Tuesday, March 31, 2020

ಇಂದಿನ ಇತಿಹಾಸ History Today ಮಾರ್ಚ್ 31

ನವದೆಹಲಿ: ಕೊರೋನಾವೈರಸ್ (ಕೋವಿಡ್-೧೯) ಹರಡದಂತೆ ತಡೆಯುವ ಸಲುವಾಗಿ ದೆಹಲಿ ಸರ್ಕಾರ ೨೦೦ಕ್ಕಿಂತ ಹೆಚ್ಚು ಮಂದಿಯ ಸಮಾವೇಶಗಳನ್ನು ನಿಷೇಧಿಸಿದ್ದ ಅವಧಿಯಲ್ಲೇ  ಸುಮಾರು ೨೦೦೦ ಮಂದಿ ಸಮಾವೇಶಗೊಂಡಿದ್ದ  ದೆಹಲಿಯ ನಿಜಾಮುದ್ದೀನ್ ಪ್ರದೇಶದ ಮರ್ಕಜ್ ನಿಜಾಮುದ್ದೀನ್ ಮಸೀದಿ ಇದೀಗ ಭಾರತದಲ್ಲಿ ಕೊರೋನಾವೈರಸ್ ಸೋಂಕು ಪ್ರಸರಣ ಕೇಂದ್ರವಾಗಿ ಪರಿಣಮಿಸಿದ್ದು, ಇಲ್ಲಿನ ಸಮಾವೇಶದಲ್ಲಿ ಪಾಲ್ಗೊಂಡಿದ್ದವರಲ್ಲಿ ಮಂದಿ ಸಾವನ್ನಪ್ಪಿದ್ದು, ೩೭ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿದೆ. ೩೩೪ ಮಂದಿಯನ್ನು ಆಸ್ಪತ್ರೆಗೆ, ೮೦೦ಕ್ಕೂ ಹೆಚ್ಚು ಮಂದಿಯನ್ನು  2020 ಮಾರ್ಚ್ 31ರ ಮಂಗಳವಾರ ಏಕಾಂತವಾಸಕ್ಕೆ ಒಳಪಡಿಸಲಾಯಿತು. ತಬ್ಲಿಘ್ -- ಜಮಾತ್ ಸಮಾವೇಶವನ್ನು ಸಂಘಟಿಸಿದ ಧಾರ್ಮಿಕ ಕೇಂದ್ರಕ್ಕೆ  2020 ಮಾರ್ಚ್ 31ರ ಮಂಗಳವಾರ ಬೀಗಮುದ್ರೆ ಹಾಕಲಾಗಿದ್ದು, ಇಲ್ಲಿದ್ದ 1500ಕ್ಕೂ ಹೆಚ್ಚು ಮಂದಿಯನ್ನು ಸ್ಥಳಾಂತರಿಸಿ ಅವರ ಪೈಕಿ ೮೦೦ ಮಂದಿಯನ್ನು ದೆಹಲಿಯ ವಿವಿಧ ಭಾಗಗಳಲ್ಲಿನ ಏಕಾಂತ ವಾಸದ ವ್ಯವಸ್ಥೆಗಳಿಗೆ ಬಸ್ಸುಗಳ ಮೂಲಕ ರವಾನಿಸಲಾಯಿತು.ಮಾರ್ಚ್ ಮಧ್ಯಾವಧಿಯಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡಿದ್ದವರಲ್ಲಿ ಇನ್ನೂ ಹಲವರಲ್ಲಿ ಸೋಂಕು ಖಚಿತಗೊಂಡಿರುವ ಬಗ್ಗೆ ವರದಿಗಳು ಬರುತ್ತಿವೆ.  ಸಮಾವೇಶದಲ್ಲಿ ಭಾಗಿಯಾಗಿದ್ದವರು ಕರ್ನಾಟಕ, ತೆಲಂಗಾಣ, ಬಿಹಾರ ಹಾಗೂ ಒಡಿಶಾ ರಾಜ್ಯಗಳಲ್ಲಿ ಸಂಚರಿಸಿರುವುದು ತಿಳಿದು ಬಂದಿತು.  ನಿಜಾಮುದ್ದೀನ್ ಪೂರ್ವ ವಲಯದಲ್ಲಿ ಮರ್ಕಜ್ ಅಥವಾ ಬಂಗ್ಲೇವಾಲಿ ಮಸೀದಿಗೆ ಕಟ್ಟಡಕ್ಕೆ ಹೊಂದಿ ಕೊಂಡಂತೆ ನಿಜಾಮುದ್ದೀನ್ ಪೊಲೀಸ್ ಠಾಣೆ ಇದೆ. ವಲಯದಲ್ಲಿ ಸುಮಾರು ೨೫,೦೦೦ ಮಂದಿ ವಾಸಿಸುತ್ತಿದ್ದಾರೆ. ದೆಹಲಿಯ ಲೋಕನಾಯಕ ಆಸ್ಪತ್ರೆಗೆ ಸೇರಿಸಿದ ಬಳಿಕ ನಡೆಸಲಾದ ಪರೀಕೆಯಲ್ಲಿ ೧೦೨ ಮಂದಿಯ ಪೈಕಿ ೨೪ ಮಂದಿಗೆ ಕೊರೋನಾವೈರಸ್ ಸೋಂಕು ತಗುಲಿದ್ದು ದೃಢಪಟ್ಟಿದೆ. ಇತರ ಎರಡು ಆಸ್ಪತ್ರೆಗಳಿಗೆ ಸೇರಿಸಲಾಗಿರುವ ಇತರ ೨೦೦ ಮಂದಿಯ ಪರೀಕ್ಷಾ ವರದಿಗಳು ಇನ್ನೂ ಬಂದಿಲ್ಲ. ತಬ್ಲಿಘ್--ಜಮಾತ್ ನಲ್ಲಿ ಪಾಲ್ಗೊಂಡಿದ್ದ ೧೧ ಮಂದಿಗೆ ಸೋಂಕು ತಗುಲಿರುವುದು ದೃಢ ಪಟ್ಟಿದೆ ಎಂದು ಆಂದ್ರ ಪ್ರದೇಶ ಸರ್ಕಾರ ತಿಳಿಸಿದೆ. sಸಮಾವೇಶದಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯ ಜೊತೆಗೆ ನಿಕಟ ಸಂಪರ್ಕ ಹೊಂದಿದ್ದ ಒಬ್ಹ ವ್ಯಕ್ತಿಗೂ ಸೋಂಕು ತಟ್ಟಿದೆ ಎಂದು ರಾಜ್ಯ ಸರ್ಕಾರ ತಿಳಿಸಿತು.  (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ವಿಶ್ವವ್ಯಾಪಿ ಕೊರೋನವೈರಸ್ ವಿರುದ್ಧ ಹೋರಾಡಲು ಚೀನಾ ಪೂರೈಸುತ್ತಿರುವ ಸಲಕರಣೆಗಳ ಗುಣಮಟ್ಟದ ಬಗ್ಗೆ ಹಲವಾರು ಯುರೋಪಿಯನ್ ರಾಷ್ಟ್ರಗಳು ತೀವ್ರ  2020 ಮಾರ್ಚ್ 31ರ ಮಂಗಳವಾರ ಆಕ್ಷೇಪ ವ್ಯಕ್ತ ಪಡಿಸಿದವು. ಕಳೆದ ವಾರಾಂತ್ಯದಲ್ಲಿ ಚೀನಾದಿಂದ ಆಮದು ಮಾಡಿಕೊಳ್ಳಲಾದ ಉಪಕರಣಗಳ ಕಳಪೆ ಗುಣಮಟ್ಟದಿಂದ ಎದುರಿಸಬೇಕಾಗಿ ಬಂದ ಸಮಸ್ಯೆಗಳ ಬಗ್ಗೆ ನೆದರ್ಲ್ಯಾಂಡ್ಸ್  ದೂರಿತು. ದೇಶವು ಚೀನಾದಿಂದ ಸಹಸ್ರಾರು ಮುಖಗವಸುಗಳನ್ನು ಆಮದು ಮಾಡಿಕೊಂಡಿತ್ತು. ಇದೇ ವೇಳೆಗೆ, ಸ್ಪೇನ್ ಚೀನಾದ ಉತ್ಪಾದಕರಿಂದ ಸರಬರಾಜು ಮಾಡಲಾದ ದೋಷಯುಕ್ತ ಆಮದು ಪರೀಕ್ಷಾ ಕಿಟ್‌ಗಳ ಬಗ್ಗೆ ದೂರು ನೀಡಿದೆ ಎಂದು ಮಾಧ್ಯಮ ವರದಿಗಳು ತಿಳಿಸಿದವು. ಚೀನಾದಿಂದ ಆಮದು ಮಾಡಿಕೊಳ್ಳುವ ಉತ್ಪನ್ನಗಳ ಗುಣಮಟ್ಟದ ಬಗ್ಗೆ ಹಲವಾರು ದೇಶಗಳು ಅನುಮಾನಗಳನ್ನು ವ್ಯಕ್ತಪಡಿಸಿವೆ ಮತ್ತು ಕೆಲವು ಸಮಸ್ಯೆಗಳಿರಬಹುದು ಎಂದು ಚೀನಾದ ವಿದೇಶಾಂಗ ಸಚಿವಾಲಯ ಅದಕ್ಕೆ ಸಮಜಾಯಿಷಿ ನೀಡಿತು. "ಹೆಚ್ಚಿನ ಸಂಖ್ಯೆಯ ಚೀನೀ ತಯಾರಕರು ಇತರ ದೇಶಗಳಲ್ಲಿನ ರೋಗಿಗಳ ಜೀವ ಉಳಿಸುವ ನಿಟ್ಟಿನಲ್ಲಿ ನೆರವಗಲು ಹಗಲಿರುಳು ಎನ್ನದೆ ಕೆಲಸ ಮಾಡುತ್ತಿದ್ದಾರೆ. ನಮ್ಮ ಪ್ರಾಮಾಣಿಕತೆ ಮತ್ತು ನೆರವು ನಿಜ. ಪ್ರಕ್ರಿಯೆಯಲ್ಲಿ ಸಮಸ್ಯೆಗಳು ಸಂಭವಿಸಿದಲ್ಲಿ, ಚೀನಾದ ಕಡೆಯವರು ಸಂಬಂಧಿತ ಇಲಾಖೆಗಳೊಂದಿಗೆ ಮಾತನಾಡುತ್ತಾರೆ ಎಂದು ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನೈಂಗ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ಕೊರೋನಾವೈರಸ್ಸಿಗಿಂತಲೂ ಭೀತಿಯು ಹೆಚ್ಚು ಜೀವಹಾನಿ ಮಾಡುತ್ತದೆ ಎಂದು 2020 ಮಾರ್ಚ್ 31ರ ಮಂಗಳವಾರ ಇಲ್ಲಿ ಹೇಳಿದ ಸುಪ್ರೀಂಕೋರ್ಟ್ ವಲಸೆ ಕಾರ್ಮಿಕರಿಗೆ ಸಲಹೆ, ಆಶ್ರಯ, ಆಹಾರ ಮತ್ತು ನೀರು ಒದಗಿಸಲು ಸೂಕ್ತ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಸೂಚಿಸಿತು. ಸುಳ್ಳು ಸುದ್ದಿ ಹರಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವಂತೆಯೂ ಆದೇಶ ನೀಡಿದ ಪೀಠ, ಪಿಡುಗಿನ ಬಗ್ಗೆ ಜನರ ಪ್ರಶ್ನೆಗಳಿಗೆ ಉತ್ತರ ನೀಡುವ ಸಲುವಾಗಿ ಪೋರ್ಟಲ್ ಒಂದರನ್ನು ಸ್ಥಾಪಿಸಲು ೨೪ ಗಂಟೆಗಳ ಗಡುವು ನೀಡಿತು. ಕೊರೊನಾವೈರಸ್ಸಿಗಿಂತ ಭೀತಿಯು ಹೆಚ್ಚು ಜೀವಹಾನಿ ಉಂಟು ಮಾಡುತ್ತದೆ ಎಂದು ಹೇಳಿದ ಸುಪ್ರೀಂಕೋರ್ಟ್ ಪೀಠವು,  ಸಾಂಕ್ರಾಮಿಕ ರೋಗದ ಬಗ್ಗೆ ತಪ್ಪು ಮಾಹಿತಿ ಮತ್ತು ನಕಲಿ ಸುದ್ದಿಗಳನ್ನು ಹರಡುವವರ ವಿರುದ್ಧ ಕ್ರಿಮಿನಲ್ ಕ್ರಮ ಕೈಗೊಳ್ಳುವ ಬಗ್ಗೆ ಒಲವು ವ್ಯಕ್ತ ಪಡಿಸಿತು. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನಡೆಸಿದ ವಿಚಾರಣೆ ವೇಳೆಯಲ್ಲಿ ಭಾರತದ ಮುಖ್ಯ ನ್ಯಾಯಮೂರ್ತಿ ಎಸ್‌ಎ ಬೋಬ್ಡೆ ಮತ್ತು ನ್ಯಾಯಮೂರ್ತಿ ಎಲ್ ನಾಗೇಶ್ವರ ರಾವ್ ಅವರ ನ್ಯಾಯಪೀಠವು ನಕಲಿ ಸುದ್ದಿ ಜನರಲ್ಲಿ ಭೀತಿಯನ್ನು ಉಂಟುಮಾಡುತ್ತದೆ. ಹೀಗಾಗಿ ಕೇಂದ್ರವು ಜನರೊಂದಿಗೆ ನೇರವಾಗಿ ಸಂವಹನ ನಡೆಸುವ ಮತ್ತು ಅಧಿಕೃತ ಮಾಹಿತಿಯನ್ನು ಹಂಚಿಕೊಳ್ಳುವ ಅಧಿಕೃತ ಚಾನೆಲ್ ಅನ್ನು ಹೊಂದಿರಬೇಕು ಎಂದು ಒತ್ತಿ ಹೇಳಿತು. ವೈರಸ್ಸಿಗಿಂತ ಭೀತಿಯು ಹೆಚ್ಚು ಅಪಾಯಕಾರಿ. ನಿಮಗೆ ಸಲಹೆಗಾರರು ಬೇಕು. ನೀವು ಭಜನೆ, ಕೀರ್ತನೆ, ನಮಾಜ್ ಅಥವಾ ಯಾವುದನ್ನಾದರೂ ಬಳಸಿಕೊಳ್ಳಬಹುದು. ಮುಖ್ಯವಾಗಿ ನೀವು ಜನರಿಗೆ ಮನೋಬಲ ತುಂಬಬೇಕು. ಎಲ್ಲ ಧರ್ಮಗಳಿಗೆ ಸೇರಿದ ಸಮುದಾಯಗಳ ಮುಖಂಡರನ್ನು ಸೇರಿಸಿಕೊಳ್ಳಿ ಎಂದು ಸಿಜೆಐ ಬೋಬ್ಡೆ ಅವರು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತ್ತ ಅವರಿಗೆ ಹೇಳಿದರು. ಪರಿಸ್ಥಿತಿಯನ್ನು ಸುಧಾರಿಸಲು  ಕೈಗೊಳ್ಳಲಾಗುತ್ತಿರುವ ಕ್ರಮಗಳ ಬಗ್ಗೆ ಸರ್ಕಾg ಸಲ್ಲಿಸಿರುವ ಪ್ರಮಾಣಪತ್ರದಲ್ಲಿ  ಆಶ್ರಯ ಮನೆಗಳಲ್ಲಿ ಮತ್ತು ಇತರ ತಾತ್ಕಾಲಿಕ ವಸತಿಗಳಲ್ಲಿ ನೆಲೆಸಿರುವ ವಲಸೆ ಕಾರ್ಮಿಕರು ಸೇರಿದಂತೆ ಜನರಿಗೆ ಸಮಾಲೋಚನಾ ಸಲಹೆಗಾರರಿಂದ ಸಲಹಾರೂಪದ ನೆರವು ಒದಗಿಸುವ ಅಂಶದ ಬಗ್ಗೆ ಪ್ರಸ್ತಾಪ ಇಲ್ಲ ಎಂದು ನ್ಯಾಯಾಲಯವು ಗಮನ ಸೆಳೆಯಿತು. ಆಶ್ರಯದಲ್ಲಿರುವ ವಲಸಿಗರಿಗೆ ಸಲಹೆ ನೀಡಲು ಮತ್ತು ಅವರನ್ನು ಶಾಂತಗೊಳಿಸಲು ಸರ್ಕಾರವು ಸಲಹೆಗಾರರನ್ನು ತೊಡಗಿಸಲಿದೆ ಮತ್ತು ಧಾರ್ಮಿಕ ಮುಖಂಡರು, ಮೌಲ್ವಿಗಳು, ಸಾಧುಗಳನ್ನು ಸಹಾಯ ಪಡೆಯುವ ಬಗ್ಗೆ ಹೇಳಿಕೆ ನೀಡಲು ಸಿದ್ಧರಿದ್ದೇನೆ ಎಂದು ಮೆಹ್ತಾ ನ್ಯಾಯಾಲಯಕ್ಕೆ ಉತ್ತರಿಸಿದರು. "೨೪ ಗಂಟೆಗಳ ಒಳಗೆ ನಾವು ತರಬೇತಿ ಪಡೆದ ಸಲಹೆಗಾರರನ್ನು ಮತ್ತು ಧಾರ್ಮಿಕ ಮುಖಂಡರನ್ನು ಸಜ್ಜುಗೊಳಿಸುತ್ತೇವೆ ಎಂಬುದಾಗಿ ನಾನು ಇಲ್ಲಿ ಹೇಳಿಕೆ ನೀಡುತ್ತಿದ್ದೇನೆ" ಎಂದು ಮೆಹ್ತ  ಹೇಳಿದರು.  (ವಿವರಗಳಿಗೆ ಇಲ್ಲಿ ಕ್ಲಿಕ್   ಮಾಡಿರಿ)

2020: ನವದೆಹಲಿ: ವಿಶ್ವಾದ್ಯಂತ ಕೊರೋನಾವೈರಸ್ ಸಾಂಕ್ರಾಮಿಕ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ 2020 ಮಾರ್ಚ್ 31ರ ಮಂಗಳವಾರ  ಒಂದೇ ದಿನದಲ್ಲಿ ಒಂದು ಲಕ್ಷಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಏರಿಕೆಯಾಗಿದ್ದು ಜಾಗತಿಕ ಸೋಂಕಿತರ ಸಂಖ್ಯೆ ,೦೪,೦೭೩ಕ್ಕೆ ಏರಿದೆ. ಸೋಂಕಿಗೆ ಬಲಿಯಾದವರ ಸಂಖ್ಯೆ ಜಗತ್ತಿನಲ್ಲಿ ೩೯,೦೭೪ಕ್ಕೆ ಏರಿತು. ಭಾರತದಲ್ಲಿ ಒಂದೇ ದಿನದಲ್ಲಿ 146  ಮಂದಿ ಕೊರೋನಾವೈರಸ್ ಪಾಸಿಟಿವ್ ವರದಿ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆಯನ್ನು 2000ಕ್ಕೆ ಏರಿಸಿದೆ. ಒಟ್ಟು ಸಾವಿನ ಸಂಖ್ಯೆ 35ಕ್ಕೆ ಏರಿತು.  ಯುರೋಪಿನಲ್ಲಿ ಶೀಘ್ರವೇ ಪರಿಸ್ಥಿತಿ ಸ್ಥಿರಗೊಳ್ಳಲು ಆರಂಭವಾಗಲಿದೆ ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯು (ಡಬ್ಲ್ಯೂ ಎಚ್ ) ಹೇಳಿದ್ದರೂ, ಕೊರೋನಾವೈರಸ್ ಸೋಂಕಿನಲ್ಲಿ ಅಮೆರಿಕ ಮತ್ತು ಇಟಲಿಯ ಬಳಿಕ ಚೀನಾವನ್ನು ಮೀರಿಸಿದ ಮೂರನೇ ರಾಷ್ಟ್ರದ ಸ್ಥಾನಕ್ಕೆ ಸ್ಪೇನ್ ಏರಿತು. ಅಮೆರಿಕದಲ್ಲಿ ವರ್ಜಿನಿಯಾ, ಮೇರಿಲ್ಯಾಂಡ್ ರಾಜ್ಯಗಳಲ್ಲಿ ತುರ್ತುಪರಿಸ್ಥಿತಿ ಜಾರಿಗೊಳಿಸಿ ಜನರಿಗೆ ಮನೆಗಳ ಒಳಗೇ ಇರುವಂತೆ ಆಜ್ಞಾಪಿಸಲಾಯಿತು. ಬೆನ್ನಲ್ಲೇ ವಾಷಿಂಗ್ಟನ್ ನಗರದಲ್ಲೂ ತುರ್ತು ಪರಿಸ್ಥಿತಿ ಜಾರಿಗೊಳಿಸಲಾಯಿತು. ಒಂದು ಮಿಲಿಯ (೧೦ ಲಕ್ಷ) ಅಮೆರಿಕನ್ನರನ್ನು ಕೊರೋನಾವೈರಸ್ ಸೋಂಕು ಪತ್ತೆ ಸಲುವಾಗಿ ಪರೀಕ್ಷಿಸಲಾಗುತ್ತಿದ್ದು ಇದೊಂದು ಮೈಲಿಗಲ್ಲು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಹೇಳಿದರು. ಭಾರತದಲ್ಲಿ ದೆಹಲಿಯ ನಿಜಾಮುದ್ದೀನ್ ಪ್ರದೇಶದ ಮರ್ಕಜ್ ಮಸೀದಿಯಿಂದ ತಬ್ಲಿಘಿ ಸಮಾವೇಶದಲ್ಲಿ ಪಾಲ್ಗೊಂಡಿದ್ದ ೧೫೦೦ ಮಂದಿಯನ್ನು ಮಂಗಳವಾರ ಸ್ಥಳಾಂತರಗೊಳಿಸಲಾಗಿದ್ದು ಅವರ ಪೈಕಿ ೨೪ ಜನರು, ೪೧ ಮಂದಿ ವಿದೇಶೀ ಯಾತ್ರಿಕರು ಮತ್ತು ೨೨ ಮಂದಿ ವಿದೇಶೀ ಯಾತ್ರಿಕರ ನಿಕಟ ಬಂಧುಗಳು ಸೇರಿದಂತೆ ೯೭ ಪ್ರಕರಣಗಳನ್ನು ವಿಶ್ಲೇಷಿಸಲಾಗಿದ್ದು ಪರಿಸ್ಥಿತಿ ನಿಯಂತ್ರಣದಲ್ಲಿದೆ, ಯಾವುದೇ ಸಮುದಾಯ ವರ್ಗಾವಣೆ ಕಂಡು ಬಂದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು. (ವಿವರಗಳಿಗೆ ಇಲ್ಲಿ  ಕ್ಲಿಕ್  ಮಾಡಿರಿ)