ನಾನು ಮೆಚ್ಚಿದ ವಾಟ್ಸಪ್

Thursday, August 23, 2018

ಇಂದಿನ ಇತಿಹಾಸ History Today ಆಗಸ್ಟ್ 23

ಇಂದಿನ ಇತಿಹಾಸ ಆಗಸ್ಟ್   23 

2018: ನವದೆಹಲಿ: ೩೭೩ ಜನರನ್ನು ಬಲಿತೆಗೆದುಕೊಂಡು ಲಕ್ಷಾಂತರ ಮಂದಿಯನ್ನು ನಿರ್ವಸಿತರನ್ನಾಗಿ ಮಾಡಿದ ಕೇರಳದ ಶತಮಾನದ ಜಲಪ್ರಳಯದ ಹೊಣೆಗಾರಿಕೆಯನ್ನು ಕೇರಳವು ತಮಿಳುನಾಡು ಸರ್ಕಾರದ ಭುಜಗಳ ಮೇಲಕ್ಕೆ ಏರಿಸಿದ್ದು, ತಮಿಳುನಾಡಿನ ವಿರುದ್ಧ ಸುಪ್ರೀಂಕೋರ್ಟ್ ಕಟ್ಟೆಯನ್ನು ಏರಿತು.  ಮುಲ್ಲಪೆರಿಯಾರ್ ಅಣೆಕಟ್ಟಿನ ನೀರಿನ ಮಟ್ಟವನ್ನು ಇಳಿಸಲು ತಮಿಳುನಾಡು ಸರ್ಕಾರ ನಿರಾಕರಿಸಿದ್ದೇ ಅನಾಹುತಕ್ಕೆ ಕಾರಣ ಎಂದು ಕೇರಳ ದೂರಿತು. ಸುಪ್ರೀಂಕೋರ್ಟಿಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ (ಅಫಿಡವಿಟ್) ಪಿಣರಾಯಿ ವಿಜಯನ್ ಸರ್ಕಾರವು ಮುಲ್ಲಪೆರಿಯಾರ್ ಅಣೆಕಟ್ಟಿನಿಂದ ದಿಢೀರನೆ ನೀರು ಬಿಡುಗಡೆ ಮಾಡಿದ್ದು ಮಾರಕ ದುರಂತಕ್ಕೆ ಮುಖ್ಯ ಕಾರಣ ಎಂದು ಹೇಳಿತು. ಜಲಾಶಯದ ನೀರಿನ ಮಟ್ಟವನ್ನು ೧೪೨ ಅಡಿಗಳಿಂದ ೧೩೯ ಅಡಿಗಳಿಗೆ ಇಳಿಸುವಂತೆ ಮಾಡಿದ ಮನವಿಯನ್ನು ತಮಿಳುನಾಡು ಸರ್ಕಾರ ಪದೇ ಪದೇ ಹೇಗೆ ತಿರಸ್ಕರಿಸಿತು ಎಂಬುದರತ್ತ ಕೇರಳ ಸರ್ಕಾರ ಬೊಟ್ಟು ಮಾಡಿತು. ಅಣೆಕಟ್ಟು ಇರುವುದು ಕೇರಳದಲ್ಲಾದರೂ, ಅದನ್ನು ನಿರ್ವಹಿಸುವುದು ಮತ್ತು ನೀರಿನ ಬಳಕೆ ಮಾಡಿಕೊಳ್ಳುವುದು ತಮಿಳುನಾಡು. ಅಣೆಕಟ್ಟಿನಲ್ಲಿ ಬಿರುಕುಗಳು ಕಾಣಿಸಿಕೊಂಡ ಬಳಿಕ ಅದರ ಬಳಕೆಯನ್ನು ಸ್ಥಗಿತಗೊಳಿಸುವಂತೆ ಕೇರಳವು ದೀರ್ಘ ಕಾಲದಿಂದ ಒತ್ತಾಯಿಸುತ್ತಾ ಬಂದಿತ್ತು. ಇಡುಕ್ಕಿಯಲ್ಲಿ ಭಾರೀ ಮಳೆ ಸುರಿದ ಹಿನ್ನೆಲೆಯಲ್ಲಿ ನೀರು ೧೪೨ ಅಡಿ ತಲುಪಿದಾಗ ಆಗಸ್ಟ್ ೧೫ರಂದು ಅಣೆಕಟ್ಟಿನ ತೂಬುಗಳನ್ನು (ಸ್ಲೂಸ್ ಗೇಟ್) ತೆರೆಯಲಾಗಿತ್ತು. ಪ್ರವಾಹದ ನೀರಿನ ಬಹುಭಾಗವನ್ನು ಸಮುದ್ರ ಸೇರುವಂತೆ ಬಿಡುಗಡೆ ಮಾಡುವ ಮೂಲಕ ಕೇರಳ ಸರ್ಕಾರವು ಪರಿಸ್ಥಿತಿಯನ್ನು ನಿರ್ವಹಿಸುತ್ತಾ ಬಂದಿತ್ತು. ’ಎರಡು ದೊಡ್ಡ ಜಲಾಶಯಗಳಾದ ಇಡುಕ್ಕಿ ಮತ್ತು ಇದಮಲಯಾರ್ ಜಲಾಶಯಗಳಿಂದ ಹೊರಹೋಗುವ ನೀರಿನ ಮೇಲೆ ಬಿಗಿ ಕಾರ್‍ಯ ನಿರ್ವಹಣಾ ನಿಯಂತ್ರಣ ಇಟ್ಟುಕೊಳ್ಳುವ ಮೂಲಕ ಇದನ್ನು ಸಾಧಿಸಲಾಗಿತ್ತು ಎಂದು ಸುಪ್ರೀಂಕೋರ್ಟಿಗೆ ಸಲ್ಲಿಸಲಾದ ಪ್ರಮಾಣಪತ್ರದಲ್ಲಿ ಕೇರಳ ತಿಳಿಸಿತು.  ಪೆರಿಯಾರ್ ಜಲಾನಯನ ಪ್ರದೇಶದಲ್ಲಿನ ಮೂರನೇ ದೊಡ್ಡ ಜಲಾಶಯವಾದ ಮುಲ್ಲ ಪೆರಿಯಾರ್ ಅಣೆಕಟ್ಟಿನಿಂದ ದಿಢೀರನೆ ನೀರು ಬಿಡುಗಡೆ ಮಾಡಿದ್ದರಿಂದ ಕೇರಳ ಸರ್ಕಾರವು ಇಡುಕ್ಕಿ ಜಲಾಶಯದಿಂದ ಹೆಚ್ಚಿನ ನೀರನ್ನು ಬಿಡುಗಡೆ ಮಾಡಬೇಕಾಯಿತು. ಇದು ಮಹಾಪೂರಕ್ಕೆ ಮುಖ್ಯ ಕಾರಣಗಳಲ್ಲಿ ಒಂದು ಎಂದು ಪ್ರಮಾಣಪತ್ರ ಹೇಳಿತು. ೨೦೧೪ರ ಮೇ ತಿಂಗಳಲ್ಲಿ ಸುಪ್ರೀಂಕೋರ್ಟ್ ನೀಡಿರುವ ನಿರ್ದೇಶನವು ತನಗೆ ನೀರಿನ ಮಟ್ಟವನ್ನು ೧೪೨ ಅಡಿಗಳಿಗೆ ಏರಿಸಲು ಅನುಮತಿ ನೀಡಿದೆ ಎಂದು ಪ್ರತಿಪಾದಿಸಿರುವ ತಮಿಳುನಾಡು ಸರ್ಕಾರವು ಶುಕ್ರವಾರ ಅಣೆಕಟ್ಟು ನಿರ್ವಹಣೆಗೆ ಸಂಬಂಧಿಸಿದಂತೆ ತನ್ನ ರಕ್ಷಣಾತ್ಮಕ ವಾದವನ್ನು ನ್ಯಾಯಾಲಯದ ಮುಂದಿಡಲಿದೆ. ವಿಜಯನ್ ಸರ್ಕಾರವು ಅಣೆಕಟ್ಟುಗಳ ತೂಬುಗಳನ್ನು ತೆರೆಯುವ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಿಲ್ಲ ಎಂದು ವಿಜಯನ್ ಸರ್ಕಾರದ ವಿರುದ್ಧ ಕಾಂಗ್ರೆಸ್ ನೇತೃತ್ವದ ಯುಡಿಎಫ್ ವಿರೋಧ ಪಕ್ಷ ಮತ್ತು ಬಿಜೆಪಿ ದೂರಿವೆ. ’ಇದು ಮಾನವ ನಿರ್ಮಿತ ದುರಂತ ಎಂದು ಉಭಯ ಪಕ್ಷಗಳೂ ಟೀಕಿಸಿದವು. ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ರಮೇಶ ಚೆನ್ನಿತ್ತಲ ಅವರು ರಾಜ್ಯದ ೪೦ಕ್ಕೂ ಹೆಚ್ಚು ಅಣೆಕಟ್ಟುಗಳ ತೂಬುಗಳನ್ನು ಏಕಕಾಲಕ್ಕೆ ತೆರೆಯುವಂತಹ ಪರಿಸ್ಥಿತಿ ಏಕೆ ಉದ್ಭವಿಸಿತು ಎಂಬ ಬಗ್ಗೆ ನ್ಯಾಯಾಗ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.  ‘ಪಂಬಾ ನದಿಯ ೯ ಅಣೆಕಟ್ಟುಗಳು, ಪೆರಿಯಾರ್ ನದಿಯ ಇಡುಕ್ಕಿ ಮತ್ತು ಎರ್ನಾಕುಲಂ ಜಿಲ್ಲೆಗಳಲ್ಲಿನ ೧೧ ಅಣೆಕಟ್ಟುಗಳು ಮತ್ತು ತ್ರಿಶ್ಯೂರಿನ ಚಲಕುಡಿ ನದಿಯ ೬ ಅಣೆಕಟ್ಟುಗಳಿಂದ ನೀರು ಬಿಟ್ಟಾಗ ಯಾವ ಪ್ರದೇಶಗಳು ಜಲಾವೃತಗೊಳ್ಳುತ್ತವೆ ಎಂಬ ಕಲ್ಪನೆಯೇ ಸರ್ಕಾರಕ್ಕೆ ಇರಲಿಲ್ಲ ಎಂದು ಅವರು ಹೇಳಿದರು. ಈ ವರ್ಷ ಮಳೆಯ ಪ್ರಮಾಣ ಶೇಕಡಾ ೪೧.೪೪ರಷ್ಟು ಹೆಚ್ಚಾಗಿದ್ದರೂ, ಪ್ರವಾಹ ಪರಿಸ್ಥಿತಿ ಅಷ್ಟೊಂದು ಬಿಗಡಾಯಿಸಿದ್ದು ಮಳೆಯ ಕಾರಣದಿಂದ ಅಲ್ಲ. ಬದಲಿಗೆ ಏಕ ಕಾಲಕ್ಕೆ ೪೪ ಅಣೆಕಟ್ಟುಗಳ ತೂಬುಗಳನ್ನು ಮುನ್ಸೂಚನೆ ನೀಡದೆ ತೆರೆದ ಕಾರಣಕ್ಕೆ ಎಂದು ಕಾಂಗ್ರೆಸ್ ನಾಯಕ ದೂರಿದರು. ’ಇದು ಮಾನವ ನಿರ್ಮಿತ ದುರಂತ ಎಂದು ಚೆನ್ನಿತ್ತಲ ಹೇಳಿದರು. ಭಾರತೀಯ ಜನತಾ ಪಕ್ಷದ (ಬಿಜೆಪಿ) ರಆಜ್ಯ ಘಟಕ ಅಧ್ಯಕ್ಷ ಪಿ.ಎಸ್. ಶ್ರೀಧರನ್ ಪಿಳ್ಳೈ ಅವರೂ ಪಿಣರಾಯಿ ವಿಜಯನ್ ಸರ್ಕಾರ ಪ್ರವಾಹ ಪ್ರಕೋಪಕ್ಕೆ ಕಾರಣ. ಸರ್ಕಾರಕ್ಕೆ ದೂರದೃಷ್ಟಿ ಇರಲಿಲ್ಲ ಎಂದು ಟೀಕಿಸಿದರು.

2018: ನವದೆಹಲಿ: ಜಲಪ್ರಳಯದ ರುದ್ರ ನರ್ತನದಿಂದ ನಲುಗಿದ ಕೇರಳಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ ಮುಂದಿಟ್ಟಿರುವ ೭೦೦ ಕೋಟಿ ರೂಪಾಯಿ ನೆರವಿನ ಭರವಸೆ ವಿಚಾರದಲ್ಲಿ ಅಗತ್ಯ ಬಿದ್ದಲ್ಲಿ ತಾವು ಕೇಂದ್ರದ ಜೊತೆಗೆ ಮಾತುಕತೆ ನಡೆಸುವುದಾಗಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು.  ‘ಯುಎಇ ನೆರವಿನ ಘೋಷಣೆ ಆದ ತತ್ ಕ್ಷಣ ಪ್ರಧಾನಿ ನರೇಂದ್ರ ಮೋದಿ ಅವರು ಇದು ಅತ್ಯಂತ ಸ್ವಾಗತಾರ್ಹ ಕೊಡುಗೆ ಎಂದು ಟ್ವೀಟ್ ಮಾಡಿದ್ದರು. ಈಗ ಬರುತ್ತಿರುವ ಮಾಧ್ಯಮ ವರದಿಗಳ ಹಿನ್ನೆಲೆಯಲ್ಲಿ ಅಗತ್ಯ ಬಿದ್ದಲ್ಲಿ ನಾವು ಪ್ರಧಾನಿಯವರ ಜೊತೆ ಮಾತನಾಡುತ್ತೇವೆ ಎಂದು ವಿಜಯನ್ ವರದಿಗಾರರ ಜೊತೆ ಮಾತನಾಡುತ್ತಾ ಹೇಳಿದರು. ಇದಕ್ಕೂ ಮುನ್ನ ವಿಜಯನ್ ಅವರು ’ಯುನೈಟೆಡ್ ಅರಬ್ ಎಮಿರೇಟ್ಸ್ ದೇಶವನ್ನು ಇತರ ದೇಶಗಳಂತೆ ಪರಿಗಣಿಸಬಾರದು, ಏಕೆಂದರೆ ಭಾರತೀಯರು, ವಿಶೇಷವಾಗಿ ಕೇರಳೀಯರು ಆ ರಾಷ್ಟ್ರ ನಿರ್ಮಾಣಕ್ಕೆ ಮಹತ್ವದ ಕೊಡುಗೆ ಕೊಟ್ಟಿದ್ದಾರೆ ಎಂದು ಹೇಳಿದ್ದರು.  ಕಳೆದ ೧೪ ವರ್ಷಗಳಲ್ಲಿ ಭಾರತವು ರಷ್ಯಾ, ಅಮೆರಿಕ, ಜಪಾನ್ ನೆರವನ್ನು ನಿರಾಕರಿಸಿದೆ. ೨೦೧೩ರಲ್ಲಿ ಉತ್ತರಾಖಂಡ ಪ್ರವಾಹ ಸಂದರ್ಭದಲ್ಲಿ, ೨೦೦೫ರಲ್ಲಿ ಕಾಶ್ಮೀರ ಭೂಕಂಪ, ೨೦೧೪ರಲ್ಲಿ ಕಾಶ್ಮೀರ ಪ್ರವಾಹ ಕಾಲದಲ್ಲಿ ಭಾರತವು ವಿದೇಶೀ ನೆರವನ್ನು ನಿರಾಕರಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವಾರ ತಮ್ಮ ಕೇರಳ ಭೇಟಿ ಸಂದರ್ಭದಲ್ಲಿ ೫೦೦ ಕೋಟಿ ರೂಪಾಯಿಗಳ ಹೆಚ್ಚುವರಿ ನೆರವನ್ನು ಕೇರಳ  ಪ್ರವಾಹ ಪರಿಹಾರ ಕಾರ್‍ಯಕ್ಕೆ ಪ್ರಕಟಿಸಿದ್ದರು. ಇದಕ್ಕೆ ಮುನ್ನ ಗೃಹ ಸಚಿವ ರಾಜನಾಥ್ ಸಿಂಗ್ ಅವರು ೧೦೦ ಕೋಟಿ ರೂಪಾಯಿಗಳ ನೆರವು ಘೋಷಿಸಿದ್ದರು. ಕೇರಳ ೨೬೦೦ ಕೋಟಿ ರೂಪಾಯಿಗಳ ನೆರವು ಕೇಳಿತ್ತು. ಮರುನಿರ್ಮಾಣಕ್ಕೆ  ವಿದೇಶೀ ನೆರವು ಪಡೆಯಬಹುದು: ನೈಸರ್ಗಿಕ ವಿಪತ್ತಿನ ಸಂದರ್ಭಗಳಲ್ಲಿ ತತ್ ಕ್ಷಣದ ಪರಿಹಾರಕ್ಕೆ ಹಿಂದಿನ ಯುಪಿಎ ಸರ್ಕಾರ ವಿದೇಶೀ ಸಂಸ್ಥೆಗಳ ನೆರವು ಕೋರಿರಲಿಲ್ಲ. ಆದರೆ ವಿಪತ್ತು ಪೀಡಿದ ಪ್ರದೇಶಗಳಲ್ಲಿ ಮರುನಿರ್ಮಾಣ ಕಾರ್ಯಕ್ಕೆ ವಿದೇಶೀ ನೆರವು ಸ್ವೀಕರಿಸಲು ಅದು ಮುಕ್ತ ಮನಸ್ಸು ಹೊಂದಿತ್ತು ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಮಾಜಿ ಮಾಧ್ಯಮ ಸಲಹೆಗಾರ ಸಂಜಯ್ ಬರು ಮಾಧ್ಯಮ ಒಂದಕ್ಕೆ ತಿಳಿಸಿದರು.  ಅಭಿವೃದ್ಧಿ ನೆರವಿನ ನಿಯಮಗಳನ್ನು ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಕಾಲದಲ್ಲಿ ಬದಲಾಯಿಸಲಾಗಿತ್ತು. ೨೦೦೪ರಲ್ಲಿ ಮನಮೋಹನ್ ಸಿಂಗ್ ಅವರು ವಿದೇಶೀ ನೆರವಿನ ಭಾಗವಾಗಿ ರಾಷ್ಟ್ರದಲ್ಲಿನ ವಿದೇಶೀ ಸಂಸ್ಥೆಗಳ ಹಾಜರಾತಿಯನ್ನು ತಡೆಯಲು ಹೇಳಿದ್ದರಷ್ಟೆ ಎಂದು ಬರು ನುಡಿದರು.  ‘ವಿದೇಶೀ ರಾಷ್ಟ್ರಗಳಿದ ನೆರವು ಸ್ವೀಕರಿಸದಂತೆ ಸರ್ಕಾರವನ್ನು ತಡೆಯುವಂತಹುದು ಏನೂ ಇಲ್ಲ. ಕೇರಳಕ್ಕೆ ದೀರ್ಘಾವಧಿಯ ಮರುನಿರ್ಮಾಣ ಕಾರ್‍ಯದ ಅಗತ್ಯವಿದೆ ಮತ್ತು ಅದಕ್ಕೆ ಅವರಿಗೆ ಈ ಹಣಕಾಸು ನೆರವಿನ ಅಗತ್ಯವಿದೆ. ಹಾಗಿರುವಾಗ ಅವರ (ಯುಎಇ) ನೆರವು ಸ್ವೀಕರಿಸುವುದರಲ್ಲಿ ತಪ್ಪೇನಿದೆ?’ ಎಂದು ಬರು ಪ್ರಶ್ನಿಸಿದರು. ಕೊಲ್ಲಿ ರಾಷ್ಟ್ರ ಮತ್ತು ಕೇರಳ ಮಧ್ಯೆ ವಿಶಿಷ್ಟವಾದ ಬಾಂಧವ್ಯವಿದೆ ಎಂದೂ ಅವರು ಈದಿನದ ತಮ್ಮ ಟ್ಟೀಟಿನಲ್ಲಿ ತಿಳಿಸಿದ್ದರು. ಕೇಂದ್ರ ಸರ್ಕಾರವು ಬುಧವಾರ ಪ್ರವಾಹ ಪೀಡಿತ ಕೇರಳಕ್ಕೆ ಇತರ ದೇಶಗಳಿಂದ ಹಣಕಾಸು ನೆರವು ಸ್ವೀಕರಿಸಲು ನಿರಾಕರಿಸಿತ್ತು. ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ದೇಶದಲ್ಲಿ ಸುಮಾರು ೨.೮ ದಶಲಕ್ಷ ಮಂದಿ ಭಾರತೀಯರು ಇದ್ದು, ಅವರನ್ನು ಬಹುತೇಕ ಮಂದಿ ಕೇರಳೀಯರು. ಈ ಹಿನ್ನೆಲೆಯಲ್ಲಿ ಯುಎಇ ಕೇರಳಕ್ಕೆ ೭೦೦ ಕೋಟಿ ರೂಪಾಯಿ ನೆರವಿನ ಕೊಡುಗೆ ಮುಂದಿಟ್ಟಿತ್ತು.  ‘ಭೀಕರ ಪ್ರವಾಹದ ಬಳಿಕ ಹಲವಾರು ರಾಷ್ಟ್ರಗಳು ಪರಿಹಾರ ಮತ್ತು ಪುನರ್ ವಸತಿ ಯತ್ನಗಳಿಗೆ ನೆರವು ನೀಡುವ ಕೊಡುಗೆ ಮುಂದಿಟ್ಟಿರುವುದನ್ನು ಭಾರತ ಸರ್ಕಾರವು ಗಾಢವಾಗಿ ಮೆಚ್ಚುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಪ್ರಶ್ನೆಗಳಿಗೆ ಉತ್ತರವಾಗಿ ಹೇಳಿದ್ದರು.  ‘ಆದರೆ, ಹಾಲಿ ನೀತಿಗೆ ಅನುಗುಣವಾಗಿ ಸರ್ಕಾರವು ಪರಿಹಾರ ಮತ್ತು ಪುನರ್ ವಸತಿ ಅಗತ್ಯಗಳನ್ನು ದೇಶೀಯ ಪ್ರಯತ್ನಗಳ ಮೂಲಕವೇ ಬರಿಸಲು ಬದ್ಧವಾಗಿದೆ ಎಂದು ಕುಮಾರ್ ಹೇಳಿದ್ದರು. ಏನಿದ್ದರೂ, ಪ್ರಧಾನ ಮಂತ್ರಿಯವರ ಪರಿಹಾರ ನಿಧಿ ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಅನಿವಾಸಿ ಭಾರತೀಯರು (ಎನ್ ಆರ್ ಐ), ಪಿಐಒ ಮತ್ತು ಫೌಂಡೇಶನ್‌ಗಳಂತಹ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ  ಯಾವುದೇ ದೇಣಿಗೆ ಸ್ವಾಗತಾರ್ಹ ಎಂದು ಅವರು ಸ್ಪಷ್ಟ ಪಡಿಸಿದ್ದರು.  ವಿದೇಶೀ ನೆರವಿಗೆ ಅನುಮತಿ ನೀಡುವಂತೆ ಕೇರಳದ ವಿವಿಧ ರಾಜಕೀಯ ಪಕ್ಷಗಳ ನಾಯಕರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದರು. ಯುಎಇ ಹೊರತಾಗಿ ಖತಾರ್ ೩೬ ಕೋಟಿ ಮತ್ತು ಮಾಲ್ದೀವ್ಸ್ ೫೦,೦೦೦ ಡಾಲರ್ ಹಣಕಾಸು ನೆರವನ್ನು ಕೇರಳಕ್ಕೆ ನೀಡಲು ಮುಂದೆ ಬಂದಿದ್ದವು. ಈ ಮಧ್ಯೆ ಭಾರತವು ಕೇರಳದ ಪ್ರವಾಹ ಪರಿಹಾರಕ್ಕೆ ಸಾಗರದಾಚೆಯ ರಾಷ್ಟ್ರಗಳ ಪರಿಹಾರ ಸ್ವೀಕರಿಸದೇ ಇರುವ ಬಗ್ಗೆ ನವದೆಹಲಿಯಲ್ಲಿನ ಥಾಯ್ಲೆಂಡಿನ ರಾಯಭಾರಿ ಟ್ವೀಟ್ ಮಾಡಿದ್ದರು.  ‘ಕೇರಳ ಪ್ರವಾಹ ಪರಿಹಾರಕ್ಕಾಗಿ ಸಾಗರದಾಚೆಯ ದೇಣಿಗೆಗಳನ್ನು ಸ್ಚೀಕರಿಸದೇ ಇರುವ ಬಗ್ಗೆ ಭಾರತ ಸರ್ಕಾರ ವಿಷಾದಸಹಿತವಾಗಿ ತಿಳಿಸಿದೆ.  ಭಾರತದ ಜನರೇ ನಮ್ಮ ಹೃದಯಗಳು ನಿಮ್ಮೊಂದಿಗೆ ಇವೆ ಎಂದು ಥಾಯ್ಲೆಂಡಿನ ರಾಯಭಾರಿ ಚುಟಿನ್ ಟೋರ್ನ್ ಗೊಂಗ್ಸಾಕ್ಡಿ ಹೇಳಿದ್ದಾರು. ಈ ಮಧ್ಯೆ ದಕ್ಷಿಣ ನೌಕಾ ಕಮಾಂಡ್ ಕೇರಳದ ಪ್ರವಾಹ ಪೀಡಿತ ಪ್ರದೇಶಗಳಲಿ ತನ್ನ ೧೪ ದಿನಗಳ ರಕ್ಷಣಾ ಕಾರ್‍ಯಾಚರಣೆಯನ್ನು ಮುಕ್ತಾಯಗೊಳಿಸಿತು. ನೀರು ಇಳಿಮುಖವಾಗುತ್ತಿದ್ದು, ತೆರವು ಕಾರ್ಯಕ್ಕೆ ಹೆಚ್ಚಿನ ಮನವಿ ಬಂದಿಲ್ಲವಾದ ಕಾರಣ ನೌಕಾ ಕಮಾಂಡ್ ಈ ನಿರ್ಧಾರ ಕೈಗೊಂಡಿತು. ನೌಕಾ ಕಮಾಂಡ್ ಸಿಬ್ಬಂದಿ ಆಗಸ್ಟ್ ೯ರಂದು ಆರಂಭಿಸಿದ್ದ  ’ಆಪರೇಷನ್ ಮದದ್ ಕಾರ್‍ಯಾಚರಣೆಯಲ್ಲಿ ಒಟ್ಟು ೧೬,೦೦೫ ಮಂದಿಯನ್ನು ರಕ್ಷಿಸಿದ್ದಾರೆ. ವಿಪತ್ತು ಪರಿಹಾರ ಕಾರ್‍ಯಾಚರಣೆಯಲ್ಲಿ ಸೇನೆ ರಾಜ್ಯ ಆಡಳಿತಕ್ಕೆ ನೆರವಾಗಿತ್ತು.

2018: ಜುಜ್ವಾ (ಗುಜರಾತ್): ೨೦೨೨ರಲ್ಲಿ ಭಾರತವು ೭೫ನೇ ಸ್ವಾತಂತ್ರ್ಯೋತ್ಸವ ಆಚರಿಸುವ ವೇಳೆಗೆ ದೇಶದ ಪ್ರತಿಯೊಂದು ಕುಟುಂಬವೂ ತನ್ನ ಸ್ವಂತ ಮನೆ ಹೊಂದಿರಬೇಕು ಎಂಬುದು ತಮ್ಮ ಕನಸು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಹೇಳಿದರು. ‘ಪ್ರಧಾನ ಮಂತ್ರಿ ಆವಾಸ್ ಯೋಜನಾ ಅಡಿಯಲ್ಲಿ ನಿರ್ಮಾಣಗೊಂಡ ಮನೆಗಳು ಉನ್ನತ ಗುಣಮಟ್ಟದ್ದಾಗಿದ್ದು, ಯಾರೊಬ್ಬರೂ ಒಂದು ರೂಪಾಯಿ ಲಂಚ ಕೊಡಬೇಕಾದ ಅಗತ್ಯ ಇಲ್ಲ ಎಂದು ಗುಜರಾತಿನ ವಲ್ಸದ್ ಪಟ್ಟಣದ ಜುಜ್ವಾ ಗ್ರಾಮದಲ್ಲಿ ಯೋಜನೆಯ ಫಲಾನುಭವಿಗಳ ಜೊತೆ ಸಂವಹನ ನಡೆಸುತ್ತಾ ಪ್ರಧಾನಿ ನುಡಿದರು. ಗುಜರಾತ್ ನನಗೆ ಬಹಳಷ್ಟನ್ನು ಕಲಿಸಿದೆ. ಈ ಪಾಠವು ನನಗೆ ಕನಸುಗಳನ್ನು ನಿರ್ದಿಷ್ಟ ಸಮಯದ ಒಳಗೆ ನನಸಾಗಿಸುವುದನ್ನು ಕೂಡಾ ಹೇಳಿಕೊಟ್ಟಿದೆ. ೨೦೨೨ರಲ್ಲಿ ಭಾರತವು ೭೫ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವ ಹೊತ್ತಿಗೆ ತನ್ನ ಸ್ವಂತ ಮನೆ ಇಲ್ಲದ ಕುಟುಂಬ ಇರಬಾರದು ಎಂಬುದು ನನ್ನ ಕನಸು ಎಂದು ಅವರು ಹೇಳಿದರು.  ಬೆವರಹನಿಯಿಂದ ಕಟ್ಟಿದ ಮನೆ: ವಸತಿ ಯೋಜನೆಯ ಫಲಾನುಭವಿಗಳ ಜೊತೆ ವಿಡಿಯೋ ಕಾನ್ಪರೆನ್ಸಿಂಗ್ ಮೂಲಕ ಸಂವಹನ ನಡೆಸಿದ ಪ್ರಧಾನಿ ’ತಮಗೆ ನಿಯಮಗಳಿಗೆ ಅನುಗುಣವಾಗಿ ಮನೆ ಲಭಿಸಿದೆ ಮತ್ತು ಒಂದು ರೂಪಾಯಿ ಲಂಚ ಕೋಡಬೇಕಾಗಿ ಬರಲಿಲ್ಲ ಎಂದು ತಾಯಿಂದಿರು ಮತ್ತು ಸಹೋದರಿಯರು ಈಗ ತೃಪ್ತಿ ಸಮಾಧಾನದೊಂದಿಗೆ ಹೇಳಬಹುದು ಎಂದು ನುಡಿದರು.  ’ಪ್ರಧಾನ ಮಂತ್ರಿ ಆವಾಸ್ ಯೋಜನಾ ಅಡಿಯಲ್ಲಿ ನಿರ್ಮಿಸಲಾಗಿರುವ ಮನೆಗಳ ಗುಣಮಟ್ಟವನ್ನು ನೋಡಿದರೆ ನೀವು ಸರ್ಕಾರಿ ಮನೆಗಳು ಈ ರೀತಿ ಇರಲು ಸಾಧ್ಯವಾ ಎಂದು ಯೋಚಿಸಬಹುದು. ಸರ್ಕಾರ ಹಣ ಕೊಟ್ಟಿದೆ. ಆದರೆ ಅದರ ಜೊತೆಗೆ ಈ ಮನೆಗಳನ್ನು ಕುಟುಂಬದ ಬೆವರಿನಿಂದ ಕಟ್ಟಲಾಗಿದೆ ಎಂದು ಮೋದಿ ಹೇಳಿದರು.  ‘ಮನೆ ಹೇಗಿರಬೇಕು, ಯಾವು ವಸ್ತುಗಳನ್ನು ಬಳಸಬೇಕು ಮತ್ತು ಅದನ್ನು ಹೇಗೆ ಕಟ್ಟಬೇಕು ಎಂದು ಕುಟುಂಬ ನಿರ್ಧರಿಸುತ್ತದೆ. ನಮಗೆ ಕಾಂಟ್ರಾಕ್ಟರುಗಳಲ್ಲಿ ನಂಬಿಕೆ ಇಲ್ಲ, ಆದರೆ ಕುಟುಂಬಗಳ ಮೇಲೆ ವಿಶ್ವಾಸ ಇದೆ. ಕುಟುಂಬವೇ ತನ್ನ ಮನೆಯನ್ನು ನಿರ್ಮಿಸಿದಾಗ ಅದು ಅತ್ಯುತ್ತಮವಾದುದನ್ನೇ ನಿರ್ಮಿಸುತ್ತದೆ ಎಂದು ಮೋದಿ ನುಡಿದರು.  ಕೇಂದ್ರದ ಅಚ್ಚುಮೆಚ್ಚಿನ ಯೋಜನೆಯ ಅಡಿಯಲ್ಲಿ ಗುಜರಾತಿನಲ್ಲಿ ೧ ಲಕ್ಷಕ್ಕೂ ಹೆಚ್ಚು ಮನೆಗಳನ್ನು ನಿರ್ಮಿಸಲಾಗಿದೆ. ಪ್ರಧಾನಿಯವರು ಗುರುವಾರ ಬೆಳಗ್ಗೆ ಗುಜರಾತಿಗೆ ಒಂದು ದಿನ ಭೇಟಿಗಾಗಿ ಆಗಮಿಸಿ ವಲ್ಸದ್ ಗೆ ತೆರಳಿದರು. ಜುನಾಗಢದಲ್ಲಿ ಇತರ ಕೆಲವು ಯೋಜನೆಗಳ ಉದ್ಘಾಟನಾ ಕಾರ್ಯಮದಲ್ಲಿ ಅವರು ಪಾಲ್ಗೊಳ್ಳುವರು. ಗಾಂಧಿ ನಗರದಲ್ಲಿ ಗುಜರಾತ್ ವಿಧಿ ವಿಜ್ಞಾನ ವಿಶ್ವ ವಿದ್ಯಾಲಯದಲ್ಲಿ ಘಟಿಕೋತ್ಸವ ಮತ್ತು ರಾಜಭವನದಲ್ಲಿ ಸೋಮನಾಥ ದೇವಾಲಯ ಟ್ರಸ್ಟ್ ಸಭೆಯಲ್ಲಿ ಅವರು ಪಾಲ್ಗೊಳ್ಳುವರು ಎಂದು ಸುದ್ದಿ ಮೂಲಗಳು ಹೇಳಿದವು.

2018: ಲಕ್ನೋ:  ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆನೆಗರ್ ಮುಖ್ಯ ಆರೋಪಿಯಾಗಿರುವ ಉನ್ನಾವೋ ಅತ್ಯಾಚಾರ ಪ್ರಕರಣವು ಹೊಸ ತಿರುವು ಪಡೆದುಕೊಂಡಿದ್ದು, ಅಪ್ರಾಪ್ತ ಬಾಲಕಿಯ ತಂದೆಯ ಮೇಲಿನ ಹಲ್ಲೆ ಪ್ರಕರಣದ ಮುಖ್ಯ ಆರೋಪಿ ಸಾವನ್ನಪ್ಪಿದ್ದು ಬೆಳಕಿಗೆ ಬಂದಿತು. ಹಲ್ಲೆ ಪ್ರಕರಣದ ಪ್ರಮುಖ ಸಾಕ್ಷಿಯು ಸಾವನ್ನಪ್ಪಿದ್ದು, ಅಪ್ರಾಪ್ತ ಬಾಲಕಿಯ ಚಿಕ್ಕಪ್ಪ ಈ ಸಾವನ್ನು ಶಂಕಿಸುವುದರೊಂದಿಗೆ ಘಟನೆ ಬೆಳಕಿಗೆ ಬಂದಿದೆ. ’ಸಾಕ್ಷಿಯ ಕುಟುಂಬಕ್ಕೆ, ಪೊಲೀಸರಿಗೆ ಅಥವಾ ಸಿಬಿಐಗೆ ತಿಳಿಸದೆಯೇ ಮೃತನ ಶವವನ್ನು ತರಾತುರಿಯಲ್ಲಿ ದಫನ ಮಾಡಲಾಗಿದ್ದು, ಇದರಲ್ಲಿ ಏನೂ ಕಿತಾಪತಿ ನಡೆದಿದೆ ಎಂದು ಹೇಳಿರುವ ಅಪ್ರಾಪ್ತ ಬಾಲಕಿಯ ಚಿಕ್ಕಪ್ಪ ’ಶವವನ್ನು ಆಟೋಪ್ಸಿ ಸಲುವಾಗಿ ಹೊರತೆಗೆಯಬೇಕು ಎಂದು ಆಗ್ರಹಿಸಿದರು. ಆದರೆ, ವಿಚಾರಣೆಯ ಬಳಿಕ ಪ್ರಮುಖ ಸಾಕ್ಷಿ ಯೂನಸ್  ಯಕೃತ್ತಿನ (ಲಿವರ್) ರೋಗದ ಕಾರಣ ಸಾವನ್ನಪ್ಪಿರುವುದಾಗಿ ಗೊತ್ತಾಗಿದೆ ಎಂದು ಪೊಲೀಸರು ಪ್ರತಿಪಾದಿಸಿದರು. ಆರೋಪದ ಬಗ್ಗೆ ತನಿಖೆ ನಡೆಸಿದ ಸಫಿಪುರ ಸರ್ಕಲ್ ಪೊಲೀಸ್ ಅಧಿಕಾರಿ ವಿವೇಕ ರಂಜನ್ ರೈ ಅವರು ’ಮೇಲ್ನೋಟಕ್ಕೆ, ವೈದ್ಯರು ನೀಡಿದ್ದ ಔಷಧ ಚೀಟಿಗಳು, ಕುಟುಂಬ ಸದಸ್ಯರ ಹೇಳಿಕೆಗಳ ಬಳಿಕ ಯೂನಸ್ (೩೦) ಕಳೆದ ಕೆಲವು ವರ್ಷಗಳಿಂದ ಲಿವರ್ ಸಿರೋಸಿಸ್ ಕಾಯಿಲೆಯಿಂದ ಬಳಲುತ್ತಿದ್ದು, ಅದರ ಪರಿಣಾಮವಾಗಿಯೇ ಸತ್ತಿದ್ದಾನೆ ಎಂಬುದು ಬೆಳಕಿಗೆ ಬಂದಿದೆ ಎಂದು ಹೇಳಿದರು. ೨೦೧೩ರಿಂದ ಯೂನಸ್ ಗೆ ಶುಕ್ಲಗಂಜ್, ಕಾನ್ಪುರ ಮತ್ತು ಲಕ್ನೋದ ಹಲವಾರು ವೈದ್ಯರು ಚಕಿತ್ಸೆ ನೀಡಿದ್ದರು. ಆರೋಗ್ಯ ಸುಧಾರಿಸದ ಕಾರಣ ಆತನನ್ನು ಬದುಕಿಸುವ ಯತ್ನಗಳು ಫಲ ನೀಡುವುದಿಲ್ಲ ಎಂದಿದ್ದರು. ಆಗಸ್ಟ್ ೧೮ರಂದು ಆತ ಸಾವನ್ನಪ್ಪಿದ ಎಂದು ಪೊಲೀಸ್ ಅಧಿಕಾರಿ ನುಡಿದರು. ಯೂನಸ್ ಸಾವಿಗೆ ಸಂಬಂಧಿಸಿದಂತೆ ಆತನ ಕುಟುಂಬ ಸದಸ್ಯರು ದೂರು ನೀಡಿಲ್ಲ. ಆದರೆ ಅಪ್ರಾಪ್ತ ಬಾಲಕಿಯ ಚಿಕ್ಕಪ್ಪ ಪೊಲೀಸರು ಮತ್ತು ಸಿಬಿಐಗೆ ಅರ್ಜಿ ಸಲ್ಲಿಸಿ, ’ಸಂಚಿನ ಭಾಗವಾಗಿ ಯೂನಸ್ ಕೊಲೆ ನಡೆದಿದೆ ಎಂದು ಆಪಾದಿಸಿದ್ದಾರೆ ಎಂದು ರೈ ಹೇಳಿದರು. ಅಪ್ರಾಪ್ತ  ಬಾಲಕಿಯ ತಂದೆ ಈ ವರ್ಷ ಏಪ್ರಲ್ ತಿಂಗಳಲ್ಲಿ ನ್ಯಾಯಾಂಗ ವಶದಲ್ಲಿದ್ದಾಗ, ಶಾಸಕ ಕುಲದೀಪ್ ಸಿಂಗ್ ಸೆನೆಗರ್ ಸಹೋದರ ಅತುಲ್ ಸೆನೆಗರ್ ದಾಳಿಯಿಂದಾದ ಹಲ್ಲೆಯಿಂದಾದ ಗಾಯಗಳ ಪರಿಣಾಮವಾಗಿ ಸಾವನ್ನಪ್ಪಿದ್ದರು. ಹಲ್ಲೆಯ ಬಳಿಕ ಶಾಸಕರ ಕಡೆಯವರು ನೀಡಿದ್ದ ದೂರನ್ನು ಅನುಸರಿಸಿ ಅಕ್ರಮವಾಗಿ ಶಸ್ತ್ರಾಸ್ತ್ರ ಹೊಂದಿರುವ ಆಪಾದನೆಯಲ್ಲಿ ಬಾಲಕಿಯ ತಂದೆಯನ್ನು ಬಂಧಿಸಿ ಬಳಿಕ ನ್ಯಾಯಾಂಗ ವಶಕ್ಕೆ ನೀಡಲಾಗಿತ್ತು.  ಏನಿದ್ದರೂ ಯೂನಸ್ ಸಹೋದರ ಜಾನ್ ಮೊಹಮ್ಮದ್ ತನ್ನ ಸಹೋದರನ ಸಾವಿನ ಹಿಂದೆ ಸಂಚು ಇರುವ ಆರೋಪಗಳನ್ನು ತಳ್ಳಿಹಾಕಿದ್ದಾನೆ.. ಆತ ಪೊಲೀಸರಿಗೆ ಯಾವುದೇ ದೂರನ್ನೂ ನೀಡಿಲ್ಲ. ತನ್ನ ಸಹೋದರ ಕಾಯಿಲೆಯಿಂದಾಗಿ ಮೃತನಾಗಿದ್ದಾನೆ. ಆತನ ಯಕೃತ್ ಹಾನಿಗೊಂಡಿತ್ತು. ಕಳೆದ ನಾಲ್ಕು ತಿಂಗಳುಗಳಿಂದ ಆತ ಅಸ್ವಸ್ಥನಾಗಿದ್ದ, ಮೂರು ತಿಂಗಳ ಕಾಲ ಆತ ಹಾಸಿಗೆಯಿಂದ ಮೇಲಕ್ಕೆ ಎದ್ದಿರಲೇ ಇಲ್ಲ ಎಂದು ಮೊಹಮ್ಮದ್ ಹೇಳಿದ್ದಾನೆ. ಸಹೋದರನ ಶವವನ್ನು ಹೊರತೆಗೆಯಲು ಅವಕಾಶ ನೀಡಿದರೆ ೧೦-೧೨ ಲಕ್ಷ ರೂಪಾಯಿ ನೀಡುವುದಾಗಿ ಅಪ್ರಾಪ್ತ ಬಾಲಕಿಯ ಚಿಕ್ಕಪ್ಪ ತನಗೆ ಆಮಿಷ ಒಡ್ಡಿದ್ದಾನೆ. ಆದರೆ ಯಾವುದೇ ಕಾರಣಕ್ಕೂ ನನ್ನ ಸಹೋದರನ ಶವವನ್ನು ಹೊರತೆಗೆಯುವುದಿಲ್ಲ ಎಂದು ಹೇಳಿದ್ದೇನೆ ಎಂದು ಮೊಹಮ್ಮದ್ ತಿಳಿಸಿದ.

2018: ನವದೆಹಲಿ: ಖ್ಯಾತ ಬರಹಗಾರ ಮತ್ತು ಪತ್ರಕರ್ತ ಕುಲದೀಪ್ ನಯ್ಯರ್ ಅವರು ಅಲ್ಪಕಾಲದ ಅಸ್ವಸ್ಥತೆಯ ಬಳಿಕ ನವದೆಹಲಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ ೯೫ ವರ್ಷ ವಯಸ್ಸಾಗಿತ್ತು. ಪಂಜಾಬಿಯಾಗಿರುವ ನಯ್ಯರ್ ಅವರು ಸಿಯಾಲ್ ಕೋಟ್‌ನಲ್ಲಿ ೧೯೨೩ರಲ್ಲಿ ಜನಿಸಿದ್ದರು. ವರು ಲಾಹೋರ್‌ನಲ್ಲಿ ಕಾನೂನು ಪದವಿ ಪಡೆದಿದ್ದರು. ತುರ್ತು ಪರಿಸ್ಥಿತಿ ಘೋಷಣೆಯಾದಾಗ ಸೆರೆಮನೆಗೆ ತಳ್ಳಲ್ಪಟ್ಟ ಪ್ರಪ್ರಥಮ ಪತ್ರಕರ್ತ ಅವರಾಗಿದ್ದರು. ನಯ್ಯರ್ ಅವರು ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಶಾಂತಿಯುತ ಬಾಂಧವ್ಯ ಸ್ಥಾಪನೆಯಲ್ಲಿ ಅತೀವ ಆಸಕ್ತಿ ಹೊಂದಿದ್ದರು. ತಮ್ಮ ಜೀವನ ಚರಿತ್ರೆ ’ಬಿಯಾಂಡ್ ದಿ ಲೈನ್ಸ್ ಗ್ರಂಥದಲ್ಲಿ ಅವರು ತಾವು ಪಾಕಿಸ್ತಾನದ ಪರಮಾಣು ವಿಜ್ಞಾನಿ ಅಬ್ದುಲ್ ಖದೀರ್ ಖಾನ್ ಜೊತೆಗೆ ನಡೆಸಿದ್ದ ಸಂದರ್ಶನದ ಬಗ್ಗೆ ಬರೆದಿದ್ದಾರೆ. ಪಾಕಿಸ್ತಾನವು ಅಣ್ವಸ್ತ್ರ ಹೊಂದಿದೆ ಎಂಬುದಾಗಿ ಯೋಚಿಸುವುದಕ್ಕೂ ಮುನ್ನವೇ ಪಾಕಿಸ್ತಾನವು ಅಣ್ವಸ್ತ್ರವನ್ನು ಹೊಂದಿತ್ತು ಎಂಬುದಾಗಿ ಪಾಕಿಸ್ತಾನದ ಪರಮಾಣು ವಿಜ್ಞಾನಿ ಅಬ್ದುಲ್ ಖದೀರ್ ಖಾನ್ ಅವರು ಬಹಿರಂಗ ಪಡಿಸಿದ್ದ ಸಮಯದಲ್ಲಿ ಕುಲದೀಪ್ ನಯ್ಯರ್ ಅವರು ಖದೀರ್ ಖಾನ್ ಸಂದರ್ಶನ ನಡೆಸಿದ್ದರು. ಸರ್ಕಾರದಿಂದ ನಡೆಯುವ ಮಾನವ ಹಕ್ಕುಗಳ ಉಲ್ಲಂಘನೆಗಳನ್ನು ಅವರು ಪತ್ರಕರ್ತರಾಗಿ ವಿವರವಾಗಿ ದಾಖಲಿಸಿದ್ದರು.
ನಯ್ಯರ್ ಅವರು ಇಂಗ್ಲೆಂಡಿನಲ್ಲಿ ಭಾರತದ ಹೈಕಮೀಷನರ್ ಆಗಿ ಸೇವೆ ಸಲ್ಲಿಸಿದ್ದರು. ೧೯೯೭ರಲ್ಲಿ ರಾಜ್ಯಸಭೆಗೂ ನಾಮನಿರ್ದೇಶನಗೊಂಡಿದ್ದರು.
  
2017: ಬೆಂಗಳೂರು: ಬಹುಕಾಲದ ಗೆಳೆಯ ಮುಂಬೈಯ ಮುಸ್ತಫಾ ರಾಜಾ ಜತೆ ಬಹುಭಾಷಾ ನಟಿ ಪ್ರಿಯಾಮಣಿ ಬೆಂಗಳೂರಿನ ಜಯನಗರದಲ್ಲಿರುವ ರಿಜಿಸ್ಟರ್ ಕಚೇರಿಯಲ್ಲಿ ಸರಳವಾಗಿ ರಿಜಿಸ್ಟರ್ ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಜಯ ನಗರದಲ್ಲಿರುವ ಉಪನೋಂದಣಾಧಿಕಾರಿ ಕಚೇರಿಗೆ ತಂದೆ ವಾಸುದೇವ ಮಣಿ ಅಯ್ಯರ್ ಸೇರಿದಂತೆ ಕುಟುಂಬಸ್ಥರ ಜತೆ ಆಗಮಿಸಿದ್ದ ಪ್ರಿಯಾಮಣಿ ಕಳೆದ ತಿಂಗಳಲ್ಲೇ ರಿಜಿಸ್ಟರ್ ವಿವಾಹಕ್ಕೆ ಅರ್ಜಿ ಸಲ್ಲಿಸಿದ್ದರು. ರಿಜಿಸ್ಟರ್ ಮದುವೆಗೆ ಪ್ರಿಯಾಮಣಿ ಅವರು ಆಪ್ತರಿಗಷ್ಟೇ ಆಹ್ವಾನ ನೀಡಿದ್ದರು. ನಟಿ ಪ್ರಿಯಾಮಣಿ ಅವರು ಹಸಿರು, ಹಳದಿ ಬಣ್ಣದ ಸೀರೆಯನ್ನುಟ್ಟು ಸರಳವಾಗಿ ರಿಜಿಸ್ಟರ್ ಕಚೇರಿಗೆ ಆಗಮಿಸಿದ್ದರು. ಮುಸ್ತಫಾ ರಾಜಾ ತಮ್ಮ ಕುಟುಂಬಸ್ಥರ ಜತೆ ಬಂದಿದ್ದರು.

2017: ನವದೆಹಲಿ: ಏರಿಂಡಿಯಾ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕರಾಗಿರುವ (ಸಿಎಂಡಿ) ಅಶ್ವನಿ
ಲೊಹಾನಿ ಅವರನ್ನು ರೈಲ್ವೇ ಮಂಡಳಿಯ ಹೊಸ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಹಾಲಿ ಅಧ್ಯಕ್ಷ ಕೆ ಮಿತ್ತಲ್ ಅವರ ರಾಜೀನಾಮೆ ಕಾರಣ ಲೊಹಾನಿ ಅವರ ನೇಮಕಾತಿ ನಡೆಯಿತು. ಲೊಹಾನಿ ಅವರು ಓರ್ವ ಐಆರ್ಎಸ್ಎಂಇ (ಇಂಡಿಯನ್ ರೈಲ್ವೇಸ್ ಸರ್ವಿಸ್ ಆಫ್ ಮೆಕ್ಯಾನಿಕಲ್ ಇಂಜಿನಿಯರ್ಸ್)ಆಗಿದ್ದು ಲಿಮ್ಕಾ ದಾಖಲೆ ಹೊಂದಿದವರು. ಉತ್ತರ ಪ್ರದೇಶದಲ್ಲಿನ ಸರಣಿ ರೈಲು ಅವಘಡಗಳಿಂದ ದುಃಖಿತರಾದ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಈದಿನ ತಮ್ಮ ಸಚಿವ ಪದಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಭು  ಅವರನ್ನು ತಡೆದಿದ್ದರು. 
2017: ಮುಂಬೈ: 2008 ಮಾಲೇಗಾಂವ್ ಸ್ಫೋಟ ಪ್ರಕರಣದ ಆರೋಪಿ ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್
ಪುರೋಹಿತ್ ಅವರು ಒಂಬತ್ತು ವರ್ಷ ಸೆರೆವಾಸದ ಬಳಿಕ ರಾಯಗಡದ ತಾಲೋಜಾ ಜೈಲಿನಿಂದ ಬಿಡುಗಡೆಯಾದರು. ಬಿಡುಗಡೆ ಬಳಿಕ ಶ್ರೀಕಾಂತ್ ಪುರೋಹಿತ್ ಅವರನ್ನು ಸೇನಾ ಸಿಬ್ಬಂದಿ ಬಿಗಿಭದ್ರತೆಯ ನಡುವೆ ಸೇನಾ ವಾಹನದಲ್ಲಿ ಕರೆದೊಯ್ದರು. ಎರಡು ದಿನಗಳ ಹಿಂದೆಯಷ್ಟೇ ಶ್ರೀಕಾಂತ್ ಪುರೋಹಿತ್ ಅವರಿಗೆ ಸುಪ್ರೀಂ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿತ್ತು. ಹಿನ್ನೆಲೆಯಲ್ಲಿ ಜೈಲಿನ ಎಲ್ಲಾ ನಿಯಮಾವಳಿಗಳನ್ನು ಪೂರ್ಣಗೊಳಿಸಿ ಹೊರಬಂದ ಬಳಿಕ ಪುರೋಹಿತ್ ಅವರು ಪುನಃ ಸೇನೆ ಸೇರುವ ಹರ್ಷದಲ್ಲಿದ್ದರು. ನಾನು ಸೇನಾ ಸಮವಸ್ತ್ರವನ್ನು ಪುನಃ ಧರಿಸಲು ಉತ್ಸುಕನಾಗಿದ್ದೇನೆ.  ರಾಷ್ಟ್ರದ ಉತ್ತಮ ಸಂಸ್ಥೆಯಾದ ಭಾರತೀಯ ಸೇನೆಗೆ  ಮರಳುತ್ತಿರುವುದು ಖುಷಿ ತಂದಿದೆ ಎಂದು ಪುರೋಹಿತ್ ಹೇಳಿದರು.

2017: ನವದೆಹಲಿ:  ಒಮ್ಮೆಲೇ ನೇರವಾಗಿ ತ್ರಿವಳಿ ತಲಾಖ್ ನೀಡುವ ಪದ್ಧತಿಗೆ ಈಜಿಪ್ಟ್ ಮೊತ್ತ ಮೊದಲಿಗೆ ಕೊನೆ
ಹಾಡಿತ್ತು. ಬಳಿಕ 25ಕ್ಕೂ ಹೆಚ್ಚು ಮುಸ್ಲಿಮ್ ರಾಷ್ಟ್ರಗಳು ಈ ಪದ್ಧತಿಗೆ ತೆರೆ ಎಳೆದಿವೆ. ದಿನದ ಹಿಂದೆ ಭಾರತದ ಸುಪ್ರೀಂಕೋರ್ಟ್ ಕೂಡಾ ತ್ರಿವಳಿತಲಾಖ್ ಪದ್ಧತಿಯನ್ನು ರದ್ದು ಪಡಿಸಿದೆ. ಮೂರು ಬಾರಿ ತಲಾಖ್ ಹೇಳುವುದರ ನಡುವೆ ಹಲವು ಸಾಂಪ್ರದಾಯಿಕ ನಿಯಮ ಮತ್ತು ಕಾನೂನನ್ನು ಅನುಸರಿಸಬೇಕಾಗುತ್ತದೆ. ಜತೆಗೆ ಒಮ್ಮೆ ಹೇಳಿದ ತಲಾಖ್ ಅನ್ನು ರದ್ದುಪಡಿಸಲು ಕಾನೂನಿನಲ್ಲಿ ಅವಕಾಶವಿದೆ. ಇದನ್ನೇ ತುಸು ಮಾರ್ಪಾಡು ಮಾಡಿಕೊಂಡು ಹಲವು ಮುಸ್ಲಿಂ ರಾಷ್ಟ್ರಗಳು ಅಳವಡಿಸಿಕೊಂಡಿವೆ. * ಹಲವು ರಾಷ್ಟ್ರಗಳಲ್ಲಿ ನ್ಯಾಯಾಲಯದ ಸಮ್ಮುಖದಲ್ಲಿ ನೀಡಿದ ತಲಾಖ್ ಅನ್ನು ಮಾತ್ರ ಪರಿಗಣಿಸಲಾಗುತ್ತದೆ. * ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ನೇತೃತ್ವದಲ್ಲಿ ತಲಾಖ್ ಪ್ರಕ್ರಿಯೆ ನಡೆದರೆ ಮಾತ್ರ ಅದಕ್ಕೆ ಕಾನೂನಿನ ಮಾನ್ಯತೆ ನೀಡುವ ಪದ್ಧತಿಯನ್ನು ಕೆಲವು ರಾಷ್ಟ್ರಗಳು ರೂಢಿಸಿಕೊಂಡಿವೆ. * ನ್ಯಾಯಾಲಯದ ಸಮ್ಮುಖದಲ್ಲಿ ತ್ರಿವಳಿ ತಲಾಖ್ ನೀಡುವುದನ್ನು ಕೆಲವು ರಾಷ್ಟ್ರಗಳು ಮಾನ್ಯ ಮಾಡುತ್ತವೆ. ಆದರೆ ಅದಕ್ಕೂ ಮುನ್ನ ಪತಿ ತಲಾಖ್ ನೀಡಲು ಸೂಕ್ತ ಕಾರಣವನ್ನು ತಿಳಿಸಬೇಕು. ಕಾರಣವನ್ನು ನ್ಯಾಯಾಲಯ ಪರಿಶೀಲಿಸಿದ ನಂತರವಷ್ಟೇ ತಲಾಖ್ ಪ್ರಕ್ರಿಯೆ ಮುಂದುವರಿಯುತ್ತದೆ.
2008: ಮುಖ್ಯಮಂತ್ರಿ ಮಧುಕೋಡಾ ನೇತೃತ್ವದ ಸರ್ಕಾರಕ್ಕೆ ಜಾರ್ಖಂಡ್ ಮುಕ್ತಿ ಮೋರ್ಚಾ ನೀಡಿದ್ದ ತನ್ನ ಬೆಂಬಲ ವಾಪಾಸು ಪಡೆದ ಹಿನ್ನೆಲೆಯಲ್ಲಿ ಮಧು ಕೋಡಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದರಿಂದಾಗಿ ಜಾರ್ಖಂಡಿನಲ್ಲಿ 12 ದಿನಗಳಿಂದ ನಡೆಯುತ್ತಿದ್ದ ರಾಜಕೀಯ ಪ್ರಹಸನಕ್ಕೆ ತೆರೆಬಿದ್ದಿತು. ಈದಿನ ಬೆಳಿಗ್ಗೆ ನವದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾದ ಬೆನ್ನಲ್ಲೇ ರಾಂಚಿಗೆ ಆಗಮಿಸಿದ ಕೋಡಾ ರಾಜ್ಯಪಾಲ ಸೈಯದ್ ಸಿಬ್ತೆ ರಝಿ ಅವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಪತ್ರ ಸಲ್ಲಿಸಿದರು.

2007: ಪಾಕಿಸ್ಥಾನ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಅವರಿಗೆ ಮುಖಭಂಗವಾಗುವಂತೆ ಪಾಕಿಸ್ಥಾನಿ ಸುಪ್ರೀಂಕೋರ್ಟ್ ಮಹತ್ವದ ತೀರ್ಪಿನಲ್ಲಿ ಮಾಜಿ ಪ್ರಧಾನಿ ನವಾಜ್ ಷರೀಫ್ ಹಾಗೂ ಅವರ ಸಹೋದರ ಶಹಬಾಜ್ ಅವರಿಗೆ ಸ್ವದೇಶಕ್ಕೆ ಮರಳಲು ಅನುಮತಿ ನೀಡಿತು. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧುರಿ ನೇತೃತ್ವದ ಏಳು ನ್ಯಾಯಮೂರ್ತಿಗಳನ್ನು ಒಳಗೊಂಡ ನ್ಯಾಯಪೀಠವು ಷರೀಫ್ ಸಹೋದರರ ಕುರಿತು ಒಮ್ಮತದ ತೀರ್ಪು ನೀಡಿ, ಸ್ವದೇಶಕ್ಕೆ ಮರಳುವುದು ಹಾಗೂ ವಾಸಿಸುವುದು ಅವರ ಜನ್ಮಸಿದ್ಧ ಹಕ್ಕಾಗಿದೆ ಎಂದು ಹೇಳಿತು. ಈ ತೀರ್ಪಿನಿಂದಾಗಿ ಈ ವರ್ಷದ ಅಂತ್ಯದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಷರೀಫ್ ಸಹೋದರರು ಪಾಲ್ಗೊಳಲು ಅವಕಾಶ ಲಭಿಸಿದಂತಾಯಿತು. 1999ರ ಅಕ್ಟೋಬರಿನಲ್ಲಿ ನಡೆದ ಸೇನಾ ಕ್ರಾಂತಿಯಲ್ಲಿ ಸೇನಾಪಡೆಯ ಮುಖ್ಯಸ್ಥರಾಗಿದ್ದ ಮುಷರಫ್, ನವಾಜ್ ಷರೀಫ್ ಅವರನ್ನು ಪ್ರಧಾನಿ ಪಟ್ಟದಿಂದ ಪದಚ್ಯುತಗೊಳಿಸಿದ್ದರು. ಅಧಿಕಾರ ಕಳೆದುಕೊಂಡ ಒಂದು ವರ್ಷದ ಬಳಿಕ ಷರೀಫ್ ಸಹೋದರರು ದೇಶತ್ಯಾಗ ಮಾಡಿ, ಸೌದಿಅರೇಬಿಯಾದಲ್ಲಿ ಭೂಗತರಾಗಿ ವಾಸಿಸುತ್ತಿದ್ದರು. ಈ ವರ್ಷದ ಅಂತ್ಯದಲ್ಲಿ ನಡೆಯುವ ಸಾರ್ವತ್ರಿಕ ಚುನಾವಣೆಯಲ್ಲಿ ಪಾಲ್ಗೊಳ್ಳಲು ತಮಗೆ ಅನುವು ಮಾಡಿಕೊಡಬೇಕು ಹಾಗೂ ಸ್ವದೇಶಕ್ಕೆ ಮರಳಲು ಅವಕಾಶ ನೀಡಬೇಕು ಎಂದು ಶರೀಫ್ ಹಾಗೂ ಅವರ ಸಹೋದರ ಶಹಬಾಜ್ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು.

2007: ಅಧಿಕಾರ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಗೊಂದಲಕಾರಿ ಹೇಳಿಕೆಗಳ ಮೂಲಕ ತಮ್ಮನ್ನು ಛೇಡಿಸುತ್ತಿರುವ ಜೆಡಿಎಸ್ ಗೆ ಚುರುಕು ಮುಟ್ಟಿಸುವುದಕ್ಕಾಗಿ ಸಂಪುಟ ಸಭೆಗೆ ಬಹಿಷ್ಕಾರ ಹಾಕಲು ಬಿಜೆಪಿ ಸಚಿವರು ವಿಫಲ ಯತ್ನ ನಡೆಸಿದರು. ಇದಕ್ಕೆ ಪ್ರತಿಯಾಗಿ ಮಧ್ಯಂತರ ಚುನಾವಣೆಗೆ ಹೋಗೋಣ ಎನ್ನುವ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಅವರ ಧಮಕಿಗೆ, ಚುನಾವಣೆಗೆ ತಾವೂ ಸಿದ್ಧ ಎನ್ನುವ ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪ್ರತಿಸವಾಲು ಹಾಕಿದ ಹಿನ್ನೆಲೆಯಲ್ಲಿ ಎರಡೂ ಪಕ್ಷಗಳು ಕೊನೆಗೆ ಸಂಧಾನಕ್ಕೆ ಶರಣಾದವು.

2007: ಕರ್ನಾಟಕ ರಾಜ್ಯ ಹೆದ್ದಾರಿಯ ಶಹಾಪುರ- ಜೇವರ್ಗಿ ರಸ್ತೆಯ ನಡುವೆ ಮೂಡಬೂಳ ಕ್ರಾಸ್ ಬಳಿ ಸಂಭವಿಸಿದ ಅಪಘಾತದಲ್ಲಿ ಗೂಡ್ಸ್ ಟೆಂಪೊ ಹಾಗೂ ಲಾರಿ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿಯಲ್ಲಿ 11 ಮಂದಿ ಮೃತರಾದರು.

2007: ಕರ್ನಾಟಕ ಏಕೀಕರಣವಾದ ಐವತ್ತು ವರ್ಷಗಳ ನಂತರ ಇದೇ ಮೊದಲ ಬಾರಿಗೆ ಹೊಸ ತಾಲೂಕುಗಳ ರಚನೆಗೆ ರಾಜ್ಯ ಸರ್ಕಾರ ಮುಂದಾಯಿತು. ರಾಜ್ಯದಲ್ಲಿ ಎಲ್ಲೆಲ್ಲಿ ಹೊಸ ತಾಲೂಕುಗಳ ರಚನೆ ಆಗಬೇಕು ಎಂಬ ಬಗ್ಗೆ ಅಧ್ಯಯನ ನಡೆಸಿ ವರದಿ ಸಲ್ಲಿಸಲು ಅಧಿಕಾರಿಗಳ ಸಮಿತಿ ರಚಿಸಲು ಸಚಿವ ಸಂಪುಟ ಸಭೆ ತೀರ್ಮಾನಿಸಿತು.

2007: ರಾಮನಗರದಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಗೃಹ ಸಚಿವ ಎಂ. ಪಿ. ಪ್ರಕಾಶ್ ಮತ್ತು ಕಂದಾಯ ಸಚಿವ ಜಗದೀಶ ಶೆಟ್ಟರ್ ಅವರು ನೂತನ ರಾಮನಗರ ಜಿಲ್ಲೆಯನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿದರು. ಹೊಸದಾಗಿ ರಚನೆಯಾಗಿರುವ ರಾಮನಗರ ಜಿಲ್ಲೆಯ ಕೇಂದ್ರಸ್ಥಾನವಾಗಿರುವ ರಾಮನಗರ ವಿಧಾನಸಭಾ ಕ್ಷೇತ್ರ ರಾಜ್ಯಕ್ಕೆ ಮೂವರು ಮುಖ್ಯಮಂತ್ರಿಗಳನ್ನು ಮತ್ತು ದೇಶಕ್ಕೆ ಒಬ್ಬ ಪ್ರಧಾನಿಯನ್ನು ನೀಡಿದ ಹೆಗ್ಗಳಿಕೆ ಗಳಿಸಿಕೊಂಡಿದೆ. ಕೆಂಗಲ್ ಹನುಮಂತಯ್ಯನವರು, ಎಚ್.ಡಿ. ದೇವೇಗೌಡರು ಹಾಗೂ ಹಾಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಏರಿಸಿದ ಕ್ಷೇತ್ರವಿದು.

2006: ಭಾರತದ ಸಾಫ್ಟ್ ವೇರ್ ರಂಗದ ದೈತ್ಯ ಸಂಸ್ಥೆಯಾಗಿರುವ ವಿಪ್ರೋದ ಅಧ್ಯಕ್ಷ ಅಜೀಂ ಪ್ರೇಮ್ ಜಿ ಅವರು ಪೋರ್ಬ್ಸ್ ಪತ್ರಿಕೆ ನಡೆಸಿದ ಸಮೀಕ್ಷೆಯಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿಶ್ವದ ಆರನೇ ದೊಡ್ಡ ಶ್ರೀಮಂತ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಒಟ್ಟು 13.3 ಶತಕೋಟಿ ಅಮೆರಿಕ ಡಾಲರ್ ಆದಾಯದೊಂದಿಗೆ ಆರನೇ ಸ್ಥಾನ ಪಡೆದಿರುವ ಪ್ರೇಮ್ ಜಿ ಗೂಗಲ್ ಸ್ಥಾಪಕ ಸರ್ಜೀ ಬ್ರಿನ್ ಮತ್ತು ಲ್ಯಾರಿ ಪೇಜ್, ಇಬೇ ಸಂಸ್ಥಾಪಕ ಪಿರ್ರಿ ಒಮಿಡ್ಯಾರ್ ಮತ್ತು ಜರ್ಮನಿಯ ಸಾಫ್ಟ್ ವೇರ್ ಕಂಪೆನಿ `ಸ್ಯಾಪ್' ಸಂಸ್ಥಾಪಕ ಹ್ಯಾಸ್ಸೋ ಪ್ಲಾಟೆನರ್ ಅವರನ್ನು ಹಿಂದೆ ಹಾಕಿದರು. 50 ಶತಕೋಟಿ ಡಾಲರ್ ನಿವ್ವಳ ಆದಾಯದ ಮೈಕ್ರೋಸಾಫ್ಟ್ ಅಧ್ಯಕ್ಷ ಬಿಲ್ ಗೇಟ್ಸ್ ಸತತ 12ನೇ ಬಾರಿ ನಂಬರ್ 1 ಶ್ರೀಮಂತ ಸ್ಥಾನ ಪಡೆದರು.

2006: ಕಾರ್ಕಳ - ಶೃಂಗೇರಿ ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಕೆರೆಕಟ್ಟೆ ವನ್ಯಜೀವಿ ವಿಭಾಗದ ಕಚೇರಿ ಮೇಲೆ ದಾಳಿ ನಡೆಸಿದ ನಕ್ಸಲೀಯರ ಗುಂಪೊಂದು ದಾಖಲೆಪತ್ರಗಳು ಮತ್ತು ಜೀಪಿಗೆ ಬೆಂಕಿ ಹಚ್ಚಿತು. ನಸುಕಿನ 1.30ರ ವೇಳೆಯಲ್ಲಿ ಈ ಘಟನೆ ನಡೆಯಿತು.

2006: ಮಾಜಿ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್ ಕರ್ನಾಟಕದ ಪಂಕಜ್ ಅಡ್ವಾಣಿ ಅವರು ಪ್ರತಿಷ್ಠಿತ ರಾಜೀವ್ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆಯಾದರು.

2006: ಹೆಸರಾಂತ ಮಲೆಯಾಳಿ ಕವಿ ಡಾ. ಕೆ. ಅಯ್ಯಪ್ಪ ಫಣಿಕ್ಕರ್ (76) ತಿರುವನಂತಪುರದಲ್ಲಿ ನಿಧನರಾದರು. ಕೇರಳ ವಿಶ್ವವಿದ್ಯಾಲಯ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾಗಿದ್ದ ಅವರು ಭಾರತೀಯ ಸಾಹಿತ್ಯ, ಪಾಶ್ಚಾತ್ಯ ಸಾಹಿತ್ಯ, ಕಲೆ ಬಗ್ಗೆ ಅಧಿಕೃತವಾಗಿ ಮಾತನಾಡಬಲ್ಲ ವಿದ್ವಾಂಸರಾಗಿದ್ದರು. ಮಲೆಯಾಳಿ ಸಾಹಿತ್ಯದ ಮೇಲೆ ಅಚ್ಚಳಿಯದ ಪ್ರಭಾವ ಬೀರಿದ್ದ ಫಣಿಕ್ಕರ್ ಅವರ `ಕುರುಕ್ಷೇತ್ರಂ' ಕಾವ್ಯ ಮಲೆಯಾಳಿ ಸಾಹಿತ್ಯಕ್ಕೆ ತಿರುವು ತಂದ ಕೃತಿ.

2006: ಪಾಕಿಸ್ಥಾನದ ಮಾಜಿ ಕ್ರಿಕೆಟ್ ಪಟು ವಾಸಿಂ ರಾಜಾ (54) ಅವರು ಲಂಡನ್ನಿನಲ್ಲಿ ಪ್ರದರ್ಶನ ಕ್ರಿಕೆಟ್ ಪಂದ್ಯವೊಂದರಲ್ಲಿ ಆಡುತ್ತಿದ್ದಾಗ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಮೈದಾನದಲ್ಲೇ ಕುಸಿದು ಬಿದ್ದು ಮೃತರಾದರು.

1949: ಸಾಹಿತಿ ಎಂ.ವಿ. ಶರ್ಮ ತದ್ದಲಸೆ ಜನನ.

1947: ಸರ್ದಾರ ವಲ್ಲಭಭಾಯಿ ಪಟೇಲ್ ಅವರು ಜವಾಹರಲಾಲ್ ನೆಹರೂ ಸಂಪುಟದಲ್ಲಿ ಉಪ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಭಾರತದ ಮೊದಲ ಉಪ ಪ್ರಧಾನಿಯಾಗಿ ಹಾಗೂ ಗೃಹ ಸಚಿವರಾಗಿ, ಹರಿದು ಹಂಚಿಹೋಗಿದ್ದ ಭಾರತದ ರಾಜ್ಯಗಳನ್ನು ಒಂದುಗೂಡಿಸಿ `ಉಕ್ಕಿನ ಮನುಷ್ಯ' ಎಂಬ ಖ್ಯಾತಿಗೆ ಪಾತ್ರರಾದ ಸರ್ದಾರ್ ಪಟೇಲ್ ಅವರು ಭಾರತದ ಸ್ವಾತಂತ್ರ್ಯ ಹೋರಾಟದ ಅಗ್ರಗಣ್ಯ ನಾಯಕರಲ್ಲಿ ಒಬ್ಬರು.

1947: ಭಾರತೀಯ ಚಿತ್ರನಟಿ ಸಾಯಿರಾಬಾನು ಜನ್ಮದಿನ. ಈಕೆಯ ಮದುವೆ ಬಾಲಿವುಡ್ ನಟ ದಿಲೀಪ್ ಕುಮಾರ್ ಜೊತೆ ನಡೆಯಿತು.

1943: ಇತಿಹಾಸದಲ್ಲೇ ಅತಿದೊಡ್ಡ `ಟ್ಯಾಂಕ್ ಸಮರ' ಎಂದೇ ಖ್ಯಾತಿ ಪಡೆದ `ಕರ್ಸ್ಕ್ ಕದನ' ಕೊನೆಗೊಂಡಿತು. 6000 ಟ್ಯಾಂಕುಗಳು, 2 ಲಕ್ಷ ಪಡೆಗಳು ಮತ್ತು 4000 ಯುದ್ಧ ವಿಮಾನಗಳನ್ನು ಈ ಕದನದಲ್ಲಿ ಬಳಸಲಾಗಿತ್ತು. ಜುಲೈ 5ರಂದು ಆರಂಭವಾದ ಈ ಕದನ ಎರಡನೇ ಜಾಗತಿಕ ಸಮರ ಕಾಲದಲ್ಲಿ ರಷ್ಯದ ಪಶ್ಚಿಮ ಭಾಗದಲ್ಲಿ ಜರ್ಮನಿ ನಡೆಸಿದ ಅಯಶಸ್ವಿ ದಾಳಿ ಎನಿಸಿತು. ಕರ್ಸ್ಕ್ ನಗರಕ್ಕಾಗಿ ನಡೆದ ಈ ಕದನದ ಸೋಲು ಜರ್ಮನಿಯ ದಾಳಿ ಸಾಮರ್ಥ್ಯವನ್ನು ಕುಗ್ಗಿಸಿ, ಅದರ ಪೂರ್ವ ಭಾಗದ ಮೇಲಿನ 1944-45ರ ಸೋವಿಯತ್ ದಾಳಿಗಳಿಗೆ ದಾರಿ ಸುಗಮಗೊಳಿಸಿತು.

1944: ರೊಮೇನಿಯಾದ ರಾಜ ಮೈಕೆಲ್ ಅವರು ಪ್ರಧಾನಿ ಅಯೋನ್ ಅಂಟೋನೆಸ್ಕ್ ಅವರನ್ನು ಅಧಿಕಾರದಿಂದ ಪದಚ್ಯುತಗೊಳಿಸಿದರು.

1930: ಸಾಹಿತಿ ಕೆ.ಎಸ್. ಆಮೂರ ಜನನ.

1930: ಸಾಹಿತಿ ಲಲಿತಾ ವೃಷಭೇಂದ್ರ ಸ್ವಾಮಿ ಜನನ.

1926: ಇಟಲಿ ಸಂಜಾತ ಅಮೆರಿಕನ್ ಚಲನಚಿತ್ರ ನಟ ರುಡಾಲ್ಫ್ ವ್ಯಾಲೆಂಟಿನೊ ತಮ್ಮ 31ನೇ ವಯಸ್ಸಿನಲ್ಲಿ ಅಲ್ಸರ್ ಪರಿಣಾಮವಾಗಿ ಮೃತರಾದರು. ಆ ಕಾಲದ `ಗ್ರೇಟ್ ಲವರ್' ಎಂದೇ ಖ್ಯಾತಿ ಪಡೆದಿದ್ದ ಇವರ ಸಾವು ಸಾಮೂಹಿಕ ಹಿಸ್ಟೀರಿಯಾ ಮತ್ತು ಹಲವಾರು ಮಂದಿಯ ಆತ್ಮಹತ್ಯೆಗಳಿಗೆ ಕಾರಣವಾಯಿತು.

1913: ನಿಘಂಟು ತಜ್ಞ ಪ್ರೊ.ಜಿ. ವೆಂಕಟಸುಬ್ಬಯ್ಯ ಅವರು ಅರಮನೆ ವಿದ್ವಾಂಸ ಗಂಜಾಂ ತಿಮ್ಮಣ್ಣಯ್ಯ- ಸುಬ್ಬಮ್ಮ ದಂಪತಿಯ ಮಗನಾಗಿ ಮಂಡ್ಯ ಜಿಲ್ಲೆಯ ಕೈಗೋನಹಳ್ಳಿಯಲ್ಲಿ ಜನಿಸಿದರು. ವಿವಿಧ ಸಂಘ ಸಂಸ್ಥೆಗಳಲ್ಲಿ ಸೇವೆ ಜೊತೆಗೇ ಹಲವಾರು ಕೃತಿಗಳನ್ನು ರಚಿಸಿದ ವೆಂಕಟಸುಬ್ಬಯ್ಯ ಭಾಷಾಂತರ ಪಾಠಗಳು, ಕಾಲೇಜು ಭಾಷಾಂತರ, ಇಗೋ ಕನ್ನಡ ಸಾಮಾಜಿಕ ನಿಘಂಟು ಸೇರಿದಂತೆ 60ಕ್ಕೂ ಹೆಚ್ಚು ಕೃತಿ ರಚಿಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಶಂಬಾ ಪ್ರಶಸ್ತಿ, ಸೇಡಿಯಾಪು ಪ್ರಶಸ್ತಿ, ಶಿವರಾಮ ಕಾರಂತ ಪ್ರಶಸ್ತಿ, ಮುದ್ದಣ ಪುರಸ್ಕಾರ, ರಾಜ್ಯ ಪತ್ರಿಕಾ ಅಕಾಡೆಮಿ ವಿಶೇಷ ಪ್ರಶಸ್ತಿ, ಅಂಕಣ ಶ್ರೀ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಗೋರೂರು ಪ್ರಶಸ್ತಿ, ಮಾಸ್ತಿ ಪ್ರಶಸ್ತಿ ಅವರಿಗೆ ಲಭಿಸಿವೆ.

1879: ನವರೋಜಿ ವಾಡಿಯಾ ಅವರು ಮುಂಬೈಯಲ್ಲಿ ಬಾಂಬೆ ಡೈಯಿಂಗ್ ಅಂಡ್ ಮ್ಯಾನುಫ್ಯಾಕ್ಚರಿಂಗ್ ಕಂಪೆನಿ ಲಿಮಿಟೆಡ್ ನ್ನು ಸ್ಥಾಪಿಸಿದರು.

1573: ಅಕ್ಬರನು ರಾಜ್ಯದಲ್ಲಿ ವ್ಯಾಪಿಸಿದ ದಂಗೆಯ ಸುದ್ದಿ ಕೇಳಿ ಆಗ್ರಾವನ್ನು ಬಿಟ್ಟು ಅಹಮದಾಬಾದಿಗೆ ಹೊರಟ. 11 ದಿನಗಳ ಬಳಿಕ ಆತ ಅಹಮದಾಬಾದ್ ತಲುಪಿದ.

1305: ಮೊದಲ ವರ್ಷಗಳಲ್ಲಿ ಸ್ಕಾಟಿಷ್ ರೆಸಿಸ್ಟೆನ್ಸ್ ಪಡೆಗಳನ್ನು ಮುನ್ನಡೆಸಿದ ನಾಯಕ ಸ್ಕಾಟಿಷ್ ದೇಶಪ್ರೇಮಿ ಸರ್. ವಿಲಿಯಂ ವಾಲೇಸ್ ನನ್ನು ಲಂಡನ್ನಿನಲ್ಲಿ ಗಲ್ಲಿಗೇರಿಸಿ ನಂತರ ಸೀಳಿ, ತಲೆ ಕಡಿದು ಉಳಿದ ದೇಹವನ್ನು ನಾಲ್ಕು ಭಾಗಗಳಾಗಿ ಕತ್ತರಿಸಲಾಯಿತು. ಮರುವರ್ಷವೇ 1306ರಲ್ಲಿ ರಾಬರ್ಟ್ ಬ್ರೂಸ್ ದಂಗೆಯೆದ್ದು ಸ್ಕಾಟ್ ಲ್ಯಾಂಡಿಗೆ ಸ್ವಾತಂತ್ರ್ಯ ತಂದುಕೊಟ್ಟ.

No comments:

Post a Comment