ನಾನು ಮೆಚ್ಚಿದ ವಾಟ್ಸಪ್

Friday, February 15, 2019

ಇಂದಿನ ಇತಿಹಾಸ History Today ಫೆಬ್ರುವರಿ 15

ಇಂದಿನ ಇತಿಹಾಸ History Today ಫೆಬ್ರುವರಿ 15
2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಕೇಂದ್ರೀಯು ಮೀಸಲು ಪೊಲೀಸ್ ಪಡೆಯ (ಸಿಆರ್ಪಿಎಫ್) ಯೋಧರ ಮೇಲೆ ಹಿಂದಿನ ದಿನ ನಡೆದ ಉಗ್ರಗಾಮಿಗಳ ಪೈಶಾಚಿಕ ದಾಳಿಗೆ ಪಾಕಿಸ್ತಾನವು ಭಾರೀ ಬೆಲೆ ತೆರಬೇಕಾಗುತ್ತದೆ ಮತ್ತು  ಭಯೋತ್ಪಾದಕರ ಜೊತೆ ವ್ಯವಹರಿಸಲು ಸೇನಾ ಪಡೆಗಳಿಗೆ ಮುಕ್ತ ಸ್ವಾತಂತ್ರ್ಯ ನೀಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಘೋಷಿಸಿದರು. ಇದೇ ವೇಳೆಗೆ ಪಾಕಿಸ್ತಾನಕ್ಕೆ ನೀಡಲಾಗಿದ್ದಅತ್ಯಂತ ಆಪ್ತ ರಾಷ್ಟ್ರ (ಮೋಸ್ಟ್ ಫೇವರ್ಡ್ ನೇಷನ್- ಎಂಎಫ್ಎನ್) ಸ್ಥಾನಮಾನವನ್ನು ಭಾರತ ರದ್ದು ಪಡಿಸಿತು. ಇನ್ನೊಂದೆಡೆಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿಯವರು ಕ್ಷಣದಲ್ಲಿ ವಿರೋಧ ಪಕ್ಷಗಳು ಸರ್ಕಾರ ಮತ್ತು ಸೇನೆಯ ಜೊತೆಗೆ ನಿಲ್ಲುತ್ತವೆ. ನಮ್ಮನ್ನು ವಿಭಜಿಸುವುದು ಉಗ್ರರ ದಾಳಿಯ ಉದ್ದೇಶವಾಗಿದ್ದು ಅದು ಈಡೇರುವುದಿಲ್ಲ, ನಮ್ಮನ್ನು ಯಾರೂ ಒಡೆಯಲು ಸಾಧ್ಯವಿಲ್ಲ ಎಂಬುದಾಗಿ ಘೋಷಿಸಿದರುಪುಲ್ವಾಮದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ನಡೆಸಿದಂತಹ ದಾಳಿಗಳನ್ನು ಸಂಘಟಿಸುವ ಮೂಲಕ ಭಾರತವನ್ನು ದುರ್ಬಲಗೊಳಿಸಲು ಸಾಧ್ಯವಿಲ್ಲ ಎಂಬುದಾಗಿ ಎಚ್ಚರಿಕೆ ನೀಡಿದ ಪ್ರಧಾನಿ, ’ ದಾಳಿಗೆ ಕಾರಣರಾದವರುಭಾರಿ ಬೆಲೆ ತೆರಬೇಕಾಗುತ್ತದೆ. ಭಯೋತ್ಪಾದಕರ ಜೊತೆ ವ್ಯವಹರಿಸಲು ಸೇನೆಗೆ ಮುಕ್ತ ಸ್ವಾತಂತ್ರ್ಯ ನೀಡಲಾಗಿದೆಎಂದು ಹೇಳಿದರು. ದೆಹಲಿ ಮತ್ತು ವಾರಾಣಸಿ ಮಧ್ಯೆ ಸಂಚರಿಸಲಿರುವ ಭಾರತದ ಅತಿವೇಗದವಂದೇ ಭಾರತ ಎಕ್ಸ್ಪ್ರೆಸ್ ರೈಲುಗಾಡಿಗೆ ಹಸಿರು ನಿಶಾನೆ ತೋರಿದ  ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿಜನರ ರಕ್ತ ಕುದಿಯುತ್ತಿದೆ. ಭಯೋತ್ಪಾದಕ ಕೃತ್ಯದ ಹಿಂದಿನ ಶಕ್ತಿಗಳನ್ನು ಖಂಡಿತವಾಗಿ ಶಿಕ್ಷಿಸಲಾಗುವುದು ಎಂದು ಹೇಳಿದರು.  ‘ಭದ್ರತಾ ಪಡೆಗಳಿಗೆ ಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ. ಜನರ ರಕ್ತ ಕುದಿಯುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಏಕಾಂಗಿಯಾಗಿರುವ ನಮ್ಮ ನೆರೆರಾಷ್ಟ್ರವು ಇಂತಹ ಭಯೋತ್ಪಾದಕ ದಾಳಿಗಳ ಮೂಲಕ ನಮ್ಮನ್ನು ಅಸ್ಥಿರಗೊಳಿಸಬಹುದು ಎಂದು ಭಾವಿಸಿದೆ. ಆದರೆ ಅವರ ಯೋಜನೆಗಳು ಸಫಲವಾಗುವುದಿಲ್ಲ ಎಂದು ಮೋದಿ ನುಡಿದರು. ಶ್ರೀನಗರ ಹೊರಭಾಗದಲ್ಲಿ ಸ್ಫೋಟಕಗಳನ್ನು ತುಂಬಿದ್ದ ಟ್ರಕ್ ಒಂದನ್ನು ವೇಗವಾಗಿ ಓಡಿಸುತ್ತಾ ಬಂದು ಸಿಆರ್ಪಿಎಫ್ ಬೆಂಗಾವಲು ವಾಹನಕ್ಕೆ ಡಿಕ್ಕಿ ಹೊಡೆಯುವ ಮೂಲಕ ದಾಳಿ ನಡೆಸಿದ್ದ ಭಯೋತ್ಪಾದಕ ದಾಳಿಯಲ್ಲಿ ೪೦ ಮಂದಿ ಯೋಧರು ಹುತಾತ್ಮರಾಗಿದ್ದಾರೆ ಎಂದು ಸಿಆರ್ಪಿಎಫ್ ದೃಢ ಪಡಿಸಿದೆ. ಪ್ರಾಥಮಿಕ ವರದಿಗಳು ದಾಳಿಯಲ್ಲಿ ೪೪ ಯೋಧರು ಹುತಾತ್ಮರಾಗಿರುವ ಶಂಕೆ ಇದೆ ಎಂದು ತಿಳಿಸಿದ್ದವು. ಕಾಶ್ಮೀರ ಕಣಿವೆಯಲ್ಲಿ ಕಳೆದ ೨೦ ವರ್ಷಗಳ ಅವಧಿಯಲ್ಲೇ ಅತ್ಯಂತ ಭೀಕರ ಸ್ವರೂಪದ ಉಗ್ರಗಾಮಿ ದಾಳಿ ಇದಾಗಿತ್ತು. ಪುಲ್ವಾಮ ದಾಳಿಯಲ್ಲಿ ಹುತಾತ್ಮರಾದ ಯೋಧರ ಕುಟುಂಬಗಳಿಗೆ ನನ್ನ ಸಂತಾಪಗಳು. ಭಯೋತ್ಪಾದಕ ದಾಳಿಯ ಹಿಂದಿದ್ದವರು ಭಾರೀ ಬೆಲೆ ತೆರುತ್ತಾರೆ ಎಂದು ಮೋದಿ ನುಡಿದರು.  ‘ಪುಲ್ವಾಮ ಉಗ್ರಗಾಮಿ ದಾಳಿಯನ್ನು ಖಂಡಿಸಿದ ಎಲ್ಲ ರಾಷ್ಟ್ರಗಳಿಗೂ ನಾನು ಆಭಾರಿಯಾಗಿದ್ದೇನೆ ಮತ್ತು ಭಯೋತ್ಪಾದನೆಯ ದಮನಕ್ಕಾಗಿ ಒಂದಾಗುವಂತೆ  ಅವರನ್ನು ಒತ್ತಾಯಿಸುತ್ತೇನೆ. ಉಗ್ರಗಾಮಿ ಕೃತ್ಯದ ಹಿಂದಿನ ಶಕ್ತಿಗಳು ಮತ್ತು ಇದಕ್ಕೆ ಕಾರಣರಾದವರು ಖಂಡಿತವಾಗಿ ಶಿಕ್ಷಿತರಾಗುತ್ತಾರೆ ಎಂದು ಅವರು ಹೇಳಿದರು. ದುರಂತವನ್ನು ರಾಜಕೀಯಗೊಳಿಸಬೇಡಿ ಎಂಬುದಾಗಿ ತಮ್ಮ ಟೀಕಾಕಾರರಿಗೆ ಮನವಿಮಾಡಿದ ಮೋದಿಭಯೋತ್ಪಾದಕ ದಾಳಿಯು ರಾಷ್ಟ್ರವನ್ನು ಭಾವುಕಗೊಳಿಸಿದೆ. ನಮ್ಮನ್ನು ಟೀಕಿಸುವವರ ಭಾವನೆಗಳನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಅದರೆ ಇದು ಭಾವನಾತ್ಮಕ  ಕ್ಷಣ. ಆದ್ದರಿಂದ ರಾಜಕೀಯಗೊಳಿಸುವಿಕೆಯಿಂದ ದೂರವಿರಿ ಎಂದು ಹೇಳಿದರು.  ರಾಹುಲ್ ಗಾಂಧಿ ಬೆಂಬಲ: ಪ್ರಧಾನಿ ಮೋದಿ ಅವರ ಭಾಷಣದ ಕೆಲವೇ ನಿಮಿಷಗಳಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಂಪೂರ್ಣ ವಿರೋಧ ಪಕ್ಷ ಮತ್ತು ರಾಷ್ಟ್ರವು ಸರ್ಕಾರ ಮತ್ತು ಸೇನೆಯ ಜೊತೆಗೆ ನಿಲ್ಲುತ್ತದೆ ಎಂದು ಘೋಷಿಸಿದರು.  ‘ಭಯೋತ್ಪಾದನೆಯ ಗುರಿ ರಾಷ್ಟ್ರದ ವಿಭಜನೆ. ಯಾರೇ ವ್ಯಕ್ತಿ ರಾಷ್ಟ್ರವನ್ನು ವಿಭಜಿಸಲು ಸಾಧ್ಯವಿಲ್ಲ. ಇಡೀ ವಿರೋಧ ಪಕ್ಷವು ಭದ್ರತಾ ಪಡೆಗಳು ಮತ್ತು ಸರ್ಕಾರದ ಜೊತೆಗೆ ಒಂದಾಗಿ ನಿಲ್ಲುತ್ತದೆ ಎಂದು ಅವರು ಹೇಳಿದರು.  ‘ ದಾಳಿಯು ಭಾರತೀಯರ ಪಾಲಿಗೆ ಅತ್ಯಂತ ಮಹತ್ವದ್ದು ಹಾಗೂ ಮೌಲ್ಯಯುತವಾದದ್ದು ಎಂದು ಕಾಂಗ್ರೆಸ್ ಅಧ್ಯಕ್ಷರು ನುಡಿದರು.  ‘ಇದು ಶೋಕಾಚರಣೆ ಮತ್ತು ದುಃಖದ ಸಮಯ. ನಾವು ಭಾರತ ಸರ್ಕಾರ ಮತ್ತು ಸೇನಾ ಪಡೆಯನ್ನು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಕಾಂಗ್ರೆಸ್ ಪಕ್ಷವು ಮುಂದಿನ ಕೆಲವು ದಿನಗಳವರೆಗೆ ಬೇರೆ ಯಾವುದೇ ವಿಷಯವನ್ನೂ ಚರ್ಚಿಸುವುದಿಲ್ಲ ಎಂದು ರಾಹುಲ್ ಗಾಂಧಿ ಹೇಳಿದರು. ಬೇರೆ ಯಾವುದೇ ವಿಷಯದ ಚರ್ಚೆಗೆ ಸ್ಪಷ್ಟವಾಗಿ ನಿರಾಕರಿಸಿದ ರಾಹುಲ್ ಗಾಂದಿಇದು ಶೋಕದ ಸಮಯ ಮತ್ತು ಹುತಾತ್ಮ ಯೋಧರ ಕುಟುಂಬಗಳ ಜೊತೆ ನಿಲ್ಲುವ ಸಮಯ ಎಂದು ಪುನರುಚ್ಚರಿಸಿದರುಎಷ್ಟೇ ದೊಡ್ಡ ಸಿಟ್ಟು ಕೂಡಾ ರಾಷ್ಟ್ರವು ಹುಟ್ಟು ಹಾಕಿರುವ ಪ್ರೇಮ ಮತ್ತು ಅನುರಾಗಕ್ಕೆ ಧಕ್ಕೆ ಉಂಟು ಮಾಡಲು ಸಾಧ್ಯವಿಲ್ಲ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹೇಳಿದರು. ಭಯೋತ್ಪಾದನೆಯ ಹಾವಳಿಯ ಜೊತೆಗೆ ವ್ಯವಹರಿಸುವಲ್ಲಿ ರಾಷ್ಟ್ರವು ಒಂದಾಗಿದೆ. ಭಯೋತ್ಪಾದನೆಯು ಒಂದು ಪೀಡೆಯಾಗಿದೆ. ಅದನ್ನು ವಿರೋಧಿಸುವಲ್ಲಿ ನಾವು ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಅವರು ನುಡಿದರು. ಪಾಕಿಸ್ತಾನದ ಆಪ್ರರಾಷ್ಟ್ರ ಸ್ಥಾನಮಾನ ರದ್ದು: ಇದಕ್ಕೆ ಮುನ್ನ  ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸಭೆ ಸೇರಿದ್ದ ಭದ್ರತೆಗೆ ಸಂಬಂಧಿಸಿದ ಉನ್ನತಾಧಿಕಾರ ಸಂಪುಟ ಸಮಿತಿಯು (ಸಿಸಿಎಸ್) ಪಾಕಿಸ್ತಾನಕ್ಕೆ ನೀಡಲಾಗಿದ್ದಅತ್ಯಂತ ಆಪ್ತ ರಾಷ್ಟ (ಮೋಸ್ಟ್ ಫೇವರ್ಡ್ ನೇಷನ್- ಎಂಎಫ್ ಎನ್) ಸ್ಥಾನಮಾನವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿತು ಮತ್ತು ದಾಳಿಗಳ ಹಿನ್ನೆಲೆಯಲ್ಲಿ ಪಾಕಿಸ್ತಾನವನ್ನು ಅಂತಾರಾಷ್ಟ್ರೀಯು ಮಟ್ಟದಲ್ಲಿ ಏಕಾಂಗಿಯನ್ನಾಗಿಸುವ  ಯೋಜನೆ ರೂಪಿಸಲು ನಿರ್ಧರಿಸಿತು. ಸಭೆಯ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ವಿತ್ತ ಸಚಿವ ಅರುಣ್ ಜೇಟ್ಲಿ ಅವರುಭಾರತವು ಪಾಕಿಸ್ತಾನಕ್ಕೆ ನೀಡಲಾಗಿದ್ದಅತ್ಯಂತ ಆಪ್ತ ರಾಷ್ಟ್ರ ಸ್ಥಾನಮಾನವನ್ನು ಹಿಂತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ಸಿಸಿಎಸ್ ಸಭೆಯ ಬಳಿಕ ಕರೆಯಲಾದ ಅಪರೂಪದ ಮಾಧ್ಯಮಗೋಷ್ಠಿಯಲ್ಲಿ ಅರುಣ್ ಜೇಟ್ಲಿಯವರುಪಾಕಿಸ್ತಾನಕ್ಕೆ ನೀಡಲಾಗಿದ್ದ ಅತ್ಯಂತ ಆಪ್ತ ರಾಷ್ಟ್ರ್ರ ಸ್ಥಾನಮಾನವನ್ನು ಹಿಂತೆಗೆದುಕೊಳ್ಳಲಾಗಿದೆ. ವಾಣಿಜ್ಯ ಸಚಿವಾಲಯವು ಇದಕ್ಕೆ ಸಂಬಂಧಿಸಿದ ಅಧಿಸೂಚನೆ ಹೊರಡಿಸಲಿದೆ ಎಂದು ಹೇಳಿದರು. ೧೯೯೬ರಲ್ಲಿ, ಅಂತಾರಾಷ್ಟ್ರೀಯ ವ್ಯಾಪಾರ ವೃದ್ಧಿಗಾಗಿ ವಿಶ್ವ ವ್ಯಾಪಾರ ಸಂಘಟನೆಯನ್ನು (ಡಬ್ಲ್ಯೂಟಿಒ) ರಚಿಸಿದ ಬಳಿಕ ಭಾರತವು ಪಾಕಿಸ್ತಾನಕ್ಕೆ ಅತ್ಯಂತ ಆಪ್ತರಾಷ್ಟ್ರ ಸ್ಥಾನಮಾನ ನೀಡಿತ್ತು೧೯೯೯ರ ಕಾರ್ಗಿಲ್ ಯುದ್ಧದ ವೇಳೆಯಲ್ಲಿ ಅಥವಾ ೨೦೦೩ರ ಸಂಸತ್ ಮೇಲಿನ ದಾಳಿ, ೨೦೦೮ರಲ್ಲಿ ೧೬೦ ಜನರನ್ನು ಬಲಿತೆಗೆದುಕೊಂಡ ಮುಂಬೈ ಮೇಲಿನ ಭಯೋತ್ಪಾದಕ ದಾಳಿ, ಉರಿ ಸೇನಾ ನೆಲೆ ಮೇಲಿನ ದಾಳಿ ಬಳಿಕ ಕೂಡಾ ಪಾಕಿಸ್ತಾನಕ್ಕೆ ನೀಡಲಾಗಿದ್ದ ಅತ್ಯಂತ ಆಪ್ತರಾಷ್ಟ್ರ ಸ್ಥಾನಮಾನವನ್ನು ರದ್ದು ಪಡಿಸಿರಲಿಲ್ಲ. ೨೦೧೬ರಲ್ಲಿ ಉರಿ ದಾಳಿಯ ಬಳಿಕ ಭಾರತೀಯ ಸೇನೆಯ ವಿಶೇಷ ಪಡೆ ನೈಜ ನಿಯಂತ್ರಣ ರೇಖೆಯನ್ನು (ಎಲ್ ಒಸಿ) ದಾಟಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭಯೋತ್ಪಾದಕ ನೆಲೆಗಳ ಮೇಲೆ ದಾಳಿ ನಡೆಸಿ ಅವುಗಳನ್ನು ಪುಡಿಗಟ್ಟಿತ್ತು. ಭಾರತವು ೧೯೮೬ರಿಂದ ನನೆಗುದಿಯಲ್ಲಿ ಇರುವ ಅಂತಾರಾಷ್ಟ್ರೀಯ ಭಯೋತ್ಪಾದನೆ ಕುರಿತ ಸಮಾವೇಶದ ಬಗೆಗಿನ ಕರಡನ್ನು ತ್ವರಿತಗೊಳಿಸುವ ಬಗ್ಗೆ ವಿಶ್ವಸಂಸ್ಥೆಗೆ ಒತ್ತಡ ಹಾಕಲಿದೆ ಎಂದು ಜೇಟ್ಲಿ ನುಡಿದರು. ಭಾರತವು ೧೯೮೬ರಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಜೀವ್ ಗಾಂಧಿ ಅವರು ಪ್ರಧಾನಿಯಾಗಿದ್ದಾಗ ಅಂತಾರಾಷ್ಟ್ರೀಯ ಭಯೋತ್ಪಾದನೆ ಬಗ್ಗೆ ಸಮಗ್ರ ಸಮಾವೇಶದ ಕರಡನ್ನು ಮಂಡಿಸಿತ್ತು. ಆದರೆ ಭಯೋತ್ಪಾದನೆ ಕುರಿತ ವಿವರಣೆ ಬಗ್ಗೆ ಒಮ್ಮತ ಇರದ ಕಾರಣ ಕಳೆದ ೩೩ ವರ್ಷಗಳಿಂದ ಅದನ್ನು ಅನುಷ್ಠಾನಕ್ಕೆ ತರಲಾಗಿಲ್ಲ. ಇದರ ಅನುಷ್ಠಾನ ಮತ್ತು ಭಯೋತ್ಪಾದನೆ ನಿಗ್ರಹ ಕ್ರಮವನ್ನು ಆದಷ್ಟೂ ತ್ವರಿತವಾಗಿ ಅಂಗೀಕರಿಸುವ ನಿಟ್ಟಿನಲ್ಲಿ ಎಲ್ಲ ರಾಷ್ಟ್ರಗಳ ಜೊತೆ ಭಾರತ ಸಮಾಲೋಚಿಸಲಿದೆ ಎಂದು ಜೇಟ್ಲಿ ನುಡಿದರು. ಎಲ್ಲ ರೂಪಗಳ ಅಂತಾರಾಷ್ಟ್ರೀಯ ಭಯೋತ್ಪಾದನೆಯನ್ನು ಕ್ರಿಮಿನಲ್ ಅಪರಾಧ ಎಂಬುದಾಗಿ ಘೋಷಿಸುವಂತೆ ಮತ್ತು ಭಯೋತ್ಪಾದಕರಿಗೆ ಹಣಕಾಸು ನೆರವು ಮತ್ತು ಆಶ್ರಯ ನಿರಾಕರಿಸುವಂತೆ ಸಮಾವೇಶದ ಕರಡು ಸೂಚನೆಯನ್ನು ಮಂಡಿಸಿದೆಜಮ್ಮುವಿನಿಂದ ಶ್ರೀನಗರಕ್ಕೆ ೨೫೦೦ ಮಂದಿ ಸಿಆರ್ಪಿಎಫ್ ಯೋಧರನ್ನು ಕರೆದೊಯ್ಯುತ್ತಿದ್ದ ೭೮ ಬೆಂಗಾವಲು ವಾಹನಗಳ ಸಾಲಿನ ಮೇಲೆ ನಡೆದಿರುವ ಪುಲ್ವಾಮ ಭಯೋತ್ಪಾದಕ ದಾಳಿಯ ಹಿಂದೆ ಪಾಕಿಸ್ತಾನದ ಕೈವಾಡ ಇದೆ ಎಂಬುದನ್ನು ಸಾಬೀತುಪಡಿಸಲು ಖಚಿತ ಸಾಕ್ಷ್ಯಾಧಾರಗಳು ಇವೆ. ಜಮ್ಮು -ಶ್ರೀನಗರ ಹೆದ್ದಾರಿಯಲ್ಲಿ ಸ್ಫೋಟಕಗಳನ್ನು ತುಂಬಿದ ಎಸ್ ಯುವಿ ಮೂಲಕ ಸಿಆರ್ಪಿಎಫ್ ಯೋಧರು ಇದ್ದ ಬಸ್ಸುಗಳಿಗೆ ಗುದ್ದಿಸಿ ಉಗ್ರಗಾಮಿಗಳು ಆತ್ಮಹತ್ಯಾ ದಾಳಿ ನಡೆಸಿದ್ದಾರೆ ಎಂದು ಜೇಟ್ಲಿ ನುಡಿದರು.  ಭಯೋತ್ಪಾದಕ ದಾಳಿಯು ಕಾಶ್ಮೀರ ಕಣಿವೆಯಲ್ಲಿ ಎರಡು ದಶಕಗಳಲ್ಲಿ ನಡೆದ ಅತ್ಯಂತ ಭೀಕರ ದಾಳಿಯಾಗಿದೆ. ೨೦೦೧ರಲ್ಲಿ ಜಮ್ಮು ಮತ್ತು ಕಾಶ್ಮೀರ ಅಸೆಂಬ್ಲಿಯ ಮೇಲೆ ಉಗ್ರಗಾಮಿಗಳು ನಡೆಸಿದ್ದ ದಾಳಿಯಲ್ಲಿ ೩೮ ಮಂದಿ ಸಾವನ್ನಪ್ಪಿದ್ದರು. ಗುರುವಾರ ದಪುಲ್ವಾಮ ದಾಳಿಯ ಹೊಣೆಗಾರಿಕೆಯನ್ನು ಪಾಕಿಸ್ತಾನ ಮೂಲದ ಜೈಶ್--ಮೊಹಮ್ಮದ್ ಸಂಘಟನೆ ಹೊತ್ತಿತು. ದಾಳಿಗೆ ಸಂಬಂಧಿಸಿದಂತೆ ಶಂಕಿತ ದಾಳಿಕೋರನ ಚಿತ್ರ ಸಹಿತವಾದ ವಿಡಿಯೋವನ್ನೂ ಭಯೋತ್ಪಾದಕ ಸಂಘಟನೆ ಅಂತರ್ಜಾಲದಲ್ಲಿ ಬಿಡುಗಡೆ ಮಾಡಿತು ಸಂಪುಟ ಸಮಿತಿಯು ಮೊದಲಿಗೆ ಹುತಾತ್ಮ ಯೋಧರಪರಮೋಚ್ಛ ಬಲಿದಾನಕ್ಕೆ ಗೌರವ ಸಲ್ಲಿಸಿ ಒಂದು ನಿಮಿಷದ ಮೌನ ಆಚರಿಸಿ ಬಳಿಕ ತನ್ನ ಸಭೆಯನ್ನು ನಡೆಸಿತು. ಸಭೆಯ ಬಳಿಕ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಕಣಿವೆಯಲ್ಲಿನ ಭದ್ರತಾ ವ್ಯವಸ್ಥೆಯ ಪರಿಶೀಲನೆಗಾಗಿ ಜಮ್ಮುಮತ್ತು ಕಾಶ್ಮೀರಕ್ಕೆ ತೆರಳಿದರು.  ಪುಲ್ವಾಮ ದಾಳಿಯ ಬಳಿಕ ಭದ್ರತಾ ವಿಷಯಗಳ ಬಗ್ಗೆ ಚರ್ಚಿಸಲು ನಡೆದ ಉನ್ನತಾಧಿಕಾರ ಭದ್ರತಾ ಸಭೆಯಲ್ಲಿ ಜೇಟ್ಲೆಯವರಲ್ಲದೆ, ಸಿಂಗ್, ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರೂ ಪಾಲ್ಗೊಂಡಿದ್ದರು.

2019: ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಸಿಆರ್ಪಿಎಫ್ ಯೋಧರ ಮೇಲೆ ಜೈಶ್--ಮೊಹಮ್ಮದ್ ಭಯೋತ್ಪಾದಕ ಸಂಘಟನೆಯು ಪೈಶಾಚಿಕ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಪಾಕಿಸ್ತಾನವನ್ನು ಜಾಗತಿಕವಾಗಿ ಪ್ರತ್ಯೇಕಿಸುವ ಕೆಲಸವನ್ನು ಭಾರತ ಆರಂಭಿಸಿದ್ದು, ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ನಿಟ್ಟಿನಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಐವರು ಕಾಯಂ ಸದಸ್ಯರನ್ನು (ಪಿ೫) ಭೇಟಿ ಮಾಡಿದರು. ಗೋಖಲೆಯವರು ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಕಾಯಂ ಸದಸ್ಯರಾದ  ಅಮೆರಿಕ, ಚೀನಾ, ರಶ್ಯಾ, ಇಂಗ್ಲೆಂಡ್ ಮತ್ತು ಫ್ರಾನ್ಸ್ ಐದು ರಾಷ್ಟ್ರಗಳು ಹಾಗೂ ಯುರೋಪ್ ಮತ್ತು ಏಷ್ಯಾದ ಪ್ರಮುಖ ರಾಷ್ಟ್ರಗಳ ರಾಯಭಾರಿಗಳನ್ನು ಭೇಟಿ ಮಾಡಿ ಅವರಿಗೆ ಪುಲ್ವಾಮ ಭಯೋತ್ಪಾದಕ ದಾಳಿಗೆ ಪಾಕಿಸ್ತಾನ ಹೇಗೆ ಬೆಂಬಲ ನೀಡಿದೆ ಎಂಬುದಾಗಿ ವಿವರಿಸಿದರು. ಅದಕ್ಕೂ ಮುನ್ನ ಪಾಕಿಸ್ತಾನದ ಹೈಕಮೀಷನರ್ ಅವರನ್ನು ಕರೆಸಿಕೊಂಡು ಭಾರತದ ಪ್ರಬಲ ಪ್ರತಿಭಟನೆಯನ್ನು ವ್ಯಕ್ತ ಪಡಿಸಿದ್ದಲ್ಲದೆ, ಭಯೋತ್ಪಾದಕ ಗುಂಪುಗಳ ವಿರುದ್ಧ ಪರಿಶೀಲಿಸಲು ಸಾಧ್ಯವಿರುವಂತಹ ಕ್ರಮಗಳನ್ನು ಪಾಕಿಸ್ತಾನ ತತ್ ಕ್ಷಣ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದರು. ಪಾಕಿಸ್ತಾನದಲ್ಲಿನ ಭಾರತದ ಹೈಕಮೀಷನರ್ ಅಜಯ್ ಬಿಸಾರಿಯ ಅವರನ್ನು ಕೂಡಾ ಸಮಾಲೋಚನೆಗಾಗಿ ದೆಹಲಿಗೆ ಬರುವಂತೆ ಸೂಚನೆ ನೀಡಲಾಯಿತು.. ದಕ್ಷಿಣ ಕಾಶ್ಮೀರದಲ್ಲಿ ನಡೆದ ಆತ್ಮಾಹುತಿ ದಾಳಿಯ ಘಟನೆಗೆ ನೀಡಿದ ತನ್ನ ಮೊದಲ ಪ್ರತಿಕ್ರಿಯೆಯಲ್ಲಿ, ಪಾಕಿಸ್ತಾನ ನಿಯಂತ್ರಿತ ಪ್ರದೇಶಗಳಿಂದ ಕಾರ್ಯಾಚರಣೆ ನಡೆಸುತ್ತಿರುವ ಭಯೋತ್ಪಾದಕ ಗುಂಪುಗಳನ್ನು ನಿಷೇಧಿಸುವ ಯತ್ನಗಳನ್ನು ಭಾರತವು ಅಂತಾರಾಷ್ಟ್ರೀಯ ಸಮುದಾಯಕ್ಕೆ ನೆನಪಿಸಿತ್ತು. ಜೈಶ್ --ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ನನ್ನು ಅಂತಾರಾಷ್ಟ್ರೀಯ ಭಯೋತ್ಪಾದಕ ಎಂಬುದಾಗಿ ಘೋಷಿಸುವ ಪ್ರಯತ್ನ ಇನ್ನೂ ಹೇಗೆ ನನೆಗುದಿಯಲ್ಲಿ ಬಿದ್ದಿದೆ ಎಂಬುದನ್ನೂ ಭಾರತ ವಿವರಿಸಿತ್ತು. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ವ್ಹೀಟೋ ಪ್ರಯೋಗಿಸುವ ಅಧಿಕಾರ ಹೊಂದಿರುವ ಪಾಕಿಸ್ತನದ ನಿಕಟ ಮಿತ್ರ ಚೀನಾವು ಅಜರ್ನನ್ನು ವಿಶ್ವಸಂಸ್ಥೆಯ ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರ್ಪಡೆ ಮಾಡುವ ಭಾರತದ ಯತ್ನವನ್ನು ಪದೇ ಪದೇ ವಿಫಲಗೊಳಿಸಿದೆ. ವಿಷಯಕ್ಕೆ ಸಂಬಂಧಿಸಿದಂತೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸಹಮತ ಇಲ್ಲ ಎಂಬ ನೆಪವನ್ನು ಚೀನಾ ನೀಡುತ್ತಿದೆ.  ಪಾಕಿಸ್ತಾನವನ್ನು ಸಂಪೂರ್ಣವಾಗಿ ಏಕಾಂಗಿಯನ್ನಾಗಿಸುವ ಯತ್ನವಾಗಿ ಭಾರತವು ವಿವಿಧ ದೇಶಗಳ ರಾಜತಾಂತ್ರಿಕರನ್ನು ಭೇಟಿ ಮಾಡುವ ಕೆಲಸಕ್ಕೆ ಇದೀಗ ಆದ್ಯತೆ ನೀಡಿದೆ.  ಅಂತಾರಾಷ್ಟೀಯ ಸಮುದಾಯದಲ್ಲಿ ಪಾಕಿಸ್ತಾನವನ್ನು ಒಂಟಿಯಾಗಿಸಲು ಸಾಧ್ಯವಿರುವ ಎಲ್ಲ ರಾಜತಾಂತ್ರಿಕ ಕ್ರಮಗಳನ್ನು ಸರ್ಕಾರವು ಕೈಗೊಳ್ಳಲಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಬೆಳಗ್ಗೆ ಭದ್ರತೆಗೆ ಸಂಬಂಧಿಸಿದ ಸಚಿವ ಸಂಪುಟ ಸಮಿತಿ ಸಭೆಯ ಬಳಿಕ ಪ್ರಕಟಿಸಿದ್ದರು. ಪೈಶಾಚಿಕ ದಾಳಿಯಲ್ಲಿ ಪಾಕಿಸ್ತಾನದ ನೇರ ಕೈ ಇದೆ ಎಂಬುದಕ್ಕೆ ಪ್ರಶ್ನಿಸಲಾಗದಂತಹ ಸಾಕ್ಷ್ಯಾಧಾರ ಇದೆ ಎಂದು ಜೇಟ್ಲಿ ಹೇಳಿದ್ದರುಪಾಕಿಸ್ತಾನವನ್ನು ಒಂಟಿಯಾಗಿಸುವ ಯತ್ನದ ಮೊದಲ ಹೆಜ್ಜೆಯಾಗಿ, ವಿತ್ತ ಸಚಿವರು ಭದ್ರತೆಗೆ ಸಂಬಂಧಿಸಿದ ಸಂಪುಟ ಸಮಿತಿ ಸಭೆಯ ಬಳಿಕ ಭಾರತವು ಪಾಕಿಸ್ತಾನಕ್ಕೆ ನೀಡಲಾಗಿದ್ದಅತ್ಯಂತ ಆಪ್ತ ರಾಷ್ಟ್ರ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುತ್ತಿದೆ ಎಂದು ಪ್ರಕಟಿಸಿದ್ದರು.

2019: ನವದೆಹಲಿ/ ಶ್ರೀನಗರ: ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಸಿಆರ್ಪಿಎಫ್ ಯೋಧರ ಪಾರ್ಥಿವ ಶರೀರಗಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ಬಳಿಕ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಮಹಾ ನಿರ್ದೇಶಕ ದಿಲ್ ಬಾಗ್ ಸಿಂಗ್ ಅವರು ಸ್ವತಃ ಹೆಗಲುಕೊಡುವ ಮೂಲಕ ಶವ ಪೆಟ್ಟಿಗೆ ಒಯ್ಯಲು ನೆರವಾದರು.  ವಿಶೇಷ ವಿಮಾನದ ಮೂಲಕ ಹುತಾತ್ಮ ಯೋಧರ ಪಾರ್ಥಿವ ಶರೀರಗಳನ್ನು ಜಮ್ಮು ಮತ್ತು ಕಾಶ್ಮೀರದಿಂದ ಕಳುಹಿಸಿಕೊಡಲಾಯಿತು. ದೆಹಲಿಯಿಂದ ಆಗಮಿಸಿದೊಡನೆಯೇ ಗೃಹಸಚಿವರು ತ್ರಿವರ್ಣ ಧ್ವಜ ಹೊದಿಸಿ ಇರಿಸಲಾಗಿದ್ದ ೪೦ ಮಂದಿ ಸಿಆರ್ಪಿಎಫ್ ಯೋಧರ ಪಾರ್ಥಿವ ಶರೀರಗಳ ಬಳಿಗೆ ಬಂದು ಅಂತಿಮ ಗೌರವಾರ್ಪಣೆಯಲ್ಲಿ ಪಾಲ್ಗೊಂಡರು. ಜಮ್ಮು ಮತ್ತು ಕಾಶ್ಮೀರದಿಂದ ವಿಶೇಷ ವಿಮಾನದ ಮೂಲಕ ಹೊರಕ್ಕೆ ಕಳುಹಿಸುವ ಮುನ್ನ  ಹುತಾತ್ಮ ಯೋಧರ ಶವಪಟ್ಟಿಗೆಯನ್ನು ಒಯ್ಯಲು ರಾಜನಾಥ್ ಸಿಂಗ್ ಅವರು ಸ್ವತಃ ನೆರವಾದರು ಎಂದು ಮಾಲಾರ್ಪಣೆ ಸಮಾರಂಭದಲ್ಲಿ ಹಾಜರಿದ್ದ ಅಧಿಕಾರಿಯೊಬ್ಬರು ತಿಳಿಸಿದರು. ಗೃಹ ಸಚಿವರು, ರಾಜ್ಯಪಾಲ ಸತ್ಯ ಪಾಲ್ ಮಲಿಕ್, ಗೃಹಕಾರ್ಯದರ್ಶಿ ರಾಜೀವ್ ಗೌಬಾ, ಸಿಆರ್ಪಿಎಫ್ ಮಹಾನಿರ್ದೇಶಕ ಆರ್.ಆರ್. ಭಟ್ನಾಗರ್, ಜಮ್ಮು ಮತ್ತು ಕಾಶ್ಮೀರ ಡಿಜಿಪಿ ದಿಲ್ಬಾಗ್ ಸಿಂಗ್ ಮತ್ತಿತರರು ಮಾಲಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.   ಕೆಚ್ಚದೆಯ ಸಿಆರ್ಪಿಎಫ್ ಯೋಧರ ಪರಮೋಚ್ಛ ಬಲಿದಾನವನ್ನು ರಾಷ್ಟ್ರವು ಮರೆಯುವುದಿಲ್ಲ. ನಾನು ಹುತಾತ್ಮರಿಗೆ ನನ್ನ ಅಂತಿಮ ಗೌರವವನ್ನು ಪುಲ್ವಾಮದಲ್ಲಿ ಸಲ್ಲಿಸಿದೆ. ಬಲಿದಾನ ವ್ಯರ್ಥವಾಗುವುದಿಲ್ಲ ಎಂದು ರಾಜನಾಥ್ ಸಿಂಗ್ ನುಡಿದರು. ಹುತಾತ್ಮ ಯೋಧರನ್ನು ಇರಿಸಲಾಗಿದ್ದ ಶವಪೆಟ್ಟಿಗೆಗಳನ್ನು ಶ್ರೀನಗರ ವಿಮಾನನಿಲ್ದಾಣಕ್ಕೆ ಒಯ್ಯುವ ಸಲುವಾಗಿ ತರಲಾಗಿದ್ದ ಟ್ರಕ್ಕಿಗೆ ತುಂಬುವವರೆಗೂ ಗಣ್ಯರು ಮೌನವಾಗಿ ಸ್ಥಳದಲ್ಲೇ ನಿಂತಿದ್ದರು. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮದಲ್ಲಿ ಗುರುವಾರ ಜೈಶ್--ಮೊಹಮ್ಮದ್ ನಡೆಸಿದ ಪೈಶಾಚಿಕ ಭಯೋತ್ಪಾದಕ ದಾಳಿಯಲ್ಲಿ ೪೦ ಮಂದಿ ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದು , ಯೋಧರನ್ನು ಹೊತ್ತ ಬೆಂಗಾವಲು ೭೮ ವಾಹನಗಳು ಜಮ್ಮುವಿನಿಂದ ಶ್ರೀನಗರಕ್ಕೆ ಹೊರಟಿದ್ದಾಗ ದಾಳಿ ನಡೆದಿತ್ತು.

2019: ನವದೆಹಲಿ: ಪಾಕಿಸ್ತಾನದ ಹೈಕಮೀಷನರ್ ಸೊಹೈಲ್ ಮಹಮೂದ್ ಅವರನ್ನು  ಬುಲಾವ್ ನೀಡಿ ಕರೆಸಿಕೊಂಡ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಜೈಶ್ -- ಮೊಹಮ್ಮದ್  (ಜೆಇಎಂ) ಭಯೋತ್ಪಾದಕ ಸಂಘಟನೆಯು ಪುಲ್ವಾಮದಲ್ಲಿ ನಡೆಸಿದ ಸಿಆರ್ಪಿಎಫ್ ಯೋಧರ ವಿರುದ್ಧದ ಪೈಶಾಚಿಕ ಭಯೋತ್ಪಾದಕ ದಾಳಿಗೆ ಪ್ರಬಲ ಪ್ರತಿಭಟನೆಯನ್ನು ಸಲ್ಲಿಸಿತು.  ಭದ್ರತೆಗೆ ಸಂಬಂಧಿಸಿದ ಉನ್ನತಾಧಿಕಾರ ಸಚಿವ ಸಂಪುಟ ಸಮಿತಿಯು ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಪಾಕಿಸ್ತಾನಕ್ಕೆ ದಶಕಗಳಷ್ಟು ಹಿಂದೆ ನೀಡಲಾಗಿದ್ದಅತ್ಯಂತ ಆಪ್ತ ರಾಷ್ಟ್ರ ಸ್ಥಾನಮಾನವನ್ನು ಹಿಂತೆಗೆದುಕೊಳ್ಳಲು ನಿರ್ಧರಿಸಿದ ಸ್ವಲ್ಪ ಹೊತ್ತಿನಲ್ಲೇ ಪಾಕಿಸ್ತಾನದ ಹೈಕಮೀಷನರ್ ಅವರನ್ನು ಕರೆಸಿಕೊಂಡ ವಿದೇಶಾಂಗ ಕಾರ್ಯದರ್ಶಿ ವಿಜಯ್ ಗೋಖಲೆ ಅವರು ಪ್ರಬಲ ಪ್ರತಿಭಟನಾ ಪತ್ರವನ್ನು ನೀಡಿದರು. ಪಾಕಿಸ್ತಾನಿ ನೆಲದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಜೆಇಎಂ ಸಂಘಟನೆ ಮತ್ತು ಅದಕ್ಕೆ ಸಂಬಂಧಪಟ್ಟ ವ್ಯಕ್ತಿಗಳ ವಿರುದ್ಧ ಪರಿಶೀಲಿಸಲು ಸಾಧ್ಯವಾಗುವಂತಹ ಕ್ರಮವನ್ನು ಪಾಕಿಸ್ತಾನವು ತತ್ ಕ್ಷಣವೇ ಕೈಗೊಳ್ಳಬೇಕು ಎಂದು ಗೋಖಲೆ ಆಗ್ರಹಿಸಿದರು.
 

2018: ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ವಿಶೇಷ ಪೀಠವು ಫೆಬ್ರುವರಿ ೧೬ರ ಶುಕ್ರವಾರ ಕಾವೇರಿಜಲವಿವಾದಕ್ಕೆ ಸಂಬಂಧಿಸಿದಂತೆ ತನ್ನ ತೀರ್ಪು ಪ್ರಕಟಿಸುವುದು.  ೨೦೦೭ರಲ್ಲಿ ಕಾವೇರಿ ಜಲ ನ್ಯಾಯಾಧಿಕರಣವು ಕಾವೇರಿ ಜಲವಿವಾದಕ್ಕೆ ಸಂಬಂಧಿಸಿದಂತೆ ನೀಡಿದ್ದ ಅಂತಿಮ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಮತ್ತು ಕೇರಳ ಸುಪ್ರೀಂಕೋರ್ಟ್ ಮೆಟ್ಟಿಲನ್ನು ಏರಿದ್ದವು. ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ನಡುವಣ ಕಾವೇರಿ ನದಿ ನೀರು ಹಂಚಿಕೆ ವಿವಾದದ ಈ ಪ್ರಕರಣಕ್ಕೆ ಸಂಬಂಧಿಸಿದ  ಮೇಲ್ಮನವಿಗಳ ತೀರ್ಪು ಪ್ರಕಟಣೆಯನ್ನು ಫೆ.೧೬ಕ್ಕೆ ನಿಗದಿ ಪಡಿಸಲಾಗಿರುವುದನ್ನು ಸುಪ್ರೀಂಕೋರ್ಟ್ ಕಾಸ್‌ಲಿಸ್ಟ್‌ನಲ್ಲಿ ಈದಿನ ಪ್ರಕಟಿಸಲಾಯಿತು. ಮೇಕೆದಾಟು ಯೋಜನೆ, ಕೊರತೆ ವರ್ಷದಲ್ಲಿ ನೀರಿನ ಸಮರ್ಪಕ ಹಂಚಿಕೆ, ನದಿ ನೀರು ನಿರ್ವಹಣಾ ಮಂಡಳಿ ರಚನೆ ಕುರಿತು ಸುಪ್ರೀಂಕೋರ್ಟ್ ತೀರ್ಪು ನೀಡಲಿದೆ. ೨೦೧೭ರ ಸೆಪ್ಟೆಂಬರ್ ೨೦ರಂದು ಮೇಲ್ಮನವಿಗಳ ಸುದೀರ್ಘ ವಾದ ಮಂಡನೆಗಳ ಅಂತಿಮ ದಿನದಂದು ನ್ಯಾಯಮೂರ್ತಿಗಳಾಗಿದ್ದ ಅಮಿತ್ ರಾಯ್ ಮತ್ತು ಎ.ಎಂ. ಖಾನ್ವಿಲ್ಕರ್ ಅವರನ್ನು ಒಳಗೊಂಡ ಪೀಠಕ್ಕೆ ತಮಿಳುನಾಡು ತನ್ನನ್ನು ಕರ್ನಾಟಕದ ಮುಂದೆ ಬಿಕ್ಷುಕನ ಸ್ಥಾನಕ್ಕೆ ಇಳಿಸಬೇಡಿ ಎಂದು ಮನವಿ ಮಾಡಿತ್ತು. ಪ್ರಕರಣದಹಿನ್ನೆಲೆ: ಕರ್ನಾಟಕ ಮತ್ತು ತಮಿಳುನಾಡಿನ ನಡುವಣ ದಶಕಗಳಷ್ಟು ಹಳೆಯದಾದ ಕಾವೇರಿ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ಮುಂದಿನ ನಾಲ್ಕು ವಾರಗಳಲ್ಲಿ ಈ ವಿವಾದಕ್ಕೆ ಸಂಬಂಧಿಸಿದಂತೆ ತನ್ನ ಅಂತಿಮ ತೀರ್ಪು ನೀಡುವುದಾಗಿ ಸುಪ್ರೀಂಕೋರ್ಟ್ ತಿಂಗಳ ಹಿಂದೆ ಸುಳಿವು ನೀಡಿತ್ತು. ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಮತ್ತು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವನ್ನು ಒಳಗೊಂಡ ಪೀಠವು ನಾಲ್ಕು ವಾರಗಳಲ್ಲಿ ತಾನು ತೀರ್ಪು ನೀಡಿದ ಬಳಿಕವಷ್ಟೇ ಯಾವುದೇ ವೇದಿಕೆಯು ಕಾವೇರಿ ಜಲಾನಯನಕ್ಕೆ ಸಂಬಂಧಿಸಿದ ವಿಷಯವನ್ನು ಮುಟ್ಟಲು ಸಾಧ್ಯ ಎಂದು ಹೇಳಿತ್ತು.. ವಿಷಯಕ್ಕೆ ಸಂಬಂಧಿಸಿದಂತೆ ಎರಡು ದಶಕಗಳಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಲಾಗಿದೆ ಎಂದೂ ಪೀಠ ಅಭಿಪ್ರಾಯ ಪಟ್ಟಿತ್ತು. ಬೆಂಗಳೂರು ಮತ್ತು ಸುತ್ತಮುತ್ತಣ ಜಿಲ್ಲೆಗಳ ನಿವಾಸಿಗಳಿಗೆ ಕುಡಿಯುವ ನೀರು ಸರಬರಾಜು ಸಲುವಾಗಿ ನ್ಯಾಯಾಲಯವು ಮಧ್ಯಪ್ರವೇಶ ಮಾಡಬೇಕು ಎಂಬುದಾಗಿ ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬೆಂಗಳೂರು ಪೊಲಿಟಿಕಲ್ ಆಕ್ಷನ್ ಕಮಿಟಿ- ಬಿಪಿಎಸಿ) ೨೦೧೬ರಲ್ಲಿ ಸಲ್ಲಿಸಿದ್ದ ಮನವಿಯ ವಿಚಾರಣೆ ಕಾಲದಲ್ಲಿ ಸುಪ್ರೀಂಕೋರ್ಟ್ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪು ನೀಡುವ
ಸುಳಿವನ್ನು ನೀಡಿತ್ತು. ವಾಸ್ತವವಾಗಿ ಬ್ರಿಟಿಷರ ಆಳ್ವಿಕೆಯಡಿಯಲ್ಲಿದ್ದ  ಮದ್ರಾಸ್ ಪ್ರಾಂತ್ಯ ಮತ್ತು ಮೈಸೂರು ರಾಜ್ಯದ ನಡುವೆ ಕಾವೇರಿ ನೀರಿನ ಹಂಚಿಕೆ ವಿವಾದ ೧೮೯೨ ರಲ್ಲಿ ಆರಂಭವಾಯಿತು. ವರ್ಷ ೧೯೧೦ ರಲ್ಲಿ, ಎರಡೂ ಪ್ರಭುತ್ವಗಳು ಕಾವೇರಿ ನದಿಯ ಅಣೆಕಟ್ಟಿನ ನಿರ್ಮಾಣ ಯೋಜನೆಯನ್ನು ಆರಂಭಿಸಿದವು. ೧೯೨೪ ರಲ್ಲಿ, ಕೃಷ್ಣರಾಜಸಾಗರ (ಕನ್ನಂಬಾಡಿ) ಅಣೆಕಟ್ಟು ಕಟ್ಟುವ ವೇಳೆಯಲ್ಲಿ ಉಭಯ ಪ್ರಾಂತ್ಯಗಳು ಪಡೆಯುವ ನೀರಿನ ಪಾಲಿಗೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಸಹಿ ಮಾಡಲಾಗಿತ್ತು. ಹಿರಿಯ ವಕೀಲ ಎ.ಕೆ. ಗಂಗೂಲಿ ಅವರ ಪ್ರಕಾರ ’ಒಪ್ಪಂದದ ೧೧ ನೇ ಷರತ್ತು ಪ್ರಕಾರ ಪರಸ್ಪರ ಅಂಗೀಕಾರವಾದಂತೆ ಐದು ದಶಕಗಳ ನಂತರ ಪರಸ್ಪರ ಒಪ್ಪಿಕೊಂಡು ಪುನಃ ಪರಿಶೀಲನೆ ಮಾಡಬಹುದು,’ ಎಂದು ತಿಳಿಸಲಾಗಿತ್ತು. ಈ ಪರಿಷ್ಕರಣೆ ಷರತ್ತು ಕೃಷ್ಣರಾಜಸಾಗರ (ಕೆಆರ್‌ಎಸ್) ಹೊರತು ಪಡಿಸಿ ಬೇರೆ ಯೋಜನೆಗಳಿಗೆ ಮಾತ್ರ ಅನ್ವಯವಾಗುತ್ತಿತ್ತು.  ಒಪ್ಪಂದದ ಪ್ರಮುಖ ಅಂಶ (ಕೋರ್) ಕೆಆರ್‌ಎಸ್ ನಿರ್ಮಾಣ ಮತ್ತು ಅದರ ಕಾರ್ಯಾಚರಣೆ ಮತ್ತು ಆಡಳಿತ ಪರಿಸ್ಥಿತಿಗಳು ಯಾವುದೇ ಷರುತ್ತಗಳ ವ್ಯಾಪ್ತಿಗೆ ಒಳಪಡುವುದಿಲ್ಲ. ಆದರಂತೆ ೧೯೨೪ ಒಪ್ಪಂದದ ಪ್ರಕಾರ ಮದ್ರಾಸ್ ಮತ್ತು ಮೈಸೂರು ಎರಡೂ ರಾಜ್ಯಗಳು ಕಾವೇರಿ ನದಿಯ ಹೆಚ್ಚುವರಿ ನೀರಿನ್ನು ಬಳಸಲು ಹಕ್ಕುಗಳನ್ನು ಪಡೆದವು. ಮದ್ರಾಸ್ ಸರ್ಕಾರ ಕೃಷ್ಣರಾಜಸಾಗರ ಅಣೆಕಟ್ಟಿನ ನಿರ್ಮಾಣಕ್ಕೆ ವಿರೋಧ ಮಾಡಿದ್ದರಿಂದ, ಅದಕ್ಕೆ ಒಪ್ಪಂದದಲ್ಲಿ ಮೆಟ್ಟೂರ್ ಅಣೆಕಟ್ಟು ನಿರ್ಮಿಸುವ ಸ್ವಾತಂತ್ರ್ಯವನ್ನು ನೀಡಿತ್ತು. ಆದರೂ, ನದಿ ನೀರು ಬಳಸಿಕೊಂಡು ಮದ್ರಾಸ್ ಮತ್ತು ಮೈಸೂರು ರಾಜ್ಯಗಳು ಕಾವೇರಿ ನೀರು ಬಳಸುವ ನೀರಾವರಿ ಪ್ರದೇಶದ ವ್ಯಾಪ್ತಿಯನ್ನು ಹೆಚ್ಚಿಸದಂತೆ ನಿರ್ಬಂಧಗಳನ್ನು ಒಪ್ಪಂದವು ಹಾಕಿತ್ತು. ಕಾವೇರಿ ನದಿಯು ಕರ್ನಾಟಕ ಮತ್ತು ತಮಿಳುನಾಡಿನಾದ್ಯಂತ ೭೬೫ ಕಿಮೀನಷ್ಟು ಉದ್ದದ ಹರಿವು ಹೊಂದಿದೆ. ಇದು ಕರ್ನಾಟಕದಲ್ಲಿ ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಹುಟ್ಟಿ. ಪ್ರಮುಖವಾಗಿ ಕರ್ನಾಟಕ ಮತ್ತು ತಮಿಳುನಾಡು ಮೂಲಕ ಹರಿಯುತ್ತದೆ, ಅದರ ಜಲಾನಯನ ಬಹಳಷ್ಟು ಪ್ರದೇಶ ಕೇರಳ ಮತ್ತು ಪುದುಚೆರಿ ಕಾರೈಕಾಲ್ ಪ್ರದೇಶವನ್ನು ಆವರಿಸಿಕೊಂಡಿದೆ. ೧೮೯೨ ಮತ್ತು ೧೯೨೪ ರ ಒಪ್ಪಂದಗಳ ಪ್ರಕಾರ ಲಭ್ಯವಿರುವ ಅಂದಾಜು ೮೬೮ ಟಿಎಂಸಿ ಅಡಿ ನೀರಿನ ಪೈಕಿ ತಮಿಳುನಾಡು ಮತ್ತು ಪುದುಚೆರಿಗೆ ಶೇಕಡಾ ೭೫ರಷ್ಟು ಅಂದರೆ ೬೫೧ ಟಿ.ಎಮ್.ಸಿ ಅಡಿ, ಕರ್ನಾಟಕಕ್ಕೆ ಶೇಕಡಾ ೨೩ ಅಂದರೆ ೨೦೦ ಟಿ.ಎಮ್.ಸಿ ಅಡಿ ಮತ್ತು ಉಳಿದ ಭಾಗ ಶೇಕಡಾ ೨ರಷ್ಟು ಅಂದರೆ ೧೭.೩೬ ಟಿಎಂಸಿ ಅಡಿ ನೀರನ್ನು ಕೇರಳಕ್ಕೆ ಒದಗಿಸಲು ವ್ಯವಸ್ಥೆಯಾಗಿತ್ತು. ಸ್ವಾತಂತ್ರ್ಯ ಲಭಿಸಿ ಭಾಷಾವಾರು ರಾಜ್ಯಗಳ ರಚನೆಯಾದ ಬಳಿಕ ಸಹಜವಾಗಿ ಎಲ್ಲ ರಾಜ್ಯಗಳಲ್ಲೂ ಕೃಷಿಭೂಮಿ, ನಗರ ಪ್ರದೇಶಗಳ ಅಭಿವೃದ್ಧಿಯಾದಾಗ ನೀರಿನ ತಕರಾರು ಶುರುವಾಗಿ ಅದರ ಇತ್ಯರ್ಥಕ್ಕೆ ೧೯೯೦ರ ಜೂನ್ ೨ರಂದು ಕಾವೇರಿ ನ್ಯಾಯಾಧಿಕರಣದ (ಕಾವೇರಿ ಜಲವಿವಾದ ನ್ಯಾಯಮಂಡಳಿ) ರಚನೆಯಾಗಿತ್ತು. ಸುಮಾರು ೧೬ ವರ್ಷಗಳ ಕಾಲ ಕಲಾಪ ನಡೆಸಿ ೨೦೦೭ರ ಫೆಬ್ರವರಿ ೫ರಂದು ತನ್ನ ಅಂತಿಮ ತೀರ್ಪು ನೀಡಿದ ನ್ಯಾಯಾಧಿಕರಣ ೧೮೯೨ ಮತ್ತು ೧೯೨೪ರ ತೀರ್ಪನ್ನು ಮಾನ್ಯ ಮಾಡಿತು. ಕಾವೇರಿ ಕಣಿವೆಯಲ್ಲಿ ಲಭ್ಯವಿರುವ ನೀರನ್ನು ೭೪೦ ಟಿ.ಎಂ.ಸಿ. ಎಂದು ಅಂದಾಜು ಮಾಡಿದ ಅದು ತಮಿಳುನಾಡಿಗೆ ೪೧೯ ಟಿ.ಎಂ.ಸಿ.ಗಳು, ಕರ್ನಾಟಕಕ್ಕೆ ೨೭೦ ಟಿ.ಎಂ.ಸಿ.ಗಳು, ಕೇರಳಕ್ಕೆ ೩೦ ಮತ್ತು ಪುದುಚೆರಿಗೆ ಏಳು ಟಿ.ಎಂ.ಸಿ.ಗಳನ್ನು ಹಂಚಿಕೆ ಮಾಡಿತು. ಪರಿಸರ ಸಂರಕ್ಷಣೆಗೆಂದು ಕಾವೇರಿ ಕೊಳ್ಳದಲ್ಲಿ ೧೦ ಟಿ.ಎಂ.ಸಿ. ನೀರನ್ನು ಉಳಿಸಬೇಕೆಂದು ಸೂಚಿಸಿತ್ತು.  ಈ ತೀರ್ಪಿನ ವಿರುದ್ಧ ಕರ್ನಾಟಕ, ತಮಿಳುನಾಡು ಮತ್ತು ಕೇರಳ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದವು. ಮೇಲ್ಮನವಿಗಳ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಬಳಿಕ ೨೦೧೭ರ ಸೆಪ್ಟೆಂಬರ್ ೨೦ರಂದು ಸುಪ್ರೀಂಕೋರ್ಟ್ ಪೀಠವು ತನ್ನ ತೀರ್ಪನ್ನು ಕಾಯ್ದಿರಿಸಿತ್ತು. ಈ ಮಧ್ಯೆ ಬೆಂಗಳೂರು ರಾಜಕೀಯ ಕ್ರಿಯಾ ಸಮಿತಿ (ಬಿಪಿಎಸಿ) ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿ ಬೆಂಗಳೂರು. ಮೈಸೂರು, ಮಂಡ್ಯ ಮತ್ತಿತರ ನಗರಗಳು ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದ ಜಿಲ್ಲೆಗಳಿಗೆ ವರ್ಷಕ್ಕೆ ಅಂದಾಜು ೨೬ ಟಿಎಂಸಿಯಷ್ಟು ಕುಡಿಯುವ ನೀರು ಬೇಕಾಗುತ್ತದೆ ಎಂದು ಸುಪ್ರೀಂಕೋರ್ಟಿನ ಗಮನ ಸೆಳೆದು ಇಲ್ಲಿನ ಜನರ ಕುಡಿಯುವ ನೀರಿನ ಹಕ್ಕನ್ನು ಸುಪ್ರೀಂಕೋರ್ಟ್ ರಕ್ಷಿಸಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿತ್ತು.
 
2018: ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿನಲ್ಲಿ ಒಟ್ಟು ೧೧,೫೦೦ ಕೋಟಿ ರೂಪಾಯಿಗಳ ವಂಚನೆ ನಡೆದ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಕೋಟ್ಯಧಿಪತಿ ವಜ್ರಾಭರಣ ವ್ಯಾಪಾರಿ ನೀರವ್ ಮೋದಿ ಅವರಿಗೆ ಸಂಬಂಧಿಸಿದ ಮುಂಬೈ ಕಚೇರಿ, ನಿವಾಸ ಸೇರಿದಂತೆ ಮೂರು ರಾಜ್ಯಗಳಲ್ಲಿ ದಾಳಿ ನಡೆಸಿ ತೀವ್ರ ಶೋಧ ಕಾರ್ಯಾಚರಣೆ ನಡೆಸಿದರು. ದೆಹಲಿ, ಮುಂಬೈ ಮತ್ತು ಸೂರತ್ ನಗರಗಳ ೧೦ ಕಡೆಗಳಲ್ಲಿ ಜಾರಿ ನಿರ್ದೇಶನಾಲಯ ದಾಳಿ ಹಾಗೂ ಶೋಧ ನಡೆಸುತ್ತಿದೆ. ಹಿರಿಯ ಬ್ಯಾಂಕ್ ಅಧಿಕಾರಿಯೊಬ್ಬರ ನಿವಾಸದಲ್ಲೂ ಶೋಧ ನಡೆಯಿತು ಎಂದು ವರದಿಗಳು ಹೇಳಿದವು. ನೀರವ್ ಮೋದಿ ಮತ್ತು ಅವರ ಬಂಧುಗಳ ವಿರುದ್ಧ ವಿರುದ್ಧ ಪಂಜಾಬ್ ನ್ಯಾಶನಲ್ ಬ್ಯಾಂಕಿಗೆ ೨೮೦ ಕೋಟಿ ರೂ.ಗಳನ್ನು ವಂಚಿಸಿದ ಬಗ್ಗೆ ಈ ವರ್ಷಾರಂಭದಲ್ಲಿ ಸಿಬಿಐ ಪ್ರಕರಣ ದಾಖಲಿಸಿತ್ತು. ೪೬ರ ಹರೆಯದ ನೀರವ್ ಮೋದಿ, ಅವರ ಸಹೋದರ, ಪತ್ನಿ ಮತ್ತು ಚೋಕ್ಸಿ ಬ್ಯಾಂಕ್ ಅಧಿಕಾರಿಗಳೊಂದಿಗೆ ಸೇರಿಕೊಂಡು ವಂಚನೆ ಎಸಗಿದ್ದು ಬ್ಯಾಂಕಿಗೆ ನಷ್ಟ ಉಂಟುಮಾಡಿದ್ದಾರೆ ಎಂದು ಸಿಬಿಐ ತನ್ನ ವರದಿಯಲ್ಲಿ ಹೇಳಿತ್ತು. ಆ ಬಳಿಕ ತನಿಖೆಗಳನ್ನು ನಡೆಸಿದ ಜಾರಿ ನಿರ್ದೇಶನಾಲಯವು ಬ್ಯಾಂಕ್ ಅಧಿಕಾರಿಯೊಬ್ಬರ ದೂರಿನ ಮೇರೆಗೆ ಮೋದಿಗಳ ವಿರುದ್ಧ ಹಣ ವರ್ಗಾವಣೆ ತಡೆ ಕಾಯ್ದೆಯ ಅಡಿಯಲ್ಲೂ ಪ್ರಕರಣ ದಾಖಲಿಸಿದೆ. ನೀರವ್ ಮೋದಿ ಅವರ ಪತ್ನಿ ಅಮಿ, ಸಹೋದರ ನಿಶ್ಚಿಲ್ ಮತ್ತು ಮೆಹುಲ್ ಚೋಕ್ಸಿ ಅವರು ಡೈಮಂಡ್ಸ್ ಆರ್ ಯುಎಸ್, ಸೋಲಾರ್ ಎಕ್ಸಪೋರ್ಟ್ ಮತ್ತು ಸ್ಟೆಲ್ಲಾರ್ ಡಮೈಂಡ್ಸ್ ಕಂಪೆನಿಯ ಪಾಲುದಾರರಾಗಿದ್ದಾರೆ. ಈ ಕಂಪೆನಿಗಳಿಗೆ ಹಾಂಕಾಂಗ್ , ದುಬೈ ಮತ್ತು ನ್ಯೂಯಾರ್ಕ್‌ನಲ್ಲಿ ಮಳಿಗೆಗಳಿವೆ ಎಂದು ಸಿಬಿಐ ವರದಿ ತಿಳಿಸಿತು. ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಶನಲ್ ಬ್ಯಾಂಕ್  ಮುಂಬಯಿಯಲ್ಲಿನ ತನ್ನ ಕೆಲವು ಶಾಖೆಗಳಲ್ಲಿ ಒಟ್ಟು ೧೧,೫೦೦ ಕೋಟಿ ರೂಪಾಯಿ ಮೊತ್ತದ  ವಂಚನೆ ಮತ್ತು ಅನಧಿಕೃತ ವಹಿವಾಟು ನಡೆದಿರುವುದನ್ನು ತಾನು ಪತ್ತೆ ಹಚ್ಚಿರುವುದಾಗಿ ಹೇಳಿತ್ತು. ಆಯ್ದ ಕೆಲವು ಖಾತೆದಾರರ ಲಾಭಕ್ಕಾಗಿ ಮತ್ತು ಅವರಿಗೆ ಗೊತ್ತಿರುವ ರೀತಿಯಲ್ಲೇ ಈ ಅನಧಿಕೃತ ಮತ್ತು ವಂಚನೆಯ ವಹಿವಾಟುಗಳು ನಡೆದಿದ್ದು  ಈ ವಹಿವಾಟುಗಳ ಆಧಾರದಲ್ಲಿ ಇತರ ಬ್ಯಾಂಕುಗಳು ವಿದೇಶದಲ್ಲಿನ ಆ ಗ್ರಾಹಕರಿಗೆ ಬೃಹತ್ ಮೊತ್ತದ ಹಣ ವಾಪಸಾತಿ ಮಾಡಿವೆ. ಈ ವಿಷಯವನ್ನು ತಾನು ನಿಯಂತ್ರಣ ಸಂಸ್ಥೆಗೆ ಸಲ್ಲಿಸಿರುವ ಮಾಹಿತಿಯಲ್ಲಿ ತಿಳಿಸಿದ್ದೇನೆ ಎಂದು ಪಂಜಾಬ್ ನ್ಯಾಶನಲ್ ಬ್ಯಾಂಕ್ ಹೇಳಿತ್ತು. ನೀರವ್ ಮೋದಿ ಅವರು
೨೦೧೮ರ ಜನವರಿ ೧ರಂದು ದೇಶ ತ್ಯಜಿಸಿದ್ದು, ಅಮೆರಿಕದ ಪ್ರಜೆಯಾಗಿರುವ ಅವರ ಪತ್ನಿ ಜನವರಿ ೬ರಂದು ದೇಶದಿಂದ ಹೊರಹೋಗಿದ್ದಾರೆ. ಮೆಹುಲ್ ಚೋಸ್ಕಿ ಜನವರಿ ೪ರಂದು ರಾಷ್ಟ್ರ ತ್ಯಜಿಸಿದ್ದಾರೆ. ಬೆಲ್ಜಿಯಂ ನಾಗರಿಕನಾಗಿರುವ ಅವರ ಸಹೋದರನೂ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಈ ಎಲ್ಲ ಆರೋಪಿಗಳ ವಿರುದ್ಧ ಸಿಬಿಐ ಜನವರಿ ೩೧ರಂದು ಎಫ್ ಐ ಆರ್ ದಾಖಲಾದ ದಿನವೇ ಲುಕ್ ಔಟ್ ನೋಟಿಸ್ ಜಾರಿ ಮಾಡಿತ್ತು, ಮುಂಬೈಯ ತನ್ನ ಶಾಖೆಯೊಂದರಲ್ಲಿ ಅಕ್ರಮವಾಗಿ ಆಮದು ವಸ್ತುಗಳಿಗೆ ವಿದೇಶದಲ್ಲಿ ಹಣ ಪಾವತಿ ಮಾಡಲು ಅಕ್ರಮವಾಗಿ ಅನುಮತಿ ನೀಡಲಾಗಿತ್ತು. ತನ್ಮೂಲಕ ಫಲಾನುಭವಿಗಳಿಗೆ ಸಾಲ ಸವಲತ್ತು ಒದಗಿಸಲಾಗಿತ್ತು ಎಂದು ಬ್ಯಾಂಕ್ ಆಪಾದಿಸಿತ್ತು. ಬ್ಯಾಂಕಿನ ಬ್ರಾಡಿ ಹೌಸ್ನ ಮಿಡ್ ಕಾರ್ಪೋರೇಟ್ ಶಾಖೆಯಲ್ಲಿ ೨೦೧೧ರಿಂದ ಕೆಲವು ಬ್ಯಾಂಕ್ ನೌಕರರ ಸಹಕಾರದೊಂದಿಗೆ ಈ ವಂಚಕ ಕೂಟ ಕೆಲಸ ಮಾಡುತ್ತಿತ್ತು ಎಂದು ಹೇಳಲಾಯಿತು. ಆಪಾದಿತ ಫಲಾನುಭವಿಗಳು, ಖಾತೆಯಲ್ಲಿ ಸಾಕಷ್ಟು ಹಣ ಇಲ್ಲದೇ ಇದ್ದರೂ ಪಂಜಾಬ್ ನ್ಯಾಷನಲ್ ಬ್ಯಾಂಕಿನಿಂದ ನೀಡಲಾದ ಲೆಟರ್‍ಸ್ ಆಪ್ ಅಂಡರ್ ಟೇಕಿಂಗ್ (ಎಲ್ ಒಯು) ಬಳಸಿಕೊಂಡು ವಿದೇಶೀ ಶಾಖೆಗಳಲ್ಲಿ ಹಣ ಹಿಂಪಡೆದುಕೊಂಡಿದ್ದಾರೆ ಎಂದು ಹೇಳಲಾಗಿತ್ತು. ನಿಯಮಗಳ ಪ್ರಕಾರ ಸಾಲಗಾರರು ೯೦ ದಿನಗಳ ಒಳಗಾಗಿ ಲೆಕ್ಕ ಚುಕ್ತಾ ಮಾಡಬೇಕು. ಆದರೆ ಫಲಾನುಭವಿಗಳು ಇನ್ನೊಂದು ಬಾಕಿ ಹಣಕ್ಕೂ ಸೇರಿಸಿಕೊಂಡು ಎಲ್ ಒಯು ಪಡೆದುಕೊಳ್ಳುವ ಮೂಲಕ ವಂಚನೆ ಪತ್ತೆ ಹಚ್ಚದಂತೆ ಮತ್ತು ಮರುಪಾವತಿ ವಿಳಂಬವಾಗುವಂತೆ ನೋಡಿಕೊಳ್ಳುತ್ತಿದ್ದರು ಎಂದು ಆಪಾದಿಸಲಾಗಿತ್ತು. ಬ್ಯಾಂಕಿನ ಕೇಂದ್ರೀಯ ಮಾಹಿತಿ ಮೂಲದಲ್ಲಿ ಅನುಮಾನಾಸ್ಪದ ವಹಿವಾಟಿನ ಯಾವುದೇ ದಾಖಲಾತಿಗಳೂ ಇಲ್ಲದ ಕಾರಣ ಹಗರಣ ಪತ್ತೆಯಾಗದೇ ಉಳಿದಿತ್ತು. ಈ ಫಲಾನುಭವಿಗಳ ಜೊತೆಗೆ ನಂಟು ಹೊಂದಿದ್ದರೆನ್ನಲಾದ ೧೦ ಬ್ಯಾಂಕ್ ಅಧಿಕಾರಿಗಳನ್ನು ಇದೀಗ ಅಮಾನತುಗೊಳಿಸಲಾಯಿತು. ಮುಂಬೈ ಮತ್ತು ಇತರ ನಗರಗಳಲ್ಲದೆ ಕಾಲಾಘೋಡಾದಲ್ಲಿನ ಮೋದಿ ಅವರ ಕಚೇರಿ ಮತ್ತು ಶೋ ರೂಮ್ ನಲ್ಲೂ ಶೋಧ ನಡೆಸಲಾಗಿದೆ ಎಂದು ಜಾರಿ ನಿರ್ದೇಶನಾಲಯದ ಹಿರಿಯ ಅಧಿಕಾರಿಗಳು ತಿಳಿಸಿದರು. ಎಂಡಿ ಸುರೇಶ್ ಮೆಹ್ತಾ ಹೇಳಿಕೆ: ಈ ಮಧ್ಯೆ ೧೧,೫೦೦ ಕೋಟಿ ರೂಪಾಯಿಗಳ ಈ ವಂಚನೆ ಹಗರಣ ೨೦೧೧ರಲ್ಲಿ ಆರಂಭವಾಗಿತ್ತು ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಆಡಳಿತ ನಿರ್ದೇಶಕ ಸುನಿಲ್ ಮೆಹ್ತಾ ಹೇಳಿದ್ದಾರೆ. ಈ ಹಗರಣ ನಡೆದಿರುವುದು ಒಂದು ಬ್ಯಾಂಕಿನಲ್ಲಿ ಮಾತ್ರ ಎಂದು ಅವರು ಸ್ಪಷ್ಟ ಪಡಿಸಿದ್ದಾರೆ. ಜನವರಿ ೩ನೇ ವಾರದಲ್ಲಿ ವಂಚನೆ ಪ್ರಕರಣ ಬೆಳಕಿಗೆ ಬಂತು. ಜನವರಿ ೩೦ರಂದು ಸಿಬಿಐನಲ್ಲಿ ಪ್ರಕರಣ ದಾಖಲಿಸಲಾಯಿತು ಎಂದು ಅವರು ಹೇಳಿದರು. ೫೦೦೦ ಕೋಟಿ ರೂ. ನೀಡಲು ಮೋದಿ ಸಿದ್ಧ: ಈ ಮಧ್ಯೆ ಸ್ವಿಟ್ಜರ್ಲೆಂಡಿನಲ್ಲಿ ಇದ್ದಾರೆಂದು ಹೇಳಲಾಗಿರುವ ಪ್ರಕರಣದ ಮುಖ್ಯ ಆರೋಪಿ ನೀರವ್ ಮೋದಿ ತಾನು ಬ್ಯಾಂಕಿಗೆ ೫೦೦೦ ಕೋಟಿ ರೂಪಾಯಿ ಸಾಲ ಹಿಂತಿರುಗಿಸಲು ಸಿದ್ಧ ಎಂದು ಹೇಳಿರುವುದಾಗಿ ವರದಿಯಾಯಿತು. ತನ್ಮಧ್ಯೆ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಸ್ತುಸ್ಥಿತಿ ವರದಿ ನೀಡುವಂತೆ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿದ್ದಾರೆ ಎಂದು ವರದಿಗಳು ಹೇಳಿದವು. ಸಿಬಿಐ ದಾಖಲಿಸಿರುವ ಪ್ರಕರಣದ ಎಫ್ ಐ ಆರ್ ನಲ್ಲಿ ಮೋದಿ ಜೊತೆಗೆ ಶಾಮೀಲಾಗಿದ್ದರೆನ್ನಲಾದ ಬ್ಯಾಂಕಿನ ನಿವೃತ್ತ ಡೆಪ್ಯುಟಿ ಮ್ಯಾನೇಜರ್ ಗೋಕುಲನಾಥ ಶೆಟ್ಟಿ ಮತ್ತು ಇನ್ನೊಬ್ಬ ಅಧಿಕಾರಿ ಮನೋಜ್ ಹನುಮಂತ ಖರತ್ ಅವರ ಹೆಸರನ್ನೂ ಸೇರ್ಪಡೆ ಮಾಡಲಾಗಿದೆ. ಬ್ಯಾಂಕಿನ ಇತರ ೧೦ ಮಂದಿ ಸಿಬ್ಬಂದಿಯ ಮೇಲೂ ಜಾರಿ ನಿರ್ದೇಶನಾಲಯ ಕಣ್ಣಿಟ್ಟಿತು. ಈ ಮಧ್ಯೆ ಪ್ರಕರಣದ ಆರೋಪಿಗಳು ದೇಶದಿಂದ ಪರಾರಿಯಾಗುವವರೆಗೂ ಬ್ಯಾಂಕ್ ದೂರು ದಾಖಲಿಸದೇ ಇರಲು ಕಾರಣವೇನು ಎಂದು ಪ್ರಶ್ನಿಸಿರುವ ವಿಪಕ್ಷಗಳು ಪ್ರಕರಣದ ಬಗ್ಗೆ ಕಾಲಮಿತಿಯ ತನಿಖೆ ನಡೆಯಬೇಕು ಎಂದು ಆಗ್ರಹಿಸಿದವು.

2018: ನವದೆಹಲಿ: ದಾವೋಸ್‌ನಲ್ಲಿ ಭಾರತೀಯ ವ್ಯಾಪಾರೋದ್ಯಮಿಗಳ ನಿಯೋಗದಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ ಬಿ) ವಂಚನೆ ಹಗರಣದ ಆರೋಪಿ ವಜ್ರಾಭರಣ ವ್ಯಾಪಾರೋದ್ಯಮಿ ನೀರವ್ ಮೋದಿ ಅವರಿಗೆ ಅವಕಾಶ ನೀಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರತ್ತ ಟೀಕಾಸ್ತ್ರ ಎಸೆದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ’ಆರೋಪಿ ವ್ಯಾಪಾರೋದ್ಯಮಿ ರಾಷ್ಟ್ರ ತ್ಯಜಿಸಲು ಪ್ರಧಾನಿ ನೆರವಾಗಿದ್ದಾರೆ ಎಂದು ಆಪಾದಿಸಿದರು. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೊಸತೊಂದು ವಾಕ್ಸಮರವನ್ನು ಆರಂಭಿಸಿರುವ ರಾಹುಲ್ ಗಾಂಧಿ ಅವರು ಟ್ವಿಟರ್‌ನಲ್ಲಿ  ರಾಹುಲ್ "ಗೈಡ್ ಟು ಲೂಟ್ ಇಂಡಿಯಾ ಎಂಬ ತಲೆಬರಹದಡಿ ಹೀಗೆ ಬರೆದರು: ೧. ಪಿಎಂ ಮೋದಿಯನ್ನು ಅಪ್ಪಿಕೊಳ್ಳಿ, ೨. ದಾವೋಸ್‌ನಲ್ಲಿ ಮೋದಿ ಜೊತೆಗೆ ಕಾಣಿಸಿಕೊಳ್ಳಿ. ಈ ಶಕ್ತಿಯನ್ನು ಬಳಸಿಕೊಂಡು (ಎ) ೧೨,೦೦೦ ಕೋಟಿ ರೂ. ಲೂಟಿ ಮಾಡಿ; (ಬಿ) ಮಲ್ಯ ರೀತಿಯಲ್ಲಿ ಸರ್ಕಾರ ಬೇರೆ ಕಡೆ ನೋಡುತ್ತಿರುವಾಗ ದೇಶದಿಂದ ಪರಾರಿಯಾಗಿ. ಬಳಿಕ ಪತ್ರಿಕಾಗೋಷ್ಠಿಯಲ್ಲಿ ನೀರವ್ ಮೋದಿ ಅವರು ಪ್ರಧಾನಿ ನರೇಂದ್ರ ಮೋದಿ ಜೊತೆಗಿದ್ದ ಉನ್ನತ ವ್ಯಾಪಾರೋದ್ಯಮಿಗಳ ನಿಯೋಗ ಸದಸ್ಯರ  ಭಾವಚಿತ್ರವನ್ನು ಬಿಡುಗಡೆ ಮಾಡಿರುವ ಕಾಂಗ್ರೆಸ್,  ’ಹರಿಪ್ರಸಾದ್ ಎಂಬ ವ್ಯಕ್ತಿಯೊಬ್ಬರು ೨೦೧೬ರ ಜುಲೈ ೨೬ರಷ್ಟು ಹಿಂದೆಯೇ ಗೀತಾಂಜಲಿ ಜೆಮ್ಸ್ ಅಂಡ್ ಜ್ಯುವೆಲ್ಲರಿ ಮಾಲೀಕರಾದ ನೀರವ್ ಮೋದಿ ಮತ್ತು ಅವರ ಸಂಬಂಧಿ ಮೆಹುಲ್ ಚೊಕ್ಸಿ ಶಾಮೀಲಾಗಿರುವ ಬ್ಯಾಂಕ್ ವಂಚನೆ ಬಗ್ಗೆ ಪ್ರಧಾನ ಮಂತ್ರಿಗಳ ಕಚೇರಿಗೆ ದೂರು ನೀಡಿದ್ದರು. ಆದರೆ ಸರ್ಕಾರಿ ಅಧಿಕಾರಿಗಳು ನಿದ್ರಿಸುತ್ತಿದ್ದರು ಎಂದು ಆಪಾದಿಸಿತು. ಪ್ರಧಾನ ಮಂತ್ರಿಗಳ ಸಚಿವಾಲಯ ದೂರಿನ ಸಂಬಂಧ ಸ್ವೀಕೃತಿ ಪತ್ರ ನೀಡಿದೆ, ಆದರೆ ಪ್ರಧಾನ ಮಂತ್ರಿಗಳ ಕಚೇರಿ, ಹಣಕಾಸು ಸಚಿವರು ಮತ್ತು  ಹಣಕಾಸು ಗುಪ್ತಚರ ಘಟಕ (ಎಫ್ ಐಯು) ದೃಢ ಕ್ರಮ ಕೈಗೊಂಡು ವ್ಯಾಪಾರೋದ್ಯಮಿ ಭಾರತದಿಂದ ಪರಾರಿಯಾಗುವುದನ್ನು ತಡೆಯಲಿಲ್ಲ ಎಂದು ಕಾಂಗ್ರೆಸ್ ಪ್ರತಿಪಾದಿಸಿತು. ನೀರವ್ ಮೋದಿ ಮತ್ತು ಚೋಕ್ಸಿ ಮಾಲೀಕತ್ವದ ಕಂಪೆನಿಗಳ ವಿರುದ್ಧ ಸುಮಾರು ೪೨ರಷ್ಟು ಎಫ್ ಐ ಆರ್ ಗಳು ಇವೆ ಎಂಬುದಾಗಿಯೂ ಹರಿಪ್ರಸಾದ್ ಅವರು ತಮ್ಮ ದೂರಿನಲ್ಲಿ ದಾಖಲಿಸಿದ್ದರು ಎಂದೂ ಕಾಂಗ್ರೆಸ್ ಹೇಳಿತು.  ’ಇಂತಹ ವ್ಯಕ್ತಿಗೆ ಭಾರತೀಯ ವ್ಯಾಪಾರೋದ್ಯಮಿಗಳ ನಿಯೋಗದಲ್ಲಿ ಭಾಗಿಯಾಗಲು ಪ್ರಧಾನಿಯವರು ಏಕೆ ಅವಕಾಶ ಮಾಡಿಕೊಡಬೇಕು?’ ಎಂದು ಪಕ್ಷದ ಸಂಪರ್ಕ ವಿಭಾಗದ ಮುಖ್ಯಸ್ಥ ರಣ್ ದೀಪ್ ಸುರ್ಜಿವಾಲ ಅವರು ಗುಜರಾತ್ ಕಾಂಗ್ರೆಸ್ ನಾಯಕರಾದ ಶಕ್ತಿ ಸಿನ್ಹ ಗೋಹಿಲ್ ಮತ್ತು ಪವನ್ ಖೇರಾ ಜೊತೆಗೆ ನಡೆಸಿದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು. ಹಗರಣವು ಮುಖ್ಯವಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚಿಸಲಾದ ಸುಮಾರು ೧೧,೦೦೦ ಕೋಟಿ ರೂಪಾಯಿಗಳಿಗೆ ಸಂಬಂಧಿಸಿದ್ದರೂ, ಇನ್ನಷ್ಟು ಬ್ಯಾಂಕುಗಳು ಹಗರಣದಲ್ಲಿ ಶಾಮೀಲಾಗಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಈ ಮೊತ್ತ ೩೦,೦೦೦ ಕೋಟಿ ರೂ. ಮೊತ್ತವನ್ನು ದಾಟಬಹುದು ಎಂದು ಬ್ಯಾಂಕಿಂಗ್ ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಪ್ರಮುಖ ವಿರೋಧಿ ಪಕ್ಷವಾದ ಕಾಂಗ್ರೆಸ್ ಹೇಳಿತು. ಸರ್ಕಾರಕ್ಕೆ ಐದು ಪ್ರಶ್ನೆಗಳನ್ನು ಕೇಳಿರುವ ಕಾಂಗ್ರೆಸ್ ’ಕಳೆದ ೭೦ ವರ್ಷಗಳಲ್ಲೇ ಅತ್ಯಂತ ದೊಡ್ಡ ಬ್ಯಾಂಕಿಂಗ್ ವಂಚನೆ ಪ್ರಕರಣದ ಬಗ್ಗೆ ಪ್ರಧಾನಿಯವರು ಮಾತನಾಡಬೇಕು ಎಂದು ಆಗ್ರಹಿಸಿತು. ಈ ವರ್ಷ ಜನವರಿ ೨೯ರಂದೇ ಪಂಜಾಬ್ ನ್ಯಾಷನಲ್ ಬ್ಯಾಂಕ್ ಸಿಬಿಐಗೆ ಪತ್ರ ಬರೆದಿದ್ದರೂ, ನೀರವ್ ಮೋದಿ ಮತ್ತಿತರ ಆರೋಪಿಗಳು ದೇಶದಿಂದ ಪರಾರಿಯಾದದ್ದು ಹೇಗೆ? ನೀರವ್ ಮೋದಿ ಮತ್ತು ಮೆಹುಲ್ ಚೊಕ್ಸಿ ಮತ್ತಿತರರನ್ನು ಯಾರು ರಕ್ಷಿಸುತ್ತಿದ್ದಾರೆ. ಅತ್ಯಂತ ದೊಡ್ಡ ಬ್ಯಾಂಕ್ ಲೂಟಿ ಪ್ರಕರಣದ ಹೊಣೆಗಾರರು ಯಾರು ಎಂದು ಸುರ್ಜಿವಾಲ ಪ್ರಶ್ನಿಸಿದರು.  ಪಂಜಾಬ್ ನ್ಯಾಶನಲ್ ಬ್ಯಾಂಕ್ ನೀಡಿರುವ ದೂರಿನಲ್ಲಿ ನೀರವ್ ಮತ್ತು ಮತ್ತು ಇತರರು ಬ್ಯಾಂಕಿಗೆ ಬಹುಕೋಟಿ ಪಂಗನಾಮ ಹಾಕಿದ್ದಾರೆ. ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಈಗ ನೀರವ್ ಮೋದಿ ಅವರ ಮುಂಬಯಿಯಲ್ಲಿನ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿ,  ಸುಮಾರು ೧೦ ತಾಣಗಳಲ್ಲಿ ಶೋಧ ನಡೆಸಿದರು. ಪಂಜಾಬ್ ನ್ಯಾಶನಲ್ ಬ್ಯಾಂಕ್ ಫೆ.14ರ ಬುಧವಾರ ಹೇಳಿಕೆಯೊಂದನ್ನು ಹೊರಡಿಸಿ ಬ್ಯಾಂಕಿಗೆ ಆಯ್ದ ಕೆಲ ಹೈ ಪ್ರೊಫೈಲ್ ಗ್ರಾಹಕರ ಖಾತೆ ಮೂಲಕ ೧೧,೪೦೦ ಕೋಟಿ ರೂ.ಗಳ ಪಂಗನಾಮದ ಹಗರಣ ನಡೆದಿರುವುದನ್ನು ತಾನು ಪತ್ತೆ ಹಚ್ಚಿರುವುದಾಗಿ ಹೇಳಿತ್ತು. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಈ ಹಗರಣದ ತನಿಖೆ ನಡೆಸುತ್ತಿವೆ.  ಸರ್ಕಾರದ ನಿರಾಕರಣೆ: ಕಾಂಗ್ರೆಸ್ ಬಿಡುಗಡೆ ಮಾಡಿದ ದಾವೋಸ್ ನಲ್ಲಿ  ಪ್ರಧಾನಿ ಜೊತೆಗಿನ ನೀರವ್ ಮೋದಿ ಫೋಟೋ ಸಂಬಂಧಿತ ಆರೋಪಗಳ ಬಗ್ಗೆ ಪ್ರತಿಕ್ರಿಯಿಸಿದ ಸರ್ಕಾರಿ ಮೂಲಗಳು ವ್ಯಾಪಾರೋದ್ಯಮಿಗಳು ಪ್ರಧಾನಿಯವರ ನಿಯೋಗದ ಭಾಗವಾಗಿರಲಿಲ್ಲ. ಅಧಿಕೃತ ನಿಯೋಗ ಮತ್ತು ಪತ್ರಕರ್ತರ ತಂಡ ಮಾತ್ರ ಪ್ರಧಾನಿಯವರ ತಂಡದ ಭಾಗವಾಗಿದ್ದವು ಎಂದು ಹೇಳಿದವು. ‘ಬಹಳಷ್ಟು ಮಂದಿ ದಾವೋಸ್ ಗೆ ಪ್ರಯಾಣ ಮಾಡಿದ್ದಾರೆ. ನಾವು ಅವರೆಲ್ಲರಿಗೂ ವ್ಯವಸ್ಥೆ ಮಾಡಿಲ್ಲ. ೧೦ ಸೆಕೆಂಡ್ ಗಳ ಫೋಟೋ ಸೆಷನ್ ಇತ್ತು. ಪ್ರಧಾನಿಯವರು ಅದರಲ್ಲಿ ಪಾಲ್ಗೊಂಡಿದ್ದರು. ಬಳಿಕ ಅವರು ಅವರು ಅಲ್ಲಿಂದ ನೇರವಾಗಿ ನಿರ್ಗಮಿಸಿದ್ದರು. ಡಿಐಪಿಪಿ / ಇನ್ವೆಸ್ಟ್ ಇಂಡಿಯಾ ಈ ಫೋಟೋ ಸೆಷನ್ ವ್ಯವಸ್ಥೆ ಮಾಡಿದ್ದವು. ಆದರೆ ಪ್ರಧಾನಿಯವರು ಗುಂಪಿನಲ್ಲಿದ್ದ ಯಾರೊಬ್ಬರನ್ನೂ ಭೇಟಿ ಮಾಡಿಲ್ಲ ಎಂದು ಮೂಲಗಳು ಹೇಳಿದವು.

2018: ಜೋರ್ಹಾಟ್ :  ಅಸ್ಸಾಮಿನ ಜೋರ್ಹಾಟ್‌ನಲ್ಲಿ ಮೈಕ್ರೋ ಲೈಟ್ ಲಘು ವಿಮಾನ ಪತನಗೊಂಡು, ಅದರಲ್ಲಿದ್ದ್ದ ವಾಯು ಪಡೆಯ ಇಬ್ಬರು ಸಿಬ್ಬಂದಿ ಸಾವನ್ನಪ್ಪಿದರು. ಲಘು ವಿಮಾನ ತನ್ನ ದೈನಂದಿನ ಹಾರಾಟದಲ್ಲಿ ನಿರತವಾಗಿದ್ದ ವೇಳೆ ಈ ದುರಂತ ಸಂಭವಿಸಿತು. ದುರಂತದ ಹೊತ್ತಿನಲ್ಲಿ ಈ ಸಿಬ್ಬಂದಿ ವೈರಸ್ ಎಸ್‌ಡಬ್ಲ್ಯು೮೦ ಲಘು ವಿಮಾನವನ್ನು ಚಲಾಯಿಸುತ್ತಿದ್ದರು ಎಂದು ವರದಿ ತಿಳಿಸಿತು. ಜೋರ್ಹಾಟ್ ವಾಯು ನೆಲೆಯಿಂದ ಮೇಲಕ್ಕೇರಿದ ಮರುಕ್ಷಣದಲ್ಲೇ ವಿಮಾನ ಪತನಗೊಂಡಿತು. ಇಬ್ಬರೂ ಪೈಲಟ್‌ಗಳು ಐಎಎಫ್ ವಿಂಗ್ ಕಮಾಂಡರ್‌ಗಳಾಗಿದ್ದರು. ಅಪಘಾತಕ್ಕೆ ಕಾರಣವೇನು ಎಂಬುದು ತತ್ ಕ್ಷಣಕ್ಕೆ ಗೊತ್ತಾಗಿಲ್ಲ. ವಿಮಾನ ದುರಂತದ ತನಿಖೆಗೆ ಆದೇಶ ನೀಡಲಾಗಿದೆ ಎಂದು ಮೂಲಗಳು ಹೇಳಿವೆ. ಮಾಜೂಲಿ ನದೀ ದ್ವೀಪದ ಸಮೀಪದಲ್ಲಿರುವ ಸುಮೋಯಿಮರಿ ಎಂಬ ಗ್ರಾಮದಲ್ಲಿ ಪತನಗೊಂಡ ವಿಮಾನದ ಅವಶೇಷಗಳು ಪತ್ತೆಯಾಗಿರುವುದಾಗಿ ವರದಿ ತಿಳಿಸಿತು.

2018: ಬೀಜಿಂಗ್ : ಪ್ರಧಾನಿ ನರೇಂದ್ರ ಮೋದಿ ಅವರು ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವುದಕ್ಕೆ ಪ್ರಬಲ ವಿರೋಧ ವ್ಯಕ್ತ ಪಡಿಸಿರುವ ಚೀನಾ,  ಭಾರತ ಸರ್ಕಾರಕ್ಕೆ ಈ ಬಗ್ಗೆ ರಾಜತಾಂತ್ರಿಕ ಪ್ರತಿಭಟನೆ ದಾಖಲಿಸಲಾಗುವುದು ಎಂದು ಹೇಳಿತು. ಅರುಣಾಚಲ ಪ್ರದೇಶವು ದಕ್ಷಿಣ ಟಿಬೆಟ್ ಭಾಗವೆಂದು ಚೀನಾ ಪ್ರತಿಪಾದಿಸುತ್ತಿದ್ದು, ಅದು ತನಗೆ ಸೇರಿದ್ದು ಎಂದು ಹೇಳುತ್ತಿದೆ. ಪ್ರಧಾನಿ ಮೋದಿ ಅವರು ಫೆ.15ರ ಗುರುವಾರ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿದ್ದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಚೀನಾದ ವಿದೇಶಾಂಗ  ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಅವರು, ಚೀನಾ - ಭಾರತ ಗಡಿ ಪ್ರಶ್ನೆ ಕುರಿತಂತೆ ಚೀನದ ನಿಲುವು ಅತ್ಯಂತ ಸ್ಪಷ್ಟ ಮತ್ತು  ಕ್ರಮಬದ್ಧವಾಗಿದೆ ಎಂದು ಹೇಳಿದರು. ಚೀನಾ ಸರ್ಕಾರ ಅರುಣಾಚಲ ಪ್ರದೇಶವನ್ನು ಎಂದೂ ಮಾನ್ಯ ಮಾಡಿಲ್ಲ; ಹಾಗೆಯೇ ಭಾರತೀಯ ನಾಯಕನೋರ್ವ ಆ ವಿವಾದಿತ ಪ್ರದೇಶಕ್ಕೆ  ಭೇಟಿ ನೀಡಿರುವುದನ್ನು ಚೀನಾ ಬಲವಾಗಿ ವಿರೋಧಿಸುತ್ತದೆ ಎಂದು ಗೆಂಗ್ ಶುವಾಂಗ್ ಹೇಳಿರುವುದನ್ನು ಚೀನಾದ ಸರ್ಕಾರಿ ಸ್ವಾಮ್ಯದ ಕ್ಷಿನ್ ಹುವಾ ಸುದ್ದಿ ಸಂಸ್ಥೆ ತನ್ನ ವರದಿಯಲ್ಲಿ ಉಲ್ಲೇಖಿಸಿತು. ಪ್ರಧಾನಿ ನರೇಂದ್ರ ಮೋದಿ ಅವರು ವಿವಾದಿತ ಅರುಣಾಚಲ ಪ್ರದೇಶಕ್ಕೆ ಭೇಟಿ ನೀಡಿರುವ ಬಗ್ಗೆ ನಾವು ಭಾರತದ ರಾಜತಾಂತ್ರಿಕ ಕಚೇರಿ ಜೊತೆ ನಮ್ಮ ಪ್ರತಿಭಟನೆ, ಆಕ್ಷೇಪವನ್ನು ದಾಖಲಿಸುತ್ತೇವೆ ಎಂದು ಗೆಂಗ್ ಶುವಾಂಗ್ ಹೇಳಿದರು.

2018: ನವದೆಹಲಿ: ಕೇರಳದಲ್ಲಿ ಕಾರ್ಯಾಚರಿಸುತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ ಐ) ಮುಸ್ಲಿಮ್ ಸಂಘಟನೆಯನ್ನು ನಿಷೇಧಿಸುವಂತೆ ಕೇರಳ ರಾಜ್ಯವೇ ಕೋರಿದೆ ಎಂದು ಕೇಂದ್ರ ಗೃಹ ರಾಜ್ಯ ಸಚಿವ ಕಿರಣ್ ರಿಜಿಜು ಅವರು ಇಲ್ಲಿ ತಿಳಿಸಿದರು. ಮಧ್ಯಪ್ರದೇಶದ ಟೇಕನ್ ಪುರದಲ್ಲಿ ಜನವರಿ ತಿಂಗಳಲ್ಲಿ ನಡೆದಿದ್ದ ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ವಾರ್ಷಿಕ ಸಮಾವೇಶದಲ್ಲಿ ವಿಷಯ ಚರ್ಚೆಗೆ ಬಂದಿತ್ತು. ಸಮಾವೇಶದಲ್ಲಿ ಪಾಲ್ಗೊಂಡಿದ್ದ ಕೇರಳ ಪೊಲೀಸ್ ಮುಖ್ಯಸ್ಥ ಲೋಕನಾಥ ಬೆಹೆರಾ ಅವರು ರಾಜ್ಯದಲ್ಲಿ ಪಿಎಫ್ ಐ ಬೆಳವಣಿಗೆ ಮತ್ತು ಅದರ ಚಟುವಟಿಕೆಗಳ ಬಗ್ಗೆ ವಿಸ್ತೃತ ವಿವರ ನೀಡಿದ್ದರು ಎಂದು ರಿಜಿಜು ಹೇಳಿದರು. ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಭದ್ರತಾ ರಂಗದ ಇತರ ಹಿರಿಯ ಅಧಿಕಾರಿಗಳೂ ಪಾಲ್ಗೊಂಡಿದ್ದರು. ’ಕೇರಳವು ಪಿಎಫ್ ಐ ಮೇಲೆ ನಿಷೇಧ ಹೇರಬೇಕು ಎಂದು ಒತ್ತಾಯಿಸಿತು. ನಾವು ಪ್ರಕರಣವನ್ನು ಪರಿಶೀಲಿಸುತ್ತಿದ್ದೇವೆ ಎಂದು ರಿಜಿಜು ನುಡಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ ಐ)  ಸದಸ್ಯರು ಶಾಮೀಲಾಗಿದ್ದ ನಾಲ್ಕು ಕ್ರಿಮಿನಲ್ ಪ್ರಕರಣಗಳನ್ನು ಬೆಹೆರಾ ಸಮಾವೇಶದಲ್ಲಿ ಪಟ್ಟಿ ಮಾಡಿದ್ದರು ಎಂದು ಗೃಹ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು. ಕೇಂದ್ರ ಸರ್ಕಾರವು ಪಿಎಫ್ ಐಯನ್ನು ಅಕ್ರಮ ಸಂಘಟನೆ ಎಂಬುದಾಗಿ ಘೋಷಿಸುವುದಕ್ಕೆ ಮುನ್ನ ಅದರ ಚಟುವಟಿಕೆಗಳಿಗೆ ಸಂಬಂಧಿಸಿದ ಇನ್ನಷ್ಟು ವಾಸ್ತವಾಂಶಗಳು ಮತ್ತು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಲಿದೆ ಎಂದು ಅವರು ಹೇಳಿದರು. ಬೆಹೆರಾ ಅವರನ್ನು ಸಂಪರ್ಕಿಸಲು ನಡೆಸಿದ ಯತ್ನಗಳು ಫಲಪ್ರದವಾಗಲಿಲ್ಲ. ಡಿಜಿಪಿಗಳ ಸಮಾವೇಶದಲ್ಲಿ ನಿರ್ದಿಷ್ಟ ಸಂಘಟನೆಯೊಂದರ ಚಟುವಟಿಕೆಗಳ ಬಗ್ಗೆ ಇಷ್ಟೊಂದು ವಿವರವಾಗಿ ಈ ಹಿಂದೆ ಚರ್ಚೆ ನಡೆದದ್ದು ಇಲ್ಲ. ಪಿಎಫ್ ಐ ಮೇಲೆ ಹದ್ದುಗಣ್ಣು ಇಡಲಾಗಿದೆ, ಆದರೆ ಅದನ್ನು ಇನ್ನೂ ನಿಷೇಧಿಸಿಲ್ಲ. ಈ ಹಿಂದೆ ಸಿಮಿ (ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್ ಮೆಂಟ್ ಆಫ್ ಇಂಡಿಯಾ) ಮತ್ತು ಇಂಡಿಯನ್ ಮುಜಾಹಿದೀನ್ ಸಂಘಟನೆಗಳ ಕುರಿತು ಚರ್ಚೆ ನಡೆದಿತ್ತು. ಆದರೆ ಅದು ಅವುಗಳನ್ನು ನಿಷೇಧಿಸಿದ ನಂತರ ಎಂದು ಅಧಿಕಾರಿ ನುಡಿದರು. ಜಾಗೃತಾ ದಳ (ಇಂಟೆಲಿಜೆನ್ಸ್ ಬ್ಯೂರೋ) ವರ್ಷಕ್ಕೆ ಒಮ್ಮೆ ಪೊಲೀಸ್ ಮಹಾ ನಿರ್ದೇಶಕರ ಸಮಾವೇಶವನ್ನು ಸಂಘಟಿಸುತ್ತದೆ. ಈ ಸಮಾವೇಶದಲ್ಲಿ ಆಂತರಿಕ ಭದ್ರತೆಗೆ ಸಂಬಂಧಪಟ್ಟ ವಿಷಯಗಳ ಚರ್ಚೆ ನಡೆಯುತ್ತದೆ. ಕಳೆದ ವರ್ಷ ರಾಷ್ಟ್ರೀಯ ತನಿಖಾ ಸಂಸ್ಥೆಯು (ಎನ್ ಐಎ) ಪಿಎಫ್ ಐ ಸಂಘಟನೆಯು ಕ್ರಿಮಿನಲ್ ಪ್ರಕರಣಗಳಲ್ಲಿ ದೋಷಿ ಎಂಬುದಾಗಿ ದೋಷಾರೋಪ ಪಟ್ಟಿ ಸಲ್ಲಿಸಿದ ಇಲ್ಲವೇ ಶಿಕ್ಷೆಗೆ ಗುರಿಯಾದ ನಾಲ್ಕು ಪ್ರಕರಣಗಳನ್ನು ಗೃಹ ಸಚಿವಾಲಯಕ್ಕೆ ಕಳುಹಿಸಿದ ವಿಸ್ತೃತವಾದ ವರದಿಯಲ್ಲಿ ಪ್ರಸ್ತಾಪಿಸಿತ್ತು. ಏನಿದ್ದರೂ ಏಪ್ರಿಲ್‌ಗೆ ಮುನ್ನ ನಿಷೇಧ ಅಸಂಭವ, ಏಕೆಂದರೆ ಇನ್ನೂ ಸಾಕಷ್ಟು ಕೆಲಸಗಳು ಆಗಬೇಕಾಗಿವೆ ಎಂದು ಭದ್ರತಾ ಸಂಸ್ಥೆಯ ಇನ್ನೊಬ್ಬ ಅಧಿಕಾರಿ ನುಡಿದರು. ೨೦೧೦ರಲ್ಲಿ ಪಿಎಫ್ ಐ ಸಂಘಟನೆಯ ಕೆಲವು ಶಸ್ತ್ರಧಾರಿ ಸದಸ್ಯರು ಪ್ರೊಫೆಸರ್ ಟಿ.ಜೆ. ಜೋಸೆಫ್ ಅವರ ಮೇಲೆ ಎರ್ನಾಕುಲಂ ಜಿಲ್ಲೆಯ ಮುವಾತ್ತುಪುಳದಲ್ಲಿ ದಾಳಿ ನಡೆಸಿ ಬಲ ಅಂಗೈಯನ್ನು ಕತ್ತರಿಸಿದ್ದರು. ಪ್ರವಾದಿ ಮಹಮ್ಮದರಿಗೆ ಸಂಬಂಧಿಸಿದಂತೆ ಕೆಲವು ಉಲ್ಲೇಖಗಳು ಇದ್ದ ಕಾಲೇಜೊಂದರ ಪ್ರಶ್ನೆ ಪತ್ತಿಕೆಯನ್ನು ಸಿದ್ಧ ಪಡಿಸಿದ್ದಕ್ಕಾಗಿ ಜೋಸೆಫ್ ಅವರ ಮೇಲೆ ಅವರು ದಾಳಿ ನಡೆಸಿದ್ದರು. ಈ ಪ್ರಶ್ನೆಪತ್ರಿಕೆಯಲ್ಲಿ ಪ್ರವಾದಿಯನ್ನು ಅವಮಾನಿಸಲಾಗಿತ್ತು ಎಂದು ದಾಳಿಕೋರರು ಆಪಾದಿಸಿದ್ದರು. ೨೦೧೫ರ ಮೇ ತಿಂಗಳಲ್ಲಿ ಪ್ರಕರಣದ ೧೩ ಮಂದಿ ಕಾರ್ಯಕರ್ತರಿಗೆ ನ್ಯಾಯಾಲಯ ಶಿಕ್ಷ ವಿಧಿಸಿತ್ತು. ತಾನು ಪರಿಶೀಲಿಸಿದ ಪುರುಷರು ಅಥವಾ ಮಹಿಳೆಯರನ್ನು ಇಸ್ಲಾಮ್ ಗೆ ಮತಾಂತರ ಮಾಡಿದ ೯ ಪ್ರಕರಣಗಳ ಪೈಕಿ ಕನಿಷ್ಠ ೪ ಪ್ರಕರಣಗಳಲ್ಲಿ ಪಿಎಫ್ ಐ ಸದಸ್ಯರು ಶಾಮೀಲಾಗಿದ್ದುದು ಸಾಬೀತಾಗಿತ್ತು ಎಂದು ಎನ್ ಐಎ ಹೇಳಿತ್ತು.

2018: ಕಠ್ಮಂಡು: ನೇಪಾಳದಲ್ಲಿ ನಡೆದ ರಾಜಕೀಯ ಪ್ರಹಸನದಲ್ಲಿ ಆ ದೇಶದ ನೂತನ ಪ್ರಧಾನಿಯಾಗಿ ಹಿರಿಯ ಕಮ್ಯುನಿಸ್ಟ್ ಮುಖಂ ಡ ಕೆಪಿ ಶರ್ಮಾ ಒಲಿ ಆಯ್ಕೆಯಾದರು. ದೇಶದ ಎರಡು ಪ್ರಮುಖ ಕಮ್ಯುನಿಸ್ಟ್ ಪಕ್ಷಗಳಾದ ಸಿಪಿಎನ್ ಮತ್ತು ಯುಎಂಎಲ್ ಪಕ್ಷಗಳ ನಡುವಿನ ಚುನಾವಣಾ ಪೂರ್ವ ಮೈತ್ರಿಯಿಂದಾಗಿ ಸಿಪಿಎನ್ ಪಕ್ಷದ ಹಿರಿಯ ಮುಖಂಡ ಖಡ್ಗಕುಮಾರ್ ಶರ್ಮಾ ಒಲಿ ಅವರಿಗೆ ಮತ್ತೆ ನೇಪಾಳ ಪ್ರಧಾನಿ ಹುದ್ದೆ ಅರಸಿಬಂದಿತು. ನೇಪಾಳದ ೪೧ನೇ ಪ್ರಧಾನಿ ಯಾಗಿ ಕೆಪಿ ಶರ್ಮಾ ಒಲಿ ಆಯ್ಕೆಯಾದರು. ಈ ಹಿಂದೆ ಡಿಸೆಂಬರ್ ನಲ್ಲಿ ನಡೆದ ನೇಪಾಳದ ಸಂಸತ್ ಮತ್ತು ಪ್ರಾಂತೀಯ ಚುನಾವಣೆಯಲ್ಲಿ ಸಿಪಿ ಎನ್ ಮತ್ತು ಯುಎಂಎಲ್ ಮೈತ್ರಿಕೂಟ ಪ್ರಚಂಡ ಬಹುಮತಗಳಿಸಿದ್ದು, ಒಟ್ಟು ೨೭೫ ಕ್ಷೇತ್ರಗಳ ಪೈಕಿ ೧೭೪ ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿತ್ತು. ಇನ್ನು ನೂತನ ಕಮ್ಯುನಿಸ್ಟ್ ಮೈತ್ರಿಕೂಟಕ್ಕೆ ಕೆಪಿ ಶರ್ಮಾ ಒಲಿ ಮತ್ತು ಸಿಪಿಎನ್ ಮಾವೋ ಕೇಂದ್ರ ಪಕ್ಷದ ಮುಖ್ಯಸ್ಥ ಪ್ರಚಂಡ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎನ್ನಲಾಯಿತು. ಇನ್ನು ನೇಪಾಳದ ನೂತನ ಪ್ರಧಾನಿ ಕೆಪಿಶರ್ಮಾ ಒಲಿ ಚೀನಾ ಪರ ಒಲವು ಹೊಂದಿದ್ದು, ಈ ಹಿಂದೆ ೨೦೧೫ರಿಂದ ೨೦೧೬ರ ಆಗಸ್ಟ್ ೩ರವರೆಗೂ ನೇಪಾಳದ ಪ್ರಧಾನಿಯಾಗಿ ಕಾರ್ಯ ನಿರ್ವಹಿಸಿದ್ದರು.

2018: ಜೋಹಾನ್ಸ್‌ಬರ್ಗ್: ರಾಜಕೀಯ ಬೆಳವಣಿಗೆಯಲ್ಲಿ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಜಾಕೊಬ್ ಝುಮಾ ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಆಡಳಿತಾರೂಢ ಆಫ್ರಿಕ ನ್ಯಾಷನಲ್ ಕಾಂಗ್ರೆಸ್(ಎಎನ್ಸಿ)ಅಧಿಕಾರ ತ್ಯಜಿಸುವಂತೆ ೪೮ ಗಂಟೆಗಳ ಗಡುವು ವಿಧಿಸಿದ ಹಿನ್ನೆಲೆಯಲ್ಲಿ ಅಧ್ಯಕ್ಷ ಹುದ್ದೆಗೆ ರಾಜೀನಾಮೆ ಸಲ್ಲಿಸಿದರು. ೭೫ರ ಹರೆಯದ ಝುಮಾ ಅಧಿಕಾರದಲ್ಲಿದ್ದಾಗ ಹಲವು ಹಗರಣಗಳಲ್ಲಿ ಭಾಗಿಯಾಗಿದ್ದರು. ಬುಧವಾರ ೩೦ ನಿಮಿಷಗಳ ಕಾಲ ವಿದಾಯದ ಭಾಷಣ ಮಾಡಿದ ಝುಮಾ,” ತನ್ನನ್ನು ಅಧಿಕಾರದಿಂದ ಕೆಳಗಿಳಿಸುತ್ತಿರುವ ಎಎನ್ಸಿ ನಾಯಕತ್ವದ ನಿರ್ಧಾರವನ್ನು ನಾನು ಒಪ್ಪಲಾರೆ. ನಾನು ಯಾವಾಗಲೂ ಎಎನ್ಸಿಯ ಶಿಸ್ತಿನ ಸದಸ್ಯನಾಗಿದ್ದೆ. ಆದರೆ, ಸರ್ಕಾರದ ಆದೇಶವನ್ನು ಪಾಲಿಸುವೆ. ತಕ್ಷಣ ವೇ ಜಾರಿಗೆ ಬರುವಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವೆ ಎಂದು ಹೇಳಿದರು. ತತ್‌ಕ್ಷಣವೇ ನಾನು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ ಎಂದು ರಾಷ್ಟ್ರೀಯ ಮಾಧ್ಯಮಗಳ ಮುಂದೆ ಜಾಕೊಬ್ ಝುಮಾ ಘೋಷಿಸಿದರು. ಈ ಮೂಲಕ ಝುಮಾ ಅವರ ೯ ವರ್ಷಗಳ ಅಧಿಕಾರ ಅಂತ್ಯಗೊಂಡಿತು.  ಅಧ್ಯಕ್ಷೀಯ ಸ್ಥಾನದ ಕುರಿತು ಆಡಳಿತಾರೂಢ ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ (ಎಎನ್‌ಸಿ)ನಲ್ಲಿ ಬಿಕ್ಕಟ್ಟು ತಲೆದೂರಿದ್ದು, ಸಂಸತ್ತಿನಲ್ಲಿ ಜಾಕೊ ಬ್ ಝುಮಾ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲು ಪ್ರತಿಪಕ್ಷ ಗಳು ಚಿಂತನೆ ನಡೆಸಿದ್ದವು.



2017: ಶ್ರೀಹರಿ ಕೋಟಾ: ಬಾಹ್ಯಾಕಾಶ ರಂಗದಲ್ಲಿ ಹಲವಾರು ದಾಖಲೆಗಳನ್ನು ನಿರ್ಮಿಸಿರುವ ಇಸ್ರೋ ಈದಿನ ಏಕಕಾಲಕ್ಕೆ ಒಂದೇ ರಾಕೆಟ್ನಿಂದ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಇತಿಹಾಸ ನಿರ್ಮಿಸಿತು. ಬೆಳಗ್ಗೆ 9.28 ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ 104 ಉಪಗ್ರಹಗಳನ್ನು ಹೊತ್ತ ಪಿಎಸ್ಎಲ್ವಿ ಸಿ-37 ರಾಕೆಟ್ ನಭಕ್ಕೆ ಚಿಮ್ಮತು. ಇಸ್ರೋ ಭಾರತದ 3, ಇಸ್ರೇಲ್, ಕಜಕಿಸ್ತಾನ, ನೆದರ್ಲೆಂಡ್, ಸ್ವಿಜರ್ಲೆಂಡ್, ಯುಎಇಯ ತಲಾ 1, ಅಮೆರಿಕದ 96 ಉಪಗ್ರಹ ಸೇರಿ ಒಟ್ಟು 104 ಉಪಗ್ರಹಗಳನ್ನು ಕಕ್ಷೆಗೆ ತಲುಪಿಸಿತು. ಎಲ್ಲ104 ಉಪಗ್ರಹಗಳು ಯಶಸ್ವಿಯಾಗಿ ಬೇರ್ಪಟ್ಟಿದ್ದು, ಅವುಗಳ ನಿಗದಿತ ಕಕ್ಷೆಗಳಿಗೆ ತಲುಪಿಸುವ ಕಾರ್ಯ ಪ್ರಾರಂಭವಾಗಲಿದೆ ಎಂದು ಇಸ್ರೋ ತನ್ನ ಪ್ರಕಟಣೆಯಲ್ಲಿ ತಿಳಿಸಿತು. ಇದಕ್ಕೂ ಮೊದಲು ರಷ್ಯಾ 2014ರಲ್ಲಿ 39 ಉಪಗ್ರಹಗಳನ್ನು ಏಕಕಾಲಕ್ಕೆ ಉಡಾವಣೆ ಮಾಡಿತ್ತು. ಅಮೆರಿಕದ ನಾಸಾ 2013ರಲ್ಲಿ 29 ಉಪಗ್ರಹಗಳ ಉಡಾವಣೆ ನಡೆಸಿತ್ತು. ಕಳೆದ ವರ್ಷ ಇಸ್ರೋ 20 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು. 104 ಉಪಗ್ರಹಗಳನ್ನು ಏಕಕಾಲದಲ್ಲಿ ಯಶಸ್ವಿಯಾಗಿ ಕಕ್ಷೆ ಸೇರಿಸಿದ ಸಾಧನೆಗಾಗಿ ಇಸ್ರೊ ವಿಜ್ಞಾನಿಗಳನ್ನು ಪ್ರಧಾನಿ  ನರೇಂದ್ರ ಮೋದಿ ಅಭಿನಂದಿಸಿದರು.
2017: ಇಂದೋರ್‌: ಎಂಥ ಅವಕಾಶ ದೊರೆತರೂ ಪಾಕಿಸ್ತಾನದಲ್ಲಿ ಗಾಯನ ಮಾಡುವುದಿಲ್ಲ ಎಂದು ದೇಶದ ಹೆಸರಾಂತ ಭಜನ ಗೀತೆಗಳ ಹಿರಿಯ ಗಾಯಕ ಅನೂಪ್ಜಲೊಟಾ ಹೇಳಿದರು. ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ರಾಷ್ಟ್ರ ಪಾಕಿಸ್ತಾನ. ನಮ್ಮ ದೇಶದೊಳಗೆ ನುಸುಳಿ ಅಮಾಯಕರ ಹತ್ಯೆ ಮಾಡುವ ಪಾಪಿಗಳ ರಾಷ್ಟ್ರಕ್ಕೆ ಎಂದಿಗೂ ಕಾಲಿಡುವುದಿಲ್ಲಎಂದು ಅನೂಪ್ ಹೇಳಿದರು. ಪಾಕಿಸ್ತಾನದಲ್ಲಿ ಗಾಯನ ಮಾಡಲು ಆಹ್ವಾನ ನೀಡಲಾಗಿತ್ತು. ಆದರೆ ಅದನ್ನು ಜಲೊಟಾ ತಿರಸ್ಕರಿಸಿದರು. ಅಲ್ಲದೇ, ಪಾಕಿಸ್ತಾನದಿಂದ ಭಾರತಕ್ಕೆ ಆಗಮಿಸುವ ಕಲಾವಿದರಿಗೆ ಭಯೋತ್ಪಾದನೆ ವಿರುದ್ಧ ಜಾಗೃತಿ ಮೂಡಿಸಲು ತಮ್ಮ ದೇಶದ ನಾಯಕರಿಗೆ ತಿಳಿಸಬೇಕು ಎಂದು 63 ಪ್ರಾಯದ ಗಾಯಕ ಅಭಿಪ್ರಾಯಪಟ್ಟರು.
2017: ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಶಶಿಕಲಾ
ಅವರ ರಾತ್ರಿ ಊಟಕ್ಕೆ ಮುದ್ದೆ ಅಥವಾ ಚಪಾತಿ ಜತೆಗೆ 200ಗ್ರಾಂ ಅನ್ನ ಹಾಗೂ ಬೇಳೆ ಸಾಂಬಾರ್‌.  ಸುಪ್ರೀಂ ಕೋರ್ಟ್ಶಶಿಕಲಾ ಮತ್ತು ಇತರೆ ಅಪರಾಧಿಗಳಿಗೆ ನಾಲ್ಕು ವರ್ಷಗಳ ಜೈಲು ಶಿಕ್ಷೆ ಹಾಗೂ ತಲಾ ರೂ.10 ಕೋಟಿ ದಂಡ ಪಾವತಿಸಲು ಆದೇಶಿಸಿತ್ತುಈದಿನ ಚೆನ್ನೈಯಿಂದ  ರಸ್ತೆ ಮಾರ್ಗದಲ್ಲಿ ಆಗಮಿಸಿದ ಶಶಿಕಲಾ, ಇಳವರಸಿ ಹಾಗೂ ಸುಧಾಕರನ್ಪರಪ್ಪನ ಅಗ್ರಹಾರದ ವಿಶೇಷ ನ್ಯಾಯಾಲಯದಲ್ಲಿ ಹಾಜರಾದರು. ಶಶಿಕಲಾ ಅವರನ್ನ ಸಾಮಾನ್ಯ ಕೈದಿಗಳಂತೆ ನೋಡಿಕೊಳ್ಳಲು ಸೂಚಿಸಿದ ವಿಶೇಷ ನ್ಯಾಯಾಲಯ ಮನೆಯಿಂದ ಊಟ ತರಿಸಿಕೊಳ್ಳಲು ಮಾಡಿದ ಮನವಿಯನ್ನು ತಿರಸ್ಕರಿಸಿತು. ಧ್ಯಾನ ಹಾಗೂ ವಿಶೇಷ ಕೊಠಡಿ ಕೋರಿಕೆಗೂ ನ್ಯಾ.ಅಶ್ವಥ ನಾರಾಯಣ ಅವರು ಅವಕಾಶ ನೀಡಲಿಲ್ಲ. ಅಗತ್ಯ ಔಷಧಿ ಇಟ್ಟುಕೊಳ್ಳಲು ಅವಕಾಶ ಕಲ್ಪಿಸಲಾಯಿತು. ಬೆಂಗಳೂರು ಕಾರಾಗೃಹಕ್ಕೆ ಬರುವುದಕ್ಕೂ ಮುನ್ನ  ಜಯಲಲಿತಾ  ಸಮಾಧಿ ಮುಂದೆ ಆಕ್ರೋಶಿತರಾಗಿ  ಶಪಥ ಮಾಡಿದ್ದರು. ಶಶಿಕಲಾ ಅವರ ಜತೆಗೆ ಕೇಂದ್ರ ಕಾರಾಗೃಹದ ಸಮೀಪ ಬರುತ್ತಿದ್ದ ಬೆಂಬಲಿಗರ ಕಾರಿನ ಮೇಲೆ ಕಲ್ಲು ಮತ್ತು ಚಪ್ಪಲಿ ತೂರಾಟ ನಡೆದು, ಕಾರಿನ ಗಾಜುಗಳನ್ನು ಜಖಂಗೊಂಡವು. ಜಯಲಲಿತಾ ಅವರಿಗೆ ಮೋಸ ಮಾಡಿರುವ ಕುರಿತು ಆಕ್ರೋಶ ವ್ಯಕ್ತಪಡಿಸಿದ ಕೆಲವರು ಕಾರಿನ ಮೇಲೆ ದಾಳಿ ನಡೆಸಿದರು. ಇದಕ್ಕೆ ಮುನ್ನ ಶರಣಾಗಲು ಕಾಲಾವಕಾಶ ಕೋರಿ ಸಲ್ಲಿಸಲಾದ ಅರ್ಜಿಯನ್ನು ಆಲಿಸಲೂ ನಿರಾಕರಿಸಿದ ಸುಪ್ರೀಂಕೋರ್ಟ್, ಕೂಡಲೇ ಎಂದರೆ ತತ್ ಕ್ಷಣ ಎಂದು ಅರ್ಥ ಎಂದು ಖಡಾಖಂಡಿತವಾಗಿ ಹೇಳಿತು.
2017: ನವದೆಹಲಿ: ಸ್ಮಾರ್ಟ್ಫೋನ್ಮೂಲಕ ತೆರಿಗೆ ಪಾವತಿಸಲು ಹಾಗೂ ನಿಮಿಷದೊಳಗೆ ಪಾನ್

(ಪರ್ಮನೆಂಟ್ಅಕೌಂಟ್ನಂಬರ್‌) ಕಾರ್ಡ್ದೊರಕಿಸುವ ನೂತನ ಯೋಜನೆ ಶೀಘ್ರದಲ್ಲೇ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಆದಾಯ ತೆರಿಗೆ ಇಲಾಖೆ ಅಭಿವೃದ್ಧಿಪಡಿಸುತ್ತಿರುವ ನೂತನ ಆ್ಯಪ್ನಲ್ಲಿ ಎಲ್ಲ ಸೌಲಭ್ಯಗಳನ್ನು ಆಧಾರ್ಕಾರ್ಡ್ಲಿಂಕ್ನೊಂದಿಗೆ ಸ್ಮಾರ್ಟ್ಫೋನ್ಮೂಲಕ ಪಡೆಯ ಬಹುದಾಗಿದೆ ಎಂದು ಸುದ್ದಿ ಮೂಲಗಳು ತಿಳಿಸಿದವು. ಈ ಹೊಸ ಸೌಲಭ್ಯಗಳ ಜತೆಗೆ ಆನ್ಲೈನ್ತೆರಿಗೆ ಪಾವತಿ ಮಾಡಲು ಮತ್ತು ಆ್ಯಪ್ಮೂಲಕ ಲೆಕ್ಕಪತ್ರ ವಿವರ ಸಲ್ಲಿಕೆ (ಟ್ಯಾಕ್ಸ್ರಿಟರ್ನ್ಸ್‌) ಮಾಹಿತಿ ಕೂಡ ಪಡೆಯಬಹುದು.  ಪ್ರಾಯೋಗಿಕ ಹಂತದಲ್ಲಿರುವ ಯೋಜನೆಗೆ ಕೇಂದ್ರ ಆರ್ಥಿಕ ಸಚಿವಾಲಯ ಅನುಮೋದನೆ ನೀಡಿದ ನಂತರ ಸಾರ್ವಜನಿಕ ಬಳಕೆಗೆ ಬಿಡುಗಡೆಯಾಗಲಿದೆ. ತೆರಿಗೆ ವಂಚನೆ ತಡೆಗಟ್ಟಲು ಮತ್ತು ನಾಗರಿಕರಿಗೆ ತ್ವರಿತ ಸೇವೆ ಒದಗಿಸಲು ಹೊಸ ಯೋಜನೆ ರೂಪಿಸಿರುವುದಾಗಿ ತೆರಿಗೆ ಇಲಾಖೆ ತಿಳಿಸಿದೆ. ದೇಶದಲ್ಲಿ ಈಗಾಗಲೇ 25 ಕೋಟಿ ಜನ ಪಾನ್ಕಾರ್ಡ್ಹೊಂದಿದ್ದಾರೆ. ಪ್ರತಿವರ್ಷ 2.5 ಕೋಟಿ ಜನ ಪಾನ್ಕಾರ್ಡ್ಗಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ. ರೂ. 50 ಸಾವಿರಕ್ಕೂ ಮೇಲ್ಪಟ್ಟ ವಹಿವಾಟು ನಡೆಸಲು ಬ್ಯಾಂಕುಗಳಲ್ಲಿ ಪಾನ್ಕಾರ್ಡ್ಸಂಖ್ಯೆ ನಮೂದಿಸುವುದು ಕಡ್ಡಾಯ.  ತೆರಿಗೆ ಇಲಾಖೆಯು ಜನವರಿ 1 ನಂತರ ಹೊಸ ಪಾನ್ಕಾರ್ಡ್ಗಳನ್ನು ವಿತರಿಸುತ್ತಿದೆ. ಇದರ ಮೇಲೆ ಹಿಂದಿ ಮತ್ತು ಇಂಗ್ಲೀಷ್ಭಾಷೆಯಲ್ಲಿ ವಿವರಗಳನ್ನು ನಮೂದಿಸಲಾಗಿದೆ.



2017: ನವದೆಹಲಿ: ಇಂಡಿಯನ್ಪ್ರೀಮಿಯರ್ಲೀಗ್‌ (ಐಪಿಎಲ್‌) 10ನೇ ಆವೃತ್ತಿಯ
ವೇಳಾಪಟ್ಟಿಯನ್ನು ಬಿಸಿಸಿಐ (ಭಾರತೀಯ ಕ್ರಿಕೆಟ್ನಿಯಂತ್ರಣ ಮಂಡಳಿ) ಈದಿನ ಬಿಡುಗಡೆಗೊಳಿಸಿತು. ಮೊದಲ ಪಂದ್ಯ ರಾಯಲ್ಚಾಲೆಂಜರ್ಸ್ಬೆಂಗಳೂರು ಮತ್ತು ಹಾಲಿ ಚಾಂಪಿಯನ್ಸನ್ರೈಸರ್ಸ್ಹೈದರಾಬಾದ್ತಂಡದ ನಡುವೆ ಹೈದರಾಬಾದಿನ ರಾಜೀವ್ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಏಪ್ರಿಲ್‌ 5 ರಂದು ನಡೆಯಲಿದೆ.  47 ದಿನಗಳ ಕಾಲ ನಡೆಯಲಿರುವ ಚುಟುಕು ಕ್ರಿಕೆಟ್ಸೆಣಸಾಟದಲ್ಲಿ ಪ್ರತಿ ತಂಡವು 14 ಪಂದ್ಯಗಳನ್ನು ಆಡಲಿವೆ. ದೇಶದ ಹತ್ತು ಸ್ಥಳಗಳಲ್ಲಿ ಪಂದ್ಯಗಳು ನಡೆಯಲಿವೆ. 2008ರಲ್ಲಿ ಆರಂಭವಾದ ಐಪಿಎಲ್‌, ಪ್ರತಿವರ್ಷ ಹೊಸ ಅವತಾರದೊಂದಿಗೆ ಕ್ರಿಕೆಟ್ಅಭಿಮಾನಿಗಳನ್ನು ರಂಜಿಸುವತ್ತ ಸಾಗಿದೆ. ರಾಯಲ್ಚಾಲೆಂಜರ್ಸ್ಬೆಂಗಳೂರು ತಂಡವು ಏಪ್ರಿಲ್‌ 8ರಂದು ತವರು ನೆಲವಾದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದೆಹಲಿ ಡೇರ್ಡೆವಿಲ್ಸ್ತಂಡದ ವಿರುದ್ಧ ಪಂದ್ಯ ಆಡಲಿದೆ. ಪಿಎಲ್‌ 10ನೇ ಆವೃತ್ತಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಲಿವೆ.

2009: ಬಳ್ಳಾರಿ ತಾಲ್ಲೂಕಿನ ಸಿರಿವಾರ ಬಳಿ ಉದ್ದೇಶಿತ ವಿಮಾನ ನಿಲ್ದಾಣ ವಿರೋಧಿಸಿ, ಸಮೀಪದ ಗೋಡೆಹಾಳ್ ಕ್ರಾಸ್ ಬಳಿ ರೈತರು ರಾಷ್ಟ್ರೀಯ ಹೆದ್ದಾರಿ (ಸಂಖ್ಯೆ-63) ತಡೆ ಪ್ರತಿಭಟನೆಯ ಸಮಯದಲ್ಲಿ ಸಂಭವಿಸಿದ ಪ್ರಕ್ಷುಬ್ಧ ಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿ, ಗಾಳಿಯಲ್ಲಿ ಗುಂಡು ಹಾರಿಸಿದರು. ಈ ಸಂದರ್ಭದಲ್ಲಿ ನಡೆದ ಘರ್ಷಣೆ ಹಾಗೂ ಕಲ್ಲು ತೂರಾಟದಲ್ಲಿ ಮೂವರು ಪೊಲೀಸರು ಗಾಯಗೊಂಡರು.

2009: '2009ರ ಮಿಸ್ ಇಂಡಿಯಾ ವರ್ಲ್ಡ್‌ವೈಡ್' (ಜಗತ್ತಿನಾದ್ಯಂತ ಇರುವ ಭಾರತೀಯ ಮೂಲದವರಲ್ಲಿ ಸುಂದರಿ) ಕಿರೀಟವು ಭಾರತೀಯ ಸಂಜಾತೆ, ಅಮೆರಿಕದ ಶಿಕಾಗೋದಲ್ಲಿ ನೆಲೆಸಿದ 19 ಹರೆಯದ ನಿಖಿತಾ ಶಾ ಮರ್‌ಹವಾ ಅವರ ಮುಡಿಗೇರಿತು. ಇವರು ನಾಟಕ ಶಾಲೆಯ ವಿದ್ಯಾರ್ಥಿನಿ, ಡರ್ಬಾನಿನಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಈಕೆ ಭಾರತೀಯ ಶಾಸ್ತ್ರೀಯ ನೃತ್ಯದಿಂದ ಎಲ್ಲರ ಮನಸೂರೆಗೊಂಡರು. '18ನೇ ಮಿಸ್ ಇಂಡಿಯಾ ವರ್ಲ್ಡ್‌ವೈಡ್' ಕಿರೀಟ ತೊಡುವ ಮೂಲಕ ನಿಖಿತಾ ಶಾ ಗಯಾನಾ, ಫಿಜಿ ಹಾಗೂ ದಕ್ಷಿಣ ಆಫ್ರಿಕಾದ ಭಾರತೀಯ ಸುಂದರಿಯರನ್ನೆಲ್ಲ ಹಿಂದಿಕ್ಕಿದರು. ನಿಖಿತಾ ಶಾ ಫ್ಯೂಷನ್ ನೃತ್ಯ ತೀರ್ಪುಗಾರರ ಗಮನ ಸೆಳೆಯಿತು. ಆಸ್ಟ್ರೇಲಿಯಾದ ಕಾಂಚನಾ ವರ್ಮಾ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಇವರೂ ಕೂಡ ತಮ್ಮ ಅದ್ಭುತ ನೃತ್ಯದ ಮೂಲಕ ಪ್ರೇಕ್ಷಕರನ್ನು ಸೆರೆಹಿಡಿದರು.

2009: ಮುಂಬೈ ದಾಳಿ ನಡೆದದ್ದು ಪಾಕಿಸ್ಥಾನೀಯರಿಂದಲೇ ಎಂಬುದಕ್ಕೆ ಕಲೆ ಹಾಕಲಾದ ಸಾಕ್ಷ್ಯಾಧಾರಗಳಿಗೆ ಇನ್ನೊಂದು ಪುರಾವೆ ಸೇರ್ಪಡೆಯಾಯಿತು. ಉಗ್ರರು ತಮ್ಮ ದಾಳಿ ಸಂಚನ್ನು ರೂಪಿಸಿದ ಮನೆಯನ್ನು ಪತ್ತೆ ಹಚ್ಚಲಾಯಿತು. ದಾಳಿ ನಡೆಸಿದವರ ಪೈಕಿ ಜೀವಂತ ಸೆರೆ ಸಿಕ್ಕ ಅಜ್ಮಲ್ ಕಸಾಬ್ ಮತ್ತು ಇತರರು ಕುಳಿತು ಸಂಚು ರೂಪಿಸಿದ ಈ ಮನೆ ಭಾರತದ ಗುಜರಾತ್ ಸಮುದ್ರ ತೀರದಿಂದ ಸುಮಾರು 160 ಕಿ.ಮೀ. ದೂರದಲ್ಲಿರುವ ಮೀರ್‌ಪುರ್ ಸಕ್ರೋ ಎಂಬಲ್ಲಿ ಇದೆ. ಇದು ಪಾಕಿಸ್ಥಾನದ ಸಿಂಧ್ ಪ್ರಾಂತ್ಯಕ್ಕೆ ಸೇರುತ್ತದೆ. ಈಗ ಯಾವುದೇ ಸ್ವಚ್ಛತೆ ಕಾಣದೆ ಅನಾಥವಾಗಿರುವ ಈ ಮನೆಯ ದೃಶ್ಯಗಳನ್ನು ಜಿಯೋ ಟಿ.ವಿ.ಯು ಪ್ರಸಾರ ಮಾಡಿತು. ಮುಂಬೈ ಮೇಲಿನ ದಾಳಿ ಸಂಬಂಧದ ವರದಿಗಳಿರುವ ದಿನಪತ್ರಿಕೆಗಳು ಆ ಮನೆಯ ನೆಲದ ಮೇಲೆ ಬಿದ್ದದ್ದು ಪತ್ತೆಯಾಯಿತು. ಅಲ್ಲಿನ ಗೋಡೆಗೆ ಅಂಟಿಸಲಾದ ಒಂದು ದೊಡ್ಡ ವಿಶ್ವ ಭೂಪಟದಲ್ಲಿ ಮುಂಬೈ ಮೇಲೆ ಸ್ಪಷ್ಟವಾಗಿ ಪ್ರತ್ಯೇಕವಾಗಿ 'ಗುರುತು' ಹಾಕಲಾಗಿತ್ತು. ಮುಖ್ಯ ಕೊಠಡಿಯಲ್ಲಿ ಎರಡು ಮಂಚ, ಹೊದಿಕೆ ಮತ್ತು ಹಾಸಿಗೆಗಳು ಇದ್ದರೆ ಮೂಲೆಯೊಂದರಲ್ಲಿ ಹಲವಾರು ಕೋವಿ ನಳಿಕೆಗಳು ಇದ್ದವು.. ಕಟ್ಟು ಹಾಕಿಸಿದ ಚಿಕ್ಕ ದೋಣಿಯೊಂದರ ಚಿತ್ರವನ್ನೂ ಗೋಡೆಗೆ ತೂಗುಹಾಕಲಾಗಿತ್ತು. ಮಮ್ತಾಜ್ ಎಂಬಾತ ಈ ಮನೆಯ ಮಾಲೀಕನಾಗಿದ್ದು, 'ಅಲ್ಲಿ ನೆಲೆಸಿದ್ದವರು ಮನೆ ಬಳಕೆ ಸಂಬಂಧ ತನಗೆ 15000 ರೂ. ನೀಡಿದ್ದರು' ಎಂದು ವಾಹಿನಿಗೆ ತಿಳಿಸಿದ.

2009: ರಷ್ಯಾದ ಎಲೆನಾ ಇಸಿನ್ಬಾಯೇವಾ ಅವರು ವಿಶ್ವ ಒಳಾಂಗಣ ಪೋಲ್‌ವಾಲ್ಟ್ ಸ್ಪರ್ಧೆಯಲ್ಲಿ ಮತ್ತೆ ಹೊಸ ದಾಖಲೆ ನಿರ್ಮಿಸಿದರು. ಉಕ್ರೇನಿನ ಡೊಂಟೆಸ್ಕ್‌ನಲ್ಲಿ ನಡೆದ ಬುಕ್ಕಾ ಸ್ಮಾರಕ ವಾರ್ಷಿಕ ಅಥ್ಲೆಟಿಕ ಚಾಂಪಿಯನ್‌ಶಿಪ್ಪಿನಲ್ಲಿ ರಷ್ಯಾದ ಅಥ್ಲೀಟ್ 5 ಮೀಟರ್ ಎತ್ತರ ಜಿಗಿಯುವ ಮೂಲಕ ಈ ಸಾಧನೆ ಮಾಡಿದರು. ಇಪ್ಪತ್ತಾರು ವರ್ಷ ವಯಸ್ಸಿನ ಇಸಿನ್ಬಾಯೇವಾ ಅವರು ಹೊಸ ದಾಖಲೆ ನಿರ್ಮಿಸುವ ಹಾದಿಯಲ್ಲಿ ಕಳೆದ ವರ್ಷ ತಾವೇ 4.95 ಮೀಟರ್ ಎತ್ತರದೊಂದಿಗೆ ಸ್ಥಾಪಿಸಿದ್ದ ದಾಖಲೆಯನ್ನು ಉತ್ತಮ ಪಡಿಸಿದರು. 4.81 ಮೀಟರಿನೊಂದಿಗೆ ಆರಂಭಿಸಿದ ರಷ್ಯಾದ ಅಥ್ಲೀಟ್ ಮೊದಲ ಅವಕಾಶದಲ್ಲಿ ಬ್ರೆಜಿಲಿನ ಫ್ಯಾಬಿಯನ್ ಮುರರ್ ಅವರ ಹಿಂದಿದ್ದರು.

2008: ಭಾರತದ ಕೃಷಿ ರಂಗದ ಪುನಶ್ಚೇತನಕ್ಕೆ ಬಂಡವಾಳ ಹೂಡಿಕೆ ಹೆಚ್ಚಳ, ದೊಡ್ಡ ಪ್ರಮಾಣದಲ್ಲಿ ಬೆಳೆ ವಿಮೆ ಸೌಲಭ್ಯ ಒದಗಿಸುವುದು, ನೀರಾವರಿ ಮತ್ತು ವಿದ್ಯುತ್ತಿಗೆ ವಾಸ್ತವತೆಯ ತಳಹದಿ ಮೇಲೆ ಶುಲ್ಕ ನಿಗದಿ ಮತ್ತು ಕೃಷಿ ಕಾರ್ಮಿಕರಿಗೆ ಕೃಷಿಯೇತರ ಚಟುವಟಿಕೆಗಳಲ್ಲಿ ಉದ್ಯೋಗ ಅವಕಾಶ ಒದಗಿಸುವುದು ಸೇರಿದಂತೆ ಅನೇಕ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಶ್ವಬ್ಯಾಂಕಿನ `ವಿಶ್ವ ಅಭಿವೃದ್ಧಿ ವರದಿ' ಅಭಿಪ್ರಾಯಪಟ್ಟಿತು. ಭಾರತ ಸೇರಿದಂತೆ ಏಷ್ಯಾದ 60 ಕೋಟಿಯಷ್ಟು ಬಡ ಜನರ ಕಲ್ಯಾಣಕ್ಕೆ ಕೃಷಿ ರಂಗದಲ್ಲಿ ಹೂಡುವ ಬಂಡವಾಳವನ್ನು ಗಮನಾರ್ಹವಾಗಿ ಹೆಚ್ಚಿಸಬೇಕು. ಭಾರತದಲ್ಲಿ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಂಪನ್ಮೂಲದ ಅಪವ್ಯಯ ಆಗುತ್ತಿದೆ ಎಂದೂ ವರದಿ ಹೇಳಿತು.

2008: ಮೊಗಲ್ ಚಕ್ರವರ್ತಿ ಅಕ್ಬರನ ಪ್ರೇಮ ಕಥೆಯನ್ನು ಆಧರಿಸಿ ಅಶುತೋಶ್ ಗೌರಿಕರ್ ಅವರು ನಿರ್ಮಿಸಿರುವ ಜೋಧಾ ಅಕ್ಬರ್ ಚಿತ್ರವು ಜಗತ್ತಿನ 26 ರಾಷ್ಟ್ರಗಳಲ್ಲಿ ಸುಮಾರು 1500 ಚಿತ್ರಮಂದಿರಗಳಲ್ಲಿ ತೆರೆ ಕಂಡಿತು. ಇದುವರೆಗೆ ಭಾರತದ ಚಿತ್ರರಂಗದ ಇತಿಹಾಸದಲ್ಲಿ ಏಕಕಾಲಕ್ಕೆ 26 ರಾಷ್ಟ್ರಗಳಲ್ಲಿ 1500 ಚಿತ್ರಮಂದಿರಗಳಲ್ಲಿ ಪ್ರದರ್ಶನ ಆರಂಭವಾದ ದಾಖಲೆಗಳು ಇರಲಿಲ್ಲ. ಭಾರತದಲ್ಲಿ 1200 ಚಿತ್ರ ಮಂದಿರಗಳಲ್ಲಿ ಬಿಡುಗಡೆಯಾಗುವುದು ಸಹ ಸಾರ್ವಕಾಲಿಕ ದಾಖಲೆಯೇ. ಈ ಚಿತ್ರವನ್ನು ತೆಲಗು ಮತ್ತು ತಮಿಳಿನಲ್ಲಿ ಡಬ್ ಮಾಡಲಾಗಿದ್ದು ಇದನ್ನು ನಂತರ ಬಿಡುಗಡೆ ಮಾಡಲಾಗುತ್ತದೆ. ಇಂಗ್ಲಿಷ್, ಅರೆಬಿಕ್ ಮತ್ತು ಡಚ್ ಭಾಷೆಯ ಉಪಶೀರ್ಷಿಕೆಯನ್ನು ನೀಡಲಾಗಿದೆ.

2008: ರಜಪೂತ ಗುಂಪುಗಳ ಪ್ರತಿಭಟನೆಯ ಪರಿಣಾಮವಾಗಿ ಅಶುತೋಷ್ ಗೌರೀಕರ್ ನಿರ್ದೇಶನದ `ಜೋಧಾ ಅಕ್ಬರ್' ಚಿತ್ರವು ರಾಜಸ್ಥಾನದ ಚಿತ್ರಮಂದಿರಗಳ್ಲಲಿ ಬಿಡುಗಡೆಯಾಗಲಿಲ್ಲ. `ಮೊಘಲ್ ಚಕ್ರವರ್ತಿ ಅಕ್ಬರ್ ಆಧಾರಿತ ಚಿತ್ರದಲ್ಲಿ ಚಾರಿತ್ರಿಕ ವಾಸ್ತವಾಂಶಗಳನ್ನು ತಿರುಚಲಾಗಿದೆ' ಎಂದು ರಜಪೂತ ಸಂಘಟನೆಗಳು ಚಿತ್ರ ಮಂದಿರಗಳ ಮುಂದೆ ಪ್ರತಿಭಟಿಸಿದವು. ಹೀಗಾಗಿ ಜೈಪುರ ನಗರದ 9 ಚಿತ್ರಮಂದಿರಗಳು ಸೇರಿದಂತೆ ರಾಜಸ್ಥಾನದಾದ್ಯಂತ 30 ಚಿತ್ರಮಂದಿರಗಳಲ್ಲಿ ಚಲನಚಿತ್ರ ಬಿಡುಗಡೆ ಆಗಲಿಲ್ಲ.

2008: ಕೆನಡಾದಲ್ಲಿ ಜನರು ಮಾತನಾಡುವ ನಾಲ್ಕನೇ ದೊಡ್ಡ ಭಾಷೆ ಪಂಜಾಬಿ ಎಂಬುದು ಗೊತ್ತೇ? ಅಧಿಕೃತ ಅಂಕಿಅಂಶವೊಂದು ಇದನ್ನು ದೃಢಪಡಿಸಿತು. ಈ ಅಂಕಿ ಅಂಶದ ಪ್ರಕಾರ ಇಂಗ್ಲಿಷ್ ಮತ್ತು ಫ್ರೆಂಚ್ ಕೆನಡಾ ದೇಶದ ಅಧಿಕೃತ ಭಾಷೆಗಳಾಗಿದ್ದು, ಮೂರನೇ ದೊಡ್ಡ ಭಾಷೆಯಾದ ಚೀನೀ ಭಾಷೆಯನ್ನು ಶೇ 2.6 ಮಂದಿ ಹಾಗೂ ಪಂಜಾಬಿಯನ್ನು ಶೇ 0.8 ಮಂದಿ ಮಾತನಾಡುತ್ತಾರೆ.

2008: ನ್ಯೂಯಾರ್ಕಿನ ಉತ್ತರ ಇಲಿನಾಯ್ಸ್ ವಿಶ್ವವಿದ್ಯಾಲಯದ ಆವರಣದಲ್ಲಿ ಮಾಜಿ ವಿದ್ಯಾರ್ಥಿಯೊಬ್ಬ ಆರು ವಿದ್ಯಾರ್ಥಿಗಳನ್ನು ಗುಂಡಿಟ್ಟು ಕೊಂದು, ಬಳಿಕ ಸ್ವತಃ ತನಗೇ ಗುಂಡಿಟ್ಟುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆಯಿತು.

2008: ರಾಜ್ಯದ ವಿವಿಧ ಧಾರ್ಮಿಕ ಕೇಂದ್ರಗಳಲ್ಲಿ ಪ್ರಾಣಿಬಲಿ ತಡೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಎಲ್ಲ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ತತ್ ಕ್ಷಣ ಸುತ್ತೋಲೆ ಕಳುಹಿಸಬೇಕು ಎಂದು ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತು. ಅಖಿಲ ಕರ್ನಾಟಕ ಪ್ರಾಣಿ ದಯಾ ಸಂಘದ ಕಾರ್ಯದರ್ಶಿ ಪಿ.ಉತ್ತಮಚಂದ್ ದುಗ್ಗಡ್ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಮತ್ತು ನ್ಯಾಯಮೂರ್ತಿ ಬಿ. ಎಸ್. ಪಾಟೀಲ್ ಅವರನ್ನು ಒಳಗೊಂಡ ಪೀಠ ಈ ಆದೇಶ ನೀಡಿತು.

2008: ಬೆಲ್ಜಿಯಂ ಸರ್ಕಾರದಿಂದ ಪುರಸ್ಕಾರ ಸ್ವೀಕರಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಐಸಿಸಿ ಅಧ್ಯಕ್ಷೆ ಹಾಗೂ ಸಂಸದೆ ಸೋನಿಯಾ ಗಾಂಧಿ ಅವರಿಗೆ ಚುನಾವಣಾ ಆಯೋಗ ನೋಟಿಸ್ ಜಾರಿ ಮಾಡಿತು.

2007: ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇನ್ನೊಂದು ಹೆಜ್ಜೆ ಇಟ್ಟ ರೈಲ್ವೆ ಇಲಾಖೆ ರೈಲ್ವೆ ಟಿಕೆಟುಗಳ ಮಾರಾಟಕ್ಕಾಗಿ ಐಸಿಐಸಿಐ ಬ್ಯಾಂಕಿನೊಂದಿಗೆ ಒಪ್ಪಂದ ಮಾಡಿಕೊಂಡಿತು. ಇದರಿಂದಾಗಿ ದೇಶದ 125 ನಗರಗಳ ಪ್ರಮುಖ ವಾಣಿಜ್ಯ ಕೇಂದ್ರಗಳು ಮತ್ತು ಶಾಪಿಂಗ್ ಮಾಲುಗಳಲ್ಲಿ ಇನ್ನು ಮುಂದೆ ರೈಲ್ವೆ ಟಿಕೆಟುಗಳು ದೊರೆಯಲು ಅವಕಾಶ ಲಭಿಸುವುದು. ಭಾರತೀಯ ರೈಲ್ವೆ ಪ್ರವಾಸೋದ್ಯಮ ನಿಗಮದ ಹಿರಿಯ ಅಧಿಕಾರಿ ರಜನಿ ಹಸಿಜಾ ಮತ್ತು ಐಸಿಐಸಿಐ ಬ್ಯಾಂಕಿನ ಸಚಿನ್ ಖಂಡೇಲ್ ವಾಲ ತಿಳುವಳಿಕೆ ಒಪ್ಪಂದಕ್ಕೆ ಸಹಿ ಮಾಡಿದರು. ರೈಲ್ವೆ ಸಚಿವ ಲಾಲು ಪ್ರಸಾದ್ ಮತ್ತು ಖಾತೆಯ ರಾಜ್ಯ ಸಚಿವರಾದ ಎನ್. ಜೆ. ರಾತಾವ್, ಆರ್. ವೇಲು ಮತ್ತು ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

2007: ಕಾವೇರಿ ನ್ಯಾಯಮಂಡಳಿಯ ತೀರ್ಪನ್ನು ವಿರೋಧಿಸಿ ಕೇಂದ್ರ ಸರ್ಕಾರದ ಮೇಲೆ ಸಾಮೂಹಿಕವಾಗಿ ಒತ್ತಡ ತರುವುದರ ಜೊತೆಗೆ ಕಾನೂನು ಹೋರಾಟವನ್ನೂ ಮುಂದುವರೆಸಲು ಬೆಂಗಳೂರಿನಲ್ಲಿ ಸೇರಿದ ಕರ್ನಾಟಕದ ಸಂಸದರು ಹಾಗೂ ಕಾವೇರಿ ಕೊಳ್ಳದ ಶಾಸಕರ ಸಭೆ ಒಕ್ಕೊರಲಿನ ತೀರ್ಮಾನ ಕೈಗೊಂಡಿತು.

2007: ಭಾರತೀಯ ವಿದ್ಯಾಭವನವು ಗುರು ಗಂಗೇಶ್ವರಾನಂದ ವೇದರತ್ನ ಪುರಸ್ಕಾರಕ್ಕಾಗಿ ಋಗ್ವೇದ ವಿದ್ವಾಂಸ ಡಾ. ಎನ್. ಎಸ್. ಅನಂತ ರಂಗಾಚಾರ್ಯ (ಕರ್ನಾಟಕ), ಕೃಷ್ಣ ಯಜುರ್ವೇದ ವಿದ್ವಾಂಸ ಪಿ.ಎಸ್. ಅನಂತನಾರಾಯಣ ಸೋಮಯಾಜಿ (ತಮಿಳುನಾಡು), ಸಾಮವೇದ ವಿದ್ವಾಂಸ ಶಿವರಾಮ ತ್ರಿಪಾಠಿ, ಅಥರ್ವಣ ವೇದ ವಿದ್ವಾಂಸ ಕೆ.ವಿ. ಬಾಲಸುಬ್ರಹ್ಮಣ್ಯನ್ (ಆಂಧ್ರ ಪ್ರದೇಶ), ವೇದ ಮತ್ತು ಸಂಸ್ಕೃತಿ ವಿದ್ವಾಂಸರಾದ ಡಾ. ಕಪಿಲದೇವ ತ್ರಿವೇದಿ (ಉತ್ತರ ಪ್ರದೇಶ) ಹಾಗೂ ಡಾ. ದಾಮೋದರ ಝಾ (ಪಂಜಾಬ್) ಅವರನ್ನು ಆಯ್ಕೆ ಮಾಡಿತು.

2007: ಕೊಯಮತ್ತೂರು ಪಶುವೈದ್ಯಕೀಯ ವಿಶ್ವವಿದ್ಯಾಲಯದ ಮೂವರು ವಿದ್ಯಾರ್ಥಿಗಳು ಬಸ್ ಬೆಂಕಿ ದುರಂತದಲ್ಲಿ ಮೃತರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ ಏಳು ವರ್ಷಗಳ ನಂತರ ಸೇಲಂನ ಸೆಷನ್ಸ್ ನ್ಯಾಯಾಲಯವು ತಪ್ಪಿತಸ್ಥರಾದ ಮೂವರು ಏಐಎಡಿಎಂಕೆ ಸದಸ್ಯರಿಗೆ ಶಿಕ್ಷೆ ವಿಧಿಸಿ, 25 ಮಂದಿಗೆ ದಂಡ ವಿಧಿಸಿತು. ಮೂವರನ್ನು ಖುಲಾಸೆ ಮಾಡಿತು. 2000ದ ಫೆ.2ರಂದು ಪ್ರೆಸೆಂಟ್ ಸ್ಟೇ ಹೋಟೆಲ್ ಹಗರಣಕ್ಕೆ ಸಂಬಂಧಿಸಿದಂತೆ ಚೆನ್ನೈನ ವಿಶೇಷ ನ್ಯಾಯಾಲಯವು ತಮಿಳುನಾಡಿನ ಆಗಿನ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಒಂದು ವರ್ಷದ ಕಠಿಣ ಶಿಕ್ಷೆ ವಿಧಿಸಿದ್ದರ ವಿರುದ್ಧ ಪ್ರತಿಭಟನೆ ನಡೆದಾಗ ಈ ಘಟನೆ ಸಂಭವಿಸಿತ್ತು. ಧರ್ಮಪುರಿ ಬಳಿ ಕೊಯಮತ್ತೂರು ವಿವಿಯ 40 ವಿದ್ಯಾರ್ಥಿನಿಯರು ಪ್ರಯಾಣ ಮಾಡುತ್ತಿದ್ದ ಬಸ್ಸಿಗೆ ಏಐಎಡಿಎಂಕೆ ಕಾರ್ಯಕರ್ತರು ಬೆಂಕಿ ಹಚ್ಚಿದರು. ದುರಂತದಲ್ಲಿ ಕೋಕಿಲವಾಣಿ, ಗಾಯತ್ರಿ ಮತ್ತು ಹೇಮಲತ ಎಂಬ ವಿದ್ಯಾರ್ಥಿನಿಯರು ಅಸು ನೀಗಿದ್ದರು.

2006: ಹೂಸನ್ನಿನಲ್ಲಿ ಅನಿವಾಸಿ ಭಾರತೀಯ ಅರುಳ್ ಮಣಿ ಪೆರಿಸ್ವಾಮಿ ಅವರಿಗೆ ಅಮೆರಿಕದ ಭಾರತೀಯ ರಾಯಭಾರ ಕಚೇರಿಯ ಕೌನ್ಸುಲೇಟ್ ಜನರಲ್ ಎಸ್. ಎಂ. ಗವಾಯಿ ಅವರು ಅಮೆರಿಕದಲ್ಲೇ ಪ್ರಥಮ ಸಾಗರೋತ್ತರ ಭಾರತೀಯ ಪೌರ ಕಾರ್ಡ್ನೀಡಿದರು. ಇವರ ಜೊತೆಯಲ್ಲೇ 37 ಅಮೆರಿಕದ ಭಾರತೀಯರಿಗೂ ಈ ಕಾರ್ಡ್ನೀಡಲಾಯಿತು.

2006: ತೈವಾನಿನ ಮಾಜಿ ಪ್ರಧಾನಿ, 1980ರ ದ್ವೀಪದ ಆರ್ಥಿಕ ವಿಸ್ತರಣಾ ಕಾರ್ಯಕ್ರಮ ರೂವಾರಿ ಸನ್ ಯುನ್- ಸುವಾನ್ (92) ಅವರು ಹೃದಯಾಘಾತದಿಂದ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು. 1978ರಿಂದ 1984ರ ನಡುವಣ ಅವಧಿಯಲ್ಲಿ ಅವರು ತೈವಾನಿನ ಪ್ರಧಾನಿಯಾಗಿದ್ದರು. ಅದಕ್ಕೆ ಮೊದಲು 9 ವರ್ಷಗಳ ಕಾಲ ಆರ್ಥಿಕ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸಿದ್ದರು. 20 ವರ್ಷಗಳ ಹಿಂದೆ ಅವರು ಪಾರ್ಶ್ವವಾಯುವಿಗೆ ತುತಾಗಿದ್ದರು. ಇದರೊಂದಿಗೆ ಅವರ ರಾಜಕೀಯ ಜೀವನಕ್ಕೆ ತೆರೆ ಬಿದ್ದಿತ್ತು.

2006: ಒಡಲಲ್ಲಿ ಹತ್ತಾರು ವಿಷಯುಕ್ತ ರಾಸಾಯನಿಕಗಳನ್ನು ತುಂಬಿಕೊಂಡು ಒಡೆಯುವ ಸಲುವಾಗಿ ಭಾರತಕ್ಕೆ ಹೊರಟಿದ್ದ `ಕ್ಲೆಮೆನ್ಸು' ವಿಮಾನ ವಾಹಕ ಫ್ರೆಂಚ್ ಸಮರ ನೌಕೆಗೆ ಮತ್ತೆ ಫ್ರಾನ್ಸಿಗೆ ಮರಳುವಂತೆ ಫ್ರೆಂಚ್ ಅಧ್ಯಕ್ಷ ಜಾಕಿಸ್ ಚಿರಾಕ್ ಆಜ್ಞಾಪಿಸಿದರು. ಫ್ರಾನ್ಸಿನ ಉನ್ನತ ಆಡಳಿತಾತ್ಮಕ ನ್ಯಾಯಾಲಯವು ಕ್ಲೆಮೆನ್ಸು ನೌಕೆಯನ್ನು ಭಾರತದ ಗುಜರಾತಿಗೆ ಕಳುಹಿಸುವುದನ್ನು ತಡೆಯಲು ಆದೇಶ ನೀಡಿದ ಹಿನ್ನೆಲೆಯಲ್ಲಿ ಅಧ್ಯಕ್ಷರು ಈ ಕ್ರಮ ಕೈಗೊಂಡರು. ಫಾನ್ಸಿನಿಂದ ಡಿಸೆಂಬರ್ 31ರಂದು ಕ್ಲೆಮೆನ್ಸು ಸಮರ ನೌಕೆಯು ಭಾರತದತ್ತ ಹೊರಟಿತ್ತು. ಈ ಹಡಗನ್ನು ಒಡೆಯುವುದರಿಂದ ಭಾರತದಲ್ಲಿ ಪರಿಸರ ಹಾಗೂ ಆರೋಗ್ಯಕ್ಕೆ ಅಪಾರ ಹಾನಿಯಾಗುವುದು ಎಂದು ಗ್ರೀನ್ ಪೀಸ್ ಮತ್ತು ಮೂರು ಕಲ್ನಾರು ವಿರೋಧಿ ಗುಂಪುಗಳು ದೂರಿದ್ದವು.

1978: ಲಾಸ್ ವೇಗಾಸಿನಲ್ಲಿ ನಡೆದ ಪಂದ್ಯದಲ್ಲಿ ಮಹಮ್ಮದ್ ಅಲಿ ಎದುರಾಳಿ ಲಿಯೋನ್ ಸ್ಫಿಂಕ್ಸ್ ಎದುರು ಸೋತು ತನ್ನ ಜಾಗತಿಕ ಬಾಕ್ಸಿಂಗ್ ಪ್ರಶಸ್ತಿಯನ್ನು ಕಳೆದುಕೊಂಡರು.

1955: ರಾಷ್ಟ್ರದ ಕೆಲವು ಅತ್ಯಂತ ಸುರಕ್ಷಿತ ಕಂಪ್ಯೂಟರುಗಳಲ್ಲಿನ ಭದ್ರತಾ ವ್ಯವಸ್ಥೆಯನ್ನು ಹಾಳುಗೆಡವಿದ ಆರೋಪದಲ್ಲಿ ಕೆವಿನ್ ಮಿಟ್ನಿಕ್ ನನ್ನು ಎಫ್ ಬಿ ಐ ಬಂಧಿಸಿತು. ಐದು ವರ್ಷಗಳ ಸೆರೆವಾಸದ ಬಳಿಕ 2001ರ ಜನವರಿಯಲ್ಲಿ ಆತನನ್ನು ಬಿಡುಗಡೆ ಮಾಡಲಾಯಿತು.

1942: ಎರಡನೇ ಜಾಗತಿಕ ಸಮರಕಾಲದಲ್ಲಿ ಜಪಾನೀ ಪಡೆಗಳಿಗೆ ಸಿಂಗಪುರವು ಶರಣಾಯಿತು.

1922: ಹೇಗ್ ನಲ್ಲಿ ಖಾಯಂ ಅಂತಾರಾಷ್ಟ್ರೀಯ ನ್ಯಾಯಾಲಯದ ಮೊದಲ ಸಮಾವೇಶ ನಡೆಯಿತು.

1903: ನ್ಯೂಯಾರ್ಕಿನ ಬ್ರೂಕ್ಲಿನ್ನಿನ ಆಟಿಕೆಗಳ ಅಂಗಡಿಯೊಂದರ ಮಾಲೀಕರೂ, ರಷ್ಯದ ವಲಸೆಗಾರರೂ ಆಗಿದ್ದ ಮೋರ್ರಿಸ್ ಮತ್ತು ರೋಸ್ ಮಿಚ್ ಟೊಮ್ ನ್ಯೂಯಾರ್ಕಿನಲ್ಲಿ ಮೊತ್ತ ಮೊದಲ ಬಾರಿಗೆ `ಟೆಡ್ಡಿ ಬೇರ್'ನ್ನು ಮಾರುಕಟ್ಟೆಗೆ ತಂದರು. ಅಧ್ಯಕ್ಷ ಥಿಯೋಡೋರ್ ರೂಸ್ ವೆಲ್ಟ್ ಹೆಸರಿನ ಜೊತೆಗೆ ಅವರು ಇದನ್ನು ತಳಕು ಹಾಕಿದರು. (ರೂಸ್ ವೆಲ್ಟ್ ಅವರಿಗೆ `ಟೆಡ್ಡಿ' ಎಂಬ ಅಡ್ಡ ಹೆಸರು ಇತ್ತು. 1902ರಲ್ಲಿ ಬೇಟೆಯಾಡುತ್ತಿದ್ದಾಗ ಅನಾಥವಾದ ಕರಡಿಮರಿಯೊಂದರ ಪ್ರಾಣ ರಕ್ಷಿಸಲು ನಿರ್ಧರಿಸಿದ್ದರಿಂದ ಈ ಅಡ್ಡ ಹೆಸರು ಅವರಿಗೆ ಬಂತು. ಇದು ವಾಷಿಂಗ್ಟನ್ ಪೋಸ್ಟ್ ಪತ್ರಿಕೆಯಲ್ಲಿ ಕಾರ್ಟೋನಿಗೆ ವಸ್ತುವಾಯಿತು. ಇದರಿಂದ ಸ್ಫೂರ್ತಿ ಪಡೆದ ಮಿಚ್ ಟೊಮ್ ಅಂಗಡಿಯ ಕಿಟಕಿಯಲ್ಲಿಪ್ರದರ್ಶನಕ್ಕೆ ಇಟ್ಟ ತಮ್ಮ ಆಟಿಕೆಗೆ `ಟೆಡ್ಡಿ ಬೇರ್' ಎಂದು ಹೆಸರು ಇಟ್ಟರು. ಈ `ಕರಡಿಮರಿ'ಯ ಜನಪ್ರಿಯತೆ ಈಗ ನಿಮಗೆಲ್ಲ ಗೊತ್ತು!

1869: ಪರ್ಷಿಯಾ ಹಾಗೂ ಉರ್ದು ಭಾಷೆಗಳಲ್ಲಿ ಸಮಾನವಾಗಿ ಪ್ರಭುತ್ವ ಹೊಂದಿದ್ದ ಭಾರತದ ಖ್ಯಾತ ಕವಿ, ಸಾಹಿತಿ ಮಿರ್ಜಾ ಅಸದುಲ್ಲಾ ಖಾನ್ ಘಾಲಿಬ್ (1797-1869) ದೆಹಲಿಯಲ್ಲಿ ತಮ್ಮ 71ನೇ ವಯಸ್ಸಿನಲ್ಲಿ ನಿಧನರಾದರು.

1858: ವಿಲಿಯಂ ಹೆನ್ರಿ ಪಿಕರಿಂಗ್ (1858-1938) ಹುಟ್ಟಿದ ದಿನ. ಅಮೆರಿಕನ್ ಖಗೋಳ ತಜ್ಞನಾದ ಈತ 1919ರಲ್ಲಿ ಶನಿಗ್ರಹದ ಒಂಭತ್ತನೇ ಉಪಗ್ರಹ `ಫೋಬೆ'ಯನ್ನು ಕಂಡು ಹಿಡಿದ.

1564: ಇಟಲಿಯ ಖಗೋಳ ಭೌತ ತಜ್ಞ ಗೆಲಿಲಿಯೋ ಗೆಲೀಲಿ (1564-1642) ಹುಟ್ಟಿದ ದಿನ.

No comments:

Post a Comment