ಇಂದಿನ ಇತಿಹಾಸ History Today ಸೆಪ್ಟೆಂಬರ್ 17
17: ನವಗಾಮ್ (ಗುಜರಾತ್): ಬರೋಬ್ಬರಿ 56 ವರ್ಷಗಳ ಬಳಿಕ ಕಾಮಗಾರಿ ಪೂರ್ಣಗೊಂಡಿರುವ ನರ್ಮದಾ ನದಿಯ ಸರ್ದಾರ್ ಸರೋವರ ಅಣೆಕಟ್ಟನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನವಾದ ಈದಿನ ಲೋಕಾರ್ಪಣೆ ಮಾಡಿದರು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಈ ಅಣೆಕಟ್ಟಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಎಲ್ಲಿದೆ ಅಣೆಕಟ್ಟು? ಗುಜರಾತ್‌ನ ನರ್ಮದಾ ಜಿಲ್ಲೆಯ ನವಗಾಮ್ನಲ್ಲಿ ನರ್ಮದಾ ನದಿಗೆ ಅಡ್ಡಲಾಗಿ ಈ ಅಣೆಕಟ್ಟನ್ನು ಕಟ್ಟಲಾಗಿದೆ. ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ ರಾಜ್ಯಗಳ ನೀರಾವರಿ, ವಿದ್ಯುತ್ ಬೇಡಿಕೆಯನ್ನು ಪೂರೈಸಲು ಈ ಅಣೆಕಟ್ಟೆಗೆ 1961 ಏ.5ರಂದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಏನು ಪ್ರಯೋಜನ? ನೀರಾವರಿ, ಕುಡಿವ ನೀರು, ವಿದ್ಯುತ್ ಉತ್ಪಾದನೆ ಉದ್ದೇಶದಿಂದ ಅಣೆಕಟ್ಟು ನಿರ್ಮಾಣಕ್ಕೆ ಯೋಜಿಸಲಾಗಿತ್ತು. ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರಕ್ಕೆ ನೀರಾವರಿ, ವಿದ್ಯುತ್ ಉದ್ದೇಶದಿಂದ ಈ ಅಣೆಕಟ್ಟು ನಿರ್ಮಾಣಕ್ಕೆ ಕೈ ಹಾಕಲಾಗಿತ್ತು. 20 ಲಕ್ಷ ಜನರಿಗೆ ಆಹಾರ ಉತ್ಪಾದನೆಗೆ, 30 ಲಕ್ಷ ಜನರ ದೈನಂದಿನ ಬಳಕೆ ಮತ್ತು ಕೈಗಾರಿಕಾ ಬಳಕೆಗೆ, ಗುಜರಾತ್ ಒಂದರಲ್ಲೇ 17.82 ಲಕ್ಷ ಹೆಕ್ಟೇರ್ ಜಾಗಕ್ಕೆ ನೀರಾವರಿ ಉದ್ದೇಶದಿಂದ ಈ ಅಣೆಕಟ್ಟು ಕಟ್ಟುವ ನಿರ್ಧಾರ ಮಾಡಲಾಗಿತ್ತು. ನೀರು, ವಿದ್ಯುತ್ ಹಂಚಿಕೆ: ಸರ್ದಾರ್ ಸರೋವರ್ ಅಣೆಕಟ್ಟಿನ ಪ್ರಯೋಜನ ವನ್ನು ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ. ಗುಜರಾತ್ಗೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಉತ್ಪಾದನೆಯಾದ ವಿದ್ಯುತ್ತನ್ನು ಮಹಾರಾಷ್ಟ್ರ, ಗುಜರಾತ್ ಮಧ್ಯಪ್ರದೇಶಗಳು ಹಂಚಿಕೊಳ್ಳುತ್ತವೆ. ಮಧ್ಯಪ್ರದೇಶ ಶೇ.57ರಷ್ಟು ವಿದ್ಯುತ್ ಅನ್ನು ಪಡೆದುಕೊಂಡರೆ, ಮಹಾರಾಷ್ಟ್ರ ಶೇ.27ರಷ್ಟು ವಿದ್ಯುತ್, ಗುಜರಾತ್ ಶೇ.16ರಷ್ಟು ವಿದ್ಯುತ್ತನ್ನು ಪಡೆದುಕೊಳ್ಳುತ್ತವೆ. ಇನ್ನು ನೀರನ್ನು ನಾಲ್ಕು ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತದೆ. ಮಧ್ಯಪ್ರದೇಶ ಶೇ.65.18ರಷ್ಟು ನೀರು ಪಡೆದುಕೊಂಡರೆ, ಗುಜರಾತ್ ಶೇ.32.14ರಷ್ಟು, ರಾಜಸ್ಥಾನ ಶೇ.1.79ರಷ್ಟು, ಮಹಾ ರಾಷ್ಟ್ರ ಶೇ.0.89ರಷ್ಟು ನೀರನ್ನು ಪಡೆಯಲಿದೆ. ಗುಜರಾತ್ ಸರಕಾರ ಇದೇ ಅಣೆಕಟ್ಟಿನ ಕಾಲುವೆಗಳ ಮೇಲೆ ಸೋಲಾರ್ ಪ್ಯಾನೆಲ್‌ಗಳನ್ನು ಅಳವಡಿಸಿದ್ದು, ಅದರಿಂದಲೂ ವಿದ್ಯುತ್ ಪಡೆವ ಯೋಜನೆ ರೂಪಿಸಿದೆ. ದೇಶದ ಅತಿ ದೊಡ್ಡ ಅಣೆಕಟ್ಟು: ಸರ್ದಾರ್ ಸರೋವರ್ ಅಣೆಕಟ್ಟು ದೇಶದಲ್ಲಿ ದೊಡ್ಡ ಅಣೆಕಟ್ಟುಗಳಲ್ಲಿ ಒಂದು. ವಿಶ್ವದಲ್ಲಿ 2ನೆಯ ಅತಿ ದೊಡ್ಡ ಅಣೆಕಟ್ಟು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಮೆರಿಕದ ಗ್ರ್ಯಾಂಡ್ ಕೌಲೀ ಡ್ಯಾಂ ವಿಶ್ವದ ಅತಿ ದೊಡ್ಡ ಅಣೆಕಟ್ಟು ಎಂಬ ಹೆಸರು ಹೊಂದಿದೆ. 1.2 ಕಿ. ಮೀ. ಉದ್ದವಿರುವ ಈ ಅಣೆಕಟ್ಟು 138 ಮೀ. ಎತ್ತರ ಹೊಂದಿದೆ. ವೆಚ್ಚದಲ್ಲೂ ದಾಖಲೆ: ಸರ್ದಾರ್ ಸರೋವರ್ ಅಣೆಕಟ್ಟು ಆದ ವೆಚ್ಚ ಒಟ್ಟು 65,369 ಕೋಟಿ ರೂ. ಅಣೆಕಟ್ಟಿನ ಸಂಪೂರ್ಣ ಕೆಲಸವಾದಾಗ ಇದರ ವೆಚ್ಚ 90 ಸಾವಿರ ಕೋಟಿ ಗಳಾಗಬಹುದು ಎಂದು ಅಂದಾಜಿಸಲಾಗಿದೆ. ಅಣೆ ಕಟ್ಟು ಕಟ್ಟುವ ಸಂದರ್ಭ ಇದರ ವೆಚ್ಚ 650 ಕೋಟಿ ರೂ. ಆಗಬಹುದು ಎಂದು ಅಂದಾಜಿಸಲಾಗಿತ್ತು. 1986-87ರಲ್ಲಿ ಇದರ ಅಂದಾಜು ವೆಚ್ಚವನ್ನು 6,406 ಕೋ. ರೂ.ಗೆ ಹೆಚ್ಚಿಸಲಾಗಿತ್ತು. 2014 ಮಾರ್ಚ್ ವೇಳೆಗೆ 65 ಸಾವಿರ ಕೋಟಿ ವೆಚ್ಚವಾಗಿದ್ದಾಗಿ ಹೇಳಲಾಗಿತ್ತು. ಅತಿ ವಿವಾದಕ್ಕೊಳಗಾದ ಅಣೆಕಟ್ಟು: ಸರ್ದಾರ್ ಸರೋವರ್ ಅಣೆಕಟ್ಟು ದೇಶದಲ್ಲೇ ಏಕೆ, ವಿಶ್ವದಲ್ಲೇ ಅತಿ ವಿವಾದಕ್ಕೊಳಗಾದ ಅಣೆಕಟ್ಟುಗಳಲ್ಲಿ ಒಂದು. ಪರಿಸರಕ್ಕೆ ಹಾನಿ, ಪುನರ್ವಸತಿ ಯೋಜನೆಗಳು ಜನರಿಗೆ ತಲುಪಿಲ್ಲ ಎಂಬ ಕಾರಣಕ್ಕೆ ಯೋಜನೆ ವ್ಯಾಪಕ ಪ್ರತಿಭಟನೆಯನ್ನು ಕಂಡಿದೆ. 1980ರ ದಶಕದಲ್ಲಿ ಅಣೆಕಟ್ಟು ವಿರೋಧಿಸಿ "ನರ್ಮದಾ ಬಚಾವೋ ಆಂದೋಲನ' ದೇಶವ್ಯಾಪಿಯಾಗಿದ್ದು, ಭಾರೀ ಬೆಂಬಲ ಪಡೆದುಕೊಂಡಿತ್ತು. ಮೇಧಾ ಪಾಟ್ಕರ್, ಬಾಬಾ ಆಮ್ಟೆ ಮುಂತಾದವರು ಮುಂಚೂಣಿ ಯಲ್ಲಿದ್ದು ಪ್ರತಿಭಟನೆ ನಡೆಸಿದ್ದು. ಪರಿಣಾಮ ಕುಂಟುತ್ತಾ ಸಾಗಿದ್ದ ಅಣೆಕಟ್ಟು ಕೆಲಸ, 1996ರಲ್ಲಿ ಸ್ಥಗಿತ ವಾಗಿತ್ತು. ಅಣೆಕಟ್ಟು ವಿರುದ್ಧ ಸುಪ್ರೀಂ ಕೋರ್ಟ್ನಿಂದ ತಡೆಯಾಜ್ಞೆ ತರಲಾಗಿತ್ತು. 2000ರಲ್ಲಿ ತಡೆ ತೆರವಾಗಿತ್ತು. ಬಳಿಕ ಅಣೆಕಟ್ಟು ಎತ್ತರ ಏರಿಸುವ ಕುರಿತಂತೆಯೂ ವಿವಾದವಾಗಿದ್ದು, ಪರಿಹಾರ ನೀಡಿದ ಬಳಿಕ ಏರಿಕೆಗೆ ಸುಪ್ರೀಂ ಅನುಮತಿ ಸಿಕ್ಕಿತ್ತು. 121.92 ಮೀ. ನಿಂದ ಅಣೆಕಟ್ಟು ಎತ್ತರವನ್ನು 138.7 ಮೀ. ಎತ್ತರಕ್ಕೇರಿಸಲು ಬಳಿಕ ಕೇಂದ್ರ ಸರ್ಕಾರ ಗುಜರಾತ್ ಸರ್ಕಾರಕ್ಕೆ ಅನುಮತಿ ನೀಡಿತ್ತು.
2017: ಅಲ್ವಾರ್ : ರಾಜಸ್ಥಾನದ ಬಿಜೆಪಿ ಸಂಸದ ಮಹಂತ್ ಚಂದ್ರನಾಥ್ (61)ಅವರು ಹಿಂದಿನ ದಿನ (ಸೆ.16) ತಡರಾತ್ರಿ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ನಾಥ ಪರಂಪರೆಯ ಸನ್ಯಾಸಿಯಾಗಿದ್ದ ಚಂದ್ರನಾಥ್ ಮಸ್ತ್ ನಾಥ್ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು. 2014 ರಲ್ಲಿ ಉಪಚುನಾವಣೆಯಲ್ಲಿ ಬೆಹರೂರ್ ಕ್ಷೇತ್ರದಲ್ಲಿ ಜಯಗಳಿಸಿದ್ದ ಅವರು ಸಾರ್ವತ್ರಿಕ ಚುನಾವಣೆಯಲ್ಲಿ ಅಲ್ವಾರ್ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿದು ಕಾಂಗ್ರೆಸ್ ಅಭ್ಯರ್ಥಿ ಜಿತೇಂದ್ರ ಸಿಂಗ್ ಅವರನ್ನು ಮಣಿಸಿದ್ದರು. 2017 ಫೆಬ್ರುವರಿ ತಿಂಗಳಿನಲ್ಲಿ ಹರಿಯಾಣ ಕೋರ್ಟ್ ಭೂಹಗರಣವೊಂದಕ್ಕೆ ಸಂಬಂಧಿಸಿ ಕ್ರಿಮಿನಲ್ ಪಿತೂರಿ ಸಾಬೀತಾದ ಹಿನ್ನಲೆಯಲ್ಲಿ ಚಂದ್ರನಾಥ್ಗೆ 1 ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
2018: ನವದೆಹಲಿ: ’ತೆಂಗಿನ ಎಣ್ಣೆ ಅಥವಾ ಕೊಬ್ಬರಿ ಎಣ್ಣೆ ಶುದ್ಧ ವಿಷ’ ಎಂಬುದಾಗಿ ಹೇಳುವ ಮೂಲಕ ಹಾರ್ವರ್ಡ್ ಉಪನ್ಯಾಸಕಿಯೊಬ್ಬರು
ವಿವಾದ ಕಿಡಿ ಹಚ್ಚಿದ್ದು, ಭಾರತ ಮತ್ತು ಥಾಯ್ಲೆಂಡ್ ಸೇರಿದಂತೆ ವಿವಿಧೆಡೆಗಳಿಂದ ಈ ಹೇಳಿಕೆಗೆ ಉಗ್ರ ವಿರೋಧ ವ್ಯಕ್ತವಾಯಿತ. ’ಇದು ಕೇವಲ ರುಚಿಯ ವಿಷಯವಲ್ಲ, ೬,೪೪೮ ಕೋಟಿ ರೂಪಾಯಿಗಳ ಆರ್ಥಿಕತೆಯ ಪ್ರಶ್ನೆ ಕೂಡಾ ಆಗಿದೆ’ ಭಾರತ ಹೇಳಿತು. ಹಾರ್ವರ್ಡ್ ಟಿಎನ್ ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ಪ್ರೊಫೆಸರ್ ಕರೀನ್ ಮಿಶೆಲ್ಸ್ ಅವರು ’ಸೂಪರ್ ಫೂಡ್ ಅಭಿಯಾನವನ್ನು ಟೀಕಿಸುತ್ತಾ ತೆಂಗಿನ ಎಣ್ಣೆಯು ’ನೀವು ತಿನ್ನಬಹುದಾದ ಅತ್ಯಂತ ಕೆಟ್ಟ ವಸ್ತು’ ಬಣ್ಣಿಸಿದ್ದಾರೆ. ಸೋಂಕು ಶಾಸ್ತ್ರಜ್ಞೆಯಾಗಿರುವ ಕರೀನ್ ಅವರು ಯುನಿವರ್ಸಿಟಿ ಆಫ್ ಫ್ರೀಬರ್ಗ್ನಲ್ಲಿ ’ತೆಂಗಿನ ಎಣ್ಣೆ ಮತ್ತು ಇತರ ಪುಷ್ಟಿದಾಯಕ ತಪ್ಪುಗಳು’ ಶೀರ್ಷಿಕೆಯ ಉಪನ್ಯಾಸ ನೀಡುತ್ತಿದ್ದರು.
ಜರ್ಮನ್ ಭಾಷೆಯ ಉಪನ್ಯಾಸವಾಗಿದ್ದರೂ ಲಕ್ಷಾಂತರ ಮಂದಿ ಕೆಲವೇ ದಿನಗಳ ಒಳಗಾಗಿ ಈ ಉಪನ್ಯಾಸದ ವಿಡಿಯೋವನ್ನು ವೀಕ್ಷಿಸಿದರು. ಭಾರತ
ಸರ್ಕಾರವು ಈ ಉಪನ್ಯಾಸಕ್ಕೆ ತನ್ನ ತೀವ್ರ ಪ್ರತಿಕ್ರಿಯೆಯನ್ನು
ನೀಡಿದೆ. ಕೃಷಿ ಸಚಿವಾಲಯದ ತೋಟಗಾರಿಕಾ ಕಮೀಷನರ್ ಬಿಎನ್ ಎಸ್ ಮೂರ್ತಿ ಅವರು ವಿಶ್ವವಿದ್ಯಾಲಯಕ್ಕೆ
ಬರೆದ ಆಗಸ್ಟ್ ೨೮ರ ದಿನಾಂಕದ ಪತ್ರದಲ್ಲಿ ’ತಪ್ಪು ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ತೆಂಗನ್ನು ಅದು ಪೂಜನೀಯ ಬೆಳೆ ಎಂಬುದಾಗಿ ಪತ್ರ ಶ್ಲಾಘಿಸಿತು. ‘ಯಾವ ಸಂದರ್ಭದಲ್ಲಿ ಆಕೆ (ಪ್ರೊ. ಮಿಶೆಲ್ಸ್) ಕೋಟ್ಯಂತರ ಮಂದಿಯ ಪೂಜನೀಯ ಬೆಳೆಯ ಬಗ್ಗೆ ಇಂತಹ ನಕಾರಾತ್ಮಕ ಹೇಳಿಕೆ ನೀಡಿದ್ದಾರೆ?’ ಎಂಬುದಾಗಿ ಕೇಳಿರುವ ಮೂರ್ತಿ ಅವರು ’ಈ ಹೇಳಿಕೆಯಿಂದ ಹಿಂದೆ ಸರಿಯುವ ಮೂಲಕ ತಪ್ಪು ಸರಿಪಡಿಸುವ ಕ್ರಮ ಕೈಗೊಳ್ಳುವಿರಿ ಎಂಬುದಾಗಿ ನಾನು ಹಾರೈಸಿದ್ದೇನೆ’ ಎಂದು ಹಾರ್ವರ್ಡ್ ಟಿ.ಎಚ್. ಚಾನ್ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್’ ಡೀನ್ ಅವರಿಗೆ ಬರೆದರು. ಬೆನ್ನಲ್ಲೇ ಏಷ್ಯಾ ಫೆಸಿಫಿಕ್ ಕೋಕೋನೆಟ್ ಕಮ್ಯೂನಿಟಿ ಕೂಡಾ ಥಾಯ್ಲೆಂಡಿನಲ್ಲಿ ನಡೆದ ತನ್ನ ವಾರ್ಷಿಕ ಸಮಾವೇಶದಲ್ಲಿ ಭಾರತದ ಅಭಿಪ್ರಾಯವನ್ನು ಅನುಮೋದಿಸಿತು. ಭಾರತದ ತೆಂಗಿನ ಕಾಯಿ ರಫ್ತು ೨೦೧೪ರಿಂದೀಚೆಗೆ ದುಪ್ಪಟ್ಟಾಗಿದೆ. ೨೦೦೪-೧೪ರ ನಡುವಣ ಅವಧಿಯಲ್ಲಿ ೩,೯೭೫ ಕೋಟಿ ರೂಪಾಯಿಗಳಷ್ಟಿದ್ದ ಭಾರತದ ತೆಂಗಿನಕಾಯಿ ರಫ್ತು ೨೦೧೮ರ ವೇಳೆಗೆ ೬,೪೪೮ ಕೋಟಿ ರೂಪಾಯಿಗಳಿಗೆ ಏರಿದೆ. ಇದೇ ವೇಳೆಗೆ ಅಮೆರಿಕ ಮತ್ತು ಯುರೋಪಿನ ಪ್ರಮುಖ ಮಾರುಕಟ್ಟೆಗಳು ತೆಂಗಿನ ಎಣ್ಣೆಯ ಆರೋಗ್ಯ ಲಾಭಗಳ ಪ್ರತಿಪಾದನೆಯ ಹಿಂದಿನ ವಿಜ್ಞಾನವನ್ನು ಪ್ರಶ್ನಿಸುತ್ತಿವೆ.
ಜಾಗತಿಕವಾಗಿ ಸೂಪರ್ ಫುಡ್ ಎಂಬುದಾಗಿ ತೆಂಗಿನ ಎಣ್ಣೆಯನ್ನು ಬ್ರ್ಯಾಂಡ್ ಮಾಡಿದ್ದರಿಂದ ಭಾರತದ ರಫ್ತು ದೊಡ್ಡ ಪ್ರಮಾಣದಲ್ಲಿ ಬೆಳೆದಿದೆ. ೨೦೧೧-೧೩ರ ಅವಧಿಯಲ್ಲಿ ಅಮೆರಿಕದ ಗ್ರೂಗಲ್ ಟ್ರೆಂಡ್ ಮಾಹಿತಿ ಪ್ರಕಾರ ತೆಂಗಿನ ಎಣ್ಣೆಗಾಗಿ ಹುಡುಕಾಟವು (ಸರ್ಚ್) ದುಪ್ಪಟ್ಟಾಗಿದೆ.
೨೦೧೪ರಲ್ಲಿನ ಕೆಲವು ಸಂಬಂಧಿತ ಹುಡುಕಾಟಗಳಲ್ಲಿ
’ಹಲ್ಲು ಸ್ವಚ್ಛಗೊಳಿಸಲು ತೆಂಗಿನ ಎಣ್ಣೆಯನ್ನು ಮುಕ್ಕಳಿಸುವುದು’ ವಿಚಾರ ಸೇರಿದಂತೆ ಹಲವಾರು ಅಂಶಗಳು ಕಂಡು ಬಂದಿವೆ. ಅಮೆರಿಕದಲ್ಲಿ ೨೦೧೫ರಲ್ಲಿ ೨೩೦ ದಶಲಕ್ಷ (ಮಿಲಿಯನ್) ಡಾಲರಿನಷ್ಟಿದ್ದ ತೆಂಗಿನ ಕಾಯಿ ಮಾರಾಟವು ನಂತರದ ಎರಡು ವರ್ಷಗಳಲ್ಲಿ ೫೨ ದಶಲಕ್ಷ (ಮಿಲಿಯನ್‌ಫ) ಡಾಲರುಗಳಷ್ಟು ಕುಸಿದಿದೆ ಎಂದು ಅಮೆರಿಕ ಮೂಲದ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಸ್ಪಿನ್ಸ್ ಹೇಳಿದೆ. ಆದರೆ ತೆಂಗಿನ ಬೆಳೆಯನ್ನು ಪ್ರೋತ್ಸಾಹಿಸುತ್ತಿರುವ ಭಾರತದ ಪಾಲಿಗೆ ಇದು ಶುಭ ಸುದ್ದಿಯಲ್ಲ. ‘ತೆಂಗು
ಉದ್ಯಮವು ೧೨ ದಶಲಕ್ಷ (ಮಿಲಿಯನ್) ರೈತ ಕುಟುಂಬಗಳಿಗೆ ಬದುಕಿಗೆ ಆಸರೆಯಾಗಿದೆ’ ಎಂದು
ಮೂರ್ತಿ ಅವರು ಹಾರ್ವಡ್ ವಿಶ್ವ ವಿದ್ಯಾಲಯಕ್ಕೆ ತಿಳಿಸಿದ್ದಾರೆ. ವಿಶ್ವ ವಿದ್ಯಾಲಯದ ಹೇಳಿಕೆಯನ್ನು ವಿರೋಧಿಸಿ ಭಾರತ ಸರ್ಕಾರ ಪತ್ರ ಬರೆದಿರುವುದರ ಹೊರತಾಗಿಯೂ ತೆಂಗಿನ ಎಣ್ಣೆಯ ಜಾಗತಿಕ ಮಾರುಕಟ್ಟೆ ಕುಸಿದರೆ ತೆಂಗು ಕೃಷಿಕರು ಅತಿದೊಡ್ಡ ಸವಾಲು ಎದುರಿಸಬೇಕಾಗಿ ಬರುತ್ತದೆ’ ಎಂದು
ಅಧಿಕಾರಿಗಳು ಅಭಿಪ್ರಾಯ ಪಟ್ಟರು. ಪ್ರಸ್ತತ ತೆಂಗಿನ ಎಣ್ಣೆಯ ಬೆಲೆ ಏರುತ್ತಿದೆ. ೨೦೧೮ರ ಫೆಬ್ರುವರಿಯಲ್ಲಿ ಕೇರಳದಲ್ಲಿ ಕಿಲೋ ಗ್ರಾಂ ತೆಂಗಿನ ಎಣ್ಣೆಯ ದರ ೨೨೩ ರೂಪಾಯಿ ಇತ್ತು. ಇದು ೧೦ ತಿಂಗಳ ಹಿಂದಿನ ದರಕ್ಕಿಂತ ೧೨೪ ರೂಪಾಯಿ ಹೆಚ್ಚು. ಆದರೂ ದರ ಏರಿಳಿತವು ರೈತರ ಪಾಲಿಗೆ ದೊಡ್ಡ ಸವಾಲಾಗಿಯೇ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳುತ್ತಾರೆ. ಕೋಚಿಯ ಸಿಡಿಬಿ ಯ ಉಪ ನಿರ್ದೇಶಕ ಜ್ಞಾನದೇವನ್ ಆರ್ ಅವರ ಪ್ರಕಾರ ತೆಂಗಿನ ಬೆಲೆ ಏರಿಕೆಗೆ ಕಾರಣ ಉತ್ಪಾದನೆ ಇಳಿಮುಖವಾದ್ದದ್ದು ಹೊರತು ಬೇರೇನಲ್ಲ. ಜೊತೆಗೆ ರಪ್ತಿಗೆ ಹೆಚ್ಚಿನ ಬೇಡಿಕೆ ಇರುವುದೂ ಬೆಲೆ ಏರಿಕೆಗೆ ಕಾಣಿಕೆ ನೀಡಿದೆ ಎಂದು ಅವರು ಹೇಳುತ್ತಾರೆ. ೨೦೧೭ರಲ್ಲಿ ಅಮೆರಿಕನ್ ಹಾರ್ಟ್ ಅಸೋಸಿಯೇಶನ್ ತೆಂಗಿನ ಎಣ್ಣೆಯಲ್ಲಿ ಕೊಬ್ಬಿನ ಅಂಶ ಅತ್ಯಧಿಕ ಇರುವುದರಿಂದ ಅದು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವಾದಿಸಿತ್ತು. ಆದರೆ ಭಾರತ ಇದನ್ನು ಒಪ್ಪಿಲ್ಲ. ಸಿಡಿಬಿಯು ತೆಂಗಿನ ಎಣ್ಣೆಯ ೧೮ ವಿಶಿಷ್ಟ ಪೌಷ್ಟಿದಾಯಕ ಮತ್ತು ವೈದ್ಯಕೀಯ ಲಾಭಗಳನ್ನು ಪಟ್ಟಿ ಮಾಡಿದೆ ಮತ್ತು ಕೊಬ್ಬಿನ ವಿರುದ್ಧ ಹೋರಾಟಕ್ಕೆ ಕೊಬ್ಬರಿ ಎಣ್ಣೆ ಅತ್ಯುತ್ತಮ ಆಯುಧ ಎಂದು ಬಣ್ಣಿಸಿದೆ. ಕೇರಳ ವಿಶ್ವ ವಿದ್ಯಾಲಯದ ಜೀವ ರಸಾಯನ ಇಲಾಖೆಯು ಕೊಬ್ಬರಿ ಎಣ್ಣೆಯು ರಕ್ತದ ಕೊಬ್ಬನ್ನು ಹೆಚ್ಚಿಸುವುದಿಲ್ಲ, ಬದಲಿಗೆ ಎಚ್ ಡಿಎಲ್ನ್ನು (ಉತ್ತಮ ಕೊಬ್ಬು) ಹೆಚ್ಚಿಸುತ್ತದೆ,
ಹಾಗೆಯೇ ಎಲ್ ಡಿಎಲ್ ಕೊಲೆಸ್ಟ್ರಾಲ್ ನ್ನು (ಕೆಟ್ಟ ಕೊಬ್ಬು) ಕೂಡಾ ಹೆಚ್ಚಿಸುವುದಿಲ್ಲ. ಮಧುಮೇಹಿಗಳಿಗೂ ತೆಂಗಿನ ಎಣ್ಣೆ ಆರೋಗ್ಯಕರ ಎಂದು ಪ್ರತಿಪಾದಿಸಿತು.
2018: ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ೬೮ನೇ ವಸಂತಕ್ಕೆ ಕಾಲಿಟ್ಟ ಹಿನ್ನೆಲೆಯಲ್ಲಿ ಕೇಂದ್ರ ಸಚಿವರಾದ ಪ್ರಕಾಶ್ ಜಾವಡೇಕರ್ ಹಾಗೂ ಸಚಿವ ಸಂಪುಟದ ಸಹೋದ್ಯೋಗಿ ಮುಖ್ತಾರ್ ಅಬ್ಬಾಸ್ ನಖ್ವಿ ೫೬೮ ಕೆಜಿ ಭಾರೀ ತೂಕದ ಲಡ್ಡನ್ನು ಅನಾವರಣಗೊಳಿಸಿದರು. ಪ್ರಧಾನಿ ಮೋದಿಯವರು ಈದಿನ ಸಂಜೆ ತಮ್ಮ ಸಂಸದೀಯ ಕ್ಷೇತ್ರವಾದ ವಾರಾಣಸಿಯಲ್ಲಿ ೩೦೦ ಮಂದಿ ಶಾಲಾ ಮಕ್ಕಳ ಜೊತೆಗೆ ಹುಟ್ಟು ಹಬ್ಬವನ್ನು ಆಚರಿಸಿದರು. ವಾರಾಣಸಿಯಲ್ಲಿನ ನರೂರು ಗ್ರಾಮದಲ್ಲಿ ಕೊಳಚೆ ಪ್ರದೇಶಗಳ ಶಾಲೆಗಳೂ ಸೇರಿದಂತೆ ೨೦೦ ವಿವಿಧ ಪ್ರಾಥಮಿಕ ಶಾಲೆಗಳ ಮಕ್ಕಳು ಸೇರಿದಂತೆ ೩೦೦ ಮಂದಿ ಪ್ರಾಥಮಿಕ ಶಾಲಾ ಮಕ್ಕಳ ಜೊತೆಗೆ ತಮ್ಮ ಹುಟ್ಟು ಹಬ್ಬ ಆಚರಿಸಿ ಸಂವಾದ ನಡೆಸಿದರು. ವಿದ್ಯಾರ್ಥಿಗಳು ಕ್ರೀಡೆಗೆ ಮಹತ್ವ ನೀಡಬೇಕು. ಹೊರಕ್ಕೆ ಹೋಗಿ ಆಟವಾಡಿ, ಅದು ಅತ್ಯಂತ ಅಗತ್ಯ ಎಂದು ಮೋದಿ ಮಕ್ಕಳಿಗೆ ಕಿವಿಮಾತು ಹೇಳಿದರು. ಪ್ರಶ್ನೆ ಕೇಳಲು ಎಂದೂ ಅಂಜಬೇಡಿ, ವಿದ್ಯಾರ್ಥಿಗಳಾಗಿ ಪ್ರಶ್ನೆಗಳನ್ನು ಕೇಳುವುದು ಅತ್ಯಂತ ಮುಖ್ಯ. ಪ್ರಶ್ನೆ ಕೇಳುವುದು ಕಲಿಕೆಯ ಅತ್ಯಂತ ಮುಖ್ಯವಾದ ಅಂಶ ಎಂದು ಅವರು ನುಡಿದರು. ವಿಶ್ವ ಕರ್ಮ ಜಯಂತಿಯ ವಿಶೇಷ ದಿನವಾದ ಇಂದು ನಾನು ನಿಮ್ಮ ಶಾಲೆಗೆ ಬಂದಿದ್ದೇನೆ. ಈ ವಿಶೇಷ ದಿನದ ಸಲುವಾಗಿ ನಿಮಗೆಲ್ಲರಿಗೂ ಶುಭಾಶಯಗಳು. ವಿದ್ಯಾರ್ಥಿಗಳಾಗಿ ವಿವಿಧ ಕೌಶಲಗಳನ್ನು ಕಲಿತುಕೊಳ್ಳುವುದು
ಅತಿ ಮುಖ್ಯ. ಇದು ಎಂದೆಂದೂ ನಿಮಗೆ ನೆರವಾಗುತ್ತದೆ ಎಂದು ಮೋದಿ ಹೇಳಿದರು. ಮೋದಿ ಅವರ ಆಗಮನಕ್ಕೆ ಮುನ್ನ ಹಿಂದು ಯುವ ವಾಹಿನಿಯ ಕಾರ್ಯಕರ್ತರು ವಾರಾಣಸಿಯ ಸರ್ಕಾರಿ ಶಾಲೆಯಲ್ಲಿ ಪ್ರಧಾನಿ ಜನ್ಮದಿನದ ಅಂಗವಗಿ ಗಿಡಗಳನ್ನು ನೆಟ್ಟರು.
ರಾಜಧಾನಿಯ ಸುಲಭ್ ಅಂತಾರಾಷ್ಟ್ರೀಯ ಸಾಮಾಜಿಕ ಸೇವಾ ಸಂಸ್ಥೆ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಪ್ರಯುಕ್ತ ಸಂಘಟಿಸಿದ್ದ ೫೬೮ ಕಿ.ಗ್ರಾಂ ತೂಕದ ಲಡ್ಡು ಅನಾವರಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಚಿವ ಜಾವಡೇಕರ್, ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬವನ್ನು
ಸ್ವಚ್ಛ ದಿವಸವನ್ನಾಗಿ ಸಂಸ್ಥೆ ಆಚರಿಸಿದೆ ಎಂದು ಹೇಳಿದರು. ದೇಶದಲ್ಲಿನ ೪೫೦ ಲಕ್ಷ ಹಳ್ಳಿಗಳಲ್ಲಿ ಸ್ವಚ್ಛ ಭಾರತ್ ಅಭಿಯಾನದಡಿ ೯ ಕೋಟಿಗೂ ಅಧಿಕ ಶೌಚಾಲಯಗಳನ್ನು ನಿರ್ಮಿಸಲಾಗಿದ್ದು.
ಇದರಿಂದ ಬಯಲು ಶೌಚ ಮುಕ್ತ ಎಂದು ಘೋಷಿಸಬಹುದಾಗಿದೆ
ಎಂದು ಅವರು ನುಡಿದರು. ಗಣ್ಯರ ಶುಭಾಶಯ: ರಾಷ್ಟಪತಿ ರಾಮನಾಥ ಕೋವಿಂದ್, ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿಗೆ ಮೊದಲಿಗರಾಗಿ ಶುಭಾಶಯ ಕೋರಿದವರಲ್ಲಿ ಸೇರಿದ್ದರು. ‘ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನ್ಮದಿನದ ಶುಭಾಶಯಗಳು. ಅವರಿಗೆ ದೀರ್ಘಾಯುಸ್ಸು ಮತ್ತು ರಾಷ್ಟ್ರದ ಜನತೆಗೆ ಹಲವಾರು ವರ್ಷಗಳ ಕಾಲ ಸಮರ್ಪಿತ ಸೇವೆ ಸಲ್ಲಿಸುವ ಅವಕಾಶ ಲಭಿಸಲಿ ಎಂದು ಹಾರೈಸುವೆ ಎಂದು ರಾಷ್ಟ್ರಪತಿ ಟ್ವೀಟ್ ಮಾಡಿದರು. ಮಾಲ್ಟಾದಲ್ಲಿ ಇರುವ ಉಪರಾಷ್ಟ್ರಪತಿ ನಾಯ್ಡು ಅವರು ದೂರವಾಣಿ ಮೂಲಕ ಪ್ರಧಾನಿಗೆ ಶುಭ ಹಾರೈಸಿದರು ಎಂದು ಉಪರಾಷ್ಟ್ರಪತಿಯವರ
ಸಚಿವಾಲಯ ತಿಳಿಸಿತು. ಅವರು ಟ್ವಿಟ್ಟರ್ ಸಂದೇಶದ ಮೂಲಕವೂ ಪ್ರಧಾನಿಯವರಿಗೆ ಶುಭ ಕೋರಿದರು. ಅಮಿತ್ ಶಾ ಅವರು ಮೋದಿ ಅವರ ನಾಯಕತ್ವವನ್ನು ಶ್ಲಾಘಿಸಿ, ಭಾರತವು ಅವರ ಆಳ್ವಿಕೆಯಡಿಯಲ್ಲಿ
ಅಭಿವೃದ್ಧಿಯ ಸಂಕೇತವಾಗುವುದು ಎಂದು ಹೇಳಿದರು. ಸಮಾಜದ ಪ್ರತಿಯೊಂದು ವಿಭಾಗಕ್ಕೂ ಅವರು ಅಭೂತಪೂರ್ವ ಶಕ್ತಿಯ ಸಂಚಯನ ಮಾಡಿದ್ದಾರೆ ಎಂದು ಶಾ ನುಡಿದರು. ರಾಹುಲ್ ಗಾಂಧಿಯವರು ಪ್ರಧಾನಿಯವರಿಗೆ ಉತ್ತಮ ಆರೋಗ್ಯ ಮತ್ತು ಸಂತಸವನ್ನು ಹಾರೈಸಿದರು. ತಮಗೆ
ಟ್ವಿಟ್ಟರಿನಲ್ಲಿ ಶುಭ ಹಾರೈಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್, ಬಿಜೆಪಿ ಅಧ್ಯಕ್ಷ ಅಮಿತ್ ಶಾ ಸೇರಿದಂತೆ ಎಲ್ಲರಿಗೂ ಪ್ರಧಾನಿ ಟ್ವಿಟ್ಟರ್ ಮೂಲಕವೇ ಉತ್ತರ ನೀಡಿ ಧನ್ಯವಾದ ಸಲ್ಲಿಸಿದರು. ೧೯೫೦ರ ಸೆಪ್ಟೆಂಬರ್ ೧೭ರಂದು ಜನಿಸಿದ ಮೋದಿ ಅವರ ೬೮ನೇ ಹುಟ್ಟು ಹಬ್ಬದ ಅಂಗವಾಗಿ ಪ್ರತಿಯೊಂದು ಕೇಕ್ ಕೂಡಾ ೬೮ ಕಿಲೋ ಗ್ರಾಮ್ ತೂಗುವ ೬೮ ಕೇಕ್ ಗಳನ್ನು ವಿವಿಧ ಕಡೆಗಳಲ್ಲಿ ಕತ್ತರಿಸಲಾಗುವುದು ಎಂದು ಉತ್ತರ ಪ್ರದೇಶದ ಸಚಿವ ನೀಲಕಂಠ ತಿವಾರಿ ಹೇಳಿದರು. ಮೋದಿ ಅವರ ೬೮ನೇ ಹುಟ್ಟು ಹಬ್ಬದ ಪ್ರಯುಕ್ತ ಉತ್ತರ ಪ್ರದೇಶದ ವಿವಿಧ ಸೆರೆಮನೆಗಳಿಂದ ೬೮ ಮಂದಿ ಕೈದಿಗಳನ್ನು ಈದಿನ ಬಿಡುಗಡೆ ಮಾಡಲಾಯಿತು. ಪಶ್ಚಿಮ ಬಂಗಾಳದ ಬಿಜೆಪಿ ಘಟಕವು ಸ್ವಚ್ಛತಾ ಅಭಿಯಾನ ನಡೆಸುವ ಮೂಲಕ ಪ್ರಧಾನಿಯ ಜನ್ಮದಿನವನ್ನು ಅಚರಿಸಿತು. ರಾಷ್ಟಾದ್ಯಂತ ಬಿಜೆಪಿ ಕಾರ್ಯಕರ್ತರು ವಿವಿಧ ಕಾರ್ಯಕ್ರಮಗಳನ್ನು ಸಂಘಟಿಸುವ ಮೂಲಕ ಪ್ರಧಾನಿಯ ಜನ್ಮದಿನವನ್ನು ಆಚರಿಸಿದರು. ಮಣ್ಣಿನ ಕೇಕ್: ಕಾಂಗ್ರೆಸ್ ಸೇವಾ ದಳವು ವಾರಾಣಸಿಯ ರಸ್ತೆಗಳು ಬಿರುಕು ಬಿಟ್ಟಿರುವ ಬಗ್ಗೆ ಪ್ರಧಾನಿಯ ಗಮನ ಸೆಳೆಯಲು ವಾರಾಣಸಿಯ ಸಿಗ್ರಾ ಪ್ರದೇಶದ ಮಣ್ಣಿನಿಂದ ಕೇಕ್ ತಯಾರಿಸಿ ಅದನ್ನು ಕತ್ತರಿಸಿದರು.
2018: ನವದೆಹಲಿ: ಸರ್ಕಾರಿ ಸ್ವಾಮ್ಯದ ವಿಜಯಾ ಬ್ಯಾಂಕ್, ದೇನಾ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ ಈ ಮೂರು ಬ್ಯಾಂಕುಗಳನ್ನು ವಿಲೀನಗೊಳಿಸುವ ಮೂಲಕ ಭಾರತದ ಮೂರನೇ ಬೃಹತ್ ಸಾಲ ನೀಡಿಕಾ ಸಂಸ್ಥೆಯನ್ನು ಸೃಷ್ಟಿಸಲು ಕೇಂದ್ರ ಸರ್ಕಾರ ನಿರ್ಧರಿಸಿತು. ವಿತ್ತ ಸೇವಾ ಕಾರ್ಯದರ್ಶಿ ರಾಜೀವ್ ಕುಮಾರ್ ಅವರು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಜೊತೆಗೆ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರವನ್ನು ಪ್ರಕಟಿಸಿದರು. ಮೂರೂ ಬ್ಯಾಂಕುಗಳ ಆಡಳಿತ ಮಂಡಳಿಗಳು ವಿಲೀನ ಪ್ರಸ್ತಾಪವನ್ನು ಪರಿಶೀಲಿಸಲಿವೆ ಎಂದು ಅವರು ನುಡಿದರು. ವಿಲೀನದಿಂದ ಯಾರೇ ನೌಕರನ ಸೇವಾ ಸ್ಥಿತಿಗತಿಗಳ ಮೇಲೆ ವ್ಯತಿರಿಕ್ತ ಪರಿಣಾಮವಾಗುವುದಿಲ್ಲ. ಅತ್ಯುತ್ತಮ ಸೇವಾ ಸ್ಥಿತಿಗಳು ಅವರಿಗೆ ಅನ್ವಯವಾಗಲಿವೆ ಎಂದು ಸಚಿವ ಅರುಣ್ ಜೇಟ್ಲಿ ಹೇಳಿದರು. ಸರ್ಕಾರವು ತನ್ನ ಮುಂಗಡಪತ್ರದಲ್ಲಿ
ಬ್ಯಾಂಕುಗಳ ಏಕೀಕರಣವನ್ನು ಪ್ರಕಟಿಸಿದ್ದು ಈ ನಿಟ್ಟಿನಲ್ಲಿ ಇದೀಗ ಮೊದಲ ಹೆಜ್ಜೆಯನ್ನು ಪ್ರಕಟಿಸಲಾಗಿದೆ ಎಂದು ಜೇಟ್ಲಿ ನುಡಿದರು. ಬ್ಯಾಂಕಿಂಗ್ ರಂಗದಲ್ಲಿ ಸುಧಾರಣೆಗಳು ಆಗಬೇಕಾಗಿವೆ. ಸರ್ಕಾರವು ಬ್ಯಾಂಕುಗಳ ಬಂಡವಾಳ ಅಗತ್ಯಗಳ ಬಗ್ಗೆ ಕಾಳಜಿ ವಹಿಸಿದೆ. ಬ್ಯಾಂಕಿಂಗ್ ರಂಗದಲ್ಲಿ ಸಾಗರದಾಚೆಯ ವ್ಯವಹಾರಗಳು ಪೂರ್ಣ ಪ್ರಮಾಣದಲ್ಲಿ ನಡೆಯುತ್ತಿವೆ. ಅನುತ್ಪಾದಕ ಸಾಲಗಳಿಗೆ ಸಂಬಂಧಿಸಿದಂತೆ ಇತಿಹಾಸ ಮರುಕಳಿಸದಂತೆ ಸರ್ಕಾರ ಕ್ರಮಗಳನ್ನು ಕೈಗೊಳ್ಳುತ್ತಿದೆ
ಎಂದೂ ಕುಮಾರ್ ಹೇಳಿದರು. ಕಳೆದ ವರ್ಷ ದೇಶದ ಅತಿದೊಡ್ಡ ಸಾಲ ನೀಡಿಕೆ ಸಂಸ್ಥೆಯಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜೊತೆಗೆ ಐದು ಆಧೀನ ಬ್ಯಾಂಕುಗಳನ್ನು ವಿಲೀನಗೊಳಿಸಲು ಮತ್ತು ಭಾರತೀಯ ಮಹಿಳಾ ಬ್ಯಾಂಕನ್ನು ಮುಂಚೂಣಿಯ ಮಹಿಳಾ ಬ್ಯಾಂಕ್ ಆಗಿ ನೆಲೆಗೊಳಿಸುವ ತೀರ್ಮಾನದ ಬಳಿಕ ಕೇಂದ್ರವು ಈ ಮೂರು ಬ್ಯಾಂಕುಗಳ ವಿಲೀನ ಕ್ರಮವನ್ನು ಕೈಗೊಂಡಿದೆ. ಸರ್ಕಾರವು ೨೧ ಸಾಲ ನೀಡಿಕೆ ಸಂಸ್ಥೆಗಳಲ್ಲಿ ಬಹುಮತದ ಪಾಲು ಹೊಂದಿದ್ದು, ಇವು ಏಷ್ಯಾದ ಮೂರನೇ ದೊಡ್ಡ ಆರ್ಥಿಕತೆಯಲ್ಲಿನ ಮೂರನೇ ಎರಡರಷ್ಟು ಬ್ಯಾಂಕಿಂಗ್ ಆಸ್ತಿಯನ್ನು ಹೊಂದಿದೆ. ಆದರೆ ಸರ್ಕಾರಿ ರಂಗದ ಬ್ಯಾಂಕುಗಳೇ ಮರುಪಾವತಿಯಾಗದ ಸಾಲ (ಅನುತ್ಪಾದಕ ಆಸ್ತಿ) ಹಾವಳಿಗೂ ಹೆಚ್ಚಿನ ಪ್ರಮಾಣದಲ್ಲಿ ತುತ್ತಾಗಿವೆ.
2018: ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವರು ದೆಹಲಿಯ ಏಮ್ಸ್ ಆಸ್ಪತ್ರೆಗೆ ಸ್ಥಳಾಂತರಗೊಂಡ ಕೆಲವು ದಿನಗಳ ಬಳಿಕ ಬಿಜೆಪಿ ನೇತೃತ್ವದ ಸರ್ಕಾರವನ್ನು ವಜಾಗೊಳಿಸುವಂತೆ ರಾಜ್ಯಪಾಲರನ್ನು ಆಗ್ರಹಿಸಿರುವ ಗೋವಾ ಕಾಂಗ್ರೆಸ್ ಸರ್ಕಾರ ರಚನೆಗೆ ಹಕ್ಕು ಮಂಡನೆಯನ್ನೂ ಮಾಡಿತು. ರಾಜ್ಯಪಾಲರಾದ ಮೃದುಲಾ ಸಿನ್ಹ ಅವರಿಗೆ ಸಲ್ಲಿಸಿರುವ ಪತ್ರದಲ್ಲಿ ಮನೋಹರ ಪರಿಕ್ಕರ್ ಸರ್ಕಾರ ಕಾರ್‍ಯ ನಿರ್ವಹಿಸುತ್ತಿಲ್ಲ ಎಂದು ಪ್ರತಿಪಾದಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರ ರಚಿಸಲು ತನಗೆ ಆಹ್ವಾನ ನೀಡುವಂತೆ ಆಗ್ರಹಿಸಿತು. ರಾಜಭವನದ ಹೊರಗೆ ಸುದ್ದಿಗಾರರ ಜೊತೆ ಮಾತನಾಡಿದ ವಿರೋಧ ಪಕ್ಷದ ನಾಯಕ ಚಂದ್ರಕಾಂತ ಕವಳೇಕರ್ ಅವರು ತಮಗೆ ಈದಿನ ರಾಜ್ಯಪಾಲರನ್ನು ಭೇಟಿ ಮಾಡಲು ಸಾಧ್ಯವಾಗಿಲ್ಲ, ನಾಳೆ ಇನ್ನೊಂದು ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು. ’ಸರ್ಕಾರ ಇದ್ದರೂ ಕಾರ್‍ಯ ನಿರ್ವಹಿಸುತ್ತಿಲ್ಲ.
ಆದ್ದರಿಂದ ಸರ್ಕಾರವನ್ನು ವಜಾಗೊಳಿಸಬೇಕು ಮತ್ತು ನಮಗೆ ಸರ್ಕಾರ ರಚನೆಗೆ ಅವಕಾಶ ನೀಡಬೇಕು’ ಎಂದು ಕವಳೇಕರ್ ನುಡಿದರು. ರಾಜ್ಯಪಾಲರಿಗೆ ಸಲ್ಲಿಸಲಾದ ಎರಡು ಪತ್ರಗಳಿಗೆ ಎಲ್ಲ ೧೬ ಮಂದಿ ಶಾಸಕರೂ ಸಹಿ ಮಾಡಿದ್ದಾರೆ ಎಂದು ಅವರು ನುಡಿದರು. ‘ನಾವು ಏಕೈಕ ದೊಡ್ಡ ಪಕ್ಷವಾಗಿದ್ದೇವೆ
ಮತ್ತು ಏಕೈಕ ದೊಡ್ಡ ಪಕ್ಷವಾಗಿರುವ ನೆಲೆಯಲ್ಲಿ ಸರ್ಕಾರ ರಚಿಸಲು ನಮ್ಮನ್ನು ಆಹ್ವಾನಿಸಬೇಕಾಗಿತ್ತು. ಆದರೆ ನಮ್ಮನ್ನು ಆಹ್ವಾನಿಸಲಿಲ್ಲ’ ಎಂದು ಕವಳೇಕರ್ ಹೇಳಿದರು. ‘ಕಾಂಗ್ರೆಸ್ ಪಕ್ಷವು ಇತರ ಪಕ್ಷಗಳ ಶಾಸಕರ ಬೆಂಬಲವನ್ನು ಹೊಂದಿದೆ ಮತ್ತು ರಾಜ್ಯಪಾಲರು ಅವಕಾಶ ನೀಡಿದರೆ ಸರ್ಕಾರ ರಚಿಸಬಲ್ಲವು. ನಾವು ಸದನದಲ್ಲಿ ಬಹುಮತ ಸಾಬೀತು ಪಡಿಸುತ್ತೇವೆ’ ಎಂದು
ಕವಳೇಕರ್ ನುಡಿದರು. ಕಾಂಗ್ರೆಸ್ ಪಕ್ಷವು ಈ ಮುನ್ನ ಗೋವಾ ವಿಧಾನಸಭೆಯನ್ನು ವಿಸರ್ಜಿಸುವುದರ ವಿರುದ್ಧ ರಾಜ್ಯಪಾಲರಿಗೆ ಎಚ್ಚರಿಕೆ ನೀಡಿ ಪತ್ರ ಬರೆದಿತ್ತು. ಹಾಲಿ ಆಡಳಿತ ವ್ಯವಸ್ಥೆಯು ವಿಧಾನಸಭೆ ವಿಸರ್ಜನೆಗೆ ಯತ್ನಿಸುವ ಸಾಧ್ಯತೆಗಳಿವೆ ಎಂಬುದು ನಮ್ಮ ಭಾವನೆ ಎಂದು ಕಾಂಗ್ರೆಸ್ ರಾಜ್ಯಪಾಲರಿಗೆ ತಿಳಿಸಿತ್ತು. ಪರಿಕ್ಕರ್ ಅವರು ಚೇತರಿಸುತ್ತಿದ್ದಾರೆ ಎಂದು ಹೇಳುವ ಮೂಲಕ ಬಿಜೆಪಿಯು ಗೋವಾದಲ್ಲಿ ನಾಯಕತ್ವ ಬದಲಾವಣೆಯನ್ನು ತಳ್ಳಿಹಾಕಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಪಕ್ಷದ ಮೂವರು ಹಿರಿಯ ಸದಸ್ಯರಾದ ಬಿಎಲ್ ಸಂತೋಷ್, ರಾಮಲಾಲ್ ಮತ್ತು ವಿನಯ್ ಪುರಾಣಿಕ್ ಅವರನ್ನು ಕರಾವಳಿ ರಾಜ್ಯದ ರಾಜಕೀಯ ಪರಿಸ್ಥಿತಿ ಅಧ್ಯಯನಕ್ಕಾಗಿ ಕಳುಹಿಸಿತು. ಗೋವಾದಲ್ಲಿ ಎರಡು ದಿನಗಳ ಪ್ರವಾಸದಲ್ಲಿರುವ ತ್ರಿಸದಸ್ಯ ಸಮಿತಿಯು ರಾಜ್ಯದಲ್ಲಿನ ಬಿಜೆಪಿ ಮಿತ್ರ ಪಕ್ಷಗಳನ್ನೂ ಭೇಟಿ ಮಾಡಿತು. ಸಭೆಯ ಬಳಿಕ ಬಿಜೆಪಿ ಮೈತ್ರಿಕೂಟದ ಮಿತ್ರ ಪಕ್ಷಗಳಾದ ಗೋವಾ ಫಾರ್ವರ್ಡ್ ಪಾರ್ಟಿ (ಜಿಎಫ್ ಪಿ), ಮಹಾರಾಷ್ಟ್ರವಾದಿ
ಗೋಮಾಂತಕ ಪಕ್ಷ (ಎಂಜಿಪಿ) ಸದಸ್ಯರು ಮತ್ತು ಮೂವರು ಪಕ್ಷೇತರರು ತಾವು ಕೇಸರಿ ಪಕ್ಷವು ಕೈಗೊಳ್ಳುವ ಯಾವುದೇ ರಾಜಕೀಯ ನಿರ್ಣಯವನ್ನು ಒಪ್ಪುವುದಾಗಿ ತಿಳಿಸಿದರು. ರಾಜಕಾರಣಿಯಾಗಿ ಪರಿವರ್ತನೆಗೊಂಡಿರುವ
ಐಐಟಿ ಎಂಜಿನಿಯರ್, ೬೨ರ ಹರೆಯದ ಪರಿಕ್ಕರ್ ಅವರನ್ನು ಮೇಧೋಜೀರಕ ಗ್ರಂಥಿ (ಪ್ಯಾಂಕ್ರಿಯಾಟಿಕ್) ಸಮಸ್ಯೆಗಾಗಿ ಚಿಕಿತ್ಸೆ ನೀಡಲು ಏಮ್ಸ್ ಗೆ ದಾಖಲಿಸಲಾಗಿತ್ತು. ಇದಕ್ಕೂ ಮುನ್ನ ಮೈತ್ರಿಕೂಟದ ಪಾಲುದಾರ ಪಕ್ಷಗಳು ಪರಿಕ್ಕರ್ ಅವರ ಅಸ್ವಸ್ಥತೆ ಮತ್ತು ದೈನಂದಿನ ಆಡಳಿತದಲ್ಲಿ ಅವರ ಗೈರುಹಾಜರಿಯಿಂದ ಉದ್ಭವಿಸಿರುವ ಪರಿಸ್ಥಿತಿಗೆ ಕಾಯಂ ಪರಿಹಾರ ಒದಗಿಸುವಂತೆ ಬಿಜೆಪಿಯ ಕೇಂದ್ರ ವೀಕ್ಷಕರಿಗೆ ಸೂಚಿಸಿದ್ದರು. ೪೦ ಸದಸ್ಯ ಬಲದ ಗೋವಾ ವಿಧಾನಸಭೆಯಲ್ಲಿ ಕಾಂಗ್ರೆಸ್ ೧೬ ಶಾಸಕರನ್ನು ಹೊಂದಿದ್ದರೆ ಬಿಜೆಪಿಯು ೧೪ ಸದಸ್ಯರನ್ನು ಮತ್ತು ಅಂಗ ಪಕ್ಷಗಳಾದ ಎಂಜಿಪಿ ಮತ್ತು ಗೋವಾ ಫಾರ್ವರ್ಡ್ ಪಕ್ಷ ತಲಾ ಮೂರು ಶಾಸಕರನ್ನು ಹೊಂದಿವೆ. ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿಯು (ಎನ್ ಸಿಪಿ) ಒಬ್ಬ ಸದಸ್ಯನನ್ನು ಹೊಂದಿದೆ.
2018: ನವದೆಹಲಿ: ಭೀಮಾ -ಕೋರೆಗಾಂವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾದ ಐವರು ಹಕ್ಕು ಕಾರ್ಯಕರ್ತರ ಗೃಹ ಬಂಧನವನ್ನು ಸೆಪ್ಟೆಂಬರ್ ೧೯ರವರೆಗೆ ವಿಸ್ತರಿಸಿದ ಸುಪ್ರೀಂಕೋರ್ಟ್,
ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಾಧಾರಗಳು ’ನಕಲಿ ಸೃಷ್ಟಿ’ ಎಂದು ಕಂಡು ಬಂದಲ್ಲಿ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ ಐಟಿ) ರಚಿಸುವುದಾಗಿ ಎಚ್ಚರಿಕೆ ನೀಡಿತು. ಅಂತಿಮ ವಿಚಾರಣೆ ಮತ್ತು ಇತಿಹಾಸ ತಜ್ಞ ರಾದ ರೊಮೀಲಾ ಥಾಪರ್ ಮತ್ತು ಇತರ ನಾಲ್ಕು ಮಂದಿಯ ಅಹವಾಲುಗಳ ಆಲಿಕೆಗೂ ಸೆಪ್ಟೆಂಬರ್ ೧೯ರ ದಿನಾಂಕವನ್ನೇ ಕೋರ್ಟ್ ನಿಗದಿ ಪಡಿಸಿತು. ಸೆಪ್ಟೆಂಬರ್ ೧೯ರಂದು ಕೇಸ್ ಡೈರಿ ಮತ್ತು ಇತರ ಸಾಕ್ಷ್ಯಾಧಾರಗಳನ್ನು ಸಲ್ಲಿಸಲು ಕೇಂದ್ರ ಸರ್ಕಾರ ಬಯಸಿದೆ. ವಕೀಲೆ ಹಾಗೂ ಕಾರ್ಮಿಕ ನಾಯಕಿ ಸುಧಾ ಭಾರದ್ವಾಜ್, ತೆಲುಗು ಕವಿ ಪಿ. ವರವರ ರಾವ್, ಹಕ್ಕು ಕಾರ್ಯಕರ್ತ ಗೌತಮ್ ನವಲಖಾ ಮತ್ತು ವಕೀಲರಾದ ಅರುಣ್ ಫೆರೇರಿಯಾ ಹಾಗೂ ವರ್ನೊನ್ ಗೋನ್ಸಾಲ್ವೆಸ್ ಅವರನ್ನು ಶಂಕಿತ ಮಾವೋವಾದಿ ಸಂಪರ್ಕಗಳಿಗಾಗಿ ಬಂಧಿಸಿರುವುದರ ವಿರುದ್ಧ ದಾಖಲಿಸಲಾಗಿರುವ ಈ ಅರ್ಜಿಯನ್ನು ಸುಪ್ರೀಂಕೋರ್ಟ್ ಪರಿಗಣಿಸಬಾರದಾಗಿತ್ತು ಎಂದು ಇದಕ್ಕೆ ಮುನ್ನ ಕೇಂದ್ರವು ಸುಪ್ರೀಂಕೋರ್ಟಿನಲ್ಲಿ ವಾದಿಸಿತು. ಐವರು ಕಾರ್ಯಕರ್ತರಿಗೆ ಏನಾದರೂ ಸಮಸ್ಯೆಗಳಿದ್ದರೆ
ರಾಷ್ಟ್ರದ ಸರ್ವೋಚ್ಚ ನ್ಯಾಯಾಲಯದ ಬದಲು ಸಂಬಂಧಪಟ್ಟ ಮ್ಯಾಜಿಸ್ಟ್ರೇಟರೇ
ಪರಿಶೀಲಿಸುತ್ತಿದ್ದರು ಎಂದು ಕೇಂದ್ರ ಹೇಳಿತು. ಇತಿಹಾಸಕಾರರಾದ ರೊಮೀಲಾ ಥಾಪರ್ ಸೇರಿದಂತೆ ಹಲವರು ಆಗಸ್ಟ್ ೨೮ರಂದು ಸುಧಾ ಭಾರದ್ವಾಜ್ ಮತ್ತು ಇತರರನ್ನು ಬಂಧಿಸಿದ್ದನ್ನು ಪ್ರಶ್ನಿಸಿ ಸುಪ್ರೀಂಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಭಿನ್ನಮತವನ್ನು ದಮನಿಸುವ ಉದ್ದೇಶದಿಂದ ಈ ಬಂಧನಗಳನ್ನು ಮಾಡಲಾಗಿದೆ ಎಂದು ರೊಮೀಲಾ ಥಾಪರ್ ಆಪಾದಿಸಿದ್ದರು. ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ಸುಪ್ರೀಂಕೋರ್ಟ್ ತನ್ನ ಮಧ್ಯಂತರ ಆದೇಶದಲ್ಲಿ ಬಂಧಿತರನ್ನು ಸೆರೆಮನೆಗಳಿಗೆ ಒಯ್ಯುವ ಬದಲಿಗೆ ಅವರವರೆ ಮನೆಗಳಲ್ಲೇ ಗೃಹ ಬಂಧನದಲ್ಲಿ ಇರಿಸಬೇಕು ಎಂದು ಪೊಲೀಸರಿಗೆ ಆಜ್ಞಾಪಿಸಿತ್ತು. ದಲಿತ ಸಂಘಟನೆಗಳು ಒಟ್ಟಾಗಿ ೨೦೧೭ರ ಡಿಸೆಂಬರ್ ೩೧ರಂದು ಪುಣೆಯಲ್ಲಿ ನಡೆಸಿದ ಎಲ್ಗಾರ್ ಪರಿಷದ್ ನಡೆಸಿ ಮರುದಿನ ಭೀಮಾ ಕೋರೆಗಾಂವ್ ನಲ್ಲಿ ಹಿಂಸಾಚಾರ ನಡೆಸಲು ಹೂಡಿದ ಸಂಚಿನ ತನಿಖೆಗೆ ಸಂಬಂಧಿಸಿದಂತೆ ಐವರು ಕಾರ್ಯಕರ್ತರನ್ನು ಬಂಧಿಸಿಲಾಗಿದೆ ಎಂದು ಪೊಲೀಸರು ಪ್ರತಿಪಾದಿಸಿದ್ದರು. ಆಗಸ್ಟ್ ೨೮ರಂದು ಭೀಮಾ ಕೋರೆಗಾಮವ್ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಬಂಧನಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರವು ನೆಚ್ಚಿಕೊಂಡಿರುವ ಸಾಕ್ಷ್ಯಾಧಾರಗಳು
’ನಕಲಿ ಸೃಷ್ಟಿ’ ಎಂಬುದಾಗಿ ಕಂಡು ಬಂದಲ್ಲಿ ಈ ದಾಳಿ ಹಾಗೂ ಬಂಧನಗಳ ತನಿಖೆಗೆ ಸುಪ್ರೀಂಕೋರ್ಟ್ ನಿಶ್ಚಿತವಾಗಿ ವಿಶೇಷ ತನಿಖಾ ತಂಡವನ್ನು (ಎಸ್ ಐಟಿ) ರಚಿಸಲಿದೆ ಎಂದು ಸೋಮವಾರ ವಿಚಾರಣೆ ವೇಳೆಯಲ್ಲಿ ತ್ರಿಸದಸ್ಯ ಪೀಠದ ಮುಖ್ಯಸ್ಥ ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ಹೇಳಿದರು. ಕಾರ್ಯಕರ್ತರ ವಿರುದ್ಧದ ಎಲ್ಲ ಸಾಕ್ಷ್ಯಾಧಾರಗಳನ್ನು
ನೋಡದ ವಿನಃ ಪೀಠವು ತನ್ನ ನಿರ್ಧಾರವನ್ನು ಮಾಡಲು ಸಾಧ್ಯವಿಲ್ಲ. ಮೊತ್ತ ಮೊದಲಿಗೆ ನಾವು ಎಲ್ಲ ಸಾಕ್ಷ್ಯಾಧಾರಗಳನ್ನು
ನೋಡಬೇಕು. ಈ ಸಾಕ್ಷ್ಯಾಧಾರಗಳು ನಕಲಿ ಸೃಷ್ಟಿ ಎಂಬುದಾಗಿ ಕಂಡು ಬಂದಲ್ಲಿ ನಾವು ಖಂಡಿತವಾಗಿ ವಿಶೇಷ ತನಿಖಾ ತಂಡವನ್ನು (ಎಸ್ ಐಟಿ) ರಚಿಸುತ್ತೇವೆ. ಅಪರಾಧ ದಂಡ ಸಂಹಿತೆಯ ಉಲ್ಲಂಘನೆಯಾಗಿದೆಯೇ
ಎಂಬ ಬಗ್ಗೆ ಇಲ್ಲಿ ಚರ್ಚೆ ನಡೆಯಬೇಕಾಗಿದೆ. ಈ ನ್ಯಾಯಾಲಯವು ಎಲ್ಲೆಲ್ಲಿ ಎಸ್ ಐಟಿಯನ್ನು ರಚಿಸಿದೆಯೋ ಅಲ್ಲೆಲ್ಲ ಗಂಭೀರ ಉಲ್ಲಂಘನೆಗಳಾಗಿವೆ’ ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು. ರೊಮೀಲಾ ಥಾಪರ್ ಮತ್ತು ಇತರ ನಾಲ್ವರ ಪರ ಹಾಜರಾಗಿದ್ದ ಪ್ರಶಾಂತ ಭೂಷಣ್ ಅವರು ’ಪೊಲೀಸರು ಮಾಧ್ಯಮಗಳಲ್ಲಿ ಬಿತ್ತಿರುವ ಸೃಷ್ಟಿತ ಸಾಕ್ಷ್ಯಾಧಾರಗಳನ್ನು ಆಧರಿಸಿ ಈ ಬಂಧನಗಳನ್ನು ಮಾಡಲಾಗಿದೆ’ ಎಂದು ವಾದಿಸಿದರು.
’ಮಾಧ್ಯಮಗಳಲ್ಲಿ ಏನು ಬಂದಿದೆಯೋ ಅದನ್ನು ಆಧರಿಸಿ ನಾವು ಮುಂದುವರೆಯುವುದಿಲ್ಲ. ಅಲ್ಲದೆ, ಪ್ರತಿಯೊಂದು ಕ್ರಿಮಿನಲ್ ಪ್ರಕರಣದಲ್ಲೂ ಸಾಕ್ಷ್ಯಾಧಾರಗಳನ್ನು
ಸೃಷ್ಟಿಸಲಾಗಿದೆ ಎಂದೇ ಆರೋಪ ಮಾಡಲಾಗುತ್ತದೆ. ಉಭಯ ಕಡೆಗಳೂ ತಮ್ಮ ಸಾಕ್ಷ್ಯಾಧಾರಗಳನ್ನು
ಸಲ್ಲಿಸಬಹುದು. ನಾವು ಸೆಪ್ಟೆಂಬರ್ ೧೯ರ ಬುಧವಾರ ಅವೆಲ್ಲವನ್ನೂ ಪರಿಶೀಲಿಸುತ್ತೇವೆ’ ಎಂದು ಮುಖ್ಯ ನ್ಯಾಯಮೂರ್ತಿ ನುಡಿದರು. ಐವರು ಕಾರ್ಯಕರ್ತರ ಮೂಲಭೂತ ಸ್ವಾತಂತ್ರ್ಯದ ಹಕ್ಕಿನ ರಕ್ಷಣೆಗಾಗಿ ನ್ಯಾಯಾಲಯವು ಈ ಅರ್ಜಿಯನ್ನು ಪರಿಗಣಿಸಿದೆ. ನಾವು ಈಗಾಗಲೇ ಇದನ್ನು ಮಾಡಿದ್ದೇವೆ. ನಮ್ಮ ಮಧ್ಯಂತರ ಆದೇಶ (ಬಂಧಿತರ ಗೃಹ ಬಂಧನ ಆದೇಶ) ಮುಂದುವರೆಯುವುದು ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.
2018: ನವದೆಹಲಿ: ಮಾನವ ಬಳಕೆಗಾಗಿ ನಿರ್ಮಾಣ ಮತ್ತು ವಿತರಣೆ ನಿಷೇಧಕ್ಕೆ ಒಳಗಾದ ೩೨೮ ಔಷಧಗಳ ಪಟ್ಟಿಯಿಂದ ನೋವು ನಿವಾರಕ ಸಾರಿಡಾನ್ನ್ನು ಹೊರತು ಪಡಿಸುವ ಮೂಲಕ ಸುಪ್ರೀಂಕೋರ್ಟ್ ಸಾರಿಡಾನ್ ಮಾರಾಟಕ್ಕೆ ಅನುಮತಿ ನೀಡಿತು. ಸರ್ಕಾರವು ಕಳೆದವಾರ ಹೊರಡಿಸಿದ್ದ ಮಾನವ ಬಳಕೆಗೆ ನಿಷೇಧಿತವಾಗಿದ್ದ ೩೨೪ ನಿಗದಿತ ಪ್ರಮಾಣದ ಮಿಶ್ರ ಔಷಧಗಳ (ಎಫ್ ಡಿಸಿ) ಪಟ್ಟಿಯಿಂದ ಸಾರಿಡಾನ್ ನೋವು ನಿವಾರಕವನ್ಜು ಸುಪ್ರೀಂಕೋರ್ಟ್ ತೆರವುಗೊಳಿಸಿತು.
ಎಫ್ ಡಿಸಿಗಳೆಂದರೆ ಎರಡು ಅಥವಾ ಹೆಚ್ಚು ಔಷಧಗಳನ್ನು ನಿಗದಿತ ಪಮಾಣದಲ್ಲಿ ಒಂದೇ ಡೋಸೇಜ್ ರೂಪದಲ್ಲಿ ಮಾಡಿದ ಮಿಶ್ರಣ. ಪ್ರತಿಜೀವಾಣು (ಆಂಟಿ ಬಯೋಟಿಕ್) ಮಿಶ್ರಣಗಳ ಬಳಕೆ ಹೆಚ್ಚಳದಿಂದಾಗಿ ದೇಹದ ರೋಗ ನಿರೋಧಕ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮಗಳಾಗುತ್ತಿವೆ ಎಂದು ಭಾರತ ಮತ್ತು ವಿದೇಶಗಳಲ್ಲಿನ ವೈದ್ಯರು ಮತ್ತು ಸಾರ್ವಜನಿಕ ಆರೋಗ್ಯ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. ಏಕ ಔಷಧದ ಬದಲಿಗೆ ಮಿಶ್ರ ಔಷಧಗಳ ಮಾರುಕಟ್ಟೆಯು ಜಗತ್ತಿನ ಇತರ ಯಾವುದೇ ಭಾಗಕ್ಕಿಂತ ಭಾರತದಲ್ಲಿ ದೊಡ್ಡ ಪ್ರಮಾಣದಲ್ಲಿ ಇರುವುದು ಕಳವಳದ ವಿಷಯವಾಗಿದೆ. ತರ್ಕಹೀನ ಔಷಧಗಳ ಮೇಲೆ ನಿಷೇಧ ವಿಧಿಸುವ ಬಗ್ಗೆ ಒಲವು ವ್ಯಕ್ತ ಪಡಿಸಿ ಔಷಧಗಳ ತಾಂತ್ರಿಕ ಸಲಹಾ ಮಂಡಳಿಯು ರಚಿಸಿದ್ದ ತಜ್ಞರ ತಂಡವೊಂದು ತನ್ನ ವರದಿಯಲ್ಲಿ ಶಿಫಾರಸು ಮಾಡಿದ್ದನ್ನು ಅನುಸರಿಸಿ ಕೇಂದ್ರ ಸರ್ಕಾರವು ಇಂತಹ ೩೨೪ ನಿಗದಿತ ಪ್ರಮಾಣದ ಮಿಶ್ರ ಔಷಧಗಳನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ೩೨೮ ಮಿಶ್ರ ಔಷಧಗಳಲ್ಲಿ ಇರುವ ಅಂಶಗಳಿಗೆ ಯಾವುದೇ ಚಿಕಿತ್ಸಾ ಸಮರ್ಥನೆಯೂ ಇಲ್ಲ. ಇವು ಮಾನವರಿಗೆ ಅಪಾಯಕಾರಿಯಾಗಬಹುದು
ಎಂದು ತಂಡವು ಹೇಳಿತ್ತು. ಈ ಔಷಧಗಳು ಅಗತ್ಯಕ್ಕಿಂತ ಹೆಚ್ಚಿನ ಔಷಧಗಳಾಗುವ (ಓವರ್ ಡೋಸ್) ಸಾಧ್ಯತೆಗಳಿವೆ. ಒಂದೇ ಒಂದು ಔಷಧ ಕೆಲಸ ಮಾಡಲು ಸಾಧ್ಯವಿರುವ ವೇಳೆಯಲ್ಲಿ ಇಂತಹ ಅನಗತ್ಯ ಔಷಧಗಳನ್ನು ರೋಗಿಗಳಿಗೆ ನೀಡಬೇಕಾದ ಅಗತ್ಯವಿಲ್ಲ. ಆದ್ದರಿಂದ ವಿಶಾಲ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಇಂತಹ ಮಿಶ್ರ ಔಷಧಗಳ ತಯಾರಿ ಮಾರಾಟ ಅಥವಾ ವಿತರಣೆಯನ್ನು ನಿಷೇಧಿಸುವ ಅಗತ್ಯವಿದೆ ಎಂದು ಔಷಧಗಳ ತಾಂತ್ರಿಕ ಸಲಹಾ ಮಂಡಳಿ ಹೇಳಿತ್ತು.
17: ನವಗಾಮ್ (ಗುಜರಾತ್): ಬರೋಬ್ಬರಿ 56 ವರ್ಷಗಳ ಬಳಿಕ ಕಾಮಗಾರಿ ಪೂರ್ಣಗೊಂಡಿರುವ ನರ್ಮದಾ ನದಿಯ ಸರ್ದಾರ್ ಸರೋವರ ಅಣೆಕಟ್ಟನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಜನ್ಮದಿನವಾದ ಈದಿನ ಲೋಕಾರ್ಪಣೆ ಮಾಡಿದರು. ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಈ ಅಣೆಕಟ್ಟಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಎಲ್ಲಿದೆ ಅಣೆಕಟ್ಟು? ಗುಜರಾತ್‌ನ ನರ್ಮದಾ ಜಿಲ್ಲೆಯ ನವಗಾಮ್ನಲ್ಲಿ ನರ್ಮದಾ ನದಿಗೆ ಅಡ್ಡಲಾಗಿ ಈ ಅಣೆಕಟ್ಟನ್ನು ಕಟ್ಟಲಾಗಿದೆ. ಮಧ್ಯಪ್ರದೇಶ, ಗುಜರಾತ್, ಮಹಾರಾಷ್ಟ್ರ ರಾಜ್ಯಗಳ ನೀರಾವರಿ, ವಿದ್ಯುತ್ ಬೇಡಿಕೆಯನ್ನು ಪೂರೈಸಲು ಈ ಅಣೆಕಟ್ಟೆಗೆ 1961 ಏ.5ರಂದು ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಶಂಕುಸ್ಥಾಪನೆ ನೆರವೇರಿಸಿದ್ದರು. ಏನು ಪ್ರಯೋಜನ? ನೀರಾವರಿ, ಕುಡಿವ ನೀರು, ವಿದ್ಯುತ್ ಉತ್ಪಾದನೆ ಉದ್ದೇಶದಿಂದ ಅಣೆಕಟ್ಟು ನಿರ್ಮಾಣಕ್ಕೆ ಯೋಜಿಸಲಾಗಿತ್ತು. ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರಕ್ಕೆ ನೀರಾವರಿ, ವಿದ್ಯುತ್ ಉದ್ದೇಶದಿಂದ ಈ ಅಣೆಕಟ್ಟು ನಿರ್ಮಾಣಕ್ಕೆ ಕೈ ಹಾಕಲಾಗಿತ್ತು. 20 ಲಕ್ಷ ಜನರಿಗೆ ಆಹಾರ ಉತ್ಪಾದನೆಗೆ, 30 ಲಕ್ಷ ಜನರ ದೈನಂದಿನ ಬಳಕೆ ಮತ್ತು ಕೈಗಾರಿಕಾ ಬಳಕೆಗೆ, ಗುಜರಾತ್ ಒಂದರಲ್ಲೇ 17.82 ಲಕ್ಷ ಹೆಕ್ಟೇರ್ ಜಾಗಕ್ಕೆ ನೀರಾವರಿ ಉದ್ದೇಶದಿಂದ ಈ ಅಣೆಕಟ್ಟು ಕಟ್ಟುವ ನಿರ್ಧಾರ ಮಾಡಲಾಗಿತ್ತು. ನೀರು, ವಿದ್ಯುತ್ ಹಂಚಿಕೆ: ಸರ್ದಾರ್ ಸರೋವರ್ ಅಣೆಕಟ್ಟಿನ ಪ್ರಯೋಜನ ವನ್ನು ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ. ಗುಜರಾತ್ಗೆ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಉತ್ಪಾದನೆಯಾದ ವಿದ್ಯುತ್ತನ್ನು ಮಹಾರಾಷ್ಟ್ರ, ಗುಜರಾತ್ ಮಧ್ಯಪ್ರದೇಶಗಳು ಹಂಚಿಕೊಳ್ಳುತ್ತವೆ. ಮಧ್ಯಪ್ರದೇಶ ಶೇ.57ರಷ್ಟು ವಿದ್ಯುತ್ ಅನ್ನು ಪಡೆದುಕೊಂಡರೆ, ಮಹಾರಾಷ್ಟ್ರ ಶೇ.27ರಷ್ಟು ವಿದ್ಯುತ್, ಗುಜರಾತ್ ಶೇ.16ರಷ್ಟು ವಿದ್ಯುತ್ತನ್ನು ಪಡೆದುಕೊಳ್ಳುತ್ತವೆ. ಇನ್ನು ನೀರನ್ನು ನಾಲ್ಕು ರಾಜ್ಯಗಳಿಗೆ ಹಂಚಿಕೆ ಮಾಡಲಾಗುತ್ತದೆ. ಮಧ್ಯಪ್ರದೇಶ ಶೇ.65.18ರಷ್ಟು ನೀರು ಪಡೆದುಕೊಂಡರೆ, ಗುಜರಾತ್ ಶೇ.32.14ರಷ್ಟು, ರಾಜಸ್ಥಾನ ಶೇ.1.79ರಷ್ಟು, ಮಹಾ ರಾಷ್ಟ್ರ ಶೇ.0.89ರಷ್ಟು ನೀರನ್ನು ಪಡೆಯಲಿದೆ. ಗುಜರಾತ್ ಸರಕಾರ ಇದೇ ಅಣೆಕಟ್ಟಿನ ಕಾಲುವೆಗಳ ಮೇಲೆ ಸೋಲಾರ್ ಪ್ಯಾನೆಲ್‌ಗಳನ್ನು ಅಳವಡಿಸಿದ್ದು, ಅದರಿಂದಲೂ ವಿದ್ಯುತ್ ಪಡೆವ ಯೋಜನೆ ರೂಪಿಸಿದೆ. ದೇಶದ ಅತಿ ದೊಡ್ಡ ಅಣೆಕಟ್ಟು: ಸರ್ದಾರ್ ಸರೋವರ್ ಅಣೆಕಟ್ಟು ದೇಶದಲ್ಲಿ ದೊಡ್ಡ ಅಣೆಕಟ್ಟುಗಳಲ್ಲಿ ಒಂದು. ವಿಶ್ವದಲ್ಲಿ 2ನೆಯ ಅತಿ ದೊಡ್ಡ ಅಣೆಕಟ್ಟು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಅಮೆರಿಕದ ಗ್ರ್ಯಾಂಡ್ ಕೌಲೀ ಡ್ಯಾಂ ವಿಶ್ವದ ಅತಿ ದೊಡ್ಡ ಅಣೆಕಟ್ಟು ಎಂಬ ಹೆಸರು ಹೊಂದಿದೆ. 1.2 ಕಿ. ಮೀ. ಉದ್ದವಿರುವ ಈ ಅಣೆಕಟ್ಟು 138 ಮೀ. ಎತ್ತರ ಹೊಂದಿದೆ. ವೆಚ್ಚದಲ್ಲೂ ದಾಖಲೆ: ಸರ್ದಾರ್ ಸರೋವರ್ ಅಣೆಕಟ್ಟು ಆದ ವೆಚ್ಚ ಒಟ್ಟು 65,369 ಕೋಟಿ ರೂ. ಅಣೆಕಟ್ಟಿನ ಸಂಪೂರ್ಣ ಕೆಲಸವಾದಾಗ ಇದರ ವೆಚ್ಚ 90 ಸಾವಿರ ಕೋಟಿ ಗಳಾಗಬಹುದು ಎಂದು ಅಂದಾಜಿಸಲಾಗಿದೆ. ಅಣೆ ಕಟ್ಟು ಕಟ್ಟುವ ಸಂದರ್ಭ ಇದರ ವೆಚ್ಚ 650 ಕೋಟಿ ರೂ. ಆಗಬಹುದು ಎಂದು ಅಂದಾಜಿಸಲಾಗಿತ್ತು. 1986-87ರಲ್ಲಿ ಇದರ ಅಂದಾಜು ವೆಚ್ಚವನ್ನು 6,406 ಕೋ. ರೂ.ಗೆ ಹೆಚ್ಚಿಸಲಾಗಿತ್ತು. 2014 ಮಾರ್ಚ್ ವೇಳೆಗೆ 65 ಸಾವಿರ ಕೋಟಿ ವೆಚ್ಚವಾಗಿದ್ದಾಗಿ ಹೇಳಲಾಗಿತ್ತು. ಅತಿ ವಿವಾದಕ್ಕೊಳಗಾದ ಅಣೆಕಟ್ಟು: ಸರ್ದಾರ್ ಸರೋವರ್ ಅಣೆಕಟ್ಟು ದೇಶದಲ್ಲೇ ಏಕೆ, ವಿಶ್ವದಲ್ಲೇ ಅತಿ ವಿವಾದಕ್ಕೊಳಗಾದ ಅಣೆಕಟ್ಟುಗಳಲ್ಲಿ ಒಂದು. ಪರಿಸರಕ್ಕೆ ಹಾನಿ, ಪುನರ್ವಸತಿ ಯೋಜನೆಗಳು ಜನರಿಗೆ ತಲುಪಿಲ್ಲ ಎಂಬ ಕಾರಣಕ್ಕೆ ಯೋಜನೆ ವ್ಯಾಪಕ ಪ್ರತಿಭಟನೆಯನ್ನು ಕಂಡಿದೆ. 1980ರ ದಶಕದಲ್ಲಿ ಅಣೆಕಟ್ಟು ವಿರೋಧಿಸಿ "ನರ್ಮದಾ ಬಚಾವೋ ಆಂದೋಲನ' ದೇಶವ್ಯಾಪಿಯಾಗಿದ್ದು, ಭಾರೀ ಬೆಂಬಲ ಪಡೆದುಕೊಂಡಿತ್ತು. ಮೇಧಾ ಪಾಟ್ಕರ್, ಬಾಬಾ ಆಮ್ಟೆ ಮುಂತಾದವರು ಮುಂಚೂಣಿ ಯಲ್ಲಿದ್ದು ಪ್ರತಿಭಟನೆ ನಡೆಸಿದ್ದು. ಪರಿಣಾಮ ಕುಂಟುತ್ತಾ ಸಾಗಿದ್ದ ಅಣೆಕಟ್ಟು ಕೆಲಸ, 1996ರಲ್ಲಿ ಸ್ಥಗಿತ ವಾಗಿತ್ತು. ಅಣೆಕಟ್ಟು ವಿರುದ್ಧ ಸುಪ್ರೀಂ ಕೋರ್ಟ್ನಿಂದ ತಡೆಯಾಜ್ಞೆ ತರಲಾಗಿತ್ತು. 2000ರಲ್ಲಿ ತಡೆ ತೆರವಾಗಿತ್ತು. ಬಳಿಕ ಅಣೆಕಟ್ಟು ಎತ್ತರ ಏರಿಸುವ ಕುರಿತಂತೆಯೂ ವಿವಾದವಾಗಿದ್ದು, ಪರಿಹಾರ ನೀಡಿದ ಬಳಿಕ ಏರಿಕೆಗೆ ಸುಪ್ರೀಂ ಅನುಮತಿ ಸಿಕ್ಕಿತ್ತು. 121.92 ಮೀ. ನಿಂದ ಅಣೆಕಟ್ಟು ಎತ್ತರವನ್ನು 138.7 ಮೀ. ಎತ್ತರಕ್ಕೇರಿಸಲು ಬಳಿಕ ಕೇಂದ್ರ ಸರ್ಕಾರ ಗುಜರಾತ್ ಸರ್ಕಾರಕ್ಕೆ ಅನುಮತಿ ನೀಡಿತ್ತು.
2017:
ಸಿಯೋಲ್: ಒಲಿಂಪಿಕ್ ಬೆಳ್ಳಿತಾರೆ ಪಿ.ವಿ. ಸಿಂಧು ಈದಿನ ನಡೆದ ರೋಚಕ ಹೋರಾಟದಲ್ಲಿ ಜಪಾನ್‌ನ ವಿಶ್ವಚಾಂಪಿಯನ್ ನಜೊಮಿ ಒಕುಹರಾ ಅವರನ್ನು ಮಣಿಸಿ "ಕೊರಿಯಾ ಓಪನ್ ಸೂಪರ್ ಸಿರೀಸ್ ಬ್ಯಾಡ್ಮಿಂಟನ್'
ಪ್ರಶಸ್ತಿ ಜಯಿಸಿ ಸಂಭ್ರಮಿಸಿದರು. ಸಿಂಧು ಒಕುಹರಾ ವಿರುದ್ಧದ 1 ಗಂಟೆ 23 ನಿಮಿಷಗಳ ಫೈನಲ್ ಕಾಳಗದಲ್ಲಿ 21-10, 17-21, 21-16 ಅಂತರದ ಜಯ ಸಾಧಿಸಿ ಕಳೆದ ತಿಂಗಳ ಸೋಲಿನ ಸೇಡು ತೀರಿಸಿಕೊಂಡರು.
ಕಳೆದ ತಿಂಗಳು ಗ್ಲಾಸ್ಗೊದಲ್ಲಿ ನಡೆದ ವಿಶ್ವ ಚಾಂಪಿಯನ್ ಫೈನಲ್‌ನಲ್ಲಿ ಒಕುಹರಾ ಸಿಂಧುಗೆ ಸೋಲುಣಿಸಿದ್ದರು.
2017: ಅಲ್ವಾರ್ : ರಾಜಸ್ಥಾನದ ಬಿಜೆಪಿ ಸಂಸದ ಮಹಂತ್ ಚಂದ್ರನಾಥ್ (61)ಅವರು ಹಿಂದಿನ ದಿನ (ಸೆ.16) ತಡರಾತ್ರಿ ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ನಾಥ ಪರಂಪರೆಯ ಸನ್ಯಾಸಿಯಾಗಿದ್ದ ಚಂದ್ರನಾಥ್ ಮಸ್ತ್ ನಾಥ್ ವಿಶ್ವವಿದ್ಯಾಲಯದ ಕುಲಪತಿಯಾಗಿದ್ದರು. 2014 ರಲ್ಲಿ ಉಪಚುನಾವಣೆಯಲ್ಲಿ ಬೆಹರೂರ್ ಕ್ಷೇತ್ರದಲ್ಲಿ ಜಯಗಳಿಸಿದ್ದ ಅವರು ಸಾರ್ವತ್ರಿಕ ಚುನಾವಣೆಯಲ್ಲಿ ಅಲ್ವಾರ್ ಕ್ಷೇತ್ರದಿಂದ ಮತ್ತೆ ಕಣಕ್ಕಿಳಿದು ಕಾಂಗ್ರೆಸ್ ಅಭ್ಯರ್ಥಿ ಜಿತೇಂದ್ರ ಸಿಂಗ್ ಅವರನ್ನು ಮಣಿಸಿದ್ದರು. 2017 ಫೆಬ್ರುವರಿ ತಿಂಗಳಿನಲ್ಲಿ ಹರಿಯಾಣ ಕೋರ್ಟ್ ಭೂಹಗರಣವೊಂದಕ್ಕೆ ಸಂಬಂಧಿಸಿ ಕ್ರಿಮಿನಲ್ ಪಿತೂರಿ ಸಾಬೀತಾದ ಹಿನ್ನಲೆಯಲ್ಲಿ ಚಂದ್ರನಾಥ್ಗೆ 1 ವರ್ಷದ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು.
2016: ಮುಂಬೈ: ಭಾರತೀಯ ನೌಕಾಪಡೆಗಾಗಿ ನಿರ್ಮಿಸಲಾದ ಪ್ರಾಜೆಕ್ಟ್ 15ಬಿಯ ಎರಡನೆಯ ಮಾರ್ಗದರ್ಶಿತ ಕ್ಷಿಪಣಿ ನಾಶಕ ನೌಕೆ ‘ಮೊರ್ಮುಗಾವೊ’ಕ್ಕೆ ಮುಂಬೈಯಲ್ಲಿ ಚಾಲನೆ ನೀಡಲಾಯಿತು. ಉದ್ಘಾಟನಾ ಸಮಾರಂಭದಲ್ಲಿ ನೌಕೆಯ ಕವಚವನ್ನು ಮೊತ್ತ ಮೊದಲ ಬಾರಿಗೆ ನೀರಿಗೆ ಇಳಿಸಲಾಯಿತು.. ಯಾವುದೇ ನೌಕೆಗೆ ಇದೊಂದು ಮೈಲಿಗಲ್ಲು. ಮಜಗಾಂವ್ ಹಡಗುಕಟ್ಟೆಯ ಅರ್ಚಕ ಶ್ರೀ ಪುರಾಣಿಕ್ ಅವರು ಪೂಜೆ ನೆರವೇರಿಸಿ ನೌಕೆಯನ್ನು ಹರಸಿದರು. ಅಡ್ಮಿರಲ್ ಎಸ್. ಲಂಬಾ ಸಿಎನ್ಎಸ್ ಮತ್ತು ಶ್ರೀಮತಿ ರೀನಾ ಲಂಬಾ ಹಾಗೂ ಇತರ ಗಣ್ಯರು ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಶ್ರೀಮತಿ ರೀನಾ ಲಂಬಾ ಅವರು ನೌಕೆಗೆ ‘ಮೊರ್ಮುಗಾವೊ’ ಎಂದು ಹೆಸರು ಇಟ್ಟರು. ಸಮರ ನೌಕೆ ನಿರ್ಮಾಣ ಮತ್ತು ಸ್ವಾಧೀನ ನಿಯಂತ್ರಕರಾದ ವೈಸ್ ಅಡ್ಮಿರಲ್ ಜಿ.ಎಸ್. ಪಬ್ಬಿ ಅವರು ಈ ಸಂದರ್ಭದಲ್ಲಿ ಮಾತನಾಡಿ 2027ರ ವೇಳೆಗೆ 212 ನೌಕೆಗಳ ದಳವನ್ನು ಹೊಂದುವ ಗುರಿಯನ್ನು ನೌಕಾಪಡೆ ಇಟ್ಟುಕೊಂಡಿದೆ. ಇದನ್ನು ಸಾಧಿಸುವುದು ನಮ್ಮ ಮುಂದಿನ ನಿಜವಾದ ಸವಾಲು ಎಂದು ಹೇಳಿದರು.
2016: ಶ್ರೀನಗರ: ಕಾಶ್ಮೀರದ ಶ್ರೀನಗರದ ಹೊರಭಾಗದ ಹರ್ವಾನ್ನಲ್ಲಿ ಹಿಂದಿನ ದಿನ ಸಂಜೆ ಪೊಲೀಸ್ ಗೋಲಿಬಾರ್ನಲ್ಲಿ ಪೆಲೆಟ್ ಗುಂಡಿನಿಂದ ಗಾಯಗೊಂಡಿದ್ದನೆನ್ನಲಾದ 15 ವರ್ಷದ ಬಾಲಕನೊಬ್ಬ ಸಾವನ್ನಪ್ಪಿದ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿ ವ್ಯಾಪಕ ಪ್ರತಿಭಟನೆ ಭುಗಿಲೆದ್ದಿತು. ಪ್ರತಿಭಟನೆಗಳನ್ನು ಅನುಸರಿಸಿ ಹರ್ವಾನ್ ಮತ್ತು ಆಸು ಪಾಸಿನ ಪ್ರದೇಶಗಳಲ್ಲಿ ಕರ್ಫ್ಯ ಮಾದರಿ ನಿಯಂತ್ರಣಗಳನ್ನು ಹೇರಲಾಯಿತು. ಹರ್ವಾನ್ನಲ್ಲಿ ಹಿಂದಿನ ದಿನ ಸಂಜೆ ಪ್ರತಿಭಟನಕಾರರ ಮೇಲೆ ಭದ್ರತಾ ಪಡೆಗಳು ಪೆಲ್ಲೆಟ್ ಗುಂಡು ಹಾರಿಸಿದ ಬಳಿಕ 15 ವರ್ಷದ ಮೊಮಿನ್ ಅಲ್ತಾಫ್ ಗಾಯಗೊಂಡು ಸಾವನನ್ನಪ್ಪಿದ್ದ ಎನ್ನಲಾಗಿದ್ದು, ಆತನ ಶವ ಪೆಲ್ಲೆಟ್ ಗಾಯಗಳೊಂದಿಗೆ ರಾತ್ರಿ ಲಭಿಸಿತ್ತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಏನಿದ್ದರೂ ಪೆಲ್ಲೆಟ್ ಗುಂಡುಗಳನ್ನು ದೂರದಿಂದ ಹಾರಿಲಾಗಿತ್ತು. ಆದ್ದರಿಂದ ಪೊಲೀಸರ ಪೆಲ್ಲೆಟ್ ಗುಂಡು ಬಾಲಕನ ಸಾವಿಗೆ ಕಾರಣವಾಗಿರಲಾರದು ಎಂದು ಪೊಲೀಸರು ಹೇಳಿದರು.. ಈದಿನ ಬೆಳಗ್ಗೆ ಮೃತನ ಅಂತ್ಯ ಸಂಸ್ಕಾರ ಪ್ರಾರ್ಥನೆಗೆ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ಬಳಿಕ ಪ್ರತಿಭಟಿಸುತ್ತಾ ತಮ್ಮತ್ತ ಕಲ್ಲೆಸೆಯುತ್ತಿದ್ದ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಆಶ್ರುವಾಯು ಶೆಲ್ ಬಳಸಬೇಕಾಯಿತು ಎಂದು ಪೊಲೀಸರು ಹೇಳಿದರು.
2016: ವಾಷಿಂಗ್ಟನ್: ಬಾಹ್ಯಾಕಾಶದಲ್ಲಿ ಇರುವ ಕಪ್ಪು ರಂಧ್ರಗಳು ಭಯಂಕರ ಹೊಟ್ಟೆಬಾಕತನದ ಪ್ರಾಣಿಗಳು! ನಕ್ಷತ್ರಗಳು ಸೇರಿದಂತೆ ತಮ್ಮ ಸಮೀಪ ಬರುವ ಎಲ್ಲವನ್ನೂ ಗುರುತ್ವಾಕರ್ಷಣಾ ಬಲದಿಂದ ತಮ್ಮತ್ತ ಸೆಳೆದು ಗುಳುಂಕರಿಸುತ್ತವೆ. ಇದು ಎಲ್ಲರಿಗೂ ಗೊತ್ತು. ಆದರೆ ಆಮೇಲೇ ಏನಾಗುತ್ತದೆ? ಖಗೋಳ ವಿಜ್ಞಾನಿಗಳು ಈಗ ಇದೇ ಮೊದಲ ಬಾರಿಗೆ, ಕಪ್ಪು ರಂಧ್ರಗಳು ನಕ್ಷತ್ರ ನುಂಗಿದ ಬಳಿಕ ನಡೆಯುವ ವಿದ್ಯಮಾನದ ಚಿತ್ರಗಳನ್ನು ಸೆರೆ ಹಿಡಿದಿದ್ದಾರೆ. ಭರ್ಜರಿಯಾಗಿ ಉಂಡ ಬಳಿಕ ಬರುವ ತೇಗಿನಂತೆ, ಕಪ್ಪು ರಂಧ್ರವು ಭರ್ಜರಿಯಾಗಿ ನಕ್ಷತ್ರ ಭೋಜನ ಸವಿದ ಬಳಿಕ ಅತಿಗೆಂಪು ಬಣ್ಣದ ಬೆಳಕಿನ ಅಲೆ ಅಲೆಯಾದ ತೇಗನ್ನು ಹೊರಕ್ಕೆ ಬಿಡುತ್ತದೆ. ಹೌದು, ನಕ್ಷತ್ರ ನುಂಗಿದ ಬಳಿಕ ಕಪ್ಪು ರಂಧ್ರದಿಂದ ಕೆಂಪು ಬೆಳಕು ಹೊರಬರುವ ದೃಶ್ಯವನ್ನು ಖಗೋಳ ವಿಜ್ಞಾನಿಗಳು ಅವಲೋಕಿಸಿದ್ದಾರೆ. ನಾಸಾದ ವೈಡ್- ಫೀಲ್ಡ್ ಇನ್ಫ್ರಾರೆಡ್ ಸರ್ವೆ ಎಕ್ಸ್ ಪ್ಲೋರರ್ (ಡಬ್ಲ್ಯೂಐಎಸ್ಇ) ಬಾಹ್ಯಾಕಾಶ ಟೆಲಿಸ್ಕೋಪ್ ಸೆರೆ ಹಿಡಿದ ಬಾಹಾಕಾಶದ ದೃಶ್ಯಗಳ ಚಿತ್ರಗಳನ್ನು ಅಧ್ಯಯನ ಮಾಡಿ ನಾಸಾದ ವಿಜ್ಞಾನಿಗಳು ಮತ್ತು ಚೀನಾದ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವ ವಿದ್ಯಾಲಯದ ಸಂಶೋಧಕರು ಈವಾರ ಸಿದ್ಧ ಪಡಿಸಿ ಪ್ರಕಟಿಸಿರುವ ಎರಡು ಅಧ್ಯಯನಗಳಲ್ಲಿ ಈ ವಿಚಾರವನ್ನು ವಿವರಿಸಲಾಯಿತು.
2016: ಲಿಂಖೇಡಾ (ಗುಜರಾತ್) ಪ್ರಧಾನಿ ನರೇಂದ್ರ ಮೋದಿ ಅವರು ಲಿಂಖೇಡಾದಲ್ಲಿ ಬುಡಕಟ್ಟು
2016: ಸೂರತ್: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮ ದಿನ ಆಚರಣೆ ಸಲುವಾಗಿ 3750 ಕಿ.ಗ್ರಾಂ ತೂಕದ ವಿಶ್ವದಲ್ಲೇ ಅತ್ಯಂತ ದೊಡ್ಡದಾದ ಕೇಕ್ ನಿರ್ಮಿಸಲಾಯಿತು.. ವಿಶ್ವ ದಾಖಲೆ ಮುರಿಯುವ ಯತ್ನವನ್ನು ಈ ‘ಪಿರಮಿಡ್’ ಕೇಕ್ ತಯಾರಿ ಮೂಲಕ ಮಾಡಲಾಯಿತು. ವಿವಿಧ ಗುಡ್ಡಗಾಡು ಪ್ರದೇಶಗಳಿಂದ ಬರುವ ಬಾಲಕಿಯರು ಈ ಕೇಕ್ ಕತ್ತರಿಸಿದ ಬಳಿಕ ಈ ಬಾಲಕಿಯರು ಹಾಗೂ ಇತರರಿಗೆ ಅದನ್ನು ವಿತರಿಸಲಾಯಿತು.
2016: ಉತ್ತಮ ಸೌಲಭ್ಯ ಮತ್ತು ಶಿಕ್ಷಣಕ್ಕಾಗಿ ಒತ್ತಾಯಿಸಿ ಪ್ರತಿಭಟನೆಯ ಹಾದಿ ತುಳಿದಿರುವ ಏಮ್ಸ್ ವೈದ್ಯಕೀಯ ವಿದ್ಯಾರ್ಥಿಗಳು ಕೇಂದ್ರ ಸಚಿವ ಜೆ.ಪಿ.ನಡ್ಡಾ ಅವರ ಮೇಲೆ ಇಂಕ್ ಎಸೆದ ಘಟನೆ ಭೋಪಾಲ್ನಲ್ಲಿ ಈದಿನ ಘಟಿಸಿತು.
2014: ಢಾಕಾ: ಜಮಾತ್-ಇ-ಇಸ್ಲಾಮಿ ನಾಯಕ ಹಾಗೂ 1971ರ ಯುದ್ಧಾಪರಾಧಿ ದೆಲ್ವಾರ್ ಹೊಸೈನ್ ಸಯೀದೀಗೆ ಬಾಂಗ್ಲಾದೇಶ ಸುಪ್ರಿಂಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿತು. ಸಯೀದೀ ಸಾಯುವವರೆಗೂ ಸೆರೆಮನೆವಾಸ ಅನುಭವಿಸಬೇಕು ಎಂದು ನ್ಯಾಯಾಲಯ ಹೇಳಿತು. 'ತನ್ನ ಜೀವನದ ಉಳಿದ ಆಯುಸ್ಸನ್ನು ಆತ ಸೆರೆಮನೆಯಲ್ಲೇ ಕಳೆಯಬೇಕು' ಎಂದು ಮುಖ್ಯ ನ್ಯಾಯಮೂರ್ತಿ ಎಂ. ಮುಝಾಮ್ಮೆಲ್ ಹೊಸೈನ್ ಅವರು ನ್ಯಾಯಾಲಯದ ಕಿಕ್ಕಿರಿದ ಕೊಠಡಿಯಲ್ಲಿ ಅಚ್ಚರಿದಾಯಕ ತೀರ್ಪು ಪ್ರಕಟಿಸುತ್ತಾ ಹೇಳಿದರು. ಹೊಸೈನ್ ನೇತೃತ್ವದ ಪಂಚ ಸದಸ್ಯ ಪೀಠವು ಬಹುಮತದ ಅಭಿಪ್ರಾಯವನ್ನು ಆಧರಿಸಿ ಈ ತೀರ್ಪು ನೀಡಿತು. ಆದರೆ ಸಯೀದೀಗೆ ಕೊಡುವ ಶಿಕ್ಷೆ ಬಗ್ಗೆ ಎಷ್ಟು ನ್ಯಾಯಮೂರ್ತಿಗಳು ಭಿನ್ನ ಅಭಿಪ್ರಾಯ ಹೊಂದಿದ್ದರು ಎಂದು ಎಂದು ಸ್ಪಷ್ಟ ಪಡಿಸಲಿಲ್ಲ. ಕಳೆದ ಫೆಬ್ರುವರಿ ತಿಂಗಳಲ್ಲಿ ಅಂತಾರಾಷ್ಟ್ರೀಯ ಅಪರಾಧಗಳ ನ್ಯಾಯಾಲಯ ಸಯೀದೀಗೆ ಮರಣದಂಡನೆ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪು ಪ್ರಕಟವಾಗುತ್ತಿದ್ದಂತೆಯೇ ರಾಷ್ಟ್ರದ ಇತಿಹಾಸದಲ್ಲೇ ಭೀಕರ ರಾಜಕೀಯ ಹಿಂಸಾಚಾರ ಭುಗಿಲೆದ್ದಿತ್ತು. ಸಯೀದೀ ಜಮಾತ್ನ ಪ್ರಮುಖ ನಾಯಕರಲ್ಲಿ ಒಬ್ಬರಾಗಿದ್ದು 1971ರ ಸಮರ ಕಾಲದಲ್ಲಿ ಪಾಕ್ ಕಡೆಗೆ ವಾಲಿ, ಬಾಂಗ್ಲಾ ಸಮರವನ್ನು ವಿರೋಧಿಸಿದ್ದರು. ಅಷ್ಟೇ ಅಲ್ಲದೆ ಆಗಿನ ಪಾಕಿಸ್ತಾನಿ ಆಡಳಿತದ ಜೊತೆ ಕೈಮಿಲಾಯಿಸಿ ಆಲ್ ಬದರ್, ಅಲ್ ಶಾಮ್ಂತಹ ಕುಖ್ಯಾತ ಗುಂಪುಗಳನ್ನು ಪಾಕ್ ಸೇನೆಗೆ ನೆರವಾಗುವ ಸಲುವಾಗಿ ಸ್ಥಾಪಿಸಿದ್ದರು. ಸಯೀದೀ ಕಾರ್ಯಾಚರಣೆಗಳಿಂದಾಗಿ 100 ಹೆಚ್ಚು ಮಂದಿ ಹತರಾಗಿದ್ದರು.
2014: ನವದೆಹಲಿ: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಸದಸ್ಯೆ ಲಲಿತಾ ಕುಮಾರಮಂಗಲಂ ಅವರನ್ನು ರಾಷ್ಟ್ರೀಯ ಮಹಿಳಾ ಆಯೋಗದ ನೂನತ ಅಧ್ಯಕ್ಷೆಯಾಗಿ ನೇಮಕ ಮಾಡಲಾಯಿತು. ಕೇಂದ್ರ ಸರ್ಕಾರ ಈದಿನ ಲಲಿತಾ ಅವರ ನೇಮಕಾತಿಯನ್ನು ಅಧಿಕೃತಗೊಳಿಸಿತು. ಈ ಕುರಿತು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಮಾಹಿತಿ ನೀಡಿದರು. ಲಲಿತಾ ತಮಿಳುನಾಡಿನಲ್ಲಿ ಪ್ರಕೃತಿ ಎನ್ನುವ ಖಾಸಗಿ ಸಂಸ್ಥೆಯೊಂದನ್ನು(ಎನ್ಜಿಒ) ನಡೆಸಿದ ಅನುಭವ ಹೊಂದಿದ್ದು, ಖುದ್ದು ಪ್ರಧಾನಿಯೇ ಇವರ ನೇಮಕಾತಿ ಮಾಡಿದ್ದಾರೆ. ಆಕೆ ಸಾಮರ್ಥ್ಯವಂತೆಯಾಗಿದ್ದು ಮಹಿಳೆಯರ ಆಶೋತ್ತರಗಳನ್ನು ಈಡೇರಿಸುವ ಸಲುವಾಗಿ ಸಮರ್ಥವಾಗಿ ಕಾರ್ಯ ನಿರ್ವಹಿಸಬಲ್ಲರು ಎಂದು ಮೇನಕಾ ಹೇಳಿದರು.
2014: ನವದೆಹಲಿ: ಅರ್ಜುನ ಪ್ರಶಸ್ತಿಗಾಗಿ ಕ್ರೀಡಾ ಸಚಿವಾಲಯದ ಜತೆ ಹೋರಾಡುತ್ತಿದ್ದ ಬಾಕ್ಸರ್ ಮನೋಜ್ ಕುಮಾರ್ ಕೊನೆಗೂ ಗೆಲುವು ಸಾಧಿಸಿದರು. ನ್ಯಾಯಾಲಯದ ಮೆಟ್ಟಿಲೇರಿದ್ದ ಮನೋಜ್ಗೆ ತಲೆಬಾಗಿದ ಕ್ರೀಡಾ ಸಚಿವಾಲಯ, ಅವರಿಗೆ ಅರ್ಜುನ ಪ್ರಶಸ್ತಿ ನೀಡಲು ಒಪ್ಪಿಕೊಂಡಿತು. 2010ರ ಕಾಮನ್ವೆಲ್ತ್ ಗೇಮ್ಸ್ ಸ್ವರ್ಣ ಪದಕ ಸಾಧಕ ಮನೋಜ್ಗೆ ಈದಿನ ಬೆಳಗ್ಗೆ ಕ್ರೀಡಾ ಸಚಿವಾಲಯ, ಅರ್ಜುನ ಪ್ರಶಸ್ತಿ ನೀಡುವ ಬಗ್ಗೆ ಪತ್ರದ ಮೂಲಕ ಮಾಹಿತಿ ನೀಡಿತು.
2014: ಚೆನ್ನೈ: 'ಮೈ ಹೂಂ ರಜನೀಕಾಂತ್' ಚಿತ್ರದ ವಿರುದ್ಧ ನ್ಯಾಯಾಲಯದ ಕಟ್ಟೆ ಏರಿದ ತಮಿಳು ‘ಸೂಪರ್ ಸ್ಟಾರ್ ರಜನೀಕಾಂತ್’ ಚಿತ್ರದ ಬಿಡುಗಡೆ ವಿರುದ್ಧ ಮಧ್ಯಂತರ ತಡೆಯಾಜ್ಞೆ ಪಡೆದುಕೊಂಡರು. 'ಮೈ ಹೂಂ ರಜನೀಕಾಂತ್' ಚಿತ್ರ ನಿರ್ಮಾಪಕರ ವಿರುದ್ಧ ಮದ್ರಾಸ್ ಹೈಕೋರ್ಟ್ನಲ್ಲಿ ರಜನೀಕಾಂತ್ ದಾವೆ ಹೂಡಿದರು. 'ನನ್ನ ಹೆಸರನ್ನು ದುರುಪಯೋಗಿಸಲಾಗಿದೆ. ಮತ್ತು ಚಿತ್ರ ನಿರ್ಮಾಪಕರು ನನ್ನ ಹೆಸರು ಬಳಸುವ ಮುನ್ನ ನನ್ನ ಅನುಮತಿ ಪಡೆದುಕೊಂಡಿಲ್ಲ' ಎಂದು ರಜನೀಕಾಂತ್ ದೂರಿದರು. ಅಹವಾಲು ಆಲಿಸಿದ ಮದ್ರಾಸ್ ಹೈಕೋರ್ಟ್ ಚಿತ್ರ ಬಿಡುಗಡೆಗೆ ಮಧ್ಯಂತರ ತಡೆಯಾಜ್ಞೆ ನೀಡಿತು. ಪ್ರಕರಣವನ್ನು ವಿಚಾರಣೆಗಾಗಿ ಸೆಪ್ಟೆಂಬರ್ 22ಕ್ಕೆ ಮುಂದೂಡಲಾಯಿತು.
2014: ಅಹಮದಾಬಾದ್: ಭಾರತಕ್ಕೆ ಆಗಮಿಸಿದ ಒಂದು ಗಂಟೆ ಅವಧಿಯಲ್ಲೇ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್, ಪ್ರಮುಖ ಮೂರು ಅಂಶಗಳ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ನಡೆಸಿ ಒಪ್ಪಂದಕ್ಕೆ ಸಹಿ ಮಾಡಿದರು. ನೆರೆಯ ರಾಷ್ಟ್ರ ಚೀನಾ ಜತೆಗಿನ ಬಾಂಧವ್ಯ ವೃದ್ಧಿಸಿಕೊಳ್ಳುವ ವಿಚಾರ ಸೇರಿದಂತೆ ವ್ಯಾಪಾರ ವಿನಿಮಯ, ಬಂಡವಾಳ ಹೂಡಿಕೆ ಮತ್ತು ಗಡಿ ವಿಚಾರವಾಗಿ ಆಗಾಗ ತಲೆದೋರುವ ಸಮಸ್ಯೆಗಳ ಕುರಿತು ಒಪ್ಪಂದ ಪ್ರಕ್ರಿಯೆ ನಡೆಯಿತು. ಗುಜರಾತ್ ಸರ್ಕಾರದ ಸಹಭಾಗಿತ್ವದಲ್ಲಿ ಕೆಲ ಯೋಜನೆಗಳಿಗೆ ನೇರ ಬಂಡವಾಳ ಹೂಡಿಕೆಯ ಒಪ್ಪಂದವೂ ನಡೆದಿದೆ ಎನ್ನಲಾಯಿತು. ಮೂರು ದಿನಗಳ ಪ್ರವಾಸಕ್ಕಾಗಿ ಈದಿನ ಭಾರತಕ್ಕೆ ಆಗಮಿಸಿದ ಕ್ಸಿ ಜಿನ್ಪಿಂಗ್ ಅವರಿಗೆ ಅಹಮದಾಬಾದ್ನಲ್ಲಿ ಅದ್ದೂರಿ ಸ್ವಾಗತವನ್ನೇ ನೀಡಲಾಯಿತು. ವಿಮಾನ ನಿಲ್ದಾಣಕ್ಕೆ ಬಂದಿಳಿದ ನರೇಂದ್ರ ಮೋದಿ ಅವರನ್ನು ಗುಜರಾತ್ ಮುಖ್ಯಮಂತ್ರಿ ಆನಂದಿಬೆನ್ ಪಟೇಲ್, ರಾಜ್ಯಪಾಲ ಒ.ಪಿ. ಕೊಹ್ಲಿ ಮತ್ತು ರಾಜ್ಯ ಸಂಪುಟ ಸಚಿವರು ಬರಮಾಡಿಕೊಂಡರು. ಬಳಿಕ ಪ್ರಧಾನಿ ನರೇಂದ್ರ ಮೋದಿ ಹಿಯಾತ್ ಹೋಟೆಲ್ನಲ್ಲಿ ಜಿನ್ಪಿಂಗ್ ಅವರನ್ನು ಭೇಟಿ ಮಾಡಿದರು. ಬೌದ್ಧ ಸಂಸ್ಕೃತಿ ಪ್ರತಿಬಿಂಬಿಸುವ ನಾನಾ ಕಲಾಕೃತಿಗಳ ಪ್ರದರ್ಶನ ಮತ್ತು ಸ್ಲೈಡ್ ಶೋ ನಡೆಯಿತು. ನಂತರ ಉಭಯ ರಾಷ್ಟ್ರಗಳ ನಡುವಿನ ಒಪ್ಪಂದದ ಅಂಶಗಳನ್ನು ಸಂಕ್ಷಿಪ್ತವಾಗಿ ವಿವರಿಸಿ ಸಹಿ ಮಾಡಿಸಿಕೊಳ್ಳಲಾಯಿತು. ಭಾರತದಲ್ಲಿ ಚೀನಾದ ಹೂಡಿಕೆ ಮತ್ತು ಗಡಿ ಪ್ರದೇಶಗಳಲ್ಲಿ ನಡೆಯುತ್ತಿರುವ ಕೆಲ ಅಂಶಗಳು ಜಿನ್ಪಿಂಗ್ ಮತ್ತು ಪ್ರಧಾನಿ ಮೋದಿ ಅವರ ಮಾತುಕತೆಯ ಮಹತ್ವದ ಅಂಶಗಳಾಗಿದ್ದವು. ಅಹಮದಾಬಾದ್ನಲ್ಲಿ ಇಂಡಿಸ್ಟ್ರಿಯಲ್ ಪಾರ್ಕ್ ನಿರ್ವಿುಸಿ ಚೀನಾದ ಗುವಾಂಗ್ಜೋ ಮಾದರಿಯಲ್ಲೇ ಅಭಿವೃದ್ಧಿ ಪಡಿಸುವುದೂ ಒಪ್ಪಂದದೊಳಗಿನ ಒಂದು ಅಂಶವಾದರೆ, ಉಳಿದಂತೆ ಭಾರತೀಯ ರೈಲ್ವೆ ಯೋಜನೆಗಳಲ್ಲಿ ಚೀನಾ ಸಾವಿರಾರು ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲಿದ್ದು, ತಯಾರಿಕೆ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸುವ ಯೋಜನೆಗಳಲ್ಲೂ ಹೂಡಿಕೆ ಮಾಡುವ ವಿಚಾರವೂ ಒಪ್ಪಂದದ ಪ್ರಮುಖ ಅಂಶಗಳಾಗಿದ್ದವು ಎಂದು ಹೇಳಲಾಯಿತು. ಇವೆಲ್ಲದರ ಜೊತೆಗೆ ಗುಜರಾತ್‌ನ ಶಿಕ್ಷಣ ಕ್ಷೇತ್ರದಲ್ಲೂ ಚೀನಾ ಸರ್ಕಾರದ ಹೂಡಿಕೆ ಮಾಡಲಿದೆ ಎನ್ನಲಾಯಿತು.
2014: ನವದೆಹಲಿ: ನ್ಯಾಯಮೂರ್ತಿ ಎಚ್.ಎಲ್. ದತ್ತು ಅವರನ್ನು ಭಾರತದ ಮುಂದಿನ ಮುಖ್ಯನ್ಯಾಯಮೂರ್ತಿಯಾಗಿ (ಸಿಜೆಐ) ನೇಮಕ ಮಾಡಿರುವುದರ ವಿರುದ್ಧ ವಕೀಲೆ ಹಾಗೂ ಮಾಜಿ ರಾ ಮಹಿಳಾ ಅಧಿಕಾರಿ ಸಲ್ಲಿಸಿದ ಅರ್ಜಿಯನ್ನು ಆಲಿಸಲು ದೆಹಲಿ ಹೈಕೋರ್ಟ್ ಒಪ್ಪಿತು. ಲೈಂಗಿಕ ಕಿರುಕುಳದ ಆರೋಪ ಮಾಡಿರುವ ನಿಶಾ ಪ್ರಿಯಾ ಭಾಟಿಯಾ (51) ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ದತ್ತು ಅವರ ಹೆಸರನ್ನು ಸರ್ಕಾರವು ರಾಷ್ಟ್ರಪತಿಗಳಿಗೆ ಮಾಡಿರುವ ಶಿಫಾರಸನ್ನು ರದ್ದು ಪಡಿಸಬೇಕು ಎಂದು ಕೋರಿದರು. ಮುಖ್ಯ ನ್ಯಾಯಮೂರ್ತಿ ಜಿ. ರೋಹಿಣಿ ಮತ್ತು ನ್ಯಾಯಮೂರ್ತಿ ಆರ್.ಎಸ್. ಎಂಡ್ಲಾ ಅವರನ್ನು ಒಳಗೊಂಡ ವಿಭಾಗೀಯ ಪೀಠವು ವಿಷಯವನ್ನು ಆಲಿಸುವುದಾಗಿ ಹೇಳಿತು. ಕೇಂದ್ರ ಸರ್ಕಾರದ ಪರವಾಗಿ ವಾದಿಸಿದ ಸಾಲಿಸಿಟರ್ ಜನರಲ್ ಸಂಜಯ ಜೈನ್ ಅವರು ಮನವಿಯನ್ನು ವಿರೋಧಿಸಿದರು. ಅರ್ಜಿಯು ಕ್ಷುಲ್ಲಕವಾದುದಾಗಿದ್ದು ಅದನ್ನು ಪುರಸ್ಕರಿಸಬಾರದು ಎಂದು ಜೈನ್ ವಾದಿಸಿದರು. ನ್ಯಾಯಮೂರ್ತಿ ಎಚ್.ಎಲ್. ದತ್ತು ಅವರನ್ನು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕ ಮಾಡಲು ರಾಷ್ಟ್ರಪತಿಗಳಿಗೆ ಶಿಫಾರಸು ಮಾಡುವ ನಿರ್ಣಯವನ್ನು ಕೇಂದ್ರ ಸಚಿವ ಸಂಪುಟ ಕೈಗೊಂಡಿದೆ ಎನ್ನಲಾಗಿದ್ದು ಈ ಶಿಫಾರಸನ್ನು ರದ್ದು ಪಡಿಸಬೇಕು ಎಂದು ಭಾಟಿಯಾ ತಮ್ಮ ಮನವಿಯಲ್ಲಿ ಕೋರಿದರು. '2011ರಲ್ಲಿ ನ್ಯಾಯಮೂರ್ತಿ ದತ್ತು ಅವರು ಸುಪ್ರೀಂಕೋರ್ಟಿನಲ್ಲಿ ನನ್ನ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದಾಗ ನಾನು ಕಾನೂನು ವಿದ್ಯಾರ್ಥಿನಿಯಾಗಿದ್ದೆ. ಆವಾಗಿನಿಂದ ಅವರು ನನಗೆ ಲೈಂಗಿಕ ಕಿರುಕುಳ ನೀಡಿದ್ದಾರೆ' ಎಂದು ಭಾಟಿಯಾ ದೂರಿದರು. 'ದತ್ತು ಅವರು ನನ್ನ ಎಲ್ಲಾ ಪ್ರಕರಣಗಳನ್ನೂ ವಜಾ ಮಾಡಿದ್ದರು. ಅವರ ವಿರುದ್ಧ ನಾನು ಪೊಲೀಸರು, ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ದೆಹಲಿ ಮಹಿಳಾ ಆಯೋಗಕ್ಕೂ ದೂರು ನೀಡಿದ್ದೆ' ಎಂದು ಭಾಟಿಯಾ ವಿವರಿಸಿದರು. 1987ರಲ್ಲಿ ರೀಸರ್ಚ್ ಅಂಡ್ ಅನಾಲಿಸಿಸ್ ವಿಂಗ್ನಲ್ಲಿ (ರಾ) ಪ್ರಥಮ ದರ್ಜೆ ಎಕ್ಸಿಕ್ಯೂಟಿವ್ ಅಧಿಕಾರಿಯಾಗಿದ್ದ ಭಾಟಿಯಾ ಅವರನ್ನು 2009ರಲ್ಲಿ ಸೇವೆಯಿಂದ ಕಡ್ಡಾಯವಾಗಿ ನಿವೃತ್ತಿ ಮಾಡಲಾಗಿತ್ತು.
2014: ಅಹಮದಾಬಾದ್: ತಮ್ಮ ಜನ್ಮದಿನವಾದ ಈದಿನ ಪ್ರಧಾನಿ ನರೇಂದ್ರ ಮೋದಿ ಅವರು ಗಾಂಧಿನಗರದಲ್ಲಿ ತಮ್ಮ ಮಾತೆಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಜಪಾನ್ ಪ್ರಧಾನಿ ಶಿಂಝೊ ಅಬೆ ಮತ್ತು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಮೋದಿ ಅವರಿಗೆ ದೂರವಾಣಿ ಕರೆ ಮಾಡಿ ಜನ್ಮದಿನದ ಶುಭಾಶಯ ಕೋರಿದರು. 64ಕ್ಕೆ ಕಾಲಿರಿಸಿದ ಮೋದಿ ಅವರು ಅಹಮದಾಬಾದಿನಿಂದ 23 ಕಿ.ಮೀ. ದೂರದ ಗಾಂಧಿ ನಗರಕ್ಕೆ ತಮ್ಮ ಸಾಮಾನ್ಯ ವಾಹನದಲ್ಲಿ ಯಾವ ಭದ್ರತೆಯೂ ಇಲ್ಲದೆ ಏಕಾಂಗಿಯಾಗಿ ತೆರಳಿ ತಮ್ಮ ಮಾತೆ ಹೀರಾಬೆನ್ ಅವರ ಆಶೀರ್ವಾದ ಪಡೆದರು. ಪ್ರಧಾನಿಯಾಗಿ ತಮ್ಮ ಜನ್ಮದಿನವನ್ನು ಆಚರಿಸದೇ ಇರಲು ಮೋದಿ ಜನತೆಗೆ ಮನವಿ ಮಾಡಿದ್ದರು. ಬದಲಾಗಿ ಪ್ರವಾಹ ಸಂತ್ರಸ್ಥರಿಗೆ ನೆರವಾಗುವ ನಿಟ್ಟಿನಲ್ಲಿ ಶ್ರಮಿಸುವಂತೆ ಕೋರಿದ್ದರು. ಹೀರಾಬೆನ್ ಅವರು ಪುತ್ರನಿಗೆ 50,000ರೂಪಾಯಿಗಳ ಗಿಫ್ಟ್ ಚೆಕ್ ನೀಡಿ ಜಮ್ಮು - ಕಾಶ್ಮೀರ ನೆರೆಸಂತ್ರಸ್ಥರ ಪರಿಹಾರಕ್ಕೆ ಬಳಸುವಂತೆ ಸೂಚಿಸಿದರು.
2014: ನವದೆಹಲಿ: ಬಿಜೆಪಿಯ ಹಿರಿಯ ನಾಯಕ ಲಾಲ್ ಕೃಷ್ಣ ಅಡ್ವಾಣಿ ಅವರು ಲೋಕಸಭೆಯ ಪ್ರತಿಷ್ಠಿತ ನೈತಿಕತೆ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡರು. 75 ವಯಸ್ಸು ಮೀರಿದವರನ್ನು ಸಂಪುಟದಿಂದ ಹೊರಗಿಡಬೇಕು ಎಂಬ ನಿರ್ಧಾರದ ಪರಿಣಾಮವಾಗಿ ನರೇಂದ್ರ ಮೋದಿ ಸರ್ಕಾರದಲ್ಲಿ ಹಿರಿಯ ಸಚಿವರಾಗುವ ಅವಕಾಶ ವಂಚಿತರಾಗಿದ್ದ 86ರ ಹರೆಯದ ಹಿರಿಯ ನಾಯಕ ಅಡ್ವಾಣಿ ಅವರನ್ನು ನೈತಿಕತೆ ಸಮಿತಿಯ ಅಧ್ಯಕ್ಷರನ್ನಾಗಿ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್ ನೇಮಕ ಮಾಡಿದರು. ಕಳೆದ ಲೋಕಸಭೆಯಲ್ಲಿ ಕಾಂಗ್ರೆಸ್ಸಿನ ಮಾಣಿಕ್ರಾವ್ ಗವಿಟ್ ಅವರು ನೈತಿಕತೆ ಸಮಿತಿಯ ಅಧ್ಯಕ್ಷರಾಗಿದ್ದರು.
2014: ಇಸ್ಲಾಮಾಬಾದ್: ಪಾಕಿಸ್ತಾನದ ಪ್ರಧಾನಿ ನವಾಜ್ ಶರೀಫ್, ಅವರ ಸಂಪುಟ ಸಚಿವರು ಮತ್ತು ಹಿರಿಯ ಅಧಿಕಾರಿಗಳ ವಿರುದ್ಧ ಇಸ್ಲಾಮಾಬಾದಿನಲ್ಲಿ ಸರ್ಕಾರಿ ವಿರೋಧಿ ಪ್ರತಿಭಟನಕಾರರ ಹತ್ಯೆಯಲ್ಲಿ ಶಾಮೀಲಾಗಿದ್ದಾರೆಂದು ಆರೋಪಿಸಿ ಕೊಲೆ ಪ್ರಕರಣ ದಾಖಲಿಸಲಾಯಿತು. ಪಾಕಿಸ್ತಾನಿ ಪ್ರಧಾನಿ ನವಾಜ್ ಶರೀಫ್ ವಿರುದ್ಧ ಹಿಂದಿನ ರಾತ್ರಿ ಕೊಲೆ ಪ್ರಕರಣ ದಾಖಲಿಸಲಾಗಿದೆ. ಪ್ರತಿಭಟನಕಾರರನ್ನು ಕೊಂದುದಕ್ಕಾಗಿ ಶರೀಫ್ ಮತ್ತು ಇತರರ ವಿರುದ್ಧ ಕೊಲೆ ಆಪಾದನೆ ಹೊರಿಸುವಂತೆ ಜಿಲ್ಲಾ ನ್ಯಾಯಾಧೀಶರು ಆಜ್ಞಾಪಿಸಿದ ಬಳಿಕ ಕಳೆದ ರಾತ್ರಿ ಪ್ರಕರಣ ದಾಖಲಿಸಲಾಯಿತು ಎಂದು ವರದಿ ತಿಳಿಸಿತು. ಪ್ರಧಾನಿ ವಿರುದ್ಧ ದಾಖಲಾದ ಎರಡನೇ ಕ್ರಿಮಿನಲ್ ಪ್ರಕರಣ ಇದು. ಮುಸ್ಲಿಂ ಧಾರ್ವಿುಕ ನಾಯಕ ತಾಹೀರುಲ್ ಖಾದ್ರಿ ನೇತೃತ್ವದ ಪಾಕಿಸ್ತಾನ ಅವಾಮಿ ತೆಹರಿಕ್ (ಪಿಎಟಿ) ಸಂಘಟನೆಯು ಪ್ರಕರಣ ದಾಖಲಿಸುವಂತೆ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಆಗಸ್ಟ್ 30ರಂದು ಪೊಲೀಸರೊಂದಿಗೆ ಸಂಭವಿಸಿದ ಘರ್ಷಣೆಗಳಲ್ಲಿ ಕನಿಷ್ಠ ಮೂವರು ಮೃತರಾಗಿ 500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಲಾಹೋರಿನಲ್ಲಿ ಖಾದ್ರಿ ಬೆಂಬಲಿಗರು ಮತ್ತು ಪೊಲೀಸರ ಮಧ್ಯೆ ಕಳೆದ ಜೂನ್ನಲ್ಲಿ ಸಂಭವಿಸಿದ್ದ ಘರ್ಷಣೆಗಾಗಿ ಪ್ರಧಾನಿ ವಿರುದ್ಧ ಕಳೆದ ತಿಂಗಳು ಪ್ರಕರಣ ದಾಖಲಾದ ಬಳಿಕ ದಾಖಲಾದ ಎರಡನೇ ಕ್ರಿಮಿನಲ್ ಪ್ರಕರಣ ಇದು.
2014: ನವದೆಹಲಿ: ಶಾರದಾ ಹಗರಣದಲ್ಲಿ ಸಿಬಿಐ ಪರಿಶೀಲನೆಗೆ ಒಳಗಾಗಿದ್ದ ಅಸ್ಸಾಮಿನ ಮಾಜಿ ಡಿಜಿಪಿ ಶಂಕರ ಬರೂವ ಅವರು ಗುವಾಹಟಿಯ ತಮ್ಮ ನಿವಾಸದಲ್ಲಿ ಮೃತರಾಗಿರುವುದು ಪತ್ತೆಯಾಯಿತು. ಶಂಕರ ಬರೂವ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದರು. ಮಾಜಿ ಡಿಜಿಪಿ ರಿವಾಲ್ವರಿನಿಂದ ಸ್ವತಃ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಯಿತು. ಶಂಕರ ಬರೂವ ಅವರ ಮನೆ ಮೇಲೆ ಶಾರದಾ ಹಗರಣದ ಹಿನ್ನೆಲೆಯಲ್ಲಿ ಎರಡು ವಾರಗಳ ಹಿಂದೆ ಸಿಬಿಐ ದಾಳಿ ನಡೆಸಿತ್ತು. ಬರೂವ ಮನೆ ಸೇರಿದಂತೆ ಗುವಾಹಟಿಯಲ್ಲಿ 12 ಕಡೆ ಸಿಬಿಐ ಸಿಬ್ಬಂದಿ ದಾಳಿ ನಡೆಸಿ ಶೋಧ ಕಾರ್ಯಾಚರಣೆ ಕೈಗೊಂಡಿದ್ದರು.
2014: ಸುವಾ (ಫಿಜಿ): ಫಿಜಿಯಲ್ಲಿ 2006ರಲ್ಲಿ ಸಂಭವಿಸಿದ ಸೇನಾ ದಂಗೆಯ ಬಳಿಕ ಫಿಜಿ ಸಂಸತ್ತಿಗಾಗಿ ಇದೇ ಮೊತ್ತ ಮೊದಲ ಸಾರ್ವಜನಿಕ ಚುನಾವಣೆ ಈದಿನ ನಡೆಯಿತು. ಚುನಾವಣೆ ಸಲುವಾಗಿ ಒಟ್ಟು 1460 ಮತಗಟ್ಟೆಗಳ ವ್ಯವಸ್ಥೆ ಮಾಡಲಾಗಿತ್ತು. ಮತಗಟ್ಟೆಗಳಿಗೆ ದೊಡ್ಡ ಸಂಖ್ಯೆಯಲ್ಲಿ ಮತದಾರರು ಬಂದು ಮತಚಲಾಯಿಸಿದರು ಎಂದು ಸನೀಮ್ಹರ್ಷ ವ್ಯಕ್ತ ಪಡಿಸಿದರು. 50 ಸದಸ್ಯ ಬಲದ ಸಂಸತ್ತಿಗೆ ನಡೆಯುತ್ತಿರುವ ಮತದಾನ ಸಂಜೆ 6 ಗಂಟೆಗೆ ಮುಕ್ತಾಯಗೊಂಡಿತು.
2007: ಕನ್ನಡ ಪುಸ್ತಕ ಪ್ರಾಧಿಕಾರದ 2006ನೇ ಸಾಲಿನ ಶ್ರೇಷ್ಠ ಪ್ರಕಾಶನ ಪ್ರಶಸ್ತಿಗೆ ಬೆಂಗಳೂರಿನ ನವಕರ್ನಾಟಕ ಪ್ರಕಾಶನ ಆಯ್ಕೆಯಾಯಿತು. ಪ್ರಶಸ್ತಿಯು 50 ಸಾವಿರ ರೂಪಾಯಿ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಪ್ರಶಸ್ತಿಗೆ ಒಟ್ಟು 24 ಸಂಸ್ಥೆಗಳು ಸ್ಪರ್ಧೆಯಲ್ಲಿದ್ದವು. ಹಿರಿಯ ವಿಮರ್ಶಕ ಪ್ರೊ. ಜಿ. ಎಚ್. ನಾಯಕ ಅಧ್ಯಕ್ಷತೆಯ ಆಯ್ಕೆ ಸಮಿತಿ ಅಂತಿಮವಾಗಿ ಈ ಆಯ್ಕೆ ನಡೆಸಿತು.
2007: ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಸಂಬಂಧವನ್ನು ಪ್ರತಿಬಿಂಬಿಸುವ ಉದ್ದೇಶದಿಂದ ಡರ್ಬಾನಿನ ಖ್ಯಾತ ಕ್ವಾಜುಲು- ನಾಟಲ್ ವಿಶ್ವವಿದ್ಯಾಲಯವು, ವರ್ಣಭೇದ ನೀತಿಯ ವಿರುದ್ಧ ಹೋರಾಡಿದ ಭಾರತದ ಮಹಾತ್ಮ ಗಾಂಧಿ ಹಾಗೂ ದಕ್ಷಿಣ ಆಫ್ರಿಕದ ಆಲ್ಬರ್ಟ್ ಲುಥುಲಿ ಅವರ ಸ್ಮರಣಾರ್ಥ ಶಾಂತಿ ಅಧ್ಯಯನ ಪೀಠ ಆರಂಭಿಸುತ್ತಿರುವುದಾಗಿ ಪ್ರಕಟಿಸಿತು. 1997ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಡರ್ಬಾನ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದಾಗ ಅವರಿಗೆ ಈ ಅಧ್ಯಯನ ಪೀಠದ ಕಲ್ಪನೆ ಮೊಳೆಯಿತು. ಈ ಯೋಜನೆಯನ್ನು ಮೊದಲು ಪ್ರಸ್ತಾಪಿಸಿದವರೇ ಗಾಂಧಿ ಅವರ ಮೊಮ್ಮಗಳು ಇಳಾ ಗಾಂಧಿ. ನಂತರ ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಷನ್ ಪೀಠದ ಪ್ರಾಯೋಜಕತ್ವ ವಹಿಸಿಕೊಂಡಿತು. ಆಫ್ರಿಕದಲ್ಲೇ ಮಹಾತ್ಮ ಗಾಂಧಿ ಸತ್ಯಾಗ್ರಹ ಚಳವಳಿ ಆರಂಭಿಸಿದ್ದರು.
2007: ಬ್ರಿಟನ್ ಮಾರುಕಟ್ಟೆಯಲ್ಲಿ ಶೀಘ್ರದಲ್ಲೇ ವಿಶ್ವದ ಮೊಟ್ಟಮೊದಲ ಸೀಡ್ಲೆಸ್ (ಬೀಜರಹಿತ) ನಿಂಬೆಹಣ್ಣು ಕಾಣಿಸಿಕೊಳ್ಳಲಿದೆ ! ಬ್ರಿಟನ್ನಿನ ರೈತರೊಬ್ಬರು ಬೀಜಗಳೇ ಇಲ್ಲದ ನಿಂಬೆ ಹಣ್ಣನ್ನು ಅಭಿವೃದ್ಧಿಪಡಿಸಿದ್ದಾರೆ. ಒಗರು ಮಿಶ್ರಿತ ಸಿಹಿ ರುಚಿ ಹೊಂದಿರುವ ಈ ವಿಶಿಷ್ಟ ನಿಂಬೆ ಮುಂದಿನ ವರ್ಷದ ಆರಂಭದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಬೀಜರಹಿತ ನಿಂಬೆ ವಿಶೇಷ ಹಣ್ಣು. ಯುರೋಪಿನ 900 ವರ್ಷಗಳ ಇತಿಹಾಸದಲ್ಲಿ ಇಂಥ ಹಣ್ಣನ್ನು ಕಂಡಿಲ್ಲ ಎಂದು ಇಂಗ್ಲೆಂಡಿನ ಮಾಧ್ಯಮಗಳು ವರದಿ ಮಾಡಿದವು.
2007: ಅಂತರ್ಜಾಲದಲ್ಲಿ ಗೂಗಲ್ ಸರ್ಚ್ ಎಂಜಿನ್ ಹಾಗೂ ಜಿ-ಮೇಲ್ ಸೇರಿದಂತೆ ಅನೇಕ ವಿದೇಶಿ ವೆಬ್ಸೈಟ್, ಇ-ಮೈಲ್ ತಾಣಗಳ ಬಳಕೆಯನ್ನು ಇರಾನ್ ನಿಷೇಧಿಸಿತು.
2007: ಎಳ್ಳು ಹಾಗೂ ಶೇಂಗಾ ಆಮದಿನ ಮೇಲೆ ಹೇರಿದ್ದ ನಿಷೇಧವನ್ನು ರಷ್ಯ ತೆರವುಗೊಳಿಸಿತು. ಭಾರತದ ಶೇಂಗಾ ಹಾಗೂ ಎಳ್ಳಿನ ಮೇಲೆ ರಾಸಾಯನಿಕ ಗೊಬ್ಬರ ಹಾಗೂ ಕೀಟನಾಶಕಗಳ ಉಳಿಕೆ ಹೆಚ್ಚಾಗಿರುತ್ತಿದ್ದುದರಿಂದ ರಷ್ಯಾದ ಕೃಷಿ ಕಾವಲುಪಡೆ ಈ ನಿರ್ಬಂಧ ಹೇರಿತ್ತು.
2006: ಭಯೋತ್ಪಾದನೆ ನಿಗ್ರಹ ಕುರಿತು ಭಾರತದ ನಿಲುವನ್ನು ಬೆಂಬಲಿಸಿದ ಅಲಿಪ್ತ ಚಳವಳಿಯ ರಾಷ್ಟ್ರಗಳ ಒಕ್ಕೂಟವು (ನ್ಯಾಮ್) ಭಯೋತ್ಪಾದನೆ ನಿಗ್ರಹಿಸಲು ಎಲ್ಲ ಸದಸ್ಯ ರಾಷ್ಟ್ರಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುವ 91 ಪುಟಗಳ ನಿರ್ಣಯವನ್ನು ಸ್ವೀಕರಿಸಿತು. ಭಯೋತ್ಪಾದನೆಯಲ್ಲಿ ತೊಡಗಿರುವವರ ಗಡೀಪಾರು ಅಥವಾ ಹಸ್ತಾಂತರ ಮತ್ತು ನ್ಯಾಯಾಂಗದ ಪರಿಧಿಗೆ ಅವರನ್ನು ತರಲು ಸದಸ್ಯ ರಾಷ್ಟ್ರಗಳು ಪ್ರಯತ್ನಿಸಬೇಕು ಎಂದು ನಿರ್ಣಯ ಹೇಳಿತು.
1980: ನಿಕರಾಗುವಾದ ಮಾಜಿ ಅಧ್ಯಕ್ಷ ಅನಾಸ್ಟಾಸಿಯೊ ಸೊಮಾಝಾ ಅವರನ್ನು ಪರಗ್ವೆಯಲ್ಲಿ ಹತ್ಯೆಗೈಯಲಾಯಿತು.
1970: ಸಾಹಿತಿ ರಾಘವೇಂದ್ರ ದಂಡಿನ ಜನನ.
1960: ಸಿಂಧು ಮತ್ತು ಅದರ ಉಪನದಿಗಳ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಭಾರತ ಮತ್ತು ಪಾಕಿಸ್ತಾನ ಸಹಿ.
1956: ಒಎನ್ ಜಿಸಿ ಆರಂಭ.
1950: ಭಾರತ ಸರ್ಕಾರವು ಇಸ್ರೇಲಿಗೆ ಮಾನ್ಯತೆ ನೀಡಿತು.
1949: ಸಿ.ಎನ್. ಅಣ್ಣಾದುರೈ ಅವರು `ಪೆರಿಯಾರ್' ಸಂಬಂಧ ಕಡಿದುಕೊಂಡು `ದ್ರಾವಿಡ ಮುನ್ನೇತ್ರ ಕಳಗಂ' (ಡಿಎಂಕೆ) ಪಕ್ಷವನ್ನು ಸ್ಥಾಪಿಸಿದರು.
1948: ಹೈದರಾಬಾದ್ ಭಾರತದೊಂದಿಗೆ ವಿಲೀನಗೊಂಡ ಬಗ್ಗೆ ಹೈದರಾಬಾದ್ ನಿಜಾಮನಿಂದ ಘೋಷಣೆ.
1939: ಸಾಹಿತಿ ಗುರುಸ್ವಾಮಿ ಕಲಗೇರಿ ಜನನ.
1915: ಸಮಕಾಲೀನ ಭಾರತೀಯ ಕಲಾವಿದ ಹಾಗೂ ಚಿತ್ರ ನಿರ್ಮಾಪಕ ಮಕ್ಬೂಲ್ ಫಿದಾ ಹುಸೇನ್ ಜನ್ಮದಿನ.
1906: ಜ್ಯೂನಿಯಸ್ ರಿಚರ್ಡ್ ಜಯವರ್ಧನೆ ಜನ್ಮದಿನ. ವಕೀಲ ಹಾಗೂ ಸರ್ಕಾರಿ ಅಧಿಕಾರಿಯಾಗಿದ್ದ ಇವರು 1978ರಿಂದ
1989ರ ಅವಧಿಯಲ್ಲಿ ಶ್ರೀಲಂಕಾದ ಅಧ್ಯಕ್ಷರಾಗಿದ್ದರು.
1879: ಸಮಾಜ ಸುಧಾರಕ ಹಾಗೂ `ದ್ರಾವಿಡ ಕಳಗಂ' ಪಕ್ಷದ ಸ್ಥಾಪಕ ಇ.ವಿ. ರಾಮಸ್ವಾಮಿ `ಪೆರಿಯಾರ್' ಜನ್ಮದಿನ.
1876: ಭಾರತೀಯ ಕಾದಂಬರಿಕಾರ ಶರತ್ ಚಂದ್ರ ಚಟರ್ಜಿ (1876-1938) ಜನ್ಮದಿನ.
1867: ಭಾರತೀಯ ಕಲಾವಿದ ಹಾಗೂ ಒಳಾಂಗಣ ಕಲಾವಿದ ಗಗನೇಂದ್ರನಾಥ ಟ್ಯಾಗೋರ್ (1867-1938) ಜನ್ಮದಿನ. ಇವರು ರಬೀಂದ್ರನಾಥ ಟ್ಯಾಗೋರ್ ಅವರ ಸೋದರಳಿಯ.
1850: ಸಾಹಿತಿ, ಶಿಕ್ಷಣ ತಜ್ಞ, ಮುಂಬೈ ಕರ್ನಾಟಕದ ಏಳಿಗೆಗಾಗಿ ಶ್ರಮಿಸಿದ ರೊದ್ದ ಶ್ರೀನಿವಾಸರಾಯರು (17-9-1850ರಿಂದ 4-8-1929) ಕೋನೆರರಾಯರು- ಸುಬ್ಬಮ್ಮ ದಂಪತಿಯ ಮಗನಾಗಿ ಧಾರವಾಡದ ಮದಿಹಾಳದಲ್ಲಿ ಜನಿಸಿದರು.
1827: ಬ್ರೈಟನ್ನಿನಲ್ಲಿ ಸಸೆಕ್ಸ್ ವಿರುದ್ಧ ಕೆಂಟ್ ಪಂದ್ಯದಲ್ಲಿ ಕ್ರಿಕೆಟ್ ಆಟಕ್ಕೆ `ವೈಡ್ ಬಾಲ್' ಪ್ರವೇಶ ಪಡೆಯಿತು.
(ಸಂಗ್ರಹ: ನೆತ್ರಕೆರೆ ಉದಯಶಂಕರ)
No comments:
Post a Comment