Tuesday, November 6, 2018

ಇಂದಿನ ಇತಿಹಾಸ History Today ನವೆಂಬರ್ 06

ಇಂದಿನ ಇತಿಹಾಸ History Today ನವೆಂಬರ್ 06
2018: ಅಯೋಧ್ಯೆ: ಬೆಳಕಿನ ಹಬ್ಬ ದೀಪಾವಳಿ ನಿಮಿತ್ತ ಪವಿತ್ರ ಕ್ಷೇತ್ರ ಅಯೋಧ್ಯೆಯ ಸರಯೂ ನದಿ
ತಟದಲ್ಲಿ ಏಕಕಾಲಕ್ಕೆ 3 ಲಕ್ಷಕ್ಕಿಂತ ಹೆಚ್ಚು ದೀಪಗಳನ್ನು ಬೆಳಗಿಸುವ ಮೂಲಕ ವಿಶ್ವದಾಖಲೆ ಸೃಷ್ಟಿಸಲಾಯಿತು. ದೀಪೋತ್ಸವದಲ್ಲಿ ವಿಶ್ವದಾಖಲೆ ಸೃಷ್ಟಿಯಾಗಿರುವುದನ್ನು ಗಿನ್ನಿಸ್ ವಿಶ್ವ ದಾಖಲೆಯ ಅಧಿಕೃತ ತೀರ್ಪುಗಾರರಾದ ರಿಷಿ ನಾಥ್ ಘೋಷಿಸಿದರು.  ಏಕಕಾಲಕ್ಕೆ 3,01,152 ದೀಪ ಬೆಳಗಿಸಿರುವುದು ಒಂದು ಹೊಸ ದಾಖಲೆ ಎಂದು ರಿಷಿ ನಾಥ್ ಹೇಳಿದ್ದಾರೆ. ಸಂದರ್ಭದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ದಕ್ಷಿಣ ಕೊರಿಯಾದ 'ಪ್ರಥಮ ಮಹಿಳೆ' ಕಿಮ್ ಜುಂಗ್ ಸೂಕ್ ಉಪಸ್ಥಿತರಿದ್ದರು.   ಹಿಂದೆ ಹರಿಯಾಣದಲ್ಲಿ ಏಕಕಾಲಕ್ಕೆ 1,50,009 ದೀಪ ಬೆಳಗಿಸಿರುವುದು ಗಿನ್ನಿಸ್ ದಾಖಲೆ ಪುಟ ಸೇರಿತ್ತು.

2018: ಬೆಂಗಳೂರು/ಬಳ್ಳಾರಿ: ತೀವ್ರ ಕುತೂಹಲ ಕೆರಳಿಸಿದ್ದ ಮೂರು ಲೋಕಸಭೆ ಹಾಗೂ ಎರಡು
ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಬಳ್ಳಾರಿ, ಮಂಡ್ಯ ಲೋಕಸಭೆ ಮತ್ತು ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್- ಜೆಡಿಎಸ್ ಮೈತ್ರಿ ಭರ್ಜರಿ ಗೆಲುವು ಸಾಧಿಸುವ ಮೂಲಕ ಮೈತ್ರಿ ಕೂಟ ಭದ್ರವಾಯಿತು. ಮತ್ತೊಂದೆಡೆ ಭಾರತೀಯ ಜನತಾ ಪಕ್ಷ ಬೈಂದೂರು-ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮಾತ್ರ ಜಯಸಾಧಿಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪನವರ ನಾಯಕತ್ವಕ್ಕೆ ಮತ್ತಷ್ಟು ಬಂಡಾಯದ ಬಿಸಿ ಮುಟ್ಟುವಂತಾಯಿತು. ಬಳ್ಳಾರಿಯಲ್ಲಿ ವಿಎಸ್ ಉಗ್ರಪ್ಪ ಜಯದ ದಾಖಲೆ: ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ 6,20,977 ಭರ್ಜರಿ ಮತ ಪಡೆದರೆ, ಪ್ರತಿಸ್ಪರ್ಧಿ ಬಿಜೆಪಿಯ ಜೆ.ಶಾಂತಾ ಅವರು 3,79, 321ಮತ ಗಳಿಸಿ ಪರಾಜಯಗೊಂಡರು. ಉಗ್ರಪ್ಪ 2,41,656 ಭಾರೀ ಮತಗಳ ಅಂತರದಿಂದ ಜಯ ಸಾಧಿಸಿದರು. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಜಯಭೇರಿ: ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಶಿವರಾಮೇಗೌಡರು 5,69,302 ಮತ ಪಡೆದು ಗೆದ್ದರೆ, ಬಿಜೆಪಿಯ ಸಿದ್ದರಾಮಯ್ಯ 2,44,377 ಮತಗಳಿಸಿ ಹೀನಾಯವಾಗಿ ಸೋಲುಂಡರು.  ಜೆಡಿಎಸ್ ಶಿವರಾಮೇಗೌಡ 3,24,925 ಭಾರೀ ಮತಗಳ ಅಂತರದಿಂದ ಗೆಲುವಿನ ನಗು ಬೀರಿದರು. ಶಿವಮೊಗ್ಗ-ಬೈಂದೂರು ಲೋಕಸಭಾ ಕ್ಷೇತ್ರ ಮತ್ತೆ ಬಿಜೆಪಿ ತೆಕ್ಕೆಗೆ: ಶಿವಮೊಗ್ಗ-ಬೈಂದೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ 5,43,306 ಮತ ಪಡೆದರೆ,  ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ 4,91,158 ಮತ ಗಳಿಸಿ ಸೋಲಿನ ರುಚಿ ಕಂಡರು.  ಬಿವೈ ರಾಘವೇಂದ್ರ 52,148 ಮತಗಳ ಅಂತರದಿಂದ ಗೆದ್ದರು. ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಅನಿತಾಗೆ ಸುಲಭ ಜಯ: ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ ಅನಿತಾ ಕುಮಾರಸ್ವಾಮಿ 1,25,043 ಮತ ಪಡೆದರೆ, ಬಿಜೆಪಿಯ(ಕಣದಿಂದ ಹಿಂದೆ ಸರಿದಿದ್ದ) ಎಲ್.ಚಂದ್ರಶೇಖರ್ 15,906 ಮತ ಪಡೆಯಲು ಶಕ್ತರಾದರು. ಅನಿತಾ ಕುಮಾರಸ್ವಾಮಿ 1,09,137 ಭಾರೀ ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಜಮಖಂಡಿ ವಿಧಾನಸಭಾ ಕ್ಷೇತ್ರ ಕೈ ವಶ: ಜಮಖಂಡಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಆನಂದ್ ನ್ಯಾಮಗೌಡ 97017 ಮತ ಪಡೆದರು. ಬಿಜೆಪಿಯ ಶ್ರೀಕಾಂತ ಕುಲಕರ್ಣಿ 57,537 ಮತಗಳಿಸಿ ಪರಾಭವಗೊಂಡರು. ಆನಂದ್ ನ್ಯಾಮಗೌಡ  ಅವರಿಗೆ 39,476 ಮತಗಳ ಅಂತರದಿಂದ ಜಯಲಕ್ಷ್ಮಿ ಒಲಿದಳು.

2018: ಹೈದರಾಬಾದ್‌: ತೆಲಂಗಾಣದ ವಿಕಾರಾಬಾದ್ನಲ್ಲಿ ಟಿಆರ್ಎಸ್ ಪ್ರಭಾವಿ ನಾಯಕ ನಾರಾಯಣ ರೆಡ್ಡಿ ಅವರನ್ನು ಕಲ್ಲು ಹೊಡೆದು ಬರ್ಬರವಾಗಿ ಹತ್ಯೆಗೈಯಲಾಯಿತು. ಘಟನೆ ಬಳಿಕ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.  ಬೆಳಗ್ಗೆ ಸುಲ್ತಾನ್ಪುರ್ನಲ್ಲಿ ನಾರಾಯಣ ರೆಡ್ಡಿ ಶವವಾಗಿ ಪತ್ತೆಯಾದರು.  ಗ್ಯಾಂಗ್ವೊಂದರೊಂದಿಗೆ ರೆಡ್ಡಿ ಅವರು ದ್ವೇಷ ಹೊಂದಿದ್ದರು ಎನ್ನಲಾಯಿತು. ಘಟನೆ ಬಳಿಕ ಟಿಆರ್ಎಸ್ಕಾರ್ಯಕರ್ತರು ರೊಚ್ಚಿಗೆದ್ದಿದ್ದು, ಕೆಲವರು ಕಾಂಗ್ರೆಸ್ಕಾರ್ಯಕರ್ತರ ಮೇಲೆ ದಾಳಿ ನಡೆಸಿದರು.


2016: ಸೂರತ್: 1930 ಮಾರ್ಚ್ -ಎಪ್ರಿಲ್ ತಿಂಗಳಲ್ಲಿ ನಡೆದ ಗುಜರಾತಿನ ಕರಾವಳಿಯಲ್ಲಿ ದಂಡಿ
ಉಪ್ಪಿನ ಸತ್ಯಾಗ್ರಹ ಯಾತ್ರೆ ಯಾರಿಗೆ ನೆನಪಿಲ್ಲ? ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿ ಅವರ ಕೋಲನ್ನು ಮುಂದಿನಿಂದ ಹಿಡಿದುಕೊಂಡು ಗಾಂಧೀಜಿ ಅವರನ್ನು ಮುನ್ನಡೆಸಿಕೊಂಡು ಹೋಗಿದ್ದ ಚೂಟಿ ಹುಡುಗನನ್ನು ನೆನಪಿಸಿಕೊಳ್ಳಿ. ಹುಡುಗನ ಹೆಸರು ಕನು ರಾಮದಾಸ್ ಗಾಂಧಿ. ಮೋಹನ್ ದಾಸ್ ಕರಮ್ ಚಂದ್ ಗಾಂಧಿ (ಗಾಂಧೀಜಿ) ಅವರ ಮೊಮ್ಮಗ. ದಂಡಿಯಾತ್ರೆಯ ದೃಶ್ಯದ ಫೊಟೋ ವಿಶ್ವ ಪ್ರಸಿದ್ಧ. ಅದರೆ ಇದೇ ಹುಡುಗ, ಒಂದು ಕಾಲದಲ್ಲಿ ನಾಸಾದಲ್ಲಿ  ವಿಜ್ಞಾನಿಯಾಗಿಯೂ  ಸೇವೆ ಸಲ್ಲಿಸಿದ್ದ ಚೂಟಿ ಹುಡುಗ ತನ್ನ 87 ಹರೆಯದಲ್ಲಿ ಸೂರತ್ತಿನ ದತ್ತಿ ಆಸ್ಪತ್ರೆಯೊಂದರ ತೀವ್ರ ನಿಗಾ ಘಟಕದಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವುದು ಬೆಳಕಿಗೆ ಬಂತು.  ಅವರನ್ನು ನೋಡಿಕೊಳ್ಳಲು ವಸ್ತುಶಃ ಯಾರೂ ಇಲ್ಲ. ಚಿಕಿತ್ಸೆಗೆ ಬೇಕಾದಷ್ಟು ಹಣಕಾಸೂ ಇಲ್ಲ. ಗಾಂಧೀಜಿ ಅವರ ನಿಕಟವರ್ತಿಯಾಗಿದ್ದ ಅಹಮದಾಬಾದಿನ ವ್ಯಕ್ತಿಯ ಮೊಮ್ಮಗ ಧೀಮಂತ್ ಬಧಿಯಾ ಎಂಬ ಹಳೆಯ ಗೆಳೆಯ ಅಲ್ಪ ಸ್ಪಲ್ಪ ಹಣಕಾಸಿನ ನೆರವು ನೀಡುತ್ತಿದ್ದಾರೆ. ಇತ್ತೀಚೆಗೆ ತಮ್ಮ ವೈಯಕ್ತಿಕ ಮೂಲಗಳಿಂದ 21,000 ರೂಪಾಯಿ ದಾನ ನೀಡಿದ್ದಾರೆ. ನಗರದ ರಾಧಾಕೃಷ್ಣ ದೇವಾಲಯ ಕನು ಗಾಂಧಿ ಅವರನ್ನು ಸಮೀಪದ ಶಿವಜ್ಯೋತಿ ಆಸ್ಪತ್ರೆಗೆ ಸೇರಿಸಿದ್ದು, ಕಿವುಡಿಯಾಗಿರುವ ಕನು ಅವರ ಪತ್ನಿ 90 ಹರೆಯದ ಶಿವಲಕ್ಷ್ಮಿ ಗಾಂಧಿ ಅವರನ್ನೂ ಸಲಹುತ್ತಿದೆ. ಮಕ್ಕಳಿಲ್ಲದ ಕನುಗಾಂಧಿ ದಂಪತಿ 25 ವರ್ಷ ನಾಸಾ ಸೇವೆಯ ಬಳಿಕ 2014ರಲ್ಲಿ ಭಾರತಕ್ಕೆ ವಾಪಸಾಗಿದ್ದರು. ಸ್ವಂತ ಜಾಗ ಇಲ್ಲದ್ದರಿಂದ ಅಲ್ಲಿ ಇಲ್ಲಿ, ಆಶ್ರಮಗಳಲ್ಲಿ ಸುತ್ತಾಡುತ್ತಾ ಬದುಕು ಸಾಗಿಸುತ್ತಿದ್ದರು. ನವದೆಹಲಿಯ ಗುರು ವಿಶ್ರಮ್ ವೃದ್ಧಾಶ್ರಮದಲ್ಲಿ ಆರು ತಿಂಗಳು ಇದ್ದಾಗ ಸಂಪರ್ಕಕ್ಕೆ ಬಂದಿದ್ದ ಕೇಂದ್ರ ಸಚಿವರೊಬ್ಬರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಯೂ ಮಾತನಾಡಿದ್ದರು. ಕನುಗಾಂಧಿ ಅವರ ಬಗ್ಗೆ ಅನುಕಂಪದಿಂದ ಮಾತನಾಡಿದ ಪ್ರಧಾನಿ ನೆರವಿನ ಭರವಸೆಯನ್ನೂ ನೀಡಿದ್ದರು. ಆದರೆ ಈವರೆಗೂ ಕೇಂದ್ರ ಸರ್ಕಾರದಿಂದ ಅಥವಾ ಗುಜರಾತ್ ಸರ್ಕಾರದಿಂದ ಚಿಕ್ಕಾಸಿನ ನೆರವೂ ಬಂದಿಲ್ಲ. ಸರ್ಕಾರಗಳಿಂದ ಅನುದಾನ ಪಡೆಯುವ ಗಾಂಧಿಯವರೇ ಸ್ಥಾಪಿಸಿದ್ದ ಯಾವುದೇ ಸಂಘ, ಸಂಸ್ಥೆ, ಆಶ್ರಮದಿಂದಲೂ ನೆರವು ಸಿಕ್ಕಿಲ್ಲ ಎಂದು ಧೀಮಂತ್ ಬಧಿಯಾ ದುಃಖ ವ್ಯಕ್ತಪಡಿಸುತ್ತಾರೆ.

2016: ನವದೆಹಲಿ: ಕೇಂದ್ರ ಪ್ರವಾಸೋದ್ಯಮ ಸಚಿವಾಲಯವು ಇನ್ಕ್ರೆಡಿಬಲ್ ಇಂಡಿಯಾ ಅಭಿಯಾನದ ರಾಯಭಾರಿಯಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬಳಕೆ ಮಾಡಿಕೊಳ್ಳಲು ನಿರ್ಧರಿಸಿತು.  ಬಾಲಿವುಡ್ ಕಲಾವಿದರನ್ನು ರಾಯಭಾರಿಯಾಗಿ ಆಯ್ಕೆ ಮಾಡದಿರಲು ತೀರ್ಮಾನಿಸಲಾಯಿತು.  ಆಮೀರ್ ಖಾನ್ ವಿವಾದಾತ್ಮಕ ಹೇಳಿಕೆಯ ನಂತರ ಅವರನ್ನು ರಾಯಭಾರಿ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ನಂತರ ರಾಯಭಾರಿ ಸ್ಥಾನಕ್ಕೆ ಮತ್ತೊಬ್ಬರನ್ನು ಆಯ್ಕೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿತ್ತು. ಆದರೆ ಈಗ ಪ್ರವಾಸೋದ್ಯಮ ಸಚಿವಾಲಯ ಅಂತಿಮ ತೀರ್ಮಾನ ತೆಗೆದುಕೊಳ್ಳಲು ುಂದಾಗಿದ್ದು, ಮೋದಿ ಅವರ ಜನಪ್ರಿಯತೆಯನ್ನು ಪ್ರವಾಸೋದ್ಯಮ ಅಭಿವೃದ್ಧಿಗೆ ಬಳಸಲು ನಿರ್ಧರಿಸಿದೆ ಎಂದು ಸಚಿವಾಲಯದ ಹಿರಿಯ ಅಧಿಕಾರಿಗಳು ತಿಳಿಸಿದರು.  ಕಳೆದ ಎರಡೂವರೆ ವರ್ಷಗಳ ಆಡಳಿತಾವಧಿಯಲ್ಲಿ ಮೋದಿ ಅವರು ಪ್ರವಾಸೋದ್ಯಮದ ಕುರಿತು ದೇಶ ಮತ್ತು ವಿದೇಶದಲ್ಲಿ ಮಾಡಿರುವ ಭಾಷಣಗಳನ್ನು ಬಳಕೆ ಮಾಡಿಕೊಂಡು ಪ್ರಚಾರಾಂದೋಲನ ರೂಪಿಸಲು ಯೋಜಿಸಲಾಗಿದೆ. ಪ್ರಚಾರಕ್ಕೆ ಅಗತ್ಯವಿರುವ ವಿಡಿಯೋ ತುಣುಕುಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಮುಂದಿನ 40-45 ದಿನಗಳಲ್ಲಿ ಪ್ರಚಾರದ ವಿಡಿಯೋ ಮತ್ತು ಆಡಿಯೋವನ್ನು ಬಿಡುಗಡೆ ಮಾಡಲು ಯೋಜಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.
ಪ್ರವಾಸೋಸದ್ಯಮ ಅಭಿವೃದ್ಧಿಗೆ ಮೋದಿ ಅವರ ಜನಪ್ರಿಯತೆಯನ್ನು ಬಳಸಿಕೊಳ್ಳಬಹುದಾಗಿದೆ. ಮೋದಿ ಅವರು ಭೇಟಿ ನೀಡಿದ ದೇಶಗಳಿಂದ ಹೆಚ್ಚಿನ ಪ್ರವಾಸಿಗರು ಭಾರತಕ್ಕೆ ಬರುತ್ತಿದ್ದಾರೆ. ಹಾಗಾಗಿ ಮೋದಿ ಅವರನ್ನು ಇನ್ಕ್ರೆಡಿಬಲ್ ಇಂಡಿಯಾ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳಲು ಚಿಂತಿಸಲಾಗುತ್ತಿದೆ ಎಂದು ಪ್ರವಾಸೋದ್ಯಮ ಸಚಿವ ಮಹೇಶ್ ಶರ್ಮಾ ಹಿಂದೊಮ್ಮೆ ತಿಳಿಸಿದ್ದರು.

2016: ಜಮ್ಮು: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಪಾಕಿಸ್ತಾನ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಭಾರತೀಯ ಸೇನೆ ತಿರುಗೇಟು ನೀಡಿದ್ದು, ಹಲವು ಪಾಕ್ ಸೇನಾ ನೆಲೆಗಳನ್ನು ಪುಡಿಗಟ್ಟಿ ಭಾರಿ ಹಾನಿ ಉಂಟು ಮಾಡಿತು.. ಕಾಳಗದಲ್ಲಿಪಾಕ್ ಶೆಲ್ ದಾಳಿಯಿಂದ ಇಬ್ಬರು ಭಾರತೀಯ ಯೋಧರು ಹುತಾತ್ಮರಾದರು..  ಮುಂಜಾನೆ ಗಡಿ ನಿಯಂತ್ರಣಾ ರೇಖೆಯ ಕೃಷ್ಣ ಘಾಟಿ ಸೆಕ್ಟರ್ನಲ್ಲಿ ಪಾಕ್ ದಾಳಿ ನಡೆಸಿತು.. ಪಾಕ್ ದಾಳಿಗೆ ಭಾರತೀಯ ಸೈನ್ಯ ಪ್ರಬಲ ಪ್ರತಿರೋಧ ಒಡ್ಡುವ ಮೂಲಕ ಉಗ್ರರನ್ನು ಹಿಮ್ಮೆಟ್ಟಿಸಿತು.   ಸಂದರ್ಭದಲ್ಲಿ ಇಬ್ಬರು ಯೋಧರು ಅಸು ನೀಗಿದರು.. ಇನ್ನಿಬ್ಬರಿಗೆ ಗಂಭೀರ ಗಾಯವಾಯಿತು. ಕನಿಷ್ಠ ನಾಲ್ಕು ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಪಾಕ್ ಸೈನಿಕರು ದಾಳಿ ನಡೆಸಿದರು. ನಾಗರಿಕರು ಮತ್ತು ರಕ್ಷಣಾ ಸಲಕರಣೆಗಳನ್ನೇ ತನ್ನ ಮುಖ್ಯ ಗುರಿಯಾಗಿಸಿಕೊಂಡು ದಾಳಿ ನಡೆಯಿತು.  ಭಾರತೀಯ ಯೋಧರು ಕೂಡ ಅಷ್ಟೇ ಪರಿಣಾಮಕಾರಿಯಾಗಿ ದಾಳಿ ನಡೆಸಿ, ಉಗ್ರರನ್ನು ಹಿಮ್ಮೆಟ್ಟಿಸಿದ್ದಲ್ಲದೆ ಹಲವಾರು ಪಾಕ್ ಸೇನಾ ನೆಲೆಗಳನ್ನು ಪುಡಿಗಟ್ಟಿ ಅಪಾರ ಪ್ರಮಾಣದ ಹಾನಿ ಉಂಟು ಮಾಡಿದರು.   2 ದಿನಗಳ ಬಿಡುವಿನ ಬಳಿಕ ಪಾಕಿಸ್ತಾನ ಗಡಿ ನಿಯಂತ್ರಣ ರೇಖೆ ಬಳಿ ಗುಂಡಿನ ದಾಳಿಯನ್ನು ಬೆಳಗ್ಗೆ ಪ್ರಾರಂಭಿಸಿತ್ತು ಜಮ್ಮು ಮತ್ತು ಕಾಶ್ಮೀರದ ಪಂಚ್ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಟರ್, ಸಲೋತ್ರಿ, ಸಗರ ಪ್ರದೇಶಗಳಲ್ಲಿ ಪಾಕ್ ಸೈನಿಕರು ಬೆಳಗಿನ ಜಾವ 3.30 ಸುಮಾರಿಗೆ ಗುಂಡಿನ ದಾಳಿ ಪ್ರಾರಂಭಿಸಿದರು.  ನಂತರ ಬೆಳಗ್ಗೆ 7.30 ಸುಮಾರಿಗೆ ಎರಡನೇ ಸಲ ಭಾರೀ ಪ್ರಮಾಣದ ಗುಂಡಿನ ದಾಳಿ ಮತ್ತು ಶೆಲ್ ದಾಳಿ ಪ್ರಾರಂಭಿಸಿದರು.  ಬಿಎಸ್ಎಫ್ ಯೋಧರೂ ಸಹ ಪಾಕ್ ಪುಂಡಾಟಕ್ಕೆ ತಕ್ಕ ಪ್ರತ್ಯುತ್ತರ ನೀಡಿತು. ಭಾರತ ಸೀಮಿತ ದಾಳಿ ನಡೆಸಿದ ನಂತರ ಪಾಕಿಸ್ತಾನ 99 ಬಾರಿ ಕದನ ವಿರಾಮ ಉಲ್ಲಂಘಿಸಿ ಗಡಿಯಲ್ಲಿ ಗುಂಡಿನ ದಾಳಿ ನಡೆಸಿದೆ.

2016: ಕರಾಚಿ: ಪಾಕಿಸ್ತಾನದಲ್ಲಿ ಪ್ರತಿ ಕ್ಷಣವೂ ಮಹಿಳೆಯರ ಮೇಲೆ ಹಿಂಸಾಚಾರ ನಡೆಯುತ್ತಿದೆ. ಇದರಿಂದಾಗಿ ಮಾನಸಿಕ ಮತ್ತು ದೈಹಿಕವಾಗಿ ಮಹಿಳೆಯರು ಕುಗ್ಗಿ ಹೋಗಿದ್ದಾರೆ ಎಂಬ ವರದಿಯೊಂದನ್ನು ಡಾನ್ ಪತ್ರಿಕೆ ಪ್ರಕಟಿಸಿತು.  ಪಾಕ್ ಸಂಶೋಧಕಿ ತಾಜೀನ್ ಸಯೀದ್ ಅಲಿ ದೇಶದಲ್ಲಿ ಮಹಿಳೆಯರನ್ನು ನಡೆಸಿಕೊಳ್ಳುತ್ತಿರುವ ರೀತಿಯ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.. ಶೇ. 50ರಷ್ಟು ಮಹಿಳೆಯರು ದೇಶಿಯ ಹಿಂಸಾಚಾರದಿಂದ ಬಳಲುತ್ತಿದ್ದಾರೆ. ಇದಕ್ಕೆ ಪತಿ ನೀಡುವ ಕಿರುಕಳ, ಸಂಬಂಧಿಗಳು ನಡೆಸುವ ದೌರ್ಜನ್ಯ, ಬಂಜೆತನ ಮತ್ತು ಆರ್ಥಿಕ ವಿಷಯಗಳೇ ಮೂಲ ಕಾರಣ ಎಂದು ಅವರು ಹೇಳಿದರು. “ನಾನು ಕೈಗೊಂಡ ಅಧ್ಯಯನದ ಪ್ರಕಾರ 97.7ರಷ್ಟು ಮಹಿಳೆಯರು ಆರೋಗ್ಯ ಕಿರಿಕಿರಿ ಅನುಭವಿಸುತ್ತಿದ್ದಾರೆ. ಇನ್ನು ಶೇ 72ರಷ್ಟು ವಿವಾಹಿತ ಮಹಿಳೆಯರು ಮನೆಯಲ್ಲಿ ಲೈಂಗಿಕ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ಇದು ಮಹಿಳೆಯರ ಆತ್ಮವಿಶ್ವಾಸವನ್ನೇ ಕುಗ್ಗಿಸಿದೆ ಎಂದು ಸಯೀದ್ ಅಲಿ ತಿಳಿಸಿದರು. ಇವರ ಸಂಶೋಧನಾ ವರದಿಯನ್ನು ಡಾನ್ ಪತ್ರಿಕೆ ಪ್ರಕಟಿಸಿತು.

2016: ನವದೆಹಲಿ: ಅನುಮಾಸ್ಪದವಾಗಿ ಕಣ್ಮರೆಯಾಗಿದ್ದ ಜವಾಹರಲಾಲ್ ನೆಹರು ವಿಶ್ವ
ವಿದ್ಯಾಲಯದ ವಿದ್ಯಾರ್ಥಿ ನಜೀಬ್ ಅಹ್ಮದ್ನನ್ನು ಪತ್ತೆ ಹಚ್ಚಲು ಅಧಿಕಾರಿಗಳು ವಿಫಲರಾದ ಹಿನ್ನೆಲೆಯಲ್ಲಿ ವಿವಿ ವಿದ್ಯಾರ್ಥಿಗಳು  ಇಂಡಿಯಾ ಗೇಟ್ ಬಳಿ ಬೃಹತ್ ಪ್ರತಿಭಟನೆ ನಡೆಸಿದರು. ಪ್ರತಿಭಟನಾಕಾರರು ವಾಹನ ದಟ್ಟಣೆಗಳಿರುವ ಪ್ರದೇಶಕ್ಕೆ ತೆರಳಿ ತಡೆಯೊಡ್ಡಿದರು. ಇದರಿಂದಾಗಿ ಕಣ್ಣಿಗೆ ಕಾಣದಷ್ಟು ದೂರ ಟ್ರಾಫಿಕ್ ಸಮಸ್ಯೆ ಉದ್ಭವಿಸಿತು. ನಡುವೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಟ್ವಿಟರ್ನಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿದರು.  ಇಂಡಿಯಾ ಗೇಟ್ ಬಳಿ ನಜೀಬ್ಗಾಗಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಅನಾನುಕೂಲ ಪರಿಸ್ಥಿತಿ ನಿರ್ಮಾಣವಾಗಿದೆ. ದೆಹಲಿಯನ್ನು ಕಲುಷಿತಗೊಳಿಸಬೇಡಿ ಎಂದು ಮನವಿ ಮಾಡಿದರು.  ಅಷ್ಟೇ ಅಲ್ಲ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಭೇಟಿ ಮಾಡಿ, ಘಟನೆ ಕುರಿತು ಮಾಹಿತಿ ನೀಡಿದರು. ನಜೀಬ್ ಅಹ್ಮದ್ಗಾಗಿ ಪೊಲೀಸರು ಶೋಧಕಾರ್ಯವನ್ನು ಮುಂದುವರೆಸಿದ್ದಾರೆ. ಈತನ ಕುರಿತು ಮಾಹಿತಿ ನೀಡಿದವರಿಗೆ 2 ಲಕ್ಷ ರೂ. ಬಹುಮಾನ ನೀಡುವುದಾಗಿ ಕೂಡ ಪೊಲೀಸ್ ಇಲಾಖೆ ಘೋಷಿಸಿತು. ಹಾಸ್ಟೆಲ್ನಲ್ಲಿದ್ದ ಜೈವಿಕ ತಂತ್ರಜ್ಞಾನ ವಿದ್ಯಾರ್ಥಿ ಕಳೆದ .14ರಂದು ಕಣ್ಮರೆಯಾಗಿದ್ದ. ವಿದ್ಯಾರ್ಥಿ ಪೋಷಕರು ಹಲವು ದಿನಗಳವರೆಗೆ ನಜೀಬ್ನನ್ನು ಹುಡುಕಿಕೊಡುವಂತೆ ವಿವಿ ಆವರಣದಲ್ಲಿಯೇ ಪ್ರತಿಭಟನೆ ನಡೆಸಿದ್ದರು.


2016: ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ದಿನದಂದು ಅಮೆರಿಕದ ಮತದಾರರ
ವಧೆ ಮಾಡುವಂತೆ ಐಸಿಸ್ (ಇಸ್ಲಾಮಿಕ್ ಸ್ಟೇಟ್) ಭಯೋತ್ಪಾದಕ ಸಂಘಟನೆ ಕರೆ ಕೊಟ್ಟಿದ್ದು, ಪ್ರಜಾತಾಂತ್ರಿಕ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳದಂತೆಯೂ ಮುಸ್ಲಿಮರನ್ನು ಆಗ್ರಹಿಸಿದೆ ಎಂದು ಅಮೆರಿಕ ಮೂಲದ ಭಯೋತ್ಪಾದಕ ಚಟುವಟಿಕೆಗಳ ಮೇಲೆ ನಿಗಾ ಇಟ್ಟಿರುವ ತಂಡವೊಂದು ತಿಳಿಸಿತು. ಸೈಟ್ ಗುಪ್ತಚರ ಗುಂಪಿನ ನಿರ್ದೇಶಕ ರಿಟ್ಜ್ ಕಟ್ಜ್ ಅವರು ಟ್ವಿಟ್ಟರ್ ಸಂದೇಶದಲ್ಲಿ ಐಸಿಸ್ ಹಲ್ ಹಯಾತ್ ಮಾಧ್ಯಮ ಕೇಂದ್ರದ ಪ್ರಬಂಧ ಒಂದರಲ್ಲಿ ಕರೆ ಕಂಡು ಬಂದಿದೆ ಎಂದು ತಿಳಿಸಿದರು. ಭಯೋತ್ಪಾದಕರು ನಿಮ್ಮನ್ನು ವಧೆಗೈಯಲು ಮತ್ತು ಮತಪೆಟ್ಟಿಗೆಗಳನ್ನು ಧ್ವಂಸಗೊಳಿಸಲು ಬಂದಿದ್ದಾರೆ ಎಂದು ಹಲ್ ಹಯಾತ್ ಮಾಧ್ಯಮ ಕೇಂದ್ರ ಘೋಷಿಸಿತು. ದಿ ಮುರ್ತಾಡ್ಡ್ ವೋಟ್ ಶೀರ್ಷಿಕೆಯ ಸುಮಾರು 7 ಪುಟಗಳಷ್ಟು ಸುದೀರ್ಘವಾಗಿರುವ ಹೇಳಿಕೆಯಲ್ಲಿ ಎಚ್ಚರಿಕೆ ನೀಡಲಾಗಿದೆ ಎಂದು ಯುಎಸ್ ಟುಡೆ ವರದಿ ಮಾಡಿತು.. ತನ್ನ ಇಂತಹ ದಾಳಿಗಳನ್ನು ಸಮರ್ಥಿಸುವ ಪ್ರಯತ್ನವಾಗಿ ನೀಡಲಾಗುವ ಸುದೀರ್ಘ ಧಾರ್ಮಿಕ ವಾದವನ್ನು ಇಂತಹ ಪ್ರಬಂಧಗಳಲ್ಲಿ ಐಸಿಸ್ ನೀಡುತ್ತದೆ. ಇಸ್ಲಾಮ್ ಮತ್ತು ಮುಸ್ಲಿಮರ ವಿರುದ್ಧದ ನೀತಿಗಳಿಗೆ ಸಂಬಂಧಿಸಿದಂತೆ ರಿಪಬ್ಲಿಕನ್ ಮತ್ತು ಡೆಮಾಕ್ರಾಟಿಕ್ ಪಕ್ಷಗಳಲ್ಲಿ ಯಾವುದೇ ವ್ಯತ್ಯಾಸವೂ ಇಲ್ಲ ಎಂದೂ ಹೇಳಿಕೆ ಘೋಷಿಸಿತು.

2016: ಕರೀಮ್ ಲಾಶ್ (ಇರಾಕ್): ಐಸಿಸ್ (ಇಸ್ಲಾಮಿಕ್ ಸ್ಟೇಟ್) ಭಯೋತ್ಪಾದಕರ ಪ್ರಬಲ ನೆಲೆಯಾದ ಮೊಸುಲ್ ನಗರಕ್ಕೆ ನುಗ್ಗಿರುವ ಇರಾಕಿ ಸೇನೆಗೆ ಈಗ ಐಸಿಸ್ ಭಯೋತ್ಪಾಕದರನ್ನು ಸದೆ ಬಡಿಯುವುದೇ ದೊಡ್ಡ ತಲೆ ನೋವಿನ ಕೆಲಸವಾಯಿತು.. ಏಕೆಂದರೆ ಐಸಿಸ್ ಭಯೋತ್ಪಾದಕರು ಮೊಸುಲ್ ನಗರದಲ್ಲಿ ಎಲ್ಲೆಂದರಲ್ಲಿ ಸುರಂಗಳನ್ನು ಕೊರೆದಿದ್ದು, ಸುರಂಗಗಳಲ್ಲಿ ಅವಿತುಕೊಂಡು ಇರಾಕಿ ಸೇನೆ ಮೇಲೆ ಹಠಾತ್ ದಾಳಿಗಳನ್ನು ನಡೆಸುತ್ತಿದ್ದಾರೆಅವರ ಎಲ್ಲೆಲ್ಲಿಯೂ ಇದ್ದಾರೆ ಎಂದು ಇರಾಕಿ ಗುಪ್ತಚರ ಇಲಾಖೆಯ ಅಧಿಕಾರಿಯೊಬ್ಬರು ಹೇಳಿದರು. ಹೀಗಾಗಿ ಇರಾಕಿ ಕ್ಯಾಪ್ಟನಗೆ ಈಗ ಐಸಿಸ್ ಭಯೋತ್ಪಾದಕರು ಕೊರೆದಿರಬಹುದಾದ ಸುರಂಗಗಳನ್ನು ಹುಡುಕುವುದೇ ಕೆಲಸವಾಗಿದೆ. ಸುರಂಗಕೊರೆಯುವ ಕೆಲವು ಯಂತ್ರಗಳನ್ನು ಸೇನೆ ಪತ್ತೆ ಹಚ್ಚಿದೆ. ನಮಗೆ ಮೊದಲು ಒಂದು ಸುರಂಗ ಕಂಡಿತು, ಬಳಿಕ ಮೂರು ಸುರಂಗಗಳು ಪತ್ತೆಯಾದವು. ಈಗ ಇಲ್ಲೇ ಆರನೇ ಸುರಂಗ ಪತ್ತೆಯಾಗಿದೆ. ಇನ್ನೂ ಸುರಂಗಗಳು ಇರುವುದು ಗ್ಯಾರಂಟಿ ಎಂದು ಅಧಿಕಾರಿ ನುಡಿದರು. ಐಸಿಸ್ ವಶದಿಂದ ಮುಕ್ತಗೊಳಿಸಲಾದ ಹಲವಾರು ಗ್ರಾಮಗಳಲ್ಲಿ ಇಂತಹ ಸುರಂಗಗಳು ಕಂಡು ಬಂದವು.  ಐಸಿಸ್ ಭಯೋತ್ಪಾದಕರು ಇದೀಗ ಸಂಪೂರ್ಣವಾಗಿ ಸುರಂಗವಾಸಿಗಳಾಗಿದ್ದು, ಎಲ್ಲಿಂದಲೋ ಹಠಾತ್ತನೆ ಪ್ರತ್ಯಕ್ಷರಾಗಿ ದಾಳಿ ಎಸಗಿ ಪರಾರಿಯಾಗಿ ಸುರಂಗಗಳ ಒಳಗೆ ಅಡಗುತ್ತಾರೆ. ಅವರೊಂದಿಗೆ ಘರ್ಷಣೆ ಅತ್ಯಂತ ಭೀಕರವಾಗಿರುತ್ತವೆ ಎಂದು ಇರಾಕಿ ಸೇನಾ ಅಧಿಕಾರಿಯೊಬ್ಬರು ಹೇಳಿದರು

2016: ಜಮ್ಮು:  ಪಾಕಿಸ್ತಾನ ಕಾಶ್ಮೀರದ ಕೃಷ್ಣಘಟಿ ಸೆಕ್ಟರ್ನಲ್ಲಿ ಬೆಳಗ್ಗೆ ನಡೆಸಿದ ಗುಂಡಿನ ದಾಳಿಗೆ ಯೋಧ ಗುರುಸೇವಕ್ ಸಿಂಗ್  ಹುತಾತ್ಮನಾದ. ಮುಂಜಾನೆಯಿಂದಲೇ ಪಾಕ್ ಅಪ್ರಚೋದಿತ ದಾಳಿ ನಡೆಸಿದೆ. 22 ಸಿಖ್ ರೆಜಿಮೆಂಟ್ ಯೋಧ ಗುರುಸೇವಕ್ ಸಿಂಗ್ ಉಗ್ರರ ವಿರುದ್ಧ ಹೋರಾಡಿ, ಗುಂಡಿನ ದಾಳಿಗೆ ಅಸುನೀಗಿದ್ದಾರೆ ಎಂದು ರಕ್ಷಣಾ ಇಲಾಖೆ ತಿಳಿಸಿತು.

2016: ನವದೆಹಲಿ:ರಾಜಧಾನಿ ದೆಹಲಿಯು ಅತಿ ತೀವ್ರ ಸ್ವರೂಪದ ವಾಯುಮಾಲಿನ್ಯದಿಂದ ನಲುಗುತ್ತಿರುವ ಹಿನ್ನೆಲೆಯಲ್ಲಿ ಮಹಾನಗರದ ಎಲ್ಲಾ ಶಾಲೆಗಳೂ ಇನ್ನೂ ಮೂರು ದಿನ ಮುಚ್ಚಲಿವೆ. ಶೀಘ್ರದಲ್ಲೇ ಸಮ-ಬೆಸ ವಾಹನ ಸಂಚಾರ ವ್ಯವಸ್ಥೆ ಮತ್ತೆ ಬರುವ ಸಾಧ್ಯತೆಯಿದ್ದು, ದೆಹಲಿಯಲ್ಲಿ ಕೃತಕ ಮಳೆ ಸುರಿಸುವ ಬಗೆಗೂ ದೆಹಲಿ ಸರ್ಕಾರ ಚಿಂತಿಸಿತು. ತುರ್ತು ಸಂಪುಟ ಸಭೆಯ ಬಳಿಕ ವಿಚಾರವನ್ನು ಪ್ರಕಟಿಸಿದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು 5 ದಿನಗಳ ಅವಧಿಗೆ ಎಲ್ಲ ಕಟ್ಟಡ ನಿರ್ಮಾಣ ಹಾಗೂ ಕಟ್ಟಡನಾಶ ಕಾಮಗಾರಿಗಳನ್ನು ಸಂಪೂರ್ಣವಾಗಿ
ನಿರ್ಬಂಧಿಸಲಾಗಿದೆ. ರಸ್ತೆಗಳ ಮೇಲೆ ನೀರು ಚಿಮುಕಿಸಲಾಗುವುದು ಮತ್ತು ತ್ಯಾಜ್ಯ ಸುಡುವಿಕೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಕೃತಕ ಮಳೆ ಸುರಿಸುವ ಬಗ್ಗೆ ಸಂಪುಟ ಚರ್ಚಿಸಿದೆ. ಈಗ ಕೇಂದ್ರದ ಬೆಂಬಲದ ಅಗತ್ಯವಿದೆ ಎಂದು ನುಡಿದ ಮುಖ್ಯಮಂತ್ರಿ ಕೃಷಿ ತ್ಯಾಜ್ಯ ಸುಡುವ ಪ್ರಕ್ರಿಯೆ  ಮುಂದುವರೆಯುತ್ತಿರುವುದರಿಂದ  ಶೀಘ್ರದಲ್ಲೇ ನಗರಕ್ಕೆ ದಟ್ಟ ಹೊಗೆಯಿಂದ ಮುಕ್ತಿ ಸಿಗುವ ನಿರೀಕ್ಷೆ ಇಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರುಖಾಲಿ ನಿವೇಶನಗಳಲ್ಲಿ ಕಸ ಸುಡವಿಕೆಯನ್ನು ಸ್ಥಗಿತಗೊಳಿಸಲಾಗುವುದು. ಜನರು ಸಾಧ್ಯವಿದ್ದಷ್ಟೂ ಮನೆಯೊಳಗಿದ್ದುಕೊಂಡು ಮನೆಯಿಂದಲೇ ಕೆಲಸ ಮಾಡಬೇಕು ಎಂದು ನುಡಿದ ಮುಖ್ಯಮಂತ್ರಿ ವ್ಯಾಕ್ಯೂಂ ಕ್ಲೀನರ್ ಬಳಸಿ ರಸ್ತೆಗಳನ್ನು ಸ್ವಚ್ಛಗೊಳಿಸುವ ಕೆಲಸ ನವೆಂಬರ್ 10ರಿಂದ ಆರಂಭವಾಗಲಿದೆ. ನಾಳೆಯಿಂದ ರಸ್ತೆಗಳಿಗೆ ಜೆಟ್ ಮೂಲಕ ನೀರು ಚಿಮುಕಿಸಲಾಗುವುದು ಎಂದು ಅವರು ನುಡಿದರು. ಕೇಜ್ರಿವಾಲ್ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಂಪುಟ ಸಭೆಯಲ್ಲಿ ಎಲ್ಲ ಸಂಪುಟ ಸಚಿವರು, ಆರೋಗ್ಯ ಮತ್ತು ಪರಿಸರ ಇಲಾಖೆಯ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು. ದೆಹಲಿ ವಾಯುಮಾಲಿನ್ಯ ವಿರುದ್ಧ ಮಕ್ಕಳು ಸೇರಿದಂತೆ ನೂರಾರು ಮಂದಿ ಭಾನುವಾರ ಜಂತರ್ ಮಂತರ್ನಲ್ಲಿ ಪ್ರತಿಭಟನಾ ಸಭೆ ನಡೆಸಿ ದೆಹಲಿ ವಾಯುಮಾಲಿನ್ಯ ನಿಯಂತ್ರಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು.

2016: ನವದೆಹಲಿ: ಮಿರಿ ಮಿರಿ ಮಿಂಚುತ್ತಿದ್ದ ಅಮೃತಶಿಲಾ ಸ್ಮಾರಕ ಆಗ್ರಾದ ತಾಜ್ ಮಹಲ್ ವಾಯುಮಾಲಿನ್ಯ- ದಟ್ಟ ಹೊಗೆಯ ಪರಿಣಾಮವಾಗಿ ಈಗ ಮಿಂಚುವುದು ಬಿಡಿ ಕಣ್ಣಿಗೆ ಕಾಣಿಸುವುದೂ ಇಲ್ಲ. ದಟ್ಟ ಹೊಗೆಯಿಂದ ಕಂಗೆಟ್ಟ ದೆಹಲಿಯ ಜನರಿಂದ ಮಲಿನ ವಾಯು ಸೇವನೆ ತಡೆಗಟ್ಟಲು ಮುಖಕವಚಗಳಿಗೆ ಬೇಡಿಕೆ ಹೆಚ್ಚಿತು.  ವಾಸ್ತವವೆಂದರೆ ಪ್ರಸ್ತುತ ದೆಹಲಿ ಅನುಭವಿಸುತ್ತಿರುವ ವಾಯುಮಾಲಿನ್ಯದ ದುಷ್ಪರಿಣಾಮದ ಬೆದರಿಕೆ ಭಾರತದ ಕನಿಷ್ಠ 94 ನಗರಗಳನ್ನು ಬಾಧಿಸುತ್ತಿದೆ. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ (ಸಿಪಿಸಿಬಿ) ಅಧಿಕಾರಿಗಳ ಪ್ರಕಾರ 2011ರಿಂದಲೇ ಭಾರತದ ಕನಿಷ್ಠ 94 ನಗರಗಳು ರಾಷ್ಟ್ರೀಯ ಹವಾಮಾನ ಗುಣಮಟ್ಟ ಪಾಲನೆ ವಿಚಾರಕ್ಕೆ ಸೊಪ್ಪು ಹಾಕಿಲ್ಲ. ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಕೂಡ ನಗರಗಳನ್ನು ಅತಿಮಾಲಿನ್ಯ ನಗರಗಳ ಪಟ್ಟಿಯಿಂದ ಹೊರತರಲು ಕೈಗೊಳ್ಳಬೇಕಾದ ಕ್ರಮಗಳ ಬಗೆಗೂ ಯೋಚಿಸಿಲ್ಲ. ಜಾಗತಿಕ ಆರೋಗ್ಯ ಸಂಸ್ಥೆಯು (ಡಬ್ಲ್ಯೂ ಎಚ್ ) ನಗರಗಳ ಮಾಲಿನ್ಯ ಕುರಿತು ಇತ್ತೀಚೆಗೆ ಬಿಡುಗಡೆ ಮಾಡಿರುವ ನಗರ ವಾಯುಗುಣಮಟ್ಟ ಮಾಹಿತಿ ವರದಿಯಂತೆ ವಿಶ್ವದ 20 ಅತಿ ಹೆಚ್ಚು ವಾಯುಮಾಲಿನ್ಯ ನಗರಗಳ ಪೈಕಿ 10 ನಗರಗಳು ಭಾರತೀಯ ನಗರಗಳು. ಆದರೆ ವರದಿ ಕೂಡಾ ಕೇಂದ್ರೀಯ ವಾಯುಮಾಲಿನ್ಯ ನಿಯಂತ್ರಣ ಮಂಡಳಿ ಅಥವಾ ಆಡಳಿತಗಾರರ ಕಣ್ತೆರೆಸಿಲ್ಲಕಳೆದ ಕೆಲವು ವರ್ಷಗಳಲ್ಲಿ ದೆಹಲಿ, ಕಾನ್ಪುರ, ಲಖನೌ ಮತ್ತು ವಾರಾಣಸಿ ನಗರಗಳ ವಾಯುಗುಣ ಮಟ್ಟ ಅಪಾಯಕಾರಿ ಮಟ್ಟವನ್ನು ಮೀರಿದೆ. ವಾಯು ಗುಣಮಟ್ಟ ಪಾಲಿಸುವ ಸಂಬಂಧ ತಾನು ಹೊರಡಿಸಿದ್ದ ನಿರ್ದೇಶನಗಳು ಪಾಲನೆಯಾಗದೇ ಇರುವ ಬಗೆಗೂ ಮಂಡಳಿ ತಲೆ ಕೆಡಿಸಿಕೊಂಡೇ ಇಲ್ಲ ಎಂದು ವರದಿಗಳು ತಿಳಿಸಿವೆ.

2008: ಕಾಮಗಾರಿಯ ಬಿಲ್ ಅನುಮೋದನೆಯ ಸಂಬಂಧ 20 ಲಕ್ಷ ರೂಪಾಯಿ ಲಂಚ ಪಡೆಯುತ್ತಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಮತ್ತು ಹಣ ನೀಡಿದ ಖಾಸಗಿ ಕಂಪೆನಿಯ ಮೂವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದರು. ಬಿಡಿಎ ಸದಸ್ಯ ಎಂಜಿನಿಯರ್ ಡಿ.ಶಿವಶಂಕರ್, ಈಸ್ಟ್ ಕೋಸ್ಟ್ ಕನ್ಸ್ಟ್ರಕ್ಷನ್ಸ್ ಅಂಡ್ ಇಂಡಸ್ಟ್ರೀಸ್ ಲಿಮಿಟೆಡ್ ನಿರ್ದೇಶಕ ಎಸ್.ಎ.ಮೊಹಮ್ಮದ್ ಮೊಯಿದ್ದೀನ್, ಪ್ರಧಾನ ವ್ಯವಸ್ಥಾಪಕ ಇಲಿಯಾಸ್ ಲತೀಫ್ ಮತ್ತು ವ್ಯವಸ್ಥಾಪಕ ಬಸಪ್ಪ ಬಂಧಿತರು. ಯಾವುದೇ ದೂರಿಲ್ಲದೇ ಸಿಬಿಐ ಮಾದರಿಯಲ್ಲಿ ಕಾರ್ಯಾಚರಣೆ ನಡೆಯಿತು. ಈ ಅಧಿಕಾರಿಗೆ ಭಾರಿ ಪ್ರಮಾಣದ ಲಂಚ ನೀಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ರೂಪಕ್ ಕುಮಾರ್ ದತ್ತ ಅವರಿಗೆ ತಲುಪಿತ್ತು. ಈ ಸುಳಿವು ಆಧರಿಸಿ ಕಾರ್ಯತಂತ್ರ್ರ ರೂಪಿಸಿದ ಅವರು, ಜಾಗೃತ ದಳದ ಅಧಿಕಾರಿಗಳ ತಂಡವನ್ನು ಕಾರ್ಯಾಚರಣೆಗೆ ನಿಯೋಜಿಸಿದ್ದರು.

2008: ಹಿಮಾಲಯದ ತಪ್ಪಲಲ್ಲಿರುವ ಸಣ್ಣ ರಾಷ್ಟ್ರ ಭೂತಾನಿನ ನೂತನ 5 ನೇ ದೊರೆಯಾಗಿ ಜಿಗ್ಮೆ ಖೇಸರ್ ನಮ್ಜಿಲ್ ವಾಂಗ್ ಚುಕ್ ಅವರು ಅಧಿಕಾರ ಸ್ವೀಕರಿಸುವುದರೊಂದಿಗೆ ಈ ದೇಶದಲ್ಲಿ ಹೊಸ ಅಧ್ಯಾಯವೊಂದು ಪ್ರಾರಂಭವಾಯಿತು. ಭೂತಾನಿನ ಥಿಂಪುವಿನಲ್ಲಿ ನಡೆದ ಅಧಿಕಾರ ಸ್ವೀಕಾರದ ವರ್ಣರಂಜಿತ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿ ಪ್ರತಿಭಾ ಪಾಟೀಲ್, ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ವಿದೇಶಾಂಗ ಸಚಿವ ಪ್ರಣವ್ ಮುಖರ್ಜಿ ಅವರು ಭಾಗವಹಿಸಿದರು. ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದಿರುವ 28 ವರ್ಷದ ಜಿಗ್ಮೆ ಅವರು ವಿಶ್ವದ ಅತಿ ಕಿರಿಯ ದೊರೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2008: ಅಧಿಕಾರ ಹಸ್ತಾಂತರ ಪ್ರಕ್ರಿಯೆಯಲ್ಲಿ ಒಬಾಮ ತಂಡಕ್ಕೆ ನೆರವಾಗುವ ನಿಟ್ಟಿನಲ್ಲಿ ಭಾರತೀಯ ಮೂಲದ ಖ್ಯಾತ ಅರ್ಥಶಾಸ್ತ್ರಜ್ಞೆ ಸೋನಲ್ ಷಾ ಅವರನ್ನು ಸಲಹೆಗಾರರಾಗಿ ನೇಮಕ ಮಾಡಲಾಯಿತು. ಸೋನಲ್ ಷಾ ಗೂಗಲ್ನ ಸಾಮಾಜಿಕ ಸೇವಾ ವಿಭಾಗದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಒಬಾಮ ಮತ್ತವರ ತಂಡಕ್ಕೆ ಸಲಹೆ ನೀಡಲು ನೇಮಿಸಲಾಗಿರುವ ವಿವಿಧ ಕ್ಷೇತ್ರಗಳ ತಜ್ಞರ ಸಮಿತಿಯಲ್ಲಿ 40 ವರ್ಷದ ಸೋನಲ್ ಷಾ ಸಹ ಒಬ್ಬರು. ಸೋನಲ್ ಅವರ ತಂದೆ 1970ರಲ್ಲಿ ಗುಜರಾತಿನಿಂದ ನ್ಯೂಯಾರ್ಕಿಗೆ ತೆರಳಿದ್ದರು. 1972ರಲ್ಲಿ ಸೋನಲ್ ತಮ್ಮ ತಾಯಿ ಹಾಗೂ ಸಹೋದರಿಯ ಜೊತೆ ಅಲ್ಲಿಗೆ ತೆರಳಿದ್ದರು. ಅಮೆರಿಕದಲ್ಲಿಯೇ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಸೋನಲ್, ಆ ದೇಶದ ಖ್ಯಾತ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದರು.

2007: ಎಂಟು ಕೈಕಾಲುಗಳನ್ನು ಹೊಂದಿದ್ದ ಬಿಹಾರದ ಬಾಲಕಿ ಲಕ್ಷ್ಮಿಯ ದೇಹದ ಅನಗತ್ಯ ಭಾಗಗಳನ್ನು ಬೇರ್ಪಡಿಸುವ ಅತ್ಯಂತ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಈದಿನ ಬೆಳಿಗ್ಗೆ 7 ಗಂಟೆಗೆ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಆರಂಭವಾಗಿ ರಾತ್ರಿಯ ವೇಳೆಗೆ ಬೆನ್ನಹುರಿಯಿಂದ ಅವಳಿ ದೇಹ ಬೇರ್ಪಡಿಸುವ ಕಾರ್ಯ ಯಶಸ್ವಿಯಾಯಿತು. ಬೆನ್ನುಹುರಿಯಲ್ಲಿನ ಹಲವು ನರಮಂಡಲಗಳಿಗೆ ಯಾವುದೇ ಧಕ್ಕೆಯಾಗದಂತೆ ಅವಳಿ ಭಾಗವನ್ನು ಬೇರ್ಪಡಿಸಲಾಯಿತು. ಸುಮಾರು 30 ತಜ್ಞ ವೈದ್ಯರು ಡಾ. ಶರಣ್ ಪಾಟೀಲ ನೇತೃತ್ವದಲ್ಲಿ ಈ ಶಸ್ತ್ರಚಿಕಿತ್ಸೆಯಲ್ಲಿ ಪಾಲ್ಗೊಂಡರು.

2007: ಆಫ್ಘಾನಿಸ್ಥಾನದ ಬಘಲನ್ ನಗರಕ್ಕೆ ಭೇಟಿ ನೀಡಿದ್ದ ಸಂಸತ್ ಸದಸ್ಯರ ನಿಯೋಗದ ಮೇಲೆ ಆತ್ಮಾಹುತಿ ದಳದ ವ್ಯಕ್ತಿಯೊಬ್ಬ ನಡೆಸಿದ ದಾಳಿಗೆ 90 ಮಂದಿ ಬಲಿಯಾಗಿ, 50 ಜನ ಗಾಯಗೊಂಡರು. ವಿರೋಧಪಕ್ಷದ ವಕ್ತಾರ ಮುಸ್ತಫಾ ಕಸೆಮಿ ಸೇರಿದಂತೆ ಐವರು ಸಂಸದರು ಘಟನೆಯಲ್ಲಿ ಮೃತರಾದರು.

2007: ಪಾಕಿಸ್ಥಾನದಲ್ಲಿ ಬರುವ ಜನವರಿಯೊಳಗೆ ರಾಷ್ಟ್ರೀಯ ಚುನಾವಣೆ ನಡೆಯಲಿದ್ದು ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರು ಅಮೆರಿಕದ ಒತ್ತಡಕ್ಕೆ ಮಣಿದು ಶೀಘ್ರವೇ ಸೇನಾ ಸಮವಸ್ತ್ರ ತ್ಯಜಿಸಲು ನಿರ್ಧರಿಸಿದರು.

2007: ಬಹುಮತದ ಬಗ್ಗೆ ತೃಪ್ತಿ, ಸುಭದ್ರತೆ ಬಗ್ಗೆ ಅನುಮಾನ ವ್ಯಕ್ತಪಡಿಸುವ ಅಂತಿಮ ವರದಿಯನ್ನು ಕರ್ನಾಟಕದ ರಾಜ್ಯಪಾಲ ರಾಮೇಶ್ವರ ಠಾಕೂರ್ ರಾಷ್ಟ್ರಪತಿಯವರಿಗೆ ಸಲ್ಲಿಸಿದರು. ಈ ಮಧ್ಯೆ ಬಿಜೆಪಿ ಮತ್ತು ಜೆಡಿ (ಎಸ್) ಪಕ್ಷಗಳಿಗೆ ಸೇರಿದ 125 ಶಾಸಕರು ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಸಮ್ಮುಖದಲ್ಲಿ ಪೆರೇಡ್ ನಡೆಸಿ ತಮಗಿರುವ ಬಹುಮತ ಪ್ರದರ್ಶಿಸಿದರು.

2007: ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವದ ಜವಾಬ್ದಾರಿ ಹೊತ್ತುಕೊಳ್ಳಲು ಸಚಿನ್ ತೆಂಡೂಲ್ಕರ್ ನಿರಾಕರಿಸಿದರು. ಸಚಿನ್ ಅವರು ಭಾರತ ಟೆಸ್ಟ್ ತಂಡದ ನಾಯಕ ಎಂಬ ಅಧಿಕೃತ ಪ್ರಕಟಣೆ ಹೊರಬೀಳುವ ಎರಡು ದಿನಗಳ ಮೊದಲು ಈ ನಿರ್ಧಾರ ಹೊರಬಿದ್ದಿತು. ರಾಹುಲ್ ದ್ರಾವಿಡ್ ಅವರು ರಾಜೀನಾಮೆ ನೀಡಿದ ಕಾರಣ ಭಾರತ ಏಕದಿನ ಮತ್ತು ಟೆಸ್ಟ್ ತಂಡಗಳ ನಾಯಕ ಸ್ಥಾನ ತೆರವಾಗಿತ್ತು.

2007: ಎಂಟು ವಾರಗಳ ಯೋಗದಿಂದ ಹೃದ್ರೋಗ ತಹಬಂದಿಗೆ ಬರುವುದು ಮಾತ್ರವಲ್ಲ ಮೃತ್ಯುಮುಖಿ ಲಕ್ಷಣಗಳೂ ಕಡಿಮೆಯಾಗುತ್ತವೆ ಎಂದು ಅಧ್ಯಯನದ ವರದಿಯೊಂದು ತಿಳಿಸಿತು. ಅಟ್ಲಾಂಟಾದ ಎಮೊರಿ ವೈದ್ಯಕೀಯ ವಿಶ್ವವಿದ್ಯಾಲಯದ ಸಂಶೋಧಕರು ಎಂಟು ವಾರಗಳ ನಿಯಮಿತ ಯೋಗಾಸನ ನಡೆಸಿ ಅಧ್ಯಯನ ಮಾಡಿದ ಬಳಿಕ ಈ ವಿಚಾರವನ್ನು ಬಹಿರಂಗಪಡಿಸಿದರು. ಸುಮಾರು 50 ಲಕ್ಷ ಅಮೆರಿಕನ್ನರು ಹೃದ್ರೋಗದಿಂದ ಬಳಲುತ್ತಿದ್ದರು. ಪರಿಣಾಮಕಾರಿ ಔಷಧಿಗಳು ಮತ್ತು ಶಸ್ತ್ರಚಿಕಿತ್ಸೆಯಿಂದಲೂ ಸಂಪೂರ್ಣ ಗುಣ ಸಾಧ್ಯವಾಗಿರಲಿಲ್ಲ. ಅವರಲ್ಲಿ 19 ಹೈದ್ರೋಗಿಗಳಿಗೆ ಅಟ್ಲಾಂಟಾದ ಎಮೊರಿ ವೈದ್ಯಕೀಯ ವಿಶ್ವವಿದ್ಯಾಲಯದ ಸಂಶೋಧಕರು ಎಂಟು ವಾರಗಳ ನಿಯಮಿತ ಯೋಗಾಸನ ನೀಡಿ ಫಲಿತಾಂಶ ಪರಿಶೀಲಿಸಿದಾಗ ಅವರಲ್ಲಿ ರೋಗದ ತೀವ್ರತೆ ಕಡಿಮೆಯಾಗಿದ್ದುದು ಕಾಣಿಸಿತು.

2006: ಮೈಸೂರಿನ ಚಾಮುಂಡಿಬೆಟ್ಟದಲ್ಲಿ ವಿರಾಜಮಾನವಾಗಿರುವ 342 ವರ್ಷಗಳ ಇತಿಹಾಸ ಹೊಂದಿರುವ 16 ಅಡಿ ಎತ್ತರ, 25 ಅಡಿ ಉದ್ದದ ಮಹಾನಂದಿಗೆ ಇದೇ ಮೊದಲ ಬಾರಿಗೆ ಭಕ್ತರ ಜೈಕಾರ, ಪುರೋಹಿತರ ಮಂತ್ರಘೋಷಗಳ ಮಧ್ಯೆ ಮಹಾಮಜ್ಜನ ನೆರವೇರಿಸಲಾಯಿತು. ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಬೆಳಗ್ಗೆ 10.45ಕ್ಕೆ ಹಾಲಿನ ಅಭಿಷೇಕ ಮಾಡುವ ಮೂಲಕ ಮಹಾಭಿಷೇಕಕ್ಕೆ ಚಾಲನೆ ನೀಡಿದರು.

2006: ಭಾರತದ ಜೊತೆ ಬಾಹ್ಯಾಕಾಶ ಒಪ್ಪಂದಕ್ಕೆ ರಷ್ಯಾ ಸಹಿ ಹಾಕಿತು. ಇದರೊಂದಿಗೆ ಬಾಹ್ಯಾಕಾಶ ತಂತ್ರಜ್ಞಾನ ವರ್ಗಾವಣೆ ಮತ್ತು ಜಂಟಿ ಬಾಹ್ಯಾಕಾಶ ಅನ್ವೇಷಣೆಗೆ ಹಾದಿ ಸುಗಮಗೊಂಡಿತು.

2005: ವೋಲ್ಕರ್ ವರದಿಯಲ್ಲಿ ಭಾರತದ ವಿದೇಶಾಂಗ ಸಚಿವ ನಟವರ್ ಸಿಂಗ್ ಹಾಗೂ ಕಾಂಗ್ರೆಸ್ ಪಕ್ಷದ ವಿರುದ್ಧ ಮಾಡಲಾದ ಆರೋಪಗಳ ಸತ್ಯಾಸತ್ಯತೆ ಬಯಲಿಗೆ ಎಳೆಯಲು ವಿಶ್ವಸಂಸ್ಥೆಯ ಮಾಜಿ ಉಪ ಕಾರ್ಯದರ್ಶಿ ವೀರೇಂದ್ರ ದಯಾಳ್ ನೇತೃತ್ವದಲ್ಲಿ ತನಿಖೆ ನಡೆಸಲು ಕೇಂದ್ರದ ಯುಪಿಎ ಸರ್ಕಾರ ನಿರ್ಧರಿಸಿತು.

2005: ಭಾರತೀಯ ಗೋ ತಳಿಗಳ ಸಂರಕ್ಷಣೆಗಾಗಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ನೇತೃತ್ವದ 68 ದಿನಗಳ ಕರ್ನಾಟಕ ವ್ಯಾಪಿ `ಭಾರತೀಯ ಗೋ ಯಾತ್ರೆ'ಗೆ ಬೆಂಗಳೂರು ನ್ಯಾಷನಲ್ ಕಾಲೇಜು ಮೈದಾನದಲ್ಲಿ ಚಾಲನೆ ನೀಡಲಾಯಿತು.

2000: ಬಂಗಾಳ ರಾಜ್ಯದಲ್ಲಿ ದೀರ್ಘಕಾಲ ಆಳ್ವಿಕೆ ನಡೆಸಿದ ಮುಖ್ಯಮಂತ್ರಿ ಜ್ಯೋತಿ ಬಸು ಅವರು 23 ವರ್ಷಗಳ ಆಳ್ವಿಕೆಯ ಬಳಿಕ ತಮ್ಮ ಹುದ್ದೆಯಿಂದ ಕೆಳಗಿಳಿದರು. ಬುದ್ಧದೇವ ಭಟ್ಟಾಚಾರ್ಯ ಅವರು ಬಸು ಉತ್ತರಾಧಿಕಾರಿಯಾದರು.

1967: ಓಹಾಯೋದ ಡೇಟನ್ನಿನಲ್ಲಿ `ಫಿಲ್ ಡೊನಾಹ್ಯೂ ಟಿ.ವಿ. ಟಾಕ್ ಶೋ' ಆರಂಭವಾಯಿತು. ಈ ಶೋ 29 ವರ್ಷಗಳ ಕಾಲ ಪ್ರಸಾರಗೊಂಡಿತು.

1955: ಸಾಹಿತಿ ವೆಂಕಟಸ್ವಾಮಿ ಎಂ. ಜನನ.

1951: ಸಾಹಿತಿ ಮಧು ವೆಂಕಾರೆಡ್ಡಿ ಜನನ.

1945: ಸಾಹಿತಿ ಶ್ರೀನಿವಾಸ ಉಡುಪ ಜನನ.

1936: `ದೇಶಾಂಶ ಹುಡಗಿ' ಕಾವ್ಯನಾಮದ ಸಾಹಿತಿ ಶಾಂತಪ್ಪ ದೇವರಾಯ ಅವರು ಶರಣಪ್ಪ ದೇವರಾಯ- ಭೀಮಾಬಾಯಿ ದಂಪತಿಯ ಮಗನಾಗಿ ಬೀದರ್ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ಹುಡಗಿ ಗ್ರಾಮದಲ್ಲಿ ಜನಿಸಿದರು.

1931: ಸಾಹಿತಿ ಟೇಕಲ್ ಗೋಪಾಲಕೃಷ್ಣ ಜನನ.

1888: ಮಹಾತ್ಮಾ ಗಾಂಧಿ ಅವರನ್ನು ಲಂಡನ್ನಿನಲ್ಲಿ ಕಾನೂನು ವಿದ್ಯಾರ್ಥಿಯಾಗಿ ದಾಖಲು ಮಾಡಿಕೊಳ್ಳಲಾಯಿತು. ಅವರು `ಇನ್ನರ್ ಟೆಂಪಲ್' ನ ಸದಸ್ಯರೂ ಆದರು. ಆದರೆ 1922ರಲ್ಲಿ ಅವರನ್ನು ಬ್ರಿಟಿಷ್ ರಾಜ್ ವಿರುದ್ಧ ಅತೃಪ್ತಿ ಪ್ರಚೋದಿಸಿದ್ದಕ್ಕಾಗಿ ಡಿಬಾರ್ ಮಾಡಲಾಯಿತು. 100 ವರ್ಷಗಳ ನಂತರ ಕಾನೂನು ವಿದ್ಯಾರ್ಥಿಯಾಗಿ ದಾಖಲು ಮಾಡಿಕೊಂಡ ಶತಮಾನೋತ್ಸವ ಸಂದರ್ಭದಲ್ಲಿ ಅವರನ್ನು `ಬಾರ್ - ಅಟ್- ಲಾ' ಆಗಿ ಮರು ದಾಖಲು ಮಾಡಿಕೊಳ್ಳಲಾಯಿತು.

1854: ಅಮೆರಿಕನ್ ಬ್ರ್ಯಾಂಡ್ ಮಾಸ್ಟರ್ ಹಾಗೂ ಸೇನಾ ಕವಾಯತುಗಳ ಸಂಗೀತ ರಚನೆಕಾರ ಜಾನ್ ಫಿಲಿಪ್ ಸೌಸಾ (1854-1932) ಹುಟ್ಟಿದ ದಿನ. ತನ್ನ ವಾದ್ಯವೊಂದಕ್ಕೆ ಈತ `ಸೌಸಾಫೋನ್' ಎಂದೇ ಹೆಸರಿಟ್ಟ.

1814: ಸ್ಯಾಕ್ಸೋಫೋನ್ ಸಂಶೋಧಕ ಬೆಲ್ಜಿಯನ್- ಫ್ರೆಂಚ್ನ ಆಂಟೋನಿ- ಜೋಸೆಫ್ ಸ್ಯಾಕ್ಸ್ (1814-1994) ಹುಟ್ಟಿದ ದಿನ. `ಸ್ಯಾಕ್ಸೋಫೋನ್' ವಾದ್ಯೋಪಕರಣಕ್ಕೆ ಈತನ ಹೆಸರನ್ನೇ ಇಡಲಾಗಿದೆ.

No comments:

Post a Comment