ಇಂದಿನ ಇತಿಹಾಸ History Today ನವೆಂಬರ್ 05
2018: ಪಟ್ಟಣಂತಿಟ್ಟ:
ಶಬರಿಮಲೈಅಯ್ಯಪ್ಪಸ್ವಾ,ಮಿ ದೇವಸ್ಥಾನಕ್ಕೆ ಋತುಮತಿ ವಯೋಮಾನದ ಮಹಿಳೆಯರಿಗೆ ಪ್ರವೇಶ ನಿರಾಕರಣೆ
ಶತಮಾನಗಳಷ್ಟು ಹಳೆಯದಾಗಿದ್ದು, ಕಟ್ಟುನಿಟ್ಟಾದ ತಾಂತ್ರಿಕ ಪರಿಕಲ್ಪನೆಯ ಶುದ್ಧತೆ ಮತ್ತು ಮಾಲಿನ್ಯಕ್ಕೆ
ಅನುಗುಣವಾದದ್ದು. ಈ ನಿರ್ಬಂಧಗಳು ಯಾವುದೇ ತಾರತಮ್ಯವಲ್ಲ ಎಂದು ಕೇರಳದ ಖ್ಯಾತ ಇತಿಹಾಸಕಾರ ಎಸ್. ಜಯಶಂಕರ್
ಹೇಳಿದರು. ಪ್ರಖ್ಯಾತ ಇತಿಹಾಸಕಾರ ಮತ್ತು ಜನಗಣತಿ ಕಾರ್ಯಾಚರಣೆಯ ಮಾಜಿ ಉಪ ನಿರ್ದೇಶಕ ಎಸ್.ಜಯಶಂಕರ್
ಅವರನ್ನು ಉಲ್ಲೇಖಿಸಿ, ಇದುಯಾವುದೇರೀತಿಯ ಲೈಂಗಿಕ ತಾರತಮ್ಯವನ್ನು ಹೊಂದಿಲ್ಲ’ ಎಂದು ಪತ್ರಿಕಾ ವರದಿಯೊಂದು ತಿಳಿಸಿತು. "ಶುದ್ಧತೆ
ಮತ್ತು ಮಾಲಿನ್ಯ" ಎಂಬ ಹಿಂದೂ ಪರಿಕಲ್ಪನೆಯು ವಿಶಾಲ ಮತ್ತು ಸಂಕೀರ್ಣವಾದದ್ದು ಎಂದು ಶ್ರೀ ಜಯಶಂಕರ್
ಹೇಳಿದ್ದಾರೆ. ’ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಒಂದು ಅವಿಭಾಜ್ಯ ಅಂಗವಾಗಿದೆ ಮತ್ತು
ಪ್ರದೇಶದಿಂದ ಪ್ರದೇಶಕ್ಕೆ ಮತ್ತು ಪಂಗಡದಿಂದ ಪಂಗಡಕ್ಕೆ ಗಣನೀಯವಾಗಿ ಭಿನ್ನವಾಗಿದೆ ಜಯಶಂಕರ್ ಹೇಳಿದರು.
೮೪ರ ಹರೆಯದ ಇತಿಹಾಸಕಾರರು ಭಾರತ ಸರ್ಕಾರದ ಜನಗಣತಿ ಇಲಾಖೆಯು ಪ್ರಕಟಿಸಿರುವ "ಕೇರಳದ ದೇವಾಲಯಗಳು"
ಪ್ರಕಟಣೆಯ ೧೩ ಸಂಪುಟಗಳನ್ನು ಬರೆದವರು. ೧೯೫೬ರ ಅಧಿಸೂಚನೆ: ೧೯೫೬ ರ ನವೆಂಬರ್ ೨೭
ರಂದು ಕೇರಳ ಸರ್ಕಾರ ಪ್ರಕಟಿಸಿದ್ದ ಅಧಿಸೂಚನೆ ಪ್ರಕಾರ,
"ಶಬರಿಮಲೈ, ಅಯ್ಯಪ್ಪಸ್ವಾಮಿಯ (ಭಕ್ತರು) ಪೂಜ್ಯ ಪವಿತ್ರ ಮತ್ತು ಪ್ರಾಚೀನ ದೇವಸ್ಥಾನದ ಮೂಲಭೂತ
’ಪ್ರತಿಷ್ಠಾ’ (ಸ್ಥಾಪನೆಯ) ವಿಧಿಗಳ ಪ್ರಕಾರ, ಸಾಮಾನ್ಯ ನಿಯಮಗಳನ್ನು
ಪಾಲಿಸದ ಮತ್ತು ಋತುಮತಿಯರಾದ ಮಹಿಳೆಯರು ಅಯ್ಯಪ್ಪ
ಸ್ವಾಮಿಯ ದರ್ಶನಕ್ಕಾಗಿ ‘ಪದಿನೆಟ್ಟಾಂಪಡಿ’ [೧೮ ಮೆಟ್ಟಿಲುಗಳನ್ನು] ಹತ್ತಿ ದೇವಾಲಯದೊಳಗೆ ಪ್ರವೇಶಿಸುವ
ಅಭ್ಯಾಸ ಇರಲಿಲ್ಲ’ ಎಂದು ಜಯಶಂಕರ್ ಉಲ್ಲೇಖಿಸಿದರು. ವಿಧಿ ವಿಧಾನಗಳ
ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಮತ್ತು ಯಾವುದೇ
ರೀತಿಯ ‘ಮಾಲಿನ್ಯ’ ನಿವಾರಿಸುವ ಸಲುವಾಗಿ ದೇವಾಲಯದ ಮಹಿಳಾ ಉದ್ಯೋಗಿಗಳಿಗೆ
ತಮ್ಮ ಮುಟ್ಟಿನ ಅವಧಿಯಲ್ಲಿ, ಕಡ್ಡಾಯವಾಗಿ ವಿಶೇಷ ರಜೆ ನೀಡುತ್ತಿದ್ದರು. ಈ ಅಭ್ಯಾಸವನ್ನು ತಿರುವಾಂಕೂರು
ದೇವಸ್ವಂ ಮಂಡಳಿಯು ಈಗಲೂ ಅನುಸರಿಸುತ್ತಿದೆ. ಇತಿಹಾಸಕಾರ
ಜಯಶಂಕರ್ ಅವರ ಪ್ರಕಾರ, ದೇವಸ್ಥಾನದ ಅಧಿದೇವತೆ ಕೂಡಾ ಕೆಲವು ಮೂಲಭೂತ ಹಕ್ಕುಗಳನ್ನು ಹೊಂದಿದ್ದು,
ನಿಷಿದ್ಧ ಮಹಿಳೆಯರು ದೇವತೆಯ ಸನ್ನಿಧಾನವನ್ನು ಪ್ರವೇಶಿಸುವ ಮೂಲಕ ವಿಧಿ ವಿಧಾನವನ್ನು ಉಲ್ಲಂಘಿಸಿದರೆ
ಅದು ಅಧಿದೇವತೆಯ ಮೂಲಭೂತ ಹಕ್ಕಿಗೆ ಚ್ಯುತಿ ಉಂಟು ಮಾಡುತ್ತದೆ. ಹೀಗಾಗಿ ಅಧಿದೇವತೆಯ ಹಕ್ಕನ್ನು ಸಂಪೂರ್ಣವಾಗಿ
ರಕ್ಷಣೆ ಮಾಡಬೇಕು ಎಂದು ಅವರು ಹೇಳಿದರು.
2018: ನವದೆಹಲಿ: ತನ್ನ ಪ್ರಪ್ರಥಮ ತಡೆ ಪಹರೆ ಕಾರ್ಯಾಚರಣೆಯನ್ನು
ಪೂರ್ಣಗೊಳಿಸುವ ಮೂಲಕ ಭಾರತದ ಮೊತ್ತ ಮೊದಲ ದೇಶೀಯ ಪರಮಾಣು ಜಲಾಂತರ್ಗಾಮಿ ಐಎನ್ ಎಸ್ ಅರಿಹಂತ್ ಪರಮಾಣು
ಬ್ಲಾಕ್ ಮೇಲ್‌ನಲ್ಲಿ ತೊಡಗಿರುವವರಿಗೆ ಸೂಕ್ತ ಉತ್ತರ ಉತ್ತರ ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ
ಹೇಳಿದರು. ಜಲಾಂತರ್ಗಾಮಿಯ ಅಪರೂಪದ ಚಿತ್ರಗಳ ಸಹಿತವಾಗಿ ಸರಣಿ ಟ್ವೀಟ್‌ಗಳನ್ನು ಮಾಡಿದ ಪ್ರಧಾನಿ
’ಭಾರತದ ಮೊತ್ತ ಮೊದಲ ಪರಮಾಣು ಜಲಾಂತರ್ಗಾಮಿಯು ತನ್ನ ಪ್ರಥಮ ತಡೆ ಕಾರ್ಯಾಚರಣೆಯನ್ನು ಯಶಸ್ವಿಯಾಗಿ
ಪೂರ್ಣಗೊಳಿಸುವ ಮೂಲಕ ಭಾರತಕ್ಕೆ ತನ್ನ ಅಣ್ವಸ್ತ್ರಗಳನ್ನು ನೆಲ, ಭಾನು, ಸಮುದ್ರಗಳಿಂದ ಹಾರಿಸಬಲ್ಲ
ಸಾಮರ್ಥ್ಯವನ್ನು ತಂದುಕೊಟ್ಟಿದೆ’ ಎಂದು ಹೇಳಿದರು. ‘ಈದಿನ ಚರಿತ್ರಾರ್ಹ ದಿನ. ಏಕೆಂದರೆ ಭಾರತದ ಪರಮಾಣು ಜಲಾಂತರ್ಗಾಮಿಯ
ಯಶಸ್ವೀ ಸ್ಥಾಪನೆಯನ್ನು ಪೂರೈಸಲಾಗಿದೆ. ಭಾರತದ ಪರಮಾಣು ಜಲಾಂತರ್ಗಾಮಿಯು ಜಾಗತಿಕ ಶಾಂತಿ ಮತ್ತು ಸ್ಥಿರತೆಗೆ
ಅತ್ಯಂತ ಮಹತ್ವದ ಆಧಾರಸ್ಥಂಭವಾಗಲಿದೆ’ ಎಂದು ಪ್ರಧಾನಿ ಮೋದಿ
ಟ್ವೀಟ್ ಮಾಡಿದರು. ‘ಇಂದಿನ ಯುಗದಲ್ಲಿ ವಿಶ್ವಾಸಾರ್ಹ
ಪರಮಾಣು ತಡೆ ಸಾಮರ್ಥ್ಯವು ಸಮಯದ ಅಗತ್ಯವಾಗಿದೆ. ಐಎನ್‌ಎಸ್ ಅರಿಹಂತ್ ಯಶಸ್ಸು ಪರಮಾಣು ಬ್ಲಾಕ್‌ಮೇಲ್‌ನಲ್ಲಿ
ನಿರತರಾಗಿರುವವರಿಗೆ ಸೂಕ್ತ ಉತ್ತರವನ್ನು ನೀಡಿದೆ’ ಎಂದು ಹೇಳಿದ ಪ್ರಧಾನಿ
ನೆಲೆಗೊಳಿಸಲಾಗಿರುವ ವಿಶಾಖಪಟ್ಟಣದಿಂದ ಪಹರೆಯನ್ನು ಪೂರ್ಣಗೊಳಿಸಿದ ಅರಿಹಂತ್ ಕಾರ್‍ಯವನ್ನು ನಮ್ಮ
ರಾಷ್ಟ್ರದ ಮಹತ್ವದ ಸಾಧನೆ ಎಂದು ಬಣ್ಣಿಸಿದರು. ‘ತನ್ನ ಹೆಸರಿಗೆ ತಕ್ಕಂತೆಯೇ ಐಎನ್ ಎಸ್ ಅರಿಹಂತ್ ೧೩೦ ಕೋಟಿ
ಭಾರತೀಯರನ್ನು ವಿದೇಶೀ ಬೆದರಿಕೆಗಳಿಂದ ರಕ್ಷಿಸಲಿದೆ ಮತ್ತು ಪ್ರದೇಶದಲ್ಲಿ ಶಾಂತ ಪರಿಸರಕ್ಕೆ ಕಾಣಿಕೆ
ಸಲ್ಲಿಸಲಿದೆ’ ಎಂದು ಪ್ರಧಾನಿ ಟ್ವೀಟ್ ಮಾಡಿದರು. ‘ಭಾರತ ಶಾಂತಿಯ ನಾಡು. ಒಗ್ಗಟ್ಟಿನ ಮೌಲ್ಯಗಳು ನಮ್ಮ ಸಂಸ್ಕೃತಿಯಲ್ಲೇ
ಹಾಸುಹೊಕ್ಕಾಗಿವೆ. ಶಾಂತಿ ನಮ್ಮ ಬಲ, ನಮ್ಮ ದೌರ್ಬಲ್ಯವಲ್ಲ. ನಮ್ಮ ಪರಮಾಣು ಕಾರ್‍ಯಕ್ರಮವನ್ನು ಜಾಗತಿಕ
ಶಾಂತಿ ಮತ್ತು ಸ್ಥಿರತೆಯೆಡೆಗಿನ ಭಾರತದ ಪ್ರಯತ್ನಗಳು ಎಂಬುದಾಗಿ ಅರ್ಥ ಮಾಡಿಕೊಳ್ಳಬೇಕು’ ಎಂದು ಮೋದಿ ಹೇಳಿದರು. ಭಾರತವು ಪ್ರಸ್ತುತ ರಷ್ಯಾ
ಮೂಲದ ಪರಮಾಣು ಶಕ್ತಿಯ ಜಲಾಂತರ್ಗಾಮಿ ಐಎನ್‌ಎಸ್ ಚಕ್ರವನ್ನು ಬಳಸುತ್ತಿದೆ. ಇದನ್ನು ರಷ್ಯಾದಿಂದ ೨೦೧೨ರಲ್ಲಿ
೧೦ ವರ್ಷಗಳ ಅವಧಿಗೆ ಗುತ್ತಿಗೆ ಪಡೆಯಲಾಗಿತ್ತು. ಐಎನ್ ಎಸ್ ಅರಿಹಂತ್ ಭಾರತದ ಮೊತ್ತ ಮೊದಲ ದೇಶೀ ಪರಮಾಣು
ಜಲಾಂತರ್ಗಾಮಿಯಾಗಿದ್ದು, ಅರಿಹಂತ್ ದರ್ಜೆಯ ಪರಮಾಣು ಶಕ್ತಿಯ ಸಮರ ಕ್ಷಿಪಣಿ ಜಲಾಂತರ್ಗಾಮಿ ದಜೆಯ ಜಲಾಂತರ್ಗಾಮಿಯಾಗಿದೆ.
ರಷ್ಯಾದ ಅಕುಲಾ-೨ ದರ್ಜೆಯ ಜಲಾಂತರ್ಗಾಮಿಯನ್ನು ಆಧರಿಸಿ
೨೦೦೯ರಲ್ಲಿ ಇದರ ನಿರ್ಮಾಣವನ್ನು ಆರಂಭಿಸಿಲಾಗಿತ್ತು. ೨೦೧೬ರಲ್ಲಿ ಉರಿ ಭಯೋತ್ಪಾದಕ
ದಾಳಿ ನಡೆದ ಸೆಪ್ಟೆಂಬರ್ ೧೮ಕ್ಕೆ ಮುನ್ನ ಸದ್ದು ಗದ್ದಲವಿಲ್ಲದೆ ’ಅರಿಹಂತ್’ಗೆ ಚಾಲನೆ ನೀಡಲಾಗಿತ್ತು. ಪಾಕಿಸ್ತಾನಿ ನಾಯಕರು ಭಾರತದ
ವಿರುದ್ಧ ಚತುರ ಯುದ್ಧ ತಂತ್ರದ ಅಣ್ವಸ್ತ್ರಗಳನ್ನು ಬಳಸುವ ಸಾಧ್ಯತೆ ಬಗ್ಗೆ ಚಿಂತಿಸುತ್ತಿದ್ದಾಗ ೬೦೦೦
ಟನ್ ತೂಕದ, ೩೫೦೦ ಕಿಮೀ ವ್ಯಾಪ್ತಿಯವರೆಗೆ ಪರಮಾಣು ಸಮರ ಕ್ಷಿಪಣಿಗಳನ್ನು ಉಡಾಯಿಸುವ ಸಾಮರ್ಥ್ಯವಿರುವ
ಈ ದೇಶೀ ಪರಮಾಣು ಜಲಾಂತರ್ಗಾಮಿಗೆ ರಹಸ್ಯವಾಗಿ ಚಾಲನೆ ನೀಡಲಾಗಿತ್ತು. ಐಎನ್ ಎಸ್ ಅರಿಹಂತ್‌ನ ೧೦೦
ಮಂದಿ ಸಿಬ್ಬಂದಿಗೆ ರಷ್ಯದ ತಜ್ಞರು ತರಬೇತಿ ನೀಡಿದ್ದಾರೆ. ಬಾಬಾ ಪರಮಾಣು ಸಂಶೋಧನಾ ಕೇಂದ್ರದಲ್ಲಿನ
ಭಾರತೀಯ ವಿಜ್ಞಾನಿಗಳು ರಿಯಾಕ್ಟರಿನ ಗಾತ್ರವನ್ನು ಕುಗ್ಗಿಸುವಲ್ಲಿ ತಜ್ಞರ ನೆರವು ಪಡೆದಿದ್ದಾರೆ.
ಪರಮಾಣು ಜಲಾಂತರ್ಗಾಮಿಗಳು ಸಮುದ್ರದ ಒಳಗೆ ದೀರ್ಘಕಾಲ ಇರುವಂತಹ ಸಾಮರ್ಥ್ಯವನ್ನು ಹೊಂದಿದ್ದು, ಅದಕ್ಕೆ
ದೀರ್ಘಕಾಲ ಸಮುದ್ರದಿಂದ ಹೊರಕ್ಕೆ ಬರಬೇಕಾದ ಅಗತ್ಯ ಇರುವುದಿಲ್ಲ. ಏನಿದ್ದರೂ ಭಾರತದ ಸಮುದ್ರದೊಳಗಿನ
ಸಾಮರ್ಥ್ಯವು ಚೀನಾಕ್ಕೆ ಹೋಲಿಸಿದರೆ, ತುಂಬಾ ಹಿಂದಿದೆ. ಚೀನಾದ ಜಲಾಂತರ್ಗಾಮಿಗಳು ಸಮುದ್ರದ ಒಳಗೇ
ಉಳಿದುಕೊಂಡು ದಾಳಿ ನಡೆಸುವ ಅಪಾರ ಸಾಮರ್ಥ್ಯವನ್ನು ಹೊಂದಿವೆ.
2018: ಶಬರಿಮಲೈ: ನೂರಾರು ಪೊಲೀಸ್ ಸಿಬ್ಬಂದಿ, ಸಶಸ್ತ್ರ ಕಮಾಂಡೋಗಳು,
ಕಣ್ಗಾವಲು ಕ್ಯಾಮರಾಗಳು, ಮೊಬೈಲ್ ಜಾಮ್ಮರ್ ಗಳಿಂದಾಗಿ ವಸ್ತುಶಃ ಬಿಗಿ ಭದ್ರಕೋಟೆಯಾಗಿ ಪರಿವರ್ತನೆಗೊಂಡ
ಶಬರಿಮಲೈಯ ಅಯ್ಯಪ್ಪಸ್ವಾಮಿ ದೇವಾಲಯದ ಬಾಗಿಲುಗಳನ್ನು ಸಂಜೆ ವಿಶೇಷ ಪೂಜೆಗಾಗಿ ತೆರೆಯಲಾಯಿತು. ಏನಿದ್ದರೂ,
ಎಲ್ಲ ವಯಸ್ಸಿನ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಕಳೆದ ತಿಂಗಳು
ಮೊದಲ ಬಾರಿಗೆ ಬಾಗಿಲು ತೆರೆದಾಗ ತೀರ್ಪಿನ ವಿರುದ್ಧ ೬ ದಿನಗಳ ಕಾಲ ಹಿಂಸಾತ್ಮಕ ಪ್ರತಿಭಟನೆಗಳು ನಡೆದ
ಹಿನ್ನೆಲೆಯಲ್ಲಿ ದೇವಾಲಯವನ್ನು ಪ್ರವೇಶಿಸಲು ಈ ಬಾರಿ ಯಾರೊಬ್ಬ ಮಹಿಳೆಯೂ ಯತ್ನಿಸಲಿಲ್ಲ. ಕಳೆದ ತಿಂಗಳು
ದೇವಾಲಯ ಪ್ರವೇಶಿಸಲು ಯತ್ನಿಸಿದ್ದ ಸುಮಾರು ಒಂದು ಡಜನ್ ಮಹಿಳೆಯರನ್ನು ಅಯ್ಯಪ್ಪಸ್ವಾಮಿ ಭಕ್ತ ಪ್ರತಿಭಟನಕಾರರು
ಮಾರ್ಗ ಮಧ್ಯದಲ್ಲೇ ತಡೆದು ಹಿಂದಕ್ಕೆ ಕಳುಹಿಸಿದ್ದರು. ಅಕ್ಟೋಬರ್ ೧೭ರಿಂದ ೨೨ರವರೆಗಿನ ಅವಧಿಯಲ್ಲಿ
ಸುಪ್ರೀಂಕೋರ್ಟ್ ತೀರ್ಪು ಜಾರಿಗೆ ಎಡ ಪ್ರಜಾತಾಂತ್ರಿಕ ಸರ್ಕಾರವು ಕೈಗೊಂಡ ನಿರ್ಧಾರವನ್ನು ಪ್ರತಿಭಟಿಸಿ
ಭಕ್ತರು ಮತ್ತು ಹಿಂದು ಸಂಘಟನೆಗಳು ನಡೆಸಿದ್ದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಹಿಂದೆಂದೂ ಇಲ್ಲದಂತೆ
ದೇವಾಲಯ ಆವರಣದಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು. ಆದರೆ ಭಕ್ತರು ಹಾಗು ಬಲಪಂಥೀಯ ಸಂಘಟನೆಗಳು ಹಲವೆಡೆಗಳಲ್ಲಿ
ಸಂಘಟಿಸಿದ ಪ್ರಬಲ ಪ್ರತಿರೋಧದ ಪರಿಣಾಮವಾಗಿ ಭದ್ರತಾ ವ್ಯವಸ್ಥೆ ಬಹುತೇಕ ವಿಫಲಗೊಂಡಿತ್ತು. ತಿರುವಾಂಕೂರು
ರಾಜ್ಯದ ಕೊನೆಯ ದೊರೆ ಚಿಥಿರ ತಿರುನಾಳ್ ಬಲರಾಮ ವರ್ಮ
ಜನ್ಮದಿನದ ಅಂಗವಾಗಿ ಮಂಗಳವಾರ ನಡೆಯಲಿರುವ ’ಶ್ರಿ ಚಿಥಿರ ಅಟ್ಟ ತಿರುನಾಳ್’ ಪೂಜೆ ಸಲುವಾಗಿ ಈದಿನ ಸಂಜೆ ೫ ಗಂಟೆಗೆ ತೆರೆಯಲಾದ ದೇವಾಲಯವನ್ನು ಮರುದಿನ ರಾತ್ರಿ ಮುಚ್ಚಲಾಗುವುದು. ದೇವಸ್ಥಾನದ ಸುತ್ತಮುತ್ತ ಯಾವುದೇ ಅಹಿತರಕ ಘಟನೆ ನಡೆಯದಂತೆ
ತಡೆಯಲು ಸರ್ಕಾರ ಮತ್ತು ಪೊಲೀಸ್ ವ್ಯವಸ್ಥೆಯು ಕಟಿಬದ್ಧವಾಗಿದ್ದು ಇಡೀ ಪ್ರದೇಶದಲ್ಲಿ ಅಪರಾಧ ದಂಡ
ಸಂಹಿತೆಯ (ಸಿಆರ್‌ಪಿಸಿ) ಸೆಕ್ಷನ್ ೧೪೪ರ ಅಡಿಯಲ್ಲಿ ನಿಷೇಧಾಜ್ಞೆ ಹೊರಡಿಸಲಾಗಿದೆ. ಮರುದಿನ ರಾತ್ರಿಯವರೆಗೂ
ನಿಷೇಧಾಜ್ಞೆ ಜಾರಿಯಲ್ಲಿ ಇರುತ್ತದೆ. ಪಟ್ಟಣಂತಿಟ್ಟ
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ. ನಾರಾಯಣನ್ ಅವರು ಭಕ್ತರಿಗೆ ಸುಲಲಿತ ದರ್ಶನಕ್ಕೆ ಎಲ್ಲ ವ್ಯವಸ್ಥೆಗಳನ್ನೂ
ಮಾಡಲಾಗಿದೆ ಎಂದು ಹೇಳಿದ್ದರು. ೨೦ ಸದಸ್ಯರ ಕಮಾಂಡೋ
ತಂಡ ಮತ್ತು ೧೦೦ ಮಂದಿ ಮಹಿಳಾ ಪೊಲೀಸರು ಸೇರಿದಂತೆ ಸುಮಾರು ೨೩೦೦ ಭದ್ರತಾ ಸಿಬ್ಬಂದಿಯನ್ನು ಭಕ್ತರ
ಭದ್ರತೆ ಸಲುವಾಗಿ ನಿಯೋಜಿಸಲಾಗಿದೆ. ಸನ್ನಿಧಾನದಲ್ಲಿ (ದೇವಾಲಯ ಸಮುಚ್ಚಯ) ಕನಿಷ್ಟ ೫೦ ವರ್ಷ ಮೀರಿದ
ಕನಿಷ್ಠ ೧೫ ಮಂದಿ ಮಹಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ಹೇಳಿದರು.
ನಿಲಕ್ಕಲ್‌ನಿಂದ ಪಂಬಾವರೆಗೆ
ಮಾರ್ಗದಲ್ಲಿ ಹಲವಾರು ಕಡೆ ಭಕ್ತರು ಮತ್ತು ಪೊಲೀಸರ ನಡುವೆ ವಾಕ್ಸಮರ ನಡೆದ ದೃಶ್ಯಾವಳಿಗಳನ್ನು ಟಿವಿಗಳು
ಪ್ರಸಾರ ಮಾಡಿದವು. ಇದರ ಜೊತೆ ಮೂಲಶಿಬಿರದಲ್ಲಿ ಅಗತ್ಯ ಸವಲತ್ತುಗಳ ಕೊರತೆ ಇರುವ ಬಗ್ಗೆ ಹಲವಾರು ಭಕ್ತರು
ದೂರಿದರು. ಎರುಮೇಲಿಗೆ ಬಂದ ಭಕ್ತರ ಗುಂಪೊಂದು ಈದಿನ
ಬೆಳಗ್ಗೆ ತಮಗೆ ಪಂಬಾದಿಂದ ಮುಂದಕ್ಕೆ ತೆರಳಲು ಅವಕಾಶ ನೀಡಲಿಲ್ಲ ಎಂದು ಪ್ರತಿಭಟಿಸಿತು. ’ಅಯ್ಯಪ್ಪ
ಶರಣಂ’ ಮಂತ್ರ ಪಠಿಸುತ್ತಾ ಅವರು ರಸ್ತೆ ಸಂಚಾರವನ್ನು
ಅಡ್ಡಗಟ್ಟಿದರು. ಇನ್ನೊಂದು ತಂಡವು ರಾಜ್ಯ ಸರ್ಕಾರಿ ಬಸ್ಸಿನಲ್ಲಿ ಪಂಬಾಕ್ಕೆ ಬರುವಾಗ ಮಹಿಳಾ ಪೊಲೀಸ್
ಸಿಬ್ಬಂದಿ ತಮ್ಮ ಗುರುತಿನ ಚೀಟಿ ತೋರಿಸುವಂತೆ ಆಗ್ರಹಿಸಿದರು ಎಂದು ಅಕ್ಷೇಪಿಸಿದರು. ಅವರು ನಮ್ಮ ಬಸ್ಸನ್ನು
ತಡೆದು ನಮ್ಮ ಹೆಸರುಗಳನ್ನು ಕೇಳತೊಡಗಿದರು. ಬಸ್ಸಿನಲ್ಲಿದ್ದ ಪ್ರತಿಯೊಬ್ಬರೂ ’ನನ್ನ ಹೆಸರು ಅಯ್ಯಪ್ಪ’ ಎಂದು ಉತ್ತರಿಸಿದರು ಎಂದು ವರದಿ ತಿಳಿಸಿತು.
ಇನ್ನೊಬ್ಬ ಯುವ ಭಕ್ತ ತನಗೆ ಪೊಲಿಸರು ’ಸ್ವಾಮಿಯೇ ಶರಣಂ ಅಯ್ಯಪ್ಪ’ ಪಠಿಸಲೂ ಬಿಡಲಿಲ್ಲ ಎಂದು
ಹೇಳಿದರು. ನೀಲಕ್ಕಲ್‌ನಲ್ಲಿ ರಾಜ್ಯಸಾರಿಗೆ ಬಸ್ಸುಗಳನ್ನು ತಡೆದ ಬಳಿಕ ಹಲವಾರು ಭಕ್ತರು ನಡೆದುಕೊಂಡೇ
ಪಂಬಾದತ್ತ ಹೊರಟ ದೃಶ್ಯಗಳ ಕಂಡು ಬಂದವು. ಸುಮಾರು ೫೦೦ ಭಕ್ತರು ರಸ್ತೆ ಸಂಚಾರಕ್ಕೆ ನಿರ್ಬಂಧ ಹೇರಿದ್ದನ್ನು
ಪ್ರತಿಭಟಿಸಿ ಪಂಬಾಕ್ಕೆ ಪಾದಯಾತ್ರೆ ಮೂಲಕ ಆಗಮಿಸಿದರು. ಮಾಧ್ಯಮಗಳಿಗೂ ಬೆಳಗ್ಗೆ ಸನ್ನಿಧಾನ ಪ್ರವೇಶಿಸಲು
ಅವಕಾಶ ನೀಡಲಿಲ್ಲ. ಆದರೆ ಕೆಲವು ಗಂಟೆಗಳ ಬಳಿಕ ಈ ನಿರ್ಬಂದವನ್ನು ತೆರವುಗೊಳಿಸಲಾಯಿತು. ಮಹಿಳಾ ಪತ್ರಕರ್ತರು
ಪಂಬಾಕ್ಕೆ ಪೊಲೀಸ್ ರಕ್ಷಣೆಯಲ್ಲಿ ತೆರಳಿದರು. ಚಳವಳಿ ನಡೆಸುತ್ತಿರುವ ಭಕ್ತರು- ಹಿಂದೂ ಸಂಘಟನೆಗಳು
೫೦ ವರ್ಷಗಳ ಒಳಗಿನ ಮಹಿಳಾ ವರದಿಗಾರರನ್ನು ನಿಯೋಜಿಸಬೇಡಿ ಎಂದು ಮೊದಲೇ ಮಾಧ್ಯಮ ಸಂಸ್ಥೆಗಳಿಗೆ ಮನವಿ
ಮಾಡಿದ್ದವು. ಕಣ್ಗಾವಲು ಕ್ಯಾಮರಾಗಳ ಜೊತೆಗೆ ದೇವಾಲಯ ಸಮುಚ್ಚಯದಲ್ಲಿ ತಂತ್ರಿ ಕಂಡಾರು ರಾಜೀವರು ಅವರ
ಕೊಠಡಿಯ ಮುಂಭಾಗದಲ್ಲಿ ಮತ್ತು ಇತರ ಕೆಲವೆಡೆ ಜಾಮ್ಮರ್ ಗಳನ್ನು ಅಳವಡಿಸಲಾಗಿತ್ತು. ಪೊಲೀಸರು ಮಾಧ್ಯಮಗಳ
ಜೊತೆಗೆ ಅರ್ಚಕರು ಮಾತನಾಡದಂತೆ ನಿರ್ಬಂಧಗಳನ್ನು ಹಾಕಿದ್ದಾರೆ ಎಂದು ಭಕ್ತರು ಹೇಳಿದರು. ಸುಪ್ರೀಂಕೋರ್ಟ್ ತೀರ್ಪಿನ
ವಿರುದ್ಧ ಮರುಪರಿಶೀಲನಾ ಅರ್ಜಿ ಸಲ್ಲಿಸಲು ನಿರಾಕರಿಸಿ, ತೀರ್ಪು ಜಾರಿಗೆ ನಿರ್ಧರಿಸಿರುವ ರಾಜ್ಯದ
ಎಡ ರಂಗ ಸರ್ಕಾರದ ವಿರುದ್ಧ ಬಿಜೆಪಿ ಮತ್ತು ವಿವಿಧ ಹಿಂದೂ ಸಂಘಟನೆಗಳು ತೀವ್ರ ಹೋರಾಟಕ್ಕೆ ಇಳಿದಿವೆ.
ಕಳೆದ ತಿಂಗಳ ಹಿಂಸಾತ್ಮಕ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಈವರೆಗೆ ೩.೭೩೧ ಮಂದಿಯನ್ನು
ರಾಜ್ಯ ಪೊಲೀಸರು ಬಂಧಿಸಿದರು. ಏಕೈಕ ದರ್ಶನಾಕಾಂಕ್ಷಿ ಮಹಿಳೆ: ೨೬ರ ಹರೆಯದ ಏಕೈಕ ಮಹಿಳೆಯೊಬ್ಬರು ಶಬರಿಮಲೈ
ದೇವಾಲಯ ಭೇಟಿ ಸಲುವಾಗಿ ಪಂಬಾಕ್ಕೆ ಆಗಮಿಸಿ ಪೊಲೀಸ್ ರಕ್ಷಣೆ ಕೋರಿದರು. ಮಂಜು ಎಂಬ ಈ ಮಹಿಳೆ ತನ್ನ
ಪತಿ ಹಾಗೂ ಇಬ್ಬರು ಮಕ್ಕಳ ಜೊತೆಗೆ ಆಗಮಿಸಿದ್ದು, ಹಿಂದು ಸಂಘಟನೆಗಳು ಆಕೆಯ ದೇವಾಲಯ ಭೇಟಿಗೆ ತೀವ್ರ
ಪ್ರತಿಭಟನೆ ವ್ಯಕ್ತ ಪಡಿಸಿವೆ. ಏನಿದ್ದರೂ, ಪೊಲೀಸರು ರಾತ್ರಿ ಆಕೆಯನ್ನು ದೇವಾಲಯಕ್ಕೆ ಕರೆದೊಯ್ಯುವ
ಸಾಧ್ಯತೆಗಳು ಇಲ್ಲ ಎಂದು ಹೇಳಲಾಯಿತು.
2018: ವಾಷಿಂಗ್ಟನ್: ಕೊಲ್ಲಿರಾಷ್ಟ್ರ ಇರಾನ್‌ನಿಂದ ತೈಲ ಖರೀದಿಸುವುದರ
ವಿರುದ್ಧ ಮರುಜಾರಿಗೊಳಿಸಲಾಗಿರುವ ದಿಗ್ಬಂಧನದಿಂದ ಭಾರತ, ಜಪಾನ್, ಚೀನಾ ಸೇರಿದಂತೆ ಎಂಟು ರಾಷ್ಟ್ರಗಳಿಗೆ
ಅಮೆರಿಕವು ತಾತ್ಕಾಲಿಕ ವಿನಾಯ್ತಿ ನೀಡಿತು. ಪಷಿಯನ್ ಕೊಲ್ಲಿ ರಾಷ್ಟ್ರದಿಂದ ತೈಲ ಖರೀದಿಯನ್ನು ಗಣನೀಯವಾಗಿ
ತಗ್ಗಿಸಿರುವುದನ್ನು ಅನುಸರಿಸಿ ೮ ರಾಷ್ಟ್ರಗಳಿಗೆ ತೈಲ ದಿಗ್ಬಂಧನದಿಂದ ತಾತ್ಕಾಲಿಕ ವಿನಾಯ್ತಿ ನೀಡಲಾಗಿದೆ
ಎಂದು ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪೆಯೋ ಪ್ರಕಟಿಸಿದರು. ಟೆಹರಾನ್ ವಿರುದ್ಧ ಟ್ರಂಪ್ ಆಡಳಿತವು
ದಿಗ್ಬಂಧನಗಳನ್ನು ಮರುಜಾರಿಗೊಳಿಸಿದ್ದು, ಇರಾನ್ ಜೊತೆಗಿನ ತೈಲ ವ್ಯವಹಾರ ತಗ್ಗಿಸಲು ಗಡುವು ನೀಡಿತ್ತು. ಇರಾನ್‌ನಿಂದ ತೈಲ ಖರೀದಿಸದಂತೆ ಒತ್ತಡ ಹಾಕುವುದನ್ನು ಅಮೆರಿಕ
ಮುಂದುವರೆಸುವುದು ಎಂದು ತಾತ್ಕಾಲಿಕ ವಿನಾಯ್ತಿ ಘೋಷಿಸಲಾದ ದೇಶಗಳ ಪಟ್ಟಿಯನ್ನು ಪತ್ರಿಕಾಗೋಷ್ಠಿಯಲ್ಲಿ
ಪ್ರಕಟಿಸುತ್ತಾ ಪಾಂಪೆಯೋ ಪುನರುಚ್ಚರಿಸಿದರು. ಇಟಲಿ, ಗ್ರೀಸ್, ದಕ್ಷಿಣ ಕೊರಿಯಾ, ತೈವಾನ್ ಮತ್ತು
ಟರ್ಕಿ ಕೂಡಾ ಪಾಂಪೆಯೋ ಅವರು ಪ್ರಕಟಿಸಿದ ವಿನಾಯ್ತಿ ಪಡೆದ ರಾಷ್ಟ್ರಗಳ ಪಟ್ಟಿಯಲ್ಲಿ ಸೇರಿವೆ. ತನ್ನ
ವರ್ತನೆ ಬದಲಿಸಿಕೊಳ್ಳದ ಇರಾನ್ ಆಡಳಿತದ ವಿರುದ್ಧ ಹಿಂದೆಂದಿಗಿಂತಲೂ ಕಠಿಣವಾದ ದಿಗ್ಬಂಧನವನ್ನು ಅಮೆರಿಕ
ಸೋಮವಾರ ವಿಧಿಸಿದೆ. ಇರಾನಿನ ಬ್ಯಾಂಕಿಂಗ್ ಮತ್ತು ಇಂಧನ ರಂಗಗಳೂ ದಿಗ್ಬಂಧನ ವ್ಯಾಪ್ತಿಗೆ ಒಳಪಟ್ಟಿವೆ.
ಇರಾನಿನಿಂದ ತೈಲ ಆಮದು ನಿಲ್ಲಿಸದ ಯುರೋಪ್, ಏಷ್ಯಾ ಮತ್ತು ಇತರ ಕಡೆಗಳ ರಾಷ್ಟ್ರಗಳು ಮತ್ತು ಕಂಪೆನಿಗಳಿಗೆ
ಕಠಿಣ ದಂಡ ವಿಧಿಸುವುದಾಗಿ ಅಮೆರಿಕ ಹೇಳಿತು. ಭಾರತ ಸೇರಿದಂತೆ ಎಲ್ಲ ರಾಷ್ಟ್ರಗಳೂ ಇರಾನಿನಿಂದ ತೈಲ
ಖರೀದಿಯನ್ನು ನವೆಂಬರ್ ೪ರಿಂದ ಜಾರಿಯಾಗುವಂತೆ ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಎಂದು ಅಮೆರಿಕ ಈ
ಹಿಂದೆ ಬಯಸಿತ್ತು. ಆದರೆ ಮಾರುಕಟ್ಟೆಯಿಂದ ಇರಾನ್ ತೈಲ ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಂಡರೆ ಬೆಲೆಗಳ
ಮೇಲೆ ತೀವ್ರ ಪರಿಣಾಮ ಆಗಬಹುದು ಎಂಬುದನ್ನು ಅಮೆರಿಕ ಅರ್ಥ ಮಾಡಿಕೊಂಡಂತೆ ಕಂಡು ಬರುತ್ತದೆ ಎಂದು ವರದಿಗಳು
ಹೇಳಿವೆ. ಭಾರತವು ಮೂರನೇ ದೊಡ್ಡ ತೈಲ ಗ್ರಾಹಕನಾಗಿದ್ದು, ತನಗೆ ಬೇಕಾದ ಶೇಕಡಾ ೮೦ಕ್ಕಿಂತಲೂ ಹೆಚ್ಚಿನ
ತೈಲವನ್ನು ಆಮದು ಮೂಲಕವೇ ಪೂರೈಸಿಕೊಳ್ಳುತ್ತದೆ. ಇರಾಕ್ ಮತ್ತು ಸೌದಿ ಅರೇಬಿಯಾ ಬಳಿಕ ಇರಾನ್ ಮೂರನೆ
ದೊಡ್ಡ ತೈಲ ಸರಬರಾಜು ರಾಷ್ಟ್ರವಾಗಿದ್ದು ಒಟ್ಟು ಅಗತ್ಯದ ಶೇಕಡಾ ೧೦ರಷ್ಟು ತೈಲವನ್ನು ಪೂರೈಸುತ್ತದೆ.
ಭಾರತವು ಪ್ರಸ್ತುತ ತನ್ನ
ಮೂರನೇ ದೊಡ್ಡ ತೈಲ ಸರಬರಾಜು ರಾಷ್ಟ್ರಕ್ಕೆ ಯುರೋಪಿನ ಬ್ಯಾಂಕಿಂಗ್ ಚಾನೆಲ್ ಗಳ ಮೂಲಕ ಯೂರೋಗಳಲ್ಲಿ
ಹಣ ಪಾವತಿ ಮಾಡುತ್ತಿದೆ.
2018: ಕೊಲಂಬೋ: ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ಕಿತ್ತು
ಹಾಕಿದ್ದು ಮತ್ತು ಸಂಸತ್ತನ್ನು ಅಮಾನತುಗೊಳಿಸಿದ್ದನ್ನು ’ಪ್ರಜಾಪ್ರಭುತ್ವ ವಿರೋಧಿ’ ಎಂಬುದಾಗಿ ಹೇಳುವ ಮೂಲಕ ಶ್ರೀಲಂಕಾ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರನ್ನು ಖಂಡಿಸಿರುವ
ಶ್ರೀಲಂಕಾ ಸಂಸತ್ತಿನ ಸ್ಪೀಕರ್ ಕರು ಜಯಸೂರ್ಯ ಸದನಪರೀಕ್ಷೆಯಲ್ಲಿ
ಗೆಲ್ಲುವವರೆಗೆ ರಾಜಪಕ್ಸೆ ಅವರನ್ನು ಪ್ರಧಾನಿಯಾಗಿ ಮಾನ್ಯ ಮಾಡುವುದಿಲ್ಲ ಎಂದು ಘೋಷಿಸಿದರು. ಸಂಸತ್ತನ್ನು
ತಾವು ಈ ಮುನ್ನ ಘೋಷಿಸಿದ್ದಕ್ಕಿಂತ ಒಂದು ವಾರ ತಡವಾಗಿ ನವೆಂಬರ್ ೧೪ರಂದು ಮರುಸಮಾವೇಶ ಗೊಳಿಸಲಾಗುವುದು
ಎಂದು ಅಧ್ಯಕ್ಷ ಸಿರಿಸೇನಾ ಅವರು ಪ್ರಕಟಿಸಿದ ಬಳಿಕ ಜಯಸೂರ್ಯ ಅವರು ಈ ಖಡಕ್ ಹೇಳಿಕೆ ನೀಡಿದರು. ಸಿಂಹಳದಲ್ಲಿ ತಮ್ಮ ಹೇಳಿಕೆಯನ್ನು
ಬಿಡುಗಡೆ ಮಾಡಿದ ಜಯಸೂರ್ಯ ಅವರು ಸಂಸತ್ತಿನ ಬಹುತೇಕ ಸದಸ್ಯರು ಸಂಸತ್ ಅಧಿವೇಶನ ಸಮಾವೇಶಗೊಳಿಸುವ ಬಗ್ಗೆ ಅಧ್ಯಕ್ಷ ಸಿರಿಸೇನಾ ಇತ್ತೀಚೆಗೆ ಮಾಡಿದ ಬದಲಾವಣೆಗಳು ಸಂವಿಧಾನಬಾಹಿರ
ಎಂಬುದಾಗಿ ತಮಗೆ ದೂರು ಸಲ್ಲಿಸಿದ್ದಾರೆ ಎಂದು ತಿಳಿಸಿದರು. ಕಾನೂನು ಬದ್ಧ ಸಂಸತ್ ಅಧಿವೇಶನವನ್ನು
ತಡೆಯುವ ಮೂಲಕ ತಮ್ಮ ಹಕ್ಕುಗಳನ್ನು ಕಿತ್ತುಕೊಳ್ಳಲಾಗಿದೆ ಎಂಬುದಾಗಿ ಸಂಸತ್ತಿನ ಬಹುತೇಕ ಸದಸ್ಯರು
ಬೊಟ್ಟು ಮಾಡಿ ತೋರಿಸಿದಾಗ, ನ್ಯಾಯ ಮತ್ತು ಪ್ರಾಮಾಣಿಕತೆಯ ಹೆಸರಿನಲ್ಲಿ ನಾನು ಜಗತ್ತಿಗೆ ನನ್ನ ನಿಲುವನ್ನು
ಘೋಷಿಸಬೇಕಾಗುತ್ತದೆ ಎಂದು ಜಯಸೂರ್ಯ ಹೇಳಿದರು. ಮಾಡಲಾಗಿರುವ ಎಲ್ಲ ಬದಲಾವಣೆಗಳು ಸಂವಿಧಾನ ವಿರೋಧಿ
ಮತ್ತು ಪರಂಪರೆಗೆ ವಿರುದ್ಧ ಎಂಬುದಾಗಿ ಸಂಸತ್ತಿನ
ಬಹುಮತೀಯ ಸದಸ್ಯರು ನನಗೆ ದೂರು ನೀಡಿದ್ದಾರೆ. ಹೊಸ ಪಕ್ಷವು ಬಹುಮತ ಸಾಬೀತುಪಡಿಸುವವರೆಗೆ ಬದಲಾವಣೆಗೆ
ಮುನ್ನ ಇದ್ದ ಯಥಾಸ್ಥಿತಿಯನ್ನು ಮಾನ್ಯ ಮಾಡುವಂತೆ ಆಗ್ರಹಿಸಿದ್ದಾರೆ. ಆದ್ದರಿಂದ ಹೊಸ ಪಕ್ಷವು ಬಹುಮತ
ಸಾಬೀತುಪಡಿಸುವವರೆಗೆ ಬದಲಾವಣೆಗಳಿಗೆ ಮುನ್ನ ಇದ್ದ ಯಥಾಸ್ಥಿತಿಯನ್ನು ನಾನು ಮಾನ್ಯ ಮಾಡಬೇಕಾಗಿದೆ
ಎಂದು ಜಯಸೂರ್ಯ ಹೇಳಿದರು. ಪರಿಣಾಮವಾಗಿ ಸಂಸತ್ತಿನಲ್ಲಿ
ಈಗ ರಾಜಪಕ್ಸೆ ಅವರಿಗೆ ಪ್ರಧಾನಮಂತ್ರಿಯ ಆಸನ ನೀಡಲಾಗುವುದಿಲ್ಲ ಮತ್ತು ಹಾಲಿ ಸರ್ಕಾರದ ಸದಸ್ಯರು ವಿರೋಧಿ
ಆಸನಗಳಲ್ಲಿ ಕುಳಿತುಕೊಳ್ಳಬೇಕಾಗುತ್ತದೆ. ಸಿರಿಸೇನಾ ಅವರು ಪ್ರಧಾನಿ ವಿಕ್ರಮಸಿಂಘೆ ಅವರನ್ನು ಅಕ್ಟೋಬರ್
೨೬ರಂದು ದಿಢೀರನೆ ಪದಚ್ಯುತಿಗೊಳಿಸಿ, ವಿವಾದಾತ್ಮಕ ಮಾಜಿ ಪ್ರಧಾನಿ ಮಹಿಂದ ರಾಜಪಕ್ಸೆ ಅವರನ್ನು ಪ್ರಧಾನಿ
ಸ್ಥಾನದಲ್ಲಿ ಕೂರಿಸಿದ ಬಳಿಕ ಅಮಾನತುಗೊಳಿಸಲಾದ ಸಂಸತ್ ಕಲಾಪಗಳನ್ನು ಈಗ ನವೆಂಬರ್ ೧೪ಕ್ಕೆ ಮುಂದೂಡಿದರು. ಸಂಸತ್ತಿನ ಅಧಿವೇಶನವನ್ನು
ನವೆಂಬರ್ ೭ಕ್ಕೆ ಮರುಸಮವೇಶಗೊಳಿಸಬಹುದು ಎಂದು ಸ್ಪೀಕರ್ ನಿರೀಕ್ಷಿಸಿದ್ದರು. ಆದರೆ ಸಿರಿಸೇನಾ ಅವರು
ಸಂಸತ್ತನ್ನು ನವೆಂಬರ್ ೧೪ರಂದು ಸಮಾವೇಶಗೊಳಿಸುವಂತೆ ನೋಟಿಸ್ ನೀಡಿದರು.ನಾಗರಿಕ ಸಂಘಟನೆಗಳು
ಜಯಸೂರ್ಯ ಅವರು ಸ್ವತಃ ಸಂಸತ್ ಅಧಿವೇಶನ ಸಮಾವೇಶಗೊಳಿಸುವಂತೆ
ಆಗ್ರಹಿಸಿವೆ. ಆದರೆ ಅಧ್ಯಕ್ಷರ ಒಪ್ಪಿಗೆ ಇಲ್ಲದೆ ಇದ್ದರೆ ತಾವು ಇಂತಹ ಅಧಿಕಾರ ಹೊಂದಿರುವುದಿಲ್ಲ
ಎಂದು ಜಯಸೂರ್ಯ ಹೇಳಿದರು. ಈ ಮಧ್ಯೆ ವಿಕ್ರಮಸಿಂಘೆ ಅವರ ಯುನೈಟೆಡ್ ನ್ಯಾಷನಲ್ ಪಾರ್ಟಿಯು (ಯುಎನ್
ಪಿ) ರಾಜಪಕ್ಸೆ ವಿರುದ್ಧ ಅವಿಶ್ವಾನ ನಿರ್ಣಯ ಮಂಡಿಸಲು ನಿರ್ಧರಿಸಿ, ನೋಟಿಸ್ ನೀಡಿತು.
2008: ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಡೆಮಾಕ್ರೆಟಿಕ್ ಪಕ್ಷದ ಸಂಸದ ಬರಾಕ್ ಹುಸೇನ್ ಒಬಾಮ ಹೊಸ ಯುಗಕ್ಕೆ ನಾಂದಿ ಹಾಡಿದರು. ಅಮೆರಿಕ ಅಧ್ಯಕ್ಷ ಹುದ್ದೆಗೆ ಏರಿದ ಮೊದಲ ಕಪ್ಪು ವರ್ಣೀಯ ವ್ಯಕ್ತಿ ಎಂಬ ಹೆಗ್ಗಳಿಕೆ ಅವರದಾಯಿತು. ಇದಲ್ಲದೇ, ಅಧ್ಯಕ್ಷ ಹುದ್ದೆಗೆ ಏರಿದ ಅತ್ಯಂತ ಚಿಕ್ಕ ವಯಸ್ಸಿನ ಸಂಸದ ಎಂಬ ಹಿರಿಮೆಯೂ ಒಬಾಮ ಪಾಲಿಗೆ ಬಂದಿತು. ಇಲಿನಾಯ್ಸ್ ಸಂಸದ ಒಬಾಮ ಅವರಿಗೆ ಈವೇಳೆಗೆ 47 ವರ್ಷ ವಯಸ್ಸು. ಇಡೀ ವಿಶ್ವವೇ ತೀವ್ರ ಕುತೂಹಲದಿಂದ ವೀಕ್ಷಿಸುತ್ತಿದ್ದ ಅಮೆರಿಕದ 44ನೇ ಅಧ್ಯಕ್ಷೀಯ ಚುನಾವಣೆಯಲ್ಲಿ ಒಬಾಮಾ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ರಿಪಬ್ಲಿಕನ್ ಪಕ್ಷದ ಅರಿಜೋನಾ ಸಂಸದ ಜಾನ್ ಮೆಕೇನ್ ಅವರನ್ನು ಭಾರಿ ಅಂತರದಿಂದ ಸೋಲಿಸಿದರು.
2008: ಬಿ.ಆರ್. ಚೋಪ್ರಾ ಎಂದೇ ಮನೆಮಾತಾಗಿದ್ದ ವಿಶ್ವಖ್ಯಾತ ಚಲನಚಿತ್ರ- ಕಿರುತೆರೆ ಧಾರಾವಾಹಿ ನಿರ್ದೇಶಕ, ನಿರ್ಮಾಪಕ ಹಾಗೂ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಬಲದೇವ್ ರಾಜ್ ಚೋಪ್ರಾ (95) ಈದಿನ ಮುಂಬೈ ಹೊರವಲಯ ಜುಹುವಿನಲ್ಲಿನ ತಮ್ಮ ನಿವಾಸದಲ್ಲಿ ಬೆಳಗ್ಗೆ ನಿಧನರಾದರು. ಚೋಪ್ರಾ ನಿರ್ದೇಶಿಸಿದ ಯಶಸ್ವಿ ಚಿತ್ರಗಳ ಪಟ್ಟಿ ದೊಡ್ಡದು. ಆ ಪೈಕಿ ನಯಾ ದೌರ್, ಗುಮ್ ರಾಹ್, ಹಮ್ ರಾಜ್é್, ದುಂದ್, ಇನ್ ಸಾಫ್ ಕ ತರಾಜéೂ, ನಿಕಾಹ್ ಪ್ರಮುಖವಾದವುಗಳು. 1914ರ ಏಪ್ರಿಲ್ 14ರಂದು ಅವಿಭಜಿತ ಪಾಕಿಸ್ಥಾನದಲ್ಲಿ ಜನಿಸಿದ ಅವರು ಲಾಹೋರ್ ವಿ.ವಿ.ಯಲ್ಲಿ ಎಂ.ಎ.ಇಂಗ್ಲಿಷ್ ಸಾಹಿತ್ಯ ವ್ಯಾಸಂಗ ಮಾಡಿದರು. ಆದರೆ, ಬಾಲ್ಯದಿಂದಲೂ ಬೆಳ್ಳಿತೆರೆಯೆಡೆಗೆ ಆಕರ್ಷಿತರಾಗಿದ್ದ ಅವರು ನಂತರ ಸಿನಿಮಾ ಪತ್ರಿಕೋದ್ಯಮಕ್ಕೆ ಹೊರಳಿ, ಮಾಸಿಕ ನಿಯತಕಾಲಿಕವೊಂದರಲ್ಲಿ ವಿಮರ್ಶೆ ಬರೆಯುವ ಮೂಲಕ ತಮ್ಮ ಚಲನಚಿತ್ರ ವೃತ್ತಿಯಾತ್ರೆ ಆರಂಭಿಸಿದರು. ಕಿರುತೆರೆ ಧಾರಾವಾಹಿ ಕ್ಷೇತ್ರದಲ್ಲಿ ಚೋಪ್ರಾ ಸಾಧನೆ ಪರ್ವತದಷ್ಟು ಎತ್ತರ. ಅವರ `ಮಹಾಭಾರತ' ಧಾರಾವಾಹಿಯು ಭಾರತದ ಕಿರುತೆರೆ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಧಾರಾವಾಹಿ. `ಎಂದಿಗಾದರೂ ಕೆಡುಕಿನ ವಿರುದ್ಧ ಒಳಿತೇ ಜಯಿಸುತ್ತದೆ' ಎಂಬ ಮಹಾಕಾವ್ಯದ ಸಂದೇಶವನ್ನು ಅವರು ಈ ಧಾರಾವಾಹಿ ಮೂಲಕ ಸಮಾಜಕ್ಕೆ ನೀಡಿದರು.
2008: ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯದಲ್ಲಿ ಡಾ.ಗಂಗೂಬಾಯಿ ಹಾನಗಲ್ ಪೀಠವನ್ನು ಕುಲಪತಿ ಡಾ. ಎಸ್. ಕೆ. ಸೈದಾಪುರ ಉದ್ಘಾಟಿಸಿದರು.
2008: ಭಾರತದ ಶೂಟರ್ ಗಗನ್ ನಾರಂಗ್ ಅವರು ಬ್ಯಾಂಕಾಕಿನಲ್ಲಿ ನಡೆದ ವಿಶ್ವಕಪ್ ಶೂಟಿಂಗಿನ ಪುರುಷರ 10 ಮೀ. ಏರ್ ರೈಫಲ್ ವಿಭಾಗದ ಸ್ಪರ್ಧೆಯಲ್ಲಿ ನೂತನ ವಿಶ್ವದಾಖಲೆ ನಿರ್ಮಿಸಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಈ ಸಾಧನೆಯ ಮೂಲಕ ಅವರು ಬೀಜಿಂಗ್ ಒಲಿಂಪಿಕ್ ಕೂಟದಲ್ಲಿ ಎದುರಾದ ನಿರಾಸೆಯ ಕರಿನೆರಳನ್ನು ದೂರ ಮಾಡಿದರು. ಈದಿನ ಬೆಳಗ್ಗೆ ನಡೆದ ಸ್ಪರ್ಧೆಯ ಅರ್ಹತಾ ಸುತ್ತುಗಳಲ್ಲಿ 600 ಹಾಗೂ ಫೈನಲಿನಲ್ಲಿ 103.5 ಪಾಯಿಂಟ್ ಕಲೆಹಾಕಿದ ನಾರಂಗ್ ಒಟ್ಟು 703.5 ಪಾಯಿಂಟುಗಳೊಂದಿಗೆ ಬಂಗಾರದ ಪದಕ ಕೊರಳಿಗೇರಿಸಿಕೊಂಡರು. ಈ ಹಾದಿಯಲ್ಲಿ ಅವರು ಆಸ್ಟ್ರೇಲಿಯಾದ ಫಾರ್ನಿಕ್ ಥಾಮಸ್ 2006ರಲ್ಲಿ ಸ್ಪೇನಿನ ಗ್ರೆನಾಡದಲ್ಲಿ ನಡೆದ ವಿಶ್ವಕಪ್ ಫೈನಲಿನಲ್ಲಿ ಸ್ಥಾಪಿಸಿದ್ದ ವಿಶ್ವದಾಖಲೆಯನ್ನು ಮುರಿದರು. ಒಲಿಂಪಿಕ್ ಕೂಟದ ಪದಕ ವಿಜೇತರಾದ ಚೀನಾದ ಜು ಕ್ವಿನಾನ್ ಮತ್ತು ಫಿನ್ ಹೆನ್ ಹಕಿನೆನ್ ಅವರನ್ನು ಹಿಂದಿಕ್ಕುವ ಮೂಲಕ 25ರ ಹರೆಯದ ನಾರಂಗ್ ಅದ್ವಿತೀಯ ಸಾಧನೆ ಮಾಡಿದರು. ಗಗನ್ಗೆ ಒಲಿಂಪಿಕ್ ಪದಕ ಗಗನ ಕುಸುಮವಾಗಿಯೇ ಉಳಿದಿತ್ತು. ಅಲ್ಲಿ ಅಂತಿಮ ಸುತ್ತು ಪ್ರವೇಶಿಸಿದ್ದರಾದರೂ ಪದಕ ದಕ್ಕಿರಲಿಲ್ಲ. ಇದೀಗ ವಿಶ್ವದಾಖಲೆಯೊಂದಿಗೆ ಚಿನ್ನ ಗೆದ್ದು ತಮ್ಮ ಸಾಮರ್ಥ್ಯ ಏನೆಂಬುದನ್ನು ತೋರಿಸಿಕೊಟ್ಟರು.
2008: ಆಫ್ಘಾನಿಸ್ಥಾನದ ದಕ್ಷಿಣ ಪ್ರಾಂತದ ಕಂದಹಾರದಲ್ಲಿ (05-11-2008) ಮದುವೆ ನಡೆಯುತ್ತಿದ ಸ್ಥಳದ ಮೇಲೆ ಅಮೆರಿಕ ನೇತೃತ್ವದ ಸೇನಾಪಡೆ ನಡೆಸಿದ ವಾಯುದಾಳಿಯಲ್ಲಿ 40 ಜನ ಮೃತರಾಗಿ 28 ಜನರು ಗಾಯಗೊಂಡರು.. ಅಮೆರಿಕ ನೇತೃತ್ವದ ಜಂಟಿ ಪಡೆಗಳು ತಪ್ಪು ತಿಳಿವಳಿಕೆಯಿಂದ ನಡೆಸಿದ ದಾಳಿ ಇದಾಗಿತ್ತು. ಶಾ ವಾಲಿ ಕೋಟ್ ಜ್ಲಿಲೆಯ್ಲಲಿ ತಾಲಿಬಾನ್ ಪಡೆಗಳ ಮೇಲೆ ಬಾಂಬ್ ದಾಳಿ ನಡೆಸಲಾಗಿತ್ತು. ಆದರೆ ಇದರಲ್ಲಿ ಒಂದು ಬಾಂಬ್ ಮದುವೆ ನಡೆಯುತ್ತಿದ್ದ ಸ್ಥಳದಲ್ಲಿ ಬಿತ್ತು.
2007: ರಾಜ್ಯಪಾಲ ರಾಮೇಶ್ವರ ಠಾಕೂರ್ ಮತ್ತು ಬಿಜೆಪಿ- ಜೆಡಿ ಎಸ್ ಶಾಸಕರು ಪ್ರತ್ಯೇಕ ವಿಮಾನಗಳಲ್ಲಿ ದೆಹಲಿಗೆ ತೆರಳುವುದರೊಂದಿಗೆ ಕರ್ನಾಟಕದಲ್ಲಿ ಚುನಾಯಿತ ಸರ್ಕಾರ ರಚನೆ ಸಂಬಂಧ ನಡೆದ ರಾಜಕೀಯ ಕಸರತ್ತು ಹಾಗೂ ಚಟುವಟಿಕೆಗಳು ರಾಜ್ಯದ ರಾಜಧಾನಿಯಿಂದ ರಾಷ್ಟ್ರದ ರಾಜಧಾನಿ ದೆಹಲಿಗೆ ಸ್ಥಳಾಂತರಗೊಂಡವು.
2007: ತುರ್ತು ಪರಿಸ್ಥಿತಿ ಹೇರಿಕೆಯ ವಿರುದ್ಧ ಪಾಕಿಸ್ಥಾನದ ವಿವಿಧ ಕಡೆ ವ್ಯಾಪಕ ಪ್ರತಿಭಟನೆ ಕಂಡು ಬಂದಿತು. ಈ ಪ್ರತಿಭಟನೆಗಳನ್ನು ನಿಯಂತ್ರಿಸುವ ಸಲುವಾಗಿ ಹಲವು ಕಡೆ ಪೊಲೀಸರು ಬಲ ಪ್ರಯೋಗ ನಡೆಸಿ ನೂರಾರು ಮಂದಿಯನ್ನು ಬಂಧಿಸಿದರು. ಪೇಶಾವರ, ಕರಾಚಿ, ರಾವಲ್ಪಿಂಡಿ ಸೇರಿದಂತೆ ಪಾಕಿಸ್ಥಾನದ ಮುಖ್ಯ ಪಟ್ಟಣಗಳಲ್ಲಿ ಎಲ್ಲೆಂದರಲ್ಲಿ ಪೊಲೀಸರ ಲಾಠಿ- ಬೂಟಿನ ಸದ್ದು, ಪ್ರತಿಭಟನಕಾರರ ಮುಗಿಲು ಮುಟ್ಟುವ ಘೋಷಣೆಗಳು, ಬೀದಿಗಿಳಿದ ವಕೀಲರ ಕಪ್ಪು ದಿನಾಚರಣೆ ಮತ್ತು ನ್ಯಾಯಾಂಗ ಕಲಾಪ ಬಹಿಷ್ಕಾರ ಪ್ರತಿಭಟನೆಯ ಅಬ್ಬರ ಸಾಮಾನ್ಯ ದೃಶ್ಯವಾಗಿತ್ತು.
2007: ತಮ್ಮನ್ನು ಹತ್ಯೆ ಮಾಡಲು `ಚಿಕ್ಕ ಮಗುವೊಂದನ್ನು ಆತ್ಮಹತ್ಯಾ ದಾಳಿಕೋರ'ನನ್ನಾಗಿ ಬಳಸಿಕೊಳ್ಳಲಾಗಿತ್ತು ಎಂದು ಪಾಕಿಸ್ಥಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಬಹಿರಂಗಪಡಿಸಿದರು. ಬಾಂಬು ಸ್ಫೋಟ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದವರನ್ನು ಭೇಟಿ ಮಾಡಿದಾಗ ತಮ್ಮನ್ನು ಹತ್ಯೆ ಮಾಡಲು ಚಿಕ್ಕ ಮಗುವೊಂದನ್ನು ಬಳಸಿರುವ ವಿಷಯ ತಿಳಿದುಬಂತು ಎಂದು ಬೆನಜೀರ್ ಸಿಎನ್ನೆನ್ ಗೆ ಬರೆದ ಪತ್ರದಲ್ಲಿ ತಿಳಿಸಿದರು. `ಭಯೋತ್ಪಾದಕರು ನನ್ನ ಪಕ್ಷದ ಧ್ವಜವನ್ನು ಈ ಮಗುವಿನ ಮೇಲೆ ಹೊದಿಸಿ ನನ್ನ ಬಳಿ ಕರೆತಂದಿದ್ದರು. ಆದರೆ ಬಾಂಬ್ ಸಿಡಿಸಲು ವಿಫಲರಾದ ಅವರು ನಂತರ ನನ್ನ ವಾಹನದ ಬಳಿ ಮಗುವನ್ನು ಬಿಟ್ಟು ಹೋದರು. ಕೆಲ ಸಮಯದ ನಂತರ ವಾಹನ ಸ್ಫೋಟಗೊಂಡಿತು. ಆಗ ನಾನು ಅಲ್ಲಿರಲಿಲ್ಲ' ಎಂದು ಬೆನಜೀರ್ ನ್ಯೂಯಾರ್ಕಿನಲ್ಲಿ ಹೇಳಿದರು. ಎಂಟು ವರ್ಷಗಳ ನಂತರ ಬೆನಜೀರ್ ಸ್ವದೇಶಕ್ಕೆ ವಾಪಸಾದ ಅಕ್ಟೋಬರ್ 18 ರಂದು ಬೆನಜೀರ್ ಅವರ ಪಕ್ಷದ ಕಾರ್ಯಕರ್ತರು ಭಾರಿ ರ್ಯಾಲಿ ನಡೆಸಿದಾಗ ಭಯೋತ್ಪಾದಕರು ಹಲವೆಡೆ ಬಾಂಬುಗಳನ್ನು ಸಿಡಿಸಿ, 140ಕ್ಕೂ ಹೆಚ್ಚು ಜನರ ಮಾರಣಹೋಮ ಗೈದಿದ್ದರು.
2007: ಜಮ್ಮು ಮತ್ತು ಕಾಶ್ಮೀರದ ರೇಸಿ ಜಿಲ್ಲೆಯಲ್ಲಿ ಭಾರತೀಯ ರೈಲ್ವೆ ಇಲಾಖೆ ನಿರ್ಮಿಸುತ್ತಿರುವ ಚೆನಾಬ್ ಸೇತುವೆ ವಿಶ್ವದಲ್ಲೇ ಅತಿ ಎತ್ತರದ ಸೇತುವೆಯಾಗಲಿದೆ ಎಂದು ಕೊಂಕಣ ರೈಲ್ವೆ ಉಪ ಮುಖ್ಯ ಎಂಜಿನಿಯರ್ ಈಶ್ವರ ಚಂದ್ರ ಹೇಳಿದರು. 359 ಮೀಟರ್ ಎತ್ತರದ ಈ ಸೇತುವೆ ಜಿಲ್ಲೆಯ ಬಕ್ಕಳ್ ಮತ್ತು ಕೌರಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸಲಿದೆ. ಪ್ರಸ್ತುತ ವಿಶ್ವದ ಅತಿ ಎತ್ತರದ ಸೇತುವೆಯ ಪಟ್ಟಿಯಲ್ಲಿ ದಕ್ಷಿಣಫ್ರಾನ್ಸಿನ 323 ಮೀಟರ್ ಎತ್ತರದ ಮಿಲ್ಲಾವ್ ಸೇತುವೆ ಇದ್ದು, ಚೆನಾಬ್ ಸೇತುವೆ ನಿರ್ಮಾಣಗೊಂಡ ನಂತರ ಆ ಸ್ಥಾನ ಈ ಸೇತುವೆಗೆ ಲಭ್ಯವಾಗಲಿದೆ. ಭಾರತವು ಐರೋಪ್ಯ ದೇಶಗಳ ಸಹಭಾಗಿತ್ವದಲ್ಲಿ ಕೊಂಕಣ ರೈಲ್ವೆ ಫ್ಲಾಗ್ ಶಿಪ್ ಯೋಜನೆಯಡಿಯಲ್ಲಿ ಈ ಸೇತುವೆ ನಿರ್ಮಾಣ ಕಾರ್ಯ ನಡೆಯುತ್ತಿದೆ.
2007: ಈಶಾನ್ಯ ಅರ್ಜೆಂಟೀನಾದ ಬ್ಯೂನಸ್ ಏರಿಸ್ ನಗರದ ಕಾರಾಗೃಹದಲ್ಲಿ ಕೈದಿಗಳ ಪರಸ್ಪರ ಕಾದಾಟದಲ್ಲಿ ಹೊತ್ತಿಕೊಂಡ ಬೆಂಕಿಯಿಂದ ಕನಿಷ್ಠ 29 ಜನರು ಸಾವಿಗೀಡಾದರು.
2007: ಹನ್ನೆರಡು ದಿನಗಳ ಹಿಂದೆ ಗಗನಕ್ಕೆ ಉಡಾಯಿಸಲಾಗಿದ್ದ ಮಾನವ ರಹಿತ ಉಪಗ್ರಹ `ಚಾಂಗ್' ಈದಿನ ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ತಲುಪಿತು. ಇದು ಚೀನಾದ ಬಾಹ್ಯಾಕಾಶ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲಾಯಿತು.
2007: ವೀಕ್ಷಕರ ಕುತೂಹಲ ಕೆರಳಿಸಿದ್ದ ಝೀ ಕನ್ನಡದ `ಶ್ರೀಮತಿ ಕರ್ನಾಟಕ' ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ಶಾಂತಾ ವೆಂಕಟೇಶ್ ವಿಜೇತರಾದರು.
2006: ಮಾನವೀಯತೆ ವಿರುದ್ಧ ಎಸಗಿದ ಅಪರಾಧಕ್ಕಾಗಿ ಇರಾಕಿನ ಪದಚ್ಯುತ ಅಧ್ಯಕ್ಷ ಸದ್ದಾಂ ಹುಸೇನ್ (69) ಅವರಿಗೆ, ಅಮೆರಿಕ ಬೆಂಬಲಿತ ಉನ್ನತ ನ್ಯಾಯಮಂಡಳಿಯು ಬಾಗ್ದಾದಿನಲ್ಲಿ ಮರಣದಂಡನೆ ವಿಧಿಸಿತು. 1982ರ ಜುಲೈ 8ರಂದು ಸದ್ದಾಂ ಹತ್ಯೆಗೆ ವಿಫಲ ಯತ್ನ ನಡೆಸಿದ ದುಜೈಲಿನ ಶಿಯಾ ಜನಾಂಗಕ್ಕೆ ಸೇರಿದ 148 ಜನರನ್ನು ಪ್ರತೀಕಾರಕ್ಕಾಗಿ ಬರ್ಬರವಾಗಿ ಕೊಂದ ಆರೋಪ ಸದ್ದಾಂ ಮತ್ತು ಏಳು ಮಂದಿ ಸಹಚರರ ಮೇಲೆ ಇತ್ತು. ಇರಾಕಿನ ಮಾಜಿ ಮುಖ್ಯ ನ್ಯಾಯಾಧೀಶ ಅವದ್ ಅಹ್ಮದ್ ಅಲ್ ಬಂದರ್ ಮತ್ತು ಸದ್ದಾಂ ಮಲ ಸೋದರನಾಗಿರುವ ಬೇಹುಗಾರಿಕೆ ಪಡೆ ಮುಖಾಬಾರತ್ ನ ಮಾಜಿ ಮುಖ್ಯಸ್ಥ ಬರ್ಜಾನ್ ಇಬ್ರಾಹಿಂ ಅಲ್ ಟಿಕ್ರಿತಿ ಅವರಿಗೂ ಮರಣ ದಂಡನೆ ವಿಧಿಸಿದ ನ್ಯಾಯಾಲಯ, ಇರಾಕಿನ ಮಾಜಿ ಉಪಾಧ್ಯಕ್ಷ ತಹಾ ಯಾಸಿನ್ ರಮ್ದಾನ್ ಗೆ ಜೀವಾವಧಿ ಶಿಕ್ಷೆ ವಿಧಿಸಿತು.
2006: ಅಸ್ಸಾಂ ರಾಜಧಾನಿ ಗುವಾಹತಿಯಲ್ಲಿ ಸೂರ್ಯಾಸ್ತದ ವೇಳೆಯಲ್ಲಿ ಅವಳಿ ಬಾಂಬ್ ಸ್ಫೋಟಗಳಿಂದ 10 ಮಂದಿ ಸತ್ತು 52ಕ್ಕೂ ಹೆಚ್ಚು ಮಂದಿ ಗಾಯಗೊಂಡರು. ವಾಣಿಜ್ಯ ಪ್ರದೇಶವಾದ ಫ್ಯಾನ್ಸಿ ಬಜಾರ್ ಮತ್ತು ನೂನ್ಮತಿ ಪ್ರದೇಶಗಳಲ್ಲಿ ಈ ಬಾಂಬ್ ಸ್ಫೋಟಗಳು ಸಂಭವಿಸಿದವು.
2006: ಮುಂಬೈಯಲ್ಲಿ ನಡೆದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಎಂಟು ವಿಕೆಟ್ ಅಂತರದಿಂದ ಸೋಲಿಸಿದ ಆಸ್ಟ್ರೇಲಿಯಾ ಮೊದಲ ಬಾರಿಗೆ `ಚಾಂಪಿಯನ್ಸ್ ಟ್ರೋಫಿ' ಗೆಲ್ಲುವಲ್ಲಿ ಯಶಸ್ಸು ಸಾಧಿಸಿ, ಕ್ರಿಕೆಟ್ ವಿಶ್ವದಲ್ಲಿ ತನ್ನ ಸಾರ್ವಭೌಮತ್ವವನ್ನು ಮತ್ತೊಮ್ಮೆ ಸಾಬೀತು ಪಡಿಸಿತು.
2005: ಪಾಕಿಸ್ಥಾನದ ಈಶಾನ್ಯ ಭಾಗದಲ್ಲಿ ಸಿಂಧೂನದಿಯಲ್ಲಿ ದೋಣಿ ಮುಳುಗಿ ಅದರಲ್ಲಿದ್ದ 70 ಮಂದಿ ಜಲ ಸಮಾಧಿಯಾದರು. ಅವರೆಲ್ಲರೂ ಸಂಬಂಧಿಯೊಬ್ಬನ ಅಂತ್ಯಕ್ರಿಯೆಗೆ ಹೊರಟಿದ್ದಾಗ ಈ ದುರಂತ ಸಂಭವಿಸಿತು.
1999: ಅಮೆರಿಕದ ಜಿಲ್ಲಾ ನ್ಯಾಯಾಧೀಶ ಥಾಮಸ್ ಪೆನ್ ಫೀಲ್ಡ್ ಅವರು ಮೈಕ್ರೋಸಾಫ್ಟ್ ಕಾರ್ಪೊರೇಷನ್ ಒಂದು `ಏಕಸ್ವಾಮ್ಯ' ಸಂಸ್ಥೆ ಎಂದು ಘೋಷಿಸಿದರು. ಈ ಸಾಫ್ಟ್ ವೇರ್ ದೈತ್ಯ ಸಂಸ್ಥೆಯ `ಆಕ್ರಮಣಕಾರಿ' ಕ್ರಮಗಳು ಸಂಶೋಧನೆಗಳಿಗೆ ಅಡ್ಡಿ ಉಂಟು ಮಾಡುತ್ತಿವೆ ಹಾಗೂ ಗ್ರಾಹಕರನ್ನು ನೋಯಿಸುತ್ತಿವೆ ಎಂದು ಅವರು ಹೇಳಿದರು.
1994: ಲಾಸ್ ವೆಗಾಸಿನಲ್ಲಿ ನಡೆದ ಜಾಗತಿಕ ಬಾಕ್ಸಿಂಗ್ ಅಸೋಸಿಯೇಶನ್ (ಡಬ್ಲ್ಯೂಬಿಎ ) ಕ್ರೀಡಾಕೂಟದ 10ನೇ ಸುತ್ತಿನಲ್ಲಿ ಎದುರಾಳಿ ಮೈಕೆಲ್ ಮೂರರ್ ಅವರನ್ನು ಕೆಳಕ್ಕೆ ಕೆಡಹುವ ಮೂಲಕ 45 ವರ್ಷ ವಯಸ್ಸಿನ ಜಾರ್ಜ್ ಫೋರ್ಮನ್ ಬಾಕ್ಸಿಂಗಿನ ಅತ್ಯಂತ ಹಿರಿಯ ಹೆವಿವೇಯ್ಟ್ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
1991: ಅಂತಾರಾಜ್ಯ ಸಂಪರ್ಕ ಸಾಮ್ರಾಜ್ಯ ಕಟ್ಟಿದ ಜೆಕೊಸ್ಲೋವೇಕಿಯಾ ಸಂಜಾತ ಬ್ರಿಟಿಷ್ ಪ್ರಕಾಶನಕಾರ ರಾಬರ್ಟ್ ಮ್ಯಾಕ್ಸ್ ವೆಲ್ (1923-1991) ಕ್ಯಾನರಿ ದ್ವೀಪಗಳ ಬಳಿ ಸಮುದ್ರದಲ್ಲಿಮುಳುಗಿ ಆತ್ಮಹತ್ಯೆ ಮಾಡಿಕೊಂಡರು.
1978: ಜಿ.ಪಿ. ದೇಶಪಾಂಡೆ ಅವರ ನಾಟಕ `ಉಧ್ವಸ್ತ ಧರ್ಮಶಾಲಾ' ನಾಟಕ ಪ್ರದರ್ಶನದೊಂದಿಗೆ ಬಾಂಬೆಯಲ್ಲಿ (ಈಗಿನ ಮುಂಬೈ) `ಪೃಥ್ವಿ ಥಿಯೇಟರ್' (ಪೃಥ್ವಿ ರಂಗಭೂಮಿ) ಉದ್ಘಾಟನೆಗೊಂಡಿತು. ಪೃಥ್ವಿರಾಜ್ ಕಪೂರ್ ಸ್ಮಾರಕ ಟ್ರಸ್ಟ್ ಈ ಥಿಯೇಟರನ್ನು ನಿರ್ಮಿಸಿತು. ಶಶಿ ಮತ್ತು ಜೆನ್ನಿಫರ್ ಕಪೂರ್ ಅವರು ಪೃಥ್ವಿರಾಜ್ ಕಪೂರ್ ಅವರ `ಪ್ರತ್ಯೇಕ ರಂಗಭೂಮಿ'ಯ ಕನಸನ್ನು ನನಸುಗೊಳಿಸಿದರು. (1944ರಲ್ಲಿ ಪೃಥ್ವಿರಾಜ್ ಕಪೂರ್ `ಪೃಥ್ವಿ ಥಿಯೇಟರ್ಸ್' ಹೆಸರಿನಲ್ಲಿ ಹಿಂದಿ ಥಿಯೇಟರ್ ಕಂಪೆನಿಯನ್ನು ಸ್ಥಾಪಿಸಿ ಭಾರತದಾದ್ಯಂತ ಈ ತಂಡದೊಂದಿಗೆ ಪ್ರವಾಸ ಮಾಡಿದ್ದರು. ಅವರು ಈ ತಂಡದ ನಟ-ನಿರ್ವಾಹಕರಾಗಿದ್ದರು.)
1977: ವಿದೇಶಾಂಗ ಸಚಿವ ಅಟಲ್ ಬಿಹಾರಿ ವಾಜಪೇಯಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಿಂದಿಯಲ್ಲಿ ಭಾಷಣ ಮಾಡಿದರು.
1961: ಪ್ರಧಾನಿ ಜವಾಹರಲಾಲ್ ನೆಹರೂ ಅವರು ಮೊತ್ತ ಮೊದಲ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡಿದರು.
1951: ಬಾಂಬೆ- ಬರೋಡ, ಸೆಂಟ್ರಲ್ ಇಂಡಿಯಾ ರೈಲ್ವೇ, ಸೌರಾಷ್ಟ್ರ, ರಾಜಸ್ಥಾನ ಮತ್ತು ಜೈಪುರ ರೈಲ್ವೇಗಳು ವಿಲೀನಗೊಂಡು `ವೆಸ್ಟರ್ನ್ ರೈಲ್ವೇ' ಪಶ್ಚಿಮ ರೈಲ್ವೇ ರಚನೆಯಾಯಿತು. ಇದೇ ದಿನ ಗ್ರೇಟ್ ಇಂಡಿಯನ್ ಪೆನಿನ್ ಸ್ಯುಲರ್ ರೈಲ್ವೇ ಮತ್ತು ಇತರ ರೈಲ್ವೇಗಳ ಮರು ವರ್ಗೀಕರಣ ನಡೆದು ಸೆಂಟ್ರಲ್ ರೈಲ್ವೆ ರಚನೆಯಾಯಿತು.
1915: ಭಾರತದ ರಾಜಕೀಯ ನಾಯಕ, ಬಾಂಬೆ ಮುನಿಸಿಪಲ್ ಪ್ಲಾನರ್ ಯೋಜಕ ಹಾಗೂ `ಬಾಂಬೆ ಕ್ರಾನಿಕಲ್' (1913) ಪತ್ರಿಕೆಯ ಸ್ಥಾಪಕ ಫಿರೋಜ್ ಶಹಾ ಮೆಹ್ತಾ ತಮ್ಮ 70ನೇ ವಯಸ್ಸಿನಲ್ಲಿ ಮೃತರಾದರು.
1904: ಇತಿಹಾಸ ಸಂಶೋಧಕ, ಸಾಹಿತ್ಯಾಸಕ್ತ ಶ್ರೀಕಂಠಶಾಸ್ತ್ರಿ (5-11-1904ರಿಂದ 7-5-1974) ಅವರು ರಾಮಸ್ವಾಮಿ ಶಾಸ್ತ್ರಿ- ಶೇಷಮ್ಮ ದಂಪತಿಯ ಮಗನಾಗಿ ನೆಲಮಂಗಲ ತಾಲ್ಲೂಕಿನ ಸೊಂಡೆಕೊಪ್ಪದಲ್ಲಿ ಜನಿಸಿದರು.
1870: ಭಾರತೀಯ ವಕೀಲ, ಬ್ರಿಟಿಷ್ ಆಳ್ವಿಕೆ ಕಾಲದಲ್ಲಿ ಬಂಗಾಳದ ಸ್ವರಾಜ್ ಪಕ್ಷದ ಧುರೀಣರಾಗಿದ್ದ ಚಿತ್ತರಂಜನ್ ದಾಸ್ ಜನ್ಮದಿನ. ಅಲಿಪುರ ಬಾಂಬ್ ಪ್ರಕರಣದ ವಿಚಾರಣೆ ಕಾಲದಲ್ಲಿ ಅವರು ಅರವಿಂದ ಘೋಷ್ ಅವರ ವಕೀಲರಾಗಿದ್ದರು.
1556: ಪಾಣಿಪತ್ತದಲ್ಲಿ ನಡೆದ ಎರಡನೇ ಕದನದಲ್ಲಿ ಅಕ್ಬರನು ಹಿಂದು ಜನರಲ್ ಹೇಮುವನ್ನು ಕೊಂದು ಹಾಕಿದ. ಇದು ಭಾರತದಲ್ಲಿ ಮೊಘಲ ಅಧಿಕಾರದ ಮರುಸ್ಥಾಪನೆ ಹಾಗೂ ಭಾರತದಲ್ಲಿ ಮೊಘಲ್ ಸಾಮ್ರಾಜ್ಯ ವಿಸ್ತರಣೆಗೆ ಅಡಿಪಾಯವಾಯಿತು.
No comments:
Post a Comment