Friday, December 7, 2007

'ಮಿನರಲ್ ವಾಟರ್'ಗೆ ಇಷ್ಟ ಬಂದಷ್ಟು ದರ..! Wake up Consumer

ಎದ್ದೆದ್ದು ಬೀಳದಿರುಒದ್ದಾಡಿ ಸೋಲದಿರು:
ಗ್ರಾಹಕರಿಗುಂಟು ಇದೋ  'ಪರ್ಯಾಯ ಮಾರ್ಗ'...


ಪೆಪ್ಸಿ, ಕೋಕ್, ಮಿರಿಂಡಾ, ಫಾಂಟಾ, ಸೆವೆನ್ ಅಪ್ ಇತ್ಯಾದಿ ತಂಪು ಪಾನೀಯವಿರಲಿ, ಮಿನರಲ್ ವಾಟರ್, ಹಾಲು, ಮೊಸರಿನ ಪ್ಯಾಕೆಟ್ಟೇ ಇರಲಿ- ಅಂಗಡಿ, ಹೋಟೆಲ್ ಚಿತ್ರಮಂದಿರ ಎಲ್ಲಾದರೂ ಹೋಗಿ ತೆಗೆದುಕೊಳ್ಳಿ.
ನಮೂದಿಸಿದ ಬೆಲೆಗಿಂತ ಕನಿಷ್ಠ ಒಂದು ರೂಪಾಯಿ ಹೆಚ್ಚು! ಯಾಕಪ್ಪಾ ಹೀಗೆ ಅಂತ ಕೇಳಿದರೆ 'ಪ್ರಿಜ್ನಲ್ಲಿ ಇಡ್ತೇವಲ್ಲ ಸ್ವಾಮೀ, ಕೂಲ್ ಮಾಡಿದ್ದಕ್ಕೆ!' ಎಂಬ ಉತ್ತರ ಬರುತ್ತದೆ. ಹೋಟೆಲ್ಗಳಲ್ಲಿ ಅಧಿಕೃತವಾಗಿಯೇ ಇದಕ್ಕೆ 'ಸೇವೆ' ಸೋಗು..!'ಥಂಡಾ, ಥಂಡಾ, ಕೂಲ್ ಕೂಲ್' ಎನ್ನುತ್ತಾ ಸುಲಿಗೆ ನಡೆಯುತ್ತದೆ ನಿರಂತರ.. ಇದು ನಮ್ಮ ಗ್ರಹಚಾರ ಎಂದುಕೊಂಡು ಸುಮ್ಮನೆ ಕುಳಿತುಕೊಳ್ಳುತ್ತೀರಾ? ಅಥವಾ ಬೆಂಗಳೂರು ಮಲ್ಲೇಶ್ವರಂನ ಬಿ.ವಿ. ಶಂಕರನಾರಾಯಣರಾವ್ ತುಳಿದ 'ಪರ್ಯಾಯ' ಹಾದಿ ತುಳಿಯುತ್ತೀರಾ?ಮೊದಲು ಶಂಕರ ನಾರಾಯಣರಾವ್ ಮಾಡಿದ್ದೇನು? ಓದಿಕೊಳ್ಳಿ.. ಗ್ರಾಹಕ ಗೆಲುವಿನ ಕಥೆಯನ್ನು..

'ಮಿನರಲ್ ವಾಟರ್'ಗೆ ಇಷ್ಟ ಬಂದಷ್ಟು ದರ..!

ಪ್ಯಾಕ್ ಮಾಡಿ ಗರಿಷ್ಠ ಬಿಡಿ ಮಾರಾಟ ಬೆಲೆ ನಮೂದಿಸಿದ ಯಾವುದೇ ವಸ್ತುವನ್ನೂ ಅದೇ ಬೆಲೆಗೆ ಮಾರಾಟ ಮಾಡಬೇಕಾದ್ದು ಕಡ್ಡಾಯ. ಆದರೆ ಹೋಟೆಲ್/ರೆಸ್ಟೋರೆಂಟ್ಗಳಲ್ಲಿ 'ಸೇವೆ' ಸೋಗಿನಲ್ಲಿ ಹೀಗೆ ನಮೂದಿಸಲಾದ ಬೆಲೆಗಿಂತ ಹೆಚ್ಚಿನ ಬೆಲೆಗೆ ಅಂತಹ ವಸ್ತುವನ್ನು ಮಾರಬಹುದೇ?ಯಾವುದೇ ವಸ್ತುವನ್ನು ಈರೀತಿ ಮಾರುವುದು ಸೇವಾ ಲೋಪವಾಗುತ್ತದೆ ಎಂದು ಅಭಿಪ್ರಾಯಪಟ್ಟ ಬೆಂಗಳೂರು ನಗರ ಜಿಲ್ಲಾ ಮೂರನೇ ಹೆಚ್ಚುವರಿ ಗ್ರಾಹಕ ನ್ಯಾಯಾಲಯವು ಗ್ರಾಹಕರೊಬ್ಬರಿಗೆ ನ್ಯಾಯ ಒದಗಿಸಿದ ಪ್ರಕರಣ ಇದು.

ನೆತ್ರಕೆರೆ ಉದಯಶಂಕರ 

ಪ್ರಕರಣದ ಅರ್ಜಿದಾರರು: ಬೆಂಗಳೂರು ಮಲ್ಲೇಶ್ವರಂನ ನಿವಾಸಿ ಬಿ.ವಿ. ಶಂಕರ ನಾರಾಯಣ ರಾವ್ಪ್ರತಿವಾದಿಗಳು:ಬೆಂಗಳೂರು ಜೆ.ಸಿ. ರಸ್ತೆಯ ಹೋಟೆಲ್ ಪೈ ವೈಸ್ರಾಯ್ ಮತ್ತು ಬೆಂಗಳೂರು ರೇಸ್ ಕೋರ್ಸ್
ರಸ್ತೆಯ ಸಾಮ್ರಾಟ್ ರೆಸ್ಟೋರೆಂಟ್ ಕಾತ್ಯಾಯಿನಿ ಎಂಟರ್ ಪ್ರೈಸಸ್.ವಾಸ್ತವವಾಗಿ ಅರ್ಜಿದಾರರು ಗ್ರಾಹಕ ನ್ಯಾಯಾಲಯಕ್ಕೆ ಇಬ್ಬರು ಪ್ರತಿವಾದಿಗಳ ವಿರುದ್ಧ ಎರಡು ಪ್ರತ್ಯೇಕ ದೂರುಗಳನ್ನು ನೀಡಿದ್ದರು. ಆದರೆ ಉಭಯ ಪ್ರಕರಣಗಳ ಸ್ವರೂಪ ಒಂದೇ ಆಗಿದ್ದುದರಿಂದ ನ್ಯಾಯಾಲಯ ಎರಡೂ ಪ್ರಕರಣಗಳನ್ನು ಒಟ್ಟುಗೂಡಿಸಿ ವಿಚಾರಣೆ ನಡೆಸಿ ತೀರ್ಪು ನೀಡಿತು.ಪ್ರಕರಣದ ಅರ್ಜಿದಾರ ಬಿ.ವಿ. ಶಂಕರ ನಾರಾಯಣ ರಾವ್ ಅವರು ವಕೀಲರಾಗಿದ್ದು 2-5-2007ರಂದು ತಮ್ಮ ಇಬ್ಬರು ಸ್ನೇಹಿತರ ಜೊತೆಗೆ ಒಂದನೇ ಪ್ರಕರಣದ ಪ್ರತಿವಾದಿ ಹೋಟೆಲ್ ಪೈ ವೈಸ್ರಾಯ್ಗೆ ತೆರಳಿದ್ದರು. ಆಹಾರದ ಜೊತೆಗೆ ಪ್ಯಾಕ್ ಮಾಡಿದ ಕುಡಿಯುವ ನೀರಿನ (ಮಿನರಲ್ ವಾಟರ್) ಎರಡು ಬಾಟಲಿಗಳಿಗೆ ಆರ್ಡರ್ ಮಾಡಿದರು. ಪ್ರತಿವಾದಿ ಪ್ಯಾಕ್ ಮಾಡಿದ 'ಕಿನ್ಲೆ' ನೀರು ಸರಬರಾಜು ಮಾಡಿದರು.

ಬಾಟಲಿಯಲ್ಲಿ ನಮೂದಾಗಿದ್ದ ಗರಿಷ್ಠ ಬಿಡಿ ಮಾರಾಟ ದರ (ಎಂಆರ್ಪಿ) ತಲಾ 13 ರೂಪಾಯಿ. ಆದರೆ ಬಿಲ್ ನೀಡುವಾಗ ಬಾಟಲಿಗೆ ತಲಾ 24 ರೂಪಾಯಿ ವಿಧಿಸಲಾಯಿತು. ಎರಡು ಬಾಟಲಿಗಳಿಗೆ ಒಟ್ಟು 22 ರೂಪಾಯಿಗಳನ್ನು ಹೆಚ್ಚುವರಿಯಾಗಿ ಪಡೆಯಲಾಯಿತು.

ಎರಡನೇ ಪ್ರಕರಣದಲ್ಲಿ ಅರ್ಜಿದಾರ ಶಂಕರ ನಾರಾಯಣರಾವ್ ಅವರು ಪ್ರತಿವಾದಿ ಸಾಮ್ರಾಟ್ ರೆಸ್ಟೋರೆಂಟ್ ಕಾತ್ಯಾಯಿನಿ ಎಂಟರ್ ಪ್ರೈಸಸ್ಗೆ 17-4-2007ರಂದು ಮತ್ತು 18-4-2007ರಂದು ತಮ್ಮ ಕಿರಿಯ ಸಹೋದ್ಯೋಗಿ ಎಚ್.ಕೆ. ಹೊನ್ನೇಗೌಡ ಅವರ ಜೊತೆಗೆ ಭೇಟಿ ನೀಡಿದ್ದರು. ಅಲ್ಲೂ ಆಹಾರದ ಜೊತೆಗೆ ಪ್ಯಾಕ್ ಮಾಡಿದ ಕುಡಿಯುವ ನೀರಿಗೆ ಆರ್ಡರ್ ಮಾಡಿದಾಗ ಪ್ಯಾಕ್ ಮಾಡಿದ 'ಬಿಸ್ಲೇರಿ' ನೀರು ಬಾಟಲಿಗಳನ್ನು ಸರಬರಾಜು ಮಾಡಲಾಯಿತು.

ನೀರಿಗೂ ನಮೂದಾಗಿದ್ದ ಗರಿಷ್ಠ ಬಿಡಿ ಮಾರಾಟ ದರ ಬಾಟಲಿ ತಲಾ 12 ರೂಪಾಯಿ. ಪ್ರತಿವಾದಿಗಳು ಬಿಲ್ ಮಾಡಿದ್ದು ಬಾಟಲಿಗೆ ತಲಾ 18 ರೂಪಾಯಿಗಳು. ಬಾಟಲಿಗೆ ತಲಾ 6 ರೂಪಾಯಿಗಳಂತೆ ಹೆಚ್ಚು ಹಣ ಪಡೆಯಲಾಯಿತು.

ರೀತಿ ಪ್ಯಾಕ್ ಮಾಡಿದ ವಸ್ತುಗಳಿಗೆ ನಮೂದಿತ ದರದಿಂದ ಹೆಚ್ಚು ದರ ಪಡೆಯುವುದು ತೂಕ ಮತ್ತು ಅಳತೆ ನಿಯಮಾವಳಿಗಳ 23 (2) ನಿಯಮದ ಉಲ್ಲಂಘನೆ ಆಗುತ್ತದೆ, ಇದು ಅಪ್ರಾಮಾಣಿಕ ವಹಿವಾಟು ಎಂಬ ನೆಲೆಯಲ್ಲಿ ಅರ್ಜಿದಾರರು ಉಭಯ ಪ್ರತಿವಾದಿಗಳ ವಿರುದ್ಧ ಬೆಂಗಳೂರು ನಗರ ಜಿಲ್ಲಾ ಮೂರನೇ ಹೆಚ್ಚುವರಿ ಗ್ರಾಹಕ ನ್ಯಾಯಾಲಯದಲ್ಲಿ ಪ್ರತ್ಯೇಕ ದೂರುಗಳನ್ನು ದಾಖಲಿಸಿದರು. ಹೆಚ್ಚುವರಿಯಾಗಿ ಪಡೆದ ಹಣವನ್ನು ವಾಪಸ್ ನೀಡುವುದರ ಜೊತೆಗೆ ತಲಾ 10,000 ರೂಪಾಯಿ ಖಟ್ಲೆ ವೆಚ್ಚ ಮತ್ತು ತಲಾ ಒಂದು ಲಕ್ಷ ರೂಪಾಯಿಗಳನ್ನು ಗ್ರಾಹಕರ ಕಲ್ಯಾಣ ನಿಧಿಗೆ ಪರಿಹಾರ ರೂಪದಲ್ಲಿ ಪಾವತಿ ಮಾಡಲು ನಿರ್ದೇಶನ ನೀಡಬೇಕು ಎಂದು ಅವರು ನ್ಯಾಯಾಲಯವನ್ನು ಪ್ರಾರ್ಥಿಸಿದರು.

ಅಧ್ಯಕ್ಷ ಎನ್. ಶ್ರೀವತ್ಸ ಕೆದಿಲಾಯ ಮತ್ತು ಸದಸ್ಯೆ ಡಾ. ಸುಭಾಷಿಣಿ ಅವರನ್ನು ಒಳಗೊಂಡ ಪೀಠವು ಅರ್ಜಿದಾರರು ಮತ್ತು ಪ್ರತಿವಾದಿಗಳ ಪರ ವಕೀಲರಾದ .ಎಸ್. ಮೂರ್ತಿ, ಬಿ. ದಿನೇಶ, ಸಿ.ಎನ್. ಕಾಮತ್ ಮತ್ತು ವಿನಾಯಕ ಕಾಮತ್ ಅವರ ಅಹವಾಲುಗಳನ್ನು ಆಲಿಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು.ಅರ್ಜಿದಾರರು ಗ್ರಾಹಕನಲ್ಲ, ಪ್ರತಿವಾದಿಗಳು ಯಾವುದೇ ಅಪ್ರಾಮಾಣಿಕ ವಹಿವಾಟು ನಡೆಸಿಲ್ಲ, ಎಂಆರ್ಪಿ ಕಾಯ್ದೆ ಹೋಟೆಲ್ - ರೆಸ್ಟೋರೆಂಟುಗಳಿಗೆ ಅನ್ವಯಿಸುವುದಿಲ್ಲ (ಏಕೆಂದರೆ ಇವು ಬಿಡಿ ವ್ಯಾಪಾರ ಸಂಸ್ಥೆಗಳಲ್ಲ), ಆಹಾರ ಮತ್ತು ಪಾನೀಯಗಳ 'ಮೆನು' ದರದಲ್ಲಿ ಒದಗಿಸಲಾಗುವ ಸೇವೆ, ವಸ್ತುಗಳ ಸಂರಕ್ಷಣೆಗೆ ಬೇಕಾದ ಮೂಲ ಸವಲತ್ತುಗಳ ವೆಚ್ಚ ಇತ್ಯಾದಿ ಸೇರುತ್ತದೆ, ಮೆನುವಿನಲ್ಲಿ ನಮೂದಿಸಿದ ದರವನ್ನೇ ಬಿಲ್ನಲ್ಲಿ ಹಾಕುವುದರಿಂದ ಮೆನು ನೋಡಿ ಆಹಾರ ವಸ್ತುವಿಗೆ ಆರ್ಡರ್ ಮಾಡಿದ ಅರ್ಜಿದಾರ ನಂತರ ರೀತಿ ತಗಾದೆ ತೆಗೆಯುವುದು ಸರಿಯಲ್ಲ ಎಂದು ಆಕ್ಷೇಪಗಳ ಮಹಾಪೂರವನ್ನೇ ಹರಿಸಿದ ಉಭಯ ಪ್ರಕರಣಗಳ ಪ್ರತಿವಾದಿಗಳು ಅರ್ಜಿಯನ್ನು ತಳ್ಳಿಹಾಕಬೇಕು ಎಂದು ಮನವಿ ಮಾಡಿದವು.

ಸುಪ್ರೀಂಕೋರ್ಟ್ ತೀಪರ್ು ಸೇರಿದಂತೆ ವಿವಿಧ ನ್ಯಾಯಾಲಯಗಳು ನೀಡಿದ ತೀರ್ಪುಗಳು, ರಾಜ್ಯ ಗ್ರಾಹಕ ನ್ಯಾಯಾಲಯಗಳು ನೀಡಿದ ತೀರ್ಪುಗಳ ಸವಿಸ್ತಾರ ಅಧ್ಯಯನ ಮಾಡಿದ ಗ್ರಾಹಕ ನ್ಯಾಯಾಲಯ, ಅರ್ಜಿದಾರರು ತಕರಾರು ತೆಗೆದದ್ದು ಪ್ಯಾಕ್ ಮಾಡಲಾದ ನೀರಿನ ಬಾಟಲಿಯಲ್ಲಿ ನಮೂದಿಸಲಾದ ಬಿಡಿ ಮಾರಾಟದರಕ್ಕಿಂತ ಹೆಚ್ಚು ದರ ಪಡೆದುದಕ್ಕೆ ಹೊರತು ಇತರ ಯಾವುದೇ ಆಹಾರ ವಸ್ತುಗಳ ದರಕ್ಕೆ ಸಂಬಂಧಿಸಿದಂತೆ ಅಲ್ಲ ಎಂಬುದನ್ನು ಗಮನಕ್ಕೆ ತೆಗೆದುಕೊಂಡಿತು.ತಾವು ವಸ್ತುಗಳನ್ನು ಮಾರುವುದಿಲ್ಲ, ಸೇವೆಯನ್ನಷ್ಟೇ ನೀಡುತ್ತಿದ್ದೇವೆ ಎನ್ನುತ್ತಾ ಗರಿಷ್ಠ ಬಿಡಿ ಮಾರಾಟ ದರ ಕಾಯ್ದೆ ಪ್ರಕಾರ ನಮೂದಿಸಲಾದ ದರಕ್ಕಿಂತ ಹೆಚ್ಚು ದರವನ್ನು ಹೋಟೆಲ್/ ರೆಸ್ಟೋರೆಂಟ್ಗಳು ಪಡೆಯಬಹುದೇ? ಕಾಯ್ದೆ ಅನ್ವಯ ಆಗುವುದಿಲ್ಲ ಎಂಬ ನೆಪದಲ್ಲಿ ಆಹಾರ ವಸ್ತುವಿನ ಜೊತೆಗೆ ಗ್ರಾಹಕ ಆರ್ಡರ್ ಮಾಡುವ 'ಪ್ಯಾಕ್' ಮಾಡಿದ ನೀರಿಗೆ ಹೆಚ್ಚು ದರ ವಿಧಿಸುವುದರಿಂದ ಪರಿಸ್ಥಿತಿಯ ದುರ್ಲಾಭ ಪಡೆದಂತಾಗುವುದಿಲ್ಲವೇ ಎಂಬ ಪ್ರಶ್ನೆ ನ್ಯಾಯಾಲಯದ ಮುಂದೆ ಬಂತು.

ಸೇವೆಯ ಹೆಸರಿನಲ್ಲಿ ನಮೂದಿತ ಗರಿಷ್ಠ ಬಿಡಿ ಮಾರಾಟ ದರಕ್ಕಿಂತ ಹೆಚ್ಚು ಹಣವನ್ನು ತಮಗಿಷ್ಟ ಬಂದಂತೆ ಯಾರೂ ವಿಧಿಸಲು ಸಾಧ್ಯವಿಲ್ಲ. ಹಾಗೆ ಮಾಡಬಹುದಾದರೆ 'ಗರಿಷ್ಠ ಬಿಡಿ ಮಾರಾಟ ದರ' ಕಾನೂನಿಗೆ ಯಾವ ಪಾವಿತ್ರ್ಯವೂ ಉಳಿಯುವುದಿಲ್ಲ ಎಂದು ಹೇಳಿದ ನ್ಯಾಯಾಲಯ ರೀತಿ ದರ ವಿಧಿಸುವುದು ಗ್ರಾಹಕ ಸಂರಕ್ಷಣಾ ಕಾಯ್ದೆಯ ಅನ್ವಯ ಅಪ್ರಾಮಾಣಿಕ ವಹಿವಾಟು ಆಗುತ್ತದೆ ಎಂಬ ನಿಲುವನ್ನು ತಾಳಿತು.

ವಾಸ್ತವವಾಗಿ ದಾಹ ನೀಗಿಸಿ ಬಿಕ್ಕಳಿಕೆ ನಿವಾರಿಸಬೇಕಾದ ನೀರು, ಪ್ರಕರಣದಲ್ಲಿ ಬಿಲ್ ಕಂಡೊಡನೆಯೇ ಗ್ರಾಹಕ ಬಿಕ್ಕುವಂತೆ ಮಾಡಿದೆ ಎಂಬ ಅಭಿಪ್ರಾಯಕ್ಕೂ ನ್ಯಾಯಾಲಯ ಬಂದಿತು.

ಹಿನ್ನೆಲೆಯಲ್ಲಿ ಮಾರಾಟಕ್ಕಾಗಿ ಇಡಲಾದ ಪ್ಯಾಕ್ ಮಾಡಿದ ವಸ್ತುಗಳಿಗೆ ಸೇವೆಯ ಹೆಸರಿನಲ್ಲಿ ನಮೂದಿತ ಗರಿಷ್ಠ ಬಿಡಿ ಮಾರಾಟ ದರಕ್ಕಿಂತ ಹೆಚ್ಚು ದರ ವಿಧಿಸುವ ಇಂತಹ ಅಪ್ರಾಮಾಣಿಕ ವಹಿವಾಟನ್ನು ಇನ್ನು ಮುಂದೆ ನಡೆಸಬಾರದು, ಹೆಚ್ಚು ಪಡೆದ ಹಣವನ್ನು ತಲಾ 1000 ರೂಪಾಯಿ ಖಟ್ಲೆ ವೆಚ್ಚ ಸಹಿತವಾಗಿ ಮರುಪಾವತಿ ಮಾಡಬೇಕು ಹಾಗೂ ತಲಾ 5000 ರೂಪಾಯಿಗಳನ್ನು ಗ್ರಾಹಕ ನ್ಯಾಯಾಲಯದ ಗ್ರಾಹಕ ಕಲ್ಯಾಣ ನಿಧಿ ಖಾತೆಗೆ ಪರಿಹಾರರೂಪದಲ್ಲಿ ಪಾವತಿ ಮಾಡಬೇಕು ಎಂದು ಪ್ರತಿವಾದಿಗಳಿಗೆ ಆದೇಶ ನೀಡಿತು.