Wednesday, November 21, 2018

ಇಂದಿನ ಇತಿಹಾಸ History Today ನವೆಂಬರ್ 21

ಇಂದಿನ ಇತಿಹಾಸ History Today ನವೆಂಬರ್ 21
2016: ನವದೆಹಲಿ: ಉತ್ತರ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಭಾರತದ ಅತ್ಯಂ ಉದ್ದದ ಎಕ್ಸ್ ಪ್ರೆಸ್ ಮಾರ್ಗದ ಉದ್ಘಾಟನಾ ಸಮಾರಂಭದಲ್ಲಿ ಈದಿನ ಭಾರತೀಯ ವಾಯಪಡೆಗೆ ಸೇರಿದ 6 ಯುದ್ಧ ವಿಮಾನಗಳೇ ಮುಖ್ಯ ಅತಿಥಿಗಳು. ಆರೂ ಯುದ್ಧ ವಿಮಾನಗಳು ಒಂದರ ಹಿಂದೆ ಒಂದರಂತೆ ಹೆದ್ದಾರಿಯಲ್ಲಿ ಇಳಿದವು. ವಾಯುಪಡೆಯ ಯುದ್ಧ ವಿಮಾನಗಳು ನೆಲ ಸ್ಪರ್ಶಿಸುವ ಮೂಲಕ ಉದ್ಘಾಟನೆಗೊಂಡ ಎಕ್ಸ್ ಪ್ರೆಸ್ ಮಾರ್ಗದ ಉದ್ಘಾಟನಾ ಸಮಾರಂಭದಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಜರಿದ್ದರು. ಅಖಿಲೇಶ್ ತಂದೆ, ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಲಖನೌದಿಂದ 50 ಕಿಮೀ ದೂರದ ಉನ್ನಾವ್ನಲ್ಲಿ ಆಗ್ರಾ-ಲಖನೌ ಎಕ್ಸ್ ಪ್ರೆಸ್ ಮಾರ್ಗವನ್ನು ಉದ್ಘಾಟಿಸಿದರು. 302 ಕಿಮೀ ಉದ್ದದ ಆಗ್ರಾ -ಲಖನೌ ಎಕ್ಸ್ ಪ್ರೆಸ್ ಮಾರ್ಗವನ್ನು 23 ತಿಂಗಳುಗಳ ದಾಖಲೆ ಅವಧಿಯಲ್ಲಿ ನಿರ್ಮಿಸಲಾಗಿದ್ದು, ಜೆಟ್ ಯುದ್ಧ ವಿಮಾನಗಳು ಇಳಿಯಲು ಅನುಕೂಲವಾಗುವಂತೆ 3.3 ಕಿಮೀ ಪ್ರದೇಶವನ್ನು ಹೊಂದಿದೆ. ಹಿಮ ಮತ್ತು ಅಪಘಾತಗಳನ್ನು ನಿಯಂತ್ರಿಸಲು ಇಲ್ಲಿ ಸ್ವಯಂಚಾಲಿತ ವ್ಯವಸ್ಥೆಯನ್ನು ರೂಪಿಸಲಾಗಿದೆ. ಸುಖೋಯ್ ಮತ್ತು ಮಿರಾಜ್ 2000 ಯುದ್ಧ ವಿಮಾನಗಳು ರಸ್ತೆಯೊಂದರ ಉದ್ಘಾಟನೆ ಸಲುವಾಗಿ ಇದೇ ಮೊತ್ತ ಮೊದಲ ಬಾರಿಗೆ ರನ್ವೇ ಬದಲು ಹೆದ್ದಾರಿಯಲ್ಲಿ ಇಳಿದವು. ಸುಖೋಯ್ಗೆ ಇಳಿಯುವ ಮೊದಲ ಪ್ರಯತ್ನಕ್ಕೆ ನಾಯಿಯೊಂದು ಅಡ್ಡಿಯಾಯಿತು. ಎರಡನೇ ಯತ್ನದಲ್ಲಿ ಹೆದ್ದಾರಿಯಲ್ಲಿ ಇಳಿಯುವಲ್ಲಿ ಅದು ಸಫಲತೆ ಸಾಧಿಸಿತು. ಆಗ್ರಾ - ಲಖನೌ ಎಕ್ಸ್ ಪ್ರೆಸ್ ಮಾರ್ಗವು ದೆಹಲಿ ಮತ್ತು ಉತ್ತರ ಪ್ರದೇಶದ ರಾಜಧಾನಿ ನಡುವಣ ಪಯಣದ ಅವಧಿಯನ್ನು 9 ಗಂಟೆಯಿಂದ ಸುಮಾರು 5 ಗಂಟೆಗಳಿಗೆ ಇಳಿಸಲಿದೆ.

 2016: ಪುಖರಾಯನ್/ ಕಾನ್ಪುರ/ ಲಖನೌ: ಕಾನ್ಪುರ ಸಮೀಪ ಸಂಭವಿಸಿದ ಇಂದೋರ್-ಪಟನಾ ಎಕ್ಸ್ಪ್ರೆಸ್ ರೈಲು ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 146ಕ್ಕೆ ಏರಿತು. ಹಳಿ ತಪ್ಪಿದ 14 ಬೋಗಿಗಳ ಎಡೆಯಲ್ಲಿ ಸಿಕ್ಕಿಹಾಕಿಕೊಂಡರವರ ರಕ್ಷಣೆಗಾಗಿ ರಕ್ಷಣಾ ತಂಡಗಳು ಕಾರ್ಯ ಮುಂದುವರೆಯಿತು. ಭಾರತದ ಇತಿಹಾಸದಲ್ಲೇ ಅತ್ಯಂತ ಭೀಕರವಾದ ಅಪಘಾತ ಸಂಭವಿಸಿದ ಸ್ಥಳದಲ್ಲಿ ರಾಷ್ಟ್ರೀಯ ವಿಕೋಪ ಸ್ಪಂದನಾ ಪಡೆ (ಎನ್ಡಿಆರ್ಎಫ್) ಸೇನಾ ಯೋಧರು, ಪೊಲೀಸ್ ಸಿಬ್ಬಂದಿಯ ತಂಡಗಳು ರಕ್ಷಣೆ ಹಾಗೂ ಪರಿಹಾರ ಕಾರ್ಯದಲ್ಲಿ ನಿರಂತರ ಮಗ್ನವಾದವು. ಅವಶೇಷಗಳ ಅಡಿಯಲ್ಲಿ ಇನ್ನಷ್ಟು ಶವಗಳು ಸಿಗುವ ಸಾಧ್ಯತೆ ಕ್ಷೀಣಿಸಿದ್ದರೂ, ಯಾವುದೇ ನಿರ್ಲಕ್ಷ್ಯ ಆಗದಂತೆ ನೋಡಿಕೊಳ್ಳುವ ಸಲುವಾಗಿ ನಾವು ರಕ್ಷಣಾ ಕಾರ್ಯಾಚರಣೆ ಮುಂದುವರೆಸಿದ್ದೇವೆ ಎಂದು ಎನ್ಡಿಆರ್ಎಫ್ ಸಿಬ್ಬಂದಿ ಹೇಳಿದರು. ಅಪಘಾತದಲ್ಲಿ ಪಾರಾಗಿರುವ 300 ಮಂದಿಯನ್ನು ವಿಶೇಷ ರೈಲುಗಾಡಿಯ ಮೂಲಕ ಈದಿನ ಬೆಳಗ್ಗೆ ಬಿಹಾರದ ರಾಜಧಾನಿಗೆ ಕಳುಹಿಸಿಕೊಡಲಾಯಿತು. ಉತ್ತರ ಪ್ರದೇಶದಲ್ಲಿ ಹಳಿತಪ್ಪಿದ ಇಂದೋರ್-ಪಟನಾ ಎಕ್ಸ್ಪ್ರಸ್ ರೈಲುಗಾಡಿ ಮಧ್ಯಪ್ರದೇಶದ ಇಂದೋರ್ ನಿಂದ ಪಟನಾ ಕಡೆಗೆ ಹೊರಟಿತ್ತು. ಹಿಂದಿನ ದಿನ ನಸುಕಿನ 3 ಗಂಟೆ ವೇಳೆಗೆ ಕಾನ್ಪುರ ಸಮೀಪದ ಹಳಿ ತಪ್ಪಿ ದುರಂತ ಸಂಭವಿಸಿತ್ತು.
2016: ನವದೆಹಲಿ: ಮುಂಬೈ ಕೋರ್ಟ್ನಿಂದ ಜಾಮೀನು ರಹಿತ ವಾರಂಟ್ಪಡೆದುಕೊಂಡಿರುವ ಕೇಂದ್ರೀಯ ತನಿಖಾ ದಳ(ಸಿಬಿಐ)ವು ಇಂಗ್ಲೆಂಡ್ನಿಂದ ಉದ್ಯಮಿ ವಿಜಯ್ಮಲ್ಯ ವಶಕ್ಕೆ ಪಡೆಯಲು ಮುಂದಾಯಿತು.  ರಾಜತಾಂತ್ರಿಕ ಮಾರ್ಗದ ಮೂಲಕ ಶೀಘ್ರವೇ ಯುಕೆ ಅಧಿಕಾರಿಗಳಿಗೆ ಮಲ್ಯ ವಶಕ್ಕೆ ಪಡೆದುಕೊಳ್ಳುವ ಕುರಿತು ಮನವಿ ಕಳುಹಿಸಲಾಗುತ್ತಿದೆ ಎಂದು ಸಿಬಿಐ ಮೂಲಗಳು ತಿಳಿಸಿದವು. ಮುಂಬೈನ ವಿಶೇಷ ಸಿಬಿಐ ಕೋರ್ಟ್ನಿಂದ ಜಾಮೀನು ರಹಿತ ವಾರಂಟ್ಪಡೆಯಲಾಗಿದೆ ಎಂದು ಮೂಲಗಳು ಹೇಳಿದವು.

2016: ಮದುರೈ
 ಎರಡು ಸಾವಿರ ರೂಪಾಯಿಯ ಹೊಸ ನೋಟುಗಳ ಮೇಲೆ ಮೌಲ್ಯವನ್ನು
ಯಾವ ಅಧಿಕಾರ ಬಳಸಿ ದೇವನಾಗರಿ ಅಂಕಿಗಳಲ್ಲಿ ಮುದ್ರಿಸಲಾಗಿದೆ ಎಂಬುದನ್ನು ಸ್ಪಷ್ಟ ಪಡಿಸುವಂತೆ ಮದ್ರಾಸ್ ಹೈಕೋರ್ಟ್ ಕೇಂದ್ರ ಹಣಕಾಸು ಸಚಿವಾಲಯಕ್ಕೆ ನೋಟಿಸ್ ಜಾರಿ ಮಾಡಿತು. ಕೆಪಿಟಿ ಗಣೇಶನ್ ದಾಖಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಾಲಯ ಸ್ಪಷ್ಟನೆ ಕೇಳಿತು. ಅರ್ಜಿದಾರರ ಪರ ವಕೀಲರು ದೇವನಾಗರಿ ಅಂಕಿಗಳಲ್ಲಿ ನೋಟಿನ ಮೌಲ್ಯವನ್ನು ಮುದ್ರಿಸಿರುವುದು ಸಂವಿಧಾನ ಬಾಹಿರ ಎಂದು ವಾದಿಸಿದ್ದರು. ಸಂವಿಧಾನ 342ನೇ ವಿಧಿಯಂತೆ ನೋಟುಗಳ ಮೇಲೆ  ಮುದ್ರಿಸಲಾಗುವ ಅಂಕಿಗಳು  ಅಂತಾರಾಷ್ಟ್ರೀಯಗೊಂಡಿರುವ ಭಾರತೀಯ ಅಂಕಿಗಳಷ್ಟೇ ಆಗಿರಬೇಕುದೇವನಾಗರಿ ಅಂಕಿಗಳನ್ನು ಮುದ್ರಿಸಬೇಕಾದರೆ ಅದನ್ನು ಸಂಸತ್ತು ಒಪ್ಪಬೇಕಾಗುತ್ತದೆಅಷ್ಟೇ ಅಲ್ಲ ಸಂವಿಧಾನ ಜಾರಿಗೆ ಬಂದ 15 ವರ್ಷಗಳ ಒಳಗೆ ರಾಷ್ಟ್ರಪತಿ  ಬಗೆಯ ಅಂಕಿಗಳನ್ನು ಬಳಸುವುದಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಿರಬೇಕಿತ್ತುಅಂಥದ್ದೇನೂ  ತನಕ ಆಗದೇ ಇರುವುದರಿಂದ ದೇವನಾಗರಿ ಅಂಕಿಗಳ ಬಳಕೆ ಅಸಾಂವಿಧಾನಿಕ ಎಂದು ಅರ್ಜಿದಾರರು ವಾದಿಸಿದ್ದರು.  1963ರಲ್ಲಿ ಜಾರಿಗೆ ಬಂದ ಅಧಿಕೃತ ಭಾಷೆಗಳ ಕಾಯ್ದೆಯಲ್ಲೂ ದೇವನಾಗರಿ ಅಂಕಿಗಳ ಬಳಕೆಗೆ ಅವಕಾಶ ಕಲ್ಪಿಸಲಾಗಿಲ್ಲಆದ್ದರಿಂದ ಈಗ ಮುದ್ರಿಸಲಾಗಿರುವ 2000 ರೂಪಾಯಿಗಳ ನೋಟುಗಳ ಮಾನ್ಯತೆಯನ್ನು ರದ್ದುಪಡಿಸಬೇಕು ಎಂದು ಅವರು ನ್ಯಾಯಾಲಯವನ್ನು ಕೋರಿದ್ದರು.  ಸರ್ಕಾರಿ ವಕೀಲರು ಕೇಂದ್ರ ಹಣಕಾಸು ಸಚಿವಾಲಯದಿಂದ  ಕುರಿತಂತೆ ಸ್ಪಷ್ಟನೆ ಒದಗಿಸಬೇಕು ಎಂದು ಆದೇಶಿಸಿದ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿತು.
2016: ಬಳ್ಳಾರಿ :  ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರಿಗೆ ಆದಾಯ ತೆರಿಗೆ ಇಲಾಖೆಯು  ನೊಟೀಸ್ಜಾರಿ ಮಾಡಿ ಪುತ್ರಿಯ ವಿವಾಹದ ಖರ್ಚಿನ ಕುರಿತು ವಿವರ ನೀಡುವಂತೆ ಸೂಚಿಸಿತು. ಆದಾಯ ತೆರಿಗೆ ಇಲಾಖೆ ಸಹಾಯಕ ನಿರ್ದೇಶಕ ಸಂಜೀವ ಕುಮಾರ ವರ್ಮ ನೋಟಿಸ್ನೀಡಿದ್ದು, ಪ್ರಶ್ನೆಗಳಿಗೆ ಉತ್ತರಿಸುವಂತೆ ಸೂಚಿಸಿದರು. ನೀಡಲಾಗಿರುವ ನೋಟಿಸ್ನಲ್ಲಿ ಒಟ್ಟು 16 ಪ್ರಶ್ನೆಗಳಿದ್ದು, ತಿಂಗಳ 25 ರೊಳಗೆ ವಿವರಣೆ ನೀಡಲು ಸೂಚಿಸಲಾಯಿತು. ನವೆಂಬರ್‌ 16ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರೆಡ್ಡಿ ಮಗಳ ಮದುವೆ ನೆರವೇರಿತ್ತು. ನೋಟಿಸ್ವಿವರ : * ಮದುವೆಗೆ ಮಾಡಿರುವ ಖರ್ಚಿನ ವಿವರ ತಿಳಿಸಬೇಕು. * ಮದುವೆಯಲ್ಲಿ ಬಳಸಲಾದ ಆಭರಣ,ಬಟ್ಟೆ, ಶಾಮಿಯಾನ , ಅಡುಗೆ, ಪೋಟೋ ವಿವರ ನೀಡಬೇಕು. * ವಸತಿ, ಸಾರಿಗೆ, ಧ್ವನಿಬೆಳಕು  ಭದ್ರತೆ, ಹೂವಿನ ಅಲಂಕಾರ, ಪೂಜಾರಿಗೆ ನೀಡಿದ ಖರ್ಚು ಸೇರಿದಂತೆ ವೈಭವಕ್ಕೆ ಬಳಸಿದ ವಿವರ ನೀಡುವುದು. * ಬ್ಯಾಂಕಿನ ವಹಿವಾಟು ಮತ್ತು ಅತಿಥಿಗಳಿಗೆ ನೀವು ನೀಡಿದ ಮತ್ತು ಪಡೆದ ಉಡುಗೊರೆ ವಿವರ ತಿಳಿಸಬೇಕು.
2016: ಕಾಬೂಲ್: ಆತ್ಮಾಹುತಿ ದಳದ ಬಾಂಬ್ ದಾಳಿಯಿಂದಾಗಿ 27 ಮಂದಿ ಸಾವನ್ನಪ್ಪಿ, 35 ಮಂದಿ ಗಾಯಗೊಂಡ ಘಟನೆ ಈದಿನ ಕಾಬೂಲಿನ ಶಿಯಾ ಮಸೀದಿಯಲ್ಲಿ ಘಟಿಸಿತು.  ಮಸೀದಿಯಲ್ಲಿ ನಡೆಯುತ್ತಿದ್ದ ಸಮಾರಂಭದ ಕೊಠಡಿ ಪ್ರವೇಶಿಸಿ ಭಯೋತ್ಪಾದಕರು ಈ ಕೃತ್ಯ ಎಸಗಿದರು ಎಂದು ಗೃಹಮಂತ್ರಿ ಸ್ಪಷ್ಟಪಡಿಸಿದರು.  ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಪರಾಧ ಪೊಲೀಸ್ ವಿಭಾಗದ ಮುಖ್ಯಸ್ಥ ಪ್ರೈದೂನ್ ಒಬೈಡಿ, ಘಟನೆಯಲ್ಲಿ 27 ಮಂದಿ ಸಾವನ್ನಪ್ಪಿದ್ದಾರೆ. 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆತ್ಮಾಹುತಿ ದಳದ ವ್ಯವಸ್ಥಿತವಾದ ದಾಳಿ ಇದಾಗಿದೆ. ಆದರೆ ಇನ್ನೂ ದಾಳಿಯ ಹೊಣೆಗಾರಿಕೆಯನ್ನು ಯಾವ ಸಂಘಟನೆಯೂ ಹೊತ್ತುಕೊಂಡಿಲ್ಲ ಎಂದು ತಿಳಿಸಿದರು.
2016: ನವದೆಹಲಿ: 1000 ಮತ್ತು 500 ರೂಪಾಯಿಗಳ ಹಳೆ ನೋಟು ರದ್ದತಿಯಿಂದ ಸಂಕಷ್ಟಕ್ಕೆ
ಸಿಲುಕಿರುವ ರೈತರು ಮತ್ತು ವ್ಯಾಪಾರಿಗಳಿಗೆ ಸರ್ಕಾರ ಹೊಸ ವ್ಯವಸ್ಥೆ ಘೋಷಿಸಿತು. ಮೂಲಕ ಹಳೆಯ 500 ಮುಖಬೆಲೆಯ ನೋಟು ನೀಡಿ ಅಗತ್ಯ ಬಿತ್ತನೆ ಬೀಜಗಳನ್ನು ರೈತರು ಪಡೆದುಕೊಳ್ಳಬಹುದು.  ಕೇಂದ್ರ ಅಥವಾ ರಾಜ್ಯ ಸರ್ಕಾರಕ್ಕೆ ಸೇರಿದ ಮಳಿಗೆ, ಘಟಕಗಳು, ರಾಷ್ಟ್ರೀಯ ಅಥವಾ ರಾಜ್ಯ ಬೀಜ ನಿಗಮಗಳು, ಕೃಷಿ ವಿಶ್ವವಿದ್ಯಾಲಯ ಹಾಗೂ ಭಾರತೀಯ ಕೃಷಿ ಸಂಶೋಧನಾ ಮಂಡಳಿಯಲ್ಲಿ ಸೂಕ್ತ ಗುರುತಿನ ಆಧಾರ ನೀಡಿ ರೈತರು ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಬೀಜ ಕೊಳ್ಳಬಹುದು ಎಂದು ಹಣಕಾಸು ಸಚಿವಾಲಯದ ಪ್ರಕಟಣೆ ತಿಳಿಸಿತು. ಹಳೆಯ 500 ರೂಪಾಯಿ ಮುಖಬೆಲೆಯ ನೋಟುಗಳನ್ನು ಬೀಜ ಕೊಳ್ಳಲು ಬಳಸುವ ಅವಕಾಶ ಕಲ್ಪಿಸಲಾಗಿದ್ದು, ಮೂಲಕ ರಬಿ ಕಾಲದ ಬೆಳೆ ಬೆಳೆಯಲು ರೈತರಿಗೆ ಅಗತ್ಯ ವ್ಯವಸ್ಥೆಗೆ ಸರ್ಕಾರ ಮುಂದಾಯಿತು. ಈ ಹಿಂದೆ ಪ್ರಕಟಿಸಿದಂತೆ ರೈತರು ತಮ್ಮ ಖಾತೆಯಿಂದ ವಾರಕ್ಕೆ ರೂ.25,000 ವರೆಗೂ ನಗದು ಪಡೆದುಕೊಳ್ಳಲು ಅವಕಾಶವಿದ್ದು, ಇದರೊಂದಿಗೆ ಬೆಳೆ ವಿಮೆ ಪ್ರೀಮಿಯಂ ಪಾವತಿ ಕೊನೆಯ ದಿನವನ್ನು 15 ದಿನ ಮುಂದೂಡಲಾಗಿದೆ. ಜೊತೆಗೆ ಎಪಿಎಂಸಿ ನೋಂದಾಯಿತ ವ್ಯಾಪಾರಿಗಳು ಖಾತೆಯಿಂದ ವಾರಕ್ಕೆ 50,000 ತೆಗೆಯಲು ಸರ್ಕಾರ ಅವಕಾಶ ಕಲ್ಪಿಸಿತು.
2016: ನವದೆಹಲಿ/ ಮುಂಬೈ: ಚಾಲ್ತಿ ಖಾತೆ (ಕರೆಂಟ್ ಅಕೌಂಟ್), ಓವರ್ ಡ್ರಾಫ್ಟ್, ಕ್ಯಾಷ್ ಕ್ರೆಡಿಟ್ ಖಾತೆ ಹೊಂದಿರುವವರಿಗೆ ನಗದು ಹಣ ಹಿಂಪಡೆಯುವ ಮಿತಿಯನ್ನು ವಾರಕ್ಕೆ 50,000 ರೂಪಾಯಿಗಳಿಗೆ ಏರಿಸಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿ ಐ) ಈದಿನ ಆದೇಶ ಹೊರಡಿಸಿತು. ಹಾಗೆಯೇ ರೈತರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಸೇರಿದ ಕೇಂದ್ರ, ಮಾರಾಟ ಮಳಿಗೆಗಳಲ್ಲಿ ಬೀಜ ಖರೀದಿಗೆ ಹಳೆಯ 500 ರೂಪಾಯಿಗಳ ನೋಟು ಬಳಸಲು ಅನುಮತಿ ನೀಡಲಾಯಿತು. ಕಳೆದ ಮೂರು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಸಮಯದಿಂದ ಚಾಲ್ತಿ ಖಾತೆ (ಕರೆಂಟ್ ಅಕೌಂಟ್), ಓವರ್ ಡ್ರಾಫ್, ಕ್ಯಾಷ್ ಕ್ರೆಡಿಟ್ ಖಾತೆ ಹೊಂದಿರುವವರಿಗೆ ವಾರಕ್ಕೆ ಹಣ ಹಿಂಪಡೆಯುವ ಮೊತ್ತವನ್ನು 50,000 ರೂಪಾಯಿಗಳಿಗೆ ಏರಿಸಲಾಯಿತು. ಆದರೆ ಇದು ವೈಯಕ್ತಿಕ ಓವರ್ ಡ್ರಾಫ್ಟ್ ಖಾತೆಗಳಿಗೆ ಅನ್ವಯವಾಗುವುದಿಲ್ಲ. ಇಂತಹ ಹಿಂಪಡೆಯುವ ಹಣವವನ್ನು 2000 ರೂಪಾಯಿಗಳ ಮುಖಬೆಲೆಯ ನೋಟಿನ ರೂಪದಲ್ಲಿ ನೀಡಲಾಗುವುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ತಿಳಿಸಿತು.

2016: ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಕೆಲವು ಪದಾಧಿಕಾರಿಗಳನ್ನು ಕಿತ್ತು ಹಾಕಬೇಕು ಎಂದು ಕೋರಿ ನ್ಯಾಯಮೂರ್ತಿ ರಾಜೇಂದ್ರ ಮಲ್ ಲೋಧಾ ಸಮಿತಿ ಸುಪ್ರೀಂಕೋರ್ಟಿಗೆ ಇನ್ನೊಂದು ವರದಿಯನ್ನು ಸಲ್ಲಿಸಿತು. ಕೇಂದ್ರದ ಮಾಜಿ ಗೃಹ ಕಾರ್ಯದರ್ಶಿ ಜಿ.ಕೆ. ಪಿಳ್ಳೈ ಅವರನ್ನು ವೀಕ್ಷಕರಾಗಿ ನೇಮಿಸಿ ಅವರಿಗೆ ಲೆಕ್ಕ ಪರಿಶೋಧಕರನ್ನು (ಆಡಿಟರ್) ನೇಮಿಸುವ ಅಧಿಕಾರ ನೀಡಬೇಕು ಎಂದು ಸಮಿತಿ ಶಿಫಾರಸು ಮಾಡಿತು. ಎಲ್ಲ ಅಗತ್ಯ ಸಚಿವಾಲಯ ಸಿಬ್ಬಂದಿ, ಸಹಾಯಕರು ಮತ್ತು ಸಂಭಾವನೆ ಯಾ ವೇತನವನ್ನು ಸಮಿತಿಯು ನಿರ್ಧರಿಸಬೇಕು ಎಂದೂ ವರದಿ ಶಿಫಾರಸು ಮಾಡಿತು. ಬಿಸಿಸಿಐ ಸುಧಾರಣೆ ಸಲುವಾಗಿ ಸುಪ್ರೀಂಕೋರ್ಟ್ ಸ್ವತಃ ನ್ಯಾಯಮೂರ್ತಿ ಲೋಧಾ ಸಮಿತಿಯನ್ನು ನೇಮಕ ಮಾಡಿ ವರದಿ ನೀಡುವಂತೆ ಸೂಚಿಸಿತ್ತು. ಸಮಿತಿ ಹಿಂದೆಯೇ ನೀಡಿದ್ದ ಶಿಫಾರಸುಗಳನ್ನು ಜಾರಿಗೆ ತರಲಾಗಿಲ್ಲ ಎಂದು ಸುಪ್ರೀಂಕೋರ್ಟ್ ಬಿಸಿಸಿಐಯನ್ನು ತರಾಟೆಗೂ ತೆಗೆದುಕೊಂಡಿತ್ತು.

2016: ಬೆಂಗಳೂರು/ ಬಳ್ಳಾರಿ: ಪುತ್ರಿ ಬ್ರಹ್ಮಣಿಯ ಅದ್ಧೂರಿ ಮದುವೆ ಪೂರೈಸಿದ ಬೆನ್ನಲ್ಲೇ ಈದಿನ ಮಾಜಿ ಸಚಿವ ಗಣಿ ಉದ್ಯಮಿ ಗಾಲಿ ಜನಾರ್ಧನ ರೆಡ್ಡಿ ಅವರ ಮನೆಗಳು ಮತ್ತು ಓಬಳಾಪುರಂ ಗಣಿಗಾರಿಕಾ ಕಂಪೆನಿ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. ಜನಾರ್ಧನ ರೆಡ್ಡಿ ಅವರ ಬಳ್ಳಾರಿಯಲ್ಲಿನ ಮನೆಗಳ ಮೇಲೆ ವಿಶೇಷ ತನಿಖಾ ತಂಡ (ಎಸ್ಐಟಿ) ದಾಳಿ ನಡೆಸಿದೆ ಎಂದು ಸುದ್ದಿ ಮೂಲಗಳು ತಿಳಿಸಿದವು.  ದಾಳಿಯಲ್ಲಿ ತಂಡವು ಹಲವಾರು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದು, ದಾಖಲೆಗಳಲ್ಲಿ ಕೆಲವು ರೆಡ್ಡಿ ವಿರುದ್ಧದ ಸಾಕ್ಷ್ಯಳನ್ನು ಒದಗಿಸುವ ಸಾಧ್ಯತೆ ಇದೆ ಎಂದು ಹೇಳಲಾಯಿತು. ಓಬಳಾಪುರಂ ಗಣಿಗಾರಿಕಾ ಕಂಪನಿಗೆ ಸಂಬಂಧಿಸಿದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ಧನ ರೆಡ್ಡಿ ಆರೋಪಿಯಾಗಿದ್ದಾರೆ. ಕೌಸಲ್ಯಾಕುಮಾರ್  ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ಜನಾರ್ಧನ ರೆಡ್ಡಿ ಅವರ ಬಳ್ಳಾರಿಯ ನಾಲ್ಕು ನಿವಾಸಗಳ ಮೇಲೆ ದಾಳಿ ಕಾರ್ಯಾಚರಣೆ ನಡೆಸಿತು.

2016:  ವಿಶಾಖಪಟ್ಟಣ: ಜಯಂತ್ ಯಾದವ್ (30ಕ್ಕೆ3), ಆರ್ ಅಶ್ವಿನ್ (52ಕ್ಕೆ3) ಸೇರಿದಂತೆ ಬೌಲರ್ಗಳ ಸಂಘಟನಾತ್ಮಕ ಬೌಲಿಂಗ್ ದಾಳಿಯ ನೆರವಿನಿಂದ ಭಾರತ ತಂಡ ಇಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ 246 ರನ್ಗಳಿಂದ ಗೆಲುವು ಸಾಧಿಸಿತು. ಮೂಲಕ ಭಾರತ 1- 0 ಅಂತರದಿಂದ ಸರಣಿ ಮುನ್ನಡೆ ಸಾಧಿಸಿತು. 4ನೇ ದಿನದ ಅಂತ್ಯಕ್ಕೆ 59.2 ಓವರ್ಗಳಲ್ಲಿ 2ವಿಕೆಟ್ ನಷ್ಟಕ್ಕೆ 87 ರನ್ಗಳಿಸಿದ್ದ ಇಂಗ್ಲೆಂಡ್ ಅಂತಿಮ ದಿನವಾದ ಈದಿನ ಒಟ್ಟು 97.3 ಓವರ್ಗಳಲ್ಲಿ 158 ರನ್ ಗಳಿಸುವಷ್ಟರಲ್ಲೇ ಭಾರತೀಯ ಬೌಲರ್ಗಳ ದಾಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಸೋಲೊಪ್ಪಿಕೊಂಡಿತುಸಂಕ್ಷಿಪ್ತ ಸ್ಕೋರ್: ಭಾರತ ಮೊದಲ ಇನಿಂಗ್ಸ್ 455ಕ್ಕೆ ಆಲೌಟ್. ಇಂಗ್ಲೆಂಡ್ ಮೊದಲ ಇನಿಂಗ್ಸ್ 255ಕ್ಕೆ ಆಲೌಟ್. ಭಾರತ ದ್ವಿತೀಯ ಇನಿಂಗ್ಸ್ 204ಕ್ಕೆ ಆಲೌಟ್.  ಇಂಗ್ಲೆಂಡ್ ದ್ವಿತೀಯ ಇನಿಂಗ್ಸ್ 158ಕ್ಕೆ ಆಲೌಟ್.

 
2008: 2000 ಇಸವಿಯಲ್ಲಿ ರಾಜ್ಯವನ್ನು ತಲ್ಲಣಗೊಳಿಸಿದ್ದ ಸರಣಿ ಇಗರ್ಜಿ (ಚರ್ಚ್) ಸ್ಫೋಟ ಪ್ರಕರಣದಲ್ಲಿ ಪಾಲ್ಗೊಂಡಿದ್ದ ದೀನ್‌ದಾರ್ ಅಂಜುಮನ್ ಸಂಘಟನೆಯ 23 ಮಂದಿ ವಿರುದ್ಧದ ಆರೋಪವು ವಿಶೇಷ ನ್ಯಾಯಾಲಯದಲ್ಲಿ ಸಾಬೀತಾಯಿತು. ಈ ಎಲ್ಲ ಆರೋಪಿಗಳ ಶಿಕ್ಷೆಯ ಪ್ರಮಾಣವನ್ನು ಮರುದಿನ ಪ್ರಕಟಿಸುವುದಾಗಿ ನ್ಯಾಯಾಧೀಶ ಎಸ್.ಎಂ. ಶಿವನಗೌಡರ್ ತಿಳಿಸಿದರು. ಇದೇ ವೇಳೆ ಪ್ರಕರಣದ ನಾಲ್ವರು ಆರೋಪಿಗಳನ್ನು ಖುಲಾಸೆಗೊಳಿಸಲಾಯಿತು. 2000ನೇ ಇಸವಿಯಲ್ಲಿ ಬೆಂಗಳೂರು, ಹುಬ್ಬಳ್ಳಿ ಮತ್ತು ಗುಲ್ಬರ್ಗಾದ ವಿವಿಧ ಇಗರ್ಜಿಗಳ (ಚರ್ಚ್‌) ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದರು. ಅದೇ ಸಾಲಿನ ಜುಲೈ 10ರಂದು ಬೆಂಗಳೂರಿನ ಜಗಜೀವನರಾಮ್ ನಗರದ ಸೇಂಟ್ ಪೀಟರ್ ಮತ್ತು ಪಾಲ್ ಇಗರ್ಜಿಯಲ್ಲಿ (ಚರ್ಚ್‌) ದುಷ್ಕರ್ಮಿಗಳು ಬಾಂಬ್ ಸ್ಫೋಟಿಸಿದ್ದರು. ಇದಕ್ಕೂ ಮೊದಲು ಹುಬ್ಬಳ್ಳಿಯ ಸೇಂಟ್‌ ಜಾನ್ ಲೂಥರನ್ಸ್ ಇಗರ್ಜಿ (ಚರ್ಚ್) ಮತ್ತು ಗುಲ್ಬರ್ಗದ ವಾಡಿಯಲ್ಲಿ ಕೂಡ ಸ್ಫೋಟ ನಡೆಸಿದ್ದರು. ರಾಜ್ಯದಲ್ಲಿ ಕೋಮು ಗಲಭೆ ಹುಟ್ಟು ಹಾಕುವ ಉದ್ದೇಶದಿಂದ ದುಷ್ಕರ್ಮಿಗಳು ಇಗರ್ಜಿಗಳ ಮೇಲೆ ಬಾಂಬ್ ದಾಳಿ ನಡೆಸಿದ್ದರು. ಬೆಂಗಳೂರಿನ ಜಗಜೀವನರಾಮ್ ನಗರದ ಇಗರ್ಜಿಯಲ್ಲಿ (ಚರ್ಚ್‌) ಬಾಂಬ್ ಇಟ್ಟ ದುಷ್ಕರ್ಮಿಗಳು ಮಾರುತಿ ವ್ಯಾನಿನಲ್ಲಿ ಮರಳುತ್ತಿದ್ದ ವೇಳೆ ವಾಹನದಲ್ಲಿದ್ದ ಬಾಂಬ್ ಮಾಗಡಿ ರಸ್ತೆಯ ಮಿನರ್ವ ಮಿಲ್ ಸಮೀಪ ಸ್ಫೋಟಗೊಂಡಿತ್ತು. ಕಾರಿನಲ್ಲಿದ್ದ ಮೂವರ ಪೈಕಿ ಇಬ್ಬರು ಮೃತರಾಗಿದ್ದರು. ಆದರೆ ವಾಹನ ಚಾಲನೆ ಮಾಡುತ್ತಿದ್ದ ಮಹಮ್ಮದ್ ಇಬ್ರಾಹಿಂ ಗಾಯಗೊಂಡಿದ್ದ. ಆತನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದಾಗ ಇಗರ್ಜಿ ಮೇಲಿನ ದಾಳಿಯ ಬಗ್ಗೆ ಮಾಹಿತಿ ನೀಡಿದ್ದ. ಈ ಘಟನೆ ಇಗರ್ಜಿ ಮೇಲಿನ ದಾಳಿಯ ತನಿಖೆಗೆ ಮಹತ್ವದ ತಿರುವು ನೀಡಿತ್ತು.

2008: ಕಳೆದ ಎರಡು ದಶಕಗಳಲ್ಲಿ ಜಮ್ಮು ಕಾಶ್ಮೀರದಾದ್ಯಂತ ನಡೆದ ಭಯೋತ್ಪಾದಕ ಕೃತ್ಯಗಳಿಗೆ 47 ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ, ಅವರಲ್ಲಿ 20 ಸಾವಿರ ಮಂದಿ ನಾಗರಿಕರಾಗಿದ್ದರೆ, ಉಗ್ರಗಾಮಿಗಳು ನಡೆಸಿದ ವಿವಿಧ ದಾಳಿಗಳಲ್ಲಿ 7 ಸಾವಿರ ಪೊಲೀಸ್ ಸಿಬ್ಬಂದಿ ಹಾಗೂ ವಿಶೇಷ ಪೊಲೀಸ್ ಅಧಿಕಾರಿಗಳು ಹತರಾಗಿದ್ದಾರೆ.  ಭದ್ರತಾ ಸಿಬ್ಬಂದಿ 20 ಸಾವಿರ ಉಗ್ರರನ್ನು ಕೊಂದು ಹಾಕಿದ್ದಾರೆ ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಎಸ್.ಎಸ್.ಕಪೂರ್ ಮಾಹಿತಿ ನೀಡಿದರು.

2008: ಮಾಜಿ ಕೇಂದ್ರ ಸಚಿವ ಹಾಗೂ ತಮಿಳುನಾಡು ಮುಖ್ಯಮಂತ್ರಿ ಎಂ.ಕರುಣಾನಿಧಿ ಸಂಬಂಧಿ ದಯಾನಿಧಿ ಮಾರನ್ ಡಿಎಂಕೆ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಚೆನ್ನೈಯಲ್ಲಿ ಘೋಷಿಸಿದರು. ತನ್ನ ರಾಜೀನಾಮೆ ಕುರಿತು ಪಕ್ಷದ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಕರುಣಾನಿಧಿಯವರಿಗೆ  ಬರೆದಿರುವ ಪತ್ರದಲ್ಲಿ 'ಒಂದೂವರೆ ವರ್ಷದ ಹಿಂದೆ ತನ್ನ ಹಾಗೂ ತನ್ನ ಸಹೋದರ ಕಲಾನಿಧಿ ಮಾರನ್ ಮೇಲೆ ನಡೆದ ಹಲ್ಲೆಯಿಂದ ಬೇಸತ್ತು ಪಕ್ಷ ತ್ಯಜಿಸುತ್ತಿರುವುದಾಗಿ' ವಿವರಿಸಿದರು. ತನ್ನ ರಾಜೀನಾಮೆ ಹಾಗೂ ಪಕ್ಷದ ಅಧ್ಯಕ್ಷರಿಗೆ ಬರೆದ ಪತ್ರವನ್ನು ಕಿಕ್ಕಿರಿದ ಪತ್ರಿಕಾ ಗೋಷ್ಠಿಯಲ್ಲಿ ದಯಾನಿಧಿ ಮಾರನ್ ಬಿಡುಗಡೆ ಮಾಡಿದರು

2008: ಖ್ಯಾತ ಪಾಪ್ ಗಾಯಕ ಮೈಕೆಲ್ ಜಾಕ್ಸನ್ ಇಸ್ಲಾಮ್ ಧರ್ಮಕ್ಕೆ ಮತಾಂತರ ಹೊಂದಿ ತಮ್ಮ ಹೆಸರನ್ನು ಮಿಕಾಯಿಲ್ ಎಂದು ಬದಲಾಯಿಸಿಕೊಂಡರು.  ಲಾಸ್‌ ಏಂಜಲೀಸಿನಲ್ಲಿನ ತಮ್ಮ ಭವ್ಯ ಕಟ್ಟಡದ ಗೃಹ ಪ್ರವೇಶವನ್ನು  'ಕುರಾನ್' ಧರ್ಮಗ್ರಂಥ ನಿಯಮಾನುಸಾರ ಮಾಡುವುದಾಗಿ ಪ್ರಮಾಣ ಅವರು ಪ್ರಮಾಣ ಮಾಡಿದರು ಎಂದು ವರದಿಗಳು ತಿಳಿಸಿದವು.

2008: ಮೇ ತಿಂಗಳಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಸಿಯಾಚಿನ್ ಪ್ರಾಂತ್ಯದಲ್ಲಿ ಸುಮಾರು 19 ಸಾವಿರ ಶಾಲಾ ಮಕ್ಕಳು ಮೃತರಾದರು ಎಂದು ಚೀನಾ ಇದೇ ಮೊದಲ ಬಾರಿಗೆ ಬಹಿರಂಗಪಡಿಸಿತು. ಅಂದು ನಡೆದ ದುರಂತದಲ್ಲಿ ಸುಮಾರು 90 ಸಾವಿರಕ್ಕೂ ಅಧಿಕ ಮಂದಿ ಸಾವನ್ನಪ್ಪಿದರು. ಕೆಲವು ಶಾಲೆಗಳು ಕುಸಿದಿದ್ದವು. ಆದರೆ ಎಷ್ಟು ಶಾಲಾ ಮಕ್ಕಳು ಮೃತರಾಗಿದ್ದರು ಎಂಬ ಸತ್ಯವನ್ನು ಸರ್ಕಾರ ಹೇಳಿರಲಿಲ್ಲ.

2007: ಪಶ್ಚಿಮ ಬಂಗಾಳದ ನಂದಿಗ್ರಾಮದಲ್ಲಿನ ಹಿಂಸಾಚಾರದ ಖಂಡನೆ ಹಾಗೂ ಬಾಂಗ್ಲಾದೇಶದ ವಿವಾದಾತ್ಮಕ ಬರಹಗಾರ್ತಿ ತಸ್ಲೀಮಾ ನಸ್ರೀನ್ ಅವರ ವೀಸಾವನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿ ಅಖಿಲ ಭಾರತ ಅಲ್ಪಸಂಖ್ಯಾತರ ವೇದಿಕೆಯ ಕರೆಯ ಮೇರೆಗೆ ನಡೆದ ಮೂರು ಗಂಟೆಗಳ ಬಂದ್ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆದು, ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಜವಾಬ್ದಾರಿಯನ್ನು ಸೇನೆಗೆ ವಹಿಸಲಾಯಿತು. ಇದರೊಂದಿಗೆ  `ನಂದಿಗ್ರಾಮ ಪ್ರಕರಣ'ವು ಹೊಸ ತಿರುವು ಪಡೆದುಕೊಂಡಿತು. ಕೇಂದ್ರ ಕೋಲ್ಕತ್ತದ ವಿವಿಧ ಕಡೆ ಹಿಂಸಾಚಾರವನ್ನು ತಡೆಗಟ್ಟುವುದಕ್ಕಾಗಿ ಐದು ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ರಾತ್ರಿ ಕರ್ಫ್ಯೂ ಹೇರಲಾಯಿತು. ಗಲಭೆಕೋರರು ನೂರಾರು ವಾಹನಗಳಿಗೆ ಬೆಂಕಿ ಹಚ್ಚಿದರು. ಸುಮಾರು 70ಕ್ಕೂ ಹೆಚ್ಚು ಮಂದಿ ಹಿಂಸಾತ್ಮಕ ಘಟನೆಗಳಲ್ಲಿ ಗಾಯಗೊಂಡರು.

2007: ಚಿತ್ರನಟ ವಿಜಯ್ ಮೇಲೆ ಹೇರಿದ್ದ ಒಂದು ವರ್ಷದ ನಿಷೇಧವನ್ನು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ತೆಗೆದುಹಾಕಿತು. `ಚಂಡ' ಚಿತ್ರದ ಡಬ್ಬಿಂಗ್ ವಿವಾದದ ಕಾರಣಕ್ಕೆ ವಿಜಯ್ ಮೇಲೆ ಈ ಮೊದಲು ಮಂಡಳಿ 1 ವರ್ಷ ನಿಷೇಧ ಹೇರಿತ್ತು. ನಂತರ ಹಿರಿಯ ನಟ ಅಂಬರೀಷ್ ಮಧ್ಯಸ್ಥಿಕೆಯಲ್ಲಿ ಇನ್ನೊಂದು ಸಭೆ ನಡೆಸಿ, ನವೆಂಬರ್ 7ರಂದು ಡಬ್ಬಿಂಗ್ ಮಾಡಿಕೊಡುವಂತೆ ವಿಜಯ್ ಅವರಿಗೆ ಸೂಚಿಸಲಾಗಿತ್ತು. ಆದರೆ ಆ ಹೊತ್ತಿಗೆ ಚಿತ್ರದ ಡಿಟಿಎಸ್ ಪ್ರಕ್ರಿಯೆ ಮುಗಿದಿದ್ದ ಕಾರಣ ವಿಜಯ್ ಕೈಲಿ ಡಬ್ಬಿಂಗ್ ಮಾಡಿಸುವುದು ಸಾಧ್ಯವಿಲ್ಲ ಎಂದು `ಚಂಡ' ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಎಸ್.ನಾರಾಯಣ್ ಹೇಳಿದ್ದರು. ಈದಿನ ಮಂಡಳಿಯ ಸಂಧಾನ ಸಮಿತಿ ಸಭೆ ನಡೆಸಿ, ವಿಜಯ್ ಮೇಲಿನ ನಿಷೇಧ ತೆಗೆದುಹಾಕಿತು. ವಿಜಯ್ ಗೆ ತಮ್ಮ ತಪ್ಪುಗಳ ಅರಿವಾಗಿರುವುದರಿಂದ ಈ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ಮಂಡಳಿಯ ಗೌರವ ಕಾರ್ಯದರ್ಶಿ ಕೆ.ವಿ. ವಿಜಯ್ ಕುಮಾರ್ ತಿಳಿಸಿದರು.

2007: ಮಲೇಷ್ಯಾದಲ್ಲಿರುವ ಬಡ ಭಾರತೀಯರ ದುಃಸ್ಥಿತಿಗೆ ಬ್ರಿಟಿಷ್ ವಸಾಹತುಶಾಹಿ ಆಡಳಿತವೇ ಕಾರಣ, ಅಂಥ ಭಾರತೀಯರ ಸಂಕಷ್ಟಗಳಿಗೆ 4 ಸಾವಿರ ಶತಕೋಟಿ ಡಾಲರ್ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕ್ವಾಲಾಲಂಪುರದ ಭಾರತೀಯ ಸಮುದಾಯಕ್ಕೆ ಸೇರಿದ ವೈತ ಮೂರ್ತಿ ಎಂಬ ವ್ಯಕ್ತಿ ಬ್ರಿಟಿಷರ ವಿರುದ್ಧ ಹೋರಾಡಲು ಮುಂದಾದರು. ಮಲೇಷ್ಯಾ ಸರ್ಕಾರ ಇದು ಆಧಾರರಹಿತ ಪ್ರಕರಣವೆಂದು ಆತನ ಆರೋಪಗಳನ್ನು ತಳ್ಳಿಹಾಕಿತು. ಆದರೆ ಪಟ್ಟು ಬಿಡದ, ವೃತ್ತಿಯಲ್ಲಿ ವಕೀಲರಾಗಿರುವ ವೈತ ಮೂರ್ತಿ, ಈ ಮೊದಲು ಬ್ರಿಟಿಷ್ ವಸಾಹತುಶಾಹಿ ಆಡಳಿತದಲ್ಲಿ ಇಲ್ಲಿನ ಬಡ ಭಾರತೀಯರು ಶೋಷಣೆ ಒಳಪಟ್ಟಿದ್ದರು, ಈಗ ಸ್ವತಂತ್ರ ಮಲೇಷ್ಯಾದಲ್ಲಿ ಮಲೇಷ್ಯ ಮೂಲದ ಜನರಿಂದ ಶೋಷಣೆಗೆ ಒಳಪಟ್ಟಿದ್ದಾರೆ ಎಂದು ಆಪಾದಿಸಿದರು. ಪರಿಹಾರಕ್ಕಾಗಿ ಬ್ರಿಟನ್ ರಾಣಿಯವರಿಗೂ ಪ್ರಕರಣವನ್ನು ಒಯ್ಯುವುದಾಗಿ ಮೂರ್ತಿ ಪ್ರಕಟಿಸಿದರು.

2007: ಬ್ರಿಟನ್ನಿನ ಬ್ರಿಸ್ಟಲ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಈದಿನ ಡೈನೊಸಾರಾಸ್ಸಿಗಿಂತಲೂ ಮುಂಚಿನ ಸಮುದ್ರ ಚೇಳಿನ ಪಳೆಯುಳಿಕೆಯ ಚಿತ್ರವನ್ನು ಬಿಡುಗಡೆ ಮಾಡಿದರು. ಇದು 390 ಮಿಲಿಯನ್ ವರ್ಷಗಳಷ್ಟು ಹಿಂದೆ ಅಸ್ತಿತ್ವದಲ್ಲಿತ್ತು ಎನ್ನಲಾಗಿದೆ. ಈ ಚೇಳಿನ ಕೊಂಡಿ 2.5 ಮೀಟರಿನಷ್ಟು ಉದ್ದವಾಗಿತ್ತು ಎಂಬುದು ವಿಜ್ಞಾನಿಗಳ ಹೇಳಿಕೆ.

2006: ಕಾಂಚೀಪುರಂ ಜಿಲ್ಲೆಯ ವಲ್ಲಕೊಟ್ಟಾಯಿಯಲ್ಲಿನ ಮುರುಘಾ ದೇವಸ್ಥಾನದ ತಳಭಾಗದಲ್ಲಿ ಭೂಗರ್ಭ ಸುರಂಗವೊಂದು ಪತ್ತೆಯಾಗಿದ್ದು ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾ ಇಲಾಖೆ (ಎಎಸ್ ಐ) ಅದರ ಅಧ್ಯಯನ ನಡೆಸುತ್ತಿರುವುದಾಗಿ ಇಲಾಖೆಯ ಸಂಶೋಧನಾ ವಿಶ್ಲೇಷಕ ಜಿ. ತಿರುಮೂರ್ತಿ ಪ್ರಕಟಿಸಿದರು. ದೇವಾಲಯವನ್ನು 1200 ವರ್ಷಗಳಷ್ಟು ಹಿಂದೆಯೇ ಮುಚ್ಚಲಾಗಿತ್ತು. ಯಾವುದೇ ದೇವಸ್ಥಾನದ ತಳಭಾಗದಲ್ಲಿ ಇಂತಹ ಸುರಂಗ ಇರುವುದು ಈವರೆಗೆ ಬೆಳಕಿಗೆ ಬಂದಿಲ್ಲ. ದೇವಾಲಯದ ಅಧಿಕಾರಿಗಳು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಂಡಿರುವ ಜೀರ್ಣೋದ್ಧಾರ ಕಾರ್ಯದ ಅಂಗವಾಗಿ ಮಂಟಪ ನಿರ್ಮಿಸಲು ಅಗೆಯುತ್ತಿದ್ದಾಗ ಈ ಸುರಂಗ ಪತ್ತೆಯಾಯಿತು. ಅರ್ಚಕರಿಗೆ ದೇವಸ್ಥಾನದ ಗರ್ಭಗುಡಿಗೆ ಕ್ಷಿಪ್ರವಾಗಿ ತಲುಪಲು ಸಾಧ್ಯವಾಗುವಂತೆ ಈ ಸುರಂಗವನ್ನು ನಿರ್ಮಿಸಲಾಗಿದೆ.

2006: ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಹಾಗೂ ಉಭಯಕಡೆಗಳಲ್ಲಿ ಬಂಡವಾಳ ಹರಿಯುವಿಕೆಗೆ ಪ್ರೋತ್ಸಾಹ ನೀಡುವ ಸುಮಾರು 13 ಒಪ್ಪಂದಗಳಿಗೆ ಭಾರತ ಮತ್ತು ಚೀನಾ ನವದೆಹಲಿಯಲ್ಲಿ ಸಹಿ ಹಾಕಿದವು. ಇದರ ಪ್ರಕಾರ 2010ರ ವೇಳೆಗೆ ದ್ವಿಪಕ್ಷೀಯ ವ್ಯಾಪಾರ ವಹಿವಾಟನ್ನು ದುಪ್ಪಟ್ಟುಗೊಳಿಸಿ, 4000 ಕೋಟಿ ಡಾಲರುಗಳಿಗೆ ಏರಿಸಿಕೊಳ್ಳಲು ತೀರ್ಮಾನಿಸಿದವು. ಈ ಕುರಿತ ಜಂಟಿ ಘೋಷಣೆಗೆ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಚೀನಾದ ಅಧ್ಯಕ್ಷ ಹು ಜಿಂಟಾವೊ ಸಹಿ ಹಾಕಿದರು.

2006: ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ನಾಯಕ ಬ್ರಯನ್ ಲಾರಾ ಅವರು ಮುಲ್ತಾನಿನಲ್ಲಿ ಪಾಕಿಸ್ಥಾನದ ವಿರುದ್ಧ ನಡೆದ ಎರಡನೇ ಕ್ರಿಕೆಟ್ ಟೆಸ್ಟ್ ಪಂದ್ಯದಲ್ಲಿ 34ನೇ ಶತಕ ದಾಖಲಿಸಿ, ಭಾರತದ ಸುನಿಲ್ ಗಾವಸ್ಕರ್ ಅವರ 34 ಶತಕಗಳ ದಾಖಲೆಯನ್ನು ಸರಿಗಟ್ಟಿದರು. ಸಚಿನ್ ತೆಂಡೂಲ್ಕರ್ ಮಾತ್ರ 35 ಶತಕಗಳೊಂದಿಗೆ ಲಾರಾ - ಸುನಿಲ್ ಗಾವಸ್ಕರ್ ಅವರಿಗಿಂತ ಮುಂದಿದ್ದಾರೆ. ಪಾಕ್ ವಿರುದ್ಧ ಅವರು ಬಾರಿಸಿದ  ಸತತ 4ನೇ ಶತಕ ಇದಾಗಿದ್ದು, ಒಂದೇ ಅವಧಿಯಲ್ಲಿ ಶತಕ ಗಳಿಸಿದ ಐದನೇ ಆಟಗಾರ ಎಂಬ ಹೆಗ್ಗಳಿಕೆಯೂ ಲಾರಾಗೆ ದಕ್ಕಿತು. ಈವರೆಗೆ ಲಾರಾ ಟೆಸ್ಟ್ ಕ್ರಿಕೆಟಿನಲ್ಲಿ ಗಳಿಸಿದ ಒಟ್ಟು ರನ್ನುಗಳ ಸಂಖ್ಯೆ 11,884.

2005: `ವಿಕ್ಟೋರಿಯಾ ಕ್ರಾಸ್' ಗೌರವ ಪಡೆದ 40 ಭಾರತೀಯರ ಪೈಕಿ ಈವರೆಗೆ ಜೀವಿಸಿದ್ದ ಏಕೈಕ ವ್ಯಕ್ತಿ ಸುಬೇದಾರ್ ಮೇಜರ್ ಹಾಗೂ ಗೌರವ ಕ್ಯಾಪ್ಟನ್ ಉಮ್ರಾವೋ ಸಿಂಗ್ (85) ನಿಧನರಾದರು. ಹರಿಯಾಣದ ರೋಹ್ಟಕ್ ನಿವಾಸಿ ಸಿಂಗ್ 1944ರ ಡಿಸೆಂಬರಿನಲ್ಲಿ ಬರ್ಮಾದ (ಈಗ ಮ್ಯಾನ್ಮಾರ್) ಕಲದನ್ ಕಣಿವೆಯಲ್ಲಿ ಜಪಾನೀಯರ ನಾಲ್ಕು ಆಕ್ರಮಣಗಳನ್ನು ಹಿಮ್ಮೆಟ್ಟಿಸಿದ್ದರು. ಗಾಯಗೊಂಡು ಬೀಳುವ ಮುನ್ನ 10 ಜಪಾನ್ ಸೈನಿಕರನ್ನು ನೆಲಕ್ಕೆ ಉರುಳಿಸಿದ್ದರು. ಇದಕ್ಕಾಗಿ ಬ್ರಿಟಿಷರು ಅವರಿಗೆ ಅತ್ಯುಚ್ಚ ಪರಾಕ್ರಮ ಪ್ರಶಸ್ತಿ ನೀಡಿದ್ದರು.

2005: ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂಬ ವಿವಾದಾಸ್ಪದ ನಿರ್ಣಯ ಕೈಗೊಂಡಿದ್ದ ಬೆಳಗಾವಿ ಮಹಾನಗರ ಪಾಲಿಕೆ ಆಡಳಿತವನ್ನು ರಾಜ್ಯ ಸರ್ಕಾರ ರದ್ದುಗೊಳಿಸಿತು.

2005: ರತ್ನಸಿರಿ ವಿಕ್ರಮ ನಾಯಕೆ ಶ್ರೀಲಂಕಾದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಹಿಂದೆ 2000 ಹಾಗೂ 2001ರಲ್ಲಿ ರತ್ನಸಿರಿ ಪ್ರಧಾನಿಯಾಗಿದ್ದರು.

1985: ಮೈಕ್ರೋಸಾಫ್ಟ್ ಕಾರ್ಪೊರೇಷನ್ `ವಿಂಡೋಸ್ 1.03'ನ್ನು ಬಿಡುಗಡೆ ಮಾಡಿತು. 80 ಮಾನವ ವರ್ಷಗಳ ಯತ್ನದ ಬಳಿಕ ಬಿಡುಗಡೆಯಾದ ಇದು `ವಿಂಡೋಸ್' ನ ಮೊತ್ತ ಮೊದಲ ಆವೃತ್ತಿ. ಮೈಕ್ರೋಸಾಫ್ಟ್ ಇತಿಹಾಸದಲ್ಲಿ ಇದು ಅತ್ಯಂತ ಸುದೀರ್ಘ ಅಭಿವೃದ್ಧಿ. ಇದನ್ನು ನಿರ್ಮಿಸಲು 1.10 ಲಕ್ಷ ಪ್ರೊಗ್ರಾಮಿಂಗ್ ಗಂಟೆಗಳು ಬೇಕಾದವು.

1970: ಭಾರತೀಯ ವಿಜ್ಞಾನಿ ಸರ್ ಚಂದ್ರಶೇಖರ ವೆಂಕಟ ರಾಮನ್ (ಸಿವಿ ರಾಮನ್)  ಅವರು ತಮ್ಮ 82ನೇ ವಯಸ್ಸಿನಲ್ಲಿ ನಿಧನರಾದರು. ಬೆಳಕಿನ ವರ್ತನೆ ಬಗ್ಗೆ ನಡೆಸಿದ ಸಂಶೋಧನೆಗಾಗಿ 1930ರಲ್ಲಿ ಅವರು ಭೌತ ವಿಜ್ಞಾನಕ್ಕೆ ನೀಡಲಾಗುವ `ನೊಬೆಲ್ ಪ್ರಶಸ್ತಿ'ಯನ್ನು ಪಡೆದಿದ್ದರು. ಅವರ ಈ ಸಂಶೋಧನೆ `ರಾಮನ್ ಎಫೆಕ್ಟ್' ಎಂದೇ ಖ್ಯಾತಿ ಪಡೆದಿದೆ.

1964: ನ್ಯೂಯಾರ್ಕಿನ ವೆರ್ರಾಂಝಾನೊ ನ್ಯಾರೋಸ್ ಸೇತುವೆ ಸಾರ್ವಜನಿಕ ಸಂಚಾರಕ್ಕಾಗಿ ತೆರವುಗೊಂಡಿತು. ಹಂಬರ್ ಸೇತುವೆ ಆಗುವವರೆಗೆ ಈ ಸೇತುವೆಯೇ ಜಗತ್ತಿನ ಅತ್ಯಂತ ದೊಡ್ಡ `ಏಕ ಕಮಾನಿನ' (ಸಿಂಗಲ್ ಸ್ಪಾನ್) (Single span bridge) ಸೇತುವೆ ಆಗಿತ್ತು.

1963: ಥುಂಬಾ ಉಡಾವಣಾ ಕೇಂದ್ರದಿಂದ ಮೊತ್ತ ಮೊದಲ `ನಿರ್ದೇಶನ ರಹಿತ ರಾಕೆಟ್' (ಅನ್ ಗೈಡೆಡ್ ರಾಕೆಟ್) ಉಡ್ಡಯನದೊಂದಿಗೆ ಭಾರತದ ಬಾಹ್ಯಾಕಾಶ ಕಾರ್ಯಕ್ರಮ ಆರಂಭಗೊಂಡಿತು.

1950: ಸಾಹಿತಿ ಚಂದ್ರಕಲಾ ನಂದಾವರ ಜನನ.

1947: `ಜೈಹಿಂದ್' ಬರಹ ಹೊತ್ತ ಸ್ವತಂತ್ರ ಭಾರತದ ಮೊತ್ತ ಮೊದಲ ಅಂಚೆ ಚೀಟಿ ಬಿಡುಗಡೆಗೊಂಡಿತು.

1928: ಸಾಹಿತಿ ಎಸ್. ನಾಗರಾಜ್ ಜನನ.

1909: ಭಾರತದ ಖ್ಯಾತ ಇಂಗ್ಲಿಷ್ ಕಾದಂಬರಿಕಾರ ಹಾಗೂ ಸಣ್ಣ ಕಥೆಗಾರ ರಾಜಾ ರಾವ್ ಹುಟ್ಟಿದ ದಿನ.

1877: ಸಂಶೋಧಕ ಥಾಮಸ್ ಆಲ್ವ ಎಡಿಸನ್ ಅವರು ಫೋನೋಗ್ರಾಫ್ ಸಂಶೋಧನೆಯನ್ನು ಪ್ರಕಟಿಸಿದರು.

1854: ಹೊಸಗನ್ನಡದ ಆರಂಭಿಕ ಕಾಲದ ಸಾಹಿತಿ ಎಂ.ಎಸ್. ಪುಟ್ಟಣ್ಣ (ಲಕ್ಷ್ಮೀನರಸಿಂಹ ಶಾಸ್ತ್ರಿ) (21-11-1854ರಿಂದ 11-4-1930ರವರೆಗೆ) ಅವರು ಸೂರ್ಯನಾರಾಯಣ ಭಟ್ಟ- ಲಕ್ಷ್ಮಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು.

1785: ಅಮೆರಿಕದ ಸೇನಾ ಸರ್ಜನ್ ವಿಲಿಯಮ್ ಬಿಯಾಮೊಂಟ್ (1785-1853) ಹುಟ್ಟಿದ ದಿನ. ಮಾನವನ ಹೊಟ್ಟೆಯ ಒಳಗೆ ಪಚನಕ್ರಿಯೆ ಹೇಗೆ ನಡೆಯುತ್ತದೆ ಎಂದು ಮೊತ್ತ ಮೊದಲಿಗೆ ಅಧ್ಯಯನ ಮಾಡಿದ ಸಂಶೋಧಕ ಈತ.

(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment