ಇಂದಿನ ಇತಿಹಾಸ History Today ನವೆಂಬರ್ 28
2018: ನವದೆಹಲಿ/ ಕರ್ತಾರಪುರ: ಭಾರತದೊಂದಿಗೆ ಪ್ರಬಲ ಬಾಂಧವ್ಯದ ಬಯಕೆಯನ್ನು ವ್ಯಕ್ತ ಪಡಿಸಿದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರು ’ನಮ್ಮ ಏಕೈಕ ಸಮಸ್ಯೆಯಾದ ಕಾಶ್ಮೀರ ಸಮಸ್ಯೆಯನ್ನು ಇತ್ಯರ್ಥ ಪಡಿಸಲು ಉಭಯ ರಾಷ್ಟ್ರಗಳ ಇಬ್ಬರು ಸಮರ್ಥ ನಾಯಕರು ಸಾಕು, ಇತ್ಯರ್ಥ ಪಡಿಸಲಾಗದ ವಿಷಯ ಇಲ್ಲವೇ ಇಲ್ಲ’ ಎಂದು ಹೇಳಿದರು.ಪಾಕಿಸ್ತಾನದ ಕರ್ತಾರಪುರದಲ್ಲಿ ಗುರುದ್ವಾರ ದರ್ಬಾರ್ ಸಾಹಿಬ್ ಮತ್ತು ಭಾರತದ ಗುರುದಾಸಪುರ ಜಿಲ್ಲೆಯಲ್ಲಿನ ಡೇರಾ ಬಾಬಾ ನಾನಕ್ ಮಂದಿರವನ್ನು ಪರಸ್ಪರ ಸಂಪರ್ಕಿಸುವ ’ಕರ್ತಾರಪುರ ಕಾರಿಡಾರ್’ಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಖಾನ್ ’ಭಾರತ ಒಂದು ಹೆಜ್ಜೆ ಮುಂದಿಟ್ಟರೆ ನಾವು ಎರಡು ಹೆಜ್ಜೆ ಮುಂದಿಡುತ್ತೇವೆ’ ಎಂಬುದಾಗಿ ತಾವು ಪ್ರಮಾಣವಚನ ಕಾಲದಲ್ಲಿ ನೀಡಿದ್ದ ಹೇಳಿಕೆಯನ್ನು ಪುನರುಚ್ಚರಿಸಿದರು. ಕರ್ತಾರಪುರ ಕಾರಿಡಾರ್ ಸಿಖ್ ಯಾತ್ರಿಕರಿಗೆ ಗುರುದಾಸಪುರ ಜಿಲ್ಲೆಯ ಸಿಖ್ ಮಂದಿರದಿಂದ ಕರ್ತಾರಪುರದ ಸಿಖ್ ಮಂದಿರಕ್ಕೆ ಮುಕ್ತ ಸಂಚಾರ ಮಾರ್ಗವನ್ನು ಕಲ್ಪಿಸಿಕೊಡಲಿದೆ. ಭಾರತದ ಕಡೆಯಲ್ಲಿ ಗುರುದಾಸಪುರದಲ್ಲಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಮತ್ತು ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅವರು ಶಿಲಾನ್ಯಾಸ ನೆರವೇರಿಸಿದ್ದರು.
ಶಿಲಾನ್ಯಾಸದ ಬಳಿಕ ಮಾತನಾಡಿದ ಇಮ್ರಾನ್ ಖಾನ್ ಅವರು ’ನಾನು ಭಾರತದ ಜೊತೆಗೆ ಪ್ರಬಲ ಬಾಂಧವ್ಯವನ್ನು ಅಪೇಕ್ಷಿಸುತ್ತೇನೆ.
ಏನಾದರೂ ಸರಿ ನಮ್ಮ ಬಾಂಧವ್ಯಗಳನ್ನು ಸುಧಾರಿಸಲೇಬೇಕು.
ಭಾರತದ ಜೊತೆಗೆ ಗೆಳೆತನದ ವಿಚಾರದಲ್ಲಿ ಪಾಕಿಸ್ತಾನದ ಪಕ್ಷಗಳು ಮತ್ತು ಸೇನೆ ಒಂದೇ ಕಡೆ ಇರುತ್ತವೆ’ ಎಂದು ಹೇಳಿದರು. ’ಮಾನವ ಚಂದ್ರನನ್ನು ತಲುಪಿದ್ದಾನೆ. ಇತ್ಯರ್ಥ ಪಡಿಸಲಾಗದ ವಿಷಯ ಇಲ್ಲವೇ ಇಲ್ಲ. ನಮ್ಮ ಮಧ್ಯೆ ಇರುವ ಏಕೈಕ ವಿಷಯ ಕಾಶ್ಮೀರ. ಇದನ್ನು ಇತ್ಯರ್ಥ ಪಡಿಸಲು ಇಬ್ಬರು ಸಮರ್ಥ ನಾಯಕರು ಸಾಕು. ನಮ್ಮ ಬಾಂಧವ್ಯ ಪ್ರಬಲಗೊಂಡರೆ ಎಂತಹ ಸಾಧನೆಗಳನ್ನು ಮಾಡುವ ಸಾಮರ್ಥ್ಯ ನಮಗಿದೆ ಎಂಬುದನ್ನು ಕಲ್ಪಿಸಿಕೊಳ್ಳಿ’ ಎಂದು ಖಾನ್ ನುಡಿದರು. ‘ಚಾಂಪಿಯನ್ಗಳು ಅಪಾಯ ಮತ್ತು ಅವಕಾಶಗಳನ್ನು ತೆಗೆದುಕೊಳ್ಳುತ್ತಾರೆ’ ಎಂದು ನುಡಿದ ಖಾನ್ ’ಭಾರತ ಒಂದು ಹೆಜ್ಜೆ ಮುಂದಿಟ್ಟರೆ ನಾವು ಎರಡು ಹೆಜ್ಜೆ ಮುಂದಿಡುತ್ತೇವೆ’ ಎಂಬ ತಮ್ಮ ಹಿಂದಿನ ಮಾತನ್ನು ಪುನರುಚ್ಚರಿಸಿದರು. ಕರ್ತಾರಪುರದಲ್ಲಿ ಸವಲತ್ತುಗಳನ್ನು ನಾವು ಅಭಿವೃದ್ಧಿ ಪಡಿಸಲಿದ್ದೇವೆ ಎಂದೂ ಅವರು ಹೇಳಿದರು. ನವಜೋತ್ ಸಿಂಗ್ ಸಿಧು ಅವರ ಬಗ್ಗೆ ವ್ಯಕ್ತವಾದ ಟೀಕೆಗಳನ್ನು ಪ್ರಸ್ತಾಪಿಸಿದ ಇಮ್ರಾನ್ ಖಾನ್ ’ನನ್ನ ಪ್ರಮಾಣವಚನ ಸಮಾರಂಭದಿಂದ ವಾಪಸಾದ ಬಳಿಕ ಸಿಧು ಬಗ್ಗೆ ಬಹಳಷ್ಟು ಟೀಕೆಗಳು ಬಂದವು ಎಂಬುದನ್ನು ನಾನು ಕೇಳಿದ್ದೇನೆ. ಅವರನ್ನು ಏಕೆ ಟೀಕಿಸಲಾಯಿತು ಎಂಬುದು ನನಗೆ ಗೊತ್ತಿಲ್ಲ. ಅವರು ಕೇವಲ ಶಾಂತಿ ಮತ್ತು ಸಹೋದರತ್ವದ ಬಗ್ಗೆ ಮಾತನಾಡಿದ್ದರು. ಅವರು ಪಾಕಿಸ್ತಾನಕ್ಕೆ ಬರಬಹುದು ಮತ್ತು ಪಾಕಿಸ್ತಾನದ ಪಂಜಾಬಿನಲ್ಲಿ ಚುನಾವಣೆಗೆ ನಿಲ್ಲಬಹುದು, ಅವರು ಗೆಲ್ಲುತ್ತಾರೆ’ ಎಂದು ಹೇಳಿದರು. ಸಮಾರಂಭದಲ್ಲಿ ಮಾತನಾಡಿದ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮೆಹಮೂದ್ ಖುರೇಶಿ ಅವರು ತಮ್ಮ ರಾಷ್ಟ್ರವು ಧರ್ಮಗಳ ಮಧ್ಯೆ ಯಾವುದೇ ವ್ಯತ್ಯಾಸ ಮಾಡುವುದಿಲ್ಲ ಎಂದು ಹೇಳಿದರು. ಕರ್ತಾರಪುರ ಕಾರಿಡಾರ್ ಉಭಯ ರಾಷ್ಟ್ರಗಳ ನಡುವಣ ಅಂತರವನ್ನು ಕಡಿಮೆ ಮಾಡುವುದು ಎಂದು ಅವರು ಹಾರೈಸಿದರು. ಸಮಾರಂಭದಲ್ಲಿ ಭಾರತದ ಪರವಾಗಿ ಮಾತನಾಡಿದ ಕೇಂದ್ರ ಸಚಿವೆ ಅರ್ ಸಿಮ್ರತ್ ಕೌರ್
ಬಾದಲ್ ಅವರು ’ಕರ್ತಾರಪುರ ಕಾರಿಡಾರ್ ಶಾಂತಿಯ ಕಾರಿಡಾರ್’ ಎಂಬುದಾಗಿ ಬಣ್ಣಿಸಿ ’ಇದು ಎಲ್ಲ ವೈರತ್ವಗಳನ್ನು ಕೊನೆಗೊಳಿಸಲಿ ’ ಎಂದು ಹಾರೈಸಿದರು. ಬರ್ಲಿನ್ ಗೋಡೆ ಕುರಿತು ಪ್ರಧಾನಿ ಮೋದಿ ಅವರು ನೀಡಿದ ಹೇಳಿಕೆಯನ್ನು ಪುನರುಚ್ಚರಿಸಿದ ಬಾದಲ್ ’ಇಸ್ರೇಲ್ ಗೋಡೆ ಉರುಳಬಹುದಾದರೆ, ಈ ಕಾರಿಡಾರ್‌ನೊಂದಿಗೆ ಭಾರತ ಮತ್ತು ಪಾಕಿಸ್ತಾನದ ನಡುವಣ ಗೋಡೆಯೂ ಉರುಳಬಲ್ಲುದು’ ಎಂದು ಭಾವುಕರಾಗಿ ನುಡಿದರು. ಸಮಾರಂಭದಲ್ಲಿ ಮಾತನಾಡಿದ ನವಜೋತ್ ಸಿಂಗ್ ಸಿಧು ಅವರು ಪಾಕಿಸ್ತಾನದ ಪ್ರಧಾನಿಯನ್ನು ಶ್ಲಾಘಿಸಿದರು. ’ಈ ಕಾರಿಡಾರ್ (ಕರ್ತಾರಪುರ) ಮೂಲಕ ಉಭಯ ದೇಶಗಳನ್ನು ಒಟ್ಟಾಗಿಸಿದ್ದಕ್ಕಾಗಿ ಇತಿಹಾಸವು ಇಮ್ರಾನ್ ಖಾನ್ ಅವರನ್ನು ನೆನಪಿನಲ್ಲಿ ಇರಿಸಲಿದೆ’ ಎಂದು ಹೇಳಿದರು. ಕಾರಿಡಾರ್ ಯೋಜನೆಗೆ ಅನುಮೋದನೆ ನೀಡಿದ್ದಕ್ಕಾಗಿ ಸಿಧು ಅವರು ಭಾರತ ಸರ್ಕಾರಕ್ಕೂ ಧನ್ಯವಾದ ಸಲ್ಲಿಸಿದರು. ಈಕಾರಿಡಾರ್ನೊಂದಿಗೆ ಇಮ್ರಾನ್ ಖಾನ್ ಅವರು ೭೦ ವರ್ಷಗಳ ಕಾಯುವಿಕೆಯನ್ನು ಕೊನೆಗೊಳಿಸಿದರು ಎಂದು ನುಡಿದ ಸಿಧು ’ಭಾರತ ಚಿರಾಯುವಾಗಲಿ, ಪಾಕಿಸ್ತಾನ ಚಿರಾಯುವಾಗಲಿ’ ಎಂದು ಹೇಳಿದರು. ಸಿಧು ಅವರ ಇನ್ನಷ್ಟು ಆಲಿಂಗನಗಳು ಸಾಧ್ಯವಾದರೆ ಹಲವಾರು ಸಮಸ್ಯೆಗಳು ಇತ್ಯರ್ಥವಾಗುತ್ತವೆ ಎಂದು ಹೇಳುವ ಮೂಲಕ ಪಾಕ್ ಸಚಿವರೊಬ್ಬರು ಪಾಕಿಸ್ತಾನದ ಸೇನಾ ಮುಖ್ಯಸ್ಥ ಬಜ್ವಾ ಅವರನ್ನು ಆಲಿಂಗಿಸಿದ ಸಿಧು ನಡೆಯನ್ನು ಸಮಾರಂಭದಲ್ಲಿ ಶ್ಲಾಘಿಸಿದರು. ಸಿಧುಗೆ ಮುಂದಿನ ಸಾಲಿನ ಆಸನ: ಪಾಕಿಸ್ತಾನದ ಕಡೆಯಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಕೇಂದ್ರ ಸಚಿವರಾದ ಹರ್ಸಿಮ್ರತ್ ಕೌರ್ ಬಾದಲ್ ಮತ್ತು ಹರ್ದೀಪ್ ಸಿಂಗ್ ಪುರಿ ಅವರು ಭಾರತವನ್ನು ಪ್ರತಿನಿಧಿಸಿದರು. ಪಂಜಾಬ್ ಸಂಪುಟ ಸಚಿವ ನವಜೋತ್ ಸಿಂಗ್ ಸಿಧು ಅವರೂ ಕೂಡಾ ತಮ್ಮ ವೈಯಕ್ತಿಕ ನೆಲೆಯಿಂದ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಮುಂದಿನ ಸಾಲಿನಲ್ಲಿ ಇಮ್ರಾನ್ ಖಾನ್ ಅವರ ಸಮೀಪದಲ್ಲೇ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ ಅವರ ಪಕ್ಕದಲ್ಲೇ ಸಿಧು ಅವರಿಗೆ ಆಸನ ಒದಗಿಸಲಾಗಿತ್ತು. ಭಾರತವನ್ನು ಪ್ರತಿನಿಧಿಸಿದ ಹರ್ ಸಿಮ್ರತ್ ಮತ್ತು ಪುರಿ ಅವರಿಗೆ ಪ್ರೊಟೋಕಾಲ್ ಬದಿಗೊತ್ತಿ ಸ್ವಲ್ಪ ದೂರದ ಆಸನಗಳನ್ನು ಒದಗಿಸಲಾಗಿತ್ತು. ಸಿಖ್ ಉಗ್ರಗಾಮಿಗೂ ಮಣೆ: ನಾಗರಿಕ ಸಮಾರಂಭದಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ ಅವರಿಗೂ ಮಹತ್ವದ ಸ್ಥಾನ ಒದಗಿಸಿದ್ದು ಭಾರತದಲ್ಲಿ ಎಲ್ಲರ ಹುಬ್ಬೇರುವಂತೆ ಮಾಡಿತು. ವಿವಾದಾತ್ಮಕ ಸಿಖ್ ಉಗ್ರಗಾಮಿ ಮತ್ತು ಖಲಿಸ್ತಾನ ಪರ ನಾಯಕ ಗೋಪಾಲ್ ಸಿಂಗ್ ಚಾವ್ಲಾ ಕೂಡಾ ವೇದಿಕೆಯಲ್ಲಿ ಉಪಸ್ಥಿತರಿದ್ದುದು ಮತ್ತು ಬಜ್ವಾ ಅವರಿಗೆ ಹಸ್ತಲಾಘವ ನೀಡುತ್ತಿದ್ದುದು ಕೂಡಾ ಭಾರತದ ಪಾಲಿಗೆ ಅಹಿತಕರವಾಗಿತ್ತು.ಅಮೃತಸರದ ನಿರಂಕಾರಿ ಭವನದಲ್ಲಿ ಇತ್ತೀಚೆಗೆ ಮೂವರನ್ನು ಬಲಿತೆಗೆದುಕೊಂಡ ಭಯೋತ್ಪಾದಕ ದಾಳಿಗೆ ಚಾವ್ಲಾ ಹೆಸರು ಜೋಡಣೆಯಾಗಿದೆ ಎಂದು ಭಾರತದ ಗುಪ್ತಚರ ಸಂಸ್ಥೆಗಳು ತಿಳಿಸಿದ್ದವು. ದಾಳಿಯನ್ನು ಸಂಘಟಿಸಲು ಐಎಸ್ ಐ ಮತ್ತು ಲಷ್ಕರ್-ಇ-ತೊಯ್ಬಾ (ಎಲ್ಇಟಿ) ಮುಖ್ಯಸ್ಥ ಹಫೀಜ್ ಸಯೀದ್ ಜೊತೆ ಚಾವ್ಲಾ ಸಂಪರ್ಕ ಇಟ್ಟುಕೊಂಡಿದ್ದ ಎಂದು ಭಾರತದ ಅಧಿಕಾರಿಗಳು ಹೇಳಿದ್ದರು. ಚಾವ್ಲಾ ಮತ್ತು ಸಯೀದ್ ಭೇಟಿಯ ಭಾವಚಿತ್ರವನ್ನೂ ಅವರು ಸಂಪಾದಿಸಿದ್ದರು. ಬೈಸಾಖಿ ವೇಳೆಯಲ್ಲಿ ಭಾರತದಿಂದ ಸಿಖ್ ಯಾತ್ರಿಕರು ಭೇಟಿ ನೀಡಿದ್ದಾಗ ಪಾಕಿಸ್ತಾನದ ಗುರುದ್ವಾರಗಳ ಹೊರಗೆ ’ಸಿಖ್ ಜನಮತಗಣನೆ ೨೦೨೦’ ಭಿತ್ತಿಚಿತ್ರ
ಅಂಟಿಸುವುದರಲ್ಲಿ ಚಾವ್ಲಾ ಶಾಮೀಲಾಗಿದ್ದ ಭಾವಚಿತ್ರಗಳೂ ಭಾರತೀಯ ಅಧಿಕಾರಿಗಳಿಗೆ ಲಭಿಸಿದ್ದವು. ಗುರುನಾನಕ್ ದೇವ್ ವಿಧಿವಶರಾದ ಸ್ಥಳ: ಪಾಕಿಸ್ತಾನದಲ್ಲಿನ ಕರ್ತಾರಪುರ ಸಾಹಿಬ್ ಡೇರಾ ಬಾಬಾ ನಾನಕ್ ಮಂದಿರದಿಂದ ೪ ಕಿಮೀ ದೂರದಲ್ಲಿ ರಾವಿ ನದಿ ದಂಡೆಯಲ್ಲಿದೆ. ಸಿಖ್ ಗುರುಗಳು ೧೫೨೨ರಲ್ಲಿ ಇದನ್ನು ಸ್ಥಾಪಿಸಿದ್ದರು. ಗುರುನಾನಕ್ ದೇವ್ ಅವರು ವಿಧಿವಶರಾದರೆನ್ನಲಾದ ಈ ಸ್ಥಳದಲ್ಲಿಯೇ ಸ್ಥಾಪಿಸಲಾದ ಮೊತ್ತ ಮೊದಲ ಗುರುದ್ವಾರವೇ ’ಗುರುದ್ವಾರ ಕರ್ತಾರಪುರ ಸಾಹಿಬ್’ ಎಂದು ಹೇಳಲಾಗಿದೆ. ಭಾರತದಲ್ಲಿನ ಸಿಖ್ ಯಾತ್ರಾರ್ಥಿಗಳಿಗೆ ಭಾರತದ ಗುರುದಾಸಪುರದಿಂದ ಪಾಕಿಸ್ತಾನದ ಕರ್ತಾರಪುರದಲ್ಲಿನ ಗುರುದ್ವಾರ ದರ್ಬಾರ್ ಸಾಹಿಬ್ ಮುಕ್ತವಾಗಿ ಸಂಚರಿಸುವ ಅವಕಾಶವನ್ನು ಕರ್ತಾರಪುರ ಕಾರಿಡಾರ್ ಒದಗಿಸಲಿದ್ದು, ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಮುಂದಿನ ವರ್ಷ ಗುರುನಾನಕ್ ಅವರ ೫೫೦ನೇ ಜನ್ಮ ದಿನಾಚರಣೆಗೆ ಮುಂಚಿತವಾಗಿ ಕಾರಿಡಾರ್ ನಿರ್ಮಾಣದ ಬೆಳವಣಿಗೆ ಆಗಿದೆ.ಗುರುನಾನಕ್ ಜನ್ಮದಿನಾಚರಣೆ ಆಚರಿಸಲು ಸಹಸ್ರಾರು ಸಿಖ್ ಯಾತ್ರಿಕರು ಭಾರತದಿಂದ ಪಾಕಿಸ್ತಾನಕ್ಕೆ ಪ್ರತಿವರ್ಷವೂ ಭೇಟಿ ನೀಡುತ್ತಾರೆ. ಭಾರತದ್ದೇ ಪ್ರಸ್ತಾವ: ಸಿಖ್ ಯಾತ್ರಿಕರ ಅನುಕೂಲಕ್ಕಾಗಿ ಕಾರಿಡಾರ್ ನಿರ್ಮಾಣ ಮಾಡುವ ಪ್ರಸ್ತಾಪವನ್ನು ಭಾರತ ೨೦ ವರ್ಷಗಳ ಹಿಂದೆಯೇ ಪ್ರಸ್ತಾಪಿಸಿತ್ತು. ಕರ್ತಾರಪುರದ ಗುರುದ್ವಾರ ದರ್ಬಾರ್ ಸಾಹಿಬ್ ಗೆ ತೆರಳುವ ಭಾರತದ ಯಾತ್ರಿಕರಿಗೆ ಅನುಕೂಲವಾಗುವಂತೆ ತಮ್ಮ ತಮ್ಮ ಗಡಿಯವರೆಗೆ ಕಾರಿಡಾರ್ ಅಭಿವೃದ್ಧಿ ಪಡಿಸುವ ನಿರ್ಧಾರವನ್ನು ಭಾರತ ಮತ್ತು ಪಾಕಿಸ್ತಾನ ಕಳೆದವಾರ ಪ್ರಕಟಿಸಿದ್ದವು. ೨೦೧೬ರಲ್ಲಿ ಪಾಕಿಸ್ತಾನದಲ್ಲಿನ ಭಯೋತ್ಪಾದಕರು ನಡೆಸಿದ ಉರಿ ದಾಳಿಯ ಬಳಿಕ ದ್ವಿಪಕ್ಷೀಯ ಮಾತುಕತೆಗಳು ರದ್ದಾಗಿ, ಭಾರತ- ಪಾಕಿಸ್ತಾನ ಬಾಂಧವ್ಯ ನಶಿಸಿತ್ತು.ಪಾಕ್ ಕಡೆಯಲ್ಲಿನ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಪಾಕಿಸ್ತಾನವು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರಿಗೆ ಆಹ್ವಾನ ನೀಡಿತ್ತು. ಆಹ್ವಾನಕ್ಕಾಗಿ ಪಾಕ್ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ ಅವರಿಗೆ ಧನ್ಯವಾದ ಸಲ್ಲಿಸಿದ ಸುಷ್ಮಾ ಪೂರ್ವ ನಿಗದಿತ ಕಾರ್ಯಕ್ರಮಗಳ ಕಾರಣ ತಮಗೆ ಕರ್ತಾರಪುರಕ್ಕೆ ಪ್ರಯಾಣ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದರು.ಕಳೆದ ಆಗಸ್ಟ್ ತಿಂಗಳಲ್ಲಿ ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರು ಪಾಕಿಸ್ತಾನಕ್ಕೆ
ಕ್ರಿಕೆಟಿಗ ಮಿತ್ರ ಇಮ್ರಾನ್ ಖಾನ್ ಅವರು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದಾಗ ಕರ್ತಾರ್ ಪುರ ಸಾಹಿಬ್ ವಿಷಯದ ಮೇಲೆ ಗಮನ ಹರಿದಿತ್ತು.
ಪಾಕಿಸ್ತಾನದ ಸೇನಾ ಮುಖ್ಯಸ್ಥ ಖಮರ್ ಜಾವೇದ್ ಬಜ್ವಾ ಅವರು ಪಾಕಿಸ್ತಾನವು ಕರ್ತಾರಪುರ ಸಾಹಿಬ್ ಗೆ ಕಾರಿಡಾರ್ ನಿರ್ಮಿಸಬಹುದು ಎಂದು ತಿಳಿಸಿರುವುದಾಗಿ ಸಿಧು ಅವರು ಪಾಕಿಸ್ತಾನದಿಂದ ಹಿಂದಿರುಗಿದ ಬಳಿಕ ಹೇಳಿದ್ದರು.
2018: ನವದೆಹಲಿ: ಮಾವೋವಾದಿ ನಕ್ಸಲೀಯ ಉಪಟಳ ಪ್ರದೇಶಗಳೂ ಸೇರಿದಂತೆ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ
ಮತದಾರರು ಅಮಿತೋತ್ಸಾಹ ಪ್ರದರ್ಶಿಸಿ, ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮತದಾನ ಮಾಡಿದ್ದರೆ, ಮಿಜೋರಾಂನಲ್ಲಿ ಮತದಾರರ ಆಸಕ್ತಿ ಕುಗ್ಗಿದ್ದು ಮತದಾನ ಪ್ರಮಾಣ ಕಡಿಮೆಯಾಯಿತು. ಸಣ್ಣಪುಟ್ಟ ಘರ್ಷಣೆಗಳನ್ನು ಹೊರತುಪಡಿಸಿ ಬಹುತೇಕ ಶಾಂತಿಯುತ ಮತದಾನ ನಡೆದಿದ್ದು, ಮಧ್ಯಪ್ರದೇಶದಲ್ಲಿ ಶೇಕಡಾ ೭೫ರಷ್ಟು ಮತ್ತು ಮಿಜೋರಾಂನಲ್ಲಿ ಶೇಕಡಾ ೭೭ರಷ್ಟು ಮತದಾನವಾಯಿತು. ಮಧ್ಯಪ್ರದೇಶದಲ್ಲಿ ಈ ಬಾರಿ ಕಳೆದ ಬಾರಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಮತ ಚಲಾವಣೆ ಆಯಿತು. ಕಳೆದ ಬಾರಿ ಶೇಕಡಾ ೭೨.೭ ರಷ್ಟು ಮತದಾನವಾಗಿತ್ತು ಎಂದು ಚುನಾವಣಾ ಆಯೋಗ ತಿಳಿಸಿತು. ಮಿಜೋರಾಂನಲ್ಲಿ ೨೦೧೩ರಲ್ಲಿ ಶೇಕಡಾ ೮೩.೪ರಷ್ಟು ಮತದಾನವಾಗಿತ್ತು.
ಮಧ್ಯಪ್ರದೇಶ ವಿಧಾನಸಭೆಯ ೨೩೦ ಸ್ಥಾನಗಳಿಗಾಗಿ ನಡೆದ ಚುನಾವಣೆಯಲ್ಲಿ ೧,೦೯೪ ಪಕ್ಷೇತರರು ಸೇರಿ ೨,೮೯೯ ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಇದ್ದರು. ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ಕಾಂಗ್ರೆಸ್ ಮಧ್ಯೆ ನೇರ ಹಣಾಹಣಿ ಇರುವ ರಾಜ್ಯದಲ್ಲಿ ೫.೦೪ ಕೋಟಿಯಷ್ಟು ಅರ್ಹ ಮತದಾರರಿದ್ದು, ೬೫,೩೪೧ ಮತಗಟ್ಟೆಗಳಲ್ಲಿ ೪೫,೯೦೪ ಮಹಿಳೆಯರು ಸೇರಿದಂತೆ ೩,೦೦,೭೮೨ ಮಂದಿ ಸರ್ಕಾರಿ ನೌಕರರು ಚುನಾವಣಾ ಕಾರ್ಯವನ್ನು ನಿರ್ವಹಿಸಿದರು.ಮಧ್ಯಪ್ರದೇಶದಲ್ಲಿ ಸಂಜೆ ೬ ಗಂಟೆಗೆ ಮತದಾನ ಮುಕ್ತಾಯಗೊಂಡಿದ್ದು ಶೇಕಡಾ ೭೪.೬೧ರಷ್ಟು ಮತದಾನವಾಗಿದೆ ಎಂದು ಮಧ್ಯಪ್ರದೇಶದ ಚುನಾವಣಾ ಅಧಿಕಾರಿ ಪ್ರಕಟಿಸಿದರು. ವಿದ್ಯುನ್ಮಾನ ಮತಯಂತ್ರಗಳ ಅಸಮರ್ಪಕ ಕಾರ್ಯನಿರ್ವಹಣೆ ದೂರನ್ನು ಅನುಸರಿಸಿ ೨೧೨೬ ವಿವಿಪ್ಯಾಟ್ಗಳು ಮತ್ತು ೮೮೩ ಬ್ಯಾಲೆಟ್ ಘಟಕ ಹಾಗೂ ೮೮೧ ನಿಯಂತ್ರಣ ಘಟಕಗಳನ್ನು ಬದಲಾಯಿಸಲಾಯಿತು ಎಂದು ಅವರು ಹೇಳಿದರು. ತಾಂತ್ರಿಕ ಅಡಚಣೆಗಳ ದೂರುಗಳನ್ನು ಅನುಸರಿಸಿ ೧,೧೪೬ ವಿದ್ಯುನ್ಮಾನ ಮತಯಂತ್ರಗಳು ಮತ್ತು ೧,೫೪೫ ವಿವಿಪ್ಯಾಟ್ಗಳನ್ನು (ವೋಟರ್ ವೆರಿಫಿಯೇಬಲ್ ಪೇಪಲ್ ಆಡಿಟ್ ಟ್ರೈಲ್) ಬದಲಾಯಿಸಲಾಯಿತು ಎಂದು ಮಧ್ಯಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ವಿ.ಎಲ್. ಕಾಂತರಾವ್ ಹೇಳಿದರು.ಮಾವೋವಾದಿ ನಕ್ಸಲೀಯ ಪ್ರಾಬಲ್ಯದ ಪ್ರದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಮತದಾನವಾಗಿದ್ದು, ಬೈಹರ್, ಲಾಂಜ್ಹಿ ಮತ್ತು ಪಾರಸ್ವಾಡಗಳಲ್ಲಿ ಕ್ರಮವಾಗಿ ಶೇಕಡಾ ೬೬, ಶೇಕಡಾ ೬೪ ಮತ್ತು ಶೇಕಡಾ ೬೮ರಷ್ಟು ಮತದಾನವಾಯಿತು. ಮಾವೋವಾದಿ ಉಪಟಳ ಪ್ರದೇಶಗಳಾದ ಬಲಘಾಟ್- ಬೈಹರ್, ಲಾಂಜ್ಹಿ ಮತ್ತು ಪಾರಸ್ವಾಡ ಪ್ರದೇಶಗಳಲ್ಲಿ ಪೂರ್ವ ನಿಗದಿಯಂತೆಯೇ ಮತದಾನ ಮುಕ್ತಾಯವಾಯಿತು. ಈ ಕ್ಷೇತ್ರಗಳಲ್ಲಿ ಬೆಳಗ್ಗೆ ೭ ಗಂಟೆಗೆ ಮತದಾನ ಆರಂಭವಾಗಿತ್ತು.
ಮೊರೆನಾದಲ್ಲಿ ಗಾಳಿಯಲ್ಲಿ ಗುಂಡು: ಮೊರೆನಾ ಜಿಲ್ಲೆಯಲ್ಲಿನ ಸೊಮಾವೊಲಿ ವಿಧಾನಸಭಾ ಕ್ಷೇತ್ರದ ಜೌರಿ ಗ್ರಾಮದಲ್ಲಿ ದುಷ್ಕರ್ಮಿಗಳು ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆ ಘಟಿಸಿದೆ. ಘಟನೆಯಲ್ಲಿ ಯಾವುದೇ ಸಾವು ನೋವಿನ ವರದಿ ಬಂದಿಲ್ಲ. ಅನಾರೋಗ್ಯದಿಂದ ೩ ನೌಕರರ ಸಾವು: ಮಧ್ಯಪ್ರದೇಶದ ಧರ್, ಇಂದೋರ್ ಮತ್ತು ಗುನಾ ಜಿಲ್ಲೆಗಳಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುತ್ತಿದ್ದಾಗ ಅನಾರೋಗ್ಯದ ಪರಿಣಾಮವಾಗಿ ಮೂವರು ನೌಕರರು ಸಾವನ್ನಪ್ಪಿದ್ದಾರೆ ಎಂದು ಚುನಾವಣಾ ಅಧಿಕಾರಿ ಕಾಂತರಾವ್ ಹೇಳಿದರು. ರಾಜ್ಯದ ಹಲವಡೆಗಳಲ್ಲಿ ವಿದ್ಯುನ್ಮಾನ ಯಂತ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಆಪಾದಿಸಿದ ಕಾಂಗ್ರೆಸ್ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರು ತುರ್ತು ಕ್ರಮ ಕೈಗೊಳ್ಳುವಂತೆ ಮುಖ್ಯ ಚುನಾವಣಾ ಕಮೀಷನರ್ ಅವರನ್ನು ಆಗ್ರಹಿಸಿದ್ದರು.ಈ ಮಧ್ಯೆ, ಕಾಂಗ್ರೆಸ್ ನಾಯಕ ಕಮಲನಾಥ್ ಅವರು ಛಿಂದ್ವಾರದಲ್ಲಿ ಮತದಾನದ ಬಳಿಕ ಮತಗಟ್ಟೆಯ ಬಳಿಯಲ್ಲೇ ಕಾಂಗ್ರೆಸ್ ಪಕ್ಷದ ಲಾಂಛನವಾದ ’ಕೈ’ಯನ್ನು ತೋರಿಸುವ ಮೂಲಕ ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಭಾರತೀಯ ಜನತಾ ಪಕ್ಷವು (ಬಿಜೆಪಿ) ಚುನಾವಣಾ ಆಯೋಗಕ್ಕೆ (ಇಸಿ) ದೂರು ನೀಡಿದೆ.ಮಧ್ಯಪ್ರದೇಶದ ೨೩೦ ಸದಸ್ಯಬಲದ ವಿಧಾನಸಭೆಗೆ ಬುಧವಾರ ನಡೆದ ಚುನಾವಣೆಗಾಗಿ ನೇರ ಹಣಾಹಣಿಗೆ ಇಳಿದ ಬಿಜೆಪಿ ಮತ್ತು ಕಾಂಗ್ರೆಸ್ ತುರುಸಿನ ಪ್ರಚಾರ ನಡೆಸಿದ್ದವು.ಬಿಜೆಪಿಯ ಸತತ ನಾಲ್ಕನೇ ಅವಧಿಗೆ ಗೆಲುವು ಸಾಧಿಸುವತ್ತ ದೃಷ್ಟಿ ನೆಟ್ಟಿದ್ದರೆ, ಕಾಂಗ್ರೆಸ್ ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸಿದ ೧೫ ವರ್ಷಗಳ ಬಳಿಕ ಅಧಿಕಾರಕ್ಕೆ ಮರಳುವ ಆಶಯ ಹೊಂದಿದೆ. ೨೨೭ ಕ್ಷೇತ್ರಗಳಲ್ಲಿ ಬೆಳಗ್ಗೆ ೮ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ಮತದಾನ ನಡೆದರೆ, ಮಾವೋವಾದಿ ಹಾವಳಿಗೆ ತುತ್ತಾಗಿರುವ ಬಲಘಾಟ್ ಜಿಲ್ಲೆಯ ಲಾನ್ಜಿ, ಪಾರಸ್ವಾಡ ಮತ್ತು ಬೈಹರ್ ವಿಧಾನಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ ೭ ಗಂಟೆಯಿಂದ ಸಂಜೆ ೩ ಗಂಟೆಯವರೆಗೆ ಮತದಾನ ನಡೆಯಿತು. ರಾಜ್ಯದಲ್ಲಿ ಶಾಂತಿಯುತ ಮತದಾನಕ್ಕಾಗಿ ೧.೮೦ ಲಕ್ಷಕ್ಕೂ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ೨,೪೧,೩೦,೩೯೦ ಮಹಿಳೆಯರು ಮತ್ತು ೧,೩೮೯ ತೃತೀಯ ಲಿಂಗಿಗಳು ಸೇರಿದಂತೆ ೫೦ ಮಿಲಿಯನ್ (೫ ಕೋಟಿ) ಮತದಾರರರಿದ್ದರು. ಬಿಜೆಪಿಯು ೨೩೦ ಸ್ಥಾನಗಳಿಗೆ ಸ್ಪರ್ಧಿಸಿದ್ದರೆ ಕಾಂಗ್ರೆಸ್ ೨೨೯ ಸ್ಥಾನಗಳಿಗೆ ಸ್ಪರ್ಧಿಸಿತ್ತು. ಟಿಕಾಮಗಢ ಜಿಲ್ಲೆಯ ಜಟಾರ ಸ್ಥಾನವನ್ನು ಶರದ್ ಯಾದವ್ ನೇತೃತ್ವದ ಲೋಕತಾಂತ್ರಿಕ ಜನತಾದಳಕ್ಕೆ (ಎಲ್ ಜೆಡಿ) ಬಿಟ್ಟುಕೊಟ್ಟಿತ್ತು. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಬುಧವಾರ ಬೆಳಗ್ಗೆ ಟ್ವೀಟ್ ಮಾಡಿ ಹೆಚ್ಚಿನ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಮಧ್ಯಪ್ರದೇಶ ಮತ್ತು ಮಿಜೋರಾಂ ಜನರನ್ನು ಆಗ್ರಹಿಸಿದ್ದರು. ’ಬದಲಾವಣೆಯ ಸಮಯ ಬಂದಿದೆ. ಮತದಾರರ ಸಮೃದ್ಧಿ ಮತ್ತು ಪ್ರಗತಿಗಾಗಿ ಮತದಾನ ಮಾಡಬೇಕು’ ಎಂದು ಮಿಜೋರಾಂ ಮತ್ತು ಮಧ್ಯಪ್ರದೇಶದ ಮತದಾರರಿಗೆ ಪ್ರತ್ಯೇಕ ಟ್ವೀಟ್ ಗಳ ಮೂಲಕವರು ಕೋರಿದ್ದರು. ’ವೋಟು ಪ್ರಜಾಪ್ರಭುತ್ವದ ದೊಡ್ಡ ಶಕ್ತಿ. ಈದಿನ ನಿಮ್ಮ ಮತವನ್ನು ಚಲಾಯಿಸಿ, ಏಕೆಂದರೆ ಇದು ಬದಲಾವಣೆಯ ಸಮಯ’ ಎಂದು ರಾಹುಲ್ ಟ್ವೀಟ್ ಮಾಡಿದ್ದರು. ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ಬಿಜೆಪಿಯ ನಾಲ್ಕನೇ ಅವಧಿಗೆ ಗೆಲ್ಲುವ ನಿರೀಕ್ಷೆಯಲ್ಲಿದ್ದರೆ, ಕಾಂಗ್ರೆಸ್ ಆಡಳಿತ ವಿರೋಧಿ ಅಲೆಯನ್ನು ನೆಚ್ಚಿಕೊಂಡು ಗೆಲ್ಲಲು ಹವಣಿಸಿತ್ತು. ಮಿಜೋರಾಂನಲ್ಲಿ ೧೯೮೭ರಲ್ಲಿ ರಚನೆಯಾದಂದಿನಿಂದಲೂ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷದ ಕೈಯಿಂದ ಅಧಿಕಾರವನ್ನು ಕಿತ್ತುಕೊಳ್ಳಲು ಬಿಜೆಪಿಯ ಯತ್ನಿಸಿತ್ತು. ೪೦ ಸದಸ್ಯಬಲದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ೨೦೯ ಅಭ್ಯರ್ಥಿಗಳ ಹಣೆ ಬರಹ ನಿರ್ಧಾರವಾಗಲಿದೆ. ರಾಜ್ಯದಲ್ಲಿ ಬಿಜೆಪಿಯು ೩೯ ಸ್ಥಾನಗಳಿಗೆ ಸ್ಪರ್ಧಿಸಿತ್ತು.
2018: ಶ್ರೀನಗರ: ಕಾಶ್ಮೀರದ ಹಿರಿಯ ಪತ್ರಕರ್ತ, ‘ರೈಸಿಂಗ್ ಕಾಶ್ಮೀರ’ ಸಂಪಾದಕ ಶುಜಾತ್ ಬುಖಾರಿ ಕೊಲೆ ಆರೋಪಿ, ನವೀದ್ ಜಟ್ಟ್ ಸೇರಿದಂತೆ ಲಷ್ಕರ್-ಇ-ತೊಯ್ಬಾ (ಎಲ್ಇಟಿ) ಭಯೋತ್ಪಾದಕ ಸಂಘಟನೆಯ ಇಬ್ಬರು ಭಯೋತ್ಪಾದಕರು ಕಾಶ್ಮೀರದ ಬಡಗಮ್ ಜಿಲ್ಲೆಯಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಘರ್ಷಣೆಯಲ್ಲಿ ಹತರಾದರು. ಬುಕಾರಿ ಅವರು ಹಿರಿಯ ಪತ್ರಕರ್ತ ಮತ್ತು ‘ರೈಸಿಂಗ್ ಕಾಶ್ಮೀರ’ ಪತ್ರಿಕೆಯ ಸಂಪಾದಕರಾಗಿದ್ದು, ಈ ವರ್ಷದ ಜೂನ್ ತಿಂಗಳಲ್ಲಿ ಶ್ರೀನಗರದ ಹೃದಯ ಭಾಗದಲ್ಲಿರುವ ತಮ್ಮ ಪತ್ರಿಕಾ ಕಚೇರಿಯ ಹೊರಭಾಗದಲ್ಲಿ ಭಯೋತ್ಪಾದಕರ ಗುಂಡಿನ ದಾಳಿಗೆ ಬಲಿಯಾಗಿದ್ದರು. ಈದಿನ ಬೆಳಗ್ಗೆ ಪ್ರದೇಶದಲ್ಲಿ ಉಗ್ರಗಾಮಿಗಳು ಅಡಗಿರುವ ಬಗ್ಗೆ ಲಭಿಸಿದ ಮಾಹಿತಿಯನ್ನು ಅನುಸರಿಸಿ ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗ ಉಗ್ರಗಾಮಿಗಳು ಗುಂಡಿನ ದಾಳಿ ಆರಂಭಿಸಿದರು. ಭದ್ರತಾ ಪಡೆಗಳೂ ಪ್ರತಿಗುಂಡು ಹಾರಿಸಿದವು. ತೀವ್ರ ಗುಂಡಿನ ಚಕಮಕಿಯ ಬಳಿ ಇಬ್ಬರೂ ಉಗ್ರಗಾಮಿಗಳು ಹತರಾದರು ಎಂದು ಸುದ್ದಿಮೂಲಗಳು ತಿಳಿಸಿದವು. ಮುನ್ನೆಚ್ಚರಿಕೆಯ ಕ್ರಮವಾಗಿ ಬಡಗಮ್ ಜಿಲ್ಲೆಯಲ್ಲಿ ಅಂತರ್ಜಾಲ ಸೇವೆಗಳನ್ನು ಸ್ಥಗಿತಗೊಳಿಸಲಾಯಿತು ಎಂದು ಮೂಲಗಳು ಹೇಳಿದವು. ಆಸ್ಪತ್ರೆಯಿಂದ ಪರಾರಿಯಾಗಿದ್ದ: ಪಾಕಿಸ್ತಾನದ ಮೂಲದ ಎಲ್ಇಟಿ ಸದಸ್ಯನಾಗಿದ್ದ ಉಗ್ರಗಾಮಿ ನವೀದ್ ಜಟ್ಟ್ ೨೦೧೮ರ
ಫೆಬ್ರುವರಿ ೬ರಂದು ಶ್ರೀನಗರದ ಕೇಂದ್ರೀಯ ಸೆರೆಮನೆಯಿಂದ ಚಿಕಿತ್ಸೆಗಾಗಿ ನಗರದ ಶ್ರೀ ಮಹಾರಾಜಾ ಹರಿ ಸಿಂಗ್ ಆಸ್ಪತ್ರೆಗೆ ಕರೆತಂದಿದ್ದಾಗ ತಪ್ಪಿಸಿಕೊಂಡಿದ್ದ. ಬಳಿಕ ಆತ ದಕ್ಷಿಣ ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದ ಮತ್ತು ೨೦೧೩-೨೦೧೪ರ ಅವಧಿಯಲ್ಲಿ ಹಲವಾರು ಭಯೋತ್ಪಾದಕ ದಾಳಿಗಳಲ್ಲಿ ಪಾಲ್ಗೊಂಡಿದ್ದ.ಪಂಜಾಬಿನ ಮುಲ್ತಾನಿನ ಟ್ರಕ್ ಚಾಲಕನೊಬ್ಬನ ಮಗನಾದ ಜಟ್ಟ್ ದಕ್ಷಿಣ ಕಾಶ್ಮೀರದ ಅನಂತನಾಗ್, ಪುಲ್ವಾಮಾ ಮತ್ತು ಶೋಪಿಯಾನ್ ಜಿಲ್ಲೆಗಳಲ್ಲಿ ಸಕ್ರಿಯನಾಗಿದ್ದ. ಪೊಲೀಸ್ ದಾಖಲೆಗಳ ಪ್ರಕಾರ, ಅನಂತನಾಗ್ ಜಿಲ್ಲೆಯ ಸೆಂಪೋರಾ ಬಿಜ್ ಬೆಹರಾದಲ್ಲಿ ೨೦೧೪ ರ ಸೆಪ್ಟೆಂಬರ್ ೧೯ ರಂದು ನವೀದ್ ಜಟ್ಟ್ನನ್ನು ಬಂಧಿಸಲಾಗಿತ್ತು. ಕೊಲೆ ಮತ್ತು ಕೊಲೆಯತ್ನ ಆರೋಪದ ಪ್ರಕರಣಗಳಲ್ಲಿ ಆತನನ್ನು
ಶ್ರೀನಗರ ರೈನಾವರಿ ಸೆರೆಮನೆಯಲ್ಲಿ ಬಂಧಿಸಿ ಇಡಲಾಗಿತ್ತು. ರಾಜ್ಯದ ಅನೇಕ ಭಯೋತ್ಪಾದನಾ ದಾಳಿ ಕೃತ್ಯಗಳಿಗೆ ಸಂಬಂಧಿಸಿದಂತೆ ಜಟ್ಟ್ ಪೊಲೀಸರಿಗೆ ಬೇಕಾಗಿದ್ದ. ಅಬು ಹಂಜುಲ್ಲ ಎಂಬುದಾಗಿಯೂ ಕರೆಯಲ್ಪಡುತ್ತಿದ್ದ ಜಟ್ಟ್, ದಾಳಿಯೊಂದರಲ್ಲಿ ಇಬ್ಬರು ಪೊಲೀಸರನ್ನು ಮತ್ತು ಅಸಿಸ್ಟೆಂಟ್ ಸಬ್ ಇನ್ ಸ್ಪೆಕ್ಟರನನ್ನು ಕೊಂದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಲ್ತಾನ್ ನಿವಾಸಿಯಾಗಿದ್ದ ಆತ ಇನ್ನೊಂದು ದಾಳಿಯಲ್ಲಿ ಐವರು ಪೊಲೀಸರು ಮತ್ತು ಇಬ್ಬರು ನಾಗರಿಕರನ್ನು ಗಂಭೀರವಾಗಿ ಗಾಯಗೊಳಿಸಿದ್ದ. ಈದಿನದ ಗುಂಡಿನ ಘರ್ಷಣೆಯ ಸಂದರ್ಭದಲ್ಲಿ ಪ್ರತಿಭಟನಕಾರರು ಭದ್ರತಾ ಪಡೆ ಕಾರ್ಯಾಚರಣೆಯನ್ನು ವಿರೋಧಿಸಿ ಘರ್ಷಣೆಗೆ ಇಳಿದಾಗ ಮೂವರು ಗಾಯಗೊಂಡಿದ್ದಾರೆ. ಒಬ್ಬ ಗಾಯಾಳುವನ್ನು ಶ್ರೀನಗರ ಆಸ್ಪತೆಗೆ ಸ್ಥಳಾಂತರಿಸಲಾಯಿತು. ಶುಜಾತ್ ಬುಖಾರಿ ಅವರನ್ನು ಹತ್ಯೆಯಲ್ಲಿ ಶಾಮೀಲಾಗಿದ್ದ ದಕ್ಷಿಣ ಕಾಶ್ಮೀರ ಖಾಜಿಗುಂಡ್ ಪ್ರದೇಶದ ಮುಜಾಫ್ಫರ್ ಅಹ್ಮದ್ ಯಾನೆ ತಲ್ಹಾ, ಬಿಜ್ ಬೆಹರಾದ ಆಜಾದ್ ಅಹ್ಮದ್ ಮಲಿಕ್ ಯಾನೆ ದಾದಾ ಯಾನೆ ಜೈದ್ ಮತ್ತು ಜಟ್ಟ್ ಯಾನೆ ಹಂಜುಲ್ಲಾ ಅವರು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದ್ದರು.ಏನಿದ್ದರೂ ಇದನ್ನು ಸಾಬೀತು ಪಡಿಸಲು ತಾವು ಇತರ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಿರುವುದಾಗಿ ಪೊಲೀಸರು ಹೇಳಿದರು. ಪ್ರಕರಣದ ಇನ್ನೊಬ್ಬ ಶಂಕಿತ ಆರೋಪಿ ದಾದಾ ಅನಂತನಾಗ್ ಜಿಲ್ಲೆಯ ಬಿಜ್ ಬೆಹರಾದಲ್ಲಿ ನವೆಂಬರ್ ೨೩ರಂದು ನಡೆದ ಕಾರ್ಯಾಚರಣೆಯಲ್ಲಿ ಹತನಾಗಿದ್ದ.
2018: ನವದೆಹಲಿ: ೧೯೮೪ರಂದು ನಡೆದ ಸಿಖ್ ಹಿಂಸಾ ಚಾರ ಪ್ರಕರಣ ಸಂಬಂಧ ೮೦ಕ್ಕೂ ಹೆಚ್ಚು ಮಂದಿಯ ಜೈಲು ಶಿಕ್ಷೆಯನ್ನು ಎತ್ತಿಹಿಡಿದ ದೆಹಲಿ ಹೈಕೋರ್ಟ್ ೨೨ ವರ್ಷಗಳ ನಂತರ ಗಲಭೆಯಲ್ಲಿ ಅವರೆಲ್ಲಾ ಭಾಗಿದಾರರು ಎಂದು ಹೇಳಿ, ಅರ್ಜಿ ವಜಾ ಮಾಡಿತು. ೧೯೮೪ರಲ್ಲಿ ಪೂರ್ವ ದಿಲ್ಲಿಯ ತ್ರಿಲೋಕಪುರಿ ಪ್ರದೇಶದಲ್ಲಿ ನಡೆದಿದ್ದ ಸಿಖ್ ವಿರೋಧಿ ದೊಂಬಿ ಯಲ್ಲಿ ೮೮ ಮಂದಿ ದೋಷಿಗಳೆಂದು ಹೇಳಿದ್ದ ವಿಚಾರಣಾ ನ್ಯಾಯಾಲಯದ ತೀರ್ಪನ್ನು ಹೈಕೋರ್ಟ್ ಎತ್ತಿ ಹಿಡಿಯಿತು. ೧೯೮೪ರ ಸಿಖ್ ವಿರೋಧಿದೊಂಬಿಯಲ್ಲಿ ಕನಿಷ್ಠ ೨,೮೦೦ ಮಂದಿ ಸಿಕ್ಖರು ಹತರಾಗಿದ್ದು ಅವರಲ್ಲಿ ೨,೧೦೦ ಮಂದಿ ದೆಹಲಿಯವರೇ ಆಗಿದ್ದರು. ಸಿಖ್ ವಿರೋಧಿ ದೊಂಬಿ ಪ್ರಕರಣದಲ್ಲಿ ಅಪರಾಧಿಗಳೆಂದು ಪರಿಗಣಿಸಿದ್ದ ದಿಲ್ಲಿ ವಿಚಾರಣಾ ನ್ಯಾಯಾಲಯ ಕಳೆದ ನವೆಂಬರ್ ೨೦ರಂದು ಯಶ್ಪಾಲ್ ಸಿಂಗ್ ಗೆ ಮರಣ ದಂಡನೆ ಮತ್ತು ಇನ್ನೋರ್ವ ಅಪರಾಧಿ ನರೇಶ್ ಶೇರಾವತ್ ಗೆ ಜೀವಾವಧಿ ಜೈಲು ಶಿಕ್ಷೆಯನ್ನು ಪ್ರಕಟಿಸಿತ್ತು. ಇವರು ಸಿಖ್ ಸಮುದಾಯದ ಇಬ್ಬರು ವ್ಯಕ್ತಿಗಳನ್ನು ಕೊಂದಿದ್ದರು.ಪೂರ್ವ ದೆಹಲಿಯ ತ್ರಿಲೋಕ್ ಪುರಿ ನಗರದಲ್ಲಿ ೧೯೮೪ರಂದು ಹಿಂಸಾಚಾರ ನಡೆಸಿದ್ದ ಆರೋಪದ ಮೇಲೆ ೧೦೭ ಮಂದಿಯನ್ನು ಬಂಧಿಸಲಾಗಿತ್ತು. ಅವರಲ್ಲಿ ೮೮ ಮಂದಿಯ ವಿರುದ್ಧ ೧೯೯೬ ಆಗಸ್ಟ್ ೨೭ರಂದು ಸೆ?ನ್ಸ್ ನ್ಯಾಯಾಲಯ ತೀರ್ಪು ನೀಡಿತ್ತು. ಈ ಆದೇಶ ಪ್ರಶ್ನಿಸಿ, ಅಪರಾಧಿಗಳು ದೆಹಲಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.೧೯೮೪ ಆಕ್ಟೋಬರ್ ೩೧ರಂದು ಪ್ರಧಾನಮಂತ್ರಿ ಇಂದಿರಾ ಗಾಂಧಿ ಅವರ ಹತ್ಯೆಯಾದ ನಂತರದ ಕೆಲವು ದಿನಗಳಲ್ಲಿ ಹಿಂಸಾಚಾರ ಭುಗಿಲೆದ್ದು, ರಾ? ರಾಜಧಾನಿಯಲ್ಲಿ ಸಿಖ್‌ರನ್ನು ಹತ್ಯೆಗೈಯ್ಯಲಾಯಿತು. ಎಫ್‌ಐಆರ್ ಪ್ರಕಾರ, ತ್ರಿಲೋಕ್ಪುರಿ ಸುತ್ತಮುತ್ತ ನಡೆದ ಹಿಂಸಾಚಾರದಲ್ಲಿ ೯೫ ಮಂದಿಯನ್ನು ಕೊಂದು, ೧೦೦ ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಲಾಗಿತ್ತು ಎಂದು ಗಲಭೆಯ ಸಂತ್ರಸ್ಥರ ಪರವಾಗಿ ವಾದಿಸಿದ್ದ ಹಿರಿಯವಕೀಲ ಎಚ್.ಎಸ್.ಪೋಲ್ಕಾ ಅವರು ಹೇಳಿದರು.ಕೋರ್ಟ್ ಆದೇಶದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಕೀಲ ಪೋಲ್ಕಾ, ಶಿಕ್ಷೆಯ ಪ್ರಮಾಣ ಅ? ಇದೆ. ಅವರೆಲ್ಲ ಶಿಕ್ಷೆ ಅನುಭವಿಸಲೇಬೇಕು. ಅವರು ನ್ಯಾಯಾಲಯದ ಮುಂದೆ ಶರಣಾಗಲೇಬೇಕು ಎಂದು ಹೇಳಿದ್ದಾರೆ.ತ್ರಿಲೋಕ್ಪುರಿ ಪ್ರಕರಣದ ಸಂಬಂಧ ದಾಖಲಾದ ಎಫ್ಐಆರ್ ಪ್ರಕಾರ, ’ದೆಹಲಿ ಗಲಭೆಯಲ್ಲಿ ೯೫ ಮಂದಿ ಮೃತಪಟ್ಟಿದ್ದು, ಸುಮಾರು ೧೦೦ ಮನೆಗಳು ಬೆಂಕಿಗೆ ಆಹುತಿಯಾಗಿವೆ’ ಎಂದು ಗಲಭೆಯ ಸಂತ್ರಸ್ತರ ಪರ ಹಿರಿಯ ವಕೀಲರಾದ ಎಚ್.ಎಸ್. ಫೂಲ್ಕ ತಿಳಿಸಿದರು.
ಸರ್ಕಾರಿ ಅಂಕಿ-ಅಂಶಗಳ ಪ್ರಕಾರ ಸಿಖ್ ವಿರೋಧಿ ಗಲಭೆಯಲ್ಲಿ ಮೃತಪಟ್ಟವರ ಸಂಖ್ಯೆ ೩,೩೨೫. ಈ ಪೈಕಿ ದೆಹಲಿಯಲ್ಲಿ ನಡೆದ ಗಲಭೆಗಳಲ್ಲಿ ೨,೭೩೩ ಮಂದಿ ಮೃತಪಟ್ಟಿದ್ದಾರೆ. ಸಿಖ್ ಹೋರಾಟಗಾರರ ಪ್ರಕಾರ ಗಲಭೆಗೆ ಬಲಿಯಾದವರ ಸಂಖ್ಯೆ ೧೦ ಸಾವಿರಕ್ಕಿಂತಲೂ ಹೆಚ್ಚು ಎಂದರು.ಅಪರಾಧಿಗಳೆಂದು ಘೋಷಣೆಯಾದ ೮೮ ಮಂದಿಯ ಪೈಕಿ ಈಗ ೪೭ ಜನ ಮಾತ್ರ ಬದುಕಿದ್ದು, ಅವರು ಶೀಘ್ರ ನ್ಯಾಯಾಲಯಕ್ಕೆ ಶರಣಾಗಬೇಕು ಎಂದು ಕೋರ್ಟ್ ಸೂಚಿಸಿತು. ’ಶಿಕ್ಷೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಹಾಗಾಗಿ ಅವರು ಶರಣಾಗಲೇ ಬೇಕು’ ಎಂದು ವಕೀಲರು ಹೇಳಿದರು.
2018: ಬೆಂಗಳೂರು: ರೆಬಲ್ ಸ್ಟಾರ್ ಅಂಬರೀಶ್ ಅವರ ಅಸ್ಥಿಯನ್ನು ಶ್ರೀರಂಗಪಟ್ಟಣದಲ್ಲಿರುವ ಕಾವೇರಿ ಸಂಗಮದಲ್ಲಿ ವಿಸರ್ಜನೆ ಮಾಡಲಾಯಿತು. ಮೂರು ಮಡಕೆಗಳಲ್ಲಿದ್ದ ಅಸ್ಥಿಯನ್ನು ಶಾಸ್ತ್ರೋಕ್ತವಾಗಿ ಪುತ್ರ ಅಭಿಷೇಕ್ ವಿಸರ್ಜನೆ ಮಾಡಿದರು.ಅಂಬಿ ಪತ್ನಿ ಸುಮಲತಾ, ಪುತ್ರ ಅಭಿಷೇಕ್, ನಟ ದರ್ಶನ್, ರಾಕ್ಲೈನ್ ವೆಂಕಟೇಶ್ ಸೇರಿ ದಂತೆ ಹಲವು ಗಣ್ಯರು ಅಸ್ಥಿ ವಿಸರ್ಜನೆಯಲ್ಲಿ ಭಾಗಿಯಾಗಿದ್ದರು. ಹಿಮ್ಮುಖವಾಗಿ ನಿಂತು ಅಂಬರೀಶ್ ಪುತ್ರ ಅಭಿಷೇಕ್ ಅಸ್ಥಿ ವಿಸರ್ಜನೆ ಮಾಡಿದರು. ನಂತರ ತೆಪ್ಪದಲ್ಲಿ ತೆರಳಿ ಚಿತಾಭಸ್ಮ ವಿಸರ್ಜನೆ ಮಾಡಲಾಯಿತು.
2018: ಬೆಂಗಳೂರು: ಸುಪ್ರೀಂಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕನ್ನಡಿಗ ಹೆಚ್.ಎಲ್ ದತ್ತು, ಕಾಂಗ್ರೆಸ್ ಹಿರಿಯ ನಾಯಕಿ ಹಾಗೂ ಮಾಜಿ ರಾಜ್ಯ ಪಾಲರಾದ ಮಾರ್ಗರೇಟ್ ಆಳ್ವ , ಚಿತ್ರನಟ ಜೈ ಜಗದೀಶ್ ಸೇರಿದಂತೆ ಪ್ರಸಕ್ತ ಸಾಲಿನಲ್ಲಿ ೬೩ ಸಾಧಕ ರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿತು. ಉಪಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮುಂದೂಡಲಾಗಿದ್ದ ೨೦೧೮ನೇ ಸಾಲಿನ ಕನ್ನಡ ರಾಜ್ಯೋತ್ಸವ ರಾಜ್ಯ ಪ್ರಶಸ್ತಿಯನ್ನು ೬೩ ಸಾಧಕರಿಗೆ ಕನ್ನಡ & ಸಂಸ್ಕೃತಿ ಇಲಾಖೆ ಘೋಷಿಸಿ ಬುಧವಾರ ಪಟ್ಟಿ ಬಿಡುಗಡೆ ಮಾಡಿದೆ. ಈ ಹಿಂದೆಯೇ ಆಯ್ಕೆ ಪ್ರಕ್ರಿಯೆಯನ್ನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪೂರ್ಣಗೊಳಿಸಿತ್ತು. ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ೬೩ ಸಾಧಕರ ಪಟ್ಟಿಯನ್ನು ಪ್ರಕಟಿಸಿತು.
2018: ನವದೆಹಲಿ: ಪಾಕಿಸ್ತಾನದಲ್ಲಿ ನಡೆಯಲಿರುವ ಸಾರ್ಕ್ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸುವ ಸಾಧ್ಯತೆಯನ್ನು ಭಾರತ ತಳ್ಳಿ ಹಾಕಿತು. ಸಾರ್ಕ್ ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುವುದು ಎಂಬ ಪಾಕ್ ವಿದೇಶಾಂಗ ಸಚಿವಾಲಯದ ಹೇಳಿಕೆಯನ್ನು ಭಾರತ ತಿರಸ್ಕರಿಸಿದ್ದು, ಅದು ಕೇವಲ ’ತೋರಿಕೆಯ ನಡೆ’ ಎಂದು ಬಣ್ಣಿಸಿತು. ಸಾರ್ಕ್ ಶೃಂಗಸಭೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಲಾಗುವುದು ಎಂದು ಅಲ್ಲಿನ ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್ ಫೈಸಲ್ ಹೇಳಿದ್ದರು.
2017: ನವದೆಹಲಿ: ವಿದೇಶದಲ್ಲಿ ’ಪದ್ಮಾವತಿ’ ಬಿಡುಗಡೆಗೆ ತಡೆ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಮಂಗಳವಾರ ವಜಾಗೊಳಿಸಿತು. ಜೊತೆಗೇ, ಉನ್ನತ ಸ್ಥಾನಗಳಲ್ಲಿ ಇರುವವರು ಚಿತ್ರದ ವಿರುದ್ಧ ನೀಡುತ್ತಿರುವ ಹೇಳಿಕೆಗಳಿಗೆ ಕೋರ್ಟ್ ಪ್ರಬಲ ಆಕ್ಷೇಪ ವ್ಯಕ್ತ ಪಡಿಸಿತು. ಉನ್ನತ ಸ್ಥಾನಗಳಲ್ಲಿ ಇರುವವರು ನೀಡುವ ಹೇಳಿಕೆಗಳು ಸೆನ್ಸಾರ್ ಮಂಡಳಿಯಿಂದ ಇನ್ನೂ ಪ್ರಮಾಣ ಪತ್ರ ನೀಡಬೇಕಾಗಿರುವ ಸಿನಿಮಾ ಬಗ್ಗೆ ಪೂರ್ವ ತೀರ್ಮಾನಕ್ಕೆ ಸಮವಾಗುತ್ತದೆ ಎಂದು ನ್ಯಾಯಾಲಯ ಹೇಳಿತು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ಪೀಠವು, ವಿದೇಶಗಳಲ್ಲಿ ಚಲನಚಿತ್ರವನ್ನು ಬಿಡುಗಡೆ ಮಾಡದಂತೆ ನಿರ್ಮಾಪಕರ ಮೇಲೆ ನಿಯಂತ್ರಣ ಹೇರಿ ಆದೇಶ ನೀಡುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿತು. ‘ನಾವು ನಿಯಮಾವಳಿಗಳಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ (ಸಿಬಿಎಫ್ ಸಿ) ಮುಂದೆ ಪ್ರಮಾಣಪತ್ರಕ್ಕಾಗಿ ಸಲ್ಲಿಸಿರುವ ಅರ್ಜಿ ಇನ್ನೂ ಇತ್ಯರ್ಥವಾಗದೇ ಇರುವಾಗ, ಜವಾಬ್ದಾರಿಯುತ ಸ್ಥಾನ ಹೊಂದಿರುವ ಯಾರೇ ವ್ಯಕ್ತಿ ಅದರ ಬಗ್ಗೆ ಯಾವುದೇ ಹೇಳಿಕೆ ನೀಡಬಾರದು, ಹಾಗೆ ನೀಡಿದರೆ ಅದು ಕಾನೂನಿನ ಆಡಳಿತ ತತ್ವದ ಉಲ್ಲಂಘನೆಯಾಗುತ್ತದೆ’ ಎಂದು ಪೀಠ ಹೇಳಿತು. ಸಿನಿಮಾಟೋಗ್ರಫಿ ಕಾಯ್ದೆಯ ಉಲ್ಲಂಘನೆ ಮತ್ತು ಮಾನಹಾನಿ ಸೇರಿದಂತೆ ವಿವಿಧ ಅಪರಾಧಗಳಿಗಾಗಿ ಚಿತ್ರ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸುವಂತೆ ಸಿಬಿಐಗೆ ನಿರ್ದೇಶನ ನೀಡುವಂತೆ ಕೋರಿ ವಕೀಲ ಎಂ ಎಲ್ ಶರ್ಮಾ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಎಎಂ ಖಾನ್ವಿಲ್ಕರ್ ಮತ್ತು ಡಿವೈ ಚಂದ್ರಚೂಡ್ ಅವರನ್ನೂ ಒಳಗೊಂಡಿರುವ ಪೀಠವು ಶರ್ಮಾ ಅವರು ಮಾಡಿರುವ ಕೋರಿಕೆ ತಪ್ಪು ಗ್ರಹಿಕೆಯದ್ದಾಗಿದೆ’ ಎಂದು ಬಣ್ಣಿಸಿತು. ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ (ಸಿಬಿಎಫ್ ಸಿ) ಇನ್ನೂ ಪ್ರಮಾಣಪತ್ರವನ್ನೇ ನೀಡದಿರುವ ಚಿತ್ರದ ಬಗ್ಗೆ ನ್ಯಾಯಾಲಯ ಪೂರ್ವ ತೀರ್ಮಾನ ನೀಡಲು ಮಾಡಲು ಸಾಧ್ಯವಿಲ್ಲ ಎಂದು ಅದು ಹೇಳಿತು. ಸುಪ್ರೀಂಕೋರ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಕೀಲರೆಂಬಕಾರಣಕ್ಕೆ ಶರ್ಮಾ ಅವರ ವಿರುದ್ಧ ತಾನು ವೆಚ್ಚ ವಿಧಿಸುವುದಿಲ್ಲ ಎಂದೂ ಪೀಠ ಹೇಳಿತು.
2017:
ನವದೆಹಲಿ: ಮುಂಬೈ ಮೇಲಿನ ೨೬/೧೧ರ
ದಾಳಿಗಳ ಸಂಚುಕೋರ ಹಫೀಜ್ ಸಯೀದ್ ವಿಶ್ವಸಂಸ್ಥೆಗೆ ಅರ್ಜಿಯೊಂದನ್ನು ಸಲ್ಲಿಸಿ ತನ್ನ ಹೆಸರನ್ನು
ವಿಶ್ವಸಂಸ್ಥೆಯ ಭಯೋತ್ಪಾದಕ ಪಟ್ಟಿಯಿಂದ ಕಿತ್ತು ಹಾಕುವಂತೆ
ಮನವಿ ಮಾಡಿದ್ದಾನೆ. ಲಷ್ಕರ್-ಇ-ತೊಯ್ಬಾ ಸಂಸ್ಥಾಪಕನಾಗಿರುವ ಸಯೀದ್, ಲಾಹೋರ್
ಮೂಲದ ಕಾನೂನು ಸಂಸ್ಥೆಯೊಂದರ ಮೂಲಕ ತಾನು ಗೃಹ ಬಂಧನದಲ್ಲಿ ಇದ್ದಾಗಲೇ ಈ ಅರ್ಜಿಯನ್ನು ವಿಶ್ವಸಂಸ್ಥೆಗೆ
ಕಳುಹಿಸಿದ್ದ ಎಂದು ಮೂಲಗಳು ತಿಳಿಸಿದವು. ಭಯೋತ್ಪಾದಕ
ಚಟುವಟಿಕೆಗಳಿಗಾಗಿ ಅಮೆರಿಕವು ಜೆಯುಡಿ ಮುಖ್ಯಸ್ಥನ
ತಲೆಗೆ ೧೦ ದಶಲಕ್ಷ ಡಾಲರ್ ಬಹುಮಾನವನ್ನು ಘೋಷಿಸಿತ್ತು. ಪಾಕಿಸ್ತಾನದ ನ್ಯಾಯಾಂಗ ಪರಾಮರ್ಶೆ ಮಂಡಳಿಯು
ಈತನನ್ನು ಸೂಕ್ತ ಸಾಕ್ಷ್ಯಾಧಾರಗಳು ಇಲ್ಲ ಎಂಬ ನೆಲೆಯಲ್ಲಿ
ಬಿಡುಗಡೆ ಮಾಡಿತ್ತು. ಈ ವರ್ಷ ಜನವರಿಯಿಂದ ಸಯೀದ್ ಗೃಹ ಬಂಧನದಲ್ಲಿ ಇದ್ದ. ಮುಂಬೈ ದಾಳಿಗಳ ಸಂಚುಕೋರ
ಹಫೀದ್ ಸಯೀದ್ ನನ್ನು ಬಂಧಿಸಲು ಪಾಕಿಸ್ತಾನ ಕ್ರಮ ಕೈಗೊಳ್ಳದೇ ಹೋದರೆ ಅಮೆರಿಕ- ಪಾಕಿಸ್ತಾನ ಬಾಂಧವ್ಯಗಳ
ಮೇಲೆ ದುಷ್ಪರಿಣಾಮಗಳಾಗುವ ಸಾಧ್ಯತೆಗಳಿವೆ ಎಂದು ಶ್ವೇತಭವನ ಶನಿವಾರ ಎಚ್ಚರಿಕೆ ನೀಡಿದೆ. ‘ಸಾಕ್ಷ್ಯಾಧಾರ
ಹಾಜರು ಪಡಿಸಲು ಪಾಕಿಸ್ತಾನ ಸರ್ಕಾರ ವಿಫಲಗೊಂಡ ಬಳಿಕ ಹಫೀಜ್ ಸಯೀದನ ಬಿಡುಗಡೆಯಾಗಿರುವುದು , ಅಂತಾರಾಷ್ಟ್ರೀಯ
ಭಯೋತ್ಪಾದನೆ ನಿಗ್ರಹ ವಿಚಾರದಲ್ಲಿ ಪಾಕಿಸ್ತಾನದ ಬದ್ಧತೆ ಬಗ್ಗೆ ಅನುಮಾನಾಸ್ಪದ ಸಂದೇಶವನ್ನು ನೀಡಿದೆ.
ಜೊತೆಗೇ ಪಾಕಿಸ್ತಾನವು ತನ್ನ ನೆಲದಲ್ಲಿ ಭಯೋತ್ಪಾದಕರಿಗೆ ಆಶ್ರಯ ಕಲ್ಪಿಸುವುದಿಲ್ಲ ಎಂಬಪ್ರತಿಪಾದನೆಯು
ಸುಳ್ಳು ಎಂಬುದನ್ನು ಸಾಬೀತುಪಡಿಸಿದೆ ಎಂದು ಶ್ವೇತಭವನ ತನ್ನ ಹೇಳಿಕೆಯಲ್ಲಿ ತಿಳಿಸಿತ್ತು. ಸಯೀದ್
ಬಂಧನಕ್ಕೆ ಪಾಕಿಸ್ತಾನ ಕಾನೂನುಬದ್ಧ ಕ್ರಮ ಕೈಗೊಳ್ಳದೇ ಇದ್ದಲ್ಲಿ ಮತ್ತು ಆತನನ್ನು ಅಪರಾಧಗಳಿಗಾಗಿ ಶಿಕ್ಷಿಸಲು ಕ್ರಮ ಕೈಗೊಳ್ಳದೇ ಇದ್ದಲ್ಲಿ ಅದು ದ್ವಿಪಕ್ಷೀಯ ಬಾಂಧವ್ಯ
ಮತ್ತು ಪಾಕಿಸ್ತಾನದ ಜಾಗತಿಕ ಗೌರವದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಗಳಿವೆ ಎಂದು ಹೇಳಿಕೆ ತಿಳಿಸಿತ್ತು. ಲಾಹೋರ್ ಹೈಕೋಟ್ ನ್ಯಾಯಮೂರ್ತಿಗಳನ್ನೂ
ಒಳಗೊಂಡಿರುವ ಪಂಜಾಬ್ ಪ್ರಾಂತದ ನ್ಯಾಯಾಂಗ ಪರಾಮರ್ಶೆ ಮಂಡಳಿಯು ಸಯೀದ್ ಬಿಡುಗಡೆ ಮಾಡುವಂತೆ ಕಳೆದ
ಗುರುವಾರ ಆಜ್ಞಾಪಿಸಿತ್ತು. ಬಿಡುಗಡೆಯ ಬಳಿಕ ಸಯೀದ್ ’ಜನವರಿ ತಿಂಗಳಲ್ಲಿ ಕಾಶ್ಮೀರಿಗಳಿಗೆ ಬೆಂಬಲ
ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ನನ್ನನ್ನು ಬಂಧಿಸಲಾಯಿತು’
ಎಂದು
ಹೇಳಿದ್ದಾನೆ. ತನ್ನನ್ನು ಬಿಡುಗಡೆ ಮಾಡುವಂತೆ ನ್ಯಾಯಾಂಗ ಪರಾಮರ್ಶೆ ಮಂಡಳಿ ನೀಡಿದ ಆದೇಶವನ್ನು ತನ್ನ
ನಿರಪರಾಧಿತ್ವ ಪ್ರತಿಪಾದನೆಗೆ ಸಮರ್ಥನೆಯಾಗಿಯೂ ಸಯೀದ್ ಬಳಸಿಕೊಂಡಿದ್ದ. ‘ನನ್ನ ವಿರುದ್ಧದ ಯಾವುದೇ
ಆಪಾದನೆಯೂ ಲಾಹೋರ್ ಹೈಕೋರ್ಟಿನ ಮೂವರು ನ್ಯಾಯಮೂರ್ತಿಗಳ ಎದುರು ಸಾಬೀತಾಗಿಲ್ಲ. ಹೀಗಾಗಿ ಅವರು ನನ್ನ ಬಿಡುಗಡೆಗೆ ಆದೇಶ ಮಾಡಿದ್ದಾರೆ. ಭಾರತ
ನನ್ನ ವಿರುದ್ಧ ಬುಡರಹಿತ ಆಪಾದನೆಗಳನ್ನು ಮಾಡಿದೆ. ಲಾಹೋರ್ ಹೈಕೋರ್ಟಿನ ಮರುವಿಮರ್ಶಾ ಮಂಡಳಿಯ ತೀರ್ಮಾನವು
ನಾನು ನಿರಪರಾಧಿ ಎಂಬುದನ್ನು ಸಾಬೀತು ಪಡಿಸಿದೆ’
ಎಂದು
ಸಯೀದ್ ಹೇಳಿದ್ದ.
2017:
ನವದೆಹಲಿ: ದೆಹಲಿಯಲ್ಲಿ ಮಹಿಳಾ ನ್ಯಾಯಾಧೀಶರೊಬ್ಬರನ್ನು ಅಪಹರಿಸಲು ಯತ್ನಿಸಿದ
ಆಪಾದನೆಯಲ್ಲಿ ಕ್ಯಾಬ್ ಚಾಲಕನೊಬ್ಬನನ್ನು ಹಿಂದಿನ ದಿನ ಪೊಲೀಸರು ಬಂಧಿಸಿದರು. ತಮ್ಮನ್ನು ಕರ್ಕರಡೂಮಾ
ನ್ಯಾಯಾಲಯಕ್ಕೆ ಕರೆದೊಯ್ಯುವುದಕ್ಕೆ ಬದಲಾಗಿ ಚಾಲಕ ರಾಷ್ಟ್ರೀಯ ಹೆದ್ದಾರಿ -೨೪ರಲ್ಲಿ ಹಾಪುರ್ ಕಡೆಗೆ ವಾಹನ ಚಲಾಯಿಸಲು ಆರಂಭಿಸಿದ ಎಂದು ಮಹಿಳಾ
ನ್ಯಾಯಾಧೀಶರು ಪೊಲೀಸರಿಗೆ ನೀಡಿದ ತಮ್ಮ ದೂರಿನಲ್ಲಿ ತಿಳಿಸಿದ್ದರು. ತತ್ ಕ್ಷಣವೇ ಆಕೆ ಪೊಲೀಸರಿಗೆ
ಸುದ್ದಿ ಮುಟ್ಟಿಸಿದ್ದಲ್ಲದೆ ಸಹೋದ್ಯೋಗಿ ಒಬ್ಬರಿಗೂ ಮಾಹಿತಿ ನೀಡಿದರು. ಸ್ವಲ್ಪ ದೂರ ಸಾಗಿದ ಬಳಿಕ
ಚಾಲಕ ಯು-ಟರ್ನ್ ತೆಗೆದುಕೊಂಡು ಮತ್ತೆ ದೆಹಲಿಯತ್ತ ತಿರುಗಿದ. ಮಾರ್ಗ ಮಧ್ಯದಲ್ಲಿ ಘಾಜಿಪುರ ಟೋಲ್ ಪ್ಲಾಜಾ ಬಳಿಕ ಪೊಲೀಸರು ವಾಹನವನ್ನು ಅಡ್ಡಗಟ್ಟಿ ಚಾಲಕನನ್ನು
ಬಂಧಿಸಿದರು. ಚಾಲಕ ಖಾಸಗಿ ಕಂಪೆನಿಯೊಂದಕ್ಕೆ ಸೇರಿದವನಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು
ತಿಳಿಸಿದರು.
2017:
ನವದೆಹಲಿ: ಹಿರಿಯ ಐಎಎಸ್ ಅಧಿಕಾರಿ
ಪ್ರದೀಪ್ ಸಿಂಗ್ ಖರೋಲ ಅವರನ್ನು ಏರ್ ಇಂಡಿಯಾದ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ
ಎಂದು ಅಧಿಕೃತ ಮೂಲಗಳು ತಿಳಿಸಿದವು. ಕರ್ನಾಟಕ ಕೇಡರ್ ಅಧಿಕಾರಿಯಾಗಿರುವ ಖರೋಲ ಅವರು ಕಳೆದ ಮೂರು ತಿಂಗಳುಗಳಿಂದ
ಹಂಗಾಮೀ ಸಿಎಂಡಿ ಆಗಿ ಸೇವೆ ಸಲ್ಲಿಸುತ್ತಿರುವ ರಾಜೀವ ಬನ್ಸಲ್ ಅವರ ಸ್ಥಾನಕ್ಕೆ ನೇಮಕಗೊಂಡಿದ್ದಾರೆ. ಬನ್ಸಲ್ ಅವರಿಗೆ ಮೂರು ತಿಂಗಳ ವಿಸ್ತರಣೆ ನೀಡಿದ ಬಳಿಕ ಖರೋಲ
ಅವರ ನೇಮಕವಾಯಿತು. ಖರೋಲ ಅವರನ್ನು ಏರ್ ಇಂಡಿಯಾದ ನೂತನ ಸಿಎಂಡಿ ಆಗಿ ನೇಮಿಸಲಾಗಿದೆ ಎಂದು ಅಧಿಕೃತ
ಮೂಲಗಳು ತಿಳಿಸಿದವು. ಖರೋಲ ಅವರು ಪ್ರಸ್ತುತ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತದ ಆಡಳಿತ ನಿರ್ದೇಶಕರು.
2017:
ಹೈದರಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ಹೈದರಾಬಾದ್ ಮೆಟ್ರೋ ರೈಲನ್ನು
ಉದ್ಘಾಟಿಸಿದರು ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಜೊತೆಗೆ ಮೆಟ್ರೋ ರೈಲಿನಲ್ಲಿ
ಚೊಚ್ಚಲ ಪಯಣ ಮಾಡಿದರು. ಮೆಟ್ರೋ ರೈಲು ಯೋಜನೆಯ ಮೊದಲ ಹಂತದಲ್ಲಿ ಮೀಯಾಪುರದಿಂದ ನಾಗೋಲೆವರೆಗೆ ೩೦ ಕಿಮೀ ಉದ್ದದ ರೈಲುಮಾರ್ಗ ನಿರ್ಮಿಸಲಾಗಿದ್ದು
೨೪ ರೈಲು ನಿಲ್ದಾಣಗಳಿವೆ. ಮೆಟ್ರೋ ರೈಲಿನ ವಾಣಿಜ್ಯ ಸಂಚಾರ ಬುಧವಾರ, ನವೆಂಬರ್ 29ರಿಂದ ಆರಂಭವಾಗಲಿದೆ.
ತೆಲಂಗಾಣದ ಮುಖ್ಯಮಂತ್ರಿ ಹೊರತಾಗಿ ಆಂಧ್ರಪ್ರದೇಶ ಮತ್ತು ತೆಲಂಗಾಣದ ರಾಜ್ಯಪಾಲ ಇಎಸ್ ಎಲ್ ನರಸಿಂಹನ್, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ
ಹರದೀಪ್ ಸಿಂಗ್ ಪುರಿ, ತೆಲಂಗಾಣದ ಐಟಿ ಸಚಿವ ಕೆ ಟಿ ರಾಮರಾವ್ ಮತ್ತು ಬಿಜೆಪಿ ಮುಖ್ಯಸ್ಥ ಕೆ. ಲಕ್ಷ್ಮಣ್
ಅವರು ದೀರ್ಘ ಕಾಲದಿಂದ ಕಾಯಲಾಗಿದ್ದ ಮೆಟ್ರೋ ರೈಲಿನ ಚೊಚ್ಚಲ ಪಯಣದಲ್ಲಿ ಪ್ರಧಾನಿ ಜೊತೆಗಿದ್ದರು.
ರೈಲುಗಳು ಪ್ರಾರಂಭದಲ್ಲಿ ಬೆಳಗ್ಗೆ ೬ ಗಂಟೆಯಿಂದ ರಾತ್ರಿ ೧೦ ಗಂಟೆವರೆಗೆ ಸಂಚರಿಸಲಿವೆ. ಮುಂದಕ್ಕೆ
ಸಂಚಾರ ದಟ್ಟಣೆ ಮತ್ತು ಬೇಡಿಕೆಗೆ ಅನುಗುಣವಾಗಿ ಬೆಳಗ್ಗೆ ೫.೩೦ರಿಂದ ರಾತ್ರಿ ೧೦ ಗಂಟೆಯವರೆಗೆ ರೈಲುಗಾಡಿಗಳನ್ನು
ಓಡಿಸಲಾಗುವುದು ಎಂದು ತೆಲಂಗಾಣದ ಮಾಹಿತಿ ತಂತ್ರಜ್ಞಾನ ಸಚಿವ ಕೆಟಿ ರಾಮರಾವ್ ಕಳೆದ ವಾರ ಪ್ರಕಟಿಸಿದ್ದರು.
ಸರ್ಕಾರಿ-ಖಾಸಗಿ ಪಾಲುದಾರಿಕೆಯಲ್ಲಿ (ಪಿಪಿಪಿ) ಕಾರ್‍ಯಗತವಾಗುತ್ತಿರುವ ವಿಶ್ವದ ಅತ್ಯಂತ ದೊಡ್ಡ ಮತ್ತು
ನವೀನ ಯೋಜನೆ ಹೈದರಾಬಾದ್ ಮೆಟ್ರೋ ರೈಲುಯೋಜನೆ ಎಂದು ಅವರು ಪ್ರತಿಪಾದಿಸಿದ್ದರು. ಎಲ್ ಅಂಡ್ ಟಿ ಮೆಟ್ರೋ
ರೈಲು (ಹೈದರಾಬಾದ್) ಲಿಮಿಟೆಡ್ ೨ ಕಿಮೀವರೆಗಿನ ದೂರಕ್ಕೆ
ಕನಿಷ್ಠ ೧೦ ರೂಪಾಯಿಗಳ ಪ್ರಯಾಣ ದರವನ್ನು ಮತ್ತು ೨೬
ಕಿಮೀಗಿಂತ ಹೆಚ್ಚು ದೂರದ ಪಯಣಕ್ಕೆ ಗರಿಷ್ಠ ೬೦ ರೂಪಾಯಿಗಳ
ದರವನ್ನು ನಿಗದಿ ಪಡಿಸಿದೆ. ಪ್ರತಿಯೊಂದು ರೈಲುಗಾಡಿ ೩ ಬೋಗಿಗಳನ್ನು ಹೊಂದಿದ್ದು ಪ್ರತಿ ಬೋಗಿಯಲ್ಲಿ
೩೩೦ ಮಂದಿ ಪಯಣಿಸಬಹುದು. ಸಂಚಾರ ದಟ್ಟಣೆಗೆ ಅನುಗುಣವಾಗಿ ಬೋಗಿಗಳ ಸಂಖ್ಯೆಯನ್ನು ೬ಕ್ಕೆ ಹೆಚ್ಚಿಸಬಹುದು
ಎಂದು ರಾವ್ ನುಡಿದರು.
2017:
ಮೆಸಾಚ್ಯುಸೆಟ್ಸ್: ಅಂಗಾರಾಮ್ಲ (ಕಾರ್ಬನ್ ಡೈ ಆಕ್ಸೈಡ್) ಮತ್ತು ಇತರ
ಹಸಿರುಮನೆ ಅನಿಲಗಳನ್ನು ಕಾರುಗಳು ಮತ್ತು ವಿಮಾನಗಳಿಗೆ ಉಪಯುಕ್ತ ಇಂಧನವಾಗಿ ಪರಿವರ್ತಿಸುವಂತಹ ಹೊಸ
ವಿಧಾನವೊಂದನ್ನು ಮೆಸಾಚ್ಯುಸೆಟ್ಸ್ ತಂತ್ರಜ್ಞಾನ ಸಂಸ್ಥೆಯ (ಎಂಐಟಿ) ವಿಜ್ಞಾನಿಗಳು ಅಭಿವೃದ್ಧಿ ಪಡಿಸಿರುವುದಾಗಿ
ಪ್ರಕಟಿಸಿದರು. ಲ್ಯಾಂಥನಮ್, ಕ್ಯಾಲ್ಸಿಯಂ ಮತ್ತು ಕಬ್ಬಿಣದ ಆಕ್ಸೈಡ್ ನಿಂದ ನಿರ್ಮಿಸಲಾದ ತೆಳುಪೊರೆಯನ್ನು
(ಮೆಂಬ್ರೇನ್) ಬಳಸಿ ಅಂಗಾರಾಮ್ಲದಿಂದ ಕಾರ್ಬನ್ ಮಾನಾಕ್ಸೈಡ್ ತಯಾರಿಸುವಂತಹ ವಿಧಾನವನ್ನು ವಿಜ್ಞಾನಿಗಳು ಅವಿಷ್ಕರಿಸಿದರು. ಈ ವಿಧಾನದಲ್ಲಿ ಮೆಂಬ್ರೇನ್
ಬಳಸಿದಾಗ ಅಂಗಾರಾಮ್ಲದಿಂದ ಆಮ್ಲಜನಕ ಬೇರ್ಪಟ್ಟು ಕಾರ್ಬನ್ ಮಾನಾಕ್ಸೈಡ್ ಉಳಿಯುತ್ತದೆ. ಈ ಪ್ರಕ್ರಿಯೆಯಲ್ಲಿ
ಉತ್ಪತ್ತಿಯಾಗುವ ಕಾರ್ಬನ್ ಮಾನಾಕ್ಸೈಡನ್ನು ನೇರವಾಗಿ ಇಂಧನವಾಗಿ ಬಳಸಬಹುದು ಅಥವಾ ಹೈಡ್ರೋಜನ್ ಮತ್ತು
/ ಅಥವಾ ನೀರಿನ ಜೊತೆ ಸೇರಿಸಿ ಇತರ ದ್ರವೀಕೃತ ಹೈಡ್ರೋಕಾರ್ಬನ್ ಇಂಧನಗಳನ್ನು ತಯಾರಿಸಬಹುದು. ಇದನ್ನು
ಮೆಥನಾಲ್ , ಸಿಂಗ್ಯಾಸ್ ಇತ್ಯಾದಿ ಉತ್ಪಾದಿಸಲೂ ಬಳಸಬಹುದು. ಈ ಪ್ರಕ್ರಿಯೆಯನ್ನು ಕಾರ್ಬನ್ ಸಂಗ್ರಹ,
ಬಳಕೆ ಮತ್ತು ದಾಸ್ತಾನು ತಂತ್ರಜ್ಞಾನದ ಭಾಗವಾಗಿಯೂ ಬಳಸಬಹುದಾಗಿದ್ದು, ವಿದ್ಯುತ್ ಉತ್ಪಾದನೆಗೆ ಅನ್ವಯಿಸುವ
ಮೂಲಕ ಜಾಗತಿಕ ತಾಪಮಾನಕ್ಕೆ ಕಾರಣವಾಗಿರುವ ಪಳೆಯುಳಿಕೆ ಇಂಧನದ ದುಷ್ಪರಿಣಾಮವನ್ನು ತಗ್ಗಿಸಬಹುದು. ಮೆಂಬ್ರೇನ್ ಶೇಕಡಾ ೧೦೦ರಷ್ಟು ಆಮ್ಲಜನಕವನ್ನು ಮಾತ್ರ ಹಾಯ್ದು
ಹೋಗಲು ಬಿಡುತ್ತದೆ ಎಂಬುದು ಈ ಸಂಶೋಧನೆಯ ಅತ್ಯಂತ ಪ್ರಮುಖ ಅಂಶ ಎಂದು ಎಂಐಟಿಯ ಕ್ಷಿಯವೊ-ಯು ವು ಹೇಳಿದರು.
ಈ ಪ್ರಕ್ರಿಯೆಯಲ್ಲಿ ವಿಜ್ಞಾನಿಗಳು ಹೈಡ್ರೋಜನ್ ಅಥವಾ ಮೆಥೇನ್ ಬಳಸಿದ್ದರು. ಆಮ್ಲಜನಕವನ್ನು ಹಿಂದಕ್ಕೆ
ಸಾಗದಂತೆ ಹಾಗೂ ಕಾರ್ಬನ್ ಮಾನಾಕ್ಸೈಡ್ ಜೊತೆ ಮರುಮಿಶ್ರಣಗೊಂಡು
ಪುನಃ ಅಂಗಾರಾಮ್ಲವಾಗದಂತೆಯೂ ಮೆಂಬ್ರೇನ್ ತಡೆಯಿತು ಎಂದು ವರದಿ ಹೇಳಿತು. ಈ ವಿಧಾನವು ಹಸಿರುಮನೆ ಅನಿಲಗಳನ್ನು
ಕಡಿತಗೊಳಿಸುವುದರ ಜೊತೆಗೆ ಕಡಿಮೆ ವೆಚ್ಚದಲ್ಲಿ ಇನ್ನೊಂದು ಆದಾಯಮೂಲವನ್ನೂ ಸೃಷ್ಟಿಸಬಲ್ಲುದು ಎಂದು
ಸಂಶೋಧಕರು ಹೇಳಿದ್ದಾರೆ. ಸಂಶೋಧನೆಯ ವಿವರಗಳು ಪಿಎನ್ ಎ ಎಸ್ ನಲ್ಲಿ ಪ್ರಕಟಗೊಂಡಿವೆ.
2017:
ಹೈದರಾಬಾದ್: ಕಾರ್ಮಿಕ ಪಡೆಯ ಪುರುಷರು ಮತ್ತು ಮಹಿಳೆಯರ ನಡುವಣ ಅಂತರವನ್ನು ಅರ್ಧದಷ್ಟು
ಇಳಿಸಲು ಸಾಧ್ಯವಾದರೆ ಭಾರತದ ಆರ್ಥಿಕತೆಯು ಮುಂದಿನ
ಮೂರು ವರ್ಷಗಳಲ್ಲಿ ೧೫೦೦೦ ಕೋಟಿ (೧೫೦ ಬಿಲಿಯನ್)
ಅಮೆರಿಕನ್ ಡಾಲರ್ ನಷ್ಟು ಬೆಳೆಯಬಲ್ಲುದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ
ಪುತ್ರಿ, ಶ್ವೇತಭವನ ಸಲಹೆಗಾರ್ತಿ ಇವಾಂಕಾ ಟ್ರಂಪ್ ಅವರು ಇಲ್ಲಿ ಹೇಳಿದರು. ಎಂಟನೇ ಜಾಗತಿಕ ಉದ್ಯಮಶೀಲತಾ
ಶೃಂಗಸಭೆಯನ್ನು (ಜಿಇಎಸ್) ಉದ್ದೇಶಿಸಿ ಮುಖ್ಯಭಾಷಣ ಮಾಡಿದ ಇವಾಂಕಾ ಭಾರತದ ಆರ್ಥಿಕತೆಯನ್ನು ಉಜ್ವಲಗೊಳಿಸುತ್ತಿರುವುದಕ್ಕಾಗಿ
ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಪ್ರಶಂಸೆಯ ಮಳೆಗರೆದರು. ಭಾರತದ ಆರ್ಥಿಕತೆಯನ್ನು ಪ್ರಜಾಪ್ರಭುತ್ವದ ಬೆಳಕು ಹಾಗೂ ವಿಶ್ವದ ಭರವಸೆಯ ಸಂಕೇತವಾಗಿ
ಬೆಳೆಸಲು ಮೋದಿ ಅವರು ಯತ್ನಿಸುತ್ತಿರುವುದನ್ನು ಉಲ್ಲೇಖಿಸಿದ ಅವರು ’ನೀವು ಮಾಡುತ್ತಿರುವ ಸಾಧನೆ ನಿಜಕ್ಕೂ
ಅಸಾಮಾನ್ಯ’ ಎಂದು
ಹೇಳಿದರು. ಬಾಲ್ಯದಲ್ಲಿ ಚಹಾ ಮಾರಾಟ ಮಾಡುತ್ತಿದ್ದುದರಿಂದ
ಹಿಡಿದು ಭಾರತದ ಪ್ರಧಾನಿಯಾಗಿ ಆಯ್ಕೆಯಾಗಿರುವವರೆಗೂ ನಿಮ್ಮ ಸಾಧನೆ ಅಸಾಮಾನ್ಯ ಎಂದು ಅವರು ನುಡಿದರು.
ನಿಮ್ಮದೇ ಆದ ಉದ್ಯಮಶೀಲತೆ ಮತ್ತು ಕಠಿಣ ಶ್ರಮದಿಂದ ಭಾರತದ ಜನತೆ ೧೩ ಕೋಟಿ ನಾಗರಿಕರನ್ನು ಬಡತನದಿಂದ
ಮೇಲೆತ್ತಿದ್ದಾರೆ- ಇದು ಗಮನಾರ್ಹ ಅಭಿವೃದ್ಧಿ. ಪ್ರಧಾನಿಯವರ ನಾಯಕತ್ವದಲ್ಲಿ ಇದು ಇನ್ನಷ್ಟು ಮುಂದಕ್ಕೆ
ಸಾಗಲಿದೆ ಎಂದು ಇವಾಂಕಾ ಹೇಳಿದರು. ಇಲ್ಲಿ, ಭಾರತದಲ್ಲಿ ನಾನು ಮಹಿಳೆಯರ ಸಬಲೀಕರಣದ ಹೊರತಾಗಿ ಮಾನವತೆಯ
ಪ್ರಗತಿ ಅಪೂರ್ಣವಾಗುತ್ತದೆ ಎಂಬ ದೃಢ ನಂಬಿಕೆ ಇಟ್ಟುಕೊಂಡಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ
ಅವರನ್ನು ಶ್ಲಾಘಿಸಬಯಸುತ್ತೇನೆ’ ಎಂದು
ಇವಾಂಕಾ ಒತ್ತಿ ಹೇಳಿದರು. ಭಾರತವು ಜಗತ್ತಿನಲ್ಲಿ ತ್ವರಿತವಾಗಿ ಆರ್ಥಿಕ ಬೆಳವಣಿಗೆ ಹೊಂದುತ್ತಿರುವ
ಒಂದು ರಾಷ್ಟ ಮತ್ತು ಶ್ವೇತಭವನದ ನಿಜವಾದ ಮಿತ್ರ ಎಂದು ಅವರು ನುಡಿದರು.
2016: ಮಧುರೈ: ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ದೇಶದ ಇಪ್ಪತ್ತಕ್ಕೂ ಹೆಚ್ಚು
2016:
ನವದೆಹಲಿ: ಪೊಲೀಸ್ ಸಮವಸ್ತ್ರದಲ್ಲಿದ್ದ ಬಂದೂಕುಧಾರಿ ಯುವಕರ ಗುಂಪೊಂದು
ಪಂಜಾಬ್‌ನ ನಭಾ ಸೆರೆಮನೆಗೆ ದಾಳಿ ನಡೆಸಿದಾಗ ಅಲ್ಲಿಂದ ಪರಾರಿಯಾಗಿದ್ದ ಉಗ್ರಗಾಮಿ ಸಂಘಟನೆ ಖಲಿಸ್ತಾನ್ ಲಿಬರೇಷನ್ ಫ್ರಂಟ್‌ನ ಮುಖ್ಯಸ್ಥ ಹರ್ಮಿಂದರ್ ಸಿಂಗ್ ಮಿಂಟೂವನ್ನು ದೆಹಲಿ ಪೊಲೀಸರು ನಸುಕಿನ ವೇಳೆಯಲ್ಲಿ ಬಂಧಿಸಿದರು. ಭಾರಿ ಭದ್ರತೆ ಇದ್ದ ನಭಾ ಸೆರೆಮನೆ ಮೇಲೆ 12 ಮಂದಿ ಬಂದೂಕುಧಾರಿಗಳು ಹಿಂದಿನ ದಿನ ನಸುಕಿನಲ್ಲಿ ದಾಳಿ ನಡೆಸಿ, ಮಿಂಟೂ ಮತ್ತು
ಇತರ ಐವರನ್ನು ಬಂಧಮುಕ್ತಗೊಳಿಸಿ ತಮ್ಮ ಜೊತೆಗೆ
ಒಯ್ದಿದ್ದರು. ಖಲಿಸ್ತಾನ ಲಿಬರೇಷನ್ ಫ್ರಂಟ್‌ನ (ಕೆಎಲ್‌ಎಫ್) ಹಾಲಿ ಮುಖ್ಯಸ್ಥ ಹರ್ಮಿಂದರ್ ಸಿಂಗ್ ಮಿಂಟೂ ವಿರುದ್ಧ 10 ಭಯೋತ್ಪಾದನಾ ದಾಳಿಗಳಿಗೆ ಸಂಚು ರೂಪಿಸಿದ ಆರೋಪಗಳಿದ್ದವು. ಪ್ರತ್ಯೇಕ ಖಲಿಸ್ತಾನ ಬೇಡಿಕೆ ಸಂಬಂಧ ಈತ ಪಾಕಿಸ್ತಾನದ ಗೂಪ್ತಚರ ಸಂಸ್ಥೆ ಐಎಸ್‌ಐ ಮತ್ತು ಕೆಲವು ಉಗ್ರಗಾಮಿ ಸಂಘಟನೆಗಳ ಜತೆ ಸೇರಿ ಪಂಜಾಬ್ನಲ್ಲಿ ದಾಳಿ ನಡೆಸಿದ ಆರೋಪ ಮಿಂಟೂ ಮೇಲಿದೆ. ಖಲಿಸ್ತಾನ ಚಳವಳಿಗೆ ದೇಣಿಗೆ ಸಂಗ್ರಹಿಸುವ ಸಲುವಾಗಿ ಮಿಂಟೂ ಥಾಯ್ಲೆಂಡ್ನಲ್ಲಿ ನೆಲೆಸಿದ್ದ. ನಕಲಿ ಪಾಸ್‌ಪೋರ್ಟ್ ಮತ್ತು ವೀಸಾ ಬಳಸಿ ಪಾಕಿಸ್ತಾನ, ಶ್ರೀಲಂಕಾ ಮತ್ತು ಯೂರೋಪ್‌ನ ಹಲವು ರಾಷ್ಟ್ರಗಳಿಗೆ ಪ್ರಯಾಣ ಬೆಳೆಸಿದ ಆರೋಪಗಳೂ ಈತನ ಮೇಲಿವೆ. 2014ರ ನವೆಂಬರ್‌ನಲ್ಲಿ ಥಾಯ್ಲೆಂಡ್ನಿಂದ ಹಿಂತಿರುಗಿದಾಗ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಂಜಾಬ್ ಪೊಲೀಸರು ಈತನನ್ನು ಬಂಧಿಸಿದ್ದರು.
2016: ನವದೆಹಲಿ: ಪಠಾಣ್ ಕೋಟ್ ವಾಯುನೆಲೆಯ ಮೇಲೆ ಉಗ್ರರು ದಾಳಿ ನಡೆಸಿದ ಪ್ರಕರಣಕ್ಕೆ
ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿರುವ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆ ಮುಖ್ಯಸ್ಥ ಮೌಲಾನ ಮಸೂದ್ ಅಜರ್ ಮತ್ತು ಇತರ ಮೂವರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ಕೇಂದ್ರ ಗೃಹ ಸಚಿವಾಲಯ ಎನ್ಐಎಗೆ ಗ್ರೀನ್ ಸಿಗ್ನಲ್ ನೀಡಿತು. ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆಯ 18, 20 ಮತ್ತು 28ನೇ ಸೆಕ್ಷನ್, ಶಸ್ತಾಸ್ತ್ರ ಕಾಯ್ದೆ ಸೇರಿದಂತೆ ಹಲವು ಕಾಯ್ದೆಗಳನ್ವಯ ಅಜರ್ ಮಸೂದ್, ಆತನ ಸಹೋದರ ಅಬ್ದುಲ್ ರೌಫ್ ಮತ್ತು ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶಾಹೀದ್ ಲತೀಫ್ ಮತ್ತು ಕಾಸಿಫ್ ಜಾನ್ ವಿರುದ್ದ ದೋಷಾರೋಪ ಪಟ್ಟಿ ಸಲ್ಲಿಸಲು ಅನುಮತಿ ನೀಡಲಾಯಿತು. ರಾಷ್ಟ್ರೀಯ ತನಿಖಾ ಸಂಸ್ಥೆ ಈ ನಾಲ್ವರ ವಿರುದ್ಧ ಶೀಘ್ರದಲ್ಲೇ ಚಾರ್ಜ್ ಶೀಟ್ ಸಲ್ಲಿಸಲಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿದವು. ಎನ್ಐಎ ಅಜರ್ ಮಸೂದ್ ಮತ್ತು ಇತರರ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ಅನುಮತಿ ನೀಡುವಂತೆ ಗೃಹ ಸಚಿವಾಲಯಕ್ಕೆ ಪತ್ರ ಬರೆದಿತ್ತು. ಅಜರ್ ಮಸೂದ್ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಿದ ನಂತರ ಆತನ ವಿರುದ್ಧ ವಿಶ್ವಸಂಸ್ಥೆಯಲ್ಲಿ ವಾದ ಮಂಡಿಸಲು ಭಾರತಕ್ಕೆ ಮತ್ತೊಂದು ಅಸ್ತ್ರ ದೊರೆಯಲಿದೆ. ಭಾರತವು ಅಜರ್ ಮಸೂದ್ನನ್ನು ಅಂತಾರಾಷ್ಟ್ರೀಯ ಭಯೊತ್ಪಾದಕ ಎಂದು ಘೋಷಿಸಬೇಕು ಎಂದು ವಿಶ್ವಸಂಸ್ಥೆಯಲ್ಲಿ ವಾದ ಮಂಡಿಸಿದೆ. ಆದರೆ ಚೀನಾ ತನ್ನ ವೀಟೋ ಅಧಿಕಾರ ಬಳಸಿ ಭಾರತದ ವಾದಕ್ಕೆ ಬೆಂಬಲ ಸಿಗದಂತೆ ನೋಡಿಕೊಂಡಿದೆ. ನಾಲ್ವರು ಉಗ್ರರು ಪಠಾಣ್ ಕೋಟ್ ವಾಯುನೆಲೆಯ ಮೇಲೆ ದಾಳಿ ನಡೆಸಿ 7 ಯೋಧರನ್ನು ಕೊಂದಿದ್ದರು. ಭದ್ರತಾ ಪಡೆಗಳು ಸತತ 80 ಗಂಟೆಗಳ ಕಾರ್ಯಾಚರಣೆ ನಡೆಸಿ ಎಲ್ಲಉಗ್ರರನ್ನೂ ಹೊಡೆದುರುಳಿಸಿತ್ತು. ಅಜರ್ ಮಸೂದ್, ಅಬ್ದುಲ್ ರೌಫ್, ಶಾಹೀದ್ ಲತೀಫ್ ಮತ್ತು ಕಾಸಿಫ್ ಜಾನ್ ವಿರುದ್ಧ ಇಂಟರ್ ಪೋಲ್ ಈಗಾಗಲೇ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿದೆ. ಆದರೆ ಪಾಕಿಸ್ತಾನ ಇವರ ವಿರುದ್ಧ ಯಾವುದೇ ಕ್ರಮ ತೆಗೆದುಕೊಂಡಿಲ್ಲ.
2016: ಬೆಂಗಳೂರು: 500, 1000 ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ಪ್ರತಿಪಕ್ಷಗಳು ನೀಡಿದ ರಾಷ್ಟ್ರವ್ಯಾಪಿ ‘ಆಕ್ರೋಶ ದಿನ’ಕ್ಕೆ ನೀರಸ ಪ್ರತಿಕ್ರಿಯೆ ವ್ಯಕ್ತಗೊಂಡಿತು. ರಾಜ್ಯದ ಬಹುತೇಕ ನಗರಗಳಲ್ಲಿ, ಪಟ್ಟಣಗಳಲ್ಲಿ ಎಂದಿನಂತೆ ವ್ಯಾಪಾರ, ವಹಿವಾಟು ನಡೆಯಿತು. ಸರ್ಕಾರಿ ಮತ್ತು ಖಾಸಗಿ ಬಸ್, ಮೆಟ್ರೋ, ಆಪ್ ಆಧಾರಿತ ಟ್ಯಾಕ್ಸಿ, ಆಟೋ ಸಂಚಾರ, ಪೆಟ್ರೋಲ್ ಬಂಕ್, ಹೋಟೆಲ್, ಮಾಲ್, ಚಿತ್ರಮಂದಿರ, ಆಸ್ಪತ್ರೆ ಔಷಧಿ, ಹಾಲು ವ್ಯಾಪಾರಗಳು ಎಂದಿನಂತೆ ನಡೆದವು.
2016: ನವದೆಹಲಿ: ಕಪ್ಪು ಹಣ ಹೊಂದಿರುವವರು ತಮ್ಮ ಹಣವನ್ನು ಬದಲಿಸಿಕೊಳ್ಳಲು ಹಲವು ಮಾರ್ಗಗಳನ್ನು ಹುಡುಕುತ್ತಿರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನ ತೆಗೆದುಕೊಂಡಿತು.. ಬ್ಯಾಂಕುಗಳಲ್ಲಿ ಸೂಕ್ತ ದಾಖಲೆಗಳಿಲ್ಲದೆ ಠೇವಣಿಯಾಗಿರುವ ಮೊತ್ತದ ಮೇಲೆ ಶೇ. 50 ರಷ್ಟು ತೆರಿಗೆ ವಿಧಿಸಲಾಗುವುದು, ಕಪ್ಪು ಹಣ ಹೊಂದಿರುವುದು ಪತ್ತೆಯಾದರೆ ಶೇ. 85ರಷ್ಟು ತೆರಿಗೆ ಮತ್ತು ದಂಡ ವಿಧಿಸಲಾಗುವುದು ಎಂದು ಕೇಂದ್ರ ಸರ್ಕಾರ ತಿಳಿಸಿತು. ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಲೋಕಸಭೆಯಲ್ಲಿ ಆದಾಯ ತೆರಿಗೆ ತಿದ್ದುಪಡಿ ಮಸೂದೆಯನ್ನು ಮಂಡಿಸಿದರು. ಈ ಮಸೂದೆಯಲ್ಲಿ ಕಪ್ಪು ಹಣ ಹೊಂದಿರುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ. ಜತೆಗೆ ಕಪ್ಪುಹಣವನ್ನು ಘೋಷಿಸುವವರು ತಾವು ಘೋಷಿಸಿದ ಶೇ. 25ರಷ್ಟು ಹಣವನ್ನು ಬಡತನ ನಿರ್ಮೂಲನಾ ಯೋಜನೆ (ಪ್ರಧಾನ ಮಂತ್ರಿ ಗರೀಬಿ ಕಲ್ಯಾಣ ಯೋಜನೆ 2016)ಗೆ ಬಳಕೆ ಮಾಡಿಕೊಳ್ಳಲು ಠೇವಣಿ ಇಡಬೇಕು. ಈ ಹಣವನ್ನು 4 ವರ್ಷಗಳವರೆಗೆ ವಾಪಸ್ಸು ಪಡೆಯಲು ಅವಕಾಶ ಇರುವುದಿಲ್ಲಎಂದು ತಿಳಿಸಲಾಯಿತು.
ಜತೆಗೆ ಇನ್ನು ಮುಂದೆ ಕಪ್ಪು ಹಣ ಹೊಂದಿರುವವರು ಸಿಕ್ಕಿ ಬಿದ್ದರೆ, ಅವರು ಘೋಷಣೆ ಮಾಡದೆ ಉಳಿಸಿಕೊಂಡಿರುವ ಹಣಕ್ಕೆ ಶೇ. 75ರಷ್ಟು ತೆರಿಗೆ ಮತ್ತು ದಂಡ ವಿಧಿಸಲು ಮಸೂದೆಯಲ್ಲಿ ಅವಕಾಶ ಕಲ್ಪಸಲಾಯಿತು. ಜತೆಗೆ ಇನ್ನೂ ಶೇ. 10ರಷ್ಟು ಹೆಚ್ಚುವರಿ ದಂಡ ವಿಧಿಸಲು ಸಹ ಇದರಲ್ಲಿ ಅವಕಾಶ ನೀಡಲಾಯಿತು.
2016: ನವದೆಹಲಿ/ ಬೆಂಗಳೂರು: ನೋಟು ರದ್ದು ಮಾಡಿರುವ ಕೇಂದ್ರ ಸರ್ಕಾರದ ಕ್ರಮದಿಂದಾಗಿ
ಉಂಟಾಗಿರುವ ಸಮಸ್ಯೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ‘ಆಕ್ರೋಶ ದಿವಸ್’ ಹೆಸರಿನಲ್ಲಿ ಪ್ರತಿಭಟಿಸುತ್ತಿರುವ ವಿಪಕ್ಷಗಳ ತಂತ್ರಕ್ಕೆ ಪ್ರತಿಯಾಗಿ ಬಿಜೆಪಿ ಮತ್ತು ಮಿತ್ರಪಕ್ಷಗಳು ‘ಸಂಭ್ರಮ ದಿವಸ್’ ಹೆಸರಿನಲ್ಲಿ ಸಂಭ್ರಮಾಚರಣೆ ಮಾಡಿದವು. ಕರ್ನಾಟಕ ಸೇರಿದಂತೆ ದೇಶದ ನಾನಾ ಕಡೆಗಳಲ್ಲಿ ಸಂಭ್ರಮ ದಿವಸ ಆಚರಣೆ ನಡೆಯಿತು. ಅನೇಕ ಕಡೆಗಳಲ್ಲಿ ಸರ್ಕಾರ ಕಪ್ಪುಹಣದ ವಿರುದ್ಧ ಕಠಿಣ ನಿಲುವು ತಾಳಿರುವುದನ್ನು ಬಲವಾಗಿ ಸಮರ್ಥಿಸಿಕೊಂಡು ಸಿಹಿ ಹಂಚಲಾಯಿತು. ಬೆಂಗಳೂರಿನಲ್ಲಿ ಯುವ ಬ್ರಿಗೇಡ್ ಸಂಘಟನೆ ಕಾರ್ಯಕರ್ತರು ಎಣ್ಣೆ ಸ್ನಾನ ಮಾಡಿ, ಹೋಳಿಗೆ ತಿಂದು ಸಂಭ್ರಮಿಸಿದರೆ, ಮಹಾರಾಷ್ಟ್ರದ ಅನೇಕ ಕಡೆಗಳಲ್ಲಿ ‘ಆಕ್ರೋಶ ದಿನ’ಕ್ಕೆ ಬೆಂಬಲಿಸದೆ, ಅಂಗಡಿಗಳನ್ನು ತೆರೆದ ಅಂಗಡಿಕಾರರಿಗೆ ಸಿಹಿಗಳನ್ನು ಹಂಚಿ ಸಂಭ್ರಮದ ದಿನವನ್ನಾಗಿ ಆಚರಿಸಲಾಯಿತು. ವಿಪಕ್ಷಗಳ ಆಕ್ರೋಶಕ್ಕೆ ನವದೆಹಲಿಯಲ್ಲಿ ಪ್ರತಿಕ್ರಿಯಿಸಿದ ಸಚಿವ ಅನಂತ್ ಕುಮಾರ್, ರಾಜ್ಯಸಭೆ ಮತ್ತು ಲೋಕಸಭೆಯ ಕಲಾಪ ನಡೆಯದಂತೆ ಕಾಂಗ್ರೆಸ್ ಮತ್ತು ಇತರ ವಿಪಕ್ಷಗಳು ವಿನಾಕಾರಣ ಗದ್ದಲ ಮಾಡುತ್ತಿವೆ. ಕಲಾಪದಲ್ಲಿ ಈ ಬಗ್ಗೆ ಚರ್ಚೆಗೆ ಸಿದ್ದವಿದ್ದೇವೆ. ವಿಪಕ್ಷಗಳೂ ಚರ್ಚೆಗೆ ಮುಂದಾಗಲಿ ಎಂದು ಸವಾಲೆಸೆದರು.2014: ನವದೆಹಲಿ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಯಥಾಸ್ಥಿತಿಯನ್ನೇ ಕಾಯ್ದುಕೊಳ್ಳಿ ಎಂದು ಸುಪ್ರೀಂಕೋರ್ಟ್ ಸೂಚಿಸುವುದರೊಂದಿಗೆ ಕೇಂದ್ರೀಯ ವಿದ್ಯಾಲಯಗಳಲ್ಲಿ ಜರ್ಮನ್ ಬದಲು ಮೂರನೆಯ ಭಾಷೆಯಾಗಿ ಸಂಸ್ಕೃತ ಕಡ್ಡಾಯಗೊಳಿಸಬೇಕು ಎಂಬ ಕೇಂದ್ರದ ನಿರ್ಧಾರಕ್ಕೆ ಹಿನ್ನಡೆಯಾಯಿತು. ಈ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿತು. ಜರ್ಮನಿ–ಸಂಸ್ಕೃತ ವಿವಾದಲ್ಲಿ ವಿದ್ಯಾರ್ಥಿಗಳನ್ನು ಯಾಕೆ ಬಲಿಪಶು ಮಾಡುತ್ತೀರಿ? ನಿಮ್ಮ ಕೈಯಿಂದ ಆದ ತಪ್ಪಿಗೆ ಅವರು ಏಕೆ ಶಿಕ್ಷೆ ಅನುಭವಿಸಬೇಕು ಎಂದು ಕೋರ್ಟ್ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿತು. ಕೇಂದ್ರೀಯ ವಿದ್ಯಾಲಯಗಳಲ್ಲಿ ಮೂರನೆಯ ಭಾಷೆಯಾಗಿ ಜರ್ಮನ್ ಬೋಧಿಸಬೇಕು ಎಂದು ಕೇಂದ್ರೀಯ ವಿದ್ಯಾಲಯ ಸಂಘಟನೆ ಮತ್ತು ಗೊಥೆ ಇನ್ಸ್ಟಿಟ್ಯೂಟ್ ಮ್ಯಾಕ್ಸ್ ಮುಲ್ಲರ್ ಭವನ್ ನಡುವೆ ಒಪ್ಪಂದ ಆಗಿದೆ. ಆದರೆ, ಇದು ಅಕ್ರಮ ಎಂದು ಅಟಾರ್ನಿ ಜನರಲ್ ಮುಕುಲ್ ರಸ್ತೋಗಿ ಕೋರ್ಟ್ಗೆ ಹೇಳಿದರು. ಆದರೆ, ಈ ವಾದವನ್ನು ಒಪ್ಪದ ಕೋರ್ಟ್, ನೀವು ಮಾಡಿದ ತಪ್ಪಿಗೆ ವಿದ್ಯಾರ್ಥಿಗಳಿಗೆ ಯಾಕೆ ಶಿಕ್ಷೆ. ಮುಖ್ಯ ಪರೀಕ್ಷೆಗೆ ಇನ್ನು ಕಲವೇ ತಿಂಗಳುಗಳು ಮಾತ್ರ ಬಾಕಿ ಇದೆ. ಈ ಹಂತದಲ್ಲಿ ಈ ರೀತಿಯ ಬದಲಾವಣೆಗಳನ್ನು ಮಾಡುವುದು ಸರಿಯಲ್ಲ. ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಯಥಾಸ್ಥಿತಿಯೇ ಮುಂದುವರಿಯಲಿ ಎಂದು ಸೂಚಿಸಿತು. ಕೋರ್ಟ್ ತೀರ್ಪಿನಿಂದ ಕೇಂದ್ರೀಯ ವಿದ್ಯಾಲಯಗಳಲ್ಲಿ ಕಲಿಯುತ್ತಿರುವ 70,000 ವಿದ್ಯಾರ್ಥಿಗಳು ಮತ್ತು ಜರ್ಮನ್ ಭಾಷೆ ಕಲಿಯುತ್ತಿದ್ದ 700 ಶಿಕ್ಷಕರು ನಿಟ್ಟುಸಿರು ಬಿಟ್ಟರು.
2014: ನವದೆಹಲಿ: ಇರಾಕ್ನಲ್ಲಿ ಐಎಸ್ಐಎಸ್ ಉಗ್ರಗಾಮಿಗಳು ಒತ್ತೆಯಾಳುಗಳಾಗಿ ಇಟ್ಟುಕೊಂಡಿರುವ 39 ಮಂದಿ ಭಾರತೀಯರು ಇನ್ನೂ ಜೀವಂತವಾಗಿದ್ದಾರೆ ಎಂದು ಭಾರತ
ಸರ್ಕಾರ ನಂಬಿದೆ. ಅವರನ್ನು ಕೊಲ್ಲಲಾಗಿದೆ ಎಂಬ ವರದಿಗಳು ದೃಢಪಟ್ಟಿಲ್ಲ ಎಂದು ಸಂಸತ್ತಿಗೆ ತಿಳಿಸಲಾಯಿತು. ಉಗ್ರಗಾಮಿಗಳು ಸೆರೆ ಹಿಡಿದು ಇಟ್ಟಿರುವ ಭಾರತೀಯರ ಬಗ್ಗೆ ಸದಸ್ಯರು ತೀವ್ರ ಕಳವಳ ವ್ಯಕ್ತ ಪಡಿಸಿದ ಸಂದರ್ಭದಲ್ಲಿ ಸರ್ಕಾರ ಈ ವಿಚಾರವನ್ನು ಸ್ಪಷ್ಟ ಪಡಿಸಿತು. ಒತ್ತೆಯಾಳಾಗಿ ಇಟ್ಟುಕೊಂಡ 39 ಮಂದಿ ಭಾರತೀಯರನ್ನು ಉಗ್ರಗಾಮಿಗಳು ಐದು ತಿಂಗಳ ಹಿಂದೆ ಗುಂಡಿಟ್ಟು ಕೊಂದು ಹಾಕಿದ್ದಾರೆ ಎಂಬ ಮಾಧ್ಯಮ ವರದಿಗಳ ಬಗ್ಗೆ ಲೋಕಸಭೆ ಮತ್ತು ರಾಜ್ಯಸಭೆಗಳಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಹೇಳಿಕೆ ನೀಡಿದರು. ತಪ್ಪಿಸಿಕೊಂಡವರು ಎಂದು ಹೇಳಲಾದ ಇಬ್ಬರು ಬಾಂಗ್ಲಾದೇಶೀಯರ ಪೈಕಿ ಹರಜೀತ್ ಎಂಬವರನ್ನು ಉಲ್ಲೇಖಿಸಿ ಮಾಧ್ಯಮಗಳು ಈ ವರದಿ ಮಾಡಿವೆ. ಅವರು ಭಾರತೀಯರನ್ನು ಅಪಹರಿಸಿ ಕೊಲ್ಲಲಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಆದರೆ ಅದನ್ನು ದೃಢ ಪಡಿಸುವಂತಹ ಯಾವುದೇ ಸಾಕ್ಷ್ಯಾರವೂ ಇಲ್ಲ ಎಂದು ಸುಷ್ಮಾ ಹೇಳಿದರು. 'ಒಂದು ಮೂಲ ದೃಢಪಡದೇ ಇರುವ ಈ ಸುದ್ದಿಯನ್ನು ನೀಡಿದೆ. ಆದರೆ ಉಳಿದ 6 ವಿವಿಧ ಮೂಲಗಳು ಅವರನ್ನು ಕೊಲ್ಲಲಾಗಿಲ್ಲ ಎಂದು ಸರ್ಕಾರಕ್ಕೆ ತಿಳಿಸಿವೆ' ಎಂದು ವಿದೇಶಾಂಗ ವ್ಯವಹಾರಗಳ ಸಚಿವೆ ನುಡಿದರು. ಕಾಂಗ್ರೆಸ್ ಉಪನಾಯಕ ಆನಂದ ಶರ್ಮ ಅವರು ರಾಜ್ಯಸಭೆಯಲ್ಲಿ ಮತ್ತು ಪಕ್ಷ ಸಹೋದ್ಯೋಗಿ ಜ್ಯೋತಿರಾದಿತ್ಯ ಸಿಂಧಿಯಾ ಅವರು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಉಭಯ ಸದನಗಳಿಗೂ ಸುಷ್ಮಾ ಒಂದೇ ಮಾದರಿಯ ಹೇಳಿಕೆ ನೀಡಿದರು. ಸರ್ಕಾರವು ಒಬ್ಬ ವ್ಯಕ್ತಿ ಹೇಳಿದ್ದನ್ನು ನಂಬಬೇಕೇ ಅಥವಾ ಇತರ ಆರು ಮೂಲಗಳನ್ನು ನಂಬಬೇಕೇ ಎಂದು ಸದನವನ್ನು ಪ್ರಶ್ನಿಸಿದ ಸುಷ್ಮಾ, ಜವಾಬ್ದಾರಿಯುತ ಸರ್ಕಾರವಾಗಿ ಸ್ಪಷ್ಟವಾದ ಸಾಕ್ಷ್ಯಲಭಿಸುವವರೆಗೂ ಈ ಬಗ್ಗೆ ಶೋಧಿಸುವುದನ್ನು ಬಿಟ್ಟುಕೊಡಲು ತಾನು ತಯಾರಿಲ್ಲ ಎಂದು ಹೇಳಿದರು. 'ಅವರ ಹೇಳಿಕೆಯನ್ನು ನಾವು ಅಂಗೀಕರಿಸುವುದಿಲ್ಲ. ನಮ್ಮ ಪ್ರಾರ್ಥನೆಗಳು ಮತ್ತು ಭರವಸೆಗಳು ಜೀವಂತವಾಗಿವೆ. ಸುರಕ್ಷಿತ ಬಿಡುಗಡೆಗಾಗಿ ನಮ್ಮ ಶೋಧ ಮುಂದುವರೆಯುತ್ತದೆ. ಅವರನ್ನು ಜೀವಂತವಾಗಿ ಶೋಧಿಸಿ, ಸುರಕ್ಷಿತವಾಗಿ ಮನೆಗಳಿಗೆ ಮುಟ್ಟಿಸುವ ಆಶಯ ಇಟ್ಟುಕೊಳ್ಳುವುದು ನನ್ನ ಕರ್ತವ್ಯ' ಎಂದು ಸ್ವರಾಜ್ ನುಡಿದರು.
2014: ನವದೆಹಲಿ: ಭಾರತೀಯ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಡಿಆರ್ಡಿಒ 2001ರಿಂದ 2,776 ವಿಜ್ಞಾನಿಗಳ ಕೊರತೆ ಎದುರಿಸುತ್ತಿದೆ ಎಂದು ಸರ್ಕಾರ ಹೇಳಿತು. ಈ ಕುರಿತು ಲೋಕಸಭೆಗೆ ಪತ್ರ ಮುಖೇನ ಮಾಹಿತಿ ನೀಡಿದ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್, ರಕ್ಷಣಾ ಕ್ಷೇತ್ರದಲ್ಲಿ ಸಾಕಷ್ಟು ಯೋಜನೆಗಳು ಅನುಷ್ಠಾನಗೊಂಡಿವೆ. ಆದರೆ ಸಾಕಷ್ಟು ಕೊರತೆಗಳನ್ನು ಎದುರಿಸುತ್ತಿದೆ. ಪ್ರಮುಖವಾಗಿ ಬೇಕಾದ ಜನಬಲದ ಕೊರತೆ ನೀಗಿಸಿಕೊಳ್ಳಬೇಕಿದೆ. ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಒಟ್ಟು 4966 ಹುದ್ದೆಗಳಿಗೆ ನೇಮಕ ಮಾಡಿಕೊಳ್ಳುವ ಅನಿವಾರ್ಯತೆಯ ಬಗ್ಗೆ ತಿಳಿಸಲಾಗಿದೆ. 2,776 ವಿಜ್ಞಾನಿಗಳ ನೇಮಕ ಕೂಡ ಇದರಲ್ಲೊಳಗೊಂಡಿರುತ್ತದೆ ಎಂದು ತಿಳಿಸಿದರು. ಹೊಸ ನೇಮಕಾತಿಗೆ ಒಪ್ಪಿಗೆ ಸಿಕ್ಕ ಬಳಿಕ ಐದು ಹಂತಗಳಲ್ಲಿ 2,776 ವಿಜ್ಞಾನಿಗಳ ನೇಮಕ ಪ್ರಕ್ರಿಯೆ ನಡೆಸಲಾಗುತ್ತದೆ. ಪ್ರತಿ ಹಂತದಲ್ಲಿ 555 ವಿಜ್ಞಾನಿಗಳಂತೆ ಪೂರ್ಣಗೊಳಿಸಲಾಗುತ್ತದೆ ಎಂದು ಅವರು ಹೇಳಿದರು.
2014: ಊಧಮ್ ಪುರ: ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿ ಕಳೆದ 30 ವರ್ಷಗಳಿಂದ ನಿಂತಲ್ಲಿಯೇ ನಿಂತುಕೊಂಡಿದೆ. ಇಲ್ಲಿನ ನಾಯಕರು ಭ್ರಷ್ಟಾಚಾರ ಮತ್ತು ಭಾವನಾತ್ಮಕ ಬ್ಲಾಕ್ ಮೇಲ್ ಮಾಡುತ್ತಾ ಕಾಲ ತಳ್ಳುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಹೇಳಿದರು. ಜಮ್ಮು ಮತ್ತು ಕಾಶ್ಮೀರದ ಎರಡನೇ ಹಂತದ ಚುನಾವಣೆಗೆ ಮುಂಚಿತವಾಗಿ ಊಧಮ್ ಪುರದಲ್ಲಿ ಬಿಜೆಪಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ 'ಭಾರತದಲ್ಲಿ ಒಂದು ಡಜನ್
ಪ್ರಧಾನಿಗಳಿದ್ದರು, ಆದರೆ ಯಾರಿಗೂ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲು ನನಗೆ ಲಭಿಸಿದಷ್ಟು ಅವಕಾಶವೇ ಸಿಗಲಿಲ್ಲ. ನಾನು ದೀಪಾವಳಿಯ ದಿನಗಳನ್ನು ಇಲ್ಲಿನ ಪ್ರವಾಹ ಸಂತ್ರಸ್ಥರ ಜೊತೆಗೆ ಕಳೆದೆ. ನನ್ನ ನಿರ್ಧಾರ ರಾಜಕೀಯ ಸಲುವಾಗಿ ಅಥವಾ ಓಟುಗಳನ್ನು ಗಳಿಸುವುದಕ್ಕಾಗಿ ಮಾಡಿದ್ದಲ್ಲ' ಎಂದು ಅವರು ನುಡಿದರು. '30 ವರ್ಷಗಳಲ್ಲಿ ಏನು ಆಗಿಲ್ಲವೋ ಅದನ್ನು ನಾನು ಮುಂದಿನ ಐದು ವರ್ಷಗಳಲ್ಲಿ ಮಾಡದಿದ್ದರೆ ನೀವು ನನ್ನನ್ನು ಜವಾಬ್ದಾರಿಯನ್ನಾಗಿ ಮಾಡಬಹುದು ಮತ್ತು ಪ್ರಶ್ನಿಸಲೂ ಬಹುದು. 30 ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಥಿ ಸ್ಥಗಿತಗೊಂಡಿದೆ. ಆಳುವ ಮತ್ತು ವಿರೋಧ ಪಕ್ಷಗಳ ನಾಯಕರು ಭ್ರಷ್ಟಾಚಾರ ಮತ್ತು ಭಾವನಾತ್ಮಕ ಬ್ಲಾಕ್ವೆುೕಲ್ ಮಾಡುವುದರಲ್ಲಿಯೇ ಮಗ್ನರಾಗಿದ್ದಾರೆ' ಎಂದು ಮೋದಿ ಹೇಳಿದರು. 'ನಾವು ಕಣಿವೆಯ ಅಭಿವೃದ್ಧಿಗಾಗಿ ದುಡಿಯಬೇಕಾಗಿದೆ. ಅದಕ್ಕಾಗಿ ನನಗೆ ನಿಮ್ಮ ನೆರವು ಬೇಕು' ಎಂದು ಪ್ರಧಾನಿ ನುಡಿದರು.
2014: ಕಠ್ಮಂಡು: ನೇಪಾಳದ ರಾಜಧಾನಿಯ ಮೂರು ದಿನಗಳ ಯಶಸ್ವೀ ಪ್ರವಾಸದ ಬಳಿಕ ಪ್ರಧಾನಿ ನರೇಂದ್ರ ಮೋದಿ ದೆಹಲಿಗೆ ವಾಪಸಾದರು. ಮೂರು ದಿನಗಳ ಪ್ರವಾಸದ ಅವಧಿಯಲ್ಲಿ 18ನೇ ಸಾರ್ಕ್ ಶೃಂಗಸಭೆಯಲ್ಲಿ ಪಾಲ್ಗೊಂಡಿದ್ದ ಮೋದಿ ಅವರು ಆರು ಸದಸ್ಯರ ಸಾರ್ಕ್ ರಾಷ್ಟ್ರಗಳ ನಾಯಕರ ಜೊತೆಗೆ ನೆರೆಹೊರೆ ಬಾಂಧವ್ಯ ವೃದ್ಧಿ ಹಾಗೂ ಅಭಿವೃದ್ಧಿಗೆ ಆದ್ಯತೆ ಮೇರೆಗೆ ದ್ವಿಪಕ್ಷೀಯ
ಮಾತುಕತೆಗಳನ್ನು ನಡೆಸಿದರು. ನಿರೀಕ್ಷೆಯಂತೆಯೇ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಪ್ ಜೊತೆಗೆ ಪ್ರತ್ಯೇಕ ಮಾತುಕತೆಯನ್ನು ಅವರು ನಡೆಸಲಿಲ್ಲ. ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನೇಪಾಳಕ್ಕೆ ಎರಡನೇ ಬಾರಿಗೆ ಭೇಟಿ ನೀಡಿದ ಪ್ರಧಾನಿ ಟ್ವಿಟ್ಟರ್ನಲ್ಲಿ ನೇಪಾಳಕ್ಕೆ ಸಂಬಂಧಿಸಿದಂತೆ ತಮ್ಮ ಭಾವನೆಗಳನ್ನು ಹಂಚಿಕೊಂಡರು. 'ನೇಪಾಳಕ್ಕೆ ಮತ್ತೊಮ್ಮೆ ಬಂದಿರುವುದು ಅದ್ಭುತ. ಇಲ್ಲಿ ಲಭಿಸಿದ ಆತ್ಮೀಯ ಸ್ವಾಗತವನ್ನು ಎಂದಿಗೂ ಮರೆಯಲಾರೆ' ಎಂದು ನೇಪಾಳದ ರಾಜಧಾನಿಯಲ್ಲಿ ಬಂದಿಳಿದೊಡನೆಯೇ ಅವರು ಟ್ವೀಟ್ ಮಾಡಿದ್ದರು. ನೇಪಾಳದ ಪ್ರಧಾನಿ ಸುಶೀಲ್ ಕೊಯಿರಾಲ ಜೊತೆಗಿನ ಮಾತುಕತೆ ಕಾಲದಲ್ಲಿ ಪ್ರವಾಸೋದ್ಯಮ ಮತ್ತು ಯುವ ವಿನಿಮಯ ಹಾಗೂ ಮೋಟಾರು ವಾಹನ ಒಪ್ಪಂದ ಸೇರಿದಂತೆ ಉಭಯ ರಾಷ್ಟ್ರಗಳ ನಡುವಣ ಬಾಂಧ್ಯವ ವೃದ್ಧಿಗೆ ನೆರವಾಗುವ ಹಲವಾರು ಒಪ್ಪಂದಗಳಿಗೆ ಸಹಿ ಹಾಕಲಾಯಿತು. ಅಯೋಧ್ಯಾ-ಜನಕಪುರ, ಕಠ್ಮಂಡು- ವಾರಾಣಸಿ ಹಾಗೂ ಲುಂಬಿನಿ-ಬುದ್ಧ ಗಯಾ ಮಧ್ಯೆ ಪರಸ್ಪರ ಸಹಕಾರ ಅಭಿವೃದ್ಧಿಯ ಮೂರು ಅವಳಿನಗರ ಒಪ್ಪಮದಗಳಿಗೆ ಸಹಿಹಾಕಲಾಯಿತು. ಧ್ರುವ ಸುಧಾರಿತ ಲಘು ಹೆಲಿಕಾಪ್ಟರ್ (ಎಎಲ್ಎಚ್) ಮಾರ್ಕ್ 3ನ್ನು ಪ್ರಧಾನಿ ಮೋದಿ ನೇಪಾಳಿ ಸೇನೆಗೆ ಹಸ್ತಾಂತರಿಸಿದರು. ಪ್ರಧಾನಿ ಮೋದಿ ಅವರು 150 ಕೋಟಿ ರೂಪಾಯಿ ವೆಚ್ಚದ ಆಘಾತ ಕೇಂದ್ರ (ಟ್ರೂಮಾ ಸೆಂಟರ್)ವನ್ನೂ ನೇಪಾಳದಲ್ಲಿ ಉದ್ಘಾಟಿಸಿದರು. ಕಠ್ಮಂಡುವಿನಿಂದ ನವದೆಹಲಿಗೆ ಬಸ್ ಸೇವೆಯನ್ನೂ ಉದ್ಘಾಟಿಸಲಾಯಿತು.
2014: ನವದೆಹಲಿ: ಎಬೋಲ ಬಾಧಿತ ದೇಶಗಳಿಂದ ಬರುವವರು ಎಬೋಲ ಇಲ್ಲ ಎಂಬುದನ್ನು ದೃಢಪಡಿಸುವ ಪ್ರಮಾಣಪತ್ರ ತರಬೇಕೆಂದು ಭಾರತ ಹೇಳಿತು. ಎಬೋಲ ಗುಣಮುಖನಾಗಿ ಬಂದ ವ್ಯಕ್ತಿಯೊಬ್ಬನ ವೀರ್ಯದಲ್ಲಿ ಎಬೋಲ ವೈರಾಣು ಪತ್ತೆಯಾದ ಬಳಿಕ ರೋಗದ ಹಾವಳಿಯಿರುವ ದೇಶದಿಂದ ಬರುವವರು ತಮ್ಮ ದೇಹದ ಸ್ರಾವಗಳಲ್ಲಿ ಎಬೋಲ ವೈರಾಣು ಇಲ್ಲ ಎನ್ನುವುದನ್ನು ದೃಢಪಡಿಸುವ ವೈದ್ಯಕೀಯ ಪ್ರಮಾಣಪತ್ರ ತರುವುದನ್ನು ಕಡ್ಡಾಯಗೊಳಿಸಲು ನಿರ್ಧರಿಸಿತು. ಎಬೋಲದಿಂದ ಗುಣಮುಖರಾಗಿದ್ದರೂ ಸಂಬಂಧಿಸಿದ ದೇಶ ಅವರಿಗೆ ನೋ ಎಬೋಲ ಪ್ರಮಾಣಪತ್ರ ನೀಡಿರದಿದ್ದರೆ ಅಂತವರು ಆಸ್ಪತ್ರೆಯಿಂದ ಬಿಡುಗಡೆಯಾದ 90 ದಿನಗಳ ನಂತರವೇ ಭಾರತಕ್ಕೆ ಬರಬೇಕು ಎಂದು ಆರೋಗ್ಯ ಸಚಿವ ಜೆ. ಪಿ. ನಡ್ಡ ಲೋಕಸಭೆಗೆ ತಿಳಿಸಿದರು. ನೋ ಎಬೋಲ ಪ್ರಮಾಣಪತ್ರದ ಬಗ್ಗೆ ಭಾರತ ಐವರಿ ಕೋಸ್ಟ್, ಸೆನೆಗಲ್, ನೈಜೀರಿಯ, ಘಾನಾ ಮತ್ತು ನೈಗರ್ ದೇಶಗಳಲ್ಲಿರುವ ತನ್ನ ದೂತವಾಸಕ್ಕೆ ಮಾಹಿತಿ ನೀಡಿದೆ.
2014: ತಿರುಚಿನಾಪಲ್ಲಿ: ಇತ್ತೀಚೆಗಷ್ಟೇ ಕಾಂಗ್ರೆಸ್ಗೆ ಗುಡ್ಬೈ ಹೇಳಿದ ಮಾಜಿ ಕೇಂದ್ರ ಸಚಿವ ಜಿ.ಕೆ.ವಾಸನ್ ಹೊಸ ಪಕ್ಷದ ಹೆಸರು ಬಿಡುಗಡೆ ಮಾಡಿದರು. ತಂದೆ ಜಿ.ಕೆ. ಮೂಪ್ಪನಾರ್ ಕಟ್ಟಿ ಬೆಳೆಸಿದ್ದ ತಮಿಳು ಮಾನಿಲ ಕಾಂಗ್ರೆಸ್ ಪಕ್ಷವನ್ನೇ ಮತ್ತೆ ಬೆಳೆಸಲು ಮುಂದಾದ ವಾಸನ್, ತಂದೆಯ ಹೆಸರನ್ನು ಸೇರ್ಪಡೆ ಮಾಡಿ 'ಮೂಪನಾರ್ ತಮಿಳ್ ಮಾನಿಲ ಕಾಂಗ್ರೆಸ್' ಎಂದು ಪಕ್ಷಕ್ಕೆ ಮರು ನಾಮಕರಣ ಮಾಡಿದರು. ಈದಿನ ನಡೆದ ಸಮಾರಂಭದಲ್ಲಿ ಪಕ್ಷದ ಹೊಸ ಹೆಸರು ಪ್ರಕಟಿಸಲಾಯಿತು. ಸಮಾರಂಭದಲ್ಲಿ 50,000ಕ್ಕೂ ಹೆಚ್ಚು ಬೆಂಬಲಿಗರು ಪಾಲ್ಗೊಂಡಿದ್ದರು.
2014: ನವದೆಹಲಿ/ಕೋಲ್ಕತ: ಭಾರತೀಯ ಸೇನಾ ಪಡೆಯ ಗಾರ್ಡನ್ ರೀಚ್ ಶಿಪ್ಬಿಲ್ಡರ್ಸ್ ಆಂಡ್ ಇಂಜಿನಿಯರ್ಸ್(ಜಿಆರ್ಎಸ್ಇ) ಇದೇ ಮೊದಲ ಬಾರಿ ಸಮರನೌಕೆಯನ್ನು ಮಾರಿಷಸ್ಗೆ ರಫ್ತು ಮಾಡಲು ಮುಂದಾಯಿತು. 'ಸಿಜಿಎಸ್ ಬರಾಕುಡಾ' ಸಮರನೌಕೆಯನ್ನು ಮುಂದಿನ ಡಿಸೆಂಬರ್ನಲ್ಲಿ ರಫ್ತು ಮಾಡಲಾಗುತ್ತಿದೆ ಎಂದು ರೇರ್ ಅಡ್ಮಿರಲ್ ಎ.ಕೆ. ವರ್ವ ಮಾಹಿತಿ ನೀಡಿದರು. 300 ಕೋಟಿ ರೂ. ಮೌಲ್ಯದ ಸಮರನೌಕೆ ರಫ್ತು ರಕ್ಷಣಾ ಕ್ಷೇತ್ರದಲ್ಲಾಗುತ್ತಿರುವ ಪ್ರಮುಖ ಬೆಳವಣಿಗೆಯಾಗಿದ್ದು, ಆಫ್ರಿಕಾ, ಲ್ಯಾಟಿನ್ ಅಮೆರಿಕಕ್ಕೂ ರಕ್ಷಣಾ ಸಾಮಗ್ರಿ ರಫ್ತು ಮಾಡುವ ಬಗ್ಗೆ ಮಾತುಕತೆಗಳು ನಡೆಯುತ್ತಿವೆ ಎಂದು ಅವರು ತಿಳಿಸಿದರು. 2011ರಿಂದ ಭಾರತ 1800 ಕೋಟಿ ರೂ. ಮೌಲ್ಯದ ರಕ್ಷಣಾ ಸಾಮಗ್ರಿಗಳನ್ನು ವಿದೇಶಗಳಿಗೆ ರಫ್ತು ಮಾಡಿದೆ.
ಎಚ್ಎಎಲ್ ಜತೆ ಒಪ್ಪಂದ: ಅಂತೆಯೇ ಎಚ್ಎಎಲ್ ಜತೆ ಅಂದಾಜು 100 ಕೋಟಿ ರೂ. ಮೌಲ್ಯದ ಒಪ್ಪಂದಕ್ಕೂ ಮಾರಿಷಸ್ ಸರ್ಕಾರ ಸಹಿ ಮಾಡಿತು. ಎಚ್ಎಎಲ್ ವ್ಯವಸ್ಥಾಪಕ ನಿರ್ದೇಶಕ ಎಸ್. ಸುಬ್ರಹ್ಮಣ್ಯನ್ ಮತ್ತು ಮಾರಿಷಸ್ನ ರಾಜಧಾನಿ ಪೋರ್ಟ್ ಲೂಯಿಸ್ನಲ್ಲಿ ಈ ಒಪ್ಪಂದ ಏರ್ಪಟ್ಟಿತು. ಪ್ರಧಾನ ಮಂತ್ರಿ ಕಚೇರಿಯ ಹಿರಿಯ ಕಾರ್ಯನಿರ್ವಹಣಾಧಿಕಾರಿ ಕನ್ ಓಯಿ ಫಾಂಗ್ ವೆಂಗ್ ಪೂರುನ್ ಒಪ್ಪಂದಕ್ಕೆ ಸಹಿ ಮಾಡಿದ್ದಾರೆ ಎಂದು ಎಚ್ಎಎಲ್ನ ಚೇರ್ಮನ್ ಆರ್ಕೆ ತ್ಯಾಗಿ ತಿಳಿಸಿದರು.
2014: ಬೆಂಗಳೂರು: 12 ಬಾರಿ ವಿಶ್ವ ಚಾಂಪಿಯನ್ ಆದ ಪಂಕಜ್ ಆಡ್ವಾಣಿ ಅವರನ್ನು ಚೀನಾದ 14 ವರ್ಷ ವಯಸ್ಸಿನ ಯಾನ್ ಬಿಂಗ್ಟೋ ಮಣಿಸುವ ಮೂಲಕ ಅಚ್ಚರಿಯ ಗೆಲುವು ಸಾಧಿಸಿದರು. ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಐಬಿಎಸ್ಎಫ್ ವಿಶ್ವ ಸ್ನೂಕರ್ ಟೂರ್ನಿಯಲ್ಲಿ ಈದಿನ ನಡೆದ ಪಂದ್ಯದಲ್ಲಿ ಯಾನ್ 6-4 ಅಂತರದಿಂದ ಪಂಕಜ್ ಆಡ್ವಾಣಿ ಅವರನ್ನು ಮಣಿಸಿದರು. ಟೂರ್ನಿಯ ಆರಂಭದಿಂದ ಉತ್ತಮ ಪ್ರದರ್ಶನ ನೀಡುತ್ತ ಬಂದ ಪಂಕಜ್ ಆಡ್ವಾಣಿ ಚೀನಾದ ಬಾಲಕನ ವಿರುದ್ಧ ಆಡುವಾಗ ಏಕಚಿತ್ತದ ಪ್ರದರ್ಶನ ನೀಡುವಲ್ಲಿ ವಿಫಲವಾದರು. ಮೊದಲ ಫ್ರೇಮ್ ಸ್ಪರ್ಧೆಯಲ್ಲಿ 38-63ರಿಂದ ಸೋಲನುಭವಿಸಿದರು. ಆ ನಂತರದ ಫ್ರೇಮ್ಲ್ಲಿ 47-75 ಅಂತರದಿಂದ ಪರಾಭವಗೊಂಡರು. ನಂತರದ ಮೂರು ಫ್ರೇಮ್ಲ್ಲಿ ಪಂಕಜ್ 107-0, 68-10 ಮತ್ತು 60-16 ಅಂತರದಿಂದ ಗೆಲುವು ಸಾಧಿಸಿ 3-2ರಿಂದ ಮುನ್ನಡೆ ಕಂಡುಕೊಂಡರು. ಆದರೆ 6ನೇ ಫ್ರೇಮ್ಲ್ಲಿ ಪಂಕಜ್ ನಿರೀಕ್ಷೆಯ ಆಟ ಪ್ರದರ್ಶಿಸದೆ ಎದುರಾಳಿಯ ಜಯಕ್ಕೆ ಕಾರಣರಾದರು. ಯಾನ್ 83-4ರಿಂದ ಜಯಿಸಿ 3-3 ಸಮಬಲ ಸಾಧಿಸಿದರು. ರೋಚಕ ಘಟ್ಟಕ್ಕೆ ತಲುಪಿದ್ದ ಸೆಣಸಾಟದ 7ನೇ ಫ್ರೇಮ್ಲ್ಲಿ ಪಂಕಜ್ ಹಿಡಿತ ಸಾಧಿಸಿ 89-40ರಿಂದ ಗೆದ್ದು ಮುನ್ನಡೆ ಕಂಡುಕೊಂಡರು. ಯಾನ್ ಹೋರಾಟ ಅಷ್ಟಕ್ಕೇ ನಿಂತಿರಲಿಲ್ಲ. ಅಂತಿಮ ಮೂರೂ ಫ್ರೇಮ್ಲ್ಲಿ 40-67, 26-71 ಮತ್ತು 40-59 ಅಂತರದಿಂದ ಯಾನ್ ಬಲಿಷ್ಠ ಎದುರಾಳಿಯನ್ನು ಮಣಿಸಿ ಜಯಭೇರಿ ಬಾರಿಸಿ ಕೇಕೆ ಹಾಕಿದರು. ಸೋಲಿನ ಬಳಿಕ ಪ್ರತಿಕ್ರಿಯಿಸಿದ ಕರ್ನಾಟಕದ ಶ್ರೇಷ್ಠ ಆಟಗಾರ ಪಂಕಜ್, ಏಕಾಗ್ರತೆಗೆ ಪ್ರೇಕ್ಷಕರಿಂದ ವಿಪರೀತವಾದ ಅಡಚಣೆ ಉಂಟಾಯಿತು. ಇದರಿಂದಾಗಿ ಉತ್ತಮ ಆಟ ಪ್ರದರ್ಶಿಸಲು ಸಾಧ್ಯವಾಗಲಿಲ್ಲ. ಯಾನ್ ಶ್ರೇಷ್ಠ ಆಟ ಪ್ರದರ್ಶಿಸಿದ್ದಾನೆಂದು ಹೇಳಲು ಸಾಧ್ಯವಿಲ್ಲ. ಅವರ ಪ್ರದರ್ಶನದಿಂದ ನಾನು ಕಲಿಯಬೇಕಾಗಿದ್ದಿಲ್ಲ ಎಂದು ಹೇಳಿದ್ದಾರೆ.
2008: 2007ರಲ್ಲಿ ವಿಶ್ವದ ಹಿರಿಯ ಅಜ್ಜಿ ಎನ್ನುವ ಖ್ಯಾತಿಗೆ ಪಾತ್ರರಾದ ಈಡನ್ ಪಾರ್ಕರ್ ಅವರು 115 ವರ್ಷ ವಯಸ್ಸಿನಲ್ಲಿ ಈದಿನ ಶೆಲ್‌ಬೈವಿಲ್ಲೆಯಲ್ಲಿ ನಿಧನರಾದರು. ಇಂಡಿಯಾನಾ ಪ್ರದೇಶದ ಶೆಲ್‌ಬೈವಿಲ್ಲೆಯಲ್ಲಿ ಇರುವ ವೃದ್ಧಾಶ್ರಮದಲ್ಲಿ ಕೊನೆಯುಸಿರೆಳೆದಾಗ ಅವರ ಆಯಸ್ಸು ಬರೋಬ್ಬರಿ 115 ವರ್ಷ 220 ದಿನಗಳಾಗಿದ್ದವು ಎಂದು ಗಿನ್ನೆಸ್ ವಿಶ್ವ ದಾಖಲೆಯ ಸಲಹೆಗಾರ ರಾಬರ್ಟ್ ಯಂಗ್ ತಿಳಿಸಿದರು. ಪಾರ್ಕರ್ ಅವರು 1893ರ ಏಪ್ರಿಲ್ 20ರಂದು ಮಧ್ಯೆ ಇಂಡಿಯಾನಾದಲ್ಲಿ ಜನಿಸಿದ್ದರು. 2007ರಲ್ಲಿ ಜಪಾನಿನ ಯೊನ್ ಮಿನಗವಾ ಅವರು ಮೃತರಾದ ನಂತರ ಪಾರ್ಕರ್ ಅವರು ವಿಶ್ವದ ಹಿರಿಯ ವ್ಯಕ್ತಿಯಾಗಿ ದಾಖಲೆಯ ಪುಟಗಳಲ್ಲಿ ಸೇರಿದರು. ಮಿನಗವಾ ಅವರು ಪಾರ್ಕರ್ ಅವರಿಗಿಂತ ನಾಲ್ಕು ತಿಂಗಳು ಹಿರಿಯರಾಗಿದ್ದರು. ಈಡನ್ ಪಾರ್ಕರ್ ಅವರ ಪತಿ ಇರ್ಲ್ ಪಾರ್ಕರ್ 1939ರಲ್ಲಿ ಹೃದಯಾಘಾತದಿಂದ ಮೃತರಾಗಿದ್ದರು. 100 ವರ್ಷ ವಯಸ್ಸಿನವರೆಗೂ ಈಡನ್ ಏಕಾಂಗಿಯಾಗಿಯೇ ಬದುಕಿದರು. ನಂತರ ಮಗನ ಮನೆಯಲ್ಲಿ ಸ್ವಲ್ಪ ದಿನಗಳ ಕಾಲ ಇದ್ದು ಆ ಬಳಿಕ ವೃದ್ಧಾಶ್ರಮ ಸೇರಿದ್ದರು. ಈಡನ್ ಪಾರ್ಕರ್ ಅವರಿಗೆ ಇಬ್ಬರು ಮಕ್ಕಳು, ಐವರು ಮೊಮ್ಮಕ್ಕಳು, 13 ಜನ ಮರಿಮಕ್ಕಳು ಹಾಗೂ 13 ಜನ ಮರಿಮಕ್ಕಳ ಮಕ್ಕಳು. ಅವರು ಯಾವತ್ತೂ ಮದ್ಯ ಸೇವನೆಯಾಗಲಿ ಅಥವಾ ಧೂಮಪಾನ ಮಾಡುವುದಾಗಲಿ ಮಾಡಿರಲಿಲ್ಲ.
2008: ಸೋಮಾಲಿಯಾ ಕಡಲ್ಗಳ್ಳರ ಅಟ್ಟಹಾಸ ಮತ್ತೆ ಮುಂದುವರಿಯಿತು. ರಾಸಾಯನಿಕ ವಸ್ತು ಸಾಗಿಸುತ್ತಿದ್ದ ಲೆಬನಾನ್ ದೇಶಕ್ಕೆ ಸೇರಿದ ಹಡಗನ್ನು ಕಡಲ್ಗಳ್ಳರು ಅಪಹರಿಸಿದರು. ಅಪಹೃತರಲ್ಲಿ 25 ಜನ ಭಾರತೀಯ ಸಿಬ್ಬಂದಿ. ಹಡಗಿನಿಂದ ಸಮುದ್ರಕ್ಕೆ ಜಿಗಿದಿದ್ದ ಬ್ರಿಟಿಷ್ ಸುರಕ್ಷಾ ಪಡೆಯ ಮೂವರು ಯೋಧರನ್ನು ಹೆಲಿಕಾಪ್ಟರ್ ಬಳಸಿ ಪಾರು ಮಾಡಲಾಯಿತು ಎಂದು ಅಧಿಕಾರಿಗಳು ತಿಳಿಸಿದರು. ಸೋಮಾಲಿಯಾ ಪ್ರದೇಶದಲ್ಲಿ ಈ ವರ್ಷ ಅಪಹರಣಕ್ಕೀಡಾದ 97ನೇ ಹಡಗು ಇದು.
2008: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಮೂರು ದಿನಗಳ ಕಾಲ ನಡೆಯುವ ಕನ್ನಡ ನಾಡು- ನುಡಿಯ ರಾಷ್ಟ್ರೀಯ ಸಮ್ಮೇಳನ 'ಆಳ್ವಾಸ್ ನುಡಿಸಿರಿ- 2008' ಈದಿನ ಮೂಡುಬಿದಿರೆ ವಿದ್ಯಾಗಿರಿಯ ರತ್ನಾಕರ ವರ್ಣಿ ವೇದಿಕೆಯಲ್ಲಿ ಆರಂಭಗೊಂಡಿತು. 'ಕನ್ನಡ ಮನಸ್ಸು- ಶಕ್ತಿ ಮತ್ತು ವ್ಯಾಪ್ತಿ' ಎಂಬ ಪರಿಕಲ್ಪನೆಯಲ್ಲಿ 'ಸಾಹಿತ್ಯ- ಸಂಸ್ಕೃತಿ'ಗೆ ಸಂಬಂಧಿಸಿದ ಈ ಕನ್ನಡ ಉತ್ಸವವನ್ನು ಕವಿ ಡಾ. ಚೆನ್ನವೀರ ಕಣವಿ ಅವರ ಅಧ್ಯಕ್ಷತೆಯಲ್ಲಿ ಡಾ.ಕೆ.ಎಸ್. ನಿಸಾರ್ ಅಹಮ್ಮದ್ ಉದ್ಘಾಟಿಸಿದರು.
2007: ಕರ್ನಾಟಕ ರಾಜ್ಯ ವಿಧಾನಸಭೆಯನ್ನು ವಿಸರ್ಜಿಸಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು ಆದೇಶ ಹೊರಡಿಸಿದರು. ಇದರೊಂದಿಗೆ ಎರಡು ತಿಂಗಳಿನಿಂದ ರಾಜ್ಯದಲ್ಲಿ ತಲೆದೋರಿದ್ದ ರಾಜಕೀಯ ಗೊಂದಲಗಳಿಗೆ ತೆರೆ ಬಿತ್ತು.
2007: ಚೆಲುವು, ಅನುಭವ, ಚಿಂತನೆ ಇವೆಲ್ಲದರ ಖಣಿಯಾದ ಸೂಸಾನ್ ಪೋಲ್ಗಾರ್ (http://in.youtube.com/watch?v=4VlGGM5WYZo) ಅವರು ಈದಿನ ಬೆಂಗಳೂರಿನಲ್ಲಿ ನಡೆದ `ನ್ಯಾಷನಲ್ ಜಿಯೊಗ್ರಾಫಿಕ್ ಚಾನೆಲ್'ನ `ಮೈ ಬ್ರಿಲಿಯಂಟ್ ಬ್ರೈನ್' ಕಾರ್ಯಕ್ರಮದಲ್ಲಿ ಏಕಕಾಲಕ್ಕೆ ಇಪ್ಪತ್ತೊಂದು ಮಂದಿ ಆಟಗಾರರೊಂದಿಗೆ ಸ್ನೇಹ ಪರ ಚೆಸ್ ಆಡಿ, ಅತ್ಯುತ್ತಮ ಚಿಂತನಾ ಶಕ್ತಿಯ ಜೊತೆಯಲ್ಲಿ ಎದುರಾಳಿಯ ಮನಸ್ಸನ್ನು ಅರಿತು `ಕಾಯಿ'ಗಳನ್ನು ನಡೆಸುವ ಸಾಮರ್ಥ್ಯ ಇದ್ದರೆ ಎಷ್ಟೇ ಸಂಖ್ಯೆಯ ಸ್ಪರ್ಧಿಗಳಿದ್ದರೂ ಅವರನ್ನು ಸೋಲಿಸಬಹುದು ಎಂದು ತೋರಿಸಿದರು.
2007: ದಿನ ಪತ್ರಿಕೆಗಳಲ್ಲಿ ತಮ್ಮ ಬಗ್ಗೆ ಬಂದ ಲೇಖನಗಳು ಹಾಗೂ ಛಾಯಾಚಿತ್ರಗಳನ್ನು ಸಂಗ್ರಹಿಸುವ ಮೂಲಕ ಕೇರಳದ ಕೊಚ್ಚಿಯ ವಯೋವೃದ್ಧ, ಮಾಜಿ ಕಾಂಗ್ರೆಸ್ ಧುರೀಣ 78 ರ ಹರೆಯದ ಅಬ್ರಹಾಂ ಪುತುಸ್ಸೆರಿ ಲಿಮ್ಕಾ ದಾಖಲೆ ಸ್ಥಾಪಿಸಿದರು. 60 ವರ್ಷಗಳ ಸಾರ್ವಜನಿಕ ಬದುಕಿನಲ್ಲಿ ತಮ್ಮ ಕುರಿತು ವಿವಿಧ ದಿನಪತ್ರಿಕೆಗಳಲ್ಲಿ ಬಂದ 2000 ಕ್ಕೂ ಹೆಚ್ಚು ವರದಿಗಳು ಹಾಗೂ ಛಾಯಾಚಿತ್ರಗಳನ್ನು ಇವರು ಸಂಗ್ರಹಿಸಿದ್ದಾರೆ. 1948ರಿಂದ ಸಂಗ್ರಹಿಸಿದ ವರದಿಗಳು ಹಾಗೂ ಛಾಯಾಚಿತ್ರಗಳ 480 ಪುಟುಗಳ ಆಲ್ಬಂ ತಯಾರಿಸಿದ್ದಾರೆ. ಇದರ ತೂಕ 4.5 ಕೆಜಿ.
2007: ಗುಜರಾತಿನಲ್ಲಿ ವಿಧಾನಸಭೆ ಚುನಾವಣಾ ಸಿದ್ಧತೆಗಳು ಆರಂಭವಾದವು. ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಮಣಿನಗರ ವಿಧಾನಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. 2002ರಲ್ಲಿ ಗುಜರಾತಿನಲ್ಲಿ ಕೋಮುಗಲಭೆ ನಡೆದ ನಂತರ ಚುನಾವಣೆ ನಡೆದಿತ್ತು. ಆಗ ಕೆಲವು ಪ್ರದೇಶಗಳಲ್ಲಿ ಹಿಂದುತ್ವದ ಅಲೆ ಜೋರಾಗಿತ್ತು. ಹಿಂದೂಗಳೇ ಬಹುಸಂಖ್ಯಾತರಾದ ಮಣಿನಗರ ಕ್ಷೇತ್ರದಿಂದ ಮೋದಿ ಜಯಭೇರಿ ಬಾರಿಸಿದ್ದರು.
2007: 1993ರ ಮುಂಬೈ ಸರಣಿ ಸ್ಫೋಟ ಪ್ರಕರಣದಲ್ಲಿ ಸುಪ್ರೀಂಕೋರ್ಟಿನಿಂದ ಜಾಮೀನು ಪಡೆದ ನಟ ಸಂಜಯ್ ದತ್ ಹಾಗೂ ಇತರ 16 ಅಪರಾಧಿಗಳ ಬಿಡುಗಡೆಗೆ ವಿಶೇಷ ಟಾಡಾ ನ್ಯಾಯಾಲಯ ಆದೇಶ ನೀಡಿತು. ಸರಣಿ ಸ್ಫೋಟ ಪ್ರಕರಣದಲ್ಲಿ ಅಕ್ರಮ ಶಸ್ತ್ರಾಸ್ತ್ರ ಹೊಂದಿದ್ದ ಆರೋಪದ ಮೇಲೆ ಸಂಜಯ್ ದತ್ ಅವರಿಗೆ ಟಾಡಾ ಕೋರ್ಟ್ 6 ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಅಕ್ಟೋಬರ್ 22ರಿಂದ ಅವರು ಯೆರವಾಡ ಜೈಲಿನಲ್ಲಿ ಇರಿಸಲಾಗಿತ್ತು. ಪ್ರಕರಣದ ಇತರ ಆರೋಪಿಗಳನ್ನು ಮಹಾರಾಷ್ಟ್ರದ ವಿವಿಧ ಜೈಲುಗಳಲ್ಲಿ ಇರಿಸಲಾಗಿತ್ತು.ಸಂಜಯ್ ಹಾಗೂ ಇತರ 16 ಮಂದಿಗೆ ನವೆಂಬರ್ 27ರಂದು ಸುಪ್ರೀಂಕೋರ್ಟ್ ಜಾಮೀನು ನೀಡಿತು. 1995 ರಲ್ಲಿ ಮೊದಲ ಬಾರಿ ಸುಪ್ರೀಂಕೋರ್ಟ್ ಜಾಮೀನು ನೀಡಿದಾಗ ಸಂಜಯ್ ದತ್ 5 ಲಕ್ಷ ರೂ ಭದ್ರತಾ ಮುಚ್ಚಳಿಕೆ ನೀಡಿದ್ದರು. ಈಗಲೂ ಅಷ್ಟೇ ಮೊತ್ತದ ಹಣ ನೀಡಬೇಕು ಎಂದು ನ್ಯಾಯಾಧೀಶ ಕೋಡೆ ಸೂಚಿಸಿದರು.
2007: ಸ್ವತಂತ್ರ ಪ್ಯಾಲೆಸ್ಟೈನ್ ರಾಜ್ಯ ಸ್ಥಾಪನೆ ಕುರಿತಂತೆ ಸ್ಥಗಿತವಾಗಿದ್ದ ದೀರ್ಘಕಾಲೀನ ಮಾತುಕತೆಯನ್ನು ಪುನರಾರಂಭಿಸಲು ಇಸ್ರೇಲ್ ಮತ್ತು ಪ್ಯಾಲೆಸ್ಟೀನ್ ನಾಯಕರು ಒಪ್ಪಿಕೊಂಡರು. ಮುಂದಿನ ವರ್ಷದ ಅಂತ್ಯದೊಳಗಾಗಿ ಸ್ವತಂತ್ರ ಪ್ಯಾಲೆಸ್ಟೈನಿ ರಾಜ್ಯ ಸ್ಥಾಪಿಸಲು ಇಸ್ರೇಲ್ ಪ್ರಧಾನಿ ಎಹುದ್ ಓಲ್ಮರ್ಟ್ ಮತ್ತು ಪ್ಯಾಲೆಸ್ಟೈನ್ ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರು ಪರಸ್ಪರ ಒಪ್ಪಿಗೆ ನೀಡಿದ್ದಾರೆ' ಎಂದು ಅಮೆರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯು ಬುಷ್ ಮೇರಿ ಲ್ಯಾಂಡಿನ ಅನ್ನಾಪೊಲಿಸ್ನಲ್ಲಿ ಹೇಳಿದರು.
2007: ಪಾಕಿಸ್ಥಾನದ ಸೇನಾ ಮುಖ್ಯಸ್ಥನ ಹುದ್ದೆಯನ್ನು ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಕೊನೆಗೂ ತ್ಯಜಿಸಿದರು. ಪುನಃ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುವ ಒಂದು ದಿನ ಮುಂಚಿತವಾಗಿ ಮುಷರಫ್ ಅವರು ಸೇನಾ ಮುಖ್ಯಸ್ಥನ ಸ್ಥಾನವನ್ನು ಇಸ್ಲಾಮಾಬಾದಿನಲ್ಲಿ ಜನರಲ್ ಅಷ್ಫಾಕ್ ಪರ್ವೇಜ್ ಕಿಯಾನಿ ಅವರಿಗೆ ವಹಿಸಿಕೊಟ್ಟರು.
2007: ಕಿರ್ಗಿಜ್ ಸ್ಥಾನದ ಪ್ರಧಾನಿ ಅಲ್ಮಜ್ ಬೆಕ್ ಅತಾಂಬೆಯೆವ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ಈ ರಾಜೀನಾಮೆಯನ್ನು ಅಧ್ಯಕ್ಷ ಕುರ್ಮನ್ ಬೆಕ್ ಬಕಿಯೆವ್ ಅಂಗೀಕರಿಸಿದರು.
2007: 2001ರಲ್ಲಿ ಬಹು ಚರ್ಚೆಗೆ ಗ್ರಾಸವಾಗಿದ್ದ `ಬಿಲ್ಡರ್' ಶ್ರೀನಿವಾಸ ಅವರ ಕೊಲೆ ಪ್ರಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ ಆರೋಪಕ್ಕೆ ಒಳಗಾಗಿದ್ದ ಮುತ್ತಪ್ಪ ರೈ ಅವರನ್ನು ಆರೋಪ ಮುಕ್ತಗೊಳಿಸಿ ಸೆಷನ್ಸ್ ನ್ಯಾಯಾಲಯ ಹೊರಡಿಸಿದ ಆದೇಶವನ್ನು ಹೈಕೋರ್ಟ್ ಊರ್ಜಿತಗೊಳಿಸಿತು.
2007: ತರಗತಿ ಬೋಧನೆಯಲ್ಲಿ ತಂತ್ರಜ್ಞಾನವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಲು ನೆರವಾಗುವ, ಬೋಧನೆ ಮತ್ತು ಕಲಿಕೆಯನ್ನು ಹೆಚ್ಚು ಸುಲಲಿತಗೊಳಿಸುವ ಸಾಫ್ಟ್ಟವೇರನ್ನು ಬೆಂಗಳೂರಿನಲ್ಲಿ ಪ್ರೊಮೆಥಿಯಾನ್ ದೇಶಿ ಮಾರುಕಟ್ಟೆಗೆ ಬಿಡುಗಡೆ ಮಾಡಿತು. ವಿಭಿನ್ನ ಬಗೆಯ ತಂತ್ರಜ್ಞಾನ ಆಧಾರಿತ ಬೋಧನಾ ವಿಧಾನದ ಮೂಲಕ ಮಕ್ಕಳ ಗಮನ ಕೇಂದ್ರಿಕರಿಸುತ್ತಲೇ ಪರಿಣಾಮಕಾರಿ ಕಲಿಕೆಗೆ ಈ ಶ್ವೇತ ಹಲಗೆ (ವ್ಹೈಟ್ ಬೋರ್ಡ್) ಶ್ರೇಣಿಯ ಉತ್ಪನ್ನಗಳು ಶಿಕ್ಷಣ ರಂಗದಲ್ಲಿ ಹೊಸ ಅಲೆ ಮೂಡಿಸಲಿವೆ ಎಂಬುದು ಕಂಪೆನಿಯ ಅಂತಾರಾಷ್ಟ್ರೀಯ ಮಾರಾಟ ವ್ಯವಸ್ಥಾಪಕ ಪೀಟರ್ ಆರ್ಮೆರೋಡ್ ವಿಶ್ವಾಸ. ಈ ಶ್ವೇತ ಹಲಗೆಯನ್ನು ದೀರ್ಘಕಾಲ ಬಾಳಿಕೆ ಬರುವಂತೆ ನಿರ್ಮಿಸಲಾಗಿದೆ. ಕಂಪ್ಯೂಟರ್, ಪ್ರೊಜೆಕ್ಟರ್ ಮತ್ತು ಬಿಳಿ ಹಲಗೆ ಜೊತೆಗೆ ನೀಡಲಾಗುವ ಈ ಸಾಫ್ಟ್ಟವೇರ್ ವರ್ಣರಂಜಿತ ಕಲಿಕೆಯ ಅನುಭವ ನೀಡುತ್ತದೆ. ಬೋಧನೆಗೆ ಅಗತ್ಯವಾದ ಪಠ್ಯಕ್ರಮ, ಚಿತ್ರ, ನಕ್ಷೆ ಮತ್ತಿತರ ಪೂರಕ ಮಾಹಿತಿಯೂ ಈ ಸಾಫ್ಟವೇರಿನಲ್ಲಿ ಅಡಕವಾಗಿರುತ್ತದೆ. ಸದ್ಯಕ್ಕೆ ಈ ತಂತ್ರಜ್ಞಾನವು 25 ಭಾಷೆಗಳಲ್ಲಿ ಲಭ್ಯ. ಮುಂದೆ ಶೀಘ್ರದಲ್ಲೇ 40 ಭಾಷೆಗಳಲ್ಲಿ ಅಭಿವೃದ್ಧಿಪಡಿಸಲಾಗುವುದು. ಬೆಂಗಳೂರಿನ ಬೆಥನಿ ಹೈಸ್ಕೂಲ್ ಈ ತಂತ್ರಜ್ಞಾನ ಅಳವಡಿಸಿಕೊಂಡಿದೆ.
2006: ತಮ್ಮ ಆಪ್ತ ಸಹಾಯಕ ಶಶಿನಾಥ ಝಾ ಕೊಲೆ ಪ್ರಕರಣದಲ್ಲಿ ಕೇಂದ್ರ ಕಲ್ಲಿದ್ದಲು ಖಾತೆ ಸಚಿವ ಶಿಬು ಸೊರೇನ್ ತಪ್ಪಿತಸ್ಥ ಎಂಬುದಾಗಿ ದೆಹಲಿಯ ಅಡಿಷನಲ್ ಸೆಷನ್ಸ್ ನ್ಯಾಯಾಧೀಶ ಬಿ.ಆರ್. ಕೆದಿಯಾ ಅವರ ನ್ಯಾಯಾಲಯ ತೀರ್ಪು ನೀಡಿತು. ಈ ಹಿನ್ನೆಲೆಯಲ್ಲಿ ಶಿಬು ಸೊರೇನ್ ಕೇಂದ್ರ ಸಂಪುಟಕ್ಕೆ ರಾಜೀನಾಮೆ ಸಲ್ಲಿಸಿದರು. ಕಾಕತಾಳೀಯವಾಗಿ 12 ವರ್ಷಗಳ ಬಳಿಕ ಕೊಲೆ ನಡೆದ ದಿನಾಂಕದಂದೇ ತಪ್ಪಿತಸ್ಥರೆಂದು ಘೋಷಿತರಾಗಿರುವ ಸೊರೇನ್ ಸ್ವಾತಂತ್ರ್ಯಾನಂತರ ಕೊಲೆ ಅಪರಾಧಕ್ಕಾಗಿ ಶಿಕ್ಷೆಗೆ ಗುರಿಯಾದ ಮೊದಲ ಕೇಂದ್ರ ಸಂಪುಟ ಸಚಿವ ಎಂಬ ಕುಖ್ಯಾತಿಗೂ ಪಾತ್ರರಾದರು. 1994ರ ನವೆಂಬರ್ 28ರಂದು ಝಾ ಅವರನ್ನು ಕೊಂದ ಪ್ರಕರಣದಲ್ಲಿ ಇತರ ನಾಲ್ಕು ಮಂದಿಯನ್ನು ಕೂಡಾ ತಪ್ಪಿತಸ್ಥರು ಎಂದು ನ್ಯಾಯಾಧೀಶರು ತೀರ್ಪು ನೀಡಿದರು. ತೀರ್ಪು ಹೊರಬೀಳುತ್ತಿದ್ದಂತೆಯೇ ನ್ಯಾಯಾಲಯದಲ್ಲಿ ಹಾಜರಿದ್ದ 62 ವರ್ಷದ ಸೊರೇನ್ ಅವರನ್ನು ಬಂಧಿಸಲಾಯಿತು. ಸೊರೇನ್ ಅವರು ಕ್ರಿಮಿನಲ್ ಸಂಚು, ಕೊಲೆ ಮತ್ತು ಅಪಹರಣದ ಅಪರಾಧಗಳಲ್ಲಿ ತಪ್ಪಿತಸ್ಥರಾಗಿದ್ದಾರೆ ಎಂದು ನ್ಯಾಯಾಲಯ ಹೇಳಿತು. ಸೊರೇನ್ ಅವರು ಸಂಪುಟ ತ್ಯಜಿಸಬೇಕಾಗಿ ಬಂದದ್ದು ಇದು ಎರಡನೇ ಸಲ. ಈ ಮೊದಲು 1980ರ ಆದಿಯ ಪ್ರತಿಭಟನಾ ಪ್ರದರ್ಶನ ಕಾಲದ ಕೊಲೆ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಾರ್ಖಂಡ್ ನ್ಯಾಯಾಲಯವೊಂದು ಜಾಮೀನುರಹಿತ ಬಂಧನ ವಾರಂಟ್ ಹೊರಡಿಸಿದಾಗ ಸೊರೇನ್ ಅವರು ರಾಜೀನಾಮೆ ನೀಡಬೇಕಾಗಿ ಬಂದಿತ್ತು. ನಂತರ ಜಾಮೀನು ಪಡೆದಿದ್ದ ಸೊರೇನ್ ಅವರನ್ನು ಈ ವರ್ಷ ಜನವರಿಯಲ್ಲಿ ಸಂಪುಟಕ್ಕೆ ಮರು ಸೇರ್ಪಡೆ ಮಾಡಿಕೊಳ್ಳಲಾಗಿತ್ತು. ಪ್ರಸ್ತುತ ಝಾ ಕೊಲೆ ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ, ಝಾ ಅವರನ್ನು 1994ರ ಮೇ 22ರಂದು ದೆಹಲಿಯಿಂದ ಅಪಹರಿಸಿ ರಾಂಚಿ ಸಮೀಪದ ಪಿಸ್ಕಾ ನಗರಿ ಗ್ರಾಮಕ್ಕೆ ಒಯ್ದು ಅಲ್ಲಿ ಕೊಲ್ಲಲಾಯಿತು ಎಂದು 1998ರ ನವೆಂಬರ್ 10ರಂದು ಸಲ್ಲಿಸಿದ ಪ್ರಕರಣದ ದೋಷಾರೋಪ ಪಟ್ಟಿಯಲ್ಲಿ ತಿಳಿಸಿತ್ತು. ಝಾ ಅವರಿಗೆ 1993ರ ಜುಲೈ ತಿಂಗಳಲ್ಲಿ ಪಿ.ವಿ. ನರಸಿಂಹರಾವ್ ಸರ್ಕಾರ ಅವಿಶ್ವಾಸ ನಿರ್ಣಯ ಎದುರಿಸಿದ ಸಂದರ್ಭದಲ್ಲಿ ರಾವ್ ಸರ್ಕಾರ ಉಳಿಕೆಗಾಗಿ ನಡೆದ ಜೆಎಂಎಂ - ಕಾಂಗ್ರೆಸ್ ಒಪ್ಪಂದದ ವಿವರ ಗೊತ್ತಿತ್ತು. ಅವರು ಈ ಹಣದಲ್ಲಿ ತಮ್ಮ ಪಾಲು ನೀಡುವಂತೆ ಒತ್ತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಅವರನ್ನು ಕೊಲ್ಲಲಾಯಿತು. ಝಾ ಅವರು ಹೆಚ್ಚು ಹಣ ನೀಡುವಂತೆ ಸೊರೇನ್ ಅವರನ್ನು ಒತ್ತಾಯಿಸುತ್ತಿದ್ದರು. ಹೀಗೆ ಒತ್ತಾಯಿಸಲು ಸೊರೇನ್ ಅವರ ಅಕ್ರಮ ಹಣಕಾಸು ವ್ಯವಹಾರಗಳ ಬಗ್ಗೆ ಹಾಗೂ ಅವರ ಹಲವಾರು ರಹಸ್ಯಗಳು ಗೊತ್ತಿದ್ದುದು ಕಾರಣವಾಗಿತ್ತು ಎಂದು ದೋಷಾರೋಪ ಪಟ್ಟಿಯಲ್ಲಿ ಸಿಬಿಐ ತಿಳಿಸಿತ್ತು. 1998ರ ಆಗಸ್ಟ್ 13ರಂದು ಸಿಬಿಐ ಝಾ ಅವರ ಅಸ್ಥಿಪಂಜರವನ್ನು ರಾಂಚಿ ಸಮೀಪದ ಪಿಸ್ಕಾನಗರಿ ಗ್ರಾಮದ ಸಮೀಪ ಪತ್ತೆ ಹಚ್ಚಲಾಯಿತು ಎಂದು ಹೇಳಿತ್ತು. ಹೈದರಾಬಾದಿನ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಈ ಅಸ್ಥಿಪಂಜರದ ಪರಿಶೀಲನೆಯ ಬಳಿಕ ತಲೆ ಬುರುಡೆ ಝಾ ಅವರದ್ದು ಎಂದು ತಮ್ಮ ವರದಿಯಲ್ಲಿ ದೃಢಪಡಿಸಿದ್ದರು. ಸೊರೇನ್ ಅವರು ಮೊದಲಿಗೆ ಝಾ ಅವರಿಗೆ ದಕ್ಷಿಣ ದೆಹಲಿಯಲ್ಲಿ ಜವಳಿ ಗಿರಣಿ ಒಂದರ ಸ್ಥಾಪನೆಗಾಗಿ 15 ಲಕ್ಷ ರೂಪಾಯಿ ನೀಡಿದ್ದರು. ಈ ವಹಿವಾಟಿನಲ್ಲಿ ನಷ್ಟವಾದಾಗ ಝಾ ಮತ್ತೆ ಹಣ ನೀಡುವಂತೆ ಸೊರೇನ್ ಅವರನ್ನು ಕಾಡತೊಡಗಿದರು. ಇದು ಅಂತಿಮವಾಗಿ ಅವರ ಕೊಲೆಯಲ್ಲಿ ಪರ್ಯವಸಾನಗೊಂಡಿತು ಎಂದೂ ಸಿಬಿಐ ತಿಳಿಸಿತ್ತು.
2006: ಮುಂಬೈಯಲ್ಲಿ 1993ರಲ್ಲಿ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ಡಿನ ಜನಪ್ರಿಯ ನಟ ಸಂಜಯದತ್ (47) ಅವರು ಶಸ್ತ್ರಾಸ್ತ್ರ ಹೊಂದಿದ್ದ ಆರೋಪ ಸಾಬೀತಾಗಿದ್ದು ಆತ ಡಿಸೆಂಬರ್ 19ರಂದು ನ್ಯಾಯಾಲಯಕ್ಕೆ ಶರಣಾಗಬೇಕು ಎಂದು ವಿಶೇಷ ಟಾಡಾ ನ್ಯಾಯಾಲಯ ಆದೇಶ ನೀಡಿತು. ಆದರೆ ಸಾಕ್ಷ್ಯಾಧಾರಗಳ ಪ್ರಕಾರ ಸಂಜಯದತ್ ಭಯೋತ್ಪಾದಕ ಅಲ್ಲ, ಅವರ ಮೇಲಿನ ಸರಣಿ ಬಾಂಬ್ ಸ್ಫೋಟದ ಸಂಚಿನಲ್ಲಿ ಭಾಗಿಯಾದ ಆರೋಪ ಕೈಬಿಡಲಾಗಿದೆ ಎಂದು ನ್ಯಾಯಮೂರ್ತಿ ಪಿ.ಡಿ. ಖೋಡೆ ತೀರ್ಪು ನೀಡಿದರು.
2005: ಮಧ್ಯಪ್ರದೇಶ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಶಿವರಾಜ್ ಸಿಂಗ್ ಚೌಹಾಣ್ ಆಯ್ಕೆಯಾದರು. ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಮತ್ತು ಅವರ ಬೆಂಬಲಿಗರು ಈ ಸಂದರ್ಭದಲ್ಲಿ ತೀವ್ರ ಪ್ರತಿಭಟನೆ ನಡೆಸಿ ಧಿಕ್ಕಾರ ಕೂಗಿದರು.
1990: ಬ್ರಿಟನ್ನಿನ ಮೊತ್ತ ಮೊದಲ ಮಹಿಳಾ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಅವರು ರಾಣಿ ಎರಡನೇ ಎಲಿಜಬೆತ್ ಅವರಿಗೆ ತಮ್ಮ ರಾಜೀನಾಮೆಯನ್ನು ಕಳುಹಿಸಿದರು. `ಉಕ್ಕಿನ ಮಹಿಳೆ' ಎಂದೇ ಖ್ಯಾತಿ ಪಡೆದಿದ್ದ ಇವರು ಮೂರು ಚುನಾವಣೆಗಳನ್ನು ಸತತವಾಗಿ ಜಯಿಸಿ ಬ್ರಿಟನನ್ನು 11 ವರ್ಷಗಳಷ್ಟು ದೀರ್ಘಕಾಲ ಆಳಿದ (1979-1990) ಪ್ರಧಾನಿ.
1964: ಮೆರೈನರ್ -4 ಬಾಹ್ಯಾಕಾಶ ಸಂಶೋಧನಾ ನೌಕೆಯನ್ನು ಅಮೆರಿಕವು ಮಂಗಳ ಗ್ರಹದತ್ತ ಹಾರಿಸಿತು.
1957: ಸಾಹಿತಿ ಹಾ.ವಿ. ಮಂಜುಳಾ ಶಿವಾನಂದ ಜನನ.
1954: ಸಾಹಿತಿ ನಂದಿನಿ ಕಾಪಡಿ ಜನನ.
1946: ಸಾಹಿತಿ ಎಸ್. ದಿವಾಕರ್ ಜನನ.
1944: ಸಾಹಿತಿ ಕ.ರಾ. ಮೋಹನ್ ಜನನ.
1943: ದ್ವಿತೀಯ ವಿಶ್ವ ಸಮರ ಕಾಲದಲ್ಲಿ ಅಮೆರಿಕದ ಅಧ್ಯಕ್ಷ ರೂಸ್ ವೆಲ್ಟ್, ಬ್ರಿಟಿಷ್ ಪ್ರಧಾನಿ ವಿನ್ ಸ್ಟನ್ ಚರ್ಚಿಲ್ ಹಾಗೂ ಸೋವಿಯತ್ ನಾಯಕ ಜೋಸೆಫ್ ಸ್ಟಾಲಿನ್ ಮೂವರೂ ಟೆಹರಾನಿನಲ್ಲಿ ಸಭೆ ಸೇರಿದರು. `ಎರಡನೇ ರಂಗ' ಸ್ಥಾಪನೆ ಈ ಮಾತುಕತೆಯ ಗುರಿಯಾಗಿತ್ತು. ಜರ್ಮನ್ ಆಕ್ರಮಿತ ಫ್ರಾನ್ಸಿನಲ್ಲಿ ದಾಳಿ ನಡೆಯುವ ಕಾಲಕ್ಕೇ ಪೂರ್ವದಿಂದ ದಾಳಿ ನಡೆಸಲು ಸ್ಟಾಲಿನ್ ಒಪ್ಪಿಗೆ ನೀಡಿದರು.
1942: ಸಾಹಿತಿಗಳಾದ ಎಂ.ಎಂ. ಕಲಬುರ್ಗಿ, ಚಿ. ಶ್ರೀನಿವಾಸ ರಾಜು ಜನನ.
1940: ಸಾಹಿತಿ ಎಸ್. ರಾಜಗೋಪಾಲಾಚಾರಿ ಜನನ.
1934: ಸಾಹಿತಿ ಗೌರು ಭಟ್ ಜನನ.
1925: ನವ್ಯ ಸಾಹಿತ್ಯದ ಪ್ರವರ್ತಕರಲ್ಲಿ ಒಬ್ಬರಾದ ಡಾ. ಬಿ.ಸಿ. ರಾಮಚಂದ್ರ ಶರ್ಮ (28-11-1925ರಿಂದ 18-4-2005) ಅವರು ಚಂದ್ರಶೇಖರ ಶರ್ಮ- ಲಕ್ಷ್ಮೀ ದೇವಮ್ಮ ದಂಪತಿಯ ಮಗನಾಗಿ ಮುಂಬೈಯಲ್ಲಿ ಜನಿಸಿದರು. ಇವರ ಪೂರ್ವೀಕರು ನಾಗಮಂಗಲ ತಾಲ್ಲೂಕಿನವರು.
1864: ಬಾಂಬೆ-ಬರೋಡಾ ಅಂಡ್ ಸೆಂಟ್ರಲ್ ಇಂಡಿಯಾ ರೈಲ್ವೇಸ್ (ಬಿಬಿ ಅಂಡ್ ಸಿಐ) ಮಾರ್ಗವನ್ನು ಸೂರತ್ ಸಮೀಪದ ಉಟ್ರಾನಿನಲ್ಲಿ ಉದ್ಘಾಟಿಸಲಾಯಿತು. ಈ ರೈಲು ಮಾರ್ಗವು ಸೂರತ್ತಿನ ಉಟ್ರಾನಿನಿಂದ ಬಾಂಬೆಯ (ಈಗಿನ ಮುಂಬೈ) ಗ್ರಾಂಟ್ ರೋಡ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಿತು. 1866ರಲ್ಲಿ ಗ್ರಾಂಟ್ ರೋಡ್ ಲೈನನ್ನು ಬ್ಯಾಕ್ ಬೇವರೆಗೆ ವಿಸ್ತರಿಸಲಾಯಿತು. 1973ರಲ್ಲಿ ಕೊಲಾಬಾದಲ್ಲಿ ನೂತನ ಟರ್ಮಿನಲ್ ಸ್ಥಾಪನೆ ಸಲುವಾಗಿ ಇನ್ನಷ್ಟು ವಿಸ್ತರಿಸಲಾಯಿತು.
1520: ಪೋರ್ಚುಗೀಸ್ ನಾವಿಕ ಫರ್ಡಿನಾಂಡ್ ಮೆಗೆಲ್ಲನ್ ದಕ್ಷಿಣ ಅಮೆರಿಕನ್ ಜಲಸಂಧಿಯ ಮೂಲಕವಾಗಿ ಫೆಸಿಫಿಕ್ ಸಾಗರವನ್ನು ತಲುಪಿದ. ಈ ಜಲಸಂಧಿಗೆ ಈಗ ಆತನ ಹೆಸರನ್ನೇ ಇಡಲಾಗಿದೆ.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment