Tuesday, November 13, 2018

ರಾಜಪಕ್ಸೆ ವಿರುದ್ಧ ಶ್ರೀಲಂಕಾ ಸಂಸತ್ ಅವಿಶ್ವಾಸ ನಿರ್ಣಯ

ರಾಜಪಕ್ಸೆ ವಿರುದ್ಧ ಶ್ರೀಲಂಕಾ ಸಂಸತ್ ಅವಿಶ್ವಾಸ ನಿರ್ಣಯ

ಕೊಲಂಬೋ:  ಶ್ರೀಲಂಕಾ ಸಂಸತ್ತನ್ನು ವಿಸರ್ಜಿಸಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಹೊರಡಿಸಿದ್ದ ಆದೇಶವನ್ನು ಸುಪ್ರೀಂಕೋರ್ಟ್ ರದ್ದು ಪಡಿಸಿದ ಒಂದು ದಿನದ ಬಳಿಕ, 2018 ನವೆಂಬರ್ 14 ಬುಧವಾರ ಶ್ರೀಲಂಕಾ ಸಂಸತ್ತು ಪ್ರಧಾನಿ ಮಹಿಂದ ರಾಜಪಕ್ಸೆ ಅವರ ವಿರುದ್ಧ  ಅವಿಶ್ವಾಸ ನಿರ್ಣಯವನ್ನು ಅಂಗೀಕರಿಸಿತು.

225 ಸದಸ್ಯಬಲದ ಸಂಸತ್ತಿನಲ್ಲಿ ಬಹುಮತದ ಸದಸ್ಯರು ರಾಜಪಕ್ಸೆ ವಿರುದ್ಧದ  ಅವಿಶ್ವಾಸ ನಿರ್ಣಯವನ್ನು ಬೆಂಬಲಿಸಿದ್ದಾರೆ ಎಂದು ಸ್ಪೀಕರ್ ಕರು ಜಯಸೂರ್ಯ  ಅವರು ಸದನದಲ್ಲಿ ಘೋಷಿಸಿದರು. ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಅಕ್ಟೋಬರ್ 26ರಂದು ದಿಢೀರನೆ ಪ್ರಧಾನಿ ರಾನಿಲ್  ವಿಕ್ರಮಸಿಂಘೆ ಅವರನ್ನು ವಜಾ ಮಾಡಿ, ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಿದ್ದರು.

ಸಂಸತ್ ನಿರ್ಣಯದ ಪರಿಣಾಮವಾಗಿ ರಾನಿಲ್ ವಿಕ್ರಮ ಸಿಂಘೆ ಅವರ ಪ್ರಧಾನಿ ಪದದ ಹಾದಿಯೇನೂ ಸುಗಮಗೊಂಡಿಲ್ಲ. ಮುಂದಿನ ಪ್ರಧಾನಿಯ ನೇಮಕಾತಿಯ ಅಧಿಕಾರ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಕೈಯಲ್ಲೇ ಇರುವುದರಿಂದ ಶ್ರೀಲಂಕೆಯ ಸಾಂವಿಧಾನಿಕ ಬಿಕ್ಕಟ್ಟು ತತ್ ಕ್ಷಣ ಬಗೆ ಹರಿಯಿತು ಎನ್ನಲಾಗದು ಎಂದು ವರದಿಗಳು ಹೇಳಿವೆ.

ಶ್ರೀಲಂಕಾ ಸಂಸತ್ತನ್ನು ವಿಸರ್ಜಿಸಿ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರು ಹೊರಡಿಸಿದ್ದ ಆದೇಶವನ್ನು 13 ನವೆಂಬರ್ 2018 ಮಂಗಳವಾರ ರದ್ದು ಪಡಿಸಿದ ಶ್ರೀಲಂಕಾ ಸುಪ್ರೀಂಕೋರ್ಟ್ ಮುಂದಿನ ವರ್ಷ ನಡೆಸಲು ಘೋಷಿಸಲಾಗಿದ್ದ ದಿಢೀರ್ ಚುನಾವಣೆಯ ಸಿದ್ಧತೆಗಳನ್ನು ಸ್ಥಗಿತಗೊಳಿಸಲು ಆದೇಶ ನೀಡಿತ್ತು.
ಅಧ್ಯಕ್ಷ ಸಿರಿಸೇನಾ ಅವರು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ಅಕ್ಟೋಬರ್ ೨೬ರಂದು ವಜಾಗೊಳಿಸಿ, ಹಿಂದಿನ ಬಲಾಢ್ಯ ಅಧ್ಯಕ್ಷ ಮಹಿಂದ ರಾಜಪಕ್ಸೆ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಿದಂದಿನಿಂದ ಹಿಂದೂ ಮಹಾಸಾಗರದಲ್ಲಿನ  ದ್ವೀಪರಾಷ್ಟ್ರವು ಸಾಂವಿಧಾನಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದು, ಘಟನಾವಳಿಗಳು ದಿನಕ್ಕೊಂದು ತಿರುವು ಪಡೆಯುತ್ತಿವೆ.

ಸಂಸತ್ ವಿಸರ್ಜನೆ ವಿರುದ್ಧ ರಾನಿಲ್ ವಿಕ್ರಮಸಿಂಘೆ ಅವರ ಪಕ್ಷ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ನಳಿನ್ ಪೆರೇರಾ ನೇತ್ವತ್ವದ ತ್ರಿಸದಸ್ಯ ಪೀಠವು ಕಿಕ್ಕಿರಿದ ನ್ಯಾಯಾಲಯದಲ್ಲಿ ತನ್ನ ತೀರ್ಪನ್ನು ಪ್ರಕಟಿಸಿತು. ಅರ್ಜಿಯ ವಿಚಾರಣೆ ವೇಳೆಯಲ್ಲಿ ನ್ಯಾಯಾಲಯಕ್ಕೆ ನೂರಾರು ಮಂದಿ ಸಶಸ್ತ್ರ ಪೊಲೀಸ್ ಮತ್ತು ಕಮಾಂಡೊಗಳ ಬಿಗಿ ಭದ್ರತೆ ಒದಗಿಸಲಾಗಿತ್ತು.

ಸಂಸತ್ತನ್ನು ವಿಸರ್ಜಿಸಿ, ಜನವರಿ ೫ರಂದು ಚುನಾವಣೆ ಘೋಷಿಸಿ ಸಿರಿಸೇನಾ ಅವರು ಶುಕ್ರವಾರ ಹೊರಡಿಸಿದ್ದ ಅಧಿಸೂಚನೆಯನ್ನು ಸುಪ್ರೀಂಕೋರ್ಟ್ ರದ್ದು ಪಡಿಸಿತು.

ಸುಪ್ರೀಂಕೋರ್ಟ್ ತೀರ್ಪಿನ ಪರಿಣಾಮವಾಗಿ, ೨೨೫ ಸದಸ್ಯಬಲದ ಸಂಸತ್ತಿನಲ್ಲಿ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರನ್ನು ಅಧಿಕಾರದಿಂದ ವಜಾಗೊಳಿಸಿ, ಸಿರಿಸೇನಾ ಅವರು ನೇಮಿಸಿದ ಅಭ್ಯರ್ಥಿ ಮಹಿಂದ ರಾಜಪಕ್ಸೆ ಅವರಿಗೆ ಬಹುಮತ ಇದೆಯೇ ಎಂಬ ಪರೀಕ್ಷೆಗೆ  ದಾರಿ ಸುಗಮಗೊಂಡಿತ್ತು. 
ಜನವರಿ ೫ಕ್ಕೆ ಸಾರ್ವತ್ರಿಕ ಚುನಾವಣೆ ನಿಗದಿಗೊಳಿಸಿ ಆದೇಶ ಹೊರಡಿಸಿದ್ದ ಅಧ್ಯಕ್ಷ ಸಿರಿಸೇನಾ ಆದೇಶದಂತೆ ಡಿಢೀರ್ ಚುನಾವಣೆಗೆ ಆರಂಭಿಸಿದ ಸಿದ್ಧತೆಗಳನ್ನು ಸ್ಥಗಿತಗೊಳಿಸುವಂತೆ ಸ್ವಾಯತ್ತ ಚುನಾವಣಾ ಆಯೋಗಕ್ಕೂ ಸುಪ್ರೀಂಕೋರ್ಟ್ ಆದೇಶ ನೀಡಿತ್ತು.

No comments:

Post a Comment