Wednesday, May 30, 2018

ಪೆಟ್ರೋಲ್‌, ಡೀಸೆಲ್‌ ಬೆಲೆ ಕಾಂಗ್ರೆಸ್ ಕಾಲದಲ್ಲೂ ಅಷ್ಟೇ, ಈಗಲೂ ಅಷ್ಟೆ!


ಪೆಟ್ರೋಲ್‌, ಡೀಸೆಲ್ಬೆಲೆ ಕಾಂಗ್ರೆಸ್ ಕಾಲದಲ್ಲೂ ಅಷ್ಟೇ, ಈಗಲೂ ಅಷ್ಟೆ!

ನವದೆಹಲಿ : ಹದಿನಾರು ದಿನಗಳಿಂದ ಸತತ ಏರುತ್ತಾ ಬಂದ ಪೆಟ್ರೋಲ್ಮತ್ತು ಡೀಸೆಲ್ದರಗಳು 30 ಮೇ 2018ರ ಬುಧವಾರ  ಕೊನೆಗೂ ಇಳಿದವು.  ಆದರೆ  ಇಳಿದದ್ದು ಕೇವಲ 1 ಪೈಸೆಯಷ್ಟುಅಂದರೆ ಬೆಲೆ ಲೀಟರಿಗೆ 78ರಿಂದ 82ರ ಆಸುಪಾಸಿನಲ್ಲೇ ಇದೆ. ಅಚ್ಚರಿ ಪಡಬೇಡಿ, 5 ವರ್ಷಗಳ ಹಿಂದೆ ಕಾಂಗ್ರೆಸ್ ಕಾಲದಲ್ಲೂ ಪೆಟ್ರೋಲ್ ಬೆಲೆ ಇದ್ದದ್ದು ಹೆಚ್ಚು ಕಡಿಮೆ ಇದೇ ಮಟ್ಟದಲ್ಲಿ!

ಇಂಡಿಯನ್ ಆಯಿಲ್  ಕಾರ್ಪೋರೇಷನ್ (ಐಓಸಿ) ತನ್ನ  ವೆಬ್ಸೈಟಿನಲ್ಲಿ ಈದಿನ  ದೆಹಲಿ  ಮತ್ತು ಮುಂಬಯಿ ಯಲ್ಲಿ ಪೆಟ್ರೋಲ್ಮತ್ತು ಡೀಸೆಲ್ದರಗಳು ಅನುಕ್ರಮವಾಗಿ ಲೀಟರ್ಗೆ 60 ಮತ್ತು 59 ಪೈಸೆ ಇಳಿದಿರುವುದಾಗಿ ಪ್ರಕಟಿಸಿತ್ತು.

ಅದಾಗಿ ಸ್ವಲ್ಪವೇ ಹೊತ್ತಿನ ಬಳಿಕ ಐಓಸಿ ತನ್ನ ಪ್ರಕಟಣೆಯನ್ನು ಸರಿಪಡಿಸಿ ಪೆಟ್ರೋಲ್‌ , ಡೀಸೆಲ್ದರ ಕೇವಲ 1 ಪೈಸೆ ಇಳಿದಿರುವುದಾಗಿ ಸ್ಪಷ್ಟಪಡಿಸಿತು.

ಅಂತೆಯೇ ನಾಲ್ಕು ಮೆಟ್ರೋಪಾಲಿಟನ್ನಗರಗಳಾಗಿರುವ  ದೆಹಲಿ, ಕೋಲ್ಕತ, ಮುಂಬಯಿ ಮತ್ತು ಚೆನ್ನೈನಲ್ಲಿ ಪೆಟ್ರೋಲ್ದರ ಲೀಟರಿಗೆ ಅನುಕ್ರಮವಾಗಿ 78.42, 81.05, 86.25 ಮತ್ತು 81.42 ರೂ ಇರುವುದಾಗಿ ಐಓಸಿ ಅಧಿಕೃತವಾಗಿ ತಿಳಿಸಿತು.

ಹಾಗೆಯೇ ದೆಹಲಿ, ಕೋಲ್ಕತ, ಮುಂಬಯಿ ಮತ್ತು ಚೆನ್ನೈನಲ್ಲಿ ಡೀಸೆಲ್ಲೀಟರ್ದರ ಅನುಕ್ರಮವಾಗಿ 69.30, 71.85, 73.78 ಮತ್ತು 73.17 ರೂ. ಇರುವುದಾಗಿ ಅದು ತಿಳಿಸಿತು.

ಆದರೆ ಇದಕ್ಕಿಂತಲೂ ಕುತೂಹಲಕರವಾದ ಮಾಹಿತಿ ಪ್ರಕಾರ ಐದು ವರ್ಷದ ಹಿಂದೆ ಪ್ರಧಾನಿ ಡಾ. ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ (ಯುಪಿಎ) ಸರ್ಕಾರ ಇದ್ದ 2013ನೇ ಸಾಲಿನಲ್ಲೂ ಪೆಟ್ರೋಲ್ ಬೆಲೆ ಈದಿನ ದರಕ್ಕಿಂತ ಕಡಿಮೆ ಏನೂ ಇರಲಿಲ್ಲ ಎಂಬುದು ಬೆಳಕಿಗೆ ಬಂದಿದೆ.
ಇಲ್ಲಿ ಇರುವ ಎರಡು ಚಿತ್ರಗಳು 2013ರಲ್ಲಿನ ಪೆಟ್ರೋಲ್ ಬೆಲೆಯನ್ನು ತಿಳಿಸುತ್ತವೆ. ಅದಕ್ಕೆ ಸಮರ್ಥನೆಯಾಗಿ 17 ಸೆಪ್ಟೆಂಬರ್ 2013ರ ಪೆಟ್ರೋಲ್ ಬೆಲೆಯ ನೈಜ ಬಿಲ್ಲಿನ ಚಿತ್ರವೂ ಇಲ್ಲಿದೆ. ಆದಿನ ಗ್ರಾಹಕರೊಬ್ಬರು ಪಾವತಿ ಮಾಡಿದ ಪೆಟ್ರೋಲ್ ದರ ಲೀಟರಿಗೆ 82.87 ರೂಪಾಯಿ!


ದೆಹಲಿ, ಕೋಲ್ಕತಾ, ಮುಂಬೈ, ಚೆನ್ನೈಯಲ್ಲಿ 20 ಡಿಸೆಂಬರ್ 2013ರಂದು ಇದ್ದ ಪೆಟ್ರೋಲ್ ದರ ಲೀಟರಿಗೆ ಕ್ರಮವಾಗಿ 71.51, 78.6, 78.56 ಮತ್ತು 74.71 ರೂಪಾಯಿಗಳು.

ಇಂಧನ ದರ ಏರಿಕೆ ಮನಮೋಹನ್ ಸಿಂಗ್ ಕಾಲದಲ್ಲೂ ಹೀಗೆಯೇ ಇತ್ತು, ಈಗ ನರೇಂದ್ರ ಮೋದಿ ಕಾಲದಲ್ಲೂ ಹೀಗೆಯೇ ಇದೆ. ಬಹಳ  ವ್ಯತ್ಯಾಸವೇನೂ  ಇಲ್ಲ.

Monday, May 28, 2018

ಖ್ಯಾತ ಛಾಯಾಗ್ರಾಹಕ ಕೇಶವ ವಿಟ್ಲ ಇನ್ನಿಲ್ಲ


ಖ್ಯಾತ ಛಾಯಾಗ್ರಾಹಕ ಕೇಶವ ವಿಟ್ಲ ಇನ್ನಿಲ್ಲ
ಬೆಂಗಳೂರು: ಖ್ಯಾತ ಛಾಯಾಗ್ರಾಹಕ ಕೇಶವ ವಿಟ್ಲ (56) ಅವರು 28 ಮೇ 2018ರ ಸೋಮವಾರ ಮುಂಜಾನೆ  ಮಂಗಳೂರು ವೆನ್ ಲಾಕ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ರಾಜ್ಯಪ್ರಶಸ್ತಿ ಪುರಸ್ಕೃತ ಕೇಶವ ವಿಟ್ಲ ಅವರು ಕೆಲ ಸಮಯದಿಂದ ಕಿಡ್ನಿ ತೊಂದರೆಯಿಂದ ಬಳಲುತ್ತಿದ್ದರು.
ಕಳೆದ ವರ್ಷ ಅವರು ಶ್ರಮವಹಿಸಿ ಸಿದ್ದಪಡಿಸಿದ್ದ ಕರ್ನಾಟಕದ ನೈಸರ್ಗಿಕ ಸಂಪತ್ತಿನ  ಕಾಫಿ ಟೇಬಲ್ ಪುಸ್ತಕ "ಫೆಸೆಟ್ಸ್ ಆಫ್ ಕರ್ನಾಟಕ " ಛಾಯಚಿತ್ರ ಸಂಪುಟವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ದರು. ಪುಸ್ತಕ ರಾಜ್ಯದಾದ್ಯಂತ ಭಾರೀ ಜನಮನ್ನಣೆ ಪಡೆದಿತ್ತು.
ಗ್ರಾಮೀಣ ಪ್ರದೇಶವಾದ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದಲ್ಲಿ 1961ರಲ್ಲಿ ಜನಿಸಿದ್ದ ಕೇಶವ ವಿಟ್ಲ 1984ರಲ್ಲಿ ಮುಂಗಾರು ಪತ್ರಿಕೆಯ ಮೂಲಕ ಪತ್ರಿಕಾ ಛಾಯಗ್ರಾಹಕರಾಗಿ ವೃತ್ತಿ ಜೀವನ ಆರಂಭಿಸಿದ್ದರು.
1996ರಲ್ಲಿ ಕೇಶವ ವಿಟ್ಲ ಬೆಂಗಳೂರಿನಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕಾ ಬಳಗದಲ್ಲಿ ಹಲವು ವರ್ಷಗಳ ಕಾಲ ಛಾಯಗ್ರಾಹಕರಾಗಿ ಸೇವೆ ಸಲ್ಲಿಸಿ, ತದನಂತರ ಪ್ರೀಲಾನ್ಸ್ ಪತ್ರಿಕಾ ಛಾಯಗ್ರಾಹಕರಾಗಿ ದಿ ಟೆಲಿಗ್ರಾಫ್ , ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗಳಿಗೆ ಛಾಯಚಿತ್ರಗಳನ್ನು ಪೂರೈಸಿದ್ದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತ ಸಂಘದಿಂದ ಶ್ರೇಷ್ಠ  ಸುದ್ದಿ ಛಾಯಾಗ್ರಾಹಕ ಪ್ರಶಸ್ತಿ , ಬೆಂಗಳೂರು ಪ್ರೆಸ್ ಕ್ಲಬ್ ಜೀವಮಾನ ಸಾಧನೆಗಾಗಿ ಪ್ರಶಸ್ತಿ  , ..ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ , ಬಲಿಯೇಂದ್ರ ಪುರಸ್ಕಾರ , ತುಳುನಾಡ ಸಿರಿ ಪ್ರಶಸ್ತಿ ಪುರಸ್ಕೃತರಾಗಿರುವ ಕೇಶವ ವಿಟ್ಲ ಅವರು ಹಲವು ಏಕವ್ಯಕ್ತಿ ಛಾಯಚಿತ್ರ ಪ್ರದರ್ಶನಗಳನ್ನು ಆಯೋಜಿಸಿದ್ದರು.
ಇಂದು ಮಧ್ಯಾಹ್ನ ಗಂಟೆ 2 ವೇಳೆಗೆ ವಿಟ್ಲದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.


Keshav Vittla, freelance photographer has clicked more than 1000
photos of waterfalls, dams, rivers and beaches apart from landscape pictures of
Karnataka. His pictures of waterfalls are fantastic and fascinating. Tourism Department of Karnataka has organized an exhibition of his selected pictures related to Water in Venkatappa Art Gallery at Bangalore recently. It attracted several prominent personalities too including Anil Kumble, well-known leg spinner and Captain of Indian Cricket Team.


ಕಂಡಿರಾ 'ಅಬ್ಬಿ ಅಬ್ಬೆ' ಸೊಬಗು..?

'ಅಬ್ಬಿ' ಹರವು ವಿಸ್ತಾರಗೊಂಡು, ನೆಲದ ಮೇಲೆ ಹರಿಯುತ್ತಾ ಸಾಗಿದರೆ 'ತೋಡು', 'ಹಳ್ಳ', 'ನದಿ' ಸೃಷ್ಟಿಯಾಗುತ್ತದೆ. ಒಂದೇ ಕಡೆಯಲ್ಲಿ ವಿಶಾಲವಾಗಿ ನಿಂತರೆ 'ಕೆರೆ', 'ಜಲಾಶಯ' ಆಗುತ್ತದೆ. 'ನದಿ'ಗೆ ಮನುಷ್ಯನೇ ಅಡ್ಡಗಟ್ಟೆ ಹಾಕಿದರೆ ಅದು 'ಅಣೆಕಟ್ಟು' 'ಡ್ಯಾಂ' ಎಂಬ ಹೆಸರು ಪಡೆದುಕೊಳ್ಳುತ್ತದೆ. ಜಲಾಶಯ ಬೃಹತ್ ಗಾತ್ರದ್ದಾಗಿ ಅಲೆಗಳ ಜೊತೆಗೆ ಭೋರ್ಗರೆಯತೊಡಗಿದರೆ ಅದೇ 'ಸಮುದ್ರ' ಇಲ್ಲವೇ 'ಸಾಗರ'ವಾಗುತ್ತದೆ. ಅದೇ 'ಅಬ್ಧಿ'!

ನೆತ್ರಕೆರೆ ಉದಯಶಂಕರ

'ಅಬ್ಬೆ' ಅಂದರೆ ಅಮ್ಮ. ಜನ್ಮದಾತೆ, ಮಾತೆ, ಹೆತ್ತವಳು. ಪ್ರೀತಿ, ಒಲವಿನ ಧಾರೆ ಎರೆಯುವವಳು ಆಕೆ. ಆಕೆ ಇದ್ದರೆ ಬದುಕು, ಆಕೆ ಇಲ್ಲದೇ ಇದ್ದರೆ ಜಗತ್ತಿನ ಜೀವ ಸಂಕುಲ ಇರುತ್ತಿರಲೇ ಇಲ್ಲ!

ಧುಮುಕುವ ಜಲಧಾರೆಗೂ 'ಅಬ್ಬೆ'ಗೆ ಹತ್ತಿರದ 'ಅಬ್ಬಿ' ಎಂಬ ಹೆಸರಿದೆ. 'ಅಬ್ಬಿ'ಯನ್ನು ಕಣ್ತುಂಬಿಕೊಂಡು ನೋಡುತ್ತಿದ್ದರೆ ಹೊತ್ತು ಹೋಗುವುದೇ ಗೊತ್ತಾಗುವುದಿಲ್ಲ. 'ಅಬ್ಬಿ'ಯನ್ನೂ 'ಅಬ್ಬೆ' ಎಂದರೆ ತಪ್ಪಲ್ಲ, ಏಕೆಂದರೆ ಅಬ್ಬೆ ಹೆತ್ತರೆ, ಅಬ್ಬಿ ನಮ್ಮ ದಾಹ ಇಂಗಿಸುತ್ತಾ ಪೊರೆಯುತ್ತಾಳೆ!

ಪ್ರತಿಯೊಬ್ಬರ ಮನೆಯಲ್ಲಿ ಒಬ್ಬ 'ಅಬ್ಬೆ' ಇದ್ದರೆ, ಪಶ್ಚಿಮಘಟ್ಟದಲ್ಲಿ ಸುತ್ತಾಡಿ ನೋಡಿ. ನಿಮಗೆ ಹತ್ತಾರು 'ಅಬ್ಬಿ'ಯರು ಕಾಣಸಿಗುತ್ತಾರೆ. 'ಅಬ್ಬಿ', 'ಒನಕೆ ಅಬ್ಬಿ', 'ಕುದುರೆ ಅಬ್ಬಿ','ಕೋಟಿ ಅಬ್ಬಿ', 'ಅಬ್ಬಿ ಮಠ'.....ಹೀಗೆ.

ಯಾವ 'ಅಬ್ಬಿ' ಮುಂದೆ ನಿಂತರೂ ನಿಮ್ಮನ್ನು ನೀವು ಮರೆಯುವುದು ಖಂಡಿತ.

'ಅಬ್ಬಿ'ಯರನ್ನು 'ಜಲಪಾತ'ಗಳೆಂದೂ ನಾವು ಕರೆಯುತ್ತೇವೆ. ಇಲ್ಲಿ 'ಅಬ್ಬಿ'ಯರ ಗಾತ್ರ, ವ್ಯಾಪ್ತಿ ದೊಡ್ಡದಾಗಿರುತ್ತದೆ ಅಷ್ಟೆ.

'
ಅಬ್ಬಿ' ಹರವು ವಿಸ್ತಾರಗೊಂಡು, ನೆಲದ ಮೇಲೆ ಹರಿಯುತ್ತಾ ಸಾಗಿದರೆ 'ತೋಡು', 'ಹಳ್ಳ', 'ನದಿ' ಸೃಷ್ಟಿಯಾಗುತ್ತದೆ. ಒಂದೇ ಕಡೆಯಲ್ಲಿ ವಿಶಾಲವಾಗಿ ನಿಂತರೆ 'ಕೆರೆ', 'ಜಲಾಶಯ' ಆಗುತ್ತದೆ. 'ನದಿ'ಗೆ ಮನುಷ್ಯನೇ ಅಡ್ಡಗಟ್ಟೆ ಹಾಕಿದರೆ ಅದು 'ಅಣೆಕಟ್ಟು' 'ಡ್ಯಾಂ' ಎಂಬ ಹೆಸರು ಪಡೆದುಕೊಳ್ಳುತ್ತದೆ.

ಜಲಾಶಯ ಬೃಹತ್ ಗಾತ್ರದ್ದಾಗಿ ಅಲೆಗಳ ಜೊತೆಗೆ ಭೋರ್ಗರೆಯತೊಡಗಿದರೆ ಅದೇ 'ಸಮುದ್ರ ಇಲ್ಲವೇ 'ಸಾಗರ'ವಾಗುತ್ತದೆ. ಹಾಂ! ಸಾಗರಕ್ಕೆ 'ಅಬ್ಧಿ' (ಅಬ್ಬಿಗೆ ಬಹಳ ಹತ್ತಿರದ ಶಬ್ಧ) ಎಂದೇ ಕರೆಯುತ್ತೇವಲ್ಲ!!

ಜಗತ್ತಿನ ಜೀವಸೆಲೆಯಾದ 'ಅಬ್ಬಿ' ವಿಶ್ವರೂಪ ನೋಡಿ - ಎಂತಹವರಾದರೂ ಅಚ್ಚರಿ ಪಡಲೇಬೇಕು.

ಪುಟ್ಟ 'ಒರತೆ' ರೂಪದಲ್ಲಿ ಹುಟ್ಟಿ, ವಿವಿಧ ರೂಪ ಪಡೆಯುತ್ತಾ ಸಾಗುವ ಭೂಮಿಯ ಜೀವ ದ್ರವ್ಯ 'ಜಲ' ವಿವಿಧ ರೂಪಗಳನ್ನು ನೋಡಬೇಕೆಂದರೆ ನಿಸರ್ಗದ ಮಡಿಲಲ್ಲಿ ಸುತ್ತಾಡಬೇಕು. ಅವುಗಳ ಸೊಬಗನ್ನು ಕಂಡು ಆಸ್ವಾದಿಸಬೇಕು ಎಂದರೆ ನಮ್ಮ ಒಳಗಣ್ಣನ್ನು ತೆರೆಯಬೇಕು.

ಹೀಗೆ ಒಳಗಣ್ಣು ತೆರೆದಾಗ ಪ್ರಕಟವಾದ 'ಅಬ್ಬಿ' ವಿಶ್ವರೂಪ ರ್ಶನವನ್ನು ಎಲ್ಲಾದರೂ ಒಂದೇ ಕಡೆ ನೋಡಬೇಕೆಂದು ನಿಮಗೆ ಅನ್ನಿಸಿದರೆ ಸೀದಾ ಕೇಶವ ವಿಟ್ಲ ಅವರ ಬಳಿಗೆ ಹೋಗಿ. ಅವರ ಬಳಿ ಇರುವ ಛಾಯಾಚಿತ್ರಗಳ ಆಲ್ಬಮ್ ತೆರೆದರೆ, ನೀರಿನ ವಿಶ್ವರೂಪ ದರ್ಶನವಾಗುತ್ತದೆ.

ಜಲಪಾತ ಅಂದೊಡನೆ ಜೋಗ ಜಲಪಾತ, ಗೋಕಾಕ, ಗಗನಚುಕ್ಕಿ ಭರಚುಕ್ಕಿ ಮುಂತಾದ ಕೆಲವೇ ಕೆಲವು ಜಲಧಾರೆಗಳ ಚಿತ್ರಗಳನ್ನು ಮನಸ್ಸಿಗೆ ತಂದುಕೊಳ್ಳುವ ನಮಗೆ, ಕೆರೆ, ನದಿ ಎಂದರೂ ನೆನಪಾಗುವುದು ಕೆಲವು ಪ್ರಸಿದ್ಧ ಕೆರೆಗಳು, ನದಿಗಳ ಹರಿವಿನ ಸೊಬಗು ಮಾತ್ರ.

ಕೇಶವ ವಿಟ್ಲ ಅವರ ಛಾಯಾಚಿತ್ರ ಲೋಕಕ್ಕೆ ನುಸುಳಿದರೆ... ಅಬ್ಬಿ, ಒನಕೆ ಅಬ್ಬಿ, ಕುದುರೆ ಅಬ್ಬಿ, ಕೋಟಿ ಅಬ್ಬಿ, ಅಬ್ಬಿ ಮಠ, ಮಾಣಿಕ್ಯಧಾರಾ, ಬೆಣ್ಣೆ, ಜೋಡುಪಲ, ಗೊಡಚಿನ ಮಲ್ಕಿ, ಶಿರ್ಲೆ, ಸಿರಿಮನೆ, ಅಪ್ಸರಕೊಂಡ ಮುಂತಾದ ಇನ್ನೆಷ್ಟೋ ಅರಿವಿನಲ್ಲೇ ಇರದ ಜಲಪಾತಗಳ ದರ್ಶನವಾಗುತ್ತದೆ.

ಹೊನ್ನಮ್ಮನ ಹಳ್ಳ, ಗಾಳಿಕೆರೆ (ಬಾಬಾಬುಡನ್ ಗಿರಿ), ಅಯ್ಯನಕೆರೆ, ಕವಡಿಕೆರೆ, ಕಾರ್ಗಲ್ ವಾಟರ್ ಬೆಡ್, ಹಿಡ್ಕಲ್ ಅಣೆಕಟ್ಟು, ಆಲಮಟ್ಟಿ ಅಣೆಕಟ್ಟು, ವಾಣಿವಿಲಾಸ ಸಾಗರ, ಕೃಷ್ಣರಾಜ ಸಾಗರ, ಕಾಳಿನದಿ, ನೇತ್ರಾವತಿ ನದಿ, ಮಲಪ್ರಭಾ ನದಿಗಳ ಸೌಂದರ್ಯ ಕಣ್ಣಿನ ಮುಂದೆ ಪ್ರತ್ಯಕ್ಷವಾಗುತ್ತದೆ.

ಕರ್ನಾಟಕದ ಏಕೈಕ ಕರಾವಳಿಯಾದ ಪಶ್ಚಿಮದ ಅರಬ್ಬಿ ಸಮುದ್ರ ದಂಡೆಯ ಉದ್ದಕ್ಕೂ ಇರುವ ಸುಂದರ ತಾಣಗಳಾದ ಓಂ ಬೀಚ್ ಗೋಕರ್ಣ, ಗೋಕರ್ಣ ಬೀಚ್, ಸುರತ್ಕಲ್ ಬೀಚ್, ಕುಡ್ಲೆ ಬೀಚ್, ಕಾರವಾರ ಬೀಚ್, ಉಳ್ಳಾಲ ಬೀಚ್, ಬಾಡ ಬೀಚ್ (ಕುಮಟಾ), ಪಣಂಬೂರು ಬೀಚ್, ತಿಲ್ಮತಿ ಬೀಚ್, ಮುರುಡೇಶ್ವರ ಬೀಚ್, ಸೋಮೇಶ್ವರ ಬೀಚ್, ಬೇಂಗ್ರೆ (ಮಂಗಳೂರು) ಇತ್ಯಾದಿಗಳೆಲ್ಲ ಕಣ್ಮನ ಸೆಳೆಯುತ್ತವೆ.

ಅಷ್ಟೇ ಅಲ್ಲ, ನಮ್ಮ ಚಾರಿತ್ರಿಕ ಪುಣ್ಯಕ್ಷೇತ್ರಗಳು ಕೂಡಾ ನೀರಿನ ಹಿನ್ನೆಲೆಯಲ್ಲೇ ತಮ್ಮ ಸೊಬಗನ್ನು ಅದೆಷ್ಟು ಹೆಚ್ಚಿಸಿಕೊಂಡಿವೆ ಎಂಬುದರ ಅರಿವಾಗುತ್ತದೆ. ಕೂಡಲ ಸಂಗಮ, ಭಾಗಮಂಡಲ, ಸಹಸ್ರಲಿಂಗ ಮತ್ತಿತರ ಕ್ಷೇತ್ರಗಳ ಆಕರ್ಷಣೆಯ ಹಿಂದಿನ 'ಜಲ' ವಿರಾಟ್ ದರ್ಶನವಾಗುತ್ತದೆ.

ಕಂಬಳದಂತಹ ಸುಂದರ ಸಾಹಸಿ ಜಲಕ್ರೀಡೆಗಳ ಪರಿಚಯವೂ ಆಗುತ್ತದೆ.

ಕೇಶವ ವಿಟ್ಲ ಅವರ 'ಕ್ಯಾಮರಾ' ಚಳಕ ಇಷ್ಟಕ್ಕೇ ನಿಲ್ಲುವುದಿಲ್ಲ. ಕರ್ನಾಟಕದ ಸುಂದರ ನಿಸರ್ಗ ತಾಣಗಳ ಸೊಬಗಿನ ಸಾಕಾರವನ್ನೂ ಅದು ಮಾಡಿದೆ. ಇಂತಹ ಸಾವಿರಕ್ಕೂ ಹೆಚ್ಚು ಛಾಯಾಚಿತ್ರಗಳು ಈಗ ವಿಟ್ಲ 'ಬತ್ತಳಿಕೆ'ಯಲ್ಲಿ ಇವೆ.!

24
ವರ್ಷಗಳ ಹಿಂದೆ, 1984ರಲ್ಲಿ ನಾನು ಮಂಗಳೂರಿನಲ್ಲಿ 'ಮುಂಗಾರು' ಪತ್ರಿಕೆಯಲ್ಲಿ ಕೆಲಸ ಮಾಡುತ್ತಿದ್ದಾಗ ಪತ್ರಿಕೆ ಸೇರಿ ನನ್ನೊಂದಿಗೆ ಮಂಗಳೂರಿನ ಬೀದಿಗಳು, ಗಲ್ಲಿಗಳನ್ನು ಅಡ್ಡಾಡಿದ್ದ ಕೇಶವ ವಿಟ್ಲ, ನಂತರ 'ಕನ್ನಡ ಪ್ರಭ'ದಲ್ಲಿ ಪತ್ರಿಕಾ ಛಾಯಾಗ್ರಾಹಕರಾಗಿ ತಮ್ಮ ಕ್ಯಾಮರಾದ ಒಳಗಣ್ಣಿನ ಹೊಳಪು ಹೆಚ್ಚಿಸಿಕೊಂಡವರು.

ಮುಂದೆ ಹವ್ಯಾಸಿ ಛಾಯಾಗ್ರಾಹಕರಾಗಿ 'ಉದಯವಾಣಿ' 'ರೂಪತಾರಾ'ಗಳಿಗೆ ಕಾಣಿಕೆ ಸಲ್ಲಿಸಿದ ಅವರು, ಈಗ 'ಟೆಲಿಗ್ರಾಫ್' ಪತ್ರಿಕೆಗೆ ಹವ್ಯಾಸಿ ಛಾಯಾಗ್ರಾಹಕ. ವಿಟ್ಲ ಅವರ ಛಾಯಾಚಿತ್ರ ಪ್ರಪಂಚಕ್ಕೆ ಇಣುಕಿದರೆ ಅವರು ನಿಸರ್ಗದ ಮಡಿಲನ್ನು ನೋಡುತ್ತಾ ಬೆಳೆದ ಪರಿ ಅಚ್ಚರಿ ಮೂಡಿಸುತ್ತದೆ.

ಖುಷಿಯ ಸಂಗತಿ ಎಂದರೆ ರ್ನಾಟಕ ಪ್ರವಾಸೋದ್ಯಮ ಇಲಾಖೆ ಕೇಶವ ವಿಟ್ಲ ಅವರ ಸಾಹಸವನ್ನು ಗುರುತಿಸಿದೆ. ಬೆಂಗಳೂರಿನ ವೆಂಕಟಪ್ಪ ಕಲಾಗ್ಯಾಲರಿಯಲ್ಲಿ ಅದು ಇತ್ತೀಚೆಗೆ ವಿಟ್ಲ ಅವರ 'ಜಲ ವಿನ್ಯಾಸ'ಗಳ ಸುಂದರ ಪ್ರದರ್ಶನವನ್ನು ಏರ್ಪಡಿಸಿತ್ತು. ಭಾರತದ ಕ್ರಿಕೆಟ್ ತಂಡದ ನಾಯಕ, ವಿಶ್ವವಿಖ್ಯಾತ ಲೆಗ್ ಸ್ಪಿನ್ನರ್ ಅನಿಲ್ ಕುಂಬಳೆಯಂತಹವರೂ ಸೇರಿದಂತೆ ಸಹಸ್ರಾರು ಮಂದಿ ಪ್ರದರ್ಶನ ವೀಕ್ಷಿಸಿ ಕರ್ನಾಟಕದ ನಿಸರ್ಗ ಸೊಬಗನ್ನು ಕಣ್ತುಂಬಿಕೊಂಡರು..

ಕೇಶವ ವಿಟ್ಲ ಅವರ ನೀರಿನ ಸೊಬಗಿನ ಚಿತ್ರಗಳ ಪ್ರದರ್ಶನ ಮಾಡಿದರಷ್ಟೇ ಸಾಕೆ ಎಂಬ ಪ್ರಶ್ನೆ ನಮ್ಮನ್ನು 'ಕಾಡು'ತ್ತದೆ. ಏಕೆಂದರೆ 'ಕಾಡು'ನಾಶದಿಂದ ಇಂತಹ ಸುಂದರ ಅಬ್ಬಿ, ಜಲಪಾತಗಳು ಕಣ್ಮರೆಯಾಗುತ್ತಿವೆ. ನದಿಗಳು ಒಣಗುತ್ತಿವೆ. ಕಲುಷಿತ ನೀರು ಮಿಶ್ರಗೊಂಡು ನದಿ, ತೊರೆಗಳೂ ಸೊಬಗನ್ನು ಕಳೆದುಕೊಳ್ಳುತ್ತಿವೆ.

ಕಾಡುನಾಶಕ್ಕೆ ಅಂಕುಶ, ಜಲ ಮಾಲಿನ್ಯಕ್ಕೆ ಕಡಿವಾಣ ಹಾಕುವುದರ ಜೊತೆಗೆ ನೀರಿನ ಮೂಲವಾದ 'ಒರತೆ' ಹೆಚ್ಚುವಂತಾಗಲು ಎಲ್ಲೆಡೆಯಲ್ಲಿ ನೀರಿಂಗಿಸುವ ಭಗೀರಥ ಪ್ರಯತ್ನಕ್ಕೆ ಸಕಲರೂ ಕೈಜೋಡಿಸದೇ ಇದ್ದರೆ ಸೊಬಗನ್ನು ಮುಂದಿನ ತಲೆಮಾರಿಗೆ ಉಳಿಸಿಕೊಡುವುದು ಕಷ್ಟವಾಗಬಹುದು.

ಕೇಶವ ವಿಟ್ಲ ಅವರಿಗೆ ಅಭಿನಂದನೆ ಹೇಳುವುದರೊಂದಿಗೆ, 'ಅಬ್ಬಿ ಅಬ್ಬೆ' ರಕ್ಷಣೆಗೆ ಸಿದ್ಧರಾಗೋಣವೇ?
Posted 6th March 2008 by PARYAYA


ಕೇಶವ ವಿಟ್ಲ ಅವರ ಆತ್ಮಕ್ಕೆ ಚಿರಶಾಂತಿ ಲಭಿಸಲಿ ಎಂಬುದುಪರ್ಯಾಯ ಪ್ರಾರ್ಥನೆ.