Monday, November 12, 2018

‘ಅನಂತ’ ನೆನಪು...

ಅನಂತನೆನಪು...

ಅದು ತೊಂಬತ್ತರ ದಶಕ. ನಾನು ಪ್ರಜಾವಾಣಿ ವರದಿಗಾರನಾಗಿ ಹುಬ್ಬಳ್ಳಿಯಲ್ಲಿ ಇದ್ದ ಸಮಯ. ಈದ್ಗಾ ಮೈದಾನದ ಧ್ವಜ ವಿವಾದದ  ಬಿಸಿ ಎಲ್ಲಡೆ ಹರಡಿತ್ತು.
 
ನಾನು ಕಚೇರಿಯಲ್ಲಿ ಕಾರ್ಯನಿರತನಾಗಿದ್ದ ಹೊತ್ತು. ಫೋನ್ ರಿಂಗಣಿಸಿತು. ಕೈಗೆ ತೆಗೆದುಕೊಂಡರೆ ಕಡೆಯ ಧ್ವನಿ ಕೇಳಿತು: ಉದಯಶಂಕರ್ ಇದ್ದಾರಾ?

ಹೌದು ನಾನೇ ಎಂದು ಉತ್ತರಿಸುತ್ತಿದ್ದಂತೆಯೇ. ನೀವೇನಾ? ಉಶಂನಾಭ ಅವರೇ ನಾನು ಅನಂತ ಮಾತನಾಡುತ್ತಿದ್ದೇನೆ ಗುರುತು ಸಿಕ್ಕಿತಾ?’ ಎಂಬ ಪ್ರಶ್ನೆ ಬಂತು ಕಡೆಯಿಂದ.

ಓ.. ಗೊತ್ತಾಯಿತು, ಬಿಡಿ, ಎಲ್ಲಿದ್ದೀರಿ?’ ಪ್ರಶ್ನಿಸಿದೆ.

ಶ್. ಎಲ್ಲಿದ್ದೇನೆ ಎಂದು ಕೇಳಬೇಡಿ. ಅಜ್ಞಾತವಾಸಿಯಾಗಿದ್ದೇನೆ. ಇನ್ನೂ ಸುರಕ್ಷಿತ ಸ್ಥಳ ಬೇಕಾಗಿದೆ. ನಿಮ್ಮ ಮನೆಗೇ ಬಂದು ಬಿಡಲಾ? ಪೊಲೀಸರ ಕಣ್ಣು ಬೀಳದಲ್ಲವೇ?’ ಎಂಬ ಮರುಪ್ರಶ್ನೆ ಬಂತು ಕಡೆಯಿಂದ.

ಒಮ್ಮಿಂದೊಮ್ಮೆಗೇ ಬಂದ ಪ್ರಶ್ನೆಗೆ ಏನು ಉತ್ತರ ಕೊಡಲಿ ಎಂದು ಯೋಚಿಸುವಷ್ಟರಲ್ಲಿ, ‘ಸಧ್ಯಕ್ಕೆ ಬೇಡ ಬಿಡಿ. ಅಂತಹ ಅಗತ್ಯ ಇದ್ದರೆ ಮತ್ತೆ ಫೋನ್ ಮಾಡುವೆಎಂದು ಉತ್ತರಿಸಿತ್ತು ಕಡೆಯ ಧ್ವನಿ.

ಹೌದು. ಫೋನ್ ಮಾಡಿದ್ದ ವ್ಯಕ್ತಿ ಅನಂತ ಕುಮಾರ್.

ಈದ್ಗಾ ಮೈದಾನದಲ್ಲಿ ಗಣರಾಜ್ಯೋತ್ಸವದ ದಿನ ರಾಷ್ಟ್ರಧ್ವಜ ಹಾರಿಸಿಯೇ ಸಿದ್ಧ ಎಂದು ಬಿಜೆಪಿ, ಏನಾದರೂ ಸರಿ ಧ್ವಜ ಹಾರಿಸಲು ಬಿಡೆವು ಎಂದು ಪೊಲೀಸರು ಪಟ್ಟು ಹಿಡಿದಿದ್ದ ಸಂದರ್ಭವದು.
 
ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸುವ ಯೋಜನೆಯ ಜಾರಿಯಲ್ಲಿ ಅವರ ಪಾತ್ರವೇ ಮಹತ್ವದ್ದಾಗಿತ್ತು. ಸಾಧ್ವಿ ಉಮಾ ಭಾರತಿ ಅವರನ್ನೂ ಕಾರ್ಯಕ್ರಮಕ್ಕಾಗಿ ಕರೆಸಿದ್ದರು.

ಹುಬ್ಬಳ್ಳಿಯಲ್ಲೇ ಕ್ಯಾಂಪ್ ಹೂಡಿದ್ದ ಐಜಿಪಿ ಬರ್ಮನ್ಈದ್ಗಾ ಮೈದಾನದಲ್ಲಿ ಒಂದು ಸೊಳ್ಳೆಯೂ ಹಾರಲು ಸಾಧ್ಯವಿಲ್ಲಎಂದಿದ್ದರು.

ಆದರೆ, ಗಣರಾಜ್ಯೋತ್ಸವದ ದಿನ ಬೆಳ್ಳಂಬೆಳಗ್ಗೆಯೇ ಒಂದಿಬ್ಬರು ತರುಣರು ಈದ್ಗಾ ಮೈದಾನ ಪ್ರವೇಶಿಸಿ ಧ್ವಜ ಹಿಡಿದುಕೊಂಡು ಮೈದಾನದ ಒಳಗಿನ ಬೇಲಿಯ ಬದಿಯಲ್ಲೇ ಓಡಿದ್ದರು. ‘ಮೈದಾನದಲ್ಲಿ ಧ್ವಜ ಅರಳಿಯೇ ಬಿಟ್ಟಿತ್ತು!’

ಬಳಿಕ ಮೈದಾನದತ್ತ ಮೆರವಣಿಗೆಯಲ್ಲಿ ಹೊರಟಿದ್ದ ಅನಂತಕುಮಾರ್, ಉಮಾಭಾರತಿ ಮತ್ತಿತರ ನಾಯಕರನ್ನು ಪೊಲೀಸರು ಬಂಧಿಸಿದ್ದರು.

ಧ್ವಜ ಹಿಡಿದು ಓಡಿದ್ದ ಅನಂತಕುಮಾರ ಹೆಗಡೆ ಮತ್ತುಇನ್ನೊಬ್ಬ ವ್ಯಕ್ತಿ ಪೊಲೀಸರ ಲಾಠಿ ಏಟಿನಿಂದ ಜರ್ಜರಿತರಾಗಿ ಆಸ್ಪತ್ರೆ ಸೇರಿದ್ದರು.

ಅನಂತ ಕುಮಾರ್ ಪೂರ್ತಿ ಹೆಸರು ಎಚ್.ಎನ್. ಅನಂತ ಕುಮಾರ್ ನನಗೆ ಪರಿಚಿತರಾಗಿದ್ದುದು ಅದಕ್ಕೂ ಸುಮಾರು ಒಂದು ದಶಕಕ್ಕೂ ಹಿಂದೆ. ಅಂದರೆ 1979-80 ಅವಧಿಯಲ್ಲಿ. ನಾನು ಬೆಂಗಳೂರಿಗೆ ಬಂದ ಹೊಸತರಲ್ಲಿ ಬೆಂಗಳೂರು ಕಾಟನ್ ಪೇಟೆಯಲ್ಲಿದ್ದ ವಿದ್ಯಾರ್ಥಿ ಪರಿಷತ್ತಿನ ಕಚೇರಿಯಲ್ಲಿ.

ಬೆಂಗಳೂರಿಗೆ ಬಂದ ಹೊಸತರಲ್ಲಿ ನನಗೆ ವಸತಿ ಒದಗಿಸಿದ್ದು ವಿದ್ಯಾರ್ಥಿ ಪರಿಷತ್ ಕಚೇರಿಯೇ. ಪ್ರಸ್ತುತ ಆರೆಸ್ಸೆಸ್ ಪ್ರಮುಖರಾಗಿರುವ ದತ್ತಾತ್ರೇಯ ಹೊಸಬಾಳೆ, ಪ್ರೇಮ್ ಕುಮಾರ್ ಮತ್ತಿತರರು ಅಲ್ಲಿಯೇ ವಾಸವಾಗಿದ್ದರು.

ಕಚೇರಿಯಲ್ಲಿಯೇ ಒಂದು ಕೊಠಡಿಯಲ್ಲಿ ನಾವು ಅಡುಗೆ ಮಾಡಿಕೊಳ್ಳುತ್ತಿದ್ದೆವು. ನಾವು ತಯಾರು ಮಾಡುತ್ತಿದ್ದ ಅಡುಗೆಯನ್ನೇ ಕಚೇರಿಗೆ ಬರುತ್ತಿದ್ದ ಇತರ ಕೆಲವು ಕಾರ್ಯಕರ್ತರು ಉಣ್ಣುತ್ತಿದ್ದುದೂ ಇತ್ತು. ಹಾಗೆ ನಮ್ಮೊಂದಿಗೆ ಊಟ ಜೊತೆಯಾಗಿ ಊಟ ಮಾಡುತ್ತಿದ್ದ ಕಾರ್ಯಕರ್ತರಲ್ಲಿ ಒಬ್ಬರಾಗಿದ್ದರು ಅನಂತ ಕುಮಾರ್.

ನನ್ನ ಹೆಸರು ಬಹಳ ಉದ್ದವಾಗಿದೆ ಎಂದು ಅನಂತಕುಮಾರ್, ಹೊಸಬಾಳೆ, ಬಪ (ಬಸವರಾಜ ಪಾಟೀಲ), ಮಸೂದೆ (ಮಧು ಸೂಧನ ದೇಸಾಯಿ), ಮಾಪಣ್ಣ (ಮಹಾಬಲೇಶ್ವರ ಭಟ್) ಮತ್ತಿತರರೆಲ್ಲ ಸೇರಿಉಶಂನಾಭ ಅಡ್ಡ ಹೆಸರಿಟ್ಟಿದ್ದರು.

ಪರಿಷತ್ತಿನವಿದ್ಯಾರ್ಥಿ ಪಥಪತ್ರಿಕೆಯನ್ನು ರೂಪಿಸುವ ಹೊಣೆಗಾರಿಕೆಯನ್ನು ನಾವೆಲ್ಲ ಒಟ್ಟಾಗಿ ಆಗ ನಿಭಾಯಿಸುತ್ತಿದ್ದೆವು.

ಕೆಲಸ ಮುಗಿದ ಬಳಿಕ ರಾತ್ರಿ ಒಟ್ಟಾಗಿ ಕಾಂತಿ ಸ್ವೀಟ್ಸ್ ಗೆ ಹೋಗಿಬಾದಾಮಿ ಹಾಲುಕುಡಿದು ಬರುತ್ತಿದ್ದೆವು.

ಹುಬ್ಬಳ್ಳಿಯ ಈದ್ಗಾ ಮೈದಾನದ ವಿವಾದ ಕಡೆಗೂ ಬಿಜೆಪಿಗೆ ದೊಡ್ಡ ವರದಾನವಾಗಿತ್ತು. ನಂತರದ ಚುನಾವಣೆಗಳಲ್ಲಿ ಬಿಜೆಪಿ ಪಡೆದ ಯಶಸ್ಸುಗಳಿಗೆ ಈದ್ಗಾ ವಿವಾದ ಮೂಲ ಮೆಟ್ಟಿಲಾಗಿತ್ತು.

ಮುಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಅನಂತಕುಮಾರ್ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಸಚಿವರಾದರು.

ಸಚಿವರಾದ ಮೇಲೆ ಹುಬ್ಬಳ್ಳಿಗೆ ಬಂದ ಅನಂತಕುಮಾರ್ ಪತ್ರಕರ್ತರನ್ನು ಭೇಟಿ ಮಾಡಿದಾಗ, ಬೆಂಗಳೂರಿನ ಹಳೆಯ ದಿನಗಳ ಮೆಲುಕು ಹಾಕುವುದನ್ನು ಮರೆಯಲಿಲ್ಲ. ಪತ್ರಕರ್ತ ಮಿತ್ರರೊಂದಿಗೂಇವರು ನನ್ನ ಹಳೆಯ ಗೆಳೆಯ ಉಶಂನಾಭಎಂದು ಹೇಳಿಕೊಂಡಿದ್ದರು.

ಇಂತಹ ಸ್ನೇಹಶೀಲಅನಂತಈದಿನ (12.11.2018)ಅನಂತದಲ್ಲಿ ಲೀನರಾಗಿದ್ದಾರೆ. ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಪ್ರಾರ್ಥಿಸುವೆ.



No comments:

Post a Comment