Thursday, November 15, 2018

ಇಂದಿನ ಇತಿಹಾಸ History Today ನವೆಂಬರ್ 15

ಇಂದಿನ ಇತಿಹಾಸ History Today ನವೆಂಬರ್ 15
2018: ಇಟಲಿ: ಕರ್ನಾಟಕ ಕರಾವಳಿ ಬೆಡಗಿ ಚಿತ್ರನಟಿ ದೀಪಿಕಾ ಪಡುಕೋಣೆ ಮತ್ತು ಬಾಲಿವುಡ್ ನಟ ರಣವೀರ್ ಸಿಂಗ್ ಅವರ ಮದುವೆ ಸಿಂಧಿ ಸಂಪ್ರದಾಯಕ್ಕೆ ಅನುಗುಣವಾಗಿ ಇಟಲಿಯ ಲೇಕ್ ಕೊಮೋದಲ್ಲಿ ನೆರವೇರಿತು. ಕೊಂಕಣಿ ಸಂಪ್ರದಾಯಕ್ಕೆ ಅನುಗುಣವಾಗಿ ಮದುವೆ ಸಮಾರಂಭ ನಡೆದ ಒಂದು ದಿನದ ಬಳಿಕ ಸಿಂಧಿ ಸಂಪ್ರದಾಯಕ್ಕೆ ಅನುಗುಣವಾಗಿ ಅವರ ಮದುವೆ ನಡೆಯಿತು. ಅತ್ಯಂತ ಖಾಸಗಿಯಾಗಿ ನಡೆದ ಮದುವೆ ಸಮಾರಂಭಕ್ಕೆ ಭಾರೀ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಮದುವೆ ಬಳಿಕ ಸಮಾರಂಭದ ಭಾವಚಿತ್ರಗಳು ಒಂದೊಂದಾಗಿ ಹೊರಬರಲು ಆರಂಭವಾದವು. ರಣವೀರ್ ಮತ್ತು ಅವರ ದಿಬ್ಬಣ ನದಿಗಳಲ್ಲಿ ಆಗಮಿಸಿತು. ದಿಬ್ಬಣದ ಸದಸ್ಯರು ಹಿಂದಿ ಹಾಡುಗಳಿಗೆ ಸರಿಯಾಗಿ ನರ್ತಿಸುತ್ತಾ ಆಗಮಿಸಿದರು. ಕುಟುಂಬದ ಪುರುಷ ಸದಸ್ಯರ ಕೆಂಪು ಪಗಡಿಗಳನ್ನು ಧರಿಸಿದ್ದರೆ, ಮಹಿಳಾ ಬಂಧುಗಳು ಕೆಂಪು ಮತ್ತು ಗುಲಾಬಿ ಬಣ್ಣದ ದಿರುಸುಗಳಲ್ಲಿ ಕಂಗೊಳಿಸುತ್ತಿದ್ದರು. ಉತ್ತರ ಇಟಲಿಯ ಲೇಕ್ ಕೊಮೋದಲ್ಲಿನ ಝಗಮಗಿಸುತ್ತಿದ್ದ ವಿಲ್ಲಾ ಡೆಲ್ ಬಾಲ್ಬಿಯಾನೆಲ್ಲೋದಲ್ಲಿ ದೀಪಿಕಾ-ರಣವೀರ್ ದಾಂಪತ್ಯಕ್ಕೆ ಅಡಿ ಇಟ್ಟರು. ಲೇಕಸ್ ಸಮೀಪದಿಂದ ತೆಗೆಯಲಾದ ವಿಡಿಯೋ ಒಂದನ್ನು ಬಳಿಕ ಅಂತರ್ಜಾಲದಲ್ಲಿ ಹಂಚಿಕೊಳ್ಳಲಾಯಿತು. ವಿಡಿಯೋದಲ್ಲಿ ಅವರ ನಿಕಟ ಗೆಳೆಯರು ಮತ್ತು ಕುಟುಂಬ ಸದಸ್ಯರು ವಿಲ್ಲಾದ ಬಾಲ್ಕನಿಯಲ್ಲಿ ಇರುವುದನ್ನು ತೋರಿಸಲಾಯಿತು. ವಿಡಿಯೋದಲ್ಲಿ ದೀಪಿಕಾ ಮತ್ತು ರಣವೀರ್ ಅವರ ಹೆತ್ತವರೂ ಕಂಡು ಬಂದರು.

2018: ನವದೆಹಲಿ: ೩೬ ರಫೆಲ್ ಯುದ್ಧ ವಿಮಾನಗಳ ಖರೀದಿ ವ್ಯವಹಾರಕ್ಕೆ ಸಂಬಂಧಿಸಿದಂತೆ ಸರ್ಕಾರವನ್ನು ಪ್ರಬಲವಾಗಿ ಟೀಕಿಸುತ್ತಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರುಅಸ್ಥಿಪಂಜರಗಳು ಹೊರಬರಲು ಆರಂಭಿಸಿವೆ ಎಂದು ಸರ್ಕಾರದ ವಿರುದ್ಧ ಟ್ವೀಟ್ ಮೂಲಕ ಚಾಟಿ ಬೀಸಿದರು. ಸುಪ್ರೀಂಕೋರ್ಟಿನಲ್ಲಿ ಸರ್ಕಾರದ ಅತ್ಯುನ್ನತ ಕಾನೂನು ಅಧಿಕಾರಿ (ಅಟಾರ್ನಿ ಜನರಲ್) ನೀಡಿದ ಹೇಳಿಕೆ ಸಂಬಂಧದ ವರದಿಗಳನ್ನು ಉಲ್ಲೇಖಿಸಿದ ರಾಹುಲ್, ೫೮,೦೦೦ ಕೋಟಿ ರೂಪಾಯಿ ಮೊತ್ತದ ೩೬ ಯುದ್ಧ ವಿಮಾನಗಳ ಖರೀದಿ ವ್ಯವಹಾರವು ಅಂತರ್ ಸರ್ಕಾರಿ ವ್ಯವಹಾರ ಎಂಬ ಸರ್ಕಾರದ ಪ್ರತಿಪಾದನೆಯನ್ನು ಈದಿನ ಪ್ರಶ್ನಿಸಿದರು. ‘ರಫೆಲ್ ಕಪಾಟಿನಿಂದ ಇತ್ತೀಚಿನ ಅಸ್ಥಿಪಂಜರ ಹೊರಬಂದಿದೆ: ವ್ಯವಹಾರವನ್ನು ಬೆಂಬಲಿಸಿ ಫ್ರೆಂಚ್ ಸರ್ಕಾರದಿಂದ ಯಾವುದೇ ಖಾತರಿ ಇಲ್ಲ ಆದರೆ ವಿಧೇಯತೆಯ ಭರವಸೆ ನೀಡಿ ಫ್ರೆಂಚ್ ಸರ್ಕಾರ ಬರೆದ ಪತ್ರ ಇದೆ ಎಂದು ನಮ್ಮ ಪ್ರಧಾನಿ ಹೇಳುತ್ತಿದ್ದಾರೆ! ಇದು ಅಂತರ್ -ಸರ್ಕಾರಿ ವ್ಯವಹಾರ ಎಂದು ಕರೆಯಲು ಇಷ್ಟು ಸಾಕೇ?’ ಎಂದು ಗಾಂಧಿ ಟ್ವೀಟ್ ಮಾಡಿದ್ದಾರೆ. ವ್ಯವಹಾರದಲ್ಲಿನ ಭ್ರಷ್ಟಾಚಾರ ಬಗ್ಗೆ ತಾವು ಮಾಡಿರುವ ಆರೋಪ ಕುರಿತು ತನಿಖೆಯಾಗಬೇಕು ಎಂದು ಕಾಂಗ್ರೆಸ್ ಅಧ್ಯಕ್ಷರು ಆಗ್ರಹಿಸಿದರು.
ಸುಪ್ರೀಂಕೋರ್ಟಿನಲ್ಲಿ ಅರ್ಜಿದಾರರು ೨೦೧೬ರಲ್ಲಿ  ಎನ್ ಡಿಎ ಸರ್ಕಾರ ಸಹಿ ಹಾಕಿರುವ ಮತ್ತು ಪ್ರಧಾನಿ ಮೋದಿ ಅವರು ೨೦೧೫ರಲ್ಲಿ  ಇದು ಅಂತರ್ ಸರ್ಕಾರಿ ಒಪ್ಪಂದ ಎಂಬುದಾಗಿ ಪ್ರತಿಪಾದಿರುವ ಹೊಸ ಒಪ್ಪಂದದ ಅಡಿಪಾಯದ ಮೇಲೆ ದಾಳಿ ನಡೆಸಿದ್ದಾರೆ. ಫ್ರೆಂಚ್ ಸರ್ಕಾರವು ಒಪ್ಪಂದಕ್ಕೆ ಸಾರ್ವಭೌಮ ಖಾತರಿಯನ್ನೇ ನೀಡದೇ ಇರುವಾಗ ಇದು ಅಂತರ್ ಸರ್ಕಾರಿ ಒಪ್ಪಂದವಾಗಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು. ಅರ್ಜಿದಾರರಾದ ಸಾಮಾಜಿಕ ಕಾರ್ಯಕರ್ತ -ವಕೀಲ ಪ್ರಶಾಂತ ಭೂಷಣ್, ಮಾಜಿ ಕೇಂದ್ರ ಸಚಿವರಾದ ಅರುಣ್ ಶೌರಿ ಮತ್ತು ಯಶವಂತ ಸಿನ್ಹ, ಆಮ್ ಆದ್ಮಿ ಪಕ್ಷದ (ಆಪ್) ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಮತ್ತು ವಕೀಲರಾದ ಎಂ.ಎಲ್. ಶರ್ಮ ಮತ್ತು ವಿನೀತ್ ಧಂಡಾ ಅವರು () ವಿಮಾನಗಳ ದರಕ್ಕೆ ಸಂಬಂಧಿಸಿದಂತೆ ಪಾರದರ್ಶಕತೆಯ ಕೊರತೆ, () ಹಾಲಿ ಒಪ್ಪಂದವನ್ನು ರದ್ದು ಪ್ರಕ್ರಿಯೆಯನ್ನು ಗಾಳಿಗೆ ತೂರಿ ಖಾಸಗಿ ಸಂಸ್ಥೆಗೆ ಅನುಕೂಲ ಮಾಡಿಕೊಡಲು ಮಾಡಿಕೊಂಡ ಆಫ್ ಸೆಟ್ ಒಪ್ಪಂದ, () ಫ್ರಾನ್ಸ್ ಸಾರ್ವಭೌಮ ಖಾತರಿ ನೀಡಲು ನಿರಾಕರಿಸಿ, ಕೇವಲ ಸೌಕರ್ಯ ಪತ್ರ ಕೊಟ್ಟ ಕಾರಣ ಇದು ಅಂತರ್ ಸರ್ಕಾರಿ ಒಪ್ಪಂದವೇ ಅಲ್ಲ - ನೆಲೆಗಳಲ್ಲಿ ರಫೆಲ್ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು. ಈ ಮಧ್ಯೆ, ರಕ್ಷಣಾ ಖರೀದಿಗಳಲ್ಲಿ ಶಾಮೀಲಾಗಿದ್ದ ಮಾಜಿ ಸರ್ಕಾರಿ ರಕ್ಷಣಾ ಅಧಿಕಾರಿಯೊಬ್ಬರು ಒಪ್ಪಂದದಲ್ಲಿ ಯಾವುದೇ ಅಸಾಧಾರಣತೆ ಇಲ್ಲ ಎಂದು ಹೇಳಿದರು. ವಿವಾದ ಇತ್ಯರ್ಥ ಮತ್ತು ಸಾರ್ವಭೌಮ ಖಾತರಿ ಷರತ್ತುಗಳು ಸೇರಿದಂತೆ ಎಲ್ಲ ಅಂತರ್ ಸರ್ಕಾರಿ ಒಪ್ಪಂದಗಳನ್ನು (ಐಜಿಎಗಳು) ಮಾತುಕತೆಗೆ ಒಳಪಡಿಸಬಹುದು. ಎಲ್ಲ ಅಂತರ್ ಸರ್ಕಾರಿ ಒಪ್ಪಂದಗಳೂ ಮಾತುಕತೆಯನ್ನು ಆಧರಿಸಿದ ಒಪ್ಪಂದಗಳಾಗಿದ್ದು, ಇವುಗಳಲ್ಲಿ ಯಾವುದೂ ಶಿಲಾಲೇಖವಲ್ಲ. ಇವುಗಳಿಗೆ ನಿರ್ದಿಷ್ಟ ಸ್ವರೂಪ ಇರುವುದಿಲ್ಲ. ಭಾರತವು ಹಿಂದೆ ಕೂಡಾ ರಶ್ಯಾ ಮತ್ತು ಇತರ ರಾಷ್ಟ್ರಗಳಿಂದ ಸೌಕರ್ಯ ಪತ್ರಗಳ ಆಧಾರದಲ್ಲಿ ಶಸ್ತ್ರಾಸ್ತ್ರಗಳನ್ನು ತರಿಸಿದೆ ಎಂದು ಮಾಜಿ ಮುಖ್ಯ ಹಣಕಾಸು ಸಲಹೆಗಾರ (ಸ್ವಾಧೀನ) ಅಮಿತ್ ಕೌಶಿಶ್ ಹೇಳಿದರು. ಫ್ರೆಂಚ್ ಸರ್ಕಾರವು ವ್ಯವಹಾರದ ಅಂತಿಮ ಜಾರಿಯನ್ನು ಖಚಿತಪಡಿಸಿ ಯಾವುದೇ ಸಾರ್ವಭೌಮ ಖಾತರಿಯನ್ನು ನೀಡಿಲ್ಲ, ಬದಲಿಗೆ ಸೌಕರ್ಯ ಪತ್ರವನ್ನು ನೀಡಿದೆ ಎಂದು ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರು ಸುಪ್ರೀಂಕೋರ್ಟಿನಲ್ಲಿ ಒಪ್ಪಿಕೊಂಡಿದ್ದರು. ನಿಯಮಾವಳಿಗಳ ಉಲ್ಲಂಘನೆಯಾಗಿದೆ ಎಂಬ ಆರೋಪವನ್ನು ನಿರಾಕರಿಸಿದ್ದ ಅಟಾರ್ನಿ ಜನರಲ್, ನ್ಯಾಯಾಲಯಗಳು ಅಂತರ್ -ಸರ್ಕಾರಿ ಒಪ್ಪಂದವನ್ನು ಪುನರ್ ವಿಮರ್ಶೆ ಮಾಡಲು ಸಾಧ್ಯವಿಲ್ಲ ಎಂದು ವಾದಿಸಿದ್ದರು.

2018: ಚೆನ್ನೈ: ತೀವ್ರಗೊಂಡ  ’ಗಜ ಚಂಡಮಾರುತವು ರಾತ್ರಿ ಅಥವಾ ತಡರಾತ್ರಿಯಲ್ಲಿ ದಕ್ಷಿಣ ತಮಿಳುನಾಡು ಕರಾವಳಿ ಮೂಲಕ ಹಾದು ಹೋಗುವ ನಿರೀಕ್ಷೆಯಿದ್ದು, ಗಂಟೆಗೆ ೮೦ರಿಂದ ೯೦ ಅಥವಾ ೧೦೦ ಕಿಲೋಮೀಟರ್ ವೇಗದಲ್ಲಿ ನಾಗಪಟ್ಟಿಣಂ ಜಿಲ್ಲೆಯ ಮೇಲೆ ಅಪ್ಪಳಿಸುವ ಸಾಧ್ಯತೆ ಇದೆ ಎಂದ ತಮಿಳುನಾಡು ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೇಳಿತು. ಚಂಡಮಾರುತ ಅಪ್ಪಳಿಸಬಹುದೆಂದು ನಂಬಲಾಗಿರುವ ನಾಟಪಟ್ಟಿಣಂ ಮತ್ತು ಇತರ ಜಿಲ್ಲೆಗಳಲ್ಲಿ ಸರ್ಕಾರಿ ಯಂತ್ರವನ್ನು ಕಟ್ಟೆಚ್ಚರದಲ್ಲಿ ಇರಿಸಲಾಗಿದೆ. ರಾತ್ರಿ ೮ರಿಂದ ೧೧ ಗಂಟೆಯ ಮಧ್ಯೆ ಭಾರೀ ಮಳೆ-ಬಿರುಗಾಳಿಯೊಂದಿಗೆ ಚಂಡಮಾರುತ ಅಪ್ಪಳಿಸಬಹುದು ಎಂದು ಪ್ರಾಧಿಕಾರ ತಿಳಿಸಿತು.  ‘ಗಜ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ತಮಿಳುನಾಡು ತಾಂತ್ರಿಕ ಶಿಕ್ಷಣ ನಿರ್ದೇಶನಾಲಯವು ನವೆಂಬರ್ ೧೬ರ ಬೆಳಗ್ಗೆ ಮತ್ತು ಸಂಜೆ ನಡೆಯಬೇಕಾಗಿದ್ದ ಪಾಲಿಟೆಕ್ನಿಕ್ ಡಿಪ್ಲೋಮಾ ಪರೀಕ್ಷೆಗಳನ್ನು ಮುಂದೂಡಿತು. ನಾಗಪಟ್ಟಿಣಂ ಜಿಲ್ಲೆಯ ತಗ್ಗು ಪ್ರದೇಶಗಳಲ್ಲಿನ ಗುಡಿಸಲುಗಳಲ್ಲಿ ಇರಬೇಡಿ ಎಂಬುದಾಗಿ ಕಂದಾಯ ಮತ್ತು ವಿಪತ್ತು ನಿರ್ವಹಣಾ ಸಚಿವರು ಜನರಿಗೆ ಮನವಿ ಮಾಡಿದ್ದು ಜನರನ್ನು ವಿವಿಧೋದ್ದೇಶ ಶೆಲ್ಟರ್ ಗಳು ಮತ್ತು ಚಂಡಮಾರುತ ಶಿಬಿರಗಳಿಗೆ ಸ್ಥಳಾಂತರಿಸುವಂತೆ ಸೂಚಿಸಿದ್ದಾರೆ. ತಂಜಾವೂರು, ಪುದುಕೊಟ್ಟಾಯಿ, ತಿರುವರೂರು ಜಿಲ್ಲೆಗಳ ಎಲ್ಲ ಶಾಲೆ , ಕಾಲೇಜುಗಳಿಗೆ ನವೆಂಬರ್ ೧೬ರಂದು ರಜೆ ಘೋಷಿಸಲಾಯಿತು. ಮುಂಜಾಗರೂಕತಾ ಕ್ರಮವಾಗಿ ನಾಗಪಟ್ಟಿಣಂ ಜಿಲ್ಲೆಯ ಕರಾವಳಿ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗಿದೆ. ವೇದಾರಣ್ಯಂನಲ್ಲಿ ಎಲ್ಲ ಅಂಗಡಿ, ವ್ಯಾಪಾರ ಮುಂಗಟ್ಟುಗಳನ್ನು ಮುಚ್ಚಲಾಗಿದೆ. ವೇಲಾಂಕಣಿ, ನಾಗೋರ್, ಚೆನ್ನೈ ಕರಾವಳಿ ತೀರದಿಂದ ದೂರ ಹೋಗುವಂತೆ ಪ್ರವಾಸಿಗರಿಗೆ ಸೂಚಿಸಲಾಗಿದ್ದು, ಚೆನ್ನೈ ಮರೀನಾ ಬೀಚನ್ನು ಮುಚ್ಚಲಾಯಿತು.


2018: ತಿರುವನಂತಪುರಂ: ಶಬರಿಮಲೈ ವಿಷಯಕ್ಕೆ ಸಂಬಂಧಿಸಿದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪಂದಳ ರಾಜಕುಟುಂಬದ ಜೊತೆ ಮಾತುಕತೆ ನಡೆಸಿದ್ದು, ಬಿಕ್ಕಟಿನ ಇತ್ಯರ್ಥ ಸಾಧ್ಯತೆ ಕಂಡು ಬಂದಿದೆ ಎಂದು ವರದಿಗಳು ತಿಳಿಸಿದವು. ಇದಕ್ಕೂ ಮುನ್ನ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಸರ್ವ ಪಕ್ಷ ಸಭೆ ವಿಫಲಗೊಂಡಿತ್ತು. ಮೂಲಗಳ ಪ್ರಕಾರ ಮಹಿಳೆಯರಿಗೆ ಅಯ್ಯಪ್ಪ ಸ್ವಾಮಿ ಭೇಟಿಗೆ ಪ್ರತ್ಯೇಕ ದಿನಗಳನ್ನು ನಿಗದಿ ಪಡಿಸಲು ಸಾಧ್ಯವೇ ಎಂಬುದಾಗಿ ಮುಖ್ಯಮಂತ್ರಿ ವಿಜಯನ್ ಅವರು ತಂತ್ರಿಗಳ (ಮುಖ್ಯ ಅರ್ಚಕರು) ಬಳಿ ವಿಚಾರಿಸಿದ್ದಾರೆ ಎನ್ನಲಾಯಿತು. ೧೦ರಿಂದ ೫೦ ವರ್ಷಗಳ ನಡುವಣ ವಯೋಮಾನದ ಮಹಿಳೆಯರಿಗೆ ದೇವಾಲಯ ಭೇಟಿಗೆ ಪತ್ಯೇಕ ದಿನಗಳನ್ನು ತಮ್ಮ ಸರ್ಕಾರವು ನಿಗದಿ ಪಡಿಸಬಹುದು ಎಂದು ಇದಕ್ಕೆ ಮುನ್ನ ವಿಜಯನ್ ಅವರು ಹೇಳಿದ್ದರು. ದೇವಾಲಯವು ಮಂಡಲ-ಮಕರವಿಳಕ್ಕು ಯಾತ್ರಾ ಋತುವಿಗಾಗಿ ತೆರೆಯಲಿದೆ. ಸರ್ವ ಪಕ್ಷ ಸಭೆಯ ಬಳಿ ಮುಖ್ಯಮಂತ್ರಿಯವರು ತಾವು ತಂತ್ರಿಗಳು ಮತ್ತು ಪಂದಳ ರಾಜಕುಟುಂಬದ ಸದಸ್ಯರನ್ನು ಭೇಟಿ ಮಾಡಿ ತಮ್ಮ ಸಲಹೆಯನ್ನು ಅವರ ಮುಂದೆ ಇರಿಸುವುದಾಗಿ ಹೇಳಿದ್ದರು. ವಿರೋಧಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಪ್ರತಿಭಟನೆಯ ಹೊರತಾಗಿಯೂ ಸುಪ್ರೀಂಕೋರ್ಟ್ ತೀರ್ಪು ಜಾರಿಯ ನಿರ್ಧಾರದಿಂದ ಸರ್ಕಾರ ಹಿಂದೆ ಸರಿಯುವುದಿಲ್ಲ ಎಂದು ಅವರು ಸಭೆಯಲ್ಲಿ ಹೇಳಿದ್ದರು. ತಂತ್ರಿಗಳು ಮುಖ್ಯಮಂತ್ರಿಗಳ ಸಲಹೆಯನ್ನು ತಿರಸ್ಕರಿಸಿಲ್ಲ, ಬದಲಿಗೆ ಸಮಾಲೋಚನೆಗೆ ಇನ್ನಷ್ಟು ಕಾಲಾವಕಾಶ ನೀಡುವಂತೆ ಕೋರಿದ್ದಾರೆ ಎಂದು ಮೂಲಗಳು ಹೇಳಿವೆ. ರಾಜಕುಟುಂಬ ಕೂಡಾ ತೀರ್ಪಿಗೆ ತಡೆಯಾಜ್ಞೆ ನೀಡುವಂತೆ ಕೋರಿ ದೇವಸ್ವಂ ಮಂಡಳಿಗೆ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಮುಖ್ಯಮಂತ್ರಿ ವಿಜಯನ್ ಅವರಿಗೆ ಸೂಚಿಸಿತು ಎಂದು ವರದಿಗಳು ಹೇಳಿವೆ. ದೇವಸ್ವಂ ಮಂಡಳಿಯು ತೀರ್ಪಿಗೆ ತಡೆಯಾಜ್ಞೆ ಕೋರಿ ಜನವರಿ ೨೨ರಂದು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ ಎನ್ನಲಾಯಿತು. ದೇವಾಲಯದ ಬಾಗಿಲು ತೆರೆಯುವುದಕ್ಕೆ ಒಂದು ದಿನ ಮುಂಚಿತವಾಗಿ ಸಹಮತ ಸಾಧಿಸುವ ಆಶಯದೊಂದಿಗೆ ಸರ್ಕಾರ ಏರ್ಪಡಿಸಿದ್ದ ಸರ್ವ ಪಕ್ಷ ಸಭೆಯು ಉಭಯ ಬಣಗಳು ತಮ್ಮ ತಮ್ಮ ನಿಲುವಿಗೇ ಅಂಟಿಕೊಂಡ ಪರಿಣಾಮವಾಗಿ ವಿಫಲಗೊಂಡಿತ್ತು. ಮುಖ್ಯಮಂತ್ರಿ ಮೊಂಡುಹಠ ಹಿಡಿದಿದ್ದಾರೆ ಎಂದು ಆಪಾದಿಸಿ ಕಾಂಗ್ರೆಸ್ ನಾಯಕರು ಸಭೆಯಿಂದ ಹೊರ ನಡೆದಿದ್ದರು.  ‘ಸರ್ಕಾರವು ನಮ್ಮ ಬೇಡಿಕೆಗಳನ್ನು ಆಲಿಸಲು ನಿರಾಕರಿಸಿತು. ಇದು ಭಕ್ತರಿಗೆ ಸವಾಲು. ಮುಖ್ಯಮಂತ್ರಿಯವರು ಶಬರಿಮಲೈಯಲ್ಲಿ ಶಾಂತಿ ತರಲು ಇದ್ದ ಸುವರ್ಣ ಅವಕಾಶವನ್ನು ಹಾಳುಮಾಡಿದರು ಎಂದು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ರಮೇಶ ಚೆನ್ನಿತ್ತಲ ದೂರಿದ್ದರು. ಸಭೆಯಲ್ಲಿ ಪಾಲ್ಗೊಂಡಿದ್ದ ಬಿಜೆಪಿ ಕೇರಳ ಘಟಕ ಅಧ್ಯಕ್ಷ ಶ್ರೀಧರನ್ ಪಿಳ್ಳೈ ಅವರುಚಳವಳಿಯನ್ನು ಕೇರಳದಿಂದ ಹೊರಕ್ಕೂ ವಿಸ್ತರಿಸುವ ಬಗ್ಗೆ ಎನ್ಡಿಎ ಪರಿಗಣಿಸಲಿದೆ ಎಂದು ಹೇಳಿದ್ದರು.


2016: ಗಾಂಧಿನಗರ (ಗುಜರಾತ್): 500 ರೂಪಾಯಿ ಮತ್ತು 1000 ರೂಪಾಯಿ ನೋಟುಗಳನ್ನು ರದ್ದು ಪಡಿಸಿದ ಕೇಂದ್ರ ಸರ್ಕಾರದ ಬಿಸಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರ ಕುಟುಂಬಕ್ಕೂ ತಟ್ಟಿತು. ಪ್ರಧಾನಿ ಮೋದಿಯವರ ತಾಯಿ ಹೀರಾಬೆನ್ ಮೋದಿ ಅವರು ಈದಿನ ಹಳೆ ನೋಟು ಬದಲಾವಣೆಗಾಗಿ ಸ್ವತಃ ಬ್ಯಾಂಕಿಗೆ ಬಂದ ಘಟನೆ ಘಟಿಸಿತು.  ಹೀರಾಬೆನ್ ಮೋದಿ ಅವರು ಗಾಂಧಿ ನಗರದ ತಮ್ಮ ಬ್ಯಾಂಕಿಗೆ ಆಗಮಿಸಿ ನಿಗದಿತ ಫಾರಂಗೆ ಸಹಿಯ ಬದಲು ಹೆಬ್ಬೆಟ್ಟು ಒತ್ತಿ ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಂಡು 4500 ರೂಪಾಯಿಗಳನ್ನು ಪಡೆದುಕೊಂಡರು. 90 ಹರೆಯದ ಹೀರಾಬೆನ ಅವರು ಕೈಯಲ್ಲಿ ಹಳೆಯ ನೋಟುಗಳನ್ನು ಸ್ವತಃ ಹಿಡಿದುಕೊಂಡು ಸಾಲಿನಲ್ಲಿ ತಮ್ಮ ಸರದಿ ಬರುವವರೆಗೂ ಕಾದು ನಿಂತು ಬಳಿಕ ಬ್ಯಾಂಕಿನ ಒಳಕ್ಕೆ ತೆರಳಿ ಕೌಂಟರಿನಲ್ಲಿ ನೋಟು ಬದಲಾಯಿಸಿಕೊಂಡರು. ಕುಟುಂಬ ಸದಸ್ಯರು ಅವರ ಜೊತೆಗಿದ್ದು ನೋಟು ಬದಲಾವಣೆ ಮಾಡುವಲ್ಲಿ ಹೀರಾಬೆನ್ ಅವರಿಗೆ ನೆರವಾದರು.

2016:  ಶ್ರೀನಗರ: ಇಟಲಿಯ ಆಂಡ್ರಿಯಾದಲ್ಲಿ ನಡೆದ 8 ವರ್ಷಗಳ ಒಳಗಿನವರ ವಿಶ್ವ ಕಿಕ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಕಾಶ್ಮೀರದ 8 ಹರೆಯದ ಬಾಲಕಿ ತಜಮುಲ್ ಇಸ್ಲಾಮ್ ನವೆಂಬರ್ 11 ಶುಕ್ರವಾರ ಸ್ವರ್ಣ ಪದಕವನ್ನು ಗೆಲ್ಲುವ ಮೂಲಕ ಇತಿಹಾಸ ಸೃಷ್ಟಿಸಿದಳು. ಭಾರತಕ್ಕಾಗಿ ಸ್ವರ್ಣ ಪದಕವನ್ನು ಗೆದ್ದಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ, ನನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದು ಪುಟಾಣಿ ತಜಮುಲ್ ಹೇಳಿದಳು. ಐದು ದಿನಗಳ ಅವಧಿಯಲ್ಲಿ ತಜಮುಲ್ ಇಸ್ಲಾಮ್ 6 ಆಟಗಳನ್ನು ಗೆದ್ದಿದ್ದಾಳೆ ಎಂದು ಕೋಚ್ ಮಾಸ್ಟರ್ ಫಸಿಲ್ ಅಲಿ ತಿಳಿಸಿದರು. ತಜಮುಲ್ ಅಮೆರಿಕದ ತನ್ನ ಪ್ರತಿಸ್ಪರ್ಧಿಯನ್ನು ಪರಾಭವಗೊಳಿಸಿದಳು.  ಪ್ರಕ್ಷುಬ್ಧ ಕಾಶ್ಮೀರ ಕಣಿವೆಯ ಆಟಗಾರ್ತಿಯೊಬ್ಬಳು ಇಂತಹ ಸಾಧನೆ ಮಾಡಿದ್ದು ಇದೇ ಪ್ರಥಮಎರಡನೇ ತರಗತಿಯ ವಿದ್ಯಾರ್ಥಿನಿಯಾದ ತಜಮುಲ್ ಭಾರತವನ್ನು ಪ್ರತಿನಿಧಿಸಿದ ವಿಶ್ವ ಕಿಕ್ ಬಾಕ್ಸಿಂಗ್ ಚಾಂಪಿಯನ್ಶಿಪ್ನಲ್ಲಿ ಒಟ್ಟು 90 ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

2016: ಜೆಹನಾಬಾದ್ (ಬಿಹಾರ): 1999 ಸೆನಾರಿ ಸಾಮೂಹಿಕ ಹತ್ಯಕಾಂಡ ಪ್ರಕರಣದಲ್ಲಿ ಜೆಹನಾಬಾದ್ ನ್ಯಾಯಾಲಯವು 10 ಮಂದಿ ಅಪರಾಧಿಗಳಿಗೆ ಮರಣದಂಡನೆ ಹಾಗೂ ಮೂವರಿಗೆ ಜೀವಾವಧಿ ಸಜೆ ವಿಧಿಸಿ ತೀರ್ಪು ನೀಡಿತು. 1999 ಮಾರ್ಚ್ 18ರಂದು ಬಿಹಾರದ ಸೆನಾರಿ ಗ್ರಾಮದಲ್ಲಿ ನಡೆದ ಘಟನೆಯಲ್ಲಿ ಒಂದೇ ಜಾತಿಗೆ ಸೇರಿದ 34 ಮಂದಿಯನ್ನು ಮಾವೋವಾದಿ ಎಂಸಿಸಿ ಕಾರ್ಯಕರ್ತರು ಸಾಮೂಹಿಕವಾಗಿ ಹತ್ಯೆಗೈದಿದ್ದರು. ಕಗ್ಗೊಲೆಯ ಸೂತ್ರಧಾರಿ ಮಾವೋವಾದಿ ಕಮ್ಯೂನಿಸ್ಟ್ ಸೆಂಟರ್ (ಎಂಸಿಸಿ) ಮುಖ್ಯಸ್ಥ ರಮೇಶ ಯಾದವ್ ಯಾನೆ ಪೆಹ್ಲವಾನ್ನನ್ನು ಸುದೀರ್ಘ ಕಾಲದ ಹುಡುಕಾಟದ ಬಳಿಕ 2010 ಫೆಬ್ರುವರಿ ತಿಂಗಳಲ್ಲಷ್ಟೇ ಬಂಧಿಸಲು ವಿಶೇಷ ಕಾರ್ಯ ಪಡೆಗೆ (ಎಸ್ಟಿಎಫ್) ಸಾಧ್ಯವಾಗಿತ್ತು. ಇಬ್ಬರು ಸಹಚರರೊಂದಿಗೆ ಆತನನ್ನು ಬಂಧಿಸಲಾಗಿತ್ತು. ಜೆಹನಾಬಾದ್ ನ್ಯಾಯಾಲಯವು ಅಕ್ಟೋಬರ್ 28ರಂದು 15 ಆರೋಪಿಗಳನ್ನು ತಪ್ಪಿತಸ್ಥರು ಎಂಬುದಾಗಿ ತೀರ್ಪು ನೀಡಿ ಪ್ರಕರಣದ ಇತರ 23 ಆರೋಪಿಗಳನ್ನು ಖುಲಾಸೆಗೊಳಿಸಿತ್ತು.

2016: ನವದೆಹಲಿ: ಭ್ರಷ್ಟಾಚಾರ, ಕಳ್ಳನೋಟು ಹಾವಳಿ ಮತ್ತು ಕಾಳಸಂತೆಯನ್ನು ನಿಗ್ರಹಿಸಲು 500 ಹಾಗೂ 1000 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದು ಪಡಿಸಿ ಕೇಂದ್ರ ಸರ್ಕಾರವು ಕೈಗೊಂಡ ನಿರ್ಧಾರದಲ್ಲಿ ಮಧ್ಯಪ್ರವೇಶ ಮಾಡಲು ಈದಿನ ನಿರಾಕರಿಸಿದ ಸುಪ್ರೀಂಕೋರ್ಟ್, ನಿರ್ಣಯದ ಹಿನ್ನೆಲೆಯಲ್ಲಿ ಜನರು ಎದುರಿಸುತ್ತಿರುವ ಸಂಕಷ್ಟಗಳನ್ನು ನಿವಾರಿಸಲು ಕೈಗೊಂಡಿರುವ ಕಾರ್ಯ ಯೋಜನೆಯನ್ನು ಸಲ್ಲಿಸುವಂತೆ ಸರ್ಕಾರಕ್ಕೆ ಸೂಚಿಸಿತುಮದುವೆಗಳನ್ನು ನಡೆಸುತ್ತಿರುವ ಕುಟುಂಬಗಳು ಮತ್ತು ಕಟಾವು ಸಮಯವಾದ್ದರಿಂದ ರೈತರು ತೊಂದರೆ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ಹಳೆಯ ನೋಟು ರದ್ದು ನಿರ್ಣಯವನ್ನು ಹಿಂತೆಗೆದುಕೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂಬುದಾಗಿ ಅರ್ಜಿದಾರರು ಮಾಡಿದ ಮನವಿಯನ್ನು ಪುರಸ್ಕರಿಸಲು ಸುಪ್ರೀಂಕೋರ್ಟ್ ನಿರಾಕರಿಸಿತು. ಇವು ಸರ್ಕಾರದ ಆರ್ಥಿಕ ನೀತಿಗಳಾಗಿರುವುದರಿಂದ ನಾವು ಮಧ್ಯಪ್ರವೇಶ ಮಾಡುವುದಿಲ್ಲ. ಏನಿದ್ದರೂ ಜನ ಸಾಮಾನ್ಯರು ಎದುರಿಸುತ್ತಿರುವ ಸಂಕಷ್ಟಗಳನ್ನು ನಿವಾರಿಸುವ ಮಾರ್ಗಗಳ ಬಗ್ಗೆ ಪರಿಶೀಲಿಸುತ್ತೇವೆ ಎಂದು ನ್ಯಾಯಮೂರ್ತಿಗಳು ಹೇಳಿದರು. ಜನರು ಈಗ ಹಿಂಪಡೆಯುವ ಹಣದ ಮೊತ್ತವನ್ನು ಹೆಚ್ಚಿಸುವ ಬಗ್ಗೆ ಪರಿಶೀಲಿಸುವಂತೆ ಅವರು ಸರ್ಕಾರಕ್ಕೆ ಸೂಚಿಸಿದರು. ಅರ್ಜಿಯ ದಿನ ವಿಚಾರಣೆಯನ್ನು ನವೆಂಬರ್ 25ಕ್ಕೆ ಮುಂದೂಡಲಾಯಿತು.

 2016: ನವದೆಹಲಿ: ಟಾಟಾ ಸನ್ಸ್ಕಂಪೆನಿ ಅಧ್ಯಕ್ಷ ಹುದ್ದೆಯಿಂದ ವಜಾಗೊಂಡಿರುವ ಸೈರಸ್ಮಿಸ್ತ್ರಿ ಕಾಲಾವಧಿಯಲ್ಲಿ ಟಾಟಾ ಸಮೂಹ ಸಂಸ್ಥೆ ನಷ್ಟ ಅನುಭವಿಸಿದೆ ಎಂಬ ಆರೋಪಕ್ಕೆ ಉತ್ತರ ನೀಡಲು ಮಿಸ್ತ್ರಿ ಮುಂದೆ ಬಂದರು.  ತನ್ನ ಕಾಲಾವಧಿಯಲ್ಲಿ ಕಂಪೆನಿಯ ಖರ್ಚು ವೆಚ್ಚಗಳು ಯಾವ ರೀತಿ ಇದ್ದವು ಎಂಬುದರ ಲೆಕ್ಕ ಹೇಳಿದ ಮಿಸ್ತ್ರಿ ನೀರಾ ರಾಡಿಯಾ ಪ್ರಕರಣವನ್ನು ಉಲ್ಲೇಖಿಸುವ ಮೂಲಕ ಟಾಟಾ ಕಂಪೆನಿ ವಿರುದ್ದ ಗುಡುಗಿದರು. ಟಾಟಾ ಸನ್ಸ್, ರತನ್ ಟಾಟಾ ಅವರ ಕಚೇರಿಯ ಎಲ್ಲ ಖರ್ಚುಗಳನ್ನು ನಿಭಾಯಿಸುತ್ತಿದ್ದು, ಇದರಲ್ಲಿ ಮಹತ್ತರವಾದ ಒಂದಷ್ಟು ಮೊತ್ತವನ್ನು  ಕಾರ್ಪೋರೇಟ್ ಜೆಟ್ಗಳಿಗಾಗಿ ಬಳಸಲಾಗುತ್ತಿತ್ತು. 2ಜಿ ತರಂಗಾಂತರ ವಿತರಣೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಲಾಬಿಗಾರ್ತಿ ನೀರಾ ರಾಡಿಯಾ ಅವರಿಗೆ ಟಾಟಾ ಸನ್ಸ್ 40 ಕೋಟಿ ರೂಪಾಯಿ ಪಾವತಿ ಮಾಡುತ್ತಿತ್ತು. ರಾಡಿಯಾ ಫೋನ್ ಕದ್ದಾಲಿಕೆ ಪ್ರಕರಣ ಬೆಳಕಿಗೆ ಬಂದ ನಂತರ ರಾಡಿಯಾ ತನ್ನ ವೈಷ್ಣವಿ ಕಾರ್ಪೊರೇಟ್ ಕಮ್ಯುನಿಕೇಶನ್ಸ್ ಸಂಸ್ಥೆಯನ್ನು ಸ್ಥಗಿತಗೊಳಿಸಿದ್ದರು. ಟಾಟಾ ಮತ್ತು ರಿಲಯನ್ಸ್ ಕಂಪೆನಿಗಳಿಗೆ ಸಾರ್ವಜನಿಕ ಸಂಪರ್ಕ ಸೇವೆ ಒದಗಿಸುತ್ತಿದ್ದ ನೀರಾ ರಾಡಿಯಾ ವ್ಯವಹಾರ ಸ್ಥಗಿತಗೊಳಿಸಿದ ನಂತರ ಟಾಟಾ ಕಂಪೆನಿ ಅರುಣ್ ನಂದಾ ಒಡೆತನದ ರೆಡಿಫ್ಯೂಶಿಯನ್ ಸಂಸ್ಥೆಯೊಂದಿಗೆ ತನ್ನ ಸಾರ್ವಜನಿಕ ಸಂಪರ್ಕ ಸೇವೆಯ ಒಪ್ಪಂದ ಆರಂಭಿಸಿತ್ತು. ರೆಡಿಫ್ಯೂಶಿಯನ್ ಸಂಸ್ಥೆಗೆ ಟಾಟಾ ಕಂಪನಿ ವರ್ಷಕ್ಕೆ 60 ಕೋಟಿ ರೂಪಾಯಿ ಪಾವತಿ ಮಾಡುತ್ತಿತ್ತುಇದೆಲ್ಲವೂ ಮಿಸ್ತ್ರಿ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವ ಮುಂಚೆ ನಡೆದಿತ್ತು ಎಂದು ಮಿಸ್ತ್ರಿಯವರ ಕಚೇರಿ ಹೇಳಿತು.
2016: ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಗುಜರಾತ್ನಲ್ಲಿ ಬ್ಯಾಂಕ್ಗೆ ಬಂದು
ನೋಟು ಬದಲಾವಣೆ ಮಾಡಿದ ಸುದ್ದಿಯ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೋದಿಯವರನ್ನು ತರಾಟೆಗೆ ತೆಗೆದು ಕೊಂಡರು. ಮೋದಿಯವರು ತಮ್ಮ ರಾಜಕೀಯಕ್ಕಾಗಿ 97 ಹರೆಯದ ತಮ್ಮ ಅಮ್ಮ ಹೀರಾಬೆನ್ ಮೋದಿಯವರನ್ನು ಸರತಿ ಸಾಲಿನಲ್ಲಿ ನಿಲ್ಲಿಸಿದರು. ಒಂದು ವೇಳೆ ಅವರು ನನ್ನ ಅಮ್ಮ ಆಗಿದ್ದರೆ, ನಾನು ರೀತಿ ಅವರನ್ನು ಸಾಲಿನಲ್ಲಿ ನಿಲ್ಲಿಸುತ್ತಿರಲಿಲ್ಲ ಎಂದು ಕೇಜ್ರಿವಾಲ್ ಟ್ವೀಟ್ ಮಾಡಿದರು. 500 ಮತ್ತು 1000  ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವ ಮೋದಿಯವರ ಐತಿಹಾಸಿಕ ನಿರ್ಧಾರವನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿ ಈದಿನ  ಬೆಳಗ್ಗೆ ಕೇಜ್ರಿವಾಲ್  ದೆಹಲಿ ವಿಧಾನಮಂಡಲದಲ್ಲಿ ಠರಾವು ಮಂಡಿಸಿದ್ದರು.
2016: ಇಸ್ಲಾಮಾಬಾದ್: ಪಾಕಿಸ್ತಾನ  5,000 ರೂಪಾಯಿ  ನೋಟನ್ನು ರದ್ದು ಮಾಡುವುದಾಗಲೀ  40,000 ರೂಪಾಯಿಗಳ ಪ್ರೈಜ್  ಬಾಂಡ್ಗಳನ್ನು  ಹಿಂಪಡೆಯುವ ನಿರ್ಧಾರಗಳನ್ನಾಗಲೀ ತೆಗೆದುಕೊಳ್ಳುವುದಿಲ್ಲ ಎಂದು ಪಾಕಿಸ್ತಾನ ವಿತ್ತ ಸಚಿವರು ಹೇಳಿದರು. ಭಾರತ ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಿದಂತೆ ಪಾಕಿಸ್ತಾನವೂ ಗರಿಷ್ಠ ಮುಖಬೆಲೆಯ ನೋಟುಗಳನ್ನು ರದ್ದು ಮಾಡಲಿದೆ ಎಂಬ ವದಂತಿ ಕೇಳಿಬಂದಿತ್ತು. ಬಗ್ಗೆ ಪ್ರತಿಕ್ರಿಯಿಸಿದ ವಿತ್ತ ಸಚಿವ ಇಷಾಕ್ ಧಾರ್, ಇದೆಲ್ಲಾ ಸತ್ಯಕ್ಕೆ ದೂರವಾದುದು. ಇಂಥಾ ಯಾವ ರೀತಿಯ ಪ್ರಸ್ತಾಪಗಳೂ  ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದರು. ಪಾಕ್ ಪ್ರಧಾನಿ ನವಾಜ್ ಷರೀಫ್ ಅವರ ವಿಶೇಷ ಸಹಾಯಕ  ಹರೂನ್ ಅಖ್ತರ್ ಖಾನ್, ಪಾಕ್ನಲ್ಲಿ ನೋಟು ರದ್ದು ಮತ್ತು ಪ್ರೈಜ್ ಬಾಂಡ್ ರದ್ದು ಮಾಡುವ ಪ್ರಸ್ತಾಪ ಸರ್ಕಾರದ ಮುಂದಿದೆ ಎಂದು ಹಿಂದಿನ ದಿನ ಹೇಳಿದ್ದರು. ಹೇಳಿಕೆಯ ಬೆನ್ನಲ್ಲೇ ಅಂಥಾ ಯಾವುದೇ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ವಿತ್ತ ಸಚಿವರು ಪ್ರತಿಕ್ರಿಯಿಸಿದರು.
2016: ನವದೆಹಲಿ: ಕೇಂದ್ರ ಸರ್ಕಾರವು 500 ರೂಪಾಯಿ ಮತ್ತು 1000 ರೂಪಾಯಿ ಮುಖಬೆಲೆಯ
ಹಳೆಯ ನೋಟುಗಳನ್ನು ರದ್ದು ಪಡಿಸಿ ಕಪ್ಪು ಹಣವನ್ನು ಪತ್ತೆ ಹಚ್ಚಲು ಕ್ರಮ ಕೈಗೊಂಡಿದ್ದರೆ, ಕಪ್ಪು ಹಣ ಹೊಂದಿರುವವರು ತಮ್ಮ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಮಾಡಿಕೊಳ್ಳಲು ರಂಗೋಲಿ ಕೆಳಗೆ ತೂರುವ ಜಾಣ್ಮೆ ಪ್ರದರ್ಶಿಸುತ್ತಿದ್ದಾರೆ ಎಂದು ವಿದೇಶೀ ಮಾಧ್ಯಮಗಳು ವರದಿ ಮಾಡಿದವು. ಹಳೆ ನೋಟುಗಳನ್ನು ವಿನಿಮಯ ಮಾಡಿ ಹೊಸ ನೋಟು ಪಡೆಯಲು ನಿಂತಿರುವ ಕ್ಯೂಗಳಲ್ಲಿ ಜನ ಅಸ್ವಸ್ಥರಾದ, ಸಾವನ್ನಪ್ಪಿದ, ಆಸ್ಪತ್ರೆಗಳಲ್ಲಿ ಹಳೆಯ ನೋಟಿದ್ದರೂ ಚಿಕಿತ್ಸೆ ನೀಡಲು ಒಪ್ಪದ್ದರಿಂದ ನವಜಾತ ಶಿಶು ಸಾವನ್ನಪ್ಪಿದ ವರದಿಗಳು ಬಂದಿವೆ. ಆದರೆ ಸಾವು ನೋವಿನ ತೊಂದರೆಗೆ ಒಳಗಾಗಿರುವವರು ಬಡ ಅಥವಾ ಮಧ್ಯಮ ವರ್ಗದ ಜನ. ಕಪ್ಪು ಹಣ ಅಡಗಿಸಿಟ್ಟ ಮಂದಿ ಹಠಾತ್ ಆಘಾತದಿಂದ ಸಾವನ್ನಪ್ಪಿದ ಅಥವಾ ಆತ್ಮಹತ್ಯೆ ಮಾಡಿಕೊಂಡ ವರದಿಗಳು ಎಲ್ಲಿಂದಲೂ ಬಂದಿಲ್ಲ. ಏಕೆಂದರೆ ಕಪ್ಪು ಹಣ ಹೊಂದಿರುವ ಮಂದಿ ಅತ್ಯಂತ ಕಡಿಮೆ ಹಣವನ್ನು ತಮ್ಮಲ್ಲಿ ಬಳಿ ನಗದು ರೂಪದಲ್ಲಿ ಇಟ್ಟುಕೊಂಡಿರುತ್ತಾರೆ. ತಮ್ಮ ಕಪ್ಪು ಹಣದ ಬಹುತೇಕ ಭಾಗವನ್ನು ವಿವಿಧ ರೂಪಗಳಲ್ಲಿ ಬಿಳಿ ಹಣವನ್ನಾಗಿ ಮಾಡುವ ಮಾರ್ಗಗಳನ್ನು ಕಂಡು ಕೊಂಡಿರುತ್ತಾರೆ ಎಂದು ವಿದೇಶೀ ಮಾಧ್ಯಮಗಳು ಹೇಳಿದವು.  ಭಾರತದಲ್ಲಿ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಮಾಡಲು ಬಳಲಾಗುವ ಮುಖ್ಯ ಮಾರ್ಗ ಚಿನ್ನ ಕೊಳ್ಳುವುದು, ರಿಯಲ್ ಎಸ್ಟೇಟ್ನಲ್ಲಿ ತೊಡಗಿಸುವುದು, ವಿದೇಶೀ ಕರೆನ್ಸಿಗೆ ಹಣ ಬದಲಿಸುವುದು, ವಿದೇಶೀ ಬ್ಯಾಂಕುಗಳಲ್ಲಿ ಹಣ ಇಡುವುದು, ಭಾರತೀಯ ಬ್ಯಾಂಕುಗಳಲ್ಲಿ ಬೇನಾಮೀ ಖಾತೆಗಳಲ್ಲಿ ಹಣ ಇಡುವುದು. ಸ್ಟಾಕ್ ಮಾರ್ಕೆಟ್ ಮತ್ತು ಕಮಶಿಯಲ್ ಉದ್ಯಮಗಳಲ್ಲಿ ಹಣ ತೊಡಗಿಸುವುದು. ವಿದೇಶೀ ಮಾಧ್ಯಮಗಳ ವರದಿ ಪ್ರಕಾರ ಕಪ್ಪು ಹಣವನ್ನು ಬಿಳಿಹಣವನ್ನಾಗಿ ಮಾಡುವ ಇತರ 13 ಮಾರ್ಗಗಳು ಕೆಳಗಿನಂತಿವೆ. 1) ದೇಗುಲಗಳಿಗೆ ದೇಣಿಗೆ. ದೇಗುಲಗಳ ಆಡಳಿತ ಮಂಡಳಿಗಳು ಹಣವನ್ನು ಅನಾಮಿಕ ದೇಣಿಗೆ ಎಂದು ತೋರಿಸಿ, ಬದಲಿಗೆ ಹೊಸ ಕರೆನ್ಸಿ ನೀಡು ನೀಡಿ ಕಮಿಷನ್ ಪಡೆಯುತ್ತವೆ. 2) ಕೋ -ಆಪರೇಟಿವ್ ಬ್ಯಾಂಕುಗಳು ಮತ್ತು ಕ್ರೆಡಿಟ್ ಸೊಸೈಟಿಗಳಲ್ಲಿ ಹಳೆ ದಿನಾಂಕ ನಮೂದಿಸಿ ಫಿಕ್ಸೆಡ್ ಡೆಪಾಸಿಟ್ ಮಾಡುವುದು. 3) ಬಡವರನ್ನು ಬಳಸಿಕೊಂಡು ಕ್ಯೂನಲ್ಲಿ ನಿಲ್ಲಿಸಿ ನೋಟು ವಿನಿಮಯ ಮಾಡಿಸಿಕೊಳ್ಳುವುದು. ಕೆಲಸಕ್ಕೆ ಬಡವರಿಗೆ ಕಮೀಷನ್ ನೀಡುವುದು. ಬಡವರ ಬ್ಯಾಂಕ್ ಖಾತೆಗಳಲ್ಲಿ 2.5 ಲಕ್ಷ ರೂಪಾಯಿಗಳವರೆಗೆ ಕಪ್ಪು ಹಣವನ್ನು ಜಮಾ ಮಾಡುವುದು. 4) ಬಡವರಿಗೆ ಸಾಲ ನೀಡುವುದು. ಬಡ್ಡಿ ರಹಿತ ಸಾಲ ನೀಡಿ ಅವರಿಂದ ಹೊಸ ಉದ್ಯಮಗಳನ್ನು ಸ್ಥಾಪಿಸುವುದು. 5) ಜನ -ಧನ ಖಾತೆದಾರರನ್ನು ಗುರುತಿಸಿ ಅವರ ಖಾತೆಗಳಿಗೆ ಹಣ ಜಮಾ ಮಾಡಿಸುವುದು. ಖಾತೆಗಳಲ್ಲಿ 1 ಲಕ್ಷ ರೂಪಾಯಿವರೆಗೆ ಹಣ ಜಮಾ ಮಾಡಲು ಇರುವ ಅವಕಾಶಗಳನ್ನು ಬಳಸಿಕೊಳ್ಳುವುದು. 6) ರಾತ್ರೋರಾತ್ರಿ ಹುಟ್ಟಿಕೊಂಡಿರುವ ಬ್ಯಾಂಕ್ ಮಾಫಿಯಾದ ಬಳಕೆ. ಮಂದಿ 500, 1000 ರೂ ಮುಖಬೆಲೆಯ ಹಳೆಯ ನೋಟು ಪಡೆದು ಮೌಲ್ಯದ ಶೇಕಡಾ 15ರಿಂದ 80ರಷ್ಟು ಹಣವನ್ನು 100 ರೂ. ಮುಖಬೆಲೆಯ ನೋಟುಗಳಲ್ಲಿ ನೀಡುತ್ತಾರೆ. ವ್ಯಕ್ತಿಗಳು ಬಡವರನ್ನು ಬಳಸಿ ಅಥವಾ ಬೇರೆ ಮಾರ್ಗಗಳ ಮೂಲಕ ಹಣವನ್ನು ಬಿಳಿ ಮಾಡಿಕೊಳ್ಳುತ್ತಾರೆ. 7) ನೌಕರರಿಗೆ ಮುಂಗಡ ವೇತನ ನೀಡಿಕೆ. ಕಪ್ಪು ಹಣ ಹೊಂದಿರುವ ಹಲವು ಉದ್ಯಮ ಸಂಸ್ಥೆಗಳು ನೌಕರರಿಗೆ ಮುಂದಿನ 3ರಿಂದ 8 ತಿಂಗಳುಗಳವರೆಗಿನ ವೇತನವನ್ನು ಹಳೆಯ 500, 1000 ರೂ ನೋಟುಗಳ ಮೂಲಕ ಮುಂಗಡ ವೇತನ ನೀಡುತ್ತಿವೆ. ಆದರೆ ನೌಕರರಿಗೆ 2.5 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಮೊತ್ತದ ಹಣ ನೀಡುವಂತೆ ಎಚ್ಚರಿಕೆ ವಹಿಸಲಾಗುತ್ತದೆ. ಮುಂಗಡ ವೇತನವನ್ನು ಬ್ಯಾಂಕ್ ಖಾತೆ ತೆರೆದು ನೌಕರರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. 8) ರೈಲ್ವೆ ಪಯಣದ ಟಿಕೆಟ್ ಬುಕ್ ಮಾಡಿ ನಂತರ ಬುಕಿಂಗ್ ರದ್ದು ಪಡಿಸುವುದು. ಸ್ವಲ್ಪ ಹಣ ಕಡಿತಗೊಂಡರೂ ಉಳಿದ ಹಣ ಹೊಸ ನೋಟಿನ ರೂಪದಲ್ಲಿ ಲಭಿಸುತ್ತದೆ. 9) ಹಣ ವರ್ಗಾವಣೆ ಕಂಪೆನಿಗಳನ್ನು ಬಳಸಿಕೊಳ್ಳುವುದು. ಕೋಲ್ಕತದ ಜಮಾ-ಖರ್ಚಿ ಸಂಸ್ಥೆಗಳು, ಮುಂಬೈಯ ಪಡ್-ಪೆಡಿ ಸಂಸ್ಥೆಗಳು ರೀತಿ ಹಣ ವರ್ಗಾವಣೆಯಲ್ಲಿ ನಿಸ್ಸೀಮ ಕಂಪೆನಿಗಳು. 10) ಚಿನ್ನ ಖರೀದಿ. 11) ರೈತರನ್ನು ಬಳಸಿಕೊಳ್ಳುವುದು. ರೈತರ ಆದಾಯಕ್ಕೆ ತೆರಿಗೆ ಇಲ್ಲವಾದ್ದರಿಂದ ಮಂಡಿಗಳಲ್ಲಿ ಅವರ ಉತ್ಪನ್ನಗಳಿಗೆ ಇದೇ ಹಣವನ್ನು ನೀಡಿ ಅವರ ಮೂಲಕ ಕಪ್ಪು ಹಣವನ್ನು ಬಿಳಿ ಹಣವನ್ನಾಗಿ ಮಾಡಿಕೊಳ್ಳವುದು. 12) ರಾಜಕೀಯ ಪಕ್ಷಗಳಿಗೆ ದೇಣಿಗೆ ರೂಪದಲ್ಲಿ ನೀಡಿ ಕಪ್ಪು ಹಣವನ್ನು ಬಿಳಿಯಾಗಿಸುವುದು. 13) ಭಂಡಧೈರ್ಯದಿಂದ ಬ್ಯಾಂಕಿಗೆ ಜಮಾ ಮಾಡುವುದು. ಆದಾಯ ತೆರಿಗೆ ಅಧಿಕಾರಿಗಳು ಆದಾಯದ ಮಿತಿ ಮೀರಿದ ಹಣಕ್ಕೆ ಶೇಕಡಾ 200 ತೆರಿಗೆ ಬೀಳುತ್ತದೆ ಎನ್ನುತ್ತಿದ್ದರೂ, ವರ್ಷ ಇತರ ಮೂಲಗಳಿಂದ ಬಂದ ಆದಾಯ ಎಂದು ತೋರಿಸಿ ಸರ್ಕಾರಕ್ಕೆ ಶೇಕಡಾ 33 ಆದಾಯ ತೆರಿಗೆ ಪಾವತಿ ಮಾಡಿ, ಉಳಿದುದನ್ನು ಬಿಳಿ ಹಣವನ್ನಾಗಿ ಮಾಡಿಕೊಳ್ಳುವುದು.

 2008: 2007ರ  ಫೆಬ್ರುವರಿ 17 ರಂದು 68 ಜನರ ಸಾವಿಗೆ ಕಾರಣವಾದ  ಸಂಜೋತಾ ಎಕ್ಸ್ಪ್ರೆಸ್ ರೈಲು ಸ್ಫೋಟ ಮತ್ತು  ಸೆಪ್ಟಂಬರ್ 29ರಂದು 6 ಜನರ ಸಾವಿಗೆ ಕಾರಣವಾದ ಮಾಲೆಗಾಂವ್ ಸ್ಫೋಟಗಳಲ್ಲಿ ಬಳಸಲಾದ ಆರ್ಡಿಎಕ್ಸನ್ನು ಸೇನಾ ಅಧಿಕಾರಿ ಲೆಪ್ಟಿನೆಂಟ್  ಕರ್ನಲ್ ಪಿ. ಎಸ್ ಪುರೋಹಿತ್ ಒದಗಿಸಿದ್ದರು ಎಂಬುದಾಗಿ ಪೊಲೀಸರು ನಾಸಿಕ್  ನ್ಯಾಯಾಲಯಕ್ಕೆ ತಿಳಿಸಿದರು.

2008: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರಕ್ಕೆ ಈದಿನ ಹಾರಿಬಿಡಲಾದ ಎಂಡೀವರ್' ನೌಕೆಯ ವಿಜ್ಞಾನಿಗಳು ಕುಡಿಯುವ ಸಲುವಾಗಿ ಮೂತ್ರವನ್ನು  ಸಂಸ್ಕರಿಸುವ  ಹೊಸ ಸಲಕರಣೆಯನ್ನು ಮನುಕುಲಕ್ಕೆ ನೀಡಿದರು. ಮೂತ್ರವನ್ನು ಸಂಸ್ಕರಿಸಿ ಕುಡಿಯಲು ಯೋಗ್ಯವಾಗುವ, ಮರುಬಳಕೆಯ ನೀರನ್ನು ಈ ಉಪಕರಣ ತಯಾರಿಸುವುದು. ಬಾಹ್ಯಾಕಾಶದಲ್ಲಿ ಗಗನ ಯಾತ್ರಿಗಳ ಮೂತ್ರವನ್ನೇ ಕುಡಿಯುವ ನೀರಾಗಿ ಶುದ್ಧೀಕರಿಸುವ  ಘಟಕ ಎಂಡೀವರ್ ನೌಕೆಯಲ್ಲಿ ಯಶಸ್ವಿಯಾಗಿ ಕಾರ್ಯಾಚರಿಸುತ್ತಿದೆ ಎಂದು ನಾಸಾ ವಿಜ್ಞಾನಿಗಳು ಪ್ರಕಟಿಸಿದರು.  ಮೂತ್ರವನ್ನು ಸಂಸ್ಕರಿಸಿ ಕುಡಿಯಲು ಯೋಗ್ಯವಾಗುವ, ಮರುಬಳಕೆಯ ನೀರನ್ನು ತಯಾರಿಸುವ ಮಹತ್ವದ ಪ್ರಯತ್ನ ಬಾಹ್ಯಾಕಾಶ ಸಂಚಾರದಲ್ಲಿ ಇದೇ ಪ್ರಥಮ. ಆದರೆ ಇದು ದುಬಾರಿ  ವಿಧಾನ. ಈ ಸಲಕರಣೆ ಪ್ರತಿದಿನ 23 ಲೀಟರುಗಳಷ್ಟು  (6 ಗ್ಯಾಲನ್) ಮೂತ್ರವನ್ನು  ಶುದ್ಧೀಕರಿಸುವ ಸಾಮರ್ಥ್ಯ ಹೊಂದಿದೆ. ನೌಕೆಯಲ್ಲಿ ಈ ಕಾರ್ಯ ಯಶಸ್ವಿಯಾಗಿದೆ. ಇದರೊಂದಿಗೆ ಬಾಹ್ಯಾಕಾಶ ಕೇಂದ್ರದಲ್ಲಿ ಅವಶ್ಯವಿರುವ ನೀರಿನ ಶೇಕಡ 92 ಭಾಗವನ್ನು ಪೂರೈಸಲು ಸಾಧ್ಯ .

2008: ರಾಜ್ಯದ 17 ಜಿಲ್ಲೆಗಳ ವ್ಯಾಪ್ತಿ ಹೊಂದಿರುವ ಬೆಂಗಳೂರು ಕೃಷಿ ವಿಶ್ವವಿದ್ಯಾಲಯವು ರೈತರನ್ನು ತರಕಾರಿ ಮತ್ತು ಹಣ್ಣುಗಳ ಸಂಸ್ಕರಣಾ ತಂತ್ರಜ್ಞಾನದತ್ತ ಆಕರ್ಷಿಸಲು  ಜಿಕೆವಿಕೆ ಆವರಣದಲ್ಲಿ ನಡೆದ  ಕೃಷಿ  ಮೇಳದಲ್ಲಿ  ರಾಜ್ಯ ಸರ್ಕಾರದ ನೆರವಿನಿಂದ ತರಕಾರಿ ಮತ್ತು ಹಣ್ಣು ಸಂಸ್ಕರಣಾ ತರಬೇತಿ ಕೇಂದ್ರವನ್ನು ಸ್ಥಾಪಿಸಿತು. ಈ ಘಟಕದಲ್ಲಿ ಬೆಟ್ಟದ ನೆಲ್ಲಿಕಾಯಿ ಶರಬತ್ತು, ಪುನರ್ಪುಳಿ ಮತ್ತು ಪರಂಗಿಹಣ್ಣಿನ ಜ್ಯೂಸ್ ತಯಾರಿಸಿ, ರೈತರಿಗೆ ರುಚಿ ತೋರಿಸಿತು. ಈ ಕೇಂದ್ರದ ಮೂಲಕ ತರಕಾರಿ ಮತ್ತು ಹಣ್ಣುಗಳ ಸಂಸ್ಕರಣಾ ಡಿಪ್ಲೊಮಾ ಪದವಿ ತರಗತಿ ಆರಂಭಿಸಲು ಉದ್ದೇಶಿಸಿರುವುದಾಗಿ ಕೃಷಿ ವಿವಿ ಪ್ರಕಟಿಸಿತು. ಹೆಚ್ಚು ಶಿಕ್ಷಣ ಪಡೆಯದ ರೈತರು ಮತ್ತು ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ಸದಸ್ಯರಿಗೂ ಇದೇ ಕೇಂದ್ರದಲ್ಲಿ ಒಂದು ವಾರ ಅವಧಿಯ ತರಬೇತಿ ನೀಡಿ, ರೈತರನ್ನು ತಾವೇ ಬೆಳೆದ ಹಣ್ಣು ಮತ್ತು ತರಕಾರಿಯ ಸಂಸ್ಕರಣೆಗೆ ಸಜ್ಜುಗೊಳಿಸಲು ಉದ್ದೇಶಿಸಲಾಗಿದೆ ಎಂದು ವಿವಿ ಹೇಳಿತು. ಹಣ್ಣುಗಳ ಉತ್ಪಾದನೆಯಲ್ಲಿ ಭಾರತ ಜಗತ್ತಿನಲ್ಲೇ ಮೊದಲ ಸ್ಥಾನದಲ್ಲಿದೆ. ತರಕಾರಿಯಲ್ಲಿ ಎರಡನೇ ಸ್ಥಾನ. ಆದರೆ ಸಂಸ್ಕರಣೆಯಲ್ಲಿ ತೀರಾ ಕೆಳ ಹಂತದಲ್ಲಿದೆ. ಕೇವಲ ಶೇ 1.5ರಷ್ಟು ಉತ್ಪನ್ನಗಳು ಮಾತ್ರ ಸಂಸ್ಕರಣೆಗೆ ಒಳಪಡುತ್ತಿವೆ. ಇದು ದೇಶದ ರೈತರು ತೀವ್ರ ನಷ್ಟ ಅನುಭವಿಸಲು ಕಾರಣ ಎಂಬುದು ವಿವಿ  ವಿಶ್ಲೇಷಣೆ..

2008: ಸೋಮಾಲಿಯಾ ಹಡಗುಗಳ್ಳರು ಎರಡು ತಿಂಗಳ ಹಿಂದೆ ಅಪಹರಿಸಿದ್ದ ಸ್ಟಾಲ್ಟ್ ವೇಲರ್ ಹಡಗಿನಿಂದ 18 ಭಾರತೀಯರು ಸೇರಿದಂತೆ 22 ಜನರನ್ನು ಈದಿನ ಬೆಳಿಗ್ಗೆ ಬಿಡುಗಡೆ ಮಾಡಿದರು.

2007: ಗುಜರಾತ್ ಮತ್ತು ಹಿಮಾಚಲ ಪ್ರದೇಶಗಳಲ್ಲಿ ಡಿಸೆಂಬರಿನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಮತದಾನಕ್ಕಿಂತ 48 ಗಂಟೆಗಳ ಮುಂಚೆ ಅಭ್ಯರ್ಥಿಗಳು ಮೊಬೈಲಿನ ಎಸ್ ಎಂ ಎಸ್ (ಸಂಕ್ಷಿಪ್ತ ಸಂದೇಶ) ಕಳುಹಿಸಿ ಪ್ರಚಾರ ಮಾಡುವುದನ್ನು ಚುನಾವಣಾ ಆಯೋಗ ನಿಷೇಧಿಸಿತು. ಮತದಾನಕ್ಕಿಂತ 48 ಗಂಟೆಗಳ ಮುಂಚೆ ಅಭ್ಯರ್ಥಿಗಳು ತಮ್ಮ ಮೊಬೈಲಿನಿಂದ ಸಂದೇಶ ಕಳುಹಿಸಿ ಪ್ರಚಾರ ಮಾಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಯಿತು. ಮತದಾನ ಸಮಯದಲ್ಲಿ ನಡೆಯುವ ಅಕ್ರಮಗಳನ್ನು ತಡೆಯಲು ಚುನಾವಣಾ ಆಯೋಗ ಈ ನೂತನ ಕ್ರಮವನ್ನು ಮೊತ್ತ ಮೊದಲ ಬಾರಿಗೆ ಕಂಡುಕೊಂಡಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಎನ್. ಗೋಪಾಲಸ್ವಾಮಿ ತಿಳಿಸಿದರು.

2007: ಗುಲ್ಬರ್ಗ ನಗರದ ಪ್ರತಿಷ್ಠಿತ ಎಂ.ಆರ್. ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ, ಖ್ಯಾತ ವೈದ್ಯ ಸಾಹಿತಿಯೂ ಆಗಿರುವ ಡಾ.ಪಿ.ಎಸ್. ಶಂಕರ್ ಅವರಿಗೆ `ನ್ಯಾಶನಲ್ ಕಾಲೇಜ್ ಆಫ್ ಚೆಸ್ಟ್ ಫಿಜಿಶಿಯನ್ಸ್' ಜೀವಮಾನ ಸಾಧನೆಯ ಪ್ರಶಸ್ತಿಯನ್ನು ಘೋಷಿಸಿತು. 50 ವರ್ಷಗಳ ಇತಿಹಾಸ ಹೊಂದಿರುವ ಈ ಸಂಸ್ಥೆಯು ಎದೆ ರೋಗಗಳ ನಿದಾನ, ಶುಶ್ರೂಷೆಯಲ್ಲಿ ಸಾಧನೆಗಾಗಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಘೋಷಿಸಿದ್ದು, 1999ರ ನಂತರ ಈ ಪ್ರಶಸ್ತಿಗೆ ಪಾತ್ರರಾದವರ ಪೈಕಿ ದೇಶದಲ್ಲೇ ಎರಡನೆಯವರು ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಡಾ. ಪಿ.ಎಸ್. ಶಂಕರ್ ಅವರು ಚೆಸ್ಟ್ ಸೊಸೈಟಿ ಮತ್ತು ನ್ಯಾಷನಲ್ ಕಾಲೇಜ್ ಆಫ್ ಚೆಸ್ಟ್ ಫಿಜಿಶಿಯನ್ಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ದೆಹಲಿಯ ಪಟೇಲ್ ಚೆಸ್ಟ್ ಇನ್ಸ್ಟಿಟ್ಯೂಟಿನಲ್ಲಿ ಅಧ್ಯಯನ ನಡೆಸಿ, ನಂತರ ಕಾಮನ್ ವೆಲ್ತ್ ಮೆಡಿಕಲ್ ಫೆಲೋ ಆಗಿ ಲಂಡನ್ನಿನ ಬ್ರಾಮ್ ಟನ್ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ.

2007: ಸೇವೆ ಕಾಯಂಗೆ ಒತ್ತಾಯಿಸಿ ನಡೆಸಿದ ಪ್ರತಿಭಟನೆ ಸಂದರ್ಭದಲ್ಲಿ ಇಬ್ಬರ ಸಾವಿಗೆ ಕಾರಣರಾದ ನಗರದ ಬಿಪಿಎಲ್ ಎಂಜಿನಿಯರಿಂಗ್ ಲಿಮಿಟೆಡ್ ಕಾರ್ಮಿಕ ಸಂಘದ 12 ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿ ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿತು. 1998ರಲ್ಲಿ ನಡೆದ ಈ ಘಟನೆಯಲ್ಲಿ ಶಿಕ್ಷೆಗೆ ಒಳಗಾದವರು ಕಂಪೆನಿಗೆ ಸೇರಿದ ಬಸ್ಸಿಗೆ ಬೆಂಕಿ ಹಚ್ಚಿ, ಅದರ ಒಳಗಿದ್ದ ಸಿಬ್ಬಂದಿ ತಪ್ಪಿಸಿಕೊಂಡು ಹೋಗದಂತೆ ಮಾಡಿದ್ದರಿಂದಾಗಿ ಇಬ್ಬರು ಸಾವನ್ನಪ್ಪಿ ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. 49 ಆರೋಪಿಗಳ ಪೈಕಿ ಸೆಷನ್ಸ್ ಕೋರ್ಟಿನಿಂದ ಅಕ್ಟೋಬರ್ 13ರಂದು ಆರೋಪ ಮುಕ್ತಗೊಂಡಿದ್ದ ಸಿ.ಮಗೇಶ್, ಪಿ.ಎ.ಭರತ್ ಕುಮಾರ್, ಎಡ್ವಿನ್ ನೋಯಲ್, ಎಸ್.ಬಾಬು, ನಾಗರಾಜ್ (ಎಲ್ಲರೂ 20 ರಿಂದ 25 ವರ್ಷ ವಯಸ್ಸಿನವರು) ಅವರಿಗೆ ನ್ಯಾಯಮೂರ್ತಿಗಳಾದ ಕೆ.ಶ್ರೀಧರರಾವ್ ಹಾಗೂ ರವಿ ಬಿ.ನಾಯಕ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಜೀವಾವಧಿ ಶಿಕ್ಷೆ ವಿಧಿಸಿತು. ಈ ಆರೋಪಿಗಳನ್ನು ಖುಲಾಸೆ ಮಾಡಿದ್ದ ಆದೇಶವನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಪೀಠ ಮಾನ್ಯ ಮಾಡಿತು. ಕೊಲೆಗೆ ಕಾರಣರಾದ ಕಾರ್ಮಿಕರ ಒಕ್ಕೂಟದ ಅಧ್ಯಕ್ಷ ಆರ್. ಶ್ರೀನಿವಾಸ, ಕಾರ್ಯದರ್ಶಿ ಟಿ.ಕೆ.ಎಸ್.ಕುಟ್ಟಿ ಹಾಗೂ ಇತರ ಪದಾಧಿಕಾರಿಗಳಾದ ಎನ್.ವಿ.ರವಿ, ಆರ್.ರಮೇಶ್, ಧರಣೇಶ್ ಕುಮಾರ್, ಎಸ್.ಜಗದೀಶ ಹಾಗೂ ಶರತ್ಕುಮಾರ್ ಅವರಿಗೆ ಸೆಷನ್ಸ್ ಕೋರ್ಟ್ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಪೀಠ ಊರ್ಜಿತಗೊಳಿಸಿತು.

2007: ಗ್ವಾಲಿಯರಿನಲ್ಲಿ ಪಾಕಿಸ್ಥಾನ ತಂಡದ ವಿರುದ್ಧದ ಇಂಡಿಯನ್ ಆಯಿಲ್ ಕಪ್ ಏಕದಿನ ಕ್ರಿಕೆಟ್ ಸರಣಿಯ ನಾಲ್ಕನೇ ಪಂದ್ಯವನ್ನು ಆರು ವಿಕೆಟ್ಟುಗಳ ಅಂತರದಿಂದ ಜಯಿಸಿದ ಭಾರತ ಇನ್ನೂ ಒಂದು ಪಂದ್ಯ ಉಳಿದಿರುವಂತೆ ಸರಣಿಯನ್ನು 3-1ರಿಂದ ತನ್ನದಾಗಿಸಿಕೊಂಡಿತು.

2006: ಸಾರ್ವತ್ರಿಕ ಲಸಿಕಾ ಕಾರ್ಯಕ್ರಮವನ್ನು ಜನಪ್ರಿಯಗೊಳಿಸಲು ಸಲ್ಲಿಸಿದ ಅನುಪಮ ಸೇವೆಗಾಗಿ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗೆ ಲಂಡನ್ನಿನ ಅಂತಾರಾಷ್ಟ್ರೀಯ ಲಸಿಕಾ ಕಾರ್ಯಕ್ರಮದ ಅನುದಾನ ಸಂಸ್ಥೆಯು ವಿಶೇಷ ಪ್ರಮಾಣಪತ್ರ ನೀಡಿ ಗೌರವಿಸಿತು. ಈ ವಿಶೇಷ ಪ್ರಮಾಣಪತ್ರ ಪಡೆಯುತ್ತಿರುವ ಮೊದಲ ಭಾರತೀಯ ಹಾಗೂ ವಿಶ್ವದ 6ನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಬಚ್ಚನ್ ಪಾತ್ರರಾದರು. ಬಚ್ಚನ್ ಅವರು ಭಾರತದಲ್ಲಿ ಯುನಿಸೆಫ್ ಮತ್ತು ಪಲ್ಸ್ ಪೋಲಿಯೊ ಲಸಿಕೆ ನೀಡಿಕೆ ಕಾರ್ಯಕ್ರಮಗಳ ಪ್ರಚಾರದ ರಾಯಭಾರಿಯಾಗಿದ್ದಾರೆ.

2006: ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ ಅವರ ಎರಡು ದಶಕಗಳ ಹಿಂದಿನ ಬ್ಯಾಟಿಂಗ್ ಜೊತೆಯಾಟದ ವಿಶ್ವದಾಖಲೆಯನ್ನು ಹೈದರಾಬಾದ್ ಸೇಂಟ್ ಪೀಟರ್ಸ್ ಶಾಲೆಯ ಬಿ. ಮನೋಜ್ ಕುಮಾರ್ ಮತ್ತು ಮೊಹಮ್ಮದ್ ಶಾಯ್ ಬಾಜ್ ತಂಬಿ ಮುರಿದರು. ಸೇಂಟ್ ಪೀಟರ್ಸ್ ಶಾಲೆಯ ವಿರುದ್ಧ ಸಿಕಂದರಾಬಾದ್ ಪೆರೇಡ್ ಮೈದಾನದಲ್ಲಿ ನಡೆದ ಅಂತರಶಾಲಾ ಪಂದ್ಯದಲ್ಲಿ ಈ ಜೋಡಿ ಮುರಿಯದ ಮೊದಲ ವಿಕೆಟ್ ಜೊತೆಯಾಟಕ್ಕೆ 721 ರನ್ ಕಲೆ ಹಾಕಿತು. ಇದರಿಂದಾಗಿ 1987-88ರ ಸಾಲಿನಲ್ಲಿ ಸಚಿನ್ ಮತ್ತು ಕಾಂಬ್ಳಿ ಶಾರದಾಶ್ರಮ ಶಾಲೆಯ ಪರ ಮುರಿಯದ 3ನೇ ವಿಕೆಟ್ಟಿಗೆ ಸೇರಿಸಿದ್ದ 664 ರನ್ನುಗಳ ದಾಖಲೆಯನ್ನು ಈ ಜೋಡಿ ಮುರಿದಂತಾಯಿತು.

2005: ಬೆಂಗಳೂರಿನ ಪ್ರಾರ್ಥನಾ ಎಜುಕೇಷನ್ ಸೊಸೈಟಿ'ಯು 2004ರ ಸಾಲಿನ ಕಂಪ್ಯೂಟರ್ ಲಿಟರೆಸಿ ಎಕ್ಸಲೆನ್ಸ್ ಅವಾರ್ಡ್ ಫಾರ್ ಸ್ಕೂಲ್ಸ್' ಪ್ರಶಸ್ತಿಗೆ ಆಯ್ಕೆಯಾಯಿತು. ಕೇಂದ್ರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಪ್ರತಿವರ್ಷ ನೀಡುವ ಈ ಪ್ರಶಸ್ತಿಯ ಮೊತ್ತ 1.5 ಲಕ್ಷ ರೂಪಾಯಿಗಳು.

2002: ನೇಪಾಳದಲ್ಲಿ ಮಾವೋವಾದಿಗಳ ದಾಳಿಯಲ್ಲಿ ಭದ್ರತಾಪಡೆಯ ಸಿಬ್ಬಂದಿ ಸೇರಿ 200 ಜನ ಮೃತರಾದರು.

1989: ಕರಾಚಿಯಲ್ಲಿ ಪಾಕಿಸ್ಥಾನದ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ತಮ್ಮ ಚೊಚ್ಚಲ ಹೆಜ್ಜೆ ಇರಿಸಿದ ಸಚಿನ್ ತೆಂಡೂಲ್ಕರ್ ಭಾರತದ ಪರವಾಗಿ ಆಡಿದ ಅತ್ಯಂತ ಕಿರಿಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆಗ ಅವರ ವಯಸ್ಸು: 16 ವರ್ಷ 205 ದಿನಗಳು. ಪಾಕಿಸ್ಥಾನದ ಬೌಲರ್ ವಖಾರ್ ಯೂನಸ್ ಅವರೂ ಇದೇ ಪಂದ್ಯದಲ್ಲಿ ಚೊಚ್ಚಲ ಹೆಜ್ಜೆ ಇರಿಸಿದರು.

1982: ಖ್ಯಾತ ಗಾಂಧಿವಾದಿ, ಸಮಾಜ ಸುಧಾರಕ ಆಚಾರ್ಯ ವಿನೋಬಾ ಭಾವೆ ಅವರು ವಾರ್ಧಾದಲ್ಲಿ ತಮ್ಮ 87ನೇ ವಯಸ್ಸಿನಲ್ಲಿ ನಿಧನರಾದರು.

1982: ಖ್ಯಾತ ಕವಿ, ಯುಗವಾಣಿ ಮಾಜಿ ಸಂಪಾದಕ ಎಸ್.ಎನ್. ಕಾಟ್ಕರ್ ನಿಧನ.

1965: ಕಝಖಸ್ಥಾನದ ಬೈಕನೂರಿನಿಂದ ಸೋವಿಯತ್ ಗಗನನೌಕೆ ವೆನೆರಾ 3 ಬಾಹ್ಯಾಕಾಶಕ್ಕೆ ಏರಿತು. 1966ರ ಮಾರ್ಚ್ 1 ರಂದು ಇದು ಶುಕ್ರಗ್ರಹಕ್ಕೆ ತಲುಪಿ ಅಲ್ಲಿಂದ ಇನ್ನೊಂದು ಗ್ರಹವನ್ನು ತಲುಪಿದ ಮೊದಲ ಮಾನವ ರಹಿತ ಬಾಹ್ಯಾಕಾಶ ನೌಕೆ ಎನಿಸಿಕೊಂಡಿತು.

1956: ಮಣಿಪುರ ಸಂಸ್ಥಾನಕ್ಕೆ ಭಾರತದ ಆರು ಶಾಸನಗಳನ್ನು ಅನ್ವಯಿಸಲು ಅವಕಾಶ ನೀಡುವ `ಸಿ' ವಿಭಾಗದ ಸಂಸ್ಥಾನಗಳ (ಶಾಸನಗಳ ತಿದ್ದುಪಡಿ) ಮಸೂದೆಯನ್ನು ಲೋಕಸಭೆಯು ಅಂಗೀಕರಿಸಿತು.

1949: ಮಹಾತ್ಮಾ ಗಾಂಧಿ ಅವರನ್ನು ಕೊಲೆಗೈದುದಕ್ಕಾಗಿ ನಾಥೂರಾಂ ಗೋಡ್ಸೆ ಮತ್ತು ನಾರಾಯಣ ಆಪ್ಟೆ ಅವರನ್ನು ಗಲ್ಲಿಗೇರಿಸಲಾಯಿತು.

1947: ಸಾಹಿತಿ ಹಿ.ಶಿ. ರಾಮಚಂದ್ರಗೌಡ ಜನನ.

1945: ಸಾಹಿತಿ ಟಿ. ಜಯಶೀಲ ಜನನ.

1907: `ಹಚ್ಚೇವು ಕನ್ನಡದ ದೀಪ' ರಚನಕಾರ ದುಂಡಪ್ಪ ಸಿದ್ದಪ್ಪ ಕರ್ಕಿ (15-11-1907ರಿಂದ 16-1-1984) ಅವರು ಸಿದ್ದಪ್ಪ್ಪ-ದುಂಡವ್ವ ದಂಪತಿಯ ಮಗನಾಗಿ ಬೆಳಗಾವಿ ಜಿಲ್ಲೆ ರಾಮದುರ್ಗ ತಾಲ್ಲೂಕಿನ ಹಿರೇಕೊಪ್ಪದಲ್ಲಿ ಜನಿಸಿದರು.

1904: `ಸೇಫ್ಟಿ ರೇಜರ್' ಗಾಗಿ ಕಿಂಗ್ ಕ್ಯಾಂಪ್ ಗಿಲ್ಲೆಟ್ ಅವರಿಗೆ ಪೇಟೆಂಟ್ ನೀಡಲಾಯಿತು.

1738: ಸರ್ ವಿಲಿಯಮ್ ಫ್ರೆಡರಿಕ್ ಹರ್ಶೆಲ್ (1738-1822) ಹುಟ್ಟಿದ ದಿನ. ಜರ್ಮನ್ ಸಂಜಾತ ಈ ಬ್ರಿಟಿಷ್ ಖಗೋಳತಜ್ಞ ಯುರೇನಸ್ ಗ್ರಹವನ್ನು ಕಂಡು ಹಿಡಿದ.

(ಸಂಗ್ರಹನೆತ್ರಕೆರೆ ಉದಯಶಂಕರ)

No comments:

Post a Comment