Monday, December 31, 2018

ಇಂದಿನ ಇತಿಹಾಸ History Today ಡಿಸೆಂಬರ್ 31

ಇಂದಿನ ಇತಿಹಾಸ History Today ಡಿಸೆಂಬರ್  31
2018: ನವದೆಹಲಿ: ಶರಣಾಗತಿಗೆ ಕಾಲಾವಕಾಶ ವಿಸ್ತರಿಸುವಂತೆ ಮಾಡಿದ ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿದ್ದನ್ನು ಅನುಸರಿಸಿ ಮಾಜಿ ಕಾಂಗ್ರೆಸ್ ನಾಯಕ ಸಜ್ಜನ್ ಕುಮಾರ್ ಅವರು ೧೯೮೪ರ ಸಿಖ್ ಗಲಭೆ ಪ್ರಕರಣದಲ್ಲಿ ತಮಗೆ ವಿಧಿಸಲಾದ ಜೀವಾವಧಿ ಶಿಕ್ಷೆ ಅನುಭವಿಸುವ ಸಲುವಾಗಿ ದೆಹಲಿ ನ್ಯಾಯಾಲಯದಲ್ಲಿ ಶರಣಾಗತರಾದರುಸಿಖ್ ಗಲಭೆಗಳ ಸಂದರ್ಭದಲ್ಲಿ ಒಂದೇ ಕುಟುಂಬದ ಐವರನ್ನು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಜ್ಜನ್ ಕುಮಾರ್ ಅವರಿಗೆ ನ್ಯಾಯಾಲಯವು ಜೀವಾವಧಿ ಸಜೆ  ವಿಧಿಸಿತ್ತು.  ನ್ಯಾಯಾಲಯದಲ್ಲಿ ಶರಣಾಗಲು ಹೈಕೋರ್ಟ್ ಸಜ್ಜನ್ ಕುಮಾರ್ ಗೆ ಡಿಸೆಂಬರ್ ೩೧ರ ಗಡುವನ್ನು  ನೀಡಿತ್ತು. ಸಜ್ಜನ್ ಅವರು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅದಿತಿ ಗಾರ್ಗ್ ಅವರ ಎದುರು ಶರಣಾಗತರಾದರು. ಸಜ್ಜನ್ ಕುಮಾರ್ ಅವರನ್ನು ಪ್ರಕರಣದಲ್ಲಿ ಖುಲಾಸೆಗೊಳಿಸಿ ಕೆಳ ನ್ಯಾಯಾಲಯ ನೀಡಿದ್ದ ತೀರ್ಪನ್ನು ಡಿಸೆಂಬರ್ ೧೭ರಂದು ರದ್ದು ಪಡಿಸಿದ್ದ ದೆಹಲಿ ಹೈಕೋರ್ಟ್, ೩೪ ವರ್ಷಗಳ ಹಿಂದೆ ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರನ್ನು ಸಿಖ್ ಅಂಗರಕ್ಷಕರಿಬ್ಬರು ಕೊಲೆಗೈದ ಬಳಿಕ ಸಂಭವಿಸಿದ ಗಲಭೆಗಳ ವೇಳೆಯಲ್ಲಿ ಪಶ್ಚಿಮ ದೆಹಲಿಯ ರಾಜ್ ನಗರದಲ್ಲಿ ಕುಟುಂಬವೊಂದನ್ನು ಜೀವಂತವಾಗಿ ದಹಿಸಿದ ಪ್ರಕರಣದಲ್ಲಿ ತಪ್ಪಿತಸ್ಥರು ಎಂದು ತೀರ್ಪು ನೀಡಿತ್ತು. ೭೩ರ ಹರೆಯದ ಸಜ್ಜನ್ ಕುಮಾರ್ ಅವರು ಶಿಕ್ಷೆ ಅನುಭವಿಸಲು ಶರಣಾಗತಿಗೆ ಜನವರಿ ೩೦ರವರೆಗೆ ಕಾಲಾವಕಾಶ ವಿಸ್ತರಿಸುವಂತೆ ಕೋರಿ ಮಾಡಿದ ಮನವಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದ ಬಳಿಕ ತಮಗೆ ಜೀವಾವಧಿ ಶಿಕ್ಷೆ ವಿಧಿಸಿದ್ದನ್ನು ಪ್ರಶ್ನಿಸಿ ಡಿಸೆಂಬರ್ ೨೨ರಂದು ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲಿಸಿದ್ದರು. ಕುಟುಂಬದ ಜೊತೆಗೆ ೩೦ ಹೆಚ್ಚುವರಿ ದಿನಗಳನ್ನು ಕಳೆಯಲು ಅವಕಾಶ ನೀಡುವಂತೆ ಸಜ್ಜನ್ ಕುಮಾರ್ ದೆಹಲಿ ಹೈಕೋರ್ಟಿಗೆ ಮನವಿ ಮಾಡಿದ್ದರು. ೧೫ ಅಂಶಗಳ ತಮ್ಮ ಮನವಿಯಲ್ಲಿ ಅವರು ತಮ್ಮ ಸೆರೆವಾಸದ ಅವಧಿಯನ್ನು ಒಂದು ತಿಂಗಳ ಕಾಲ ಮುಂದೂಡುವಂತೆ ಕೋರಿದ್ದರು. ತಮ್ಮನ್ನು ತಪ್ಪಿತಸ್ಥ ಎಂಬುದಾಗಿ ಘೋಷಿಸಿರುವ ಹೈಕೋರ್ಟ್ ತೀರ್ಪು ತಮ್ಮನ್ನು ದಿಗ್ಭ್ರಮೆಗೊಳಿಸಿದ್ದು, ಸೆರೆವಾಸ ಅನುಭವಿಸಲು ತಮ್ಮನ್ನು ತಾವು ಸಜ್ಜುಗೊಳಿಸಿಕೊಳ್ಳಲು ಕಾಲಾವಕಾಶ ಬೇಕು ಎಂದು ಅವರು ಹೇಳಿದ್ದರುಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಮಾಜಿ ಶಾಸಕರಾದ ಕಿಷನ್ ಖೋಖರ್ ಮತ್ತು ಮಹೇಂದರ್ ಯಾದವ್ ಅವರೂ ತಮಗೆ ವಿಧಿಸಲಾಗಿರವು ತಲಾ ೧೦ ವರ್ಷಗಳ ಸೆರೆವಾಸ ಅನುಭವಿಸುವ ಸಲುವಾಗಿ ದೆಹಲಿ ನ್ಯಾಯಾಲಯದಲ್ಲಿ ಶರಣಾಗತರಾದರು.  ಸಜ್ಜನ್ ಕುಮಾರ್ ಅವರ  ಮನವಿಯನ್ನು ದೆಹಲಿ ಹೈಕೋರ್ಟ್ ಡಿಸೆಂಬರ್ ೨೧ರಂದು ತಿರಸ್ಕರಿಸಿತ್ತು. ಮಕ್ಕಳು ಮತ್ತು ಆಸ್ತಿಗೆ ಸಂಬಂಧಿಸಿದ ವ್ಯವಹಾರಗಳನ್ನು ಇತ್ಯರ್ಥ ಪಡಿಸಲು ತಮಗೆ ಕಾಲಾವಕಾಶ ಬೇಕಾಗಿದೆ ಹಾಗೆಯೇ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲು ಕೂಡಾ ತಮಗೆ ಕಾಲಾವಕಾಶ ಬೇಕು ಎಂದು ಸಜ್ಜನ್ ಕುಮಾರ್ ಕೋರಿದ್ದರು. ತಾವು ಹಿರಿಯ ವಕೀಲರ ಮೂಲಕ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ಬಯಸಿದ್ದು, ಸುಪ್ರೀಂಕೋರ್ಟಿಗೆ ರಜಾ ಅವಧಿಯಾದ ಕಾರಣ ಬಹುತೇಕ ಹಿರಿಯ ವಕೀಲರೂ ರಜೆಯಲ್ಲಿದ್ದಾರೆ ಎಂದು ಕುಮಾರ್ ತಮ್ಮ ಮನವಿಯಲ್ಲಿ ಹೇಳಿದ್ದರು. ಏನಿದ್ದರೂ, ಅವರ ಅರ್ಜಿಯನ್ನು ತಿರಸ್ಕರಿಸಿದ ಹೈಕೋರ್ಟ್, ಡಿಸೆಂಬರ್ ೩೧ರ ಗಡುವಿನ ಒಳಗೆ ಶರಣಾಗುವಂತೆ ನಿರ್ದೇಶನ ನೀಡಿತ್ತು.  ಬಳಿಕ ಹೈಕೋರ್ಟ್ ತೀರ್ಪಿನ ವಿರುದ್ಧದ ತಮ್ಮ ಮೇಲ್ಮನವಿಯನ್ನು ಜನವರಿ ೧ರಂದು ಮುಕ್ತಾಯಗೊಳ್ಳಲಿರುವ ರಜಾಕಾಲದ ಅವಧಿಯಲ್ಲಿ ಆಲಿಸುವ ಸಾಧ್ಯತೆ ಇಲ್ಲವಾದ್ದರಿಂದ ಸಜ್ಜನ್ ಕುಮಾರ್ ಅವರು ಹೈಕೋರ್ಟ್ ತೀರ್ಪನ್ನು ಪಾಲಿಸುವರು ಎಂದು ಸಜ್ಜನ್ ಕುಮಾರ್ ಅವರ ವಕೀಲರು ಹೇಳಿದ್ದರು. ಜನವರಿ ೧ರವರೆಗೆ ನ್ಯಾಯಾಲಯಕ್ಕೆ ರಜೆ ಇರುವ ಹಿನ್ನೆಲೆಯಲ್ಲಿ, ಸುಪ್ರೀಂಕೋರ್ಟಿನಲ್ಲಿ ಸಲ್ಲಿಸಲಾದ ಮೇಲ್ಮನವಿಯಲ್ಲಿನ ಆಕ್ಷೇಪಣೆಗಳನ್ನು ತಾವು ಕಿತ್ತು ಹಾಕಿತ್ತು, ಅದನ್ನು ಡಿಸೆಂಬರ್ ೩೧ರ ಒಳಗೆ ಆಲಿಸುವ ಸಾಧ್ಯತೆಗಳು ಇಲ್ಲ ಎಂದು ಸಜ್ಜನ್ ಕುಮಾರ್ ಪರ ವಕೀಲ ಅನಿಲ್ ಕುಮಾರ ಶರ್ಮ ಹೇಳಿದ್ದರು. ಎರಡು ವಾರಗಳ ರಜೆಯ ಬಳಿಕ ಜನವರಿ ೨ರಂದು ಸುಪ್ರೀಂಕೋರ್ಟ್ ತನ್ನ ಕಲಾಪ ಪುನಾರಂಭ ಮಾಡಲಿದೆ. ರಜೆ ಮುಗಿದ ಬಳಿಕ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದೂ ವಕೀಲರು ಹೇಳಿದ್ದರುಸಜ್ಜನ್ ಕುಮಾರ್ ಅವರು ತಮ್ಮ ಸಹಜ ಬದುಕಿನ ಉಳಿದ ಪೂರ್ತಿ ಅವಧಿಗೆ ಸೆರೆವಾಸದ ಶಿಕ್ಷೆ ಅನುಭವಿಸಬೇಕು ಎಂದು ದೆಹಲಿ ಹೈಕೋರ್ಟ್ ಡಿಸೆಂಬರ್ ೧೭ರ ತನ್ನ ತೀರ್ಪಿನಲ್ಲಿ ಹೇಳಿತ್ತು. ತೀರ್ಪನ್ನು ಅನುಸರಿಸಿ, ೨೦೧೯ರ ಮಹಾಚುನಾವಣೆಯಲ್ಲಿ ಪಕ್ಷಕ್ಕೆ ಮುಜುಗರವಾಗದಿರಲಿ ಎಂದು ಸಜ್ಜನ್ ಕುಮಾರ್ ಅವರು ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು. ೧೯೮೪ರ ನವೆಂಬರ್ ಮತ್ತು ೨ರಂದು ದಕ್ಷಿಣ ದೆಹಲಿಯ ಪಾಲಂ ಕಾಲೋನಿಯ  ರಾಜ್ ನಗರ ಭಾಗ ೧ದಲ್ಲಿ ಸಿಖ್ ಸಮುದಾಯಕ್ಕೆ ಸೇರಿದ ಐವರನ್ನು ಕೊಂದರೆ, ರಾಜ್ ನಗರದ ಭಾಗ ೨ರಲ್ಲಿ ಗುರುದ್ವಾರಕ್ಕೆ ಕಿಚ್ಚಿಡಲಾಗಿತ್ತು. ಗಲಭೆಯ ಕಾಲದಲ್ಲಿ ಸಜ್ಜನ್ ಕುಮಾರ್ ಸಂಸದರಾಗಿದ್ದರು. ಸಜ್ಜನ್ ಕುಮಾರ್ ಅವರನ್ನು ತಪ್ಪಿತಸ್ಥ ಎಂಬುದಾಗಿ ಘೋಷಿಸಿ ಅವರಿಗೆ ಸಹಜ ಬದುಕಿನ ಉಳಿದ ಅವಧಿಪೂರ್ತಿ ಸೆರೆವಾಸ ಅನುಭವಿಸುವಂತೆ ತೀರ್ಪು ನೀಡಿದ ಹೈಕೋರ್ಟ್, ಕಾಂಗ್ರೆಸ್ಸಿನ ಮಾಜಿ ಕೌನ್ಸಿಲರ್ ಬಲವಾನ್ ಖೋಖರ್, ನಿವೃತ್ತ ನೌಕಾ ಕ್ಯಾಪ್ಟನ್ ಭಾಗ್ಮಲ್, ಗಿರಿಧಾರಿ ಲಾಲ್ ಮತ್ತು ಮಾಜಿ ಶಾಸಕರಾದ ಮಹೆಂದರ್ ಯಾದವ್ ಮತ್ತು ಕಿಷನ್ ಖೋಖರ್ ಅವರಿಗೆ ವಿವಿಧ ಅವಧಿಗಳ ಸೆರೆವಾಸ ವಿಧಿಸಿ ವಿಚಾರಣಾ ನ್ಯಾಯಾಲಯ ನೀಡಿದ್ದ ತೀರ್ಪನ್ನು ಎತ್ತಿ ಹಿಡಿದಿತ್ತು. ಡಿಸೆಂಬರ್ ೩೧ರ ಒಳಗಾಗಿ ಶರಣಾಗುವಂತೆಯೂ , ಮಧ್ಯದ ಕಾಲಾವಧಿಯಲ್ಲಿ ದೆಹಲಿಯಿಂದ ಹೊರಕ್ಕೆ ಹೋಗದಂತೆಯೂ ಹೈಕೋರ್ಟ್ ನಿದೇಶಿಸಿತ್ತುಭದ್ರತಾ ಕಾರಣಗಳಿಗಾಗಿ ಸಜ್ಜನ್ ಕುಮಾರ್ ಅವರನ್ನು ಮಂಡಾವ್ಲಿ ಸೆರೆಮನೆಗೆ ಕಳುಹಿಸಲಾಯಿತು.

2018: ನಾಸಿಕ್: ಹಲವಾರು ರಾಜ್ಯಗಳಿಗೆ ವ್ಯಾಪಿಸಿದ್ದ ನಕಲಿ ಛಾಪಾ ಕಾಗದ ಹಗರಣದಲ್ಲಿ ಶಿಕ್ಷೆಗೆ ಒಳಗಾಗಿದ್ದ ಅಬ್ದಲ್ ಕರೀಂ ತೆಲಗಿ ಮತ್ತು ಇತರರನ್ನು ಮಹಾರಾಷ್ಟ್ರದ ನಾಸಿಕ್ ನ್ಯಾಯಾಲಯವೊಂದು ದೋಷಮುಕ್ತಿಗೊಳಿಸಿತು.. ತೀವ್ರತರವಾದ  ಮಿದುಳಪೊರೆ ಉರಿತ (ಮೆನಿಂಜೈಟಿಸ್) ಕಾಯಿಲೆಯಿಂದಾಗಿ ಕಳೆದ ವರ್ಷ ತೆಲಗಿ ಸಾವು ಸಂಭವಿಸಿದ ಬಳಿಕ ನ್ಯಾಯಾಲಯದ ತೀರ್ಪು ಬಂದಿತು. ೨೦೦೧ರ ನವೆಂಬರಿನಲ್ಲಿ ಬಂಧಿಸಲ್ಪಟ್ಟಿದ್ದ ತೆಲಗಿ ಕಳೆದ ೨೦ ವರ್ಷಗಳಿಂದ ಮಧುಮೇಹ, ಹೈಪರ್ ಟೆನ್ಶನ್, ಏಡ್ಸ್ ಮತ್ತಿತರ ಕಾಯಿಲೆಗಳಿಂದ ಬಳಲಿದ್ದ. ಬಹುಕೋಟಿ ನಕಲಿ ಛಾಪಾ ಕಾಗದ ಹಗರಣದಲ್ಲಿ ೩೦ ವರ್ಷಗಳ ಕಠಿಣ ಸೆರೆವಾಸದ ಶಿಕ್ಷೆಗೆ ಗುರಿಯಾದ ಬಳಿಕ ತೆಲಗಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಸೆರೆವಾಸ ಅನುಭವಿಸುತ್ತಿದ್ದ. ನಕಲಿ ಛಾಪಾ ಕಾಗದ ಹಗರಣದಕಿಂಗ್ ಪಿನ್ ಎಂಬುದಾಗಿ ಪರಿಗಣಿತನಾಗಿದ್ದ ತೆಲಗಿಗೆ ಕಠಿಣ ಸಜೆಯ ಜೊತೆಗೆ ೨೦೨ ಕೋಟಿ ರೂಪಾಯಿಗಳ ದಂಡವನ್ನೂ ವಿಧಿಸಲಾಗಿತ್ತು. ಸೆರೆಮನೆಯಲ್ಲಿ ತೆಲಗಿಗೆ ಆದ್ಯತೆಯ ಆಧಾರದಲ್ಲಿ ಚಿಕಿತ್ಸೆ ಒದಗಿಸಲಾಗುತ್ತಿದೆ ಎಂದು ಮಾಜಿ ಡಿಐಜಿ (ಸೆರೆಮನೆ) ಡಿ. ರೂಪಾ ಅವರು ಆಪಾದಿಸಿದ ಬಳಿಕ ತೀವ್ರ ಕೋಲಾಹಲ ಉಂಟಾಗಿತ್ತು. ತೀವ್ರ ಅಸ್ವಸ್ಥತೆಯ ಬಳಿಕ ೨೦೧೭ರ ಅಕ್ಟೋಬರಿನಲ್ಲಿ ತೆಲಗಿ ಬೆಂಗಳೂರಿನ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ. ರೈಲ್ವೇ ನೌಕರ ಮತ್ತು ಮಾಜಿ ಟ್ರಾವಲ್ ಎಜೆಂಟ್ ಒಬ್ಬರ ಮಗನಾದ ತೆಲಗಿ ವಿರುದ್ಧ ದಶಕಗಳ ಕಾಲ ನಕಲಿ ಛಾಪಾ ಕಾಗದ ಜಾಲ ರೂಪಿಸಿದ ಆರೋಪಕ್ಕೆ ಗುರಿಯಾಗಿದ್ದ. ೨೦೦೧ರಲ್ಲಿ ಬೆಂಗಳೂರು ಪೊಲೀಸರು ಆತನನ್ನು ಬಂಧಿಸಿದ್ದರು. ೧೧ ರಾಜ್ಯಗಳಲ್ಲಿ ನಕಲಿ ಛಾಪಾ ಕಾಗದ ಜಾಲವನ್ನು ಬೆಳೆಸಿದ್ದ ಆರೋಪದಲ್ಲಿ ಬಂಧಿತನಾದ ತೆಲಗಿಗೆ ಸರ್ಕಾರಿ ಅಧಿಕಾರಿಗಳು, ಉನ್ನತ ಪೊಲೀಸ್ ಅಧಿಕಾರಿಗಳು ಮತ್ತು ರಾಜಕಾರಣಿಗಳ ಜೊತೆ ನಂಟು ಇತ್ತು ಎಂದು ಹೇಳಲಾಗಿತ್ತು. ತನಿಖೆ ಕಾಲದಲ್ಲಿ  ಹಗರಣದಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ ಹಲವಾರು ಗಣ್ಯರ ಹೆಸರುಗಳು ಬೆಳಕಿಗೆ ಬಂದಿದ್ದವುತೆಲಗಿ ನಕಲಿ ಛಾಪಾ ಕಾಗದಗಳನ್ನು ಮುದ್ರಿಸಿ, ಬ್ಯಾಂಕುಗಳು, ಸ್ಟಾಕ್ ಬ್ರೋಕರೇಜ್ ಸಂಸ್ಥೆಗಳು ಮತ್ತು ವಿಮಾ ಕಂಪೆನಿಗಳಿಗೆ ಸರಬರಾಜು ಮಾಡುತ್ತಿದ್ದ ಎನ್ನಲಾಗಿತ್ತು. ಜಾಲ ಕನಿಷ್ಠ ೧೮ ರಾಜ್ಯಗಳ ೭೦ ನಗರಗಳಲ್ಲಿ ೩೫೦ ಏಜೆಂಟರ ಮೂಲಕ ಕಾರ್ಯ ನಿರ್ವಹಿಸುತ್ತಿತ್ತು ಎಂದು ಆಪಾದಿಸಲಾಗಿತ್ತು.

2018: ನವದೆಹಲಿ: ಲೋಕಸಭೆಯಲ್ಲಿ ಅನುಮೋದನೆ ಪಡೆದಿರುವ ಮುಸ್ಲಿಂ ಸಮುದಾಯದಲ್ಲಿನದಿಢೀರ್ ತ್ರಿವಳಿ ತಲಾಖ್ ಪದ್ಧತಿಯನ್ನು ಕ್ರಿಮಿನಲ್ ಅಪರಾಧವನ್ನಾಗಿ ಮಾಡುವ ಪರಿಷ್ಕೃತ ಮಸೂದೆಗೆ ಅನುಮೋದನೆ ಪಡೆಯುವ ಸರ್ಕಾರದ ಯತ್ನಕ್ಕೆ  ಒಗ್ಗಟ್ಟಿನ ವಿರೋಧ ಪ್ರದರ್ಶಿಸುವ ಮೂಲಕ ವಿರೋಧ ಪಕ್ಷಗಳು ರಾಜ್ಯಸಭೆಯಲ್ಲಿ ತಡೆ ಹಾಕಿದವು.  ಮಸೂದೆಯನ್ನು ಸಂಸತ್ತಿನ ಜಂಟಿ ಆಯ್ಕೆ ಸಮಿತಿ ಪರಾಮರ್ಶೆಗೆ ಕಳುಹಿಸಬೇಕು ಎಂಬುದಾಗಿ ವಿಪಕ್ಷಗಳು ಹಿಡಿದ ಪಟ್ಟಿನಿಂದಾಗಿ ಉಂಟಾದ ಕೋಲಾಹಲದ ಮಧ್ಯೆ ರಾಜ್ಯಸಭಾ ಉಪ ಸಭಾಪತಿ ಹರಿವಂಶ ನಾರಾಯಣ್ ಸಿಂಗ್ ಅವರು ಸದನ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರುಇನ್ನು ಮಸೂದೆಯನ್ನು ೨೦೧೯ರ ಜನವರಿ ೨ರ ಬುಧವಾರ ಸಂಸತ್ತಿನ ಮೇಲ್ಮನೆಯಲ್ಲಿ ಮಂಡಿಸಲಾಗುವುದುಮುಸ್ಲಿಂ ಮಹಿಳಾ (ವಿವಾಹ ಹಕ್ಕುಗಳ ಸಂರಕ್ಷಣಾ) ಮಸೂದೆ ೨೦೧೮ನ್ನು ರಾಜ್ಯಸಭೆಯಲ್ಲಿ ಮಧ್ಯಾಹ್ನ ಪರಿಶೀಲನೆ ಮತ್ತು ಅನುಮೋದನೆ ಸಲುವಾಗಿ ಮಂಡಿಸಬೇಕಾಗಿತ್ತು. ಏನಿದ್ದರೂ ಮಸೂದೆ ಮಂಡನೆಗೆ ಸರ್ಕಾರ ಯತ್ನ ಮಾಡುವಷ್ಟರಲ್ಲೇ ಸದನದಲ್ಲಿ ಭಾರೀ ಕೋಲಾಹಲ ಉಂಟಾಯಿತು. ಕಲಾಪ ಆರಂಭವಾಗುತ್ತಿದ್ದಂತೆಯೇ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ (ಎಐಎಡಿಎಂಕೆ) ಸದಸ್ಯರು ಕಾವೇರಿ -ಮೇಕೆದಾಟು ಅಣೆಕಟ್ಟು ವಿಷಯವನ್ನು ಹಿಡಿದುಕೊಂಡು ಸಭಾಪತಿಯವರ ಪೀಠದ ಮುಂದಿನ ಜಾಗಕ್ಕೆ ಧಾವಿಸಿ ಬಂದು ತೀವ್ರ ಪ್ರತಿಭಟನೆ ಆರಂಭಿಸಿದರು. ಮಧ್ಯೆ, ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕ ಡೆರೆಕ್ ಬ್ರೀನ್ ಅವರುಮಸೂದೆಯನ್ನು ಸೂಕ್ತ ಪರಾಮರ್ಶೆಗಾಗಿ ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂಬುದಾಗಿ ವಿರೋಧ ಪಕ್ಷಗಳು ಸರ್ವಾನುಮತದೊಂದಿಗೆ ಬಯಸುತ್ತಿವೆ ಎಂದು ಹೇಳಿದರು. ಇಂತಹುದೇ ಭಾವನೆಗಳನ್ನು ವ್ಯಕ್ತ ಪಡಿಸಿದ ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಅವರುಇದು ಕೋಟ್ಯಂತರ ಜನರ ಬದುಕಿನ ಮೇಲೆ ಸಕಾರಾತ್ಮಕ ಅಥವಾ ನಕಾರಾತ್ಮಕ ಪರಿಣಾಮ ಬೀರುವಂತಹ ಮಹತ್ವದ ಮಸೂದೆಯಾಗಿದ್ದು, ಆಯ್ಕೆ ಸಮಿತಿಗೆ ಹೋಗದೆಯೇ ಇದನ್ನು ಅನುಮೋದಿಸಲಾಗದು ಎಂದು ಹೇಳಿದರು. ಸದನ ಅಸ್ತವ್ಯಸ್ತವಾಗಿದ್ದುದನ್ನು ಗಮನಿಸಿ ಉಪಸಭಾಪತಿ ಹರಿವಂಶ್ ನಾರಾಯಣ್ ಸಿಂಗ್ ಅವರು ೧೫ ನಿಮಿಷಗಳ ಅವಧಿಗೆ ಸದನ ಕಲಾಪಗಳನ್ನು ಮುಂದೂಡಿದರು. ಸದನ ಮರುಸಮಾವೇಶಗೊಂಡ ಬಳಿಕವೂ ಕೋಲಾಹಲ ಮುಂದುವರೆದುದನ್ನು ಅನುಸರಿಸಿ ಉಪಸಭಾಪತಿಯವರು ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಿದರು. ಮಸೂದೆಯನ್ನು ಸದನವು ಪರಿಶೀಲನೆಗಾಗಿ ಎತ್ತಿಕೊಳ್ಳುವ ಮುನ್ನ ಶಾಸನಾತ್ಮಕ ಪರಿಶೀಲನೆಗೆ ಒಳಪಡಿಸುವುದು ಅತ್ಯಂತ ನಿರ್ಣಾಯಕ ಎಂದು ಕಾಂಗ್ರೆಸ್ ನಾಯಕ ಆನಂದ ಶರ್ಮ ಹೇಳಿದರು. ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿಜಯ್ ಗೋಯೆಲ್ ಅವರು ಮಸೂದೆಯನ್ನು ತಡೆ ಹಿಡಿಯುತ್ತಿರುವುದಕ್ಕಾಗಿ ವಿರೋಧ ಪಕ್ಷಗಳ ಮೇಲೆ ದಾಳಿ ನಡೆಸಿದರು. ಮುಸ್ಲಿಂ ಮಹಿಳೆಯರ ಬಗ್ಗೆ ಅವರಿಗೆ ಯಾವುದೇ ಅನುಕಂಪ ಇಲ್ಲ ಎಂದು ಸಚಿವರು ಟೀಕಿಸಿದರು. ತಲಾಖ್ ಪದವನ್ನು ಒಂದೇ ಉಸಿರಿನಲ್ಲಿ ಮೂರು ಬಾರಿ ಉಚ್ಚರಿಸುವ ಮೂಲಕ ತಮ್ಮ ಪತ್ನಿಯರಿಗೆ ಮುಸ್ಲಿಂ ಪುರುಷರು ದಿಢೀರನೆ ವಿವಾಹ ವಿಚ್ಛೇದನ ನೀಡುವ  ಪದ್ಧತಿಯನ್ನು ಕ್ರಿಮಿನಲ್ ಅಪರಾಧವನ್ನಾಗಿ ಮಾಡಲು ಉದ್ದೇಶಿಸಿರುವ ಪರಿಷ್ಕೃತ ಮಸೂದೆಯನ್ನು ಲೋಕಸಭೆಯು ಮೂರುದಿನಗಳ ಹಿಂದೆ ಅಂಗೀಕರಿಸಿದೆ. ಮಸೂದೆಯು ಕಾನೂನು ಆಗಿ ಜಾರಿಗೆ ಬರಲು ರಾಜ್ಯಸಭೆ ಅನುಮತಿ ನೀಡಬೇಕಾದ ಅಗತ್ಯ ಇದೆ.  ಕಾನೂನು ಸಚಿವ ರವಿಶಂಕರ ಪ್ರಸಾದ್ ಅವರು ದಿಢೀರ್ ತ್ರಿವಳಿ ತಲಾಖ್ ಮಸೂದೆಯನ್ನು ಸೋಮವಾರ ಮಧ್ಯಾಹ್ನ ಮೇಲ್ಮನೆಯಲ್ಲಿ ಮಂಡಿಸಬೇಕಾಗಿತ್ತುಲೋಕಸಭೆಯು ಕಾವೇರಿದ ಚರ್ಚೆಯ ಬಳಿಕ ೨೪೫ ಪರ ಮತ್ತು ೧೧ ವಿರುದ್ಧ ಮತಗಳೊಂದಿಗೆ ಮಸೂದೆಯನ್ನು ಗುರುವಾರ ಅಂಗೀಕರಿಸಿತ್ತು. ಮಸೂದೆಯನ್ನು ಮತಕ್ಕೆ ಹಾಕುವ ಮುನ್ನ ವಿರೋಧಿ ಕಾಂಗ್ರೆಸ್ ಮತ್ತು ಎಐಎಡಿಎಂಕೆ ಸಭಾತ್ಯಾಗ ಮಾಡಿದ್ದವುಪರಿಷ್ಕೃತ ಮಸೂದೆಯಲ್ಲಿ ದಿಢೀರ್ ತಲಾಖ್ ನೀಡುವ ಮುಸ್ಲಿಂ ಪುರುಷರಿಗೆ ಮೂರು ವರ್ಷಗಳ ಸೆರೆವಾಸ ವಿಧಿಸಲು ಅವಕಾಶ ಕಲ್ಪಿಸಿರುವುದನ್ನು ವಿರೋಧ ಪಕ್ಷಗಳು ತಮ್ಮ ಆಕ್ಷೇಪಕ್ಕೆ ಅತ್ಯಂತ ಮುಖ್ಯ ಅಂಶವನ್ನಾಗಿ ಮಾಡಿಕೊಂಡಿವೆ. ಹೀಗಾಗಿ ಮಸೂದೆಯನ್ನು ಸಮಗ್ರ ಪರಾಮರ್ಶೆಗಾಗಿ ಜಂಟಿ ಸಂಸದೀಯ ಆಯ್ಕೆ ಸಮಿತಿಗೆ ಕಳುಹಿಸಬೇಕು ಎಂಬುದಾಗಿ ಪಟ್ಟು ಹಿಡಿದಿತ್ತು.

2018: ಲಕ್ನೋ: ತಮ್ಮ ಬಾಹ್ಯ ಬೆಂಬಲದೊಂದಿಗೆ ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಸರ್ಕಾರ ರಚಿಸಿರುವ ಕಾಂಗ್ರೆಸ್ಸಿಗೆ ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿಬೆಂಬಲ ಮರುಪರಿಶೀಲನೆ ಮಾಡಬಹುದು ಎಂಬುದಾಗಿ ಎಚ್ಚರಿಕೆ ನೀಡುವ ಮೂಲಕ ಕಾಂಗ್ರೆಸ್ ಸರ್ಕಾರಗಳಿಗೆ ವಸ್ತುಶಃ ನೋಟಿಸ್ ನೀಡಿದರು. ಏಪ್ರಿಲ್ ೨ರ ಭಾರತ ಬಂದ್ ವೇಳೆಯಲ್ಲಿಮುಗ್ಧರ ವಿರುದ್ಧ ಹಾಕಲಾಗಿರುವ ಪ್ರಕರಣಗಳನ್ನು ಹಿಂತೆಗೆದುಕೊಳ್ಳದೇ ಇದ್ದಲ್ಲಿ ಪಕ್ಷವು ಉಭಯ ರಾಜ್ಯಗಳಲ್ಲೂ ನೀತಿಲಾಗಿರುವ ಬಾಹ್ಯ ಬೆಂಬಲದ ಬಗ್ಗೆ ಮರುಪರಿಶೀಲನೆ ಮಾಡಬಹುದು ಎಂದು ಹೇಳುವ ಮೂಲಕ ಬಿಎಸ್ಪಿ ನಾಯಕಿ ಕಾಂಗ್ರೆಸ್ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದರು. ‘ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಹೊಸದಾಗಿ ಚುನಾಯಿತವಾಗಿರುವ ಸರ್ಕಾರಗಳು ಭಾರತ ಬಂದ್ ಕಾಲದಲ್ಲಿ ಮುಗ್ಧರ ವಿರುದ್ಧ ಹೂಡಲಾದ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ತ್ವರಿತ ಕ್ರಮ ಕೈಗೊಳ್ಳದೇ ಇದ್ದಲ್ಲಿ ಬಿಎಸ್ಪಿಯು ಕಾಂಗ್ರೆಸ್ ಸರ್ಕಾರಗಳಿಗೆ ನೀಡಿರುವ ಬಾಹ್ಯ ಬೆಂಬಲ ಮುಂದುವರಿಕೆ ವಿಚಾರವನ್ನು ಮರುಪರಿಶೀಲನೆ ಮಾಡಬಹುದು ಎಂದು ಕಟುಪದಗಳ ಪತ್ರಿಕಾ ಹೇಳಿಕೆಯಲ್ಲಿ ಮಾಯಾವತಿ ಹೇಳಿದರು. ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಬಿಜೆಪಿ ಆಳ್ವಿಕೆಯ ಇತರ ರಾಜ್ಯಗಳಲ್ಲಿ ರಾಜಕೀಯ ಮತ್ತು ಜಾತಿಗಳನ್ನು ಪರಿಗಣಿಸಿ ಮುಗ್ಧ ಜನರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಈಗ ಮಧ್ಯಪ್ರದೇಶ ಮತ್ತು ರಾಜಸ್ಥಾನ ಕಾಂಗ್ರೆಸ್ಸಿನ ಆಡಳಿತಕ್ಕೆ ಒಳಪಟ್ಟಿದ್ದು, ಹೊಸ ಸರ್ಕಾರಗಳು ತತ್ ಕ್ಷಣವೇ ಪ್ರಕರಣಗಳನ್ನು ಹಿಂತೆಗೆದುಕೊಳ್ಳಬೇಕು. ಸರ್ಕಾರಗಳು ಇದಕ್ಕೆ ವಿಫಲವಾದಲ್ಲಿ ತಮ್ಮ ಪಕ್ಷವು ಬಾಹ್ಯ ಬೆಂಬಲ ಮುಂದುವರಿಕೆಯ ನಿರ್ಧಾರವನ್ನು ಮರುಪರಿಶೀಲನೆ ಮಾಡಬೇಕಾಗಬಹುದು ಎಂದು ಮಾಯಾವತಿ ತಿಳಿಸಿದರು. ೨೩೦ ಸದಸ್ಯ ಬಲದ ಮಧ್ಯಪ್ರದೇಶ ವಿಧಾನಸಭೆಯಲ್ಲಿ ಬಿಎಸ್ಪಿ ಇಬ್ಬರು ಸದಸ್ಯರನ್ನು ಹೊಂದಿದ್ದರೆ, ರಾಜಸ್ಥಾನದ ೨೦೦ ಸದಸ್ಯಬಲದ ವಿಧಾನಸಭೆಯಲ್ಲಿ ಸ್ಥಾನಗಳನ್ನು ಹೊಂದಿದೆ. ಉಭಯ ರಾಜ್ಯಗಳಲ್ಲೂ ಸ್ವಂತ ಬಲದ ಬಹುಮತ ಪಡೆಯಲು ಕಾಂಗ್ರೆಸ್ ವಿಫಲವಾದಾಗ ಬಿಎಸ್ಪಿ ಸರ್ಕಾರ ರಚಿಸಲು ಅದಕ್ಕೆ ಬಾಹ್ಯ ಬೆಂಬಲವನ್ನು ನೀಡಿತ್ತು. ಮಧ್ಯಪ್ರದೇಶ, ಛತ್ತೀಸ್ ಗಢ ಮತ್ತು ರಾಜಸ್ಥಾನದಲ್ಲಿ ಕಾಂಗ್ರಸ್ಸಿನಿಂದ ರಚಿತವಾಗಿರುವ ಸರ್ಕಾರಗಳು ಬಿಜೆಪಿಯಂತೆ ಕೆಲಸ ಮಾಡಬಾರದು, ಬಿಜೆಪಿಯು ರೈತರು ಮತ್ತು ನಿರುದ್ಯೋಗಿಗಳಿಗೆ ನೀಡಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಯಿತು ಎಂದು ಮಾಯಾವತಿ ನುಡಿದರು. ಕಾಂಗ್ರೆಸ್ ಪಕ್ಷವು ಈಗ ಕೇವಲ ಪ್ರಕಟಣೆಗಳನ್ನು ನೀಡುತ್ತಿದ್ದು, ಇದು ಸಾಕಾಗುವುದಿಲ್ಲವಾದ್ದರಿಂದ ಕಾಂಗ್ರೆಸ್ ಪಕ್ಷಕ್ಕೆ ಎಚ್ಚರಿಕೆ ನೀಡುವ ಅಗತ್ಯ ಎದುರಾಗಿದೆ. ಭರವಸೆಗಳನ್ನು ಕೇವಲ ಕಾಗದಗಳಲ್ಲಿ ನೀಡಲಾಗುತ್ತಿದೆ ಎಂದು ಜನರು ಅಭಿಪ್ರಾಯ ಪಡುತ್ತಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಒಂದೇ ನಾಣ್ಯದ ಎರಡು ಮುಖಗಳಾಗಿವೆ. ನಂಬಿಕೆಯನ್ನು ಬದಲಾಯಿಸುವುದು ಈಗ ಕಾಂಗ್ರೆಸ್ ಸರ್ಕಾರಗಳಿಗೆ ಬಿಟ್ಟ ವಿಷಯ ಎಂದು ಮಾಯಾವತಿ ಚುಚ್ಚಿದರು. ಕೇಂದ್ರವು ತ್ರಿವಳಿ ತಲಾಖ್ ೨೦೧೮ ಮಸೂದೆ ಬಗೆಗಿನ ತನ್ನ ಮೊಂಡು ಹಠವನ್ನು ಬಿಟ್ಟು ಸಂಪೂರ್ಣ ವಿಪಕ್ಷಗಳು ಇಟ್ಟಿರುವ ಬೇಡಿಕೆಯಂತೆ ಮಸೂದೆಯನ್ನು ಸಂಸತ್ತಿನ ಜಂಟಿ ಆಯ್ಕೆ ಸಮಿತಿಗೆ ಕಳುಹಿಸುವುದು ಒಳ್ಳೆಯದು ಎಂದು ಅವರು ನುಡಿದರುಕಳೆದ ಐದು ವರ್ಷಗಳಲ್ಲಿಅಚ್ಛೇ ದಿನ್ ಕುರಿತು ಕನಸುಗಳನ್ನು ಬಿತ್ತಿದ್ದರ ಹೊರತಾಗಿ ಯಾವ ಭರವಸೆಗಳನ್ನೂ ಈಡೇರಿಸಲಾಗಿಲ್ಲ. ’ನೋಟು ಅಮಾನ್ಯೀಕರಣ ಮತ್ತು ಜಿಎಸ್ಟಿಯನ್ನು  ಅಪ್ರಬುದ್ಧವಾಗಿ ಅನುಷ್ಠಾನಗೊಳಿಸಲಾಗಿದೆ ಎಂದು ಬಿಎಸ್ಪಿ ನಾಯಕಿ ನುಡಿದರು.

2018: ನವದೆಹಲಿ: ಅಡುಗೆ ಅನಿಲದ ಬೆಲೆಯನ್ನು ಇಳಿಸುವ ಮೂಲಕ ಹೊಸ ವರ್ಷಕ್ಕೆ ಕೇಂದ್ರ ಸರ್ಕಾರ ಕೊಡುಗೆಯನ್ನು ನೀಡಿತು. ಭಾರತೀಯ ತೈಲ ನಿಗಮದ (ಐಒಸಿ) ಪ್ರಕಟಣೆಯ ಪ್ರಕಾರ ಸಬ್ಸಿಡಿ ಅಡುಗೆ ಅನಿಲ (ಎಲ್ಪಿಜಿ) ದರವನ್ನು ಸಿಲಿಂಡರಿಗೆ .೯೧ ರೂಪಾಯಿಯಷ್ಟು ಇಳಿಸಲಾಗಿದ್ದು, ಸಬ್ಸಿಡಿಯೇತರ ಅಡುಗೆ ಅನಿಲದ ದರ ಸಿಲಿಂಡರಿಗೆ ೧೨೦.೫೦ ರೂಪಾಯಿಯಷ್ಟು ಇಳಿಕೆಯಾಯಿತು. ಒಂದು ತಿಂಗಳ ಅವಧಿಯಲ್ಲಿ ಅಡುಗೆ ಅನಿಲದ ಬೆಲೆ ನೇರವಾಗಿ ಇಳಿದದ್ದು ಇದು ಎರಡನೇ ಬಾರಿ. ೧೪. ಕಿಗ್ರಾಂ ತೂಕದ ಸಬ್ಸಿಡಿ ಎಲ್ ಪಿಜಿ ಸಿಲಿಂಡರ್ ಬೆಲೆ ರಾಷ್ಟ್ರದ ರಾಜಧಾನಿಯಲ್ಲಿ ಮಧ್ಯರಾತ್ರಿಯಿಂದ ಈಗಿನ ೫೦೦.೯೦ ರೂ ಬದಲಿಗೆ ೪೯೪.೯೯ ರೂ.ಗೆ ಇಳಿಯಲಿದೆ ಎಂದು ಐಒಸಿ ಪ್ರಕಟಣೆ ಹೇಳಿತು. ಡಿಸೆಂಬರ್  ೧ರಂದು ಸಬ್ಸಿಡಿ ಅಡುಗೆ ಅನಿಲದ ಬೆಲೆ ಸಿಲಿಂಡರಿಗೆ .೫೨ ರೂಪಾಯಿಯಷ್ಟು ಇಳಿದಿತ್ತುಜೂನ್ ತಿಂಗಳಿನಿಂದೀಚೆಗೆ ನಿರಂತರ ಏರಿಕೆಯಾಗುತ್ತಿದ್ದ ಅಡುಗೆ ಅನಿಲದ ಬೆಲೆ ಡಿಸೆಂಬರ್ ತಿಂಗಳಲ್ಲಿ ಇಳಿಮುಖವಾಗಿದೆ. ಎರಡು ಬಾರಿ ಇಳಿಕೆಯೊಂದಿಗೆ ಜೂನ್- ನವೆಂಬರ್ ಅವಧಿಯಲ್ಲಿ ಸಿಲಿಂಡರಿಗೆ ೧೪.೧೩ ರೂಪಾಯಿಯಷ್ಟು ಏರಿಕೆ ಕಂಡಿದ್ದ ಅಡುಗೆ ಅನಿಲದ ದರ ಇಳಿಮುಖವಾಗುವತ್ತ ಸಾಗಿತು. ಸಬ್ಸಿಡಿ ರಹಿತ ಅಥವಾ ಮಾರುಕಟ್ಟೆ ದರದ ಅಡುಗೆ ಅನಿಲದ ದರ ಕೂಡಾ ಸೋಮವಾರ ಸಿಲಿಂಡರಿಗೆ ೧೨೦.೫೦ ರೂಪಾಯಿ ಇಳಿಕೆಯೊಂದಿಗೆ ಅಗಾಧ ಇಳಿಕೆ ಕಂಡಿದೆ ಎಂದು ಐಒಸಿ ಹೇಳಿಕೆ ತಿಳಿಸಿತು. ಸಬ್ಸಿಡಿಯೇತರ ಅಡುಗೆ ಅನಿಲದ ದರ ಈಗ ದೆಹಲಿಯಲ್ಲಿ ೧೪. ಕಿಗ್ರಾಂ ತೂಕದ ಸಿಲಿಂಡರಿಗೆ ೬೮೯ ರೂಪಾಯಿ ಆಗಲಿದೆ ಎಂದು ಹೇಳಿಕೆ ತಿಳಿಸಿತು. ಡಿಸೆಂಬರ್ ೧ರಂದು ಸಬ್ಸಿಡಿಯೇತರ ಅಡುಗೆ ಅನಿಲದ ದರ ಸಿಲಿಂಡರಿಗೆ ೧೩೩ ರೂಪಾಯಿಯಷ್ಟು ಇಳಿದಿತ್ತು. ಎಲ್ಲ ಅಡುಗೆ ಅನಿಲ ಗ್ರಾಹಕರೂ ಮಾರುಕಟ್ಟೆ ದರದಲ್ಲೆ ಅಡುಗೆ ಅನಿಲವನ್ನು ಖರೀದಿಸಬೇಕಾಗಿದ್ದರೂ, ಸಬ್ಸಿಡಿ ಎಲ್ ಪಿಜಿಯ ೧೨ ಸಿಲಿಂಡರುಗಳ ಸಬ್ಸಿಡಿಯನ್ನು ಬಳಕೆದಾರರ ಬ್ಯಾಂಕ್ ಖಾತೆಗಳಿಗೆ ಸರ್ಕಾರ ಪಾವತಿಸುತ್ತದೆ.

2018: ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟ ಲೋಕನಾಥ್‌ (91) ಡಿಸೆಂಬರ್ 30ರ ಭಾನುವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾದರು.. ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಚಿಕಿತ್ಸೆ ಲಕಾರಿಯಾಗದೆ ಬನಶಂಕರಿಯ ಎಕ್ಸ್ಎಲ್ಕೇರ್ನಲ್ಲಿ ಕೊನೆಯುಸಿರೆಳೆದರು. ಅವರು ಪುತ್ರ ಮತ್ತು ನಾಲ್ವರು ಹೆಣ್ಣು ಮಕ್ಕಳು ಸೇರಿ ಚಿತ್ರರಂಗದ ಅಪಾರ ಗೆಳೆಯರನ್ನು ಅಗಲಿದರು.  ಈದಿನ  ಮೃತರ ಪಾರ್ಥಿವ ಶರೀರವನ್ನು ರವೀಂದ್ರ ಕಲಾಕ್ಷೇತ್ರದಲ್ಲಿ ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಚಿತ್ರರಂಗದ ಬಹುತೇಕ ಗಣ್ಯರು, ಅಭಿಮಾನಿಗಳು ಸೇರಿ ಅಪಾರ ಬಂಧುಗಳು ದರ್ಶನ ಪಡೆದುಕೊಂಡರು. ಸಂಜೆ ಬನಶಂಕರಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.  "ಸಂಸ್ಕಾರ' ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಲೋಕನಾಥ್‌, ಈವರೆಗೆ ಸುಮಾರು 650ಕ್ಕೂ ಹೆಚ್ಚು ಚಿತ್ರಗಳಲ್ಲಿ ತರಹೇವಾರಿ ಪಾತ್ರಗಳ ಮೂಲಕ ಗಮನಸೆಳೆದಿದ್ದರು. ರಂಗಭೂಮಿಯ ಹಿನ್ನೆಲೆ ಇದ್ದ ಅವರು, ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ನಟಿಸಿದ್ದರು. ಅಷ್ಟೊಂದು ಚಿತ್ರಗಳಲ್ಲಿ ನಟಿಸಿದ್ದರೂ ಅವರ ಅಮೋಘ ಅಭಿನಯದಿಂದ ಗಮನಸೆಳೆದಿದ್ದು ಮಾತ್ರ "ಭೂತಯ್ಯನ ಮಗ ಅಯ್ಯು' ಚಿತ್ರದಲ್ಲಿ. "ನಾಗರಹಾವು', "ಬಂಗಾರದ ಮನುಷ್ಯ', "ದೂರದ ಬೆಟ್ಟ',  "ಶರಪಂಜರ', "ಹೇಮಾವತಿ', "ಬಂಗಾರದ ಪಂಜರ', "ಹೃದಯ ಸಂಗಮ', "ಕೃಷ್ಣ ರುಕ್ಮಿಣಿ ಸತ್ಯಭಾಮ',"ಭಾಗ್ಯಜ್ಯೋತಿ', "ಕೂಡಿ ಬಾಳ್ಳೋಣ',"ಹೊಸ ನೀರು'," ಮನೆ ಮನೆ ಕಥೆ',"ಒಲವಿನ ಆಸರೆ' "ಸಿಂಗಾಪುರದಲ್ಲಿ ರಾಜಕುಳ್ಳ', "ಮಿಂಚಿನ ಓಟ', ಸೇರಿದಂತೆ ಹಲವು ಸೂಪರ್ಹಿಟ್ಚಿತ್ರಗಳಲ್ಲಿ ಲೋಕನಾಥ್ಅಭಿನಯಿಸಿದ್ದರು. ಅವರು "ಸಂಸ್ಕಾರ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರೂ, "ಗೆಜ್ಜೆ ಪೂಜೆ' ಬಿಡುಗಡೆಯಾದ ಮೊದಲ ಚಿತ್ರವಾಗಿತ್ತು. 1952ರಲ್ಲಿ ಅವರು ರವಿ ಕಲಾವಿದರು ರಂಗ ಸಂಸ್ಥೆ ಸೇರಿಕೊಂಡಿದ್ದರು. ಮೂಲಕ "ಬಂಡವಾಳವಿಲ್ಲದ ಬಡಾಯಿ' ಎಂಬ ಮೊದಲ ನಾಟಕದಲ್ಲಿ ನಟಿಸಿದ್ದರು. ನಂತರದ ದಿನಗಳಲ್ಲಿ ಹಲವು ನಾಟಕಗಳಲ್ಲಿ ನಟಿಸಿದ್ದರು. ಕನ್ನಡ ಚಿತ್ರರಂಗದಲ್ಲಿ ಐದು ದಶಕಕ್ಕೂ ಹೆಚ್ಚು ಸೇವೆ ಸಲ್ಲಿಸಿರುವ ಕೀರ್ತಿ ಲೋಕನಾಥ್ಅವರದು. 

2017: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ ಪಿಎಫ್) ಸಿಬ್ಬಂದಿಯ ಮೇಲೆ  ಜೈಶ್--ಮೊಹಮ್ಮದ್ (ಜೆಇಎಂ) ಭಯೋತ್ಪಾದಕ ಸಂಘಟನೆ ನಡೆಸಿದಫಿಯಾದೀನ್ (ಆತ್ಮಹತ್ಯಾ) ದಾಳಿಯಲ್ಲಿ ಐವರು ಸಿಆರ್ ಪಿಎಫ್ ಯೋಧರು ಹುತಾತ್ಮರಾಗಿದ್ದು, ಸಿಆರ್ಪಿಎಫ್ ಪ್ರತಿ ಕಾರ್ಯಾಚರಣೆಗೆ  ಮೂವರು ಉಗ್ರಗಾಮಿಗಳು ಬಲಿಯಾದರು. ಭಾರಿ ಶಸ್ತ್ರಾಸ್ತ್ರಗಳೊಂದಿಗೆ ಉಗ್ರಗಾಮಿಗಳು ನಸುಕಿನ ಗಂಟೆ ಸುಮಾರಿಗೆ ಶಿಬಿರದ ಮೇಲೆ ಎರಗಿದರು. ಅವರು ಅಂಡರ್ ಬ್ಯಾರೆಲ್ ಗ್ರೆನೇಡ್ ಲಾಂಚರುಗಳು ಮತ್ತು ಸ್ವಯಂಚಾಲಿತ ಶಸ್ತ್ರಾಸ್ತ್ರ ಹೊಂದಿದ್ದರು. ಶಿಬಿರದಲ್ಲಿದ್ದ ಯೋಧರು ಅವರೊಂದಿಗೆ ಘರ್ಷಿಸಿದರು ಎಂದು ಸಿಆರ್ ಪಿಎಫ್ ಅಧಿಕಾರಿಗಳು ತಿಳಿಸಿದರು. ಹುತಾತ್ಮ ಯೋಧರಲ್ಲಿ ಒಬ್ಬರನ್ನು ಶ್ರೀನಗರದ ನಿವಾಸಿ ಸೈಫುದ್ದೀನ್ ಸೋಜ್ ಎಂಬುದಾಗಿ ಗುರುತಿಸಲಾಯಿತು. ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ತಂಡವೂ ಶಿಬಿರದಲ್ಲಿ ಸಿಆರ್ ಪಿಎಫ್ ಯೋಧರ ಜೊತೆಗಿತ್ತು. ಭಯೋತ್ಪಾದಕರ ತಂಡ ಪುಲ್ವಾಮ ಜಿಲ್ಲೆಯ ಅವಂತಿಪೋರಾದಲ್ಲಿನ ಸಿಆರ್ ಪಿಎಫ್ ತರಬೇತಿ ಕೇಂದ್ರದ ಮೇಲೆ ನಡೆಸಿದ ದಾಳಿಯಲ್ಲಿ ಮೂವರು ಭದ್ರತಾ ಸಿಬ್ಬಂದಿಯೂ ಗಾಯಗೊಂಡರು. ಯೋಧರ ಮೇಲೆ ಉಗ್ರಗಾಮಿಗಳು ಯದ್ವಾತದ್ವ ಗುಂಡು ಹಾರಿಸಿದರು ಎಂದು ಸಿಆರ್ ಪಿಎಫ್ ಪಿಆರ್ ರಾಜೇಶ್ವರ ಯಾದವ್ ಹೇಳಿದರು.  ಉಗ್ರಗಾಮಿಗಳು ಕಟ್ಟಡವೊಂದರಲ್ಲಿ ಅಡಗಿಕೊಂಡರು. ಅವರನ್ನು ಅಲ್ಲಿಂದ ತೆರವುಗೊಳಿಸಲು ಕಾರ್ಯಾಚರಣೆ ನಡೆಸಿ ಕೊಲ್ಲಲಾಯಿತು  ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಆತ್ಮಹತ್ಯಾ ದಾಳಿಯನ್ನು ಜೆಇಎಂ ನಡೆಸಿರುವುದಾಗಿ ಜೆಇಎಂ ವಕ್ತಾರ ಹಸನ್ ಶಾ ತಿಳಿಸಿದ. ಜೆಇಎಂ ಕಮಾಂಡರ್ ನೂರ್ ಟ್ರಾಲಿ ತಲಾಹ್, ತಲಾಹ್ ರಶೀದ್ ಮತ್ತು ಮೆಹಮೂದ್ ಭಾಯಿ ಹತ್ಯೆಯ ಸೇಡು ತೀರಿಸಲು ದಾಳಿ ನಡೆಸಲಾಗಿದೆ ಎಂದು ಹಸನ್ ಶಾ ತಿಳಿಸಿದ.
2017: ನವದೆಹಲಿ: ಜಮ್ಮು ಮತ್ತು ಕಾಶ್ಮಿರದ ಪುಲ್ವಾಮ ಜಿಲ್ಲೆಯಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ಕಾಂಗ್ರೆಸ್ಇದು ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯ ವೈಫಲ್ಯ ಎಂದು ಹೇಳಿತು. ಪುನರಾವರ್ತನೆಗೊಳ್ಳುತ್ತಿರುವ ದಾಳಿಗಳು ರಾಷ್ಟ್ರವಿರೋಧಿ ಶಕ್ತಿಗಳು ಭಾರತಕ್ಕೆ ಹೆದರುವುದಿಲ್ಲ ಎಂಬ ಸಂದೇಶವನ್ನು ನೀಡಿವೆ ಎಂದು ಪಕ್ಷದ ವಕ್ತಾರರಾದ ಸುಷ್ಮಿತಾ ದೇವ್ ಅವರು ಇಲ್ಲಿ ಹೇಳಿದರು. ಚುನಾವಣೆ ಕಾಲದಲ್ಲಿ ಮೋದಿಯವರು ಭಾರತ ಬಲಾಢ್ಯ ದೇಶ ಎಂದು ಹೇಳಿದ್ದರು, ಆದರೆ ಕದನವಿರಾಮ ಉಲ್ಲಂಘನೆಗಳಲ್ಲಿ ಸಂಭವಿಸುತ್ತಿರುವ ಸಾವು ನೋವಿನ ಸಂಖ್ಯೆ ಹೆಚ್ಚುತ್ತಿದೆ ಎಂದು ದೇವ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ‘ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯ ವೈಫಲ್ಯದ ಸಂಕೇತ ಎಂದು ಅವರು ನುಡಿದರು. ಭಾರತದ ಆಂತರಿಕ ಮತ್ತು ಬಾಹ್ಯ ವೈರಿಗಳನ್ನು ನಿಗ್ರಹಿಸಲು ಪ್ರಧಾನಿ ಪ್ರಬಲ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಬಯಸುತ್ತದೆ ಎಂದು ಅವರು ನುಡಿದರು. ರಾಷ್ಟ್ರದ ಭದ್ರತೆ ಮತ್ತು ಸುರಕ್ಷತೆಗಾಗಿ ಪ್ರಧಾನಿ ಕೈಗೊಳ್ಳುವ ಕ್ರಮಗಳನ್ನು ಕಾಂಗ್ರೆಸ್ ಬೆಂಬಲಿಸುತ್ತದೆ ಎಂದು ಅವರು ಹೇಳಿದರು.  ಭಾರಿ ಶಸ್ತ್ರಾಸ್ತ್ರ ಹೊಂದಿದ್ದ ಮೂವರು ಉಗ್ರಗಾಮಿಗಳು ಪುಲ್ವಾಮ ಜಿಲ್ಲೆಯ ಅವಂತಿಪೋರಾದಲ್ಲಿ ಕೇಂದ್ರೀಯ  ಮೀಸಲು ಪೊಲೀಸ್ ಪಡೆಯ ೧೮೫ನೇ ಬೆಟಾಲಿಯನ್ ಶಿಬಿರದ ಮೇಲೆ ಗುಂಡಿನ ದಾಳಿ ನಡೆಸಿ ಐವರು ಸಿಆರ್ ಪಿಎಫ್ ಯೋಧರನ್ನು ಕೊಂದು ಹಾಕಿದ್ದರು.
2017: ಅಹಮದಾಬಾದ್: ಗುಜರಾತಿನ ನೂತನ ಸಚಿವ ಸಂಪುಟದಲ್ಲಿ ಉಪಮುಖ್ಯಮಂತ್ರಿಯಾದ ನಿತಿನ್ ಪಟೇಲ್ ಕಡೆಗೂ ತಮ್ಮ ಸಮರದಲ್ಲಿ ವಿಜಯಿಯಾದರು. ಪ್ರಮುಖ ಖಾತೆ ಬೇಕು ಎಂದು ಪಟ್ಟು ಹಿಡಿದಿದ್ದ ನಿತಿನ್ ಪಟೇಲ್ ಆಗ್ರಹಕ್ಕೆ ಮಣಿದ ಬಿಜೆಪಿ ನಾಯಕತ್ವ ನಿರ್ಣಾಯಕ ಹಣಕಾಸು ಖಾತೆಯನ್ನು ಅವರಿಗೆ ವಹಿಸಿತು. ಮುನ್ನ ಹಣಕಾಸು ಖಾತೆಯನ್ನು ಸೌರಭ್ ಪಟೇಲ್ ಅವರಿಗೆ ನೀಡಲಾಗಿತ್ತು.  ಇದಕ್ಕೆ ಮುನ್ನ,  ನೂತನ ಸಂಪುಟದಲ್ಲಿ ತಾವು ಅಪೇಕ್ಷಿಸಿದ ಖಾತೆಗಳು ಲಭ್ಯವಾಗಿಲ್ಲ ಎಂದು ಅಸಮಾಧಾನಗೊಂಡಿದ್ದ ಉಪ ಮುಖ್ಯಮಂತ್ರಿ ನಿತಿನ್ ಪಟೇಲ್ ಅವರು ಪಕ್ಷದ ರಾಷ್ಟ್ರಾಧ್ಯಕ್ಷ  ಅಮಿತ್ ಶಾ ಸಂಧಾನದ ಬಳಿಕ ಜಗ್ಗಿ, ಖಾತೆಗಳನ್ನು ವಹಿಸಿಕೊಳ್ಳಲು ಒಪ್ಪಿದ್ದರು. ಬೆಳಗ್ಗೆ ಅಮಿತ್ ಶಾ ಅವರು ನಿತಿನ್ ಪಟೇಲ್ ಅವರ ಬಳಿ ಮಾತನಾಡಿ, ಸರ್ಕಾರದಲ್ಲಿ ನಂಬರ್ ಸ್ಥಾನಮಾನಕ್ಕೆ ತಕ್ಕುದಾದ ಖಾತೆ ನೀಡುವ ಬಗ್ಗೆ ಭರವಸೆ ನೀಡಿದ ಬಳಿಕ ತಮಗೆ ವಹಿಸಲಾದ ಖಾತೆಗಳನ್ನು ವಹಿಸಿಕೊಳ್ಳಲು ಪಟೇಲ್ ಒಪ್ಪಿದರು ಎಂದು ಮೂಲಗಳು ತಿಳಿಸಿದವು. ‘ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಈದಿನ ಬೆಳಗ್ಗೆ ಸಂಪರ್ಕಿಸಿ ಸಂಪುಟದಲ್ಲಿ ಉಪಮುಖ್ಯ ಮಂತ್ರಿಯಾಗಿರುವ ತಮ್ಮ ನಂಬರ್ ಸ್ಥಾನಮಾನಕ್ಕೆ ತಕ್ಕುದಾದ ಖಾತೆ ನೀಡುವ ಬಗ್ಗೆ ಭರವಸೆ ನೀಡಿದರು ಎಂದು ಪಟೇಲ್ ವರದಿಗಾರರಿಗೆ ತಿಳಿಸಿದ್ದರು.  ಶಾ ಅವರು ನನಗೆ ನೀಡಲಾದ ಖಾತೆಗಳನ್ನು ವಹಿಸಿಕೊಳ್ಳುವಂತೆ ಸೂಚಿಸಿದರು. ಆದ್ದರಿಂದ ಈದಿನ ನಾನು ಖಾತೆಗಳನ್ನು ವಹಿಸಿಕೊಳ್ಳುವೆ. ಮುಖ್ಯಮಂತ್ರಿ ವಿಜಯ್ ರೂಪಾನಿ ಅವರು ರಾಜ್ಯಪಾಲ .ಪಿ. ಕೊಹ್ಲಿ ಅವರನ್ನು ಭೇಟಿ ಮಾಡಿ ನನಗೆ ನೂತನ ಖಾತೆ ನೀಡುವ ಪತ್ರವನ್ನು ಒಪ್ಪಿಸಲಿದ್ದಾರೆ ಎಂದು ಪಟೇಲ್ ಹೇಳಿದ್ದರು. ಪಟೇಲ್ ಅವರು ಹಿಂದಿನ ಸರ್ಕಾರದಲ್ಲಿ ಹಣಕಾಸು, ನಗರಾಭಿವೃದ್ಧಿಯಂತಹ ಮಹತ್ವದ ಖಾತೆಗಳನ್ನು ನಿಭಾಯಿಸಿದ್ದರು. ಬಾರಿ ಅವರಿಗೆ ರಸ್ತೆ, ಕಟ್ಟಡ, ಆರೋಗ್ಯ, ವೈದ್ಯಕೀಯ ಶಿಕ್ಷಣ, ನರ್ಮದಾ, ಕಲ್ಪಸರ್ ಹಾಗೂ ಬಂಡವಾಳ ಯೋಜನೆಗಳ ಖಾತೆಯನ್ನು ನೀಡಲಾಗಿತ್ತು. ಹಣಕಾಸು ಖಾತೆಯನ್ನು ಸೌರಭ್ ಪಟೇಲ್ ಅವರಿಗೆ ನೀಡಲಾಗಿದ್ದು,  ಮುಖ್ಯಮಂತ್ರಿ ರೂಪಾನಿ ಅವರು ನಗರಾಭಿವೃದ್ಧಿ ಖಾತೆಯನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದರು. ಏನಿದ್ದರೂ ಪಟೇಲ್ ಅವರುಪ್ರಶ್ನೆ ಕೆಲವು ಇಲಾಖೆಗಳದ್ದಲ್ಲ, ಆತ್ಮಗೌರವದ್ದು ಎಂದು ಹೇಳಿದ್ದರು. ನಾನು ಗೌರವಾರ್ಹ ಇಲಾಖೆಗಳನ್ನು ಕೊಡಿ ಅಥವಾ ಸಂಪುಟದಿಂದ ನನ್ನನ್ನು ಬಿಡುಗಡೆ ಮಾಡಿ ಎಂಬ ಸಂದೇಶವನ್ನು ವರಿಷ್ಠ ಮಂಡಳಿಗೆ ರವಾನಿಸಿದ್ದೆ ಎಂದು ಪಟೇಲ್ ಹೇಳಿದರು. ನಾನು ಪಕ್ಷದ ನಿಷ್ಠಾವಂತ ಶಿಸ್ತಿನ ಸಿಪಾಯಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ ಎಂದೂ ಪಟೇಲ್ ನುಡಿದರು. ಎರಡು ದಿನಗಳ ಹಿಂದೆ ಖಾತೆಗಳನ್ನು ಪ್ರಕಟಿಸುವ ಸಂದರ್ಭದಲ್ಲಿ ರೂಪಾನಿ ಅವರುಹಣಕಾಸು ಖಾತೆ ಹೊಂದಿದ ಸಚಿವರು ಸಂಪುಟದಲ್ಲಿ ನಂಬರ್ ಸ್ಥಾನದಲ್ಲಿ ಇರುತ್ತಾರೆ ಎಂದು ಅರ್ಥವಲ್ಲ. ನಿತಿನ್ ಪಟೇಲ್ ಅವರು ನಮ್ಮ ಹಿರಿಯ ನಾಯಕ, ಅವರು ನಂಬರ್ ಆಗಿಯೇ ಮುಂದುವರೆಯುತ್ತಾರೆ ಎಂದು ಹೇಳಿದ್ದರು. ನಿತಿನ್ ಪಟೇಲ್ ಅತೃಪ್ತಿಯ ಹಿನ್ನೆಲೆಯಲ್ಲಿ ಹಿಂದಿನ ದಿನ ಮೀಸಲಾತಿ ಚಳವಳಿ ಧುರೀಣ ಹಾರ್ದಿಕ್ ಪಟೇಲ್ ಅವರು ತಾವು ಪಟೇಲ್ ಅವರಿಗೆ ಬೆಂಬಲ ನೀಡುವುದಾಗಿಯೂ, ಅವರು ೧೦ ಬೆಂಬಲಿಗರೊಂದಿಗೆ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರಬೇಕು ಎಂದು ಹೇಳಿದ್ದರು. ಅವರಿಗೆ ಸಲ್ಲಬೇಕಾದ ಗೌರವ ಸಲ್ಲಿಸುವಂತೆ ಕಾಂಗ್ರೆಸ್ ಜೊತೆ ತಾನು ಮಾತನಾಡುವುದಾಗಿಯೂ ಹಾರ್ದಿಕ್ ಪಟೇಲ್ ಹೇಳಿದ್ದರು. ಬಿಜೆಪಿ ತ್ಯಜಿಸಿದರೆ ಕಾಂಗ್ರೆಸ್ ಬೆಂಬಲದೊಂದಿಗೆ ಪಟೇಲ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗುವುದು ಎಂದು ಹಿರಿಯ ಕಾಂಗ್ರೆಸ್ ಶಾಸಕ ವಿರ್ಜಿ ಥುಮ್ಮರ್ ಹೇಳಿದ್ದರು. ಆದರೆ ಥುಮ್ಮರ್ ಹೇಳಿಕೆ ವೈಯಕ್ತಿಕ. ಖಾತೆ ಹಂಚಿಕೆಗೆ ಸಂಬಂಧಿಸಿದ ವಿವಾದ ಬಿಜೆಪಿಯ ಆಂತರಿಕ ವಿಚಾರ ಎಂದು ವಿರೋಧ ಪಕ್ಷ ಸ್ಪಷ್ಟ ಪಡಿಸಿತ್ತು. ೧೮೨ ಸದಸ್ಯಬಲದ ಗುಜರಾತ್ ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕ್ರಮವಾಗಿ ೯೯ ಮತ್ತು ೭೭ ಸ್ಥಾನಗಳನ್ನು ಹೊಂದಿವೆ.
2017: ಚೆನ್ನೈ: ಎರಡು ದಶಕಗಳ ಊಹಾಪೋಹಗಳ ಬಳಿಕಸೂಪರ್ ಸ್ಟಾರ್ ರಜನೀಕಾಂತ್ ಅವರು ತಾವು ರಾಜಕೀಯ ಪ್ರವೇಶಿಸುವುದಾಗಿ ಪ್ರಕಟಿಸಿದರು.
ಸೂಕ್ತ ಕಾಲದಲ್ಲಿ ಪಕ್ಷವನ್ನು ಆರಂಭಿಸುವುದಾಗಿ ರಜನೀಕಾಂತ್ ಅವರು ಹೇಳಿದರೂ, ೨೦೧೮ರ ಜನವರಿ ೧೪ರಪೊಂಗಲ್ ವೇಳೆಗೆ ಹೊಸ ಪಕ್ಷದ ಹೆಸರನ್ನು ಪ್ರಕಟಿಸುವ ಸಾಧ್ಯತೆ ಇದೆ ಎಂದು ಅವರ ನಿಕಟವರ್ತಿಗಳು ತಿಳಿಸಿದರು. ರಾಜಕೀಯ ಪಕ್ಷ ಆರಂಭದ ಪ್ರಕಟಣೆ ಮಾಡುವ ಸಲುವಾಗಿಯೇ ಚೆನ್ನೈಯಲ್ಲಿ ಮದುವೆ ಮನೆಯಲ್ಲಿ ಸ್ವಲ್ಪ ಹೊತ್ತು ನಿಂತ ರಜನೀಕಾಂತ್ಸೂಕ್ತ ಸಮಯದಲ್ಲಿ ರಾಜಕೀಯ ಪಕ್ಷವೊಂದನ್ನು ಆರಂಭಿಸಲಿದ್ದು ಅದು ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಎಲ್ಲ ೨೩೪ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದೆ ಎಂದು ಹೇಳಿದರು. ಎರಡು ದಶಕಗಳ ಊಹಾಪೋಹ, ನಿರಾಕರಣೆಗಳ ಏಳುಬೀಳಿನ ಬಳಿಕ ಕೊನೆಗೂ ಹೊಸ ರಾಜಕೀಯ ಪಕ್ಷದೊಂದಿಗೆ ತಮಿಳುನಾಡು ರಾಜಕೀಯಕ್ಕೆ ಪ್ರವೇಶ ನೀಡುವುದಾಗಿ ಅವರು ಮದುವೆ ಮನೆಯಲ್ಲಿ ನೂರಾರು ಅಭಿಮಾನಿಗಳ ಹರ್ಷೋದ್ಘಾರಗಳ ನಡುವೆ ಘೋಷಿಸಿದರು. ತಮಿಳುನಾಡು ಸುಗ್ಗಿಯ ಸಂಭ್ರಮ ಆಚರಿಸುವಪೊಂಗಲ್ ಹೊತ್ತಿಗೆ ರಜನೀಕಾಂತ್ ಅವರು ತಮ್ಮ ಪಕ್ಷದ ಹೆಸರು ಹಾಗೂ ಕಾರ್ಯತಂತ್ರವನ್ನು ರೂಪಿಸಲಿದ್ದಾರೆ ಎಂದು ನಿಕಟವರ್ತಿಗಳು ಹೇಳಿದರು.
ತಮಿಳುನಾಡಿನ ಸಿನಿಮಾ ಕ್ಷೇತ್ರ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅಭಿಮಾನಿಗಳನ್ನು ಹೊಂದಿರುವ ರಜನೀಕಾಂತ್ ಎರಡು ದಶಕಗಳ ಊಹಾಪೋಹಕ್ಕೆ ತಮ್ಮ ರಾಜಕೀಯ ಪ್ರವೇಶದ ಪ್ರಕಟಣೆಯೊಂದಿಗೆ ಮಂಗಳ ಹಾಡಿದರು.  ‘ನಾನು ರಾಜಕೀಯಕ್ಕೆ ಸೇರುತ್ತಿದ್ದೇನೆ. ಇದು ಖಚಿತ ಬಿಳಿ ಕುರ್ತಾ ಧರಿಸಿ ಹರ್ಷಚಿತ್ತರಾಗಿದ್ದ ಬಿಳಿ ಗಡ್ಡಧಾರಿ ಚಿತ್ರನಟ ಹೇಳಿದರು. ರಾಜಕೀಯದಲ್ಲಿ ಪ್ರಾಮಾಣಿಕತೆ ಮತ್ತು ಉತ್ತಮ ಆಡಳಿತ ಬೇಕು ಎಂದು ಹೇಳಿದ ಅವರುಎಲ್ಲವನ್ನೂ ಬದಲಾಯಿಸಬೇಕಾದ ಅಗತ್ಯ ಇದೆ. ಯಾವುದೇ ಜಾತಿ, ಧರ್ಮದ ನೆರಳಿಲ್ಲದ ಪಾರದರ್ಶಕತೆಯೊಂದಿಗೆ ಪವಿತ್ರ ರಾಜಕೀಯ ಉದಯಿಸಬೇಕಾಗಿದೆ ಎಂದು ನುಡಿದರು.  ಇದು ನನ್ನ ಗುರಿ ಮತ್ತು ಹಂಬಲ ಎಂದು ಹೇಳಿದ ಅವರುಒಬ್ಬನಿಗೇ ಇದನ್ನು ಮಾಡಲು ಸಾಧ್ಯವಿಲ್ಲ. ಆದ್ದರಿಂದ ನನ್ನ ಸಾಹಸಕ್ಕೆ ಬೆಂಬಲ ನೀಡಿ ಎಂದು ಜನತೆಗೆ ಮನವಿ ಮಾಡಿದರು. ‘ರಾಜರ ಕಾಲದಲ್ಲಿ ವೈರಿ ರಾಷ್ಟ್ರಗಳ ಸಂಪತ್ತನ್ನು ಲೂಟಿ ಮಾಡಲಾಗುತ್ತಿತ್ತು. ಆದರೆ ಪ್ರಜಾಪ್ರಭುತ್ವದಲ್ಲಿ ಪಕ್ಷಗಳು ತಮ್ಮ ಜನರನ್ನೇ ಲೂಟಿ ಮಾಡುತ್ತಿವೆ. ಇಂತಹ ವ್ಯವಸ್ಥೆಯನ್ನು ಪ್ರಜಾತಾಂತ್ರಿಕವಾಗಿಯೇ ಬದಲಾಯಿಸಬೇಕಾದ ಅಗತ್ಯವಿದೆ ಎಂದು ಹೇಳಿದ ಸೂಪರ್ ಸ್ಟಾರ್, ಜನರಿಗೆ ಸವಲತ್ತುಗಳು ಮತ್ತು ಹಕ್ಕುಗಳು ಲಭಿಸದಂತೆ ನಿರ್ಬಂಧಿಸುವುದನ್ನು ತಡೆಯಲು ಸ್ವಯಂಸೇವಕರು ಮುಂದೆ ಬರಬೇಕು ಎಂದರು. ‘ನಾನು ಸ್ವಜನ ಪಕ್ಷಪಾತವನ್ನು ಅಥವಾ ಮೇಜಿನ ಕೆಳಗಿನ ವ್ಯವಹಾರಗಳನ್ನು ಸಹಿಸುವುದಿಲ್ಲ. ಯಾವುದೇ ಅಧಿಕಾರಿಗಳು, ಸಚಿವರು, ಸಂಸದರು ಅಥವಾ ಶಾಸಕರ ಬಳಿಗೆ ಸ್ವಂತ ಅಗತ್ಯಗಳಿಗಾಗಿ ತೆರಳದೆ ಸ್ವಜನಪಕ್ಷಪಾತ, ಮೇಜಿನ ಕೆಳಗಿನ ವ್ಯವಹಾರಗಳ ಬಗ್ಗೆ ಕಣ್ಣಿಡುವಂತಹ ಸ್ವಯಂಸೇವಕರನ್ನು ನಾನು ಬಯಸುತ್ತೇನೆ ಎಂದು ಚಿತ್ರನಟ ನುಡಿದರು. ಇಂತಹ ಸ್ವಯಂ ಸೇವಕರು ಯಾರೇ ತಪ್ಪು ಮಾಡಿದರೂ ಪ್ರಶ್ನಿಸಬೇಕು. ಅಂತಹ ಜನರು ಮಾತ್ರವೇ ನನ್ನ ಪಕ್ಷಕ್ಕೆ ಬೇಕು. ಇಂತಹ ಜಾಗೃತರ ಮೇಲ್ವಿಚಾರಣೆ ಮಾಢುವ ಜನರ ಪ್ರತಿನಿಧಿಯಾಗಿಯಷ್ಟೇ ನಾನು ಇರುತ್ತೇನೆ ಎಂದು ಅವರು ಹೇಳಿದರು. ರಾಜ್ಯಾದ್ಯಂತ ಇರುವ ನೊಂದಣಿಯಾದ, ನೋಂದಣಿಯಾಗದ ಅಭಿಮಾನಿಗಳ ಬಳಗಗಳನ್ನು ಸುವ್ಯವಸ್ಥಿತಗೊಳಿಸುವುದು ಮೊದಲ ಕೆಲಸ. ಎಲ್ಲ ವರ್ಗಗಳ ಜನರನ್ನು ತಮ್ಮ ಬಳಗಕ್ಕೆ ಸೇರಿಸಿಕೊಳ್ಳಿ. ಬಳಿಕ ಇಂತಹ ಬಳಗವೇ ಪಕ್ಷವಾಗಿ ಪರಿವರ್ತನೆಗೊಳ್ಳುತ್ತದೆ. ಅಲ್ಲಿಯವರೆಗೆ ನಾನೂ ಸೇರಿದಂತೆ ಯಾರೂ ರಾಜಕೀಯ ಮಾತುಕತೆಗಳಲ್ಲಿ ತೊಡಗಬೇಕಾದ ಅಗತ್ಯವಿಲ್ಲ ಎಂದು ಅವರು ನುಡಿದರು. ‘ರಾಜಕೀಯ ಕೆಟ್ಟುಹೋಗಿದೆ. ತಮಿಳುನಾಡಿನಲ್ಲಿ ಕಳೆದ ಒಂದು ವರ್ಷದಿಂದ ನಡೆದಿರುವ ಕೆಲವು ರಾಜಕೀಯ ಘಟನೆಗಳು ಪ್ರತಿಯೊಬ್ಬ ತಮಿಳನೂ ನಾಚಿಕೆಯಿಂದ ತನ್ನ ತಲೆಯನ್ನು ತಗ್ಗಿಸುವಂತೆ ಮಾಡಿದೆ. ಇತರ ಎಲ್ಲ ರಾಜ್ಯಗಳ ಜನರು ನಮ್ಮನ್ನು ನೋಡಿ ನಗುತ್ತಿದ್ದಾರೆ ಎಂದು ಅವರು ಹೇಳಿದರು.  ಭಗವದ್ಗೀತೆಯ ಶ್ಲೋಕವನ್ನು ಉಚ್ಚರಿಸಿದ ಅವರುಕರ್ತವ್ಯವನ್ನು ಮಾಡು, ಫಲಾಫಲಗಳನ್ನು ದೇವರಿಗೆ ಬಿಡು ಎಂಬುದು ಈಗ ಕಾಲದ ಅಗತ್ಯವಾಗಿದೆ. ಸಮರ ನಿರತನಾಗು. ಗೆದ್ದರೆ ದೇಶವನ್ನು ಆಳುವೆ, ಸತ್ತರೆ ಸ್ವರ್ಗ ಸೇರುವೆ. ಸಮರ ಮಾಡದೇ ಇದ್ದಲ್ಲಿ ನೀವು ಹೇಡಿ ಎಂದು ಕರೆಸಿಕೊಳ್ಳುವೆ ಎಂದು ಭಾರಿ ಕರತಾಡನಗಳ ಮಧ್ಯೆ ಸೂಪರ್ ಸ್ಟಾರ್ ಹೇಳಿದರು. ರಾಜಕೀಯ ಪ್ರವೇಶಿಸುತ್ತಿರುವುದು ಹೆಸರಿಗಾಗಿ ಅಥವಾ ಖ್ಯಾತಿಗಾಗಿ ಅಲ್ಲ. ೪೫ರ ಹರೆಯದಲ್ಲಿ ದಿವಂಗತ ಮುಖ್ಯಮಂತ್ರಿ ಜೆ. ಜಯಲಲಿತಾ ವಿರುದ್ಧ ಮೊತ್ತ ಮೊದಲಿಗೆ ರಾಜಕೀಯದ ಧ್ವನಿ ಏರಿಸಿದ್ದಾಗ ಬೇಡವಾಗಿದ್ದ ಅಧಿಕಾರಕ್ಕಾಗಿ ೬೮ರ ಹರೆಯದಲ್ಲಿ ಹಂಬಲಿಸಬೇಕೆ ಎಂದು ಪ್ರಶ್ನಿಸಿದ ರಜನಿ, ’ಈಗ ಅಧಿಕಾರಕ್ಕಾಗಿ ಹಾತೊರೆತ ನನಗೆ ಬಂದರೆ ನಾನು ಮೂರ್ಖನಾಗುವುದಿಲ್ಲವೇ?’ ಎಂದೂ  ಕೇಳಿದರು. ಧಾರ್ಮಿಕ ವ್ಯಕ್ತಿಗೆ ಇಂತಹ ಹಾರೈಕೆ ಸರಿಯಾಗುವುದೂ ಇಲ್ಲ ಎಂದು ಅವರು ನುಡಿದರು. ೧೯೯೬ರಲ್ಲಿ ರಜನೀಕಾಂತ್ ಜಯಲಲಿತಾ ವಿರುದ್ಧ ದನಿ ಎತ್ತಿದ್ದರು. ರಾಜಕೀಯಕ್ಕೆ ಇಳಿಯುವುದಾಗಿ ಈವರ್ಷ ಪ್ರಕಟಿಸಿದ್ದ ಚಿತ್ರನಟ ಕಮಲಹಾಸನ್ ಅವರು ರಜನೀಕಾಂತ್ ಅವರನ್ನು ರಾಜಕೀಯ ಪ್ರವೇಶಿಸುವ ನಿರ್ಧಾರಕ್ಕಾಗಿ ಅಭಿನಂದಿಸಿದರು.
2017: ನವದೆಹಲಿ: ಸೂಪರ್ ಸ್ಟಾರ್ ರಜನೀಕಾಂತ್ ಅವರ ರಾಜಕೀಯ ಪ್ರವೇಶ ಕೇವಲಮಾಧ್ಯಮ ಪ್ರಚಾರ (ಮೀಡಿಯಾ ಹೈಪ್) ಎಂದು ಹೇಳುವ ಮೂಲಕ ರಜನಿ ರಾಜಕೀಯ ಪ್ರವೇಶವನ್ನು ನಿರ್ಲಕ್ಷಿಸಿದ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿರಜನಿ ಅವರು ಅನಕ್ಷರಸ್ಥ ಮತ್ತು ಭ್ರಷ್ಟ ಎಂದು ಬಣ್ಣಿಸಿದರು. ‘ರಜನಿ ಒಬ್ಬ ಅನರಕ್ಷರಸ್ಥ ವ್ಯಕ್ತಿ. ಅವರು ನಮಗೆ ಏನು ಹೇಳಬಲ್ಲರು? ಇದು ತಮಿಳು ಚಿತ್ರನಟ ರಾಜಕೀಯ ಸೇರುವ ಅತ್ಯಂತ ಹಳೆಯ ಕಥೆ. ನಾನು ರಜನೀಕಾಂತ್ ಅವರನ್ನು ಯಾವಾಗಲೂ ವಿರೋಧಿಸುವೆ. ತಮಿಳುನಾಡು ಯಾವಾಗ ಚಿತ್ರನಟರಿಂದ ಮುಕ್ತವಾಗುತ್ತದೆಯೋ ಆಗ ರಾಜ್ಯದ ವರ್ಚಸ್ಸು ವೃದ್ಧಿಸುತ್ತದೆ. ಅಷ್ಟಕ್ಕೂ ಅವರು ಇನ್ನೂ ರಾಜಕೀಯ ಪಕ್ಷವನ್ನು ಪ್ರಕಟಿಸಿಲ್ಲ ಎಂದು ಸ್ವಾಮಿ ಹೇಳಿದರು. ರಜನೀಕಾಂತ್ ಅವರದ್ದು ಮಾಧ್ಯಮ ನಿರ್ವಹಣೆ ಹೊರತಾಗಿ ಬೇರೇನೂ ಅಲ್ಲ ಎಂದೂ ಹೇಳಿದ ರಾಜ್ಯಸಭಾ ಸಂಸದ, ‘ನಟ ಎಂದಿಗೂ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಅರ್ಥ ಮಾಡಿಕೊಳ್ಳಿ ಎಂದು ಪಕ್ಷ ನಾಯಕರಿಗೆ ಕಿವಿಮಾತು ಹೇಳಿದರು.  ‘ಇದೊಂದು ತಮಾಷೆ. ತಮಿಳುನಾಡಿಗೆ ಗಂಭೀರತೆಯ ಅಗತ್ಯ ಇದೆ.  ರಾಜಕೀಯದಿಂದ ಎಲ್ಲ ಚಿತ್ರನಟರನ್ನು ಮುಕ್ತಗೊಳಿಸಲು ತಮಿಳುನಾಡು ತಹತಹಿಸುತ್ತಿದೆ. ರಜನಿ ಅವರು ತಪ್ಪು ವೇಳೆಯಲ್ಲಿ ತಪ್ಪು ಸ್ಥಳದಲ್ಲಿ ರಾಜಕೀಯ ಪ್ರವೇಶಿಸುತ್ತಿದ್ದಾರೆ. ವಾಸ್ತವವಾಗಿ ತಮ್ಮ ಎಲ್ಲ ಕಪ್ಪು ಹಣ ಬೆಳಕಿಗೆ ಬರುವ ಬಗ್ಗೆ ರಜನಿ ಅವರು ಈಗ ಚಿಂತಿಸಬೇಕು. ತಮಿಳುನಾಡಿನ ಜನರು ರಜನಿ ಅಭಿಮಾನಿಗಳ ಬಳಗದಲ್ಲಿ ಬೀಳುವುದಿಲ್ಲ ಮತ್ತು ಅದರ ಹಾಡಿಗೆ ನರ್ತಿಸುವುದಿಲ್ಲ. ಅಭಿಮಾನಿಗಳ ಬಳಗ ರಾಜಕೀಯ ಸಂಘಟನೆಯಾಗಲು ಸಾಧ್ಯವೂ ಇಲ್ಲ ಎಂದು ಸ್ವಾಮಿ ಹೇಳಿದರು.
2017: ಬೆಂಗಳೂರು: ವಿಧಾನಸಭಾ ಚುನಾವಣೆಯ ಟಿಕೆಟ್ ಹಂಚಿಕೆಯ ವಿಚಾರ ಸಂಪೂರ್ಣವಾಗಿ ವರಿಷ್ಠ ಮಂಡಳಿಯ ನಿರ್ಧಾರಕ್ಕೆ ಬಿಟ್ಟದ್ದು. ಯಾರೊಬ್ಬರೂ ಬಗ್ಗೆ ಬಹಿರಂಗವಾಗಿ ಮಾತನಾಡುವಂತಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪಕ್ಷದ ರಾಜ್ಯ ನಾಯಕರಿಗೆ ಕಟ್ಟಪ್ಪಣೆ ಮಾಡಿದರು. ಬೆಂಗಳೂರಿನ ರಿಸಾರ್ಟ್ ಒಂದರಲ್ಲಿ ರಾಜ್ಯದ  ನಾಯಕರ ಜೊತೆ ಸುಮಾರು ಗಂಟೆಗೂ ಹೆಚ್ಚು ಹೊತ್ತು ಸಭೆ ನಡೆಸಿದ ಶಾ, ಚುನಾವಣೆಗಾಗಿ ಹೊಸ ಕೆಲಸಗಳನ್ನು ವಹಿಸಿದರು. ಟಿಕೆಟ್ ಹಂಚಿಕೆ ಕುರಿತು ಉಂಟಾಗಿರುವ ಗೊಂದಲದ ಬಗ್ಗೆ ಪ್ರಸ್ತಾಪಿಸಿದ ಅವರು ಯಾರೂ ಬಗ್ಗೆ ಮಾತನಾಡಬೇಕಾಗಿಲ್ಲ. ವಿಚಾರದಲ್ಲಿ ವರಿಷ್ಠ ಮಂಡಳಿಯ ತೀರ್ಮಾನವೇ ಅಂತಿಮ ಎಂದು ಖಡಕ್ ಮಾತುಗಳಲ್ಲಿ ಹೇಳಿದರು. ರಾಜ್ಯದಲ್ಲಿ ಯಾವ ನಾಯಕರೂ ಅಭ್ಯರ್ಥಿಗಳ ಘೋಷಣೆ ಮಾಡುವ ಹಾಗಿಲ್ಲ. ಸಭೆಯಲ್ಲಿ ನಡೆದಂತಹ ವಿಷಯಗಳು ಮಾಧ್ಯಮಗಳಿಗೆ ಸೋರಿಕೆ ಆಗದಂತೆ ಎಚ್ಚರವಹಿಸಬೇಕು. ಪಕ್ಷದ ಕಾರ್ಯಕಾರಿಣಿ ಸಭೆಗಳ ನಂತರ ಯಾರು ಮಾತುಕತೆಯನ್ನು ಗೌಪ್ಯವಾಗಿ ಇರಿಸತಕ್ಕದ್ದು ಎಂದು ಶಾ  ಸ್ಪಷ್ಟವಾಗಿ ಹೇಳಿದರು. ಬೂತ್ ಸಶಕ್ತೀಕರಣ, ವಿಸ್ತಾರಕರ ಗ್ರೌಂಡ್ ರಿಪೋರ್ಟ್ಗೆ ಅನುಗುಣವಾಗಿ ಕಾರ್ಯಚಟುವಟಿಕೆ ರೂಪಿಸಬೇಕು ಎಂದೂ ಅಮಿತ್ ಶಾ ನಿರ್ದೇಶಿಸಿದರು. ಇನ್ನೂ ಬಿಜೆಪಿ ದುರ್ಬಲವಿರುವ ಕ್ಷೇತ್ರಗಳಲ್ಲಿ ಗೆಲ್ಲಲು ಅಮಿತ್ ಶಾ ೧೨ ಅಂಶಗಳ ಸೂತ್ರವನ್ನು ಸಭೆಯಲ್ಲಿ ಸೂಚಿಸಿದರು. ಎಲ್ಲ ನಾಯಕರಿಗೂ ೧೨ ಅಂಶಗಳನ್ನು ಬರೆದುಕೊಳ್ಳುವಂತೆ ಹೇಳಿದರು ಎಂದು ಮೂಲಗಳು ತಿಳಿಸಿದವು.

2016: ನವದೆಹಲಿ: ಹೊಸ ವರ್ಷದ ಮುನ್ನಾದಿನ ರಾಷ್ಟ್ರವ
ನ್ನು ಉದ್ಧೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ರೈತರು, ಬಡ- ಮಧ್ಯಮ ವರ್ಗದವರು, ಸಣ್ಣ ವರ್ತಕರು, ಹಿರಿಯ ನಾಗರಿಕರು ಮತ್ತು ಗರ್ಭಿಣಿಯರಿಗೆ ಹಲವಾರು ಕೊಡುಗೆಗಳನ್ನು ಪ್ರಕಟಿಸಿದರು. ನಗರ, ಗ್ರಾಮೀಣ ಬಡವರಿಗೆ 9 -12 ಲಕ್ಷ ರೂಪಾಯಿಗಳವರೆಗಿನ ಗೃಹ ಸಾಲಗಳಿಗೆ ಶೇಕಡಾ 4 ಮತ್ತು 3ರಷ್ಟು ಬಡ್ಡಿ ಕಡಿತ, ರೈತರಿಗೆ ಬೆಳೆಸಾಲದ ಮೇಲೆ 60 ದಿನಗಳ ಬಡ್ಡಿ ಮನ್ನಾ, ಹಿರಿಯ ನಾಗರಿಕರಿಗೆ 7.5 ಲಕ್ಷ ರೂ.ವರೆಗಿನ ಠೇವಣಿಗಳಿಗೆ ಶೇಕಡಾ 8 ಬಡ್ಡಿ, ಗರ್ಭಿಣಿಯರಿಗೆ 6000 ರೂಪಾಯಿಗಳ ನೆರವು, ಸಣ್ಣ ವರ್ತಕರಿಗೆ ಸಾಲ ಮಿತಿ ಹೆಚ್ಚಳದ ಕೊಡುಗೆ ಪ್ರಕಟಿಸಿದರು. 500 ಮತ್ತು 1000 ರೂ. ಮುಖಬೆಲೆಯ ನೋಟುಗಳ ರದ್ದತಿ ಹಿನ್ನೆಲೆಯಲ್ಲಿ ಕಷ್ಟಗಳನ್ನು ಎದುರಿಸಿಯೂ ಸರ್ಕಾರವನ್ನು ಬೆಂಬಲಿಸಿದ್ದಕ್ಕಾಗಿ ಜನತೆಗೆ ವಂದನೆ ಸಲ್ಲಿಸಿದ ಪ್ರಧಾನಿ, ಕಾಳಧನಿಕರಿಗೆ ನೆರವಾಗುವವರನ್ನು ಬಿಡುವುದಿಲ್ಲ ಎಂದು ಎಚ್ಚರಿಸಿದರು.
2016: ಇಟಾನಗರ: ಅರುಣಾಚಲ ಪ್ರದೇಶದಲ್ಲಿ ಉಂಟಾದ ರಾಜಕೀಯ ಬಿಕ್ಕಟ್ಟನ್ನು ಲಾಭವಾಗಿ
ಪರಿವರ್ತಿಸಿಕೊಳ್ಳುವಲ್ಲಿ ಯಶಸ್ವಿಯಾದ ಬಿಜೆಪಿ ಸರ್ಕಾರ ರಚಿಸಿತು. ಈದಿನ ನಡೆದ ಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಪೆಮಾ ಖಂಡು ನೇತೃತ್ವದ 33 ಶಾಸಕರು ಪೀಪಲ್ಸ್ ಪಾರ್ಟಿ ಆಫ್ ಅರುಣಾಚಲ (ಪಿಪಿಎ) ಪಕ್ಷ ತೊರೆದು ಬಿಜೆಪಿ ಜತೆಗೆ ಕೈಜೋಡಿಸಿದರು. 60 ಶಾಸಕರ ಬಲ ಹೊಂದಿದ್ದ ಪಿಪಿಎ 10ಕ್ಕೆ ಇಳಿಯಿತು. ಸರ್ಕಾರದಲ್ಲಿ ಬಿಜೆಪಿ ಹಸ್ತಕ್ಷೇಪ ಹೆಚ್ಚುತ್ತಿದೆ ಎಂಬ ಕಾರಣಕ್ಕೆ ಪಿಪಿಎ ಸಿಎಂ ಪೆಮಾ ಖಂಡು, ಉಪಮುಖ್ಯಮಂತ್ರಿ ಹಾಗೂ 5 ಶಾಸಕರನ್ನು ಪಕ್ಷದಿಂದ ಉಚ್ಚಾಟನೆ ಮಾಡಿತ್ತು.
2016: ಚೆನ್ನೈ: ಎಐಎಡಿಎಂಕೆ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ವಿ.ಕೆ.ಶಶಿಕಲಾ ನಟರಾಜನ್
ಅಧಿಕಾರ ವಹಿಸಿಕೊಂಡರು. ಅಭಿಮಾನದಿಂದಚಿನ್ನಮ್ಮಎಂದು ಕರೆಯಿಸಿಕೊಂಡ ಶಶಿಕಲಾ ಸಾವಿರಾರು ಬೆಂಬಲಿಗರ ಸಮ್ಮುಖದಲ್ಲಿ ಎಐಎಡಿಎಂಕೆ  ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡರು. ಪಕ್ಷದ ಸಂಸ್ಥಾಪಕರಾದ ಎಂಜಿಆರ್‌  ಅವರ ಪ್ರತಿಮೆ ಮತ್ತು ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದ ಬಳಿಕ ಶಶಿಕಲಾ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದರು. ‘ಅಮ್ಮಸದಾ ನನ್ನ ಮನಸ್ಸಿನಲ್ಲಿರುತ್ತಾರೆ, ಅವರೊಂದಿಗೆ 33 ವರ್ಷಗಳ ಕಾಲ ಪಕ್ಷದ ಸಭೆಗಳಲ್ಲಿ ಭಾಗವಹಿಸಿದ್ದೇನೆ. ಎಐಎಡಿಎಂಕೆ ಇನ್ನೂ ಬಹಳ ಕಾಲ ಆಡಳಿತ ನಡೆಸಲಿದೆ ಎಂದು ಶಶಿಕಲಾ ನುಡಿದರು. ಮುಖ್ಯಮಂತ್ರಿ .ಪನ್ನೀರ್ಸೆಲ್ವಂ, ಪಕ್ಷದ ನಾಯಕರಾದ ಮದುಸುದನನ್, ಥಂಬಿದೊರೈ ಸೇರಿದಂತೆ ಅನೇಕರು ಶಶಿಕಲಾ ಅವರನ್ನು ಪಕ್ಷದ ಕಚೇರಿಯಲ್ಲಿ ಸ್ವಾಗತಿಸಿದರು.
2016: ಲಖನೌ:  ತಮ್ಮ ಪಕ್ಷದಿಂದ ಹಿಂದಿನ ದಿನವಷ್ಟೇ ಉಚ್ಛಾಟನೆಗೊಂಡಿದ್ದ ಉತ್ತರ ಪ್ರದೇಶ
ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು  ಪಕ್ಷದ  ಪ್ರಧಾನ ಕಾರ್ಯದರ್ಶಿ ರಾಮ್ಗೋಪಾಲ್ಯಾದವ್ ಅವರನ್ನು  ಸಮಾಜವಾದಿ ಪಕ್ಷದ  ಮುಖ್ಯಸ್ಥ ಮುಲಾಯಂ ಸಿಂಗ್ಯಾದವ್ ಇಂದು ಮತ್ತೆ ಪಕ್ಷಕ್ಕೆ ಸೇರಿಸಿಕೊಂಡರು. ಹಿಂದಿನ ದಿನ ರಾತ್ರಿ ಸುದ್ದಿಗೋಷ್ಠಿ  ನಡೆಸಿದ ಮುಲಾಯಂ, ತಮ್ಮ ಪುತ್ರ ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮತ್ತು   ರಾಮ್ಗೋಪಾಲ್ಯಾದವ್ ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಹೊರ ಹಾಕಿರುವುದಾಗಿ ಪ್ರಕಟಿಸಿದ್ದರು. ನಿರ್ಧಾರ ತೆಗೆದುಕೊಂಡ 24 ಗಂಟೆಗಳೊಳಗೆ ಮುಲಾಯಂ ತಮ್ಮ ನಿರ್ಧಾರವನ್ನು ಬದಲಿಸಿದರು. ಅಖಿಲೇಶ್ ಅವರನ್ನು ಪಕ್ಷದಿಂದ ಉಚ್ಛಾಟಿಸಿದ ತೀರ್ಮಾನವನ್ನು ವಾಪಸ್ ತೆಗೆದುಕೊಳ್ಳುವಂತೆ ಕೆಲವು ನಾಯಕರು ಒತ್ತಾಯಿಸಿದ್ದರು. ಬಗ್ಗೆ ಮುಂದಿನ ತೀರ್ಮಾನ ಕೈಗೊಳ್ಳಲು ಈದಿನ ಮಧ್ಯಾಹ್ನ ಮುಲಾಯಂ ಅವರ ಮನೆಯಲ್ಲಿ ಪಕ್ಷದ ವರಿಷ್ಠರ ಸಭೆ ಕರೆಯಲಾಗಿತ್ತು. ಸಮಾಜವಾದಿ ಪಕ್ಷದ ಹಿರಿಯ ನಾಯಕ ಮತ್ತು ಸಚಿವ ಅಜಂ ಖಾನ್ ಅವರು ಸಭೆ ಕರೆದಿದ್ದು, ಸಭೆಯಲ್ಲಿ ಅಖಿಲೇಶ್ ಮತ್ತು ರಾಮ್ಗೋಪಾಲ್ ಯಾದವ್  ಅವರನ್ನು ಪಕ್ಷಕ್ಕೆ ಕರೆಸಿಕೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು.
2016: ನವದೆಹಲಿ: ಜನರಲ್ಬಿಪಿನ್ರಾವತ್ಅವರು ಸೇನಾ ಪಡೆಯ 27ನೇ ಮುಖ್ಯಸ್ಥರಾಗಿ  ಅಧಿಕಾರಿ ವಹಿಸಿಕೊಂಡರು. ಸೇನಾ ಪಡೆ ಮುಖ್ಯಸ್ಥ ಜನರಲ್ದಲ್ಬೀರ್ಸಿಂಗ್ಸುಹಾಗ್ಅವರ ಅಧಿಕಾರಾವಧಿ ಡಿಸೆಂಬರ್‌ 31ರಂದು ಕೊನೆಗೊಂಡಿದ್ದು, ಬಿಪಿನ್ರಾವತ್ಅವರು ನೂತನ ಮುಖ್ಯಸ್ಥರಾಗಿ ಅಧಿಕಾರ ವಹಿಸಿದರು.

 1978
ರಲ್ಲಿ ರಾವತ್ಅವರು ಗೋರ್ಖಾ ರೈಫಲ್ಸ್ ಪಡೆಗೆ ನೇಮಕಗೊಳ್ಳುವ ಮೂಲಕ ಭಾರತೀಯ ಸೇನೆಯಲ್ಲಿ ಕರ್ತವ್ಯ ಪ್ರಾರಂಭಿಸಿದರು.
2016: ಬಿಹಾರ: ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಕೈದಿಗಳು ಸೇರಿದಂತೆ ಐವರು ಅಪರಾಧಿಗಳು
ಬಕ್ಸಾರ್ಸೆಂಟ್ರಲ್ಜೈಲ್ನಿಂದ ತಪ್ಪಿಸಿಕೊಂಡರು. ಹಿಂದಿನ  ರಾತ್ರಿ 12ರಿಂದ 3 ಗಂಟೆ ನಡುವೆ ಕೈದಿಗಳು ಜೈಲಿನ ಗೋಡೆ ಹಾರಿ ತಪ್ಪಿಸಿಕೊಂಡಿದ್ದಾರೆ. ಗೋಡೆಯ ಸಮೀಪ ಕಬ್ಬಿಣದ ಸಲಾಕೆ, ಪೈಪ್ಹಾಗೂ ಧೋತಿ ದೊರೆತಿರುವುದಾಗಿ ಜಿಲ್ಲಾ ಮ್ಯಾಜಿಸ್ಟ್ರೇಟ್ರಮಣ್ಕುಮಾರ್ತಿಳಿಸಿದರು. ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ ಪ್ರಜಿತ್ ಸಿಂಗ್‌, ಗಿರ್ಧಾರಿ ರಾಯ್‌, ಸೋನು ಪಾಂಡೆ, ಉಪೇಂದ್ರ ಸಾಹ್ ಹಾಗೂ 10 ವರ್ಷಗಳ ಶಿಕ್ಷೆಗೆ ಗುರಿಯಾಗಿದ್ದ ಸೋನು ಸಿಂಗ್ತಪ್ಪಿಸಿಕೊಂಡ ಕೈದಿಗಳು. ಮಧ್ಯರಾತ್ರಿ ಆವರಿಸಿಕೊಂಡಿದ್ದ ದಟ್ಟ ಮಂಜು ಭದ್ರತಾ ಸಿಬ್ಬಂದಿಯಿಂದ ತಪ್ಪಿಸಿಕೊಳ್ಳಲು ಕೈದಿಗಳಿಗೆ ಸಹಕಾರಿಯಾಗಿರಬಹುದು ಎಂದು ಎಸ್ಪಿ ಉಪೇಂದ್ರ ಶರ್ಮಾ ಅಭಿಪ್ರಾಯಪಟ್ಟರು.
2008: ದೇಶದೊಳಗಿನ ಭಯೋತ್ಪಾದಕ ಕೃತ್ಯಗಳ ನಿಗ್ರಹಕ್ಕಾಗಿ ರಚಿಸಲಾದ ಫೆಡರಲ್ ಸಂಘಟನೆ ರಾಷ್ಟ್ರೀಯ ತನಿಖಾ ಸಂಸ್ಥೆ 2009ರ ಜನವರಿ 1ರಿಂದ ಅಸ್ತಿತ್ವಕ್ಕೆ ಬರಲಿದೆ ಎಂದು ಗೃಹ ಮಂತ್ರಿ ಪಿ.ಚಿದಂಬರಮ್ ಅವರು ನವದೆಹಲಿಯಲ್ಲಿ ಪ್ರಕಟಿಸಿದರು. ಈ ಸಂಬಂಧ ಮಸೂದೆಗೆ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಈದಿನ ತಮ್ಮ ಸಹಿ ಹಾಕಿದರು.

2008: ಮುಂಬೈ ಮೇಲಿನ ದಾಳಿಗೆ ಸಂಬಂಧಿಸಿದಂತೆ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಕಮಾಂಡರ್ ಜರಾರ್ ಷಾ ದಾಳಿಯಲ್ಲಿ ತಮ್ಮ ಸಂಘಟನೆ ಭಾಗಿಯಾಗಿತ್ತು ಎಂಬುದನ್ನು ಒಪ್ಪಿಕೊಂಡಿದ್ದು, ಎಲ್‌ಇಟಿ ಕಮಾಂಡರ್ ಲಖ್ವಿ ದಾಳಿಯ ಸಂಚು ರೂಪಿಸಿದ್ದನೆಂಬುದಕ್ಕೆ ಬಲವಾದ ಸಾಕ್ಷ್ಯ ಇದೆ ಎಂದು ಅಮೆರಿಕ ಹೇಳಿತು. ಇದರಿಂದಾಗಿ ದಾಳಿಗೆ 'ಗಡಿಯಾಚೆಗಿನ ಭಯೋತ್ಪಾದನೆ'ಯೇ ಕಾರಣವೆಂಬ ಭಾರತದ ದೂರನ್ನು ತಳ್ಳಿಹಾಕುತ್ತಲೇ ಬಂದ ಪಾಕಿಸ್ಥಾನಕ್ಕೆ ಭಾರಿ ಹಿನ್ನಡೆಯಾಯಿತು.

2008: ಮುಂಬೈ ದಾಳಿಯಲ್ಲಿ 6 ಮಂದಿ ಯಹೂದಿಗಳು ಹತರಾದ ಒಂದು ತಿಂಗಳ ಬಳಿಕ ಬಹುತೇಕ ಪಾಕಿಸ್ಥಾನ, ಬಾಂಗಾದ್ಲೇಶ ಮತ್ತು ಆಫ್ಘಾನಿಸ್ಥಾನದಲ್ಲಿ ಸಕ್ರಿಯವಾಗಿರುವ 35 ಅಲ್-ಖೈದಾ ಮತ್ತು ತಾಲಿಬಾನ್ ಸಂಯೋಜಿತ ಸಂಘಟನೆಗಳನ್ನು ಗುರುತಿಸಿದ ಇಸ್ರೇಲ್ ಅವುಗಳನ್ನು ಭಯೋತ್ಪಾದಕ ಸಂಘಟನೆಗಳು ಎಂಬುದಾಗಿ ಘೋಷಿಸಿತು. ಜಾಗತಿಕ ಜಿಹಾದ್ ಬಗ್ಗೆ ನಡೆದ ಸಮಗ್ರ ಚರ್ಚೆಯ ಸಂದರ್ಭದಲ್ಲಿ ಅಲ್ ಖೈದಾ ಮತ್ತು ತಾಲಿಬಾನ್ ಜೊತೆಗೆ ಸಂಯೋಜಿತವಾದ ಈ ಸಂಘಟನೆಗಳ ಬಗ್ಗೆ ಕಟ್ಟೆಚ್ಚರ ವಹಿಸಬೇಕು ಮತ್ತು ಇವುಗಳು ಭಯೋತ್ಪಾದನೆಗೆ ಹಣಕಾಸು ನೆರವು ಒದಗಿಸುವುದರ ವಿರುದಟ ಕಾನೂನಿಗೆ ಅನುಗುಣವಾಗಿ ಕ್ರಮ ಕೈಗೊಳ್ಳಬೇಕು ಎಂದು ಇಸ್ರೇಲ್‌ನ ಭದ್ರತಾ ಸಂಪುಟವು ನಿರ್ಧರಿಸಿತು.

2008: ಕೊಚ್ಚಿಯಲ್ಲಿ ನಡೆದ ಬ್ಯೂಟಿಫುಲ್... ಸ್ಮೈಲ್: 'ಮಿಸ್ ಸೌತ್ ಇಂಡಿಯಾ-2008' ಸ್ಪರ್ಧೆಯಲ್ಲಿ ಕರ್ನಾಟಕದ ಚಲುವೆ ಡಿಂಪಲ್ ಅವರು '2008ರ ದಕ್ಷಿಣ ಭಾರತ ಸುಂದರಿ' ಪಟ್ಟಕ್ಕೆ ಆಯ್ಕೆಯಾದರು. ಮೊದಲ ರನ್ನರ್ ಅಪ್ ಸ್ಥಾನಕ್ಕೆ ಕರ್ನಾಟಕದವರೇ ಆದ ಮೇಘನಾ ಹಾಗೂ ಎರಡನೇ ರನ್ನರ್ ಅಪ್ ಸ್ಥಾನಕ್ಕೆ ಆಂಧ್ರಪ್ರದೇಶದ ಆಕಾಂಕ್ಷಾ ಅವರು ಆಯ್ಕೆಯಾದರು. 'ಮಿಸ್ ಬ್ಯೂಟಿಫುಲ್ ಸ್ಮೈಲ್' ಸ್ಪರ್ಧೆಯಲ್ಲೂ ಡಿಂಪಲ್ ಜಯಗಳಿಸಿದರು. ಕರ್ನಾಟಕದ ಮತ್ತೊಬ್ಬ ಬೆಡಗಿ ಅಶ್ವಿನಿ, 'ಕೇಶ ಸುಂದರಿ'ಯಾಗಿ ಆಯ್ಕೆಯಾದರು. ಜನರ ಆಯ್ಕೆಯ ಸುಂದರಿಯಾಗಿ ಮೇಘನಾ ಆಯ್ಕೆಯಾದರು.

2008: ಕಠ್ಮಂಡುವಿನ ಖ್ಯಾತ ಪಶುಪತಿನಾಥ ದೇಗುಲದಲ್ಲಿ ದಕ್ಷಿಣ ಭಾರತೀಯ ಅರ್ಚಕರನ್ನು ವಜಾ ಮಾಡಿರುವ ನೇಪಾಳದ ಮಾವೋವಾದಿ ಸರ್ಕಾರದ ಕ್ರಮ ಪ್ರಶ್ನಿಸಿ ಅಲ್ಲಿನ ಹಿಂದೂ ಸಂಘಟನೆಯೊಂದು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿತು. ಭಾರತೀಯ ಅರ್ಚಕರ ಬದಲಿಗೆ ಸ್ಥಳೀಯ ಅರ್ಚಕರ ನೇಮಕಾತಿಗೆ ಮಧ್ಯಂತರ ತಡೆ ನೀಡಬೇಕೆಂದು ಅದು ನ್ಯಾಯಾಲಯವನ್ನು ಕೋರಿದೆ ಎಂದು ಪಶುಪತಿ ಪ್ರದೇಶಾಭಿವೃದ್ಧಿ ಮಂಡಳಿ (ಪಿಎಡಿಟಿ) ಮಾಜಿ ಸದಸ್ಯ ನರೋತ್ತಮ್ ವೈದ್ಯ ಅವರು ಖಾಸಗಿ ಸುದ್ದಿ ಸಂಸ್ಥೆಗೆ ತಿಳಿಸಿದರು. ಪಶುಪತಿ ದೇಗುಲದ ಪ್ರಧಾನ ಅರ್ಚಕ ಮಹಾಬಲೇಶ್ವರ ಭಟ್ಟ ಸೇರಿದಂತೆ ಮೂವರು ಭಾರತೀಯರು ಅರ್ಚಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾವೋವಾದಿ ಸರ್ಕಾರವು ಒತ್ತಡ ಹೇರಿತ್ತು.

2007: ಹಂಪಿ ಕನ್ನಡ ವಿಶ್ವವಿದ್ಯಾಲಯದ 2007ರ ಸಾಲಿನ ನಾಡೋಜ ಗೌರವ ಪದವಿಗೆ ಖ್ಯಾತ ಸಾಹಿತಿ ಶಾಂತರಸ ಹೆಂಬೇರಾಳು, ನ್ಯಾಯಮೂರ್ತಿ ಸುಬ್ರಾಯ ರಾಮನಾಯಕ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿದ್ದಲಿಂಗಯ್ಯ ಹಾಗೂ ಜಾನಪದ ಕಲಾವಿದೆ ಸುಕ್ರಿ ಬೊಮ್ಮಗೌಡ ಆಯ್ಕೆಯಾದರು.

2007: ಗೋವಾ ರಾಜ್ಯದಲ್ಲಿ ಸ್ಥಾಪಿಸಲು ನಿರ್ಧರಿಸಲಾಗಿದ್ದ 12 ವಿಶೇಷ ಆರ್ಥಿಕ ವಲಯಗಳನ್ನು ಕೈಬಿಡಲು ರಾಜ್ಯ ಸರ್ಕಾರ ನಿರ್ಧರಿಸಿತು. ಈ ಬಗ್ಗೆ ಸಾಕಷ್ಟು ಚರ್ಚೆ ನಡೆಸಿದ ನಂತರ ಸರ್ಕಾರ ಈ ತೀರ್ಮಾನವನ್ನು ತೆಗೆದುಕೊಂಡಿತು ಎಂದು ಮುಖ್ಯಮಂತ್ರಿ ದಿಗಂಬರ ಕಾಮತ್ ಪಣಜಿಯಲ್ಲಿ ತಿಳಿಸಿದರು. ಕೇಂದ್ರದ ಮುಂದೆ 8 ವಿಶೇಷ ಆರ್ಥಿಕ ವಲಯಗಳ ಪ್ರಸ್ತಾವ ಇದ್ದು ಅದನ್ನು ಕೈಬಿಡಲು ಮನವಿ ಮಾಡಿಕೊಳ್ಳಲಾಗುವುದು. ಈಗಾಗಲೇ ಅನುಮತಿ ದೊರಕಿರುವ 4 ವಲಯಗಳನ್ನು ಜಾರಿಗೊಳಿಸದಿರಲು ನಿರ್ಧರಿಸಲಾಗಿದೆ ಎಂದು ಕಾಮತ್ ಹೇಳಿದರು.

2007: ಚಿಕ್ಕಮಗಳೂರು ನಗರದ ಪತ್ರಿಕಾ ಛಾಯಾಗ್ರಾಹಕ ಎ.ಎನ್.ಪ್ರಸನ್ನ ಅವರು ತೆಗೆದ ಉರುಳಿಗೆ ಸಿಕ್ಕಿ ಸಾವು ಬದುಕಿನ ನಡುವೆ ಹೋರಾಡುತ್ತಿರುವ ಚಿರತೆಯ ಚಿತ್ರವು ಸ್ಯಾಂಕ್ಚುಯರಿ ಏಷ್ಯಾ ನಿಯತಕಾಲಿಕದ 2007ನೇ ಸಾಲಿನ ಹವ್ಯಾಸಿ ಛಾಯಾಚಿತ್ರಗ್ರಾಹಕ ಪ್ರಶಸ್ತಿಗೆ ಆಯ್ಕೆಯಾಯಿತು. ಏಷ್ಯಾ ಖಂಡದ ಹಲವು ದೇಶಗಳಿಂದ ಸ್ಪರ್ಧೆಗೆ ಬಂದಿದ್ದ
ನೂರಾರು ಛಾಯಾಚಿತ್ರಗಳಲ್ಲಿ 14 ಚಿತ್ರಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಪ್ರಸನ್ನ ಅವರ ಚಿತ್ರ `ದ ನೈನ್ತ್ ಲೈಫ್' ಶೀರ್ಷಿಕೆಯಡಿ ಡಿಸೆಂಬರ್ ತಿಂಗಳ ನಿಯತಕಾಲಿಕದಲ್ಲಿ ಪ್ರಕಟಗೊಂಡಿತು. ಚಿಕ್ಕಮಗಳೂರು ಸಮೀಪದ ಬ್ಯಾಗದಹಳ್ಳಿಯ ಕಾಫಿ ತೋಟವೊಂದರಲ್ಲಿ ಬೇಟೆಗಾರರು ಹಾಕಿದ್ದ ಉರುಳಿಗೆ ಸಿಕ್ಕಿ ನರಳಾಡುತ್ತಿದ್ದ ಚಿರತೆ ಪ್ರಸನ್ನ ಅವರ ಕ್ಯಾಮೆರಾದಲ್ಲಿ ಬಂಧಿಯಾಗಿತ್ತು. ಅಂತಿಮವಾಗಿ ಉರುಳಿಗೆ ಜಯವಾಗಿ ಚಿರತೆ ಮೃತಪಟ್ಟಿತ್ತು. ಅರಣ್ಯ ವ್ಯಾಪಕ ಒತ್ತುವರಿಗೊಳಗಾಗಿ ಕಾಫಿ ತೋಟಗಳಾಗಿ ಬದಲಾಗುತ್ತಿರುವ ಪಶ್ಚಿಮಘಟ್ಟದಲ್ಲಿ ಮನುಷ್ಯ ಮತ್ತು ವನ್ಯಜೀವಿಗಳ ನಡುವಿನ ಸಂಘರ್ಷವನ್ನು ಈ ಚಿತ್ರ ಬಿಂಬಿಸಿತ್ತು.

2007: ಗ್ರಾಮಾಂತರ ಪ್ರದೇಶದ ದೇವಸ್ಥಾನಗಳಲ್ಲಿ ಮಹಿಳೆಯರನ್ನು ಕೊಲೆ ಮಾಡಿ ನಗದು ಮತ್ತು ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದ ಸರಣಿ ಹಂತಕಿಯನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದರು. ಆರೋಪಿ ಮಹಿಳೆ ಕನಕಪುರ ಮುಖ್ಯ ರಸ್ತೆಯ ಕಗ್ಗಲಿಪುರ ಹೋಬಳಿಯ ಬಾದೆಕಟ್ಟೆ ಗ್ರಾಮದ ನಿವಾಸಿ ಹನುಮಂತಪ್ಪನ ಪತ್ನಿ ಮಲ್ಲಿಕಾ (43). ಈಕೆ ಸೈನೈಡ್ ಬಳಸಿ ಆರು ಮಹಿಳೆಯರನ್ನು ಕೊಲೆ ಮಾಡಿದ ಪ್ರಕರಣಗಳು ಬೆಳಕಿಗೆ ಬಂದಿದ್ದವು.

2007: ವಿವಾದಿತ ರಾಮಜನ್ಮಭೂಮಿ - ಬಾಬ್ರಿ ಮಸೀದಿ ಕಟ್ಟಡ ಧ್ವಂಸ ಪ್ರಕರಣದ ತನಿಖೆಗಾಗಿ ನೇಮಕಗೊಂಡ ಲಿಬರಾನ್ ಆಯೋಗದ ಅವಧಿಯನ್ನು ಇನ್ನೊಂದು ವರ್ಷಕ್ಕೆ ವಿಸ್ತರಿಸಲಾಯಿತು. ಇದರೊಂದಿಗೆ ಅಸ್ತಿತ್ವಕ್ಕೆ ಬಂದ 15 ವರ್ಷಗಳಲ್ಲಿ ಆಯೋಗದ ಅವಧಿಯನ್ನು 43 ನೇ ಬಾರಿ ವಿಸ್ತರಿಸಿದಂತಾಯಿತು. ನ್ಯಾಯಮೂರ್ತಿ ಎಂ.ಎಸ್.ಲಿಬರಾನ್ ನೇತೃತ್ವದ ತಂಡಕ್ಕೆ 2008ರ ಫೆಬ್ರುವರಿ 29 ರ ತನಕ ಗಡುವು ವಿಸ್ತರಿಸಲಾಯಿತು. 1992 ರ ಡಿಸೆಂಬರ್ 16 ರಂದು ಈ ಆಯೋಗದ ರಚನೆಯಾಗಿತ್ತು.

2007: ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಹತ್ಯೆ ನಡೆದ ಸಂದರ್ಭದ ವಿಡಿಯೋ ದೃಶ್ಯವನ್ನು ಬ್ರಿಟಿಷ್ ಚಾನೆಲ್ 4 ಪ್ರಸಾರ ಮಾಡಿತು. ಇದು ಬೆನಜೀರ್ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ನೀಡಿತು. ಗುಂಡೇಟು ತಗುಲಿದ ಬೆನಜೀರ್ ಭುಟ್ಟೊ ತಮಗೆ ನೀಡಿದ್ದ ಗುಂಡುನಿರೋಧಕ ಕಾರಿನಿಂದ ಕೆಳಗೆ ಬಿದ್ದದ್ದನ್ನು ಈ ವೀಡಿಯೋ ದೃಶ್ಯ ತೋರಿಸಿತು. ಈ ವಿಡಿಯೋ ದೃಶ್ಯದಲ್ಲಿ ಬಿಳಿ ಅಂಗಿ, ಕಪ್ಪು ಜಾಕೆಟ್ ಹಾಗೂ ಕನ್ನಡಕಧಾರಿ ವ್ಯಕ್ತಿ ಬೆನಜೀರ್ ಇದ್ದ ಕಾರಿನ ಎಡಭಾಗಕ್ಕೆ ಗುಂಡು ಹಾರಿಸಿದ ಹಾಗೂ ಆ ನಂತರ ಆತ್ಮಹತ್ಯಾ ದಾಳಿಕೋರನೋರ್ವ ತನ್ನನ್ನು ಸ್ಫೋಟಿಸಿಕೊಂಡ ದೃಶ್ಯಗಳಿವೆ. ಬೆನಜೀರ್ ಅವರಿಗೆ ಪಾಕ್ ಸರ್ಕಾರ ಸೂಕ್ತ ಭದ್ರತೆ ನೀಡುವಲ್ಲಿ ವಿಫಲವಾಗಿದೆ ಎನ್ನುವುದಕ್ಕೆ ಇದು ಸಾಕಷ್ಟು ಪುಷ್ಟಿ ನೀಡಿತು.

2007: ಇಸ್ಲಾಮಾಬಾದಿನ ಹವ್ಯಾಸಿ ವಿಡಿಯೋಗ್ರಾಫರನೊಬ್ಬ ತೆಗೆದ ಬೆನಜೀರ್ ಭುಟ್ಟೋ ಅವರ ಕೊನೆಯ ಕೆಲವು ಕ್ಷಣಗಳ ಇನ್ನೆರಡು ಹೊಸ ವಿಡಿಯೊ ಚಿತ್ರಗಳನ್ನು ಪಾಕಿಸ್ಥಾನದ ಸುದ್ದಿ ಚಾನೆಲ್ಲುಗಳು ಪ್ರಸಾರ ಮಾಡಿವು. ಈ ವಿಡಿಯೋ ಚಿತ್ರವು ತಂಪು ಕನ್ನಡಕ (ಸನ್ ಗ್ಲಾಸ್) ಧರಿಸಿದ್ದ ಕೊಲೆಗಾರ ಪಿಪಿಪಿ ನಾಯಕಿ ಬೆನಜೀರ್ ಭುಟ್ಟೋ ಅವರತ್ತ ಗುಂಡು ಹಾರಿಸುತ್ತಿರುವುದನ್ನು ಮತ್ತು ಪರಿಣಾಮವಾಗಿ ಭುಟ್ಟೋ ಅವರು ಹಿಂಜರಿದದ್ದನ್ನು ಸ್ಪಷ್ಟವಾಗಿ ತೋರಿಸಿತು. ಇವುಗಳಲ್ಲಿ ಒಂದನ್ನು ಹವ್ಯಾಸಿ ಫೊಟೋಗ್ರಾಫರ್ ಒಬ್ಬ ತೆಗೆದಿದ್ದು, ಇದರಲ್ಲಿ ಭುಟ್ಟೋ ಅವರತ್ತ ಯುವಕನೊಬ್ಬ ಹಿಂಭಾಗದಿಂದ ಪಿಸ್ತೂಲು ಗುರಿ ಹಿಡಿದದ್ದನ್ನು ಸ್ಪಷ್ಟವಾಗಿ ತೋರಿಸಿದೆ. ಈ ವೇಳೆಯಲ್ಲಿ ಭುಟ್ಟೋ ಅವರು ತಮ್ಮ ಗುಂಡುನಿರೋಧಕ ವಾಹನದಿಂದಲೇ ಬೆಂಬಲಿಗರತ್ತ ಕೈ ಬೀಸುತ್ತಿದ್ದರು ಎಂದು ಡಾನ್ ನ್ಯೂಸ್ ಚಾನೆಲ್ ಹೇಳಿತು. ಇನ್ನೊಂದು ವಿಡಿಯೋದಲ್ಲೂ ಇದೇ ಯುವಕ, ಮುಖಕ್ಕೆ ಬಿಳಿಬಟ್ಟೆ ಹಾಕಿಕೊಂಡಿದ್ದ ಇನ್ನೊಬ್ಬ ವ್ಯಕ್ತಿಯ ಪಕ್ಕದಲ್ಲಿ ನಿಂತಿದ್ದುದು ಕಾಣಿಸುತ್ತಿತ್ತು. ಗುಂಡು ಹಾರಿಸಿದ ಯುವಕನ ಪಕ್ಕದಲ್ಲಿದ್ದ ಈ ಇನ್ನೊಬ್ಬ ವ್ಯಕ್ತಿ ಶಂಕಿತ ಆತ್ಮಹತ್ಯಾ ಬಾಂಬರ್ ಇರಬಹುದು ಎಂದು ಡಾನ್ ನ್ಯೂಸ್ ವಿವರಿಸಿತು.

2007: ಕೀನ್ಯಾದ ಹಾಲಿ ಅಧ್ಯಕ್ಷ ಮವಾಯಿ ಕಿಬಾಕಿ ಎರಡನೇ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಬೆನ್ನಲ್ಲೇ ಕೀನ್ಯಾದಲ್ಲಿ ಹಿಂಸಾಚಾರ ಭುಗಿಲೆದ್ದು 125ಕ್ಕೂ ಹೆಚ್ಚು ಮಂದಿ ಮೃತರಾದರು.

2006: ಡಿಸೆಂಬರ್ 30ರಂದು ನೇಣುಗಂಬ ಏರಿದ ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಮ್ ಹುಸೇನ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯನ್ನು ಭಾರತೀಯ ಕಾಲಮಾನ ಮುಂಜಾನೆ 4.00 ಗಂಟೆಗೆ ಇರಾಕಿನ ಉತ್ತರ ಭಾಗದಲ್ಲಿ ಇರುವ ಸದ್ದಾಮ್ ಹುಟ್ಟೂರು ಟಿಕ್ರಿತ್ ಸಮೀಪದ ಅವ್ಜಾಹ್ ಗ್ರಾಮದಲ್ಲಿ ನೆರವೇರಿಸಲಾಯಿತು. ಸದ್ದಾಮ್ ತಮ್ಮ ಆಳ್ವಿಕೆ ಕಾಲದಲ್ಲಿ ಸ್ವ-ಗ್ರಾಮದಲ್ಲಿ ನಿರ್ಮಿಸಿದ್ದ ಕಟ್ಟಡದಲ್ಲೇ ಅವರ ಸಮಾಧಿ ಮಾಡಲಾಯಿತು. ಬಾಗ್ದಾದಿನಿಂದ 180 ಕಿ.ಮೀ ದೂರದಲ್ಲಿ ಇರುವ ಅವ್ಜಾಹ್ ಗ್ರಾಮದಲ್ಲಿ ಸದ್ದಾಮ್ ನಿರ್ಮಿಸಿದ್ದ ಕಟ್ಟಡವನ್ನು ಈ ಮೊದಲು ಸಾಮಾನ್ಯವಾಗಿ ಶ್ರದ್ಧಾಂಜಲಿ ಸಭೆ ನಡೆಸಲು ಬಳಸಲಾಗುತ್ತಿತ್ತು. ಸಲಾಹೆದ್ದೀನ್ ಪ್ರಾಂತ್ಯದ ರಾಜ್ಯಪಾಲ ಹಮೇದ್-ಅಲ್-ಶಕ್ತಿ ಮತ್ತು ಸದ್ದಾಮ್ ಅವರ ಅಲ್ಬು ನಾಸೀರ್ ಬುಡಕಟ್ಟು ಜನಾಂಗದ ಮುಖ್ಯಸ್ಥ ಅಲಿ -ಅಲ್- ನಿದಾ ಮತ್ತು ಕುಟುಂಬ ವರ್ಗದವರ್ಗದವರು ಅಂತ್ಯಕ್ರಿಯೆಯಲ್ಲಿಪಾಲ್ಗೊಂಡಿದ್ದರು. ಆದರೆ, ರಕ್ಷಣಾ ಪಡೆಯು ಟಕ್ರಿತ್ನಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದುದರಿಂದ ಸದ್ದಾಮ್ ಅಭಿಮಾನಿಗಳು ಯಾರೂ ಪಾಲ್ಗೊಳ್ಳಲು ಅವಕಾಶ ಸಿಗಲಿಲ್ಲ. ಅಮೆರಿಕ ಸೇನಾಪಡೆಯಿಂದ 2003ರಲ್ಲಿ ಹತ್ಯೆಗೀಡಾಗಿದ್ದ ಸದ್ದಾಮ್ ಪುತ್ರರಾದ ಉದಯ ಮತ್ತು ಖುಸಾಯ ಅವರನ್ನೂ ಇದೇ ಗ್ರಾಮದಲ್ಲಿ ಸಮಾಧಿ ಮಾಡಲಾಗಿತ್ತು.

2006: ಕೋಫಿ ಅನ್ನಾನ್ ಅವರು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಸ್ಥಾನದಿಂದ ಈದಿನ ಮಧ್ಯರಾತ್ರಿ ನಿರ್ಗಮಿಸಿದರು. ಅನ್ನಾನ್ ಉತ್ತರಾಧಿಕಾರಿಯಾಗಿ ದಕ್ಷಿಣ ಕೊರಿಯಾದ ಬಾನ್ ಕಿ ಮೂನ್ ಆಯ್ಕೆಯಾಗಿದ್ದಾರೆ.

2006: ಜಾವಾದ ಕರಾವಳಿ ಸಮೀಪ ಸಮುದ್ರದಲ್ಲಿ ಡಿಸೆಂಬರ್ 29ರ ನಡುರಾತ್ರಿ ಹವಾಮಾನ ವೈಪರೀತ್ಯದಿಂದ ಮುಳುಗಿದ `ಸೇನಾಪತಿ' ನೌಕೆಯಲ್ಲಿದ್ದ 600 ಜನರ ಪೈಕಿ 200 ಮಂದಿಯನ್ನು ರಕ್ಷಿಸಲಾಗಿದ್ದು, 66 ಮಂದಿಯ ಶವ ಪತ್ತೆಯಾಯತು. 400 ಮಂದಿಗಾಗಿ ಇನ್ನೂ ಶೋಧ ಮುಂದುವರೆದಿದೆ ಎಂದು ಅಂತಾರ ಸುದ್ದಿ ಸಂಸ್ಥೆ ವರದಿ ಮಾಡಿತು.

2006: ಲಿಮ್ಕಾ ದಾಖಲೆ ಸಲುವಾಗಿ ಸುನೀಲ್ (22) ಮತ್ತು ವಂದನಾ ಶರ್ಮಾ (22) ಜೋಡಿ ರಾಜಸ್ಥಾನದ ಜೈಪುರದ ಕ್ರೀಡಾಂಗಣದಲ್ಲಿ ಬಿಸಿಗಾಳಿಯ ಬಲೂನಿನೊಳಗೆ ಕುಳಿತು ಆಕಾಶಕ್ಕೆ ಏರಿ ಅಲ್ಲೇ ಹಾರ ಬದಲಾಯಿಸಿ ಮದುವೆ ಮಾಡಿಕೊಂಡರು. ಮದುವೆಗೆ ಆಕಾಶದ ಮೋಡಗಳಷ್ಟೇ ಸಾಕ್ಷಿಯಾಗಲಿಲ್ಲ. ವಧು, ವರನ ಸಂಬಂಧಿಗಳು ಅಲ್ಲಿ ಸೇರಿ ಶುಭ ಕೋರಿದರು. ಹೊಸ ದಂಪತಿ ಬಲೂನಿನಲ್ಲಿ ಕುಳಿತುಕೊಂಡು ಮೇಲಕ್ಕೆ ಹಾರುತ್ತಿದ್ದಂತೆ ಕೆಳಗಿನ ಜನರೆಲ್ಲ ಕರತಾಡನ ಮಾಡಿ ಹರಸಿದರು. ಆಕಾಶದಲ್ಲಿ ತೇಲುತ್ತಿದ್ದ ಬಲೂನ್ ಮದುವೆ ಮಂಟಪವಾಗಿದ್ದುದನ್ನು ಹೊರತು ಪಡಿಸಿ, ಉಳಿದದ್ದೆಲ್ಲ ಹಿಂದು ಸಂಪ್ರದಾಯದಂತೆಯೇ ಸಾಂಗವಾಗಿ ನಡೆಯಿತು. ಭೂಮಿಯ ಮೇಲಿಂದ ಬರುತ್ತಿದ್ದ ಶಹನಾಯಿ ನಾದ, ಜನರ ಹಷರ್ೋದ್ಘಾರಗಳ ಮಧ್ಯೆ ವರ ಸುನೀಲ್ ಮತ್ತು ವಧು ವಂದನಾ ಪರಸ್ಪರ ಹಾರ ಬದಲಾಯಿಸಿಕೊಂಡರು. ಬಳಿಕ ಸುನೀಲ್ ಬಲೂನಿನಲ್ಲಿ ಹೊಮ್ಮುತ್ತಿದ್ದ ಬಿಸಿಗಾಳಿ ಸಾಕ್ಷಿಯಾಗಿ ತಾಳಿಕಟ್ಟಿ ದಾಂಪತ್ಯ ಜೀವನಕ್ಕೆ ಅಡಿಯಿಟ್ಟ. ಸುನೀಲ್ ಬಂಡವಾಳ ಹೂಡಿಕೆದಾರ ಮತ್ತು ಖಾಸಗಿ ಸಂಸ್ಥೆಯೊಂದರಲ್ಲಿ ನೌಕರ. ಎಂಟರ್ ಟೇನ್ಮೆಂಟ್ 7 ಕಂಪನಿಯ ಅನುಪ ಶ್ರೀವಾಸ್ತವ ಈ ವಿನೂತನ ಮದುವೆ ಸಂಘಟಿಸಿದ್ದರು.

2006: ಸಮಕಾಲೀನ ನೃತ್ಯಕ್ಕೆ ವಿನೂತನ ತಿರುವು ತಂದುಕೊಟ್ಟ ಖ್ಯಾತ ನೃತ್ಯ ಕಲಾವಿದೆ ಚಂದ್ರಲೇಖಾ ಅವರು ಚೆನ್ನೈಯಲ್ಲಿ ನಿಧನರಾದರು. 78 ವರ್ಷ ವಯಸ್ಸಿನ ಚಂದ್ರಲೇಖಾ ಅವರು ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಭರತನಾಟ್ಯ ಸೇರಿದಂತೆ ವಿವಿಧ ನೃತ್ಯ ರೂಪಕಗಳನ್ನು ಪ್ರದರ್ಶಿಸುವ ಮೂಲಕ ಚಂದ್ರಲೇಖಾ ಅವರು 1950ರ ದಶಕದಲ್ಲೇ ಜನರ ಮನಸ್ಸು ಗೆದ್ದಿದ್ದರು. ಚಂದ್ರಲೇಖಾ ಅವರು ಖ್ಯಾತ ಗುರು ಕಂಚೀಪುರ ಎಲ್ಲಪ್ಪಾ ಪಿಳ್ಳೈ ಅವರ ಬಳಿ 50ರ ದಶಕದಲ್ಲಿ ಸಾಂಪ್ರದಾಯಿಕ ನೃತ್ಯಾಭ್ಯಾಸ ಪಡೆದು ತಮ್ಮ ಸಾಧನೆ ಆರಂಭಿಸಿದ್ದರು. ಕಾಳಿದಾಸ ಸಮ್ಮಾನ್, ಸಂಗೀತ ನೃತ್ಯ ನಾಟಕ ಅಕಾಡೆಮಿ ಫೆಲೋಶಿಪ್ ಸೇರಿದಂತೆ ಹಲವಾರು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳು ಇವರಿಗೆ ಬಂದಿವೆ. 60ರ ದಶಕದ ಬಳಿಕ ಲೇಖಕಿಯಾಗಿ ಮತ್ತು ಮಹಿಳಾ ಹಕ್ಕು ರಕ್ಷಣೆ ಕಾರ್ಯಕರ್ತರಾದ ಚಂದ್ರಲೇಖಾ 1985ರ ನಂತರ ನೃತ್ಯ ನಿರ್ದೇಶನವನ್ನೂ ಮಾಡುತ್ತಿದ್ದರು.

2006: ರಾಜಸ್ಥಾನದ ಭಿಲ್ವಾರದ 72 ವರ್ಷದ ಮಹಿಳೆಯೊಬ್ಬರ 7 ಮಂದಿ ಪುತ್ರಿಯರು ತಮ್ಮ ತಾಯಿಯ ಪಾರ್ಥಿವ ಶರೀರವನ್ನು ತಾವೇ ಹೊತ್ತದ್ದಲ್ಲದೆ, ಚಿತೆಗೆ, ಚಿತೆಗೆ ಅಗ್ನಿಸ್ಪರ್ಶವನ್ನೂ ಮಾಡುವ ಮೂಲಕ ರಾಜಸ್ಥಾನಿ ಸಮಾಜಕ್ಕೆ ಹೊಸ ಮಾದರಿ ಹಾಕಿಕೊಟ್ಟರು. ತಮ್ಮ ತಾಯಿ ಕಾಂಚನ ದೇವಿ ತಮ್ಮನ್ನು ಪುತ್ರರಂತೆಯೇ ಪರಿಗಣಿಸಿದ್ದರು. ತಾವು ಏಳೂ ಮಂದಿ ಕೂಡಾ ಪುತ್ರಿಯರೇ ಆಗಿದ್ದರೂ ಪುತ್ರ ಬೇಕೆಂದು ಆಕೆ ಬಯಸಲಿಲ್ಲ. ಬದಲಾಗಿ ಏಳೂ ಮಂದಿ ಪುತ್ರಿಯರನ್ನು ಹುಡುಗರಿಗೆ ಸರಿಸಮಾನವಾಗಿ ಬೆಳೆಯುವಂತೆ ಪ್ರೋತ್ಸಾಹಿಸಿದರು ಎಂಬುದು ಪುತ್ರಿಯರಲ್ಲಿ ಒಬ್ಬರಾದ ಲತಾ ಮಾದ್ರೇಚಾ ಅಭಿಮತ. ಕಾಂಚನದೇವಿಯ ಪುತ್ರಿಯರು ತಮ್ಮ ತಾಯಿಯ ಪಾರ್ಥಿವ ಶರೀರವನ್ನು ದುಃಖಾಶ್ರುಗಳೊಂದಿಗೆ ಸ್ವತಃ ತಾವೇ ಹೊತ್ತುಕೊಂಡು ರುದ್ರಭೂಮಿಗೆ ತಂದು ಅಗ್ನಿಸ್ಪರ್ಶ ಮಾಡಿದರು. ಪುತ್ರಿಯರನ್ನು ಹೊರೆ ಎಂದೂ ಪುತ್ರರನ್ನು ವರ ಎಂದೂ ಪರಿಗಣಿಸುವ ಸಮಾಜದಲ್ಲಿ, ಈ ಪುತ್ರಿಯರು ಸಂಪ್ರದಾಯದ ಹಾದಿ ತ್ಯಜಿಸಿ ಹೊಸ ಹಾದಿ ಹಿಡಿದಾಗ ಅವರ ಗಂಡಂದಿರು, ಬಂಧುಗಳು ಮತ್ತು ನೆರೆಹೊರೆಯ ಮಂದಿ ಕೂಡಾ ಹೃತ್ಪೂರ್ವಕವಾಗಿ ಬೆಂಬಲಿಸಿದರು. ರಾಜಸ್ಥಾನದಲ್ಲಿ ಹಿಂದಿನ ದಿನಗಳಲ್ಲಿ ಮಹಿಳೆಯರನ್ನೂ ರುದ್ರಭೂಮಿಗೆ ತೆರಳದಂತೆ ತಡೆಯಲಾಗುತ್ತಿತ್ತು, ಆದರೆ ಈ ಘಟನೆಯೊಂದಿಗೆ ಕಾಂಚನ ದೇವಿಯ 35ರ ಹರೆಯ ದಾಟಿದ ಪುತ್ರಿಯರು ರುದ್ರಭೂಮಿಗೆ ತೆರಳಿ ತಾಯಿಗೆ ಶ್ರದ್ಧಾಂಜಲಿ ಸಲ್ಲಿಸುವಲ್ಲೂ ಸಫಲರಾದರು.

2006: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಆರ್.ವಿ. ಬಿಡಪ್ಪ (86) ಅವರು ಈದಿನ ರಾತ್ರಿ ಬೆಂಗಳೂರಿನಲ್ಲಿ ನಿಧನರಾದರು. ಬೀದರಿನಲ್ಲಿ ರಾಷ್ಟ್ರೀಯ ಶಿಕ್ಷಣ ಸೊಸೈಟಿಯನ್ನು ಸ್ಥಾಪಿಸಿರುವ ಬಿಡಪ್ಪ ಅವರು, ಸ್ವಾತಂತ್ರ್ಯ ಪೂರ್ವದಲ್ಲಿ ಹೈದರಾಬಾದ್ ಪ್ರಾಂತದ ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ನಿಜಾಮ ಆಡಳಿತದ ವಿರುದ್ಧ ಚಳವಳಿ ನಡೆಸಿದ ಮುಖಂಡರಲ್ಲಿ ಇವರೂ ಒಬ್ಬರು. ಕಾರ್ಮಿಕ ಮುಖಂಡರೂ ಆಗಿದ್ದ ಅವರು, ಗುಲ್ಬರ್ಗದ ಎಂ. ಎಸ್. ಕೆ. ಮಿಲ್ಸ್ ಕಾರ್ಮಿಕರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

2006: ಗಿನ್ನೆಸ್ ದಾಖಲೆ ಸ್ಥಾಪನೆ ಸಲುವಾಗಿ ಕರಾಟೆ ಬಾಲೆ ಐದು ವರ್ಷ 11 ತಿಂಗಳು ಪ್ರಾಯದ ಯುಕೆಜಿ ವಿದ್ಯಾರ್ಥಿನಿ ದಿಯಾ ಅರಸ್ ಮೈಸೂರಿನ ಮಾನಸಗಂಗೋತ್ರಿ ರಂಗಮಂದಿರದಲ್ಲಿ ತನ್ನ ಮೃದುವಾದ ಹಣೆಯಿಂದ ಒಂದು ನಿಮಿಷದಲ್ಲಿ 31 ಮಂಗಳೂರು ಹಂಚುಗಳನ್ನು ಪುಡಿ ಪುಡಿ ಮಾಡಿದಳು. ಈ ಮೂಲಕ 40 ಸೆಕೆಂಡುಗಳಲ್ಲಿ 25 ಹಂಚುಗಳನ್ನು ಪುಡಿ ಪುಡಿ ಮಾಡಿದ್ದ ತನ್ನ ಹಿಂದಿನ ದಾಖಲೆಯನ್ನು ಅಳಿಸಿಹಾಕಿದಳು. ಗಿನ್ನೆಸ್ ದಾಖಲೆ ಸ್ಥಾಪನೆ ಸಲುವಾಗಿ 30 ಹಂಚುಗಳನ್ನು ಪುಡಿಗುಟ್ಟಲು ಯೋಚಿಸಿದ್ದ ದಿಯಾ ಒಂದು ಹಂಚು ಹೆಚ್ಚು ಪುಡಿ ಮಾಡಿ ಗಿನ್ನೆಸ್ ದಾಖಲೆಯತ್ತ ದೃಢ ಹೆಜ್ಜೆ ಇಟ್ಟಳು.

2005: ಭಾರತೀಯ ಜನತಾ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಲಾಲ್ ಕೃಷ್ಣ ಅಡ್ವಾಣಿ ಅವರು ರಾಜೀನಾಮೆ ನೀಡಿದರು. ನೂತನ ಅಧ್ಯಕ್ಷರಾಗಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ರಾಜನಾಥ್ ಸಿಂಗ್ ನೇಮಕಗೊಂಡರು. ತಮ್ಮ ರಾಜೀನಾಮೆ ಮತ್ತು ಹೊಸ ಅಧ್ಯಕ್ಷರ ನೇಮಕ ಸುದ್ದಿಯನ್ನು ಸುದ್ದಿಯನ್ನು ಅಡ್ವಾಣಿ ಸ್ವತಃ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಉತ್ತರ ಪ್ರದೇಶದ ಚಾಂದೌಲಿ ಜಿಲ್ಲೆಯ ಭಾಬೌರಾ ಗ್ರಾಮದಲ್ಲಿ 1951ರ ಜುಲೈ 10ರಂದು ಜನಿಸಿದ ರಾಜನಾಥ್ ಸಿಂಗ್ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದ ಮೊದಲ ರೈತ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಿಕಟವರ್ತಿ. ವಿದ್ಯಾರ್ಥಿ ದೆಸೆಯಿಂದಲೂ ಆರೆಸ್ಸೆಸ್ ಕಾರ್ಯಕರ್ತ. ಆರೆಸ್ಸೆಸ್, ಅಭಾವಿಪಗಳಲ್ಲಿ ದುಡಿದು 1974ರಲ್ಲಿ ಜನಸಂಘದ ಮೂಲಕ ರಾಜಕೀಯಕ್ಕೆ ಕಾಲಿಟ್ಟರು. 1975ರಲ್ಲಿ ಜೆಪಿ ಚಳವಳಿಯಲ್ಲಿ ಧುಮುಕಿ ತುರ್ತು ಪರಿಸ್ಥಿತಿ ವಿರುದ್ಧ ಹೋರಾಟಕ್ಕೆ ಇಳಿದು ಎರಡು ವರ್ಷ ಸೆರೆವಾಸ ಅನುಭಸಿದರು. 1977 ರಲ್ಲಿ ಮೊದಲ ಬಾರಿಗೆ ಉತ್ತರ ಪ್ರದೇಶ ವಿಧಾನಸಭೆ ಪ್ರವೇಶಿಸಿದರು.

2005: ಭವಿಷ್ಯದ ಅನಿಶ್ಚಿತತೆಯೊಂದಿಗೆ ಕುದುರೆಮುಖ ಕಬ್ಬಿಣ ಮತ್ತು ಅದಿರು ಕಂಪೆನಿ (ಕೆಐಒಸಿಎಲ್) ಈದಿನ ಮಧ್ಯರಾತ್ರಿ ತನ್ನ ಚಟುವಟಿಕೆಯನ್ನು ಅಧಿಕೃತವಾಗಿ ಸ್ಥಗಿತಗೊಳಿಸಿತು. 2005ರ ಡಿಸೆಂಬರ್ 31ಕ್ಕೆ ಕುದುರೆಮುಖದಲ್ಲಿ ಗಣಿಗಾರಿಕೆ ಸ್ಥಗಿತಗೊಳಿಸಬೇಕು ಎಂದು 2002ರ ಅಕ್ಟೋಬರ್ 30ರಂದು ತೀರ್ಪಿಗೆ ಪ್ರತಿಯಾಗಿ ಕಂಪೆನಿಯ ಕಾರ್ಮಿಕ ಸಂಘಟನೆಗಳು ಸಲ್ಲಿಸುತ್ತಾ ಬಂದಿದ್ದ ಮೇಲ್ಮನವಿಗಳನ್ನು ಸುಪ್ರೀಂಕೋರ್ಟ್ ತಿರಸ್ಕರಿಸುತ್ತಲೇ ಬಂದಿತ್ತು.

1993: ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ಕರ್ನಾಟಕ ಕಾಂಗ್ರೆಸ್ ಪಕ್ಷವನ್ನು ರಚಿಸಿದರು.

1991: ಸೋವಿಯತ್ ಒಕ್ಕೂಟ (ಯು ಎಸ್ ಎಸ್ ಆರ್) ಕಾನೂನುಬದ್ಧವಾಗಿ ಅಸ್ತಿತ್ವ ಕಳೆದುಕೊಂಡಿತು. 1991ರ ಡಿಸೆಂಬರ್ 21ರಂದೇ ರಷ್ಯ ಮತ್ತು ಇತರ ಹತ್ತು ಹಿಂದಿನ ಸೋವಿಯತ್ ಗಣರಾಜ್ಯಗಳು ತಮಗೆ ತಾವೇ ಸ್ವಾತಂತ್ರ್ಯ ಘೋಷಿಸಿಕೊಂಡು, ಸ್ವತಂತ್ರ ರಾಷ್ಟ್ರಗಳ ಕಾಮನ್ವೆಲ್ತ್ (ಸಿಐಎಸ್) ಸ್ಥಾಪಿಸಿಕೊಂಡಿದ್ದವು. ಹಾಗೂ ಮಿನ್ಸ್ಕ್ನ್ನು ತಮ್ಮ ರಾಜಧಾನಿಯಾಗಿ ಮಾಡಿಕೊಂಡ್ದಿದವು.

1950: ಸಾಹಿತಿ ಡಿ.ಎನ್. ಶ್ರೀನಾಥ್ ಜನನ.

1946: ಸಾಹಿತಿ ಹೊರೆಯಾಲ ದೊರೆಸ್ವಾಮಿ ಜನನ.

1943: ಖ್ಯಾತ ಬ್ರಿಟಿಷ್ ಚಿತ್ರನಟ ಬೆನ್ ಕಿಂಗ್ ಸ್ಲೆ ಹುಟ್ಟಿದ ದಿನ. ರಿಚರ್ಡ್ ಅಟೆನ್ ಬರೊ ಅವರ ಚಲನಚಿತ್ರ `ಗಾಂಧಿ'ಯಲ್ಲಿ ಬೆನ್ ಕಿಂಗ್ ಸ್ಲೆ ಮಹಾತ್ಮಾ ಗಾಂಧೀಜಿ ಪಾತ್ರ ವಹಿಸಿದ್ದರು.

1934: ಸಾಹಿತಿ ಉಷಾದೇವಿ ಜನನ.

1929: ಈ ದಿನ ನಡುರಾತ್ರಿ `ಪೂರ್ಣ ಸ್ವರಾಜ್' ಪ್ರತಿಜ್ಞೆ ಸ್ವೀಕರಿಸುವ ಸಲುವಾಗಿ ಮಹಾತ್ಮಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ಸಿಗರು ಲಾಹೋರಿಗೆ ತೆರಳಿದರು. 1930ರ ಜನವರಿ 26ರಂದು ಮೊದಲ ಬಾರಿಗೆ `ಸ್ವರಾಜ್ ದಿನ' ಆಚರಿಸಲಾಯಿತು.

1923: ಹೊಸ ವರ್ಷದ ಮುನ್ನಾದಿನ ರೇಡಿಯೋದಲ್ಲಿ ಮೊತ್ತ ಮೊದಲ ಬಾರಿಗೆ `ಬಿಗ್ ಬೆನ್' ಕೇಳಿಸಿತು. 1924ರ ಫೆಬ್ರುವರಿ 17ರಿಂದ ಬಿ.ಬಿ.ಸಿ.ಯಲ್ಲಿ ಗ್ರೀನ್ ವಿಚ್ `ಪಿಪ್ಸ್' ಜೊತೆಗೆ ಬಿಗ್ ಬೆನ್ ಗಂಟೆ ನಿಯಮಿತವಾಗಿ ಕೇಳಿಸತೊಡಗಿತು.

1903: ಪ್ರತಿಭೆ, ಅನುಭವ, ಕ್ರಿಯಾಶೀಲತೆಯಿಂದ ಹಲವಾರು ಮಂತ್ರಿಗಳಿಗೆ ಲೇಖನ, ಭಾಷಣ, ಭಿನ್ನವತ್ತಳೆಗಳನ್ನು ಬರೆದುಕೊಡುತ್ತ್ದಿದ ಕೆ.ಎಸ್. ಧರಣೇಂದ್ರಯ್ಯ (31-12-1903ರಿಂದ 13-8-1971) ಅವರು ಸಣ್ಣ ಅಂಬಣ್ಣ ಅವರ ಮಗನಾಗಿ ತುಮಕೂರು ಜಿಲ್ಲೆ ಉರುಡುಗೆರೆ ಹೋಬಳಿಯ ತಾಳೇನಹಳ್ಳಿಯಲ್ಲಿ ಜನಿಸಿದರು.

1896: ಸಾಹಿತಿ ಎಂ.ವಿ. ಗೋಪಾಲಸ್ವಾಮಿ ಜನನ.

1864: ಜಾಜರ್್ ಮಿಫ್ಲಿನ್ ಡಲ್ಲಾಸ್ (1792-1864) ಅವರು ಫಿಲಡೆಲ್ಫಿಯಾದಲ್ಲಿ ತಮ್ಮ 72ನೇ ವಯಸ್ಸಿನಲ್ಲಿ ನಿಧನರಾದರು. 1845-1849 ಅವಧಿಯಲ್ಲಿ ಅಮೆರಿಕಾದ ಉಪಾಧ್ಯಕ್ಷರಾಗಿದ್ದ ಅವರ ಗೌರವಾರ್ಥ ಟೆಕ್ಸಾಸ್ ಮತ್ತು ಓರೆಗಾನಿನ ನಗರಗಳಿಗೆ `ಡಲ್ಲಾಸ್ ನಗರ' ಎಂಬ ಹೆಸರಿಡಲಾಯಿತು.

1861: ಅಸ್ಸಾಮಿನ ಚಿರಾಪುಂಜಿಯಲ್ಲಿ ವಿಶ್ವದಾಖಲೆಯ 22,990 ಮಿ.ಮೀ. ಮಳೆ ಸುರಿಯಿತು.

1857: ಕೆನಡಾದ ರಾಜಧಾನಿಯಾಗಿ ಒಟ್ಟಾವವನ್ನು ಆಯ್ಕೆ ಮಾಡಲಾಯಿತು.

1600: ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಗೆ 15 ವರ್ಷಗಳ ಅವಧಿಗೆ ಪೂರ್ವ ಸಮುದ್ರದಲ್ಲಿ ವ್ಯಾಪಾರ ನಡೆಸುವ ಏಕಸ್ವಾಮ್ಯವನ್ನು ರಾಣಿ ಒಂದನೇ ಎಲಿಜಬೆತ್ ಮಂಜೂರು ಮಾಡಿದರು.