Saturday, March 31, 2018

ಇಂದಿನ ಇತಿಹಾಸ History Today ಮಾರ್ಚ್ 30

ಇಂದಿನ ಇತಿಹಾಸ History Today  ಮಾರ್ಚ್ 30
2018: ನವದೆಹಲಿ: ಅಪರಾಧ ಅಥವಾ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಸರ್ಕಾರಿ ಅಧಿಕಾರಿಗಳು ಇನ್ನು ಮುಂದೆ ಪಾಸ್ಪೋರ್ಟ್ಪಡೆಯುವುದು ಕಷ್ಟವಾಗಲಿದೆ. ಇಂತಹ ಅಧಿಕಾರಿಗಳು ಪಾಸ್ಪೋರ್ಟ್ಪಡೆಯಲು ಅಗತ್ಯವಾದ ಜಾಗೃತ ದಳದ ಅನುಮೋದನೆಯನ್ನು ತಡೆ ಹಿಡಿಯುವಂತೆ ಕೇಂದ್ರದ ಸಿಬ್ಬಂದಿ ಸಚಿವಾಲಯವು ನಿಯಮಗಳನ್ನು ಪರಿಷ್ಕರಿಸಿತು.  ಆದರೆ, ಇಂತಹವರು ವೈದ್ಯಕೀಯ ಕಾರಣಗಳಂತಹ ತುರ್ತು ಸಂದರ್ಭಗಳಲ್ಲಿ ವಿದೇಶಗಳಿಗೆ ತೆರಳಬೇಕಾದಲ್ಲಿ, ಸಂಬಂಧಪಟ್ಟ ಅಧಿಕಾರಿಗಳು ಕುರಿತು ಅಂತಿಮ ನಿರ್ಣಯ ಕೈಗೊಳ್ಳಬಹುದು. ನಾಗರಿಕ ಸೇವಾ ಅಧಿಕಾರಿಗಳು ಪಾಸ್ಪೋರ್ಟ್ ಪಡೆಯಲು ಜಾಗೃತ ದಳದ ಅನುಮೋದನೆ ಪಡೆಯುವುದು ಕಡ್ಡಾಯ.  ತನಿಖಾ ಸಂಸ್ಥೆಯಿಂದ ನ್ಯಾಯಾಲಯದಲ್ಲಿ ಆರೋಪಪಟ್ಟಿ ದಾಖಲಾಗಿದ್ದರೆ ಮತ್ತು ವಿಚಾರಣೆ ಬಾಕಿ ಇದ್ದರೆ ಅನುಮೋದನೆ ನೀಡುವುದನ್ನು ತಡೆಹಿಡಿಯಬಹುದು. ಜತೆಗೆ ಭ್ರಷ್ಟಾಚಾರ ನಿಯಂತ್ರಣ ತಡೆ ಕಾಯ್ದೆ ಅಡಿಯಲ್ಲಿ ತನಿಖೆ ಅಥವಾ ವಿಚಾರಣೆಗೆ ಅನುಮತಿ ನೀಡಲಾಗಿದ್ದರೆ ಮತ್ತು ಅಧಿಕಾರಿ ವಿರುದ್ಧ ಶಿಸ್ತುಕ್ರಮದ ಭಾಗವಾಗಿ ಆರೋಪಪಟ್ಟಿ ಸಲ್ಲಿಕೆಯಾಗಿದ್ದರೆ, ಆಗಲೂ ಅನುಮೋದನೆ ನಿರಾಕರಿಸಲಾಗುತ್ತದೆ ಎಂದು ನಿಯಮ ತಿಳಿಸಿತು. ಖಾಸಗಿ ದೂರು ಆಧರಿಸಿ ಎಫ್ಐಆರ್ ದಾಖಲಾಗಿದ್ದರೂ, ಆರೋಪಪಟ್ಟಿ ಸಲ್ಲಿಕೆಯಾಗದ ಹೊರತು, ಅನುಮೋದನೆ ತಡೆಹಿಡಿಯಲಾಗದುಎಂದು ಸಚಿವಾಲಯ ರೂಪಿಸಿರುವ ನಿಯಮಾವಳಿಗಳು ಉಲ್ಲೇಖಿಸಿದವು. ಆದರೆ ಎಫ್ಐಆರ್ ಕುರಿತ ಮಾಹಿತಿಯನ್ನು ಪಾಸ್ಪೋರ್ಟ್ ಕಚೇರಿಗೆ ಸಲ್ಲಿಸಬೇಕು. ಕುರಿತ ಅಂತಿಮ ನಿರ್ಣಯವನ್ನು ಪಾಸ್ಪೋರ್ಟ್ ಕಚೇರಿಯೇ ಕೈಗೊಳ್ಳುತ್ತದೆ. ಕೇಂದ್ರ ಸರ್ಕಾರದ ಎಲ್ಲಾ ಇಲಾಖೆಯ ಕಾರ್ಯದರ್ಶಿಗಳಿಗೂ ಸಂಬಂಧ ಆದೇಶ ಕಳುಹಿಸಲಾಗಿದೆ ಎಂದು ವರದಿ ತಿಳಿಸಿತು.

2009: ಪಾಕಿಸ್ಥಾನದ ವಾಘಾ ಗಡಿ ಪ್ರದೇಶದಲ್ಲಿರುವ ಮನಾವನ್ ಪೊಲೀಸ್ ತರಬೇತಿ ಕೇಂದ್ರದ ಮೇಲೆ ಶಸ್ತ್ರಸಜ್ಜಿತ ಉಗ್ರಗಾಮಿಗಳು ನಡೆಸಿದ ಭೀಕರ ದಾಳಿಯಲ್ಲಿ ಹನ್ನೊಂದು ಅಧಿಕಾರಿಗಳು ಸೇರಿ 27 ಪೊಲೀಸರು, ಎಂಟು ಉಗ್ರರ ಸಹಿತ ಒಟ್ಟು 35 ಜನ ಹತರಾಗಿ, 100ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡರು. ಕಾದಾಟದ ವೇಳೆ ನಾಲ್ವರು ಉಗ್ರರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾದರೆ ಇತರೆ ನಾಲ್ವರು ತಮ್ಮನ್ನು ತಾವೇ ಸ್ಫೋಟಿಸಿಕೊಂಡು ಸಾವನ್ನಪ್ಪಿದರು. ಆರು ಉಗ್ರರನ್ನು ಜೀವಂತ ಸೆರೆ ಹಿಡಿಯುವಲ್ಲಿ ಸೇನಾ ಪಡೆ ಯಶಸ್ವಿಯಾಯಿತು. ಹಲವರನ್ನು ಒತ್ತೆಯಾಳಾಗಿ ಇರಿಸಿಕೊಂಡು ಮಧ್ಯಾಹ್ನದವರೆಗೂ ಕಾದಾಟ ನಡೆಸಿದ ಉಗ್ರರು ಇಡೀ ಪ್ರದೇಶವನ್ನು ಅಕ್ಷರಶಃ ರಣಾಂಗಣವನ್ನಾಗಿ ಪರಿವರ್ತಿಸಿ ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಬೆಳಗಿನ 7ಗಂಟೆ ವೇಳೆ ನಿತ್ಯದ ಕವಾಯತು ನಡೆಸಲು ತಯಾರಾಗುತ್ತಿದ್ದ ಪೊಲೀಸರ ಮೇಲೆ 10ರಿಂದ 16 ಜನರಿದ್ದ ಉಗ್ರಗಾಮಿಗಳ ಗುಂಪು ದಿಢೀರ್ ದಾಳಿ ನಡೆಸಿತು. ಇವರು ಮೊದಲಿಗೆ ತರಬೇತಿ ಕೇಂದ್ರದ ಮುಖ್ಯ ಬಾಗಿಲಿನಲ್ಲಿದ್ದ ಕಾವಲುಗಾರರನ್ನು ಕೊಂದು ಹಾಕಿದರು. ಈ ಸಮಯದಲ್ಲಿ ಕೆಲವರನ್ನು ಒತ್ತೆಯಾಗಳುಗಳನ್ನಾಗಿ ಇರಿಸಿಕೊಂಡು ಒಳನುಗ್ಗುವ ಮೂಲಕ ಬೀಭತ್ಸ ಹತ್ಯಾಕಾಂಡಕ್ಕೆ ಮುನ್ನುಡಿ ಬರೆದರು.

2009: ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳು ಪುನಃ ಕನ್ನಡಿಗರ ತೆಕ್ಕೆಗೆ ಬಿದ್ದವು. ಈದಿನ ನಡೆದ ಚುನಾವಣೆಯಲ್ಲಿ ಮಹಾಪೌರರಾಗಿ ಯಲ್ಲಪ್ಪ ಕುರ್ಗರ ಹಾಗೂ ಉಪಮಹಾಪೌರರಾಗಿ ಜ್ಯೋತಿ ಭಾವಿಕಟ್ಟಿ ಆಯ್ಕೆಯಾದರು. ಇದರಿಂದಾಗಿ ಪಾಲಿಕೆ ಮೇಲೆ ಪುನಃ ಹಿಡಿತ ಸಾಧಿಸಲು ಯತ್ನಿಸಿದ ಮಹಾರಾಷ್ಟ್ರ ಏಕೀಕರಣ ಸಮಿತಿಗೆ (ಎಂಇಎಸ್) ಮುಖಭಂಗವಾದಂತಾಯಿತು.. ಪಾಲಿಕೆ ಆಡಳಿತ ಹೊಸ ಕಟ್ಟಡಕ್ಕೆ ಸ್ಥಳಾಂತರವಾದ ನಂತರ ನಡೆದ ಮೊದಲ ಚುನಾವಣೆಯಲ್ಲಿ 57ನೇ ವಾರ್ಡಿನ ಯಲ್ಲಪ್ಪ 34 ಮತ ಪಡೆದು ತಮ್ಮ ಸಮೀಪದ ಪ್ರತಿಸ್ಪರ್ಧಿ ಎಂ.ಇ.ಎಸ್. ಬೆಂಬಲಿತ ಧನರಾಜ ಗವಳಿ ಅವರನ್ನು 8 ಮತಗಳ ಅಂತರದಿಂದ ಮಣಿಸಿದರು. ಮೇಯರ್ ಸ್ಥಾನ ಹಿಂದುಳಿದ 'ಎ' ವರ್ಗಕ್ಕೆ ಮೀಸಲಾಗಿತ್ತು.

2009: ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿ ವೇಳೆ ಸಿಕ್ಕಿಬಿದ್ದ ಏಕೈಕ ಉಗ್ರ ಮಹಮ್ಮದ್ ಅಜ್ಮಲ್ ಅಮಿರ್ ಕಸಾಬ್ ಪರವಾಗಿ ವಾದಿಸಲು ವಿಶೇಷ ಸೆಷನ್ಸ್ ನ್ಯಾಯಾಲಯವು ಮಹಾರಾಷ್ಟ್ರ ಕಾನೂನು ನೆರವು ಘಟಕದ ವಕೀಲರೊಬ್ಬರನ್ನು ನೇಮಿಸಿ, ಏಪ್ರಿಲ್ 6ರಿಂದ ವಿಚಾರಣೆ ಆರಂಭವಾಗುವುದು ಎಂದು ಹೇಳಿತು. ನ್ಯಾಯಾಧೀಶ ಎಂ. ಎಲ್. ತಹಿಲ್‌ಯಾನಿ ಅವರು ಕಸಾಬ್ ಪರ ವಕಾಲತ್ತು ನಡೆಸಲು ಮಹಾರಾಷ್ಟ್ರ ಸೇವಾ ಕಾನೂನು ಪ್ರಾಧಿಕಾರದ ಅಂಜಲಿ ವಾಗ್ಮಾರೆ ಅವರನ್ನು ನೇಮಿಸಿದರು.

2009: ಮಾಹಿತಿ ಹಕ್ಕು ಕಾಯ್ದೆಯಡಿ ಮಾಹಿತಿ ಬಯಸುವರಿಗೆ ಸಮರ್ಪಕ ಮಾಹಿತಿ ನೀಡಲು ನಿರಾಕರಿಸಿದರೆ ಅವರಿಗೆ ದಂಡ ವಿಧಿಸಬಹುದಾಗಿ ಎಂದು ಕೇಂದ್ರ ಮಾಹಿತಿ ಆಯೋಗ (ಸಿಐಸಿ ) ತಿಳಿಸಿತು. ಮಾಹಿತಿ ನೀಡಬೇಕೆಂಬುದು ಸಿಐಸಿ ಉದ್ದೇಶ. ಈ ಸಂಬಂಧ ಹೊರಡಿಸಲಾದ ಆದೇಶವನ್ನು ಉಲ್ಲಂಘಿಸುವ ಸರ್ಕಾರಿ ಸಂಸ್ಥೆಗಳಿಗೆ 20 ಸಾವಿರ ರೂಪಾಯಿಗಳವರೆಗೆ ದಂಡ ವಿಧಿಸಲಾಗುವುದು. ಸಿಐಸಿ ಆದೇಶ ಉಲ್ಲಂಘಿಸಿದರೆ, ಮಾಹಿತಿಗೆ ಅಡ್ಡಿಪಡಿಸಲಾಗಿದೆ ಎಂದು ಪರಿಗಣಿಸಿ 25 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು ಎಂದು ಮಾಹಿತಿ ಆಯೋಗದ ಮುಖ್ಯಸ್ಥರು ತಿಳಿಸಿದರು.

2009: ಸೌರವ್ ಗಂಗೂಲಿಗೆ ಆರಂಭದ ದಿನಗಳಲ್ಲಿ ಕ್ರಿಕೆಟ್ ಪಾಠವನ್ನು ಹೇಳಿಕೊಟ್ಟಿದ್ದ ಕೋಚ್ ಬುದ್ಧದೇವ ಬ್ಯಾನರ್ಜಿ (63) ಅವರು ಈದಿನ ಕೋಲ್ಕತದಲ್ಲಿ ನಿಧನರಾದರು. ಕೋಲ್ಕತ ನೈಟ್ ರೈಡರ್ಸ್ ತಂಡದಲ್ಲಿದ್ದ 'ದಾದಾ' ಇಲ್ಲಿನ ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಅಭ್ಯಾಸ ಮುಗಿಸಿ ಹೊರಬರುತ್ತಿದ್ದಂತೆಯೇ ಅವರಿಗೆ ಬ್ಯಾನರ್ಜಿ ಮೃತರಾದ ಸುದ್ದಿ ತಿಳಿಯಿತು. ತತ್ ಕ್ಷಣ ಅವರು ತಮ್ಮ ಮೊದಲ ಕ್ರಿಕೆಟ್ ಕೋಚ್ ಪಾರ್ಥಿವ ಶರೀರದ ದರ್ಶನ ಪಡೆಯಲು ಧಾವಿಸಿದರು. 'ಚಿಕ್ಕವನಾಗಿದ್ದಾಗ ನನಗೆ ಕ್ರಿಕೆಟ್‌ನ ಮೂಲ ಪಾಠವನ್ನು ಕಲಿಸಿಕೊಟ್ಟ ಅವರನ್ನು ಸದಾ ಸ್ಮರಿಸುತ್ತೇನೆ' ಎಂದು ಗಂಗೂಲಿ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದರು.

2009: ಶ್ರೀಲಂಕಾದ ಈಶಾನ್ಯ ಭಾಗದ ಮುಲ್ಲೈತೀವು ಕರಾವಳಿಯಲ್ಲಿ ಈದಿನ ಮುಂಜಾನೆ ಎಲ್‌ಟಿಟಿಇ ಮತ್ತು ಲಂಕಾ ಸೇನೆ ನಡುವೆ ನಡೆದ ಕಾಳಗದಲ್ಲಿ ಕನಿಷ್ಠ 47 ಜನರು ಮೃತರಾದರು. ಎಲ್‌ಟಿಟಿಇ ನೌಕಾ ಮುಖ್ಯಸ್ಥ ಮಾರನ್ ಸೇರಿದಂತೆ 26 ಎಲ್‌ಟಿಟಿಇ ಉಗ್ರರು ಕೊನೆಯುಸಿರೆಳೆದರು. ಇದಲ್ಲದೆ ಎಲ್‌ಟಿಟಿಇಗೆ ಸೇರಿದ ನಾಲ್ಕು ದೋಣಿಗಳನ್ನು ಸೇನೆ ನಾಶಪಡಿಸಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿತು.

2008: ಅನಾರೋಗ್ಯದಿಂದ ಢಾಕಾದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಬಾಂಗ್ಲಾ ದೇಶದ ಬಂಧಿತ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರನ್ನು ಬಿಗಿ ಭದ್ರತೆ ನಡುವೆ ಪಾರ್ಲಿಮೆಂಟ್ ಭವನದ ತಾತ್ಕಾಲಿಕ ಕಾರಾಗೃಹಕ್ಕೆ ವಾಪಸ್ ಕಳುಹಿಸಲಾಯಿತು. ಇದಕ್ಕೂ ಮುನ್ನ ಅವರನ್ನು ಸುಲಿಗೆ ಪ್ರಕರಣದ ವಿಚಾರಣೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು.

2008: ಚೀನಾದ ಹುನಾನ್ ಪ್ರಾಂತ್ಯದಲ್ಲಿ ವ್ಯಾನೊಂದಕ್ಕೆ ಡಿಕ್ಕಿ ಹೊಡೆದ ಬಸ್ಸು ಬಳಿಕ 15 ಮೀಟರ್ ಆಳದ ನದಿಗೆ ಉರುಳಿ ಬಿದ್ದ ಪರಿಣಾಮವಾಗಿ 13 ಮಂದಿ ಪ್ರಯಾಣಿಕರು ಸಾವನ್ನಪ್ಪಿ, ಇತರ 10 ಮಂದಿ ಗಾಯಗೊಂಡರು.

2008: ಹಾವು ಕಚ್ಚಿ ಮನುಷ್ಯ ಸಾಯುವುದು ಸಹಜ. ಆದರೆ ಪಶ್ಚಿಮ ಬಂಗಾಳದ ಬರ್ದ್ವಾನಿನಲ್ಲಿ ವಿಷಪೂರಿತ ನಾಗರ ಹಾವನ್ನು ವ್ಯಕ್ತಿಯೊಬ್ಬ ಕಚ್ಚಿ ಎರಡು ಭಾಗ ಮಾಡಿ ಸಾಯಿಸಿದ ಘಟನೆ ನಡೆಯಿತು. ಕ್ಯಾಂಟೀನಿನಲ್ಲಿ ಕೆಲಸ ಮಾಡುತ್ತಿದ್ದ ಸುಭಾಶ್ ಬ್ಯಾನರ್ಜಿ ಎಕ್ರಾ ಗ್ರಾಮದ ತಮ್ಮ ಮನೆಗೆ ಕುಡಿದು ಹೋಗುತ್ತಿದ್ದಾಗ ಹಾವೊಂದರ ಬಗ್ಗೆ ಗ್ರಾಮಸ್ಥರು ಮಾಹಿತಿ ನೀಡಿದರು. ಬ್ಯಾನರ್ಜಿ ಹಾವನ್ನು ಕಂಡು ಅದನ್ನು ಕೋಲಿನಿಂದ ಹೊಡೆದ. ಅದು ಇನ್ನೂ ಬದುಕಿರುವುದನ್ನು ನೋಡಿ ಬಾಯಿಯಿಂದ ಕಚ್ಚಿ ಎರಡು ತುಂಡು ಮಾಡಿದ್ದರಿಂದ ಹಾವು ಸತ್ತು ಹೋಯಿತು. ಘಟನೆಯ ನಂತರ ಜ್ಞಾನ ತಪ್ಪಿ ಬಿದ್ದ ಬ್ಯಾನರ್ಜಿಯನ್ನು ಗ್ರಾಮಸ್ಥರು ಆಸ್ಪತ್ರೆಗೆ ದಾಖಲಿಸಿದರು. ಆತನು ನಂತರ ಚೇತರಿಸಿಕೊಂಡ.

2008: ಲೋಕಸಭೆಯ ವಿರೋಧ ಪಕ್ಷದ ನಾಯಕ ಎಲ್. ಕೆ. ಆಡ್ವಾಣಿ `ಆತ್ಮಚರಿತ್ರೆ' ಬಿಡುಗಡೆಯಾಗಿ ಸುದ್ದಿಯಾದ ಬೆನ್ನಲ್ಲೇ ಎನ್ ಡಿ ಎ ಸಂಚಾಲಕ, ಜಾರ್ಜ್ ಫರ್ನಾಂಡಿಸ್ ಆತ್ಮಚರಿತ್ರೆ ಬರೆಯಲು ನಿರ್ಧರಿಸಿರುವುದನ್ನು ಬಹಿರಂಗ ಪಡಿಸಿದರು. `ಈ ಆತ್ಮಚರಿತ್ರೆ ಆರು ವರ್ಷಗಳ ವಾಜಪೇಯಿ ನಾಯಕತ್ವದ ಎನ್ ಡಿ ಎ ಸರ್ಕಾರದಲ್ಲಿ ತಾವು ಸಲ್ಲಿಸಿದ ಸೇವೆಯನ್ನು ಪ್ರಾಮಾಣಿಕವಾಗಿ ತೆರೆದಿಡುತ್ತದೆ' ಎಂದು ಜಾರ್ಜ್ ಹೇಳಿದರು. `ಈ ಪುಸ್ತಕದಲ್ಲಿ ಹಲವು ವ್ಯಕ್ತಿಗಳ ಬಣ್ಣ ಬಯಲಿಗೆಳೆಯುವೆ' ಎಂದು ಅವರು ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದರು.

2008: ಬೆಂಗಳೂರಿನ ಕನ್ನಡ ಭವನದ ನಯನ ಸಭಾಂಗಣದಲ್ಲಿ ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ ಏರ್ಪಡಿಸಿದ್ದ ಸಮಾರಂಭದಲ್ಲಿ ಸಾಹಿತಿಗಳಾದ ಪಂಡಿತ್ ಸುಧಾಕರ ಚತುರ್ವೇದಿ, ಡಾ. ಬಸವರಾಜ ಪುರಾಣಿಕ, ಗುರುಮೂರ್ತಿ ಪೆಂಡಕೂರು, ಡಾ. ಬಿ.ನಂ.ಚಂದ್ರಯ್ಯ ಮತ್ತು ಡಾ. ಸರಜೂ ಕಾಟ್ಕರ್ ಅವರಿಗೆ 2007ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕೆ.ಎಂ.ಸೀತಾರಾಮಯ್ಯ, ಈಶ್ವರಂದ್ರ, ಸ್ನೇಹಲತಾ ರೋಹಿಡೇಕರ್, ಹಸನ್ ನಯೀಂ ಸುರಕೋಡ ಮತ್ತು ಕೆ.ವೆಂಕಟರಾಜು ಅವರಿಗೆ 2006ನೇ ಸಾಲಿನ ಪುಸ್ತಕ ಬಹುಮಾನ ನೀಡಲಾಯಿತು.

2008: ಬೆಂಗಳೂರು ನಗರದ ಪ್ರಮುಖ ಬಡಾವಣೆಗಳಿಂದ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣಕ್ಕೆ ಸಂಪರ್ಕ ಕಲ್ಪಿಸಲು ಬಿಎಂಟಿಸಿ ಆರಂಭಿಸಿದ `ವಾಯು ವಜ್ರ' ಬಸ್ ಸೇವೆಗೆ ಚಾಲನೆ ದೊರೆಯಿತು. ನಗರದ ಒಳಭಾಗದಲ್ಲಿ ದಟ್ಟಣೆ ಅವಧಿಯಲ್ಲಿ ಸಂಚರಿಸಲಿರುವ ವಿಶೇಷ `ಸುವರ್ಣ ಪೀಕ್ ಅವರ್' ಬಸ್ ಸೇವೆಯೂ ಆರಂಭವಾಯಿತು.
ವಿಧಾನಸೌಧದ ಮುಂಭಾಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲರ ಸಲಹೆಗಾರ ಪಿ.ಕೆ.ಎಚ್. ತರಕನ್ ಹಸಿರು ನಿಶಾನೆ ತೋರುವ ಮೂಲಕ `ವಾಯು ವಜ್ರ' ಸೇವೆಯನ್ನು ಉದ್ಘಾಟಿಸಿದರು. ನಗರ ಪೊಲೀಸ್ ಕಮಿಷನರ್ ಎನ್. ಅಚ್ಯುತರಾವ್ `ಪೀಕ್ ಅವರ್ ಸೇವೆ'ಗೆ ಚಾಲನೆ ನೀಡಿದರು.

2008: ಖ್ಯಾತ ಮಲಯಾಳಿ ಕವಿ ಕದಮ್ಮನಿಟ್ಟ ರಾಮಕೃಷ್ಣನ್ (73) ಅವರು ತಿರುವನಂತಪುರದ ಪಟ್ಟಣಂತಿಟ್ಟದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಕೇರಳದ ಮೂಲೆ ಮೂಲೆಗೆ ಸುತ್ತಾಡಿ ಜಾನಪದ ಸೊಗಡಿನೊಂದಿಗೆ ಕವನ ರಚಿಸಿ ಖ್ಯಾತರಾದ ಅವರ ಹಲವು ಕವನ ಜನಸಾಮಾನ್ಯರ ಬಾಯಲ್ಲೂ ಸದಾ ನಲಿದಾಡುತ್ತಿವೆ. ಸಿಪಿಎಂ ಪಕ್ಷದ ವತಿಯಿಂದ ಅವರು 1996ರಲ್ಲಿ ಅರನ್ ಮುಲ ವಿಧಾನಸಭಾ ಕ್ಷೇತ್ರದಿಂದ ಆರಿಸಿ ಬಂದಿದ್ದರು.

2008: 2007ರ ಸಾಲಿನ ಯಶಸ್ವಿ ಬಾಲಿವುಡ್ ಚಿತ್ರ `ಚಕ್ ದೇ ಇಂಡಿಯಾ', ಮುಂಬೈಯಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಪ್ರೊಡ್ಯೂಸರ್ಸ್ ಗಿಲ್ಡಿನ ಸಿಂಹಪಾಲು ಪ್ರಶಸ್ತಿಗಳನ್ನು ಬಾಚಿಕೊಂಡಿತು. `ಚಕ್ ದೇ ಇಂಡಿಯಾ...' ಉತ್ತಮ ಚಿತ್ರ ಪ್ರಶಸ್ತಿ ಜೊತೆಗೆ ಉತ್ತಮ ನಾಯಕ ನಟ ಪ್ರಶಸ್ತಿ (ಶಾರುಖ್ ಖಾನ್), ಉತ್ತಮ ನಿರ್ದೇಶಕ ಪ್ರಶಸ್ತಿ (ಶಮಿತ್ ಅಮಿನ್) ಮತ್ತು ಉತ್ತಮ ಕಥೆ ಮತ್ತು ಚಿತ್ರಕಥೆಗಾಗಿ ಜೈದೀಪ್ ಸಾಹ್ನಿ ಪ್ರಶಸ್ತಿ ಪಡೆದುಕೊಂಡಿತು. ಉತ್ತಮ ನಾಯಕಿ ನಟಿ ಪ್ರಶಸ್ತಿಯನ್ನು `ಜಬ್ ವಿ ಮೆಟ್' ಚಿತ್ರಕ್ಕಾಗಿ ಕರೀನಾ ಕಪೂರ್ ಪಡೆದರು. ಇದೇ ಚಿತ್ರದ ಉತ್ತಮ ಸಂಗೀತಕ್ಕಾಗಿ ಪ್ರೀತಮ್ ಮತ್ತು ಉತ್ತಮ ಸಂಭಾಷಣೆಗಾಗಿ ಅಲಿ ಪ್ರಶಸ್ತಿ ಸ್ವೀಕರಿಸಿದರು. `ಲೈಫ್ ಇನ್ ಮೆಟ್ರೋ' ಚಿತ್ರದಲ್ಲಿನ ಅಭಿನಯಕ್ಕಾಗಿ ಕೊಂಕಣ ಸೇನ್ ಮತ್ತು ಇರ್ಫಾನ್ ಖಾನ್ ಕ್ರಮವಾಗಿ ಉತ್ತಮ ಪೋಷಕ ನಟಿ ಮತ್ತು ನಟ ಪ್ರಶಸ್ತಿ ಪಡೆದರು.

2007: ಲೆಗ್ ಸ್ಪಿನ್ ಬ್ರಹ್ಮಾಸ್ತ್ರದಿಂದ ದಿಗ್ಗಜರನ್ನೇ ಗಿರಕಿ ಹೊಡೆಸಿದ ಮೋಡಿಗಾರ ಕ್ರಿಕೆಟಿಗ ಅನಿಲ್ ಕುಂಬ್ಳೆ (ಜನನ: 17 ಅಕ್ಟೋಬರ್ 1970, ಬೆಂಗಳೂರು) ಅವರು ಏಕದಿನ ಪಂದ್ಯಗಳಿಂದ ನಿವೃತ್ತಿ ಘೋಷಿಸಿದರು. 271 ಪಂದ್ಯಗಳಲ್ಲಿ 337 ವಿಕೆಟ್ ಉರುಳಿಸಿದ ಕುಂಬ್ಳೆ ಕೋಲ್ಕತ್ತಾದಲ್ಲಿ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ (6/12) ನೀಡಿದ್ದರು. 1990ರಲ್ಲಿ ಶಾರ್ಜಾದಲ್ಲಿ ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಏಕದಿನ ಪಂದ್ಯಗಳಿಗೆ ಪದಾರ್ಪಣೆೆ ಮಾಡಿದ್ದರು. 2007ರಲ್ಲಿ ಬರ್ಮುಡಾದ ಟ್ರೆನಿಡಾಡಿನಲ್ಲಿ ನಡೆದ ವಿಶ್ವಕಪ್ ಪಂದ್ಯ ಅವರ ಕೊನೆಯ ಪಂದ್ಯವಾಯಿತು.

2007: ಭಾರತೀಯ ಮೂಲದ ಅಮೆರಿಕನ್ ಗಗನಯಾನಿ ಸುನೀತಾ ವಿಲಿಯಮ್ಸ್ ಅವರು ಖ್ಯಾತ ಬೋಸ್ಟನ್ ಮ್ಯಾರಾಥಾನ್ ಸ್ಪರ್ಧೆಯಲ್ಲಿ ಬಾಹ್ಯಾಕಾಶದಿಂದಲೇ ಪಾಲ್ಗೊಳ್ಳಲು ಪ್ರವೇಶ ಪಡೆದರು. 338 ಕಿ.ಮೀ. ಎತ್ತರದಲ್ಲಿ ಇರುವ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲೇ ಮ್ಯಾರಥಾನ್ ಓಟದುದ್ದಕ್ಕೂ ಪಾಲ್ಗೊಳ್ಳಲು ನಿರ್ಧರಿಸಿದ ಅವರು ಈ ರೀತಿ ಬಾನಿನಿಂದ ಸ್ಪರ್ಧಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಭಾಜನರಾಗುವರು.

2007: ಹಿರಿಯ ನಾಟ್ಯ ಕಲಾವಿದೆ ನರ್ಮದಾ (65) ಅವರು ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಖ್ಯಾತ ನೃತ್ಯ ಪಟುಗಳಾದ ನಿರುಪಮಾ ರಾಜೇಂದ್ರ, ಮಂಜು ಭಾರ್ಗವಿ, ಲಕ್ಷ್ಮೀ ಗೋಪಾಲ ಸ್ವಾಮಿ, ಅನುರಾಧಾ ವಿಕ್ರಾಂತ್ ಮತ್ತಿತರ ಕಲಾವಿದರಿಗೆ ನರ್ಮದಾ ಗುರುವಾಗಿದ್ದರು. 25 ವರ್ಷಗಳ ಕಾಲ ನಾಟ್ಯಕ್ಷೇತ್ರಕ್ಕೆ ಸೇವೆ ಸಲ್ಲಿಸಿದ್ದ ಅವರಿಗೆ ಸಂಗೀತ ನಾಟಕ ಅಕಾಡೆಮಿ, ಕರ್ನಾಟಕ ಸರ್ಕಾರದ ಶಾಂತಲಾ, ರಾಜ್ಯೋತ್ಸವ ಸೇರಿದಂತೆ ಹಲವಾರು ಪ್ರಶಸ್ತಿಗಳು ಬಂದಿದ್ದವು. 1978ರಲ್ಲಿ ಅವರು ಶಕುಂತಲಾ ನೃತ್ಯಾಲಯ ಕಲಾಶಾಲೆ ಆರಂಭಿಸಿದ್ದರು.

2007: ಹೆಸರಾಂತ ಬಂಗಾಳಿ ಲೇಖಕಿ ಖ್ಯಾತ ಕಾದಂಬರಿಗಾರ್ತಿ ಮಹಾಶ್ವೇತಾದೇವಿ ಅವರು ಸಾರ್ಕ್ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾದರು.

2007: ಬಂಗಾಳಕೊಲ್ಲಿಯ ಪಾರಾದೀಪ್ ಬಂದರಿನ ಸಮೀಪ ಲಂಗರು ಹಾಕಿದ್ದ ನೌಕಾದಳದ ಹಡಗಿನಿಂದ 150 ಕಿ.ಮೀ. ದೂರಕ್ಕೆ ಸಾಗುವ ಸಾಮರ್ಥ್ಯವುಳ್ಳ, ಹಡಗಿನಿಂದ ಹಡಗಿಗೆ ಗುರಿ ಇಡಬಹುದಾದ ದೇಶೀ ತಂತ್ರಜ್ಞಾನ ಬಳಸಿ ನಿರ್ಮಿಸಲಾದ `ಧನುಷ್' ಕ್ಷಿಪಣಿಯ ಪರೀಕ್ಷಾ ಪ್ರಯೋಗವನ್ನು ಭಾರತ ನಡೆಸಿತು. ವಿಮಾನದಿಂದ ವಿಮಾನಕ್ಕೆ ಗುರಿ ಇಡಬಹುದಾದ ಅಲ್ಪ ದೂರ ಹಾರಬಲ್ಲ `ಅಸ್ತ್ರ' ಕ್ಷಿಪಣಿಯ ಪರೀಕ್ಷಾ ಪ್ರಯೋಗವನ್ನು ಭಾರತ ಮಾರ್ಚ್ 29ರಂದು ಯಶಸ್ವಿಯಾಗಿ ನಡೆಸಿತ್ತು. ಭೂ ಮೇಲ್ಮೈಯಿಂದ ಮೇಲ್ಮೈಗೆ ಗುರಿ ಇಡಲು ಸಾಧ್ಯವಿರುವ `ಪೃಥ್ವಿ' ಕ್ಷಿಪಣಿಯ ನೌಕಾದಳ ಆವೃತ್ತಿಯಾದ 8.56 ಮೀಟರ್ ಉದ್ದದ `ಧನುಷ್' ಕ್ಷಿಪಣಿಯನ್ನು ನೌಕಾದಳದ ಹಡಗಿನಿಂದ ಮಧ್ಯಾಹ್ನ 2.30 ಗಂಟೆಗೆ ಹಾರಿಸಲಾಯಿತು. ಈಗಾಗಲೇ ರಕ್ಷಣಾ ಪಡೆಗೆ ಸೇರ್ಪಡೆ ಮಾಡಲಾಗಿರುವ ಈ ಕ್ಷಿಪಣಿಯು, ಹಡಗಿನಿಂದ ಕ್ಷಿಪಣಿ ಉಡಾಯಿಸುವ ಸಾಮರ್ಥ್ಯ ಉಳ್ಳ ರಾಷ್ಟ್ರಗಳ ಸಾಲಿಗೆ ಭಾರತ ಸೇರುವಂತೆ ಮಾಡಿತು. ಧನುಷ್ ಕ್ಷಿಪಣಿಯು 750 ಕಿಲೋಗ್ರಾಂವರೆಗಿನ ತೂಕದ ಸಿಡಿತಲೆಯನ್ನು 150 ಕಿಮೀ. ದೂರ ಒಯ್ಯುವ ಸಾಮರ್ಥ್ಯ ಹೊಂದಿದೆ. ಆದರೆ ಸಿಡಿತಲೆ ಇನ್ನಷ್ಟು ಹಗುರವಾಗಿದ್ದರೆ ಅದು 500 ಕಿ.ಮೀ. ದೂರ ಕೂಡಾ ಕ್ರಮಿಸಬಲ್ಲುದು.

2007: ಸರಣಿ ಬಾಂಬ್ ಸ್ಫೋಟಿಸಿ ಇಬ್ಬರು ನ್ಯಾಯಾಧೀಶರ ಸಾವಿಗೆ ಕಾರಣವಾಗಿದ್ದ ಆರು ಮಂದಿ ಜಮಾತ್- ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್ (ಜೆಬಿಎಂ) ಉಗ್ರರನ್ನು ಗಲ್ಲಿಗೆ ಏರಿಸಲಾಯಿತು.

2006: ಖ್ಯಾತ ಹಿಂದಿ ಸಾಹಿತಿ, ಹಿರಿಯ ಪತ್ರಕರ್ತ ಮನೋಹರ್ ಶ್ಯಾಮ್ ಜೋ (73) ಈದಿನ ನಿಧನರಾದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕತರಾದ ಜೋ `ಹಿಂದೂಸ್ಥಾನ್' ಹಿಂದಿ ವಾರಪತ್ರಿಕೆಯ ಸಂಪಾದಕರಾಗಿದ್ದರು. 'ಹಮ್ ಲೋಗ್' ಸೇರಿದಂತೆ ಅನೇಕ ಪ್ರಸಿದ್ಧ ಧಾರಾವಾಹಿಗಳನ್ನು ಅವರು ಬರೆದಿದ್ದರು.

2006: ಪ್ರವಾಸಿ ಐಷಾರಾಮಿ ದೋಣಿ ಮಗುಚಿದ ಪರಿಣಾಮವಾಗಿ ಅದರಲ್ಲಿದ್ದ 137 ಜನರ ಪೈಕಿ 57 ಜನ ನೀರಿನಲ್ಲಿ ಮುಳುಗಿ ಮೃತರಾದ ಘಟನೆ ಬಹ್ರೇನಿನಲ್ಲಿ ಘಟಿಸಿತು. ಮೃತರಲ್ಲಿ ಬಹುತೇಕ ಮಂದಿ ಔತಣಕೂಟದಲ್ಲಿಪಾಲ್ಗೊಂಡವರಾಗಿದ್ದು, ಅವರಲ್ಲಿ ಭಾರತೀಯರ ಸಂಖ್ಯೆ 18.

2006: ಹೈಕೋರ್ಟ್ ಪೀಠ ಕಾಮಗಾರಿಗೆ ಏಪ್ರಿಲ್ 11ರಂದು ಭೂಮಿಪೂಜೆ ನೆರವೇರಿಸುವುದಾಗಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಧಾರವಾಡ ವಕೀಲರ ಸಂಘದ ಅಧ್ಯಕ್ಷ ಬಿ.ಡಿ. ಹಿರೇಮಠ ತಮ್ಮ ಅನಿರ್ದಿಷ್ಟ ಅವಧಿಯ ನಿರಶನ ಕೊನೆಗೊಳಿಸಿದರು.

2006: ಲಷ್ಕರ್ ಎ ತೊಯಿಬಾ ಉಗ್ರಗಾಮಿ ಸಂಘಟನೆಗೆ ಸೇರಿದ ಅಬ್ದುಲ್ ರಹಮಾನ್ ಎಂಬ ಉಗ್ರಗಾಮಿಯನ್ನು ಗುಲ್ಬರ್ಗ ಪೊಲೀಸರು ಬಂಧಿಸಿದರು.

1979: ಜೆ. ಆರ್. ಡಿ. ಟಾಟಾ ಅವರಿಗೆ ಅಮೆರಿಕದ ಫ್ಲಾರಿಡಾದಲ್ಲಿ ವಾಣಿಜ್ಯೋದ್ಯಮ ಸಂಸ್ಥೆಯು `ಟೋನಿ ಜಾನುಸ್' ಪ್ರಶಸ್ತಿಯನ್ನು ಪ್ರದಾನ ಮಾಡಿತು. ಟಾಟಾ ಅವರು ಈ ಪ್ರತಿಷ್ಠಿತ ಪ್ರಶಸ್ತಿ ಪಡೆದ 17ನೇ ವ್ಯಕ್ತಿಯಾಗಿದ್ದು, ಇದು ಅವರನ್ನು ಜಗತ್ತಿನ ಪ್ರಮುಖ ವಿಮಾನ ಹಾರಾಟಗಾರರ ಗುಂಪಿಗೆ ಸೇರಿಸಿತು.

1966: ಕಲಾವಿದ ರಘು ಎನ್ ಜನನ.

1954: ಕಲಾವಿದ ರೇಖಾ ಸುರೇಶ್ ಜನನ.

1949: ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಜೈಪುರದಲ್ಲಿ `ಯೂನಿಯನ್ ಆಫ್ ಗ್ರೇಟರ್ ರಾಜಸ್ಥಾನ'ವನ್ನು ಉದ್ಘಾಟಿಸಿದರು.

1908: ಭಾರತೀಯ ಚಿತ್ರರಂಗದ ಮೊದಲ ಚಿತ್ರನಟಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾದ ದೇವಿಕಾ ರಾಣಿ ರೋರಿಕ್ (1908-1994) ಜನನ. 1920ರಲ್ಲಿ ಲಂಡನ್ನಿಗೆ ತೆರಳಿದ ಇವರು ಅಲ್ಲಿವಾಸ್ತುಶಾಸ್ತ್ರ ಅಧ್ಯಯನ ಮಾಡಿದರು. ಅಲ್ಲಿದ್ದಾಗ ಹಿಮಾಂಶುರಾಯ್ ಅವರ ಮೊದಲ ಚಿತ್ರ (1925) ಲೈಟ್ ಆಫ್ ಏಷ್ಯಾ ಚಿತ್ರದ ಸೆಟ್ ತಯಾರಿಗೆ ನೆರವಾಗಲು ಒಪ್ಪಿದರು. ಅನಂತರ ರಾಯ್ ಅವರು ದ್ವಿಭಾಷಾ ಚಿತ್ರ ಕರ್ಮ (1933) ಚಿತ್ರ ನಿರ್ಮಿಸಿದರು. ಆಗ ಇವರಿಬ್ಬರೂ ಈ ಚಿತ್ರ ನಿರ್ಮಾಣಕ್ಕಾಗಿ ಭಾರತಕ್ಕೆ ಬಂದರು. ಇಬ್ಬರೂ ಸೇರಿ ಬಾಂಬೆ ಟಾಕೀಸ್ ಸ್ಟುಡಿಯೋ ಆರಂಭಿಸಿದರು. 1935ರಲ್ಲಿ ಹಿಂದಿ ಚಲನಚಿತ್ರ ಬಾಂಬೆ ಟಾಕೀಸ್ ಲಿಮಿಟೆಡ್ ಅಡಿಯಲ್ಲಿ ಚಿತ್ರೀಕರಣ ಆರಂಭವಾಯಿತು. ಮುಂದೆ ದೇವಿಕಾರಾಣಿ ಅವರು ಅಶೋಕಕುಮಾರ್ ಜೊತೆಗೆ ಯಶಸ್ವಿ ತಂಡ ಕಟ್ಟಿದರು. `ಅಚುತ್ ಕನ್ಯಾ' ಚಿತ್ರ ಅವರಿಗೆ ಅಪಾರ ಖ್ಯಾತಿ ತಂದುಕೊಟ್ಟಿತು. 1943ರವರೆಗೆ ನಟನೆ ಮುಂದುವರೆಸಿದರು. 1940ರಲ್ಲಿ ರಾಯ್ ನಿಧನರಾದರು. ದೇವಿಕಾ ರಾಣಿ ರಷ್ಯನ್ ಕಲಾವಿದ ರೋರಿಕ್ ಅವರನ್ನು ಮದುವೆಯಾಗಿ ಬೆಂಗಳೂರಿನಲ್ಲಿ ಇರುವ ತಾತಗುಣಿ ಎಸ್ಟೇಟಿನಲ್ಲಿ ವಾಸಿಸಿದರು 1970ರಲ್ಲಿ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ ಲಭಿಸಿತು.

1892: ಖ್ಯಾತ ಪಿಟೀಲು ವಾದಕ ಎ.ಎಸ್. ಶಿವರುದ್ರಪ್ಪ ಅವರು ಆನೇಕಲ್ಲಿನಲ್ಲಿ ಈದಿನ ಜನಿಸಿದರು. ಹುಟ್ಟು ಕುರುಡರಾಗಿದ್ದ ಇವರು ವಿದ್ವಾನ್ ಮುನಿಶಂಕರಪ್ಪ ಅವರಲ್ಲಿ ಸಂಗೀತ ಅಭ್ಯಾಸ ಮಾಡಿ ನಂತರ ಮೈಸೂರಿನ ಕುರುಡ- ಮೂಗರ ಶಾಲೆ ಸೇರಿದರು. ನಾಲ್ಮಡಿ ಕೃಷ್ಣರಾಜ ಒಡೆಯರ್ ಅವರ ಗಮನಕ್ಕೆ ಬಂದ ಬಳಿಕ ವಿದ್ವಾಂಸ ಬಿಡಾರಂ ಕೃಷ್ಣಪ್ಪ ಅವರಿಂದ ಸಂಸ್ಕೃತ ಕಲಿಕೆಗೆ ಏರ್ಪಾಟು. ಒಡೆಯರ್ ಆಸ್ಥಾನದಲ್ಲಿ ಫಿಡ್ಲ್ ಬಾಯ್ ಎಂಬುದಾಗಿ ನೇಮಕ. ಮುಂದೆ ಹಾರ್ನ್ ವಯೋಲಿನ್ನಿನಲ್ಲೂ ಅಭ್ಯಾಸ.

1891: ಆರ್ಥರ್ ವಿಲಿಯಂ ಸಿಡ್ನಿ ಹ್ಯಾರಿಂಗ್ಟನ್ (1891-1970) ಹುಟ್ಟಿದ ದಿನ. ಅಮೆರಿಕನ್ ಎಂಜಿನಿಯರ್ ಹಾಗೂ ಉತ್ಪಾದಕನಾದ ಈತ ಹಲವಾರು ಸೇನಾ ವಾಹನಗಳನ್ನು ನಿರ್ಮಿಸಿದ. ಇವುಗಳಲ್ಲಿ ಒಂದು ವಾಹನ ದ್ವಿತೀಯ ಜಾಗತಿಕ ಸಮರ ಜೀಪ್ ಎಂದೇ ಖ್ಯಾತಿ ಪಡೆದಿದೆ.

1856: ಪ್ಯಾರಿಸ್ ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಕ್ರೀಮಿಯನ್ ಯುದ್ಧ ಕೊನೆಗೊಂಡಿತು.

1785: ಹೆನ್ರಿ ಹಾರ್ಡಿಂಗ್ (1785-1856) ಹುಟ್ಟಿದ ದಿನ. ಬ್ರಿಟಿಷ್ ಯೋಧ ಹಾಗೂ ಮುತ್ಸದ್ಧಿಯಾಗಿದ್ದ ಈತ 1844-48ರ ಅವಧಿಯಲ್ಲಿ ಭಾರತದ ಗವರ್ನರ್ ಜನರಲ್ ಹಾಗೂ ಕ್ರೀಮಿಯನ್ ಯುದ್ಧ ಕಾಲದಲ್ಲಿ ಬ್ರಿಟಿಷ್ ಸೇನೆಯ ಕಮಾಂಡರ್ ಇನ್ ಚೀಫ್ ಆಗಿದ್ದ.

1699: ಗುರುಗೋಬಿಂದ್ ಸಿಂಗ್ ಪಂಜಾಬಿನ ಆನಂದಪುರ ಸಮೀಪದ ಕೇಶ್ ಗಢ ಸಾಹಿಬ್ ನಲ್ಲಿ `ಖಾಲ್ಸಾ ಪಂಥ' ಹುಟ್ಟು ಹಾಕಿದರು. ತನ್ನ ಆಯ್ದ ಅನುಯಾಯಿಗಳು ಕೇಶ, ಕಚ್ಛ, ಕರ್ರ, ಕಂಘ ಮತ್ತು ಕೃಪಾಣಗಳನ್ನು ಧರಿಸಬೇಕು ಹಾಗೂ ಹೆಸರಿನ ಜೊತೆಗೆ `ಸಿಂಗ್' (ಸಿಂಹ) ವಿಶೇಷಣವನ್ನು ಸೇರಿಸಬೇಕು ಎಂದು ಅವರು ಸೂಚಿಸಿದರು. `ಗುರುಗ್ರಂಥ ಸಾಹಿಬ್'ನ್ನು ಸಿಖ್ ಪಂಥದ ಪವಿತ್ರ ಗ್ರಂಥ ಎಂದು ಘೋಷಿಸಲಾಯಿತು

ಭಾರತದ ಮೊತ್ತ ಮೊದಲ ಆಲೋಪಥಿ ವೈದ್ಯೆ


ಭಾರತದ ಮೊತ್ತ ಮೊದಲ ಆಲೋಪಥಿ ವೈದ್ಯೆ
ಮಹಿಳೆಯರು ಮನೆಬಿಟ್ಟು ಹೊರಗೆ ಹೋಗಬಾರದು ಎಂಬ ನಂಬಿಕೆ ಬಲವಾಗಿದ್ದ ಕಾಲದಲ್ಲಿ ಮಹಿಳೆಯೊಬ್ಬಳು ಮನೆಯಿಂದ ಹೊರಬಂದು ವಿದೇಶಕ್ಕೆ ತೆರಳಿ ಅಧ್ಯಯನ ಮಾಡಿ ಭಾರತದ ಮೊತ್ತ ಮೊದಲ `ಆಲೋಪಥಿ ವೈದ್ಯೆ' ಆದ ಕಥೆ ಇದು. ಆಕೆಯ ಸಾಧನೆಗೆ ಬೆಂಬಲವಾಗಿ ಇದ್ದದ್ದು ಆಕೆಯ ಪತಿ.... ಪುರುಷನ ಯಶಸ್ಸಿನ ಹಿಂದೆ ಮಹಿಳೆ ಇರುತ್ತಾಳೆ ಎಂಬ ಮಾತನ್ನೇ ತಿರುವು ಮುರುವು ಮಾಡಿದ ಘಟನೆ ಇದು...! ಈ ಮಹಾನ್ ಮಹಿಳೆಗೆ ಗೂಗಲ್ ಈದಿನ ತನ್ನ ‘ಡೂಡಲ್’ ಗೌರವ ಸಲ್ಲಿಸಿದೆ.

ನೆತ್ರಕೆರೆ ಉದಯಶಂಕರ
ನೂರ ಇಪ್ಪತ್ತೆರಡು ವರ್ಷಗಳ ಹಿಂದೆ- 1886 ಮಾರ್ಚ್ 11- ಭಾರತೀಯ ಮಹಿಳೆಯರ ಪಾಲಿಗೆ ಚಿರಸ್ಮರಣೀಯ ದಿನ. ಈದಿನ ಅಮೆರಿಕದ ಪೆನ್ಸಿಲ್ವೇನಿಯಾದ ಮಹಿಳಾ ವೈದ್ಯಕೀಯ ಕಾಲೇಜಿನ ಘಟಿಕೋತ್ಸವ. ಪದವಿ ಪ್ರದಾನದ ದಿನ. ಅಮೆರಿಕನ್ನರಿಗೆ ಮಹಿಳಾ ವಿದ್ಯಾರ್ಥಿಗಳು ವೈದ್ಯಕೀಯ ಪದವಿ ಪಡೆಯುವುದರಲ್ಲಿ ಅಂತಹ ವಿಶೇಷವೇನೂ ಇರಲಿಲ್ಲ. ಆದರೆ ಭಾರತೀಯರ ಮಟ್ಟಿಗೆ ಅದು ಸಂಭ್ರಮದ ಕ್ಷಣವಾಗಿತ್ತು.

ಈದಿನ ಪಾಶ್ಚಾತ್ಯ ವೈದ್ಯಕೀಯ ಶಿಕ್ಷಣ ಓದಿದ ಭಾರತದ ಮೊತ್ತ ಮೊದಲ ಮಹಿಳೆ `ವೈದ್ಯಕೀಯ ಪದವಿ' ಪಡೆದರು. ಅರ್ಥಾತ್ ಆಕೆ ಭಾರತದ ಮೊತ್ತ ಮೊದಲ ಮಹಿಳಾ ಆಲೋಪಥಿ ವೈದ್ಯೆ ಎನಿಸಿಕೊಂಡರು..! ಸಾಧನೆ ಮಾಡಿದ ಮಹಿಳೆಯ ಹೆಸರು ಆನಂದಿಬಾಯಿ ಜೋಶಿ.

ಆನಂದಿಬಾಯಿ ಜೋಶಿ ಬದುಕಿದ್ದುದು ಕೇವಲ 22 ವರ್ಷಗಳು. 1865ರಿಂದ 1887ರವರೆಗೆ ಅಷ್ಟೆ. ಆದರೆ ಚಿಕ್ಕ ವಯಸ್ಸಿನಲ್ಲಿ ಎಲ್ಲ ಸಾಂಪ್ರದಾಯಿಕ ಅಡ್ಡಿ, ಅಡಚಣೆ, ವಿರೋಧಗಳನ್ನು ಎದುರಿಸಿ ಆಕೆ ಮಾಡಿದ ಸಾಧನೆ ಮಾತ್ರ ಭಾರತದ ಮಹಿಳಾ ವೈದ್ಯಕೀಯ ಜಗತ್ತಿನಲ್ಲಿ ಚಿರಸ್ಥಾಯಿಯಾಗಿ ನಿಲ್ಲುವಂತಹುದು.

ಅದು ಹತ್ತೊಂಬತ್ತನೆಯ ಶತಮಾನ. ಪರಂಪರಾಗತ ಕಟ್ಟುನಿಟ್ಟುಗಳಿಗೆ ಭಾರತೀಯರು, ಅದರಲ್ಲೂ ಭಾರತೀಯ ನಾರಿಯರು ಬಲವಾಗಿ ಅಂಟಿಕೊಂಡಿದ್ದ ಕಾಲ. ಮಹಾರಾಷ್ಟ್ರದ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ಈಕೆ ಬೆಳೆದ ಪರಿಸರ, ಸ್ವತಂತ್ರ ವಿಚಾರ ಲಹರಿ ಮೊಳೆಯಲು ಆಸ್ಪದ ಕೊಡುವಂತಹುದಾಗಿರಲಿಲ್ಲ.

ಆದರೆ ಗೋಪಾಲರಾವ್ ಜೋಶಿ ಎಂಬ ಬ್ರಾಹ್ಮಣ ವಿಧುರನೊಬ್ಬ ಆಕೆಯ ಬದುಕನ್ನು ಪ್ರವೇಶಿಸಿದ್ದು ಆಕೆಯ ಬಾಳಿಗೆ ಒಂದು ದೊಡ್ಡ ತಿರುವನ್ನೇ ನೀಡಿತು. ವಾಸ್ತವವಾಗಿ ಕಾಲದ ಚಿಂತನೆಗಳಿಗೆ ಭಿನ್ನವಾಗಿ ಚಿಂತಿಸುತ್ತಿದ್ದ ಗೋಪಾಲರಾವ್ ವಿಧವೆಯೊಬ್ಬಳನ್ನು ಮದುವೆಯಾಗುವ ವಿಚಾರ ಹೊಂದಿದ್ದ ವ್ಯಕ್ತಿ. ಬಡ ಅಂಚೆ ಗುಮಾಸ್ತನಾಗಿದ್ದ ಆತನಿಗೆ ಮರುಮದುವೆಯಾಗಲು ವಿಧವೆ ಸಿಗಲಿಲ್ಲ.

ಕಡೆಗೆ ಆತ ಮದುವೆಯಾದದ್ದು 9 ವರ್ಷ ವಯಸ್ಸಿನ ಯಮುನಾಳನ್ನು. ಮದುವೆಯ ಬಳಿಕ ಆತ ತನ್ನ ಪತ್ನಿಯನ್ನು ವಿದ್ಯಾವಂತೆಯನ್ನಾಗಿ ಮಾಡಬೇಕು ಎಂಬ ಗುರಿ ಇಟ್ಟುಕೊಂಡ.

1965 ಮಾರ್ಚ್ 31ರಂದು ಮುಂಬೈ ಸಮೀಪದ ಕಲ್ಯಾಣದಲ್ಲಿ ಜನಿಸಿದ್ದ ಯಮುನಾಳಿಗೆ ಮದುವೆ ಬಳಿಕ ಗೋಪಾಲರಾವ್ ಜೋಶಿ ಇಟ್ಟ ಹೆಸರು ಆನಂದಿ. ಹುಟ್ಟಿದ ಮೊದಲ ಮಗು ವಾರದಲ್ಲೇ ಸತ್ತು ಹೋದಾಗ ಜೋಶಿ ಗಟ್ಟಿ ಮನಸ್ಸು ಮಾಡಿದ. ಪತ್ನಿಯನ್ನು ಕೇವಲ ವಿದ್ಯಾವಂತೆಯನ್ನಾಗಿ ಮಾಡುವುದಷ್ಟೇ ಅಲ್ಲ, ಆಕೆಯನ್ನು ವೈದ್ಯೆಯನ್ನಾಗಿ ಮಾಡಬೇಕೆಂಬ ಸಂಕಲ್ಪ ಮಾಡಿಕೊಂಡ.

ಇದಕ್ಕಾಗಿಯೇ ಗೋಪಾಲರಾವ್ ಮುಂಬೈಗೆ ವರ್ಗಾವಣೆ ಮಾಡಿಸಿಕೊಂಡ. ಅಲ್ಲಿನ ಮಿಷನ್ ಶಾಲೆಯಲ್ಲಿ ಆಕೆಗೆ ಶಿಕ್ಷಣ ಕೊಡಿಸಿದ.

ಅಮೆರಿಕಕ್ಕೆ ಹೋದರೆ ವೈದ್ಯಕೀಯ ಶಿಕ್ಷಣಕ್ಕೆ ವಿಪುಲ ಅವಕಾಶ ಇದೆ ಎಂದೂ ಅರಿತುಕೊಂಡ. ಆದರೆ ಅಮೆರಿಕಕ್ಕೆ ಹೋಗಲು ಬೇಕಾಗುವಷ್ಟು ಹಣ ಎಲ್ಲಿಂದ ಬರಬೇಕು? ಆದರೆ ಜೋಶಿ ಧೃತಿಗೆಡಲಿಲ್ಲ. ಅಮೆರಿಕದ ವಿವಿಧ ಸಂಸ್ಥೆಗಳಿಗೆ ನೆರವು ಕೋರಿ ಪತ್ರಗಳನ್ನು ಬರೆಯತೊಡಗಿದ.

ಗೋಪಾಲರಾವ್ ಜೋಶಿ ಮತ್ತು ಮಿಸ್ಟರ್ ವೈಲ್ಡರ್ ಎಂಬವರ ಮಧ್ಯೆ ವಿಚಾರವಾಗಿ ನಡೆದ ಪತ್ರ ವ್ಯವಹಾರ `ಅಮೆರಿಕನ್ ಕ್ರಿಶ್ಚಿಯನ್ ರಿವ್ಯೂ' ಪತ್ರಿಕೆಯಲ್ಲಿ ಬೆಳಕು ಕಂಡದ್ದು ಜೋಶಿಯ ಪ್ರಯತ್ನಗಳಿಗೆ ಹೊಸ ತಿರುವು ನೀಡಿತು. ಇದನ್ನು ಓದಿದ ಅಮೆರಿಕದ ಮಹಿಳೆ ಕಾರ್ಪೆಂಟರ್ ಎಂಬಾಕೆ ಆನಂದಿಬಾಯಿಗೆ ಪತ್ರ ಬರೆದಳು. ಇಬ್ಬರಲ್ಲಿ ಗೆಳೆತನ ಬೆಳೆಯಿತು.

ಅಂತೂ ಇಂತೂ ಹಣ ಹೊಂದಿಸಿಕೊಂಡು ಆನಂದಿಯನ್ನು ನ್ಯೂಯಾರ್ಕಿಗೆ ಕಳುಹಿಸಲು ಜೋಶಿ ಸಿದ್ಧತೆ ನಡೆಸಿದ.

ಸಂಪ್ರದಾಯಸ್ಥರಿಂದ ಇದಕ್ಕೂ ವಿರೋಧ ವ್ಯಕ್ತವಾಯಿತು. ಆದರೂ ಕೆಲವು ಆಸಕ್ತರು, ಸಮಾಜ ಸುಧಾರಕರು ಜೋಶಿ ದಂಪತಿಯ ನೆರವಿಗೆ ಬಂದರು. ಆಕೆಗೆ ಬೀಳ್ಕೊಡುಗೆ ಏರ್ಪಡಿಸಿದರು.

`
ನಾನು ಸರಿಯಾದ ಕೆಲಸ ಮಾಡುತ್ತ್ತಿದ್ದೇನೆ ಎಂದು ನನಗೆ ಅನ್ನಿಸುತ್ತಿದೆ. ಮಹಿಳಾ ವೈದ್ಯಳಾಗಿ ಭಾರತೀಯ ಮಹಿಳೆಯರಿಗೆ ಹೆಚ್ಚು ನೆರವಾಗಲು ಸಾಧ್ಯವಾಗುತ್ತದೆ ಎಂಬುದು ನನ್ನ ನಂಬಿಕೆ' ಎಂದು ಸಂದರ್ಭದಲ್ಲಿ ಹೇಳಿದ ಆನಂದಿಬಾಯಿ `ನಾನು ಭಾರತೀಯ ಬ್ರಾಹ್ಮಣಳಾಗಿ ವಿದೇಶಕ್ಕೆ ಹೋಗುತ್ತಿದ್ದೇನೆ. ಹಾಗೆಯೇ ಹಿಂದಿರುಗುತ್ತೇನೆ' ಎಂದೂ ಘೋಷಿಸಿದಳು.

ಅಮೆರಿಕದಲ್ಲಿ ಕಾರ್ಪೆಂಟರ್ ಕುಟುಂಬ ಜೋಶಿ ದಂಪತಿಗೆ ಅಗತ್ಯ ಮಾರ್ಗದರ್ಷನಗಳನ್ನು ಮಾಡಿತು. ಮೆಡಿಕಲ್ ಕಾಲೇಜಿನಲ್ಲಿ ಸೀಟು ಹಾಗೂ ಶಿಷ್ಯವೇತನ ಪಡೆದ ಆನಂದಿ, ಹಣಕಾಸಿನ ಚಿಂತೆಗಳನ್ನು ಬದಿಗೊತ್ತಿ ಓದಿನಲ್ಲಿ ತನ್ಮಯಳಾದಳು.

ಇಷ್ಟ್ಲೆಲದರ ಮಧ್ಯೆ ಆಕೆ ತನ್ನ ಬದುಕಿನ ರೀತಿ, ನೀತಿ ಮಾತ್ರ ಬದಲಾಯಿಸಲಿಲ್ಲ. ಶುದ್ಧ ಸಸ್ಯಾಹಾರಿಯಾಗಿ, ಎಂಟು ಮೀಟರ್ ಉದ್ದದ ಮಹಾರಾಷ್ಟ್ರದ ಸೀರೆಯನ್ನೇ ಧರಿಸುತ್ತಾ ಭಾರತೀಯ ಬ್ರಾಹ್ಮಣ ಬದುಕನ್ನೇ ಬಾಳುತ್ತಾ ವೈದ್ಯಕೀಯ ಓದಿದಳು.

1886
ಮಾರ್ಚಿಯಲ್ಲಿ ಆಕೆ ಅಂತಿಮ ಪರೀಕ್ಷೆ ತೆಗೆದುಕೊಂಡು ಪದವಿ ಗಿಟ್ಟಿಸಿಕೊಂಡಳು. ಭಾರತಕ್ಕೆ ಹಿಂದಿರುಗುವ ಮುನ್ನವೇ ಕೊಲ್ಹಾಪುರದ ಎಡ್ವರ್ಡ್ ಆಸ್ಪತ್ರೆಯ ಮಹಿಳಾ ವಾರ್ಡನ್ ಉಸ್ತುವಾರಿ ಹೊಣೆಗಾರಿಕೆಯೂ ಆಕೆಯ ಪಾಲಿಗೆ ಲಭಿಸಿತು.

ಗೋಪಾಲರಾವ್ ಜೋಶಿಯ ಸಂಕಲ್ಪ ಸಿದ್ಧಿಸಿತು. ಪತ್ನಿಯನ್ನು ಭಾರತದ ಪ್ರಪ್ರಥಮ ಮಹಿಳಾ ವೈದ್ಯೆಯನ್ನಾಗಿ ರೂಪಿಸಿಕೊಂಡು 1886 ಅಕ್ಟೋಬರಿನಲ್ಲಿ ಗೋಪಾಲ ರಾವ್ ಆಕೆಯೊಂದಿಗೆ ಭಾರತಕ್ಕೆ ವಾಪಸಾದ. ಟೀಕೆ, ಬಹಿಷ್ಕಾರಗಳ ಬದಲಾಗಿ ಭಾರತದ ಮೊತ್ತ ಮೊದಲ ವೈದ್ಯೆಗೆ ಮೆಚ್ಚುಗೆ, ಅಭಿನಂದನೆಗಳ ಮಹಾಪೂರ ಹರಿಯಿತು. ಜೋಶಿ ದಂಪತಿಯ ಇಚ್ಛಾಶಕ್ತಿ ಕೊನೆಗೂ ಗೆದ್ದಿತ್ತು.

ಆದರೆ ವಿಧಿಯ ನಿರ್ಧಾರ ಬೇರೆಯೇ ಆಗಿತ್ತು. ವೈದ್ಯಳಾಗಿ ದೀರ್ಘಕಾಲ ಸೇವೆ ಸಲ್ಲಿಸುವ ಭಾಗ್ಯ ಆಕೆಗೆ ಇರಲಿಲ್ಲ.ವಿದೇಶದಲ್ಲಿ ಸರಳ, ಸಾತ್ವಿಕ, ಸಸ್ಯಾಹಾರವನ್ನು ಒಳಗೊಂಡ ಆಹಾರ ಪದ್ಧತಿ, ವೈದ್ಯಕೀಯ ಅಧ್ಯಯನ ಕಾಲದ ಸುಸ್ತು, ಸಮುದ್ರಯಾನದ ಬಳಲಿಕೆಯನ್ನು ಆಕೆಯ ಕೃಶ ಶರೀರ ಸಹಿಸಿಕೊಳ್ಳಲಿಲ್ಲವೇನೋ? ಆರೋಗ್ಯ ಹದಗೆಟ್ಟಿತು. 1887 ಫೆಬ್ರುವರಿ 26ರಂದು ತನ್ನ 22ನೇ ಹುಟ್ಟು ಹಬ್ಬಕ್ಕೆ ಒಂದು ತಿಂಗಳಿಗೂ ಮೊದಲು ಡಾ. ಆನಂದಿ ಬಾಯಿ ಇಹಲೋಕ ತ್ಯಜಿಸಿದಳು.

`
ನಾನು ಮಾಡಬಹುದಾಗಿದ್ದ ಎಲ್ಲವನ್ನೂ ಮಾಡಿದ್ದೇನೆ' ಎಂಬ ಶಬ್ಧಗಳು ಆಕೆಯ ಕಟ್ಟ ಕಡೆಯ ಶಬ್ಧಗಳಾಗಿ ಉಳಿದುಬಿಟ್ಟವು. (ಸಾಧಾರ)  


http://www.paryaya.com/2008/03/she-is-first-woman-allopathic-doctor-of.html?q=%E0%B2%86%E0%B2%A8%E0%B2%82%E0%B2%A6%E0%B2%BF+%E0%B2%9C%E0%B3%8B%E0%B2%B6%E0%B2%BF

March 8th was celebrated as International Woman’s Day all over the world including India. We praised and recognized many women who contributed to various fields. But we forgot one Anandi Bai who was the first woman allopathic doctor who got her medical degree certificate on 11 March 1886 in America. PARYAYA salutes this young lady doctor and her husband for their achievement. ಈ ಲೇಖನವನ್ನು ಪರ್ಯಾಯ 10 ವರ್ಷಗಳ ಹಿಂದೆ ಇದೇ ದಿನ ಪ್ರಕಟಿಸಿತ್ತು. ಲಿಂಕ್ ಗೆ ಪಕ್ಕದ  ಚಿತ್ರ ಕ್ಲಿಕ್ ಮಾಡಿ:

Posted 10th March 2008 by PARYAYA