Tuesday, November 13, 2018

ಇಂದಿನ ಇತಿಹಾಸ History Today ನವೆಂಬರ್ 13

ಇಂದಿನ ಇತಿಹಾಸ History Today ನವೆಂಬರ್ 13
2018: ನವದೆಹಲಿ: ಕೇರಳದ ಶಬರಿಮಲೈ ದೇವಾಲಯಕ್ಕೆ ಎಲ್ಲ ಮಹಿಳೆಯರಿಗೆ ಪ್ರವೇಶಾವಕಾಶ ಕಲ್ಪಿಸಿ ನೀಡಿದ್ದ ತನ್ನ ತೀರ್ಪಿನ ಮರುಪರಿಶೀಲನೆಗೆ ಭಾರತದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ನೇತೃತ್ವದ ಸಂವಿಧಾನಪೀಠವು ಒಪ್ಪಿಗೆ ನೀಡಿದ್ದು, ಜನವರಿ ೨೨ರಿಂದ ಬಹಿರಂಗ ವಿಚಾರಣೆ ನಡೆಸಲಿದೆ. ಆದರೆ ತನ್ನ ತೀರ್ಪಿಗೆ ತಡೆಯಾಜ್ಞೆ ಇರುವುದಿಲ್ಲ ಎಂದು ಪೀಠ ಸ್ಪಷ್ಟ ಪಡಿಸಿತು. ನ್ಯಾಯಮೂರ್ತಿಗಳಾದ ಆರ್ ಎಫ್ ನಾರಿಮನ್, .ಎಂ. ಖಾನ್ವಿಲ್ಕರ್, ಡಿವೈ ಚಂದ್ರಚೂಡ್ ಮತ್ತು ಇಂದು ಮಲ್ಹೋತ್ರಾ ಅವರನ್ನೂ ಒಳಗೊಂಡ ಪಂಚಸದಸ್ಯ ಸಂವಿಧಾನ ಪೀಠವು ಜನವರಿ ೨೨ರಿಂದ ೪೯ ಪುನರ್ ಪರಿಶೀಲನಾ ಅರ್ಜಿಗಳ ವಿಚಾರಣೆ ನಡೆಸಲಿದೆ. ಸುಪ್ರೀಂಕೋರ್ಟ್ ನಿರ್ಧಾರವು ದೇವಾಲಯದ ತಂತ್ರಿ ಹಾಗೂ ಅರ್ಜಿ ಸಲ್ಲಿಸಿದ ಭಕ್ತರಿಗೆ ಸಂತಸ ಉಂಟು ಮಾಡಿದ್ದುಅಯ್ಯಪ್ಪ ಸ್ವಾಮಿಯೇ ನಮಗೆ ನೆರವು ನೀಡಿದ್ದಾರೆಎಂದು ತಂತ್ರಿಗಳು ಪ್ರತಿಕ್ರಿಯಿಸಿದರು. ಸೆಪ್ಟೆಂಬರ್ ೨೮ರಂದು ನೀಡಿದ್ದ ತನ್ನ - ಬಹುಮತದ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಸಂವಿಧಾನಪೀಠವು ಶಬರಿಮಲೈ ಅಯ್ಯಪ್ಪಸ್ವಾಮಿ ದೇವಾಲಯ ಪ್ರವೇಶಕ್ಕೆ ೧೦ರಿಂದ ೫೦ರ ನಡುವಣ ಮಹಿಳೆಯರ ಮೇಲೆ ಇದ್ದ ಶತಮಾನಗಳಷ್ಟು ಹಳೆಯದಾದ ನಿಷೇಧವನ್ನು ರದ್ದು ಪಡಿಸಿತ್ತು. ಜೈವಿಕ ಮತ್ತು ದೈಹಿಕ ವಿಶಿಷ್ಟತೆಗಳ ಆಧಾರದಲ್ಲಿ ಮಹಿಳೆಯರನ್ನು ದೇವಾಲಯ ಪ್ರವೇಶಿಸದಂತೆ ಹೊರತುಪಡಿಸುವುದು ಸಂವಿಧಾನ ಬಾಹಿರ ಮತ್ತು ತಾರತಮ್ಯದ ಕ್ರಮ ಎಂದು ಸುಪ್ರೀಂಕೋರ್ಟ್ ಹೇಳಿತ್ತು. ನಿಷೇಧವು ಮಹಿಳೆಯರನ್ನು ಸಮಾನವಾಗಿ ಕಾಣುವ ಹಕ್ಕಿನಿಂದ ವಂಚಿಸುತ್ತದೆ ಎಂದು ಕೋರ್ಟ್ ಹೇಳಿತ್ತು. ಆದರೆ ತೀರ್ಪು ಪಶ್ಚಿಮ ಘಟ್ಟ ಶ್ರೇಣಿಯಲ್ಲಿರುವ ದೇವಾಲಯದಲ್ಲಿ ಭಾರೀ ಪ್ರಮಾಣದ ಪ್ರತಿಭಟನೆಗಳಿಗೆ ಕಾರಣವಾಯಿತು. ತೀರ್ಪಿನ ಜಾರಿಗೆ ತೀರ್ಮಾನಿಸಿದ ಕೇರಳದ ಎಡರಂಗ ಸರ್ಕಾರದ ನಿರ್ಧಾರವನ್ನು ಭಕ್ತರ ಸಂಘಟನೆಗಳು, ಭಾರತೀಯ ಜನತಾ ಪಕ್ಷ ಮತ್ತು ಕಾಂಗ್ರೆಸ್ ತೀವ್ರವಾಗಿ ವಿರೋಧಿಸಿದವು. ಸರ್ಕಾರದ ತೀರ್ಮಾನವನ್ನು ಪಂದಳ ರಾಜಕುಟುಂಬ ಮತ್ತು ದೇವಾಲಯದ ವಿಧಿವಿಧಾನಗಳ ವಿಚಾರದಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ತಂತ್ರಿ (ಮುಖ್ಯ ಅರ್ಚಕ) ಕುಟುಂಬಗಳೂ ವಿರೋಧಿಸಿದವು. ತೀರ್ಪನ್ನು ಪ್ರಶ್ನಿಸಿ ೪೬ ದಿನಗಳ ಅವಧಿಯಲ್ಲಿ ಸುಮಾರು ೫೦ ಅರ್ಜಿಗಳು ಸುಪ್ರೀಂಕೋರ್ಟಿನಲ್ಲಿ ದಾಖಲಾದವು. ದೇವಾಲಯದ ಆರಾಧ್ಯದೇವತೆಯಾಗಿರುವ ಅಯ್ಯಪ್ಪಸ್ವಾಮಿ ನೈಷ್ಠಿಕ ಬ್ರಹ್ಮಚಾರಿ ಎಂಬುದಾಗಿ ನಂಬುವ ಸಂಪ್ರದಾಯವಾದಿಗಳು ಸುಪ್ರೀಂಕೋರ್ಟ್ ತೀರ್ಪನ್ನು ಪ್ರತಿಭಟಿಸಿ ಚಳವಳಿ ನಡೆಸಿದ್ದಲ್ಲದೆ ಕಳೆದ ತಿಂಗಳು ದೇವಾಲಯ ಸಂದರ್ಶನಕ್ಕಾಗಿ ಬಂದು ಸುಮಾರು ಒಂದು ಡಜನ್ನಿಗೂ ಹೆಚ್ಚು ಮಹಿಳೆಯರನ್ನು ದೇವಾಲಯ ಪ್ರವೇಶಿಸದಂತೆ ತಡೆದರು. ಒಂದು ಹಂತದಲ್ಲಿ ಇಬ್ಬರು ಮಹಿಳೆಯರು ದೇವಾಲಯ ಪ್ರವೇಶಕ್ಕಾಗಿ ಅತ್ಯಂತ ಸನಿಹಕ್ಕೆ ಬಂದಾಗ ಅರ್ಚಕರು ದೇವಾಲಯದ ಪೂಜಾವಿಧಿಗಳನ್ನೂ ಬಹಿಷ್ಕರಿಸಿದರು. ಮಹಿಳೆಯರು ದೇವಾಲಯ ಪ್ರವೇಶಿಸಿದರೆ ಅಥವಾ ಏನಾದರೂ ರಕ್ತಪಾತ ಸಂಭವಿಸಿದರೆ ದೇವಾಲಯಕ್ಕೆ ಬೀಗ ಹಾಕಿ ತೆರಳುವುದಾಗಿ ತಂತ್ರಿಗಳು ಎಚ್ಚರಿಕೆ ನೀಡಿದ ಘಟನೆಯೂ ಘಟಿಸಿತು.   ಸುಪ್ರೀಂಕೋರ್ಟ್ ತೀರ್ಪನ್ನು ಪ್ರಶ್ನಿಸಿರುವ ಅರ್ಜಿದಾರರು ನಂಬಿಕೆಯನ್ನು ವೈಜ್ಞಾನಿಕ ಅಥವಾ ತಾರ್ಕಿಕ ಕಾರಣಗಳನ್ನು ಆಧರಿಸಿ ತೀರ್ಮಾನಿಸಲಾಗದು ಎಂದು ಪ್ರತಿಪಾದಿಸಿದರು.  ’ದೈಹಿಕ ಕಾರಣಗಳಿಗಾಗಿ ಮಹಿಳೆಯರನ್ನು ನಿಷೇಧಿಸಿರುವುದಲ್ಲ ಅದು ಆರಾಧ್ಯ ದೇವತೆಯ ಬ್ರಹ್ಮಚರ್ಯ ಗುಣವನ್ನು ಆಧರಿಸಿದ್ದುಎಂದು ಅವರು ಪ್ರತಿಪಾದಿಸಿದರು. ತನ್ನ ತೀರ್ಪಿನ ಪುನರ್ ಪರಿಶೀಲನೆಗೆ ಒಪ್ಪಿರುವ ಸುಪ್ರೀಂಕೋರ್ಟ್ ಪುನರ್ ಪರಿಶೀಲನೆ ಕೋರಿಕೆ ಅರ್ಜಿಗಳನ್ನು ಬಹಿರಂಗವಾಗಿ ಆಲಿಸುವ ಅಸಾಧಾರಣ ಕ್ರಮವನ್ನು ಕೈಗೊಂಡಿತು. ಸಾಮಾನ್ಯವಾಗಿ ಪುನರ್ ಪರಿಶೀಲನಾ ಅರ್ಜಿಗಳನ್ನು ನ್ಯಾಯಮೂರ್ತಿಗಳ ಕೊಠಡಿಯಲ್ಲಷ್ಟೇ ಆಲಿಸಲಾಗುತ್ತದೆ ತೀರ್ಪು ನೀಡುವುದಕ್ಕೆ ಮುನ್ನ ಶಬರಿಮಲೈಗೆ ಸಂಬಂಧಿಸಿದಂತೆ ಸಲ್ಲಿಸಲಾದ ಇತರ ಅರ್ಜಿಗಳನ್ನು ವಿಚಾರಣೆಗೆ ಅಂಗೀಕರಿಸುವ ಬಗ್ಗೆ ಪುನರ್ ಪರಿಶೀಲನಾ ಅರ್ಜಿಗಳ ಕುರಿತು ನಿರ್ಧರಿಸಿದ ಬಳಿಕ ತೀರ್ಮಾನಿಸಲಾಗುವುದು ಎಂದು ಸುಪ್ರೀಂಕೋರ್ಟ್ ಪ್ರಕಟಿಸಿತ್ತು. ಪುನರ್ ಪರಿಶೀಲನಾ ಅರ್ಜಿಗಳು ತಿರಸ್ಕೃತವಾದರೆ ಆಗ ಬೇರೆ ಅರ್ಜಿಗಳ ವಿಚಾರಣೆಗೆ ಬಗ್ಗೆ ಗಮನ ಹರಿಸಲಾಗುವುದು. ಇಲ್ಲದೇ ಇದ್ದಲ್ಲಿ ಅವುಗಳನ್ನೂ ಪುನರ್ ಪರಿಶೀಲನಾ ಅರ್ಜಿಗಳ ಜೊತೆಗೇ ಸೇರಿಸಲಾಗುವುದು ಎಂದು ಸುಪ್ರೀಂಕೋರ್ಟ್ ಹೇಳಿತ್ತು. ಪುನರ್ ಪರಿಶೀಲನಾ ಅರ್ಜಿಗಳನ್ನು ಆಲಿಸಲು ಒಪ್ಪಿಗೆ ನೀಡಿದ ಸುಪ್ರೀಂಕೋರ್ಟಿನ ಸಂಕ್ಷಿಪ್ತ ಆದೇಶವನ್ನು ದೇವಾಲಯದ ತಂತ್ರಿಗಳು ಹಾಗೂ ಇತರ ಹಲವರು ತತ್ ಕ್ಷಣವೇ ಹರ್ಷೋದ್ಘಾರಗಳೊಂದಿಗೆ ಸ್ವಾಗತಿಸಿದರು. ‘ಇದು ಮಹಾನ್ ನಿರ್ಧಾರ. ಅಯ್ಯಪ್ಪಸ್ವಾಮಿಯೇ ನಮಗೆ ನೆರವಾಗಿದ್ದಾನೆಎಂದು ತಂತ್ರಿ ರಾಜೀವರು ಕಂಡಾರರು ಹೇಳಿದರು.  ‘ಪುನರ್ ಪರಿಶೀಲನಾ ಅರ್ಜಿಗಳನ್ನು ಬಹಿರಂಗವಾಗಿ ಆಲಿಸುವ ನ್ಯಾಯಾಲಯದ ನಿರ್ಧಾರದ ಹಿಂದೆ ಅಯ್ಯಪ್ಪಸ್ವಾಮಿಯ ಆಶೀರ್ವಾದ ಮತ್ತು ಸಹಸ್ರಾರು ಭಕ್ತರ ಆಶಯದ ಇದೆಎಂದು ಅವರು ನುಡಿದರು. ದೇವಾಲಯ ಹಿಂದೆಂದೂ ಇಂತಹ ಕಷ್ಟದ ಸಮಯವನ್ನು ಎದುರಿಸಿರಲಿಲ್ಲ. ಮೊದಲು ಭಾರೀ ಪ್ರವಾಹದಿಂದ ದೇವಾಲಯ ಸಮುಚ್ಚಯದ ಸುತ್ತಮುತ್ತಣ ಮೂಲಸವಲತ್ತುಗಳಿಗೆ ಅಪಾರ ಹಾನಿಯಾಯಿತು. ನಂತರ ಸುಪ್ರೀಂಕೋರ್ಟಿನಿಂದ ಸೆಪ್ಟೆಂಬರ್ ೨೮ರ ತೀರ್ಪು ಬಂತು. ಇಂದಿನ ತೀರ್ಪು ದೊಡ್ಡ ವಿಜಯ. ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುವುದು ಎಂದು ನಾವು ನಂಬಿದ್ದೇವೆ. ಇದು ಅಯ್ಯಪ್ಪ ಸ್ವಾಮಿಯ ವಿಜಯಎಂದು ನುಡಿದ ತಂತ್ರಿಗಳುಆದದ್ದೆಲ್ಲಾ ಒಳಿತೇ ಆಗುತ್ತದೆಎಂದು ಹೇಳಿದರು. ಕೇರಳ ಬಿಜೆಪಿ ಅಧ್ಯಕ್ಷ ಶ್ರೀಧರನ್ ಪಿಳ್ಳೈ ಅವರು ೪೯ ಪುನರ್ ಪರಿಶೀಲನಾ ಅರ್ಜಿಗಳನ್ನು ಬಹಿರಂಗ ನ್ಯಾಯಾಲಯದಲ್ಲಿ ಆಲಿಸಲು ಸುಪ್ರೀಂಕೋರ್ಟ್ ಕೈಗೊಂಡ ತೀರ್ಮಾನವನ್ನುಪ್ರತಿಭಟನಕಾರರ ವಿಜಯಎಂದು ಬಣ್ಣಿಸಿದರು. ’ಸುಪ್ರೀಂಕೋರ್ಟ್ ನಿರ್ಧಾರ ಉತ್ತಮ ಹೆಜ್ಜೆ. ಸುಪ್ರೀಂಕೋರ್ಟ್ ನಿರ್ಧಾರದ ಹಿಂದಿನ ಸ್ಫೂರ್ತಿಯನ್ನು ನಾವು ಸ್ವೀಕರಿಸುತ್ತೇವೆ ಎಂದು ಅವರು ನುಡಿದರು. ‘ನಾವು ತೀರ್ಪಿನ ವಿವರಗಳಿಗಾಗಿ ಕಾಯುತ್ತಿದ್ದೇವೆಎಂದು ಹೇಳಿದ ಕೇರಳದ ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್ ಅವರುನಾವು ಹಿಂದೆ ಕೂಡಾ ಇದನ್ನು ಹೇಳಿದ್ದೇವೆ. ಸುಪ್ರೀಂಕೋರ್ಟ್ ಏನು ತೀರ್ಮಾನ ಕೈಗೊಳ್ಳುತ್ತದೋ ಅದನ್ನು ನಾವು ಪಾಲಿಸುತ್ತೇವೆಎಂದು ಹೇಳಿದರು. ಶಬರಿಮಲೈ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶಾವಕಾಶ ಕಲ್ಪಿಸಿದ ಸುಪ್ರೀಂಕೋರ್ಟಿನ ಸೆಪ್ಟೆಂಬರ್ ೨೮ರ ತೀರ್ಪಿನ ಮೇಲೆ ಯಾವುದೇ ತಡೆಯಾಜ್ಞೆ ಕೊಡಲಾಗಿಲ್ಲ. ಆದ್ದರಿಂದ ನಮ್ಮ ನಿಲುವಿನಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ವಿಚಾರದಲ್ಲಿ ಕಾನೂನು ತಜ್ಞರ ಜೊತೆ ಸಮಾಲೋಚಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಸುಪ್ರೀಂಕೋರ್ಟ್ ತೀರ್ಪು ಜಾರಿಗೆ ರಾಜ್ಯ ಸರ್ಕಾರ ಕೈಗೊಂಡ ನಿರ್ಧಾರವನ್ನು ವಿರೋಧಿಸಿ ಬಿಜೆಪಿ ಚಳವಳಿಯನ್ನು ತೀವ್ರಗೊಳಿಸಿದ್ದರೆ, ಸರ್ಕಾರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲಿಲ್ಲ ಎಂದು ಟೀಕಿಸಿದ ಕಾಂಗ್ರೆಸ್ ಪ್ರತಿಭಟನಕಾರರನ್ನು ಬೆಂಬಲಿಸಿತ್ತು. ದೇವಾಲಯದ ಪರಂಪರೆಯನ್ನು ಮುರಿಯಲು ಸರ್ಕಾರ ಯತ್ನಿಸಿದರೆ ಪ್ರತಿಭಟನೆಗಳು ಮುಂದುವರೆಯುವುವು ಎಂದು ಆರೆಸ್ಸೆಸ್ ನಾಯಕ ವಲ್ಸನ್ ಥಿಲ್ಲಂಕೇರಿ ಹೇಳಿದರು. ದೇವಾಲಯದ ಪರಂಪರೆಯನ್ನು ಬೆಂಬಲಿಸಿ ರಥಯಾತ್ರೆ ನಡೆಸಿದ್ದ ಶ್ರೀಧರನ್ ಪಿಳ್ಳೈ ನ್ಯಾಯಾಲಯವು ಭಕ್ತರ ಪ್ರತಿಭಟನೆಯನ್ನು ಗಮನಕ್ಕೆ ತೆಗೆದುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳುವುದು ಎಂದು ಮುನ್ನ ಹಾರೈಸಿದ್ದರು. ನಾಯರ್ ಸೇವಾ ಸಮಾಜ, ರಾಷ್ಟ್ರೀಯ ಅಯ್ಯಪ್ಪ ಭಕ್ತರ ಸಂಘ ಸೇರಿದಂತೆ ವಿವಿಧ ಸಂಘಟನೆಗಳು ಸುಪ್ರೀಂಕೋರ್ಟಿನ ಸೆಪ್ಟೆಂಬರ್ ೨೮ರ ತೀರ್ಪಿನ ವಿರುದ್ಧ ಮೇಲ್ಮನವಿಗಳನ್ನು ಸಲ್ಲಿಸಿವೆ. ಅಕ್ಟೋಬರ್ ೯ರಂದು ಸುಪ್ರೀಂಕೋರ್ಟ್ ಮೇಲ್ಮನವಿಗಳ ತುರ್ತು ಆಲಿಕೆಗೆ ನಿರಾಕರಿಸಿತ್ತು. ಪುನರ್ ಪರಿಶೀಲನಾ ಅರ್ಜಿಗಳ ಹೊರತಾಗಿ ಜಿ. ವಿಜಯ ಕುಮಾರ್, ಎಸ್. ಜಯಾ ರಾಜಕುಮಾರ್ ಮತ್ತು ಶೈಲಜಾ ವಿಜಯನ್ ಅವರು ಸುಪ್ರೀಂಕೋರ್ಟಿನ ಸೆಪ್ಟೆಂಬರ್ ೨೮ರ ತೀರ್ಪನ್ನು ಪ್ರಶ್ನಿಸಿ ಹೊಸ ಅರ್ಜಿಗಳನ್ನೂ ಸಲ್ಲಿಸಿದ್ದರು.


2018: ಕೊಲಂಬೋ: ಶ್ರೀಲಂಕಾ ಸಂಸತ್ತನ್ನು ವಿಸರ್ಜಿಸಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಹೊರಡಿಸಿದ್ದ ಆದೇಶವನ್ನು ರದ್ದು ಪಡಿಸಿದ ಶ್ರೀಲಂಕಾ ಸುಪ್ರೀಂಕೋರ್ಟ್ ಮುಂದಿನ ವರ್ಷ ನಡೆಸಲು ಘೋಷಿಸಲಾಗಿದ್ದ ದಿಢೀರ್ ಚುನಾವಣೆಯ ಸಿದ್ಧತೆಗಳನ್ನು ಸ್ಥಗಿತಗೊಳಿಸಲು ಆದೇಶ ನೀಡಿತು. ಅಧ್ಯಕ್ಷ ಸಿರಿಸೇನಾ ಅವರು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ಅಕ್ಟೋಬರ್ ೨೬ರಂದು ವಜಾಗೊಳಿಸಿ, ಹಿಂದಿನ ಬಲಾಢ್ಯ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಿದಂದಿನಿಂದ ಹಿಂದೂ ಮಹಾಸಾಗರದಲ್ಲಿನ  ದ್ವೀಪರಾಷ್ಟ್ರವು ಸಾಂವಿಧಾನಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದು, ಘಟನಾವಳಿಗಳು ದಿನಕ್ಕೊಂದು ತಿರುವು ಪಡೆಯುತ್ತಿವೆ. ಸಂಸತ್ ವಿಸರ್ಜನೆ ವಿರುದ್ಧ ರಾನಿಲ್ ವಿಕ್ರಮಸಿಂಘೆ ಅವರ ಪಕ್ಷ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನಳಿನ್ ಪೆರೇರಾ ನೇತ್ವತ್ವದ ತ್ರಿಸದಸ್ಯ ಪೀಠವು ಕಿಕ್ಕಿರಿದ ನ್ಯಾಯಾಲಯದಲ್ಲಿ ತನ್ನ ತೀರ್ಪನ್ನು ಪ್ರಕಟಿಸಿತು. ಅರ್ಜಿಯ ವಿಚಾರಣೆ ವೇಳೆಯಲ್ಲಿ ನ್ಯಾಯಾಲಯಕ್ಕೆ ನೂರಾರು ಮಂದಿ ಸಶಸ್ತ್ರ ಪೊಲೀಸ್ ಮತ್ತು ಕಮಾಂಡೊಗಳ ಬಿಗಿ ಭದ್ರತೆ ಒದಗಿಸಲಾಗಿತ್ತು. ಸಂಸತ್ತನ್ನು ವಿಸರ್ಜಿಸಿ, ಜನವರಿ ೫ರಂದು ಚುನಾವಣೆ ಘೋಷಿಸಿ ಸಿರಿಸೇನಾ ಅವರು ಹೊರಡಿಸಿದ್ದ ಅಧಿಸೂಚನೆಯನ್ನು ಸುಪ್ರೀಂಕೋರ್ಟ್ ರದ್ದು ಪಡಿಸಿತು. ಸುಪ್ರೀಂಕೋರ್ಟ್ ತೀರ್ಪಿನ ಪರಿಣಾಮವಾಗಿ ಇದೀಗ ೨೨೫ ಸದಸ್ಯಬಲದ ಸಂಸತ್ತಿನಲ್ಲಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ಅಧಿಕಾರದಿಂದ ವಜಾಗೊಳಿಸಿ, ಸಿರಿಸೇನಾ ಅವರು ನೇಮಿಸಿದ ಅಭ್ಯರ್ಥಿ ಮಹಿಂದ ರಾಜಪಕ್ಸೆ ಅವರಿಗೆ ಬಹುಮತ ಇದೆಯೇ ಎಂಬ ಪರೀಕ್ಷೆ ನಡೆಯಬಹುದಾಗಿದೆಜನವರಿ ೫ಕ್ಕೆ ಸಾರ್ವತ್ರಿಕ ಚುನಾವಣೆ ನಿಗದಿಗೊಳಿಸಿ ಆದೇಶ ಹೊರಡಿಸಿದ್ದ ಅಧ್ಯಕ್ಷ ಸಿರಿಸೇನಾ ಆದೇಶದಂತೆ ಡಿಢೀರ್ ಚುನಾವಣೆಗೆ ಆರಂಭಿಸಿದ ಸಿದ್ಧತೆಗಳನ್ನು ಸ್ಥಗಿತಗೊಳಿಸುವಂತೆ ಸ್ವಾಯತ್ತ ಚುನಾವಣಾ ಆಯೋಗಕ್ಕೂ ಸುಪ್ರೀಂಕೋರ್ಟ್ ಆದೇಶ ನೀಡಿತು.

2018: ಲಕ್ನೋ: ಅಲಹಾಬಾದ್ ಮತ್ತು ಫೈಜಾಬಾದ್ ವಿಭಾಗಗಳಿಗೆ ಕ್ರಮವಾಗಿ ಪ್ರಯಾಗರಾಜ್ ಮತ್ತು ಅಯೋಧ್ಯಾ ವಿಭಾಗ ಎಂಬುದಾಗಿ ನಾಮಕರಣ ಮಾಡುವ ಪ್ರಸ್ತಾವಗಳಿಗೆ ಉತ್ತರ ಪ್ರದೇಶ ಸರ್ಕಾರ ಔಪಚಾರಿಕ ಅನುಮೋದನೆ ನೀಡಿತುಅಲಹಾಬಾದ್ ಜಿಲ್ಲೆಗೆ ಪ್ರಯಾಗರಾಜ್ ಎಂಬುದಾಗಿ ಕಳೆದ ತಿಂಗಳು ನಾಮಕರಣ ಮಾಡಲಾಗಿದ್ದು , ದೀಪಾವಳಿಯ ಮುನ್ನಾದಿನ ಫೈಜಾಬಾದ್ ಜಿಲ್ಲೆಗೆ ಅಯೋಧ್ಯಾ ಹೆಸರು ಇಡುವ ಬಗ್ಗೆ ಪ್ರಕಟಿಸಲಾಗಿತ್ತು.  ‘ಹೌದು, ಅಲಹಾಬಾದ್ ಈಗ ಇಲ್ಲ. ಅಲಹಾಬಾದ್ ವಿಭಾಗಕ್ಕೆ ಪ್ರಯಾಗರಾಜ್ ವಿಭಾಗ ಎಂಬುದಾಗಿ ಮರುನಾಮಕರಣ ಮಾಡಲು ನಾವು ರಾಜ್ಯ ಸಚಿವ ಸಂಪುಟದ ಅನುಮೋದನೆ ಕೋರಿದ್ದೇವೆ ಎಂದು ಉತ್ತರ ಪ್ರದೇಶದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದರು.  ನಾವು ಅಗತ್ಯ ವಿಧಿ ವಿಧಾನಗಳನ್ನು ಪೂರ್ಣಗೊಳಿಸುತ್ತಿದ್ದೇವೆ. ವಿಷಯವು ರಾಜ್ಯ ಸಚಿವ ಸಂಪುಟದ ಮುಂದೆ ಮಂಗಳವಾರ ಬರುವ ಸಾಧ್ಯತೆ ಇದೆ ಎಂದೂ ಅವರು ಹೇಳಿದ್ದರು. ಮಧ್ಯೆ ಇತರ ಹಲವು ಜಜಿಲ್ಲೆಗಳ ಹೆಸರುಗಳನ್ನೂ ಬದಲಾಯಿಸುವ ಬಗ್ಗೆ ರಾಜ್ಯ ಸರ್ಕಾರ ಪರಿಶೀಲಿಸುತ್ತಿದೆ ಎಂದು ವರದಿಗಳು ಹೇಳಿದವು. ಮೀರತ್ ಸರ್ಧಾನ ಜಿಲ್ಲೆಯ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರು ಮುಜಾಫ್ಫರನಗರದ ಹೆಸರನ್ನು ಲಕ್ಷ್ಮೀನಗರ ಎಂಬುದಾಗಿ ಬದಲಾಯಿಸಬೇಕು ಎಂದು ಒತ್ತಾಯಿಸಿದರು.  ’ಇತರ ಹಲವಾರು ಜಿಲ್ಲೆಗಳ ಮರುನಾಮಕರಣ ಮಾಡುವಂತೆ ನಮಗೆ ಒತ್ತಾಯಗಳು ಬಂದಿವೆ. ಪ್ರಸ್ತುತ ಫೈಜಾಬಾದ್ ಜಿಲ್ಲೆ ಮತ್ತು ವಿಭಾಗವನ್ನು ಅಯೋಧ್ಯಾ ಎಂಬುದಾಗಿಯೂ, ಅಲಹಾಬಾದ್ ವಿಭಾಗವನ್ನು ಪ್ರಯಾಗರಾಜ್ ಎಂಬುದಾಗಿಯೂ ಮರುನಾಮಕರಣ ಮಾಡುವ ಪ್ರಸ್ತಾಪವಿದ್ದು ಅದನ್ನು ರಾಜ್ಯ ಸಚಿವ ಸಂಪುಟಕ್ಕೆ ಕಳುಹಿಸಲಾಗಿದೆ ಎಂದು ಇನ್ನೊಬ್ಬ ಅಧಿಕಾರಿ ಹೇಳಿದ್ದರು.

2018: ನವದೆಹಲಿ: ರಫೇಲ್ ವಿಮಾನ ವ್ಯವಹಾರಕ್ಕೆ ಸಂಬಂಧಿಸಿದ ಪಾಲುದಾರ ಗುತ್ತಿಗೆಯ ಡಸ್ಸಾಲ್ಟ್ ರಿಲಯನ್ಸ್ ಜಂಟಿ ಸಾಹಸದ ವಿವರಗಳ ಬಗ್ಗೆ ತಾವು ಸುಳ್ಳು ಹೇಳಿರುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಾಡಿದ ಆರೋಪಗಳನ್ನು ಡಸ್ಸಾಲ್ಟ್ ಏವಿಯೇಷನ್ ಮುಖ್ಯ ಎಕ್ಸಿಕ್ಯೂಟಿವ್ ಅಧಿಕಾರಿ (ಸಿಇಒ) ಎರಿಕ್ ಟ್ರಾಪ್ಪಿಯರ್  ಇಲ್ಲಿ ಖಂಡತುಂಡವಾಗಿ ತಳ್ಳಿಹಾಕಿದರು. ‘ನಾನು ಸುಳ್ಳು ಹೇಳುವುದಿಲ್ಲ. ಹಿಂದೆ ನಾನು ಘೋಷಿಸಿದ ಸತ್ಯ ಮತ್ತು ನಾನು ನೀಡಿದ್ದ ಹೇಳಿಕೆಗಳು ಸಂಪೂರ್ಣ ಸತ್ಯ. ನನಗೆ ಸುಳ್ಳು ಹೇಳುವವನೆಂಬ ಅಪಖ್ಯಾತಿ ಇಲ್ಲ. ಸಿಇಒ ಹುದ್ದೆಯಲ್ಲಿ ಇದ್ದುಕೊಂಡು ನೀವು ಸುಳ್ಳು ಹೇಳುವುದಕ್ಕೆ ಆಗುವುದೂ ಇಲ್ಲ ಎಂದು ರಾಹುಲ್ ಗಾಂಧಿ ಆಪಾದನೆಗಳ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಟ್ರಾಪ್ಪಿಯರ್ ನುಡಿದರುನವೆಂಬರ್ ೨ರಂದು ರಾಹುಲ್ ಗಾಂಧಿ ಅವರು ಪತ್ರಿಕಾಗೋಷ್ಠಿಯಲ್ಲಿಅನಿಲ್ ಅಂಬಾನಿ ಹುಟ್ಟು ಹಾಕಿದ  ನಷ್ಟದಲ್ಲಿರುವ ಕಂಪೆನಿಗೆ ನಾಗಪುರದಲ್ಲಿ ಭೂಮಿ ಖರೀದಿಸಲು ಡಸ್ಸಾಲ್ಟ್ ಕಂಪೆನಿಯು ೨೮೪ ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿತು ಎಂದು ಆಪಾದಿಸಿದ್ದರು. ’ಡಸ್ಸಾಲ್ಟ್ ಸಿಇಒ ಸುಳ್ಳು ಹೇಳುತ್ತಿದ್ದಾರೆ ಎಂಬುದು ಖಚಿತವಾಗಿದೆ. ಕುರಿತು ತನಿಖೆ ಆರಂಭವಾದರೆ ಮೋದಿ ಅವರು ಬಚಾವ್ ಆಗುವಿದಲ್ಲ, ಇದು ಖಾತರಿ ಎಂದೂ ಕಾಂಗ್ರೆಸ್ ಅಧ್ಯಕ್ಷ ಹೇಳಿದ್ದರು.  ಉತ್ತರ ಫ್ರಾನ್ಸಿನ ಮಾರ್ಸೀಲ್ಲೆ ನಗರದ ಇಸ್ಟ್ರೆಸ್-ಲೆ-ಟ್ಯೂಬ್ ವಾಯುನೆಲೆಯಲ್ಲಿ ಸುದ್ದಿ ಸಂಸ್ಥೆ ಜೊತೆಗೆ ಮಾತನಾಡಿದ ಡಸ್ಸಾಲ್ಟ್ ಮುಖ್ಯಸ್ಥ ಎರಿಕ್, ’ನಮಗೆ ಕಾಂಗ್ರೆಸ್ ಪಕ್ಷದೊಂದಿಗೆ ವ್ಯವಹರಿಸಿದ ಹಿಂದಿನ ಅನುಭವ ಇದೆ. ಕಾಂಗ್ರೆಸ್ ಅಧ್ಯಕ್ಷರ ಟೀಕೆಗಳು  ನನಗೆ ಬೇಸರ ಉಂಟು ಮಾಡಿವೆ ಎಂದು ಹೇಳಿದರು.  ‘ನಮಗೆ ಕಾಂಗ್ರೆಸ್ ಪಕ್ಷದ ಜೊತೆಗೆ ಸುದೀರ್ಘ ಅನುಭವ ಇದೆ. ಭಾರತದ ಜೊತೆಗಿನ ನಮ್ಮ ಮೊದಲ ವ್ಯವಹಾರ ೧೯೫೩ರಲ್ಲಿ ನೆಹರೂ ಅವರ ಜೊತೆಗೆ ನಡೆದಿತ್ತು. ಬಳಿಕದ ಪ್ರಧಾನಿಗಳ ಜೊತೆಗೂ ನಾವು ವ್ಯವಹರಿಸಿದ್ದೇವೆ. ನಾವು ಭಾರತದ ಜೊತೆಗೆ ಕೆಲಸ ಮಾಡುತ್ತಿದ್ದೇವೆ. ನಾವು ಯಾವುದೇ ಒಂದು ಪಕ್ಷಕ್ಕಾಗಿ ಕೆಲಸ ಮಾಡುತ್ತಿಲ್ಲ. ಯುದ್ಧ ವಿಮಾನಗಳಂತಹ ವ್ಯೂಹಾತ್ಮಕ ಉತ್ಪನ್ನಗಳನ್ನು ನಾವು ಭಾರತೀಯ ವಾಯುಪಡೆಗೆ ಮತ್ತು ಭಾರತ ಸರ್ಕಾರಕ್ಕೆ ಸರಬರಾಜು ಮಾಡುತ್ತಿದ್ದೇವೆ. ಇದು ಅತ್ಯಂತ ಮಹತ್ವದ ವಿಚಾರ ಎಂದು ಎರಿಕ್ ನುಡಿದರುಸ್ಸಾಲ್ಟ್ ಆಫ್ಸೆಟ್ ಪಾಲುದಾರನಾಗಿ ಯುದ್ಧ ವಿಮಾನ ತಯಾರಿಯಲ್ಲಿ ಅನುಭವವೇ ಇಲ್ಲದ ರಿಲಯನ್ಸ್ ಕಂಪೆನಿಯನ್ನು ಆಯ್ಕೆ ಮಾಡಿದಕ್ಕೆ ಕಾರಣಗಳೇನು ಎಂಬ ಪ್ರಶ್ನೆಗೆ, ’ಡಸ್ಸಾಲ್ಟ್ ಕಂಪೆನಿಯು ಹೂಡಿಕೆ ಮಾಡಿದ ಹಣ ನೇರವಾಗಿ ರಿಲಯನ್ಸ್ ಗೆ ಹೋಗುವುದಿಲ್ಲ, ಬದಲಿಗೆ ಡಸ್ಸಾಲ್ಟ್ ಕೂಡಾ ಒಳಗೊಂಡಿರುವ ಜಂಟಿ ಸಾಹಸಕ್ಕೆ (ಜೆವಿ) ಹೋಗುತ್ತದೆ ಎಂದು ಎರಿಕ್ ಉತ್ತರಿಸಿದರು. ನಾವು ನಮ್ಮ ಹಣವನ್ನು ರಿಲಯನ್ಸ್ ನಲ್ಲಿ ತೊಡಗಿಸುತ್ತಿಲ್ಲ. ಹಣವು ಜಂಟಿ ಸಾಹಸಕ್ಕೆ ಹೋಗುತ್ತದೆ. ನಾನು ನನ್ನ ಜ್ಞಾನವನ್ನು ಉಚಿತವಾಗಿ ನೀಡುತ್ತೇನೆ. ನನ್ನ ಬಳಿ ಎಂಜಿನಿಯರುಗಳಿದ್ದಾರೆ, ಡಸ್ಶಾಲ್ಟ್ ಕಾರ್ಮಿಕರಿದ್ದಾರೆ. ಅವರು ಒಪ್ಪಂದದ ಭಾಗವಾಗಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡುತ್ತಾರೆ. ಇದೇ ಸಮಯದಲ್ಲಿ ನನ್ನ ಬಳಿ ರಿಲಯನ್ಸ್ನಂತಹ ಭಾರತೀಯ ಕಂಪೆನಿ ಇದೆ. ಅವರು ಜಂಟಿ ಸಾಹಸದಲ್ಲಿ ಹಣ ತೊಡಗಿಸುತ್ತಾರೆ. ತಮ್ಮ ರಾಷ್ಟ್ರವನ್ನು ಅಭಿವೃದ್ಧಿ ಪಡಿಸಬೇಕು ಎಂಬ ಉದ್ದೇಶದಿಂದ ಅವರು ಹಣ ತೊಡಗಿಸುತ್ತಾರೆ. ಹೀಗಾಗಿ ಕಂಪೆನಿಯು ವಿಮಾನ ಉತ್ಪಾದನೆ ಮಾಡುವುದು ಹೇಗೆ ಎಂಬುದನ್ನು ಅರಿತುಕೊಳ್ಳುತ್ತದೆ ಎಂದು ಟ್ರಾಪಿಯರ್ ನುಡಿದರುಹೆಚ್ಚು ಕಡಿಮೆ ಡಸ್ಸಾಲ್ಟ್ ತೊಡಗಿಸುವಷ್ಟೇ ಹಣವನ್ನು ರಿಲಯನ್ಸ್ ಕಂಪೆನಿಯೂ ತೊಡಗಿಸುತ್ತದೆ ಏಕೆಂದರೆ ಸರ್ಕಾರದ ಪೂರ್ವ ನಿರ್ಧರಿತ ನಿಯಮಗಳ ಪ್ರಕಾರ ಡಸ್ಸಾಲ್ಟ್ ಶೇಕಡಾ ೪೯ರಷ್ಟು  ಹಣ ತೊಡಗಿಸುತ್ತದೆ, ರಿಲಯನ್ಸ್ ಶೇಕಡಾ ೫೧ರಷ್ಟು ಹಣ ಹೂಡುತ್ತದೆ ಎಂದು ಎರಿಕ್ ವಿವರಿಸಿದರು.  ‘ನಾವು ೫೦:೫೦ ಒಪ್ಪಂದಂತೆ ಕಂಪೆನಿಯಲ್ಲಿ ಒಟ್ಟಿಗೆ ೮೦೦ ಕೋಟಿ ರೂಪಾಯಿಗಳನ್ನು ಜೊತೆಯಾಗಿ ತೊಡಗಿಸಬೇಕಾಗಿದೆ. ಪ್ರಸ್ತುತ ಕಾರ್ಯಾರಂಭದ ಹೊತ್ತಿನಲ್ಲಿ ನಾವು ಕಾರ್ಮಿಕರು ಮತ್ತು ನೌಕರರಿಗೆ ವೇತನ ಮಾವತಿ ಮಾಡಬೇಕಾಗಿದ್ದು, ಈಗಾಗಲೇ ನಾವು ೪೦ ಕೋಟಿ ರೂಪಾಯಿ ವಿನಿಯೋಗಿಸಿದ್ದೇವೆ. ಆದರೆ ಅದನ್ನು ಕ್ರಮೇಣ ೮೦೦ ಕೋಟಿ ರೂಪಾಯಿಗಳಿಗೆ ಏರಿಸಲಾಗುವುದು. ಪೈಕಿ ೪೦೦ ಕೋಟಿ ರೂಪಾಯಿಗಳನ್ನು ಡಸ್ಸಾಲ್ಟ್ ಮುಂಬರುವ ಐದು ವರ್ಷಗಳ ಅವಧಿಯಲ್ಲಿ ವಿನಿಯೋಗಿಸುವುದು ಎಂದು ಟ್ರಾಪಿಯರ್ ಹೇಳಿದರು.   ’ಆಫ್ ಸೆಟ್ ಕಾರ್ಯನಿರ್ವಹಣೆಗೆ ಡಸ್ಸಾಲ್ಟ್ಗೆ ಏಳು ವರ್ಷಗಳ ಕಾಲಾವಕಾಶ ಇದೆ. ಮೊದಲ ಮೂರು ವರ್ಷಗಳನ್ನು ನಾವು ನಾವು ಯಾರ ಜೊತೆಗೆ ಕೆಲಸ ಮಾಡುತ್ತಿದ್ದೇವೆ ಎಂದು ಹೇಳುವ ಅಗತ್ಯ ಇಲ್ಲ. ನಾವು ಈಗಾಗಲೇ ೩೦ ಕಂಪೆನಿಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು ಕೆಲಸ ಅಂತಿಮಗೊಳಿಸಿದ್ದೇವೆ. ಒಪ್ಪಂದದ ಪ್ರಕಾರ ಒಟ್ಟು ಆಫ್ಸೆಟ್ ಶೇಕಡಾ ೪೦ನ್ನು ಇದು ಪ್ರತಿನಿಧಿಸಲಿದೆ. ರಿಲಯನ್ಸ್ ೪೦ರ ಪೈಕಿ ಶೇಕಡಾ ೧೦ ಮಾತ್ರ. ಉಳಿದ ಶೇಕಡಾ ೩೦ ಕಂಪೆನಿUಳು ಮತ್ತು ಡಸ್ಸಾಲ್ಟ್ ನಡುವಣ ನೇರ ಒಪ್ಪಂದವಾಗಿದೆ ಎಂದು ಟ್ರಾಪಿಯರ್ ಹೇಳಿದರು. ಬೆಲೆ ನಿಗದಿ ವಿಷಯಕ್ಕೆ ಸಂಬಂಧಿಸಿದಂತೆ ಈಗಿನ ಯುದ್ಧ ವಿಮಾನವು ಶೇಕಡಾ ೯ರಷ್ಟು ಅಗ್ಗವಾಗಿದೆ ಎಂದು ಸಿಇಒ ನುಡಿದರು. ’೩೬ ಯುದ್ಧ ವಿಮಾನಗಳ ಬೆಲೆ ಹಾರುವ ಸ್ಥಿತಿಯಲ್ಲಿ ಸರಬರಾಜು ಆಗಬೇಕಾಗಿದ್ದ ವಿಮಾನಗಳಿಗೆ ಹೋಲಿಸಿದರೆ ಹೆಚ್ಚು ಕಡಿಮೆ ಅಷ್ಟೇ ಆಗುತ್ತದೆ. ೩೬ ಅಂದರೆ ೧೮ರ ದುಪ್ಪಟ್ಟು. ನನ್ನ ಪ್ರಕಾರ ಇದರ ಬೆಲೆ ದುಪ್ಪಟ್ಟು ಆಗಬೇಕಾಗಿತ್ತು. ಆದರೆ ಇದು ಸರ್ಕಾರ- ಸರ್ಕಾರ ನಡುವಣ (ಅಂತರ ಸರ್ಕಾರ) ಒಪ್ಪಂದವಾದ ಕಾರಣ ಸಂಧಾನ ಮಾತುಕತೆ ನಡೆದಿದ್ದು, ನಾವು ದರವನ್ನು ಶೇಕಡಾ ೯ರಷ್ಟು ಇಳಿಸಿದ್ದೇವೆ. ಅಂದರೆ ೩೬ರ ಒಪ್ಪಂದದಲ್ಲಿ ಹಾರುವ ಸ್ಥಿತಿಯಲ್ಲಿನ ರಫೇಲ್ ವಿಮಾನಗಳು ಹಿಂದಿನ ೧೨೬ರ ಒಪ್ಪಂದದ ವಿಮಾನಗಳ ಬೆಲೆಗಳಿಗೆ ಹೋಲಿಸಿದರೆ ಅಗ್ಗವಾಗಿವೆ  ಎಂದು ಅವರು ವಿವರಿಸಿದರು. ರಫೇಲ್ ಯುದ್ಧ ವಿಮಾನ ತಯಾರಿಗೆ ಸಂಬಂಧಿಸಿದಂತೆ ಹಿಂದೆ ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್) ಜೊತೆಗೆ ಆಗಿದ್ದ ಪ್ರಾಥಮಿಕ ಒಪ್ಪಂದದ ಬಗ್ಗೆ ಕೇಳಲಾದ ಪ್ರಶ್ನೆಗೆ, ’೧೨೬ ಯುದ್ಧ ವಿಮಾನಗಳ ಪ್ರಾಥಮಿಕ ಒಪ್ಪಂದವಾಗಿದ್ದರೆ ನಾವು ಎಚ್ಎಎಲ್ ಮತ್ತು ಮುಖೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಜೊತೆಗೆ ಕೆಲಸ ಮಾಡಲು ಹಿಂಜರಿಯುತ್ತಿರಲಿಲ್ಲ ಎಂದು ಟ್ರಾಫಿಯರ್ ನುಡಿದರು.   ‘೧೨೬ರ ಪ್ರಾಥಮಿಕ ಒಪ್ಪಂದ ಸುಸೂತ್ರವಾಗಿ ಸಾಗದೇ ಇದ್ದ ಕಾರಣ ಭಾರತ ಸರ್ಕಾರವು ಫ್ರಾನ್ಸಿನಿಂದ ೩೬ ವಿಮಾನಗಳನ್ನು ತುರ್ತಾಗಿ ಪಡೆಯಲು ಒಪ್ಪಂದವನ್ನು ಪರಿಷ್ಕರಿಸಬೇಕಾಯಿತು. ಆಗ ನಾನು ರಿಲಯನ್ಸ್  ಜೊತೆಗೆ ಮುಂದುವರೆಯುವ ನಿರ್ಧಾರ ಕೈಗೊಂಡೆ. ಅಲ್ಲದೆ, ಕಳೆದ ಕೆಲವು ದಿನಗಳಿಂದ ತಾವು ಆಫ್ ಸೆಟ್ ಪಾಲುದಾರಿಕೆಯಲ್ಲಿ ತಮಗೆ ಆಸಕ್ತಿ ಇಲ್ಲ ಎಂಬುದಾಗಿ ಎಚ್ ಎಎಲ್ ಕೂಡಾ ಹೇಳಿತು. ಹೀಗಾಗಿ ಹೊಸ ಖಾಸಗಿ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡುವ ನಿರ್ಧಾರವನ್ನು ನಾನು ಮತ್ತು ರಿಲಯನ್ಸ್ ಕೈಗೊಂಡೆವು ಎಂದು ಸಿಇಒ ಹೇಳಿದರು. ಇದಕ್ಕೆ ಮುನ್ನ ಡಸ್ಸಾಲ್ಟ್ ಕಂಪೆನಿಯು ಆಫ್ ಸೆಟ್ ಹೊಂದಾಣಿಕೆಗಾಗಿ ಇತರ ಹಲವಾರು ಕಂಪೆನಿಗಳ ಜೊತೆ ಮಾತುಕತೆ ನಡೆಸಿತ್ತು. ನಾವು ಟಾಟಾ ಅಥವಾ ಬೇರೆ ಕುಟುಂಬ ಸಮೂಹಗಳ ಜೊತೆಗೆ ಹೋಗಬಹುದಾಗಿತ್ತು. ಆಗ ಮುಂದುವರೆಯುವ ಅನುಮತಿಯನ್ನು ಡಸ್ಸಾಲ್ಟ್ ಗೆ ಕೊಡುವ ಬಗ್ಗೆ ನಿರ್ಧಾರವಾಗಿರಲಿಲ್ಲ. ೨೦೧೧ರಲ್ಲಿ ನಾವು ಟಾಟಾ ಮತ್ತು ಇತರ ವೈಮಾನಿಕ ಕಂಪೆನಿಗಳ ಜೊತೆಗೆ ಮಾತುಕತೆ ನಡೆಸಿದ್ದೆವು. ಅಂತಿಮವಾಗಿ ದೊಡ್ಡ ಪ್ರಮಾಣದ ಎಂಜಿನಿಯರಿಂಗ್ ಸವಲತ್ತುಗಳ ಅನುಭವ  ಹೊಂದಿದ್ದ ಹಿನ್ನೆಲೆಯಲ್ಲಿ ರಿಲಯನ್ಸ್ ಜೊತೆಗೆ ಮುಂದುವರೆಯಲು ನಾವು ನಿರ್ಧರಿಸಿದೆವು ಎಂದು ಟ್ರಾಪಿಯರ್ ಹೇಳಿದರು. ‘ಅಂಬಾನಿಯನ್ನು ನಾವು ನಮ್ಮಷ್ಟಕ್ಕೆ ಆಯ್ಕೆ ಮಾಡಿದೆವು. ರಿಲಯನ್ಸ್ ಹೊರತಾಗಿ ನಾವು ಈಗಾಗಲೇ ೩೦ ಪಾಲುದಾರರನ್ನೂ ಹೊಂದಿದ್ದೇವೆ ಎಂದು ಸಿಇಒ ಹೇಳಿದರು. ವಿಮಾನದ ಬಗ್ಗೆ ಪ್ರಸ್ತಾಪಿಸಿದ ಡಸ್ಸಾಲ್ಟ್ ಮುಖ್ಯಸ್ಥ, ’ಪ್ರಸ್ತುತ ವಿಮಾನಗಳು ಎಲ್ಲ ಅಗತ್ಯ ಸಲಕರಣೆಗಳನ್ನು ಹೊಂದಿರುತ್ತವೆ, ಆದರೆ ಶಸ್ತ್ರಾಸ್ತ್ರ ಮತ್ತು ಕ್ಷಿಪಣಿಗಳನ್ನು ಅಲ್ಲ ಎಂದು ನುಡಿದರು. ಶಸ್ತ್ರಾಸ್ತ್ರಗಳನ್ನು ಪ್ರತ್ಯೇಕ ಒಪ್ಪಂದದಂತೆ ಕಳುಹಿಸಲಾಗುವುದು. ಆದರೆ ಶಸ್ತ್ರಾಸ್ತ್ರಗಳ ಹೊರತಾದ ಎಲ್ಲ ಅಗತ್ಯ ಸವಲತ್ತುಗಳೊಂದಿಗೆ ವಿಮಾನವನ್ನು ಡಸ್ಸಾಲ್ಟ್ ಒದಗಿಸುವುದು ಎಂದು ಅವರು ಹೇಳಿದರು.
2018: ಬೆಂಗಳೂರು: ಹಿಂದಿನ ದಿನ ಬೆಳಗ್ಗೆ ನಿಧನ ರಾದ ಕೇಂದ್ರ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ಅನಂತ ಕುಮಾರ್ ಅವರ ಅಂತ್ಯಸಂಸ್ಕಾರ  ಈದಿನ ಮಧ್ಯಾಹ್ನ ಚಾಮರಾಜಪೇಟೆ ಯ ರುದ್ರಭೂಮಿಯಲ್ಲಿ ಅಪಾರ ಸಂಖ್ಯೆಯ ಬೆಂಬಲಗರ ಆಶ್ರುತರ್ಪಣದ ನಡುವೆಯೇ ಸಕಲ ಸರಕಾರಿ ಗೌರವದೊಂದಿಗೆ ವೈದಿಕ ಸಂಪ್ರದಾಯದಂತೆ ನೆರವೇರಿತು. ಚಾಮರಾಜಪೇಟೆಯ ಹಿಂದೂ ರುದ್ರಭೂ ಮಿಯಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಅವರ ಸಹೋದರ ನಂದಕುಮಾರ್ ವಿಧಿವಿಧಾನ ನೆರವೇರಿಸಿದರು.ರಕ್ಷಣಾ ಇಲಾಖೆಯ ಮೂರು ಪಡೆಗಳು ಅನಂತಕುಮಾರ್ ಪಾರ್ಥಿವ ಶರೀರಕ್ಕೆ ರಾಷ್ಟ್ರಧ್ವಜ ಹೊದಿಸಿ ಗೌರವ ಸಲ್ಲಿಸಿದವು.  ವೈದಿಕ ಧರ್ಮಶಾಸ್ತ್ರ ಪಂಡಿತ ಭಾನು ಪ್ರಕಾಶ್ ಶರ್ಮಾ, ಧಾರ್ಮಿಕ ವಿಧಿವಿಧಾನ ನಡೆಸಿ ಕೊಟ್ಟರು. ಸುಮಾರು ೪೫ ನಿಮಿಷಗಳ ಕಾಲ ಬ್ರಾಹ್ಮಣ ಸಮುದಾಯದ ಆಶ್ವಲಾಯನ ಸ್ಮಾರ್ತ ಸಂಪ್ರದಾಯದಂತೆ ಅಂತಿಮ ವಿಧಿ ವಿಧಾನ ನಡೆಯಿತು.  ಶಾಸ್ತ್ರ ಸಂಪ್ರದಾಯ, ಪ್ರಾಯಶ್ಚಿತ್ತ ಸಂಕಲ್ಪ ಮಾಡಲಾಯಿತು. ಚಿತೆಯ ಮೇಲೆ ಪಾರ್ಥಿವ ಶರೀರವಿಟ್ಟು ದಹ್ಯಮಾನ ಮಂತ್ರ ಪಠಣ ಮಾಡಿದ ಬಳಿಕ ಶವದ ಬಲಭಾಗಕ್ಕೆ ಅನಂತ ಕುಮಾರ್ ಸಹೋದರ ನಂದಕುಮಾರ್ ಅಗ್ನಿ ಸ್ಪರ್ಶ ಮಾಡಿದರು. ಬಿಜೆಪಿ ಮುಖಂಡರಾದ ಎಲ್‌ಕೆ ಅಡ್ವಾಣಿ, ಅಮಿತ್ ಶಾ, ಗೃಹ ಸಚಿವ ರಾಜ್ ನಾಥ್ ಸಿಂಗ್, ಕಾನೂನು ಸಚಿವ ರವಿಶಂಕರ ಪ್ರಸಾದ್, ರಕ್ಷಣಾ ಸಚಿವೆ ನಿರ್ಮಲಾ ಸೀತಾ ರಾಮನ್,ರೈಲ್ವೆ ಸಚಿವ ಪಿಯೂಶ್ ಗೊಯೆಲ್, ರಾಜ್ಯ ಸಚಿವರಾದ ಡಿಕೆ ಶಿವಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಕೇಂದ್ರ ಸಚಿವ ಸದಾನಂದ ಗೌಡ ಮತ್ತಿತರರು ಅನಂತ ಕುಮಾರ್‌ಗೆ ಪುಷ್ಪ ನಮನ ಸಲ್ಲಿಸಿದರು. ನ್ಯಾಶನಲ್ ಕಾಲೇಜು ಮೈದಾನದಲ್ಲಿ ಉಪರಾಷ್ಟಪತಿ ವೆಂಕಯ್ಯ ನಾಯ್ಡು ಅವರು ಅನಂತಕುಮಾರ್‌ಗೆ ಅಂತಿಮ ನಮನ ಸಲ್ಲಿಸಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.  ಹಿಂದಿನ ದಿನ ಇಡೀ ಅನಂತಕುಮಾರ್ ಪಾರ್ಥಿವ ಶರೀರವನ್ನು ಬಸವನಗುಡಿಯಲ್ಲಿ ರುವ ಅವರ ನಿವಾಸದಲ್ಲಿ ಇಡಲಾಗಿತ್ತು. ರಾತ್ರಿ ಪ್ರಧಾನಿ ನರೇಂದ್ರ ಮೋದಿ ಅವರು ನಗರಕ್ಕೆ ಆಗಮಿಸಿ ಅಂತಿಮ ನಮನ ಸಲ್ಲಿಸಿದ ಕುಟುಂಬ ಸದಸ್ಯರನ್ನು ಸಂತೈಸಿದ್ದರು. ಈದಿನ ಬೆಳಗ್ಗೆ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗಿತ್ತು. ಬಳಿಕ ನ್ಯಾಶನಲ್ ಕಾಲೇಜು ಮೈದಾನಕ್ಕೆ ಪಾರ್ಥಿವ ಶರೀರವನ್ನು ಸ್ಥಳಾಂತರಿಸಲಾಯಿತು.  ಕಳೆದ ಕೆಲ ತಿಂಗಳುಗಳಿಂದ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅನಂತ್ ಕುಮಾರ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಹಿಂದಿನ ದಿನ ಬೆಳಗಿನ ಜಾವ ೩.೩೦ರ ಸುಮಾರಿಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.  ಬಿಜೆಪಿ ಹಿರಿಯ ನಾಯಕ ಲಾಲ್ಕೃಷ್ಣ ಅಡ್ವಾಣಿ ಅವರು ಶಿಷ್ಯ ಅನಂತ್ಕುಮಾರ್ಅವರ ಅಂತಿಮ ದರ್ಶನಕ್ಕೆ ಆಗಮಿಸಿದ್ದರು. ಅನಂತ್ಕುಮಾರ್ಅವರ ಪಾರ್ಥೀವ ಶರೀರ ಕಂಡು ಕಂಬನಿ ಮಿಡಿದರು. ಕೇಂದ್ರ ಸಚಿವರಾದ ರಾಜ್ನಾಥ್ಸಿಂಗ್‌, ನಿರ್ಮಲಾ ಸೀತಾರಾಮನ್‌ , ಡಿ.ವಿ.ಸದಾನಂದ ಗೌಡ ಸೇರಿ 20 ಕ್ಕೂ ಹೆಚ್ಚು ಮಂದಿ ಅಂತಿಮ ಕ್ರಿಯೆಯಲ್ಲಿ ಹಾಜರಾಗಿ  ಗೌರವ ಸಮರ್ಪಣೆ ಮಾಡಿದರುರಾಜ್ಯ ಸರ್ಕಾರದ ಪರವಾಗಿ ಸಚಿವ ಡಿ.ಕೆ.ಶಿವಕುಮಾರ್ಅವರು ಅಂತಿಮ ನಮನ ಸಲ್ಲಿಸಿದರುಅಂತ್ಯಕ್ರಿಯೆ ವೇಳೆ ಸಾವಿರಾರು ಮಂದಿ ಅಭಿಮಾನಿಗಳು,ಬಿಜೆಪಿ ಕಾರ್ಯಕರ್ತರು , ಮುಖಂಡರು ಅಮರ್ರಹೇ ಅನಂತ್ಕುಮಾರ್‌..ಅಮರ್ರಹೇ ಅನಂತ್ಕುಮಾರ್ಎಂಬ ಘೋಷಣೆಗಳನ್ನು ಮೊಳಗಿಸಿದರುಸಾರ್ವಜನಿಕರಿಗೆ ಅಂತಿಮ ವಿಧಿಗಳನ್ನು ವೀಕ್ಷಿಸುವ ಸಲುವಾಗಿ ಮೈದಾನದ ಹೊರಗೆ ಬೃಹತ್ಎಲ್ಇಡಿ ಸ್ಕ್ರೀನ್ಗಳನ್ನು ಅಳವಡಿಸಲಾಗಿತ್ತು. ರುದ್ರಭೂಮಿಯತ್ತ ಲಕ್ಷಾಂತರ ಜನರು ಹರಿದು ಬಂದಿದ್ದರು.

2018: ನವದೆಹಲಿ: ವಿಮಾನ ಹಾರಾಟಕ್ಕೆ ಮುನ್ನ ನಡೆಸಲಾದ ಆಲ್ಕೋಹಾಲ್ ಪರೀಕ್ಷೆಯಲ್ಲಿ ವಿಫಲರಾದ ಏರ್ ಇಂಡಿಯಾದ ಹಿರಿಯ ಪೈಲಟ್ ಕ್ಯಾಪ್ಟನ್ ಅರವಿಂದ ಕತ್ಪಾಲಿಯಾ ಅವರನ್ನು ಮೂರು ವರ್ಷಗಳ ಅವಧಿಗೆ ವಿಮಾನ ಹಾರಿಸದಂತೆ ನಿಷೇಧಿಸಿದ ಒಂದು ದಿನದ ಬಳಿಕ ಕಾರ್ಯಾಚರಣೆಗಳ ನಿರ್ದೇಶಕ ಸ್ಥಾನದಿಂದಲೂ ವಜಾ ಮಾಡಲಾಯಿತು. ಕ್ಯಾಪ್ಟನ್ ಅಮಿತಾಭ್ ಸಿಂಗ್ ಅವರಿಗೆ ಕಾರ್ಯಾಚರಣೆ ನಿರ್ದೇಶಕ ಹುದ್ದೆಯನ್ನು ಹೆಚ್ಚುವರಿಯಾಗಿ ವಹಿಸಲಾಯಿತು. ಲಂಡನ್ನಿನಿಂದ ನವದೆಹಲಿಗೆ ವಿಮಾನ ಹಾರಿಸಬೇಕಾಗಿದ್ದ ಪೈಲಟ್ ಕ್ಯಾಪ್ಟನ್ ಕತ್ಪಾಲಿಯಾ ಅವರನ್ನು ವಿಮಾನ ಹಾರಾಟಕ್ಕೆ ಮುನ್ನ ಆಲ್ಕೋಹಾಲ್ ಪರೀಕ್ಷೆಗೆ ಒಳಪಡಿಸಿದಾಗ ಅವರ ರಕ್ತದಲ್ಲಿ ಆಲ್ಕೋಹಾಲ್ ಪ್ರಮಾಣ ಅತಿಯಾದ ಪ್ರಮಾಣದಲ್ಲಿ ಕಂಡು ಬಂದಿತ್ತು. ಇದನ್ನು ಅನುಸರಿಸಿ ಮೂರು ವರ್ಷಗಳ ಅವಧಿಗೆ ವಿಮಾನ ಹಾರಿಸದಂತೆ ಅವರನ್ನು ನಿಷೇಧಿಸಲಾಗಿತ್ತು. ಪರೀಕ್ಷೆಯಲ್ಲಿ ವಿಫಲರಾದ ಬಳಿಕ ಅವರನ್ನು ವಿಮಾನದಿಂದ ಹೊರಕ್ಕೆ ಕಳುಹಿಸಲಾಗಿತ್ತು.


2018: ನವದೆಹಲಿ:  ಫ್ಲಿಪ್ಕಾರ್ಟ್ಸಹ ಸ್ಥಾಪಕ ಮತ್ತು ಸಮೂಹದ ಸಿಇಓ ಆಗಿರುವ ಬಿನ್ನಿ ಬನ್ಸಾಲ್ಅವರು ತತ್ಕ್ಷಣದಿಂದ ಜಾರಿಗೆ ಬರುವಂತೆ ಕಂಪೆನಿಗೆ ರಾಜೀನಾಮೆ ನೀಡಿದರು. ಬನ್ಸಾಲ್ವಿರುದ್ಧ ಇರುವ ಗಂಭೀರ ವೈಯಕ್ತಿಕ ಲೈಂಗಿಕ ದುರ್ವರ್ತನೆಯ ಆರೋಪಗಳ ಬಗ್ಗೆ ಫ್ಲಿಪ್ಕಾರ್ಟ್ಮತ್ತು ಸಂಸ್ಥೆಯ ಹಾಲಿ ಮಾಲಕ ವಾಲ್ಮಾರ್ಟ್ಪರವಾಗಿ ನಡೆಸಲಾದ ಸ್ವತಂತ್ರ ತನಿಖೆಯನ್ನು ಅನುಸರಿಸಿ ಬನ್ಸಾಲ್ರಾಜೀನಾಮೆ ನೀಡಿರುವುದಾಗಿ ಕಂಪೆನಿಯ ಹೇಳಿಕೆ ತಿಳಿಸಿದೆ. ಆದರೆ ಬನ್ಸಾಲ್ತನ್ನ ವಿರುದ್ಧದ ಆರೋಪಗಳನ್ನು ಬಲವಾಗಿ ಅಲ್ಲಗಳೆದರು. ಫ್ಲಿಪ್ಕಾರ್ಟ್ಸಂಸ್ಥೆಯ ನಿಯಂತ್ರಣ ಪ್ರಕೃತ ವಾಲ್ಮಾರ್ಟ್ಇಂಕ್ಕೈಯಲ್ಲಿದೆ.  ವಾಲ್ಮಾರ್ಟ್ ವರ್ಷ ಮೇ ತಿಂಗಳಲ್ಲಿ  16 ಶತಕೋಟಿ ಡಾಲರ್ತೆತ್ತು ಫ್ಲಿಪ್ಕಾರ್ಟ್ ಶೇ.77 ಒಡೆತನವನ್ನು ವಶಪಡಿಸಿಕೊಂಡಿತ್ತು.



2018: ನವದೆಹಲಿ:   ಕ್ಯಾನ್ಸರ್ ನಿಂದ ಹಿಂದಿನ ದಿನ ಮುಂ ಜಾನೆ ನಿಧನರಾದ ಕೇಂದ್ರ ಸಚಿವ ಅನಂತ್ಕುಮಾರ್ ಅವರು ನಿರ್ವಹಿಸು ತ್ತಿದ್ದ ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯನ್ನು ಡಿ.ವಿ. ಸದಾನಂದ ಗೌಡರಿಗೆ ವಹಿಸಲಾಯಿತು. ಪ್ರಸ್ತುತ ಕೇಂದ್ರ ಸರ್ಕಾರದಲ್ಲಿ ಸಾಂ ಖ್ಯಿಕ ಮತ್ತು ಯೋಜನೆಗಳ ಜಾರಿ ಸಚಿವರಾಗಿ ಅಧಿಕಾರದಲ್ಲಿರುವ ಡಿ.ವಿ. ಸದಾನಂದ ಗೌಡರಿಗೆ ಹೆಚ್ಚುವರಿ ಜವಾ ಬ್ದಾರಿಯನ್ನು ನೀಡಲಾಯಿತು. ಮೂಲಕ ಕರ್ನಾಟಕದವರೇ ಆದ ಡಿ.ವಿ. ಸದಾನಂದ ಗೌಡರಿಗೆ ಅನಂತ್ ಕುಮಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಂತ್ರಿ ಸ್ಥಾನ ಲಭಿಸಿತು. ಸಂಸದೀಯ ವ್ಯವಹಾರಗಳ ಖಾತೆ ಯನ್ನೂ ದಿ. ಅನಂತ್ ಕುಮಾರ್ ನಿರ್ವ ಹಿಸುತ್ತಿದ್ದರು. ಖಾತೆಯನ್ನು ಈಗ ಕೇಂದ್ರ ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವರಾಗಿರುವ ನರೇಂದ್ರ ಸಿಂಗ್ ತೋಮರ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹಂಚಿಕೆ ಮಾಡಿದರು. ಖಾತೆ ಬದಲಾವಣೆಗೆ ರಾಷ್ಟ್ರಪತಿ ರಾಮನಾಥ ಕೋವಿಂದ ಅವರಿಂದ ಅಂಕಿತ ಸಿಕ್ಕಿತು.

2016: ಪಣಜಿ (ಗೋವಾ): 70 ವರ್ಷಗಳಿಂದ ದೇಶವನ್ನು ಲೂಟಿ ಹೊಡೆದವರು ಈಗ ತೊಂದರೆಯಲ್ಲಿದ್ದಾರೆ. ಅವರು ನನ್ನನ್ನು ಜೀವಂತ ಇರಲು ಬಿಡಲಾರರು, ನನ್ನನ್ನು ಸರ್ವನಾಶ ಮಾಡಿಯಾರು ಎಂಬುದು ನನಗೆ ಗೊತ್ತಿದೆ, ಆದರೆ ನಾನು ಅವರನ್ನು ಎದುರಿಸಲು ಸಿದ್ಧನಾಗಿದ್ದೇನೆ ಎಂದು ಈದಿನ ಇಲ್ಲಿ ನುಡಿದ ಪ್ರಧಾನಿ ನರೇಂದ್ರ ಮೋದಿ ಅವರು ಭ್ರಷ್ಟಾಚಾರದ ವಿರುದ್ಧ ಹೋರಾಡಲೆಂದೇ ನಾನು ಬಂದಿದ್ದೇನೆ. ಪ್ರಾಮಾಣಿಕ ಪ್ರಜೆಗಳೇ 50 ದಿನ ನನ್ನೊಂದಿಗೆ ಬನ್ನಿ, ಎಲ್ಲ ಸಮಸ್ಯೆಗಳು ಬಗೆ ಹರಿಯುತ್ತವೆ ಎಂದು ಕರೆ ನೀಡಿದರು. ಗೋವಾದ ಮೊಪಾ ಪೀಠಭೂಮಿಯಲ್ಲಿ ಗ್ರೀನ್ ಫೀಲ್ಡ್ ವಿಮಾನ ನಿಲ್ದಾಣದ ಶಿಲಾನ್ಯಾಸ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಭ್ರಷ್ಟಾಚಾರದ ಹಾವಳಿಯನ್ನು ಕಿತ್ತು ಹಾಕುವ ಹೋರಾಟದಲ್ಲಿ ಆಶೀರ್ವಾದ ನೀಡಿ ಎಂದು ಜನತೆಗೆ ಮನವಿ ಮಾಡಿದರು. 500 ರೂಪಾಯಿ ಮತ್ತು 1000 ರೂಪಾಯಿ ನೋಟು ರದ್ಧತಿ ಪ್ರಕ್ರಿಯೆ 10 ತಿಂಗಳ ಹಿಂದೆಯೇ ಆರಂಭಗೊಂಡಿತ್ತು ಎಂದು ವಿವರಿಸಿದ ಅವರು ಭಾರಿ ಹಗರಣಗಳಲ್ಲಿ ಶಾಮೀಲಾಗಿದ್ದವರು ಈಗ ಕಷ್ಟದಲ್ಲಿ ಸಿಲುಕಿದ್ದಾರೆ, 4000 ರೂಪಾಯಿಗಳನ್ನು ಪಡೆಯಲು ಅವರು ಸರದಿಯ ಸಾಲಿನಲ್ಲಿ ನಿಂತು ಕಾಯಬೇಕಾಗಿದೆ ಎಂದು ಹೇಳಿದರು. ನೋಟು ರದ್ದು ಕ್ರಮವನ್ನು ಸೊಕ್ಕು ಪ್ರದರ್ಶನಕ್ಕಾಗಿ ಕೈಗೊಂಡಿಲ್ಲ. ನಾನು ಬಡತನವನ್ನು ನೋಡಿದ್ದೇನೆ ಮತ್ತು ಜನರ ಕಷ್ಟಗಳನ್ನು ಅರಿತಿದ್ದೇನೆ. ನನಗೂ ನೋವಾಗುತ್ತಿದೆ. ಯಾರು ರಾಜಕೀಯ ಮಾಡಬಯಸಿದ್ದಾರೋ ಅವರು ಅದನ್ನೇ ಮಾಡುತ್ತಿರಲಿ. ಲೂಟಿ ಮಾಡಿದವರು ಆರೋಪ ಮಾಡುತ್ತಲೇ ಇರಲಿ, ಆದರೆ ಪ್ರಾಮಾಣಿಕ ದೇಶವಾಸಿಗಳೇ ಕೇವಲ 50 ದಿನ ನನ್ನೊಂದಿಗೆ ಬನ್ನಿ. ಕಷ್ಟಗಳು ಬಗೆಹರಿಯುತ್ತವೆ ಎಂದು ಪ್ರಧಾನಿ ನುಡಿದರು.

2016: ಪಣಜಿ (ಗೋವಾ): ಗೋವಾದ ಮೋಪಾ ಪೀಠಭೂಮಿಯಲ್ಲಿ ಗ್ರೀನ್ಫೀಲ್ಡ್ ವಿಮಾನ ನಿಲ್ದಾಣದ ಶಿಲಾನ್ಯಾಸ ಸಮಾರಂಭದಲ್ಲಿ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿ ಅವರು ಭಾವೋದ್ವೇಗಕ್ಕೆ ಒಳಗಾದ ಘಟನೆ ಈದಿನ ಘಟಿಸಿತು. ಭಾರತದಲ್ಲಿ ಯಾವುದೇ ಹಣ ಲೂಟಿಯಾದರೆ ಮತ್ತು ಭಾರತದ ತೀರದಿಂದ ಆಚೆಗೆ ಹೋದರೆ, ಅದನ್ನು ಪತ್ತೆ ಹಚ್ಚುವುದು ನಮ್ಮ ಕರ್ತವ್ಯ. ಹಲವಾರು ಸಂಸತ್ ಸದಸ್ಯರು ನನ್ನ ಬಳಿ ಚಿನ್ನಾಭರಣ ಖರೀದಿಗೆ ಪಾನ್ (ಪಿಎ ಎನ್) ಕಡ್ಡಾಯ ಮಾಡಬೇಡಿ ಎಂದು ನನ್ನನ್ನು ಆಗ್ರಹಿಸಿದ್ದರು ಎಂಬುದನ್ನು ತಿಳಿದರೆ ನಿಮಗೆ ಆಘಾತವಾಗಬಹುದು ಎಂದು ಪ್ರಧಾನಿ ಹೇಳಿದರು. ಮುಂದುವರೆದ ಅವರು ‘‘ನಾನು ಉನ್ನತ ಕಚೇರಿಯ ಕುರ್ಚಿಯಲ್ಲಿ ಕೂರಲೆಂದು ಹುಟ್ಟಿದವನಲ್ಲ. ನನ್ನ ಎಲ್ಲವನ್ನೂ, ನನ್ನ ಕುಟುಂಬವನ್ನು, ನನ್ನ ಮನೆಯನ್ನು ನಾನು ದೇಶಕ್ಕಾಗಿ ತೊರೆದಿದ್ದೇನೆ (ದೇಶ್ ಕೆ ಲಿಯೆ ಘರ್ ಪರಿವಾರ್ ಛೋಡಾ ಹೈ, ಸಬ್ ಕುಚ್ ದೇಶ್ ಕೆ ನಾಮ್ ಕರಾ ಹೈ) ಎಂದು ಹೇಳುತ್ತಾ ಪ್ರಧಾನಿ ಭಾವೋದ್ಯೋಗಕ್ಕೆ ಒಳಗಾಗಿ ಗದ್ಗದಿತರಾದರು. ಅವರ ಕಣ್ಣಂಚಿನಲ್ಲಿ ನೀರು ತುಂಬಿತು. ತಮ್ಮ ನಿರರ್ಗಳ ಭಾಷಣವನ್ನು ಕೆಲ ನಿಮಿಷ ನಿಲ್ಲಿಸಿ ನೀರು ಕುಡಿದರು. ಆಮೇಲೆ ಮಾತು ಮುಂದುವರೆಸಿದ ಅವರು ನಮ್ಮ ಯುವಕರ ಭವಿಷ್ಯವನ್ನು ನಾವು ಏಕೆ ಅಪಾಯಕ್ಕೆ ತಳ್ಳಬೇಕು? ಎಂದು ಪ್ರಶ್ನಿಸಿ ರಾಜಕೀಯ ಮಾಡಬಯಸುವವರು ಹಾಗೆ ಮಾಡಲು ಮುಕ್ತರಾಗಿದ್ದಾರೆ ಎಂದು ನುಡಿದರು.

2016: ನವದೆಹಲಿ
: ಬ್ಯಾಂಕ್ಖಾತೆಯಿಂದ ಹಣ  ಹಿಂತೆಗೆದುಕೊಳ್ಳವುದರ ಮೇಲಿನ ಮಿತಿಯನ್ನು
ವಾರಕ್ಕೆ ರೂ.20,000ದಿಂದ ರೂ.24,000ಕ್ಕೆ ಏರಿಸಲಾಗಿದೆ ಎಂದು ವಿತ್ತ ಸಚಿವ ಅರುಣ್ಜೇಟ್ಲಿ ತಿಳಿಸಿದರು. ಬ್ಯಾಂಕ್ಖಾತೆಯಿಂದ ದಿನಕ್ಕೆ ರೂ. 10,000 ಹಿಂತೆಗೆದುಕೊಳ್ಳುವುದರ ಮೇಲಿನ ನಿರ್ಬಂಧವನ್ನೂತೆಗೆದು ಹಾಕಲಾಯಿತು. ಹೀಗಾಗಿ ಇನ್ನು ಮುಂದೆ ಬ್ಯಾಂಕ್ಖಾತೆಯಿಂದ ವಾರದಲ್ಲಿ ಒಂದೇ ಬಾರಿ ರೂ.24,000 ಹಿಂತೆಗೆದುಕೊಳ್ಳಬಹುದು. ಇದಲ್ಲದೆ ಹಳೆಯ ನೋಟುಗಳ ವಿನಿಮಯ ಮೊತ್ತವನ್ನು ರೂ.4,000ದಿಂದ ರೂ.4,500ಕ್ಕೆ ಹೆಚ್ಚಿಸಬೇಕು ಹಾಗೂ ಎಟಿಎಂಗಳಿಂದ ದಿನಕ್ಕೆ ಹಣ ತೆಗೆದುಕೊಳ್ಳುವ ಮಿತಿಯನ್ನು ರೂ.2,000ದಿಂದ ರೂ.2,500ಕ್ಕೆ ಹೆಚ್ಚಿಸಬೇಕೆಂದು ಬ್ಯಾಂಕ್ಗಳು ಸಲಹೆ ನೀಡಿವೆ ಎಂದು ಹಣಕಾಸು ಸಚಿವಾಲಯ ತಿಳಿಸಿತು.
2016: ಬೆಳಗಾವಿ: 'ನೋಟು ರದ್ದು' ನಿರ್ಧಾರದಿಂದಾಗಿ ಮುಗ್ದ ಜನರಿಗೆ ಕಷ್ಟವಾಗುತ್ತಿದೆ ನಿಜ. ಆದರೆ
ಡಿಸೆಂಬರ್ 30ರವರೆಗೆ ನಮ್ಮೊಂದಿಗೆ ಸಹಕರಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನರಲ್ಲಿ ಮನವಿ ಮಾಡಿದರು. ರೂ.500 ಮತ್ತು ರೂ.1000 ಮುಖಬೆಲೆ ನೋಟು ರದ್ದು ಮಾಡುವುದರಿಂದ ಸಾಮಾನ್ಯ ಜನರು ಕಷ್ಟ ಅನುಭವಿಸುತ್ತಿದ್ದಾರೆ. ನಮ್ಮ  ಸರ್ಕಾರ ಮುಗ್ದ ಜನರಿಗೆ ತೊಂದರೆ ಮಾಡಲು ಬಯಸುವುದಿಲ್ಲ. ಅದೇ ವೇಳೆ ತಪ್ಪು ಮಾಡಿದವರನ್ನು ಶಿಕ್ಷಿಸದೇ ಬಿಡುವುದಿಲ್ಲ. ಡಿಸೆಂಬರ್ 30 ವರೆಗೆ ನಮಗೆ ಸಹಕಾರ ನೀಡಿ ಎಂದು ಕೆಎಲ್ಇ ಸಂಸ್ಥೆ ಶತಮಾನೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಮೋದಿ ಹೇಳಿದರು. ಕೆಎಲ್ಇ ಸಂಸ್ಥೆಯನ್ನು ಶ್ಲಾಘಿಸಿದ ನಂತರ ನೋಟು ರದ್ದು ನಿರ್ಧಾರದ ಬಗ್ಗೆ ಮಾತನಾಡಿದ ಪ್ರಧಾನಿ, ನಾವು  ರೂ.500 ಮತ್ತು ರೂ.1000 ನೋಟುಗಳನ್ನು ರದ್ದು ಮಾಡಿದ್ದು ಯಾಕೆ? ಎಂದು ಕಾಂಗ್ರೆಸ್ ಪ್ರಶ್ನಿಸುತ್ತಿದೆ. ಅಂದಹಾಗೆ ಅವರು 25 ಪೈಸೆಯನ್ನು ರದ್ದು ಮಾಡಿದಾಗ ನಾನು ಅವರನ್ನು ಪ್ರಶ್ನಿಸಿದ್ದೆನೇ?. ಕಾಂಗ್ರೆಸ್ 25 ಪೈಸೆಯನ್ನು ರದ್ದು ಮಾಡಿತು, ಯಾಕೆಂದರೆ ಅದು ಅವರ ಅಧಿಕಾರದ ಮಿತಿಯಲ್ಲಿತ್ತು. 2012, 2013  ಮತ್ತು 2014 ಮೊದಲಾರ್ಧದಲ್ಲಿ ಯಾವುದು ಸುದ್ದಿಯಾಗಿದ್ದು ಹೇಳಿ? ಹಗರಣಗಳು ಮತ್ತು ಭ್ರಷ್ಟಾಚಾರಗಳು ಅಲ್ಲವೇ? ನವೆಂಬರ್ 8 ನಂತರ ಅವರ ಪರಿಸ್ಥಿತಿಯನ್ನು ನೋಡಿ. ನವೆಂಬರ್ 8 ರಾತ್ರಿ ದೇಶದಲ್ಲಿರುವ ಬಡವರು ಸುಖವಾಗಿ ನಿದ್ದೆ ಮಾಡಿದರು. ಧನಿಕರು ನಿದ್ದೆ ಮಾತ್ರೆ ಖರೀದಿಸಲು ಹೊರಗೆ ಹೋದರು. ಇಲ್ಲಿ ನೋವಿದೆ, ಆದರೆ ನೋವಿನಿಂದ ದೇಶಕ್ಕೆ ಲಾಭವಾಗುತ್ತಿದೆ. ಗಂಗಾ ನದಿಗೆ 25 ಪೈಸೆ ನಾಣ್ಯ ಎಸೆಯದೇ ಇದ್ದವರು ಈಗ  ರೂ.500 ಮತ್ತು ರೂ.1000 ನೋಟುಗಳನ್ನು ಎಸೆಯುತ್ತಿದ್ದಾರೆ ಎಂದು ಹೇಳಿದ ಪ್ರಧಾನಿ ಡಿಸೆಂಬರ್ 30 ನಂತರವೂ ತಾನು ತನ್ನ ಕಾರ್ಯಾಚರಣೆಗಳನ್ನು ನಿಲ್ಲಿಸುವುದಿಲ್ಲ ಎಂದಿದ್ದಾದರು.
2016: ಚೆನ್ನೈ: ಜನರ ಪ್ರಾರ್ಥನೆಯಿಂದ ನಾನು ಮರುಹುಟ್ಟು ಪಡೆದಿದ್ದೇನೆ. ಶೀಘ್ರದಲ್ಲೇ ಕರ್ತವ್ಯಕ್ಕೆ ಮರಳಲಿದ್ದೇನೆಎಂದು ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ತಿಳಿಸಿದರು. ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ‘ತಮಿಳುನಾಡಿನಲ್ಲಿ ಮಾತ್ರವಲ್ಲದೆ ಹಲವು ರಾಜ್ಯಗಳಲ್ಲಿ ಹಾಗೂ ಜಗತ್ತಿನ ಹಲವೆಡೆ ನನ್ನ ಆರೋಗ್ಯಕ್ಕಾಗಿ ಜನ ಪ್ರಾರ್ಥನೆ ಮಾಡಿದ್ದಾರೆ. ಅವರ ಪ್ರಾರ್ಥನೆಯಿಂದ ನಾನು ಮರುಜನ್ಮ ಪಡೆದಿದ್ದೇನೆಎಂದು ಹೇಳಿದರು.  ತಂಜಾವೂರು, ಅರವಕುರಿಚಿ ಮತ್ತು ತಿರುಪರಕುಂದ್ರಮ್ವಿಧಾನಸಭಾ ಕ್ಷೇತ್ರಗಳ ಜನತೆ ತಮ್ಮ ಪಕ್ಷಕ್ಕೆ ಮತಹಾಕಬೇಕೆಂದು ಮನವಿ ಮಾಡಿದ ಜಯಲಲಿತಾ, ‘ಮೂರೂ ಕ್ಷೇತ್ರಗಳಲ್ಲಿ ಪಕ್ಷ ಜಯ ಸಾಧಿಸುವುದನ್ನು ನೋಡಲು ಕಾತರಿಸುತ್ತಿದ್ದೇನೆಎಂದರು. ಜನರ ಪ್ರೀತಿ ಮತ್ತು ವಿಶ್ವಾಸದಿಂದಾಗಿ ನಾನು ಈಗ ಪೂರ್ಣ ಗುಣಮುಖಳಾಗಿದ್ದೇನೆ. ಆದಷ್ಟು ಬೇಗ ಕರ್ತವ್ಯಕ್ಕೆ ಮರಳುತ್ತೇನೆಎಂದು ಎರಡು ಪುಟಗಳ ಪತ್ರಿಕಾ ಪ್ರಕಟಣೆಯಲ್ಲಿ ಜಯಲಲಿತಾ ತಿಳಿಸಿದರು. ಜಯಲಲಿತಾ ಅವರು ಸೆಪ್ಟೆಂಬರ್‌ 22ರಂದು ಚೆನ್ನೈನ ಅಪೋಲೊ ಆಸ್ಪತ್ರೆಗೆ ದಾಖಲಾಗಿದ್ದರು.
2016: ನವದೆಹಲಿ: ಭಾರತದ ಗಾಲ್ಫ್ ಆಟಗಾರ್ತಿ ಅದಿತಿ ಅಶೋಕ್ಇಂಡಿಯನ್ ಓಪನ್ ಕಿರೀಟ ಮುಡಿಗೇರಿಸಿಕೊಂಡರು.   ಮೂಲಕ  ಲೇಡೀಸ್ ಯುರೋಪಿಯನ್ ಟೂರ್ ಪಂದ್ಯವನ್ನು ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಅದಿತಿ ಭಾಜನರಾದರು.  ಒಂಭತ್ತನೇ ಸ್ಥಾನದಲ್ಲಿದ್ದ ಅದಿತಿ, 17ನೇ ಕುಳಿ (ಹೋಲ್) ನಂತರ 2ನೇ ಸ್ಥಾನಕ್ಕೆ ಜಿಗಿದಿದ್ದರು, ಇನ್ನೇನು ಕಿರೀಟ ಗೆಲ್ಲಲು ಒಂದೇ ಒಂದು ಪಾಯಿಂಟ್ ಅಂತರದಲ್ಲಿದ್ದಾಗ ಕೊನೆಯ ಹೋಲ್ ನಲ್ಲಿ ಉತ್ತಮ ಪ್ರದರ್ಶನ ನೀಡಿ ಪ್ರಸ್ತುತ ಕಿರೀಟವನ್ನು ತಮ್ಮದಾಗಿಸಿಕೊಂಡರು. ಮೊದಲ ಸುತ್ತಿನಲ್ಲಿ ಮತ್ತು ಮೂರನೇ ಸುತ್ತಿನಲ್ಲಿ 72 ಪಾಯಿಂಟ್ ಗಳಿಸಿದ್ದ ಅದಿತಿ ಎರಡನೇ ಸುತ್ತಿನಲ್ಲಿ 69 ಪಾಯಿಂಟ್ ಗಳಿಸಿದ್ದರುಬೆಂಗಳೂರು ಮೂಲದ 18 ಹರೆಯದ ಅದಿತಿ ರಿಯೊ ಒಲಿಂಪಿಕ್ಸ್ ನಲ್ಲಿಯೂ ಉತ್ತಮ ಪ್ರದರ್ಶನ ನೀಡಿದ್ದರು.

2016: ನವದೆಹಲಿ: ಸೂಕ್ತ ಮುಂದಾಲೋಚನೆ ಇಲ್ಲದೆ ನೋಟು ರದ್ದು ಮಾಡಿದ ಹಣಕಾಸು ಇಲಾಖೆಯ ಕ್ರಮ ಸರಿಯಲ್ಲಎಂದು ಬಿಜೆಪಿ ಸಂಸದ ಸುಬ್ರಮಣಿಯನ್ಸ್ವಾಮಿ ಕಿಡಿಕಾರಿದರು. ನೋಟು ರದ್ದತಿಯಿಂದ ಮುಂದಾಗುವ ಅನಾನುಕೂಲಗಳ ಬಗ್ಗೆ ಹಣಕಾಸು ಇಲಾಖೆ ಯೋಚಿಸಬೇಕಿತ್ತು. ಯೋಜಿತ ರೀತಿಯಲ್ಲಿ ಹೆಚ್ಚುವರಿ ಎಟಿಎಂ ಯಂತ್ರಗಳನ್ನು ಅಳವಡಿಸಬೇಕಿತ್ತು. ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಎಟಿಎಂ ಯಂತ್ರಗಳನ್ನು ಸ್ಥಾಪಿಸಬೇಕಿತ್ತುಎಂದು ಸ್ವಾಮಿ ಹೇಳಿದರು ಎಂದುಸೌತ್ಚೀನಾ ಮಾರ್ನಿಂಗ್ಪೋಸ್ಟ್‌’ ವರದಿ ಮಾಡಿತು. ಹಣಕಾಸು ಇಲಾಖೆಯು ಯಾವುದೇ ರೀತಿಯಲ್ಲಿ ಸಮರ್ಥನೆ ಮಾಡಿಕೊಳ್ಳಬಹುದು. ಆದರೆ, ಸಮರ್ಥನೆಗಳು ಕ್ಷಮಾರ್ಹವಲ್ಲಎಂದು ಸ್ವಾಮಿ ತಿಳಿಸಿದರು. ಭ್ರಷ್ಟಾಚಾರ ನಿಗ್ರಹಕ್ಕೆ ಭಾರತದಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಚೀನಾದ ಫಾರಿನ್ಕರೆಸ್ಪಾಂಡೆನ್ಟ್ಸ್ಕ್ಲಬ್ನಲ್ಲಿ ವಿಶೇಷ ಉಪನ್ಯಾಸ ನೀಡಲು ತೆರಳಿದ್ದ ಸ್ವಾಮಿ ಹಾಂಕಾಂಗ್ನಲ್ಲಿ ಮಾತನಾಡಿದರು.
2016: ಪುಣೆ: ಯಾರೊಬ್ಬರೂ 500 ಮತ್ತು 1000 ರೂಪಾಯಿಗಳ ಹಳೆಯ ನೋಟಿಗೆ ಬದಲಾಗಿ ಒಂದು ರೂಪಾಯಿ ಕೂಡಾ ಕಡಿಮೆ ಹಣ ಪಡೆಯಬೇಕಾಗಿಲ್ಲ. ನಿಮಗೆ ಕೊಟ್ಟಷ್ಟೇ ಮೊತ್ತದ ಹಣ ವಿನಿಮಯದಲ್ಲಿ ಸಿಗುತ್ತದೆ ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿ ಭರವಸೆ ನೀಡಿದರು. ಗೋವಾ ಮತ್ತು ಕರ್ನಾಟಕದ ಬೆಳಗಾವಿ ಕಾರ್ಯಕ್ರಮಗಳನ್ನು ಮುಗಿಸಿ ಪುಣೆಯಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ‘ಮೇರೆ ಕಿಸಾನ್ ಭಾಯಿಯೋ, ಆಪ್ ಪರ್ ಕೋಯಿ ಟ್ಯಾಕ್ಸ್ ಲಗ್ನೆವಾಲಾ ನಹೀ ಹೈ. ಆಪ್ ಬೆಫಿಕ್ರ್ ರಹಿಯೆ, ಯೇ ದೇಶ್ ಆಪ್ ಕಾ ಹೈ, ಮೋದಿ ಭೀ ಆಪ್ಕಾ ಹೈ. ಭ್ರಮ್ ಸೆ ಬಚಿಯೆ (ನನ್ನ ರೈತ ಸಹೋದರರೇ, ನಿಮ್ಮ ಮೇಲೆ ತೆರಿಗೆ ವಿಧಿಸುವವರು ಯಾರೂ ಇಲ್ಲ. ನೀವು ನಿಶ್ಚಿಂತೆಯಿಂದ ಇರಿ. ದೇಶ ನಿಮ್ಮದು, ಮೋದಿ ಕೂಡಾ ನಿಮ್ಮವರೇ. ಭ್ರಮೆಯಿಂದ ಪಾರಾಗಿ) ಎಂದು ಮೋದಿ ಮನವಿ ಮಾಡಿದರು. ನಾನು ನವೆಂಬರ್ 8ಕ್ಕೆ ಮುನ್ನ ಕ್ರಮವನ್ನು (ನೋಟು ರದ್ದು ಕ್ರಮ) ಕೈಗೊಳ್ಳಲು ಸಾಧ್ಯವಿರಲಿಲ್ಲ. ಏಕೆಂದರೆ ಹಣ ಸಂಗ್ರಹಿಸಿ ಇಟ್ಟವರು ಜಾಗೃತರಾಗುವ ಸಂದರ್ಭಗಳಿದ್ದವು ಎಂದು ಮೋದಿ ಹೇಳಿದರು.

 2016: ಕ್ರೈಸ್ಟ್ ಚರ್ಚ್: ನ್ಯೂಜಿಲೆಂಡ್ ಪ್ರಮುಖ ನಗರ ಕ್ರೈಸ್ಟ್ ಚರ್ಚ್ ಸಮೀಪದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿತು. ನಗರದಿಂದ ವಾಯವ್ಯ ಭಾಗದಲ್ಲಿ 91 ಕಿ.ಮೀ. ದೂರದಲ್ಲಿ ಭೂಕಂಪನ ಕೇಂದ್ರೀಕೃತವಾಗಿತ್ತು. ಭೂಕಂಪನದ ಕೇಂದ್ರ ಭೂಮಿಯಿಂದ 10 ಕಿ.ಮೀ. ಆಳದಲ್ಲಿತ್ತು ಎಂದು ಅಮೆರಿಕದ ಭೂವೈಜ್ಞಾನಿಕ ಅಧ್ಯಯನ ಸಂಸ್ಥೆ ತಿಳಿಸಿತು. ಈದಿನ ಸಂಜೆ 4.30 (ಸ್ಥಳೀಯ ಕಾಲಮಾನ) ಸುಮಾರಿಗೆ ಭೂಕಂಪನ ಸಂಭವಿಸಿತು. ಸಾವು ನೋವಿನ ಕುರಿತು ಮಾಹಿತಿ ಲಭ್ಯವಾಗಲಿಲ್. 2011 ಫೆಬ್ರವರಿಯಲ್ಲಿ ಕ್ರೈಸ್ಟ್ ಚರ್ಚ್ ಸಮೀ 6.3 ತೀವ್ರತೆಯ ಭೂಕಂಪನ ಸಂಭವಿಸಿತ್ತು. ಘಟನೆಯಲ್ಲಿ 185 ಜನರು ಮೃತಪಟ್ಟಿದ್ದರು ಮತ್ತು ಅಪಾರ ಪ್ರಮಾಣದ ಹಾನಿ ಸಂಭವಿಸಿತ್ತು.

2016: ಎರ್ಬಿಲ್ (ಇರಾಕ್): ಜಿಹಾದಿ ಇಸ್ಲಾಮೀ ಸ್ಟೇಟ್ (ಐಸಿಸ್) ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ, ಸ್ವಯಂಘೋಷಿತ ಖಲೀಫ ಅಬು ಬಕ್ರ್ ಅಲ್- ಬಗ್ದಾದಿ, ಉಗ್ರಗಾಮಿಗಳ ಕೊನೆಯ ಕೋಟೆಯಾದ ಮೊಸುಲ್ ನಿಂದ ಪರಾರಿಯಾಗಿದ್ದಾನೆ ಎಂದು ಇರಾಕಿನ ನೆನೆವಿಹ್ ಪ್ರಾಂತದ ಗವರ್ನರ್ ತಿಳಿಸಿದರು. ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ನೆನೆವಿಹ್ ಪ್ರಾಂತದ ಗವರ್ನರ್ ನೊಫಲ್ ಹಮದಿಲ್-ಸುಲ್ತಾನ್ ಅವರು ಭಯೋತ್ಪಾದಕ ಸಂಘಟನೆಯ ಸ್ವಯಂಘೋಷಿತ ಖಲೀಫ ಅಬು ಬಕ್ರ್ ಅಲ್-ಬಗ್ದಾದಿ ಮೊಸುಲ್ನಿಂದ ಪರಾರಿಯಾಗಿದ್ದು, ನಮಗೆ ವಿಜಯ ನಿಶ್ಚಿತ ಎಂದು ಹೇಳಿರುವುದಾಗಿ ಇಎಫ್ ಸುದ್ದಿ ಸಂಸ್ಥೆ ವರದಿ ಮಾಡಿತು. ಅಲ್-ಸುಲ್ತಾನ್ ಪ್ರಕಾರ, ಅಲ್-ಬಗ್ದಾದಿಯ ಕೊನೆಯ ಆಡಿಯೋ ಪ್ರಸಾರದ ಪ್ರಕಾರ ಅಲ್ ಬಗ್ದಾದಿ ಮೊಸುಲ್ ಬಿಟ್ಟಿರುವುದು ಖಚಿತವಾಗಿದೆ. ನವೆಂಬರ್ 3ರಂದು ಪ್ರಸಾರವಾದ ಬಗ್ದಾದಿಯ ಪ್ರಸಾರ ಭಾಷಣದಲ್ಲಿ ಬಗ್ದಾದಿ ತನ್ನ ಹಿಂಬಾಲಕರಿಗೆ ಮೊಸುಲ್ ತ್ಯಜಿಸಬೇಡಿ ಎಂದು ಆಗ್ರಹಿಸಿದ್ದ.


2008: ಕಾಂಗ್ರೆಸ್ ನಂತರ ಬಿಜೆಪಿ ಸರದಿ. `ಹಣಕ್ಕಾಗಿ ಟಿಕೆಟ್ ಮಾರಾಟ ಮಾಡಲಾಗಿದೆ, ಬಿಜೆಪಿಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ' ಎಂದು ಆರೋಪಿಸಿ ರಾಜಸ್ಥಾನದ ಭರತಪುರ್ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿಜೆಪಿ ಲೋಕಸಭಾ ಸದಸ್ಯ ವಿಶ್ವೇಂದ್ರ ಸಿಂಗ್ ಪಕ್ಷಕ್ಕೆ ಹಾಗೂ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ರಾಜಸ್ಥಾನದ ಮುಖ್ಯಮಂತ್ರಿ ವಸುಂಧರಾ ರಾಜೇ ಸಿಂಧ್ಯ ಅವರ ರಾಜಕೀಯ ಸಲಹಾಗಾರರಾಗಿದ್ದ ಸಿಂಗ್ ರಾಜೀನಾಮೆ ಪಕ್ಷಕ್ಕೆ ಭಾರಿ ಮುಜುಗರ ತಂದಿತು.

2008: ಮೆದುಳು ನಿಷ್ಕ್ರಿಯಗೊಂಡಿದ್ದ ಐದು ವರ್ಷದ ಬಾಲಕಿಯ ಅಂಗಾಂಗ ದಾನ ಮಾಡಲು ಪೋಷಕರು ಒಪ್ಪಿದ್ದರಿಂದ ಇತರ ಮೂರು ಜನರಿಗೆ ಅನುಕೂಲವಾದ ಘಟನೆ ತಿರುಚಿನಾಪಳ್ಳಿಯಲ್ಲಿ ನಡೆಯಿತು. `ಬ್ರೇನ್ ಸ್ಟೆಮ್ ಗ್ಲುಕೋಮ' ರೋಗಕ್ಕೆ ಎಂಟು ತಿಂಗಳಿನಿಂದ ತುತ್ತಾಗಿದ್ದ ಶುಭಾ ನಂದಿನಿಯ ಮೂತ್ರಪಿಂಡ, ಪಿತ್ತಜನಕಾಂಗ, ಪಾರದರ್ಶಕ ಪಟಲ ಹಾಗೂ ಹೃದಯವನ್ನು ದಾನ ಮಾಡಲು ಪೋಷಕರು ಒಪ್ಪಿದ್ದರು. ಮೂತ್ರಪಿಂಡವನ್ನು ತಿರುಚಿನಾಪಳ್ಳಿಯ ಎಬಿಸಿ ಆಸ್ಪತೆಯಲ್ಲಿ ಕಸಿ ಮಾಡಿ 46 ವರ್ಷದ ರೋಗಿಗೆ ಅಳವಡಿಸಲಾಯಿತು. ಪಾರದರ್ಶಕ ಪಟಲದ ಕಸಿಯನ್ನು ಸೆಂಟ್ ಜಾನ್ಸ್ ನೇತ್ರಸಂಸ್ಥೆಯಲ್ಲಿ ಮಾಡಲಾಯಿತು. ನಗರದಲ್ಲಿ ಹೃದಯ ಮತ್ತು ಪಿತ್ತಜನಕಾಂಗದ ಕಸಿಗೆ ಸೌಲಭ್ಯ ಇಲ್ಲದ ಕಾರಣ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಕಳುಹಿಸಲಾಯಿತು. `ಮಗಳ ಅಂಗಾಂಗ ದಾನದಿಂದ ಮೂರು ಜನರಿಗೆ ಅನುಕೂಲವಾಗಿರುವುದು ಸಂತಸ ತಂದಿದೆ' ಎಂದು ಬಾಲಕಿಯ ತಂದೆ ಮಾಣಿಕನಂದನ್ ಹೇಳಿದರು.

2008: ಆಫ್ರಿಕ ಖಂಡದ ದೇಶಗಳೊಡನೆ ಭಾರತದ ಸಂಬಂಧವನ್ನು ಉತ್ತಮಗೊಳಿಸಿರುವುದಕ್ಕೆ ಕೃತಜ್ಞತೆಯಿಂದ ಘಾನಾ ದೇಶವು ಆ ದೇಶದ ಉನ್ನತ ಪ್ರಶಸ್ತಿಯನ್ನು ಭಾರತದ ವಿದೇಶಾಂಗ ಇಲಾಖೆಯ ರಾಜ್ಯ ಸಚಿವ ಆನಂದ ಶರ್ಮ ಅವರಿಗೆ ನೀಡುವುದಾಗಿ ಅಕ್ರಾದಲ್ಲಿ (ಘಾನ) ಪ್ರಕಟಿಸಿತು.

2008: ಪೂರ್ವ ಆಫ್ಘಾನಿಸ್ಥಾನದ ನಂಗರ್ ಹಾರ್ ಪ್ರಾಂತ್ಯದಲ್ಲಿನ ಮಾರುಕಟ್ಟೆ ಪ್ರದೇಶವೊಂದರಲ್ಲಿ ಅಮೆರಿಕ ನೇತೃತ್ವದ ಸಮ್ಮಿಶ್ರ ಸೇನಾಪಡೆಗಳ ಬೆಂಗಾವಲು ವಾಹನದ ಮೇಲೆ ಆತ್ಮಹತ್ಯಾ ಕಾರು ಬಾಂಬ್ ದಾಳಿ ನಡೆದು ಕನಿಷ್ಠ 21 ಮಂದಿ ಮೃತರಾಗಿ ಇತರ 74 ಜನರು ಗಾಯಗೊಂಡರು. ಮೃತರಲ್ಲಿ ಒಬ್ಬ ಯೋಧ ಮತ್ತು ಮಂದಿ 20 ನಾಗರಿಕರು.

2008: ಪಾಕಿಸ್ಥಾನದ ವಾಯವ್ಯ ಪ್ರಾಂತ್ಯದಲ್ಲಿ ಅಪರಿಚಿತ ಬಂದೂಕುಧಾರಿಗಳು ಇರಾನ್ ರಾಜತಾಂತ್ರಿಕರೊಬ್ಬರನ್ನು ಅಪಹರಿಸಿ, ಅವರ ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿದ ಘಟನೆ ನಡೆಯಿತು. ಈ ಮಧ್ಯೆ, ತನ್ನ ರಾಜತಾಂತ್ರಿಕರು, ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಪೂರ್ಣಪ್ರಮಾಣದ ಭದ್ರತೆ ಒದಗಿಸುವಂತೆ ಪಾಕ್ ಸರ್ಕಾರವನ್ನು ಇರಾನ್ ಒತ್ತಾಯಿಸಿತು.

2008: ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸ್ವಯಂ ಸೇವಾ ಸಂಸ್ಥೆಗಳಿಗೆ ನೀಡುವ ತಲಾ ಒಂದು ಲಕ್ಷ ರೂಪಾಯಿ ಮೊತ್ತದ ಪ್ರಶಸ್ತಿ ಸರಗೂರಿನ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಹಾಗೂ ನಗರದ ಚೈಲ್ಡ್ ರೈಟ್ಸ್ ಟ್ರಸ್ಟಿಗೆ ದೊರಕಿತು. ಇದರ ಜೊತೆಯಲ್ಲಿ ತಲಾ 25 ಸಾವಿರ ರೂಪಾಯಿ ಮೊತ್ತದ ವೈಯಕ್ತಿಕ ಪ್ರಶಸ್ತಿಯನ್ನು ಚಾಮರಾಜನಗರದ ಆದಿವಾಸಿ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ನಿರ್ದೇಶಕ ಬಿ.ಎಸ್ ಬಸವರಾಜು ಹಾಗೂ ಕಾರವಾರದ ನಜೀರ್ ಅಹ್ಮದ್ ಯು ಶೇಖ್ ಅವರಿಗೆ ನೀಡಲಾಯಿತು.

2008: ಪೆಟ್ರೋಲಿಯಮ್ಮಿನಿಂದ ಜವಳಿ ಉದ್ಯಮದವರೆಗೂ ಮುಂಚೂಣಿ ಸ್ಥಾನ ಕಾಯ್ದುಕೊಂಡಿರುವ ರಿಲಯನ್ಸ್ ಇಂಡಸ್ಟ್ರೀಸ್ ಮಾಲೀಕ ಮುಖೇಶ್ ಅಂಬಾನಿ (51) ವಿಶ್ವದಲ್ಲೇ ಅತ್ಯಂತ ಶ್ರೀಮಂತ ಭಾರತೀಯ ಎಂದು `ಫೋಬ್ಸ್ ` ಪತ್ರಿಕೆ ಹೇಳಿತು. ಜಾಗತಿಕ ಆರ್ಥಿಕ ಬಿಕ್ಕಟ್ಟಿನಿಂದಾಗಿ ಷೇರುಪೇಟೆಯಲ್ಲಿ ಆಸ್ತಿ ಮೌಲ್ಯ ಕಳೆದುಕೊಳ್ಳುತ್ತಿರುವ ಅನಿವಾಸಿ ಭಾರತೀಯ ಉಕ್ಕು ಉದ್ಯಮಿ ಲಕ್ಷ್ಮಿ ಮಿತ್ತಲ್ ಎರಡನೇ ಸ್ಥಾನಕ್ಕಿಳಿದಿದ್ದಾರೆ ಎಂದು ಪತ್ರಿಕೆಯ ವಾರ್ಷಿಕ ಶ್ರೀಮಂತರ ಪಟ್ಟಿ ತಿಳಿಸಿತು.

2007: ಉಕ್ಕು, ಆಟೋಮೋಟಿವ್ ಮತ್ತು ದೂರವಾಣಿ ಸೇವೆ ಕ್ಷೇತ್ರಗಳಲ್ಲಿ ಜಾಗತಿಕ ಸಾಧನೆ ಮಾಡಿರುವ ಟಾಟಾ ಸಮೂಹ, ವಿಶ್ವದಲ್ಲೇ ನಾಲ್ಕನೇ ಸ್ಥಾನದ ವೇಗವನ್ನು ಹೊಂದಿರುವ ಸೂಪರ್ ಕಂಪ್ಯೂಟರ್ ಸಿದ್ಧಪಡಿಸಿರುವುದನ್ನು ಮುಂಬೈಯಲ್ಲಿ ಬಹಿರಂಗ ಪಡಿಸಿತು. ಏಕ್ (ಇಕೆಎ- 'ಏಕ' ಸಂಸ್ಕೃತದಲ್ಲಿ ಪ್ರಥಮ) ಎಂದು ಹೆಸರಿಡಲಾದ ಟಾಟಾ ಸಮೂಹದ ಸೂಪರ್ ಕಂಪ್ಯೂಟರ್ ಪ್ರತಿ ಸೆಕೆಂಡಿಗೆ 117.9 ಟ್ರಿಲಿಯನ್ ಲೆಕ್ಕ ಹಾಕುತ್ತದೆ. ಜಾಗತಿಕವಾಗಿ ಉನ್ನತ ಶ್ರೇಣಿಯ 500 ಸೂಪರ್ ಕಂಪ್ಯೂಟರ್ ಮಾದರಿಯಲ್ಲಿ ಇದೂ ಒಂದು ಎಂದು ಗುರುತಿಸಿಕೊಂಡಿದ್ದು, ವೇಗದಲ್ಲಿ ಏಷ್ಯಾದಲ್ಲಿ ಪ್ರಥಮ ಸ್ಥಾನವನ್ನು ಹೊಂದಿದೆ. ಪುಣೆಯಲ್ಲಿ ಟಾಟಾ ಸಮೂಹ ಸ್ಥಾಪಿಸಿರುವ ಕಂಪ್ಯೂಟೇಷನಲ್ ರಿಸರ್ಚ್ ಲ್ಯಾಬೋರೊಟರೀಸ್ ಘಟಕದ 60 ವಿವಿಧ ಸಂಪನ್ಮೂಲ ವ್ಯಕ್ತಿಗಳು ಸೇರಿಕೊಂಡು ಇದನ್ನು ಅಭಿವೃದ್ಧಿಗೊಳಿಸಿದ್ದಾರೆ. ಸಿ ಆರ್ ಎಲ್ ಅಧ್ಯಕ್ಷ ಎಸ್. ರಾಮಾದೊರೈ ಈ ಕುರಿತು ಮಾಹಿತಿ ನೀಡಿದರು. `ಸೂಪರ್ ಕಂಪ್ಯೂಟರ್ ಅಭಿವೃದ್ಧಿಪಡಿಸಲು 30 ದಶಲಕ್ಷ ಡಾಲರ್ ವೆಚ್ಚ ತಗುಲಿತು. ಇದನ್ನು ಸಂಪೂರ್ಣವಾಗಿ ಟಾಟಾ ಸನ್ಸ್ ಭರಿಸಿದೆ. ಬರುವ ದಿನಗಳಲ್ಲಿ ಸಿ ಆರ್ ಎಲ್ ಸಿಬ್ಬಂದಿಯ ಸಂಖ್ಯೆಯು 90ಕ್ಕೆ ಹೆಚ್ಚಾಗಲಿದೆ' ಎಂದು ರಾಮಾದೊರೈ ಹೇಳಿದರು. `ಬಾಲಿವುಡ್ ಚಿತ್ರ `ಶೋಲೆ'ಯನ್ನು ಒಂದು ಆನಿಮೇಷನ್ ಸಿನಿಮಾವಾಗಿ ಪರಿವರ್ತಿಸಲು ಸೂಪರ್ ಕಂಪ್ಯೂಟರ್ ಬೇಕಾಗುತ್ತದೆ. ಅದೇ ರೀತಿ ಆಟೋಮೋಟಿವ್ ಎಂಜಿನಿಯರಿಂಗ್, ನ್ಯಾನೋ ತಂತ್ರಜ್ಞಾನಕ್ಕೆ ಸೂಪರ್ ಕಂಪ್ಯೂಟರಿನ ಅಗತ್ಯವಿದೆ. `ಏಕ' ಇದೊಂದು ಟಾಟಾ ಆಸ್ತಿಯಾಗಿದ್ದು, ಇದರ ಪೇಟೆಂಟ್ ಪಡೆಯಲಾಗುವುದು. ಅದೇ ರೀತಿ ಇದರ ಬಹುಪಯೋಗದ ಬಗ್ಗೆ ವಿವಿಧ ಕಂಪೆನಿಗಳಿಗೆ ಪ್ರಾತ್ಯಕ್ಷಿಕೆಯನ್ನು ನೀಡಲಾಗುತ್ತಿದೆ' ಎಂದು ಅವರು ನುಡಿದರು. ಸಂಸ್ಥೆಯು ಈವರೆಗೆ ದೇಶದಲ್ಲಿ 9 ಸೂಪರ್ ಕಂಪ್ಯೂಟರುಗಳನ್ನು ಅಬೀವೃದ್ಧಿ ಪಡಿಸಲಾಗಿದೆ ಎಂದೂ ಅವರು ಬಹಿರಂಗ ಪಡಿಸಿದರು.

2007: ನಿರ್ದೇಶಕ ಫಿರೋಜ್ ಅಬ್ಬಾಸ್ ಖಾನ್ ಅವರ `ಗಾಂಧಿ ಮೈ ಫಾದರ್' ಚಲನಚಿತ್ರ ಉತ್ತಮ ಚಿತ್ರಕಥೆಗಾಗಿ ಏಷ್ಯ ಪೆಸಿಫಿಕ್ ಸ್ಕ್ರೀನ್ ಪ್ರಶಸ್ತಿ ಪಡೆಯಿತು. ನಟರಾದ ಅಕ್ಷಯ್ ಖನ್ನಾ, ಭೂಮಿಕಾ ಚಾವ್ಲಾ, ಮತ್ತು ಶೆಫಾಲಿ ಷಾ ಅವರು ನಟಿಸಿದ್ದ ಈ ಚಲನಚಿತ್ರದ ಕಥೆಯನ್ನು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಅವರ ಹಿರಿಯ ಪುತ್ರ ಹರಿಲಾಲ್ ಗಾಂಧಿ ಅವರ ನಡುವಣ ವಿವಾದಾತ್ಮಕ ಸಂಬಂಧದ ಸುತ್ತ ಹೆಣೆಯಲಾಗಿತ್ತು. ಆಸ್ಟ್ರೇಲಿಯದ ಕ್ವೀನ್ಸ್ ಲ್ಯಾಂಡಿನ ಗೋಲ್ಡ್ ಕೋಸ್ಟಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ಚಿತ್ರದ ಚಿತ್ರಕಥೆಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಭಾರತ, ಕೊರಿಯ, ಇಂಡೋನೇಷ್ಯ, ಜಪಾನ್, ಲೆಬನಾನ್, ಇರಾನ್, ಟರ್ಕಿ, ಇಸ್ರೇಲ್ ಇತ್ಯಾದಿ ರಾಷ್ಟ್ರಗಳ ಚಿತ್ರಗಳು ಕಣದಲ್ಲಿದ್ದವು. ಖ್ಯಾತ ನಟಿ ಶಬಾನಾ ಆಜ್ಮಿ ಅಧ್ಯಕ್ಷತೆಯ ಅಂತಾರಾಷ್ಟ್ರೀಯ ಆಯ್ಕೆ ಸಮಿತಿ ಚಿತ್ರಗಳನ್ನು ಆಯ್ಕೆ ಮಾಡಿತು. ಉತ್ತಮ ಚಲನಚಿತ್ರ ಪ್ರಶಸ್ತಿ ಕೊರಿಯದ `ಮಿರ್ ಯಾಂಗ್' (ರಹಸ್ಯ ಸೂರ್ಯಕಿರಣ) ಚಿತ್ರಕ್ಕೆ ದೊರೆಯಿತು.

2007: ಎಂಟು ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಪತಿ ಹಾಗೂ 20 ವರ್ಷದ ಮಗನನ್ನು ಕಳೆದುಕೊಂಡ ಮಹಿಳೆಗೆ ಅಪಘಾತ ಪರಿಹಾರ ಮಂಡಳಿಯು 46.44 ಲಕ್ಷ ರೂಪಾಯಿ ಪರಿಹಾರ ಧನ ನೀಡುವಂತೆ ಆದೇಶಿಸಿತು. 8 ವರ್ಷಗಳ ಹಿಂದೆ ಮದುರೈ ಸಮೀಪ ಮ್ಯಾಕ್ಸಿ ಕ್ಯಾಬ್ ಹಾಗೂ ತಮಿಳುನಾಡು ರಸ್ತೆ ಸಾರಿಗೆ ಸಂಸ್ಥೆಯ ಬಸ್ ನಡುವೆ ರಸ್ತೆ ಅಪಘಾತ ಸಂಭವಿಸಿತ್ತು. ಈಗ ಪರಿಹಾರ ಪಡೆದಿರುವ ಮಹಿಳೆಯ ಪತಿ ಹಾಗೂ ಮಗ ಮ್ಯಾಕ್ಸಿಕ್ಯಾಬಿನಲ್ಲಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಮಂಡಳಿಯ ಅಧ್ಯಕ್ಷೆ ವಿ.ಕೆ. ಮಹೇಶ್ವರಿ ಅವರು, ಈ ಅಪಘಾತಕ್ಕೆ ಮ್ಯಾಕ್ಸಿಕ್ಯಾಬ್ ಚಾಲಕ ಹಾಗೂ ಮಾಲೀಕನೇ ಹೊಣೆ ಎಂದು ಹೇಳಿ, ಮಹಿಳೆಗೆ ಪರಿಹಾರ ಧನ ನೀಡುವಂತೆ ಆದೇಶ ನೀಡಿದರು.

2007: ಕರ್ನಾಟಕ ರಾಜ್ಯಪಾಲ ಠಾಕೂರ್ ಅವರ ಸೂಚನೆ ಮೇರೆಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ನವೆಂಬರ್ 19ರಂದೇ ಬಹುಮತ ಸಾಬೀತು ಪಡಿಸಲು ನಿರ್ಧರಿಸಿದರು. ಇದಕ್ಕೆ ಮುನ್ನ ಈ ತಿಂಗಳ 23 ರಂದು ಬಹುಮತ ಸಾಬೀತು ಪಡಿಸಲು ಮುಖ್ಯಮಂತ್ರಿ ತೀರ್ಮಾನಿಸಿದ್ದರು. ಆದರೆ, ರಾಜ್ಯಪಾಲರು ಬಹುಮತ ಸಾಬೀತು ಪಡಿಸಲು ಎಂಟು ದಿನಗಳ ಗಡುವು ವಿಧಿಸಿದ ಹಿನ್ನೆಲೆಯಲ್ಲಿ ತುರ್ತು ಸಂಪುಟ ಸಭೆ ನಡೆಸಿದ ಯಡಿಯೂರಪ್ಪ ಈ ನಿರ್ಧಾರ ಕೈಗೊಂಡರು.

2007: ನೆನೆಗುದಿಗೆ ಬಿದ್ದಿದ್ದ 8ನೇ ತರಗತಿ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸುವ ಯೋಜನೆಗೆ ಮರು ಚಾಲನೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 75 ದಿನಗಳ ಒಳಗೆ 4.35 ಲಕ್ಷ ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಲು ಆದೇಶ ನೀಡಿದರು. ಸಚಿವ ಸಂಪುಟ ಸಭೆ ತೆಗೆದುಕೊಂಡ ಈ ತೀರ್ಮಾನವನ್ನು ಸಚಿವ ಡಾ. ವಿ.ಎಸ್. ಆಚಾರ್ಯ ಸುದ್ದಿಗಾರರಿಗೆ ತಿಳಿಸಿದರು.

2007: ವಾರದ ಹಿಂದೆ ಬೆಂಗಳೂರಿನ ಹೊರವಲಯದ ನಾರಾಯಣ ಆರೋಗ್ಯ ನಗರದ ಸ್ಪರ್ಶ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿ ಅವಳಿ ದೇಹದ ಭಾರ ಕಳೆದುಕೊಂಡಿದ್ದ ಬಿಹಾರಿನ ಎರಡು ವರ್ಷದ ಬಾಲಕಿ ಲಕ್ಷ್ಮಿಯನ್ನು ಈದಿನ ತೀವ್ರ ನಿಗಾ ಘಟಕದಿಂದ (ಐಸಿಯು) ಸಾಮಾನ್ಯ ವಾರ್ಡಿಗೆ ಸ್ಥಳಾಂತರಿಸಲಾಯಿತು. ಲಕ್ಷ್ಮಿ ತತ್ಮಾಳ ತಂದೆ ಶಂಭು ಪುಟ್ಟ ಬಾಲೆಯನ್ನು ಎತ್ತಿಕೊಂಡು ಬಂದಾಗ ಪಿಳಪಿಳನೆ ಕಣ್ಣು ಬಿಟ್ಟು ನೋಡುತ್ತಿದ್ದ ಮಗು ಹೊಸ ಜಗತ್ತಿಗೆ ಬಂದ ಹಿಗ್ಗಿನಲ್ಲಿ ಇದ್ದಂತಿತ್ತು. ಅಪಾರ ನೋವಿನಲ್ಲೂ ಮಗುವಿನ ಕಣ್ಣಲ್ಲಿ ಲವಲವಿಕೆ ನಾಟ್ಯವಾಡುತ್ತಿತ್ತು. ಲಕ್ಷ್ಮಿಯ ಅಮ್ಮ ಪೂನಂ ಮುಖದಲ್ಲಿ ಸಂತೃಪ್ತಿ, ಅಣ್ಣ ಮಿಥಿಲೇಶನಲ್ಲಿ ಖುಷಿ ಮನೆ ಮಾಡಿತ್ತು.

2007: ಭಾರತೀಯ ಮೂಲದ ಅಮೆರಿಕ ಪ್ರಜೆ ಶಾಂತನು ನರೇನ್ ಅವರನ್ನು ವಿಶ್ವವಿಖ್ಯಾತ ಅಡೋಬ್ ಸಿಸ್ಟಮ್ಸ್ ಇನ್ ಕಾರ್ಪೊರೇಟೆಡ್ ಸಂಸ್ಥೆಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ನೇಮಕ ಮಾಡಲಾಯಿತು. ಬ್ರೂಸ್ ನಾಗರಿಕನ ಉತ್ತರಾಧಿಕಾರಿಯಾಗಿ ಈ ಪ್ರತಿಷ್ಠಿತ ಹುದ್ದೆಗೆ ಏರಿದ ಶಾಂತನು ಅವರು ಡಿಸೆಂಬರ್ 1 ರಿಂದ ಹೊಸ ಹುದ್ದೆ ಅಲಂಕರಿಸುವರು ಎಂದು ನ್ಯೂಯಾರ್ಕಿನಲ್ಲಿ ಸಂಸ್ಥೆಯ ಪ್ರಕಟಣೆ ತಿಳಿಸಿತು.

2007: ಪಂಡಿತ್ ಜವಾಹರ ಲಾಲ್ ನೆಹರೂ ಅವರ 118ನೇ ಜನ್ಮದಿನಾಚರಣೆ ಅಂಗವಾಗಿ ಜವಾಹರ್ಲಾಲ್ ನೆಹರೂ ಸ್ಮಾರಕ ನಿಧಿ ಸಂಸ್ಥೆಯು ದೆಹಲಿ ವಿಶ್ವವಿದ್ಯಾಲಯ ಕೇಂದ್ರೀಯ ಶಿಕ್ಷಣ ಸಂಸ್ಥೆಯ ಪ್ರೊ. ಪೂನಂ ಬಾತ್ರಾ ಅವರಿಗೆ ನೆಹರೂ ಫೆಲೋಶಿಪ್ ನೀಡಿತು.

2007: ಕನ್ನಡದ ಹಿರಿಯ ಕವಿ, ಅನುವಾದಕ ಡಾ.ಬಿ.ಎ. ಸನದಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಪುತ್ತೂರು ವಿವೇಕಾನಂದ ಕಾಲೇಜಿನ ಶಿವರಾಮ ಕಾರಂತ ಅಧ್ಯಯನ ಕೇಂದ್ರವು ನೀಡುವ ಪ್ರಸಕ್ತ ಸಾಲಿನ ಪ್ರತಿಷ್ಠಿತ ನಿರಂಜನ ಪ್ರಶಸ್ತಿಗೆ ಆಯ್ಕೆ ಮಾಡಿತು. ನವ್ಯ ಮತ್ತು ನವ್ಯೋತ್ತರದ ಸಂದರ್ಭದಲ್ಲಿ ಕನ್ನಡ ಕಾವ್ಯ, ಅನುವಾದ ವಿಮರ್ಶೆ, ಶಿಶು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಗಮನಿಸಿ ಅವರನ್ನು ಈ ಪ್ರಶಸ್ತಿಗೆ ಆರಿಸಲಾಯಿತು.

2006: ವಿಶ್ವದ ಅತಿದೊಡ್ಡ ಪ್ರಯಾಣಿಕರ ವಿಮಾನ `ಎ 380'ರ ದಕ್ಷಿಣ ಫ್ರಾನ್ಸಿನ ಟುಲೌಸಿನಿಂದ ವಿಶ್ವದ ಸುತ್ತ ಪರೀಕ್ಷಾರ್ಥ ಹಾರಾಟ ಆರಂಭಿಸಿತು. ದಕ್ಷಿಣ ಫ್ರಾನ್ಸಿನ ಟುಲೌಸಿನಿಂದ ಗಗನಕ್ಕೆ ನೆಗೆದ ವಿಮಾನ 12 ತಾಸುಗಳ ಪ್ರಯಾಣದ ನಂತರ ಸಿಂಗಪುರ ವಿಮಾನ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿ ಮೊದಲ ನಿಲುಗಡೆ ಪಡೆಯಿತು. ಪೈಲಟ್ ಹಾಗೂ ತಾಂತ್ರಿಕ ಸಿಬ್ಬಂದಿ ಸೇರಿ 60 ಜನ ವಿಮಾನದಲ್ಲಿ ಇದ್ದರು.

2006: ಬೆಂಗಳೂರಿನ ನಿಸರ್ಗ ಆಯುರ್ವೇದಿಕ್ ಮೆಡಿಸಿನ್ ರೀಸರ್ಚ್ ಸೆಂಟರಿನ ವೈದ್ಯ ಡಾ. ಅಶೋಕಕುಮಾರ ಅವರು ಮಧುಮೇಹಕ್ಕೆ `ಡಯಟ್ ಸ್ಟೀವಿಯಾ' ಎಂಬ ಸಸ್ಯಮೂಲ ಔಷಧಿ ಸಂಶೋಧಿಸಿರುವುದಾಗಿ ಪ್ರಕಟಿಸಿದರು. ಸ್ಟೀವಿಯಾ ಸಸ್ಯ ಮಧುಮೇಹ ರೋಗಿಗಳಿಗೆ ಇನ್ಸುಲಿನ್ ಹೆಚ್ಚಲು ಸಹಕಾರಿ ಎಂದು ಅವರು ಹೇಳಿದರು.

2006: ಗಿನ್ನೆಸ್ ದಾಖಲೆ ಸ್ಥಾಪಿಸುವ ಸಲುವಾಗಿ ತಮಿಳುನಾಡಿನ ಕೋವಿಲ್ ಪಟ್ಟಿಯ ಮಡು ಗ್ರಾಮದ ಕಟ್ಟಡ ಕೆಲಸಗಾರ ಮುತ್ತುಕುಮಾರ್ ಎಂಬ 23 ವರ್ಷದ ಯುವಕನೊಬ್ಬ 1 ನಿಮಿಷ 38 ಸೆಕೆಂಡ್ ಕಾಲ ನೇಣಿನ ಕುಣಿಕೆಯೊಳಗೆ ನೇತಾಡಿಯೂ ಜೀವಂತವಾಗಿ ಉಳಿದ.

2006: ಬ್ರೆಜಿಲಿನ ರಿಯೋಡಿಜನೈರೋದಲ್ಲಿರುವ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಅಂತಾರಾಷ್ಟ್ರೀಯ ಒಕ್ಕೂಟದ (ಐಎಫ್ ಇ ಇ ಎಸ್) ಉಪಾಧ್ಯಕ್ಷರಾಗಿ ಬೆಂಗಳೂರಿನ ಇಂಡಿಯನ್ ಸೊಸೈಟಿ ಫಾರ್ ಟೆಕ್ನಿಕಲ್ ಎಜುಕೇಷನ್ ಅಧ್ಯಕ್ಷ ಪ್ರೊ. ಎನ್. ಆರ್. ಶೆಟ್ಟಿ ನೇಮಕಗೊಂಡರು. ಈ ಒಕ್ಕೂಟಕ್ಕೆ ನೇಮಕಗೊಂಡ ಪ್ರಥಮ ಭಾರತೀಯ ಎಂಬ ಹೆಗ್ಗಳಿಕೆ ಇವರದಾಯಿತು. ಪ್ರೊ. ಶೆಟ್ಟಿ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯಾಗಿಯೂ ಸೇವೆ ಸಲ್ಲಿಸಿದವರು.

2006: ನೇತಾಜಿ ಸುಭಾಶ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ ಕಡತಗಳನ್ನು ರಹಸ್ಯ ದಾಖಲೆಗಳ ಪಟ್ಟಿಯಿಂದ ಸಾಮಾನ್ಯ ದಾಖಲೆಗಳ ಪಟ್ಟಿಗೆ ಸೇರಿಸುವ ಮೂಲಕ ಈ ಕಡತಗಳನ್ನು ಬಹಿರಂಗ ಪಡಿಸಲು ಪ್ರಧಾನಿ ಸಚಿವಾಲಯ ತೀರ್ಮಾನಿಸಿದೆ ಎಂದು ಪ್ರಧಾನಿ ಕಚೇರಿ ಮೂಲಗಳು ಬಹಿರಂಗ ಪಡಿಸಿದವು. ಕೇಂದ್ರೀಯ ಮಾಹಿತಿ ಅಧಿಕಾರಿ ಕಮಲ್ ದಯಾನಿ ಅವರು ಪತ್ರವೊಂದರಲ್ಲಿ ಈ ವಿಚಾರವನ್ನು ದೆಹಲಿಯ ನೇತಾಜಿ ಮಿಷನ್ ಸಂಸ್ಥೆಗೆ ತಿಳಿಸಿದರು.

2005: ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘಟನೆ `ಸಾರ್ಕ್' ದೇಶಗಳು ದಕ್ಷಿಣ ಏಷ್ಯಾ ಮುಕ್ತ ವಾಣಿಜ್ಯ ಒಪ್ಪಂದವನ್ನು (ಸಪ್ಟಾ)-2006ರ ಜನವರಿ 1ರಿಂದ ಜಾರಿಗೆ ತರಲು ಈದಿನ ನೇಪಾಳದ ಕಠ್ಮಂಡುವಿನಲ್ಲಿ ಮುಕ್ತಾಯಗೊಂಡ 13ನೇ ಸಾರ್ಕ್ ಸಮ್ಮೇಳನದಲ್ಲಿ ನಿರ್ಧರಿಸಿದವು. ದಕ್ಷಿಣ ಏಷ್ಯಾ ಆರ್ಥಿಕ ಒಕ್ಕೂಟ ರಚನೆ ನಿಟ್ಟಿನಲ್ಲಿ ಈ ಒಪ್ಪಂದ ಮಹತ್ವದ ಮೈಲಿಗಲ್ಲು. ಈ ನಿಟ್ಟಿನ ಒಪ್ಪಂದಕ್ಕೆ ಈದಿನ ಸಾರ್ಕ್ ಶೃಂಗಸಭೆಯಲ್ಲಿ ಸಹಿ ಹಾಕಲಾಯಿತು.

2005: ಬೆಂಗಳೂರಿನಲ್ಲಿ ನಡೆದ ಜನತಾ ದಳ (ಜಾತ್ಯತೀತ) ರಾಷ್ಟ್ರೀಯ ಮಹಾ ಅಧಿವೇಶನದಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಎಚ್. ಡಿ. ದೇವೇಗೌಡ ಅವರನ್ನು ಪುನರಾಯ್ಕೆ ಮಾಡಲಾಯಿತು.

2005: ವಿಶ್ವದಲ್ಲೇ ಮೊತ್ತ ಮೊದಲ ರಾಷ್ಟ್ರಮಟ್ಟದ 9 ದಿನಗಳ `ಮಹಾಭಾರತ ಉತ್ಸವ' ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಆರಂಭಗೊಂಡಿತು. ಗಿರಿನಗರದ ಮಹಾಭಾರತ ಸಂಶೋಧನಾ ಪ್ರತಿಷ್ಠಾನವು ಸಂಘಟಿಸಿದ ಈ ಉತ್ಸವದಲ್ಲಿ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳ ಜೊತೆಗೆ ಮಹಾಭಾರತ ಕುರಿತ ಸಾಂಪ್ರದಾಯಿಕ ವರ್ಣಚಿತ್ರಗಳು ಮತ್ತು ಸಂತೊಕ್ ಬಾ ಎಂಬ ವರ್ಣಚಿತ್ರಕಾರ ರಚಿಸಿದ ವಿಶ್ವದ ಅತ್ಯಂತ ಉದ್ದದ (ಸುಮಾರು 1.7 ಕಿ.ಮೀ) ಕ್ಯಾನ್ವಾಸ್ ಪ್ರದರ್ಶನಗೊಂಡಿತು.

2005: ಬಿಹಾರಿನ ಜೆಹಾನಾಬಾದ್ ಜಿಲ್ಲಾ ಸೆರೆಮನೆಯ ಮೇಲೆ ಬಾಂಬ್ ದಾಳಿ ನಡೆಸಿದ ಶಸ್ತ್ರಸಜ್ಜಿತ ಸಿಪಿಐ ಮಾವೋವಾದಿ ನಕ್ಸಲೀಯರು 389 ಮಂದಿ ಕೈದಿಗಳು ಪರಾರಿಯಾಗುವಂತೆ ಮಾಡಿದರು. ಸೆರೆಮನಯಲ್ಲಿದ್ದ ಭೂಮಾಲೀಕರ ರಣವೀರ ಸೇನೆಯ 15 ಮಂದಿಯನ್ನು ಅಪಹರಿಸಿ ಅವರಲ್ಲಿ 9 ಜನರನ್ನು ಕೊಲ್ಲಲಾಯಿತು. ಬಾಂಬ್ ದಾಳಿ ಸಂದರ್ಭದಲ್ಲಿ 4 ಮಂದಿ ಅಸು ನೀಗಿದರು.

1970: ನೆರೆ ಹಾವಳಿಯಿಂದ ಗಂಗಾನದಿಯ ದಡದಲ್ಲಿ ಲಕ್ಷಾಂತರ ಜನ ಅಸು ನೀಗಿದರು.

1967: ಜೂಹಿ ಚಾವ್ಲಾ ಹುಟ್ಟಿದ ದಿನ.

1914: ನ್ಯೂಯಾರ್ಕಿನ ಮೇರಿ ಫೆಲ್ ಪ್ಸ್ ಜಾಕೋಬ್ ಅವರಿಗೆ `ಬ್ಯಾಕ್ ಲೆಸ್ ಬ್ರಾಸಿಯರ್' ಗೆ ಪೇಟೆಂಟ್ ಲಭಿಸಿತು. ಸ್ತನಗಳನ್ನು ಸಹಜವಾಗಿ ಬೇರೆ ಬೇರೆಯಾಗಿ ಕಾಣುವಂತಹ ವಿನ್ಯಾಸದ ಮೃದುವಾದ, ಚಿಕ್ಕದಾದ ಹೊಸ ಮಾದರಿಯ ಈ `ಬ್ರಾ'ವನ್ನು ಈಕೆ ಸಂಶೋಧಿಸಿದರು. ಈಕೆ ಅದನ್ನು `ಬ್ರಾಸಿಯರ್' ಎಂದು ಕರೆದರು. ನಂತರ ಈಕೆ ಈ ಪೇಟೆಂಟನ್ನು ಕನೆಕ್ಟಿಕಟ್ ನ ಬ್ರಿಜ್ಪೋರ್ಟಿನ ವಾರ್ನರ್ ಬ್ರದರ್ಸ್ ಕೊರ್ಸೆಟ್ ಕಂಪೆನಿಗೆ 1500 ಡಾಲರುಗಳಿಗೆ ಮಾರಾಟ ಮಾಡಿದರು. ಕಳೆದ 30 ವರ್ಷಗಳಲ್ಲಿ ಈ ಕಂಪೆನಿ ಈ `ಬ್ರಾ'ಗಳ ಮಾರಾಟದಿಂದ 1.50 ಕೋಟಿ ಡಾಲರುಗಳಿಗೂ ಹೆಚ್ಚಿನ ಹಣ ಸಂಪಾದನೆ ಮಾಡಿತು.

1789: ಬೆಂಜಮಿನ್ ಫ್ರಾಂಕ್ಲಿನ್ ತನ್ನ ಗೆಳೆಯನೊಬ್ಬನಿಗೆ ಪತ್ರವೊಂದನ್ನು ಬರೆದರು. ಅದರಲ್ಲಿ ಅವರು ಬರೆದ ಅಮರ ಹೇಳಿಕೆ ಹೀಗಿತ್ತು: `ಈ ಜಗತ್ತಿನಲ್ಲಿ ಸಾವು ಮತ್ತು ತೆರಿಗೆಗಳ ಹೊರತಾಗಿ ಯಾವುದನ್ನೂ ಖಚಿತ ಎಂದು ಹೇಳಲು ಸಾಧ್ಯವಿಲ್ಲ.'

1780: ಪಂಜಾಬಿನಲ್ಲಿ ಸಿಕ್ಖರ ರಾಜ್ಯವನ್ನು ಸ್ಥಾಪಿಸಿ 1801-1839ರ ಅವಧಿಯಲ್ಲಿ ಅದನ್ನು ಆಳಿದ ಮಹಾರಾಜ ರಣಜಿತ್ ಸಿಂಗ್ (1780-1839) ಹುಟ್ಟಿದ ದಿನ.

1834: ಪೀಟರ್ ಅರ್ರೆಲ್ ಬ್ರೌನ್ ವೈಡನರ್ (1834-1915) ಹುಟ್ಟಿದ ದಿನ. ಅಮೆರಿಕದ ಮಹಾದಾನಿಗಳಲ್ಲೊಬ್ಬರಾದ ಇವರು ಹ್ಯಾರಿ ಎಲ್ಕಿನ್ಸ್ ವೈಡ್ನರ್ ಗ್ರಂಥಾಲಯವನ್ನು ತನ್ನ ಮೊಮ್ಮಗನ ನೆನಪಿಗಾಗಿ ಹಾರ್ವರ್ಡ್ ವಿಶ್ವ ವಿದ್ಯಾಲಯಕ್ಕೆ ದಾನ ನೀಡಿದರು. ಟೈಟಾನಿಕ್ ದುರಂತದಲ್ಲಿ ಇವರ ಮೊಮ್ಮಗ ಹ್ಯಾರಿ ಅಸು ನೀಗಿದ್ದರು

2 comments:

  1. ಸರ್ ಆಡಿಸನ್

    addisonfinancialorporation@gmail.com
    ಆತ್ಮೀಯ ಸರ್ / ಮ್ಯಾಡಮ್, ನಿಮ್ಮ ಮೂತ್ರಪಿಂಡವನ್ನು ಮಾರಲು ನೀವು ಬಯಸುತ್ತೀರಾ? ನೀವು ಒಂದು ಕೋರಿದ್ದೀರಾ?
    ಆರ್ಥಿಕ ವಿಘಟನೆಯ ಕಾರಣದಿಂದ ಹಣಕ್ಕೆ ನಿಮ್ಮ ಮೂತ್ರಪಿಂಡವನ್ನು ಮಾರಲು ಅವಕಾಶವಿದೆ ಮತ್ತು ನೀವು ಏನು ಮಾಡಬೇಕೆಂದು ನಿಮಗೆ ತಿಳಿದಿಲ್ಲ, ನಂತರ ನಮ್ಮನ್ನು ಇಂದು ಸಂಪರ್ಕಿಸಿ ಮತ್ತು ನಿಮ್ಮ ಮೂತ್ರಪಿಂಡಕ್ಕೆ ನಾವು ನಿಮಗೆ ಉತ್ತಮ ಮೊತ್ತವನ್ನು ನೀಡುತ್ತೇವೆ. ನಮ್ಮನ್ನು ಸಂಪರ್ಕಿಸಿ: addisonfinancialorporation@gmail.com

    ReplyDelete
  2. Are you in need of money urgently? or to meet up with your Financial problem ? And you want to sell one of your kidney for money. Donor should Email us now on: Manipalhospitaltransplant@gmail.com for more details. Your happiness and safety is our major concern.

    Regards
    Dr. Dheeraj A (India)
    +917353901450

    [Whatsapp Only]

    ReplyDelete