Monday, November 12, 2018

ಇಂದಿನ ಇತಿಹಾಸ History Today ನವೆಂಬರ್ 12

ಇಂದಿನ ಇತಿಹಾಸ History Today ನವೆಂಬರ್ 12
2018: ಬೆಂಗಳೂರು: ಕರ್ನಾಟಕ ಬಿಜೆಪಿಯ ಪ್ರಮುಖ ನೇತಾರ, ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಅನಂತ್ ಕುಮಾರ್ ಬೆಂಗಳೂರಿನಲ್ಲಿ ಈದಿನ ಬೆಳಗ್ಗೆ ನಿಧನರಾದರು. ಬೆಂಗ ಳೂರು ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಅವರು ಕಳೆದ ಹಲವು ಸಮಯದಿಂದ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಲಂಡನ್, ನ್ಯೂ ಯಾರ್ಕ್‌ನಲ್ಲಿ ಖಾಯಿಲೆಗೆ ಚಿಕಿತ್ಸೆ ಪಡೆದ ನಂತರ ಅವರು ಬೆಂಗಳೂರಿಗೆ ವಾಪಸಾಗಿ ಬಸವನಗುಡಿಯಲ್ಲಿರುವ ‘ಶ್ರೀ ಶಂಕರ ಕ್ಯಾನ್ಸರ್ ಮತ್ತು ಸಂಶೋಧನಾ ಕೇಂದ್ರ ದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ತಮ್ಮ ೫೯ನೇ ವಯಸ್ಸಿನಲ್ಲಿ ಸಾವನ್ನಪ್ಪಿದರು. ಬೆಂಗಳೂರು ಅನಂತ್ ಕುಮಾರ್ ಅವರ ಹುಟ್ಟೂರು. ಜುಲೈ ೨೨, ೧೯೫೯ರಲ್ಲಿ ಎಚ್.ಎನ್. ನಾರಾಯಣ ಶಾಸ್ತ್ರಿ ಮತ್ತು ಗಿರಿಜಾ ಎನ್ ಶಾಸ್ತ್ರಿ ಪುತ್ರರಾಗಿ ಜನಿಸಿದ ಅವರು ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನಲ್ಲಿ ಮುಗಿಸಿದರು. ಮುಂದೆ ಉನ್ನತ ವ್ಯಾಸಂಗಕ್ಕಾಗಿ ಹುಬ್ಬಳ್ಳಿಯ ಬಸ್ಸು ಹತ್ತಿದರು.  ಕೆ.ಎಸ್. ಆರ್ಟ್ಸ್ ಕಾಲೇಜಿನಿಂದ ಬಿಎ ಪದವಿ ಪಡೆದ ಅವರು ಮುಂದೆ ಕಾನೂನು ಕ್ಷೇತ್ರವನ್ನು ಆಯ್ದುಕೊಂಡು ಜೆಎಸ್‌ಎಸ್ ಕಾಲೇಜಿನಿಂದ ಎಲ್‌ಎಲ್‌ಬಿ ಪದವಿ ಪಡೆದರು.  ಕಾಲೇಜು ದಿನಗಳಲ್ಲೇ ಅನಂತ್ ಕುಮಾರ್ ಅವರಿಗೆ ರಾಜಕೀಯದೆಡೆಗಿನ ತುಡಿತ ಆರಂಭವಾಗಿತ್ತು. ವಿದ್ಯಾರ್ಥಿ ಸಂಘಟನೆ ‘ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಅವರ ಕಾರ್ಯಕ್ಷೇತ್ರವಾಯಿತು. ೧೯೮೨ರಿಂದ ೮೫ರವರೆಗೆ ಎಬಿವಿಪಿಯ ಕಾರ್ಯದರ್ಶಿಯಾಗಿ, ೮೫ ರಿಂದ ೮೭ರವರೆಗೆ ಎಬಿವಿಪಿಯ ರಾಷ್ಟ್ರೀಯ ಕಾರ್ಯ ದರ್ಶಿ ಹುದ್ದೆಗಳನ್ನು ನಿಭಾಯಿಸಿದರು. ಬಳಿಕ ಸಕ್ರಿಯ ರಾಜಕಾರಣಕ್ಕೆ ಧುಮುಕಿದ ಅವರು ಬಿಜೆಪಿ ಸೇರಿ ಕೊಂಡರು. ಕರ್ನಾಟಕ ಬಿಜೆಪಿಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹುದ್ದೆಗಳಿಗೆ ಬಲು ಬೇಗ ಏರಿದರು. ಹೀಗಿರುವಾಗಲೇ ರಾಷ್ಟ್ರ  ರಾಜಕಾರಣ ಅವರನ್ನು ಕೈ ಬೀಸಿ ಕರೆಯಿತು. ದೆಹಲಿ ವಿಮಾನ ಹತ್ತಿದವರೇ ೧೯೯೫ರಲ್ಲಿ ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾದರು. ಮರು ವರ್ಷವೇ ೧೯೯೬ರಲ್ಲಿ ನಡೆದ ಲೋಕಸಭೆ ಚುನಾವಣೆ ಯಲ್ಲಿ ಮೊದಲ ಬಾರಿಗೆ ಬೆಂಗಳೂರು ದಕ್ಷಿಣ ಲೋಕ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದರು. ಮೊದಲ ಯತ್ನದಲ್ಲೇ ಗೆಲುವು ಅವರದಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಸತತ ಆರು ಬಾರಿ ಈ ಕ್ಷೇತ್ರದಿಂದ ಕಣಕ್ಕಿಳಿದು ಗೆದ್ದ ಇತಿಹಾಸ ಅವರದ್ದು. ೧೯೯೮ರಲ್ಲಿ ಎರಡನೇ ಬಾರಿಗೆ ಅವರು ಲೋಕಸಭಾ ಚುನಾವಣೆ ಗೆದ್ದಾಗ ಅವರಿಗೆ ಮಂತ್ರಿಯಾಗುವ ಭಾಗ್ಯ ಒದಗಿ ಬಂತು. ೧೯೯೮ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸಂಪುಟದಲ್ಲಿ ನೇರ ಕ್ಯಾಬಿನೆಟ್ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ವಾಜಪೇಯಿ ಸರ್ಕಾರದಲ್ಲಿದ್ದ ಅತೀ ಕಿರಿಯ ವಯಸ್ಸಿನ ಸಚಿವರು ಅನಂತ್ ಕುಮಾರ್ ಅವರಾಗಿದ್ದರು. ೧೯೯೯ರಲ್ಲಿ ಮತ್ತೆ ಗೆದ್ದು ಐದು ವರ್ಷ ಗಳ ಕಾಲ ಸಚಿವರಾಗಿದ್ದರು. ೨೦೧೪ರಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬರುತ್ತಲೇ ಅವರು ಮೂರನೇ ಬಾರಿ ಸಚಿವರಾದರು. ಹೀಗೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೇರಿದ ಮೂರು ಬಾರಿ ಗೂಟದ ಕಾರು ಹತ್ತಿದ ಹೆಗ್ಗಳಿಕೆ ಅವ ರದ್ದು. ಕರ್ನಾಟಕದ ಬಿಜೆಪಿಯ ಮಟ್ಟಿಗೆ ಯಡಿಯೂರಪ್ಪ ರಾಜ್ಯಕ್ಕೆ, ಕೇಂದ್ರಕ್ಕೆ ಅನಂತ್ ಕುಮಾರ್ ಎಂಬುದು ಜನಜನಿತ ವಾಗಿತ್ತು. ಬೆಂಗಳೂರು ಮತ್ತು ದೆಹಲಿ ನಡುವೆ ಬಿಜೆ ಪಿಯ ಸಂಪರ್ಕ ಸೇತುವಾಗಿದ್ದರು ಅವರು. ಅವರು ಅಧ್ಯಕ್ಷರಾಗಿದ್ದ ಅವಧಿಯಲ್ಲಿ ೨೦೦೪ರಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಅತೀ ಹೆಚ್ಚಿನ ಸ್ಥಾನಗಳನ್ನು ಗಳಿಸಿತ್ತು. ೨೦೦೮ರಲ್ಲಿ ಬಿಜೆಪಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತಲೇ ಅನಂತ್ ಕುಮಾರ್ ಶಕ್ತಿ ಕೇಂದ್ರವಾಗಿ ಬದಲಾಗಿದ್ದರು. ಪರಿಣಾಮ ಮುಂದಿನ ಹಲವು ವರ್ಷ ಕರ್ನಾಟಕ ಬಿಜೆಪಿಯ ‘ಜೋಡಿ ಎತ್ತುಗಳಂತಿದ್ದ ಯಡಿಯೂರಪ್ಪ ಮತ್ತು ಅನಂತ್ ಕುಮಾರ್ ನಡುವೆ ಶೀತಲ ಸಮರ ಹತ್ತಿಕೊಂಡಿತು. ಅನಂತ್ ಕುಮಾರ್‌ಗೆ ಮುಖ್ಯಮಂತ್ರಿಯಾಗುವ ಆಸೆ ಇತ್ತು. ಅದೇ ಕಾರಣಕ್ಕೆ ನಾನು ಪಕ್ಷ ಬಿಡಬೇಕಾಯಿತು,” ಎಂದು ಅಂದು ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದ್ದ ಯಡಿಯೂರಪ್ಪ ಹೇಳಿದ್ದರು. ಅವತ್ತು ಅನಂತ್ ಕುಮಾರ್ ಬಿಜೆಪಿಯ ಮೇರು ನಾಯಕ ಎಲ್.ಕೆ. ಅಡ್ವಾಣಿ ಪಾಳಯದಲ್ಲಿ ಗುರು ತಿಸಿಕೊಂಡಿದ್ದರು. ಅಡ್ವಾಣಿ ಮಾನಸ ಪುತ್ರ ಎನ್ನುವಷ್ಟರ ಮಟ್ಟಿಗೆ ಹೈಕಮಾಂಡ್‌ಗೆ ಆಪ್ತರಾಗಿದ್ದರು. ಈ ಕಾರಣಕ್ಕೆ ನರೇಂದ್ರ ಮೋದಿ ಅಧಿಕಾರಕ್ಕೆ ಬಂದಾಗ ಅನಂತ್ ಕುಮಾರ್ ಅವರಿಗೆ ಪ್ರಮುಖ ಖಾತೆ ದಕ್ಕಿರಲಿಲ್ಲ. ಹಲವು ಬಾರಿ ಗೊಬ್ಬರ ಖಾತೆ ಸಚಿವ ಎಂದು ಅವರು ಲೇವಡಿಗೂ ಗುರಿಯಾಗಬೇಕಾಯಿತು. ಬಿಜೆಪಿಯ ಹಿರಿಯ ನಾಯಕ ಎಲ್. ಕೆ. ಅಡ್ವಾಣಿಯ ಮಾನಸ ಪುತ್ರ ಎಂಬ ಹೆಸರು ಅನಂತ್ ಕುಮಾರ್ ಅವರಿಗಿತ್ತು. 

2018: ವಾರಾಣಸಿ:  ರಾಷ್ಟ್ರದ ಪ್ರಪ್ರಥಮ ಒಳನಾಡು ಜಲಮಾರ್ಗ ಹಾಗೂ ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ ವಾರಾಣಸಿಯಲ್ಲಿ ೨,೪೧೨ ಕೋಟಿ ರೂಪಾಯಿಗಳ ಮೂಲಸವಲತ್ತು ಯೋಜನೆಗಳನ್ನು ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ’ದೇಶವು ಇಂದು ಅಭಿವೃದ್ಧಿ ರಾಜಕೀಯವನ್ನು ಬಯಸುತ್ತಿದೆ ಎಂದು ಹೇಳಿದರು.
ಕಳೆದ ನಾಲ್ಕೂವರೆ ವರ್ಷಗಳಲ್ಲಿ ತಮ್ಮ ಕ್ಷೇತ್ರಕ್ಕೆ ೧೫ನೇ ಭೇಟಿ ನೀಡಿದ ಪ್ರಧಾನಿ ಕೇಂದ್ರ ಸರ್ಕಾರದ ಜಲಮಾರ್ಗ ವಿಕಾಸ ಯೋಜನೆಯ ಅಂಗವಾಗಿ ರಾಲ್ಹುಪುರದಲ್ಲಿ ಗಂಗಾನದಿಯಲ್ಲಿನ  ಬಹುಮಾದರಿ ಟರ್ಮಿನಲ್ ಸೇರಿದಂತೆ ವಿವಿಧ ಯೋಜನೆಗಳನ್ನು ಉದ್ಘಾಟಿಸಿದರು. ೪೨೪ ಕೋಟಿ ರೂಪಾಯಿಗಳ  ಎರಡು ಒಳಚರಂಡಿ ಸಂಸ್ಕರಣಾ ಯೋಜನೆಗಳನ್ನೂ ವಾರಾಣಸಿಯಲ್ಲಿ ಉದ್ಘಾಟಿಸಿದ ಪ್ರಧಾನಿ ರಾಮನಗರಕ್ಕಾಗಿ ೭೨.೯೧ ಕೋಟಿ ರೂಪಾಯಿಗಳ ಯೋಜನೆಗೆ ಶಿಲಾನ್ಯಾಸ ನೆರವೇರಿಸಿದರು. ಗಂಗಾನದಿ ಶುದ್ಧೀಕರಣಕ್ಕಾಗಿ ೨೩,೦೦೦ ಕೋಟಿ ರೂಪಾಯಿ ಮೌಲ್ಯದ ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದ್ದು ೫೦೦೦ ಕೋಟಿ ರೂಪಾಯಿಗಳ ಯೋಜನೆಗಳು ಅನುಷ್ಠಾನದಲ್ಲಿವೆ. ಗಂಗಾನದಿ ದಂಡೆಯಲ್ಲಿನ ಬಹುತೇಕ ಹಳ್ಳಿಗಳು ಬಯಲು ಶೌಚ ಮುಕ್ತವಾಗಿವೆ ಎಂದು ಮೋದಿ ಹೇಳಿದರು.  ಈಗ ರೈಲುಗಳು ಭಾರತದ ಈಶಾನ್ಯ ಮೂಲೆಯವರೆಗೂ ತಲುಪುತ್ತಿವೆ. ಎಕ್ಸ್ ಪ್ರೆಸ್ ಮಾರ್ಗಗಳ ಜಾಲ ನಮ್ಮ ಸರ್ಕಾರದ ಅಸ್ಮಿತೆಯಾಗಲಿದೆ ಎಂದು ಪ್ರಧಾನಿ ನುಡಿದರು.  ನೈರ್ಮಲ್ಯದಂತಹ ಅತಿಸಣ್ಣ ಅಗತ್ಯಗಳ ಬಗ್ಗೆ ಕೂಡಾ ನಾವು ಗಮನ ಹರಿಸಿದ್ದೇವೆ ಎಂದು ನುಡಿದ ಪ್ರಧಾನಿ ’ರಾಷ್ಟ್ರವು ಈಗ ಅಭಿವೃದ್ಧಿಯ ರಾಜಕೀಯವನ್ನು ಬಯಸುತ್ತಿದೆ. ತಮಗೆ ಕಾಣಿಸುತ್ತಿರುವ ಅಭಿವೃದ್ಧಿಯನ್ನು ಗಮನಿಸಿ ಮತದಾರರು ಈಗ ನಿರ್ಣಯಗಳನ್ನು ಕೈಗೊಳ್ಳುತ್ತಿದ್ದಾರೆ, ವೋಟ್ ಬ್ಯಾಂಕ್ ರಾಜಕೀಯವನ್ನು ಆಧರಿಸಿ ಅಲ್ಲ ಎಂದು ಹೇಳಿದರು. ಮುಂಬರುವ ದಿನಗಳಲ್ಲಿ ಕಾಶಿಯು ಪ್ರವಾಸೋದ್ಯಮಕ್ಕೆ ಖ್ಯಾತಿ ಪಡೆಯಲಿದೆ. ಕಾಶಿಯು ಪ್ರಕೃತಿ, ಸಂಸ್ಕೃತಿ ಮತ್ತು ಸಾಹಸಗಳ ಸಮ್ಮಿಳನವನ್ನು ಕಾಣಲಿದೆ ಎಂದು ಮೋದಿ ನುಡಿದರು. ನಾಲ್ಕೂವರೆ ವರ್ಷಗಳಿಂದ ಜಲಮಾರ್ಗ ಯೋಜನೆಯನ್ನು ಟೀಕಿಸುತ್ತಿದ್ದವರಿಗೆ ಜಲಮಾರ್ಗದ ಉದ್ಘಾಟನೆ ಉತ್ತರವನ್ನು ಕೊಟ್ಟಿದೆ. ಬಹುಮಾದರಿ ಟರ್ಮಿನಲ್‌ನ್ನು ಪೂರ್ಣಗೊಳಿಸುವುದರೊಂದಿಗೆ ಪೂರ್ವ ಉತ್ತರ ಪ್ರದೇಶವು ಈಗ ಬಂಗಾಳ ಕೊಲ್ಲಿಯೊಂದಿಗೆ ಸಂಪರ್ಕವನ್ನು ಪಡೆದಿದೆ ಎಂದು ಪ್ರಧಾನಿ ಹೇಳಿದರು. ಜಲಮಾರ್ಗದ ಕನಸು ನನಸಾಗಿರುವುದಕ್ಕೆ ನಾನು ಇಂದು ಅತ್ಯಂತ ಹರ್ಷಿತನಾಗಿದ್ದೇನೆ. ಸ್ವಾತಂತ್ರ್ಯಾನಂತರ ಇದೇ ಮೊದಲ ಬಾರಿಗೆ ನಾವು ಒಳನಾಡಿನ ನದಿಗಳನ್ನು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ವಾಣಿಜ್ಯ ಮಾರ್ಗಗಳಾಗಿ ಬಳಸುತ್ತಿದ್ದೇವೆ ಎಂದು ಮೋದಿ ನುಡಿದರು. ವಾರಾಣಸಿಯು ಮುಂದಿನ ತಲೆಮಾರಿನ ಮೂಲಸವಲತ್ತುಗಳನ್ನು ಪಡೆಯುತ್ತಿದ್ದು, ಇದು ಇಡೀ ಪ್ರದೇಶವನ್ನೇ ಸಂಪೂರ್ಣವಾಗಿ ಬದಲಾಯಿಸಲಿದೆ ಎಂದು ಪ್ರಧಾನಿ ಹೇಳಿದರು. ದೀಪಾವಳಿಯಲ್ಲಿ ತಾವು ಕೇದಾರನಾಥಕ್ಕೆ ನೀಡಿದ ಭೇಟಿಯನ್ನು ಪ್ರಸ್ತಾಪಿಸಿದ ಪ್ರಧಾನಿ, ಈದಿನ ನಾನು ಗಂಗಾ ಮಾತೆಗೆ ಪ್ರಾರ್ಥನೆ ಸಲ್ಲಿಸಿದ್ದೇನೆ ಎಂದು ನುಡಿದರು. ಎರಡು ಪ್ರಮುಖ ರಾಷ್ಟ್ರೀಯ ಹೆದ್ದಾರಿಗಳನ್ನೂ ಪ್ರಧಾನಿ ಈ ಸಂದರ್ಭದಲ್ಲಿ ತಮ್ಮ ಕ್ಷೇತ್ರದಲ್ಲಿ ಉದ್ಘಾಟಿಸಿದರು. ಎರಡು ರಸ್ತೆಗಳು ಒಟ್ಟು ೩೪ ಕಿಮೀ ದೂರವನ್ನು ಹೊಂದಿದ್ದು ಇವುಗಳ ನಿರ್ಮಾಣಕ್ಕೆ ೧,೫೭೧.೯೫ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗಿದೆ. ೭೫೯.೩೬ ಕೋಟಿ ರೂಪಾಯಿ ವೆಚ್ಚದಲ್ಲಿ ೧೬.೫೫ ಕಿಮೀ ವರ್ತುಲ ರಸ್ತೆಯ ಮೊದಲ ಹಂತವನ್ನು ಪೂರ್ಣಗೊಳಿಸಲಾಗಿದೆ. ಚತುಷ್ಪಥ ಮತ್ತು ೧೭.೨೫ ಕಿಮೀ ಉದ್ದದ ಬಾಬತ್ಪುರ - ವಾರಾಣಸಿ ರಸ್ತೆಯನ್ನು ರಾಷ್ಟ್ರೀಯ ಹೆದ್ದಾರಿ ೫೬ರಲ್ಲಿ ೮೧೨.೫೯ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಎರಡು ಆರ್‌ಒಬಿ ಮತ್ತು ಮೇಲ್ಸೇತುವೆಯನ್ನು ಒಳಗೊಂಡಿರುವ ವರ್ತುಲ ರಸ್ತೆಯು ಲಕ್ನೋ-ವಾರಾಣಸಿ ನಡುವಣ ರಾಷ್ಟ್ರೀಯ ಹೆದ್ದಾರಿ ೫೬, ಆಜಂಗಡ-ವಾರಾಣಸಿ ನಡುವಣ ರಾಷ್ಟ್ರೀಯ ಹೆದ್ದಾರಿ ೨೩೩ ಮತ್ತು ಗೋರಖ್ ಪುರ -ವಾರಾಣಸಿ ನಡುವಣ ರಾಷ್ಟ್ರೀಯ ಹೆದ್ದಾರಿ ೨೯ರ ಮೇಲಿನ ಒತ್ತಡ, ಇಂಧನ ಬಳಕೆ ಮತ್ತು ಮಾಲಿನ್ಯವನ್ನು ತಗ್ಗಿಸಲಿದೆ. ಅಲ್ಲದೆ ಖ್ಯಾತ ಬೌದ್ಧ ಯಾತ್ರಾಸ್ಥಳವಾದ ಸಾರಾನಾಥಕ್ಕೆ ಸುಲಲಿತ ರಸ್ತೆ ಸಂಪರ್ಕವನ್ನೂ ಈ ವರ್ತುಲ ರಸ್ತೆಯು ಕಲ್ಪಿಸಲಿದೆ.
ವಾರಾಣಸಿ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರ ಜೊತೆಗೆ ಉತ್ತರ ಪ್ರದೇಶದ ರಾಜ್ಯಪಾಲ ರಾಮ್ ನಾಯ್ಕ್, ಕೇಂದ್ರ ರಸ್ತೆ ಮತ್ತು ಸಾರಿಗೆ ಹಾಗೂ ಹೆದ್ದಾರಿಗಳು, ನೌಕಾಯಾನ, ಜಲಸಂಪನ್ಮೂಲ, ನದಿ ಅಭಿವೃದ್ಧಿ ಮತ್ತು ಗಂಗಾ ಪುನರುಜ್ಜೀವನ ಸಚಿವ ನಿತಿನ್ ಗಡ್ಕರಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೂ ಪಾಲ್ಗೊಂಡಿದ್ದರು.

2018: ಲಖ್ನೋ\ವಾರಾಣಸಿ: ಒಳನಾಡು ಸಾರಿಗೆಯನ್ನು ಪ್ರೋತ್ಸಾ ಹಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕೈಗೆತ್ತಿ ಕೊಂಡ ಪ್ರತಿಷ್ಠಿತ ಗಂಗಾನದಿ ತೀರದ ವಾರಾಣಸಿ ಒಳ ನಾಡು ಬಂದರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು  ಉದ್ಘಾಟಿಸಿದರು. ಉತ್ತರ ಪ್ರದೇಶದ ಈ ಪುಣ್ಯಕ್ಷೇತ್ರದಿಂದ ಪಶ್ಚಿಮ ಬಂಗಾಳದ ಹಲ್ದಿಯಾವರೆಗೆ ನದಿಪಾತ್ರದುದ್ದಕ್ಕೂ ಭಾರೀ ಸರಕು ಸಾಗಣೆಯ ಹಡಗುಗಳ ಸಾಗಾಟಕ್ಕೆ ಈ ನವಬಂ ದರು ಹಲವು ಬಗೆಯ ಅನುಕೂಲತೆಗಳನ್ನು ಹೊಂದಿದೆ.  ಕೋಲ್ಕತ್ತಾದಿಂದ ದೇಶದ ಮೊಟ್ಟಮೊದಲ ಒಳನಾಡು ಜಲಸಾರಿಗೆ ಕಂಟೇನರ್ ಅಕ್ಟೋಬರ್ ೩೦ ರಿಂದ ಹೊರ ಟಿದ್ದು, ಅದನ್ನು ಪ್ರಧಾನ ಮಂತ್ರಿಗಳು ಇಲ್ಲಿನ ಬಂದರು ಅನಾವರಣದೊಂದಿಗೆ ವಿದ್ಯುಕ್ತವಾಗಿ ಸ್ವಾಗತಿಸಿದರು. ಈ ಕಾರ್ಗೋ ಹಡಗು ಪೆಪ್ಸಿಕೋ ಇಂಡಿಯಾ ಕಂಪನಿಯ ಪಾನೀಯಗಳು, ಮತ್ತು ಆಹಾರ ಸರಕೊತ್ಪನ್ನಗಳನ್ನು ಹೊತ್ತು ತಂದಿತು. ೧೬ ಲಾರಿಗಳಷ್ಟು  ಸರಕುಗಳನ್ನು ತನ್ನ ೧೬ ಕಂಟೇನರ್ ಗಳಲ್ಲಿ ಹೊತ್ತುಕೊಂಡು ಬಂದ ಎಂ.ವಿ.ರವೀಂದ್ರನಾಥ್ ಠಾಗೋರ್ ಹೆಸರಿನ ಈ ಹಡಗು ನದಿ ದಂಡೆಗೆ ಬರುತ್ತಿ ರುವಂತೆಯೇ ಭಾರಿ ಹರ್ಷೋದ್ಗಾರಗಳ ಮಧ್ಯೆ ಜನ ಬರಮಾ ಡಿಕೊಂಡರು. ಒಳನಾಡು ಜಲಸಾರಿಗೆ ಭಾರತೀಯ ಪ್ರಾಧಿಕಾರವು ಈ ರಾಷ್ಟ್ರೀಯ ಜಲಮಾರ್ಗ-೧ (ಹಲ್ದಿಯಾ- ವಾರಣಾಸಿ ಮಾರ್ಗ) ವನ್ನು ಅಭಿವೃದ್ಧಿ ಪಡಿಸಿದೆ.

2018: ತಿರುವನಂತಪುರಂ: ಶಬರಿಮಲೈ ಘಟನಾವಳಿಗಳು ಈದಿನ ದಿಢೀರ್ ತಿರುವು ಪಡೆದಿದ್ದು, ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಪರ ಸುಪ್ರೀಂಕೋರ್ಟಿನಲ್ಲಿ ಹಾಜರಾಗಬೇಕಾಗಿದ್ದ ಹಿರಿಯ ವಕೀಲ ಸಿ.ಆರ್‍ ಯಮ ಸುಂದರಂ ಅವರು ಈಗ ಶಬರಿಮಲೈ ತೀರ್ಪಿನ ವಿರುದ್ಧ ಪುನರ್ ಪರಿಶೀಲನಾ ಕೋರಿಕೆ ಅರ್ಜಿಗಳನ್ನು ಸಲ್ಲಿಸಿರುವವರಲ್ಲಿ ಒಬ್ಬ ಅರ್ಜಿದಾರರ ಪರವಾಗಿ ಸುಪ್ರೀಂಕೋರ್ಟಿನಲ್ಲಿ ವಾದಿಸಲು ಮುಂದಾದರು. ತಿರುವಾಂಕೂರು ದೇವಸ್ವಂ ಮಂಡಳಿಯ (ಟಿಡಿಬಿ) ಪರವಾಗಿ ಈಗ ಶೇಖರ ನಫಡೆ ಅವರು ಹಾಜರಾಗಲಿದ್ದಾರೆ. ಸುಂದರಂ ಅವರು ಅರ್ಜಿ ಸಲ್ಲಿಕೆಗೆ ಮುನ್ನ ಅರ್ಜಿದಾರರಲ್ಲಿ ಒಬ್ಬರಾಗಿರುವ ನಾಯರ್ ಸೇವಾ ಸಮಾಜದ (ಎನ್‌ಎಸ್‌ಎಸ್) ಜೊತೆ ನಿಕಟವಾಗಿದ್ದ ಕಾರಣಕ್ಕಾಗಿ ಟಿಡಿಬಿ ಪರ ವಕಾಲತ್ತಿನಿಂದ ಹಿಂದೆ ಸರಿದರು. ತನ್ನ ವಕೀಲರಾದ ಬೀನಾ ಮಾಧವನ್ ಅವರ ಸ್ಥಾನಕ್ಕೆ ಸುಂದರಂ ಅವರನ್ನು ದೇವಸ್ವಂ ಮಂಡಳಿ ನಿಯೋಜಿಸಿತ್ತು. ಆರ್‍ಯಮ ಸುಂದರಂ ಅವರು ಕಾರ್ಪೋರೇಟ್ ವಕೀಲರಾಗಿದ್ದು, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (ಬಿಸಿಸಿಐ) ಹಲವಾರು ಪ್ರಕರಣಗಳಲ್ಲಿ ಪ್ರತಿನಿಧಿಸಿದ್ದರು. ೧೯೮೯ರಲ್ಲಿ, ಅವರನ್ನು ಕೇಂದ್ರ ಸರ್ಕಾರದ ಸ್ಥಾಯೀ ವಕೀಲರಾಗಿ ನೇಮಿಸಲಾಗಿತ್ತು. ೧೯೯೫ರವರೆಗೂ ಅವರು ಈ ಹುದ್ದೆಯಲ್ಲಿ ಮುಂದುವರೆದರು. ೧೯೯೫ರಲ್ಲಿ ಅವರನ್ನು ಮದ್ರಾಸ್ ಹೈಕೋರ್ಟಿನ ಹಿರಿಯ ವಕೀಲರಾಗಿ ನೇಮಿಸಲಾಯಿತು.  ಎಸ್. ರಂಗರಾಜನ್ ಪ್ರಕರಣದಲ್ಲಿ ಕೂಡಾ ಸುಂದರಂ ಅವರು ವಕೀಲರಾಗಿದ್ದರು. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ ಮಹತ್ವದ ತೀರ್ಪು ಈ ಪ್ರಕರಣದಲ್ಲಿ ಹೊರಬಿದ್ದಿತ್ತು. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಕಾರ್ಯದರ್ಶಿಯಾಗಿದ್ದ ಎನ್. ಶ್ರೀನಿವಾಸನ್ ಅವರಿಗೆ ಅಧ್ಯಕ್ಷರಾಗಲು ಹಾದಿಯನ್ನು ಸುಗಮಗೊಳಿಸಿದ ಬಿಸಿಸಿಐ ಪ್ರಕರಣದಲ್ಲಿ ಅವರು ಬಿಸಿಸಿಐಯನ್ನು ಪ್ರತಿನಿಧಿಸಿದ್ದರು. ಸುಂದರಂ ಅವರು ಚೆನ್ನೈಯಲ್ಲಿ ಜನಿಸಿದ ಖ್ಯಾತ ವಕೀಲ ಚೆಟ್ಪಟ್ ಪಟ್ಟಾಭಿರಾಮನ್ ರಾಮಸ್ವಾಮಿ ಅಯ್ಯರ್ (ಸಿಪಿ ರಾಮಸ್ವಾಮಿ ಅಯ್ಯರ್) ಅವರ ಮೊಮ್ಮಗ. ಸಿಪಿ ರಾಮಸ್ವಾಮಿ ಅಯ್ಯರ್ ಅವರು ಹಿಂದಿನ ತಿರುವಾಂಕೂರಿನಲ್ಲಿ ಎಲ್ಲ ಜಾತಿಗಳ ಪುರುಷರು ಮತ್ತು ಮಹಿಳೆಯರಿಗೆ ದೇವಾಲಯಗಳ ದ್ವಾರಗಳನ್ನು ತೆರೆಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

2018: ನವದೆಹಲಿ: ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಿದ ಕೇಂದ್ರ ಸರ್ಕಾರವು ಫ್ರಾನ್ಸಿನಿಂದ ೩೬ ರಫೇಲ್ ಯುದ್ಧ ವಿಮಾನ ಖರೀದಿಗೆ ಸಂಬಂಧಿಸಿದ ನಿರ್ಣಯಗಳ ವಿವರಗಳನ್ನು ಒಳಗೊಂಡ ೧೬ ಪುಟಗಳ ದಾಖಲೆಯನ್ನು ಸುಪ್ರೀಂಕೋರ್ಟಿಗೆ  ಸಲ್ಲಿಸಿತು. ಸುಪ್ರೀಂಕೋರ್ಟ್ ಉಸ್ತುವಾರಿಯಲ್ಲಿ ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ನಡೆಯಬೇಕು ಎಂಬುದಾಗಿ ಆಗ್ರಹಿಸಿ ಕೋರ್ಟ್ ಮೆಟ್ಟಿಲೇರಿದ್ದ ಅರ್ಜಿದಾರರಿಗೂ ಕೇಂದ್ರವು ದಾಖಲೆಯ ಪ್ರತಿಯನ್ನು ಒದಗಿಸಿತು.   ‘೩೬ ರಫೇಲ್ ಯುದ್ಧ ವಿಮಾನ ಖರೀದಿ ಆದೇಶ ನೀಡಲು ಕಾರಣವಾದ ನಿರ್ಣಯ ಪ್ರಕ್ರಿಯೆಯ ಹೆಜ್ಜೆಗಳ ವಿವರಗಳು ಶೀರ್ಷಿಕೆಯ ದಾಖಲೆಯು ೨೦೧೩ರ ರಕ್ಷಣಾ ಖರೀದಿ ನಿಯಮಾವಳಿಯನ್ನು (ಡಿಪಿಪಿ) ಅನುಸರಿಸಲಾಗಿದೆ ಎಂದು ತಿಳಿಸಿತು.  ವಾಯು ಸಿಬ್ಬಂದಿ ಉಪ ಮುಖ್ಯಸ್ಥ ಶ್ರೇಣಿಯ ಅಧಿಕಾರಿಯೊಬ್ಬರ ನೇತೃತ್ವದಲ್ಲಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಫ್ರಾನ್ಸ್ ಜೊತೆಗೆ ಮಾತುಕತೆ ನಡೆಸಲು ಭಾರತೀಯ ಸಂಧಾನಕಾರರ ತಂಡವನ್ನು ರಚಿಸಲಾಗಿತ್ತು. ಈ ತಂಡವು ಫ್ರಾನ್ಸ್ ಜೊತೆಗೆ ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲ ಮಾತುಕತೆ ನಡೆಸಿ ಅತ್ಯುತ್ತಮವಾದ ಒಪ್ಪಂದವನ್ನು ರೂಪಿಸಿ, ೨೦೧೬ರ ಜುಲೈಯಲ್ಲಿ ವರದಿ ಸಲ್ಲಿಸಿತು. ಬಳಿಕ ಅಂತರ್ ಸರ್ಕಾರ ಒಪ್ಪಂದಕ್ಕೆ ಸಹಿ ಹಾಕುವ ಮುನ್ನ ಭದ್ರತೆ ಕುರಿತ ಸಂಪುಟ ಸಮಿತಿ ಮತ್ತು ರಕ್ಷಣಾ ಖರೀದಿ ಮಂಡಳಿಯ ಅನುಮೋದನೆ ಪಡೆಯಲಾಗಿತ್ತು ಎಂದು ದಾಖಲೆ ತಿಳಿಸಿತು. ಶಾಸನಬದ್ಧವಾಗಿಯೇ ಸಾರ್ವಜನಿಕ ಜಾಲತಾಣದಲ್ಲಿ ಪ್ರಕಟಿಸಬಹುದಾದ ಯುದ್ಧ ವಿಮಾನ ಖರೀದಿಗಾಗಿ ನಿರ್ಣಯ ಪ್ರಕ್ರಿಯೆಯಲ್ಲಿನ ಹೆಜ್ಜೆಗಳ ವಿವರಗಳನ್ನು ತನ್ನ ಮುಂದೆ ಅರ್ಜಿಗಳನ್ನು ಸಲ್ಲಿಸಿದ ಕಕ್ಷಿದಾರರಿಗೂ ಒದಗಿಸುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು. ವಿಮಾನಗಳ ದರ ವಿವರಗಳನ್ನು ಮೊಹರಾದ ಲಕೋಟೆಯಲ್ಲಿ ೧೦ ದಿನಗಳ ಒಳಗಾಗಿ ತನ್ನ ಮುಂದೆ ಸಲ್ಲಿಸುವಂತೆಯೂ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಿತು. ಕೇಂದ್ರ ಸರ್ಕಾರದಿಂದ ಮಾಹಿತಿ ಸಲ್ಲಿಕೆಯ ಬಳಿಕ ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ ೧೪ಕ್ಕೆ ಮುಂದೂಡಿದ ನ್ಯಾಯಾಲಯಕ್ಕೆ ದರ ವಿವರಗಳು ’ಅನನ್ಯವಾಗಿದ್ದು ನ್ಯಾಯಾಲಯದ ಜೊತೆ ಹಂಚಿಕೊಳ್ಳಲು ಸಾಧ್ಯವಿಲ್ಲ ಎಂಬುದಾಗಿ ಕೇಂದ್ರವು ಖಂಡ ತುಂಡವಾಗಿ ತಿಳಿಸಿತು.  ಫ್ರೆಂಚ್ ಸಂಸ್ಥೆ ಡಸ್ಸಾಲ್ಟ್ ಹಿಂದೆ ನೀಡಿದ್ದ ಕೊಡುಗೆಗೆ ಹೋಲಿಸಿದರೆ ಅತ್ಯುತ್ತಮವಾದ ಒಪ್ಪಂದವನ್ನು, ೩೬ ರಫೇಲ್ ಯುದ್ಧ ವಿಮಾನಗಳ ಖರೀದಿ ವಿಚಾರದಲ್ಲಿ ಬೆಲೆ ಹಾಗೂ ವಿಮಾನಗಳ ನಿರ್ವಹಣೆ ಕುರಿತು ಸಂಧಾನಕಾರರ ತಂಡವು ರೂಪಿಸಿದೆ ಎಂದು ಸರ್ಕಾರವು ಸುಪ್ರೀಂಕೋರ್ಟಿಗೆ ಕಳೆದ ತಿಂಗಳು ಸಲ್ಲಿಸಿದ್ದ ತನ್ನ ವರದಿಯಲ್ಲಿ ಹೇಳಿದೆ. ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ವರದಿಯ ಪರಿಷ್ಕೃತ ಪ್ರತಿಯನ್ನು ಸೋಮವಾರ ಅರ್ಜಿದಾರರಿಗೆ ಒದಗಿಸಲಾಯಿತು. ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟವು ಎನ್‌ಡಿಎ) ದರವಿವರಗಳನ್ನು ಬಹಿರಂಗ ಪಡಿಸಿಲ್ಲ, ಆದರೆ ೨೦೧೨ರಲ್ಲಿ ಯುಪಿಎ ರೂಪಿಸಿದ್ದ ಒಪ್ಪಂದವು ಕಾರ್‍ಯಸಾಧ್ಯವಾದುದಾಗಿರಲಿಲ್ಲ ಎಂದು ಮಾಜಿ ರಕ್ಷಣಾ ಸಚಿವ ಮನೋಹರ ಪರಿಕ್ಕರ್ ಈ ಹಿಂದೆಯೇ ಹೇಳಿದ್ದರು. ಹಾಲಿ ವ್ಯವಹಾರದಲ್ಲಿ ಅಗತ್ಯಕ್ಕೆ ಅನುಗುಣವಾದ ಶಸ್ತ್ರಾಸ್ತ್ರಗಳು ಒಳಗೊಂಡಿವೆ ಎಂದು ಎನ್ ಡಿಎ ಹೇಳಿತ್ತು. ಡಸ್ಸಾಲ್ಟ್ ನಿರ್ಮಿತ ೩೬ ಯುದ್ಧ ವಿಮಾನಗಳನ್ನು ಖರೀದಿಸಲು ೮.೭ ಬಿಲಿಯನ್ (೮೭೦ ಕೋಟಿ) ಡಾಲರ್ ಮೌಲ್ಯದ ಅಂತರ-ಸರ್ಕಾರ ಒಪ್ಪಂದಕ್ಕೆ ಎನ್ ಡಿಎ ಸರ್ಕಾರ ಕೈಗೊಂಡ ನಿರ್ಣಯವನ್ನು, ಒಪ್ಪಂದಕ್ಕೆ ಸಹಿ ಹಾಕಿದ ಒಂದು ವರ್ಷದ ಬಳಿಕ, ೨೦೧೫ರ ಏಪ್ರಿಲ್‌ನಲ್ಲಿ ಪ್ರಕಟಿಸಲಾಗಿತ್ತು.
ಹಿಂದಿನ ಸಂಯುಕ್ತ ಪ್ರಗತಿಪರ ಮೈತ್ರಿಕೂಟ (ಯುಪಿಎ) ಆಡಳಿತವು ೧೨೬ ರಫೇಲ್ ಯುದ್ಧ ವಿಮಾನ ಖರೀದಿಗೆ ಕೈಗೊಂಡಿದ್ದ ನಿರ್ಣಯಕ್ಕೆ ಬದಲಾಗಿ ಎನ್‌ಡಿಎ ಈ ಹೊಸ ಒಪ್ಪಂದವನ್ನು ಅಂತಿಮಗೊಳಿಸಿತ್ತು. ಯುಪಿಎ ನಿರ್ಣಯದ ಪ್ರಕಾರ ೧೨೬ ಯುದ್ಧ ವಿಮಾನಗಳ ಪೈಕಿ ೧೦೮ ವಿಮಾನಗಳನ್ನು ಸರ್ಕಾರಿ ಸ್ವಾಮ್ಯದ ಹಿಂದುಸ್ಥಾನ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಭಾರತದಲ್ಲಿ ನಿರ್ಮಿಸಬೇಕಾಗಿತ್ತು. ಪ್ರಸ್ತುತ ತಲಾ ೧,೬೭೦ ಕೋಟಿ ರೂಪಾಯಿ ದರದಲ್ಲಿ ಭಾರತ ಈಗ ರಫೇಲ್ ವಿಮಾನಗಳನ್ನು ಖರೀದಿಸುತ್ತಿದ್ದು, ಈ ದರವು ಯುಪಿಎ ವಿಮಾನ ಖರೀದಿಗೆ ಯತ್ನಿಸುತ್ತಿದ್ದಾಗ ಕಂಪೆನಿಯು ನೀಡಿದ್ದ ತಲಾ ೫೨೬ ಕೋಟಿ ರೂಪಾಯಿಗಳ ಕೊಡುಗೆಗೆ ಹೋಲಿಸಿದರೆ ಮೂರು ಪಟ್ಟು ಹೆಚ್ಚಿನದಾಗಿದೆ ಎಂದು ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಪ್ರತಿಪಾದಿಸುವುದರೊಂದಿಗೆ ಎನ್‌ಡಿಎ  ಸರ್ಕಾರ ಅಂತಿಮಗೊಳಿಸಿದ ರಫೇಲ್ ವಿಮಾನ ಖರೀದಿ ಒಪ್ಪಂದವು ವಿವಾದಕ್ಕೆ ಗುರಿಯಾಗಿತ್ತು. ಹಿಂದಿನ ಒಪ್ಪಂದದ ಪ್ರಕಾರ ಎಚ್‌ಎಎಲ್ ಜೊತೆಗೆ ತಂತ್ರಜ್ಞಾನ ವರ್ಗಾವಣೆ ವಿಚಾರವೂ ಒಳಗೊಂಡಿತ್ತು ಎಂದೂ ಕಾಂಗ್ರೆಸ್ ಪ್ರತಿಪಾದಿಸಿತ್ತು.

2018: ಜಮ್ಮು: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್ ಪಡೆಗಳು ಮರೆಯಿಂದ ಅಡಗಿ ನಡೆಸಿದ ದಾಳಿಯಲ್ಲಿ ಭಾರತೀಯ ಯೋಧನೊಬ್ಬ ಹುತಾತ್ಮನಾಗಿದ್ದು, ಇನ್ನೊಬ್ಬ ಯೋಧ ಗಾಯಗೊಂಡರು. ಪೀರ್ ಪಂಜಲ್ ವಲಯದಲ್ಲಿ ಪಾಕಿಸ್ತಾನಿ ಪಡೆಗಳು ಅಡಗಿ ನಡೆಸಿದ ನಾಲ್ಕನೇ ದಾಳಿ ಘಟನೆ ಇದಾಗಿದೆ. ಹಿಂದಿನ ದಿನದವರೆಗೆ ಇಂತಹ ದಾಳಿಗಳಿಗೆ ಸಿಲಕಿ ಮೂವರು ಭಾರತೀಯ ಯೋಧರು ಹುತಾತ್ಮರಾಗಿದ್ದು, ಸೇನಾ ಪೋರ್ಟ್‌ರ್ ಒಬ್ಬರೂ ಪ್ರಾಣ ಕಳೆದುಕೊಂಡರು.  ಈದಿನ ಪೂಂಚ್ ವಿಭಾಗದ ಮೆಂಧರ್‌ನಲ್ಲಿ ದಾಳಿ ನಡೆಯಿತು ಎಂದು ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ದೇವೇಂದರ್ ಆನಂದ್ ದೃಢ ಪಡಿಸಿದರು.

2018: ರಾಯ್ ಪುರ: ಮಾವೋವಾದಿ ನಕ್ಸಲೀಯರ ಚುನಾವಣಾ ಬಹಿಷ್ಕಾರ ಕರೆಗೆ ಸೊಪ್ಪು ಹಾಕದ ಮತದಾರರು ಛತ್ತೀಸ್ ಗಢ ವಿಧಾನಸಭೆಗೆ ಈದಿನ ೮ ಜಿಲ್ಲೆಗಳ ೧೮ ಕ್ಷೇತ್ರಗಳಲ್ಲಿ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಉತ್ಸಾಹದಿಂದಲೇ ಪಾಲ್ಗೊಂಡರು. ಶೇಕಡಾ ೭೦ರಷ್ಟು ಮತದಾನವಾಯಿತು. ಈ ಮಧ್ಯೆ ಬಿಜಾಪುರ ಜಿಲ್ಲೆಯಲ್ಲಿ ಸಂಭವಿಸಿದ ಗುಂಡಿನ ಘರ್ಷಣೆಯಲ್ಲಿ ಭದ್ರತಾ ಪಡೆಗಳು ಕನಿಷ್ಠ ನಾಲ್ಕು ಮಂದಿ ಮಾವೋವಾದಿ ನಕ್ಸಲೀಯರನ್ನು ಕೊಂದು ಹಾಕಿದವು. ದಾಂತೆವಾಡದಲ್ಲಿ ಸುಧಾರಿತ ಸ್ಫೋಟಕ ಒಂದನ್ನು ಸ್ಫೋಟಿಸಲಾಗಿದ್ದು, ಉಳಿದೆಡೆ ಚುನಾವಣೆ ಬಹುತೇಕ ಶಾಂತವಾಗಿತ್ತು.  ೨೦೧೮ರ ಛತ್ತೀಸ್‌ಗಢದ ಮೊದಲ ಹಂತದ ಮತದಾನ ಮುಕ್ತಾಯಗೊಂಡಿದ್ದು ಶೇಕಡಾ ೭೦ರಷ್ಟು ಮತದಾನವಾಗಿದೆ ಎಂದು ಉಪ ಚುನಾವಣಾ ಕಮೀಷನರ್ ಉಮೇಶ ಸಿನ್ಹ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಲಭ್ಯ ಮಾಹಿತಿಗಳ ಪ್ರಕಾರ ಖುಜಿ ಕ್ಷೇತ್ರದಲ್ಲಿ ಅತ್ಯಂತ ಹೆಚ್ಚು, ಶೇಕಡಾ ೭೨ರಷ್ಟು ಮತದಾನವಾಯಿತು.  ದಾಂತೆವಾಡದಲ್ಲಿ ಅತ್ಯಂತ ಕಡಿಮೆ, ಶೇಕಡಾ ೪೯ರಷ್ಟು ಮತದಾನವಾಯಿತು.  ಕೊಂಡಗಾಂವದಲ್ಲಿ ಶೇಕಡಾ ೬೧.೪೭, ಕೇಶ್ಕಲ್ ನಲ್ಲಿ ಶೇಕಡಾ ೬೩.೫೧, ಕಂಕೇರ್ ನಲ್ಲಿ ಶೇಕಡಾ ೬೨, ಬಸ್ತಾರ್ ನಲ್ಲಿ ಶೇಕಡಾ ೫೮, ಖೈರ್ ಗಢದಲ್ಲಿ ಶೇಕಡಾ ಮತ್ತು ಡೊಂಗರಗಢ ಮತ್ತು ಡೊಂಗರಗಾಂವ್ನಲ್ಲಿ ತಲಾ ಶೇಕಡಾ ೭೧ರಷ್ಟು ಮತದಾನವಾಯಿತು. ಬಿಜಾಪುರದ ಮಜಿಗುಡ ಗ್ರಾಮದ ಸಮೀಪ ಅರಣ್ಯ ಪ್ರದೇಶದಲ್ಲಿ ಸಿಆರ್ ಪಿಎಫ್ ಸಿಬ್ಬಂದಿ ಮತ್ತು ಮಾವೋವಾದಿಗಳ ಮಧ್ಯೆ ಸಂಭವಿಸಿದ ಗುಂಡಿನ ಘರ್ಷಣೆಯಲ್ಲಿ ಕನಿಷ್ಠ ೪ ಮಾವೋವಾದಿಗಳು ಹತರಾಗಿದ್ದು, ಇಬ್ಬರು ಸಿಆರ್ ಪಿಎಫ್ ಸಿಬ್ಬಂದಿ ಗಾಯಗೊಂಡರು. ೫ ನಕ್ಸಲೀಯರು ಸತ್ತಿದ್ದಾರೆ ಎಂದು ವರದಿಗಳು ಬಂದಿದ್ದು, ನಿರಂತರ ಗುಂಡಿನ ವಿನಿಮಯದ ಕಾರಣ ಸತ್ತ ನಕ್ಸಲೀಯರ ಶವಗಳನ್ನು ಸಂಗ್ರಹಿಸಲಾಗಿಲ್ಲ ಎಂದು ವಿಶೇಷ ಪೊಲೀಸ್ ಮಹಾ ನಿರ್ದೇಶಕ ಡಿ.ಎಂ. ಅವಸ್ಥಿ ನುಡಿದರು. ಮೊದಲ ಹಂತದ ಚುನಾವಣೆಯಲ್ಲಿ ೧೯೦ ಅಭ್ಯರ್ಥಿಗಳು ಸ್ಪರ್ಧಿಸಿದ್ದು ಮತದಾರ ಪಟ್ಟಿಯಲ್ಲಿ ೩೧,೮೦,೦೧೪ ಮತದಾರರಿದ್ದರು. ೧೮ ಕ್ಷೇತ್ರಗಳ ಪಐಕಿ ೧೦ ಕ್ಷೇತ್ರಗಳಲ್ಲಿ ಬೆಳಗ್ಗೆ ೭ ಗಂಟೆಗೆ ಮತದಾನ ಆರಂಭವಾದರೆ, ಉಳಿದ ಕ್ಷೇತ್ರಗಳಲ್ಲಿ ಬೆಳಗ್ಗೆ ೮ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ಮತದಾನ ನಡೆಯಿತು. ಸುಧಾರಿತ ಸ್ಫೋಟಕ ಸಾಧನ ಸ್ಫೋಟ: ದಾಂತೆವಾಡ ಜಿಲ್ಲೆಯಲ್ಲಿ ಚುನಾವಣೆ ಬಹಿಷ್ಕಾರಕ್ಕೆ ಕರೆಕೊಟ್ಟಿದ್ದ ನಕ್ಸಲೀಯರು ಸುಧಾರಿತ ಸ್ಫೋಟಕ ಸಾಧನ ಒಂದನ್ನು ಬೆಳಗ್ಗೆ ೫.೩೦ರ ವೇಳೆಗೆ ಸ್ಫೋಟಿಸಿದ್ದಾರೆ, ಆದರೆ ಯಾವುದೇ ಸಾವು ನೋವಿನ ವರದಿ ಬಂದಿಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ತುಮಾಕ್‌ಪಾಲ್- ನಯನಾರ್ ರಸ್ತೆಯಲ್ಲಿ ಚುನಾವಣಾ ಸಿಬ್ಬಂದಿಗೆ ಮತಗಟ್ಟೆಗೆ ತೆರಳಲು ಭದ್ರತಾ ಸಿಬ್ಬಂದಿ ರಕ್ಷಣೆ ಒದಗಿಸಿದ್ದ ವೇಳೆಯಲ್ಲಿ ಬೆಳಗ್ಗೆ ೫.೩೦ರ ವೇಳೆಯಲ್ಲಿ ಸ್ಫೋಟ ಸಂಭವಿಸಿತು ಎಂದು ಹಿರಿಯ ಅಧಿಕಾರಿ ಹೇಳಿದರು. ಬಿಜಾಪುರ ಜಿಲ್ಲೆಯಲ್ಲಿ ಪೊಲೀಸರು ಒಂದು ಕಿಗ್ರಾಂನಷ್ಟು ಸ್ಫೋಟಕಗಳನ್ನು ವಶ ಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿ ನುಡಿದರು. ಪ್ರಧಾನಿ ಮನವಿ: ಮತದಾನ ಆರಂಭಕ್ಕೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ದೊಡ್ಡ ಸಂಖ್ಯೆಯಲ್ಲಿ ಮತಗಟ್ಟೆಗಳಿಗೆ ಬಂದು ಮತದಾನ ಮಾಡುವಂತೆ ಜನರನ್ನು ಆಗ್ರಹಿಸಿದ್ದರು.  ‘ಪ್ರಜಾ ಪ್ರಭುತ್ವದ ಉತ್ಸವದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಳ್ಳಿ ಎಂದು ಪ್ರಧಾನಿ ಟ್ವೀಟ್ ಮೂಲಕ ಮತದಾರರಿಗೆ ಮನವಿ ಮಾಡಿದ್ದರು.



2016: ನವದೆಹಲಿ: ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ನಿನ  ನೂತನ ಅಧ್ಯಕ್ಷರಾಗಿ ಹಾಕಿ ಇಂಡಿಯಾ ಅಧ್ಯಕ್ಷ ನರೀಂದರ್ ಬಾತ್ರ ಅವರು ದುಬೈಯಲ್ಲಿ ಆಯ್ಕೆಯಾದರು. ಅವರು ತ್ರಿಕೋಣ ಸ್ಪರ್ಧೆಯಲ್ಲಿ ಆಸ್ಟ್ರೀಯಾದ ಕೆನ್ ರೀಡ್ ಮತ್ತು ಐರ್ಲೆಂಡಿನ ಡೇವಿಡ್ ಬಾಲಬಿರ್ನೀ ಅವರನ್ನು ಪರಾಭವಗೊಳಿಸಿದರು. ಇದರೊಂದಿಗೆ ಹುದ್ದೆಗೆ ಏರಿದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಬಾತ್ರ ಪಾತ್ರರಾದರು. ಕಳೆದ ಹಲವಾರು ದಶಕಗಳಿಂದ ಸಂಘಟನೆ ಐರೋಪ್ಯರ ಸ್ವಾಮ್ಯದಲ್ಲಿತ್ತು. 59 ಹರೆಯದ ನರೀಂದರ್ ಬಾತ್ರ ಅವರು 2014 ಅಕ್ಟೋಬರಿನಲ್ಲಿ ಹಾಕಿ ಇಂಡಿಯಾದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಇದಕ್ಕೆ ಮುನ್ನ ಅವರು ಹಾಕಿ ಇಂಡಿಯಾದ ಕಾರ್ಯದರ್ಶಿಯಾಗಿದ್ದರು. ಕಳೆದ ಕೆಲವು ವಾರಗಳಿಂದ ವಿಶ್ವಾದ್ಯಂತ ಸಂಚರಿಸಿ ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್ ಅಧ್ಯಕ್ಷ ಸ್ಥಾನಕ್ಕಾಗಿ ಪ್ರಚಾರ ನಡೆಸಿದ್ದರು

2016: ನವದೆಹಲಿ: 500 ರೂಪಾಯಿ ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ರದ್ದತಿ ಹಿನ್ನೆಲೆಯಲ್ಲಿ ನೋಟುಗಳ ವಿನಿಮಯ ಕಾರ್ಯಾಚರಣೆಯ ಮೇಲೆ ವಿತ್ತ ಸಚಿವಾಲಯ ನಿರಂತರ ನಿಗಾ ಇರಿಸಿದೆ. ಕಳೆದ ಎರಡು ದಿನಗಳಲ್ಲಿ ಈದಿನ ಮಧ್ಯಾಹ್ನ 12 ಗಂಟೆವರೆಗೆ 2 ಲಕ್ಷ ಕೋಟಿ ರೂಪಾಯಿ ಬ್ಯಾಂಕುಗಳಿಗೆ ಜಮೆ ಆಗಿದೆ. ಈದಿನ ಒಂದೇ ದಿನ 47868 ಕೋಟಿ ರೂಪಾಯಿ ಜಮೆ ಆಗಿದೆ. ಇಂದು ಮಧ್ಯಾಹ್ನ 12 ಗಂಟೆವರೆಗೆ 58 ಲಕ್ಷ ಜನ ನೋಟುಗಳ ವಿನಿಮಯ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ವಿತ್ತಸಚಿವ ಅರುಣ್ ಜೇಟ್ಲಿ ಅವರು ಇಲ್ಲಿ ಹೇಳಿದರು. ದೇಶಾದ್ಯಂತ ಜನ ಹಣಕ್ಕಾಗಿ ಪರದಾಡುತ್ತಿರುವ ಹಿನ್ನೆಲೆಯಲ್ಲಿ ನವದೆಹಲಿಯ ರಾಷ್ಟ್ರೀಯ ಮಾಧ್ಯಮ ಕೇಂದ್ರದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಹೊಸ ವ್ಯವಸ್ಥೆ ಜಾರಿ ನಿಟ್ಟಿನಲ್ಲಿ ಸಹಕರಿಸುತ್ತಿರುವುದಕ್ಕಾಗಿ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ಜೊತೆಗೇ ಜನರಿಗೆ ಆಗುತ್ತಿರುವ ತೊಂದರೆಗಾಗಿ ವಿಷಾದವನ್ನೂ ವ್ಯಕ್ತ ಪಡಿಸಿದರು. ನೋಟು ವಿನಿಮಯ ವಿಚಾರದಲ್ಲಿ ಯಾವುದೇ ಅಕ್ರಮಗಳಿಗೂ ಸರ್ಕಾರ ಆಸ್ಪದ ನೀಡುವುದಿಲ್ಲ. ಗೌಪ್ಯತೆ ಕಾಪಾಡಬೇಕಾಗಿದ್ದುದರಿಂದ ನೋಟು ರದ್ದು ನಿರ್ಧಾರವನ್ನು ಮುಂಚಿತವಾಗಿ ಪ್ರಕಟಿಸಲು ಸಾಧ್ಯವಿರಲಿಲ್ಲ ಎಂದು ನುಡಿದ ಜೇಟ್ಲಿ ಹೊಸ 2000 ರೂಪಾಯಿ ಮುಖಬೆಲೆಯ ನೋಟುಗಳಿಗೆ ಅನುಗುಣವಾಗಿ ಎಟಿಎಂಗಳಲ್ಲಿ ಕೆಲವು ವಿನ್ಯಾಸ ಬದಲಾವಣೆ ಮಾಡಬೇಕಾಗಿದೆ. ಪ್ರಕ್ರಿಯೆ ಜಾರಿಯಲ್ಲಿದೆ, ಅದಕ್ಕೆ 2-3 ವಾರ ಬೇಕಾಗಬಹುದು ಎಂದು ವಿವರಿಸಿದರು ಬ್ಯಾಂಕುಗಳು ಪರಿಸ್ಥಿತಿ ಬಗ್ಗೆ ಆಗಿಂದಾಗ್ಗೆ ನಮಗೆ ಮಾಹಿತಿ ನೀಡುತ್ತಿವೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಇತರ ಬ್ಯಾಂಕುಗಳು, ಪೋಸ್ಟ್ ಆಫೀಸ್ ಸೇರಿದಂತೆ ವಿವಿಧ ಕಡೆಗಳು, ಎಟಿಎಂ ಮೂಲಕ ಜನ ಹಣ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು. ನೋಟುಗಳನ್ನು ರದ್ದು ಪಡಿಸುವ ನಿರ್ಧಾರವನ್ನು ಸರ್ಕಾರ ಕೈಗೊಳ್ಳುವಾಗಲೇ ಜನ ದೊಡ್ಡ ಸಂಖ್ಯೆಯಲ್ಲಿ ಬ್ಯಾಂಕುಗಳಿಗೆ ಹೋಗಬೇಕಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಇದೊಂದು ಬೃಹತ್ ಕಾರ್ಯಾಚರಣೆ. ವಿವಿಧ ಪಕ್ಷಗಳು ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿವೆ. ಆದರೆ ಕೆಲವು ಪಕ್ಷಗಳ ಪ್ರತಿಕ್ರಿಯೆ ನಿಜಕ್ಕೂ ಬೇಜಾಬ್ದಾರಿಯುತವಾದದ್ದು ಎಂದು ಜೇಟ್ಲಿ ನುಡಿದರು. ಶೇಕಡಾ 86ರಷ್ಟು ನೋಟುಗಳನ್ನು ವಿನಿಮಯ ಮಾಡಬೇಕಾದ ಸ್ಥಿತಿ ಇರುವ ಕಾರಣ ಮೊದಲ ಕೆಲ ದಿನ ಸಂಕಷ್ಟ ಎದುರಾಗಬಹುದು ಎಂಬ ನಿರೀಕ್ಷೆ ನಮಗಿತ್ತು ಎಂದು ಅವರು ಹೇಳಿದರು. ನೋಟುಗಳಲ್ಲಿ ಎಲೆಕ್ಟ್ರಾನಿಕ್ ಚಿಪ್ಗಳನ್ನು ಅಳವಡಿಸಲಾಗಿದೆ ಎಂಬ ವದಂತಿಯನ್ನು ಮೊದಲ ದಿನವೇ ಹಬ್ಬಿಸಲಾಗಿತ್ತು. ಈಗ ಉಪ್ಪು ಅಭಾವದ ವದಂತಿ ಹರಡಲಾಗಿದೆ. ಇವೆಲ್ಲ ಕೇವಲ ವದಂತಿಗಳಷ್ಟೆ ಎಂದು ನುಡಿದ ಜೇಟ್ಲಿ ಅಕ್ರಮ ಚಟುವಟಿಕೆಗಳಲ್ಲಿ ನಿರತರಾದ ಯಾರೇ ವ್ಯಕ್ತಿಯ ವಿರುದ್ಧ ಸಂಬಂಧ ಪಟ್ಟ ಇಲಾಖೆ ಕಠಿಣ ಕ್ರಮ ಕೈಗೊಳ್ಳುವುದು ಎಂದು ಎಚ್ಚರಿಕೆ ನೀಡಿದರು

2016: ಟೋಕಿಯೋ: ಕಾಳಸಂತೆಕೋರರ ವಿರುದ್ಧ ತಮ್ಮ ಸರ್ಕಾರವು ಕೈಗೊಂಡ ಅತ್ಯಂತ ಬೃಹತ್ ಸ್ವಚ್ಛತಾ ಕ್ರಮ ಕರೆನ್ಸಿ ನಿಷೇಧ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಹೇಳಿದರು. ಜಪಾನಿನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ 500 ರೂಪಾಯಿ ಮತ್ತು 1000 ರೂಪಾಯಿ ನೋಟುಗಳನ್ನು ರದ್ದು ಪಡಿಸಿದ ಬಳಿಕ ದೇಶದಲ್ಲಿ ಜನರು ಎದುರಿಸುತ್ತಿರುವ ಕಷ್ಟದ ಅರಿವು ನನಗೆ ಇದೆ. ಆದರೆ ರಾಷ್ಟ್ರದ ವಿಶಾಲ ಹಿತದೃಷ್ಟಿಯಿಂದ ಕ್ರಮ ಅತ್ಯಗತ್ಯವಾಗಿತ್ತು ಎಂದು ಪ್ರತಿಪಾದಿಸಿದರು. ‘ನಾನು ಪ್ರತಿಯೊಬ್ಬ ಭಾರತೀಯನಿಗೂ ನಮಸ್ಕರಿಸುತ್ತೇನೆ. ಹಲವು ಕುಟುಂಬಗಳಲ್ಲಿ ಮದುವೆಗಳಿದ್ದವು. ಹಲವರಿಗೆ ಆರೋಗ್ಯ ಸಮಸ್ಯೆಗಳಿದ್ದವು. ಆದರೂ ಅವರೆಲ್ಲರೂ ತೊಂದರೆಗಳನ್ನು ಸಹಿಸಿಕೊಂಡು ನಿರ್ಣಯವನ್ನು ಅಂಗೀಕರಿಸಿದ್ದಾರೆ. 2.5 ಲಕ್ಷ ರೂಪಾಯಿವರೆಗೆ ಬ್ಯಾಂಕುಗಳಲ್ಲಿ ಸಲ್ಲಿಸಲು ಯಾವುದೇ ತೊಂದರೆಯೂ ಇಲ್ಲ. ಆದ್ದರಿಂದ ಜನ ಸಾಮಾನ್ಯರಿಗೆ ಯಾವ ತೊಂದರೆಯೂ ಆಗುವುದಿಲ್ಲ ಎಂದು ಪ್ರಧಾನಿ ನುಡಿದರು. ಇದಕ್ಕೆ ಮುನ್ನ ಪ್ರಧಾನಿಯವರು ಜಪಾನಿನ ಪ್ರಧಾನಿ ಶಿಂಜೊ ಅಬೆ ಅವರ ಜೊತೆಗೆ ಖ್ಯಾತ ಶಿಂಕನ್ಸೆನ್ ಬುಲೆಟ್ ರೈಲಿನ ಮೂಲಕ ಕೊಬೆಗೆ ಪ್ರಯಾಣಿಸಿ, ಕವಾಸಾಕಿ ಹೆವಿ ಇಂಡಸ್ಟ್ರೀಸ್ಗೆ ಭೇಟಿ ನೀಡಿದರು. ಶಿಂಕನ್ಸೆನ್ ಬುಲೆಟ್ ರೈಲು ತಂತ್ರಜ್ಞಾನವನ್ನು ದೇಶದಲ್ಲಿ ಮುಂಬೈ-ಅಹಮದಾಬಾದ್ ಮಧ್ಯ ಅಳವಡಿಸಲು ಭಾರತ- ಜಪಾನ್ ಯೋಜನೆ ರೂಪಿಸಿವೆ. ಬಳಿಕ ಒಸಾಕಾ ಮೂಲಕ ಭಾರತಕ್ಕೆ ವಾಪಸ್ ಪಯಣ ಹೊರಟರು.

2016: ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆರೋಗ್ಯ ಸಂಪೂರ್ಣ ಸುಧಾರಿಸಿದೆ. ಪೂರ್ಣ ಗುಣಮುಖ ಆಗಿರುವುದಾಗಿ ಅವರಿಗೆ ಅನಿಸಿದರೆ ಅವರು ಮನೆಗೆ ಹೋಗಬಹುದುಎಂದು ಚೆನ್ನೈನ ಅಪೋಲೊ ಆಸ್ಪತ್ರೆಯ ಅಧ್ಯಕ್ಷ ಪ್ರತಾಪ್ಸಿ. ರೆಡ್ಡಿ ತಿಳಿಸಿದರು. ಸೆಪ್ಟೆಂಬರ್‌ 22ರಂದು ಆಸ್ಪತ್ರೆಗೆ ದಾಖಲಾಗಿದ್ದ ಜಯಲಲಿತಾ ಅವರು ಈವರೆಗೆ ಆಸ್ಪತ್ರೆಯಲ್ಲೇಇದ್ದಾರೆ. ಜಯಲಲಿತಾ ಸಂಪೂರ್ಣ ಗುಣಮುಖರಾಗಿದ್ದರೂ ಇನ್ನೂಕೆಲ ಕಾಲ ಆಸ್ಪತ್ರೆಯಲ್ಲೇವಿಶ್ರಾಂತಿ ತೆಗೆದುಕೊಳ್ಳಿ ಎಂದು ಎಐಎಡಿಎಂಕೆ ಪಕ್ಷದ ಮುಖಂಡರು ಅವರಿಗೆ ಸಲಹೆ ಮಾಡಿದ್ದಾರೆ. ಜಯಲಲಿತಾ ಅವರು ಮನೆಗೆ ಹೋದರೆ ಮನೆಯಲ್ಲಿ ಸುಮ್ಮನೇ ಕೂರುವವರಲ್ಲ. ಅದೂ ಇದೂ ಕೆಲಸದಲ್ಲಿ ತೊಡಗಿಕೊಳ್ಳುತ್ತಾರೆ. ಅದರಿಂದ ಅವರಿಗೆ ಆಯಾಸವಾಗಬಹುದು. ಹೀಗಾಗಿ ಅವರು ಇನ್ನೂ ಕೆಲ ಸಮಯ ಆಸ್ಪತ್ರೆಯಲ್ಲೇ ಇರಲಿಎಂದು ಎಐಎಡಿಎಂಕೆ ಪಕ್ಷದ ಹಿರಿಯ ಮುಖಂಡ ಪೊನ್ನಯ್ಯನ್ತಿಳಿಸಿದರು.
2016: ರಾಮನಗರ: ಮಾಗಡಿ ತಾಲ್ಲೂಕಿನ ತಿಪ್ಪಗೊಂಡನಹಳ್ಳಿ ಜಲಾಶಯದ ಹಿನ್ನೀರಿನಲ್ಲಿ
ನಡೆಯುತ್ತಿದ್ದ, ದುನಿಯಾ ವಿಜಯ್ನಟನೆಯಮಾಸ್ತಿಗುಡಿಚಿತ್ರದ ಕೊನೆಯ ಹಂತದ ಚಿತ್ರೀಕರಣದ ವೇಳೆ ಇಬ್ಬರು ಕಲಾವಿದರು ನೀರಿನಲ್ಲಿ ಮುಳುಗಿದ ಪ್ರಕರಣದ ಆರೋಪಿ ಸ್ಟಂಟ್ ಮಾಸ್ಟರ್ ರವಿ ವರ್ಮಾ ಮಾಗಡಿ ಪೊಲೀಸ್ ಠಾಣೆಯಲ್ಲಿ ಶರಣಾದರು. ಸಿನಿಮಾ ಚಿತ್ರೀಕರಣದ ವೇಳೆ ಖಳ ನಟರಾದ ಅನಿಲ್ ಮತ್ತು ಉದಯ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಿನಿಮಾದ ನಿರ್ಮಾಪಕ ಸುಂದರ್ ಪಿ ಗೌಡ್ರು ಮತ್ತು ನಿರ್ದೇಶಕ ನಾಗಶೇಖರ್ ಅವರನ್ನು ಈಗಾಗಲೇ ಬಂಧಿಸಲಾಗಿತ್ತು.
2016: ಚಿಕ್ಕಮಗಳೂರು: ಚಿಕ್ಕಮಗಳೂರು ಎಪಿಎಂಸಿ ಮಾರುಕಟ್ಟೆಯಲ್ಲಿ ರೂ. 2000 ಮುಖಬೆಲೆಯ ಖೋಟೋ ನೋಟು ಪತ್ತೆಯಾಯಿತು. ವರ್ತಕರೊಬ್ಬರು ಅಲ್ಲಿನ ರೈತರೊಬ್ಬರಿಗೆ ಎರಡು ಸಾವಿರ ರುಪಾಯಿ ಖೋಟಾ ನೋಟು ನೀಡಿ ಈರುಳ್ಳಿ ಖರೀದಿಸಿದ್ದು ಬೆಳಕಿಗೆ ಬಂತು. ಖೋಟಾ ನೋಟು ಪತ್ತೆಯಾಗಿರುವ ಬಗ್ಗೆ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು.
2016: ವಾಷಿಂಗ್ಟನ್‌: ಭಾರತೀಯ ಮೂಲದ ಕಮಲಾ ಹ್ಯಾರಿಸ್ಅವರಿಗೆ ಅಮೆರಿಕದ ಅಧ್ಯಕ್ಷೆಯಾಗುವ ಸಾಮರ್ಥ್ಯವಿದೆ ಎಂದು ಅಮೆರಿಕದ ಮಾಧ್ಯಮಗಳು ವರದಿ ಮಾಡಿದವು.  ಕಮಲಾ ಹ್ಯಾರಿಸ್ಅಮೆರಿಕಾದ ಕ್ಯಾಲಿಫೋರ್ನಿಯಾ ಸೆನೆಟ್ಗೆ ಆಯ್ಕೆಯಾಗುವ ಮೂಲಕ ಏಷ್ಯಾದಿಂದ ಆಯ್ಕೆಯಾದ ಮೊದಲ ಸೆನೆಟರ್ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅಧ್ಯಕ್ಷರಾಗಿ ಆಯ್ಕೆಯಾಗಿರುವ ಟ್ರಂಪ್ಅವರು ಹೊಂದಿರುವ  ವಲಸಿಗ ವಿರೋಧಿ ಧೋರಣೆಯ ವಿರುದ್ಧ ರಾಷ್ಠ್ರವ್ಯಾಪಿ ಪ್ರಚಾರಾಂದೋಲನ ನಡೆಸುವುದರ ಮೂಲಕವೂ ಕಮಲಾ ಸುದ್ದಿಯಾಗಿದ್ದರು. ಆಂದೋಲನವು ಕಮಲಾ ಅವರನ್ನು ಪುನಶ್ಚೇತನಗೊಳಿಸಲಿದೆ. ಮಹಿಳೆಯರಿಗೆ ಇದುವರೆಗೂ ಸಾಧ್ಯವಾಗಿರದ ಅಮೆರಿಕ ಅಧ್ಯಕ್ಷರಾಗುವ ಕನಸನ್ನು ನನಸಾಗಿಸುವ ಸಾಮರ್ಥ್ಯ ಅವರಿಗಿದೆಎಂದು ಮಾಧ್ಯಮಗಳು ಹೇಳಿವೆ. ಕಮಲಾ ಅವರು ಈಗಾಗಲೆ ಕ್ಯಾಲಿಫೋರ್ನಿಯಾ ಅಟಾರ್ನಿ ಜನರಲ್ಆಗಿ ಉತ್ತಮ ಹೆಸರು ಮಾಡಿದ್ದು, ಪ್ರಜಾಪ್ರಭುತ್ವ ನಿಲುವುಗಳಿಂದಾಗಿ ಜನಪ್ರಿಯರಾಗಿದ್ದಾರೆ. ಸೆನೆಟರ್ಆಗಿ ಆಯ್ಕೆಯಾಗುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ. 2020 ಅಧ್ಯಕ್ಷೀಯ ಚುನಾವಣೆಯತ್ತ ಗಮನಹರಿಸಲಿಎಂದು ಮಾಧ್ಯಮಗಳು ಸಲಹೆ ಮಾಡಿದವು. ಅಧ್ಯಕ್ಷ ಹುದ್ದೆಗಿರುವ ಅಡೆತಡೆಗಳನ್ನು ದಾಟಲು ನಮ್ಮಿಂದ ಸಾಧ್ಯವಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಬೇರೊಬ್ಬರಿಂದ ಅದು ಸಾಧ್ಯವಾಗಲಿದೆಎಂದು ಹಿಲರಿ ಕ್ಲಿಂಟನ್ತಿಳಿಸಿದರು.

2016: ಕಾಬೂಲ್: ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ಉತ್ತರ ಭಾಗದಲ್ಲಿರುವ ಬಾಗ್ರಮ್ ವಾಯುನೆಲೆಯಲ್ಲಿ ಸ್ಫೋಟ ಸಂಭವಿಸಿತು. ಘಟನೆಯಲ್ಲಿ ನಾಲ್ವರು ಮೃತರಾಗಿ, ಹಲವರು ಗಾಯಗೊಂಡರು. ತಾಲಿಬಾನ್ ಉಗ್ರರು ಬಾಂಬ್ ಸ್ಪೋಟದ ಹೊಣೆ ಹೊತ್ತುಕೊಂಡರು. ಉಗ್ರರು ವಾಯುನೆಲೆಯ ಒಳಗೆ ಸ್ಫೋಟ ನಡೆಸಿದ್ದಾರೆ. ಘಟನೆಯಲ್ಲಿ 14 ಜನರು ಗಾಯಗೊಂಡಿದ್ದಾರೆ. ಪರಿಹಾರ ಕಾರ್ಯಾಚರಣೆ ನಡೆಸಲಾಗುತ್ತಿದೆ. ಮೃತಪಟ್ಟವರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ನ್ಯಾಟೋ ತನ್ನ ಹೇಳಿಕೆಯಲ್ಲಿ ತಿಳಿಸಿತು. ಬಾಗ್ರಾಮ್ ವಾಯುನೆಲೆಗೆ ಅಮೆರಿಕ ಸೇನೆ ಭಾರೀ ಭದ್ರತೆ ಒದಗಿಸಿದೆ. ಆದರೂ ತಾಲಿಬಾನ್ ಉಗ್ರರು ಆಗಾಗ್ಗೆ ವಾಯುನೆಲೆಯ ಮೇಲೆ ದಾಳಿ ನಡೆಸುತ್ತಿರುತ್ತಾರೆ.

2016: ನವದೆಹಲಿ: ಕೇಂದ್ರ ಸರ್ಕಾರವು 2000 ರೂಪಾಯಿ ಮುಖಬೆಲೆಯ ಹೊಸ ನೋಟನ್ನು
ಬಿಡುಗಡೆ ಮಾಡಿರುವ ದಿನದಿಂದಲೂ ನೋಟು ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಾಗುತ್ತಿದೆ. ನ್ಯಾನೋ ಚಿಪ್ ವದಂತಿ ಬಳಿಕ ಇದೀಗ ಟ್ವಿಟ್ಟರಿನಲ್ಲಿ ಈ ನೋಟಿನಲ್ಲಿ ಮುದ್ರಣ ದೋಷಗಳಿವೆಯೇ? ಎಂಬ ಪ್ರಶ್ನೆಗಳನ್ನು ಹೊತ್ತ ಟ್ವೀಟುಗಳು ಹರಿದಾಡಿದವು. ನೂತನ 2000 ರೂಪಾಯಿ ನೋಟಿನ ಹಿಂಬದಿಯಲ್ಲಿ ಮುದ್ರಣ ದೋಷವಿದೆಯೇ ಎಂಬ ಪ್ರಶ್ನೆ ಟ್ವಿಟ್ಟರ್ ಮತ್ತು ವಾಟ್ಸ್ ಆಪಿನಲ್ಲಿ ಹರಿದಾಡಿದವು.  ಹಿಂದಿಯಲ್ಲಿ 2000 ಎಂಬುದಕ್ಕೆ ದೋ ಹಜಾರ್ ಎಂಬುದಾಗಿ ಹೇಳಲಾಗುತ್ತದೆ. ಆದರೆ ನೋಟಿನಲ್ಲಿ ಒಂದಲ್ಲ ಎರಡು ಕಡೆ ದೋನ್ ಹಜಾರ್ ಎಂಬುದಾಗಿ ಮುದ್ರಿಸಲಾಗಿದೆ. ಮುದ್ರಣ ದೋಷವನ್ನು ಗಮನಿಸಲಾಗಿಲ್ಲವೇ? ಎಂಬುದಾಗಿ ಟ್ವಿಟ್ಟರ್ ಹಾಗೂ ವಾಟ್ಸ್ ಆಪ್ ಸಂದೇಶಗಳಲ್ಲಿ ಪ್ರಶ್ನಿಸಲಾಯಿತು. ಈ ಸಂದೇಶಗಳ ಜೊತೆಗೆ 2000 ರೂಪಾಯಿ ನೋಟಿನ ಹಿಂಭಾಗದಲ್ಲಿ ವಿವಿಧ ಭಾಷೆಗಳಲ್ಲಿ ನೋಟಿನ ಮೊತ್ತವನ್ನು ನಮೂದಿಸಿರುವ ಪಟ್ಟಿಯನ್ನು ಗುರುತು ಮಾಡಿ ಪ್ರಕಟಿಸಲಾಯಿತು. ಈ ಟ್ವೀಟುಗಳಿಗೆ  ಪ್ರತಿಕ್ರಿಯಿಸಿರುವ ಒಬ್ಬರು ಇದೇ ನೋಟಿನಲ್ಲಿ ವಿವಿಧ ಭಾಷೆಗಳಿರುವ ಪಟ್ಟಿ ಹಾಗೂ ಎಡಭಾಗದಲ್ಲಿ ಹಿಂದಿಯಲ್ಲಿಯೇ ಸ್ಪಷ್ಟವಾಗಿ ದೋ ಹಜಾರ್ ಎಂಬುದಾಗಿ ಬರೆದಿರುವ ವಾಕ್ಯವನ್ನು ಗುರುತು ಮಾಡಿ ವಿವಿಧ ಭಾಷೆಗಳ ಪಟ್ಟಿಯಲ್ಲಿ ಇರುವುದು ಹಿಂದಿಯಲ್ಲ, ಬದಲಿಗೆ ಕೊಂಕಣಿ ಮತ್ತು ಮರಾಠಿ ಎಂಬುದಾಗಿ ಪ್ರತಿಕ್ರಿಯಿಸಿದರು. ಕೊಂಕಣಿ ಮತ್ತು ಮರಾಠಿ ದಕ್ಷಿಣ ಭಾರತದ ಭಾಷೆಗಳಾಗಿದ್ದು ಬಹಳಷ್ಟು ಮಂದಿಗೆ ಅಪರಿಚಿತವಾದ್ದರಿಂದ ಗೊಂದಲ ಉಂಟಾಗಿದೆ ಎಂದು ಅವರು ಸ್ಪಷ್ಟ ಪಡಿಸಿದರು. ಇದಕ್ಕೆ ಮುನ್ನ ನೋಟಿನಲ್ಲಿ ನ್ಯಾನೋ ಚಿಪ್ ಇದೆ ಎಂಬುದಾಗಿ ವದಂತಿಗಳು ಹರಿದಾಡಿದ್ದವು.

2016: ನವದೆಹಲಿ: 500 ರೂಪಾಯಿ ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ಹಿಂತೆಗೆದುಕೊಳ್ಳುವ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆಯ ಹಿಂದೆ ಬೃಹತ್ ಹಗರಣ ಇದೆ ಎಂದು ಇಲ್ಲಿ ಆಪಾದಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ತತ್ ಕ್ಷಣವೇ ತತ್ ಕ್ಷಣವೇ ಸರ್ಕಾರ ನೋಟು ರದ್ದು ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ನ.8ರ ಮಂಗಳವಾರ ಪ್ರಧಾನಿಯವರು ನೋಟು ರದ್ದು ಕ್ರಮವನ್ನು ಪ್ರಕಟಿಸುವುದಕ್ಕೆ ಮುನ್ನವೇ ಬಿಜೆಪಿ ಮತ್ತು ಅದರ ಮಿತ್ರರಿಗೆ ಬಗ್ಗೆ ಸುಳಿವು ನೀಡಲಾಗಿದ್ದು, ಅವರು ತಮ್ಮ ಹಣವನ್ನು ಈಗಾಗಲೇ ಭದ್ರ ಪಡಿಸಿಕೊಂಡಿದ್ದಾರೆ ಎಂದು ಕೇಜ್ರಿವಾಲ್ ಪತ್ರಿಕಾಗೋಷ್ಠಿಯಲ್ಲಿ ದೂರಿದರು. ಪ್ರಧಾನಿಯವರ ನಾಟಕೀಯ ಪ್ರಕಟಣೆಗೆ ಹಲವು ದಿನಗಳಿಗೆ ಮುನ್ನವೇ ಪಂಜಾಬಿನ ಬಿಜೆಪಿ ಅಧಿಕಾರಿಯೊಬ್ಬರು ಟ್ವಿಟ್ಟರ್ನಲ್ಲಿ ಹೊಸ 2000 ರೂಪಾಯಿ ನೋಟುಗಳ ಕಂತೆಯ ಜೊತೆಗೆ ಫೋಸ್ ನೀಡಿ ಫೋಟೋ ಪ್ರಕಟಿಸಿಕೊಂಡಿದ್ದರು. ಇನ್ನೊಂದು ಮಹತ್ವದ ಅಂಶವೆಂದರೆ ದೇಶಾದ್ಯಂತ ಇಷ್ಟೊಂದು ಅರಾಜಕತೆ ಉಂಟಾಗಿದ್ದರೂ, ಕಾಳಸಂತೆಯ ಹಣ ವ್ಯವಸ್ಥೆಯೊಳಕ್ಕೆ ಬರುವುದಿಲ್ಲ. ಬದಲಾಗಿ ಕಪ್ಪು ಹಣ ಕೈ ಬದಲಾಗುವ ಮೂಲಕ ಮರುವಿತರಣೆಯಾಗುತ್ತದೆ ಅಷ್ಟೆ ಎಂದು ಕೇಜ್ರಿವಾಲ್ ಪ್ರತಿಪಾದಿಸಿದರು.

2016: ಕರಾಚಿ
: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ಷಾ ನೂರಾನಿ ಯಾತ್ರಾ ಸ್ಥಳದಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ 43ಕ್ಕೂ ಹೆಚ್ಚು ಮಂದಿ ಮೃತರಾಗಿ 70ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ಈ ಯಾತ್ರಾಸ್ಥಳಕ್ಕೆ ಶುಕ್ರವಾರಗಳಲ್ಲಿ ಹೆಚ್ಚಿನ ಸಂಖ್ಯೆಯ ಯಾತ್ರಿಗಳು ಬರುತ್ತಾರೆ. ಶುಕ್ರವಾರ ಬರುವ ಯಾತ್ರಿಗಳು ಶನಿವಾರ ಇಲ್ಲಿಂದ ಹಿಂದಿರುಗುತ್ತಾರೆ. ಯಾತ್ರಿಗಳನ್ನು ಗುರಿಯಾಗಿಸಿಕೊಂಡು ಈ ಸ್ಫೋಟ ನಡೆಸಲಾಗಿದೆ ಎನ್ನಲಾಯಿತು. ಯಾತ್ರಾಸ್ಥಳಕ್ಕೆ ಹೋಗಿ ಬರುವ ಮಾರ್ಗ ಅಷ್ಟು ಅನುಕೂಲಕರವಾಗಿಲ್ಲ. ಹತ್ತಿರದಲ್ಲಿ ಯಾವುದೇ ಆಸ್ಪತ್ರೆಗಳಿಲ್ಲ. ಗಂಭೀರವಾಗಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಕರಾಚಿಗೆ ಕಳಿಸಲಾಗಿದೆ ಎಂದು ‘ಡಾನ್‌’ ವರದಿ ಮಾಡಿತು.
2008: ರಕ್ಷಣಾ ಇಲಾಖೆ ಒರಿಸ್ಸಾದ ಬಲ್ಸೂರು ಬಳಿ ಭೂ ಕ್ಷಿಪಣಿ `ಶೌರ್ಯ'ದ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು.

2008: ಚಂದ್ರನ ಕಕ್ಷೆ ಪ್ರವೇಶಿಸಿದ ಚಂದ್ರಯಾನ-1 ಬಾಹ್ಯಾಕಾಶ ನೌಕೆಯನ್ನು ಚಂದ್ರನ ಇನ್ನಷ್ಟು ಸಮೀಪ ಸಾಗಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾದರು. ಅಂಡಾಕಾರ ಮಾರ್ಗದಲ್ಲಿ ಚಂದ್ರನಿಂದ ಸುಮಾರು 200 ಕಿ.ಮೀ ದೂರದ ಅಂತರದಲ್ಲಿ ಸುತ್ತುತ್ತಿದ್ದ ನೌಕೆಯನ್ನು 100 ಕಿ.ಮೀ ಅಂತರಕ್ಕೆ ತಲುಪಿಸಿದರು. ಈದಿನ ಸಂಜೆ 6.30ರ ಸುಮಾರಿಗೆ ಒಂದು ನಿಮಿಷದ ಕಾಲ ನೌಕೆಯ ಲ್ಯಾಮ್ ರಾಕೆಟನ್ನು ಕೊನೆಯ ಬಾರಿ ಉರಿಸುವ ಮೂಲಕ ನಿಗದಿತ ಸ್ಥಳಕ್ಕೆ ನೌಕೆಯನ್ನು ತಲುಪಿಸಲಾಯಿತು

2008: ಕರ್ನಾಟಕದ ವಿಧಾನಸಭಾ ಚುನಾವಣೆಯ ಟಿಕೆಟ್ ಹಂಚಿಕೆಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಮಾಡಿದ್ದ ಕೇಂದ್ರದ ಮಾಜಿ ಸಚಿವೆ ಮಾರ್ಗರೆಟ್ ಆಳ್ವ ಮೇಲೆ ಕಾಂಗ್ರೆಸ್ ಹೈಕಮಾಂಡ್ ಶಿಸ್ತುಕ್ರಮದ ದಂಡ ಪ್ರಯೋಗಿಸಿತು. ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯ ಜೊತೆಗೆ ಕಾರ್ಯಕಾರಿ ಸಮಿತಿ ಮತ್ತು ಕೇಂದ್ರ ಚುನಾವಣಾ ಸಮಿತಿಯ ಸದಸ್ಯತ್ವವನ್ನು ಅವರು ಕಳೆದುಕೊಂಡರು. ರಕ್ಷಣಾ ಖಾತೆ ಸಚಿವ ಎ.ಕೆ.ಆಂಟನಿ ಅಧ್ಯಕ್ಷತೆಯ ಶಿಸ್ತುಪಾಲನಾ ಸಮಿತಿ ನೀಡಿದ ವರದಿಯನ್ನು ಪರಿಶೀಲಿಸಿದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಆಳ್ವ ಅವರ ತಲೆದಂಡ ಪಡೆದರು. ತನ್ನ ಆರೋಪವನ್ನು ತನಿಖೆಗಾಗಿ ಶಿಸ್ತುಪಾಲನಾ ಸಮಿತಿಗೆ ಒಪ್ಪಿಸಿದ ನಂತರ ಕಾಂಗ್ರೆಸ್ ಅಧ್ಯಕ್ಷೆಯನ್ನು ಭೇಟಿ ಮಾಡಿದ್ದ ಮಾರ್ಗರೆಟ್ ಪಕ್ಷದ ಪದಾಧಿಕಾರಗಳಿಗೆ ರಾಜೀನಾಮೆ ಸಲ್ಲಿಸಿದ್ದರು. ಇದಕ್ಕೆ ಮೊದಲು ಅವರು ಶಿಸ್ತುಪಾಲನಾ ಸಮಿತಿ ಮುಂದೆಯೂ ಹಾಜರಾಗಿದ್ದರು. ಪಕ್ಷದ ಹಿರಿಯ ನಾಯಕರೊಡನೆ ಸಮಾಲೋಚನೆ ನಡೆಸಿದ ಸೋನಿಯಾಗಾಂಧಿ ಅವರು ಆಳ್ವ ರಾಜೀನಾಮೆಯನ್ನು ಸ್ವೀಕರಿಸಿದರು.

2008: ಸಿಡ್ನಿಯ ಖ್ಯಾತ ಪ್ರವಾಸಿ ತಾಣವಾದ ಗೋಲ್ಡ್ ಕೋಸ್ಟಿನಲ್ಲಿ ಆಯೋಜಿಸಿದ್ದ ಏಷ್ಯಾ ಪೆಸಿಫಿಕ್ ಚಲನಚಿತ್ರೋತ್ಸವದಲ್ಲಿ ಭಾರತದ ಪ್ರಯಾಸ್ ಗುಪ್ತ ಅವರ ನಿರ್ದೇಶನದ `ದಿ ಪ್ರಿಸನರ್' ತೀರ್ಪುಗಾರರ ಮಂಡಳಿಯ ಪ್ರಶಸ್ತಿಗೆ ಪಾತ್ರವಾಯಿತು. ಜೊತೆಗೆ ಏಷ್ಯಾ ಪೆಸಿಫಿಕ್ ವಲಯದಲ್ಲಿ ಚಿತ್ರೋದ್ಯಮದ ಜೀವಮಾನದ ಸಾಧನೆಗಾಗಿ ಯಶ್ ರಾಜ್ ಫಿಲ್ಮಿನ ಸಂಸ್ಥಾಪಕ ಯಶ್ ಚೋಪ್ರಾ ಅವರಿಗೆ ಅಂತಾರಾಷ್ಟ್ರೀಯ ಚಿತ್ರ ನಿರ್ಮಾಪಕರ ಸಂಘಗಳ ಒಕ್ಕೂಟ (ಎಫ್ ಐ ಎ ಪಿ ಎಫ್) ದ ಪ್ರಶಸ್ತಿ ಲಭಿಸಿತು.

2007: ಬೂಕನಕೆರೆ ಸಿದ್ಧಲಿಂಗಪ್ಪ ಯಡಿಯೂರಪ್ಪ ಅವರು ಕರ್ನಾಟಕದ 26ನೇ ಮುಖ್ಯಮಂತ್ರಿಯಾಗಿ ವಿಧಾನಸೌಧದ ಎದುರು ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ದಕ್ಷಿಣ ಭಾರತದಲ್ಲಿ ಮೊತ್ತ ಮೊದಲ ಬಾರಿಗೆ ಬಿಜೆಪಿ ನೇತೃತ್ವದ ಸರ್ಕಾರ ಅಸ್ತಿತ್ವಕ್ಕೆ ಬಂದಿತು. ಯಡಿಯೂರಪ್ಪ ಅವರ ಜೊತೆಗೆ ಗೋವಿಂದಪ್ಪ ಕಾರಜೋಳ, ಜಗದೀಶ ಶೆಟ್ಟರ, ಡಾ.ವಿ.ಎಸ್. ಆಚಾರ್ಯ ಮತ್ತು ಆರ್. ಅಶೋಕ್ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಬಿಜೆಪಿಯ ರಾಷ್ಟ್ರೀಯ ನಾಯಕರು ಈ ಐತಿಹಾಸಿಕ ಘಟನೆಗೆ ಸಾಕ್ಷಿಯಾದರು. ಲೋಕಸಭೆ ವಿರೋಧ ಪಕ್ಷದ ನಾಯಕ ಎಲ್.ಕೆ.ಅಡ್ವಾಣಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್, ಮಾಜಿ ಅಧ್ಯಕ್ಷ ಮುರಳಿ ಮನೋಹರ್ ಜೋಷಿ, ರಾಷ್ಟ್ರೀಯ ಉಪಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು, ರಾಜ್ಯದ ಉಸ್ತುವಾರಿ ನೋಡಿಕೊಳ್ಳುತ್ತಿರುವ ಯಶವಂತಸಿನ್ಹಾ, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಾದ ನರೇಂದ್ರ ಮೋದಿ (ಗುಜರಾತ್), ಶಿವರಾಜ್ ಸಿಂಗ್ ಚವಾಣ್ (ಮಧ್ಯಪ್ರದೇಶ), ರಮಣ್ ಸಿಂಗ್ (ಛತ್ತೀಸ್ ಗಡ) ಹಾಗೂ ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ- ಹೀಗೆ ರಾಷ್ಟ್ರದ ವಿವಿಧೆಡೆಯಿಂದ ಬಿಜೆಪಿ ಮುಖಂಡರ ದಂಡೇ ಆಗಮಿಸಿತ್ತು. ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು ಪಕ್ಷ ಸದಸ್ಯರು ಸಮಾರಂಭಕ್ಕೆ ಹಾಜರಾದರೂ ತತ್ ಕ್ಷಣ ಸರ್ಕಾರ ಸೇರದಿರಲು ಮಿತ್ರ ಪಕ್ಷ ಜನತಾದಳ (ಎಸ್) ನಿರ್ಧರಿಸಿತು.

2007: ಭಾರತೀಯ ವಾಯು ಪಡೆಗೆ ಎರಡು ಅತ್ಯಾಧುನಿಕ `ಹಾಕ್ ಎಂಕೆ132' ಯುದ್ಧ ವಿಮಾನಗಳು ಸೇರ್ಪಡೆಯೊಂದಿಗೆ ರಾಷ್ಟ್ರದ ಬಹುದಿನಗಳ ಕನಸು ಈಡೇರಿತು. ಏರ್ ಮಾರ್ಷಲ್ ಜಿ.ಎಸ್. ಚೌಧುರಿ ಅವರು ಬೀದರ ನಗರದ ಹೊರಭಾಗದಲ್ಲಿನ ವಾಯುಪಡೆಯ ತರಬೇತಿ ಕೇಂದ್ರದಲ್ಲಿ ಸಾಯಂಕಾಲ 4 ಗಂಟೆಗೆ ನಡೆದ ಸರಳ ಮತ್ತು ಹೃದಯಸ್ಪರ್ಶಿ ಸಮಾರಂಭದಲ್ಲಿ ಬೂದು ಬಣ್ಣದ ಉಕ್ಕಿನ ಹಕ್ಕಿಗಳನ್ನು ಬರಮಾಡಿಕೊಂಡರು. ಪ್ಲಾಟಿನಂ ಮಹೋತ್ಸವ ಆಚರಿಸಿದ ವಾಯುಪಡೆಗೆ ಹಾಕ್ ವಿಮಾನಗಳ ಸೇರ್ಪಡೆ ಹೊಸ ಆಯಾಮವನ್ನೇ ಕಲ್ಪಿಸಿತು. ಇಂಗ್ಲೆಂಡಿನಲ್ಲಿ ಸಿದ್ಧವಾದ ಅತ್ಯಾಧುನಿಕ ಜೆಟ್ ಟ್ರೇನರ್ (ಎಜೆಟಿ)ಗಳಾದ `ಹಾಕ್ ಎಂಕೆ 132' ವಿಮಾನಗಳು ಸತತ ಐದು ದಿನಗಳ ಪ್ರಯಾಣದ ನಂತರ ಬೀದರಿನ ರನ್ ವೇಗೆ ಶರವೇಗದಲ್ಲಿ ಬಂದಿಳಿದವು. ವಿಂಗ್ ಕಮಾಂಡರ್ ಪಂಕಜ್ ಜೈನ್ ಮತ್ತು ಸ್ಕ್ವಾಡ್ರನ್ ಲೀಡರ್ ತರುಣ್ ಹಿಂದ್ವಾನಿ ಇಂಗ್ಲೆಂಡಿನಿಂದ ಹಾಕ್ ಯುದ್ಧ ವಿಮಾನಗಳನ್ನು `ಹಾರಿಸಿ'ಕೊಂಡು ಬಂದರು. ಅವರೊಂದಿಗೆ ಬ್ರಿಟಿಷ್ ಪೈಲಟ್ ಗಳಾದ ಜಾನ್ ಲಾಸನ್ ಮತ್ತು ಪೀಟರ್ ಕೊಸೊಗೊರಿನ್ ಇದ್ದರು. ಬ್ರಿಟಿಷ್ ಏರೋಸ್ಪೇಸ್ (ಬಿಇಎ) ಸಂಸ್ಥೆಯು ನಿಗದಿತ ಸಮಯದಲ್ಲಿಯೇ ಹಾಕ್ ವಿಮಾನಗಳನ್ನು ಪೂರೈಸಿತು. ಅತ್ಯುತ್ತಮ ಗುಣಮಟ್ಟದ ಹಾಕ್ ಗಳ ನಿರ್ಮಾಣದಲ್ಲಿ ಬೆಂಗಳೂರಿನ ಎಚ್ ಎ ಎಲ್ ಸಂಸ್ಥೆ ಕೂಡ ಪ್ರಮುಖ ಪಾತ್ರ ವಹಿಸಿತ್ತು. ಮೂರು ಸಾವಿರ ಕಿ.ಮೀ. ಕ್ರಮಿಸಿರುವ ಹಾಕ್ ಗಳು ಬೀದರ ತಲುಪುವಲ್ಲಿ ಯಾವುದೇ ಸಮಸ್ಯೆ ಎದುರಾಗಲಿಲ್ಲ. ಹಂಟರ್ ವಿಮಾನಗಳ ನಿವೃತ್ತಿಯ ನಂತರ ಮಿಗ್ 21 ವಿಮಾನಗಳನ್ನು ಬಳಸಲಾಗುತ್ತಿತ್ತು. ಮುಂಚೂಣಿಯಲ್ಲಿದ್ದು ಹಾರಾಟ ನಡೆಸುವುದಕ್ಕೆ ಮಿಗ್ ವಿಮಾನಗಳು ಸೂಕ್ತವಾದವುಗಳಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಹಾಕ್ ವಿಮಾನಗಳ ಸೇರ್ಪಡೆ ಅಗತ್ಯವಾಗಿತ್ತು. ಗಂಟೆಗೆ 1050 ಕಿ.ಮೀ. ವೇಗದಲ್ಲಿ ಸಂಚರಿಸುವ ಹಾಕ್ ಯುದ್ಧ ವಿಮಾನಗಳಲ್ಲಿ 9,100 ಕೆ.ಜಿ. ಭಾರದ ಶಸ್ತ್ರಾಸ್ತ್ರಗಳನ್ನು ಸಾಗಿಸಬಹುದು. 13 ಅಡಿ ಎತ್ತರ ಮತ್ತು 40 ಅಡಿ ಅಗಲ ಇರುವ ಈ ಹಾಕ್ ಗಳಲ್ಲಿ ರಾಕೆಟ್, ಮಿಸೈಲ್, ಪ್ರಾಕ್ಟೀಸ್ ಬಾಂಬುಗಳನ್ನು ಕೊಂಡೊಯ್ಯಬಹುದು.

2007: ಕಾವೇರಿ ನದಿಯ ಉಗಮ ಸ್ಥಾನವಾದ ತಲಕಾವೇರಿಯಲ್ಲಿ ನವೆಂಬರ್ 14ಂದು `ಸುವರ್ಣ ಯುಗ' ಎಂಬ ಹೊಸ ಪಕ್ಷ ಆರಂಭಿಸಲು ನಿರ್ಧರಿಸಿದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಅವರ ಪುತ್ರ ಮಹಿಮಾ ಪಟೇಲ್ ಈದಿನ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

2007: ಗುಜರಾತಿನ ಗೋಧ್ರಾದಲ್ಲಿ ಸಬರಮತಿ ರೈಲಿನ ಕೆಲ ಬೋಗಿಗಳಿಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿ ಇದ್ರಿಸ್ ಸಾದಿಕನನ್ನು ಗೋಧ್ರಾ ಪೊಲೀಸರು ಬಂಧಿಸಿದರು. 2002ರಲ್ಲಿ ರೈಲು ಬೋಗಿಗಳಿಗೆ ಬೆಂಕಿ ಹಚ್ಚಿದಾಗ ಅದರಲ್ಲಿ ಪ್ರಯಾಣಿಸುತ್ತಿದ್ದ 59 ಕರಸೇವಕರು ಸಜೀವ ದಹನಗೊಂಡಿದ್ದರು. ಇದರ ಪರಿಣಾಮವಾಗಿ ಗುಜರಾತಿನಲ್ಲಿ ಸಂಭವಿಸಿದ ಕೋಮು ಗಲಭೆಯಲ್ಲಿ ಅಪಾರ ಪ್ರಮಾಣದದಲ್ಲಿ ಸಾವು ನೋವು ಸಂಭವಿಸಿತ್ತು. ರೈಲಿಗೆ ಬೆಂಕಿ ಹಚ್ಚಿದ ಪ್ರಕರಣದ ಆರೋಪಿ ಇದ್ರಿಸ್ ಸಾದಿಕ್ ತನ್ನ ಮನೆಗೆ ಬಂದ ಮಾಹಿತಿ ಅನುಸರಿಸಿ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡರು.

2007: ದಕ್ಷಿಣ ಧ್ರುವ ಅಂಟಾರ್ಟಿಕಾದಲ್ಲಿ ಸಂಶೋಧನಾ ಕಾರ್ಯವನ್ನು ಇನ್ನಷ್ಟು ವಿಸ್ತ್ರತಗೊಳಿಸಲು ನಿರ್ಧರಿಸಿದ ಚೀನಾದ 90ಕ್ಕೂ ಹೆಚ್ಚು ವಿಜ್ಞಾನಿಗಳು ಮತ್ತು ಸಹಾಯಕ ಸಿಬ್ಬಂದಿ ಸೋಮವಾರ ಅಂಟಾರ್ಟಿಕಾದತ್ತ ಪಯಣ ಬೆಳೆಸಿದರು. `ಸ್ನೊ ಡ್ರಾಗನ್' ಎಂಬ ಹಡಗಿನಲ್ಲಿ ಈ ತಂಡ ಅಂಟಾರ್ಟಿಕಾದತ್ತ ಹೊರಟಾಗ, ಸೇನೆಯ ಸಂಗೀತದ ಬ್ಯಾಂಡ್, ಚೀನಾದ ಸಾಂಪ್ರದಾಯಿಕ ನೃತ್ಯ, ಸಿಡಿಮದ್ದಿನ ಸಂಭ್ರಮದ ನಡುವೆ ಈ ಸಿಬ್ಬಂದಿಯನ್ನು ಬೀಳ್ಕೊಡಲಾಯಿತು.

2006: ಉತ್ತರಾಂಚಲದ ಬಾಹ್ಯಾಕಾಶ ಕೇಂದ್ರದ ನಿರ್ದೇಶಕ ಡಾ. ಅನಿಲ್ ಕುಮಾರ ತಿವಾರಿ ಅವರನ್ನು ಅಪರಿಚಿತ ಬಂದೂಕುಧಾರಿಯೊಬ್ಬ ಗುಂಡಿಟ್ಟು ಹತ್ಯೆ ಮಾಡಿದ.

2006: ಬ್ರಿಟಿಷ್ ವಿಜ್ಞಾನಿಗಳು ಜಗತ್ತಿನ ಮೊತ್ತ ಮೊದಲ `ಕೃತಕ ಹೊಟ್ಟೆ'ಯನ್ನು ನಿರ್ಮಿಸಿದರು. ಈ ಕೃತಕ ಹೊಟ್ಟೆಯು ಹೊಟ್ಟೆಯ ಒಳಗೆ ಏನು ಕ್ರಿಯೆ ಸಂಭವಿಸುತ್ತದೆ, ಮತ್ತು ಅಜೀರ್ಣ ಸಮಸ್ಯೆ ನಿವಾರಿಸಲು ಎಂತಹ ಆರೋಗ್ಯ ಪೂರ್ಣ ಆಹಾರ ತೆಗೆದುಕೊಳ್ಳಬೇಕು ಎಂಬುದನ್ನು ಅರಿತುಕೊಳ್ಳಲು ನೆರವಾಗುತ್ತದೆ. ನಾರ್ವಿಜ್ ಆಹಾರ ಮತ್ತು ಸಂಶೋಧನಾ ಸಂಸ್ಥೆಯ ವಿಜ್ಞಾನಿ ಮಾರ್ಟಿನ್ ವಿಕ್ಹಾಮ್ ಮತ್ತು ಸಹೋದ್ಯೋಗಿಗಳು ಈ `ಕೃತಕ ಹೊಟ್ಟೆ'ಯನ್ನು ನಿರ್ಮಿಸಿದವರು.

2006: ಹಲವು ರೋಗಗಳನ್ನು ಆರಂಭದ ಹಂತದಲ್ಲಿಯೇ ಗುರುತಿಸುವ ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಿರುವುದಾಗಿ ಭಾರತೀಯ ವಿಜ್ಞಾನ ಸಂಸ್ಥೆಯ ಭೌತ ಶಾಸ್ತ್ರ ವಿಭಾಗದ ಬೆಂಗಳೂರು ಮೂಲದ ವಿಜ್ಞಾನಿಗಳಾದ ಡಾ. ಅಜಯ್ ಸೂದ್ ಮತ್ತು ಅಜಯ್ ನೇಗಿ ಪ್ರಕಟಿಸಿದರು. ಬಹುತೇಕ ಎಲ್ಲ ರೋಗಗಳ ಪತ್ತೆಗೆ ಬಳಸುವ ಆಂಟಿಜನ್ ಡಯಾಗ್ನೋಸ್ಟಿಕ್ ಉಪಕರಣದ ದಕ್ಷತೆಯನ್ನು ನೂರು ಪಟ್ಟು ಹೆಚ್ಚಿಸುವ ನಿಟಿನಲ್ಲಿ ಸೂಕ್ಷ್ಮ ವಿದ್ಯುತ್ ಪಲ್ಸ್ ಗಳನ್ನು ಅವರು ಬಳಸಿದರು. ಈ ತಂತ್ರಜ್ಞಾನದಿಂದ ರೋಗವನ್ನು ಆರಂಭಗೊಂಡ ಮೊದಲ ಅಥವಾ ಎರಡನೇ ದಿನವೇ ಪತ್ತೆಹಚ್ಚಲು ಸಾಧ್ಯವಿದೆ.

2005: ಭಾರತದ ಪರಿಶುದ್ಧ ರಾಜಕಾರಣಿಗಳಲ್ಲಿ ಒಬ್ಬರಾದ, ಸ್ವಾತಂತ್ರ್ಯ ಹೋರಾಟಗಾರ, ಸಮಾಜವಾದಿ ನಾಯಕ, ಕೇಂದ್ರದ ಮಾಜಿ ಸಚಿವ ಪ್ರೊ. ಮಧು ದಂಡವತೆ (1924-2005) ಮುಂಬೈಯಲ್ಲಿ ನಿಧನರಾದರು. ಅವರು ಹುಟ್ಟಿದ್ದು 1924ರ ಜನವರಿ 21ರಂದು. ಭಾರತದ ಹೆಮ್ಮೆಯ ಕೊಂಕಣ ರೈಲ್ವೆ ದಂಡವತೆ ಅವರ ಕಲ್ಪನೆಯ ಕೂಸು.

2000: ಜಾರ್ಖಂಡ್ ಭಾರತದ 28ನೇ ರಾಜ್ಯವಾಯಿತು. ರಾಂಚಿ ಅದರ ರಾಜಧಾನಿಯಾಯಿತು.

1990: ಜಪಾನಿನ ಚಕ್ರವರ್ತಿ ಅಕಿಹಿಟೊ ಅವರು ಔಪಚಾರಿಕವಾಗಿ ಕ್ರೈಸಾಂಥೇಮಮ್ (ಸೇವಂತಿಗೆ) ಸಿಂಹಾಸನವನ್ನು ಏರಿದರು.

1981: ಅಮೆರಿಕಾದ ಷಟಲ್ ನೌಕೆ ಕೊಲಂಬಿಯಾ ಬಾಹ್ಯಾಕಾಶಕ್ಕೆ ಎರಡನೇ ಯಾನ ಮಾಡಿದ ಮೊದಲ ಬಾಹ್ಯಾಕಾಶ ನೌಕೆ ಎನಿಸಿತು.

1960: ಸಾಹಿತಿ ನಂದಾ ಪ್ರಸಾದ್ ಜನನ.

1953: ಸಾಹಿತಿ ಸದಾನಂದ ಜನನ.

1946: ಪಂಡಿತ ಮದನ ಮೋಹನ ಮಾಳವೀಯ ನಿಧನರಾದರು.

1946: ಖ್ಯಾತ ಕಾದಂಬರಿಕಾರ ಎಚ್. ಕೆ. ಅನಂತರಾವ್ ಅವರು ಎಚ್.ಬಿ. ಕೃಷ್ಣರಾವ್- ರಾಧಾಬಾಯಿ ದಂಪತಿಯ ಮಗನಾಗಿ ಹೈದರಾಬಾದಿನಲ್ಲಿ ಜನಿಸಿದರು.

1933: ಸಾಹಿತಿ ಜೀಶಂಪ ಜನನ.

1923: ಸಾಹಿತಿ ಗಂಗಾಧರ ಚಿತ್ತಾಲ ಜನನ.

1896: `ಭಾರತದ ಪಕ್ಷಿ ಮಾನವ' (ಬಡರ್್ ಮ್ಯಾನ್ ಆಫ್ ಇಂಡಿಯಾ) ಎಂದೇ ಖ್ಯಾತರಾಗಿರುವ ಪಕ್ಷಿತಜ್ಞ ಸಲೀಂ ಅಲಿ (1896-1987) ಹುಟ್ಟಿದ ದಿನ.

1893: ಅಫ್ಘಾನಿಸ್ಥಾನ ಮತ್ತು ಅದರ ಪೂರ್ವ ಹಾಗೂ ದಕ್ಷಿಣ ಭಾಗದಲ್ಲಿ ಆಗಿನ ಬ್ರಿಟಿಷ್ ಭಾರತದ ಗಡಿಗಳನ್ನು ಗುರುತಿಸುವ ಒಪ್ಪಂದಕ್ಕೆ ಭಾರತ ಸರ್ಕಾರದ ವಿದೇಶಾಂಗ ಕಾರ್ಯದರ್ಶಿ ಮಾರ್ಟಿಮರ್ ಡ್ಯುರಾಂಡ್ ಮತ್ತು ಅಫ್ಘಾನಿಸ್ಥಾನದ ಅಮೀರ್ ಅಬ್ದುಲ್ ರಹಮಾನ್ ಖಾನ್ ಸಹಿ ಹಾಕಿದರು. ಈ ಗಡಿ ರೇಖೆಯನ್ನು `ಡ್ಯುರಾಂಡ್ ಲೈನ್' ಎಂದೇ ಹೆಸರಿಸಲಾಯಿತು.

1889: ಡೆ ವಿಟ್ ವ್ಯಾಲೇಸ್ (1889-1981) ಹುಟ್ಟಿದ ದಿನ. ಇವರು ಜಗತಿನಲ್ಲಿ ಅತ್ಯಂತ ಹೆಚ್ಚು ಪ್ರಸಾರವುಳ್ಳ ನಿಯತಕಾಲಿಕಗಳಲ್ಲಿ ಒಂದಾದ `ರೀಡರ್ಸ್ ಡೈಜೆಸ್ಟ್' ಪತ್ರಿಕೆಯನ್ನು ರೂಪಿಸಿದವರು ಹಾಗೂ ಪ್ರಕಾಶಕರು.

1866: ಚೀನೀ ನ್ಯಾಷನಲಿಸ್ಟ್ ಪಾರ್ಟಿಯ ನಾಯಕ ಹಾಗೂ ಚೀನಾ ಗಣರಾಜ್ಯದ ಮೊದಲ ತಾತ್ಕಾಲಿಕ ಅಧ್ಯಕ್ಷ ಸನ್-ಯಾತ್-ಸೆನ್ (1866-1925) ಹುಟ್ಟಿದ ದಿನ. ಇವರು ಆಧುನಿಕ ಚೀನಾದ ಜನಕ ಎಂದೇ ಖ್ಯಾತರಾಗಿದ್ದಾರೆ.

1880: ಭಾರತದ ಸ್ವಾತಂತ್ರ್ಯ ಹೋರಾಟಗಾರ ಸೇನಾಪತಿ ಬಾಪಟ್ (1880-1967) ಹುಟ್ಟಿದ ದಿನ.

1855: ಭಾರತೀಯ ಸ್ವಾತಂತ್ರ್ಯ ಯೋಧ ಹಾಗೂ ಕೈಗಾರಿಕೋದ್ಯಮಿ ಕುಂದನ್ ಮಲ್ ಸೋಭಚಂದ್ ಫಿರೋಡಿಯಾ (1855-1968) ಹುಟ್ಟಿದ ದಿನ.

1817: ಬಹಾಯಿ ಪಂಥದ ಸ್ಥಾಪಕ ಬಹಾವುಲ್ಲಾ (1817-1892) ಹುಟ್ಟಿದ ದಿನ.

No comments:

Post a Comment