2018: ಕೇಪ್ ಕೆನವರಾಲ್: ಸೌರ ನಿಗೂಢದ ಪತ್ತೆಗಾಗಿ
ರೂಪುಗೊಂಡಿರುವ ವಿಶ್ವದ ಪ್ರಪ್ರಥಮ
ಅಭೂತಪೂರ್ವ ’ಪಾರ್ಕರ್ ಸೋಲಾರ್ ಪ್ರೋಬ್’ ವ್ಯೋಮ ನೌಕೆ ಈದಿನ ನಸುಕಿನಲ್ಲಿ ಸೂರ್ಯನನ್ನು ಮುಟ್ಟುವ ಸಲುವಾಗಿ
ತನ್ನ ಪಯಣ ಆರಂಭಿಸಿತು.
ಆದರೆ ಸಾಹಸಕ್ಕೆ ಬುನಾದಿ ಹಾಕಿದ್ದು
ಭಾರತೀಯ ಮೂಲದ ಅಮೆರಿಕನ್
ವಿಜ್ಞಾನಿ ನೊಬೆಲ್ ಪ್ರಶಸ್ತಿ
ವಿಜೇತ ಸುಬ್ರಹ್ಮಣ್ಯನ್ ಚಂದ್ರಶೇಖರ್ ಎಂಬುದು ಬಹುಮಂದಿಗೆ ಗೊತ್ತಿಲ್ಲದ ವಿಷಯ. ಸೂರ್ಯನ ನಿಗೂಢಗಳನ್ನು ಭೇದಿಸುವ
ಸಲುವಾಗಿ ೭ ವರ್ಷಗಳ ಪಯಣ ನಡೆಸಲಿರುವ
’ಪಾರ್ಕರ್ ಸೋಲಾರ್ ಪ್ರೋಬ್’ ಈದಿನ ನಸುಕಿನಲ್ಲಿ ಅಮೆರಿಕದ ಕೇಪ್ ಕೆನವರಾಲ್
ವಾಯುಪಡೆ ಉಡ್ಡಯನ ಕೇಂದ್ರದ
ಸಮುಚ್ಚಯ ೩೭ರಿಂದ ಉಡಾವಣೆಗೊಂಡಿತು ನಾಸಾ ಪ್ರಕಟಿಸಿತು. ಸೂರ್ಯನತ್ತ ಹಿಂದಿನ ದಿನ ಪಯಣಿಸಬೇಕಾಗಿದ್ದ ’ಪಾರ್ಕರ್ ಸೋಲಾರ್ ಪ್ರೋಬ್’ ಉಡ್ಡಯನವನ್ನು ಈದಿನಕ್ಕೆ ಮುಂದೂಡಲಾಗಿತ್ತು. ನಾಸಾ ತನ್ನ ಟ್ವಿಟ್ಟರ್
ಪುಟದಲ್ಲಿ ಪಾರ್ಕರ್ ಸೋಲಾರ್ ಪ್ರೋಬ್ ಉಡ್ಡಯನವನ್ನು ಹಿಂದಿನ ದಿನ ಬೆಳಗಿನ ೩.೩೩ ಗಂಟೆಯಿಂದ
೪.೩೮ ಗಂಟೆಗೆ ಮುಂದೂಡಲಾಗಿದೆ ಎಂದು ಪ್ರಕಟಿಸಿತ್ತು. ಆದರೆ ಬಳಿಕ ಯಾನವನ್ನು
ರದ್ದು ಪಡಿಸಲಾಗಿದ್ದು ಆಗಸ್ಟ್ 12ರ ಭಾನುವಾರ ಬೆಳಗ್ಗೆ ದ್ವಿತೀಯ ಪ್ರಯತ್ನ
ಮಾಡಲಾಗುವುದು ಎಂದು ತಿಳಿಸಿತ್ತು. ನಾಸಾದ ಕಾರು ಗಾತ್ರದ ೧೫೦೦ ಕೋಟಿ (೧.೫ ಬಿಲಿಯನ್)
ಡಾಲರ್ ವೆಚ್ಚದ ಪಾರ್ಕರ್
ಸೋಲಾರ್ ಪ್ರೋಬ್ ಬಾಹ್ಯಾಕಾಶ
ನೌಕೆಯ ಇತಿಹಾಸದಲ್ಲೇ ಸೂರ್ಯನಿಗೆ ಅತ್ಯಂತ ಸಮೀಪ ಸಾಗಲಿರುವ
ಮಾನವ ರಹಿತ ಬಾಹ್ಯಾಕಾಶ
ನೌಕೆಯಾಗಿದ್ದು, ಇದರ ಉಡ್ಡಯನದ
ಮುಖ್ಯ ಉದ್ದೇಶ ಅಸಾಧಾರಣ
ಪರಿಸರವಾದ ಸೂರ್ಯನ ಪ್ರಭಾವಲಯದ
(ಕೊರೋನ) ರಹಸ್ಯಗಳನ್ನು ಪತ್ತೆ ಹಚ್ಚುವುದಾಗಿದೆ. ’ಸೌರ ಗಾಳಿ ಬಹುಪಟ್ಟು ಗಾತ್ರದಲ್ಲಿ ಹೆಚ್ಚುತ್ತಿರುವ ಪ್ರದೇಶಕ್ಕೆ ನಾವು ಹೋಗುತ್ತಿದ್ದೇವೆ. ಇದೊಂದು ರೋಮಾಂಚಕ ಅನುಭವ’ ಎಂದು ನಾಸಾದ ಗ್ರಹ ವಿಜ್ಞಾನ
ವಿಭಾಗದ ನಿರ್ದೇಶಕ ಜಿಮ್ ಗ್ರೀನ್ ಹೇಳಿದರು. ‘ಸೌರ ಪ್ರಭಾವಲಯದಲ್ಲಿ ಭಾರಿ ಗಾತ್ರದ ಆಯಸ್ಕಾಂತ
ಕ್ಷೇತ್ರವಿದ್ದು, ನಾವು ಅದರ ಮೂಲಕ ಸಾಗಲಿದ್ದೇವೆ.’ ಎಂದು ಅವರು ಹೇಳಿದರು. ಸೌರ ಪ್ರಭಾವಲಯವು ಸೂರ್ಯನ ಮೇಲ್ಮೈಗಿಂತ ೩೦೦ ಪಟ್ಟು ಬಿಸಿಯಾಗಿದರುವುದಲ್ಲದೆ, ಭೂಕಾಂತೀಯ
ಬಾಹ್ಯಾಕಾಶ ಬಿರುಗಾಳಿಗಳನ್ನು ಎಬ್ಬಿಸಬಲ್ಲಂತಹ ಕಣಗಳನ್ನು ಮತ್ತು ಬಲವಾದ ಪ್ಲಾಸ್ಮಾವನ್ನು ಹೊರಕ್ಕೆ ಎಸೆಯುತ್ತಿರುತ್ತದೆ. ಇದು ಭೂಮಿಯ ಮೇಲೆ ಭಾರಿ ಅನಾಹುತವನ್ನು ಸೃಷ್ಟಿಸಬಲ್ಲುದು ಎಂದು ನಂಬಲಾಗಿದೆ.
ಆದರೆ ಈ ಸೌರ ಸ್ಫೋಟದ ವಿದ್ಯಮಾನ
ಅತ್ಯಂತ ನಿಗೂಢವಾಗಿದ್ದು, ವಿಜ್ಞಾನಿಗಳಿಗೆ ಇನ್ನೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಭೂಮಿಗೆ ಯಾವಾಗ ಸೌರ ಗಾಳಿ ಬಡಿದು ಹಾನಿ ಉಂಟಾಗಬಹುದು ಎಂಬುದನ್ನು ಚೆನ್ನಾಗಿ ತಿಳಿದುಕೊಳ್ಳಲು ಪಾರ್ಕರ್ ಸೋಲಾರ್ ಪ್ರೋಬ್ ನಮಗೆ ನೆರವಾಗಲಿದೆ’ ಎಂದು ಯೋಜನಾ ವಿಜ್ಞಾನಿ
ಮತ್ತು ಮಿಷಿಗನ್ ವಿಶ್ವ ವಿದ್ಯಾಲಯದ
ಪ್ರೊಫೆಸರ್ ಜಸ್ಟಿನ್ ಕಸ್ಪರ್ ಹೇಳಿದರು. ಚಂದ್ರ ಮತ್ತು ಮಂಗಳ ಗ್ರಹಗಳತ್ತ
ಸಾಗಲಿರುವ ಮುಂದಿನ ಆಳವಾದ ಬಾಹ್ಯಾಕಾಶ
ಸಂಶೋಧನೆ ಯತ್ನಗಳ ರಕ್ಷಣೆ ದೃಷ್ಟಿಯಿಂದಲೂ ಸೌರ ಗಾಳಿ ಮತ್ತು ಬಾಹ್ಯಾಕಾಶ
ಬಿರುಗಾಳಿಗಳನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಎಂದು ಅವರು ತಿಳಿಸಿದರು. ಪಾರ್ಕರ್ ಸೋಲಾರ್ ಪ್ರೋಬ್ ಕೇವಲ ೪.೫ ಅಂಗುಲ ದಪ್ಪದ ಅತ್ಯಂತ ಶಕ್ತಿಶಾಲಿಯಾದ ಶಾಕ ಕವಚದಿಂದ (ಅಲ್ಟ್ರಾ ಪವರ್ ಫುಲ್ ಹೀಟ್ ಶೀಲ್ಡ್)
ಸಂರಕ್ಷಿಸಲ್ಪಟ್ಟಿದೆ. ಈ ಶಾಖ ಕವಚವು ಸೌರ ಮೇಲ್ಮೈಯಿಂದ ೩೮.೩ ಲಕ್ಷ (೩.೮೩ ಮಿಲಿಯನ್)
ಮೈಲುಗಳಷ್ಟು ಒಳಗಿನಿಂದ ಬರುವಾಗ ಅತಿಯಾದ ಶಾಖದಿಂದ
ಕಾರು ಗಾತ್ರದ ಈ ಬಾಹ್ಯಾಕಾಶ
ನೌಕೆಯನ್ನು ರಕ್ಷಿಸುವ ಸಾಮರ್ಥ್ಯ
ಹೊಂದಿದೆ. ಭೂಮಿಯ ಮೇಲಿನ ಸೌರ ವಿಕಿರಣದ
೫೦೦ ಪಟ್ಟು ವಿಕಿರಣವನ್ನು ತಡೆದುಕೊಳ್ಳಬಲ್ಲಂತಹ ಶಕ್ತಿ ಈ ಶಾಖ ಕವಚಕ್ಕೆ
ಇದೆ. ಭಾರತೀಯನ ಬುನಾದಿ: ಸೂರ್ಯನನ್ನು ಮುಟ್ಟುವ
ಈ ಸಾಹಸಕ್ಕೆ
ಬುನಾದಿ ಹಾಕಿದವರು ಭಾರತೀಯ ಮೂಲದ ಅಮೆರಿಕನ್
ಖಭೌತ ವಿಜ್ಞಾನಿ ಸುಬ್ರಹ್ಮಣ್ಯನ್ ಚಂದ್ರಶೇಖರ್ ಎಂದರೆ ತಪ್ಪಲ್ಲ.
ಏಕೆಂದರೆ ೬೦ ವರ್ಷಗಳ ಹಿಂದೆ ಚಂದ್ರಶೇಖರ್ ಅವರು ಮಧ್ಯಪ್ರವೇಶ ಮಾಡದೇ ಇದ್ದಿದ್ದರೆ ಸೌರ ಗಾಳಿಯ ಅಸ್ತಿತ್ವದ ಕುರಿತ ಡಾ. ಎಗುನ್ ನ್ಯೂಮನ್
ಪಾರ್ಕರ್ ಅವರ ಸಂಶೋಧನಾ
ಪ್ರಬಂಧ ಬಹುಶಃ ಬೆಳಕು ಕಾಣುತ್ತಿರಲೇ ಇಲ್ಲ. ಪಾರ್ಕರ್ ಅವರು ಪ್ರಸ್ತಾಪಿಸಿದ ’ಸೌರ ಗಾಳಿ’ಯ ಅಧ್ಯಯನಕ್ಕಾಗಿ ಹೊರಟಿರುವ ಸಂಶೋಧನಾ ಬಾಹ್ಯಾಕಾಶ
ನೌಕೆಗೆ ಪಾರ್ಕರ್ ಅವರ ಹೆಸರನ್ನೇ
ಇಡಲಾಗಿದ್ದು, ಜೀವಿಸಿರುವ ವಿಜ್ಞಾನಿಯೊಬ್ಬರ ಹೆಸರನ್ನು ಹೀಗೆ ಇರಿಸಿದ್ದು
ಕೂಡಾ ವಿಶ್ವದಲ್ಲಿ ಇದೇ ಪ್ರಥಮ. ೧೯೫೮ರಲ್ಲಿ,
೩೧ರ ಹರೆಯದ ಪಾರ್ಕರ್ ಅವರು ಸೂರ್ಯನಿಂದ
ಹೊರಕ್ಕೆ ತಳ್ಳಲ್ಪಟ್ಟ ಕಣಗಳು ಆಕಾಶವನ್ನು
ತುಂಬುತ್ತಿವೆ ಎಂದು ಸೂಚಿಸುವ
ತಮ್ಮ ಪ್ರಬಂಧವನ್ನು ಸಿದ್ಧ ಪಡಿಸಿದ್ದರು. ಆದರೆ ವಿಜ್ಞಾನಿಗಳ ಸಮೂಹ ಇದನ್ನು ನಂಬಲು ಸಿದ್ಧವಿರಲಿಲ್ಲ. ಬಾಹ್ಯಾಕಾಶ ಸಂಪೂರ್ಣವಾಗಿ ನಿರ್ವಾತ
ಪ್ರದೇಶ ಎಂಬುದು ಆಗಿನ ದಟ್ಟ ನಂಬಿಕೆಯಾಗಿತ್ತು. ಪಾರ್ಕರ್ ಅವರು ತಮ್ಮ ಸಂಶೋಧನಾ
ಪ್ರಬಂಧವನ್ನು ಪ್ರತಿಷ್ಠಿತ ಸಂಶೋಧನಾ
ನಿಯತಕಾಲಿಕವಾದ ಆಸ್ಟ್ರೋಫಿಸಿಕಲ್ ಜರ್ನಲ್ ಗೆ ನೀಡಿದಾಗ,
ಎರಡು ಬಾರಿ ಇಬ್ಬರು ವಿಭಿನ್ನ
ಅಭಿಪ್ರಾಯಗಳನ್ನು ನೀಡಿದ್ದರಿಂದ ಅದು ತಿರಸ್ಕರಿಸಲ್ಪಟ್ಟಿತ್ತು’ ಎಂದು ಕೋಲ್ಕತದ
ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಅಂಡ್ ರೀಸರ್ಚ್
(ಐಐಎಸ್ ಇಆರ್) ಸಂಸ್ಥೆಯ
ಅಸೋಸಿಯೇಟ್ ಪ್ರೊಫೆಸರ್ ದಿಬಿಯೇಂದು
ನಂದಿ ಹೇಳಿದರು. ಈ ಸಂದರ್ಭದಲ್ಲಿ ಆಸ್ಟ್ರೋಫಿಸಿಕಲ್ ಜರ್ನಲ್ ನ ಹಿರಿಯ ಸಂಪಾದಕರೊಬ್ಬರು ಮಧ್ಯಪ್ರವೇಶ ಮಾಡಿ ಪ್ರಬಂಧವನ್ನು ತಿರಸ್ಕರಿಸುವಂತೆ ಬಂದ ಎರಡೂ ಅಭಿಪ್ರಾಯಗಳನ್ನು ತಳ್ಳಿ ಹಾಕಿದರು ಮತ್ತು ಪ್ರಬಂಧವನ್ನು ಪ್ರಕಟಿಸಲು ಅವಕಾಶ ನೀಡಿದರು.
ಈ ಸಂಪಾದಕರೇ ಭಾರತೀಯ ಮೂಲದ ಅಮೆರಿಕನ್
ಖಭೌತ ವಿಜ್ಞಾನಿ ಸುಬ್ರಹ್ಮಣ್ಯನ್ ಚಂದ್ರಶೇಖರ್ ಎಂದು ನಂದಿ ನುಡಿದರು.
’ಚಂದ್ರ ಎಂದೇ ಪರಿಚಿತರಾಗಿದ್ದ ಚಂದ್ರಶೇಖರ್ ಅವರು ನಾಸಾದ ಚಂದ್ರ ಎಕ್ಸ್ ರೇ ಅಬ್ಸರ್ವೇಟರಿ ಬಾಹ್ಯಾಕಾಶ
ಯೋಜನೆಯಲ್ಲಿ ತಮ್ಮ ಹೆಸರನ್ನು
ಜೋಡಿಸಿರುವ ಇನ್ನೊಬ್ಬ ಖಭೌತ ವಿಜ್ಞಾನಿಯೂ ಹೌದು’ ಎಂದು ನಂದಿ ಹೇಳಿದರು.
ನಕ್ಷತ್ರಗಳ ರಚನೆ ಮತ್ತು ವಿಕಸನದ ಮಹತ್ವಕ್ಕೆ
ಸಂಬಂಧಿಸಿದಂತೆ ತಮ್ಮ ಅಧ್ಯಯನಕ್ಕಾಗಿ ವಿಲಿಯಂ ಎ ಫೌಲರ್ ಅವರ ಜೊತೆಗೆ ೧೯೮೩ರ ನೊಬೆಲ್ ಪ್ರಶಸ್ತಿಯನ್ನು ಸುಬ್ರಹ್ಮಣ್ಯನ್ ಚಂದ್ರಶೇಖರ್ ಹಂಚಿಕೊಂಡಿದ್ದರು.
2018: ಪಾಟ್ನಾ: ಬಿಹಾರಿನ
ಮುಜಾಫ್ಫರಪುರ ಬಾಲಿಕಾ ಆಶ್ರಯಧಾಮದಲ್ಲಿ ಅಪ್ರಾಪ್ತ ಬಾಲಕಿಯರ ಮೇಲಿನ ಲೈಂಗಿಕ ಶೋಷಣೆ ಪ್ರಕರಣದ
ಬಿಸಿ ಇನ್ನೂ ತಣ್ಣಗಾಗುವ
ಮುನ್ನವೆ ರಾಜ್ಯ ಇತರ ೧೪ ಮಕ್ಕಳ ಆಶ್ರಯಧಾಮಗಳಲ್ಲೂ ಲೈಂಗಿಕ ಹಾಗೂ ದೈಹಿಕ ಶೋಷಣೆ ನಡೆಯುತ್ತಿರುವ ವಿಚಾರ ಬೆಳಕಿಗೆ ಬಂದಿತು. ಬಾಲಕಿಯರಷ್ಟೇ ಅಲ್ಲ, ಬಾಲಕರೂ ಇಲ್ಲಿ ಶೋಷಣೆಗೆ
ಗುರಿಯಾಗಿದ್ದಾರೆ. ಮುಜಾಫ್ಫರಪುರ ಬಾಲಿಕಾ ಆಶ್ರಯಧಾಮದ ಶೋಷಣೆ ಬಗ್ಗೆ ಸರ್ಕಾರಕ್ಕೆ ವರದಿ ನೀಡಿದ್ದ ಟಾಟಾ ಇನ್ ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ (ಟಿಐಎಎಸ್
ಎಸ್- ಟಿಸ್) ನ ಏಳು ಸದಸ್ಯರ ಸದಸ್ಯರ ತಂಡವು ರಾಜ್ಯ ಸಮಾಜ ಕಲ್ಯಾಣ ಇಲಾಖೆಗೆ
ಕಳೆದ ಮಾರ್ಚ್ ೧೫ರಷ್ಟು
ಹಿಂದೆಯೇ ಈ ಬಗ್ಗೆ ತನ್ನ ಸೋಶಿಯಲ್
ಆಡಿಟ್ ವರದಿಯನ್ನು ಸಲ್ಲಿಸಿದೆ
ಎಂದು ’ದಿ ಹಿಂದೂ’ ವರದಿ ಮಾಡಿತು. ರಾಜ್ಯದ ಇತರ ೧೪ ಆಶ್ರಯಧಾಮಗಳು ಮತ್ತು ಅಲ್ಪ ಕಾಲಿಕ ತಂಗುಮನೆಗಳು (ಶಾರ್ಟ್ ಸ್ಟೇ ಹೋಮ್ಸ್)
ಕೂಡಾ ಮುಜಾಫ್ಫರಪುರ ಬಾಲಿಕಾ ಆಶ್ರಯಧಾಮದ
ಮಾದರಿಯಲ್ಲೇ ಲೈಂಗಿಕ ಇಲ್ಲವೇ ದೈಹಿಕ ಶೋಷಣೆಯ ಕೂಪಗಳಾಗಿವೆ ಎಂದು ವರದಿ ಹೇಳಿದೆ.
ಬಿಹಾರಿನ ೩೫ ಜಿಲ್ಲೆಗಳಲ್ಲಿನ ೧೧೦ ಆಶ್ರಯಧಾಮಗಳು ಮತ್ತು ಶಾರ್ಟ್ ಸ್ಟೇ ಹೋಮ್ ಗಳ ಪರಿಸ್ಥಿತಿ
ಬಗ್ಗೆ ಟಿಸ್ ಅಧ್ಯಯನ ಮಾಡಿತ್ತು.
ಈ ಆಶ್ರಯಧಾಮ ಮತ್ತು ಶಾರ್ಟ್ ಟೈಮ್ ಸ್ಟೇ ಹೋಮ್ ಗಳ ಪರಿಸ್ಥಿತಿ
ಚಿಂತಾಜನಕವಾಗಿದ್ದು ಈ ಬಗ್ಗೆ ತುರ್ತು ಗಮನ ಹರಿಸಬೇಕಾದ
ಅಗತ್ಯವಿದೆ ಎಂದು ಟಿಸ್ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈ ಆಶ್ರಯಧಾಮಗಳಲ್ಲಿ ಬಾಲಕಿಯರು ಮಾತ್ರವೇ ಅಲ್ಲ ಬಾಲಕರು ಮತ್ತು ವಯಸ್ಕರನ್ನೂ ಶೋಷಣೆಗೆ ಗುರಿಪಡಿಸಲಾಗುತ್ತಿದೆ. ಇವರು ಲೈಂಗಿಕ ಶೋಷಣೆ, ದೈಹಿಕ ಮತ್ತು ಮಾನಸಿಕ ಹಿಂಸೆಗಳಿಗೂ ಗುರಿಯಾಗುತ್ತಿದ್ದಾರೆ ಎಂದು ವರದಿ ಹೇಳಿದೆ. ‘ಒಂದು ಅಶ್ರಯಧಾಮದಲ್ಲಿ ಮೂತ್ರ ತುಂಬಿದ್ದ ಬಾಟಲಿಗಳು
ಪತ್ತೆಯಾದವು. ಈ ಬಗ್ಗೆ ವಿಚಾರಣೆ
ನಡೆಸಿದಾಗ ರಾತ್ರಿ ಬೀಗ ಹಾಕಿದ ಬಳಿಕ ಬಾಲಕರು ಬಾಟಲಿಗಳಲ್ಲಿಯೇ ಮೂತ್ರ ವಿಸರ್ಜನೆ ಮಾಡಬೇಕಾದ
ಸ್ಥಿತಿ ಇದ್ದುದು ಗೊತ್ತಾಯಿತು. ಇದೇ ಪರಿಸ್ಥಿತಿ ಹಲವಾರು ಆಶ್ರಯಧಾಮಗಳಲ್ಲಿ ಇರುವುದೂ ಬೆಳಕಿಗೆ ಬಂತು’ ಎಂದು ವರದಿ ತಿಳಿಸಿದೆ. ಸರ್ಕಾರೇತರ ಸಂಘಟನೆ
’ನಿರ್ದೇಶ್’ ಮೋತಿಹಾರಿಯಲ್ಲಿ ನಡೆಸುವ ಬಾಲಕರ ಗೃಹದಲ್ಲಿ
ಸಿಬ್ಬಂದಿಯೊಬ್ಬರು ದಪ್ಪ ಪೈಪ್ ಬಳಸಿ ಮಕ್ಕಳಿಗೆ
ದೈಹಿಕ ಹಿಂಸೆ ನೀಡುತ್ತಿದ್ದುದು ಬೆಳಕಿಗೆ ಬಂತು. ಮುಂಗೇರ್
ನಲ್ಲಿ ಇನ್ನೊಂದು ಸರ್ಕಾರೇತರ
ಸಂಘಟನೆ ’ಪನಾಹ್’ ನಡೆಸುತ್ತಿದ್ದ ಬಾಲಕರ ಗೃಹದಲ್ಲಿ
ಬ್ಯಾರಕ್ ಮಾದರಿಯ ರಚನೆಯಲ್ಲಿ
ಮಕ್ಕಳು ವಾಸವಾಗಿದ್ದುದು ಪತ್ತೆಯಾಯಿತು. ಸೂಪರಿಂಟೆಂಡೆಂಟ್ ಅವರ ವಸತಿ ಕ್ವಾರ್ಟರ್
ಆ ಬ್ಯಾರಕ್ ಸಮೀಪದಲ್ಲೇ ಇದ್ದು ಬಾಲಕರಿಂದ
ಬಲವಂತವಾಗಿ ಮನೆ ಕೆಲಸಗಳನ್ನು ಮಾಡಿಸಲಾಗುತ್ತಿತ್ತು. ಸೂಪರಿಂಟೆಂಡೆಂಟ್ ಗೆ ಈ ಮಕ್ಕಳೇ ಅಡುಗೆ ಮಾಡಿ ಬಡಿಸಬೇಕಾಗಿತ್ತು ಎಂದು ವರದಿ ಹೇಳಿದೆ.
ಚೆನ್ನಾಗಿ ಅಡುಗೆ ಮಾಡುತ್ತಿದ್ದ ಬಾಲಕನೊಬ್ಬನ ಎದೆಯಲ್ಲಿ ಹೊಡೆದ ಗುರುತು ಇತ್ತು, ವಿಚಾರಿಸಿದಾಗ ಆತ ಅಡುಗೆ ಮಾಡಲು ನಿರಾಕರಿಸಿದ್ದಕ್ಕೆ ಬಿದ್ದ ಏಟಿನ ಗುರುತು ಅದು ಎಂಬುದು ಗೊತ್ತಾಯಿತು ಎಂದು ವರದಿ ಹೇಳಿದೆ.
ಗಯಾದಲ್ಲಿ ಸರ್ಕಾರೇತರ ಸಂಘಟನೆ
’ಡೋರ್ಡ್’ ನಡೆಸುತ್ತಿದ್ದ ಬಾಲಕರ ಗೃಹದಲ್ಲಿ
ಮಕ್ಕಳಿಂದ ಅವಾಚ್ಯ ಸಂದೇಶಗಳನ್ನು ಕಾಗದದಲ್ಲಿ ಬರೆಸುತ್ತಿದ್ದ ಮಹಿಳಾ ಸಿಬ್ಬಂದಿ,
ಅದನ್ನು ಹೊಸದಾಗಿ ಕೆಲಸಕ್ಕೆ
ಸೇರಿದ ಇತರ ಮಹಿಳಾ ಸಿಬ್ಬಂದಿಗೆ ರವಾನಿಸಿ ’ಮಜಾ’ ತೆಗೆದುಕೊಳ್ಳುತ್ತಿದ್ದರು. ಅರಾರಿಯಾ
ಜಿಲ್ಲೆಯಲ್ಲಿನ ಸರ್ಕಾರಿ ಅವಲೋಕನಾ
ಗೃಹದಲ್ಲಿ ಬಾಲಕನೊಬ್ಬನ ಎದೆಯಲ್ಲಿ
ಊತವಿತ್ತು. ಬಿಹಾರ ಪೊಲೀಸ್ ಭದ್ರತಾ ಗಾರ್ಡ್ ಲೋಹದ ಸರಳಿನಿಂದ
ಹೊಡೆದ ಪರಿಣಾಮವಾಗಿ ಹಾಗಾಗಿದೆ
ಎಂದು ಆತ ತಿಳಿಸಿದ.
’ಇದು ಸುಧಾರಣಾ ಗೃಹವಲ್ಲ, ನಿವಾರಣಾ
ಗೃಹ’ ಎಂದು ಆತ ಟಿಸ್ ತಂಡದ ಬಳಿ ದೂರಿದ್ದ.
ಪಾಟ್ನಾದಲ್ಲಿ ’ಇಕಾರ್ಡ್’ ನಿರ್ವಹಿಸುವ ಶಾರ್ಟ್ ಸ್ಟೇ ಹೋಮ್ ನಲ್ಲಿ ಹಿಂಸೆ ತಾಳಿಕೊಳ್ಳಲಾಗದೆ ಬಾಲಕಿಯೊಬ್ಬಳು ಕಳೆದ ವರ್ಷ ಆತ್ಮಹತ್ಯೆ
ಮಾಡಿಕೊಂಡಿದ್ದರೆ, ಇನ್ನೊಬ್ಬ ಬಾಲಕಿ ಹಿಂಸೆಯಿಂದಾಗಿ ಮಾನಸಿಕ ಸ್ವಾಸ್ಥ್ಯವನ್ನೇ ಕಳೆದುಕೊಂಡಿದ್ದಾಳೆ. ಇಲ್ಲಿನ ಬಾಲಕಿಯರು ತಮಗೆ ಬಟ್ಟೆ, ಔಷಧ, ಶೌಚಾಲಯಕ್ಕೆ ಬೇಕಾದ ಪರಿಕರಗಳನ್ನೂ ಕೊಡುತ್ತಿಲ್ಲ ಎಂದು ದೂರಿದ್ದಾರೆ. ಮೋತಿಹಾರಿಯಲ್ಲಿ ಸರ್ಕಾರೇತರ
ಸಂಘಟನೆ ’ಸಖಿ’ ನಡೆಸುವ ಶಾರ್ಟ್ ಸ್ಟೇ ಹೋಮ್ ನಲ್ಲಿ ಬಾಲಕಿಯರು
ಮಾನಸಿಕ ಅಸ್ವಸ್ಥತೆಯಿಂದ ನರಳುತ್ತಿದ್ದಾರೆ. ಎಲ್ಲೆಂದರಲ್ಲಿ ದೇವ- ದೇವತೆಗಳ
ಚಿತ್ರವಿರುವ ಈ ಸ್ಟೇಮ್ ಹೋಮ್ ಆಶ್ರಯಧಾಮದ
ಬದಲಿಗೆ ದೇಗುಲದಂತೆ ಕಾಣುತ್ತದೆ.
ಇಲ್ಲಿದ್ದ ಮುಸ್ಲಿಂ ಬಾಲಕಿಯೊಬ್ಬಳು, ಖುರಾನ್ ಮೇಲೆ ತಾನು ನಂಬಿಕೆ ಇರಿಸಿದ್ದಕ್ಕಾಗಿ ಸಮಾಲೋಚಕರು ಹೊಡೆದು, ಖುರಾನನ್ನು
ಚಿಂದಿ ಮಾಡಿದರು ಎಂದು ಆಪಾದಿಸಿದಳು. ಇಸ್ಲಾಮನ್ನು ಅನುಸರಿಸುತ್ತಿದ್ದುದಕ್ಕಾಗಿ ತನ್ನನ್ನು
ಆಗಾಗ ಥಳಿಸಿ ನಿಂದಿಸಲಾಗುತ್ತಿತ್ತು ಎಂದು ಆಕೆ ದೂರಿದಳು.
ತಮಗೆ ಸ್ಯಾನಿಟರಿ ಪ್ಯಾಡ್ಗಳನ್ನೂ ನೀಡುತ್ತಿರಲಿಲ್ಲ ಎಂದು ಅಲ್ಲಿನ ಇತರ ಬಾಲಕಿಯರು
ದೂರಿದ್ದಾರೆ. ಕೈಮೂರ್ ಜಿಲ್ಲೆಯಲ್ಲಿ ’ಗ್ರಾಮ ಸ್ವರಾಜ್ ಸೇವಾ ಸಂಸ್ಥಾನ’ ನಡೆಸುತ್ತಿದ್ದ ಶಾರ್ಟ್ ಸ್ಟೇ ಹೋಮ್ ನಲ್ಲಿ ಗಾರ್ಡ್ ಲೈಂಗಿಕ ಶೋಷಣೆ ನಡೆಸುತ್ತಿದ್ದುದಾಗಿ ದೂರಲಾಗಿದೆ. ಸ್ಟೇ ಹೋಮ್ ನ ಮಹಿಳೆಯರು/
ಬಾಲಕಿಯರ ಜೊತೆ ಅಸಭ್ಯ ಮಾತುಗಳನ್ನು ಆಡುತ್ತಿದ್ದ ಆತ, ಅವರ ಗುಪ್ತಾಂಗ
ಮುಟ್ಟಲು ಯತ್ನಿಸುತ್ತಿದ್ದ ಎಂದು ವರದಿ ಹೇಳಿದೆ. ಮುಜಾಫ್ಫರಪುರದಲ್ಲಿ ಓಂ ಸಾಯಿ ಫೌಂಡೇಶನ್
ನಡೆಸುತ್ತಿದ್ದ ಸೇವಾ ಕುಟೀರದ ನಿವಾಸಿಗಳು
ತಮ್ಮ ಮೇಲೆ ರಕ್ಷಿಸಬೇಕಾದವರೇ ಲೈಂಗಿಕ ಹಲ್ಲೆ ನಡೆಸುತ್ತಿದ್ದುದಾಗಿಯೂ, ಪ್ರತಿಭಟಿಸಿದರೆ ಪೆಟ್ಟು ಬೀಳುತ್ತಿದ್ದುದಾಗಿ ಆಪಾದಿಸಿದ್ದಾರೆ. ಇಲ್ಲಿನ ಕೊಠಡಿಗಳಲ್ಲಿ ಸೀಲಿಂಗ್ ಫ್ಯಾನ್ ಅಥವಾ ಲೈಟುಗಳು
ಇರಲಿಲ್ಲ. ನಿವಾಸಿಗಳಿಗೆ ಕುಡಿಯುವ
ನೀರಿನ ವ್ಯವಸ್ಥೆಯೂ ಇರಲಿಲ್ಲ.
ಶೌಚಾಲಯದ ನಳಗಳಿಂದಲೇ ನೀರು ಕುಡಿಯುವಂತೆ ಅವರಿಗೆ ಸೂಚಿಸಲಾಗಿತ್ತು ಎಂದು ವರದಿ ಹೇಳಿದೆ.
ಗಯಾ ಜಿಲ್ಲೆಯಲ್ಲಿ ಮೆಟ್ಟ ಬುದ್ಧ ಟ್ರಸ್ಟ್
ನಡೆಸುತ್ತಿದ್ದ ಸೇವಾ ಕುಟೀರದ ನಿವಾಸಿಗಳು
ದೈಹಿಕ ಹಿಂಸೆಯಿಂದ ಮಾನಸಿಕ ಅಸ್ವಸ್ಥರಾಗಿದ್ದರೆ, ಪಾಟ್ನಾದಲ್ಲಿ ಡಾನ್ ಬಾಸ್ಕೋ ಟೆಕ್ ಸೊಸೈಟಿ ನಡೆಸುವ ಕೌಶಲ ಕುಟೀರದಲ್ಲಿ ಪುರುಷರು ಮತ್ತು ಮಹಿಳೆಯರು
ದೈಹಿಕ ಹಿಂಸೆ, ಬೈಗುಳದ ಏಟು ಸಹಿಸಬೇಕಾಗಿತ್ತು. ಸೂಪರಿಂಟೆಂಡೆಂಟ್ ಪ್ರತಿನಿತ್ಯ ಅಶ್ಲೀಲ ಟೀಕೆಗಳ ಮಳೆಗರೆಯುತ್ತಾರೆ ಎಂದು ವರದಿ ತಿಳಿಸಿದೆ.
ಈ ಆಶ್ರಯಧಾಮಗಳ ಸ್ಥಿತಿಗತಿ ಅತ್ಯಂತ ಚಿಂತಾಜನಕವಾಗಿದ್ದು, ಆಡಳಿತಾತ್ಮಕ ಮತ್ತು ಪ್ರಕ್ರಿಯಾತ್ಮಕ ಅಂತರವು ಸಂಸ್ಥೆಗಳ ಕಾರ್ಯನಿರ್ವಹಣೆ
ಮೇಲೆ ಪರಿಣಾಮ ಬೀರಿದೆ.
ಈ ಸಂಸ್ಥೆಗಳ ಒಟ್ಟಾರೆ ಕಾರ್‍ಯ ನಿರ್ವಹಣೆ
ತೃಪ್ತಿದಾಯಕವಾಗಿಯಂತೂ ಇಲ್ಲ ಎಂದು ಟಿಸ್ ತಂಡದ ನಾಯಕ ಮೊಹಮ್ಮದ್
ತಾರಿಖ್ ಹೇಳಿದ್ದಾರೆ. ಏನಿದ್ದರೂ,
ಸಮಾಜ ಕಲ್ಯಾಣ ಇಲಾಖೆಯ ರಾಜ್ ಕುಮಾರ್ ಅವರು ’ಪರಿಸ್ಥಿತಿ
ಸುಧಾರಿಸಲು ಪ್ರಬಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪ್ರತಿಯೊಂದು ಆಶ್ರಯಧಾಮವೂ ನಮಗೆ ಅತ್ಯಂತ ಮುಖ್ಯ’ ಎಂದು ಹೇಳಿದರು.
2018: ಪಾಟ್ನಾ: ಸರ್ಕಾರಿ ಸ್ವಾಮ್ಯದ
ಬಾಲಿಕಾಗೃಹದ ಮೇಲೆ ದಾಳಿ ನಡೆಸಿದ ಪೊಲೀಸರು,
ತನ್ನೊಂದಿಗೆ ಬರುವಂತೆ ಬಾಲಿಕಾಗೃಹದ ಬಾಲಕಿಯರಿಗೆ ಆಮಿಷ ಒಡ್ಡುತ್ತಿದ್ದ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬನನ್ನು ಬಂಧಿಸಿದ್ದು, ಈ ಘಟನೆ ನಡೆದ ಬಳಿಕ ಬಾಲಿಕಾಗೃಹದ ಇಬ್ಬರು ಬಾಲಕಿಯರನ್ನು ಮೃತ ಸ್ಥಿತಿಯಲ್ಲಿ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಪಿಎಂಸಿಎಚ್) ಹಿಂದಿನ ರಾತ್ರಿ ತಂದ ಘಟನೆ ಘಟಿಸಿತು. ಪಾಟ್ನಾದ ನೇಪಾಳಿ ನಗರ ಪ್ರದೇಶದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ
ನಡೆಸಲ್ಪಡುತ್ತಿರುವ ಆಸರ ಬಾಲಿಕಾ ಆಶ್ರಯಧಾಮದ
ನಿರ್ವಹಣೆಗಾರರು ಬಾಲಕಿಯರ ಸಾವನ್ನು
ಮುಚ್ಚಿಟ್ಟಿರುವಂತೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ
ಎಂದು ಸುದ್ದಿ ಮೂಲಗಳು ತಿಳಿಸಿದವು. ಹಿಂದಿನ ದಿನ ಸಂಜೆ ಬಾಲಕಿಯರ ಶವಗಳನ್ನು
ಆಸ್ಪತ್ರೆಗೆ ತರಲಾಯಿತು ಮತ್ತು ರಾತ್ರಿಯ
ವೇಳೆಗೆ ಮರಣೋತ್ತರ ಪರೀಕ್ಷೆ
ಪೂರ್ಣಗೊಂಡಿತು ಎಂದು ಪಿಎಂಸಿಎಚ್
ವೈದ್ಯರು ಹೇಳಿದ್ದಾರೆ. ವಿಷಯಕ್ಕೆ
ಸಂಬಂಧಿಸಿದಂತೆ ತನಿಖೆ ನಡೆಸುವ ಸಲುವಾಗಿ
ಪಾಟ್ನಾ ಪೊಲೀಸ್ ಇಲಾಖೆಯ ದೊಡ್ಡ ದಂಡು ಭಾನುವಾರ
ಬಾಲಿಕಾ ಗೃಹಕ್ಕೆ ತೆರಳಿದೆ
ಎಂದು ಮೂಲಗಳು ಹೇಳಿದವು. ಮುಜಾಫ್ಫರಪುರ ಬಾಲಿಕಾ ಧಾಮದಲ್ಲಿ ನಡೆಯುತ್ತಿದ್ದ ಅಪ್ರಾಪ್ತ ಬಾಲಕಿಯರ ಲೈಂಗಿಕ ಶೋಷಣೆಯ ಘಟನೆ ಬಹಿರಂಗಕ್ಕೆ ಬಂದ ಬೆನ್ನಲ್ಲೇ, ಐವತ್ತರ ಹರೆಯದ ರಾಮ ನಗೀನ ಸಿಂಗ್ ಯಾನೆ ಬನಾರಸಿ ಎಂಬ ಬಾಲಿಕಾ ಗೃಹದ ಸಮೀಪದಲ್ಲೇ
ವಾಸವಾಗಿದ್ದ ವ್ಯಕ್ತಿ ಬಹುಮಾನದ
ಕೊಡುವುದಾಗಿ ಹೇಳಿ ತನ್ನೊಂದಿಗೆ ಬರುವಂತೆ ಬಾಲಕಿಯರಿಗೆ ಆಮಿಷ ಒಡ್ಡುತ್ತಿದ್ದ ಬಗ್ಗೆ ಬಂದ ದೂರನ್ನು
ಅನುಸರಿಸಿ ಪೊಲೀಸರು ಆಸರ ಗೃಹದ ಮೇಲೆ ಹಿಂದಿನ ದಿನ ಸಂಜೆ ದಾಳಿ ನಡೆಸಿದ್ದರು. ‘ನಾವು ಆಶ್ರಯಧಾಮಕ್ಕೆ ಭೇಟಿ ನೀಡಿ ಬಾಲಕಿಯರು
ಮತ್ತು ಇತರರನ್ನು ಪ್ರಶ್ನಿಸಿದೆವು. ನಾವು ಬನಾರಸಿಯನ್ನೂ ವಿಚಾರಿಸಿದೆವು. ಆತನನ್ನು ಬಂಧಿಸಿ ಸೆರೆಮನೆಗೆ
ಕಳುಹಿಸಲಾಗಿದ್ದು, ಬಾಲಿಕಾಗೃಹದ ಸುತ್ತಮುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ’ ಎಂದು ಪಾಟ್ನಾದ
ಡೆಪ್ಯುಟಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್
(ಕಾನೂನು ಮತ್ತು ಸುವ್ಯವಸ್ಥೆ) ಮನೋಜ್ ಕುಮಾರ್ ಸುಧಾಂಶು
ತಿಳಿಸಿದರು. ಬನಾರಸಿ ಉದ್ದೇಶವೇನಿತ್ತು ಎಂಬ ಪ್ರಶ್ನೆಗೆ ’ವಿಚಾರದ ಬಗ್ಗೆ ಇನ್ನೂ ತನಿಖೆ ನಡೆಯುತ್ತಿದೆ. ಆತ ಕೆಲವು ಬಾಲಕಿಯರನ್ನು ತನ್ನ ಜೊತೆಗೆ ಬರುವಂತೆ
ಹೇಳಿದ್ದು, ಅದಕ್ಕೆ ಬಹುಮಾನ ಕೊಡುವ ಭರವಸೆ ಕೊಟ್ಟಿದ್ದಂತೆ ಕಾಣುತ್ತದೆ’ ಎಂದು ಸುಧಾಂಶು ನುಡಿದರು.
ಮುಜಾಫ್ಫರಪುರ ಲೈಂಗಿಕ ಶೋಷಣೆ ಪ್ರಕರಣದ
ಹಿನ್ನೆಲೆಯಲ್ಲಿ ಪಾಟ್ನಾ ಬಾಲಿಕಾಗೃಹದ ಪ್ರಕರಣವೂ ಈಗ ನಿತೀಶ್ ಕುಮಾರ್ ಸರ್ಕಾರಕ್ಕೆ ಇನ್ನಷ್ಟು ಬಿಸಿ ಮುಟ್ಟಿಸುವ
ಲಕ್ಷಣಗಳು ಕಂಡು ಬರುತ್ತಿವೆ.
ಮುಜಾಫ್ಫರಪುರದಲ್ಲಿ ಸರ್ಕಾರೇತರ ಸಂಘಟನೆಯೊಂದು ನಡೆಸುತ್ತಿದ್ದ ಬಾಲಿಕಾಗೃಹದ ೩೦ ಅಪ್ರಾಪ್ತ
ಬಾಲಕಿಯರನ್ನು ಲೈಂಗಿಕ ಶೋಷಣೆಗೆ
ಗುರಿಪಡಿಸಿದ ಘಟನೆ ಇತ್ತೀಚೆಗೆ
ಬಹಿರಂಗಕ್ಕೆ ಬಂದಿತ್ತು. ಪ್ರಕರಣ ಬಹಿರಂಗಗೊಂಡ ಬಳಿಕ ಸರ್ಕಾರೇತರ ಸಂಘಟನೆಯ
ಮುಖ್ಯಸ್ಥನನ್ನು ಬಂಧಿಸಲಾಗಿದ್ದು, ಬಾಲಿಕಾಗೃಹವನ್ನು ಮುಚ್ಚಲಾಗಿತ್ತು. ಸರ್ಕಾರೇತರ ಸಂಘಟನೆಯ
ಮುಖ್ಯಸ್ಥನ ಜೊತೆಗೆ ಪತಿಯ ಒಡನಾಟ ಇತ್ತೆಂಬ
ಆರೋಪದ ಹಿನ್ನೆಲೆಯಲ್ಲಿ ಬಿಹಾರದ ನಿತೀಶ್ ಕುಮಾರ್ ಸಚಿವ ಸಂಪುಟದ ಸಚಿವೆ ಮಂಜು ವರ್ಮಾ ಅವರು ಇತ್ತೀಚೆಗೆ
ರಾಜೀನಾಮೆ ನೀಡಿದ್ದರು.
.
2018: ಕೋಚಿ: ಕೇರಳದ ಪ್ರವಾಹಗ್ರಸ್ತ ಪ್ರದೇಶಗಳಲ್ಲಿ ಈದಿನ ವೈಮಾನಿಕ
ಸಮೀಕ್ಷೆ ನಡೆಸಿದ ಕೇಂದ್ರ ಗೃಹ ಸಚಿವ ರಾಜನಾಥ್
ಸಿಂಗ್ ಅವರು ಕೇಂದ್ರವು
ಕೇರಳ ಸರ್ಕಾರದ ಜೊತೆಗೆ ಇರುವುದಾಗಿ
ಭರವಸೆ ನೀಡಿ, ೧೦೦ ಕೋಟಿ ರೂಪಾಯಿಗಳ
ನೆರವನ್ನು ಘೋಷಿಸಿದರು. ಇದೇ ವೇಳೆಗೆ ಕೇರಳ ಸರ್ಕಾರವು
ಭಾರಿ ಮಳೆ, ಪ್ರವಾಹದಿಂದ ರಾಜ್ಯದಲ್ಲಿ ೮,೩೧೬ಕೋಟಿ
ರೂಪಾಯಿ ನಷ್ಟ ಸಂಭವಿಸಿದೆ
ಎಂದು ಅಂದಾಜು ಮಾಡಿತು. ಸಮೀಕ್ಷೆಯ ಬಳಿಕ ಪತ್ರಕರ್ತರ ಜೊತೆ ಮಾತನಾಡಿದ
ಸಿಂಗ್ ’ಕೇರಳದ ಪರಿಸ್ಥಿತಿ
ಅತ್ಯಂತ ಗಂಭೀರವಾಗಿದೆ’ ಎಂದು ಹೇಳಿದರು. ‘ಈ ಅಭೂತಪೂರ್ವ
ಬಿಕ್ಕಟ್ಟಿನ ಪರಿಣಾಮವಾಗಿ ಕೇರಳದ ಜನತೆ ಎದುರಿಸುತ್ತಿರುವ ತೊಂದರೆಯನ್ನು ನಾನು ಅರ್ಥ ಮಾಡಿಕೊಂಡಿದ್ದೇನೆ. ಹಾನಿಯ ಅಂದಾಜಿಗೆ ಇನ್ನೂ ಸ್ವಲ್ಪ ಸಮಯ ಆಗಬಹುದಾದ್ದರಿಂದ ತತ್ ಕ್ಷಣಕ್ಕೆ ೧೦೦ ಕೋಟಿ ರೂಪಾಯಿಗಳ
ಹೆಚ್ಚುವರಿ ನೆರವನ್ನು ನಾನು ಘೋಷಿಸುತ್ತಿದ್ದೇನೆ’ ಎಂದು ಗೃಹ ಸಚಿವರು ಟೀಟ್ ಮಾಡಿದರು. ರಾಜ್ಯ ಸರ್ಕಾರದ
ಯತ್ನಗಳಿಗೆ ಪೂರಕವಾಗಿ, ಕೇರಳಕ್ಕೆ
ಹೊರಡುವುದಕ್ಕೆ ಸ್ವಲ್ಪ ಮುನ್ನ ನಾನು ೮೦.೨೫ ಕೋಟಿ ರೂಪಾಯಿಗಳ
ಎರಡನೇ ಕಂತನ್ನು ಎಸ್ ಡಿಆರ್ ಎಫ್ ಗೆ ಮುಂಗಡ ನೆರವನ್ನು
ಮಂಜೂರು ಮಾಡಿದ್ದೇನೆ’ ಎಂದು ಸಿಂಗ್ ತಿಳಿಸಿದರು.
ಕೇರಳದ ಮುಖ್ಯಮಂತ್ರಿ ಪಿಣರಾಯಿ
ವಿಜಯನ್ ಸರ್ಕಾರವು ೮,೩೧೬ ಕೋಟಿ ರೂಪಾಯಿಗಳಷ್ಟು ನಷ್ಟವಾಗಿದೆ ಎಂದು ಉಲ್ಲೇಖಿಸಿ
ಮನವಿ ಸಲ್ಲಿಸಿದೆ ಮತ್ತು ೧,೨೨೦ ಕೋಟಿ ರೂಪಾಯಿಗಳ
ನೆರವನ್ನು ಕೋರಿದೆ ಎಂದು ಗೃಹ ಸಚಿವರು ಹೇಳಿದರು.
‘ಪ್ರಕೋಪದ ಪರಿಣಾಮ ದೀರ್ಘ ಕಾಲ ಅನುಭವಕ್ಕೆ
ಬರುವ ಸಾಧ್ಯತೆ ಇದೆ. ಪ್ರಾಥಮಿಕ
ಅಂದಾಜಿನಂತೆ ಸುಮಾರು ೨೦,೦೦೦ ಮನೆಗಳು ಪೂರ್ಣವಾಗಿ
ಹಾನಿಗೊಂಡಿದ್ದು ಸುಮಾರು೧೦,೦೦೦ ಕಿಮೀ ಉದ್ದದ ರಾಜ್ಯ ಲೋಕೋಪಯೋಗಿ
ಇಲಾಖೆಯ ರಸ್ತೆಗಳು ಹಾನಿಗೊಂಡಿವೆ. ಪ್ರಾಥಮಿಕ ಅಂದಾಜಿನಂತೆ ರೂ.೮೩೧೬ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ವಿಜಯನ್ ಅವರು ಟ್ವಿಟ್ಟರಿನಲ್ಲಿ ಹೇಳಿಕೆ ನೀಡಿದರು. ‘ಮುಖ್ಯಮಂತ್ರಿಯವರು ವಿಸ್ತೃತ
ಮನವಿಯೊಂದನ್ನು ಹಾನಿಯ ಅಂದಾಜು ಪೂರ್ಣಗೊಂಡ
ಬಳಿಕ ಆದಷ್ಟೂ ಶೀಘ್ರ ಸಲ್ಲಿಸುವುದಾಗಿ ಹೇಳಿದ್ದಾರೆ. ವಿಪತ್ತನ್ನು ಅಪರೂಪದಲ್ಲಿ ಅಪರೂಪ ಎಂಬುದಾಗಿ ಘೋಷಿಸುವಂತೆ ಮತ್ತು ಅಗತ್ಯ ನಿಧಿ ಮತ್ತು ನೆರವು ಒದಗಿಸುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ’ ಎಂದೂ ಸಿಂಗ್ ಹೇಳಿದರು. ರಾಜನಾಥ್ ಸಿಂಗ್ ಅವರು ಎರ್ನಾಕುಲಂ
ಜಿಲ್ಲೆಯ ಪರವೂರ್ ತಾಲೂಕಿನ
ಎಲಾಂಥಿಕ್ಕಾರದ ಪರಿಹಾರ ಶಿಬಿರದಲ್ಲಿ ಸಂತ್ರಸ್ಥರನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯಮಂತ್ರಿ ಪಿಣರಾಯಿ ವಿಜಯನ್,
ಕೇಂದ್ರ ಸಚಿವ ಅಲ್ಫೋನ್ಸ್
ಕನ್ನಾಂಥನಂ, ರಾಜ್ಯ ಕಂದಾಯ ಸಚಿವ ಇ. ಚಂದ್ರಸೇಖರನ್ ಮತ್ತು ರಾಜ್ಯ ಸರ್ಕಾರದ
ಹಿರಿಯ ಅಧಿಕಾರಿಗಳು ಹಾಜರಿದ್ದರು. ಪ್ರವಾಹದಿಂದಾಗಿ ಮನೆ ಮತ್ತು ಭೂಮಿ ಕಳೆದುಕೊಂಡವರ ಸಮಸ್ಯೆಗಳನ್ನೂ ಸಿಂಗ್ ಆಲಿಸಿದರು.
ಮುಂದುವರೆದ ಜಡಿಮಳೆ: ಹಿಂದಿನ ದಿನ ರಾತ್ರಿ ಸ್ವಲ್ಪ ಬಿಡುವು ನೀಡಿದ್ದ
ಮಳೆ ಈದಿನ ಬೆಳಗ್ಗಿನಿಂದಲೇ ರಾಜ್ಯದ ಹಲೆವೆಡೆಗಳಲ್ಲಿ ಮತ್ತೆ ತನ್ನ ಆರ್ಭಟವನ್ನು ಮುಂದುವರೆಸಿತು.. ಪರಿಣಾಮವಾಗಿ ಪ್ರವಾಹ,
ಭೂಕುಸಿತ ಸಂಭವಿಸಿದ ಪ್ರದೇಶಗಳಲ್ಲಿ ಪರಿಹಾರ ಕಾರ್ಯಕ್ಕೆ ಅಡ್ಡಿಯಾಯಿತು. ಏನಿದ್ದರೂ, ಇಡುಕ್ಕಿ ಮತ್ತು ಇದಮಲಯಾರ್
ಅಣೆಕಟ್ಟುಗಳಲ್ಲಿ ನೀರಿನ ಮಟ್ಟ ಇಳಿದಿದ್ದು
ಸ್ವಲ್ಪ ಮಟ್ಟಿನ ನಿರಾಳತೆಯನ್ನು ಮೂಡಿಸಿತು. ಕೆಳ ಪ್ರದೇಶಗಳ
ಜನರು ಭೀತರಾಗಬೇಕಾದ ಅಗತ್ಯವಿಲ್ಲ ಎಂದು ಅಧಿಕಾರಿಗಳು ಈದಿನ ಹೇಳಿದರು.
ಹಿಂದಿನ ದಿನದ ಬಳಿಕ ಮಳೆ ಸಂಬಂಧಿತ
ಘಟನೆಗಳಲ್ಲಿ ಸಾವು ನೋವು ಸಂಭವಿಸಿದ
ಬಗ್ಗೆ ಹೊಸದಾಗಿ ಯಾವುದೇ ವರದಿಗಳು
ಬಂದಿಲ್ಲ. ಹಾಲಿ ಮುಂಗಾರು
ಮಳೆಯ ಉಗ್ರ ಸ್ವರೂಪಕ್ಕೆ ಆಗಸ್ಟ್ ೮ರಿಂದ ಈವರೆಗೆ ೩೭ ಮಂದಿ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ನುಡಿದರು.
ಕೇರಳದ ವೇನಾಡಿನಲ್ಲಿ ೧೪,೦೦೦ ಮಂದಿಗೆ ಆಶ್ರಯ ಕಲ್ಪಿಸಿರುವುದು ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ
ನಿರಾಶ್ರಿತ ಶಿಬಿರಗಳಲ್ಲಿ ಒಟ್ಟು ೬೦,೦೦೦ ಮಂದಿಗೆ ಆಶ್ರಯ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
2018: ಕೋಲ್ಕತ: ಮಾಜಿ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅವರಿಗೆ ಲಘು ಹೃದಯಾಘಾತವಾಗಿ, ಆ ಬಳಿಕ ಅವರ ಸ್ಥಿತಿ ವಿಷಮಿಸಿದೆ
ಎಂದು ಖಾಸಗಿ ಆಸ್ಪತ್ರೆಯ
ಅಧಿಕಾರಿಯೊಬ್ಬರು ತಿಳಿಸಿದರು. ೮೧ರ ಹರೆಯದ ಚಟರ್ಜಿ ಅವರು ಮೂತ್ರಪಿಂಡ
ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದು, ಅವರನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ‘ಅವರಿಗೆ ಡಯಾಲಿಸಿಸ್
ಮಾಡಲಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ಕೆಲವೊಮ್ಮೆ ಹೃದಯ ಬೆಂಬಲ ನೀಡುವುದನ್ನು ನಿಲ್ಲಿಸಿಬಿಡುತ್ತದೆ. ಚಟರ್ಜಿ ಅವರಿಗೆ ಈದಿನ ಬೆಳಗ್ಗೆ
ಲಘು ಹೃದಯಾಘಾತವಾಯಿತು. ಆದರೆ ಮತ್ತೆ ಹೃದಯ ಬಡಿತ ಆರಂಭವಾಗುವಂತೆ ಮಾಡಲಾಯಿತು. ಅವರು ಈಗ ತೀವ್ರ ನಿಗಾ ಘಟಕದಲ್ಲಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ’ ಎಂದು ಆಸ್ಪತ್ರೆಯ
ಹಿರಿಯ ಅಧಿಕಾರಿ ನುಡಿದರು.
ಮಾಜಿ ಲೋಕಸಭಾಧ್ಯಕ್ಷರು ಕಳೆದ ತಿಂಗಳು ರಕ್ತಸ್ರಾವದ ಜೊತೆಗೆ ಪಾರ್ಶವಾಯುವಿಗೆ ಈಡಾಗಿದ್ದರು. ‘ಚಟರ್ಜಿ ಅವರು ಕಳೆದ ೪೦ ದಿನಗಳಿಂದ
ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಗ್ಯ ಚೇತರಿಸಿದ್ದನ್ನು ಅನುಸರಿಸಿ ಕೇವಲ ಮೂರು ದಿನಗಳ ಹಿಂದೆ ಅವರನ್ನು
ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿತ್ತು. ಆದರೆ ಕಳೆದ 7ನೇ ದಿನಾಂಕ ಮಂಗಳವಾರ ಅವರ ಆರೋಗ್ಯ ಸ್ಥಿತಿ ಮತ್ತೆ ಬಿಗಡಾಯಿಸಿತು. ಹೀಗಾಗಿ ಪುನಃ ಅವರನ್ನು
ಆಸ್ಪತ್ರೆಗೆ ದಾಖಲು ಮಾಡಲಾಯಿತು’ ಎಂದು ಅಧಿಕಾರಿ
ನುಡಿದರು. ೧೦ ಬಾರಿ ಲೋಕಸಭಾ ಸದಸ್ಯರಾಗಿದ್ದ ಚಟರ್ಜಿ, ೧೯೬೮ರಲ್ಲಿ ತಾವು ಸೇರಿದ್ದ
ಸಿಪಿಐ(ಎಂ) ಪಕ್ಷದ ಕೇಂದ್ರೀಯ
ಸಮಿತಿ ಸದಸ್ಯರಾಗಿದ್ದರು. ೨೦೦೪ರಿಂದ
೨೦೦೯ರ ಅವಧಿಯಲ್ಲಿ ಅವರು ಲೋಕಸಭಾಧ್ಯಕ್ಷರಾಗಿದ್ದರು. ಆದರೆ, ೨೦೦೮ರಲ್ಲಿ ಸಿಪಿಐ (ಎಂ) ಯುಪಿಎ -೧ ಸರ್ಕಾರಕ್ಕೆ ತನ್ನ ಬೆಂಬಲ ಹಿಂಪಡೆದಾಗ
ಲೋಕಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ
ನೀಡಲು ನಿರಾಕರಿಸಿದ್ದನ್ನು ಅನುಸರಿಸಿ
ಪಕ್ಷವು ಹಿರಿಯ ನಾಯಕ ಚಟರ್ಜಿ ಅವರನ್ನು
ಪಕ್ಷದಿಂದ ಉಚ್ಚಾಟಿಸಿತ್ತು.
2018: ಬೆಂಗಳೂರು: ಭಾರತದ ಎರಡನೇ ಚಂದ್ರಯಾನವು ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿದ್ದು, ಜನವರಿ ೩ರಂದು ಚಂದ್ರಯಾನ
ನೌಕೆ ಉಡಾವಣೆಗೊಳ್ಳಲಿದೆ. ಅದು ಲ್ಯಾಂಡರ್
ಮತ್ತು ರೋವರ್ ಜೊತೆಗೆ ಚಂದ್ರನ ಮೇಲ್ಮೈಯಲ್ಲಿ ಇಳಿಯಲಿದೆ ಎಂದು ಇಸ್ರೋದ ಉನ್ನತ ಬಾಹ್ಯಾಕಾಶ
ಅಧಿಕಾರಿ ತಿಳಿಸಿದರು. ಮುಂದಿನ ವರ್ಷ ಜನವರಿ ೩ರಂದು ಚಂದ್ರಯಾನ
ನೌಕೆ ಉಡಾವಣೆಯ ಗುರಿ ಹೊಂದಿದ್ದೇವೆ. ಆದರೆ ಚಾಂದ್ರ ನೆಲದ ಮೇಲೆ ಇಳಿಯಲು ೨೦೧೯ರ ಮಾರ್ಚ್ ವರೆಗೆ ಕಾಯಬೇಕಾಗಬಹುದು ಎಂದು ಭಾರತೀಯ ಬಾಹ್ಯಾಕಾಶ
ಸಂಶೋಧನಾ ಸಂಸ್ಥೆಯ (ಇಸ್ರೋ) ಅಧ್ಯಕ್ಷ
ಕೆ. ಸಿವನ್ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು. ೮೦೦ ಕೋಟಿ ರೂಪಾಯಿ ವೆಚ್ಚದ
’ಚಂದ್ರಯಾನ -೨’ ಭಾರತವು ೨೦೦೮ರ ನವೆಂಬರ್
೮ರಂದು ಚಂದ್ರಯಾನ್ ೧ ನೌಕೆ ಚಾಂದ್ರ ಕಕ್ಷೆಯನ್ನು ತಲುಪಿದ ಸುಮಾರು ಒಂದು ದಶಕದ ಬಳಿಕ ಸಾಕಾರಗೊಳ್ಳುತ್ತಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದ ಪೋಲಾರ್ ಉಪಗ್ರಹ ಉಡಾವಣಾ ವಾಹನ (ಪಿಎಸ್ ಎಲ್ ವಿ) ಮೂಲಕ ಅಕ್ಟೋಬರ್
೨೨ರಂದು ಚಾಂದ್ರಯಾನ -೧ ನೌಕೆಯನ್ನು
ಉಡಾವಣೆ ಮಾಡಲಾಗಿತ್ತು.
2007: ಟಿವಿ ಅಡುಗೆ ಕಾರ್ಯಕ್ರಮದ ಹೆಸರಾಂತ ನಿರೂಪಕಿ ಭಾರತೀಯ ಮೂಲದ ಬ್ರಿಟನ್ ಪ್ರಜೆ ಅಂಜುಮ್ ಆನಂದ್ ಅವರು ಭಾರತೀಯ ಅಡುಗೆ ಕುರಿತು ಬರೆದಿರುವ `ಇಂಡಿಯನ್ ಫುಡ್ ಮೇಡ್ ಈಸಿ' ಪುಸ್ತಕ ಹ್ಯಾರಿ ಪಾಟರ್ ಗಿಂತಲೂ ಹೆಚ್ಚು ಮಾರಾಟವಾಗಿ ದಾಖಲೆ ನಿರ್ಮಿಸಿದೆ ಎಂದು 'ಡೈಲಿ ಮೇಲ್' ಪತ್ರಿಕೆ ವರದಿ ಮಾಡಿತು. 35 ವರ್ಷದ ಅಂಜುಮ್ ಅವರು, ಭಾರತೀಯ ಅಡುಗೆಯನ್ನು ಸರಳವಾಗಿ, ರುಚಿಕರವಾಗಿ ಮತ್ತು ಆರೋಗ್ಯಕರವಾಗಿ ಹೇಗೆ ತಯಾರಿಸಬಹುದು ಎಂಬ ಬಗ್ಗೆ ಬರೆದಿರುವ ಈ ಪುಸ್ತಕದಲ್ಲಿ 70 ಹೊಸ ಖಾದ್ಯಗಳನ್ನುಪರಿಚಯಿಸಲಾಗಿದೆ.
2007: ಅಲಹಾಬಾದಿನ ಗಂಗಾ, ಯಮುನಾ ಮತ್ತು ಗುಪ್ತಗಾಮಿನಿ ಸರಸ್ವತಿ ನದಿಗಳ ತ್ರಿವೇಣಿ ಸಂಗಮದಲ್ಲಿ ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಅಸ್ಥಿ ವಿಸರ್ಜಿಸಲಾಯಿತು. ಚಂದ್ರಶೇಖರ್ ಅವರ ಪುತ್ರರಾದ ಪಂಕಜ್ ಕುಮಾರ್ ಮತ್ತು ನೀರಜ್ ಶೇಖರ್ ತಮ್ಮ ತಂದೆಯ ಅಸ್ಥಿಯನ್ನು ಸಂಪ್ರದಾಯ ಪ್ರಕಾರ ವಿಸರ್ಜಿಸಿದರು.
2007: ನೇಪಾಳದ ದೊರೆಯ ಎಲ್ಲ ಅಧಿಕಾರಗಳನ್ನು ಪ್ರಧಾನಿಗೆ ವರ್ಗಾಯಿಸುವ ಸಂಸತ್ತಿನ ರಾಜ್ಯ ವ್ಯವಹಾರಗಳ ಸಮಿತಿ ಮಂಡಿಸಿದ, ಮಸೂದೆ 2064ಕ್ಕೆ ಸಂಸತ್ತು ಒಪ್ಪಿಗೆ ನೀಡಿತು.
ಸುಮಾರು 26 ವಿಧದ ಬಿರುದುಗಳು, ಪ್ರಶಸ್ತಿ ಮತ್ತು ಪದಕಗಳನ್ನು ಪ್ರಧಾನಿ ಅವರು ನೀಡುವುದಕ್ಕೆ ಈ ಮಸೂದೆ ಅವಕಾಶ ಕಲ್ಪಿಸುತ್ತದೆ. ಈ ಮುಂಚೆ ದೇಶದ ಮುಖ್ಯಸ್ಥ ಎಂಬ ಕಾರಣಕ್ಕೆ ದೊರೆಗೆ ಈ ಅಧಿಕಾರವಿತ್ತು.
2007: ಪ್ರತಿಷ್ಠಿತ ನೈಸ್ ಸಂಸ್ಥೆಯ ಅಧ್ಯಕ್ಷ ಅಶೋಕ ಖೇಣಿ ಅವರ ಹುಟ್ಟೂರು ಖೇಣಿ ರಂಜೋಳದಲ್ಲಿ ರಾಷ್ಟ್ರದಲ್ಲೇ ಮೊತ್ತ ಮೊದಲ `ಹೈಬ್ರಿಡ್ ಸಿಸ್ಟಮ್' (ಪವನ- ಸೌರಶಕ್ತಿ ಯಂತ್ರ) ಅಳವಡಿಸಿಕೊಂಡ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ನೈಸ್ ಸಂಸ್ಥೆಯ ತಾಂತ್ರಿಕ ಅಧಿಕಾರಿ ಡಾ. ಹೆಚ್. ನಾಗನಗೌಡ ಪ್ರಕಟಿಸಿದರು. ಇದರಿಂದ ಉತ್ಪಾದನೆಯಾಗುವ ಸೌರ ವಿದ್ಯುತ್ತನ್ನು ಗ್ರಾಮದ ಎಲ್ಲ ಮನೆ ಹಾಗೂ ರಸ್ತೆಗಳಲ್ಲಿ ವಿದ್ಯುದ್ದೀಪಗಳಿಗೆ ಒದಗಿಸಲಾಗಿದ್ದು ಇಡೀ ಗ್ರಾಮ ರಾತ್ರಿ ವೇಳೆಯಲ್ಲಿ ವಿದ್ಯುದ್ದೀಪಗಳಿಂದ ಕಂಗೊಳಿಸುತ್ತಿದೆ. ಈ ಹೈಬ್ರಿಡ್ ಸಿಸ್ಟಮಿನಲ್ಲಿ ಸಮರ್ಪಕ ವಿದ್ಯುತ್ ಪೂರೈಕೆಯಾಗುವುದು. ಕೇಬಲ್ ಸ್ಥಾಪನೆಯ ವೆಚ್ಚ ಇಲ್ಲ. ವಿದ್ಯುತ್ ಬಿಲ್ ಪಾವತಿ ಸಮಸ್ಯೆ ಇಲ್ಲ. ಸಾರ್ವಜನಿಕರಿಗೆ ಸುರಕ್ಷತೆ ಒದಗುತ್ತದೆ. ಸಂಪೂರ್ಣವಾಗಿ ಸ್ವಯಂ ಚಾಲಿತ ಹಾಗೂ ಪರಿಸರ ಸ್ನೇಹಿ ಹಾಗೂ ಶುದ್ಧ ಇಂಧನ ಸಂಪನ್ಮೂಲ ಲಭ್ಯತೆ ಇದರ ಅನುಕೂಲಗಳು ಎಂಬುದು ನಾಗನಗೌಡ ವಿವರಣೆ.
2007: ಜುಲೈ ತಿಂಗಳಲ್ಲಿ ಗೋಹತ್ಯೆಯನ್ನು ನಿಷೇಧಿಸಿದ ಉತ್ತರಖಂಡದ ಬಿಜೆಪಿ ಸರ್ಕಾರ ಗೋಮೂತ್ರಕ್ಕೆ ಅಪಾರ ಪ್ರಾಮುಖ್ಯತೆ ನೀಡಿತು. ಕ್ಯಾನ್ಸರ್ ದೂರಮಾಡುವ ವಿಶೇಷ ಗುಣಗಳು `ಗೋಮೂತ್ರ'ದಲ್ಲಿ ಇರುವ ಹಿನ್ನೆಲೆಯಲ್ಲಿ ಬ್ಲಾಕ್ ಮಟ್ಟದಲ್ಲಿ ಸಹಕಾರ ಸಂಘಗಳನ್ನು ಸ್ಥಾಪಿಸಿ ಅವುಗಳ ಮೂಲಕ ಗೋಮೂತ್ರ ಸಂಗ್ರಹಿಸಲು ಸರ್ಕಾರ ಚಿಂತಿಸಿದೆ ಎಂದು ಪಶುಸಂಗೋಪನೆ ಹಾಗೂ ಕೃಷಿ ಸಚಿವ ತ್ರಿವೇಂದ್ರ ರಾವ್ ಪ್ರಕಟಿಸಿದರು. ಹೀಗೆ ಸಂಗ್ರಹಗೊಂಡ ಗೋಮೂತ್ರವನ್ನು ಯೋಗ ಗುರು ಬಾಬಾ ರಾಮದೇವ್ ಅವರ `ದಿವ್ಯ ಯೋಗ ಫಾರ್ಮೆಸಿ' ಕಂಪೆನಿಯು ಲೀಟರಿಗೆ 6 ರೂಪಾಯಿಯಂತೆ ಖರೀದಿಸಲು ಮುಂದೆ ಬಂದಿದೆ. ಗೋಮೂತ್ರದಲ್ಲಿನ ಔಷಧೀಯ ಗುಣಗಳನ್ನು ಬಳಸಿಕೊಂಡು ದಿವ್ಯ ಯೋಗ ಫಾರ್ಮೆಸಿ ಕಂಪೆನಿಯು ಆಯುರ್ವೇದ ಉತ್ಪನ್ನಗಳನ್ನು ತಯಾರಿಸುತ್ತಿದೆ. ಕಂಪೆನಿಯ ಪ್ರಸ್ತಾವವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಒಂದು ಅಂದಾಜಿನ ಪ್ರಕಾರ ರಾಜ್ಯದಲ್ಲಿ 10 ಲಕ್ಷ ಗೋವುಗಳಿವೆ. ಪ್ರತಿ ಗೋವು ದಿನಕ್ಕೆ 5 ರಿಂದ 6 ಲೀಟರ್ ಗೋಮೂತ್ರ ಕೊಡುವ ಸಾಮರ್ಥ್ಯ ಹೊಂದಿದೆ.
2007: ಸೇತುಸಮುದ್ರಂ ಯೋಜನೆಗಾಗಿ `ರಾಮ ಸೇತು'ವನ್ನು ನಾಶಪಡಿಸುವ ಕ್ರಮದ ವಿರುದ್ಧ ತಮಿಳುನಾಡಿನ ಚೆನ್ನೈಯಲ್ಲಿ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಉಪವಾಸ ಸತ್ಯಾಗ್ರಹ ನಡೆಸಿದರು. ರಾಮ ಸೇತುವನ್ನು ರಾಷ್ಟ್ರೀಯ ಪರಂಪರೆಯ ಸ್ಮಾರಕವನ್ನಾಗಿ ಉಳಿಸಿಕೊಳ್ಳಬೇಕು ಎಂದು ಮದ್ರಾಸ್ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ವಿರುದ್ಧವಾಗಿ ಶೇ 20ರಷ್ಟು ಸೇತುವೆಯನ್ನು ನಾಶಪಡಿಸಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಕಾರ್ಯನಿರ್ವಾಹಕ ಅಧ್ಯಕ್ಷ ಎಸ್.ವೇದಾಂತಂ ಆಪಾದಿಸಿದರು.
2006: ಉತ್ತರ ಮತ್ತು ಪಶ್ಚಿಮ ಶ್ರೀಲಂಕಾದಲ್ಲಿ ಎಲ್ಟಿಟಿಇ ತಮಿಳು ಬಂಡುಕೋರರು ಮತ್ತು ಸೈನಿಕರ ಮಧ್ಯೆ ನಡೆದ ತೀವ್ರ ಹೋರಾಟದಲ್ಲಿ ಕನಿಷ್ಠ 200 ಜನ ಬಂಡುಕೋರರು, 27 ಜನ ಸೈನಿಕರು ಮೃತರಾಗಿ ಒಟ್ಟು 280 ಜನ ಗಾಯಗೊಂಡರು.
2006: ಅಡಾಲ್ಫ್ ಹಿಟ್ಲರನ ನಾಝಿ ಪಡೆಗಳಿಗೆ ಸೇರಿದ ವಾಫೆನ್ ಎಸ್ಸೆಸ್ಸಿನಲ್ಲಿ ತಾವು ಸೇವೆ ಸಲ್ಲಿಸಿದ್ದುದಾಗಿ ನೊಬೆಲ್ ಪ್ರಶಸ್ತಿ ಪುರಸ್ಕೃತ ಜರ್ಮನ್ ಸಾಹಿತಿ ಗುಂಟರ್ ಗ್ರಾಸ್ (78) ಪ್ರಪ್ರಥಮ ಬಾರಿಗೆ ಒಪ್ಪಿಕೊಂಡರು. ಫ್ರಾಂಕ್ ಫರ್ಟರ್ ಅಲ್ಜೆಮೀನ್ ಝೀಟಂಗ್ ಜೊತೆಗಿನ ಸಂದರ್ಶನದಲ್ಲಿ ಇದನ್ನು ಬಹಿರಂಗಗೊಳಿಸಿದ ಗ್ರಾಸ್ ದ್ವಿತೀಯ ಮಹಾಸಮರದ ಕೊನೆಯ ದಿನಗಳಲ್ಲಿ ತಾವಾಗಿಯೇ ಜಲಾಂತರ್ಗಾಮಿಯಲ್ಲಿ ಸೇವೆ ಸಲ್ಲಿಸಿದ್ದುದಾಗಿ ನುಡಿದರು.
2006: ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಖ್ಯಾತ ಕೊಳಲು ವಾದಕ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರ ಕೊಳಲಗಾನಕ್ಕೆ ಖ್ಯಾತ ಗಾಯಕಿ ಡಾ. ಗಂಗೂಬಾಯಿ ಹಾನಗಲ್ ಸ್ವರ ಸೇರಿಸಿದರು.
2000: ಇವಾಂಡರ್ ಹೋಲಿಫೀಲ್ಡ್ ಅವರು ಜಾನ್ ರೂಯಿಝ್ ಅವರನ್ನು ಸೋಲಿಸಿ ಡಬ್ಲ್ಯೂಬಿಎ ಬಾಕ್ಸಿಂಗ್ ಪ್ರಶಸ್ತಿಯನ್ನು ಗೆದ್ದುಕೊಂಡರು. ಈ ಪ್ರಶಸ್ತಿಯನ್ನು ನಾಲ್ಕು ಸಲ ಗೆದ್ದ ಪ್ರಥಮ ವ್ಯಕ್ತಿ ಎಂಬ ಹೆಗ್ಗಳಿಕೆ ಇವರದಾಯಿತು.
2000: ರಷ್ಯದ ಪರಮಾಣು ಚಾಲಿತ ಜಲಾಂತರ್ಗಾಮಿ `ಕರ್ಸ್ಕ್' ಸ್ಫೋಟದ ಪರಿಣಾಮವಾಗಿ ಬೇರೆಂಟ್ಸ್ ಸಮುದ್ರದಲ್ಲಿ ಅದರಲ್ಲಿದ್ದ ಎಲ್ಲ 118 ಮಂದಿಯೊಂದಿಗೆ ಮುಳುಗಿತು.
1985: ಜಪಾನ್ ಏರ್ ಲೈನ್ಸ್ ಬೋಯಿಂಗ್ 747 ದೇಶೀ ಹಾರಾಟ ನಡೆಸುತ್ತಿದ್ದಾಗ ಪರ್ವತಕ್ಕೆ ಅಪ್ಪಳಿಸಿ 520 ಜನ ಮೃತರಾದರು. ಇದು ಜಗತ್ತಿನ ಅತ್ಯಂತ ಭೀಕರ ವಿಮಾನ ಅಪಘಾತ ಎಂದು ಪರಿಗಣಿತವಾಗಿದೆ.
1981: ಈದಿನ ಪಿ.ಸಿ.ಯ ಜನ್ಮದಿನ. ವ್ಯವಹಾರ, ಶಾಲೆ ಮತ್ತು ಮನೆಗಳಲ್ಲಿ ಬಳಸಬಹುದಾದಂತಹ ಅತಿ ಸಣ್ಣ, ಅತಿ ಕಡಿಮೆ ಬೆಲೆಯ ಐಬಿಎಂ ಪರ್ಸನಲ್ ಕಂಪ್ಯೂಟರನ್ನು ತಾನು ಬಿಡುಗಡೆ ಮಾಡುತ್ತಿರುವುದಾಗಿ ಐಬಿಎಂ ಕಾರ್ಪೊರೇಷನ್ ಪ್ರಕಟಿಸಿತು. ಅದರ ಬೆಲೆ 1565 ಪೌಂಡುಗಳು. ಸುಮಾರು ಎರಡು ದಶಕಗಳ ಬಳಿಕ ಈ ಪರ್ಸನಲ್ ಕಂಪ್ಯೂಟರುಗಳು ಜಗತ್ತಿನ ಜೀವನ ವಿಧಾನವನ್ನೇ ಬದಲಾಯಿಸಿ ಬಿಟ್ಟವು.
1953: ಸಾಹಿತಿ, ಪ್ರವಾಸಪ್ರಿಯೆ ಡಾ. ಲತಾ ಗುತ್ತಿ ಅವರು ನಾಗನಗೌಡ- ಶಾಂತಾದೇವಿ ಪಾಟೀಲ ದಂಪತಿಯ ಪುತ್ರಿಯಾಗಿ ಬೆಳಗಾವಿಯಲ್ಲಿ ಜನಿಸಿದರು. ಇವರ ಸುಮಾರು 12 ಕೃತಿಗಳು ಪ್ರಕಟಗೊಂಡಿದ್ದು ರತ್ನಮ್ಮ ಹೆಗ್ಗಡೆ ಪ್ರಶಸ್ತಿ, ಬಿ.ಎಂ.ಶ್ರೀ. ಪ್ರತಿಷ್ಠಾನ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ರತ್ನಾಕರ ವರ್ಣಿ, ಮುದ್ದಣ ಕಾವ್ಯ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಲಭಿಸಿವೆ.
1942: ಕ್ಯಾತನಹಳ್ಳಿ ರಾಮಣ್ಣ ಜನನ.
1940: ಸಾಹಿತಿ ಎನ್. ವಸಂತಕುಮಾರ ಜನನ.
1924: ಪಾಕಿಸ್ಥಾನದ ಮಹಮ್ಮದ್ ಜಿಯಾ ಉಲ್ ಹಕ್ (1924-1988) ಜನ್ಮದಿನ. ಸೇನಾದಂಡನಾಯಕ, ಮಾರ್ಷಲ್ ಲಾ ಮುಖ್ಯ ಆಡಳಿತಗಾರರಾಗಿದ್ದು ನಂತರ ರಾಷ್ಟ್ರದ ಅಧ್ಯಕ್ಷರಾದ (1978-88) ಇವರ ಆಡಳಿತಾವದಿಯಲ್ಲೇ ಪಾಕಿಸ್ಥಾನದ ಮಾಜಿ ಪ್ರಧಾನಿ ಝುಲ್ಫಿಕರ್ ಅಲಿ ಭುಟ್ಟೋ ಅವರನ್ನು ಕೊಲೆ ಆಪಾದನೆಯಲ್ಲಿ ಗಲ್ಲು ಶಿಕ್ಷೆಗೆ ಗುರಿಪಡಿಸಲಾಯಿತು.
1919: ವಿಕ್ರಮ್ ಅಂಬಾಲಾಲ್ ಸಾರಾಭಾಯಿ (1919-1971) ಜನ್ಮದಿನ. ಇವರು `ಭಾರತದ ಬಾಹ್ಯಾಕಾಶ ಕಾರ್ಯಕ್ರಮಗಳ ಜನಕ' ಎಂದೇ ಖ್ಯಾತಿ ಪಡೆದಿದ್ದಾರೆ. ಅಹಮದಾಬಾದಿನಲ್ಲಿ ಫಿಸಿಕಲ್ ರೀಸರ್ಚ್ ಲ್ಯಾಬೋರೇಟರಿ ಮತ್ತು ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ಸ್ಥಾಪಿಸಲು ನೆರವಾದವರು ಇವರು. ಗುಜರಾತಿನ ಅಹಮದಾಬಾದಿನಲ್ಲಿ ಅಂಬಾಲಾಲ್- ಸರಳಾದೇವಿ ದಂಪತಿಯ ಮಗನಾಗಿ ಜನಿಸಿದ ವಿಕ್ರಮ್ ಸಾರಾಭಾಯಿ ಅವರ ಜೀವನದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸ್ಥಾಪನೆ ಮಹತ್ವದ ಮೈಲಿಗಲ್ಲು. ಪದ್ಮಭೂಷಣ ಪ್ರಶಸ್ತಿ (1966), ಭಟ್ನಾಗರ್ ಪ್ರಶಸ್ತಿ (1962), ನಂತರ ಮರಣೋತ್ತರವಾಗಿ ಪದ್ಮವಿಭೂಷಣ ಪ್ರಶಸ್ತಿ (1972) ಇವರಿಗೆ ಲಭಿಸಿದವು. 1971ರ ಡಿಸೆಂಬರ್ 31ರಂದು ತಮ್ಮ 52ನೇ ವಯಸ್ಸಿನಲ್ಲಿ ಇವರು ನಿಧನರಾದರು.
1908: ಮೊತ್ತ ಮೊದಲ ಟಿ-ಮಾಡೆಲ್ ಫೋರ್ಡ್ ಕಾರು ಡೆಟ್ರಾಯಿಟ್ ನಲ್ಲಿ ಬಿಡುಗಡೆಯಾಯಿತು. ಜನರ ಕಾರು ಎಂದೇ ಖ್ಯಾತಿ ಪಡೆದ ಇದಕ್ಕೆ 825 ಡಾಲರ್ ಬೆಲೆ ನಿಗದಿ ಪಡಿಸಲಾಗಿತ್ತು.
1851: ಐಸಾಕ್ ಸಿಂಗರ್ ಅವರಿಗೆ ಅವರ ಹೊಲಿಗೆ ಯಂತ್ರಕ್ಕೆ ಪೇಟೆಂಟ್ ನೀಡಲಾಯಿತು.
No comments:
Post a Comment