ಇಂದಿನ ಇತಿಹಾಸ History Today ನವೆಂಬರ್ 18
2018: ಕೋಚಿ/ ಶಬರಿಮಲೈ: ಶಬರಿಮಲೈಯಲ್ಲಿ ಅಯ್ಯಪ್ಪಸ್ವಾಮಿ ದೇವಾಲಯದ ಕಡೆಗೆ ಹಿಂದಿನ ರಾತ್ರಿ ಹೊರಟಿದ್ದ ಬಿಜೆಪಿ ಕೇರಳ ಘಟಕದ ಪ್ರಧಾನ ಕಾರ್ಯದರ್ಶಿ ಕೆ. ಸುರೇಂದ್ರನ್ ಅವರನ್ನು ಬಂಧಿಸಲಾಗಿದ್ದು, ಪಟ್ಟಣಂತಿಟ್ಟ ಜಿಲ್ಲಾ ಮ್ಯಾಜಿಸ್ಟ್ರೇಟರು ಸುರೇಂದ್ರನ್ ಅವರಿಗೆ ಈದಿನ ೧೪ ದಿನಗಳ ನ್ಯಾಯಾಂಗ ಕಸ್ಟಡಿ ವಿಧಿಸಿದರು. ಸುರೇಂದ್ರನ್ ಬಂಧನ ವಿರುದ್ಧ ಬಿಜೆಪಿ ರಾಜ್ಯವ್ಯಾಪಿ ಹೆದ್ದಾರಿ ತಡೆ ನಡೆಸಿತು. ಬಿಜೆಪಿ ನಾಯಕರ ಬಂಧನ ಹಾಗೂ ಪ್ರತಿಭಟನೆ ಹೊರತಾಗಿ ಶಬರಿಮಲೈಯಲ್ಲಿ ಬೇರಾವುದೇ ರೀತಿಯ ಘಟನೆಗಳು ಘಟಿಸಲಿಲ್ಲ. ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಪಿ.ಎಸ್. ಶ್ರೀಧರನ್ ಪಿಳ್ಳೈ ಅವರು ’ಕೇರಳದ ಸಿಪಿಐ(ಎಂ) ನೇತೃತ್ವದ ಸರ್ಕಾರವು ಅಯ್ಯಪ್ಪ ಸ್ವಾಮಿ ದೇವಾಲಯದ ಅನನತ್ಯೆಯನ್ನು ನಾಶ ಪಡಿಸುವ ಸಲುವಾಗಿ ಶಬರಿಮಲೈಯನ್ನು ವಿವಾದದ ಕೇಂದ್ರವನ್ನಾಗಿ ಮಾಡುತ್ತಿದೆ’ ಎಂದು ಆಪಾದಿಸಿದರು. ಶಾಂತಿಯುತವಾಗಿ ಪ್ರತಿಭಟಿಸುತ್ತಿರುವ ಭಕ್ತರ ವಿರುದ್ಧದ ಪೊಲೀಸ್ ಕ್ರಮಗಳನ್ನು ಖಂಡಿಸಿದ ಅವರು ’ಭಾರತೀಯ ಜನತಾ ಪಕ್ಷವು (ಬಿಜೆಪಿ) ಬೆಟ್ಟದ ದೇಗುಲವನ್ನು ನಾಸ್ತಿಕವಾದಿಗಳ ರಹಸ್ಯ ಕಾರ್ಯಸೂಚಿಯಿಂದ ರಕ್ಷಿಸಲು ಭಕ್ತರು ನಡೆಸುತ್ತಿರುವ ಪ್ರತಿಭಟನೆಗಳಿಗೆ ಸಾಧ್ಯವಿರುವ ಎಲ್ಲ ನೆರವನ್ನೂ ಒದಗಿಸುವುದು’ ಎಂದು ಹೇಳಿದರು. ಬಿಜೆಪಿ ಮತ್ತು ಸಂಘ ಪರಿವಾರವು, ಎಲ್ಲ ವಯಸ್ಸಿನ ಮಹಿಳೆಯರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ ಸುಪ್ರೀಂಕೋರ್ಟ್ ತೀರ್ಪನ್ನು ಅವಸರ ಅವಸರವಾಗಿ ಜಾರಿಗೊಳಿಸಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ನಡೆಯುತ್ತಿರುವ ಚಳವಳಿಯನ್ನು ದೇಶದ ಇತರ ಭಾಗಗಳಿಗೂ ವಿಸ್ತರಿಸಲಿದೆ ಎಂದು ನುಡಿದ ಅವರು ’ಶಬರಿಮಲೈಗೆ ಸಂಬಂಧಿಸಿದಂತೆ ಕೇರಳದಲ್ಲಿ ನಡೆಯುತ್ತಿರುವುದು ಭಕ್ತರು ಮತ್ತು ನಾಸ್ತಿಕರ ನಡುವಣ ಹೋರಾಟ’ ಎಂದು ಹೇಳಿದರು.ಋತುಮತಿ ವಯಸ್ಸಿನ ಯಾರೇ ಮಹಿಳೆ ದೇವಾಲಯ ಪ್ರವೇಶಿಸಲು ಯತ್ನಿಸಿದರೆ ಅದನ್ನು ಪ್ರತಿಭಟಿಸುವ ಭಕ್ತರ ಜೊತೆಗೆ ಸೇರುವ ಕಾಯಕವನ್ನು ಬಿಜೆಪಿ ಕಾರ್ಯಕರ್ತರು ಮುಂದುವರೆಸುವರು. ಇಂತಹ ಮಹಿಳೆಯರನ್ನು ತಡೆಗಟ್ಟುವ ಮೂಲಕ ಭಕ್ತರು ಈವರೆಗೆ ಪರಂಪರೆಯನ್ನು ಮುರಿಯದಂತೆ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಅವರು ನುಡಿದರು.ಸೆಪ್ಟೆಂಬರ್ ೨೮ರ ಸುಪ್ರೀಂಕೋರ್ಟ್ ತೀರ್ಪಿನ ವಿರುದ್ಧ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಲು ತಿರುವಾಂಕೂರು ದೇವಸ್ವಂ ಮಂಡಳಿಗೆ (ಟಿಡಿಬಿ) ಕೇರಳ ಸರ್ಕಾರ ಅನುಮತಿ ನೀಡುತ್ತಿಲ್ಲ ಎಂದು ಅವರು ದೂರಿದರು. ಬಿಜೆಪಿ ಹೆದ್ದಾರಿ ತಡೆ: ಶಬರಿಮಲೈಗೆ ಸಾಗುವ ೨೬ ಕಿಮೀ ದೂರದ ಮಾರ್ಗದಲ್ಲಿ ಅಂತಿಮ ಚೆಕ್ ಪಾಯಿಂಟಿನಲ್ಲಿ ದೇವಾಲಯದ ಕಡೆಗೆ ಹೊರಟಿದ್ದ ಬಿಜೆಪಿ ನಾಯಕ ಸುರೇಂದ್ರನ್ ಮತ್ತು ಅವರ ಜೊತೆಗಿದ್ದ ನಾಲ್ಕು ಮಂದಿ ಸಹಚರರನ್ನು ಪೊಲೀಸರು ಶನಿವಾರ ತಡೆದಾಗ ಸುಮಾರು ೨೦ ನಿಮಿಷ ಕಾಲ ಪ್ರಕ್ಷಬ್ಧ ಸ್ಥಿತಿ ಉಂಟಾಗಿತ್ತು. ಪೊಲೀಸರು ಅವರನ್ನು ಪಹರೆ ವಾಹನದಲ್ಲಿ ಕೂರಿಸಿ ಚಿತ್ತಾರ ಪೊಲೀಸ್ ಠಾಣೆಗೆ ಒಯ್ದಿದ್ದರು. ಅಲ್ಲಿ ಪೊಲೀಸರ ಕರ್ತವ್ಯ ನಿರ್ವಹಣೆಗೆ ಅಡ್ಡಿ ಪಡಿಸಿದ ಆಪಾದನೆಯನ್ನು ಅವರ ವಿರುದ್ಧ ಹೊರಿಸಲಾಗಿತ್ತು. ಸುರೇಂದ್ರನ್ ಅವರು ತಾವು ಯಾತ್ರಿಯಾಗಿ ಬಂದಿದ್ದು ಪ್ರತಿಭಟನಾಕಾರನಾಗಿ ಅಲ್ಲ ಎಂದು ಪ್ರತಿಪಾದಿಸಿದ್ದರು. ಪೊಲೀಸರು ಅವರ ವಿರುದ್ಧ ನೀಲಕ್ಕಲ್ನಲ್ಲಿ ನಿಷೇಧಾಜ್ಞೆ ಉಲ್ಲಂಘಿಸಿದ ಆರೋಪ ಹೊರಿಸಿ ಪ್ರಕರಣ ದಾಖಲಿಸಲಾಗಿತ್ತು. ಈದಿನ ಬೆಳಗ್ಗೆ ಸುರೇಂದ್ರನ್ ಅವರನ್ನು ಪಟ್ಟಣಂತಿಟ್ಟ ಜಿಲ್ಲಾ ಮ್ಯಾಜಿಸ್ಟ್ರೇಟ್ ಮನೆಯಲ್ಲಿ ಹಾಜರು ಪಡಿಸಲಾಗಿತ್ತು. ಮ್ಯಾಜಿಸ್ಟ್ರೇಟ್ ಮನೆಯ ಹೊರಗೆ ಜಮಾಯಿಸಿದ್ದ ಬೆಂಬಲಿಗರು ಅವರಿಗೆ ಬೆಂಬಲ ವ್ಯಕ್ತ ಪಡಿಸಿದ್ದರು. ಪೊಲೀಸರು ರಾತ್ರಿ ತಮಗೆ ಶೌಚ ಸವಲತ್ತು ಸೇರಿದಂತೆ ಮೂಲಭೂತ ಅಗತ್ಯಗಳನ್ನೂ ನಿರಾಕರಿಸಿದರು ಎಂದು ಬಿಜೆಪಿ ನಾಯಕ ದೂರಿದ್ದರು. ಆದರೆ ಪೊಲೀಸರು ಅವರ ಆರೋಪಗಳನ್ನು ನಿರಾಕರಿಸಿದ್ದರು. ಸುರೇಂದ್ರನ್ ಬಂಧನದ ವಿರುದ್ಧ ರಾಜ್ಯವ್ಯಾಪಿ ಹೆದ್ದಾರಿ ತಡೆಗೆ ಬಿಜೆಪಿ ಕರೆ ಕೊಟ್ಟಿತ್ತು. ತಿರುವನಂತಪುರಂನಲ್ಲಿ ಬಿಜೆಪಿ ಕಾರ್ಯಕರ್ತರು ದೇವಸ್ವಂ ಸಚಿವ ಕಡಕಂಪಲ್ಲಿ ಸುರೇಂದ್ರನ್ ವಿರುದ್ಧ ಕರಿಪತಾಕೆ ಪ್ರದರ್ಶನ ನಡೆಸಿದರು. ಸಿಪಿಎಂ ಕಾರ್ಯಕರ್ತರು ಬಿಜೆಪಿ ಪ್ರದರ್ಶನಕಾರರನ್ನು ತಡೆಯಲು ಯತ್ನಿಸಿದಾಗ ಸಣ್ಣ ಪ್ರಮಾಣದ ಘರ್ಷಣೆ ನಡೆಯಿತು. ಪಾಲಕ್ಕಾಡ್ ಮತ್ತು ಕೋಚಿಯಲ್ಲಿ ಬಿಜೆಪಿ ಕಾರ್ಯಕರ್ತರು ಹೆದ್ದಾರಿ ತಡೆ ನಡೆಸಿದರು.
2018: ಮುಂಬೈ: ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ಕೆಲಸಗಳಲ್ಲಿ ಮರಾಠಾ ಸಮುದಾಯಕ್ಕೆ ಮೀಸಲಾತಿ ಒದಗಿಸುವ ಯೋಜನೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸರ್ಕಾರ ತನ್ನ ಅನುಮೋದನೆಯ ಮೊಹರು ಒತ್ತಿತು. ಡಿಸೆಂಬರ್ ೧ರಂದು ಸಂಭ್ರಮಾಚರಣೆಗೆ ಸಿದ್ಧರಾಗಿರಿ ಎಂಬುದಾಗಿ ಮುಖ್ಯಮಂತ್ರಿ ಮರಾಠಾ ಸಮುದಾಯಕ್ಕೆ ಸೂಚಿಸಿದ ಕೆಲವು ದಿನಗಳ ಬಳಿಕ ಈದಿನ ಮಹಾರಾಷ್ಟ್ರ ಸಚಿವ ಸಂಪುಟ ಸಭೆಯಲ್ಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸುವ ನಿರ್ಧಾರವನ್ನು ಕೈಗೊಳ್ಳಲಾಯಿತು.ಮರಾಠಾ ಸಮುದಾಯಕ್ಕೆ ಮೀಸಲಾತಿ ಸವಲತ್ತು ವಿಸ್ತರಿಸುವ ಮಸೂದೆಯನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುವುದು.ಮೀಸಲಾತಿ ಬೇಡಿಕೆಯನ್ನು ಪರಿಶೀಲಿಸುವ ಕೆಲಸ ನಿರ್ವಹಿಸಿದ ಸಮಿತಿಯು ಮರಾಠಾ ಸಮುದಾಯವನ್ನು ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗದ ವ್ಯಾಪ್ತಿಗೆ ಸೇರಿಸಲು ಶಿಫಾರಸು ಮಾಡಿತ್ತು. ‘ನಾವು ಶಿಫಾರಸುಗಳನ್ನು ಅಂಗೀಕರಿಸಿ, ಅವುಗಳ ಜಾರಿಗಾಗಿ ಸ್ಥಾಯೀ ಕ್ರಮಗಳಿಗಾಗಿ ಸಂಪುಟ ಉಪ ಸಮಿತಿಯನ್ನು ರಚಿಸಿದ್ದೆವು’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಫಡ್ನವಿಸ್ ಹೇಳಿದರು. ಏನಿದ್ದರೂ, ರಾಜ್ಯದ ಜನಸಂಖ್ಯೆಯ ಶೇಕಡಾ ೩೨-೩೫ರಷ್ಟಿರುವ ಮರಾಠರಿಗೆ ಪ್ರಸ್ತುತ ಪರಿಶಿಷ್ಟ ಜಾತಿ (ಎಸ್ಸಿ), ಪರಿಶಿಷ್ಟ ವರ್ಗ (ಎಸ್ ಟಿ) ಮತ್ತು ಇತರೆ ಹಿಂದುಳಿದ ವರ್ಗಗಳಿಗೆ (ಒಬಿಸಿ) ಹಂಚಿಕೆಯಾಗಿರುವ ಮೀಸಲಾತಿ ಸವಲತ್ತಿಗೆ ಧಕ್ಕೆಯಾಗದಂತೆ ಮೀಸಲಾತಿ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸ್ಪಷ್ಟ ಪಡಿಸಿದರು.ತಮಿಳುನಾಡು ಮಾದರಿ ಅನುಸರಿಸಲು ಉದ್ದೇಶಿಸಿರುವ ರಾಜ್ಯ ಸರ್ಕಾರವು ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರಿ ರಂಗದ ಹುದ್ದೆಗಳಲ್ಲಿ ಶೇಕಡಾ ೬೮ರಷ್ಟು ಸ್ಥಾನಗಳನ್ನು ಪರಿಶಿಷ್ಟ ಜಾತಿಗಳು, ಪರಿಶಿಷ್ಟ ವರ್ಗಗಳು, ಇತರೆ ಹಿಂದುಳಿದ ವರ್ಗಗಳು, ಇತರ ಅಲ್ಪಸಂಖ್ಯಾತ ಗುಂಪುಗಳು ಮರಾಠರಿಗೆ ನೀಡಲಿದೆ ಎನ್ನಲಾಯಿತು.
2018: ಅಮೃತಸರ: ಅಮೃತಸರದಲ್ಲಿ ನಿರಂಕಾರಿ ಪಂಥದ ಧಾರ್ಮಿಕ ಸಮಾವೇಶದ ಮೇಲೆ ನಡೆದ ಗ್ರೆನೇಡ್ ದಾಳಿಯಲ್ಲಿ ಕನಿಷ್ಠ ೩ ಮಂದಿ ಮೃತರಾಗಿ, ೧೫ ಮಂದಿ ಗಾಯಗೊಂಡರು.
ನಿರಂಕಾರಿ ಪಂಥದ ಧಾರ್ಮಿಕ ಸಮಾವೇಶ ನಡೆಯುತ್ತಿದ್ದಾಗ ಬೆಳಗ್ಗೆ ೧೧.೩೦ರ ವೇಳೆಗೆ ಬೈಕಿನಲ್ಲಿ ಗ್ರೆನೇಡ್ನೊಂದಿಗೆ ಬಂದ ಇಬ್ಬರು ವ್ಯಕ್ತಿಗಳು ಈ ಕೃತ್ಯ ಎಸಗಿದರು. ರಾಜಸಾನ್ಸಿ ಗ್ರಾಮದಲ್ಲಿ ಸಮಾವೇಶ ನಡೆಯುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಬೈಕಿನಲ್ಲಿ ಬಂದ ವ್ಯಕ್ತಿಗಳು ಮುಖಕ್ಕೆ ಮೋರೆಮುಸುಕು ಧರಿಸಿಕೊಂಡಿದ್ದರು ಮತ್ತು ಮುಖ್ಯ ದ್ವಾರದಲ್ಲಿದ್ದ ಗಾರ್ಡ್ನನ್ನು ಬಂದೂಕು ತೋರಿಸಿ ಬೆದರಿಸಿ ಒಳಕ್ಕೆ ನುಗ್ಗಿದರು. ದಾಳಿಯ ಬಳಿಕ ಸ್ಥಳೀಯರು ಸ್ವಲ್ಪ ದೂರದವರೆಗೆ ಅವರನ್ನು ಅಟ್ಟಿಸಿಕೊಂಡು ಹೋದರು ಎನ್ನಲಾಗಿದೆ. ’ಕೆಲವೇ ನಿಮಿಷಗಳಲ್ಲಿ ಎಲ್ಲವೂ ನಡೆದುಹೋಯಿತು. ಅವರು ನುಗ್ಗಿ ಬಂದರು ಗ್ರೆನೇಡ್ ಎಸೆದರು ಮತ್ತು ಪರಾರಿಯಾದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಪೊಲೀಸರಿಗೆ ತಿಳಿಸಿದರು.
’ಧಾರ್ಮಿಕ ಸಮಾವೇಶದಲ್ಲಿ ಇದ್ದ ಸುಮಾರು ೨೫೦ ಮಂದಿಯ ಪೈಕಿ ಮೂವರು ಹತರಾದರು, ೧೫-೨೦ ಮಂದಿ ಗಾಯಗೊಂಡರು. ಪ್ರಾಥಮಿಕ ವರದಿಗಳ ಪ್ರಕಾರ ಇಬ್ಬರು ವ್ಯಕ್ತಿಗಳು ಗ್ರೆನೇಡಿನೊಂದಿಗೆ ದಾಳಿ ನಡೆಸಿದರು’ ಎಂದು ಐಜಿ (ಗಡಿ) ಸುರೀಂದರ್ ಪಾಲ್ ಸಿಂಗ್ ಪರ್ಮಾರ್ ಹೇಳಿದರು. ಪೊಲೀಸರು ವ್ಯಾಪಕ ತನಿಖೆ ಆರಂಭಿಸಿದ್ದು, ಪ್ರದೇಶದ ಸಿಸಿಟಿವಿ ಕ್ಯಾಮರಾದಲ್ಲಿ
ದಾಖಲಾದ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ತಲೆಗೆ ಪೇಟಾ ಧರಿಸಿದ್ದ ಇಬ್ಬರು ಯುವಕರು ಅಮೃತಸರದಲ್ಲಿ ಧಾರ್ಮಿಕ ಸಮಾವೇಶದ ಮೇಲೆ ಹ್ಯಾಂಡ್ ಗ್ರೆನೇಡ್ ಎಸೆದಿದ್ದಾರೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿತು. ಸಾಕಷ್ಟು ಸುಳಿವುಗಳು ಲಭಿಸಿವೆ. ಸರಿಯಾದ ಮಾರ್ಗದಲ್ಲಿ ತನಿಖೆ ನಡೆಯುತ್ತಿದೆ’ ಎಂದು ಅಧಿಕಾರಿಗಳು ಹೇಳಿದರು.
‘ಈ ಹಿಂದೆ ೭ ಮಂದಿ ಆರೆಸ್ಸೆಸ್ ಮಂದಿಯ ಹತ್ಯೆ ಪ್ರಕರಣದಲ್ಲಿ ಪಂಜಾಬ್ ಪೊಲೀಸ್ ಅತ್ಯದ್ಭುತ ತನಿಖೆ ನಡೆಸಿದ್ದರು. ಇಂತಹ ಘಟನೆಗಳ ಹಿಂದಿನ ಸಂಚನ್ನು ಭೇದಿಸುವಲ್ಲೂ ಪೊಲೀಸ್ ಪಡೆ ಸಮರ್ಥವಾಗಿದೆ’ ಎಂದು ಸಚಿವಾಲಯದ ಇನ್ನೊಬ್ಬ ಅಧಿಕಾರಿ ನುಡಿದರು. ಅಮೃತಸರ ಸಮೀಪದ ಅಡ್ಲಿವಾಲ್ ಗ್ರಾಮದ ನಿರಂಕಾರಿ ಭವನದಲ್ಲಿ ನಿರಂಕಾರಿ ಪಂಥದ ಧಾರ್ಮಿಕ ಸಮಾವೇಶ ನಡೆಯುತ್ತಿದ್ದ ವೇಳೆಯಲ್ಲಿ ಸ್ಫೋಟ ಸಂಭವಿಸಿತು. ಈ ಸ್ಥಳ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅತ್ಯಂತ ಸಮೀಪದಲ್ಲಿತ್ತು. ಪಠಾಣ್ ಕೋಟ್ ಜಿಲ್ಲೆಯ ಮಾಧೋಪುರದ ಸಮೀಪ ಕಳೆದ ವಾರ ಚಾಲಕನೊಬ್ಬನನ್ನು ಬಂದೂಕು ತೋರಿಸಿ ಆತ ಚಲಾಯಿಸುತ್ತಿದ್ದ ಎಸ್ಯುವಿಯನ್ನು ನಾಲ್ವರು ಕಿತ್ತುಕೊಂಡು ಹೋದ ಘಟನೆಯ ಬಳಿಕ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿತ್ತು. ಘಟನೆಯ ಬೆನ್ನಲ್ಲೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಅವರ ಚಂಡೀಗಢದಲ್ಲಿ ಉನ್ನತ ಭದ್ರತಾ ಅಧಿಕಾರಿಗಳ ಸಭೆ ನಡೆಸಿದರು.’ಅಮೃತಸರದ ನಿರಂಕಾರಿ ಭವನದಲಿ ಸಂಭವಿಸಿದ ಬಾಂಬ್ ಸ್ಫೋಟದ ಘಟನೆಯನ್ನು ನಾನು ಪ್ರಬಲವಾಗಿ ಖಂಡಿಸುತ್ತೇನೆ. ತತ್ ಕ್ಷಣ ಘಟನಾ ಸ್ಥಳಕ್ಕೆ ಧಾವಿಸಿ ತನಿಖೆಯನ್ನು ಚುರುಕುಗೊಳಿಸುವಂತೆ ನಾನು ಗೃಹ ಕಾರ್ಯದರ್ಶಿ, ಪಂಜಾಬ್ ಪೊಲೀಸ್ ಡಿಜಿಪಿ, ಗುಪ್ತಚರ ಡಿಜಿಪಿ, ಕಾನೂನು ಸುವ್ಯವಸ್ಥೆ ಡಿಜಿಪಿಗೆ ಸೂಚಿಸಿದ್ದೇನೆ. ನನ್ನ ಹೃದಯ ಅಮೃತಸರ ಬಾಂಬ್ ಸ್ಫೋಟದಲ್ಲಿ ಮೃತರಾದರು ಮತ್ತು ಅವರ ಕುಟುಂಬಗಳಿಗಾಗಿ ಮರುಗುತ್ತಿದೆ. ಪ್ರತಿಯೊಬ್ಬ ಮೃತ ವ್ಯಕ್ತಿಯ ವಾರಸುದಾರರಿಗೆ ನನ್ನ ಸರ್ಕಾರವು ೫ ಲಕ್ಷ ರೂಪಾಯಿಗಳ ಪರಿಹಾರವನ್ನು ನೀಡುತ್ತದೆ ಮತ್ತು ಗಾಯಾಳುಗಳಿಗೆ ಉಚಿತ ಚಿಕಿತ್ಸೆಯನ್ನು ಒದಗಿಸುತ್ತದೆ. ಎಲ್ಲ ರೀತಿಯ ನೆರವು ನೀಡುವಂತೆ ಜಿಲ್ಲಾ ಆಡಳಿತಕ್ಕೆ ಸೂಚಿಸಲಾಗಿದೆ’ ಎಂದು ಮುಖ್ಯಮಂತ್ರಿ
ನುಡಿದರು.ಶಾಂತರಾಗಿರುವಂತೆಯೂ, ಭಯಭೀತರಾಗದಂತೆಯೂ ಮುಖ್ಯಮಂತ್ರಿ ಜನತೆಗೆ ಮನವಿ ಮಾಡಿದರು.ಈ ಮಧ್ಯೆ, ರಾಜ್ಯದ ಎಲ್ಲ ನಿರಂಕಾರಿ ಭವನಗಳಿಗೂ ಘಟನೆಯ ಬೆನ್ನಲ್ಲೇ ಭದ್ರತೆ ಹೆಚ್ಚಿಸಲಾಯಿತು. ಆರರಿಂದ ಏಳು ಮಂದಿ ಜೈಶ್-ಎ-ಮೊಹಮ್ಮದ್ (ಜೆಇಎಂ) ಭಯೋತ್ಪಾದಕರು ಫೀರೋಜ್ ಪುರ ಪ್ರದೇಶಕ್ಕೆ ನುಸುಳಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಪಂಜಾಬಿನಲ್ಲಿ ಕೆಲದಿನಗಳಿಂದ ಕಟ್ಟೆಚ್ಚರ ವಹಿಸಲಾಗಿತ್ತು. ಈದಿನ ದಾಳಿಯನ್ನು ರಾಜ್ಯದಲ್ಲಿ ಶಾಂತಿ ಕದಡುವ ಯತ್ನ ಎಂದು ಆಡಳಿತಾರೂಢ ಕಾಂಗ್ರೆಸ್ ಪಕ್ಷದ ರಾಜ್ಯ ಘಟಕ ಅಧ್ಯಕ್ಷ ಸುನಿಲ್ ಜಾಖಡ್ ಹೇಳಿದರು.
2018: ಶ್ರೀನಗರ: ಐಸಿಸ್ (ಐಎಸ್ಐಎಸ್)-ಶೈಲಿಯಲ್ಲಿ
ಭಯೋತ್ಪಾದಕರು ಹದಿಹರೆಯದ ಎರಡನೇ ವ್ಯಕ್ತಿಯನ್ನು ಕೊಲೆ ಮಾಡಿದ ಒಂದು ದಿನದ ನಂತರ,
ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಶಂಕಿತ ಉಗ್ರಗಾಮಿಗಳು ಮತ್ತೊಬ್ಬ ಯುವಕನನ್ನು ಅಪಹರಿಸಿದರು. ಅಪಹೃತ ಯುವಕನನ್ನು ಶೋಪಿಯಾನ್ ನಿವಾಸಿ ಸುಹೈಲ್ ಅಹ್ಮದ್ ಎಂಬುದಾಗಿ ಗುರುತಿಸಲಾಯಿತು. ೧೭ ವರ್ಷ ವಯಸ್ಸಿನ ನದೀಮ್ ಮಂಜೂರ್ ಮತ್ತು ೧೯ ವರ್ಷದ ಹುಜೈಫ್ ಕುಟ್ಟೆ ಅವರ ಭೀಕರ ಹತ್ಯೆಗಳ ಬಳಿಕ
ಇದೀಗ
ಈ ಯುವಕನ ಅಪಹರಣ ನಡೆಯಿತು. ಮಂಜೂರನನ್ನು ಗುಂಡಿನ ಸುರಿಮಳೆಗೈದು ಕೊಂದರೆ, ಹುಜೈಫ್ನನ್ನು ಗಂಟಲು ಸೀಳಿ ಸೀಳಿ ಭೀಕರವಾಗಿ ಕೊಲ್ಲಲಾಗಿತ್ತು. ಇವರಿಬ್ಬರೂ
ಶೋಪಿಯಾನ್ ನಿವಾಸಿಗಳು. ಅಲ್-ಬದರ್ ಗುಂಪಿನ ಇಬ್ಬರು ಉಗ್ರಗಾಮಿಗಳನ್ನು ಶೋಪಿಯಾನಿನಲ್ಲಿ
ನಡೆದ ಗುಂಡಿನ ಘರ್ಷಣೆಯಲ್ಲಿ ಭದ್ರತಾ ಪಡೆಗಳು ಹತ್ಯೆಗೈದ ಕೆಲವೇ ಗಂಟೆಗಳಲ್ಲಿ ಭಯೋತ್ಪಾದಕರು ಸುಹೈಲ್ನನ್ನು ಅಪಹರಿಸಿದರು. ಗುಂಡಿನ ಘರ್ಷಣೆಯಲ್ಲಿ ಹತರಾದ ಭಯೋತ್ಪಾದಕರನ್ನುರೆಬ್ಬಾನ್ ಜೈನಪೊರಾ ನಿವಾಸಿ ನವಾಜ್ ಅಹ್ಮದ್ ವಾಗೆ ಮತ್ತು ಬಟ್ನೂರ್ ಲಿಟ್ಟರ್ ಪುಲ್ವಾಮಾದ ಯಾವರ್ ವಾನಿ ಎಂದು ಗುರುತಿಸಲಾಯಿತು. ಮಂಜೂರನ ಕ್ರೂರ ಹತ್ಯೆಯ ವಿಡಿಯೋ ಜೊತೆಗೆ ಬಿಡುಗಡೆ ಮಾಡಲಾದ ಆಡಿಯೋ ಸಂದೇಶದಲ್ಲಿ ಹೆಚ್ಚು ಯುವಕರನ್ನು ಕೊಲ್ಲುವುದಾಗಿ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ರಿಯಾಜ್ ನೈಕೂ ಬೆದರಿಕೆ ಹಾಕಿದ್ದ.
ವೈರಲ್ ಆದ ಈ ವಿಡಿಯೋದಲ್ಲಿ ಉಗ್ರಗಾಮಿಗಳು ಮಂಜೂರನ ಮೇಲೆ ಗುಂಡಿನ ಮಳೆಗರೆದದ್ದನ್ನು ಚಿತ್ರೀಕರಿಸಿ ತೋರಿಸಿದ್ದರು. ಕೊಲ್ಲುವುದಕ್ಕೆ ಮುಂಚೆ ಚಿತ್ರೀಕರಿಸಲಾಗಿದ್ದ ಇನ್ನೊಂದು ವಿಡಿಯೋದಲ್ಲಿ ತನ್ನ ಗ್ರಾಮದಲ್ಲಿ ಉಗ್ರಗಾಮಿಗಳು ಇರುವ ಬಗ್ಗೆ ತಾನು ಸೇನೆಗೆ ತಿಳಿಸಿದ್ದುದಾಗಿ ಮಂಜೂರ ಹೇಳಿದ್ದನ್ನು ಚಿತ್ರೀಕರಿಸಿ ಅದನ್ನೂ ಬಿಡುಗಡೆ ಮಾಡಿದ್ದರು. ‘ಮಂಜೂರ ಒಬ್ಬ ಸೇನಾ ಮಾಹಿತಿದಾರನಾಗಿದ್ದ. ಸೇನೆಗೆ ಉಗ್ರಗಾಮಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದ. ಇಬ್ಬರು ಉಗ್ರಗಾಮಿಗಳ ಬಗ್ಗೆ ಮಾಹಿತಿ ನೀಡಿದ ಬಳಿಕ
ಅವರಿಬ್ಬರೂ ಗುಂಡಿನ ಘರ್ಷಣೆಯಲ್ಲಿ ಹತರಾದರು ಎಂದು ನವೆಂಬರ್ ೬ರ ಗುಂಡಿನ ಘರ್ಷಣೆಯಲ್ಲಿ ಉಗ್ರಗಾಮಿಗಳಿಬ್ಬರು ಹತರಾದುದನ್ನು ಉಲ್ಲೇಖಿಸಿದ ನೈಕೂ ಅದಕ್ಕಾಗಿ ಮಂಜೂರನನ್ನು ಕೊಲ್ಲಲಾಗಿದೆ ಎಂದು ಸಮರ್ಥಿಸಿಕೊಂಡಿದ್ದ."ನಾವು ಯಾರನ್ನೂಕೊಲ್ಲಲು ಬಯಸುವುದಿಲ್ಲ, ಆದರೆ ಅವರು (ಮಾಹಿತಿದಾರರು) ನಮ್ಮನ್ನು ಇಂತಹ ಕೃತ್ಯಕ್ಕೆ ಎಳಸುವಂತೆ ಮಾಡುತ್ತಿದ್ದಾರೆ. ಭವಿಷ್ಯದಲ್ಲಿ ಇಂತಹ ಇನ್ನಷ್ಟು ವೀಡಿಯೋಗಳನ್ನು ನಾವು ಬಹಿರಂಗ ಪಡಿಸುತ್ತೇವೆ ಮತ್ತು ದ್ರೋಹಿಗಳಿಗೆ ಇದೇ ರೀತಿಯ ಹಣೆಬರಹ ಕಾದಿದೆ’ ಎಂದು ಆತ ಹೇಳಿದ. ‘ನ್ಯಾಯ’ದ
ಪಂಚರು ಮತ್ತು ಸರಪಂಚರಿಗೂ ಇದೇ ಗತಿ ಕಾದಿದೆ ಎಂದೂ ಆತ ಎಚ್ಚರಿಸಿದ. ಅಪಹರಿಸಲಾಗಿದ್ದ ಹುಜೈಫ್ ಕುಟ್ಟೆ ಶವ ಹಿಂದಿನ ರಾತ್ರಿ ಪತ್ತೆಯಾಗಿದ್ದು ಆತನನ್ನು ಗಂಟಲು ಸೀಳಿ ಕೊಲ್ಲಲಾಗಿತ್ತು.
2018: ಮಹಾಸಮುಂಡ (ಛತ್ತೀಸ್ ಗಢ): ಕಾಂಗ್ರೆಸ್ ಮತ್ತು ನೆಹರೂ-ಗಾಂಧಿ ಕುಟುಂಬದ ಮೇಲೆ ತಮ್ಮ ವಾಗ್ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿ ಅವರು ’ದಲಿತ ಸೀತಾರಾಂ ಕೇಸರಿ ಅವರಿಗೆ ಕಾಂಗ್ರೆಸ್ ಅಧ್ಯಕ್ಷರಾಗಿ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸಲೂ ಬಿಡಲಿಲ್ಲ. ಪಕ್ಷದ ನೂತನ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಮಾರ್ಗ ತೆರವುಗೊಳಿಸುವ ಸಲುವಾಗಿ ಕೇಸರಿ ಅವರನ್ನು ’ಪಕ್ಷದ ಕಚೇರಿಯಿಂದ ಹೊರಕ್ಕೆ ಎಸೆಯಲಾಯಿತು’ ಎಂದು ಟೀಕಿಸಿದರು. ಛತ್ತೀಸ್ ಗಢ ವಿಧಾನಸಭೆಗೆ ನಡೆಯುತ್ತಿರುವ ಎರಡನೆಯ ಹಾಗೂ ಅಂತಿಮ ಹಂತದ ಚುನಾವಣೆಗೆ ಪ್ರಚಾರದ ಕೊನೆಯ ದಿನ ಚುನಾವಣಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ, ಒಂದೇ ಕುಟುಂಬದ ನಾಲ್ಕು ತಲೆಮಾರುಗಳು ರಾಷ್ಟ್ರವನ್ನು ಆಳಿವೆ ಮತ್ತು ’ಅಧಿಕಾರದ ಅನುಕೂಲಗಳನ್ನು ಸವಿದಿದೆ, ಆದರೆ ಅವರ ಆಳ್ವಿಕೆಯಿಂದ ರಾಷ್ಟ್ರಕ್ಕೆ ಯಾವುದೇ ಅನುಕೂಲವೂ ಆಗಲಿಲ್ಲ’ ಎಂದು ಹೇಳಿದರು.’ದಲಿತರಾಗಿದ್ದ ಸೀತಾರಾಂ ಕೇಸರಿ ಅವರಿಗೆ ಕಾಂಗ್ರೆಸ್ ಅಧ್ಯಕ್ಷರಾಗಿ ತಮ್ಮ ಐದು ವರ್ಷಗಳ ಅವಧಿಯನ್ನು ಪೂರ್ಣಗೊಳಿಸಲು ಅವಕಾಶ ನೀಡಲಿಲ್ಲ ಎಂಬುದು ರಾಷ್ಟ್ರಕ್ಕೆ ಗೊತ್ತಿದೆ, ಪಕ್ಷದ ನೂತನ ಮುಖ್ಯಸ್ಥರಾದ ಸೋನಿಯಾ ಗಾಂಧಿ ಅವರಿಗೆ ಮಾರ್ಗ ತೆರವಿಗಾಗಿ ಸೀತಾರಾಂ ಕೇಸರಿ ಅವರನ್ನು ಪಕ್ಷದ ಕಚೇರಿಯಿಂದ ಹೊರಕ್ಕೆ ಎಸೆಯಲಾಯಿತು’ ಎಂದು ಮೋದಿ ನುಡಿದರು. ‘ಹಿಂದೆ ದೆಹಲಿಯಲ್ಲಿ ದೂರ ನಿಯಂತ್ರಿತ (ರಿಮೋಟ್ ಕಂಟ್ರೋಲ್ಡ್) ಸರ್ಕಾರವಿತ್ತು. ಬಿಜೆಪಿ ಬಗ್ಗೆ ಭಯಪಟ್ಟಿದ್ದ ಒಂದು ಕುಟುಂಬದ ಕೈಯಲ್ಲಿ ರಿಮೋಟ್ ಇತ್ತು’ ಎಂದು ಕಾಂಗ್ರೆಸ್ ಮತ್ತು ಗಾಂಧಿಗಳನ್ನು ಗುರಿಯಾಗಿಟ್ಟುಕೊಂಡು ಪ್ರಧಾನಿ ವಾಗ್ಬಾಣಗಳನ್ನು ಎಸೆದರು.೧೯೪೭ರಿಂದ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ೧೪ ರಾಜಕಾರಣಿಗಳ ಹೆಸರಿನ ಪಟ್ಟಿ ಬಿಡುಗಡೆ ಮಾಡಿ ಮೋದಿ ಅವರಿಗೆ ಸವಾಲು ಹಾಕಿದ್ದ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಟ್ವೀಟಿಗೆ ಪ್ರತಿಕ್ರಿಯಿಸಿದ ಮೋದಿ ’ಒಬ್ಬ ಆಸ್ಥಾನಿಕ (ಹೊಗಳುಭಟ) ಪ್ರತಿಕ್ರಿಯಿಸಿದ್ದಾರೆ’ ಎಂದು ಛೇಡಿಸಿದರು. ಮಧ್ಯಪ್ರದೇಶದಲ್ಲಿ: ಮಧ್ಯಪ್ರದೇಶದ ಛಿಂದ್ವಾರದಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಧಾನಿ ’ವಂಚನೆ ವಿರೋಧ ಪಕ್ಷದ ರಕ್ತದಲ್ಲೇ ಇದೆ’ ಎಂದು ಟೀಕಿಸಿದರು.ಗೋ ಸಂರಕ್ಷಣೆಯ ವಿಚಾರದಲ್ಲಿ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಮೋದಿ, ’ಕಾಂಗ್ರೆಸ್ ಪಕ್ಷವು ಜನರನ್ನು ದಾರಿತಪ್ಪಿಸುವ ಕೆಲಸವನ್ನು ನಿರಂತರ ಮಾಡುತ್ತಿದೆ. ವಂಚನೆ ಕಾಂಗ್ರೆಸ್ಸಿಗೆ ರಕ್ತಗತವಾಗಿದೆ. ಆದರೆ ಮಧ್ಯಪ್ರದೇಶದ ಜನರು ಆ ಪಕ್ಷಕ್ಕೆ ಮಹತ್ವ ಕೊಡುವುದಿಲ್ಲ’ ಎಂದು ಹೇಳಿದರು.ಇದೇ ಕಾಂಗ್ರೆಸ್ ಪಕ್ಷವು ಮಧ್ಯ ಪ್ರದೇಶದಲ್ಲಿ ಗೋವುಗಳನ್ನು ಹೊಗಳುತ್ತದೆ ಮತ್ತು ತನ್ನ ಪ್ರಣಾಳಿಕೆಯಲ್ಲಿ ಅದನ್ನು ಪ್ರಸ್ತಾಪಿಸುತ್ತದೆ. ಆದರೆ ಕೇರಳದ ರಸ್ತೆಗಳಲ್ಲಿ ಕರುಗಳನ್ನು ಕೊಲ್ಲುತ್ತದೆ ಮತ್ತು ಗೋಮಾಂಸ ತಿನ್ನುತ್ತದೆ’ ಎಂದು ಮೋದಿ ಟೀಕಿಸಿದರು.ಕೇರಳದ ಕಣ್ಣೂರಿನಲ್ಲಿ ಕಳೆದ ವರ್ಷ ಭಾರತೀಯ ಜನತಾ ಪಕ್ಷ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟದ (ಎನ್ ಡಿಎ) ಸರ್ಕಾರವು ಜಾನುವಾರುಗಳನ್ನು ಹತ್ಯೆಗಾಗಿ ಮಾರಾಟ ಮಾಡುವುದನ್ನು ನಿಷೇಧಿಸಿ ಅಧಿಸೂಚನೆ ಹೊರಡಿಸಿದ್ದನ್ನು
ಪ್ರತಿಭಟಿಸಲು ಕೇರಳದಲ್ಲಿ ಕರುಗಳನ್ನು ಕೊಂದ ಘಟನೆಯನ್ನು ಉಲ್ಲೇಖಿಸಿ ಪ್ರಧಾನಿ ಈ ಟೀಕೆ ಮಾಡಿದರು. ಕಾಂಗ್ರೆಸ್ ಪಕ್ಷವು ನವೆಂಬರ್ ೨೮ರ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಗಾಗಿ ಬಿಡುಗಡೆ ಮಾಡಿದ ತನ್ನ ಪ್ರಣಾಳಿಕೆಯಲ್ಲಿ ’ಗೋಮೂತ್ರ’ ಮತ್ತು ’ಕಂಡ’ದ (ಗೋವುಗಳ ಸೆಗಣಿಯ ಬೆರಣಿ) ವಾಣಿಜ್ಯ ಉತ್ಪಾದನೆ ಬಗ್ಗೆ ಪ್ರಸ್ತಾಪ ಮಾಡಿತ್ತು. ತಮ್ಮ ಸರ್ಕಾರವು ತಂತ್ರಜ್ಞಾನದ ಮೂಲಕ ನಕಲಿ ಫಲಾನುಭವಿಗಳನ್ನು ಗುರುತಿಸಿ ವರ್ಷಕ್ಕೆ ೯೦,೦೦೦ ಕೋಟಿ ರೂಪಾಯಿಗಳಷ್ಟು ರಾಷ್ಟ್ರದ ಹಣ ’ಕಳವು’ ಆಗುತ್ತಿದ್ದುದನ್ನು ಸ್ಥಗಿತಗೊಳಿಸಿತು. ’ಇದಕ್ಕಾಗಿ ನಾನು ಕಾಂಗ್ರೆಸ್ ನಾಯಕರಿಂದ ತೀವ್ರ ದೂಷಣೆಗೆ ಒಳಗಾದೆ, ಆದರೆ ಅದಕ್ಕೆ ಕಾರಣವೇನು ಎಂಬುದು ನನಗೆ ಗೊತ್ತಿದೆ. ಆಧಾರ್ ಆಧಾರಿತ ತಂತ್ರಜ್ಞಾನದ ಬಳಕೆಯು ಸರ್ಕಾರಿ ಯೋಜನೆಗಳ ೬ ಕೋಟಿ ನಕಲಿ ಫಲಾನುಭವಿಗಳನ್ನು ಪತ್ತೆ ಹಚ್ಚಿತು. ವಾರ್ಷಿಕ ೯೦,೦೦೦ ಕೋಟಿ ರೂಪಾಯಿಗಳಷ್ಟು ರಾಷ್ಟ್ರದ ಹಣ ಕಳವಾಗುತ್ತಿದ್ದುದನ್ನು ನನ್ನ ಸರ್ಕಾರ ಸ್ಥಗಿತಗೊಳಿಸಿತು’ ಎಂದು ಅವರು ನುಡಿದರು.ಛಿಂದ್ವಾರದ ಸಂಸತ್ ಸದಸ್ಯ ಹಾಗೂ ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲನಾಥ್ ಅವರು ತಮ್ಮ ಅಭಿವೃದ್ಧಿ ಸಾಧನೆಗಳನ್ನು ಪ್ರತಿಪಾದಿಸಿದ ವಿಡಿಯೋದಲ್ಲಿ ’ಅಭ್ಯರ್ಥಿಯ ಗೆಲುವಿನ ಸಾಮರ್ಥ್ಯ ತಮಗೆ ಅತ್ಯಂತ ಮುಖ್ಯ ಅಂಶ, ಆತನ ಚಾರಿತ್ರ್ಯವಲ್ಲ’ ಎಂದು ಹೇಳಿದ್ದರ ವಿರುದ್ಧ ಮೋದಿ ಹರಿಹಾಯ್ದರು.
2018: ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಬಸ್ಸೊಂದು ೧೫೦ ಮೀಟರ್ ಆಳದ ಕಮರಿಗೆ ಬಿದ್ದ ಪರಿಣಾಮವಾಗಿ ಆ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿದ್ದ ಕನಿಷ್ಠ ೧೨ ಮಂದಿ ಸಾವನ್ನಪ್ಪಿ, ೧೩ ಮಂದಿ ಗಾಯಗೊಂಡರು.
ಜಿಲ್ಲೆಯ ಜಾನಕಿಚಟ್ಟಿಯಿಂದ ವಿಕಾಸ ನಗರಕ್ಕೆ ಹೊರಟಿದ್ದ ಖಾಸಗಿ ಬಸ್ಸು ದಮ್ತ ಸಮೀಪ ಕಮರಿಗೆ ಉರುಳಿತು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಆಶಿಶ್ ಚೌಹಾಣ್ ಹೇಳಿದರು.
೧೦ ಮಂದಿ ಸ್ಥಳದಲ್ಲೇ ಮೃತರಾಗಿದ್ದು, ಇಬ್ಬರು ಸಮೀಪದ ಆಸ್ಪತ್ರೆಯಲ್ಲಿ ಅಸು ನೀಗಿದರು ಎಂದು ಅವರು ನುಡಿದರು. ಸ್ಥಳೀಯರ ನೆರವಿನೊಂದಿಗೆ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಪೊಲೀಸರು ಕೈಗೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ನಾಲ್ವರನ್ನು ವಿಮಾನದ ಮೂಲಕ ಡೆಹ್ರಾಡೂನ್ ಗೆ ಚಿಕಿತ್ಸೆಗಾಗಿ ಕಳುಹಿಸಲಾಗಿದೆ ಎಂದು ಅವರು ನುಡಿದರು.
2016: ನವದೆಹಲಿ: ರದ್ದಾಗಿರುವ ಹಳೆಯ ನೋಟುಗಳನ್ನು ನವೆಂಬರ್ 19ರ ಶನಿವಾರ ಹಿರಿಯ ನಾಗರಿಕರು ಮಾತ್ರ ಬ್ಯಾಂಕ್ಗಳ ಮೂಲಕ ವಿನಿಮಯ ಮಾಡಿಕೊಳ್ಳಬಹುದು. ಶನಿವಾರ ಎಂದಿನಂತೆ ಬ್ಯಾಂಕ್ಗಳು ಕಾರ್ಯಾಚರಣೆ ನಡೆಸಲಿವೆ. ಆದರೆ, ಹಳೆಯ ನೋಟುಗಳ ವಿನಿಮಯಕ್ಕೆ ಹಿರಿಯ ನಾಗರಿಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಇದನ್ನು ಹೊರತು ಪಡಿಸಿದರೆ ಇತರೆ ಬ್ಯಾಂಕಿಂಗ್ ಸೇವೆಗಳು ಎಂದಿನಂತೆ ನಡೆಯಲಿವೆ ಎಂದು ಭಾರತೀಯ ಬ್ಯಾಂಕ್ಗಳ ಸಂಘಟನೆ (ಐಬಿಎ) ಅಧ್ಯಕ್ಷ ರಾಜೀವ್ ರಿಷಿ ತಿಳಿಸಿದರು.
2016: ನವದೆಹಲಿ: ರದ್ದು ಪಡಿಸಲಾಗಿರುವ 500 ಮತ್ತು 1000 ರೂಪಾಯಿ ಮುಖಬೆಲೆಯ ಹಳೆಯ ನೋಟುಗಳ ವಿನಿಮಯವನ್ನು ರದ್ದು ಪಡಿಸುವ ಪ್ರಸ್ತಾಪ ಈವರೆಗೂ ಇಲ್ಲ ಎಂದು ಅಧಿಕೃತ ಮೂಲಗಳು ಸ್ಪಷ್ಟ ಪಡಿಸಿದವು. ಹಳೆಯ ನೋಟುಗಳ ವಿನಿಮಯ ಕೊಡುಗೆಯನ್ನು ದುರುಪಯೋಗಿಸಲಾಗುತ್ತಿದೆ ಎಂಬ ಕಾರಣಕ್ಕಾಗಿ ಈ ನೋಟುಗಳ ವಿನಿಮಯವನ್ನು ರದ್ದು ಪಡಿಸಿ, ಹಳೆಯ ನೋಟುಗಳನ್ನು ಸ್ವಂತ ಖಾತೆಗಳಲ್ಲಿ ಜಮಾ ಮಾಡಲು ಮಾತ್ರ ಅವಕಾಶ ನೀಡುವ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂಬ ವದಂತಿಗಳು ವ್ಯಾಪಕವಾಗಿ ಹರಿದಾಡಿದ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳು ಈ ಸ್ಪಷ್ಟನೆ ನೀಡಿದರು. ಜನರನ್ನು ಭಯಭೀತರನ್ನಾಗಿಸುವ ಯಾವುದೇ ಸಂಕೇತವನ್ನೂ ನೀಡಲು ಸರ್ಕಾರ ಬಯಸುವುದಿಲ್ಲ ಎಂದು ಸರ್ಕಾರಿ ಮೂಲಗಳು ಹೇಳಿದವು. ಹಳೆಯ ನೋಟುಗಳ ವಿನಿಮಯದಿಂದ ಬ್ಯಾಂಕಿಂಗ್ ವಹಿವಾಟಿಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕಾಗಿ ಹಳೆ ನೋಟುಗಳ ವಿನಿಮಯವನ್ನು ರದ್ದು ಪಡಿಸುವ ಚಿಂತನೆ ನಡೆದಿದೆ ಎಂದೂ ವರದಿಗಳು ಈ ಮುನ್ನ ಹೇಳಿದ್ದವು.
2016: ನವದೆಹಲಿ: ವಿವಿಧ ಹೈಕೋರ್ಟ್ಗಳ ನ್ಯಾಯಮೂರ್ತಿಗಳ ನೇಮಕಾತಿಗಳಿಗೆ ಸಂಬಂಧಿಸಿದಂತೆ ಕೊಲಿಜಿಯಂ ಶಿಫಾರಸು ಮಾಡಿದ್ದ 43 ಹೆಸರುಗಳನ್ನು ತಿರಸ್ಕರಿಸಿ ಬೇರೆ ಹೆಸರುಗಳನ್ನು ಪರಿಗಣಿಸುವಂತೆ ಸೂಚಿಸಿ ಎನ್ಡಿಎ ಸರ್ಕಾರ ನೀಡಿದ್ದ ಸಲಹೆಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತು. ಇದರೊಂದಿಗೆ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಯಿತು. ತಾನು ಶಿಫಾರಸು ಮಾಡಿದ್ದ 43 ಹೆಸರುಗಳ ಪಟ್ಟಿಯನ್ನೇ ಮತ್ತೆ ಪರಿಗಣಿಸುವಂತೆ ಸೂಚಿಸಿರುವ ಸುಪ್ರೀಂಕೋರ್ಟ್ ಅದೇ ಪಟ್ಟಿಯನ್ನು ಮತ್ತೆ ಕೇಂದ್ರಕ್ಕೆ ಕಳುಹಿಸಿದೆ. ವಿವಿಧ ಹೈಕೋರ್ಟ್ಗಳ ನ್ಯಾಯಮೂರ್ತಿಗಳ ನೇಮಕಾತಿ ವಿಚಾರದಲ್ಲಿ ಮಧ್ಯಪ್ರವೇಶ ಮಾಡುವಂತೆ ಕೋರಿ ಲೆಫ್ಟಿನೆಂಟ್ ಕರ್ನಲ್ ಅನಿಲ್ ಕಬೋತ್ರ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಕಾಲದಲ್ಲಿ ಸುಪ್ರೀಂಕೋರ್ಟ್ ಈ ವಿಚಾರವನ್ನು ಸ್ಪಷ್ಟ ಪಡಿಸಿತು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ನೇತೃತ್ವದ ನ್ಯಾಯಮೂರ್ತಿಗಳ ಕೊಲಿಜಿಯಂ ಹೈಕೋರ್ಟ್ ನ್ಯಾಯಮೂರ್ತಿ ಹುದ್ದೆಗಳಿಗೆ ಶಿಫಾರಸು ಮಾಡಿದ್ದ ಹೆಸರುಗಳ ಪೈಕಿ ಅರ್ಧದಷ್ಟು ಹೆಸರುಗಳನ್ನು ತಾನು ಹಿಂದಿರುಗಿಸಿರುವುದಾಗಿ ಕೇಂದ್ರ ಸರ್ಕಾರವು ನವೆಂಬರ್ 11ರಂದು ಸುಪ್ರೀಂಕೋರ್ಟಿಗೆ ತಿಳಿಸಿತ್ತು. ಕೊಲಿಜಿಯಂ ಶಿಫಾರಸು ಮಾಡಿದ್ದ 77 ಹೆಸರುಗಳ ಪೈಕಿ 34 ಹೆಸರುಗಳನ್ನು ಒಪ್ಪಿದ್ದ ಕೇಂದ್ರ ಸರ್ಕಾರ ಉಳಿದ 43 ಹೆಸರುಗಳನ್ನು ಬದಲಾಯಿಸುವಂತೆ ಸೂಚಿಸಿ ಹಿಂದಕ್ಕೆ ಕಳುಹಿಸಿತ್ತು.
2016: ನವದೆಹಲಿ: 500 ರೂಪಾಯಿ ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ರದ್ದತಿ ಹಿನ್ನೆಲೆಯಲ್ಲಿ ಕುಶಲ ಕರ್ಮಿಗಳು, ನೌಕರರು, ಗೃಹಿಣಿಯರು ಮತ್ತಿತರರ ಖಾತೆಗಳಿಗೆ ಮಾಡಲಾಗುವ ಸಣ್ಣ ಮೊತ್ತದ ಜಮಾವನ್ನು ಆದಾಯ ತೆರಿಗೆ ಇಲಾಖೆ ಪ್ರಶ್ನಿಸುವುದಿಲ್ಲ, ಆದರೆ ಇತರರ ಕಪ್ಪು ಹಣವನ್ನು ಬಿಳಿ ಮಾಡುವ ಸಲುವಾಗಿ ತಮ್ಮ ಖಾತೆ ಬಳಸಲು ಅವಕಾಶ ನೀಡುವವರು ಕಾನೂನು ಕ್ರಮಕ್ಕೆ ಒಳಗಾಗಬಹುದು ಎಂದು ಹಣಕಾಸು ಸಚಿವಾಲಯ ಎಚ್ಚರಿಸಿದೆ. ಕೆಲವು ವ್ಯಕ್ತಿಗಳು ಕಪ್ಪು ಹಣವನ್ನು ಹೊಸ ನೋಟುಗಳನ್ನಾಗಿ ಪರಿವರ್ತಿಸಲು ಇತರರ ಖಾತೆಗಳನ್ನು ಬಳಸುತ್ತಿರುವ ಬಗೆಗೆ ವರದಿಗಳು ಬಂದಿವೆ. ತೆರಿಗೆ ತಪ್ಪಿಸುವ ಸಲುವಾಗಿ ನಡೆಯುವ ಇಂತಹ ಚಟುವಟಿಕೆಗಳಿಗೆ ಆದಾಯ ತೆರಿಗೆ, ದಂಡ ಬೀಳಬಹುದು. ತಮ್ಮ ಖಾತೆಗಳನ್ನು ದುರುಪಯೋಗ ಮಾಡಲು ಅವಕಾಶ ನೀಡಿದವರ ವಿರುದ್ಧ ಇಲಾಖೆಯು ಕಾನೂನು ಕ್ರಮವನ್ನೂ ಕೈಗೊಳ್ಳಬಹುದು ಎಂದು ಹಣಕಾಸು ಸಚಿವಾಲಯ ಹೇಳಿತು. ಏನಿದ್ದರೂ ತಮ್ಮ ಸ್ವಂತ ನಗದು ಉಳಿತಾಯವನ್ನು ತಮ್ಮ ಖಾತೆಗಳಿಗೆ ಜಮಾ ಮಾಡುವವರನ್ನು ಪ್ರಶ್ನಿಸಲಾಗುವುದಿಲ್ಲ ಎಂದು ಹಣಕಾಸು ಸಚಿವಾಲಯ ಹೇಳಿತು.
2016:
ನವದೆಹಲಿ: ನೋಟು ಬದಲಾವಣೆಯ ಮಿತಿಯನ್ನು ರೂ.4,500ರಿಂದ ರೂ.2,000ಕ್ಕೆ
ಇಳಿಸಿದ ಕೇಂದ್ರ ಸರ್ಕಾರ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ನೋಟು ಬದಲಾವಣೆಯ ಮಿತಿಯನ್ನು ರೂ.2,000ಕ್ಕೆ ಇಳಿಸಿದ್ದು ಯಾಕೆ ಎಂಬುದರ ಬಗ್ಗೆ ಸರ್ಕಾರ ಸ್ಪಷ್ಟೀಕರಣ ನೀಡಬೇಕು. ಈ ರೀತಿ ನಿರ್ಧಾರ ತೆಗೆದುಕೊಳ್ಳುವ ಮೂಲಕ ಜನರಿಗೆ ಇನ್ನಷ್ಟು ತೊಂದರೆ ನೀಡುತ್ತಿರುವುದು ಯಾಕೆ? ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು. ಅದೇ ವೇಳೆ ಜನರ ಸಮಸ್ಯೆಗಳನ್ನು ನಿವಾರಿಸಲು ಶೀಘ್ರವೇ ಕ್ರಮ ಕೈಗೊಳ್ಳಿ ಎಂದು ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿತು. ಒಬ್ಬ ವ್ಯಕ್ತಿ ದಿನವೊಂದಕ್ಕೆ ಬದಲಾವಣೆ ಮಾಡಬಹುದಾದ ಹಣದ ಮಿತಿಯನ್ನು ರೂ.4,500 ರಿಂದ ರೂ.2,000ಕ್ಕೆ ಇಳಿಸಿ ಹಿಂದಿನ ದಿನ ಕೇಂದ್ರ ಆದೇಶ ಹೊರಸಿತ್ತು. ಈ ಆದೇಶ ಇಂದಿನಿಂದ ಜಾರಿಗೆ ಬಂದಿತು. ಏತನ್ಮಧ್ಯೆ, ನೋಟು ರದ್ದು ತೀರ್ಮಾನದ ವಿರುದ್ಧ ವಿವಿಧ ಹೈಕೋರ್ಟ್ಗಳಲ್ಲಿ ಮತ್ತು ಇತರ ನ್ಯಾಯಾಲಯಗಳಲ್ಲಿ ಸಲ್ಲಿಸಲ್ಪಟ್ಟ ಅರ್ಜಿಗಳಿಗೆ ತಡೆ ನೀಡಿಬೇಕೆಂಬ ಕೇಂದ್ರ ಸರ್ಕಾರದ ಮನವಿಯನ್ನು ಸುಪ್ರೀಂ ಕೋರ್ಟ್ ತಳ್ಳಿ ಹಾಕಿತು. ಕೇಂದ್ರ ಸರ್ಕಾರ ನೋಟು ರದ್ದು ಮಾಡಿರುವ ತೀರ್ಮಾನದಿಂದ ಜನರು ಕಂಗಾಲಾಗಿದ್ದಾರೆ. ಆದ ಕಾರಣ ಈ ನಿರ್ಧಾರವನ್ನು ವಾಪಸ್ ಪಡೆಯಬೇಕು ಎಂದು ಈ ಅರ್ಜಿಯಲ್ಲಿ ಒತ್ತಾಯಿಸಲಾಗಿತ್ತು.
2016:
ಮಂಗಳೂರು: ಮೂಡುಬಿದಿರೆಯ ವಿದ್ಯಾಗಿರಿ ಆವರಣದಲ್ಲಿ ಈದಿನ ಬೆಳಗ್ಗೆ ಕನ್ನಡ ನಾಡು ನುಡಿ ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ವರ್ಣರಂಜಿತ ಮೆರವಣಿಗೆಯೊಂದಿಗೆ ಆರಂಭವಾಯಿತು. 50ಕ್ಕೂ ಅಧಿಕ ಕಲಾತಂಡಗಳ ಮನಮೋಹಕ ಗಾನ, ನೃತ್ಯಗಳೊಂದಿಗೆ ನಡೆದ ಮೆರವಣಿಗೆಯಲ್ಲಿ ಬಂದ ಸಮ್ಮೇಳನದ ಸರ್ವಾಧ್ಯಕ್ಷೆ ಡಾ.ಬಿ.ಎನ್.ಸುಮಿತ್ರಾ ಬಾಯಿ, ಹಿರಿಯ ಸಾಹಿತಿ ಜಯಂತ ಕಾಯ್ಕಿಣಿ, ಸಮ್ಮೇಳನದ ರೂವಾರಿ ಡಾ.ಎಂ.ಮೋಹನ ಆಳ್ವ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್ ಹಾಗೂ ಇತರರು ಪುಂಡಲೀಕ ಹಾಲಂಬಿ ಸಭಾಂಗಣದ ಒಳಗಿನಿಂದ ರತ್ನಾಕರ ವರ್ಣಿ ವೇದಿಕೆಗೆ ಬಂದಾಗ ನೆರೆದಿದ್ದ ಸಾವಿರಾರು ಮಂದಿ ಹರ್ಷೋದ್ಗಾರ ಮಾಡಿದರು. ರಾಜ್ಯದ ಮೂಲೆ ಮೂಲೆಗಳಿಂದ ಬಂದ ಕಲಾತಂಡಗಳು ವೇದಿಕೆಯಲ್ಲಿ ಹಾದು ಹೋಗುತ್ತಿದ್ದಂತೆಯೇ ಇಡೀ ರಾಜ್ಯದ ತುಣುಕೇ ಕಣ್ಣಮುಂದೆ ಕಟ್ಟಿದಂತಾಯಿತು. ಹಿರಿಯ ಸಾಹಿತಿ ಜಯಂತ ಕಾಯ್ಕಿಣಿ ಅವರು ವ್ಯಾಸಪೀಠದಲ್ಲಿದ್ದ ಪುಸ್ತಕವನ್ನು ತೆರೆಯುವ ಮೂಲಕ ಹಾಗೂ ತೆನೆಗೆ ಹಾಲೆರೆಯುವ ಮೂಲಕ 13ನೇ ವರ್ಷದ ಆಳ್ವಾಸ್ ನುಡಿಸಿರಿಗೆ ಚಾಲನೆ ನೀಡಿದರು. ಸಂಸ್ಕೃತಿ ಎಂಬುದು ಒಂದು ಮ್ಯೂಸಿಯಂ ಕಲ್ಪನೆಯಲ್ಲಿ ಇರಬಾರದು, ಅದು ಉದ್ಯಾನವಾಗಬೇಕು. ಜಾತಿ ಮತ, ಭೇದ ಇಲ್ಲದೆ ಒಟ್ಟು ಸೇರುವ ಇಂತಹ ಹಬ್ಬವೇ ನಿಜವಾದ ನುಡಿಸಿರಿ ಎಂದು ಜಯಂತ ಕಾಯ್ಕಿಣಿ ಹೇಳಿದರು. ಸರ್ವಾಧ್ಯಕ್ಷೆ ಸುಮಿತ್ರಾ ಬಾಯಿ ಅವರು ತಮ್ಮ ಅಧ್ಯಕ್ಷ ಭಾಷಣದಲ್ಲಿ ಆಳ್ವಾಸ್ ನುಡಿಸಿರಿಯ ಒಟ್ಟಾರೆ ಕಲ್ಪನೆಯನ್ನು ಕೊಂಡಾಡಿದರು. ನಾವು ಆಗಾಗ ಶರಣದ ಕಾಲದಲ್ಲಿ ಆದಂತಹ ಕ್ರಾಂತಿ ನಡೆಯಬೇಕು ಎಂದು ಹೇಳುತ್ತಲೇ ಇರುತ್ತೇವೆ. ಆದರೆ ವೈಯಕ್ತಿಕ ನೆಲೆಯಲ್ಲಿ ಅದನ್ನು ಜಾರಿಗೆ ತರುವ ವಿಚಾರದಲ್ಲಿ ಕುರುಡಾಗಿದ್ದೇವೆ ಎಂದರು.
2016: ಭೋಪಾಲ್: ರೈತನೊಬ್ಬ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಭೇಟಿ ಮಾಡಲು ಅವಕಾಶ ನೀಡಬೇಕು ಅಥವಾ ಮುಖ್ಯಮಂತ್ರಿ ಅವರೇ ನನ್ನನ್ನು ಭೇಟಿ ಮಾಡಬೇಕು ಎಂದು ಆಗ್ರಹಿಸಿ ಮೊಬೈಲ್ ಟವರ್ ಏರಿ ಕುಳಿತ ಪ್ರಸಂಗ ಭೋಪಾಲ್ನಲ್ಲಿ ಘಟಿಸಿತು. ಬಳಿಕ ಸುರಕ್ಷಿತವಾಗಿ ರೈತನನ್ನು ಕೆಳಕ್ಕಿಳಿಸುವಲ್ಲಿ ಪೊಲೀಸರು ಯಶಸ್ವಿಯಾದರು.
2016: ನವದೆಹಲಿ: ಕೇಂದ್ರ ಸರ್ಕಾರದ ನೋಟು ರದ್ದತಿ ಕ್ರಮವನ್ನು ಪ್ರಶ್ನಿಸಿ ವಿವಿಧ ಹೈಕೊರ್ಟುಗಳು ಮತ್ತು ಆಧೀನ ನ್ಯಾಯಾಲಯಗಳಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಗೆ ತತ್ ಕ್ಷಣಕ್ಕೆ ತಡೆಯಾಜ್ಞೆ ನೀಡಲು ಸುಪ್ರೀಂಕೋರ್ಟ್ ನಿರಾಕರಿಸಿತು. ‘ಸಮಸ್ಯೆ ಎಷ್ಟು ಗಂಭೀರವಾದದು ಎಂಬುದನ್ನು ಇದು ತೋರಿಸುತ್ತದೆ. ಜನ ಪರಿಹಾರಕ್ಕಾಗಿ ಹೈಕೋರ್ಟುಗಳಿಗೆ ಹೋಗುತ್ತಿದ್ದಾರೆ. ಇದು ಗಂಭೀರವಾದ ವಿಷಯ. ಅವರು ಹೋಗಲಿ ಬಿಡಿ’ ಎಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಮತ್ತು ನ್ಯಾಯಮೂರ್ತಿ ಅನಿಲ್ ಆರ್. ದವೆ ಅವರನ್ನು ಒಳಗೊಂಡ ಪೀಠ ಹೇಳಿತು. ಹೈಕೋರ್ಟುಗಳು ಮತ್ತು ಆಧೀನ ನ್ಯಾಯಾಲಯಗಳಲ್ಲಿ ಸಲ್ಲಿಕೆಯಾಗಿರುವ ಇಂತಹ ಎಲ್ಲ ಅರ್ಜಿಗಳ ಮೇಲಿನ ವಿಚಾರಣೆಗಳಿಗೆ ತಡೆ ನೀಡುವಂತೆ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಆಗ್ರಹಿಸಿದ್ದರು. ವಿಚಾರಣೆಯನ್ನು ನವೆಂಬರ್ 25ಕ್ಕೆ ಮುಂದೂಡಿದ ನ್ಯಾಯಾಲಯ, ವರ್ಗಾವಣೆ ಅರ್ಜಿಗಳನ್ನು ಸಲ್ಲಿಸಿ, ನ್ಯಾಯಾಲಯವು ಅವುಗಳನ್ನು ಪರಿಶೀಲಿಸುವುದು ಎಂದು ಅಟಾರ್ನಿ ಜನರಲ್ ಅವರಿಗೆ ಸೂಚಿಸಿತು. ಕೇಂದ್ರ ಸರ್ಕಾರವು ನವೆಂಬರ್ 8ರಂದು 500 ರೂಪಾಯಿ, 1000 ರೂಪಾಯಿಗಳ ನೋಟುಗಳನ್ನು ಕಪ್ಪು ಹಣ ಮತ್ತು ಭ್ರಷ್ಟಾಚಾರ ನಿಗ್ರಹ ಸಲುವಾಗಿ ರದ್ದು ಪಡಿಸಿರುವುದಾಗಿ ಪ್ರಕಟಿಸಿತ್ತು.
2016: ಮಾಪುತು: ಆಫ್ರಿಕಾದ ಮೊಜಾಂಬಿಕ್ನಲ್ಲಿ ತೈಲ ಟ್ಯಾಂಕರ್ ಒಂದು ಸ್ಪೋಟಗೊಂಡು 73 ಜನರು ಮೃತರಾಗಿ, 110 ಕ್ಕೂ ಹೆಚ್ಚು ಜನರು ಗಾಯಗೊಂಡರು. ತೈಲ ಟ್ಯಾಂಕರ್ನಿಂದ ಗ್ರಾಮಸ್ಥರು ತೈಲ ಸಂಗ್ರಹಿಸುತ್ತಿದ್ದ ಸಂದರ್ಭದಲ್ಲಿ ಟ್ಯಾಂಕರ್ ಏಕಾಏಕಿ ಸ್ಪೋಟಗೊಂಡಿತು. ಗಾಯಗೊಂಡಿರುವವರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಮೊಜಾಂಬಿಕ್ ಸರ್ಕಾರ ತನ್ನ ಹೇಳಿಕೆಯಲ್ಲಿ ತಿಳಿಸಿತು. ಗ್ರಾಮಸ್ಥರು ತೈಲ ಟ್ಯಾಂಕರ್ ಮೇಲೆ ದಾಳಿ ನಡೆಸಿ ತೈಲ ಸಂಗ್ರಹಿಸುತ್ತಿದ್ದರೇ ಅಥವಾ ಟ್ಯಾಂಕರ್ ಚಾಲಕರು ಗ್ರಾಮಸ್ಥರಿಗೆ ತೈಲ ಮಾರಾಟ ಮಾಡುತ್ತಿದ್ದರೇ ಎಂಬ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಸರ್ಕಾರ ತಿಳಿಸಿದೆ. ಟ್ಯಾಂಕರ್ ಬುಧವಾರ ಅಪಘಾತಕ್ಕೆ ಈಡಾಗಿತ್ತು. ಅದರಿಂದ ಗ್ರಾಮಸ್ಥರು ತೈಲ ಸಂಗ್ರಹಿಸುತ್ತಿದ್ದರು, ಗುರುವಾರ ಮಧ್ಯಾಹ್ನದ ವೇಳೆಗೆ ಟ್ಯಾಂಕರ್ ಸ್ಪೋಟಗೊಂಡಿದೆ ಎಂದು ಸ್ಥಳೀಯ ಪತ್ರಕರ್ತರೊಬ್ಬರು ತಿಳಿಸಿದರು.
2016: ನವದೆಹಲಿ: ಅಯೋಧ್ಯಾ ಮಂದಿರ ವಿವಾದದ ವಿಷಯ ಬಗ್ಗೆ ಪ್ರತಿದಿನವೂ ವಿಚಾರಣೆ ನಡೆಸಬೇಕು ಎಂಬುದಾಗಿ ಕೋರಿ ಸುಬ್ರಮಣಿಯನ್ ಸ್ವಾಮಿ ಅವರು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ಮುಂದಿನವಾರ ನಡೆಸಲು ಸುಪ್ರೀಂಕೋರ್ಟ್ ಒಪ್ಪಿತು. ಆಗಸ್ಟ್ ತಿಂಗಳಲ್ಲಿ ಸ್ವಾಮಿ ಅವರು ವಿಷಯವನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿ ಅಯೋಧ್ಯಾ ದೇಗುಲ ವಿವಾದದ ವಿಷಯದ ವಿಚಾರಣೆ ಸುಪ್ರೀಂಕೋರ್ಟಿನಲ್ಲಿ ಪ್ರತಿದಿನವೂ ನಡೆಸುವ ಮೂಲಕ ವಿವಾದವನ್ನು ಬೇಗನೆ ಇತ್ಯಥ ಪಡಿಸಬೇಕು ಎಂದು ಹೇಳಿ ವಿಷಯದ ಬಗ್ಗೆ ಸದನದಲ್ಲಿ ಚರ್ಚೆ ನಡೆಯಬೇಕು ಎಂದು ಆಗ್ರಹಿಸಿದ್ದರು. ಶಾಸನಬದ್ಧ ಮಾರ್ಗಗಳ ಮೂಲಕ, ಅದೂ ನ್ಯಾಯಾಲಯಗಳ ಮೂಲಕ ಅಯೋಧ್ಯಾ ಮಂದಿರ ವಿವಾದಕ್ಕೆ ಪರಿಹಾರ ಕಂಡುಕೊಳ್ಳುವುದಾಗಿ ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ನಾವು ಜನತೆಗೆ ಭರವಸೆ ನೀಡಿದ್ದೇವೆ. ಈಗ ಈ ವಿಚಾರವನ್ನು ಬಹುತೇಕ ಎಲ್ಲ ಪಕ್ಷಗಳೂ ಒಪ್ಪಿವೆ ಎಂದು ಅವರು ನುಡಿದರು. ಅಯೋಧ್ಯಾ ಮಂದಿರ ವಿವಾದದ ವಿಷಯ ಪ್ರಸ್ತುತ ಸುಪ್ರೀಂಕೋರ್ಟ್ ಮುಂದೆ ಇದೆ. ವಿಷಯಕ್ಕೆ ಇತ್ಯರ್ಥ ಕಂಡುಕೊಳ್ಳುವ ಸಲುವಾಗಿ ಪ್ರಕರಣದ ವಿಚಾರಣೆಯನ್ನು ಅನುದಿನವೂ ನಡೆಸಬೇಕು ಎಂಬುದನ್ನು ಈಗ ಎಲ್ಲ ಪಕ್ಷಗಳೂ ಒಪ್ಪಿವೆ ಎಂದು ಸ್ವಾಮಿ ಹೇಳಿದರು. ಇದಕ್ಕೆ ಮುನ್ನ 1992ರಲ್ಲಿ ವಿವಾದಿತ ಕಟ್ಟಡವನ್ನು ಕೆಡವಿ ಹಾಕಲಾದ ಅಯೋಧ್ಯೆಯ ನಿವೇಶನದಲ್ಲಿ ರಾಮ ಮಂದಿರವನ್ನು ನಿರ್ಮಸಲು ನಿರ್ದೇಶನ ನೀಡುವಂತೆ ಕೋರಿ ಸ್ವಾಮಿ ಅವರು ಫೆಬ್ರುವರಿಯಲ್ಲಿ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು.
2016: ನವದೆಹಲಿ: ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ ಅವರು ಕಾಂಗ್ರೆಸ್ ಪ್ರಚಾರ ಕಾರ್ಯಗಳಲ್ಲಿ ಗವಹಿಸುವುದರೊಂದಿಗೆ ‘ಮಹತ್ವದ ಪಾತ್ರ’ ವಹಿಸಲಿದ್ದಾರೆ ಎಂದು ಪಕ್ಷದ ಮುಖಂಡರು ತಿಳಿಸಿದರು. ‘ಪ್ರಿಯಾಂಕಾ ಅವರು ಪ್ರಚಾರ ಕಾರ್ಯಗಳಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ ಆದರೆ ಯಾವುದೂ ಅಂತಿಮವಾಗಿಲ್ಲ’ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸಂಜಯ್ ಸಿಂಗ್ ಹೇಳಿದರು. ‘ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳಲು ಪ್ರಿಯಾಂಕಾ ಗಾಂಧಿ ಒಪ್ಪಿಕೊಂಡಿದ್ದಾರೆ. ಅವರ ವೇಳಾಪಟ್ಟಿ ಆಧರಿಸಿ ಸಮಯ ಹೊಂದಿಸಿಕೊಳ್ಳಲಿದ್ದೇವೆ’ ಎಂದು ಉತ್ತರಪ್ರದೇಶ ಕಾಂಗ್ರೆಸ್ ಸಮಿತಿ ಮುಖ್ಯಸ್ಥ ರಾಜ್ ಬಬ್ಬರ್ ತಿಳಿಸಿದರು.
2008: ಬ್ರಿಟಿಷ್ ಕೊಲಂಬಿಯಾ ದ್ವೀಪದ ಕಡಲ ತೀರದಲ್ಲಿ ಅಪಘಾತಕ್ಕೊಳಗಾದ ಪುಟ್ಟ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಒಟ್ಟು ಎಂಟು ಮಂದಿಯಲ್ಲಿ ಕೊಡಗು ಜಿಲ್ಲೆ ಸಿದ್ದಾಪುರದ ಬಿದ್ದಂಡ ಅಜಯ್ ಕಾರ್ಯಪ್ಪ (34) ಸೇರಿದಂತೆ ಏಳು ಜನರು ಸಾವನ್ನಪ್ಪಿದರು.
2008: ಮಾಜಿ ವಿದೇಶಾಂಗ ಸಚಿವ ಕೆ.ನಟವರ್ ಸಿಂಗ್ ಅವರನ್ನು ಬಹುಜನ ಸಮಾಜಪಕ್ಷದಿಂದ ಉಚ್ಚಾಟಿಸಲಾಯಿತು. ನಾಲ್ಕು ತಿಂಗಳ ಹಿಂದೆ ಬಹುಜನ ಸಮಾಜ ಪಕ್ಷ ಸೇರಿದ್ದ ನಟವರ್ ಸಿಂಗ್ ಅವರನ್ನು ಅಶಿಸ್ತು ಹಾಗೂ ಪಕ್ಷ ವಿರೋಧಿ ಚಟುವಟಿಕೆಯ ಕಾರಣ ನೀಡಿ ಉಚ್ಚಾಟಿಸಲಾಯಿತು.
2008: ನಾಡಿನ ಖ್ಯಾತ ತಬಲಾ ವಾದಕ ರಾಜು ಕುಲಕರ್ಣಿ (54) ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ತಮ್ಮ ತಂದೆ ಸುಮನರಾವ ಕುಲಕರ್ಣಿ ಅವರಲ್ಲಿ ತಬಲಾ ಶಿಕ್ಷಣ ಕಲಿತಿದ್ದ ರಾಜು, 1998ರಿಂದ ಬೆಂಗಳೂರಿನಲ್ಲಿ ನೆಲೆಸಿ, ಸಂಗೀತಾಸಕ್ತರಿಗೆ ತಬಲಾ ಕಲಿಸುತ್ತಿದ್ದರು. ಭಾರತರತ್ನ ಭೀಮಸೇನ ಜೋಶಿ, ಜಸರಾಜ್, ಪಂ. ಮಾಧವ ಗುಡಿ, ಮಾಲಿನಿ ರಾಜೂರಕರ, ಅಜಯ ಚಕ್ರವರ್ತಿ, ಕಂಕಣಾ ಬ್ಯಾನರ್ಜಿ ಸೇರಿದಂತೆ ಇತರ ಅಂತಾರಾಷ್ಟ್ರೀಯ ಖ್ಯಾತಿಯ ಸಂಗೀತ ದಿಗ್ಗಜರಿಗೆ ರಾಜು ಕುಲಕರ್ಣಿ ಅವರು ತಬಲಾ ಸಾಥ್ ನೀಡಿದ್ದರು.
2008: ಪ್ರತಿಷ್ಠಿತ ಆಳ್ವಾಸ್ ನುಡಿಸಿರಿ-2008ರ `ನುಡಿಸಿರಿ' ಪ್ರಶಸ್ತಿಯನ್ನು ನಾಡು ನುಡಿಗೆ ಅನುಪಮ ಸೇವೆ ಸಲ್ಲಿಸಿದ ನಾಡೋಜ ದರೋಜಿ ಈರಮ್ಮ, ಗೊ.ರು. ಚನ್ನಬಸಪ್ಪ, ಡಾ. ಸಾ.ಶಿ. ಮರುಳಯ್ಯ, ಹೊಸ್ತೋಟ ಮಂಜುನಾಥ ಭಾಗವತ, ಡಾ. ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟ, ಸದಾನಂದ ಸುವರ್ಣ, ಎ. ಈಶ್ವರಯ್ಯ, ವೈ.ಕೆ. ಮುದ್ದುಕೃಷ್ಣ, ನಾಗತಿಹಳ್ಳಿ ಚಂದ್ರಶೇಖರ, ಬಹ್ರೈನ್ ಕನ್ನಡ ಸಂಘ ಇವರಿಗೆ ನೀಡಲು ತೀರ್ಮಾನಿಸಲಾಯಿತು.
2007: ಬೆಂಗಳೂರಿನ ಅರಮನೆ ಮೈದಾನ ಈದಿನ ಗೋವಿಗಾಗಿ ಮರುಗಿತು, ಗೋವಿನ ಹಾಡನ್ನು ಹಾಡಿ, ಕುಣಿದು ಕುಪ್ಪಳಿಸಿತು. ಕೊನೆಯಲ್ಲಿ ಲಕ್ಷ ಲಕ್ಷ ಬಾರಿ ಗೋವಿಗೆ ಆರತಿ ಬೆಳಗಿ ಗೋವಿನ ಕಣ್ಣಲ್ಲಿ ವಿಶೇಷ ಆಶಾಕಿರಣವೊಂದನ್ನು ಹೊರಹೊಮ್ಮಿಸಿತು. ಗೋ ಸಂರಕ್ಷಣೆಯ ಸಂದೇಶವನ್ನು ಜಗತ್ತಿಗೆ ನೀಡಿತು. 2007ರ ಮೇ ತಿಂಗಳಲ್ಲಿ ಹೊಸನಗರದಲ್ಲಿ ವಿಶ್ವ ಗೋ ಸಮ್ಮೇಳನ ನಡೆಸಿ ಗೋವಿಗಾಗಿಯೇ ತಮ್ಮ ಜೀವನ ಮುಡಿಪು ಎಂದು ಸಾರಿದ ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಅವರ ಬಹುದಿನಗಳ ಕನಸಾದ ಕೋಟಿ ನೀರಾಜನ ರಾತ್ರಿ 9ರ ಸುಮಾರಿಗೆ ಸಂಪನ್ನ ಗೊಳ್ಳುತ್ತಿದ್ದಂತೆಯೇ ಇಡೀ ಅರಮನೆ ಮೈದಾನವೇ ಲಕ್ಷ ದೀಪಗಳಿಂದ ಮಿಂಚಿತು. ಪುರುಷರಿಂದ ಆಗದ ಗೋ ಮಾತೆಯ ಸಂರಕ್ಷಣೆಗೆ ತಾವು ಕಂಕಣ ತೊಟ್ಟಿದ್ದೇವೆ ಎಂಬ ಸೂಚ್ಯ ಸಂದೇಶವನ್ನು ಮಾತೆಯರು ಜಗತ್ತಿಗೆ ಸಾರಿ ಹೇಳಿದರು. ಅಪರೂಪದ ದೇಶೀಯ ಗಿರ್ ತಳಿಯ ಗೋವಿನ ಬೃಹತ್ ಪ್ರತಿಕೃತಿಯನ್ನು ಹೊಂದಿದ್ದ ವೇದಿಕೆ ಎಲ್ಲರನ್ನೂ ಸ್ವಾಗತಿಸಿತು. ಕಾರ್ಯಕ್ರಮಕ್ಕೆ ಬಂದ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಹಿತ ಎಲ್ಲಾ ಗಣ್ಯರೂ ವೇದಿಕೆಯ ಕೆಳಭಾಗದಲ್ಲೇ ಕುಳಿತು ಗೋ ಮಾತೆಗೆ ತಮ್ಮ ಗೌರವ ಸಲ್ಲಿಸಿದರು. ಭಾಷಣ ಮಾಡುವ ಸಂದರ್ಭದಲ್ಲಿ ಮಾತ್ರ ವೇದಿಕೆಯೇರಿ ಭಾಷಣ ಮುಗಿದಂತೆ ಕೆಳಗಿಳಿದು ಬಂದು ಗೋವಿನ ಮುಂದೆ ತಾವೆಲ್ಲ ಸಣ್ಣವರೇ ಎಂಬುದನ್ನು ಮನಸಾರೆ ಒಪ್ಪಿಕೊಂಡರು. ರಾಘವೇಶ್ವರ ಶ್ರೀಗಳು ಗೋ ಸಂರಕ್ಷಣೆಯ ಮಹಾನ್ ಕಾರ್ಯಕ್ಕೆ ಕೈಹಚ್ಚಿ ಈಗಾಗಲೇ ಹಲವು ಮಹತ್ವದ ಕಾರ್ಯಕ್ರಮ ನಡೆಸಿದ್ದಾರೆ. ಕೋಟಿ ನೀರಾಜನ ಮೂಲಕ ಮತ್ತೊಮ್ಮೆ ಗೋವಿನ ಮಹತ್ವವನ್ನು ಸಾರಿದ್ದಾರೆ. ಅವರು ಬಯಸುವ ರೀತಿಯಲ್ಲಿ ಗೋ ಸಂರಕ್ಷಣೆಯ ಕಾರ್ಯಕ್ಕೆ ಸರ್ಕಾರ ಬದ್ಧ ಎಂದು ಯಡಿಯೂರಪ್ಪ ಹೇಳಿದರು. ಕೇಂದ್ರದ ಯೋಜನಾ ಖಾತೆ ರಾಜ್ಯ ಸಚಿವ ಎಂ. ವಿ. ರಾಜಶೇಖರನ್ ಮಾತನಾಡಿದರು. ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ, ಹೃಷಿಕೇಶದ ಚಿದಾನಂದ ಸರಸ್ವತಿ ಮಹಾರಾಜ್ ಆಶೀರ್ವಚನ ನೀಡಿದರು. ರಾಘವೇಶ್ವರ ಶ್ರೀಗಳು ಮಾತನಾಡಿ, ಗೋವಿಗೆ ಆಗುತ್ತಿರುವ ನೋವನ್ನು ಪರಿಪರಿಯಾಗಿ ವಿವರಿಸಿದರು. `ಗೋ ರಾಷ್ಟ್ರವನ್ನಾಗಿ ಮಾಡುವುದೇ ತಮ್ಮ ಗುರಿ, ಪುರುಷರಿಂದ ಈ ಕಾರ್ಯ ಸಾಧ್ಯವಾಗಿಲ್ಲ. ಹೆಣ್ಣಿನ ನೋವನ್ನು ಹೆಣ್ಣು ಮಾತ್ರ ಅರ್ಥ ಮಾಡಿಕೊಳ್ಳಲು ಸಾಧ್ಯ ಎಂಬ ಚಿಂತನೆಯೊಂದಿಗೆ ಮಹಿಳೆಯರು ಗೋ ಮಾತೆಯ ಸಂರಕ್ಷಣೆಗೆ ಮುಂದಾಗಬೇಕು ಎಂದು ಸಾರಲು ಈ ಕಾರ್ಯಕ್ರಮ ನಡೆದಿದೆ. ಮಾತೆಯರು ದುರ್ಗೆಯರಾಗಬೇಕು' ಎಂದರು. ವಿ. ಮನೋಹರ್ ನಿರ್ದೇಶನದಲ್ಲಿ ಗೀತ-ಗಾಯನ ಹಾಗೂ ನೃತ್ಯಗಳು ನಡೆದವು. ನಿರುಪಮಾ ಮತ್ತು ರಾಜೇಂದ್ರ ಹಾಗೂ ಬಳಗದ ಗೋ ವಿಶ್ವರೂಪ ದರ್ಶನ ನೃತ್ಯ ರೂಪಕ ಗಮನ ಸೆಳೆಯಿತು. ಭೂಮಿಯ ಆಕಾರದ ವೇದಿಕೆಯಲ್ಲಿ ನಿಂತಿದ್ದ ಜೀವಂತ ಹಸು ನೆಲದ ಒಳಗಿಂದ ಮೇಲೆದ್ದು ಬರುವಂತೆ ವ್ಯವಸ್ಥೆ ಮಾಡಲಾಗಿತ್ತು. ಗೋವು ಮೇಲೆ ಬರುತ್ತಿದ್ದಂತೆಯೇ ಸಹಸ್ರಾರು ಮಹಿಳೆಯರು ಏಕ ಕಾಲಕ್ಕೆ ಗೋವಿಗೆ ದೀಪ ಬೆಳಗಿದರು.
2007: `ಪಕ್ಷಿ ಸಂಕುಲಗಳ ವರ್ಧನೆಗೆ ಕೃತಕ ಗೂಡುಗಳ ಪ್ರಯೋಗ' ಎಂಬ ಪ್ರಬಂಧವನ್ನು ಮಂಡಿಸಿದ ಮೈಸೂರು ಜಿಲ್ಲೆಯ ದಾಸನೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿನಿ ಮಾದಲಾಂಬಿಕ ಪ್ರಸಕ್ತ ವರ್ಷದ `ಯುವ ವಿಜ್ಞಾನಿ' ಪ್ರಶಸ್ತಿಗೆ ಭಾಜನಳಾದಳು. ಮಂಗಳೂರು ಸಮೀಪದ ಪಿಲಿಕುಳ ನಿಸರ್ಗಧಾಮದಲ್ಲಿ `ಜೀವವೈವಿಧ್ಯ- ನಿಸರ್ಗದ ಪೋಷಣೆ, ನಮ್ಮೆಲ್ಲರ ಭವಿಷ್ಯಕ್ಕಾಗಿ' ಎಂಬ ವಿಷಯಾಧಾರಿತವಾಗಿ ನಡೆದ 15ನೇ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಭಾಗವಹಿಸಿದ್ದ ರಾಜ್ಯದ 310 ಸ್ಪರ್ಧಾಳುಗಳಲ್ಲಿ ದಾಸನೂರಿನ ರೈತ ಶಿವಮಲ್ಲಪ್ಪ ಮತ್ತು ರಾಜಮ್ಮ ದಂಪತಿ ಪುತ್ರಿ ಮಾದಲಾಂಬಿಕೆ ತನ್ನ ವಿಚಾರವನ್ನು ಸಮರ್ಥವಾಗಿ ಮಂಡನೆ ಮಾಡುವ ಮೂಲಕ `ಯುವವಿಜ್ಞಾನಿ' ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಳು.
2007: ಬಾಂಗ್ಲಾದೇಶದಲ್ಲಿ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 2,300ಕ್ಕೆ ಏರಿತು. ಈ ಸಂಖ್ಯೆ 10,000 ದಾಟುವ ಸಂಭವ ಇದೆ ಎಂದು ರೆಡ್ ಕ್ರೆಸೆಂಟ್ ಸೊಸೈಟಿ ಹೇಳಿತು.
2006: ಹಿರಿಯ ಲೇಖಕಿ ಕಾಕೋಳು ಸರೋಜಾ ರಾವ್ (64) ಅವರು ಬೆಂಗಳೂರಿನ ಮಲ್ಲೇಶ್ವರಂನ ರಾಮಕೃಷ್ಣ ನರ್ಸಿಂಗ್ ಹೋಮಿನಲ್ಲಿ ನಿಧನರಾದರು. 60ಕ್ಕೂ ಹೆಚ್ಚು ಕಾದಂಬರಿಗಳನ್ನು ರಚಿಸಿದ್ದ ಕಾಕೋಳು ಅವರ `ಸಂಯುಕ್ತ', `ಕರುಣಾಮಯಿ', `ಮಾಗಿ ಕನಸು', `ಬಾಳೆ ಹೊಂಬಾಳೆ', `ಮಾಂಗಲ್ಯ ಮಾತೆ, `ಇಂದ್ರಜಿತ್' ಮೊದಲಾದ ಕಾದಂಬರಿಗಳು ಚಲನಚಿತ್ರಗಳಾಗಿವೆ. ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ವಿಶ್ವ ಮಹಿಳೆ ಮತ್ತಿತರ ಪುರಸ್ಕಾರಗಳು ಅವರ ಮುಡಿಗೇರಿದ್ದವು.
2006: ಇಂದೋರಿನ ಬಾಲಕಿ ಆಕಾಂಕ್ಷ ಸತತ 61 ಗಂಟೆಗಳ ಕಾಲ ಹಾಡಿ ದಾಖಲೆ ನಿರ್ಮಿಸಿದ ಬೆನ್ನಲ್ಲೇ ಇಂದೋರಿನ ಯುವಕ ದೀಪಕ್ ಗುಪ್ತ (28) ಕೊಯಮತ್ತೂರಿನಲ್ಲಿ ಸತತ 55 ಗಂಟೆ ಸಂಗೀತ ಕಾರ್ಯಕ್ರಮ ನೀಡಿ ಗಿನ್ನೆಸ್ ದಾಖಲೆ ಸ್ಥಾಪಿಸಿದ. ಜರ್ಮನಿಯ ಹಾಡುಗಾರನ ಹೆಸರಿನಲ್ಲಿ ಇದ್ದ `ಗಿನ್ನೆಸ್' ದಾಖಲೆಯನ್ನು ಗುಪ್ತ ಅಳಿಸಿ ಹಾಕಿದ.
2006: `ಇರಾಕ್ ಮೇಲೆ ಅಮೆರಿಕ ಮತ್ತು ಇಂಗ್ಲೆಂಡ್ ನಡೆಸಿದ ದಾಳಿ ಒಂದು ದುರ್ಘಟನೆ' ಎಂದು ಅಲ್ ಜಜೀರಾದ ಹೊಸ ಇಂಗ್ಲಿಷ್ ಭಾಷಾ ಚಾನೆಲ್ ಒಂದಕ್ಕಾಗಿ ಸರ್ ಡೇವಿಡ್ ಫ್ರಾಸ್ಟ್ ಅವರಿಗೆ ನೀಡಿದ ಸಂದರ್ಶನದಲ್ಲಿ ಬ್ರಿಟಿಷ್ ಪ್ರಧಾನಿ ಟೋನಿ ಬ್ಲೇರ್ ಒಪ್ಪಿಕೊಂಡರು. ಸಂದರ್ಶನ ಕಾಲದಲ್ಲಿ ಸರ್ ಡೇವಿಡ್ ಅವರು ಅವರು `ಇರಾಕಿನಲ್ಲಿ ನಡೆಸಿದ ಹಸ್ತಕ್ಷೇಪ ದುರ್ಘಟನೆ ಎಂದು ಭಾವಿಸುವಿರಾ' ಎಂದು ಕೇಳಿದ್ದರು. `ಹೌದು. ಆದರೆ ಅದು ಇರಾಕಿನಲ್ಲಿ ಏಕೆ ಕಷ್ಟಕರ ಎಂಬುದನ್ನು ನಾನು ಜನರಿಗೆ ಹೇಳಬೇಕಾಗಿದೆ. ಅಲ್ ಖೈದಾ ಸಂಘಟನೆಯು ಒಂದು ಕೈಯಲ್ಲಿ ಸುನ್ನಿ ಬಂಡುಕೋರರನ್ನು ಮತ್ತು ಇನ್ನೊಂದು ಕೈಯಲ್ಲಿ ಇರಾನ್ ಬೆಂಬಲಿತ ಶಕ್ತಿಗಳಾದ ಶಿಯಾ ಉಗ್ರಗಾಮಿಗಳನ್ನು ಇಟ್ಟುಕೊಂಡು ಬಹುಸಂಖ್ಯಾತರ ಅಪೇಕ್ಷೆಯಾದ ಶಾಂತಿಯನ್ನು ಹದಗೆಡಿಸುವಂತಹ ನಿರ್ದಿಷ್ಟ ಕಾರ್ಯತಂತ್ರ ರೂಪಿಸಿ ಅಲ್ಪಸಂಖ್ಯಾತರ ಯುದ್ಧದ ಬಯಕೆಯನ್ನು ಬಹುಸಂಖ್ಯಾತರ ಮೇಲೆ ಹೇರಿದ್ದು ನಮಗೆ ಸಮಸ್ಯೆಯಾಯಿತು' ಎಂದು ಬ್ಲೇರ್ ಉತ್ತರಿಸಿದರು.
2005: ಶ್ರೀಲಂಕಾದಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಹಾಲಿ ಪ್ರಧಾನಿ ಮಹಿಂದ ರಾಜಪಕ್ಸೆ ಜಯ ಗಳಿಸಿದರು. ಅವರು ಸಮೀಪದ ಪ್ರತಿಸ್ಪರ್ಧಿ ಮಾಜಿ ಪ್ರಧಾನಿ ರಾನಿಲ್ ವಿಕ್ರಮ್ ಸಿಂಘೆ ಅವರನ್ನು 1.86 ಲಕ್ಷ ಮತಗಳ ಅಂತರದಿಂದ ಸೋಲಿಸಿದರು.
2005: ಇರಾಕ್ ರಾಜಧಾನಿ ಬಾಗ್ದಾದಿನ ವಾಯವ್ಯ ಭಾಗದ ಖಾನಾಕ್ವಿನ್ ಪಟ್ಟಣದಲ್ಲಿ ಶಿಯಾ ಜನಾಂಗದ ಎರಡು ಮಸೀದಿಗಳ ಮೇಲೆ ನಡೆದ ಆತ್ಮಾಹುತಿ ದಾಳಿಯಲ್ಲಿ 100 ಜನ ಹತರಾದರು. 85ಕ್ಕೂ ಹೆಚ್ಚು ಮಂದಿ ಗಾಯಗೊಂಡರು.
1995: ಇಂಟರ್ನೆಟ್ಟಿನಲ್ಲಿ ಸಂಗೀತ ಕಾರ್ಯಕ್ರಮ ಪ್ರಸಾರ ಮಾಡಿದ ಮೊತ್ತ ಮೊದಲ ತಂಡ ಎಂಬ ಹೆಗ್ಗಳಿಕೆಗೆ ರೋಲಿಂಗ್ ಸ್ಟೋನ್ಸ್ ಪಾತ್ರವಾಯಿತು.
1978: ಜೇಮ್ಸ್ ವಾರನ್ ಜೋನ್ಸ್ (1931-1978) ಗುಯಾನಾದಲ್ಲಿ ಅಮೆರಿಕದ ತನ್ನ ಪಂಥದ ಅನುಯಾಯಿಗಳ ಸಾಮೂಹಿಕ ಆತ್ಮಹತ್ಯೆಯ ನೇತೃತ್ವ ವಹಿಸಿದ. ಈ ಘಟನೆ `ಜೋನ್ಸ್ ಟೌನ್ ಮೆಸಾಕರ್' (ಜೋನ್ಸ್ ಟೌನ್ ಹತ್ಯಾಕಾಂಡ) ಎಂದೇ ಖ್ಯಾತಿ ಪಡೆಯಿತು. ಸಯನೈಡ್ ಮಿಶ್ರಿತ ಪಾನೀಯ ಸೇವಿಸಲು ತನ್ನ ಅನುಯಾಯಿಗಳಿಗೆ ಆಜ್ಞಾಪಿಸಿದ ಆತ ತಾನು ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ. ಈ ಘಟನೆಯಲ್ಲಿ 276 ಮಕ್ಕಳು ಸೇರಿ 913 ಮಂದಿ ಸತ್ತರು.
1978: ಚಿತ್ರ ನಿರ್ಮಾಪಕ, ನಿರ್ದೇಶಕ ಧೀರೇಂದ್ರ ಗಂಗೂಲಿ ನಿಧನ.
1954: ಸಾಹಿತಿ ತುಳಸಿ ವೇಣುಗೋಪಾಲ್ ಜನನ.
1946: ಶಾಸನಶಾಸ್ತ್ರ ಬೋಧಕ, ಸಾಹಿತಿ ಡಾ. ಎಚ್. ಎಸ್. ಗೋಪಾಲರಾವ್ ಅವರು ಎಚ್. ಎನ್. ಸೂರ್ಯನಾರಾಯಣರಾವ್- ಮಹಾಲಕ್ಷ್ಮಮ್ಮ ದಂಪತಿಯ ಮಗನಾಗಿ ಬೆಂಗಳೂರು ಉತ್ತರ ತಾಲ್ಲೂಕಿನ ಜುಲ್ಲೇಗೌಡನ ಹಳ್ಳಿಯಲ್ಲಿ ಜನಿಸಿದರು.
1936: ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸುಧಾರಕ ಚಿದಂಬರಂ ಪಿಳ್ಳೈ ನಿಧನ.
1936: ಸಾಹಿತಿ ವಿಶಾಲಾಕ್ಷಿ ದಕ್ಷಿಣಾಮೂರ್ತಿ ಜನನ.
1928: ವಾಲ್ಟ್ ಡಿಸ್ನಿ ಅವರ `ಸ್ಟೀಮ್ ಬೋಟ್ ವಿಲ್ಲೀ' ಜೊತೆಗೆ `ಮಿಕ್ಕಿ ಮೌಸ್' ಜನ್ಮತಾಳಿತು. ಪರದೆಯಲ್ಲಿ ಸದ್ದಿಗೆ ಸರಿಯಾಗಿ ಓಡಾಡಿದ ಮೊತ್ತ ಮೊದಲ ಮಿಕ್ಕಿ ಕಾರ್ಟೂನ್ ಇದಾಗಿತ್ತು. 1988ರಲ್ಲಿ ಮಿಕಿ ಮೌಸ್ ನ 60ನೇ ಹುಟ್ಟುಹಬ್ಬವನ್ನು ವಾಲ್ಟ್ ಡಿಸ್ನಿ ಕಂಪೆನಿಯು ಆಚರಿಸಿತು.
1922: ಸಾಹಿತಿ ಚಂಪಾವತಿ ಮಹಿಷಿ ಜನನ.
1901: ಭಾರತೀಯ ಚಿತ್ರ ನಿರ್ದೇಶಕ ಹಾಗೂ ನಿರ್ಮಾಪಕ ವಿ. ಶಾಂತಾರಾಮ್ (1901-1990) ಹುಟ್ಟಿದ ದಿನ. ಭಾರತೀಯ ಚಿತ್ರೋದ್ಯಮಕ್ಕೆ ನೀಡಿದ ಗಣನೀಯ ಕೊಡುಗೆ ಇವರಿಗೆ 1986ರಲ್ಲಿ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ತಂದು ಕೊಟ್ಟಿತ್ತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment