Thursday, November 15, 2018

ಶಬರಿಮಲೈಗೆ ಮಾರ್ಗವಿಲ್ಲ: ಕೋಚಿ ವಿಮಾನ ನಿಲ್ದಾಣದಲ್ಲೇ ‘ತೃಪ್ತಿ’

ಶಬರಿಮಲೈಗೆ ಮಾರ್ಗವಿಲ್ಲ: ಕೋಚಿ

ವಿಮಾನ ನಿಲ್ದಾಣದಲ್ಲೇತೃಪ್ತಿ

ಕೋಚಿ: ಶಬರಿಮಲೈ ದೇವಸ್ಥಾನಕ್ಕೆ ಭೇಟಿ ನೀಡಲು ಮಹಿಳಾ ಹಕ್ಕುಗಳ ಕಾರ್ಯಕರ್ತೆ ತೃಪ್ತಿ ದೇಸಾಯಿ 2018 ನವೆಂಬರ್ 16 ಶುಕ್ರವಾರ ಕೇರಳದ ಕೋಚಿಗೆ ಬಂದಿಳಿದಿದ್ದರೂ, ಶಬರಿಮಲೈಗೆ ಹೋಗುವ ಎಲ್ಲ ಮಾರ್ಗಗಳೂ ಬಂದ್ ಆದ ಪರಿಣಾಮವಾಗಿ ಕೋಚಿ ವಿಮಾನನಿಲ್ದಾಣದಲ್ಲೇ ಸಿಕ್ಕಿಹಾಕಿಕೊಂಡಿದ್ದಾರೆ.

ಶಬರಿಮಲೈ ದೇಗುಲ ಪ್ರವೇಶಿಸಿಯೇ ಸಿದ್ಧ ಎಂಬುದಾಗಿ ಘೋಷಿಸಿರುವ ತೃಪ್ತಿ ದೇಸಾಯಿ ಪ್ರಕಟಣೆ ವಿರುದ್ಧ ಭಾರೀ ಸಂಖ್ಯೆಯ ಅಯ್ಯಸ್ವಾಮಿ ಭಕ್ತರು ಕೋಚಿ ವಿಮಾನ ನಿಲ್ದಾಣಕ್ಕೇ ಮುತ್ತಿಗೆ ಹಾಕಿದ್ದು, ವಿಮಾನ ನಿಲ್ದಾಣದಿಂದ ಹೊರಕ್ಕೆ ಬರಲು ಕೂಡಾ ಸಾಧ್ಯವಾಗದಂತೆ ತೃಪ್ತಿ ದೇಸಾಯಿ ಮತ್ತು ಆಕೆಯ ಜೊತೆಗೆ ಬಂದ ಮಹಿಳೆಯರನ್ನು  ಅಡ್ಡಗಟ್ಟಿದ್ದಾರೆ.

ಪೊಲೀಸರು ತೃಪ್ತಿ ದೇಸಾಯಿ ಅವರನ್ನು ಪೊಲೀಸ್ ವ್ಯಾನಿನಲ್ಲಿ ಕರೆದೊಯ್ಯಲು ಯತ್ನಿಸಿದರೆ, ತಮ್ಮ ದೇಹಗಳ ಮೇಲೆಯೇ ಕರೆದೊಯ್ಯಬೇಕು ಎಂದು ಅಯ್ಯಪ್ಪ ಭಕ್ತರು ಎಲ್ಲ ಮಾರ್ಗಗಳಲ್ಲೂ ಮಲಗಿಕೊಂಡಿದ್ದಾರೆ. ಕೋಚಿ ವಿಮಾನ ನಿಲ್ದಾಣದಿಂದಲೇ ಮಹಾರಾಷ್ಟ್ರಕ್ಕೆ ವಾಪಸ್ ಹೋಗುವಂತೆ ತೃಪ್ತಿ ದೇಸಾಯಿ ಮತ್ತು ಸಂಗಡಿಗರನ್ನು ಪ್ರತಿಭಟನಕಾರರು ಒತ್ತಾಯಿಸಿದರು.

ಪೊಲೀಸರು ದೇಸಾಯಿಯನ್ನು  ಹೊಟೇಲಿಗೆ ಸ್ಥಳಾಂತರಿಸಲು ಯತ್ನಿಸಿದರೂ, ಪ್ರತಿಭಟನಾಕಾರರು ಹೊರಕ್ಕೆ ಬಿಡಲು ನಿರಾಕರಿಸಿದರು. ದೇವಸ್ಥಾನದ ಮೂಲ ಶಿಬಿರವಾದ ಪಂಬಾವರೆಗಿನ 5.5 ಕಿಮೀ ದೂರವನ್ನು ಕ್ರಮಿಸಲು ಬಾಡಿಗೆ ವಾಹನಗಳನ್ನು ಒದಗಿಸುವಂತೆ ತೃಪ್ತಿ ದೇಸಾಯಿ ಪೊಲೀಸರನ್ನು ಕೇಳಿಕೊಂಡಿದ್ದಾರೆ

ಆದರೆ ಯಾವ ಟ್ಯಾಕ್ಸಿ ಚಾಲಕರೂ ಆಕೆಯನ್ನು ಕರೆದೊಯ್ಯಲು ಒಪ್ಪಿಲ್ಲ. ಆನ್ ಲೈನ್ ಮೂಲಕ ಟ್ಯಾಕ್ಸಿ ಬುಕ್ ಮಾಡುವ ಯತ್ನವೂ ಸಫಲವಾಗಲಿಲ್ಲ. ಯಾವುದೇ ಟ್ಯಾಕ್ಸಿಚಾಲಕರೂ ಆನ್ ಲೈನಿನಲ್ಲಿ ಕರೆದೊಯ್ಯಲು ಮುಂದೆ ಬರಲಿಲ್ಲ. ಬೆಳಗ್ಗೆ 5 ಗಂಟೆಗೆ ವಿಮಾನಕ್ನನಿಲ್ದಾಣಕ್ಕೆ ಬಂದಿಳಿದರೂ, ನಿಲ್ದಾಣದಿಂದ ಹೊರಬರಲೂ ಅವರಿಗೆ ಸಾಧ್ಯವಾಗಲಿಲ್ಲ.

"ಏನಾದರೂ ಸರಿ, ನಾನು ಅಯ್ಯಪ್ಪನ ದರ್ಶನ ಇಲ್ಲದೆ ಹಿಂತಿರುಗುವುದಿಲ್ಲ"ಎಂದು ದೇಸಾಯಿ ಹೇಳಿದ್ದಾರೆ. ತಮ್ಮನ್ನು ಅಡ್ಡ ಗಟ್ಟಿರುವುದು ಭಕ್ತರಲ್ಲ ಗೂಂಡಾಗಳು ಎಂದು ಅವರು ನುಡಿದರು.

ಮಹಾರಾಷ್ಟ್ರದ ಅಹ್ಮದನಗರ  ಜಿಲ್ಲೆಯ ಶನಿ ಶಿಂಗ್ಣಾಪುರ ದೇವಸ್ಥಾನ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕಾಗಿ ತೃಪ್ತಿ ದೇಸಾಯಿ ಮತ್ತು ಅವರ ಭೂಮಾತಾ ಬ್ರಗೇಡ್ ತೀವ್ರ ಹೋರಾಟ ನಡೆಸಿ ಕಡೆಗು ಯಶಸ್ವಿಯಾಗಿತ್ತು.

ಎಲ್ಲ ವಯಸ್ಸಿನ ಮಹಿಳೆಯರಿಗೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ತೆರೆದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ, ಶಬರಿಮಲೈ ವಿವಾದದ ಕೇಂದ್ರ ಬಿಂದುವಾಗಿದೆ. ಸುಪ್ರೀಂಕೋರ್ಟ್ ತೀರ್ಪು ಅನುಷ್ಠಾನಕ್ಕೆ ಬದ್ಧ ಎಂಬುದಾಗಿ ಕೇರಳ ಸರ್ಕಾರ ಪಟ್ಟು ಹಿಡಿದಿದ್ದರೆ, ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಲಾಗದು ಎಂದು ಮಹಿಳೆಯರೂ ಸೇರಿದಂತೆ ಭಕ್ತರು, ತಂತ್ರಿಗಳು, ಪಂದಳ ರಾಜಕುಟುಂಬ ಪಟ್ಟು ಹಿಡಿದಿದ್ದಾರೆ. ಬಿಜೆಪಿ ನೇತೃತ್ವದ  ಎನ್ ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಜಾತಾಂತ್ರಕ ಮೈತ್ರಿಕೂಟ ಭಕ್ತರ ಹೋರಾಟಕ್ಕೆ ಬೆಂಬಲ ನೀಡಿವೆ.

ಶಬರಿಮಲೈ ವಿವಾದ ಇತ್ಯರ್ಥ ಸಲುವಾಗಿ ಗುರುವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರೆದ ಸರ್ವ ಪಕ್ಷ ಸಭೆ ವಿಫಲಗೊಂಡಿದೆ. ಬಳಿಕ ವಿಜಯನ್ ಅವರು ತಂತ್ರಿಗಳು ಮತ್ತು ಪಂದಳ ರಾಜ ಕುಟುಂಬದ ಜೊತೆಗೆ ಮಾತುಕತೆ ನಡೆಸಿದ್ದು, ಮಹಿಳೆಯರಿಗೆ ಪ್ರತ್ಯೇಕ ದಿನದಂದು ದೇವಾಲಯ ಭೇಟಿಗೆ ಅವಕಾಶ ಕಲ್ಪಿಸುವ ಪ್ರಸ್ತಾಪ ಮುಂದಿಟ್ಟಿದ್ದಾರೆ.

ತಂತ್ರಿಗಳು ಮತ್ತು ರಾಜಕುಟುಂಬ ಸಲಹೆಯನ್ನು ತಿರಸ್ಕರಿಸಿಲ್ಲ, ಆದರೆ ಸಮಾಲೋಚನೆಗೆ ಕಾಲಾವಕಾಶ ಕೋರಿದ್ದಾರೆ ಎಂದು ವರದಿಗಳು ತಿಳಿಸಿವೆ. ತಿರುವಾಂಕೂರು ದೇವಸ್ವಂ ಮಂಡಳಿಗೆ ಸುಪ್ರೀಂಕೋರ್ಟಿನಲ್ಲಿ ತೀರ್ಪಿಗೆ ತಡೆಯಾಜ್ಞೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಪಂದಳ ರಾಜಕುಟುಂಬ ಮುಖ್ಯಮಂತ್ರಿಗೆ ಸೂಚಿಸಿದೆ.

ಸುಪ್ರೀಂಕೋರ್ಟಿನ ಸೆಪ್ಟೆಂಬರ್ 28 ತೀರ್ಪು ಜಾರಿಗೆ ಕಾಲಾವಕಾಶ ನೀಡವಂತೆ ನ್ಯಾಯಾಲಯವನ್ನು ಕೋರಬಹುದು ಎಂಬ ಸಲಹೆಯನ್ನು ನೀಡುವ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಪಟ್ಟನ್ನು ಸ್ವಲ್ಪ ಸಡಿಲಿಸಿದ್ದಾರೆ ಎಂದೂ ವರದಿಗಳು ಹೇಳಿವೆ.

No comments:

Post a Comment