Wednesday, November 14, 2018

ಇಂದಿನ ಇತಿಹಾಸ History Today ನವೆಂಬರ್ 14

ಇಂದಿನ ಇತಿಹಾಸ History Today ನವೆಂಬರ್ 14
2018: ಇಟಲಿ: ಖ್ಯಾತ ಬಾಲಿವುಡ್ ನಟಿ, ಕರ್ನಾಟಕದ ಕರಾವಳಿ ಬೆಡಗಿ ದೀಪಿಕಾ ಪಡುಕೋಣೆ ಮತ್ತು ಖ್ಯಾತ ನಟ ರಣವೀರ್ ಸಿಂಗ್ ಅವರು ಇಟಲಿಯ ಲೇಕ್ ಕೊಮೋದಲ್ಲಿ ಈದಿನ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ಲೇಕ್ ಕೊಮೋದ ವಿಲ್ಲಾ ಡೆಲ್ ಬಾಲ್ಬಿಯಾನೆಲ್ಲೋದಲ್ಲಿ ದಕ್ಷಿಣ ಭಾರತದ ಕೊಂಕಣಿ ಸಂಪ್ರದಾಯದಂತೆ ವಿವಾಹ ಸಮಾರಂಭ ನಡೆಯಿತು.ಉಭಯರ ಕುಟುಂಬ ಸದಸ್ಯರು ಮತ್ತು ಆಯ್ದ ನಿಕಟ ಗೆಳೆಯರು ಮಾತ್ರವೇ ಸಮಾರಂಭದಲ್ಲಿ ಹಾಜರಿದ್ದರು ಎಂದು ವರದಿಗಳು ಹೇಳಿದವು. ಈದಿನ ಬೆಳಗ್ಗೆ ಗಂಟೆಯ ಮುಹೂರ್ತದಲ್ಲಿ ಮದುವೆ ನಡೆದಿದ್ದು, ಫೊಟೋ ತೆಗೆಯಲು ಯಾರಿಗೂ ಅವಕಾಶ ನೀಡಲಿಲ್ಲ. ಆಹ್ವಾನಿತರಿಗೂ ಮೊಬೈಲ್ ನಿಷೇಧಿಸಲಾಗಿತ್ತು.  ಸಿಖ್ ಸಂಪ್ರದಾಯದಂತೆ ಆನಂದ್ ಕರಾಜ್ ಕಾರ್ಯಕ್ರಮ ನಡೆಯಲಿದೆ. ವಿವಾಹ ಸಮಾರಂಭದ ತಾಣದಲ್ಲಿ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.ದೀಪಿಕಾ ಮತ್ತು ರಣವೀರ್ ಅವರ ಸಂಗೀತ ಮತ್ತು ಮೆಹಂದಿ ಅಚರಣೆಗಳ ಕೆಲವೇ ವಿವರಗಳು ಬಂದಿದ್ದು, ಸಂಗೀತ ಕಾರ್ಯಕ್ರಮದಲ್ಲಿ ಶುಭ ಮುದ್ಗಲ್ ವೇಳೆಯಲ್ಲಿ ದೀಪಿಕಾ ಅವರ ಕಣ್ಣಂಚಿನಲ್ಲಿ ನೀರು ತುಂಬಿತು. ರಣವೀರ್ ಅವರು ಗುಂಡೆ ಹಾಡಿನೊಂದಿಗೆ ಭವ್ಯ ಎಂಟ್ರಿ ನೀಡಿದರು ಎಂದು ವರದಿ ಹೇಳಿತು. ದೀಪಿಕಾ ಮತ್ತು ರಣವೀರ್ ಅವರ ಆರತಕ್ಷತೆ ಕುಟುಂಬ ಸದಸ್ಯರು ಮತ್ತು ಸ್ನೇಹಿತರಿಗಾಗಿ ಬೆಂಗಳೂರಿನಲ್ಲಿ ನವೆಂಬರ್ ೨೧ರಂದು ಮತ್ತು ಮುಂಬೈಯಲ್ಲಿ ನವೆಂಬರ್ ೨೮ರಂದು ನಡೆಯಲಿದೆ ಎಂದು ವರದಿ ತಿಳಿಸಿತು.

2018: ಕೊಲಂಬೋ:  ಶ್ರೀಲಂಕಾ ಸಂಸತ್ತನ್ನು ವಿಸರ್ಜಿಸಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಹೊರಡಿಸಿದ್ದ ಆದೇಶವನ್ನು ಸುಪ್ರೀಂಕೋರ್ಟ್ ರದ್ದು ಪಡಿಸಿದ ಒಂದು ದಿನದ ಬಳಿಕ, ಈದಿನ ಶ್ರೀಲಂಕಾ ಸಂಸತ್ತು ಪ್ರಧಾನಿ ಮಹಿಂದ ರಾಜಪಕ್ಸೆ ಅವರ ವಿರುದ್ಧ  ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸಿತು.೨೨೫ ಸದಸ್ಯಬಲದ ಸಂಸತ್ತಿನಲ್ಲಿ ಬಹುಮತದ ಸದಸ್ಯರು ರಾಜಪಕ್ಸೆ ವಿರುದ್ಧದ  ಅವಿಶ್ವಾಸ ನಿರ್ಣಯವನ್ನು ಬೆಂಬಲಿಸಿದ್ದಾರೆ ಎಂದು ಸ್ಪೀಕರ್ ಕರು ಜಯಸೂರ್ಯಅವರು ಸದನದಲ್ಲಿ ಘೋಷಿಸಿದರು. ಯುನೈಟೆಡ್ ನ್ಯಾಷನಲ್ ಪಾರ್ಟಿ (ಯುಎನ್ ಪಿ) ಸದಸ್ಯ ಲಕ್ಷ್ಮಣ್ ಕಿರಿಯೆಲ್ಲ ಅವಿಶ್ವಾಸ ನಿರ್ಣಯವನ್ನು ಮಂಡಿಸಿದ್ದರು.ಅವಿಶ್ವಾಸ ನಿರ್ಣಯವನ್ನು ಮತಕ್ಕೆ ಹಾಕುವುದಕ್ಕೆ ಸ್ವಲ್ಪ ಮುನ್ನ ರಾಜಪಕ್ಸೆ ಅವರು ಪುತ್ರ ಮತ್ತು ಸಂಸದ ನಮಲ್ ರಾಜಪಕ್ಸ  ಜೊತೆಗೆ ತಮ್ಮ ಕೊಠಡಿಯಿಂದ ಹೊರ ನಡೆದರು. ಬಳಿಕ ಅವರ ಬೆಂಬಲಿಗ ಸಂಸದರು ಅವಿಶ್ವಾಸ ನಿರ್ಣಯ ಕಲಾಪವನ್ನು ಅಸ್ತವ್ಯಸ್ತಗೊಳಿಸಲು ಯತ್ನಿಸಿದರುರಾಜಪಕ್ಸೆ ಅವರಿಗೆ ನಿಷ್ಠರಾದ ಸದಸ್ಯರು ಸ್ಪೀಕರ್ ಅವರ ಅಧಿಕಾರ ದಂಡವನ್ನು ಕಿತ್ತುಕೊಳ್ಳಲು ಯತ್ನಿಸಿದರು. ಆದರೆ ಜಯಸೂರ್ಯ ಅವರು ಕಲಾಪವನ್ನು ಮುಂದುವರೆಸಿದರು.’ಧ್ವನಿಮತದ ಪ್ರಕಾರ ಸರ್ಕಾರವು ಬಹುಮತವನ್ನು ಹೊಂದಿಲ್ಲ ಎಂಬುದನ್ನು ನಾನು ಮಾನ್ಯ ಮಾಡುತ್ತೇನೆ ಎಂದು ರಾಜಪಕ್ಸೆ ಬೆಂಬಲಿಗರ ಪ್ರತಿಭಟನೆಯ ಮಧ್ಯೆ ಜಯಸೂರ್ಯ ಘೋಷಿಸಿದರು. ಸ್ಪೀಕರ್ ಅವರು ತಮ್ಮ ಆಶಯಗಳಿಗೆ ವಿರುದ್ಧವಾಗಿ ನಿರ್ಣಾಯಕ ಅವಿಶ್ವಾಸಮತ ನಿರ್ಣಯ ಪ್ರಕ್ರಿಯೆಯನ್ನು ನಡೆಸುವ ಮೂಲಕ ಸಂಸದೀಯ ಮಿತಿಗಳನ್ನು ಉಲ್ಲಂಘಿದ್ದಾರೆ ಎಂದು ರಾಜಪಕ್ಸೆ ಸಚಿವ ಸಂಪುಟದ ಹಲವಾರು ಸದಸ್ಯರು ಸಂಸತ್ತಿನಿಂದ ಹೊರಬರುತ್ತಾ ಆಪಾದಿಸಿದರುಶ್ರೀಲಂಕಾ ಸಂಸತ್ತನ್ನು ವಿಸರ್ಜಿಸಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಹೊರಡಿಸಿದ್ದ ಆದೇಶವನ್ನು ರದ್ದು ಪಡಿಸಿದ ಶ್ರೀಲಂಕಾ ಸುಪ್ರೀಂಕೋರ್ಟ್ ಮುಂದಿನ ವರ್ಷ ನಡೆಸಲು ಘೋಷಿಸಲಾಗಿದ್ದ ದಿಢೀರ್ ಚುನಾವಣೆಯ ಸಿದ್ಧತೆಗಳನ್ನು ಸ್ಥಗಿತಗೊಳಿಸಲು ಆದೇಶ ನೀಡಿತ್ತು.ಸಂಸತ್ ವಿಸರ್ಜನೆ ವಿರುದ್ಧ ರಾನಿಲ್ ವಿಕ್ರಮ ಸಿಂಘೆ ಅವರ ಪಕ್ಷ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನಳಿನ್ ಪೆರೇರಾ ನೇತ್ವತ್ವದ ತ್ರಿಸದಸ್ಯ ಪೀಠವು ಕಿಕ್ಕಿರಿದ ನ್ಯಾಯಾಲಯದಲ್ಲಿ ತನ್ನ ತೀರ್ಪನ್ನು ಪ್ರಕಟಿಸಿತ್ತು. .ಅರ್ಜಿಯ ವಿಚಾರಣೆ ವೇಳೆಯಲ್ಲಿ ನ್ಯಾಯಾಲಯಕ್ಕೆ ನೂರಾರು ಮಂದಿ ಸಶಸ್ತ್ರ ಪೊಲೀಸ್ ಮತ್ತು ಕಮಾಂಡೊಗಳ ಬಿಗಿ ಭದ್ರತೆ ಒದಗಿಸಲಾಗಿತ್ತು.ಸಂಸತ್ತನ್ನು ವಿಸರ್ಜಿಸಿ, ಜನವರಿ ೫ರಂದು ಚುನಾವಣೆ ಘೋಷಿಸಿ ಸಿರಿಸೇನಾ ಅವರು ಹೊರಡಿಸಿದ್ದ ಅಧಿಸೂಚನೆಯನ್ನೂ ಸುಪ್ರೀಂಕೋರ್ಟ್ ರದ್ದು ಪಡಿಸಿತ್ತು.ಸುಪ್ರೀಂಕೋರ್ಟ್ತೀರ್ಪಿನ ಪರಿಣಾಮವಾಗಿ, ೨೨೫ ಸದಸ್ಯಬಲದ ಸಂಸತ್ತಿನಲ್ಲಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ಅಧಿಕಾರದಿಂದ ವಜಾಗೊಳಿಸಿ, ಸಿರಿಸೇನಾ ಅವರು ನೇಮಿಸಿದ ಅಭ್ಯರ್ಥಿ ಮಹಿಂದ ರಾಜಪಕ್ಸೆ ಅವರಿಗೆ ಬಹುಮತ ಇದೆಯೇ ಎಂಬ ಪರೀಕ್ಷೆಗೆ ದಾರಿ ಸುಗಮಗೊಂಡಿತ್ತು.ಜನವರಿ ೫ಕ್ಕೆ ಸಾರ್ವತ್ರಿಕ ಚುನಾವಣೆ ನಿಗದಿಗೊಳಿಸಿ ಆದೇಶ ಹೊರಡಿಸಿದ್ದ ಅಧ್ಯಕ್ಷ ಸಿರಿಸೇನಾ ಆದೇಶದಂತೆ ಡಿಢೀರ್ ಚುನಾವಣೆಗೆ ಆರಂಭಿಸಿದ ಸಿದ್ಧತೆಗಳನ್ನು ಸ್ಥಗಿತಗೊಳಿಸುವಂತೆ ಸ್ವಾಯತ್ತ ಚುನಾವಣಾ ಆಯೋಗಕ್ಕೂ ಸುಪ್ರೀಂಕೋರ್ಟ್ಆದೇಶ ನೀಡಿತ್ತು.ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಅಕ್ಟೋಬರ್ ೨೬ರಂದು ದಿಢೀರನೆ ಪ್ರಧಾನಿ ರಾನಿಲ್  ವಿಕ್ರಮಸಿಂಘೆ ಅವರನ್ನು ವಜಾ ಮಾಡಿ, ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಿದ್ದರುಸಂಸತ್ ನಿರ್ಣಯದ ಪರಿಣಾಮವಾಗಿ ರಾನಿಲ್ ವಿಕ್ರಮ ಸಿಂಘೆ ಅವರ ಪ್ರಧಾನಿ ಪದದ ಹಾದಿಯೇನೂ ಸುಗಮಗೊಂಡಿಲ್ಲ. ಮುಂದಿನ ಪ್ರಧಾನಿಯ ನೇಮಕಾತಿಯ ಅಧಿಕಾರ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಕೈಯಲ್ಲೇ ಇರುವುದರಿಂದ ಶ್ರೀಲಂಕೆಯ ಸಾಂವಿಧಾನಿಕ ಬಿಕ್ಕಟ್ಟು ತತ್ಕ್ಷಣ ಬಗೆ ಹರಿಯಿತು ಎನ್ನಲಾಗದು ಎಂದು ವರದಿಗಳು ಹೇಳಿದವು. ಅಧ್ಯಕ್ಷ ಸಿರಿಸೇನಾ ಅವರು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ಅಕ್ಟೋಬರ್ ೨೬ರಂದು ವಜಾಗೊಳಿಸಿ, ಹಿಂದಿನ ಬಲಾಢ್ಯಅಧ್ಯಕ್ಷ ಮಹಿಂದ ರಾಜಪಕ್ಸೆ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಿದಂದಿನಿಂದ ಹಿಂದೂ ಮಹಾಸಾಗರದಲ್ಲಿನ  ದ್ವೀಪ ರಾಷ್ಟ್ರವು ಸಾಂವಿಧಾನಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದು, ಘಟನಾವಳಿಗಳು ದಿನಕ್ಕೊಂದು ತಿರುವು ಪಡೆದವು.

2018: ನವದೆಹಲಿ: ೩೬ ರಫೇಲ್ ಯುದ್ಧ ವಿಮಾನಗಳ ಬೆಲೆಗೆ ಸಂಬಂಧಿಸಿದ ಗೌಪ್ಯತಾ ಷರತ್ತನ್ನು ಸುಪ್ರೀಂಕೋರ್ಟಿನಲ್ಲಿ ಪ್ರಬಲವಾಗಿ ಸಮರ್ಥಿಸಿದ ಕೇಂದ್ರ ಸರ್ಕಾರವು, ಸಂಪೂರ್ಣ ದರ ವಿವರಗಳನ್ನು ಬಹಿರಂಗ ಪಡಿಸುವುದರಿಂದ ವೈರಿಗಳಿಗೆ ಅನುಕೂಲ ಆಗುವ ಆಗುವ ಸಾಧ್ಯತೆ ಇದೆ, ಆದ್ದರಿಂದ ಒಪ್ಪಂದದ ದರ ವಿವರಗಳನ್ನು ಬಹಿರಂಗ ಪಡಿಸಲಾಗದು ಎಂದು ಹೇಳಿತು. ‘ ವಿಚಾರಗಳು ತಜ್ಞರು ವ್ಯವಹರಿಸಬೇಕಾದ ವಿಚಾರಗಳು. ಯುದ್ಧ ವಿಮಾನಗಳ ಸಂಪೂರ್ಣ ದರ ವಿವರಗಳನ್ನು ಸಂಸತ್ತಿಗೆ ಕೂಡಾ ನೀಡಲಾಗಿಲ್ಲ ಎಂಬುದಾಗಿ ನಾವು ಹೇಳುತ್ತಿದ್ದೇವೆ ಎಂದು ಕೇಂದ್ರ ಸರ್ಕಾರದ ಪರ ವಾದ ಮಂಡಿಸಿದ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ನ್ಯಾಯಾಲಯಕ್ಕೆ ತಿಳಿಸಿದರು.ವ್ಯವಹಾರದ ಗೌಪ್ಯತಾ ಷರತ್ತನ್ನು ಸಮರ್ಥಿಸಿದ ಅವರುಸಂಪೂರ್ಣ ದರ ವಿವರಗಳನ್ನು ಬಹಿರಂಗ ಪಡಿಸಿದರೆ ವೈರಿಗಳು ಅದರ ಲಾಭವನ್ನು ಮಾಡಿ ಕೊಳ್ಳಬಹುದು ಎಂದು ಹೇಳಿದರು.ಸುಪ್ರೀಂಕೋರ್ಟ್ ನಿಗಾದಲ್ಲಿ ೩೬ ರಫೇಲ್ ಯುದ್ದ ವಿಮಾನ ಖರೀದಿಗೆ ಸಂಬಂಧಿಸಿಂತೆ ಸಿಬಿಐ ತನಿಖೆ ನಡೆಯಬೇಕು ಎಂಬುದಾಗಿ ಕೋರಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಈದಿನ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಮತ್ತು ಕೆ.ಎಂ. ಜೋಸಫ್ ಅವರ ಪೀಠವು ಬಳಿಕ ತನ್ನ ತೀರ್ಪನ್ನು ಕಾಯ್ದಿರಿಸಿತುವ್ಯವಹಾರದಲ್ಲಿನ  ಅಕ್ರಮ ಆರೋಪಗಳಿಗೆ ಸಂಬಂಧಿಸಿದಂತೆ ಪ್ರಥಮ ಮಾಹಿತಿ ವರದಿಯನ್ನು (ಎಫ್ಐಆರ್) ದಾಖಲಿಸಬೇಕು ಎಂಬುದಾಗಿಯೂ ಕೋರಿದ ವಿವಿಧ ಅರ್ಜಿಗಳ ಮೇಲಿನ ವಾದ-ವಿವಾದಗಳನ್ನು ಪೀಠವು ಈದಿನ ಪೂರ್ಣಗೊಳಿಸಿತು. ‘ದರ ವಿವರಕ್ಕೆ ಸಂಬಂಧಿಸಿದಂತೆ ತಾವು ನ್ಯಾಯಾಲಯಕ್ಕೆ ಇನ್ನಷ್ಟು ನೆರವಾಗಲು ತಮಗೆ ಸಾಧ್ಯವಿಲ್ಲ ಎಂದು ಅಟಾರ್ನಿ ಜನರಲ್ ವೇಣುಗೋಪಾಲ್ ಅವರು ವಿಚಾರಣೆ ಕಾಲದಲ್ಲಿ ನ್ಯಾಯಾಲಯಕ್ಕೆ ತಿಳಿಸಿದರು. ’ನಾನು ವಿಚಾರದಲ್ಲಿ ಇನ್ನಷ್ಟು ಮುಂದುವರೆಯದಿರಲು ನಿರ್ಧರಿಸಿದ್ದೇನೆ. ಏನಾದರೂ ಸೋರಿಕೆಯಾದಲ್ಲಿ ನನ್ನ ಕಚೇರಿಯನ್ನು ಹೊಣೆಯಾಗಿಸಬಾರದು ಎಂದೂ ವೇಣುಗೋಪಾಲ್ ಅವರು ನ್ಯಾಯಾಲಯಕ್ಕೆ ಹೇಳಿದರು. ರಫೇಲ್ ಯುದ್ಧ ವಿಮಾನಗಳ ದರಗಳಿಗೆ ಸಂಬಂಧಿಸಿದ ಯಾವುದೇ ಚರ್ಚೆಯು, ವ್ಯವಹಾರದ ವಾಸ್ತವಾಂಶಗಳನ್ನು ವೆಬ್ ಸೈಟ್ ನಲ್ಲಿ ಬರಲು ಪ್ರಕಟಿಸಲು ಅವಕಾಶ ನೀಡಿದಾಗ ಮಾತ್ರ ನಡೆಯುತ್ತದೆ ಎಂದು ಪೀಠ ಹೇಳಿತುದರ ವಿವರಕ್ಕೆ ಸಂಬಂಧಪಟ್ಟ ವಾಸ್ತವಾಂಶ ಅಂತರ್ಜಾಲದಲ್ಲಿ ಬರಬಹುದೇ ಅಥವಾ ಬೇಡವೇ ಎಂಬ ಬಗ್ಗೆ ನಾವು ನಿರ್ಧರಿಸಬೇಕಾದ ಅಗತ್ಯ ಇದೆ ಎಂದು ಪೀಠ ತಿಳಿಸಿತುನ್ಯಾಯಾಲಯದಲ್ಲಿ ಹಾಜರಿದ್ದ ಹಿರಿಯ ರಕ್ಷಣಾ ಸಚಿವಾಲಯ ಅಧಿಕಾರಿಯಿಂದಲೂ ನ್ಯಾಯಾಲಯ ಸ್ಪಷ್ಟನೆಗಳನ್ನು ಬಯಸಿತು.’ಯುದ್ಧ ವಿಮಾನದ ಕೊರತೆಯಿಂದಾಗಿ ನಮ್ಮ ರಾಷ್ಟ್ರವನ್ನು ರಕ್ಷಿಸಿಕೊಳ್ಳಲು ಕಷ್ಟವಾಗುವುದೇ? ಮತ್ತು ವಿಚಾರದಲ್ಲಿ ರಾಷ್ಟ್ರವು ಹಿಂದೆ ಬಿದ್ದಿದೆಯೇ ಎಂಬ ಬಗ್ಗೆ ವಾಯುಪಡೆಯು ಸರ್ಕಾರಕ್ಕೆ ಪತ್ರ ಬರೆಯಲಿದೆ ಎಂದೂ ವೇಣುಗೋಪಾಲ್ ತಿಳಿಸಿದರು.ಸರ್ಕಾರವು ಯುದ್ಧ ವಿಮಾನಗಳ ದರ ವಿವರಗಳನ್ನು ಹಂಚಿಕೊಳ್ಳಲು ನಿರಾಸಕ್ತವಾಗಿರುವುದು ಏಕೆ ಎಂದು ವೇಣುಗೋಪಾಲ್ ಅವರು ಇದಕ್ಕೆ ಮುನ್ನ ಪೀಠಕ್ಕೆ ವಿವರಿಸಿದರು. ಸರ್ಕಾರವು ಎಂದೂ ದರ ವಿವರಗಳನ್ನು ಪೂರ್ತಿಯಾಗಿ ಅಂತರ್ಜಾಲದಲ್ಲಿ ಬಹಿರಂಗಗೊಳಿಸಿಲ್ಲ ಎಂಬುದಾಗಿ ಹೇಳುವ ಮೂಲಕ ಅರ್ಜಿದಾರರ ವಾದಗಳನ್ನು ಅವರು ವಿರೋಧಿಸಿದರುನ್ಯಾಯಾಲಯದಲ್ಲಿ ದರ ವಿವರಗಳನ್ನು ಹಂಚಿಕೊಳ್ಳಲು ಹಿಂದೆಯೂ ನಿರಾಕರಿಸಿದ್ದ ಅಟಾರ್ನಿ ಜನರಲ್ ಅವರುಸರ್ಕಾರವು ಶಸ್ತ್ರಾಸ್ತ್ರಗಳು ಸೇರಿದಂತೆ ವಿಮಾನದ ಸಂಪೂರ್ಣ ದರವನ್ನು ನ್ಯಾಯಾಲಯದ ಮುಂದಿಡಲು ನಿರ್ಧರಿಸಿದ್ದು ನ್ಯಾಯಾಲಯಕ್ಕೆ ಗೌರವವನ್ನು ಕೊಟ್ಟು. ಇದು ನ್ಯಾಯಾಂಗವು ಪುನರ್ ವಿಮರ್ಶೆ ಮಾಡುವಂತಹ ವಿಚಾರವಲ್ಲ, ವಿಶೇಷವಾಗಿ ವದಂತಿಗಳು ಮತ್ತು ಮಾಧ್ಯಮ ವರದಿಗಳನ್ನು ಆಧರಿಸಿದ್ದಾಗ ಪುನರ್ ವಿಮರ್ಶೆ ಮಾಡುವಂತಹ ವಿಚಾರವಲ್ಲ ಎಂದು ಅಟಾರ್ನಿ ಜನರಲ್ ಹೇಳಿದರು. ಇದಕ್ಕೆ ಮುನ್ನ ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಅರ್ಜಿಗಳನ್ನು ಸಲ್ಲಿಸಿದ ಅರ್ಜಿದಾರರ ಫ್ರಾನ್ಸಿನಿಂದ ೩೬ ವಿಮಾನಗಳ ಖರೀದಿ ವ್ಯವಹಾರದಲ್ಲಿ ಸರ್ಕಾರವು ಗಂಭೀರ ವಂಚನೆ ಎಸಗಿದೆ ಎಂದು ಆಪಾದಿಸಿದ್ದರುನನಗೆ ಒದಗಿಸಲಾಗಿರುವ ದಾಖಲೆಗಳ ಪ್ರಕಾರ ೨೦೧೫ರ ಮೇ ತಿಂಗಳಿನಿಂದ ಮಾತುಕತೆ ಆರಂಭವಾಗಿದೆ ಎಂದು ತಿಳಿಸಲಾಗಿದೆ. ಆದರೆ ಪ್ರಧಾನಿಯವರು ವ್ಯವಹಾರ ಆಗಿದೆ ಎಂದು ಏಪ್ರಿಲ್ ತಿಂಗಳಲ್ಲೇ ಘೋಷಿಸಿದ್ದಾರೆ ಎಂದು ಕೇಂದ್ರ ಸರ್ಕಾರದ ದರ ವಿವರಗಳ ಕುರಿತ ವರದಿ ಮೇಲೆ ಸುಪ್ರೀಂಕೋರ್ಟಿನಲ್ಲಿ ವಾದ ನಡೆಸಿದ ಅರ್ಜಿದಾರರಲ್ಲಿ ಒಬ್ಬರಾದ ಎಂ.ಎಲ್. ಶರ್ಮ ಹೇಳಿದರು.ಅಟಾರ್ನಿ ಜನರಲ್ ಅವರು ತಮ್ಮ ಅರ್ಜಿಗೆ ವಿಸ್ತೃತ ಉತ್ತರವನ್ನು ನೀಡಬೇಕು. ಅವರು ಸಂಪೂರ್ಣ ದಾಖಲೆಗಳನ್ನು ಒದಗಿಸಿಲ್ಲ ಎಂದು ಶರ್ಮ ನುಡಿದರು. ಇನ್ನೊಬ್ಬ ಅರ್ಜಿದಾರರಾದ ವಿನೀತ್ ಧಂಡ ಅವರು ಭದ್ರತೆ ಕುರಿತ ಸಂಪುಟ ಸಮಿತಿಯು ಅನುಮೋದನೆ ನೀಡುವ ಮುನ್ನವೇ ಪ್ರಧಾನಿಯವರು ಹೇಗೆ ಹೇಳಿಕೆ ನೀಡಲು ಸಾಧ್ಯ ಎಂದು ತಿಳಿಯಬಯಸಿದರು.ವಕೀಲ ಪ್ರಶಾಂತ ಭೂಷಣ್ ಅವರು ಸರ್ಕಾರವು ದರಗಳನ್ನು ಹಿಂದೆ ಸಂಸತ್ತಿನಲ್ಲಿ ಪ್ರಕಟಿಸಿರುವಾಗ ಯುದ್ಧ ವಿಮಾನಗಳ ಬೆಲೆ ಕುರಿತು ಯಾವುದೇ ಗೌಪ್ಯತೆ ಸಾಧ್ಯವಿಲ್ಲ ಎಂದು ವಾದಿಸಿದರು. ’ದರ ವಿವರಗಳನ್ನು ಪ್ರಕಟಿಸಲಾಗದು ಎಂಬ ಸರ್ಕಾರದ ವಾದ ಕೇವಲ ಬೋಗಸ್ ವಾದ. ಹೊಸ ವ್ಯವಹಾರದಲ್ಲಿ ರಫೇಲ್ ಜೆಟ್ಗಳ ಬೆಲೆ ಹಿಂದಿನ ವ್ಯವಹಾರಕ್ಕಿಂತ ಶೇಕಡಾ ೪೦ರಷ್ಟು ಹೆಚ್ಚಿದೆ ಎಂದು ಪ್ರಶಾಂತ ಭೂಷಣ್ ವಾದಿಸಿದರು.ತಮ್ಮ ವಾದವನ್ನು ಪುಷ್ಟೀಕರಿಸಲು ಭೂಷಣ್ ಅವರು ಒಪ್ಪಂದದಲ್ಲಿ ಪ್ರಸ್ತಾಪಗೊಂಡಿರುವ ಬೆಲೆ ಬಗ್ಗೆ ಮಾತನಾಡಲು ಬಯಸಿದರು. ಆದಕ್ಕೆ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ರಹಸ್ಯ ಒಪ್ಪಂದವನ್ನು ಮುಕ್ತ ನ್ಯಾಯಾಲಯದಲ್ಲಿ ಓದಲಾಗದು ಎಂದು ಆಕ್ಷೇಪಿಸಿದರು.ರಫೇಲ್ ವ್ಯವಹಾರಕ್ಕೆ ಸಂಬಂಧಿಸಿದ ನಿರ್ಧಾರ ಪ್ರಕ್ರಿಯೆ ಕುರಿತ ವರದಿ, ದಾಖಲೆಯನ್ನು ಸರ್ಕಾರವು ಸುಪ್ರೀಂಕೋರ್ಟಿನ ಆದೇಶದ ಮೇರೆಗೆ ವಾರ ಅರ್ಜಿದಾರರಿಗೆ ಒದಗಿಸಿತ್ತು.ಹಿಂದಿನ ವಿಚಾರಣೆ ಕಾಲದಲ್ಲಿ ೩೬ ಯುದ್ಧ ವಿಮಾನಗಳ ದರ ವಿವರಗಳನ್ನು ಕೂಡಾ ಒದಗಿಸುವಂತೆ ಸುಪ್ರೀಂಕೋರ್ಟ್ ಕೇಂದ್ರಕ್ಕೆ ಆಜ್ಞಾಪಿಸಿತ್ತು. ಮಾಹಿತಿಯನ್ನು ಮೊಹರಾದ ಲಕೋಟೆಯಲ್ಲಿ ನ್ಯಾಯಾಲಯದ ಮುಂದಿಡಲಾಗಿದೆ ಎಂದು ಹೇಳಲಾಗಿದೆ. ಆದರೆ ತಿಳಿಸಲಾಗಿರುವ ಬೆಲೆಯು ಶಸ್ತ್ರಾಸ್ತ್ರಗಳ ಹೊರತಾದ ವಿಮಾನದ ಮೂಲ ಬೆಲೆಯೇ ಅಥವಾ ಭಾರತಕ್ಕಾಗಿ ನಿರ್ಮಿಸಲಾಗುವ ವಿಮಾನದ ಶಸ್ತ್ರಾಸ್ತ್ರ ಸಹಿತವಾದ ಸಂಪೂರ್ಣ ಬೆಲೆಯೇ ಎಂಬುದು ಸ್ಪಷ್ಟವಾಗಿಲ್ಲ.ಈದಿನ ವಿಚಾರಣೆಯಲ್ಲಿ ಅರ್ಜಿದಾರರು ಸರ್ಕಾರದ ವರದಿಯಲ್ಲಿನ ಅಂಶಗಳ ಮೇಲೆ ಬೆಳಕು ಚೆಲ್ಲಿ ತಮ್ಮ ವಾದ ಮಂಡಿಸಿದರು ಮತ್ತು ಇದು ಅಂತರ್- ಸರ್ಕಾರಿ (ಸರ್ಕಾರ- ಸರ್ಕಾರದ ನಡುವಣ) ವ್ಯವಹಾರವಾಗಿದ್ದು, ಅತ್ಯಂತ ಮೇಲ್ಮಟ್ಟದ್ದು ಎಂಬ ಪ್ರತಿಪಾದನೆಯಲ್ಲಿನ ನ್ಯೂನತೆಗಳನ್ನು ಪ್ರಸ್ತಾಪಿಸಿದರು.ಸರ್ಕಾರದ ಗೌಪ್ಯತಾ ಪ್ರತಿಪಾದನೆಯನ್ನು ಪ್ರಶ್ನಿಸಿದ ಅರ್ಜಿದಾರ ಆಪ್ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರುಭಾರತ ಸರ್ಕಾರವು ಒಂದು ಬಾರಿಯಲ್ಲ, ಎರಡು ಬಾರಿ ಸಂಸತ್ತಿನಲ್ಲಿ ದರವನ್ನು ಪ್ರಕಟಿಸಿದೆ ಎಂದು ಹೇಳಿದರು. ಹಳೆಯ ವ್ಯವಹಾರವನ್ನು ರದ್ದು ಪಡಿಸದೆಯೇ ಹೊಸ ವ್ಯವಹಾರವನ್ನು ಸರ್ಕಾರ ಹೇಗೆ ಪ್ರಕಟಿಸಿಲು ಸಾಧ್ಯ ಎಂಬುದಾಗಿ ಸರ್ಕಾರದ ನಿರ್ಣಯ ಪ್ರಕ್ರಿಯೆಯನ್ನು ಅವರು ಪ್ರಶ್ನಿಸಿದರು.ದರ ವಿವರಗಳು ೧೯೨೩ರ ಅಧಿಕೃತ ರಹಸ್ಯಗಳ ಕಾಯ್ದೆಯ ಅಡಿಯಲ್ಲೂ ಸಂರಕ್ಷಿತವಾಗಿವೆ ಎಂದೂ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ನ್ಯಾಯಾಲಯದ ಗಮನಕ್ಕೆ ತಂದರು. ಈವರೆಗೆ ಸರ್ಕಾರವು ೬೭೦ ಕೋಟಿ ರೂಪಾಯಿಗಳ ಮೂಲ ಮಾದರಿ ದರದ ವಿವರಗಳನ್ನು ಮಾತ್ರವೇ ರಾಜ್ಯಸಭೆಯಲ್ಲಿ ಹಂಚಿಕೊಂಡಿತ್ತು.ವಕೀಲರಾದ ವಿನೀತ್ ಧಂಡ, ಎಂ ಎಲ್ ಶರ್ಮ ಅವರು ಸುಪ್ರೀಂಕೋರ್ಟಿನಲ್ಲಿ ರಫೇಲ್ ವ್ಯವಹಾರ ಸಂಬಂಧ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಆಮ್ ಆದ್ಮಿ ಪಕ್ಷದ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರೂ ಸುಪ್ರೀಂಕೋರ್ಟಿಗೆ ಸರ್ಜಿ ಸಲ್ಲಿಸಿ ಸುಪ್ರೀಂಕೋರ್ಟ್ ನಿಗಾದಲ್ಲಿ ತನಿಖೆ ನಡೆಸಲು ವಿಶೇಷ ತಂಡವನ್ನು ರಚಿಸಬೇಕು ಎಂದು ಕೋರಿದ್ದರು. ದರಗಳನ್ನು ಅಂತಿಮಗೊಳಿಸುವ ಮುನ್ನ ಸೂಕ್ತ ಹೆಜ್ಜೆಗಳನ್ನು ಇಡಲಾಗಿದೆಯೇ ಎಂಬ ಬಗ್ಗೆ ಸರ್ಕಾರವು ಸಲ್ಲಿಸಿರುವ ದಾಖಲೆಗಳು ಮೌನವಾಗಿದೆ ಎಂದು ಸಿಂಗ್ ಸುಪ್ರೀಂಕೋರ್ಟಿನಲ್ಲಿ ವಾದಿಸಿದರು. ರಾಷ್ಟ್ರೀಯ ಪ್ರಜಾತಾಂತ್ರಿಕ ಮೈತ್ರಿಕೂಟ (ಎನ್ ಡಿಎ) ಸರ್ಕಾರವು . ಬಿಲಿಯನ್ (೮೭೦ ಕೋಟಿ) ಡಾಲರ್ ಮೊತ್ತದ ಅಂತರ್ ಸರ್ಕಾರ ವ್ಯವಹಾರಕ್ಕೆ ಫ್ರಾನ್ಸ್ ಜೊತೆಗೆ ಸಹಿ ಹಾಕುವ ನಿರ್ಧಾರವನ್ನು ಕೈಗೊಂಡಿತ್ತು. ೨೦೧೫ರ ಏಪ್ರಿಲ್ ನಲ್ಲಿ ಪ್ರಕಟಿಸಲಾದ ವ್ಯವಹಾರದ ಅಡಿಯಲ್ಲಿ ಫ್ರಾನ್ಸಿನಿಂದ ೩೬ ಯುದ್ಧ ವಿಮಾನಗಳನ್ನು ಖರೀದಿಸಲು ತೀರ್ಮಾನಿಸಲಾಗಿತ್ತು. ಒಂದು ವರ್ಷದ ಬಳಿಕ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.ಹಿಂದಿನ ಯುಪಿಎ ಸರ್ಕಾರವು ೧೨೬ ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು ಕೈಗೊಂಡಿದ್ದ ನಿರ್ಣಯವನ್ನು ಬದಲಾಯಿಸಿ ಹೊಸ ವ್ಯವಹಾರ ನಡೆಸಲು ಎನ್ ಡಿಎ ಸರ್ಕಾರ ನಿರ್ಧರಿಸಿತ್ತು. ಯುಪಿಎ ವ್ಯವಹಾರ ಮಾತುಕತೆಯ ಪ್ರಕಾರ ಖರೀದಿಸಲಾಗುವ ೧೨೬ ಯುದ್ಧ ವಿಮಾನಗಳ ಪೈಕಿ ೧೦೮ ವಿಮಾನಗಳನ್ನು ಭಾರತದಲ್ಲೇ ಸರ್ಕಾರಿ ಸ್ವಾಮ್ಯದ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ ಎಎಲ್) ತಯಾರಿಸಬೇಕಾಗಿತ್ತು.ಎನ್ ಡಿಎ ಸರ್ಕಾರದದ ಒಪ್ಪಂದದ ಪ್ರಕಾರ ೩೬ ರಫೇಲ್ ವಿಮಾನಗಳನ್ನು ಫ್ರಾನ್ಸಿನ ಡಸ್ಸಾಲ್ಟ್ ಕಂಪೆನಿಯು ಭಾರತಕ್ಕೆ ನಿರ್ಮಾಣ ಮಾಡಿ ಕೊಡಲಿದ್ದು, ವ್ಯವಹಾರದಲ್ಲಿ ಆಫ್ಸೆಟ್ ಪಾಲುದಾರನಾಗಿ ರಿಲಯನ್ಸ್ ಕಂಪೆನಿಯನ್ನು ಆಯ್ಕೆ ಮಾಡಿಕೊಂಡಿತ್ತು. ಎಚ್ ಎಎಲ್ನ್ನು ಕೈಬಿಟ್ಟು ರಿಲಯನ್ಸ್ನ್ನು ಆಫ್ ಸೆಟ್ ಪಾಲುದಾರನಾಗಿ ಮಾಡಿಕೊಂಡದ್ದನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ಪ್ರಶ್ನಿಸಿದ್ದವು.

2018: ಶ್ರೀಹರಿಕೋಟ:  ಹೆಮ್ಮೆಯ ಇಸ್ರೋ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸಾಧಿಸಿತು. ಸ್ವದೇಶಿ ನಿರ್ಮಿತ ಸಂವಹನ ಉಪಗ್ರಹವನ್ನು ಯಶಸ್ವಿ ಯಾಗಿ ಉಡಾವಣೆ ಮಾಡಿತು. ಶ್ರೀಹರಿಕೋಟದ ಬಾಹ್ಯಾಕಾಶ ಅಂತರಿಕ್ಷ ಉಡಾವಣಾ ಕೇಂದ್ರದಿಂದ ಜಿಸ್ಯಾಟ್ -29 ಉಪಗ್ರಹ ಉಡಾವಣೆ ಮಾಡಲಾಯಿತು. ಸ್ವದೇಶಿ ನಿರ್ಮಿತ ಜಿಸ್ಯಾಟ್ -29  ಉಪಗ್ರಹ ಸಂವಹನ ಕ್ಷೇತ್ರದ ಬಳಕೆಗೆ ಲಭ್ಯವಾಗಲಿದೆ. ಜಿಎಸ್ ಎಲ್ ವಿ –ಎಂಕೆ 3  5ನೇ ತಲೆಮಾರಿನ ಉಪ ಗ್ರಹ ಉಡಾವಣಾ ವಾಹನದ ಮೂಲಕ ನಭಕ್ಕೆ ಹಾರಿದೆ. ಇದು ಸುಮಾರು ೪,೦೦೦ ಕೆಜಿ ತೂಕದ ಉಪಗ್ರಹವನ್ನ ಉಡಾವಣೆ ಮಾಡುವ ಸಾಮರ್ಥ್ಯ ಹೊಂದಿದೆ. ಇಸ್ರೋದ ೩೩ನೇ ಸಂವಹನ ಸ್ಯಾಟ ಲೈಟ್ ಇದಾಗಿದ್ದು, ಈ ವರ್ಷ ಉಡಾವಣೆ ಮಾಡಿದ ೫ನೇ ಉಪಗ್ರಹ ಇದಾಗಿದೆ. ಸೆಟಲೈಟ್ ಲಾಂಚ್ ವೆಹಿಕಲ್(ಜಿಎಸ್ ಎಲ್ ವಿ ಎಂಕೆ 3) ೪೩.೪ ಮೀಟರ್ ಎತ್ತರವಿದ್ದು, ೬೪೦ ಟನ್ ಭಾರ ಹೊಂದಿದೆ. ಇದು ಹತ್ತು ವ?ಗಳ ಕಾಲ ಕಾರ್ಯಾಚರಣೆ ನಡೆಸಲಿದ್ದು ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿ ಸಂಪರ್ಕ ಸೇವೆ ವೃದ್ಧಿಗೆ ಪೂರಕವಾಗಿದೆ. ಬುಧವಾರ ಆಂಧ್ರದ ಶ್ರೀಹರಿಕೋಟದ ಉಡಾ ವಣಾ ಕೇಂದ್ರದಿಂದ ಸಂಜೆ ೫:೦೮ಕ್ಕೆ ಸರಿಯಾಗಿ ಪ್ರಬಲ ಜಿಎಸ್‌ಎಲ್‌ವಿ-ಮಾರ್ಕ್೩ ರಾಕೆಟ್ ಜಿಸ್ಯಾಟ್-೨೯ ಸೆಟಿಲೈಟನ್ನು ನಿರ್ದಿ? ಭೂಕಕ್ಷೆಗೆ ಸೇರಿಸಲು ಹೊತ್ತೊಯ್ಯಲಾಯಿತು.  ಬರೋಬ್ಬರಿ ೬೪೦ ಟನ್ ತೂಕದ, ನೂತನ ತಂತ್ರಜ್ಞಾನದ ಈ ರಾಕೆಟ್ ಯಾವುದೇ ತೊಂದರೆ ಯಿಲ್ಲದೆ ೩,೪೨೩ ಕಿಲೋ ತೂಕದ ಉಪಗ್ರಹವನ್ನು ಮೇಲೆ ಹೊತ್ತೊಯ್ದಿತು. ಉಡಾವಣೆಗೊಂಡ ೧೬ ನಿಮಿ?ದಲ್ಲಿ ಜಿಎಸ್‌ಎಲ್‌ವಿ ರಾಕೆಟ್ಟು ೩೬ ಸಾವಿರ ಕಿಮೀ ಎತ್ತರದಲ್ಲಿರುವ ಭೂಕಕ್ಷೆಗೆ ಈ ಸಂವಹನ ಉಪಗ್ರಹವನ್ನು ಹೊಯ್ದು ಅಲ್ಲಿ ಪ್ರತ್ಯೇಕಗೊಳಿಸಿ ಬರಲಿದೆ. ಗಜ ಚಂಡಮಾರುತದಂತಹ ಪ್ರತಿಕೂಲ ಹವಾಮಾನದಲ್ಲೂ ರಾಕೆಟ್‌ನ ಯಶಸ್ವಿ ಉಡಾ ವಣೆಯು ಇಸ್ರೋದ ಹುಮ್ಮಸ್ಸನ್ನು ಇಮ್ಮಡಿ ಗೊಳಿಸಿದೆ.

2016: ಘಾಜಿಪುರ: 500 ಮತ್ತು 1000 ರೂಪಾಯಿ ನೋಟುಗಳ ರದ್ದು ಹಿನ್ನೆಲೆಯಲ್ಲಿ ಜನ ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಪ್ರಸ್ತಾಪಿಸುತ್ತಾ ಗೋವಾದಲ್ಲಿ ಭಾವೋದ್ವೇಗಕ್ಕೆ ಒಳಗಾಗಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ಈದಿನ ಘಾಜಿಪುರದಲ್ಲಿ ರೈಲ್ವೆ ಯೋಜನೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡುತ್ತಾ ವಿರೋಧ ಪಕ್ಷಗಳನ್ನು ವಿಶೇಷವಾಗಿ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡರು. ‘ಕಾಳಧನ ಹೊಂದಿರುವವರಿಗೆ ನಡುಕ ಹುಟ್ಟಿದೆ. ಹಳೆ ನೋಟು ರದ್ದು ಬಳಿಕ ಬಡವರು ನಿಶ್ಚಿಂತೆಯಿಂದ ನಿದ್ರಿಸಿದರೆ, ಶ್ರೀಮಂತರು ನಿದ್ದೆಗುಳಿಗ ಖರೀದಿಗಾಗಿ ಆಂಡಲೆಯುತ್ತಿದ್ದಾರೆ ಎಂದು ಅವರು ಹೇಳಿದರು. ಹಳೆಯ ನೋಟು ರದ್ದತಿಯನ್ನು ವಿರೋಧಿಸುತ್ತಿರುವ ಕಾಂಗ್ರೆಸ್ ಮೇಲೆ ಹರಿಹಾಯ್ದ ಪ್ರಧಾನಿ ಕಾಂಗ್ರೆಸ್ ಪಕ್ಷವು ಕೇವಲ ಇಂದಿರಾಗಾಂಧಿ ಅವರ ಲೋಕಸಭಾ ಸದಸ್ಯತ್ಯ ರಕ್ಷಣೆಗಾಗಿ ದೇಶದಲ್ಲಿ ತುರ್ತುಸ್ಥಿತಿಯನ್ನು ಹೇರಿ ರಾಷ್ಟ್ರವನ್ನು 19 ತಿಂಗಳ ಕಾಲ ಸೆರೆಮನೆಯನ್ನಾಗಿ ಪರಿವರ್ತಿಸಿತು. ಕಾಂಗ್ರೆಸ್ ಕೂಡಾ ಯಾರನ್ನೂ ಕೇಳದೆ 25 ಪೈಸೆ ನಾಣ್ಯವನ್ನು ರದ್ದು ಪಡಿಸಿತ್ತು. ಅವರು ಅವರ ಘನತೆಗೆ ತಕ್ಕಂತೆ ಏನನ್ನೋ ಮಾಡಿದರು. ನಾನು ನನ್ನ ಘನತೆಗೆ ತಕ್ಕಂತೆ ಮಾಡಿದ್ದೇನೆ ಎಂದು ಚುಚ್ಚಿದರು. ಬಡವರು ಎದುರಿಸುತ್ತಿರುವ ಕಷ್ಟಗಳಿಗೆ ತಮ್ಮನ್ನು ದೂಷಿಸುತ್ತಿರುವ ವಿರೋಧ ಪಕ್ಷಗಳನ್ನು ಟೀಕಿಸಿದ ಪ್ರಧಾನಿ ಜನಸಾಮಾನ್ಯರು ಎದುರಿಸುತ್ತಿರುವ ಸಮಸ್ಯೆಗಳ ಅರಿವು ನನಗೆ ಇದೆ. ನೀವು (ಕಾಂಗ್ರೆಸ್) ಹೇಳಿಕೆಗಳನ್ನು ನೀಡುತ್ತಿದ್ದೀರಿ. ಆದರೆ ನನಗೆ ಜನರ ನಾಡಿ ಬಡಿತ ಗೊತ್ತಿದೆ. ಇನ್ನು ಕೆಲವು ರಾಜಕೀಯ ಪಕ್ಷಗಳಿಗೆ ನೋಟು ರದ್ದು ಚಿಂತೆಯಾಗಿದೆ. ಆದರೆ ಅವರು ನೋಟುಗಳ ಹಾರಗಳನ್ನೇ ಹಾಕಿಸಿಕೊಳ್ಳುತ್ತಿದ್ದರು. ಈಗಿರುವ ಏಕೈಕ ಆಯ್ಕೆ ಎಂದರೆ 500 ಮತ್ತು 1000 ರೂ. ನೋಟುಗಳನ್ನು ಕಸದ ಬುಟ್ಟಿಗೆ ಎಸೆಯುವುದು ಎಂದು ಹೇಳಿದರು. ಕೆಲವರು ಮುಖದಲ್ಲಿ ನಗು ತಂದುಕೊಂಡು ಮೋದೀಜಿ ನೀವು ಬಹಳ ಒಳ್ಳೆಯ ಕೆಲಸ ಮಾಡಿದ್ದೀರಿ ಎಂದು ಹೇಳುತ್ತಾರೆ. ಆದರೆ ಅವರೇ ಬಳಿಕ ನನ್ನ ನಿರ್ಣಯವನ್ನು ವಿರೋಧಿಸಲು ಪಕ್ಷ ಕಾರ್ಯಕರ್ತರನ್ನು ಪ್ರಚೋದಿಸುತ್ತಾರೆ ಎಂದು ಹೆಸರುಗಳನ್ನು ಉಲ್ಲೇಖಿಸದೆಯೇ ಪ್ರಧಾನಿ ಛೇಡಿಸಿದರು.
2016: ನವದೆಹಲಿ: ರೂ.500 ಮತ್ತು ರೂ.1000 ಮುಖಬೆಲೆಯ ನೋಟುಗಳ ಚಲಾವಣೆ ರದ್ದು
ಮಾಡಿರುವ ನಿರ್ಧಾರವನ್ನು ವಿಪಕ್ಷಗಳು ವಿರೋಧಿಸಿದರೂ ದೇಶದ ಜನತೆ ನಮ್ಮೊಂದಿಗೆ ಇದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಈದಿನ  ಬಿಜೆಪಿ ಸಂಸದೀಯ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಮೋದಿ, ಎಷ್ಟೇ ವಿರೋಧ ವ್ಯಕ್ತವಾದರೂ ನೋಟು ರದ್ದು ನಿರ್ಧಾರವನ್ನು ವಾಪಸ್ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಹಿರಿಯ ಸಚಿವರಾದ ಅರುಣ್ ಜೇಟ್ಲಿ, ರಾಜನಾಥ್ ಸಿಂಗ್ಎಲ್ ಕೆ ಅಡ್ವಾಣಿ ಮೊದಲಾದವರು ಸಭೆಯಲ್ಲಿ ಭಾಗಿಯಾಗಿದ್ದರು.
 2016: ನವದೆಹಲಿ: 500 ಮತ್ತು 1000 ರೂ. ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳನ್ನು ನವೆಂಬರ್ 18ವರೆಗೆ ಟೋಲ್ ಮುಕ್ತಗೊಳಿಸಿ ಕೇಂದ್ರ ಸರ್ಕಾರ ಆದೇಶಿಸಿತು. ಈ ಮುನ್ನ .14ರವರೆಗೆ ಹೆದ್ದಾರಿಗಳನ್ನು ಟೋಲ್ ಮುಕ್ತಗೊಳಿಸಲಾಗಿತ್ತು. ಟೋಲ್ ಮುಕ್ತ ಅವಧಿಯನ್ನು ಕೇಂದ್ರ ಸರ್ಕಾರ ಇನ್ನೂ ನಾಲ್ಕು ದಿನಗಳಿಗೆ ವಿಸ್ತರಿಸಿ ಈದಿನ ಆದೇಶಿಸಿತು. ಸಂಬಂಧ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಎಲ್ಲಾ ಟೋಲ್ ಸಂಗ್ರಹ ಸಂಸ್ಥೆಗಳಿಗೆ ಸೂಚನೆಯನ್ನು ರವಾನಿಸಿದೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದರು.

2016: ಇಸ್ಲಾಮಾಬಾದ್: ಭಾರತೀಯ ಪಡೆಗಳು ಬಿಂಬರ್ ವಿಭಾಗದಲ್ಲಿ ಹಿಂದಿನ ದಿನ ತಡರಾತ್ರಿ ನಡೆಸಿದ ಕದನ ವಿರಾಮ ಉಲ್ಲಂಘನೆ- ಗುಂಡಿನ ಘರ್ಷಣೆಯಲ್ಲಿ ಪಾಕಿಸ್ತಾನದ 7 ಮಂದಿ ಸೈನಿಕರು
ಹತರಾಗಿದ್ದಾರೆ ಎಂದು ಪಾಕಿಸ್ತಾನ ಹೇಳಿತು. ಪಾಕಿಸ್ತಾನ ಬಲು ಅಪರೂಪಕ್ಕೆ ತನ್ನ ಸೈನಿಕರ ಸಾವನ್ನು ಒಪ್ಪಿಕೊಂಡ ಘಟನೆ ಇದು. ಭಾರತವು ಗಡಿ ನಿಯಂತ್ರಣ ರೇಖೆಯಲ್ಲಿ ಗಡಿಯಾಚೆಯಿಂದ ನಡೆಸಿದ ಗುಂಡಿನ ದಾಳಿಯಲ್ಲಿ 7 ಮಂದಿ ಪಾಕಿಸ್ತಾನಿ ಸೈನಿಕರು ಹತರಾಗಿದ್ದಾರೆ ಎಂದು ಪಾಕಿಸ್ತಾನದ ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ಐಎಸ್ಪಿಆರ್) ಹೇಳಿರುವುದಾಗಿ ಡಾನ್ ವರದಿ ಮಾಡಿತು. ಈ ಸಂಬಂದ  ಭಾರತದ ರಾಜತಾಂತ್ರಿಕ ಅದಿಕಾರಿಯನ್ನು ಕರೆಸಿ ತನ್ನ ಪ್ರತಿಭಟನೆಯನ್ನೂ ಪಾಕ್ ವ್ಯಕ್ತ ಪಡಿಸಿತು. ದಾಳಿಗೆ ಪ್ರತಿಯಾಗಿ ಪಾಕ್ ಪಡೆಗಳೂ ಭಾರತೀಯ ನೆಲೆಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ನಡೆಸಿವೆ ಎಂದು ವರದಿ ತಿಳಿಸಿತು. ನಿರಂತರ ಅಪ್ರಚೋದಿತ ದಾಳಿಗಳನ್ನು ಖಂಡಿಸುವುದಾಗಿ ಪಾಕಿಸ್ತಾನದ ವಿದೇಶಾಂಗ ಕಚೇರಿ ವಕ್ತಾರ ನಫೀಸ್ ಝುಕಾರಿಯಾ ಟ್ವೀಟ್ ಮಾಡಿದರು. ಭಾರತದ ದಾಳಿಗಳಿಂದ ಪಾಕಿಸ್ತಾನದಲ್ಲಿ ಸಾವನ್ನಪ್ಪಿರುವ ನಾಗರಿಕರ ಸಂಖ್ಯೆ ಕನಿಷ್ಠ 25ಕ್ಕೇ ಏರಿದ್ದು, 103 ಮಂದಿ ಗಾಯಗೊಂಡಿದ್ದಾರೆ ಎಂದೂ ನಫೀಸ್ ಹೇಳಿದರು.

 2016: ಚೆನ್ನೈ: ಕಪ್ಪು ಹಣ ಮತ್ತು ಭ್ರಷ್ಟಾಚಾರದ ದಮನಕ್ಕಾಗಿ ಕೇಂದ್ರ ಸರ್ಕಾರವು 500 ಮತ್ತು 1000
ಮುಖಬೆಲೆಯ ರೂಪಾಯಿಗಳನ್ನು ರದ್ದುಗೊಳಿಸಿದ ಕೆಲ ದಿನಗಳ ಬಳಿಕ ತಮಿಳುನಾಡಿನ ವೆಲ್ಲೂರಿನಲ್ಲಿರುವ 16ನೇ ಶತಮಾನದ ಜಲಕಂಠೇಶ್ವರ ದೇವಾಲಯದ ಹುಂಡಿಗೆ 44 ಲಕ್ಷ ರೂಪಾಯಿ ಮೌಲ್ಯದ ರದ್ದಾದ ಹಳೆಯ ನೋಟುಗಳ ಸಮರ್ಪಣೆಯಾಗಿರುವುದು ಬೆಳಕಿಗೆ ಬಂತು. ಏಕೈಕ ಭಕ್ತನಿಂದ ಅಥವಾ ಗುಂಪೊಂದರಿಂದ ಹಣ ಸಮರ್ಪಣೆಯಾಗಿರಬಹುದು ಎಂಬುದು ಚೆನ್ನೈಯಿಂದ 137 ಕಿ.ಮೀ. ದೂರದಲ್ಲಿರುವ ಜಲಕಂಠೇಶ್ವರ ದೇವಾಲಯದ ಅಧಿಕಾರಿಗಳ ಅಭಿಪ್ರಾಯ. ನಾವು ನೋಟುಗಳನ್ನು ವಿನಿಮಯಕ್ಕಾಗಿ ಬ್ಯಾಂಕಿಗೆ ಜಮಾ ಮಾಡುತ್ತೇವೆ. ದೇವಾಲಯಕ್ಕೆ ಬಂದಿರುವ ಅತ್ಯಂತ ದೊಡ್ಡ ಮೊತ್ತದ ಕಾಣಿಕೆ ಇದು ಎಂದು ದೇವಾಲಯದ ಕಾರ್ಯದರ್ಶಿ ಎಸ್. ಸುರೇಶ ಕುಮಾರ್ ಹೇಳಿದರು. ಶಿವನಿಗೆ ಸಮರ್ಪಣೆಯಾಗಿರುವ ಜಲಕಂಠೇಶ್ವರ ದೇವಾಲಯ ಧಾರ್ಮಿಕ ವಿವಾದದ ಪರಿಣಾಮವಾಗಿ ಕಳೆದ ಸುಮಾರು 400 ವರ್ಷಗಳಿಂದ ಬಳಕೆಯಲ್ಲಿರಲಿಲ್ಲ. ವಿವಾದ ಇತ್ಯರ್ಥದ ಬಳಿಕ 1981ರಲ್ಲಿ ದೇವಾಲಯದ ಜೀಣೋದ್ಧಾರವಾಗಿತ್ತು. ಭಾರತೀಯ ಪ್ರಾಕ್ತನ ಇಲಾಖೆ ದೇವಾಲಯದ ಉಸ್ತುವಾರಿ ನೋಡಿಕೊಳ್ಳುತ್ತಿದೆ.

 2016: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಪ್ರಕಟಣೆಯೊಂದಿಗೆ ಕಳೆದ ವಾರ ಮಾನ್ಯತೆ
ಕಳೆದುಕೊಂಡ 500 ರೂಪಾಯಿ ಮತ್ತು 1000 ರೂಪಾಯಿಗಳ ನೋಟುಗಳನ್ನು ಕೆಲವು ನಿರ್ದಿಷ್ಟ ಸ್ಥಳಗಳಲ್ಲಿ ಇನ್ನೂ 10 ದಿನ ಬಳಸಬಹುದು ಎಂದು ಸರ್ಕಾರ ತಿಳಿಸಿತು. ಸ್ಥಳಗಳಲ್ಲಿ ನೋಟುಗಳ ಬಳಕೆಯ ಅವಧಿಯನ್ನು ನವೆಂಬರ್ 14 ಮಧ್ಯರಾತ್ರಿಯಿಂದ ನವೆಂಬರ್ 24 ಮಧ್ಯರಾತ್ರಿಯವರೆಗೆ ವಿಸ್ತರಿಸಲಾಯಿತು. ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ (ಇಎ ಎಸ್) ಶಕ್ತಿಕಾಂತ ದಾಸ್ ಅವರು ವಿಚಾರವನ್ನು ಪ್ರಕಟಿಸಿದರು. ಸರ್ಕಾರಿ ಆಸ್ಪತ್ರೆಗಳು, ಪೆಟ್ರೋಲ್ ಬಂಕುಗಳು, ಮತ್ತು ಟೋಲ್ ಬೂತುಗಳಲ್ಲಿ ನವೆಂಬರ್ 24 ಮಧ್ಯರಾತ್ರಿಯವರೆಗೆ ನೋಟುಗಳನ್ನು ಸ್ವೀಕರಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿತು. ಇದೇ ಮಾದರಿ ಪ್ರಕಟಣೆಯನ್ನೂ ರೈಲ್ವೆ  ಇಲಾಖೆಯೂ ನೀಡಿತು. ಹಳೆಯ ನೋಟುಗಳ ಸ್ವೀಕಾರ ಅವಧಿಯನ್ನು ಎರಡನೇ ಬಾರಿಗೆ ವಿಸ್ತರಿಸುವ ಪ್ರಕಟಣೆಯನ್ನು ನೀಡಿದ ದಾಸ್ ಅವರು ಬ್ಯಾಂಕ್ ಖಾತೆಗಳಿಂದ ನಗದು ಹಿಂಪಡೆಯುವ ದೈನಿಕ ಮಿತಿಯನ್ನೂ 2000 ರೂಪಾಯಿಗಳಿಂದ 2500 ರೂಪಾಯಿಗಳಿಗೆ ಹೆಚ್ಚಿಸಲಾಗಿದೆ ಎಂದು ಹೇಳಿದರು. ದಿವ್ಯಾಂಗರು ಮತ್ತು ಹಿರಿಯ ನಾಗರಿಕರಿಗೆ ಹಳೆಯ ನೋಟು ನೀಡಿ ಹೊಸ ನೋಟು ಪಡೆಯುವಲ್ಲಿ ಆಗುತ್ತಿರುವ ಅನಾನುಕೂಲ ತಪ್ಪಿಸಲು ಬ್ಯಾಂಕ್ಗಳಲ್ಲಿ ಪ್ರತ್ಯೇಕ ಸರತಿಯ ಸಾಲು (ಕ್ಯೂ) ವ್ಯವಸ್ಥೆ ಮಾಡಲೂ ನಿರ್ದೇಶಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನಗದು ಲಭ್ಯತೆ ಬಗ್ಗೆ ಪರಿಶೀಲಿಸಿದ್ದಾರೆ ಎಂದೂ ದಾಸ್ ನುಡಿದರು.
2016: ಚಿಕ್ಕಮಗಳೂರುನಕ್ಸಲ್ಚಟುವಟಿಕೆ ಮೂಲಕ ಒಂದೂವರೆ ದಶಕದಿಂದ ಭೂಗತರಾಗಿ,
ಶಸ್ತ್ರಾಸ್ತ್ರ ಹೋರಾಟದಲ್ಲಿ ತೊಡಗಿದ್ದ ನೀಲಗುಳಿ ಪದ್ಮನಾಭ ಅಲಿಯಾಸ್ಪರಶುರಾಮ ಮತ್ತು ಆತನ ಪತ್ನಿ ಭಾರತಿ ಹಾಗೂ ರಾಜು ಮತ್ತು ಆತನ ಪತ್ನಿ ರಿಜ್ವಾನ್ಬೇಗಮ್ ನಾಲ್ಕು ಮಂದಿ ನಕ್ಸಲೀಯರು ಪೊಲೀಸರಿಗೆ ಶರಣಾದರು. ಶಸ್ತ್ರಾಸ್ತ್ರ ಹೋರಾಟ ತ್ಯಜಿಸಿ, ಪ್ರಜಾತಂತ್ರ ವ್ಯವಸ್ಥೆಯನ್ನು ಒಪ್ಪಿ, ಸಮಾಜದ ಮುಖ್ಯವಾಹಿನಿಗೆ ಸೇರಿದರು. ಸರ್ಕಾರದ ಉನ್ನತಾಧಿಕಾರ ಸಮಿತಿ ಸದಸ್ಯ .ಕೆ. ಸುಬ್ಬಯ್ಯ, ಶಾಂತಿಗಾಗಿ ನಾಗರಿಕ ವೇದಿಕೆಯ ಗೌರಿ ಲಂಕೇಶ್‌, ವಕೀಲ ಕೆ.ಪಿ. ಶ್ರೀಪಾಲ್ಅವರ ಸಮ್ಮುಖದಲ್ಲಿ ನಾಲ್ವರು ಶರಣಾದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅಣ್ಣಾಮಲೈ ಉಪಸ್ಥಿತರಿದ್ದರು. ನಾಲ್ವರು ಕಳೆದ ಒಂದೂವರೆ ದಶಕದಿಂದ ಭೂಗತರಾಗಿದ್ದು, ಶಸ್ತ್ರಾಸ್ತ್ರ ಹೋರಾಟದಲ್ಲಿ ತೊಡಗಿದ್ದರು. ತೀರ್ಥಹಳ್ಳಿ ತಾಲ್ಲೂಕಿನ ಆಗುಂಬೆ ಪೊಲೀಸ್ಠಾಣೆ ವ್ಯಾಪ್ತಿಯ ಬರ್ಕಣದಲ್ಲಿ ನಡೆದ ಎನ್ಕೌಂಟರ್ನಲ್ಲಿ ಪದ್ಮನಾಭ ತೀವ್ರಗಾಯಾಗೊಂಡು ಪರಾರಿಯಾಗಿದ್ದ. ನೀಲಗುಳಿ ಪದ್ಮನಾಭ ಅಲಿಯಾಸ್ಪರಶುರಾಮ ಮತ್ತು ಆತನ ಪತ್ನಿ ಭಾರತಿ ಹಾಗೂ ರಿಜ್ವಾನ್ಬೇಗಮ್ ಮೂವರ ವಿರುದ್ಧ ಜಿಲ್ಲೆಯ ಶೃಂಗೇರಿ ಸೇರಿದಂತೆ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು.
2016: ನವದೆಹಲಿ: ರೂ. 2000 ಮುಖಬೆಲೆಯ ಹೊಸ ನೋಟು ಹೇಗಿದೆ? ಎಂಬುದಕ್ಕೆ ಒಬ್ಬೊಬ್ಬರು
ಒಂದೊಂದು ರೀತಿಯ ಅಭಿಪ್ರಾಯಗಳನ್ನು ದಾಖಲಿಸುತ್ತಿದ್ದರೆ ಇಲ್ಲೊಬ್ಬ ವ್ಯಕ್ತಿ ಹೊಸ ನೋಟನ್ನು ನೀರಿನಲ್ಲಿ ತೊಳೆದು ಪರೀಕ್ಷೆಗೊಳಪಡಿಸಿರುವುದು ಬೆಳಕಿಗೆ ಬಂದಿತು. ಸಾಮಾನ್ಯವಾಗಿ ಹೊಸ ಐಫೋನ್ಗಳು ಮಾರುಕಟ್ಟೆಗೆ ಬಂದಾಗ ಫೋನನ್ನು ನೀರಿನಲ್ಲಿ ತೊಳೆದು ಟೆಸ್ಟಿಂಗ್ ಮಾಡುವ ವಿಡಿಯೊಗಳು ಕಾಣಸಿಗುತ್ತವೆ. ಆದರೆ ಇಲ್ಲಿ ರೂ.2000 ಮುಖಬೆಲೆಯ ಹೊಸ ನೋಟನ್ನು ನೀರಿನಲ್ಲಿ ತೊಳೆದು ಪರೀಕ್ಷೆ ಮಾಡಿದ್ದು ವಿಡಿಯೋದಲ್ಲಿ ದಾಖಲಾಗಿದೆ. ನಲ್ಲಿ ನೀರಿನಲ್ಲಿ ನೋಟು ತೊಳೆಯುತ್ತಿರುವ ವಿಡಿಯೊವನ್ನು ಯುಟ್ಯೂಬ್ನಲ್ಲಿ ಅಪ್ಲೋಡ್ ಮಾಡಲಾಗಿದ್ದು, ವಿಡಿಯೊ ಸಂಚಲನ ಸೃಷ್ಟಿಸಿತು. ರೂ.2000 ಮುಖಬೆಲೆಯ ನೋಟು ಮಾರುಕಟ್ಟೆಗೆ ಬರುವ ಮುನ್ನ ನೋಟಿನಲ್ಲಿ ಚಿಪ್ ಅಳವಡಿಸಲಾಗಿದೆ ಎಂಬ ವದಂತಿ  ಹಬ್ಬಿತ್ತು. ನೋಟಿನಲ್ಲಿ ಚಿಪ್ ಇದೆಯೇ? ಎಂದು ಪರೀಕ್ಷಿಸಿ ಕೆಲವರು ನೋಟನ್ನು ಹರಿದು ನೋಡಿದ ಘಟನೆಯೂ  ಸುದ್ದಿಯಾಗಿತ್ತು.  ಇದೀಗ ನೋಟನ್ನು ಒಂದೇ ಸಮನೆ ನೀರಿನಲ್ಲಿ ತೊಳೆಯುತ್ತಾ, ನೋಟು ಏನೂ ಆಗಲ್ಲ ಎಂದು ಪರೀಕ್ಷೆ ನಡೆಸಿ ತೋರಿಸಿದ ವಿಡಿಯೊ ಸುದ್ದಿಯಾಯಿತು. ಇದೆ ರೀತಿ ಇನ್ನೊಂದು ವಿಡಿಯೋ ಕೂಡಾ ಅಂತರ್ಜಾಲದಲ್ಲಿ ವೈರಲ್್ ಆಗಿದ್ದು, ಈ ವಿಡಿಯೋದಲ್ಲಿ ಹೊಸ 2000 ರೂಪಾಯಿ ನೋಟನ್ನು ಮುದ್ದೆ ಮಾಡಿ, ನೀರಿನಲ್ಲಿ ಹಾಕಿ ಪರೀಕ್ಷಿಸಲಾಗಿದೆ.

  2016:ಗುವಾಹಟಿಗುವಾಹಟಿಯ ರುಕ್ಮಿಣಿ ನಗರ ಪ್ರದೇಶದ ಚರಂಡಿಯೊಂದರಲ್ಲಿ 500 ಮತ್ತು 1000 ರೂಪಾಯಿ ಮುಖಬೆಲೆಯ ಸಹಸ್ರಾರು ನೋಟುಗಳು ಈದಿನ ತೇಲಿದವು.

1889: ಇಂದು ಮಕ್ಕಳ ದಿನ. ಭಾರತದಲ್ಲಿ ಮೊದಲ ಪ್ರಧಾನಿ ಜವಾಹರ ಲಾಲ್ ನೆಹರೂ (1889-1964) ಅವರ ಜನ್ಮದಿನವನ್ನು ಮಕ್ಕಳ ದಿನವಾಗಿ ಆಚರಿಸಲಾಗುತ್ತಿದೆ. ಆದರೆ ಹಲವಾರು ರಾಷ್ಟ್ರಗಳಲ್ಲಿ ಜೂನ್ 1ರಂದು ಮಕ್ಕಳ ದಿನವನ್ನು ಆಚರಿಸಲಾಗುತ್ತದೆ. 1925ರ ಜೂನ್ 1ರಂದು ಮಕ್ಕಳ ಕಲ್ಯಾಣಕ್ಕೆ ಸಂಬಂಧಿಸಿದ ಜಾಗತಿಕ ಸಮ್ಮೇಳನ ಸ್ವಿಜರ್ ಲ್ಯಾಂಡಿನ ಜಿನೇವಾದಲ್ಲಿ ನಡೆಯಿತು. ಇದೇ ಈ ದಿನಾಚರಣೆಯ ಮೂಲ.

2008: ಚಂದ್ರನ ಮೇಲೆ ರಾಷ್ಟ್ರಧ್ವಜವನ್ನು ಪ್ರತಿಷ್ಠಾಪಿಸುವ ಭಾರತೀಯರ ಕನಸು ಈದಿನ ರಾತ್ರಿ ನನಸಾಯಿತು. ಚಂದ್ರಯಾನ-1 ನೌಕೆಯಿಂದ ಬಿಡುಗಡೆಗೊಂಡ ಮೂನ್ ಇಂಪ್ಯಾಕ್ಟ್ ಪ್ರೋಬ್ (ಎಂಐಬಿ) ಶೋಧಕ ಉಪಕರಣವು ಚಂದ್ರನ ಮೇಲೆ ಇಳಿಯುವ ಮೂಲಕ ರಾಷ್ಟ್ರಧ್ವಜ ಪ್ರತಿಷ್ಠಾಪನೆಗೊಂಡಿತು. ಇದು ವಿಜ್ಞಾನಿಗಳಿಗೆ ಸಾಧನೆ ಮಾಡಿದ ರೋಮಾಂಚನ ಉಂಟು ಮಾಡಿದರೆ, ಭಾರತೀಯರಿಗೆ ಹೆಮ್ಮೆ ತಂದಿತು. ಭಾರತೀಯರು ಯಾವುದೇ ಕ್ಷೇತ್ರದಲ್ಲಿ ಹಿಂದುಳಿದಿಲ್ಲ ಎಂಬುದನ್ನು ಸಾಬೀತುಪಡಿಸಿತು. ಚಂದ್ರನ ಮೇಲಿಳಿದ `ಶೋಧನಾ ಉಪಕರಣ'ವು ತ್ರಿವರ್ಣ ಧ್ವಜವನ್ನು ವಿಭಿನ್ನವಾಗಿ ಪ್ರದರ್ಶಿಸಿತು. `ರಾತ್ರಿ 8.30ರ ಸುಮಾರಿಗೆ ನೌಕೆಯಿಂದ ಶೋಧನಾ ಉಪಕರಣವನ್ನು ಚಂದ್ರನ ಮೇಲೆ ಇಳಿಸಲಾಯಿತು. ಉಪಕರಣದ ನಾಲ್ಕು ದಿಕ್ಕುಗಳಲ್ಲಿಯೂ ತ್ರಿವರ್ಣ ಧ್ವಜವನ್ನು ಚಿತ್ರಿಸಲಾಗಿದ್ದು, ಅದು ಚಂದ್ರನ ಮೇಲೆ ಭಿನ್ನವಾದ ರೀತಿಯಲ್ಲಿ ಕಂಗೊಳಿಸುತ್ತಿದೆ' ಎಂದು ಇಸ್ರೋ ವಕ್ತಾರ ಎಸ್. ಸತೀಶ್ ತಿಳಿಸಿದರು. ಶೋಧನಾ ಉಪಕರಣ ಚಂದ್ರನನ್ನು ತಲುಪಲು ಒಟ್ಟು ಇಪ್ಪತ್ತು ನಿಮಿಷ ತೆಗೆದುಕೊಂಡಿತು. ಇದರ ಒಟ್ಟು ಪ್ರಕ್ರಿಯೆಯಲ್ಲಿ ಉಪಕರಣವು ವಿವಿಧ ಕೋನಗಳಲ್ಲಿ ಚಂದ್ರನ ದೃಶ್ಯಗಳನ್ನು ಸೆರೆ ಹಿಡಿಯಿತು. ಶೋಧಕ ಉಪಕರಣವು 29 ಕೆ.ಜಿ ತೂಕದ `ಸಿ-ಬ್ಯಾಂಡ್ ರಾಡಾರ್ ಆಲ್ಟಿಮೀಟರ್' ಸಾಧನದ ಮೂಲಕ ಚಂದ್ರನ ಮೇಲ್ಮೈ ಪ್ರದೇಶವನ್ನು ಅಳೆದು, ದೃಶ್ಯಗಳನ್ನು ಸೆರೆ ಹಿಡಿದು ಮಾಹಿತಿ ರವಾಸುವುದು.

2008: ಅತ್ಯಧಿಕ ಮಾಲಿನ್ಯದಿಂದಾಗಿ ನವದೆಹಲಿಯಿಂದ ಬೀಜಿಂಗ್ ವರೆಗಿನ ಏಷ್ಯಾದ ನಗರಗಳು ಕಪ್ಪಾಗುತ್ತಿವೆ; ಹಿಮಾಲಯದ ಹಿಮರಾಶಿ ಶೀಘ್ರವಾಗಿ ಕರಗುತ್ತಿದ್ದು, ಹವಾಮಾನ ವೈಪರೀತ್ಯ ಹೆಚ್ಚುತ್ತಿದೆ ಎಂದು ವಿಶ್ವಸಂಸ್ಥೆಯ ಅಧ್ಯಯನವೊಂದು ಎಚ್ಚರಿಸಿತು. ಕಪ್ಪು ಇಂಗಾಲದ ಅಂಶ ಮೋಡಗಳಲ್ಲಿ ಸೇರಿಕೊಂಡು ಸೂರ್ಯನ ಕಿರಣಗಳನ್ನು ಹೀರಿಕೊಳ್ಳುತ್ತದಲ್ಲದೆ ವಾತಾವರಣವನ್ನು ಬಿಸಿ ಮಾಡುತ್ತದೆ. ಇದರಿಂದ ಗಾಳಿಯ ಗುಣಮಟ್ಟ ಹಾಗೂ ಏಷ್ಯಾದ ಕೃಷಿಯ ಮೇಲೆ ದುಷ್ಪರಿಣಾಮವಾಗುತ್ತಿದೆ. ಇಲ್ಲಿನ ಮೂರು ಶತಕೋಟಿ ಮನುಷ್ಯರ ಆರೋಗ್ಯ ಮತ್ತು ಆಹಾರ ಉತ್ಪಾದನೆಗೆ ಗಂಡಾಂತರ ತಂದೊಡ್ಡುತ್ತಿದೆ. ಭಾರತದಲ್ಲಿ 1960ರಿಂದ 2000 ದವರೆಗೆ ವಾತಾವರಣ ಮಸುಕಾಗುವ ಪ್ರಮಾಣ ದಶಕಕ್ಕೆ ಶೇ 2ರಷ್ಟಿದ್ದರೆ 1980ರಿಂದ 2004ರ ಅವಧಿಯಲ್ಲಿ ಅದು ದ್ವಿಗುಣಗೊಂಡಿದೆ. ನವದೆಹಲಿ, ಕರಾಚಿ, ಬೀಜಿಂಗ್, ಶಾಂಘೈಗಳಂತಹ ನಗರಗಳಲ್ಲಿ ವಾತಾವರಣ ಮಸುಕಾಗುವಿಕೆ ಶೇ. 10ರಿಂದ 25ರಷ್ಟು. ಎಲ್ಲಕ್ಕಿಂತ ಹೆಚ್ಚು ಹಾನಿಗೊಳಗಾಗಿರುವ ನಗರವೆಂದರೆ ಚೀನಾದ ಗ್ವಾಂಗ್ ಝೊ. ಚಳಿಗಾಲದಲ್ಲಿ ಇಲ್ಲಿನ ಸೂರ್ಯಕಿರಣಗಳು ಶೇ 20ಕ್ಕಿಂತಲೂ ಹೆಚ್ಚು ಪ್ರಮಾಣದಲ್ಲಿ ಮಸುಕಾಗುತ್ತವೆ ಎಂದು ವರದಿ ಹೇಳಿತು.

2008: ಭಾರತೀಯ ಮೂಲದ ಡಿಸೈನರ್ ಆನಂದ್ ಜಾನ್ ಅಲೆಗ್ಸಾಂಡರ್ ಮೇಲಿದ್ದ ಅತ್ಯಾಚಾರಕ್ಕೆ ಸಂಬಂಧಿಸಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಯಿತು. 2 ತಿಂಗಳ ವಿಚಾರಣೆ ಬಳಿಕ ಕೋರ್ಟ್ ತೀರ್ಪು ನೀಡಿತು. ಸದ್ಯ 34ರ ಹರೆಯದ ಆನಂದ್ 67 ವರ್ಷವಾದ ಬಳಿಕ ಮಾತ್ರ ಪೆರೋಲ್ ಮೇಲೆ ಬಿಡುಗಡೆಗೆ ಅವಕಾಶವಿದೆ ಎಂದು ತೀರ್ಪಿನಲ್ಲಿ ಹೇಳಲಾಯಿತು. ವಿಚಾರಣೆಯ ಪ್ರಾರಂಭದ ಹಂತದಲ್ಲಿ ಆತನ ಮೇಲೆ ಇಂತಹ 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದವು. ಆದರೆ ಕೊನೆಯ ಹಂತದಲ್ಲಿ 16 ಪ್ರಕರಣಗಳು ಮಾತ್ರ ಸಾಬೀತಾದವು. ಎರಡು ಕೊಲೆ ಪ್ರಕರಣಗಳೂ ಇದರಲ್ಲಿ ಸೇರಿದ್ದರೂ ಅವುಗಳಿಂದ ದೋಷಮುಕ್ತಗೊಳಿಸಲಾಯಿತು.

2008: ಮಾಜಿ ರಾಜ ಪ್ರಭುತ್ವದ ಕುಟುಂಬಗಳಿಗೆ ವಿಶೇಷ ಸ್ಥಾನಮಾನ ಒದಗಿಸುವ ಕಾನೂನನ್ನು ತೆಗೆದು ಹಾಕುವಂತೆ ಅಥವಾ ಅದಕ್ಕೆ ತಿದ್ದುಪಡಿ ತರುವಂತೆ ನೇಪಾಳ ಸುಪ್ರೀಂಕೋರ್ಟ್ ಮಾವೋವಾದಿ ನೇತೃತ್ವದ ಸರ್ಕಾರಕ್ಕೆ ನಿರ್ದೇಶನ ನೀಡಿತು. ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನುಪರಿಗಣಿಸಿ ಈ ತೀರ್ಪು ಹೊರಬಿದ್ದಿತು.

2008: ಇಂಡೊನೇಷ್ಯಾದ ಎರಡು ಗ್ರಾಮಗಳಲ್ಲಿ ಅಧಿಕ ಮಳೆಯಿಂದ ಭೂಕುಸಿತ ಸಂಭವಿಸಿ 10 ಜನರು ಮೃತರಾಗಿ, 7 ಮಂದಿ ಕಾಣೆಯಾದರು. 30 ಮನೆಗಳು ನಾಶಗೊಂಡವು.

2008: ಮಾಜಿ ಕೇಂದ್ರ ಸಚಿವ ಹಾಗೂ ತೃಣಮೂಲ ಕಾಂಗ್ರೆಸ್ಸೊಮ ಹಿರಿಯ ಮುಖಂಡ ಅಜಿತ್ ಪಾಂಜಾ (72) ಈದಿನ ಕೋಲ್ಕತ್ತದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಆರು ಸಲ ಸಂಸತ್ತಿಗೆ ಆಯ್ಕೆಯಾಗಿದ್ದ ಪಾಂಜಾ ಅವರು ರಾಜೀವ ಗಾಂಧಿ, ಪಿ.ವಿ.ನರಸಿಂಹ ರಾವ್ ಹಾಗೂ ವಾಜಪೇಯಿ ಸರ್ಕಾರದಲ್ಲಿ ಸಚಿವರಾಗಿದ್ದರು. 1971 ಹಾಗೂ 1972-77 ರ್ಲಲಿ ಪಶ್ಚಿಮ ಬಂಗಾಳದ ರಾಜ್ಯ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

2008: ಕರಾವಳಿ ಪ್ರದೇಶದ ಬಹುತೇಕ ಮಂದಿಯನ್ನು ಕಾಡುವ ಆನೆಕಾಲು ರೋಗ (ಫೈಲೇರಿಯಾ) ನಿವಾರಿಸುವ ನಿಟ್ಟಿನಲ್ಲಿ ಕಾಸರಗೋಡಿನ `ಇನ್ಸ್ಟಿಟ್ಯೂಟ್ ಆಫ್ ಅಪ್ಲೈಯ್ಡ್ ಡರ್ಮಟಾಲಜಿ' (ಐಎಡಿ) ಸಂಸ್ಥೆಯು ಭಾರತೀಯ ಸಂಯೋಜಿತ ಚಿಕಿತ್ಸಾ ವಿಧಾನವನ್ನು ಪತ್ತೆ ಮಾಡಿದೆ ಎಂದು ಸಂಸ್ಥೆಯ ಚರ್ಮರೋಗ ತಜ್ಞ ಡಾ.ಎಸ್. ಆರ್. ನರಹರಿ ಬೆಂಗಳೂರಿನಲ್ಲಿಪ್ರಕಟಿಸಿದರು. ಅಲೋಪಥಿ, ಆಯುರ್ವೇದ, ಹೋಮಿಯೋಪಥಿ ಮುಂತಾದ ಚಿಕಿತ್ಸಾ ಮಾದರಿ ಒಳಗೊಂಡ ಸಂಯೋಜಿತ ಚಿಕಿತ್ಸಾ ವಿಧಾನದ ಮೂಲಕ ಫೈಲೇರಿಯಾ ರೋಗ ಗುಣಪಡಿಸಬಹುದು ಎಂದು ಅವರು ವಿಶ್ವಾಸ ವ್ಯಕ್ತ ಪಡಿಸಿದರು. `ಮೂರು ಚಿಕಿತ್ಸಾ ಮಾದರಿಗಳ ಜೊತೆಗೆ ಯೋಗಾಸನ ಮಾಡಿಸುವುದರಿಂದ ಫೈಲೇರಿಯಾದಿಂದ ಬಳಲುತ್ತಿರುವ ವ್ಯಕ್ತಿಯನ್ನು ಹಂತಹಂತವಾಗಿ ಗುಣಪಡಿಸಬಹುದು. ಸಂಯೋಜಿತ ಚಿಕಿತ್ಸಾ ಪದ್ಧತಿ ಮೂಲಕ ಫೈಲೇರಿಯಾ ಬಾಧಿತ ಕಾಲನ್ನು ಶೇ 80ರಷ್ಟು ಗುಣಪಡಿಸಬಹುದು' ಎಂದು ಅವರು ಈ ದಿನದ ವಿಶ್ವ ಆನೆಕಾಲು ರೋಗ ದಿನಾಚರಣೆ ಸಂದರ್ಭದಲ್ಲಿ ಹೇಳಿದರು.

2007: ಜನತಾದಳ (ಎಸ್) ಮುಖಂಡರ ಧೋರಣೆಯಿಂದ ಬೇಸತ್ತು ಆ ಪಕ್ಷ ತ್ಯಜಿಸಿ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಿದ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್. ಪಟೇಲ್ ಪುತ್ರ ಮಹಿಮಾ ಪಟೇಲ್ ಸಾರಥ್ಯದ `ಸುವರ್ಣ ಯುಗ' ನೂತನ ಪಕ್ಷ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಈದಿನ ಉದಯವಾಯಿತು.

2007: ಮಾಜಿ ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ರೆಫ್ರಿ ಎಂ. ಕೃಷ್ಣಪ್ಪ (72) ಮಂಗಳೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಇವರು ಬಾಲಾಂಜನೇಯ ವ್ಯಾಯಾಮ ಶಾಲೆಯ ಸ್ಥಾಪಕ ಸದಸ್ಯರು ಹಾಗೂ ಅಧ್ಯಕ್ಷರು. ಅನೇಕ ಅಂತಾರಾಷ್ಟ್ರೀಯ ಖ್ಯಾತಿಯ ಪವರ್ ಲಿಫ್ಟರುಗಳು ಕೃಷ್ಣಪ್ಪ ಅವರಿಂದ ತರಬೇತಿ ಪಡೆದಿದ್ದಾರೆ. ರಥಬೀದಿಯ ಬಳಿ ಅವರು ಬೆಳೆಸಿದ ಬಾಲಾಂಜನೇಯ ವ್ಯಾಯಾಮ ಶಾಲೆಗೆೆ ಈ ವರ್ಷ ವಜ್ರ ಮಹೋತ್ಸವ ಸಂಭ್ರಮ.

2007: ಬೆಂಗಳೂರು ನಗರದ ಹೊರವಲಯದಲ್ಲಿನ ಸ್ಪರ್ಶ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ಬಿಹಾರದ ಎರಡು ವರ್ಷದ ಬಾಲಕಿ ಲಕ್ಷ್ಮಿಯನ್ನು ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಆಕೆಯ ಆರೈಕೆಗಾಗಿ ಸರ್ಕಾರದ ವತಿಯಿಂದ 1 ಲಕ್ಷ ರೂಪಾಯಿ ನೀಡಿದರು.

2006: ಬಡಕುಟುಂಬದ ಹೆಣ್ಣು ಮಗುವಿನ ಹೆಸರಿನಲ್ಲಿ 10,000 ರೂಪಾಯಿ ಠೇವಣಿ ಇಡುವ ಕರ್ನಾಟಕ ಸರ್ಕಾರದ ವಿನೂತನ `ಭಾಗ್ಯಲಕ್ಷ್ಮಿ' ಯೋಜನೆಗೆ ಬೆಂಗಳೂರಿನ ಜವಾಹರ ಬಾಲ ಭವನದಲ್ಲಿ ಅಧಿಕೃತ ಚಾಲನೆ ನೀಡಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಯೋಜನೆಗೆ ಚಾಲನೆ ನೀಡಿ, 100 ಫಲಾನುಭವಿ ಹೆಣ್ಣುಮಕ್ಕಳ ತಾಯಂದಿರಿಗೆ ಸಾಂಕೇತಿಕವಾಗಿ ಮಂಜೂರಾತಿ ಆದೇಶ ಪತ್ರ ವಿತರಿಸಿದರು. ಬಿಡದಿ ಹೋಬಳಿ ಕರಿಯಪ್ಪನ ಹಳ್ಳಿಯ ಚೌಡಯ್ಯ ಮತ್ತು ಭಾಗ್ಯ ಅವರ ಮಗು ಅನುಷಾ ಠೇವಣಿ ಪತ್ರ ಪಡೆದ ಪ್ರಥಮ ಮಗು ಎನಿಸಿಕೊಂಡಿತು. ಉಪ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಜರಿದ್ದರು.

2006: ಹಿರಿಯ ಸಾಹಿತಿ ಸೂರ್ಯನಾರಾಯಣ ಚಡಗ (77) ಅವರು ಬೆಂಗಳೂರಿನ ಕಲ್ಯಾಣನಗರದ ತಮ್ಮ ನಿವಾಸದಲ್ಲಿ ನಿಧನರಾದರು. 1954ರಲ್ಲಿ ಮೊದಲ ಕಾದಂಬರಿ `ರತ್ನ ಪಡೆದ ಭಾಗ್ಯ'ದಿಂದ 2001ರಲ್ಲಿ ಬರೆದ `ನಾಟ್ಯರಶ್ಮಿ' ಕೃತಿವರೆಗೆ 30ಕ್ಕೂ ಹೆಚ್ಚು ಕೃತಿಗಳನ್ನು ಚಡಗ ರಚಿಸಿದ್ದಾರೆ.

2006: ಕೇರಳದ ಹಿರಿಯ ಸ್ವಾತಂತ್ರ್ಯ ಯೋಧ, ಕಮ್ಯೂನಿಸ್ಟ್ ಧುರೀಣ ಎನ್. ಸುಬ್ರಹ್ಮಣ್ಯ ಶೆಣೈ ಪಯ್ಯನ್ನೂರಿನಲ್ಲಿ ನಿಧನರಾದರು. ಕೇರಳದಲ್ಲಿ ಕಮ್ಯೂನಿಸ್ಟ್ ಆಂದೋಲನ ಹುಟ್ಟು ಹಾಕಿದವರಲ್ಲಿ ಶೆಣೈ ಒಬ್ಬರು.

2006: ಇರಾಕಿ ಪೊಲೀಸ್ ಕಮಾಂಡೋ ಸಮವಸ್ತ್ರ್ರ ಧರಿಸ್ದಿದ ಶಸ್ತ್ರಧಾರಿಗಳು ಕೇಂದ್ರ ಬಾಗ್ದಾದಿನ ಉನ್ನತ ಶಿಕ್ಷಣ ಸಚಿವಾಲಯದ ಕಟ್ಟಡ, ಹಾಗೂ ಕರ್ರಾಡಾ ಸಂಶೋಧನಾ ನಿರ್ದೇಶನಾಲಯದಿಂದ ಶಿಯಾ ಹಾಗೂ ಸುನ್ನಿ ಸಮುದಾಯಗಳಿಗೆ ಸೇರಿದ 150ಕ್ಕೂ ಹೆಚ್ಚು ಮಂದಿಯನ್ನು ಅಪಹರಿಸಿದರು. ಶಸ್ತ್ರಧಾರಿಗಳು 20 ನಿಮಿಷಗಳ ಅವಧಿಯಲ್ಲಿ ಈ ಕಾರ್ಯಾಚರಣೆಯನ್ನು ನಡೆಸಿದರು. ದಾಳಿಗೆ ಮುನ್ನ ಇಡೀ ರಸ್ತೆಯನ್ನು ಸುತ್ತುವರೆದು, ಪ್ರತಿಭಟಿಸಿದ ನಾಲ್ವರು ಭದ್ರತಾ ಸಿಬ್ಬಂದಿಯನ್ನು ನಿಶ್ಯಸ್ತ್ರಗೊಳಿಸಲಾಯಿತು. ಪುರುಷರು ಹಾಗೂ ಮಹಿಳೆಯರನ್ನು ಪ್ರತ್ಯೇಕ ಕೊಠಡಿಗಳಲ್ಲಿ ಕೂಡಿ ಹಾಕಿ ಅವರ ಕೈಗಳನ್ನು ಬಿಗಿದು 6 ಟ್ರಕ್ಕುಗಳಲ್ಲಿ ತುಂಬಿಕೊಂಡು ಹೋಗಲಾಯಿತು.

2006: ಕೆನಡಾ ನಿವಾಸಿ `ಎಡಿಬಿ'ಯ ಆಗ್ನೇಯ ಏಷ್ಯಾ ವಿಭಾಗದ ಮಹಾ ನಿರ್ದೇಶಕ, `ಎಡಿಬಿ' ಅಧ್ಯಕ್ಷರ ಸಲಹೆಗಾರ ರಜತ್ ಎಂ. ನಾಗ್ ಅವರನ್ನು ಏಷ್ಯನ್ ಡೆವೆಲಪ್ ಮೆಂಟ್ ಬ್ಯಾಂಕಿನ (ಎಡಿಬಿ) ಹೊಸ ಮಹಾ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನೇಮಿಸಲಾಯಿತು.

2005: ಬೆಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ಲಾರೆನ್ಸ್ ಫರ್ನಾಂಡಿಸ್ (73) ಹೃದಯದ ರಕ್ತನಾಳ ಒಡೆದ ಪರಿಣಾಮವಾಗಿ ಅಸು ನೀಗಿದರು. ತುರ್ತು ಪರಿಸ್ಥಿತಿ ಕಾಲದಲ್ಲಿ ಸೆರೆಮನೆವಾಸ ಅನುಭವಿಸಿ ಪೊಲೀಸರಿಂದ ವಿಪರೀತ ಚಿತ್ರಹಿಂಸೆ ಅನುಭವಿಸಿದ್ದ ಲಾರೆನ್ಸ್ ಅವಿವಾಹಿತರಾಗಿದ್ದರು. ಲಾರೆನ್ಸ್ ಫರ್ನಾಂಡಿಸ್ ಅವರು ಮಾಜಿ ಕೇಂದ್ರ ರಕ್ಷಣಾ ಸಚಿವ ಜಾರ್ಜ್ ಫರ್ನಾಂಡಿಸ್ ಅವರ ಸಹೋದರ.

1992: ಸಚಿನ್ ತೆಂಡೂಲ್ಕರ್ ಅವರು ದಕ್ಷಿಣ ಆಫ್ರಿಕದ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದ ಎರಡನೇ ದಿನ ಟೆಲಿವಿಷನ್ ಸಾಕ್ಷ್ಯದ ಆಧಾರದಲ್ಲಿ (ಥರ್ಡ್ ಅಂಪೈರ್) ವಜಾಗೊಂಡ ಮೊದಲ ಕ್ರಿಕೆಟ್ ಪಟು ಎನಿಸಿಕೊಂಡರು.

1971: ಬಾಂಗ್ಲಾದೇಶದಲ್ಲಿ ಬೀಸಿದ ಭಾರಿ ಚಂಡಮಾರುತಕ್ಕೆ 3 ಲಕ್ಷ ಮಂದಿ ಬಲಿಯಾದರು.

1967: ಭಾರತದ ಮೊದಲ ಟೆಸ್ಟ್ ಕ್ಯಾಪ್ಟನ್ ಹಾಗೂ ಖ್ಯಾತ ಕ್ರಿಕೆಟ್ ಆಟಗಾರ ಕೊಟ್ಟಾರಿ ಕನಕಯ್ಯ ನಾಯ್ಡು ಅವರು ತಮ್ಮ 72ನೇ ವಯಸ್ಸಿನಲ್ಲಿ ನಿಧನರಾದರು.

1948: ವೇಲ್ಸ್ ರಾಜಕುಮಾರ ಚಾರ್ಲ್ಸ್ ಜನನ.

1944: ಭಾರತದ ಕೈಗಾರಿಕೋದ್ಯಮಿ ಆದಿತ್ಯ ವಿಕ್ರಮ್ ಬಿರ್ಲಾ (1944-95) ಹುಟ್ಟಿದ ದಿನ.

1915: ಕರಿಯ ಅಮೆರಿಕನ್ನರ ಪ್ರಭಾವಶಾಲಿ ವಕ್ತಾರ, ಸುಧಾರಕ ಬೂಕರ್ ಟಿ. ವಾಷಿಂಗ್ಟನ್ ಅವರು ತಮ್ಮ 59ನೇ ವಯಸಿನಲ್ಲಿ ನಿಧನರಾದರು.

1913: ರಬೀಂದ್ರನಾಥ ಟ್ಯಾಗೋರ್ ಅವರಿಗೆ ಸಾಹಿತ್ಯಕ್ಕೆ ನೀಡಲಾಗುವ ನೊಬೆಲ್ ಪ್ರಶಸ್ತಿ ಲಭಿಸಿದ ಸುದ್ದಿ ತಿಳಿಯಿತು. ಆಗ ಶಾಂತಿ ನಿಕೇತನದಲ್ಲಿ ದೂರವಾಣಿ ಇರಲಿಲ್ಲ. ಹಾಗಾಗಿ ಕಲ್ಕತ್ತದಿಂದ (ಈಗಿನ ಕೋಲ್ಕತ್ತಾ) ಕೇಬಲ್ ಮೂಲಕ ಸುದ್ದಿ ಕಳುಹಿಸಲಾಯಿತು. ಈ ಗೌರವಕ್ಕೆ ಪಾತ್ರರಾದ ಮೊದಲ ಭಾರತೀಯ ಹಾಗೂ ಮೊದಲ ಏಷ್ಯನ್ ಎಂಬ ಹೆಗ್ಗಳಿಕೆ ಟ್ಯಾಗೋರ್ ಅವರದಾಯಿತು.

1910: ಪ್ರಾಧ್ಯಾಪಕ, ಸಾಹಿತಿ, ವಿಮರ್ಶಕ ಸ.ಸ. ಮಾಳವಾಡ ಅವರು ಸಂಗನಬಸಪ್ಪ- ಕಾಳಮ್ಮ ದಂಪತಿಯ ಮಗನಾಗಿ ಧಾರವಾಡ ಜಿಲ್ಲೆಯ ಮೆಣಸಗಿಯಲ್ಲಿ ಜನಿಸಿದರು.

1891: ಸರ್ ಫ್ರೆಡರಿಕ್ ಗ್ರಾಂಟ್ ಬಂಟಿಂಗ್ (1891-1941) ಹುಟ್ಟಿದ ದಿನ. ವೈದ್ಯರಾದ ಇವರು ಚಾರ್ಲ್ಸ್ ಎಚ್. ಬೆಸ್ಟ್ ನೆರವಿನೊಂದಿಗೆ ಇನ್ಸುಲಿನನ್ನು ಕಂಡು ಹಿಡಿದರು.

1889: ಸ್ವತಂತ್ರ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು (1889-1964) ಹುಟ್ಟಿದ ದಿನ.

1863: ಅಮೆರಿಕದ ಕೈಗಾರಿಕಾ ರಾಸಾಯನಿಕ ತಜ್ಞ, ಸಂಶೋಧಕ ಲಿಯೋ ಹೆಂಡ್ರಿಕ್ ಬೆಕೆಲೈಟ್ ಹುಟ್ಟಿದ ದಿನ. ಈತ ಕಂಡು ಹಿಡಿದ `ಬೆಕಲೈಟ್' ಆಧುನಿಕ ಪ್ಲಾಸ್ಟಿಕ್ ಉದ್ಯಮದ ಹುಟ್ಟಿಗೆ ಕಾರಣವಾಯಿತು.

1687: ಇಂಗ್ಲಿಷ್ ನಟಿ ಹಾಗೂ ಎರಡನೇ ಚಾರ್ಲ್ಸ್ ನ ಪ್ರೇಯಸಿ ನೆಲ್ ಗ್ವಿನ್ ತನ್ನ 37ನೇ ವಯಸ್ಸಿನಲ್ಲಿ ಮೃತಳಾದಳು.

1681: ಈಸ್ಟ್ ಇಂಡಿಯಾ ಕಂಪೆನಿಯು ಬಂಗಾಳವನ್ನು ಪ್ರತ್ಯೇಕ ಪ್ರಾಂತ್ಯ ಎಂದು ಘೋಷಿಸಿತು.

No comments:

Post a Comment