Showing posts with label ಶಬರಿಮಲೈ. Show all posts
Showing posts with label ಶಬರಿಮಲೈ. Show all posts

Thursday, November 15, 2018

ಶಬರಿಮಲೈಗೆ ಮಾರ್ಗವಿಲ್ಲ: ಕೋಚಿ ವಿಮಾನ ನಿಲ್ದಾಣದಲ್ಲೇ ‘ತೃಪ್ತಿ’

ಶಬರಿಮಲೈಗೆ ಮಾರ್ಗವಿಲ್ಲ: ಕೋಚಿ

ವಿಮಾನ ನಿಲ್ದಾಣದಲ್ಲೇತೃಪ್ತಿ

ಕೋಚಿ: ಶಬರಿಮಲೈ ದೇವಸ್ಥಾನಕ್ಕೆ ಭೇಟಿ ನೀಡಲು ಮಹಿಳಾ ಹಕ್ಕುಗಳ ಕಾರ್ಯಕರ್ತೆ ತೃಪ್ತಿ ದೇಸಾಯಿ 2018 ನವೆಂಬರ್ 16 ಶುಕ್ರವಾರ ಕೇರಳದ ಕೋಚಿಗೆ ಬಂದಿಳಿದಿದ್ದರೂ, ಶಬರಿಮಲೈಗೆ ಹೋಗುವ ಎಲ್ಲ ಮಾರ್ಗಗಳೂ ಬಂದ್ ಆದ ಪರಿಣಾಮವಾಗಿ ಕೋಚಿ ವಿಮಾನನಿಲ್ದಾಣದಲ್ಲೇ ಸಿಕ್ಕಿಹಾಕಿಕೊಂಡಿದ್ದಾರೆ.

ಶಬರಿಮಲೈ ದೇಗುಲ ಪ್ರವೇಶಿಸಿಯೇ ಸಿದ್ಧ ಎಂಬುದಾಗಿ ಘೋಷಿಸಿರುವ ತೃಪ್ತಿ ದೇಸಾಯಿ ಪ್ರಕಟಣೆ ವಿರುದ್ಧ ಭಾರೀ ಸಂಖ್ಯೆಯ ಅಯ್ಯಸ್ವಾಮಿ ಭಕ್ತರು ಕೋಚಿ ವಿಮಾನ ನಿಲ್ದಾಣಕ್ಕೇ ಮುತ್ತಿಗೆ ಹಾಕಿದ್ದು, ವಿಮಾನ ನಿಲ್ದಾಣದಿಂದ ಹೊರಕ್ಕೆ ಬರಲು ಕೂಡಾ ಸಾಧ್ಯವಾಗದಂತೆ ತೃಪ್ತಿ ದೇಸಾಯಿ ಮತ್ತು ಆಕೆಯ ಜೊತೆಗೆ ಬಂದ ಮಹಿಳೆಯರನ್ನು  ಅಡ್ಡಗಟ್ಟಿದ್ದಾರೆ.

ಪೊಲೀಸರು ತೃಪ್ತಿ ದೇಸಾಯಿ ಅವರನ್ನು ಪೊಲೀಸ್ ವ್ಯಾನಿನಲ್ಲಿ ಕರೆದೊಯ್ಯಲು ಯತ್ನಿಸಿದರೆ, ತಮ್ಮ ದೇಹಗಳ ಮೇಲೆಯೇ ಕರೆದೊಯ್ಯಬೇಕು ಎಂದು ಅಯ್ಯಪ್ಪ ಭಕ್ತರು ಎಲ್ಲ ಮಾರ್ಗಗಳಲ್ಲೂ ಮಲಗಿಕೊಂಡಿದ್ದಾರೆ. ಕೋಚಿ ವಿಮಾನ ನಿಲ್ದಾಣದಿಂದಲೇ ಮಹಾರಾಷ್ಟ್ರಕ್ಕೆ ವಾಪಸ್ ಹೋಗುವಂತೆ ತೃಪ್ತಿ ದೇಸಾಯಿ ಮತ್ತು ಸಂಗಡಿಗರನ್ನು ಪ್ರತಿಭಟನಕಾರರು ಒತ್ತಾಯಿಸಿದರು.

ಪೊಲೀಸರು ದೇಸಾಯಿಯನ್ನು  ಹೊಟೇಲಿಗೆ ಸ್ಥಳಾಂತರಿಸಲು ಯತ್ನಿಸಿದರೂ, ಪ್ರತಿಭಟನಾಕಾರರು ಹೊರಕ್ಕೆ ಬಿಡಲು ನಿರಾಕರಿಸಿದರು. ದೇವಸ್ಥಾನದ ಮೂಲ ಶಿಬಿರವಾದ ಪಂಬಾವರೆಗಿನ 5.5 ಕಿಮೀ ದೂರವನ್ನು ಕ್ರಮಿಸಲು ಬಾಡಿಗೆ ವಾಹನಗಳನ್ನು ಒದಗಿಸುವಂತೆ ತೃಪ್ತಿ ದೇಸಾಯಿ ಪೊಲೀಸರನ್ನು ಕೇಳಿಕೊಂಡಿದ್ದಾರೆ

ಆದರೆ ಯಾವ ಟ್ಯಾಕ್ಸಿ ಚಾಲಕರೂ ಆಕೆಯನ್ನು ಕರೆದೊಯ್ಯಲು ಒಪ್ಪಿಲ್ಲ. ಆನ್ ಲೈನ್ ಮೂಲಕ ಟ್ಯಾಕ್ಸಿ ಬುಕ್ ಮಾಡುವ ಯತ್ನವೂ ಸಫಲವಾಗಲಿಲ್ಲ. ಯಾವುದೇ ಟ್ಯಾಕ್ಸಿಚಾಲಕರೂ ಆನ್ ಲೈನಿನಲ್ಲಿ ಕರೆದೊಯ್ಯಲು ಮುಂದೆ ಬರಲಿಲ್ಲ. ಬೆಳಗ್ಗೆ 5 ಗಂಟೆಗೆ ವಿಮಾನಕ್ನನಿಲ್ದಾಣಕ್ಕೆ ಬಂದಿಳಿದರೂ, ನಿಲ್ದಾಣದಿಂದ ಹೊರಬರಲೂ ಅವರಿಗೆ ಸಾಧ್ಯವಾಗಲಿಲ್ಲ.

"ಏನಾದರೂ ಸರಿ, ನಾನು ಅಯ್ಯಪ್ಪನ ದರ್ಶನ ಇಲ್ಲದೆ ಹಿಂತಿರುಗುವುದಿಲ್ಲ"ಎಂದು ದೇಸಾಯಿ ಹೇಳಿದ್ದಾರೆ. ತಮ್ಮನ್ನು ಅಡ್ಡ ಗಟ್ಟಿರುವುದು ಭಕ್ತರಲ್ಲ ಗೂಂಡಾಗಳು ಎಂದು ಅವರು ನುಡಿದರು.

ಮಹಾರಾಷ್ಟ್ರದ ಅಹ್ಮದನಗರ  ಜಿಲ್ಲೆಯ ಶನಿ ಶಿಂಗ್ಣಾಪುರ ದೇವಸ್ಥಾನ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶಕ್ಕಾಗಿ ತೃಪ್ತಿ ದೇಸಾಯಿ ಮತ್ತು ಅವರ ಭೂಮಾತಾ ಬ್ರಗೇಡ್ ತೀವ್ರ ಹೋರಾಟ ನಡೆಸಿ ಕಡೆಗು ಯಶಸ್ವಿಯಾಗಿತ್ತು.

ಎಲ್ಲ ವಯಸ್ಸಿನ ಮಹಿಳೆಯರಿಗೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ತೆರೆದು ಸುಪ್ರೀಂಕೋರ್ಟ್ ತೀರ್ಪು ನೀಡಿದ ಬಳಿಕ, ಶಬರಿಮಲೈ ವಿವಾದದ ಕೇಂದ್ರ ಬಿಂದುವಾಗಿದೆ. ಸುಪ್ರೀಂಕೋರ್ಟ್ ತೀರ್ಪು ಅನುಷ್ಠಾನಕ್ಕೆ ಬದ್ಧ ಎಂಬುದಾಗಿ ಕೇರಳ ಸರ್ಕಾರ ಪಟ್ಟು ಹಿಡಿದಿದ್ದರೆ, ಮಹಿಳೆಯರ ಪ್ರವೇಶಕ್ಕೆ ಅವಕಾಶ ನೀಡಲಾಗದು ಎಂದು ಮಹಿಳೆಯರೂ ಸೇರಿದಂತೆ ಭಕ್ತರು, ತಂತ್ರಿಗಳು, ಪಂದಳ ರಾಜಕುಟುಂಬ ಪಟ್ಟು ಹಿಡಿದಿದ್ದಾರೆ. ಬಿಜೆಪಿ ನೇತೃತ್ವದ  ಎನ್ ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಸಂಯುಕ್ತ ಪ್ರಜಾತಾಂತ್ರಕ ಮೈತ್ರಿಕೂಟ ಭಕ್ತರ ಹೋರಾಟಕ್ಕೆ ಬೆಂಬಲ ನೀಡಿವೆ.

ಶಬರಿಮಲೈ ವಿವಾದ ಇತ್ಯರ್ಥ ಸಲುವಾಗಿ ಗುರುವಾರ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರೆದ ಸರ್ವ ಪಕ್ಷ ಸಭೆ ವಿಫಲಗೊಂಡಿದೆ. ಬಳಿಕ ವಿಜಯನ್ ಅವರು ತಂತ್ರಿಗಳು ಮತ್ತು ಪಂದಳ ರಾಜ ಕುಟುಂಬದ ಜೊತೆಗೆ ಮಾತುಕತೆ ನಡೆಸಿದ್ದು, ಮಹಿಳೆಯರಿಗೆ ಪ್ರತ್ಯೇಕ ದಿನದಂದು ದೇವಾಲಯ ಭೇಟಿಗೆ ಅವಕಾಶ ಕಲ್ಪಿಸುವ ಪ್ರಸ್ತಾಪ ಮುಂದಿಟ್ಟಿದ್ದಾರೆ.

ತಂತ್ರಿಗಳು ಮತ್ತು ರಾಜಕುಟುಂಬ ಸಲಹೆಯನ್ನು ತಿರಸ್ಕರಿಸಿಲ್ಲ, ಆದರೆ ಸಮಾಲೋಚನೆಗೆ ಕಾಲಾವಕಾಶ ಕೋರಿದ್ದಾರೆ ಎಂದು ವರದಿಗಳು ತಿಳಿಸಿವೆ. ತಿರುವಾಂಕೂರು ದೇವಸ್ವಂ ಮಂಡಳಿಗೆ ಸುಪ್ರೀಂಕೋರ್ಟಿನಲ್ಲಿ ತೀರ್ಪಿಗೆ ತಡೆಯಾಜ್ಞೆ ನೀಡುವಂತೆ ಕೋರಿ ಅರ್ಜಿ ಸಲ್ಲಿಸಲು ಅವಕಾಶ ನೀಡುವಂತೆ ಪಂದಳ ರಾಜಕುಟುಂಬ ಮುಖ್ಯಮಂತ್ರಿಗೆ ಸೂಚಿಸಿದೆ.

ಸುಪ್ರೀಂಕೋರ್ಟಿನ ಸೆಪ್ಟೆಂಬರ್ 28 ತೀರ್ಪು ಜಾರಿಗೆ ಕಾಲಾವಕಾಶ ನೀಡವಂತೆ ನ್ಯಾಯಾಲಯವನ್ನು ಕೋರಬಹುದು ಎಂಬ ಸಲಹೆಯನ್ನು ನೀಡುವ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಮ್ಮ ಪಟ್ಟನ್ನು ಸ್ವಲ್ಪ ಸಡಿಲಿಸಿದ್ದಾರೆ ಎಂದೂ ವರದಿಗಳು ಹೇಳಿವೆ.

Monday, November 5, 2018

ಶಬರಿಮಲೈ ನಿರ್ಬಂಧಗಳು ತಾರತಮ್ಯವಲ್ಲ: ಇತಿಹಾಸಕಾರ

ಶಬರಿಮಲೈ ನಿರ್ಬಂಧಗಳು ತಾರತಮ್ಯವಲ್ಲ:ಇತಿಹಾಸಕಾರ

ವಿಧಿನಿಯಮಗಳು ಭಾರತದ ಪರಂಪರೆಯ ಅವಿಭಾಜ್ಯ ಅಂಗ
ಪಟ್ಟಣಂತಿಟ್ಟ:  ಶಬರಿಮಲೈ ಅಯ್ಯಪ್ಪ ದೇವಸ್ಥಾನಕ್ಕೆ ಋತುಮತಿ ವಯೋಮಾನದ ಮಹಿಳೆಯರಿಗೆ ಪ್ರವೇಶ ನಿರಾಕರಣೆ ಶತಮಾನಗಳಷ್ಟು ಹಳೆಯದಾಗಿದ್ದು, ಕಟ್ಟುನಿಟ್ಟಾದ ತಾಂತ್ರಿಕ ಪರಿಕಲ್ಪನೆಯ ಶುದ್ಧತೆ ಮತ್ತು ಮಾಲಿನ್ಯಕ್ಕೆ ಅನುಗುಣವಾದದ್ದು. ಈ ನಿರ್ಬಂಧಗಳು ಯಾವುದೇ ತಾರತಮ್ಯವಲ್ಲ ಎಂದು ಕೇರಳದ ಖ್ಯಾತ ಇತಿಹಾಸಕಾರರನ್ನು ಉಲ್ಲೆಖಿಸಿ ‘ದಿ ಹಿಂದೂ’ ನವೆಂಬರ್ ೨೦೧೮ರ ಸೋಮವಾರ ವರದಿ ಮಾಡಿದೆ.
.
ಪ್ರಖ್ಯಾತ ಇತಿಹಾಸಕಾರ ಮತ್ತು ಜನಗಣತಿ ಕಾರ್ಯಾಚರಣೆಯ ಮಾಜಿ ಉಪ ನಿರ್ದೇಶಕ ಎಸ್.ಜಯಶಂಕರ್ ಅವರನ್ನು ಉಲ್ಲೇಖಿಸಿ, ’ಇದು ಯಾವುದೇ ರೀತಿಯ ಲೈಂಗಿಕ ತಾರತಮ್ಯವನ್ನು ಹೊಂದಿಲ್ಲಎಂದು ವರದಿ ಹೇಳಿದೆ.

"ಶುದ್ಧತೆ ಮತ್ತು ಮಾಲಿನ್ಯ" ಎಂಬ ಹಿಂದೂ ಪರಿಕಲ್ಪನೆಯು ವಿಶಾಲ ಮತ್ತು ಸಂಕೀರ್ಣವಾಗಿದೆ ಎಂದು ಶ್ರೀ ಜಯಶಂಕರ್ ಹೇಳಿದರು. ಇದು ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಒಂದು ಅವಿಭಾಜ್ಯ ಅಂಗವಾಗಿದೆ ಮತ್ತು ಪ್ರದೇಶಗಳು ಮತ್ತು ಪಂಗಡಗಳ ನಡುವೆ ಗಣನೀಯ ಭಿನ್ನತೆಯನ್ನು ಹೊಂದಿದೆ ಎಂದು ವರದಿ ಹೇಳಿದೆ.

೮೪ರ ಹರೆಯದ  ಇತಿಹಾಸಕಾರರು ಭಾರತ ಸರ್ಕಾರದ  ಜನಗಣತಿ ಇಲಾಖೆಯಿಂದ ಪ್ರಕಟವಾಗಿರುವ "ಕೇರಳದ ದೇವಾಲಯಗಳು" ಪ್ರಕಟಣೆಯ ೧೩ ಸಂಪುಟಗಳನ್ನು ಬರೆದಿದ್ದಾರೆ.

೧೯೫೬ರ ಅಧಿಸೂಚನೆ:

೧೯೫೬ ನವೆಂಬರ್ ೨೭ ರಂದು ಕೇರಳ ಸರ್ಕಾರ  ಪ್ರಕಟಿಸಿದ್ದ ಅಧಿಸೂಚನೆ ಪ್ರಕಾರ, "ಶಬರಿಮಲೈ, ಅಯ್ಯಪ್ಪಸ್ವಾಮಿಯ (ಭಕ್ತರು) ಪೂಜ್ಯ ಪವಿತ್ರ ಮತ್ತು ಪ್ರಾಚೀನ ದೇವಸ್ಥಾನದ ಮೂಲಭೂತ ಪ್ರತಿಷ್ಠಾ’ (ಸ್ಥಾಪನೆಯ) ನಿಯಮಗಳ   ಪ್ರಕಾರ, ಸಾಮಾನ್ಯ ನಿಯಮಗಳನ್ನು ಪಾಲಿಸದ ಮತ್ತು ಋತುಮತಿಯರಾದ ಮಹಿಳೆಯರು  ಅಯ್ಯಪ್ಪ ಸ್ವಾಮಿಯ ದರ್ಶನಕ್ಕಾಗಿ  ಪದಿನೆಟ್ಟಾಂಪಡಿ’ [೧೮ ಮೆಟ್ಟಿಲುಗಳನ್ನು] ಹತ್ತಿ ದೇವಾಲಯದೊಳಗೆ ಪ್ರವೇಶಿಸುವ ಅಭ್ಯಾಸ ಇರಲಿಲ್ಲ’ ಎಂದು ಜಯಶಂಕರ್ ಉಲ್ಲೇಖಿಸಿದ್ದಾರೆ.

ವಿಧಿ ವಿಧಾನಗಳ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು  ಮತ್ತು ಯಾವುದೇ ರೀತಿಯ ‘ಮಾಲಿನ್ಯ’ ನಿವಾರಿಸುವ ಸಲುವಾಗಿ ದೇವಾಲಯದ ಮಹಿಳಾ ಉದ್ಯೋಗಿಗಳಿಗೆ ತಮ್ಮ ಮುಟ್ಟಿನ ಅವಧಿಯಲ್ಲಿ, ಕಡ್ಡಾಯವಾಗಿ ವಿಶೇಷ ರಜೆ ನೀಡುತ್ತಿದ್ದರು. ಈ ಅಭ್ಯಾಸವನ್ನು ತಿರುವಾಂಕೂರು ದೇವಸ್ವಂ ಮಂಡಳಿಯು ಈಗಲೂ ಅನುಸರಿಸುತ್ತಿದೆ.

ಇತಿಹಾಸಕಾರ ಜಯಶಂಕರ್ ಅವರ ಪ್ರಕಾರ, ದೇವಸ್ಥಾನದ ಅಧಿದೇವತೆ ಕೂಡಾ ಕೆಲವು ಮೂಲಭೂತ ಹಕ್ಕುಗಳನ್ನು ಹೊಂದಿದೆ. ನಿಷಿದ್ಧ ಮಹಿಳೆಯರು ದೇವತೆಯ ಸನ್ನಿಧಾನವನ್ನು ಪ್ರವೇಶಿಸುವ ಮೂಲಕ ವಿಧಿ ವಿಧಾನವನ್ನು ಉಲ್ಲಂಘಿಸಿದರೆ ಅದು ಅಧಿದೇವತೆಯ ಮೂಲಭೂತ ಹಕ್ಕಿಗೆ ಚ್ಯುತಿ ಉಂಟು ಮಾಡುತ್ತದೆ. ಹೀಗಾಗಿ ಅಧಿದೇವತೆಯ ಹಕ್ಕನ್ನು ಸಂಪೂರ್ಣವಾಗಿ ರಕ್ಷಣೆ ಮಾಡಬೇಕು ಎಂದು ಅವರು ಹೇಳಿದರು.

ವಿವರಗಳಿಗೆ ಕೆಳಗಿನ ಚಿತ್ರ ಕ್ಲಿಕ್ಕಿಸಿ: