Saturday, July 7, 2018

ನೈನಂ ಛಿಂದಂತಿ ಶಸ್ತ್ರಾಣಿ


ನೈನಂ ಛಿಂದಂತಿ ಶಸ್ತ್ರಾಣಿ

ಭಗವದ್ಗೀತೆ ಅಧ್ಯಾಯ-2
ಶ್ಲೋಕ - 23
ನೈನಂ ಛಿಂದಂತಿ ಶಸ್ತ್ರಾಣಿ ನೈನಂ ದಹತಿ ಪಾವಕಃ |
ನಚೈನಂ ಕ್ಲೇದಯಂತ್ಯಾಪೋ ಶೋಷಯತಿ ಮಾರುತಃ ॥೨೩॥
ಏನಮ್ ಛಂದಂತಿ ಶಸ್ತ್ರಾಣಿ ಏನಮ್ ದಹತಿ ಪಾವಕಃ ಏನಮ್ ಕ್ಲೇದಯಂತಿ ಅಪಃ ಶೋಷಯತಿ ಮಾರುತಃ
ಜೀವನನ್ನು (ಭಗವಂತನನ್ನು) ಆಯುಧಗಳು ತುಂಡರಿಸವು. ಇವನನ್ನು ಬೆಂಕಿ ಸುಡದು. ಇವನನ್ನು ನೀರು ನೆನೆಸದು, ಗಾಳಿ ಒಣಗಿಸದು.

ಯಾವುದೇ ಒಂದು ವಸ್ತುವನ್ನು ನಾಶಮಾಡಲು ಇರುವ ಮುಖ್ಯ ಅಸ್ತ್ರ ನಾಲ್ಕು. ಮಣ್ಣು(ಘನ ಆಯುಧ), ನೀರು, ಬೆಂಕಿ ಹಾಗು ಗಾಳಿ. ಜೀವ ಸೂಕ್ಷ್ಮರಲ್ಲಿ ಸೂಕ್ಷ್ಮ. ಶಾಸ್ತ್ರಕಾರರು ಹೇಳುವಂತೆ ಕುದುರೆಯ ಬಾಲದ ಒಂದು ಕೂದಲಿನ ತುತ್ತ ತುದಿಯನ್ನು ಹತ್ತು ಸಾವಿರ ಭಾಗಗಳಾಗಿ ವಿಂಗಡಿಸಿದರೆ ಸಿಗುವ ಒಂದು ಭಾಗ ಎಷ್ಟು ಗಾತ್ರದ್ದೋ ಅಷ್ಟು ಗಾತ್ರದಲ್ಲಿರುತ್ತದೆ ಜೀವ. ಇಂತಹ ಜೀವವನ್ನು ಯಾವುದೇ ಆಯುಧ ತುಂಡರಿಸಲು ಸಾಧ್ಯವಿಲ್ಲ. ಬೆಂಕಿ ಜೀವನನ್ನು ಸುಡಲಾರದು. ನೀರಿನಿಂದ ಜೀವ ಒದ್ದೆಯಾಗದು. ಗಾಳಿ ಜೀವನನ್ನು ಒಣಗಿಸದು. ಸೂಕ್ಷ್ಮಾತಿ ಸೂಕ್ಷ್ಮವಾದ ಜೀವನನ್ನು ಯಾವ ಆಯುಧವೂ ನಾಶ ಮಾಡಲಾರವು.

ಭಗವದ್ಗೀತೆ ಅಧ್ಯಾಯ-2
ಶ್ಲೋಕ - 24
ಅಚ್ಛೇದ್ಯೋSಯಮದಾಹ್ಯೋSಯಮಕ್ಲೇದ್ಯೋSಶೋಷ್ಯ ಏವ
ನಿತ್ಯಃ ಸರ್ವಗತಃ ಸ್ಥಾಣುರಚಲೋಯಂ ಸನಾತನಃ ॥೨೪॥
ಅಚ್ಛೇದ್ಯಃ ಅಯಮ್ ಅದಾಹ್ಯಃ ಅಯಮ್ ಅಕ್ಲೇದ್ಯಃ ಅಶೋಷ್ಯಃ ಏವ ನಿತ್ಯಃ ಸರ್ವಗತಃ ಸ್ಥಾಣು ಆಚಲಃ ಅಯಮ್ ಸನಾತನಃ
- ಜೀವನನ್ನು ಕಡಿಯಲಾಗದು. ಇವನನ್ನು ಸುಡಲಾಗದು. ನೆನೆಸಲಾಗದು; ಒಣಗಿಸಲೂ ಆಗದು. ಎಂದೆಂದೂ ಎಲ್ಲೆಡೆ ಹಬ್ಬಿರುವ, ಏತರಿಂದಲೂ ಮಾರ್ಪಡದ, ಅವಿಚಲನಾದ, ಪುರಾಣಪುರುಷನ ಪಡಿಯಚ್ಚು ಇವನು.[ಎಲ್ಲೆಡೆ ಹಬ್ಬಿರುವ ಭಗವಂತನನ್ನೆ ಎಂದೆಂದೂ ಹೊಂದಿರುವ ಅಣುರೂಪಿ. ಇವನು ಏತರಿಂದಲೂ ಮಾರ್ಪಡದ ನಿಯತಿಗೆ ಬದ್ಧ ; ವೇದದ ವಿಧಿ-ನಿಷೇಧಗಳಿಗೆ ಕೂಡ].
ಜೀವನನ್ನು ಇಂದಲ್ಲ, ಮುಂದೆಂದೂ ಯಾರಿಂದಲೂ ನಾಶಮಾಡಲು ಸಾದ್ಯವಿಲ್ಲ. ಏಕೆಂದರೆ ಆತ ತನ್ನ ಗುಣಧರ್ಮದಿಂದ ಎಂದೂ ಬದಲಾಗದ, ಸರ್ವಗತನಾದ, ವಿಚಲಿತನಾಗದ-ಭಗವಂತನ ಪಡಿಯಚ್ಚು. ಯಾವ ಆಯುಧಕ್ಕೂ ನಿಲುಕದೆ ಎಲ್ಲ ಕಾಲದಲ್ಲೂ ಏಕರೂಪನಾಗಿರುವ, ಎಲ್ಲ ಕಡೆ ಸ್ಥಿರವಾದ, ಬದಲಾವಣೆ ಇಲ್ಲದೆ ಇರುವ ಗುಣಧರ್ಮ ಜೀವನಿಗಿದೆ. ಜೀವ ಸನಾತನ. ಅಂದರೆ ನಾತನದಿಂದ ಸಹಿತನಾದವ. ಇಲ್ಲಿ 'ನಾತನ' ಎಂದರೆ 'ನಾದನ'. ಅಂದರೆ ವೇದನಾದ. ಜೀವ ವೇದನಾದದಿಂದ ಸಹಿತನಾಗಿ, ಸಮಸ್ತ ವೇದ ಪ್ರತಿಪಾದ್ಯನಾದ ಭಗವಂತನ ಮಡಿಲಲ್ಲಿ ವೇದದ ವಿಧಿ-ನಿಷೇಧಗಳಿಗೆ ಬದ್ಧನಾಗಿರುತ್ತಾನೆ. ಅದು ಸರ್ವಗತನಾದ ಭಗವಂತನನ್ನು ಆಶ್ರಯಿಸಿರುವ ಮಹತ್ತಾದ ಅಣು.
******************


ಅನುಪ ಕೃಷ್ಣ ಭಟ್ ನೆತ್ರಕೆರೆ ಸ್ಫೂರ್ತಿಯ ಅಣು. ಅವನಿಂದ ಸ್ಫೂರ್ತಿ ಪಡೆದ ಎಲ್ಲರ ಜೊತೆಗೆ ಅವನು ಎಂದೆಂದೂ ಇರುತ್ತಾನೆ.
 
ಅವನ ಹೋರಾಟದಲ್ಲಿ ಅವನ ಜೊತೆಗೆ ನಿಂತ, ತನು, ಮನ, ಧನ ಮಾತ್ರವೇ ಅಲ್ಲ ತಮ್ಮ ನೆತ್ತರನ್ನು ಕೂಡಾ ಹಂಚಿಕೊಂಡು ನೆರವಾದ ಬಂಧು-ಮಿತ್ರರು, ಸಮಾಜದ ಸಮಸ್ತ ಬಂಧುಗಳು, ಸಂಘ-ಸಂಸ್ಥೆಗಳು, ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳು, ಅವನ ನೋವು ಶಮನಗೊಳಿಸಲು ಶ್ರಮಿಸಿದ ಆಯುಶ್ರೀ, ರಾಧಾಕೃಷ್ಣ, ಎಚ್.ಸಿ.ಜಿ, ಕಿದ್ವಾಯಿ, ಶ್ರೀಶಂಕರ, ಮಣಿಪಾಲ, ಸೈಟ್ ಕೇರ್, ಡಿ.ಎಸ್. ರೀಸರ್ಚ್ ಸೆಂಟರ್, ಸಿಮರೂಬ, ಸಾಗರದ ಆಯುರ್ವೇದ ಔಷಧ ತಜ್ಞರು ಆಸ್ಪತ್ರೆಗಳ ವೈದ್ಯರು,ಸಿಬ್ಬಂದಿಯನ್ನು,ಅವನಿಗೆ ಸ್ಫೂರ್ತಿ ತುಂಬಿದ್ದ ಪ್ರಜಾವಾಣಿ, ವಿಜಯಕರ್ನಾಟಕ, ಉದಯವಾಣಿ ಪತ್ರಿಕೆಗಳು, ಅವನಿಗೆ ಹಿತಕರವಾದ ಮನೆಯೂಟವನ್ನು ಒದಗಿಸಿಕೊಟ್ಟ ಬಂಧು-ಮಿತ್ರರು ಇವೆರಲ್ಲರನ್ನೂ ನಾನು ಮರೆಯುವಂತಿಲ್ಲ.
ಅವರೆಲ್ಲರಿಗೂ ನಾನು, ಪತ್ನಿ ಸಾಧನಾ, ಪುತ್ರಿ ಅನುಷಾ ಭಟ್  ಕುಟುಂಬ ಸದಸ್ಯರೆಲ್ಲರೂ ಚಿರಋಣಿಗಳು
ನಾನು ಜೀವಮಾನದಲ್ಲಿ ಮಾಡಲು ಸಾಧ್ಯವಾಗದ ಸಾಧನೆಯನ್ನು ಅವರು ಕಾಲುಶತಮಾನದ ತನ್ನ ಜೀವನದಲ್ಲಿ ಸಾಧಿಸಿದ್ದಾನೆ. ಅಸಂಖ್ಯ ಬಂಧುಮಿತ್ರರನ್ನು ಗಳಿಸಿದ್ದಾನೆ. ತನ್ನ ನೋವಿನಲ್ಲೂಅದೆಷ್ಟೋ ಮಂದಿಗೆ ಅನಾಮಿಕ ನೆರವನ್ನು ನೀಡಿದ್ದಾನೆ.

ಅವನ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.

No comments:

Post a Comment