ಇಂದಿನ ಇತಿಹಾಸ History Today ನವೆಂಬರ್ 11
2018: ಬೆಂಗಳೂರು: ಆಂಬಿಡೆಂಟ್ ಕಂಪನಿಯ
೨೦ ಕೋಟಿ ರೂ. ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಯಶಸ್ವಿಯಾಗಿ ಖೆಡ್ಡಾ ತೋಡಿದ ಕೇಂದ್ರ ಅಪರಾಧ ವಿಭಾಗದ
ಪೊಲೀಸರು, ಕೊನೆಗೂ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ಅವರನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ
ಕಳುಹಿಸುವಲ್ಲಿ ಸಫಲರಾದರು. ಸಿಸಿಬಿ ಪೊಲೀಸರು ೧ನೇ ಏಸಿಎಂಎಂ ನ್ಯಾಯಾ ಲಯದ ನ್ಯಾಯಾಧೀಶ ಜಗದೀಶ್ ಅವರ
ಮುಂದೆ ಜನಾರ್ದನ ರೆಡ್ಡಿ ಅವರನ್ನು ಹಾಜರುಪಡಿಸಿದ್ದು, ನ್ಯಾಯಾಲಯ ಈ ತಿಂಗಳ ೨೪ರ ವರೆಗೆ ನ್ಯಾಯಾಂಗ
ಬಂಧನಕ್ಕೆ ಒಪ್ಪಿಸಿತು. ನಂತರ ರೆಡ್ಡಿ ಅವರನ್ನು ಸಿಸಿಬಿ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಸೇರಿಸಿದರು.
ಹಿಂದಿನ ದಿನ ಮಧ್ಯಾಹ್ನ ಸಿಸಿಬಿ ಕಚೇರಿಗೆ ವಿಚಾರ
ಣೆಗೆ ಆಗಮಿಸಿದ ಜನಾರ್ಧನ ರೆಡ್ಡಿ ಅವರನ್ನು ಮಧ್ಯ ರಾತ್ರಿ ೨.೩೦ರವರೆಗೆ ವಿಚಾರಣೆ ನಡೆಸಿ ಮತ್ತೆ ಈದಿನ
ಬೆಳಗ್ಗೆ ವಿಚಾರಣೆ ಆರಂಭಿಸಿದ ಸಿಸಿಬಿ ಅಧಿಕಾರಿಗಳು
ಮಧ್ಯಾಹ್ನದ ವೇಳೆಗೆ ಬಂಧಿಸಿದರು. ಆಂಬಿಡೆಂಟ್
ಪ್ರಕರಣದಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರ ಪಾತ್ರ ಕಂಡುಬಂದಿ ರುವುದಿಂದ ಅವರನ್ನು ಬಂಧಿಸಲಾಗಿದೆ
ಎಂದು ಸಿಸಿಬಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಸ್ಪಷ್ಟನೆ ನೀಡಿದರು. ರೆಡ್ಡಿ ಬಂಧನದ ನಂತರ ಮಾತನಾಡಿದ ಅವರು, ಆಂಬಿಡೆಂಟ್ ವಂಚನೆ
ಪ್ರಕರಣಕ್ಕೆ ಸಂಬಂಧಿ ಸಿದಂತೆ ಗಾಲಿ ಜನಾರ್ದನ ರೆಡ್ಡಿಗೆ ನೋಟಿಸ್ ನೀಡಲಾ ಗಿತ್ತು. ಹೀಗಾಗಿ ಅವರು
ಹಿಂದಿನ ದಿನ ಮಧ್ಯಾಹ್ನ ಸಿಸಿಬಿ ಕಚೇರಿಗೆ ತಮ್ಮ ವಕೀಲರೊಂದಿಗೆ ಆಗಮಿಸಿ ದ್ದರು. ಈ ವೇಳೆ ತನಿಖಾಧಿಕಾರಿಗಳು
ಅವರನ್ನು ಸವಿಸ್ತಾರವಾಗಿ ವಿಚಾರಣೆ ನಡೆಸಿದ್ದರು. ಅಲ್ಲದೇ ತಡರಾತ್ರಿಯವರೆಗೂ ಸಹ ವಿಚಾರಣೆ ಮುಂದುವ
ರೆದಿತ್ತು. ಪ್ರಕರಣದಲ್ಲಿ ರೆಡ್ಡಿಯವರು ೨೦ ಕೋಟಿ ರೂಪಾಯಿಯನ್ನು ಲಪಟಾಯಿಸಲು ಒಳಸಂಚು ರೂಪಿಸಿದ್ದರ
ಹಿನ್ನೆಲೆಯಲ್ಲಿ ಅವರನ್ನು ಬಂಧಿಸಿದ್ದೇ ವೆಂದು ತಿಳಿಸಿದರು. ರೆಡ್ಡಿಯ ಜೊತೆ ಅವರ ಆಪ್ತ ಆಲಿಖಾನ್
ನನ್ನು ಸಹ ಬಂಧಿಸಿದ್ದೇವೆ. ಸಂಪೂರ್ಣ ತನಿಖೆಯ ನಂತರ ಅವರಿಂದ ಹಣವನ್ನು ವಶಕ್ಕೆ ಪಡೆದುಕೊಳ್ಳುತ್ತೇವೆ.
ಅಲ್ಲದೇ ಆಂಬಿಡೆಂಟ್ ಸಂಸ್ಥೆ ಯಲ್ಲಿ ಹೂಡಿಕೆ ಮಾಡಿದ್ದವರಿಗೆ ಅದನ್ನು ಮರಳಿಸು ತ್ತೇವೆ ಎಂದು ಹೇಳಿದರು.
2018: ರಾಯ್ ಪುರ: ಛತ್ತೀಸ್ಗಢ ವಿಧಾನಸಭೆಗೆ ನಡೆಯಲಿರುವ ಮೊದಲ ಹಂತದ ಚುನಾವಣೆಗಾಗಿ ಒಂದು ಲಕ್ಷ ಮಂದಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಿರುವುದರ ಮಧ್ಯೆಯೇ ಈದಿನ ಮಾವೋವಾದಿ ನಕ್ಸಲೀಯರು ನಡೆಸಿದ ಹಿಂಸಾಚಾರಕ್ಕೆ ಗಡಿ ಭದ್ರತಾ ಪಡೆಯ (ಬಿಎಸ್ ಎಫ್) ಅಧಿಕಾರಿಯೊಬ್ಬರು ಸೇರಿ ೨೭ ಮಂದಿ ಬಲಿಯಾದರು. ಮಾವೋವಾದಿಗಳು ಛತ್ತೀಸ್ಗಢದ ಕಂಕೇರ್ ಜಿಲ್ಲೆಯಲ್ಲಿ ೬ ಕಡೆ ಸುಧಾರಿತ ಸ್ಫೋಟಕ ಸಾಧನಗಳನ್ನು ಸ್ಫೋಟಿಸಿದ್ದು ಬಿಎಸ್‌ಎಫ್‌ನ ಸಬ್ ಇನ್ ಸ್ಪೆಕಟ್ಟರ್ ಒಬ್ಬರು ಸಾವನ್ನಪ್ಪಿದರು. ಇನ್ನೊಂದು ಘಟನೆಯಲ್ಲಿ ಭದ್ರತಾ ಪಡೆಗಳು ಬಂಡಾಯ ಪೀಡಿತ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳ ಜೊತೆಗೆ ನಡೆದ ಗುಂಡಿನ ಘರ್ಷಣೆಯಲ್ಲಿ ಮಾವೋವಾದಿ ಒಬ್ಬನನ್ನು ಗುಂಡಿಟ್ಟು ಹತ್ಯೆ ಗೈಯಲಾಯಿತು. ಕಂಕೇರ್ ಜಿಲ್ಲೆಯ ಕಟ್ಟಕಲ್ ಮತ್ತು ಗೋಮ್ ಗ್ರಾಮಗಳ ಮಧ್ಯೆ ಭದ್ರತಾ ಪಡೆಗಳನ್ನು ಗುರಿ ಇಟ್ಟು ಮಾವೋವಾದಿಗಳು ೬ ಸುಧಾರಿತ ಸ್ಫೋಟಕ ಸಾಧನಗಳನ್ನು ಸ್ಫೋಟಿಸಿದರು ಎಂದು ಪೊಲೀಸರು ತಿಳಿಸಿದರು. ಬಿಎಸ್ಎಫ್ ತಂಡವೊಂದು ಕೊಲಿಯಾಬೇಡ ಪ್ರದೇಶದಲ್ಲಿ ದೈನಂದಿನ ಗಸ್ತಿನಲ್ಲಿ ನಿರತವಾಗಿದಾಗ ಬೆಳಗ್ಗೆ ೮.೩೦ರ ವೇಳೆಗೆ ಸ್ಫೋಟ ಸಂಭವಿಸಿತು. ಈ ಪ್ರದೇಶವು ಅಂತಾಗರ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದ್ದು,
ಇಲ್ಲಿ ಬಿಜೆಪಿ ಸಂಸತ್ ಸದಸ್ಯ ವಿಕ್ರಮ್ ಉಸೆಂಡಿ ಅವರನ್ನು ಕಣಕ್ಕಿಳಿಸಿತ್ತು. ಸ್ಫೋಟ ಹಾಗೂ ಬುಲೆಟ್ ಗುಂಡಿನಿಂದ ಗಾಯಗೊಂಡ ಬಿಎಸ್ಎಫ್ ಸಬ್ ಇನ್ ಸ್ಪೆಕ್ಟರ್ ಮಹೇಂದ್ರ ಸಿಂಗ್ ಅವರನ್ನು ತತ್ಕ್ಷಣವೇ ಆಸ್ಪತ್ರೆಗೆ ಒಯ್ಯಲಾಯಿತು ಎಂದು ಕಂಕೇರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ಎಲ್ ಧ್ರುವೆ ಹೇಳಿದರು. ಘಟನೆಯ ಸುದ್ದಿ ತಿಳಿಯುತ್ತಿದ್ದಂತೆಯೇ ಹೆಚ್ಚುವರಿ ಪಡೆಗಳನ್ನು ಪ್ರದೇಶಕ್ಕೆ ಕಳುಹಿಸಿ, ಗಾಯಾಳುಗಳನ್ನು ಅರಣ್ಯದಿಂದ ತೆರವುಗೊಳಿಸಲಾಯಿತು. ಸ್ಫೋಟದ ಬಳಿಕ ಪ್ರದೇಶದಲ್ಲಿ ನಾವು ಶೋಧ ಕಾರ್ಯಾಚರಣೆ ನಡೆಸುತ್ತಿದ್ದೇವೆ
ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹೇಳಿದರು. ಬಿಜಾಪುರ ಜಿಲ್ಲೆಯಲ್ಲಿ ನಡೆದ ಗುಂಡಿನ ಘರ್ಷಣೆಯಲ್ಲಿ ಬೆಡ್ರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿಶೇಶ ಕಾರ್‍ಯ ಪಡೆಯು (ಎಸ್ ಟಿಎಫ್) ನಕ್ಸಲ್ ವಿರೋಧಿ ಕಾರ್ಯಾಚರಣೆ ನಡೆಸುತ್ತಿದ್ದಾಗ
ಗುಂಡಿನ ಚಕಮಕಿ ನಡೆಯಿತು ಎಂದು ಪೊಲೀಸ್ ಮಹಾನಿರ್ದೇಶಕ (ನಕ್ಸಲ್ ವಿರೋಧಿ ಕಾರ್ಯಾಚರಣೆ) ಡಿಎಂ ಅವಸ್ಥಿ ನುಡಿದರು. ನವೆಂಬರ್ ೧೨ರ ಸೋಮವಾರ ಮೊದಲ ಹಂತದ ಚುನಾವಣೆ ನಡೆಯಲಿರುವ ಬಸ್ತಾರ್ ಡಿವಿಷನ್ನಿನ ಏಳು ಜಿಲ್ಲೆಗಳು ಮತ್ತು ರಾಜನಂದಗಾಂವ್ ಜಿಲ್ಲೆಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದ್ದು
ಸುಲಲಿತ ಮತದಾನದ ಖಾತರಿ ನೀಡಲು ಒಂದು ಲಕ್ಷಕ್ಕೂ ಹೆಚ್ಚು ಮಂದಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಯಿತು. ಮಾವೋವಾದಿಗಳು ಚುನಾವಣೆಗಳನ್ನು ಬಹಿಷ್ಕರಿಸುವಂತೆ ಮತದಾರರಿಗೆ ಕರೆ ನೀಡಿದ್ದರು. ಚುನಾವಣೆಗಳನ್ನು ಬಹಿಷ್ಕರಿಸುವಂತೆ
ಕರೆ ಕೊಟ್ಟಿರುವ ನಕ್ಸಲೀಯ ಗುಂಪುಗಳು ಕಳೆದ ೧೫ ದಿನಗಳಲ್ಲಿ ಸುಮಾರು ೬ ಬಾರಿ ದಾಳಿಗಳನ್ನು ನಡೆಸಿದ್ದು, ಅವುಗಳು ಮೂರು ದಾಳಿಗಳು ಪ್ರಮುಖ ದಾಳಿಗಳಾಗಿದ್ದು ದೂರದರ್ಶನದ ಛಾಯಾಗ್ರಾಹಕ ಸೇರಿದಂತೆ ೧೩ ಮಂದಿ ಹತರಾಗಿದ್ದಾರೆ. ಚುನಾವಣಾ ಪ್ರಚಾರದ ವರದಿಗಾಗಿ ಬಂದಿದ್ದಾಗ ದೂರದರ್ಶನ ತಂಡದ ಮೇಲೆ ನಕ್ಸಲೀಯ ದಾಳಿ ನಡೆದಿತ್ತು. ನಕ್ಸಲೀಯ ಬೆದರಿಕೆಗಳ ಹಿನ್ನೆಲೆಯಲ್ಲಿ ಚುನಾವಣಾ ಸಿಬ್ಬಂದಿಯನ್ನು ತಮ್ಮ ನಿಯೋಜಿತ ಸ್ಥಳಗಳಿಗೆ ಕಳುಹಿಸುವಾಗ ಬೆಂಗಾವಲಾಗಿ ಕಳುಹಿಸಲಾಗುತ್ತಿದೆ
ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು. ‘ಕೇಂದ್ರ ಅರೆಸೇನಾ ಪಡೆಗಳ ಸುಮಾರು ೧ ಲಕ್ಷ ಮಂದಿ ಭದ್ರತಾ ಸಿಬ್ಬಂದಿಯನ್ನು ಮೊದಲ ಹಂತದ ಚುನಾವಣೆ ಶಾಂತಿಯುತವಾಗಿ ನಡೆಯುವಂತೆ ನೋಡಿಕೊಳ್ಳುವ ಸಲುವಾಗಿ ನಿಯೋಜಿಸಲಾಗಿದೆ’ ಎಂದು ಛತ್ತೀಸ್ ಗಢದ ವಿಶೇಷ ಪೊಲೀಸ್ ಮಹಾ ನಿರ್ದೇಶಕ (ನಕ್ಸಲ್ ನಿಗ್ರಹ ಕಾರ್ಯಾಚರಣೆ) ಡಿಎಂ ಅವಸ್ಥಿ ನುಡಿದರು. ಚುನಾವಣೆ ಪ್ರಕ್ರಿಯೆ ಹಾಳುಗೆಡವಲು ಮಾವೋವಾದಿಗಳು ನಡೆಸುವ ಎಲ್ಲ ಪ್ರಯತ್ನಗಳನ್ನೂ ವಿಫಲಗೊಳಿಸಲು ಸಕಲ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಅವರು ಹೇಳಿದರು. ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್), ಗಡಿ ಭದ್ರತಾ ಪಡೆ (ಬಿಎಸ್ಎಫ್), ಇಂಡೋ -ಟಿಬೆಟನ್ ಪೊಲೀಸ್ (ಐಟಿಬಿಪಿ) ಇತ್ಯಾದಿ ಅರೆ ಸೇನಾ ಪಡೆ ಮತ್ತು ರಾಜ್ಯ ಪಡೆಗಳು ಸೇರಿದಂತೆ ೬೫೦ ಕಂಪೆನಿ (ಸುಮಾರು ೬೫,೦೦೦ ಭದ್ರತಾ ಸಿಬ್ಬಂದಿ)ಳನ್ನು ಚುನಾವಣಾ ಕರ್ತವ್ಯಕ್ಕಾಗಿ ನಿಯೋಜಿಸಲಾಗಿದೆ.
ಹೆಲಿಕಾಪ್ಟರ್ ಮತ್ತು ಭಾರತೀಯ ವಾಯುಪಡೆಯ ವಿಮಾನಗಳನ್ನೂ ಬಳಸಲಾಗುತ್ತಿದೆ ಎಂದು ಅವರು ನುಡಿದರು.
2018: ಕೊಲಂಬೋ: ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರಿಂದ ವಿವಾತ್ಮಕ ಕ್ರಮದಲ್ಲಿ ಪ್ರಧಾನ ಮಂತ್ರಿಯಾಗಿ ನೇಮಕಗೊಂಡಿದ್ದ ಶ್ರೀಲಂಕಾದ ಬಲಾಢ್ಯ ರಾಜಕಾರಣಿ ಮಹಿಂದ ರಾಜಪಕ್ಸೆ ಅವರು ಶ್ರೀಲಂಕಾ ಫ್ರೀಡಮ್ ಪಾರ್ಟಿ (ಎಸ್ಎಲ್ಎಫ್ಪಿ) ಜೊತೆಗಿನ ೫೦ ವರ್ಷಗಳ ಬಾಂಧವ್ಯಕ್ಕೆ ತೆರೆ ಎಳೆದು ಹೊಸದಾಗಿ ರಚಿಸಲಾದ ಶ್ರೀಲಂಕಾ ಪೀಪಲ್ಸ್ ಪಾರ್ಟಿಯನ್ನು (ಎಸ್ಎಲ್ಪಿಪಿ) ಸೇರಿದರು. ೨೦೧೯ರ ಜನವರಿ ೫ರಂದು ನಡೆಯಲಿರುವ ದಿಢೀರ್ ಸಂಸತ್ ಚುನಾವಣೆಯಲ್ಲಿ ಸಿರಿಸೇನಾ ಅವರ ಶ್ರೀಲಂಕಾ ಫ್ರೀಡಮ್ ಪಾರ್ಟಿ (ಎಸ್ಎಲ್ಎಫ್ಪಿ) ಪಕ್ಷದ ಅಡಿಯಲ್ಲಿ ಸ್ಪರ್ಧಿಸುವ ಬದಲು ತಮ್ಮ ಸ್ವಂತ ಪಕ್ಷದ ಬ್ಯಾನರ್ ಹಿಡಿದು ಸ್ಪರ್ಧಿಸುವ ಸೂಚನೆಯನ್ನು ರಾಜಪಕ್ಸೆ ಅವರು ತಮ್ಮ ಈದಿನದ ಕ್ರಮದ ಮೂಲಕ ನೀಡಿದರು. ಶ್ರೀಲಂಕೆಯ ಮಾಜಿ ಅಧ್ಯಕ್ಷರಾದ ರಾಜಪಕ್ಸೆ ಅವರು ತಮ್ಮ ಬೆಂಬಲಿಗರು ಆರಂಭಿಸಿದ ಎಸ್ಎಲ್ಪಿಪಿ ಸದಸ್ಯತ್ವವನ್ನು ಈದಿನ ಬೆಳಗ್ಗೆ ಪಡೆದರು. ರಾಜಪಕ್ಸೆ ಅವರ ತಂದೆ ಡಾನ್ ಅಲ್ವಿನ್ ರಾಜಪಕ್ಸೆ ಅವರು ೧೯೫೧ರಲ್ಲಿ ಸ್ಥಾಪಿಸಲಾಗಿದ್ದ ಶ್ರೀಲಂಕಾ ಫ್ರೀಡಮ್ ಪಾರ್ಟಿಯ ಸ್ಥಾಪಕ ಸದಸ್ಯರಾಗಿದ್ದರು.
ರಾಜಪಕ್ಸೆ ಬೆಂಬಲಿಗರು ತಮ್ಮ ನಾಯಕನಿಗೆ ರಾಜಕೀಯ ಮರುಪ್ರವೇಶಕ್ಕೆ ವೇದಿಕೆ ಸೃಷ್ಟಿಸುವ ಸಲುವಾಗಿ ಕಳೆದ ವರ್ಷ ಎಸ್ಎಲ್ಪಿಪಿಯನ್ನು ಸ್ಥಾಪಿಸಿದ್ದರು. ಈ ಪಕ್ಷವು ಫೆಬ್ರುವರಿಯಲ್ಲಿ
ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ೩೪೦ ಸ್ಥಾನಗಳ ಪೈಕಿ ಮೂರನೆ ಎರಡರಷ್ಟು ಸ್ಥಾನಗಳನ್ನು ಗೆದ್ದಿತ್ತು. ೭೨ರ ಹರೆಯದ ಬಲಾಢ್ಯ ರಾಜಕಾರಣಿ ರಾಜಪಕ್ಸೆ ೨೦೦೫ರಿಂದ ಒಂದು ದಶಕ ಕಾಲ ದ್ವೀಪರಾಷ್ಟ್ರದ ಆಡಳಿತ ನಡೆಸಿದ್ದರು. ೨೦೧೫ರಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಅವರು ಅನಿರೀಕ್ಷಿತವಾಗಿ ವಿಕ್ರಮಸಿಂಘೆ ಅವರ ಯುನೈಟೆಡ್ ನ್ಯಾಷನಲ್ ಪಾರ್ಟಿಯ (ಯುಎನ್ಪಿ) ಬೆಂಬಲದೊಂದಿಗೆ ತಮ್ಮ ಕೈಕೆಳಗಿನ ಸಿರಿಸೇನಾ ಅವರಿಂದ ಪರಾಜಿತರಾಗಿದ್ದರು.
ಏನಿದ್ದರೂ ಸಿರಿಸೇನಾ ಮತ್ತು ವಿಕ್ರಮಸಿಂಘೆ ನಡುವಣ ಅಧಿಕಾರ ಹಂಚಿಕೆ ವ್ಯವಸ್ಥೆಯು ಹಲವಾರು ನೀತಿ ವಿಚಾರಗಳು ವಿಶೇಷವಾಗಿ ಆರ್ಥಿಕತೆ ಮತ್ತು ಭದ್ರತೆಗೆ ಸಂಬಂಧಿಸಿದ ವಿಚಾರಗಳ ಘರ್ಷಣೆಗಳ ಪರಿಣಾಮವಾಗಿ ಕುಸಿದಿತ್ತು. ಅಂತಿಮವಾಗಿ ಅಕ್ಟೋಬರ್ ೨೬ರಂದು ಸಿರಿಸೇನಾ ಅವರು ದಿಢೀರನೆ ಪ್ರಧಾನಿ ವಿಕ್ರಮಸಿಂಘೆ ಅವರನ್ನು ವಜಾಮಾಡಿ ರಾಜಪಕ್ಸೆ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಿದ್ದರು. ಅಧ್ಯಕ್ಷ ಸಿರಿಸೇನಾ ಅವರ ಈ ವಿವಾದಾತ್ಮಕ ಕ್ರಮದ ಪರಿಣಾಮವಾಗಿ ದ್ವೀಪರಾಷ್ಟ್ರವು ಸಂವಿಧಾನ ಬಿಕ್ಕಟ್ಟಿನಲ್ಲಿ ಸಿಲುಕಿತು. ಸಿರಿಸೇನಾ ಅವರು ನವೆಂಬರ್ ೧೬ರವರೆಗೆ ಸಂಸತ್ ಕಲಾಪಗಳನ್ನು ಅಮಾನತುಗೊಳಿಸಿದರು.
ಆದರೆ ಬಳಿಕ ದೇಶದ ಒಳಗಿನ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಒತ್ತಡಕ್ಕೆ ಮಣಿದು ನವೆಂಬರ್ ೧೪ರಂದು ಸಂಸತ್ ಅಧಿವೇಶನಕ್ಕೆ ನೋಟಿಸ್ ನೀಡಿದರು. ಏನಿದ್ದರೂ ಪ್ರಧಾನಿ ರಾಜಪಕ್ಸೆ ಅವರು ಸಂಸತ್ತಿನಲ್ಲಿ ಬಹುಮತ ಸಾಬೀತು ಪಡಿಸಲು ಅಗತ್ಯವಾದ ಸದಸ್ಯರನ್ನು ಹೊಂದಿಲ್ಲ ಎಂಬುದು ಖಚಿತವಾದಾಗ, ಸಿರಿಸೇನಾ ಅವರು ಶುಕ್ರವಾರ ಸಂಸತ್ತನ್ನು ವಿಸರ್ಜಿಸಿ, ಜನವರಿ ೫ರಂದು ಸಂಸತ್ತಿಗೆ ದಿಢೀರ್ ಚುನಾವಣೆ ನಡೆಸುವುದಾಗಿ ಪ್ರಕಟಿಸಿದ್ದರು. ರಾಜಪಕ್ಸೆ ಅವರಿಗೆ ೨೨೫ ಸದಸ್ಯ ಬಲದ ಸಂಸತ್ತಿನಲ್ಲಿ ಬಹುಮತ ಸಾಬೀತು ಪಡಿಸಲು ಕನಿಷ್ಠ ೧೧೩ ಸಂಸತ್ ಸದಸ್ಯರ ಬೆಂಬಲದ ಅಗತ್ಯವಿತ್ತು.
2018: ಭೋಪಾಲ್: ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್) ಶಾಖೆಗಳಲ್ಲಿ ಪಾಲ್ಗೊಳ್ಳಲು ತನ್ನ ನೌಕರರಿಗೆ ಅವಕಾಶ ನೀಡಿ ಮಧ್ಯಪ್ರದೇಶ ಸರ್ಕಾರ ಹೊರಡಿಸಿದ್ದ ಆದೇಶವನ್ನು ಹಿಂತೆಗೆದುಕೊಳ್ಳುವುದಾಗಿಯೂ, ಇಂತಹ ಸಭೆಗಳಿಗೆ ಸರ್ಕಾರಿ ಆಸ್ತಿ ಬಳಕೆಯನ್ನು ನಿಷೇಧಿಸುವುದಾಗಿಯೂ ಕಾಂಗ್ರೆಸ್ ಪಕ್ಷವು ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವುದಕ್ಕೆ ಬಿಜೆಪಿ ಗರಂ ಆಯಿತು. ಕಾಂಗ್ರೆಸ್
ಪ್ರಣಾಳಿಕೆಯನ್ನು ಖಂಡಿಸಿದ ಬಿಜೆಪಿ ವಕ್ತಾರ ರಜನೀಶ್ ಅಗರ್ವಾಲ್ ಅವರು ಕಾಂಗ್ರೆಸ್ ಪಕ್ಷವು ವೋಟುಗಳಿಗಾಗಿ ಅಲ್ಪಸಂಖ್ಯಾತರಲ್ಲಿ ಭೀತಿ ಸೃಷ್ಟಿಸಲು ಯತ್ನಿಸುತ್ತಿದೆ ಎಂದು ಹೇಳಿದರು. ‘ಆರೆಸ್ಸೆಸ್ ಶಿಸ್ತುಬದ್ಧವಾದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಘಟನೆಯಾಗಿದ್ದು, ಇದನ್ನು ನ್ಯಾಯಾಲಯಗಳು ಕೂಡಾ ಅಂಗೀಕರಿಸಿವೆ’ ಎಂದು ರಜನೀಶ್ ಹೇಳಿದರು. ‘ಈ ವಿಷಯವನ್ನು ಎತ್ತುವ ಮೂಲಕ ಕಾಂಗ್ರೆಸ್ ಪಕ್ಷವು ಆರೆಸ್ಸಸ್ನ್ನು ಅಲ್ಪಸಂಖ್ಯಾತ ವಿರೋಧಿ ಎಂಬುದಾಗಿ ಬಿಂಬಿಸಲು ಮತ್ತು ತನ್ನ ವೋಟ್ ಬ್ಯಾಂಕ್ ಗಟ್ಟಿಗೊಳಿಸಲು ಅಲ್ಪಸಂಖ್ಯಾತರಲ್ಲಿ
ಭೀತಿ ಹುಟ್ಟಿಸಲು ಯತ್ನಿಸುತ್ತಿದೆ’ ಎಂದು ಅವರು ಹೇಳಿದರು.
ರಜನೀಶ್ ಹೇಳಿಕೆಯನ್ನು ವಿರೋಧಿಸಿದ ಹಿರಿಯ ಕಾಂಗ್ರೆಸ್ ನಾಯಕ ಮನಕ್ ಅಗರ್ವಾಲ್ ಅವರು ಆರೆಸ್ಸೆಸ್ ರಾಜಕೀಯ ಸಂಘಟನೆ ಎಂಬ ಬಗ್ಗೆ ಅಲ್ಪ ಸಂಶಯ ಇದೆ ಎಂದು ನುಡಿದರು. ’ಅದರ ಸದಸ್ಯರು ರಾಜಕೀಯ ಬೆಳವಣಿಗೆಗಳ ಬಗ್ಗೆ ನಿರಂತರವಾಗಿ ಟೀಕೆ ಮಾಡುತ್ತಿರುತ್ತಾರೆ.
ಅಲ್ಲದೆ ಅದರ ಸದಸ್ಯರು ನೇರವಾಗಿ ಬಿಜೆಪಿಗೆ ನೆರವಾಗುತ್ತಾರೆ.
ಹಲವರು ಉಭಯ ಸದಸ್ಯತ್ವವನ್ನು ಹೊಂದಿದ್ದಾರೆ’ ಎಂದು
ಹೇಳಿದರು. ಕಾಂಗ್ರೆಸ್ಸಿನ ಮಧ್ಯಪ್ರದೇಶ ಘಟಕ ಅಧ್ಯಕ್ಷ ಕಮಲ್ ನಾಥ್, ಜ್ಯೋತಿರಾದಿತ್ಯ ಸಿಂಧಿಯಾ, ದಿಗ್ವಿಜಯ್ ಸಿಂಗ್ ಮತ್ತು ಇತರರು ಶನಿವಾರ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದರು. ಇತರ ಹಲವಾರು ಭರವಸೆಗಳೊಂದಿಗೆ ಪಕ್ಷವು ಆರೆಸ್ಸೆಸ್ ಶಾಖೆಗಳ ಬಗೆಗೂ ಪ್ರಕಟಿಸಿತ್ತು. ಚುನಾವಣಾ ಪ್ರಣಾಳಿಕೆಯ ಅಂಶಗಳನ್ನು ಸಮರ್ಥಿಸಿದ ಕಾಂಗ್ರೆಸ್ ವಕ್ತಾರ ಭೂಪೇಂದ್ರ ಗುಪ್ತ ಅವರು ರಾಜಕೀಯ ಸಂಘಟನೆಗಳಿಗಾಗಿ ಸರ್ಕಾರಿ ಕಟ್ಟಡಗಳ ಬಳಕೆಯನ್ನು ಕೇಂದ್ರ ಸರ್ಕಾರದ ಆದೇಶವೊಂದು ನಿಷೇಧಿಸಿದ್ದು, ಸರ್ಕಾರದ ಯಾರೇ ನೌಕರರೂ ಸೇವಾ ನಿಯಮಗಳ ಪ್ರಕಾರ ಯಾವುದೇ ರಾಜಕೀಯ ಪಕ್ಷದ ಭಾಗವಾಗುವಂತಿಲ್ಲ
ಎಂದು ಹೇಳಿದರು. ಮಧ್ಯಪ್ರದೇಶದಲ್ಲಿ ಮಾತ್ರವೇ ಬಿಜೆಪಿ ಸರ್ಕಾರವು ೨೦೦೬ರಲ್ಲಿ ಆದೇಶ ಹೊರಡಿಸಿ ತನ್ನ ನೌಕರರಿಗೆ ಸರ್ಕಾರಿ ಕಟ್ಟಡಗಳಲ್ಲಿ ನಡೆಯುವ ಆರೆಸ್ಸೆಸ್ ಶಾಖೆಗಳಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿತ್ತು. ಬುಡಕಟ್ಟು ಜಿಲ್ಲೆಗಳಲ್ಲಿ ಸರ್ಕಾರಿ ವಸತಿ ನಿಲಯಗಳಲ್ಲಿ ಆರೆಸ್ಸೆಸ್ ಕಾರ್ಯಕ್ರಮಗಳು ನಡೆದ ಹಲವಾರು ನಿದರ್ಶನಗಳು ನನ್ನ ಬಳಿ ಇವೆ. ಆ ವೇಳೆಯಲ್ಲಿ ಎಲ್ಲ ಮಕ್ಕಳನ್ನು ಮನೆಗಳಿಗೆ ಕಳುಹಿಸಲಾಗುತ್ತದೆ. ಇದು ಸರ್ಕಾರಿ ಆಸ್ತಿಯ ದುರುಪಯೋಗ. ನಾವು ಇದನ್ನು ನಿಲ್ಲಿಸುತ್ತೇವೆ
ಎಂದು ಗುಪ್ತ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿರುವ ಆರೆಸ್ಸೆಸ್ ಪ್ರಚಾರ ಪ್ರಮುಖ್ ರಾಜೀವ ತುಲಿ ಅವರು ’ಸರ್ಕಾರಿ ನೌಕರರು ಸೇರಿದಂತೆ ಯಾರನ್ನು ಕೂಡಾ ಶಾಖೆಗೆ ಭೇಟಿ ನೀಡದಂತೆ ತಡೆಯಲು ಯಾರಿಗೂ ಸಾಧ್ಯವಿಲ್ಲ. ಶಾಕೆಯಲ್ಲಿ ಪಾಲ್ಗೊಳ್ಳದಂತೆ ಯಾರ ಮೇಲೂ ನಿಷೇಧ ವಿಧಿಸಲು ಸಾಧ್ಯವಿಲ್ಲ ಎಂದು ಹಿಂದೆ ನ್ಯಾಯಾಲಯಗಳು ಕೂಡಾ ತೀರ್ಪು ನೀಡಿವೆ ಎಂದು ಹೇಳಿದರು. ಹಿಂದೆ ಕೆಲವು ಕಾಂಗ್ರೆಸ್ ನಾಯಕರು ಕೂಡಾ ಶಾಖೆಗಳ ಬೆಳವಣಿಗೆಗೆ ಅವಕಾಶ ನೀಡಿದ್ದಾರೆ. ’ಪಕ್ಷವು ಇಂದು ಯಾವ ಸ್ಥಿತಿಗೆ ತಲುಪಿದೆ ಎಂಬುದನ್ನು ನಾವು ನೋಡಿದ್ದೇವೆ. ನೆಹರೂ ಅವರಿಂದ ರಾಹುಲ್ ಗಾಂಧಿವರೆಗಿನ ಕಾಂಗ್ರೆಸ್ ಏಕೆ ಆರೆಸ್ಸೆಸ್ ಕಂಡರೆ ಬೆಚ್ಚುತ್ತದೆ’ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದರು.
2018: ಪಟ್ನಾ: ಬಿಹಾರಿನಲ್ಲಿ ಆರ್ ಎಲ್ ಎಸ್ ಪಿಯ ಇಬ್ಬರೂ ಶಾಸಕರು ಜನತಾದಳ (ಯು) ಸೇರಲು ಸಜ್ಜಾಗಿದ್ದಾರೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಮತ್ತು ಎನ್ಡಿಎ ಮಿತ್ರಪಕ್ಷ ಆರ್ಎಲ್ ಎಸ್ಪಿ ನಾಯಕರಾದ ಉಪೇಂದ್ರ ಕುಶವಾಹ ಅವರು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ‘ಪಕ್ಷಗಳನ್ನು ಒಡೆಯುವಲ್ಲಿ ನಿತೀಶ್ ಕುಮಾರ್ ಅವರು ಪಳಗಿದ್ದಾರೆ’ ಎಂದು
ಟ್ವೀಟ್ ಮಾಡಿದ ಕುಶವಾಹ, ’ಪಕ್ಷದ ಸದಸ್ಯರಿಗೆ ಆಮಿಷ ಒಡ್ಡುವುದು ಮತ್ತು ಅವರನ್ನು ಸೆಳೆದುಕೊಳ್ಳುವುದು
ವರದಕ್ಷಿಣೆ ತೆಗೆದುಕೊಳ್ಳುವಷ್ಟೇ
ದೊಡ್ಡ ಅಪರಾಧ’ ಎಂದು
ಟೀಕಿಸಿದರು. ‘ನಿತೀಶ್ ಕುಮಾರ್ ಅವರೇ ನಿಮ್ಮ ಒಪ್ಪಿಗೆ ಇಲ್ಲದೆ ನಿಮ್ಮ ಪಕ್ಷವು ಏನಾದರೂ ಮಾಡುತ್ತದೆ ಎಂದು ಯಾರೂ ನಂಬುವುದಿಲ್ಲ’ ಎಂದೂ
ಅವರು ಟೀಟ್ ಮಾಡಿದರು. ಆರ್ಎಲ್ ಎಸ್ ಪಿಯು ಜೆಡಿ(ಯು) ಯತ್ನದ ಹೊರತಾಗಿಯೂ ಬಡವರು, ತುಳಿತಕ್ಕೆ ಒಳಗಾದವರ ಹಕ್ಕುಗಳಿಗಾಗಿ ತನ್ನ ಹೋರಾಟವನ್ನು ಮುಂದುವರೆಸುವುದು’ ಎಂದೂ ಅವರು ಟ್ವೀಟ್ ಮಾಡಿದರು. ಮಾಧ್ಯಮ ವರದಿಗಳ ಪ್ರಕಾರ ಆರ್ ಎಲ್ ಎಸ್ ಪಿಯ ಶಾಸಕರಾದ ಲಾಲನ್ ಪಾಸ್ವಾನ್ ಮತ್ತು ಸುಧಾಂಶು ಶೇಖರ್ ಅವರನ್ನು ಶೀಘ್ರದಲ್ಲೇ ಜೆಡಿಯುಗೆ ಸೇರಲಿದ್ದಾರೆ ಎಂದು ಹೇಳಲಾಯಿತು. ಉಭಯ ಶಾಸಕರೂ ನಿತೀಶ್ ಅವರ ನಂಬರ್ ೨ ವ್ಯಕ್ತಿಯಾಗಿರುವ
ಪ್ರಶಾಂತ್ ಕಿಶೋರ್ ಜೊತೆಗೆ ಸಂಪರ್ಕಕ್ಕೆ ಬಂದ ಬಳಿಕ ಪಕ್ಷಾಂತರದ ನಿರ್ಧಾರ ಮಾಡಿದ್ದಾರೆ ಎಂದು ವರದಿಗಳು ಹೇಳಿದವು. ಬಿಹಾರ
ಮುಖ್ಯಮಂತ್ರಿಯ ಹೇಳಿಕೆ ವಿರುದ್ಧ ಪಟ್ನಾದಲ್ಲಿ ತಮ್ಮ ಬೆಂಬಲಿಗರು ಆಕ್ರೋಶ ಮೆರವಣಿಗೆ ನಡೆಸಿದ ಬಳಿಕ ಕುಶವಾಹ ಟ್ವೀಟ್ ದಾಳಿ ನಡೆಸಿದರು. ೨೦೧೪ರ
ಲೋಕಸಭಾಚುನಾವಣೆಯಲ್ಲಿ ಆರ್ ಎಲ್ ಎಸ್ ಪಿಗೆ ಕೆಲವೇ ಕೆಲವು ಸ್ಥಾನಗಳು ಲಭಿಸಬಹುದು ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯಿಸಲು ಟಿವಿ ಕಾರ್ಯಕ್ರಮ ಒಂದರಲ್ಲಿ ಜೆಡಿ(ಯು) ಮುಖ್ಯಸ್ಥ ನಿರಾಕರಿಸಿದ್ದರು.
ನಿತೀಶ್ ಕೈಯಲ್ಲಿ ತಾವು ಅನುಭವಿಸುತ್ತಿರುವ
ಅವಮಾನವನ್ನು ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅವರಿಗೆ ವಿವರಿಸುವುದಾಗಿಯೂ ಕುಶವಾಹ ಹೇಳಿದರು. ಸ್ಥಾನ ಹಂಚಿಕೆಯ ಗೊಂದಲ ನಿವಾರಿಸುವಂತೆಯೂ
ನಾನು ಶಾ ಅವರನ್ನು ಕೋರುವೆ ಎಂದು ಕುಶವಾಹ ಹೇಳಿದರು.
2018: ನವದೆಹಲಿ: ಉಸಿರಾಟ ವಿಶ್ಲೇಷಣಾ ಪರೀಕ್ಷೆಯಲ್ಲಿ ಸಹ ಪೈಲಟ್ ವಿಫಲನಾದ ಪರಿಣಾಮವಾಗಿ ಬಾನಿಗೇರಿದ್ದ ವಿಮಾನವನ್ನು ಕೆಲವೇ ನಿಮಿಷಗಳಲ್ಲಿ ಕೆಳಕ್ಕಿಳಿಸಿದ ಮತ್ತು ಆ ಬಳಿಕ ಪ್ರಯಾಣಿಕರನ್ನು ತಾಸುಗಟ್ಟಲೆ ಕಾಯಿಸಿದ ಘಟನೆ ದೆಹಲಿಯಲ್ಲಿ ಘಟಿಸಿತು.ದೆಹಲಿಯಿಂದ ಬ್ಯಾಂಕಾಕ್ ಗೆ ತೆರಳಬೇಕಾಗಿದ್ದ ಏರ್ ಇಂಡಿಯಾ ವಿಮಾನದ ಪ್ರಯಾಣಿಕರಿಗೆ ಈದಿನ ಈ ಅನುಭವವಾಯಿತು. ಗಗನಕ್ಕೆ ಏರಿದ ಕೆಲವೇ ಕ್ಷಣಗಳಲ್ಲಿ ವಿಮಾನವನ್ನು ಇಂದಿರಾಗಾಂಧಿ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ಮತ್ತೆ ಕೆಳಕ್ಕೆ ಇಳಿಸಿದ ಪೈಲಟ್ ಎಚ್.ಎಚ್. ರಾಂಧವ ಮತ್ತು ಸಹ ಪೈಲಟ್ ಎ ಕೆ ಕತ್ಪಾಲಿಯಾ ತಮ್ಮ ಕರ್ತವ್ಯ ಬಿಟ್ಟು ಹೊರಕ್ಕೆ ಹೋದರು ಎನ್ನಲಾಗಿದ್ದು ಏರ್ ಇಂಡಿಯಾ ಆಧಿಕಾರಿಗಳು ಪ್ರಯಾಣಿಕರ ಯಾವುದೇ ಪ್ರಶ್ನೆಗಳಿಗೂ ಉತ್ತರ ನೀಡಲಾಗದೆ ಮುಜುಗರಕ್ಕೆ ಈಡಾದರು. ಏಐ-೩೩೨ ವಿಮಾನವು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗಗನಕ್ಕೆ ಏರಿದ ಕೇವಲ ೧೦-೧೫ ನಿಮಿಷಗಳಲ್ಲಿ ವಾಪಸಾಯಿತು. ಆ ಬಳಿಕ ಯಾವ ಕಾರಣವನ್ನೂ ನೀಡದೆ ತಮ್ಮನ್ನು ತಾಸುಗಟ್ಟಲೆ ಕಾಲ ವಿಮಾನದ ಒಳಗೇ ಕುಳಿತುಕೊಳ್ಳುವಂತೆ ಮಾಡಲಾಯಿತು ಎಂದು ವಿಮಾನ ಪ್ರಯಾಣಿಕರು ದೂರಿದರು. ವೈಮಾನಿಕ ನಿಯಮಾವಳಿಗಳ ೨೪ನೇ ನಿಯಮವು ಪೈಲಟ್, ಸಹ ಪೈಲಟ್ ಮತ್ತಿತರ ಸಿಬ್ಬಂದಿ ವಿಮಾನ ಹಾರಾಟ ಆರಂಭವಾಗುವುದಕ್ಕೆ
೧೨ ಗಂಟೆ ಮುಂಚಿತವಾಗಿ ಯಾವುದೇ ಮಾದಕ ಪೇಯ ಕುಡಿಯುವುದನ್ನು ನಿಷೇದಿಸುತ್ತದೆ.
ವಿಮಾನ ಚಾಲನೆ ಮಾಡುವುದಕ್ಕೆ ಮುನ್ನ ಅವರು ಕಡ್ಡಾಯವಾಗಿ ಉಸಿರಾಟ ವಿಶ್ಲೇಷಣಾ ಪರೀಕ್ಷೆಗೂ ಹಾಜರಾಗಬೇಕು. ವಿಮಾನ ಹಾರಾಟ ಪೂರ್ವ ಆಲ್ಕೋಹಾಲ್ ಪರೀಕ್ಷೆಯಲ್ಲಿ ಕ್ಯಾಪ್ಟನ್ ಎಕೆ ಕತ್ಪಾಲಿಯಾ ಅವರು ವಿಫಲರಾದ ಕಾರಣ ಏರ್ ಇಂಡಿಯಾ ವಿಮಾನವನ್ನು ಇಳಿಸಿದ ಬಳಿಕ ಅಂತಾರಾಷ್ಟ್ರೀಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಗೊಂದಲ ಉಂಟಾಯಿತು. ಕ್ಯಾಪ್ಟನ್ ಕತ್ಪಾಲಿಯಾ ಅವರು ಏರ್ ಇಂಡಿಯಾದ ಎಐ-೧೧೧ ವಿಮಾನವನ್ನು ಲಂಡನ್ನಿನಿಂದ ನವದೆಹಲಿಗೆ ಭಾನುವಾರ ಮಧ್ಯಾಹ್ನ ಹಾರಿಸಬೇಕಾಗಿತ್ತು. ಈ ಹಿಂದೆಯೂ ಕತ್ಪಾಲಿಯಾ ಅವರು ಇಂತಹುದೇ ಕಾರಣಕ್ಕಾಗಿ ವಿಮಾನವನ್ನು ಕೆಳಗಿಳಿಸಿದ್ದರು ಎನ್ನಲಾಯಿತು. ‘ಉಸಿರಾಟ ವಿಶ್ಲೇಷಣಾ ಪರೀಕ್ಷೆಯಲ್ಲಿ ಎರಡು ಬಾರಿ ವಿಫಲರಾದ ಕಾರಣ ನಾವು ಕ್ಯಾಪ್ಟನ್ ಎ ಕೆ ಕತ್ಪಾಲಿಯಾ ಅವರನ್ನು ಕೆಳಗಿಳಿಸಿದೆವು.
ಅವರು ಲಂಡನ್ನಿನಿಂದ ನವದೆಹಲಿಗೆ ವಿಮಾನ ಚಲಾಯಿಸಬೇಕಾಗಿತ್ತು. ಆದರೆ ಹಾರಾಟಪೂರ್ವ ಆಲ್ಕೋಹಾಲ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಅವರು ವಿಫಲರಾದರು’ ಎಂದು
ಅಧಿಕಾರಿಯೊಬ್ಬರು ನುಡಿದರು. ’ಅವರಿಗೆ ಇನ್ನೊಂದು ಅವಕಾಶ ನೀಡಲಾಯಿತು, ಆದರೆ ಎರಡನೇ ಪರೀಕ್ಷೆಯಲ್ಲೂ ಅವರು ಮಾದಕ ಪೇಯ ಸೇವಿಸಿದ್ದು ಖಚಿತವಾಯಿತು. ಹೀಗಾಗಿ ಅವರನ್ನು ಕೆಳಕ್ಕಿಳಿಸಲೇಬೇಕಾಯಿತು’ ಎಂದು ಅಧಿಕಾರಿ ಹೇಳಿದರು. ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆಗೆ ಏರ್ ಇಂಡಿಯಾ ವಕ್ತಾರರು ಲಭಿಸಲಿಲ್ಲ ಎಂದು ವರದಿ ತಿಳಿಸಿತು.
2016: ನವದೆಹಲಿ: ಸಿಂಧೂ ಜಲ ಒಪ್ಪಂದ ಕುರಿತ ವಿವಾದಕ್ಕೆ ಸಂಬಂಧಿಸಿದಂತೆ ಏಕ ಕಾಲಕ್ಕೆ ಕೋರ್ಟ್ ಆಫ್ ಆರ್ಬಿಟ್ರೇಷನ್ ರಚನೆ ಮತ್ತು ಎರಡು ಹೈಡ್ರೋ ಎಲೆಕ್ಟ್ರಿಕ್ ಯೋಜನೆಗಳ ಬಗೆಗಿನ ಪಾಕಿಸ್ತಾನದ ದೂರು ಪರಿಶೀಲನೆಗಾಗಿ ತಟಸ್ಥ ತಜ್ಞರನ್ನು ನೇಮಿಸಿದ ವಿಶ್ವ ಬ್ಯಾಂಕ್ ನಿರ್ಣಯಕ್ಕೆ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದ ಭಾರತ ‘ವಿಶ್ವ ಬ್ಯಾಂಕ್ ಕ್ರಮ ವಿವರಣೆಗೆ ನಿಲುಕದಂತಹುದು’ ಎಂದು ಬಣ್ಣಿಸಿತು. ಜಲ ವಿವಾದಕ್ಕೆ ಸಂಬಂಧಿಸಿದಂತೆ ಭಾರತದ ಕೋರಿಕೆಯಂತೆ ತಟಸ್ಥ ತಜ್ಞರನ್ನು ನೇಮಿಸಲು ನಿರ್ಧರಿಸಿದ ವಿಶ್ವ ಬ್ಯಾಂಕ್, ಪಾಕಿಸ್ತಾನದ ಬಯಕೆಯಂತೆ ಕೋರ್ಟ್ ಆಫ್ ಆರ್ಬಿಟ್ರೇಷನ್ನ್ನು ಕೂಡಾ ರಚನೆ ಮಾಡಿತು. ವಿಶ್ವ ಬ್ಯಾಂಕ್ ಎರಡು ಹೆಜ್ಜೆಗಳನ್ನು ಒಟ್ಟಿಗೆ ಇಟ್ಟಿರುವುದು ಶಾಸನಬದ್ಧವಾಗಿ ಸಮರ್ಥನೀಯವಲ್ಲ ಎಂದು ವಿದೇಶಾಂಗ ವಕ್ತಾರ ವಿಕಾಸ್ ಸ್ವರೂಪ್ ಹೇಳಿದರು. ಏಕಕಾಲಕ್ಕೆ ಎರಡು ಸಮಾನಾಂತರ ವ್ಯವಸ್ಥೆಗಳನ್ನು ಮಾಡಲು ವಿಶ್ವ ಬ್ಯಾಂಕ್ ನಿರ್ಣಯಿಸಿದ್ದು ವಿವರಣೆಗೆ ನಿಲುಕುವಂತಹುದಲ್ಲ ಎಂದು ಅವರು ನುಡಿದರು. ಈ ವಿಚಾರದಲ್ಲಿ ಸರ್ಕಾರವು ಪರಿಶೀಲನೆ ಬಳಿಕ ಕ್ರಮ ಕೈಗೊಳ್ಳುವುದು ಎಂದು ಅವರು ನುಡಿದರು. ಜಮ್ಮು ಮತ್ತು ಕಾಶ್ಮೀರದ ಕ್ಷೀರಗಂಗಾ ಮತ್ತು ರಾಟ್ಲ್ ಹೈಡ್ರೋಎಲೆಕ್ಟ್ರಿಕ್ ಯೋಜನೆಗಳ ವಿರುದ್ಧ ಪಾಕಿಸ್ತಾನದ ದೂರಿನ ಪರಿಶೀಲನೆ ನಡೆಸುವಂತೆ ತಟಸ್ಥ ತಜ್ಞರಿಗೆ ವಿಶ್ವಬ್ಯಾಂಕ್ ಸೂಚಿಸಿತು.
2016: ನವದೆಹಲಿ: 500 ರೂಪಾಯಿ ಮತ್ತು 1000 ರೂಪಾಯಿ ನೋಟು ರದ್ದು ಪಡಿಸಿದ ಹಿನ್ನೆಲೆಯಲ್ಲಿ ಉದ್ಭವಿಸಿದ ‘ನೋಟು ಅಭಾವ’ದ ಬಿಸಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ತಟ್ಟಿತು. ರಾಹುಲ್ ಗಾಂಧಿ ಅವರು ದೆಹಲಿಯ ಸಂಸತ್ ಭವನ ರಸ್ತೆಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ) ಮುಂದೆ ಹೊಸ ನೋಟು ಪಡೆಯುವ ಸಲುವಾಗಿ ಸರತಿ ಸಾಲಿನಲ್ಲಿ ನಿಂತು ಕಾಯಬೇಕಾಯಿತು. ಬಹಳ ಹೊತ್ತು ಸರತಿ ಸಾಲಿನಲ್ಲಿ ನಿಂತು ಕಾದ ಬಳಿಕ ರಾಹುಲ್ ಅವರು 4000 ರೂಪಾಯಿ ಪಡೆದುಕೊಂಡು ವಾಪಸಾದರು. ಪತ್ರಕರ್ತರೊಂದಿಗೆ ಮಾತನಾಡಿದ ರಾಹುಲ್, ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ.
ನಾನು ಅವರೊಂದಿಗೆ ಇದ್ದೇನೆ ಎಂದು ಹೇಳಿದರು.
2016: ಲಖನೌ (ಉತ್ತರ ಪ್ರದೇಶ): ಉತ್ತರ ಪ್ರದೇಶ ಬರೇಲಿಯಲ್ಲಿ ಹಳೆಯ 500 ರೂಪಾಯಿ ಮತ್ತು 1000 ಮುಖಬೆಲೆಯ ರೂಪಾಯಿಗಳ ಲಕ್ಷಾಂತರ ನೋಟುಗಳನ್ನು ಸುಟ್ಟು ಹಾಕಿದ ಒಂದು ದಿನದ ಬಳಿಕ ಈದಿನ ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಇಂತಹುದೇ ನೂರಾರು ನೋಟುಗಳು ಗಂಗಾನದಿಯಲ್ಲಿ ತೇಲಿ ಬಂದವು. ಗಂಗಾನದಿಯಲ್ಲಿ ತೇಲಿಬಂದ ನೋಟುಗಳ ನಿರ್ದಿಷ್ಟ ಸಂಖ್ಯೆ ಎಷ್ಟು ಎಂಬುದು ಖಚಿತವಿಲ್ಲ ಎಂದು ಉತ್ತರ ಪ್ರದೇಶ ಪೊಲೀಸರು ಹೇಳಿದರು. ನರಘಾಟ್ನಲ್ಲಿ ಜನ ಸ್ನಾನ ಮಾಡುತ್ತಿದ್ದಾಗ ಈ ನೋಟುಗಳು ತೇಲಿ ಬಂದವು. ನದಿಯಲ್ಲಿ ನೋಟುಗಳು ತೇಲುತ್ತಿರುವ ಸುದ್ದಿ ಹರಡುತ್ತಿದ್ದಂತೆಯೇ ಭಾರಿ ಸಂಖ್ಯೆಯಲ್ಲಿ ಜನ ಅಲ್ಲಿಗೆ ದೌಡಾಯಿಸಿದರು. ಹೀಗಾಗಿ ತತ್ ಕ್ಷಣವೇ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಅವರು 500 ರೂಪಾಯಿ ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದು ಪಡಿಸಲಾಗಿದೆ ಎಂದು ನ.8ರಂದು ದಿಢೀರ್ ಪ್ರಕಟಣೆ ಮಾಡಿದ್ದರು. ಅತ್ಯಂತ ಹೆಚ್ಚು ಭದ್ರತೆಯುಳ್ಳ 500 ರೂಪಾಯಿ ಮತ್ತು 2000 ರೂಪಾಯಿ ಮುಖಬೆಲೆಯ ಹೊಸ ನೋಟುಗಳನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಬಳಿಕ ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿತ್ತು.
2016: ಮುಂಬೈ: ಹಳೆಯ 500 ರೂ. ಮತ್ತು 1000 ರೂ. ನೋಟುಗಳನ್ನು ಬದಲಿಸಿಕೊಳ್ಳಲು ಬ್ಯಾಂಕ್ ಮುಂದೆ ಸರತಿಯಲ್ಲಿ ನಿಂತಿದ್ದ 73 ವರ್ಷದ ವ್ಯಕ್ತಿಯೊಬ್ಬರು ಕುಸಿದು ಮೃತರಾದ ಘಟನೆ ಮುಂಬೈನ ಉಪನಗರ ಮುಲುಂದ್ನಲ್ಲಿ ಮಧ್ಯಾಹ್ನ ಘಟಿಸಿತು. ವಿಶ್ವನಾಥ್ ವಾರ್ತಾಕ್ ಎಂಬ 73 ವರ್ಷದ ವ್ಯಕ್ತಿ ಮುಲುಂದ್ನ ನವಘರ್ ಎಂಬ ಪ್ರದೇಶದಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಮುಂದೆ ಸರತಿಯಲ್ಲಿ ನಿಂತಿದ್ದರು. ಮಧ್ಯಾಹ್ನ 1.30ರ ಸುಮಾರಿಗೆ ವಿಶ್ವನಾಥ್ ಅವರು ಏಕಾಏಕಿ ಕುಸಿದು ಬಿದ್ದರು. ಜನರು ಅವರನ್ನು ಆಸ್ಪತ್ರೆಗೆ ಕರೆದೊಯ್ದರು. ಆದರೆ ಮಾರ್ಗ ಮಧ್ಯೆ ಅವರು ಮೃತರಾದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ವಿಶ್ವನಾಥ್ ಅವರು ಹೃದಯಾಘಾತದಿಂದ ಮೃತರಾಗಿದ್ದಾರೆ ಎಂದು ಪ್ರಾಥಮಿಕ ಮಾಹಿತಿಗಳಿಂದ ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದರು.
2016: ಅಹಮದಾಬಾದ್ (ಗುಜರಾತ್)/ ಮರಾಠಾವಾಡ (ಮಹಾರಾಷ್ಟ್ರ): ಹಳೆಯ 500 ರೂಪಾಯಿ ಮತ್ತು 1000 ರೂಪಾಯಿ ನೋಟುಗಳ ಚಲಾವಣೆ ಕಾಲಾವಧಿಯನ್ನು ವಿಸ್ತರಿಸುವಂತೆ ಕೋರಿ ಗುಜರಾತ್ ಹೈಕೋರ್ಟಿನಲ್ಲಿ ಅರ್ಜಿಯೊಂದನ್ನು ಸಲ್ಲಿಸಲಾಯಿತು. ತುರ್ತು ಮತ್ತು ಅಗತ್ಯ ಸೇವೆಗಳಿಗೆ ಸಂಬಂಧಿಸಿದಂತೆ ಹಳೆಯ 500 ರೂಪಾಯಿ ಮತ್ತು 1000 ರೂಪಾಯಿ ನೋಟುಗಳ ಚಲಾವಣೆಯ ಅವಧಿಯನ್ನು ಕನಿಷ್ಠ ಒಂದು ತಿಂಗಳ ಕಾಲ ವಿಸ್ತರಿಸಬೇಕು ಎಂದು ಅಹಮದಾಬಾದ್ ಹೈಕೋರ್ಟ್ನಲ್ಲಿ ಅರ್ಜಿಯೊಂದನ್ನು ಸಲ್ಲಿಸಲಾಗಿದೆ ಎಂದು ವರದಿಗಳು ತಿಳಿಸಿದವು. ಈ ನಡುವೆ ಜನರು ತಮ್ಮ ಕಾಳಧನವನ್ನು ದೇವಾಲಯಗಳಿಗೆ ಸಮರ್ಪಿಸದಂತೆ ತಡೆಯುವ ಸಲುವಾಗಿ ಮಹಾರಾಷ್ಟ್ರದ ಮರಾಠಾವಾಡ ಪ್ರದೇಶದಲ್ಲಿ ದೇವರ ಹುಂಡಿಗಳಿಗೆ ದೇವಾಲಯಗಳು ಬೀಗ ಮುದ್ರೆ ಮಾಡಿವೆ ಎಂದು ವರದಿಗಳು ಹೇಳಿದವು.
2016: ಹೈದರಾಬಾದ್/ ನವದೆಹಲಿ/ ಚೆನ್ನೈ: ಬ್ಲಾಕ್ಬಸ್ಟರ್ ಹಿಟ್ ಚಲನ ಚಿತ್ರ ಬಾಹುಬಲಿಯ ನಿರ್ಮಾಪಕರ ಮನೆಗಳ ಮೇಲೆ ಶುಕ್ರವಾರ ಹೈದರಾಬಾದಿನಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದರು. 500 ರೂಪಾಯಿ, 1000 ರೂಪಾಯಿ ನೋಟುಗಳ ನಿಷೇಧದ ಹಿನ್ನೆಲೆಯಲ್ಲಿ ತಮಿಳುನಾಡಿನ ಚೆನ್ನೈಯಲ್ಲಿ ವಿವಿಧ ಚಿನ್ನಾಭರಣ ಅಂಗಡಿಗಳ ಮೇಲೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, ಶೋಧ ನಡೆಸಿದರು. ಈ ಮಧ್ಯೆ ಎಲ್ಲ ರಾಷ್ಟ್ರೀಯ ಹೆದ್ದಾರಿಗಳಲ್ಲೂ ರಸ್ತೆ ಸುಂಕ ಅಮಾನತನ್ನು ನವೆಂಬರ್ 14ರ ಮಧ್ಯರಾತ್ರಿಯವರೆಗೂ ವಿಸ್ತರಿಸಲಾಯಿತು.
2016: ನವದೆಹಲಿ: ದೇಶೀ ವಿಮಾನಗಳ ಹಾರಾಟದ ಮೇಲಿನ ಲೆವಿಯನ್ನು ಸರ್ಕಾರ ಪರಿಷ್ಕರಿಸಿತು. ಇದರಿಂದ ದೇಶೀ ವಿಮಾನಯಾನ ತುಟ್ಟಿಯಾಯಿತು. ಸರ್ಕಾರದ ಪ್ರಕಟಣೆಯ ಪ್ರಕಾರ 1000 ಕಿ.ಮೀ.ವರೆಗಿನ ವಿಮಾನಯಾನಕ್ಕೆ 7500 ಲೆವಿಯನ್ನು ವಿಧಿಸಲಾಯಿತು. 1000-1500 ಕಿ.ಮೀ ನಡುವಣ ವಿಮಾನಯಾನಕ್ಕೆ 8000 ರೂಪಾಯಿ ಹಾಗೂ 1500 ಕಿ.ಮೀಗಿಂತ ಹೆಚ್ಚು ದೂರದ ವಿಮಾನಯಾನಕ್ಕೆ 8500 ರೂಪಾಯಿಗಳ ಲೆವಿಯನ್ನು ಸರ್ಕಾರ ವಿಧಿಸಿತು. ಲೆವಿಯನ್ನು ವಿಮಾನ ಯಾನದ ಮೇಲೆ ವಿಧಿಸಲಾಗಿದೆ ಹೊರತು ತಲಾ ಟಿಕೆಟ್ ಮೇಲೆ ಅಲ್ಲ ಎಂದು ಸರ್ಕಾರ ಸ್ಪಷ್ಟ ಪಡಿಸಿತು. ನೂತನ ಲೆವಿ 2016ರ ಡಿಸೆಂಬರ್ 1ರಿಂದ ಜಾರಿಯಾಗಲಿದೆ.
2016: ನವದೆಹಲಿ: ಸುಪ್ರೀಂಕೋರ್ಟ್ ಕೊಲೀಜಿಯಂ ಶಿಫಾರಸು ಮಾಡಿದ 77 ಹೆಸರುಗಳ ಪೈಕಿ 34 ಹೆಸರುಗಳನ್ನು ಹೈಕೋರ್ಟ್ ನ್ಯಾಯಮೂರ್ತಿಗಳಾಗಿ ನೇಮಕ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ತಿಳಿಸಿತು. ಉಳಿದ 43 ಹೆಸರುಗಳನ್ನು ಹಿಂತಿರುಗಿಸಲಾಗಿದೆ. ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದ ಒಂದೇ ಒಂದು ಕಡತವೂ ಸರ್ಕಾರದ ಬಳಿ ಉಳಿದಿಲ್ಲ ಎಂದು ಅಟಾರ್ನಿ ಜನರಲ್ ಅವರು ಸುಪ್ರೀಂಕೋರ್ಟಿಗೆ ತಿಳಿಸಿದರು. ಸರ್ಕಾರವು ಹೊಸ ಎಂಒಪಿ ಕರಡನ್ನು ಆಗಸ್ಟ್ 3ರಂದು ಸರ್ಕಾರಕ್ಕೆ ಕಳುಹಿಸಿದ್ದು, ಇನ್ನೂ ಉತ್ತರ ಬಂದಿಲ್ಲ ಎಂದೂ ಅಟಾರ್ನಿ ಜನರಲ್ ಹೇಳಿದರು. ಕೊಲೀಜಿಯಂ ನವೆಂಬರ್ 15ರಂದು ಸಭೆ ಸೇರಲಿದೆ ಎಂದು ತಿಳಿಸಿದ ಮುಖ್ಯ ನ್ಯಾಯಮೂರ್ತಿಯವರು ಪ್ರಕರಣದ ವಿಚಾರಣೆಯನ್ನು ನವೆಂಬರ್ 18ಕ್ಕೆ ಮುಂದೂಡಿದರು.
2016: ನವದೆಹಲಿ: ಫೇಸ್ ಬುಕ್ ಪೋಸ್ಟ್ ಒಂದರಲ್ಲಿ ಕೇರಳದ ಸೌಮ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ನೀಡುವಾಗ ಆರೋಪಿಯ ಸೆರೆವಾಸದ ಶಿಕ್ಷೆಯನ್ನು ಇಳಿಸುವ ಮೂಲಕ ಸುಪ್ರೀಂಕೋರ್ಟ್ ಗಂಭೀರ ಶಾಸನ ಲೋಪ ಮಾಡಿದೆ ಎಂಬುದಾಗಿ ಬರೆದುದಕ್ಕಾಗಿ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಮಾರ್ಕಾಂಡೇಯ ಕಟ್ಜು ಅವರಿಗೆ ಸುಪ್ರೀಂಕೋರ್ಟ್ ‘ನ್ಯಾಯಾಲಯ ನಿಂದನೆ’ ನೋಟಿಸ್ ಜಾರಿ ಮಾಡಿತು. ಕೇರಳದಲ್ಲಿ ಸಂಭವಿಸಿದ್ದ 2011ರ ಈ ಪ್ರಕರಣದಲ್ಲಿ 23ರ ಹರೆಯದ ಸೌಮ್ಯ ಮೇಲೆ ಅತ್ಯಾಚಾರ ಎಸಗಿ ಬಳಿಕ ಆಕೆಯನ್ನು ಕೊಲೆ ಮಾಡಲಾಗಿತ್ತು. ಕೆಳಗಿನ ನ್ಯಾಯಾಲಯಗಳು ಆರೋಪಿ ಗೋವಿಂದ ಸಾಮಿಗೆ ಗೆ ನೀಡಿದ್ದ ಮರಣದಂಡನೆಯನ್ನು ರದ್ದು ಪಡಿಸಿದ್ದ ಸುಪ್ರೀಂಕೋರ್ಟ್ ಸೌಮ್ಯ ಕೊಲೆಗೆ ಸಾಕ್ಷ್ಯಾಧಾರವಿಲ್ಲದ್ದರಿಂದ ಆರೋಪಿಯನ್ನು ನೇಣಿಗೆ ಏರಿಸಲಾಗದು ಎಂದು ಹೇಳಿ ಸೆರೆವಾಸದ ಶಿಕ್ಷೆಯನ್ನು 14 ವರ್ಷಗಳಿಗೆ ಇಳಿಸಿತ್ತು.
‘ಆರೋಪಿಯ ಕೊಲೆ ಅಪರಾಧವನ್ನು ಎತ್ತಿ ಹಿಡಿಯದೆ ಸುಪ್ರೀಂಕೋರ್ಟ್ ಶಾಸನ ಲೋಪ ಮಾಡಿದೆ. ಇಷ್ಟರ ಮಟ್ಟಿಗೆ ತೀರ್ಪನ್ನು ಪುನರ್ಪರಿಶೀಲಿಸಬೇಕಾದ ಅಗತ್ಯ ಇದೆ’ ಎಂದು ನ್ಯಾಯಮೂರ್ತಿ ಕಟ್ಜು ಫೇಸ್ ಬುಕ್ ಪೋಸ್ಟ್ ನಲ್ಲಿ ಹೇಳಿದ್ದರು. ಕಟ್ಜು ಅವರ ಹೇಳಿಕೆ ತೀರ್ಪಿನ ಮೇಲಿನ ಹಲ್ಲೆಯಲ್ಲ, ನ್ಯಾಯಮೂರ್ತಿಗಳ ಮೇಲಿನ ಹಲ್ಲೆ ಎಂದು ಅಭಿಪ್ರಾಯಪಟ್ಟ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಕಟ್ಜು ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿತ್ತು. ನ್ಯಾಯಾಲಯದಲ್ಲಿ ತಮ್ಮ ಅಭಿಪ್ರಾಯ ಸೂಚಿಸಲು ಈದಿನ ನ್ಯಾಯಾಲಯದಲ್ಲಿ ಹಾಜರಾಗುವಂತೆ ನ್ಯಾಯಮೂರ್ತಿ ಕಟ್ಜು ಅವರಿಗೆ ಸುಪ್ರೀಂಕೋರ್ಟ್ ಸೂಚಿಸಿತ್ತು.
2016:
ಲಾಸ್ ಏಂಜಲೀಸ್: ಕೆನಡಿಯನ್ ಕವಿ, ಹಾಡುಗಾರ ಲಿಯೊನಾರ್ಡ್ ಕೊಹೆನ್ (82)
ನಿಧನರಾದರು. ‘ನಾವು ಅತ್ಯುತ್ತಮ ಸಂಗೀತ ಕಲಾವಿದರೊಬ್ಬರನ್ನು ಕಳೆದುಕೊಂಡಿದ್ದೇವೆ’ ಎಂದು ಕೊಹೆನ್ ಅವರ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ತಿಳಿಸಲಾಯಿತು. ಕಳೆದ ತಿಂಗಳಷ್ಟೇ ಕೊಹೆನ್ ‘You Want It Darker’ ಆಲ್ಬಮ್ ಬಿಡುಗಡೆ ಮಾಡಿದ್ದರು. ಇದೇ ಅವರ ಕೊನೆಯ ಆಲ್ಬಮ್ ಆಗಿತ್ತು.
2016: ನವದೆಹಲಿ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ ಕೃಷ್ಣಮೃಗ ಬೇಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೋಟಿಸ್ ಜಾರಿ ಮಾಡಿತು. ರಾಜಸ್ತಾನ ಸರ್ಕಾರ ಸಲ್ಮಾನ್ ಖಾನ್ ವಿರುದ್ಧ
ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆಗೆ ಒಪ್ಪಿಗೆ ಸೂಚಿಸಿದ ಸುಪ್ರೀಂ ಕೋರ್ಟ್ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿತು. ಇದರಿಂದ ಸಲ್ಮಾನ್ ಖಾನ್‌ಗೆ ಮತ್ತೆ ಸಂಕಷ್ಟ ಎದುರಾಯಿತು. 1998ರಲ್ಲಿ ರಾಜಸ್ತಾನದ ಜೋದ್ಪುರದಲ್ಲಿರುವ ಕಂಕಣಿ ಎಂಬ ಅರಣ್ಯ ಪ್ರದೇಶದಲ್ಲಿ ಸಲ್ಮಾನ್ ಖಾನ್ ಕೃಷ್ಣಮೃಗ ಬೇಟೆಯಾಡಿದ್ದರು ಎಂಬ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ 2 ಪ್ರತ್ಯೇಕ ಪ್ರಕರಣಗಳು ದಾಖಲಾಗಿದ್ದವು. ಸಲ್ಮಾನ್ ಖಾನ್ ಅವರು ಸಿನಿಮಾವೊಂದರ ಚಿತ್ರಿಕರಣಕ್ಕಾಗಿ ಅಲ್ಲಿಗೆ ತೆರಳಿದ್ದರು.
2016:
ನವದೆಹಲಿ: ಬ್ಯಾಂಕ್ಗಳಲ್ಲಿ ನೋಟು ಬದಲಾಯಿಸಿಕೊಳ್ಳಲು ಹೋದರೆ ಅಲ್ಲಿಯೂ
ದುಡ್ಡಿಲ್ಲ, ಎಟಿಎಂಗಳೂ ಕಾರ್ಯ ನಿರ್ವಹಿಸುತ್ತಿಲ್ಲ. ಹಳೇ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಬದಲಿಸಲು ಜನರು ಕಷ್ಟಪಡುತ್ತಿದ್ದಾರೆ. ಕೆಲವೊಂದು ಬ್ಯಾಂಕ್ಗಳಲ್ಲಿ ನಾಗರಿಕರು ಬ್ಯಾಂಕ್ ಸಿಬ್ಬಂದಿಗಳ ಮೇಲೆ ಕೂಗಾಡುತ್ತಾರೆ. ಕೈಯಲ್ಲಿ ದುಡ್ಡಿಲ್ಲದೆ, ಕೈಯಲ್ಲಿರುವ ದುಡ್ಡು ಖರ್ಚು ಮಾಡಲಾಗದೆ ಹೊಸ ನೋಟಿಗಾಗಿ ಜನರು ಬ್ಯಾಂಕ್, ಅಂಚೆ ಕಚೇರಿಗಳಲ್ಲಿ ಸಾಲುಗಟ್ಟಿ ನಿಂತಿದ್ದಾರೆ. ಕಳೆದೆರಡು ದಿನಗಳಿಂದ ಸಾಮಾನ್ಯ ಜನರ ದಿನಚರಿಯೂ ಬದಲಾದಂತೆ ಕಾಣುತ್ತಿದೆ. ಈ ಎಲ್ಲ ವಿದ್ಯಮಾನಗಳ ಬಗ್ಗೆ ಪ್ರತಿಕ್ರಿಯಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್, ನಾಗರಿಕರು ತಾಳ್ಮೆಯಿಂದಿರುವಂತೆ ಮನವಿ ಮಾಡಿತು. ಬ್ಯಾಂಕ್ಗಳಲ್ಲಿ ಸಾಕಷ್ಟು ನಗದು ಲಭ್ಯವಾಗಲಿದೆ. ಈ ನಗದು ದೇಶದ ಎಲ್ಲ ಜನರಿಗೆ ತಲುಪುವಂತೆ ಮಾಡುತ್ತೇವೆ ಎಂದು ಆರ್ ಬಿ ಐ ತನ್ನ ಪ್ರಕಟಣೆಯಲ್ಲಿ ತಿಳಿಸಿತು.
2016: ನವದೆಹಲಿ: ಕಾಳಸಂತೆ, ಕಳ್ಳನೋಟು ಮತ್ತು ಭ್ರಷ್ಟಾಚಾರವನ್ನು ನಿಗ್ರಹಿಸುವ ಸಲುವಾಗಿ
ಕೇಂದ್ರ ಸರ್ಕಾರವು 500 ರೂಪಾಯಿ ಮತ್ತು 1000 ರೂಪಾಯಿ ನೋಟುಗಳನ್ನು ರದ್ದು ಪಡಿಸಿದ ಮೂರು ದಿನಗಳ ಬಳಿಕ ದೇಶಾದ್ಯಂತ ಎಟಿಎಂಗಳ ಮುಂದೆ ನಗದು ಹಣಕ್ಕಾಗಿ ಸುದೀರ್ಘವಾದ ಸಾಲುಗಳು ಕಂಡು ಬಂದಿತು. ಅಲ್ಲಲ್ಲಿ ಜನ ಸಿಟ್ಟಿಗೆದ್ದ ವರದಿಗಳೂ
ಬಂದವು. ಎಟಿಎಂಗಳು ಹಿಂದಿನ ದಿನ ಮಧ್ಯರಾತ್ರಿಯಿಂದ 500 ರೂಪಾಯಿ ಮತ್ತು 2000 ರೂಪಾಯಿಗಳ ಹೊಸ ನೋಟುಗಳನ್ನು ಬಿಡುಗಡೆ ಮಾಡಲಿವೆ ಎಂಬುದಾಗಿ ಪ್ರಕಟಣೆ ನೀಡಲಾಗಿದ್ದ ಹಿನ್ನೆಲೆಯಲ್ಲಿ ಈದಿನ ಮುಂಜಾನೆಯಿಂದಲೇ ಜನ ಎಟಿಎಂಗಳಿಗೆ ದೌಡಾಯಿಸಿದ್ದರು. ಆದರೆ ಬಹುತೇಕ ಕಡೆಗಳಲ್ಲಿ ಎಟಿಎಂಗಳು ಕಾರ್ಯಾಚರಣೆ ಮಾಡದೇ ಇರುವುದು ಕಂಡು ಬಂದಿದ್ದು ಜನರನ್ನು ಸಿಟ್ಟಿಗೆಬ್ಬಿಸಿತು. ಎಟಿಎಂಗಳಿಗೆ ಇನ್ನೂ ಹೊಸ ನೋಟುಗಳನ್ನು ತುಂಬಿಸಿಲ್ಲ ಎಂದು ಬ್ಯಾಂಕ್ ಅಧಿಕಾರಿಗಳು ಹೇಳಿದರು. ಹಲವು ಕಡೆಗಳಲ್ಲಿ ಎಟಿಎಂಗಳ ಮುಂದೆ ‘ನೋ ಕ್ಯಾಷ್’ ಎಂಬ ಬೋರ್ಡಗಳು ರಾರಾಜಿಸಿದವು. ಹೀಗಾಗಿ ಎಲ್ಲೆಡೆಗಳಲ್ಲಿ ಈದಿನವೂ ಜನ ಬ್ಯಾಂಕುಗಳ ಮುಂದೆ ಹಣಕ್ಕಾಗಿ ಸಾಲುಗಟ್ಟಿದರು. ದೆಹಲಿಯ ಪಹಾಡಗಂಜದಲ್ಲಿ
ಜನದಟ್ಟಣೆ ನಿಯಂತ್ರಿಸಲು ಪೊಲೀಸರು ದೌಡಾಯಿಸಬೇಕಾಯಿತು.
ದೆಹಲಿಯ ಯಮುನಾ ವಿಹಾರ, ಉತ್ತರ ಪ್ರದೇಶದ ಲಖನೌ, ಕರ್ನಾಟಕದ ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಜನ ಹಾವಿನಬಾಲದಂತೆ ಬ್ಯಾಂಕುಗಳು, ಎಟಿಎಂಗಳ ಮುಂದೆ ಸಾಲುಗಟ್ಟಿ ನಿಂತಿರುವ ವರದಿಗಳು ಬಂದವು.1998, 1981: ಮೃತ್ಯುವಿಗೆ ಸವಾಲು ಹಾಕುವ ಎರಡು ಸಾಹಸಗಳು ಈದಿನ ನಡೆದವು. 1998ರಲ್ಲಿ ಜೇ ಕೊಚ್ರಾನೆ ಅವರು ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಆಗಸದಲ್ಲಿ ನಡೆದರು. ನೆವಾಡಾದ ಲಾಸ್ ವೆಗಾಸಿನಲ್ಲಿ ಫ್ಲೆಮಿಂಗೊ ಹಿಲ್ಟನ್ ಗೋಪುರಗಳ ಮಧ್ಯೆ ಬಿಗಿಯಾಗಿ ಕಟ್ಟಿದ್ದ ಹಗ್ಗದ ಮೇಲೆ ಕಣ್ಣಿಗೆ ಪಟ್ಟಿ ಕಟ್ಟಿಕೊಂಡು ಅವರು ನಡೆದರು. ಈ ಗೋಪುರಗಳ ನಡುವಣ ಅಂತರ 600 ಅಡಿಗಳು. 1981ರಲ್ಲಿ ಸ್ಟಂಟ್ ಮ್ಯಾನ್ ಗುಡ್ ವಿನ್ ಅವರು 100 ಮಹಡಿಗಳ ಕಟ್ಟಡವನ್ನು ಅದರ ಹೊರಭಾಗದ ಗೋಡೆಯ ಮೂಲಕ ಏರಿದರು. ಈ ಸಾಹಸಕ್ಕೆ ಅವರು 6 ಗಂಟೆಗಳನ್ನು ತೆಗೆದುಕೊಂಡರು.
2008: ಚಾಮರಾಜನಗರ- ನಂಜನಗೂಡು ಪರಿವರ್ತತ ಬ್ರಾಡ್ ಗೇಜ್ ಮಾರ್ಗದಲ್ಲಿ ಪ್ರಥಮ ರೈಲು ಪಯಣಕ್ಕೆ ರೈಲ್ವೆ ಖಾತೆ ರಾಜ್ಯ ಸಚಿವ ಆರ್. ವೇಲು ಹಸಿರು ನಿಶಾನೆ ತೋರಿದರು.
2008: ಭಾರತದ ಕಡಲ ತಡಿಯಲ್ಲಿರುವ 'ಪ್ರವಾಸಿಗರ ಸ್ವರ್ಗ' ಮಾಲ್ಡೀವ್ಸಿನಲ್ಲಿ ಹೊಸ ಶಕೆಯೊಂದು ಆರಂಭವಾಯಿತು. 41 ವರ್ಷದ ಮೊಹಮ್ಮದ್ ಅನ್ನಿ ನಶೀದ್ ಈ ದ್ವೀಪ ರಾಷ್ಟ್ರದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಮೂಲಕ ಮೂರು ದಶಕಗಳ ಏಕ ವ್ಯಕ್ತಿ ಆಡಳಿತವನ್ನು ಕೊನೆಗಾಣಿಸಿ, ದೇಶದ ಜನರಲ್ಲಿ ಮಿಂಚಿನ ಸಂಚಾರಕ್ಕೆ ಕಾರಣರಾದರು. ಹಿಂದಿನ ಸುದೀರ್ಘ ಅವಧಿಯ ಅಧ್ಯಕ್ಷ ಮೌಮೂನ್ ಅಬ್ದುಲ್ ಗಯೂಮ್ ಅವರಿಂದ ಭಿನ್ನಮತದ ಕಾರಣಕ್ಕಾಗಿ ಹಲವು ಬಾರಿ ಜೈಲುವಾಸ ಅನುಭವಿಸಿದ್ದ ನಶೀದ್, ಅಭಿವ್ಯಕ್ತಿ ಸ್ವಾತಂತ್ರ್ಯದ ಜೊತೆಗೆ ದ್ವೇಷ, ಹೊಟ್ಟೆಕಿಚ್ಚು ಮತ್ತು ಹಗೆತನದಿಂದ ಹೊರತಾದ ಹೊಸ ಮಾಲ್ಡೀವ್ಸ್ ಕಟ್ಟುವ ಭರವಸೆಯನ್ನು ಪ್ರಜೆಗಳಿಗೆ ನೀಡಿದರು.
2008: ಮಂಗಳಗ್ರಹದ ಮೇಲಿನ ಅಧ್ಯಯನಕ್ಕಾಗಿ ಐದು ತಿಂಗಳ ಹಿಂದೆ ತೆರಳಿದ್ದ 'ಫೀನಿಕ್ಸ್ ಮಾರ್ಸ್ ಲ್ಯಾಂಡರ್' ಗಗನನೌಕೆಯು ತಾಂತ್ರಿಕ ದೋಷಗಳಿಂದಾಗಿ ಅಮೆರಿಕದ ಬಾಹ್ಯಾಕಾಶ ಸಂಸ್ಥೆ 'ನಾಸಾ'ದೊಂದಿಗೆ ಸಂಪರ್ಕ ಕಡಿದುಕೊಂಡಿತು.
2008: ಪೆಪ್ಸಿ ಕಂಪೆನಿಯ ಅಧ್ಯಕ್ಷೆ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭಾರತೀಯ ಮೂಲದ ಇಂದ್ರಾ ನೂಯಿ ಅವರನ್ನು 'ಷಿಕಾಗೋ ಯುನೈಟೆಡ್-2008 ಬ್ರಿಜ್ ಪ್ರಶಸ್ತಿ'ಗೆ ಆಯ್ಕೆ ಮಾಡಲಾಯಿತು. ವಿವಿಧತೆಯಲ್ಲಿ ನೂಯಿ ಅವರು ತೋರಿರುವ ವಿಶೇಷ ನಾಯಕತ್ವ ಗುಣಕ್ಕಾಗಿ ಈ ಪ್ರಶಸ್ತಿ ನೀಡಲಾಯಿತು..
2008: ಇಂದು ರಾಷ್ಟ್ರೀಯ ಶಿಕ್ಷಣ ದಿನ. ಭಾರತದ ಪ್ರಥಮ ಶಿಕ್ಷಣ ಸಚಿವರಾಗಿದ್ದ ಮೌಲಾನಾ ಅಬುಲ್ ಕಲಾಂ ಆಜಾದ್ ಅವರ ಜನ್ಮದಿನವಾದ ನವೆಂಬರ್ 11ನ್ನು 'ರಾಷ್ಟ್ರೀಯ ಶಿಕ್ಷಣ ದಿನ'ವನ್ನಾಗಿ ಆಚರಿಸಬೇಕೆಂದು ಭಾರತ ಸರ್ಕಾರ ಘೋಷಣೆ ಹೊರಡಿಸಿತು.. ಸಚಿವರಾಗಿದ್ದ ಅವಧಿಯಲ್ಲಿ ಆಜಾದ್ ಕೈಗೊಂಡ ಸುಧಾರಣೆಗಳು ದೇಶದ ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಿಗೆ ಕಾರಣವಾಗಿದ್ದವು. ಉರ್ದು ಲೇಖಕರಾಗಿ, ಪತ್ರಕರ್ತರಾಗಿ, ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯ ಪಾತ್ರವಹಿಸಿದ್ದ ಮೌಲಾನಾ ಅಬುಲ್ ಕಲಾಂ ಮಕ್ಕಾದಲ್ಲಿ 1888ರ ನವೆಂಬರ್ 11 ರಂದು ಜನಿಸಿದರು. ಅಬುಲ್ ಕಲಾಮ್ ಮೊಹಿಯ್ದುದೀನ್ ಅಹಮದ್ ಎಂಬ ತಮ್ಮ ಮೊದಲಿನ ಹೆಸರಿಗೆ ಆಜಾದ್ ಎಂಬ ಕಾವ್ಯನಾಮ ಸೇರಿಸಿಕೊಂಡರು. ಕೈರೋದ ಅಲ್ ಅಝ್ಹರ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ ನಂತರ 1912ರಲ್ಲಿ ಕೋಲ್ಕತದಲ್ಲಿ ಅಲ್ ಹಿಲಾಲ್ ಎಂಬ ಉರ್ದು ವಾರಪತ್ರಿಕೆಯನ್ನು ಆರಂಭಿಸಿದರು.
2008: ಕರ್ನಾಟಕದಲ್ಲಿ ಕಾಂಗ್ರೆಸ್ ಟಿಕೆಟುಗಳು ಮಾರಾಟವಾಗಿವೆ ಎಂಬ ಗಂಭೀರ ಆರೋಪ ಮಾಡಿದ ಏಐಸಿಸಿ ಪ್ರಧಾನ ಕಾರ್ಯದರ್ಶಿ ಮಾರ್ಗರೆಟ್ ಆಳ್ವ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಆಳ್ವ ವಿರುದ್ಧದ ಶಿಸ್ತು ಉಲ್ಲಂಘನೆಯ ಆರೋಪದ ಬಗ್ಗೆ ತನಿಖೆ ನಡೆಸಿರುವ ಪಕ್ಷದ ಶಿಸ್ತುಪಾಲನಾ ಸಮಿತಿಯ ಅಧ್ಯಕ್ಷ ಎ.ಕೆ.ಆಂಟನಿ ತಮ್ಮ ವರದಿಯನ್ನು ಈದಿನ ಸಂಜೆ ಪಕ್ಷಾಧ್ಯಕ್ಷೆ ಸೋನಿಯಾ ಅವರಿಗೆ ಸಲ್ಲಿಸಿದರು.
2007: ಪಾಕಿಸ್ಥಾನದಲ್ಲಿ 2008ರ ಜನವರಿ 9ರಂದು ಸಾರ್ವತ್ರಿಕ ಚುನಾವಣೆಯನ್ನು ನಡೆಸುವುದಾಗಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಘೋಷಿಸಿದರು. ಚುನಾವಣೆ ಪ್ರಕ್ರಿಯೆ ನೋಡಿಕೊಳ್ಳಲು ಉಸ್ತುವಾರಿ ಸರ್ಕಾರ ನವೆಂಬರ್ 15ರಂದು ಅಸ್ತಿತ್ವಕ್ಕೆ ಬರಲಿದೆ ಎಂದು ಹೇಳಿದ ಅವರು 'ನಾನು ಅಧ್ಯಕ್ಷನಾಗಿ ಮತ್ತೊಂದು ಅವಧಿಗೆ ಪ್ರಮಾಣ ವಚನ ತೆಗೆದುಕೊಳ್ಳುವೆ. ಸೇನಾ ಮುಖ್ಯಸ್ಥನ ಸ್ಥಾನ ಬಿಟ್ಟುಕೊಡುವೆ' ಎಂದೂ ಪ್ರಕಟಿಸಿದರು. ತುರ್ತು ಪರಿಸ್ಥಿತಿ ಘೋಷಿಸಿದ 9 ದಿನಗಳ ನಂತರ ಮುಷರಫ್ ಈ ಘೋಷಣೆ ಮಾಡಿದರು.
2007: ಅಮೆರಿಕದ ನ್ಯೂಜೆರ್ಸಿ ಶಾಸನ ಸಭೆಯ ಉಪಾಧ್ಯಕ್ಷ ಉಪೇಂದ್ರ ಜೆ.ಚಿವುಕುಲ ಅವರಿಗೆ ಪ್ರತಿಷ್ಠಿತ ಅತ್ಯುತ್ತಮ ಶಾಸಕ ಪ್ರಶಸ್ತಿ ಸಂದಿದೆ ಎಂದು ನ್ಯೂಜೆರ್ಸಿ ರಾಜ್ಯ ವಾಣಿಜ್ಯ ಮಂಡಳಿ ಘೋಷಿಸಿತು. ಈ ಪ್ರಶಸ್ತಿ ಸ್ವೀಕರಿಸುವ ಒಟ್ಟು ನಾಲ್ಕು ಮಂದಿಯಲ್ಲಿ ಚಿವುಕುಲ ಅವರೂ ಒಬ್ಬರು.
2007: ಆಗ್ನೇಯ ಚೀನಾದ ಕಲ್ಲಿದ್ದಲು ಗಣಿಯಲ್ಲಿ ವಿಷಾನಿಲ ಸೋರಿಕೆಯಿಂದ ಸತ್ತವರ ಸಂಖ್ಯೆ 35ಕ್ಕೆ ಏರಿತು. ವಿಷಾನಿಲ ಸೋರಿಕೆ ಶುರುವಾದಾಗ ಒಟ್ಟು 86 ಗಣಿ ಕಾರ್ಮಿಕರು ಗಣಿಯಲ್ಲಿ ಸಿಕ್ಕಿಹಾಕಿಕೊಂಡಿದ್ದರು.
2007: ಇಂಡೋನೇಷ್ಯಾದ ಸುಮಾತ್ರ ದ್ವೀಪದಲ್ಲಿ ಲಘು ಭೂಕಂಪ ಸಂಭವಿಸಿತು. ರಿಕ್ಟರ್ ಮಾಪಕದಲ್ಲಿ 6.0ಯಷ್ಟು ತೀವ್ರತೆಯ ಈ ಭೂಕಂಪದಿಂದ ಪ್ರಾಣ ಮತ್ತು ಆಸ್ತಿಪಾಸ್ತಿಗಳಿಗೆ ಹಾನಿಯಾದ ವರದಿ ಬಂದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿತು.
2006: `ಕೇರಾಫ್ ಫುಟ್ಪಾತ್' ಚಿತ್ರವನ್ನು ನಿರ್ದೇಶಿಸಿ, `ಅತ್ಯಂತ ಕಿರಿಯ ವಯಸ್ಸಿನ ನಿರ್ದೇಶಕ' ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದ 11ರ ಹರೆಯದ ಮಾಸ್ಟರ್ ಕಿಶನ್ ಗಿನ್ನೆಸ್ ದಾಖಲೆಗೆ ಸೇರ್ಪಡೆಯಾದ. ಈ ಕುರಿತು ಗಿನ್ನೆಸ್ನಿಂದ ಪತ್ರ ಬಂತು. ಕೊಳೆಗೇರಿ ಮಕ್ಕಳ ಕತೆ ಹೊಂದಿರುವ ಈ ಚಿತ್ರದಲ್ಲಿ ನಟರಾದ ಅಂಬರೀಷ್, ಸುದೀಪ್, ಬಾಲಿವುಡ್ ನಟ ಜಾಕಿ ಶ್ರಾಫ್ ನಟಿಸಿದ್ದಾರೆ.
2006: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಬ್ರಸ್ಸೆಲ್ಸ್ ನಲ್ಲಿ ಬೆಲ್ಜಿಯಂನ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ `ಆರ್ಡರ್ ಆಫ್ ಲಿಯೋಪೋಲ್ಡ್' ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಷ್ಟ್ರೀಯ ಅಭಿವೃದ್ಧಿ, ಭಾರತದ ಬಹು ಸಂಸ್ಕೃತಿ, ಸಹನಶೀಲ ಸಮಾಜ ವ್ಯವಸ್ಥೆಯ ರಕ್ಷಣೆಗೆ ಶ್ರಮಿಸುತ್ತಿರುವ ಹಿನ್ನೆಲೆಯಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.
2006: ಎರಡು ವರ್ಷಗಳ ಹಿಂದೆ ಸುನಾಮಿ ದುರಂತದಲ್ಲಿ ತಾಯಿಯೊಡನೆ ಸಾವನ್ನಪ್ಪಿದ ಹುಬ್ಬಳ್ಳಿಯ ಶಾಲಾ ಬಾಲಕ ಶ್ರೇಯಸ್ ಪಾಟೀಲನಿಗೆ ಮರಣೋತ್ತರವಾಗಿ ರಾಜ್ಯ ಸರ್ಕಾರ ಶೌರ್ಯ ಪ್ರಶಸ್ತಿ ಘೋಷಿಸಿತು. 2004ರ ಡಿಸೆಂಬರಿನಲ್ಲಿ ವಾಸುದೇವ ಪಾಟೀಲ ಕುಟುಂಬ ಮತ್ತು ಗೆಳೆಯ ಶಶಿಧರ ಉಡುಪ ಕುಟುಂಬ ಕಡಲೂರಿಗೆ ಪ್ರವಾಸ ಹೋಗಿದ್ದಾಗ ಈ ದುರಂತ ಸಂಭವಿಸಿತ್ತು. ಡಿಸೆಂಬರ್ 26ರಂದು ದುರಂತ ಸಂಭವಿಸಿದಾಗ ಸಮುದ್ರ ತೀರದಲ್ಲಿದ್ದ ಈ ಕುಟುಂಬಗಳ ನಾಲ್ವರು ಸಮುದ್ರದದ ಅಲೆಯ ಮಧ್ಯೆ ಕೊಚ್ಚಿ ಹೋಗಿದ್ದರು. ತಾಯಿ ಸಂಧ್ಯಾ ಅವರನ್ನು ಉಳಿಸಲು ಯತ್ನಿಸಿದ ಶ್ರೇಯಸ್ ಹಾಗೂ ಶಶಿಧರ ಉಡುಪ ಅವರ ಪತ್ನಿ ಗೀತಾ ಪ್ರಾಣ ಕಳೆದುಕೊಂಡಿದ್ದರು. ಅವರ ಮಗ ಪ್ರಣಾಮ್ ಮತ್ತು ವಾಸುದೇವ ಪಾಟೀಲ ಮಾತ್ರ ಪಾರಾಗಿದ್ದರು.
2005: ಅಂಧರ ಬಾಳಿಗೆ ಆಶಾಕಿರಣವಾಗಿದ್ದ ಅಂತಾರಾಷ್ಟ್ರೀಯ ಖ್ಯಾತಿಯ ನೇತ್ರತಜ್ಞ ಡಾ. ಎಂ.ಸಿ. ಮೋದಿ (90) ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಅವರ ಇಚ್ಛೆಯಂತೆ ಅವರ ಎರಡೂ ಕಣ್ಣುಗಳನ್ನು ಲಯನ್ಸ್ ಕಣ್ಣಿನ ಆಸ್ಪತ್ರೆಗೆ ದಾನ ಮಾಡಲಾಯಿತು.
1992: ಕರ್ನಾಟಕದ ಮುಖ್ಯಮಂತ್ರಿ ಎಸ್. ಬಂಗಾರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು.
1960: ಸಾಹಿತಿ ಸತ್ಯನಾರಾಯಣ ಉರಾಳ ಜನನ.
1958: ಸಾಹಿತಿ ಬಸವರಾಜ ಹುಡೇದಗಡ್ಡಿ ಜನನ.
1948: ಸಾಮಾಜಿಕ, ಚಾರಿತ್ರಿಕ ಸೇರಿದಂತೆ ಎಲ್ಲ ಪ್ರಾಕಾರಗಳಲ್ಲೂ ಕಾದಂಬರಿ ರಚಿಸಿ ಖ್ಯಾತಿ ಪಡೆದ ಕಾದಂಬರಿಕಾರ ರುದ್ರಮೂರ್ತಿ ಶಾಸ್ತ್ರಿ ಅವರು ಎಸ್.ಎನ್. ಶಿವರುದ್ರಯ್ಯ- ಸಿದ್ದಗಂಗಮ್ಮ ದಂಪತಿಯ ಮಗನಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸುಗ್ಗನಹಳ್ಳಿಯಲ್ಲಿ ಜನಿಸಿದರು.
1947: ಫಂಡರಪುರದ ವಿಠೋಬಾ ದೇವಾಲಯ ಪ್ರವೇಶಕ್ಕೆ ಹರಿಜನರಿಗೆ ಅವಕಾಶ ಲಭಿಸಿತು. ಗಣಪತರಾವ್ ತಾಪ್ಸೆ ಅವರು ದೇವಾಲಯ ಪ್ರವೇಶಿಸಿದ ಮೊತ್ತ ಮೊದಲ ಹರಿಜನ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
1944: ಸಾಹಿತಿ ಲಲಿತಾ ಬಿ. ರಾವ್ ಜನನ.
1942: ಸಾಹಿತಿ ಗಂಡಸಿ ವಿಶ್ವೇಶ್ವರ ಜನನ.
1938: ಇಪ್ಪತ್ತನೇ ಶತಮಾನದ ಆದಿಯಲ್ಲಿ ನ್ಯೂಯಾರ್ಕ್ ನಗರದಲ್ಲಿ `ಟೈಫಾಯಿಡ್ ವಾಹಕಿ' ಎಂಬುದಾಗಿಯೇ ಹೆಸರು ಪಡೆದ ಮೇರಿ ಮಲ್ಲೊನ್ (1870-1938) ಮೃತಳಾದಳು. 51 ಟೈಫಾಯಿಡ್ ಪ್ರಕರಣಗಳಿಗೆ ನೇರವಾಗಿ ಈಕೆ ಕಾರಣಳಾಗಿದ್ದು, ಮೂರು ಸಾವುಗಳೂ ನೇರವಾಗಿ ಈಕೆಯಿಂದ ಟೈಫಾಯಿಡ್ ಹರಡಿದ ಪರಿಣಾಮವಾಗಿಯೇ ಸಂಭವಿಸಿವೆ. (ಈಕೆಯ ಮೂಲಕ ಪರೋಕ್ಷವಾಗಿ ರೋಗ ಹರಡಿದ ಪ್ರಕರಣಗಳು ಅಸಂಖ್ಯಾತ). ಇಷ್ಟೆಲ್ಲ ಮಂದಿಗೆ ರೋಗ ತಗುಲಿಸಿದರೂ ಈಕೆಗೆ ಮಾತ್ರ ಟೈಫಾಯಿಡ್ ರೋಗಾಣುಗಳಿಂದ ಏನೂ ತೊಂದರೆ ಆಗಿರಲಿಲ್ಲ.
1918: ಫ್ರಾನ್ಸಿನ ಕಾಂಪಿಗ್ನೆ ಅರಣ್ಯದ ನಡುವೆ ಮಿತ್ರ ಪಡೆಗಳ ಕಮಾಂಡರ್ ಮಾರ್ಷಲ್ ಫರ್ಡಿನಾಂಡ್ ಫೋಕ್ ಅವರ ರೈಲ್ವೇ ಬೋಗಿಯಲ್ಲಿ ಆರ್ಮಿಸ್ಟೀಸ್ ಗೆ ಸಹಿ ಮಾಡುವುದರೊಂದಿಗೆ ಮೊದಲನೆಯ ವಿಶ್ವ ಸಮರ ಕೊನೆಗೊಂಡಿತು. ಈ ದಿನವನ್ನು `ಆರ್ಮಿಸ್ಟೀಸ್ ದಿನ' ಎಂಬುದಾಗಿ ಕರೆಯಲಾಗಿದೆ. ಈ ರೈಲ್ವೇ ಬೋಗಿಯನ್ನು ಸ್ಮಾರಕವಾಗಿ ಸಂರಕ್ಷಿಸಿ ಇಡಲಾಗಿದೆ.
1888: ಭಾರತರತ್ನ ಪ್ರಶಸ್ತಿ ಪುರಸ್ಕೃತ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಮೌಲಾನಾ ಅಬುಲ್ ಕಲಂ ಅಜಾದ್ ಅವರು ಹುಟ್ಟಿದ ದಿನ. ಅವರು ಈದಿನ ಹುಟ್ಟಿದ್ದು ಮೆಕ್ಕಾದಲ್ಲಿ. ಅವರ ತಂದೆ ಮೌಲಾನಾ ಕೈರುದ್ದೀನ್ 1890ರಲ್ಲಿ ಕೋಲ್ಕತ್ತಾಕ್ಕೆ ಬಂದು ನೆಲೆಸಿದರು. ಹೀಗಾಗಿ ಭಾರತ ಅಜಾದ್ ಅವರ ಕರ್ಮಭೂಮಿಯಾಯಿತು.
1888: ಸ್ವಾತಂತ್ರ್ಯ ಸೇನಾನಿ, ಮಾಜಿ ಸಂಸದ ಆಚಾರ್ಯ ಕೃಪಲಾನಿ ಜನನ.
1675: ಸಿಕ್ಖರ 9ನೇ ಗುರುಗಳಾದ ಗುರು ತೇಗ್ ಬಹದೂರ್ (1621-1675) ಅವರನ್ನು ಇಸ್ಲಾಮಿಗೆ ಮತಾಂತರಗೊಳ್ಳಲು ನಿರಾಕರಿಸಿದ್ದಕ್ಕಾಗಿ ದೆಹಲಿಯಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬ್ ಮರಣದಂಡನೆಗೆ ಗುರಿಪಡಿಸಿದ. ಈ ಘಟನೆ ನಡೆದಾಗ ತೇಗ್ ಬಹದೂರ್ ಅವರ ಪುತ್ರ ಗೋಬಿಂದ್ ಸಿಂಗ್ ವಯಸ್ಸು ಕೇವಲ 9 ವರ್ಷ.
No comments:
Post a Comment