ನಾನು ಮೆಚ್ಚಿದ ವಾಟ್ಸಪ್

Thursday, July 31, 2008

Free Flight / Free Family Holiday..! ವಿದೇಶ ಪಯಣ ಮತ್ತು ರಜಾದ ಮಜಾ..!

Free Flight and Free Family Holiday..!

What is the meaning of advertisement that 'Flight to West Indies Free or Family Holiday in India Free'. While Consumer thought that second part of the advertisement means that 'Holiday in India Free' includes travelling fare also. But Court ruled that it is not so. It means only stay arrangements in a Hotel in India is free and travelling fare will not include in it.

ವಿದೇಶ ಪಯಣ ಮತ್ತು

ರಜಾದ ಮಜಾ..!


ಗ್ರಾಹಕರು ನ್ಯಾಯಕ್ಕಾಗಿ ಹೋರಾಟ ಮಾಡಲು ಮುಂದಾಗುವಾಗ ತಾವು ಮಾಡಿಕೊಂಡ ಒಪ್ಪಂದ/ ಕರಾರುಗಳ ಇಲ್ಲವೇ ಪಡೆಯಲು ಮುಂದಾಗುವ ಸೇವೆಗಳಿಗೆ ಸಂಬಂಧಿಸಿದ ಎಲ್ಲ ವಿವರಗಳನ್ನೂ ಸೂಕ್ಷ್ಮವಾಗಿ ಅಧ್ಯಯನ ಮಾಡಿಕೊಳ್ಳಬೇಕು. ಇಂತಹ ಅಧ್ಯಯನ ಗುಣ ಬೆಳೆಸಿಕೊಳ್ಳದೇ ಇದ್ದರೆ ಎಲ್ಲ ಸಂದರ್ಭಗಳಲ್ಲೂ ನ್ಯಾಯ ಲಭಿಸೀತು ಎಂದು ಹೇಳಲು ಸಾಧ್ಯವಿಲ್ಲ.
ನೆತ್ರಕೆರೆ ಉದಯಶಂಕರ
'ಉಚಿತ ವಿದೇಶಯಾನ' ಅಥವಾ 'ದೇಶದೊಳಗೆ ಒಂದು ದಿನ ಉಚಿತ ರಜಾದ ಮಜಾ' ಎಂಬ ಜಾಹೀರಾತು ಕಂಡರೆ ನೀವು ಏನೆಂದು ಅರ್ಥ ಮಾಡಿಕೊಳ್ಳುತ್ತೀರಿ?

ಇಂತಹ ಸೂಕ್ಷ್ಮ ಬರಹದ ಗೊಂದಲದಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಗ್ರಾಹಕ ಕಲಿತುಕೊಳ್ಳಬೇಕು. ಇಂತಹ ಆಕರ್ಷಕ ಜಾಹೀರಾತು ಒಂದಕ್ಕೆ ಮರುಳಾದ ಗ್ರಾಹಕರಿಬ್ಬರ ಪ್ರಕರಣಗಳಿವು. ಇಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ತೀರ್ಪು ಗ್ರಾಹಕರ ಪರವಾದರೂ ರಾಜ್ಯ ಗ್ರಾಹಕ ನ್ಯಾಯಾಲಯದಲ್ಲಿ ಅವರಿಗೆ ಗೆಲುವು ಲಭಿಸಲಿಲ್ಲ.

ಈ ಪ್ರಕರಣದ ಅರ್ಜಿದಾರರು: (1) ಬಾಗಲಕೋಟೆ ನವನಗರದ ನಿವಾಸಿ ವಕೀಲ ಸುರೇಶ ಮಲ್ಲಪ್ಪ ಕುಂಬಾರ, (2) ಬಾಗಲಕೋಟೆ ಸ್ಟೇಷನ್ ರಸ್ತೆಯ ಹೀರೋ ಹೋಂಡಾ ವ್ಯಾಪಾರಿ ವಿಜಯಾ ಮೋಟಾರ್ಸ್ನ ಫ್ರಾನ್ಸಿಸ್ ಕ್ಸೇವಿಯರ್. ಹಾಗೂ ಎರಡನೇ ಪ್ರಕರಣದ ಅರ್ಜಿದಾರರು: (2) ಬಾಗಲಕೋಟೆ ಥಲಗಿಹಾಳ ತಾಲ್ಲೂಕಿನ ನಿವಾಸಿ ಮಲ್ಲಿಕಾರ್ಜುನ ಈಶ್ವರಪ್ಪ ಕಮತಗಿ ಹಾಗೂ ಬಾಗಲಕೋಟೆ ಸ್ಟೇಷನ್ ರಸ್ತೆಯ ಹೀರೋ ಹೋಂಡಾ ವ್ಯಾಪಾರಿ ಫ್ರಾನ್ಸಿಸ್ ಕ್ಸೇವಿಯರ್.
ಎರಡೂ ಪ್ರಕರಣಗಳ ಪ್ರತಿವಾದಿಗಳು: ಚಂಡೀಗಢದ ಮೆ. ಇನ್ನೋವೇಟಿವ್ ಇನ್ಸೆಂಟಿವ್ ಹಾಲಿಡೇಸ್ ಪ್ರೈವೇಟ್ ಲಿಮಿಟೆಡ್.

ಉಭಯ ಅರ್ಜಿದಾರರ ದೂರುಗಳ ಪ್ರಕಾರ ಅವರು ಪ್ರತಿವಾದಿಯ ಆಕರ್ಷಕ ಜಾಹೀರಾತು ಕಂಡು ಎರಡು ಹೀರೋ ಹೋಂಡಾ ಸ್ಪ್ಲೆಂಡರ್ ಪ್ಲಸ್ ಮೋಟಾರ್ ಬೈಕುಗಳನ್ನು ಖರೀದಿಸಿದರು. ಈ ಬೈಕುಗಳನ್ನು ಖರೀದಿಸಿದವರಿಗೆ ವೆಸ್ಟೀಂಡೀಸ್ ಗೆ ಉಚಿತ ಪ್ರವಾಸ ಅಥವಾ ಭಾರತದಲ್ಲಿ ಕುಟುಂಬ ಸಹಿತ ಉಚಿತ ರಜಾದ ಮಜಾ ಅವಕಾಶ ಎಂಬ ಜಾಹೀರಾತು ಇವರನ್ನು ಸೆಳೆದಿತ್ತು.

ಪ್ರತಿವಾದಿಯ ಜಾಹೀರಾತಿನ ಪ್ರಕಾರ ಹೀರೋ ಹೋಂಡಾ ಖರೀದಿಸಿದ ಯಾರು ಬೇಕಾದರೂ ಅವರಿಗೆ ನೀಡಲಾಗುವ ಸ್ಕ್ರಾಚ್ ಕಾರ್ಡ್ನ್ನು ಗೀರಿದಾಗ ಯಾವ ಬರಹ ಕಂಡು ಬರುತ್ತದೋ ಅದರ ಪ್ರಕಾರ ವೆಸ್ಟಿಂಡೀಸ್ ಗೆ ಉಚಿತ ಪ್ರವಾಸ ಮಾಡಬಹುದು ಅಥವಾ ಭಾರತದಲ್ಲಿ ಕುಟುಂಬ ಸಹಿತ ಉಚಿತ ರಜಾದ ಮಜಾ ಅನುಭವಿಸಬಹುದಾಗಿತ್ತು.

ಅರ್ಜಿದಾರರು ತಮಗೆ ನೀಡಲಾಗಿದ್ದ ಸ್ಕ್ರಾಚ್ ಕಾರ್ಡನ್ನು ಗೀರಿದಾಗ ಅದರಲ್ಲಿ 'ಭಾರತದಲ್ಲಿ ಕುಟುಂಬ ಸಹಿತವಾಗಿ ಉಚಿತ ರಜಾದ ಮಜಾ' ಎಂಬ ಬರಹ ಕಾಣಿಸಿತು.

ಅದಕ್ಕೆ ಅನುಗುಣವಾಗಿ ಪ್ರತಿವಾದಿಗಳು ಕೋಡೈಕನಾಲ್ ರಾಯಲ್ ಹೋಟೆಲಿನಲ್ಲಿ ಅವರಿಗೆ ಮೂರು ಹಗಲು, ಮೂರು ರಾತ್ರಿ ಕಾಲ ರಜಾ ವಾಸ್ತವ್ಯಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಿದರು.
ಆದರೆ ಅರ್ಜಿದಾರರು ಇದನ್ನು ತಿರಸ್ಕರಿಸಿದರು. ಅವರು ಇದನ್ನು ತಿರಸ್ಕರಿಸಲು ಮುಖ್ಯ ಕಾರಣ: ಕೊಡೈಕನಾಲಿನಲ್ಲಿ ಉಚಿತ ರಜಾದ ಮಜಾ ಅನುಭವಿಸಲು ಪ್ರತಿವಾದಿಗಳು ವಾಹನ ಮತ್ತು ಇತರ ವೆಚ್ಚಗಳನ್ನು ಭರಿಸಲು ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆಯನ್ನು ಪ್ರತಿವಾದಿ ತಿರಸ್ಕರಿಸಿದ್ದು.

ಅರ್ಜಿದಾರರು ಪ್ರತಿವಾದಿಯಿಂದ ಸೇವಾಲೋಪ ಆಗಿದೆ ಎಂದು ಆಪಾದಿಸಿ ಜಿಲ್ಲಾ ಗ್ರಾಹಕ ನ್ಯಾಯಾಲಯಕ್ಕೆ ದೂರು ಸಲ್ಲಿಸಿದರು.

ಪ್ರಕರಣಗಳ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕ ನ್ಯಾಯಾಲಯವು ಅರ್ಜಿದಾರರ ವಾದವನ್ನು ಪುರಸ್ಕರಿಸಿ, ಅರ್ಜಿದಾರರಿಗೆ ತಲಾ 20,000 ರೂಪಾಯಿಗಳ ಪರಿಹಾರ ನೀಡುವಂತೆ ಪ್ರತಿವಾದಿಗೆ ಆಜ್ಞಾಪಿಸಿತು.

ಜಿಲ್ಲಾ ಗ್ರಾಹಕ ನ್ಯಾಯಾಲಯದ ಈ ತೀರ್ಪನ್ನು ಪ್ರಶ್ನಿಸಿ ಪ್ರತಿವಾದಿ ಸಂಸ್ಥೆಯು ರಾಜ್ಯ ಗ್ರಾಹಕ ನ್ಯಾಯಾಲಯದ ಕದ ತಟ್ಟಿತು.

ಅಧ್ಯಕ್ಷ ನ್ಯಾಯಮೂರ್ತಿ ಚಂದ್ರಶೇಖರಯ್ಯ, ಸದಸ್ಯರಾದ ಟಿ. ಹರಿಯಪ್ಪ ಗೌಡ ಮತ್ತು ಶ್ರೀಮತಿ ರಮಾ ಅನಂತ್ ಅವರನ್ನು ಒಳಗೊಂಡ ಪೀಠವು ಅರ್ಜಿದಾರರ ಪರವಾಗಿ ಫ್ರಾನ್ಸಿಸ್ ಕ್ಸೇವಿಯರ್ ಮತ್ತು ಪ್ರತಿವಾದಿಗಳ ಪರವಾಗಿ ಶ್ರೀಮತಿ ಸಿ. ಶಂಕರ ರೆಡ್ಡಿ ಅವರ ಅಹವಾಲು ಆಲಿಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು.

ರಾಜ್ಯ ಗ್ರಾಹಕ ನ್ಯಾಯಾಲಯ ಮೊತ್ತ ಮೊದಲನೆಯದಾಗಿ ಜಾಹೀರಾತನ್ನು ಎಚ್ಚರಿಕೆಯಿಂದ ಗಮನಿಸಿತು. 'ಫ್ಲೈ ಟು ವೆಸ್ಟ್ ಇಂಡೀಸ್ ಫ್ರೀ ಆರ್ ಫ್ಯಾಮಿಲಿ ಹಾಲಿಡೇ ಇನ್ ಇಂಡಿಯಾ ಫ್ರೀ' (ಅಂದರೆ ಉಚಿತವಾಗಿ ವೆಸ್ಟ್ ಇಂಡೀಸ್ ಪ್ರವಾಸ ಇಲ್ಲವೇ ಕುಟುಂಬ ಸಹಿತ ಭಾರತದಲ್ಲಿ ಉಚಿತವಾಗಿ ಕುಟುಂಬ ಸಹಿತ ರಜಾ ದಿನದ ಮಜಾ' ಎಂಬುದು ಜಾಹೀರಾತಿನ ವಿವರಣೆಯಾಗಿತ್ತು.

ಈ ಜಾಹೀರಾತಿನ ಪ್ರಕಾರ ಹೀರೋ ಹೋಂಡಾ ಖರೀದಿಸಿದಾಗ ಲಭಿಸಿದ ಸ್ಕ್ರಾಚ್ ಕಾರ್ಡ್ ಗೀರಿದಾಗ ಯಾವ ಕೊಡುಗೆಯ ಬರಹ ಕಾಣುತ್ತದೋ ಅದಕ್ಕೆ ಅವರು ಅರ್ಹರಾಗಿದ್ದರು.

ಅಂದರೆ ಗ್ರಾಹಕನಿಗೆ ಸ್ಕ್ರಾಚ್ ಕಾರ್ಡಿನಲ್ಲಿ 'ಫ್ಲೈ ಟು ವೆಸ್ಟ್ ಇಂಡೀಸ್ ಫ್ರೀ' ಎಂಬ ಬರಹ ಕಂಡರೆ ಆತನು ಉಚಿತ ವೆಸ್ಟ್ ಇಂಡೀಸ್ ಪ್ರವಾಸಕ್ಕೂ, ಸ್ಕ್ರಾಚ್ ಕಾರ್ಡಿನಲ್ಲಿ 'ಫ್ಯಾಮಿಲಿ ಹಾಲಿಡೇ ಇನ್ ಇಂಡಿಯಾ ಫ್ರೀ' ಎಂಬ ಬರಹ ಕಂಡುಬಂದರೆ ಭಾರತದಲ್ಲಿ ಕುಟುಂಬ ಸಹಿತವಾಗಿ ಉಚಿತ ರಜಾದ ಮಜಾ ಅನುಭವಿಸಲೂ ಅರ್ಹತೆ ಲಭಿಸುತ್ತಿತ್ತು.

ಸ್ಕ್ರಾಚ್ ಕಾರ್ಡ್ ಕೊಡುಗೆಯ ಪ್ರಕಾರ ಪ್ರತಿವಾದಿಯು ಅರ್ಜಿದಾರರ ಇಚ್ಛೆಯಂತೆಯೇ ಅವರನ್ನು ಕೊಡೈಕನಾಲ್ಗೆ ಕಳುಹಿಸಲು ಮತ್ತು ಅಲ್ಲಿ ರಾಯಲ್ ಹೋಟೆಲಿನಲ್ಲಿ ವಾಸ್ತವ್ಯಕ್ಕೆ ಬೇಕಾದ ವ್ಯವಸ್ಥೆ ಮಾಡಿದರು.

ಆದರೆ ಅರ್ಜಿದಾರರು ಅದನ್ನು ಪಡೆದುಕೊಳ್ಳಲು ಮುಂದಾಗಲಿಲ್ಲ. ಪ್ರತಿವಾದಿಯು ಅಲ್ಲಿಗೆ ಹೋಗಲು ಶುಲ್ಕ ವಿಧಿಸಿದ್ದು ಸರಿಯಲ್ಲ, ಉಚಿತವಾಗಿ ಹೋಗಲು ವ್ಯವಸ್ಥೆ ಮಾಡಬೇಕಾಗಿತ್ತು ಎಂಬ ವಾದ ಅವರದಾಗಿತ್ತು.

'ಫ್ಲೈ ಟು ವೆಸ್ಟ್ ಇಂಡೀಸ್ ಫ್ರೀ ಆರ್ ಫ್ಯಾಮಿಲಿ ಹಾಲಿಡೇ ಇನ್ ಇಂಡಿಯಾ ಫ್ರೀ' ಎಂಬ ವಾಕ್ಯದಲ್ಲಿ ವೆಸ್ಟ್ ಇಂಡೀಸ್ಗೆ ಪ್ರವಾಸ ಮತ್ತು ಭಾರತದ ಒಳಗೆ ಉಚಿತವಾಗಿ ಕುಟುಂಬ ಸಹಿತವಾಗಿ ಉಚಿತ ರಜಾದ ಮಜಾ ಅವಕಾಶದ ಪ್ರಸ್ತಾಪವಿದ್ದುದನ್ನು ನ್ಯಾಯಾಲಯ ಗಮನಿಸಿತು. ಆದರೆ ಭಾರತದಲ್ಲಿ ಕುಟುಂಬ ಸಹಿತ ಉಚಿತ ರಜಾದ ಮಜಾ ಎಂಬ ಭರವಸೆಯ ಜೊತೆಗೆ ಸಂಚಾರ ಮತ್ತು ಇತರ ಸವಲತ್ತುಗಳ ಪ್ರಸ್ತಾಪ ಇರಲಿಲ್ಲ ಎಂಬುದನ್ನು ನ್ಯಾಯಾಲಯ ಗಮನಕ್ಕೆ ತೆಗೆದುಕೊಂಡಿತು.

ಕೊಡುಗೆಯ ಭರವಸೆ 'ಕೇವಲ ಫ್ಯಾಮಿಲಿ ಹಾಲಿಡೇ ಇನ್ ಇಂಡಿಯಾ ಫ್ರೀ' ಎಂದಷ್ಟೇ ಹೇಳಿತ್ತು.

ತಮ್ಮ ಕೊಡುಗೆಯಲ್ಲಿ ನೀಡಿದ ಭರವಸೆಯ ಪ್ರಕಾರ ಪ್ರತಿವಾದಿಗಳು ಕೋಡೈಕನಾಲಿನಲ್ಲಿ ಕುಟುಂಬ ಸಹಿತ ವಾಸ್ತವ್ಯಕ್ಕೆ ಅರ್ಜಿದಾರರ ಇಚ್ಛೆಯಂತೆಯೇ ಎಲ್ಲ ವ್ಯವಸ್ಥೆ ಮಾಡಿದ್ದರಿಂದ ಇಲ್ಲಿ ಸೇವಾಲೋಪ ಆಗಿಲ್ಲ ಎಂಬ ತೀರ್ಮಾನಕ್ಕೆ ರಾಜ್ಯ ಗ್ರಾಹಕ ನ್ಯಾಯಾಲಯ ಬಂದಿತು.

ಸಾರಿಗೆ ವ್ಯವಸ್ಥೆ ಮಾಡಿಲ್ಲ ಎಂದು ಹೇಳಿ ಅರ್ಜಿದಾರರು ಪ್ರತಿವಾದಿ ನೀಡಿದ ಕೊಡುಗೆಯನ್ನು ಸ್ವೀಕರಿಸದೇ ಇದ್ದುದು ಒಪ್ಪುವಂತಹ ವಿಚಾರವಲ್ಲ ಎಂದು ಹೇಳಿದ ನ್ಯಾಯಾಲಯ ಈ ಪ್ರಕರಣದಲ್ಲಿ ಜಿಲ್ಲಾ ಗ್ರಾಹಕ ನ್ಯಾಯಾಲಯದ ತೀರ್ಪು ಸಮರ್ಪಕ ಅಲ್ಲ ಎಂದು ನಿರ್ಧರಿಸಿತು.

ಈ ಹಿನ್ನೆಲೆಯಲ್ಲಿ ಮೇಲ್ಮನವಿಯನ್ನು ಅಂಗೀಕರಿಸಿದ ಪೀಠವು ಜಿಲ್ಲಾ ಗ್ರಾಹಕ ನ್ಯಾಯಾಲಯದ ತೀರ್ಪನ್ನು ರದ್ದು ಪಡಿಸಿ, ಜಿಲ್ಲಾ ಗ್ರಾಹಕ ನ್ಯಾಯಾಲಯದ ಮುಂದೆ ಸಲ್ಲಿಸಲಾಗಿದ್ದ ಅರ್ಜಿಗಳನ್ನು ವಜಾ ಮಾಡಿತು.

ಪ್ರತಿವಾದಿಯು ಉಭಯ ಪ್ರಕರಣಗಳಿಗೂ ಸಂಬಂಧಿಸಿದಂತೆ ಠೇವಣಿ ಇರಿಸಿದ್ದ ತಲಾ 11,000 ರೂಪಾಯಿಗಳನ್ನು ಪ್ರತಿವಾದಿ ಮನವಿಯ ಮೇರೆಗೆ ಹಿಂದಿರುಗಿಸುವಂತೆಯೂ ನ್ಯಾಯಾಲಯ ಆಜ್ಞಾಪಿಸಿತು.