Wednesday, August 22, 2018

ಇಂದಿನ ಇತಿಹಾಸ History Today ಆಗಸ್ಟ್ 22

ಇಂದಿನ ಇತಿಹಾಸ History Today ಆಗಸ್ಟ್ 22
2018: ನವದೆಹಲಿ: ಇಂಡೋನೇಷ್ಯದ ಪಾಲೆಂಬಂಗ್‌ನಲ್ಲಿ ನಡೆದ ೨೫ ಎಂ ಮಹಿಳಾ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಗೆಲ್ಲುವ ಮೂಲಕ ೨೭ರ ಹರೆಯದ ರಾಹಿ ಸರ್ನೋಬತ್ ಅವರು ಪ್ರತಿಷ್ಠಿತ ಏಷ್ಯನ್ ಕ್ರೀಡಾಕೂಟದಲ್ಲಿ ’ಶೂಟಿಂಗ್ ಸ್ವರ್ಣ ಪದಕವನ್ನು ಭಾರತಕ್ಕೆ ತಂದುಕೊಟ್ಟ ಮೊದಲ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ರಾಹಿ ಮತ್ತು ಥಾಯ್ಲೆಂಡಿನ ನಫಸ್ವನ್ ಯಾಂಗ್ಪಾಯಿಬೂನ್ ಇಬ್ಬರು ೩೪ ಅಂಕಗಳೊಂದಿಗೆ ಸಮಾನ ಅಂಕಗಳನ್ನು ಗಳಿಸಿ ’ಟೈ ಆದ ಬಳಿಕ ನಡೆದ ಫೈನಲ್ ಸ್ಪರ್ಧೆಯಲ್ಲಿ ರಾಹಿ ಅವರು ೫೯೩ ಅಂಕಗಳಿಸುವ ಮೂಲಕ ನಫಸ್ವನ್ ಯಾಂಗ್ಪಾಯಿಬೂನ್ ಅವರನ್ನು ಪರಾಭವಗೊಳಿಸಿದರು.  ೨೦೧೪ರ ಇಂಚೆಯೋನ್ ಏಷ್ಯನ್ ಕ್ರೀಡಾಕೂಟದಲ್ಲಿ ಸರ್ನೋಬತ್ ಅವರು ಕಂಚಿನ ಪದಕ ಗೆದ್ದಿದ್ದರು. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ರಾಹಿ ಎರಡು ಬಾರಿ ಚಿನ್ನ (೨೦೧೦, ೨೦೧೪) ಮತ್ತು ಒಂದು ಬಾರಿ ರಜತ ಪದಕ (೨೦೧೦) ಗೆದ್ದಿದ್ದರು. ಇಲ್ಲಿಯವರೆಗೆ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತ ೧೧ ಪದಕಗಳನ್ನು ಗೆದ್ದಿದೆ. ೪ ಚಿನ್ನ, ೩ ಬೆಳ್ಳಿ ಮತ್ತು ೪ ಕಂಚಿನ ಪದಕಗಳು ಇದರಲ್ಲಿ ಸೇರಿವೆ. ಪದಕ ಪಟ್ಟಿಯಲ್ಲಿ ಭಾರತ ೬ನೇ ಸ್ಥಾನದಲ್ಲಿದೆ.
 2018: ಕರಾಚಿ: ಪಾಕಿಸ್ತಾನದ ಕರಾಚಿ ನಗರದ ಪುಟ್ಟ ಪುಟ್ಟ ಗುಡಿಸಲುಗಳಿರುವ ಪ್ರದೇಶದ ಹಿಂದೂ
ದೇವಾಲಯ ಒಂದರಲ್ಲಿ ಸಾಂಪ್ರದಾಯಿಕ ಹಿಜಬ್ ಧರಿಸಿದ ಮುಸ್ಲಿಮ್ ಶಿಕ್ಷಕಿ ಅನುಮ್ ಅಘಾ ತನ್ನ ವಿದ್ಯಾರ್ಥಿಗಳಿಗೆ ’ಸಲಾಮ್ ಹೇಳುತ್ತಾರೆ. ಅದಕ್ಕೆ ಪ್ರತಿಯಾಗಿ ಮಕ್ಕಳಿಂದ ’ಜೈ ಶ್ರೀರಾಮ್ ಘೋಷಣೆ ಹೊರಹೊಮ್ಮುತ್ತದೆ. ದಕ್ಷಿಣದ ಬಂದರು ನಗರದ ಬಸ್ತಿ ಗುರು ಪ್ರದೇಶದಲ್ಲಿ ಅನುಮ್ ಅಘಾ ದೇವಾಲಯ ಒಂದರ ಒಳಗೆ ಶಾಲೆ ನಡೆಸುತ್ತಾರೆ. ಭೂಗಳ್ಳರಿಂದ ನಿರಂತರ ಬೆದರಿಕೆ ಎದುರಿಸುತ್ತಿರುವ ಅನೌಪಚಾರಿಕ ಹಿಂದೂ ವಸತಿ ಪ್ರದೇಶದ ಮಧ್ಯ ಭಾಗದಲ್ಲಿ ಈ ಶಾಲೆ ಇದೆ. ಆದರೆ ಅಲ್ಪಸಂಖ್ಯಾತ ಸಮುದಾಯದ ಮಕ್ಕಳಿಗೆ ಶಿಕ್ಷಣ, ಆರೋಗ್ಯ ಮತ್ತು ಮೂಲಭೂತ ಹಕ್ಕುಗಳ ಬಗ್ಗೆ ಅನುಮ್ ಇಲ್ಲಿ ದೃಢ ಮನಸ್ಸಿನೊಂದಿಗೆ ತಿಳುವಳಿಕೆ ನೀಡುತ್ತಿದ್ದಾರೆ. ಬಹುತೇಕ ಗುಡಿಸಲುಗಳು ಮತ್ತು ಕೆಲವು ಅರೆ ಕಟ್ಟಡ ಮನೆಗಳಿರುವ ಈ ವಸತಿ ಪ್ರದೇಶದಲ್ಲಿ ೮೦-೯೦ ಹಿಂದೂ ಕುಟುಂಬಗಳು ವಾಸವಾಗಿವೆ. ತರಗತಿಗಳು ಮುಗಿದ ಬಳಿಕವೂ ಅನುಮ್ ಅವರು ವಸತಿ ಪ್ರದೇಶದ ಮಕ್ಕಳ ಜೊತೆಗೆ ಚರ್ಚೆ ನಡೆಸುವುದು ಇಲ್ಲಿನ ನಿತ್ಯ ದೃಶ್ಯ. ‘ದೇವಾಲಯದ ಮಧ್ಯಭಾಗದಲ್ಲಿ ನಮ್ಮ ಶಾಲೆ ನಡೆಯುತ್ತಿರುವ ವಿಚಾರ ಹೇಳುವಾಗ ಪ್ರತಿಯೊಬ್ಬರೂ ಅಚ್ಚರಿ ಪಡುತ್ತಾರೆ. ಆದರೆ ಕಳೆದ ವರ್ಷ ನಾನು ಇಲ್ಲಿಗೆ ಬರಲು ಆರಂಭಿಸಿದಾಗ ಇಲ್ಲಿ ತರಗತಿ ನಡೆಸಲು ಬೇರೆ ಯಾವುದೇ ಸ್ಥಳವೂ ಇರಲಿಲ್ಲ ಎಂದು ಅನುಮ್ ಹೇಳಿದರು.  ದೇವಾಲಯದ ಮುಖ್ಯ ಒಳಾಂಗಣದಲ್ಲಿ ತರಗತಿಗಳು ನಡೆಯುತ್ತವೆ. ದೇವಾಲಯದ ಗೋಡೆಗಳಲ್ಲಿ ಹಿಂದೂ ದೇವ, ದೇವತೆಯರ ಚಿತ್ರಗಳಿವೆ. ಸ್ವಲ್ಪ ಎತ್ತರದ ಪೀಠದಲ್ಲಿ ಹಿಂದೂ ದೇವತಾ ಮೂರ್ತಿಗಳಿವೆ. ಮೆಹಮೂದಾಬಾದ್ ಸಮೀಪದ ರೆಹಮಾನ ಕಾಲೋನಿಯಲ್ಲಿ ಇರುವ ಈ ವಸತಿ ಪ್ರದೇಶವನ್ನು ಸುತ್ತಾಡಿದಾಗ ಇಲ್ಲಿ ಮೂಲಭೂತ ಸವಲತ್ತುಗಳ ಅಭಾವ ಇರುವುದು ಢಾಳಾಗಿ ಗೋಚರಿಸುತ್ತದೆ. ಆದರೆ ಭೂ ಮಾಫಿಯಾಗಳ ಪಾಲಿಗೆ ಇದು ಸಾಮಾನ್ಯ ಭೂಮಿಯಲ್ಲ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಇಲ್ಲಿನ ಕೆಲವು ಗುಡಿಸಲುಗಳಿಗೆ ಬೆಂಕಿ ಹಚ್ಚಿದ ಕನಿಷ್ಠ ಎರಡು ಘಟನೆಗಳು ಘಟಿಸಿವೆ ಮತ್ತು ಹಿಂದು ಕುಟುಂಬಗಳಿಗೆ ಜಾಗ ತೆರವು ಮಾಡುವಂತೆ ಬೆದರಿಕೆ ಹಾಕಲಾಗಿದೆ ಎಂದು ಸಮುದಾಯದ ನಾಯಕ ಶಿವ ಧರ್ಣಿ ನುಡಿದರು.  ಸಿಂಧ್ ಒಳಪ್ರದೇಶದ ಘೋಟ್ಕಿಯಿಂದ ಕರಾಚಿಗೆ ವಲಸೆಯಾಗಿದ್ದ ಹಿಂದು ಕುಟುಂಬಗಳು ೬೦ರ ದಶಕದಲ್ಲಿ ಇಲ್ಲಿ ನಿರ್ಮಿಸಿಕೊಂಡಿದ್ದ ಈ ಬಸ್ತಿಗೆ ಅಧಿಕಾರಿಗಳು ಇತ್ತೀಚೆಗೆ ವಿದ್ಯುತ್ ಮತ್ತು ನೀರಿನ ಸಂಪರ್ಕವನ್ನೂ ಕಡಿತಗೊಳಿಸಿದ್ದಾರೆ.  ಮುಸ್ಲಿಂ ನಿವಾಸಿಯೊಬ್ಬ ಈ ಭೂಮಿಯಲ್ಲಿ ಮಸೀದಿ ನಿರ್ಮಿಸಬೇಕು ಎಂಬ ಪ್ರಸ್ತಾಪ ಮುಂದಿಟ್ಟ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ  ಕೆಲ ಸಮಯದ ಹಿಂದೆ ಪ್ರಕ್ಷುಬ್ಧತೆ ಉಂಟಾಗಿತ್ತು.  ಮುಸ್ಲಿಮರು ಇರುವ ಪ್ರದೇಶದ ಕೇಂದ್ರ ಭಾಗದಲ್ಲಿ ಕೆಳ ಜಾತಿಯ ಹಿಂದುಗಳ ವಸತಿ ಪ್ರದೇಶ ಇರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂಬುದಾಗಿ ಮುಸ್ಲಿಂ ಮುಖ್ಯಸ್ಥರ ಮನವೊಲಿಸಲು ಈ ಭೂ ಮಾಫಿಯಾ ಮಂದಿ ಯತ್ನಿಸುತ್ತಾರೆ ಎಂದು ಈ ದೇವಾಲಯದಲ್ಲಿ ಶಾಲೆ ನಡೆಸಲು ಅನುಮ್ ಅವರನ್ನು ಕರೆತಂದ ಸರ್ಕಾರೇತರ ಸಂಸ್ಥೆ ಮಾನವ ಅಭಿವೃದ್ಧಿ ಫೌಂಡೇಶನ್ ಮುಖ್ಯಸ್ಥ ಅರಿಫ್ ಹಬೀಬ್ ಹೇಳುತ್ತಾರೆ.  ‘ಇವು ಅತ್ಯಂತ ದುರ್ಬಲ ಸಮುದಾಯಗಳು ಮತ್ತು ಇವರು ಸರ್ಕಾರೇತರರಿಂದ ಅಂದರೆ ಈ ಭೂಮಿಯನ್ನು ಕಿತ್ತುಕೊಳ್ಳಬಯಸಿರುವ ಭೂ ಮಾಫಿಯಾದಿಂದ ಬೆದರಿಕೆ ಎದುರಿಸುತ್ತಿದ್ದಾರೆ ಎಂದು ಅವರು ನುಡಿದರು.  ‘ವಸತಿ ಪ್ರದೇಶದ ಸಮೀಪ ವಾಸವಾಗಿರುವ ಕೆಲವು ಮುಸ್ಲಿಂ ನಿವಾಸಿಗಳು ಪರಿಶಿಷ್ಟ ಜಾತಿಯ ಹಿಂದೂ ಕುಟುಂಬಗಳ ಜೊತೆಗಿನ ತನ್ನ ಒಡನಾಟ ಮತ್ತು ಅವರಿಗೆ ತರಗತಿ ನಡೆಸುವುದನ್ನು ಇಷ್ಟ ಪಡುವುದಿಲ್ಲ ಎಂದು ಅನುಮ್ ಅರೆಮನಸ್ಸಿನಿಂದ ಹೇಳಿದರು.  ‘ಆದರೆ ನಾನು ಇದನ್ನು ಈ ಜನರಿಗೆ ತಮ್ಮ ಮೂಲಭೂತ ಹಕ್ಕುಗಳ ಅರಿವು ಕೂಡಾ ಇಲ್ಲದೆ ಕಾರಣ ಮಾಡುತ್ತಿದ್ದೇನೆ. ಅವರ ಮಕ್ಕಳು ತಿಳಿವಳಿಕೆ ಮತ್ತು ಶಿಕ್ಷಣ ಪಡೆಯಲು ಬಯಸುತ್ತಾರೆ. ಅವರಲ್ಲಿ ಕೆಲವರು ಪ್ರದೇಶದ ಬೇರೆ ಶಾಲೆಗಳಿಗೆ ಹೋಗುತ್ತಿದ್ದಾರೆ. ಆದರೆ ಅವರು ಕೂಡಾ ಧಾರ್ಮಿಕ ಮತ್ತು ಇತರ ವಿಷಯಗಳಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಅನುಮ್ ವಿವರಿಸಿದರು.  ತಮ್ಮ ಮಕ್ಕಳು, ವಿಶೇಷವಾಗಿ ಹೆಣ್ಮಕ್ಕಳು ಶಿಕ್ಷಣಕ್ಕಾಗಿ ವಸತಿ ಪ್ರದೇಶದಿಂದ ಆಚೆಗೆ ಹೋಗಬೇಕಾಗಿ ಬಂದಿಲ್ಲ ಎಂದು ಹಿಂದೂ ಹಿರಿಯರು ಅತ್ಯಂತ ಖುಷಿಯಾಗಿದ್ದಾರೆ ಎಂದು ಅವರು ನುಡಿದರು. ಮುಸ್ಲಿಮ್ ಶಿಕ್ಷಕಿಯಾಗಿ ಸಮಸ್ಯೆಗಳು ಎದುರಾಗಿವೆಯೇ ಎಂಬ ಪ್ರಶ್ನೆಗೆ ಖಂಡಿತವಾಗಿಯೂ ಸವಾಲುಗಳನ್ನು ಎದುರಿಸಬೇಕಾಗಿತ್ತು ಎಂದು ಅವರು ಉತ್ತರಿಸಿದರು. ಆದರೆ ನಾನು ಎಂದೂ ಧರ್ಮದ ಬಗ್ಗೆ ಮಾತನಾಡುವುದಿಲ್ಲ ಮತ್ತು ಅವರ ಭಾವನೆಗಳಿಗೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇನೆ. ವಿವಿಧ ವಿಷಯಗಳ ಬಗ್ಗೆ ಅವರಿಗೆ ತಿಳಿಹೇಳುತ್ತೇನೆ. ಧರ್ಮ ಅದರಲ್ಲಿ ಒಂದು ವಿಷಯ ಅಷ್ಟೆ ಎಂದು ಅವರು ನುಡಿದರು. ನಾನು ಅವರನ್ನು ಮಾನವರಂತೆ ಕಾಣುತ್ತೇನೆ ಮತ್ತು ನನಗೆ ಅದೇ ಗೌರವವನ್ನು ಹಿಂದಿರುಗಿಸುತ್ತಾರೆ. ಇದು ನಾವು ಕೆಲಸ ಮಾಡುವ ಬಗೆ. ಧಾರ್ಮಿಕ ಉತ್ಸವಗಳನ್ನು ನಾವು ಒಟ್ಟಾಗಿ ಆಚರಿಸುತ್ತೇವೆ. ನಾನು ಅವರಿಗೆ ಸಲಾಮ್ ಹೇಳುತ್ತೇನೆ ಅವರು ಅದಕ್ಕೆ ’ಜೈ ಶ್ರೀರಾಮ್ ಎಂದು ಪ್ರತಿಕ್ರಿಯಿಸುತ್ತಾರೆ ಎಂದು ಅನುಮ್ ಹೇಳಿದರು. ವಿಭಿನ್ನ ಸಮುದಾಯಗಳು ಮುಸ್ಲಿಂ ಪ್ರಾಬಲ್ಯ ಇರುವ ರಾಷ್ಟ್ರದಲ್ಲಿ ಪರಸ್ಪರ ಗೌರವಿಸುತ್ತಾ ಹೇಗೆ ಒಟ್ಟಿಗೆ ಶಾಂತಿಯುತವಾಗಿ ಇರಲು ಸಾಧ್ಯ ಎಂಬುದಕ್ಕೆ ನಮ್ಮ ಶಾಲೆ ಉದಾಹರಣೆಯಾಗಿದೆ ಎಂದು ಅವರು ನುಡಿದರು.
2018: ನವದೆಹಲಿ: ಜಲಪ್ರಳಯದಿಂದ ತತ್ತರಿಸಿದ ಕೇರಳ ಮರುನಿರ್ಮಾಣಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಪ್ರಸ್ತಾಪಿಸಿರುವ ೭೦೦ ಕೋಟಿ ರೂಪಾಯಿ ನೆರವಿನ ಕೊಡುಗೆಯನ್ನು ಕೇಂದ್ರವು ತಿರಸ್ಕರಿಸುವ ಸಾಧ್ಯತೆ ಇದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಕೇರಳದ ನಾಯಕರು ’೨೦,೦೦೦ ಕೋಟಿ ರೂ. ನಷ್ಟ ಅನುಭವಿಸಿರುವ ಕೇರಳದ ಮರುನಿರ್ಮಾಣಕ್ಕೆ ಯಾರು ಹಣಕೊಡುತ್ತಾರೆ?’ ಎಂದು ಪ್ರಶ್ನಿಸಿದರು. ‘ಯುಎಇ ನೆರವಿನ ಕೊಡುಗೆಯನ್ನು ಇತರ ರಾಷ್ಟ್ರಗಳ ನೆರವಿನಂತೆ ಪರಿಗಣಿಸಬಾರದು. ದೇಣಿಗೆ ಸ್ವೀಕಾರಕ್ಕೆ ನೀತಿ ಅಡ್ಡಿಯಾಗುತ್ತಿದ್ದರೆ, ಅದಕ್ಕೆ ಬದಲಾವಣೆ ತರಲು ಗಂಭೀರವಾಗಿ ಚಿಂತಿಸಿ ಎಂದು ಕೇರಳದ ನಾಯಕರು ಆಗ್ರಹಿಸಿದ್ದಾರೆ. ಕೇರಳದ ಪ್ರಾಕೃತಿಕ ವಿಪತ್ತನ್ನು ’ರಾಷ್ಟ್ರೀಯ ವಿಪತ್ತು ಎಂಬುದಾಗಿ ಘೋಷಿಸುವಂತೆಯೂ ಅವರು ಒತ್ತಾಯಿಸಿದರು. ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ವಿರೋಧ ಪಕ್ಷದ ನಾಯಕ ಒಮನ್ ಚಾಂಡಿ ಅವರು ಪ್ರತ್ಯೇಕ ಹೇಳಿಕೆಗಳಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿದರು.  ‘ಕೇಂದ್ರದ ನಿರ್ಧಾರ ಕೇರಳ ಜನತೆಯ ಪಾಲಿಗೆ ಭ್ರಮ ನಿರಸನಮೂಡಿಸುವ ಪ್ರಸ್ತಾಪ. ನಿಯಮಗಳು ಜನರ ಸಂಕಷ್ಟಗಳನ್ನು ದೂರಮಾಡುವಂತಿರಬೇಕು. ವಿದೇಶೀ ಹಣಕಾಸು ನೆರವನ್ನು ಅಂಗೀಕರಿಸಲು ಯಾವುದಾದರೂ ಅಡ್ಡಿ ಇದ್ದರೆ, ದಯವಿಟ್ಟು ಅದಕ್ಕೆ ಅಗತ್ಯ ಬದಲಾವಣೆಗಳನ್ನು ತರುವ ಬಗ್ಗೆ ಗಂಭೀರವಾಗಿ ಪರಿಶೀಲಿಸಿ ಎಂದು ಒಮನ್ ಚಾಂಡಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೇರಳ ದುರಂತವನ್ನು ’ರಾಷ್ಟ್ರೀಯ ವಿಪತ್ತು ಎಂಬುದಾಗಿ ಘೋಷಿಸುವಂತೆಯೂ ಅವರು ಆಗ್ರಹಿಸಿದರು. ಕೇರಳ ರಾಜ್ಯವು ಮುಂಗಾರು ಜಲಪ್ರಳಯದಿಂದ ೨೦,೦೦೦ ಕೋಟಿ ರೂಪಾಯಿಗಳಷ್ಟು ನಷ್ಟ ಅನುಭವಿಸಿದ್ದು, ೨೬೦೦ ಕೋಟಿ ರೂಪಾಯಿಗಳ ವಿಶೇಷ ಪ್ಯಾಕೇಜ್ ನೀಡುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದೆ. ಕೇಂದ್ರ ಸರ್ಕಾರವು ಈವರೆಗೆ ೬೦೦ ಕೋಟಿ ರೂಪಾಯಿಗಳ ನೆರವನ್ನು ಘೋಷಿಸಿತ್ತು.  ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಹಣಕಾಸು ಸಚಿವ ಥಾಮಸ್ ಐಸಾಕ್ ಮತ್ತು ಮಾಜಿ ಮುಖ್ಯಮಂತ್ರಿ ಒಮನ್ ಚಾಂಡಿ ಅವರು ಕೇಂದ್ರ ಸರ್ಕಾರವು ವಿದೇಶೀ ನೆರವನ್ನು ತಿರಸ್ಕರಿಸುತ್ತಿದ್ದರೆ ಕೇರಳ ರಾಜ್ಯವು ಅನುಭವಿಸಿರುವ ಅಗಾಧ ನಷ್ಟವನ್ನು ತುಂಬಿಕೊಳ್ಳುವುದಾದರೂ ಹೇಗೆ? ಎಂದು ಪ್ರಶ್ನಿಸಿದರು.  ‘ಯುಎಇಯನ್ನು ಬೇರೆ ಯಾವುದೇ ರಾಷ್ಟ್ರದಂತೆ ಪರಿಗಣಿಸುವುದು ಸಮರ್ಥನೀಯವಲ್ಲ. ಮಧ್ಯ ಪ್ರಾಚ್ಯ ರಾಷ್ಟ್ರವು ಕೇರಳದ ಜನರಿಗೆ ಎರಡನೇ ರಾಷ್ಟ್ರವಿದ್ದಂತೆ ಎಂದು ಮುಖ್ಯಮಂತ್ರಿ ವಿಜಯನ್ ಹೇಳಿದರು.  ಪರಿಸ್ಥಿತಿಯನ್ನು  ನಿಭಾಯಿಸಲು ಪೂರ್ತಿಯಾಗಿ ದೇಶೀ ಪ್ರಯತ್ನಗಳನ್ನೇ ನೆಚ್ಚಿಕೊಳ್ಳಬೇಕು ಎಂಬುದಾಗಿ ಈವರೆಗೆ ಪಾಲಿಸುತ್ತಾ ಬರಲಾದ ನೀತಿಯನ್ನೇ ಅನುಸರಿಸುವ ನಿರ್ಣಯವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ ಎಂದು ಮೂಲಗಳು ಹೇಳಿವೆ.  ಪ್ರಾಕೃತಿಕ ವಿಪತ್ತನ್ನು ನಿಭಾಯಿಸುವ ಶಕ್ತಿ ರಾಷ್ಟ್ರಕ್ಕೆ ಇದೆ ಎಂಬುದಾಗಿ ಕೇಂದ್ರ  ಭಾವಿಸಿದೆ. ಏನಿದ್ದರೂ ಈ ಬಗ್ಗೆ ಅಂತಿಮ ನಿರ್ಧಾರವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತೆಗೆದುಕೊಳ್ಳುವುದು ಎಂದು ಮೂಲಗಳು ಹೇಳಿವೆ. ’ತನಗೆ ಇನ್ನೂ ಯಾವುದೇ ನೆರವಿನ ಪ್ರಸ್ತಾಪ ಬಂದಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿತು. ೨೦೦೭ರಿಂದ ಭಾರತ ಯಾವುದೇ ರಾಷ್ಟ್ರ ಅಥವಾ ಬಹುರಾಷ್ಟ್ರೀಯ ಸಂಸ್ಥೆಯಿಂದ ಯಾವುದೇ ನೆರವನ್ನೂ ಪಡೆದಿಲ್ಲ. ಈ ನೀತಿಯನ್ನು ಈಗ ಬದಲಾಯಿಸುವ ಸಾಧ್ಯತೆಗಳಿಲ್ಲ ಎಂದು ಮೂಲಗಳು ಹೇಳಿದವು. ಉತ್ತರಾಖಂಡ ಮತ್ತು ಕಾಶ್ಮೀರ ಪ್ರವಾಹಗಳ ಸಂದರ್ಭದಲ್ಲೂ ಕೇಂದ್ರವು ವಿದೇಶೀ ನೆರವನ್ನು ನಿರಾಕರಿಸಿತ್ತು ಎಂದು ಅವು ತಿಳಿಸಿದವು. ಇದಕ್ಕೆ ವಿರುದ್ಧವಾಗಿ ಮುಖ್ಯಮಂತ್ರಿ ವಿಜಯನ್ ಅವರು ಸರಣಿ ಟ್ವೀಟ್ ಗಳಲ್ಲಿ ಅಬುಧಾಬಿಯ ಯುವರಾಜ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯನ್ ಅವರು ನೆರವಿನ ಕೊಡುಗೆ ನೀಡಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರೆ ಮಾಡಿದ್ದರು ಎಂದು ಪ್ರತಿಪಾದಿಸಿದ್ದಾರೆ. ಯುಎಇಯ ಉದಾತ್ತ ಕೊಡುಗೆಗಾಗಿ ವಿಜಯನ್ ಅವರು ಧನ್ಯವಾದವನ್ನೂ ಸಲ್ಲಿಸಿದರು. ಬೃಹತ್ ಪ್ರಮಾಣದಲ್ಲಿ ಮೂಲಸವಲತ್ತುಗಳನ್ನು ಕಳೆದುಕೊಂಡಿರುವ ಕೇರಳದ ಮರುನಿರ್ಮಾಣಕ್ಕೆ ನೆರವು ನೀಡುವ ವಿಚಾರದಲ್ಲಿ ಕೇಂದ್ರದ ಯೋಜನೆ ಏನು ಎಂದು ಥಾಮಸ್ ಐಸಾಕ್ ಅವರೂ ಪ್ರಶ್ನಿಸಿದ್ದಾರೆ. ಸಹಸ್ರಾರು ರಸ್ತೆಗಳು, ಹೆದ್ದಾರಿಗಳು ಕೊಚ್ಚಿ ಹೋಗಿದ್ದರೆ, ಇನ್ನೂ ಹಲವು ಹೆದ್ದಾರಿಗಳು ಆಗಸ್ಟ್ ೮ರಿಂದ ಸುರಿದ ಜಡಿಮಳೆಗೆ ಹಾನಿಗೊಂಡಿವೆ ಎಂದು ಅವರು ನುಡಿದರು. ಕೇರಳ ಮರುನಿರ್ಮಾಣಕ್ಕೆ ನಿಧಿ ಕ್ರೋಡೀಕರಣಕ್ಕಾಗಿ ರಾಜ್ಯ ಜಿಎಸ್ಟಿ ಮೇಲೆ ಶೇಕಡಾ ೧೦ರಷ್ಟು ಸೆಸ್ ವಿಧಿಸಲು ಅನುಮತಿ ನೀಡುವಂತೆ ಕೇಂದ್ರ ಸರ್ಕಾರವನ್ನು ಕೋರಿರುವ ರಾಜ್ಯ ಸರ್ಕಾರ ತನ್ನ ಸಾಲ ತರುವ ಮಿತಿಯನ್ನು ವಿಸ್ತರಿಸುವಂತೆಯೂ ಕೇಂದ್ರವನ್ನು ಕೋರಿತು.  ೩೭೦ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿರುವ ಮುಂಗಾರು ಮಳೆ ೭ ಲಕ್ಷಕ್ಕೂ ಹೆಚ್ಚು ಮಂದಿಯನ್ನು ನಿರ್ವಸಿತರನ್ನಾಗಿ ಮಾಡಿದೆ. ಹಲವ ರಾಜ್ಯಗಳು ಕೇರಳಕ್ಕೆ ಹಣಕಾಸು ಮತ್ತಿತರ ನೆರವು ನೀಡಲು ಮುಂದೆ ಬಂದಿವೆ.
2018: ಶ್ರೀನಗರ:  ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಗೌರವಾರ್ಥ ನಡೆದಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ’ಭಾರತ್ ಮಾತಾ ಕೀ ಜಯ್ ಘೋಷಣೆ ಕೂಗಿದ್ದಕ್ಕಾಗಿ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ (ಎನ್ ಸಿ) ಅಧ್ಯಕ್ಷ ಫಾರೂಕ್ ಅಬ್ದುಲ್ಲ ಅವರಿಗೆ ಮುತ್ತಿಗೆ ಹಾಕಿ ಅವರ ವಿರುದ್ಧ ಘೋಷಣೆ ಕೂಗಿದ ಹಾಗೂ ಶೂ ತೋರಿಸಿದ ಘಟನೆ ಶ್ರೀನಗರದ ಪ್ರಾರ್ಥನಾ ಮಂದಿರ ಒಂದರಲ್ಲಿ ಘಟಿಸಿತು. ವರದಿಗಳ ಪ್ರಕಾರ, ಅಬ್ದುಲ್ಲ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ತಮ್ಮ ಶ್ರದ್ಧಾಂಜಲಿ ಸಲ್ಲಿಸುತ್ತಾ ’ಭಾರತ್ ಮಾತಾ ಕೀ ಜಯ್ ಮಂತ್ರ ಪಠಿಸಿದ್ದಕ್ಕೆ ಸಿಟ್ಟಿಗೆದ್ದಿದ್ದ ಯುವಕರ ಸಮೂಹವೊಂದು ಅಬ್ದುಲ್ಲ ಅವರ ಪದಗಳಿಗೆ ಆಕ್ಷೇಪ ವ್ಯಕ್ತ ಪಡಿಸಿ ಅವರ ವಿರುದ್ಧ ಘೋಷಣೆ ಕೂಗಲು ಆರಂಭಿಸಿತು. ಹಜರತ್ ಬಾಲ್ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ನಡೆಸಿಕೊಡುತ್ತಿದ್ದ ಇಮಾಮ್ ಈದ್ ಪ್ರವಚನ ಆರಂಭಿಸುವುದಕ್ಕೂ ಮುನ್ನ ಗುಂಪು ಶೇಕ್ ಅಬ್ದುಲ್ಲ ವಿರುದ್ಧ ಪ್ರತಿಭಟನೆ ಮಾಡತೊಡಗಿತು.  ಫಾರೂಕ್ ಅಬ್ದುಲ್ಲ ಅವರ ವಿರುದ್ಧ ಯುವಕರು ಘೋಷಣೆ ಕೂಗುತ್ತಿದ್ದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಹಲವಾರು ಯುವಕರು ತಮ್ಮ ಕೈಗಳಲ್ಲಿ ಶೂ ಹಿಡಿದುಕೊಂಡು ಘೋಷಣೆ ಕೂಗುತ್ತಾ ಅಬ್ದುಲ್ಲ ಅವರನ್ನು ಹೊರಟುಹೋಗುವಂತೆ ಆಗ್ರಹಿಸುತ್ತಿದ್ದ ದೃಶ್ಯ  ಈ ವಿಡಿಯೋದಲ್ಲಿ ಇತ್ತು. ಆದರೆ ಶಾಂತವಾಗಿದ್ದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ತಮ್ಮ ಈದ್ ಪ್ರಾರ್ಥನೆಯನ್ನು ಮುಂದುವರೆಸಿದರು. ’ಘೋಷಣೆ ಕೂಗುತ್ತಿರುವವರು ಮತ್ತು ಪ್ರತಿಭಟಿಸುತ್ತಿರುವವರು ನಮ್ಮ ಜನರೇ. ಅವರನ್ನು ದಾರಿತಪ್ಪಿಸಲಾಗಿದೆ ಅಷ್ಟೆ ಎಂದು ಅವರು ಹೇಳಿದರು.  ಮಸೀದಿಯಲ್ಲಿ ಸೇರಿದ್ದ ಜನಸಮೂಹದಲ್ಲಿ ಒಂದು ವರ್ಗವು ’ಫಾರೂಕ್ ಅಬ್ದುಲ್ಲ ಗೋ ಬ್ಯಾಕ್ (ಫರೂಕ್ ಅಬ್ದುಲ್ಲ ಹಿಂದಕ್ಕೆ ಹೋಗಿ)  ಮತ್ತು ’ಹಮ್ಮ ಕ್ಯಾ ಚಾಹ್ತೇ, ಆಜಾದಿ (ನಾವು ಏನು ಬಯಸುತ್ತಿದ್ದೇವೆ, ಸ್ವಾತಂತ್ರ್ಯ)  ಎಂಬ ಘೋಷಣೆಗಳನ್ನು ಕೂಗಿತು. ಅಸ್ವಾಸ್ಥ್ಯದ ಕಾರಣ ಮುಂಭಾಗದ ಸಾಲಿನಲ್ಲಿ ಕುರ್ಚಿಯಲ್ಲಿ ಕುಳಿತಿದ್ದ ಅಬ್ದಲ್ಲ ಅವರ ಬಳಿಗೆ ಬರಲು ಘೋಷಣೆ ಕೂಗುತ್ತಿದ್ದ ಗುಂಪು ಯತ್ನಿಸಿದಾಗ, ಕೆಲವರು ಮಾನವ ಸರಪಣಿ ರಚಿಸಿ ಗುಂಪನ್ನು ತಡೆದರು. ಭದ್ರತಾ ಸಿಬ್ಬಂದಿ ಕೂಡಾ ಶ್ರೀನಗರದ ಸಂಸತ್ ಸದಸ್ಯರಾದ ಅಬ್ದುಲ್ಲ ಅವರಿಗೆ ರಕ್ಷಣಾ ಕವಚ ನಿರ್ಮಿಸಿ ರಕ್ಷಣೆ ನೀಡಿದರು.  ‘ನನ್ನ ಪ್ರಾರ್ಥನೆ ಪೂರ್ಣಗೊಳ್ಳುವವರೆಗೂ ನಾನು ಸ್ಥಳ ಬಿಟ್ಟು ತೆರಳುವುದಿಲ್ಲ ಎಂದು ಹೇಳಿದ ಅಬ್ದಲ್ಲ ’ಅವರೆಲ್ಲರೂ ನನ್ನ ಜನ. ಅವರನ್ನು ದಾರಿ ತಪ್ಪಿಸಲಾಗಿದೆ. ಅವರ ನಾಯಕನಾಗಿ ದುಡಿಯುವ ನನ್ನ ಕರ್ತವ್ಯದಿಂದ ನಾನು ವಿಮುಖನಾಗಲಾರೆ ಎಂದು ಅಬ್ದುಲ್ಲ ಬಳಿಕ ತಮ್ಮ ನಿವಾಸದಲ್ಲಿ ಜನರ ಜೊತೆ ಮಾತನಾಡುತ್ತಾ ಹೇಳಿದರು.   ‘ಭಾರತ ಮಾತಾ ಕೀ ಜಯ್ ಮಂತ್ರ ಪಠಿಸುವುದನ್ನು ನಾನು ಮುಂದುವರೆಸುತ್ತೇನೆ. ಕಾಶ್ಮೀರದಲ್ಲಿ ಕೂಡಾ ನಾನು ಅದನ್ನು ಪಠಿಸುತ್ತೇನೆ ಎಂದು ಅಬ್ದುಲ್ಲ ನುಡಿದರು.  ‘ಕೆಲವರು ಉದ್ರಿಕ್ತರಾಗಿದ್ದಾರೆ. ಅದರರ್ಥ ನಾನು ಪರಾರಿಯಾಗುತ್ತೇನೆ ಎಂದಲ್ಲ. ಪ್ರತಿಯೊಬ್ಬರನ್ನು ಒಗ್ಗಟ್ಟಿನಲ್ಲಿ ಉಳಿಸಿಕೊಳ್ಳಬೇಕಾದ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದು ಅವರು ಹೇಳಿದರು.  ಆಗಸ್ಟ್ ೨೦ರಂದು ವಾಜಪೇಯಿ ಅವರ ಗೌರವಾರ್ಥ ನವದೆಹಲ್ಲಿ ನಡೆದಿದ್ದ ಪ್ರಾರ್ಥನಾ ಸಭೆಯಲ್ಲಿ ಭಾವುಕರಾಗಿ ಭಾಷಣ ಮಾಡಿದ್ದ ಅಬ್ದುಲ್ಲ ಅವರು ’ಭಾರತ್ ಮಾತಾ ಕೀ ಜಯ್ ಮಂತ್ರ ಪಠಿಸಿದ್ದರು.
2018: ಮುಂಬೈ: ಮುಂಬೈಯ ಪರೇಲ್‌ನ ಗಗನ ಚುಂಬಿ ’ಕಿಸ್ಟಲ್ ಟವರ್ ಕಟ್ಟಡದ ೧೭ನೇ ಮಹಡಿಯಲ್ಲಿ ಬುಧವಾರ ಸಂಭವಿಸಿದ ಭಾರೀ ಅಗ್ನಿ ಅನಾಹುತದಲ್ಲಿ ಒಬ್ಬ ಮಹಿಳೆ ಸೇರಿದಂತೆ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದು, ಇತರ ೧೬ ಮಂದಿ ಗಾಯಗೊಂಡರು.  ಹಿಂದ್ಮತ ಸಿನೆಮಾ ಸಮೀಪದ ೧೭ ಅಂತಸ್ತುಗಳ ಕಟ್ಟಡದ ವಿವಿಧ ಮಹಡಿಗಳಲ್ಲಿ ಇದ್ದ ಸುಮಾರು ಒಂದು ಡಜನ್ ಜನರನ್ನು ರಕ್ಷಿಸಲಾಗಿದೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಬಿಸಿ ಆರಿಸುವ ಕಾರ್‍ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. ಕಟ್ಟಡದ ೧೨ನೇ ಮಹಡಿಯಲ್ಲಿ ಬೆಂಕಿ ಕಾಣಿಸಿದ ಬಗ್ಗೆ ಬೆಳಗ್ಗೆ ೮.೩೨ ಗಂಟೆಗೆ ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಸಂದೇಶ ಬಂತು. ಹೊಗೆ ಬಹುಬೇಗನೇ ಇತರ ಕಡೆಗಳಿಗೂ ವ್ಯಾಪಿಸಿತು. ಪರಿಣಾಮವಾಗಿ ಹಲವರು ಮೆಟ್ಟಲಿನಲ್ಲಿಯೇ ಹೊಗೆಯ ಮಧ್ಯೆ ಸಿಲುಕಿದರು ಎಂದು ಮುಂಬೈ ಅಗ್ನಿಶಾಮಕ ದಳದ ಮುಖ್ಯಸ್ಥ ಪಿ.ಎಸ್. ರಹಂಗ್ದಲೆ ನುಡಿದರು. ೧೬ ಮಂದಿ ಉಸಿರುಕಟ್ಟಿ ಅಸ್ವಸ್ಥರಾದರು. ಅವರನ್ನು ಸಮೀಪದ ಕೆಮ್ ಆಸ್ಪತ್ರೆಗೆ ಒಯ್ಯಲಾಯಿತು. ಅವರ ಪೈಕಿ ಇಬ್ಬರು ಆಸ್ಪತ್ರೆಗೆ ತರುವಷ್ಟರಲ್ಲೇ ಅಸು ನೀಗಿದ್ದರು.  ಹೊಗೆ ಮೆಟ್ಟಿಲುಗಳ ಮೂಲಕ ಇಡೀ ಕಟ್ಟಡವನ್ನು ವ್ಯಾಪಿಸಿತು. ಮುಂಜಾಗರೂಕತಾ ಕ್ರಮವಾಗಿ ರಕ್ಷಣಾ ಕಾರ್ಯಾಚರಣೆಗೆ ಲಿಫ್ಟ್ ಬಳಸಲಿಲ್ಲ. ಗಾಳಿಕೊಳವೆ (ಸ್ನಾರ್ಕೆಲ್) ಏಣಿಗಳನ್ನು ಕಟ್ಟಡದಲ್ಲಿ ಸಿಕ್ಕಿಹಾಕಿಕೊಂಡಿದ್ದ ನಿವಾಸಿಗಳ ರಕ್ಷಣೆಗೆ ಬಳಸಲಾಯಿತು ಎಂದು ಅಗ್ನಿಶಾಮಕದ ದಳದ ನಿಯಂತ್ರಣ ಕೊಠಡಿಯ ಅಧಿಕಾರಿಯೊಬ್ಬರು ನುಡಿದರು. ೨೦೧೮ರ ಜೂನ್ ತಿಂಗಳಲ್ಲಿ ಮುಂಬೈಯ ಪ್ರಭಾದೇವಿಯ ಬಿಯಾಮೊಂಡೆ ಟವರ್ಸ್‌ನಲ್ಲಿ ಭಾರಿ ಅಗ್ನಿದುರಂತ ಸಂಭವಿಸಿತ್ತು. ಐದು ಗಂಟೆಗಳಲ್ಲಿ ಈ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿತ್ತು. ೯೦ಕ್ಕೂ ಹೆಚ್ಚು ನಿವಾಸಿಗಳನ್ನು ಈ ಸಂದರ್ಭದಲ್ಲಿ ರಕ್ಷಿಸಲಾಗಿತ್ತು. ಯಾವುದೇ ಸಾವುನೋವು ವರದಿಯಾಗಿರಲಿಲ್ಲ.

2018: ಹೈದರಾಬಾದ್: ಅಪ್ರಾಪ್ತ ವಯಸ್ಸಿನ ತನ್ನ ವಿದ್ಯಾರ್ಥಿನಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿ ಆಕೆ ಗರ್ಭಿಣಿಯಾಗುವಂತೆ ಮಾಡಿದ್ದಕ್ಕಾಗಿ ೩೮ರ ಹರೆಯದ ಶಿಕ್ಷಕನೊಬ್ಬನನ್ನು ಬಟ್ಟೆ ಬಿಚ್ಚಿ ಥಳಿಸಿ ರಸ್ತೆಗಳಲ್ಲಿ ಮೆರವಣಿಗೆ ಮಾಡಿದ ಘಟನೆ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ಏಲೂರು ಪಟ್ಟಣದಲ್ಲಿ ಹಿಂದಿನ  ರಾತ್ರಿ ಘಟಿಸಿತು. ಶಿಕ್ಷಕನನ್ನು ಥಳಿಸಿ ನಗ್ನ ಮೆರವಣಿಗೆ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲೂ ಪ್ರಕಟಿಸಲಾಗಿದ್ದು, ಅದು ವೈರಲ್ ಆಗಿಯಿತು. ಶಿಕ್ಷಕ ಕರೆ ರಾಮಬಾಬು ಎಂಬಾತನನ್ನು ೧೫-೨೦ ಜನರು ಧರ್ಮದೇಟು ನೀಡುತ್ತಾ ನಗ್ನ ಮೆರವಣಿಗೆ ಮಾಡುವ ದೃಶ್ಯ ವಿಡಿಯೋದಲ್ಲಿತ್ತು. ಖಾಸಗಿ ಶಾಲೆಯೊಂದರ ಇಂಗ್ಲಿಷ್ ಶಿಕ್ಷಕ ಕರೆ ರಾಮಬಾಬು ೧೦ನೇ ತರಗತಿಯ ವಿದ್ಯಾರ್ಥಿನಿ ಒಬ್ಬಳಿಗೆ ಆರು ತಿಂಗಳ ಹಿಂದೆ ಹೆಚ್ಚಿನ ಅಂಕ ನೀಡುವುದಾಗಿ ಆಮಿಷ ಒಡ್ಡಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ, ಕಳೆದ ಆರು ತಿಂಗಳುಗಳಲ್ಲಿ ಈ ಕೃತ್ಯವನ್ನು ಪುನರಾರ್ವನೆ ಮಾಡಿದ್ದ. ೧೬ರ ಹರೆಯದ ಬಾಲಕಿ ೧೦ನೇ ತರಗತಿ ಪೂರ್ಣಗೊಳಿಸಿ, ಪಾಲಿಟೆಕ್ನಿಕ್ ಕಾಲೇಜು ಸೇರಿದ ಬಳಿಕವೂ ಆತ ಆಕೆಯ ಮೇಲೆ ಲೈಂಗಿಕ ಶೋಷಣೆ ಮುಂದುವರೆಸಿದ್ದ ಎಂದು ಪೊಲೀಸರು ಹೇಳಿದರು. ಬಾಲಕಿಗೆ ಇತ್ತೀಚೆಗೆ ತಾನು ಗರ್ಭಿಣಿಯಾಗಿರುವುದು ಅರಿವಿಗೆ ಬಂದಿದ್ದು, ಆಕೆ ರಾಮಬಾಬುವನ್ನು ಸಂಪರ್ಕಿಸಿ ಪರಿಹಾರ ಮಾರ್ಗ ವಿಚಾರಿಸಿದ್ದಳು. ಆತ ಗರ್ಭಸ್ರಾವಕ್ಕಾಗಿ ಕೆಲವು ಗುಳಿಗೆಗಳನ್ನು ಆಕೆಗೆ ನೀಡಿದ್ದ. ಆದರೆ ಬಳಿಕ ಬಾಲಕಿಗೆ ಅತಿಯಾದ ರಕ್ತಸ್ರಾವದೊಂದಿಗೆ ಅನಾರೋಗ್ಯ ಕಾಡಿದಾಗ, ಪಾಲಕರು ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿದರು. ಆಗ ಪಾಲಕರಿಗೆ ಆಕೆಯ ಗರ್ಭಿಣಿಯಾದ ವಿಷಯ ಗೊತ್ತಾಯಿತು.  ಬಾಲಕಿಯನ್ನು ಪ್ರಶ್ನಿಸಿದಾಗ ಆಕೆ ರಾಮಬಾಬು ತನ್ನನ್ನು ಲೈಂಗಿಕವಾಗಿ ಶೋಷಿಸಿದ ಬಗೆಯನ್ನು ವಿವರಿಸಿದಳು. ಸಿಟ್ಟಿಗೆದ್ದ ಪಾಲಕರು ಇತರ ಬಂಧುಗಳು ಮತ್ತು ಸ್ಥಳೀಯರಿಗೂ ವಿಷಯ ತಿಳಿಸಿದರು. ಮಂಗಳವಾರ ರಾತ್ರಿ ಉದ್ರಿಕ್ತ ಗುಂಪು ಶಿಕ್ಷಕನ ಕೊಠಡಿಗೆ ನುಗ್ಗಿ ನಗ್ನಗೊಳಿಸಿ, ಮೆರವಣಿಗೆ ಮಾಡಿ ಆತನನ್ನು ಯದ್ವಾತದ್ವ ಥಳಿಸಿತು ಎಂದು ಪೊಲೀಸ್ ಅಧಿಕಾರಿ ಹೇಳಿದರು. ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿ ರಾಮಬಾಬುವನ್ನು ವಶಕ್ಕೆ ಪಡೆದು ಪೊಲೀಸ್ ಜೀಪಿನಲ್ಲಿ ಠಾಣೆಗೆ ಒಯ್ದರು. ಅಲ್ಲಿ ಮೈ ಮುಚ್ಚಿಕೊಳ್ಳಲು ಪೊಲೀಸರೇ ಟವೆಲ್ ಮತ್ತು ಶರ್ಟ್ ಕೊಟ್ಟರು. ಕರ್ನೂಲ್ ಜಿಲ್ಲೆಯವನಾದ ರಾಮಬಾಬು ಏಲೂರಿನಲ್ಲಿ ಕಳೆದ ೬ ವರ್ಷಗಳಿಂದ ವಾಸವಾಗಿದ್ದು, ಆತನ ದುರ್ವರ್ತನೆಗೆ ಬೇಸತ್ತು ಪತ್ನಿ ಮತ್ತು ಇಬ್ಬರು ಮಕ್ಕಳು ಆತನಿಂದ ಬೇರೆಯಾಗಿದ್ದರು ಎಂದು ಪೊಲೀಸರು ಹೇಳಿದರು. ತಾನು ಅಪ್ರಾಪ್ತ ಬಾಲಕಿಯ ಜೊತೆ ಲೈಂಗಿಕ ಬಾಂಧವ್ಯ ಹೊಂದಿದ್ದುದನ್ನು ರಾಮಬಾಬು ಒಪ್ಪಿಕೊಂಡಿದ್ದಾನೆ. ’ಆಕೆಯ ಬಂಧುಗಳು ನನ್ನ ಮನೆಗೆ ಮಾತುಕತೆ ನಡೆಸಲೆಂದು ಬಂದರು. ಬಳಿಕ ನನ್ನನ್ನು ಹೊರಕ್ಕೆ ಎಳೆದು ನಿರ್ದಾಕ್ಷಿಣ್ಯವಾಗಿ ಥಳಿಸಿದರು ಎಂದು ಆತ ಹೇಳಿದ. ಪೊಲೀಸರು ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೩೭೬ ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಸ್ಕೊ) ಕಾಯ್ದೆಯ ವಿವಿಧ ವಿಧಿಗಳ ಅಡಿಯಲ್ಲಿ ರಾಮಬಾಬು ವಿರುದ್ಧ  ಅತ್ಯಾಚಾರ ಮತ್ತು ಇತರ ಅಪರಾಧಗಳಿಗಾಗಿ ಪ್ರಕರಣ ದಾಖಲಿಸಿದ್ದಾರೆ.

2017: ನವದೆಹಲಿ: ವಿವಾದಿತ ತ್ರಿವಳಿ ತಲಾಖ್ಗೆ ಸಂಬಂಧಿಸಿದಂತೆ ಐವರು ನ್ಯಾಯಮೂರ್ತಿಗಳ ಭಿನ್ನ ನಿಲುವಿನ ಹೊರತಾಗಿಯೂ ಸುಪ್ರೀಂ ಕೋರ್ಟಿನ  ಸಂವಿಧಾನ ಪೀಠ ಪದ್ಧತಿಯನ್ನು ರದ್ದುಗೊಳಿಸುವ ತೀರ್ಪು ನೀಡಿತು. ಸಂವಿಧಾನ ಪೀಠದಲ್ಲಿದ್ದ ಐವರು ನ್ಯಾಯಮೂರ್ತಿಗಳು ವಿಭಿನ್ನ ನಂಬುಗೆ ಮತ್ತು ಧಾರ್ಮಿಕ ಹಿನ್ನೆಲೆಯಿಂದ ಬಂದಿದ್ದರೂ ಪದ್ಧತಿ ಕೊನೆಗೊಳಿಸುವ ಆದೇಶ ಹೊರಡಿಸಿದರು. ಸಿಖ್ ಧರ್ಮಕ್ಕೆ ಸೇರಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ಮತ್ತು ಮುಸ್ಲಿಂ ಧರ್ಮಕ್ಕೆ ಸೇರಿದ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅವರು ತ್ರಿವಳಿ ತಲಾಖ್ ಮಾನ್ಯತೆ ಎತ್ತಿಹಿಡಿದರು. ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್, ರೋಹಿಂಗ್ಟನ್ ನಾರಿಮನ್ ಮತ್ತು ಉದಯ್ ಲಲಿತ್ ಅವರು ತ್ರಿವಳಿ ತಲಾಖ್ ಸಂವಿಧಾನ ಬಾಹಿರ ಎಂದು ಅಭಿಪ್ರಾಯಪಟ್ಟರು. ಕುರಿಯನ್ ಜೋಸೆಫ್ ಕ್ರೈಸ್ತರಾದರೆ, ಯು.ಯು. ಲಲಿತ್ ಅವರು ಹಿಂದು. ರೋಹಿಂಗ್ಟನ್ ಎಫ್. ನಾರಿಮನ್ ಜೋರಾಸ್ಟ್ರಿಯನ್ ಧರ್ಮಕ್ಕೆ ಸೇರಿದವರು. ಬಹುಮತದ (3:2) ತೀರ್ಪಿನ ಆಧಾರದ ಮೇಲೆ ಸುಪ್ರೀಂಕೋರ್ಟ್ ತ್ರಿವಳಿ ತಲಾಖ್ ರದ್ದುಪಡಿಸಿತು. ಹೋರಾಡಿ ಗೆದ್ದ ಐವರು ಮಹಿಳೆಯರು: ತ್ರಿವಳಿ ತಲಾಖ್ ಪದ್ಧತಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಮೊದಲು ದೂರು ಕೊಟ್ಟವರು ಉತ್ತರಾಖಂಡದ ಶಾಯಿರಾ ಬಾನು. ತಲಾಖ್ ಎಂದು ಮೂರು ಬಾರಿ ಬರೆದ ಪತ್ರವನ್ನು ಕಳುಹಿಸುವ ಮೂಲಕ ಗಂಡ ಅವರನ್ನು ಬಿಟ್ಟು ಹೋಗಿದ್ದ. ಶಾಯಿರಾ ದೂರು ಕೊಟ್ಟು ಎರಡು ವರ್ಷ ಬಳಿಕ ಐತಿಹಾಸಿಕ ತೀರ್ಪು ಬಂದಿದೆ. ಅವರ ನಂತರ ನಾಲ್ವರು ದೂರು ಕೊಟ್ಟಿದ್ದರು. ಆರನೇ ಅರ್ಜಿಯನ್ನು ಭಾರತೀಯ ಮುಸ್ಲಿಂ ಮಹಿಳಾ ಅಂದೋಲನ ಸಲ್ಲಿಸಿತ್ತು. ಚಾರಿತ್ರಿಕವಾದ ತೀರ್ಪಿಗೆ ಕಾರಣರಾದ ಐವರು ಮಹಿಳೆಯರ ಬಗೆಗಿನ ಕಿರು ಚಿತ್ರಣ ಇಲ್ಲಿದೆ. ಶಾಯಿರಾ ಬಾನು: ಅಲಹಾಬಾದ್ನಲ್ಲಿ
ರಿಯಲ್ ಎಸ್ಟೇಟ್ ದಲ್ಲಾಳಿಯಾಗಿದ್ದ ರಿಜ್ವಾನ್ ಅಹ್ಮದ್, ಶಾಯಿರಾ ಬಾನು ಅವರಿಗೆ 2015 ಅಕ್ಟೋಬರ್ನಲ್ಲಿ ತ್ರಿವಳಿ ತಲಾಖ್ ನೀಡಿದ್ದರು. ಇಬ್ಬರು ಮಕ್ಕಳನ್ನು ಜತೆಗೆ ಕರೆದೊಯ್ದಿದ್ದರು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ ಶಾಯಿರಾ, ತ್ರಿವಳಿ ತಲಾಖ್, ಬಹುಪತ್ನಿತ್ವ ಮತ್ತು ನಿಖಾ ಹಲಾಲ ಅನ್ನು (ವಿಚ್ಛೇದನ ಕೊಟ್ಟ ಗಂಡನನ್ನು ಮತ್ತೆ ಮದುವೆ ಆಗುವುದಕ್ಕೆ ಮೊದಲು ಬೇರೊಬ್ಬನನ್ನು ಮದುವೆ ಆಗಲೇಬೇಕಿರುವ ನಿಯಮ) ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ಎಂದು ತೀರ್ಪು ನೀಡುವಂತೆ ಕೋರಿದ್ದರು. ಈ ವಾದವನ್ನು ಶಾಯಿರಾ ಅವರ ಗಂಡ ತಿರಸ್ಕರಿಸಿದ್ದರು. ಮುಸ್ಲಿಂ ಸಮುದಾಯವು ವೈಯಕ್ತಿಕ ಕಾನೂನಿನ ಅಡಿಯಲ್ಲಿ ಬರುತ್ತದೆ. ಶಾಯಿರಾ ಅವರು ಪ್ರಶ್ನಿಸಿರುವ ಮೂರೂ ಪದ್ಧತಿಗಳಿಗೆ ಮುಸ್ಲಿಂ ವೈಯಕ್ತಿಕ ಕಾನೂನಿನ ಮಾನ್ಯತೆ ಇದೆ ಎಂದು ಅವರು ಪ್ರತಿಪಾದಿಸಿದ್ದರು. ಶಾಯಿರಾ ಸಲ್ಲಿಸಿದ ದೂರಿಗೆ ಸಂಬಂಧಿಸಿ ಕೇಂದ್ರದ ಎನ್ಡಿಎ ಸರ್ಕಾರ ಪ್ರಮಾಣಪತ್ರ ಸಲ್ಲಿಸಿ, ತಲಾಖ್ ಪದ್ಧತಿಯನ್ನು ವಿರೋಧಿಸಿತ್ತು. ಇಶ್ರತ್ ಜಹಾಂ: ಪಶ್ಚಿಮ ಬಂಗಾಳದ ಹೌರಾದ ಇಶ್ರತ್ ಜಹಾಂ ಅವರಿಗೆ ದುಬೈಯಲ್ಲಿದ್ದ ಗಂಡ ಮುರ್ತಜಾ 2015 ಏಪ್ರಿಲ್ನಲ್ಲಿ ದೂರವಾಣಿ ಮೂಲಕ ತಲಾಖ್ ನೀಡಿದ್ದರು. ಮುರ್ತಜಾ ಅವರು ಬೇರೆ ಮದುವೆ ಆಗಿದ್ದಲ್ಲದೆ ಮೊದಲ ಮದುವೆಯಲ್ಲಿ ಇದ್ದ ನಾಲ್ಕು ಮಕ್ಕಳನ್ನು ಜತೆ ಕರೆದುಕೊಂಡು ಹೋಗಿದ್ದರು. ದೂರವಾಣಿಯ ತಲಾಖ್ ಅನ್ನು ನಾನು ಒಪ್ಪಿಕೊಳ್ಳುವುದಿಲ್ಲ. ನನಗೆ ನ್ಯಾಯ ಬೇಕು. ಗಂಡ ಕಸಿದುಕೊಂಡು ಹೋಗಿರುವ ನಾಲ್ಕು ಮಕ್ಕಳನ್ನು ವಾಪಸ್ ಕೊಡಬೇಕು ಮತ್ತು ಮಕ್ಕಳನ್ನು ಬೆಳೆಸಲು ಜೀವನಾಂಶ ಕೊಡಬೇಕು. ಕಾರಣಕ್ಕಾಗಿಯೇ ನಾನು ನ್ಯಾಯಾಲಯಕ್ಕೆ ಹೋಗಿದ್ದೇನೆ. ನ್ಯಾಯ ಸಿಗುವವರೆಗೆ ಹೋರಾಡುತ್ತೇನೆ ಎಂದು ಇಶ್ರತ್ ಪ್ರತಿಪಾದಿಸಿದ್ದರು. ಗುಲ್ಶನ್ ಪರ್ವೀನ್: 2015ರಲ್ಲಿ ಪರ್ವೀನ್ ಅವರು ತವರು ಮನೆಗೆ ಬಂದಿದ್ದಾಗ ಉತ್ತರ ಪ್ರದೇಶದ ರಾಂಪುರದ ಪರ್ವೀನ್ಗೆ ರೂ.10 ಛಾಪಾ ಕಾಗದದಲ್ಲಿ ತಲಾಖ್ ಎಂದು ಮೂರು ಬಾರಿ ಬರೆದು ಕಳುಹಿಸಲಾಗಿತ್ತು. ಒಂದು ದಿನ ನನ್ನ ಗಂಡನಿಗೆ ವಿಚ್ಛೇದನ ಕೊಡೋಣ ಅನಿಸಿಬಿಟ್ಟಿತ್ತು. ಆತನ ನಿರ್ಧಾರ ನಾನು ಮತ್ತು ನನ್ನ ಎರಡು ವರ್ಷದ ಮಗನನ್ನು ನಿರ್ಗತಿಕರನ್ನಾಗಿ ಮಾಡಿತು ಎಂದು ಗುಲ್ಶನ್ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾರೆ. ತಲಾಖ್ ಕೊಡುವ ನಿರ್ಧಾರವನ್ನು ಪರ್ವೀನ್ ಒಪ್ಪಿಕೊಳ್ಳುವುದಿಲ್ಲ. ಹಾಗಾಗಿ ಗಂಡನೇ ಕೋರ್ಟ್ಗೆ ಹೋಗುತ್ತಾರೆ. ಗಂಡನ ವಿರುದ್ಧ ಕೌಟುಂಬಿಕ ಹಿಂಸೆ ಮತ್ತು ವರದಕ್ಷಿಣೆ ಕಿರುಕುಳ ಆರೋಪವನ್ನೂ ಪರ್ವೀನ್ ಹೊರಿಸಿದ್ದರು.  ಅಫ್ರೀನ್ ರೆಹಮಾನ್: ವೈವಾಹಿಕ ಪೋರ್ಟಲ್ನಲ್ಲಿ ಪರಿಚಯವಾದ ವ್ಯಕ್ತಿಯನ್ನು ಇವರು 2014ರಲ್ಲಿ ಮದುವೆಯಾಗಿದ್ದರು.  ಎರಡು ಮೂರು ತಿಂಗಳಲ್ಲಿ ವರದಕ್ಷಿಣೆಗೆ ಒತ್ತಾಯಿಸಿ ಗಂಡನ ಮನೆಯಲ್ಲಿ ಕಿರುಕುಳ ಆರಂಭವಾಯಿತು. ನಂತರ ಹೊಡೆಯುವುದಕ್ಕೂ ಆರಂಭಿಸಿದರು. 2015 ಸೆಪ್ಟೆಂಬರ್ನಲ್ಲಿ ಮನೆ ಬಿಟ್ಟು ಹೋಗುವಂತೆ ಹೇಳಿದರು ಎಂದು ಅಫ್ರೀನ್ ಸುದ್ದಿ ವಾಹಿನಿಯೊಂದಕ್ಕೆ ಹೇಳಿದ್ದರು. ತವರಿಗೆ ಮರಳಿದ ಅಫ್ರೀನ್ಗೆ ಕೆಲ ದಿನಗಳ ಬಳಿಕ ಸ್ಪೀಡ್ ಪೋಸ್ಟ್ನಲ್ಲಿ ತಲಾಖ್ ಪತ್ರ ಬಂತು. ಇದು ಸಂಪೂರ್ಣವಾಗಿ ತಪ್ಪು, ಅನ್ಯಾಯ. ಸ್ವೀಕಾರಾರ್ಹ ಅಲ್ಲವೇ ಅಲ್ಲ ಎಂದು ಅವರು ಹೇಳಿದ್ದರು. ಮಧ್ಯಪ್ರವೇಶಕ್ಕೆ ಕೋರಿ ಅವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅತಿಯಾ ಸಬ್ರಿ: 2012ರಲ್ಲಿ ಮದುವೆಯಾದ ಅತಿಯಾ ಅವರಿಗೆ ಕಾಗದದ ತುಣುಕಿನಲ್ಲಿ ತಲಾಖ್ ಎಂದು ಮೂರು ಬಾರಿ ಬರೆದು ಕೊಡಲಾಗಿತ್ತು. ಇದನ್ನು ಪ್ರಶ್ನಿಸಿ ಅವರು ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಅವರಿಗೆ ನಾಲ್ಕು ಮತ್ತು ಮೂರು ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನನಗೆ ಕೊಟ್ಟ ತಲಾಖ್ ಅನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ ಇಲ್ಲ. ನನಗೆ ನ್ಯಾಯ ಬೇಕು. ನಾನು ನನ್ನ ಮಕ್ಕಳನ್ನು ಬೆಳೆಸಬೇಕಿದೆ ಎಂಬುದು ಸಬ್ರಿ ಹೇಳಿಕೆ. ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ: ಸಂಘಟನೆಯು ಸಮಾನತೆಗಾಗಿ ಮುಸ್ಲಿಂ ಮಹಿಳೆಯರ ತುಡಿತ ಎಂಬ ಹೆಸರಿನ್ಲಲಿ ಸುಪ್ರೀಂ ಕೋರ್ಟ್ಗೆ ಅರ್ಜಿಯೊಂದನ್ನು ಸಲ್ಲಿಸಿತ್ತು. ಗಂಡು ಮತ್ತು ಹೆಣ್ಣು ಸಮಾನ ಎಂದು ಅಲ್ಲಾಹ್ ಹೇಳುತ್ತಾನೆ ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು. ತಲಾಖ್ ಬಗ್ಗೆ ಕುರ್ಆನ್ನಲ್ಲಿ ಇರುವ ವಚನಗಳನ್ನು ನಾವು ಅರ್ಜಿಯಲ್ಲಿ ಉಲ್ಲೇಖಿಸಿದ್ದೇವೆ. ತಲಾಖ್ ಜಾರಿಯಾಗಲು ಕನಿಷ್ಠ 90 ದಿನ ಬೇಕು ಎಂಬ ವಿಚಾರವನ್ನು ತಿಳಿಸಿದ್ದೇವೆ. ನಮ್ಮ ಎರಡನೇ ವಾದ ಲಿಂಗ ಸಮಾನತೆಗೆ ಸಂಬಂಧಿಸಿದ್ದಾಗಿತ್ತು. ಎಲ್ಲ ಪ್ರಜೆಗಳಿಗೆ ಸಮಾನ ಹಕ್ಕುಗಳಿವೆ ಎಂಬ ವಿಚಾರದಲ್ಲಿ ಭಾರತದ ಸಂವಿಧಾನದಲ್ಲಿ ಯಾವ ದ್ವಂದ್ವವೂ ಇಲ್ಲ ಎಂದು ಆಂದೋಲನದ ಝಕಿಯ ಸೊಮಾನ್ ಹೇಳಿದರು.


2016: ನವದೆಹಲಿ: ದೇಶದ ಅತ್ಯುನ್ನತ ಕ್ರೀಡಾ ಪ್ರಶಸ್ತಿಯಾದ ರಾಜೀವ್ ಖೇಲ್ ರತ್ನ ಪ್ರಶಸ್ತಿಯನ್ನು ಕೇಂದ್ರ ಸರ್ಕಾರವು ಇದೇ ಮೊದಲ ಬಾರಿಗೆ ನಾಲ್ವರಿಗೆ ನೀಡಲು ತೀರ್ಮಾನಿಸಿತು.  ಪಿ.ವಿ.ಸಿಂಧು, ಸಾಕ್ಷಿ ಮಲಿಕ್, ದೀಪಾ ಕರ್ಮಾಕರ್ ಮತ್ತು ಜೀತು ರೈ ಅವರನ್ನು ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.  ಸಂಬಂಧ ಕ್ರೀಡಾ ಸಚಿವಾಲಯವು ಈದಿನ ಪ್ರಕಟಣೆ ಹೊರಡಿಸಿ, ಪ್ರಶಸ್ತಿ ಪಡೆದವರ ಪಟ್ಟಿಯನ್ನು ಪ್ರಕಟಿಸಿತು.  ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದ ಪಿ.ವಿ.ಸಿಂಧು, ಕಂಚಿನ ಪದಕ ಗೆದ್ದ ಸಾಕ್ಷಿ ಮಲಿಕ್, ಜಿಮ್ನಾಸ್ಟಿಕ್ಸ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ದೀಪಾ ಕರ್ಮಾಕರ್ ಮತ್ತು ಕಳೆದ 2 ವರ್ಷಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಶೂಟರ್ ಜೀತು ರೈ ಅವರನ್ನು ಖೇಲ್ ರತ್ನ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಇದನ್ನು ಹೊರತುಪಡಿಸಿ 15 ಜನರಿಗೆ ಅರ್ಜುನ ಪ್ರಶಸ್ತಿ ಘೋಷಿಸಲಾಯಿತು. ಕನ್ನಡಿಗ ಹಾಕಿ ಆಟಗಾರ ವಿ.ಆರ್.ರಘುನಾಥ್, ಹಾಕಿ ಆಟಗಾರ್ತಿ ರಾಣಿ ರಾಂಪಾಲ್, ಅಥ್ಲಿಟ್ ಲಲಿತಾ ಬಾಬರ್, ಬಾಕ್ಸರ್ ಶಿವ ಥಾಪಾ, ಕ್ರಿಕೆಟ್ ಆಟಗಾರ ಅಜಿಂಕ್ಯ ರಹಾನೆ ಸೇರಿದಂತೆ 15 ಜನರ ಹೆಸರನ್ನು ಅಂತಿಮಗೊಳಿಸಲಾಯಿತು.  ದ್ರೋಣಾಚಾರ್ಯ ಪ್ರಶಸ್ತಿಯನ್ನು ದೀಪಾ ಕರ್ಮಾಕರ್ ಕೋಚ್ ವಿಶ್ವೇಶ್ವರ್ ನಂದಿ ಸೇರಿದಂತೆ ಒಟ್ಟು 6 ಜನರಿಗೆ ನೀಡಲಾಯಿತು. 4 ವರ್ಷಗಳ ಅವಧಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುವಿಗೆ ಖೇಲ್ ರತ್ನ ಪ್ರಶಸ್ತಿ ನೀಡಲಾಗಿದೆ.. ಪ್ರಶಸ್ತಿಯು 7.5 ಲಕ್ಷ ರೂ. ನಗದು ಮತ್ತು ಸ್ಮರಣಿಕೆಯನ್ನು ಒಳಗೊಂಡಿರುತ್ತದೆ.
2016: ನವದೆಹಲಿ: ಅರುಣಾಚಲ ಪ್ರದೇಶದ ಗಡಿಯಲ್ಲಿ ಭಾರತ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಯನ್ನು ನಿಯೋಜನೆಗೊಳಿಸಿರುವುದರ ವಿರುದ್ಧ ಚೀನಾ ಕಿಡಿಕಾರಿ ಕ್ಷಿಪಣಿ ಹಿಂದೆ ಸರಿಸುವಂತೆ ಭಾರತಕ್ಕೆ ಎಚ್ಚರಿಕೆ ನೀಡಿತು. ದೇಶದ ಭದ್ರತೆ ದೃಷ್ಟಿಯಿಂದ ಕೇಂದ್ರ ಸರ್ಕಾರವು ಬ್ರಹ್ಮೋಸ್ ಕ್ಷಿಪಣಿಯ ಸುಧಾರಿತ ಮತ್ತು ಸುಸಜ್ಜಿತ ಮಾದರಿಯನ್ನು ಗಡಿಯಲ್ಲಿ ಕಳೆದ ತಿಂಗಳು ನಿಯೋಜಿಸಿತ್ತು.  ಇದರ ವೆಚ್ಚ 4,300 ಕೋಟಿ ರೂಪಾಯಿಗಳು. ಗಡಿಯಲ್ಲಿ ಕ್ಷಿಪಣಿ ನಿಯೋಜನೆಯಿಂದ ಚೀನಾ ಕೂಡ ಪ್ರತಿತಂತ್ರ ಹೆಣೆದು ಸೂಪರ್ಸಾನಿಕ್ ಮಿಸೈಲ್ಗೆ ತಿರುಗೇಟು ನೀಡುವ ಸಾಧ್ಯತೆಯಿದೆ ಎಂದು ಮಾಧ್ಯಮಗಳು ವರದಿ ಮಾಡಿದವು.  ಟಿಬೆಟ್ ಮತ್ತು ಯುನಾನ್ ಪ್ರಾಂತ್ಯದ ಮೇಲೆ ಭಾರತದ ನಿರ್ಧಾರದಿಂದ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ ಎನ್ನಲಾಯಿತು.  ಬ್ರಹ್ಮೋಸ್ ಕ್ಷಿಪಣಿ ನಿಯೋಜನೆಯಿಂದ ಭಾರತ ಮತ್ತು ಚೀನಾ ನಡುವಿನ ಬಾಂಧವ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಚೀನಾ ಮಾಧ್ಯಮಗಳು ವರದಿ ಬಿತ್ತರಿಸಿವೆ. ಬ್ರಹ್ಮೋಸ್ ಸೂಪರ್ಸಾನಿಕ್ ಕ್ಷಿಪಣಿಯ ವ್ಯಾಪ್ತಿ 290 ಕಿ. ಮೀ. ಇದ್ದು, ಅರುಣಾಚಲ ಪ್ರದೇಶ ಗಡಿಯಿಂದ ಚೀನಾ ಗಡಿಗೆ 100 ಕಿ ಮೀ ಇರುವುದೇ ಚೀನಾ ದುಗುಡಕ್ಕೆ ಕಾರಣ. ಅಲ್ಲದೇ ಬ್ರಹ್ಮೋಸ್ ಕ್ಷಿಪಣಿಯನ್ನು ಭೂಮಿ, ಸಮುದ್ರದಿಂದ ನಿಗದಿತ ದಾಳಿ ಪ್ರದೇಶ ಗೊತ್ತು ಮಾಡಿ ಗಾಳಿಯಲ್ಲಿ ಉಡಾಯಿಸಬಹುದು. ಭಾರತದ ರಕ್ಷಣಾ ಸಂಸ್ಥೆ ಡಿಆರ್ಡಿಓ ಮತ್ತು ರಷ್ಯಾದ ಎನ್ಪಿಓಎಮ್ ಜಂಟಿ ಸಹಭಾಗಿತ್ವದಲ್ಲಿ ಬ್ರಹ್ಮೋಸ್ ತಯಾರಿಸಲಾಗಿದೆ.

2016: ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ ಕಳೆದ 45 ದಿನಗಳಿಂದ ನಡೆಯುತ್ತಿರುವ ಗಲಭೆಯಿಂದ ನನಗೆ ಸಾಕಷ್ಟು ನೋವುಂಟಾಗಿದೆ. ಕಾಶ್ಮೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಂವಿಧಾನದ ಚೌಕಟ್ಟಿನಲ್ಲಿ ಮಾತುಕತೆ ನಡೆಸಬೇಕಾದ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.  ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಪರೆನ್ಸ್ ಮುಖಂಡ ಓಮರ್ ಅಬ್ದುಲ್ಲಾ ಅವರ ನೇತೃತ್ವದಲ್ಲಿ ವಿರೋಧ ಪಕ್ಷಗಳ ನಿಯೋಗ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಇದೇ ಸಂದರ್ಭದಲ್ಲಿ ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿದರು. ಕಾಶ್ಮೀರ ಕಣಿವೆಯಲ್ಲಿ ನಡೆದ ಗಲಭೆಯಲ್ಲಿ ಮೃತರಾದ ಮತ್ತು ಗಾಯಗೊಂಡಿರುವ ಯುವಕರು ಮತ್ತು ಭದ್ರತಾ ಪಡೆಗಳ ಸಿಬ್ಬಂದಿ ನಮ್ಮಲ್ಲಿ ಒಬ್ಬರು. ಕೇಂದ್ರ ಸರ್ಕಾರ ಮತ್ತು ದೇಶ ಕಾಶ್ಮೀರ ಜನತೆಯೊಂದಿಗಿದೆ. ಜಮ್ಮು ಮತ್ತು ಕಾಶ್ಮೀರದ ಎಲ್ಲಾ ರಾಜಕೀಯ ಪಕ್ಷಗಳು ಜನತೆಗೆ ಇದನ್ನು ಮನವರಿಕೆ ಮಾಡಿಕೊಡಬೇಕು. ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಗೆ ಮಾತುಕತೆಗಳ ಮೂಲಕವೇ ಪರಿಹಾರ ಕಂಡುಕೊಳ್ಳಬೇಕಿದೆ. ಹಾಗಾಗಿ ಸಂವಿಧಾನದ ಚೌಕಟ್ಟಿನೊಳಗೆ ಮಾತುಕತೆ ನಡೆಸಬೇಕಾದ ಅಗತ್ಯವಿದೆ ಎಂದು ಮೋದಿ ಸಭೆಯಲ್ಲಿ ತಿಳಿಸಿದರು. ಇದೇ ಸಂದರ್ಭದಲ್ಲಿ ರಾಜ್ಯದ ಎಲ್ಲಾ ರಾಜಕೀಯ ಪಕ್ಷಗಳು ಸಮಸ್ಯೆ ಬಗೆಹರಿಸಲು ಅಗತ್ಯ ಪರಿಹಾರ ಕ್ರಮಗಳ ಕುರಿತು ಚಿಂತನೆ ನಡೆಸಬೇಕು ಎಂದು ಮೋದಿ ಸಭೆಯಲ್ಲಿ ತಿಳಿಸಿದರು.

2016: ಚೆನ್ನೈ: ಚೆನ್ನೈ ನೌಕಾದಳದ ವಿಶೇಷ ನೌಕೆ ಚೆನ್ನೈ ಸಮುದ್ರದಾಳದಲ್ಲಿ ಕಳೆದ ತಿಂಗಳು ನಾಪತ್ತೆಯಾಗಿದ್ದ ಭಾರತೀಯ ವಾಯುಸೇನೆಯ ಎಎನ್-32 ವಿಮಾನದ ಅವಶೇಷ ಪತ್ತೆ ಮಾಡಿದೆ ಎಂದು ಮೂಲಗಳು ತಿಳಿಸಿದವು.  ಸಮುದ್ರ ರತ್ನಾಕರ ಎಂಬ ಅತ್ಯಾಧುನಿಕ ಸೋನಾರ್ ಉಪಕರಣ ಹೊಂದಿರುವ ನೌಕೆ ಈದಿನ ಮಧ್ಯಾಹ್ನದ ವೇಳೆ ಸಾಗರದ 3,500 ಮೀಟರ್ ಆಳದಲ್ಲಿ ವಿಮಾನದ ಅವಶೇಷದಂತಿರುವ ಕೆಲ ಭಾಗವನ್ನು ಪತ್ತೆ ಮಾಡಿದೆ ಎಂದು ಭೂ ವೈಜ್ಞಾನಿಕ ಸಮೀಕ್ಷೆ ಇಲಾಖೆ ತಿಳಿಸಿತು.  ಆದರೆ ಪತ್ತೆಯಾಗಿರುವ ಅವಶೇಷ ಜೂನ್ 22 ರಂದು ನಾಪತ್ತೆಯಾದ ಎಎನ್ 32 ವಿಮಾನದ ಅವಶೇಷ ಎಂದು ದೃಢವಾಗಿ ಹೇಳಲು ಸಾಧ್ಯವಿಲ್ಲ ಎಂದು ಇಲಾಖೆ ಹೇಳಿತು.  ನೌಕಾದಳದ ಸಾಗರ್ ನಿಧಿ ಎಂಬ ಮತ್ತೊಂದು ನೌಕೆ ಎಎನ್ 32 ವಿಮಾನದ ಪತ್ತೆಗೆ ರಾಡಾರ್ ನೆರವಿನಿಂದ ಹುಡುಕಾಟ ನಡೆಸುತ್ತಿದೆ. ಶೋಧಕಾರ್ಯ ನಡೆಸಿರುವ ಎರಡು ನೌಕೆಯಲ್ಲಿ ಅತ್ಯಾಧುನಿಕ ಉಪಕರಣಗಳಿದ್ದು, ಮಲ್ಟಿ ಬೀಮ್ ಇಕೋ ಸೌಂಡರ್ ಸಾಧನದಿಂದ ಸಮುದ್ರದ ಎರಡು ಮೀಟರ್ ಸುತ್ತಮುತ್ತಲಿನ ವಸ್ತುವನ್ನು ಪತ್ತೆ ಮಾಡುತ್ತವೆ ಅಲ್ಲದೇ ಸೋನಾರ್ ಉಪಕರಣದಿಂದ 150 ಮೀಟರ್ ಸಮುದ್ರದಾಳದ ವಸ್ತುಗಳನ್ನು ಗುರುತಿಸುವ ಸಾಮರ್ಥ್ಯ ಹೊಂದಿವೆ. ನೌಕಾದಳದ ವಿಮಾನಗಳು ಎಎನ್ ವಿಮಾನ ನಾಪತ್ತೆಯಾದ ಸ್ಥಳದ ಮೇಲೆ ಗಸ್ತು ತಿರುಗುತ್ತಿವೆಭಾರತದ ಅತಿ ದೀರ್ಘಾವಧಿ ಪತ್ತೆ ಕಾರ್ಯಾಚರಣೆ ಇದಾಗಿದ್ದು, 17 ನೌಕೆ, 23 ವಿಮಾನ ಹಾಗೂ ಸಬ್ಮರೀನ್ ಕಳೆದ ಜುಲೈ 22 ರಿಂದ ನಾಪತ್ತೆಯಾದ ವಿಮಾನದ ಶೋಧ ಕಾರ್ಯ ನಡೆಸಿವೆ.

2016: ಕ್ವೆಟ್ಟಾ: ಬಲೂಚಿಸ್ತಾನ ಮತ್ತು ಪಿಓಕೆ (ಪಾಕ್ ಆಕ್ರಮಿತ ಕಾಶ್ಮೀರ) ವಿಷಯದಲ್ಲಿ ಬಹಿರಂಗ ಸಹಕಾರ ಘೋಷಿಸಿದ ಭಾರತದ ಪ್ರಧಾನಿ ಹೇಳಿಕೆಯಿಂದ ಕಂಗಾಲಾದ ಪಾಕಿಸ್ತಾನ ಮೋದಿ ಅವರಿಗೆ ಧನ್ಯವಾದ ತಿಳಿಸಿದ್ದ ಬಲೂಚಿಸ್ತಾನ ಕಾರ್ಯಕರ್ತರು ಮತ್ತು ರಾಜಿಕೀಯ ನಾಯಕರ ವಿರುದ್ಧ ಎಫ್ಐಆರ್ ದಾಖಲಿಸಿತು.  ಬಲೂಚಿಸ್ತಾನ ರಾಜಕೀಯ ಮುಖಂಡ ಬ್ರಹಂದಾಗ್ ಬುಗ್ತಿ, ಕಾರ್ಯಕರ್ತರಾದ ಹರ್ಬಿಯಾರ್ ಮರ್ರಿ, ಬಾನೂಕ್ ಕರಿಮಾ ಬಲೂಚ್ ಸೇರಿದಂತೆ ಪಾಕ್ ಕಪಿಮುಷ್ಠಿಯಿಂದ ಬಿಡುಗಡೆ ಹೊಂದಲು ನೆರವು ಕೋರಿದ್ದ ಬಲೂಚಿಸ್ತಾನದ ಹಲವು ಮುಖಂಡರ ವಿರುದ್ಧ ಎಫ್ಐಆರ್ ದಾಖಲಿಸಲಾಯಿತು.
ಮುನೀರ್ ಅಹ್ಮದ್, ಮೌಲಾನಾ ಮುಹಮದ್ ಅಸ್ಲಂ, ಮುಹಮದ್ ಹುಸೇನ್, ಗುಲಾಮ್ ಯಾಸೀನ್ ಮತ್ತು ಮುಹಮದ್ ರಹಿಮ್ ಎಂಬುವರಿಂದ ಬಲೂಚಿಸ್ತಾನದ ಖುಜ್ದಾರ್ ಪ್ರದೇಶದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು.  ಪ್ರತ್ಯೇಕತೆಗಾಗಿ ಧ್ವನಿ ಎತ್ತಿರುವ ಇವರು ದೇಶದ್ರೋಹ ಕೆಲಸ ಮಾಡಿದ್ದು, ಅವರನ್ನು ಗಲ್ಲಿಗೇರಿಸುವಂತೆ ಕೋರಿದರು. ಜನಸೇವೆ ಮಾಡುವುದನ್ನು ಬಿಟ್ಟು ಅಪರಾಧ ಪ್ರಕರಣಕ್ಕೆ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಅರ್ಜಿದಾರರು ತಮ್ಮ ದೂರಿನಲ್ಲಿ ದಾಖಲಿಸಿದರು.  ಆಗಸ್ಟ್ 15 ಸ್ವಾತಂತ್ರ್ಯೊತ್ಸವ ಭಾಷಣದಲ್ಲಿ ಮೋದಿಯವರು ಬಲೂಚಿಸ್ತಾನ, ಗಿಲ್ಗಿಟ್, ಬಾಲ್ಟಿಸ್ತಾನ, ಪಿಓಕೆ ಜನರಿಗೆ ನಮ್ಮ ಬೆಂಬಲವಿದೆ ಎಂದು ಬಹಿರಂಗವಾಗಿ ಘೋಷಿಸಿದ ಮೇಲೆ ಬಲೂಚಿ ಜನರು ಪಾಕಿಸ್ತಾನ ನಡೆಸುತ್ತಿರುವ ದೌರ್ಜನ್ಯಗಳ ಬಗ್ಗೆ ಜಗತ್ತಿನ ಮುಂದೆ ಮಾತನಾಡಿದ್ದಕ್ಕಾಗಿ ಮೋದಿಯವರಿಗೆ ಧನ್ಯವಾದ ತಿಳಿಸಿದ್ದರು.

2016: ಹೈದರಾಬಾದ್: ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧುವಿಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಬಿಎಂಡಬ್ಲ್ಯೂ ಕಾರ್ ಉಡುಗೊರೆ ಮಾಡಲಿದ್ದಾರೆ. ದುಬಾರಿ ಕಾರನ್ನು ಸಚಿನ್ ಅವರ ಆಪ್ತ ಸ್ನೇಹಿತ ಹಾಗೂ ಹೈದರಾಬಾದ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಅಧ್ಯಕ್ಷರೂ ಆಗಿರುವ ವಿ.ಚಾಮುಂಡೇಶ್ವರನಾಥ್ ಪ್ರಾಯೋಜಿಸಿದ್ದಾರೆಒಲಿಂಪಿಕ್ಸ್ನಲ್ಲಿ ಬೆಳ್ಳಿ ಗೆದ್ದ ಪಿ.ವಿ ಸಿಂಧು ಅವರಿಗೆ ವಿ.ಚಾಮುಂಡೇಶ್ವರನಾಥ್ ಹಾಗೂ ಸಚಿನ್ ತೆಂಡುಲ್ಕರ್ ಬಿಎಂಡಬ್ಲ್ಯೂ ಕಾರು ಉಡುಗೊರೆಯಾಗಿ ನೀಡಲಿದ್ದಾರೆ ಎಂದು ಹೈದರಾಬಾದ್ ಬ್ಯಾಡ್ಮಿಂಟನ್ ಅಸೋಸಿಯೇಷನ್ ಕಾರ್ಯದರ್ಶಿ ಪುನ್ನಯ್ಯ ಚೌಧರಿ ತಿಳಿಸಿದರು.   ಈ ಹಿಂದೆ ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚು ಗೆದ್ದಿದ್ದ ಸೈನಾ ನೆಹ್ವಾಲ್ ಅವರಿಗೂ ಸಚಿನ್ ಬಿಎಂಡಬ್ಲ್ಯೂ ಕಾರನ್ನು ಉಡುಗೊರೆಯಾಗಿ ನೀಡಿದ್ದರು. 2012ರಲ್ಲಿ ನಡೆದ ಏಷ್ಯನ್ ಚಾಂಪಿಯನ್ಶಿಪ್ನಲ್ಲಿ 19 ವರ್ಷದ ಕೆಳಗಿನ ಬಾಲಕಿಯರ ಬ್ಯಾಡ್ಮಿಂಟನ್ ಸಿಂಗಲ್ಸ್ ಪಂದ್ಯದಲ್ಲಿ ಗೆದ್ದ ಪಿ.ವಿ ಸಿಂಧುವಿಗೆ ಸಚಿನ್ ಮಾರುತಿ ಸ್ವಿಫ್ಟ್ ಕಾರು ಉಡುಗೊರೆಯಾಗಿ ನೀಡಿದ್ದರು.
 2016: ನವದೆಹಲಿ: ಮಾಚ್ 18, 2009ರಂದು ನಡೆದ ಜಿಗಿಶಾ ಘೋಷ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಇಬ್ಬರು ಅಪರಾಧಿಗಳಿಗೆ ಮರಣದಂಡನೆ ಶಿಕ್ಷೆಯನ್ನು  ಕಾಯಂಗೊಳಿಸಿತು.  ಮೂವರು ಅಫರಾಧಿಗಳಲ್ಲಿ ರವಿ ಕಪೂರ್ ಹಾಗೂ ಅಮಿತ್ ಶುಕ್ಲಾ ಅವರಿಗೆ ಮರಣದಂಡನೆ ನೀಡಿದರೆ, ಬಲ್ಜೀತ್ ಮಲಿಕ್ಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. ಮಾರ್ಚ್ ಹದಿನೆಂಟು 2009ರಂದು ಐಟಿ ಉದ್ಯೋಗಿ ಜಿಗಿಶಾ ಘೋಷ್ ಅವರನ್ನು ಕಂಪನಿಯ ಕ್ಯಾಬ್ ದಕ್ಷಿಣ ದೆಹಲಿಯ ವಸಂತ ವಿಹಾರದ ಬಳಿ ಡ್ರಾಪ್ ನೀಡಿ ತೆರಳಿತ್ತು. ಮುಂಜಾನೆ ನಾಲ್ಕು ಗಂಟೆ ಸುಮಾರಿಗೆ ಜಿಗಿಶಾರನ್ನು ಅಪಹರಿಸಲಾಗಿತ್ತುಎರಡು ದಿನಗಳ ನಂತರ ಅಂದರೇ ಮಾರ್ಚ್ 20ರಂದು ಹರಿಯಾಣದ ಸೂರಜ್ಕುಂಡ್ನಲ್ಲಿ ಜಿಗಿಶಾ ಅವರ ಮೃತ ದೇಹ ಪತ್ತೆಯಾಗಿತ್ತು. ಮಾರ್ಚ್ 23ರಂದು ಮೂವರು ಆರೋಪಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದರು.

2016: ಅಗರ್ತಲ: ರಿಯೋ ಒಲಿಂಪಿಕ್ಸ್ ಜಿಮ್ನಾಸ್ಟಿಕ್ ಫೈನಲ್ನಲ್ಲಿ ಅಮೊಘ 4ನೇ ಸ್ಥಾನ ಪಡೆಯುವ ಮೂಲಕ ಇತಿಹಾಸ ನಿರ್ವಿುಸಿದ ದೀಪಾ ಕರ್ಮಾಕರ್ ಈದಿನ ಮುಂಜಾನೆ ತನ್ನ ಹುಟ್ಟೂರಿಗೆ ಮರಳಿದರು. 19ರಂದೇ ಬ್ರೆಜಿಲ್ನಿಂದ ಭಾರತಕ್ಕೆ ಮರಳಿದ್ದ ದೀಪಾ ಈದಿನ ದೆಹಲಿಯಿಂದ ತನ್ನ ಕೋಚ್ ಬಿಶ್ವೇಶ್ವರ್ ನಂದಿ ಜತೆ ಅಗರ್ತಲ ವಿಮಾನ ನಿಲ್ದಾಣದಲ್ಲಿ ಬಂದಿಳಿದರು. ಹುಟ್ಟೂರಿನ ಅಭಿಮಾನಿಗಳು ಅವರನ್ನು ಅದ್ದೂರಿಯಾಗಿ ಸ್ವಾಗತಿಸಿದರು. ‘‘ಮುಂದಿನ ಒಲಿಂಪಿಕ್ಸ್ಗೆ ಪದಕ ಗೆಲ್ಲಲು ಎಲ್ಲಾ ಪ್ರಯತ್ನಗಳನ್ನು ಮಾಡಲಿದ್ದು ಇದಕ್ಕಾಗಿ ತಾನು ಸ್ವಯಂ ಅಭ್ಯಾಸವನ್ನು ಕೈಗೊಳ್ಳುತ್ತೇನೆ ’’ಎಂದು ದೀಪಾ ಹೇಳಿದರು.  ಒಂದುವಾರ ಕಾಲ ಹೆತ್ತವರೊಡನೆ ಮನೆಯಲ್ಲೇ ಇರಲು ತಾನೀಗ ಹುಟ್ಟೂರಿಗೆ ಬಂದಿರುವುದಾಗಿ ದೀಪಾ ಹೇಳಿದರು. ತನ್ನ ಕೋಚ್ ಬಿಶ್ವೇಶ್ವರ್ ನಂದಿ ಹಾಗೂ ದೇಶದ ಎಲ್ಲಾ ಮೂಲೆಯಿಂದಲೂ ತನ್ನನ್ನು ಬೆಂಬಲಿಸಿ ಧೈರ್ಯ ನೀಡಿದ ಅಭಿಮಾನಿಗಳಿಗೆ ತಾನು ಕೃತಜ್ಞಳಾಗಿದ್ದೇನೆ ಎಂದು ದೀಪಾ ಹೇಳಿದರು.

2016: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ ಆಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ವಿಡಿಯೋ ಕಾನ್ಪರೆನ್ಸ್ ಮೂಲಕ ಕಾಬೂಲ್ನಲ್ಲಿ ನವೀಕರಿಸಲಾದ ಸ್ಟೋರ್ ಪ್ಯಾಲೆಸ್ಸನ್ನು ಜಂಟಿಯಾಗಿ ಉದ್ಘಾಟಿಸಿದರು. ‘‘ಭಾರತೀಯರ ಮನಸ್ಸಿನಲ್ಲಿ ಯಾವತ್ತೂ ಆಫ್ಘಾನಿಸ್ತಾನಕ್ಕೆ ಒಳ್ಳೆಯ ಸ್ಥಾನ ನೀಡಲಾಗಿದೆ. ಭಾರತೀಯರು ಮತ್ತು ಆಫ್ಘಾನಿಸ್ತಾನಿಗರು ಯಾವಾತ್ತೂ ಒಳ್ಳೆಯ ಗೆಳೆಯರಾಗಿರುತ್ತಾರೆ. ಗೆಳೆತನಕ್ಕೆ ಸ್ಟೊರ್ ಪ್ಯಾಲೇಸ್ ಜಂಟಿ ಉದ್ಘಾಟನಾ ಕಾರ್ಯಕ್ರಮ ಹೊಸಮೈಲುಗಲ್ಲಾಗಿದೆ’’ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯ ಪಟ್ಟರು. ಇದೇ ವೇಳೆ ಹಿಂದೆ ಭಾರತ, ಆಫ್ಘಾನಿಸ್ತಾನ ಹಾಗೂ ಇರಾನ್ ಸಹಿ ಹಾಕಿರುವ ಟ್ರಾನ್ಸಿಟ್ ಕಾರಿಡಾರ್ ಒಪ್ಪಂದ ನಮ್ಮ ಸಹಭಾಗಿತ್ವದ ಇನ್ನೊಂದು ಮೈಲುಗಲ್ಲು ಎಂದು ಪ್ರಧಾನಿ ಮೋದಿ ಹೇಳಿದರುಆಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ, ತಾನು ಭಾರತೀಯರಿಗೆ ಕೃತಜ್ಞನಾಗಿದ್ದು, ಭಾರತ ಸರ್ಕಾರ ಹಾಗೂ ಭಾರತೀಯರಿಗೆ ಪ್ರಮಾಣಿಕ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ ಎಂದು ನುಡಿದರು.

2016: ರಿಯೋ ಡಿ ಜನೈರೋ: ಅಂತಾರಾಷ್ಟ್ರೀಯ ಒಲಿಂಪಿಕ್ ಕ್ರೀಡಾಕೂಟದ ಮುಖಸ್ಥ ಥಾಮಸ್ ಬಾಚ್ ಧ್ವಜವನ್ನು ಟೋಕಿಯೊ ರಾಜ್ಯಪಾಲ ಯುರಿಕೋ ಕೊಯ್್ಕ ಅವರಿಗೆ ಹಸ್ತಾಂತರಿಸುವ ಮೂಲಕ ಹದಿನೆಂಟು ದಿನಗಳ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ 21ರ  ತಡರಾತ್ರಿ ತೆರೆಯೆಳೆದರು. ಸಿಡಿಮದ್ದು, ಬೆಳಕಿನ ವೈಭವದ ನಡುವೆ ಸಾಂಪ್ರದಾಯಿಕ ನೃತ್ಯ, ಹಾಡು ಸೇರಿದಂತೆ ವಿವಿಧ ಕಲಾ ಪ್ರಕಾರಗಳಿಗೆ ಮರಾಕಾನ ಮೈದಾನ ಸಾಕ್ಷಿಯಾಯಿತು. ಮನಮೋಹಕ ಕ್ಷಣಕ್ಕೆ ಮೈದಾನದಲ್ಲಿ ನೆರೆದಿದ್ದ 60 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಹಾಗೂ ಹನ್ನೊಂದು ಸಾವಿರ ಕ್ರೀಡಾ ಪಟುಗಳು ಪ್ರತ್ಯಕ್ಷ ಸಾಕ್ಷಿಯಾದರು. 32ನೇ ಒಲಿಂಪಿಕ್ ಕ್ರೀಡಾಕೂಟ ಜಪಾನ್ ದೇಶದ ಟೋಕಿಯೊದಲ್ಲಿ 2020ಕ್ಕೆ ನಡೆಯಲಿದೆ. ಪ್ರಸಕ್ತ ಒಲಿಂಪಿಕ್ ಕ್ರೀಡಾಕೂಟ ಮುಕ್ತಾಯವಾಗಿದೆ ಎಂದು ಘೋಷಿಸುವೆ ಎಂದು ಥಾಮಸ್ ಬಾಚ್ ತಿಳಿಸಿದರುಸಾಂಬಾ ನಾಡಿನಲ್ಲಿ ನಡೆದ 31ನೇ ಒಲಿಂಪಿಕ್ ಕ್ರೀಡಾಕೂಟ ಹಲವು ದಾಖಲೆಗಳ ಮೈಲುಗಲ್ಲಿಗೆ ಸಾಕ್ಷಿಯಾಯಿತು. ಅಮೆರಿಕ ಈಜು ಪಟು ಮೈಕಲ್ ಫೆಲ್ಪ್ಸ್ ಐದು ಸ್ವರ್ಣ ಪದಕ ಬೇಟೆಯಾಡಿದರೆ, ಜಮೈಕದ ಉಸೇನ್ ಬೋಲ್ಟ್ ಮೂರು ಸ್ವರ್ಣ ಮುಡಿಗೇರಿಸಿಕೊಂಡು ಟ್ರಿಪಲ್ ಟ್ರಿಪಲ್ ಸಾಧನೆ ಮಾಡಿದರು. ಕ್ರೀಡಾಕೂಟದ ಆರಂಭದಲ್ಲಿ ಭಾರತೀಯ ಕ್ರೀಡಾ ಪಟುಗಳು ನಿರೀಕ್ಷಿತ ಪ್ರದರ್ಶನ ತೋರದಿದ್ದರೂ, ಕಡೆ ಘಳಿಗೆಯಲ್ಲಿ ಮಹಿಳಾ ಕುಸ್ತಿ ಪಟು ಸಾಕ್ಷಿ ಮಲಿಕ್ ಕಂಚು ಪದಕ ಹಾಗೂ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಬೆಳ್ಳಿ ಪದಕ ಬೇಟೆಯಾಡುವ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದರು. 46 ಸ್ವರ್ಣ ಸೇರಿದಂತೆ ಒಟ್ಟು 121 ಪದಕವನ್ನು ತನ್ನ ಮುಡಿಗೇರಿಸಿಕೊಳ್ಳುವ ಮೂಲಕ ಅಮೆರಿಕ ಅಗ್ರ ಸ್ಥಾನ ಅಲಂಕರಿಸಿದರೆ, ಗ್ರೇಟ್ ಬ್ರಿಟನ್ 27 ಸ್ವರ್ಣ ಸೇರಿದಂತೆ ಒಟ್ಟು 67 ಪದಕಗಳನ್ನು ತನ್ನ ಬುಟ್ಟಿಗೆ ಹಾಕಿಕೊಂಡು ದ್ವಿತೀಯ ಸ್ಥಾನ ಅಲಂಕರಿಸಿದೆ. ಇನ್ನು ಚೀನಾ 70, ರಷ್ಯಾ 56 ಪದಕಗಳ ಬೇಟೆಯಾಡುವ ಮೂಲಕ ಕ್ರಮವಾಗಿ ಮೂರು ಹಾಗೂ ನಾಲ್ಕನೇ ಸ್ಥಾನವನ್ನು ಅಲಂಕರಿಸಿದೆ. ಅಂಕ ಪಟ್ಟಿಯಲ್ಲಿ ಭಾರತ 67ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
2016: ಹೈದರಾಬಾದ್: ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಗೆದ್ದ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಹಾಗೂ ಕೋಚ್ ಪುಲ್ಲೇಲ ಗೋಪಿಚಂದ್ ಬ್ರೆಜಿಲ್ನಿಂದ ಈದಿನ ಮುಂಜಾನೆ ಹೈದರಾಬಾದ್ ರಾಜೀವ್ ಗಾಂಧಿ ವಿಮಾನ ನಿಲ್ದಾಣಕ್ಕೆ ಆಗಮಿಸಿದಾಗ ಅಭೂತಪೂರ್ವ ಸ್ವಾಗತ ದೊರಕಿತು. ವಿಮಾನ ನಿಲ್ದಾಣದಿಂದ ತೆರೆದ ವಿಶೇಷ ಬಸ್ನಲ್ಲಿ ಗಚ್ಚಿಬೌಲಿ ಸ್ಟೇಡಿಯಂ ವರೆಗೆ ಮೆರವಣಿಗೆಯಲ್ಲಿ ಪಾಲ್ಗೊಂಡ ಸಿಂಧು ಹಾಗೂ ಕೋಚ್ ಗೋಪಿಚಂದ್ಗೆ ವಿದ್ಯಾರ್ಥಿಗಳು, ಅಭಿಮಾನಿಗಳು ಹಾಗೂ ಊರ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ದೊರಕಿತು. ಮೆರವಣಿಗೆ ಬಳಿಕ ಗಚ್ಚಿಬೌಲಿ ಸ್ಟೇಡಿಯಂನಲ್ಲಿ ತೆಲಂಗಾಣ ಸರ್ಕಾರದಿಂದ ಸಿಂಧು ಹಾಗೂ ಕೋಚ್ ಗೋಪಿಚಂದ್ಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಮೆರವಣಿಗೆಯಲ್ಲಿ ತೆಲಂಗಾಣ ಡಿಸಿಎಂ ಮಹಮ್ಮದ್ ಆಲಿ ಭಾಗಿಯಾದರು.

2016: ನವದೆಹಲಿ:  ವರದಕ್ಷಿಣೆ ಕಿರುಕುಳಪ್ರಕರಣ ದಾಖಲಾದ ಕೂಡಲೇ ಆರೋಪಿಯನ್ನು ಪೊಲೀಸರು ಯಾಂತ್ರಿಕವಾಗಿ ಬಂಧಿಸಬಾರದು ಎಂದು 2014ರಲ್ಲಿ ಸುಪ್ರೀಂ ಕೋರ್ಟ್ನೀಡಿದ್ದ ತೀರ್ಪನ್ನು ಪ್ರಶ್ನಿಸಿ ರಾಷ್ಟ್ರೀಯ ಮಹಿಳಾ ಆಯೋಗವು ಸಲ್ಲಿಸಿದ್ದ ಪರಿಹಾರಾತ್ಮಕ ಅರ್ಜಿಯನ್ನು ಸುಪ್ರೀಂ ಕೋರ್ಟ್ವಜಾ ಮಾಡಿತು. 2014 ಜುಲೈ 2ರಂದು ಸುಪ್ರೀಂ ಕೋರ್ಟ್ನೀಡಿದ್ದ ತೀರ್ಪಿನಲ್ಲಿ ಮಧ್ಯಪ್ರವೇಶಿಸುವ ಅಗತ್ಯ ಇಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್‌, ನ್ಯಾಯಮೂರ್ತಿಗಳಾದ ಅನಿಲ್ಆರ್‌. ದವೆ, ಜೆ.ಎಸ್‌. ಖೇಹರ್ಮತ್ತು ಪಿ.ಸಿ. ಘೋಷ್ಅವರನ್ನೊಳಗೊಂಡ ಪೀಠ ಹೇಳಿತು.  ವರದಕ್ಷಿಣೆ ಪ್ರಕರಣಗಳಲ್ಲಿ ಆರೋಪಿಗಳನ್ನು ದೂರು ದಾಖಲಾದ ತಕ್ಷಣಬಂಧಿಸಬಾರದು ಮತ್ತು ವಶಕ್ಕೆ ಪಡೆಯುವ ಮೊದಲು ಮ್ಯಾಜಿಸ್ಟ್ರೇಟ್ರಿಂದ ಅನುಮತಿ ಪಡೆಯಬೇಕು ಎಂದು ವರದಕ್ಷಿಣೆ ತಡೆ ಕಾನೂನು ದುರ್ಬಳಕೆ ತಡೆಯುವುದಕ್ಕಾಗಿ ಸುಪ್ರೀಂಕೋರ್ಟ್ನಿರ್ದೇಶನ ನೀಡಿತ್ತು. ವರದಕ್ಷಿಣೆ ಪ್ರಕರಣಗಳಿಗೆ ಮಾತ್ರವಲ್ಲ, ಗರಿಷ್ಠ ಏಳು ವರ್ಷ ಶಿಕ್ಷೆ ವಿಧಿಸಬಹುದಾದ ಇತರ ಪ್ರಕರಣಗಳಲ್ಲಿಯೂ ಇದು ಅನ್ವಯವಾಗುತ್ತದೆ ಎಂದು ಸುಪ್ರೀಂ ಕೋರ್ಟ್ಹೇಳಿತ್ತು. ಸುಪ್ರೀಂ ಕೋರ್ಟ್ ತೀರ್ಪು ಸಂತ್ರಸ್ತ ಮಹಿಳೆಯರ ಹಿತಾಸಕ್ತಿಗೆ ವಿರುದ್ಧವಾಗಿದೆ.   ತೀರ್ಪು ಆರೋಪಿಯನ್ನು ಬಂಧಿಸಬೇಕೇ ಬೇಡವೇ ಎಂಬುದನ್ನು ನಿರ್ಧರಿಸಲು ಪೊಲೀಸರಿಗೆ ನ್ಯಾಯಯುತವಲ್ಲದ ವಿವೇಚನಾಧಿಕಾರ ನೀಡುತ್ತದೆ ಎಂದು ಮಹಿಳಾ ಆಯೋಗ ವಾದಿಸಿತ್ತು. ಸುಪ್ರೀಂ ಕೋರ್ಟ್‌ 2014ರಲ್ಲಿ ನೀಡಿದ್ದ ನಿರ್ದೇಶನಗಳು: * ಭಾರತೀಯ ದಂಡ ಸಂಹಿತೆಯ 498 ಸೆಕ್ಷನ್ಅಡಿಯಲ್ಲಿ ಆರೋಪಿಯನ್ನು ಯಾಂತ್ರಿಕವಾಗಿ ಬಂಧಿಸದಂತೆ ಪೊಲೀಸ್ಅಧಿಕಾರಿಗಳಿಗೆ ರಾಜ್ಯ ಸರ್ಕಾರಗಳು ಸೂಚಿಸಬೇಕು. * ಬಂಧನಕ್ಕೆ ಏನೇನು ಕಾರಣಗಳಿರಬೇಕು ಎಂಬ ಪಟ್ಟಿಯನ್ನು ಸರ್ಕಾರವು ಸಿದ್ಧಪಡಿಸಿ ಪೊಲೀಸ್ಅಧಿಕಾರಿಗಳಿಗೆ ನೀಡಬೇಕು. *ಪೊಲೀಸ್ಅಧಿಕಾರಿಯು ಪಟ್ಟಿಯನ್ನು ಭರ್ತಿ ಮಾಡಿಸಮರ್ಥನೆಗಳೊಂದಿಗೆ ಮ್ಯಾಜಿಸ್ಟ್ರೇಟ್ಗೆ ನೀಡಬೇಕು.  *ಮ್ಯಾಜಿಸ್ಟ್ರೇಟ್ಇದನ್ನು ಪರಿಶೀಲನೆ ಮಾಡಿ ತನಗೆ ಮನವರಿಕೆ ಆದರೆ ಮಾತ್ರ  ಬಂಧನ ಆದೇಶ ಹೊರಡಿಸಬೇಕು. *ಆರೋಪಿಯನ್ನು ಬಂಧಿಸುವ ಅಗತ್ಯ ಇಲ್ಲ ಎಂದಾದರೆ ಪ್ರಕರಣ ದಾಖಲಾಗಿ ಎರಡು ವಾರಗಳೊಳಗೆ ಬಗ್ಗೆ ಸಮರ್ಥನೆಗಳನ್ನು ಪೊಲೀಸ್ಅಧಿಕಾರಿಯು ಮ್ಯಾಜಿಸ್ಟ್ರೇಟ್ಗೆ ನೀಡಬೇಕು.  *ವಿಚಾರಣೆಗೆ ಹಾಜರಾಗುವಂತೆ ಪ್ರಕರಣ ದಾಖಲಾಗಿ ಎರಡು ವಾರಗಳೊಳಗೆ ಆರೋಪಿಗೆ ಕಾರಣಗಳಿರುವ  ನೋಟಿಸ್ನೀಡಬೇಕು. *ನಿರ್ದೇಶನಗಳನ್ನು ಪಾಲಿಸದ ಅಧಿಕಾರಿಗಳ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಬೇಕು ಮತ್ತು ನ್ಯಾಯಾಂಗ ನಿಂದನೆ ಅಡಿಯಲ್ಲಿಯೂ ಅವರು ಶಿಕ್ಷೆಗೆ ಒಳಗಾಗುತ್ತಾರೆ.  *ಕಾರಣಗಳನ್ನು ನೀಡದೆ ಆರೋಪಿಯನ್ನು ವಶಕ್ಕೆ ಪಡೆಯಲು ಆದೇಶ ನೀಡುವ ಮ್ಯಾಜಿಸ್ಟ್ರೇಟ್ವಿರುದ್ಧವೂ ಹೈಕೋರ್ಟ್‌  ಕ್ರಮ ಕೈಗೊಳ್ಳಬೇಕು.
2008: ನವದೆಹಲಿಯ ಕ್ಲಿನಿಕಲ್ ಹಂತದಲ್ಲಿ ಔಷಧಗಳನ್ನು ಪ್ರಯೋಗಾತ್ಮಕವಾಗಿ ಬಳಸಿದ್ದರಿಂದ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (ಏಮ್ಸ್) ಇದುವರೆಗೆ 49 ಹಸುಳೆಗಳು ಸತ್ತ ಬೆಚ್ಚಿ ಬೀಳಿಸುವಂತಹ ವಿಚಾರ ಬಹಿರಂಗಗೊಂಡಿತು. ಮಾಹಿತಿ ಹಕ್ಕು ಕಾಯ್ದೆಯ ಪ್ರಕಾರ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಏಮ್ಸ್ ಆಡಳಿತ ಮಂಡಳಿಯು, ಕಳೆದ ಎರಡೂವರೆ ವರ್ಷಗಳಲ್ಲಿ ಚಿಕಿತ್ಸೆಯ ವೇಳೆ 49 ಹಸುಳೆಗಳು ಸತ್ತಿವೆ ಎಂದು ತಿಳಿಸಿತು. ಮಂತ್ಲಿ ಇಂಡೆಕ್ಸ್ ಆಫ್ ಮೆಡಿಕಲ್ ಸ್ಪೆಷಾಲಿಟಿಸ್ ಪತ್ರಿಕೆಯ ಸಂಪಾದಕ ಚಂದ್ರ ಎಂ. ಗುಲ್ಹಾಟಿ ಈ ಬಗ್ಗೆ ಮಾಹಿತಿ ಕೋರಿದ್ದರು.

2007: ಆಗಸ್ಟ್ 8ರಂದು ಬಾಹ್ಯಾಕಾಶಕ್ಕೆ ತೆರಳಿದ್ದ ನಾಸಾದ `ಎಂಡೆವರ್' ಗಗನನೌಕೆ ವೇಳಾಪಟ್ಟಿಗಿಂತ ಒಂದು ದಿನ ಮುಂಚೆಯೇ ಈದಿನ ರಾತ್ರಿ 10 ಗಂಟೆಗೆ (ಮಧ್ಯಾಹ್ನ 12.32- ಅಮೆರಿಕ ಕಾಲಮಾನ) ಸುರಕ್ಷಿತವಾಗಿ ಧರೆಗಿಳಿಯಿತು. ಏಳು ಗಗನಯಾತ್ರಿಗಳನ್ನು ಹೊತ್ತ `ಎಂಡೆವರ್' ಕೆನಡಿ ಬಾಹ್ಯಾಕಾಶ ಕೇಂದ್ರದಲ್ಲಿ ಬಂದಿಳಿದಾಗ ನಾಸಾ ವಿಜ್ಞಾನಗಳ ಮುಖದಲ್ಲಿ ಸಂತಸ ಮಿನುಗಿತು.

2007: ಐಎಸ್ ಐ ದೇಶದ ಕಾನೂನು ಜಾರಿ ಮಾಡುವ ಸಂಸ್ಥೆಯಾಗಲಿ ಅಥವಾ ಸುಂಕ ಪ್ರಾಧಿಕಾರವಾಗಲಿ ಅಲ್ಲ. ದೇಶದ ಕಾನೂನಿನ ಅಡಿಯಲ್ಲಿ ಯಾರನ್ನೂ ಬಂಧಿಸುವ ಅಧಿಕಾರ ಆ ಸಂಸ್ಥೆಗಿಲ್ಲ ಎಂದು ಪಾಕಿಸ್ಥಾನದ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿತು. ಅಮೂಲ್ಯ ಹರಳುಗಳ ಕಳ್ಳ ಸಾಗಣೆ ಪ್ರಕರಣದಲ್ಲಿ ಐಎಸ್ ಐನಿಂದ ಬಂಧಿತರಾದ ಪಾಕಿಸ್ಥಾನ ಮೂಲದ ಜರ್ಮನ್ ಪ್ರಜೆ ಅಲೀಂ ನಾಸಿರ್ ಅವರ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ನೇತೃತ್ವದ ಸುಪ್ರೀಂ ಕೋರ್ಟ್ ಪೂರ್ಣಪೀಠವು ಈ ತೀರ್ಪು ನೀಡಿತು. ಅಲೀಂ ನಾಸಿರ್ ಅವರನ್ನು ಯಾವ ಕಾನೂನಿನಡಿ ಐಎಸ್ ಐ ಬಂಧಿಸಿದೆ ಎಂದು ಪ್ರಶ್ನಿಸಿರುವ ಸುಪ್ರೀಂ ಕೋರ್ಟ್, ತಕ್ಷಣ ಅವರನ್ನು ಬಿಡುಗಡೆ ಮಾಡಬೇಕು. ಪಾಸ್ ಪೋರ್ಟ್ ಮತ್ತಿತರ ದಾಖಲೆಗಳನ್ನು ಅವರಿಗೆ ವಾಪಸ್ ಕೊಡಬೇಕು. ಅವರು ಜರ್ಮನಿಗೆ ಮರಳಲು ಅವಕಾಶ ಕೊಡಬೇಕು ಎಂದು ಆದೇಶಿಸಿತು. ಮತ್ತೊಂದು ಪ್ರಕರಣದಲ್ಲಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಮೇಲೆ ದಾಳಿಗೆ ಸಿದ್ಧತೆ ನಡೆಸುತ್ತಿದ್ದ ಆರೋಪದ ಮೇಲೆ ಭದ್ರತಾ ಪಡೆಗಳಿಂದ 2004ರಲ್ಲಿ ಬಂಧಿತನಾಗಿದ್ದ ಹಫೀಜ್ ಅಬ್ದುಲ್ ಬಸಿತ್ ಎಂಬಾತನ ಬಿಡುಗಡೆಗೂ ಕೋರ್ಟ್ ಆದೇಶಿಸಿತು. ಈ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ತನಿಖಾ ಸಂಸ್ಥೆಯ ಮಹಾ ನಿರ್ದೇಶಕರಿಗೆ ಛೀಮಾರಿ ಹಾಕಿತ್ತು.

2007: ಕೇಂದ್ರದ ಮಾಜಿ ಸಚಿವ ಶಿಬು ಸೊರೇನ್ ಅವರನ್ನು ತಮ್ಮ ಆಪ್ತ ಕಾರ್ಯದರ್ಶಿ ಶಶಿನಾಥ್ ಝಾ ಅವರನ್ನು ಕೊಲೆ ಮಾಡಿದ ಆರೋಪದಿಂದ ದೆಹಲಿ ಹೈಕೋರ್ಟ್ ಖುಲಾಸೆಗೊಳಿಸಿತು. ಸೊರೇನ್ ವಿರುದ್ಧ 1994ರಲ್ಲಿ ನಡೆದ ಝಾ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಅಗತ್ಯ ಸಾಕ್ಷ್ಯಾಧಾರಗಳನ್ನು ಸಲ್ಲಿಸುವಲ್ಲಿ ಸಿಬಿಐ ವಿಫಲಗೊಂಡ ಹಿನ್ನೆಲೆಯಲ್ಲಿ ಹೈಕೋರ್ಟ್ ಆರೋಪಮುಕ್ತಗೊಳಿಸಿ ಆದೇಶ ಹೊರಡಿಸಿತು. ಸೊರೇನ್ ಮತ್ತು ಇತರ ನಾಲ್ವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ಕೆಳಹಂತದ ನ್ಯಾಯಾಲಯದ ಆದೇಶವನ್ನು ತಳ್ಳಿಹಾಕಿದ ನ್ಯಾಯಮೂರ್ತಿಗಳಾದ ಆರ್.ಎಸ್. ಸೋಧಿ ಮತ್ತು ಎಚ್.ಆರ್. ಮಲ್ಹೋತ್ರ ಅವರನ್ನೊಳಗೊಂಡ ನ್ಯಾಯಪೀಠವು, ಪ್ರಕರಣದಲ್ಲಿ ಸೊರೇನ್ ವಿರುದ್ಧ ಆರೋಪ ಸಾಬೀತುಪಡಿಸಲು ಸಿಬಿಐ ವಿಫಲವಾಗಿರುವುದಾಗಿ ತಿಳಿಸಿತು. ಪತ್ತೆಯಾದ ಶವ ಝಾ ಅವರದ್ದೆಂದು ಗುರುತಿಸಲು ಸಿಬಿಐ ವಿಫಲವಾಗಿರುವುದರಿಂದ ಈ ಮೊದಲು ನ್ಯಾಯಾಲಯ ನೀಡಿದ ತೀರ್ಪನ್ನು ರದ್ದುಗೊಳಿಸುವುದಾಗಿ ಹೇಳಿದ ನ್ಯಾಯಪೀಠ, ಇತರ ಆರೋಪಿಗಳಾದ ನಂದ ಕಿಶೋರ್ ಮೆಹ್ತಾ, ಶೈಲೇಂದ್ರ ಭಟ್ಟಾಚಾರ್ಯ, ಪಶುಪತಿನಾಥ ಹಾಗೂ ಅಜಯ್ ಕುಮಾರ್ ಮೆಹ್ತಾ ಅವರನ್ನು ಕೂಡಾ ಖುಲಾಸೆ ಮಾಡಿತು. ಕೆಳ ಹಂತದ ನ್ಯಾಯಾಲಯವು ಸಾಂದರ್ಭಿಕ ಸಾಕ್ಷ್ಯ ಮತ್ತು ಸಂಚಿನ ಆರೋಪದ ಮೇಲೆ ಸೊರೇನ್ ಮತ್ತು ಇತರ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಇದರಿಂದಾಗಿ ಕೇಂದ್ರ ಸಚಿವ ಸ್ಥಾನಕ್ಕೆ ಸೊರೇನ್ ರಾಜೀನಾಮೆ ಸಲ್ಲಿಸಬೇಕಾಗಿ ಬಂತು.

2007: ಕೆಲವು ದಿನಗಳಿಂದ ಮರಳು ಹಾಗೂ ಕಟ್ಟಡ ನಿರ್ಮಾಣ ಸಾಮಗ್ರಿ ಸಾಗಣೆದಾರರು ನಡೆಸುತ್ತಿದ್ದ ಮುಷ್ಕರ ಈದಿನ ರಾತ್ರಿ ಅಂತ್ಯಗೊಂಡಿತು. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ರಾಜ್ಯ ಲಾರಿ ಮಾಲೀಕರು ಹಾಗೂ ಏಜೆಂಟರುಗಳ ಸಂಘದ ಸದಸ್ಯರು ಸಾರಿಗೆ ಸಚಿವ ಎನ್.ಚೆಲುವರಾಯಸ್ವಾಮಿ ಅವರ ನಿವಾಸದಲ್ಲಿ ಸಮಾಲೋಚನೆ ನಡೆಸಿದ ಬಳಿಕ ಮುಷ್ಕರವನ್ನು ಕೈಬಿಡಲಾಯಿತು.

2006: ಪೂರ್ವ ಉಕ್ರೇನಿನಲ್ಲಿ 170 ಮಂದಿ ಪ್ರಯಾಣಿಕರಿದ್ದ ರಷ್ಯದ ವಿಮಾನವೊಂದು ನೆಲಕ್ಕೆ ಅಪ್ಪಳಿಸಿದೆ ಎಂದು ಇಂಟರ್ ಫಾಕ್ಸ್ ಸುದ್ದಿ ಸಂಸ್ಥೆ ವರದಿ ಮಾಡಿತು.

2006: ಪ್ರತ್ಯೇಕ ತೆಲಂಗಾಣ ರಾಜ್ಯದ ಬೇಡಿಕೆ ಈಡೇರಿಕೆ ವಿಚಾರದಲ್ಲಿ ಕಾಂಗ್ರೆಸ್ `ವಂಚಿಸಿದೆ' ಎಂದು ಆಪಾದಿಸಿ ಮುನಿಸಿಕೊಂಡ ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್ ಪಿಎಸ್) ಸದಸ್ಯರಾದ ಕೇಂದ್ರ ಕಾರ್ಮಿಕ ಸಚಿವ ಕೆ. ಚಂದ್ರಶೇಖರ ರಾವ್ ಮತ್ತು ಗ್ರಾಮೀಣಾಭಿವೃದ್ಧಿ ಖಾತೆ ಸಹಾಯಕ ಸಚಿವ ನರೇಂದ್ರ ಕೇಂದ್ರ ಸಂಪುಟಕ್ಕೆ ರಾಜೀನಾಮೆ ನೀಡಿದರು.

2006: ತನ್ನ ಇಚ್ಛೆಗೆ ವಿರುದ್ಧವಾಗಿ ಬೇರೆ ಕಡೆ ಕೆಲಸಕ್ಕೆ ಸೇರಿದ್ದಕ್ಕಾಗಿ ಹಸೀನಾ ಎಂಬ ಯುವತಿಯ ಮೇಲೆ 1999ರಲ್ಲಿ ಆಸಿಡ್ ಎರಚಿದ್ದ ಆಕೆಯ `ಪ್ರೇಮಿ' ಜೋಸೆಫ್ ರಾಡ್ರಿಗಸ್ ಗೆ ಕರ್ನಾಟಕ ಹೈಕೋರ್ಟ್ ಜೀವಾವಧಿ ಶಿಕ್ಷೆ ನೀಡಿದ್ದಲ್ಲದೆ ಯುವತಿಯ ಚಿಕಿತ್ಸಾ ವೆಚ್ಚ 5 ಲಕ್ಷ ರೂಪಾಯಿಗಳನ್ನೂ ಆತನೇ ಭರಿಸಬೇಕು ಎಂದು ಆದೇಶ ನೀಡಿತು. ದಾಳಿಗೆ ಒಳಗಾದ ವ್ಯಕ್ತಿ ಬದುಕಿರುವಾಗ ಇಂತಹ ಶಿಕ್ಷೆ ನೀಡಿದ್ದು ದೇಶದ ನ್ಯಾಯಾಂಗ ಇತಿಹಾಸದಲ್ಲೇ ಪ್ರಥಮ. 1999ರಲ್ಲಿ ಉತ್ತರ ಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಹಳದಿಪುರದಲ್ಲಿ ನಾಗಮ್ಮ ಎಂಬ ಯುವತಿಯ ಮೇಲೆ ನಡೆದ ಆಸಿಡ್ ದಾಳಿಯಲ್ಲಿ ಆಕೆ ಮೃತಳಾದ ಹಿನ್ನೆಲೆಯಲ್ಲಿ ಆರೋಪಿ ಶಿವಕುಮಾರ್ ಗೆ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು.

2006: ಬೆಂಗಳೂರಿನಲ್ಲಿ ನಡೆದ 10ನೇ ದಕ್ಷಿಣ ಏಷ್ಯಾ ಫೆಡರೇಷನ್ (ಎಸ್ಎಎಫ್) ಕ್ರೀಡಾಕೂಟದಲ್ಲಿ ಪಣಕ್ಕೆ ಇಡಲಾದ ಎಲ್ಲ ಏಳು ಸ್ವರ್ಣ ಪದಕಗಳನ್ನೂ ಭಾರತದ ಬ್ಯಾಡ್ಮಿಂಟನ್ ತಾರೆಯರು ಗೆದ್ದುಕೊಂಡರು.

2006: ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳಿಗೆ ಶೇಕಡಾ 27 ಮೀಸಲಾತಿ ನೀಡುವ ಸರ್ಕಾರದ ನಿಲುವನ್ನು ವಿರೋಧಿಸಿ ವೈದ್ಯಕೀಯ ವಿದ್ಯಾರ್ಥಿಗಳು ನವದೆಹಲಿಯ ರಸ್ತೆಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗೆ ಇಳಿದರು. ಇದರಿಂದಾಗಿ ವಿವಾದಾತ್ಮಕ ಮೀಸಲಾತಿ ಮಸೂದೆ ವಿರೋಧಿ ಚಳವಳಿಗೆ ಮತ್ತೆ ಚಾಲನೆ ದೊರೆಯಿತು.

2006: ವಿಜ್ಞಾನ ಮತ್ತು ಪರಿಸರ ಕೇಂದ್ರವು (ಸಿಎಸ್ ಇ) ನೀಡಿರುವ ವರದಿ `ಪೆಪ್ಸಿ' ಮತ್ತು `ಕೋಕಾಕೋಲಾ' ಕಂಪೆನಿಗಳ ತಂಪು ಪಾನೀಯಗಳಲ್ಲಿ ಕೀಟನಾಶಕ ಅಂಶ ಇರುವುದನ್ನು ಖಚಿತವಾಗಿ ಸಾಬೀತು ಪಡಿಸಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿತು.

1993: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಗುಂಡೂರಾವ್ (56) ನಿಧನರಾದರು.

1987: ವಿಮಾನ ಸಾಗಣೆ ಹಡಗು `ವಿರಾಟ್' ನೌಕಾದಳಕ್ಕೆ ಸೇರ್ಪಡೆಯಾಯಿತು.

1979: ರಾಷ್ಟ್ರಪತಿ ನೀಲಂ ಸಂಜೀವರೆಡ್ಡಿ ಅವರು 6ನೇ ಲೋಕಸಭೆಯನ್ನು ವಿಸರ್ಜಿಸಿದರು.

1967: ಅಮೆರಿಕದ ಗ್ರಂಥಿ ತಜ್ಞ ಗ್ರೆಗೊರಿ (ಗುಡ್ವಿನ್) ಪಿನ್ ಕಸ್ ತಮ್ಮ 64ನೇ ವಯಸ್ಸಿನಲ್ಲಿ ಮೃತರಾದರು. ಇವರ ಸಂಶೋಧನೆಗಳು ಮುಂದೆ ಮೊತ್ತ ಮೊದಲ ಪರಿಣಾಮಕಾರಿಯಾದ ಜನನ ನಿಯಂತ್ರಣ ಗುಳಿಗೆ (ಗರ್ಭ ನಿರೋಧಕ ಗುಳಿಗೆ) ಅಭಿವೃದ್ಧಿಗೆ ಮೂಲವಾದವು.

1945: ಸಾಮಾಜಿಕ, ವೈದ್ಯಕೀಯ, ನಿಘಂಟು ಹೀಗೆ ವಿವಿಧ ಪ್ರಾಕಾರಗಳಲ್ಲಿ ಸುಮಾರು 425ಕ್ಕೂ ಹೆಚ್ಚು ಸಣ್ಣ ಸಣ್ಣ ಕೃತಿಗಳನ್ನು ರಚಿಸಿರುವ ಬೆ.ಗೊ. ರಮೇಶ್ ಅವರು ಗೋವಿಂದರಾಜು- ರಾಧಮ್ಮ ದಂಪತಿಯ ಮಗನಾಗಿ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ದೊಡ್ಡ ಹನಸೋಗೆಯಲ್ಲಿ ಜನಿಸಿದರು.

1922: ಐರಿಷ್ ರಾಜಕಾರಣಿ ಮತ್ತು ಕ್ರಾಂತಿಕಾರಿ ಮೈಕೆಲ್ ಕೊಲಿನ್ಸ್ ಅವರು ಐರ್ಲೆಂಡಿನ ಕಾರ್ಕಿನಲ್ಲಿ ನಡೆದ ಘರ್ಷಣೆಯಲ್ಲಿ ರಿಪಬ್ಲಿಕನ್ ಉಗ್ರಗಾಮಿಗಳಿಂದ ಹತರಾದರು.

1907: ಮೇಡಂ ಭಿಕಾಜಿ ಕಾಮಾ ಅವರು ತಾವೇ ವಿನ್ಯಾಸಗೊಳಿಸಿದ ಭಾರತೀಯ ರಾಷ್ಟ್ರೀಯ ಧ್ವಜವನ್ನು ಜರ್ಮನಿಯ ಸ್ಟುಟ್ ಗರ್ಟಿನಲ್ಲಿ ನಡೆದ ಸೋಷಿಯಲಿಸ್ಟ್ ಕಾಂಗ್ರೆಸ್ಸಿನಲ್ಲಿ ಪ್ರದರ್ಶಿಸಿದರು. ವಿದೇಶದಲ್ಲಿ ಭಾರತೀಯ ಧ್ವಜವನ್ನು ಹೀಗೆ ಪ್ರದರ್ಶಿಸಿದ್ದು ಇದೇ ಮೊದಲು. ನಂತರ ಸಮಾಜವಾದಿ ನಾಯಕ ಇಂದುಲಾಲ್ ಯಾಜ್ಞಿಕ್ ಅವರು ಅದನ್ನು ರಹಸ್ಯವಾಗಿ ಭಾರತಕ್ಕೆ ತಂದರು. ಈಗ ಅದು ಪುಣೆಯ ಮರಾಠಾ ಮತ್ತು ಕೇಸರಿ ಲೈಬ್ರರಿಯಲ್ಲಿ ಪ್ರದರ್ಶಿತವಾಗಿದೆ.

1877: ಶ್ರೀಲಂಕಾ ಇತಿಹಾಸಕಾರ ಆನಂದ ಕೆಂಟಿಶ್ ಕೂಮಾರಸ್ವಾಮಿ (1877-1947) ಜನ್ಮದಿನ. ಭಾರತೀಯ ಕಲಾ ಇತಿಹಾಸಕಾರರಾದ ಇವರು ಭಾರತೀಯ ಸಂಸ್ಕೃತಿಯನ್ನು ಪಾಶ್ಚಾತ್ಯ ಜಗತ್ತಿಗೆ ಪರಿಚಯಿಸಿದ ಮುಂಚೂಣಿಯ ಇತಿಹಾಸಕಾರರು.

1846: ಅಮೆರಿಕದ ಜೊತೆ ನ್ಯೂಮೆಕ್ಸಿಕೊ ವಿಲೀನಗೊಂಡಿತು.

1647: ಡೆನಿಸ್ ಪಪಿನ್ (1647-1712) ಜನ್ಮದಿನ. ಫ್ರೆಂಚ್ ಸಂಜಾತ ಬ್ರಿಟಿಷ್ ಭೌತತಜ್ಞನಾದ ಈತ ಪ್ರೆಷರ್ ಕುಕ್ಕರನ್ನು ಸಂಶೋಧಿಸಿದ.

No comments:

Post a Comment