ಅಸಮ್ಮತಿ ಪ್ರಜಾಪ್ರಭುತ್ವದ ಸುರಕ್ಷಾ ಕವಾಟ: ಸುಪ್ರೀಂ
ಐವರು ಸಿವಿಲ್ ರೈಟ್ ಕಾರ್ಯಕರ್ತರಿಗೆ ಗೃಹ ಬಂಧನ
ನವದೆಹಲಿ: ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿರುವ ಐವರು ನಾಗರಿಕ ಹಕ್ಕುಗಳ ಕಾರ್ಯಕರ್ತರ ಬಂಧನ ಕ್ರಮವು ಭಿನ್ನಮತದ ಧ್ವನಿಯನ್ನು ಹತ್ತಿಕ್ಕುವ ಯತ್ನವೇ ಎಂಬ ವಿಚಾರವನ್ನು ತಾನು ಪರಿಶೀಲಿಸುವುದಾಗಿ ಸುಪ್ರೀಂಕೋರ್ಟ್ 2018 ಆಗಸ್ಟ್ 29ರ ಬುಧವಾರ ಹೇಳಿತು.
ಭಾರತದ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರ ನೇತೃತ್ವದ ತ್ರಿಸದಸ್ಯ ಪೀಠವು ಮಂಗಳವಾರ ರಾಷ್ಟ್ರವ್ಯಾಪಿ ದಾಳಿ ಕಾಲದಲ್ಲಿ ಬಂಧಿಸಲ್ಪಟ್ಟ ಐವರು ನಾಗರಿಕ ಹಕ್ಕುಗಳ ಕಾರ್ಯಕರ್ತರನ್ನು ತತ್ ಕ್ಷಣಕ್ಕೆ ಸೆರೆಮನೆಗೆ ಕಳುಹಿಸುವಂತಿಲ್ಲ, ಬದಲಾಗಿ ಸೆಪ್ಟೆಂಬರ್ 6ರಂದು ತಾನು ಪ್ರಕರಣದ ವಿಚಾರಣೆ ನಡೆಸುವವರೆಗೆ ಅವರವರ ಮನೆಗಳಲ್ಲೇ ಗೃಹ ಬಂಧನದಲ್ಲಿ ಇರಿಸಬೇಕು ಎಂದು ಆಜ್ಞಾಪಿಸುವ ಮೂಲಕ ಮಧ್ಯಂತರ ಪರಿಹಾರ ನೀಡಿತು.
ಅಸಮ್ಮತಿ ಅಥವಾ ಭಿನ್ನಮತವು ಪ್ರಜಾಪ್ರಭುತ್ವದ ಸುರಕ್ಷಾ ಕವಾಟ. ನೀವು ಭಿನ್ನಮತಕ್ಕೆ ಅವಕಾಶ ನೀಡದೇ ಇದ್ದಲ್ಲಿ ಪ್ರಜಾಪ್ರಭುತ್ವದ ಒತ್ತಡ ಕವಾಟವು ಸ್ಫೋಟಗೊಳ್ಳಬಹುದು ಎಂದು ಹೇಳಿತು.
ನಾಗರಿಕ ಹಕ್ಕುಗಳ ಕಾರ್ಯಕರ್ತರ ಬಂಧನಗಳನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ಮಹಾರಾಷ್ಟ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ನೋಟಿಸುಗಳನ್ನು ಜಾರಿ ಮಾಡಿತು.
ಒಂದೇ ಮಾದರಿಯ ದಾಳಿಗಳಲ್ಲಿ ಐವರು ನಾಗರಿಕ ಹಕ್ಕುಗಳ ಕಾರ್ಯಕರ್ತರನ್ನು ಆಗಸ್ಟ್ 28ರಂದು ಬಂಧಿಸಲಾಗಿತ್ತು.
No comments:
Post a Comment