೆನೀರಿನ ಝರಿಗಳು,ಕಣಿವೆ- ಪ್ರಪಾತಗಳು, ಸೇತುವೆಗಳು, ಸುರಂಗಗಳು, ಅಪರೂಪದ ಸಸ್ಯರಾಶಿ, ಹಾವು ಪವಡಿಸಿದಂತೆ  ಕಾಣುವ ಮಾರ್ಗ, ಇವೆಲ್ಲಕ್ಕೆ ಕಿರೀಟವಿಟ್ಟಂತೆ ತೇಲುವ ಮೋಡ, ಹಿಮ, ತೀಡುವ ತಂಗಾಳಿ…

ಪಶ್ಚಿಮ ಘಟ್ಟದ ಆಹ್ಲಾದಕರ ಅನುಭವವನ್ನು  ಅಲ್ಲಿ ಪಯಣಿಸಿದವರೇ ಬಲ್ಲರು. ದಶಕಗಳಿಂದಲೇ ಇಲ್ಲಿ ಓಡುತ್ತಿರುವ ರೈಲುಗಳಲ್ಲಿ ಪಶ್ಚಿಮ ಘಟ್ಟದ ಈ ಸೊಬಗು ವೀಕ್ಷಿಸಲೆಂದೇ ಹಗಲು ರೈಲಿನಲ್ಲಿ ಪಯಣಿಸುವವರ ಸಂಖ್ಯೆ ಕಡಿಮೆಯೇನೂ ಇಲ್ಲ. ಮೊಬೈಲ್ ಯುಗ ಆರಂಭವಾದ ಬಳಿಕವಂತೂ ಸಕಲೇಶಪುರ ಕಳೆಯಿತು ಎಂದರೆ ಸುಬ್ರಹ್ಮಣ್ಯ ರಸ್ತೆಯವರೆಗೂ ಮೊಬೈಲ್ ಕ್ಲಿಕ್ಕಿಸಿಕೊಂಡು ಫೊಟೋಗ್ರಾಫರ್ ಆಗಿದ್ದೇವೆಂದು ಹೆಮ್ಮೆಯಿಂದ ಬೀಗುವವರಿಗೆ ಲೆಕ್ಕವಿಲ್ಲ.

ಪಶ್ಚಿಮ ಘಟ್ಟದ ಸೊಬಗನ್ನು ಜನರಿಗೆ ಪರಿಚಯಿಸಲೆಂದೇ ರೈಲ್ವೇ ಇಲಾಖೆಯು ಈ ಮಾರ್ಗದಲ್ಲಿ ಈಗ ವಿಸ್ಟಾಡೋಮ್ ರೈಲು ಪಯಣವನ್ನೂ ಹಗಲಿನಲ್ಲಿ ಆರಂಭಿಸಿದೆ. ಸಂಪೂರ್ಣ ಗಾಜುಮಯವಾದ ಈ ರೈಲಿನಲ್ಲಿ ನಿಮಗೆ ಪಶ್ಚಿಮಘಟ್ಟದಲ್ಲಿ ಕುಳಿತುಕೊಂಡೇ ಹಾರುತ್ತಿರುವ ಅನುಭವ ಆಗಬಲ್ಲುದು.

ಛಾಯಾಚಿತ್ರಕಾರರಿಗಂತೂ ಪಶ್ಚಿಮ ಘಟ್ಟದ ರೈಲು ಪಯಣ ಒಂದು ಹಬ್ಬ. ತಮ್ಮ ಕ್ಯಾಮರಾ ಹೆಗಲಿಗೇರಿಸಿಕೊಂಡು ಭೂಮಾತೆಯ ಸೌಂದರ್ಯವನ್ನು ಸೆರೆ ಹಿಡಿಯಲು ಅವರಿಗೆ ಅಮಿತೋತ್ಸಾಹ.

ಪಕ್ಷಿ, ಪ್ರಾಣಿ, ಪ್ರಕೃತಿ, ಕೋಟೆ – ಹೀಗೆ ವೈವಿಧ್ಯಮಯ ಛಾಯಾಚಿತ್ರಗಳನ್ನು ತೆಗೆಯುವುದರಲ್ಲಿ ಸಿದ್ಧ ಹಸ್ತರಾದ ಹಿರಿಯ ಪತ್ರಿಕಾ ಛಾಯಾಗ್ರಾಹಕ ವಿಶ್ವನಾಥ ಸುವರ್ಣರಿಗೂ ಪಶ್ಚಿಮ ಘಟ್ಟದ ಸೊಬಗು ಸೆರೆ ಹಿಡಿಯುವುದೆಂದರೆ ಅಪಾರ ಆಸಕ್ತಿ. ವಿಸ್ಟಾಡೋಮ್ ಪಯಣ ಆರಂಭಕ್ಕೆ ಸ್ವಲ್ಪ ಮುನ್ನವೇ ಅವರು ಸೆರೆ ಹಿಡಿದ ಪಶ್ಚಿಮ ಘಟ್ಟದ ಛಾಯಾಚಿತ್ರಗಳು ಅಪ್ಯಾಯಮಾನವಾಗಿವೆ.

ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಇಡೀ ದೇಶದ ಜನರನ್ನು ಬಡಿದೆಬ್ಬಿಸಿದ್ದ ವಂದೇ ಮಾತರಂ ಗೀತೆಯಲ್ಲಿ ಬಂಕಿಮ್ ಚಂದ್ರ ಚಟರ್ಜಿಯವರು ವರ್ಣಿಸಿದ್ದ ಭೂಮಾತೆಯ ಸೊಬಗು ಈ ಪಶ್ಚಿಮ ಘಟ್ಟದಲ್ಲಿ ಪಯಣಿಸುವಾಗ ಕಣ್ಣಿಗೆ ರಾಚುತ್ತದೆ.

ಈ ವಂದೇ ಮಾತರಂ ಗೀತೆಯನ್ನು ಭಾಗವತರಾದ ಪಟ್ಲಸತೀಶ ಶೆಟ್ಟಿಸತ್ಯನಾರಾಯಣ ಪುಣ್ಚಿತ್ತಾಯ ಮತ್ತು ಕಾವ್ಯಶ್ರೀ  ಅಜೇರು ಅವರು ಯಕ್ಷಗಾನದ ಶೈಲಿಯಲ್ಲಿ ಹಾಡಿದ್ದು ಇತ್ತೀಚೆಗೆ ವಾಟ್ಸಪ್ ಗಳಲ್ಲಿ ವ್ಯಾಪಕವಾಗಿ ಹರಿದಾಡಿತ್ತು.

ವಿಶ್ವನಾಥ ಸುವರ್ಣರ ಪಶ್ಚಿಮ ಘಟ್ಟದ ಛಾಯಾಚಿತ್ರಗಳನ್ನು ನೋಡುತ್ತಿದ್ದಂತೆಯೇ  ಮನಸ್ಸಿನಲ್ಲಿ ಭಾರತ ಮಾತೆಯ ಸೊಬಗನ್ನು ಬಣ್ಣಿಸುವ ‘ವಂದೇ ಮಾತರಂ’ ಮನದೊಳಗೆ ಮೂಡಿಬಂದದ್ದರ ಪರಿಣಾಮವೇ  ಈ ‘ವಂದೇ ಮಾತರಂ ದೃಶ್ಯ ಕಾವ್ಯದ ಚಿತ್ರಣ ನೀಡುವ ವಿಡಿಯೋ ಸೃಷ್ಟಿಗೆ  ಪ್ರೇರಣೆಯಾಯಿತು.

ಈ ದೃಶ್ಯ ಕಾವ್ಯದ  ಎರಡು ಆವೃತ್ತಿಗಳು ಇಲ್ಲಿವೆ: ಕೇಳಿ ಆನಂದಿಸಿ. ಈ ವಿಡಿಯೋಗಳು ‘ಪರ್ಯಾಯ-5’ ಯು ಟ್ಯೂಬ್ ಚಾನೆಲ್ ನಲ್ಲಿಯೂ ಲಭ್ಯವಿವೆ.

ವಿಡಿಯೋಗಳನ್ನು ವೀಕ್ಷಿಸಲು ಕೆಳಗಿನ ಚಿತ್ರಗಳನ್ನು ಕ್ಲಿಕ್ ಮಾಡಿ.




-ನೆತ್ರಕೆರೆ ಉದಯಶಂಕರ.


PARYAYA: ಪಶ್ಚಿಮ ಘಟ್ಟ: ಹೀಗೊಂದು ದೃಶ್ಯ ಕಾವ್ಯ…:   ಪಶ್ಚಿಮ ಘಟ್ಟ: ಹೀಗೊಂದು   ದೃಶ್ಯ ಕಾವ್ಯ… ಪಶ್ಚಿಮ ಘಟ್ಟ- ದಕ್ಷಿಣ ಭಾರತದ ಕಾಶ್ಮೀರವೆಂದರೆ ತಪ್ಪಲ್ಲ. ಪಶ್ಚಿಮ ಘಟ್ಟದ ಕಾನನಗಳ ಮಧ್ಯೆ ಚಾರಣ, ಪಯಣ ಒಂದು ಅಪೂರ್ವ ಅನುಭವ...

Sunday, September 5, 2021

PARYAYA: ನ್ಯಾಯಾಲಯಕ್ಕೆ ಸಾಧ್ಯವಾಗದ್ದು, ಪಂಚಾಯತಿಗೆ ಸಾಧ್ಯವಾಯಿತು..!

ನ್ಯಾಯಾಲಯಕ್ಕೆ ಸಾಧ್ಯವಾಗದ್ದು, ಪಂಚಾಯತಿಗೆ ಸಾಧ್ಯವಾಯಿತು..!

 ಈ ಗ್ರಾಮ ಪಂಚಾಯತಿಯಲ್ಲಿ ‘ಸರ್’  ‘ಮ್ಯಾಡಮ್’ ಪದ ಬಳಸುವಂತಿಲ್ಲ..

ನ್ಯಾಯಾಲಯಕ್ಕೆ ಸಾಧ್ಯವಾಗದ್ದು, ಪಂಚಾಯತಿಗೆ ಸಾಧ್ಯವಾಯಿತು..!

ಆರು ತಿಂಗಳ ಹಿಂದೆ ಸುಪ್ರೀಂಕೋರ್ಟಿನಲ್ಲಿ  ಭಾರತದ ಮುಖ್ಯ ನ್ಯಾಯಮೂರ್ತಿ  ಎಸ್ ಎ ಬೋಬಡೆ ಅವರು ಯುವ ವಕೀಲರೊಬ್ಬರು ತಮ್ಮನ್ನು ‘ಯುವರ್ ಆನರ್’ ಎಂಬುದಾಗಿ ಸಂಬೋಧಿಸಿದಾಗ ಸಿಟ್ಟಿಗೆದ್ದಿದ್ದರು.

‘ನಿಮ್ಮ ಮನಸ್ಸಿನಲ್ಲಿ ಏನಿದೆ? ನೀವು ಅಮೆರಿಕದ ಸುಪ್ರೀಂಕೋರ್ಟಿನಲ್ಲಿ ಇದ್ದೇನೆ ಅಂದುಕೊಂಡಿದ್ದೀರೋ ಅಥವಾ ಅಲ್ಲಿನ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಇದ್ದೇನೆ ಅಂದುಕೊಂಡಿದ್ದೀರೋ?’

ತತ್ ಕ್ಷಣವೇ ಕಾನೂನು ವಿದ್ಯಾರ್ಥಿಯಾಗಿದ್ದ ಯುವ ವಕೀಲರು  ನಾಲಿಗೆ ಕಚ್ಚಿಕೊಂಡರು. ‘ತಪ್ಪಾಯಿತು, ಕ್ಷಮಿಸಿ’ ಎಂದು ಕೇಳಿಕೊಂಡು ಯುವ ವಕೀಲರು ‘ಇನ್ನು ಮುಂದೆ  ‘ಮೈ ಲಾರ್ಡ್ಸ್ ಪದ ಬಳಸುತ್ತೇನೆ’ ಎಂದು ಉತ್ತರಿಸಿದರು.

‘ಏನಾದರೂ ಸರಿ. ನೀವು ಯಾವ ಪದ ಬಳಸುತ್ತೀರಿ ಎಂದೇ ನಾವು ಗಮನಿಸುತ್ತಿರುವುದಿಲ್ಲ, ಆದರೆ ತಪ್ಪು ಪದಗಳನ್ನು ಬಳಸಬೇಡಿ’ ಎಂದರು ಸಿಜೆಐ.

ಹಿಂದೆ, 2020ರ ಆಗಸ್ಟ್ ತಿಂಗಳಲ್ಲಿ ಕೂಡಾ ಇದೇ ರೀತಿ ನ್ಯಾಯಮೂರ್ತಿಗಳನ್ನು ಉದ್ದೇಶಿಸಿ ‘ಯುವರ್ ಆನರ್’ ಪದ ಬಳಸಿದಾಗ  ಸಿಜೆಐ ಬೋಬ್ಡೆ ಸಿಡಿಮಿಡಿಗೊಂಡಿದ್ದರು. ಆಗ ಕೂಡಾ  ‘ನೀವೇನು ಅಮೆರಿಕದ ಸುಪ್ರೀಂಕೋರ್ಟಿನ ಮುಂದೆ ಇದ್ದೀರೋ?’ ಎಂಬುದಾಗಿ ಅವರು ವಕೀಲರನ್ನು ಗದರಿದ್ದರು.

ಉನ್ನತ  ನ್ಯಾಯಾಲಯಗಳಲ್ಲಿ ಸಾಮಾನ್ಯವಾಗಿ ಬಳಸುವ  ‘ಮೈ ಲಾರ್ಡ್’, ‘ಯುವರ್ ಲಾರ್ಡ್ ಶಿಪ್’ ಮುಂತಾದ ಶಿಷ್ಟಾಚಾರದ ಪದಗಳು ನಮ್ಮ ದೇಶಕ್ಕೆ ಬ್ರಿಟಿಷ್ ಆಡಳಿತದ ಬಳುವಳಿಗಳು. ಈ ಪದಗಳ ಬಳಕೆಯನ್ನು ನಿಲ್ಲಿಸಬೇಕು ಎಂದು ಹಲವಾರು ವರ್ಷಗಳಿಂದಲೇ ಪ್ರಯತ್ನಗಳು ನಡೆಯುತ್ತಲೇ ಬಂದಿವೆ.

ಭಾರತದ ವಕೀಲರ ಸಂಘವಾದ ಬಾರ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ  ಇಂತಹ ಪದಗಳ ಬಳಕೆ ಬಗ್ಗೆ ನಿಯಮಗಳನ್ನು ರೂಪಿಸಲು 1961ರ ವಕೀಲರ ಕಾಯ್ದೆಯ ಸೆಕ್ಷನ್ 49 (1)(ಸಿ) ಅಧಿಕಾರ ನೀಡಿದೆ.  2006ರಲ್ಲೇ  ಬಾರ್ ಕೌನ್ಸಿಲ್ ಆಫ್ ಇಂಡಿಯಾ , ‘ಮೈಲಾರ್ಡ್’ ‘ಯುವರ್ ಲಾರ್ಡ್ ಶಿಪ್’ ನಂತಹ ಪದಗಳನ್ನು  ಬಳಸಲು ಉತ್ತೇಜನ ನೀಡಬಾರದು ಎಂದು ನಿರ್ಣಯ ಕೈಗೊಂಡಿತ್ತು.

2014ರಲ್ಲಿ ಶಿವಸಾಗರ್ ತಿವಾರಿ ಎಂಬ ವಕೀಲರೊಬ್ಬರು, ಇಂತಹ ಪದಗಳು ದೇಶದ ಘನತೆಗೆ ಧಕ್ಕೆ ತರುತ್ತವೆ ಮತ್ತು ಇವು ಗುಲಾಮಿತನದ ಸಂಕೇತವಾದ್ದರಿಂದ ಅವುಗಳ ಬಳಕೆಯನ್ನು  ನಿಷೇಧಿಸಬೇಕು’ ಎಂದು ಸುಪ್ರೀಂಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಆದರೆ ಆದರೆ ನ್ಯಾಯಮೂರ್ತಿಗಳಾದ ಎಚ್.ಎಲ್. ದತ್ತು ಮತ್ತು ಬೋಬ್ಡೆ ಅವರ ಪೀಠವು ‘ಈ ಪದಗಳ ಬಳಕೆ ಎಂದಿಗೂ ಕಡ್ಡಾಯವಾಗಿಲ್ಲ’ ಎಂಬುದಾಗಿ ಹೇಳಿ ಅರ್ಜಿಯನ್ನು ತಿರಸ್ಕರಿಸಿತ್ತು.

‘ನ್ಯಾಯಾಲಯವನ್ನು ಗೌರವಯುತವಾಗಿ ಸಂಬೋಧಿಸಿ ಅಷ್ಟೆ. ನೀವು ‘ಸರ್’ ಎಂದರೂ ಒಪ್ಪುತ್ತೇವೆ, ‘ಯುವರ್ ಆನರ್’ ಎಂದರೂ  ಒಪ್ಪುತ್ತೇವೆ, ‘ಲಾರ್ಡ್ ಶಿಪ್’ ಎಂದು ಕರೆದರೂ ಒಪ್ಪುತ್ತೇವೆ.’ ಎಂದು ಪೀಠ ಹೇಳಿತ್ತು.

ಆದರೆ, 2019ರಲ್ಲಿ ರಾಜಸ್ಥಾನ ಹೈಕೋರ್ಟ್ ‘ಮೈಲಾರ್ಡ್’  ‘ಯುವರ್ ಲಾರ್ಡ್ ಶಿಪ್’ ಪದಗಳ ಬಳಕೆಯನ್ನು ನಿಷೇಧಿಸಿತ್ತು. ಸಂವಿಧಾನವು ಸಮಾನತೆಯನ್ನು ಪ್ರತಿಪಾದಿಸಿರುವಾಗ  ಇಂತಹ ಪದಗಳ ಬಳಕೆ ಸರಿಯಲ್ಲ ಎಂದು ರಾಜಸ್ಥಾನ ಹೈಕೋರ್ಟ್ ಸಾರಿತ್ತು.

ಆದರೂ ನ್ಯಾಯಾಲಯಗಳಲ್ಲಿ ಇಂತಹ ಪದಗಳ ಬಳಕೆ ನಿರಂತರವಾಗಿ ನಡೆಯುತ್ತಲೇ ಇದೆ.

ಬ್ರಿಟಿಷ್ ವಸಾಹತಿನ ಬಳುವಳಿ ಪದಗಳನ್ನು ನಿಷೇಧಿಸುವ ಬಗ್ಗೆ ನ್ಯಾಯಾಲಯಗಳೇ ಹೀಗೆ ದ್ವಂದ್ವದಲ್ಲಿ ಇರುವ ಹೊತ್ತಿನಲ್ಲಿ  ಕೇರಳದ ಪುಟ್ಟ ಗ್ರಾಮ ಪಂಚಾಯತಿಯೊಂದು ‘ಸರ್ ಮತ್ತು  ಮ್ಯಾಡಮ್’ ನಂತಹ ಬ್ರಿಟಿಷ್ ವಸಾಹತುಶಾಹಿಯ ಪದಗಳ ಬಳಕೆಯನ್ನು ನಿಷೇಧಿಸುವ ಮೂಲಕ  ಇಂತಹ ಪದಗಳ ಬಳಕೆಯನ್ನು ನಿಷೇಧಿಸಿದ ದೇಶದ ಮೊತ್ತ ಮೊದಲ ಗ್ರಾಮ ಪಂಚಾಯತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಕೇರಳದ ಪಾಲಕ್ಕಾಡ್ ಜಿಲ್ಲೆಯ ಮಾಥುರ್ ಗ್ರಾಮ ಪಂಚಾಯತಿಯು 2021ರ ಆಗಸ್ಟ್ 31ರ ಮಂಗಳವಾರ  ‘ಸರ್ ಮತ್ತು ಮ್ಯಾಡಮ್’  ಪದಗಳ ಬಳಕೆಯನ್ನು ನಿಷೇಧಿಸುವ  ಚಾರಿತ್ರಿಕ ನಿರ್ಣಯವನ್ನು ಕೈಗೊಂಡು ಇತಿಹಾಸ  ಬರೆದಿದೆ.

16 ಸದಸ್ಯರ ಕಾಂಗ್ರೆಸ್ ಆಡಳಿತದ ಗ್ರಾಮ ಪಂಚಾಯಿತಿಯು ಈ ವಾರದ ಆರಂಭದಲ್ಲಿ ಅಂಗೀಕರಿಸಿದ ಸರ್ವಾನುಮತದ ನಿರ್ಣಯಕ್ಕೆ ಏಳು ಸಿಪಿಐ (ಎಂ) ನಾಮನಿರ್ದೇಶಿತರು ಮತ್ತು ಒಬ್ಬ ಬಿಜೆಪಿ ಸದಸ್ಯರ ಬೆಂಬಲ ಲಭಿಸಿದೆ. ಈ ವಿಚಾರದಲ್ಲಿ ಪಕ್ಷಗಳು ಯಾವುದೇ ರಾಜಕೀಯವನ್ನೂ ಎಳೆದುತರಲಿಲ್ಲ ಎಂಬುದೇ ವಿಶೇಷ.

ಸಾಮಾನ್ಯ ಜನರು, ಜನಪ್ರತಿನಿಧಿಗಳು ಮತ್ತು ನಾಗರಿಕ ಸಂಸ್ಥೆಯ ಅಧಿಕಾರಿಗಳ ನಡುವಣ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ  ಇಂತಹ ಕ್ರಮ ಕೈಗೊಂಡಿರುವ ಮಾಥುರ್ ಗ್ರಾಮ ಪಂಚಾಯತಿ ಇದನ್ನು ಪಂಚಾಯತಿಯ ಪ್ರಕಟಣಾ ಫಲಕದಲ್ಲಿ ಅಂಟಿಸುವ ಮೂಲಕ ಜಾರಿಗೂ ತಂದಿದೆ.

ಜನರು, ಪಂಚಾಯತಿನ ಯಾವುದೇ ಅಧಿಕಾರಿಯನ್ನು ಉದ್ದೇಶಿಸಿ ‘ಸರ್’ ಅಥವಾ ‘ಮ್ಯಾಡಮ್’ ಎಂಬುದಾಗಿ ಸಂಬೋಧಿಸಬೇಕಾಗಿಲ್ಲ.  ಅಧಿಕಾರಿಯ ಹುದ್ದೆ ಅಥವಾ ಹೆಸರಿನಿಂದಲೇ ಸಂಬೋಧಿಸಬಹುದುಅಧಿಕಾರಿಗಳು ವಯಸ್ಸಾದವರೋ  ಹಿರಿಯರೋ ಆಗಿದ್ದರೆ ಮಲಯಾಳಂನಲ್ಲಿ ‘ಚೇತಾ’/ ‘ಚೇತನ್’ (ಅಣ್ಣ) ಅಥವಾ ‘ಚೇಚಿ’ (ಅಕ್ಕ) ಇಂತಹ ಸ್ನೇಹಪರ ಪದಗಳನ್ನು ಬಳಸಬಹುದು.

‘ಸರ್’ ಅಥವಾ ‘ಮ್ಯಾಡಮ್’ ಪದ ಬಳಸದ್ದಕ್ಕಾಗಿ ಸೇವೆ ನೀಡಲು ಯಾರಾದರೂ ನಿರಾಕರಿಸಿದರೆ ಜನರು ಪಂಚಾಯತ್ ಅಧ್ಯಕ್ಷರು ಅಥವಾ ಕಾರ್ಯದರ್ಶಿಗೆ ದೂರು ನೀಡಬಹುದು.

ಪಂಚಾಯತಿ ನಿರ್ಣಯದ ಪರಿಣಾಮವಾಗಿ ಈಗ ಅಲ್ಲಿನ  ಅಧಿಕಾರಿಗಳು ತಮ್ಮ ಮೇಜಿನ ಮೇಲೆ ತಮ್ಮ ಹೆಸರುಹುದ್ದೆಗಳ ಫಲಕಗಳನ್ನೂ ಇಡುತ್ತಿದ್ದಾರೆ.

'ಸರ್' ಮತ್ತು 'ಮೇಡಂ' ಗೆ ಪರ್ಯಾಯ ಪದಗಳನ್ನು ನೀಡುವಂತೆ ಪಂಚಾಯತಿಯು ಅಧಿಕೃತ ಭಾಷಾ ಇಲಾಖೆಯನ್ನು  ಕೂಡಾ  ಕೋರಿದೆ.

ಪ್ರಜಾಪ್ರಭುತ್ವದಲ್ಲಿ ನಾಗರಿಕರೇ ಪ್ರಭುಗಳು. ನಾವೆಲ್ಲರೂ ಅವರಿಗೆ ಸೇವೆ ಒದಗಿಸುವ ಸೇವಕರು. ನಮ್ಮ ಸೇವೆ ಪಡೆಯಲು ಜನರು ನಮ್ಮನ್ನು ಅಂಗಲಾಚುವಂತೆ ಆಗಬಾರದು. ಇದಕ್ಕಾಗಿ, ಪಂಚಾಯತ್ ಪ್ರಸ್ತುತ 'ಅಪೇಕ್ಷಾ ನಮೂನೆ' (ಅರ್ಜಿ ನಮೂನೆ) ಯನ್ನು 'ಅವಕಾಶ ಪತ್ರಿಕೆ' (ಹಕ್ಕು ಪ್ರಮಾಣಪತ್ರ) ಆಗಿ ಬದಲಾಯಿಸಲೂ ಪಂಚಾಯತಿಯು ತೀರ್ಮಾನಿಸಿದೆ ಎಂದೂ ಪಂಚಾಯತಿಯ ಉಪಾಧ್ಯಕ್ಷರು ತಿಳಿಸಿದ್ದಾರೆ.

ಎಂತಹ ಅನುಕರಣೀಯ ಗ್ರಾಮ ಪಂಚಾಯತಿ ಇದು ಅಲ್ಲವೇ?

ವಿಡಿಯೋ ನೋಡಲು ಕೆಳಗೆ ಕ್ಲಿಕ್ ಮಾಡಿರಿ:


 -ನೆತ್ರಕೆರೆ ಉದಯಶಂಕರ



PARYAYA: ನ್ಯಾಯಾಲಯಕ್ಕೆ ಸಾಧ್ಯವಾಗದ್ದು, ಪಂಚಾಯತಿಗೆ ಸಾಧ್ಯವಾಯಿತು..!:   ಈ ಗ್ರಾಮ ಪಂಚಾಯತಿಯಲ್ಲಿ ‘ಸರ್’   ‘ಮ್ಯಾಡಮ್’ ಪದ ಬಳಸುವಂತಿಲ್ಲ.. ನ್ಯಾಯಾಲಯಕ್ಕೆ ಸಾಧ್ಯವಾಗದ್ದು, ಪಂಚಾಯತಿಗೆ ಸಾಧ್ಯವಾಯಿತು..! ಆರು ತಿಂಗಳ ಹಿಂದೆ ಸುಪ್ರೀಂಕೋರ್ಟ...

Sunday, January 26, 2020

ಗಣರಾಜ್ಯೋತ್ಸವದ ದಿನ ಇವರ ಮರೆವು ಕನ್ನಡಿಗರ ಪಾಲಿನ ದುರಂತ..!

ಗಣರಾಜ್ಯೋತ್ಸವದ ದಿನ ಇವರ ಮರೆವು ಕನ್ನಡಿಗರ ಪಾಲಿನ ದುರಂತ..!
2020 ಜನವರಿ 26 ಭಾನುವಾರ. ಭಾರತದ 71ನೇ ಗಣರಾಜ್ಯೋತ್ಸವದ ದಿನ. ಭಾರತೀಯ ಗಣರಾಜ್ಯಕ್ಕೆ ಅಡಿಪಾಯವಾದ ಸಂವಿಧಾನವನ್ನು ಹಾಡಿ ಹೊಗಳುವ ದಿನ. ಈದಿನ ಕನ್ನಡದ ಪತ್ರಿಕೆಗಳೂ ಸೇರಿದಂತೆ ನಾಡಿನ ಪ್ರಮುಖ ಪತ್ರಿಕೆಗಳ ನಮ್ಮ ಸಂವಿಧಾನದ ಮಹತ್ವದ ಬಗ್ಗೆ, ಸಂವಿಧಾನದ ಬಗ್ಗೆ ತಿಳಿದುಕೊಳ್ಳಬೇಕಾದ ಅಂಶಗಳ ಬಗ್ಗೆ ದಪ್ಪಕ್ಷರಗಳಲ್ಲಿ ಪುಟಗಟ್ಟಲೆ ಲೇಖನಗಳನ್ನು ಬರೆದಿವೆ.
ಆದರೆ ಎಲ್ಲರಿಗೂ ಮರೆತು ಹೋದ ಅಥವಾ ಜಾಣಮರೆವಿನ ಒಂದು ಅಂಶ ವಾಟ್ಸಪ್ ಬರಹಗಳಲ್ಲಿ ಪ್ರಸಾರವಾಗುತ್ತಿದೆ. ವಿಷಯ ಏನೆಂಬುದು ನಿಮಗೆ ಗೊತ್ತೇ?

ಹೌದು, ನಮ್ಮ ಸಂವಿಧಾನವನ್ನು ಮೂಲತಃ ಸಿದ್ಧ ಪಡಿಸಿದ ಮಹಾನ್ ವ್ಯಕ್ತಿ ನಾವು ಹೆಮ್ಮೆ ಪಡಬೇಕಾದ ಕನ್ನಡಿಗ ನ್ಯಾಯಶಾಸ್ತ್ರ ತಜ್ಞ ಬೆನಗಲ್ ನರಸಿಂಗ ರಾವ (ಬಿ.ಎನ್. ರಾವ). ಸ್ವಾತಂತ್ರ್ಯ ಪೂರ್ವಕ್ಕೆ ಮುನ್ನವೇ ಜಮ್ಮು ಮತ್ತು ಕಾಶ್ಮೀರದ ಪ್ರಧಾನಿ (1944-45) ಆಗಿ ಹಾಗೂ ಬಳಿಕ ಅಂತಾರಾಷ್ಟ್ರೀಯ ನ್ಯಾಯಾಲಯದ (ಐಸಿಜೆ ) ನ್ಯಾಯಮೂರ್ತಿ (1952-52) ಮತ್ತು  ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಅಧ್ಯಕ್ಷರಾಗಿ (1951)  ಸೇವೆ ಸಲ್ಲಿಸಿದ್ದ ಬೆನಗಲ್ ನರಸಿಂಗ ರಾವ ಅವರು ಭಾರತದ ಸಂವಿಧಾನ ರಚನೆಯ ಸಲಹೆಗಾರರಾಗಿ ಭಾರತ ಸರ್ಕಾರದಿಂದ ನೇಮಕಗೊಂಡಿದ್ದರು.

ಭಾರತೀಯ
ಸಂವಿಧಾನದ ಮೂಲ ಪ್ರತಿಯನ್ನು ರಚಿಸಿಕೊಟ್ಟ ನರಸಿಂಗ ರಾವ ಅವರ ಕರಡು ಪ್ರತಿಯನ್ನೇ ಬಳಿಕ ಪರಿಷ್ಕರಿಸಲಾಗಿದೆ ಹೊರತು ಇದರಲ್ಲಿ ನನ್ನ ಹೆಗ್ಗಳಿಕೆಯೇನೂ ಇಲ್ಲ ಎಂಬುದಾಗಿ ಸಂವಿಧಾನ ರಚನಾ ಸಮಿತಿಯ ಪರಿಮಾಪ್ತಿ ಭಾಷಣದಲ್ಲಿ ಸಮಿತಿಯ ಅಧ್ಯಕ್ಷ ಡಾ. ಬಿ.ಆರ್. ಅಂಬೇಡ್ಕರ್ ಅವರೇ ಸ್ವತಃ ತಿಳಿಸಿದ್ದರು.

ಅಂಬೇಡ್ಕರ್ ಅವರು ಹೇಳಿದ ಮಾತು ವಿಕಿಪೀಡಿಯಾದಲ್ಲಿ ದಾಖಲಾಗಿರುವಂತೆ ಇರುವುದು ಹೀಗೆ: ‘ಶ್ರೇಯಸ್ಸನ್ನು ನನಗೆ ಕೊಡಲಾಗುತ್ತಿದೆ. ಆದರೆ, ನಿಜವಾಗಿ ಅದು ನನಗೆ ಸಲ್ಲುವಂತಹುದೇ ಅಲ್ಲ. ಅದು ಭಾಗಶಃ ಸಲ್ಲುವುದು ಸಂವಿಧಾನ ರಚನಾ ಸಮಿತಿಯ ಪರಿಶೀಲನೆಗಾಗಿ ಕರಡು ಸಂವಿಧಾನವನ್ನು ಸಿದ್ಧ ಪಡಿಸಿಕೊಟ್ಟ  ಸಂವಿಧಾನ ರಚನಾ ಸಭೆಯ ಸಲಹೆಗಾರ ಶ್ರೀ ಬಿ.ಎನ್. ರಾವ ಅವರಿಗೆ’ .

ಇಂತಹ ವ್ಯಕ್ತಿಯನ್ನು ಗಣರಾಜ್ಯ ದಿನೋತ್ಸವವಾದ ಈದಿನ ಮರೆಯುವುದು ಕನ್ನಡಿಗರ ಪಾಲಿನ ದುರಂತವಾಗುತ್ತದೆ. ಹೀಗಾಗಿ ವಾಟ್ಸಪ್ ನಲ್ಲಿ ಅನಾಮಧೇಯರೊಬ್ಬರು ಬರೆದ ಲೇಖನವನ್ನೇ ಇಲ್ಲಿ ಪುನರಾವರ್ತನೆ ಮಾಡಿದ್ದೇನೆ.

ಲೇಖಕರ ಸಲಹೆ ಖಂಡಿತಾ ಎಲ್ಲರೂ ನೆನಪಿಟ್ಟುಕೊಳ್ಳಬೇಕಾದಂತಹುದು.  ಕನ್ನಡ ಪತ್ರಿಕೆಗಳಂತೂ ಹೆಚ್ಚು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದಂತಹುದು.
ಗಣರಾಜ್ಯನಿಮಗೆ, ನಮಗೆ ಬಿ.ಆರ್. ಅಂಬೇಡ್ಕರ್ ಗೊತ್ತು. ಆದರೆ ಸಂವಿಧಾನ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಮತ್ತೊಬ್ಬ ವ್ಯಕ್ತಿ "ಬಿ.ಎನ್. ರಾವ್" ರವರ ಬಗ್ಗೆ ಗೊತ್ತೆ? ಬಹುಶಃ ಗೊತ್ತಿರಲಿಕ್ಕಿಲ್ಲ. ನಿಮ್ಮ ಮನೆಯಲ್ಲಿ, ಕಚೇರಿಯಲ್ಲಿ, ಮಾರುಕಟ್ಟೆಯಲ್ಲಿ, ಹೊಟೆಲುಗಳಲ್ಲಿ ಅಥವಾ ಇನ್ನಾವುದೇ ಸ್ಥಳಗಳಲ್ಲಿ, ಯಾರನ್ನು ಬೇಕಾದರೂ ಕೇಳಿ; ಯಾರಿಗೂ ಹೆಸರಿನ ವ್ಯಕ್ತಿಯ ಪರಿಚಯ ಇಲ್ಲ. ಇವರ ಬಗ್ಗೆ ಅವರೆಲ್ಲೂ ಓದಿಲ್ಲವೆಂದು ಧೈರ್ಯದಿಂದ ಷರತ್ತನ್ನೂ ಕಟ್ಟಬಹುದು ! ಈಗ ಅವರ ಬಗ್ಗೆ ಕೇಳಿ.
ಇವರ ಹೆಸರಿನ, ಎನ್ ಎಂದರೆ ನರಸಿಂಗ; ಬಿ ಎಂದರೆ ಬೆನಗಲ್ ಎಂದು. ಬೆನಗಲ್, ಕಾರ್ಕಳ ಮಂಗಳೂರುಗಳ ಮಧ್ಯೆ ಇರುವ ಪುಟ್ಟದೊಂದು ಹಳ್ಳಿ. ಹಳ್ಳಿಯ ಚಿತ್ರಾಪುರ ಸಾರಸ್ವತ ಬ್ರಾಹ್ಮಣರ ಮನೆತನದಲ್ಲಿ ೧೮೮೭ರ ಫೆಬ್ರವರಿ ೨೬ರಂದು ಹುಟ್ಟಿದ ಮಗು, ನರಸಿಂಗ.

ವಂಶದ ಜನ ಪಾರ್ಸಿಗಳಿಗಿಂತಲೂ ಅಲ್ಪಸಂಖ್ಯಾತರು. ಇಡೀ ಜಗತ್ತಿನಲ್ಲಿ ೩೦ ಸಾವಿರ ಚಿತ್ರಾಪುರ ಬ್ರಾಹ್ಮಣರಿದ್ದರೆ ಹೆಚ್ಚು. ಆದರೆ ಜಗತ್ತಿನಲ್ಲಿ ಬಹಳ ಹೆಸರು ಮಾಡಿದ ಇದೇ ಪಂಗಡದ ಮಹಾಮಹಿಮರನ್ನು ಪರಿಚಯಿಸಿಕೊಳ್ಳೋಣ : ದೇಶಭಕ್ತ ಕಾರ್ನಾಡ್ ಸದಾಶಿವರಾಯರು, ಕುದ್ಮುಲ್ ರಂಗರಾವ್, ಸಹಕಾರ ಕ್ರಾಂತಿಯ ಮೊಳಹಳ್ಳಿ ಶಿವರಾಯರು, ಪಂಜೆ ಮಂಗೇಶರಾಯರು, ಕಮಲಾದೇವಿ ಚಟ್ಟೋಪಾಧ್ಯಾಯ, ಗೌರೀಶ ಕಾಯ್ಕಿಣಿ, ಜಯಂತ್ ಕಾಯ್ಕಿಣಿ, ಪ್ರಕಾಶ್ ಪಡುಕೋಣೆ, ಸಂತೋಷ ಕುಮಾರ ಗುಲ್ವಾಡಿ, ಗಿರೀಶ ಕಾರ್ನಾಡ್.

ನರಸಿಂಗರಾವರ ತಂದೆ ರಾಘವೇಂದ್ರ ರಾಯರು ಸುತ್ತಮುತ್ತಲಿನ ಹಳ್ಳಿಗೆಲ್ಲ ಪ್ರಸಿದ್ಧ ವೈದ್ಯರು. ನರಸಿಂಗರಾಯರು ಮಂಗಳೂರಿನ ಕೆನರಾ ಶಾಲೆಯಲ್ಲಿ ಕಲಿಯುತ್ತಿದ್ದವರು ೧೯೦೧ರಲ್ಲಿ ನಡೆದ ಮೆಟ್ರಿಕ್ಯುಲೇಶನ್ ಪರೀಕ್ಷೆಯಲ್ಲಿ ಇಡೀ ಮದ್ರಾಸ್ ಪ್ರಾಂತ್ಯಕ್ಕೇ ಮೊದಲ ಸ್ಥಾನ ಪಡೆದು ಬಿಟ್ಟರು.
ಅಲ್ಲಿಂದ
ಮದ್ರಾಸಿಗೆ ಹೋಗಿ ಪ್ರತಿಷ್ಠಿತ ಪ್ರೆಸಿಡೆನ್ಸಿ ಕಾಲೇಜು ಸೇರಿದ್ದಾಯಿತು. ಅಲ್ಲಿ ಇಂಗ್ಲೀಷ್, ಸಂಸ್ಕೃತ ಮತ್ತು ಗಣಿತ ವಿಷಯಗಳನ್ನು ಅಭ್ಯಾಸ ಮಾಡಿ ಎಫ್ ಪರೀಕ್ಷೆಯಲ್ಲಿ ಮತ್ತೆ ಇಡೀ ಪ್ರಾಂತ್ಯಕ್ಕೆ ಪ್ರಥಮ ಸ್ಥಾನ ಪಡೆದದ್ದೂ ಆಯಿತು. ವಿದ್ಯಾರ್ಥಿ ವೇತನ ಸಿಕ್ಕಿದ್ದರಿಂದ ನರಸಿಂಗ ರಾಯರು ಇಂಗ್ಲೆಂಡಿಗೆ ಹೋದರು. ಅಲ್ಲಿ ಟ್ರಿನಿಟಿ ಕಾಲೇಜಿನಲ್ಲಿ ಮೂರು ವರ್ಷ ಪದವಿ ವ್ಯಾಸಂಗ ಮಾಡಿ ೧೯೦೯ರಲ್ಲಿ ಟ್ರೈಪೋಸ್ ಪಾಸು ಮಾಡಿದರು. ಅದೇ ವರ್ಷ ಭಾರತೀಯ ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆದು ಅದನ್ನೂ ಪಾಸು ಮಾಡಿಕೊಂಡು ಆಗಿನ ಬ್ರಿಟಿಷ್ ಭಾರತದ ರಾಜಧಾನಿ ಕಲ್ಕತ್ತಕ್ಕೆ ನ್ಯಾಯಾಧೀಶನಾಗಿ ಆಯ್ಕೆಯಾಗಿ ಬಂದ ನರಸಿಂಗರಾಯರು ಕಾಲದಲ್ಲಿ ಮಾಡಿದ ಬಹು ದೊಡ್ಡ ಕೆಲಸವೆಂದರೆ ಭಾರತದ ಕಾನೂನು ಸಂಹಿತೆಯನ್ನು ಹೊಸದಾಗಿ ಬರೆದದ್ದು. ಬ್ರಿಟಿಷ್ ಸರಕಾರ ವಹಿಸಿದ್ದ ಕೆಲಸವನ್ನು ದಾಖಲೆಯ ಎರಡು ವರ್ಷದಲ್ಲಿ ಮುಗಿಸಿದ್ದಕ್ಕಾಗಿ ರಾಯರಿಗೆ ನೈಟ್-ಹುಡ್ ಬಿರುದು ಕೊಡಲಾಯಿತು. ಹೆಸರಿನ ಹಿಂದೆ ಸರ್ ಎಂಬ ಉಪಾಧಿ ಸೇರಿ ಕೊಂಡಿತು. ನಂತರ ಬ್ರಿಟಿಷ್ ಸರಕಾರವು ರಾಯರನ್ನು ಸಿಂಧ್ ಪ್ರಾಂತ್ಯಕ್ಕೆ ಕರೆಸಿಕೊಂಡಿತು. ಅಲ್ಲಿನ ನಗರ-ಹಳ್ಳಿಗಳಿಗೆ ನದಿ ನೀರಿನ ಹಂಚಿಕೆಯನ್ನು ಯಾವ ರೀತಿಯಲ್ಲಿ ಮಾಡಬೇಕೆಂಬುದಕ್ಕೆ ಅಧ್ಯಯನ ಮಾಡಿ ವರದಿ ನೀಡಬೇಕೆಂದು ಕೇಳಿಕೊಂಡಿತು. ನರಸಿಂಗರಾಯರು ಅದನ್ನೂ ಅತ್ಯಂತ ಶ್ರದ್ಧೆಯಿಂದ ಮಾಡಿ ವರದಿ ಒಪ್ಪಿಸಿದರು. ಗಣಿತದಲ್ಲಿ ಅಪ್ರತಿಮ ಪಂಡಿತರಾಗಿದ್ದ ಅವರು ಸುಮಾರು ಇಪ್ಪತ್ತು- ಮೂವತ್ತು ವರ್ಷಗಳ ಎಲ್ಲಾ ಅಂಕಿ-ಅಂಶಗಳನ್ನು ಒಟ್ಟು ಹಾಕಿ ಆಳವಾದ ಅಧ್ಯಯನ ಮಾಡಿ ಬರೆದ ವರದಿಯ ಆಧಾರದಲ್ಲೇ ಇಂದಿಗೂ ಭಾರತ-ಪಾಕಿಸ್ತಾನಗಳ ನಡುವೆ ನೀರಿನ ಹಂಚಿಕೆ ನಡೆಯುತ್ತಿದೆ. ಸದಾ ಬೆಂಕಿಯುಗುಳುವ ದೇಶಗಳ ಮಧ್ಯೆ ಕಳೆದ ಎಪ್ಪತ್ತು ವರ್ಷಗಳಲ್ಲಿ ನೀರಿನ ಹಂಚಿಕೆಯ ವಿಷಯದಲ್ಲಿ ಸಮಸ್ಯೆ ಉದ್ಭವವಾಗಿಲ್ಲವೆಂದರೆ ಅದಕ್ಕೆ ಕಾರಣ ನರಸಿಂಗ ರಾಯರ ದೂರದೃಷ್ಟಿ ಎನ್ನಲೇಬೇಕು.

ನದಿನೀರಿನ ವರದಿ ಕೊಟ್ಟ ಮೇಲೆ ಸರಕಾರ ಅವರನ್ನು ಮತ್ತೆ ಕಲ್ಕತ್ತಕ್ಕೆ ಕರೆಸಿ ಸುಪ್ರೀ೦ ಕೋರ್ಟ್ ಮುಖ್ಯ ನ್ಯಾಯಾಧೀಶರನ್ನಾಗಿ ನೇಮಿಸಿತು. ೧೯೪೪ರಲ್ಲಿ ಅವರು ಹುದ್ದೆಯಿಂದ ನಿವೃತ್ತಿ ಹೊಂದಿದ ನಂತರ ಜಮ್ಮು ಮತ್ತು ಕಾಶ್ಮೀರದ ಪ್ರಧಾನ ಮಂತ್ರಿಯಾಗಿ ಆಯ್ಕೆಯಾದರು!
೧೯೪೬ರಲ್ಲಿ
, ಬ್ರಿಟಿಷ್ ಸರಕಾರ ಭಾರತಕ್ಕೆ ಅಧಿಕಾರ ಹಸ್ತಾಂತರಿಸುವುದು ಬಹುತೇಕ ಖಚಿತವಾದ ಮೇಲೆ ನರಸಿಂಗರಾಯರನ್ನು ಭಾರತದ ಸಂವಿಧಾನ ಸಮಿತಿಯ ಸಲಹೆಗಾರರನ್ನಾಗಿ ನೇಮಿಸಲಾಯಿತು. ತನ್ನ ಸೇವಾವಧಿಯಲ್ಲಿ ಸುಮಾರು ಮೂರು ದಶಕಗಳ ಕಾಲ ನ್ಯಾಯಾಂಗದಲ್ಲಿ ಕೆಲಸ ಮಾಡಿದ ಅವರಿಗಿಂತ ಸೂಕ್ತ ವ್ಯಕ್ತಿ ಬೇರಾರಿದ್ದಾರು? ನರಸಿಂಗರಾಯರು ಸರಕಾರ ಕೇಳಿಕೊಂಡಂತೆ ಸಂವಿಧಾನದ ಕರಡು ಸಿದ್ಧಪಡಿಸಿದರು. ಇದರಲ್ಲಿ ಒಟ್ಟು ೨೪೩ ವಿಧಿಗಳೂ ೧೩ ಅನುಚ್ಛೇದಗಳೂ ಇದ್ದವು. ಇದನ್ನು ಮುಂದಿಟ್ಟುಕೊಂಡು ಸಂವಿಧಾನ ಕರಡು ರಚನಾ ಸಮಿತಿಯು ಸಂವಿಧಾನವನ್ನು ಬೆಳೆಸುವ, ತಿದ್ದುವ, ಪರಿಷ್ಕರಿಸುವ ಕೆಲಸವನ್ನು ಕೈಗೆತ್ತಿ ಕೊಂಡಿತು. ರಾಯರು
ಬರೆದ ಮೂಲ ಸಂವಿಧಾನಕ್ಕೆ ನಂತರ ಹಲವು ವಿಧಿಗಳನ್ನು ಸೇರಿಸಲಾಯಿತು. ಕೆಲವನ್ನು ಪರಿಷ್ಕಾರ ಮಾಡಲಾಯಿತು. ಮೊದಲ ಕರಡು ಪ್ರತಿಯನ್ನು ಅದು ಸಂಸತ್ತಿಗೆ ಸಲ್ಲಿಸಿದಾಗ ಅದರಲ್ಲಿ ೩೧೫ವಿಧಿಗಳೂ ಅನುಚ್ಛೇದಗಳು ಇದ್ದವು. ಕೊನೆಗೆ ಸಂಸತ್ತಿನ ಒಪ್ಪಿಗೆ ಪಡೆಯುವ ಸಮಯಕ್ಕೆ ಅದರಲ್ಲಿ ಮತ್ತಷ್ಟು ವಿಧಿಗಳು ಸೇರ್ಪಡೆಯಾಗಿ ಅವುಗಳ ಸಂಖ್ಯೆ ೩೯೫ಕ್ಕೆ ಏರಿತು. ತನ್ನ ಕರ್ತವ್ಯವನ್ನು ರಾಯರು ಒಂದೇ ಒಂದು ರುಪಾಯಿ ವೇತನ ಅಥವಾ ಸಂಭಾವನೆ ಪಡೆಯದೇ ಉಚಿತವಾಗಿ ನಡೆಸಿಕೊಟ್ಟರು ಎನ್ನುವುದು ಇನ್ನೊಂದು ಮಹತ್ವದ ಅಂಶ. ಸಂವಿಧಾನವನ್ನು ಪೂರ್ತಿ ಬರೆದವರೇ ಅಂಬೇಡ್ಕರ್ ಎಂಬ ತಪ್ಪು ಕಲ್ಪನೆ ಈಗ ಬೆಳೆದುಬಂದಿದೆ. ಬಹುಶಃ ಕಾಲಕಾಲಕ್ಕೆ ಜನರನ್ನು ಜಾತಿ ಆಧಾರದ ಮೇಲೆ ಓಲೈಸಿಕೊಂಡು ಬಂದ ರಾಜಕೀಯ ಪಕ್ಷಗಳೇ ಮಿಥ್ಯ ಚರಿತ್ರೆಗೆ ನೇರ ಹೊಣೆ ಎನ್ನಬಹುದು. ಸಂವಿಧಾನ ಆಂಗೀಕೃತವಾದ ಸುವರ್ಣ ಮಹೋತ್ಸವದ ಸಂದರ್ಭದಲ್ಲೂ ಅದರ ಮೂಲಕರಡನ್ನು ತಯಾರಿಸಿಕೊಟ್ಟ ಮೇಧಾವಿ, ಯಾರಿಗೂ ನೆನಪಾಗಿಲ್ಲವೆಂದರೆ ಅದು ಗಣರಾಜ್ಯದ ದುರಂತ !


ನರಸಿಂಗರಾಯರು, ಸಂವಿಧಾನದ ಕೆಲಸ ಮುಗಿಸಿದ ಮೇಲೆ ವಿಶ್ವಸಂಸ್ಥೆಗೆ ಭಾರತದ ಶಾಶ್ವತ ಪ್ರತಿನಿಧಿಯಾಗಿ ಆಯ್ಕೆಯಾದರು. ಅದೇ ಸಮಯದಲ್ಲಿ ಬರ್ಮಾ ದೇಶ, ತನ್ನ ಸಂವಿಧಾನದ ಕರಡನ್ನು ಸಿದ್ಧಪಡಿಸಿ ಕೊಡಲು ರಾಯರನ್ನು ಕೇಳಿ ಕೊಂಡಿತು ! ಕೆಲಸವನ್ನೂ ಪೂರೈಸಿಕೊಟ್ಟ ರಾಯರು, ವಿಶ್ವಸಂಸ್ಥೆಯಲ್ಲಿ ಒಂದೊಂದೇ ಹುದ್ದೆಗಳನ್ನು ಏರುತ್ತಾಹೋಗಿ ೧೯೫೦ರಲ್ಲಿ ಅದರ ಸೆಕ್ಯುರಿಟಿ ಕೌನ್ಸಿಲ್ಲಿನ ಅಧ್ಯಕ್ಷರಾಗಿ ಆಯ್ಕೆಯಾದರು. ಆಗ ಭಾರತಕ್ಕೆ ವಿಶ್ವಸಂಸ್ಥೆಯ ಸೆಕ್ಯುರಿಟಿ ಕೌನ್ಸಿಲ್ಲಿನ ಸದಸ್ಯ ರಾಷ್ಟ್ರವಾಗಲು ಚಿನ್ನದಂಥಾ ಅವಕಾಶ ಒದಗಿಬಂದಿತ್ತು. ಆದರೆ ಅದೃಷ್ಟವನ್ನು ನಮ್ಮ ದೇಶದ ಆಗಿನ ಪ್ರಧಾನಿ ನೆಹರೂ, ಕೃಷ್ಣಾರ್ಪಣ ಮಾಡಿದ್ದರಿಂದ ಎಪ್ಪತ್ತು ವರ್ಷಗಳೇ ಕಳೆದರೂ ನಮಗೆ ವಿಶ್ವದ ಸೂಪರ್ ಪವರ್ ರಾಷ್ಟ್ರಗಳ ಪಟ್ಟಿಯಲ್ಲಿ ಗುರುತಿಸಿ ಕೊಳ್ಳಲು ಸಾಧ್ಯವಾಗಿಲ್ಲ. ೧೯೫೨ರಲ್ಲಿ ವಿಶ್ವಸಂಸ್ಥೆಯ ಮಹಾ ಕಾರ್ಯದರ್ಶಿ ಆಗುವ ಅವಕಾಶ ರಾಯರಿಗೆ ಕೂದಲೆಳೆಯಲ್ಲಿ ಕೈತಪ್ಪಿ ಹೋಯಿತು. ಆದರೇನಂತೆ, ಅವರು ಹೇಗ್ ಅಂತರ-ರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರಾದರು. ಆದರೆ, ಹುದ್ದೆಯಲ್ಲಿ ಬಹುಕಾಲ ಮುಂದುವರಿಯಲು ಅದೃಷ್ಟ ಇರಲಿಲ್ಲವೋ ಏನೋ.೧೯೫೩ರ ನವೆಂಬರ್ ೩೦ರಂದು ಬೆನಗಲ್ ನರಸಿಂಗ ರಾಯರು ಜ್ಯೂರಿಕ್ ನಲ್ಲಿ ತನ್ನ ೬೬ನೆಯ ವಯಸ್ಸಿನಲ್ಲಿ ನಿಧನರಾದರು.ನರಸಿಂಗ ರಾಯರ ಉಳಿದಿಬ್ಬರು ಸೋದರರೂ ಮಹಾರಥಿಗಳೇ. ಅವರ ಮೊದಲ ಸಹೋದರರಾದ ಬಿ. ರಾಮರಾವರವರು ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದರು. ಎರಡನೆಯ ಸಹೋದರ ಶಿವರಾಯರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧರಾಗಿದ್ದ ಕಾರ್ಮಿಕ ಹೋರಾಟಗಾರರು. ಜೊತೆಗೆ ಸಂಸದರೂ ಆಗಿದ್ದವರು. ತನ್ನ ರಾಜಕೀಯ ಜೀವನದ ಉತ್ತುಂಗದಲ್ಲಿದ್ದಾಗಲೇ ನಿವೃತ್ತಿ ಘೋಷಿಸಿ ಬದುಕಿನ ಕೊನೆಯ ಹದಿನೈದು ವರ್ಷಗಳನ್ನು ಸಂಶೋಧನೆಗೆ ಮೀಸಲಿಟ್ಟ ವಿಚಿತ್ರ ಮತ್ತು ಅಪರೂಪದ ರಾಜಕಾರಣಿ ಅವರು.

ಕಾರ್ಕಳದ
ಬೆನಗಲ್ಲಿನಂಥ ಒಂದು ಪುಟ್ಟ ಊರಿನಿಂದ ವಿಶ್ವಸಂಸ್ಥೆ, ಬಅಂತರರಾಷ್ಟ್ರೀಯ ನ್ಯಾಯಾಲಯಗಳಂಥ ಎತ್ತರಗಳನ್ನು ಏರಿ, ಹಲವು ಪ್ರತಿಷ್ಠಿತ ಹುದ್ದೆಗಳನ್ನು ಅಲಂಕರಿಸಿದ, ಭಾರತದ ಸಂವಿಧಾನವನ್ನು ಬರೆಯುವಂಥ ಅವಕಾಶ ಪಡೆದ ಧೀಮಂತರು ನಮ್ಮ ದೇಶದಲ್ಲಿ ಹೆಚ್ಚಿಲ್ಲ. ಸಂಸತ್ತಿನ ಹೊರಗೆ ಅಂಬೇಡ್ಕರರ ಪಕ್ಕದಲ್ಲಿ ಹೆಗಲೆಣೆಯಾಗಿ ನಿಲ್ಲಬೇಕಿದ್ದ ಪ್ರತಿಮೆ ಬೆನಗಲ್ ನರಸಿಂಗರಾಯರದು ! ಆದರೆ, ನಮ್ಮ ಕರ್ನಾಟಕದ ಮಹಾನ್ ವ್ಯಕ್ತಿಯನ್ನು ದೇಶಕ್ಕೆ ಮರು-ನೆನಪಿಸುವ ಕೆಲಸವನ್ನು ಯಾವ ಜನಪ್ರತಿನಿಧಿಯೂ ಇದುವರೆಗೆ ಮಾಡಿಲ್ಲ ಎನ್ನುವುದು ನಮ್ಮ ಅಭಿಮಾನ-ಶೂನ್ಯತೆಯನ್ನು ಎತ್ತಿ ತೋರಿಸುವಂತಿದೆ !

ಕೊನೆಯಪಕ್ಷ ಈಗಲಾದರೂ ನಮ್ಮ ಶಾಸಕರು, ಸಂಸದರು ಹಾಗೂ ಮುಂದಾಳುಗಳು ಕಾರ್ಯವನ್ನು ಮಾಡಿ ಒಬ್ಬ ಮಹಾನ್ ಮೇಧಾವಿ ಸತ್ಪುರುಷನನ್ನು ಹೊಸಪೀಳಿಗೆಗೆ ಪರಿಚಯಿಸುವ ಕಾರ್ಯ ಮಾಡಲಿ ಎಂದು ಆಶಿಸೋಣವೇ?

ನೆತ್ರಕೆರೆ ಉದಯಶಂಕರ