ನಾನು ಮೆಚ್ಚಿದ ವಾಟ್ಸಪ್

Friday, November 9, 2018

ಇಂದಿನ ಇತಿಹಾಸ History Today ನವೆಂಬರ್ 09

ಇಂದಿನ ಇತಿಹಾಸ History Today ನವೆಂಬರ್ 09
2018: ಚೀನ: ಕೃತಕ ಬುದ್ಧಿಮತ್ತೆ (ಎಐ) ಆಧರಿಸಿ ತಯಾರಿಸಿರುವ ರೋಬೋವೊಂದು ಚೀನದಲ್ಲಿ ನಡೆಯುತ್ತಿರುವ 5ನೇ ಜಾಗತಿಕ ಅಂತರ್ಜಾಲ ಸಮ್ಮೇಳನದಲ್ಲಿ "ಸುದ್ದಿ ನಿರೂಪಕ'ನಾಗಿ ತನ್ನ ತಾಕತ್ತು ಪ್ರದರ್ಶಿಸಿದ್ದು, ಇಡೀ ವಿಶ್ವವನ್ನೇ ನಿಬ್ಬೆರಗಾಗಿಸಿತು!  ಪುರುಷ ಸ್ವರೂಪದ ರೋಬೋ ಧ್ವನಿಯೊಂದಿಗೆ ಆಯಾ ಸುದ್ದಿಗೆ ಸಂಬಂಧಿಸಿದಂತೆ ಮುಖಭಾವವನ್ನೂ ಬದಲಿಸುವ ಸಾಮರ್ಥ್ಯ ಹೊಂದಿದೆ. ಸದ್ಯ ಟಿವಿ ಚಾನೆಲ್ಳಲ್ಲಿ ಸುದ್ದಿ ವಾಚಕರು ಹೇಗೆ ವಾರ್ತೆಗಳನ್ನು ಓದುತ್ತಾರೆಯೋ ಅದೇ ರೀತಿಯಲ್ಲಿ ಹಾವ ಭಾವ ಪ್ರದರ್ಶಿಸುತ್ತದೆ. ಜತೆಗೆ, ಸುದ್ದಿಯನ್ನು ವಾಚಿಸಿದ ನಂತರ ಅದಕ್ಕೆ ಸಂಬಂಧಪಟ್ಟ ವಿಡಿಯೋವನ್ನು ತಾನೇ ಹುಡುಕಿ ಅದನ್ನು ಪ್ರಸಾರ ಮಾಡುವ ಛಾತಿ ಹೊಂದಿದೆ. ಚೀನಾ ಸರ್ಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ದಿ ಸಂಸ್ಥೆ ಹಾಗೂ ಚೀನದ ಅಂತರ್ಜಾಲ ಸರ್ಚ್ಸಂಸ್ಥೆಯಾದ ಸೊಗೌ ಡಾಟ್ಕಾಮ್ಜಂಟಿಯಾಗಿ ರೋಬೋವನ್ನು ತಯಾರಿಸಿವೆ. ಸುದ್ದಿ ವಾಚಕನಾಗುವ ಮೊದಲು ರೋಬೋವನ್ನು ತನ್ನ ವರದಿಗಾರರ ವಿಭಾಗದಲ್ಲಿ ತರಬೇತಿ ನೀಡಲಾಗಿದ್ದು, ದಿನದ 24 ಗಂಟೆಗಳ ಕಾಲ ದಣಿವಿಲ್ಲದೆ ದುಡಿಯುವಂಥ ಕ್ಷಮತೆಯನ್ನು ರೋಬೋ ಹೊಂದಿದೆ ಎಂದು ಕ್ಸಿನ್ಹುವಾ ಹೇಳಿತು.


2018: ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ನಿಂದ (ಆರ್ಬಿಐ) . ಲಕ್ಷ ಕೋಟಿ ರೂಪಾಯಿಗಳ ಬಂಡವಾಳವನ್ನು ತಾನು ಕೋರಿಲ್ಲ ಎಂಬುದಾಗಿ ಕೇಂದ್ರ ಸರ್ಕಾರವು ಸ್ಪಷ್ಟ ಪಡಿಸಿತು. ಕೇಂದ್ರೀಯ ಬ್ಯಾಂಕಿನ ಆರ್ಥಿಕ ಬಂಡವಾಳ ಚೌಕಟ್ಟು ನಿಗದಿ ಪಡಿಸುವುದಷ್ಟೇ ಈಗ ಚರ್ಚೆಯಲ್ಲಿ ಇರುವ ವಿಷಯ ಎಂದು ಅದು ಹೇಳಿತು. ‘ತಪ್ಪು ಮಾಹಿತಿಗಳನ್ನು ಆಧರಿಸಿದ ಸಾಕಷ್ಟು ಊಹಾಪೋಹಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಸರ್ಕಾರದ ಆರ್ಥಿಕ ಲೆಕ್ಕಾಚಾರ ಸಂಪೂರ್ಣವಾಗಿ ಹಳಿಯ ಮೇಲಿದೆ. ಊಹಾಪೋಹಗಳು ಹೇಳುವಂತೆ . ಲಕ್ಷ ಕೋಟಿ ರೂಪಾಯಿ ಅಥವಾ ಲಕ್ಷ ಕೋಟಿ ರೂಪಾಯಿಗಳನ್ನು ಸರ್ಕಾರಕ್ಕೆ ವರ್ಗಾವಣೆ ಮಾಡುವಂತೆ ಆರ್ಬಿಐಯನ್ನು ಕೇಳುವ ಪ್ರಸ್ತಾಪವೇ ಇಲ್ಲ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಸುಭಾಶ್ ಚಂದ್ರ ಗರ್ಗ್ ಟ್ವೀಟ್ ಮಾಡಿದರು. ಪ್ರಸ್ತುತ ಚರ್ಚೆಯಲ್ಲಿ ಇರುವ ವಿಷಯ ಸೂಕ್ತವಾದ ಆರ್ ಬಿಐಯ ಆರ್ಥಿಕ ಬಂಡವಾಳ ಚೌಕಟ್ಟು ನಿಗದಿಯ ಪ್ರಸ್ತಾವ ಅಷ್ಟೇ ಎಂದು ಅವರು ಹೇಳಿದರು. ಸರ್ಕಾರದ ಹಣಕಾಸು ಲೆಕ್ಕಾಚಾರದ ಬಗ್ಗೆ ವಿಶ್ವಾಸ ವ್ಯಕ್ತ ಪಡಿಸಿದ ಅವರು೨೦೧೯ರ ಮಾರ್ಚ್ ೩೧ರಂದು ಕೊನೆಗೊಳ್ಳುವ ಪ್ರಸ್ತುತ ವಿತ್ತ ವರ್ಷದಲ್ಲಿ ಶೇಕಡಾ . ಹಣಕಾಸು ಕೊರತೆಯ ಗುರಿ ಹೊಂದಲಾಗಿದ್ದು ಸರ್ಕಾರ ಅದಕ್ಕೆ ದೃಢವಾಗಿ ಅಂಟಿಕೊಂಟಿದೆ ಎಂದು ನುಡಿದರು.  ‘೨೦೧೩-೧೪ರಲ್ಲಿ ಸರ್ಕಾರದ ವಿತ್ತೀಯ ಕೊರತೆಯು (ಫಿಸ್ಕಲ್ ಡೆಫಿಸಿಟ್) ಶೇಕಡಾ .೧ರಷ್ಟು ಇತ್ತು. ೨೦೧೪-೧೫ರಿಂದ ಸರ್ಕಾರವು ಅದನ್ನು ಗಮನಾರ್ಹವಾಗಿ ಕೆಳಕ್ಕೆ ತರುವಲ್ಲಿ ಯಶಸ್ವಿಯಾಗಿದೆ. ೨೦೧೮-೧೯ರ ಸಾಲಿನ ವಿತ್ತವರ್ಷದ ಕೊನೆಗೆ ಶೇಕಡಾ ವಿತ್ತೀಯ ಕೊರತೆಯನ್ನು ಶೇಕಡಾ .೩ಕ್ಕೆ ತಂದು ನಿಲ್ಲಿಸಲಿದ್ದೇವೆ. ವರ್ಷ ಮಾರುಕಟ್ಟೆಗೆ ೭೦,೦೦೦ ಕೋಟಿ ರೂಪಾಯಿಗಳನ್ನು ಸಾಲವಾಗಿ ತರುವ ಮುಂಗಡಪತ್ರದ ಪ್ರಸ್ತಾವವನ್ನು ನಾವು ವಾಸ್ತವವಾಗಿ ಮುಂದಕ್ಕೆ ಹಾಕಿದ್ದೇವೆ ಎಂದು ಗರ್ಗ್ ಹೇಳಿದರು. ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯ ಹೇಳಿಕೆಯನ್ನು ಕಾಂಗ್ರೆಸ್ ನಾಯಕ ಹಾಗೂ ಮಾಜಿ ವಿತ್ತ ಸಚಿವ ಪಿ. ಚಿದಂಬರಂ ತರಾಟೆಗೆ ತೆಗೆದುಕೊಂಡರು.  ನರೇಂದ್ರ ಮೋದಿ ಸರ್ಕಾರವು ತನ್ನ ಹಣಕಾಸು ಬಿಕ್ಕಟ್ಟಿನಿಂದ ಹೊರಬರಲು ಭಾರತೀಯ ರಿಸರ್ವ್ ಬ್ಯಾಂಕನ್ನು ಸ್ವಾಧೀನ ಪಡಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಚಿದಂಬರಂ ಅವರು ಆಪಾದಿಸಿದ್ದರು.  ‘ಆರ್ಬಿಐಯ ಆರ್ಥಿಕ ಬಂಡವಾಳ ಚೌಕಟ್ಟು ನಿಗದಿ ಪಡಿಸುವುದು ಎಂಬ ಸರ್ಕಾರದಲೊಚಗುಟ್ಟುವಿಕೆ ಅರ್ಥ ಏನು ಎಂದು ಚಿದಂಬರಂ ಟ್ವೀಟ್ ಮೂಲಕ ಪ್ರಶ್ನಿಸಿದರು. ಆರ್ಥಿಕ ಬಂಡವಾಳ ಚೌಕಟ್ಟು ಎಂಬುದು ಆರ್ಥಿಕ ಕರಗುವಿಕೆಯಂತಹ ವಿವಿಧ ರೀತಿಯ ಹಣಕಾಸು ಅಪಾಯಗಳ ಜೊತೆ ವ್ಯವಹರಿಸಲು ತೆಗೆದಿರಿಸಿದ ಅಗತ್ಯ ನಿಧಿಗೆ ಸಂಬಂಧಿಸಿದೆ ಎಂದು ಚಿದಂಬರಂ ಪ್ರತಿಪಾದಿಸಿದ್ದಾರೆ.
ಚುನಾವಣಾ ವರ್ಷದಲ್ಲಿ ತನ್ನ ವೆಚ್ಚ ಹೆಚ್ಚಿಸಿಕೊಳ್ಳಲು ಬಯಸಿರುವ ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ಬಿಐ) ಮೇಲೆ ಅದರ ಸಾದಿಲ್ವಾರು ಮೀಸಲು ನಿಧಿಯಿಂದ ಲಕ್ಷ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆ ಒತ್ತಡ ಹೇರುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಅವರು ಗುರುವಾರ ಆಪಾದಿಸಿದ್ದರು ’ಬೇರೆಲ್ಲಾ ಆದಾಯದ ದಾರಿಗಳೂ ಮುಚ್ಚಿರುವುದನ್ನು ಅರಿತಿರುವ ಸರ್ಕಾರ ಭ್ರಮನಿರಸನಗೊಂಡಿದ್ದು ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ಬಿಐ) ಮೀಸಲು ನಿಧಿಯಿಂದ ಲಕ್ಷ ಕೋಟಿ ರೂಪಾಯಿ ಬಿಡುಗಡೆಗೆ ಒತ್ತಾಯ ಮಾಡಿದೆ. ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ಅವರು ಇದನ್ನು ಒಪ್ಪಲು ನಿರಾಕರಿಸಿದರೆ ಸರ್ಕಾರವು ಆರ್ಬಿಐ ಕಾಯ್ದೆಯ ಸೆಕ್ಷನ್ ೭ನ್ನು ಬಳಸುವ ಅಭೂತಪೂರ್ವ ಕ್ರಮಕ್ಕೆ ಕೈಹಾಕಿದೆ ಎಂದು ಚಿದಂಬರಂ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು. ಸರ್ಕಾರವು ಅಧಿಕಾರವನ್ನು ಬಳಸಿಕೊಂಡು ಕೇಂದ್ರೀಯ ಬ್ಯಾಂಕನ್ನುವಶಪಡಿಸಿಕೊಳ್ಳಲು ಯತ್ನಿಸುತ್ತಿದೆ ಎಂದು ಆಪಾದಿಸಿದ ಅವರು ಇಂತಹ ಕ್ರಮವು ರಾಷ್ಟ್ರಕ್ಕೆ ವಿಪ್ಲವಕಾರಿಯಾದೀತು (ಮಹಾದುರಂತಕಾರಿ) ಎಂದು ಎಚ್ಚರಿಸಿದ್ದರು.  ‘ಆರ್ಬಿಐ  ಗವರ್ನರ್ ಅವರು ತಮ್ಮ ನಿಲುವಿಗೆ ಬದ್ಧರಾಗಿ ನಿಂತುಕೊಂಡರೆ, ವಿಷಯಕ್ಕೆ ಸಂಬಂಧಿಸಿದಂತೆ ಆರ್ಬಿಐ ಕಾಯ್ದೆಯ (೧೯೩೪) ಸೆಕ್ಷನ್ ಬಳಸಿ, ಅದರ ಅಡಿಯಲ್ಲಿ ಹಣವನ್ನು ( ಲಕ್ಷ ಕೋಟಿ ರೂಪಾಯಿ) ಸರ್ಕಾರದ ಖಾತೆ ವರ್ಗಾವಣೆ ಮಾಡುವಂತೆ ನಿರ್ದೇಶನ ನೀಡಲು ಕೇಂದ್ರವು ಯೋಜಿಸುತ್ತಿದೆ. ಇದು ರಾಷ್ಟ್ರದ ಪಾಲಿಗೆ ಮಹಾದುರಂತಕಾರಿಯಾದೀತು ಎಂದು ಅವರು ಹೇಳಿದ್ದರುಸರ್ಕಾರವು ಕೇಂದ್ರೀಯ ಬ್ಯಾಂಕಿನ ಮಂಡಳಿಯಲ್ಲಿ ಆಯ್ದ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಿ ತುಂಬಿದೆ ಮತ್ತು ನವೆಂಬರ್ ೧೯ರಂದು ಆರ್ಬಿಐ ಮಂಡಳಿಯಲ್ಲಿ ತನ್ನ ಪ್ರಸ್ತಾಪಗಳನ್ನು ಮುಂದಿಟ್ಟು ಈಡೇರಿಸಿಕೊಳ್ಳಲು ಸರ್ವ ಪ್ರಯತ್ನ ಮಾಡುತ್ತಿದೆ. ಹೀಗಾಗಿ ಆರ್ಬಿಐ ಮಂಡಳಿಯು ಸಭೆ ಸೇರಲು ನಿಗದಿಯಾಗಿರುವ ನವೆಂಬರ್ ೧೯ರಂದು ಏನಾದೀತು ಎಂದು ಊಹಿಸಬಹುದು ಎಂದು ಚಿದಂಬರಂ ಹೇಳಿದ್ದರು.  ಸರ್ಕಾರವು ತನ್ನ ಕಾರ್ಯಸೂಚಿಯನ್ನು ಸಭೆಯ ಮುಂದಿಟ್ಟರೆ, ಆರ್ ಬಿಐ ಗವರ್ನರ್ ಗೆ ಎರಡು ಆಯ್ಕೆಗಳು ಮಾತ್ರ ಉಳಿಯುತ್ತವೆ- ಆದೇಶವನ್ನು ಪಾಲಿಸುವುದು ಇಲ್ಲವೇ ರಾಜೀನಾಮೆ ನೀಡುವುದು ಎಂದು ಚಿದಂಬರಂ ಹೇಳಿದ್ದರು.  ‘ನನ್ನ ಅಭಿಪ್ರಾಯದಲ್ಲಿ, ಗವರ್ನರ್ ಯಾವುದೇ ಆಯ್ಕೆಯನ್ನು ಮಾಡಿದರೂ ಅದು ಆರ್ಬಿಐ ವಿಶ್ವಾಸಾರ್ಹತೆ ಮತ್ತು ವರ್ಚಸ್ಸಿಗೆ ಭಾರೀ ಧಕ್ಕೆಯನ್ನು ಖಂಡಿತವಾಗಿ ಮಾಡುತ್ತದೆ. ಸರ್ಕಾರವು ಆರ್ಬಿಐಯನ್ನು ಖಾಸಗಿ ಕಂಪೆನಿಯಂತೆ ಬಳಸಲು ಯತ್ನಿಸುತ್ತಿದೆ. ಅವರು ಆರ್ಬಿಐಯನ್ನು ವಶ ಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ದುರದೃಷ್ಟಕರವಾಗಿ ಇನ್ನೊಂದು ನಿರ್ಣಾಯಕ ಸಂಸ್ಥೆಯೂ ತನ್ನ ಶೋಭೆಯನ್ನು ಕಳೆದುಕೊಂಡು ಕುಸಿದು ಬೀಳಲಿದೆ ಎಂದು ಅವರು ದೂರಿದ್ದರು.

2018: ನವದೆಹಲಿ: ಕೇಂದ್ರೀಯ ತನಿಖಾ ದಳದ (ಸಿಬಿಐ) ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನ ಅವರು ತಮ್ಮ ವಿರುದ್ಧ ಮಾಡಿದ್ದ ಭ್ರಷ್ಟಾಚಾರ ಆಪಾದನೆಗಳಿಗೆ ಸಂಬಂಧಿಸಿದಂತೆ ಶುಕ್ರವಾರ ಸತತ ಎರಡನೇ ದಿನ ಕೇಂದ್ರೀಯ ಜಾಗೃತಾ ಆಯುಕ್ತ ಕೆ.ವಿ. ಚೌಧರಿ ನೇತೃತ್ವದ ತನಿಖಾ ಆಯೋಗದ ಮುಂದೆ ಹಾಜರಾದ ಸಿಬಿಐ ನಿರ್ದೇಶಕ ಅಲೋಕ ವರ್ಮ ಅವರು ಭ್ರಷಾಚಾರ ಆರೋಪ ಕುರಿತ ಪ್ರಶ್ನೆಗಳನ್ನು ಉತ್ತರಿಸಿದರುವರ್ಮ ಅವರು ತಮ್ಮ ವಿರುದ್ಧ ಜಾಗೃತಾ ಆಯೋಗಕ್ಕೆ (ಸಿವಿಸಿ) ರಾಕೇಶ್ ಅಸ್ತಾನ ಅವರು ನೀಡಿದ್ದ ದೂರಿನಲ್ಲಿ ಮಾಡಲಾದ ಭ್ರಷ್ಟಾಚಾರ ಆರೋಪಗಳನ್ನು ಅಂಶ ಅಂಶವಾಗಿ ನಿರಾಕರಿಸಿದರು ಎಂದು ಅಧಿಕಾರಿ ಮೂಲಗಳು ಹೇಳಿವೆ. ಜಾಗೃತಾ ಆಯುಕ್ತರಾದ ಟಿ.ಎಂ. ಭಾಸಿನ್ ಮತ್ತು ಶರದ್ ಕುಮಾರ್ ಅವರೂ ತನಿಖೆಯ ವೇಳೆಯಲ್ಲಿ ಹಾಜರಿದ್ದರು.  ಸುಪ್ರೀಂಕೋರ್ಟ್ ಆದೇಶದ ಪ್ರಕಾರ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂರ್ತಿ .ಕೆ. ಪಟ್ನಾಯಕ್ ಅವರು ಜಾಗೃತಾ ಆಯೋಗದ ತನಿಖೆಯ ಉಸ್ತುವಾರಿ ನೋಡಿಕೊಂಡರು ಎಂದು ಅಧಿಕಾರಿಗಳು ಹೇಳಿದರುಅಲೋಕ ವರ್ಮ ಅವರು ಶುಕ್ರವಾರ ಬೆಳಗ್ಗೆ ಬೇಗನೇ ಸಿವಿಸಿ ಕಚೇರಿಗೆ ಬಂದಿದ್ದು, ಸುಮಾರು ಒಂದು ಗಂಟೆ ಕಾಲ ಅಲ್ಲಿದ್ದರು.  ಸಿವಿಸಿ ಕಚೇರಿಯ ಹೊರಭಾಗದಲ್ಲಿ ಕಾಯುತ್ತಿದ್ದ ಮಾಧ್ಯಮಗಳ ಜೊತೆ ಅವರು ಯಾವುದೇ ಮಾತನಾಡಲಿಲ್ಲ. ವರ್ಮ ವಿರುದ್ಧ ಅಸ್ತಾನ ಅವರು ಮಾಡಿರುವ ಆಪಾದನೆಗಳ ಕುರಿತ ತನಿಖೆಯನ್ನು ಎರಡು ವಾರಗಳ ಒಳಗಾಗಿ ಮುಗಿಸುವಂತೆ ಸುಪ್ರೀಂಕೋರ್ಟ್ ಅಕ್ಟೋಬರ್ ೨೬ರಂದು ಕೇಂದ್ರೀಯ ಜಾಗೃತಾ ಆಯೋಗಕ್ಕೆ ಆಜ್ಞಾಪಿಸಿತ್ತು. ಎರಡು ವಾರಗಳ ಗಡುವು ಭಾನುವಾರಕ್ಕೆ ಮುಕ್ತಾಯವಾಗುತ್ತಿದ್ದು, ಸುಪ್ರೀಂಕೋರ್ಟ್ ಪ್ರಕರಣವನ್ನು .೧೨ರ ಸೋಮವಾರ ಆಲಿಸಲಿದ್ದು, ಆದಿನ ಸಿವಿಸಿಯು ತನ್ನ ವರದಿಯನ್ನು ಕೋರ್ಟಿಗೆ ನೀಡಬೇಕಾಗಿದೆ. ಪರಸ್ಪರ ಘರ್ಷಣೆಗೆ ಇಳಿದ ವರ್ಮ ಮತ್ತು ಅಸ್ತಾನ ಅವರನ್ನು ಸರ್ಕಾರವು ಕಡ್ಡಾಯ ರಜೆಯಲ್ಲಿ ಕಳುಹಿಸಿತ್ತು. ವರ್ಮ ಅವರಲ್ಲದೆ ಅಸ್ತಾನ ಅವರೂ ಗುರುವಾರ ಸಿವಿಸಿ ಭೇಟಿ ಮಾಡಿದ್ದರು. ಅಸ್ತಾನ ಅವರು ವರ್ಮ ವಿರುದ್ಧದ ತಮ್ಮ ಆರೋಪಗಳಿಗೆ ಸಮರ್ಥನೆಯಾಗಿ ಪೂರಕ ಸಾಕ್ಷ್ಯಾಧಾರಗಳನ್ನು ನೀಡಿದರು ಎನ್ನಲಾಯಿತು. ಸಿಬಿಐ ಮುಖ್ಯಸ್ಥ ವರ್ಮ ವಿರುದ್ಧ ಅಸ್ತಾನ ಅವರು ಮಾಡಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರಿನಲ್ಲಿ ಪ್ರಸ್ತಾಪವಾಗಿರುವ ನಿರ್ಣಾಯಕ ಪ್ರಕರಣಗಳ ತನಿಖೆ ನಡೆಸುತ್ತಿದ್ದ ಕೆಲವು ಸಿಬಿಐ ಅಧಿಕಾರಿಗಳನ್ನು ಜಾಗೃತಾ ಆಯೋಗವು ಇತ್ತೀಚೆಗೆ ಪ್ರಶ್ನಿಸಿತ್ತು. ಇನ್ಸ್ಪೆಕ್ಟರ್ರಿಂದ ಹಿಡಿದು ಪೊಲೀಸ್ ವರಿಷ್ಠಾಧಿಕಾರಿವರೆಗಿನ (ಎಸ್ಪಿ) ಅಧಿಕಾರಿ- ಸಿಬ್ಬಂದಿಯನ್ನೂ ಕರೆಸಿದ ಸಿವಿಸಿ ಅವರ ಹೇಳಿಕೆಗಳನ್ನೂ ದಾಖಲಿಸಿತ್ತು. ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಅವರು ಶಾಮೀಲಾಗಿದ್ದ ಐಆರ್ಸಿಟಿಸಿ ಹಗರಣ ಮತ್ತು ಕೇರಳದಲ್ಲಿ ಹಿರಿಯ ಬಿಎಸ್ ಎಫ್ ಅಧಿಕಾರಿಯೊಬ್ಬರು ಬಂಧಿಸಲ್ಪಟ್ಟ ಗೋವು ಸಾಗಣೆ ಪ್ರಕರಣ, ಮೊಯಿನ್ ಖುರೇಶಿ ಲಂಚ ಪ್ರಕರಣ ಇತ್ಯಾದಿಗಳ  ತನಿಖೆ ನಡೆಸುತ್ತಿದ್ದ ಅಧಿಕಾರಿಗಳ ಹೇಳಿಕೆಯನ್ನೂ ಸಿವಿಸಿ ದಾಖಲಿಸಿತ್ತು. ತಮ್ಮನ್ನು ಕರ್ತವ್ಯದಿಂದ ಮುಕ್ತಗೊಳಿಸಿ ಕಡ್ಡಾಯ ರಜೆಯಲ್ಲಿ ಕಳುಹಿಸಿದ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದ ವರ್ಮ ಅವರ ವಿರುದ್ಧ ಅಸ್ತಾನ ನೀಡಿದ್ದ ದೂರಿನ ತನಿಖೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ನಿರ್ದೇಶನ ನೀಡಿದ್ದ ಪೀಠವು ತನಿಖೆಯ ಉಸ್ತುವಾರಿ ನೋಡಿಕೊಳ್ಳುವಂತೆ ನ್ಯಾಯಮೂರ್ತಿ .ಕೆ. ಪಟ್ನಾಯಕ್ ಅವರಿಗೆ ನಿರ್ದೇಶನ ನೀಡಿತ್ತುವರ್ಮ ಮತ್ತು ಅಸ್ತಾನ ನಡುವಣ ಜಗಳವು ಅಸ್ತಾನ ಮತ್ತು ಉಪ ಪೊಲೀಸ್ ವರಿಷ್ಠಾಧಿಕಾರಿ ದೇವೇಂದ್ರ ಕುಮಾರ್ ವಿರುದ್ಧ ಸಿಬಿಐ ಎಫ್ ಐಆರ್ ದಾಖಲಿಸುವುದರೊಂದಿಗೆ ತಾರಕಕ್ಕೆ ಏರಿತ್ತು.   ದೇವೇಂದ್ರ ಕುಮಾರ್ ಅವರನ್ನು ಬಂಧಿಸಲಾಗಿತ್ತು. ಸಿಬಿಐ ಅಕ್ಟೋಬರ್ ೧೫ರಂದು ಅಸ್ತಾನ ವಿರುದ್ಧ ಹೈದರಾಬಾದ್ ಮೂಲದ ವ್ಯಾಪಾರಿ ಸನಾ ಸತೀಶ್ ಬಾಬು ಅವರಿಂದ ಕೋಟಿ ರೂಪಾಯಿ ಪಡೆದ ಆಪಾದನೆಯಲ್ಲಿ ಎಫ್ ಐಆರ್ ದಾಖಲಿಸಿತ್ತು. ಮಧ್ಯವರ್ತಿ ಮನೋಜ್ ಪ್ರಸಾದ್ ಮತ್ತು ಸೋಮೇಶ್ ಪ್ರಸಾದ್ ಅವರ ಮೂಲಕ ಹಣವನ್ನು ಮಾಂಸ ವ್ಯಾಪಾರಿ ಮೊಯಿನ್ ಖುರೇಶಿ ವಿರುದ್ಧದ ತನಿಖೆಯನ್ನು ಹಾಳುಗೆಡಹುವ ಸಲುವಾಗಿ ನೀಡಲಾಗಿತ್ತು ಎಂದು ಆಪಾದಿಸಲಾಗಿತ್ತು. ಸನಾ ಅವರ ಮೂಲಕ ಎರಡು ಕೋಟಿ ರೂಪಾಯಿಗಳ ಲಂಚವನ್ನು ತಮಗೆ ನೀಡಿ ವಿಷಯದ ಬಗ್ಗೆ ಪ್ರಶ್ನಿಸುವಾಗ ರಿಯಾಯ್ತಿ ನೀಡಿ ನೆರವಾಗುವಂತೆ ಕೋರಲಾಗಿತ್ತು ಎಂದು ಆಗಸ್ಟ್  ೨೪ರಂದು ಅಸ್ತಾನ ಅವರು ಸಂಪುಟ ಕಾರ್ಯದರ್ಶಿಗೆ ನೀಡಿದ ತಮ್ಮ ದೂರಿನಲ್ಲಿ ವರ್ಮ ವಿರುದ್ಧ ಆರೋಪಗಳನ್ನು ಮಾಡಿದ್ದರು.

2018: ರಾಯ್ ಪುರ: ನಗರಗಳಲ್ಲಿ ಐಷಾರಾಮೀ ಜೀವನ ಮಾಡುತ್ತಾ, ಸರ್ಕಾರದ ವಿರುದ್ಧ ಶಸ್ತ್ರಾಸ್ತ್ರ ಕೈಗೆತ್ತಿಕೊಳ್ಳುವಂತೆ ಪ್ರೋತ್ಸಾಹ ನೀಡಿ ಬಡ ಬುಡಕಟ್ಟು ಜನರನ್ನು ಸಂಕಷ್ಟಕ್ಕೆ ತಳ್ಳುವ ಮಾವೋವಾದಿ ನಗರ ನಕ್ಸಲರನ್ನು ಕಾಂಗ್ರೆಸ್ ಬೆಂಬಲಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಆಪಾದಿಸಿದರು. ಛತ್ತೀಸ್ ಗಢ ರಾಜ್ಯದಲ್ಲಿ ಮುಂದಿನವಾರ ನಡೆಯಲಿರುವ ವಿಧಾನಸಭಾ ಚುನಾವಣೆಗಳಿಗಾಗಿ ಬಸ್ತಾರಿನ ಜಗದಾಲಪುರದಲ್ಲಿ ತಮ್ಮ ಮೊದಲ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡುತ್ತಿದ್ದ ಪ್ರಧಾನಿ, ’ನಗರ ಮಾವೋವಾದಿಗಳನ್ನು ಸಮರ್ಥಿಸಿ ಮಾತನಾಡುತ್ತಿರುವುದು ಏಕೆ ಎಂದು ಜನರಿಗೆ ಕಾಂಗ್ರೆಸ್ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.  ನಗರ ಮಾವೋವಾದಿಗಳು ಹವಾನಿಯಂತ್ರಿತ ಮನೆಗಳಲ್ಲಿ ವಾಸ ಮಾಡುತ್ತಾರೆ, ವಿದೇಶಗಳಲ್ಲಿ ಅಧ್ಯಯನ ಮಾಡುತ್ತಾರೆ. ಐಷಾರಾಮೀ ಕಾರುಗಳಲ್ಲಿ ಸಂಚರಿಸುತ್ತಾರೆ, ಆದರೆ  ಹಿಂಸಾಚಾರದ ಮೇಲಿನ ತಮ್ಮ ರಿಮೋಟ್ ಕಂಟ್ರೋಲ್ ಮೂಲಕ ಇಲ್ಲಿನ ಬುಡಕಟ್ಟು ಯುವಕರ ಬದುಕನ್ನು ಹಾಳು ಮಾಡುತ್ತಾರೆ. ಕಾಂಗ್ರೆಸ್ ಇಂತಹ ನಗರ ಮಾವೋವಾದಿಗಳನ್ನು ಬೆಂಬಲಿಸುತ್ತಿರುವುದು P? ಎಂದು ಮೋದಿ ದಶಕಗಳಿಂದ ಮಾವೋವಾದಿ ಚಟುವಟಿಕೆಗಳ ಆಡುಂಬೊಲವಾಗಿರುವ ಬಸ್ತಾರಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಪ್ರಶ್ನಿಸಿದರು.  ‘ಮಾವೋವಾದಿಗಳನ್ನು ದುಷ್ಟ ಮನಸ್ಸಿನ ರಕ್ಕಸರು ಎಂದು ಬಣ್ಣಿಸಿದ ಪ್ರಧಾನಿ ಮೋದಿ, ತಮ್ಮ ಸರ್ಕಾರವು ರಾಜ್ಯದಲ್ಲಿ ಮಾವೋವಾದಿ ಹಾವಳಿಗೆ ತುತ್ತಾಗಿರುವ ಪ್ರದೇಶಗಳಲ್ಲಿ ಒಂದಿಷ್ಟೂ ಎದೆಗುಂದದೆ ಅಭಿವೃದ್ಧಿ ಕಾರ್ಯಗಳನ್ನು ಮುಂದುವರೆಸಿದೆ ಮತ್ತು ಇನ್ನಷ್ಟು ಸವಲತ್ತುಗಳನ್ನು ಒದಗಿಸಲು ದೃಢ ನಿರ್ಧಾರ ಮಾಡಿದೆ ಎಂದು ಹೇಳಿದರು. ಮಧ್ಯಪ್ರದೇಶದಿಂದ ಬೇರ್ಪಟ್ಟು ೨೦೦೦ನೇ ಇಸವಿಯಲ್ಲಿ ರೂಪುಗೊಂಡ ಛತ್ತೀಸ್ಗಢಕ್ಕೆ ಈಗ ೧೮ ವರ್ಷ. ೧೮ ವರ್ಷ ಆಗುತ್ತಿದ್ದಂತೆಯೇ ಪಾಲಕರು ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಬಜೆಟ್ ರೂಪಿಸಬೇಕಾಗುತ್ತದೆ. ಅವರ ಎಲ್ಲ ಕನಸುಗಳೂ ದೆಹಲಿಯಲ್ಲಿನ ಸರ್ಕಾರದ ಸುತ್ತ ಸುತ್ತುತ್ತವೆ. ೧೮ರ ಹರೆಯದ ಛತ್ತೀಸ್ಗಢ ಕೂಡಾ ಭವಿಷ್ಯದ ಕನಸುಗಳನ್ನು ಹೆಣೆಯುತ್ತಿದೆ ಎಂದು ಮೋದಿ ನುಡಿದರು.ಮಾವೋವಾದಿ ಹಾವಳಿಗೆ ತುತ್ತಾಗಿರುವ ಛತ್ತೀಸ್ಗಢದ ಬಹಳಷ್ಟು ಭಾಗಗಳಲ್ಲಿ ಹೊಸ ಸರ್ಕಾರಕ್ಕಾಗಿ ಚುನಾವಣೆ ನಡೆಯಲಿದ್ದು, ಭದ್ರತಾ ಸಿಬ್ಬಂದಿಯ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ರಾಜ್ಯದ ಉಳಿದ ಭಾಗಗಳಲ್ಲಿ ನವೆಂಬರ್ ೨೦ರಂದು ಚುನಾವಣೆ ನಡೆಯಲಿದೆ. ಬಸ್ತಾರ್ ಪ್ರದೇಶದಲ್ಲಿ ಅಭಿವೃದ್ಧಿ ಕೆಲಸಗಳನ್ನು ಸಾಕಷ್ಟು ಪ್ರಮಾಣದಲ್ಲಿ ಮಾಡದೇ ಇದ್ದುದಕ್ಕಾಗಿ ಹಿಂದಿನ ಕಾಂಗ್ರೆಸ್ ಸರ್ಕಾರಗಳನ್ನು ದೂರಿದ ಮೋದಿ, ಮತ್ತೊಮ್ಮ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ ಎಂದು ಕೋರಿದರು.  ‘ಅಂತಹ ವ್ಯಕ್ತಿಗಳನ್ನು ನೀವು ಬೆಂಬಲಸುವಿರಾ? ಜನರು ಛತ್ತೀಸ್ಗಢವನ್ನು ಗೆಲ್ಲಲಾರರು. ಬಸ್ತಾರ್ ಪ್ರದೇಶದಲ್ಲಿ ಮತ್ತೊಮ್ಮೆ ಎಲ್ಲ ಸ್ಥಾನಗಳಲ್ಲೂ ಬಿಜೆಪಿ ಗೆಲುವನ್ನು ಖಚಿತ ಪಡಿಸಿ. ಬೇರೆ ಯಾರಾದರೂ ಗೆದ್ದಲ್ಲಿ ಬಸ್ತಾರ್ ಕನಸುಗಳು ನನಸಾಗುವುದಿಲ್ಲ ಎಂದು ಅವರು ನುಡಿದರು.

2018: ಚೆನ್ನೈ: ಎಐಎಡಿಎಂಕೆ ಕಾರ್ಯಕರ್ತರ ವ್ಯಾಪಕ ಪ್ರತಿಭಟನೆಗಳಿಗೆ ಮಣಿದ ತಮಿಳು ಚಿತ್ರ ನಟ ವಿಜಯ್ ಅವರು ನಟಿಸಿರುವ ನೂತನಸರ್ಕಾರ್ ಚಿತ್ರದ ನಿರ್ಮಾಪಕರು ಕೆಲವು ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಲು ಒಪ್ಪಿದ್ದು, ಪ್ರತಿಭಟನಕಾರರು ಪ್ರತಿಭಟನೆಗಳನ್ನು ರದ್ದು ಪಡಿಸಿದರು. ಚಿತ್ರದಲ್ಲಿನ ಕೆಲವು ದೃಶ್ಯಗಳು ಪಕ್ಷದ ನಾಯಕಿ ಜಯಲಲಿತಾ ಅವರಿಗೆ ಅವಮಾನ ಮಾಡುವಂತಿವೆ ಎಂದು ಸಿಟ್ಟಿಗೆದ್ದ ಎಐಎಡಿಎಂಕೆ ಪ್ರತಿಭಟನಕಾರರು ಚಿತ್ರಮಂದಿರಗಳ ಮೇಲೆ ದಾಳಿ ನಡೆಸಿದ್ದಲ್ಲದೆ ನಟ ವಿಜಯ್ ಅವರ ಪೋಸ್ಟರುಗಳನ್ನೂ ಸುಟ್ಟು ಹಾಕಿದ್ದರು. ತೀವ್ರ ಪ್ರತಿಭಟನೆಯ ಬಳಿಕಸರ್ಕಾರ್ ನಿರ್ಮಾಪಕರಾದ ಸನ್ಸ್ ಪಿಕ್ಚರ್ಸ್ ಚಿತ್ರದಲ್ಲಿನ ಕೆಲವು ದೃಶ್ಯಗಳನ್ನು ಕತ್ತರಿಸಿ, ಬದಲಾಯಿಸಲು ನಿರ್ಧರಿಸಿತುಚಿತ್ರ ಪ್ರದರ್ಶನ ಕಂಡ ತಿರುಪ್ಪುರ್, ಸೇಲಂ ಜಿಲ್ಲೆಗಳಲ್ಲಿ ಚಿತ್ರಮಂದಿರಗಳ ಮೇಲೆ ದಾಳಿ ಮಾಡಿದ್ದ ಎಐಎಡಿಎಂಕೆ ಕಾರ್ಯಕರ್ತರು ಚಿತ್ರದ ಕಟ್ ಔಟ್ ಮತ್ತು ಪೋಸ್ಟರುಗಳನ್ನು ನಾಶ ಪಡಿಸಿದ್ದರು. ತಿರುಪ್ಪುರದಲ್ಲಿ ಎಸ್ವಿಆರ್ ಚಿತ್ರ ಮಂದಿರದ ಮ್ಯಾನೇಜರ್ ಮೇಲೂ ಹಲ್ಲೆ ನಡೆದಿತ್ತು.  ದಿವಂಗತ ಮುಖ್ಯಮಂತ್ರಿ ಜಯಲಲಿತಾ ಅವರ ಬಗೆಗಿನ ಕೆಲವು ಉಲ್ಲೇಖಗಳನ್ನು ಆಕ್ಷೇಪಿಸಿ ಎಐಎಡಿಎಂಕೆ ಕಾರ್ಯಕರ್ತರು ಐಕಾನಿಕ್ ಚಿತ್ರಮಂದಿರಗಳಾದ ಕಾಸಿ ಮತ್ತು ದೇವಿ ಥಿಯೇಟರುಗಳ ಮುಂದೆಯೂ ತೀವ್ರ ಪ್ರತಿಭಟನಾ ಪ್ರದರ್ಶನ ನಡೆಸಿದ್ದರುಪ್ರತಿಭಟನೆಗಳ ಒತ್ತಡಕ್ಕೆ ಮಣಿದ ಸನ್ ಪಿಕ್ಚರ್ಸ್, ಚಿತ್ರದಲ್ಲಿ ಕೆಲವು ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಿತು. ಮಿಕ್ಸರ್ ಗ್ರೈಂಡರನ್ನು ಬೆಂಕಿಗೆ ಎಸೆಯುವ ದೃಶ್ಯಕ್ಕೆ ಕತ್ತರಿ ಹಾಕುವುದರ ಜೊತೆಗೆ ಕೆಲವು ದೃಶ್ಯಗಳಲ್ಲಿ ಸಂಭಾಷಣೆಗಳು ಮೂಕಗೊಳಿಸಿತು. ಕೆಲವು ಸಬ್ ಟೈಟಲ್ ಗಳನ್ನೂ ಕಿತ್ತು ಹಾಕಲಾಯಿತು. ಎಐಎಡಿಎಂಕೆಗೆ ಸಂಬಂಧಿಸಿದ ಕೆಲವು ವಿವಾದಾತ್ಮಕ ದೃಶ್ಯಗಳನ್ನು ಕಿತ್ತು ಹಾಕಲು ಚಿತ್ರ ನಿರ್ಮಾಪಕರು ಒಪ್ಪಿದ ಬಳಿಕ ಆಡಳಿತಾರೂಢ ಪಕ್ಷವುವಿಷಯ ಈಗ ಮುಗಿದ ಅಧ್ಯಾಯ. ಇನ್ನು ಪ್ರತಿಭಟನೆಗಳು ನಡೆಯುವುದಿಲ್ಲ ಎಂದು ಘೋಷಿಸಿದರು. ‘ಸರ್ಕಾರ್ ತಂಡಕ್ಕೆ ತಾವು ಜನರ ಭಾವನೆಗಳಿಗೆ ನೋವು ಉಂಟು ಮಾಡಿದ್ದೇವೆ ಎಂಬುದು ಅರ್ಥವಾಗಿದ್ದು, ದೃಶ್ಯಗಳನ್ನು ಕಿತ್ತು ಹಾಕಲು ಮುಂದೆ ಬಂದಿದ್ದಾರೆ. ಇದು ಸ್ವಾಗತಾರ್ಹ. ಆದ್ದರಿಂದ ವಿಷಯಕ್ಕೆ ಕೊನೆ ಹಾಡಲಾಗಿದೆ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಕಡಂಬೂರು ಸಿ. ರಾಜು ಹೇಳಿದರು.



2016: ನವದೆಹಲಿ:  2,000 ರೂಪಾಯಿ ಮುಖಬೆಲೆಯ ಹೊಸ ನೋಟುಗಳಲ್ಲಿ ನ್ಯಾನೊ ಜಿಪಿಎಸ್ಚಿಪ್‌ (ಎನ್ಜಿಸಿ) ಅಳವಡಿಸಲಾಗಿಲ್ಲ ಎಂದು ಆರ್ಬಿಐ ಸ್ಪಷ್ಟನೆ ನೀಡಿತು.  2,000 ರೂಪಾಯಿ ಮುಖಬೆಲೆಯ ಹೊಸ ನೋಟುಗಳಲ್ಲಿ ಎನ್ಜಿಸಿ ಅಳವಡಿಸಲಾಗಿದೆ ಎಂಬ ವದಂತಿಗಳಿಗೆ ತೆರೆ ಎಳೆದ ಆರ್ಬಿಐನ ವಕ್ತಾರೆ ಅಲ್ಪನಾಕಿಲ್ಲವಾಲ, ‘ನೋಟುಗಳಿಗೆ ಎನ್ಜಿಸಿ ಅಳವಡಿಸುವ ವ್ಯವಸ್ಥೆ ಜಗತ್ತಿನಲ್ಲಿ ಸದ್ಯ ಎಲ್ಲೂ ಇಲ್ಲ. ಇಲ್ಲದ ತಂತ್ರಜ್ಞಾನವನ್ನು ನಾವು ಹೇಗೆ ಅಳವಡಿಸಿಕೊಳ್ಳಲು ಸಾಧ್ಯಎಂದು ಪ್ರಶ್ನಿಸಿದರು. ಹೆಚ್ಚಿನ ನೋಟುಗಳನ್ನು ಸಂಗ್ರಹಿಸಿಟ್ಟುಕೊಳ್ಳುವುದನ್ನು ತಡೆಯಲು ಆರ್ಬಿಐ ಹೊಸ ನೋಟುಗಳಲ್ಲಿ ಎನ್ಜಿಸಿ ಅಳವಡಿಸಿದೆ ಎಂಬ ವದಂತಿ ಹಬ್ಬಿತ್ತು. ಆದರೆ, ಆರ್ಬಿಐ ಬಗ್ಗೆ ಇದ್ದ ಗೊಂದಲ ಹಾಗೂ ವದಂತಿಗಳಿಗೆ ಅಂತ್ಯ ಹಾಡಿತು. ಹೊಸ ನೋಟುಗಳ ಬಗ್ಗೆ ಮಾಹಿತಿಗೆ ಆರ್ಬಿಐ ವೆಬ್ಸೈಟ್ನೋಡಬಹುದು: www.rbi.org.in
2016: ನವದೆಹಲಿ/ ಮುಂಬೈ: ಕೇಂದ್ರ ಸರ್ಕಾರವು ಹಳೆಯ 500 ರೂಪಾಯಿ ಮತ್ತು 1000 ರೂಪಾಯಿ
ಮುಖಬೆಲೆಯ ಕರೆನ್ಸಿ ನೋಟುಗಳನ್ನು ರದ್ದು ಪಡಿಸಿರುವ ಹಿನ್ನೆಲೆಯಲ್ಲಿ ಗ್ರಾಹಕರ ಅನುಕೂಲಕ್ಕಾಗಿ ಎಲ್ಲ ಬ್ಯಾಂಕುಗಳು ನವೆಂಬರ್ 12 ಶನಿವಾರ ಮತ್ತು ನವೆಂಬರ್ 13 ಭಾನುವಾರ ಕಾರ್ಯ ನಿರ್ವಹಿಸಲಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಪ್ರಕಟಿಸಿತು. ಹಿಂದಿನ ದಿನ ಮಧ್ಯರಾತ್ರಿಯಿಂದ 500 ರೂ. ಮತ್ತು 1000 ರೂ. ಮುಖಬೆಲೆ ಹಳೆಯ ಕರೆನ್ಸಿ ನೋಟುಗಳನ್ನು ರದ್ದು ಪಡಿಸಿತ್ತು. ಈ ಕರೆನ್ಸಿ ನೋಟುಗಳ ಬದಲಿಗೆ  500 ರೂಪಾಯಿ ಮತ್ತು 2000 ರೂಪಾಯಿಗಳ ಹೊಸ ಕರೆನ್ಸಿ ನೋಟು .10ರಿಂದ ಚಾಲ್ತಿಗೆ ಬರಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದ್ದರು. .9. 10,11ರಂದು ಎಲ್ಲ ಬ್ಯಾಂಕ್, ಎಟಿಎಂಗಳು ಕಾರ್ಯ ನಿರ್ವಹಿಸುವುದಿಲ್ಲ ಎಂದೂ ಕೇಂದ್ರ ಸರ್ಕಾರ ಪ್ರಕಟಿಸಿತ್ತು. ಬ್ಯಾಂಕ್ಗಳಲ್ಲಿ ದಿನಕ್ಕೆ ಗರಿಷ್ಠ ರೂ. 4,000ದವರೆಗೆ ಮಾತ್ರ ಹಳೆಯ ನೋಟುಗಳ ವಿನಿಮಯಕ್ಕೆ ಸದ್ಯ ಅವಕಾಶ ನೀಡಲಾಯಿತು.  ಮುಂದಿನ ದಿನಗಳಲ್ಲಿ ವಿನಿಮಯ ಮೊತ್ತ ಹೆಚ್ಚಿಸಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿತು.
2016: ಬೆಂಗಳೂರು/ರಾಮನಗರ: ದುರಂತ ಸಂಭವಿಸಿ ಸುಮಾರು 48 ಗಂಟೆಗಳ ಬಳಿಕ ನಟ ಉದಯ್ಅವರ ಶವವು ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಪತ್ತೆಯಾಯಿತು. ಅಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಸಿ, ಸಂಬಂಧಿಕರ ವಶಕ್ಕೆ ಒಪ್ಪಿಸಲಾಯಿತು. ‘ಮಾಸ್ತಿ ಗುಡಿಚಿತ್ರದ ಕ್ಲೈಮ್ಯಾಕ್ಸ್ದೃಶ್ಯದ ಚಿತ್ರೀಕರಣದ ವೇಳೆ ಹಿಂದಿನ ದಿನ ಮಧ್ಯಾಹ್ನ 2.45 ಸುಮಾರಿಗೆ ನಟರಾದ ಅನಿಲ್ ಹಾಗೂ ಉದಯ್ಅವರು ಹೆಲಿಕಾಪ್ಟರ್ನಿಂದ ಜಿಗಿದು ನೀರು ಪಾಲಾಗಿದ್ದರು. ಈದಿನ ಮಧ್ಯಾಹ್ನ 3.30 ಸುಮಾರಿಗೆ ಉದಯ್ಅವರ ಶವವು ಪತ್ತೆಯಾಯಿತು. ದೇಹದ ಒಳಗೆ ನೀರು ತುಂಬಿಕೊಂಡ ಕಾರಣ ಇಡೀ ದೇಹ ಉಬ್ಬಿಕೊಂಡಿತ್ತು. ಅಲ್ಲಲ್ಲಿ ಚರ್ಮ ಕಿತ್ತುಬಂದಿತ್ತು. ಹೀಗಾಗಿ ಗುರುತು ಹಿಡಿಯುವುದೇ ಕಷ್ಟವಾಯಿತು. ಕಡೆಗೆ ವ್ಯಕ್ತಿಯ ಕೂದಲು, ಚಹರೆ ಆಧಾರದ ಮೇಲೆ ಅವರ ಕುಟುಂಬದವರು ಇದು ಉದಯ್ ಅವರದ್ದೇ ಶವ ಎಂದು ಗುರುತಿಸಿದರು. ಸಂದರ್ಭ ಅವರ ಕುಟುಂಬ ಸದಸ್ಯರ ರೋಧನ ಮುಗಿಲು ಮುಟ್ಟಿತು.
2016: ವಾಷಿಂಗ್ಟನ್: ಭಾರತೀಯ ಮೂಲದ ಅಮೆರಿಕನ್ ಪ್ರಜೆ ಕಮಲಾ ಹ್ಯಾರಿಸ್ ಅವರು ಅಮೆರಿಕ
ಸಂಸತ್ತಿಗೆೆ ಆಯ್ಕೆಯಾಗುವ ಮೂಲಕ ಮಂಗಳವಾರ ಇತಿಹಾಸ ನಿರ್ಮಿಸಿದರು. ಅಮೆರಿಕ ಸೆನೆಟಿಗೆ  ಆಯ್ಕೆಯಾದ ಮೊದಲ ಭಾರತೀಯ ಮೂಲದ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಕಮಲಾ ಪಾತ್ರರಾದರು. ಇಲಿನೋಯಿಸಿನಲ್ಲಿ ಜಯಗಳಿಸುವ ಮೂಲಕ ಅಮೆರಿಕದ ಕಾಂಗ್ರೆಸ್ಸಿಗೆ  ಆಯ್ಕೆಯಾದ ಮೊತ್ತ ಮೊದಲ ಭಾರತೀಯ ಮೂಲದ ಅಮೆರಿಕನ್ ಎಂಬ ಹೆಗ್ಗಳಿಕೆಗೆ ರಾಜಾ ಕೃಷ್ಣಮೂರ್ತಿ ಪಾತ್ರರಾಗಿದರು. ಹ್ಯಾರಿಸ್ ಅವರು ಪ್ರಸ್ತುತ ಕ್ಯಾಲಿಫೋರ್ನಿಯಾದ ಅಟಾರ್ನಿ ಜನರಲ್ ಆಗಿದ್ದು ಅವರ ತಾಯಿ ಭಾರತದವರಾಗಿದ್ದು, ತಂದೆ ಜಮೈಕಾದವರು. ಹೀಗಾಗಿ ಅವರನ್ನು ಭಾರತೀಯ ಮೂಲದ ಅಮೆರಿಕನ್ ಮತ್ತು ಆಫ್ರಿಕಾ ಮೂಲದ ಅಮೆರಿಕನ್ ಎಂಬುದಾಗಿ ಗುರುತಿಸಲಾಗುತ್ತದೆ.  ಕಮಲಾ ಮತ್ತು ಕೃಷ್ಣಮೂರ್ತಿ ಇಬ್ಬರೂ ಡೆಮಾಕ್ರಟಿಕ್ ಪಕ್ಷದ ಸದಸ್ಯರು. 51 ಹರೆಯದ ಕಮಲಾ ಅವರು ಲೊರೆಟ್ಟಾ ಸಾಂಕೆಜ್ಅವರನ್ನು ಪರಾಭವಗೊಳಿಸಿದರು. ಕಮಲಾ ಅವರು ಕ್ಯಾಲಿಫೋರ್ನಿಯಾದ ಓಕ್ಲೆಂಡ್ನಲ್ಲಿ ಜನಿಸಿದವರು. ಚೆನ್ನೈ ಮೂಲದವರಾದ ಅವರ ತಾಯಿ ಡಾ. ಶ್ಯಾಮಲಾ ಗೋಪಾಲನ್  1960ರಲ್ಲಿ ಅಮೆರಿಕಕ್ಕೆ ವಲಸೆ ಹೋಗಿದ್ದರು.  40 ಹರೆಯದ ರಾಜಾ ಕೃಷ್ಣಮೂರ್ತಿ ಇಲಿನಾಯ್ ನಿಂದ ಸೆನೆಟ್ಗೆ ಸ್ಪರ್ಧಿಸಿದ್ದರುನವದೆಹಲಿ ಮೂಲದವರಾದ ಕೃಷ್ಣಮೂರ್ತಿ ವರ್ಷ ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿದ್ದರು.ಭಾರತದಲ್ಲಿ ಜನಿಸಿದ್ದರೂ ರಾಜಾ ಅವರು ಬೆಳೆದದ್ದು, ಓದಿದ್ದು ಅಮೆರಿಕದಲ್ಲೇ. ವಕೀಲ, ಉದ್ಯಮಿ, ಇಂಜಿನಿಯರ್ ಆಗಿಯೂ ಕೃಷ್ಣಮೂರ್ತಿ ಕೆಲಸ ನಿರ್ವಹಿಸಿದ್ದರು. 
2016: ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಜಯಭೇರಿ ಭಾರಿಸಿದರು. ಇದರೊಂದಿಗೆ ಟ್ರಂಪ್ ಅವರು ಅಮೆರಿಕದ 45ನೇ ಅಧ್ಯಕ್ಷರಾಗಿ ಆಯ್ಕೆಯಾದರು. ವಿಸ್ಕೋನ್ಸಿನ್ ವಿಜಯದೊಂದಿಗೆ ಟ್ರಂಪ್ ವಿಜಯ ಖಚಿತಗೊಂಡಿದೆ ಎಂದು ಎಪಿ ವರದಿ ಮಾಡಿತು.
ವಿಸ್ಕೋನ್ಸಿನ್ ವಿಜಯದೊಂದಿಗೆ ಟ್ರಂಪ್ ನಿರ್ಣಾಯಕ ಮುನ್ನಡೆ ಸಾಧಿಸಿದರು. ಒಟ್ಟು ಮತಗಳ ಸಂಖ್ಯೆ 540ರಲ್ಲಿ 270 ಮತಗಳು ವಿಜಯದ ನಿರ್ಣಯಕ್ಕೆ ಬೇಕಾದ ಮ್ಯಾಜಿಕ್ ಸಂಖ್ಯೆಯಾಗಿದೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಗೆಲ್ಲುತ್ತಾರೆ ಎಂದು ಭಾರತದ ಮೀನು ಮತ್ತು ಚೀನಾದ ಮಂಗ ಭವಿಷ್ಯ ನುಡಿದಿದ್ದು, ಭವಿಷ್ಯ ಸತ್ಯವಾಯಿತು. ಚೆನ್ನೈಯ ಚಾಣಕ್ಯ-3 ಎಂಬ ಮೀನು ಟ್ರಂಪ್ ಅವರ ಚಿತ್ರವಿರುವ ಬೋಟ್ನಲ್ಲಿಟ್ಟಿದ್ದ ಆಹಾರವನ್ನು ಆಯ್ಕೆ ಮಾಡಿ, ಟ್ರಂಪ್ ಅವರೇ ಅಧ್ಯಕ್ಷರಾಗುತ್ತಾರೆಂದು ಭವಿಷ್ಯ ನುಡಿದಿತ್ತು. ಹಿಂದೆ ಯುಇಎಫ್ ಯುರೋ ಚಾಂಪಿಯನ್ಶಿಪ್ ಮತ್ತು ಫೀಫಾ ವಿಶ್ವಕಪ್ ನಲ್ಲಿ ಯಾವ ತಂಡ ಗೆಲ್ಲುತ್ತದೆ ಎಂದು ನುಡಿದ ಭವಿಷ್ಯ ನಿಜವಾಗಿತ್ತು. ಅದೇ ವೇಳೆ ಚೀನಾದ ಕೋತಿ, ಹಿಲರಿ ಮತ್ತು ಟ್ರಂಪ್  ಕಟೌಟ್ಗಳ ಪೈಕಿ ಟ್ರಂಪ್ ಅವರ ಕಟೌಟ್ ಆಯ್ಕೆ ಮಾಡಿ ಭವಿಷ್ಯ ನುಡಿದಿತ್ತು. 
2016: ಜಮ್ಮು: ರಾಜೌರಿ ಜಿಲ್ಲೆಯ ನೌಶೇರಾ ವಿಭಾಗದ ನೈಜ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನ ನಡೆಸಿದ ಷೆಲ್ ದಾಳಿಯಲ್ಲಿ ಗಾಯಗೊಂಡಿದ್ದ ಸೇನಾ ಯೋಧರೊಬ್ಬರು ಗಾಯಗಳ ಪರಿಣಾಮವಾಗಿ ಈದಿನ ಅಸು ನೀಗಿದರು. ಹಿಂದಿನ ರಾತ್ರಿ ಸಂಭವಿಸಿದ ಗುಂಡಿನ ಘರ್ಷಣೆಯಲ್ಲಿ ಇತರ ನಾಲ್ವರು ಗಾಯಗೊಂಡರು. ಪಾಕಿಸ್ತಾನಿ ಪಡೆಗಳು ಕದನ ವಿರಾಮ ಉಲ್ಲಂಘಿಸಿ ನಡೆಸಿದ ಷೆಲ್ ದಾಳಿಯ ಪರಿಣಾಮವಾಗಿ ಸೇನಾ ಯೋಧರೊಬ್ಬರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಕಳೆದ ರಾತ್ರಿ ತಡವಾಗಿ ಅಸು ನೀಗಿದ್ದಾರೆ. ಷೆಲ್ ದಾಳಿಯಿಂದ ಇತರ ನಾಲ್ವರು ಯೋಧರೂ ಗಾಯಗೊಂಡಿದ್ದಾರೆ ಎಂದು ಎಂದು ಸೇನಾ ವಕ್ತಾರರೊಬ್ಬರು ತಿಳಿಸಿದರು. ಪಾಕಿಸ್ತಾನಿ ಪಡೆಗಳು ಸೇನಾ ನೆಲೆಗಳ ಜೊತೆಗೆ ನಾಗರಿಕ ಪ್ರದೇಶಗಳನ್ನೂ ಗುರಿ ಇಟ್ಟು ದಾಳಿ ನಡೆಸಿದ್ದವು. ಇದಕ್ಕೆ ತಕ್ಕ ಉತ್ತರ ನೀಡಿದ ಭಾರತೀಯ ಪಡೆಗಳು ಪಾಕ್ ಸೇನೆಯ ಮೂರು ನೆಲೆಗಳ ಮೇಲೆ ದಾಳಿ ನಡೆಸಿ ಸಾಕಷ್ಟು ಹಾನಿ ಉಂಟು ಮಾಡಿದೆ ಎಂದು ವಕ್ತಾರರು ಹೇಳಿದರು.

2016:  ನವದೆಹಲಿ: ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್ (ಪಿಬಿಎಲ್) ಇಲ್ಲಿ ನಡೆಸಿದ ಪಿಬಿಎಲ್ ಹರಾಜಿನಲ್ಲಿ ರಿಯೋ ಒಲಿಂಪಿಕ್ ಚಾಂಪಿಯನ್ ಸ್ಪೇನಿನ ಕರೋಲಿನಾ ಮರಿನ್ ಅವರನ್ನು ಹೈದರಾಬಾದ್ ಹಂಟರ್ಸ್ 61.5 ಲಕ್ಷ ರೂಪಾಯಿಗಳಿಗೆ ಖರೀದಿಸುವುದರೊಂದಿಗೆ, ಮರಿನ್ ಅವರು ಅತ್ಯಂತ ತುಟ್ಟಿಯ ಬ್ಯಾಡ್ಮಿಂಟನ್ ತಾರೆ ಎನಿಸಿದರು. ದಕ್ಷಿಣ ಕೊಪರಿಯಾದ ಮಹಿಳಾ ಶಟ್ಲರ್ ಸಂಗ್ ಜಿ ಹ್ಯೂನ್ ಹರಾಜಿನಲ್ಲಿ ಎರಡನೇ ತುಟ್ಟಿಯ ತಾರೆಯಾಗಿ ಮೂಡಿ ಬಂದಿದ್ದು, ಅವರನ್ನು ಮುಂಬೈ ರಾಕೆಟ್ಸ್ 60 ಲಕ್ಷ ರೂಪಾಯಿಗಳಿಗೆ ಖರೀದಿಸಿತು. ಡೆನ್ಮಾರ್ಕ್ ಶಟ್ಲರ್ ಜಾನ್ಸೆನ್ ಅವರು ಹರಾಜಿನಲ್ಲಿ ಮೂರನೇ ತುಟ್ಟಿ ಕ್ರೀಡಾಪಟುವಾಗಿ ಮೂಡಿ ಬಂದಿದ್ದು ಅವರನ್ನು ಡೆಲ್ಲಿ ಏಸರ್ಸ್ 59 ಲಕ್ಷ ರೂಪಾಯಿಗಳಿಗೆ ಖರೀದಿಸಿತು. ಭಾರತದ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಅವರು ಹರಾಜಿನಲ್ಲಿ ನಿರೀಕ್ಷೆಗಿಂತ ಕೆಳಗಿನ ಮೊತ್ತಕ್ಕೆ ಹರಾಜಾದರು. ಸಿಂಧು ಅವರನ್ನು ಚೆನ್ನೈ ಸ್ಮಾಶರ್ಸ್ 39 ಲಕ್ಷ ರೂಪಾಯಿಗಳಿಗೆ ಖರೀದಿಸಿತು. ಅವರ ಜೊತೆಗಾತಿ ಸೈನಾ ನೆಹ್ವಾಲ್ ಅವರನ್ನು ಅವಧೆ ವಾರಿಯರ್ಸ್ 33 ಲಕ್ಷ ರೂಪಾಯಿಗಳಿಗೆ ಖರೀದಿಸಿತು. ಡೆನ್ಮಾರ್ಕ್ನ ವಿಕ್ಟೊರ್ ಆಕ್ಷೆಲ್ಸೆನ್ ಅವರನ್ನು ಬೆಂಗಳೂರು ಬ್ಲಾಸ್ಟರ್ಸ್ 39 ಲಕ್ಷ ರೂಪಾಯಿಗಳಿಗೆ ಖರೀದಿಸಲ್ಪಟ್ಟರು. ಹಾಗೆಯೇ ವಾನ್ ಹೊ ಸೊನ್ ದೆಹಲಿಗೆ ಬಿಕರಿಯಾದರು. ಪುರುಷರ ಸಿಂಗಲ್ಸ್ ಬ್ಯಾಡ್ಮಿಂಟನ್ನಿನ ಪ್ರಮುಖ ಮೂವರು ಆಟಗಾರರಾದ ಚೀನಾದ ಚೆನ್ ಲೊಂಗ್ ಮತ್ತು ಲಿನ್ ಡನ್ ಹಾಗೂ ಮಲೇಶ್ಯಾದ ಸೂಪರ್ಸ್ಟಾರ್ ಲೀ ಚೊಂಗ್ ವೀ ಪಿಬಿಎಲ್ನಲ್ಲಿ ಆಡದೇ ಇರಲು ನಿರ್ಧರಿಸಿದರು.


2016: ಜಮ್ಮು: ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯ ವಾಟರ್ಗ್ರಾಮ್ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಣ ಗುಂಡಿನ ಘರ್ಷಣೆ ಕೊನೆಗೊಂಡಿದ್ದು, ಇಬ್ಬರು ಲಷ್ಕರ್ ತೊಯಿಬಾ (ಎಲ್ಇಟಿ) ಭಯೋತ್ಪಾದಕರನ್ನು ಕೊಲ್ಲಲಾಯಿತು ಎಂದು ಸುದ್ದಿ ಮೂಲಗಳು ತಿಳಿಸಿದವು. ಈ ಮಧ್ಯೆ ಕುಪ್ವಾರ ಜಿಲ್ಲೆಯ ಮಚ್ಛಲ್ ವಿಭಾಗದಲ್ಲಿ ಪಾಕಿಸ್ತಾನ ಸೈನಿಕರು ಗಡಿಯಾಚೆಯಿಂದ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಭಾರತದ ಒಬ್ಬ ಸೈನಿಕ ಹುತಾತ್ಮನಾಗಿರುವುದಾಗಿ ಸೇನಾ ಮೂಲಗಳು ತಿಳಿಸಿದವು.

2008: 800 ಸೇತುವೆಗಳು ಹಾಗೂ 102 ಸುರಂಗಗಳನ್ನು ಹೊಂದಿರುವ 105 ವರ್ಷಗಳ ಹಳೆಯದಾದ ಕಲ್ಕಾ-ಶಿಮ್ಲಾ ರೈಲ್ವೆ ಹಳಿಯನ್ನು ವಿಶ್ವ ಪಾರಂಪರಿಕ ತಾಣ ಎಂದು ಯುನೆಸ್ಕೊ ಘೋಷಿಸಿದ ಹಿನ್ನೆಲೆಯಲ್ಲಿ, ವಿಶ್ವ ಪಾರಂಪರಿಕ ತಾಣ ಎಂದು ಬರೆದ ಅಲಂಕಾರಿಕ ಫಲಕವನ್ನು ಚಂಡೀಗಢದಿಂದ ಸುಮಾರು 25 ಕಿ.ಮೀ. ದೂರದಲ್ಲಿ ಕಲ್ಕಾ ರೈಲ್ವೆ ನಿಲ್ದಾಣದಲ್ಲಿ ರೈಲ್ವೆ ಖಾತೆ ರಾಜ್ಯ ಸಚಿವ ಆರ್.ವೇಲು ಅನಾವರಣಗೊಳಿಸಿದರು. ಭಾರತದ ಬೇಸಿಗೆ ರಾಜಧಾನಿ ಎಂದು ಗುರುತಿಸಿಕೊಳ್ಳುವ ಶಿಮ್ಲಾಕ್ಕೆ ದೇಶದ ಇತರ ಭಾಗಗಳಿಂದ ಸಂಪರ್ಕ ಕಲ್ಪಿಸಲು 1898ರಲ್ಲಿ ಬ್ರಿಟಿಷರು ಕಲ್ಕಾ-ಶಿಮ್ಲಾ ರೈಲ್ವೆ ಮಾರ್ಗ ನಿರ್ಮಾಣ ಪ್ರಾರಂಭಿಸಿದ್ದರು. 2 ಅಡಿ 6 ಇಂಚು ಅಗಲವಿರುವ 96 ಕಿ.ಮೀ. ದೂರದ ನ್ಯಾರೋ ಗೇಜ್ ರೈಲ್ವೆ ಹಳಿಯನ್ನು 1903ರ ನವೆಂಬರ್ 9ರಂದು ಸಂಚಾರಕ್ಕೆ ಮುಕ್ತಗೊಳಿಸಲಾಗಿತ್ತು. ರೈಲಿನ ಹಳೆಯ ಚಕ್ರಗಳು, ವಿಶ್ವದಲ್ಲಿ ಎಲ್ಲೂ ಕಾಣದ ವಿವಿಧ ತಾಂತ್ರಿಕ ವಸ್ತುಗಳು, ಅಪರೂಪದ ಗಡಿಯಾರ ಮತ್ತು ಉಗಿ ಎಂಜಿನ್ನುಗಳನ್ನು ಶಿಮ್ಲಾದ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿದೆ. ಈ ಕಂಪ್ಯೂಟರ್ ಯುಗದಲ್ಲೂ ಸಹ ಮಾರ್ಗದ ತೆರವಿಗಾಗಿ ಎಲ್ಲಾ ನಿಲ್ದಾಣಗಳಲ್ಲಿ ಟೋಕನ್ ಬದಲಾಯಿಸುವ ನಿಯಾಲ್ಸ್ ಟೋಕನ್ ಪದ್ಧತಿ ಇಲ್ಲಿ ಜಾರಿಯಲ್ಲಿದೆ ಎಂದು ಕಲ್ಕಾ ರೈಲ್ವೆ ನಿಲ್ದಾಣದ ಅಧಿಕಾರಿ ಅಜಯ್ ಕೋಚರ್ ಹೇಳಿದರು. ಈ ರೈಲ್ವೆ ಹಳಿ ಸಮುದ್ರ ಮಟ್ಟದಿಂದ 656 ಮೀಟರ್ ಎತ್ತರದಲ್ಲಿರುವ ಕಲ್ಕಾದಿಂದ ಆರಂಭಗೊಂಡು ಸಮುದ್ರ ಮಟ್ಟದಿಂದ 2,076 ಮೀಟರ್ ಎತ್ತರದಲ್ಲಿರುವ ಶಿಮ್ಲಾದಲ್ಲಿ ಕೊನೆಗೊಳ್ಳುವುದು. ಈ ರೈಲ್ವೆ ಹಾದಿಯಲ್ಲಿ ಬೆಟ್ಟದ ರಮಣೀಯ ದೃಶ್ಯಗಳು ಪ್ರವಾಸಿಗರಿಗೆ ಮುದ ನೀಡುತ್ತವೆ.

2008: ಹೈಟಿಯ ರಾಜಧಾನಿ ಪೆಟಿಯಾನ್ ವಿಲ್ಲಿಯಲ್ಲಿ 8-11-2008ರಂದು ಸಂಭವಿಸಿದ ಶಾಲಾ ಕಟ್ಟದ ಕುಸಿತದಲ್ಲಿ ಮೃತರಾದವರ ಸಂಖ್ಯೆ 84 ಕ್ಕೆ ಏರಿತು. ಹಿಂದಿನ ದಿನ ದುರಂತದಲ್ಲಿ 58 ಶಾಲಾ ಮಕ್ಕಳು ಹಾಗೂ ಅಧ್ಯಾಪಕರು ಮೃತರಾಗಿದ್ದಾರೆ ಎಂದು ನಂಬಲಾಗಿತ್ತು.

2008: ಮಲೇಷ್ಯಾ ರಾಷ್ಟ್ಟ್ರಿಯ ಫತ್ವಾ ಮಂಡಳಿ ಯೋಗಾಭ್ಯಾಸಕ್ಕೆ ನಿಷೇಧ ಹೇರಿ ಧಾರ್ಮಿಕ ಆದೇಶ ಹೊರಡಿಸುವುದನ್ನು ಮುಂದೂಡಿತು. ಮಂಡಳಿಯ ಅಧ್ಯಕ್ಷ ಪ್ರಸ್ತುತ ವಿದೇಶ ಪ್ರವಾಸದಲ್ಲಿ ಇರುವುದರಿಂದ ಈ ನಿರ್ಧಾರವನ್ನು ಕೈಗೊಳ್ಳಲಾಯಿತು ಎಂದು ಇಸ್ಲಾಂ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಶೇಖ್ ಅಬ್ದುಲ್ ಅಜೀಜ್ ಹೇಳಿಕೆ ನೀಡಿದರು.

2008: ಸಾಧಾರಣ ಮುಖಚಹರೆಯುಳ್ಳವರು ಅತ್ಯಂತ ಸುಂದರವಾಗಿ ಕಾಣಿಸಿಕೊಳ್ಳುವಂತೆ ಮಾಡುವ ಸಾಫ್ಟ್ವೇರ್ ಒಂದನ್ನು ಸಿದ್ಧಪಡಿಸಿರುವುದಾಗಿ ಟೆಲ್ ಅವೀವ್ ವಿವಿಯ ವಿಜ್ಞಾನಿಗಳು ಪ್ರಕಟಿಸಿದರು. ಸದ್ಯಕ್ಕೆ ಈ ಸಾಫ್ಟ್ ವೇರನ್ನು ಡಿಜಿಟಲ್ ಬಿಂಬಗಳಲ್ಲಿ ಮಾತ್ರ ಬಳಸಲಾಗಿದೆ. ಇನ್ನಷ್ಟು ಅಭಿವೃದ್ಧಿಪಡಿಸಿದಲ್ಲಿ ಸುರೂಪಿ ಚಿಕಿತ್ಸೆ ನೀಡುವ ಪ್ಲಾಸ್ಟಿಕ್ ಸರ್ಜನ್ಗಳು ಇದನ್ನು ಬಳಸಿಕೊಳ್ಳಬಹುದು. ಭವಿಷ್ಯದಲ್ಲಿ ಎಲ್ಲಾ ಡಿಜಿಟಲ್ ಕ್ಯಾಮೆರಾಗಳಲ್ಲೂ ಈ ಸಾಫ್ ್ಟವೇರ್ ಅಳವಡಿಸುವ ಸಾಧ್ಯತೆಯಿದೆ ಎಂದು ತಜ್ಞರು ಹೇಳಿದರು.

2008: ಜಲಜನಕವನ್ನು ಇಂಧನವಾಗಿ ಬಳಸಿಕೊಂಡು ಅತಿ ವೇಗ ವಾಗಿ ಚಲಿಸನಬಲ್ಲ ಕಾರನ್ನು ಸಿದ್ಧ ಪಡಿಸಿರುವುದಾಗಿ ಆಸ್ಟ್ರೇಲಿಯಾದ ಸಂಶೋಧಕರು ಸಿಡ್ನಿಯಲ್ಲಿ ಪ್ರಕಟಿಸಿದರು. ಮುಂದಿನ ವರ್ಷದ ಜನವರಿಯಲ್ಲಿ ಜರ್ಮನಿಯಲ್ಲಿ ನಡೆಯುವ ಸ್ಪರ್ಧೆಯಲ್ಲಿ ಈ ಕಾರು ಪಾಲ್ಗೊಳ್ಳಲ್ದಿದು, ಜಗತ್ತಿನಲ್ಲೇ ಅತಿ ವೇಗವಾಗಿ ಓಡುವ ಜಲಜನಕ ಕಾರು ಎಂದು ಗಿನ್ನೆಸ್ ದಾಖಲೆ ಪುಸ್ತಕದ್ಲಲಿ ನಮೂದಾಗುವ ಸಾಧ್ಯತೆಯಿದೆ. ಗಂಟೆಗೆ 170 ಕಿ.ಮೀ. ವೇಗದಲ್ಲಿ ಚಲಿಸಬಲ್ಲ ಈ ಕಾರನ್ನು ರಾಯಲ್ ಮೆಬೋರ್ನ್ ತಾಂತ್ರಿಕ ಸಂಸ್ಥೆಯ ವಿಜ್ಞಾನಿಗಳು ತಯಾರಿಸಿದರು. ಭವಿಷ್ಯದ ವಾಹನಗಳಲ್ಲಿ ಜಲಜನಕವನ್ನು ಇಂಧನವಾಗಿ ಬಳಸುವ ಸಾಧ್ಯತೆಯ ಮೇಲೆ ಈ ಕಾರು ಬೆಳಕು ಚೆಲ್ಲುವುದು.

2008: ಗರ್ಭ ಧರಿಸಿದ್ದ ಹಸುವೊಂದನ್ನು ಕೊಂದದ್ದಕ್ಕಾಗಿ ದೆಹಲಿಯ ಬೇಕರಿ ಮಾಲೀಕನೊಬ್ಬನಿಗೆ ನ್ಯಾಯಾಲಯ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಿತು. ತನ್ನ ಬೇಕರಿಗೆ ಹಸುವೊಂದು ನುಗ್ಗಿ ತಿಂಡಿ, ತಿನಿಸುಗಳಿಗೆ ಬಾಯಿಹಾಕಿದಾಗ ಕುಪಿತಗೊಂಡ ನಸೀಮ್ ಖಾನ್ (25) ಚಾಕು ತೆಗೆದುಕೊಂಡು ಮೂರು ಬಾರಿ ಇರಿದ. ಹಸು ಸ್ಥಳದ್ಲಲೇ ಸಾವನ್ನಪ್ಪಿತು. ಹಸುವಿನ ಮಾಲೀಕ ವೀರ್ ಸಿಂಗ್ ಈ ಬಗ್ಗೆ ದೂರು ಸಲ್ಲಿಸಿದ. ಈ ದೂರಿನ ವಿಚಾರಣೆಯ ಸಂದರ್ಭದಲ್ಲಿ ಖಾನನ ವಕೀಲರು ವೀರ್ ಸಿಂಗನನ್ನು ಪಾಟೀ ಸವಾಲಿಗೆ ಒಳಪಡಿಸಿರಲಿಲ್ಲ. ಘಟನೆ ಕುರಿತು ತೀರ್ಪು ನೀಡಿದ ದೆಹಲಿ ಮೆಟ್ರೊಪಾಲಿಟನ್ ನ್ಯಾಯಾಧೀಶರು, ಖಾನ್ ಮೇಲಿನ ಆರೋಪ ಸಾಬೀತುಪಡಿಸುವಲ್ಲಿ ಪ್ರಾಸೆಕ್ಯೂಷನ್ ಯಶಸ್ವಿಯಾಗಿದೆ. ಆರೋಪಿ ಪರ ವಕೀಲರು ಸಾಕ್ಷ್ಯವನ್ನು ಪಾಟೀ ಸವಾಲಿಗೆ ಒಳಪಡಿಸದ ಕಾರಣ ಆತನ ಹೇಳಿಕೆ ಒಪ್ಪಿಕೊಳ್ಳಲೇಬೇಕಾಗಿದೆ ಎಂದು ತಿಳಿಸಿದರು. ವಯಸ್ಸಾದ ತಂದೆ-ತಾಯಿ ಹಾಗೂ ಚಿಕ್ಕ ಮಗುವನ್ನು ನೋಡಿಕೊಳ್ಳಬೇಕಿರುವುದರಿಂದ ಶಿಕ್ಷೆಯಿಂದ ವಿನಾಯತಿ ನೀಡುವಂತೆ ನಸೀಮ್ ಖಾನ್ ಮಾಡಿಕೊಂಡ ಮನವಿಯನ್ನು ನ್ಯಾಯಾಲಯ ತಳ್ಳಿಹಾಕಿತು.

2008: ಭಾರತಕ್ಕೆ ಮುಂದಿನ ವರ್ಷ ಗುತ್ತಿಗೆ ಆಧಾರದ ಮೇಲೆ ನೀಡಲು ಉದ್ದೇಶಿಸಲಾದ ಹೊಚ್ಚ ಹೊಸ ಅಣುಶಕ್ತಿ ಚಾಲಿತ ಜಲಾಂತರ್ಗಾಮಿ ನೌಕೆಯನ್ನು ಪರೀಕ್ಷೆಗೆ ಒಳಪಡಿಸಿದಾಗ ಅನಿಲ ಸೋರಿ 20 ಜನರು ಮೃತರಾಗಿ 21 ಜನ ಗಾಯಗೊಂಡರು. ರಷ್ಯಾದಲ್ಲಿ ದಶಕದ ನಂತರ ಸಂಭವಿಸಿದ ನೌಕಾ ದುರಂತವಿದು. ಸತ್ತವರಲ್ಲಿ ಮೂವರು ನಾವಿಕರು.

2008: ಡಾ. ರಾಜಕುಮಾರ್ ಅವರ ಹುಟ್ಟೂರಾದ ದೊಡ್ಡಗಾಜನೂರಿನ ಗ್ರಾಮಸ್ಥರು ಗ್ರಾಮದ ಕೂಡು ರಸ್ತೆ (ಪೆಟ್ರೋಲ್ ಬಂಕ್ ಬಳಿ) ವೃತ್ತಕ್ಕೆ `ಪದ್ಮಭೂಷಣ ಡಾ. ರಾಜಕುಮಾರ್' ಎಂದು ನಾಮಕರಣ ಮಾಡಿ ಪ್ರತಿಮೆ ಸ್ಥಾಪಿಸುವ ಮೂಲಕ ವರನಟನಿಗೆ ತಮ್ಮ ಗೌರವ ಸಲ್ಲಿಸಿದರು. ಈ ಸಂಬಂಧಿ ಫಲಕವನ್ನು ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ್ ಅನಾವರಣ ಮಾಡಿದರು.

2008: ಗ್ರಾಮೀಣ ಜನರಿಗೆ ನೆರವಾಗುವ ಸಣ್ಣ ಕಂತಿನ ಜನತಾ ಬಿಮಾ ಯೋಜನೆಗೆ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ತಮಿಳುನಾಡಿನ ಕುರೈಕುಡಿಯಲ್ಲಿ ಚಾಲನೆ ನೀಡಿದರು. ಖಾಸಗಿ ಕಂಪೆನಿಯೊಂದು ಈ ಯೋಜನೆಯನ್ನು ರೂಪಿಸಿತು. ಇದು ರೂ 100 ರ ಪ್ರೀಮಿಯಂ ಮೊತ್ತವನ್ನು ಹೊಂದಿದೆ. ಗ್ರಾಮೀಣರನ್ನೇ ಉದ್ದೇಶವಾಗಿಟ್ಟುಕೊಳ್ಳಲಾದ ಈ ಯೋಜನೆಯ ವಾಪ್ತಿಗೆ 18-60ರ ವರೆಗಿನ ವಯಸ್ಸಿನವರು ಬರುತ್ತಾರೆ.

2007: ದೇಶದಲ್ಲೇ ಪ್ರಥಮ ಎನ್ನಲಾದ ಅನಗತ್ಯ ಅವಯವಗಳ ನಿವಾರಣೆಗಾಗಿ ನಡೆಸಲಾದ 27 ಗಂಟೆಗಳ ಶಸ್ತ್ರಚಿಕಿತ್ಸೆಗೆ ಬೆಂಗಳೂರಿನ ಸ್ಪರ್ಶ ಆಸ್ಪತ್ರೆಯಲ್ಲಿ ಒಳಗಾಗಿದ್ದ ಬಿಹಾರ ಲಕ್ಷ್ಮಿ ಎರಡು ದಿನಗಳ ಬಳಿಕ ಈದಿನ ಚೇತರಿಸಿಕೊಂಡು ಅಪ್ಪ, ಅಮ್ಮ, ಅಣ್ಣನನ್ನು ಗುರುತಿಸಿದಳು. ಅಮ್ಮನನ್ನು ಕಂಡೊಡನೆಯೇ ಕಿರುನಗೆ ಸೂಚಿಸಿದಳು. ಆಕೆ ಚೇತರಿಸಿಕೊಂಡ ವಿಚಾರವನ್ನು ಆಸ್ಪತ್ರೆಯ ಮುಖ್ಯಸ್ಥ ಡಾ. ಶರಣ್ ಪಾಟೀಲ್ ಬಹಿರಂಗಗೊಳಿಸಿದರು.

2007: ರಾಜ್ಯಪಾಲ ರಾಮೇಶ್ವರ ಠಾಕೂರ್ ಅವರು ಸರ್ಕಾರ ರಚನೆಗೆ ಬಿಜೆಪಿ ಮುಖಂಡ ಬಿ.ಎಸ್. ಯಡಿಯೂರಪ್ಪ ಅವರಿಗೆ ಅಧಿಕೃತ ಆಹ್ವಾನ ನೀಡಿದರು. ಮಾಜಿ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಜೊತೆಗೆ ಈದಿನ ಸಂಜೆ ರಾಜಭವನಕ್ಕೆ ತೆರಳಿ 45 ನಿಮಿಷಗಳ ಕಾಲ ಮಾತುಕತೆ ನಡೆಸಿದ ಸಂದರ್ಭದಲ್ಲಿ ರಾಜ್ಯಪಾಲರು ಈ ಆಹ್ವಾನ ನೀಡಿದರು. ಇದರೊಂದಿಗೆ ಬಿಜೆಪಿಯು ದಕ್ಷಿಣ ಭಾರತದಲ್ಲಿ ಮೊತ್ತ ಮೊದಲ ಬಿಜೆಪಿ ನೇತೃತ್ವದ ಸರ್ಕಾರ ರಚನೆಗೆ ಸಜ್ಜಾಯಿತು. ಕುಮಾರಸ್ವಾಮಿಯವರು ತಮ್ಮ 20 ತಿಂಗಳ ಅಧಿಕಾರಾವಧಿ ನಂತರ ಅಕ್ಟೋಬರ್ 3ರಂದು ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡಬೇಕಿತ್ತು. ಆದರೆ, `ರಾಜಕೀಯ ಕಾರಣ'ಗಳಿಂದಾಗಿ ಅಧಿಕಾರ ಹಸ್ತಾಂತರ ಮಾಡಲಿಲ್ಲ. ಇದರಿಂದ ಬೇಸತ್ತ ಬಿಜೆಪಿ ತನ್ನ ಬೆಂಬಲವನ್ನು ಅಕ್ಟೋಬರ್ 7ರಂದು ವಾಪಸ್ ಪಡೆದಿತ್ತು. ಮರುದಿನ ಕುಮಾರಸ್ವಾಮಿ ಸರ್ಕಾರ ಪತನಗೊಂಡಿತು. ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್- ಮೂರು ಪಕ್ಷಗಳೂ ವಿಧಾನಸಭೆ ವಿಸರ್ಜಿಸುವಂತೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ರಾಜ್ಯಪಾಲರ ಶಿಫಾರಸಿನ ಮೇರೆಗೆ ಅಕ್ಟೋಬರ್ 9ರಿಂದ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿತ್ತು. ನಂತರದ ಬೆಳವಣಿಗೆಗಳಲ್ಲಿ ಜೆಡಿಎಸ್ ನ ಬಹುತೇಕ ಶಾಸಕರು ಚುನಾವಣೆ ಬೇಡ ಎಂದು ಎಂ.ಪಿ.ಪ್ರಕಾಶ್ ನೇತೃತ್ವದಲ್ಲಿ ಕಾಂಗ್ರೆಸ್ ಜತೆ ಸೇರಿ ಸರ್ಕಾರ ರಚಿಸಲು ಮುಂದಾದರು. ಇದರ ಸುಳಿವರಿತ ಜೆಡಿಎಸ್ ವರಿಷ್ಠರು ಬಿಜೆಪಿ ಜತೆ ಮರು ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದರು. 15 ದಿನಕ್ಕೂ ಹೆಚ್ಚು ಕಾಲ ಜೆಡಿಎಸ್ ವಿರುದ್ಧ ಟೀಕಾಪ್ರಹಾರ ನಡೆಸಿದ್ದ ಬಿಜೆಪಿ ಮರು ಹೊಂದಾಣಿಕೆಗೆ ಒಪ್ಪಿತು. ಪುನಃ ಎರಡೂ ಪಕ್ಷಗಳ ಮುಖಂಡರು ಅಕ್ಟೋಬರ್ 27ರಂದು ರಾಜ್ಯಪಾಲರನ್ನು ಭೇಟಿ ಮಾಡಿ, ಸರ್ಕಾರ ರಚನೆಗೆ ಅವಕಾಶ ನೀಡುವಂತೆ ಮನವಿ ಮಾಡಿದರು. ಬಿಜೆಪಿ- ಜೆಡಿ ಎಸ್ ಸರ್ಕಾರ ರಚನೆಗೆ ಅವಕಾಶ ನೀಡಬಾರದು ಎಂದು ಕಾಂಗ್ರೆಸ್ ಕೇಂದ್ರದ ಮೇಲೆ ಒತ್ತಡ ಹೇರಿದರೂ, ಅಕ್ಟೋಬರ್ 8ರ ಸಂಪುಟ ಸಭೆಯಲ್ಲಿ ಕೇಂದ್ರವು ಬಿಜೆಪಿ- ಜೆಡಿ ಎಸ್ ಸರ್ಕಾರ ರಚನೆಗೆ ಹಸಿರು ನಿಶಾನೆ ತೋರಿಸಿತು. ಈ ನಿರ್ಧಾರಕ್ಕೆ ರಾಷ್ಟ್ರಪತಿ ಅಂಕಿತ ಹಾಕಿದರು. ಇದಕ್ಕೂ ಮುನ್ನ ಬಿಜೆಪಿ ಹಾಗೂ ಜೆಡಿಎಸ್ ಈ ಎರಡೂ ಪಕ್ಷಗಳ 129 ಮಂದಿ ಶಾಸಕರು ರಾಜ್ಯಪಾಲರು ಹಾಗೂ ರಾಷ್ಟ್ರಪತಿಗಳ ಮುಂದೆ ಪೆರೇಡ್ ಕೂಡಾ ನಡೆಸಿ ಬಹುಮತ ಪ್ರದರ್ಶಿಸಿದ್ದರು.

2007: ತುರ್ತು ಪರಿಸ್ಥಿತಿಯನ್ನು ವಿರೋಧಿಸಲು ಪಾಕಿಸ್ತಾನ ಪೀಪಲ್ಸ್ ಪಕ್ಷ (ಪಿಪಿಪಿ) ರಾವಲ್ಪಿಂಡಿಯಲ್ಲಿ ಆಯೋಜಿಸಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಪಕ್ಷದ ಅಧ್ಯಕ್ಷೆ ಹಾಗೂ ಮಾಜಿ ಪ್ರಧಾನಿ ಬೆನ ಜೀರ್ ಭುಟ್ಟೋ ಅವರನ್ನು ಪೊಲೀಸರು ಬಂಧಿಸಿದರು.

2007: ನೈಋತ್ಯ ಚೀನಾದ ಕಲ್ಲಿದ್ದಲು ಗಣಿಯೊಂದರಲ್ಲಿ ಸಂಭವಿಸಿದ ವಿಷಾನಿಲ ಸೋರಿಕೆಯಿಂದ 29 ಕಾರ್ಮಿಕರು ಮೃತರಾಗಿ, ಆರು ಮಂದಿ ಕಾಣೆಯಾದರು. ಈ ಗಣಿಯಲ್ಲಿ 52 ಮಂದಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು.

2006: ಕಾದಂಬರಿಗಾರ್ತಿ ಎಚ್. ಜಿ. ರಾಧಾದೇವಿ (55) ಅವರು ಹೃದಯಾಘಾತದಿಂದ ರಾಯಚೂರಿನಲ್ಲಿ ನಿಧನರಾದರು. ಮೂಲತಃ ಕೋಲಾರದವರಾದ ರಾಧಾದೇವಿ 1975ರಲ್ಲಿ ಸುದರ್ಶನ ಅವರ ಜೊತೆಗೆ ವಿವಾಹವಾದ ಬಳಿಕ ರಾಯಚೂರಿನಲ್ಲಿ ನೆಲೆಸಿ ಕಾದಂಬರಿ ರಚನೆಯಲ್ಲಿ ತೊಡಗಿದ್ದರು. ಅನುರಾಗ ಅರಳಿತು, ಸುವರ್ಣ ಸೇತುವೆ, ಭ್ರಮರ ಬಂಧನ, ಅಮರ ಚುಂಬಿತೆ, ಬಂಗಾರದ ನಕ್ಷತ್ರ, ಕನಸಿನ ಚಪ್ಪರ ಇತ್ಯಾದಿ 150ಕ್ಕೂ ಹೆಚ್ಚು ಕಾದಂಬರಿಗಳನ್ನು ಅವರು ರಚಿಸಿದ್ದಾರೆ. ಅತ್ತಿಮಬ್ಬೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಅವರಿಗೆ ಬಂದಿವೆ. `ಅನುರಾಗ ಅರಳಿತು', `ಸುವರ್ಣ ಸೇತುವೆ' ಚಲನಚಿತ್ರಗಳಾಗಿವೆ. `ಅನುರಾಗ ಅರಳಿತು' ಆಧರಿಸಿ ತೆಲುಗಿನಲ್ಲೂ `ಘರಾನ ಮೊಗಡು' ಚಲನಚಿತ್ರ ನಿರ್ಮಾಣಗೊಂಡಿತ್ತು.

2006: ಸಂಸತ್ತಿನ ಮೇಲೆ 2001 ರಲ್ಲಿ ನಡೆಸಿದ ಭಯೋತ್ಪಾದಕ ದಾಳಿಗಾಗಿ ಮರಣದಂಡನೆಗೆ ಗುರಿಯಾಗಿರುವ ಮೊಹಮ್ಮದ್ ಅಫ್ಜಲ್ ಗುರು ತಡವಾಗಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ. 102 ಪುಟಗಳ ತನ್ನ ಕ್ಷಮಾದಾನ ಕೋರಿಕೆ ಅರ್ಜಿಯನ್ನು ಆತ ತಿಹಾರ್ ಸೆರೆಮನೆ ಅಧಿಕಾರಿಗಳಿಗೆ ಸಲ್ಲಿಸಿದ.

2006: ಸಂವೇದನಾಶೀಲ, ಕೃತಕ ಹಲ್ಲುಗಳನ್ನು ಶಾಶ್ವತವಾಗಿ ಅಳವಡಿಸುವ ಅತ್ಯಾಧುನಿಕ ತಂತ್ರಜ್ಞಾನ ಬೆಂಗಳೂರಿನ ಲ್ಯಾವೆಲ್ಲೇ ರಸ್ತೆಯಲ್ಲಿನ `ಡೆಂಟಲ್ ಲ್ಯಾವೆಲ್ಲೆ' ಚಿಕಿತ್ಸಾಲಯಕ್ಕೆ ಬಂತು. ಸ್ವೀಡನ್ ಮೂಲದ ಈ ತಂತ್ರಜ್ಞಾನವನ್ನು ದಕ್ಷಿಣ ಭಾರತದಲ್ಲಿ ಇದೇ ಮೊದಲ ಬಾರಿಗೆ ಅಳವಡಿಸಲಾಗಿದೆ ಎಂದು ಚಿಕಿತ್ಸಾಲಯದ ಸ್ಥಾಪಕ, ಹಿರಿಯ ವೈದ್ಯ ಡಾ. ಜಗದೀಶ್ ಬೆಲೂರು ಪ್ರಕಟಿಸಿದರು.

2005: ನಿಷ್ಠುರ ನಡೆ ನುಡಿಯ ಮುತ್ಸದ್ಧಿ ಭಾರತದ ಮಾಜಿ ರಾಷ್ಟ್ರಪತಿ ಕೊಚೇರಿಲ್ ರಾಮನ್ ವೈದ್ಯರ್ ನಾರಾಯಣನ್ (ಕೆ.ಆರ್. ನಾರಾಯಣನ್) (85) ನವದೆಹಲಿಯಲ್ಲಿ ನಿಧನರಾದರು. ಅವರು 1997-2002ರ ಅವದಿಯಲ್ಲಿ ರಾಷ್ಟ್ರಪತಿಯಾಗಿ ಸೇವೆ ಸಲ್ಲಿಸಿದ್ದರು.

2005: ಭೂಮಿಗೆ ಸಮೀಪದಲ್ಲಿರುವ ಶುಕ್ರಗ್ರಹದ ಬಗ್ಗೆ ಸಂಶೋಧನೆ ನಡೆಸುವ ಸಲುವಾಗಿ `ವೀನಸ್ ಎಕ್ಸ್ ಪ್ರೆಸ್' ಅಂತರಿಕ್ಷ ನೌಕೆಯನ್ನು ರಷ್ಯದ ಕಜಕಸ್ಥಾನದ ಬಾಹ್ಯಾಕಾಶ ಕೇಂದ್ರದಿಂದ ಗಗನಕ್ಕೆ ಹಾರಿಬಿಡಲಾಯಿತು. ಅದು ಸೋಯುಜ್ ಎಫ್. ಜಿ. ರಾಕೆಟ್ಟಿನಿಂದ ಬೇರ್ಪಟ್ಟು ಶುಕ್ರಗ್ರಹದಿಂದ 163 ದಿನಗಳ ಪಯಣ ಆರಂಭಿಸಿತು.

1989: ಕಮ್ಯೂನಿಸ್ಟ್ ಪೂರ್ವ ಜರ್ಮನಿಯು ತನ್ನ ಗಡಿಗಳನ್ನು ತೆರೆದು ತನ್ನ ನಾಗರಿಕರಿಗೆ ಪಶ್ಚಿಮ ಜರ್ಮನಿಗೆ ಪ್ರವಾಸ ಮಾಡಲು ಮುಕ್ತ ಅವಕಾಶ ಕಲ್ಪಿಸಿತು. ಮರುದಿನ ಪೂರ್ವ ಜರ್ಮನಿಯ ಪಡೆಗಳು `ಬರ್ಲಿನ್ ಗೋಡೆ'ಯ ಭಾಗಗಳನ್ನು ಕೆಡವಿ ಹಾಕಲು ಆರಂಭಿಸಿದವು. ನವೆಂಬರ್ 22ರಂದು ಬ್ರಾಂಡೆನ್ ಬರ್ಗ್ ಗೇಟ್ ನ ಉತ್ತರ ಮತ್ತು ದಕ್ಷಿಣ ಭಾಗಗಳಲ್ಲಿ ಹೊಸ ದಾರಿಗಳನ್ನು ನಿರ್ಮಿಸಲಾಯಿತು. 1990ರ ವೇಳೆಗೆ ಸಂಪೂರ್ಣ ಗೋಡೆಯನ್ನು ಕೆಡವಿ ಹಾಕಲಾಯಿತು.

1960: ಭಾರತದ ವಾಯುಪಡೆಯ ಪ್ರಥಮ ಏರ್ ಚೀಫ್ ಮಾರ್ಷಲ್ ಸುಬ್ರತೋ ಮುಖರ್ಜಿ ನಿಧನರಾದರು.

1943: ಸಾಹಿತ್ಯ , ಸಂಗೀತ, ಚಿತ್ರಕಲೆ ಮುಂತಾದುವುಗಳಲ್ಲಿ ಪರಿಣತಿ ಪಡೆದಿರುವ ಅಮೃತೇಶ್ವರ ತಂಡರ ಅವರು ಉಮ್ಮಣ್ಣ ತಂಡರ- ಬಸವಣ್ಣೆವ್ವ ದಂಪತಿಯ ಮಗನಾಗಿ ಧಾರವಾಡ ಜಿಲ್ಲೆ ನವಲಗುಂದ ತಾಲ್ಲೂಕಿನ ಅಣ್ಣಿಗೇರಿಯಲ್ಲಿ ಜನಿಸಿದರು.

1938: ನಾಜಿ ಪಡೆಗಳು ಮತ್ತು ಬೆಂಬಲಿಗರು 7500 ಯಹೂದಿ ವಾಣಿಜ್ಯ ಮುಂಗಟ್ಟುಗಳನ್ನು ನಾಶಮಾಡಿ ಲೂಟಿ ಮಾಡಿದರು. 267 ಯಹೂದಿ ಪೂಜಾ ಮಂದಿರಗಳನ್ನು ಸುಟ್ಟು ಹಾಕಲಾಯಿತು. 91 ಯಹೂದ್ಯರನ್ನು ಕೊಲ್ಲಲಾಯಿತು. 25,000 ಯಹೂದಿಗಳನ್ನು ಬಂಧಿಸಲಾಯಿತು.

1877: ಖ್ಯಾತ ಉರ್ದು ಕವಿ, ತತ್ವಜ್ಞಾನಿ ಸರ್ . ಮಹಮ್ಮದ್ ಇಕ್ಬಾಲ್ (1877-1938) ಹುಟ್ಟಿದ ದಿನ. ಮುಸ್ಲಿಮರಿಗೆ ಪ್ರತ್ಯೇಕ ರಾಜ್ಯ ಸ್ಥಾಪನೆಯ ವಿಚಾರವನ್ನು ಬೆಂಬಲಿಸಿದ ಇವರು 20ನೇ ಶತಮಾನದ ಶ್ರೇಷ್ಠ ಉರ್ದು ಕವಿ ಎಂಬ ಖ್ಯಾತಿ ಪಡೆದವರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

No comments:

Post a Comment