ನಾನು ಮೆಚ್ಚಿದ ವಾಟ್ಸಪ್

Thursday, November 22, 2018

ಇಂದಿನ ಇತಿಹಾಸ History Today ನವೆಂಬರ್ 22

ಇಂದಿನ ಇತಿಹಾಸ History Today ನವೆಂಬರ್ 22

2018: ಮುಂಬೈ:ಕೊಟ್ಟ ವಚನ ಮರೆತಿದ್ದೀರಿ. ತತ್ ಕ್ಷಣ ಈಡೇರಿಸಲು ಕ್ರಮ ಕೈಗೊಳ್ಳಿ ಎಂಬುದಾಗಿ ದೇವೇಂದ್ರ ಫಡ್ನವಿಸ್ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನೆನಪಿಸಲು ೧೦,೦೦೦ಕ್ಕೂ ಹೆಚ್ಚು ರೈತರು ಪುಣೆಯಿಂದ ಮುಂಬೈಗೆ ೪೦ ಕಿಮೀ ದೂರವನ್ನು ಪಾದಯಾತ್ರೆ ಮೂಲಕ ಕ್ರಮಿಸಿ ಮುಂಬೈ ತಲುಪಿದರು. ಮುಂಬೈಯ ಆಜಾದ್ ಮೈದಾನ ತಲುಪಿದ ಬಳಿಕ ಪ್ರತಿಭಟನಕಾರ ರೈತರ ನಿಯೋಗವನೊಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿ ಮಾಡಿ ಸಾಲಮನ್ನಾ, ರೈತರು ಬುಡಕಟ್ಟು ಮಂದಿಗೆ ಭೂಮಿ ಹಕ್ಕು ನೀಡಿಕೆ, ಸ್ವಾಮಿನಾಥನ್ ಆಯೋಗದ ವರದಿ ಜಾರಿ ಸೇರಿದಂತೆ ತಮ್ಮ ಬೇಡಿಕೆಗಳನ್ನು ಈಡೇರಿಸುವುದಾಗಿ ಎಂಟು ತಿಂಗಳ ಹಿಂದೆ ಬಿಜೆಪಿ ಸರ್ಕಾರವು ಲಿಖಿತವಾಗಿ ಕೊಟ್ಟಿದ್ದ ಭರವಸೆಗಳನ್ನು ನೆನಪಿಸಿತು. ಪುಣೆಯಿಂದ ಮುಂಬೈಗೆ ಬೃಹತ್ ರೈತ ಪಾದಯಾತ್ರೆ ಸಂಘಟಿಸಿದ್ದ ಲೋಕಸಂಘರ್ಷ ಮೋರ್ಚಾ ನೇತೃತ್ವದ ನಿಯೋಗಕ್ಕೆ ರಾಜ್ಯದ ಜಲಸಂಪನ್ಮೂಲ ಸಚಿವ ಗಿರೀಶ್ ಮಹಾಜನ್ ಸಹಯೋಗ ನೀಡಿದರು. ನಿಯೋಗವು ವಿಧಾನಭವನದಲ್ಲಿ ಮುಖ್ಯಮಂತ್ರಿ ಫಢ್ನವಿಸ್ ಅವರನ್ನು ಭೇಟಿ ಮಾಡಿ ಬೇಡಿಕೆಗಳನ್ನು ಪುನರುಚ್ಚರಿಸಿತು. ಎಂ.ಎಸ್. ಸ್ವಾಮಿನಾಥನ್ ಆಯೋಗವು ರೈತರ ಬೆಳೆಗಳಿಗೆ ವೆಚ್ಚಕ್ಕಿಂತ ಶೇಕಡಾ ೫೦ಕ್ಕಿಂತ ಹೆಚ್ಚಿನ ಬೆಲೆ ನೀಡುವಂತೆ. ಬುಡಕಟ್ಟು ರೈತರಿಗೆ ಭೂಮಿಯ ಹಕ್ಕು ನೀಡುವಂತೆ ಮತ್ತು ರೈತ ಕಾರ್ಮಿಕರಿಗೆ ಪರಿಹಾರ ಒದಗಿಸುವಂತೆ ಮಾಡಿದ್ದ ಶಿಫಾರಸುಗಳನ್ನು ಈಡೇರಿಸುವುದಾಗಿ ಕಳೆದ ವರ್ಷ ನೀಡಿದ್ದ ಭರವಸೆಗಳು ಇನ್ನೂ ಅನುಷ್ಠಾನಗೊಂಡಿಲ್ಲ, ಅವುಗಳನ್ನು ತತ್ ಕ್ಷಣ ಅನುಷ್ಠಾನಗೊಳಿಸಬೇಕು ಎಂದು ರೈತರು ಆಗ್ರಹಿಸಿದರು. ಜೊತೆಗೆ ಬರಗಾಲದಿಂದ ಆಗಿರುವ ಹಾನಿಯನ್ನೂ ವಿವರಿಸಿದರು. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ರೈತರು ಮತ್ತು ಬುಡಕಟ್ಟು ಮಂದಿ ಇದೇ ರೀತಿ ಪುಣೆಯಿಂದ ರಾಜಧಾನಿಗೆ ೪೦ ಕಿಮೀ ಪಾದಯಾತ್ರೆ ಮಾಡಿದ್ದರು. ಆಗ ಫಡ್ನವಿಸ್ ಸರ್ಕಾರ ರೈತರ ಬಹುತೇಕ ಬೇಡಿಕೆಗಳ ಈಡೇರಿಕೆಯ ಭರವಸೆ ಕೊಟ್ಟಿತ್ತು.   ಬಾರಿ ಪ್ರತಿಯೊಬ್ಬ ಪ್ರತಿಭಟನಕಾರ ರೈತನೂ ಎರಡು ಕಿಲೋಗ್ರಾಂ ಅಕ್ಕಿ ಮತ್ತು ಒಂದು ಕಿಲೋಗ್ರಾಮ್ ಬೇಳೆಯನ್ನು ತಮ್ಮೊಂದಿಗೆ ಒಯ್ಯಲಿದ್ದು, ತಮ್ಮ ಬೇಡಿಕೆಗಳು ಈಡೇರಿರುವವರೆಗೂ ಮುಂಬೈಯಲ್ಲೇ ವಾಸ್ತವ್ಯ ಹೂಡುವರು ಎಂದು ಮೋರ್ಚಾ ಪ್ರಧಾನ ಕಾರ್ಯದಶಿ ಪ್ರತಿಭಾ ಶಿಂಧೆ ಬುಧವಾರ ಪ್ರಕಟಿಸಿದ್ದರು. ಪ್ರತಿಭಟನಾ ಸಭೆಗಳು, ರಾಜಕೀಯ ರ್ಯಾಲಿಗಳಿಗಾಗಿ ಖ್ಯಾತಿ ಪಡೆದಿರುವ ಆಜಾದ್ ಮೈದಾನದಲ್ಲಿ ಬೀಡು ಬಿಟ್ಟಿರುವ ಪ್ರತಿಭಟನಕಾರರು  ’ಮಹಾರಾಷ್ಟ್ರ ಸರ್ಕಾರವೇ ಎದ್ದೇಳು ಇತ್ಯಾದಿ ಘೋಷಣೆಗಳನ್ನು ಕೂಗಿದರು. ಲೋಕಸಂಘರ್ಷ ಮೋರ್ಚಾ ನೇತೃತ್ವದಲ್ಲಿ ಬುಧವಾರ ಪುಣೆಯಿಂದ ಪಾದಯಾತ್ರೆ ಹೊರಟ ಪ್ರತಿಭಟನಕಾರರು ಆಜಾದ್ ಮೈದಾನ ತಲುಪಲು ೧೩ ಗಂಟೆಗಳಿಗೂ ಹೆಚ್ಚು ಕಾಲ ಪಾದಯಾತ್ರೆ ಮಾಡಿದರು. ನಂದೂರ್ ಬಾರ್ ಜಿಲ್ಲೆಯ ೧೦೦ ವರ್ಷ ಮೀರಿದ ಅಜ್ಜಿ ಜಿಲಾಬಾಯಿ ಥಾಣೆಯಿಂದ ಆಜಾದ್ ಮೈದಾನದವರೆಗೂ ಪಾದಯಾತ್ರೆ ನಡೆಸಿದ್ದಾರೆ. ಆಜಾದ್ ಮೈದಾನದಲ್ಲಿ ವೇದಿಕೆ ಏರಿದ ಅವರು ಸರ್ಕಾರವನ್ನು ಟೀಕಿಸುವ ಹಾಡು ಹಾಡಿ, ಘೋಷಣೆಗಳನ್ನು ಕೂಗಿದರು. ಜಲಗಾಂವ್ ಸರ್ದಾರ್ ರಾಮಸಿಂಗ್ ಅವರು ಮುಂಬೈ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ,೪೦೦ ರೂಪಾಯಿ ಹೊಂದಿಸಿಕೊಳ್ಳಲು ತನ್ನ ಮೇಕೆಯನ್ನು ಮಾರಾಟ ಮಾಡಿರುವುದಾಗಿ ಹೇಳಿದರು. ’ನನ್ನ ಬಳಿ ಎಕರೆ ಜಮೀನು ಇತ್ತು. ಅದನ್ನು ಅರಣ್ಯ ಇಲಾಖೆಯವರು ವಶ ಪಡಿಸಿಕೊಂಡಿದ್ದಾರೆ. ನಾನೀಗ ಪ್ರತಿದಿನ ೧೫೦ ರೂಪಾಯಿ ಸಂಪಾದಿಸಲು ಬೇರೆಯವರ ಜಮೀನಿನಲ್ಲಿ ದುಡಿಯುತ್ತಿದ್ದೇನೆ ಎಂದು ರಾಮ್ ಸಿಂಗ್ ಹೇಳಿದರು. ಇಲ್ಲಿಗೆ ಬರಲು ನನ್ನ ಬಳಿ ಹಣ ಇರಲಿಲ್ಲ. ಆದ್ದರಿಂದ ನಾನು ನನ್ನ ಮೇಕೆಯನ್ನು ಮಾರಾಟ ಮಾಡಿ ಸ್ವಲ್ಪ ಹಣ ಹೊಂದಿಸಿಕೊಂಡಿದ್ದೇನೆ ಎಂದು ಅವರು ನುಡಿದರು. ಹಿಂದಿನ ರಾತ್ರಿ ಮುಳುಂದದಲ್ಲಿನ ಆನಂದನಗರ ಆಕ್ಟ್ರಾಯ್ ನಾಕಾದಲ್ಲಿ ರೈತರು ಜಮಾಯಿಸಿದ್ದರು. ಸುಮಾರು ೧೯ ಕಿಮೀ ಪಾದಯಾತ್ರೆಯ ಬಳಿಕ ಅವರು ಸಿಯೋನ್   ಸೋಮಯ್ಯ ಮೈದಾನದಲ್ಲಿ ಬೀಡು ಬಿಟ್ಟಿದ್ದರು. ರಾಜ್ಯ ಸರ್ಕಾರವು ಅವರಿಗಾಗಿ ಸಿಯೋನ್ ನಿಂದ ಮುಂದಕ್ಕೆ ಬರಲು ಬಸ್ಸುಗಳನ್ನು ಕಳುಹಿಸಲು ಮುಂದಾಯಿತು. ಆದರೆ ಕೊಡುಗೆಯನ್ನು ತಿರಸ್ಕರಿಸಿದ ರೈತರು ಪಾದಯಾತ್ರೆಯಲ್ಲೇ ಮುಂಬೈಗೆ ಬರುವುದಾಗಿ ತಿಳಿಸಿದರು. ರೈತರಲ್ಲದೆ, ಆಮ್ ಆದ್ಮಿ ಪಕ್ಷದ (ಆಪ್) ಬೆಂಬಲಿಗರು ಮತ್ತು ಮುಂಬೈಯ ಕೆಲವು ಸಾಮಾಜಿಕ ಗುಂಪುಗಳೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು. ರೈತ ಪಾದಯಾತ್ರೆ ಹಿನ್ನೆಲೆಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಮಾರ್ಗದ ಮೂಲದ ದಕ್ಷಿಣ ಮುಂಬೈ ಕಡೆಗೆ ಹೋಗುವ ತನ್ನ ಎಲ್ಲ ವಾಹನಗಳನ್ನು ಬೆಳಗ್ಗೆ ಗಂಟೆಯಿಂದಲೇ ಭೋಯಿವಾಡ ಮತ್ತು ಕೆಇಎಂ ಆಸ್ಪತ್ರೆ ಮಾರ್ಗಕ್ಕೆ ತಿರುಗಿಸಲಾಗಿದೆ ಎಂದು ಬೃಹನ್ಮುಂಬಯಿ ಎಲೆಕ್ಟ್ರಿಕ್ ಸಪ್ಲೈ ಮತ್ತು ಟ್ರಾನ್ಸ್ ಪೋರ್ಟ್ ಅಂಡರ್ ಟೇಕಿಂಗ್ (ಬೆಸ್ಟ್) ಅಧಿಕಾರಿಗಳು ಹೇಳಿದರುತಮ್ಮ ಹಕ್ಕುಗಳಿಗಾಗಿ ಒತ್ತಾಯಿಸಿ ರೈತರು ಬೃಹತ್ ಸಂಖ್ಯೆಯಲ್ಲಿ ರಾಜ್ಯ ರಾಜಧಾನಿಗೆ ಪಾದಯಾತ್ರೆ ನಡೆಸಿದ್ದು ಎಂಟು ತಿಂಗಳುಗಳ ಅವಧಿಯಲ್ಲಿ ಇದು ಎರಡನೇ ಬಾರಿ. ಎಡಪಕ್ಷಗಳಿಗೆ ಸೇರಿದ ಆಲ್ ಇಂಡಿಯಾ ಕಿಸಾನ್ ಸಭಾ (ಎಐಕೆಎಸ್) ನೇತೃತ್ವದಲ್ಲಿ ೩೫,೦೦೦ಕ್ಕೂ ಹಎಚ್ಚು ರೈತರು ಮಾರ್ಚ್ ೧೨ರಂದು ತಮ್ಮ ಬೇಡಿಕೆಗಳನ್ನು ಒತ್ತಾಯಿಸಿ ನಾಸಿಕ್ ನಿಂದ ಮುಂಬೈಗೆ ಬೃಹತ್ ಪಾದಯಾತ್ರೆ ನಡೆಸಿದ್ದರು. ೧೮೦ ಕಿಮೀ ದೂರದ ಯಾತ್ರೆಯು ಹಲವಾರು ದಿನಗಳ ಬಳಿಕ ಮಾರ್ಚ್ ೧೧ರಂದು ಮುಂಬೈ  ತಲುಪಿತ್ತು.ಭಾರತೀಯ ಜನತಾ ಪಕ್ಷ ನೇತೃತ್ವದ ಸರ್ಕಾರವು ರೈತರ ಬಹುತೇಕ ಎಲ್ಲ ಬೇಡಿಕೆಗಳನ್ನೂ ಕಾಲಮಿತಿಯಲ್ಲಿ ಈಡೇರಿಸುವುದಾಗಿ ಭರವಸೆ ಕೊಟ್ಟದ್ದನ್ನು ಅನುಸರಿಸಿ ರೈತರು ತಮ್ಮ ಚಳವಳಿಯನ್ನು ಹಿಂತೆಗೆದುಕೊಂಡಿದ್ದರು. ಆದರೆ ಅಂದಿನಿಂದ ಇಂದಿನವರೆಗೂ ಸರ್ಕಾರ ತಮ್ಮ ಯಾವ ಬೇಡಿಕೆಯನ್ನು ಈಡೇರಿಸಿಲ್ಲ ಎಂದು ರೈತರು ಆಪಾದಿಸಿದರು.

2018: ನವದೆಹಲಿ: ಪಾಕಿಸ್ತಾನದ ರಾವಿ ನದಿ ದಂಡೆಯಲ್ಲಿನ ಕರ್ತಾರಪುರ ಗುರುದ್ವಾರ ದರ್ಬಾರ್ ಸಂದರ್ಶಿಸುವ ಭಾರತೀಯ ಯಾತ್ರಿಕರಿಗೆ ಅನುಕೂಲವಾಗುವಂತೆ ಪಂಜಾಬಿನ ಗುರುದಾಸಪುರ ಜಿಲ್ಲೆಯ ಡೇರಾ ಬಾಬಾ ನಾನಕ್ನಿಂದ ಅಂತಾರಾಷ್ಟ್ರೀಯ ಗಡಿಯವರೆಗೆ ಕಾರಿಡಾರ್ ನಿರ್ಮಾಣ ಮಾಡಲು ಕೇಂದ್ರ ಸಚಿವ ಸಂಪುಟವು ಒಪ್ಪಿಗೆ ನೀಡಿತು. ಸಿಖ್ ಪಂಥದ ಸ್ಥಾಪಕ ಗುರುನಾನಕ್ ದೇವ್ ಅವರು ಪಾಕಿಸ್ತಾನದಲ್ಲಿನ ಗುರುದ್ವಾರದಲ್ಲಿ ೧೮ ವರ್ಷಗಳನ್ನು ಕಳೆದಿದ್ದರು. ಅಂತಾರಾಷ್ಟ್ರೀಯ ಗಡಿಯಿಂದ ಆಚೆ ಪಾಕಿಸ್ತಾನದ ಕಡೆಯಲ್ಲಿ ಕಾರಿಡಾರ್ ನಿರ್ಮಿಸುವಂತೆ ಪಾಕಿಸ್ತಾನವನ್ನು ಒತ್ತಾಯಿಸುವ ಪತ್ರವನ್ನು ಕಳುಹಿಸಲೂ ಸಂಪುಟ ಸಮ್ಮತಿಸಿತು.  ಕೆಲವೇ ತಿಂಗಳುಗಳ ಹಿಂದೆ ಪಾಕಿಸ್ತಾನಿ ಸೇನಾ ಮುಖ್ಯಸ್ಥ ಜನರಲ್ ಖಮರ್ ಬಜ್ವಾ ಅವರು ಪಂಜಾಬ್ ಸಚಿವ ನವಜೋತ್ ಸಿಂಗ್ ಸಿಧು ಅವರ ಮೂಲಕ ಕಳುಹಿಸಿದ್ದ ಅನೌಪಚಾರಿಕ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಲು ಕೇಂದ್ರ ಸರ್ಕಾರ ನಿರಾಕರಿಸಿತ್ತು. ಸಿಧು ಅವರು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ತೆರಳಿದ್ದ ವೇಳೆಯಲ್ಲಿ ಬಜ್ವಾ ಅವರು ಅನೌಪಚಾರಿಕ ಪ್ರಸ್ತಾವ ಮಾಡಿದ್ದರು. ಇಸ್ಲಾಮಾಬಾದಿನಲ್ಲಿನ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಕಳುಹಿಸಿದ ಪತ್ರದಲ್ಲಿ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಗುರುದಾಸಪುರದ  ಡೇರಾ ಬಾಬಾ ನಾನಕ್ನಿಂದ ಅಂತಾರಾಷ್ಟ್ರೀಯ ಗಡಿಯವರೆಗೆ ಕಾರಿಡಾರ್ ನಿರ್ಮಿಸಲು ತಾನು ನಿರ್ಧರಿಸಿರುವುದಾಗಿ ತಿಳಿಸಿದೆ ಮತ್ತು ತನ್ನ ಕಡೆಯಲ್ಲಿ ಕಾರಿಡಾರ್ ನಿರ್ಮಿಸುವಂತೆ ಪಾಕಿಸ್ತಾನಕ್ಕೆ ಮನವಿ ಮಾಡಿತು.  ‘ಸೂಕ್ತ ಸವಲತ್ತು ಸಹಿತವಾದ ಕಾರಿಡಾರ್ ಅಭಿವೃದ್ಧಿ ಪಡಿಸುವ ಮೂಲಕ ಸಿಖ್ ಸಮುದಾಯದ ಭಾವನೆಗಳನ್ನು ಮಾನ್ಯ ಮಾಡುವಂತೆ ಭಾರತ ಸರ್ಕಾರವು ಪಾಕಿಸ್ತಾನಿ ಸರ್ಕಾರವನ್ನು ಒತ್ತಾಯಿಸುತ್ತದೆ ಎಂದು ಪತ್ರ ತಿಳಿಸಿದೆ.
೨೦೧೯ರಲ್ಲಿ ಗುರು ನಾನಕ್ ದೇವ್ ಜಿ ಅವರ ೫೫೦ನೇ ಜನ್ಮದಿನಾಚರಣೆಯನ್ನು ಆಚರಿಸುವ ನಿರ್ಣಯವನ್ನೂ ಕೇಂದ್ರ ಸಂಪುಟವು ಅಂಗೀಕರಿಸಿತು.  ‘ಇದರಿಂದ ಯಾತ್ರಿಕರಿಗೆ ವರ್ಷಪೂರ್ತಿ ಪವಿತ್ರ ಮಂದಿರವನ್ನು ಸಂದರ್ಶಿಸಲು ಸಾಧ್ಯವಾಗುವುದು. ಕರ್ತಾರಪುರ ಕಾರಿಡಾರ್ ಯೋಜನೆಯನ್ನು ಸಮಗ್ರ ಅಭಿವೃದ್ಧಿ ಯೋಜನೆಯಾಗಿ ಕೇಂದ್ರ ಸರ್ಕಾರದ ನಿಧಿ ನೆರವಿನಿಂದ ಅನುಷ್ಠಾನಗೊಳಿಸಲಾಗುವುದು. ಕಾರಿಡಾರಿನಲ್ಲಿ ಎಲ್ಲ ಅತ್ಯಾಧುನಿಕ ಸವಲತ್ತುಗಳನ್ನೂ ಒದಗಿಸಲಾಗುವುದು. ಭಾರತ ಸರ್ಕಾರವು ಯಾತ್ರಾರ್ಥಿಗಳಿಗಾಗಿ ಎಲ್ಲ ಸವಲತ್ತುಗಳನ್ನೂ ಕಲ್ಪಿಸುವುದು. ಪಾಕಿಸಾನ ಸರ್ಕಾರವು ಸಿಖ್ ಸಮುದಾಯದ ಭಾವನೆಗಳನ್ನು ಮನ್ನಿಸಿ ತಮ್ಮ ನೆಲದಲ್ಲಿ ಸೂಕ್ತ ಸವಲತ್ತುಗಳನ್ನು ಒಳಗೊಂಡ ಕಾರಿಡಾರ್ ನಿರ್ಮಿಸುವಂತೆ ಭಾರತವು ಒತ್ತಾಯಿಸುವುದು ಎಂದು ಸರ್ಕಾರಿ ಅಧಿಕಾರಿಯೊಬ್ಬರು ತಿಳಿಸಿದರುಪಾಕ್ ವೀಸಾ ವಿತರಣೆ: ಲಾಹೋರ್ ಸಮೀಪದ ನಂಕಾನಾ ಸಾಹಿಬ್ನಲ್ಲಿ ನವೆಂಬರ್ ೨೧ರಿಂದ ೩೦ರವರೆಗೆ ನಡೆಯುವ ಗುರುನಾನಕ್ ಅವರ ೫೪೯ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಭಾರತೀಯ ಯಾತ್ರಿಕರಿಗೆ ,೮೦೦ ಕ್ಕೂ ಹೆಚ್ಚಿನ ವೀಸಾಗಳನ್ನು ಪಾಕಿಸ್ತಾನವು ವಿತರಿಸಿತ್ತು.  ಇತ್ತೀಚಿನ ವರ್ಷಗಳಲ್ಲಿ ಸಿಖ್ ಯಾತ್ರಿಕರಿಗೆ ವಿತರಿಸಲಾಗಿರುವ ಅತ್ಯಂತ ಹೆಚ್ಚಿನ ಸಂಖ್ಯೆಯ ವೀಸಾ ಇದು ಎಂದು ಪಾಕಿಸ್ತಾನ ಹೈ ಕಮೀಷನ್ ಪತ್ರಿಕಾ ಹೇಳಿಕೆಯೊಂದರಲ್ಲಿ ತಿಳಿಸಿತ್ತು. ಸಿಖ್ ಪಂಥದ ಸ್ಥಾಪಕ ಗುರುನಾನಕ್ ಅವರಿಗೆ ಸಂಬಂಧಿಸಿದ ಪಾಕಿಸ್ತಾನದಲ್ಲಿನ ಸಿಖ್ ಪವಿತ್ರ ತಾಣಗಳಿಗೆ ಭೇಟಿ ನೀಡಬಯಸುವ ಸಿಖ್ ಯಾತ್ರಿಕರಿಗೆ ಇದು ಪಾಕಿಸ್ತಾನದ ವಿಶೇಷ ಕೊಡುU’ ಎಂದು ಹೈಕಮೀಷನರ್ ಸೊಹೈಲ್ ಮಹಮೂದ್ ಹೇಳಿದ್ದರು. ಪವಿತ್ರ ಸಂದರ್ಭವನ್ನು ಆಚರಿಸಬಯಸುವ ನಮ್ಮ ಸಹೋದರರು ಮತ್ತು ಸಹೋದರಿಯರಿಗೆ ನಾವು ವಿಶೇಷ ವ್ಯವಸ್ಥೆಗಳನ್ನು ಮಾಡುತ್ತೇವೆ. ಮತ್ತು ಎಲ್ಲ ಯಾತ್ರಿಗಳಿಗೆ ಯಾತ್ರೆ ಫಲಪ್ರದವಾಗಲೆಂದು ಹಾರೈಸುತ್ತೇವೆ ಎಂದು ಮಹಮೂದ್ ಹೇಳಿಕೆಯಲ್ಲಿ ತಿಳಿಸಿದ್ದರು. ವಿಶ್ವದ ಇತರ ಕಡೆಗಳಿಂದ ಬರುವ ಸಿಖ್ ಯಾತ್ರಿಕರಿಗೂ ಪಾಕಿಸ್ತಾನ ವೀಸಾ ವಿತರಿಸಿದೆ ಎಂದು ಹೈಕಮೀಷನ್ ಹೇಳಿತ್ತುಇದಕ್ಕೆ ಮುನ್ನ ಜೂನ್ ತಿಂಗಳಲ್ಲಿ, ಭಾರತೀಯ ಹೈ ಕಮೀಷನರ್ ಅಜಯ್ ಬಿಸಾರಿಯಾ ಅವರನ್ನು ಇಸ್ಲಾಮಾಬಾದ್ ಸಮೀಪದ ಗುರುದ್ವಾರ ಪಂಜಾ ಸಾಹಿಬ್ ಪ್ರವೇಶಿಸದಂತೆ ತಡೆದದ್ದು ವಿವಾದವಾಗಿತ್ತು. ಏನಿದ್ದರೂ, ಪವಿತ್ರ ಧಾರ್ಮಿಕ ಸ್ಥಳಗಳ ಸಂರಕ್ಷಣೆ ಮತ್ತು ಅಂತಹ ಸ್ಥಳಗಳಿಗೆ ಭೇಟಿ ನೀಡುವ ಎಲ್ಲ ಯಾತ್ರಿಗಳಿಗೂ ಸಾಧ್ಯವಿರುವ ಎಲ್ಲ ಸವಲತ್ತುಗಳನ್ನೂ ಒದಗಿಸಲು ತಾನು ಬದ್ಧವಾಗಿರುವುದಾಗಿ ಪಾಕಿಸ್ತಾನ ಹೇಳಿತ್ತು.


2018: ನವದೆಹಲಿ: ಮುಂದಿನ ಲೋಕಸಭಾ ಚುನಾವಣೆಗೆ ಇವಿಎಂ ಬದಲು ಬ್ಯಾಲೆಟ್ ಬಾಕ್ಸ್ ಬಳಸಲು ಆದೇಶ ನೀಡಬೇಕೆಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾ ಸಕ್ತಿ ಅರ್ಜಿ(ಪಿಐಎಲ್) ಅನ್ನು ಸುಪ್ರೀಂ ಕೋರ್ಟ್ ವಜಾ ಗೊಳಿಸಿತು.  ಟಿಎಂಸಿ ನಾಯಕಿ ಮಹಿಯಾ ಮೈತ್ರ ಅವರು ವಿಧಾನಸಭಾ ಚುನಾವಣೆ ಮತ್ತು ಲೋಕಸಭಾ ಚುನಾ ವಣೆಯನ್ನು ಬ್ಯಾಲೆಟ್ ಪೇಪರ್ ನಲ್ಲಿ ನಡೆಸಲು ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಪಿಐಎಲ್ ಸಲ್ಲಿಸಿ ಮನವಿ ಮಾಡಿಕೊಂಡಿದ್ದರು


2017: ನವದೆಹಲಿ: ಅತ್ಯಾಧುನಿಕ ಸೂಪರ್ ಸಾನಿಕ್ (ಶಬ್ದಾತೀತ) ಬ್ರಹ್ಮೋಸ್ ಕ್ಷಿಪಣಿಯನ್ನು ಪ್ರಪ್ರಥಮ ಬಾರಿಗೆ ಯಶಸ್ವಿಯಾಗಿ ಪರೀಕ್ಷಿಸುವ ಮೂಲಕ ಭಾರತ ಇತಿಹಾಸ ಸೃಷ್ಟಿಸಿತು. ಭಾರತೀಯ ವಾಯುಪಡೆಯ ಯುದ್ಧವಿಮಾನ ಸುಖೋಯ್ ೩೦ ಎಂಕೆಐ ಮೂಲಕ ಕ್ಷಿಪಣಿಯನ್ನು ಉಡಾಯಿಸಿ ಪರೀಕ್ಷಾ ಪ್ರಯೋಗ ನಡೆಸಲಾಯಿತು. ಯುದ್ಧ ವಿಮಾನದ ಮೂಲಕ ನಡೆಸಿದ ಪರೀಕ್ಷೆಯಲ್ಲಿ ಬ್ರಹ್ಮೋಸ್ ಕ್ಷಿಪಣಿಯು (ಸೂಪರ್ ಸಾನಿಕ್ ಕ್ರೂಸ್ ಮಿಸೈಲ್) ಬಂಗಾಳ ಕೊಲ್ಲಿಯಲ್ಲಿ ನಿಗದಿ ಪಡಿಸಿದ್ದ ಗುರಿಯತ್ತ ಯಶಸ್ವಿಯಾಗಿ ನುಗ್ಗಿತು. ಮೂಲಕ ಭಾರತ ಹೊಸ ದಾಖಲೆಯನ್ನು ನಿರ್ಮಿಸಿತು. ಸುಖೋಯ್ ೩೦ ಎಂಕೆಐ ಯುದ್ಧ ವಿಮಾನದ ಮೂಲಕ . ಟನ್ ತೂಕದ ಬ್ರಹ್ಮೋಸ್ ಕ್ಷಿಪಣಿ ಉಡಾವಣೆ ಯಶಸ್ವಿನಿಂದ ವಾಯುಪಡೆ ಸಾಮರ್ಥ್ಯ ಹೆಚ್ಚಿಸಿದಂತಾಗಿದೆ ಎಂದು ರಕ್ಷಣಾ ಸಚಿವಾಲಯ ಹೇಳಿತು. ಕ್ಷಿಪಣಿ ಹೊತ್ತೊಯ್ಯಲು ಸಹಕಾರಿಯಾಗುವಂತೆ ಎಚ್ಎಎಲ್ ಸುಖೋಯ್ ೩೦ಎಂಕೆಐ ಯುದ್ಧವಿಮಾನದಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಲಾಗಿತ್ತು. ಗಂಟೆಗೆ ,೪೦೦-,೭೦೦ ಕಿ.ಮೀ. ವೇಗದಲ್ಲಿ ಸಾಗುವ ಸಾಮರ್ಥ್ಯ ಹೊಂದಿರುವ ಬ್ರಹ್ಮೋಸ್ ಜಗತ್ತಿನ ಅತಿ ವೇಗದ ಕ್ಷಿಪಣಿ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಭಾರತದ ಡಿಆರ್ಡಿಒ ಮತ್ತು ರಷ್ಯಾದ ಎನ್ಪಿಒಎಂ ಜತೆಗೂಡಿ ಕ್ಷಿಪಣಿಯನ್ನು ಅಭಿವೃದ್ಧಿ ಪಡಿಸಿವೆ. ಭಾರತ ಮತ್ತು ರಷ್ಯಾದ ಜಂಟಿ ಸಾಹಸದಿಂದ ಬ್ರಹ್ಮೋಸ್ ಕ್ಷಿಪಣಿ ಹೊಸ ರೂಪ ಪಡೆದುಕೊಂಡು ಭೀಮಬಲವನ್ನು ಪಡೆದುಕೊಂಡಿದ್ದು, ನೆಲ, ಜಲ ಹಾಗೂ ವಾಯು ಮಾರ್ಗದ ಮೂಲಕ ಇದನ್ನು ಉಡಾವಣೆ ಮಾಡಬಹುದು. ಸುಖೋಯ್ ಯುದ್ಧ ವಿಮಾನದ ಮೂಲಕ ಆಗಸಕ್ಕೆ ಒಯ್ಯಲ್ಪಡುವ ಸೂಪರ್ರ್ಸಾನಿಕ್ ಕ್ರೂಸ್ ಬ್ರಹ್ಮೋಸ್ ಕ್ಷಿಪಣಿಯ ಇಂದಿನ ಯಶಸ್ವೀ ಪ್ರಾಯೋಗಿಕ ಚೊಚ್ಚಲ ಪರೀಕ್ಷೆಯಿಂದಾಗಿ ಭಾರತೀಯ ವಾಯು ಪಡೆಯ ಯುದ್ಧ ಸಾಮರ್ಥಯಕ್ಕೆ ಹೊಸ ಆಯಾಮ ಲಭಿಸಿದೆ. . ಟನ್ ತೂಕ ಹೊಂದಿರುವ ಬ್ರಹ್ಮೋಸ್ ಎಎಲ್ಸಿಎಂ ಕ್ಷಿಪಣಿಯು ಭಾರತದ ಎಸ್ಯು೩- ಫೈಟರ್ ಜೆಟ್ ಮೂಲಕ ನಿಯೋಜಿಸಲ್ಪಡುವ ಅತ್ಯಂತ ಭಾರದ ಶಸ್ತ್ರ. ಘನ ಶಸ್ತ್ರಾಸ್ತ್ರಗಳನ್ನು ಒಯ್ಯುವುದಕ್ಕೆ ಅನುಕೂಲವಾಗುವಂತೆ ಎಚ್ಎಎಲ್ ಇದನ್ನು ವಿನ್ಯಾಸಗೊಳಿಸಿ ಅಭಿವೃದ್ಧಿಪಡಿಸಿದೆ.  ಸರ್ಜಿಕಲ್ ದಾಳಿಗೆ ಪ್ರಶಸ್ತ: ,೨೦೦ ಕಿ.ಮೀ ದೂರದ ಗುರಿಯತ್ತ ಉಡಾಯಿಸಬಲ್ಲ ಕ್ಷಿಪಣಿಯನ್ನು ಸುಖೋಯ್ ೩೦ಎಂಕೆಐಗೆ ಜೋಡಿಸಿರುವುದರಿಂದ ಸರ್ಜಿಕಲ್ ದಾಳಿಗೆ ಮತ್ತೊಂದು ಹೊಸ ಅಸ್ತ್ರ ಸಿಕ್ಕಿದಂತಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಜಗತ್ತಿನ ಅತಿವೇಗದ ಕ್ಷಿಪಣಿಗಳಲ್ಲಿ ಒಂದೆನಿಸಿರುವ ತೆಳ್ಳನೆಯ ಬ್ರಹ್ಮೋಸ್ ಸೂಪರ್ಸಾನಿಕ್ ಕ್ರೂಸ್  ಕ್ಷಿಪಣಿ ಶಬ್ದದ ವೇಗಕ್ಕಿಂತಲೂ ಪಟ್ಟು ಹೆಚ್ಚು ವೇಗದಲ್ಲಿ ಚಲಿಸುತ್ತದೆ.

2017:  ಲಾಹೋರ್ : ೨೦೧೭ರ ಜನವರಿಯಿಂದ ಗೃಹ ಬಂಧನದಲ್ಲಿರುವ ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರ ನಿಷೇಧಿತ ಜಮಾತ್ ಉದ್ ದವಾ (ಜೆಯುಡಿ) ಉಗ್ರ  ಸಂಘಟನೆಯ ಮುಖ್ಯಸ್ಥ, ಹಫೀಜ್ ಸಯೀದನನ್ನು ಬಿಡುಗಡೆ ಮಾಡುವಂತೆ ಪಾಕ್ ಪಂಜಾಬ್ ಪ್ರಾಂತ್ಯದ ನ್ಯಾಯಾಂಗ ಪರಾಮರ್ಶೆ ಮಂಡಳಿ ಆಜ್ಞಾಪಿಸಿತು. ಸಯೀದ್ ಗೃಹ ಬಂಧನವನ್ನು ಇನ್ನೂ ಮೂರು ತಿಂಗಳು ವಿಸ್ತರಿಸುವಂತೆ ಪಾಕ್ ಸರ್ಕಾರ ಮಾಡಿದ್ದ ಮನವಿಯನ್ನು ತಿರಸ್ಕರಿಸಿದ ಮಂಡಳಿ  ಆತನ ಬಿಡುಗಡೆಗೆ ಆದೇಶ ಮಾಡಿತು.
"ಹಫೀಜ್ ಸಯೀದ್ ಬೇರೆ ಯಾವುದೇ ಪ್ರಕರಣದಲ್ಲಿ  ಬೇಕಾಗಿಲ್ಲ ಎಂದಾದರೆ ಆತನನ್ನು ಗೃಹಬಂಧನದಿಂದ ಬಿಡುಗಡೆ ಮಾಡಬೇಕು ಎಂದು ಮಂಡಳಿಯು ಸರಕಾರಕ್ಕೆ ನಿರ್ದೇಶಿಸಿತು. ಕಳೆದ ತಿಂUಳು ಸಯೀದ್ ಗೃಹಬಂಧನವನ್ನು ಇನ್ನೂ ೩೦ ದಿನ ವಿಸ್ತರಿಸಬೇಕೆಂಬುದಾಗಿ ಸರ್ಕಾರ ಮಾಡಿದ್ದ  ಮನವಿಯನ್ನು ಮಂಡಳಿ ಕಳೆದ ತಿಂಗಳು ಪುರಸ್ಕರಿಸಿತ್ತು. ಮೂವತ್ತು ದಿನಗಳ ಅವಧಿ ಮುಂದಿನವಾರ ಮುಕ್ತಾಯಗೊಳ್ಳಲಿತ್ತು.
೧೯೯೭ರ ಉಗ್ರ ನಿಗ್ರಹ ಕಾಯ್ದೆ ಮತ್ತು ಕಾಯ್ದೆಯ ೪ನೇ ಷೆಡ್ಯೂಲು ಪ್ರಕಾರ ವರ್ಷ ಜನವರಿ ೩೧ರಂದು ಸಯೀದ್ ಮತ್ತು ಆತನ ನಾಲ್ವರು ಸಹಚರರಾದ ಅಬ್ದುಲ್ಲಾ ಉಬೇದ್, ಮಲಿಕ್ ಜಾಫರ್ ಇಕ್ಬಾಲ್, ಅಬ್ದುಲ್ ರೆಹಮಾನ್ ಮತ್ತು ಕಾಜಿ ಕಾಶಿಫ್ ಹುಸೇನ್ ಅವರನ್ನು ಪಂಜಾಮ್ ಸರಕಾರ ೯೦ ದಿನಗಳ ಅವಧಿಗೆ ಬಂಧಿಸಿತ್ತು. ಸಯೀದ್ನ ನಾಲ್ವರು ಸಹಚರರನ್ನು ಕಳೆದ ಅಕ್ಟೋಬರ್ ಅಂತ್ಯಕ್ಕೆ ಬಿಡುಗಡೆ ಮಾಡಲಾಗಿತ್ತು. ಅಮೆರಿಕ ಸರ್ಕಾರ ಉಗ್ರ ಸಯೀದ್ ತಲೆಗೆ ೧೦ ದಶಲಕ್ಷ ಡಾಲರ್ ಬಹುಮಾನ ಘೋಷಿಸಿತ್ತು. ಸಯೀದ್ ನೇತೃತ್ವದ ಜೆಯುಡಿ ಉಗ್ರ ಸಂಘಟನೆಗೆ ಸೇರಿದ ಲಷ್ಕರ್ ತೊಯಿಬಾ ಭಯೋತ್ಪಾದಕ  ಸಂಘಟನೆಯ ಮುಂಚೂಣಿ ಸಂಘಟನೆಯಾಗಿದ್ದು ಸಂಘಟನೆಯೇ ೨೦೦೮ರಲ್ಲಿ  ಮುಂಬೈ ಮೇಲೆ ಭಯೋತ್ಪಾದಕ ದಾಳಿ ನಡೆಸಿತ್ತು. ದಾಳಿಯಲ್ಲಿ ೧೬೬ ಮಂದಿ ಅಸು ನೀಗಿದ್ದರು. ಮುಂಬೈ ಭಯೋತ್ಪಾದಕ ದಾಳಿ ನಡೆದಿದ್ದ ನವೆಂಬರ್ ೨೩ನೇ ದಿನಾಂಕಕ್ಕಿಂತ ಒಂದು ದಿನ ಮೊದಲೇ ಸಯೀದ್ಗೆ ಗೃಹ ಬಂಧನದಿಂದಲೂ ಬಂಧಮುಕ್ತಿ ಆದೇಶ ಲಭಿಸಿತು. ಮಾಧ್ಯಮಗಳ ಜೊತೆ ಮಾತನಾಡಿದ ಸಯೀದ್ ವಕೀಲ .ಕೆ. ಡೊಗರ್ ಅವರು ಸಯೀದ್ ತಪ್ಪಿತಸ್ಥನಾಗಿದ್ದರೆ ಆತನನ್ನು ಶಿಕ್ಷಿಸಬೇಕು. ಆದರೆ ಆತ ತಪ್ಪಿತಸ್ಥ ಎಂಬುದಾಗಿ ಘೋಷಿಸಲು ಯಾವುದೇ ಸಾಕ್ಷ್ಯಾಧಾರವೂ ಇಲ್ಲ. ನ್ಯಾಯಾಲಯವು ಆತ ತಪ್ಪಿತಸ್ಥ ಎಂದು ಘೋಷಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು. ನ್ಯಾಯಾಲಯದ ಮೂವರು ನ್ಯಾಯಾಧೀಶರು ಸಯೀದ್ ತಪ್ಪಿತಸ್ಥ ಎಂಬುದಾಗಿ ತೋರಿಸುವಂತಹ ಸಾಕ್ಷ್ಯಾಧಾರ ನೀಡಲು ಎರಡು ದಿನಗಳ ಕಾಲಾವಕಾಶ ನೀಡಿದ್ದರು. ಸರ್ಕಾರ ಯಾವುದೇ ಸಾಕ್ಷ್ಯಾಧಾರ ನೀಡಲು ವಿಫಲವಾದಾಗ ನ್ಯಾಯಾಲಯ ಆತನನ್ನು ಸಾಕ್ಷ್ಯಾಧಾರಗಳಿಲ್ಲದೆ ಆತನನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿತು ಎಂದು ಡೊಗರ್ ಹೇಳಿದರು. ಸಯೀದ್ ಬಿಡುಗಡೆಯಿಂದ ರಾಷ್ಟ್ರವು ಅಂತಾರಾಷ್ಟ್ರೀಯ ದಿಗ್ಬಂಧನ ಎದುರಿಸಬೇಕಾದ ಪರಿಸ್ಥಿತಿ ಉದ್ಭವಿಸಬಹುದು ಎಂದು ಪಂಜಾಬ್ ಗೃಹ ಇಲಾಖಾ ಅಧಿಕಾರಿಯೊಬ್ಬರು ಮಂಡಳಿ ಮುಂದೆ ಅಹವಾಲು ಮಂಡಿಸಿದ್ದರು.

2017: ನವದೆಹಲಿ: ಸುಪ್ರೀಂಕೋರ್ಟ್ ಮತ್ತು ೨೪ ಹೈಕೋರ್ಟ್ಗಳ ನ್ಯಾಯಮೂರ್ತಿಗಳು ಶೀಘ್ರದಲ್ಲೇ ಹೆಚ್ಚಿನ ವೇತನ ಪಡೆಯಲಿದ್ದಾರೆ. ನ್ಯಾಯಮೂರ್ತಿಗಳ ವೇತನ ಹೆಚ್ಚಳ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಇಲ್ಲಿ ತಿಳಿಸಿದರು. ನ್ಯಾಯಮೂರ್ತಿಗಳ ವೇತನ ಹೆಚ್ಚಳಕ್ಕೆ ಸಂಬಂಧಿಸಿದ ಎರಡು ಮಸೂದೆಗಳನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಅವರು ನುಡಿದರು. ಕೇಂದ್ರ ಸಚಿವ ಸಂಪುಟವು ಈದಿನ ಅನುಮೋದನೆ ನೀಡಿದ ಪ್ರಸ್ತಾವದ ಪ್ರಕಾರ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಮಾಸಿಕ .೮೦ ಲಕ್ಷ ರೂಪಾಯಿ ಮತ್ತು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಮಾಸಿಕ ತಲಾ .೫೦ ಲಕ್ಷ ರೂಪಾಯಿ ವೇತನ ಪಡೆಯಲಿದ್ದಾರೆ. ಹೈಕೋರ್ಟ್ ನ್ಯಾಯಮೂರ್ತಿಗಳು ಮಾಸಿಕ .೨೫ ಲಕ್ಷ ರೂಪಾಯಿ ವೇತನ ಪಡೆಯುವರು.  ಪರಿಷ್ಕೃತ ವೇತನ ಮತ್ತು ನಿವೃತ್ತ ನ್ಯಾಂiiಮೂರ್ತಿಗಳಿಗೆ ಪರಿಷ್ಕೃತ ಪಿಂಚಣಿ ೨೦೧೬ ಜನವರಿ ೧ರಿಂದ ಪೂರ್ವಾನ್ವಯವಾಗಿ ಜಾರಿಯಾಗಲಿದೆ. ಪ್ರಸ್ತುತ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು ವೇತನದಿಂದ ಎಲ್ಲ ಕಡಿತಗಳ ಬಳಿಕ . ಲಕ್ಷ ರೂಪಾಯಿ ವೇತನ ಹಾಗೂ ಭತ್ಯೆಗಳನ್ನು ಪಡೆಯುತ್ತಾರೆ. ಸಿಜೆಐ ಅವರಿಗೆ ಇದಕ್ಕಿಂತ ಹೆಚ್ಚಿನ ವೇತನ ಲಭಿಸುತ್ತದೆ. ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಇದಕ್ಕಿಂತ ಕಡಿಮೆ ವೇತನ ಲಭಿಸುತ್ತದೆ. ೨೦೧೬ರಲ್ಲಿ ಆಗಿನ ಭಾರತದ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್ ಅವರು ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಮೂರ್ತಿಗಳ ವೇತನ ಹೆಚ್ಚಳ ಮಾಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದರು. ವೇತನ ಹೆಚ್ಚಳದಿಂದ ಒಟ್ಟು ,೫೦೦ ಮಂದಿ ನ್ಯಾಯಮೂರ್ತಿಗಳಿಗೆ ಅನುಕೂಲವಾಗುವುದು ಎಂದು ರವಿ ಶಂಕರ ಪ್ರಸಾದ್ ನುಡಿದರು.

2017: ಹರಾರೆ: ಜನರ ತೀವ್ರ ಆಕ್ರೋಶಕ್ಕೆ ತುತ್ತಾಗಿದ್ದ ಜಿಂಬಾಬ್ವೆಯ ಸುದೀರ್ಘ ಅವಧಿಯ ಅಧ್ಯಕ್ಷ ರಾಬರ್ಟ್ ಮುಗಾಬೆ (೯೩) ಅವರು ಕಡೆಗೂ ರಾಜೀನಾಮೆ ಸಲ್ಲಿಸಿದ್ದು ಅವರ ಉತ್ತರಾಧಿಕಾರಿಯಾಗಲು ಇತ್ತೀಚೆಗೆ ಉಪಾಧ್ಯಕ್ಷ ಸ್ಥಾನದಿಂದ ಪದಚ್ಯುತರಾಗಿದ್ದ ಎಮ್ಮರ್ಸನ್ ಮಾಂಗಾಗ್ವ ಸಜ್ಜಾದರು. ರಾಜೀನಾಮೆ ನೀಡಲು ನಿರಾಕರಿಸಿದ್ದ ಮುಗಾಬೆ ಅವರ ವಿರುದ್ಧ ದೋಷಾರೋಪಣಾ ಪ್ರಕ್ರಿಯೆ ಆರಂಭಗೊಂಡ ಬಳಿಕ ಅಧ್ಯಕ್ಷರು ದಿಢೀರನೆ ತಮ್ಮ ರಾಜೀನಾಮೆ ನಿರ್ಧಾರವನ್ನು ಸಂಸತ್ತಿನಲ್ಲಿ ಪ್ರಕಟಿಸಿದರು. ಕಳೆದ ೩೭ ವರ್ಷಗಳಿಂದ ಮುಗಾಬೆ ಅವರು ಅಧ್ಯಕ್ಷರಾಗಿದ್ದರು. ನನ್ನ ರಾಜೀನಾಮೆ ನಿರ್ಧಾರ ಸ್ವ ಇಚ್ಛೆಯದು. ಜಿಂಬಾಬ್ವೆಯ ಜನರ ಕಲ್ಯಾಣವನ್ನು ಗಮನದಲ್ಲಿ ಇರಿಸಿಕೊಂಡು ನಾನು ಕ್ರಮ ಕೈಗೊಂಡಿದ್ದೇನೆ. ಅಹಿಂಸಾತ್ಮಕವಾಗಿ ಮತ್ತು ಸುಲಲಿತವಾಗಿ ಅಧಿಕಾರದ ಹಸ್ತಾಂತರ ಆಗಬೇಕು ಎಂಬುದು ನನ್ನ ಇಚ್ಛೆ ಎಂದು ಸಂಸತ್ತಿನಲ್ಲಿ ಓದಿ ಹೇಳಿದ ತಮ್ಮ ಪತ್ರದಲ್ಲಿ ಮುಗಾಬೆ ತಿಳಿಸಿದರು. ಮುಗಾಬೆ ಅವರ ರಾಜೀನಾಮೆ ಘೋಷಣೆಯನ್ನು ಸಂಸತ್ ಸದಸ್ಯರು ಹರ್ಷೋದ್ಘಾರ, ಕರತಾಡನದೊಂದಿಗೆ ಸ್ವಾಗತಿಸಿದರು. ಮುಗಾಬೆ ರಾಜೀನಾಮೆಯ ಸುದ್ದಿ ಪ್ರಸಾರವಾಗುತ್ತಿದ್ದಂತೆಯೇ ಜನ ಗುಂಪುಗುಂಪಾಗಿ ಸೇರಿದ ಕುಣಿದಾಡಿದರು. ೪೮ ಗಂಟೆಗಳ ಒಳಗಾಗಿ ಇತ್ತೀಚೆಗೆ ಪದಚ್ಯುತರಾಗಿದ್ದ ರಾಷ್ಟ್ರದ ಉಪಾಧ್ಯಕ್ಷ ಎಮ್ಮರ್ಸನ್ ಮಾಂಗಾಗ್ಯ ಅವರು ನೂತನ ನಾಯಕರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಆಡಳಿತಾರೂಢ ಪಕ್ಷದ ಮುಖ್ಯ ಸಚೇತಕ ಮಾತುಕೆ ಮಾಧ್ಯಮಗಳಿಗೆ ತಿಳಿಸಿದರು. ಪದಚ್ಯುತಿಗೊಂಡ ಬಳಿಕ ಮಾಂಗಾಗ್ಯ ಅವರು ಪ್ರಾಣಭೀತಿ ಕಾರಣದಿಂದ ದೇಶ ತ್ಯಜಿಸಿದ್ದರು. ಮಾಂಗಾಗ್ಯ ಅವರನ್ನು ಪದಚ್ಯುತಿಗೊಳಿಸುವಲ್ಲಿ ಸಫಲರಾಗಿದ್ದ ಪ್ರಥಮ ಮಹಿಳೆ ಗ್ರೇಸ್ ಮುಗಾಬೆ ಅವರ ಸ್ಥಾನಕ್ಕೆ ಏರಿದ್ದರು. ಬೆಳವಣಿಗೆ ತೀವ್ರ ಅಸಮಾಧಾನಕ್ಕೆ ಕಾರಣವಾಗಿದ್ದಲ್ಲದೆ, ವಾರದ ಹಿಂದೆ ಸೇನಾ ಹಸ್ತಕ್ಷೇಪಕ್ಕೂ ಕಾರಣವಾಗಿತ್ತು. ಜನರೂ ಅಧ್ಯಕ್ಷ ಮುಗಾಬೆ ವಿರುದ್ಧ ಬಹಿರಂಗವಾಗಿ ಬೀದಿಗೆ ಇಳಿದಿದ್ದರು.

2017: ನವದೆಹಲಿ: ಮನೆ ಖರೀದಿದಾರರ ನೆರವಿಗೆ ಬಂದ ಸುಪ್ರೀಂಕೋರ್ಟ್, ತೀವ್ರ ಬಿಕ್ಕಟ್ಟಿಗೆ ಸಿಲುಕಿರುವ ಜಯಪ್ರಕಾಶ್ ಅಸೋಸಿಯೇಟ್ ಲಿಮಿಟೆಡ್ (ಜೆಎಎಲ್) ಕಂಪೆನಿಯ ಐವರು ಪ್ರವರ್ತಕರು ಸೇರಿದಂತೆ ೧೩ ಮಂದಿ ನಿರ್ದೇಶಕರಿಗೆ ತಮ್ಮ ಖಾಸಗಿ ಆಸ್ತಿಗಳನ್ನು ಬೇರೆಯವರಿಗೆ ವರ್ಗಾಯಿಸದಂತೆ ಆದೇಶ ನೀಡಿತು. ಅಲ್ಲದೆ, ಡಿಸೆಂಬರ್ ೧೪ರಂದು ೧೫೦ ಕೋಟಿ ರೂಪಾಯಿ ಮತ್ತು ಡಿಸೆಂಬರ್ ೩೧ರಂದು ೧೨೫ ಕೋಟಿ ರೂಪಾಯಿ ಠೇವಣಿ ಇಡುವಂತೆ ಕಂಪೆನಿಗೆ ಆಜ್ಞಾಪಿಸಿತು.  ರಿಯಲ್ ಎಸ್ಟೇಟ್ ಸಂಸ್ಥೆಯು ಈದಿನ ಸಲ್ಲಿಸಿದ ೨೭೫ ಕೋಟಿ ರೂಪಾಯಿಗಳ ಡಿಮಾಂಡ್ ಡ್ರಾಫ್ಟ್ನ್ನು ಪೀಠವು ಅಂಗೀಕರಿಸಿತು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ .ಎಂ. ಖಾನ್ವಿಲ್ಕರ್ ಮತ್ತು ಡಿ.ವೈ. ಚಂದ್ರಚೂಡ್ ಅವರನ್ನು ಒಳಗೊಂಡ ಪೀಠವು ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಆಸ್ತಿಗಳನ್ನು ಇತರರಿಗೆ ವರ್ಗಾಯಿಸದಂತೆ ಈದಿನ ಆದೇಶ ನೀಡಿ, ತನ್ನ ನಿರ್ದೇಶನದ ಉಲ್ಲಂಘನೆಯಾದಲ್ಲಿ ಅವರ ವಿರುದ್ಧ ಕ್ರಿಮಿನಲ್ ಖಟ್ಲೆ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿತು. ವಕೀಲ ಪವನ್ ಶ್ರೀ ಅಗರ್ವಾಲ್ ಅವರನ್ನು ಕೋರ್ಟ್ ಸಹಾಯಕರಾಗಿ (ಅಮಿಕಸ್ ಕ್ಯೂರಿ) ನೇಮಕ ಮಾಡಿದ ಪೀಠ, ಒಂದು ವಾರದ ಒಳಗಾಗಿ ಮನೆ ಖರೀದಿಸಿದವರ ಕುಂದುಕೊರತೆಗಳು ಸೇರಿದಂತೆ ಕಂಪೆನಿಗೆ ಸಂಬಂಧಿಸಿದ ಎಲ್ಲ ವಿವರಗಳಿರುವ ವೆಬ್ ಪೋರ್ಟಲ್ ರೂಪಿಸುವಂತೆ ಅವರಿಗೆ ಸೂಚಿಸಿತು. ಕಂಪೆನಿ ಪ್ರವರ್ತಕರು ಮತ್ತು ನಿರ್ದೇಶಕರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲರಾದ ಮುಕುಲ್ ರೋಹ್ಟಗಿ ಮತ್ತು ರಂಜಿತ್ ಕುಮಾರ್ ಅವರು ನ್ಯಾಯಾಲಯದ ಹಿಂದಿನ ಆದೇಶಕ್ಕೆ ಅನುಗುಣವಾಗಿ ವೈಯಕ್ತಿಕ ಆಸ್ತಿ ವಿವರಗಳ ಬಗ್ಗೆ ಪ್ರಮಾಣಪತ್ರ ಸಲ್ಲಿಸಿರುವುದಾಗಿ ತಿಳಿಸಿದರು. ಹಣದ ವ್ಯವಸ್ಥೆ ಮಾಡಲು ಕಂಪೆನಿಗೆ ಸಾಕಷ್ಟು ಕಾಲಾವಕಾಶ ನೀಡಬೇಕು. ಇಲ್ಲದೇ ಇದ್ದಲ್ಲಿ ಸಹಾರಾ ಕಂಪೆನಿಯಂತಾದೀತು ಎಂದು ರಿಯಲ್ ಎಸ್ಟೇಟ್ ಕಂಪೆನಿಯ ಪರ ಹಾಜರಾಗಿದ್ದ ಹಿರಿಯ ವಕೀಲ ಕಪಿಲ್ ಸಿಬಲ್ ಹೇಳಿದರು. ತಮ್ಮ ಫ್ಲಾಟ್ ಗಳನ್ನು ಬುಕ್ ಮಾಡಿದ ಸುಮಾರು ೩೨,೦೦೦ ಮಂದಿ ಕಂಪೆನಿಗೆ ತಮ್ಮ ಕಂತುಗಳನ್ನು ಪಾವತಿ ಮಾಡುತ್ತಿದ್ದಾರೆ ಎಂದು ಕಂಪೆನಿ ವಿರುದ್ಧ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದ ಚಿತ್ರಾ ಶರ್ಮಾ ತಿಳಿಸಿದ್ದರು.

2017: ನವದೆಹಲಿ: ಕೇಂದ್ರ ಸಾರ್ವಜನಿಕ ರಂಗದ ಉದ್ಯಮಗಳಿಗಾಗಿ ರೂಪಿಸಲಾಗಿರುವ ನೀತಿ ಚೌಕಟ್ಟಿಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿತು. ಇದರ ಪರಿಣಾಮವಾಗಿ ಉದ್ಯಮಗಳಲ್ಲಿ ದುಡಿಯುವ ಕಾರ್ಮಿಕರ ವೇತನ ಪರಿಷ್ಕರಣೆ ಸಂಬಂಧದ ಮುಂದಿನ ಹಂತದ ಮಾತುಕತೆಗೆ ವೇದಿಕೆ ಸಿದ್ಧವಾದಂತಾಯಿತು. ಸರಕಾರದ ಕ್ರಮದಿಂದ ಕೇಂದ್ರ ಸಾರ್ವಜನಿಕ ಉದ್ಯಮ ರಂಗದಲ್ಲಿ ದುಡಿಯುತ್ತಿರುವ ಕಾರ್ಮಿಕ ಸಂಘಗಳ ಸುಮಾರು .೩೫ ಲಕ್ಷ  ಕೆಲಸಗಾರರಿಗೆ ಅನುಕೂಲವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಈದಿನ ನಡದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಕೇಂದ್ರ ಉದ್ಯಮಗಳ ಕಾರ್ಮಿಕರ ವೇತನ ನೀತಿಗೆ ಅನುಮೋದನೆ ನೀಡಲಾಯಿತು.  ಕೇಂದ್ರ ಸರಕಾರದ ಸುಮಾರು ೩೨೦ ಉದ್ಯಮ ಸಂಸ್ಥೆಗಳಲ್ಲಿ ೧೨.೩೪ ಲಕ್ಷ ಕಾರ್ಮಿಕರು ದುಡಿಯುತ್ತಿದ್ದು ಈಪೈಕಿ .೯೯ ಲಕ್ಷ ಕಾರ್ಮಿಕರು ಬೋರ್ಡ್ ಮಟ್ಟದವರು. ಉಳಿದವರು ಬೋರ್ಡ್ ಕೆಳಮಟ್ಟದ ಕಾರ್ಯ ನಿರ್ವಾಹಕರು ಮತ್ತು ಅಸಂಘಟಿತ ಮೇಲುಸ್ತುವಾರಿದಾರರಾಗಿದ್ದಾರೆ.

2014:  ಮಂಗಳೂರು: ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಸಿದ್ಧವಾದ ಕಂಬಳವನ್ನು ದ.ಕ. ಜಿಲ್ಲಾಡಳಿತ ನಿಷೇಧಿಸಿ ಆದೇಶ ಹೊರಡಿಸಿತು. ಆದೇಶದಲ್ಲಿ ಕಂಬಳವನ್ನು ಆಯೋಜಿಸುವುದು ಪ್ರಾಣಿಗಳ ಮೇಲೆ ಕ್ರೌರ್ಯ ತಡೆ ಕಾಯ್ದೆ 1960ರ ಸೆಕ್ಷನ್ 3ರ ಉಲ್ಲಂಘನೆಯಾಗುತ್ತದೆ ಹಾಗಾಗಿ ಕಂಬಳವನ್ನು ನಿಷೇಧಿಸಿರುವುದಾಗಿ ತಿಳಿಸಲಾಯಿತು. ಪಶು ಸಂಗೋಪನೆ ಮತ್ತು ಪಶು ವಿಜ್ಞಾನ ಇಲಾಖೆ ಸುಪ್ರೀಂಕೋರ್ಟ್ 2014ರ ಮೇ 7ರಂದು ನೀಡಿದ್ದ ಆದೇಶ ಮತ್ತು ಭಾರತೀಯ ಪ್ರಾಣಿ ಸಂರಕ್ಷಣಾ ಸಮಿತಿಯ ನಿರ್ದೇಶನದಂತೆ ನಿಷೇಧವನ್ನು ಹೇರಲಾಯಿತು. ಹಿಂದಿನ ವಾರ ಉಡುಪಿ ಜಿಲ್ಲಾಡಳಿತ ಜಿಲ್ಲೆಯಲ್ಲಿ ಕಂಬಳವನ್ನು ನಿಷೇಧಿಸಿತ್ತು. ಸುಪ್ರೀಂ ಕೋರ್ಟ್ ಆದೇಶವನ್ನು ಪಾಲಿಸದಿದ್ದರೆ ಕಂಬಳ ಆಯೋಜಕರ ಮತ್ತು ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವುದಾಗಿ ಪಶು ಸಂಗೋಪನೆ ಮತ್ತು ಪಶು ವಿಜ್ಞಾನ ಇಲಾಖೆಯ ಉಪನಿರ್ದೇಶಕರಾದ ತಿಪ್ಪೇಸ್ವಾಮಿ ತಿಳಿಸಿದರು. ಈಮಧ್ಯೆ ರಾಜ್ಯ ಸರ್ಕಾರ ಕಂಬಳವನ್ನು ನಿಷೇಧಿಸದಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧರಿಸಿತು. ಕಂಬಳ ಕರಾವಳಿ ಭಾಗದ ಸಂಸ್ಕೃತಿಯ ಪ್ರತೀಕ, ಇದನ್ನು ಆಯೋಜಿಸುವುದರಿಂದ ಪ್ರಾಣಿಗಳಿಗೆ ಯಾವುದೇ ಹಿಂಸೆ ಉಂಟಾಗುವುದಿಲ್ಲ ಎಂದು ಅರಣ್ಯ ಸಚಿವ ಬಿ.ರಮಾನಾಥ ರೈ ತಿಳಿಸಿದರು

2014:ನವದೆಹಲಿ: ದೆಹಲಿಯ ಜಾಮಾ ಮಸೀದಿ ನೂತನ ಮೌಲ್ವಿಯಾಗಿ ಪುತ್ರ ಶಬಾನ್ ಬುಖಾರಿಗೆ ಶಾಹಿ ಇಮಾಮ್​ಸಯ್ಯದ್ ಅಹ್ಮದ್ ಬುಖಾರಿ ಅಧಿಕಾರ ಹಸ್ತಾಂತರಿಸಿದರು.
ಜಾಮಾ ಮಸೀದಿ ವಕ್ಪ್ ಆಸ್ತಿಯೆಂದು ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದ್ದು, ನೂತನ ಮೌಲ್ವಿ ನೇಮಕಕ್ಕೆ ಮಾನ್ಯತೆ ಇಲ್ಲ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡದ್ದರೂ ಶಾಹಿ ಇಮಾಮ್ ಈದಿನ ಅಧಿಕಾರ ಹಸ್ತಾಂತರ ಮಾಡಿದರು.


2008: ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿರ್ದೇಶಕ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಸ್.ಎ.ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಕರ್ನಾಟಕ ಕೃಷಿ ಮಿಷನ್ ರಚಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತು. ಅಧಿಕಾರೇತರ ಸದಸ್ಯರಾಗಿ ಶಿವಮೊಗ್ಗದ ಪ್ರಗತಿಪರ ರೈತ ಡಾ. ಪ್ರಫುಲ್ಲಚಂದ್ರ, ಹುನಗುಂದದ ಮಲ್ಲಣ್ಣ ನಾಗರಾಳ್, ಬಾಗಲಕೋಟೆಯ ಬೆನಕಟ್ಟೆಯ ಎಸ್.ಎನ್. ಅಮಟಪ್ಪನವರ್, ಗುಲ್ಬರ್ಗದ ಬಸವರಾಜ ಜೀವಣಗಿ, ಬೆಳಗಾವಿಯ ಶರದ್ ಪೈ, ರಾಯಚೂರಿನ ಪ್ರೊ. ಸಿ.ಪಾಟೀಲ್, ಬೆಂಗಳೂರು ಕೃಷಿ ವಿ.ವಿಯ ವಿಶ್ರಾಂತ ಕುಲಪತಿಗಳಾದ ಡಾ.ಮಹದೇವಪ್ಪ ಹಾಗೂ ಡಾ. ಎಸ್.ಬಿಸಲಯ್ಯ, ಗುಲ್ಬರ್ಗದ ಬಸವರಾಜ ಇಂಗಿನ್, ಬಿಎಐಎಫ್‌ನ ಜಿ.ಎನ್.ಎಸ್.ರೆಡ್ಡಿ, ಲಕ್ಷ್ಮೀಶ ತೋಳ್ಪಾಡಿ, ಕೋಲಾರದ ಪಾಪಮ್ಮ ಅವರನ್ನು ಸರ್ಕಾರ ನೇಮಿಸಿತು.

2008:  ಕಲರ್ಸ್‌ ಟಿವಿಯಲ್ಲಿ ಮೂರು ತಿಂಗಳಿನಿಂದ ಪ್ರಸಾರವಾಗುತ್ತಿದ್ದ  'ಬಿಗ್ ಬಾಸ್' ರಿಯಾಲಿಟಿ ಶೋದ ಅಂತಿಮ ಸುತ್ತಿನಲ್ಲಿ ಅಶುತೋಷ್ ಕೌಶಿಕ್ ವಿಜಯಿಯಾದರು. ರಿಯಾಲಿಟಿ ಶೋ ನಿರೂಪಕಿ ಶಿಲ್ಪಾ ಶೆಟ್ಟಿ ಹಾಗೂ ಸ್ಪರ್ಧಾಳುಗಳ ಹಾಜರಿಯಲ್ಲಿ ಹಿಂದಿ ಚಿತ್ರನಟ ಅಕ್ಷಯ್ ಕುಮಾರ್ ಅಶುತೋಷ್ ಹೆಸರು ಮಹಾರಾಷ್ಟ್ರದ ಲೋನಾವಾಲಾದಲ್ಲಿ ಈ ವಿಚಾರ ಪ್ರಕಟಿಸಿದರು. ಕೊಡಗು ಮೂಲದ ರೂಪದರ್ಶಿ ಜುಲ್ಫಿ ಸಯ್ಯದ್ ಎರಡನೇ ರನ್ನರ್ ಅಪ್ ಆಗಿ ಆಯ್ಕೆಯಾದರು. ರಾಜಾ ಚೌಧುರಿ ಮೊದಲ ರನ್ನರ್ ಅಪ್ ಆಗಿ ಆಯ್ಕೆಯಾದರು.

2008:  ಮಲೇಷ್ಯಾದಲ್ಲಿ ಕೆಲವು ತಿಂಗಳುಗಳಿಂದ ತೀವ್ರ ಚರ್ಚೆಗೆ ಕಾರಣವಾಗಿದ್ದ 'ಯೋಗ ನಿಷೇಧ' ವಿಷಯವು ನಿರ್ಣಾಯಕ ಹಂತಕ್ಕೆ ಬಂದಿತು. ಅಲ್ಲಿನ ಅತ್ಯುಚ್ಚ ಇಸ್ಲಾಮ್ ಸಮಿತಿಯು ಈದಿನದಿಂದ ಅನ್ವಯವಾಗುವಂತೆ ಯೋಗದ ಮೇಲೆ ನಿಷೇಧ ವಿಧಿಸಿತು. ರಾಷ್ಟ್ರೀಯ ಫತ್ವಾ ಮಂಡಲಿ ಧಾರ್ಮಿಕ ಆದೇಶವನ್ನು ಹೊರಡಿಸಿ ಯೋಗದ ಆಚರಣೆಯಲ್ಲಿ ತೊಡಗಲು ಮುಸ್ಲಿಮರಿಗೆ ಇಸ್ಲಾಮಿನಲ್ಲಿ ಅವಕಾಶವಿಲ್ಲ ಎಂದು ಹೇಳಿತು. ಯೋಗವು ಕೇವಲ ಅಂಗಸಾಧನೆಯನ್ನು ಮಾತ್ರ ಒಳಗೊಂಡಿಲ್ಲ. ದೈವ ಪೂಜೆ ಹಾಗೂ ಮಂತ್ರ ಪಠಣವನ್ನೂ ಅದು ಒಳಗೊಂಡಿದ್ದು, ಇಸ್ಲಾಮಿನಲ್ಲಿ ಅವಕ್ಕೆ ಅವಕಾಶವಿಲ್ಲ ಎಂದೂ ಆದೇಶದಲ್ಲಿ ವಿವರಿಸಲಾಯಿತು.  2.7 ಕೋಟಿ ಜನಸಂಖ್ಯೆಯ ಈ ರಾಷ್ಟ್ರದ ಮೂರನೇ ಎರಡು ಭಾಗದಷ್ಟು ಜನ ಮುಸ್ಲಿಮರಾಗಿದ್ದು ಹಿಂದೂ ಧರ್ಮದ ಅವಿಭಾಜ್ಯ ಅಂಗವಾದ ಯೋಗಾಭ್ಯಾಸದ ಪ್ರಭಾವದೆಡೆಗೆ ಇಸ್ಲಾಮ್ ಧರ್ಮೀಯರು ಹೆಚ್ಚೆಚ್ಚು ಆಕರ್ಷಿತರಾಗಬಹುದು ಎಂಬ ಚಿಂತೆಯೇ ಫತ್ವಾ ಮಂಡಳಿಯ ಈ ನಿರ್ಧಾರಕ್ಕೆ ಕಾರಣವೆಂದು ವಿಶ್ಲೇಷಿಸಲಾಯಿತು. ಈ ಮಧ್ಯೆ, 'ಸಿಸ್ಟರ್ಸ್‌ ಇನ್ ಇಸ್ಲಾಮ್' ಎಂಬ ಸರ್ಕಾರೇತರ ಸಂಘಟನೆಯೊಂದು ಫತ್ವಾ ಮಂಡಳಿಯ ನಿಲುವನ್ನು ವಿರೋಧಿಸಿತು. ಫತ್ವಾ ಮಂಡಲಿಯು ರಾಷ್ಟ್ರದ ಮಹಿಳೆಯರನ್ನು, ವಿಶೇಷವಾಗಿ ಮುಸ್ಲಿಮ್ ಸ್ತ್ರೀಯರನ್ನು ಮುಂಚಿನಿಂದಲೂ ತಾರತಮ್ಯ ದೃಷ್ಟಿಯಿಂದ ಹಾಗೂ ಭೋಗದ ವಸ್ತುವೆಂಬಂತೆಯೇ ನೋಡಿಕೊಂಡು ಬಂದಿದೆ ಎಂದು ಸಂಘಟನೆ ಟೀಕಿಸಿತು.

2008: ಒಂದು ಕಾಲದ ವೈರಿಯಾಗಿದ್ದ ಲಿಬಿಯಾಕ್ಕೆ 36 ವರ್ಷಗಳ ನಂತರ ರಾಯಭಾರಿಯನ್ನು ಕಳುಹಿಸಲು ಅಮೆರಿಕ ಸೆನೆಟ್ ಒಪ್ಪಿಗೆ ನೀಡಿತು. ಅಮೆರಿಕದ ಹಿರಿಯ ರಾಯಭಾರಿ ಜಿನಿ ಕ್ರೆಟ್ಜ್ ಅವರನ್ನು ಈ ಸ್ಥಾನಕ್ಕೆ ಸೆನೆಟ್ ನಿಯೋಜಿಸಿತು.

2007: `ಕರ್ನಾಟಕದಲ್ಲಿ ಯಾರ ಜೊತೆಗೂಡಿಯೂ ಸರ್ಕಾರ ರಚಿಸುವುದಿಲ್ಲ, ವಿಧಾನಸಭೆ ವಿಸರ್ಜನೆ ಖಂಡಿತ. ಇದು ಸ್ಫಟಿಕದಷ್ಟು ಸ್ಪಷ್ಟ.' ಎಂಬುದಾಗಿ ಘೋಷಿಸುವ ಮೂಲಕ ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ನವದೆಹಲಿಯಲ್ಲಿ ಕರ್ನಾಟಕಕ್ಕೆ ಸಂಬಂಧಿಸಿದಂತೆ ಹಾರಾಡುತ್ತಿದ್ದ ರಾಜಕೀಯ ಊಹಾಪೋಹಗಳಿಗೆ ತೆರೆ ಎಳೆದರು. `ರಾಷ್ಟ್ರಪತಿ ಆಳ್ವಿಕೆಯ ಘೋಷಣೆಯನ್ನು ಸಂಸತ್ತಿನ ಉಭಯ ಸದನಗಳಲ್ಲಿ ನವೆಂಬರ್ 21ರಂದು ಮಂಡಿಸಲಾಗಿದೆ. ಅಲ್ಲಿ ಅಂಗೀಕಾರ ಸಿಕ್ಕಿದ ನಂತರ ವಿಧಾನಸಭೆ ವಿಸರ್ಜನೆಯಾಗಲಿದೆ. ಅದಕ್ಕೆ ಮತ್ತೊಮ್ಮೆ ಸಂಪುಟ ಸಭೆ ಸೇರುವ ಅಗತ್ಯವೂ ಇಲ್ಲ' ಎಂದು ಸಿಂಘ್ವಿ ಸ್ಪಷ್ಟ ಪಡಿಸಿದರು.

2007: ಕೊಪ್ಪಳದ ವಸಂತ ಕುಷ್ಟಗಿ, ಚಿತ್ರದುರ್ಗದ ಬಿ.ಎಲ್.ವೇಣು, ನಂಜನಗೂಡಿನ ಮುಳ್ಳೂರು ನಾಗರಾಜ್, ಮೈಸೂರಿನ ಡಾ. ಕೆ.ವಿ.ನಾರಾಯಣ ಹಾಗೂ ಧಾರವಾಡದ ಹೇಮಾ ಪಟ್ಟಣಶೆಟ್ಟಿ ಅವರನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರಸಕ್ತ ಸಾಲಿನ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಿತು. ಅಕಾಡೆಮಿಯ ಅಧ್ಯಕ್ಷೆ ಗೀತಾ ನಾಗಭೂಷಣ ಅವರು ಈ ವಿಚಾರವನ್ನು ಪ್ರಕಟಿಸಿದರು.

2007: ಕೆಳ ನ್ಯಾಯಾಲಯದಲ್ಲಿ ಭ್ರಷ್ಟಾಚಾರದ ಬಗ್ಗೆ ಮಾರುವೇಷದ ಕಾರ್ಯಾಚರಣೆ ನಡೆಸಿ ಪ್ರಸಾರ ನಡೆಸಿದ ಖಾಸಗಿ ದೂರದರ್ಶನ ವಾಹಿನಿ ಹಾಗೂ ಅದರ ವರದಿಗಾರ ಬೇಷರತ್ ಕ್ಷಮಾಪಣೆ ಕೇಳಬೇಕು ಎಂದು ಸುಪ್ರೀಂಕೋರ್ಟ್ ಆದೇಶ ನೀಡಿತು. ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅವರನ್ನು ಒಳಗೊಂಡ ಪೀಠವು ಪ್ರತಿವಾದಿಗಳು ಸಲ್ಲಿಸಿದ ಪ್ರಮಾಣ ಪತ್ರದ ಬಗ್ಗೆ ಸಂತೃಪ್ತರಾಗದೆ ಪ್ರಕರಣದ ಬಗ್ಗೆ  4 ವಾರಗಳ ನಂತರ ವಿಚಾರಣೆ ನಡೆಸಲು ಸೂಚಿಸಿತು. ಜೀ ಟಿವಿ 2004ರಲ್ಲಿ ಮಾರುವೇಷದ ಕಾರ್ಯಾಚರಣೆ ನಡೆಸಿ `ಕ್ಯಾಶ್ ಫಾರ್ ವಾರಂಟ್ ಸ್ಕಾಮ್' ಕಾರ್ಯಕ್ರಮ ಬಿತ್ತರಿಸಿತ್ತು. ಅದರಲ್ಲಿ ಅಹಮದಾಬಾದಿನ ಮೂವರು ವಕೀಲರು ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ, ಮಾಜಿ ಮುಖ್ಯ ನ್ಯಾಯಮೂರ್ತಿ ವಿ.ಎನ್.ಖರೆ, ಅಂದಿನ ಅಪೆಕ್ಸ್ ಕೋರ್ಟಿನ ನ್ಯಾಯಮೂರ್ತಿ ಬಿ.ಪಿ.ಸಿಂಗ್ ಮತ್ತು ಹಿರಿಯ ವಕೀಲ ದಿ.ಆರ್.ಕೆ. ಜೈನ್ ವಿರುದ್ಧ ಜಾಮೀನು ವಾರಂಟ್ ಪಡೆಯಲು ರೂ.40,000 ಲಂಚ ಪಡೆದಿರುವ ಬಗ್ಗೆ ಬಿತ್ತರಿಸಲಾಗಿತ್ತು.

2007: ಉತ್ತರ ಅಮೆರಿಕದಲ್ಲಿ ಕೃತಜ್ಞತಾ ಸ್ಮರಣೆ ದಿನ ಆಚರಿಸಲಾಯಿತು. ಸುಗ್ಗಿಯ ಹಿನ್ನೆಲೆಯ ಈ ಸಂಭ್ರಮದ ಹಬ್ಬ `ಥ್ಯಾಂಕ್ಸ್ ಗಿವಿಂಗ್' ಆಚರಣೆ ಎಂದೇ ಪ್ರಸಿದ್ಧಿ ಪಡೆದಿದೆ. ಈ ಸಂಬಂಧ ಒಂದು ದಿನ ಮೊದಲು ನೆವಾಡಾದಲ್ಲಿನ ಇಗರ್ಜಿಯೊಂದರಲ್ಲಿ (ಚರ್ಚ್) ನಡೆದ ಆರಾಧನೆಯ ಸಂದರ್ಭದಲ್ಲಿ ಸಂಸ್ಕೃತ ಮಂತ್ರಗಳನ್ನು ಪಠಿಸಲಾಯಿತು. ನೆವಾಡಾದ ರಿನೋ ಪ್ರದೇಶದಲ್ಲಿರುವ ಎಪಿಸ್ಕೋಪಲ್ ಇಗರ್ಜಿಯಲ್ಲಿ ಆರಾಧನೆ ನಡೆದಾಗ ಪಾದ್ರಿ ರಜನ್ ಜೇಡ್ ಅವರು, ಋಗ್ವೇದ, ಉಪನಿಷತ್ ಹಾಗೂ ಭಗವದ್ಗೀತೆ ಶ್ಲೋಕಗಳನ್ನು ಪಠಿಸಿದರು.

2007: ಸುಸ್ತಿದಾರರಿಂದ ಸಾಲ ವಸೂಲಿಗೆ ನೇಮಿಸಿಕೊಂಡ ಖಾಸಗಿ ಸಂಸ್ಥೆಯು ಕಾರು ಜಪ್ತಿ ಮಾಡಿಕೊಂಡದ್ದಕ್ಕಾಗಿ ಪುಣೆಯ ಗ್ರಾಹಕರ ವ್ಯಾಜ್ಯ ಪರಿಹಾರ ನ್ಯಾಯಾಲಯವು, ಸಾಲ ಪಡೆದ ಮಹಿಳೆಗೆ ರೂ 1 ಲಕ್ಷ ಪರಿಹಾರ ನೀಡುವಂತೆ ಖಾಸಗಿ ವಲಯದ ಐಸಿಐಸಿಐ ಬ್ಯಾಂಕಿಗೆ ಆದೇಶಿಸಿತು. ಬ್ಯಾಂಕಿನ ಗ್ರಾಹಕರಾಗಿರುವ ರೇಣು ಭಂಡ್ವಾಳಕರ್ ಅವರಿಗೆ ಆಗಿರುವ ಮಾನಸಿಕ ಕಿರುಕುಳಕ್ಕೆ ಪ್ರತಿಯಾಗಿ ಈ ಮೊತ್ತದ ಪರಿಹಾರ ನೀಡಬೇಕೆಂದು ಗ್ರಾಹಕ ನ್ಯಾಯಾಲಯ ಸೂಚಿಸಿತು. ಸಾಲ ವಸೂಲಿಗೆ ತಾವು ನೀಡಿದ್ದ ಸಲಹೆಯನ್ನು ಬ್ಯಾಂಕ್ ಸಮರ್ಪಕವಾಗಿ ಪಾಲಿಸಿರಲಿಲ್ಲ. ತಮ್ಮ ಉಳಿತಾಯ ಖಾತೆಯಿಂದ ಸಾಲದ ಮೊತ್ತ ಮರು ಪಾವತಿ ಮಾಡಿಕೊಳ್ಳಲು ನೀಡಿದ್ದ ಚೆಕ್ಕುಗಳನ್ನು ಸರಿಯಾಗಿ ಬಳಸದ ಕಾರಣಕ್ಕೆ ತಾವು ಸುಸ್ತಿದಾರರಾಗಬೇಕಾಯಿತು. ಇದೇ ನೆಪ ಮುಂದಿಟ್ಟುಕೊಂಡು ಸಾಲ ವಸೂಲಿ ಏಜೆಂಟರು ತಮ್ಮ ಕಾರನ್ನು ಜಪ್ತಿ ಮಾಡಿಕೊಂಡಿದ್ದರು. ಅದರಲ್ಲಿ ಲ್ಯಾಪ್ ಟಾಪ್ ಅಳವಡಿಸಲಾಗಿತ್ತು ಎಂದು ರೇಣು ಅವರು ಗ್ರಾಹಕರ ನ್ಯಾಯಾಲಯಕ್ಕೆ ದೂರು ನೀಡಿದ್ದರು.

2006: ಕೋಲ್ಕತ್ತದ ಪೂರ್ವ ವಲಯದ ಟೊಪ್ಸಿಯಾ ಪ್ರದೇಶದಲ್ಲಿ ಚರ್ಮದ ಕಾರ್ಖಾನೆಗೆ ಬೆಂಕಿ ತಗುಲಿ 9 ಕಾರ್ಮಿಕರು ಮೃತರಾಗಿ 12 ಮಂದಿ ಗಂಭೀರವಾಗಿ ಗಾಯಗೊಂಡರು.

2006: ಕ್ಯಾನ್ಸರ್ ಅಥವಾ ಅಣು ವಿಕಿರಣ ಕಾಯಿಲೆಗೆ ಆಯುರ್ವೇದದ `ತ್ರಿಫಲ' ಚೂರ್ಣ ರಾಮಬಾಣ ಎಂದು ಮುಂಬೈಯ ಭಾಭಾ ಅಣು ಸಂಶೋಧನಾ ಕೇಂದ್ರದ (ಬಿ ಎ ಆರ್ ಸಿ) ಜೊತೆಗೆ ಈ ಹಿಂದೆ ಕೆಲಸ ಮಾಡಿದ್ದ ಖ್ಯಾತ ವಿಕಿರಣ ಜೀವ ಶಾಸ್ತ್ರಜ್ಞ ಎಂ.ಪಿ. ಮಿಶ್ರ ಪ್ರತಿಪಾದಿಸಿದರು. ಬನಾರಸ್ ಹಿಂದೂ ವಿಶ್ವ ವಿದ್ಯಾಲಯವು ಆಯೋಜಿಸಿದ್ದ ಐದನೇ ಅಂತಾರಾಷ್ಟ್ರೀಯ `ಮಾನವ ಆರೋಗ್ಯ ಮತ್ತು ಪರಿಸರದ ಮೇಲೆ ಕನಿಷ್ಠ ಪ್ರಮಾಣದ ವಿಕಿರಣ ಪರಿಣಾಮ' (ಲೋ ಡೋಸ್ ರೇಡಿಯೇಷನ್ ಎಫೆಕ್ಟ್ಸ್ ಆನ್ ಹ್ಯೂಮನ್ ಹೆಲ್ತ್ ಮತ್ತು ಎನ್ವಿರಾನ್ ಮೆಂಟ್) ಸಮಾವೇಶದಲ್ಲಿ ಈ ವಿಚಾರ ತಿಳಿಸಿದರು. ತ್ರಿಫಲ ಚೂರ್ಣವು ಅಳಲೆ, ನೆಲ್ಲಿ ಹಾಗೂ ತಾರೆ ಕಾಯಿಗಳ ಸಮ ಪ್ರಮಾಣದ ಮಿಶ್ರಣದಿಂದ ತಯಾರಾಗುವ ಚೂರ್ಣ. ಈ ಚೂರ್ಣಕ್ಕೆ ಕ್ಯಾನ್ಸರಿನಂತಹ ಮಾರಣಾಂತಿಕ ರೋಗ ನಿವಾರಿಸುವ ಶಕ್ತಿ ಇದೆ. ಅದು ದೇಹದ ರೋಗ ನಿರೋಧಕ ಶಕ್ತಿ ವರ್ಧಕ. ಅದು ಬೇಧಿ ನಿವಾರಕ ಟಾನಿಕ್ ಅಷ್ಟೇ ಅಲ್ಲ, ಶೀತ, ಜ್ವರ, ಗ್ಯಾಸ್ಟ್ರಿಕ್ ಹಾಗೂ ಅಲರ್ಜಿಯಂತಹ ಇತರ ಕಾಯಿಲೆಗಳಿಗೂ ಸಿದ್ಧೌಷಧ. ತ್ರಿಫಲ ಔಷಧದ ಮತ್ತೊಂದು ವಿಶೇಷ ಗುಣವೆಂದರೆ, ಮನುಷ್ಯನ ದೇಹದೊಳಗೆ ಇದು ಹೊಕ್ಕ ಕೂಡಲೇ, ರೋಗಗ್ರಸ್ತ ಹಾಗೂ ಆರೋಗ್ಯಯುತ ಜೀವಕೋಶಗಳನ್ನು ಗುರುತಿಸುತ್ತದೆ. ರೋಗಗ್ರಸ್ತವಾದವುಗಳನ್ನು ಕೊಂದು, ಹೊಸ ಜೀವಕೋಶಗಳನ್ನು ಸೃಷ್ಟಿಸುತ್ತದೆ. ಆರೋಗ್ಯಯುತ ಜೀವಕೋಶಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಎಂಬುದು ಮಿಶ್ರ ವಿವರಣೆ. ಡಾ. ಮಿಶ್ರ, ಬಾಬಾ ಅಣು ಸಂಶೋಧನಾ ಕೇಂದ್ರದಲ್ಲಿ ಸೈನಿಕರಿಗೆ ಅಣುವಿಕಿರಣದಿಂದ ಉಂಟಾಗುವ ತೊಂದರೆ ನಿವಾರಣೆ ಹಾಗೂ ಅವರ ದೇಹಕ್ಕೆ ಬಂದೆರಗುವ ರೋಗಗಳನ್ನು ಶಮನಗೊಳಿಸಲು ಔಷಧ ಕಂಡು ಹಿಡಿಯವ ಯೋಜನೆಯಲ್ಲಿ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದರು. ತ್ರಿಫಲದಲ್ಲಿ ಇಂಥ ಶಕ್ತಿಯುತ ಔಷಧವಿದೆ ಎಂದು ಕಂಡು ಹಿಡಿದಿರುವ ಡಾ.ಸಂಧ್ಯಾ ಅವರು ಈ ಯೋಜನೆಯ ಸದಸ್ಯರಲ್ಲಿ ಒಬ್ಬರು.

2006: ರಾಷ್ಟ್ರಕವಿ ಗೌರವಕ್ಕೆ ಪಾತ್ರರಾಗಿರುವ ಕನ್ನಡದ ಹಿರಿಯ ಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರಿಗೆ ಗೌರವ ಡಾಕ್ಟರೇಟ್ ನೀಡಲು ಕುವೆಂಪು ವಿವಿ ಸಿಂಡಿಕೇಟ್ ಸಭೆ ನಿರ್ಧರಿಸಿತು.

2006: ಕೋಲ್ಕತ್ತದ ಪೂರ್ವ ವಲಯದ ಟೊಪ್ಸಿಯಾ ಪ್ರದೇಶದಲ್ಲಿ ಚರ್ಮದ ಕಾರ್ಖಾನೆಗೆ ಬೆಂಕಿ ತಗುಲಿದ್ದರಿಂದ ಒಂಬತ್ತು ಕಾರ್ಮಿಕರು ಮೃತರಾಗಿ 12 ಮಂದಿ ಗಾಯಗೊಂಡರು.

2006: ಚಲನಚಿತ್ರಗಳ ಹಂಚಿಕೆದಾರ, `ಟ್ರಿಣ್ ಟ್ರಿಣ್' ಚಿತ್ರದ ನಿರ್ಮಾಪಕ ಎ.ಎನ್. ರಂಗಸ್ವಾಮಿ (57) ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು.

2006: ಖ್ಯಾತ ವಿಜ್ಞಾನಿ ಮತ್ತು ಶಿಕ್ಷಣ ತಜ್ಞೆ ಅಸೀಮಾ ಚಟರ್ಜಿ (90) ಕೋಲ್ಕತ್ತಾದಲ್ಲಿ ನಿಧನರಾದರು. ಶುದ್ಧ ರಸಾಯನಶಾಸ್ತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದ ಅಸೀಮಾ, ಭಾರತೀಯ ವಿಜ್ಞಾನ ಕಾಂಗ್ರೆಸ್ಸಿನ ಮೊದಲ ಮಹಿಳಾ ಅಧ್ಯಕ್ಷರಾಗಿದ್ದರು. ಪದ್ಮಭೂಷಣ ವಿಜೇತರೂ ಆಗಿದ್ದ ಅವರು ರಾಜ್ಯಸಭೆಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದವರು.

2005: ಬಿಹಾರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಜನತಾದಳ (ಯು)- ಬಿಜೆಪಿ ಮೈತ್ರಿಕೂಟ ನಿಚ್ಚಳ ಬಹುಮತ ಗಳಿಸುವ ಮೂಲಕ ಲಾಲೂ ಪ್ರಸಾದ್ ಯಾದವ್ ಅವರ 15 ವರ್ಷಗಳ `ಲಾಲೂ ಯುಗ'ಕ್ಕೆ ಮಂಗಳ ಹಾಡಿತು.

2005: ಹಿರಿಯ ಬಾಲಿವುಡ್ ಚಿತ್ರ ನಿರ್ದೇಶಕ, `ನಗೀನಾ' ಹಾಗೂ `ನಿಗಾಹೇಂ' ಚಿತ್ರಗಳ ಖ್ಯಾತಿಯ ಹರ್ಮೇಶ್ ಮಲ್ಹೋತ್ರಾ (66) ಅವರು ಮುಂಬೈಯಲ್ಲಿ ಹೃದಯಾಘಾತದಿಂದ ನಿಧನರಾದರು. ಪಾಕಿಸ್ಥಾನದ ಖುಸಬ್ ಪ್ರಾಂತ್ಯದಲ್ಲಿ ಜನಿಸಿದ್ದ ಮಲ್ಹೋತ್ರಾ ದೇಶವಿಭಜನೆ ಬಳಿಕ ಆಗ್ರಾಕ್ಕೆ ವಲಸೆ ಬಂದಿದ್ದರು. ಪದವಿ ಪಡೆದ ನಂತರ ಚಿತ್ರೋದ್ಯಮದಲ್ಲಿ ಭವಿಷ್ಯ ಅರಸಿ ಮುಂಬೈಗೆ ಬಂದಿದ್ದರು. 70ರ ದಶಕದಲ್ಲಿ ಬಿಡುಗಡೆಯಾದ `ಬೇಟಿ' ಅವರ ಚೊಚ್ಚಲ ಚಿತ್ರ. ಸಂಜಯಖಾನ್ ಮತ್ತು ನಂದಾ ಇದರಲ್ಲಿ ನಟಿಸಿದ್ದರು. 1972ರಲ್ಲಿ ತಮ್ಮದೇ ಆದ ಎಚ್.ಎಂ. ಪ್ರೊಡಕ್ಷನ್ಸ್ ಸ್ಥಾಪಿಸಿ `ಗದ್ದಾರ್' ಚಿತ್ರ ನಿರ್ದೇಶಿಸಿದರು. ರಿಷಿ ಕಪೂರ್, ಶ್ರೀದೇವಿ ಹಾಗೂ ಅಮರೇಶಪುರಿ ನಟಿಸಿದ `ನಗೀನಾ' ಚಿತ್ರ ಅವರಿಗೆ ಹೆಚ್ಚಿನ ಖ್ಯಾತಿ ತಂದುಕೊಟ್ಟಿತು. ನಂತರ ಅದರ ಮುಂದಿನ ಭಾಗವಾಗಿ `ನಿಗಾಹೇಂ' ಬಂತು. ಗೋವಿಂದ ನಟಿಸಿದ `ದುಲ್ಹೆ ರಾಜಾ' ಕೂಡಾ ಅವರ ಯಶಸ್ವಿ ಚಿತ್ರಗಳ ಪೈಕಿ ಒಂದು.

2005: ಹಿರಿಯ ಪತ್ರಕರ್ತ ಎಂ. ಮಲ್ಲಿಕಾರ್ಜುನಯ್ಯ ಬೆಂಗಳೂರಿನಲ್ಲಿ ನಿಧನರಾದರು. 'ಪೊಲೀಸ್ ನ್ಯೂಸ್' ಪತ್ರಿಕೆಯ ಮೂಲಕ ಕನ್ನಡದಲ್ಲಿ ಕ್ರೈಂ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಿದ್ದ ಅವರು 'ಆದರ್ಶ ಗಂಡ ಹೆಂಡತಿ' ಮಾಸಪತ್ರಿಕೆ, ಮುಂಬೈಯಲ್ಲಿ `ಕರ್ನಾಟಕ ಮಲ್ಲ' ದಿನಪತ್ರಿಕೆ ಹಾಗೂ ಮಂಗಳೂರಿನಲ್ಲಿ `ಮಂಗಳೂರು ಮಿತ್ರ' ಸಂಜೆ ಪತ್ರಿಕೆ ಆರಂಭಿಸಿ ಯಶಸ್ಸು ಪಡೆದಿದ್ದರು.

1990: ಬ್ರಿಟನ್ ಪ್ರಧಾನ ಮಂತ್ರಿ ಮಾರ್ಗರೆಟ್ ಥ್ಯಾಚರ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದರು.

2000: ಜೆಕ್ ಓಟಗಾರ ಎಮಿಲ್ ಝಾಟೊಪೆಕ್ ತಮ್ಮ 78ನೇ ವಯಸ್ಸಿನಲ್ಲಿ ನಿಧನರಾದರು. 1952ರಲ್ಲಿ ಹೆಲ್ಸಿಂಕಿಯಲ್ಲಿ ನಡೆದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ 5000 ಮತ್ತು 10,000 ಮೀಟರ್ ಓಟಗಳಲ್ಲಿ ಭಾಗವಹಿಸಿ ಅವರು ದಾಖಲೆ ನಿರ್ಮಿಸಿದ್ದರು.

1986: ಕಾನ್ಪುರದಲ್ಲಿ ನಡೆದ ಶ್ರೀಲಂಕಾ ಜೊತೆಗಿನ ಟೆಸ್ಟ್ ಪಂದ್ಯದಲ್ಲಿ ಸುನಿಲ್ ಗಾವಸ್ಕರ್ ಅವರು ತಮ್ಮ 34ನೇ ಟೆಸ್ಟ್ ಸೆಂಚುರಿ (176) ಸಿಡಿಸಿದರು.

1967: ಜರ್ಮನಿಯ ಟೆನಿಸ್ ಆಟಗಾರ ಬೋರಿಸ್ ಬೆಕರ್ ಹುಟ್ಟಿದ ದಿನ. ವಿಂಬಲ್ಟನ್ನಿನಲ್ಲಿ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಚಾಂಪಿಯನ್ ಆಗುವ ಮೂಲಕ ಅತ್ಯಂತ ಕಿರಿಯ ಟೆನಿಸ್ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾದರು.

1963: ಅಮೆರಿಕಾದ ಅಧ್ಯಕ್ಷ ಕೆನಡಿ ಅವರನ್ನು ಡಲ್ಲಾಸಿನಲ್ಲಿ ಮೋಟಾರು ವಾಹನ ರ್ಯಾಲಿಯಲ್ಲಿಪಾಲ್ಗೊಂಡ್ದಿದಾಗ ಕೊಲೆಗೈಯಲಾಯಿತು. ಟೆಕ್ಸಾಸಿನ ಗವರ್ನರ್ ಜಾನ್ ಬಿ. ಕೊನ್ನಾಲ್ಲಿ ಅವರು ಗಂಭೀರವಾಗಿ ಗಾಯಗೊಂಡರು. ಶಂಕಿತ ವ್ಯಕ್ತಿ ಲೀ ಹಾರ್ವೇ ಓಸ್ವಾಲ್ಡನನ್ನು ಬಂಧಿಸಲಾಯಿತು. ಉಪಾಧ್ಯಕ್ಷ ಲಿಂಡನ್ ಬಿ. ಜಾನ್ಸನ್ ಅವರು ಅಮೆರಿಕದ 36ನೇ ಅಧ್ಯಕ್ಷರಾದರು.

1956: ಸಾಹಿತಿ ಅಕ್ಕಮಹಾದೇವಿ ಜನನ.

1939: ಖ್ಯಾತ ಸಂಶೋಧಕ, ಅನುವಾದಕ, ಪ್ರೊ. ಬಾಲಚಂದ್ರ ಜಯಶೆಟ್ಟಿ ಅವರು ಭೀಮಣ್ಣ- ಜಯಮ್ಮ ದಂಪತಿಯ ಮಗನಾಗಿ ಬೀದರ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ರಾಜೇಶ್ವರದಲ್ಲಿ ಜನಿಸಿದರು.

1919: ಸಾಹಿತಿ ಸೀತಮ್ಮ ನಂಜೇಗೌಡ ಜನನ.

1902: ಸಾಹಿತಿ ಚುಳುಕಿ ಗೋವಿಂದ ವೆಂಕಟೇಶ ಜನನ.

1774: ಯೋಧ ಹಾಗೂ ಬಂಗಾಳದ ಮೊತ್ತ ಮೊದಲ ಬ್ರಿಟಿಷ್ ಆಡಳಿತಗಾರ ರಾಬರ್ಟ್ ಕ್ಲೈವ್ ತನ್ನ 49 ನೇ ವಯಸ್ಸಿನಲ್ಲಿ ಆತ್ಮಹತ್ಯೆ ಮಾಡಿಕೊಂಡ. ಭಾರತದಲ್ಲಿ ಬ್ರಿಟಿಷ್ ಆಡಳಿತ ಸ್ಥಾಪನೆ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿದ ವ್ಯಕ್ತಿಗಳಲ್ಲಿ ಈತನೂ ಒಬ್ಬ.


(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment