ಇಂದಿನ ಇತಿಹಾಸ History Today ನವೆಂಬರ್ 16
2018: ಶಬರಿಮಲೈ/ ಕೋಚಿ: ಎಲ್ಲ ವಯಸ್ಸಿನ ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ ಸುಪ್ರೀಂಕೋರ್ಟಿನ ತೀರ್ಪು ಜಾರಿಗೆ ಕಾಲಾವಕಾಶ ಕೋರಿ ಸುಪ್ರೀಂಕೋರ್ಟಿಗೆ ಮೇಲ್ಮನವಿ ಸಲ್ಲಿಸಲು ತಿರುವಾಂಕೂರು ದೇವಸ್ವಂ ಮಂಡಳಿಯ ತೀರ್ಮಾನ, ದೇಗುಲ ಪ್ರವೇಶಕ್ಕಾಗಿ ಬಂದ ಮಹಿಳಾ ಹಕ್ಕುಗಳ ಕಾರ್‍ಯಕರ್ತೆ ತೃಪ್ತಿ ದೇಸಾಯಿ ಪ್ರತಿಭಟನೆಗಳ ಬಳಿಕ ವಾಪಸ್- ಘಟನಾವಳಿಗಳ ಮಧ್ಯೆ ಶಬರಿಮಲೈ ದೇವಾಲಯವನ್ನು ಮಂಡಲ ೬೨ ದಿನಗಳ ಮಂಡಲಪೂಜೆಗಾಗಿ ತೆರೆಯಲಾಯಿತು. ಈದಿನ ಸಭೆ ನಡೆಸಿದ ದೇವಸ್ವ ಮಂಡಳಿಯು ಸುಪ್ರೀಂಕೋರ್ಟಿನ ಸೆಪ್ಟೆಂಬರ್ ೨೮ರ ತೀರ್ಪಿನ ಜಾರಿಗೆ ಕಾಲಾವಕಾಶ ಕೋರಿ ಮೇಲ್ಮನವಿ ಸಲ್ಲಿಸಿಲು ನಿರ್ಧರಿಸಿತು. ಈ ಮಧ್ಯೆ ಈದಿನ ಬೆಳ್ಳಂಬೆಳಗ್ಗೆಯೇ ಕೋಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತನ್ನ ಸಂಗಡಿಗರೊಂದಿಗೆ ಆಗಮಿಸಿದ ಮಹಿಳಾ ಹಕ್ಕುಗಳ ಕಾರ್‍ಯಕರ್ತೆ ತೃಪ್ತಿ ದೇಸಾಯಿ ಭಕ್ತರ ತೀವ್ರ ಪ್ರತಿರೋಧದಿಂದಾಗಿ ಸುಮಾರು ೧೨ ಗಂಟೆಗಳಿಗೂ ಹೆಚ್ಚುಕಾಲ ಕೋಚಿ ವಿಮಾನ ನಿಲ್ದಾಣದಲ್ಲಿಯೇ ಉಳಿಯಬೇಕಾಗಿ ಬಂತು. ರಾತ್ರಿಯ ವೇಳೆಗೆ ಅವರು ಹುಟ್ಟೂರು ಪುಣೆಗೆ ವಾಪಸಾಗಲು ನಿರ್ಧರಿಸಿದ್ದಾಗಿ ಪ್ರಕಟಿಸಿದರು. ಅದಕ್ಕೆ ಮುನ್ನ ಚಳವಳಿಯ ಮುಂಚೂಣಿಲ್ಲಿದ್ದ ರಾಹುಲ್ ಈಶ್ವರ್ ಅವರು ’ತೃಪ್ತಿ ದೇಸಾಯಿ ಅವರ ಜೊತೆಗೆ ಮಾತನಾಡಿದ್ದೇನೆ. ಆಕೆ ವಾಪಸಾಗುವ ಬಗ್ಗೆ ಪರಿಶೀಲಿಸುತ್ತಿದ್ದು ಸಂಜೆಯ ವೇಳೆಗೆ ನಿರ್ಧಾರ ಪ್ರಕಟಿಸುವರು’ ಎಂದು ಟ್ವೀಟ್ ಮಾಡಿದ್ದರು. ’ಇದು ಸ್ವಾಮಿ ಅಯ್ಯಪ್ಪ ಭಕ್ತರಿಗೆ ಲಭಿಸಿರುವ ದೊಡ್ಡ ವಿಜಯ. ಕೋಚಿ ವಿಮಾನ ನಿಲ್ದಾಣದಲ್ಲಿ ಪ್ರತಿಭಟಿಸುತ್ತಿರುವ ಮಾತೆಯರು ಮತ್ತು ಸಹೋದರಿಯರಿಗೆ ಲಭಿಸಿದ ವಿಜಯ’ ಎಂದೂ ಅವರು ಟ್ವೀಟ್ ಟ್ವೀಟ್ ಮಾಡಿದರು. ಇನ್ನೊಂದು ಬೆಳವಣಿಗೆಯಲ್ಲಿ ಶಬರಿಮಲೈ ಪ್ರವೇಶಕ್ಕೆ ಪಟ್ಟು ಹಿಡಿದು ವಿಫಲರಾಗಿ ವಾಪಸಾಗಿದ್ದ ಕಾರ್‍ಯಕರ್ತೆ ರೆಹಾನಾ ಫಾತಿಮಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ತಿರಸ್ಕರಿಸಿತು. ಫೇಸ್ ಬುಕ್ ಪೋಸ್ಟ್ ಗಳ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾಗಿ ಆಪಾದಿಸಿ ರಾಧಾಕೃಷ್ಣ ಮೆನನ್ ಅವರು ಸಲ್ಲಿಸಿದ್ದ ದೂರನ್ನು ಆಧರಿಸಿ ಪಟ್ಟಣಂತಿಟ್ಟ ಪೊಲೀಸರು ಪ್ರಕರಣ ದಾಖಲಿಸಿದ್ದರು.ಪೊಲೀಸರ ಸರ್ಪಗಾವಲು ಮಧ್ಯೆ ೬೨ ದಿನಗಳ ಮಂಡಲಪೂಜೆಗಾಗಿ ಶಬರಿಮಲೈ ದೇವಾಲಯವು ಭಕ್ತರಿಗೆ ತನ್ನ ದ್ವಾರಗಳನ್ನು ತೆರೆಯಿತು. ನೀಲಕ್ಕಲ್ ನಿಂದ ಭಕ್ತರನ್ನು ಕರೆದೊಯ್ಯಲು ಬಸ್ ಸೇವೆ ಶುರುಮಾಡಲಾಗಿದ್ದು, ಪಂಬಾದಿಂದ ಶಬರಿಮಲೈಗೆ ಭಕ್ತರ ಕಾಲ್ನಡಿಗೆಗೆ ವ್ಯವಸ್ಥೆ ಮಾಡಲಾಯಿತು. ತೃಪ್ತಿ ದೇಸಾಯಿ ಪ್ರಹಸನ: ಕೋಚಿ ವಿಮಾನ ನಿಲ್ದಾಣಕ್ಕೆ ಬೆಳ್ಳಂಬೆಳಗ್ಗೆ ೫ ಗಂಟೆ ವೇಳಗೆ ಸಂಗಡಿರೊಂದಿಗೆ ಬಂದಿಳಿದ ತೃಪ್ತಿ ದೇಸಾಯಿ ಅಯ್ಯಪ್ಪಸ್ವಾಮಿಯ ದರ್ಶನ ಮಾಡದೆ ಹಿಂದಕ್ಕೆ ಹೋಗುವುದಿಲ್ಲ ಎಂದು ಪಟ್ಟು ಹಿಡಿದರೆ, ಏನೇ ಆದರೂ ಆಕೆಗೆ ದೇವಾಲಯ ಪ್ರವೇಶಕ್ಕೆ ಆಸ್ಪದ ಕೊಡಲಾಗದು ಎಂದು ಭಾರೀ ಸಂಖ್ಯೆಯ ಪ್ರತಿಭಟನಕಾರರು ಪ್ರತಿಪಟ್ಟು ಹಾಕಿದರು. ಈ ಋತುವಿನಲ್ಲಿ ತೃಪ್ತಿ ದೇಸಾಯಿಯನ್ನು ದೇವಾಲಯಕ್ಕೆ ಕರೆದೊಯ್ಯಲಾಗದು ಎಂದು ಪೊಲೀಸರೂ ಕೈ ಚೆಲ್ಲಿದರು.ಶಬರಿಮಲೈ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಲು ಮಹಿಳಾ ಹಕ್ಕುಗಳ ಕಾರ್ಯಕರ್ತೆತೃಪ್ತಿ ದೇಸಾಯಿ ಬೆಳ್ಳಂಬೆಳಗ್ಗೆಯೇ ಕೇರಳದ ಕೋಚಿಗೆ ಬಂದಿಳಿದಿದ್ದರೂ, ಶಬರಿಮಲೈಗೆ ಹೋಗುವ ಎಲ್ಲ ಮಾರ್ಗಗಳೂ ಬಂದ್ ಆದ ಪರಿಣಾಮವಾಗಿ ಕೋಚಿ ಅಂತರ್ ರಾಷ್ಟ್ರೀಯ ವಿಮಾನನಿಲ್ದಾಣದಲ್ಲೇ ಸಿಕ್ಕಿಹಾಕಿಕೊಂಡರು.ಕಿಕ್ಕಿರಿದ ಭಕ್ತ ಸಮುದಾಯ, ಏರುತ್ತಿರುವ ಪ್ರತಿಭಟನಕಾರರ ಸಂಖ್ಯೆ, ಬಿಗಿ ಪೊಲೀಸ್ ಬಂದೋಬಸ್ತ್ ಮಧ್ಯೆ ಸಂಪೂರ್ಣ ಶಬರಿಮಲೈ ಭದ್ರಕೋಟೆಯಂತಾಯಿತು. ಶಬರಿಮಲೈದೇಗುಲ ಪ್ರವೇಶಿಸಿಯೇ ಸಿದ್ಧ ಎಂಬುದಾಗಿ ಘೋಷಿಸಿದ ತೃಪ್ತಿ ದೇಸಾಯಿ ವಿರುದ್ಧ ಭಾರೀ ಸಂಖ್ಯೆಯ ಅಯ್ಯಸ್ವಾಮಿ ಭಕ್ತರ, ಬಿಜೆಪಿ ಕಾರ್‍ಯಕರ್ತರು ಕೋಚಿ ವಿಮಾನ ನಿಲ್ದಾಣಕ್ಕೇ ಮುತ್ತಿಗೆ ಹಾಕಿ, ವಿಮಾನ ನಿಲ್ದಾಣದಿಂದ ಹೊರಕ್ಕೆ ಬರಲು ಕೂಡಾ ಸಾಧ್ಯವಾಗದಂತೆ ತೃಪ್ತಿ ದೇಸಾಯಿ ಮತ್ತು ಆಕೆಯ ಸಹಚರ ಮಹಿಳೆಯರನ್ನು ದಿಗ್ಬಂಧಿಸಿದರು. ಪರಿಸ್ಥಿತಿಯ ಹಿನ್ನೆಲೆಯಲ್ಲಿ ವಾಪಸ್ ತೆರಳುವಂತೆ ತೃಪ್ತಿ ದೇಸಾಯಿ ಅವರನ್ನು ಮನವೊಲಿಸಲು ಪೊಲೀಸರು ನಡೆಸಿದ ಯತ್ನ ಫಲಪ್ರದವಾಗಲಿಲ್ಲ.ತೃಪ್ತಿ ದೇಸಾಯಿಗೆ ಶಬರಿಮಲೈ ದೇಗುಲ ಪ್ರವೇಶಕ್ಕೆ ಅವಕಾಶ ನೀಡಲು ಸಾಧ್ಯವೇ ಇಲ್ಲ ಎಂಬುದಾಗಿ ಘೋಷಿಸಿದ ಹಿಂದೂ ಐಕ್ಯ ವೇದಿ ಉಪಾಧ್ಯಕ್ಷ ಕೆ. ಹರಿದಾಸ್ ಅವರು ತೃಪ್ತಿ ದೇಸಾಯಿ ವಿರುದ್ಧ ಕೋಚಿ ವಿಮಾನ ನಿಲ್ದಾಣದಲ್ಲಿ ಪ್ರತಿಭಟಿಸುವ ಪ್ರತಿಭಟನಕಾರರು ಒಂದು ದಿನವಲ್ಲ ಮುಂದಿನ ೪೧ ದಿನಗಳ ಕಾಲವೂ ಪ್ರತಿಭಟನಕಾರರು ಅಲ್ಲಿಯೇ ಇರುತ್ತಾರೆ ಮತ್ತು ತೃಪ್ತಿ ದೇಸಾಯಿಗೆ ವಿಮಾನ ನಿಲ್ದಾಣ ಬಿಟ್ಟು ತೆರಳಲು ಮಾರ್ಗವೇ ಇರುವುದಿಲ್ಲ ಎಂದು ಘೋಷಿಸಿದರು.ವಿಮಾನ ನಿಲ್ದಾಣದ ಅಧಿಕಾರಿಗಳು ತೃಪ್ತಿ ದೇಸಾಯಿ ಪ್ರಸಂಗದಿಂದ ಉಂಟಾಗಿರುವ ಪರಿಸ್ಥಿತಿಯನ್ನು ನಿವಾರಿಸಿ, ನಿಲ್ದಾಣವು ತನ್ನ ಚಟುವಟಿಕೆ ನಡೆಸಲು ಅನುವು ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ ಮಾಡಿದರು.ಕೇರಳ ಸರ್ಕಾರವು ತೃಪ್ತಿ ದೇಸಾಯಿ ಬಿಜೆಪಿ- ಸಂಘ ಪರಿವಾರಕ್ಕೆ ಸೇರಿದ ವ್ಯಕ್ತಿಯಾಗಿದ್ದು, ಆಕೆಯದ್ದು ಇನ್ನೊಂದು ಪ್ರಹಸನ ಎಂದು ಹೇಳಿದೆ. ಬಿಜೆಪಿ ಇದನ್ನು ತಳ್ಳಿಹಾಕಿ ತೃಪ್ತಿ ದೇಸಾಯಿ ಕಾಂಗ್ರೆಸ್ ಸದಸ್ಯೆ ಎಂದು ಹೇಳಿತು.ತೃಪ್ತಿ ದೇಸಾಯಿ ಭಾರೀ ಪ್ರಚಾರ ನೀಡಿ ದೇವಾಲಯ ಪ್ರವೇಶಿಸಿಲು ಬಂದಿರುವುದರಿಂದ ಆಕೆಗೆ ಈ ಬಾರಿ ದೇವಾಲಯ ಪ್ರವೇಶಿಸಲು ಅವಕಾಶ ಮಾಡಿಕೊಡಲು ಸಾಧ್ಯವಿಲ್ಲ ಎಂದು ತಿಳಿಸಿದ ಪೊಲೀಸರು, ಆಕೆಯನ್ನು ರಕ್ಷಣೆಯಲ್ಲಿ ಹೊಟೇಲಿಗೆ ಸ್ಥಳಾಂತರಿಸಬಹುದು ಆದರೆ ಅಲ್ಲಿಂದ ಮುಂದುವರೆಯಲು ಆಕೆ ಸ್ವತಃ ವಾಹನ ವ್ಯವಸ್ಥೆ ಮಾಡಿಕೊಳ್ಳಬೇಕು. ಯಾವುದೇ ಟ್ಯಾಕ್ಸಿ ಚಾಲಕರೂ ಆಕೆಯನ್ನು ಕರೆದೊಯ್ಯಲು ಮುಂದೆ ಬರುತ್ತಿಲ್ಲ ಎಂದು ತಿಳಿಸಿದರು.ಪೊಲೀಸರು ತೃಪ್ತಿ ದೇಸಾಯಿ ಅವರನ್ನು ಪೊಲೀಸ್ ವ್ಯಾನಿನಲ್ಲಿ ಕರೆದೊಯ್ಯಲು ಯತ್ನಿಸಿದರೆ, ತಮ್ಮ ದೇಹಗಳ ಮೇಲೆಯೇ ಕರೆದೊಯ್ಯಬೇಕು ಎಂದು ಅಯ್ಯಪ್ಪ ಭಕ್ತರು ಎಲ್ಲ ಮಾರ್ಗಗಳಲ್ಲೂ ಧರಣಿ ಕುಳಿತು. ಕೋಚಿ ವಿಮಾನ ನಿಲ್ದಾಣದಿಂದಲೇ ಮಹಾರಾಷ್ಟ್ರಕ್ಕೆ ವಾಪಸ್ ಹೋಗುವಂತೆ ತೃಪ್ತಿ ದೇಸಾಯಿ ಮತ್ತು ಸಂಗಡಿಗರನ್ನು ಪ್ರತಿಭಟನಕಾರರು ಒತ್ತಾಯಿಸಿದರು.ಪೊಲೀಸರು ದೇಸಾಯಿಯನ್ನು ಹೊಟೇಲಿಗೆ ಸ್ಥಳಾಂತರಿಸಲು ಯತ್ನಿಸಿದರೂ, ಪ್ರತಿಭಟನಾಕಾರರು ಹೊರಕ್ಕೆ ಬಿಡಲು ನಿರಾಕರಿಸಿದರು. ದೇವಸ್ಥಾನದ ಮೂಲ ಶಿಬಿರವಾದ ಪಂಬಾವರೆಗಿನ ೫.೫ ಕಿಮೀ ದೂರವನ್ನುಕ್ರಮಿಸಲು ಬಾಡಿಗೆ ವಾಹನಗಳನ್ನು ಒದಗಿಸುವಂತೆ ತೃಪ್ತಿದೇಸಾಯಿ ಪೊಲೀಸರನ್ನು ಕೇಳಿಕೊಂಡಿದ್ದಾರೆ. ಆದರೆ ಯಾವ ಟ್ಯಾಕ್ಸಿ ಚಾಲಕರೂ ಆಕೆಯನ್ನು ಕರೆದೊಯ್ಯಲು ಒಪ್ಪಿಲ್ಲ. ಆನ್ ಲೈನ್ ಮೂಲಕ ಟ್ಯಾಕ್ಸಿ ಬುಕ್ ಮಾಡುವ ಯತ್ನವೂ ಸಫಲವಾಗಲಿಲ್ಲ. ತನ್ನನ್ನ ಕರೆದೊಯ್ಯಲು ಬರುವ ಟ್ಯಾಕ್ಸಿ ಚಾಲಕರಿಗೆ ೫೦,೦೦೦ ರೂಪಾಯಿ ನೀಡಲು ದೇಸಾಯಿ ಮುಂದೆ ಬಂದಿದ್ದಾರೆ ಎಂಬ ವದಂತಿಗಳು ವಾಟ್ಸಪ್ ಸಮೂಹಗಳಲ್ಲಿ ವೈರಲ್ ಆಯಿತು.ಕರಂದ್ಲಾಜೆ ಪ್ರಶ್ನೆ: ಶಬರಿಮಲೈ ದರ್ಶನಕ್ಕಾಗಿ ಬಂದು ಕೋಚಿ ವಿಮಾನ ನಿಲ್ದಾಣದಲ್ಲಿ ಇಳಿದ ತೃಪ್ತಿ ದೇಸಾಯಿ ಅವರನ್ನು ’ನಿಮ್ಮ ಇರುಮುಡಿ ಎಲ್ಲಿದೆ? ೪೧ ದಿನಗಳ ವ್ರತ ಆಚರಿಸಿದ್ದೀರಾ? ಸುಪ್ರೀಂಕೋರ್ಟ್ ಮಹಿಳೆಯರಿಗೆ ದೇವಾಲಯ ಪ್ರವೇಶಕ್ಕೆ ಅನುಮತಿ ನೀಡಿರಬಹುದು ಆದರೆ ಸಂಪ್ರದಾಯಗಳನ್ನು ಮುರಿಯಲು ಭಕ್ತರಿಗೆ ಸೂಚಿಸಿಲ್ಲ’ ಎಂದು ಭಾರತೀಯ ಜನತಾ ಪಕ್ಷದ ಸಂಸತ್ ಸದಸ್ಯೆ ಕರ್ನಾಟಕದ ಶೋಭಾ ಕರಂದ್ಲಾಜೆ ತರಾಟೆಗೆ ತೆಗೆದುಕೊಂಡರು.ಮಹಾರಾಷ್ಟ್ರದ ಅಹ್ಮದ ನಗರ ಜಿಲ್ಲೆಯ ಶನಿ ಶಿಂಗ್ಣಾಪುರ ದೇವಸ್ಥಾನ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕಾಗಿ ತೃಪ್ತಿದೇಸಾಯಿ ಮತ್ತು ಅವರ ಭೂಮಾತಾ ಬ್ರಗೇಡ್ ತೀವ್ರ ಹೋರಾಟ ನಡೆಸಿ ಕಡೆಗೂ ಯಶಸ್ವಿಯಾಗಿತ್ತು.ಎಲ್ಲ ವಯಸ್ಸಿನ ಮಹಿಳೆಯರಿಗೆ ಅಯ್ಯಪ್ಪ ಸ್ವಾಮಿ ದೇವಾಲಯದ ಪ್ರವೇಶಾವಕಾಶ ಕಲ್ಪಿಸಿ ಸುಪ್ರೀಂಕೋರ್ಟ್‌ತೀರ್ಪು ನೀಡಿದ ಬಳಿಕ, ಶಬರಿಮಲೈ ವಿವಾದದ ಕೇಂದ್ರ ಬಿಂದುವಾಗಿದೆ. ಸುಪ್ರೀಂಕೋರ್ಟ್ ತೀರ್ಪು ಅನುಷ್ಠಾನಕ್ಕೆ ಬದ್ಧ ಎಂಬುದಾಗಿ ಕೇರಳ ಸರ್ಕಾರ ಪಟ್ಟು ಹಿಡಿದಿದ್ದರೆ, ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಲಾಗದುಎಂದು ಮಹಿಳೆಯರೂ ಸೇರಿದಂತೆ ಭಕ್ತರು, ತಂತ್ರಿಗಳು, ಪಂದಳ ರಾಜಕುಟುಂಬ ಪಟ್ಟು ಹಿಡಿದಿದ್ದಾರೆ. ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಜಾತಾಂತ್ರಕ ಮೈತ್ರಿಕೂಟ ಭಕ್ತರ ಹೋರಾಟಕ್ಕೆ ಬೆಂಬಲ ನೀಡಿದ್ದವು. ಶಬರಿಮಲೈ ವಿವಾದ ಇತ್ಯರ್ಥ ಸಲುವಾಗಿ ಗುರುವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರೆದ ಸರ್ವ ಪಕ್ಷ ಸಭೆ ವಿಫಲಗೊಂಡಿತ್ತು. ಆ ಬಳಿಕ ವಿಜಯನ್ ಅವರು ತಂತ್ರಿಗಳು ಮತ್ತು ಪಂದಳ ರಾಜಕುಟುಂಬದ ಜೊತೆಗೆ ಮಾತುಕತೆ ನಡೆಸಿ, ಮಹಿಳೆಯರಿಗೆ ಪ್ರತ್ಯೇಕ ದಿನದಂದು ದೇವಾಲಯ ಭೇಟಿಗೆ ಅವಕಾಶ ಕಲ್ಪಿಸುವ ಪ್ರಸ್ತಾಪ ಮುಂದಿಟ್ಟಿದ್ದರು.
ತಂತ್ರಿಗಳು ಮತ್ತು ರಾಜಕುಟುಂಬ ಈ ಸಲಹೆಯನ್ನು ತಿರಸ್ಕರಿಸಿಲ್ಲ, ಆದರೆ ಸಮಾಲೋಚನೆಗೆ ಕಾಲಾವಕಾಶ ಕೋರಿದ್ದಾರೆ ಎಂದು ವರದಿಗಳು ತಿಳಿಸಿದವು. ತಿರುವಾಂಕೂರು ದೇವಸ್ವಂ ಮಂಡಳಿಗೆ ಸುಪ್ರೀಂಕೋರ್ಟಿನಲ್ಲಿ ತೀರ್ಪಿಗೆ ತಡೆಯಾಜ್ಞೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಪಂದಳ ರಾಜಕುಟುಂಬ ಮುಖ್ಯಮಂತ್ರಿಗೆ ಸೂಚಿಸಿತ್ತು.ಸುಪ್ರೀಂಕೋರ್ಟಿನ ಸೆಪ್ಟೆಂಬರ್ ೨೮ರ ತೀರ್ಪುಜಾರಿಗೆ ಕಾಲಾವಕಾಶ ನೀಡವಂತೆ ನ್ಯಾಯಾಲಯವನ್ನು ಕೋರಬಹುದು ಎಂಬ ಸಲಹೆಯನ್ನು ನೀಡುವ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ತಮ್ಮ ಪಟ್ಟನ್ನು ಸ್ವಲ್ಪ ಸಡಿಲಿಸಿದ್ದಾರೆ ಎಂದೂ ವರದಿಗಳು ಹೇಳಿದ್ದವು.ಶಬರಿಮಲೈ- ಪರಿವೊಮ್ ಚರ್ಚ್ ತೀರ್ಪಿನಲ್ಲಿ ಹೋಲಿಕೆ ಇಲ್ಲ: ಏತನ್ಮಧ್ಯೆ ಕೇರಳ ಹೈಕೋರ್ಟ್ ರಿಟ್ ಅರ್ಜಿಯೊಂದನ್ನು ಪಿರವೊಮ್ ಚರ್ಚ್ ತೀರ್ಪನ್ನು ಶಬರಿಮಲೈಗೆ ಹೋಲಿಕೆ ಮಾಡಲಾಗದು ಎಂದು ಹೇಳಿ ವಜಾಗೊಳಿಸಿತು. ಚರ್ಚ್ ಪ್ರಕರಣದಲ್ಲಿ ಸರ್ಕಾರ ಕಕ್ಷಿದಾರನಲ್ಲ, ಆದ್ದರಿಂದ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಆದೇಶವನ್ನು ಜಾರಿಗೊಳಿಸುವ ಹೊಣೆಗಾರಿಕೆ ಇಲ್ಲ ಎಂದು ಹೈಕೋರ್ಟ್ ಹೇಳಿತು. ಪಿರವೊಮ್ ಚರ್ಚ್ ತೀರ್ಪನ್ನು ಇನ್ನೂ ಜಾರಿಗೊಳಿಸದೇ ಇರುವಾಗ ಶಬರಿಮಲೈ ಪ್ರಕರಣದಲ್ಲಿ ರಾಜ್ಯ ಸರ್ಕಾರಕ್ಕೆ ಅವಸರ ಏಕೆ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಮುಖ್ಯವಾಗಿ ವಾದಿಸಿದ್ದವು.ತಸ್ಲೀಮಾ ಟ್ವೀಟ್: ಏತನ್ಮಧ್ಯೆ ಬಾಂಗ್ಲಾದೇಶದ ವಿವಾದಾತ್ಮಕ ಲೇಖಕಿ ತಸ್ಲೀಮಾ ನಸ್ರೀನ್ ಅವರು ಶಬರಿಮಲೈ ವಿವಾದದ ಬಗ್ಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತ ಪಡಿಸಿ ಟ್ವೀಟ್ ಮಾಡಿದರು. ’ಮಹಿಳಾ ಕಾರ್‍ಯಕರ್ತೆಯರು ಶಬರಿಮಲೈ ಪ್ರವೇಶಕ್ಕೆ ಏಕೆ ಇಷ್ಟು ಕಾತರರಾಗಿದ್ದಾರೋ ನನಗೆ ಅರ್ಥವಾಗುತ್ತಿಲ್ಲ. ಮಹಿಳೆಯರು ಮನೆಯೊಳಗಿನ ಹಿಂಸೆ, ಅತ್ಯಾಚಾರ, ಲೈಂಗಿಕ ಕಿರುಕುಳ, ದ್ವೇಷ ಇತ್ಯಾದಿಗಳಿಂದ ನರಳುತ್ತಿರುವ ಗ್ರಾಮಗಳಿಗೆ, ಶಿಕ್ಷಣ, ಆರೋಗ್ಯ ಕಾಳಜಿ, ಕೆಲಸ ಮಾಡಲು ಸ್ವಾತಂತ್ರ್ಯ, ಸಮಾನ ವೇತನ ಲಭಿಸದ ಕ್ಷೇತ್ರಗಳಿಗೆ ಅವರು ಪ್ರವೇಶಿಸುವುದು ಒಳ್ಳೆಯದು’ ಎಂದು ತಸ್ಲೀಮಾ ಟ್ವೀಟ್ ಮಾಡಿದರು.
2018ಕೊಲಂಬೋ: ಸಂಸದರಿಂದ ಮೆಣಸಿನ ಪುಡಿ ತೂರಾಟ, ಪೊಲೀಸ್ ಅಧಿಕಾರಿಗಳತ್ತ ಕುರ್ಚಿಗಳ ಎಸೆತದ ಮಧ್ಯೆ ಶ್ರೀಲಂಕಾ ಸಂಸತ್ತು ಸತತ ಎರಡನೇ ದಿನ ಸಂಪೂರ್ಣ ಅಸ್ತವ್ಯಸ್ತಗೊಂಡಿತು, ಈ ಅಸ್ತವ್ಯಸ್ತತೆಯ ಮಧ್ಯದಲ್ಲೇ ಅದು ಪ್ರಧಾನಿ ಮಹಿಂದ ರಾಜಪಕ್ಸೆ ವಿರುದ್ಧ ಈ ವಾರದಲ್ಲಿ ಎರಡನೇ ಬಾರಿಗೆ ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸಿತು.ರಾಜಪಕ್ಸೆ ಪರ ಶಾಸನಕರ್ತರು ಸಂಸತ್ತಿನ ಸ್ಪೀಕರ್ ಕರು ಜಯಸೂರ್ಯ ಅವರ ಕಡೆಗೂ ವಸ್ತುಗಳನ್ನು ಎಸೆದರು ಎಂದು ಪತ್ರಿಕೆಗಳು ವರದಿ ಮಾಡಿದವು. ಹಿಂಸಾಚಾರದ ಹೊರತಾಗಿಯೂ ರಾಜಪಕ್ಸೆ ಪರ ಸಂಸತ್ ಸದಸ್ಯರು ತಮ್ಮ ನಾಯಕನ ವಿರುದ್ದ ವಾರದಲ್ಲಿ ಎರಡನೇ ಬಾರಿಗೆ ಮಂಡಿಸಲಾದ ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸದಂತೆ ತಡೆಯುವಲ್ಲಿ ವಿಫಲರಾದರು. ಎರಡನೇ ಬಾರಿಗೆ ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸುವ ಮೂಲಕ ಸಂಸತ್ತು ರಾಜಪಕ್ಸೆ ಸರ್ಕಾರವನ್ನು ವಜಾಗೊಳಿಸಿತು. ಮೂರು ವಾರಗಳ ಹಿಂದೆ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ದಿಢೀರನೆ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ವಜಾಗೊಳಿಸಿ ಅವರ ಸ್ಥಾನದಲ್ಲಿ ಮಹಿಂದ ರಾಜಪಕ್ಸೆ ಅವರನ್ನು ಪ್ರಧಾನಿಯಾಗಿ ನೇಮಿಸಿದ ದಿನದಿಂದ ಶ್ರೀಲಂಕಾದಲ್ಲಿ ತೀವ್ರ ಬಿಕ್ಕಟ್ಟು ತಲೆದೋರಿದ್ದು, ಆ ಬಳಿಕ ಸಂಭವಿಸಿದ ಮೂರನೇ ಹಿಂಸಾಚಾರದ ಘಟನೆ ಇದು.ಸಂಸತ್ ಸದಸ್ಯರು ಸ್ಪೀಕರ್ ಅವರ ಪೀಠದ ಸುತ್ತ ಜಮಾಯಿಸಿ ಪ್ರತಿಭಟನೆ ನಡೆಸಿದ ಪರಿಣಾಮವಾಗಿ ಶುಕ್ರವಾರ ಸಂಸತ್ ಅಧಿವೇಶನ ೩೦ ನಿಮಿಷಗಳಷ್ಟು ವಿಳಂಬಗೊಂಡಿತು. ಅವರು ಹಿಂದಿನ ದಿನ ಸಂಸತ್ತಿಗೆ ಚೂರಿಗಳನ್ನು ತಂದದ್ದಕ್ಕಾಗಿ ವಿಕ್ರಮ ಸಿಂಘೆ ಅವರ ಯುನೈಟೆಡ್ ನ್ಯಾಷನಲ್ ಪಾರ್ಟಿಯ ಇಬ್ಬರು ಸಂಸದರನ್ನು ತತ್ ಕ್ಷಣವೇ ಬಂಧಿಸಬೇಕು ಎಂದು ಅವರು ಆಗ್ರಹಿಸಿದರು.
ಕೋಲಾಹಲದ ಮಧ್ಯೆ ಸ್ಪೀಕರ್ ಕಡೆಗೆ ಹಲವಾರು ವಸ್ತುಗಳನ್ನು ಎಸೆಯಲಾಯಿತು. ತತ್ ಕ್ಷಣವೇ ಎರಡು ಡಜನ್‌ಗೂ ಹೆಚ್ಚಿನ ಸಂಖ್ಯೆಯ ಪೊಲೀಸರು ತಮ್ಮ ಶಸ್ತ್ರಗಳೊಂದಿಗೆ ಸ್ಪೀಕರ್ ಆಸನದತ್ತ ಧಾವಿಸಿ ಅವರಿಗೆ ರಕ್ಷಣೆ ಒದಗಿಸಿದರು.ರಾಜಪಕ್ಸೆ ಅವರು ಘಟನಾವಳಿಗಳನ್ನು ತಮ್ಮ ಆಸನದಲ್ಲಿ ಕುಳಿತುಕೊಂಡು ನೋಡುತ್ತಿದ್ದಂತೆಯೇ, ಅವರ ಪಕ್ಷದ ಸಂಸತ್ ಸದಸ್ಯರು ಪೊಲೀಸ್ ಅಧಿಕಾರಿಗಳ ಮೇಲೆ ಕುರ್ಚಿಗಳನ್ನು ಮತ್ತು ಪುಸ್ತಕಗಳನ್ನು ಎಸೆದರು. ಈ ಎಸೆತಗಳಿಂದ ಕನಿಷ್ಠ ಇಬ್ಬರು ಗಾಯಗೊಂಡರು. ಇತರ ಶಾಸನಕರ್ತರು ಸ್ಪೀಕರ್ ಜಯಸೂರ್ಯ ಅವರ ಅಲಂಕಾರಿಕ ಪೀಠವನ್ನು ಎಳೆದು ಕೆಳಕ್ಕೆ ಎಸೆದು ಎಳೆದಾಡಿದರು.ಬೆಂಚ್ ಒಂದರ ಬದಿಯಲ್ಲಿ ಸುತ್ತುವರಿದ ಅಧಿಕಾರಿಗಳ ರಕ್ಷಣೆಯೊಂದಿಗೆ ಜಯಸೂರ್‍ಯ ಅವರು ಅವಸರ ಅವಸರವಾಗಿಯೇ ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕಿದರು. ಮೊದಲಿಗೆ ಒಬ್ಬೊಬ್ಬರ ಹೆಸರು ಕರೆದು ಮತದಾನಕ್ಕೆ ಸೂಚಿಸಿದ ಅವರು ಬಳಿಕ ಗೊಂದಲ ಹಾಗೂ ಹಿಂಸಾಚಾರದ ಪರಿಣಾಮವಾಗಿ ನಿರ್ಣಯವನ್ನು ಧ್ವನಿಮತಕ್ಕೆ ಹಾಕಿದರು. ನಿರ್ಣಯವು ಧ್ವನಿಮತದಿಂದ ಅಂಗೀಕರಾರಗೊಂಡಿದೆ ಎಂಬುದಾಗಿ ಘೋಷಿಸಿದ ಸ್ಪೀಕರ್ ಕಲಾಪವನ್ನು ನವೆಂಬರ್ ೧೯ಕ್ಕೆ ಮುಂದೂಡಿದರು. ಹಿಂದಿನ ನಿರ್ಣಯದಲ್ಲಿ ಸಿರಿಸೇನಾ ಪ್ರಸ್ತಾಪಿಸಲಾಗಿದ್ದ ಸಿರಿಸೇನಾ ದುರ್ವರ್ತನೆಯ ಉಲ್ಲೇಖವನ್ನು ಈ ಬಾರಿಯ ನಿರ್ಣಯದಲ್ಲಿ ಕೈಬಿಡಲಾಗಿತ್ತು. ಈ ಬದಲಾವಣೆಯು ನಿರ್ಣಯವನ್ನು ಈ ಬಾರಿ ಅಧ್ಯಕ್ಷರು ಮಾನ್ಯ ಮಾಡಿ ರಾಜಪಕ್ಸೆ ಅವರ ನಾಯಕತ್ವವನ್ನು ರದ್ದು ಪಡಿಸಬಹುದು ಎಂಬ ಸುಳಿವನ್ನು ನೀಡಿದೆ. ಏನಿದ್ದರೂ ರಾಜಪಕ್ಸೆ ಗುಂಪು ಅವಿಶ್ವಾಸ ನಿರ್ಣಯವನ್ನು ತಿರಸ್ಕರಿಸುವುದಾಗಿ ಘೋಷಿಸಿತು. ’ಮಹಿಂದ ರಾಜಪಕ್ಸೆ ಅವರು ಸರ್ಕಾರದ ಮುಖ್ಯಸ್ಥರಾಗಿದ್ದಾರೆ ಎಂದು ನಾವು ಹೇಳುತ್ತೇವೆ’ ಎಂದು ರಾಜಪಕ್ಸೆ ಮಿತ್ರ ಪಕ್ಷದ ದಿನೇಶ್ ಗುಣವರ್ದನೆ ಹೇಳಿದರು. ’ನಾವು ಚುನಾವಣೆಗಾಗಿ ಆಗ್ರಹಿಸುತ್ತೇವೆ. ರಾಷ್ಟ್ರವು ಅರಾಜಕಗೊಂಡಿದೆ, ಸಂಸತ್ತು ಅರಾಜಕಗೊಂಡಿದೆ’ ಎಂದು ಅವರು ನುಡಿದರು. ಈ ಮಧ್ಯೆ ಸಂಸತ್ ಅಧಿವೇಶನದ ಬಳಿಕ ಟ್ವಿಟ್ಟರ್ ಮೂಲಕ ಹೇಳಿಕೆಯೊಂದನ್ನು ನೀಡಿರುವ ಸಿರಿಸೇನಾ ಅವರು ಪ್ರಜಾಪ್ರಭುತ್ವದ ತತ್ವಗಳು ಮತ್ತು ಸಂಸದೀಯ ಪರಂಪರೆಯನ್ನು ಎತ್ತಿ ಹಿಡಿಯುವಂತೆ ಸಂಸತ್ ಸದಸ್ಯರಿಗೆ ಮನವಿ ಮಾಡಿದ್ದಾರೆ. ಸಂಸತ್ತನ್ನು ಯಾವುದೇ ಸಂದರ್ಭದಲ್ಲೂ ಮುಂದೂಡುವುದಿಲ್ಲ ಎಂದೂ ಅವರು ಹೇಳಿದರು.ಅವಿಶ್ವಾಸ ನಿರ್ಣಯದ ಮೇಲೆ ನಡೆದ ಮತದಾನವು ’ಅಕ್ರಮ ರೀತಿಯಲ್ಲಿ’ ನಡೆದಿರುವ ಕಾರಣ ಸರ್ಕಾರ ಅದನ್ನು ಅಂಗೀಕರಿಸುವುದಿಲ್ಲ ಎಂದು ಸರ್ಕಾರದ ವಕ್ತಾರ ಕೆಹೆಲಿಯ ರಂಬುಕವೆಲ್ಲ ಅವರು ಘಟನಾವಳಿಗಳ ಬಳಿಕ ಹೇಳಿದರು. ರಾನಿಲ್ ವಿಕ್ರಮಸಿಂಘೆ ಅವರು ಸಂಸದರ ವರ್ತನೆಯನ್ನು ಖಂಡಿಸಿ, ಸರ್ಕಾರವನ್ನು ಪರಾಭವಗೊಳಿಸಲಾಗಿದೆ ಎಂದು ಹೇಳಿದ್ದಾರೆ.
ಗುರುವಾರವೂ ಸಂಸತ್ತಿನಲ್ಲಿ ಹಿಂಸಾಚಾರ ಸಂಭವಿಸಿ ಒಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.
2018: ಚೆನ್ನೈ: ತಮಿಳುನಾಡಿನಾದ್ಯಂತ ಗಜ ಚಂಡ ಮಾರುತದ ಅಬ್ಬರ ಜೋರಾಗಿದ್ದು, ಪ್ರಾಕೃ ತಿಕ ರೌದ್ರನರ್ತನಕ್ಕೆ ೨೩ ಮಂದಿ ಬಲಿಯಾದರು. ಗಜ ಚಂಡಮಾರುತ ತಮಿಳುನಾ ಡಿನ ನಾಗಪಟ್ಟಿಣಂ ಮತ್ತು ಹತ್ತಿರದ ವೇದ ರಣ್ಣಿಯಂ ನಡುವೆ ನಸುಕಿನ ಜಾವ ಗಂಟೆಗೆ ೧೨೦ ಕಿಲೋ ಮೀಟರ್ ವೇಗದಲ್ಲಿ ಬೀಸಿದೆ ಎಂದು ಹವಾಮಾನ ಇಲಾಖೆ ತಿಳಿಸಿತು. ಚಂಡಮಾರುತದಆರ್ಭಟಕ್ಕೆಎಂಟು ಜಿಲ್ಲೆಗಳ ಅನೇಕ ಮನೆಗಳಿಗೆ ಹಾನಿಯಾಗಿದ್ದು, ಹಲವಾರು ಮಂದಿ ಕಣ್ಮರೆಯಾದರು. ಅನೇಕ ಮರಗಳು ಮತ್ತು ವಿದ್ಯುತ್ ಕಂಬಗಳು ಉರುಳಿ ಬಿದ್ದವು. ಕೆಲವೆಡೆ ಮನೆಗಳು ಭಾಗಶಃ ಕುಸಿದವು. ಭೂ ಕುಸಿತದಿಂದ ಸಂಚಾರ ಅಸ್ತವ್ಯಸ್ತವಾಯಿತು. ಮುನ್ನಚ್ಚರಿಕೆ ಕ್ರಮವಾಗಿ ತಗ್ಗು ಪ್ರದೇಶಗ ಳಿಂದ ೮೨,೦೦೦ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ರವಾನಿಸಲಾಯಿತು.
ನಾಗಪಟ್ಟಣಂ ಜಿಲ್ಲೆಯಲ್ಲಿ ಈದಿನ ಕೂಡ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಯಿತು. ಕದ್ದಲೂರು ಜಿಲ್ಲೆಯಲ್ಲಿ ಗಜ ಚಂಡಮಾರುತದ ತೀವ್ರ ತೆಗೆ ಇಬ್ಬರು ಬಲಿಯಾದರು. ಅವರ ಕುಟುಂಬಗಳಿಗೆ ಹೆಚ್ಚಿನ ಆರ್ಥಿಕ ನೆರವು ನೀಡಲಾಗುವುದು ಎಂದು ಜಿಲ್ಲಾ ಉಸ್ತು ವಾರಿ ಸಚಿವರೂ ಕೂಡ ಆಗಿರುವ ಸಂಪತ್ ಕುಮಾರ್ ತಿಳಿಸಿದರು. ಚಂಡಮಾರುತದಿಂದ ನಾಗಪಟ್ಟಣಂ, ತಿರುವರೂರ್, ತಂಜಾವೂರ್ ಸೇರಿ ದಂತೆ ಅನೇಕ ಕಡೆಗಳಲ್ಲಿ ಭಾರೀ ಮಳೆಯಾಯಿತು.
2018: ಹೈದರಾಬಾದ್: ರಾಜ್ಯದ ನಾಯಕರ ಮೇಲೆ ಸಾಲು ಸಾಲು ದಾಳಿ ನಡೆಸಿದ ಹಿನ್ನಲೆಯಲ್ಲಿ ಆಂಧ್ರಪ್ರದೇಶಕ್ಕೆ ಇನ್ನು ಮುಂದೆ ಸಿಬಿಐ ಪ್ರವೇಶ ಪಡೆಯಬೇಕಾದರೆ ಸರ್ಕಾರದ ಅನುಮತಿ ಕಡ್ಡಾಯಗೊಳಿಸಲಾಯಿತು. ರಾಜ್ಯದಲ್ಲಿ ಯಾವುದೇ ಅಧಿಕಾರಿಗಳ ಮೇಲೆ ದಾಳಿ ನಡೆಸುವ ಮುನ್ನ ರಾಜ್ಯ ಸರ್ಕಾರಕ್ಕೆ ಮೊದಲು ಮಾಹಿತಿ ನೀಡಬೇಕು. ಬಳಿಕ ರಾಜ್ಯ ಪ್ರವೇಶಕ್ಕೆ ಅನುಮತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದರು. ರಾಜ್ಯದಲ್ಲಿ ಸಿಬಿಐ ಬಾಗಿಲು ಮುಚ್ಚಿದ ಹಿನ್ನಲೆಯಲ್ಲಿ ಕೇಂದ್ರ ತನಿಖಾ ಸಂಸ್ಥೆಯ ಜವಾಬ್ದಾರಿಯನ್ನು ರಾಜ್ಯದ ತನಿಖಾ ಸಂಸ್ಥೆ(ಎಸಿಬಿ) ಮುಂದುವರೆಸಲಿದೆ ಎಂದು ಅವರು ತಿಳಿಸಿದರು. ದೆಹಲಿ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಶ್‌ಮೆಂಟ್ ಆಕ್ಟ್ ೧೯೪೬ ಪ್ರಕಾರ ಈ ಆದೇಶ ಜಾರಿಗೆ ಬರಲಿದೆ ಎಂದು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಎಆರ್ ಅನುರಾಧ ನೋಟಿಸ್ ಜಾರಿ ಮಾಡಿದರು. ಸ್ವತಂತ್ರ ಸಂಸ್ಥೆಯಾಗಿರುವ ಸಿಬಿಐ ಕಾರ್ಯನಿರ್ವಹಣೆಯಲ್ಲಿ ತಮಗೆ ನಂಬಿಕೆ ಇಲ್ಲ. ಇತ್ತೀಚೆಗೆ ಸಿಬಿಐ ಅಧಿಕಾರಿಗಳ ನಡುವೆ ನಡೆದ ಘರ್ಷಣೆಗಳು ಸಂಸ್ಥೆಯ ಸಮಗ್ರತೆ, ನಂಬಿಕೆ ಮತ್ತು ನಿಷ್ಠೆ ಬಗ್ಗೆ ಅನುಮಾನ ಮೂಡಿಸುತ್ತಿದೆ. ಈ ಹಿನ್ನಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಆಂಧ್ರ ಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ತಿಳಿಸಿದರು. ದೆಹಲಿ ವಿಶೇಷ ಪೊಲೀಸ್ ಮರು ಸ್ಥಾಪನಾ ಕಾಯ್ದೆ ೧೯೪೬ರ ನಿಯಮದ ಅಡಿ ಭ್ರಷ್ಟಾಚಾರ ಪ್ರಕರಣಗಳನ್ನು ತನಿಖೆ ನಡೆಸಲು ಕೇಂದ್ರ ಸಿಬಿಐ ಅನ್ನು ಸ್ಥಾಪಿ ಸಿತ್ತು. ಕಾಯ್ದೆ ಪ್ರಕಾರ ಸಂಸ್ಥೆ ವ್ಯಾಪ್ತಿ ದೆಹಲಿಗೆ ಮಾತ್ರ ಸೀಮಿತವಾಗಿದೆ, ಒಂದು ವೇಳೆ ಇದು ಬೇರೆ ರಾಜ್ಯಕ್ಕೆ ಪ್ರವೇಶ ನೀಡಬೇಕಾದರೆ ಆ ರಾಜ್ಯದ ಸರ್ಕಾರವನ್ನು ಸಂಪರ್ಕಿಸುವುದು ಕಡ್ಡಾಯವಾಗಿದೆ.
2018: ಬೆಂಗಳೂರು: ರಾಜ್ಯಾದ್ಯಂತ ಇನ್ನು ಮುಂದೆ ಜಮೀನು, ನಿವೇಶನ, ಆಸ್ತಿ ನೋಂದಣಿ ಕಾರ್ಯವನ್ನು ಆನ್ ಲೈನ್ ಮೂಲಕ ಸುಲಭವಾಗಿ ಮಾಡಿಸಿ ಕೊಳ್ಳಬಹುದು. ಕಾವೇರಿ ಹೆಸರಿನ ಅಂತರ್ಜಾಲಕ್ಕೆ ಹೋಗಿ ಅಗತ್ಯದ ಮಾಹಿತಿಗಳನ್ನು ಪಡೆದು ಆನ್‌ಲೈನ್ ಮೂಲಕವೇ ಅದನ್ನು ಉಪನೋಂದಣಾಧಿಕಾರಿಗ ಳಿಗೆ ರವಾನಿಸಿದರೆ ನೋಂದಣಿ ದಿನಾಂಕವನ್ನು ನಿಗದಿಪಡಿಸಿಕೊಂಡು ಮಾರಾಟಗಾರರು-ಖರೀದಿ ಮಾಡುವವರು ಒಂದೇ ದಿನದಲ್ಲಿ ಆ ಕೆಲಸ ಮಾಡಿಸಿಕೊಳ್ಳಬಹುದು. ಇದುವರೆಗೆ ಜಮೀನು, ನಿವೇಶನ, ಆಸ್ತಿಖರೀದಿ ಸೇರಿದಂತೆ ಹಲವು ಕಾರ್ಯಗಳಿಗೆ ನೋಂದಣಿ ಮಾಡಿಸಬೇ ಕೆಂದರೆ ಸಂಬಂಧಪಟ್ಟ ಕಚೇರಿಗೆ ಹಲವು ಬಾರಿ ಅಲೆಯಬೇಕಾಗುತ್ತಿತ್ತು. ಯಾಕೆಂದರೆ ಇದೇ ಕೆಲಸಕ್ಕೆ ಐವತ್ತು, ಅರವತ್ತು ಜನ ಬಂದಾಗ ಸಮಸ್ಯೆ ಉಲ್ಬಣವಾಗುತ್ತಿತ್ತು. ಹೀಗಾಗಿ ಮಾರಾಟಗಾರರು- ಖರೀದಿದಾರರು ಹಲವು ಬಾರಿ ಉಪ ನೋಂದಣಾಧಿಕಾರಿಗಳ ಕಛೇರಿಗೆ ಅಲೆದಾಡಬೇಕಾಗುತ್ತಿತ್ತು. ಆದರೆ ಇನ್ನು ಮುಂದೆ ಕಾವೇರಿ ವೆಬ್ ಸೈಟ್ ಅನ್ನು ಕಂದಾಯ ಇಲಾಖೆ ಆರಂಭಿಸಿದ್ದು,ಈ ವೆಬ್ ಸೈಟ್‌ಗೆ ಹೋದರೆ ಸದರಿ ಜಮೀನು,ನಿವೇಶನ,ಆಸ್ತಿಯ ಸರ್ಕಾರಿ ಮಾರ್ಗಸೂಚಿ ಮೌಲ್ಯದ ವಿವರ ದಕ್ಕುತ್ತದೆ. ಹೀಗೆ ಸಿಗುವ ವಿವರವನ್ನು ಪಡೆದು ಆನ್‌ಲೈನ್‌ನಲ್ಲಿ ಸಂಬಂಧಪಟ್ಟ ಆಸ್ತಿಯ ವಿವರ ದಾಖಲಿಸಿ,ಅದರ ನೋಂದ ಣಿಗೆ ತಗಲುವ ವೆಚ್ಚವನ್ನೂ ಭರಿಸಿ ಸದರಿ ವಿವರವನ್ನು ಉಪನೋಂದಣಾ ಧಿಕಾರಿಗಳಿಗೆ ಕಳಿಸಬೇಕು ಅವರು ಅದನ್ನು ಪರಿಶೀಲಿಸಿ ಆಸ್ತಿ ನೋಂದ ಣಿಗೆ ದಿನವನ್ನು ನಿಗದಿ ಮಾಡುತ್ತಾರೆ. ಅವರು ನಿಗದಿ ಮಾಡಿದ ದಿನ ದಂದು, ನಿರ್ದಿ? ಸಮಯಕ್ಕೆ ಹೋದರೆ ಕೆಲವೇ ಹೊತ್ತಿನಲ್ಲಿ ನೋಂದಣಿ ಕಾರ್ಯ ಪೂರ್ಣವಾಗುತ್ತದೆ.ಆ ಮೂ ಲಕ ಸಮಯದ ಉಳಿತಾಯವೂ ಆಗುತ್ತದೆ. ಇದೇ ರೀತಿ ಮನೆ ಬಾಡಿಗೆ ಪತ್ರ, ಗುತ್ತಿಗೆ ಆಧಾರದ ಪತ್ರ,ವಿವಿಧ ಪ್ರಮಾಣ ಪತ್ರಗಳನ್ನು ಆನ್‌ಲೈನ್ ಮೂಲಕವೇ ಸ್ಟ್ಯಾಂಪ್ ಪೇಪರ್ ಡೌನ್‌ಲೋಡ್ ಮಾಡಿಕೊಂಡು ಕೆಲಸ ಸುಲಭಗೊಳಿಸಿ ಕೊಳ್ಳಬಹುದು.
2018: ನವದೆಹಲಿ: ಕೇಂದ್ರೀಯ ತನಿಖಾ ದಳದ ನಿರ್ದೇಶಕ ಅಲೋಕ್ ವರ್ಮ ಅವರ ವಿರುದ್ಧದ ಆರೋಪಗಳ ಬಗ್ಗೆ ತನಿಖೆ ನಡೆಸಿ ಕೇಂದ್ರೀಯ ಜಾಗೃತಾ ಆಯೋಗವು (ಸಿವಿಸಿ) ಮೊಹರಾದ ಲಕೋಟೆಯಲ್ಲಿ ಸಲ್ಲಿಸಿದ್ದ ವರದಿಯ ಪ್ರತಿಯನ್ನು ಅಲೋಕ್ ವರ್ಮ ಅವರಿಗೆ ನೀಡಿದ ಸುಪ್ರೀಂಕೋರ್ಟ್ ಒಳಗೆ ಅದಕ್ಕೆ ಪ್ರತಿಕ್ರಿಯೆ ನೀಡುವಂತೆ ಆಜ್ಞಾಪಿಸಿತು.
ಸಿವಿಸಿ ನೀಡಿರುವ ವರದಿಯಲ್ಲಿ ಕೆಲವು ಅತೃಪ್ತಿಕರ ಅಂಶಗಳು ಪ್ರಸ್ತಾಪವಾಗಿದ್ದು, ಈ ಅಂಶಗಳ ವಿರುದ್ಧ ಪ್ರತ್ಯೇಕ ತನಿಖೆ ನಡೆಯುವ ಅಗತ್ಯವಿದೆ ಎಂದು ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ, ಕೇಂದ್ರ ಜಾಗೃತ ಆಯೋಗದ ವರದಿಯನ್ನು ಅಟೊರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರಿಗೆ ಸಹ ನೀಡಬೇಕೆಂದು ಹೇಳಿತು. ಸಿಬಿಐ ವರ್ಚಸ್ಸನ್ನು ಕಾಪಾಡುವ ಸಲುವಾಗಿ ವರದಿಯನ್ನು ಮೊಹರು ಮಾಡಿದ ಲಕೋಟೆಯಲ್ಲಿ ಸಲ್ಲಿಸಲಾಗಿದೆ. ನ್ಯಾಯಾಧೀಶ ಎ.ಕೆ. ಪಟ್ನಾಯಕ್ ಅವರು ಸಿವಿಸಿ ವರದಿಯನ್ನು ಪರಿಶೀಲಿಸಿ ಟಿಪ್ಪಣಿಗಳನ್ನು ಬರೆದುಕೊಂಡಿದ್ದಾರೆ ಎಂದು ನ್ಯಾಯಪೀಠ ಹೇಳಿತು. ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ನ್ಯಾಯಾಧೀಶರು, ಅಲೋಕ್ ವರ್ಮಾ ಮೇಲೆ ಕೇಳಿಬರುತ್ತಿರುವ ಆರೋಪಗಳ ಕುರಿತು ನೀಡಿರುವ ಸಿವಿಸಿ ವರದಿ ತುಂಬಾ ಪ್ರಶಂಸಾತ್ಮಕವಾಗಿಲ್ಲ, ಅವರ ವಿರುದ್ಧವಾಗಿದೆ. ಹೀಗಾಗಿ ಕೆಲವು ವಿಷಯಗಳಿಗೆ ಸಂಬಂಧಪಟ್ಟಂತೆ ಹೆಚ್ಚಿನ ತನಿಖೆಯ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಮುಚ್ಚಿದ ಲಕೋಟೆಯಲ್ಲಿ ನೀಡಲಾದ ವರದಿಗೆ 3 ದಿನದಲ್ಲಿ ಉತ್ತರ ನೀಡಬೇಕೆಂದು ನ್ಯಾಯಾಧೀಶರು ಹೇಳಿದರು. ಸಿವಿಸಿ ವರದಿಯನ್ನು ತಮಗೆ ನೀಡಬೇಕೆಂದು ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಮಾಡಿರುವ ಮನವಿಯನ್ನು ಕೂಡ ನ್ಯಾಯಾಲಯ ಇದೇ ಸಂದರ್ಭದಲ್ಲಿ ತಳ್ಳಿ ಹಾಕಿತು. ನವೆಂಬರ್ ೧೯ರ ಒಳಗೆ ಅಲೋಕ್ ವರ್ಮಾ ಪ್ರತಿಕ್ರಿಯೆ ನೀಡಿದರೆ ನವೆಂಬರ್ ೨೦ರಿಂದ ವಿಚಾರಣೆ ಆರಂಭವಾಗಲಿದೆ. ಸಿವಿಸಿ ವರದಿಯ ಪ್ರತಿಯನ್ನು ಅಟಾರ್ನಿ ಜನರ್ ಮತ್ತು ಸಾಲಿಸಿಟರ್ ಜನರಲ್ ಅವರಿಗೂ ನೀಡುವಂತೆ ಸುಪ್ರೀಂ ಸೂಚಿಸಿತು. ಅಲೋಕ್ ವರ್ಮಾ ಪರವಾಗಿ ಪಾಲಿ ನಾರಿಮನ್ ವಾದ ಮಂಡನೆ ಮಾಡಿದರು.
2016: ನವದೆಹಲಿ: ಮೂತ್ರಪಿಂಡ ವೈಫಲ್ಯ ದಿಂದ ಬಳಲುತ್ತಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಏಮ್ಸ್ (ಅಖಿಲ ಭಾರತೀಯ ವೈದ್ಯ ಕೀಯ ವಿಜ್ಞಾನ ಸಂಸ್ಥೆ) ಆಸ್ಪತ್ರೆಗೆ ನ.16ರ ಬುಧವಾರ ದಾಖಲಾಯಿತು. ಸಂಸತ್‌ನ ಚಳಿಗಾಲದ ಅಧಿವೇಶನ ಆರಂಭದ ದಿನವಾದ ನ.16ರ ಬೆಳಿಗ್ಗೆ ಸಚಿವೆ ಸುಷ್ಮಾ ಅವರು ತಮ್ಮ ಆರೋಗ್ಯ ಸಮಸ್ಯೆ ಕುರಿತು ಟ್ವೀಟ್ ಮಾಡಿ, ‘ಸ್ನೇಹಿತರೇ, ನನ್ನ ಆರೋಗ್ಯದ ಮಾ ಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಮೂತ್ರಪಿಂಡ ವೈಫಲ್ಯದ ಕಾರಣ ನಾನು ಏಮ್ಸ್ ಆಸ್ಪತ್ರೆಗೆ ದಾಖ ಲಾಗಿದ್ದು, ಸದ್ಯ ಡಯಾಲಿಸಿಸ್ಗೆ ಒಳಗಾ ಗುತ್ತಿದ್ದೇನೆ. ಮೂತ್ರಪಿಂಡ ಕಸಿ ಕುರಿತ ಪರೀಕ್ಷೆಗಳು ನಡೆಯುತ್ತಿವೆ. ಶ್ರೀಕೃಷ್ಣ ಪರಮಾತ್ಮ ನನ್ನೊಂದಿಗೆ ಇದ್ದಾನೆ’ ಎಂದು ತಿಳಿಸಿದರು. ‘ಸುಷ್ಮಾ ಸ್ವರಾಜ್ ಅವರು ಆಸ್ಪತ್ರೆಗೆ ದಾಖಲಾಗಿದ್ದು, ಮೂತ್ರಪಿಂಡ ಕಸಿ ಮಾಡಬೇಕಿದೆ. ಅದಕ್ಕಾಗಿ ದಾನಿಗಳಿಗೆ ಹುಡುಕಾಟ ನಡೆದಿದ್ದು, ಅಗತ್ಯ ಪ್ರಕ್ರಿಯೆಗಳು ಜಾರಿಯಲ್ಲಿವೆ’ ಎಂದು ಏಮ್ಸ್ ವೈದ್ಯರು ಹೇಳಿದರು. ಸುಷ್ಮಾ ಸ್ವರಾಜ್ ಅವರ ಟ್ಟಿಟ್ಟ್ಟರ್ ಸಂದೇಶಕ್ಕೆ ಭಾರಿ ಸಂಖ್ಯೆಯ ಅಭಿಮಾನಿಗಳಿಂದ ಆರೋಗ್ಯ ಹಾರೈಸಿ ಸಂದೇಶಗಳ ಸುರಿಮಳೆಯಾಯಿತು. ಕೆಲವರು ಮೂತ್ರ ಪಿಂಡ ದಾನದ ಕೊಡುಗೆಗೂ ಮುಂದಾದರು.
2016:
ನವದೆಹಲಿ: ತಮ್ಮಲ್ಲಿರುವ ಹಣದ ಮಾಹಿತಿ ಹಾಗೂ ದಾಖಲೆಗಳನ್ನು ಒದಗಿಸುವಂತೆ
ಆದಾಯ ತೆರಿಗೆ ಇಲಾಖೆಯು ದೇಶದ ಹಲವು ಧಾರ್ಮಿಕ, ಶೈಕ್ಷಣಿಕ ಹಾಗೂ ಸಮಾಜಸೇವಾ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿತು. ಮಾರ್ಚ್ 31ರಿಂದ ನವೆಂಬರ್ 8ರವರೆಗೆ ಎಷ್ಟು ಹಣ ದಾನದ ರೂಪದಲ್ಲಿ ಬಂದಿದೆ ಎಂಬ ಮಾಹಿತಿ ನೀಡಬೇಕು ಎಂದು ಸಂಸ್ಥೆಗಳಿಗೆ ನೋಟಿಸ್ನಲ್ಲಿ ತಿಳಿಸಲಾಯಿತು. ಡಿಸೆಂಬರ್ 30ರ ಬಳಿಕ ದಾಖಲೆಗಳನ್ನು ಪರಿಶೀಲಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ತಿಳಿಸಿದರು.2008: `ಡ್ರಾ' ಮಾಡಿದ ಹಣ ಕೈಗೂ ಸಿಗದೇ, `ಎಟಿಎಂ ಬಿನ್' ನಲ್ಲಿಯೂ (ಎಟಿಎಂ ಯಂತ್ರದ ಡಬ್ಬ) ಕಾಣದೇ ವ್ಯಕ್ತಿಯೊಬ್ಬರು ತೊಂದರೆ ಪಡುವಂತೆ ಮಾಡಿದ ಸ್ಟೇಟ್ ಬ್ಯಾಂಕ್ ಆಫ್ ವೆೆುಸೂರಿನ ಜಯನಗರ ಶಾಖೆಗೆ ಬೆಂಗಳೂರಿನ ಮೂರನೇ ಹೆಚ್ಚುವರಿ ಗ್ರಾಹಕ ನ್ಯಾಯಾಲಯ ದಂಡ ವಿಧಿಸಿ ಆದೇಶ ಹೊರಡಿಸಿತು. ಎಂ.ಆರ್. ರಾಜಕುಮಾರ್ ಎಂಬವರು ಈ ಬ್ಯಾಂಕಿನ ಎಟಿಎಂನಲ್ಲಿ ಮೂರು ಸಾವಿರ ರೂಪಾಯಿ `ಡ್ರಾ' ಮಾಡಲು ಹೋಗಿದ್ದರು. ಆದರೆ ಅದೇ ಸಮಯದಲ್ಲಿ ವಿದ್ಯುತ್ ನಿಲುಗಡೆ ಆದ ಕಾರಣ, ಹಣ ಹೊರಕ್ಕೆ ಬರಲಿಲ್ಲ. ಈ ಬಗ್ಗೆ ಅವರು ಬ್ಯಾಂಕನ್ನು ಸಂಪರ್ಕಿಸಿದಾದ ಮರುದಿನ ಬೆಳಗ್ಗೆ ಅದು `ಬಿನ್' ನಲ್ಲಿ ಇರುವುದಾಗಿ ಉತ್ತರ ಬಂತು. ಆದರೆ ಮಾರನೇ ದಿನ ಹಣ `ಬಿನ್' ನಲ್ಲಿ ಇರಲಿಲ್ಲ. ಅವರು ಬ್ಯಾಂಕನ್ನು ಪುನಃ ಸಂಪರ್ಕಿಸಿದಾಗ ಸಿಬ್ಬಂದಿಯಿಂದ ಹಾರಿಕೆ ಉತ್ತರ ಬಂತು. ಇದರಿಂದ ಬೇಸತ್ತ ಅವರು ಗ್ರಾಹಕ ನ್ಯಾಯಾಲಯದ ಮೊರೆ ಹೋದರು. ಬ್ಯಾಂಕ್ ಕರ್ತವ್ಯ ಲೋಪ ಎಸಗಿದೆ ಎಂದು ಅಭಿಪ್ರಾಯ ಪಟ್ಟ ವೇದಿಕೆ ಅಧ್ಯಕ್ಷ ಎನ್. ಶ್ರೀವತ್ಸ ಕೆದಿಲಾಯ ಅವರು, ಅರ್ಜಿದಾರರಿಗೆ ಮೂರು ಸಾವಿರ ರೂಪಾಯಿ ಜೊತೆಗೆ ಐದು ಸಾವಿರ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದರು. ಈ ಮೊತ್ತದ ಜೊತೆಗೆ ದಂಡದ ರೂಪದಲ್ಲಿ ಒಂದು ಸಾವಿರ ರೂಪಾಯಿ ನೀಡುವಂತೆಯೂ ಬ್ಯಾಂಕಿಗೆ ಸೂಚಿಸಿದರು.
2008: ಈಚೆಗೆ ಸಂತ ಪದವಿ ಪಡೆದ ಭಾರತೀಯ ಮೊದಲ ಮಹಿಳೆ ಸೇಂಟ್ ಆಲ್ಫೋನ್ಸಾ ಅವರ ಹೆಸರಿನಲ್ಲಿ ಅಂಚೆ ಚೀಟಿಯನ್ನು ನವದೆಹಲಿಯಲ್ಲಿ ಬಿಡುಗಡೆ ಮಾಡಲಾಯಿತು. ಇಲ್ಲಿನ ಸೈರೋ ಮಲಬಾರ್ ಇಗರ್ಜಿಯಲ್ಲಿ (ಚರ್ಚ್) ನಡೆದ ಸಮಾರಂಭದಲ್ಲಿ ಅಂಚೆ ಇಲಾಖೆಯ ಮಹಾನಿರ್ದೇಶಕ ಪಿ.ಕೆ.ಗೋಪಿನಾಥ್ ಅವರು 15 ರೂಪಾಯಿಯ ಅಂಚೆ ಚೀಟಿ ಬಿಡುಗಡೆ ಮಾಡಿ ಸುಪ್ರೀಂಕೋರ್ಟ್ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಅವರಿಗೆ ನೀಡಿದರು. ತ್ರಿಶೂರಿನ ಮಹಾಧರ್ಮಾಧ್ಯಕ್ಷ ಅ್ಯಂಡ್ರೂಸ್ ಥಾಜ್ಸು ಅವರ ನೇತೃತ್ವದಲ್ಲಿ ದೆಹಲಿ ಮತ್ತು ಕೇರಳದ ಬೇರೆ ಬೇರೆ ಧರ್ಮಕ್ಷೇತ್ರಗಳ ಬಿಷಪ್ ಗಳು ಭಾಗವಹಿಸಿದ್ದರು.
2008: ಚಂದ್ರ ಯಾನ-1 ಬಾಹ್ಯಾಕಾಶ ನೌಕೆಯ ಮೂನ್ ಇಂಪ್ಯಾಕ್ಟ್ ಪ್ರೋಬ್ (ಎಂಐಪಿ) ಶೋಧಕ ಉಪಕರಣ ಚಂದ್ರನ ಮೇಲೆ ಬಿದ್ದ ಬೆನ್ನಲ್ಲೇ ಲೂನಾರ್ ಲೇಸರ್ ರೇಂಜಿಂಗ್ (ಎಲ್ ಎಲ್ ಆರ್ ಐ) ಉಪಕರಣ ತನ್ನ ಮಹತ್ವದ ಕೆಲಸ ಆರಂಭಿಸಿತು. ಚಂದ್ರನ ವಿಕಾಸ ಹಾಗೂ ಈ ಪ್ರದೇಶದ ಗುರುತ್ವಾಕರ್ಷಣ ಶಕ್ತಿಯನ್ನು ಅರಿಯುವಲ್ಲಿ ಲೂನಾರ್ ಲೇಸರ್ ರೇಂಜಿಂಗ್ ಉಪಕರಣ ಸಹಾಯ ಮಾಡುವುದು.
2007: ಕಲೆ, ಸಂಸ್ಕೃತಿ ಮತ್ತು ಶಿಕ್ಷಣಕ್ಕಾಗಿ ನೀಡಲಾಗುವ ಪ್ರತಿಷ್ಠಿತ ದಯಾವತಿ ಮೋದಿ ಪ್ರಶಸ್ತಿಯನ್ನು ಖ್ಯಾತ ಚಿತ್ರ ಕಲಾವಿದ ಅಕ್ಬರ್ ಪದಂಸೀ ಅವರಿಗೆ ಪ್ರಕಟಿಸಲಾಯಿತು. ಸಮಕಾಲೀನ ಭಾರತೀಯ ಚಿತ್ರ ಪರಂಪರೆಗೆ ಪದಂಸೀ ಅವರು ಸಲ್ಲಿಸಿರುವ ಸೇವೆಗಾಗಿ ಅವರನ್ನು ಆಯ್ಕೆ ಮಾಡಲಾಯಿತು. ಪ್ರಶಸ್ತಿಯು 2.51 ಲಕ್ಷ ನಗದು, ಬೆಳ್ಳಿ ಪದಕವನ್ನು ಒಳಗೊಂಡಿರುತ್ತದೆ ಎಂದು ಪ್ರಶಸ್ತಿ ಸಮಿತಿಯ ಸತೀಶ್ಕುಮಾರ್ ಮೋದಿ ಬೆಂಗಳೂರಿನಲ್ಲಿ ತಿಳಿಸಿದರು.
2007: ನವೆಂಬರ್ 15ರ ರಾತ್ರಿ ಬಾಂಗ್ಲಾದೇಶದ ದಕ್ಷಿಣದ ಕರಾವಳಿ ತೀರಕ್ಕೆ ಅಪ್ಪಳಿಸಿದ ಭಯಾನಕ `ಸಿದ್ರ್' ಚಂಡಮಾರುತಕ್ಕೆ ಸಿಲುಕಿ 550ಕ್ಕೂ ಹೆಚ್ಚು ಜನ ಮೃತರಾಗಿ, 3,000ಕ್ಕೂ ಹೆಚ್ಚು ಮೀನುಗಾರರು, ನಾವಿಕರು ನಾಪತ್ತೆಯಾದರು. ಬಂಗಾಳ ಕೊಲ್ಲಿಯ ಉತ್ತರ ಭಾಗದಿಂದ ಬಾಂಗ್ಲಾ ಪ್ರವೇಶಿಸಿದ ಚಂಡಮಾರುತ 15 ಕರಾವಳಿ ಜಿಲ್ಲೆಗಳಲ್ಲಿ ರುದ್ರನರ್ತನ ಮಾಡಿತು. ಗಂಟೆಗೆ 240 ಕಿ.ಮೀ. ವೇಗದಲ್ಲಿ ಬೀಸುತ್ತಿದ್ದ ಪ್ರಬಲ ಗಾಳಿ, 15 ಅಡಿ ಎತ್ತರದ ಸಮುದ್ರದ ಅಲೆಗಳು ಸುನಾಮಿಯನ್ನು ನೆನಪಿಸಿದವು.
2007: ಒಡಂಬಡಿಕೆ ಪತ್ರ ಎಂಬ `ಮೂಗುದಾರ'ದ ಮೂಲಕ ಸರ್ಕಾರವನ್ನು ನಿಯಂತ್ರಿಸಲು ಉದ್ದೇಶಿಸಿದ ಜೆ.ಡಿ (ಎಸ್) ನಾಯಕ ಎಚ್. ಡಿ. ದೇವೇಗೌಡರ ಕಾರ್ಯತಂತ್ರಕ್ಕೆ ಮಣಿಯದಿರಲು ಬಿಜೆಪಿ ನಿರ್ಧರಿಸಿತು. ನವದೆಹಲಿಯಲ್ಲಿ ಮಾಜಿ ಉಪಪ್ರಧಾನಿ ಎಲ್.ಕೆ.ಅಡ್ವಾಣಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತಿತರ ನಾಯಕರು ಪಾಲ್ಗೊಂಡ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಇಪ್ಪತ್ತೊಂದು ತಿಂಗಳುಗಳ ಹಿಂದೆ ಉಭಯ ಪಕ್ಷಗಳ ನಡುವೆ ಯಾವ ಬಗೆಯ ಕೊಡು-ಕೊಳ್ಳುವಿಕೆ ಆಧಾರದಲ್ಲಿ ಮೈತ್ರಿ ಏರ್ಪಟ್ಟಿತ್ತೋ ಅದನ್ನಷ್ಟೇ ಪಾಲಿಸಿಕೊಂಡು ಹೋಗಬೇಕೆಂಬ ಒಮ್ಮತದ ಅಭಿಪ್ರಾಯವನ್ನು ಪಕ್ಷದ ನಾಯಕರು ಸಭೆಯಲ್ಲಿ ವ್ಯಕ್ತ ಪಡಿಸಿದರು.
2007: ಪಾಕಿಸ್ಥಾನದ ಸೇನಾ ಆಡಳಿತಗಾರ ಜನರಲ್ ಪರ್ವೇಜ್ ಮುಷರಫ್ ಅವರ ಬೆಂಬಲಿಗ, 57 ವರ್ಷದ ಮೊಹಮ್ಮದಿಯಾ ಸೂಮ್ರೊ ದೇಶದ ಹಂಗಾಮಿ ಪ್ರಧಾನಿಯಾಗಿ ಇಸ್ಲಾಮಾಬಾದಿನಲ್ಲಿ ಅಧಿಕಾರ ಸ್ವೀಕರಿಸಿದರು.
2007: ಗೃಹ ಬಂಧನದಲ್ಲಿದ್ದ ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ, ಮಾನವ ಹಕ್ಕುಗಳ ಧುರೀಣೆ ಆಸ್ಮಾ ಜಹಾಂಗೀರ್ ಮತ್ತಿತರ ಬಂಧಿತ ಮಹಿಳಾ ಮುಖಂಡರನ್ನು ಪಾಕಿಸ್ಥಾನದ ಸೇನಾ ಆಡಳಿತ ಬಿಡುಗಡೆ ಮಾಡಿತು. ತುರ್ತು ಪರಿಸ್ಥಿತಿ ತೆರವುಗೊಳಿಸುವಂತೆ ಪರ್ವೇಜ್ ಮುಷರಫ್ ಅವರನ್ನು ಒತ್ತಾಯಿಸಲು ಅಮೆರಿಕದ ಪ್ರತಿನಿಧಿಯಾಗಿ ರಕ್ಷಣಾ ಇಲಾಖೆ ಜಂಟಿ ಕಾರ್ಯದರ್ಶಿ ಜಾನ್ ನೆಗ್ರೊಪೊಂಟೆ ಅವರು ಲಾಹೋರಿಗೆ ಆಗಮಿಸುವ ಕೇವಲ ಒಂದು ಗಂಟೆ ಮೊದಲು ಈ ಮುಖಂಡರನ್ನು ಬಿಡುಗಡೆ ಮಾಡಲಾಯಿತು. ನವೆಂಬರ್ 13 ರಂದು ಬೆನಜೀರ್ ಭುಟ್ಟೊ ಅವರಿಗೆ ಏಳು ದಿನಗಳ ಗೃಹ ಬಂಧನದ ಆದೇಶ ಜಾರಿಯಾಗಿತ್ತು. ಆದರೆ, ಅಮೆರಿಕ ಪ್ರತಿನಿಧಿ ಆಗಮನದ ಹಿನ್ನೆಲೆಯಲ್ಲಿ ಏಳುದಿನಗಳ ಮೊದಲೇ ಅವರನ್ನು ಮುಕ್ತಗೊಳಿಸಲಾಯಿತು. ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷೆ ಆಸ್ಮಾ ಜಹಾಂಗೀರ್ ಅವರನ್ನು ತುರ್ತು ಪರಿಸ್ಥಿತಿ ಘೋಷಣೆಯಾದ ದಿನದಿಂದಲೇ ಗೃಹ ಬಂಧನದಲ್ಲಿ ಇರಿಸಲಾಗಿತ್ತು.
2007: ವಿಶ್ವದ ಮೊತ್ತ ಮೊದಲ ತದ್ರೂಪಿ ಕುರಿ `ಡಾಲಿ' ರೂಪಿಸಿದ ವಿಜ್ಞಾನಿಗಳು ಈಗ ಇದೇ ಮೊದಲ ಬಾರಿಗೆ ಜಗತ್ತಿನ ಮೊತ್ತ ಮೊದಲ ಮಂಗನ ಭ್ರೂಣದ ತದ್ರೂಪಿ ರೂಪಿಸುವಲ್ಲಿ ಸಫಲರಾಗಿರುವುದಾಗಿ ಪ್ರಕಟಿಸಿದರು. ಈ ವಿಜ್ಞಾನಿಗಳ ಪ್ರಕಾರ ಭ್ರೂಣದ ಆಕರ ಕೋಶಗಳಿಂದ ದೇಹದ ಯಾವುದೇ ಅಂಗಾಂಶದ ಜೀವಕೋಶಗಳನ್ನು ಪಡೆಯಬಹುದು. ಇದರಿಂದ ಅನೇಕ ಕಾಯಿಲೆಗಳಿಗೆ ಪರಿಣಾಮಕಾರಿ ಚಿಕಿತ್ಸೆಯೂ ಸಾಧ್ಯವಾಗಲಿದೆ. `ನೇಚರ್' ಪತ್ರಿಕೆಯಲ್ಲಿ ಈ ಕುರಿತ ವರದಿಯನ್ನು ಪ್ರಕಟಿಸಲಾಗಿದೆ. ಅದರ ಪ್ರಕಾರ ಭ್ರೂಣದ ಆಕರ ಕೋಶಗಳಿಂದ ಪಡೆಯುವ ಹೊಸ ಜೀವಕೋಶಗಳನ್ನು ತಮ್ಮ ಕಾರ್ಯಕ್ಷಮತೆ ಕಳೆದುಕೊಂಡ ಜೀವಕೋಶಗಳ ಬದಲಿಗೆ ಅಳವಡಿಸುವುದರಿಂದ ಮಾನವ ದೇಹ ಅಂತಹ ಕೋಶಗಳನ್ನು ತಿರಸ್ಕರಿಸುವುದಿಲ್ಲ ಎಂಬುದು ವಿಜ್ಞಾನಿಗಳ ಅಭಿಮತ.
2006: 1300 ಕಿ.ಮೀ. ದೂರದ ಗುರಿಯನ್ನು ನಿಖರವಾಗಿ ತಲುಪುವ ಸಾಮರ್ಥ್ಯದ ಮಧ್ಯಮಗಾಮಿ `ಹತ್ಪ್ 5 (ಘೋರಿ) ಅಣ್ವಸ್ತ್ರ ಪ್ರಕ್ಷೇಪಣಾ ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆಯನ್ನು ಪಾಕಿಸ್ಥಾನ ಯಶಸ್ವಿಯಾಗಿ ನಡೆಸಿತು. ಈ ಕ್ಷಿಪಣಿಯು ಇಂಧನಶಕ್ತಿಯಿಂದ ಉಡಾವಣೆಗೊಂಡು ಬಳಿಕ ಗುರುತ್ವಾಕರ್ಷಣ ಶಕ್ತಿಯಿಂದಲೇ ವೈರಿಪಾಳಯವನ್ನು ಧ್ವಂಸಗೊಳಿಸುವ ಸಾಮರ್ಥ್ಯ ಹೊಂದಿದೆ.
2006: ಬೆಂಗಳೂರಿನ ಹವ್ಯಾಸಿ ಪತ್ರಕರ್ತೆ ಭಾರತಿ ಘನಶ್ಯಾಮ್ ಅವರಿಗೆ ಪ್ರತಿಷ್ಠಿತ ಥಾಮ್ಸನ್ ಪ್ರತಿಷ್ಠಾನ ಪ್ರಶಸ್ತಿ ಲಭಿಸಿತು. ಎಚ್ ಐವಿ/ ಏಡ್ಸ್ ಕುರಿತು ಉದಯವಾಣಿಯಲ್ಲಿ ಬರೆದ ಲೇಖನಕ್ಕೆ ಈ ಪ್ರಶಸ್ತಿ ಬಂದಿತು.
2004: ಖ್ಯಾತ ಛಾಯಾಗ್ರಾಹಕ ಗೌರಿಶಂಕರ ನಿಧನ.
2001: ದಕ್ಷಿಣ ಆಫ್ರಿಕಾದ ಸನ್ಸಿಟಿಯಲ್ಲಿ ನಡೆದ ವಿಶ್ವಸುಂದರಿ ಸ್ಪರ್ಧೆಯಲ್ಲಿ ವಿಶ್ವಸುಂದರಿ ಕಿರೀಟ ಧರಿಸುವ ಮೂಲಕ ನೈಜೀರಿಯಾದ 18 ವರ್ಷದ ತರುಣಿ ಅಗ್ಬಾನಿ ಡರೇಗೊ ಸ್ಪರ್ಧೆಯ 51 ವರ್ಷಗಳ ಇತಿಹಾಸದಲ್ಲೇ `ವಿಶ್ವ ಸುಂದರಿ' ಎನಿಸಿಕೊಂಡ ಮೊತ್ತ ಮೊದಲ ಕರಿಯ ಆಫ್ರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
2000: ಕಮ್ಯೂನಿಸ್ಟ್ ವಿಯೆಟ್ನಾಂಗೆ ಭೇಟಿ ನೀಡಿದ ಮೊತ್ತ ಮೊದಲ ಅಮೆರಿಕನ್ ಅಧ್ಯಕ್ಷ ಎಂಬ ಹೆಗ್ಗಳಿಕೆ ಬಿಲ್ ಕ್ಲಿಂಟನ್ ಅವರದಾಯಿತು.
1990: ಚಂದ್ರಶೇಖರ್ ನೇತೃತ್ವದ ಕೇಂದ್ರ ಸರ್ಕಾರಕ್ಕೆ ವಿಶ್ವಾಸಮತ ಗೊತ್ತುವಳಿಯಲ್ಲಿ ಜಯ.
1988: ಪಾಕಿಸ್ಥಾನದಲ್ಲಿ ಹನ್ನೊಂದು ವರ್ಷಗಳ ಬಳಿಕ ನಡೆದ ಮೊದಲ ಮುಕ್ತ ಚುನಾವಣೆಯಲ್ಲಿ
ಬೆನಜೀರ್ ಭುಟ್ಟೋಗೆ ಗೆಲುವು.
1981: ಅಮೆರಿಕನ್ ಚಿತ್ರನಟ ವಿಲಿಯಂ ಹೋಲ್ಡನ್ ಕ್ಯಾಲಿಫೋರ್ನಿಯಾದ ಸಾಂಟಾ ಮೋನಿಕಾದಲ್ಲಿ ತಮ್ಮ 63ನೇ ವಯಸ್ಸಿನಲ್ಲಿ ನಿಧನರಾದರು. `ಸನ್ ಸೆಟ್ ಬುಲೆವಾರ್ಡ್' ಚಿತ್ರದ ಪಾತ್ರ ಅವರಿಗೆ ಅಪಾರ ಖ್ಯಾತಿ ತಂದು ಕೊಟ್ಟಿತು.
1973: ಭಾರತದ ಬ್ಯಾಡ್ಮಿಂಟನ್ ಪಟು ಪುಯೆಲ್ಲ ಗೋಪಿಚಂದ್ ಹುಟ್ಟಿದ ದಿನ. ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್ ಗೆದ್ದ ಎರಡನೇ ಭಾರತೀಯ ಇವರು. ಮೊದಲಿಗೆ ಈ ಚಾಂಪಿಯನ್ ಶಿಪ್ ಗೆದ್ದದ್ದು ಪ್ರಕಾಶ್ ಪಡುಕೋಣೆ.
1960: ಹಾಲಿವುಡ್ಡಿನ ಖ್ಯಾತ ನಟ ಕ್ಲಾರ್ಕ್ ಗ್ಯಾಬಲ್ 59ನೇ ವಯಸ್ಸಿನಲ್ಲಿ ಮೃತರಾದರು. `ಕಿಂಗ್ ಆಫ್ ಹಾಲಿವುಡ್' ಎಂದೇ ಪ್ರಖ್ಯಾತರಾಗಿದ್ದ ಇವರು `ಗಾನ್ ವಿದ್ ದಿ ವಿಂಡ್' ಚಿತ್ರದಲ್ಲಿ ಮಾಡಿದ್ದ ರೆಟ್ ಬಟ್ಲರ್ ಪಾತ್ರದಿಂದ ಜನಪ್ರಿಯರಾಗಿದ್ದರು.
1947: ಸಾಹಿತಿ ವಿಜಯಾ ನಾಗರಾಜ್ ಜನನ.
1942: ಸಾಹಿತಿ ಕೋ.ಲ. ರಂಗನಾಥರಾವ್ ಜನನ.
1933: ಅಮೆರಿಕ ಮತ್ತು ಸೋವಿಯತ್ ಯೂನಿಯನ್ ಮೊದಲ ಬಾರಿಗೆ ರಾಜತಾಂತ್ರಿಕ ಬಾಂಧ್ಯವಗಳನ್ನು ಸ್ಥಾಪಿಸಿಕೊಂಡವು.
1930: ಭಾರತೀಯ ಈಜುಗಾರ ಮಿಹಿರ್ ಸೆನ್ (1930-1997) ಹುಟ್ಟಿದ ದಿನ. 1958ರಲ್ಲಿ ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜಿದ ಪ್ರಪ್ರಥಮ ಏಷ್ಯನ್ ಎಂಬ ಹೆಗ್ಗಳಿಕೆ ಇವರದು. ಪಾಕ್ ಜಲಸಂಧಿ, ಗಿಬ್ರಾಲ್ಟರ್ ಜಲಸಂಧಿ, ಪನಾಮಾ ಕಾಲುವೆ ಇತ್ಯಾದಿಗಳನ್ನೂ ಇವರು ಈಜಿದ್ದಾರೆ.
1916: ಅಂತಾರಾಷ್ಟ್ರೀಯ ಖ್ಯಾತಿಯ ಸಮಾಜ ಶಾಸ್ತ್ರಜ್ಞ, ಸಾಮಾಜಿಕ ಮಾನವ ಶಾಸ್ತ್ರದ ಅದ್ವೈರ್ಯು ಪ್ರೊ. ಎಂ.ಎನ್. ಶ್ರೀನಿವಾಸ್ ಅವರು ನರಸಿಂಹಾಚಾರ್ ಪುತ್ರನಾಗಿ ಮೈಸೂರಿನ ಬಳಿಯ ಅರಕೆರೆ ಗ್ರಾಮದಲ್ಲಿ ಜನಿಸಿದರು.
1835: ಬ್ರಿಟಿಷರೊಂದಿಗೆ ಹೋರಾಡುತ್ತಾ ರಣರಂಗದಲ್ಲಿ ಮಡಿದ ಭಾರತದ ವೀರ ಯೋಧೆ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ (1835-1858) ಹುಟ್ಟಿದ ದಿನ.
(ಸಂಗ್ರಹ: ನೆತ್ರಕೆರೆ ಉದಯಶಂಕರ )
No comments:
Post a Comment