Monday, December 4, 2017

ಇಂದಿನ ಇತಿಹಾಸ History Today ಡಿಸೆಂಬರ್ 04

ಇಂದಿನ ಇತಿಹಾಸ History Today ಡಿಸೆಂಬರ್  04
2017: ಮುಂಬೈದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಖ್ಯಾತ ನಟ ಶಶಿಕಪೂರ್ (79ವರ್ಷ) ವಿಧಿವಶರಾದರು.   ಮುಂಬೈನ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿರುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ. 1970ರ ದಶಕದಲ್ಲಿ ಚಿತ್ರರಸಿಕರ ಮನಗೆದ್ದಿದ್ದ ಶಶಿ ಕಪೂರ್ ಅವರು, ಭಾರತ ಸರ್ಕಾರದಿಂದ 2011ರಲ್ಲಿ ಪದ್ಮಭೂಷಣ ಪ್ರಶಸ್ತಿ ಪಡೆದಿದ್ದರು. 2015ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಗೆ ಪಾತ್ರರಾಗಿದ್ದರು.  1986ರಲ್ಲಿ ಹೊಸದಿಲ್ಲಿ ಟೈಮ್ಸ್ ಉತ್ತಮ ನಟನೆಗೆ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯನ್ನು ಪಡೆದಿದ್ದರು. ಅವರ ದೀವಾರ್, ಜನೂನ್, ಕಲಿಯುಗ್ ಚಿತ್ರಗಲು ಫಿಲಂಫೇರ್ ಪ್ರಶಸ್ತಿಗೆ ಭಾಜನವಾಗಿದ್ದವು. 1938 ಮಾರ್ಚ್ 18ರಂದು ಶಶಿ ಕಪೂರ್ ಜನಿಸಿದ್ದರು. ಸುಮಾರು 175 ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ನಟಿಸಿದ್ದರು.  ಸುಹಾಗ್,  ಜೂನೂನ್, ವಿಜೇತ, ಉತ್ಸವ್ ಸೇರಿದಂತೆ ಹಲವು ಸಿನಿಮಾಗಳು ಅವರಿಗೆ ಹೆಸರು ತಂದುಕೊಟ್ಟಿದ್ದವು. 1991ರಲ್ಲಿ ಅಮಿತಾಬ್ ಬಚ್ಚನ್ ನಟನೆಯ ಅಜೂಬಾ ಸಿನಿಮಾವನ್ನು ಶಶಿಕಪೂರ್ ಅವರು ಮೊಟ್ಟ ಮೊದಲ ಬಾರಿಗೆ ನಿರ್ದೇಶಿಸಿದ್ದರು. ಅಲ್ಲದೇ ಶಶಿಕಪೂರ್ ಅವರು ರಿಟರ್ನ್ ಆಫ್ ಥೀಫ್ ಆಫ್ ಬಗ್ದಾದ್ ಎಂಬ ಸಿನಿಮಾವನ್ನು  ರಷ್ಯನ್ ಭಾಷೆಯಲ್ಲಿ 1988ರಲ್ಲಿ ನಿರ್ದೇಶಿಸಿದ್ದರು. ಬಾಲನಟನಾಗಿ ಸಿನಿಮಾ ರಂಗಕ್ಕೆ ಪ್ರವೇಶಿಸಿದ್ದ ಶಶಿ ಕಪೂರ್ ಅವರು ತನ್ನ ಸಹೋದರ ರಾಜ್ ಕಪೂರ್ ಜತೆಯಲ್ಲಿ 1948ರಲ್ಲಿ ಆಗ್ ಸಿನಿಮಾದಲ್ಲಿ ಕಾರ್ಯನಿರ್ವಹಿಸಿದ್ದರು. 1951ರಲ್ಲಿ ಸೂಪರ್ ಹಿಟ್ ಆದ ಆವಾರ್ ದಲ್ಲಿಯೂ ಇಬ್ಬರೂ ಜತೆಯಾಗಿಯೇ ಚಿತ್ರಕ್ಕಾಗಿ ದುಡಿದಿದ್ದರು. ಕುನಾಲ್ ಕಪೂರ್, ಸಂಜನಾ ಕಪೂರ್ ಮತ್ತು ಕರಣ್ ಕಪೂರ್ ಶಶಿ ಕಪೂರ್ಅವರ ಮಕ್ಕಳು. ಶಶಿಕಪೂರ್ಬಸೇರಾ’, ‘ಪಿಘಲ್ತಾ ಆಸ್ಮಾನ್ಸೇರಿದಂತೆ ಹಲವು ಚಿತ್ರಗಳಲ್ಲಿ ಶಶಿ ಕಪೂರ್ ಅಭಿನಯಿಸಿದ್ದರುಅಮಿತಾಬ್ ಬಚ್ಚನ್ ಜತೆಗೆ ದೀವಾರ್, ದೋ ಔರ್ ದೋ ಪಾಂಚ್ ಮತ್ತು ನಮಕ್ ಹಲಾಲ್ ಚಿತ್ರಗಳಲ್ಲಿ ಶಶಿ ಕಪೂರ್ ನಟಿಸಿದ್ದರು. ಹಿರಿಯ ನಟ ಶಶಿ ಕಪೂರ್ ನಿಧನಕ್ಕೆ ಬಾಲಿವುಡ್ ಗಣ್ಯರು ಸಂತಾಪ ವ್ಯಕ್ತಪಡಿಸಿದರು.


2017: ಬೆಂಗಳೂರು: ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಅವರನ್ನುಬಸವ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಉಮಾಶ್ರೀ ತಿಳಿಸಿದರು. ನ್ಯಾಯಮೂರ್ತಿ ವಿ. ಪಾಟೀಲ್ನೇತೃತ್ವದ ಆಯ್ಕೆ ಸಮಿತಿ ಪಾಟೀಲ ಪುಟ್ಟಪ್ಪ ಅವರನ್ನು ಆಯ್ಕೆಮಾಡಿದ್ದು, ಪ್ರಶಸ್ತಿ ಪ್ರದಾನ ದಿನಾಂಕವನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು ಎಂದು ಅವರು ಹೇಳಿದರು.

2017: ಬರ್ಲಿನ್‌ : ಗೋಡೆ ಕೆಡಹುವ, ಕಿಟಕಿ ಮುರಿಯುವ ದರೋಡೆಕೋರರ ಸಂಚನ್ನು ವಿಫಲಗೊಳಿಸುವ
ಸ್ಮಾರ್ಟ್ಅಲಾರಾಂವ್ಯವಸ್ಥೆಯನ್ನು ಕಂಡು ಹಿಡಿದಿರುವುದಾಗಿ ವಿಜ್ಞಾನಿಗಳು ಪ್ರಕಟಿಸಿದರು.  ಜರ್ಮನಿಯ ಫ್ರೌನ್ಹೋಫರ್‌– ಗೆಸೆಲ್ಶ್ಯಾಫ್ಟ್ಸಂಸ್ಥೆಯ ಸಂಶೋಧಕರು ಅಭಿವೃದ್ಧಿಪಡಿಸಿರುವ ಕರೆಗಂಟೆಯು, ಉಷ್ಣಾಂಶದಲ್ಲಿನ ಬದಲಾವಣೆ, ಕಿಟಕಿಗಳ ಕಂಪನಗಳನ್ನು ಪತ್ತೆ ಹಚ್ಚಿ ಸದ್ದು ಮಾಡುತ್ತದೆ. ಕಲಾ ಗ್ಯಾಲರಿ, ಆಭರಣ ಮಳಿಗೆ ಹಾಗೂ ಬ್ಯಾಂಕ್ಗಳು ರಕ್ಷಣೆಗಾಗಿ ಅಲಾರಾಂ ಹಾಗೂ ಗಾಜಿನ ರಕ್ಷಣಾ ಕವಚ ಅಳವಡಿಸಿಕೊಳ್ಳಬಹುದು. ಕಟಿಂಗ್ಟಾರ್ಚ್ಅಥವಾ ಡ್ರಿಲ್ಮೂಲಕ ಗಾಜನ್ನು ಹಾನಿಗೊಳಿಸಲು ಪ್ರಯತ್ನಿಸಿದರೆ ಈಗಿನ ರಕ್ಷಣಾ ವ್ಯವಸ್ಥೆಯು ತಡವಾಗಿ ಪ್ರತಿಕ್ರಿಯಿಸುತ್ತದೆ ಅಥವಾ ಪ್ರತಿಕ್ರಿಯಿಸುವುದೇ ಇಲ್ಲ. ಇದನ್ನೇ ಬಂಡವಾಳ ಮಾಡಿಕೊಳ್ಳುತ್ತಿರುವ ದರೋಡೆಕೋರರು, ಹ್ಯಾಮರ್ಗೆ ಬದಲಾಗಿ ಇಂತಹ ವಸ್ತುಗಳನ್ನೇ ಗಾಜು ಒಡೆಯಲು ಬಳಸುತ್ತಿದ್ದಾರೆ. ಆದರೆ ಹೊಸ ರಕ್ಷಣಾ ಕವಚದ ಮೇಲೆ ನಿಧಾನಕ್ಕೆ ಗುದ್ದಿದರೂ ಇದು ಕೂಡಲೇ ಸದ್ದು ಮಾಡುತ್ತದೆ.

2016: ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರಿಗೆ ಹೃದಯಾಘಾತವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎಂದು ಚೆನ್ನೈನ ಅಪೋಲೊ ಆಸ್ಪತ್ರೆ ವೈದ್ಯರು ತಿಳಿಸಿದರು. ಈ ದಿನ ಸಂಜೆ ಜಯಲಲಿತಾ ಅವರಿಗೆ ಹೃದಯಾಘಾತವಾಗಿದೆ. ತಜ್ಞ ವೈದ್ಯರು ಅವರಿಗೆ ಚಿಕಿತ್ಸೆ  
ನೀಡುತ್ತಿದ್ದಾರೆ ಎಂದು ಅಪೋಲೊ ಆಸ್ಪತ್ರೆ ಪ್ರಕಟಣೆಯಲ್ಲಿ ತಿಳಿಸಿತು. ಸೆಪ್ಟೆಂಬರ್  22 ರಂದು ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾ ಅವರು ಈವರೆಗೂ ಅಲ್ಲೇ  ಇದ್ದರು. 
ಜಯಲಲಿತಾ ಅವರಿಗೆ ಹೃದಯಾಘಾತವಾಗಿದೆ ಎಂಬ ಸುದ್ದಿ ಹಬ್ಬುತ್ತಿದ್ದಂತೆ ಚೆನ್ನೈನ ಅಪೋಲೊ            ಆಸ್ಪತ್ರೆಯ ಎದುರು ಸಾವಿರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದರು.
2016: ಚೆನ್ನೈ/ನವದೆಹಲಿ: ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಆರೋಗ್ಯ ಸ್ಥಿತಿಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ರಾಜ್ಯಪಾಲ ವಿದ್ಯಾಸಾಗರ್ ರಾವ್ ಅವರಿಂದ ಮಾಹಿತಿ ಪಡೆದರು. ವಿದ್ಯಾಸಾಗರ್ ರಾವ್ ಅವರು ದೂರವಾಣಿ ಮೂಲಕ ಮೋದಿ ಅವರಿಗೆ      ಮಾಹಿತಿ ನೀಡಿದ್ದಾರೆ ಎನ್ನಲಾಯಿತು.  ಜಯಲಲಿತಾ ಅವರ ಆರೋಗ್ಯದಲ್ಲಿ ಏರುಪೇರಾಗಿರುವ ನಂತರದ ಬೆಳವಣಿಗೆಗಳ ಬಗ್ಗೆ ಚರ್ಚಿಸಲು ತಮಿಳುನಾಡು ಸರ್ಕಾರ ತುರ್ತು ಸಂಪುಟ ಸಭೆ ನಡೆಸಿತು. ಜಯಲಲಿತಾ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಹೈಲರ್ಟ್ ಘೋಷಿಸಲಾಯಿತು. ತಮಿಳು ಭಾಷಿಗರು ಹೆಚ್ಚಿರುವ ಪ್ರದೇಶಗಳಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದರು.
.
2016: ನವದೆಹಲಿ: 20 ರೂ. ಮತ್ತು 50 ರೂ. ಹೊಸ ನೋಟುಗಳನ್ನು ಶೀಘ್ರ ಬಿಡುಗಡೆ ಮಾಡಲಾಗುವುದು, ನೋಟುಗಳಲ್ಲಿ ಮುದ್ರಣಗೊಂಡ ವರ್ಷವನ್ನು ಮುಂಭಾಗದಲ್ಲಿ ನಮೂದಿಸಲಾಗುವುದು, ಹಳೆಯ ನೋಟುಗಳು ರದ್ದಾಗುವುದಿಲ್ಲ ಅವು ಚಲಾವಣೆಯಲ್ಲಿ ಮುಂದುವರೆಯಲಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತನ್ನ ಪ್ರಕಟಣೆಯಲ್ಲಿ ತಿಳಿಸಿತು. ಹೊಸ ನೋಟುಗಳು ಹಾಲಿ ಆರ್ಬಿಐ ಗವರ್ನರ್ ಉರ್ಜಿತ್ ಪಟೇಲ್ ಅವರ ಸಹಿಯನ್ನು ಒಳಗೊಂಡಿರುತ್ತದೆ. ಹಳೆಯ 20 ಮತ್ತು 50 ರೂ. ನೋಟುಗಳಲ್ಲಿರುವ ಸುರಕ್ಷತಾ ಕ್ರಮಗಳನ್ನು ಒಳಗೊಂಡಿರಲಿದೆ ಎಂದು ಆರ್ಬಿಐ ಹೇಳಿತು. 500 ರೂ. ಮತ್ತು 1000 ರೂ. ನೋಟುಗಳ ರದ್ದತಿಯ ನಂತರ ಉಂಟಾಗಿರುವ ಚಿಲ್ಲರೆ ಸಮಸ್ಯೆಯನ್ನು ಸರಿದೂಗಿಸಲು ಆರ್ಬಿಐ ಕ್ರಮ ತೆಗೆದುಕೊಂಡಿತು.
2016: ನವದೆಹಲಿ: 2016 ಅಕ್ಟೋಬರ್ 1ರಂದು ಪ್ರಕಟಿಸಲಾಗಿದ್ದ ಸ್ವಯಂ ಕಾಳಧನ ಘೋಷಣೆ ಯೋಜನೆಯ ಅಡಿಯಲ್ಲಿ ದಾಖಲೆಗೆ ಸೇರ್ಪಡೆಯಾಗಿರುವ ನೈಜ ಘೋಷಣೆಯ ಪರಿಷ್ಕೃತ ಅಂಕಿ ಸಂಖ್ಯೆಯ ಪ್ರಕಾರ ಒಟ್ಟು ಘೋಷಿತ ಕಪ್ಪು ಧನದ ಮೊತ್ತ 67,382 ಕೋಟಿ ರೂಪಾಯಿ ಎಂದು ಆದಾಯ ತೆರಿಗೆ ಇಲಾಖೆ ಪ್ರಕಟಿಸಿತು. ಹಿಂದೆ ಘೋಷಿತ ಕಾಳಧನದ ಮೊತ್ತ 65250 ಕೋಟಿ ರೂಪಾಯಿ ಎಂದು ಪ್ರಕಟಿಸಲಾಗಿದ್ದು, ಇಲಾಖೆಯು ಅದನ್ನು ಈಗ ಪರಿಷ್ಕರಿಸಿತು. ಮುಂಬೈ ಮತ್ತು ಅಹಮದಾಬಾದಿನಲ್ಲಿ ಸಲ್ಲಿಕೆಯಾದ ಎರಡು ಕಾಳಧನ ಘೋಷಣೆಗಳನ್ನು ತನಿಖೆ ಸಲುವಾಗಿ ಬಾಕಿ ಇರಿಸಲಾಗಿದ್ದು, ಘೋಷಣೆಗಳ ಮೊತ್ತವನ್ನು ಒಟ್ಟು ಘೋಷಿತ ಕಾಳಧನದ ಮೌಲ್ಯಕ್ಕೆ ಸೇರ್ಪಡೆ ಮಾಡಲಾಗಿಲ್ಲ ಎಂದು ಇಲಾಖಾ ಮೂಲಗಳು ತಿಳಿಸಿದವು.
2016: ನವದೆಹಲಿ: ಆದಾಯ ಘೋಷಣಾ ಯೋಜನೆಯಡಿಯಲ್ಲಿ ಸಲ್ಲಿಸಲಾಗಿದ್ದ 2 ಲಕ್ಷ ಕೋಟಿ ರೂಪಾಯಿ ಮೌಲ್ಯದ ಕಪ್ಪುಹಣ ಘೋಷಣೆಯ ಒಂದು ಪ್ರತಿಯನ್ನು ಆದಾಯ ತೆರಿಗೆ ಇಲಾಖೆಯು ತಿರಸ್ಕರಿಸಿ, ತನಿಖೆಗಾಗಿ ಬಾಕಿ ಇರಿಸಿತು. ಮುಂಬೈಯ ನಾಲ್ಕು ಮಂದಿ ಸದಸ್ಯರು ಇರುವ ಕುಟುಂಬವೊಂದು 2 ಲಕ್ಷ ಕೋಟಿ ರೂಪಾಯಿ ಕಪ್ಪುಹಣವನ್ನು ಘೋಷಣಾ ಯೋಜನೆಯ ಅಡಿಯಲ್ಲಿ ಘೋಷಿಸಿತ್ತು. ಆದಾಯ ತೆರಿಗೆ ಅಧಿಕಾರಿಗಳು ಬಗ್ಗೆ ತನಿಖೆಗಳನ್ನು ನಡೆಸಿದ್ದರು. ಮುಂಬೈಯ ಅಬ್ದುಲ್ ರಜಾಕ್ ಮೊಹಮ್ಮದ್ ಸಯೀದ್ (ಘೋಷಣೆದಾರ), ಮೊಹಮ್ಮದ್ ಆರಿಫ್ ಅಬ್ದುಲ್ ರಜಾಕ್ ಸಯೀದ್ (ಮಗ), ಶ್ರೀಮತಿ ರುಕ್ಸಾನಾ ಅಬ್ದುಲ್ ರಜಾಕ್ ಸಯೀದ್ (ಪತ್ನಿ) ಮತ್ತು ನೂರ್ ಜಹಾಂ ಮೊಹಮ್ಮದ್ ಸಯೀದ್ (ಸಹೋದರಿ) ನಾಲ್ವರು ಒಟ್ಟು 2 ಲಕ್ಷ ಕೋಟಿ ರೂಪಾಯಿಗಳ ಕಾಳಧನ ಹೊಂದಿರುವುದಾಗಿ ಸ್ವಯಂ ಆದಾಯ ಘೋಷಣೆ ಅಡಿಯಲ್ಲಿ ಘೋಷಿಸಿದ್ದರು. ಇನ್ನೊಂದು ಆದಾಯ ತೆರಿಗೆ ಘೋಷಣೆಯಲ್ಲಿ ಅಹಮದಾಬಾದ್ ನಿವಾಸಿ ಮಹೇಶಕುಮಾರ್ ಚಂಪಕಲಾಲ್ ಷಾ ಅವರು 13,860 ಕೋಟಿ ರೂಪಾಯಿ ಮೊತ್ತದ ಕಾಳಧನವನ್ನು ಘೋಷಿಸಿದ್ದರು. ತನಿಖೆಯ ಬಳಿಕ ವ್ಯಕ್ತಿಗಳು ಸಂಶಯಾಸ್ಪದ ವ್ಯಕ್ತಿಗಳಾಗಿದ್ದು, ಸಣ್ಣ ಪ್ರಮಾಣದ ಆದಾಯ ಮೂಲಗಳನ್ನು ಹೊಂದಿದ್ದಾರೆ ಮತ್ತು ಆದಾಯ ಘೋಷಣೆ ಯೋಜನೆಯನ್ನು ದುರುಪಯೋಗಿಸಿಕೊಂಡಿರಬಹುದು ಎಂಬುದು ಕಂಡು ಬಂತು ಎಂದು ಆದಾಯ ತೆರಿಗೆ ಮೂಲಗಳು ತಿಳಿಸಿದವು.
2016: ನವದೆಹಲಿ: ಜನಧನ ಖಾತೆಗಳಿಗೆ ಕಳೆದ 1 ವಾರದಲ್ಲಿ ಜಮಾ ಆಗಿರುವ ಮೊತ್ತದಲ್ಲಿ ಇಳಿಕೆ ಕಂಡು ಬಂದಿತು. ನವೆಂಬರ್ 30 ಕ್ಕೆ ಕೊನೆಗೊಂಡ ವಾರದಲ್ಲಿ ಕೇವಲ 1,487 ಕೋಟಿ ರೂ. ಜನಧನ ಖಾತೆಗಳಲ್ಲಿ ಜಮೆಯಾಗಿದೆ ಎಂದು ಹಣಕಾಸು ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿತು. ಅದಕ್ಕೂ ಹಿಂದಿನ ವಾರ ಒಟ್ಟು 8,283 ಕೋಟಿ ರೂ. ಜನಧನ ಖಾತೆಗೆ ಜಮೆಯಾಗಿತ್ತು. ನೋಟು ರದ್ಧತಿಯ ನಂತರ ನವೆಂಬರ್ 23ರವರೆಗೆ 25.68 ಕೋಟಿ ಜನಧನ ಖಾತೆಗಳಲ್ಲಿ ಒಟ್ಟು 72,834.72 ಕೋಟಿ ರೂ. ಜಮೆಯಾಗಿತ್ತು. ನವೆಂಬರ್ 30 ಕ್ಕೆ 25.85 ಕೋಟಿ ಖಾತೆಗಳಲ್ಲಿ 74,321.55 ಕೋಟಿ ರೂ. ಜಮೆಯಾಯಿತು.  ನೋಟು ರದ್ಧತಿ ಘೋಷಣೆಯಾದ ಮೊದಲೆರಡು ದಿನಗಳಲ್ಲಿ ಜನಧನ ಖಾತೆಗಳಿಗೆ 45,636.61 ಕೋಟಿ ರೂ. ಹರಿದು ಬಂದಿತ್ತು ಎಂದು ಹಣಕಾಸು ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿತು. ಜನಧನ ಖಾತೆಗಳಿಗೆ ಹೆಚ್ಚಿನ ಹಣ ಹರಿದು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ ಹಣ ವಾಪಸ್ಸು ಪಡೆಯುವ ಮಿತಿಯನ್ನು ತಗ್ಗಿಸಿತು. ಜತೆಗೆ ಕಾಳಧನಿಕರು ಜನಧನ ಖಾತೆಯ ಮೂಲಕ ಹಣವನ್ನು ಬದಲಿಸಿಕೊಳ್ಳಲು ಮುಂದಾದರೆ ಅಂತಹವರನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದರು.
2016: ಬ್ಯಾಂಕಾಕ್: ಬ್ಯಾಂಕಾಕಿನಲ್ಲಿ ನಡೆದ ಟಿ-20 ಪಂದ್ಯದ ಫೈನಲ್ನಲ್ಲಿ ಪಾಕಿಸ್ತಾನವನ್ನು 17 ರನ್ನುಗಳಿಂದ  ಪರಾಭವಗೊಳಿಸುವ ಮೂಲಕ ಭಾರತದ ಮಹಿಳಾ ಕ್ರಿಕೆಟ್ ತಂಡವು ಸತತ 6ನೇ ಬಾರಿಗೆ ಏಷ್ಯಾ ಕಪ್ಪನ್ನು  ಗೆದ್ದುಕೊಂಡಿತು. ಇಲ್ಲಿ ನಡೆದ ಪ್ರಾದೇಶಿಕ ಪಂದ್ಯದಲ್ಲಿ ಪಾಕಿಸ್ತಾನವನ್ನು 17 ರನ್ನುಗಳಿಂದ ಪರಾಭವಗೊಳಿಸುವ ಮೂಲಕ ಏಷ್ಯಾ ಕಪ್ ಟಿ-20 ಚಾಂಪಿಯನ್ ಷಿಪ್ಪನ್ನು ಭಾರತದ ವನಿತೆಯರು 6ನೇ ಬಾರಿಗೆ ತಮ್ಮ ಬಗಲಿಗೆ ಏರಿಸಿಕೊಂಡರು. ಮೊದಲಿಗೆ ಬ್ಯಾಟಿಂಗ್ ಆರಿಸಿಕೊಂಡ ಭಾರತ 5 ವಿಕೆಟ್ ನಷ್ಟಕ್ಕೆ 121 ರನ್ ಪೇರಿಸಿತು. ಮೈಥಿಲಿ ರಾಜ್ ಅಜೇಯರಾಗಿ ಕೊನೆಯವರೆಗೂ ಉಳಿದು 73 ರನ್ ಬಾಚಿಕೊಂಡರು. ಜುಲಿಯನ್ ಗೋಸ್ವಾಮಿ 17 ರನ್ ಗಳಿಸಿದರು.  ಇದಕ್ಕೆ ಉತ್ತರವಾಗಿ ಪಾಕಿಸ್ತಾನದ ಆಯೇಶಾ ಜಾಫರ್ (15), ಜವೀರಿಯಾ ಖಾನ್ (22) ಮತ್ತು ಬಿಸ್ಮಾಹ್ ಮರೂಫ್ 25 ರನ್ ಗಳಿಸಿದರಾದರೂ ಭಾರತದ ವನಿತೆಯರನ್ನು ಹಿಂದಿಕ್ಕಲಾಗಲಿಲ್ಲ. ಒಟ್ಟು 6 ವಿಕೆಟ್ ಕಳೆದುಕೊಂಡ ಪಾಕಿಸ್ತಾನಕ್ಕೆ 104 ರನ್ ಗಳಿಸಲಷ್ಟೇ ಸಾಧ್ಯವಾಯಿತು..
2016: ನವದೆಹಲಿ: 500 ಮತ್ತು 1000 ರೂಪಾಯಿ ನೋಟು ರದ್ದತಿ ಹಿನ್ನೆಲೆಯಲ್ಲಿ ಮಾರಾಟ ಸ್ಥಳಗಳಲ್ಲಿ ಮೈಕ್ರೋ-ಎಟಿಎಂ ಬಳಕೆ ಹೆಚ್ಚುತ್ತಿರುವ ಬೆನ್ನಲ್ಲೇ ವ್ಯವಸ್ಥೆಗಳ ಮೇಲೆ ಮಾಹಿತಿ ಕಳವು ಹಾಗೂ ದುರುದ್ದೇಶಪೂರಿತ ಸಾಫ್ಟವೇರ್ ದಾಳಿ (ಮೆಲಾಷಿಯಸ್ ಸಾಫ್ಟ್ವೇರ್- ಮಾಲ್ವೇರ್) ಸಾಧ್ಯತೆಗಳಿವೆ ಎಂದು ದೇಶದ ಮುಂಚೂಣಿ ಸೈಬರ್ ಭದ್ರತಾ ಸಂಸ್ಥೆ ಸಿಇಆರ್ಟಿ-ಇನ್ ಗ್ರಾಹಕರು, ಬ್ಯಾಂಕರುಗಳು ಮತ್ತು ವರ್ತಕರಿಗೆ ಎಚ್ಚರಿಕೆ ನೀಡಿತು. ಇಂತಹ ದಾಳಿಗಳಿಂದ ರಕ್ಷಿಸಿಕೊಳ್ಳಲು ಹೈ ಎಂಡ್ ಎನ್ಕ್ರಿಪ್ಷನ್ ಅಳವಡಿಸಿಕೊಳ್ಳಿ ಎಂದು ಸಿಇಆರ್ಟಿ -ಇನ್ ಸಲಹೆ ಮಾಡಿತು. ಭಾರತೀಯ ಇಂಟರ್ನೆಟ್ ಡೊಮೈನ್ ರಕ್ಷಣೆಗೆ ಸಂಬಂಧಿಸಿದಂತೆ ಭದ್ರತಾ ವ್ಯವಸ್ಥೆ ನೋಡಿಕೊಳ್ಳುತ್ತಿರುವ ಸಿಇಆರ್ಟಿ ಇನ್ ಹ್ಯಾಕಿಂಗ್ ಮತ್ತಿತರ ಸಾಫ್ಟವೇರ್ ದಾಳಿಗಳ ವಿರುದ್ಧ ಕಾರ್ಯಾಚರಿಸುತ್ತಿರುವ ಸರ್ಕಾರಿ ನೋಡಲ್ ಸಂಸ್ಥೆಯಾಗಿದೆ. ಮೈಕ್ರೊ-ಆಟೋಮೇಟೆಡ್ ಟೆಲ್ಲರ್ ಮೆಷಿನ್ (ಎಟಿಎಂ) ಮತ್ತು ಪಿಒಎಸ್ ಟರ್ಮಿನಲ್ಗಳಿಗೆ ಭದ್ರತೆ ಸಂಬಂಧಿತ ಸಲಹೆಗಳನ್ನು ನೀಡಿತು. ಮೈಕ್ರೋ -ಎಟಿಎಂಗಳು ಅತ್ಯಂತ ಕಡಿಮೆ ವಿದ್ಯುತ್ತಿನಲ್ಲಿ ಕಾರ್ಯ ನಿರ್ವಹಿಸಬೇಕು ಮತ್ತು ಕೇಂದ್ರ ಬ್ಯಾಂಕಿಂಗ್ ಸರ್ವರ್ಗಳ ಜೊತೆಗೆ ಜಿಪಿಆರ್ಎಸ್ ಜಾಲದ ಮೂಲಕ ಸಂಪರ್ಕ ಹೊಂದಿರಬೇಕು. ಹ್ಯಾಕರ್ಗಳ ಪ್ರಯತ್ನಗಳನ್ನು ತಡೆಯಲು ಕಾಲ ಕಾಲಕ್ಕೆ ಅಗತ್ಯವಾದ ಭದ್ರತಾ ವ್ಯವಸ್ಥೆಗಳನ್ನು ನವೀಕರಿಸುತ್ತಿರಬೇಕು ಎಂದು ಸಿಇಆರ್ಟಿ -ಇನ್ ಸೂಚಿಸಿದೆ. ಹ್ಯಾಕರ್ಗಳು ಖಾಸಗಿ ಗ್ರಾಹಕನಿಗೆ ಸಂಬಂಧಿಸಿದ ಮಾಹಿತಿ ಹಾಗೂ ಬ್ಯಾಂಕಿಗೆ ಸಂಬಂಧಿಸಿದ ಮಾಹಿತಿ ಕಳವು ಮಾಡುವ ದುರುದ್ಧೇಶಪೂರಿತ ಯೋಜನೆಗಳನ್ನು ಹೊಂದಿರುತ್ತಾರೆ ಎಂದು ಸಿಇಆರ್ಟಿ ಹೇಳಿತು. ಇದರಿಂದಾಗಿ ಬ್ಯಾಂಕ್ ಹಾಗೂ ಗ್ರಾಹಕರಿಗೆ ಕಷ್ಟಪಟ್ಟು ಸಂಪಾದಿಸಿದ ಹಣ ನಷ್ಟವಾಗುವ ಸಾಧ್ಯತೆಗಳಿವೆ ಎಂದು ಸಿಇಆರ್ಟಿ ಎಚ್ಚರಿಕೆ ನೀಡಿತು. ಸಾಮಾನ್ಯವಾಗಿ ಪಿಒಎಸ್ ವ್ಯವಸ್ಥೆಯಲ್ಲಿ ಮಾಹಿತಿಯು ಮೆಮೋರಿಯಲ್ಲಿ ಸ್ಪಷ್ಟ ಅಕ್ಷರ ರೂಪದಲ್ಲಿ ಇರುವುದರಿಂದ ದಾಳಿಕೋರರು, ಮೆಮೋರಿ ಕದಿಯುವವರು ಸುಲಭವಾಗಿ ತಮ್ಮ ಕೇಡುಕಾರ್ಯವನ್ನು ಮಾಡಲು ಸಮರ್ಥರಾಗುತ್ತಾರೆ ಎಂದು ಅದು ಹೇಳಿತು.
2016: ಅಮೃತಸರ (ಪಂಜಾಬ್): ಆಫ್ಘಾನಿಸ್ತಾನ ಮತ್ತು ನಮ್ಮ ಪ್ರದೇಶದಲ್ಲಿನ ಭಯೋತ್ಪಾದನೆ ವಿರುದ್ಧ ವಹಿಸುವ ಮೌನ ಮತ್ತು ನಿಷ್ಕ್ರಿಯತೆ ಭಯೋತ್ಪಾದಕರಿಗೆ ಮತ್ತು ಅವರ ದೊರೆಗಳಿಗೆ ಇನ್ನಷ್ಟು ಧೈರ್ಯವನ್ನು ತಂದುಕೊಡುತ್ತದೆ ಅಷ್ಟೆ. ರಕ್ತಪಾತ ಮತ್ತು ಭೀತಿಯನ್ನು ಸೃಷ್ಟಿಸುವ ಭಯೋತ್ಪಾದಕ ಜಾಲಗಳನ್ನು ಪರಾಭವಗೊಳಿಸಲು ನಾವು ಪ್ರಬಲ ಸಾಮೂಹಿಕ ಇಚ್ಛಾಶಕ್ತಿಯನ್ನು ಪ್ರದರ್ಶಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮೃತಸರದಲ್ಲಿ ಕರೆ ನೀಡಿದರು. ನಮ್ಮ ಈದಿನದ ಸಮಾವೇಶವು ಆಫ್ಘಾನಿಸ್ತಾನದಲ್ಲಿ ಸುದೀರ್ಘ ಶಾಂತಿ ಮತ್ತು ಸ್ಥಿರತೆ ಸಾಧಿಸಲು ಅಂತಾರಾಷ್ಟ್ರೀಯ ಸಮುದಾಯದ ಬದ್ಧತೆಯನ್ನು ಮತ್ತೆ ದೃಢ ಪಡಿಸುತ್ತದೆ ಎಂದು ಹಾರ್ಟ್ ಆಫ್ ಏಷ್ಯಾ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತಾ ಪ್ರಧಾನಿ ನುಡಿದರು. ನಮ್ಮ ಮಾತುಗಳು ಮತ್ತು ಕೃತಿಗಳು ಆಫ್ಘಾನಿಸ್ತಾನದ ಪ್ರದೇಶ ಮತ್ತು ಅಲ್ಲಿನ ಜನರನ್ನು ವಿದೇಶೀ ಅಪಾಯಗಳಿಂದ ಪಾರು ಮಾಡುವ , ಅದನ್ನು ಪ್ರಬಲಗೊಳಿಸುವ ನಿಟ್ಟಿನಲ್ಲಿ ಬೆಳಕು ಚೆಲ್ಲುತ್ತದೆ ಎಂದು ಅವರು ಹೇಳಿದರು. ನರೇಂದ್ರ ಮೋದಿ ಅವರ ಮಾತುಗಳಿಗೆ ಸ್ಪಂದಿಸಿದ ಆಫ್ಘನ್ ಅಧ್ಯಕ್ಷ ಡಾ. ಅಶ್ರಫ್ ಘನಿ ಅವರು ನಿಮ್ಮ ಮಾತುಗಳು ಆಫ್ಘಾನಿಸ್ತಾನಕ್ಕೆ 125 ಕೋಟಿ ಭಾರತೀಯ ಜನರ ಬೆಂಬಲ ಮತ್ತು ನೆರವಿನ ಭರವಸೆಯನ್ನು ನೀಡುತ್ತದೆ. ಇದು ಉಭಯ ರಾಷಟ್ರಗಳ ಚಾರಿತ್ರಿಕ ಬಾಂಧವ್ಯವನ್ನು ಇನ್ನಷ್ಟು ವಿಸ್ತರಿಸುತ್ತದೆ ಎಂದು ಹೇಳಿದರು. ವಿಶ್ವಸಂಸ್ಥೆಯು ಹೆಸರಿಸಿರುವ ಸುಮಾರು 30 ಭಯೋತ್ಪಾದಕ ಗುಂಪುಗಳು ಆಫ್ಘಾನಿಸ್ತಾನದಲ್ಲಿ ನೆಲೆ ಸ್ಥಾಪಿಸಿಕೊಳ್ಳಲು ಯತ್ನಿಸುತ್ತಿವೆ ಎಂದು ಅವರು ಆತಂಕ ವ್ಯಕ್ತ ಪಡಿಸಿದರು. ಸಮಾವೇಶವು ಅಮೃತಸರ ಘೋಷಣೆಯನ್ನು ಬಳಿಕ ಅಂಗೀಕರಿಸಿತು.

2016: ಅಹಮದಾಬಾದ್: ಆದಾಯ ಘೊಷಣೆ ಯೋಜನೆ ಅಡಿಯಲ್ಲಿ 13,000 ಕೋಟಿ ರೂಪಾಯಿಗಳಿಗೂ ಹೆಚ್ಚಿನ ಆದಾಯ ಘೋಷಿಸಿ, ಶೇಕಡಾ 25ರಷ್ಟು ಮೊತ್ತವನ್ನು ತೆರಿಗೆ ರೂಪದಲ್ಲಿ ಕಟ್ಟಬೇಕಾದ ಹೊತ್ತಿನಲ್ಲಿ ಕಣ್ಮರೆಯಾಗಿ ಬಳಿಕ ಹಿಂದಿನ ದಿನ ಸಂಜೆ ದಿಢೀರನೆ ಪ್ರತ್ಯಕ್ಷರಾಗಿದ್ದ ಉದ್ಯಮಿ ಮಹೇಶ ಷಹಾ ಅವರನ್ನು ವಶಕ್ಕೆ ತೆಗೆದುಕೊಂಡಿರುವ ಆದಾಯ ತೆರಿಗೆ ಅಧಿಕಾರಿಗಳು ಷಹಾ ಹೇಳಿಕೆಗಳನ್ನು ನಿಯಮಾನುಸಾರ ದಾಖಲಿಸಿಕೊಂಡರುಹೇಳಿಕೆ ದಾಖಲಾತಿ ಬಳಿಕ ಷಹಾ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಷಹಾ ಅವರ ಕುಟುಂಬಕ್ಕೂ ರಕ್ಷಣೆ ಒದಗಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ಜಂಟಿ ನಿರ್ದೇಶಕ ವಿಮಲ್ ಮೀನಾ ಹೇಳಿದರು. ಕಣ್ಮರೆಯಾಗಿದ್ದ ಷಹಾ ಅವರು ಹಿಂದಿನ ಸಂಜೆ ಗುಜರಾತಿನ ಸ್ಥಳೀಯ ಈಟಿವಿ ಗುಜರಾತಿ ವಾಹಿನಿಯಲ್ಲಿ ಸಂದರ್ಶನದಲ್ಲಿ ಪ್ರತ್ಯಕ್ಷರಾಗಿ ಆದಾಯ ಘೋಷಣೆ ಯೋಜನೆ ಅಡಿಯಲ್ಲಿ ತಾವು ಘೋಷಿಸಿರುವ ಹಣ ತಮಗೆ ಸೇರಿದ್ದಲ್ಲ. ರಾಜಕಾರಣಿಗಳು, ಬಾಬುಗಳು ಮತ್ತು ಬಿಲ್ಡರುಗಳು  ಸೇರಿದಂತೆ ವಿವಿಧ ವ್ಯಕ್ತಿಗಳಿಗೆ ಸೇರಿದ್ದು ಎಂದು ಹೇಳಿದ್ದರು. ಟಿವಿ ವಾಹಿನಿಯಲ್ಲಿ ಷಹಾ ಸಂದರ್ಶನ ಬಿತ್ತರವಾಗುತ್ತಿದ್ದಂತೆಯೇ ಸಂಭವಿಸಿದ ನಾಟಕೀಯ ತಿರುವಿನಲ್ಲಿ ಆದಾಯ ತೆರಿಗೆ ಅಧಿಕಾರಿಗಳು ಮತ್ತು ಪೊಲೀಸರು ಟಿವಿ ವಾಹಿನಿಗೆ ನುಗ್ಗಿ ಷಹಾ ಅವರನ್ನು ಪ್ರಶ್ನಿಸುವ ಸಲುವಾಗಿ ತಮ್ಮ ವಶಕ್ಕೆ ತೆಗೆದುಕೊಂಡು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದರು. ಇದಕ್ಕೆ ಮುನ್ನ ಆದಾಯ ತೆರಿಗೆ ಅಧಿಕಾರಿಗಳು ಷಹಾ ಅವರ ಮನೆ ಹಾಗೂ ಕಚೇರಿಗಳಲ್ಲಿ ಶೋಧ ನಡೆಸಿದ್ದರು. ಕಳೆದ ಕೆಲ ಸಮಯದಿಂದ ಷಹಾ ಅವರ ಸಂಪರ್ಕಕ್ಕೆ ಸಿಕ್ಕಿಲ್ಲ, ಆದರೆ ಅವರು ಬರುತ್ತಾರೆ ಮತ್ತು ತೆರಿಗೆ ಇಲಾಖೆಯವರ ಎಲ್ಲ ಪ್ರಶ್ನೆಗಳಿಗೂ ಉತ್ತರಿಸುತ್ತಾರೆ ಎಂದು ಷಹಾ ಕುಟುಂಬ ಸದಸ್ಯರು ಹೇಳಿದ್ದರು.
2008: ರಾಷ್ಟ್ರೀಯ ಭದ್ರತಾ ದಳದ (ಎನ್ಎಸ್ಜಿ) ಮಾದರಿಯಲ್ಲೇ ಸುಮಾರು 750 ಮಂದಿ ಕಮಾಂಡೊ ಪಡೆ ಮತ್ತು ತ್ವರಿತ ಪ್ರಹಾರ ದಳದ ಆಂತರಿಕ ಭದ್ರತಾ ವಿಭಾಗ ಸ್ಥಾಪಿಸಲು ಕರ್ನಾಟಕ ರಾಜ್ಯ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿತು. ಮುಂಬೈಯಲ್ಲಿ ನಡೆದ ಉಗ್ರರ ದಾಳಿ ನಂತರ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಮಹತ್ವದ ತೀರ್ಮಾನವನ್ನು ತೆಗೆದುಕೊಂಡಿತು.

2008: ವಿಜಾಪುರ ತಾಲ್ಲೂಕಿನ ಬಗ್ಗಲೇಶ್ವರದ ವೀರಭದ್ರೇಶ್ವರ ಜಾತ್ರೆಯಲ್ಲಿ ವೃದ್ಧ ಪುರವಂತರೊಬ್ಬರು ತಮ್ಮ ಕೆನ್ನೆಯಲ್ಲಿ 2525 ಅಡಿ ಉದ್ದದ ಹಗ್ಗವನ್ನು ತೂರಿಸಿಕೊಳ್ಳುವ ಮೂಲಕ ಸಾಹಸ ಮೆರೆದ ಘಟನೆ ನಡೆಯಿತು. ಬಗ್ಗಲೇಶ್ವರದ ಲಕ್ಷ್ಮಣ ಚಿನ್ನಪ್ಪ ಬೂದಿಹಾಳ (65) ಎಂಬಾತ ಸಾಹಸಿ. ತಾಯಿಯ ಹರಕೆ ತೀರಿಸಲಿಕ್ಕಾಗಿ ಭಕ್ತಿ ಸೇವೆ ಮಾಡಿದರು. ಬಗ್ಗಲೇಶ್ವರದ ಶ್ರೀ ಪ್ರಭು ವೀರಭದ್ರೇಶ್ವರ ಜಾತ್ರೆಯ ಅಂಗವಾಗಿ ಅಗ್ನಿ ಹಾಯುವ ಹಾಗೂ ಪುರವಂತರಿಂದ ಸಾಹಸ ಪ್ರದರ್ಶನ ಏರ್ಪಡಿಸಲಾಗಿತ್ತು. ಕಿರುಬೆರಳಿನಷ್ಟು ದಪ್ಪದ 2525 ಅಡಿ ಉದ್ದದ ನೂಲಿನಿಂದ ತಯಾರಿಸಿದ್ದ ಹಗ್ಗ ಇದಾಗಿತ್ತು. ಸೂಜಿಗೆ ದಾರ ಪೋಣಿಸುವಂತೆ ದೊಡ್ಡದಾದ ಶಸ್ತ್ರಕ್ಕೆ ಹಗ್ಗದ ತುದಿಯನ್ನು ಪೋಣಿಸಲಾಗಿತ್ತು. ಲಕ್ಷ್ಮಣ ಶಸ್ತ್ರದಿಂದ ತನ್ನ ಎಡಭಾಗದ ಕೆನ್ನೆಗೆ ಚುಚ್ಚಿಕೊಂಡು ಹಗ್ಗವನ್ನು ಕೆನ್ನೆಯಲ್ಲಿ ತೂರಿಸಿಕೊಂಡರು. ಅತ್ತ ಕಡೆ ನಾಲ್ಕಾರು ಜನರು ಹಗ್ಗವನ್ನು ಎಳೆದು ಕೊಡುತ್ತಿದ್ದರು. ಈತ ತನ್ನ ಕೆನ್ನೆಯಲ್ಲಿ ತೂರಿದ್ದ ಹಗ್ಗವನ್ನು ತನ್ನ ಎರಡೂ ಕೈಗಳಿಂದ ಹೊರ ಜಗ್ಗುತ್ತಿದ್ದ. ಹೀಗೆ ಕೆನ್ನೆಗೆ ತೂರುತ್ತಿದ್ದ ಹಗ್ಗವನ್ನು ಇನ್ನು ಕೆಲವರು ಸುತ್ತುತ್ತಿದ್ದರು. ಸುಮಾರು 20 ನಿಮಿಷಗಳವರೆಗೆ ನಡೆದ ರೋಮಾಂಚನಕಾರಿ ಸಾಹಸವನ್ನು ನೋಡಲು ಸಹಸ್ರಾರು ಜನರು ನೆರೆದಿದ್ದರು.
2008: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ಸಹೋದರ ಹರದನಹಳ್ಳಿ .ಡಿ. ಬಸವೇಗೌಡ (64) ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು.

2008: ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರದ (ಎಎಐ) ನೂತನ ಅಧ್ಯಕ್ಷರಾಗಿ ವಿ.ಪಿ. ಅಗರವಾಲ್ ಅವರನ್ನು ನೇಮಕ ಮಾಡಲಾಯಿತು.

2007: ದೇಶದ ಎಲ್ಲೆಡೆ ಹರಡುತ್ತಿರುವ ಉಗ್ರರ ದಾಳಿಗಳ ಹಿಂದೆ ಬಲವಾದ ಹಣಕಾಸಿನ ಜಾಲ ಇರಬಹುದು ಎಂಬ ಶಂಕೆ ಇದೀಗ ದೃಢಪಟ್ಟಿದ್ದು, `ಉಗ್ರರಿಗೆ ಷೇರುಪೇಟೆಯ ಮೂಲಕ ಹಣ ದೊರೆಯುತ್ತಿದೆ' ಎಂದು ಹಣಕಾಸು ಸಚಿವ ಪಿ. ಚಿದಂಬರಂ ರಾಜ್ಯಸಭೆಯಲ್ಲಿ ಒಪ್ಪಿಕೊಂಡರು. `ಇಂತಹ ಒಬ್ಬ ವ್ಯಕ್ತಿಯ ಚಟುವಟಿಕೆ ಸರ್ಕಾರದ ಗಮನಕ್ಕೆ ಬಂದಿದ್ದು, ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ' ಎಂದು ಅವರು ಹೇಳಿದರು. ರಾಷ್ಟ್ರೀಯ ಭದ್ರತಾ ಸಲಹೆಗಾರ ಎಂ.ಕೆ.ನಾರಾಯಣನ್ ಅವರು 2007 ಫೆಬ್ರುವರಿಯಲ್ಲಿ ಮ್ಯೂನಿಚ್ಚಿನಲ್ಲಿ ನೀಡಿದ ಹೇಳಿಕೆ ಅನುಮಾನ ಹುಟ್ಟು ಹಾಕಿತ್ತು. `ಹಲವಾರು ಉಗ್ರ ಸಂಘಟನೆಗಳು ಷೇರುಪೇಟೆಯಲ್ಲಿ ಹಣ ತೊಡಗಿಸುವ ಮೂಲಕ ಭಯೋತ್ಪಾದಕ ಕೃತ್ಯಗಳಿಗೆ ಹಣಕಾಸು ನೆಲೆ ಕಂಡುಕೊಳ್ಳುತ್ತಿವೆ. ಮುಂಬೈ ಮತ್ತು ಚೆನ್ನೈ ಷೇರುಪೇಟೆಯಲ್ಲಿ ಬೇನಾಮಿ ಕಂಪೆನಿಗಳ ಹೆಸರಿನಲ್ಲಿ ವಹಿವಾಟು ನಡೆಸುತ್ತಿವೆ' ಎಂಬ ಅವರ ಹೇಳಿಕೆ ಸಾಕಷ್ಟು ಸಂಚಲನ ಉಂಟು ಮಾಡಿತ್ತು. ಚಿದಂಬರಂ ಅವರ ಈದಿನದ ಬಹಿರಂಗ ಹೇಳಿಕೆ ಶಂಕೆಯನ್ನು ದೃಢಪಡಿಸಿತು.

2007: ಅಕ್ರಮ ಕಟ್ಟಡಗಳ ಸಕ್ರಮದ ವಿವಾದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರ ಹಿತಾಸಕ್ತಿಗೆ ಅನುಗುಣವಾಗಿ ಸರ್ಕಾರವೇ ಸೂಕ್ತ ನಿರ್ಧಾರ ತೆಗೆದುಕೊಳ್ಳುವಂತೆ ಕರ್ನಾಟಕ ಹೈಕೋರ್ಟ್ ಆದೇಶಿಸಿತು. ಇದರಿಂದಾಗಿ ಪ್ರಕರಣ ಹೈಕೋರ್ಟಿನಿಂದ ಸರ್ಕಾರದ ಅಂಗಳಕ್ಕೆ ಬಂದಿತು. `ಸಕ್ರಮ' ಯೋಜನೆ ಕುರಿತು ರಾಜ್ಯಪಾಲರು ಇನ್ನೊಮ್ಮೆ ಅವಲೋಕನ ಮಾಡುವ ಅಗತ್ಯ ಇದೆ ಎಂದೂ ನ್ಯಾಯಾಲಯ ಅಭಿಪ್ರಾಯಪಟ್ಟಿತು.

2007: ನಂದಿಗ್ರಾಮ ಪ್ರಕರಣಕ್ಕೆ ಸಂಬಂಧಿಸಿದಂತೆ ತಾವು ನೀಡಿರುವ ವಿವಾದಾತ್ಮಕ ಹೇಳಿಕೆ ಬಗ್ಗೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ವಿಷಾದ ವ್ಯಕ್ತಪಡಿಸಿದರು. `ಅವರದೇ ವಿಧಾನದ ಮೂಲಕ ಅವರಿಗೆ ಪಾಠ ಕಲಿಸಿದ್ದೇವೆ ಎಂಬ ಹೇಳಿಕೆಯನ್ನು ನಾನು ನೀಡಬಾರದಿತ್ತು. ಏಕೆಂದರೆ ಎಲ್ಲ ವರ್ಗಗಳಲ್ಲಿ ಶಾಂತಿ ನೆಲೆಸಬೇಕಾಗಿರುವುದು ಈಗಿನ ಅವಶ್ಯಕತೆ' ಎಂದು ಭಟ್ಟಾಚಾರ್ಯ ಹೇಳಿದರು.

2007: ಕೆಮ್ಮಿನಿಂದ ನರಳುವ ಮಕ್ಕಳಿಗೆ ಸಿರಪ್ ಕುಡಿಸುವ ಬದಲು ಹಳೇ ಜೇನುತುಪ್ಪ ಕುಡಿಸಿ. ಇದು ಈಗ ಜಾಗತಿಕವಾಗಿ ಸಂಶೋಧಕರು ಒಪ್ಪಿಕೊಂಡ ಸತ್ಯ. ಜೇನುತುಪ್ಪವನ್ನು ಹಿಂದಿನಿಂದಲೂ ಸ್ವಸ್ಥ ಆರೋಗ್ಯಕ್ಕೆ ಪೂರಕ ಎಂದು ಭಾರತದಲ್ಲಿ ಭಾವಿಸಲಾಗುತ್ತಿದೆ. ಈಗ ಅದಕ್ಕೆ ಲಂಡನ್ನಿನ ಸಂಶೋಧಕರೂ ಅಧಿಕೃತ ಮುದ್ರೆ ಒತ್ತಿದರು. ಇತ್ತೀಚೆಗೆ ನಡೆದ ಅಧ್ಯಯನವೊಂದರ ಪ್ರಕಾರ ತೀವ್ರ ಕೆಮ್ಮಿನಿಂದ ಬಳಲುತ್ತಿರುವವರು ರಾತ್ರಿ ಮಲಗುವಾಗ ದುಬಾರಿ ಸಿರಪ್ಪುಗಳನ್ನು ಕುಡಿಯುವ ಬದಲಿಗೆ ಜೇನುತುಪ್ಪವನ್ನು ಕುಡಿದರೆ ಹೆಚ್ಚು ನೆಮ್ಮದಿ ಸಿಗುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟರು.

2007: ಜಪಾನಿನ ಸೇನಾ ತುಕಡಿಗಳು 1937 ಡಿಸೆಂಬರ್ 13ರಂದು ಚೀನಾದ ರಾಜಧಾನಿಯನ್ನು ವಶಪಡಿಸಿಕೊಂಡಾಗ ಹುತಾತ್ಮರಾದ 30 ಸಾವಿರ ಚೀನಿಯರ ಪೈಕಿ 13 ಸಾವಿರ ಜನರ ಹೆಸರುಗಳನ್ನು ಎಂಟು ಸಂಪುಟಗಳಲ್ಲಿ ಚೀನಾ ಪ್ರಕಟಿಸಿತು. ಚೀನಾದ ಮೇಲೆ ದಂಡೆತ್ತಿ ಬಂದ ಜಪಾನಿನ ಸೈನಿಕರು 30 ಸಾವಿರ ನಾಗರಿಕರನ್ನು ನಿರ್ದಯವಾಗಿ ಹತ್ಯೆಗೈದರು. ಅವರೆಲ್ಲರ ಹೆಸರುಗಳನ್ನು ಪ್ರಕಟಿಸಲು ಉದ್ದೇಶಿಸಲಾಗಿದೆ ಎಂದು ಸರ್ಕಾರಿ ಸುದ್ದಿ ಸಂಸ್ಥೆ ಹೇಳಿತು. `ಜಸ್ಟ್ ಸ್ಟಾರ್ಟ್' ಹೆಸರಿನಲ್ಲಿ ಪ್ರಕಟವಾಗಿರುವ ಎಂಟು ಸಂಪುಟಗಳಲ್ಲಿ ಮೃತಪಟ್ಟವರ ಕುರಿತು ಮಾಹಿತಿಗಳನ್ನು ಒದಗಿಸಲಾಗಿದೆ. ಇನ್ನುಳಿದ ಮಾಹಿತಿಯನ್ನು ಒಟ್ಟು 27 ಸಂಪುಟಗಳಲ್ಲಿ ಹೊರತರಲು ನಿರ್ಧರಿಸಲಾಗಿದೆ ಎಂದು ಸಂಸ್ಥೆಯ ಪ್ರಧಾನ ಸಂಪಾದಕರು ತಿಳಿಸಿದರು.

2006: ಇಡೀ ರಾಷ್ಟ್ರದ ಗಮನ ಸೆಳೆದಿದ್ದ ಚಿಂತಾಮಣಿ ತಾಲ್ಲೂಕಿನ ಕಂಬಾಲಪಲ್ಲಿ ದಲಿತರ ಸಜೀವ ಹತ್ಯಾಕಾಂಡದ ಎಲ್ಲ 32 ಆರೋಪಿಗಳನ್ನೂ ಕೋಲಾರದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ದೌರ್ಜನ್ಯ ವಿರೋಧಿ ವಿಶೇಷ ನ್ಯಾಯಾಲಯವು ಖುಲಾಸೆ ಮಾಡಿತು. ಪ್ರಕರಣದಲ್ಲಿ ಪ್ರತ್ಯಕ್ಷ ಸಾಕ್ಷಿಗಳು ಪ್ರತಿಕೂಲ ಸಾಕ್ಷ್ಯ ನೀಡಿದ ಕಾರಣ ಆರೋಪಿಗಳ ವಿರುದ್ಧ ದೋಷಾರೋಪ ಸಾಬೀತಾಗಲಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯ ಪಟ್ಟಿತು.

2006: ನಾಡಿನ ಪ್ರಸಿದ್ಧ ಶಾಸ್ತ್ರೀಯ ಸಂಗೀತ ಗಾಯಕ ಪಂ. ಗಣಪತಿ ಭಟ್ಟ ಹಾಸಣಗಿ ಅವರು ಸಂಗೀತ ಕ್ಷೇತ್ರದ ಪ್ರತಿಷ್ಠಿತ ವತ್ಸಲಾಬಾಯಿ ಭೀಮಸೇನ್ ಜೋಶಿ ಪ್ರಶಸ್ತಿಗೆ ಆಯ್ಕೆಯಾದರು. ಪುಣೆಯ ಆರ್ಯ ಸಂಗೀತ ಪ್ರಸಾರಕ ಮಂಡಳಿ ಪ್ರಶಸ್ತಿಯನ್ನು ನೀಡುತ್ತಿದೆ.

2006: ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಆಯಾಮ ನೀಡಿದ ಸಂಸ್ಥೆಗಳಿಗೆ ನೀಡುವ `ಟೆಕ್ನಾಲಜಿ ಪಯೋನೀರ್ಸ್ 2007' ಅಂತಾರಾಷ್ಟ್ರೀಯ ಪ್ರಶಸ್ತಿಯನ್ನು ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ನಿಧಾನವಾಗಿ ಹೆಸರು ಮಾಡುತ್ತಿರುವ ಬೆಂಗಳೂರಿನ `ಸ್ಟ್ರಾಂಡ್ ಲೈಫ್ ಸೈನ್ಸಸ್' ಮತ್ತು ಗ್ರಾಮೀಣ ಪ್ರದೇಶಗಳಿಗೆ ಇಂಟರ್ನೆಟ್ ಸೌಲಭ್ಯ ಕಲ್ಪಿಸುತ್ತಿರುವ `ದೃಷ್ಟಿ' ಎರಡು ಕಂಪೆನಿಗಳು ಪಡೆದುಕೊಂಡವು. ಜಿನೀವಾದಲ್ಲಿರುವ ವಿಶ್ವ ಆರ್ಥಿಕ ವೇದಿಕೆ ಪ್ರಶಸ್ತಿಯನ್ನು ಪ್ರಕಟಿಸಿದೆ. ವೇದಿಕೆ ಜಗತ್ತಿನ 47 ಕಂಪೆನಿಗಳನ್ನು ಪ್ರಶಸ್ತಿಗಾಗಿ ಗುರುತಿಸಿದೆ.

2006: ಎಂ.ಎಲ್.ವಸಂತಕುಮಾರಿ ಸ್ಮಾರಕ ಸಂಗೀತ ಸಭಾ ನೀಡುವ `ಎಂ.ಎಲ್.ವಸಂತಕುಮಾರಿ ಮೆಮೋರಿಯಲ್ ಸಂಗೀತ ಪ್ರಶಸ್ತಿ'ಗೆ ಖ್ಯಾತ ಚಲನಚಿತ್ರ ನಟಿ, ಶ್ರೀಲತಾ ನಂಬೂದರಿ ಆಯ್ಕೆಯಾದರು.

2005: ಸಮಕಾಲೀನ ಕಲಾ ಪರಂಪರಯಲ್ಲಿ ತಮ್ಮದೇ ಆದ ವಿಶಿಷ್ಟ ಪ್ರಯೋಗಗಳ ಮೂಲಕ ಹೆಸರಾಗಿದ್ದ ಕಲಾವಿದ, ಚಿಂತಕ ಹಡಪದ್ ಅವರ ನೆನಪಿಗೆ ನೀಡುವ ನಾಡೋಜ ಎಂ. ಹಡಪದ್ ಪ್ರಶಸ್ತಿ-2005ನ್ನು ಕಲಾವಿದ ಎನ್. ಕೃಷ್ಣಾಚಾರ್ ಅವರಿಗೆ ಹಿರಿಯ ಸಂಶೋಧಕ ಡಾ. ಎಂ. ಚಿದಾನಂದ ಮೂರ್ತಿ ಬೆಂಗಳೂರು ಶೇಷಾದ್ರಿಪುರದ ಕೆನ್ ಕಲಾಶಾಲೆಯಲ್ಲಿ ಪ್ರದಾನ ಮಾಡಿದರು.

2005: ವೋಲ್ಕರ್ ವರದಿಯ ಹಿನ್ನೆಲೆಯಲ್ಲಿ ವಿದೇಶಾಂಗ ಖಾತೆ ಕಳೆದುಕೊಂಡ ಸಚಿವ ನಟವರ್ ಸಿಂಗ್ ವಿರುದ್ಧ ಹೇಳಿಕೆ ನೀಡಿ ಬಿರುಗಾಳಿ ಎಬ್ಬಿಸಿದ ಕ್ರೊಯೇಷಿಯಾದ ಮಾಜಿ ರಾಯಭಾರಿ ಅನಿಲ್ ಮಥೆರಾನಿ ಅವರನ್ನು ಜಾರಿ ನಿರ್ದೇಶನಾಲಯ, ಕೇಂದ್ರ ಗುಪ್ತಚರ ವಿಭಾಗ ಹಾಗೂ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗದ ಅಧಿಕಾರಿಗಳ ತಂಡಗಳು ವಿಚಾರಣೆಗೆ ಒಳಪಡಿಸಿದವು.

1993: ಮುಲಯಂ ಸಿಂಗ್ ಅವರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

1982: ಚೀನಾದಲ್ಲಿ ಸಂವಿಧಾನ ಅಳವಡಿಸಿಕೊಳ್ಳಲಾಯಿತು.

1981: ನವದೆಹಲಿಯ ಇತಿಹಾಸ ಪ್ರಸಿದ್ಧ ಕುತುಬ್ ಮೀನಾರಿನ ಮೆಟ್ಟಿಲು ಸಾಲಿನಲ್ಲಿ ನೂಕು ನುಗ್ಗಲು ಸಂಭವಿಸಿ 21 ಮಂದಿ ಶಾಲಾ ಮಕ್ಕಳು ಸೇರಿದಂತೆ ಒಟ್ಟು 45 ಮಂದಿ ಅಸು ನೀಗಿದರು. ಇತರ 21 ಮಂದಿ ಗಾಯಗೊಂಡರು. ವಿದ್ಯುತ್ ವೈಫಲ್ಯದಿಂದ ಉಂಟಾದ ಗಾಬರಿಯಿಂದ ನೂಕುನುಗ್ಗಲು ಸಂಭವಿಸಿತು.

1924: ವೈಸ್ ರಾಯ್ ದಿ ಅರ್ಲ್ ಅಫ್ ರೀಡಿಂಗ್ ಅವರಿಂದ ಬಾಂಬೆಯ (ಈಗಿನ ಮುಂಬೈ) `ಗೇಟ್ ವೇ ಆಫ್ ಇಂಡಿಯಾ' ಉದ್ಘಾಟನೆಗೊಂಡಿತು. ಇಂಡೋ ಸಾರ್ಸನಿಕ್ ಶೈಲಿಯಲ್ಲಿ ನಿರ್ಮಿಸಲಾದ ಇದನ್ನು ದೊರೆ 5ನೇ ಜಾರ್ಜ್ ಮತ್ತು ರಾಣಿ ಮೇರಿ 1911 ಡಿಸೆಂಬರಿನಲ್ಲಿ ಬಾಂಬೆಗೆ ನೀಡಿದ ಭೇಟಿಯ ನೆನಪಿಗಾಗಿ ನಿರ್ಮಿಸಲಾಯಿತು. ಇದಕ್ಕೆ 1911 ಮಾಚರ್ಿಯಲ್ಲಿ ಶಿಲಾನ್ಯಾಸ ನೆರವೇರಿಸಲಾಗಿತ್ತು. ಶಿಲ್ಪಿ ಜಾರ್ಜ್ ವಿಟ್ಟೆಟ್ ಅವರ ಅಂತಿಮ ವಿನ್ಯಾಸಕ್ಕೆ 1914 ಆಗಸ್ಟಿನಲ್ಲಿ ್ಲಮಂಜೂರಾತಿ ದೊರಕಿತ್ತು.

1919: ಭಾರತದ ಮಾಜಿ ಪ್ರಧಾನಿ ಇಂದ್ರ ಕುಮಾರ್ ಗುಜ್ರಾಲ್ ಹುಟ್ಟಿದ ದಿನ. ಅವರು 1997
ಏಪ್ರಿಲ್ನಿಂದ ನವೆಂಬರವರೆಗೆ ಪ್ರಧಾನಿಯಾಗಿದ್ದರು.

1910: ಭಾರತದ ಮಾಜಿ ರಾಷ್ಟ್ರಪತಿ ರಾಮಸ್ವಾಮಿ ವೆಂಕಟ್ರಾಮನ್ ಹುಟ್ಟಿದ ದಿನ. ರಾಜಕಾರಣಿ, ಅಧಿಕಾರಿ ಹಾಗೂ ವಕೀಲರಾಗಿದ್ದ ಅವರು 1987 ಜುಲೈ 25ರಂದು ಭಾರತದ ರಾಷ್ಟ್ರಪತಿಯಾದರು.

1888: ಭಾರತದ ಖ್ಯಾತ ಇತಿಹಾಸಕಾರ ರೊಮೇಶ್ ಚಂದ್ರ ಮಜುಂದಾರ್ (1888-1980) ಹುಟ್ಟಿದ ದಿನ.

1829: ರೆಗ್ಯೂಲೇಷನ್ 17 ಜಾರಿ ಮಾಡುವ ಮೂಲಕ ಲಾರ್ಡ್ ವಿಲಿಯಂ ಬೆಂಟಿಂಕ್ ಭಾರತದಲ್ಲಿ ಸತಿ ಪದ್ಧತಿಯನ್ನು ನಿಷೇಧಿಸಿದ.

1775: ಬ್ರಿಟಿಷ್ ಇತಿಹಾಸಕಾರ ಹಾಗೂ ಪ್ರಬಂಧಕಾರ ಥಾಮಸ್ ಕಾರ್ಲೈಲ್ (1795-1881) ಹುಟ್ಟಿದ ದಿನ. `ಫ್ರೆಂಚ್ ರೆವಲ್ಯೂಷನ್' ಕೃತಿ ಈತನಿಗೆ ಅಪಾರ ಖ್ಯಾತಿ ತಂದು ಕೊಟ್ಟಿತು. ಕೃತಿಯ ಇಡೀ ಮೊದಲ ಸಂಪುಟದ ಹಸ್ತಪ್ರತಿಯನ್ನು ಜಾನ್ ಸ್ಟುವರ್ಟ್ ಮಿಲ್ ಓದಲು ಒಯ್ದು ತನ್ನ ಭಾವೀ ಪತ್ನಿಯ ಕೈಯಲ್ಲಿ ಕೊಟ್ಟಿದ್ದ. ಆಕೆಯ ಸೇವಕಿ ಅದು ನಿರುಪಯುಕ್ತ ಹಾಳೆ ಎಂದು ಭಾವಿಸಿ ಸುಟ್ಟು ಹಾಕಿದಳು! ಹೀಗಾಗಿ ಥಾಮಸ್ ಕಾರ್ಲೈಲ್ ಕೃತಿಯ ಮೊದಲ ಇಡೀ ಸಂಪುಟವನ್ನು ಮತ್ತೆ ಬರೆಯಬೇಕಾಗಿ ಬಂದಿತ್ತು.