Tuesday, January 1, 2019

ಇಂದಿನ ಇತಿಹಾಸ History Today ಜನವರಿ 01

ಇಂದಿನ ಇತಿಹಾಸ History Today ಜನವರಿ 01
೨೦೧೯: ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅನುಕೂಲವಾಗುವಂತೆ ವಿಶೇಷ ಕಾನೂನು ರಚಿಸಲು ಆರೆಸ್ಸೆಸ್ ಮತ್ತು ಪಕ್ಷದ ಹಲವಾರು ಸದಸ್ಯರು ಆಗ್ರಹಿಸುತ್ತಿದ್ದರೂ, ಸುಪ್ರೀಂಕೋರ್ಟ್ ತೀರ್ಪಿನ ಬಳಿಕವೇ ಪ್ರಸ್ತಾಪಿತ ರಾಮಮಂದಿರಕ್ಕೆ ಸಂಬಂಧಿಸಿದ ಸುಗ್ರೀವಾಜ್ಞೆ ಬಗ್ಗೆ ನಿರ್ಧರಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟ ಪಡಿಸಿದರುಸುದ್ದಿ ಸಂಸ್ಥೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ರಾಮಮಂದಿರ ಸುಗ್ರೀವಾಜ್ಞೆಗೆ ಕೇಳಿ ಬರುತ್ತಿರುವ ಆಗ್ರಹ ಹಾಗೂ ಗಡೆಯಾಚೆ ನುಗ್ಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ದಾಳಿ ನಡೆಸಿದ ಬಗ್ಗೆ ನೀಡಿದ ತಮ್ಮ ಚೊಚ್ಚಲ ಪ್ರತಿಕ್ರಿಯೆಯಲ್ಲಿ ಪ್ರಧಾನಿ ಸ್ಪಷ್ಟನೆ ನೀಡಿದರು. ಅಯೋಧ್ಯೆಗೆ ಸಂಬಂಧಿಸಿದಂತೆ ನ್ಯಾಯಾಂಗ ಪ್ರಕ್ರಿಯೆಯು ಕಾಂಗ್ರೆಸ್ ವಕೀಲರು ಸುಪ್ರೀಂಕೋರ್ಟಿನಲ್ಲಿ ಅಡಚಣೆಗಳನ್ನು ಸೃಷ್ಟಿಸುತ್ತಿರುವ ಪರಿಣಾಮವಾಗಿ ನಿಧಾನಗೊಂಡಿದೆ ಎಂದು ಪ್ರಧಾನಿ ಹೇಳಿದರು.ರಾಮಮಂದಿರ ವಿಷಯವು ಬಿಜೆಪಿಗೆ ಕೇವಲ ಭಾವಾತ್ಮಕ ವಿಷಯವಾಗಿದೆಯೇ? ಎಂಬುದಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಪ್ರಧಾನಿ ಮೋದಿ ಅವರು ನಮ್ಮ ಬಿಜೆಪಿ ಪ್ರಣಾಳಿಕೆಯಲ್ಲಿ, ವಿಷಯಕ್ಕೆ ಸಂವಿಧಾನದ ಚೌಕಟ್ಟಿನಲ್ಲಿಯೇ ಪರಿಹಾರ ಲಭಿಸುವುದು ಎಂಬುದಾಗಿ ನಾವು ಹೇಳಿದ್ದೇವೆ  ಎಂದು ನುಡಿದರು. ಬಿಜೆಪಿಯು ತನ್ನ ಪ್ರಣಾಳಿಕೆಯಲ್ಲಿ ಪಕ್ಷವು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಿಸಲು ತಾನು ಬಯಸುವುದಾಗಿ ಹೇಳಿತ್ತು. ಇತ್ತೀಚೆಗೆ ಪಕ್ಷದ ಒಳಗೆ ಮತ್ತು ಸಂಘ ಪರಿವಾರದ ಸಹೋದರಿ ಸಂಘಟನೆಗಳಿಂದ ರಾಮಮಂದಿರ ನಿರ್ಮಾಣ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಪ್ರಬಲ ಬೇಡಿಕೆಯ ಅಲೆ ಎದ್ದಿತ್ತು. ಸಂಘ ಪರಿವಾರದ ಸಂಘಟನೆಗಳು ವಿಷಯ ಇತ್ಯರ್ಥ ನಿಟ್ಟಿನಲ್ಲಿ ಆಗುತ್ತಿರುವ ವಿಳಂಬಕ್ಕೆ ಅಸಮಾಧಾನ ವ್ಯಕ್ತ ಪಡಿಸಿದ್ದವು. ಜೊತೆಗೇ ತ್ರಿವಳಿ ತಲಾಖ್ ವಿಚಾರದಲ್ಲಿ ಹೊರಡಿಸಿದಂತಹ ಸುಗ್ರೀವಾಜ್ಞೆಯ ಮಾದರಿಯಲ್ಲೇ ರಾಮಮಂದಿರ ನಿರ್ಮಾಣಕ್ಕೆ ಅನುಕೂಲವಾಗುವಂತೆ ಸುಗ್ರೀವಾಜ್ಞೆ ಹೊರಡಿಸಬೇಕು ಎಂಬ ಬೇಡಿಕೆಗಳೂ ಕೇಳಿ ಬಂದಿದ್ದವು.ರಾಮಮಂದಿರಕ್ಕಾಗಿ ಸುಗ್ರೀವಾಜ್ಞೆ ರೂಪಿಸುವಂತೆ ಬಿಜೆಪಿಯ ಮಿತ್ರ ಪಕ್ಷ ಶಿವಸೇನೆ ಕೂಡಾ ಒತ್ತಾಯಿಸಿತ್ತು.ಸರ್ಕಾರವು ರಾಮಮಂದಿರ ವಿಚಾರದಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಬಗ್ಗೆ ಪರಿಶೀಲಿಸುತ್ತಿದ್ದೆಯೇ ಎಂಬುದಾಗಿ ಕೇಳಲಾದ ಪ್ರಶ್ನೆಗೆ ಪ್ರಧಾನಿಯವರು ವಿಷಯವು ಸುಪ್ರೀಂಕೋರ್ಟಿನ ಮುಂದಿದೆ ಮತ್ತು ಸಂಭವನೀಯವಾಗಿ ಅಂತಿಮ ಹಂತದಲ್ಲಿದೆ ಎಂದು ಪ್ರಧಾನಿ ಬೊಟ್ಟು ಮಾಡಿದರು.ನ್ಯಾಯಾಂಗ ಪ್ರಕ್ರಿಯೆ ಪೂರ್ಣಗೊಳ್ಳಲಿ. ನ್ಯಾಯಾಂಗ ಪ್ರಕ್ರಿಯೆ ಮುಗಿದ ಬಳಿಕ, ಸರ್ಕಾರವಾಗಿ ನಮ್ಮ ಹೊಣೆಗಾರಿಕೆ ಏನೋ ಅದನ್ನು ನಾವು ನಿಭಾಯಿಸುತ್ತೇವೆ. ಎಲ್ಲ ಪ್ರಯತ್ನಗಳನ್ನೂ ಮಾಡಲು ನಾವು ಸಿದ್ಧರಾಗಿದ್ದೇವೆ ಎಂದು ಪ್ರಧಾನಿ ಹೇಳಿದರು. ಇದಕ್ಕೆ ಮುನ್ನ, ಡಿಸೆಂಬರ್ ೨೫ರಂದು ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರು ಅಯೋಧ್ಯಾ ಭೂ ವಿವಾದ ಪ್ರಕರಣದ ಬಗೆಗಿನ ವಿಚಾರಣೆಯನ್ನು ತ್ವರಿತಗೊಳಿಸುವಂತೆ ಸುಪ್ರೀಂಕೋರ್ಟಿಗೆ ಮನವಿ ಮಾಡಿದ್ದರು. ಇದು ರಾಷ್ಟ್ರದ ನಿರೀಕ್ಷೆ ಎಂದು ಅವರು ಹೇಳಿದ್ದರು.ತಾವು ಸಚಿವರಾಗಿ ಮನವಿ ಮಾಡುತ್ತಿಲ್ಲ, ಆದರೆ ಸಾಮಾನ್ಯ ಪ್ರಜೆ ಹಾಗೂ ವಕೀಲನಾಗಿ ಮನವಿ ಮಾಡುತ್ತಿರುವುದಾಗಿ ಕಾನೂನು ಸಚಿವರು ತಿಳಿಸಿದ್ದರು.ಅಯೋಧ್ಯಾ ಪ್ರಕರಣದ ವಿಚಾರಣೆಗೆ ಜನವರಿ ೪ರ ದಿನಾಂಕವನ್ನು ಸುಪ್ರೀಂಕೋರ್ಟ್ ನಿಗದಿ ಪಡಿಸಿದೆ.ಸರ್ಜಿಕಲ್ ದಾಳಿ: ಯೋಜನೆ ಯಶಸ್ವಿಯಾಗಲಿ ಅಥವಾ ವಿಫಲವಾಗಲಿ ಅದನ್ನು ಲೆಕ್ಕಿಸದೇ ಸೂರ್ಯೋದಯಕ್ಕೆ ಮುನ್ನ ವಾಪಸ್ ಬನ್ನಿ ಎಂಬ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ ಅವರು ೨೦೧೬ರ ಸೆಪ್ಟೆಂಬರ್ ೨೮ರಂದು ಗಡಿ ನಿಯಂತ್ರಣ ರೇಖೆ (ಎಲ್ ಒಸಿ) ದಾಟಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ಶಿಬಿರಗಳ ಮೇಲೆ ಸರ್ಜಿಕಲ್ ದಾಳಿ ನಡೆಸಿದ್ದ ಭಾರತೀಯ ಸೇನೆಯ ವಿಶೇಷ ಪಡೆ ಕಮಾಂಡೋಗಳಿಗೆ ನೀಡಿದ್ದರು. ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಸರ್ಜಿಕಲ್ ದಾಳಿ ಸೇನಾ ಕಾರ್ಯಾಚರಣೆಯ ವಿವರಗಳನ್ನು ಇದೇ ಮೊತ್ತ ಮೊದಲ ಬಾರಿಗೆ ಸ್ವತಃ ಬಹಿರಂಗ ಪಡಿಸುತ್ತಾ ಪ್ರಧಾನಿಯವರು ವಿಷಯವನ್ನು ತಿಳಿಸಿದರು.ಪಡೆಗಳ ಸುರಕ್ಷತೆ ಮತ್ತು ಭದ್ರತೆಯನ್ನು ಗಮನದಲ್ಲಿ ಇಟ್ಟುಕೊಂಡು ಸರ್ಜಿಕಲ್ ದಾಳಿಯ ದಿನಾಂಕವನ್ನು ಎರಡು ಬಾರಿ ಬದಲಾಯಿಸಲಾಗಿತ್ತು ಎಂದು ಅವರು ನುಡಿದರು. ಕಾಶ್ಮೀರದ ಉರಿಯಲ್ಲಿ ಭಯೋತ್ಪಾದಕರು ದಾಳಿ ನಡೆಸಿ ೨೦ ಸೈನಿಕರನ್ನು ಬಲಿತೆಗೆದುಕೊಂಡ ಎರಡು ದಿನಗಳ ಬಳಿಕ ಸರ್ಜಿಕಲ್ ದಾಳಿಗಳನ್ನು ನಡೆಸಲಾಗಿತ್ತು.ಉರಿ ಭಯೋತ್ಪಾದಕ ದಾಳಿಯಲ್ಲಿ ಯೋಧರನ್ನು ಜೀವಂತ ಸಹಿಸಿದ ಬಳಿಕ ತಮ್ಮೊಳಗೆ ಹಾಗೂ ಸೈನಿಕರಲ್ಲಿ ಭುಗಿಲೆದ್ದ ಕ್ರೋಧವನ್ನು ಅನುಸರಿಸಿ ಸರ್ಜಿಕಲ್ ದಾಳಿ ಯೋಜನೆ ರೂಪಿಸಲಾಯಿತು ಎಂದು ಪ್ರಧಾನಿ ವಿವರಿಸಿದರು.ಕಾರ್ಯಾಚರಣೆ ಯಶಸ್ವಿಯಾಗಲಿ ಅಥವಾ ವಿಫಲವಾಗಲಿ, ನೀವು ಚಿಂತಿಸಬೇಕಾಗಿಲ್ಲ, ಆದರೆ ಸೂರ್ಯೋದಯಕ್ಕೆ ಮುನ್ನ ವಾಪಸ್ ಬನ್ನಿ. ಯಾವುದೇ ಆಸೆಗೆ ಬಲಿಬಿದ್ದು ಅದನ್ನು (ಕಾರ್ಯಾಚರಣೆಯನ್ನು) ಸುದೀರ್ಘಗೊಳಿಸಬೇಡಿ ಎಂಬ ಸ್ಪಷ್ಟ ಸಂದೇಶವನ್ನು ನಾನು ಯೋಧರಿಗೆ ನೀಡಿದ್ದೆ ಎಂದು ಮೋದಿ ನುಡಿದರು.ಕಾರ್ಯಾಚರಣೆಯ ವೇಳೆಯಲ್ಲಿ ನಮ್ಮ ಯೋಧರಲ್ಲಿ ಯಾರೂ ಸಾವನ್ನಪ್ಪಬಾರದು ಎಂಬುದು ತಮ್ಮ ದೃಢ ನಿರ್ಧಾರವಾಗಿತ್ತು. ಹೀಗಾಗಿಯೇ ಸೂರ್ಯೋದಯಕ್ಕೆ ಮುನ್ನ ಯಶಸ್ವಿಯಾದರೂ, ವಿಫಲವಾದರೂ ಕಾರ್ಯಾಚರಣೆ ಕ್ಷೇತ್ರದಿಂದ ವಾಪಸಾಗಬೇಕು ಎಂಬುದಾಗಿ ತಾವು ಸೂಚಿಸಿದ್ದುದಾಗಿ ಪ್ರಧಾನಿ ಹೇಳಿದರು.ಇಡೀ ರಾತ್ರಿ ನಡೆದ ಅಪಾಯಕಾರಿ ಕಾರ್ಯಾಚರಣೆಯ ಮೇಲೆ ತಾವು ಸಂಪೂರ್ಣ ನಿಗಾ ಇಟ್ಟಿದ್ದುದಾಗಿ ಹೇಳಿದ ಪ್ರಧಾನಿ ಕಾರ್ಯಾಚರಣೆಯ ಬಗ್ಗೆ ಸತತ ಮಾಹಿತಿ ಪಡೆಯುತ್ತಿದ್ದುದಾಗಿ ನುಡಿದರು.ಇದೊಂದು ದೊಡ್ಡ ರಿಸ್ಕ್ ಎಂಬುದು ನನಗೆ ಗೊತ್ತಿತ್ತು. ನನಗೆ ಎದುರಾಗಬಹುದಾದ ಯಾವುದೇ ರಾಜಕೀಯ ಅಪಾಯಗಳ ಬಗ್ಗೆ ನಾನು ಕಾಳಜಿ ವಹಿಸಲಿಲ್ಲ. ನನ್ನ ಪಾಲಿನ ದೊಡ್ಡ ಕಾಳಜಿ ನಮ್ಮ ಯೋಧರ ಸುರಕ್ಷತೆಯ ಬಗೆಗಿನದಾಗಿತ್ತು ಎಂದು ಅವರು ಹೇಳಿದರು.ನಮ್ಮ ಮಾತನ್ನು ಅನುಸರಿಸಿ ಬಲಿದಾನ ಮಾಡಬಯಸಿದ್ದ ಕಮಾಂಡೋಗಳಿಗೆ ಒಂದಿಷ್ಟೂ ಹಾನಿಯಾಗುವುದನ್ನು ನಾನು ಬಯಸಿರಲಿಲ್ಲ  ಎಂದು ಪ್ರಧಾನಿ ನುಡಿದರು.ಕಾರ್ಯಾಚರಣೆಗೆ ಕಮಾಂಡೋಗಳನ್ನು ಅತ್ಯಂತ ಎಚ್ಚರಿಕೆಯಿಂದ ಆಯ್ಕೆ ಮಾಡಲಾಗಿತ್ತು ಮತ್ತು ಅವರಿಗೆ ವಿಶೇಷ ತರಬೇತಿ ನೀಡಲಾಯಿತು. ಅವರಿಗೆ ಏನೇನು ಸಲಕರಣೆಗಳು ಬೇಕಾಗಿದ್ದವೂ ಅವೆಲ್ಲವನ್ನೂ ಒದಗಿಸಲಾಯಿತು ಎಂದು ಮೋದಿ ಹೇಳಿದರು.ಯೋಧರು ಗಡಿನಿಯಂತ್ರಣ ರೇಖೆಯ ಆಚೆ ಇದ್ದಷ್ಟೂ ಹೊತ್ತು ನಾನು ಆತಂಕದಲ್ಲೇ ಇದ್ದೆಬೆಳಗಿನ ವೇಳೆಗೆ ಮಾಹಿತಿಯ ಪ್ರವಾಹ ಸುಮಾರು ಒಂದು ಗಂಟೆ ಕಾಲ ನಿಂತಾಗ ಕ್ಷಣಗಳನ್ನು ಕಳೆಯುವುದು ಅತ್ಯಂತ ಕಷ್ಟಕರವಾಗಿತ್ತು ಎಂದು ಪ್ರಧಾನಿ ಹೇಳಿದರು.ಬೆಳಗ್ಗಿನ ಹೊತ್ತು ಸುಮಾರು ಒಂದು ಗಂಟೆ ಕಾಲ ಯಾವ ಮಾಹಿತಿಯೂ ಬರಲಿಲ್ಲ. ನನ್ನ ಆತಂಕ ಹೆಚ್ಚಿತು. ಸೂರ್ಯ ಉದಯಿಸಿದ ಒಂದು ಗಂಟೆಯ ಬಳಿಕವೂ ಮಾಹಿತಿ ಬರಲಿಲ್ಲ. ಕ್ಷಣಗಳನ್ನು ಕಳೆಯುವುದೂ ನನಗೆ ಅತ್ಯಂತ ಕಷ್ಟಕರ ಎನ್ನಿಸಿತು. ಆಗ ಯೋಧರು ಇನ್ನೂ ವಾಪಸ್ ಬಂದಿಲ್ಲ, ಆದರೆ ಎರಡು ಮೂರು ಘಟಕಗಳು ಸುರಕ್ಷಿತ ವಲಯ ತಲುಪಿವೆ, ಚಿಂತಿಸಬೇಕಿಲ್ಲ ಎಂಬ ಮಾಹಿತಿ ಬಂತು. ಆದರೆ ಕೊನೆಯ ವ್ಯಕ್ತಿ ಹಿಂತಿರುಗುವವರೆಗೂ ಸಮಾಧಾನವಿಲ್ಲ ಎಂದು ನಾನು ಹೇಳಿದೆ ಎಂದು ಮೋದಿ ನುಡಿದರು.ಸರ್ಜಿಕಲ್ ದಾಳಿಯ ರಾಜಕೀಯಗೊಳಿಸುವಿಕೆ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರಧಾನಿ ಇದನ್ನು ಸರ್ಕಾರ ಮಾಡಿದ್ದಲ್ಲ. ಆದರೆ ವಿರೋಧ ಪಕ್ಷಗಳು ತಮ್ಮ ಗುಮಾನಿಗೆ ಬಲ ನೀಡಲು ಪಾಕಿಸ್ತಾನಿ ಹೇಳಿಕೆಯನ್ನು ಉಲ್ಲೇಖಿಸಿ ಮೂಲಕ ಸೇನಾ ಕ್ರಮದ ಬಗ್ಗೆ ಪ್ರಶ್ನೆ ಎತ್ತುವ ಮೂಲಕ ಇದನ್ನು ಮಾಡಿದವು ಎಂದು ಉತ್ತರಿಸಿದರು.ದಾಳಿಗಳ ಬಗ್ಗೆ ರಾಷ್ಟ್ರಕ್ಕೆ ತಿಳಿಸುವುದಕ್ಕೂ ಮುನ್ನ ಅದರ ಬಗ್ಗೆ ಪಾಕಿಸ್ತಾನಕ್ಕೆ ತಿಳಿಸಲಾಯಿತು. ಸೇನಾ ಅಧಿಕಾರಿಯೊಬ್ಬರು ರಾಷ್ಟ್ರಕ್ಕೆ (ಭಾರತ) ಕಾರ್ಯಾಚರಣೆ ಬಗ್ಗೆ ವಿವರಿಸಿದರು. ಅದಕ್ಕೂ ಮುನ್ನ ಮಾಹಿತಿಯನ್ನು ಪಾಕಿಸ್ತಾನಕ್ಕೂ ನೀಡಲಾಯಿತು. ಆದರೆ ರಾಷ್ಟ್ರದ ದುರದೃಷ್ಟ ಏನೆಂದರೆ ಅದೇ ದಿನ (ಸರ್ಜಿಕಲ್ ದಾಳಿ ನಡೆದ ದಿನ) ಕೆಲವು ಪಕ್ಷಗಳ ನಾಯಕರು ಸರ್ಜಿಕಲ್ ದಾಳಿಗಳ ಬಗ್ಗೆ ಗುಮಾನಿ ವ್ಯಕ್ತ ಪಡಿಸಿ ಪ್ರಶ್ನೆಗಳನ್ನು ಎತ್ತಿದರು ಎಂದು ಪ್ರಧಾನಿ ಹೇಳಿದರು.ತಮ್ಮ ನೈತಿಕ ಸ್ಥೈರ್ಯ ಉಳಿಸಿಕೊಳ್ಳಲು ರೀತಿ ಮಾತನಾಡುವುದು (ನಿರಾಕರಣೆ) ಪಾಕಿಸ್ತಾನಕ್ಕೆ ಅನಿವಾರ್ಯ. ಆದರೆ ಪಾಕಿಸ್ತಾನ ಹೇಳುತ್ತಿದ್ದುದನ್ನೇ ಇಲ್ಲೂ ಹೇಳಲಾಯಿತು. ತಮ್ಮ ಅಭಿಪ್ರಾಯಗಳಿಗೆ ಒತ್ತು ನೀಡಲು ಅವರು ಪಾಕಿಸ್ತಾನಿ ಹೇಳಿಕೆಗಳನ್ನು ಉಲ್ಲೇಖಿಸಿದರು. ದಾಳಿಯ ರಾಜಕೀಯಗೊಳಿಸುವಿಕೆ ಕ್ಷಣದಿಂದ ಶುರುವಾಯಿತು ಎಂದು ಅವರು ವಿವರಿಸಿದರು. ವಿರೋಧಿ ನಾಯಕರು ಅಸಂಬದ್ಧ ಮಾತುಗಳನ್ನು ಆಡಿದರು. ಸೇನೆಯ ಕ್ರಮದ ಬಗ್ಗೆ ಸಂಶಯಗಳನ್ನು ವ್ಯಕ್ತ ಪಡಿಸಿದರು. ಇದು ತಪ್ಪು. ಇಂತಹ ರಾಜಕೀಯಕರಣ ಆಗಬಾರದಿತ್ತು ಎಂದು ಪ್ರಧಾನಿ ಹೇಳಿದರು.೧೯೬೨ರ ಚೀನಾ ಜೊತೆಗಿನ ಯುದ್ಧ ಸೇರಿದಂತೆ ಎಲ್ಲ ಕಾರ್ಯಾಚರಣೆಗಳ ಮೂಲಕ ಯೋಧರು ಪ್ರದರ್ಶಿಸಿದ ಶೌರ್ಯವನ್ನು ಶ್ಲಾಘಿಸುವುದು ಸರ್ಕಾರ ಮತ್ತು ನಾಗರಿಕರ ಕರ್ತವ್ಯ ಎಂದು ನುಡಿದ ಮೋದಿ, ರಾಷ್ಟ್ರಕ್ಕಾಗಿ ತಮ್ಮ ಪ್ರಾಣಗಳನ್ನೇ ಬಲಿದಾನ ಮಾಡುವ ಅವರ ಶೌರ್ಯವನ್ನು ನಾವು ಶ್ಲಾಘಿಸದೇ ಇದ್ದಲ್ಲಿ, ಮತ್ಯಾರು ಶ್ಲಾಘಿಸಬೇಕು? ಆದ್ದರಿಂದ ಸೇನೆಯ ಶ್ಲಾಘನೆಯನ್ನು ರಾಜಕೀಯಗೊಳಿಸುವಿಕೆ ಎಂದು ಪರಿಗಣಿಸಬಾರದು ಎಂದು ನುಡಿದರು.ಸರ್ಜಿಕಲ್ ದಾಳಿಯ ಉದ್ದೇಶ ಈಡೇರಿತೇ? ಕಾಶ್ಮೀರದಲ್ಲಿ ಇನ್ನೂ ಗಡಿಯಾಚೆಯಿಂದ ದಾಳಿ ನಡೆಯುತ್ತಿದೆಯಲ್ಲ ಎಂಬ ಪ್ರಶ್ನೆಗೆ ವಿಷಯದ ಬಗ್ಗೆ ಬಹಿರಂಗ ಚರ್ಚೆಯನ್ನು ತಾವು ಬಯಸುವುದಿಲ್ಲ ಎಂದು ಅವರು ಹೇಳಿದರು.ಒಂದು ಹೋರಾಟದಿಂದ ಪಾಕಿಸ್ತಾನವು ಸರಿಯಾಗಿ ವರ್ತಿಸತೊಡಗುತ್ತದೆ ಎಂದು ಯೋಚಿಸುವುದು ದೊಡ್ಡ ತಪ್ಪು. ಪಾಕಿಸ್ತಾನಕ್ಕೆ ಬುದ್ಧಿ ಬರಲು ದೀರ್ಘ ಕಾಲ ಬೇಕು ಎಂದು ಮೋದಿ ನುಡಿದರು.೨೦೧೬ರ ಸೆಪ್ಟೆಂಬರಿನಲ್ಲಿ ಪಾಕಿಸ್ತಾನ ಮೂಲದ ಜೈಶ್ --ಮೊಹಮ್ಮದ್ ಭಯೋತ್ಪಾದಕರು ನೈಜ ನಿಯಂತ್ರಣ ರೇಖೆ ಸಮೀಪದ ಉರಿ ಸೇನಾ ಶಿಬಿರಕ್ಕೆ ನುಗ್ಗಿ ಭಯೋತ್ಪಾದಕ ದಾಳಿ ನಡೆಸಿ ೨೦ ಯೋಧರನ್ನು ಬಲಿತೆಗೆದುಕೊಂಡಿದ್ದರು. ಸರ್ಜಿಕಲ್ ದಾಳಿ ಕಾರ್ಯಾಚರಣೆಯ ಮೂಲಕ ಭಾರತೀಯ ಸೇನೆ ಇದರ ವಿರುದ್ಧ ಸೇಡು ತೀರಿಸಿಕೊಂಡಿತ್ತು. ಸರ್ಜಿಕಲ್ ಕಾರ್ಯಾಚರಣೆಯಲ್ಲಿ ಭಯೋತ್ಪಾದಕರ ನೆಲೆಗಳನ್ನು ಧ್ವಂಸಗೊಳಿಸಲಾಗಿತ್ತು. ಸುಮಾರು ಪಾಕ್ ಸೈನಿಕರು ಮತ್ತು ಭಯೋತ್ಪಾದಕರು ಸೇರಿ ೫೦ ಮಂದಿ ಸಾವನ್ನಪ್ಪಿದರು ಎನ್ನಲಾಗಿತ್ತು.ಆರ್ ಬಿಐ ಗವರ್ನರ್ ರಾಜೀನಾಮೆ: ರಿಸರ್ವ್ ಬ್ಯಾಂಕ್ ಗವರ್ನರ್ ಊರ್ಜಿತ್ ಪಟೇಲ್ ಅವರು - ತಿಂಗಳಿನಿಂದಲೇ ರಾಜೀನಾಮೆ ನೀಡಲು ಬಯಸಿ ನನ್ನ ಬಳಿ ಮನವಿ ಮಾಡಿದ್ದರು. ಅವರು ರಾಜೀನಾಮೆ ನೀಡಿದ್ದು ವೈಯಕ್ತಿಕ ಕಾರಣಕ್ಕಾಗಿ. ಅವರ ಮೇಲೆ ಯಾವುದೇ ರಾಜಕೀಯ ಒತ್ತಡ ಇರಲಿಲ್ಲ ಎಂದು ಹೇಳಿದ ಪ್ರಧಾನಿ ಅವರು ಒಬ್ಬ ಉತ್ತಮ ಆರ್ ಬಿಐ ಗವರ್ನರ್ ಆಗಿದ್ದರು ಎಂದು ನುಡಿದರು.ನೋಟು ಅಪಮೌಲ್ಯ: ನೋಟು ಅಮಾನ್ಯೀಕರಣವನ್ನು ದಿಢೀರನೆ ಜನರ ಮೇಲೆ ಹೇರಿದ್ದಲ್ಲ. ಕಪ್ಪು ಹಣವನ್ನು ಬ್ಯಾಂಕಿಗೆ ಪಾವತಿಸುವಂತೆ ಒಂದು ವರ್ಷಕ್ಕೆ ಮುಂಚೆಯೇ ಎಚ್ಚರಿಕೆ ನೀಡಲಾಗಿತ್ತು. ಹಣ ಪಾವತಿ ಮಾಡದೇ ಇದ್ದುದರಿಂದ ಕಪ್ಪು ಹಣ ನಿಗ್ರಹಕ್ಕೆ ಅದು ಅನಿವಾರ್ಯವಾಯಿತು ಎಂದು ಪ್ರಧಾನಿ ಹೇಳಿದರು. ನೋಟು ಅಮಾನ್ಯೀಕರಣದ ಬಳಿಕ ದೇಶದಲ್ಲಿ ತೆರಿಗೆ ಪಾವತಿ- ಆದಾಯ ಹೆಚ್ಚಿದೆ ಎಂದು ಅವರು ಸಮರ್ಥಿಸಿದರು.ತಮ್ಮ ಪ್ರಬಲ ಪ್ರತಿಸ್ಪರ್ಧಿ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಮೋದಿ, ಗೌರವಯುತ ಕುಟುಂಬ ಎಂಬುದಾಗಿ ಹೇಳಿಕೊಳ್ಳುವ, ನಾಲ್ಕು ತಲೆಮಾರು ದೇಶವನ್ನು ಆಳಿರುವ ಕುಟುಂಬದವರು ಈಗ ಜಾಮೀನಿನ ಮೇಲೆ ಹೊರಗಿದ್ದಾರೆ. ಅವರ ಅಡಿಯಾಳಾದ ಕೆಲವರು ಅವರ ಪರವಾಗಿ ನನ್ನ ಮೇಲೆ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಮೋದಿ ದೂರಿದರು.

೨೦೧೯: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ  ೯೫ ನಿಮಿಷಗಳ ಸಂದರ್ಶನ ಟಿವಿ ಜಾಲಗಳಲ್ಲಿ ಪ್ರಸಾರಗೊಂಡ ಕೆಲವೇ ನಿಮಿಷಗಳಲ್ಲಿ ಕಾಂಗ್ರೆಸ್ ಪಕ್ಷವು ಪ್ರಧಾನಿ ಸಂದರ್ಶನವನ್ನು ಬರೀ ಸ್ವಗತ ಎಂದು ಜರೆದು, ಪ್ರಧಾನಿ ವಿರೋಧ ಪಕ್ಷಗಳ ೧೦ ಪ್ರಶ್ನೆಗಳಿಗೆ ಉತ್ತರ ನೀಡಬೇಕಾಗಿತ್ತು ಎಂದು ಹೇಳಿತು.ಪ್ರಧಾನಿಯವರ ಸಂದರ್ಶನದ ಒಟ್ಟಾರೆ ಸಾರಾಂಶ ಏನೆಂದರೆ , ಮಿ, ಮೈನ್ ಮತ್ತು ಮೈಸೆಲ್ಫ್ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಕಾಂಗ್ರೆಸ್ ನಾಯಕ ರಣ್ದೀಪ್ ಸಿಂಗ್ ಸುರ್ಜೆವಾಲ, ಪ್ರಧಾನಿಯವರು ಇದಕ್ಕೆ ಬದಲಾಗಿ ವಿದೇಶದಿಂದ ಬರುವ ಕಪ್ಪುಹಣದಿಂದ ಪ್ರತಿಯೊಂದು ಬ್ಯಾಂಕ್ ಖಾತೆಗೆ ೧೫ ಲಕ್ಷ ರೂಪಾಯಿ ಪಾವತಿಸಲಾಗುವುದು ಎಂಬುದಾಗಿ ನೀಡಿದ್ದ ಭರವಸೆ ಸೇರಿದಂತೆ ತಾವು ನೀಡಿದ್ದ ೧೦ ಭರವಸೆಗಳ ಬಗ್ಗೆ ವಿವರಿಸಬೇಕಾಗಿತ್ತು ಎಂದು ಹೇಳಿದರು.ಪ್ರಧಾನಿಯವರ ಸಂದರ್ಶನ ಕೇವಲ ಸ್ವಗತ ಎಂದು ಸುರ್ಜೆವಾಲ ಬಣ್ಣಿಸಿದರು.

೨೦೧೯: ಲಕ್ನೋ: ಭಾರತ ಬಂದ್ ಕಾಲದಲ್ಲಿ ಮುಗ್ಧರ ವಿರುದ್ಧ ದಾಖಲಿಸಲಾದ ಪ್ರಕರಣಗಳನ್ನು ಹಿಂತೆಗೆದುಕೊಳ್ಳದೇ ಇದ್ದಲ್ಲಿ ಮಧ್ಯಪ್ರದೇಶ ಮತ್ತು ರಾಜಸ್ಥಾನ ಸರ್ಕಾರಗಳಿಗೆ ನೀಡಿರುವ ಬಾಹ್ಯ ಬೆಂಬಲದ ಮರುಪರಿಶೀಲನೆ ಮಾಡುವುದಾಗಿ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಕಮಲನಾಥ್ ಸರ್ಕಾರ ಅದಕ್ಕೆ ಮಣಿದು ಪ್ರಕರಣಗಳ ವಾಪಸಾತಿಗೆ ಶಿಫಾರಸು ಮಾಡುವುದಾಗಿ ಪ್ರಕಟಿಸಿತು. ಹೊಸದಾಗಿ ಚುನಾಯಿತವಾಗಿರುವ ಮಧ್ಯಪ್ರದೇಶ ಮತ್ತು ರಾಜಸ್ಥಾನ ಸರ್ಕಾರಗಳು ಕ್ಷಿಪ್ರವಾಗಿ ಕ್ರಮ ಕೈಗೊಂಡು ಭಾರತ ಬಂದ್ ಕಾಲದಲ್ಲಿ ದಾಖಲಿಸಲಾದ ಮುಗ್ಧರ ಮೇಲಿನ ಪ್ರಕರಣಗಳನ್ನು ಹಿಂತೆಗೆದುಕೊಳ್ಳದೇ ಇದ್ದಲ್ಲಿ ಬಿಎಸ್ಪಿಯು ಕಾಂಗ್ರೆಸ್ ಸರ್ಕಾರಗಳಿಗೆ ನೀಡಿದ ಬಾಹ್ಯ ಬೆಂಬಲವನ್ನು ಮರುಪರಿಶೀಲಿಸಬೇಕಾಗಬಹುದು ಎಂದು ಮಾಯಾವತಿ ತಮ್ಮ ಕಟು ಪದಗಳ ಪತ್ರಿಕಾ ಹೇಳಿಕೆಯಲ್ಲಿ ವಸ್ತುಶಃ ನೋಟಿಸ್ ನೀಡಿದ್ದರು.ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶ ಹಾಗೂ ರಾಜಸ್ಥಾನ ಸೇರಿದಂತೆ ಬಿಜೆಪಿ ಆಡಳಿತ ನಡೆಸುತ್ತಿದ್ದ ರಾಜ್ಯಗಳಲ್ಲಿ ರಾಜಕೀಯ ಮತ್ತು ಜಾತಿ ಪರಿಗಣನೆಗಳನ್ನು ಮಾಡಿ ಮುಗ್ಧರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಈಗ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಆಡಳಿತವಿದೆ. ಹೊಸ ಸರ್ಕಾರಗಳು ತತ್ ಕ್ಷಣವೇ ಇಂತಹ ಪ್ರಕರಣಗಳನ್ನು ಹಿಂತೆಗೆದುಕೊಳ್ಳಬೇಕು. ವಿಫಲವಾದಲ್ಲಿ ಪಕ್ಷವು ಬಾಹ್ಯ ಬೆಂಬಲ ನೀಡಿಕೆಯ ನಿರ್ಧಾರವನ್ನು ಮರುಪರಿಶೀಲಿಸಬೇಕಾಗಿ ಬರಬಹುದು ಎಂದು ಮಾಯಾವತಿ ಎಚ್ಚರಿಸಿದ್ದರು.ಮಧ್ಯಪ್ರದೇಶ ಸರ್ಕಾರವು ಪ್ರಕರಣಗಳನ್ನು ಕಾನೂನು ಇಲಾಖೆಗೆ ಕಳುಹಿಸುವ ನಿರೀಕ್ಷೆಯಿದ್ದು, ಕಾನೂನು ಇಲಾಖೆಯು ಅವುಗಳನ್ನು ನ್ಯಾಯಾಲಯಗಳಿಗೆ ಕಳುಹಿಸುವುದು. ಪ್ರಕರಣಗಳನ್ನು ಹಿಂತೆಗೆದುಕೊಳ್ಳಬೇಕೆ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧರಿಸುವ ಅಂತಿಮ ಅಧಿಕಾರ ನ್ಯಾಯಾಲಯಗಳದ್ದು.೨೦೧೯ರ ಲೋಕಸಭಾ ಚುನಾವಣೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು, ಬಿಎಸ್ಪಿ ಮುಖ್ಯಸ್ಥೆಯ ಒತ್ತಡಕ್ಕೆ ಮಣಿಯಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯ ಪಟ್ಟರು. ಮಾಯಾವತಿ ಅವರು ಹಿಂದೆ ಛತ್ತೀಸ್ಗಢ ವಿಧಾನಸಭಾ ಚುನಾವಣೆಗಳ ವೇಳೆಯಲ್ಲಿ ಅಜಿತ್ ಜೋಗಿ ಅವರ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಮುಖಭಂಗ ಮಾಡಿದ್ದರು. ಸಮಾಜವಾದಿ ಪಕ್ಷ ಮತ್ತು ಬಿಎಸ್ಪಿ ೨೦೧೯ರ ಲೋಕಸಭಾ ಚುನಾವಣೆಗಾಗಿ ಮೈತ್ರಿಸೂತ್ರ ರಚಿಸಿವೆ ಎಂಬ ವರದಿಗಳು ಕೂಡಾ ಇದ್ದು, ಮಹಾಘಟಬಂಧನಕ್ಕೆ ಕಾಂಗ್ರೆಸ್ ಪಕ್ಷವನ್ನು ಸೇರಿಸಿಕೊಳ್ಳದೇ ಇರಲು ತೀರ್ಮಾನಿಸಿವೆ ಎಂದೂ ಹೇಳಲಾಯಿತು. ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಮುಂಬರುವ ಚುನಾವಣೆಯಲ್ಲಿ ಮಾಯಾವತಿ ಸಹಕಾರದ ಖಾತ್ರಿಗಾಗಿ ಆಕೆಯ ಕಡೆಗೆ ಸ್ನೇಹಹಸ್ತ ಚಾಚಿದೆ ಎಂದೂ ಹೇಳಲಾಯಿತು. ಏನಿದ್ದರೂ, ಬಿಜೆಪಿಯು ಕಮಲನಾಥ್ ಸರ್ಕಾರದ ನಿರ್ಧಾರದ ಬಗ್ಗೆ ಅತೃಪ್ತಿ ಹೊರಹಾಕಿದೆ. ಇಂತಹ ಹೀನ ಅಪರಾಧ ಪ್ರಕರಣಗಳನ್ನು, ಸಂಪೂರ್ಣ ರಾಜಕೀಯ ಕಾರಣಗಳಿಗಾಗಿ ಹಿಂತೆಗೆದುಕೊಳ್ಳುವುದು ನಾಚಿಕೆಗೇಡು ಎಂದು ಬಿಜೆಪಿ ಟೀಕಿಸಿದೆ.

೨೦೧೯: ಮುಂಬೈ: ಬಾಲಿವುಡ್ಡಿನ ಹಿರಿಯ ನಟ, ಚಿತ್ರಕಥೆಗಾರ ಖಾದಿರ್ಖಾನ್ ಅವರು ಮಂಗಳವಾರ ನಸುಕಿನಲ್ಲಿ ಕೆನಡಾದಲ್ಲಿ ನಿಧನರಾದರು. ಕೆನಡಾ ಕಾಲಮಾನದ ಪ್ರಕಾರ ಹಿಂದಿನ ಸಂಜೆ ಅವರು ನಿಧರಾಗಿದ್ದಾರೆ ಎಂದು ಅವರ ಪುತ್ರ ಸರ್ಫಾರಜ್ ಅವರು ಈದಿನ ಬೆಳಗ್ಗೆ ದೃಢ ಪಡಿಸಿದರು. ಇದಕ್ಕೆ ಮುನ್ನ ಡಿಸೆಂಬರ್ ೩೧ರಂದು ಸರ್ಫಾರಜ್ ಅವರು ತಮ್ಮ ತಂದೆಯ ನಿಧನದ ವರದಿಗಳನ್ನು ಅಲ್ಲಗಳೆದಿದ್ದರು. ಖಾದಿರ್ ಖಾನ್ ಅವರ ಆರೋಗ್ಯ ಸ್ಥಿತಿ ಬಿಗಡಾಯಿಸಿದ ಪರಿಣಾಮವಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.ಖಾದಿರ್ ಖಾನ್ಅವರು ಮುಜ್ಸೆ ಶಾದಿ ಕರೋಗಿ, ಅಖಿಯೋಂಸೆ ಗೋಲಿ ಮಾರೇ, ಜೋರು ಕಾ ಗುಲಾಂ, ಹಸೀನಾ ಮಾನಜಾಯೇಗಿ, ಆಂಟಿ ನಂ. ಮತ್ತು ಜುದ್ವಾ ಇತ್ಯಾದಿ ಜನಪ್ರಿಯ ಹಿಂದಿ ಚಿತ್ರಗಳಲ್ಲಿ ನಟಿಸಿದ್ದರು.೧೯೩೭ ಅಕ್ಟೋಬರ್ ೨೨ರಂದು ಕಾಬೂಲಿನಲ್ಲಿ ಜನಿಸಿದ್ದ ಖಾದಿರ್ ಖಾನ್ ೧೯೭೩ರಲ್ಲಿ ರಾಜೇಶ್ ಖನ್ನಾ ಅವರ ಜೊತೆಗೆ ದಾಗ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಬಳಿಕ ಅವರು ೩೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ರಣಧೀರ್ ಕಪೂರ್- ಜಯಾ ಬಚ್ಚನ್ ಅವರ ಜವಾನೀ ದಿವಾನೀ ಚಿತ್ರಕ್ಕೆ ಚೊಚ್ಚಲ ಚಿತ್ರ ಸಂಭಾಷಣೆ ಬರೆದಿದ್ದ ಖಾದಿರ್ ಖಾನ್ ಬಳಿಕ ೨೫೦ಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣೆಗಳನ್ನು  ಬರೆದಿದ್ದರು. ಚಿತ್ರಕಥೆಗಾರನಾಗಿ ಅವರು ಮನಮೋಹನ ದೇಸಾಯಿ ಮತ್ತು ಪ್ರಕಾಶ್ ಮೆಹ್ರಾ ಜೊತೆಗೆ ನಿರಂತರ ಸಹಯೋಗ ನೀಡಿದ್ದರು.ಹಿಮ್ಮತ್ ವಾಲಾ, ಆಜ್ ಕಾ ದೌರ್, ಜುದಾಯಿ ಚಿತ್ರಗಳ ಪಾತ್ರಗಳಿಂದಾಗಿ ಖಾದಿರ್ಖಾನ್ ಜನಪ್ರಿಯತೆ ಉತ್ತುಂಗಕ್ಕೆ ಏರಿತ್ತು.ಖಾನ್ ಅವರು ಹಾಸ್ಯ ಪಾತ್ರಗಳು ವಿಶೇಷವಾಗಿ ಗೋವಿಂದ ಜೊತೆಗಿನ ಚಿತ್ರಗಳ ಹಾಸ್ಯ ಪಾತ್ರಗಳಲ್ಲಿ ಮಿಂಚಿದ್ದರು. ಡೇವಿಡ್ ಧವನ್ ನಿರ್ದೇಶಿಸಿದ ದುಲ್ಹೆ ರಾಜಾ, ಕೂಲಿ ನಂ., ಬಡೇ ಮಿಯಾಂ ಛೋಟೆ ಮಿಯಾಂ, ರಆಜಾ ಬಾಬು, ಸಾಜನ್ ಚಲೇ ಸಸುರಾಲ್, ಆಂಟಿ ನಂ. ಇತ್ಯಾದಿ ಗೋವಿಂದ ನಟನೆಯ ಚಿತ್ರಗಳಲ್ಲಿ ಖಾನ್ ಕೆಲಸ ಮಾಡಿದ್ದರು. ವಾಸ್ತವವಾಗಿ ೭೦, ೮೦ ಮತ್ತು ೯೦ ದಶಕಗಳಲ್ಲಿ ಮುಂಚೂಣಿಯಲ್ಲಿದ್ದ ರಾಜೇಶ್ ಖನ್ನಾ, ಅಮಿತಾಭ್ ಬಚ್ಚನ್, ಜಿತೇಂದ್ರ, ಫಿರೋಜ್ ಖಾನ್, ಅನಿಲ್ ಕಪೂರ್ ಮತ್ತು ಗೋವಿಂದ ಸೇರಿದಂತೆ ಬಹುತೇಕ ಮುಖ್ಯನಟರ ಜೊತೆ ಖಾನ್ ಕೆಲಸ ಮಾಡಿದ್ದರು.೮೧ರ ಹರೆಯದ ಖಾದಿರ್ ಖಾನ್ಅವರು ಕೆನಡಾದಲ್ಲಿ ಸರ್ಫಾರಜ್ ಮತ್ತು ಅವರ ಸೊಸೆ ಶಹಿಷ್ಟಾ ಜೊತೆಗೆ ವಾಸವಾಗಿದ್ದರು.ನಮ್ಮ ತಂದೆಯವರು ಡಿಸೆಂಬರ್ ೩೧ರ ಸೋಮವಾರ ಸಂಜೆ ಗಂಟೆಗೆ (ಕೆನಡಾ ಕಾಲಮಾನ) (ಭಾರತೀಯ ಕಾಲಮಾನ ಮಂಗಳವಾರ ನಸುಕಿನ .೩೦ ಗಂಟೆ) ದೀರ್ಘಕಾಲದ ಅಸ್ವಸ್ಥತೆ ಬಳಿಕ ನಮ್ಮನ್ನು ಅಗಲಿದ್ದಾರೆ. ಅವರು ಮಧ್ಯಾಹ್ನ ಕೋಮಾಕ್ಕೆ ಜಾರಿದ್ದರು. ಕಳೆದ ೧೬-೧೭ ವಾರಗಳಿಂದ ಅವರು ಆಸ್ಪತ್ರೆಯಲ್ಲಿದ್ದರು ಎಂದು ಸರ್ಫಾರಜ್ ಹೇಳಿದರು. ಕೆನಡಾದಲ್ಲಿಯೇ ಅಂತ್ಯವಿಧಿಗಳನ್ನು ನೆರವೇರಿಸಲಾಗುವುದು. ನಮ್ಮ ಪೂರ್ತಿಕುಟುಂಬ ಇಲ್ಲಿಯೇ ಇದೆ. ಆದ್ದರಿಂದ ಅಂತ್ಯವಿಧಿಗಳನ್ನು ಇಲ್ಲೇ ನೆರವೇರಿಸಲಾಗುವುದು, ನಮ್ಮ ತಂದೆಯವರಿಗೆ ಆರೋಗ್ಯ ಹಾರೈಸಿದ ಮತ್ತು ಅವರಿಗಾಗಿ ಪ್ರಾರ್ಥನೆ ಸಲ್ಲಿಸಿದ ಎಲ್ಲರಿಗೂ ನಾವು ಆಭಾರಿಗಳಾಗಿದ್ದೇವೆ ಎಂದೂ ಸರ್ಫಾರಜ್ ಹೇಳಿದರು.ಚಿತ್ರ ನಟ ಅಮಿತಾಭ್ ಬಚ್ಚನ್, ಮನೋಜ್ ಬಾಜಪೇಯಿ ಸೇರಿದಂತೆ ಬಾಲಿವುಡ್ ಚಿತ್ರರಂಗದ ಪ್ರಮುಖರು ಖಾದಿರ್ ಖಾನ್ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿದರು.

೨೦೧೯: ಅಮರಾವತಿ (ಆಂಧ್ರಪ್ರದೇಶ): ರಾಜ್ಯ ವಿಭಜನೆಯಾದ ನಾಲ್ಕು ವರ್ಷಗಳ ಬಳಿಕ ಆಂಧ್ರಪ್ರದೇಶದ ಹೈಕೋರ್ಟ್ ಅಸ್ತಿತ್ವಕ್ಕೆ ಬಂದಿತು. ಮೂಲಕ ತೆಲಂಗಾಣದಿಂದ ಬೇರ್ಪಟ್ಟು ನಾಲ್ಕು ವರ್ಷಗಳ ಬಳಿಕ ಆಂಧ್ರಪ್ರದೇಶ ಪ್ರತ್ಯೇಕ ಹೈಕೋರ್ಟ್ ಹೊಂದಿದಂತಾಯಿತು. ವಿಜಯವಾಡಕ್ಕೆ ಸಮೀಪ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ಪ್ರಭಾರ ಮುಖ್ಯ ನ್ಯಾಯಾಧೀಶ ಸಿ.ಪ್ರವೀಣ್ ಕುಮಾರ್ ಮತ್ತು ಇತರ ೧೩ ನ್ಯಾಯಾಧೀ ಶರು ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ .ಎಸ್.ಎಲ್ ನರಸಿಂಹನ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಕಳೆದ ವಾರವಷ್ಟೇ ಆಂಧ್ರಪ್ರದೇಶಕ್ಕೆ ಪ್ರತ್ಯೇಕ ಹೈಕೋರ್ಟ್ಗೆ ಆದೇಶಿಸಿದ್ದರು. ಈವರೆಗೂ ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಗೆ ಹೈದರಾಬಾದಿನಲ್ಲಿನ ಹೈಕೋರ್ಟ್ ಕಾರ್ಯನಿರ್ವಹಿಸುತ್ತಿತ್ತು. ಇದೀಗ ಹೈದರಾಬಾದ್ ಹೈಕೋರ್ಟ್ ತೆಲಂಗಾಣಕ್ಕೆ ಸೀಮಿತವಾಗಿದ್ದು, ಆಂಧ್ರಪ್ರದೇಶ ನೂತನ ಹೈಕೋರ್ಟ್ ಹೊಂದಿತು. ಕುರಿತು ಮಾತ ನಾಡಿದ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು, ಇದೊಂದು ಐತಿಹಾಸಿಕ ದಿನ ಎಂದು ಹೇಳಿದರು.ಆಂಧ್ರಪ್ರದೇಶ ಹೈಕೋರ್ಟಿಗೆ ಇಂದು ನಿರ್ಮಾಣವಾಗುತ್ತಿರುವ ತಾತ್ಕಾಲಿಕ ಕಟ್ಟಡವು ಈಗಿನ್ನೂ ಸಿದ್ಧವಾಗಿಲ್ಲದಿರುವು ದರಿಂದ ರಾಜ್ಯ ಸರಕಾರ, ವಿಜಯವಾಡ ದಲ್ಲಿನ ಮುಖ್ಯಮಂತ್ರಿಗಳ ಕ್ಯಾಂಪ್ ಕಾರ್ಯಾಲಯವನ್ನು ತಾತ್ಕಾಲಿಕ ಹೈಕೋರ್ಟ್ ಆಗಿ ಪರಿವರ್ತಿಸಿದೆ.ಸುಪ್ರೀಂ ಕೋರ್ಟ್ ನ್ಯಾಯಾಧೀಶ ಜಸ್ಟಿಸ್ ಎನ್.ವಿ. ರಮಣ ಅವರು, ಮುಖ್ಯ ಮಂತ್ರಿ ನಾಯ್ಡು ಮತ್ತು ಇತರ ಗಣ್ಯರ ಉಪಸ್ಥಿತಿಯಲ್ಲಿ ತಾತ್ಕಾಲಿಕ ಹೈಕೋರ್ಟ್ ಆವರಣವನ್ನು ಉದ್ಘಾಟಿಸಿದರು. ತಾತ್ಕಾ ಲಿಕ ಹೈಕೋರ್ಟ್ ಕಟ್ಟಡ ಜನವರಿ ಅಂತ್ಯ ದೊಳಗೆ ಸಿದ್ಧವಾಗುವ ನಿರೀಕ್ಷೆ ಇದೆ. ಆದರೆ ನಿಜವಾದ ಹೈಕೋರ್ಟ್ ಸಂಕೀರ್ಣ ಮೂರು ವರ್ಷಗಳ ಒಳಗೆ ನಿರ್ಮಾಣ ಗೊಳ್ಳಲಿದೆ.

2018: ಇಸ್ಲಾಮಾಬಾದ್:  ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರ ಹಫೀಜ್ ಸಯೀದ್ ನೇತೃತ್ವದ
ಜಮಾತ್ –ಉದ್ –ದವಾ (ಜೆಯುಡಿ) ಮತ್ತು ಲಷ್ಕರ್-ಇ-ತೊಯಿಬಾ (ಎಲ್ ಇಟಿ), ಫಲಾಹ್ –ಇ-ಇನ್ಸಾನಿಯತ್ ಫೌಂಡೇಶನ್ (ಎಫ್ಐಎಫ್) ಸೇರಿದಂತೆ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿಷೇಧಿತ ಸಂಘಟನೆಗಳ ಪಟ್ಟಿಯಲ್ಲಿರುವ ವಿವಿಧ ಸಂಘಟನೆಗಳನ್ನು ದೇಣಿಗೆ ಸಂಗ್ರಹಿಸದಂತೆ ಪಾಕಿಸ್ತಾನ ನಿಷೇಧಿಸಿತು. ಪಾಕಿಸ್ತಾನದ ಭದ್ರತೆಗಳು ಮತ್ತು ವಿನಿಮಯ ಆಯೋಗವು (ಸೆಕ್ಯುರಿಟೀಸ್ ಅಂಡ್ ಎಕ್ಸ್ಚೇಂಜ್ ಕಮೀಷನ್ – ಎಸ್ ಇಸಿಪಿ)  2017ರ ಡಿಸೆಂಬರ್ 19ರಂದು ಈ ನಿರ್ಧಾರ ಕೈಗೊಂಡಿದೆ ಎಂದು ಸುದ್ದಿಮೂಲಗಳು ತಿಳಿಸಿದವು. ಇದನ್ನು ಪಾಲಿಸದೇ ಇದ್ದಲ್ಲಿ ಭಾರೀ ದಂಡ ತೆರಬೇಕಾಗುತ್ತದೆ ಎಂದು ಎಸ್ ಸಿಇಪಿ ಎಚ್ಚರಿಕೆ ನೀಡಿದೆ ಎಂದು ಮೂಲಗಳು ಹೇಳಿದವು.  ವಿಶ್ವಸಂಸ್ಥೆ ಭದ್ರತಾ ಮಂಡಳಿ ದಿಗ್ಬಂಧನ ಸಮಿತಿಯು ತಯಾರಿಸಿರುವ ಪಟ್ಟಿಯಲ್ಲಿರುವ ಸಂಘಟನೆಗಳು/ ವ್ಯಕ್ತಿಗಳಿಗೆ ದೇಣಿಗೆ ನೀಡದಂತೆ ಎಲ್ಲ ಕಂಪೆನಿಗಳನ್ನೂ ಎಸ್ಇಸಿಪಿ ನಿಷೇಧಿಸಿದೆ ಎಂದು ಅಧಿಸೂಚನೆ ಹೇಳಿದೆ. ಜೆಯುಡಿ, ಎಲ್ ಇಟಿ, ಎಫ್ಐಎಫ್ ಅಲ್ಲದೆ ಪಾಸ್ಬನ್ –ಐ-ಎಹೊಲೆ, -ಹದಿತ್ ಮತ್ತು ಪಾಸ್ಬನ್-ಐ-ಕಾಶ್ಮೀರ್ ಕೂಡಾ ಈ ನಿಷೇಧಿತ ಪಟ್ಟಿಯಲ್ಲಿವೆ. ಹೆಚ್ಚು ಪರಿಚಿತವಲ್ಲದ ಇತರ ಹಲವು ಸಂಘಟನೆಗಳೂ ಈ ಪಟ್ಟಿಯಲ್ಲಿವೆ. 10 ದಶಲಕ್ಷ ರೂಪಾಯಿಗಳವರೆಗಿನ ದಂಡ ವಿಧಿಸಲಾದೀತು ಎಂದು ಅಧಿಸೂಚನೆ ಎಚ್ಚರಿಕೆ ನೀಡಿದೆ ಎಂದು ವರದಿ ಹೇಳಿತು.  ಇದಕ್ಕೂ ಮುನ್ನ ೨೦೦೮ರ ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರ ಹಫೀಜ್ ಸಯೀದ್ಗೆ ಸೇರಿದ ಸಂಘ-ಸಂಸ್ಥೆಗಳು, ಆಸ್ತಿ ಮತ್ತು ಹಣಕಾಸಿನ ಮೂಲಗಳನ್ನು ತನ್ನ ವಶಕ್ಕೆ ಪಡೆಯಲು ಪಾಕಿಸ್ತಾನ ಸರ್ಕಾರ ಮುಂದಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿತ್ತು. ಹಫೀಜ್ ಸಯೀದ್ ಸಂಘಟನೆಗಳನ್ನು ಅಮೆರಿಕವು ಭಯೋತ್ಪಾದಕ ಸಂಘಟನೆಗಳು ಎಂಬುದಾಗಿ ಘೋಷಿಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನ ಸರ್ಕಾರ ಕ್ರಮಕ್ಕೆ ಮುಂದಾಗಿದೆ. ಸಂಬಂಧ ಈಗಾಗಲೇ ಉನ್ನತಮಟ್ಟದ ಸಭೆಗಳು ನಡೆದಿವೆ ಎಂದು ವರದಿ ಹೇಳಿತು. ಡಿಸೆಂಬರ್ ೧೯ರಂದು ವಿವಿಧ ಪ್ರಾಂತೀಯ ಸರ್ಕಾರಗಳು ಮತ್ತು ಫೆಡರಲ್ ಇಲಾಖೆಗಳಿಗೆ ಕಳುಹಿಸಿರುವ ರಹಸ್ಯ ಆದೇಶದಲ್ಲಿ ಪಾಕ್ ಸರ್ಕಾರವು ಸಯೀದ್ ಸಂಘಟನೆಗಳ ಆಸ್ತಿ ವಶಕ್ಕೆ ಸಂಬಂಧಿಸಿದ ಯೋಜನೆಗಳ ವಿವರಗಳನ್ನು ನೀಡಿದೆ ಎಂದು ಮೂವರು ಅಧಿಕಾರಿಗಳು ಸುದ್ದಿ ಸಂಸ್ಥೆಗೆ ತಿಳಿಸಿದರು. ಅಧಿಕಾರಿಗಳು ಸಂಬಂಧ ನಡೆದ ಉನ್ನತ ಮಟ್ಟದ ಹಲವಾರು ಸಭೆಗಳ ಪೈಕಿ ಒಂದು ಸಭೆಯಲ್ಲಿ ಪಾಲ್ಗೊಂಡಿದ್ದರು.  ರಹಸ್ಯ ಎಂಬುದಾಗಿ ನಮೂದಿಸಿದ ಡಿಸೆಂಬರ್ ೧೯ರ ದಾಖಲೆಯಲ್ಲಿ ಹಣಕಾಸು ಸಚಿವಾಲಯವು ಪಾಕಿಸ್ತಾನದ ಐದು ಪ್ರಾಂತೀಯ ಸರ್ಕಾರಗಳಿಗೆ ಡಿಸೆಂಬರ್ ೨೮ರ ವೇಳೆಗೆ ಸಯೀದನ ಜಮಾತ್ -ಉದ್ -ದವಾ ಮತ್ತು ಫಲಾಹ್--ಇನ್ ಸಾನಿಯತ್ ಫೌಂಡೇಶನ್ ಗಳನ್ನು ವಶಕ್ಕೆ ತೆಗೆದುಕೊಳ್ಳುವ ಕಾರ್ಯ ಯೋಜನೆಯ ವಿವರಗಳನ್ನು ನಮೂದಿಸಿತ್ತು. ಹಫೀಜ್ ಸಯೀದ್ಗೆ ಸೇರಿದ ಜಮಾತ್ ಉದ್ ದವಾ (ಜೆಯುಡಿ) ಮತ್ತು  ಫಲಾಹ್--ಇನ್ಸಾನಿಯತ್ ಸಂಘಟನೆಗಳು ಲಷ್ಕರ್--ತೊಯಿಬಾ (ಎಲ್ಇಟಿ) ಉಗ್ರ ಸಂಘಟನೆಯೊಂದಿಗೆ ನೇರ ಸಂಬಂಧ ಹೊಂದಿರುವ ಸಂಘಟನೆಗಳು ಎಂದು ಎಂದು ಅಮೆರಿಕ ಹೇಳಿತ್ತು. ೨೦೦೮ ಮುಂಬೈ ಭಯೋತ್ಪಾದಕ ದಾಳಿಗೆ ೧೬೬ ಮಂದಿ ಬಲಿಯಾಗಿದ್ದರು. ಕೃತ್ಯದ ಸಂಚು ರೂಪಿಸಿದ್ದ ಆರೋಪ ಹಫೀಜ್ ಸಯೀದ್ ಮೇಲಿದೆ. ಆದರೆ, ಹಫೀಜ್ ಆರೋಪವನ್ನು ನಿರಾಕರಿಸುತ್ತಲೇ ಬಂದಿದ್ದ. ಏನಿದ್ದರೂ ಪಾಕಿಸ್ತಾನದಲ್ಲಿ ಸಂಘಟನೆಗಳು ದತ್ತಿ ಸಂಸ್ಥೆಗಳ  ‘ವೇಷ ಧರಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿವೆ. ತನ್ನ ನೆಲದಲ್ಲಿ ಕಾರ್ಯಾಚರಿಸುತ್ತಿರುವ ಭಯೋತ್ಪಾದಕ ಸಂಘಟನೆಗಳ ವಿರುದ್ಧ ಪಾಕಿಸ್ತಾನ ನಿಷ್ಕ್ರಿಯವಾಗಿದೆ ಎಂದು ಡೊನಾಲ್ಡ್ ಟ್ರಂಪ್ ಆಡಳಿತ ಬಹಿರಂಗವಾಗಿ ಆಕ್ಷೇಪಿಸಿತ್ತು.  ಭಯೋತ್ಪಾದನೆ ಕುರಿತ ಪಾಕಿಸ್ತಾನದ ನಿಷ್ಕ್ರಿಯತೆಯ ಬಗೆಗಿನ ತನ್ನ ಅಸಮಾಧಾನದ ಪ್ರತಿಫಲನವಾಗಿ ರಾಷ್ಟ್ರಕ್ಕೆ ನೀಡಬೇಕಾದ ೨೫೫ ದಶಲಕ್ಷ ಡಾಲರ್ ನೆರವನ್ನು ತಡೆ ಹಿಡಿಯಲು ಅಮೆರಿಕ ಯೋಜಿಸುತ್ತಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಡಿಸೆಂಬರ್ ೩೦ರಂದು ವರದಿ ಮಾಡಿತ್ತು. ಹಣಕಾಸು ನೆರವಿನ ವಿಚಾರದಲ್ಲಿ ಏನು ಮಾಡಬೇಕು ಎಂಬ ಬಗ್ಗೆ ನಿರ್ಧರಿಸಲು ಟ್ರಂಪ್ ಆಡಳಿತದ ಹಿರಿಯ ಅಧಿಕಾರಿಗಳು ತಿಂಗಳು ಸಭೆ ಸೇರಿದ್ದರು. ವಿಚಾರದಲ್ಲಿ ಮುಂದಿನ ಕೆಲ ವಾರಗಳಲ್ಲಿ ಅಮೆರಿಕದ ಅಧಿಕಾರಿಗಳು ಅಂತಿಮ ನಿರ್ಧಾರ ಕೈಗೊಳ್ಳುವರು ಎಂದು ಪತ್ರಿಕೆ ಹೇಳಿತ್ತು. ದಾಳಿಗಳಲ್ಲಿ ತಾನು ಶಾಮೀಲಾಗಿರುವ ಆರೋಪಗಳನ್ನು ಸಯೀದ್ ನಿರಾಕರಿಸಿದ್ದು, ಅತನನ್ನು ಶಿಕ್ಷೆಗೆ ಗುರಿಪಡಿಸಲು ಸಾಕಷ್ಟು ಸಾಕ್ಷ್ಯಾಧಾರಗಳು ಇಲ್ಲ ಎಂದು ಪಾಕಿಸ್ತಾನಿ ನ್ಯಾಯಾಲಯ ಹೇಳಿತ್ತು. ಹೀಗಾಗಿ ಸಯೀದ್ ಪಾಕಿಸ್ತಾನದಲ್ಲಿ ಮುಕ್ತವಾಗಿ ಅಡ್ಡಾಡುತ್ತಿದ್ದಾನೆ ಎಂದು ವರದಿ ಹೇಳಿತು. ಯೋಜನೆ ಪ್ರಕಾರ ಪಾಕಿಸ್ತಾನ ಸಯೀದ್ ಸಂಘಟನೆಗಳ ವಿರುದ್ಧ ಕ್ರಮ ಕೈಗೊಂಡಲ್ಲಿ ಸಯೀದ್ ಜಾಲದ ವಿರುದ್ಧ ಪಾಕಿಸ್ತಾನ ಕೈಗೊಳ್ಳುವ ಮೊತ್ತ ಮೊದಲ ಪ್ರಮುಖ ಕ್ರಮ ಇದಾಗಲಿದೆ. ಜೆಯುಡಿ ಮತ್ತು ಎಫ್ ಎಫ್ ಸುಮಾರು ೫೦,೦೦೦ ಸ್ವಯಂಸೇವಕರನ್ನು ಹೊಂದಿದ್ದು, ನೂರಾರು ಮಂದಿ ವೇತನ ಪಡೆಯುವ ಇತರ ಕೆಲಸಗಾರರನ್ನೂ ಹೊಂದಿದೆ ಎಂದು ಭಯೋತ್ಪಾದನೆ ನಿಗ್ರಹ ಅಧಿಕಾರಿಗಳು ಹೇಳಿದರು. ಈ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರ ವಿಫಲವಾದರೆ ಅದು ವಿಶ್ವಸಂಸ್ಥೆಯಿಂದ ದಿಗ್ಬಂಧನ ಎದುರಿಸಬೇಕಾಗಬಹುದು ಎಂದು ಸಭೆಯಲ್ಲಿ ಚರ್ಚೆಯಾಯಿತು ಎಂದು ಅಧಿಕಾರಿಗಳು ತಿಳಿಸಿದರು. ವಿಶ್ವಸಂಸ್ಥೆಯು ಭಯೋತ್ಪಾದಕ ಸಂಘಟನೆಗಳು ಎಂಬುದಾಗಿ ಘೋಷಿಸಿರುವ ಸಂಘಟನೆಗಳ ವಿರುದ್ಧ ಕ್ರಮಗಳ ಪ್ರಗತಿ ಪರಿಶೀಲನೆಗಾಗಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ತಂಡವೊಂದು ಜನವರಿ ಕೊನೆಯ ವೇಳೆಗೆ ಪಾಕಿಸ್ತಾನಕ್ಕೆ ಭೇಟಿ ನೀಡಲಿದೆ. ತಂಡವು ಯಾವುದೇ ಪ್ರತಿಕೂಲ ವರದಿ ನೀಡಿದರೆ ಅಥವಾ ಕ್ರಮಕ್ಕೆ ಸಲಹೆ ಮಾಡಿದರೆ ಅದು ಪಾಕಿಸ್ತಾನದ ಮೇಲೆ ದೂರಗಾಮೀ ಪರಿಣಾಮಗಳನ್ನು ಬೀರಲಿದೆ ಎಂದು ಅಧಿಕಾರಿಗಳು ಹೇಳಿದರು.

2018: ವಾಷಿಂಗ್ಟನ್: ದಕ್ಷಿಣ ಏಷ್ಯಾದ ರಾಷ್ಟ್ರ ಪಾಕಿಸ್ತಾನ ಅಮೆರಿಕಕ್ಕೆ ಸುಳ್ಳುಗಳು ಮತ್ತು ವಂಚನೆಯ ಹೊರತಾಗಿ ಬೇರೇನನ್ನೂ ನೀಡಿಲ್ಲ. ಇದೇ ವೇಳೆಗೆ ಭಯೋತ್ಪಾದಕರಿಗೆ ಸುರಕ್ಷಿತ ಸ್ವರ್ಗವನ್ನು ನೀಡಿದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಟುವಾಗಿ ಪಾಕಿಸ್ತಾನವನ್ನು ತರಾಟೆಗೆ ತೆಗೆದುಕೊಂಡರು. ‘ಅಮೆರಿಕವು ಮೂರ್ಖತನದಿಂದ ಪಾಕಿಸ್ತಾನಕ್ಕೆ ೩೩ ಶತಕೋಟಿ (ಬಿಲಿಯನ್) ಡಾಲರುಗಳನ್ನು ಕಳೆದ ೧೫ ವರ್ಷಗಳಲ್ಲಿ ನೆರವಿನ ರೂಪದಲ್ಲಿ ನೀಡಿದೆ, ಇದಕ್ಕೆ ಪ್ರತಿಯಾಗಿ ಅವರು ನಮಗೆ ಸುಳ್ಳುಗಳು ಮತ್ತು ವಂಚನೆ ಬಿಟ್ಟು ಬೇರೇನನ್ನೂ ಕೊಟ್ಟಿಲ್ಲ, ನಮ್ಮ ನಾಯಕರನ್ನು ಅವರು ಮೂರ್ಖರೆಂದು ಭಾವಿಸಿದ್ದಾರೆ ಎಂದು ಟ್ರಂಪ್ ಕಟುಪದಗಳ ಟ್ವೀಟ್ ಮಾಡಿದರು.  ‘ನಾವು ಆಫ್ಘಾನಿಸ್ಥಾನದಲ್ಲಿ ಬೇಟೆಯಾಡುತ್ತಿರುವ ಭಯೋತ್ಪಾದಕರಿಗೆ ಅವರು ಸುರಕ್ಷಿತ ಸ್ವರ್ಗ ಒದಗಿಸಿದ್ದಾರೆ. ಭಯೋತ್ಪಾದಕರ ನಿಗ್ರಹಕ್ಕೆ ನಮಗೆ ಅತ್ಯಂತ ಕಡಿಮೆ ನೆರವು ನೀಡಿದ್ದಾರೆ. ಇದರ ಹೊರತಾಗಿ ಹೆಚ್ಚಿನದೇನನ್ನೂ ಅವರು ನಮಗೆ ನೀಡಿಲ್ಲ ಎಂದು ಹೊಸ ವರ್ಷದ ತಮ್ಮ ಮೊದಲ ಟ್ವಿಟ್ನಲ್ಲಿ ಟ್ರಂಪ್ ಬರೆದರು. ಪಾಕ್ ಸಂಪುಟ ಚರ್ಚೆ: ಮಧ್ಯೆ ಟ್ರಂಪ್ ಅವರ ಹೇಳಿಕೆ ಬಗ್ಗೆ ಚರ್ಚಿಸಲು 02 ಜನವರಿ 2018ರ ಮಂಗಳವಾರ ಸಚಿವ ಸಂಪುಟದ ವಿಶೇಷ ಸಭೆಯನ್ನು ಪಾಕಿಸ್ತಾನಿ ಪ್ರಧಾನಿ ಶಾಹಿದ್ ಖಾನ್ ಅಬ್ಬಾಸಿ ಕರೆದರು. ಟ್ರಂಪ್ ಆರೋಪಗಳಿಗೆ ರಾಷ್ಟ್ರವು ಶೀಘ್ರದಲ್ಲೇ ಅಧಿಕೃತವಾಗಿಯೇ ಪ್ರತಿಕ್ರಿಯಿಸುವುದು ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಖ್ವಾಜಾ ಎಂ ಅಸಿಫ್ ಹೇಳಿದರು. ‘ಅಧ್ಯಕ್ಷ ಟ್ರಂಪ್ ಅವರ ಟ್ವೀಟ್ಗೆ ಶೀಘ್ರದಲ್ಲೇ ನಾವು ಪ್ರತಿಕ್ರಿಯಿಸುತ್ತೇವೆ. ಜಗತ್ತಿಗೆ ವಾಸ್ತವ ಮತ್ತು ಕಟ್ಟುಕತೆಗಳ ನಡುವಣ ವ್ಯತ್ಯಾಸದ ಸತ್ಯ ಗೊತ್ತಾಗಲಿ ಎಂದು ಅಸಿಫ್ ಟ್ವೀಟ್ ಮಾಡಿದರು. ಭಯೋತ್ಪಾದನೆ ವಿರುದ್ಧದ ತನ್ನ ಹೋರಾಟದಲ್ಲಿ ಅಮೆರಿಕದ ಜೊತೆಗೆ ಸಹಕರಿಸದೇ ಇದ್ದಲ್ಲಿ ಪಾಕಿಸ್ತಾನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಡೊನಾಲ್ಡ್ ಟ್ರಂಪ್ ಅವರು ಆಗಸ್ಟ್ ತಿಂಗಳಲ್ಲಿ ಅನಾವರಣಗೊಳಿಸಿದ್ದ ತಮ್ಮ ದಕ್ಷಿಣ ಏಷ್ಯಾ ನೀತಿಯಲ್ಲಿ ಕರೆ ನೀಡಿದ್ದರು.

2018: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಡಿಸೆಂಬರ್ 31 ಭಾನುವಾರ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್) ಶಿಬಿರದ ಮೇಲೆ ದಾಳಿ ನಡೆಸಿದ್ದ ಉಗ್ರಗಾಮಿಗಳ ವಿರುದ್ಧ ಭಾರತೀಯ ಪಡೆಗಳು ಕೈಗೊಂಡ ಪ್ರತಿ ಕಾರ್ಯಾಚರಣೆ ಮೂರನೇ ಉಗ್ರಗಾಮಿಯ ಶವ ಪತ್ತೆಯೊಂದಿಗೆ ಅಂತ್ಯಗೊಂಡಿತು.  ‘ಅಂತಿಮವಾಗಿ ಮೂರನೇ ಭಯೋತ್ಪಾದಕನ ಶವ ಪತ್ತೆಯೊಂದಿಗೆ ಕಾರ್ಯಾಚರಣೆ ಸಮಾಪ್ತಿಗೊಂಡಿದೆ ಎಂದು ಪೊಲೀಸ್ ಮಹಾ ನಿರ್ದೇಶಕ ಎಸ್.ಪಿ. ವೈದ್ ಹೇಳಿದರು.  ಇನ್ನಿಬ್ಬರು ಭಯೋತ್ಪಾದಕರ ಶವಗಳು ಡಿಸೆಂಬರ್ ೩೧ರ ಭಾನುವಾರ ಪತ್ತೆಯಾಗಿದ್ದವು.  ಭಾನುವಾರ ನಸುಕಿನಲ್ಲಿ ನಡೆದ ಉಗ್ರಗಾಮಿಗಳ ದಾಳಿಯಲ್ಲಿ ಐವರು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿ ಇತರ ಮೂವರು ಗಾಯಗೊಂಡಿದ್ದರು. ಪುಲ್ವಾಮ ಜಿಲ್ಲೆಯ ಲೆತ್ಫೋರದಲ್ಲಿ ಅರೆಸೇನಾ ಪಡೆ ಶಿಬಿರದ ಮೇಲೆ ಭಾರಿ ಶಸ್ತ್ರಾಸ್ತ್ರಗಳೊಂದಿಗೆ ಭಯೋತ್ಪಾದಕರು ದಾಳಿ ನಡೆಸಿದ್ದರು. ದಾಳಿಯ ಹೊಣೆಗಾರಿಕೆಯನ್ನು ಪಾಕಿಸ್ತಾನ ಮೂಲದ ಜೈಶ್--ಮೊಹಮ್ಮದ್ (ಜೆಇಎಂ) ಹೊತ್ತುಕೊಂಡಿತ್ತು. ಪ್ರತಿ ಕಾರ್ಯಾಚರಣೆಯಲ್ಲಿ ಹತರಾದ ಇಬ್ಬರು ಭಯೋತ್ಪಾದಕರ ಶವಗಳು ಡಿಸೆಂಬರ್ ೩೧ರಂದು ಪತ್ತೆಯಾಗಿದ್ದು ಅವರನ್ನು  ಪುಲ್ವಾಮದ ಡ್ರುಬೋಗಮ್ ಮಂಝೂರ್ ಅಹ್ಮದ್ ಬಾಬಾ ಮತ್ತು ಟ್ರಾಲ್ನ ನಜೀಂಪೋರಾದ ಫರ್ದೀನ್ ಅಹ್ಮದ್ ಖಾಂಡೆ ಎಂಬುದಾಗಿ ಗುರುತಿಸಲಾಗಿತ್ತು. ಇವರ ಪೈಕಿ ಖಾಂಡೆ ಸೇವೆಯಲ್ಲಿರುವ ಪೊಲೀಸ್ ಸಿಬ್ಬಂದಿಯೊಬ್ಬರ ಮಗ.

2018: ನವದೆಹಲಿ: ಭಾರತೀಯ ವೈದ್ಯಕೀಯ ಸಂಘಕ್ಕೆ (ಐಎಂಎ) ಬದಲಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ ಎಂಸಿ) ರಚಿಸಲು ಅವಕಾಶ ಕಲ್ಪಿಸಿರುವ ಕೇಂದ್ರ ಸರ್ಕಾರದ ರಾಷ್ಟ್ರೀಯ ವೈದ್ಯ ಚಿಕಿತ್ಸೆ ವಿಧೇಯಕವನ್ನು ವಿರೋಧಿಸಿ 2018 ಜನವರಿ 2ರ ಮಂಗಳವಾರ ದೇಶಾದ್ಯಂತ ವೈದ್ಯ ಮುಷ್ಕರಕ್ಕೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಕರೆ ನೀಡಿತು. ಕೇಂದ್ರ ಸರ್ಕಾರವು ತರಲು ಉದ್ದೇಶಿಸಿದ ರಾಷ್ಟ್ರೀಯ ವೈದ್ಯ ಚಿಕಿತ್ಸೆ ವಿಧೇಯಕ ವಿರೋಧಿಸಿ ನಾಳೆ ದೇಶಾದ್ಯಂತ ಬೆಳಗ್ಗೆ ೬ರಿಂದ ಸಂಜೆ ೬ರವರೆಗೆ ಖಾಸಗಿ ಆಸ್ಪತ್ರೆಯ ಒಪಿಡಿ ಬಂದ್ ಮಾಡಿ ಪ್ರತಿಭಟನೆ ನಡೆಸಲಾಗುವುದು ಮೂಲಗಳು ತಿಳಿಸಿದವು. ಆಲೋಪತಿ ವೈದ್ಯರಲ್ಲದವರಿಗೂ ಅಲೋಪತಿ ಚಿಕಿತ್ಸೆ ನೀಡಲು ಅವಕಾಶ ಕಲ್ಪಿಸುವ ಕೇಂದ್ರ ಸರ್ಕಾರದ ವಿಧೇಯಕವನ್ನು ತೀವ್ರವಾಗಿ ವಿರೋಧಿಸುವುದಾಗಿ ಐಎಂಎ ಹೇಳಿತು. ತುರ್ತು ಸೇವೆ ಹೊರತುಪಡಿಸಿ, ಒಪಿಡಿ ಸಂಪೂರ್ಣವಾಗಿ ಬಂದ್ ಮಾಡಲಾಗುವುದು ಎಂದು ಹೇಳಿಕೆ ತಿಳಿಸಿತು. ಇದಕ್ಕೆ ಮುನ್ನ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಭಾರತೀಯ ವೈದ್ಯಕೀಯ ಸಂಘಕ್ಕೆ (ಐಎಂಎ) ಬದಲಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್ ಎಂಸಿ) ರಚಿಸಲು ಅವಕಾಶ ಕಲ್ಪಿಸಿರುವ ಕೇಂದ್ರ ಸರ್ಕಾರದ ರಾಷ್ಟ್ರೀಯ ವೈದ್ಯ ಚಿಕಿತ್ಸೆ ವಿಧೇಯಕವು ಹಲವಾರು ಸಮಸ್ಯಾತ್ಮಕ ವಿಧಿಗಳನ್ನು ಹೊಂದಿದೆ ಎಂದು ಹೇಳಿ, ವಿಧೇಯಕವನ್ನು ಸಂಸದೀಯ ಸ್ಥಾಯಿ ಸಮಿತಿಗೆ ಕಳುಹಿಸಬೇಕು ಎಂದು ಹೇಳಿದ್ದರು. ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ ೨೦೧೭, ಪಾರದರ್ಶಕತೆಯನ್ನು ತರುವ ಸಲುವಾಗಿ ಭಾರತೀಯ ವೈದ್ಯಕೀಯ ಸಂಘಕ್ಕೆ ಬದಲಾಗಿ ರಾಷ್ಟ್ರೀಯ ವೈದ್ಯಕೀಯ ಆಯೋಗ ರಚಿಸುವ ಉದ್ದೇಶ ಹೊಂದಿದ್ದು ವಿಧೇಯಕವನ್ನು ಇತ್ತೀಚೆಗೆ ಲೋಕಸಭೆಯಲ್ಲಿ ಮಂಡಿಸಲಾಗಿತ್ತು. ಆಯುರ್ವೇದ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಯುನಾನಿ, ಸಿದ್ಧ ಮತ್ತು ಹೋಮಿಯೋಪತಿ ಚಿಕಿತ್ಸೆ ನೀಡುವವರಿಗೂ ಅಲ್ಪಾವಧಿಯಬ್ರಿಜ್ ಕೋರ್ಸ್ ಪೂರೈಸಿಕೊಂಡರೆ ಆಧುನಿಕ ವೈದ್ಯಕೀಯ ಚಿಕಿತ್ಸೆ ನೀಡಲು ಅವಕಾಶ ನೀಡಲೂ ವಿಧೇಯಕ ಉದ್ದೇಶಿಸಿತ್ತು. ಹೋಮಿಯೋಪತಿ, ಭಾರತೀಯ ವೈದ್ಯಕೀಯ ಪದ್ಧತಿಗಳು ಮತ್ತು ಆಧುನಿಕ ವೈದ್ಯ ಪದ್ಧತಿ ನಡುವೆ ಅಂತರ್ ಸಂಪರ್ಕ ವಿಸ್ತರಣೆ ಸಲುವಾಗಿ ಕನಿಷ್ಠ ವರ್ಷಕ್ಕೊಮ್ಮೆಯಾದರೂ ರಾಷ್ಟ್ರೀಯ ವೈದ್ಯಕೀಯ ಆಯೋಗ, ಹೋಮಿಯೋಪತಿ ಕೇಂದ್ರೀಯ ಮಂಡಳಿ ಮತ್ತು ಭಾರತೀಯ ವೈದ್ಯಪದ್ಧತಿಯ ಕೇಂದ್ರೀಯ ಮಂಡಳಿಗಳ ಜಂಟಿ ಸಮಾವೇಶ ನಡೆಸಬೇಕು ಎಂದು ವಿಧೇಯಕದ ೪೯ನೇ ಉಪವಿಧಿ ಕರೆ ನೀಡುತ್ತದೆ. ವೈದ್ಯಕೀಯ ಶಿಕ್ಷಣದಲ್ಲಿನ ಭ್ರಷ್ಟತೆ ಮತ್ತು ಅನೀತಿಯುತ ಮಾರ್ಗಗಳನ್ನು ನಿವಾರಿಸುವ ಸಲುವಾಗಿ ಸುಧಾರಣೆ ತರಲೂ ವಿಧೇಯಕ ಉದ್ದೇಶಿಸಿತ್ತು.

2018: ಕೊರೆಗಾಂವ್: ಮಹಾರಾಷ್ಟ್ರದ ಕೊರೆಗಾಂವ್ನಲ್ಲಿ ನಡೆಯುತ್ತಿದ್ದಭೀಮಾ ಕೊರೆಗಾಂವ್ ಸಂಗ್ರಾಮ ೨೦೦ನೇ ವಿಜಯೋತ್ಸವದ ವೇಳೆ ಎರಡು ಗುಂಪುಗಳ ನಡುವೆ ಪರಸ್ಪರ ಕಲ್ಲು ತೂರಾಟ ನಡೆದು ಪ್ರಕ್ಷುಬ್ಧ ಸ್ಥಿತಿ ಉಂಟಾಗಿದೆ ಎಂದು ವರದಿಗಳು ತಿಳಿಸಿದವು. ಪೇಶ್ವಾಗಳು ಮತ್ತು ಈಸ್ಟ್ ಇಂಡಿಯಾ ಕಂಪೆನಿಯ ಸೈನಿಕರ ನಡುವೆ ಸಂಗ್ರಾಮ ನಡೆದಿತ್ತು. ದಲಿತರೇ ಹೆಚ್ಚಿನ ಸಂಖ್ಯೆಯಲ್ಲಿದ್ದ ಈಸ್ಟ್ ಇಂಡಿಯಾ ಕಂಪೆನಿಯ ಸೈನಿಕರು ಸಮರದಲ್ಲಿ ವಿಜಯಗಳಿಸಿದ್ದರು. ೧೮೧೮ ಜನವರಿ ೧ರಂದು ಪೇಶ್ವೆಗಳ ವಿರುದ್ಧ ಸಿಡಿದೆದ್ದ ಕೊರೆಗಾಂವ್ ದಲಿತ ಯೋಧರು ಗಳಿಸಿದ್ದ ಗೆಲುವಿಗೆ ೨೦೧೮ರ ಜನವರಿ ೧ಕ್ಕೆ ೨೦೦ ವರ್ಷವಾಗಿದ್ದು, ಇದನ್ನು ದಲಿತರ ಸಾಂಕೇತಿಕ ವಿಜಯ ಎಂಬುದಾಗಿ ಪರಿಗಣಿಸಿ, ೨೦೦ನೇ ವರ್ಷದ ವಿಜಯೋತ್ಸವದ ಅಂಗವಾಗಿ ಭಾನುವಾರ (೨೦೧೭ರ ಡಿ.೩೧) ಪುಣೆಯ ಶನಿವಾರ್ ವಾಡಾದಲ್ಲಿ ಬೃಹತ್ ಸಮಾವೇಶ ಮತ್ತು ಭೀಮಾ ನದಿ ತೀರದ ಕೊರೆಗಾಂವ್ವರೆಗೆ ೪೦ ಕಿ.ಮೀ. ಜಾಥಾ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಗುಜರಾತ್ ಶಾಸಕ ಜಿಗ್ನೇಶ್ ಮೆವಾನಿ ಮತ್ತಿತರರು ಪಾಲ್ಗೊಂಡಿದ್ದರು.  ಮೇವಾನಿ ಅವರು ಬೆಳಗ್ಗೆ ಭೀಮಾ ಕೋರೆಗಾಂವ್ ಸ್ಮಾರಕಕ್ಕೆ ಭೇಟಿ ನೀಡಿದ್ದರು. ಬಳಿಕ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದರು.  ಸಮಾವೇಶಕ್ಕೆ ಲಕ್ಷಾಂತರ ಜನರು ಆಗಮಿಸಿದ್ದು, ಇದೇ ವೇಳೆಗೆ ವಿರೋಧಿಗಳ ಬಣವು ಸಮೀಪದ ಇನ್ನೊಂದು ಹಳ್ಳಿಯಿಂದ ಮೆರವಣಿಗೆ ನಡೆಸಿತು. ಉಭಯ ಗುಂಪುಗಳ ಮಧ್ಯೆ ಮಾತಿನ ಘರ್ಷಣೆ ನಡೆದು ಬಳಿಕ ಪರಸ್ಪರ ಕಲ್ಲುತೂರಾಟ ಆರಂಭವಾಯಿತು ಎಂದು ವರದಿ ತಿಳಿಸಿತು. ಬಳಿಕ ಉದ್ವಿಗ್ನರು ಮನೆಗಳೂ ಹಾಗೂ ವಾಹನಗಳ ಮೇಲೂ ಕಲ್ಲು ತೂರಿ ಬೆಂಕಿ ಹಚ್ಚಿದರು ಎಂದು ವರದಿಗಳು ಹೇಳಿದವು. ಈ ಸಮಾವೇಶಕ್ಕೆ ಮೊದಲೇ ಬಲಪಂಥೀಯ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಅಖಿಲ ಭಾರತೀಯ ಬ್ರಹ್ಮ ಮಹಾಸಭಾ, ರಾಷ್ಟ್ರೀಯ ಏಕಮತ ರಾಷ್ಟ್ರ ಅಭಿಯಾನ್, ಹಿಂದೂ ಅಘದಿ ಮತ್ತಿತರ ಬಲಪಂಥೀಯ ಸಂಘಟನೆಗಳು ವಿಜಯೋತ್ಸವವನ್ನು ವಿರೋಧಿಸಿದ್ದವು. ಕಲ್ಲು ತೂರಾಟದಿಂದ ಹಲವು ವಾಹನಗಳ ಗಾಜುಗಳು ಒಡೆದವು. ಕಲ್ಲು ತೂರಾಟದ ಬಳಿಕ ಪೊಲೀಸರು ಕೊರೆಗಾಂವ್ನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದರು. ವಿಜಯಸ್ತಂಭ ಸ್ಮಾರಕದ ಕಡೆಗೆ ಜನ ಹೋಗುವುದನ್ನು ಪೊಲೀಸರು ತಡೆದರು. ಕೊರೆಗಾಂವ್ ಹಲವೆಡೆ ಕಿಡಿಗೇಡಿಗಳು ವಾಹನಗಳಿಗೆ ಬೆಂಕಿ ಹಚ್ಚಿದರು. ಸ್ಥಳಕ್ಕೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲಾಯಿತು. ಪುಣೆ - ಅಹಮದ್ ನಗರ ನಡುವಣ ರಸ್ತೆ ಸಂಚಾರವನ್ನು ಪೊಲೀಸರು ಮುಂಜಾಗರೂಕತಾ ಕ್ರಮವಾಗಿ ತಡೆ ಹಿಡಿದರು ಎಂದು ವರದಿಗಳು ಹೇಳಿದವು. ಕಲ್ಲುತೂರಾಟದ ಘಟನೆಯ - ಗಂಟೆಗಳ ಪ್ರಕ್ಷುಬ್ಧತೆಯ ಬಳಿಕ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದು, ಸಂಜೆ ವೇಳೆಗೆ ವಾಹನ ಸಂಚಾರ ಪುನಾರಂಭಗೊಂಡಿತು ಎಂದು ವರದಿಗಳು ಹೇಳಿದವು.

2018: ಆಕ್ಲಂಡ್: ವಿಚಿತ್ರ ವಿದ್ಯಮಾನವೊಂದರಲ್ಲಿ ತೈಪೆಯಿಂದ 2018ರಲ್ಲಿ ಹೊರಟ ಆರು ವಿಮಾನಗಳು 2017 ಡಿಸೆಂಬರ್ನಲ್ಲಿ ಅಮೆರಿಕದಲ್ಲಿ ಇಳಿದ ಘಟನೆ ಘಟಿಸಿತು. ಹೌದು, ಫ್ಲೈಟ್ಟ್ರೇಡರ್ಟ್ವಿಟರ್ಖಾತೆಯ ಪ್ರಕಾರ, 1 ಜನವರಿ 2018ರಲ್ಲಿ ತೈಪೆಯಿಂದ ಒಟ್ಟು ಆರು ವಿಮಾನಗಳು ಡಿಸೆಂಬರ್ 31ರಂದು, ಜನವರಿ 1ರಂದು ಹೊರಟ ವಿಮಾನ ಡಿಸೆಂಬರ್ 31ರಂದು ಇಳಿದವು. ತೈಪೆಯ ವಿಮಾನಗಳಾದ ಇವಾ ಏರ್ ವ್ಯಾಂಕೋವರ್ಗೆ ತೆರಳಿತ್ತು. ಸಿಯಾಟಲ್,ಲಾಸ್ ಏಂಜಲೀಸ್, ಮತ್ತು ಸ್ಯಾನ್ ಫ್ರಾನ್ಸಿಸ್ಕೊಗೆ ತೆರಳಬೇಕಿದ್ದ ವಿಮಾನಗಳು ಡಿಸೆಂಬರ್ 31ಕ್ಕೆ ತಲುಪಿದ್ದವು. ಈ ಮದ್ಯೆ. ಆಕ್ಲಂಡ್ನಿಂದ ಹೊನಲೂಲುಗೆ ಹೊರಟ ಹವಾಯನ್ ಏರ್ಲೈನ್ಸ್ ವಿಮಾನ HA446 ವಿಮಾನ ಕೆಲ ತಾಂತ್ರಿಕ ದೋಷದಿಂದಾಗಿ ಒಂದು ದಿನ ಮೊದಲೇ ಹೊನಲೂಲು ತಲುಪಿತು. ಆಕ್ಲಂಡ್ ಮತ್ತು ಹೊನೊಲುಲುವಿನ ನಡುವೆ 23 ಗಂಟೆಗಳ ವ್ಯತ್ಯಾಸವಿದ್ದು, ಡಿಸೆಂಬರ್ 31 ರಾತ್ರಿ 11:55ಕ್ಕೆ ವಿಮಾನವು ಹೊರಟು ಅದೇ ದಿನ ಬೆಳಗ್ಗೆ 9:45ಕ್ಕೆ ಇಳಿಯಬೇಕಿತ್ತು.  ಆದರೆ ತಾಂತ್ರಿಕ ದೋಷದಿಂದ 10 ನಿಮಿಷ ತಡವಾಗಿ ಆಕ್ಲಂಡ್ನಿಂದ ಹೊರಟ ವಿಮಾನ 2017 ಡಿಸೆಂಬರ್ 31ರಂದು ಇಳಿಯಿತು. ಅಮೆರಿಕದ ಪತ್ರಕರ್ತರೊಬ್ಬರು ಇದನ್ನು ಗಮನಿಸಿ, ಟ್ವಿಟರ್ನಲ್ಲಿ ಪೋಸ್ಟ್ ಮಾಡಿದರು.  ವಿಮಾನ HA446 ಆಕ್ಲಂಡ್ನಿಂದ ಜನವರಿ 1ರಂದು 12:05ಕ್ಕೆ ಹೊರಟಿದ್ದು, ಹೊನೊಲುಲುವಿಗೆ ಡಿಸೆಂಬರ್ 31ರಂದು ಬೆಳಗ್ಗೆ 10:16ಕ್ಕೆ ತಲುಪಿದೆ ಎಂದು ಅವರು ತಿಳಿಸಿದರು.


2017: ನವದೆಹಲಿ: ಭಾರತದ ಜನಪ್ರಿಯ ಟೆನಿಸ್ ಆಟಗಾರ ಸೋಮದೇವ್ ದೇವವರ್ಮನ್ ವೃತ್ತಿಪರ ಟೆನಿಸ್ಗೆ ವಿದಾಯ ಹೇಳಿದರು. ಈ ಸಂಗತಿಯನ್ನು ಟ್ವೀಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಅವರು ಈದಿನ ಶಾಕ್ ನೀಡಿದರು. ಸೋಮದೇವ್ ಮೊದಲೇ ಬಗ್ಗೆ ಸುಳಿವು ನೀಡಿದ್ದರು. ಅಂತೆಯೇ 2017 ಮೊದಲ ದಿನವೇ ವೃತ್ತಿಪರ ಟೆನಿಸ್ನಿಂದ ಹಿಂದೆ ಸರಿಯುವ ನಿರ್ಧಾರವನ್ನು ಪ್ರಕಟಿಸಿರುವುದು ಟೆನಿಸ್ ಪ್ರಿಯರಿಗೆ ಶಾಕ್ ನೀಡಿತು.: ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಅವರು ತಮ್ಮ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದರು. ಹೊಸ ವರ್ಷದಂದೆ ಟೆನಿಸ್ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿರುವುದಾಗಿ ಟ್ವೀಟ್ಮಾಡಿರುವ ಸೋಮ್ದೇವ್‌, ಹೊಸ ಬದುಕಿನ ಭರವಸೆಯೊಂದಿಗೆ ಹೊಸ ವರ್ಷ ಪ್ರಾರಂಭಿಸುವುದಾಗಿ ತಿಳಿಸಿದರು.  ಹಲವು ವರ್ಷಗಳಿಂದ ಪ್ರೋತ್ಸಾಹಿಸಿ, ಪ್ರೀತಿ ತೋರಿದ ಅಭಿಮಾನಿಗಳಿಗೆ ಅವರು ಧನ್ಯವಾದಗಳನ್ನು ತಿಳಿಸಿದರು. 31 ವರ್ಷದ ಸೋಮ್ದೇವ್‌ 2008ರಲ್ಲಿ ಟೆನಿಸ್ವೃತ್ತಿ ಬದುಕಿಗೆ ಪದಾರ್ಪಣೆ ಮಾಡಿದರು.
2017: ಲಖನೌ: ಬೆಂಬಲಿಗರ ಸಮಾವೇಶದಲ್ಲಿ ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷನಾಗಿ ಮುಖ್ಯಮಂತ್ರಿ ಅಖಿಲೇಶ ಸಿಂಗ್ ಆಯ್ಕೆಯ ಪ್ರಕಟಣೆ, ರಾಜ್ಯ ಅಧ್ಯಕ್ಷ ಶಿವಪಾಲ್ ಸಿಂಗ್ ಯಾದವ್ ಮತ್ತು ಪಕ್ಷದ ಸಂಸದ ಅಮರಸಿಂಗ ಉಚ್ಚಾಟನೆ,  ಇದಕ್ಕೆ ಪ್ರತಿಯಾಗಿ ಮುಲಾಯಂ ಸಿಂಗ್ ಅವರಿಂದ ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಉಚ್ಚಾಟನೆ ಮತ್ತು ಜ.5ರಂದು ರಾಷ್ಟ್ರೀಯ ಅಧಿವೇಶನ ಕರೆಯು ಘೋಷಣೆಗಳೊಂದಿಗೆ ಸಮಾಜವಾದಿ ಪಕ್ಷವು ಈದಿನ ವಸ್ತುಶಃ ಇಬ್ಬಾಗಗೊಂಡಿತು. ಇದರ ಬೆನ್ನಲ್ಲೇ ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿಯೇ ಸಮಾಜವಾದಿ ಪಕ್ಷದ ಲಖನೌ ಕೇಂದ್ರ ಕಚೇರಿ ಮೇಲೆ ನಿಯಂತ್ರಣ ಸಾಧಿಸಲು ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು ರಾಜ್ಯ ಅಧ್ಯಕ್ಷ, ಅಖಿಲೇಶ್ ಚಿಕ್ಕಪ್ಪ ಶಿವಪಾಲ್ ಯಾದವ್ ಬೆಂಬಲಿಗರು ತೀವ್ರ ಪ್ರಯತ್ನ ನಡೆಸಿದರು. ಘೋಷಣೆಗಳನ್ನು ಕೂಗುತ್ತಾ ಪಕ್ಷ ಕಚೇರಿಗೆ ಮಧ್ಯಾಹ್ನ ನೂರಾರು ಸಂಖ್ಯೆಯಲ್ಲಿ ಬಂದ ಅಖಿಲೇಶ್ ಯಾದವ್ ಬೆಂಬಲಿಗರು ಪಕ್ಷ ಕಚೇರಿಯನ್ನು ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿದರು. ವೇಳೆಗೆ ಕಚೇರಿಯಲ್ಲಿ ಇದ್ದ ಶಿವಪಾಲ್ ಯಾದವ್ ಮತ್ತು ಅಖಿಲೇಶ್ ಬೆಂಬಲಿಗರ ಮಧ್ಯೆ ಘರ್ಷಣೆ ನಡೆಯಿತು . ಘರ್ಷಣೆಯ ಮಧ್ಯೆ ಅಖಿಲೇಶ್ ಬೆಂಬಲಿಗರು ಶಿವಪಾಲ್ ಯಾದವ್ ನಾಮಫಲಕವನ್ನು ಕಿತ್ತು ಹಾಕಿದರು. ಉಭಯರ ಮಧ್ಯೆ ಭಾರಿ ತಿಕ್ಕಾಟವೂ ನಡೆಯಿತು. ಪಕ್ಷದ ಪ್ರಧಾನ ಕಾರ್ಯದರ್ಶಿ ರಾಮ್ ಗೋಪಾಲ್ ಯಾದವ್ ಅವರು ಸಮಾವೇಶಗೊಳಿಸಿದ ಭಾರಿ ಸಭೆಯಲ್ಲಿ ಈದಿನ ನಡೆದವಸ್ತುಶಃಬಂಡಾಯದಲ್ಲಿ ಅಖಿಲೇಶ್ ಯಾದವ್ ಅವರನ್ನು ಬೆಂಬಲಿಗರು ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂಬುದಾಗಿ ಘೊಷಿಸಿದರು. ಪಕ್ಷಾಧ್ಯಕ್ಷರಾಗಿದ್ದ ತಂದೆ ಮುಲಾಯಂ ಸಿಂಗ್ ಯಾದವ್ ಅವರನುಮಾರ್ಗದರ್ಶಕರಾಗಿ ಮುಂದುವರೆಯುತ್ತಾರೆ ಎಂದು ಸೂಚಿಸಲಾಯಿತು. ರಾಜ್ಯ ಅಧ್ಯಕ್ಷ ಶಿವಪಾಲ್ ಯಾದವ್ ಅವರನ್ನು ರಾಜ್ಯ ಅಧ್ಯಕ್ಷ ಸ್ಥಾನದಿಂದ ಕಿತ್ತೆಸೆಯಲಾಯಿತು. ಶಿವಪಾಲ್ ಯಾದವ್ ಮತ್ತು ಸಂಸದ ಅಮರ್ ಸಿಂಗ್ ಅವರನ್ನು ಉಚ್ಚಾಟಿಸಲಾಯಿತು. ರಾಮ್ ಗೋಪಾಲ್ ಯಾದವ್ ಅವರು ಸಭೆಯಲ್ಲಿ ಅಖಿಲೇಶ್ ಯಾದವ್ ಅವರೇ ಇನ್ನು ಮುಂದೆ ಪಕ್ಷದ ಸಂಸದೀಯ ಮಂಡಳಿ ಮುಖ್ಯಸ್ಥರೂ ಆಗಿರುತ್ತಾರೆ ಎಂದು ಹೇಳಿ ಸಂಬಂಧಿತ ನಿರ್ಣಯಗಳು ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಅಂಗೀಕಾರವಾಗಿವೆ ಎಂದು ಹೇಳಿದರು. ಆದರೆ ಘಟನಾವಳಿಗಳನ್ನು ತಿರಸ್ಕರಿಸಿದ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ರಾಮ್ ಗೋಪಾಲ್ ಯಾದವ್ ಅವರನ್ನು ಪಕ್ಷದಿಂದ ಉಚ್ಚಾಟಿಸಿ, ಅವರು ಸಮಾವೇಶಗೊಳಿಸಿದ್ದ ಸಭೆ ಸಂವಿಧಾನಬದ್ಧವಲ್ಲ, ಅಲ್ಲಿನ ನಿರ್ಣಯಗಳು ಅಕ್ರಮ ನಿರ್ಣಯಗಳು ಎಂದು ಹೇಳಿ ಜನವರಿ 5ರಂದು ಲಖನೌದಲ್ಲಿ ಪಕ್ಷದ ರಾಷ್ಟ್ರೀಯ ಅಧಿವೇಶನ ಕರೆಯಲಾಗಿದೆ ಎಂದು ಪ್ರಕಟಿಸಿದರು. ಬಳಿಕ ನರೇಶ ಯಾದವ್ ಮತ್ತು ಕಿರಣ್ಮೊಯ್ ನಂದಾ ಅವರನ್ನೂ ಪಕ್ಷದಿಂದ ಉಚ್ಚಾಟಿಸಿದರು. ಅಖಿಲೇಶ್ ಯಾದವ್ ಬಣ ನರೇಶ ಅಗರ್ವಾಲ್ ಅವರನ್ನು ರಾಜ್ಯ ಘಟಕದ ಅಧ್ಯಕ್ಷ ಎಂಬುದಾಗಿ ಹೆಸರಿಸಿ, ಶಿವಪಾಲ್ ಯಾದವ್ ಅವರನ್ನು ಉಚ್ಚಾಟಿಸುವುದರೊಂದಿಗೆಯಾದವೀ ಕಲಹಈದಿನ ಬೆಳಗ್ಗೆ ಉಲ್ಬಣಗೊಂಡಿತ್ತು. ಒಂದು ಹಂತದಲ್ಲಿ ಅಖಿಲೇಶ್ ಬೆಂಬಲಿಗರು ಪಕ್ಷ ಕಚೇರಿಯಲ್ಲಿ ಡೋಲು ಭಾರಿಸುವ ಮೂಲಕ ಸಂಭ್ರಮಾಚರಣೆಯನ್ನೂ ಮಾಡಿದರು. ಇದಕ್ಕೆ ಮುನ್ನ ರಾಮ್ ಗೋಪಾಲ್ ಯಾದವ್ ಕರೆದ ಸಭೆಯಲ್ಲಿ ಪಾಲ್ಗೊಳ್ಳದಂತೆ ಮುಲಾಯಂ ಸಿಂಗ್ ಯಾದವ್ ಕಾರ್ಯಕರ್ತರಿಗೆ ಪತ್ರದ ಮೂಲಕ ನಿರ್ದೇಶನ ನೀಡಿದ್ದರು. ಬಳಿಕ ಮುಲಾಯಂ ಸಿಂಗ್ ಮನೆಯಲ್ಲಿ ಮುಲಾಯಂ, ಶಿವಪಾಲ್ ಯಾದವ್ ಮತ್ತು ಬೇಣಿ ಪ್ರಸಾದ್ ವರ್ಮಾ ಅವರು ಮಾತುಕತೆ ನಡೆಸಿದರು. ನಾಲ್ಕು ಜಿಲ್ಲಾ ಘಟಕಗಳ ಅಧ್ಯಕ್ಷರನ್ನೂ ಶಿವಪಾಲ್ ಸಿಂಗ್ ಯಾದವ್ ಪಕ್ಷದಿಂದ ಉಚ್ಚಾಟಿಸಿದರು.
2017: ಇಸ್ತಾಂಬುಲ್:  ಟರ್ಕಿಯ ಪ್ರಸಿದ್ಧ ನಗರ ಇಸ್ತಾಂಬುಲ್ ನೈಟ್ ಕ್ಲಬ್ವೊಂದರಲ್ಲಿ ಹೊಸ ವರ್ಷದ ದಿನ ಉಗ್ರನೊಬ್ಬ ಅಟ್ಟಹಾಸ ಮೆರೆದಿದ್ದು, ಪಾರ್ಟಿ ಗುಂಗಿನಲ್ಲಿದ್ದ ಜನರ ಮೇಲೆ ಗುಂಡಿನ ಸುರಿಮಳೆಗೆರೆದು ಇಬ್ಬರು ಭಾರತೀಯರು ಸೇರಿ ಕನಿಷ್ಠ 39 ಜನರನ್ನು ಹತ್ಯೆ ಮಾಡಿದ. ಘಟನೆಯಲ್ಲಿ 40 ಕ್ಕೂ ಹೆಚ್ಚು ಜನರು ಗಾಯಗೊಂಡರು. ಮೃತ ಭಾರತೀಯರನ್ನು ರಾಜ್ಯಸಭೆಯ ಮಾಜಿ ಸದಸ್ಯರೊಬ್ಬರ ಪುತ್ರ ಅಬಿಸ್ ರಿಜ್ವಿ ಮತ್ತು ಗುಜರಾತಿನ ಖುಶಿ ಷಾ ಎಂಬುದಾಗಿ ಗುರುತಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವರಾಜ್ ತಿಳಿಸಿದರು. ಹಿಂದಿನ ದಿನ ಮಧ್ಯರಾತ್ರಿ 1.45 (ಸ್ಥಳೀಯ ಕಾಲಮಾನ) ಸುಮಾರಿಗೆ ಸಾಂತಾಕ್ಲಾಸ್ ವೇಷ ಧರಿಸಿದ್ದ ಉಗ್ರ ನೈಟ್ ಕ್ಲಬ್ಗೆ ನುಗ್ಗಿ ಏಕಾಏಕಿ ಗುಂಡಿನ ಮಳೆಗೆರೆದ. ಘಟನೆಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಸಹ ಸಾವನ್ನಪ್ಪಿದರು. ಘಟನೆ ನಡೆದ ಸಂದರ್ಭದಲ್ಲಿ ನೈಟ್ ಕ್ಲಬ್ನಲ್ಲಿ 500 ಕ್ಕೂ ಹೆಚ್ಚು ಜನರಿದ್ದರು. ಇದುವರೆಗೆ ಯಾವುದೇ ಸಂಘಟನೆ ಘಟನೆಯ ಹೊಣೆ ಹೊತ್ತೊಕೊಂಡಿಲ್ಲ ಎಂದು ಇಸ್ತಾಂಬುಲ್ ಗವರ್ನರ್ ವಸಿಪ್ ಶಾಹಿನ್ ತಿಳಿಸಿದರು.
2017: ಚೆನ್ನೈ: ತಮಿಳುನಾಡಿನ ರಾಮೇಶ್ವರಂನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ರೂ.2.44 ಕೋಟಿ ಮೌಲ್ಯದ 87 ಚಿನ್ನದ ಗಟ್ಟಿಗಳು ಪತ್ತೆಯಾದವು. ಚೆನ್ನೈ ಯ ಇನ್ಮನಕೊಂಡಾನ್ಎಂಬಲ್ಲಿರುವ ಉಚಿಪುಲಿ ಗೇಟ್ಬಳಿ ವಾಹನಗಳನ್ನು ತಪಾಸಣೆಗೊಳಪಡಿಸಿದಾಗ ಹೋಂಡಾ ಸಿಟಿ ಕಾರಿನ ಚಾಲಕರ ಸೀಟಿನ ಕೆಳಗಿಟ್ಟಿದ್ದ ಚೀಲವೊಂದರಲ್ಲಿ ಚಿನ್ನದ ಗಟ್ಟಿ ಪತ್ತೆಯಾಯಿತು. ಚೀಲದಲ್ಲಿದ್ದ ಒಂದೊಂದು ಚಿನ್ನದ ಗಟ್ಟಿಯೂ ಒಂದೊಂದು ಕೆಜಿ ತೂಕವಿತ್ತು. ಕಾರಿನ ಚಾಲಕ ಮುಜೀಬ್ ರೆಹ್ಮಾನ್ ಎಂಬವರನ್ನು ಅಧಿಕಾರಿಗಳು ಬಂಧಿಸಿದ್ದು ಅವರನ್ನು, ನ್ಯಾಯಾಂಗ ಬಂಧನದಲ್ಲಿ ಇಡಲಾಯಿತು. ಮೀನುಗಾರರ ದೋಣಿ ಮೂಲಕ ಶ್ರೀಲಂಕಾದಿಂದ ಚಿನ್ನದ ಗಟ್ಟಿಗಳನ್ನು ಕಳ್ಳಸಾಗಾಣಿಕೆ ಮಾಡಲಾಗಿತ್ತು ಎಂದು ಚಾಲಕ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದರು. .
2016: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಿದ ಬಳಿಕ ದೇಶದ ಪ್ರಮುಖ ಬ್ಯಾಂಕುಗಳಾಗಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ ಬ್ಯಾಂಕ್ ಮತ್ತು ಐಡಿಬಿಐ ತಮ್ಮ ಸಾಲಗಳ ಬಡ್ಡಿಯನ್ನು ಗಣನೀಯವಾಗಿ ಇಳಿಸಿದವು. 2008 ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಳಿಕ ಅತ್ಯಂತ ಹೆಚ್ಚಿನ ಪ್ರಮಾಣದ ಬಡ್ಡಿ ದರ ಇಳಿಕೆ ಇದಾಯಿತು.  ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಎಲ್ಲ ಅವಧಿ ಸಾಲಗಳ ಬಡ್ಡಿ ದರವನ್ನು ಶೇಕಡಾ  0.90ರಷ್ಟು  ಇಳಿಸಿತು. ಒಂದು ವರ್ಷ ಅವಧಿಯ ಎಂಸಿಎಲ್ಆರ್ ಸಾಲದ ಬಡ್ಡಿಯನ್ನು ಬ್ಯಾಂಕ್ ಶೇಕಡಾ 8.90ದಿಂದ ಶೇಕಡಾ 8ಕ್ಕೆ ಇಳಿಸಿತು. ಎಂಸಿಎಲ್ಆರ್ ಓವರ್ನೈಟ್ ಸಾಲದ ಮೇಲಿನ ಬಡ್ಡಿ ದರವನ್ನು ಬ್ಯಾಂಕ್ ಶೇಕಡಾ 8.65ರಿಂದ ಶೇಕಡಾ 7.75ಕ್ಕೆ ಇಳಿಸಿತು. ಮೂರು ವರ್ಷ ಅವಧಿಯ ಸಾಲದ ಬಡ್ಡಿ ದರವನ್ನು ಶೇಕಡಾ 9.05ರಿಂದ ಶೇಕಡಾ 8.15ಕ್ಕೆ ಇಳಿಸಿತು. ಠೇವಣಿ ಪ್ರಮಾಣ ಹೆಚ್ಚಿದ ಹಿನ್ನೆಲೆಯಲ್ಲಿ ನೋಟು ರದ್ದತಿಯ ನೋವನ್ನು ಶಮನಗೊಳಿಸುವ ಸಲುವಾಗಿ ಬ್ಯಾಂಕ್ ಕ್ರಮ ಕೈಗೊಂಡಿತು. ಹೊಸ ಬಡ್ಡಿ ದರಗಳು ಈದಿನದಿಂದಲೇ (ಜನವರಿ 1) ಜಾರಿಯಾಗಲಿವೆ. ಎಸ್ಬಿಐಯ ಮಹಿಳಾ ಗೃಹ ಸಾಲಗಾರರಿಗೆ ಶೇಕಡಾ 8.20 ದರದಲ್ಲಿ ಸಾಲ ಲಭಿಸಲಿದೆ. ಇತರರಿಗೂ ಶೇಕಡಾ 8.25 ದರದಲ್ಲಿ ಸಾಲ ಲಭಿಸಲಿದೆ. ಇದೇ ರೀತಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಒಂದು ವರ್ಷ ಅವಧಿಯ ಎಂಸಿಎಲ್ಆರ್ ಸಾಲದ ಬಡ್ಡಿ ದರವನ್ನು 65 ಬೇಸಿಸ್ ಪಾಯಿಂಟ್ನಷ್ಟು ಇಳಿಸಿದೆ, ಅಂದರೆ ಶೇಕಡಾ 8.65ಕ್ಕೆ ಇಳಿಸಿತು. ಮೂರು ವರ್ಷಗಳ ಅವಧಿಯ ಸಾಲ ಪಡೆಯುವವರಿಗೆ ಐಡಿಬಿಐ ಶೇಕಡಾ 9.30ರಷ್ಟು (ಶೇಕಡಾ 0.40ರಷ್ಟು) ದರದಲ್ಲಿ ಸಾಲ ಲಭಿಸಲಿದೆ. 6 ತಿಂಗಳ ಅವಧಿಯ ಸಾಲದ ಬಡ್ಡಿ ದರ ಶೇಕಡಾ 0.35 ಅಂದರೆ ಶೇಕಡಾ 8.90ಕ್ಕೆ ಇಳಿಸಿತು. ಒಂದು ವರ್ಷದ ಅವಧಿ ಸಾಲಕ್ಕೆ ಐಡಿಬಿಐ ಬ್ಯಾಂಕ್ ಈಗಿನ ಶೇಕಡಾ 9.30 ಬದಲಿಗೆ ಶೇಕಡಾ 9.15 ಬಡ್ಡಿ ವಿಧಿಸಿತು. ನೋಟು ರದ್ದತಿ ಬಳಿಕ ರೂ.10ಲಕ್ಷ ಕೋಟಿಗೂ ಹೆಚ್ಚು ಹಣ ಬ್ಯಾಂಕ್ಖಾತೆಗಳಲ್ಲಿ ಜಮೆಯಾಗಿದೆ. ಹೀಗಾಗಿ ಬ್ಯಾಂಕ್ಗಳು ಸಾಲದ ಮೇಲಿನ ಬಡ್ಡಿದರ ಇಳಿಕೆ ಮಾಡುವ ಕುರಿತು ನಿರೀಕ್ಷಿಸಲಾಗಿತ್ತು.

2017: ಬೆಂಗಳೂರು: ರಾಜಧಾನಿಯ ನೂತನ ಪೊಲೀಸ್ ಸಾರಥಿಯಾಗಲು ಅಧಿಕಾರಿಗಳ ನಡುವೆ ನಡೆಯುತ್ತಿದ್ದ ಪೈಪೋಟಿಗೆ ತೆರೆ ಬಿದ್ದಿದ್ದು, ನಗರದ 32ನೇ ಕಮಿಷನರ್ ಆಗಿ 1986ನೇ ಬ್ಯಾಚ್ ಐಪಿಎಸ್ ಅಧಿಕಾರಿ ಪ್ರವೀಣ್ ಸೂದ್ ಈದಿನ ಅಧಿಕಾರ ವಹಿಸಿಕೊಂಡರು. ಎನ್‌.ಎಸ್.ಮೇಘರಿಕ್ ಅವರು ಬೆಳಗ್ಗೆ ಪ್ರವೀಣ್ ಸೂದ್ ಅವರಿಗೆ ಬ್ಯಾಟನ್ಹಸ್ತಾಂತರ ಮಾಡಿದರು. ಮೇಘರಿಕ್ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಮುಖ್ಯಸ್ಥರಾಗಲಿದ್ದಾರೆ.

2017: ನವದೆಹಲಿ: ಮತ್ತೊಬ್ಬರ ನೋವಿಗೆ ಸ್ಪಂದಿಸುವ ಗುಣದವರು ಹೆಚ್ಚು ಕಾಲ ಬದುಕುತ್ತಾರೆ ಎಂದು ಇವ್ಯಾಲುವೇಷನ್ ಆಂಡ್ ಹ್ಯೂಮನ್ ಬಿಹೇವಿಯರ್ ಸಂಶೋಧನಾ ಪ್ರಬಂಧ ವರದಿಯಲ್ಲಿ ಹೇಳಲಾಯಿತು. ಮನೆಯಲ್ಲಿ ವೃದ್ಧರಿಗೆ ಪ್ರೀತಿ, ವಾತ್ಸಲ್ಯ ತೋರಿಸಿದರೆ ಅವರ ಆರೋಗ್ಯದಲ್ಲೂ ವೃದ್ಧಿ ಕಾಣುವುದರ ಜತೆಗೆ, ಕುಟುಂಬದವರಿಗೆ ತೃಪ್ತಿ, ನೆಮ್ಮದಿ ಲಭ್ಯವಾಗುತ್ತದೆ. ಇನ್ನೊಬ್ಬರಿಗೆ ಸಹಾಯ ಮಾಡುವುದರಿಂದ ಆಯುಷ್ಯ ವೃದ್ಧಿಯಾಗುವ ಜತೆಗೆ ವ್ಯಕ್ತಿಯಲ್ಲಿನ ಋಣಾತ್ಮಕ ಶಕ್ತಿಗಳು ನಶಿಸಿ ಧನಾತ್ಮಕ ಚಿಂತನೆ ಮೂಡುತ್ತದೆ ಎಂದು ಅಧ್ಯಯನ ವರದಿ ತಿಳಿಸಿತು. ಪರೋಪಕಾರಿ ಜೀವನದಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ. ಸಂಬಂಧಿಗಳಿಗೆ ತೋರುವ ಕಾಳಜಿಗಿಂತಲೂ ಅನ್ಯ ವ್ಯಕ್ತಿಗಳಿಗೆ ತೋರುವ ಕಾಳಜಿ ಹೆಚ್ಚು ಪರಿಣಾಮಕಾರಿ ಎಂದು ಅಧ್ಯಯನ ತಿಳಿಸಿತು.

ಪ್ರತಿವರ್ಷ ಭಾರತೀಯ ವಿಜ್ಞಾನ ಕಾಂಗ್ರೆಸ್ (ಸಮ್ಮೇಳನ) ಈ ದಿನ ಆರಂಭವಾಗುತ್ತದೆ.

2009: ಹೊಸ ವರ್ಷದ ಮೊದಲ ದಿನವೇ ಅಸ್ಸಾಮಿನಲ್ಲಿ ಉಗ್ರರ ಅಟ್ಟಹಾಸ ಮರುಕಳಿಸಿತು. ರಾಜ್ಯದ ಪ್ರಮುಖ ನಗರ ಗುವಾಹಟಿಯಲ್ಲಿ ಈದಿನ ಸಂಜೆ ನಡೆದ ಸರಣಿ ಬಾಂಬ್ ಸ್ಫೋಟದಿಂದ ಐವರು ಮೃತರಾಗಿ 50 ಜನ ಗಾಯಗೊಂಡರು. 'ಘಟನೆಯಲ್ಲಿ ಉಲ್ಫಾ ಉಗ್ರರ ಕೈವಾಡವಿದೆ' ಎಂದು ಕೇಂದ್ರ ಸರ್ಕಾರ ತಿಳಿಸಿತು. ಸುಧಾರಿತ ಸ್ಫೋಟಕ ಸಾಧನ (ಐಇಡಿ)ಗಳ ಮೂಲಕ ಈ ದಾಳಿಗಳನ್ನು ನಡೆಸಲಾಯಿತು. ಮುಂಬೈ ದಾಳಿಯ ಕಹಿ ನೆನಪು ಜನಮಾನಸದಿಂದ ಮರೆಯಾಗುವ ಮುನ್ನವೇ ಮತ್ತೆ ಉಗ್ರರು ರುದ್ರನರ್ತನ ಮಾಡಿದ್ದು ದೇಶಾದ್ಯಂತ ಜನರನ್ನು ದಿಗ್ಭ್ರಮೆಗೆ ಈಡುಮಾಡಿತು.. ಕೇವಲ ಎರಡೇ ತಿಂಗಳ ಹಿಂದೆ (ಅಕ್ಟೋಬರ್ 30) ಗುವಾಹಟಿ ಹಾಗೂ ಅಸ್ಸಾಮಿನ ಇತರ ಎರಡು ನಗರಗಳಲ್ಲಿ ನಡೆದ ಸರಣಿ ಸ್ಫೋಟಗಳಿಗೆ 88 ಜನ ಬಲಿಯಾಗಿದ್ದರು.

2009: ಅನಿಲ್ ದೀರೂಭಾಯ್ ಅಂಬಾನಿ ಸಮೂಹದ ಕಂಪೆನಿಗಳ ಒಡೆಯ ಅನಿಲ್ ಅಂಬಾನಿ, 'ಬಿಲಿಯನೇರ್ ಬ್ಲೋಅಪ್ಸ್ ಆಫ್ 2008' ಫೋಬ್ಸ್ ಪಟ್ಟಿಯಲ್ಲಿ ನಂ. 1 ಸ್ಥಾನಕ್ಕೆ ಏರಿದರು. ಅಂದರೆ ಕಳೆದ ವರ್ಷ ಗರಿಷ್ಠ ಆಸ್ತಿ ನಷ್ಟ ಅನುಭವಿಸಿದ ವಿಶ್ವದ ಶ್ರೀಮಂತರ ಸಾಲಿನಲ್ಲಿ ಅನಿಲ್ ಅಂಬಾನಿ ಅವರಿಗೆ ಪ್ರಥಮ ಸ್ಥಾನ. ಅನಿಲ್ ಅಂಬಾನಿ 2007ರಲ್ಲಿ ಒಟ್ಟು 42 ಶತಕೋಟಿ ಡಾಲರ್ ಆಸ್ತಿಯೊಂದಿಗೆ ಫೊಬ್ಸ್ ಕುಬೇರರ ಸಾಲಿನಲ್ಲಿ 6ನೇ ಸ್ಥಾನದಲ್ಲಿ ಇದ್ದರು. ಅನಿಲ್ ಅಂಬಾನಿ ಆಸ್ತಿ 2008ರಲ್ಲಿ ಒಟ್ಟು 30 ಶತಕೋಟಿ ಡಾಲರಿನಷ್ಟು ಕರಗಿಹೋಯಿತು. ಇದರಿಂದಾಗಿ ಅವರ ಆಸ್ತಿ ಮೌಲ್ಯ ಕೇವಲ 12 ಶತಕೋಟಿ ಡಾಲರುಗಳಿಗೆ ಇಳಿಯಿತು. ಪ್ರತಿಷ್ಠಿತ ಕಾರ್ಪೊರೇಟ್ ಸಂಸ್ಥೆ, ಅನಿಲ್ ದೀರೂಭಾಯ್ ಅಂಬಾನಿ(ಎಡಿಎ) ಕಂಪೆನಿಗಳ ಸಮೂಹಕ್ಕೆ ಹೊಸ ವರ್ಷದ ಆರಂಭದಲ್ಲೇ ಈ ಕೆಟ್ಟ ಸುದ್ದಿ ಪ್ರಾಪ್ತವಾಯಿತು. ಖ್ಯಾತ ವಾಣಿಜ್ಯ ಸುದ್ದಿ ನಿಯತಕಾಲಿಕ ಫೋಬ್ಸ್, 'ಬಿಲಿಯನೇರ್ ಬ್ಲೋಅಪ್ಸ್ ಆಫ್ 2008' ಪ್ರಕಟಿಸಿತು. ವಿಶ್ವದಲ್ಲಿ ಅತೀ ಹೆಚ್ಚು ಸಂಪತ್ತು ಕಳೆದುಕೊಂಡವರ ಪಟ್ಟಿ ಇದು. ವಿಶ್ವದ ಶ್ರೀಮಂತರ ಪಟ್ಟಿಯಲ್ಲಿದ್ದ ಮುಖೇಶ್ ಅಂಬಾನಿ, ಉಕ್ಕು ಉದ್ಯಮಿ ಲಕ್ಷ್ಮೀ ಮಿತ್ತಲ್ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಕೆ.ಪಿ. ಸಿಂಗ್ ಸಹ ಈ ಪಟ್ಟಿಯಲ್ಲಿ ಸೇರ್ಪಡೆಯಾದರು. ಈ ಎಲ್ಲ ಕುಬೇರರದ್ದೂ ಒಟ್ಟು 100 ಶತಕೋಟಿ ಡಾಲರಿನಷ್ಟು ಸಂಪತ್ತು ನಷ್ಟವಾಯಿತು. ಒಟ್ಟಾರೆ 2008ರಲ್ಲಿ ವಿಶ್ವದ ಎಲ್ಲ ಶ್ರೀಮಂತರು ಭಾರಿ ಪ್ರಮಾಣದಲ್ಲಿ ಆಸ್ತಿ ಕಳೆದುಕೊಂಡರು ಎಂದು ಫೋಬ್ಸ್ ಹೇಳಿತು.

2009: ಬ್ಯಾಂಕಾಕಿನ ಜನಪ್ರಿಯ ಪಬ್ ಒಂದರಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಸಂಭವಿಸಿದ ಬೆಂಕಿ ದುರಂತದಲ್ಲಿ ಕೆಲವು ವಿದೇಶಿಯರು ಸೇರಿದಂತೆ 61 ಜನ ಸಾವಿಗೀಡಾಗಿ 212 ಜನ ಗಾಯಗೊಂಡರು. ಹೊಸ ವರ್ಷ ಅಡಿಯಿಟ್ಟ ಕೆಲವೇ ನಿಮಿಷಗಳಲ್ಲಿ, ರಾತ್ರಿ 12.20ಕ್ಕೆ ಇಲ್ಲಿನ ಸಾಂತಿಕಾ ಕ್ಲಬ್ ಅಗ್ನಿದುರಂತಕ್ಕೆ ಸಾಕ್ಷಿಯಾಯಿತು. ಈ ವೇಳೆ ಪಬ್‌ನಲ್ಲಿ ಸುಮಾರು 1000 ಮಂದಿ ಇದ್ದರು.

2009: ಗಾಜಾ ಪಟ್ಟಿಯಲ್ಲಿನ ಹಮಾಸ್ ಉಗ್ರರ ವಿರುದ್ಧದ ಕಾರ್ಯಾಚರಣೆಯನ್ನು ಇಸ್ರೇಲ್ ಆರನೇ ದಿನವೂ ಮುಂದುವರೆಸಿತು. ಹಮಾಸ್ ಹಿಡಿತದಲ್ಲಿದ್ದ ಪ್ಯಾಲೆಸ್ಟೇನ್ ಸಂಸತ್ ಕಟ್ಟಡದ ಮೇಲೂ ದಾಳಿ ನಡೆಯಿತು. ವಾಯು ದಾಳಿಯಲ್ಲಿ ಹಮಾಸಿನ ಹಿರಿಯ ಮುಖಂಡ ನಿಝರ್ ರಯ್ಯಾನ್ ಮೃತನಾದ. ಇಲ್ಲಿಯವರೆಗೆ 391 ಜನರು ಇಸ್ರೇಲ್ ದಾಳಿಗೆ ಬಲಿಯಾದರು.

2009: ಇನ್ನೇನು ಸೋಮಾಲಿಯಾ ಕಡಲುಗಳ್ಳರ ವಶವಾಗಲಿದ್ದ ಭಾರತದ ತೈಲ ಹಡಗೊಂದನ್ನು ಮಲೇಷ್ಯಾ ನೌಕಾಪಡೆಯ ಹೆಲಿಕಾಪ್ಟರ್ ರಕ್ಷಿಸಿದ ಘಟನೆ ಹೊಸ ವರ್ಷದ ಮೊದಲ ದಿನ ಅಂತಾರಾಷ್ಟ್ರೀಯ ಕಾಲಮಾನದ ಪ್ರಕಾರ ಬೆಳಗಿನ ಜಾವ 3.30ಕ್ಕೆ (ಭಾರತೀಯ ಕಾಲಮಾನ ಬೆಳಿಗ್ಗೆ 9ಕ್ಕೆ) ನಡೆಯಿತು. ಹಡಗು ಆಡನ್ ಕೊಲ್ಲಿಯ ಮೂಲಕ ಸೂಯೆಜ್ ಕಾಲುವೆಯೆಡೆಗೆ ತೆರಳುತ್ತಿದ್ದಾಗ ಎರಡು 'ಸ್ಪೀಡ್ ಬೋಟ್'ಗಳಲ್ಲಿ ತೀರಾ ಸಮೀಪಕ್ಕೆ ಬಂದ ಸೇನಾ ಸಮವಸ್ತ್ರಧಾರಿ ಸಮುದ್ರಗಳ್ಳರು ಇದ್ದಕ್ಕಿದ್ದಂತೆ ಗುಂಡು ಹಾರಿಸಲು ಶುರು ಮಾಡಿದರು. ಮಲೇಷ್ಯಾದ ನೌಕಾ ಹೆಲಿಕಾಪ್ಟರ್ ತಕ್ಷಣ ನಿಗದಿತ ಜಾಗಕ್ಕೆ ಹೋಗದಿದ್ದರೆ ತೈಲ ಹಡಗನ್ನು ಅಪಹರಿಸುವಲ್ಲಿ ಕಳ್ಳರು ಯಶಸ್ವಿಯಾಗುತ್ತಿದ್ದರು ಎಂದು ಅಂತಾರಾಷ್ಟ್ರೀಯ ಸಾಗರ ವ್ಯವಹಾರ ಕೇಂದ್ರದ ಮುಖ್ಯಸ್ಥ ನೊಯೆಲ್ ಚೂಂಗ್ ತಿಳಿಸಿದರು.

2009: ಧಾರವಾಡದ ಕವಿ ದೇಶಪಾಂಡೆ ಸುಬ್ಬರಾಯರಿಗೆ ಕಾಂತಾವರ ಕನ್ನಡ ಸಂಘದ ಪಟೇಲ್ ಪುನರೂರು ವಾಸುದೇವರಾವ್ ಸ್ಮಾರಕ ಟ್ರಸ್ಟಿನ ಪ್ರಾಯೋಜಕತ್ವದ 2008ನೇ ಸಾಲಿನ ಮ್ದುದಣ ಕಾವ್ಯ ಪ್ರಶಸ್ತಿ ಲಭಿಸಿತು. ದೇಶಪಾಂಡೆ ಅವರ 'ಮೋರೆಯಾಚೆಯ ಮುಖ' ಎಂಬ ಕವನ ಸಂಕಲನದ ಹಸ್ತಪ್ರತಿಯನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ.ನಾ.ಮೊಗಸಾಲೆ ತಿಳಿಸಿದರು. 1979ರಲ್ಲಿ ನಂದಳಿಕೆಯ ವರಕವಿ ಮುದ್ದಣದ ಹೆಸರಿನಲ್ಲಿ ಸ್ಥಾಪಿಸಲಾದ ಈ ಪ್ರಶಸ್ತಿಯು ಹತ್ತು ಸಾವಿರ ರೂಪಾಯಿ ನಗದು ಮತ್ತು ಸನ್ಮಾನವನ್ನು ಒಳಗೊಂಡಿದೆ. ಮೂರು ವರುಷಗಳಿಂದ ಬೆಂಗಳೂರಿನ ಸುಮುಖ ಪ್ರಕಾಶನದ ಜತೆ ಕನ್ನಡ ಸಂಘವು ಮಾಡಿಕೊಂಡ ಒಪ್ಪಂದದಂತೆ, ಪ್ರಶಸ್ತಿ ಪುರಸ್ಕೃತ ಕೃತಿಯು ಅದೇ ಪ್ರಕಾಶಕರಿಂದ ಪ್ರಕಟಗೊಂಡು ಪ್ರಶಸ್ತಿ ಪ್ರದಾನದ ದಿನ ಅನಾವರಣಗೊಳ್ಳುವುದು.

2008: ಉತ್ತರ ಪ್ರದೇಶದ ರಾಮಪುರ ಜಿಲ್ಲೆಯಲ್ಲಿನ ಸಿ ಆರ್ ಪಿ ಎಫ್ ಕೇಂದ್ರದ ಮೇಲೆ ಈದಿನ ಮುಂಜಾನೆ ಲಷ್ಕರ್ ಎ ತೊಯ್ಬಾ ಸಂಘಟನೆಗೆ ಸೇರಿದ ಇಬ್ಬರು ಉಗ್ರಗಾಮಿಗಳು ಆತ್ಮಹತ್ಯಾ ದಾಳಿ ನಡೆಸಿದಾಗ 7 ಮಂದಿ ಯೋಧರು ಸೇರಿ ಒಟ್ಟು 8 ಮಂದಿ ಮೃತರಾದರು. ಉತ್ತರ ಪ್ರದೇಶದಲ್ಲಿ ಭದ್ರತಾ ಸಿಬ್ಬಂದಿಯ ಕೇಂದ್ರದ ಮೇಲೆ ಉಗ್ರಗಾಮಿಗಳು ನಡೆಸಿದ ಮೊದಲ ದಾಳಿ ಇದು. 2005ರ ಜುಲೈ 5ರಂದು ಅಯೋಧ್ಯೆಯಲ್ಲಿನ ವಿವಾದಾತ್ಮಕ ನಿವೇಶನದ ಬಳಿ ಇರುವ ರಾಮಲಲ್ಲಾ ದೇಗುಲದ ಮೇಲೆ ಲಷ್ಕರ್ ಎ ತೊಯ್ಬಾ ಉಗ್ರಗಾಮಿಗಳು ಆತ್ಮಹತ್ಯಾ ದಾಳಿ ನಡೆಸಲು ಯತ್ನಿಸಿದ್ದರಾದರೂ, ಆಗ ಸಿ ಆರ್ ಪಿ ಎಫ್ ಯೋಧರ ಚುರುಕಿನ ಕಾರ್ಯಾಚರಣೆಯಿಂದ ದೇಗುಲಕ್ಕೆ ಹಾನಿಯಾಗುವ ಮೊದಲೇ ಉಗ್ರಗಾಮಿಗಳು ಸಾವನ್ನಪ್ಪಿದ್ದರು. ಲಷ್ಕರ್ ಎ ತೊಯ್ಬಾ ಉಗ್ರಗಾಮಿಗಳು 2001ರ ಅಕ್ಟೋಬರಿನಲ್ಲಿ ದೆಹಲಿಯ ಹೊರವಲಯದಲ್ಲಿದ್ದ ಸಿ ಆರ್ ಪಿ ಎಫ್ ಕೇಂದ್ರದ ಮೇಲೆ ದಾಳಿ ನಡೆಸಿದ್ದರು.

2008: ಮಕ್ಕಳಲ್ಲಿ ಏರುತ್ತಿರುವ `ಬಾಲ್ಯಾವಸ್ಥೆಯ ಬೊಜ್ಜು' ತಡೆಗಟ್ಟುವ ಸಲುವಾಗಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಾಗಿ ತಯಾರಾಗುವ ಟಿ.ವಿ ಜಾಹೀರಾತುಗಳಲ್ಲಿ ಪ್ರಸಾರವಾಗುವ ಅನಾರೋಗ್ಯಕರ ಆಹಾರ ಹಾಗೂ ಪಾನೀಯಗಳ ಜಾಹೀರಾತಿನ ಮೇಲೆ ನಿರ್ಬಂಧ ಹೇರಲು ಬ್ರಿಟನ್ ಸರ್ಕಾರ ತೀರ್ಮಾನಿಸಿತು.

2008: ಕರ್ನಾಟಕ ಸರ್ಕಾರದ ಕೃಷಿ ಇಲಾಖೆಯು ಸಾವಯವ ಕೃಷಿಗೆ ನೀಡುವ ಒಂದು ಲಕ್ಷ ರೂಪಾಯಿ ಬಹುಮಾನ ಒಳಗೊಂಡ ಕೃಷಿ ಪಂಡಿತ ಪ್ರಶಸ್ತಿಗೆ ಮೈಸೂರು ಜಿಲ್ಲೆ ಹೆಗ್ಗಡದೇವನಕೋಟೆಯ ವಿವೇಕ್ ಕಾರಿಯಪ್ಪ ಹಾಗೂ ಜೂಲಿ ಕಾರಿಯಪ್ಪ ಅವರು ಜಂಟಿಯಾಗಿ ಆಯ್ಕೆಯಾದರು.

2008: ಶ್ರೀಲಂಕಾ ವಿರೋಧ ಪಕ್ಷದ ಸಂಸತ್ ಸದಸ್ಯ ತ್ಯಾಗರಾಜ ಮಹೇಶ್ವರನ್ ಅವರು ಕೊಲಂಬೋದ ಹಿಂದೂ ದೇವಾಲಯದಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಗುಂಡಿಗೆ ಬಲಿಯಾದರು. ಅವರು ಸಂಯುಕ್ತ ರಾಷ್ಟ್ರೀಯ ಪಕ್ಷಕ್ಕೆ (ಯು ಎನ್ ಪಿ) ಸೇರಿದವರು.

2008: ಅಪರೂಪದ ಹರಳುಗಳಿಗಾಗಿ 1,500 ವರ್ಷಗಳಷ್ಟು ಪುರಾತನವಾದ ಎರಡು ವಿಷ್ಣು ಪ್ರತಿಮೆಗಳನ್ನು ಬಾಂಗ್ಲಾದೇಶದಿಂದ ಕಳವು ಮಾಡಿದ ಇಬ್ಬರನ್ನು ಅಪರಾಧ ನಿಗ್ರಹ ಕ್ಷಿಪ್ರ ಕಾರ್ಯಾಚರಣೆ ದಳದ ಅಧಿಕಾರಿಗಳು ಬಂಧಿಸಿದರು.

2007: ಭಾರತೀಯ ಸಂಜಾತೆ ರಕ್ತತಜ್ಞೆ ಡಾ. ಚಿತ್ರಾ ಭರೂಚಾ ಅವರು ಬ್ರಿಟಿಷ್ ಬ್ರಾಡ್ ಕಾಸ್ಟಿಂಗ್ ಕಾರ್ಪೋರೇಷನ್ನಿನ (ಬಿಬಿಸಿ) ಕಾರ್ಯ ನಿರ್ವಾಹಕ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದರು.

2007: ವಿಶ್ವಸಂಸ್ಥೆಯ ನೂತನ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರು ಭಾರತದ ಹಿರಿಯ ರಾಜತಾಂತ್ರಿಕ ವಿಜಯ್ ನಂಬಿಯಾರ್ ಅವರನ್ನು ತಮ್ಮ ಸಿಬ್ಬಂದಿಯ ಮುಖ್ಯಸ್ಥರನ್ನಾಗಿ ಮತ್ತು ಹೈತಿಯ ಪತ್ರಕರ್ತೆ ಮೈಕೆಲೆ ಮೋಂಟಾಸ್ ಅವರನ್ನು ತಮ್ಮ ವಕ್ತಾರರನ್ನಾಗಿ ನೇಮಿಸಿಕೊಂಡರು.

2007: ಮಕ್ಕಳು ಮತ್ತು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ನಂತರ ಕೊಲೆಗೈದ ಆರೋಪಕ್ಕೆ ಒಳಗಾಗಿರುವ ಉತ್ತರ ಪ್ರದೇಶ ನೊಯಿಡಾದ ವ್ಯಾಪಾರಿ ಮೊಹಿಂದರ್ ಸಿಂಗ್ ಪಂಧೇರ್ ನಿವಾಸದ ಹೊರಭಾಗದಲ್ಲಿ ನಿಥಾರಿ ಗ್ರಾಮದ ಉದ್ರಿಕ್ತ ಜನ ಪೊಲೀಸರ ಜೊತೆಗೆ ಘರ್ಷಿಸಿ, ಪಂಧೇರ್ ಮನೆ ಮೇಲೆ ಎರಡನೇ ದಿನ ಕೂಡಾ ದಾಳಿ ನಡೆಸಿದರು. ಗ್ರಾಮಸ್ಥರು ಡಿಸೆಂಬರ್ 31ರಂದು ಕೂಡಾ ಪಂಧೇರ್ ನಿವಾಸದ ಗೇಟು ಮುರಿದು ಕಿಟಕಿ ಗಾಜುಗಳ ಮೇಲೆ ಕಲ್ಲು ತೂರಾಟ ನಡೆಸ್ದಿದರು.

2006: ತಮ್ಮ ದೇಶದಲ್ಲಿನ ಅಣುಸ್ಥಾವರಗಳು ಹಾಗೂ ಸೌಲಭ್ಯಗಳ ಪಟ್ಟಿಯನ್ನು ಭಾರತ ಮತ್ತು ಪಾಕಿಸ್ಥಾನದ ಅಧಿಕಾರಿಗಳು ವಿನಿಮಯ ಮಾಡಿಕೊಂಡರು. ಪರಮಾಣು ಸ್ಥಾವರಗಳ ಮೇಲೆ ದಾಳಿ ನಿಷೇಧ ಒಪ್ಪಂದದ ಅನುಚ್ಛೇದ 2ರ ಪ್ರಕಾರ ಈ ಪಟ್ಟಿಯನ್ನು ನೀಡಲಾಗಿದ್ದು 1998 ಡಿಸೆಂಬರ್ 31ರಂದು ಮಾಡಿಕೊಳ್ಳಲಾದ ಒಪ್ಪಂದವನ್ನು ಈ ಮೂಲಕ ಅನುಷ್ಠಾನಗೊಳಿಸಲಾಯಿತು.

2006: ಬೆಂಗಳೂರಿನ ಭರತನಾಟ್ಯ ಕಲಾವಿದೆ ಶಿಲ್ಪಾ ಉತ್ತಪ್ಪ ಅವರು ಚೆನ್ನೈ ಮ್ಯೂಸಿಕ್ ಅಕಾಡೆಮಿಯು ನೀಡುವ ಡಾ. ಎಂ.ಜಿ.ಆರ್ ಪ್ರಶಸ್ತಿಯನ್ನು ಸ್ವೀಕರಿಸಿದರು. ಇದೇ ಸಂದರ್ಭದಲ್ಲಿ ಅವರ ಭರತನಾಟ್ಯ ಗುರು ಪದ್ಮಿನಿ ರಾಮಚಂದ್ರನ್ ಅವರು ಉತ್ತಮ ನಾಟ್ಯ ಕಲಾವಿದೆಯ ಗುರು ಪ್ರಶಸ್ತಿ ಪಡೆದರು.

2001: ಕಲ್ಕತ್ತಾ ನಗರಕ್ಕೆ `ಕೋಲ್ಕತ' ಎಂಬುದಾಗಿ ಮರುನಾಮಕರಣ ಮಾಡಲಾಯಿತು.

2000: ಎಲ್ಲ ಎಲೆಕ್ಟ್ರಾನಿಕ್ ವಾಣಿಜ್ಯಕ್ಕೆ ಅಂತಾರಾಷ್ಟ್ರೀಯ ಗುಣಮಟ್ಟವಾಗಿ ಬ್ರಿಟನ್ನಿನಲ್ಲಿ ಗ್ರೀನ್ ವಿಚ್ ಎಲೆಕ್ಟ್ರಾನಿಕ್ ಟೈಮ್ನ್ನು ಆರಂಭಿಸಲಾಯಿತು. `ಜಿಇಟಿ' ಎಂಬುದಾಗಿ ಖ್ಯಾತಿ ಪಡೆದ ಇದು ಜಗತ್ತಿನಾದ್ಯಂತ ಇಂಟರ್ ನೆಟ್ ಮಾರಾಟಗಾರರು ಮತ್ತು ಬಳಕೆದಾರರಿಗೆ 1884ರಿಂದ ಬಳಸುತ್ತಿರುವ ಗ್ರೀನ್ ವಿಚ್ ಮೀನ್ ಟೈಮ್ನಂತೆ ಒಂದೇ ಗುಣಮಟ್ಟದ ವೇಳೆಯನ್ನು ಒದಗಿಸಿತು
1999: ಹನ್ನೊಂದು ಐರೋಪ್ಯ ರಾಷ್ಟ್ರಗಳು `ಯುರೋ' ಹೆಸರಿನ ಏಕರೂಪ ಕರೆನ್ಸಿಯನ್ನು ಜಾರಿಗೆ ತಂದವು.

1978: ಏರ್ ಇಂಡಿಯಾ 747 `ಎಂಪರರ್ ಅಶೋಕ' ವಿಮಾನವು ಬಾಂಬೆ (ಈಗಿನ ಮುಂಬೈ) ಬಳಿ ಸಮುದ್ರಕ್ಕೆ ಅಪ್ಪಳಿಸಿ ಅದರಲ್ಲಿದ್ದ 213 ಪ್ರಯಾಣಿಕರು ಮೃತರಾದರು.

1975: ಖ್ಯಾತ ಕೈಗಾರಿಕೋದ್ಯಮಿ ಶಂಕರರಾವ್, ವಾಸುದೇವ್ ಕಿರ್ಲೋಸ್ಕರ್ ನಿಧನರಾದರು.

1973: ಎಸ್. ಎಚ್. ಎಫ್. ಜೆ. ಮಾಣೆಕ್ ಶಾ ಅವರು ಭಾರತದ ಮೊತ್ತ ಮೊದಲ ಫೀಲ್ಡ್ ಮಾರ್ಷಲ್ ಆದರು.

1955: ಭಾರತೀಯ ವಿಜ್ಞಾನಿ, ವಿಶ್ವ ವಿದ್ಯಾಲಯ ಅನುದಾನ ಆಯೋಗದ ಅಧ್ಯಕ್ಷ ಶಾಂತಿ ಸ್ವರೂಪ್ ಭಟ್ನಾಗರ್ (1894-1955) ಅವರು ತಮ್ಮ 61ನೇ ವಯಸ್ಸಿನಲ್ಲಿ ನಿಧನರಾದರು.

1947: ಕಲಾವಿದೆ ವಸಂತಲಕ್ಷ್ಮಿ ಜನನ.

1944: ಇಂಗ್ಲಿಷ್ ಶಿಲ್ಪಿ ಸರ್ ಎಡ್ವಿನ್ ಲ್ಯುಟಿಯೆನ್ಸ್ (1869-1944) ತಮ್ಮ 74ನೇ ವಯಸ್ಸಿನಲ್ಲಿ ಮೃತರಾದರು. ಅವರು ನವದೆಹಲಿಯ ಯೋಜನೆ ಹಾಗೂ ರಾಷ್ಟ್ರಪತಿ ಭವನದ (ಮೊದಲಿಗೆ ವೈಸ್ ರಾಯ್ ಹೌಸ್) ವಿನ್ಯಾಸಕ್ಕಾಗಿ ಖ್ಯಾತರಾದವರು.

1940: ಕಲಾವಿದ ರಾಮಸ್ವಾಮಿ ಐನೂಲಿ ಜನನ.

1938: ಕಲಾವಿದೆ ಪದ್ಮಾ ವೆಂಕಟೇಶ್ ಜನನ.

1930: ಕಲಾವಿದ ಶಂಕರರಾವ್ ಗಾಯಕ್ ವಾಡ್ ಜನನ.

1928: ಕಲಾವಿದ ಈಶ್ವರಪ್ಪ ಜಿ. ಮಿಣಜಗಿ ಜನನ.

1923: ಚಿತ್ತರಂಜನ್ ದಾಸ್ ಮತ್ತು ಮೋತಿಲಾಲ್ ನೆಹರೂ ಸ್ವರಾಜ್ ಪಕ್ಷವನ್ನು ಸ್ಥಾಪಿಸಿದರು.

1918: ಕಲಾವಿದ ವಿ. ವೆಂಕಟಸುಬ್ಬರಾವ್ ಜನನ.

1916: ಚದುರಂಗ ಕಾವ್ಯನಾಮದಿಂದ ಖ್ಯಾತರಾಗಿರುವ ಎಂ. ಸುಬ್ರಹ್ಮಣ್ಯರಾಜ ಅರಸು (1-1-1916-19-10-1998) ಅವರು ಹುಟ್ಟಿದ ದಿನ. ವಿದ್ಯಾರ್ಥಿ ದೆಸೆಯಿಂದಲೇ ಬರವಣಿಗೆ ರೂಢಿಸಿಕೊಂಡ ಅರಸು ಅವರ ಮೊದಲ ಕಥಾ ಸಂಕಲನ ಸ್ವಪ್ನ ಸುಂದರಿ ಪ್ರಕಟವಾದದ್ದು 1944ರಲ್ಲಿ. ಆ ನಂತರ ಅವರು ಬರೆದ ಇಣುಕು ನೋಟ, ಶವದ ಮನೆ, ಬಂಗಾರದ ಗೆಜ್ಜೆ, ಮೀನಿನ ಹೆಜ್ಜೆ, ಬಣ್ಣದ ಬೊಂಬೆ ಕಥಾ ಸಂಕಲನ ಇವೆಲ್ಲ ಚದುರಂಗರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟವು. 1950ರಲ್ಲಿ ಅವರ ಸರ್ವಮಂಗಳ ಮೊದಲ ಕಾದಂಬರಿ ಪ್ರಕಟವಾಯಿತು. ಕಾದಂಬರಿ ಲೋಕದಲ್ಲಿ ಹೊಸ ಅಲೆಗೆ ಇದು ನಾಂದಿ ಹಾಡಿತು. ಅವರ ಎರಡನೇ ಕಾದಂಬರಿ ಉಯ್ಯಾಲೆ. ನಂತರ ಬರೆದದ್ದು ಮಹತ್ವಾಕಾಂಕ್ಷೆಯ ವೈಶಾಖ. ಇಲಿಬೋನು ಮತ್ತು ಕುಮಾರ ರಾಮ ಅವರಿಂದ ರಚಿತವಾದ ನಾಟಕವಾದರೆ, ನಂಜುಂಡ ಕವಿಯ ರಾಮನಾಥ ಚರಿತೆ ಚದುರಂಗರ ಕಾವ್ಯ. ಮಂಡ್ಯದ 63ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿಗಳು ಅವರಿಗೆ ಬಂದಿವೆ. ಚಲನಚಿತ್ರವಾದ ಸರ್ವಮಂಗಳ ಮತ್ತು ಉಯ್ಯಾಲೆಗೂ ಚಲನಚಿತ್ರ ಪ್ರಶಸ್ತಿಗಳು ಬಂದವು. ಜಯಚಾಮರಾಜ ಒಡೆಯರ್ ಓರಗೆಯವರಾದ ಸುಬ್ರಹ್ಮಣ್ಯರಾಜ ಅರಸು ಅವರ ಹುಟ್ಟೂರು ಮೈಸೂರು ಜಿಲ್ಲೆಯ ಕಲ್ಲಹಳ್ಳಿ. ತಂದೆ ಮುದ್ದುರಾಜ ಅರಸು, ತಾಯಿ ಗೌರಮ್ಮಣ್ಣಿ. ಮೈಸೂರು ಅರಸು ಮನೆತನದ ಸಂಬಂಧ. ಮೈಸೂರು ರಾಯಲ್ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಬೆಂಗಳೂರು ಇಂಟರ್ ಮೀಡಿಯೆಟ್ ಕಾಲೇಜುಗಳಲ್ಲಿ ಶಿಕ್ಷಣ. ವೈದ್ಯರಾಗಬೇಕೆಂಬ ಆಸೆ ಇದ್ದರೂ ಸೇರಿದ್ದು ಪುಣೆಯಲ್ಲಿ ಕಾನೂನು ಮತ್ತು ಎಂ. ಎ. ಕಲಿಯಲು. ಆದರೆ ಕಾರಣಾಂತರಗಳಿಂದ ವಿದ್ಯಾಭ್ಯಾಸ ಸ್ಥಗಿತ.

1894: ಪಶ್ಚಿಮ ಬಂಗಾಳದ ಕಲ್ಕತ್ತದಲ್ಲಿ (ಈಗ ಕೋಲ್ಕತ) ಈ ದಿನ ಖ್ಯಾತ ಭೌತವಿಜ್ಞಾನಿ ಸತ್ಯೇಂದ್ರನಾಥ ಬೋಸ್ ಜನಿಸಿದರು. ಪ್ರಸಿದ್ಧ ವಿಜ್ಞಾನಿ ಐನ್ ಸ್ಟೀನ್ ಜೊತೆಗೆ ಇವರು ವಿವಿಧ ಸಂಶೋಧನೆಗಳಲ್ಲಿ ತೊಡಗಿದ್ದರು. ಢಾಕಾ ವಿಶ್ವ ವಿದ್ಯಾಲಯದಲ್ಲಿ ಉಪನ್ಯಾಸಕರಾಗಿದ್ದಾಗ ಬೆಳಕಿನ ಮೇಲೆ ಹೆಚ್ಚಿನ ಸಂಶೋಧನೆ ನಡೆಸಿದರು. 1924ರಲ್ಲಿ ಉಪನ್ಯಾಸಕ ಹುದ್ದೆ ಬಿಟ್ಟು ಯುರೋಪಿಗೆ ತೆರಳಿದರು. ಅಲ್ಲಿ ಹೆಚ್ಚಿನ ಅಧ್ಯಯನ ನಡೆಸಿದರು. ಭೌತಶಾಸ್ತ್ರದೊಂದಿಗೆ ಗಣಿತ, ರಸಾಯನ, ಭೂಗರ್ಭಶಾಸ್ತ್ರ, ಜೀವ ವಿಜ್ಞಾನವನ್ನು ತಮ್ಮ ಸಂಶೋಧನೆಯಲ್ಲಿ ಬಳಸಿದರು. 1944ರಲ್ಲಿ ಇಂಡಿಯನ್ ಸೈನ್ಸ್ ಕಾಂಗ್ರೆಸ್ಸಿನ ಅಧ್ಯಕ್ಷರಾದರು. 1974ರ ಫೆಬ್ರುವರಿ 4ರಂದು ನಿಧನರಾದರು.

1877: ವಿಕ್ಟೋರಿಯಾ ರಾಣಿಯನ್ನು `ಭಾರತದ ರಾಣಿ' ಎಂಬುದಾಗಿ ಘೋಷಿಸಲಾಯಿತು.

1862: `ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ' (ಇಂಡಿಯನ್ ಪೀನಲ್ ಕೋಡ್) ಜಾರಿಗೆ ಬಂತು.

1582: ಫ್ರಾನ್ಸ್ ಪೋರ್ಚುಗಲ್ ಇಟಲಿ ಮತ್ತು ಸ್ಪೇನ್ ರಾಷ್ಟ್ರಗಳಲ್ಲಿ ಗ್ರೆಗೋರಿಯನ್ ಕ್ಯಾಲೆಂಡರನ್ನು ಅಂಗೀಕರಿಸಿ ಈ ದಿನವನ್ನು `ಹೊಸ ವರ್ಷದ ದಿನ' ಎಂಬುದಾಗಿ ಮೊತ್ತ ಮೊದಲ ಬಾರಿಗೆ ಮಾನ್ಯತೆ ನೀಡಲಾಯಿತು. ಗ್ರೇಟ್ ಬ್ರಿಟನ್ ಗ್ರೆಗೋರಿಯನ್ ಕ್ಯಾಲೆಂಡರನ್ನು 1752ರಲ್ಲಿ ಅಂಗೀಕರಿಸಿತು.

No comments:

Post a Comment