Wednesday, October 31, 2018

ಇಂದಿನ ಇತಿಹಾಸ History Today ಅಕ್ಟೋಬರ್ 31

ಇಂದಿನ ಇತಿಹಾಸ History Today ಅಕ್ಟೋಬರ್ 31
2018: ಅಹಮದಾಬಾದ್: ವಿಶ್ವದಲ್ಲೇ ಅತಿ ಎತ್ತರದ್ದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ೧೮೨ ಮೀಟರ್ (೫೯೭ ಅಡಿ) ಎತ್ತರದ ಭವ್ಯ ’ಏಕತಾ ಪ್ರತಿಮೆಯನ್ನು ರಾಷ್ಟ್ರಕ್ಕೆ ಅರ್ಪಿಸುವ ಮೂಲಕ ಭಾರತವನ್ನು ಒಗ್ಗೂಡಿಸಿದ  ‘ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯ್ ಪಟೇಲ್ ಅವರಿಗೆ ಮಹಾನ್ ಗೌರವವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸಲ್ಲಿಸಿದರು.  ಗುಜರಾತಿನ ಕೆವಾಡಿಯಾ ಗ್ರಾಮದ ಬಳಿ ನರ್ಮದಾ ನದಿ ತಟದಲ್ಲಿ ನಿರ್ಮಿಸಲಾಗಿರುವ ೧೮೨ ಮೀಟರ್ (೫೯೭ ಅಡಿಗಳು) ಎತ್ತರದ ಸರ್ದಾರ್ ಪಟೇಲರ ’ಏಕತಾ ಪ್ರತಿಮೆಯನ್ನು ೨೯೮೯ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ.  ಪ್ರಧಾನಿ ಮೋದಿ ಹಾಗೂ ಇತರ ಗಣ್ಯರು ಪ್ರತಿಮೆಗೆ ಕುಂಭಾಭಿಷೇಕ ಮಾಡುವ ಮೂಲಕ ಅದನ್ನು ಲೋಕಾರ್ಪಣೆ ಮಾಡಿದರು. ಇದಕ್ಕೆ ಮೊದಲು ಸಾಂಕೇತಿಕವಾಗಿ ಮಣ್ಣು ಹಾಗೂ ನರ್ಮದಾ ನದಿ ನೀರನ್ನು ಮೋದಿ ಅವರು ಕಲಶಕ್ಕೆ ಅರ್ಪಿಸಿದರು. ಬಳಿಕ ಗುಂಡಿ ಅದುಮುವ ಮೂಲಕ ಪ್ರತಿಮೆಯ ಮೇಲೆ ಅಭಿಷೇಕಕ್ಕೆ ಚಾಲನೆ ನೀಡಿದರು. ಬಳಿಕ ಪ್ರತಿಮೆಯ ಪೀಠದ ಬಳಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಪ್ರತಿಮೆ ರಾಷ್ಟ್ರಾರ್ಪಣೆ ವೇಳೆ ವಾಯುಪಡೆಯ ಎರಡು ವಿಮಾನಗಳು ಪ್ರತಿಮೆಯ ಮೇಲೆ ಹಾರಾಟ ನಡೆಸಿ ಬಣ್ಣಗಳ ಮೂಲಕ ಆಗಸದಲ್ಲಿ ತ್ರಿವರ್ಣ ಚಿತ್ತಾರ ಮೂಡಿಸಿದವು. ಜತೆಗೆ ವಿಮಾನಗಳ ಮೂಲಕ ಪುಷ್ಪಾರ್ಚನೆಯೂ ನಡೆಯಿತು.
ಪ್ರತಿಮೆಯನ್ನು ರಾಷ್ಟ್ರಕ್ಕೆ ಅರ್ಪಿಸಿದ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ‘ಈ ದಿನವನ್ನು ಯಾವ ಭಾರತೀಯನೂ ಮರೆಯಲು ಸಾಧ್ಯವಿಲ್ಲ. ಇತಿಹಾಸದಲ್ಲಿ ನೆನಪಿಡಬೇಕಾದ ದಿನ ಇದು. ಈ ಹೊತ್ತಿನಲ್ಲಿ ಭಾರತದ ಇತಿಹಾಸವನ್ನು ನಾವು ನೆನಪಿಸಿಕೊಳ್ಳಬೇಕಾಗಿದೆ. ಇಂದು ಸರ್ದಾರ್ ವಲ್ಲಭಭಾಯ್ ಪಟೇಲರ ಜನ್ಮದಿನವಾಗಿದೆ. ರಾಜರ ಆಳ್ವಿಕೆಯಲ್ಲಿದ್ದ ೫೫೦ ಪ್ರಾಂತ್ಯಗಳನ್ನು ಒಗ್ಗೂಡಿಸಿ ಸಂಯುಕ್ತ ಭಾರತ ಕಟ್ಟಿದ ಉಕ್ಕಿನ ಮನುಷ್ಯ ಪಟೇಲ್ ಎಂದು ಹೇಳಿದರು.  ‘ಪಟೇಲ್ ಅವರ ೧೪೩ನೇ ಜನ್ಮದಿನದ ಹಿನ್ನೆಲೆಯಲ್ಲಿ ದೇಶಾದ್ಯಂತ ಇಂದು ಏಕತಾ ದಿವಸವನ್ನು ಆಚರಿಸಲಾಗುತ್ತಿದೆ. ಇದೇ ವೇಳೆಯಲ್ಲಿ ಸರ್ದಾರ್ ಪಟೇಲರ ವಿಶ್ವದ ಅತೀ ಎತ್ತರದ ಪ್ರತಿಮೆಯನ್ನು ಲೋಕಾರ್ಪಣೆ ಮಾಡುವ ಅವಕಾಶ ದೊರಕಿರುವುದು ನನ್ನ ಪುಣ್ಯ ಎಂಬುದಾಗಿ ಭಾವಿಸುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.  ಸರ್ದಾರ್ ಪಟೇಲ್ ಅವರು ದಿಟ್ಟತನ, ಏಕತೆಯ ಸಂಕಲ್ಪ ತೋರಿಸದಿದ್ದರೆ ಇಂದು ನಾವು ಸೋಮನಾಥ ಹಾಗೂ ಹೈದರಾಬಾದಿನ ಚಾರ್ ಮಿನಾರ್ ನೋಡಲು ವೀಸಾ ಹೊಂದಿರಬೇಕಿತ್ತು. ಸರ್ದಾರ್ ಪಟೇಲರ ದೂರದೃಷ್ಟಿಯ ಕೊಡುಗೆ ಇಲ್ಲದಿದ್ದರೆ ಇಂದು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ನೇರರೈಲು ಸಂಪರ್ಕ ಸಾಧ್ಯವಾಗುತ್ತಿರಲಿಲ್ಲ. ಇಂಥ ಲೋಹಪುರುಷ ಪಟೇಲರಿಗೆ ನೂರೊಂದು ನಮನಗಳು ಎಂದು ಪ್ರಧಾನಿ ನುಡಿದರು. ದೇಶದಲ್ಲಿ ಆಗಲೂ ಸಹ ನಿರಾಶಾವಾದಿಗಳು ಇದ್ದರು. ಇನ್ನು ನಾವು ಯಾರಿಗೂ ಗುಲಾಮರಾಗುವ ಅಗತ್ಯವಿಲ್ಲ ಎಂದು ಪಟೇಲರು ೧೯೪೭ರಲ್ಲಿ ಹೇಳಿದ್ದರು. ಇಂದಿಗೂ ಕೂಡಾ ನಾವು ಗುಲಾಮರಾಗಿ ಬದುಕಬೇಕಾಗಿಲ್ಲ. ದೇಶ ಇಂದು ತನ್ನದೇ ಇತಿಹಾಸ ನಿರ್ಮಿಸಿಕೊಂಡಿದೆ ಎಂದು ಮೋದಿ ಹೇಳಿದರು. ಏಕತಾ ಪ್ರತಿಮೆಯ ನಿರ್ಮಾಣಕ್ಕಾಗಿ ದೇಶದ ಎಲ್ಲೆಡೆಯಿಂದ ಲಕ್ಷಾಂತರ ರೈತರು ಇಲ್ಲಿಗೆ ಬಂದು ಒಗ್ಗೂಡಿದರು. ತಮ್ಮ ಉಪಕರಣಗಳನ್ನು ನೀಡಿದರು. ತಮ್ಮ ಮಣ್ಣಿನ ಪಾಲನ್ನೂ ನೀಡಿದರು. ಹೀಗೆ ಒಂದು ಬೃಹತ್ ಆಂದೋಲನವೇ ನಡೆಯಿತು ಎಂದು ಪ್ರತಿಮೆ ಸ್ಥಾಪನೆಯ ಹಿನ್ನೆಲೆಯನ್ನು ಪ್ರಧಾನಿ ನೆನಪಿಸಿದರು. ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಈ ಪ್ರತಿಮೆಯ ಸ್ಥಾಪನೆಯ ಕನಸು ಕಂಡಿದ್ದೆ. ಅದು ಈಗ ಸಾಕಾರವಾಗಿದೆ ಎಂದು  ಪ್ರಧಾನಿ ಹೇಳಿದರು.  ವಿಶ್ವದ ಅತ್ಯಂತ ಎತ್ತರದ ಪ್ರತಿಮೆಗಾಗಿ ಅಂದಾಜು ೩೦೦೦ ಕೋಟಿ ರೂಪಾಯಿ ವೆಚ್ಚ ಮಾಡಿದ್ದಕ್ಕಾಗಿ ಸರ್ಕಾರವನ್ನು ಟೀಕಿಸುವವರನ್ನು ತರಾಟೆಗೆ ತೆಗೆದುಕೊಳ್ಳಲೂ ಪ್ರಧಾನಿ ಈ ಸಂದರ್ಭವನ್ನು ಬಳಸಿಕೊಂಡರು.  ನಮ್ಮ ರಾಷ್ಟ್ರದ ಕೆಲವು ಮಂದಿ ಇಂತಹ ಉಪಕ್ರಮವನ್ನು ರಾಜಕೀಯ ದೃಷ್ಟಿಕೋನದಿಂದ ನೋಡಿ ನಾವು ಮಹಾ ಅಪರಾಧ ಎಸಗಿದ್ದೇವೆ ಎಂಬಂತೆ ನಮ್ಮನ್ನು ಟೀಕಿಸುತ್ತಿರುವುದನ್ನು ಕಾಣುವಾಗ ನನಗೆ ಚೋದ್ಯವೆನ್ನಿಸುತ್ತದೆ. ರಾಷ್ಟ್ರದ ಮಹಾನ್ ವ್ಯಕ್ತಿತ್ವಗಳನ್ನು ನೆನಪಿನಲ್ಲಿ ಇಡುವುದು ಅಪರಾಧವೇ?’ ಎಂದು ಮೋದಿ ಪ್ರಶ್ನಿಸಿದರು.
ಗುಜರಾತಿನಲ್ಲಿ ಸರ್ದಾರ್ ವಲ್ಲಭ ಬಾಯಿ ಪಟೇಲ್ ಅವರ ಪ್ರತಿಮೆ, ಗಾಂಧಿನಗರದಲ್ಲಿ ಮಹಾತ್ಮ ಮಂದಿರ ಸಭಾಭವನ ಮತ್ತು ಪ್ರದರ್ಶನ ಕೇಂದ್ರ, ಮಹಾರಾಷ್ಟ್ರದಲ್ಲಿ ಶಿವಾಜಿ ಪ್ರತಿಮೆ, ಅಂಬೇಡ್ಕರ್ ಸ್ಮಾರಕ ಮತ್ತು ಶ್ಯಾಮಜಿ ಕೃಷ್ಣ ವರ್ಮ ಸ್ಮಾರಕಗಳು ಇತಿಹಾಸ ಮತ್ತು ಸ್ವಾತಂತ್ರ್ಯ ಹೋರಾಟ ಕಾಲದಲ್ಲಿ ಪರಮೋಚ್ಚ ಕೊಡುಗೆ ನೀಡಿದವರನ್ನು ಸ್ಮರಿಸುವ ನಿದರ್ಶನಗಳು ಎಂದು ಪ್ರಧಾನಿ ಹೇಳಿದರು. ಗುಜರಾತಿನ ೧೦,೦೦೦ಕ್ಕೂ ಹೆಚ್ಚು ಗ್ರಾಮಗಳು ಮತ್ತು ೨೦೦ಕ್ಕೂ ಹೆಚ್ಚು ಪಟ್ಟಣಗಳಿಗೆ ನೀರು ಒದಗಿಸುವ ನರ್ಮದಾ ನದಿಯ ಮೇಲೆ ನಿರ್ಮಿಸಲಾಗಿರುವ ನರ್ಮದಾ ಸಾಗರ ಸರೋವರ ಅಣೆಕಟ್ಟಿನ ಕಡೆಗೆ ಮುಖಮಾಡಿ ನಿಂತಿರುವ ವಿಶ್ವದ ಅತ್ಯಂತ ಎತ್ತರದ ಏಕತಾ ಪ್ರತಿಮೆಯು ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರು ಸಾಂಪ್ರದಾಯಿಕ ಧೋತಿ ಮತ್ತು ಶಾಲು ಧರಿಸಿ ನಿಂತಿರುವುದನ್ನು ಬಿಂಬಿಸುತ್ತದೆ.  ವಿಶ್ವದಲ್ಲಿ ಪ್ರಸ್ತುತ ಅತ್ಯಂತ ಎತ್ತರದ ಪ್ರತಿಮೆಯಾಗಿರುವ ಚೀನಾದ ೧೭೭ ಅಡಿ ಎತ್ತರದ ಸ್ಪಿಂಗ್ ಟೆಂಪಲ್ ಬುದ್ಧ ಪ್ರತಿಮೆಗಿಂತಲೂ ಎತ್ತರವಾಗಿರುವುದರಿಂದ ’ಏಕತಾ ಪ್ರತಿಮೆಯು ಈಗ ವಿಶ್ವದಲ್ಲೇ ಅತ್ಯಂತ ಎತ್ತರದ ಪ್ರತಿಮೆ ಎಂಬುದಾಗಿ ಪರಿಗಣಿತವಾಗಿದೆ.  ಪದ್ಮಭೂಷಣ ಪ್ರಶಸ್ತಿ ಪುರಸ್ಕೃತ ಶಿಲ್ಪಿ ರಾಮ್ ವಿ. ಸುತಾರ್ ಅವರು ’ಏಕತಾ ಪ್ರತಿಮೆಯ ವಿನ್ಯಾಸ ಮಾಡಿದ್ದು ಭಾರತದ ಮೂಲಸವಲತ್ತು ಮತ್ತು ಲಾರ್ಸೆನ್ ಅಂಡ್ ಟೂಬ್ರೋ ಎಂಜಿನಿಯರಿಂಗ್ ಬಳಸಿ ಇದನ್ನು ನಿರ್ಮಿಸಲಾಗಿದೆ. ೨೫೦ ಎಂಜಿನಿಯರ್‌ಗಳು, ೩೪೦೦ ಕಾರ್ಮಿಕರಿಗೆ ಈ ಪ್ರತಿಮೆಯನ್ನು ನಿರ್ಮಿಸಲು ೩೩ ತಿಂಗಳುಗಳು ಬೇಕಾದವು. ಸಮುದ್ರ ಮಟ್ಟದಿಂದ ೧೯೩ ಮೀಟರ್ ಎತ್ತರದಲ್ಲಿ ವೀಕ್ಷಣಾ ಗ್ಯಾಲರಿಯನ್ನು ನಿರ್ಮಿಸಲಾಗಿದ್ದು ಇಲ್ಲಿ ಏಕಕಾಲಕ್ಕೆ ೨೦೦ ಮಂದಿ ಪ್ರವಾಸಿಗರು ಸುತ್ತಮುತ್ತಣ ವಿಹಂಗಮ ಪ್ರಕೃತಿಯ ಸೊಬಗನ್ನು ಸವಿಯಬಹುದು. ನೆಲಮಟ್ಟದಿಂದ ೧೫೩ ಮೀಟರ್ ಎತ್ತರದಲ್ಲಿರುವ ಈ ಗ್ಯಾಲರಿಯ ಮೂಲಕ ಸರ್ದಾರ್ ಸರೋವರ ಅಣೆಕಟ್ಟು, ಅದರ ಜಲಾಶಯ ಮತ್ತು ಸತ್ಪುರ ಹಾಗೂ ವಿಂಧ್ಯ ಪರ್ವತ ಶ್ರೇಣಿಯನ್ನು ವೀಕ್ಷಿಸಬಹುದು.

2018: ನವದೆಹಲಿ: ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ವಿರುದ್ಧದ ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಲ್ಪಟ್ಟಿದ್ದ ಸಿಬಿಐ ಅಧಿಕಾರಿ ದೇವೇಂದ್ರ ಕುಮಾರ್ ಅವರಿಗೆ ದೆಹಲಿಯ ನ್ಯಾಯಾಲಯವೊಂದು ಜಾಮೀನು ಮಂಜೂರು ಮಾಡಿತು. ಜಾಮೀನಿನಲ್ಲಿ ಬಿಡುಗಡೆ ಮಾಡಲು ಸಿಬಿಐ ವಕೀಲರು ಯಾವುದೇ ವಿರೋಧವನ್ನೂ ವ್ಯಕ್ತ ಪಡಿಸದೆಕಠಿಣ ಷರತ್ತುಗಳನ್ನು ವಿಧಿಸುವಂತೆ ಕೋರಿದ ಬಳಿಕ ನ್ಯಾಯಾಲಯವು ದೇವೇಂದ್ರ ಕುಮಾರ್ ಅವರಿಗೆ ಜಾಮೀನು ಮಂಜೂರು ಮಾಡಿ ಆದೇಶ ನೀಡಿತುಸಿಬಿಐಯು ಪ್ರಕರಣದಲ್ಲಿ ಪ್ರತಿಯೊಂದು ನಿಯಮವನ್ನೂ ಉಲ್ಲಂಘಿಸಿದೆ. ವ್ಯಂಗ್ಯವೆಂದರೆ ನಿಯಮದ ಪುಸ್ತಕವನ್ನು ಅನುಸರಿಸಿದ ಏಕೈಕ ಅಧಿಕಾರಿ ದೇವೇಂದ್ರ ಕುಮಾರ್ ಜೈಲಿನಲ್ಲಿದ್ದಾರೆ ಎಂದು ಸಿಬಿಐ ಅಧಿಕಾರಿಯ ವಕೀಲರು ವಿಶೇಷ ಸಿಬಿಐ ನ್ಯಾಯಾಧೀಶ ಸಂತೋಷ್ ಸ್ನೇಹಿ ಮಾನ್ ಅವರ ಗಮನಕ್ಕೆ ತಂದರು.  ‘ ಒಬ್ಬರ ಮನೆಯ ಮೇಲೆ ದಾಳಿ ನಡೆಸಿದ ಸಿಬಿಐ ಅಧಿಕಾರಿಗಳ ಬಳಿ ಸಕ್ರಮವಾದ ವಾರಂಟ್ ಇರಲಿಲ್ಲ. ಸಿಬಿಐ ಮೊಬೈಲು ಫೋನುಗಳು ಮತ್ತು ಇತರ ಸಾಧನಗಳನ್ನು ವಶಪಡಿಸಿಕೊಂಡಿತು. ಅವುಗಳಲ್ಲಿ ಕೆಲವನ್ನು ವಶ ಪಡಿಸಿಕೊಂಡದ್ದಕ್ಕೆ ಸ್ವೀಕೃತಿಯನ್ನೂ ಕೊಡಲಿಲ್ಲ ಎಂದೂ ದೇವೇಂದ್ರ ಕುಮಾರ್ ಅವರ ವಕೀಲರು ಹೇಳಿದರುನ್ಯಾಯಾಧೀಶ ಮಾನ್ ಅವರು ೫೦,೦೦೦ ರೂಪಾಯಿಗಳ ವೈಯಕ್ತಿಕ ಬಾಂಡ್ ಮತ್ತು ಅಷ್ಟೇ ಮೊತ್ತದ ಇನ್ನೊಂದು ಭದ್ರತಾ ಖಾತರಿಯಲ್ಲಿ ದೇವೇಂದ್ರ ಕುಮಾರ್ ಅವರನ್ನು ಬಿಡುಗಡೆ ಮಾಡುವಂತೆ ಆದೇಶ ನೀಡಿದರು. ಭ್ರಷ್ಟಾಚಾರ ಆರೋಪಗಳಿಗೆ ಸಂಬಂಧಿಸಿದಂತೆ ಕಳೆದವಾರ ಬಂಧಿತರಾದ ದೇವೇಂದ್ರ ಕುಮಾರ್ ಮತ್ತು ರಾಕೇಶ್ ಅಸ್ತಾನ ಅವರು ಈಗಾಗಲೇ ತಮ್ಮ ವಿರುದ್ಧ ದಾಖಲಿಸಲಾದ ಎಫ್ಐಆರ್ನ್ನು ಪ್ರಶ್ನಿಸಿ ಕೋರ್ಟ್ ಮೆಟ್ಟಿಲೇರಿದ್ದರು. ಬೇರೊಂದು ಪ್ರಕರಣದ ತನಿಖೆಯ ವೇಳೆಯಲ್ಲಿ ಸಾಕ್ಷ್ಯವನ್ನು ನಕಲು ಮಾಡಲು ದೇವೇಂದ್ರ ಕುಮಾರ್ ಯತ್ನಿಸಿದರು ಎಂದು ಸಿಬಿಐ ಮುನ್ನ ಆಪಾದಿಸಿತ್ತು. ಆದರೆ ತಮ್ಮನ್ನು ತಪ್ಪಾಗಿ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಮತ್ತು ಕೇಂದ್ರೀಯ ತನಿಖಾ ಸಂಶ್ಥೆಯ ಇಬ್ಬರು ಹಿರಿಯ ಅಧಿಕಾರಿಗಳ ಪೈಪೋಟಿಯಲ್ಲಿ ತನ್ನನ್ನು ಬಲಿಪಶುವನ್ನಾಗಿ ಮಾಡಲಾಗಿದೆ ಎಂದು ಕುಮಾರ್ ಪ್ರತಿಪಾದಿಸಿದ್ದರು.

2018: ನವದೆಹಲಿ: ಏರ್ಸೆಲ್ - ಮ್ಯಾಕ್ಸಿಸ್ ಹಣ ವರ್ಗಾವಣೆ ಪ್ರಕರಣದಲ್ಲಿ ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ತನಿಖೆಯಲ್ಲಿ ಸಹಕರಿಸುತ್ತಿಲ್ಲ ಎಂಬುದಾಗಿ ದೆಹಲಿ ನ್ಯಾಯಾಲಯಕ್ಕೆ ತಿಳಿಸಿದ ಜಾರಿ ನಿರ್ದೇಶನಾಲಯವು (ಇಡಿ) ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಕೋರಿಕೆ ಅರ್ಜಿಯನ್ನು ವಿರೋಧಿಸಿ ತನಿಖೆಗಾಗಿ ತನ್ನ ವಶಕ್ಕೆ ಒಪ್ಪಿಸುವಂತೆ ಕೋರಿತು.  ಚಿದಂಬರಂ ಅವರ ನಿರೀಕ್ಷಣಾ ಜಾಮೀನು ಕೋರಿಕೆ ಮನವಿಗೆ ನೀಡಿದ ಉತ್ತರದಲ್ಲಿ ಜಾರಿ ನಿರ್ದೇಶನಾಲಯವು, ಚಿದಂಬರಂ ಅವರು ಜಾರಿಕೊಳ್ಳುತ್ತಿದ್ದಾರೆ ಮತ್ತು ತನಿಖೆಯಲ್ಲಿ ಸಹಕರಿಸುತ್ತಿಲ್ಲ ಎಂದು ಹೇಳಿತು. ಚಿದಂಬರಂ ಅವರ ಮನವಿ ಮೇಲಿನ ವಿಚಾರಣೆಯು  ವಿಶೇಷ ನ್ಯಾಯಾಧೀಶ ಪಿ ಸೈನಿ ಅವರ ಮುಂದೆ ನಡೆಯಲಿದೆ. ಚಿದಂಬರಂ ಮತ್ತು ಅವರ ಪುತ್ರ ಕಾರ್ತಿ ಚಿದಂಬರಂ ಅವರನ್ನು  ಸಿಬಿಐ ಮತ್ತು ಜಾರಿ ನಿರ್ದೇಶನಾಲಯವು ದಾಖಲಿಸಿರುವ ಏರ್ಸೆಲ್ - ಮ್ಯಾಕ್ಸಿಸ್ ಪ್ರಕರಣದಲ್ಲಿ ಬಂಧಿಸದಂತೆ ನೀಡಲಾಗಿರುವ ಮಧ್ಯಂತರ ರಕ್ಷಣೆಯನ್ನು ನ್ಯಾಯಾಲಯವು ಅಕ್ಟೋಬರ್ ೮ರಂದು ನವೆಂಬರ್ ೧ರವರೆಗೆ ವಿಸ್ತರಿಸಿತ್ತು. ಜಾರಿ ನಿರ್ದೇಶನಾಲಯ ಪ್ರಕರಣದಲ್ಲಿ ತಮ್ಮನ್ನು ಬಂಧಿಸದಂತೆ ರಕ್ಷಣೆ ಕೋರಿ ಚಿದಂಬರಂ ಅವರು ವರ್ಷ ಮೇ ೩೦ರಂದು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಮುನ್ನ ವಿವಿಧ ಸಂದರ್ಭಗಳಲ್ಲಿ ಅವರಿಗೆ ನಿರಾಳತೆ ಲಭಿಸಿತ್ತುತನಿಖಾ ಸಂಸ್ಥೆಯು ಅಕ್ಟೋಬರ್ ೨೫ರಂದು ಏರ್ಸೆಲ್ - ಮ್ಯಾಕ್ಸಿಸ್ ಹಣ ವರ್ಗಾವಣೆ ಪ್ರಕರಣದಲ್ಲಿ ಚಿದಂಬರಂ ವಿರುದ್ಧ ದೋಷಾರೋಪ ಪಟ್ಟಿ (ಚಾರ್ಜ್ಶೀಟ್) ಸಲ್ಲಿಸಿ, ತಮ್ಮ ಉದ್ಯಮ ಸಾಹಸಕ್ಕೆ ಒಪ್ಪಿಗೆ ಪಡೆಯಲು ವಿದೇಶೀ ಹೂಡಿಕೆದಾರರ ಜೊತೆಗೆ ಸಂಚು ನಡೆಸಿದ್ದರು ಎಂದು ಆಪಾದಿಸಿತ್ತು. ಚಿದಂಬರಂ, ಎಸ್. ಭಾಸ್ಕರರಾಮನ್ (ಕಾರ್ತಿ ಅವರ ಚಾರ್ಟರ್ಡ್ ಅಕೌಂಟೆಂಟ್), ವಿ. ಶ್ರೀನಿವಾಸನ್ (ಏರ್ಸೆಲ್ ಮಾಜಿ ಸಿಇಒ), ಆಗಸ್ಟಸ್ ರಾಲ್ಫ್ ಮಾರ್ಶಲ್ (ಮ್ಯಾಕ್ಸಿಸ್ ಜೊತೆ ಕೈಜೋಡಿಸಿದವರು), ಆಸ್ಟ್ರೋ ಆಲ್ ಏಷ್ಯಾ ನೆಟ್ ವರ್ಕ್ಸ್ ಪಿಎಲ್ಸಿ ಮಲೇಶ್ಯಾ, ಏರ್ ಸೆಲ್ ಟೆಲಿವೆಂಚರ್ಸ್ ಲಿಮಿಟೆಡ್, ಮ್ಯಾಕ್ಸಿಸ್ ಮೊಬೈಲ್ ಸರ್ವೀಸಸ್ ಎಸ್ಡಿಎನ್ ಬಿಎಚ್ ಡಿ, ಬುಮಿ ಅರ್ಮಡ ಬೆರ್ಹಾಡ್, ಬುಮಿ ಅರ್ಮಡ ನ್ಯಾವಿಗೇಷನ್ ಎಸ್ ಡಿಎನ್ ಬಿಎಚ್ಡಿ ಅವರನ್ನು ಸಂಸ್ಥೆಯು ಆರೋಪಿಗಳಾಗಿ ಹೆಸರಿಸಿತ್ತು೨೦೦೬ರ ಮಾರ್ಚ್ ತಿಂಗಳಲ್ಲಿ ಮಾಜಿ ಸಚಿವರಿಂದ ಅಕ್ರಮವಾಗಿ ಎಫ್ಐಪಿಬಿ ಅನುಮೋದನೆ ಪಡೆದ ಬಳಿಕ ಆರೋಪಿಗಳು .೧೬ ಕೋಟಿ ರೂಪಾಯಿಗಳನ್ನು ವರ್ಗಾವಣೆ ಮಾಡಿದ್ದರು ಎಂದು ಜಾರಿ ಆರೋಪಿಸಲಾಗಿತ್ತು. ಹಣವನ್ನು ವಿದೇಸೀ ಹೂಡಿಕೆದಾರ ಗ್ಲೋಬಲ್ ಕಮ್ಯೂನಿಕೇಷನ್ ಮತ್ತು ಸರ್ವೀಸಸ್ ಹೋಲ್ಡಿಂಗ್ಸ್ ಲಿಮಿಟೆಡ್, ಮಾರಿಷಸ್ಗೆ ನೀಡಲಾಗಿತ್ತು. ಭಾರತದಲ್ಲಿನ ಎಫ್ಡಿಐ ನೀತಿಯ ವಿವಿಧ ನಿಯಮಗಳು ಮತ್ತು ನಿಯಂತ್ರಣಗಳನ್ನು ಉಲ್ಲಂಘಿಸಿ ಹಣ ವರ್ಗಾವಣೆ ಮಾಡಲಾಗಿತ್ತು ಎಂದು ಆಪಾದಿಸಲಾಗಿತ್ತು. ಏರ್ಸೆಲ್ - ಮ್ಯಾಕ್ಸಿಸ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು ಸಲ್ಲಿಸಿದ ಎರಡನೇ ದೋಷಾರೋಪ ಪಟ್ಟಿ ಇದಾಗಿತ್ತು. ಇದಕ್ಕೆ ಮುನ್ನ ಜಾರಿ ನಿರ್ದೇಶನಾಲಯವು ಚಿದಂಬರಂ ಅವರ ಪುತ್ರ ಕಾರ್ತಿ ವಿರುದ್ಧ ಮೊದಲ ದೋಷಾರೋಪ ಪಟ್ಟಿಯನ್ನು ಸಲ್ಲಿಸಿ, ಬಳಿಕ ಅವರ ವಿರುದ್ಧ ಪೂರಕ ದೋಷಾರೋಪ ಪಟ್ಟಿಯನ್ನು ಸಲ್ಲಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೆ ಸಲ್ಲಿಸಿದ್ದ ತನ್ನ ದೋಷಾರೋಪ ಪಟ್ಟಿಯಲ್ಲಿ ಮಾಜಿ ಟೆಲಿಕಾಂ ಸಚಿವ ದಯಾನಿಧಿ ಮಾರನ್, ಅವರ ಸಹೋದರ ಕಲಾನಿಧಿ ಮಾರನ್ ಮತ್ತು ಇತರರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಮ್ಯಾಕ್ಸಿಸ್ ಆಧೀನ ಸಂಸ್ಥೆಯಾದ ಮಾರಿಷಸ್ ಮೂಲದ ಸಂಸ್ಥೆಗೆ ೨೦೦೬ರ ಮಾರ್ಚ್ ತಿಂಗಳಲ್ಲಿ ಚಿದಂಬರಂ ಎಫ್ಐಪಿಬಿ ಅನುಮೋದನೆ ನೀಡಿದ್ದರು ಎಂದು ಸಂಸ್ಥೆ ಆಪಾದಿಸಿತ್ತು. ಸಿಬಿಐ ದೋಷಾರೋಪ ಪಟ್ಟಿಯಲ್ಲಿ ಆರೋಪಿಗಳಾದ ಹೆಸರಿಸಲಾಗಿದ್ದ ಮಾರನ್ ಸಹೋದರರು ಮತ್ತು ಇತರರನ್ನು ವಿಶೇಷ ನ್ಯಾಯಾಲಯವು ದೋಷಮುಕ್ತರನ್ನಾಗಿ ಮಾಡಿತ್ತುಅವರ ವಿರುದ್ಧ ವಿಚಾರಣೆ ಮುನ್ನಡೆಸಲು ಯಾವುದೇ ಅಗತ್ಯ ದಾಖಲೆ ಒದಗಿಸುವಲ್ಲಿ ಸಂಸ್ಥೆಯು ವಿಫಲವಾಗಿದೆ ಎಂದು ನ್ಯಾಯಾಲಯ ಹೇಳಿತ್ತು.
ಸಿಬಿಐ ಮತ್ತು ಜಾರಿ ನಿರ್ದೇಶನಾಲಯವು ತಮ್ಮ ವಿರುದ್ಧ ಮಾಡಿದ ಆರೋಪಗಳನ್ನು ಚಿದಂಬರಂ ಮತ್ತು ಕಾರ್ತಿ ನಿರಾಕರಿಸಿದ್ದರು.

2018: ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಗವರ್ನರ್ ಊರ್ಜಿತ್ ಪಟೇಲ್ ಅವರು ಕೇಂದ್ರ ಸರ್ಕಾರದ ಜೊತೆಗೆಗುದ್ದಾಟ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಬಹುದು ಎಂಬ ವದಂತಿಗಳನ್ನು ಆರ್ಬಿಐ ಮೂಲಗಳು ತಳ್ಳಿಹಾಕಿದ್ದು, ಪಟೇಲ್ ಅವರು ತಮ್ಮ ಹುದ್ದೆ ತ್ಯಜಿಸುವ ಪ್ರಶ್ನೆಯಿಲ್ಲ ಎಂದು ಹೇಳಿದವು. ‘ಪಟೇಲ್ ರಾಜೀನಾಮೆ ಕುರಿತ ವದಂತಿಗಳು ಸಂಪೂರ್ಣ ಬುಡರಹಿತ ಎಂದು ಮೂಲಗಳು ಸ್ಪಷ್ಟ ಪಡಿಸಿವೆ.
ಆರ್ಬಿಐ ಗವರ್ನರ್ ಅವರು ನವೆಂಬರ್ ೧೯ರಂದು ಉಳಿಕೆ ವಿಷಯಗಳು ಮತ್ತು ಆರ್ ಬಿಐ ಮತ್ತು ಸರ್ಕಾರದ ನಡುವೆಹಗ್ಗ ಜಗ್ಗಾಟ ಸ್ಥಿತಿಗೆ ಕಾರಣವಾದ ವಿಷಯಗಳ ಬಗ್ಗೆ ಚರ್ಚಿಸಲು ಮಂಡಳಿಯ ಸಭೆ ಕರೆದಿದ್ದಾರೆ ಎಂದು ಮೂಲಗಳು ಹೇಳಿದವು. ಈ ಮಧ್ಯೆ ಹಣಕಾಸು ಸಚಿವಾಲಯವು ಬುಧವಾರ ಹೇಳಿಕೆಯೊಂದನ್ನು ನೀಡಿ ಉಭಯರಿಗೂಸಾರ್ವಜನಿಕ ಹಿತಾಸಕ್ತಿ ಮತ್ತುಆರ್ಥಿಕತೆಯ ಅಗತ್ಯಗಳು ಮಾರ್ಗದರ್ಶಿ ಶಕ್ತಿಯಾಗಬೇಕೆಂದು ಒತ್ತಿ ಹೇಳಿತು.  ರಿಸರ್ವ್ ಬ್ಯಾಂಕ್ ಜೊತೆಗಿನ ಸಮಾಲೋಚನೆಗಳನ್ನು ತಾನು ಎಂದೂ ಬಹಿರಂಗ ಪಡಿಸಿಲ್ಲ ಎಂದು ಅದು ತಿಳಿಸಿತು.  ‘ಆರ್ಬಿಐ ಕಾಯ್ದೆಯ ಚೌಕಟ್ಟಿನ ಒಳಗೆ ಕೇಂದ್ರೀಯ ಬ್ಯಾಂಕಿನ ಸ್ವಾಯತ್ತತೆ ಅತ್ಯಗತ್ಯ ಮತ್ತು ಅಂಗೀಕೃತವಾಗಿರುವ ಸರ್ಕಾರಿ ಅಗತ್ಯವಾಗಿದೆ ಎಂದು ವಿತ್ತ ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿತು. ಭಾರತ ಸರ್ಕಾರವು ಇದನ್ನು ಪೋಷಿಸುತ್ತಾ ಬಂದಿದೆ ಮತ್ತು ಗೌರವಿಸಿದೆ. ಸರ್ಕಾರ ಮತ್ತು ಕೇಂದ್ರೀಯ ಬ್ಯಾಂಕ್ ಎರಡೂ ತಮ್ಮ ಕಾರ್ ನಿರ್ವಹಣೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಮತ್ತು ಭಾರತೀಯ ಆರ್ಥಿಕತೆಯ ಅಗತ್ಯಗಳಿಂದ ಮಾರ್ಗದರ್ಶನ ಪಡೆಯಬೇಕಾಗಿದೆ ಎಂದು ವಿತ್ತ ಸಚಿವಾಲಯದ ಹೇಳಿಕೆ ತಿಳಿಸಿತು. ಹಲವಾರು ವಿಷಯಗಳಿಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಆರ್ ಬಿಐ ಮಧ್ಯೆ ಕಾಲ ಕಾಲಕ್ಕೆ ವಿಸ್ತೃತ ಸಮಾಲೋಚನೆಗಳು ನಡೆಯುತ್ತವೆ. ಎಲ್ಲ ನಿಯಂತ್ರಕರಿಗೆ ಸಂಬಂಧಿಸಿದಂತೆಯೂ ಇದು ಅಷ್ಟೇ ಸತ್ಯ. ಇಂತಹ ಸಮಾಲೋಚನೆಗಳ ವಿಷಯವನ್ನು ಸರ್ಕಾರ ಎಂದೂ ಬಹಿರಂಗ ಪಡಿಸಿಲ್ಲ. ನಿರ್ಧಾರಗಳನ್ನು ಮಾತ್ರವೇ ತಿಳಿಸಲಾಗುತ್ತದೆ. ವಿಷಯಗಳಿಗೆ ಸಂಬಂಧಿಸಿದಂತೆ ತನ್ನ ಅಂದಾಜು ಮತ್ತು ಸಂಭಾವ್ಯ ಪರಿಹಾರಗಳನ್ನು ಸಮಾಲೋಚನೆಗಳ ಮೂಲಕ ಸರ್ಕಾರವು ಮುಂದಿಡುತ್ತದೆ. ತನ್ನ ಪರಿಪಾಠವನ್ನು ಸರ್ಕಾರವು ಮುಂದುವರೆಸುತ್ತದೆ ಎಂದು ವಿತ್ತ ಸಚಿವಾಲಯವು ಹೇಳಿದೆ.

2018: ನವದೆಹಲಿ: ಫ್ರಾನ್ಸ್ ದೇಶದ ಜೊತೆ ಖರೀದಿಸಲು ಉದ್ದೇಶಿಸಿರುವ ರಫೇಲ್ ಜೆಟ್ ಒಪ್ಪಂದದ ಬೆಲೆ ಹಾಗೂ ವೆಚ್ಚದ ಬಗ್ಗೆ ೧೦ ದಿನಗಳ ಒಳಗಾಗಿ ಮಾಹಿತಿ ನೀಡು ವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಆದೇಶಿಸಿತು.  ೫೯ ಸಾವಿರ ಕೋಟಿ ರೂ. ನೀಡಿ ಫ್ರಾನ್ಸ್ ನಿಂದ ೩೬ ಯುದ್ಧ ವಿಮಾನಗಳನ್ನು ಖರೀದಿಸುವ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರ ನಡೆದಿದೆ. ಹೀಗಾಗಿ ಖರೀದಿ ಪ್ರಕ್ರಿಯೆಗೆ ಸಂಬಂಧಿಸಿದ ವಿವರಗಳನ್ನು ಸಾರ್ವಜನಿ ಕವಾಗಿ ಬಹಿರಂಗಪಡಿಸಲು ಸರ್ಕಾರಕ್ಕೆ ಆದೇಶ ನೀಡಬೇಕೆಂದು ಕೋರಿ ವಕೀಲ ರಾದ ಮನೋಹರ್ ಲಾಲ್ ಶರ್ಮಾ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ದ್ದರು. ಈ ಪಿಐಎಲ್ ಜೊತೆಗೆ ಯಶ ವಂತ್ ಸಿನ್ಹಾ, ಅರುಣ್ ಶೌರಿ ಮತ್ತು ವಕೀಲ ಪ್ರಶಾಂತ್ ಭೂಷಣ್ ಈ ಪ್ರಕರಣ ವನ್ನು ಸಿಬಿಐಗೆ ತನಿಖೆಗೆ ವಹಿಸುವಂತೆ ಪಿಐಎಲ್ ಸಲ್ಲಿಸಿದರು. ಈ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ನ್ಯಾ. ಎಸ್.ಕೆ. ಕೌಲ್ ಮತ್ತು ನ್ಯಾ.ಕೆ.ಎಂ ಜೋಸೆಫ್ ಅವರನ್ನೊ ಳಗೊಂಡ ಪೀಠ, ವಿಮಾನಗಳ ಬೆಲೆ ಕುರಿತು ಸಂಪೂರ್ಣ ಮಾಹಿತಿಗಳನ್ನು ಮುಚ್ಚಿದ ಲಕೋಟೆಯಲ್ಲಿ ೧೦ ದಿನದ ಒಳಗಡೆ ಸಲ್ಲಿಸುವಂತೆ ಸೂಚನೆ ನೀಡಿತು.

ವಿಚಾರಣೆ ವೇಳೆ ಅಟಾರ್ನಿ ಜನರಲ್ ಕೆಕೆ ವೇಣು ಗೋಪಾಲ್, ವಿಮಾನ ಖರೀದಿಯ ಬೆಲೆ ಗೌಪ್ಯತೆಯನ್ನು ಕಾಪಾಡಲಾಗಿದ್ದು, ಸಾರ್ವಜನಿಕವಾಗಿ ಮಾಹಿತಿಯನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಮನವಿ ಮಾಡಿ ದರು. ಈ ಸಮಯದಲ್ಲಿ ಕೋರ್ಟ್ ರಫೇಲ್ ಯುದ್ಧ ವಿಮಾನದ ತಾಂತ್ರಿಕ ಗೌಪ್ಯ ವಿಚಾರಗಳು ನಮಗೆ ಬೇಕಾ ಗಿಲ್ಲ ಆದರೆ ಒಪ್ಪಂದ ಮತ್ತು ಬೆಲೆಯ ಮಾಹಿತಿಯನ್ನು ಸಾರ್ವಜನಿಕರಿಂದ ಮುಚ್ಚಿಡುವಂತಿಲ್ಲ, ಹತ್ತು ದಿನಗಳ ಒಳಗೆ ಅರ್ಜಿದಾರರು ಕೇಳುವ ಮಾಹಿತಿ ಯನ್ನು ನೀಡಬೇಕು ಎಂದು ಆದೇಶಿ ಸಿದೆ. ಪ್ರಶಾಂತ್ ಭೂ?ಣ್ ಅವರು, ವ್ಯವಹಾರ ಖರೀದಿಯಲ್ಲಿ ಭ್ರ?ಚಾರ ನಡೆದಿದೆ. ಹೀಗಾಗಿ ಸಿಬಿಐ ತನಿಖೆಗೆ ಆದೇಶಿಸಿ ಎಂದು ಮನವಿ ಮಾಡಿದರು. ಇದಕ್ಕೆ ಕೋರ್ಟ್ ವಿಚಾರಣೆ ಮುಗಿಯು ವ ತನಕ ನೀವು ಕಾಯಬೇಕು, ಈಗಲೇ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಲು ಸಾಧ್ಯವಿಲ್ಲ ಎಂದು ಹೇಳಿ ನ. ೧೦ಕ್ಕೆ ವಿಚಾ ರಣೆಯನ್ನು ಮುಂದೂಡಿತು.


2016: ಭೋಪಾಲ್: ಮಧ್ಯಪ್ರದೇಶದ ಭೋಪಾಲ್ ಸೆಂಟ್ರಲ್ ಜೈಲಿನಿಂದ ಈದಿನ ನಸುಕಿನ ವೇಳೆಯಲ್ಲಿ ಪರಾರಿಯಾಗಿದ್ದ ನಿಷೇಧಿತ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ವೆುಂಟ್ ಆಫ್ ಇಂಡಿಯಾ (ಸಿಮಿ) ಸಂಘಟನೆಯ 8 ಮಂದಿ ಭಯೋತ್ಪಾದಕರನ್ನು ತಪ್ಪಿಸಿಕೊಂಡ ಕೆಲವೇ ಗಂಟೆಗಳಲ್ಲಿ ಪೊಲೀಸರು ಕೊಂದು ಹಾಕಿದರು. ಮಧ್ಯಪ್ರದೇಶದ ರಾಜಧಾನಿಯ ಹೊರವಲಯದ ಮಾಲಿಖೇಡದ ಇಂತಿಖೇಡಿ ಗ್ರಾಮದಲ್ಲಿ ನಡೆದ ಗುಂಡಿನ ಘರ್ಷಣೆಯಲ್ಲಿ ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ ಎಂದು ಮೂಲಗಳು ತಿಳಿಸಿದವು. ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ಸೆಂಟ್ರಲ್ ಜೈಲಿನಿಂದ ನಸುಕಿನ 2ರಿಂದ 3 ಗಂಟೆಗೆ ವೇಳೆಯಲ್ಲಿ ಸ್ಟೂಡೆಂಟ್ಸ್
ಇಸ್ಲಾಮಿಕ್ ಮೂವ್ವೆುಂಟ್ ಆಫ್ ಇಂಡಿಯಾ (ಸಿಮಿ) ನಿಷೇಧಿತ ಸಂಘಟನೆಗೆ ಸೇರಿದ 8 ಉಗ್ರರು ತಪ್ಪಿಸಿ ಕೊಂಡಿದ್ದರು. ಬಿಗಿ ಭದ್ರತೆಯಿದ್ದ ಸೆರೆಮನೆಯಿಂದ ಪರಾರಿಯಾಗುವ ಸಂದರ್ಭದಲ್ಲಿ ಓರ್ವ ಭದ್ರತಾ ಸಿಬ್ಬಂದಿಯನ್ನು ಕೈದಿಗಳು ಹತ್ಯೆ ಮಾಡಿದ್ದರು. ಅವರು ಬೆಡ್ ಶೀಟ್ ಬಳಸಿ ತಯಾರಿಸಿದ ಹಗ್ಗದ ಸಹಾಯದಿಂದ ಜೈಲಿನ ಗೋಡೆ ಹಾರಿ ತಪ್ಪಿಸಿಕೊಂಡಿದ್ದರು.ಉಗ್ರರು ಜೈಲಿನಿಂದ ತಪ್ಪಿಸಿಕೊಂಡ ಹಿನ್ನೆಲೆಯಲ್ಲಿ ಮಧ್ಯಪ್ರದೇಶದಲ್ಲಿ ಹೈ ಅಲರ್ಟ್ ಘೊಷಿಸಲಾಗಿತ್ತು. ಪರಾರಿ ಹಿನ್ನೆಲೆಯಲ್ಲಿ ಸೆರೆಮನೆಗಳ ಡಿಐಜಿ ಮತ್ತು ಎಡಿಜಿಯನ್ನು ಅಮಾನತುಗೊಳಿಸಲಾಗಿದೆ ಎಂದೂ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ಪ್ರಕಟಿಸಿದ್ದರು. ಜೈಲಿನಿಂದ ಪರಾರಿಯಾಗಿ ಗುಂಡಿನ ಘರ್ಷಣೆಯಲ್ಲಿ ಹತರಾದ 8 ಮಂದಿ ಸಿಮಿ ಕೈದಿಗಳು 2008 ಅಹಮದಾಬಾದ್ ಸರಣಿ ಸ್ಪೋಟಗಳು, ಮತ್ತು ಎರಡು ವರ್ಷಗಳ ಹಿಂದಿನ ಕರೀಮ್ ನಗರ, ಪುಣೆ ಹಾಗೂ ಚೆನ್ನೈಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಪ್ರಕರಣಗಳಲ್ಲಿ ಆರೋಪಿಗಳಾಗಿದ್ದರು.

2016: ಜಮ್ಮು: ಜಮ್ಮು ಮತ್ತು ಕಾಶ್ಮೀರದಲ್ಲಿ ಈದಿನ ನಡೆದ 4 ದಾಳಿ ಸೇರಿದಂತೆ ಹಿಂದಿನ ರಾತ್ರಿಯಿಂದೀಚೆಗೆ ಪಾಕಿಸ್ತಾನವು ಅಂತಾರಾಷ್ಟ್ರೀಯ ಗಡಿಯಲ್ಲಿ 7 ಕಡೆ ಕದನ ವಿರಾಮ ಉಲ್ಲಂಘಿಸಿ ಶೆಲ್ ಹಾಗೂ ಗುಂಡಿನ ದಾಳಿ ನಡೆಸಿತು.  ದಾಳಿಯಲ್ಲಿ ಭಾರತದ ಒಬ್ಬ ಯೋಧ ಹುತಾತ್ಮನಾಗಿದ್ದು, ಇಬ್ಬರು ಯೋಧರು ಗಾಯಗೊಂಡಿದ್ದಾರೆ. ಒಬ್ಬ ಮಹಿಳೆಯೂ ಸಾವನ್ನಪ್ಪಿದ್ದು, ಇನ್ನೊಬ್ಬ ಮಹಿಳೆ ಗಾಯಗೊಂಡಳು. ಜಮ್ಮು ಮತ್ತು ಕಾಶ್ಮೀರದ ರಾಜೌರಿ ಮತ್ತು ಪೂಂಚ್ ವಿಭಾಗಗಳಲ್ಲಿ ಕದನ ವಿರಾಮ ಉಲ್ಲಂಘಿಸಲಾಗಿದ್ದು, ತಕ್ಕ ಉತ್ತರ ನೀಡುವ ಮೂಲಕ ಭಾರತೀಯ ಪಡೆಗಳು ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಿದೆ. ರಾಜೌರಿಯ ಮಂಜಾಕೋಟೆ ಮತ್ತು ಗಂಭೀರ್ ವಿಭಾಗಗಳಲ್ಲಿ ಕದನ ವಿರಾಮದ ಉಲ್ಲಂಘನೆಯಾಯಿತು.. ಮೆಂಧರಿನ  ಬಾಲಾಕೋಟೆ ಗ್ರಾಮದಲ್ಲಿ ಪಾಕ್ ಪಡೆಗಳ ಗುಂಡಿನ ದಾಳಿಯಿಂದ ಇಬ್ಬರು ಸೇನಾ ಯೋಧರು ಗಾಯಗೊಂಡರು. ಗಾಯಾಳುಗಳನ್ನು ಉಧಮ್ ಪುರದ ಕಮಾಂಡ್ ಆಸ್ಪತ್ರೆಗೆ ದಾಖಲಿಸಲಾಯಿತು.  ಪೂಂಚ್ ನ ಮೆಂಧರ್ ವಿಭಾಗದ ಗೊಲಟ್ ಗ್ರಾಮದಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, ಇನ್ನೊಬ್ಬ ಮಹಿಳೆ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಯಿತು. ಪಾಕಿಸ್ತಾನಿ ರೇಂಜರುಗಳು ಜಮ್ಮು ಪ್ರದೇಶದ ಆರ್.ಎಸ್.ಪುರ, ಸುಚೇತಗಢ ಮತ್ತು ಹೀರಾ ನಗರ ವಿಭಾಗಗಳಲ್ಲಿ ಹಿಂದಿನ  ರಾತ್ರಿ ಶೆಲ್ ಮತ್ತು ಗುಂಡಿನ ದಾಳಿ ನಡೆಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು. ಪಾಕಿಸ್ತಾನಿ ರೇಂಜರುಗಳು ಜನವಸತಿ ಪ್ರದೇಶ ಮತ್ತು ರಕ್ಷಣಾ ಸವಲತ್ತುಗಳ ಕಡೆಗೆ ಶೆಲ್ಲುಗಳನ್ನು  ಎಸೆಯುವುದರ ಜೊತೆಗೆ ಗುಂಡಿನ ದಾಳಿಯನ್ನೂ ನಡೆಸಿದರು ಎಂದು ಪೊಲೀಸರು ತಿಳಿಸಿದರು. ಪಾಕ್ ಪಡೆಗಳು ಫಿರಂಗಿ ಹಾಗೂ ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಬಳಸಿ ಜನವಸತಿ ಪ್ರದೇಶ ಮತ್ತು ಬಿಎಸ್ಎಫ್ ಸವಲತ್ತುಗಳ ಮೇಲೆ ದಾಳಿ ನಡೆಸಿದರು. ಭಾರತೀಯ ಪಡೆಗಳು ಸೂಕ್ತ ಉತ್ತರ ನೀಡಿದ ಬಳಿಕ ಮಧ್ಯರಾತ್ರಿಯ ವೇಳೆಗೆ ಗುಂಡಿನ ಘರ್ಷಣೆ ನಿಂತಿತು ಎಂದು ಪೊಲೀಸರು ಹೇಳಿದರು. ದಾಳಿ ಪರಿಣಾಮವಾಗಿ ಗ್ರಾಮಸ್ಥರ ದೀಪಾವಳಿ ಸಂಭ್ರಮ ಮಸುಕಾಯಿತು ಎಂದು ಅವರು ನುಡಿದರು.

2016: ನವದೆಹಲಿ: ಸರ್ಕಾರವೇ ಅತಿ ದೊಡ್ಡ ವ್ಯಾಜ್ಯದಾರ ಎಂಬುದಾಗಿ ಇಲ್ಲಿ ಬಣ್ಣಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ಸರ್ಕಾರವೇ ಕಕ್ಷಿದಾರ ನಾಗಿರುವಂತಹ ಪ್ರಕರಣಗಳ ಇತ್ಯರ್ಥಕ್ಕೆ ತನ್ನ ಗರಿಷ್ಠ ಸಮಯವನ್ನು ವಿನಿಯೋಗಿಸಬೇಕಾಗಿರುವ ನ್ಯಾಯಾಂಗದ ಮೇಲಿನ ಹೊರೆಯನ್ನು ತಗ್ಗಿಸಬೇಕಾದ ಅಗತ್ಯ ಇದೆ ಎಂದು ಹೇಳಿದರು. ಭಾರತೀಯ ಆಡಳಿತಾತ್ಮಕ ಸೇವೆಯಂತೆಯೇ ಅಖಿಲ ಭಾರತ ನ್ಯಾಯಾಂಗ ಸೇವೆ ವ್ಯವಸ್ಥೆಯನ್ನು ರೂಪಿಸಬೇಕು ಎಂದೂ ಪ್ರಧಾನಿ ಸಲಹೆ ಮಾಡಿದರು. ದೆಹಲಿ ಹೈಕೋರ್ಟಿನ ಸ್ವರ್ಣ ಮಹೋತ್ಸವ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಮೋದಿ ಸರ್ಕಾರವೇ ಅತಿದೊಡ್ಡ ಕಕ್ಷಿದಾರನಾಗಿದ್ದು, ನ್ಯಾಯಾಂಗವು ತನ್ನ ಗರಿಷ್ಠ ಸಮಯವನ್ನು ನಮ್ಮ ವ್ಯಾಜ್ಯಗಳ ಇತ್ಯರ್ಥಕ್ಕಾಗಿ ವ್ಯಯಿಸುತ್ತಿದೆ. ನಾವು ಅಂದರೆ ಮೋದಿ ಅಲ್ಲ, ಸರ್ಕಾರ ಎಂದು ನುಡಿದರು. ನ್ಯಾಯಾಂಗ ಒಂದು ಅಭಿಪ್ರಾಯ ನೀಡಿ ಪ್ರಕರಣ ಇತ್ಯರ್ಥ ಪಡಿಸಿದ ಬಳಿಕ, ಸಂಬಂಧ ಪಟ್ಟಂತೆ ಅದನ್ನು ಅನ್ವಯಿಸುವ ಮೂಲಕ ಪ್ರಕರಣಗಳನ್ನು ಕಡಿಮೆಗೊಳಿಸಬಹುದು. ಆಗ ನ್ಯಾಯಾಂಗದ ಮೇಲಿನ ಹೊರೆ ತಗ್ಗುತ್ತದೆ ಎಂದು ಮೋದಿ ಹೇಳಿದರು. ಶಿಕ್ಷಕನೊಬ್ಬ ತನ್ನ ಸೇವಾ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಖಟ್ಲೆ ಹೂಡಿ ಗೆದ್ದರೆ, ಆಗ ತೀರ್ಪನ್ನು ಇತರ ಸಹಸ್ರಾರು ಮಂದಿಗೆ ಅನುಕೂಲವಾಗುವಂತೆ ಮಾಡಲು ಮಾನದಂಡವಾಗಿ ಬಳಸಬೇಕು. ಇದರಿಂದ ನಂತರದ ಹಂತದ ವ್ಯಾಜ್ಯಗಳನ್ನು ಕಡಿಮೆ ಮಾಡಲು ಸಾಧ್ಯ ಎಂದು ಪ್ರಧಾನಿ ವಿವರಿಸಿದರು. ಸ್ಪಷ್ಟವಾದ ಅಂಕಿ ಅಂಶಗಳು ಇಲ್ಲದೇ ಹೋದರೂ ನ್ಯಾಯಾಲಯದ ಪ್ರಕರಣಗಳ ಪೈಕಿ ಕನಿಷ್ಠ ಶೇಕಡಾ 46ರಷ್ಟು ಪ್ರಕರಣಗಳಲ್ಲಿ ಸರ್ಕಾರವೇ ಕಕ್ಷಿದಾರನಾಗಿದೆ. ಇವುಗಳಲ್ಲಿ ಸೇವಾ ವಿಚಾರದಿಂದ ಹಿಡಿದು ಪರೋಕ್ಷ ತೆರಿಗೆಯವರೆಗೆ ಹಲವಾರು ವಿಷಯಗಳು ಸೇರಿವೆ. ವ್ಯಾಜ್ಯ ನೀತಿಯನ್ನು ಅಂತಿಮಗೊಳಿಸಲು ಕೇಂದ್ರ ವಿಫಲವಾಗಿದ್ದರೆ, ಹಲವಾರು ರಾಜ್ಯಗಳು ಕಾನೂನು ಸಚಿವಾಲಯ ರೂಪಿಸಿದ್ದ 2010 ಕರಡು ನೀತಿಯ ಆಧಾರದಲ್ಲಿ ತಮ್ಮ ತಮ್ಮ ರಾಜ್ಯಕ್ಕೆ ಬೇಕಾದಂತೆ ವ್ಯಾಜ್ಯ ನೀತಿಗಳನ್ನು ರೂಪಿಸಿಕೊಂಡಿವೆ. ಇತ್ತೀಚೆಗೆ ರೂಪಿಸಲಾದ ಕರಡು ವ್ಯಾಜ್ಯ ನೀತಿಯ ಅಂತಿಮ ನಿರ್ಧಾರಕ್ಕಾಗಿ ನ್ಯಾಯಾಲಯಕ್ಕೆ ಬಿಟ್ಟ ವಿಷಯವನ್ನು ಸರ್ಕಾರ ತ್ಯಜಿಸಬೇಕು ಎಂಬ ಮನೋಭಾವ ರೂಪಿಸಿಕೊಳ್ಳಬೇಕು ಎಂದು ಸ್ಪಷ್ಟ ಪಡಿಸಿದೆ ಎಂದು ಅವರು ನುಡಿದರು.

2016: ನವದೆಹಲಿ: ಭಾರತದ ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರಿಗೆ, 141ನೇ
ಜನ್ಮ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಶ್ರದ್ಧಾಂಜಲಿಯನ್ನು ಸಲ್ಲಿಸಿದರು. ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರಿಗೆ ಶ್ರದ್ಧಾಂಜಲಿ ಮತ್ತು ಭಾರತದ ಏಕೀಕರಣ ಹಾಗೂ ಸಹಕಾರ ಚಳವಳಿಯನ್ನು ಬಲಪಡಿಸುವ ನಿಟ್ಟಿನಲ್ಲಿ ಪಟೇಲರು ನೀಡಿದ ಕೊಡುಗೆಯನ್ನು ಸ್ಮರಿಸಿಕೊಳ್ಳುತ್ತಿದ್ದೇನೆ ಎಂದು ಪ್ರಧಾನಿ ಟ್ವೀಟ್ ಮಾಡಿದರು. ಅದಕ್ಕೆ ಮುನ್ನ ರಾಷ್ಟ್ರೀಯ ರಾಜಧಾನಿಯ ಹೃದಯ ಭಾಗವಾದ ಪಟೇಲ್ ಚೌಕದಲ್ಲಿ ಪಟೇಲರ ಪ್ರತಿಮೆಗೆ ಪ್ರಧಾನಿ ಪುಷ್ಪಾರ್ಚನೆ ಮಾಡುವ ಮೂಲಕ ಪ್ರಧಾನಿ ತಮ್ಮ ಗೌರವ ಸಲ್ಲಿಸಿದರು. ಧ್ಯಾನಚಂದ್ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏಕತಾ ಓಟಕ್ಕೂ ಚಾಲನೆ ನೀಡಿದ ಪ್ರಧಾನಿ, ಪಟೇಲ್ ನೆನಪಲ್ಲಿ ಅಂಚೆ ಚೀಟಿ ಬಿಡುಗಡೆ ಮಾಡಿದರು. ಪಟೇಲ್ ಅವರಿಗೆ ಸಂಬಂಧಿಸಿದ ಡಿಜಿಟಲ್ ಪ್ರದರ್ಶನವನ್ನೂ ಉದ್ಘಾಟಿಸಿದರು. ಏಕತಾ ಓಟಕ್ಕೆ ಚಾಲನೆ ನೀಡುವ ಮುನ್ನ ಸಮಾರಂಭದಲ್ಲಿ ಮಾತನಾಡಿ ಸರ್ದಾರ್ ವಲ್ಲಭಭಾಯಿ ಪಟೇಲರ ಕೊಡುಗೆಯನ್ನು ಸ್ಮರಿಸಿದರು. ವಲ್ಲಭ ಭಾಯಿ ಪಟೇಲ್ ಅವರು ಗುಜರಾತಿನ ನಡಿಯಾಡಿನಲ್ಲಿ 1875 ಅಕ್ಟೋಬರ್ 31ರಂದು ಜನಿಸಿದ್ದರು.

2016: ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಶಾಲೆಗಳಿಗೆ ಬೆಂಕಿ ಹಚ್ಚಲಾಗುತ್ತಿರುವ ಘಟನೆಗಳ ಬಗ್ಗೆ
 ಸ್ವಯಂಪ್ರೇರಿತ ಖಟ್ಲೆ ದಾಖಲಿಸಿಕೊಂಡ  ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಸಂಬಂಧಪಟ್ಟ ಎಲ್ಲರಿಗೂ ಸಂಬಂಧ ಸೂಕ್ತ ಸೂಚನೆಗಳನ್ನು ನೀಡುವಂತೆ ಜಮ್ಮು ಮತ್ತು ಕಾಶ್ಮೀರದ ಮುಖ್ಯಕಾರ್ಯದರ್ಶಿ, ಪೊಲೀಸ್ ಮಹಾ ನಿರ್ದೇಶಕರು ಮತ್ತು ಕಾಶ್ಮೀರದ ಶಾಲಾ ಶಿಕ್ಷಣ ನಿರ್ದೇಶಕರಿಗೆ ಆದೇಶ ನೀಡಿತು. ಶಿಕ್ಷಣದ ಅನಾಮಿಕ ವೈರಿಗಳಿಂದ ಶಾಲೆ ಕಟ್ಟಡಗಳನ್ನು ರಕ್ಷಿಸಲು ಮುಂಜಾಗರೂಕತೆ ಹಾಗೂ ಇತರ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಜಿಲ್ಲೆಗಳ ಡೆಪ್ಯಟಿ ಕಮೀಷನರುಗಳು, ಎಸ್ಎಸ್ಪಿಗಳು ಮತ್ತು ಸಿಇಓಗಳಿಗೆ ಅಗತ್ಯ ಸೂಚನೆಗಳನ್ನು ನೀಡುವಂತೆಯೂ ಹೈಕೋರ್ಟ್ ನಿರ್ದೇಶಿಸಿತು. ಪ್ರಕರಣದ ಮುಂದಿನ ವಿಚಾರಣೆಯನ್ನು ನವೆಂಬರ್ 7 ರಂದು ನಡೆಸಲಾಗುವುದು ಎಂದು ಹೈಕೋರ್ಟ್ ತಿಳಿಸಿತು. ಈ ಮಧ್ಯೆ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಅಪರಿಚಿತ ವ್ಯಕ್ತಿಗಳು ಭಾನುವಾರ ರಾತ್ರಿ ವಿಶೇಷ ಪೊಲೀಸ್ ಅಧಿಕಾರಿಯ ಮನೆಗೆ ಕಿಚ್ಚು ಹಚ್ಚಿದ್ದಾರೆ ಎಂದು ವರದಿಗಳು ತಿಳಿಸಿದವು. ಕಣಿವೆಯಲ್ಲಿ ಹಿಂದಿನ ದಿನ ಕೂಡಾ ಕೇಂದ್ರ ಸರ್ಕಾರಿ ಸ್ವಾಮ್ಯದ ನವೋದಯ ಶಾಲೆಗೆ ಬೆಂಕಿ ಹಚ್ಚಲಾಗಿದ್ದು, ಕಾಶ್ಮೀರದ ಗಲಭೆ ಆರಂಭವಾದಂದಿನಿಂದ ಈವರೆಗೆ 25 ಶಾಲಾ ಕಟ್ಟಡಗಳಿಗೆ ಬೆಂಕಿ ಬಿದ್ದಿತ್ತು.

2016: ಮುಂಬೈ: ಭಯೋತ್ಪಾದನೆಗೆ ಪ್ರಚೋದನೆ ನೀಡಿದ ಆರೋಪ ಎದುರಿಸುತ್ತಿರುವ ಇಸ್ಲಾಂ
ಧಾರ್ಮಿಕ ಭಾಷಣಕಾರ ಡಾ. ಜಾಕಿರ್ ನಾಯಕ್ ಬಂಧನ ಭೀತಿಯಿಂದಾಗಿ ಹಿಂದಿನ ದಿನ ನಡೆದ ತಮ್ಮ ತಂದೆಯ ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲಿಲ್ಲ ಎಂದು ಮೂಲಗಳು ತಿಳಿಸಿದವು. ಬಾಂಬೆ ಮನಃಶಾಸ್ತ್ರಜ್ಞರ ಸೊಸೈಟಿನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದ ಜಾಕಿರ್ ನಾಯಕ್ ತಂದೆ ಡಾ. ಅಬ್ದುಲ್ ಕರೀಮ್ ನಾಯಕ್ (88) ಹೃದಯಾಘಾತದಿಂದ ಮೃತರರಾಗಿದ್ದರು. ಹಿಂದಿನ ದಿನ  ಮುಂಬೈನಲ್ಲಿ ಇವರ ಅಂತ್ಯ ಸಂಸ್ಕಾರ ನಡೆಯಿತು. ಜಾಕಿರ್ ನಾಯಕ್ ಎಲ್ಲಿದ್ದಾರೆ ಎಂಬುದು ಗೊತ್ತಿಲ್ಲ. ಜತೆಗೆ ಅವರು ುಂಬೈಗೆ ಯಾವಾಗ ವಾಪಸ್ಸಾಗುವರೂ ಎಂದೂ ಸಹ ಗೊತ್ತಿಲ್ಲ. ಕರೀಮ್ ನಾಯಕ್ ಅವರ ನಿಧನ ಅಚಾನಕ್ಕಾಗಿ ಆದ ಕಾರಣ ಜಾಕಿರ್ ನಾಯಕ್ ಆಗಮನಕ್ಕಾಗಿ ಕಾಯದೆ ಅಂತ್ಯ ಸಂಸ್ಕಾರ ನೆರವೇರಿಸಲಾಗಿದೆ. ಅಂತ್ಯ ಸಂಸ್ಕಾರದಲ್ಲಿ ಕುಟುಂಬದ ಸದಸ್ಯರು ಮತ್ತು ಅಪ್ತರು ಸೇರಿದಂತೆ ಸುಮಾರು 1500 ಜನರು ನೆರೆದಿದ್ದರು ಎಂದು ಕರೀಮ್ ನಾಯಕ್ ಆಪ್ತರೊಬ್ಬರು ತಿಳಿಸಿದರು. ಜುಲೈ 1 ರಂದು ಬಾಂಗ್ಲಾದೇಶದ ಢಾಕಾದ ರೆಸ್ಟೋರೆಂಟ್ ಮೇಲೆ ನಡೆದ ಉಗ್ರ ದಾಳಿಯ ನಂತರ ಜಾಕಿರ್ ನಾಯಕ್ ಬಂಧನ ಭೀತಿ ಎದುರಿಸುತ್ತಿದ್ದಾರೆ. ಜಾಕಿರ್ ನಾಯಕ್ ಭಾಷಗಳಿಂದಾಗಿ ಭಯೋತ್ಪಾದಕರು ಪ್ರಚೋದಿತರಾಗುತ್ತಿದ್ದಾರೆ ಎಂಬ ಆರೋಪ ಅವರ ಮೇಲಿದೆ. ಕೇಂದ್ರ ಸರ್ಕಾರ ಜಾಕಿರ್ ನಾಯಕ್ ವಿರುದ್ಧ ಮತ್ತು ಪೀಸ್ ಟಿವಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಕರಡನ್ನು ಸಿದ್ಧಪಡಿಸುತ್ತಿದೆ.

2016: ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಶ್ವೇತಭವನದ ಓವಲ್ ಕಚೇರಿಯಲ್ಲಿ ದೀಪ
ಬೆಳಗುವ ಮೂಲಕ ದೀಪಾವಳಿ ಆಚರಿಸಿ ಸಂಭ್ರಮಿಸಿದರು. 2009ರಲ್ಲಿ ಶ್ವೇತಭವನದಲ್ಲಿ ದೀಪಾವಳಿ ಆಚರಿಸುವ ಮೂಲಕ ಅಮೆರಿಕ ಅಧ್ಯಕ್ಷರ ಅಧಿಕೃತ ನಿವಾಸದಲ್ಲಿ ದೀಪಾವಳಿ ಸಂಭ್ರಮಾಚರಣೆಗೆ ನಾಂದಿ ಹಾಡಿದ್ದರು. ನಂತರ ಇದುವರೆಗೂ ಪ್ರತೀ ವರ್ಷ ದೀಪಾವಳಿ ಆಚರಿಸಿಕೊಂಡು ಬರುತ್ತಿದ್ದಾರೆ. ಶ್ವೇತಭವನದಲ್ಲಿ ಈದಿನ ತಮ್ಮ ಕೊನೆಯ ದೀಪಾವಳಿ ಆಚರಿಸಿದ ಒಬಾಮ ಮುಂದಿನ ಅಧ್ಯಕ್ಷರೂ ಸಹ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುವ ಆಶಯ ವ್ಯಕ್ತಪಡಿಸಿದರು. ಮುಂಬೈಯಲ್ಲಿ ದೀಪಾವಳಿ ಸಂಭ್ರಮಾಚರಣೆಯಲ್ಲಿ ಭಾಗವಹಿಸಿದ್ದ ಕ್ಷಣಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ವರ್ಷವೂ ಸಹ ನಾನು ಶ್ವೇತಭವನದಲ್ಲಿ  ದೀಪಾವಳಿಯನ್ನು ಆಚರಿಸಿದ್ದೇನೆ. ನನ್ನ ಮತ್ತು ನನ್ನ ಕುಟುಂಬದ ಎಲ್ಲಾ ಸದಸ್ಯರು ದೀಪಾವಳಿಯ ಶುಭಾಶಯ ಕೋರುತ್ತೇವೆ ಎಂದು ಒಬಾಮ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡರು. ಇದೇ ಸಂದರ್ಭದಲ್ಲಿ ಡೆಮಾಕ್ರೆಟಿಕ್ ಪಕ್ಷದ ಅಮೆರಿಕ ಅಧ್ಯಕ್ಷೀಯ ಚುನಾವಣಾ ಅಭ್ಯರ್ಥಿ ಹಿಲರಿ ಕ್ಲಿಂಟನ್ ಸಹ ದೀಪಾವಳಿಯ ಶುಭಾಶಯ ಕೋರಿದರು.

2016: ಬೆಂಗಳೂರು
: ಆಂಧ್ರ ಮೂಲದ ಉದ್ಯಮಿ ಪರುಚುರಿ ಸುರೇಂದ್ರ ಎಂಬುವವರನ್ನು
ಸಂಜಯನಗರದ ಅಪಾರ್ಟ್ ಮೆಂಟ್ ಮುಂಭಾಗದಲ್ಲಿ ದುಷ್ಕರ್ವಿುಗಳು ಗುಂಡಿಟ್ಟು ಹತ್ಯೆ ಮಾಡಿದರು. ಹಿಂದಿನ  ರಾತ್ರಿ 9.30 ಸುಮಾರಿಗೆ ಘಟನೆ ಘಟಿಸಿತು. ಹೆಬ್ಬಾಳದ ಕಚೇರಿಯಿಂದ ಸುರೇಂದ್ರ ತಮ್ಮ ಮನೆಗೆ ವಾಪಸ್ಸಾಗುತ್ತಿದ್ದ ಸಂದರ್ಭದಲ್ಲಿ ಇಬ್ಬರು ದುಷ್ಕರ್ವಿುಗಳು ಬೈಕಿನಲ್ಲಿ ಹಿಂಬಾಲಿಸಿಕೊಂಡು ಬಂದರು.  ಸಂಜಯನಗರ ಅಪಾರ್ಟ್ಮೆಂಟ್ ಬಳಿ ಬಂದಾಗ ದುಷ್ಕರ್ವಿುಗಳು ಪಟಾಕಿ ಸಿಡಿಸುವ ಸದ್ದಿನ ಹಿನ್ನೆಲೆಯಲ್ಲಿ ಸುರೇಂದ್ರ ಅವರ ಮೇಲೆ 6 ಸುತ್ತು ಗುಂಡು ಹಾರಿಸಿದರು. ಗುಂಡೇಟು ತಗುಲಿ ಕುಸಿದು ಬಿದ್ದ ಇವರನ್ನು ಸ್ಥಳೀಯರು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತರಾದರು. ಸುರೇಂದ್ರ ಸೆಕ್ಯೂರಿಟಿ ಏಜೆನ್ಸಿ, ರಿಯಲ್ ಎಸ್ಟೇಟ್ ಮತ್ತು ನೀರಿನ ಉದ್ಯಮ ನಡೆಸುತ್ತಿದ್ದರು. ಜತೆಗೆ ಇವರು ಸಚಿವ ರಮೇಶ್ ಕುಮಾರ್ ಅವರ ಆಪ್ತರಾಗಿದ್ದರು ಎಂದು ತಿಳಿದು ಬಂದಿದೆ. ಸಂಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 2016: ಮೆಲ್ಬೋರ್ನ್: ಭಾರತೀಯ ಮೂಲದ ಬಸ್ಚಾಲಕ ಮನ್ಮೀತ್ಅಲಿಷರ್ಅವರನ್ನು
ಬ್ರಿಸ್ಬೇನ್ನಲ್ಲಿ ಪೆಟ್ರೋಲ್ಬಾಂಬ್ರೀತಿಯ ದ್ರಾವಣವನ್ನು  ಎಸೆದು ಸಜೀವ ದಹನ ಮಾಡಿದ್ದ 48 ವರ್ಷದ ವ್ಯಕ್ತಿಯು ಮಾನಸಿಕ ಅಸ್ವಸ್ಥನಾಗಿದ್ದ ಎಂಬುದು ದೃಢಪಟ್ಟಿತು.  ಬಂಧಿತ ಆರೋಪಿ ಆಂಟೊನಿ ಮಾರ್ಕ್ಎಡ್ವರ್ಡ್ಡೊನೊಹ್ಯೂ, ಕ್ವೀನ್ಸ್ಲ್ಯಾಂಡ್ ಆರೋಗ್ಯ ಕೇಂದ್ರದ ಮಾನಸಿಕ ಆರೋಗ್ಯ ವಿಭಾಗದಲ್ಲಿ ಚಿಕಿತ್ಸೆ ಪಡೆದಿದ್ದರು  ಎಂದು ರಾಜ್ಯ ಆರೋಗ್ಯ ಸಚಿವ ಕ್ಯಾಮೆರಾನ್ಡಿಕ್ತಿಳಿಸಿದರು. ಆರೋಪಿಗೆ ನೀಡಲಾಗಿರುವ ಚಿಕಿತ್ಸೆ ಕುರಿತಾಗಿ ನ್ಯಾಯಸ್ಥಾನಿಕ ಮನೋಶಾಸ್ತ್ರಜ್ಞರಿಂದ ಪ್ರತ್ಯೇಕ ತನಿಖೆ ನಡೆಯಲಿದ್ದು, ಎಂಟು ವಾರಗಳೊಳಗೆ ತನಿಖೆ ಪೂರ್ಣಗೊಳ್ಳಲಿದೆ ಎಂದು ಅವರು ನುಡಿದರು.  ಬ್ರಿಸ್ಬೇನ್ನಲ್ಲಿರುವ ಪಂಜಾಬಿ ಸಮುದಾಯದಲ್ಲಿ ಚಿರಪರಿಚಿತ ಗಾಯಕರಾಗಿದ್ದ, 29 ಹರೆಯದ ಅಲಿಶರ್  ಹತ್ಯೆ ಪ್ರಕರಣದ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಆಸ್ಟ್ರೇಲಿಯಾದ ಪ್ರಧಾನಿ ಮಾಲ್ಕಂ ಟರ್ನ್ಬುಲ್ಅವರೊಂದಿಗೆ ಮಾತನಾಡಿದ್ದರು. ಪ್ರಕರಣದ ತನಿಖೆ ಕುರಿತು ಟರ್ನ್ಬುಲ್ಪ್ರತಿಕ್ರಿಯಿಸಿದ್ದರು. ಮೊಲೊಟೋವ್ಕಾಕ್ಟೇಲ್(ಪೆಟ್ರೋಲ್ಬಾಂಬ್‌)ಗೆ ಹೋಲುವ ದ್ರಾವಣವನ್ನು ಮೂರೂಕಾ ಬಸ್ನಿಲ್ದಾಣದಲ್ಲಿ ಚಾಲಕ ಅಲಿಷರ್ಮೇಲೆ ಎಸೆಯಲಾಗಿತ್ತು. ಅಲಿಷರ್ದೇಹಕ್ಕೆ ಒಮ್ಮೆಲೇ ಬೆಂಕಿ ಹತ್ತಿಕೊಂಡು ಬಸ್ನಲ್ಲಿಯೇ  ಮೃತಪಟ್ಟಿದ್ದರುಬಸ್ನಲ್ಲಿದ್ದ 6 ಮಂದಿ ಪ್ರಯಾಣಿಕರನ್ನು ರಕ್ಷಿಸಲಾಗಿತ್ತು
2016: ಲಾಹೋರ್: ಪೇಶಾವರ ಸೇನಾ ಶಾಲೆ ಮೇಲಿನ ದಾಳಿ ಹಸಿರಾಗಿರುವಾಗಲೇ ಅದೇ ರೀತಿಯ ಇನ್ನೊಂದು ಕೃತ್ಯ ಸ್ವಲ್ಪದರಲ್ಲಿ ತಪ್ಪಿದ ಘಟನೆ ಪಾಕಿಸ್ತಾನದಲ್ಲಿ ಘಟಿಸಿತು.  ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಶಂಕಿತ ಉಗ್ರರ ಗುಂಪು ಪಂಜಾಬ್ ಬಹವಾಲ್ ನಗರದ ಖಾಸಗಿ ಶಾಲೆಯೊಳಕ್ಕೆ  ನುಗ್ಗಲು ಮುಂದಾಗಿತ್ತು. ಶಾಲೆಯ ಹೊರಭಾಗದಲ್ಲಿ ಗುಂಡಿನ ದಾಳಿಗೆ ಮುಂದಾಗುತ್ತಿದ್ದಂತೆ ಭದ್ರತಾ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಕ್ಷಣಾರ್ಧದಲ್ಲಿ ಸ್ಥಳಕ್ಕೆ ಆಗಮಿಸಿದ್ದರಿಂದ ಇದು ತಪ್ಪಿತು  ಎಂದು ವರದಿ ತಿಳಿಸಿತು.. ಪೊಲೀಸರು ಆಗಮಿಸುವುದನ್ನು ಕಂಡ ಶಂಕಿತ ಉಗ್ರರು ಸ್ಥಳದಿಂದ ನಾಪತ್ತೆಯಾದರು.  ಅವರ ಪತ್ತೆಗಾಗಿ ಬಲೆ ಬೀಸಲಾಗಿದೆ ಎಂದು ಪಾಕ್ ಭದ್ರತಾ ಪಡೆ ಹೇಳಿಕೊಂಡಿತು. ಶಾಲೆಯಲ್ಲಿದ್ದ ಮಕ್ಕಳೆಲ್ಲರೂ ಸುರಕ್ಷಿತರಾಗಿದ್ದಾರೆಂದು ಅಧಿಕಾರಿಗಳು ಮಾಹಿತಿ ನೀಡಿದರು.
2008: ಕರ್ನಾಟಕ ರಾಜ್ಯೋತ್ಸವದ ಕೊಡುಗೆಯಾಗಿ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನದ ಮಲ್ಲಿಗೆಯನ್ನುನ್ನು ಕೇಂದ್ರ ಸರ್ಕಾರ ಮುಡಿಸಿತು. ಈ ಗೌರವ ಪಡೆಯಲು ಕನ್ನಡಿಗರು ನಡೆಸುತ್ತಾ ಬಂದ ಹೋರಾಟಕ್ಕೆ ಜತೆ ನೀಡಿದ ತೆಲುಗರ ಪ್ರಯತ್ನ ಕೂಡಾ ಯಶಸ್ವಿಯಾಗಿ, ಆ ಭಾಷೆಗೆ ಕೂಡಾ ಶಾಸ್ತ್ರೀಯ ಸ್ಥಾನಮಾನದ ಗೌರವ ಲಭಿಸಿತು. ಇದರೊಂದಿಗೆ ದ್ರಾವಿಡ ಬಳಗದ ಐದು ಭಾಷೆಗಳಲ್ಲಿ ಮೂರು ಈ ಗೌರವಕ್ಕೆ ಭಾಜನವಾದಂತಾದವು. ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದನಂತರದ ಮೊದಲ ಸಂಪುಟ ಸಭೆಯಲ್ಲಿಯೇ ತಮಿಳುಭಾಷೆಗೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ನೀಡುವ ನಿರ್ಧಾರವನ್ನು ಪ್ರಕಟಿಸಿತ್ತು. ಮೂರು ದ್ರಾವಿಡ ಭಾಷೆಗಳ ಜೊತೆಗೆ ಇನ್ನೊಂದು ಭಾಷೆ ಸಂಸ್ಕೃತ ಕೂಡಾ ಈ ಗೌರವವನ್ನು ಪಡೆಯಿತು. ನ್ಯಾಯಾಲಯದ ತೂಗುಕತ್ತಿಯಡಿಯಲ್ಲಿಯೇ ಈ ನಿರ್ಧಾರವನ್ನು ಪ್ರಕಟಿಸಿದ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಖಾತೆ ಸಚಿವೆ ಅಂಬಿಕಾ ಸೋನಿ `ಸರ್ಕಾರದ ನಿರ್ಧಾರ ಚೆನ್ನೈ ಹೈಕೋರ್ಟಿನಲ್ಲಿ ವಿಚಾರಣೆಯಲ್ಲಿರುವ ರಿಟ್ ಅರ್ಜಿಗೆ ಸಂಬಂಧಿಸಿದ ತೀರ್ಪಿಗೆ ಬದ್ಧವಾಗಿದೆ. ಆ ಅರ್ಜಿಯನ್ನು ವಜಾ ಮಾಡಿಸುವ ಪ್ರಯತ್ನ ಕೂಡಾ ಸಾಗಿದೆ' ಎಂದು ಹೇಳಿದರು. ರಿಟ್ ಅರ್ಜಿಗೆ ಈಗಾಗಲೇ ಕೇಂದ್ರ ಸರ್ಕಾರ ಪ್ರತಿಕ್ರಿಯೆ ಸಲ್ಲಿಸಿದ್ದು ಅದಕ್ಕೆ ಮೂರುವಾರಗಳ ಅವಧಿಯಲ್ಲಿ ಉತ್ತರ ನೀಡುವಂತೆ ಚೆನ್ನೈ ಹೈಕೋರ್ಟ್ ಅರ್ಜಿದಾರ ವಕೀಲ ಆರ್.ಗಾಂಧಿ ಅವರಿಗೆ ಮೂರು ದಿನಗಳ ಹಿಂದೆ ನೋಟಿಸ್ ನೀಡಿತ್ತು. ಕಾನೂನಿನ ತೊಡಕನ್ನು ನಿವಾರಿಸಿದ ನಂತರವೇ ನಿರ್ಧಾರವನ್ನು ಘೋಷಿಸಬೇಕೆಂಬ ಉದ್ದೇಶ ಯುಪಿಎ ಸರ್ಕಾರಕ್ಕಿತ್ತು. ಆದರೆ ಕರ್ನಾಟಕದ ಬಿಜೆಪಿ ಸರ್ಕಾರದ ಸತ್ಯಾಗ್ರಹದ ಬೆದರಿಕೆಯ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಸಲಹೆ ಪಡೆದು ಹಠಾತ್ತನೇ ಘೋಷಣೆ ಮಾಡಿತು. ಶಾಸ್ತ್ರೀಯ ಭಾಷೆಯ ಸ್ಥಾನಮಾನಕ್ಕೆ ಒತ್ತಾಯಿಸಿ ಸಚಿವರು ಮತ್ತು ಶಾಸಕರ ಜತೆಗೂಡಿ ರಾಜಘಾಟಿನಲ್ಲಿ ಸತ್ಯಾಗ್ರಹ ನಡೆಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕೆಲ ದಿನಗಳ ಹಿಂದೆ ಬೆದರಿಕೆ ಹಾಕಿದ್ದರು.

2008: ತನ್ನನ್ನು ತಾನು `ದಿ ಇಸ್ಲಾಮಿಕ್ ಸೆಕ್ಯೂರಿಟಿಫೋರ್ಸರ್ (ಇಂಡಿಯನ್ ಮುಜಾಹಿದ್ದೀನ್)' ಎಂದು ಕರೆದುಕೊಂಡ ಅಪರಿಚಿತ ಉಗ್ರ ಸಂಘಟನೆಯೊಂದು ಅಸ್ಸಾಂ ಸರಣಿ ಸ್ಫೋಟದ ಹೊಣೆ ಹೊತ್ತುಕೊಂಡಿತು. `ಐ ಎಸ್ ಎಫ್- ಐಎಂಗೆ ಸೇರಿರುವ ನಾವು ಅಸ್ಸಾಮಿಲ್ಲಿ ಹಿಂದಿನ ದಿನ ನಡೆದ ಸ್ಫೋಟದ ಹೊಣೆ ಹೊರುತ್ತಿದ್ದೇವೆ. ಅಸ್ಸಾಂ,ಭಾರತದ ಇತರೆಡೆಯೂ ಭವಿಷ್ಯದಲ್ಲಿ ಇಂತಹ ಸ್ಥಿತಿ ಎದುರಿಸಬೇಕಾಗುವ ಬಗ್ಗೆ ಎಚ್ಚರಿಕೆ ನೀಡುತ್ತಿದ್ದೇವೆ. ನಮ್ಮ ಎಲ್ಲಾ ಪವಿತ್ರ ಸದಸ್ಯರು ಮತ್ತು ಸಹಭಾಗಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇವೆ, ಅಮೀನ್.' ಎಂಬ ಹೇಳಿಕೆ ಸ್ಥಳೀಯ ಟಿವಿ ಚಾನೆಲ್ಗೆ ಬಂದ ಎಸ್ ಎಂ ಎಸ್ ಸಂದೇಶದಲ್ಲಿ ವ್ಯಕ್ತವಾಯಿತು.

2008: ಹದಿಮೂರು ಜನರು ವಿವಿಧ ಆಸ್ಪತ್ರೆಗಳಲ್ಲಿ ಸಾವನ್ನಪ್ಪುವ ಮೂಲಕ ಅಸ್ಸಾಮ್ ಸರಣಿ ಬಾಂಬ್ ಸ್ಫೋಟಕ್ಕೆ ಬಲಿಯಾದವರ ಸಂಖ್ಯೆ 77ಕ್ಕೆ ಏರಿತು.

2008: ನಾಡಿನ ವಿವಿಧೆಡೆಯಿಂದ ಬಂದಿದ್ದ ಸಹಸ್ರಾರು ಸಮಾಜ ಬಾಂಧವರು, ವಿವಿಧ ಮಠಾಧೀಶರ ಸಮಕ್ಷಮದಲ್ಲಿ ಕೋಲಿ/ಗಂಗಾಮತ ಸಮಾಜದ ವೇದವ್ಯಾಸ ಮಹರ್ಷಿ ಗುರುಪೀಠದ ಪ್ರಥಮ ಗುರುಗಳಾದ ಸಹಜಾನಂದ ಸರಸ್ವತಿ ಸ್ವಾಮೀಜಿಗಳ ಪಟ್ಟಾಭಿಷೇಕ ಮಹೋತ್ಸವ ಬಳ್ಳಾರಿಯಲ್ಲಿ ವಿಜೃಂಭಣೆಯಿಂದ ನೆರವೇರಿತು. ನಗರದ ಹೊರವಲಯದಲ್ಲಿನ ವಿದ್ಯಾನಗರದಲ್ಲಿ ನಡೆದ ಸಮಾರಂಭದಲ್ಲಿ ಮಂತ್ರೋಚ್ಚಾರಣೆ, ಧಾರ್ಮಿಕ ವಿಧಿ ವಿಧಾನಗಳ ಅನುಸಾರ ಪಟ್ಟಾಭಿಷೇಕ ಜರುಗಿತು. ತಮ್ಮ ಸಮಾಜದ ಗುರುಪೀಠ ಸ್ಥಾಪನೆ ಹಾಗೂ ಪ್ರಥಮ ಗುರುಗಳ ಪಟ್ಟಾಭಿಷೇಕ ಸಮಾರಂಭಕ್ಕೆ ಸಮಾಜ ಬಾಂಧವರು ಸಾಕ್ಷಿಯಾದರು.

2008: ಜನತಾದಳ (ಎಸ್) ಶಾಸಕರು ಹಾಗೂ ಮುಖಂಡರ ಒತ್ತಾಯಕ್ಕೆ ಮಣಿದು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರನ್ನು ಆಯ್ಕೆ ಮಾಡಲಾಯಿತು. ಬೆಂಗಳೂರಿನಲ್ಲಿ ಪಕ್ಷದ ಕಚೇರಿಯಲ್ಲಿ ನಡೆದ ಪಕ್ಷದ ಪದಾಧಿಕಾರಿಗಳು, ಜಿಲ್ಲಾ ಘಟಕದ ಅಧ್ಯಕ್ಷರು, ಹಾಲಿ ಹಾಗೂ ಮಾಜಿ ಶಾಸಕರ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡರ ವಿರೋಧದ ನಡುವೆಯೂ ಕುಮಾರಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.

2008: ಆಸ್ಟ್ರೇಲಿಯಾ ತಂಡದ ವಿರುದ್ಧದ ಮೂರನೇ ಕ್ರಿಕೆಟ್ ಟೆಸ್ಟ್ ಪಂದ್ಯದ ಮೊದಲ ದಿನದಾಟದ ವೇಳೆ ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ ಭಾರತದ ಆರಂಭಿಕ ಬ್ಯಾಟ್ಸ್ ಮನ್ ಗೌತಮ್ ಗಂಭೀರ್ ಮೇಲೆ ಒಂದು ಟೆಸ್ಟ್ ಪಂದ್ಯದ ನಿಷೇಧ ಹೇರಲಾಯಿತು.

2007: ಬಾಬರಿ ಮಸೀದಿ ಧ್ವಂಸ ಪ್ರಕರಣದ ಬಗ್ಗೆ ಸಮಗ್ರ ವರದಿ ನೀಡಲು ರಚಿಸಲಾಗಿದ್ದ ಲಿಬರಾನ್ ಆಯೋಗದ ಕಾಲಾವಧಿಯನ್ನು ಮತ್ತೆ ಎರಡು ತಿಂಗಳ ಅವಧಿಗೆ ವಿಸ್ತರಿಸಲಾಯಿತು. ಈಗಾಗಲೇ 7.20 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಿದ್ದರೂ ಇನ್ನು ವರದಿಯನ್ನು ಅಂತಿಮಗೊಳಿಸದ ಕಾರಣ ಸರ್ಕಾರ ಈ ಕ್ರಮ ಕೈಗೊಂಡಿತು. 1992ರಲ್ಲಿ ಬಾಬರಿ ಮಸೀದಿ ಧ್ವಂಸ ಕಾರ್ಯಾಚರಣೆಗೆ ಕಾರಣವಾದ ಪರಿಸ್ಥಿತಿಗಳ ಬಗ್ಗೆ ಕಳೆದ 15 ವರ್ಷಗಳಿಂದ ವರದಿ ತಯಾರಿಸುತ್ತಲೇ ಇರುವ ಈ ಆಯೋಗವು ಇದರೊಂದಿಗೆ 42ನೇ ಬಾರಿಗೆ ಕಾಲಾವಧಿ ವಿಸ್ತರಣೆ ಪಡೆದಂತಾಯಿತು.

2007: ಬಿಜೆಪಿ- ಜೆಡಿಎಸ್ ಮೈತ್ರಿಕೂಟವು ಸರ್ಕಾರ ರಚನೆಗೆ ಹಕ್ಕು ಮಂಡಿಸಿ ನಾಲ್ಕು ದಿನಗಳು ಕಳೆದ ನಂತರ ಈದಿನ ರಾತ್ರಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ರಾಷ್ಟ್ರಪತಿ ಮತ್ತು ಕೇಂದ್ರ ಗೃಹ ಸಚಿವರಿಗೆ ರಾಜ್ಯದಲ್ಲಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಮಧ್ಯಂತರ ವರದಿಯನ್ನು ರವಾನಿಸಿದರು. ಕಾನೂನು ಮತ್ತು ಇತರ ಅಂಶಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದ್ದು ಮತ್ತೊಂದು ವರದಿಯನ್ನು ಸದ್ಯದಲ್ಲೇ ಕಳುಹಿಸಿಕೊಡಲಾಗುವುದು ಎಂದು ರಾಜಭವನದ ಪತ್ರಿಕಾ ಪ್ರಕಟಣೆ ತಿಳಿಸಿತು. ತಮ್ಮ ವರದಿಯಲ್ಲಿ ವಿಧಾನಸಭೆ ಅಮಾನತನ್ನು ಹಿಂತೆಗೆದುಕೊಳ್ಳುವ ಅಥವಾ ವಿಸರ್ಜಿಸುವ ಬಗ್ಗೆ ಯಾವುದೇ ಶಿಫಾರಸು ಮಾಡದ ರಾಜ್ಯಪಾಲರು ಮುಂದಿನ ತೀರ್ಮಾನವನ್ನು ಕೇಂದ್ರ ಸರ್ಕಾರ ಮತ್ತು ರಾಷ್ಟ್ರಪತಿಯವರ ವಿವೇಚನೆಗೆ ಬಿಟ್ಟರು. ಸರ್ಕಾರ ರಚನೆಗೆ ಆಹ್ವಾನಿಸದೆ ರಾಜ್ಯಪಾಲರು ಅನುಸರಿಸುತ್ತಿರುವ ವಿಳಂಬ ಧೋರಣೆ ವಿರುದ್ಧ ನಗರದ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಬಿಜೆಪಿಯು, ಕೇಂದ್ರದ ಮಾಜಿ ಸಚಿವೆ ಸುಷ್ಮಾ ಸ್ವರಾಜ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿತು.

2007: ಉತ್ತರದ ಕ್ಯಾಲಿಫೋರ್ನಿಯಾ ಸಮೀಪದ ಸ್ಯಾನ್ ಜೋಸ್ ಹಾಗೂ ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿ ಪ್ರದೇಶದಲ್ಲಿ ಭೂಕಂಪ ಸಂಭವಿಸಿದ್ದು, ಅದರ ತೀವ್ರತೆ 5.6 ಎಂದು ರಿಕ್ಟರ್ ಮಾಪಕದಲ್ಲಿ ದಾಖಲಾಗಿರುವುದಾಗಿ ಅಮೆರಿಕದ ಭೂಗರ್ಭ ಇಲಾಖೆ ತಿಳಿಸಿತು. ಜಪಾನ್ ಮತ್ತು ಟರ್ಕಿಯಲ್ಲೂ ಭೂಕಂಪ ಸಂಭವಿಸಿತು. ಈ ಪ್ರದೇಶಗಳಲ್ಲಿ ಭೂಕಂಪದ ತೀವ್ರತೆ ಕ್ರಮವಾಗಿ 7.1 ಮತ್ತು 5.1 ಎಂದು ರಿಕ್ಟರ್ ಮಾಪಕದಲ್ಲಿ ದಾಖಲಾಯಿತು.

2007: ಅಶಿಸ್ತಿನ ವರ್ತನೆ ಆರೋಪದ ಮೇಲೆ `ದುನಿಯಾ' ಖ್ಯಾತಿಯ ನಟ ವಿಜಯ್ ಅವರನ್ನು ಒಂದು ವರ್ಷ ಕನ್ನಡ ಚಿತ್ರರಂಗದಿಂದ ಬಹಿಷ್ಕರಿಸಲು ಸಂಧಾನ ಸಮಿತಿ ತೀರ್ಮಾನಿಸಿತು. ಎಸ್. ನಾರಾಯಣ್ ನಿರ್ದೇಶನದ `ಚಂಡ' ಚಿತ್ರದ ಡಬ್ಬಿಂಗ್ ಕಾರ್ಯದಲ್ಲಿ ಭಾಗವಹಿಸುವಂತೆ ಈ ಹಿಂದೆ ಸಂಧಾನ ಸಮಿತಿ ಸೂಚಿಸಿತ್ತು. ಆದರೆ ವಿಜಯ್ ಈ ಸೂಚನೆಯನ್ನು ಪಾಲಿಸಿರಲಿಲ್ಲ. ಇದನ್ನು ಅಶಿಸ್ತು ಎಂದು ಪರಿಗಣಿಸಿ ಬಹಿಷ್ಕಾರದ ತೀರ್ಮಾನ ಕೈಗೊಳ್ಳಲಾಯಿತು ಎಂದು ಸಮಿತಿ ಹೇಳಿತು.

2007: ಕೆಂಗೇರಿ ಬಳಿಯ ಶ್ರೀನಿವಾಸಪುರದ ಓಂಕಾರ ಹಿಲ್ಸಿನಲ್ಲಿ ಇರುವ ಓಂಕಾರಾಶ್ರಮದ ಚರ ಮತ್ತು ಸ್ಥಿರಾಸ್ತಿಗಳನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವಂತೆ ನಗರ ದಕ್ಷಿಣ ಉಪವಿಭಾಗದ ಮ್ಯಾಜಿಸ್ಟ್ರೇಟ್ ಅವರು ಅಕ್ಟೋಬರ್ 24ರಂದು ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ರದ್ದು ಮಾಡಿತು. 2007ರ ನವೆಂಬರ್ 5ರವರೆಗೆ ಯಥಾಸ್ಥಿತಿ ಕಾಪಾಡುವಂತೆ ನ್ಯಾಯಮೂರ್ತಿ ಎ.ಸಿ.ಕಬ್ಬಿಣ ಆದೇಶ ನೀಡಿದರು.

2006: ವರ್ಣಭೇದವನ್ನು ಪ್ರತಿಪಾದಿಸಿ, ಅಂತಾರಾಷ್ಟ್ರೀಯ ನಿಷೇಧದ ನಡುವೆ ಆಳ್ವಿಕೆ ನಡೆಸಿದ್ದ, `ಗ್ರೇಟ್ ಕ್ರೊಕೋಡೈಲ್' ಎಂದೇ ಖ್ಯಾತರಾಗಿದ್ದ ದಕ್ಷಿಣ ಆಫ್ರಿಕದ ಮಾಜಿ ಪ್ರಧಾನಿ ಹಾಗೂ ಮಾಜಿ ಅಧ್ಯಕ್ಷ ಪೀಟರ್ ವಿಲ್ಹೆಮ್ ಬೋಥಾ (90) ವೆಸ್ಟರ್ನ್ ಕೇಪ್ ನ ತಮ್ಮ ಗ್ರಾಮದಲ್ಲಿ ನಿಧನರಾದರು. ವರ್ಣಭೇದದ ಕಟ್ಟ ಕಡೆಯ ಕಟ್ಟಾ ಪ್ರತಿಪಾದಕರಾಗಿದ್ದ ಬೋಥಾ `ವರ್ಣಭೇದದ ಸಂಕೇತ' ಎಂದೇ ಬಿಂಬಿತರಾಗಿದ್ದರು. ವ್ಯಾಪಕ ವಿರೋಧ, ಪ್ರತಿಭಟನೆಗಳ ಮಧ್ಯೆ ಒಂದು ದಶಕಕ್ಕಿಂತಲೂ ಹೆಚ್ಚು ಕಾಲ ಅವರು ಅಧಿಕಾರದಲ್ಲಿದ್ದರು.

2006: ಜಗತ್ತಿನಲ್ಲೇ ಮೊತ್ತ ಮೊದಲ ಬಾರಿಗೆ ಈ ದಿನ ರೈಲ್ವೆ ಹಳಿಗಳ ಬದಲಿಗೆ ರಸ್ತೆ ಮೇಲೆ ರೈಲುಗಾಡಿ ಚಲಿಸಿತು. ಅದು ಚಲಿಸಿದ್ದು 300 ಕಿ.ಮೀ. ಉದ್ದದ ಜಮ್ಮು- ಶ್ರೀನಗರ ರಾಷ್ಟ್ರೀಯ ಹ್ದೆದಾರಿಯಲ್ಲಿ. ಡೀಸೆಲ್ ಸಂಚಾರಿ ಬೋಗಿಗಳ (ಮೊಬೈಲ್ ಯೂನಿಟ್) ಈ ರೈಲು ಜಮ್ಮು ರೈಲ್ವೆ ನಿಲ್ದಾಣದಿಂದ ಕಾಶ್ಮೀರದ ಬದ್ಗಾಮ್ ನಿಲ್ದಾಣಕ್ಕೆ ಹಳಿಗಳ ಬದಲಿಗೆ ರಸ್ತೆಯ ಮೂಲಕ ಚಲಿಸುವಾಗ ಮಂತ್ರಘೋಷದೊಂದಿಗೆ ಹೂವಿನ ಮಳೆಗರೆಯಲಾಯಿತು. ಲಾರಿ, ಬಸ್ಸುಗಳ ನಡುವೆ ಸ್ಪರ್ಧಿಸುತ್ತಾ ಓರೆಕೋರೆಯ ರಸ್ತೆಯಲ್ಲಿ ರೈಲು ಓಡಿದಾಗ, ಜನರು ಮಂತ್ರಮುಗ್ಧರಾಗಿ ವೀಕ್ಷಿಸಿ ಆನಂದಿಸಿದರು. ಹಿಮಚ್ಛಾದಿತ ಕಾಶ್ಮೀರ ಕಣಿವೆಯಲ್ಲಿ 2007ರ ಫೆಬ್ರುವರಿ ತಿಂಗಳಲ್ಲಿ ಈ ವಿಶೇಷ ರೈಲು ಅಧಿಕೃತ ಸಂಚಾರಕ್ಕೆ ಸಜ್ಜಾಗಲಿದ್ದು, ಈ ದಿನ ನಡೆದದ್ದು ಇದರ ಪ್ರಾಯೋಗಿಕ ಓಟ. ಈ ಮೂಲಕ 4700 ಕೋಟಿ ರೂಪಾಯಿಗಳ ವೆಚ್ಚದ ಜಮ್ಮು- ಉಧಂಪುರ- ಖ್ವಾಜಿಗುಂಡ್- ಶ್ರೀನಗರ- ಬಾರಾಮುಲ್ಲಾ ರಾಷ್ಟ್ರೀಯ ರೈಲು ಯೋಜನೆಗೆ ಮಾತ್ರವಲ್ಲದೆ, ಇಡೀ ಭಾರತೀಯ ರೈಲ್ವೆಯ ಇತಿಹಾಸಕ್ಕೆ ಹೊಸ ಅಧ್ಯಾಯ ಸೇರ್ಪಡೆಯಾಯಿತು. ಈ ರೈಲಿಗೆ 36 ವಿಶೇಷ ಲಾರಿ ಚಕ್ರಗಳಿದ್ದು 460 ಎಚ್ ಪಿ (ಅಶ್ವಶಕ್ತಿಯ) ವಿಶೇಷ ಎಂಜಿನ್ ಅಳವಡಿಸಲಾಗಿತ್ತು.

2006: ಪೋಲಿಯೋ ಲಸಿಕೆಗಳ ದಾಸ್ತಾನಿಗೆ ಅನುಕೂಲವಾಗುವಂತಹ `ಸೋಲಾರ್ ಚಿಲ್' ಹೆಸರಿನ `ಸೌರ ಲಸಿಕಾ ಶೈತ್ಯ ಪೆಟ್ಟಿಗೆಯನ್ನು (ಸೋಲಾರ್ ವ್ಯಾಕ್ಸೀನ್ ಕೂಲರ್) ವಿಶ್ವಸಂಸ್ಥೆ ಪರಿಸರ ಕಾರ್ಯಕ್ರಮದ (ಯುಎನ್ಇಪಿ) ಅಡಿಯಲ್ಲಿ ಭಾರತೀಯ ವಿಜ್ಞಾನಿ ರಾಜೇಂದ್ರ ಶೆಂಡೆ ಅವರು ನಿರ್ಮಿಸಿದರು. ಬ್ಯಾಟರಿಗಳು ಹಾಗೂ ಸಾಂಪ್ರದಾಯಿಕ ರೆಫ್ರಿಜರೇಟರುಗಳಲ್ಲಿ ಬಳಸುವ ಓಝೋನ್ ಗೆ ಮಾರಕವಾದ ಕ್ಲೋರೋ-ಫ್ಲುರೋ ಕಾರ್ಬನ್ನುಗಳಿಗೆ ಪರ್ಯಾಯವಾಗಿರುವ ಈ `ಸೋಲಾರ್ ಚಿಲ್' ಪರಿಸರ ಮಿತ್ರ ಸಾಧನವಾಗಿದ್ದು ವಿದ್ಯುತ್ ಸರಬರಾಜು ತೊಂದರೆಯಿಂದ ಬಳಲುತ್ತಿರುವ ಹಳ್ಳಿಗಳಿಗೆ ವರದಾನ ಆಗ ಬಲ್ಲುದು. `ಸೋಲಾರ್ ಚಿಲ್' ನಲ್ಲಿ ಸಾಂಪ್ರದಾಯಿಕ ಸೌರ ಶೈತ್ಯಾಗಾರಗಳಲ್ಲಿ ಬಳಸುವಂತೆ ಬ್ಯಾಟರಿಗಳು ಅಥವಾ ಸೀಮೆ ಎಣ್ಣೆಯನ್ನು ಬಳಸುವುದಿಲ್ಲ. ಮಂಜು ಗಡ್ಡೆಯ ದಪ್ಪ ಪೊರೆ ನಿರ್ಮಿಸಲು ಸೌರಶಕ್ತಿಯನ್ನೇ ಬಳಸಲಾಗುತ್ತದೆ. ಇದು ಕೂಲರ್ ನ ಒಳಗಿನ ಉಷ್ಣತೆಯನ್ನು ಮೈನಸ್ 2 ಡಿಗ್ರಿಯಿಂದ 8 ಡಿಗ್ರಿ ಸೆಲ್ಷಿಯಸ್ ಮಟ್ಟದಲ್ಲಿ ಇರಿಸುತ್ತದೆ. ಈ ಶೈತ್ಯ ಪೆಟ್ಟಿಗೆ ರಾತ್ರಿಯಲ್ಲಿ ಕೂಡಾ ಲಸಿಕೆಯನ್ನು ತಂಪಾಗಿ ಇರಿಸಬಲ್ಲುದು. ಸೂರ್ಯನಿಲ್ಲದೇ ಇದ್ದರೂ ನಾಲ್ಕೈದು ದಿನಗಳ ಕಾಲ ಲಸಿಕೆಯನ್ನು ತಂಪಾಗಿ ಇಡಬಲ್ಲುದು. ಶೈತ್ಯ ಪೆಟ್ಟಿಗೆಗೆ ಯಾವುದೇ ರಾಸಾಯನಿಕಗಳ ಬಳಕೆ ಮಾಡುವುದಿಲ್ಲವಾದ ಕಾರಣ ಅದರಿಂದ ಓಝೋನ್ ಗೆ ಧಕ್ಕೆಯಾಗುವುದಿಲ್ಲ. ವಾತಾವರಣವೂ ಬಿಸಿ ಆಗುವುದಿಲ್ಲ.

2006: ಅಡ್ಮಿರಲ್ ಸುರೇಶ ಮೆಹ್ತಾ ಅವರು ಭಾರತೀಯ ನೌಕಾದಳದ ಮುಖ್ಯಸ್ಥರಾಗಿ ಮುಖ್ಯ ಅಡ್ಮಿರಲ್ ಅರುಣ್ ಪ್ರಕಾಶ್ ಅವರಿಂದ ಅಧಿಕಾರ ವಹಿಸಿಕೊಂಡರು.

2005: ಖ್ಯಾತ ಪಂಜಾಬಿ ಹಾಗೂ ಹಿಂದಿ ಲೇಖಕಿ ಅಮೃತಾ ಪ್ರೀತಮ್ (86) ನವದೆಹಲಿಯ ತಮ್ಮ ನಿವಾಸದಲ್ಲಿ ನಿಧನರಾದರು. 1919ರ ಆಗಸ್ಟ್ 31ರಂದು ಜನಿಸಿದ ಅಮೃತಾ ಪಂಜಾಬಿ ಸಾಹಿತ್ಯದ ಮೇರು ಸಾಹಿತಿ. ಸಾಹಿತ್ಯ ಅಕಾಡೆಮಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪಡೆದ ಪ್ರಥಮ ಮಹಿಳೆ.

2005: ದೆಹಲಿಯ ಕೆಂಪುಕೋಟೆ ಮೇಲೆ 2000ರ ಡಿಸೆಂಬರ್ 22ರಂದು ನಡೆಸಿದ ದಾಳಿ ಪ್ರಕರಣದ ಆರೋಪಿ ಪಾಕಿಸ್ಥಾನ ಮೂಲದ ಲಷ್ಕರ್-ಎ-ತೊಯಿಬಾ ಸಂಘಟನೆಯ ಉಗ್ರಗಾಮಿ ಮಹಮ್ಮದ್ ಅರಿಫ್ ಯಾನೆ ಅಶ್ಭಾಕನಿಗೆ ನವದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಒ.ಪಿ. ಸೈನಿ ಮರಣದಂಡನೆ ವಿಧಿಸಿದರು. ನಜೀರ್ ಅಹಮದ್ ಖಾಸಿದ್ ಹಾಗೂ ಆತನ ಪುತ್ರ ಫಾರೂಕ್ ಅಹಮದ್ ಖಾಸಿದ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಕೆಂಪುಕೋಟೆಯ 17ನೇ ಶತಮಾನದ ಮೊಘಲ್ ಸ್ಮಾರಕಕ್ಕೆ ನುಗ್ಗಿದ್ದ ಉಗ್ರರು ಇಬ್ಬರು ಸೈನಿಕರು ಹಾಗೂ ನಾಗರಿಕನೊಬ್ಬನನ್ನು ಗುಂಡಿಟ್ಟು ಕೊಂದಿದ್ದರು.

1987: ನಾಗಪುರದಲ್ಲಿ ನಡೆದ ಪಂದ್ಯದಲ್ಲಿ ನ್ಯೂಜಿಲ್ಯಾಂಡಿನ ಮೂವರು ಆಟಗಾರರನ್ನು ಒಬ್ಬರ ಹಿಂದೊಬ್ಬರಂತೆ ಔಟ್ ಮಾಡುವ ಮೂಲಕ ಭಾರತಿಯ ಕ್ರಿಕೆಟ್ ಆಟಗಾರ ಚೇತನ್ ಶರ್ಮಾ ವಿಶ್ವಕಪ್ ನಲ್ಲಿ ಹ್ಯಾಟ್ರಿಕ್ ಸಾಧಿಸಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಭಾಜನರಾದರು.

1984: ಭಾರತದ ಪ್ರಧಾನಿ ಇಂದಿರಾಗಾಂಧಿ ಅವರನ್ನು ನವದೆಹಲಿಯಲ್ಲಿ ಸಿಖ್ ಅಂಗರಕ್ಷಕರು ಕೊಲೆಗೈದರು. ಅವರ ಪುತ್ರ ರಾಜೀವಗಾಂಧಿ ಅವರ ಉತ್ತರಾಧಿಕಾರಿಯಾಗಿ ಪ್ರಧಾನಿ ಪಟ್ಟವನ್ನು ಏರಿದರು.

1975: ಖ್ಯಾತ ಸಂಗೀತ ನಿರ್ದೇಶಕ ಸಚಿನ್ ದೇವ್ ಬರ್ಮನ್ ನಿಧನ.

1951: ಇಂಗ್ಲೆಂಡಿನ ಬೆರ್ಕ್ ಶೈರಿನ ಸ್ಲೊವ್ ನಲ್ಲಿ ಮೊತ್ತ ಮೊದಲ ಬಾರಿಗೆ `ಝೀಬ್ರಾ ಕ್ರಾಸಿಂಗ್' ನ್ನು ಅನುಷ್ಠಾನಗೊಳಿಸಲಾಯಿತು. ರಸ್ತೆ ದಾಟುವಾಗ ಸಂಭವಿಸುತ್ತಿದ್ದ ಅಪಘಾತಗಳಲ್ಲಿ ಪಾದಚಾರಿಗಳ ಸಾವನ್ನು ತಪ್ಪಿಸುವ ಸಲುವಾಗಿ ಈ ಕ್ರಮ ಕೈಗೊಳ್ಳಲಾಯಿತು. ಈ ನಿಟ್ಟಿನಲ್ಲಿ ನಡೆಸಿದ ಇತರ ಪ್ರಯತ್ನಗಳು ವಿಫಲಗೊಂಡ ಬಳಿಕ ರಸ್ತೆಗೆ ಅಡ್ಡವಾಗಿ ಬಿಳಿ ಹಾಗೂ ಕಪ್ಪು ಬಣ್ಣಗಳ ದಪ್ಪ ಪಟ್ಟಿಗಳನ್ನು ಹಾಕಿ ವಾಹನ ಸಂಚಾರ ನಿಯಂತ್ರಿಸಲು ಕ್ರಮ ಕೈಗೊಳ್ಳಲಾಯಿತು.

1949: ಸಾಹಿತ್ಯ, ಸಂಗೀತ, ನಟನೆ, ವಾಜ್ಞಯ ಹೀಗೆ ಹಲವಾರು ಪ್ರತಿಭೆಗಳ ಸಂಗಮವಾದ ಅನಸೂಯಾದೇವಿ ಅವರು ದಕ್ಷಿಣ ಕನ್ನಡ ಮೂಲದವರಾದ ತಮ್ಮಯ್ಯ ಅಡಿಗ- ಕಾವೇರಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1933: ವಾಷಿಂಗ್ಟನ್, ಜೆಫರ್ಸನ್, ಲಿಂಕನ್ ಮತ್ತು ಥಿಯೋಡೋರ್ ರೂಸ್ ವೆಲ್ಟ್ ಈ ನಾಲ್ಕು ಮಂದಿ ಅಮೆರಿಕದ ಅಧ್ಯಕ್ಷರ ಕಲ್ಲಿನಲ್ಲಿ ಕೆತ್ತಲಾದ ಶಿರಗಳನ್ನು ಒಳಗೊಂಡ `ಮೌಂಟ್ ರಶ್ಮೋರ್' ಸ್ಮಾರಕ ಯೋಜನೆಯನ್ನು ಅಂತಿಮಗೊಳಿಸಲಾಯಿತು. ದಕ್ಷಿಣ ಡಕೋಟದ ಕೀಸ್ಟೋನ್ ಸಮೀಪ ಈ ಸ್ಮಾರಕಗಳನ್ನು ನಿರ್ಮಿಸಲಾಯಿತು. ಹದಿನಾಲ್ಕು ವರ್ಷಗಳ ಕಾಲ ಇದರ ಯೋಜನಾ ಶಿಲ್ಪಿಯಾಗಿದ್ದ ಗುಟ್ ಝೋನ್ ಬೋರ್ಗ್ಲರ್ಮ್(1867-1941) ಕೆಲಸ ಪೂರ್ಣಗೊಳ್ಳುವುದಕ್ಕೆ 8 ತಿಂಗಳ ಮೊದಲು ಮೃತರಾದಾಗ ಅವರ ಪುತ್ರ ಲಿಂಕನ್ ಬೋರ್ಗ್ಲರ್ಮ್ ಅದನ್ನು ಪೂರ್ಣಗೊಳಿಸಿದರು. 60 -70 ಅಡಿ ಎತ್ತರದ ಈ ಮುಖಗಳು 97 ಕಿಮೀಗಳಷ್ಟು ದೂರದಿಂದಲೇ ಕಾಣಿಸುತ್ತವೆ.

1926: ಖ್ಯಾತ ಅಮೆರಿಕನ್ ಐಂದ್ರಜಾಲಿಕ ಹ್ಯಾರಿ ಹೌಡಿನಿ ಅವರು ತಮ್ಮ 52ನೇ ವಯಸ್ಸಿನಲ್ಲಿ ಮೃತರಾದರು.

1926: ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್ಸಿನ (ಐಟಕ್) ಉದ್ಘಾಟನಾ ಅಧಿವೇಶನ ಬಾಂಬೆಯಲ್ಲಿ (ಈಗಿನ ಮುಂಬೈ) ನಡೆಯಿತು. ಲಾಲಾ ಲಜಪತ್ ರಾಯ್ ಇದರ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು.

1919: ಖ್ಯಾತ ಕೈಗಾರಿಕೋದ್ಯಮಿ ಜೈ ಕಿಸಾನ್ ಹರಿ ವಲ್ಲಭ ದಾಸ್ ಜನನ.

1875: ಸ್ವಾತಂತ್ರ್ಯ ಯೋಧ, ಮುತ್ಸದ್ದಿ ಹಾಗೂ ಮಹಾತ್ಮಾ ಗಾಂಧೀಜಿಯವರ ನಿಕಟವರ್ತಿ ವಲ್ಲಭಭಾಯಿ ಝವೆರ್ ಭಾಯಿ ಪಟೇಲ್ (1875-1950) ಜನ್ಮದಿನ. `ಸರ್ದಾರ್' ಎಂದೇ ಇವರು ಜನಪ್ರಿಯರಾಗಿದ್ದರು.