Sunday, November 18, 2018

ಶೋಪಿಯಾನ್: ಉಗ್ರಗಾಮಿಗಳಿಂದ ಇನ್ನೊಬ್ಬ ಯುವಕನ ಅಪಹರಣ

ಶೋಪಿಯಾನ್: ಉಗ್ರಗಾಮಿಗಳಿಂದ ಇನ್ನೊಬ್ಬ ಯುವಕನ ಅಪಹರಣ
ಶ್ರೀನಗರ: ಐಸಿಸ್ (ಐಎಸ್ಐಎಸ್)-ಶೈಲಿಯಲ್ಲಿ  ಭಯೋತ್ಪಾದಕರು ಹದಿಹರೆಯದ  ಎರಡನೇ ವ್ಯಕ್ತಿಯನ್ನು ಕೊಲೆ ಮಾಡಿದ ಒಂದು ದಿನದ ನಂತರ, ೨೦೧೮ ನವೆಂಬರ್ ೧೮ ರಂದು ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಶಂಕಿತ ಉಗ್ರಗಾಮಿಗಳು ಮತ್ತೊಬ್ಬ  ಯುವಕನನ್ನು ಅಪಹರಿಸಿದ್ದಾರೆ.

ಅಪಹೃತ ಯುವಕನನ್ನು ಶೋಪಿಯಾನ್   ನಿವಾಸಿ ಸುಹೈಲ್ ಅಹ್ಮದ್ ಎಂಬುದಾಗಿ ಗುರುತಿಸಲಾಗಿದೆ.

೧೭ ವರ್ಷ ವಯಸ್ಸಿನ ನದೀಮ್ ಮಂಜೂರ್ ಮತ್ತು ೧೯ ವರ್ಷದ ಹುಜೈಫ್ ಕುಟ್ಟೆ ಅವರ ಭೀಕರ ಹತ್ಯೆಗಳ ಬಳಿಕ  ಇದೀಗ  ಯುವಕನ ಅಪಹರಣ ನಡೆದಿದೆ.

ಮಂಜೂರನನ್ನು ಗುಂಡಿಟ್ಟು ಕೊಂದರೆ, ಹುಜೈಫ್ ಗಂಟಲನ್ನು ಸೀಳಿ ಭೀಕರವಾಗಿ ಕೊಲ್ಲಲಾಗಿತ್ತು. ಇವರಿಬ್ಬರೂ  ಶೋಪಿಯಾನ್ ನಿವಾಸಿಗಳು.

ಶೋಪಿಯಾನ್ ನಲ್ಲಿ ಅಲ್-ಬದರ್ ಗುಂಪಿನ  ಇಬ್ಬರು ಉಗ್ರಗಾಮಿಗಳನ್ನು ಶೋಪಿಯನ್ ನಲ್ಲಿ ನಡೆದ ಗುಂಡಿನ ಘರ್ಷಣೆಯಲ್ಲಿ ಭದ್ರತಾ ಪಡೆಗಳು ಹತ್ಯೆಗೈದ ಕೆಲವೇ ಗಂಟೆಗಳಲ್ಲಿ ಭಯೋತ್ಪಾದಕರು ಸುಹೈಲ್ ನನ್ನು ಅಪಹರಿಸಿದ್ದಾರೆ.

ಗುಂಡಿನ ಘರ್ಷಣೆಯಲ್ಲಿ ಹತರಾದ ಭಯೋತ್ಪಾದಕರನ್ನು ರೆಬ್ಬಾನ್  ಜೈನಪೊರಾ ನಿವಾಸಿ ನವಾಜ್ ಅಹ್ಮದ್ ವಾಗೆ ಮತ್ತು ಬಟ್ನೂರ್ ಲಿಟ್ಟರ್ ಪುಲ್ವಾಮಾದ ಯಾವರ್ ವಾನಿ ಎಂದು ಗುರುತಿಸಲಾಗಿದೆ.

 ಮಂಜೂರನ ಕ್ರೂರ ಹತ್ಯೆಯ ವಿಡಿಯೋ ಜೊತೆಗೆ ಬಿಡುಗಡೆ ಮಾಡಲಾದ  ಆಡಿಯೋ ಸಂದೇಶದಲ್ಲಿ ಹೆಚ್ಚು ಯುವಕರನ್ನು ಕೊಲ್ಲುವುದಾಗಿ ಹಿಜ್ಬುಲ್ ಮುಜಾಹಿದೀನ್ ಕಮಾಂಡರ್ ರಿಯಾಜ್ ನೈಕೂ ಬೆದರಿಕೆ ಹಾಕಿದ್ದ.  ವೈರಲ್ ಆದ  ವಿಡಿಯೋದಲ್ಲಿ ಉಗ್ರಗಾಮಿಗಳು ಮಂಜೂರನ ಮೇಲೆ ಗುಂಡಿನ ಮಳೆಗರೆದದ್ದನ್ನು ಚಿತ್ರೀಕರಿಸಿ ತೋರಿಸಿದ್ದರು.
ಕೊಲ್ಲುವುದಕ್ಕೆ
ಮುಂಚೆ ಚಿತ್ರೀಕರಿಸಲಾಗಿದ್ದ  ಇನ್ನೊಂದು ವಿಡಿಯೋದಲ್ಲಿ ತನ್ನ ಗ್ರಾಮದಲ್ಲಿ ಉಗ್ರಗಾಮಿಗಳು ಇರುವ ಬಗ್ಗೆ ತಾನು ಸೇನೆಗೆ ತಿಳಿಸಿದ್ದುದಾಗಿ ಮಂಜೂರ ಹೇಳಿದ್ದನ್ನು ಚಿತ್ರೀಕರಿಸಿ ಅದನ್ನೂ ಬಿಡುಗಡೆ ಮಾಡಿದ್ದರು.

ಮಂಜೂರ ಒಬ್ಬ ಸೇನಾ ಮಾಹಿತಿದಾರನಾಗಿದ್ದ. ಸೇನೆಗೆ ಉಗ್ರಗಾಮಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದ. ಇಬ್ಬರು ಉಗ್ರಗಾಮಿಗಳ ಬಗ್ಗೆ ಮಾಹಿತಿ ನೀಡಿದ ಬಳಿಕ  ಅವರಿಬ್ಬರೂ ಗುಂಡಿನ ಘರ್ಷಣೆಯಲ್ಲಿ ಹತರಾದರು ಎಂದು ನವೆಂಬರ್ 6 ಗುಂಡಿನ ಘರ್ಷಣೆಯಲ್ಲಿ ಉಗ್ರಗಾಮಿಗಳಿಬ್ಬರು ಹತರಾದುದನ್ನು ಉಲ್ಲೇಖಿಸಿದ ನೈಕೂ ಅದಕ್ಕಾಗಿ ಮಂಜೂರನನ್ನು ಕೊಲ್ಲಲಾಗಿದೆ ಎಂದು ಸಮರ್ಥಿಸಿಕೊಂಡಿದ್ದ.

"ನಾವು ಯಾರನ್ನೂ ಕೊಲ್ಲಲು ಬಯಸುವುದಿಲ್ಲ, ಆದರೆ ಅವರು (ಮಾಹಿತಿದಾರರು) ನಮ್ಮನ್ನು ಇಂತಹ ಕೃತ್ಯಕ್ಕೆ ಎಳಸುವಂತೆ ಮಾಡುತ್ತಿದ್ದಾರೆ.  ಭವಿಷ್ಯದಲ್ಲಿ ಇಂತಹ ಇನ್ನಷ್ಟು ವೀಡಿಯೋಗಳನ್ನು ನಾವು ಬಹಿರಂಗಪಡಿಸುತ್ತೇವೆ ಮತ್ತು ದ್ರೋಹಿಗಗಳಿಗೆ ಇದೇ ರೀತಿಯ ಹಣೆಬರಹ ಕಾದಿದೆ ಎಂದು ಆತ ಹೇಳಿದ್ದಾನೆ.

ನ್ಯಾಯ  ಪಂಚರು ಮತ್ತು ಸರಪಂಚರಿಗೂ ಇದೇ ಗತಿ ಕಾದಿದೆ ಎಂದೂ ಆತ ಎಚ್ಚರಿಸಿದ್ದಾನೆ.

No comments:

Post a Comment