ನಾನು ಮೆಚ್ಚಿದ ವಾಟ್ಸಪ್

Saturday, November 10, 2018

ಇಂದಿನ ಇತಿಹಾಸ History Today ನವೆಂಬರ್ 10

ಇಂದಿನ ಇತಿಹಾಸ History Today ನವೆಂಬರ್ 10

2018: ಕೊಲಂಬೊ: ಶ್ರೀಲಂಕಾದ ಪ್ರಧಾನಮಂತ್ರಿ ಬದಲಾವಣೆ ಪ್ರಯತ್ನದ ನಂತರ ಉದ್ಭವಿಸಿದ ರಾಜಕೀಯ ಬಿಕ್ಕಟ್ಟಿನ ನಡುವೆ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು  ಮಧ್ಯರಾತ್ರಿ ಸಂಸತ್ತನ್ನು ವಿಸರ್ಜಿಸಿದರು. ಹಿಂದಿನ  ಮಧ್ಯರಾತ್ರಿ ಜಾರಿಗೊಳಿಸಲಾಗಿರುವ ಅಧಿಕೃತ ಅಧಿಸೂಚನೆಯ ಪ್ರಕಾರ ಸಂಸತ್ತಿಗೆ ೨೦೧೯ರ ಜನವರಿ ೫ರಂದು ಸಾರ್ವತ್ರಿಕ ಚುನಾವಣೆ ನಡೆಯಲಿದೆ ಎಂದು ಪ್ರಕಟಿಸಲಾಯಿತು. ಆದರೆ ಈ ಅಧಿಸೂಚನೆಯನ್ನು  ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಲು ಅವಕಾಶವಿದೆ. ಅಧ್ಯಕ್ಷ ಸಿರಿಸೇನಾ ಅವರಿಂದ ವಜಾಗೊಂಡಿರುವ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರು ಸಂಸತ್ ವಿಸರ್ಜನೆಯ ಈ ಕ್ರಮ ತೆಗೆದುಕೊಳ್ಳಲು ಅಧ್ಯಕ್ಷರಿಗೆ ಅಧಿಕಾರವಿಲ್ಲ ಎಂದು ಪ್ರತಿಪಾದಿಸಿದರು. ಕಳೆದ ತಿಂಗಳು ಪ್ರಧಾನಿ ರಾನಿಲ್ ವಿಕ್ರ,ಮ ಸಿಂಘೆ ಮತ್ತು ಅವರ ಸಚಿವ ಸಂಪುಟವನ್ನು ವಜಾಗೊಳಿಸಿ, ಸಂಸತ್ತನ್ನು ಅಮಾನತುಗೊಳಿಸಿದ್ದ ಅಧ್ಯಕ್ಷ ಸಿರಿಸೇನಾ ಅವರು ಮಾಜಿ ಪ್ರಧಾನಿ ಮಹಿಂದ ರಾಜಪಕ್ಸೆ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಿದ್ದರು. ಆದರೆ ವಿಕ್ರಮಸಿಂಘೆ ಅವರು ಪ್ರಧಾನಿಯ ಅಧಿಕೃತ ನಿವಾಸವನ್ನು ತೆರವುಗೊಳಿಸಲು ನಿರಾಕರಿಸಿದ್ದರು. ಸಂಸತ್ ವಿಸರ್ಜನೆ ಕ್ರಮವು "ಅಕ್ರಮ" ಎಂದು ರಾನಿಲ್ ವಿಕ್ರಮಸಿಂಘೆ ಅವರ ಯುನೈಟೆಡ್ ನ್ಯಾಷನಲ್ ಪಾರ್ಟಿ (ಯುಎನ್ಪಿ) ಯ ಸಂಸದರೊಬ್ಬರು ಪ್ರತಿಪಾದಿಸಿದ್ದು, ಅದು ತಿರಸ್ಕೃತವಾಗುವುದು ಎಂಬುದು ತಮ್ಮ ನಂಬಿಕೆ ಎಂದು ಹೇಳಿದರು. ದೇಶದಲ್ಲಿ ರಕ್ತಪಾತವಾಗದಂತೆ ಈ ಸಮಸ್ಯೆಯನ್ನು ಶಾಂತಿಯುತವಾಗಿ ಇತ್ಯರ್ಥ ಪಡಿಸುವಂತೆ ನಾವು ನಾವು ಚುನಾವಣಾ ಆಯೋಗಕ್ಕೆ ಮನವಿ ಮಾಡುತ್ತೇವೆ ಎಂದು ಸಂಸದ ಅಜಿತ್ ಪೆರೇರಾ ಸದ್ದಿ ವಾಹಿನಿಯೊಂದಕ್ಕೆ ತಿಳಿಸಿದರು. ಸಿರಿಸೇನಾ-ರಾಜಪಕ್ಸೆ ಗುಂಪು ಸಂಸತ್ತಿನಲ್ಲಿ ತಮಗೆ ಅಗತ್ಯವಿರುವಷ್ಟು ಸಂಖ್ಯಾಬಲ ಇಲ್ಲದ ಕಾರಣ ಕ್ಷಿಪ್ರ ಚುನಾವಣೆಗೆ ಮನಸ್ಸು ಮಾಡಿದೆ ಎಂದು ವರದಿಗಳು ತಿಳಿಸಿದವು. ಆದರೆ ಇದೇ ವೇಳೆಗೆ ರಾಷ್ಟ್ರೀಯ ಚುನಾವಣೆಗೆ ಸಂಸತ್ತಿನ ಒಪ್ಪಿಗೆಯನ್ನು ಪಡೆಯಬೇಕು ಎಂದು ಯುಪಿಪಿಯು ಬಯಸುತ್ತದೆ ಎಂದು ವರದಿಗಳು ತಿಳಿಸಿದವು. ಅಧ್ಯಕ್ಷ ಸಿರಿಸೇನಾ ಮತ್ತು ಪ್ರಧಾನ ಮಂತ್ರಿಸ್ಥಾನದಿಂದ ವಜಾಗೊಂಡ ರಾನಿಲ್ ವಿಕ್ರಮ್ ಸಿಂಘೆ ಅವರು ೨೦೧೫ರ ಚುನಾವಣೆಯಲ್ಲಿ ಸುದೀರ್ಘ ಕಾಲದಿಂದ ಪ್ರಧಾನಿಯಾಗಿದ್ದ ಮಹಿಂದ ರಾಜಪಕ್ಸೆ ಅವರನ್ನು ಸೋಲಿಸಲು ಪರಸ್ಪರ ಕೈಜೋಡಿಸಿದ್ದರು. ಆದರೆ ಅವರಲ್ಲಿ ಭಿನ್ನಮತಗಳು ಬೆಳೆದು, ಸಿರಿಸೇನಾ ಅವರು ಪ್ರಧಾನಿ ವಿಕ್ರಮಸಿಂಘೆ ಅವರನ್ನು ವಜಾಮಾಡುವುದರೊಂದಿಗೆ ಮೈತ್ರಿಕೂಟವು ಪತನಗೊಂಡಿತ್ತು. ರಾನಿಲ್ ಅವರಿಂದ ದೂರವಾದ ಸಿರಿಸೇನಾ ಅವರು ರಾಜಪಕ್ಸೆ ಅವರೊಂದಿಗೆ ಕೈಜೋಡಿಸಿ ಮಹಿಂದ ರಾಜಪಕ್ಸೆ ಅವರನ್ನು ಪ್ರಧಾನಿಯಾಗಿ ನೇಮಿಸಿರುವುದಾಗಿ ಘೋಷಿಸಿದ್ದರು. ಬಂದರು ಒಂದನ್ನು ಭಾರತಕ್ಕೆ ಗುತ್ತಿಗೆ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಸಿರಿಸೇನಾ ಮತ್ತು ವಿಕ್ರಮಸಿಂಘೆ ಅವರ ಮಧ್ಯೆ ಘರ್ಷಣೆ ಉಂಟಾಗಿ ಬಾಂಧವ್ಯ ಹಳಸಿತ್ತು.  ಸಿರಿಸೇನಾ ಅವರು ವಿಕ್ರಮಸಿಂಘೆ ಅವರನ್ನು ಪ್ರಧಾನಿ ಸ್ಥಾನದಿಂದ ವಜಾಗೊಳಿಸಿರುವುದಾಗಿ ಘೋಷಿಸಿದ ಬಳಿಕ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತ್ತು. ಒಂದೆಡೆಯಲ್ಲಿ ರಾಜಪಕ್ಸೆ ಮತ್ತು ಇನ್ನೊಂದೆಡೆಯಲ್ಲಿ ವಿಕ್ರಮಸಿಂಘೆ ತಾವು ಸರ್ಕಾರದ ಮೇಲೆ ನಿಯಂತ್ರಣ ಹೊಂದಿರುವುದಾಗಿ ಪ್ರತಿಪಾದಿಸಿದರು.ರಾಜಪಕ್ಸೆ ಅವರು ಸಂಸತ್ತಿನಲ್ಲಿ ಬಹುಮತ ಸಾಬೀತು ಪಡಿಸದ ವಿನಃ ಅವರನ್ನು ಪ್ರಧಾನಿಯಾಗಿ ಮಾನ್ಯ ಮಾಡಲಾಗದುಎಂದು ಸಂಸತ್ತಿನ ಸ್ಪೀಕರ್ ಕೂಡಾ ಘೋಷಿಸಿದ್ದರು. ಅಧ್ಯಕ್ಷರ ಕ್ರಮ ಸಂವಿಧಾನ ಬಾಹಿರ ಎಂಬುದಾಗಿ ಪ್ರತಿಪಾದಿಸಿದ ರಾನಿಲ್ ವಿಕ್ರಮಸಿಂಘೆ ಅವರು ಅಧಿಕೃತ ನಿವಾಸವನ್ನು ತೆರವುಗೊಳಿಸಲು ನಿರಾಕರಿಸುವುದರ ಜೊತೆಗೆ ಸಂಸತ್ ಸಮಾವೇಶಕ್ಕೆ ಆಗ್ರಹಿಸಿದ್ದರು.ಈ ಮಧ್ಯೆ ರಾಜಪಕ್ಸೆ ಅವರು ಸಚಿವ ಸಂಪುಟವನ್ನು ರಚಿಸಿ ಖಾತೆಗಳನ್ನೂ ಹಂಚಿದ್ದರು. ರಾನಿಲ್ ವಿಕ್ರಮಸಿಂಘೆ ಪಕ್ಷದ ನಾಲ್ವರಿಗೂ ಖಾತೆಗಳನ್ನು ನೀಡಿದ್ದರು. ಈ ಘಟನಾವಳಿಗಳು ಹಿಂಸಾಚಾರಕ್ಕೂ ಕಾರಣವಾದವು. ಪದಚ್ಯುತ ತೈಲ ಸಚಿವರ ಅಂಗರಕ್ಷಕ ಅವರ ಕಚೇರಿಯ ಹೊರಗೆ ಪ್ರತಿಭಟನಾಕಾರರ ಗುಂಪಿನತ್ತ ಗುಂಡುಹಾರಿಸಿದಾಗ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದ.  ಈ ಮಧ್ಯೆ ಚೀನವು  ರಾಜಪಕ್ಸೆ ಅವರನ್ನು ಅಭಿನಂದಿಸಿದರೆ, ಭಾರತ, ಐರೋಪ್ಯ ಒಕ್ಕೂಟ ಮತ್ತು ಅಮೆರಿಕ ಸಂವಿಧಾನವನ್ನು ಗೌರವಿಸಬೇಕೆಂದು ಕರೆ ನೀಡಿದ್ದವು.


2018: ಬೆಂಗಳೂರು:ನಾನು ಬೆಂಗಳೂರಿನಲ್ಲಿಯೇ ಇದ್ದೆ, ಹೈದರಾಬಾದಿಗೂ ಹೋಗಿಲ್ಲ, ಎಲ್ಲಿಗೂ ಹೋಗಿಲ್ಲ, ಏನೂ ತಪ್ಪು ಮಾಡಿಲ್ಲಎಂಬುದಾಗಿ ಪ್ರತಿಪಾದಿಸಿ ವಿಡಿಯೋ ಒಂದನ್ನು ಬಿಡುಗಡೆ ಮಾಡಿದ ಬಳ್ಳಾರಿಯ ಗಣಿ ಉದ್ಯಮಿ, ಮಾಜಿ ಕರ್ನಾಟಕ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಲಂಚ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಂಟ್ರಲ್ ಕ್ರೈಮ್ ಬ್ರ್ಯಾಂಚ್ (ಸಿಸಿಬಿ) ಮುಂದೆ ವಿಚಾರಣೆಗೆ ಹಾಜರಾದರು. ಪೋನ್ಜಿ ಯೋಜನೆ ನಡೆಸುತ್ತಿರುವ ಆರೋಪಿತ ವ್ಯಕ್ತಿಯೊಬ್ಬನ ಜೊತೆಗೆ ಹೊಂದಿರಬಹುದಾದ ಸಂಪರ್ಕಗಳ ಬಗ್ಗೆ ಬೆಂಗಳೂರು ಅಪರಾಧ ಶಾಖೆಯು ರೆಡ್ಡಿ ಅವರನ್ನು ವಿಚಾರಣೆಗೆ ಗುರಿಪಡಿಸಿತು. ೬೦೦ ಕೋಟಿ ರೂಪಾಯಿಗಳ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ತನಿಖೆಗೆ ಗುರಿಯಾಗಿರುವ ಸೈಯದ್ ಅಹ್ಮದ್ ಫರೀದ್ ಎಂಬ ಆರೋಪಿ ತಾನು ೧೮ ಕೋಟಿ ರೂಪಾಯಿಗಳನ್ನು ಜನಾರ್ದನ ರೆಡ್ಡಿ ಅವರಿಗೆ ಜಾರಿ ನಿರ್ದೇಶನಾಲಯದ ಪ್ರಕರಣ ಒಂದನ್ನು ಇತ್ಯರ್ಥ ಪಡಿಸುವ ಸಲುವಾಗಿ ನೀಡಿರುವುದಾಗಿ ಪ್ರತಿಪಾದಿಸಿದ್ದಾನೆ ಎಂದು ಬೆಂಗಳೂರು ಪೊಲೀಸರು ಹೇಳಿದ್ದರು. ಪೊಲೀಸರ ಪ್ರಕಾರ ಫರೀದ್ ೧೫,೦೦೦ ಮಂದಿಗೆ ತನ್ನ ಅಂಬಿಡೆಂಟ್ ಮಾರ್ಕೆಟಿಂಗ್ ಫೈನಾನ್ಸ್ ಲಿಮಿಟೆಡ್ ಕಂಪನಿಯ ಮೂಲಕ ಸುಮಾರು ೬೦೦ ಕೋಟಿ ರೂಪಾಯಿಗಳಷ್ಟು ವಂಚಿಸಿದ್ದಾನೆ. ಹೂಡಿಕೆಯ ಮೇಲೆ ಶೇಕಡಾ ೪೦-೫೦ರಷ್ಟು ಬಡ್ಡಿ ನೀಡುವ ಭರವಸೆಯನ್ನು ಕೊಡುವ ಮೂಲಕ ಫರೀದ್ ವಂಚನೆ ಎಸಗಿದ್ದ. ಕಂಪೆನಿಯ ಕೆಲವು ಸದಸ್ಯರು ಕಳೆದ ವರ್ಷ ದೂರು ಆತನ ವಿರುದ್ಧ ದೂರು ದಾಖಲಿಸಿದ ಬಳಿಕ, ಜಾರಿ ನಿರ್ದೇಶನಾಲಯವು ಆತನ ಕಚೇರಿ, ಮನೆಗಳ ಮೇಲೆ ವರ್ಷ ದಾಳಿ ನಡೆಸಿ, ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿತ್ತು.ನಗರ ಪೊಲೀಸ್ ಇಲಾಖೆಯ ಸೆಂಟ್ರಲ್ ಕ್ರೈಮ್ ಬ್ರ್ಯಾಂಚ್ ಫರೀದ್ ವ್ಯವಹಾರಗಳಿಗೆ ಸಂಬಂಧಿಸಿದಂತೆ ತನಗೆ ಬಂದ ದೂರುಗಳನ್ನು ಆಧರಿಸಿ ಪರ್ಯಾಯ ತನಿಖೆ ನಡೆಸುತ್ತಿದೆ ಎಂದು ಬೆಂಗಳೂರು ಪೊಲೀಸ್ ಕಮೀಷನರ್ ಟಿ. ಸುನೀಲ್ ಕುಮಾರ್ ತಿಳಿಸಿದ್ದರು.’ತನಿಖೆ ನಡೆಸುತ್ತಿದ್ದಾಗ ಅಧಿಕಾರಿಗಳಿಗೆ ೧೮ ಕೋಟಿ ರೂಪಾಯಿ ವಹಿವಾಟಿನ ನಿರ್ದಿಷ್ಟ ಮಾಹಿತಿ ಲಭಿಸಿತು. ಮಾಹಿತಿಯ ಪ್ರಕಾರ ಹಣವನ್ನು ಅಂಬಿಡೆಂಟ್‌ನಿಂದಅಂಬಿಕಾ ಜ್ಯುವೆಲ್ಲರ್‍ಸ್ಹೆಸರಿನಲ್ಲಿ ಚಿನ್ನಾಭರಣ ವ್ಯವಹಾರ ನಡೆಸುತ್ತಿರುವ ರಮೇಶ್ ಕೊಥಾರಿಗೆ ವರ್ಗಾಯಿಸಲಾಗಿದೆಎಂಬುದು ಬೆಳಕಿಗೆ ಬಂತು ಎಂದು ಸುನೀಲ್ ಕುಮಾರ್ ಹೇಳಿದ್ದರು.ವಿಚಾರಣೆಗೆ ಗುರಿ ಪಡಿಸಿದಾಗ ಕೊಥಾರಿ, ತಾನು ೫೭ ಕಿ.ಗ್ರಾಂ. ಚಿನ್ನವನ್ನು ರಾಜ್ ಮಹಲ್ ಜ್ಯುವೆಲ್ಲರ್‍ಸ್‌ನ್ನು ನಡೆಸುತ್ತಿರುವ ರಮೇಶ್‌ಗೆ ನೀಡಿದುದಾಗಿ ತಿಳಿಸಿದ್ದಲ್ಲದೆ, ಆತ ಆತ ಚಿನ್ನವನ್ನು ರೆಡ್ಡಿ ಅವರ ಸಹಾಯಕ ಅಲಿ ಖಾನ್ ಗೆ ಹಸ್ತಾಂತರಿಸಿರುವುದಾಗಿಯೂ ಹೇಳಿದ್ದಾನೆ ಎಂದು ಸುನೀಲ್ ಕುಮಾರ್ ತಿಳಿಸಿದ್ದರು. ರೆಡ್ಡಿ ಮತ್ತು ಇತರರು ಜಾರಿ ನಿರ್ದೇಶನಾಲಯದ ಪ್ರಕರಣದಿಂದ ಪಾರಾಗಲು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರಿಂದ ತಾನು ಹಣವನ್ನು ನೀಡಿರುವುದಾಗಿ ಫರೀದ್ ತಿಳಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ವಿಷಯಕ್ಕೆ ಸಂಬಂಧಿಸಿದಂತೆ ರೆಡ್ಡಿ, ಅಲಿಖಾನ್ ಮತ್ತು ಫರೀದ್ ಮಧ್ಯೆ ಕೆಲವು ಸಭೆಗಳೂ ನಡೆದಿದ್ದವು ಎಂದು ಪೊಲೀಸರು ತಿಳಿಸಿದ್ದರು. ಜನಾರ್ದನ ರೆಡ್ಡಿ ವಿಡಿಯೋ ಬಿಡುಗಡೆ ಮಾಡಿ ಅದರಲ್ಲಿ ತಾವು ನಿರಪರಾಧಿ ಎಂಬುದಾಗಿ ಪ್ರತಿಪಾದಿಸಿದ್ದಲ್ಲದೆ, ತಾವು ಹೈದರಾಬಾದಿನಲ್ಲಿ ಅಡಗಿಲ್ಲ, ಬೆಂಗಳೂರಿನಲ್ಲೇ ಇದ್ದು ಪೋನ್ಜಿ ಪ್ರಕರಣದಲ್ಲಿ ಬೆಂಗಳೂರು ಪೊಲೀಸ್ ಇಲಾಖೆಯ ಮುಂದೆ ತನಿಖೆಗೆ ಹಾಜರಾಗುವುದಾಗಿ ತಿಳಿಸಿದರು. ಇದಕ್ಕೆ ಮುನ್ನ ವಾರಾರಂಭದಲ್ಲಿ ರೆಡ್ಡಿ ಅವರ ಬಳ್ಳಾರಿ ನಿವಾಸದಲ್ಲಿ ಶೋಧ ನಡೆಸಲಾಗಿತ್ತು. ರೆಡ್ಡಿ ಅವರ ವಿಶ್ವಾಸಿ ಶ್ರೀರಾಮುಲು ಸಹೋದರಿ, ಬಿಜೆಪಿ ಅಭ್ಯರ್ಥಿ ಜೆ. ಶಾಂತಾ ಅವರು ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಪರಾಭವಗೊಂಡ ಎರಡು ದಿನಗಳ ಬಳಿಕ ದಾಳಿ ನಡೆಸಲಾಗಿತ್ತು.೨೦೦೪ರಿಂದ ಬಿಜೆಪಿ ಕೈಯಲ್ಲಿ ಇದ್ದ ಬಳ್ಳಾರಿ ಲೋಕಸಭಾ ಕ್ಷೇತ್ರವನ್ನು ಉಪಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು.


2018: ನವದೆಹಲಿ: ವಿಮಾನದ ಪೈಲಟ್ಅಪಹರಣ ಎಚ್ಚರಿಕೆನೀಡಿದ್ದನ್ನು ಅನುಸರಿಸಿ ಏರಿಯಾನ ಅಫ್ಘನ್ ವಿಮಾನವನ್ನು ಗಗನಕ್ಕೆ ಏರದಂತೆ ತಡೆದ ಹಾಗೂ ಭದ್ರತಾ ಸಿಬ್ಬಂದಿ ವಿಮಾನಕ್ಕೆ ಮುತ್ತಿಗೆ ಹಾಕಿದ ಘಟನೆ ದೆಹಲಿ ವಿಮಾನ ನಿಲ್ದಾಣದಲ್ಲಿ ಘಟಿಸಿತು. ಏನಿದ್ದರೂ, ವಿಮಾನದ ಕ್ಯಾಪ್ಟನ್ ತಾನು ಅಚಾತುರ್ಯದಿಂದ ಎಚ್ಚರಿಕೆ ಬಟನ್ ಒತ್ತಿದ್ದುದಾಗಿ ಹೇಳಿದ ಬಳಿಕ ಆತಂಕ ನಿವಾರಣೆಯಾಯಿತು.೧೨೪ ಮಂದಿ ಪ್ರಯಾಣಿಕರು ಮತ್ತು ಮಂದಿ ಸಿಬ್ಬಂದಿ ಇದ್ದ ದೆಹಲಿ-ಕಂದಹಾರ ವಿಮಾನವು ಮಧ್ಯಾಹ್ನ .೩೦ ಗಂಟೆಗೆ ಗಗನಕ್ಕೆ ಏರಲು ಸಿದ್ಧವಾಗಿತ್ತು. ಇದೇ ವೇಳೆಗೆ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ವಿಮಾನ ಅಪಹರಣದ ಎಚ್ಚರಿಕೆ ಗಂಟೆ ಕೇಳಿತು. ತತ್ ಕ್ಷಣವೇ ವಿಮಾನ ಹಾರಿಸದಂತೆ ಸೂಚನೆ ನೀಡಲಾಯಿತು ಮತ್ತು ಭದ್ರತಾ ಸಿಬ್ಬಂದಿ ವಿಮಾನವನ್ನು ಸುತ್ತುವರಿದರು.ಆದರೆ ವಿಮಾನದ ಕ್ಯಾಪ್ಟನ್ ಸಹ-ಪೈಲಟ್‌ಗೆ ಆಕಸ್ಮಿಕವಾಗಿ ಏರ್ ಟ್ರಾಫಿಕ್ ಕಂಟ್ರೋಲ್‌ಗೆ (ಎಟಿಸಿ) ಎಚ್ಚರಿಕೆ ಕಳುಹಿಸಿದರೆ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು ಎಂದು ಹೇಳುತ್ತಿದ್ದುದು ಬಳಿಕ ಬೆಳಕಿಗೆ ಬಂತು.ಅಪಹರಣ ಬೆದರಿಕೆ ಗಂಟೆ ಮೊಳಗಿದ್ದು ಕ್ಯಾಪ್ಟನ್ ಆಕಸ್ಮಿಕವಾಗಿ ಗುಂಡಿ ಒತ್ತಿದ್ದರಿಂದ ಎಂಬುದು ಗೊತ್ತಾದ ಬಳಿಕ ವಿಮಾನದ  ಮುಂದಿನ ಪಯಣಕ್ಕೆ ಅನುಮತಿ ನೀಡಲಾಯಿತು ಎಂದು ನಾಗರಿಕ ವಿಮಾನಯಾನ ಭದ್ರತಾ ಅಧಿಕಾರಿ ತಿಳಿಸಿದರು. ಆತಂಕದ ಮಧ್ಯೆ ಪ್ರಯಾಣಿಕರು ಭದ್ರತಾ ತಪಾಸಣೆಗಳನ್ನು ಎದುರಿಸ ಬೇಕಾಯಿತು.ನಾಗರಿಕ ವಿಮಾನಯಾನ ಬ್ಯೂರೋದ ಭದ್ರತಾ ಮಹಾನಿರ್ದೇಶಕ ಕುಮಾರ್ ರಾಜೇಶ್ ಚಂದ್ರ ಅವರ ಪ್ರಕಾರ ವಿಮಾನದ ಕ್ಯಾಪ್ಟನ್ ಪೊಕಾಯಿ ನವೊಮಿ ಅವರು ಭದ್ರತಾ ಅಧಿಕಾರಿಗಳಿಗೆ ದೆಹಲಿಯ ವೈಮಾನಿಕ ಸಿಬ್ಬಂದಿ ವಿಮಾನ ಅಪಹರಣದ ಯೋಜನೆಗಳ ಬಗ್ಗೆ ತಿಳಿಸುತ್ತಿದ್ದರು ಎಂದು ಹೇಳಲಾಗಿದೆ. ಎಟಿಸಿಗೆ ಅಪಹರಣ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಕೋಡ್ ೭೫೦೦ನ್ನು ಒತ್ತುವ ಬಗ್ಗೆ ಸಹ ಪೈಲಟ್‌ಗೆ ವಿವರಿಸುವ ವೇಳೆಯಲ್ಲಿ ಕ್ಯಾಪ್ಟನ್ ಅಚಾತುರ್ಯದಿಂದ ಅಪಹರಣ ಭೀತಿಗೆ ಕಾರಣವಾದ ಕೋಡ್‌ನ್ನು ಒತ್ತಿದರು ಎಂದು ಹೇಳಲಾಯಿತು.


2018: ನವದೆಹಲಿ: ಕಾಂಗ್ರೆಸ್ ಪಕ್ಷವು ತನ್ನ ಛತ್ತೀಸ್‌ಗಢದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಒಂದು ದಿನದ ಬಳಿಕ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಧ್ಯಕ್ಷ ಅಮಿತ್ ಶಾ ಅವರು ರಾಯ್ ಪುರದಲ್ಲಿ ಪಕ್ಷದ ಭರವಸೆಗಳ ಪಟ್ಟಿಯನ್ನು ಬಿಡುಗಡೆ ಮಾಡಿ, ಮುಖ್ಯಮಂತ್ರಿ ರಮಣ್ ಸಿಂಗ್ ನೇತೃತ್ವದಲ್ಲಿ ರಾಜ್ಯವು ಬಹುತೇಕ ನಕ್ಸಲೀಯ ಹಾವಳಿಯಿಂದ ಮುಕ್ತಗೊಂಡಿದೆ ಎಂದು ಪ್ರತಿಪಾದಿಸಿದರು.ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡುವ ಸಂದರ್ಭದಲ್ಲಿ ಮುಖ್ಯಮಂತ್ರಿ ರಮಣ್ ಸಿಂಗ್ ಅವರು ಮಹಿಳೆಯರಿಗೆ ತಮ್ಮ ಉದ್ಯಮ ಸ್ಥಾಪನೆಗಾಗಿ ಲಕ್ಷ ರೂಪಾಯಿಗಳವರೆಗಿನ ಬಡ್ಡಿ ರಹಿತ ಸಾಲವನ್ನು ಒದಗಿಸಲಾಗುವುದು ಎಂದು ಭರವಸೆ ನೀಡಿದರು.’ಸಂಕಲ್ಪ ಪತ್ರಶೀರ್ಷಿಕೆಯ ಚುನಾವಣಾ ಪ್ರಣಾಳಿಕೆಯು ಛತ್ತೀಸ್‌ಗಢದಲ್ಲಿ ಚಲನಚಿತ್ರ ನಗರಿ (ಫಿಲ್ಮ್ ಸಿಟಿ) ಸ್ಥಾಪನೆ, ೧೨ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ, ಸಮವಸ್ತ್ರ ವಿತರಣೆ ಇತ್ಯಾದಿ ಭರವಸೆ ಕೊಟ್ಟಿತು.  ‘ಬಿಜೆಪಿ ಆಳ್ವಿಕೆಯ ಅಡಿಯಲ್ಲಿ, ಛತ್ತೀಸ್‌ಗಢವು ಕಲ್ಯಾಣರಾಜ್ಯವಾಗಿದೆ. ಎಂಜಿಎನ್‌ಆರ್‌ಇಜಿಎ ಸೇರಿದಂತೆ ವಿವಿಧ ಯೋಜನೆಗಳನ್ನು ಭ್ರಷ್ಟಾಚಾರ ಮುಕ್ತಗೊಳಿಸಲಾಗಿದೆಎಂದು ಅಮಿತ್ ಶಾ ಹೇಳಿದರು. ಕೌಶಲ್ಯಾಭಿವೃದ್ಧಿಯನ್ನು ಶಾಸನಬದ್ಧಗೊಳಿಸಿದ ಮೊದಲ ರಾಜ್ಯ ಛತ್ತೀಸ್‌ಗಢ ಎಂದು ಅವರು ನುಡಿದರು. ಪ್ರಮುಖ ರಾಜ್ಯದಲ್ಲಿ ರಮಣ್ ಸಿಂಗ್ ನೇತೃತ್ವದಲ್ಲಿ ಬಿಜೆಪಿಯು ತನ್ನ ಅಧಿಕಾರವನ್ನು ನಾಲ್ಕನೇ ಬಾಋಇಗೆ ಉಳಿಸಿಕೊಳ್ಳುವುದು ಎಂಬ ವಿಶ್ವಾಸವನ್ನೂ ಅಮಿತ್ ಶಾ ವ್ಯಕ್ತ ಪಡಿಸಿದರು. ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಅವರು ಛತ್ತೀಸ್‌ಗಢದಲ್ಲಿ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದರು. ರೈತಸಾಲಮನ್ನಾ, ಸ್ವಾಮಿನಾಥನ್ ಆಯೋಗದ ಶಿಫಾರಸುಗಳ ಪ್ರಕಾರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಮತ್ತು ಸಾರಾಯಿ ಮಾರಾಟ ನಿಷೇಧದ ಭರವಸೆಯನ್ನು ಕಾಂಗ್ರೆಸ್ ಪ್ರಣಾಳಿಕೆ ನೀಡಿತ್ತು. ಛತ್ತೀಸ್‌ಗಢದಲ್ಲಿ ಮೊದಲ ಹಂತದ ಚುನಾವಣೆಗೆ ಕೇವಲ ಎರಡು ದಿನಗಳಷ್ಟೇ ಬಾಕಿ ಉಳಿದಿದ್ದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಬಿಜೆಪಿ ಮುಖ್ಯಸ್ಥ ಅಮಿತ್ ಶಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರಾಜ್ಯದ ವಿವಿಧೆಡೆ ಪ್ರಚಾರಸಭೆಗಳಲ್ಲಿ ಪಾಲ್ಗೊಂಡರು.

2016: ಕ್ಯಾಲಿಫೋರ್ನಿಯಾ:  ಇದು ಆಟಿಕೆಯಲ್ಲ, ಬದಲಿಗೆ ನಿಜವಾದ ಪ್ರಾಣಿ...! ಹೌದು. ಆಟಿಕೆಯಂತೆ ಕಾಣುವ ನೇರಳೆ ಬಣ್ಣದ ಪ್ರಾಣಿ ಕ್ಯಾಲಿಫೋರ್ನಿಯಾದಲ್ಲಿ ಕಂಡುಬಂದಿತುನದಿ ತೀರದಲ್ಲಿ ಇದೇ ಮೊದಲ ಬಾರಿಗೆ ಇಂಥದ್ದೊಂದು ಪ್ರಾಣಿಯನ್ನು ನೋಡಿದ ಜನರು ಹೌಹಾರಿ ಹೋದರಂತೆ. ಇದು ನಿಧಾನವಾಗಿ ಜನರತ್ತ ಬರುತ್ತಲೇ ಜನರು ಅಲ್ಲಿಂದ ಕಾಲ್ಕಿತ್ತರು.  ಧೈರ್ಯವಂತರು ಫೋಟೊ ತೆಗೆದುಕೊಂಡಿದ್ದರೆ, ಇನ್ನು ಕೆಲವರು ಇದರ ವಿಡಿಯೊ ಕೂಡ ಮಾಡಿದರುಫೋಟೊ ತೆಗೆದವರು, ವಿಡಿಯೊ ಮಾಡಿಕೊಂಡವರೆಲ್ಲ ಇದನ್ನು ಫೇಸ್ಬುಕ್ನಲ್ಲಿ ಅಪ್ಲೋಡ್ಮಾಡುತ್ತಿದ್ದಂತೆಯೇ ಸುದ್ದಿ ಕಾಳ್ಗಿಚ್ಚಿನಂತೆ ಎಲ್ಲೆಡೆ ಹರಿದು ಅದನ್ನು ನೋಡಲು ಜನಸಾಗರವೇ ಬಂದಿತ್ತಂತೆ. ಆದರೆ ಅಷ್ಟು ಹೊತ್ತಿನವರೆಗೆ ಇದು ಅಲ್ಲಿ ಇದ್ದರೆ ತಾನೆ...? ಪರಾರಿಯಾಗಿದೆ. ಬಂದ ಜನರೆಲ್ಲಾ ನಿರಾಸೆಯಿಂದ ವಾಪಸಾದರುಈಗ ಮುಂದಿನದ್ದು ಸಂಶೋಧಕರ ಕೆಲಸ. ಫೋಟೊ ಪಡೆದುಕೊಂಡಿರುವ ಸಂಶೋಧಕರು ಇದು ಯಾವ ಪ್ರಾಣಿ, ನಿಜವಾಗಿ ಇದು ಪ್ರಾಣಿ ಹೌದೋ, ಅಲ್ಲವೋ... ಇದು ಎಲ್ಲಿಂದ ಬಂದಿದೆ... ಇತ್ಯಾದಿಯಾಗಿ ಸಂಶೋಧನೆಯಲ್ಲಿ ತೊಡಗಿದ್ದಾರೆ. ಶೀಘ್ರದಲ್ಲಿ ಇದಕ್ಕೊಂದು ಹೆಸರುನಾಮಕರಣವಾದರೂ ಅಚ್ಚರಿಯಿಲ್ಲ.

 2016: ನ್ಯೂಯಾರ್ಕ್: ಸ್ತ್ರೀ ದ್ವೇಷಿ ನಮಗೆ ಬೇಕಿಲ್ಲ’, ‘ಅಮೆರಿಕ ಫ್ಯಾಸಿಸ್ಟ್ದೇಶವಲ್ಲ’, ‘ಟ್ರಂಪ್ ನಮ್ಮ ಅಧ್ಯಕ್ಷನಲ್ಲ’... ನ.8ರಂದು ನಡೆದ ಮತದಾನದಲ್ಲಿ ಡೊನಾಲ್ಡ್ಟ್ರಂಪ್ಅಮೆರಿಕದ ಮುಂದಿನ ಅಧ್ಯಕ್ಷರಾಗಿ ಆಯ್ಕೆ ಆಗಿರುವುದನ್ನು ಖಂಡಿಸಿ, ಅಮೆರಿಕದ ವಿವಿಧೆಡೆ ಸಾವಿರಾರು ಜನರು ನಡೆಸಿದ ಪ್ರತಿಭಟನೆಗಳಲ್ಲಿ ಈ ಘೋಷಣೆಗಳು ಕೇಳಿ ಬಂದವು. ಚುನಾವಣೆಯ ಫಲಿತಾಂಶವನ್ನು ಖಂಡಿಸಿಸೋಷಿಯಲಿಸ್ಟ್ ಆಲ್ಟರ್ನೇಟಿವ್ಸ್ಎಂಬ ಸಂಘಟನೆ ಪ್ರತಿಭಟನೆಯನ್ನು ಆಯೋಜಿಸಿತ್ತು. ಮಕ್ಕಳಿಂದ ವೃದ್ಧರವರೆಗೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಫಿಲಡೆಲ್ಫಿಯ, ಬಾಸ್ಟನ್, ಸಿಯಾಟಲ್, ಲಾಸ್ಏಂಜಲೀಸ್‌, ಅಟ್ಲಾಂಟ, ಆಸ್ಟಿನ್, ಸ್ಯಾನ್ಫ್ರಾನ್ಸಿಸ್ಕೊಗಳ ಹಲವೆಡೆ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಜನರು ಟ್ರಂಪ್ವಿರುದ್ಧ ಘೋಷಣೆ ಕೂಗಿದರು. ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಹಿಂದಿನ ದಿನವೂ ವಾಷಿಂಗ್ಟನ್ಡಿ.ಸಿಯಲ್ಲಿರುವ ಶ್ವೇತಭವನದ ಎದುರು ಕೆಲವರು ಪ್ರತಿಭಟನೆ ನಡೆಸಿದ್ದರು. ಇಲ್ಲಿ ಮೇಣದಬತ್ತಿ ಬೆಳಗುವ ಮೂಲಕವೂ ಪ್ರತಿಭಟನೆ ನಡೆಸಲಾಗಿತ್ತು. ನ್ಯೂಯಾರ್ಕ್ನಲ್ಲಿ ಟ್ರಂಪ್ಅವರ ಕಚೇರಿ ಇರುವ ಟ್ರಂಪ್ಟವರ್ಸಮೀಪ ಪ್ರತಿಭಟನಾಕಾರರು ರಸ್ತೆ ತಡೆ ನಡೆಸಿದರು. ಇದರಿಂದಾಗಿ ವಹಿವಾಟು ಕೆಲಕಾಲ ಸಂಪೂರ್ಣ ಸ್ಥಗಿತಗೊಂಡಿತ್ತು. ಲಾಸ್ ಏಂಜಲೀಸ್ನಲ್ಲಿ ನಡೆದ ಪ್ರತಿಭಟನೆ ವೇಳೆ ಟ್ರಂಪ್ಪ್ರತಿಕೃತಿಯನ್ನು ಸುಡಲಾಯಿತು.
ಟೋಕಿಯೋ: ಕೋಟ್ಯಂತರ ರೂ. ಹಣ ಸುರಿದು ಐಷಾರಾಮಿ ಮನೆ ನಿರ್ಮಾಣ ಮಾಡುವವರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಆದರೆ, ಜಪಾನ್ನಲ್ಲಿ ವ್ಯಕ್ತಿಯೋರ್ವ ಅನುಪಯುಕ್ತ ವಸ್ತು ಬಳಕೆ ಮಾಡಿಕೊಂಡು ಮನೆ ನಿರ್ಮಾಣ ಮಾಡಿದರು. ಇದು ಮನೆ ಮಾತ್ರವಲ್ಲ ಇಲ್ಲಿ ಬಾರ್ ಕೂಡ ನಿರ್ಮಾಣ ಮಾಡಲಾಯಿತು. ವಿಭಿನ್ನ ರೀತಿಯ ಮನೆ ಎಲ್ಲರ ಗಮನ ಸೆಳೆಯಿತು. ಮನೆಯ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿ ಮಾಡಿತು. ಈ ಮನೆ ಸಂಪೂರ್ಣವಾಗಿ ಪರಿಸರಸ್ನೇಹಿಯಾಗಿದ್ದು, ಮುರುಕು ಗಾಜು, ಹಳೆಯ ಪೈಪ್ಗಳನ್ನು ಬಳಕೆ ಮಾಡಿಕೊಂಡು ನಿರ್ಮಾಣ ಮಾಡಲಾಯಿತು. ಇದನ್ನು ಹಿರೋಶೊ ನಕಮುರಾ ಎಂಬ ವಾಸ್ತು ಶಿಲ್ಪಿ ನಿರ್ಮಾಣ ಮಾಡಿದರು.  ಇದಕ್ಕೆ ಡಬ್ಲ್ಯುಎಎನ್ 2016 ಸುಸ್ಥಿರ ಮನೆ ನಿರ್ಮಾಣ ಪ್ರಶಸ್ತಿ ಸಹ ದೊರೆಕಿತು. ಇಂದೊಂದು ತೀರಾ ಅಪರೂಪದ ಮನೆಯಾಗಿದೆ. ಮನೆ ನಿರ್ಮಾಣಕ್ಕೆ  ಬೇಕಾದ ವಸ್ತುಗಳನ್ನು ಬೇರೆ ಕಡೆಗಳಿಂದ ಒಟ್ಟು ಮಾಡಿ ನಿರ್ಮಾಣ ಮಾಡಿದ್ದೇವೆ. ರೀತಿ ಮನೆ ನಿರ್ಮಾಣ ಮಾಡಿದರೆ ಪರಿಸರ ಉಳಿಸಲು ಸಾಧ್ಯ. ಮನೆ ವಿಭಿನ್ನ ರೀತಿ ಕಾಣುವುದರ ಜತೆಗೆ ವಸ್ತುಗಳ ಮರು ಬಳಕೆ ಮಾಡಿದಂತಾಗುತ್ತದೆ ಎಂದು ಅವರು ಹೇಳಿದರು. 


2008: ಒಂದೂವರೆ ದಶಕದ ಕಾಲ ಭಾರತದ ಕ್ರಿಕೆಟಿನಲ್ಲಿ ನಕ್ಷತ್ರದಂತೆ ಮಿನುಗಿದ್ದ ಸೌರವ್ ಚಂಡಿದಾಸ್ ಗಂಗೂಲಿ ಮಹಾರಾಷ್ಟ್ರದ ನಾಗಪುರದ ವಿದರ್ಭ ಕ್ರಿಕೆಟ್ ಸಂಸ್ಥೆಯ ನೂತನ ಕ್ರೀಡಾಂಗಣದಲ್ಲಿ ಕಿಕ್ಕಿರಿದು ಸೇರಿದ್ದ ಸಾವಿರಾರು ಕ್ರಿಕೆಟ್ ಅಭಿಮಾನಿಗಳ ಸಮ್ಮುಖದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಪೂರ್ಣ ವಿದಾಯ ಹೇಳಿದರು. ಗಾವಸ್ಕರ್- ಬಾರ್ಡರ್ ಟ್ರೋಫಿ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ `ದಾದಾ' ವೃತ್ತಿ ಜೀವನದ ಕೊನೆಯ ಪಂದ್ಯವಾಗಿ ಇತಿಹಾಸದ ಪುಟ ಸೇರಿತು.

2008: ಭಯೋತ್ಪಾದನೆ ಇಸ್ಲಾಂ ಧರ್ಮಕ್ಕೆ ವಿರುದ್ಧವಾದದ್ದು ಎಂಬ ದಾರುಲ್ ಉಲೂಮ್ ದಿಯೊಬಂದ್ (ದೇವಬಂದ್) ಇಸ್ಲಾಂ ಅಕಾಡೆಮಿಕ್ ಸೆಂಟರಿನ ಫತ್ವಾಕ್ಕೆ (ಧಾರ್ಮಿಕ ಆದೇಶ) ಹೈದರಾಬಾದಿನಲ್ಲಿ ನಡೆದ ಮುಸ್ಲಿಮ್ ಧಾರ್ಮಿಕ ಮುಖಂಡರ ಮತ್ತು ಶಿಕ್ಷಕರ ರಾಷ್ಟ್ರೀಯ ಸಮಾವೇಶದಲ್ಲಿ ಸಹಮತ ವ್ಯಕ್ತಪಡಿಸಲಾಯಿತು. ಜಮಾತ್ ಉಲೆಮಾ ಇ ಹಿಂದ್ ಸಮಾವೇಶದಲ್ಲಿ ರಾಷ್ಟ್ರದ ವಿವಿಧ ಭಾಗಗಳಿಂದ ಬಂದಿದ್ದ ಸುಮಾರು ಆರು ಸಾವಿರ ಧಾರ್ಮಿಕ ಮುಖಂಡರು ಹಾಗೂ ಶಿಕ್ಷಕರು ಭಾಗವಹಿಸಿದ್ದರು. ಈ ಸಮಾವೇಶದಲ್ಲಿ ಅಂಗೀಕರಿಸಲಾದ ಗೊತ್ತುವಳಿಯನ್ನು ಹೈದರಾಬಾದ್ ನಿರ್ಣಯ ಎಂದು ಕರೆಯಲಾಯಿತು. ಇಸ್ಲಾಮ್ ಮತ್ತು ಭಯೋತ್ಪಾದನೆಗೆ ಸಂಬಂಧವೇ ಇಲ್ಲ, ಇಸ್ಲಾಂ ಅಕಾಡೆಮಿಕ್ ಸೆಂಟರಿನ ಫತ್ವಾಕ್ಕೆ ಸಹಮತವಿದೆ, ಅನಗತ್ಯ ಹಿಂಸಾಚಾರಕ್ಕೆ ಇಸ್ಲಾಮಿನ ವಿರೋಧವಿದೆ, ಶಾಂತಿ ಕದಡುವ ಹಾಗೂ ರಕ್ತಪಾತದ ಕೃತ್ಯಗಳಿಗೆ ವಿರೋಧವಿದೆ ಎಂಬ ಮಹತ್ವದ ನಿರ್ಣಯವನ್ನು ಈ ಸಮಾವೇಶದಲ್ಲಿ ಅಂಗೀಕರಿಸಲಾಯಿತು. ಒಳ್ಳೆಯ ಕೆಲಸಗಳಿಗೆ ಸಹಕಾರ ಮನೋಭಾವದಿಂದ ಕೆಲಸ ಮಾಡಬೇಕೆ ವಿನಾ ಪಾಪ ಕೃತ್ಯಗಳಿಗೆ ಮತ್ತು ದಮನಕಾರಿ ಕೃತ್ಯಗಳಿಗಲ್ಲ ಎಂದು ನಿರ್ಣಯದಲ್ಲಿ ತಿಳಿಸಲಾಯಿತು.

2008: ಟಿಪ್ಪರ್ ಒಂದಕ್ಕೆ ವೇಗವಾಗಿ ಬಂದ ಬೈಕ್ ಒಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಬೈಕ್ ಸವಾರ ಚಲನಚಿತ್ರ ನಟ, ನಿರ್ಮಾಪಕ ದೇವದತ್ತ (37) ಮೃತರಾದ ಘಟನೆ ಮೈಸೂರಿನ ಕುವೆಂಪುನಗರದ ವಿಶ್ವಮಾನವ ಜೋಡಿ ರಸ್ತೆಯಲ್ಲಿ ನಡೆಯಿತು. ಮೈಸೂರಿನವರೇ ಆದ ದೇವದತ್ತ ಇತ್ತೀಚೆಗೆ ನಾಲ್ಕೈದು ಮಂದಿಯ ಜೊತೆ ಸೇರಿ `ಟೀಂ'ಎನ್ನುವ ಚಲನ ಚಿತ್ರವನ್ನು ನಿರ್ಮಿಸುತ್ತಿದ್ದರು.

2008: ಇರಾಕಿನ ಸುನ್ನಿ ಜನಾಂಗದ ಪ್ರಾಬಲ್ಯವಿರುವ ಜಿಲ್ಲೆಯೊಂದರ ಮಾರುಕಟ್ಟೆ ಪ್ರದೇಶದಲ್ಲಿ ಎರಡು ಬಾಂಬುಗಳು ಸ್ಫೋಟಿಸಿದ ಪರಿಣಾಮ ಕನಿಷ್ಠ 25 ಜನರು ಮೃತರಾಗಿ, ಸುಮಾರು 50 ಮಂದಿ ಗಾಯಗೊಂಡರು. ದಾಳಿಕೋರರು ಮೊದಲಿಗೆ ಅಧಾಮಿಯಾ ಪ್ರದೇಶದಲ್ಲಿ ಕಾರು ಬಾಂಬ್ ಸ್ಫೋಟಿಸಿ, ನಂತರ ಆತ್ಮಹತ್ಯಾ ದಾಳಿ ನಡೆಸಿದರು.

2008: ಅಮೆರಿಕ ನೇತೃತ್ವದ ಸಮ್ಮಿಶ್ರ ಪಡೆಯು ಉಗ್ರರನ್ನು ಗುರಿಯಾಗಿಸಿ ಪೂರ್ವ ಆಫ್ಘನಿನ ಖೋಸ್ಟ್ ಪ್ರಾಂತ್ಯದಲ್ಲಿ ವಾಯು ದಾಳಿ ನಡೆಸಿದ ಪರಿಣಾಮ ಖಾಸಗಿ ರಸ್ತೆ ನಿರ್ಮಾಣ ಕಂಪೆನಿಯೊಂದರ ಕನಿಷ್ಠ 14 ಭದ್ರತಾ ಸಿಬ್ಬಂದಿ ಮೃತರಾದರು.

2008: ವಾಯವ್ಯ ಪಾಕಿಸ್ಥಾನದಲ್ಲಿ ಇಸ್ಲಾಮಿಕ್ ಉಗ್ರರು ಮತ್ತು ಸರ್ಕಾರಿ ಪಡೆಗಳ ನಡುವೆ ನಡೆದ ವಾಯುದಾಳಿ ಮತ್ತು ಕಾಳಗದಲ್ಲಿ ಮೂವರು ಯೋಧರು ಸೇರಿದಂತೆ ಕನಿಷ್ಠ 54 ಮಂದಿ ಮೃತರಾದರು. ಆಫ್ಘನ್ ಗಡಿಯಲ್ಲಿನ ಮೋರ್ಗಾ ಪ್ರದೇಶದಲ್ಲಿ ಈ ಸಂಘರ್ಷ ನಡೆಯಿತು.

2008: ನ್ಯೂಯಾರ್ಕಿನ ವಾಲ್ ಸ್ಟ್ರೀಟ್ ಜರ್ನಲಿನ 50 ಜನರ ಜಾಗತಿಕ ಪಟ್ಟಿಯಲ್ಲಿ ಇಂದ್ರಾ ನೂಯಿ ಮೊದಲುಗೊಂಡು ಒಟ್ಟು ಮೂವರು ಭಾರತೀಯ ಮಹಿಳೆಯರು ಸ್ಥಾನ ಗಿಟ್ಟಿಸಿದರು. ಪೆಪ್ಸಿ ಕಂಪೆನಿಯ ಮುಖ್ಯಸ್ಥರಾದ ಇಂದ್ರಾ ನೂಯಿ ಎರಡನೇ ಸ್ಥಾನ ಪಡೆಯುವುದರೊಂದಿಗೆ ಮೊದಲ ಹತ್ತು ಜನರಲ್ಲಿ ಒಬ್ಬರು ಎನಿಸಿದರೆ; ಸಿಸ್ಕೊದ ಮುಖ್ಯ ತಾಂತ್ರಿಕ ಅಧಿಕಾರಿ ಪದ್ಮಶ್ರೀ ವಾರಿಯರ್ (31ನೇ ಸ್ಥಾನ) ಹಾಗೂ ಐ ಎನ್ ಎಕ್ಸ್ ಮೀಡಿಯಾದ ಮುಖ್ಯ ಕಾರ್ಯನಿರ್ವಾಹಕರಾದ ಇಂದ್ರಾಣಿ ಮುಖರ್ಜಿ 41ನೇ ಸ್ಥಾನ) ಈ ಪಟ್ಟಿಗೆ ಸೇರಿದ ಇತರ ಇಬ್ಬರು ಭಾರತೀಯ ಮಹಿಳೆಯರು. ಫೆಡರಲ್ ಡಿಪಾಸಿಟ್ ಇನ್ಶೂರೆನ್ಸ್ ಕಾರ್ಪೊರೇಷನ್ನಿನ ಅಧ್ಯಕ್ಷರಾದ ಶೀಲಾ ಬಯರ್ ಎಲ್ಲಕ್ಕಿಂತ ಮೇಲಿನ ಸ್ಥಾನ ಪಡೆದರು.

2007: ವಿಶೇಷ ಆರ್ಥಿಕ ವಲಯ ಸ್ಥಾಪನೆಗೆ ಸರ್ಕಾರ ಫಲವತ್ತಾದ ಕೃಷಿ ಭೂಮಿ ಸ್ವಾಧೀನಪಡಿಸಿಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿತು. ರಾಜ್ಯ ಸರ್ಕಾರದ ಭೂಸ್ವಾಧೀನ ಪ್ರಕ್ರಿಯೆ ಪ್ರಶ್ನಿಸಿ ಪಂಜಾಬಿನ ಹೋಶಿಯಾರ್ ಪುರ ಜಿಲ್ಲೆಯ ರೈತರಾದ ದೇವಿಂದರ್ ಸಿಂಗ್ ಮತ್ತಿತರರ ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಎಸ್.ಪಿ.ಸಿನ್ಹಾ ಹಾಗೂ ಹರ್ಜೀತ್ ಸಿಂಗ್ ಬೇಡಿ ಅವರನ್ನೊಳಗೊಂಡ ಪೀಠವು ಈ ತೀರ್ಪು ನೀಡಿತು. ಜೊತೆಗೆ ಈ ಸಂಬಂಧ ರಾಜ್ಯ ಸರ್ಕಾರಕ್ಕೆ 25,000 ರೂ ದಂಡವನ್ನೂ ನ್ಯಾಯಾಲಯ ವಿಧಿಸಿತು. ವಿಶೇಷ ಆರ್ಥಿಕ ವಲಯ ಸ್ಥಾಪಿಸಲು ಯಾವುದೇ ಕಂಪೆನಿಗೆ ಭೂಮಿ ನೀಡುವಾಗ ಅದು ಫಲವತ್ತಾದ ಕೃಷಿ ಭೂಮಿಯೇ ಅಲ್ಲವೇ ಎಂಬುದನ್ನು ಸರ್ಕಾರ ಖಾತರಿ ಮಾಡಿಕೊಳ್ಳಬೇಕು. ಫಲವತ್ತಾದ ಭೂಮಿ ಅಲ್ಲ ಎಂದು ದೃಢಪಡಿಸಿಕೊಂಡೇ ಮುಂದಿನ ಹೆಜ್ಜೆ ಇಡಬೇಕು ಎಂದು ಸುಪ್ರೀಂಕೋರ್ಟ್ ತಿಳಿಸಿತು. ಈ ಸಂಬಂಧ ನಿಯಮಗಳು ಇರುವುದರಿಂದ ಸರ್ಕಾರ ಅವುಗಳನ್ನು ಕಡೆಗಣಿಸುವ ಪ್ರಶ್ನೆಯೇ ಉದ್ಭವಿಸಬಾರದು ಎಂದು ಹೇಳಿದ ಪೀಠವು, ರೈತರ ಜಮೀನು ಸ್ವಾಧೀನ ಪ್ರಕ್ರಿಯೆ ಎತ್ತಿಹಿಡಿದು ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ ನೀಡಿದ ಆದೇಶ ಸರಿಯಾದುದಲ್ಲ ಎಂದು ಹೇಳಿತು.

2007: ಸರ್ಕಾರಿ ವೈದ್ಯರ ನೇಮಕಾತಿ ನಡೆಯುತ್ತಿದ್ದ ಸಂದರ್ಭದಲ್ಲಿ ಬ್ರಿಟಿಷ್ ಹಾಗೂ ಯೂರೋಪಿಯನ್ ವೈದ್ಯರಿಗೆ ಸರ್ಕಾರ ನೀಡುತ್ತಿದ್ದ ಪ್ರಾಶಸ್ತ್ಯದ ಕ್ರಮ `ಕಾನೂನು ಬಾಹಿರ' ಎಂದು ಲಂಡನ್ ಹೈಕೋರ್ಟ್ ಹೇಳಿತು. ಉನ್ನತ ಮಟ್ಟದ ಪರಿಣಿತ ವಲಸೆ ಕಾರ್ಯಕ್ರಮದಡಿಯಲ್ಲಿ (ಎಚ್ಎಸ್ಎಂಪಿ) ವೈದ್ಯರನ್ನು ನೇಮಕ ಮಾಡಿಕೊಳ್ಳುವಾಗ ತಾರತಮ್ಯ ನೀತಿ ಅನುಸರಿಸುತ್ತಿದ್ದ ಆರೋಗ್ಯ ಇಲಾಖೆಯ ಕ್ರಮ ಕಾನೂನು ಬಾಹಿರ ಎಂದು ಮೂವರು ನ್ಯಾಯಾಧೀಶರನ್ನು ಒಳಗೊಂಡ ಪೀಠ ತೀರ್ಪು ನೀಡಿತು. ಸರ್ಕಾದ ಕ್ರಮದ ವಿರುದ್ಧ ಭಾರತೀಯ ವೈದ್ಯರು ಅರ್ಜಿ ಸಲ್ಲಿಸಿದ್ದರು. ಭಾರತೀಯ ವೈದ್ಯರ ಸಂಘಟನೆ `ಬ್ರಿಟಿಷ್ ಅಸೋಸಿಯೇಷನ್ ಆಫ್ ಫಿಜಿಸಿಯನ್ ಆಫ್ ಇಂಡಿಯನ್ ಒರಿಜಿನ್ (ಬಿಎಪಿಐಒ)' ಸುಮಾರು 16 ತಿಂಗಳು ಕಾಲ ಕಾನೂನು ಹೋರಾಟ ನಡೆಸಿತು. ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಅಂತಾರಾಷ್ಟ್ರೀಯ ವೈದ್ಯರನ್ನು ನೇಮಕ ಮಾಡಿಕೊಳ್ಳುವ ಸಂದರ್ಭದಲ್ಲಿ ಸರ್ಕಾರ ಎರಡು ರೀತಿಯ ಪಟ್ಟಿಯನ್ನು ತಯಾರಿಸಿತ್ತು. ಮೊದಲನೇ ಪಟ್ಟಿ ಬ್ರಿಟಿಷ್ ಹಾಗೂ ಯೂರೋಪಿಯನ್ ವೈದ್ಯರದ್ದಾದರೆ, ಇನ್ನೊಂದು ಭಾರತೀಯರು ಸೇರಿದಂತೆ ಇತರ ರಾಷ್ಟ್ರಗಳ ವೈದ್ಯರ ಪಟ್ಟಿ. ಮೊದಲನೇ ಪಟ್ಟಿಯಲ್ಲಿರುವ ವೈದ್ಯರಿಂದ ಸ್ಥಾನ ಭರ್ತಿಯಾಗದಿದ್ದಾಗ ಮಾತ್ರ ಎರಡನೇ ಪಟ್ಟಿಯನ್ನು ಪರಿಶೀಲಿಸಲಾಗುತ್ತಿತ್ತು. ಇದರಿಂದ 16 ಸಾವಿರ ಸಾಗರೋತ್ತರ ವೈದ್ಯರಿಗೆ ತೊಂದರೆ ಉಂಟಾಯಿತು. ಸರ್ಕಾರದ ಈ ಆದೇಶವನ್ನು ಪ್ರಶ್ನಿಸಿ ಭಾರತೀಯ ವೈದ್ಯರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

2006: ಹದಿನಾರು ವರ್ಷದ ಬಾಲೆ ಅಕಾಂಷ ಜಾಚಕ್ ನಿರಂತರವಾಗಿ 61 ಗಂಟೆಗಳ ಕಾಲ ಹಾಡುವ ಮೂಲಕ ಇಂದೋರಿನಲ್ಲಿ ಗಿನ್ನೆಸ್ ದಾಖಲೆ ಸೃಷ್ಟಿಸಿದಳು. ನವೆಂಬರ್ 7ರಿಂದ ನವೆಂಬರ್ 9ರ ಮಧ್ಯರಾತ್ರಿಯವರೆಗೆ ಆಕೆ ನಿರಂತರವಾಗಿ 725 ಹಾಡುಗಳನ್ನು ಹಾಡಿ ಜನರನ್ನು ರಂಜಿಸಿದಳು.

2006: ಆಧುನಿಕ ವಚನಕಾರ ಶಿವಕವಿ ಸಂಗಮೇಶ ಹೊಸಮನಿ (90) ರಾಣೆಬೆನ್ನೂರಿನಲ್ಲಿ ನಿಧನರಾದರು. ಮೂಲತಃ ಹುನಗುಂದ ತಾಲ್ಲೂಕಿನ ರಾಮವಾಡಗಿ ಗ್ರಾಮದವರಾದ ಸಂಗಮೇಶ ರಾಣೆಬೆನ್ನೂರಿನಲ್ಲಿ ಹತ್ತು ವರ್ಷಗಳಿಂದ ವಾಸವಾಗಿದ್ದರು.

2006: `ಶೇನ್' ಚಿತ್ರದಲ್ಲಿ ಬಾಡಿಗೆ ಹಂತಕನಾಗಿ ನಟಿಸಿ ಖ್ಯಾತಿಯ ಶಿಖರ ತಲುಪಿದ್ದ ಹಾಲಿವುಡ್ ನಟ ಜಾಕ್ ಪಲಾನ್ಸ್ (87) ಲಾಸ್ ಏಂಜೆಲಿಸ್ನಲ್ಲಿ ನಿಧನರಾದರು.

2006: ಮದುವೆಯಾದ 11 ವರ್ಷಗಳ ಬಳಿಕ ಬಾಲಿವುಡ್ ನಟಿ ಶ್ರೀದೇವಿ ತನ್ನನ್ನು ತ್ಯಜಿಸಿರುವುದಾಗಿ ಪ್ರತಿಪಾದಿಸಿ ಆಂಧ್ರಪ್ರದೇಶದ ಗುಂಟೂರು ನಿವಾಸಿ ವಿಚರಪು ರಾಮಕೃಷ್ಣ ಗೌಡ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾ ಮಾಡಿತು. ತಾನು ಕಾನೂನು ಬದ್ಧವಾಗಿ ಶ್ರೇದೇವಿಯನ್ನು 15-3-1992ರಲ್ಲಿ ಮದುವೆಯಾಗಿದ್ದು ಆಕೆ 2003ರಲ್ಲಿ ತನ್ನನ್ನು ತ್ಯಜಿಸಿದ್ದಾಳೆ ಎಂದು ರಾಮಕೃಷ್ಣ ಗೌಡ ಚೆನ್ನೈ ಕೌಟುಂಬಿಕ ನ್ಯಾಯಾಲಯಕ್ಕೆ ದೂರು ನೀಡಿದ್ದ. 2004ರ ಮಾರ್ಚ್ 26ರಂದು ಕೌಟುಂಬಿಕ ನ್ಯಾಯಾಲಯ ಶ್ರೀದೇವಿಗೆ ನೋಟಿಸ್ ನೀಡಿತ್ತು. ಶ್ರೀದೇವಿ ಉತ್ತರಿಸುವ ಬದಲು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದರು. ಹೈಕೋರ್ಟ್ ಆಕೆಯ ಅರ್ಜಿಯನ್ನು ಪುರಸ್ಕರಿಸಿತು. ಗೌಡ ಈ ಹೈಕೋರ್ಟ್ ತೀರ್ಪಿನ ವಿರುದ್ಧ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದ.

2006: ಭಾರತದ ಪ್ರಮುಖ ಕಂಪೆನಿ ಟಾಟಾ ಸಮೂಹವು ಪ್ರಸಿದ್ಧ ಬೋಸ್ಟನ್ ರಿಜ್ ಕಾರ್ಲಟನ್ ಹೋಟೆಲನ್ನು 17 ಕೋಟಿ ಡಾಲರ್ಗೆ ಖರೀದಿಸಲು ಮತ್ತು ಅದಕ್ಕೆ `ತಾಜ್ ಬೋಸ್ಟನ್' ಹೆಸರು ಇಡಲು ನಿರ್ಧರಿಸಿತು.

2001: ಬ್ಯೂನೋಸ್ ಐರಿಸ್ಸಿನ ಬೊಂಬೊನೇರಾ ಕ್ರೀಡಾಂಗಣದಲ್ಲಿ ಅರ್ಜೆಂಟೀನಾದ ಅತ್ಯುತ್ತಮ ಫುಟ್ಬಾಲ್ ಆಟಗಾರ ಡೀಗೋ ಮರಡೋನಾ ಅವರು ತಮ್ಮ `ವಿದಾಯ ಆಟ'ವನ್ನು ಆಡಿದರು.

2000: ಭಾರತ ಮತ್ತು ಬಾಂಗ್ಲಾದೇಶ ಡಾಕ್ಕಾದಲ್ಲಿ ತಮ್ಮ ಮೊತ್ತ ಮೊದಲ ಕ್ರಿಕೆಟ್ ಟೆಸ್ಟ್ ಆಡಿದವು.

1998: ಲಾಹೋರಿನಲ್ಲಿ ಪಾಕಿಸ್ಥಾನ ಮತ್ತು ಆಸ್ಟ್ರೇಲಿಯಾ ನಡುವಣ ಒಂದು ದಿನದ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಮೊತ್ತ ಮೊದಲ ಬಾರಿಗೆ ನಾಲ್ಕು ಸೆಂಚುರಿಗಳು ಸಿಡಿದವು. ಪಾಕಿಸ್ಥಾನದ ಇಯಾಜ್ ಅಹಮದ್ ಮತ್ತು ಯೂಸುಫ್ ಯೌಹಾನ ಅವರು ಶತಕಗಳನ್ನು ಬಾರಿಸಿದರೆ, ಆಸ್ಟ್ರೇಲಿಯಾದ ಆಡಮ್ ಗಿಲ್ ಕ್ರಿಸ್ಟ್ ಮತ್ತು ರಿಕಿ ಪಾಂಟಿಂಗ್ ಶತಕಗಳನ್ನು ಬಾರಿಸಿದರು. ಆಸ್ಟ್ರೇಲಿಯಾ 6 ವಿಕೆಟುಗಳ ಜಯ ಗಳಿಸಿತು.

1994: ಕನ್ನಡದ ಮೊದಲ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಕೆ.ವಿ. ಪುಟ್ಟಪ್ಪ (ಕುವೆಂಪು) ನಿಧನರಾದರು.

1990: ಚಂದ್ರಶೇಖರ್ ಅವರು ಭಾರತದ ನೂತನ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

1989: ಅಯೋಧ್ಯೆಯ ರಾಮಜನ್ಮಭೂಮಿಯ್ಲಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಶಂಕುಸ್ಥಾಪನೆ ನೆರವೇರಿತು.

1983: ಮೈಕ್ರೋಸಾಫ್ಟ್ ಕಾರ್ಪೊರೇಷನ್ ನ್ಯೂಯಾರ್ಕ್ ನಗರದಲ್ಲಿ `ವಿಂಡೋಸ್'ನ್ನು ಔಪಚಾರಿಕವಾಗಿ ಪ್ರಕಟಿಸಿತು.

1982: ಸೋವಿಯತ್ ನಾಯಕ ಲಿಯೋನಿದ್ ಬ್ರೆಜ್ನೇವ್ ತಮ್ಮ 75ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಮೃತರಾದರು.

1970: ಪ್ರವಾಸೋದ್ಯಮಕ್ಕಾಗಿ ಚೀನಾದ ಮಹಾಗೋಡೆಯನ್ನು ತೆರೆಯಲಾಯಿತು.

1948: ಸಾಹಿತಿ ವೇಣುಗೋಪಾಲ ಕಾಸರಗೋಡು ಜನನ.

1948: ಸಾಹಿತಿ ಬಿ.ವಿ. ಸತ್ಯನಾರಾಯಣರಾವ್ ಜನನ.

1933: ಸಾಹಿತಿ ಕೆ.ಎಸ್. ಕರುಣಾಕರನ್ ಜನನ.

1931: ಸಾಹಿತಿ ಬಿ.ಆರ್. ನಾಗೇಶ್ ಜನನ.

1926: ಸಾಹಿತಿ ಆದ್ಯ ರಾಮಾಚಾರ್ಯ ಜನನ.

1925: ಬ್ರಿಟಿಷ್ ಚಿತ್ರನಟ ರಿಚರ್ಡ್ ಬರ್ಟನ್ (1925-1984) ಹುಟ್ಟಿದ ದಿನ. ಇವರು ಚಿತ್ರನಟಿ ಎಲಿಜಬೆತ್ ಟೇಲರ್ ಅವರನ್ನು ಮದುವೆಯಾಗಿದ್ದರು.

1924: ಸಾಹಿತಿ ಕ.ವೆಂ. ರಾಜಗೋಪಾಲ ಜನನ.

1905: ಸಹೃದಯ, ಸುಸಂಸ್ಕೃತ ಹಾಸ್ಯದ `ರಾಶಿ' ಕಾವ್ಯನಾಮದ ಸಾಹಿತಿ ಡಾ. ಎಂ. ಶಿವರಾಂ (10-11-1905ರಿಂದ 13-1-1984) ಅವರು ರಾಮಸ್ವಾಮಯ್ಯ- ಸೀತಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಹುಟ್ಟಿದರು.

1848: ಆಧುನಿಕ ಭಾರತದ ಸ್ಥಾಪಕರಲ್ಲಿ ಒಬ್ಬರಾದ ಸುರೇಂದ್ರನಾಥ ಬ್ಯಾನರ್ಜಿ (1848-1925) ಹುಟ್ಟಿದ ದಿನ. ಬ್ರಿಟಿಷ್ ಕಾಮನ್ವೆಲ್ಥ್ ಅಡಿಯಲ್ಲೇ ಹೆಚ್ಚಿನ ಸ್ವಾಯತ್ತತೆ ನೀಡಬೇಕು ಎಂದು ಇವರು ಪ್ರಬಲವಾಗಿ ಪ್ರತಿಪಾದಿಸಿದ್ದರು.

No comments:

Post a Comment