ನಾನು ಮೆಚ್ಚಿದ ವಾಟ್ಸಪ್

Saturday, November 3, 2018

ಇಂದಿನ ಇತಿಹಾಸ History Today ನವೆಂಬರ್ 03

ಇಂದಿನ ಇತಿಹಾಸ History Today ನವೆಂಬರ್ 03
2018: ಲಕ್ನೋ: ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಾಣದ ಪ್ರಶ್ನೆ ಸುಪ್ರೀಂಕೋರ್ಟಿನಲ್ಲಿ ಇನ್ನೂ ನನೆಗುದಿಯಲ್ಲಿ ಇರುವಾಗಲೇ ದೇಗುಲ ನಗರಿಯ ಸರಯೂ ನದಿ ತಟದಲ್ಲಿ ೧೫೧ ಮೀಟರ್ ಎತ್ತರದ ಬೃಹತ್ ಶ್ರೀರಾಮ ವಿಗ್ರಹ ನಿರ್ಮಾಣಕ್ಕೆ ಮುಖ್ಯಮಂತ್ರಿ ಆದಿತ್ಯನಾಥ್ ಸರ್ಕಾರಅಡಿಪಾಯ ಕಾರ್ಯವನ್ನು ಆರಂಭಿಸಿತು. ಅಯೋಧ್ಯೆಗೆ ದೀಪಾವಳಿಗೆ ಮುನ್ನ ಭೇಟಿ ನೀಡಲಿರುವ ಮುಖ್ಯಮಂತ್ರಿ ವಿಗ್ರಹ ನಿರ್ಮಾಣದ ಅಧಿಕೃತ ಘೋಷಣೆ ಮಾಡುವ ಸಾಧ್ಯತೆಗಳಿವೆ ಎಂದು ವರದಿ ತಿಳಿಸಿತು.  ‘ಶಿಲ್ಪ್ಪ ಮತ್ತು ವಿನ್ಯಾಸ ಸಮಾಲೋಚಕರಿಗಾಗಿ ಟೆಂಡರ್ ಕರೆಯಲಾಗಿದ್ದು ಮುಖ್ಯಮಂತ್ರಿಯವರಿಗೆ ಪ್ರಾತ್ಯಕ್ಷಿಕೆ ನೀಡುವ ಸಲುವಾಗಿ ಸಂಸ್ಥೆಗಳ ಪಟ್ಟಿ ಮಾಡಲಾಗಿದೆ. ಕೆಲ ಬದಲಾವಣೆಗಳೊಂದಿಗೆ ಹೊಸ ಪ್ರಾತ್ಯಕ್ಷಿಕೆ ನೀಡಿದ ಬಳಿಕ ನಿರ್ಮಾಣ ಸಂಸ್ಥೆಯ ಆಯ್ಕೆಯತ್ತ ನಾವು ಸಾಗಲಿದ್ದೇವೆ ಎಂದು ಉತ್ತರ ಪ್ರದೇಶದ ರಾಜಕೀಯ ನಿರ್ಮಾಣ ನಿಗಮದ (ಯುಪಿಆರ್ ಎನ್ ಎನ್) ಹಿರಿಯ ಅಧಿಕಾರಿಯೊಬ್ಬರು ಇಲ್ಲಿ ಹೇಳಿದರು.ಪ್ರತಿಮೆಯು ೧೫೧ ಮೀಟರ್ ಎತ್ತರ ಇರಲಿದ್ದು, ವೇದಿಕೆಯು ೫೦ ಮೀಟರ್ ಇರುತ್ತದೆ. ಹೀಗಾಗಿ ಒಟ್ಟಾರೆ ಎತ್ತರ ೨೦೧ ಮೀಟರ್ ಆಗಲಿದೆ ಎಂದು ಅಧಿಕಾರಿ ಹೇಳಿದರು. ಅಂದಾಜು ೭೭೫ ಕೋಟಿ ರೂಪಾಯಿ ವೆಚ್ಚದಸರಯೂ ನದಿ ಎದುರಿನ ಅಭಿವೃದ್ಧಿ ಮತ್ತು ಶ್ರೀರಾಮ ವಿಗ್ರಹ ನಿರ್ಮಾಣ, ಅಯೋಧ್ಯೆ, ಉತ್ತರ ಪ್ರದೇಶ ಯೋಜನೆಗಾಗಿ ನಿಗಮವು ಟೆಂಡರ್ ಕರೆದಿದೆ. ಶಿಲ್ಪ ಮತ್ತು ವಿನ್ಯಾಸ ಕಾರ್ಯಕ್ಕಾಗಿ ಬಿಡ್ ಗಳ ತಾಂತ್ರಿಕ ಮೌಲ್ಯ ಮಾಪನದ ಬಳಿಕ ಐದು ಸಂಸ್ಥೆಗಳ ಪಟ್ಟಿ ತಯಾರಿಸಲಾಗಿದೆ. ಸಂಸ್ಥೆಗಳು ಕೋಚಿ, ಗ್ರೇಟರ್ ನೋಯ್ಡಾ, ಮತ್ತು ಲಕ್ನೋದವು ಎಂದು ಅಧಿಕಾರಿ ನುಡಿದರು.ಅಯೋಧ್ಯೆಯಲ್ಲಿ ಮುಂದಿನ ವಾರ ಸಂಘಟಿಸಲಾಗಿರುವ ದೀಪಾವಳಿ ಉತ್ಸವ ಆಚರಣೆಯ ಸಂದರ್ಭದಲ್ಲಿ ಅಯೋಧ್ಯೆಗೆ ಭೇಟಿ ನೀಡಲಿರುವ ಮುಖ್ಯಮಂತ್ರಿ ಶ್ರೀರಾಮ ವಿಗ್ರಹ ಯೋಜನೆ ಕುರಿತು ಅಧಿಕೃತ ಪ್ರಕಟಣೆ ಮಾಡುವ ಸಾಧ್ಯತೆ ಇದೆ.ಅಕ್ಟೋಬರ್ ೩೧ರಂದು ಗೋರಖ್ ಪುರದಲ್ಲಿ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಆದಿತ್ಯನಾಥ್ ಅವರು ಅಯೋಧ್ಯೆಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಕೊಡಲಿದ್ದೇನೆ ಎಂದು ಹೇಳಿದ್ದರು. ದಕ್ಷಿಣ ಕೊರಿಯಾದ ಪ್ರಥಮ ಮಹಿಳೆ ಕಿಮ್ ಜಂಗ್ -ಸೂಕ್ ಅವರು ನವೆಂಬರ್ ೪ರಿಂದ ೭ರ ನಡುವಣ ಅವಧಿಯಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದು ನವೆಂಬರ್ ೬ರಂದು ಅಯೋಧ್ಯೆಯಲ್ಲಿ ನಡೆಯುವ ದೀಪೋತ್ಸವದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಅವರು ಶನಿವಾರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆರಂಭದ ದಿನಾಂಕ ತಿಳಿಸಲು ನಿರಾಕರಿಸಿದ್ದರು. ವಿಷಯ ನ್ಯಾಯಾಲಯದಲ್ಲಿರುವುದರಿಂದ ಬಗ್ಗೆ ಏನೂ ಹೇಳಲಾರೆ ಎಂದಿದ್ದ ಅವರು ಬದಲಿಗೆ ಪಟ್ಟಣದಲ್ಲಿ ಶ್ರೀರಾಮ ವಿಗ್ರಹ ಸ್ಥಾಪನೆಯ ಸುಳಿವು ನೀಡಿದ್ದರು. ‘ವಿಷಯ ಸಬ್ -ಜುಡಿಸ್. ವಿಷಯ ನ್ಯಾಯಾಲಯದಲ್ಲಿ ಇರುವುದರಿಂದ ನಾವು ದಿನಾಂಕ ನಿಗದಿ ಪಡಿಸಲಾಗದು. ಆದರೆ, ಹೌದು ಅಯೋಧ್ಯೆಯಲ್ಲಿ ಶ್ರಿರಾಮನ ಭವ್ಯ ಪ್ರತಿಮೆ ಸ್ಥಾಪಿಸದಂತೆ ನಮ್ಮನ್ನು ಯಾರು ತಡೆಯಲು ಸಾಧ್ಯ? ದೇಗುಲ ನಗರಿಯನ್ನು ಅಭಿವೃದ್ಧಿ ಪಡಿಸದಂತೆ ನಮ್ಮನ್ನು ತಡೆಯುವವರು ಯಾರು?’ ಎಂದು ಮೌರ್ಯ ಪ್ರಶ್ನಿಸಿದ್ದರು.ಇತ್ತೀಚೆಗೆ ಅನಾವರಣಗೊಳಿಸಲಾದ ಸ್ವತಂತ್ರ ಭಾರತದ ಪ್ರಪ್ರಥಮ ಗೃಹಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ವಿಗ್ರಹದ ಮಾದರಿಯಲ್ಲಿ  ಶ್ರೀರಾಮನ ವಿಗ್ರಹ ಸ್ಥಾಪಿಸುವಂತೆ ಅಯೋಧ್ಯೆಯಲ್ಲಿನ ಸಂತರು ಸರ್ಕಾರವನ್ನು ಆಗ್ರಹಿಸಿದ್ದರುತಪಸ್ವಿ ಚಾವ್ನಿಯ ಮಹಂತ ಪರಮಹಂಸ ದಾಸ್ ಅವರು ಸರ್ದಾರ್ ಪಟೇಲ್ ಮಾದರಿಯಲ್ಲಿ ಶ್ರೀರಾಮ ವಿಗ್ರಹವನ್ನು ಅಯೋಧ್ಯೆಯಲ್ಲಿ ಸ್ಥಾಪಿಸಬೇಕು, ಇದು ಪ್ರವಾಸೋದ್ಯಮ ಅಭಿವೃದ್ಧಿಗೂ ಪೂರಕ ಎಂದು ಹೇಳಿದ್ದರು. ಶ್ರೀರಾಮನ ಬೃಹತ್ ವಿಗ್ರಹವು ಇಡೀ ಪ್ರದೇಶದ ಭಕ್ತರಿಗೂ ಅನುಕೂಲ ಮಾಡಿಕೊಡುವುದು ಎಂದು ಮಹಂತ ಸುರೇಶ ದಾಸ್ ಹೇಳಿದ್ದರು. ವಿಶ್ವದ ಅತ್ಯಂತ ಎತ್ತರದ ಪ್ರತಿಮೆ ಎಂಬುದಾಗಿ ಹೆಗ್ಗಳಿಕೆಗೆ ಪಾತ್ರವಾಗಿರುವ ೧೮೨ ಮೀಟರ್ ಎತ್ತರದ ಸರ್ದಾರ್ ಪಟೇಲ್ ಪ್ರತಿಮೆಯನ್ನು ಕೆಲವು ಯುಪಿಆರ್ ಎನ್ ಎನ್ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಆದಿತ್ಯನಾಥ್ ಇತ್ತೀಚೆಗೆ ನೋಡಿ ಬಂದಿದ್ದರು. ಮುಂದಿನ ವರ್ಷ ಮಹಾಚುನಾವಣೆಗಳು ಇರುವ ಹಿನ್ನೆಲೆಯಲ್ಲಿ ರಾಮಮಂದಿರ ವಿಚಾರವು ರಾಜ್ಯ ರಾಜಕೀಯದಲ್ಲಿ ಮಹತ್ವ ಪಡೆಯುವ ಸಾಧ್ಯತೆ ಇದೆ. ಹೀಗಾಗಿ ಶ್ರೀರಾಮ ಪ್ರತಿಮೆ ಯೋಜನೆ ಶೀಘ್ರವೇ ರೂಪ ಪಡೆಯಬಹುದು ಎಂದು ಹೇಳಲಾಗುತ್ತಿದೆ.

2018: ನವದೆಹಲಿ: ದೇಶದ ರಾಜಧಾನಿ ದೆಹಲಿಯಲಿ ಯಮುನಾ ನದಿಯ ಮೇಲೆ ನಿರ್ಮಿಸಲಾಗಿರುವ ದೇಶದ ಇನ್ನೊಂದು ಎಂಜಿನಿಯರಿಂಗ್ ವಿಸ್ಮಯ  ‘ಸಿಗ್ನೇಚರ್ ಬ್ರಿಡ್ಜ್ ನವೆಂಬರ 4ರ ಭಾನುವಾರ ಉದ್ಘಾಟನೆಯಾಗಲಿದೆ.ಸಿವಿಲ್  ಎಂಜಿನಿಯರಿಂಗ್ ಕ್ಷೇತ್ರದ  ಇನ್ನೊಂದು ಅದ್ಭುತ ಸಾಧನೆಯನ್ನು ವೀಕ್ಷಿಸಲು ಆಗಮಿಸುವಂತೆ ದೆಹಲಿ ಸರ್ಕಾರದ ಉಪಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಅವರು ಸಾರ್ವಜನಿಕರಿಗೆ ಮನವಿ ಮಾಡಿದರು.ನಿರ್ಮಾಣಕ್ಕೆ ಬರೋಬ್ಬರಿ ೧೪ ವರ್ಷಗಳನ್ನು ತೆಗೆದುಕೊಂಡಿರುವ ಸೇತುವೆಯ ಮೇಲಿನಿಂದ, ಪ್ಯಾರಸ್ಸಿನ ಐಫೆಲ್ ಗೋಪುರದಿಂದ ಇಡೀ ಪ್ಯಾರಿಸ್ಸಿನ ವೀಕ್ಷಣೆ ಹೇಗೆ ಸಾಧ್ಯವೋ ಹಾಗೆಯೇ ರಾಜಧಾನಿ ದೆಹಲಿಯ ವಿಹಂಗಮ ನೋಟವನ್ನು ಆಸ್ವಾದಿಸಲು ಸಾಧ್ಯವಿದೆ ಎಂದು ಸಿಸೋಡಿಯಾ ವಿವರಿಸಿದರು.ಒಟ್ಟು ೫೦ ಜನರನ್ನು ಒಯ್ಯುವ ಸಾಮರ್ಥ್ಯವಿರುವ ನಾಲ್ಕು ಎಲಿವೇಟರುಗಳು ಜನರನ್ನು ಸೇತುವೆಯ ಮೇಲ್ಭಾಗಕ್ಕೆ ಕರೆದೊಯ್ಯುತ್ತವೆ ಎಂದು ಸಿಸೋಡಿಯಾ ನುಡಿದರು. ಸೇತುವೆಯ ವಿಶೇಷತೆಗಳೇನು? * ಸೇತುವೆಯು ೧೫೪ ಮೀಟರ್ ಎತ್ತರದ ಗಾಜಿನ ವೀಕ್ಷಣಾ ಪೆಟ್ಟಿಗೆಯನ್ನು ಹೊಂದಿರುತ್ತದೆ, ಎತ್ತರವ ಕುತುಬ್ ಮಿನಾರಿನ ಎರಡು ಪಟ್ಟು ಎತ್ತರವಾಗಿದೆ. * ಒಟ್ಟು ೫೦ ಜನರನ್ನು ಮೇಲಕ್ಕೆ ಎತ್ತುವ ಸಾಮರ್ಥ್ಯವಿರುವ  ನಾಲ್ಕು ಎಲಿವೇಟರುಗಳು ಜನರನ್ನು ಸೇತುವೆಯ ಮೇಲ್ಭಾಗಕ್ಕೆ ಒಯ್ಯುತ್ತವೆ. * ತಮ್ಮ ವಿಶೇಷ ಕ್ಷಣಗಳನ್ನು ಸೆರೆಹಿಡಿಯಲು ೫೭೫-ಮೀಟರ್ ಸೇತುವೆಯು ಪ್ರವಾಸಿಗರಿಗೆ ಸೆಲ್ಫಿ ತಾಣಗಳನ್ನು ಸಹ ಹೊಂದಿದೆ. * ಸೇತುವೆಯು ಭಾರತದ ಮೊತ್ತ ಮೊದಲ ಅಸಮಪಾರ್ಶ್ವದ (ಅಸಿಮೆಟ್ರಿಕಲ್) ಕೇಬಲ್-ಇರುವ ಸೇತುವೆ ಎಂದು ಪರಿಗಣಿತವಾಗಿದೆ.* ಸೇತುವೆಯು ಉತ್ತರ ಮತು ಈಶಾನ್ಯ ದೆಹಲಿ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಅಭಿವೃದ್ಧಿಯ ಎರಡನೇ ಹಂತದಲ್ಲಿ ಸೇತುವೆಯು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳ್ಳಲಿದೆ.* ೨೦೦೪ ರಲ್ಲಿ ಸೇತುವೆ ನಿರ್ಮಾಣದ ಘೋಫಣೆಯಾದಾಗ ಇದಕ್ಕೆ ೪೯೪ ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ನಂತರ, ನಿರ್ಮಾಣ ವೆಚ್ಚ ಏರುತ್ತಾ ಹೋಗಿ, ದೆಹಲಿಯಲ್ಲಿ ನಡೆದ ೨೦೧೦ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಮುಂಚಿತವಾಗಿ ರೂ.,೧೩೧ ಕೋಟಿ ಮೌಲ್ಯದ ಪರಿಷ್ಕೃತ ಅಂದಾಜಿನಲ್ಲಿ ಇದನ್ನು ಪೂರ್ಣ ಗೊಳಿಸಲಾಗುವುದು ಎಂದು ಪ್ರಕಟಿಸಲಾಗಿತ್ತು. ಆದರೆ ಬಳಿಕವೂ ಪ್ರಕಟಿಸಲಾದ ಗಡುವುಗಳಲ್ಲಿ ಕಾಮಗಾರಿ ಪೂರ್ಣಗೊಳ್ಳದೆ ಈಗ ಪೂರ್ಣಗೊಳ್ಳುವ ವೇಳೆಗೆ ಇದರ ವೆಚ್ಚ ೧೫೯೪ ಕೋಟಿ ರೂಪಾಯಿಗಳಿಗೆ ಏರಿದೆ.* ಸೇತುವೆಯ ವಜೀರಿಬಾಗ್ ಸೇತುವೆ ಮೇಲಿನ ಸಂಚಾರ ಭಾರವನ್ನು ಗಣನೀಯವಾಗಿ ಇಳಿಸಲಿದೆ.

2018: ನವದೆಹಲಿ: ಸಿಬಿಐ ಮುಖ್ಯಸ್ಥ ಅಲೋಕ್ ವರ್ಮ ಮತ್ತು ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಅವರನ್ನು ಮಧ್ಯರಾತ್ರಿಯ ಆದೇಶದಲ್ಲಿ ಎಲ್ಲ ಅಧಿಕಾರಗಳಿಂದ ಮುಕ್ತಗೊಳಿಸಿ ಕಡ್ಡಾಯ ರಜೆಯಲ್ಲಿ ಕಳುಹಿಸಿದ ೧೦ ದಿನಗಳ ಬಳಿಕ, ಸಿಬಿಐ ಮುಖ್ಯಸ್ಥರನ್ನುಅಕ್ರಮವಾಗಿ ಅಧಿಕಾರದಿಂದ ಮುಕ್ತಗೊಳಿಸಿದ್ದರ ವಿರುದ್ಧ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದರು.  ‘ಈ ಕ್ರಮವು ಸಂಪೂರ್ಣವಾಗಿ ಅಕ್ರಮ, ನಿರಂಕುಶ, ಶಿಕ್ಷಾತ್ಮಕ ಸ್ವರೂಪದ್ದು ಮತ್ತು ಯಾವುದೇ ಅಧಿಕಾರ ವ್ಯಾಪ್ತಿಯನ್ನು ಮೀರಿದ್ದು ಎಂದು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರನಾಗಿರುವ ಖರ್ಗೆ ಹೇಳಿದರು. ಸಿಬಿಐ ಮುಖ್ಯಸ್ಥರನ್ನು ಆಯ್ಕೆ ಮಾಡಿದ ಮೂರು ಸದಸ್ಯರ ಸಮಿತಿಯ ಒಬ್ಬ ಸದಸ್ಯನಾಗಿರುವ ತಮ್ಮ ಅಹವಾಲನ್ನು ಪ್ರಕರಣದಲ್ಲಿ ಆದೇಶ ಹೊರಡಿಸುವ ಮುನ್ನ ಆಲಿಸಬೇಕು ಎಂದು ಕಾಂಗ್ರೆಸ್ ನಾಯಕ ತಮ್ಮ ಅರ್ಜಿಯಲ್ಲಿ ನ್ಯಾಯಾಲಯಕ್ಕೆ ಮನವಿ ಮಾಡಿದರು. ಸಿಬಿಐ ನಿರ್ದೇಶಕರನ್ನು ಪ್ರಧಾನಿ, ಮುಖ್ಯ ನ್ಯಾಯಮೂರ್ತಿ ಮತ್ತು ವಿರೋಧ ಪಕ್ಷದ ನಾಯಕರನ್ನು ಒಳಗೊಂಡ ಸಮಿತಿಯು ನೇಮಕ ಮಾಡಿದೆ.ಸಿಬಿಐ ನಿರ್ದೇಶಕರ ಅಧಿಕಾರಾವಧಿಯು ಸಂರಕ್ಷಿತವಾದುದು. ಸಮಿತಿಯ ಪೂರ್ವಾನುಮತಿ ಇಲ್ಲದೆ ವರ್ಗಾವಣೆ ಪ್ರಕ್ರಿಯೆಯನ್ನು ಕೂಡಾ ಜರುಗಿಸಲು ಸಾಧ್ಯವಿಲ್ಲ ಎಂದು ಖರ್ಗೆ ಹೇಳಿದರು. ಭಾರತದ ಮುಂಚೂಣಿ ತನಿಖಾ ಸಂಸ್ಥೆಯ ಸಾಂಸ್ಥಿಕ ಪಾವಿತ್ರ್ಯ ಮತ್ತು ಸಮಗ್ರತೆಯನ್ನು ರಕ್ಷಿಸುವುದು ರಾಷ್ಟ್ರೀಯ ಮತ್ತು ಸಾರ್ವಜನಿಕ ಹಿತಾಸಕ್ತಿಯಿಂದ ಅತ್ಯಗತ್ಯ ಎಂದು ಕಾಂಗ್ರೆಸ್ ನಾಯಕ ತಿಳಿಸಿದ್ದಾರೆ. ಅಲೋಕ್ ವರ್ಮ ಮತ್ತು ರಾಕೇಶ್ ಅಸ್ತಾನ ಅವರನ್ನು ಅಕ್ಟೋಬರ್ ೨೪ರಂದು ಮಧ್ಯರಾತ್ರಿ .೩೦ಗಂಟೆಗೆ ಹೊರಡಿಸಲಾದ ಆದೇಶದ ಮೂಲಕ ಎಲ್ಲ ಅಧಿಕಾರಗಳಿಂದ ಮುಕ್ತಗೊಳಿಸಲಾಗಿತ್ತು. ಸಂಸ್ಥೆಯೊಳಗಿನ ಅವರಿಬ್ಬರ ಪರಸ್ಪರ ಘರ್ಷಣೆ ಸರ್ಕಾರದ ಮಧ್ಯಪ್ರವೇಶದ ಬಳಿಕ ಉಭಯರ ಅಧಿಕಾರ ಚ್ಯುತಿಯೊಂದಿಗೆ ಪರ್ಯವಸಾನಗೊಂಡಿತ್ತು. ನಾಗೇಶ್ವರ ರಾವ್ ಅವರನ್ನು ಕೇಂದ್ರೀಯ ತನಿಖಾ ದಳದ (ಸಿಬಿಐ) ಹಂಗಾಮೀ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿತ್ತು.ಸಿಬಿಐ ಮುಖ್ಯಸ್ಥರಾಗಿ ಹೊಂದಿದ್ದ ಅಧಿಕಾರಗಳನ್ನು ಕಿತ್ತುಹಾಕಿದ ಸರ್ಕಾರಿ ಆದೇಶ ಹೊರಬಿದ್ದ ಕೆಲವೇ ಗಂಟೆಗಳಲ್ಲಿ ವರ್ಮ ಅವರು ಅದನ್ನು ಸುಪ್ರೀಂಕೋರ್ಟಿನಲ್ಲಿ ಪ್ರಶ್ನಿಸಿದ್ದರು.ಕೇಂದ್ರೀಯ ಜಾಗೃತಾ ದಳವು (ಸಿವಿಸಿ) ವರ್ಮ ವಿರುದ್ಧದ ತನಿಖೆಯನ್ನು ಮುಗಿಸಲು ಎರಡು ವಾರಗಳ ಗಡುವು ನೀಡಿದ್ದ ಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರಿಗೆ ಸಿವಿಸಿ ತನಿಖೆಯ ಮೇಲೆ ನಿಗಾ ಇಡುವಂತೆ ಸೂಚಿಸಿತ್ತು.ಸುಪ್ರೀಂಕೋರ್ಟ್ ಆದೇಶವು ನ್ಯಾಯೋಚಿತತೆಯ ಉನ್ನತ ಮಾನದಂಡವನ್ನು ಖಾತರಿ ಪಡಿಸಿದೆ ಎಂಬುದಾಗಿ ಸರ್ಕಾರ ಹೇಳಿದರೆ, ನ್ಯಾಯಾಲಯವು ಭ್ರಷ್ಟಾಚಾರದ ಮೇಲೆ ಕಣ್ಣಿಟ್ಟಿರುವ ಸಿವಿಸಿಯನ್ನು ನ್ಯಾಯಾಲಯ ನಂಬಿಲ್ಲ ಎಂದು ವಿರೋಧಿ ಕಾಂಗ್ರೆಸ್ ತೀರ್ಪನ್ನು ಅರ್ಥೈಸಿತ್ತು.

2018: ನವದೆಹಲಿ: ಕಾಂಗ್ರೆಸ್ಸಿನ ಮಾಜಿ ಸಂಸದರೊಬ್ಬರು ಬಿಜೆಪಿ ಸೇರಿದ ಬೆನ್ನಲ್ಲೇ ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಭಾವ ಸಂಜಯ್ ಸಿಂಗ್ ಅವರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ಪಕ್ಷವು ಮುಯಿಗೆ ಮುಯ್ಯಿ ತೀರಿಸಿಕೊಂಡಿತು. ನವೆಂಬರ್ ೨೮ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ನಡೆದಿರುವ ವಿದ್ಯಮಾನದಿಂದ ಬಿಜೆಪಿಗೆ ಭಾರೀ ಹಿನ್ನಡೆಯಾಗಿದೆ ಎಂದು ಕಾಂಗ್ರೆಸ್ ಪ್ರತಿಪಾದಿಸಿತು. ಆದರೆ ಬಿಜೆಪಿ ಅದನ್ನು ನಿರಾಕರಿಸಿತು. ಸಂಜಯ್ ಸಿಂಗ್ ಅವರು ಶಿವರಾಜ್ ಸಿಂಗ್ ಪತ್ನಿ ಸಾಧನಾ ಸಿಂಗ್ ಅವರ ಸಹೋದರ. ಮಾಜಿ ಕೇಂದ್ರ ಸಚಿವ ಮತ್ತು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಕಮಲನಾಥ್ ಮತ್ತು ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಜ್ಯೋತಿರಾದಿತ್ಯ ಸಿಂಧಿಯಾ ಸಮ್ಮುಖದಲ್ಲಿ ಸಂಜಯ್ ಸಿಂಗ್ ಅವರು ಕಾಂಗ್ರೆಸ್ ಸೇರಿದರು. ‘ಮಧ್ಯಪ್ರದೇಶಕ್ಕೆ ನಾಥ್ ಅವರು ಬೇಕಾಗಿದ್ದಾರೆ, ೧೩ ವರ್ಷಗಳಿಂದ ಮುಖ್ಯಮಂತ್ರಿಯಾಗಿರುವ ಶಿವರಾಜ್ ಅಲ್ಲ ಎಂದು ಸಂಜಯ್ ಸಿಂಗ್ ಅವರು ನವದೆಹಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರುವಿಧಾನಸಭಾ ಚುನಾವಣೆಯ ಟಿಕೆಟ್ ವಿತರಣೆ ಬಗ್ಗೆ ಭ್ರಮನಿರಸನಗೊಂಡಿದ್ದ ಸಿಂಗ್ಬಿಜೆಪಿಯು ಈಗ ವಂಶ ರಾಜಕಾರಣದತ್ತ ಹೊರಳುತ್ತಿದೆ. ನಾಮದಾರ್ಗಳು- ದೊಡ್ಡ ವ್ಯಕ್ತಿಗಳ ಪುತ್ರರು, ಪುತ್ರಿಯರಿಗೆ ಟಿಕೆಟ್ಗಳನ್ನು ನೀಡಲಾಗುತ್ತಿದೆ. ಪಕ್ಷಕ್ಕಾಗಿ ಹಗಲಿರುಳು ದುಡಿದ ಕಾರ್ಯಕರ್ತರನ್ನು (ಕಾಮ್ ದಾರ್) ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ ಎಂದು ಸಿಂಗ್ ನುಡಿದರು.ಬಾಲಿವುಡ್ನಲ್ಲಿ ಮಹತ್ವದ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಸಂಜಯ್ ಸಿಂಗ್ ಅವರು ಮಧ್ಯಪ್ರದೇಶದ ಗೊಂಡಿಯಾ ಸಮೀಪದ ಬಾಲಘಾಟ್ ಜಿಲ್ಲೆಯಿಂದ ಬಿಜೆಪಿ ಟಿಕೆಟ್ ಬಯಸಿದ್ದರು, ಇದು ಅವರ ಹುಟ್ಟೂರಾಗಿದ್ದು ಅಲ್ಲಿ ಅವರು ಸಾಕಷ್ಟು ಪ್ರಭಾವ ಹೊಂದಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆನಾವು ತಕ್ಕ ಉತ್ತರ ನೀಡಿದ್ದೇವೆ. ಮಾಜಿ ಕಾಂಗ್ರೆಸ್ ಸಂಸದ ಪ್ರೇಮ್ ಚಂದ್ ಗುಡ್ಡು ಅವರು ಶುಕ್ರವಾರ ಬಿಜೆಪಿ ಸೇರಿದ ಬಳಿಕ ಅವರು ಉಬ್ಬಿದ್ದರು. ಈಗ ಇಬ್ಬರು ಮಾಮಾಗಳ ನಡುವೆ ಹೋರಾಟ ನಡೆಯಲಿದೆ ಎಂದು ಮಧ್ಯ ಪ್ರದೇಶ ಕಾಂಗ್ರೆಸ್ ವಕ್ತಾರ ಭೂಪೇಂದ್ರ ಗುಪ್ತ ಹೇಳಿದರು.ಏನಿದ್ದರೂ, ಬಿಜೆಪಿ ವಕ್ತಾರ ರಜನೀಶ್ ಅಗರ್ವಾಲ್ ಅವರು ಪಕ್ಷಾಂತರವನ್ನು ಗೌಣಗೊಳಿಸಿದರು.ಕಾಂಗ್ರೆಸ್ಸಿಗೆ ಖುಷಿಯಾಗುತ್ತಿರಬಹುದು, ಆದರೆ ಅದರಿಂದ ಪಕ್ಷದ ಮೇಲೆ ಯಾವ ಪರಿಣಾಮವೂ ಆಗುವುದಿಲ್ಲ. ಅದು ಮಾಧ್ಯಮಗಳಿಗೂ ಸುದ್ದಿಯಾಗಿರಬಹುದು, ಆದರೆ ನಮಗೆ ಅಲ್ಲ. ಸಿಂಗ್ ಅವರಿಗೆ ಯಾವುದೇ ರಾಜಕೀಯ ಹಿನ್ನೆಲೆ ಇಲ್ಲ ಎಂದು ರಜನೀಶ್ ನುಡಿದರುಹಿಂದಿನ ದಿನ ಬಿಜೆಪಿಯು  ನವೆಂಬರ್ ೨೮ರ ಏಕಹಂತದ ವಿಧಾನಸಭಾ ಚುನಾವಣೆಗಳಿಗಾಗಿ ೧೭೭ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಪಟ್ಟಿಯಲ್ಲಿ ನಗರಾಭಿವೃದ್ಧಿ ಸಚಿವೆ ಮಾಯಾ ಸಿಂಗ್, ಅರಣ್ಯ ಸಚಿವ ಗೌರಿ ಶಂಕರ್ ಶೆಜ್ವಾರ್ ಮತ್ತು ಜಲಸಂಪನ್ಮೂಲ ಸಚಿವ ಹರ್ಷ ಸಿಂಗ್ ಮೂವರು ಸಚಿವರನ್ನು ಕೈಬಿಡಲಾಗಿತ್ತು.ಬಿಜೆಪಿ ಮುಖ್ಯಸ್ಥ ಅಮಿತ್ ಶಾ ಅಧ್ಯಕ್ಷತೆಯಲ್ಲಿ ನಡೆದ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿ ಸಭೆಯಲ್ಲಿ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.
 
2018: ನವದೆಹಲಿ: ’ವಿದೇಶೀ ಸಂಪರ್ಕಗಳ ಮೂಲಕ ಪಂಜಾಬಿನಲ್ಲಿ ಬಂಡಾಯಕ್ಕೆ ಮರುಜೀವ ನೀಡಲು ಯತ್ನಗಳು ನಡೆಯುತ್ತಿವೆ. ಆದಷ್ಟೂ ಶೀಘ್ರ ಕ್ರಮ ಕೈಗೊಳ್ಳದೇ ಇದ್ದಲ್ಲಿ ಆಮೇಲೆ ತುಂಬಾ ತಡವಾಗಬಹುದು ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಎಚ್ಚರಿಕೆ ನೀಡಿದರು. ಭಾರತದ ಆಂತರಿಕ ಭದ್ರತೆಗೆ ಸಂಬಂಧಿಸಿದಂತೆ ನಡೆದ ವಿಚಾರ ಸಂಕಿರಣ ಒಂದರಲ್ಲಿ ಹಿರಿಯ ಸೇನಾ ಅಧಿಕಾರಿಗಳು, ರಕ್ಷಣಾ ತಜ್ಞರು ಮತ್ತು ಸರ್ಕಾರದ ಮಾಜಿ ಹಿರಿಯ ಅಧಿಕಾರಿಗಳನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ವಿದೇಶೀ ಸಂಪರ್ಕಗಳು ಮತ್ತು ವಿದೇಶೀ ಪ್ರಚೋದನೆಗಳ ಮೂಲಕ ಅಸ್ಸಾಮಿನಲ್ಲೂ ಬಂಡಾಯ ಪುನರುಜ್ಜೀವನಕ್ಕೆ ಮತ್ತೆ ಯತ್ನಗಳು ನಡೆಯುತ್ತಿವೆ ಎಂದೂ ರಾವತ್ ಹೇಳಿದರು.’ಪಂಜಾಬ್ ಪ್ರಸ್ತುತ ಶಾಂತವಾಗಿದೆ. ಆದರೆ ವಿದೇಶೀ ಸಂಪರ್ಕಗಳ ಮೂಲಕ ರಾಜ್ಯದಲ್ಲಿ ಬಂಡಾಯ ಮತ್ತೆ ತಲೆ ಎತ್ತುವಂತೆ ಮಾಡುವ ಯತ್ನಗಳು ನಡೆಯುತ್ತಿವೆ. ನಾವು ತುಂಬಾ ಎಚ್ಚರಿಕೆಯಿಂದ ಇರಬೇಕು. ಪಂಜಾಬಿನ ಪರಿಸ್ಥಿತಿ ಮುಗಿದ ಕಥೆ ಎಂದು ನಾವು ಚಿಂತಿಸುವುದು ಬೇಡ. ಪಂಜಾಬಿನಲ್ಲಿ ಘಟಿಸುತ್ತಿರುವ ಘಟನೆಗಳ ಬಗ್ಗೆ ನಾವು ಕಣ್ಣು ಮುಚ್ಚಿಕೊಂಡು ಇರಲು ಸಾಧ್ಯವಿಲ್ಲ. ನಾವು ಶೀಘ್ರ ಕ್ರಮ ಕೈಗೊಳ್ಳದೇ ಹೋದರೆ, ಆಮೇಲೆ ತುಂಬಾ ವಿಳಂಬವಾಗಬಹುದು ಎಂದು ಅವರು ನುಡಿದರು.೧೯೮೦ರ ದಶಕದಲ್ಲಿ ಖಲಿಸ್ಥಾನ ಪರ ಚಳವಳಿಯಿಂದಾಗಿ ಪಂಜಾಬ್ ಅತ್ಯಂತ ಕೆಟ್ಟ ಸನ್ನಿವೇಶವನ್ನು ಎದುರಿಸಿತ್ತು. ಏನಿದ್ದರೂ ಬಳಿಕ ಸರ್ಕಾರ ಅದನ್ನು ಮಟ್ಟ ಹಾಕಿತ್ತು.ಚರ್ಚೆಯಲ್ಲಿ ಪಾಲ್ಗೊಂಡ ಉತ್ತರ ಪ್ರದೇಶದ ಮಾಜಿ ಪೊಲೀಸ್ ಮಹಾನಿರ್ದೇಶಕ ಪ್ರಕಾಶ್ ಸಿಂಗ್ ಅವರೂ ಬಗ್ಗೆ ಒತ್ತು ನೀಡಿ ಪಂಜಾಬಿನಲ್ಲಿ ಬಂಡಾಯ ಪುನರುಜ್ಜೀವನಕ್ಕೆ ಪ್ರಯತ್ನಗಳು ನಡೆಯುತ್ತಿರುವುದು ಹೌದು ಎಂದು ಹೇಳಿದರು. ಇಂಗ್ಲೆಂಡಿನಲ್ಲಿರೆಫರೆಂಡಮ್ ೨೦೨೦ಕ್ಕೆ ಆಗ್ರಹಿಸಿ ಸಂಘಟಿಸಲಾಗಿದ್ದ ಖಲಿಸ್ಥಾನ ಪರ ರ್ಯಾಲಿಯನ್ನು ಅವರು ಉಲ್ಲೇಖಿಸಿದರುಆಗಸ್ಟ್ ೧೨ರಂದು ಲಂಡನ್ನಿನ ಟ್ರಫಾಲ್ಗರ್ ಚೌಕದಲ್ಲಿ ಖಲಿಸ್ಥಾನ ಪರ ರ್ಯಾಲಿಗೆ ಬೆಂಬಲ ವ್ಯಕ್ತ ಪಡಿಸಿ ನೂರಾರು ಮಂದಿ ಜಮಾಯಿಸಿದ್ದರು. ಸ್ವಾತಂತ್ರ್ಯ ದಿನದ ಆಚರಣೆಗೆ ಪ್ರತಿಯಾಗಿ ರ್ಯಾಲಿಯನ್ನು ಸಂಘಟಿಸಲಾಗಿತ್ತು. ಪಂಜಾಬಿಗೆ ಸ್ವಾತಂತ್ರ್ಯ ನೀಡಬೇಕು ಎಂಬುದಾಗಿ ಕರೆ ನೀಡಿ ೨೦೨೦ರಲ್ಲಿ ಜನಮತಗಣನೆ ನಡೆಸುವ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಸಭೆ ಸಂಘಟಿಸಲಾಗಿದೆ ಎಂದು ಸಿಖ್ಸ್ ಫಾರ್ ಜಸ್ಟೀಸ್ (ಎಸ್ ಎಫ್ ಜೆ) ಸಂಘಟನೆ ಹೇಳಿತ್ತು.ಇದಕ್ಕೆ ಪ್ರತಿಕ್ರಿಯೆಯಾಗಿ ಇಂಗ್ಲೆಂಡಿನ ಭಾರತೀಯ ಸಮುದಾಯಗಳುವಿ ಸ್ಟಾಂಡ್ ವಿದ್ ಇಂಡಿಯಾ ಮತ್ತುಲವ್ ಮೈ ಇಂಡಿಯಾ ಕಾರ್ಯಕ್ರಮಗಳನ್ನು ಸಂಘಟಿಸಿದ್ದವು. ‘ಆಂತರಿಕ ಭದ್ರತೆ ರಾಷ್ಟ್ರದಲ್ಲಿ ಅತ್ಯಂತ ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ. ಇದಕ್ಕೆ ಪರಿಹಾರ ಹುಡುಕಲು ನಾವು ಏಕೆ ಶಕ್ತರಾಗಿಲ್ಲ ಎಂಬ ಪ್ರಶ್ನೆ ಏಳುತ್ತದೆ. ಏಕೆಂದರೆ ಇದು ವಿದೇಶೀ ಸಂಪರ್ಕಗಳಿಂದ ಆಗುತ್ತಿದೆ ಎಂದು ಜನರಲ್ ರಾವ್ ಹೇಳಿದರು.

2018: ಬೆಂಗಳೂರು: ಭಾರೀ ಕುತೂಹಲ ಕೆರಳಿಸಿದ್ದ ಶಿವಮೊಗ್ಗ, ಬಳ್ಳಾರಿ, ಮಂಡ್ಯ ಲೋಕಸಭಾ ಹಾಗೂ ರಾಮನಗರ, ಜಮಖಂಡಿ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪ ಚುನಾವಣೆಯ ಮತದಾನ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಐದು ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಯಿತು. ಒಟ್ಟಾರೆ ಶೇ.೭೦ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿತು. ೩ ಲೋಕಸಭೆ ಮತ್ತು ಎರಡು ವಿಧಾನಸಭಾ ಕ್ಷೇತ್ರ ಗಳಿಗೆ ಉಪಚುನಾವಣೆ ನಡೆದಿತ್ತು. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಶೇ. ೫೪ರಷ್ಟು, ಶಿವಮೊಗ್ಗ ಶೇ.೬೧.೦೫ರಷ್ಟು, ಬಳ್ಳಾರಿ ಶೇ.೬೩.೮೫ರಷ್ಟು  ರಾಮನಗರದಲ್ಲಿ ಶೇ.೭೫ರಷ್ಟು, ಜಮಖಂಡಿ ಶೇ.೮೧.೫೮ರಷ್ಟು ಮತದಾನವಾಗಿತ್ತು.


2018: ಬೆಂಗಳೂರು: ಕರ್ನಾಟಕ ಉಚ್ಛ ನ್ಯಾಯಲಯದಲ್ಲಿ ಹೆಚ್ಚುವರಿ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದ ಕೆಂಪಯ್ಯ ಸೋಮಶೇಖರ್, ಕೊಟ್ರವ್ವ ಸೋಮಪ್ಪ ಮುದುಗಲ್, ಶ್ರೀನಿ ವಾಸ್ ಹರೀಶ್ ಕುಮಾರ್, ಜಾನ್ ಮೈಕೇಲ್ ಕುನ್ನಾ, ಬಸವರಾಜ್ ಅಂದಾನಗೌಡ ಪಾಟೀಲ್, ನಂಗಲಿ ಕೃಷ್ಣರಾವ್ ಸುಧೀಂದ್ರ ರಾವ್ ಮತ್ತು ಹೊಸೂರ್ ಭುಜಂಗರಾಯ ಪ್ರಭಾಕರ್ ಶಾಸ್ತ್ರಿ ಅವರನ್ನು ಒಳಗೊಂಡಂತೆ ಏಳು ಮಂದಿ ಕರ್ನಾಟಕ ಉಚ್ಛ ನ್ಯಾಯಾ ಲಯದ ನ್ಯಾಯಾಧೀಶರಾಗಿ ಹಾಗೂ ಅಶೋಕ್ ಗೋಲಪ್ಪ ನಿಜಗಣ್ಣನವರ್, ಹೇತೂರ್ ಪುಟ್ಟಸ್ವಾಮಿಗೌಡ ಸಂದೇಶ್, ಪ್ರಹ್ಲಾದರಾವ್ ಗೋವಿಂದರಾವ್ ಮುತಾಲಿಕ್ ಪಾಟೀಲ್ ಮತ್ತು ಅಪ್ಪಾಸಾಹೇಬ್ ಶಾಂತಪ್ಪ ಬೆಳ್ಳುಂಕೆ ಅವರೂ ಸೇರಿದಂತೆ ಐದು ಮಂದಿ ಕರ್ನಾಟಕ ಉಚ್ಛ ನ್ಯಾಯಾಲಯದ ಹೆಚ್ಚು ವರಿ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದರು. ರಾಜಭವನದ ಗಾಜಿನ ಮನೆ ಯಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ರಾಜ್ಯ ಪಾಲ ವಜೂಭಾಯಿ ವಾಲ ಅವರು ನ್ಯಾಯ ಮೂರ್ತಿ ಪದವಿಯ ಅಧಿಕಾರ ಪ್ರಮಾಣ ವಚನವನ್ನು ಬೋಧಿಸಿದರು.

2008: ಚರ್ಮದ ಯಾವುದಾದರೂ ಒಂದು ಭಾಗದಲ್ಲಿ ಕೂದಲು/ ರೋಮ ಎಷ್ಟುಂಟು ಎಂದು ಹೇಳಬಲ್ಲಿರಾ? `ಉಹೂಂ' ಎಂಬುದು ಬಹುತೇಕ ಮಂದಿಯ ಉತ್ತರ. ಈಗ ಕಾಲ ಬದಲಾಗುತ್ತಿದೆ. ಚರ್ಮದ ಯಾವುದೇ ಭಾಗದ ಕೂದಲನ್ನಾದರೂ ಚಕ ಚಕನೆ ಎಣಿಸಬಲ್ಲಂತಹ ಸಾಫ್ಟ್ ವೇರ್ ಸಿದ್ಧವಾಗಿ ಬಿಟ್ಟಿದೆ. `ನಾವು ಅಂತಹ ಸಾಫ್ಟ್ ವೇರ್ ಅಭಿವೃದ್ಧಿ ಪಡಿಸಿದ್ದೇವೆೆ' ಎಂದು ಆಸ್ಟ್ರೇಲಿಯಾದ ಸಂಶೋಧಕರು ಪ್ರಕಟಿಸಿದರು. `ಕೂದಲು ಉದುರದಂತೆ ಹಚ್ಚುವ ಕ್ರೀಮುಗಳು ಎಷ್ಟು ಪರಿಣಾಮಕಾರಿ ಎಂದು ಅರಿತುಕೊಳ್ಳಲು ಈ ಸಾಫ್ಟ್ ವೇರ್ ಅತ್ಯುಪಯೋಗಿ' ಎಂದು ಸಿಡ್ನಿಯ ಸಿ ಎಸ್ ಐ ಆರ್ ಓ ಗಣಿತ ಮತ್ತು ಮಾಹಿತಿ ವಿಜ್ಞಾನ ಸಂಸ್ಥೆಯ ಸಂಶೋಧಕರು ಹೇಳಿದರು. ತಮ್ಮ ಸಂಶೋಧನೆಯ ವಿವರಗಳನ್ನು ಅವರು `ಸ್ಕಿನ್ ರೀಸರ್ಚ್ ಅಂಡ್ ಟೆಕ್ನಾಲಜಿ' ನಿಯತಕಾಲಿಕದ ನವೆಂಬರ್ ಸಂಚಿಕೆಯಲ್ಲಿ ಪ್ರಕಟಿಸಿದರು. ಇಂಗ್ಲೆಂಡ್ ಕಂಪೆನಿಯೊಂದರ ಸಹಯೋಗದಲ್ಲಿ ಅಭಿವೃದ್ಧಿ ಪಡಿಸಲಾದ ಈ ಸಾಫ್ಟ್ ವೇರ್ ರೋಮ ನಿವಾರಕ ಕ್ರೀಮುಗಳು ಎಷ್ಟು ಪರಿಣಾಮಕಾರಿ ಎಂದು ನಿಖರವಾಗಿ ಅಂದಾಜು ಮಾಡಬಲ್ಲುದು ಎಂದು ಬಿಂಬ ವಿಶ್ಲೇಷಕ ಪಾಸ್ಕಲ್ ವ್ಯ್ಲಾಲೋಟ್ಟನ್ ಅವರನ್ನು ಉಲ್ಲೇಖಿಸಿ ಎಬಿಸಿ ವರದಿ ಮಾಡಿತು.

2008: ಕರ್ನಾಟಕದ ಸ್ಥಳೀಯ ಸಂಸ್ಥೆಗಳಿಂದ ರಾಜ್ಯ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಮೂರೂ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತು. ಕೊಡಗು ಕ್ಷೇತ್ರದಿಂದ ಎಸ್.ಜಿ.ಮೇದಪ್ಪ, ಬೆಳಗಾವಿ ಕ್ಷೇತ್ರದಿಂದ ಶಶಿಕಾಂತ್ ಅಕ್ಕಪ್ಪ ನಾಯಕ್ ಮತ್ತು ಧಾರವಾಡದಿಂದ ಶಿವರಾಜ್ ಸಜ್ಜನರ ಅವರು ಚುನಾವಣೆಯಲ್ಲಿ ಗೆದ್ದರು. ಈ ಮೂವರೂ ಬಿಜೆಪಿ ಅಭ್ಯರ್ಥಿಗಳು.

2008: ಹಿಂದುತ್ವ ಚಳವಳಿಗೆ ಕಳಂಕ ತರುವ ಉದ್ದೇಶದಿಂದ ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ ತಮ್ಮನ್ನು ಬುದ್ಧಿಪೂರ್ವಕವಾಗಿ ಸಿಲುಕಿಸಲಾಗಿದೆ ಎಂದು ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್ ನಾಸಿಕ್ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟಿನಲ್ಲಿ ಆರೋಪಿಸಿದರು. ಪ್ರಕರಣದಲ್ಲಿ ಬಂಧಿತರಾಗಿರುವ ತಾವು ಹಾಗೂ ಇನ್ನಿಬ್ಬರು ನಿರ್ದೋಷಿಗಳು ಎಂದು ಹೇಳಿದ ಪ್ರಗ್ಯಾ, ವಿಚಾರಣೆ ವೇಳೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳದ ಸಿಬ್ಬಂದಿ (ಎಟಿಎಸ್) ತಮಗೆ ಕಿರುಕುಳ ನೀಡಿದರು ಎಂದೂ ದೂರಿದರು.

2008: ಉತ್ತರ ಮತ್ತು ದಕ್ಷಿಣ ವಿಯೆಟ್ನಾಮಿನಲ್ಲಿ 55 ಜನರು ಪ್ರವಾಹಕ್ಕೆ ಬಲಿಯಾದರು. ರಾಜಧಾನಿ ಹನೋಯಿಯಲ್ಲಿ ಪ್ರವಾಹದಿಂದಾಗಿ 18 ಜನರು ಮೃತರಾದರು. ಕಳೆದ 25 ವರ್ಷಗಳಲ್ಲಿ ಸಂಭವಿಸಿದ ಭೀಕರ ಪ್ರವಾಹ ಇದು.

2008: ಭೂತಾನಿನಲ್ಲಿ ಸರ್ಕಾರ ಮಾಧ್ಯಮಗಳಿಗೆ ಹೆಚ್ಚು ಸ್ವಾತಂತ್ರ್ಯ ನೀಡಲಾರಂಭಿಸಿದ ಪರಿಣಾಮವಾಗಿ ಇದೇ ಮೊದಲ ಬಾರಿಗೆ `ಭೂತಾನ್ ಟುಡೆ' ಹೆಸರಿನ ದಿನಪತ್ರಿಕೆಯೊಂದು ಆರಂಭಗೊಂಡಿದೆ. ಪತ್ರಿಕೆಯು ಅಕ್ಟೋಬರ್ 30 ರಿಂದ ಮುದ್ರಣ ಆರಂಭಿಸಿತು.

2008: ಆಸ್ಟ್ರೇಲಿಯಾ ವಿಶ್ವ ಪರಂಪರಾ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಯಾಗಿರುವ `ಗ್ರೇಟ್ ಬ್ಯಾರಿಯರ್ ರೀಪ್' ಸಮೀಪದ ಪ್ರವಾಸಿ ಕಡಲ ಕಿನಾರೆಯಲ್ಲಿ ಸಿಕ್ಕಿದ ಭಾರಿ ಮೊಸಳೆ ಭಾರೀ ಪ್ರಮಾಣದಲ್ಲಿ ಪ್ಲಾಸ್ಟಿಕ್ ಸೇವಿಸಿದ್ದರಿಂದ ಸಾವನ್ನಪ್ಪಿತು ಎಂದು ಅಧಿಕಾರಿಗಳು ಪ್ರಕಟಿಸಿದರು. ಪ್ರವಾಸಿಗರಿಗೆ ಸಿಂಹಸ್ವಪ್ನವಾಗಿದ್ದ ಮೊಸಳೆಯನ್ನು ಮ್ಯಾಗ್ನಟಿಕ್ ದ್ವೀಪದ ಸಮೀಪ ಸೆರೆ ಹಿಡಿದ ಒಂದು ದಿನದ ನಂತರ ಅದು ಸತ್ತಿದೆ ಎಂದು ಕ್ವೀನ್ಸ್ ಲ್ಯಾಂಡ್ ಪರಿಸರ ಸಂರಕ್ಷಣಾ ಏಜೆನ್ಸಿ ಘೋಷಿಸಿತು. ಮೊಸಳೆಯ ಹೊಟ್ಟೆಯಲ್ಲಿ ಸರಕಿಗಾಗಿ ಬಳಸುವ ಹಾಗೂ ಅನುಪಯುಕ್ತ ಪದಾರ್ಥ ತುಂಬುವ 25 ಪ್ಲಾಸ್ಟಿಕ್ ಚೀಲಗಳು ಪತ್ತೆಯಾದವು. ಇದಲ್ಲದೆ ಮದ್ಯ ತಂಪು ಮಾಡುವ ಚೀಲ ಮತ್ತಿತರ ವಸ್ತುಗಳು ದೊರೆತವು. ಹೊಟ್ಟೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸೇರಿದ್ದರಿಂದ ಅದರ ಜೀರ್ಣಕ್ರಿಯೆಗೆ ಅಡ್ಡಿಯಾಗಿತ್ತು.

2007: ತಮಿಳು ಉಗ್ರಗಾಮಿ ಸಂಘಟನೆ ಎಲ್ಟಿಟಿಇ ಪೊಲೀಸ್ ಮುಖ್ಯಸ್ಥ ಪಿ.ನಟೇಶನ್ ಅವರನ್ನು ರಾಜಕೀಯ ಘಟಕದ ನೂತನ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು. ಲಂಕಾ ವಾಯುಪಡೆಯಿಂದ ಹತ್ಯೆಯಾದ ಬಂಡಾಯ ನಾಯಕ ಎಸ್. ಪಿ. ತಮಿಳ್ ಸೆಲ್ವಂ ಸ್ಥಾನಕ್ಕೆ ನಟೇಶನ್ ನೇಮಕಗೊಂಡರು.

2007: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ರೆಕ್ಕೆಯ ದುರಸ್ತಿ ಮಾಡುವ ಸಾಹಸವನ್ನು ಇಬ್ಬರು ಗಗನಯಾತ್ರಿಗಳು ಈದಿನ ಆರಂಭಿಸಿದರು. ಡಿಸ್ಕವರಿ ಉಪಗ್ರಹ ಉಡಾವಣೆಗೆ ಸೀಳು ಬಂದಿರುವ ರೆಕ್ಕೆಯನ್ನು ಸರಿಪಡಿಸುವುದು ಅಗತ್ಯ. ದುರಸ್ತಿ ಮಾಡದಿದ್ದಲ್ಲಿ ವಿದ್ಯುತ್ ಉತ್ಪಾದಿಸುವ ಈ ರೆಕ್ಕೆಯ ಕಾರ್ಯ ಸಂಪೂರ್ಣವಾಗಿ ಸ್ಥಗಿತಗೊಳ್ಳುವುದು ಎಂದು ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಹೇಳಿತು. ಬಾಹ್ಯಾಕಾಶ ನಡಿಗೆಯಲ್ಲಿ ನುರಿತ ಗಗನಯಾತ್ರಿ ಸ್ಕಾಟ್ ಪಾರಾಜಿನ್ ಸಕಿ (46) ಅವರು ಈ ಕೆಲಸಕ್ಕೆ ಮುಂದಾದರು.

2007: ಅಕ್ರಮ ಆಸ್ತಿ ಸಂಪಾದನೆಯ ಆರೋಪದ ಮೇರೆಗೆ ಬೆಂಗಳೂರು, ಬಳ್ಳಾರಿ ಮತ್ತು ಬೀದರಿನಲ್ಲಿ ಪೊಲೀಸ್, ಸಾರಿಗೆ ಮತ್ತು ನೀರಾವರಿ ಇಲಾಖೆಯ 13 ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು 50 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಪತ್ತೆ ಹಚ್ಚಿದರು. ಇದು ಕರ್ನಾಟಕ ಲೋಕಾಯುಕ್ತದ ಇತಿಹಾಸದಲ್ಲೇ ಅತ್ಯಂತ ದೊಡ್ಡ ದಾಳಿ. ಇಬ್ಬರು ಸಹಾಯಕ ಪೊಲೀಸ್ ಆಯುಕ್ತರು, ಒಬ್ಬ ಎಸ್ ಪಿ, ಒಬ್ಬ ಡಿ ವೈ ಎಸ್ ಪಿ, ಮೂವರು ಪೊಲೀಸ್ ಇನ್ ಸ್ಪೆಕ್ಟರುಗಳು, ಐದು ಮೋಟಾರು ವಾಹನ ನಿರೀಕ್ಷಕರು ಮತ್ತು ಒಬ್ಬ ಸಹಾಯಕ ಕಾರ್ಯಪಾಲಕ ಎಂಜಿನಿಯರುಗಳ ಮನೆ-ಕಚೇರಿ ಮೇಲೆ ದಾಳಿ ನಡೆಯಿತು. ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ವರ್ಷವೊಂದರಲ್ಲಿ ಎಂಟರಿಂದ ಹತ್ತು ಮಂದಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದು ಈವರೆಗಿನ ಇತಿಹಾಸ. ಆದರೆ ಈದಿನ ಬೆಳಿಗ್ಗೆ 6 ಗಂಟೆಗೆ ಪ್ರಾರಂಭವಾದ ದಾಳಿಯಲ್ಲಿ 13 ಮಂದಿ ಅಧಿಕಾರಿಗಳ ಮೇಲೆ ದಾಳಿ ನಡೆಸಿ, ಭಾರಿ ಪ್ರಮಾಣದ ಅಕ್ರಮ ಆಸ್ತಿಯನ್ನು ಬಯಲಿಗೆ ತರುವ ಮೂಲಕ ಲೋಕಾಯುಕ್ತ ಪೊಲೀಸರು ನೂತನ ದಾಖಲೆ ಸೃಷ್ಟಿಸಿದರು. ಬೆಂಗಳೂರಿನ ಕಬ್ಬನ್ ಪಾರ್ಕ್ ಉಪವಿಭಾಗದ ಎಸಿಪಿ ಅಜ್ಜಪ್ಪ, ವಿಧಾನಸೌಧ ಭದ್ರತಾ ವಿಭಾಗದ ಎಸಿಪಿ ವಿಶ್ವನಾಥ್ ಸಿಂಗ್, ಯಲಹಂಕ ಪೊಲೀಸ್ ತರಬೇತಿ ಕೇಂದ್ರದ ಅಧೀಕ್ಷಕ ಶ್ರೀನಿವಾಸ ಅಯ್ಯರ್, ಪೊಲೀಸ್ ಇನ್ಸ್ಪೆಕ್ಟರುಗಳಾದ ರಾಮಮೂರ್ತಿನಗರ ಠಾಣೆಯ ಸಿದ್ದಪ್ಪ, ವಿಶೇಷ ಘಟಕದ ಮರಿಸ್ವಾಮಿಗೌಡ, ಉಪ್ಪಾರಪೇಟೆ ಸಂಚಾರ ಪೊಲೀಸ್ ಠಾಣೆಯ ಎಸ್.ಪಿ. ಮಲ್ಲಿಕಾರ್ಜುನ, ಕಾಡುಗೋಡಿ ಠಾಣೆಯ ಪುರುಷೋತ್ತಮ್, ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕರಾದ ಬಾಲಚಂದ್ರರಾವ್ (ಯಶವಂತಪುರ ಪ್ರಾದೇಶಕ ಸಾರಿಗೆ ಅಧಿಕಾರಿಗಳ ಕಚೇರಿ), ಈಶ್ವರ ನಾಯಕ್ (ರಾಜಾಜಿನಗರ) ಮತ್ತು ಎಂ. ಲಕ್ಷ್ಮಣ್ (ದೇವನಹಳ್ಳಿ) ಅವರ ಮನೆ, ಕಚೇರಿ ಮೇಲೆ ದಾಳಿ ನಡೆಯಿತು.

2007: `ರಾಜಕೀಯ ಅಸ್ಥಿರತೆ, ನ್ಯಾಯಾಂಗದ ಮಿತಿಮೀರಿದ ಹಸ್ತಕ್ಷೇಪ ಹಾಗೂ ಭಯೋತ್ಪಾದಕ ಕೃತ್ಯಗಳು ಹೆಚ್ಚುತ್ತಿರುವ' ನೆಪವೊಡ್ಡಿ ಪಾಕಿಸ್ಥಾನದಲ್ಲಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ತುರ್ತು ಪರಿಸ್ಥಿತಿ ಘೋಷಿಸಿದರು. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಇಫ್ತಿಕರ್ ಮೊಹಮ್ಮದ್ ಚೌಧರಿ ಅವರನ್ನೂ ವಜಾ ಮಾಡಲಾಯಿತು. ಆದರೆ ಸುಪ್ರೀಂಕೋರ್ಟ್ ಈ ಆದೇಶವನ್ನು ಸಂವಿಧಾನಬಾಹಿರ ಎಂದು ಹೇಳಿತು.

2007: ಕರ್ನಾಟಕದಲ್ಲಿ ಸರ್ಕಾರ ರಚನೆಗೆ ಆಹ್ವಾನ ನೀಡಬೇಕೆಂದು ಆಗ್ರಹಿಸಿ ಬಿಜೆಪಿಯು ಬೆಂಗಳೂರು ಮಹಾತ್ಮ ಗಾಂಧಿ ರಸ್ತೆಯಲ್ಲಿ ಮಹಾತ್ಮ ಗಾಂಧಿ ಪ್ರತಿಮೆಯ ಬಳಿ ಅನಿರ್ದಿಷ್ಟಾವಧಿಯ ಧರಣಿಯನ್ನು ಆರಂಭಿಸಿತು.

2006: ಹೈದರಾಬಾದಿನ ವಿಶ್ವ ಪ್ರಸಿದ್ಧ ಸಾಲಾರ್ ಜಂಗ್ ವಸ್ತುಸಂಗ್ರಹಾಲಯದಲ್ಲಿ ಅಗ್ನಿ ಅನಾಹುತ ಸಂಭವಿಸಿತು. ಆದರೆ ಆದರೆ ಯಾವುದೇ ಪ್ರಾಚೀನ ವಸ್ತುಗಳಿಗೂ ಹಾನಿ ಉಂಟಾಗಲಿಲ್ಲ. ವಸ್ತುಸಂಗ್ರಹಾಲಯದ ದಾಸ್ತಾನುಕೋಣೆಯ ಒಳಗೆ ಮೊದಲಿಗೆ ಬೆಂಕಿ ಕಾಣಿಸಿಕೊಂಡಿತು. ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ತತ್ ಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಸುದ್ದಿ ಮುಟ್ಟಿಸಿದರು. ಕ್ಷಿಪ್ರವಾಗಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ಆರಿಸಿದರು.

2006: ಬೆಂಗಳೂರಿನ ಸುತ್ತಮುತ್ತ ಇರುವ ಏಳು ನಗರಸಭೆ, ಕೆಂಗೇರಿ ಪುರಸಭೆ ಮತ್ತು 111 ಗ್ರಾಮಗಳನ್ನು ಸೇರಿಸಿಕೊಂಡು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಗ್ರೇಟರ್ ಬೆಂಗಳೂರು ಮುನಿಸಿಪಲ್ ಕಾರ್ಪೊರೇಷನ್ ರಚಿಸಲು ಅಧಿಸೂಚನೆ ಹೊರಡಿಸಲಾಯಿತು. ಯೋಜನೆ ಅನುಷ್ಠಾನಕ್ಕೆ ಇಸ್ರೊ ಮಾಜಿ ಅಧ್ಯಕ್ಷ ರಾಜ್ಯಸಭಾ ಸದಸ್ಯ ಡಾ. ಕಸ್ತೂರಿ ರಂಗನ್, ರಾಜ್ಯ ಯೋಜನಾ ಮಂಡಳಿಯ ಉಪಾಧ್ಯಕ್ಷ ಎ. ರವೀಂದ್ರ ನೇತೃತ್ವದ 12 ಸದಸ್ಯರ ಸಮಿತಿ ರಚಿಸಲಾಯಿತು.

2006: ಭಾರತೀಯ ಕ್ರಿಕೆಟ್ ರಂಗದ ಪ್ರತಿಭಾನ್ವಿತ ಆಟಗಾರರರಲ್ಲಿ ಒಬ್ಬರಾದ ವಿಜಯ್ ರಾಘವೇಂದ್ರ ಭಾರಧ್ವಾಜ್ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದರು. ಉತ್ತಮ ಬ್ಯಾಟ್ ಮನ್ ಹಾಗೂ ಆಫ್ ಸ್ಪಿನ್ನರ್ ಆಗಿದ್ದ ಭಾರಧ್ವಾಜ್ ಸುದ್ದಿಗೋಷ್ಠಿಯಲ್ಲಿ ನಿವೃತ್ತಿ ನಿರ್ಧಾರ ಪ್ರಕಟಿಸಿದರು. (ಜನನ: 15 ಆಗಸ್ಟ್ 1975).

2006: ಭಾರತ ತಂಡದ ನಾಯಕ ರಾಹುಲ್ ದ್ರಾವಿಡ್ ವರ್ಷದ ಐಸಿಸಿ ವಿಶ್ವ ಇಲೆವೆನ್ ತಂಡದ ಅತ್ಯುತ್ತಮ ನಾಯಕ ಗೌರವಕ್ಕೆ ಪಾತ್ರರಾದರು. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ವಿವಿಧ ಪ್ರಶಸ್ತಿಗಳಿಗೆ ಕ್ರಿಕೆಟಿಗರನ್ನು ಆಯ್ಕೆ ಮಾಡಿತು.

1998: `ಬ್ಯಾಟ್ ಮ್ಯಾನ್' ಸೃಷ್ಟಿಕರ್ತ ಬಾಬ್ ಕೇನ್ ತಮ್ಮ 83ನೇ ವಯಸ್ಸಿನಲ್ಲಿ ಮೃತರಾದರು. ಲಿಯೋನಾರ್ಡೊ ಡ ವಿಂಚಿ ಅವರ `ಹಾರುವ ಯಂತ್ರ'ಗಳ ಚಿತ್ರಗಳಿಂದ ಸ್ಫೂರ್ತಿ ಪಡೆದು `ಬ್ಯಾಟ್ ಮ್ಯಾನ್' ಸೃಷ್ಟಿಸಿದರು ಎನ್ನಲಾಗಿದೆ.

1992: ಬಾಲಿವುಡ್ ನಟ ಪ್ರೇಮನಾಥ್ ನಿಧನ.

1986: ಸಿರಿಯನ್ ಪರ ಮ್ಯಾಗಜಿನ್ `ಆಶ್- ಶಿರಾ' ಮೊತ್ತ ಮೊದಲ ಬಾರಿಗೆ ಅಮೆರಿಕವು ಇರಾನಿಗೆ ಶಸ್ತ್ರಾಸ್ತ್ರ ಮಾರಾಟ ಮಾಡಿದ್ದನ್ನು ಪ್ರಕಟಿಸಿತು. ಈ ಶಸ್ತ್ರಾಸ್ತ್ರಗಳ ರಹಸ್ಯ ಮಾರಾಟದಿಂದ ಬಂದ ಲಾಭವನ್ನು ನಿಕರಾಗುವಾದ ಬಂಡುಕೋರರಿಗೆ ನೀಡಲಾಗಿದೆ ಎಂಬುದಾಗಿ ಅಮೆರಿಕಾದ ಅಧ್ಯಕ್ಷ ರೀಗನ್ ಹಾಗೂ ಅಟಾರ್ನಿ ಜನರಲ್ ಎಡ್ವಿನ್ ಮೀಸ್ ಪ್ರಕಟಿಸಿದಾಗ ಈ ಪ್ರಕರಣ ಪ್ರಮುಖ ಹಗರಣಯಿತು.

1984: ಓಂ ಅಗರ್ವಾಲ್ ಅವರು ಡಬಿನ್ನಿನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ವಿಜಯ ಗಳಿಸುವ ಮೂಲಕ ವಿಶ್ವ ಸ್ನೂಕರ್ ಚಾಂಪಿಯನ್ ಶಿಪ್ ಗೆದ್ದ ಪ್ರಥಮ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1984: ಹತ್ಯೆಗೊಳಗಾದ ಭಾರತದ ಪ್ರಧಾನಿ ಇಂದಿರಾಗಾಂಧಿ ಅವರ ಅಂತ್ಯಕ್ರಿಯೆ.

1978: ಸರ್ ಫ್ರಾಜ್ ನವಾಜ್ `ಶಾರ್ಟ್ ಪಿಚ್ಡ್ ಬೌಲಿಂಗ್' ಮಾಡಿದ್ದನ್ನು ಪ್ರತಿಭಟಿಸಿ ಭಾರತೀಯ ಕ್ಯಾಪ್ಟನ್ ಬಿಷನ್ ಸಿಂಗ್ ಬೇಡಿ ಅವರು ಪಾಕಿಸ್ಥಾನದ ಸಹಿವಾಲ್ ನ ಝಾಫರ್ ಸ್ಟೇಡಿಯಂನಿಂದ ತಮ್ಮ ಆಟಗಾರರನ್ನು ವಾಪಸ್ ಕರೆಸಿಕೊಂಡರು. ಒಂದು ದಿನದ ಅಂತಾರಾಷ್ಟ್ರೀಯ ಪಂದ್ಯವೊಂದು ಹೀಗೆ ಮುಕ್ತಾಯಗೊಂಡದ್ದು ಇದೇ ಪ್ರಥಮ.

1968: ಸಾಹಿತಿ ಚಂದ್ರಿಕಾ ಕಾಕೋಳ ಜನನ.

1957: ಸೋವಿಯತ್ ಒಕ್ಕೂಟ ನಿರ್ಮಿಸಿದ ಕೃತಕ ಉಪಗ್ರಹ ಸ್ಪುಟ್ನಿಕ್-2ನ್ನು ಈದಿನ ಉಡಾವಣೆ ಮಾಡಿ ಕಕ್ಷೆಗೆ ಸೇರಿಸಲಾಯಿತು. ಇದು ಮಾನವ ನಿರ್ಮಿತ ಎರಡನೆ ಉಪಗ್ರಹ. ಲೈಕಾ ಎಂಬ ನಾಯಿಯನ್ನು ಈ ಉಪಗ್ರಹದೊಂದಿಗೆ ಕಳುಹಿಸಿ ಪ್ರಾಣಿಯೊಂದನ್ನು ಮೊದಲ ಬಾರಿಗೆ ಅಂತರಿಕ್ಷಯಾನ ಮಾಡಿಸಿದ ಕೀರ್ತಿಗೆ ಸೋವಿಯತ್ ಒಕ್ಕೂಟ ಭಾಜನವಾಯಿತು.

1939: ಕನ್ನಡ ಮತ್ತು ಹಿಂದಿ ಭಾಷೆಗಳೆರಡರಲ್ಲಿ ವಿಶಿಷ್ಟ ಸ್ಥಾನ ಗಳಿಸಿರುವ ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಅವರು ಬಸೆಟ್ಟು- ಗಿರಿಜವ್ವ ದಂಪತಿಯ ಮಗನಾಗಿ ಯಾದವಾಡ ಗ್ರಾಮದಲ್ಲಿ ಜನಿಸಿದರು.

1933: ಭಾರತದ ನೊಬೆಲ್ ಪ್ರಶಸ್ತಿ ವಿಜೇತ ಆರ್ಥಿಕ ತಜ್ಞ ಅಮರ್ತ್ಯ ಸೇನ್ ಜನ್ಮದಿನ.

1933: ಸಾಹಿತಿ ಪದ್ಮಾ ಶೆಣೈ ಜನನ.

1929: ಸಾಹಿತಿ ಬಿ.ಎನ್. ನಾಣಿ ಜನನ.

1910: ಸಾಹಿತಿ ಬಾಲಚಂದ್ರ ಘಾಣೇಕರ್ ಜನನ.

1906: ಭಾರತೀಯ ಚಿತ್ರನಟ, ನಿರ್ದೇಶಕ ಪೃಥ್ವಿರಾಜ್ ಕಪೂರ್ ಹುಟ್ಟಿದ ದಿನ.

1838: `ದಿ ಟೈಮ್ಸ್ ಆಫ್ ಇಂಡಿಯಾ' ಪತ್ರಿಕೆಯು ಬಾಂಬೆಯಿಂದ (ಈಗಿನ ಮುಂಬೈ) ಮೊದಲ ಬಾರಿಗೆ ಪ್ರಕಟಗೊಂಡಿತು. `ದಿ ಬಾಂಬೆ ಟೈಮ್ಸ್ ಅಂಡ್ ಜರ್ನಲ್ ಆಫ್ ಕಾಮರ್ಸ್' ಎಂಬ ಹೆಸರಿನಿಂದ ವಾರಕ್ಕೆ ಎರಡು ಬಾರಿ ಪ್ರಕಟಗೊಳ್ಳುತ್ತಿದ್ದ ಅದನ್ನು ಬೆನ್ನೆಟ್, ಕೋಲ್ಮನ್ ಅಂಡ್ ಕಂಪೆನಿ ಲಿಮಿಟೆಡ್ ಪ್ರಕಟಿಸಿತು. 1850ರಲ್ಲಿ ಅದಕ್ಕೆ `ದಿ ಟೈಮ್ಸ್ ಆಫ್ ಇಂಡಿಯಾ' ಎಂಬುದಾಗಿ ಮರುನಾಮಕರಣ ಮಾಡಲಾಯಿತು. ಜೆ.ಇ. ಬ್ರೆನ್ನನ್ ಆಗ ಅದರ ಸಂಪಾದಕರಾಗಿದ್ದರು.

1618: ಭಾರತದ ಮೊಘಲ್ ಚಕ್ರವರ್ತಿ ಔರಂಗಜೇಬ್ ಹುಟ್ಟಿದ ದಿನ.

No comments:

Post a Comment