ಇಂದಿನ ಇತಿಹಾಸ History Today ನವೆಂಬರ್ 04
2018: ನವದೆಹಲಿ: ಎಂಜಿನಿಯರಿಂಗ್ ’ವಿಸ್ಮಯ’ವಾಗಿರುವ ಯಮುನಾ ನದಿಯ ಮೇಲೆ ನಿರ್ಮಿಸಲಾಗಿರುವ ದೆಹಲಿಯ
ಐಕಾನಿಕ್ ಸಿಗ್ನೇಚರ್ ಬ್ರಿಜ್‌ನ್ನು ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಈದಿನ ಸಂಜೆ ಉದ್ಘಾಟಿಸಿದರು.
ಸೇತುವೆಯು ನವೆಂಬರ್ 5ರ ಸೋಮದಿಂದ ಸಾರ್ವಜನಿಕರಿಗೆ
ಸಂಚಾರಕ್ಕೆ ಮುಕ್ತವಾಗುತ್ತದೆ. ೬೭೫ ಮೀಟರುಗಳ ಸಿಗ್ನೇಚರ್ ಬ್ರಿಜ್ ಎಂಟು ಪಥಗಳ ಸಾಗಣೆ ಮಾರ್ಗವಾಗಿದ್ದು
ಉತ್ತರ ಮತ್ತು ಈಶಾನ್ಯ ದೆಹಲಿ ನಡುವಣ ಪ್ರಯಾಣದ ಸಮಯವನ್ನು ಗಮನಾರ್ಹವಾಗಿ ತಗ್ಗಿಸಲಿದೆ ಮತ್ತು ವಜೀರಾಬಾದ್
ಸೇತುವೆಯ ಸಂಚಾರ ಭಾರವನ್ನು ಇಳಿಸಲಿದೆ. ಯಮುನಾ ನದಿಯ ಪಶ್ಚಿಮದಂಡೆಯಲ್ಲಿ ಹೊರ ವರ್ತುಲ ರಸ್ತೆಯನ್ನು
ಪೂರ್ವಭಾಗದ ವಜೀರಾಬಾದ್ ರಸ್ತೆಯ ಜೊತೆಗೆ ಇದು ಸಂಪರ್ಕಿಸುವುದು. ಸೇತುವೆ ಉದ್ಘಾಟನೆಯ ಭವ್ಯ ಸಮಾರಂಭವು ಬಿಜೆಪಿ ಮತ್ತು ಆಮ್
ಆದ್ಮಿ ಪಕ್ಷದ ಕಾರ್‍ಯಕರ್ತರ ಮಧ್ಯೆ ಘರ್ಷಣೆಗೂ ಕಾರಣವಾಯಿತು. ಸೇತುವೆ ಉದ್ಘಾಟನೆಗೆ ಸ್ವಲ್ಪ ಮುನ್ನ,
ನೂತನವಾಗಿ ನಿರ್ಮಿಸಿದ ಸೇತುವೆಯ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಲಿಲ್ಲ ಎಂಬ ಕಾರಣಕ್ಕಾಗಿ ದೆಹಲಿ
ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಮತ್ತು ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಕಾರ್‍ಯಕ್ರಮದ
ಸಂದರ್ಭದಲ್ಲಿ ಲೇಸರ್ ಪ್ರದರ್ಶನವೂ ನಡೆಯಿತು. ದೇಶದ ರಾಜಧಾನಿ ದೆಹಲಿಯಲಿ ಯಮುನಾ ನದಿಯ ಮೇಲೆ ನಿರ್ಮಿಸಲಾಗಿರುವ
‘ಸಿಗ್ನೇಚರ್ ಬ್ರಿಡ್ಜ್’ ಮೇಲಿನಿಂದ, ಪ್ಯಾರಿಸ್ಸಿನ
ಐಫೆಲ್ ಗೋಪುರದಿಂದ ಇಡೀ ಪ್ಯಾರಿಸ್ ವೀಕ್ಷಣೆ ಹೇಗೆ ಸಾಧ್ಯವೋ ಹಾಗೆಯೇ ರಾಜಧಾನಿ ದೆಹಲಿಯ ವಿಹಂಗಮ ನೋಟವನ್ನು
ಆಸ್ವಾದಿಸಲು ಸಾಧ್ಯವಿದೆ. ನಿರ್ಮಾಣಕ್ಕೆ ಬರೋಬ್ಬರಿ
೧೪ ವರ್ಷಗಳನ್ನು ತೆಗೆದುಕೊಂಡಿರುವ ಈ ಸೇತುವೆಯು ಒಟ್ಟು ೫೦ ಜನರನ್ನು ಒಯ್ಯುವ ಸಾಮರ್ಥ್ಯವಿರುವ ನಾಲ್ಕು
ಎಲಿವೇಟರುಗಳನ್ನು ಹೊಂದಿದ್ದು, ಜನರನ್ನು ಸೇತುವೆಯ ಮೇಲ್ಭಾಗಕ್ಕೆ ಕರೆದೊಯ್ಯುತ್ತವೆ. ಸೇತುವೆಯ ವಿಶೇಷತೆಗಳೇನು? * ಸೇತುವೆಯು ೧೫೪ ಮೀಟರ್ ಎತ್ತರದ ಗಾಜಿನ ವೀಕ್ಷಣಾ ಪೆಟ್ಟಿಗೆಯನ್ನು
ಹೊಂದಿದೆ. ಈ ಎತ್ತರವು ಕುತುಬ್ ಮಿನಾರಿನ ದುಪ್ಪಟ್ಟು ಪಟ್ಟು ಎತ್ತರವಾಗಿದೆ. * ತಮ್ಮ ವಿಶೇಷ ಕ್ಷಣಗಳನ್ನು ಸೆರೆಹಿಡಿಯಲು ೫೭೫-ಮೀಟರ್
ಸೇತುವೆಯು ಪ್ರವಾಸಿಗರಿಗೆ ಸೆಲ್ಫಿ ತಾಣಗಳನ್ನು ಸಹ ಹೊಂದಿದೆ. * ಈ ಸೇತುವೆಯು ಭಾರತದ ಮೊತ್ತ ಮೊದಲ ಅಸಮಪಾರ್ಶ್ವದ (ಅಸಿಮೆಟ್ರಿಕಲ್)
ಕೇಬಲ್-ಇರುವ ಸೇತುವೆ ಎಂದು ಪರಿಗಣಿತವಾಗಿದೆ. * ಸೇತುವೆಯು
ಉತ್ತರ ಮತು ಈಶಾನ್ಯ ದೆಹಲಿ ನಡುವಿನ ಪ್ರಯಾಣದ ಸಮಯವನ್ನು ಕಡಿಮೆ ಮಾಡುತ್ತದೆ ಮತ್ತು ಅಭಿವೃದ್ಧಿಯ
ಎರಡನೇ ಹಂತದಲ್ಲಿ ಈ ಸೇತುವೆಯು ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಳ್ಳಲಿದೆ. * ೨೦೦೪ ರಲ್ಲಿ ಸೇತುವೆ ನಿರ್ಮಾಣದ ಮಾಡಿದಾಗ ಇದಕ್ಕೆ ೪೯೪
ಕೋಟಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು. ನಂತರ, ನಿರ್ಮಾಣ ವೆಚ್ಚ ಏರುತ್ತಾ ಹೋಗಿ, ದೆಹಲಿಯಲ್ಲಿ
ನಡೆದ ೨೦೧೦ ಕಾಮನ್ವೆಲ್ತ್ ಕ್ರೀಡಾಕೂಟಕ್ಕೆ ಮುಂಚಿತವಾಗಿ ರೂ.೧,೧೩೧ ಕೋಟಿ ಮೌಲ್ಯದ ಪರಿಷ್ಕೃತ ಅಂದಾಜಿನಲ್ಲಿ
ಇದನ್ನು ಪೂರ್ಣ ಗೊಳಿಸಲಾಗುವುದು ಎಂದು ಪ್ರಕಟಿಸಲಾಗಿತ್ತು. ಆದರೆ ಆ ಬಳಿಕವೂ ಪ್ರಕಟಿಸಲಾದ ಗಡುವುಗಳಲ್ಲಿ
ಕಾಮಗಾರಿ ಪೂರ್ಣಗೊಳ್ಳದೆ ಈಗ ಪೂರ್ಣಗೊಳ್ಳುವ ವೇಳೆಗೆ ಇದರ ವೆಚ್ಚ ೧೫೯೪ ಕೋಟಿ ರೂಪಾಯಿಗಳಿಗೆ ಏರಿದೆ.
2018: ನವದೆಹಲಿ: ಪ್ರಧಾನಿ ನರೇಂದ್ರ
ಮೋದಿ ಅವರ ’ಕುರ್ತಾ-ಜಾಕೆಟ್’ ಯುವಕರಲ್ಲಿ ಇತ್ತೀಚಿನ
ಆಕರ್ಷಣೆಯಾಗಿದ್ದು ಏಳು ಖಾದಿ ಮಳಿಗೆಗಳಲ್ಲಿ ಪ್ರತಿದಿನ ೧೪೦೦ಕ್ಕೂ ಹೆಚ್ಚು ಮೋದಿ ಕುರ್ತಾ-ಜಾಕೆಟ್
ಜೋಡಿಗಳು ಮಾರಾಟವಾದವು. ಖಾದಿ ಇಂಡಿಯಾವು ’ಮೋದಿ ಜಾಕೆಟ್’ಗಳು ಮತ್ತು ’ಮೋದಿ ಕುರ್ತಾ’ಗಳನ್ನು ತನ್ನ ಕನ್ಹಾಟ್ ಪ್ಲೇಸ್ ಮಳಿಗೆಯಲ್ಲಿ ಪ್ರಮುಖ
ಆಕರ್ಷಣೆಯಾಗಿ ಸೆಪ್ಟೆಂಬರ್ ೧೭ರಿಂದ ಪ್ರಧಾನ ಮಂತ್ರಿಯವರ ಜನ್ಮದಿನಾಚರಣೆ ಸಲುವಾಗಿ ಮಾರಾಟಕ್ಕೆ ಬಿಡುಗಡೆ
ಮಾಡಿತ್ತು. ‘ಮೋದಿ ಕುರ್ತಾ-ಜಾಕೆಟ್ ಗೆ ಬರುತ್ತಿರುವ
ಬೇಡಿಕೆಯನ್ನು ಗಮನಿಸಿ ದೇಶಾದ್ಯಂತ ಇನ್ನಷ್ಟು ಮಳಿಗೆಗಳಿಗೆ ಮೋದಿ ಕುರ್ತಾ- ಜಾಕೆಟ್ ಶ್ರೇಣಿಯನ್ನು
ವಿಸ್ತರಿಸಲು ಇದೀಗ ಯೋಜಿಸಲಾಗುತ್ತಿದೆ ಎಂದು ಕೆವಿಐಸಿ ಅಧ್ಯಕ್ಷ ವಿ.ಕೆ. ಸಕ್ಸೇನಾ ಸುದ್ದಿ ಸಂಸ್ಥೆಗೆ
ತಿಳಿಸಿದರು. ಕನ್ಹಾಟ್ ಪ್ಲೇಸ್ ಖಾದಿ ಮಳೆಗೆಯಲ್ಲಿ ೨೦೧೮ರ ಅಕ್ಟೋಬರ್ ತಿಂಗಳಲ್ಲಿ ಒಟ್ಟು ೧೪.೭೬ ಕೋಟಿ
ರೂಪಾಯಿ ಮೌಲ್ಯದ ಖಾದಿ ಉಡುಪುಗಳು ಮಾರಾಟವಾಗಿದೆ. ಇದು ಕಳೆದ ವರ್ಷ ಇದೇ ತಿಂಗಳಲ್ಲಿ ಆಗಿದ್ದ ಮಾರಾಟಕ್ಕಿಂತ
ಶೇಕಡಾ ೩೪.೭೧ರಷ್ಟು ಅಧಿಕ. ದೇಶಾದ್ಯಂತ ಖಾದಿ ಇಂಡಿಯಾದ ಏಳು ಮಾರಾಟ ಮಳಿಗೆಗಳಲ್ಲಿ ಪ್ರತಿದಿನ ಸರಾಸರಿ
೨೦೦ ಜೊತೆ ಮೋದಿ ಜಾಕೆಟ್ ಮತ್ತು ಕುರ್ತಾಗಳು ಮಾರಾಟವಾಗುತ್ತಿದ್ದು ಇದು ಮೋದಿ ಕುರ್ತಾ-ಜಾಕೆಟ್ ಗೆ
ಇರುವ ಬೇಡಿಕೆಯನ್ನು ತೋರಿಸಿದೆ. ದೆಹಲಿ, ಕೋಲ್ಕತ, ಜೈಪುರ, ಜೋಧ್‌ಪುರ, ಭೋಪಾಲ್, ಮುಂಬೈ ಮತ್ತು ಎರ್ನಾಕುಲಂ
ಮಳಿಗೆಗಳು ಈ ಮಳಿಗೆಗಳಲ್ಲಿ ಸೇರಿವೆ ಎಂದು ಸಕ್ಸೇನಾ ನುಡಿದರು. ಖಾದಿ ಬಳಸುವಂತೆ ಪ್ರಧಾನಿ ನೀಡಿರುವ
ಗಟ್ಟಿ ದನಿಯ ಕರೆ ದೇಶೀ ಉಡುಪಿನ ಬಗ್ಗೆ ಸಾಮೂಹಿಕ ಜಾಗೃತಿಯನ್ನು ಮೂಡಿಸಿದ್ದು, ಯುವಕರಲ್ಲಿ ಖಾದಿ
ಉಡುಪಿನ ಜನಪ್ರಿಯತೆಯನ್ನು ಹೆಚ್ಚಿಸಿದೆ ಎಂದು ಸಕ್ಸೇನಾ ವಿಶ್ಲೇಷಿಸಿದರು.
2018: ನವದೆಹಲಿ: ಉದ್ದೇಶಪೂರ್ವಕ ಸುಸ್ತಿದಾರರ
ಪಟ್ಟಿ ಪ್ರಕಟಿಸುವ ಬಗ್ಗೆ ಸುಪ್ರೀಂಕೋರ್ಟ್ ತೀರ್ಪನ್ನು ಅಗೌರವಿಸುತ್ತಿರುವುದಕ್ಕಾಗಿ ಭಾರತೀಯ ರಿಸರ್ವ್
ಬ್ಯಾಂಕ್ (ಆರ್‌ಬಿಐ) ಗವರ್ನರ್ ಊರ್ಜಿತ್ ಪಟೇಲ್ ಅವರಿಗೆ ಕೇಂದ್ರೀಯ ಮಾಹಿತಿ ಆಯೋಗವು (ಸಿಐಸಿ) ಶೋಕಾಸ್
ನೋಟಿಸ್ ಜಾರಿ ಮಾಡಿತು. ಮರುಪಾವತಿಯಾಗದ ಸಾಲಗಳಿಗೆ (ಕೆಟ್ಟ ಸಾಲಗಳು) ಸಂಬಂಧಿಸಿದಂತೆ ಮಾಜಿ ಆರ್‌ಬಿಐ
ಗವರ್ನರ್ ರಘುರಾಮ್ ರಾಜನ್ ಅವರು ಬರೆದ ಪತ್ರವನ್ನು ಬಹಿರಂಗ ಪಡಿಸುವಂತೆಯೂ ಪ್ರಧಾನ ಮಂತ್ರಿ ಕಚೇರಿ,
ವಿತ್ತ ಸಚಿವಾಲಯ ಮತ್ತು ಭಾರತೀಯ ರಿಸರ್ವ್ ಬ್ಯಾಂಕಿಗೆ (ಆರ್ ಬಿಐ) ಸಿಐಸಿ ಸೂಚಿಸಿತು.
ಸುಪ್ರೀಂಕೋರ್ಟ್
ಆದೇಶದ ಹೊರತಾಗಿಯೂ ೫೦ ಕೋಟಿ ರೂಪಾಯಿ ಮತ್ತು ಅದಕ್ಕಿಂತ ಹೆಚ್ಚಿನ ಸಾಲ ಪಡೆದ ಉದ್ದೇಶಪೂರ್ವಕ ಸುಸ್ತಿದಾರರ
ಹೆಸರುಗಳನ್ನು ಬಹಿರಂಗ ಪಡಿಸುವ ಬಗೆಗಿನ ಮಾಹಿತಿ ನೀಡಲು ನಿರಾಕರಿಸಿದ್ದರಿಂದ ಗರಂ ಆಗಿರುವ ಸಿಐಸಿ,
ಸುಪ್ರೀಂಕೋರ್ಟಿನ ತೀರ್ಪನ್ನು ಅಗೌರವಿಸುತ್ತಿರುವುದಕ್ಕಾಗಿ ನಿಮಗೆ ಏಕೆ ಗರಿಷ್ಠ ದಂಡ ವಿಧಿಸಬಾರದು
ಎಂಬುದಾಗಿ ನೋಟಿಸಿನಲ್ಲಿ ಪ್ರಶ್ನಿಸಿತು. ಉದ್ದೇಶಪೂರ್ವಕ ಸುಸ್ತಿದಾರರ ಹೆಸರುಗಳನ್ನು ಬಹಿರಂಗ ಪಡಿಸಲು
ಸೂಚಿಸಿ ಆಗಿನ ಮಾಹಿತಿ ಆಯುಕ್ತ ಶೈಲೇಶ್ ಗಾಂಧಿ ಅವರ ನಿರ್ಧಾರವನ್ನು ಎತ್ತಿ ಹಿಡಿಯುತ್ತಾ ಸಿಐಸಿ ಈ
ನೋಟಿಸ್ ನೀಡಿತು. ಸೆಪ್ಟೆಂಬರ್ ೨೦ರಂದು ಪಟೇಲ್ ಅವರು ಮಾತನಾಡುತ್ತಾ ಕೇಂದ್ರೀಯ ಜಾಗೃತಾ ದಳವು (ಸಿವಿಸಿ)
ಜಾರಿಗೊಳಿಸಿದ ಮಾರ್ಗದರ್ಶಿ ಸೂತ್ರಗಳು ಸಾರ್ವಜನಿಕ ಬದುಕಿನಲ್ಲಿ ಹೆಚ್ಚಿನ ಪಾರದರ್ಶಕತೆ, ಪ್ರಾಮಾಣಿಕತೆಯ
ಸಂಸ್ಕೃತಿ ವರ್ಧನೆ ಮತ್ತು ಸಾರ್ವಜನಿಕ ಬದುಕಿನಲ್ಲಿ ನಿಷ್ಕಪಟತ್ವ ಮತ್ತು ತನ್ನ ವ್ಯಾಪ್ತಿಯಲ್ಲಿನ
ಸಂಸ್ಥೆಗಳ ಆಡಳಿತದಲ್ಲಿ ಒಟ್ಟಾರೆ ಜಾಗೃತಿ ಸುಧಾರಣೆಗೆ ಅನುಕೂಲಕರ ಎಂಬುದಾಗಿ ಹೇಳಿದ್ದನ್ನು ಸಿಐಸಿ
ಬೊಟ್ಟು ಮಾಡಿತು. ಆರ್ ಬಿಐ ಗವರ್ನರ್ ಮತ್ತು ಡೆಪ್ಯುಟಿ ಗವರ್ನರ್ ಮಾತುಗಳಲ್ಲಿ ಹೊಂದಾಣಿಕೆ ಕಂಡು
ಬರುತ್ತಿಲ್ಲ ಮತ್ತು ಜಯಂತಿ ಲಾಲ್ ಪ್ರಕರಣದಲ್ಲಿ ಸಿಐಸಿ ಆದೇಶವನ್ನು ಸುಪ್ರೀಂಕೋರ್ಟ್ ದೃಢ ಪಡಿಸಿದ್ದರೂ, ಆರ್ ಟಿಐ ನೀತಿಯಲ್ಲಿ ರಹಸ್ಯಗಳ ಪಾಲನೆಯನ್ನೇ ಅನುಸರಿಸಲಾಗುತ್ತಿದೆ ಎಂದು ಮಾಹಿತಿ ಕಮೀಷನರ್ ಶ್ರೀಧರ ಆಚಾರ್ಯಲು ಹೇಳಿದರು.
ಆದೇಶದ ಉಲ್ಲಂಘನೆಗಾಗಿ ಸಿಪಿಐಒ ಅವರನ್ನು ದಂಡಿಸುವುದಕ್ಕೆ ಯಾವುದೇ ಅರ್ಥವಿಲ್ಲ. ಏಕೆಂದರೆ ಅವರು ಉನ್ನತ
ಅಧಿಕಾರಿಗಳ ಸೂಚನೆಯಂತೆ ವರ್ತಿಸಿದ್ದಾರೆ ಎಂದು ಮಾಹಿತಿ ಕಮೀಷನರ್ ತಮ್ಮ ನೋಟಿಸನ್ನು ಕೊನೆಗೊಳಿಸಿದರು.
2018: ಕೊಟ್ಟಾಯಂ (ಕೇರಳ): ಸುಪ್ರೀಂಕೋರ್ಟ್ ತೀರ್ಪಿನ
ಹಿನ್ನೆಲೆಯಲ್ಲಿ ಒಂದೆಡೆಯಲ್ಲಿ ಪೊಲೀಸ್ ಸರ್ಪಗಾವಲು ಮತ್ತು ಇನ್ನೊಂದೆಡೆಯಲ್ಲಿ ಮಹಿಳಾ ವರದಿಗಾರರನ್ನು
ನಿಯೋಜಿಸಬೇಡಿ ಎಂಬುದಾಗಿ ಮಾಧ್ಯಮ ಸಂಸ್ಥೆಗಳಿಗೆ ದೇಗುಲಕ್ಕೆ ಮಹಿಳಾ ಪ್ರವೇಶವನ್ನು ವಿರೋಧಿಸುತ್ತಿರುವ
ಅಯಪ್ಪಸ್ವಾಮಿ ಭಕ್ತರ ಸಂಘಟನೆಗಳ ಆಗ್ರಹದ ನಡುವೆ ಶಬರಿಮಲೈ ದೇವಾಲಯವು ವಿಶೇಷ ಪೂಜೆಯ ಸಲುವಾಗಿ ಸೋಮವಾರ
ಮತ್ತೆ ಬಾಗಿಲು ತೆರೆಯಲು ಸಜ್ಜಾಯಿತು. ವಿಶ್ವಹಿಂದೂ ಪರಿಷತ್ ಮತ್ತು ಹಿಂದೂ ಐಕ್ಯವೇದಿ ಸೇರಿದಂತೆ
ಬಲಪಂಥೀಯ ಸಂಘಟನೆಗಳ ಜಂಟಿ ವೇದಿಕೆಯಾಗಿರುವ ಶಬರಿಮಲೈ ಕರ್ಮ ಸಮಿತಿಯು ದೇವಾಲಯದ ಸಂಕ್ಷಿಪ್ತ ಪುನಾರಂಭಕ್ಕೆ
ಮುಂಚಿತವಾಗಿಯೇ ಮಹಿಳಾ ವರದಿಗಾರರನ್ನು ನಿಯೋಜಿಸಬೇಡಿ ಎಂಬುದಾಗಿ ಮಾಧ್ಯಮ ಸಂಸ್ಥೆಗಳಿಗೆ ಮನವಿ ಮಾಡಿತು.
೧೦ರಿಂದ ೫೦ ವರ್ಷಗಳ ನಡುವಣ ಋತುಮತಿ ವಯೋಮಾನದ ಮಹಿಳೆಯರ ದೇಗುಲ ಪ್ರವೇಶದ ಮೇಲಿನ ನಿಷೇಧವನ್ನು ರದ್ದು
ಪಡಿಸಿ ಎಲ್ಲ ವಯಸ್ಸಿನ ಮಹಿಳೆಯರಿಗೂ ದೇವಾಲಯದ ಬಾಗಿಲು ತೆರೆದ ಸುಪ್ರೀಂಕೋರ್ಟ್ ಆದೇಶದ ಬಳಿಕ ನವೆಂಬರ
5ರಂದು ಎರಡನೆ ಬಾರಿಗೆ ದೇವಾಲಯದ ಬಾಗಿಲು ತೆರೆಯಲಾಗುತ್ತಿದೆ.
ಬ್ರಹ್ಮಚಾರಿಯಾಗಿರುವ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ಋತುಮತಿ ವಯೋಮಾನದ ಮಹಿಳೆಯರ ಪ್ರವೇಶವನ್ನು ನಿಷೇಧಿಸಿದ್ದ
ಶತಮಾನಗಳಷ್ಟು ಹಳೆಯದಾದ ಪದ್ಧತಿಯನ್ನು ರದ್ದು ಪಡಿಸಿದ ಸುಪ್ರೀಂಕೋರ್ಟ್ ಆದೇಶದ ವಿರುದ್ಧ ನಡೆಯುತ್ತಿರುವ
ಆಂದೋಲನದ ನೇತೃತ್ವವನ್ನು ಸಮಿತಿಯು ವಹಿಸಿಕೊಂಡಿತ್ತು.
ಸುಪ್ರೀಂಕೋರ್ಟ್ ಆದೇಶದ ಬಳಿಕ ಕಳೆದ ತಿಂಗಳು ಮೊದಲ ಬಾರಿಗೆ ಮಾಸಿಕ ಪೂಜೆಗಾಗಿ ದೇವಾಲಯವನ್ನು
ತೆರೆದಾಗ ಕಾರ್ಯಕಮದ ವರದಿ ಸಲುವಾಗಿ ಅಯ್ಯಪ್ಪಸ್ವಾಮಿ ದೇವಾಲಯದತ್ತ ಹೊರಟಿದ್ದ ಮಹಿಳಾ ವರದಿಗಾರರ ವಾಹನಗಳನ್ನು
ತಡೆದುದಲ್ಲದೆ, ಇತರ ಪ್ರತಿಭಟನಕಾರರ ಜೊತೆಗೆ ಯುವ ಮಹಿಳಾ ಭಕ್ತರು ಮಹಿಳಾ ವರದಿಗಾರರನ್ನು ದಾರಿಯಲ್ಲೇ
ಅಡ್ಡಗಟ್ಟಿ ವಾಪಸ್ ಕಳುಹಿಸಿದ್ದರು.
ಮಾಧ್ಯಮ
ಸಂಸ್ಥೆಗಳ ಸಂಪಾದಕರಿಗೆ ಬರೆಯಲಾದ ಪತ್ರಗಳನ್ನು ಈದಿನ ಇಲ್ಲಿ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಸಮಿತಿ,
ತಮ್ಮ ವೃತ್ತಿಯ ಭಾಗವಾಗಿ ನಿಷೇಧಿತ ವಯೋಮಾನದ ಮಹಿಳಾ ಪತ್ರಕರ್ತರ ಪ್ರವೇಶ ಕೂಡಾ ಪರಿಸ್ಥಿತಿ ವಿಷಮಿಸುವಂತೆ
ಮಾಡುವ ಸಾಧ್ಯತೆ ಇದೆ ಎಂದು ಹೇಳಿದತು. ‘ಈ ವಿಷಯಕ್ಕೆ ಸಂಬಂಧಿಸಿದಂತೆ ಭಕ್ತರನ್ನು ನಿಲುವನ್ನು ಬೆಂಬಲಿಸುವ
ಅಥವಾ ವಿರೋಧಿಸುವ ನಿಮ್ಮ ಹಕ್ಕನ್ನು ಮಾನ್ಯ ಮಾಡುತ್ತಲೇ, ಪರಿಸ್ಥಿತಿ ಇನ್ನಷ್ಟು ವಿಷಮಿಸುವಂತಹ ನಿಲುವನ್ನು
ನೀವು ತೆಗೆದುಕೊಳ್ಳುವುದಿಲ್ಲ ಎಂದು ನಾವು ಹಾರೈಸುತ್ತೇವೆ’ ಎಂದು ಪತ್ರ ತಿಳಿಸಿತು.
ತಿರುವಾಂಕೂರಿನ ಕೊನೆಯ ದೊರೆ ಚಿಥಿರ ತಿರುನಾಳ್ ಬಲರಾಮ
ವರ್ಮ ಜನ್ಮದಿನದ ಸಂದರ್ಭದಲ್ಲಿ ನಡೆಯುವ ’ಚಿಥಿರ ಅಟ್ಟವಿಶೇಷಂ’ ಪೂಜೆಯ ಸಲುವಾಗಿ ದೇವಾಲಯದ
ಬಾಗಿಲುಗಳನ್ನು ನ.5ರಂದು ತೆರೆಯಲಾಗುತ್ತದೆ. ನ.6ರ
ರಾತ್ರಿ ೧೦ ಗಂಟೆಗೆ ದೇವಾಲಯವನ್ನು ಮುಚ್ಚಲಾಗುತ್ತದೆ. ಮೂರು ತಿಂಗಳ ವಾರ್ಷಿಕ ಯಾತ್ರಾ ಋತುವಿಗಾಗಿ
ನವೆಂಬರ್ ೧೭ರಂದು ಮತ್ತೆ ದೇವಾಲಯದ ಬಾಗಿಲುಗಳನ್ನು ತೆರೆಯಲಾಗುವುದು.ಕೇರಳದ ಎಲ್ಲ ಸಮುದಾಯಗಳಿಗೆ ಸೇರಿದ
ಭಕ್ತರಲ್ಲದೆ ದೇಶ ಹಾಗೂ ವಿದೇಶಗಳಲ್ಲಿನ ಭಕ್ತರು ಶಬರಿಮಲೈ ದೇವಾಲಯದ ಬಹುಮತೀಯ ಭಕ್ತರ ಆಶಯಗಳಿಗೆ ವಿರುದ್ಧವಾಗಿ
ಎಲ್ಲ ವಯಸ್ಸಿನ ಮಹಿಳೆಯರಿಗೆ ಪ್ರವೇಶಾವಕಾಶ ಕಲ್ಪಿಸಿದ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ನಡೆಯುತ್ತಿರುವ
ಚಳವಳಿಗೆ ಜೊತೆಗೂಡುವ ಹಾದಿಯಲ್ಲಿದ್ದಾರೆ ಎಂದು ಸಮಿತಿ ಹೇಳಿತು. ವಿಷಯಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾಗಿರುವ
ಮರುಪರಿಶೀಲನಾ ಅರ್ಜಿಗಳು ಮತ್ತು ರಿಟ್ ಅರ್ಜಿಗಳನ್ನು ಆಲಿಸಲು ನವೆಂಬರ್ ೧೩ರಂದು ಆಲಿಸಲು ಸ್ವತಃ ಸುಪ್ರೀಂಕೋರ್ಟ್
ನಿರ್ಧರಿಸಿದ್ದರೂ, ರಾಜ್ಯ ಸರ್ಕಾರವು ತೀರ್ಪಿನ ವಿರುದ್ಧದ ಸಾಮೂಹಿಕ ಚಳವಳಿಯನ್ನು ಉದ್ದೇಶಪೂರ್ವಕವಾಗಿ
ನಿರ್ಲಕ್ಷಿಸಿ ಪೊಲೀಸ್ ಬಲವನ್ನು ಬಳಸಿಕೊಂಡು ತರಾತುರಿಯಲ್ಲಿ ತೀರ್ಪನ್ನು ಜಾರಿಗೊಳಿಸಲು ಯತ್ನಿಸುತ್ತಿದೆ
ಎಂದು ಸಮಿತಿ ಆಪಾದಿಸಿತು. ಇಂತಹ ಪರಿಸ್ಥಿತಿಯಲ್ಲಿ ತಮ್ಮ ಶಾಂತಿಯುತ ಚಳವಳಿಯನ್ನು ಮುಂದುವರೆಸುವುದರ
ಬೇರೆ ಆಯ್ಕೆಗಳು ಭಕ್ತರಿಗೆ ಇಲ್ಲ ಎಂದು ಪತ್ರ ತಿಳಿಸಿತು. ೧೦ರಿಂದ ೫೦ ವರ್ಷ ನಡುವಣ ಯುವ ಮಹಿಳೆಯರನ್ನು
ಶಬರಿಮಲೈ ದೇವಾಲಯದ ಶತಮಾನಗಳಷ್ಟು ಹಳೆಯದಾದ ವಿಧಿ ವಿಧಾನಗಳಿಗೆ ವಿರುದ್ಧವಾಗಿ ಬಲವಂತದಿಂದ ಕರೆತರಲು
ಯತ್ನಿಸುತ್ತಿರುವ ಸರ್ಕಾರದ ಹಠಮಾರೀ ಧೋರಣೆಯೇ ಪ್ರಮುಖ ಸಮಸ್ಯೆ ಎಂದು ಸಮಿತಿ ಹೇಳಿತು. ಈ ಮಧ್ಯೆ ದೇವಾಲಯದಲ್ಲಿ
ಶಾಂತಿ ಕಾಪಾಡಲು ಸಹಸ್ರಾರು ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿರುವ ಕೇರಳ ಸರ್ಕಾರ ಯಾವುದೇ ಪರಿಸ್ಥಿತಿ
ಎದುರಿಸಲು ಸನ್ನದ್ಧವಾಗಿರುವುದಾಗಿ ತಿಳಿಸಿತು. ಇತ್ತೀಚೆಗೆ ಕೇರಳಕ್ಕೆ ಭೇಟಿ ನೀಡಿದ್ದ ಭಾರತೀಯ ಜನತಾ
ಪಕ್ಷದ (ಬಿಜೆಪಿ) ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಅಯ್ಯಪ್ಪ ಸ್ವಾಮಿ ಭಕ್ತರ ಜೊತೆಗೆ ಬಿಜೆಪಿಯು
ಕಲ್ಲಿನಂತೆ ನಿಲ್ಲುವುದು ಎಂದು ಪ್ರಕಟಿಸಿದ್ದರು. ಇದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಆಕ್ರೋಶಕ್ಕೆ
ಕಾರಣವಾಗಿತ್ತು.
2018: ನವದೆಹಲಿ: ಹಿಂದುಗಳು ವಿಶ್ವದಲ್ಲೇ
ಅತ್ಯಂತ ಸಹನಶೀಲರು, ಆದರೆ ಅಯೋಧ್ಯೆಯ ರಾಮಮಂದಿರದ ಪರಿಧಿಯಲ್ಲಿ ಮಸೀದಿ ನಿರ್ಮಿಸುವ ಯಾವುದೇ ಮಾತು
ಅವರನ್ನು ಅಸಹಿಷ್ಣುಗಳನ್ನಾಗಿ ಮಾಡಬಹುದು ಎಂದು ಕೇಂದ್ರ ಸಚಿವೆ ಉಮಾಭಾರತಿ ಅವರು ಇಲ್ಲಿ ಹೇಳಿದರು. ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ತಮ್ಮ ಜೊತೆಗೇ ಬಂದು ಶಿಲಾನ್ಯಾಸ
ಮಾಡುವಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನೂ ಆಹ್ವಾನಿಸಿದ ಸಚಿವರು ’ಹಾಗೆ ಮಾಡುವ ಮೂಲಕ
ಕಾಂಗ್ರೆಸ್ ಪಕ್ಷವು ಈವರೆಗೆ ಮಾಡಿದ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಬಹುದು’ ಎಂದು ನುಡಿದರು. ಹಿಂದುಗಳು ಜಗತ್ತಿನಲ್ಲಿಯೇ ಅತ್ಯಂತ ಸಹಿಷ್ಣುಗಳು. ಅಯೋಧ್ಯೆಯಲ್ಲಿನ
ಶ್ರೀರಾಮನ ಜನ್ಮಸ್ಥಾನದ ಹೊರ ಪರಿಧಿಯಲ್ಲಿ ಮಸೀದಿ ನಿರ್ಮಿಸುವ ಮಾತುಗಳನ್ನು ಆಡುವ ಮೂಲಕ ಹಿಂದುಗಳನ್ನು
ದಯವಿಟ್ಟು ಅಸಹಿಷ್ಣುಗಳನ್ನಾಗಿ ಮಾಡಬೇಡಿ ಎಂದು ನಾನು ಎಲ್ಲ ರಾಜಕಾರಣಿಗಳಿಗೆ ಮನವಿ ಮಾಡುತ್ತೇನೆ’ ಎಂದು ಉಮಾಭಾರತಿ ಹೇಳಿದರು. ಪವಿತ್ರ ಮದೀನಾ ನಗರದಲ್ಲಿ ದೇವಾಲಯ ಇರಲು ಹೇಗೆ ಸಾಧ್ಯವಿಲ್ಲವೋ
ಅಥವಾ ವ್ಯಾಟಿಕನ್ ನಗರದಲ್ಲಿ ಮಸೀದಿ ಇರಲು ಸಾಧ್ಯವಿಲ್ಲವೋ ಹಾಗೆಯೇ ಅಯೋಧ್ಯೆಯಲ್ಲಿ ಮಸೀದಿ ನಿರ್ಮಿಸುವ
ಬಗ್ಗೆ ಮಾತನಾಡುವುದು ಅಸಮಂಜಸವಾಗುತ್ತದೆ ಎಂದು ಕೇಂದ್ರ ಸಚಿವೆ ನುಡಿದರು. ಅಯೋಧ್ಯಾ ವಿವಾದವು ಭೂಮಿಯ
ವಿವಾದವೇ ಹೊರತು ನಂಬಿಕೆಯ ವಿವಾದವಲ್ಲ ಎಂದು ಬಣ್ಣಿಸಿದ ಫೈರ್ ಬ್ರ್ಯಾಂಡ್ ಹಿಂದೂ ನಾಯಕಿ, ’ಈಗ ಇರುವುದು
ಭೂಮಿಯ ವಿವಾದ ಮಾತ್ರ, ನಂಬಿಕೆಯ ವಿವಾದವಲ್ಲ. ಅಯೋಧ್ಯೆಯು ಶ್ರೀರಾಮನ ಜನ್ಮಸ್ಥಳ ಎಂಬುದು ಈಗಾಗಲೇ
ನಿರ್ಧಾರವಾಗಿರುವ ವಿಷಯ’ ಎಂದು ಹೇಳಿದರು. ವಿವಾದಾತ್ಮಕ ವಿಷಯದ ಬಗ್ಗೆ ಕೋರ್ಟಿನ ಹೊರಗೆ ಇತ್ಯರ್ಥ ಮಾಡಿಕೊಳ್ಳುವ
ಅಗತ್ಯ ಇದೆ ಎಂದು ಒತ್ತಿ ಹೇಳಿದ ಉಮಾಭಾರತಿ ಅವರು ರಾಹುಲ್ ಗಾಂಧಿ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್
ಯಾದವ್, ಬಿಎಸ್ ಪಿ ನಾಯಕಿ ಮಾಯಾವತಿ ಮತ್ತು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಸೇರಿದಂತೆ ಎಲ್ಲ ರಾಜಕೀಯ
ನಾಯಕರನ್ನು ಇದಕ್ಕೆ ಬೆಂಬಲ ಸೂಚಿಸುವಂತೆ ಒತ್ತಾಯಿಸಿದರು.
‘ಈ ವಿಷಯದಲ್ಲಿ ನಮಗೆ ಎಲ್ಲ ರಾಜಕೀಯ ಪಕ್ಷಗಳ ಬೆಂಬಲದ ಅಗತ್ಯ ಇದೆ. ರಾಹುಲ್ ಗಾಂಧಿಜಿ ಸೇರಿದಂತೆ
ಎಲ್ಲ ನಾಯಕರನ್ನೂ ನಾನು ರಾಮಮಂದಿರಕ್ಕೆ ಶಿಲಾನ್ಯಾಸ ಮಾಡಲು ನನ್ನೊಂದಿಗೆ ಆಗಮಿಸುವಂತೆ ಆಹ್ವಾನಿಸುತ್ತೇನೆ’ ಎಂದು ಸಚಿವೆ ಹೇಳಿದರು. ಹೀಗೆ ಮಾಡುವ ಮೂಲಕ ಗಾಂಧಿ ವಂಶಜರಾಗಿರುವ ರಾಹುಲ್ ಗಾಂಧಿ
ಅವರು ಅಯೋಧ್ಯೆಯಲ್ಲಿ ದೇವಾಲಯ ನಿರ್ಮಿಸುವಲ್ಲಿ ಯಾವಾಗಲೂ ಅಡತಡೆಗಳನ್ನು ನಿರ್ಮಿಸುತ್ತಾ ಬಂದ ಕಾಂಗ್ರೆಸ್
ಪಕ್ಷದ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಬಹುದು ಎಂದು ಉಮಾಭಾರತಿ ನುಡಿದರು. ರಾಷ್ಟ್ರದ ಹಿತಾಸಕ್ತಿ ದೃಷ್ಟಿಯಿಂದ ಸಮಾಜವಾದಿ ಪಕ್ಷದ ಮುಖ್ಯಸ್ಥ
ಮುಲಾಯಂ ಸಿಂಗ್, ಮಮತಾ ಬ್ಯಾನರ್ಜಿ, ಮಾಯಾವತಿ ಮತ್ತು ಎಡ ಪಕ್ಷಗಳು ಈ ವಿಚಾರದಲ್ಲಿ ಬಿಜೆಪಿಯನ್ನು
ಬೆಂಬಲಿಸಬೇಕು ಎಂದು ಅವರು ಹೇಳಿದರು. ಆದರೆ ಅವರು ವಿಚಾರ ಇತ್ಯರ್ಥಕ್ಕೆ ಬಿಡುತ್ತಿಲ್ಲ. ಕಾಂಗ್ರೆಸ್
ಪಕ್ಷವು ಧರ್ಮದ ಹೆಸರಿನಲ್ಲಿ ರಾಷ್ಟ್ರವನ್ನು ವಿಭಜಿಸುವ ಹವ್ಯಾಸವನ್ನು ಬಿಡಬೇಕು. ಎಲ್ಲ ರಾಜಕೀಯ ಪಕ್ಷಗಳು
ಈ ವಿಷಯದಲ್ಲಿ ಒಗ್ಗೂಡಬೇಕು ಎಂದು ಸಚಿವೆ ನುಡಿದರು.
೧೯೯೦ರಲ್ಲಿ ರಾಮಜನ್ಮಭೂಮಿ ಚಳವಳಿಯಲ್ಲಿ ಪಾಲ್ಗೊಂಡಿದ್ದ ಉಮಾಭಾರತಿ ಅವರು ರಾಮಮಂದಿರ ನಿರ್ಮಾಣಕ್ಕೆ
ತಾವು ಸಂಪೂರ್ಣ ಬದ್ಧರಾಗಿರುವುದಾಗಿ ದೃಢ ಪಡಿಸಿದರು. ’ನನ್ನ ಶವದ ಮೇಲೆ ರಾಮಮಂದಿರವನ್ನು ನಿರ್ಮಿಸಬಹುದು
ಎಂದು ಅವರು ಹೇಳುವುದಾದಲ್ಲಿ, ಹಾಗೆಯೇ ಆಗಲಿ’ ಎಂದು ಅವರು ಹೇಳಿದರು.
ಪಕ್ಷದ ಫೈರ್ ಬ್ರ್ಯಾಂಡ್ ಹಿಂದೂ ನಾಯಕಿ ಎಂದೇ ಖ್ಯಾತಿ
ಪಡೆದಿರುವ ಉಮಾಭಾರತಿ ಅವರು ಈ ಹಿಂದೆಯೇ ಅಯೋಧ್ಯೆಯಲ್ಲಿ
ಶೀಘ್ರವಾಗಿ ರಾಮಮಂದಿರ ನಿರ್ಮಿಸಲು ಆಗ್ರಹ ಮಾಡಿದ್ದರು.
2008: ಕನ್ನಡಿಗರಾದ ಖ್ಯಾತ ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಗಾಯಕ ಪಂಡಿತ್ ಭೀಮಸೇನ ಗುರುರಾಜ ಜೋಶಿ ಅವರು ದೇಶದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಯಾದ `ಭಾರತ ರತ್ನ'ಕ್ಕೆ ಭಾಜನರಾದರು. ಈ ಸಂಬಂಧ ಕೇಂದ್ರ ಸರ್ಕಾರ ಈದಿನ ರಾತ್ರಿ ಪ್ರಕಟಣೆ ಹೊರಡಿಸಿತು. 86 ವರ್ಷದ ಜೋಶಿಯವರು ಭಾರತೀಯ ಶಾಸ್ತ್ರೀಯ ಸಂಗೀತವನ್ನು ತಮ್ಮ ಕಂಠಸಿರಿಯ ಮೂಲಕ ಶ್ರೀಮಂತಗೊಳಿಸಿದ ಧೀಮಂತ ಗಾಯಕರು. ಹಿಂದೂಸ್ಥಾನಿ ಸಂಗೀತಕ್ಕೆ ವಿವಿಧ ರಾಗಗಳ ಮೂಲಕ ಹೊಸ ಚೈತನ್ಯ ನೀಡಿ, ಸಂಗೀತಪ್ರಿಯರ ಮನಗೆದ್ದ ವಿದ್ವಾಂಸರು. ಅವರು ಭಜನೆಗಳು, ಖಯಾಲ್ ಪ್ರಕಾರಗಳ ಹಾಡುಗಳಿಗೆ ಹಾಗೂ ಹಿಂದೂಸ್ಥಾನಿ ಸಂಗೀತದ ಒಂದು ಪದ್ಧತಿಯಾದ `ಕಿರಾಣಾ ಘರಾನಾ'ದಲ್ಲಿ ಪರಿಣತರು. ಮೂಲತಃ ಗದಗ ಪಟ್ಟಣದಲ್ಲಿ 1922ರಲ್ಲಿ ಶಾಲಾ ಶಿಕ್ಷಕರೊಬ್ಬರ ಪುತ್ರನಾಗಿ ಜನಿಸಿದ ಭೀಮಸೇನ ಜೋಶಿಯವರು ಅತಿಯಾದ ಸಂಗೀತದ ಗೀಳಿನಿಂದಾಗಿ ಹನ್ನೊಂದನೇ ವಯಸಿನಲ್ಲೇ ಮನೆಬಿಟ್ಟು ಹೋಗಿದ್ದರು. ನಂತರ ಧಾರವಾಡ ಜಿಲ್ಲೆಗೆ ಮರಳಿದ ಅವರು ಕುಂದಗೋಳದ ಖ್ಯಾತ ಸಂಗೀತ ಗಾಯಕ ಸವಾಯಿ ಗಂಧರ್ವರ ಶಿಷ್ಯರಾದರು. ಜೋಶಿಯವರು ತಮ್ಮ 20ನೇ ವಯಸ್ಸಿನಲ್ಲೇ ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಭಜನೆಗಳ ಗಾಯನದ ಧ್ವನಿಮುದ್ರಿಕೆಗಳನ್ನು (ಆಲ್ಬಂ) ಬಿಡುಗಡೆ ಮಾಡಿದರು. ಅವರು ತಮ್ಮ ಗುರುವಿನ ನೆನಪಿಗಾಗಿ ಪ್ರತಿವರ್ಷ ಸವಾಯಿ ಗಂಧರ್ವ ಶಾಸ್ತ್ರೀಯ ಸಂಗೀತ ಮಹೋತ್ಸವ ನಡೆಸುತ್ತಾ ಬಂದಿದ್ದಾರೆ. ಜೋಶಿಯವರಿಗೆ ಈ ಹಿಂದೆಯೂ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿದ್ದು ಅವುಗಳಲ್ಲಿ ಪದ್ಮಶ್ರೀ, ಪದ್ಮಭೂಷಣ ಹಾಗೂ ಪದ್ಮ ವಿಭೂಷಣ ಪ್ರಮುಖವಾದುವು. ಕನ್ನಡ ಭಾಷೆಯ ದಾಸಪದವಾದ `ಭಾಗ್ಯದ ಲಕ್ಷ್ಮೀ ಬಾರಮ್ಮ' ಜೋಶಿಯವರ ಹೆಸರಿನೊಂದಿಗೆ ಐಕ್ಯವಾಗುವಷ್ಟು ಪ್ರಸಿದ್ಧ. ಕಲೆ ಮತ್ತು ಸಂಸ್ಕೃತಿ ಕ್ಷೇತ್ರದಲ್ಲಿ ಈ ಹಿಂದೆ ಸತ್ಯಜಿತ್ ರೇ, ಎಂ.ಎಸ್. ಸುಬ್ಬಲಕ್ಷ್ಮಿ, ಪಂಡಿತ್ ರವಿಶಂಕರ್, ಲತಾ ಮಂಗೇಶ್ಕರ್, ಉಸ್ತಾದ್ ಬಿಸ್ಮಿಲ್ಲಾ ಖಾನ್ ಈ ಐವರಿಗೆ ಭಾರತ ರತ್ನ ಪ್ರಶಸ್ತಿ ಲಭಿಸಿತ್ತು.
2008: ಗಂಗಾ ನದಿಯನ್ನು `ರಾಷ್ಟ್ರೀಯ ನದಿ' ಎಂದು ಘೋಷಿಸಲು ಕೇಂದ್ರ ಸರ್ಕಾರ ನಿರ್ಧರಿಸಿತು. ಜೊತೆಗೆ ಈ ಪುರಾತನ ನದಿಯನ್ನು ಮಾಲಿನ್ಯದಿಂದ ರಕ್ಷಿಸಲು ಉನ್ನತ ಮಟ್ಟದ ಗಂಗಾ ನದಿ ಪಾತ್ರ ಪ್ರಾಧಿಕಾರ ರಚಿಸಲೂ ತೀರ್ಮಾನಿಸಿತು. ಉ್ದದೇಶಿತ ಪ್ರಾಧಿಕಾರದ ನೇತೃತ್ವವನ್ನು ಪ್ರಧಾನಿ ಮನಮೋಹನ್ ಸಿಂಗ್ ವಹಿಸಿಕೊಳ್ಳುವರು. ಗಂಗಾ ನದಿ ಹರಿಯುವ ರಾಜ್ಯಗಳ ಮುಖ್ಯಮಂತ್ರಿಗಳು ಇದರ ಸದಸ್ಯರು. ಗಂಗಾ ಕಾರ್ಯ ಯೋಜನೆ ಪರಿಶೀಲಿಸಲು ಪ್ರಧಾನಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು. ನವದೆಹಲಿಯಲ್ಲಿ ನಡೆದ ಗಂಗಾ ಕಾರ್ಯಯೋಜನೆ ಪುನರ್ ಪರಿಶೀಲನಾ ಸಲಹಾ ಸಮಿತಿ ಸಭ್ಯೆ ಅಧ್ಯಕ್ಷತೆಯನ್ನು ಪ್ರಧಾನಿ ಮನಮೋಹನ್ ಸಿಂಗ್ ವಹಿಸ್ದಿದರು. ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ, ಕೇಂದ್ರ ಜಲಸಂಪನ್ಮೂಲ ಸಚಿವ ಸೈಪುದ್ದೀನ್ ಸೋಜ್ ಮತ್ತಿತರರು ಭಾಗವಹಿಸಿದ್ದರು.
2008: ಕುಫ್ರಿಯ ಪ್ರಸಿದ್ಧ ಪ್ರವಾಸಿ ಸ್ಥಳದ ಬಳಿ ಖಾಸಗಿ ಬಸ್ಸೊಂದು 200 ಮೀಟರ್ ಆಳದ ಕಮರಿಗೆ ಬಿದ್ದ ಪರಿಣಾಮ ಅದರಲ್ಲಿದ್ದ ಕನಿಷ್ಠ 45 ಪ್ರಯಾಣಿಕರು ಮೃತರಾಗಿ ಐವರು ಗಾಯಗೊಂಡರು.
2008: ಲೋಕಸಭೆಯ ವಿರೋಧ ಪಕ್ಷದ ನಾಯಕ ಎಲ್.ಕೆ.ಅಡ್ವಾಣಿ ಅವರ ಆತ್ಮಕಥನ `ಮೈ ಕಂಟ್ರಿ, ಮೈ ಲೈಫ್'ನ ಕನ್ನಡ ಅನುವಾದದ ಪುಸ್ತಕ `ನನ್ನ ದೇಶ, ನನ್ನ ಜೀವನ' ಬೆೆಂಗಳೂರಿನಲ್ಲಿ ಬಿಡುಗಡೆಯಾಯಿತು.
2008: `ಜುರಾಸಿಕ್ ಪಾರ್ಕ್'ನಿಂದ ಹೆಸರಾಗಿದ್ದ ಅಮೆರಿಕದ ಖ್ಯಾತ ಬರಹಗಾರ ಮೈಕೆಲ್ ಕ್ರಿಕ್ ಟನ್ (66) ಲಾಸ್ ಏಂಜಲಿಸಿನಲ್ಲಿ ನಿಧನರಾದರು. ಕ್ಯಾನ್ಸರಿನಿಂದ ಬಳಲುತ್ತಿದ್ದ ಅವರು `ಜುರಾಸಿಕ್ ಪಾರ್ಕ್', `ದಿ ಅಂಡ್ರೋಮಿಡ ಸ್ಟ್ರೇನ್' ಪುಸ್ತಕಗಳನ್ನು ಬರೆದಿದ್ದರು. ಅವರ ಪುಸ್ತಕಗಳು ವಿಶ್ವದಲ್ಲೇ ಅತ್ಯಂತ ಹೆಚ್ಚು ಮಾರಾಟವಾಗುತ್ತಿದ್ದವು. ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ವೈದ್ಯಕೀಯ ಅಧ್ಯಯನ ನಡೆಸಿದ್ದರು. ಆನಂತರ ಸಾಲ್ಕ್ ಜೈವಿಕ ಅಧ್ಯಯನ ಸಂಸ್ಥೆಯಲ್ಲಿ ವೃತ್ತಿ ಆರಂಭಿಸಿದ್ದರು. ವಿದ್ಯಾರ್ಥಿಯಾಗಿದ್ದಾಗಲೇ ಮೈಕೆಲ್ `ದಿ ಅಂಡ್ರೋಮಿಡ ಸ್ಟ್ರೇನ್' ಪುಸ್ತಕ ಪ್ರಕಟಿಸಿದ್ದರು. ಆನಂತರ ಅವರು ಚಲನಚಿತ್ರ ಹಾಗೂ ಬರವಣಿಗಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಅವರ ಪುಸ್ತಕಗಳು 36 ಭಾಷೆಗಳಲ್ಲಿ ಅನುವಾದಗೊಂಡಿವೆ ಮತ್ತು 13 ಪುಸ್ತಕಗಳು ಸಿನಿಮಾಗಳಾಗಿವೆ. ಜನಪ್ರಿಯ ಟಿವಿ ಸರಣಿಗಳನ್ನೂ ಅವರು ನಿರ್ಮಿಸಿದ್ದರು.
2007: ಪಾಕಿಸ್ಥಾನದ ಪ್ರತಿಪಕ್ಷಗಳ ಪ್ರಮುಖ ನಾಯಕ ಹಾಗೂ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಗೃಹ ಬಂಧನದಿಂದ ತಪ್ಪಿಸಿಕೊಂಡರು. ಈ ಸಂಗತಿಯನ್ನು ಅವರ ಸಂಬಂಧಿಯೊಬ್ಬರು ಸುದ್ದಿಗಾರರಿಗೆ ತಿಳಿಸಿದರು. ಇಮ್ರಾನ್ ಖಾನ್ ಮತ್ತು ಅವರ ಎಂಟು ಜನ ಬೆಂಬಲಿಗರನ್ನು ಗೃಹ ಬಂಧನದಲ್ಲಿ ಇಡಲಾಗಿತ್ತು.
2007: ಕೇಂದ್ರ ಸರ್ಕಾರಕ್ಕೆ ಅಂತಿಮ ವರದಿ ಕಳುಹಿಸಿಕೊಡುವುದಾಗಿ ರಾಜ್ಯಪಾಲ ರಾಮೇಶ್ವರ ಠಾಕೂರ್ ಭರವಸೆ ನೀಡಿದ ಮೇಲೆ ಭಾರತೀಯ ಜನತಾ ಪಕ್ಷವು ಬೆಂಗಳೂರಿನಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಮುಂದೆ ಆರಂಬಿಸಿದ್ದ ಧರಣಿಯನ್ನು ಈದಿನ ಸಂಜೆ ಮುಕ್ತಾಯಗೊಳಿಸಿತು. ಜೊತೆಗೆ ರಥಯಾತ್ರೆ ಸೇರಿದಂತೆ ತನ್ನೆಲ್ಲ ಹೋರಾಟದ ಕಾರ್ಯಕ್ರಮಗಳನ್ನು ತಾತ್ಕಾಲಿಕವಾಗಿ ಮುಂದೂಡಲು ನಿರ್ಧರಿಸಿತು. ಬಿ.ಎಸ್. ಯಡಿಯೂರಪ್ಪ ತಮ್ಮ ಎರಡು ದಿನಗಳ ಮೌನವನ್ನು ಮುರಿದರೆ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೌನದ ಮೊರೆ ಹೊಕ್ಕರು. ಚುನಾವಣೆ ಒಂದೇ ಪರಿಹಾರ ಎಂಬ ತನ್ನ ನಿಲುವನ್ನು ಪುನರುಚ್ಚರಿಸಿದ ಕಾಂಗ್ರೆಸ್, ಬಿಜೆಪಿ- ಜೆಡಿಎಸ್ ಮರು ಮೈತ್ರಿ ವಿರುದ್ಧ ಜನಾಂದೋಲನ ಕಾರ್ಯಕ್ರಮದ ಸಿದ್ಧತೆಗೆ ತೊಡಗಿತು.
2007: ವಿಮಾ ಕಂಪೆನಿಗಳ ಕಾನೂನನ್ನು ಪಾಲಿಸಿರುವಾಗ, ಇತರ ಕಾನೂನು ಉಲ್ಲಂಘನೆಗಳನ್ನು ನೆಪವಾಗಿಟ್ಟುಕೊಂಡು ಗ್ರಾಹಕರಿಗೆ ವಿಮೆ ಹಣ ನೀಡದೇ ಇರುವುದು ತಪ್ಪು ಎಂದು ರಾಷ್ಟ್ರೀಯ ಗ್ರಾಹಕ ನ್ಯಾಯಾಲಯ (ರಾಷ್ಟ್ರೀಯ ಗ್ರಾಹಕ ವಿವಾದಗಳ ನಿವಾರಣಾ ಆಯೋಗ) ತೀರ್ಪು ನೀಡಿತು. `ವಿಮೆ ಎಂಬುದು ಕಂಪೆನಿ ಮತ್ತು ಪಾಲಿಸಿದಾರರ ನಡುವಿನ ಒಪ್ಪಂದ. ಪಾಲಿಸಿದಾರ ವಿಮಾ ಕಂಪೆನಿಯ ನೀತಿ ನಿಯಮಗಳನ್ನು ಉಲ್ಲಂಘಿಸದೇ ಇರುವಾಗ ವಿಮಾ ಹಣವನ್ನು ನೀಡಲು ನಿರಾಕರಿಸಬಾರದು' ಎಂದು ನ್ಯಾಯಮೂರ್ತಿ ಎಂ.ಬಿ. ಷಾ, ಸದಸ್ಯರಾದ ರಾಜ್ಯ ಲಕ್ಷ್ಮಿ ರಾವ್ ಮತ್ತು ಕೆ.ಎಸ್. ಗುಪ್ತಾ ಅವರ ನೇತೃತ್ವದ ಪೀಠ ಹೇಳಿತು. ತಮಿಳುನಾಡಿನಲ್ಲಿ ಅಪಘಾತ ಮಾಡಿದ ಕಾರಿನ ಮಾಲೀಕನ ಬಳಿ ಮೋಟಾರ್ ವಾಹನ ಕಾಯ್ದೆ ಪ್ರಕಾರ ಅಗತ್ಯವಾಗಿ ಇರಬೇಕಾದ `ಅರ್ಹತೆ ಪ್ರಮಾಣ ಪತ್ರ'ದ ಅವಧಿ ಮುಗಿದುಹೋಗಿತ್ತು ಎಂಬ ನೆಪ ನೀಡಿ ಯುನೈಟೆಡ್ ಇನ್ಶೂರೆನ್ಸ್ ಸಂಸ್ಥೆ ವಿಮಾ ಪರಿಹಾರದ ಹಣ ನೀಡಲು ನಿರಾಕರಿಸಿತ್ತು. ಈ ಸಂಬಂಧ ತಮಿಳುನಾಡಿನ ರಾಜ್ಯ ಗ್ರಾಹಕ ನ್ಯಾಯಾಲಯ, ವಿಮಾ ಪಾಲಿಸಿಗಳು ಶಾಸನಬದ್ಧ ಒಪ್ಪಂದಗಳಲ್ಲ ಎಂದು ನೀಡಿದ ತೀರ್ಪಿನ ವಿರುದ್ಧ ರಾಷ್ಟ್ರೀಯ ಗ್ರಾಹಕ ನ್ಯಾಯಾಲಯಕ್ಕೆ ಸಂಸ್ಥೆ ಮೇಲ್ಮನವಿ ಸಲ್ಲಿಸಿತ್ತು. ಮೋಟಾರ್ ವಾಹನ ಕಾಯ್ದೆ ಉಲ್ಲಂಘನೆಗೂ ವಿಮಾ ಕಂಪೆನಿಯ ನಿಯಮಾವಳಿಗಳಿಗೂ ಸಂಬಂಧವಿಲ್ಲ ಎಂದು ತೀರ್ಮಾನಿಸಿದ ಆಯೋಗ ವ್ಯಕ್ತಿ, ಕಾರಿಗೆ ಮಾಡಿಸಿದ್ದ ವಿಮಾ ಹಣ ನೀಡುವಂತೆ ಆದೇಶಿತು.
2007: ಮೊಬೈಲ್ ಚಾರ್ಜರುಗಳು ಇನ್ನು ಮುಂದೆ ಹಳೆಯ ಸರಕಾಗಲಿವೆ. ನೋಟುಗಳ ಸಹಾಯದಿಂದ ಮೊಬೈಲ್ ರೀಚಾರ್ಜು ಮಾಡಲು ಸಾಧ್ಯ ಎಂಬುದನ್ನು ಪುರಿ ನಗರದ ಯುವಕನೊಬ್ಬ ಕಂಡುಹಿಡಿದ. ಎಲೆಕ್ಟ್ರಿಷಿಯನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ 20 ವರ್ಷದ ತಪನ್ ಕುಮಾರ್ ಪತ್ರ, ಬಹಳ ದಿನಗಳಿಂದ ತಾನು ಪ್ರಯೋಗಿಸುತ್ತಿದ್ದ ಕರೆನ್ಸಿ ನೋಟುಗಳ ಮೂಲಕ ಒಂದೇ ನಿಮಿಷದಲ್ಲಿ ನೋಕಿಯಾ ಮೊಬೈಲಿನ ಬ್ಯಾಟರಿಯನ್ನು ರೀಚಾರ್ಜ್ ಮಾಡುವ ತನ್ನ ಸಂಶೋಧನೆಯನ್ನು ಪ್ರದರ್ಶಿಸಿ ತೋರಿಸಿದ.
2007: `ಸಮಾಜದಲ್ಲಿ ಈಗ ಭಾವನೆಗಳೇ ಸತ್ತಿವೆ. ಪ್ರತಿಯೊಬ್ಬರೂ ವ್ಯಾವಹಾರಿಕವಾಗಿಯೇ ಜೀವಿಸುತ್ತಿದ್ದಾರೆ. ಹೀಗಾಗಿ ಭಾವನೆಗಳ ಜಾಗೃತಿಯಾಗಬೇಕು' ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಬೆಂಗಳೂರಿನ ಪದ್ಮನಾಭ ನಗರದಲ್ಲಿ ಗೋಸಂಧ್ಯಾ ಕಾರ್ಯಕ್ರಮದಲ್ಲಿ ಹೇಳಿದರು. ಗೋ ಸಂರಕ್ಷಣೆಯ ಮಹತ್ವದ ಬಗ್ಗೆ ಮಾತನಾಡಿದ ಅವರು ಗೋವುಗಳೆಂದರೆ ಕಾಮಧೇನು. ಎಲ್ಲರೂ ಗೋ ಸಂರಕ್ಷಣೆ ಮಾಡಬೇಕು. ಅದು ಶ್ರೇಷ್ಠ ಕಾರ್ಯ. ಕವಿಗಳು ಸಾಹಿತಿಗಳು ಕೂಡ ಗೋವುಗಳ ಮಹತ್ವದ ಬಗ್ಗೆ ಸಾಹಿತ್ಯ ರಚಿಸಬೇಕು ಎಂದು ಸಲಹೆ ಮಾಡಿದರು. ಹಿರಿಯ ಕವಿಗಳಾದ ಸುಮತೀಂದ್ರ ನಾಡಿಗ್ ಹಾಗೂ ಡಾ. ಎನ್. ಎಸ್. ಲಕ್ಷ್ಮಿನಾರಾಯಣ ಭಟ್ಟ, ಮಾಜಿ ಸಚಿವ ಆರ್. ಅಶೋಕ್ ಮಾತನಾಡಿದರು.
2007: ಮೈಸೂರು ನಗರದ ಬೆಮೆಲ್ ನಲ್ಲಿ ತಂತ್ರಜ್ಞರಾಗಿರುವ ರಾಜೀವ ಸರಳಾಯ ಅವರು ಕನ್ನಡದಲ್ಲೇ ಪರೀಕ್ಷೆ ಎದುರಿಸಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ಎಂ.ಬಿ.ಎ ಪದವಿ ಪಡೆದರು. ಕನ್ನಡದಲ್ಲೇ ಪರೀಕ್ಷೆ ಎದುರಿಸಲು ಅವರಿಗೆ ಅನುಮತಿ ನೀಡಲು ಮೂರು ವರ್ಷಗಳ ಹಿಂದೆ ಮುಕ್ತ ವಿಶ್ವವಿದ್ಯಾಲಯ ನಿರಾಕರಿಸಿತ್ತು. ನಂತರ ಕನ್ನಡ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕ ಸ.ರ.ಸುದರ್ಶನ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಎಂ.ಬಿ.ವಿಶ್ವನಾಥ್ ಮನವಿ ಮತ್ತು ಮಧ್ಯಪ್ರವೇಶದಿಂದ ಅನುಮತಿ ದೊರೆತಿತ್ತು. ಇಂಗ್ಲಿಷಿನ ಪಠ್ಯ ಸಾಮಗ್ರಿ-ಪ್ರಶ್ನೆಪತ್ರಿಕೆಗಳನ್ನು ತಾನೇ ಅನುವಾದ ಮಾಡಿಕೊಳ್ಳಬೇಕು ಎಂಬ ಷರತ್ತಿನೊಂದಿಗೆ ಮುಕ್ತ ವಿ.ವಿ ಅವರಿಗೆ ಕನ್ನಡದಲ್ಲಿ ಉತ್ತರ ಬರೆಯಲು ಅನುಮತಿ ನೀಡಿತ್ತು. `ಅದನ್ನು ಸವಾಲಾಗಿ ಸ್ವೀಕರಿಸಿದ ಸರಳಾಯ ಅವರು, ಶೇ. 60ರಷ್ಟು ಅಂಕಗಳನ್ನು ಪಡೆದು ಉತ್ತೀರ್ಣರಾದರು.
2007: ಅಮೆರಿಕದ ಮ್ಯಾರಥಾನ್ ಸ್ಪರ್ಧಿ ರಯಾನ್ ಶೇ (28) ಈದಿನ ನ್ಯೂಯಾರ್ಕಿನಲ್ಲಿ ಓಟದಲ್ಲಿ ನಿರತರಾಗಿದ್ದ ವೇಳೆ ಕುಸಿದು ಬಿದ್ದು ಮೃತರಾದರು. ಐದೂವರೆ ಮೈಲುಗಳಷ್ಟು ದೂರ ಕ್ರಮಿಸಿದಾಗ ಅವರು ಕುಸಿದು ಬಿದ್ದರು. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಜೀವ ಉಳಿಸಲು ಸಾಧ್ಯವಾಗಲಿಲ್ಲ. ರಯಾನ್ ಅವರು ವಿಶ್ವದ ವಿವಿಧ ಭಾಗಗಳಲ್ಲಿ ನಡೆದ ಐದು ಪ್ರಮುಖ ಮ್ಯಾರಥಾನ್ ಕೂಟಗಳಲ್ಲಿ ಪ್ರಶಸ್ತಿ ಜಯಿಸಿದ್ದರು.
2006: ದೆಹಲಿ ವಿಶ್ವವಿದ್ಯಾಲಯವು 60ರ ದಶಕದಲ್ಲಿ ತನ್ನಿಂದಲೇ ಪದವಿ ಪಡೆದಿದ್ದ ಅಮಿತಾಭ್ ಬಚ್ಚನ್ ಅವರಿಗೆ ಚಿತ್ರರಂಗಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಡಾಕ್ಟರೇಟ್ ಗೌರವವನ್ನು ನೀಡಿತು. ಖ್ಯಾತ ವಿಜ್ಞಾನಿ ಸಿ.ಎನ್. ಆರ್. ರಾವ್, ವ್ಯಂಗ್ಯ ಚಿತ್ರಕಾರ ಆರ್. ಕೆ. ಲಕ್ಷ್ಮಣ್, ದೆಹಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಅವರಿಗೂ ಈ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು.
2006: ಕೇವಲ ಏಳನೇ ತರಗತಿವರೆಗೆ ಓದಿದ ಬೆಂಗಳೂರಿನ ಯುವಕ ಕೆ. ಬಾಲಕೃಷ್ಣ ಅವರು ನಿಧಾನವಾಗಿ ಹರಿಯುವ ಕೊಳಚೆ ನೀರಿನಿಂದ ವಿದ್ಯುತ್ ತಯಾರಿಸಬಹುದಾದ `ಹೈಡ್ರೋ ಪವರ್ ಜನರೇಟಿಂಗ್ ಡಿವೈಸ್ ಬೈ ಸ್ಲೋ ಫ್ಲೋ ಆಫ್ ವಾಟರ್' ಎಂಬ ಯಂತ್ರ ತಯಾರಿಸಿರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ಪ್ರಕಟಿಸಿದರು. ಒಂದು ಯಂತ್ರದಿಂದ 10 ಕಿ.ವಿ. ವಿದ್ಯುತ್ ಉತ್ಪಾದಿಸಬಹುದು. ಬೆಂಗಳೂರಿನ ವಿವಿಧ ಭಾಗಗಳಲ್ಲಿ ಕೊಳಚೆ ನೀರಿಗೆ ಅಳವಡಿಸಿದರೆ ಒಟ್ಟು ಬೇಡಿಕೆಯ ಶೇಕಡಾ 25ರಷ್ಟು ವಿದ್ಯುತ್ ಉತ್ಪಾದಿಸಬಹುದು ಎಂಬುದು ಅವರ ಅಭಿಪ್ರಾಯ.
2005: `ಶಹನಾಯಿ ಮಾಂತ್ರಿಕ' ಬಿಸ್ಮಿಲ್ಲಾ ಖಾನ್ ಅವರಿಗೆ ಹೈದರಾಬಾದಿನಲ್ಲಿ ಆಂಧ್ರಪ್ರದೇಶ ಕಲಾ ವೇದಿಕೆ ಆಶ್ರಯದಲ್ಲಿ `ಭಾರತದ ಹೆಮ್ಮೆಯ ಪುತ್ರ' (ಪ್ರೈಡ್ ಆಫ್ ಇಂಡಿಯಾ) ಪ್ರಶಸ್ತಿಯನ್ನು ಮುಖ್ಯಮಂತ್ರಿ ರಾಜಶೇಖರ ರೆಡ್ಡಿ ಪ್ರದಾನ ಮಾಡಿದರು.
2001: ಜೆ.ಕೆ. ರೌಲಿಂಗ್ಸ್ ಅವರ ಪುಸ್ತಕ ಆಧಾರಿತ `ಹ್ಯಾರಿ ಪಾಟರ್ ಅಂಡ್ ದಿ ಫಿಲಾಸಫರ್ಸ್ ಸ್ಟೋನ್' ಚಲನಚಿತ್ರ ಲಂಡನ್ನಿನ ಲೀಸ್ಟರ್ ಚೌಕದ ಓಡಿಯಾನ್ ಥಿಯೇಟರಿನಲ್ಲಿ ಪ್ರದರ್ಶನಗೊಂಡಿತು.
1998: ಕಲ್ಕತ್ತಾದ (ಈಗಿನ ಕೋಲ್ಕತ್ತಾ) ಸಾಲ್ಟ್ ಲೇಕ್ ಸ್ಟೇಡಿಯಮ್ಮಿನಲ್ಲಿ ನಡೆದ 38ನೇ ಓಪನ್ ನ್ಯಾಷನಲ್ ಚಾಂಪಿಯನ್ ಶಿಪ್ ಕ್ರೀಡಾಕೂಟದಲ್ಲಿ 45.7 ಸೆಕೆಂಡುಗಳಲ್ಲಿ 400 ಮೀಟರ್ ಓಡುವ ಮೂಲಕ ಪಂಜಾಬ್ ಪೊಲೀಸ್ ಪರಮಜಿತ್ ಸಿಂಗ್ ಅವರು ಮಿಲ್ಕಾಸಿಂಗ್ ದಾಖಲೆಯನ್ನು ಮುರಿದರು. ಮಿಲ್ಖಾಸಿಂಗ್ 1960ರ ರೋಮ್ ಒಲಿಂಪಿಕ್ಸ್ ನಲ್ಲಿ 45.73 ಸೆಕೆಂಡುಗಳಲ್ಲಿ ಓಡಿ ಈ ದಾಖಲೆ ನಿರ್ಮಿಸಿದ್ದರು. ತಮ್ಮ ದಾಖಲೆಯನ್ನು ಮುರಿಯುವ ಯಾವನೇ ಭಾರತೀಯನಿಗೆ 2 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಮಿಲ್ಖಾ ಸಿಂಗ್ ಸವಾಲು ಹಾಕಿದ್ದರು. ಆದರೆ ಪರಮಜಿತ್ ಸಿಂಗ್ ಗೆ ಈ ಹಣ ನೀಡಲು ಮಿಲ್ಖಾಸಿಂಗ್ ನಿರಾಕರಿಸಿದರು. ತಮ್ಮ ಓಟದ ಎಲೆಕ್ಟ್ರಾನಿಕ್ ಅವಧಿ (45.73 ಸೆಕೆಂಡ್) ಅನಧಿಕೃತವಾಗಿದ್ದು, ಕೈಗಡಿಯಾರ ಪ್ರಕಾರ ತಾವು ಓಡಿದ್ದು 45.6 ಸೆಕೆಂಡಿನಲ್ಲಿ. ಈ ದಾಖಲೆಗಿಂತ ಪರಮಜಿತ್ ದಾಖಲೆ ಕೆಳಗಿದೆ ಎಂಬುದು ತಮ್ಮ ನಿರಾಕರಣೆಗೆ ಅವರು ನೀಡಿದ ಕಾರಣ. `ದಾಖಲೆ ವಿದೇಶಿ ನೆಲದಲ್ಲಿ ಆಗಬೇಕು' ಎಂಬ ಹೊಸ ಷರತ್ತನ್ನು ನಂತರ ಮಿಲ್ಖಾಸಿಂಗ್ ತಮ್ಮ ಸವಾಲಿಗೆ ಸೇರಿಸಿದರು.
1995: ಇಸ್ರೇಲಿ ಪ್ರಧಾನಿ ಯಿಟ್ಜ್ ಹಾಕ್ ರಾಬಿನ್ (73) ಅವರನ್ನು ಶಾಂತಿ ರ್ಯಾಲಿಯಲ್ಲಿ ಪಾಲ್ಗೊಂಡಿದ್ದಾಗ ಬಲಪಂಥೀಯ ಇಸ್ರೇಲಿಗಳು ಕೊಲೆಗೈದರು.
1945: ವಿಶ್ವಸಂಸ್ಥೆಯ ಅಂಗಸಂಸ್ಥೆಯಾದ ಯುನೆಸ್ಕೊವನ್ನು (ವಿಶ್ವಸಂಸ್ಥೆಯ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಸಂಘಟನ) ಸ್ಥಾಪಿಸಲಾಯಿತು. ಇದರ ಕೇಂದ್ರ ಕಚೇರಿ ಪ್ಯಾರಿಸ್ಸಿನಲ್ಲಿದೆ. ಪ್ರಸ್ತುತ 191 ದೇಶಗಳು ಇದರ ಸದಸ್ಯತ್ವ ಹೊಂದಿವೆ.
1936: ಮಾನವ ಕಂಪ್ಯೂಟರ್ ಎಂಬುದಾಗಿ ಹೆಸರು ಗಳಿಸಿರುವ ಬಾರತೀಯ ಗಣಿತ ತಜ್ಞೆ ಶಕುಂತಲಾ ದೇವಿ ಹುಟ್ಟಿದ ದಿನ. 1977 ರಲ್ಲಿ ಇವರು 201 ಅಂಕಿಗಳ 23 ನೇ ವರ್ಗಮೂಲವನ್ನು ಕೇವಲ 50 ಸೆಕೆಂಡುಗಳಲ್ಲಿ ಲೆಕ್ಕಹಾಕಿ ಹೇಳಿದರು. ಇದೇ ಲೆಕ್ಕವನ್ನು ಮಾಡಲು ಕಂಪ್ಯೂಟರ್ ಯುನಿವ್ಯಾಕ್ ಒಂದು ನಿಮಿಷಕ್ಕೂ ಹೆಚ್ಚು ಸಮಯವನ್ನು ತೆಗೆದುಕೊಂಡಿತು.
1934: ರಣಜಿ ಟ್ರೋಫಿಯ ಉದ್ಘಾಟನಾ ಪಂದ್ಯವು ಮದ್ರಾಸ್ ಮತ್ತು ಮೈಸೂರು ತಂಡಗಳ ಮಧ್ಯೆ ಮದ್ರಾಸಿನ ಚೀಪಾಕ್ ಸ್ಟೇಡಿಯಮ್ಮಿನಲ್ಲಿ ನಡೆಯಿತು. ಬಾಂಬೆಯಲ್ಲಿ (ಈಗಿನ ಮುಂಬೈ) 1935ರ ಮಾರ್ಚಿನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಉತ್ತರ ಭಾರತ ತಂಡವನ್ನು ಸೋಲಿಸಿ ಬಾಂಬೆ ತಂಡವು ಆ ವರ್ಷದ ರಣಜಿ ಟ್ರೋಫಿಯನ್ನು ಗೆದ್ದುಕೊಂಡಿತು. 67 ವರ್ಷಗಳಲ್ಲಿ ಬಾಂಬೆ ತಂಡವು 33 ಸಲ ರಣಜಿ ಟ್ರೋಫಿಯನ್ನು ಗೆದ್ದಿತು. ಅದರಲ್ಲಿ 1959ರಿಂದ 73ರವರೆಗೆ ಅದು ನಿರಂತರ ವಿಜಯ ಸಾಧಿಸಿತ್ತು.
1916: ಸಾಹಿತಿ ಕುಮಾರ ವೆಂಕಣ್ಣ ಜನನ.
1893: ಸಾಹಿತಿ ಪತ್ರಿಕೋದ್ಯಮಿ ರಾಜಕಾರಣಿ ಸೀತಾರಾಮ ಶಾಸ್ತ್ರಿ (4-11-1893ರಿಂದ 7-1-1971) ಅವರು ನಾಗೇಶ ಶಾಸ್ತ್ರಿ- ಪಾರ್ವತಮ್ಮ ದಂಪತಿಯ ಮಗನಾಗಿ ನಂಜನಗೂಡಿನಲ್ಲಿ ಜನಿಸಿದರು.
1889: ಭಾರತೀಯ ಸ್ವಾತಂತ್ರ್ಯ ಯೋಧ, ಕೈಗಾರಿಕೋದ್ಯಮಿ ಹಾಗೂ ದಾನಿ ಜಮ್ನಾಲಾಲ್ ಬಜಾಜ್ (1889-1942) ಜನ್ಮದಿನ.
1845: ಭಾರತೀಯ ಕ್ರಾಂತಿಕಾರಿ ಸ್ವಾತಂತ್ರ್ಯ ಯೋಧ ವಾಸುದೇವ ಬಲವಂತ ಫಡ್ಕೆ (1845-83) ಹುಟ್ಟಿದ ದಿನ. ಇವರು ತಮ್ಮ ಗೆರಿಲ್ಲಾ ಯುದ್ಧ ತಂತ್ರಗಳಿಂದ ಖ್ಯಾತಿ ಪಡೆದರು
No comments:
Post a Comment