Friday, December 21, 2018

ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್: ಎಲ್ಲ ೨೨ ಆರೋಪಿಗಳ ಖುಲಾಸೆ

ಸೊಹ್ರಾಬುದ್ದೀನ್ ನಕಲಿ ಎನ್ ಕೌಂಟರ್: ಎಲ್ಲ ೨೨ ಆರೋಪಿಗಳ ಖುಲಾಸೆ
ಮುಂಬೈ: ಮುಂಬೈಯ ವಿಶೇಷ ಸಿಬಿಐ ನ್ಯಾಯಾಲಯವು ಸೊಹ್ರಾಬುದ್ದೀನ್ ಶೇಖ್ ಎನ್ ಕೌಂಟರ್   ಪ್ರಕರಣದ ಎಲ್ಲ ೨೨ ಮಂದಿ ಆರೋಪಿಗಳನ್ನು ಕೊಲೆ ಕೃತ್ಯವನ್ನು  ಸಾಬೀತುಪಡಿಸಲು ಸಾಕಷ್ಟು ಪುರಾವೆ ಇಲ್ಲ ಎಂದು ಹೇಳಿ ೨೦೧೮ ಡಿಸೆಂಬರ್ ೨೧ ರ ಶುಕ್ರವಾರ ಖುಲಾಸೆ ಮಾಡಿತು.

ಭಯೋತ್ಪಾದಕರೊಂದಿಗೆ ಸಂಪರ್ಕ  ಇತ್ತೆನ್ನಲಾದ ಶೇಖ್ ಎಂಬ ದರೋಡೆಕೋರನನ್ನು 2005ರ ನವೆಂಬರ್ ತಿಂಗಳಲ್ಲಿ ನಡೆದ ನಕಲಿ ಗುಂಡಿನ ಘರ್ಷಣೆಯಲ್ಲಿ ಕೊಲೆಗೈದ ಕೃತ್ಯದಲ್ಲಿ ಶಾಮೀಲಾಗಿದ್ದ ಆರೋಪದಲ್ಲಿ ಗುಜರಾತ್ ಮತ್ತು ರಾಜಸ್ಥಾನದ 22 ಮಂದಿ ಬಹುತೇಕ ಕಿರಿಯ ಪೊಲೀಸ್ ಅಧಿಕಾರಿಗಳು ವಿಚಾರಣೆ ಎದುರಿಸುತ್ತಿದರು.

ಶೇಖ್ ಪತ್ನಿ ಕೌಸರ್ ಬಿ ಕೂಡ ಅದೇ ತಿಂಗಳು ಕೊಲ್ಲಲ್ಪಟ್ಟಿದ್ದರು. ಗುಜರಾತ್ ಮತ್ತು ರಾಜಸ್ಥಾನ್ ಪೊಲೀಸರು ಡಿಸೆಂಬರ್ ೨೦೦೬ ಡಿಸೆಂಬರಿನಲ್ಲಿ ನಡೆದ ಇನ್ನೊಂದು ಗುಂಡಿನ ಘರ್ಷಣೆಯಲ್ಲಿ ಶೇಖನ ಸಹಾಯಕ  ತುಳಸಿರಾಮ್ ಪ್ರಜಾಪತಿಯನ್ನು ಕೊಂದು ಹಾಕಿದ್ದರು.

ನಕಲಿ ಎನ್ ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ  ಪ್ರಾಸೆಕ್ಯೂಷನ್ ೨೧೦ ಸಾಕ್ಷಿಗಳನ್ನು ಹಾಜರು ಪಡಿಸಿತ್ತು. ಅವರ ಪೈಕಿ  ೯೨ ಸಾಕ್ಷಿಗಳು ಪ್ರತಿಕೂಲರಾಗಿದ್ದರು.

ತಿಂಗಳ ಆರಂಭದಲ್ಲಿ ಅಂತಿಮ ವಾದ ಮುಕ್ತಾಯದ ಬಳಿಕ ಸಿಬಿಐ ಪ್ರಕರಣಗಳ ವಿಶೇಷ ನ್ಯಾಯಾಧೀಶ ಎಸ್. ಜೆ. ಶರ್ಮಾ ಅವರು ಡಿಸೆಂಬರ್ ೨೧ ರಂದು ತೀರ್ಪು ಘೋಷಿಸುವುದಾಗಿ ಪ್ರಕಟಿಸಿದ್ದರು.
ಗುಜರಾತ್ ಗೃಹ ಸಚಿವ (ಈಗ ಬಿಜೆಪಿ ಅಧ್ಯಕ್ಷ ಅಮಿತ್ ಶಾ) ಮತ್ತು ಗುಜರಾತ್ ಮತ್ತು ರಾಜಸ್ಥಾನದ ಹಿರಿಯ  ಪೊಲೀಸ್ ಅಧಿಕಾರಿಗಳು ಸೇರಿದಂತೆ ೩೮ ಜನರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ೨೦೧೦ ರಲ್ಲಿ ಪ್ರಕರಣ ದಾಖಲಿಸಿತ್ತು.

ಏನಿದ್ದರೂ ಸುಪ್ರೀಂಕೋರ್ಟ್ ಆದೇಶದಂತೆ 2013ರಲ್ಲಿ ಗುಜರಾತಿನಿಂದ ಮುಂಬೈ ನ್ಯಾಯಾಲಯಕ್ಕೆ ವರ್ಗಾವಣೆಗೊಂಡಿದ್ದ ಈ ಪ್ರಕರಣದಲ್ಲಿ ಮುಂಬೈಯ ಸಿಬಿಐ ವಿಶೇಷ ನ್ಯಾಯಾಲಯವು
 ಅಮಿತ್ ಶಾ ಮತ್ತು ಗುಜರಾತ್ ಪೊಲೀಸ್ ಮುಖ್ಯಸ್ಥ ಪಿ.ಸಿ. ಪಾಂಡೆ ಹಾಗೂ ಭಯೋತ್ಪಾದನಾ ನಿಗ್ರಹ  ತಂಡ ಮಹಾನಿರ್ದೇಶಕ ಡಿ.ಜಿ. ವಂಜಾರ  ಸೇರಿದಂತೆ ೧೬ ಹಿರಿಯ ಪೊಲೀಸ್ ಅಧಿಕಾರಿಗಳನ್ನು ದೋಷಮುಕ್ತರನ್ನಾಗಿ ಮಾಡಿತ್ತು.

ಆ ಬಳಿಕ, ವಂಜಾರ ಮತ್ತು ಇತರ ನಾಲ್ವರು ಪೊಲೀಸ್ ಅಧಿಕಾರಿಗಳ ಖುಲಾಸೆ ವಿರುದ್ಧ ಶೇಖ್ ಸಹೋದರ ರುಬಾಬುದ್ದೀನ್ ಸಲ್ಲಿಸಿದ್ದ ಮನವಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು.

No comments:

Post a Comment