Thursday, November 1, 2018

ಇಂದಿನ ಇತಿಹಾಸ History Today ನವೆಂಬರ್ 01

ಇಂದಿನ ಇತಿಹಾಸ History Today ನವೆಂಬರ್ 01
2018: ನವದೆಹಲಿ: ಗೋಕರ್ಣದ ಮಹಾಬಲೇ ಶ್ವರ ದೇವಾಲಯದ ಆಡಳಿತವನ್ನು ತಕ್ಷಣ ಶ್ರೀರಾಮಚಂದ್ರಾಪುರಮಠಕ್ಕೆ ಹಸ್ತಾಂತರಿಸುವಂತೆ ಸರ್ವೋಚ್ಛ ನ್ಯಾಯಾಲಯದ ತ್ರಿಸದಸ್ಯ ಪೀಠ ಆದೇ ಶಿಸಿತು. ಶ್ರೀಮಠ ಸಲ್ಲಿಸಿದ್ದ ನ್ಯಾಯಾಂಗ ನಿಂದನೆ ಅರ್ಜಿಯನ್ನು ಮಾನ್ಯ ಮಾಡಿದ ಸರ್ವೋಚ್ಛ ನ್ಯಾಯಾ ಲಯ ಸರ್ಕಾರದ ಕ್ರಮದ ಕುರಿತಾಗಿ ತೀವ್ರ ಆಕ್ರೋಶ ವ್ಯಕ್ತಪಡಿಸಿ, ದೇವಾಲ ಯವನ್ನು ಶ್ರೀಮಠಕ್ಕೆ ತಕ್ಷಣ ಹಸ್ತಾಂತ ರಿಸುವಂತೆ ಆದೇಶ ನೀಡಿತು. ಸೆಪ್ಟೆಂಬರ್ ೧೯ ರ ವರೆಗೂ ದೇವಾಲಯ ಶ್ರೀಮಠದ ಆಡಳಿತದಲ್ಲೇ ಇತ್ತು, ಅಲ್ಲಿಯವರೆಗೂ ಯಾವುದೇ ಆಡಳಿತಾಧಿಕಾರಿಯ ಪ್ರಭಾವ ಇರಲಿಲ್ಲ. ಸೆ. ೭ ರ ಯಥಾಸ್ಥಿತಿಯನ್ನು ಮುಂದುವರಿ ಸುವಂತೆ ನ್ಯಾಯಾಲಯದ ಆದೇಶ ಇದ್ದರೂ ಸರ್ಕಾರ ದೇವಾಲಯವನ್ನು ವಶಪಡಿಸಿಕೊಂಡಿರುವುದು ಸರಿಯಲ್ಲ. *ಇದು ಸ್ಪಷ್ಟ ನ್ಯಾಯಾಂಗ ನಿಂದನೆ ಎಂದು ಅಭಿಪ್ರಾಯಪಟ್ಟ ನ್ಯಾಯಪೀಠ,* ಸೋಮವಾರದ ಒಳಗಾಗಿ ದೇವಾಲಯದ ಆಭರಣ ಸೇರಿದಂತೆ ಸಮಸ್ತ ಚರ ಹಾಗೂ ಸ್ಥಿರಾಸ್ಥಿಗಳನ್ನು ಒಳಗೊಂಡಂತೆ ಸಮಗ್ರ ಆಡಳಿತವನ್ನು ಶ್ರೀಮಠಕ್ಕೆ ಹಸ್ತಾಂತರಿ ಸುವಂತೆ ಕಟ್ಟುನಿಟ್ಟಾದ ಸೂಚನೆ ನೀಡಿತು. ಗೋಕರ್ಣ ಮಹಾಬಲೇಶ್ವರ ದೇವಾಲಯದ ಆಡಳಿತಕ್ಕೆ ಸಂಬಂಧಿಸಿ, ಸರ್ವೋಚ್ಛ ನ್ಯಾಯಾಲಯದ ಸಮ್ಮುಖದಲ್ಲಿ ೩ ನೇ ಬಾರಿಗೆ ಸರ್ಕಾರಕ್ಕೆ ಮುಖಭಂಗವಾಗಿದ್ದು, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದ್ದರೂ, ಸರ್ಕಾರ ಕಾನೂನು ಬಾಹಿರವಾಗಿ ದೇವಾಲಯವನ್ನು ವಶಪಡಿಸಿಕೊಂ ಡಿತ್ತು ಹಾಗೂ ಪುನರ್‌ಹಸ್ತಾಂತರದ ನಾಟಕವಾಡಿತ್ತು. ಇದೀಗ ಆದೇಶದಂತೆ *ಸೋಮವಾರದ ಒಳಗಾಗಿ ಆಡಳಿತವನ್ನು ಹಸ್ತಾಂತರಿಸದೇ ಇದ್ದರೆ ತೀವ್ರ ಕ್ರಮ ಜರು ಗಿಸಲಾಗುವುದು ಎಂಬ ಎಚ್ಚರಿಕೆಯನ್ನು ನ್ಯಾಯಮೂರ್ತಿ ಖಾನ್ವಿಲ್ಕರ್ ನೀಡಿದ ಪ್ರಸಂಗ ಕ್ಕೂ ನ್ಯಾಯಾಲಯ ಸಾಕ್ಷಿಯಾಯಿತು. ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡ ನ್ಯಾಯಾಲಯ, ಮುಂಜಾರೂಕತಾ ಕ್ರಮವಾಗಿ ನ್ಯಾಯಾಂಗ ನಿಂದನೆ ಅರ್ಜಿಯನ್ನು ಹಾಗೆಯೇ ಇರಿಸಿಕೊಂಡು, ಈ ಆದೇಶವನ್ನು ನೀಡಿರುವುದು ವಿಶೇಷ.. ಭಾರತ ಸರ್ಕಾರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಶ್ರೀಮಠದ ಪರವಾಗಿ ವಾದ ಮಂಡಿಸಿದರು.

2018: ನವದೆಹಲಿ: ಬಿಜೆಪಿಯ ಪರಾಭವ, ಪ್ರಜಾಪ್ರಭುತ್ವ, ಸಂಸ್ಥೆಗಳ ರಕ್ಷಣೆ ಒಂದೇ ಈಗಿನ ಅಗತ್ಯವಾಗಿದ್ದು, ದೇಶದ ಭವಿಷ್ಯದ ಸಲುವಾಗಿ ಎಲ್ಲ ವಿರೋಧ ಪಕ್ಷಗಳೂ ಒಂದಾಗಬೇಕಾದುದು ಈಗ ನಿರ್ಣಾಯಕವಾಗಿದೆ ಎಂದು ತಮ್ಮ ಚಾರಿತ್ರಿಕ ಭೇಟಿಯ ಬಳಿಕ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇಲ್ಲಿ ಹೇಳಿದರು.  ಬಿಜೆಪಿ ವಿರುದ್ಧವಿಶಾಲ ವಿರೋಧಿ ಮೈತ್ರಿಕೂಟ ರಚಿಸುವ ಸಲುವಾಗಿ ನಡೆದ ಮಾತುಕತೆಯ ಬಳಿಕ, ’ಇದೊಂದು ಸ್ಮರಣೀಯ ಕ್ಷಣ ಎಂದು ರಾಹುಲ್ ಗಾಂಧಿ ಸುದ್ದಿಗಾರರ ಜೊತೆ ಮಾತನಾಡುತ್ತಾ ಹೇಳಿದರು.  ‘ಇದೊಂದು ಅತ್ಯುತ್ತಮ ಸಭೆಯಾಗಿತ್ತು. ಉಭಯ ಪಕ್ಷಗಳೂ ರಾಷ್ಟ್ರ, ಪ್ರಜಾಪ್ರಭುತ್ವ ಮತ್ತು ಅದರ ಸಂಸ್ಥೆಗಳ ರಕ್ಷಣೆಗಾಗಿ ಒಟ್ಟಾಗಿ ದುಡಿಯಲು ನಿರ್ಧರಿಸಿವೆ ಎಂದು ಅವರು ನುಡಿದರು.  ‘ದೇಶದ ಭವಿಷ್ಯಕ್ಕಾಗಿ ಎಲ್ಲ ವಿರೋಧ ಪಕ್ಷಗಳೂ ಒಗ್ಗೂಡಬೇಕಾದ್ದು ಈಗ ನಿರ್ಣಾಯಕ ಎಂದು ಅವರು ಹೇಳಿದರು. ಕಾಂಗ್ರೆಸ್ ಮತ್ತು ಟಿಡಿಪಿಯ ಪೈಪೋಟಿ ಈಗ ಭೂತಕಾತದ ಕಥೆ. ವರ್ತಮಾನ ಕಾಲ ಮತ್ತು ಭವಿಷ್ಯ ಮಾತ್ರವೇ ಈಗ ನಮ್ಮ ಮುಂದಿರುವ ವಿಚಾರ. ಎಲ್ಲ ವಿರೋಧ ಪಕ್ಷಗಳೂ ಒಟ್ಟಾಗಬೇಕಾದಂತಹ ಪರಿಸ್ಥಿತಿ ಈಗ ರಾಷ್ಟ್ರಕ್ಕೆ ಬಂದಿದೆ ಎಂದು ಅವರು ನುಡಿದರು.  ರಾಹುಲ್ ಗಾಂಧಿ ಅವರ ಮಾತಿಗೆ ದನಿಗೂಡಿಸಿದ ನಾಯ್ಡು ಉಭಯ ಪಕ್ಷಗಳೂ ಭೂತಕಾಲವನ್ನು ಮರೆತಿವೆ ಎಂದು ಹೇಳಿದರು. ಕಾಂಗ್ರೆಸ್ ಜೊತೆಗೆ ಒಗ್ಗೂಡಬೇಕಾದದ್ದು ಪ್ರಜಾಪ್ರಭುತ್ವದ ಈಗಿನ ಅಗತ್ಯವಾಗಿದೆ ಎಂದು ಹೇಳಿದರು.  ‘ರಾಷ್ಟ್ರ ರಕ್ಷಿಸಿ, ಭವಿಷ್ಯ ರಕ್ಷಿಸಿ ಎಂಬ ಘೋಷಣೆಯನ್ನು ಮುಂದಿಟ್ಟುಕೊಂಡು ದೆಹಲಿಗೆ ಭೇಟಿ ನೀಡಿರುವ ಚಂದ್ರಬಾಬು ನಾಯ್ಡು ಅವರು ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಸಲುವಾಗಿ ಇಡೀ ದಿನ ವಿರೋಧ ಪಕ್ಷಗಳ ನಾಯಕರ ಜೊತೆಗೆ ಮಾತುಕತೆ ನಡೆಸಿದರು.  ಭವಿಷ್ಯದ ಯೋಜನೆಗಳನ್ನು ರೂಪಿಸುವ ಸಲುವಾಗಿ ಸಮಾನ ವೇದಿಕೆ ಸೃಷ್ಟಿಸುವ ಸಂಬಂಧ ವಿರೋಧ ಪಕ್ಷಗಳು ಸಭೆ ಸೇರಲಿವೆ ಎಂದು ನಾಯ್ಡು ನುಡಿದರುಅಂತಹ ಬಿಜೆಪಿ- ವಿರೋಧಿ ರಂಗವನ್ನು ಯಾರು ಮುನ್ನಡೆಸುವರು ಎಂಬ ಪ್ರಶ್ನೆಗೆ ಉಭಯ ನಾಯಕರೂ ಉತ್ತರ ನೀಡಲಿಲ್ಲ. ರಾಹುಲ್ ಗಾಂಧಿ ಅವರು ಮುಖ್ಯ ವಿರೋಧ ಪಕ್ಷದ ನಾಯಕರು ಎಂದು ನಾಯ್ಡು ನುಡಿದರು. ಮುಖ್ಯ ಸವಾಲು ಒಟ್ಟಾಗಿ ಕೆಲಸ ಮಾಡುವುದು. ಬೇರೆಲ್ಲವೂ ನಂತರದ ವಿಚಾರಗಳು ಎಂದು ರಾಹುಲ್ ಗಾಂದಿ ಹೇಳಿದರು. ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡುವ ಮುನ್ನ ಚಂದ್ರ ಬಾಬು ನಾಯ್ಡು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (ಎನ್ಸಿಪಿ) ಮುಖಂಡ ಶರದ್ ಪವಾರ್ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫರೂಕ್ ಅಬ್ದುಲ್ಲ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿ, ಬಳಿಕ ಒಟ್ಟಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದರು. ರಾಷ್ಟ್ರದ ಭವಿಷ್ಯ ರಕ್ಷಣೆಗಾಗಿ ಯೋಜನೆ ರೂಪಿಸಲು ದೆಹಲಿಯಲ್ಲಿ ಸಭೆ ಸೇರಲು ನಾವು ನಿರ್ಧರಿಸಿದ್ದೇವೆ ಎಂದು ನಾಯ್ಡು ಅವರು ಶರದ್ ಪವಾರ್ ಮತ್ತು ಫರೂಕ್ ಅಬ್ದುಲ್ಲ ಅವರ ಜೊತೆಗೆ ಮಾತುಕತೆ ನಡೆಸಿದ ಬಳಿಕ ಹೇಳಿದ್ದರು. ಕಾಕತಾಳೀಯವಾಗಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಅವರನ್ನೂ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭೇಟಿ ಮಾಡಿದ ನಾಯ್ಡು ಬಿಜೆಪಿಯೇತರ ರಾಜಕೀಯ ಪಕ್ಷಗಳು ಒಟ್ಟಾಗಬೇಕಾದ ಅಗತ್ಯದ ಬಗ್ಗೆ ಸಂಕ್ಷಿಪ್ತವಾಗಿ ಚರ್ಚಿಸಿದ್ದರು. ಪವಾರ್ ಜೊತೆಗಿನ ಮಾತುಕತೆ ವೇಳೆಯಲ್ಲಿ ಪವಾರ್ ಅವರು ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ಆರ್ಬಿಐ ವರ್ಚಸ್ಸು ಕಳೆಗುಂದುತ್ತಿರುವ ಬಗ್ಗೆ ಮಾತನಾಡಿದ್ದರು. ಪ್ರಜಾಪ್ರಭುತ್ವದ ರಕ್ಷಣೆ ಸಮಯದ ಅಗತ್ಯವಾಗಿದೆ. ನಾಯ್ಡು ಅವರು ಎಲ್ಲ ನಾಯಕರ ಜೊತೆಗೆ ಮಾತನಾಡಿ ಸಭೆಯನ್ನು ಕರೆಯುವರು ಎಂದು ಪವಾರ್ ಹೇಳಿದ್ದರು೧೯೯೫ ಮತ್ತು ೧೯೯೮ರಲ್ಲಿ ರಚಿಸಲಾಗಿದ್ದ ವಿರೋಧ ಪಕ್ಷಗಳ ಮಹಾ ಮೈತ್ರಿಯಲ್ಲೂ ನಾಯ್ಡು ಅವರು ಮುಂಚೂಣಿಯಲ್ಲಿದ್ದರು.
ರಾಜಧಾನಿಗೆ ಎರಡನೇ ಭೇಟಿ: ರಾಷ್ಟ್ರದ ರಾಜಧಾನಿಗೆ ನಾಯ್ಡು ಅವರು ಒಂದು ವಾರಕ್ಕೂ ಕಡಿಮೆ ಅವಧಿಯಲ್ಲಿ ಭೇಟಿ ನೀಡಿರುವುದು ಇದು ಎರಡನೇ ಸಲ. ಕಳೆದ ವಾರಾಂತ್ಯದಲ್ಲಿ ದೆಹಲಿಗೆ ಭೇಟಿ ನೀಡಿದ್ದ ನಾಯ್ಡು ದೆಹಲಿ ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ (ಆಪ್) ನಾಯಕ ಅರವಿಂದ ಕೇಜ್ರಿವಾಲ್, ಬಹುಜನ ಸಮಾಜ ಪಕ್ಷದ ಮುಖ್ಯಸ್ಥ ಮಾಯಾವತಿ ಮತ್ತು ಇತರ ಹಲವು ವಿರೋಧಿ ನಾಯಕರನ್ನು ಭೇಟಿ ಮಾಡಿದ್ದರು. ಮಾಜಿ ಕೇಂದ್ರ ಸಚಿವ ಯಶವಂತ ಸಿನ್ಹ ಅವರನ್ನೂ ನಾಯ್ಡು ಭೇಟಿ ಮಾಡಿದ್ದರು. ರಾಹುಲ್ ಗಾಂಧಿ ಅವರ ಜೊತೆಗಿನ ತಮ್ಮ ಉದ್ದೇಶಿತ ಭೇಟಿ ಬಗ್ಗೆ ಬುಧವಾರ ರಾತ್ರಿ ಪತ್ರಕರ್ತರಿಗೆ ತಿಳಿಸಿದ್ದ ನಾಯ್ಡು ಬಿಜೆಪಿ ವಿರುದ್ಧ ಪರ್ಯಾಯವಾಗಿ ಮೈತ್ರಿಕೂಟ ರಚಿಸುವ ಸಲುವಾಗಿ ಸಮಾನ ಮನಸ್ಕ ವಿರೋಧ ಪಕ್ಷಗಳನ್ನು ಒಟ್ಟುಗೂಡಿಸಲು ತಾವು ಯತ್ನಿಸುತ್ತಿರುವುದಾಗಿ ಹೇಳಿದ್ದರುಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿಲ್ಲ ಎಂಬ ಕಾರಣಕ್ಕಾಗಿ ಚಂದ್ರಬಾಬು ನಾಯ್ಡು ಅವರು ವರ್ಷ ಮಾರ್ಚ್ ತಿಂಗಳಲ್ಲಿ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟಕ್ಕೆ (ಎನ್ಡಿ ) ವಿದಾಯ ಹೇಳಿದ್ದರು. ಆಂಧ್ರ ಪ್ರದೇಶ ವಿಭಜನೆಯಿಂದ ಆದ ಅನ್ಯಾಯವನ್ನು ಸರಿಪಡಿಸುವುದಾಗಿ ನೀಡಿದ್ದ ಭರವಸೆಯನ್ನು ಈಡೇರಿಸಲು ನಿರಾಕರಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಜನತೆಗೆ ದ್ರೋಹ ಎಸಗಿದ್ದಾರೆ ಎಂದು ಬುಧವಾರ ನಾಯ್ಡು ಆಪಾದಿಸಿದ್ದರು. ಬಿಜೆಪಿ ನೀತಿಗಳು ರಾಷ್ಟ್ರದ ಪ್ರಜಾಪ್ರಭುತ್ವಕ್ಕೆ ಗಂಭೀರ ಅಪಾಯವನ್ನು ಒಡ್ಡಿವೆ ಎಂದೂ ನಾಯ್ಡು ದೂರಿದ್ದರು. ’ ಅಪಾಯದಿಂದ ದೇಶವನ್ನು ರಕ್ಷಿಸುವ ಹೊಣೆಗಾರಿಕೆಯನ್ನು ನಾನು ತೆಗೆದುಕೊಂಡಿದ್ದೇನೆ. ರಾಷ್ಟ್ರವನ್ನು ರಕ್ಷಿಸಬೇಕಾದ್ದು ಎಲ್ಲರ ಕರ್ತವ್ಯ ಎಂದು ಅವರು ಹೇಳಿದ್ದರು. ತಮಗೆ ಎರಡು ಬಾರಿ ಪ್ರಧಾನಿಯ ಹುದ್ದೆಯ ಕೊಡುಗೆ ಮುಂದಿಡಲಾಗಿತ್ತು, ಆದರೆ ತಾನು ಅದನ್ನು ನಿರಾಕರಿಸಿದ್ದುದಾಗಿ ನಾಯ್ಡು ನುಡಿದರು. ಈಗ ರಾಷ್ಟ್ರ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುವ ಕಾಲ ತೆಲುಗು ದೇಶಂ ಪಕ್ಷಕ್ಕೆ (ಟಿಡಿಪಿ) ಬಂದಿದೆ ಎಂದು ನಾಯ್ಡು ಹೇಳಿದ್ದರುಕಳೆದ ಮೇ ತಿಂಗಳಲ್ಲಿ ಕರ್ನಾಟಕ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಅವರ ಪ್ರಮಾಣ ವಚನ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರ ಜೊತೆಗೆ ವೇದಿಕೆ ಹಂಚಿಕೊಂಡ ಬಳಿಕ ಈದಿನ ಇದೇ ಮೊದಲ ಬಾರಿಕೆ ನಾಯ್ಡು ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು. 

2018: ನವದೆಹಲಿ: ಯಾವುದೇ ದಿಗ್ಬಂಧನ ರಹಿತವಾಗಿ ಇರಾನಿನಿಂದ ಕಚ್ಚಾ ತೈಲ ಖರೀದಿ ಮುಂದುವರಿಕೆ ಸಾಧ್ಯವಾಗುವಂತೆ ಅಮೆರಿಕದ ಜೊತೆಗೆ ಒಪ್ಪಂದ ಅಂತಿಮಗೊಳಿಸಿಕೊಳ್ಳುವ ಅಂಚಿಗೆ ಭಾರತ ಬಂದಿದೆ ಎಂದು ನಂಬರ್ಲ ಸುದ್ದಿ ಮೂಲಗಳು ತಿಳಿಸಿದವು. ಚೀನಾದ ಬಳಿಕ ಇರಾನಿನಿಂದ ತೈಲ ಖರೀದಿಸುವ ಎರಡನೇ ದೊಡ್ಡ ರಾಷ್ಟ್ರವಾಗಿರುವ ಭಾರತವು ಇರಾನಿನಿಂದ ಖರೀದಿಸುವ ಕಚ್ಚಾ ತೈಲವನ್ನು ಗಣನೀಯವಾಗಿ ಇಳಿಸಲು ಉದ್ದೇಶಿಸಿದೆ. ಮಾಸಿಕ ಖರೀದಿಯನ್ನು ವಾರ್ಷಿಕ .೨೫ ಮಿಲಿಯನ್ ಟನ್ ಅಥವಾ ೧೫ ಮಿಲಿಯನ್ ಟನ್ಗಳಿಗೆ (ಪ್ರತಿದಿನ ,೦೦,೦೦೦ ಬ್ಯಾರೆಲ್) ಸೀಮಿತಗೊಳಿಸಲು ಬಯಸಿದೆ. ಇದು ೨೦೧೭-೧೮ರ ಹಣಕಾಸು ವರ್ಷದಲ್ಲಿ ಖರೀದಿಸಿದ ತೈಲಕ್ಕೆ ಹೋಲಿಸಿದರೆ ಗಣನೀಯ ಪ್ರಮಾಣದ ಇಳಿಕೆಯಾಗಿದೆ. ೨೦೧೭-೧೮ರ ಸಾಲಿನಲ್ಲಿ ಭಾರತವು ಇರಾನಿನಿಂದ ೨೨. ಮಿಲಿಯನ್ ಟನ್ (ಪ್ರತಿದಿನ ,೫೨,೦೦೦ ಬ್ಯಾರೆಲ್) ತೈಲ ಖರೀದಿಸಿತ್ತು. ಭಾರತವು ಕಡಿತಗೊಳಿಸಲು ಬಯಸಿರುವ ತೈಲ ಖರೀದಿ ಪ್ರಸ್ತಾವವು ಅಮೆರಿಕಕ್ಕೆ ತೃಪ್ತಿಯನ್ನು ಉಂಟು ಮಾಡಿದ್ದು, ಭಾರತದ ಮೇಲೆ ದಿಗ್ಬಂಧನ ಹೇರಲು ಮುಂದಾಗುವ ಸಾಧ್ಯತೆಗಳಿಲ್ಲ ಎಂದು ಮೂಲಗಳು ಹೇಳಿದವು. ಅಮೆರಿಕದ ದಿಗ್ಬಂಧನ ಬೆದರಿಕೆಯ ಹೊರತಾಗಿಯೂ ಭಾರತವು ಇರಾನಿನಿಂದ ಕಚ್ಚಾ ತೈಲ ಆಮದನ್ನು ಮುಂದುವರೆಸಿತ್ತು. ಭಾರತದ ಇಂಡಿಯನ್ ಆಯಿಲ್ ಕಾರ್ಪೋರೇಷನ್ (ಐಒಸಿ) ಮತ್ತು ಮ್ಯಾಂಗಲೂರ್ ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ ಪಿಎಲ್) ಇರಾನಿನಿಂದ ನವೆಂಬರ್ ತಿಂಗಳಲ್ಲಿ .೨೫ ಮಿಲಿಯನ್ ಟನ್ ತೈಲ ಖರೀದಿಗೆ ಮುಂದಾಗಿದ್ದವು.

2018: ನವದೆಹಲಿ: ಅಸ್ಸಾಮಿನ ರಾಷ್ಟ್ರೀಯ ಪೌರ ನೋಂದಣಿ (ಎನ್ ಆರ್ ಸಿ)ಯಲ್ಲಿ ಹೆಸರು ಬಿಟ್ಟು ಹೋಗಿರುವ ೪೦ ಲಕ್ಷ ಮಂದಿಗೆ ತಮ್ಮ ಪರಂಪರೆ ಕುರಿತು ಪ್ರತಿಪಾದನೆ, ಆಕ್ಷೇಪಗಳನ್ನು ಸಲ್ಲಿಸುವ ಗಡುವನ್ನು  ನವೆಂಬರ್ ೨೫ರಿಂದ ಡಿಸೆಂಬರ್ ೧೫ಕ್ಕೆ ವಿಸ್ತರಿಸುವ ಮೂಲಕ ಸುಪ್ರಿಂಕೋರ್ಟ್ ಭಾರೀ ನಿರಾಳತೆಯನ್ನು ಒದಗಿಸಿತು. ಡಿಸೆಂಬರ್ ೧೫ರ ಬಳಿಕ, ತಮ್ಮ ಪ್ರತಿಪಾದನೆ, ಆಕ್ಷೇಪ ಸಲ್ಲಿಸಿದವರಿಗೆ ೨೦೧೯ರ ಜನವರಿ ೧೫ರವರೆಗೆ ನೋಟಿಸುಗಳನ್ನು ನೀಡಲಾಗುವುದು. ಅವರ ಪ್ರತಿಪಾದನೆ, ಆಕ್ಷೇಪಗಳ ಪರಿಶೀಲನೆಯನ್ನು ೨೦೧೯ರ ಏಪ್ರಿಲ್ ೧ರಿಂದ ನಡೆಸಲಾಗುವುದು. ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯಿ ಮತ್ತು ನ್ಯಾಯಮೂರ್ತಿ ರೊಹಿಂಟನ್ ಎಫ್. ನಾರಿಮನ್ ಅವರನ್ನು ಒಳಗೊಂಡ ಪೀಠವು ತಮ್ಮ ಪರಂಪರೆಯನ್ನು ಸಾಬೀತು ಪಡಿಸಲು ಇನ್ನೂ ದಾಖಲೆಗಳನ್ನು ಬಳಸಲು ಕೂಡಾ ಅವಕಾಶ ನೀಡಿತು. ೧೯೫೧ರ ರಾಷ್ಟ್ರೀಯ ಪೌರ ನೋಂದಣಿ (ಎನ್ ಆರ್ ಸಿ), ೧೯೭೧ರ ಮಾರ್ಚ್ ೨೪ರವರೆಗಿನ ಚುನಾವಣಾ ಮತದಾರರ ಯಾದಿ, ಪೌರತ್ವ ಸರ್ಟಿಫಿಕೇಟ್, ನಿರಾಶ್ರಿತ ನೋಂದಣಿ ಸರ್ಟಿಫಿಕೇಟ್, ತ್ರಿಪುರಾ ಸರ್ಕಾರದಿಂದ ನೀಡಲಾದ ೧೯೭೧ಕ್ಕೆ ಮೊದಲಿನ ಮತದಾರರ ಯಾದಿಯ ದೃಢೀಕೃತ ಪ್ರತಿಗಳು  ಮತ್ತು ರೇಷನ್ ಕಾರ್ಡ್ ದಾಖಲೆಗಳ ಪೈಕಿ ಯಾವುದಾದರೂ ಒಂದು ದಾಖಲೆಯನ್ನು   ಪರಂಪರೆ ಸಾಬೀತು ಪಡಿಸಲು ಸಲ್ಲಿಸಬಹುದು ಎಂದು ಪೀಠ ತಿಳಿಸಿತು. ಐದು ದಾಖಲೆಗಳನ್ನು ಸುಲಭವಾಗಿ ನಕಲು ಮಾಡಬಹುದು, ಆದ್ದರಿಂದ ಭಾರತೀಯ ಪೌರತ್ವ ಸಾಬೀತು ಪಡಿಸಲು ಇವುಗಳನ್ನು ಬಳಸಲು ಅವಕಾಶ ನೀಡಬಾರದು  ಎಂಬುದಾಗಿ ರಾಜ್ಯ ಎನ್ ಆರ್ ಸಿ ಸಮನ್ವಯಕಾರ ಪ್ರತೀಕ್ ಹಜೇಲಾ ಅವರ ಕೈಗೊಂಡಿದ್ದ ತೀರ್ಮಾನಕ್ಕೆ ಪೀಠ ತನ್ನ ಅಸಮ್ಮತಿ ವ್ಯಕ್ತ ಪಡಿಸಿತು.  ‘ನೀವು ಸರಿ ಎಂದು ನಮಗೆ ಅನ್ನಿಸುತ್ತಿಲ್ಲ ಮಿಸ್ಟರ್ ಹಜೇಲ ಎಂದು ನ್ಯಾಯಮೂರ್ತಿ ನಾರಿಮನ್ ಹೇಳಿದರು ದಾಖಲೆಗಳನ್ನು ನಕಲು ಮಾಡುವ ಸಂಭಾವ್ಯತೆ ಇದೆ ಎಂಬ ಕಾರಣಕ್ಕಾಗಿ ನೈಜ ಪ್ರತಿಪಾದಕರಿಗೆ ಅವುಗಳನ್ನು ಬಳಸದಂತೆ ನಿಷೇಧಿಸಲಾಗದು ಎಂದು ಮುಖ್ಯ ನ್ಯಾಯಮೂರ್ತಿ ಗೊಗೋಯಿ ನುಡಿದರು. ತಮ್ಮ ಪರಂಪರೆ ಸಾಬೀತಿಗೆ ಹಾಜರು ಪಡಿಸಲು ಬಳಸಬಹುದು ಎಂಬುದಾಗಿ ಕೇಂದ್ರ ಸರ್ಕಾರವು ಪಟ್ಟಿ ಮಾಡಿದ್ದ ೧೫ ದಾಖಲೆಗಳಲ್ಲಿ ದಾಖಲೆಗಳು ಸೇರಿವೆಇವುಗಳ ಪೈಕಿ ೧೦ ದಾಖಲೆಗಳಿಗೆ ಕೋರ್ಟ್ ಅನುಮೋದನೆ ನೀಡಿತ್ತು. ಆದರೆ ಉಳಿದ ಐದು ದಾಖಲೆಗಳ ಬಗ್ಗೆ ಗುಮಾನಿ ವ್ಯಕ್ತ ಪಡಿಸಿ ಹಜೇಲ ಅವರು ಅಕ್ಟೋಬರ್ ೪ರಂದು ವರದಿ ಸಲ್ಲಿಸಿದ್ದನ್ನು ಅನುಸರಿಸಿ ಅವುಗಳನ್ನು ಅನುಮಾನಾಸ್ಪದ ಪಟ್ಟಿಗೆ ಸೇರಿಸಲಾಗಿತ್ತು. ಐದು ದಾಖಲೆಗಳನ್ನು ಬೆಂಬಲಿಸಿ ಕೇಂದ್ರವು ಪ್ರಬಲವಾದ ಮಂಡಿಸಿತು.. ಐದು ದಾಖಲೆಗಳನ್ನು ಹೊರತುಪಡಿಸಲು ಸುಪ್ರೀಂಕೋರ್ಟ್ ಕೈಗೊಂಡಿದ್ದ ನಿರ್ಧಾರಕ್ಕೆ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ಪ್ರಬಲ ಆಕ್ಷೇಪ ವ್ಯಕ್ತ ಪಡಿಸಿದರು.

2018: ನವದೆಹಲಿ: ಸಮಾಜವಾದಿ ಪಕ್ಷದ ಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸೊಸೆ ಅಪರ್ಣಾ ಯಾದವ್ ಅವರು ಅಯೋಧ್ಯೆಯಲ್ಲಿ ರಾಮಮಂದಿರ ಕಟ್ಟಬೇಕು ಎಂದು ಹೇಳಿದ್ದು, ರಾಜಕೀಯವಾಗಿ ವಿಭಜನೆಗೊಂಡಿರುವ ಕುಟುಂಬದಲ್ಲಿ ತಮ್ಮ ನಿಷ್ಠೆ ಯಾರ ಕಡೆಗೆ ಎಂಬುದನ್ನೂ ಸ್ಪಷ್ಟ ಪಡಿಸಿದರು. ‘೨೦೧೯ರ ಚುನಾವಣೆಯಲ್ಲಿ ಸ್ಪಧಿಸುವ ಅವಕಾಶ ಲಭಿಸಿದಲ್ಲಿ ನಾನು ಶಿವಪಾಲ್ ಜಿ ಮತ್ತು ನೇತಾಜಿ (ಮುಲಾಯಂ ಸಿಂಗ್) ಅವರ ಕಡೆಗೆ ಇರುತ್ತೇನೆ ಎಂದು ಅವರು ಹೇಳಿದರು.  ‘ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗಬೇಕು. ರಾಮಾಯಣದಲ್ಲಿ ರಾಮಜನ್ಮಭೂಮಿ ಬಗ್ಗೆ ಪ್ರಸ್ತಾಪವಿದೆ. ನಾವು ಜನವರಿಯಲ್ಲಿ ನ್ಯಾಯಾಲಯದ ಕಲಾಪ ಆರಂಭವಾಗುವವರೆಗೆ ಕಾಯಬೇಕು ಎಂದು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರವಾಗಿ ಅವರು ತಿಳಿಸಿದರು. ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಸಮೀಪದ ಬಾರಾಬಂಕಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅಪರ್ಣಾ ಯಾದವ್ (೨೮) ಶಿವಪಾಲ ಯಾದವ್ ಅವರ ಪ್ರಗತಿಶೀಲ ಸಮಾಜವಾದಿ ಪಕ್ಷವು (ಲೋಹಿಯಾ) ೨೦೧೯ರ ಲೋಕಸಭಾ ಚುನಾವಣೆಯಲ್ಲಿ ಪರಿಣಾಮ ಬೀರಲಿದೆ ಎಂದು ಹೇಳಿದರು. ೨೦೧೯ರ ಚುನಾವಣೆಯಲ್ಲಿ ಸ್ಪರ್ಧಿಸಬೇಕಾಗಿ ಬಂದಲ್ಲಿ ಯಾರ ಜೊತೆಗೆ ಹೋಗುವಿರಿ ಎಂಬ ಪ್ರಶ್ನೆಗೆನಾನು ಹಿರಿಯರ ಜೊತೆಗೆ ಹೋಗುತ್ತೇನೆ. ೨೦೧೯ರ ಚುನಾವಣೆಗೆ ಇನ್ನೂ ಸಾಕಷ್ಟು ಸಮಯ ಇದೆ. ಏನೇನಾಗುತ್ತದೋ ನೋಡೋಣ ಎಂದು ಅಪರ್ಣಾ ಉತ್ತರಿಸಿದರು. ಉತ್ತರ ಪ್ರದೇಶದಮೊದಲ ಕುಟುಂಬವಾದ ಯಾದವ್ ಕುಟುಂಬ ಈಗ ಛಿದ್ರಗೊಂಡಿದ್ದು, ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ೨೫ಕ್ಕೂ ಹೆಚ್ಚು ವರ್ಷಗಳ ಹಿಂದೆ ತನ್ನ ತಂದೆನೇತಾಜಿ ಮುಲಾಯಂ ಸಿಂಗ್ ಯಾದವ್ ಅವರು ಸ್ಥಾಪಿಸಿದ್ದ ಸಮಾಜವಾದಿ ಪಕ್ಷದ ಹಾಲಿ ಮುಖ್ಯಸ್ಥರಾಗಿದ್ದಾರೆ. ಪಕ್ಷವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಅವರು ತನ್ನ ಚಿಕ್ಕಪ್ಪ ಶಿವಪಾಲ್ ಯಾದವ್ ಅವರನ್ನು ಮೂಲೆಗುಂಪು ಮಾಡಿದ್ದು ಶಿವಪಾಲ್ ಯಾದವ್ ಹೊಸ ಪಕ್ಷ ಕಟ್ಟಿದ್ದರು. ಮುಲಾಯಂ ಸಿಂಗ್ ಯಾದವ್ ಅವರು ಮಗ ಮತ್ತು ತಮ್ಮನ ಮಧ್ಯೆ ಸಿಕ್ಕಿಹಾಕಿಕೊಂಡಿದ್ದು, ಹಿರಿಯ ರಾಜಕಾರಣಿ ಮುಂದಿನ ವರ್ಷ ನಡೆಯಲಿರುವ ಮಹಾಚುನಾವಣೆಯಲ್ಲಿ ಯಾರತ್ತ ವಾಲುತ್ತಾರೆ ಎಂದು ಕಾದು ನೋಡಬೇಕಾಗಿದೆ. ಶಿವಪಾಲ್ ಯಾದವ್ ಅವರು ಬಿಜೆಪಿ ಜೊತೆಗೆ ಕೈಜೋಡಿಸಿದ್ದಾರೆ ಎಂದು ಅಖಿಲೇಶ್ ಯಾದವ್ ಆಪಾದಿಸಿದ್ದಾರೆ. ಯೋಗಿ ಆದಿತ್ಯನಾಥ್ ಸರ್ಕಾರವು ಇತ್ತೀಚೆಗೆ ಲಕ್ನೋದ ಹೃದಯಭಾಗದಲ್ಲಿ ಶಿವಪಾಲ್ ಯಾದವ್ ಅವರಿಗೆ ವಿಶಾಲವಾದ ಬಂಗಲೆ ಮಂಜೂರು ಮಾಡಿದ್ದರತ್ತ ಅಖಿಲೇಶ್ ಯಾದವ್ ಬೊಟ್ಟು ಮಾಡಿ ತೋರಿಸುತ್ತಾರೆ. ರಾಮ ಮಂದಿರಕ್ಕೆ ಸಂಬಂಧಿಸಿದಂತೆ ಅಪರ್ಣಾ ಯಾದವ್ ಅವರು ನೀಡಿರುವ ಹೇಳಿಕೆಯು ಅಯೋಧ್ಯಾ ವಿಷಯ ಸುಪ್ರೀಂಕೋರ್ಟಿನಲ್ಲಿದೆ ಎಂಬುದಾಗಿ ಹೇಳುತ್ತಿರುವ ಮುಲಾಯಂ ಸಿಂಗ್ ಯಾದವ್ ಅವರ ಸಮಾಜವಾದಿ ಪಕ್ಷದ ನಿಲುವಿಗೆ ವಿರುದ್ಧವಾಗಿದ್ದು, ಪಕ್ಷದೊಳಗಿನ ಬಿಕ್ಕಟ್ಟಿನ ಬೆಂಕಿಗೆ ತುಪ್ಪ ಎರೆಯಿತು.  ಅಪರ್ಣಾ ಯಾದವ್ ಅವರು ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಪುತ್ರ ಪ್ರತೀಕ್ ಯಾದವ್ ಅವರ ಪತ್ನಿಯಾಗಿದ್ದು, ಅಖಿಲೇಶ್ ಯಾದವ್ ಅವರ ನಾದಿನಿಯಾಗಿದ್ದಾರೆ. ಅಖಿಲೇಶ್ ಮತ್ತು ಶಿವಪಾಲ್ ನಡುವಣ ಕೌಟುಂಬಿಕ ಜಗಳದಲ್ಲಿ ಪ್ರತೀಕ್ -ಅಪರ್ಣಾ ದಂಪತಿ ಶಿವಪಾಲ್ ಕಡೆಗೆ ವಾಲಿದ್ದಾರೆ. ಕಳೆದ ವರ್ಷ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷವನ್ನು ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಪರಾಭವಗೊಳಿಸಿದ ಬೆನ್ನಲ್ಲೇ ಪ್ರತೀಕ್- ಅಪರ್ಣಾ ದಂಪತಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಬೇಟಿ ಮಾಡಿ ಅಭಿನಂದಿಸಿದ್ದರು. ಅವರ ವರ್ತನೆಯೂ ಎಲ್ಲೆಡೆ ಗಮನ ಸೆಳೆದಿತ್ತುಯಾದವ್ ಅವರ ಕಿರಿಯ ಸೊಸೆ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುವಲ್ಲೂ ಹಿಂಜರಿದಿಲ್ಲ. ಕಳೆದ ವರ್ಷ ಕುಟುಂಬದ ಸಮಾರಂಭ ಒಂದರಲ್ಲಿ ಅಪರ್ಣಾ ಅವರು ಪ್ರಧಾನಿ ಜೊತೆಗೆ ಸೆಲ್ಫಿ ತೆಗೆದುಕೊಂಡಿದ್ದರು. ಇದು ರಾಜಕೀಯ ಒಲವಿನ ಸೂಚನೆಯೇ ಎಂಬ ಪ್ರಶ್ನೆಗೆಅವರು ಪ್ರತಿಯೊಬ್ಬರ ಪ್ರಧಾನಿ ಎಂದು ಅಪರ್ಣಾ ಯಾದವ್ ಉತ್ತರಿಸಿದ್ದರು೨೦೧೭ರ ವಿಧಾನಸಭಾ ಚುನಾವಣೆಯಲ್ಲಿ ಅಪರ್ಣಾ ಯಾದವ್ ಅವರು ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ಲಕ್ನೋದಿಂದ ಸ್ಪರ್ಧಿಸಿದ್ದರು, ಆದರೆ ಪರಾಭವಗೊಂಡಿದ್ದರು. ಚುನಾವಣೆಗೆ ಸ್ವಲ್ಪ ಮುನ್ನ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಸೇರ್ಪಡೆಯಾಗಿದ್ದ ರೀಟಾ ಬಹುಗುಣ ಜೋಶಿ ಅವರು ಲಕ್ನೋ ಸ್ಥಾನವನ್ನು ಗೆದ್ದಿದ್ದರು. ೪೦೩ ಸ್ಥಾನಗಳ ಪೈಕಿ ೩೧೨ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಪ್ರಚಂಡ ವಿಜಯ ದಾಖಲಿಸಿತ್ತು. ಆಂತರಿಕ ಸಂಘರ್ಷದಿಂದ ದುರ್ಬಲಗೊಂಡಿದ್ದ ಸಮಾಜವಾದಿ ಪಕ್ಷವು ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿ ಬಂದಿತ್ತು. ವಿಧಾನಸಭಾ ಚುನಾವಣೆಯಲ್ಲಿನ ವಿಜಯದ ಬೆನ್ನಲ್ಲೇ ೨೦೧೪ರ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ೮೦ ಸ್ಥಾನಗಳ ಪೈಕಿ ೭೧ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಮತ್ತೊಂದು ವಿಜಯವನ್ನು ದಾಖಲಿಸಿತ್ತು.
ಮುಂದಿನ ವರ್ಷ ಕೇಂದ್ರದಲ್ಲಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳುವ ಯತ್ನವಾಗಿ ಬಿಜೆಪಿಯ ಬಾರಿ ಸಂಸತ್ತಿಗೆ ಅತ್ಯಂತ ಹೆಚ್ಚು ಸದಸ್ಯರನ್ನು ಕಳುಹಿಸುವ ಉತ್ತರಪ್ರದೇಶದಲ್ಲಿ ತನ್ನ ಸಾಧನೆಯನ್ನು ಮತ್ತೊಮ್ಮೆ ತೋರುವ ಆಶಯವನ್ನು ಇಟ್ಟುಕೊಂಡಿದೆ. ಅಖಿಲೇಶ್ ಯಾದವ್ ಅವರು ಬಿಜೆಪಿಯನ್ನು ಪರಾಭವಗೊಳಿಸಲು ೨೦೧೯ರ ವೇಳೆಗೆ ತನ್ನ ತಂದೆಯ ಪ್ರಬಲ ಪ್ರತಿಸ್ಪರ್ಧಿ ಮಾಯಾವತಿ ಅವರ ಜೊತೆಗೆ ಹೊಂದಾಣಿಕೆ ಮಾಡುವಪ್ರಯೋಗಕ್ಕೆ ಕೈ ಹಾಕಿದ್ದಾರೆ.

2018: ಬೆಂಗಳೂರು: ಕರ್ನಾಟಕದ ಕಂದಾಯ ಸಚಿವ ಆರ್.ವಿ. ದೇಶಪಾಂಡೆ ಅವರು ಹಳಿಯಾಳದಲ್ಲಿ ನಡೆದ ಸಮಾರಂಭ ಒಂದರಲ್ಲಿ ಪಲಾನುಭವಿಗಳತ್ತ ಕ್ರೀಡಾ ಕಿಟ್ ಎಸೆದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ವಿವಾದದಲ್ಲಿ ಸಿಕ್ಕಿಹಾಕಿಕೊಂಡರು. ಸಚಿವರ ಕ್ಷೇತ್ರವಾದ ಹಳಿಯಾಳದಲ್ಲಿ ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ  2018 ಅಕ್ಟೋಬರ್ 31 ಬುಧವಾರ ನಡೆದ ಸಮಾರಂಭದಲ್ಲಿ ಘಟನೆ ಘಟಿಸಿತ್ತುಒಳಾಂಗಣ ಕ್ರೀಡಾಂಗಣದ ಉದ್ಘಾಟನಾ ಸಮಾರಂಭ ಹಾಗೂ ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ಧ  ಸ್ಥಳೀಯ ಕ್ರೀಡಾಪಟುಗಳನ್ನು ಗೌರವಿಸುವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿತ್ತು. ಸಮಾರಂಭದಲ್ಲಿ ವೇದಿಕೆಯ ಮೇಲೆ ನಿಂತುಕೊಂಡಿದ್ದ ಸಚಿವರು ಫಲಾನುಭವಿಗಳತ್ತ ಕ್ರೀಡಾ ಕಿಟ್ ಗಳನ್ನು ಎಸೆಯುತ್ತಿದ್ದ ದೃಶ್ಯ ವಿಡಿಯೋದಲ್ಲಿ ದಾಖಲಾಗಿತ್ತು. ಗುರುವಾರ  ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಬಗ್ಗೆ ಸ್ಪಷ್ಟನೆ ಪಡೆಯಲು ಸಚಿವರನ್ನು ಸಂಪರ್ಕಿಸುವ ಯತ್ನ ಫಲಿಸಲಿಲ್ಲ ಎಂದು ವರದಿ ತಿಳಿಸಿತು. ಸೆಪ್ಟೆಂಬರ್ ತಿಂಗಳಲ್ಲಿ ಇಂತಹುದೇ ಘಟನೆಯೊಂದರಲ್ಲಿ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ  ಅವರು ಕೊಡಗಿನಲ್ಲಿ ಪ್ರವಾಹ ಸಂತ್ರಸ್ಥರ ಶಿಬಿರದಲ್ಲಿ ಆಹಾರದ ಪೊಟ್ಟಣಗಳನ್ನು ಎಸೆಯುತ್ತಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಚಿವರು ತೀವ್ರ ಟೀಕೆಗಳಿಗೆ ಗುರಿಯಾಗಿದ್ದರು.


2018: ಬೆಂಗಳೂರು: ಉಪಚುನಾವಣೆ ಮುನ್ನವೇ ರಾಮನಗರದಲ್ಲಿ ಬಿಜೆಪಿಗೆ ಮುಖಭಂಗವಾಗಿದ್ದು ರಾಮನಗರ ಉಪಚುನಾವಣಾ ಕಣದಿಂದ ಬಿಜೆಪಿ ಅಭ್ಯರ್ಥಿ ಎಲ್ .ಚಂದ್ರಶೇಖರ್ ಹಿಂದೆ ಸರಿದು ಕಮಲ ಪಾಳಯಕ್ಕೆ ದೊಡ್ಡ ಶಾಕ್ ನೀಡಿದರು.  ಇದರೊಂದಿಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವಣ ಭಿನ್ನಮತವನ್ನು ಗೆಲುವಿನ ಸೋಪಾನ ಮಾಡಿಕೊಳ್ಳುವ ಮೂಲಕ ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ ಅರಳಿಸಲು ಮುಂದಾಗಿದ್ದ ಬಿಜೆಪಿಗೆ ಡಿಕೆ ಸಹೋದರರು ದೊಡ್ಡ ಆಘಾತ ನೀಡಿದರು.  ಬೆಳಗ್ಗೆ ತಮ್ಮ ಸದಾಶಿವನಗರದ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿದ ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ ಸುರೇಶ್, ಬಿಜೆಪಿ ಅಭ್ಯರ್ಥಿ ಎಲ್. ಚಂದ್ರಶೇಖರ್, ಈ ವಿಚಾರವನ್ನು ಪ್ರಕಟಿಸಿದರು. ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಕಣದಿಂದ ಹಿಂದೆ ಸರಿದಿದ್ದರಿಂದ ಜೆಡಿಎಸ್ ಅಭ್ಯರ್ಥಿ ಅನಿತಾ ಕುಮಾರಸ್ವಾಮಿ ಅವರಿಗೆ ಗೆಲುವಿನ ಹಾದಿ ಸುಗಮವಾಯಿತು. ಬಿಜೆಪಿಯಲ್ಲಿ ಒಬ್ಬರನ್ನ ಕಂಡರೇ ಒಬ್ಬರಿಗೆ ಆಗಲ್ಲ. ನನಗೆ ಬಿಜೆಪಿಯಿಂದ ಟಿಕೆಟ್ ನೀಡಿ ಬಾವುಟ ಕೊಟ್ಟರು. ಆದರೆ ಯಾರೂ ಪ್ರಚಾರಕ್ಕೆ ಬರಲಿಲ್ಲ. ಯಾರೂ ಸಹ ಸಂಪರ್ಕಕ್ಕೆ ಸಿಗುತ್ತಿಲ್ಲ. ಸಿಪಿ ಯೋಗೇಶ್ವರ್ ಗೆ ಫೋನ್ ಮಾಡಿದರೇ ಸ್ವಿಚ್ ಆಫ್ ಮಾಡಿಕೊಂಡಿದ್ದರು. ಬಿಎಸ್ ಯಡಿ ಯೂರಪ್ಪ ಮಂಡ್ಯಕ್ಕೆ ಪ್ರಚಾರಕ್ಕೆ ಹೋದರೂ ರಾಮನಗರಕ್ಕೆ ಬರಲಿಲ್ಲ. ಬಂದ ೧೫ ದಿನದಲ್ಲಿ ಬಿಜೆಪಿ ಬಂಡವಾಳ ನನಗೆ ತಿಳಿಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

2016: ನವದೆಹಲಿ/ ಜಮ್ಮು/ ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಅಂತಾರಾಷ್ಟ್ರೀಯ
ಗಡಿಯುದ್ದಕ್ಕೂ ಪಾಕಿಸ್ತಾನದಿಂದ ಭಾರತೀಯ ಜನವಸತಿಗಳ ಮೇಲೆ ಗಡಿಯಾಚೆಯಿಂದ ಶೆಲ್ ದಾಳಿ ನಡೆದ ಹಿನ್ನೆಲೆಯಲ್ಲಿ ಪ್ರಕ್ಷುಬ್ಧತೆ ಹೆಚ್ಚಿತು.  ಜಮ್ಮು ಪ್ರದೇಶದ ನೈಜ ನಿಯಂತ್ರಣ ರೇಖೆಯಲ್ಲಿನ 174 ಶಾಲೆಗಳನ್ನು ಮುಚ್ಚುವಂತೆ ಸರ್ಕಾರ  ಆಜ್ಞಾಪಿಸಿತು.ಬಾಲಾಕೋಟ್ ವಲಯದಲ್ಲಿ 84, ಸಾಂಬಾ ವಲಯದಲ್ಲಿ 45 ಶಾಲೆಗಳನ್ನು ಮುಚ್ಚಲು ಆದೇಶಿಸಲಾಯಿತು. ಪಾಕ್ ಪಡೆಗಳಿಂದ ಈದಿನ ಶೆಲ್ ಹಾಗೂ ಫಿರಂಗಿ ದಾಳಿ ಹೆಚ್ಚಿದ ರಿಣಾಮವಾಗಿ ಭಾರತದ ಕಡೆಯಲ್ಲಿ ಮಹಿಳೆಯರೂ ಸೇರಿದಂತೆ ಒಟು 8 ಮಂದಿ ನಾಗರಿಕರು ಸಾವನ್ನಪ್ಪಿ 22ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಇದಕ್ಕೆ ಪ್ರತಿಯಾಗಿ ಭಾರತೀಯ ಸೇನೆ ಪಾಕ್ ಸೇನಾ ನೆಲೆಗಳ ಮೇಲೆ ತೀವ್ರ ಗುಂಡಿನ ದಾಳಿ ನಡೆಸಿ 14ಕ್ಕೂ ಹೆಚ್ಚು ಪಾಕ್ ಸೇನಾ ನೆಲೆಗಳನ್ನು ಧ್ವಂಸಗೊಳಿಸಿತು.  ಕನಿಷ್ಠ ಇಬ್ಬರು ಪಾಕಿಸ್ತಾನಿ ಸೈನಿಕರು ಹತರಾಗಿದ್ದು, ಭಾರಿ ಪ್ರಮಾಣದ ನಷ್ಟ ಸಂಭವಿಸಿದೆ ಎಂದು ಮೂಲಗಳು ಹೇಳಿದವು.   ಮಧ್ಯೆ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಉನ್ನತ ಮಟ್ಟದ ಸಭೆ ಕರೆದರು. ರಕ್ಷಣಾ ಸಚಿವ ಮನೋಹರ ಪರಿಕ್ಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಗೃಹ ವ್ಯವಹಾರಗಳ ಸಚಿವಾಲಯದ ಉನ್ನತ ಅಧಿಕಾರಿಗಳು ಪಾಲ್ಗೊಂಡರು.ಈ ಮಧ್ಯೆ ಪಾಕಿಸ್ತಾನದ ಕಡೆಯಲ್ಲಿ ನಾಗರಿಕ ಸಾವು ನೋವು ಸಂಭವಿಸಿದೆ ಎಂದು ಆಕ್ಷೇಪಿಸಿ ಪಾಕಿಸ್ತಾನವು ಭಾರತದ ಉಪ ಹೈಕಮೀಷನರ್ ಜೆ.ಪಿ. ಸಿಂಗ್ ಅವರಿಗೆ ಸಮನ್ಸ್ ನೀಡಿತ್ತು. ಸಂದರ್ಭದಲ್ಲಿ ಜೆ.ಪಿ.ಸಿಂಗ್ ಅವರು ಪಾಕ್ ದಾಳಿಯಿಂದ ಭಾರತದ ಜನವಸತಿ ಪ್ರದೇಶಗಳಲ್ಲಿ ಸಂಭವಿಸಿರುವ ನಾಗರಿಕ ಸಾವು ನೋವುಗಳನ್ನು ಪ್ರಸ್ತಾಪಿಸಿ ಪ್ರಬಲ ಪ್ರತಿಭಟನೆ ವ್ಯಕ್ತ ಪಡಿಸಿದರು. ಗಡಿಯಲ್ಲಿ ಪಾಕಿಸ್ತಾನದ ಅಪ್ರಚೋದಿತ ದಾಳಿ ಹೆಚ್ಚುತ್ತಿರುವುದನ್ನು ಅನುಸರಿಸಿ ಜಮ್ಮು ಮತ್ತು ಕಾಶ್ಮೀರದ ಆರ್.ಎಸ್. ಪುರದಲ್ಲಿ ಭಾರತೀಯ ಯೋಧರು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದರು. ಮಿತಿಮೀರಿದ ಪಾಕ್ ಪಡೆ ಉಪಟಳ: ಪಾಕಿಸ್ತಾನ ಪಡೆ ನಿರಂತರವಾಗಿ ಕದನ ವಿರಾಮ ಉಲ್ಲಂಘನೆ ಮಾಡುತ್ತಿದ್ದು, ಮಂಗಳವಾರ ಬೆಳಗ್ಗೆಯೂ ಶೆಲ್ ದಾಳಿ ನಡೆಸುವ ತನ್ನ ಚಾಳಿಯನ್ನು ಮುಂದುವರಿಸಿದ ಪರಿಣಾಮವಾಗಿ ಒಟ್ಟು 8ನಾಗರಿಕರು ಸಾವನ್ನಪ್ಪಿದ್ದು, 22ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಮಾಹಿತಿ ನೀಡಿದರು. ಬೆಳಗ್ಗೆ ರಾಮ್ಢ ಸೆಕ್ಟರ್, ನೌಶೇರಾ, ರಾಜೌರಿಯ ಪಣಿಯಾರಿ ಗ್ರಾಮ, ಅರ್ನಿಯಾ ಸೆಕ್ಟರ್ಗಳಲ್ಲಿ ಶೆಲ್ ದಾಳಿ ನಡೆದ ಬಗ್ಗೆ ವರದಿಯಾಗಿತ್ತು. ಕ್ಷಣದ ಮಾಹಿತಿಯಂತೆ ಸಾಂಬಾ ಜಿಲ್ಲೆಯ ಇನ್ನೂ ಕೆಲ ಗಡಿ ಭಾಗಗಳಲ್ಲಿ ಶೆಲ್ ದಾಳಿ ನಡೆದಿದ್ದು, ಓರ್ವ ಬಾಲಕಿ, ಇಬ್ಬರು ಮಹಿಳೆಯರು ಸೇರಿ ಒಟ್ಟು 8 ಮಂದಿ ನಾಗರಿಕರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.

2016: ಭೋಪಾಲ್: ಭೋಪಾಲ್ ಖಾಂಡ್ವಾ ಜೈಲಿನಿಂದ ಪರಾರಿಯಾದ 8 ಮಂದಿ ಸ್ಟೂಡೆಂಟ್ಸ್
ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ (ಸಿಮಿ) ಭಯೋತ್ಪಾದಕರನ್ನು ರಾಜ್ಯ ಪೊಲೀಸರು ಗುಂಡಿನ ಘರ್ಷಣೆಯಲ್ಲಿ ಹತ್ಯೆಗೈದ ಘಟನೆಯ ಸಂಬಂಧ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್ಎಚ್ಆರ್ಸಿ) ಮಧ್ಯಪ್ರದೇಶ ಸರ್ಕಾರ ಮತ್ತು ಪೊಲೀಸರಿಗೆ ನೋಟಿಸ್ ಜಾರಿ ಮಾಡಿತುಮಧ್ಯ ಪ್ರದೇಶದ ಮುಖ್ಯ ಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕರು, ಸೆರೆಮನೆಗಳ ಮಹಾ ನಿರ್ದೇಶಕರು ಮತ್ತು ಸೆರೆಮನೆಗಳ ಇನ್ಸ್ಪೆಕ್ಟರ್ ಜನರಲ್ ಅವರಿಗೆ ಆಯೋಗ ನೋಟಿಸ್  ನೀಡಿತು. ಅಕ್ಟೋಬರ್ 30-31 ರಾತ್ರಿ, ಎಂಟು ಮಂದಿ ಸಿಮಿ ಭಯೋತ್ಪಾದಕರು ಸೆರೆಮನೆ ಸಿಬ್ಬಂದಿಯೊಬ್ಬರ ಗಂಟಲು ಸೀಳಿ ಕೊಲೆಗೈದು ಭೋಪಾಲ್ ಸೆಂಟ್ರಲ್ ಜೈಲಿನಿಂದ ಪರಾರಿಯಾಗಿದ್ದರು. ಕೆಲವೇ ಗಂಟೆಗಳಲ್ಲಿ ನಗರದ ಹೊರವಲಯದಲ್ಲಿ ಪೊಲೀಸರೊಂದಿಗೆ ಸಂಭವಿಸಿದ ಗುಂಡಿನ ಘರ್ಷಣೆಯಲ್ಲಿ ಕೈದಿಗಳು ಗುಂಡೇಟಿಗೆ ಬಲಿಯಾಗಿ ಸಾವನ್ನಪ್ಪಿದ್ದರು.

2016: ಶಿಮ್ಲಾ: ಗಡಿಯಲ್ಲಿ ವೈರಿಯ ವಿರುದ್ಧ ಗುಂಡು ಹಾರಿಸಿ ಸೆಣಸುವ ಯೋಧನಿಗೆ ತನ್ನ
ಹುಟ್ಟೂರಿನಲ್ಲಿ ಜನ ಬಯಲು ಶೌಚಾಲಯಕ್ಕೆ ಹೋಗಿ ಒದ್ದಾಡುವ ಬಗ್ಗೆ ಚಿಂತೆ. ಹುಟ್ಟೂರಿನ ಜನರ ಸಂಕಷ್ಟ ನಿವಾರಣೆ ಆಗಬೇಕೆಂದು ಮನಸ್ಸು ಮಾಡಿದ ಯೋಧ ತನ್ನ ವೇತನದಿಂದ 57,000 ರೂಪಾಯಿಗಳನ್ನು ಹಿಮಾಚಲ ಪ್ರದೇಶದ ತನ್ನ ಗ್ರಾಮ ಸಿರ್ವುೂರ್ನಲ್ಲಿ ಶೌಚಗೃಹ ಕಟ್ಟಿಸಲು ದಾನ ನೀಡಿದ. ಯೋಧನ ಹೆಸರು ವಿಕಾಸ್ ಠಾಕೂರ್. ಐಟಿಬಿಪಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗ್ರಾಮಸ್ಥರ ಸಂಕಷ್ಟ ನಿವಾರಣೆಗಾಗಿ ಶೌಚಗೃಹ ನಿರ್ಮಾಣಕ್ಕೆ ಪಂಚಾಯತಿಗೆ ತನ್ನ ವೇತನದಿಂದ ದಾನ ನೀಡಿದ ವಿಕಾಸ್ ಠಾಕೂರ್ ಕಥೆ ಈಗ ಹಿಮಾಚಲ ಪ್ರದೇಶದಲ್ಲಿ ದೊಡ್ಡ ಸುದ್ದಿ. ಅಷ್ಟೇ ಅಲ್ಲ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕಿ ಬಾತ್ ಬಾನುಲಿ ಕಾರ್ಯಕ್ರಮದಲ್ಲಿ ವಿಕಾಸ್ ಠಾಕೂರ್ ಹೆಸರನ್ನು ಪ್ರಸ್ತಾಪಿಸಿ ವೀರ ಯೋಧನ ಸಾಮಾಜಿಕ ಕಳಕಳಿಗೆ ಸಲಾಮ್ ಹೊಡೆದರು.


2016: ಜಮ್ಮು : ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯಲ್ಲಿ ಮಕ್ಕಳು ಮತ್ತು ಮಹಿಳೆಯರು
ಸೇನಾ ಯೋಧರ ಜೊತೆಗೆ ಭಾಯಿ ದೂಜ್ ಉತ್ಸವವನ್ನು ಆಚರಿಸಿ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದ್ದಕ್ಕಾಗಿ ಸೇನಾ ಸಹೋದರರನ್ನು ಅಭಿನಂದಿಸಿದರು. ಭಾಯಿ ದೂಜ್ ಅಥವಾ ಭಯ್ಯಾ ದೂಜ್ ಇಲ್ಲವೇ ಭಾವು ಬಿಜ್ ಇತ್ಯಾದಿ ವಿವಿಧ ಹೆಸರುಗಳಿಂದ ಕರೆಯಲ್ಪಡುವ ಭಾಯಿ ದೂಜ್ ಉತ್ಸವ ಉತ್ತರ ಭಾರತದಲ್ಲಿ ಹಿಂದುಗಳ ಪಾಲಿನ ಮಹತ್ವದ ಉತ್ಸವಗಳಲ್ಲಿ ಒಂದು. ಸಹೋದರ- ಸಹೋದರಿ ಬಾಂಧವ್ಯವನ್ನು ಇದು ಇನ್ನಷ್ಟು ಗಟ್ಟಿಗೊಳಿಸುತ್ತದೆ.
ರಕ್ಷಾ ಬಂಧನ ಮತ್ತು ಭಾಯಿ ದೂಜ್ ಎರಡೂ ಉತ್ಸವಗಳು ಸಹೋದರ-ಸಹೋದರಿ ಬಾಂಧವ್ಯವನ್ನು ಗಟ್ಟಿಗೊಳಿಸುವ ಉತ್ಸವಗಳೇ. ರಕ್ಷಾ ಬಂಧನ ಉತ್ಸವ ವೇಳೆಯಲ್ಲಿ ಸಹೋದರಿ ಸಹೋದರಿಗೆ ರಾಖೆ ಕಟ್ಟಿ ತನ್ನನ್ನು ರಕ್ಷಿಸುವಂತೆ ವಚನ ತೆಗೆದುಕೊಳ್ಳುತ್ತಾಳೆ. ಆದರೆ ಭಾಯಿ ದೂಜ್ ಉತ್ಸವದಲ್ಲಿ ಸಹೋದರಿಯರು ಸಹೋದರನಿಗೆ ದೀರ್ಘಾಯು ಮತ್ತು ಸಂಪತ್ ಸಮೃದ್ಧಿ ಪ್ರಾಪ್ತಿಯಾಗಲಿ ಎಂದು ಹಾರೈಸುತ್ತಾರೆ.ದೀಪಾವಳಿಯ ಮುಗಿದ ಎರಡನೇ ದಿನ ಭಾಯಿ ದೂಜ್ ಉತ್ಸವವನ್ನು ಆಚರಿಸಲಾಗುತ್ತದೆ. ಆದರೆ ಇದು ದೀಪಾವಳಿ ಸಂಭ್ರಮದ ಭಾಗವೇ ಆಗಿದೆ ಎಂಬುದು ಕೆಲವರಿಗಷ್ಟೇ ಗೊತ್ತು.

2016: ನವದೆಹಲಿ: ವಿವಾದಾತ್ಮಕ ಮುಸ್ಲಿಂ ಬೋಧಕ ಜಾಕೀರ್ ನಾಯಕ್ಗೆ ಸೇರಿದ ಇಸ್ಲಾಮಿಕ್
ರೀಸರ್ಚ್ ಫೌಂಡೇಶನ್ನ ಎಫ್ಸಿಆರ್ಎ ನೋಂದಣಿ ರದ್ದು ಪಡಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ಮೂಲಗಳು ತಿಳಿಸಿದವು. ಜಾಕೀರ್ ನಾಯಕ್ ಅವರ ಶೈಕ್ಷಣಿಕ ಟ್ರಸ್ಟನ್ನು  ಪೂರ್ವಾನುಮತಿ ವರ್ಗದಲ್ಲಿ ಸೇರಿಸುವ ನಿಟ್ಟಿನಲ್ಲೂ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಮೂಲಗಳು ಹೇಳಿದವು.  ಬಂಧನ ಭೀತಿ ಹಿನ್ನೆಲೆಯಲ್ಲಿ  ಜಾಕೀರ್ ನಾಯಕ್ ಇತ್ತೀಚೆಗೆ ಮೃತರಾದ ತನ್ನ ತಂದೆಯ ಅಂತ್ಯಕ್ರಿಯೆಯಲ್ಲೂ ಭಾಗವಹಿಸಿರಲಿಲ್ಲ.

2016: ನವದೆಹಲಿ: ದಕ್ಷಿಣದ ಖ್ಯಾತ ಚಿತ್ರ ನಟಿ ಗೌತಮಿ ಅವರು ಖ್ಯಾತ ಚಿತ್ರ ನಟ ಕಮಲಹಾಸನ್
ಅವರ ಬದುಕಿನಿಂದ ದೂರ ಸರಿದಿದ್ದಾರೆ. ಹೃದಯ ವಿದ್ರಾವಕ ಸತ್ಯವನ್ನು ಸ್ವತಃ ಗೌತಮಿ ಅವರು ಸುದೀರ್ಘ ಹೇಳಿಕೆಯೊಂದರ ಮೂಲಕ ಪ್ರಕಟಿಸಿದರು. ಚಿತ್ರನಟ ಕಮಲಹಾಸನ್ ಜೊತೆಗಿನ 13 ವರ್ಷಗಳ ಬಂಧುತ್ವದಿಂದ ಹೊರಬಂದಿದ್ದೇನೆ ಎಂದು ತಿಳಿಸಿದ,  ಗೌತಮಿ, ಇದೊಂದು ವಿನಾಶಕಾರಿ ನಿಧಾರವಾಗಿದ್ದರೂ, ಅನಿವಾರ್ಯವಾದ ಕಾರಣ ಕೈಗೊಂಡಿದ್ದೇನೆ. ಆದರೆ 61 ಹರೆಯದ ಕಮಲಹಾಸನ್ ಅವರ ಮೇಲಿನ ಅಭಿಮಾನ ಮುಂದುವರೆಯುತ್ತದೆ ಎಂದು ಹೇಳಿದರು. ನಾನು ಮತ್ತು ಹಾಸನ್ ಇನ್ನು ಮುಂದೆ ಒಟ್ಟಿಗಿರುವುದಿಲ್ಲ ಎಂಬುದನ್ನು ಈದಿನ ಹೇಳುವುದು ನನ್ನ ಪಾಲಿನ ಅತ್ಯಂತ ಕಷ್ಟದ ಕೆಲಸ. 13 ವರ್ಷ ಜೊತೆಯಾಗಿದ್ದ ಬಳಿಕ, ನನ್ನ ಜೀವನದಲ್ಲಿ ಎಂದೂ ಕೈಗೊಳ್ಳದಂತಹ ವಿನಾಶಕಾರಿ ನಿರ್ಧಾರಗಳಲ್ಲಿ ಇದು ಒಂದು. ಬದ್ಧ ಬಾಂಧವ್ಯ ಹೊಂದಿರುವಾಗ ಇಬ್ಬರ ದಾರಿಗಳೂ ಬೇರೆ ಬೇರೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಎಂದೂ ಸುಲಭದ ಕೆಲಸವಲ್ಲ. ಇಂತಹ ಸಂದರ್ಭದಲ್ಲಿ ನಮ್ಮ ಮುಂದೆ ಉಳಿವ ಆಯ್ಕೆ ಎಂದರೆ ಬದುಕಿನ ಕನಸುಗಳನ್ನು ಬಲಿನೀಡಿ ಹೊಂದಾಣಿಕೆ ಮಾಡಿಕೊಳ್ಳುವುದು ಅಥವಾ ಸತ್ಯ ಒಪ್ಪಿಕೊಂಡು ಪರಸ್ಪರ ದೂರವಾಗಿ ಮುನ್ನಡೆಯುವುದು. ಸತ್ಯವನ್ನು ಅಂಗೀಕರಿಸಲು ನನಗೆ ಸುದೀರ್ಘ ಕಾಲ ಬೇಕಾಯಿತು. ಕಡೆಗೂ ನಾನು ಹೃದಯ ವಿದ್ರಾವಕ ಸತ್ಯವನ್ನು ಒಪ್ಪಿಕೊಂಡು ನಿರ್ಧಾರಕ್ಕೆ ಬಂದಿದ್ದೇನೆ. ಯಾರಿಂದಲಾದರೂ ಅನುಕಂಪ ಪಡೆಯುವುದು ಅಥವಾ ಯಾರನ್ನಾದರೂ ದೂರುವುದು ನನ್ನ ಉದ್ದೇಶವಲ್ಲ. ಕಮಲ್ ಜೊತೆಗೆ ಒಟ್ಟಾಗಿ ದುಡಿದ, ಅವರ ಯಶಸ್ಸಿನಲ್ಲಿ ಕೈಜೋಡಿಸಿದ ಬಗ್ಗೆ ನನಗೆ ಹೆಮ್ಮೆ ಇದೆ. ಮುಂದೆಯೂ ನಾನು ಅವರ ಅಭಿಮಾನಿಯಾಗಿ ಮುಂದುವರೆಯುತ್ತೇನೆ ಎಂದು ಗೌತಮಿ ತಿಳಿಸಿದರು.

2016: ಬೆಂಗಳೂರು: ಕರ್ನಾಟಕದ ಹಿರಿಯ ಮದ್ಯ ಕೈಗಾರಿಕೋದ್ಯಮಿ, ಚಿತ್ರ ನಿರ್ಮಾಪಕ ಶ್ರೀಹರಿ ಖೋಡೆ ಅವರು ಸುದೀರ್ಘ ಕಾಲದ ಅಸ್ವಸ್ಥತೆಯ ಬಳಿಕ ಸೋಮವಾರ ರಾತ್ರಿ ನಿಧನರಾದರು. ಅವರಿಗೆ 76 ವರ್ಷ ವಯಸ್ಸಾಗಿತ್ತು. ಖೋಡೆ ಅವರು ವಯೋಸಹಜ ಅಸ್ವಸ್ಥತೆಯ ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಪತ್ನಿ, ಮೂವರು ಪುತ್ರರು ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ ಎಂದು ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದರು. ಬೆಂಗಳೂರಿನಲ್ಲಿ ಜನಿಸಿ ಇಲ್ಲೇ ಬೆಳೆದ ಖೋಡೆ ಅವರು 1986ರಲ್ಲಿ ನಗರದಲ್ಲಿ ಮೊತ್ತ ಮೊದಲ ಪಬ್ ಸ್ಥಾಪಿಸುವ ಮೂಲಕ ಪಬ್ ಸಂಸ್ಕೃತಿಯನ್ನು ಹುಟ್ಟು ಹಾಕಿದವರು. ಈಗ ಬೆಂಗಳೂರು ನಗರದಲ್ಲಿ 500 ಪಬ್ಗಳಿವೆ. ಅವರ ಖೋಡೆ ಗ್ರೂಪ್ ಆಫ್ ಇಂಡಸ್ಟ್ರೀಸ್ ಅಥವಾ ಹೌಸ್ ಆಫ್ ಖೋಡೇಸ್ ಖ್ಯಾತ ಮದ್ಯ ಉದ್ಯಮ ಸಂಸ್ಥೆಯಾಗಿದ್ದು ಪೀಟರ್ ಸ್ಕಾಟ್, ರೆಡ್ ನೈಟ್ ವಿಸ್ಕಿ, ಎಕ್ಸ್ ಎಕ್ಸ್ ಎಕ್ಸ್ ರಮ್ ಹರ್ಕ್ಯಸ್ ಬೀರ್ ಮತ್ತು ಕಾನ್ಸ್ಟಾಂಟಿನೊ ಬ್ರಾಂದಿಗಳ ಮೂಲಕ ಭಾರಿ ಜನಪ್ರಿಯತೆ ಗಳಿಸಿದೆ. 1906ರಲ್ಲಿ ಹೌಸ್ ಆಫ್ ಖೋಡೇಸ್  ಹುಟ್ಟು ಹಾಕಿದ ಈಶ್ವರಸಾ ಅವರ ಮೂವರು ಮಕ್ಕಳ ಪೈಕಿ ಎರಡನೆಯವರಾದ ಶ್ರೀಹರಿ, ಇತರ ಉದ್ಯಮಗಳಿಗೆ ಕಾಲಿಡುವುದರ ಜೊತೆಗೆ ಮದ್ಯ ವ್ಯವಹಾರವನ್ನೂ ವಿಸ್ತರಿಸಿದ್ದರು. 60 ದಶಕದ ಮಧ್ಯಾವಧಿಯಲ್ಲಿ ನಿರ್ದೇಶಕರಾಗಿ ಕಂಪನಿ ಸೇರಿದ ಶ್ರೀಹರಿ ಬಳಿಕ ಅದರ ಉಪಾಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾಗಿ ಸೇವೆ ಸಲ್ಲಿಸಿದರು. ಕೃಷಿ, ಜೈವಿಕ ತಂತ್ರಜ್ಞಾನ, ಇಂಜಿನಿಯರಿಂಗ್, ವಿದ್ಯುತ್, ಜವುಳಿ ಮತ್ತು ಪ್ರವಾಸೋದ್ಯಮ ಕ್ಷೇತ್ರಗಳಲ್ಲೂ ಅವರು ಕಂಪೆನಿಯನ್ನು ಬೆಳೆಸಿದರು. ಚಿತ್ರರಂಗದಲ್ಲೂ ವಿಶೇಷ ಆಸ್ಥೆ ಹೊಂದಿದ್ದ ಅವರು ಕನ್ನಡದಲ್ಲಿ ಕೆಲವು ಪ್ರಶಸ್ತಿ ವಿಜೇತ ಚಿತ್ರಗಳಿಗೆ ಹಣಕಾಸು ನೆರವು ನೀಡಿ ಚಿತ್ರ ನಿರ್ಮಾಣವನ್ನೂ ಮಾಡಿದ್ದರು. ಶ್ರೀಹರಿ ಖೋಡೆ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ, ವಿರೋಧ ಪಕ್ಷದ ನಾಯಕರಾದ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ ಸೇರಿದಂತೆ ಹಲವು ಗಣ್ಯರು ಶೋಕ ವ್ಯಕ್ತಪಡಿಸಿದರು.

2016: ನವದೆಹಲಿ: ಕನ್ನಡ ರಾಜ್ಯೋತ್ಸವ ಸಂಭ್ರಮದಲ್ಲಿರುವ ಕನ್ನಡಿಗರಿಗೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾದರು. ಕರ್ನಾಟಕ ಬಹಳ ಸುಂದರ ರಾಜ್ಯವಾಗಿದ್ದು, ಭಾರತದ ಪ್ರಗತಿಗೆ ಉತ್ತಮ ಕೊಡುಗೆ ನೀಡಿದೆ. ಕರ್ನಾಟಕ ರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ರಾಜ್ಯದ ಜನತೆಗೆ ನನ್ನ ಶುಭಾಶಯಗಳುಎಂದು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದರು.

2016: ಬೆಂಗಳೂರು: 'ಟೈಮ್ಸ್ ನೌ' ಇಂಗ್ಲಿಷ್ ಸುದ್ದಿ ವಾಹಿನಿಯ ಜನಪ್ರಿಯ ನಿರೂಪಕ ಮತ್ತು ಪತ್ರಕರ್ತ ಆರ್ನಬ್ ಗೋಸ್ವಾಮಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆಂದು 'ನ್ಯೂಸ್ ಮಿನಿಟ್' ಜಾಲ ತಾಣ ವರದಿ ಮಾಡಿತು. 'ಸಂಪಾದಕೀಯ ಸಭೆಯಲ್ಲಿ ಅವರು ತಮ್ಮ ನಿರ್ಧಾರವನ್ನು
ಬಹಿರಂಗ ಪಡಿಸಿದರು ಎಂದು ವಿಶ್ವಸನೀಯ ಮೂಲಗಳು ಹೇಳಿದವು. ಇದನ್ನು 'ಟೈಮ್ಸ್ ನೌ' ವಾಹಿನಿಯ ಮೂಲಗಳೂ ದೃಢಪಡಿಸಿವೆ' ಎಂದು ವರದಿ ಹೇಳಿತು.. ಆರ್ನಬ್ ಗೋಸ್ವಾಮಿ ಟೈಮ್ಸ್ ನೌ ಮತ್ತು ಇಟಿ ನೌ ವಾಹಿನಿಗಳ ಅಧ್ಯಕ್ಷ ಮತ್ತು ಪ್ರಧಾನ ಸಂಪಾದಕ ಹುದ್ದೆಯಲ್ಲಿದ್ದರು. 2006ರಲ್ಲಿ ಆರಂಭಗೊಂಡ ಟೈಮ್ಸ್ ನೌ ವಾಹಿನಿಯನ್ನು ಒಂದು ವರ್ಷದೊಳಗೆ ನಂಬರ್ ಒನ್ ಸ್ಥಾನಕ್ಕೆ ತಲುಪಿಸಿದ ಖ್ಯಾತಿ ಆರ್ನಬ್ ಅವರದ್ದಾಗಿದೆ. ನಿತ್ಯ ರಾತ್ರಿ ಒಂಬತ್ತು ಗಂಟೆಗೆ ಪ್ರಸಾರವಾಗುವ 'ನ್ಯೂಸ್ ಅವರ್' ಕಾರ್ಯಕ್ರಮದ ನಿರೂಪಣಾ ಶೈಲಿ 'ಆರ್ನಬ್ಶೈಲಿ'ಯೆಂದೇ ಹೆಸರಾಗಿದೆ.
2008: ಮಂಗಳೂರು ನಗರದ ಜಿಲ್ಲಾ ಕಾರಾಗೃಹಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸತೀಶ್ ಕುಮಾರ್ ನೇತೃತ್ವದ ಪೊಲೀಸ್ ಪಡೆ ಈದಿನ ಬೆಳಿಗ್ಗೆ ಏಕಾಏಕಿ ದಾಳಿ ನಡೆಸಿ ಕೈದಿಗಳ ವಶದಲ್ಲಿದ್ದ ಮೊಬೈಲ್, ಸಿಮ್ ಕಾರ್ಡ್, ಮಾರಕಾಯುಧ ಮತ್ತು ಗಾಂಜಾ ವಶಪಡಿಸಿಕೊಂಡಿತು. ಕೆಲವು ದಿನಗಳಿಂದ ಜಿಲ್ಲಾ ಕಾರಾಗೃಹದಲ್ಲಿ ಕೈದಿಗಳ ಮಧ್ಯೆ ಹೊಡೆದಾಟ ನಡೆದಿತ್ತು. ಹಿಂದಿನ ದಿನ ಜೈಲು ವಾರ್ಡನ್ ಒಬ್ಬರ ಮೇಲೆ ಕೈದಿಗಳು ಹಲ್ಲೆ ಯತ್ನ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಎಂ. ಮಹೇಶ್ವರ ರಾವ್ ಅವರ ನಿರ್ದೇಶನದಂತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ದಿಲೀಪ್ ಕುಮಾರ್ ಸಹಿತ ಉನ್ನತ ಪೊಲೀಸ್ ಅಧಿಕಾರಿಗಳು, ನಗರ ಠಾಣೆಗಳ ಪೊಲೀಸ್ ಇನ್ಸ್ಪೆಕ್ಟರುಗಳು ಮತ್ತು ಪೊಲೀಸ್ ಸಿಬ್ಬಂದಿ ಜತೆ ಸತೀಶ್ ಕುಮಾರ್ ಅವರು ದಿಢೀರ್ ದಾಳಿ ನಡೆಸಿದರು.

2008: ಮಾಜಿ ವಿಶ್ವ ಸುಂದರಿ ಮತ್ತು ಬಾಲಿವುಡ್ ನಟಿ ಯುಕ್ತಾಮುಖಿ ಅವರ ವಿವಾಹ ಕಾರ್ಯಕ್ರಮದ ವಿಧಿಗಳು ಈದಿನ ನಾಗಪುರದಲ್ಲಿ ಮೆಹಂದಿ ಕಾರ್ಯಕ್ರಮದೊಂದಿಗೆ ಆರಂಭವಾದವು.

2008: ಶ್ರೀಲಂಕಾದ ಉತ್ತರ ಕರಾವಳಿಯಲ್ಲಿ ರಕ್ಷಣಾ ಪಡೆಗಳು ಎಲ್ಟಿಟಿಇಯನ್ನು ಬಗ್ಗುಬಡಿಯುವ ಕಾರ್ಯಾಚರಣೆ ಮುಂದುವರೆಸಿತು, ಈದಿನ ಬೆಳಗ್ಗೆ ನೌಕಾಪಡೆ ಸಿಬ್ಬಂದಿ 14 ಮಂದಿ ನೌಕಾದಳದ ಬಂಡುಕೋರರ ಸಹಿತ 29 ಮಂದಿ ಬಂಡುಕೋರರನ್ನು ಕೊಂದುಹಾಕಿತು. ಕಾಳಗದಲ್ಲಿ ಬಂಡುಕೋರರಿಗೆ ಸೇರಿದ 6 ದೋಣಿ ಧ್ವಂಸಗೊಂಡವು. ಲಂಕಾ ನೌಕಾದಳಕ್ಕೆ ಬೆಂಗಾವಲಾಗಿ ವಾಯುಪಡೆ ಕಾರ್ಯನಿರ್ವಹಿಸಿತ್ತು. ನಾಗರಕೊವಿಲ್ ಹಾಗೂ ಪಾಯಿಂಟ್ ಪೆಡ್ರೋ ಬಳಿ ಕರ್ತವ್ಯದಲ್ಲಿದ್ದ ಸೇನಾ ಸಿಬ್ಬಂದಿ ಮೇಲೆ ಬಂಡುಕೋರರ ದಾಳಿ ಪ್ರಯತ್ನವನ್ನು ಲಂಕಾ ನೌಕಾಪಡೆ ವಿಫಲಗೊಳಿಸಿ ಬಳಿಕ ನಡೆಸಿದ ಪ್ರತಿದಾಳಿಯಲ್ಲಿ ಉಗ್ರರ ಈ ಸಾವು ನೋವು ಸಂಭವಿಸಿತು ಎಂದು ನೌಕಾಪಡೆ ಮೂಲಗಳು ತಿಳಿಸಿದವು.

2008: ಚಂದ್ರನ ಮೇಲೆ ಮೊದಲು ಕಾಲಿರಿಸಿದ ಹೆಗ್ಗಳಿಕೆಯ ಮಾಜಿ ಗಗನಯಾತ್ರಿ ನೀಲ್ ಆರ್ಮ್ಸ್ಟ್ರಾಂಗ್ ಅವರು ತಮ್ಮ ಗಗನಯಾತ್ರೆಗೆ ಸಂಬಂಧಿಸಿದ ವಿವರಗಳನ್ನು ಪರ್ಡ್ಯೂ ವಿಶ್ವವಿದ್ಯಾಲಯಕ್ಕೆ ನೀಡಲು ಒಪ್ಪಿಕೊಂಡು ಮಾಹಿತಿ ನೀಡಲು ಮುಂದಾದರು. ವಿವಿಗೆ ಈಗಾಗಲೇ ಈ ವಿವರಗಳು ಹರಿದುಬರುತ್ತಿದ್ದು, ಇದು ವಿದ್ಯಾರ್ಥಿಗಳು ಹಾಗೂ ಸಂಶೋಧಕರಿಗೆ ಪ್ರೇರಣೆಯಾಗಲಿದೆ ಎಂದು ಪರ್ಡ್ಯೂ ವಿವಿ ಲೈಬ್ರರಿ ಸೈನ್ಸ್ ಸಹಾಯಕ ಪ್ರಾಧ್ಯಾಪಕರಾದ ಸೆಮಿ ಮೊರಿಸ್ ಹೇಳಿದರು. ಆರ್ಮಸ್ಟ್ರಾಂಗ್ ಅವರು 1955ರಲ್ಲಿ ಪರ್ಡ್ಯೂ ವಿವಿಯಿಂದ ಎರೊನಾಟಿಕಲ್ ಎಂಜಿನಿಯರಿಂಗಿನಲ್ಲಿ ಪದವಿ ಪಡೆದಿದ್ದರು.

2008: ವಿವಾಹ ಬಂಧನದಿಂದ ಬಿಡುಗಡೆ ಪಡೆದ ನಿರುದ್ಯೋಗಿ ಪತಿಗೆ ದುಡಿಯುವ ಪತ್ನಿ ಜೀವನಾಂಶ ನೀಡಬೇಕು ಎಂದು ಚಂಡಿಗಢದ ಜಿಲ್ಲಾ ನ್ಯಾಯಾಲಯ ಆದೇಶಿಸಿತು. ಪತ್ನಿಯಿಂದ ಜೀವನಾಂಶ ಕೊಡಿಸುವಂತೆ 40 ವರ್ಷದ ನಿರುದ್ಯೋಗಿ ಗುರ್ಮೀತ್ ಸಿಂಗ್ ಸಿಂಗ್ ನ್ಯಾಯಾಲಯದ ಮೆಟ್ಟಿಲು ಏರಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಜಿಲ್ಲಾ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಆ.ಕೆ. ಸೋಂಧಿ ಅವರು ಪತಿಗೆ ಮಾಸಿಕ ರೂ 2000 ನೀಡುವಂತೆ ಹಾಗೂ ಆತನ ನ್ಯಾಯಾಲಯ ವೆಚ್ಚ 3000 ರೂಪಾಯಿಗಳನ್ನೂ ಭರಿಸುವಂತೆ ಪತ್ನಿಗೆ ಆದೇಶಿಸಿ ತೀರ್ಪು ನೀಡಿದರು. ಪ್ರೇಮ ವಿವಾಹದ ಮೂಲಕ ದಾಂಪತ್ಯ ಆರಂಭಿಸಿದ ಇವರಿಗೆ ದಾಂಪತ್ಯದಲ್ಲಿ ವಿರಸ ಮೂಡಿದ ಕಾರಣ ಪತ್ನಿ ವಿಚ್ಛೇದನ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಇದಕ್ಕೂ ಮುನ್ನ ಸಿಂಗ್ ತಾನು ನಿರುದ್ಯೋಗಿಯಾಗಿರುವ ಕಾರಣ ದುಡಿಯುತ್ತಿರುವ ತನ್ನ ಪತ್ನಿಯಿಂದ ಜೀವನಾಂಶ ಕೊಡಿಸುವಂತೆ ಕೋರಿದ್ದರು.

2008: ಮಹಾರಾಷ್ಟ್ರದ ರಾಯಗಢದಲ್ಲಿ ಬಸ್ಸೊಂದು ಕಮರಿಗೆ ಉರುಳಿದ ಪರಿಣಾಮ 15 ಪ್ರಯಾಣಿಕರು ಸಾವನ್ನಪ್ಪಿ, 38 ಜನರು ಗಾಯಗೊಂಡರು. ಪಶ್ಚಿಮ ಘಟ್ಟದ ಘೋನ್ಸೆ ಕಣಿವೆ ಪ್ರದೇಶದಲ್ಲಿ ಬಸ್ ಉರುಳಿತು. ಮಹಾರಾಷ್ಟ್ರ ರಸ್ತೆ ಸಾರಿಗೆ ಸಂಸ್ಥೆಗೆ ಸೇರಿದ ಈ ಬಸ್ ಥಾಣೆ ಮತ್ತು ಮುಂಬೈ ಮಧ್ಯೆ ಪ್ರಯಾಣಸುತ್ತಿತ್ತು.

2008: ಮಧ್ಯಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಬುಡಕಟ್ಟು ಜನರನ್ನು ಗಮನದಲ್ಲಿರಿಸಿದ `ಆದಿಜನ ಮುಕ್ತಿ ಸೇನೆ' (ಎ ಎಂ ಎಸ್) ಎಂಬ ರಾಜಕೀಯ ಪಕ್ಷ ರಚನೆಯಾಯಿತು. ನಾರಾಯಣ ಸಿಂಗ್ ಎಂಬವರ ನೇತೃತ್ವದಲ್ಲಿ ಇದು ರಚನೆಗೊಂಡಿತು.

2008: ಅಪಘಾತ, ಅನಾರೋಗ್ಯ, ಆಕಸ್ಮಿಕ ದುರಂತ ಘಟನೆಗಳು ಸಂಭವಿಸಿದಾಗ ತುರ್ತು ವೈದ್ಯಕೀಯ ಸೇವೆ ಒದಗಿಸುವ `ಆರೋಗ್ಯ ಕವಚ- 108' ಯೋಜನೆಗೆ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಬೆಂಗಳೂರಿನಲ್ಲಿ ಚಾಲನೆ ನೀಡಿದರು. ಆಂಧ್ರಪ್ರದೇಶ ಮೂಲದ ತುರ್ತು ನಿರ್ವಹಣೆ ಮತ್ತು ಸಂಶೋಧನಾ ಸಂಸ್ಥೆಯ (ಇ ಎಂ ಆರ್ ಎಸ್) ಸಹಭಾಗಿತ್ವದೊಂದಿಗೆ ಕರ್ನಾಟಕ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿತು. ಗುಜರಾತ್, ಆಂಧ್ರಪ್ರದೇಶ, ಉತ್ತರಖಂಡ, ಗೋವಾ, ತಮಿಳುನಾಡು ಮೊದಲಾದ ರಾಜ್ಯಗಳಲ್ಲಿ ಈಗಾಗಲೇ ಈ ಯೋಜನೆ ಜಾರಿಯಲ್ಲಿತ್ತು. ತುರ್ತು ಸ್ಥಿತಿಯಲ್ಲಿ ಯಾವುದೇ ಸ್ಥಿರ ದೂರವಾಣಿ ಅಥವಾ ಮೊಬೈಲಿನಿಂದ 108 ಸಂಖ್ಯೆಗೆ (ಹಿಂದೆ ಯಾವುದೇ ಸಂಖ್ಯೆ ಸೇರಿಸುವಂತಿಲ್ಲ) ಕರೆ ಮಾಡಿದರೆ ನಗರ ಪ್ರದೇಶದಲ್ಲಿ 20 ನಿಮಿಷದ ಒಳಗೆ, ಗ್ರಾಮೀಣ ಪ್ರದೇಶದಲ್ಲಿ 30 ನಿಮಿಷದೊಳಗೆ ಸುಸಜ್ಜಿತ ಅಂಬುಲೆನ್ಸ್ ಕರೆ ಮಾಡಿದ ಸ್ಥಳಕ್ಕೆ ಬರುತ್ತದೆ. ಅಂಬುಲೆನ್ಸಿನಲ್ಲಿ ಪ್ರಥಮ ಚಿಕಿತ್ಸೆಯಂತಹ ಅಗತ್ಯ ಔಷಧೋಪಾಚಾರ ನೀಡಿ ಆಸ್ಪತ್ರೆಗೆ ಸೇರಿಸಲಾಗುವುದು. ಈ ಎಲ್ಲ ಸೇವೆಗಳು ಉಚಿತ. ವ್ಯಕ್ತಿ ಸುಸ್ಥಿತಿಗೆ ಬರುವ ತನಕದ ಮೊದಲ 24 ಗಂಟೆಗಳವರೆಗೆ ಆಸ್ಪತ್ರೆಗಳಿಗೆ ದಾಖಲು ಮಾಡುವುದು ಸಹ ಉಚಿತ. ಸುಸಜ್ಜಿತ ಅಂಬುಲೆನ್ಸುಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಕಲಾಂ, `ಲಕ್ಷಾಂತರ ಜನರ ಜೀವ ಉಳಿಸುವ ಈ ಯೋಜನೆ ಕರ್ನಾಟಕದಲ್ಲಿ ಜಾರಿಯಾಗುತ್ತಿದೆ. ಶಾಸ್ತ್ರೀಯ ಸ್ಥಾನಮಾನ ಘೋಷಣೆಯ ಹಿನ್ನೆಲೆಯಲ್ಲಿ ರಾಜ್ಯೋತ್ಸವದ ದಿನದಂದು ಆರೋಗ್ಯ ಕವಚ ಯೋಜನೆ ಆರಂಭವಾಗುತ್ತಿರುವುದು ಕರ್ನಾಟಕದ ಪಾಲಿಗೆ ಮಹತ್ವ್ದದಾಗಿದೆ' ಎಂದು ಹೇಳಿದರು.

2008: ಉಕ್ಕು ವಲಯದ `ಆರ್ಸೆಲರ್ ಮಿತ್ತಲ್'ನಲ್ಲಿ ತಾವು ಹೊಂದಿರುವ ಷೇರುಗಳಲ್ಲಿ 50 ಶತಕೋಟಿ ಅಮೆರಿಕ ಡಾಲರ್ ಇಳಿಕೆಯ ನಷ್ಟವನ್ನು ಅನಿವಾಸಿ ಭಾರತೀಯ ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್ ಅನುಭವಿಸಿದರು. ಆರ್ಸೆಲರ್ ಮಿತ್ತಲ್ನಲ್ಲಿ ಶೇ 45 ರಷ್ಟು ಷೇರು ಹೊಂದಿರುವ ಅನಿವಾಸಿ ಭಾರತೀಯ ಪ್ರಭಾವಿ ಉದ್ಯಮಿ ಲಕ್ಷ್ಮಿಮಿತ್ತಲ್, ತಮ್ಮ ವೈಯಕ್ತಿಕ ಷೇರು ಮೌಲ್ಯದಲ್ಲಿ ಜೂನಿನಲ್ಲಿನ 66 ಶತಕೋಟಿ ಅಮೆರಿಕ ಡಾಲರಿನಿಂದ 16 ಶತಕೋಟಿ ಅಮೆರಿಕ ಡಾಲರಿಗೆೆ ಕುಸಿತ ಕಂಡರು ಎಂದು `ಸ್ಟೀಲ್ ಉದ್ಯಮದ ಮೇಲೆ ಜಾಗತಿಕ ಹಣಕಾಸು ಬಿಕ್ಕಟ್ಟಿನ ಪರಿಣಾಮ' ಎಂಬ ವಿಶ್ಲೇಷಣಾ ವರದಿಯಲ್ಲಿ `ದಿ ಫೈನಾನ್ಶಿಯಲ್ ಟೈಮ್ಸ್' ಹೇಳಿತು.

2007: ಸುವರ್ಣ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ಬೆಳಗಾವಿಯಿಂದ 21 ಚಿಣ್ಣರು ಸ್ಕೇಟಿಂಗ್ ಮೂಲಕ 530 ಕಿ.ಮೀ. ಕ್ರಮಿಸಿ ರಾಜಧಾನಿಯಲ್ಲಿರುವ ವಿಧಾನಸೌಧಕ್ಕೆ ಬಂದು ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರನ್ನು ಭೇಟಿ ಮಾಡಿದರು. 530 ಕಿ.ಮೀ. ದೂರವನ್ನು ಈ ಚಿಣ್ಣರು ನಾಲ್ಕು ದಿನಗಳಲ್ಲಿ ಕ್ರಮಿಸಿದರು. ಬೆಳಗಾವಿಯ ವಿವಿಧ ಶಾಲೆಗಳ ಈ ಚಿಣ್ಣರಲ್ಲಿ ಅತ್ಯಂತ ಕಿರಿಯ ಮಗುವಿನ ವಯಸ್ಸು 5 ವರ್ಷವಾದರೆ, ಗರಿಷ್ಠ ವಯಸ್ಸು 14 ವರ್ಷ. ಕನ್ನಡ ಧ್ವಜದ ಬಣ್ಣದ ವೇಷ ಧರಿಸಿದ್ದ ಮಕ್ಕಳೂ ರಾಜ್ಯೋತ್ಸವ ಪ್ರಯುಕ್ತ ರಾಜ್ಯಪಾಲರು ಬ್ಯಾಂಕ್ವೆಟ್ ಹಾಲಿನಲ್ಲಿ ಏರ್ಪಡಿಸಿದ್ದ ಸಂತೋಷ ಕೂಟದಲ್ಲಿ ಕೂಡಾ ಪಾಲ್ಗೊಂಡರು. ಬೆಳಗಾವಿಯ ರೋಲರ್ ಸ್ಕೇಟಿಂಗ್ ಅಕಾಡೆಮಿ ಆಯೋಜಿಸಿದ್ದ ಈ 'ಚಿಣ್ಣರ ಸ್ಕೇಟಿಂಗ್ ಓಟ'ಕ್ಕೆ ಅಲ್ಲಿನ ರಾಣಿ ಚೆನ್ನಮ್ಮ ಪ್ರತಿಮೆ ಬಳಿ ಅಕ್ಟೋಬರ್ 28ರಂದು ಚಾಲನೆ ನೀಡಲಾಗಿತ್ತು. ಈ ಮಕ್ಕಳ ತಂಡ ಧಾರವಾಡ, ಹುಬ್ಬಳ್ಳಿ, ಹಾವೇರಿ, ರಾಣೆಬೆನ್ನೂರು, ದಾವಣಗೆರೆ, ಚಿತ್ರದುರ್ಗ, ಸಿರಾ, ತುಮಕೂರು, ನೆಲಮಂಗಲ ಮಾರ್ಗವಾಗಿ ಬೆಂಗಳೂರಿಗೆ ಬಂದು ತಲುಪಿತು.

2007: ಅನಾರೋಗ್ಯದಿಂದ ಬಳಲುತ್ತಿದ್ದ ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಹಿರಿಯ ನಾಟಕಕಾರ ಹಾಗೂ ನಿರ್ದೇಶಕ ಪುಂಡಲೀಕಪ್ಪ ಬಸನಗೌಡ ಧುತ್ತರಗಿ (78) ಮಧ್ಯಾಹ್ನ ಕೆರೂಡಿ ಆಸ್ಪತ್ರೆಯಲ್ಲಿ ನಿಧನರಾದರು. ಪುಂಡಲೀಕ ಬಸವನಗೌಡ ಧುತ್ತರಗಿ ವೃತ್ತಿರಂಗಭೂಮಿಯ ಪ್ರಖ್ಯಾತ ನಾಟಕಕಾರರು. ನಟ, ನಾಟಕ ಕಂಪನಿಯ ಮಾಲೀಕರು ಆಗಿದ್ದ ಇವರು ರಚಿಸಿದ ನಾಟಕಗಳನ್ನು ಬಹುತೇಕ ಎಲ್ಲ ನಾಟಕ ಕಂಪೆನಿಗಳೂ ಪ್ರಯೋಗಿಸಿವೆ. ಹಾಗಾಗಿ ಐದು ದಶಕಗಳ ಕಾಲ ಕನ್ನಡ ವೃತ್ತಿ ರಂಗಭೂಮಿಯ ಅವಿಭಾಜ್ಯ ಅಂಗವಾಗಿದ್ದರು. ಧುತ್ತರಗಿ ರಚಿಸಿದ 'ಸಂಪತ್ತಿಗೆ ಸವಾಲು' ವರ್ಗ ಸಂಘರ್ಷ ಕುರಿತ ಮೊದಲ ನಾಟಕ. ಡಾ. ರಾಜಕುಮಾರ್ ನಾಯಕನ ಪಾತ್ರದಲ್ಲಿ ಅಭಿನಯಿಸಿದ ಇದೇ ಹೆಸರಿನ ಚಲನಚಿತ್ರ ಭಾರಿ ಜನಪ್ರಿಯ ಚಿತ್ರವಾಯಿತಲ್ಲದೆ, ತಮಿಳು, ತೆಲುಗು, ಮಲೆಯಾಳಿ ಭಾಷೆಯಲ್ಲೂ ಚಿತ್ರೀಕರಣಗೊಂಡು 4 ಭಾಷೆಯಲ್ಲಿ ಮೂಡಿಬಂದ ಹೆಗ್ಗಳಿಕೆ ಪಡೆಯಿತು. `ಕಲ್ಪನಾ ಪ್ರಪಂಚ'ದಿಂದ ಆರಂಭಿಸಿ ಒಟ್ಟು 63 ನಾಟಕಗಳನ್ನು ರಚಿಸಿರುವ ಧುತ್ತರಗಿ ಅವರ ಮಲಮಗಳು (ಮುದುಕನ ಮದುವೆ), ತಾಯಿಕರುಳು, ಸುಖದ ಸುಪ್ಪತ್ತಿಗೆ, ಸಂಪತ್ತಿಗೆ ಸವಾಲು, ಸೊಸೆ ತಂದ ಸೌಭಾಗ್ಯ (ಚಿಕ್ಕಸೊಸೆ) ಕಿತ್ತೂರು ಚೆನ್ನಮ್ಮ, ಸಿಂಧೂರ ಲಕ್ಷ್ಮಣ, ಪುರಂದರದಾಸ ಮುಂತಾದವು ಶ್ರೇಷ್ಠ ಹಾಗೂ ಜನಪ್ರಿಯ ನಾಟಕಗಳಾಗಿದ್ದು, ವಿವಿಧ ನಾಟಕ ಕಂಪೆನಿಗಳಲ್ಲಿ ಹಾಗೂ ಗ್ರಾಮೀಣ ಹವ್ಯಾಸಿಗಳಲ್ಲಿ ಲಕ್ಷಗಟ್ಟಲೆ ಪ್ರದರ್ಶನ ಕಂಡಿವೆ. ಪತ್ನಿ ಸರೋಜಮ್ಮ ಧುತ್ತರಗಿ ವೃತ್ತಿರಂಗಭೂಮಿಯ ಜನಪ್ರಿಯ ತಾರೆ. ಪತ್ನಿಯೊಂದಿಗೆ 15 ವರ್ಷಕ್ಕಿಂತ ಹೆಚ್ಚು ಕಾಲ ನಾಟಕ ಕಂಪೆನಿಯೊಂದನ್ನು ಅವರು ನಡೆಸಿದ್ದರು. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ (1985), ರಾಜ್ಯೋತ್ಸವ ಪ್ರಶಸ್ತಿ (1996)ಗೆ ಭಾಜನರಾದ ಅವರಿಗೆ ಕನ್ನಡ ರಂಗಭೂಮಿಯ ಅತ್ಯುನ್ನತ ಪ್ರಶಸ್ತಿಯಾದ ಗುಬ್ಬಿ ವೀರಣ್ಣ ಪ್ರಶಸ್ತಿಯನ್ನು 2000ರಲ್ಲಿ ಪ್ರದಾನ ಮಾಡಲಾಗಿತ್ತು. ಪತ್ನಿ ಸರೋಜಮ್ಮನವರಿಗೆ ಪ್ರಸಕ್ತ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಲಾಗಿತ್ತು. ಅವರು ಇತ್ತ ಬೆಂಗಳೂರಿನಲ್ಲಿ ಪ್ರಶಸ್ತಿ ಸ್ವೀಕರಿಸುತ್ತಿದ್ದಾಗಲೇ ಅತ್ತ ಧುತ್ತರಗಿ ಅವರು ನಿಧನರಾದುದು, ನಾಟಕಕಾರನ ಜೀವನದ ಬಹುದೊಡ್ಡ ನಾಟಕೀಯ ದುಃಖಾಂತ್ಯಕ್ಕೆ ಕನ್ನಡಿ ಹಿಡಿಯಿತು.

2007: ಮಾನವ ಭಾಷೆ ತಿಳಿದಿದ್ದ ಹೆಣ್ಣು ಚಿಂಪಾಂಜಿ ವಾಶೋಯೆ ವಾಷಿಂಗ್ಟನ್ ಸಂಶೋಧನಾ ಸಂಸ್ಥೆಯಲ್ಲಿ ಸಾವನ್ನಪ್ಪಿತು. 1965 ರಲ್ಲಿ ಹುಟ್ಟಿದ ಈ ಚಿಂಪಾಜಿ ಮಾನವ ಭಾಷೆಯನ್ನು ಮಾತನಾಡುವ, ಮೊಟ್ಟಮೊದಲ ಮಾನವೇತರ ಪ್ರಾಣಿ ಎಂದು ಹೇಳಲಾಗಿತ್ತು. ಈ ಚಿಂಪಾಂಜಿ ಮೊದಲಿಗೆ ಅಮೆರಿಕದ ಸಂಜ್ಞೆ ಭಾಷೆ ಕಲಿತಿತ್ತು. ನಂತರ 250 ಪದಗಳನ್ನು ಕಲಿತು, ನೆನಪಿನಲ್ಲಿ ಇಟ್ಟುಕೊಂಡಿತ್ತು. ಆದರೆ ಟೀಕಾಕಾರರು ಇದನ್ನು ಒಪ್ಪಿರಲಿಲ್ಲ. ಚಿಂಪಾಂಜಿಯ ಮತ್ತೊಂದು ವಿಶೇಷ ಗುಣವೆಂದರೆ ತಾನು ಕಲಿತ ಭಾಷೆಯನ್ನು ಅದು ಮೂರು ಮರಿ ಚಿಂಪಾಂಚಿಗಳಿಗೂ ಕಲಿಸಿತ್ತು.

2007: `ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಉಭಯ ಪಕ್ಷಗಳ ಸಮನ್ವಯ ಸಮಿತಿಯನ್ನು ರಚಿಸಬೇಕು' ಎಂಬ ಷರತ್ತನ್ನು ವಿಧಿಸುವ ಮೂಲಕ ಬಿಜೆಪಿ ಮೇಲೆ ತಮ್ಮ ಹಿಡಿತ ಸಾಧಿಸಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಮುಂದಾದರು. ಬಿಜೆಪಿ- ಜೆಡಿಎಸ್ ಮೈತ್ರಿ ಕೂಟಕ್ಕೆ ಸರ್ಕಾರ ರಚಿಸಲು ರಾಜ್ಯಪಾಲರು ಇನ್ನೂ ಆಹ್ವಾನಿಸಿಲ್ಲ. ಮೈತ್ರಿ ಸರ್ಕಾರ ರಚನೆ ಇನ್ನೂ ಅನಿಶ್ಚಿತವಾಗಿರುವ ಸನ್ನಿವೇಶದಲ್ಲಿ 12 ಅಂಶಗಳ ಪರಸ್ಪರ ಒಪ್ಪಂದ ಪತ್ರಕ್ಕೆ ಸಹಿ ಹಾಕುವಂತೆ ಗೌಡರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥಸಿಂಗ್ ಅವರಿಗೆ ಪತ್ರ ಬರೆದರು.

2007: ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂದು ಜನ ಗುರುತಿಸುವುದು ಕಿರಣ್ ಬೇಡಿ ಅವರನ್ನು. ಆದರೆ ನಿಜವಾಗಿಯೂ ಕಾಂಚನ್ ಚೌಧರಿ ಭಟ್ಟಾಚಾರ್ಯ ಅವರು ಭಾರತದ ಮೊದಲ ಮಹಿಳಾ ಐಪಿಎಸ್ ಅಧಿಕಾರಿ ಎಂಬುದು ಅನೇಕರಿಗೆ ಗೊತ್ತಿಲ್ಲ. 1973ರ ತಂಡದಲ್ಲಿ ಆಯ್ಕೆಯಾದ ಭಟ್ಟಾಚಾರ್ಯ ಅವರು, 2004ರ ಜೂನ್ 15ರಂದು ಉತ್ತರಖಂಡದ ಡಿಜಿಪಿಯಾಗಿ ಅಧಿಕಾರ ಸ್ವೀಕರಿಸಿ, ಮೂರು ವರ್ಷಗಳಿಗೂ ಹೆಚ್ಚು ಕಾಲ ಡಿಜಿಪಿಯಾಗಿ ಅಧಿಕಾರ ನಿರ್ವಹಿಸಿ ಈದಿನ ಡೆಹರಾಡೂನಿನಲ್ಲಿ ನಿವೃತ್ತಿಯಾದರು. ಭಟ್ಟಾಚಾರ್ಯ ಅವರ ಕುರಿತಾಗಿ, ಅವರ ಸೋದರಿ ಕವಿತಾ ಅವರು ನಿರ್ದೇಶಿಸಿ, 1990ರಲ್ಲಿ ದೂರದರ್ಶನದಲ್ಲಿ ಪ್ರಸಾರವಾದ `ಉಡಾನ್' ಧಾರಾವಾಹಿಯಲ್ಲಿ ಭಟ್ಟಾಚಾರ್ಯ ಅವರ ಪಾತ್ರವನ್ನು ಕವಿತಾ ನಿರ್ವಹಿಸಿದ್ದರು. ಭ್ರಷ್ಟಾಚಾರದ ವಿರುದ್ಧ ಹೋರಾಡಲು ಪೊಲೀಸ್ ಕೆಲಸವನ್ನು ಆರಿಸಿಕೊಂಡ ದಿಟ್ಟ ಯುವತಿಯಾದ ಭಟ್ಟಾಚಾರ್ಯ ಅವರನ್ನು ಕುರಿತು ಈ ಧಾರಾವಾಹಿ ನಿರ್ಮಿಸಲಾಗಿತ್ತು.

2006: ದಕ್ಷಿಣ ಆಫ್ರಿಕದ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ ಅವರಿಗೆ 2006ರ ಅಮ್ನೆಸ್ಟಿ ಇಂಟರ್ ನ್ಯಾಷನಲ್ ನ `ಪ್ರಜ್ಞೆಯ ರಾಯಭಾರಿ' ಪ್ರಶಸ್ತಿಯನ್ನು ಜೋಹಾನ್ಸ್ ಬರ್ಗಿನಲ್ಲಿ ಪ್ರದಾನ ಮಾಡಲಾಯಿತು.

2006: ಪೋಲಿಯೋ ಲಸಿಕೆಗಳ ದಾಸ್ತಾನಿಗೆ ಅನುಕೂಲವಾಗುವಂತೆ ವಿಶ್ವಸಂಸ್ಥೆ ಪರಿಸರ ಕಾರ್ಯಕ್ರಮ (ಯು ಎನ್ ಇ ಪಿ) ಅಡಿಯಲ್ಲಿ ತಾವೇ ಸ್ವತಃ ನಿರ್ಮಿಸಿದ `ಸೋಲಾರ್ ಚಿಲ್' ಹೆಸರಿನ `ಸೌರ ಲಸಿಕಾ ಶೈತ್ಯ ಪೆಟ್ಟಿಗೆ'ಯನ್ನು (ಸೋಲಾರ್ ವ್ಯಾಕ್ಸೀನ್ ಕೂಲರ್) ಭಾರತೀಯ ವಿಜ್ಞಾನಿ ರಾಜೇಂದ್ರ ಶೆಂಡೆ ಅವರು ಭಾರತದ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಅರ್ಪಿಸಿದರು. ಬ್ಯಾಟರಿಗಳು ಹಾಗೂ ಸಾಂಪ್ರದಾಯಿಕ ರೆಫ್ರಿಜರೇಟರುಗಳಲ್ಲಿ ಬಳಸುವ ಓಝೋನ್ ಗೆ ಮಾರಕವಾದ ಕ್ಲೋರೋ-ಫ್ಲುರೋ ಕಾರ್ಬನ್ನುಗಳಿಗೆ ಪರ್ಯಾಯವಾಗಿರುವ ಈ `ಸೋಲಾರ್ ಚಿಲ್' ಪರಿಸರ ಮಿತ್ರ ಸಾಧನವಾಗಿದ್ದು ವಿದ್ಯುತ್ ಸರಬರಾಜು ತೊಂದರೆಯಿಂದ ಬಳಲುತ್ತಿರುವ ಹಳ್ಳಿಗಳಿಗೆ ವರದಾನ ಆಗಬಲ್ಲುದು. `ಸೋಲಾರ್ ಚಿಲ್' ನಲ್ಲಿ ಸಾಂಪ್ರದಾಯಿಕ ಸೌರ ಶೈತ್ಯಾಗಾರಗಳಲ್ಲಿ ಬಳಸುವಂತೆ ಬ್ಯಾಟರಿಗಳು ಅಥವಾ ಸೀಮೆ ಎಣ್ಣೆಯನ್ನು ಬಳಸುವುದಿಲ್ಲ. ಮಂಜುಗಡ್ಡೆಯ ದಪ್ಪ ಪೊರೆ ನಿರ್ಮಿಸಲು ಸೌರಶಕ್ತಿಯನ್ನೇ ಬಳಸಲಾಗುತ್ತದೆ. ಇದು ಕೂಲರಿನ ಒಳಗಿನ ಉಷ್ಣತೆಯನ್ನು ಮೈನಸ್ 2 ಡಿಗ್ರಿಯಿಂದ 8 ಡಿಗ್ರಿ ಸೆಲ್ಷಿಯಸ್ ಮಟ್ಟದಲ್ಲಿ ಇರಿಸುತ್ತದೆ. ಈ ಶೈತ್ಯ ಪೆಟ್ಟಿಗೆ ರಾತ್ರಿಯಲ್ಲಿ ಕೂಡಾ ಲಸಿಕೆಯನ್ನು ತಂಪಾಗಿ ಇರಿಸಬಲ್ಲುದು. ಸೂರ್ಯನಿಲ್ಲದೇ ಇದ್ದರೂ ನಾಲ್ಕೈದು ದಿನಗಳ ಕಾಲ ಲಸಿಕೆಯನ್ನು ತಂಪಾಗಿ ಇಡಬಲ್ಲುದು. ಶೈತ್ಯ ಪೆಟ್ಟಿಗೆಗೆ ಯಾವುದೇ ರಾಸಾಯನಿಕಗಳ ಬಳಕೆ ಮಾಡುವುದಿಲ್ಲವಾದ ಕಾರಣ ಅದರಿಂದ ಓಝೋನ್ ಗೆ ಧಕ್ಕೆಯಾಗುವುದಿಲ್ಲ, ವಾತಾವರಣವೂ ಬಿಸಿ ಆಗುವುದಿಲ್ಲ.
2005: ಒಟ್ಟು 175 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡುವ ಮೂಲಕ ಕರ್ನಾಟಕದ ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರ ದಾಖಲೆ ನಿರ್ಮಿಸಿತು. 1992 ರಲ್ಲಿ ಎಸ್. ಬಂಗಾರಪ್ಪ ನೇತೃತ್ವದ ಕಾಂಗ್ರೆಸ್ ಸರ್ಕಾರ 172 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿತ್ತು.

2005: ವಿಧಾನ ಪರಿಷತ್ ಸದಸ್ಯ, ಕರ್ನಾಟಕ ಬಿಜೆಪಿ ಹಿರಿಯ ಧುರೀಣ ಗುಲ್ಬರ್ಗದ ಡಾ. ಎಂ.ಆರ್. ತಂಗಾ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.

1981: ಸೌರಾಷ್ಟ್ರ ಕರಾವಳಿಯಲ್ಲಿ ಬೀಸಿದ ತೀವ್ರ ಚಂಡಮಾರುತಕ್ಕೆ ಸಿಲುಕಿ ದ್ವಾರಕಾ ಮತ್ತು ಜಕೋವೋ ಬಂದರುಗಳ ನಡುವೆ 190 ಮೀನುಗಾರಿಕೆ ದೋಣಿಗಳು ನಾಪತ್ತೆಯಾದವು.

1974: ಭಾರತೀಯ ಕ್ರಿಕೆಟ್ ಆಟಗಾರ ವೆಂಗಿಪುರುಪ್ಪು ವೆಂಕಟ್ ಸಾಯಿ ಲಕ್ಷ್ಮಣ್ ಜನ್ಮದಿನ.

1973: ಭಾರತದ ವಿಶ್ವಸುಂದರಿ ಐಶ್ವರ್ಯ ರೈ ಜನ್ಮದಿನ. ಈಗ ಈಕೆ ಬಾಲಿವುಡ್ ನಿಂದ ಹಾಲಿವುಡ್ ವರೆಗೂ ಖ್ಯಾತಿ ಪಡೆದಿರುವ ಚಿತ್ರನಟಿ.

1956: ಇದು ಕರ್ನಾಟಕ ರಾಜ್ಯವು ಉದಯಿಸಿದ ದಿನ. 1956 ರಲ್ಲಿ ದಿನ ಭಾಷಾವಾರು ರಾಜ್ಯಗಳ ಪುನರ್ ವಿಂಗಡಣೆಯಾಗಿ ಕರ್ನಾಟಕ (ಆಗ ಮೈಸೂರು ರಾಜ್ಯ) ಸೇರಿದಂತೆ ಹೊಸ ಭಾಷಾವಾರು ರಾಜ್ಯಗಳು ಅಸ್ತಿತ್ವಕ್ಕೆ ಬಂದವು. ಕರ್ನಾಟಕದ ಜೊತೆಗೆ ಅಸ್ತಿತ್ವಕ್ಕೆ ಬಂದ ಇತರ ರಾಜ್ಯಗಳು: ಮದ್ರಾಸ್, ಕೇರಳ, ದ್ವಿಭಾಷಾ ಬಾಂಬೆ, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಪಂಜಾಬ್. ಮೊದಲೇ ಸ್ಥಾಪನೆಗೊಂಡಿದ್ದ ಆಂಧ್ರಪ್ರದೇಶ ರಾಜ್ಯವು ವಿಸ್ತರಣೆಗೊಂಡು ಹೈದರಾಬಾದ್ ಅದರ ರಾಜಧಾನಿಯಾಯಿತು. ರಾಷ್ಟ್ರಾಧ್ಯಕ್ಷ ರಾಜೇಂದ್ರ ಪ್ರಸಾದ್ ಅವರು ದಿನ ಮಧ್ಯಾಹ್ನ ಶುಭ ಮುಹೂರ್ತದಲ್ಲಿ ಕರ್ನಾಟಕ ರಾಜ್ಯದ ಆರಂಭೋತ್ಸವವನ್ನು ನೆರವೇರಿಸಿ `ಒಂದುಗೂಡಿರುವ ಜನತೆಗೆ ಕಲ್ಯಾಣವಾಗಲಿ' ಎಂದು ಹಾರೈಸಿದರು. 1973ರಲ್ಲಿಮೈಸೂರು ರಾಜ್ಯಕ್ಕೆ `ಕರ್ನಾಟಕ' ಎಂಬುದಾಗಿ ಪುನರ್ ನಾಮಕರಣ ಮಾಡಲಾಯಿತು.
1956: ವಿಶಾಲ ಮೈಸೂರು ರಾಜ್ಯ ಉದಯವಾದ ಕೆಲವೇ ಗಂಟೆಗಳಲ್ಲಿ ಗೌರ್ನರ್ ಮತ್ತು 54 ವರ್ಷದ ಕರ್ನಾಟಕದ ಹಿರಿಯ ರಾಜಕಾರಣಿ ಎಸ್. ನಿಜಲಿಂಗಪ್ಪ ಅವರ ಮುಖ್ಯಮಂತ್ರಿತ್ವದಲ್ಲಿ 12 ಮಂದಿ ಸಚಿವರ ಮಂತ್ರಿ ಮಂಡಲವು ಪ್ರಮಾಣವಚನ ಸ್ವೀಕರಿಸಿತು. 

1954: ಫ್ರೆಂಚರ ಆಡಳಿತಕ್ಕೆ ಒಳಪಟ್ಟಿದ್ದ ಪಾಂಡಿಚೆರಿ, ಕಾರೈಕಲ್, ಮಾಹೆ ಮತ್ತು ಯಾನಮ್ ಗಳು ಭಾರತಕ್ಕೆ ಸೇರ್ಪಡೆಯಾದವು.

1913: ಲಾಲಾ ಹರ್ ದಯಾಳ್ ಮತ್ತು ಸೋಹನ್ ಸಿಂಗ್ ಭಾಂಕ್ನಾ ಅವರು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಪಶ್ಚಿಮದಲ್ಲಿ ಬೆಂಬಲ ದೊರಕಿಸುವ ಸಲುವಾಗಿ ಸ್ಯಾನ್ ಫ್ರಾನ್ಸಿಸ್ಕೊದಲ್ಲಿ `ಘದರ್' ಚಳವಳಿಯನ್ನು ಆರಂಭಿಸಿದರು.

1858: ಭಾರತದ ಆಡಳಿತವನ್ನು ಈಸ್ಟ್ ಇಂಡಿಯಾ ಕಂಪೆನಿಯಿಂದ ಬ್ರಿಟಿಷ್ ರಾಜಸತ್ತೆಯು ವಹಿಸಿಕೊಂಡಿತು. ಗವರ್ನರ್ ಜನರಲ್ ಗೆ `ವೈಸ್ ರಾಯ್' ಎಂಬ ಹೆಸರು ನೀಡಲಾಯಿತು. ಈ ಹೆಸರೇ ಭಾರತವು ಸ್ವಾತಂತ್ರ್ಯ ಗಳಿಸುವವರೆಗೂ ಮುಂದುವರಿಯಿತು.

1848: ಡಬ್ಲ್ಯೂ.ಎಚ್. ಸ್ಮಿತ್ ಅವರ ಮೊತ್ತ ಮೊದಲ ರೈಲ್ವೆ ಬುಕ್ ಸ್ಟಾಲ್ ಲಂಡನ್ನಿನ ಈಸ್ಟನ್ ಸ್ಟೇಷನ್ನಿನಲ್ಲಿ ಪ್ರಾರಂಭಗೊಂಡಿತು.

1800: ಅಮೆರಿಕದ ಅಧ್ಯಕ್ಷ ಜಾನ್ ಆಡಮ್ಸ್ ಅವರು `ಶ್ವೇತಭವನ'ಕ್ಕೆ ತಮ್ಮ ವಾಸ್ತವ್ಯವನ್ನು ವರ್ಗಾಯಿಸಿದರು. ಇದರೊಂದಿಗೆ `ಶ್ವೇತಭವನ'ದಲ್ಲಿ ವಾಸ್ತವ್ಯ ಹೂಡಿದ ಮೊದಲ ಅಧ್ಯಕ್ಷರೆಂಬ ಹೆಗ್ಗಳಿಕೆ ಅವರದಾಯಿತು.

No comments:

Post a Comment