Thursday, November 8, 2018

ಇಂದಿನ ಇತಿಹಾಸ History Today ನವೆಂಬರ್ 08

ಇಂದಿನ ಇತಿಹಾಸ History Today ನವೆಂಬರ್ 08
2018: ಸ್ಯಾನ್ ಫ್ರಾನ್ಸಿಸ್ಕೋ: ಹೌದು. ಇದೀಗ ಮಡಚುವ ಸ್ಮಾರ್ಟ್ ಫೋನ್!  ತನ್ನ ಮಡಚುವ (ಫೋಲ್ಡೇಬಲ್) ಸ್ಮಾರ್ಟ್ ಫೋನನ್ನು ಸ್ಯಾಮ್‌ಸಂಗ್ ಇದೇ ಮೊತ್ತ ಮೊದಲ ಬಾರಿಗೆ ಅನಾವರಣ ಗೊಳಿಸಿತು. ತನ್ನ ‘ಮಡಚುವ ಫೋನ್’ ತಂತ್ರಜ್ಞಾನವನ್ನು ಇನ್ಫಿನಿಟಿ ಪ್ಲೆಕ್ಸ್ ಡಿಸ್‌ಪ್ಲೇ ಎಂಬುದಾಗಿ ಸ್ಯಾಮ್ ಸಂಗ್ ಬಣ್ಣಿಸಿತು.  ಟ್ಯಾಬ್ಲೆಟ್-ಗಾತ್ರದ ಪರದೆಯನ್ನು ಹೊಂದಿರುವ ಈ ಸ್ಮಾರ್ಟ್ ಫೋನನ್ನು ನೀವು ಪರದೆ ಸಹಿತವಾಗಿ ಆರಾಮವಾಗಿ ಮಡಚಿ ಪುಟ್ಟ ಸ್ಮಾರ್ಟ್ ಫೋನ್‌ನಂತೆಯೇ ನಿಮ್ಮ ಕಿಸೆಯೊಳಕ್ಕೆ ಸೇರಿಸಿಕೊಳ್ಳಬಹುದು.  ತನ್ನ ಅಭಿವೃದ್ಧಿ ಸಮ್ಮೇಳನದಲ್ಲಿ  ಹೊಸ ತಂತ್ರಜ್ಞಾನದ ಫೋನನ್ನು ಅನಾವರಣಗೊಳಿಸಿದ ಸ್ಯಾಮ್‌ಸಂಗ್, ವಿನ್ಯಾಸದ ಅಂಶಗಳನ್ನು ರಕ್ಷಿಸಿಕೊಳ್ಳುವ ಸಲುವಾಗಿ  "ಮರೆಮಾಚುವ" ಸಾಧನವನ್ನು ಪ್ರದರ್ಶಿಸಿ, ದೀಪಗಳನ್ನು ಮಬ್ಬಾಗಿಸಿತು.  "ಇಲ್ಲಿ ಒಂದು ಸಾಧನವಿದೆ ಮತ್ತು ಇದು ನಿಮ್ಮನ್ನು ಬೆರಗುಗೊಳಿಸುತ್ತದೆ" ಎಂದು ಮೊಬೈಲ್ ಉತ್ಪನ್ನ ಮಾರಾಟದ ಎಸ್ವಿಪಿ ಜಸ್ಟಿನ್ ಡೆನಿಸನ್ ಸಮ್ಮೇಳನದಲ್ಲಿ ಪ್ರಕಟಿಸಿದರು.  ನಂತರ ಡೆನಿಸನ್ ಮಡಿಚಿದಾಗ ಕ್ಯಾಂಡಿಬಾರ್ ತರಹ ಕಾಣಿಸುವ ಸಾಧನವನ್ನು ಪ್ರದರ್ಶಿಸಿದರು. ಈ ಸಾಧನವು ಕವರ್ ಒಂದನ್ನು ಹೊಂದಿದ್ದು, ಇದು ಫೋನ್ ಆಗಿ ಕಾರ್ಯ ನಿರ್ವಹಿಸುತ್ತದೆ ಮತ್ತು ಮುಖ್ಯವಾದ ೭.೩-ಇಂಚಿನ ಡಿಸ್‌ಪ್ಲೇ ಪರದೆಯನ್ನು ಒಳಗೊಂಡಿದೆ. ಈ ಸಾಧನವನ್ನು ಸಹಸ್ರಾರು ಬಾರಿ ಮಡಿಚಬಹುದು, ಯಾವುದೇ ಸಮಸ್ಯೆ ಇಲ್ಲ ಎಂದು ಅವರು ವಿವರಿಸಿದರು.  ಈ ಸ್ಯಾಮ್ ಸಂಗ್  ಫೋನ್ ಏಕ ಕಾಲಕ್ಕೆ ಮೂರು ಆಪ್‌ಗಳನ್ನು ತೋರಿಸುತ್ತದೆ.  ಸ್ಯಾಮ್ ಸಂಗ್ ಡೆನಿಸನ್ ಪ್ರಕಾರ "ತಿಂಗಳಲ್ಲೇ ಮಾರುಕಟ್ಟೆಗೆ ಬರಲಿರುವ ಈ ‘ಇನ್ಫಿನಿಟಿ ಫ್ಲೆಕ್ಸ್’ ಸಾಧನಗಳನ್ನು ಕಂಪೆನಿಯು ಸಾಮೂಹಿಕವಾಗಿ ಉತ್ಪಾದಿಸಲಿದೆ.  ಸ್ಯಾಮ್‌ಸಂಗ್ ಅಷ್ಟೇ ಅಲ್ಲ,  ಇತರ ಕಂಪೆನಿಗಳೂ ಇದೀಗ ಈ ನಿಟ್ಟಿನಲ್ಲಿ ಕಾರ್ಯ ಆರಂಭ ಮಾಡಿವೆ.  ಆಂಡ್ರಾಯ್ಡ್ ಸಹಯೋಗದೊಂದಿಗೆ ಹೊಸ ಮಡಚುವ ಸಾಧನಗಳ ತಯಾರಿಗೆ ಗೂಗಲ್ ಅಧಿಕೃತವಾಗಿ ಬೆಂಬಲ ನೀಡಿದೆ. ಮುಂದಿನ ವರ್ಷ ಈ ಫೋನ್ ಪ್ರಾರಂಭಿಸುವ ಸಲುವಾಗಿ ಸ್ಯಾಮ್ ಸಂಗ್ ಜೊತೆಗೆ  ನಿಕಟವಾಗಿ ಕಾರ್ಯ ನಿರ್ವಹಿಸುತ್ತಿದೆ.  ಈ ಮಧ್ಯೆ, ಹುವಾವೇ ಮುಂದಿನ ವರ್ಷಒಂದು ಮಡಚುವ ಸಾಧನ ಬಿಡುಗಡೆ ಮಾಡಲು ಯೋಜಿಸಿದೆ. ಲೆನೊವೊ ಮತ್ತು ಕ್ಸಿಯಾಮಿಯೊ ತಮ್ಮ ಸ್ವಂತ ಮೂಲ ಮಾದರಿಗಳನ್ನು ಮಾಡಲಾರಂಭಿಸಿವೆ. ಮೈಕ್ರೋಸಾಫ್ಟ್ ಕೂಡಾ ಒಂದು ಮಲ್ಟಿಸ್ಕ್ರೀನ್ ಸಾಧನ ತಯಾರಿ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಮೈಕ್ರೋಸಾಫ್ಟ್ ಸರ್ಫೇಸ್ ಮುಖ್ಯಸ್ಥ ಪನೋಸ್ ಪನಾಯೆ ಅವರು  ಪಾಕೆಟೇಬಲ್ ಸರ್ಫೇಸ್ ಸಾಧನವು "ಸಂಪೂರ್ಣವಾಗಿ ನನ್ನ ಕೂಸು" ಎಂದು ಪ್ರತಿಪಾದಿಸಿದರು. ನೀವು ಬಹುಶಃ ಎಂದಿಗೂ ಹೆಸರನ್ನೇ ಕೇಳಿರದ ಫೋನ್ ತಯಾರಕರು ಕೂಡಾ ಇಂತಹ ಸಾಧನಗಳ ತಯಾರಿಗೆ ಪ್ರಯೋಗ ನಡೆಸುತ್ತಿದ್ದು, ಬಹುತೇಕ ೨೦೧೯ ರಲ್ಲಿ ಇಂತಹ ಹಲವಾರು ಸಾಧನಗಳು ಮಾರುಕಟ್ಟೆಗಳಿಗೆ ಲಗ್ಗೆ ಇಡುವ ಸಾಧ್ಯತೆಗಳಿವೆ ಎಂದು ವರದಿಗಳು ಹೇಳಿದವು.

2018: ಕೋಲ್ಕತ: ಚುನಾವಣಾ ವರ್ಷದಲ್ಲಿ ತನ್ನ ವೆಚ್ಚ ಹೆಚ್ಚಿಸಿಕೊಳ್ಳಲು ಬಯಸಿರುವ ಕೇಂದ್ರ ಸರ್ಕಾರವು ಭಾರತೀಯ ರಿಸರ್ವ್ ಬ್ಯಾಂಕಿನ (ಆರ್‌ಬಿಐ) ಮೇಲೆ ಅದರ ಸಾದಿಲ್ವಾರು ಮೀಸಲು ನಿಧಿಯಿಂದ ೧ ಲಕ್ಷ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡುವಂತೆ ಒತ್ತಡ ಹೇರುತ್ತಿದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಆಪಾದಿಸಿದರು. ’ಬೇರೆಲ್ಲಾ ಆದಾಯದ ದಾರಿಗಳೂ ಮುಚ್ಚಿರುವುದನ್ನು ಅರಿತಿರುವ ಸರ್ಕಾರ ಭ್ರಮನಿರಸನಗೊಂಡಿದ್ದು ಭಾರತೀಯ ರಿಸರ್ವ್ ಬ್ಯಾಂಕಿನ (ಆರ್‌ಬಿಐ) ಮೀಸಲು ನಿಧಿಯಿಂದ ೧ ಲಕ್ಷ ಕೋಟಿ ರೂಪಾಯಿ ಬಿಡುಗಡೆಗೆ ಒತ್ತಾಯ ಮಾಡಿದೆ. ಆರ್‌ಬಿಐ ಗವರ್ನರ್ ಇದನ್ನು ಒಪ್ಪಲು ನಿರಾಕರಿಸಿದಾಗ ಸರ್ಕಾರವು ಆರ್‌ಬಿಐ ಕಾಯ್ದೆಯ ಸೆಕ್ಷನ್ ೭ನ್ನು ಬಳಸುವ ಅಭೂತಪೂರ್ವ ಕ್ರಮಕ್ಕೆ ಕೈಹಾಕಿದೆ’ ಎಂದು ಚಿದಂಬರಂ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಸರ್ಕಾರವು ಅಧಿಕಾರವನ್ನು ಬಳಸಿಕೊಂಡು ಕೇಂದ್ರೀಯ ಬ್ಯಾಂಕನ್ನು ’ವಶಪಡಿಸಿಕೊಳ್ಳಲು’ ಯತ್ನಿಸುತ್ತಿದೆ ಎಂದು ಆಪಾದಿಸಿದ ಅವರು ಇಂತಹ ಕ್ರಮವು ರಾಷ್ಟ್ರಕ್ಕೆ ವಿಪ್ಲವಕಾರಿಯಾದೀತು ಎಂದು ಎಚ್ಚರಿಸಿದರು.  ’ಆರ್‌ಬಿಐ  ಗವರ್ನರ್ ಅವರು ತಮ್ಮ ನಿಲುವಿಗೆ ಬದ್ಧರಾಗಿ ನಿಂತುಕೊಂಡರೆ, ವಿಷಯಕ್ಕೆ ಸಂಬಂಧಿಸಿದಂತೆ ಆರ್‌ಬಿಐ ಕಾಯ್ದೆಯ ಸೆಕ್ಷನ್ ೭ ಬಳಸಿ, ಅದರ ಅಡಿಯಲ್ಲಿ ಹಣವನ್ನು (೧ ಲಕ್ಷ ಕೋಟಿ ರೂಪಾಯಿ) ಸರ್ಕಾರದ ಖಾತೆ ವರ್ಗಾವಣೆ ಮಾಡುವಂತೆ ನಿರ್ದೇಶನ ನೀಡಲು ಕೇಂದ್ರವು ಯೋಜಿಸುತ್ತಿದೆ. ಇದು ರಾಷ್ಟ್ರದ ಪಾಲಿಗೆ ಮಹಾದುರಂತಕಾರಿಯಾದೀತು ಎಂದು ಅವರು ನುಡಿದರು. ಸರ್ಕಾರವು ಕೇಂದ್ರೀಯ ಬ್ಯಾಂಕಿನ ಮಂಡಳಿಯಲ್ಲಿ ಆಯ್ದ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಿ ತುಂಬಿದೆ ಮತ್ತು ನವೆಂಬರ್ ೧೯ರಂದು ಆರ್‌ಬಿಐ ಮಂಡಳಿಯಲ್ಲಿ ತನ್ನ ಪ್ರಸ್ತಾಪಗಳನ್ನು ಮುಂದಿಟ್ಟು ಈಡೇರಿಸಿಕೊಳ್ಳಲು ಸರ್ವ ಪ್ರಯತ್ನ ಮಾಡುತ್ತಿದೆ. ಹೀಗಾಗಿ ಆರ್‌ಬಿಐ ಮಂಡಳಿಯು ಸಭೆ ಸೇರಲು ನಿಗದಿಯಾಗಿರುವ ನವೆಂಬರ್ ೧೯ರಂದು ಏನಾದೀತು ಎಂದು ಊಹಿಸಬಹುದು ಎಂದು ಚಿದಂಬರಂ ಹೇಳಿದರು.  ಸರ್ಕಾರವು ತನ್ನ ಕಾರ್‍ಯಸೂಚಿಯನ್ನು ಸಭೆಯಲ್ಲಿ ಮುಂದಿಟ್ಟರೆ, ಆರ್ ಬಿಐ ಗವರ್ನರ್ ಗೆ ಎರಡು ಆಯ್ಕೆಗಳು ಮಾತ್ರ ಉಳಿಯುತ್ತವೆ- ಆದೇಶವನ್ನು ಪಾಲಿಸುವುದು ಇಲ್ಲವೇ ರಾಜೀನಾಮೆ ನೀಡುವುದು ಎಂದು ಚಿದಂಬರಂ ನುಡಿದರು. ’ನನ್ನ ಅಭಿಪ್ರಾಯದಲ್ಲಿ, ಗವರ್ನರ್ ಯಾವುದೇ ಆಯ್ಕೆಯನ್ನು ಮಾಡಿದರೂ ಅದು ಆರ್‌ಬಿಐ ವಿಶ್ವಾಸಾರ್ಹತೆ ಮತ್ತು ವರ್ಚಸ್ಸಿಗೆ ಭಾರೀ ಧಕ್ಕೆಯನ್ನು ಖಂಡಿತವಾಗಿ ಮಾಡುತ್ತದೆ. ಸರ್ಕಾರವು ಆರ್‌ಬಿಐಯನ್ನು ಖಾಸಗಿ ಕಂಪೆನಿಯಂತೆ ಬಳಸಲು ಯತ್ನಿಸುತ್ತಿದೆ. ಅವರು ಆರ್‌ಬಿಐಯನ್ನು ವಶ ಪಡಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ದುರದೃಷ್ಟಕರವಾಗಿ ಇನ್ನೊಂದು ನಿರ್ಣಾಯಕ ಸಂಸ್ಥೆಯೂ ತನ್ನ ಶೋಭೆಯನ್ನು ಕಳೆದುಕೊಂಡು ಕುಸಿದು ಬೀಳಲಿದೆ’ ಎಂದು ಅವರು ಹೇಳಿದರು. ಶೇಕಡಾ ೮೬ರಷ್ಟು ನೋಟುಗಳನ್ನು ಚಲಾವಣೆಯಿಂದ ರದ್ದು ಪಡಿಸಿದ ನೋಟು ಅಮಾನ್ಯೀಕರಣದ ಎರಡನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕ ’ನವೆಂಬರ್ ೮ರಂತೆಯೇ ನವೆಂಬರ್ ೧೯ ಕೂಡಾ ಮಹಾವಿಪ್ಲವದ ದಿನವಾಗಿ ನೆನಪಿಡಬೇಕಾಗಿ ಬರುತ್ತದೆಯೇ ಎಂಬುದನ್ನು ನಾವು ಕಾದು ನೋಡಬೇಕಾಗಿದೆ’ ಎಂದು ಹೇಳಿದರು. ನೋಟು ಅಮಾನ್ಯೀಕರಣವು ನಕಲಿ ಕರೆನ್ಸಿ ಅಥವಾ ಕಪ್ಪು ಹಣಕ್ಕೆ ಕೊನೆ ಹಾಕಲಿಲ್ಲ. ಅದು ಯಾವುದೇ ಕರೆನ್ಸಿ ನೋಟನ್ನು ಬೆಲೆ ಇಲ್ಲದಂತೆ ಮಾಡಲಿಲ್ಲ ಮತ್ತು ಸರ್ಕಾರಕ್ಕೆ ೩ ಲಕ್ಷ ಕೋಟಿಯಿಂದ ೪ ಲಕ್ಷ ಕೋಟಿ ರೂಪಾಯಿಗಳ ಕೊಡುಗೆಯನ್ನೂ ತಂದು ಕೊಡಲಿಲ್ಲ. ಅಮಾನ್ಯಗೊಳಿಸಲಾದ ಎಲ್ಲ ನೋಟುಗಳು - ಶೇಕಡಾ ೯೯.೩೦ರಷ್ಟು ನೋಟುಗಳೂ ಆರ್‌ಬಿಐಗೆ ವಾಪಸಾಗಿವೆ’ ಎಂದು ಅವರು ನುಡಿದರು.  ಸರ್ಕಾರ ಈಗ ಅಚ್ಛೇ ದಿನ್, ಅಭಿವೃದ್ಧಿ, ಉದ್ಯೋಗ ಅಥವಾ ಹೂಡಿಕೆ ಬಗ್ಗೆ ಮಾತನಾಡುತ್ತಿಲ್ಲ. ಈಗ ಅವರು ಕೇವಲ ಹಿಂದುತ್ವ, ಬೃಹತ್ ಪ್ರತಿಮೆಗಳು ಇತ್ಯಾದಿಗಳ ಬಗ್ಗೆ ಮಾತನಾಡುತ್ತಿದ್ದಾರೆ. ಅಚ್ಛೇ ದಿನ್ ಭರವಸೆಗಳು ನುಚ್ಚು ನೂರಾಗಿವೆ. ಸ್ವತಃ ಪ್ರಧಾನಿಯೇ ವಿಭಜನಕಾರಿ ಮತ್ತು ವಿವಾದಾತ್ಮಕ ವಿಷಯಗಳನ್ನು ಪುನರುತ್ಥಾನಗೊಳಿಸಿದ್ದಾರೆ ಎಂದು ಚಿದಂಬರಂ ಚುಚ್ಚಿದರು.

2018: ಕೋಚಿ: ಶಬರಿಮಲೈ ದೇವಾಲಯಕ್ಕೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗಳು ಅಂಗೀಕಾರಾರ್ಹ ಅಲ್ಲ ಎಂಬುದಾಗಿ ಹೇಳಿದ ಕೇರಳ ಹೈಕೋರ್ಟ್,  ಕಳೆದ ತಿಂಗಳು ಬಂಧಿತನಾದ ವ್ಯಕ್ತಿಯೊಬ್ಬರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ’ಸುಪ್ರೀಂಕೋರ್ಟ್ ತೀರ್ಪಿಗೆ ವಿರುದ್ಧವಾಗಿ ನಡೆಯುತ್ತಿರುವ ಕಾರಣ ಶಬರಿಮಲೈಯ ಪ್ರತಿಭಟನೆಗಳನ್ನು ಅಂಗೀಕರಿಸಲಾಗದು’ ಎಂದು ಕೋಚಿ ನಿವಾಸಿ ಗೋವಿಂದ ಮಧುಸೂದನ್ ಅವರು ಸಲ್ಲಿಸಿದ್ದ ಜಾಮೀನು ಕೋರಿಕೆ ಅರ್ಜಿಯನ್ನು  ತಿರಸ್ಕರಿಸುತ್ತಾ ಹೈಕೋರ್ಟ್ ಪೀಠವು ಹೇಳಿತು. ಜಾಮೀನು ಅರ್ಜಿಯನ್ನು ಪರಿಗಣಿಸಿದರೆ, ಅದು ತಪ್ಪು ಸಂಕೇತಗಳನ್ನು ನೀಡುತ್ತದೆ ಮತ್ತು ಇಂತಹುದೇ ಘಟನೆಗಳು ಮತ್ತೆ ನಡೆಯುತ್ತವೆ ಎಂದು ಕೋರ್ಟ್ ಹೇಳಿತು. ಮಧುಸೂದನ್ ಅವರನ್ನು ದೇವಾಲಯ ನಗರಿಯಲ್ಲಿ ೧೦ರಿಂದ ೫೦ರ ವಯೋಮಾನದ ಮಹಿಳೆಯರ ಪ್ರವೇಶ ವಿರುದ್ಧ ನಡೆದ ಪ್ರತಿಭಟನೆ ಕಾಲದಲ್ಲಿ ಬಂಧಿಸಲಾಗಿತ್ತು. ಎಲ್ಲ ವಯಸ್ಸಿನ ಮಹಿಳೆಯರಿಗೂ ಪ್ರವೇಶಾವಕಾಶ ಕಲ್ಪಿಸಿ ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ ಅದೇ ಮೊದಲ ಬಾರಿಗೆ ದೇವಾಲಯದ ಬಾಗಿಲು ತೆರೆಯಲಾಗಿತ್ತು. ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಪೊಲೀಸರು ಈವರೆಗೆ ೩೫೦೦ ಮಂದಿಯನ್ನು ಬಂಧಿಸಿ ಸುಮಾರು ೫೪೦ ಪ್ರಕರಣಗಳನ್ನು ದಾಖಲಿಸಿದ್ದಾರೆ. ಸುಮಾರು ೧೦೦ ಮಂದಿ ಇನ್ನೂ ನ್ಯಾಯಾಂಗ ವಶದಲ್ಲಿ ಇದ್ದರು. ಪ್ರತಿಭಟನಕಾರರು ಕಳೆದ ತಿಂಗಳು ೧೨ ಮಹಿಳೆಯರನ್ನು ದೇವಾಲಯ ಪ್ರವೇಶಿಸದಂತೆ ತಡೆದಿದ್ದರು. ನವೆಂಬರ್ ೫ರಂದು ಒಂದು ದಿನದ ಮಟ್ಟಿಗೆ ದೇವಾಲಯದ ಬಾಗಿಲು ತೆರೆದಾಗಲೂ ಇಂತಹುದೇ ಪ್ರತಿಭಟನೆಗಳು ಕಂಡು ಬಂದಿದ್ದವು. ಮೂವರು ಮಹಿಳೆಯರು ಪ್ರತಿಭಟನೆಗಳ ಕಾರಣ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಲಾಗದೆ ಹಿಂದಿರುಗಿದ್ದರು.

2018: ನವದೆಹಲಿ: ಎರಡು ವರ್ಷ ಹಿಂದೆ ಕೈಗೊಂಡ ನೋಟು ಅಮಾನ್ಯೀಕರಣದ ನಿರ್ಧಾರವನ್ನು ಪ್ರಬಲವಾಗಿ ಪ್ರತಿಪಾದಿಸಿದ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಭಾರತವು ನಗದಿನಿಂದ ಡಿಜಿಟಲ್ ವಹಿವಾಟಿನೆಡೆಗೆ ಚಲಿಸಲು ವ್ಯವಸ್ಥೆಯನ್ನು ಅಲುಗಾಡಿಸಲೇಬೇಕಿತ್ತು ಎಂದು ಹೇಳಿದರು. ನೋಟು ನಿಷೇಧದ ಎರಡನೇ ವಾರ್ಷಿಕೋತ್ಸವವು ಆಡಳಿತಾರೂಢ ಬಿಜೆಪಿ ಮತ್ತು ವಿರೋಧ ಪಕ್ಷಗಳ ಮಧ್ಯೆ ತೀವ್ರ ಮಾತಿನ ಚಕಮಕಿಯನ್ನು ಕಂಡಿರುವುದರ ಮಧ್ಯೆಯೇ ವಿತ್ತ ಸಚಿವರು ತಮ್ಮ ಬ್ಲಾಗ್ ಬರಹದಲ್ಲಿ ಈ ಪ್ರತಿಪಾದನೆ ಮಾಡಿದರು. ’ನೋಟು ಅಮಾನ್ಯೀಕರಣದ ಎಲ್ಲ ತಪ್ಪು ಮಾಹಿತಿಯ ಟೀಕೆ ಏನೆಂದರೆ ಬ್ಯಾಂಕುಗಳಲ್ಲಿ ಠೇವಣಿ ಇಡಲಾಗಿದ್ದ ಎಲ್ಲ ನಗದು ಹಣವೂ ಹೊರಟುಹೋಯಿತು ಎಂಬುದಾಗಿತ್ತು. ನಗದು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳುವುದು ನೋಟು ಅಮಾನ್ಯೀಕರಣದ ಉದ್ದೇಶವಾಗಿರಲಿಲ್ಲ ಎಂದು ಜೇಟ್ಲಿ ಅವರು ತಮ್ಮ ಬ್ಲಾಗ್ ಬರಹದಲ್ಲಿ ಹೇಳಿದರು. ಕಾಂಗ್ರೆಸ್ ಪಕ್ಷವು ನಡೆಸಲು ಉದ್ದೇಶಿಸಿರುವ ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಗೆ ಮುಂಚಿತವಾಗಿ ಈದಿನವೇ ಜೇಟ್ಲಿ ಅವರ ಬ್ಲಾಗ್ ಬರಹ ಪ್ರಕಟಗೊಂಡಿತು. ಪ್ರಧಾನಿ ನರೇಂದ್ರ ಮೋದಿ ಅವರು ೫೦೦ ರೂಪಾಯಿ ಮತ್ತು ೧೦೦೦ ರೂಪಾಯಿಗಳ ಕರೆನ್ಸಿ ನೋಟುಗಳನ್ನು ರದ್ದು ಪಡಿಸುವ ದಿಢೀರ್ ನಿರ್ಧಾರವನ್ನು ಎರಡು ವರ್ಷಗಳ ಹಿಂದೆ ನವೆಂಬರ್ ೮ರಂದು ಪ್ರಕಟಿಸಿದ್ದರು. ಈ ಕ್ರಮದಿಂದ ಶೇಕಡಾ ೮೬ರಷ್ಟು ಕರೆನ್ಸಿ ನೋಟುಗಳು ಚಲಾವಣೆಗೆ ಅಮಾನ್ಯವಾದವು. ಪರಿಣಾಮವಾಗಿ ನಂತರದ ತಿಂಗಳುಗಳಲ್ಲಿ ಭಾರೀ ಪ್ರಮಾಣದಲ್ಲಿ ನಗದು ಕೊರತೆ ತಲೆದೋರಿತ್ತು.  ಔಪಚಾರಿಕ ಆರ್ಥಿಕತೆಗೆ ಹಣವು ಬರುವಂತೆ ಮಾಡುವುದು ಮತ್ತು ಕಾಳಸಂತೆಕೋರರು ತೆರಿಗೆ ಪಾವತಿ ಮಾಡುವಂತೆ ಮಾಡುವುದು ನೋಟು ನಿಷೇಧದ ವಿಶಾಲ ಉದ್ದೇಶವಾಗಿತ್ತು ಎಂದು ಜೇಟ್ಲಿ ವಿವರಿಸಿದರು. ೨೦೧೪ರಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ೩.೮ ಕೋಟಿ ಮಂದಿ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುತ್ತಿದ್ದರು. ಈ ಸರ್ಕಾರದ ಮೊದಲ ನಾಲ್ಕು ವರ್ಷಗಳಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಫೈಲ್ ಮಾಡುವವರ ಸಂಖ್ಯೆ ೬.೮೬ ಕೋಟಿಗಳಿಗೆ ಏರಿತು ಎಂದು ಜೇಟ್ಲಿ ನುಡಿದರು. ಈ ಸರ್ಕಾರ ತನ್ನ ಮೊದಲ ಐದು ವರ್ಷಗಳನ್ನು ಪೂರೈಸುವಷ್ಟರಲ್ಲಿ ತೆರಿಗೆ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆಯನ್ನು ನಾವು ದುಪ್ಪಟ್ಟು ಸಮೀಪಕ್ಕೆ ತಂದಿದ್ದೇವೆ. ಈ ಸಂಖ್ಯೆ ಗರಿಷ್ಠ ಪ್ರಮಾಣದಲ್ಲಿ ಏರಿಕೆಯಾಗಲು ಕಾರಣವಾದದ್ದು ನೋಟು ಅಮಾನ್ಯೀಕರಣದ ನಿರ್ಧಾರ ಎಂದು ಸಚಿವರು ಹೇಳಿದರು.  ’ಸಣ್ಣ ತೆರಿಗೆ ಪಾವತಿದಾರರಿಗೆ ೯೭,೦೦೦ ಕೋಟಿ ರೂಪಾಯಿಗಳ ವಾರ್ಷಿಕ ಆದಾಯ ತೆರಿಗೆ ಪರಿಹಾರ ಮತ್ತು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ರಿಟರ್ನ್ಸ್ ಸಲ್ಲಿಕೆದಾರರಿಗೆ ೮೦,೦೦೦ ಕೋಟಿ ರೂಪಾಯಿಗಳ ಪರಿಹಾರ ಕೊಟ್ಟ ಬಳಿಕವೂ ತೆರಿಗೆ ಸಂಗ್ರಹ ಹೆಚ್ಚಾಗಿದೆ. ನೇರ ತೆರಿಗೆ ಹಾಗೂ ಪರೋಕ್ಷ ತೆರಿಗೆಗಳ ದರಗಳನ್ನು ಇಳಿಸಲಾಗಿದೆ. ಆದರೆ ತೆರಿಗೆ ಸಂಗ್ರಹ ಹೆಚ್ಚಳವಾಗಿದೆ. ತೆರಿಗೆ ತಳಹದಿ ವಿಸ್ತರಿಸಿದೆ. ಜಿಎಸ್‌ಟಿ ತೆರಿಗೆ ವ್ಯವಸ್ಥೆಗೆ ಮುನ್ನ ಶೇಕಡಾ ೩೧ರಷ್ಟು ತೆರಿಗೆ ಬೀಳುತ್ತಿದ್ದ ೩೩೪ ವಸ್ತುಗಳ ಮೇಲಿನ ತೆರಿಗೆಗಳು ಇಳಿಕೆಯಾಗಿವೆ’ ಎಂದು ಜೇಟ್ಲಿ ಬರೆದರು. ಸರ್ಕಾರವು ಈ ಸಂಪನ್ಮೂಲಗಳನ್ನು ಸಾಮಾಜಿಕ ರಂಗ ಮತ್ತು ಗ್ರಾಮೀಣ ಭಾರತದಲ್ಲಿ ಉತ್ತಮ ಮೂಲಸವತ್ತುಗಳ ನಿರ್ಮಾಣಕ್ಕಾಗಿ ಬಳಸಿದೆ ಎಂದು ಅವರು ಒತ್ತಿ ಹೇಳಿದರು. ಹೆಚ್ಚಿನ ಔಪಚಾರಿಕತೆ, ಹೆಚ್ಚಿನ ಆದಾಯ, ಬಡವರಿಗಾಗಿ ಹೆಚ್ಚಿನ ಸಂಪನ್ಮೂಲ, ಉತ್ತಮ ಮೂಲಸವಲತ್ತುಗಳು ಮತ್ತು ನಮ್ಮ ನಾಗರಿಕರಿಗೆ ಉತ್ತಮ ಗುಣಮಟ್ಟದ ಬದುಕು ಲಭಿಸಿದೆ ಎಂದು ಸಚಿವರು ಬ್ಲಾಗ್ ಬರಹದಲ್ಲಿ ಪ್ರತಿಪಾದಿಸಿದರು.

2018: ನವದೆಹಲಿ: ನೋಟು ಅಮಾನ್ಯೀಕರಣದ ಕಸರತ್ತಿನಿಂದ ಆದ ಆಳವಾದ ಗೀರುಗಳು ಮತ್ತು ಗಾಯಗಳು ದಿನಗಳೆದಂತೆ ಹೆಚ್ಚು ಢಾಳಾಗಿ ಕಾಣಲಾರಂಭಿಸಿವೆ ಎಂದು ಇಲ್ಲಿ ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ’ಆರ್ಥಿಕ ದುಸ್ಸಾಹಸಗಳು ಹೇಗೆ ರಾಷ್ಟಕ್ಕೆ ಮಾರಕವಾಗಬಲ್ಲವು’ ಎಂಬುದನ್ನು ನೆನಪಿನಲ್ಲಿ ಇಟ್ಟುಕೊಳ್ಳುವಂತಹ ದಿನ ಇದು’ ಎಂದು ಹೇಳಿದರು. ಆರ್ಥಿಕತೆಯನ್ನು ಇನ್ನಷ್ಟು ಅಸ್ಥಿರತೆಗೆ ತಳ್ಳುವಂತಹ ಅಲ್ಪಾವಧಿಯ ಅಸಾಂಪ್ರದಾಯಿಕ ಆರ್ಥಿಕ ಕ್ರಮಗಳಿಗೆ ಮುಂದಾಗಬೇಡಿ ಎಂದೂ ಹಿರಿಯ ಕಾಂಗ್ರೆಸ್ ನಾಯಕ ಸರ್ಕಾರವನ್ನು ಆಗ್ರಹಿಸಿದರು.  ನೋಟು ಅಮಾನ್ಯೀಕರಣವನ್ನು ’ದುರ್ವಿಧಿಯ’ ಮತ್ತು ’ಕೆಟ್ಟ ಚಿಂತನೆಯ’ ಕಸರತ್ತು ಎಂಬುದಾಗಿ ಹೇಳಿಕೆಯೊಂದರಲ್ಲಿ ಬಣ್ಣಿಸಿದ ಸಿಂಗ್, ಭಾರತದ ಆರ್ಥಿಕತೆ ಮತ್ತು ಸಮಾಜದ ಮೇಲೆ ಇದು ಮಾಡಿದ ಹಾನಿ ಈಗ ಪ್ರತಿಯೊಬ್ಬರ ಅನುಭವಕ್ಕೂ ಬರುತ್ತಿದೆ ಎಂದು ಹೇಳಿದರು. ೨೦೧೬ರ ನವೆಂಬರ್ ೮ರಂದು ಪ್ರಧಾನಿ ನರೇಂದ್ರ ಮೋದಿ ಅವರು ೧೦೦೦ ರೂಪಾಯಿ ಮತ್ತು ೫೦೦ ರೂಪಾಯಿ ಮುಖಬೆಲೆಯ ನೋಟುಗಳನ್ನು ತತ್ ಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಿದ್ದರು.  ’ನೋಟುಬಂದಿಯು ವಯಸ್ಸು, ಲಿಂಗ, ಧರ್ಮ, ವೃತ್ತಿ ಅಥವಾ ಜನಾಂಗದ ವ್ಯತ್ಯಾಸವಿಲ್ಲದೆ ಪ್ರತಿಯೊಬ್ಬ ವ್ಯಕ್ತಿಯ ಮೇಲೂ ಪರಿಣಾಮ ಬೀರಿದೆ’ ಎಂದು ಸಿಂಗ್ ನುಡಿದರು.  ’ಸಮಯವು ಎಲ್ಲ ಗಾಯಗಳನ್ನೂ ವಾಸಿಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಅದರೆ ದುರದೃಷ್ಟಕರವಾಗಿ, ನೋಟು ಅಮಾನ್ಯೀಕರಣ ಪ್ರಕರಣದಲ್ಲಿ ನೋಟು ನಿಷೇಧದ ಗೀರುಗಳು ಮತ್ತು ಗಾಯಗಳು ಕಾಲಕಳೆದಂತೆ ಹೆಚ್ಚು ಢಾಳಾಗಿ ಕಾಣುತ್ತಿವೆ’ ಎಂದು ಮಾಜಿ ಪ್ರಧಾನಿ ಹೇಳಿದರು.  ನೋಟು ಅಮಾನ್ಯೀಕರಣದ ಬಳಿಕ ಒಟ್ಟು ಆಂತರಿಕ ಉತ್ಪಾದನೆ (ಜಿಡಿಪಿ) ಹೆಚ್ಚಿದೆ ಎಂದು ಸಂಖ್ಯೆಗಳು ಹೇಳುತ್ತಿದ್ದರೂ,  ವಾಸ್ತವದಲ್ಲಿ ಅದು ಕುಸಿಯುತ್ತಿದೆ. ’ನೋಟುಬಂದಿಯ’ ಇನ್ನಷ್ಟು ಆಳವಾದ ಪರಿಣಾಮಗಳು ಇನ್ನೂ ಹೊರಬರುತ್ತಲೇ ಇವೆ ಎಂದು ಅವರು ನುಡಿದರು. ದೇಶದ ಆಧಾರಸ್ತಂಭವಾಗಿರುವ ಸಣ್ಣ ಮತ್ತು ಮಧ್ಯಮ ವಹಿವಾಟು ಸಂಸ್ಥೆಗಳು ನೋಟು ಅಮಾನ್ಯೀಕರಣದ ಆಘಾತದಿಂದ ಇನ್ನೂ ಚೇತರಿಸಿಕೊಳ್ಳಬೇಕಾಗಿದೆ ಎಂದು ಸಿಂಗ್ ಹೇಳಿದರು. ನೋಟು ನಿಷೇಧವು ಉದ್ಯೋಗಾವಕಾಶಗಳ ಮೇಲೆ ನೇರ ಪರಿಣಾಮ ಬೀರಿದೆ. ಆರ್ಥಿಕತೆಯು ನಮ್ಮ ಯುವಕರಿಗೆ ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಹೆಣಗಾಡುತ್ತಲೇ ಇದೆ. ಹಣಕಾಸು ಮಾರುಕಟ್ಟೆಗಳು ಇನ್ನೂ ಚಂಚಲವಾಗಿವೆ. ನೋಟು ಅಮಾನ್ಯೀಕರಣದಿಂದ ಉಂಟಾದ ಅಸ್ಥಿರತೆ ಬಿಕ್ಕಟ್ಟಿನಿಂದ ಇನ್ನೂ ಹಣಕಾಸು ಮಾರುಕಟ್ಟೆಗಳು ಚೇತರಿಸಿಲ್ಲ. ಇದರ ಪರಿಣಾಮಗಳು ಮೂಲಸವಲತ್ತು ಸಾಲ ನೀಡಿಕೆದಾರರು ಮತ್ತು ಬ್ಯಾಂಕೇತರ ಹಣಕಾಸು ಸೇವಾ ಸಂಸ್ಥೆಗಳ ಮೇಲೆ ಆಗಿದೆ ಎಂದು ಸಿಂಗ್ ಹೇಳಿದರು. ನೋಟು ಅಮಾನ್ಯೀಕರಣವನ್ನು ಪ್ರಬಲವಾಗಿ ಟೀಕಿಸಿದ ಮನಮೋಹನ್ ಸಿಂಗ್ ಈ ಕಸರತ್ತಿನ ಪೂರ್ಣ ಪ್ರಮಾಣದ ಪರಿಣಾಮ ಇನಷ್ಟೇ ಗೊತ್ತಾಗಬೇಕಾಗಿದೆ. ಕುಸಿಯುತ್ತಿರುವ ರೂಪಾಯಿ ಮೌಲ್ಯ, ಹೆಚ್ಚುತ್ತಿರುವ ಜಾಗತಿಕ ತೈಲಬೆಲೆಗಳ ಮೂಲಕ ವಿಶಾಲ ಆರ್ಥಿಕತೆಯ ಮೇಲೆ ಈಗ ಹೊಡೆತದ ಗಾಳಿ ಬೀಸಲಾರಂಭಿಸಿದೆ ಎಂದು ಅವರು ನುಡಿದರು.  ’ಆದ್ದರಿಂದ ಅರ್ಥಿಕತೆ ಮತ್ತು ಹಣಕಾಸು ಮಾರುಕಟ್ಟೆಗಳಲ್ಲಿ ಇನ್ನಷ್ಟು ಅಸ್ಥಿರತೆ ಉಂಟು ಮಾಡುವಂತಹ ಇಂತಹ ಅಸಾಂಪ್ರದಾಯಿಕ, ಅಲ್ಪಾವಧಿಯ ಆರ್ಥಿಕ ಕ್ರಮಳಿಗೆ ಮುಂದಾಗದಿರುವುದು ಹೆಚ್ಚು ವಿವೇಕಯುತ ಎಂದು ಸರ್ಕಾರಕ್ಕೆ ಹಿತವಚನ ನೀಡಿದ ಸಿಂಗ್, ಆರ್ಥಿಕ ನೀತಿಗಳಲ್ಲಿ ದೃಢತೆ ಮತ್ತು ಪಾರದರ್ಶಕತೆ ಮರುಸ್ಥಾಪಿಸುವಂತೆ ಸಿಂಗ್ ಸರ್ಕಾರವನ್ನು ಒತ್ತಾಯಿಸಿದರು.  ’ಇಂದು ಆರ್ಥಿಕ ದುಸ್ಸಾಹಸಗಳು ರಾಷ್ಟ್ರವನ್ನು ದೀರ್ಘಕಾಲ ಹೇಗೆ ಕಾಡಬಲ್ಲವು ಮತ್ತು ಆರ್ಥಿಕ ನೀತಿ ನಿರೂಪಕರು ಎಚ್ಚರಿಕೆಯಿಂದ ವ್ಯವಹರಿಸಬೇಕು ಎಂಬುದನ್ನು ನೆನಪಿಸುವ ದಿನ’ ಎಂದು ಸಿಂಗ್ ಹೇಳಿದರು.  ನೋಟು ಅಮಾನ್ಯೀಕರಣದ ದ್ವಿತೀಯ ವಾರ್ಷಿಕೋತ್ಸವದ ಅಂಗವಾಗಿ ಶುಕ್ರವಾರ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುವುದಾಗಿ ಕಾಂಗ್ರೆಸ್ ಪ್ರಕಟಿಸಿದೆ. ಆರ್ಥಿಕತೆಯನ್ನು ಹಾಳುಗೆಡವಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜನರ ಕ್ಷಮೆ ಕೇಳಬೇಕು ಎಂದೂ ಕಾಂಗ್ರೆಸ್ ಆಗ್ರಹಿಸಿತು.

2018: ಬೆಂಗಳೂರು: ದೇಶದಲ್ಲಿ ಬಿಜೆಪಿಗೆ ಪರ್ಯಾಯ ಶಕ್ತಿ ಯನ್ನು ಕಟ್ಟುವ ನಿಟ್ಟಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇ ಗೌಡ ಹಾಗೂ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರ ಬಾಬುನಾಯ್ಡು ಹಾಗೂ ಸಿ.ಎಂ.ಕುಮಾರಸ್ವಾಮಿ ಮಹತ್ವದ ಮಾತುಕತೆ ನಡೆಸಿದರು. ದೇಶದಲ್ಲಿ ಎನ್‌ಡಿಎಯೇತರ ರಾಜಕೀಯ ಪಕ್ಷಗ ಳನ್ನು ಒಳಗೊಂಡ ಮಹಾಘಟಬಂಧನ್ ರಚಿಸುವ ಸಂಬಂಧ ದೇವೇಗೌಡರು ಹಾಗೂ ಚಂದ್ರಬಾಬು ನಾಯ್ಡು ಮಹತ್ವದ ಚರ್ಚೆ ನಡೆಸಿದರು.  ಸುಮಾರು ೪೫ ನಿಮಿಷಗಳ ಕಾಲ ಉಭಯ ನಾಯಕರು ಚರ್ಚೆ ನಡೆಸಿದರು ಎಂದು ಗೊತ್ತಾಗಿದೆ. ಬಿಜೆಪಿಗೆ ಪರ್ಯಾಯವಾಗಿ ತೃತೀಯ ರಂಗ ಕಟ್ಡುವ ನಿಟ್ಟಿನಲ್ಲಿ ಮೂವರು ನಾಯಕರ ಮಾತುಕತೆ ರಾ?ರಾಜಕಾರಣದಲ್ಲಿ ಭಾರೀ ಮಹತ್ವ ಪಡೆದುಕೊಂ ಡಿತು. ರಾಜ್ಯದ ಐದು ಕ್ಷೇತ್ರಗಳ ಉಪಚುನಾವಣೆಯಲ್ಲಿ ಮೈತ್ರಿ ಪಕ್ಷ ಯಶಸ್ಸುಗಳಿಸಿದ ಬೆನ್ನಲ್ಲೇ ಚಂದ್ರ ಬಾಬುನಾಯ್ಡು ಜೆಡಿಎಸ್ ವರಿಷ್ಠರನ್ನು ಭೇಟಿ ಮಾಡಿದರು.  ಪ್ರಧಾನಿ ಮೋದಿ ವಿರುದ್ಧದ ಹೋರಾಟಕ್ಕೆ ತೃತೀಯ ರಂಗ ರಚನೆ ಹಾಗೂ ಕರ್ನಾಟಕದ ಮಾದರಿಯಲ್ಲೇ ರಾಷ್ಟ್ರ ಮಟ್ಟದಲ್ಲೂ ಮೈತ್ರಿ ಮಾಡಿಕೊಳ್ಳುವ ಕುರಿತು ಚರ್ಚಿಸಲು ನಾಯ್ಡು ಆಗಮಿಸಿದ್ದರು ಎನ್ನಲಾಯಿತು. ಈ ಹಿಂದೆ ನಾಯ್ಡು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಕೇಂದ್ರದ ಹಲವು ನಾಯಕರನ್ನು ಭೇಟಿ ಮಾಡಿದ್ದರು. ಎನ್‌ಡಿಎ ಜೊತೆ ಸಂಪೂರ್ಣವಾಗಿ ನಂಟು ಕಡಿದುಕೊಂಡು ಎದುರು-ಬದುರಾಗಿರುವ ಟಿಡಿಪಿಯು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿದೆ. ಅಲ್ಲದೆ ಕಾಂಗ್ರೆಸ್ ಬೆಂಬಲದೊಂದಿಗೆ ತೃತೀಯ ರಂಗವನ್ನು ರಚಿಸುವ ಯೋಜನೆ ಚಂದ್ರಬಾಬು ನಾಯ್ಡು ಅವರಿಗಿದೆ ಎನ್ನಲಾಯಿತು.  ಹಾಗಾಗಿ ಅವರು ದೇವೇಗೌಡ ಅವರನ್ನು ಭೇಟಿ ಆದರು. ಮಾತುಕತೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ. ಚಂದ್ರಬಾಬು ನಾಯ್ಡು, ದೇಶದ ಪ್ರಜಾಪ್ರಭುತ್ವ ಉಳಿಸಲು ನಾವೆಲ್ಲ ಒಂದಾಗಿದ್ದೇವೆ. ಬಿಜೆಪಿ ಎದುರು ಜಾತ್ಯತೀತ ಪಕ್ಷಗಳು ಒಗ್ಗೂಡಬೇಕು ಎಂದು ಹೇಳಿದರು. ಜೆಡಿಎಸ್ ವರಿಷ್ಠ ದೇವೇಗೌಡರ ಪದ್ಮ ನಾಭನಗರದ ನಿವಾಸದಲ್ಲಿ ನಡೆದ ಸಭೆಯಲ್ಲಿ ಮಾತ ನಾಡಿ, ದೇವೇಗೌಡರ ಅಮೂಲ್ಯ ಸಲಹೆಗಳು ನಮಗೆ ಉಪಯುಕ್ತವಾಗಿವೆ. ಅಪರೂಪದ ದಿನವನ್ನು ನಾನೆಂದೂ ಮರೆಯುವುದಿಲ್ಲ ಎಂದ ಅವರು, ದೇಶದ ವನ್ನು ಉಳಿಸಬೇಕು. ಇಂದು ಸಿಬಿಐ, ಆರ್‌ಬಿಐನಲ್ಲಿ ಏನೇನು ಆಗುತ್ತಿದೆ ಎಂದು ಎಲ್ಲರಿಗೂ ಗೊತ್ತು. ಕೇಂದ್ರ ಸರ್ಕಾರ ಎಲ್ಲ ಕಡೆ ಮೂಗು ತೂರಿಸುತ್ತಿದೆ. ಇಡಿ, ಸಿಬಿಐ, ಆರ್‌ಬಿಐ ಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ. ರಫೇಲ್ ಹಗರಣದಲ್ಲಿ ಸಿಲುಕಿದೆ. ತೈಲ ದರ ದಿನದಿಂದ ದಿನಕ್ಕೆ ಏರುತ್ತಿದೆ. ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಲೇ ಇದೆ. ನಿತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

2018: ರಾಯ್‌ಪುರ: ಬಾಂಬ್ ಸ್ಫೋಟದಿಂದ ಇಬ್ಬರು ರಕ್ಷಣಾಧಿಕಾರಿಗಳು ಸೇರಿದಂತೆ ಐದು ಜನರು ಸಾವನ್ನಪ್ಪಿದ ಘಟನೆ ಛತ್ತೀಸ್‌ಗಢದ ದಾಂತೆವಾಡ ಜಿಲ್ಲೆಯಲ್ಲಿ ಘಟಿಸಿತು. ನಕ್ಸಲರು ದಾಂತೆವಾಡ ಬಳಿ ಬಸ್ ಸ್ಫೋಟಿ ಸಿದರು. ಘಟನೆಯಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಇಬ್ಬರು ಭದ್ರತಾ ಸಿಬ್ಬಂದಿ ಹಾಗೂ ಮೂವರು ಸಾರ್ವಜನಿಕರು ಸಾವನ್ನ ಪ್ಪಿದರು. ರಾಜ್ಯದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆಗಮಿಸುವ ಮುನ್ನಾದಿನವೇ ದಾಂತೇವಾಡದಲ್ಲಿ ದಾಳಿ ನಡೆಯಿತು. ನಕ್ಸಲರು ಸುಧಾರಿತ ಸ್ಫೋಟಕಗಳನ್ನು ಬಳಸಿ ಕೇಂದ್ರೀಯ ಕೈಗಾರಿಕಾ ಪಡೆಯ ವಾಹನವನ್ನು ಸ್ಫೋಟಿಸಿದರು. ಘಟನೆಯಲ್ಲಿ ಮತ್ತೊಬ್ಬ ಸಿಐಎಸ್‌ಎಫ್ ಯೋಧ ಸೇರಿದಂತೆ ಮೂವರು ಗಾಯಗೊಂಡರು. ಕೇವಲ ಎಂಟು ದಿನದ ಹಿಂದೆಯ? ಇದೇ ಇದೇ ನಕ್ಸಲ್ ಪೀಡಿತ ಪ್ರದೇಶದಲ್ಲಿ ನಕ್ಸಲ್ ನಡೆಸಿದ ಗುಂಡಿನ ದಾಳಿಗೆ ದೂರ ದರ್ಶನದ ಕ್ಯಾಮರಾಮನ್ ಸೇರಿ ಇಬ್ಬರು ಪೊಲೀಸ್ ಸಿಬ್ಬಂದಿ ಬಲಿಯಾಗಿದ್ದರು. .೩೦ ರಂದು ಘಟನೆ ನಡೆದ ಎಂಟೇ ದಿನಕ್ಕೆ ಮತ್ತೆ ನಕ್ಸಲರು ಐದು ಮಂದಿಯನ್ನು ಬಲಿ ತೆಗೆದುಕೊಂಡರು. ಮುಂದಿನ ತಿಂಗಳು ವಿಧಾನಸಭಾ ಚುನಾ ವಣೆ ನಡೆಯುವ ಮುನ್ನ ದಾಳಿ ನಡೆಯಿತು.  ಛತ್ತೀಸ್‌ಗಢದ ಚುನಾವಣೆಗೆ ಕೇವಲ ನಾಲ್ಕು ದಿನ ಬಾಕಿ ಇದೆ  ಇರುವಾಗ ನಕ್ಸಲರು ಕೃತ್ಯ ನಡೆಸಿದ್ದು ಆತಂಕ ಸೃಷ್ಟಿಸಿತು.


2016: ನವದೆಹಲಿ: ಭ್ರಷ್ಟಾಚಾರ, ಕಪ್ಪು ಹಣ ಮತ್ತು ಕಳ್ಳ ನೋಟುಗಳ ವಿರುದ್ದ ಮಹಾ ಸಮರ ಸಾರಿದ ಕೇಂದ್ರ ಸರ್ಕಾರ ಭಾರತದ 500 ರೂಪಾಯಿ ಮತ್ತು 1000 ರೂಪಾಯಿಗಳ ನೋಟುಗಳ ಮುದ್ರಣ, ಚಲಾವಣೆಯನ್ನು ಈದಿನ ದಿನ ನಡು ರಾತ್ರಿಯಿಂದ ಸ್ಥಗಿತಗೊಳಿಸಿತು. 500 ಹಾಗೂ 2000 ರೂಪಾಯಿಗಳ ಮುಖಬೆಲೆಯ ಹೊಸ ನೋಟುಗಳು ಚಲಾವಣೆಗೆ ಬರಲಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರಕಟಿಸಿದರು. ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದ ಪ್ರಧಾನಿ ನರೇಂದ್ರ ಮೋದಿ, ಕಪ್ಪು ಹಣ ಮತ್ತು ನಕಲಿ ಹಣಕ್ಕೆ ಕಡಿವಾಣ ಹಾಕಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದರು. ಬುಧವಾರ ನ.9ರಂದು ದೇಶದ ಯಾವುದೇ ಬ್ಯಾಂಕ್ಕಾರ್ಯನಿರ್ವಹಿಸುವುದಿಲ್ಲ ಹಾಗೂ ನವೆಂಬರ್‌ 9 ಮತ್ತು ನವೆಂಬರ್‌ 10ರಂದು ಎಟಿಎಂ ಕಾರ್ಯಾಚರಣೆ ಸ್ಥಗಿತಗೊಳ್ಳಲಿದೆ. ಒಟ್ಟು 50 ದಿನಗಳೊಳಗಾಗಿ ನೋಟು ವಾಪಾಸು ಕೊಡಬಹುದಾಗಿದೆ. ಪ್ರತಿದಿನ ರೂ.4 ಸಾವಿರ ವರೆಗೂ ಬದಲಿಸಿಕೊಳ್ಳಲು ಅವಕಾಶವಿದೆ. ಆಸ್ಪತ್ರೆ ಮತ್ತು ರೈಲು ಬುಕ್ಕಿಂಗ್ಗಾಗಿ ನವೆಂಬರ್‌ 11ರವೆಗೂ ನೋಟುಗಳನ್ನು ಬಳಸಬಹುದು. ರೂ. 2000 ಮತ್ತು ರೂ 500 ಹೊಸ ನೋಟುಗಳು ನವೆಂಬರ್‌ 10ರಿಂದ ಚಾಲ್ತಿಗೆ ಬರಲಿವೆ. ಆಧಾರ್ ಕಾರ್ಡ್ಸೇರಿದಂತೆ ಸೂಕ್ತ ಗುರುತಿನ ಚೀಟಿ ತೋರಿಸಿ ಬ್ಯಾಂಕ್ಮತ್ತು ಅಂಚೆ ಕಚೇರಿಯಲ್ಲಿ ನೋಟು ಬದಲಿಸಿಕೊಳ್ಳಬಹುದು. ನಗದು ರಹಿತ ವ್ಯವಹಾರಗಳಿಗೆ ಯಾವುದೇ ತೊಂದರೆ ಇಲ್ಲ. 500 ರೂ. ಮತ್ತು 1000 ರೂ. ಮುಖಬೆಲೆಯ ನೋಟುಗಳನ್ನು ಬ್ಯಾಂಕ್ ತ್ತು ಪೋಸ್ಟ್ ಆಫೀಸ್ಗಳಲ್ಲಿ ಬದಲಿಸಿಕೊಳ್ಳಲು ಡಿಸೆಂಬರ್ 31ರವರೆಗೆ ಅವಕಾಶ ನೀಡಲಾಗಿದೆ. ನವೆಂಬರ್ 9 ಮತ್ತು ನವೆಂಬರ್ 10 ರಂದು ಎಟಿಎಂಗಳು ಕಾರ್ಯ ನಿರ್ವಹಿಸುವುದಿಲ್ಲ.
ನವೆಂಬರ್ 11ರವರೆಗೆ ಆಸ್ಪತ್ರೆ, ಪೆಟ್ರೋಲ್ ಬಂಕ್, ರೈಲ್ವೆ ನಿಲ್ದಾಣ, ಏರ್ಪೋರ್ಟ್ ಮತ್ತು ಇತರ ತುರ್ತು ಸೇವೆಗಳನ್ನು ನೀಡುವ ಸ್ಥಳದಲ್ಲಿ ಮಾತ್ರ ಸ್ವೀಕರಿಸಲಾಗುತ್ತದೆ.
 2016: ನವದೆಹಲಿ: ಪಾಕಿಸ್ತಾನದಲ್ಲಿ ಗೂಢಚರ್ಯೆ ನಡೆಸುತ್ತಿದ್ದಾರೆ ಎಂದು ಪಾಕ್ ಸರ್ಕಾರದಿಂದ ಆರೋಪ ಎದುರಿಸಿದ್ದ ಮೂವರು ಭಾರತೀಯ ರಾಯಭಾರಿಗಳನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಾಪಸ್ ಕರೆಸಿಕೊಂಡಿತು. ಪಾಕ್ ವಿದೇಶಾಂಗ ಇಲಾಖೆ ಗೂಢಚರ್ಯೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ 8 ಭಾರತೀಯ ಸಿಬ್ಬಂದಿಯ ಗುರುತುಗಳನ್ನು ಮಾಧ್ಯಮಕ್ಕೆ ಬಿಡುಗಡೆ ಮಾಡಿತ್ತು. ಹಿನ್ನೆಲೆಯಲ್ಲಿ ಭಾರತೀಯ ಅಧಿಕಾರಿಗಳ ಸುರಕ್ಷತೆಗೆ ಧಕ್ಕೆಯುಂಟಾಗಿತ್ತು. ಹಾಗಾಗಿ ಕೇಂದ್ರ ಸರ್ಕಾರ ಅನುರಾಗ್ ಸಿಂಗ್, ವಿಜಯ್ ಕುಮಾರ್ ಮತ್ತು ಮಾಧವನ್ ನಂದ ಕುಮಾರ್ ವರನ್ನು ವಾಪಸ್ಸು ಕರೆಸಿಕೊಂಡಿತು. ಮೂವರೂ ಅಧಿಕಾರಿಗಳು ನ.9ರಂದು  ಪಾಕಿಸ್ತಾನದಿಂದ ಮರಳಲಿದ್ದಾರೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದರು. ಭಾರತದಲ್ಲಿ ಗೂಢಚರ್ಯೆ ನಡೆಸುತ್ತಿದ್ದ ಆರೋಪದ ಮೇಲೆ ಪಾಕ್ ರಾಯಭಾರ ಕಚೇರಿಯ 6 ಸಿಬ್ಬಂದಿಯನ್ನು ವಾಪಸ್ಸು ತೆರಳಲು ಭಾರತ ಸೂಚಿಸಿತ್ತು. ಇದರ ಬೆನ್ನಲ್ಲೇ ಪಾಕಿಸ್ತಾನ ಭಾರತೀಯ ರಾಯಭಾರ ಕಚೇರಿಯ 8 ಸಿಬ್ಬಂದಿ ಗೂಢಚರ್ಯೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಅವರ ಮಾಹಿತಿಗಳನ್ನು ಬಹಿರಂಗಪಡಿಸಿತ್ತು.

2016: ಸೂರತ್: ಅನಾರೋಗ್ಯದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಮಹಾತ್ಮಾ ಗಾಂಧಿ ಅವರ ಮೊಮ್ಮಗ ಕನುಭಾಯ್ ಗಾಂಧಿ (87) ಅವರು ನವೆಂಬರ್ 7ರ ಸೋಮವಾರ ಸಂಜೆ ನಿಧನರಾಗಿದ್ದು, ಈದಿನ  ಮಧ್ಯಾಹ್ನ ಸೂರತ್ನಲ್ಲಿ ಅವರ ಅಂತ್ಯ ಸಂಸ್ಕಾರವನ್ನು ನೆರವೇರಿಸಲಾಯಿತು. ಕನುಭಾಯ್ ಗಾಂಧಿಯವರ ಪತ್ನಿ ಶಿವಲಕ್ಷ್ಮೀ ಗಾಂಧಿ ಸೂರತ್ ಉಮ್ರಾ ಚಿತಾಗಾರದಲ್ಲಿ ಅಂತ್ಯಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಿದರು. ಅಂತ್ಯಸಂಸ್ಕಾರದಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ನಾಯಕರು ಸೇರಿದಂತೆ ನೂರಾರು ಜನರು ಭಾಗವಹಿಸಿದ್ದರು. ನಾಸಾದಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿದ್ದ ಕನುಭಾಯ ಗಾಂಧಿ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸೂರತ್ ದತ್ತಿ ಆಸ್ಪತ್ರೆಯೊಂದರಲ್ಲಿ ದಾಖಲಾಗಿದ್ದರು. ಮಕ್ಕಳಿಲ್ಲದ ಕನುಭಾಯ್ ಗಾಂಧಿ ದಂಪತಿ 25 ವರ್ಷ ನಾಸಾದಲ್ಲಿ ಸೇವೆ ಸಲ್ಲಿಸಿದ ಬಳಿಕ 2014ರಲ್ಲಿ ಭಾರತಕ್ಕೆ ವಾಪಸಾಗಿದ್ದರು. ಸ್ವಂತ ಜಾಗ ಇಲ್ಲದ್ದರಿಂದ ಅಲ್ಲಿ ಇಲ್ಲಿ, ಆಶ್ರಮಗಳಲ್ಲಿ ಸುತ್ತಾಡುತ್ತಾ ಬದುಕು ಸಾಗಿಸುತ್ತಿದ್ದರು. ನವದೆಹಲಿಯ ಗುರು ವಿಶ್ರಮ್ ವೃದ್ಧಾಶ್ರಮದಲ್ಲಿ ಆರು ತಿಂಗಳು ಇದ್ದಾಗ ಸಂಪರ್ಕಕ್ಕೆ ಬಂದಿದ್ದ ಕೇಂದ್ರ ಸಚಿವರೊಬ್ಬರ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಬಳಿಯೂ ಮಾತನಾಡಿದ್ದರು. ಕನುಭಾಯ್ ಗಾಂಧಿ ಅವರ ಬಗ್ಗೆ ಅನುಕಂಪದಿಂದ ಮಾತನಾಡಿದ ಪ್ರಧಾನಿ ನೆರವಿನ ಭರವಸೆಯನ್ನೂ ನೀಡಿದ್ದರು. ಆದರೆ ಈವರೆಗೂ ಕೇಂದ್ರ ಸರ್ಕಾರದಿಂದ ಅಥವಾ ಗುಜರಾತ್ ಸರ್ಕಾರದಿಂದ ಚಿಕ್ಕಾಸಿನ ನೆರವೂ ದೊರೆತಿರಲಿಲ್ಲ. ಸರ್ಕಾರಗಳಿಂದ ಅನುದಾನ ಪಡೆಯುವ ಗಾಂಧಿಯವರೇ ಸ್ಥಾಪಿಸಿದ್ದ ಯಾವುದೇ ಸಂಘ, ಸಂಸ್ಥೆ, ಆಶ್ರಮದಿಂದಲೂ ಇವರಿಗೆ ನೆರವು ಸಿಕ್ಕಿರಲಿಲ್ಲ.

2016: ನವದೆಹಲಿ: ದೆಹಲಿ ತಂಡದ ಯುವ ಆಟಗಾರ ರಿಷಭ್ ಪಂತ್ ಜಾರ್ಖಂಡ್ ವಿರುದ್ಧ ನಡೆದ ಪಂದ್ಯದಲ್ಲಿ ರಣಜಿ ಟ್ರೋಫಿ ಮತ್ತು ಭಾರತೀಯ ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲೇ ವೇಗದ ಶತಕ ಸಿಡಿಸುವ ಮೂಲಕ 28 ವರ್ಷಗಳ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿದರು. ರಿಷಭ್ ಪಂತ್ ಕೇವಲ 48 ಬಾಲ್ಗಳಲ್ಲಿ ಶತಕ ಸಿಡಿಸುವ ಮೂಲಕ ಸಾಧನೆ ಮಾಡಿದರು. ಋತುವಿನಲ್ಲಿ ಅದ್ಭುತ ಫಾರ್ಮ್ನಲ್ಲಿದ್ದ ರಿಷಭ್ ಪಂತ್ ಆಡಿದ 7 ಇನಿಂಗ್ಸ್ಗಳಲ್ಲಿ 113.17 ಸರಾಸರಿಯಲ್ಲಿ 799 ರನ್ ಕಲೆ ಹಾಕಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದರು. 1988-89ನೇ ಋತುವಿನಲ್ಲಿ ತಮಿಳುನಾಡಿನ ಆರಂಭಿಕ ಆಟಗಾರ ವಿ.ಬಿ. ಚಂದ್ರಶೇಖರ್ ಇರಾನಿ ಕಪ್ ಟ್ರೋಫಿಯಲ್ಲಿ 56 ಬಾಲ್ಗಳಲ್ಲಿ ಶತಕ ಸಿಡಿಸುವ ಮೂಲಕ ಅತ್ಯಂತ ವೇಗದ ಶತಕ ಸಿಡಿಸಿದ ದಾಖಲೆಯನ್ನು ನಿರ್ಮಿಸಿದ್ದರು. ದಾಖಲೆ 28 ವರ್ಷಗಳಿಂದ ಅಜೇಯವಾಗಿ ಉಳಿದಿತ್ತು.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾದ ಡೇವಿಡ್ ಹುಕ್ಸ್ 1982ರಲ್ಲಿ 34 ಬಾಲ್ಗಳಲ್ಲಿ ಶತಕ ಸಿಡಿಸುವ ಮೂಲಕ ಪ್ರಥಮ ದರ್ಜೆ ಪಂದ್ಯದಲ್ಲಿ ಅತ್ಯಂತ ವೇಗದ ಶತಕ ಗಳಿಸಿದ ಸಾಧನೆ ಮಾಡಿದ್ದರು.

2016: ವಾಷಿಂಗ್ಟನ್:  ಬಾರೀ ಕುತೂಹಲ ಕೆರಳಿಸಿರುವ ಅಮೆರಿಕದ ಅಧ್ಯಕ್ಷಿಯ ಚುನಾವಣೆಯ ಮತದಾನ  ಈದಿನ, ನ.8ರ  ರಾತ್ರಿ (ಭಾರತೀಯ ಕಾಲಮಾನ) ಅಮೆರಿಕದಾದ್ಯಂತ ಆರಂಭಗೊಂಡಿತು.
ಶ್ವೇತಭವನ ಪ್ರವೇಶಿಸಲು ಡೆಮಾಕ್ರೆಟ್ ಪಕ್ಷದ ಪರವಾಗಿ ಹಿಲರಿ ಕ್ಲಿಂಟನ್ ಮತ್ತು ರಿಪಬ್ಲಿಕನ್ ಪಕ್ಷದಿಂದ ವಿವಾದಿತ ಉದ್ಯಮಿ ಡೊನಾಲ್ಡ್ ಟ್ರಂಪ್ ಅಖಾಡದಲ್ಲಿದ್ದಾರೆ. 538 ಪ್ರತಿನಿಧಿ ಮತದಾರರು ಆಯ್ಕೆ ಮಾಡಲಿದ್ದಾರೆ. ಅಮೆರಿಕದ ಅಧ್ಯಕ್ಷರಾಗಲು 270 ಪ್ರತಿನಿಧಿಗಳ ಬೆಂಬಲ ಬೇಕು. ಅಮೆರಿಕದ ಸುಮಾರು 20 ಕೋಟಿ ಮತದಾರರು ಮತ ಚಲಾಯಿಸಲಿದ್ದಾರೆ.

2016: ಬೆಂಗಳೂರು: ಮಾಸ್ತಿಗುಡಿ ಚಿತ್ರದ ಶೂಟಿಂಗ್ ವೇಳೆ  ಸೋಮವಾರ ನವೆಂಬರ್ 7ರಂದು ಮಧ್ಯಾಹ್ನ ತಿಪ್ಪಗೊಂಡನಹಳ್ಳಿ ಜಲಾಶಯದ ನೀರಿನಲ್ಲಿ ಮುಳುಗಿ ಮೃತರಾದ ಖಳನಟ ಅನಿಲ್ ಮತ್ತು ಉದಯ್ ಅವರ ಮೃತದೇಹಗಳಿಗಾಗಿ ಈದಿನ ಸಂಜೆವರೆಗೂಶೋಧ ಕಾರ್ಯಾಚರಣೆ ನಡೆಸಿದರೂ ಮೃತದೇಹಗಳು ಪತ್ತೆಯಾಗಲಿಲ್ಲ ಎಂದು ಪೊಲೀಸರು ತಿಳಿಸಿದರುಎರಡನೆ ದಿನವಾದ ಇಂದು ಸಹ ಎನ್ ಡಿಆರ್ ಎಫ್, ಅಗ್ನಿಶಾಮಕ ಸಿಬ್ಬಂದಿ, ನುರಿತ ಈಜುಗಾರರು ಮತ್ತು ಪೊಲೀಸರು  ನಟರ ಮೃತದೇಹಗಳಿಗಾಗಿ ತಿಪ್ಪಗೊಂಡನ ಹಳ್ಳಿ ಕೆರೆಯಲ್ಲಿ ಶೋಧ ಕಾರ್ಯಾಚರಣೆ ಮುಂದುವರೆಸಿದರು. ಕೆರೆಯಲ್ಲಿ ಹೂಳು ತುಂಬಿರುವುದರಿಂದ ಮೃತ ದೇಹಗಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ ಎಂದು ಹಿರಿಯ ಪೊಲೀಸ್ಅಧಿಕಾರಿಗಳು ಹೇಳಿದರುಚಿತ್ರತಂಡದ ವಿರುದ್ಧ ದೂರು ದಾಖಲು: ನಿಯಮಗಳನ್ನು ಉಲ್ಲಂಘಿಸಿ, ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸದೇ ಬೇಜವಾಬ್ದಾರಿತನದಿಂದ ಚಿತ್ರೀಕರಣ ನಡೆಸಿದ್ದ ಚಿತ್ರತಂಡದ ವಿರುದ್ಧ ಪೊಲೀಸರು ದೂರು  ದಾಖಲಿಸಿದರುತಾವರೆಕೆರೆ ಪೊಲೀಸ್ ಠಾಣೆಯಲ್ಲಿ ನಿರ್ಮಾಪಕ ಸುಂದರ್, ನಿರ್ದೇಶಕ ನಾಗಶೇಖರ್, ಸಾಹಸ ನಿರ್ದೇಶಕ ರವಿವರ್ಮಾ, ಮ್ಯಾನೇಜರ್ ಭರತ್ ವಿರುದ್ಧ ಸೆಕ್ಷನ್ 304, 188 ಸಹ ಕಲಂ 34 ಅಡಿಯಲ್ಲಿ ಪ್ರಕರಣ ದಾಖಲಿಸಲಾಯಿತು. ಮಾಗಡಿ ತಾಲ್ಲೂಕಿನ ತಿಪ್ಪಗೊಂಡನಹಳ್ಳಿ ಜಲಾಶಯದ ಹಿನ್ನೀರಿನಲ್ಲಿ ನಡೆಯುತ್ತಿದ್ದ, ದುನಿಯಾ ವಿಜಯ್ನಟನೆಯಮಾಸ್ತಿಗುಡಿಚಿತ್ರದ ಕೊನೆಯ ಹಂತದ ಚಿತ್ರೀಕರಣದ ವೇಳೆ ಇಬ್ಬರು ಕಲಾವಿದರು ನೀರಿನಲ್ಲಿ ಮುಳುಗಿದ್ದರು. ನಾಗಶೇಖರ್ನಿರ್ದೇಶನದ ಚಿತ್ರದ ಕ್ಲೈಮಾಕ್ಸ್ಚಿತ್ರೀಕರಣವು ಸೋಮವಾರ ಮಧ್ಯಾಹ್ನ 2.45 ಸುಮಾರಿಗೆ ನಡೆದಿತ್ತು. ಮೂರು ಮಂದಿ ಕಲಾವಿದರು ಹೆಲಿಕಾಪ್ಟರ್ನಿಂದ ನೀರಿಗೆ ಜಿಗಿಯುವ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತುನಾಯಕ ದುನಿಯಾ ವಿಜಯ್ಜೊತೆಗೆ ಕಲಾವಿದರಾದ ಅನಿಲ್ಮತ್ತು ಉದಯ್ ದೃಶ್ಯದಲ್ಲಿ ಪಾಲ್ಗೊಂಡಿದ್ದರು. ಮೂವರು ಹೆಲಿಕಾಪ್ಟರ್ನಲ್ಲಿ ನೀರಿಗೆ ಧುಮುಕಿ ದಡ ಸೇರುವ ದೃಶ್ಯವನ್ನು ಚಿತ್ರೀಕರಿಸಲು ತಂಡವು ಮುಂದಾಗಿತ್ತು. ಅದರಂತೆ ಸುಮಾರು 50 ಅಡಿ ಎತ್ತರದಲ್ಲಿ ಹಾರಾಡುತ್ತಿದ್ದ ಹೆಲಿಕಾಪ್ಟರ್ನಿಂದ ಮೂವರು ಹಿನ್ನೀರಿಗೆ ಜಿಗಿದಿದ್ದರು. ಲೈಫ್ಜಾಕೆಟ್ತೊಟ್ಟಿದ್ದ ವಿಜಯ್ಈಜುತ್ತಾ ದಡಕ್ಕೆ ಬಂದರು. ಆದರೆ ಅನಿಲ್ಮತ್ತು ಉದಯ್ಸ್ವಲ್ಪ ದೂರ ಈಜುವಷ್ಟರಲ್ಲೇ ಸುಸ್ತಾಗಿ ನೀರಿನಲ್ಲಿ ಮುಳುಗಿದವರು ಮತ್ತೆ ಮೇಲೆಳಲಿಲ್ಲ. ಇಬ್ಬರು ಮೃತಪಟ್ಟಿರಬಹುದು ಎಂದು ಶಂಕಿಸಲಾಯಿತು. 

1985: ಇದು ಎಕ್ಸ್ ರೇ ಪತ್ತೆಯಾದ ದಿನ. 1895ರಲ್ಲಿ ವಿಲ್ಹೆಮ್ ರಾಂಟ್ಜೆನ್ ಗಾಳಿ ತೆಗೆದ ಗಾಜಿನ ಬಲ್ಬ್ ಮುಖಾಂತರ ಹೈ ವೋಲ್ಟೇಜ್ ಬೆಳಕು ಹಾಯಿಸುತ್ತಿದ್ದಾಗ ಅದರಿಂದ `ಅಪರಿಚಿತ ವಿಕಿರಣ' ಹೊರ ಹೊಮ್ಮುತ್ತಿದ್ದುದನ್ನು ಗಮನಿಸಿದ. ಈ ವಿಕಿರಣವು ಬೆಂಚಿನ ಮೇಲೆ ಇದ್ದ ಸಣ್ಣ ಬಾರಿಯಂ ಪ್ಲಾಟಿನೊಸಯನೈಡ್ ಪರದೆಯ ಮೇಲೆ ಹೊಳಪು ಮೂಡಿಸುತ್ತಿತ್ತು. ಅದು ಏನು ಎಂಬುದಾಗಿ ಗೊತ್ತಿಲ್ಲದೇ ಇದ್ದುದರಿಂದ ಆತ ಅದನ್ನು `ಎಕ್ಸ್ ರೇ' ಎಂಬುದಾಗಿ ಕರೆದ. ಆತನ ಗೌರವಾರ್ಥ ನಂತರ ಅದಕ್ಕೆ `ರಾಂಟ್ಜೆನ್ ಕಿರಣ' ಎಂಬುದಾಗಿ ಪುನರ್ ನಾಮಕರಣ ಮಾಡಲಾಯಿತು. (ಆತನ ಪತ್ನಿಯ ತೋಳನ್ನೇ ಮೊತ್ತ ಮೊದಲ `ಎಕ್ಸ್ ರೇ' ಫೊಟೋಗ್ರಾಫಿ'ಗೆ ಬಳಸಲಾಗಿತ್ತು. ಪ್ರಾರಂಭದಲ್ಲಿ ಜನರಿಗೆ ಇದರ ಬಗ್ಗೆ ಬಹಳ ಗುಮಾನಿ ಇತ್ತು. ಬಟ್ಟೆಯ ಮುಖಾಂತರ ದೇಹದ ಒಳಭಾಗ ವೀಕ್ಷಣೆಗೆ ಇದನ್ನು ಬಳಸಬಹುದೆಂದು ಅವರು ಶಂಕಿಸಿದ್ದರು. ಲಂಡನ್ನಿನ ಕಂಪೆನಿಯೊಂದು ಇದೇ ಹಿನ್ನೆಲೆಯಲ್ಲಿ `ಎಕ್ಸ್ ರೇ ಪ್ರೂಫ್ ಅಂಡರ್ ವೇರ್' ತಯಾರಿಸಿರುವುದಾಗಿಯೂ ಜಾಹೀರಾತು ನೀಡಿತ್ತು.)

2008: ಚಂದ್ರನ ಸಮಗ್ರ ಅಧ್ಯಯನಕ್ಕೆ ಪಯಣ ಬೆಳೆಸಿದ `ಚಂದ್ರ ಯಾನ-1' ಬಾಹ್ಯಾಕಾಶ ನೌಕೆಯು ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿತು. ಭೂಮಿಯಿಂದ ಸುಮಾರು 3.80 ಲಕ್ಷ ಕಿಲೋಮೀಟರ್ ದೂರದಲ್ಲಿದ್ದ ನೌಕೆಯು ಸಂಜೆ 5.15ಕ್ಕೆ ಚಂದ್ರನ ಕಕ್ಷೆ ಪ್ರವೇಶಿಸಿದಾಗ, ವಿಜ್ಞಾನಿಗಳ ಸಂತಸ ಇಮ್ಮಡಿಯಾಯಿತು. `ನೌಕೆಗೆ ಅಳವಡಿಸಿದ ದ್ರವ ಇಂಧನದ ಲ್ಯಾಮ್ ರಾಕೆಟನ್ನು' ಉರಿಸಿ, ಚಂದ್ರನ ಕಕ್ಷೆಯ ಸಮೀಪಕ್ಕೆ ಸಾಗುವಂತೆ ಮಾಡಲಾಗಿತ್ತು. ಈದಿನ ಸಂಜೆ ಈ ರಾಕೆಟನ್ನು 817 ಸೆಕೆಂಡುಗಳ ಕಾಲ ಮತ್ತೊಮ್ಮೆ ಉರಿಸಿ, ಚಂದ್ರನ ಕಕ್ಷೆ ಪ್ರವೇಶಿಸುವಂತೆ ಮಾಡಲಾಯಿತು. ಕ್ಲಿಷ್ಟಕರವಾದ ಈ ಕಾರ್ಯ ಯಶಸ್ವಿಯಾದಾಗ ಸಂತಸವಾಯಿತು' ಎಂದು ಚಂದ್ರಯಾನ ಯೋಜನೆ ನಿರ್ದೇಶಕ ಎಂ.ಅಣ್ಣಾದೊರೈ ಹೇಳಿದರು.

2008: ಹೈಟಿಯ ಪೆಟಿಯಾನ್- ವಿಲ್ಲಿಯ ಶಾಲಾ ಕಟ್ಟಡವೊಂದು ಕುಸಿದು 58 ಶಾಲಾ ಮಕ್ಕಳು ಮತ್ತು ಅಧ್ಯಾಪಕರು ಸಾವನ್ನಪ್ಪಿ, ನೂರಾರು ವಿದ್ಯಾರ್ಥಿಗಳು ಗಾಯಗೊಂಡರು. ಬೆಳಗ್ಗೆ 10 ಗಂಟೆ ವೇಳೆಗೆ ಮೂರು ಅಂತಸ್ತಿನ ಶಾಲಾ ಕಟ್ಟಡ ಕುಸಿದು ಅನಾಹುತ ಸಂಭವಿಸಿತು.

2008: ಹಲವು ಸಾಧನೆಗಳನ್ನು ತೋರಿರುವ ಭಾರತೀಯ ವಿಮಾನ ಯಾನ ಕ್ಷೇತ್ರ ಮತ್ತೊಂದು ಗರಿಯನ್ನು ತನ್ನ ಮುಡಿಗೇ ರಿಸಿಕೊಂಡಿತು. ಸ್ವದೇಶಿ ನಿರ್ಮಿತ `ತೇಜಸ್' ಯುದ್ಧ ವಿಮಾನವನ್ನು ಈ ರಾತ್ರಿ ಪರೀಕ್ಷಾರ್ಥವಾಗಿ ಹಾರಾಟ ನಡೆಸುವ ಮೂಲಕ ಯಶಸ್ಸು ಸಾಧಿಸಿತು. ಬೆಂಗಳೂರಿನ ವಿಮಾನ ನಿಲ್ದಾಣದಿಂದ ರಾತ್ರಿ 8.05ರ ಸುಮಾರಿಗೆ `ತೇಜಸ್'ನ್ನು ಕೆಲ ದೂರದವರೆಗೆ ಹಾರಾಟ ನಡೆಸುವ ಮೂಲಕ ಯಶಸ್ಸು ಸಾಧಿಸಿದೆವು ಎಂದು ಹಿಂದೂಸ್ಥಾನ್ ಏರೊನಾಟಿಕಲ್ಸ್ ಲಿಮಿಟೆಡ್ ಸಂಸ್ಥೆ ಅಧಿಕಾರಿ ತಿಳಿಸಿದರು. ನ್ಯಾಷನಲ್ ಫ್ಲೈಟ್ ಟೆಸ್ಟ್ ಸೆಂಟರಿನ ಕ್ಯಾಪ್ಟನ್ ಎನ್.ತಿವಾರಿ ವಿಮಾನದ ಪೈಲಟ್ ಆಗಿ ಯಶಸ್ವಿ ಹಾರಾಟ ನಡೆಸಿದರು.
2008: ಏರಿದ ನಷ್ಟ ಭರಿಸಲಾಗದೆ ಖಾಸಗಿ ವಿಮಾನ ಸಂಸ್ಥೆ ಜೆಟ್ ಏರ್ವೇಸ್ ಕನಿಷ್ಠ 25 ವಿದೇಶಿ ಪೈಲಟ್ಗಳನ್ನು ಸೇವೆಯಿಂದ ವಜಾಗೊಳಿಸಿತು. ಈ ವಿದೇಶಿ ಪೈಲಟ್ಗಳಿಗೆ ಮಾಸಿಕ 15,000 ದಿಂದ 18,000 ಅಮೆರಿಕ ಡಾಲರುವರೆಗೆ ವೇತನ ನೀಡಲಾಗುತ್ತಿತ್ತು. ಜೊತೆಗೆ ಪಂಚತಾರಾ ಹೋಟೆಲ್ ವಾಸ ಸೌಕರ್ಯ, ತಮ್ಮ ಸ್ವದೇಶಕ್ಕೆ ಹೋಗಿ ಬರಲು ಬಿಸಿನೆಸ್ ಕ್ಲಾಸ್ ಪ್ರಯಾಣ ಭತ್ಯೆ ಇತ್ಯಾದಿ ಸೌಲಭ್ಯಗಳನ್ನೂ ನೀಡಲಾಗುತ್ತಿತ್ತು.

2007: ತಮ್ಮ ವೃತ್ತಿ ಬದುಕಿನ ಮುಸ್ಸಂಜೆಯಲ್ಲಿ ಭಾರತ ಕ್ರಿಕೆಟ್ ತಂಡದ ನಾಯಕನಾಗುವ ಮೂಲಕ ಅನಿಲ್ ಕುಂಬ್ಳೆ ವಿಶ್ವದಾಖಲೆ ನಿರ್ಮಿಸಿದರು. ಅತಿ ಹೆಚ್ಚು ಪಂದ್ಯಗಳನ್ನು ಆಡಿದ ನಂತರ ತಂಡದ ಚುಕ್ಕಾಣಿ ಹಿಡಿದವರ ಪೈಕಿ ಅನಿಲ್ ಕುಂಬ್ಳೆ ಈಗ ಅಗ್ರಗಣ್ಯರು. ತಂಡದ ನಾಯಕತ್ವ ಹಿಡಿಯುವ ಮುನ್ನ ಅವರು 118 ಟೆಸ್ಟ್ ಪಂದ್ಯಗಳಲ್ಲಿ ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಆಸ್ಟ್ರೇಲಿಯಾದ ಸ್ಟೀವ್ ವಾ 111 ಪಂದ್ಯಗಳ ನಂತರ ಸಾರಥ್ಯ ವಹಿಸಿದ್ದರು. ದಕ್ಷಿಣ ಆಫ್ರಿಕಾದ ಜಾಕ್ ಕಾಲಿಸ್ 97 ಪಂದ್ಯಗಳ ಬಳಿಕ, ಭಾರತದ ವೆಂಗ್ ಸರ್ಕಾರ್ 95 ಪಂದ್ಯಗಳ ಬಳಿಕ ತಂಡದ ನಾಯಕರಾಗಿ ಆಯ್ಕೆಯಾಗಿದ್ದರು.

2006: ಹಾಲಿವುಡ್ಡಿನ ಖ್ಯಾತ ಸಂಗೀತ ನಿರ್ದೇಶಕ ಬೆಸಿಲ್ ಪೊಲಿಜ್ಯುರಸ್ (61) ಲಾಸ್ ಏಂಜೆಲ್ಸಿನಲ್ಲಿ ನಿಧನರಾದರು. 80ರ ದಶಕದಲ್ಲಿ ಸಂಗೀತ ಸಾಮ್ರಾಟರಾಗಿ ಮೆರೆದಿದ್ದ ಬೆಸಿಲ್ 1989ರಲ್ಲಿ ಪ್ರತಿಷ್ಠಿತ `ಎಮ್ಮಿ' ಪ್ರಶಸ್ತಿಗೆ ಪಾತ್ರರಾಗಿದ್ದರು. ಸಾಹಸ ಚಿತ್ರಗಳಾದ ಕ್ಯಾನನ್ ದಿ ಬಾರ್ಬರಿಯನ್ ಮತ್ತು ಕ್ಯಾನನ್ ಡೆಸ್ಟ್ರಾಯರ್ ಚಿತ್ರಕ್ಕೆ ಅವರು ಸಂಗೀತ ನೀಡಿದ್ದರು.

2006: ಗರಿಷ್ಠ 10 ಸಾವಿರ ಟನ್ ತೂಕದ ಹಡಗನ್ನು ಮೇಲೆತ್ತಬಹುದಾದ ಹಾಗೂ ಏಕಕಾಲಕ್ಕೆ 4 ಹಡಗುಗಳನ್ನು ದುರಸ್ತಿ ಮಾಡಬಹುದಾದ ಹಡಗು ಮೇಲೆತ್ತುವ ದೇಶದ ಪ್ರಪ್ರಥಮ `ಶಿಪ್ ಲಿಫ್ಟ್' ವ್ಯವಸ್ಥೆಯನ್ನು ಪಶ್ಚಿಮ ಕಮಾಂಡಿನ ನೌಕಾ ಮುಖ್ಯಸ್ಥ ವೈಸ ಅಡ್ಮಿರಲ್ ಸಂಗ್ರಾಮ್ ಸಿಂಗ್ ಬೈಸ್ ಉದ್ಘಾಟಿಸಿದರು. ಇದರ ಉದ್ದ 175 ಮೀಟರ್, ಅಗಲ 28 ಮೀಟರ್. ತಲಾ 430 ಟನ್ ಭಾರ ಹೊರುವ 42 ಫ್ಲಾಟ್ ಫಾರಂಗಳನ್ನು ಸೇರಿಸಿ ಸಿದ್ಧಪಡಿಸಿದ ಈ ಲಿಫ್ಟನ್ನು ಅಮೆರಿಕದ ರೋಲ್ಸ್ ರಾಯ್ ಅಂಗಸಂಸ್ಥೆ ಸಿಂಕ್ರೋಸಾಫ್ಟ್ ಸಿಂಕ್ ಯುಎಸ್ ಎ ನಿರ್ಮಿಸಿದೆ. ನಾರ್ವೆಯ ಟಿಟಿಎಸ್ ಕಂಪೆನಿ ಹಡಗು ವರ್ಗಾವಣೆ ವ್ಯವಸ್ಥೆಯನ್ನು ರೂಪಿಸಿದೆ.

2006: ಲಾಭದ ಹುದ್ದೆ ಮಸೂದೆಗೆ ರಾಜ್ಯಪಾಲರ ಅಂಕಿತ ಲಭಿಸಿತು. ಇದರಿಂದ ನಿಗಮ, ಮಂಡಳಿಗಳ ಸಹಿತ ಸರ್ಕಾರದ ವಿವಿಧ ಸಂಸ್ಥೆಗಳಿಗೆ ನೇಮಕಾತಿ ಮಾಡಲು ಎದುರಾಗಿದ್ದ ಅಡ್ಡಿ ನಿವಾರಣೆಗೊಂಡಿತು.

2006: ಒಂದು ದಶಕದಿಂದ ನಡೆಯುತ್ತಿದ್ದ ಹೋರಾಟವನ್ನು ಸ್ಥಗಿತಗೊಳಿಸಿ ರಾಷ್ಟ್ರದಲ್ಲಿ ಶಾಂತಿ ಸ್ಥಾಪಿಸಲು ನೇಪಾಳ ಸರ್ಕಾರ ಹಾಗೂ ಮಾವೋವಾದಿ ಬಣಗಳ ಮಧ್ಯೆ ಐತಿಹಾಸಿಕ ಒಪ್ಪಂದ ಏರ್ಪಟ್ಟಿತು. ಪ್ರಧಾನಿ ಕೊಯಿರಾಲ ನಿವಾಸದಲ್ಲಿ ನಡೆದ ಸಭೆಯಲ್ಲಿ 15 ಅಂಶಗಳ ಒಪ್ಪಂದ ಸಿದ್ಧಪಡಿಸಲಾಯಿತು.

2000: ಉತ್ತರಾಂಚಲವು ಭಾರತದ 27ನೇ ರಾಜ್ಯವಾಯಿತು. ಡೆಹ್ರಾಡೂನ್ ಅದರ ರಾಜಧಾನಿಯಾಯಿತು.

1999: ಹೈದರಾಬಾದಿನಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಡೆದ ಒಂದು ದಿನದ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ರಾಹುಲ್ ದ್ರಾವಿಡ್ 331 ರನ್ ಗಳಿಸುವ ಮೂಲಕ ಅತ್ಯಂತ ಹೆಚ್ಚು ರನ್ ಗಳಿಸಿದ `ಬ್ಯಾಟ್ಸ್ ಮನ್ ಜೋಡಿ' ಎನಿಸಿದರು.

1966: ಸ್ವಾತಂತ್ರ್ಯ ಹೋರಾಟಗಾರ್ತಿ, ಸಮಾಜ ಸೇವಕಿ ರಾಮೇಶ್ವರಿ ನೆಹರು ನಿಧನರಾದರು.

1958: ಚಂದ್ರಗ್ರಹ ಶೋಧಕ್ಕೆಂದು ಅಮೆರಿಕ ಪ್ರಯೋಗಿಸಿದ ಮೂರನೇ ರಾಕೆಟ್ ವಿಫಲವಾಯಿತು. ಕೇಪ್ ಕೆನವರಾಲಿನ ಪ್ರಯೋಗ ಕ್ಷೇತ್ರದಿಂದ ಒಂದು ಸಾವಿರ ಮೈಲಿ ಮೇಲಕ್ಕೆ ಹೋದ ನಂತರ ಆ ರಾಕೆಟ್ ಮಧ್ಯ ಆಫ್ರಿಕದ ಪೂರ್ವಭಾಗದ ಪ್ರದೇಶದ ಮೇಲೆ ಚೂರು ಚೂರಾಯಿತು. 88 ಅಡಿ ಉದ್ದದ ವಿಮಾನ ಪಡೆಯ ಆ ರಾಕೆಟಿನ ಮೂರನೆಯ ಹಂತವು ಹೊತ್ತಿಕೊಳ್ಳದೆ, ಗಂಟೆಗೆ ಹದಿನಾರು ಸಾವಿರ ಮೈಲಿ ವೇಗವನ್ನು ಮುಟ್ಟಿದ ನಂತರ ಭೂಮಿಯ ವಾತಾವರಣಕ್ಕೇ ವಾಪಸಾಯಿತು.

1956: ಫೋರ್ಡ್ ಮೋಟಾರ್ ಕಂಪೆನಿಯು 18,000 ಹೆಸರುಗಳನ್ನು ತಿರಸ್ಕರಿಸಿ ಹೆನ್ರಿ ಫೋರ್ಡ್ ಅವರ ಏಕೈಕ ಪುತ್ರ `ಎಡ್ಸೆಲ್' (Edsel) ಹೆಸರನ್ನೇ ಹೊಸ ಕಾರಿಗೆ ಇರಿಸಿತು. ಈ ಕಾರು ಸಾರ್ವಜನಿಕರ ಮನಸೆಳೆಯುವಲ್ಲಿ ಸಂಪೂರ್ಣ ವಿಫಲವಾಯಿತು.

1953: ಸಾಹಿತಿ ತಾರಾನಾಥ ಜನನ.

1933: ಸಾಹಿತಿ ಎಂ.ಆರ್. ನರಸಿಂಹನ್ ಜನನ.

1929: ಭಾರತದ ಮಾಜಿ ಉಪ ಪ್ರಧಾನಿ, ಬಿಜೆಪಿ ಧುರೀಣ ಲಾಲ್ ಕೃಷ್ಣ ಆಡ್ವಾಣಿ ಹುಟ್ಟಿದ ದಿನ.

1923: ದಂಗೆ ಮೂಲಕ ಜರ್ಮನಿಯ ಅಧಿಕಾರ ವಶಪಡಿಸಿಕೊಳ್ಳುವ ಅಡಾಲ್ಫ್ ಹಿಟ್ಲರನ ಮೊದಲ ಪ್ರಯತ್ನ ವಿಫಲವಾಯಿತು. ಆತ ಬಂಧಿತನಾಗಿ ಸೆರೆಮನೆ ಸೇರಿದ. ಸೆರೆಮನೆಯಲ್ಲಿ ಇದ್ದಾಗಲೇ ತನ್ನ `ಮೆಯ್ನ್ ಕಾಮ್ಫ್' ಪುಸ್ತಕವನ್ನು ರುಡಾಲ್ಫ್ ಹೆಸ್ ಗೆ ಹೇಳಿ ಬರೆಯಿಸಿದ.

1908: ಹಾಸನದಲ್ಲಿ ಹುಟ್ಟಿ ಇಂಗ್ಲಿಷ್ ಸಾಹಿತ್ಯ ರಚನೆಯಲ್ಲಿ ವಿಶ್ವಮಾನ್ಯತೆ ಗಳಿಸಿದ ಹಾಸನ ರಾಜಾರಾವ್ (8-11-1908ರಿಂದ 8-7-2006) ಅವರು ಎಚ್. ವಿ. ಕೃಷ್ಣಸ್ವಾಮಿ - ಗೌರಮ್ಮ ದಂಪತಿಯ ಮಗನಾಗಿ ಈದಿನ ಜನಿಸಿದರು.

No comments:

Post a Comment