ಇಂದಿನ ಇತಿಹಾಸ History Today ಆಗಸ್ಟ್ 21
ಮುಂದುವರಿದು, ಪುರುಷರ ವಿಭಾಗದ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್ ನಲ್ಲಿ 16 ವರ್ಷದ ಸೌರಭ್ ಚೌಧರಿ ಚಿನ್ನದ ಪದಕ ತಮ್ಮ ಕೊರಳಿಗೆ ಏರಿಸಿಕೊಳ್ಳುವ ಮೂಲಕ ಇತಿಹಾಸ ಬರೆದರು. ಮತ್ತೊಬ್ಬ ಭಾರತೀಯ ಅಭಿಷೇಕ್ ವರ್ಮಾ ಏರ್ ಶೂಟಿಂಗ್ ನಲ್ಲಿ ಕಂಚಿನ ಪದಕ ಪಡೆದರು. ಚೌಧರಿ ರೈತನ ಮಗ: ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದ ಸೌರಭ ಉತ್ತರಪ್ರದೇಶ ಮೀರತ್ ನ ಹಳ್ಳಿ ಮೂಲದ ರೈತನ ಮಗ. 240.7 ಮೀಟರ್ ದೂರದವರೆಗೆ ಗುರಿ ಇಡುವ ಮೂಲಕ ಸೌರಭ್ ಚಿನ್ನದ ಪದಕ ಗೆದ್ದರೆ, ಜಪಾನ್ ನ 42 ವರ್ಷದ ಮಸೂಡಾ ಗುರಿ ತಪ್ಪುವ(239.7) ಮೂಲಕ ಬೆಳ್ಳಿ ಪದಕ್ಕಷ್ಟೇ ತೃಪ್ತಿಪಟ್ಟುಕೊಳ್ಳುವಂತಾಯಿತು.
2018: ಮಾಂಡ್ಸೌರ್: ಮಾಂಡ್ಸೌರ್ ನಲ್ಲಿ ಎಂಟರ ಹರೆಯದ ಬಾಲಕಿಯ ಮೇಲೆ ಅತ್ಯಾಚಾರ ನಡೆದ ಎರಡೇ ತಿಂಗಳಲ್ಲಿ ಮಧ್ಯಪ್ರದೇಶ ಸರ್ಕಾರ ರಚಿಸಿದ್ದ ವಿಶೇಷ ನ್ಯಾಯಾಲಯವು ಇಬ್ಬರು ತಪ್ಪಿತಸ್ಥರಿಗೆ ಮರಣದಂಡನೆಯನ್ನು ವಿಧಿಸಿತು. ವಿಶೇಷ ನ್ಯಾಯಾಧೀಶರಾದ ನಿಶಾ ಗುಪ್ತ ಅವರು ಇರ್ಫಾನ್ ಯಾನೆ ಭಯಿಯು (೨೦) ಮತ್ತು ಅಸಿಫ್ (೨೪) ಇಬ್ಬರೂ ಈ ಕ್ರೂರ ಅಪರಾಧದಲ್ಲಿ ತಪ್ಪಿತಸ್ಥರು ಎಂದು ತೀರ್ಪು ನೀಡಿ, ಭಾರತೀಯ ದಂಡ ಸಂಹಿತೆಗೆ (ಐಪಿಸಿ) ಹೊಸದಾಗಿ ಅಳವಡಿಸಲಾದ ೩೭೬ ಡಿಬಿ (೧೨ ವರ್ಷಗಳಿಗಿಂತ ಕೆಳಗಿನ ಮಹಿಳೆಯ ಮೇಲೆ ಒಬ್ಬ ಅಥವಾ ಹೆಚ್ಚು ವ್ಯಕ್ತಿಗಳಿಂದ ನಡೆಯುವ ಅತ್ಯಾಚಾರಕ್ಕೆ ಶಿಕ್ಷೆ) ಸೆಕ್ಷನ್ ಅಡಿಯಲ್ಲಿ ಅವರಿಬ್ಬರಿಗೂ ಮರಣ ದಂಡನೆ ವಿಧಿಸಿದರು. ಅಪಹರಣ ಅಪರಾಧಕ್ಕಾಗಿ ಇಬ್ಬರಿಗೂ ನ್ಯಾಯಾಲಯವು ೧೦ ವರ್ಷಗಳ ಸಜೆ ಮತ್ತು ಬಾಲಕಿಯ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದಕ್ಕಾಗಿ ಜೀವಾವಧಿ ಸಜೆಯನ್ನೂ ವಿಧಿಸಿತು. ಸಿಸಿಟಿವಿ ದೃಶ್ಯಾವಳಿ ಮತ್ತು ವಿಧಿ ವಿಜ್ಞಾನ ಪರೀಕ್ಷಾ ವರದಿಯನ್ನು ನ್ಯಾಯಾಲಯ ತನ್ನ ಪರಿಗಣನೆಗೆ ತೆಗೆದುಕೊಂಡಿತು. ಪ್ರಾಸೆಕ್ಯೂಷನ್ ೩೭ ಸಾಕ್ಷಿಗಳನ್ನು ನ್ಯಾಯಾಲಯದಲ್ಲಿ ಹಾಜರು ಪಡಿಸಿತ್ತು. ತೀರ್ಪಿನ ಬಳಿಕ ಅಪರಾಧಿಗಳನ್ನು ನ್ಯಾಯಾಲಯದಿಂದ ಹೊರಕ್ಕೆ ಒಯ್ಯುತ್ತಿರುವಾಗ ನ್ಯಾಯಾಲಯ ಕೊಠಡಿಯ ಹೊರಗೆ ಜನರ ಗುಂಪಿನ ಮಧ್ಯೆ ಇದ್ದ ವಿನಯ್ ಧುಲೆ ಎಂಬ ಹಿಂದೂ ಮಹಾಸಭಾ ಪದಾಧಿಕಾರಿಯೊಬ್ಬರು ಅಪರಾಧಿ ಅಸಿಫ್ ಮೆವ್ ಕಪಾಳಕ್ಕೆ ಭಾರಿಸಿದ ಘಟನೆಯೂ ಘಟಿಸಿತು. ೨೦೧೮ರ ಜೂನ್ ೨೬ರಂದು ಅಪ್ರಾಪ್ತ ಬಾಲಕಿಯ ಮೇಲೆ ನಡೆದ ಈ ಭೀಕರ ಅತ್ಯಾಚಾರ ಘಟನೆಯು ೨೦೧೨ರಲ್ಲಿ ನಡೆದಿದ್ದ ನಿರ್ಭಯ ಸಾಮೂಹಿಕ ಅತ್ಯಾಚಾರದ ಭೀಕರತೆಯ ನೆನಪು ಮರುಕಳಿಸುವಂತೆ ಮಾಡಿತ್ತು. ಪೊಲೀಸರ ಪ್ರಕಾರ ಬಾಲಕಿಯು ಶಾಲೆಯಿಂದ ಹೊರಬಂದು ತಂದೆಗಾಗಿ ಕಾಯುತ್ತಿದ್ದಾಗ ಅಪರಾಧಿ ಇರ್ಫಾನ್ ಆಕೆಗೆ ಆಮಿಷ ಒಡ್ಡಿ ನಿರ್ಜನ ಸ್ಥಳಕ್ಕೆ ಒಯ್ದಿದ್ದ. ಅಲ್ಲಿ ಆತ ಮತ್ತು ಅಸಿಫ್ ಆಕೆಯ ಮೇಲೆ ಲೈಂಗಿಕ ದಾಳಿ ನಡೆಸಿದ್ದರು. ಶಾಲೆಯ ಹೊರಭಾಗದಲ್ಲಿದ್ದ ಸಿಸಿಟಿವಿಯಿಂದಾಗಿ ಇವರು ಪತ್ತೆಯಾಗಿದ್ದರು. ಇಬ್ಬರೂ ಸೇರಿ ಬಾಲಕಿಯ ಗಂಟಲನ್ನೂ ಸೀಳಿದ್ದರು. ಬಳಿಕ ಸತ್ತಿದ್ದಾಳೆ ಎಂದು ಭಾವಿಸಿ ನಿರ್ಜನ ಸ್ಥಳದಲ್ಲಿ ಆಕೆಯನ್ನು ಎಸೆದು ಹೋಗಿದ್ದರು. ಬಳಿಕ ಬಾಲಕಿಗೆ ಚಿಕಿತ್ಸೆ ನೀಡಿದ್ದ ವೈದ್ಯರು ಆಕೆಯ ದೇಹದಲ್ಲಿ ಹಲವಾರು ಕಡೆ ಕಚ್ಚಿದ ಗುರುತುಗಳಿದ್ದವು, ಮೂಗಿಗೆ ತೀವ್ರ ಗಾಯವಾಗಿತ್ತು ಗುದನಾಳ ಹರಿದಿತ್ತು. ಆಕೆಯ ಗುಪ್ತಾಂಗಗಳಿಗೆ ಗಟ್ಟಿಯಾದ ವಸ್ತುವನ್ನು ತೂರಿಸಲಾಗಿತ್ತು ಎಂದು ವರದಿ ನೀಡಿದ್ದರು. ಬಾಲಕಿಯನ್ನು ಬದುಕಿಸಲು ವೈದ್ಯರು ಕೆಲವು ನರಗಳಿಗೆ ಮೂರು ಸರ್ಜರಿ ಮಾಡಬೇಕಾಗಿ ಬಂದಿತ್ತು. ಬಳಿಕ ಬಾಲಕಿ ಚೇತರಿಸಿದಳು. ಪ್ರಕರಣದ ಬಳಿಕ ಮಾಂಡ್ಸೌರ್ ನಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಪರಿಣಾಮವಾಗಿ ಕಾನೂನು ಸುವ್ಯವಸ್ಥೆ ಸಮಸ್ಯೆಯೂ ತಲೆದೋರಿತ್ತು. ಬೀದಿಗಳಿಗೆ ಇಳಿದಿದ್ದ ಪ್ರತಿಭಟನಕಾರರು ಮಾರುಕಟ್ಟೆ, ಶಾಲೆ, ಕಾಲೇಜುಗಳನ್ನು ಬಂದ್ ಮಾಡಿ ಆರೋಪಿಗಳನ್ನು ಶೀಘ್ರವಾಗಿಯೇ ಗಲ್ಲಿಗೇರಿಸಬೇಕು ಎಂದು ಆಗ್ರಹಿಸಿದ್ದರು. ರಾಜ್ಯ ಸರ್ಕಾರ ತತ್ ಕ್ಷಣವೇ ಡಿಎಸ್ ಪಿ ರಾಕೇಶ್ ಮೋಹನ ಶುಕ್ಲ ನೇತೃತ್ವದಲ್ಲಿ ಎಸ್ ಐಟಿ ರಚಿಸಿ ತನಿಖೆಗೆ ಆಜ್ಞಾಪಿಸಿತ್ತು. ಕೆಲವು ದುಷ್ಟ ಶಕ್ತಿಗಳು ಪ್ರಕರಣಕ್ಕೆ ಕೋಮುಬಣ್ಣ ನೀಡಲೂ ಯತ್ನಿಸಿದ್ದವು. ಆದರೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೂ ಅಪರಾಧಿಗಳಿಗೆ ಮರಣದಂಡನೆಯಾಗಬೇಕು ಎಂಬ ಆಗ್ರಹವನ್ನು ಬೆಂಬಲಿಸಿ, ’ಅತ್ಯಾಚಾರಿಗಳು ಭೂಮಿಗೆ ಭಾರ, ಅವರಿಗೆ ಬದುಕುವ ಹಕ್ಕಿಲ್ಲ’ ಎಂದು ಹೇಳಿದ್ದರು. ವಿಶೇಷ ನ್ಯಾಯಾಲಯದ ತೀರ್ಪನ್ನು ಶ್ಲಾಘಿಸಿದ ಗೃಹ ಸಚಿವ ಭೂಪೇಂದ್ರ ಸಿಂಗ್ ಅವರು ಇಂತಹ ತೀರ್ಪುಗಳು ರಾಜ್ಯದಲ್ಲಿ ಮಹಿಳೆಯರಲ್ಲಿ ಭದ್ರತೆಯ ಭಾವನೆ ಮೂಡಿಸಬಲ್ಲವು ಎಂದು ಹೇಳಿದರು.
2018: ತಿರುವಂತಪುರಂ: ಕೇರಳದ ಮರುನಿರ್ಮಾಣ ಪ್ರಯತ್ನಗಳಿಗೆ ೭೦೦
ಕೋಟಿ ರೂಪಾಯಿಗಳ ನೆರವಿನ ಭರವಸೆಯನ್ನು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಕೊಟ್ಟಿತು. ಅಬುಧಾಬಿಯ
ಯುವರಾಜ ಹಾಗೂ ಉಪ ಮುಖ್ಯ ಕಮಾಂಡರ್ ಶೇಖ್ ಮೊಹಮ್ಮದ್ ಬಿನ್ ಸೈಯದ್ ಅಲ್ ನಹ್ಯನ್ ಅವರು ಪ್ರಧಾನಿ ನರೇಂದ್ರ
ಮೋದಿ ಅವರಿಗೆ ಈ ವಿಚಾರವನ್ನು ತಿಳಿಸಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು
ಇಲ್ಲಿ ತಿಳಿಸಿದರು. ಈ ಉದಾರ ಕೊಡುಗೆಗಾಗಿ ವಿಜಯನ್ ಅವರು ಯುಎಇ ಅಧ್ಯಕ್ಷ ಶೇಖ್ ಖಲೀಫ ಬಿನ್ ಸೈಯದ್
ಅಲ್ ನಹ್ಯನ್, ಅಬುಧಾಬಿಯ ಯುವರಾಜ ಮತ್ತು ಉಪಾಧ್ಯಕ್ಷ ಹಾಗೂ ಪ್ರಧಾನಿ ಶೇಖ್ ಮೊಹಮ್ಮದ್ ಬಿನ್ ರಶೀದ್
ಅಲ್ ಮಕ್ತೌಮ್ ಅವರಿಗೆ ವಂದನೆಗಳನ್ನು ಸಲ್ಲಿಸಿದರು. ಕೇರಳ ಮರುನಿರ್ಮಾಣಕ್ಕೆ ನೆರವು ನೀಡುವ ತನ್ನ
ನಿರ್ಧಾರವನ್ನು ಯುಎಇ ಸರ್ಕಾರವು ಕೊಲ್ಲಿ ಮೂಲದ ಉದ್ಯಮಿ ಎಂ.ಎ. ಯೂಸುಫಾಲಿ ಅವರು ಯುವರಾಜನನ್ನು ಭೇಟಿ
ಮಾಡಿದ್ದಾಗ ತಿಳಿಸಿತ್ತು. ‘ಮಲಯಾಳಿಗರಿಗೆ ಕೊಲ್ಲಿಯು
ಎರಡನೇ ಮನೆ. ಮಲಯಾಳಿಗಳು ಮತ್ತು ಕೊಲ್ಲಿ ರಾಷ್ಟ್ರಗಳು ಆಳವಾದ ಭಾವನಾತ್ಮಕ ಬಾಂಧವ್ಯ ಹೊಂದಿವೆ’ ಎಂದು ಮುಖ್ಯಮಂತ್ರಿ ನುಡಿದರು.
2018: ಚೆನ್ನೈ: ಪ್ರವಾಹ ಪೀಡಿತ ಕೇರಳಕ್ಕೆ ನೀಡಲಾಗುತ್ತಿರುವ
ಸಣ್ಣಪುಟ್ಟ ನೆರವು ಕೂಡಾ ಗಮನ ಸೆಳೆಯಿತು. ೯ರ
ಹರೆಯದ ಪುಟ್ಟ ಬಾಲಕಿಯೊಬ್ಬಳು ನೀಡಿದ ಕೊಡುಗೆ ಬಿಕ್ಕಟ್ಟಿನ
ಸಮಯದ ಒಗ್ಗಟ್ಟಿನ ಸಂಕೇತವಾಗಿ ಪ್ರತಿಫಲಿಸಿತು. ತಮಿಳುನಾಡಿನ ವಿಲ್ಲುಪುರಂನ ಬಾಲಕಿ ಅನುಪ್ರಿಯ ನಾಲ್ಕು
ವರ್ಷಗಳಿಂದ ಬೈಸಿಕಲ್ ಖರೀದಿಸಬೇಕು ಎಂಬ ಆಶಯ ಇಟ್ಟುಕೊಂಡು ತನ್ನ ಪಿಗ್ಗಿ ಬ್ಯಾಂಕಿನಲ್ಲಿ ಉಳಿತಾಯ
ಮಾಡುತ್ತಾ ಬಂದಿದ್ದಳು. ಆದರೆ ಕೇರಳ ಮತ್ತು ಪ್ರವಾಹದಿಂದಾಗಿ ಕೇರಳದ ಜನ ಎದುರಿಸುತ್ತಿರುವ ಸಂಕಷ್ಟಗಳ
ಚಿತ್ರಗಳು ಆ ಪುಟ್ಟ ಹೃದಯವನ್ನು ತಟ್ಟಿದವು. ಆಕೆ ಬೈಸಿಕಲ್ ಕೊಳ್ಳುವ ಬದಲಿಗೆ ಆ ಹಣವನ್ನು ಇನ್ನಷ್ಟು
ಒಳ್ಳೆಯ ಕೆಲಸಕ್ಕಾಗಿ ಬಳಸಬೇಕು ಎಂದು ಮನಸ್ಸು ಮಾಡಿದಳು.
‘ನಾನು ಬೈಸಿಕಲ್ ಕೊಳ್ಳಬೇಕು ಎಂದು ನಾಲ್ಕು ವರ್ಷಗಳಿಂದ ಉಳಿತಾಯ ಮಾಡುತ್ತಾ ಬಂದಿದ್ದೆ. ಆದರೆ
ಕೇರಳದ ಪ್ರವಾಹ ಪರಿಸ್ಥಿತಿಯ ದೃಶ್ಯಾವಳಿಗಳನ್ನು ನೋಡಿದ ಬಳಿಕ ನಾನು ಆ ಹಣವನ್ನು ಕೇರಳಕ್ಕೆ ನೆರವಾಗಲು
ಕೊಡಬೇಕು ಎಂದು ನಿರ್ಧರಿಸಿದೆ’ ಎಂದು ಅನುಪ್ರಿಯ ಸುದ್ದಿ ಸಂಸ್ಥೆಗೆ ತಿಳಿಸಿದಳು.
ಟ್ವಿಟ್ಟರ್ ಬಳಕೆದಾರ ಎಥಿರಾಜನ್ಸ್ ಎಂಬವರು ಆಕೆಯ ಕೊಡುಗೆಯ ವಿಚಾರವನ್ನು ಮೊತ್ತ ಮೊದಲಿಗೆ ಬೆಳಕಿಗೆ
ತಂದರು. ’ತಮಿಳುನಾಡಿನ ವಿಲ್ಲುಪುರಂನ ಮಗು ಅನುಪ್ರಿಯ ಬೈಸಿಕಲ್ ಕೊಳ್ಳುವ ಸಲುವಾಗಿ ತಾನು ೪ ವರ್ಷಗಳಿಂದ
ಉಳಿತಾಯ ಮಾಡಿದ್ದ ೯೦೦೦ ರೂಪಾಯಿಗಳನ್ನು ಕೇರಳ ಪ್ರವಾಹ ಪರಿಹಾರಕ್ಕೆ ನೀಡಿದ್ದಾಳೆ’ ಎಂದು ಟ್ವೀಟ್ ಮಾಡಿದ ಅವರು ಟ್ವೀಟನ್ನು ನರೇಂದ್ರ ಮೋದಿ, ಭಾರತದ
ಗೃಹ ಸಚಿವರು ಮತ್ತು ತಮಿಳುನಾಡು ಮುಖ್ಯಮಂತ್ರಿಗೆ ಲಿಂಕ್ ಮಾಡಿದ್ದರು. ಮೈಕ್ರೋ ಬ್ಲಾಗಿಂಗಿನಲ್ಲಿ
ಪ್ರಕಟವಾದ ಪುಟ್ಟ ಬಾಲಕಿಯ ಕೊಡುಗೆ ಪ್ರತಿಯೊಬ್ಬರ ಹೃದಯ ತಟ್ಟಿತು. ಟ್ವೀಟ್ ಎರಡೇ ದಿನದಲ್ಲಿ ೨ ಸಾವಿರದಷ್ಟು
ರಿಟ್ವೀಟ್ ಆಯಿತು. ಬೈಸಿಕಲ್ ತಯಾರಕ ಕಂಪೆನಿ ಹೀರೋ ಸೈಕಲ್ಸ್ ಬಾಲಕಿಯ ಕೊಡುಗೆಯನ್ನು ಗಮನಿಸಿ ಆಕೆಯನ್ನು
ಅಚ್ಚರಿಗೊಳಿಸಲು ನಿರ್ಧರಿಸಿತು. ಹೀರೋ ಸೈಕಲ್ಸ್ ಖಾತೆಯ ಮೂಲಕ ಪೋಸ್ಟ್ ಮಾಡಲಾದ ಕಂಪೆನಿಯ ಟ್ವೀಟ್
’ಮಾನವೀಯತೆಗೆ ನೀಡಿದ ಆಕೆಯ ಕೊಡುಗೆ’ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ, ಹೊಚ್ಚ
ಹೊಸ ಸೈಕಲನ್ನು ಆಕೆಗೆ ನೀಡುವ ಭರವಸೆ ಕೊಟ್ಟಿತು. ಅನುಪ್ರಿಯ, ಅಗತ್ಯದ ಹೊತ್ತಿನಲ್ಲಿ ಮಾನವೀಯತೆಯನ್ನು
ಬೆಂಬಲಿಸಲು ನೀನು ಕೊಟ್ಟ ಕೊಡುಗೆಯನ್ನು ನಾವು ಮೆಚ್ಚುತ್ತೇವೆ. ನೀನು ನಮ್ಮಿಂದ ಒಂದು ಹೊಚ್ಚ ಹೊಸ
ಸೈಕಲ್ ಪಡೆಯುವೆ. ನಿನ್ನ ಸಂಪರ್ಕ ವಿಳಾಸವನ್ನು ಕೊಡು ಅಥವಾ ಕಸ್ಟಮರ್ @ಹೀರೋಸೈಕಲ್ಸ್. ಕಾಮ್ ನಲ್ಲಿ
ನಮ್ಮನ್ನು ಸಂಪರ್ಕಿಸು’ ಎಂದು ಹೀರೋ ಸೈಕಲ್ ಕಂಪೆನಿ ಟ್ವೀಟ್ ಮೂಲಕ
ಪ್ರತಿಕ್ರಿಯಿಸಿತು. ಹೀರೋ ಮೋಟಾರ್ಸ್ ಕಂಪೆನಿಯ ಅಧ್ಯಕ್ಷ
ಹಾಗೂ ಆಡಳಿತ ನಿರ್ದೇಶಕ ಪಂಕಜ್ ಎಂ ಮುಂಜಲ್ ಅವರು ಅನುಪ್ರಿಯಳನ್ನು ’ಉದಾತ್ತ ಆತ್ಮ’ ಎಂಬುದಾಗಿ ಶ್ಲಾಘಿಸಿ, ಆಕೆಯ ಬದುಕಿನುದ್ದಕ್ಕೂ ಪ್ರತಿವರ್ಷವೂ ಒಂದು
ಸೈಕಲ್ ಕೊಡುವ ಭರವಸೆ ಕೊಟ್ಟರು. ‘ಅನುಪ್ರಿಯ ನಿನಗೆ
ಪ್ರಣಾಮಗಳು. ನೀನು ಉದಾತ್ತ ಆತ್ಮ. ನೀನು ಉದಾತ್ತತೆಯನ್ನು ನಿನ್ನ ಸುತ್ತಮುತ್ತ ಪಸರಿಸುವಂತಾಗಲಿ ಎಂದು
ಹಾರೈಸುವೆ. ಹೀರೋ ನಿನ್ನ ಜೀವನದುದ್ದಕ್ಕೂ ಪ್ರತಿವರ್ಷವೂ ಒಂದು ಬೈಕ್ (ಸೈಕಲ್) ನೀಡಲು ಸಂತಸ ಪಡುತ್ತದೆ.
ನನ್ನ ಖಾತೆಗೆ ನಿನ್ನ ಸಂಪರ್ಕ ವಿಳಾಸವನ್ನು ಕಳಿಸು. ಪ್ರೀತಿ ಮತ್ತು ಶುಭ ಹಾರೈಕೆಯೊಂದಿಗೆ. ಕೇರಳಕ್ಕಾಗಿ
ಪ್ರಾರ್ಥನೆಗಳೊಂದಿಗೆ’ ಎಂಬುದಾಗಿ ಹೀರೋ ಸೈಕಲ್ ಅಧ್ಯಕ್ಷರು ಟ್ವೀಟ್
ಮಾಡಿದರು. ಹೀರೋ ಕಂಪೆನಿಯ ಕೊಡುಗೆಯನ್ನು ಕೇರಳದ ಕಾಂಗ್ರೆಸ್ ಸಂಸದ ಶಶಿ ತರೂರ್ ಟ್ವೀಟ್ ಮೂಲಕ ಶ್ಲಾಘಿಸಿದರು.
ಅನುಪ್ರಿಯಾಳ ಚಿತ್ರ ಸಹಿತವಾಗಿ ಆಕೆಯ ಕೊಡುಗೆ ಬಗ್ಗೆ ತಿಳಿಸುವ ಮೂಲಕ ಸಂದೇಶವಾಹಕನ ಪಾತ್ರ ವಹಿಸಿದ್ದಕ್ಕಾಗಿ
ಎಥಿರಾಜನ್ಸ್ ಅವರನ್ನು ಶ್ಘಾಘಿಸಿದರು. ಹೀರೋ ಅಧ್ಯಕ್ಷರು
ಅನುಪ್ರಿಯಾಗೆ ಕೇರಳ ಪ್ರವಾಹ ಪರಿಹಾರಕ್ಕಾಗಿ ಕೊಟ್ಟ ೯೦೦೦ ರೂಪಾಯಿಗಳನ್ನು ಹಿಂದಕ್ಕೆ ಕಳುಹಿಸುವ ಕೊಡುಗೆಯನ್ನೂ
ಮುಂದಿಟ್ಟರು. ಆದರೆ ಅನುಪ್ರಿಯಾಳ ತಂದೆ ಅದನ್ನು ನಿರಾಕರಿಸಿದರು. ಮಕ್ಕಳಲ್ಲಿ ಉಳಿತಾಯ ಪ್ರವೃತ್ತಿಯನ್ನು
ಬೆಳೆಸಿ ಎಂದು ಎಲ್ಲ ಪಾಲಕರಿಗೂ ಅವರು ಮನವಿ ಮಾಡಿದರು.
2018: ತಿರುವನಂತಪುರಂ: ೩೭೦ಕ್ಕೂ ಹೆಚ್ಚು ಜನರನ್ನು ಬಲಿತೆಗೆದುಕೊಂಡು,
ಸಹಸ್ರಾರು ಮಂದಿಯನ್ನು ನಿರ್ವಸಿತರನ್ನಾಗಿ ಮಾಡಿದ ಶತಮಾನದ ಭೀಕರ ಮಳೆ, ಪ್ರವಾಹ ಹಾವಳಿಯಿಂದ ತತ್ತರಿಸಿರುವ
ಕೇರಳದ ಪುನರ್ ನಿರ್ಮಾಣ ಸವಾಲು ಎದುರಿಸುವ ಬಗ್ಗೆ ಚರ್ಚಿಸಲು ಕೇರಳ ವಿಧಾನ ಮಂಡಲದ ವಿಶೇಷ ಅಧಿವೇಶನವನ್ನು
ಆಗಸ್ಟ್ ೩೦ ರಂದು ನಡೆಸಲು ಕೇರಳ ಸಚಿವ ಸಂಪುಟವು ನಿರ್ಧರಿಸಿತು. ಪುನರ್ ನಿರ್ಮಾಣ ಕಾರ್ಯಕ್ಕೆ ನಿಧಿ
ಕ್ರೋಡೀಕರಿಸುವ ಸಲುವಾಗಿ ರಾಜ್ಯ ಜಿಎಸ್ ಟಿ ಮೇಲೆ ಶೇಕಡಾ ೧೦ರಷ್ಟು ಸೆಸ್ ವಿಧಿಸಲೂ ಸಚಿವ ಸಂಪುಟವು
ತೀರ್ಮಾನಿಸಿತು. ಪುನರ್ ನಿರ್ಮಾಣ ಪ್ರಯತ್ನಗಳ ಬಗ್ಗೆ ಕಾರ್ಯಯೋಜನೆಗಳನ್ನು ರೂಪಿಸುವಂತೆ ಕೂಡಾ ಸಚಿವ
ಸಂಪುಟವು ಎಲ್ಲ ಇಲಾಖೆಗಳಿಗೆ ಸೂಚನೆ ನೀಡಿತು. ರಕ್ಷಣಾ
ಕಾರ್ಯಾಚರಣೆಯಿಂದ ಮರುನಿರ್ಮಾಣದತ್ತ ಸೇನೆ ಗಮನ: ಸಶಸ್ತ್ರ ಪಡೆಗಳು ಮಂಗಳವಾರ ಕೇರಳದಲ್ಲಿ ರಕ್ಷಣಾ
ಕಾರ್ಯಾಚರಣೆಯನ್ನು ಸ್ವಲ್ಪ ಕಡಿಮೆಗೊಳಿಸಿದ್ದು, ಪುನರ್ ನಿರ್ಮಾಣ ಕಾರ್‍ಯಗಳ ಕಡೆಗೆ ತನ್ನ ಚಿತ್ತವನ್ನು
ಹರಿಸಿವೆ. ರಾಜ್ಯದ ಹಲವಡೆಗಳಲ್ಲಿ ಇದೀಗ ಮಳೆ ಇಳಿಮುಖಗೊಂಡಿದ್ದು, ನೀರಿನ ಮಟ್ಟವೂ ತಗ್ಗಿತು. ಹಾನಿಗೊಂಡಿರುವ
ಮೂಲ ಸವಲತ್ತುಗಳ ಪುನರ್ ನಿರ್ಮಾಣ, ಮನೆಗಳನ್ನು ಕಳೆದುಕೊಂಡ ಲಕ್ಷಾಂತರ ಮಂದಿಗೆ ಹೊಸ ಮನೆಗಳ ನಿರ್ಮಾಣ
ಸೇರಿದಂತೆ ಬೃಹತ್ ಪ್ರಮಾಣದಲ್ಲಿ ಮರುನಿರ್ಮಾಣ ಕಾರ್‍ಯದ ಸವಾಲನ್ನು ರಾಜ್ಯವು ಎದುರಿಸಬೇಕಾಗಿರುವ ಹಿನ್ನೆಲೆಯಲ್ಲಿ
ಕೇಂದ್ರ ಸರ್ಕಾರವು ಕೇರಳ ಪ್ರವಾಹವನ್ನು ’ಕಠೋರ ಸ್ವರೂಪದ ವಿಪತ್ತು’ ಎಂಬುದಾಗಿ
ಘೋಷಿಸಿತ್ತು. ಮಳೆ, ಪ್ರವಾಹ ಹಾವಳಿಗೆ ಕೇರಳದ ಎಲ್ಲ ೧೪ ಜಿಲ್ಲೆಗಳಲ್ಲಿ ಮೇ ೩೦ರಿಂದ ಆಗಸ್ಟ್ ೨೧ರ
ಮಂಗಳವಾರದವರೆಗೆ ಒಟ್ಟು ೩೭೩ ಮಂದಿ ಸಾವನ್ನಪ್ಪಿದ್ದು, ಇತರ ೩೨ ಮಂದಿ ಕಣ್ಮರೆಯಾಗಿದ್ದಾರೆ ಎಂದು ರಾಷ್ಟ್ರೀಯ
ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ ಡಿಎಂಎ) ತಿಳಿಸಿತು. ಮಳೆ, ಪ್ರವಾಹ, ಭೂಕುಸಿತಗಳ ಪರಿಣಾಮವಾಗಿ
ಕೇರಳದಲ್ಲಿ ೫೪.೧೧ ಲಕ್ಷಕ್ಕೂ ಹೆಚ್ಚು ಮಂದಿ ತೊಂದರೆಗೆ ಒಳಗಾಗಿದ್ದು, ಮೇ ೩೦ರಿಂದ ಇಲ್ಲಿಯವರೆಗೆ
೧೨.೪೭ ಲಕ್ಷ ಮಂದಿಗೆ ೫,೬೪೫ ಪರಿಹಾರ ಶಿಬಿರಗಳಲ್ಲಿ ಆಶ್ರಯ ನೀಡಲಾಗಿದೆ. ಆಗಸ್ಟ್ ೮ರಂದು ಆರಂಭವಾದ ಜಡಿಮಳೆ, ಸೋಮವಾರದ ವೇಳೆಗೆ ಬಹುತೇಕ
ಕಡಿಮೆಯಾಗಿದ್ದು, ಮುಂದಿನ ದಿನಗಳಲ್ಲಿ ಸಾಧಾರಣ ಮಳೆ ಬೀಳಬಹುದು ಎಂದು ಹವಾಮಾನ ತಜ್ಞರು ನಿರೀಕ್ಷಿಸಿದ್ದಾರೆ.
ವಿದ್ಯುತ್, ನೀರು ಬಂತು: ಕೇರಳದ ಪ್ರವಾಹಗ್ರಸ್ತ ಭಾಗಗಳೆಲ್ಲಕ್ಕೂ ನೀರು ಮತ್ತು ವಿದ್ಯುತ್ ಇದೀಗ ಬಂದಿದ್ದು,
ಇನ್ನೂ ಅಗತ್ಯ ಸೇವೆಗಳು ಅಲಭ್ಯವಾಗಿರುವ ಸ್ಥಳಗಳಲ್ಲಿ ಅವುಗಳನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯದ
ಅಗತ್ಯ ಸೇವಾ ಇಲಾಖೆಗಳು ಕಾರ್ಯಮಗ್ನವಾಗಿವೆ. ಕಳೆದ ಕೆಲವು ದಿನಗಳಿಂದ ಪರಿಹಾರ ಶಿಬಿರಗಳಲ್ಲಿ ಆಶ್ರಯಪಡೆದಿದ್ದ
ಹಲವರು ಹಾನಿಯ ಪ್ರಮಾಣವನ್ನು ಪರಿಶೀಲಿಸುವ ಸಲುವಾಗಿ ತಮ್ಮ ಮನೆಗಳತ್ತ ತೆರಳಲು ಆರಂಭಿಸಿದ್ದು, ಪ್ರವಾಹದಿಂದ
ಉಂಟಾಗಿರುವ ಕಲ್ಮಶಗಳನ್ನು ನಿವಾರಿಸಿ, ಪರಿಸರ ಸ್ವಚ್ಛಗೊಳೀಸುವ ಕಾರ್ಯ ಆರಂಭಿಸಿದರು. ಪ್ರವಾಹ ಹಾವಳಿಯ
ಸಂದರ್ಭದಲ್ಲಿ ತೆರೆಯಲಾದ ೩೦೦೦ಕ್ಕೂ ಹೆಚ್ಚು ಪರಿಹಾರ ಶಿಬಿರಗಳ ಪೈಕಿ ಒಂದಾಗಿದ್ದ ಕೋಚಿಯ ಹೊರಗಿನ
ಯೂನಿಯನ್ ಕ್ರಿಶ್ಚಿಯನ್ ಕಾಲೇಜಿನ ಮೈದಾನದ ಹೊರಭಾಗ, ಶಾಲಾ ಕಟ್ಟಡದಲ್ಲಿ ನಿರ್ಮಿಸಲಾಗಿದ್ದ ಶಿಬಿರದಲ್ಲಿ
ವಾರದ ಹಿಂದೆ ಸುಮಾರು ೧೦,೦೦೦ ಜನರಿದ್ದರು. ಈದಿನ ಅದರಲ್ಲಿ ಸುಮಾರು ೧,೫೦೦ ಜನರಿದ್ದರು ಎಂದು ಮೂಲಗಳು
ತಿಳಿಸಿದವು. ತಮ್ಮ ನಾಲ್ವರು ಬಂಧುಗಳೊಂದಿಗೆ ಶಿಬಿರದಲ್ಲಿ ಆಶ್ರಯ ಪಡೆದಿದ್ದ ಅಬ್ದುಲ್ಲ ಅಲಿಯಾರ್
ಅವರು ಶಿಬಿರದಿಂದ ಕೆಲವು ಮೈಲುಗಳಷ್ಟು ದೂರದಲ್ಲಿರುವ ತಮ್ಮ ಮನೆಗೆ ಹೋಗಿದ್ದರು. ಅಲ್ಲಿನ ಪರಿಸ್ಥಿತಿ
ಕಂಡು ಅವರು ಭ್ರಮನಿರಸನಗೊಂಡರು. ‘ಅಲ್ಲಿ ನನ್ನ ಮೊಣಕಾಲಿನವರೆಗೆ
ಕೆಸರು ತುಂಬಿಕೊಂಡಿದೆ’ ಎಂದು ಅಬ್ದುಲ್ಲ ನುಡಿದರು. ಈ ಕಾರಣದಿಂದ
ಅವರು ಮತ್ತೆ ಪರಿಹಾರ ಶಿಬಿರಕ್ಕೆ ವಾಪಸಾದರು. ಮನೆಯಲ್ಲಿ ಕುಡಿಯುವ ನೀರಿಲ್ಲ, ವಿದ್ಯುತ್ತಿಲ್ಲ ಎಂದು
ಅವರು ನುಡಿದರು. ಮನೆಗೆ ಯಾವಾಗ ವಾಪಸಾಗುತ್ತೇವೋ ಎಂಬುದು ಅವರಿಗೆ ಇನ್ನೂ ಸ್ಪಷ್ಟವಿಲ್ಲ. ಕೋಯಿಕ್ಕೋಡಿನಲ್ಲಿ
ಪೊಲೀಸರ ಗುಂಪೊಂದು ಒಟ್ಟಾಗಿ ಸಕ್ಕರೆ, ಬೇಳೆಕಾಳು, ಅಕ್ಕಿ ಇತ್ಯಾಗಿ ಅಗತ್ಯ ವಸ್ತುಗಳ ೧೦೦೦ ಕಿಟ್
ತಯಾರಿಸಿ ಶಿಬಿರಗಳಿಂದ ತಮ್ಮ ಮನೆಗಳಿಗೆ ತೆರಳಿದವರಿಗೆ ವಿತರಿಸಿದರು. ಶೇಕಡಾ ೯೦ರಷ್ಟು ಜನರು ಜಿಲ್ಲೆಯಲ್ಲಿನ ತಮ್ಮ ಶಿಬಿರಗಳಿಂದ
ತಮ್ಮ ಮನೆಗಳಿಗೆ ತೆರಳಿದ್ದಾರೆ. ಹಲವಾರು ಜನರ ಸ್ಥಿತಿ ಅತ್ಯಂತ ಚಿಂತಾಜನಕವಾಗಿದೆ. ಈ ಕಾರಣದಿಂದ ಅವರಿಗೆ
ಆಹಾರದ ಕಿಟ್ ಗಳನ್ನು ವಿತರಿಸಲು ನಿರ್ಧರಿಸಲಾಯಿತು. ಈ ಬಾರಿ ಹಬ್ಬಗಳು ಹತ್ತಿರದಲ್ಲಿದ್ದರೂ ಆಚರಣೆ
ಸಾಧ್ಯತೆಗಳು ಇಲ್ಲ ಎಂದು ಪೊಲೀಸ್ ಅಧಿಕಾರಿಯೊಬ್ಬರು ನುಡಿದರು. ಅತ್ಯಂತ ಹೆಚ್ಚು ತೊಂದರೆಗೆ ಈಡಾಗಿರುವ ಚೆಂಗನ್ನೂರು ಪಟ್ಟಣದಲ್ಲಿ
ಮಂಗಳವಾರ ಕೂಡಾ ರಸ್ತೆಗಳಲ್ಲಿ ಎರಡು ಅಡಿಗಳಷ್ಟು ನೀರು ನಿಂತಿದೆ. ಪಟ್ಟಣದ ಸಹಸ್ರಾರು ಮಂದಿ ಜಲಾವೃತಗೊಂಡ
ತಮ್ಮ ಮನೆಗಳಲ್ಲೇ ಕಳೆದ ೧೦ ದಿನಗಳಿಂದ ಇದ್ದರು ಎಂದು ಸೇನಾ ತಂಡಗಳು ಹೇಳಿದವು. ಚೆಂಗನ್ನೂರು ಮತ್ತು
ಸುತ್ತುಮುತ್ತಣ ಪಟ್ಟಣಗಳು ಮತ್ತು ಗ್ರಾಮಗಳಲ್ಲಿ ಸಹಸ್ರಾರು ಮಂದಿ ಊಟಕ್ಕಾಗಿ ಸಮುದಾಯ ಅಡಿಗೆ ಕೋಣೆಗಳನ್ನು
ನೆಚ್ಚಿಕೊಂಡಿದ್ದರು. ಕಳೆದ ಕೆಲವು ದಿನಗಳಲ್ಲಿ ಜನರು ತಮ್ಮ ಎಲ್ಲವನ್ನೂ ಕಳೆದುಕೊಂಡಿದ್ದಾರೆ ಎಂದು
ಅಧಿಕಾರಿಯೊಬ್ಬರು ತಿಳಿಸಿದರು.
2018: ನವದೆಹಲಿ: ಪಾಕಿಸ್ತಾನದ ಪ್ರಧಾನಿಯಾಗಿ ಇಮ್ರಾನ್ ಖಾನ್
ಅವರು ಪ್ರಮಾಣವಚನ ಸ್ವೀಕರಿಸಿದ
ಸಮಾರಂಭದ ಸಂದರ್ಭದಲ್ಲಿ ಪಾಕಿಸ್ತಾನಿ ಸೇನಾ ಮುಖ್ಯಸ್ಥ ಜನರಲ್ ಖಮರ್
ಜಾವೇದ್ ಬಜ್ವಾ ಅವರನ್ನು ಆಲಿಂಗಿಸಿದ್ದಕಾಗಿ ತೀವ್ರ ಟೀಕೆಗೆ ಗುರಿಯಾಗಿರುವ ಪಂಜಾಬ್ ಸಚಿವ ನವಜೋತ್
ಸಿಂಗ್ ಸಿಧು ಅವರ ಬೆಂಬಲಕ್ಕೆ ಸ್ವತಃ ಇಮ್ರಾನ್ ಖಾನ್ ಅವರೇ ಬಂದರು. ತಮ್ಮ ಪ್ರಮಾಣವಚನ ಸಮಾರಂಭದಲ್ಲಿ
ಪಾಲ್ಗೊಂಡದ್ದಕ್ಕಾಗಿ ರಾಜಕಾರಣಿಯಾಗಿ ಪರಿವರ್ತನೆ ಗೊಂಡಿರುವ ಕ್ರಿಕೆಟಿಗನಿಗೆ ಧನ್ಯವಾದ ಸಲ್ಲಿಸಿದ
ಇಮ್ರಾನ್ ಖಾನ್ ’ಸಿಧು ಅವರನ್ನು ಗುರಿಯಾಗಿಟ್ಟುಕೊಂಡು ಟೀಕಿಸುತ್ತಿರುವವರು ಉಪಖಂಡದಲ್ಲಿನ ಶಾಂತಿಗೆ
ದೊಡ್ಡ ಕೆಡುಕು ಉಂಟು ಮಾಡುತ್ತಿದ್ದಾರೆ. ಶಾಂತಿ ಇಲ್ಲದೆ ನಮ್ಮ ಜನರು ಪ್ರಗತಿ ಸಾಧಿಸಲು ಸಾಧ್ಯವಿಲ್ಲ’ ಎಂದು ಅವರು ಹೇಳಿದರು.
ಸಿಧು ಕೂಡಾ ಪತ್ರಿಕಾಗೋಷ್ಠಿ ಕರೆದು ಆಲಿಂಗನವನ್ನು
ಬಜ್ವಾ ಮಾತಿನ ಬಳಿಕದ ’ಒಂದು ಭಾವನಾತ್ಮಕ ಕ್ಷಣ’ ಎಂದು ಬಣ್ಣಿಸಿದ್ದಾರೆ. ಬಜ್ವಾ ಅವರು ಕರ್ತಾರಪುರ
ಸಾಹಿಬ್ ನಲ್ಲಿ ಕಾರಿಡಾರ್ ತೆರೆಯಲು ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ನನ್ನ ಬಳಿ ಹೇಳಿದರು.
ಬಳಿಕದ ಘಟನೆ ಭಾವನಾತ್ಮಕ ಕ್ಷಣವಾಗಿತ್ತು ಎಂದು ಅವರು ನುಡಿದರು. ಸಿಧು ಹೇಳಿಕೆಯ ಬಳಿಕ ಬಿಜೆಪಿ ಅವರ
ಮೇಲೆ ಇನ್ನಷ್ಟು ಪ್ರಹಾರ ಮಾಡಿತು. ’ಪಾಕಿಸ್ತಾನಕ್ಕೆ ಬೆಂಬಲವಾಗಿ ಯಾರೊ ಒಬ್ಬರು ಪತ್ರಿಕಾಗೋಷ್ಠಿ
ನಡೆಸಿದ್ದಾರೆ ಎಂಬುದನ್ನು ನಂಬಲಾಗುತ್ತಿಲ್ಲ’ ಎಂದು ಬಿಜೆಪಿ ಹೇಳಿತು. ‘ಪಾಕಿಸ್ತಾನದ ಸೇನಾ
ಮುಖ್ಯಸ್ಥರು ಕರ್ತಾರಪುರ ಸಾಹಿಬ್ ನಲ್ಲಿ ಕಾರಿಡಾರ್ ತೆರೆಯಲು ಪ್ರಯತ್ನ ಮಾಡಲಾಗುತ್ತಿದೆ ಎಂದು ನನ್ನ
ಬಳಿ ಹೇಳಿದರು. ಆ ಬಳಿಕ ಘಟಿಸಿದ್ದು ಒಂದು ಭಾವನಾತ್ಮಕ ಕ್ಷಣ’ ಎಂದು
ಸಿಧು ನುಡಿದರು. ಪಾಕಿಸ್ತಾನದ ತಮ್ಮ ಭೇಟಿ ರಾಜಕೀಯವಲ್ಲ,
ಗೆಳೆಯನೊಬ್ಬನಿಂದ ಬಂದ ಆತ್ಮೀಯ ಆಮಂತ್ರಣದ ಸಲುವಾಗಿ ನೀಡಿದ ಭೇಟಿ ಎಂದೂ ಅವರು ನುಡಿದರು. ಸಿಧು ಅವರನ್ನು ಈ ಸ್ಪಷ್ಟನೆಗಾಗಿ ತರಾಟೆಗೆ ತೆಗೆದುಕೊಂಡ
ಬಿಜೆಪಿ ವಕ್ತಾರ ಸಂಬಿತ್ ಪತ್ರ ಅವರು ’ಸಿಧು ಅವರು ರಾಹುಲ್ ಗಾಂಧಿ ಅವರ ಅಣತಿಯಂತೆ ಪತ್ರಿಕಾಗೋಷ್ಠಿ
ನಡೆಸಿದ್ದಾರೆ. ನಮಗೆ ರಾಹುಲ್ ಗಾಂಧಿ ಅವರಿಂದ ಉತ್ತರ ಬೇಕು. ಬಜ್ವಾ ಅವರನ್ನು ಅಪ್ಪಿಕೊಂಡದ್ದು ಏಕೆ
ಎಂದು ವಿವರಿಸುವ ಬದಲು ಸಿಧು ಅವರು ಉಪನ್ಯಾಸ ನೀಡುತ್ತಿದ್ದಾರೆ. ಯಾರೋ ಒಬ್ಬ ವ್ಯಕ್ತಿ ಪಾಕಿಸ್ತಾನದ
ಪರವಾಗಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದಾರೆ ಎಂಬುದನ್ನು ನಂಬಲು ಆಗುತ್ತಿಲ್ಲ’ ಎಂದು ಅವರು ಹೇಳಿದರು. ಇಮ್ರಾನ್ ಖಾನ್ ಅವರ ಪ್ರಮಾಣವಚನ ಸ್ವೀಕಾರ
ಸಮಾರಂಭದಲ್ಲಿ ಪಾಲ್ಗೊಂಡದ್ದಕ್ಕಾಗಿ ವಿರೋಧ ಪಕ್ಷಗಳು ಪಂಜಾಬ್ ಸಚಿವನ ಮೇಲೆ ದಾಳಿ ನಡೆಸಿವೆ. ಆ ಹೊತ್ತಿನಲ್ಲಿ
ಗಡಿಯಲ್ಲಿ ಭಾರತೀಯ ಯೋಧರು ಬಲಿದಾನಗಳನ್ನು ಮಾಡಿದ್ದು ಸಚಿವರಿಗೆ ನೆನಪಿತ್ತೆ? ಎಂಬುದಾಗಿ ವಿರೋಧ ಪಕ್ಷಗಳು
ಚುಚ್ಚಿದವು. ‘ಸಿಧು ಅವರ ಪಾಕಿಸ್ತಾನ ಭೇಟಿ ನಾಚಿಕೆಗೇಡು’ ಎಂದು
ಪಂಜಾಬ್ ಬಿಜೆಪಿ ಮುಖ್ಯಸ್ಥ ಶ್ವೈತ್ ಮಲಿಕ್ ಹೇಳಿದರು. ‘ಒಂದೆಡೆಯಲ್ಲಿ ಪಾಕಿಸ್ತಾನಿ ಸೇನೆ ಗಡಿಯಲ್ಲಿ
ನಮ್ಮ ಯೋಧರ ಮೇಲೆ ದಾಳಿ ನಡೆಸುತ್ತಿದೆ. ಇನ್ನೊಂದೆಡೆಯಲ್ಲಿ ಸಿಧು ಅವರು ಪಾಕ್ ಸೇನಾ ಮುಖ್ಯಸ್ಥರನ್ನು
ತಬ್ಬಿಕೊಳ್ಳುತ್ತಿದ್ದಾರೆ. ನಮ್ಮ ಯೋಧರನ್ನು ಕೊಲ್ಲುತ್ತಿರುವುದಕ್ಕಾಗಿ ಅವರು ಧನ್ಯವಾದ ಸಲ್ಲಿಸುತ್ತಿದ್ದಾರೆ
ಎಂದು ಇದರ ಅರ್ಥವೇ?’ ಎಂದು ಮಲಿಕ್ ಕೇಳಿದರು. ಸಿಧು
ಅವರನ್ನು ಅವಕಾಶವಾದಿ ಎಂದು ಟೀಕಿಸಿದ ಮಲಿಕ್ ’ಅವರು ರಾಷ್ಟ್ರದ ಘನತೆಯನ್ನು ಅಪಾಯಕ್ಕೆ ಒಡ್ಡಿದ್ದಾರೆ’ ಎಂದು ಆಪಾದಿಸಿದರು. ಸ್ವೀಕರಿಸಲಾಗದ ಈ ಕೃತ್ಯಕ್ಕಾಗಿ ಸಿಧು ಕ್ಷಮೆ
ಕೇಳಬೇಕು ಎಂದು ಬಿಜೆಪಿ ನಾಯಕ ಆಗ್ರಹಿಸಿದರು.ಪಾಕಿಸ್ತಾನಕ್ಕೆ ಭೇಟಿ ನೀಡುವ ಮೂಲಕ ಸಿಧು ಅವರು ’ಸಭ್ಯತೆಯನ್ನು’ ಮುರಿದಿದ್ದಾರೆ ಎಂದು ಶಿರೋಮಣಿ ಅಕಾಲಿದಳ ಟೀಕಿಸಿತು. ‘ಇಡೀ ದೇಶವು
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನದ ಹಿನ್ನೆಲೆಯಲ್ಲಿ ಏಳು ದಿನಗಳ ಶೋಕಾಚರಣೆ ಮಾಡುತ್ತಿದೆ.
ಇಂತಹ ಸಮಯದಲ್ಲಿ ಯಾರೇ ಸಚಿವರು ವಿಧ್ಯುಕ್ತ ಸಮಾರಂಭಗಳಲ್ಲಿ ಪಾಲ್ಗೊಳ್ಳಬಾರದು. ಪಾಕಿಸ್ತಾನಕ್ಕೆ ಭೇಟಿ
ನೀಡುವ ಮೂಲಕ ಸಿಧು ಅವರು ಸಭ್ಯತೆಯನ್ನು ಮುರಿದಿದ್ದಾರೆ’ ಎಂದು
ಶಿರೋಮಣಿ ಅಕಾಲಿದಳದ ವಕ್ತಾರ ದಲ್ಜಿತ್ ಸಿಂಗ್ ಚೀಮಾ ಹೇಳಿದರು. ಪಾಕ್ ಆಕ್ರಮಿತ ಕಾಶ್ಮೀರದ ಅಧ್ಯಕ್ಷ
ಮಸೂದ್ ಖಾನ್ ಅವರ ಪಕ್ಕ ಕುಳಿತಿದ್ದ ಬಜ್ವಾ ಅವರನ್ನು ಸಿಧು ಅವರು ಅಪ್ಪಿಕೊಂಡದ್ದು, ಭಾರತೀಯ ಸಶಸ್ತ್ರ
ಪಡೆಗಳಿಗೆ ’ತಪ್ಪು ಸಂದೇಶ’ವನ್ನು ನೀಡಿದೆ ಎಂದು ಅವರು ನುಡಿದರು.
2018: ನವದೆಹಲಿ: ವರ್ಷದಲ್ಲಿ ಎರಡು ಬಾರಿ ನೀಟ್ ಆನ್ ಲೈನ್
ಮೂಲಕ ವೈದ್ಯಕೀಯ ಪ್ರವೇಶ ಪರೀಕ್ಷೆ ನಡೆಸುವ ತನ್ನ ಯೋಜನೆಯನ್ನು ಮಾನವ ಸಂಪನ್ಮೂಲ ಅಭಿವೃದ್ಧಿ (ಎಚ್
ಆರ್ ಡಿ) ಸಚಿವಾಲಯವು ಆರೋಗ್ಯ ಸಚಿವಾಲಯದ ಶಿಫಾರಸು ಮೇರೆಗೆ ರದ್ದು ಪಡಿಸಿತು. ಡಿಸೆಂಬರ್ ೨೦೧೮ ಮತ್ತು
ಮೇ ೨೦೧೯ರ ಮಧ್ಯಾವಧಿಯಲ್ಲಿ ನಡೆಯುವ ಪರೀಕ್ಷಾ ವೇಳಾಪಟ್ಟಿಯನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು
ಪರಿಷ್ಕರಿಸಿದ್ದು, ನೀಟ್ ಪರೀಕ್ಷೆಯು ೨೦೧೯ರ ಮೇ ೫ರಂದು ನಡೆಯಲಿದ್ದು, ಪೆನ್ ಮತ್ತು ಪೇಪರ್ ಬಳಸಿಯೇ
ಪರೀಕ್ಷೆ ನಡೆಸಲಾಗುವುದು. ಈ ಮೊದಲು ತಿಳಿಸಿದ್ದಂತೆ ಆನ್ ಲೈನ್ ಪರೀಕ್ಷೆ ಇರುವುದಿಲ್ಲ. ಆರೋಗ್ಯ ಮತ್ತು
ಕುಟುಂಬ ಕಲ್ಯಾಣ ಸಚಿವಾಲಯದ ಮನವಿ ಮೇರೆಗೆ ನೀಟ್ ಪರೀಕ್ಷಾ ವಿಧಾನದಲ್ಲಿ ಬದಲಾವಣೆ ಮಾಡಲಾಗಿದೆ. ಆರೋಗ್ಯ
ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಹಿಂದಿನ ವರ್ಷ ಇದ್ದಂತಹ ಪರೀಕ್ಷಾ ವಿಧಾನವನ್ನೇ ಉಳಿಸಿಕೊಳ್ಳಲು
ಬಯಸಿತ್ತು ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು ತಿಳಿಸಿದೆ. ಆದರೆ ಸಚಿವಾಲಯದ ಮನವಿಗೆ ಕಾರಣ ಏನು
ಎಂಬುದನ್ನು ಅದು ತಿಳಿಸಲಿಲ್ಲ. ಜುಲೈ ತಿಂಗಳಲ್ಲಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ್
ಅವರು ವೈದ್ಯಕೀಯ ಮತ್ತು ದಂತ ಪ್ರವೇಶ ಪರೀಕ್ಷೆಯನ್ನು, ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ
ನಡೆಸಲಾಗುವ ಜಂಟಿ ಪ್ರವೇಶ ಪರೀಕ್ಷೆಯ ಜೊತೆಗೆ ಹೊಸದಾಗಿ ರಚಿಸಲಾಗಿರುವ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ
(ಎನ್ ಟಿಎ) ಮೂಲಕ ವರ್ಷದಲ್ಲಿ ಎರಡು ಬಾರಿ ನಡೆಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರಕಟಿಸಿದ್ದರು.
ಎನ್ ಟಿಎ ನಡೆಸುವ ಎಲ್ಲ ಪರೀಕ್ಷೆಗಳು ಕಂಪ್ಯೂಟರ್ ಆಧಾರಿತವಾಗಿರುತ್ತವೆ ಎಂದೂ ಅವರು ಹೇಳಿದ್ದರು.
ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್)ಯನ್ನು ವರ್ಷಕ್ಕೆ ಎರಡು ಬಾರಿ ನಡೆಸುವುದರಿಂದ
ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಒತ್ತಡ ಬೀಳಬಹುದು ಎಂದು ಆರೋಗ್ಯ ಸಚಿವಾಲಯವು ಮಾನವ ಸಂಪನ್ಮೂಲ ಅಭಿವೃದ್ಧಿ
ಸಚಿವಾಲಯಕ್ಕೆ ಪತ್ರ ಬರೆದು ತಿಳಿಸಿತ್ತು ಎಂದು ಮೂಲಗಳು ಹೇಳಿದವು. ಗ್ರಾಮೀಣ ಪ್ರದೇಶಗಳಲ್ಲಿ ವಾಸವಾಗಿರುವ
ವಿದ್ಯಾರ್ಥಿಗಳಿಗೆ ಆನ್ ಲೈನ್ ಪರೀಕ್ಷೆ ನಡೆಸುವುದರಿಂದ ತೊಂದರೆಯಾಗುವ ಸಾಧ್ಯತೆಗಳಿವೆ ಎಂದೂ ಅದು
ಕಳವಳ ವ್ಯಕ್ತ ಪಡಿಸಿತ್ತು ಎಂದು ಮೂಲಗಳು ತಿಳಿಸಿದವು. ವರ್ಷದಲ್ಲಿ ಎರಡು ಬಾರಿ ಪ್ರವೇಶ ಪರೀಕ್ಷೆ
ನಡೆಸುವ ನಿರ್ಧಾರವನ್ನು ಕೆಲವು ವಿದ್ಯಾರ್ಥಿಗಳು ಸ್ವಾಗತಿಸಿದ್ದರೂ, ಇತರ ಹಲವರು ಎರಡು ಬಾರಿ ಪರೀಕ್ಷೆ
ನಡೆಸುವುದರಿಂದ ಎಂಟು ಬೇರೆ ಬೇರೆ ಪ್ರಶ್ನೆ ಪತ್ರಿಕೆಗಳ ಸೆಟ್ ಮಾಡಬೇಕಾಗುತ್ತದೆ. ಪರಿಣಾಮವಾಗಿ ಅದೃಷ್ಟ
ದೊಡ್ಡ ಪಾತ್ರ ವಹಿಸುವ ಸಾಧ್ಯತೆಗಳಿವೆ ಎಂದು ಅಭಿಪ್ರಾಯ ಪಟ್ಟಿದ್ದರು. ಸಂಪೂರ್ಣ ಆನ್ ಲೈನ್ ಪರೀಕ್ಷೆ
ನಡೆಸುವ ವಿಚಾರವೂ ತೀವ್ರ ಟೀಕೆಗೆ ಗುರಿಯಾಗಿತ್ತು. ಗ್ರಾಮಗಳ ವಿದ್ಯಾರ್ಥಿಗಳು ಕಂಪ್ಯೂಟರ್ ಸೌಲಭ್ಯಗಳಿಲ್ಲದ್ದರಿಂದ
ನಗರ ವಿದ್ಯಾರ್ಥಿಗಳ ಜೊತೆ ಸ್ಪರ್ಧಿಸಲು ಕಷ್ಟ ಎಂಬ ಭಾವನೆ ವ್ಯಕ್ತವಾಗಿತ್ತು. ಈ ವರ್ಷ ನೀಟ್ ಪರೀಕ್ಷೆಗೆ
ನೋಂದಣಿ ನವೆಂಬರ್ ೧ರಿಂದ ೩೦ರ ವರೆಗೆ ನಡೆಯಲಿದ್ದು, ಅಡ್ಮಿಟ್ ಕಾರ್ಡುಗಳನ್ನು ಏಪ್ರಿಲ್ ೧೫ರಂದು ಡೌನ್
ಲೋಡ್ ಮಾಡಿಕೊಳ್ಳಬಹುದು. ಫಲಿತಾಂಶ ೨೦೧೯ರ ಜೂನ್ ೫ರಂದು ಪ್ರಕಟಗೊಳ್ಳುವುದು ಎಂದು ಎನ್ ಟಿಎ ಪ್ರಕಟಣೆ
ತಿಳಿಸಿದ್ದವು. ಜಂಟಿ ಪ್ರವೇಶ ಪರೀಕ್ಷೆಯು (ಜೆಇಇ) ಈ ಮೊದಲೇ ಪ್ರಕಟಿಸಿದಂತೆ ವರ್ಷಕ್ಕೆ ಎರಡು ಬಾರಿ
ಜನವರಿ ೨೦೧೯ ಮತ್ತು ಏಪ್ರಿಲ್ ೨೦೧೯ರಂದು ನಡೆಯುವುದು. ಎನ್ ಟಿಎ ಯುಜಿಸಿ -ನೆಟ್, ಸಿ ಮ್ಯಾಟ್ ಮತ್ತು
ಜಿಪ್ಯಾಟ್ ಪರೀಕ್ಷಾ ದಿನಾಂಕಗಳನ್ನೂ ಪ್ರಕಟಸಿತು.
2016: ಬೀಜಿಂಗ್: ವಿಶ್ವದ ಅತಿ ಎತ್ತರದ ಮತ್ತು ಅತಿ ಉದ್ದದ ಗಾಜು ಸೇತುವೆಯನ್ನು ಚೀನಾ ದೇಶ ಲೋಕಾರ್ಪಣೆ ಮಾಡಿತು. ಹುನಾನ್ ಪ್ರಾಂತ್ಯದಲ್ಲಿ ನಿರ್ಮಾಣಗೊಂಡಿರುವ ಈ ಬೃಹತ್ ಸೇತುವೆಯನ್ನು ಎರಡು ಬೆಟ್ಟಗಳ ಮಧ್ಯೆ ನಿರ್ಮಿಸಲಾಗಿದೆ. 1,410 ಅಡಿ (430 ಮೀಟರ್) ಸಮುದ್ರಮಟ್ಟದಿಂದ ಎತ್ತರದಲ್ಲಿ ಈ ಸೇತುವೆ ನಿರ್ಮಿಸಲಾಗಿದೆ. ಪ್ರವಾಸಿಗರ ಆಕರ್ಷಣೆಗೆ ತಯಾರಾಗಿರುವ ಸೇತುವೆಯಲ್ಲಿ ಮೂರು ಪದರ ಗಾಜಿನ ಕೋಟಿಂಗ್ ಇದ್ದು, ಇದರ ಮೇಲೆ ನಡೆದುಕೊಂಡು ಆಳದ ಭೂಮಿಯ ವೀಕ್ಷಣೆ ಮಾಡುವುದು ರೋಮಾಂಚನ ಎಂದು ಬಣ್ಣಿಸಲಾಗಿದೆ. ‘ಅವತಾರ್’ ಎಂಬ ಹಾಲಿವುಡ್ನ ಸೂಪರ್ಹಿಟ್ ಚಿತ್ರದ ಕೆಲಭಾಗವನ್ನು ಇದೇ ತಿಯಾನ್ಮನ್ ಮೌಂಟೇನ್ ನ್ಯಾಷನಲ್ ಪಾರ್ಕ್ ಬೆಟ್ಟದ ತಪ್ಪಲಲ್ಲಿ ಶೂಟಿಂಗ್ ಮಾಡಲಾಗಿತ್ತು ಎಂಬುದು ವಿಶೇಷ. ಕಳೆದ ಜೂನ್ನಲ್ಲಿ ರಕ್ಷಣೆ ಪರೀಕ್ಷೆ ನಡೆಸಿದ್ದ ಚೀನಾ ಇದೀಗ ಸೇತುವೆಯನ್ನು ಸಾರ್ವಜನಿಕ ವೀಕ್ಷಣೆಗೆ ಅನುವು ಮಾಡಿಕೊಡಲಾಯಿತು.
2016: ಡೆಹ್ರಾಡೂನ್: ಉತ್ತರಾಖಂಡದ ಪೌರಿ ಪ್ರದೇಶದಲ್ಲಿ ಸುರಿದ ಭಾರಿ ಮಳೆಗೆ ಕನಿಷ್ಠ 7 ಜನ ಮೃತರಾಗಿ ಹಲವರು ಗಾಯಗೊಂಡರು. ಮೃತರೆಲ್ಲರೂ ಒಂದೇ ಕುಟುಂಬದವರಾಗಿದ್ದಾರೆ ಎಂದು ಪೊಲೀಸರು ತಿಳಿಸಿದರು. ರಾಜ್ಯ ಪೊಲೀಸ್ ಮತ್ತು ನೆರೆ ಸಂತ್ರಸ್ಥರ ರಕ್ಷಣಾ ಪಡೆ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಚರಣೆ ಪ್ರಗತಿಯಲ್ಲಿದೆ. ಮಾಕೋಲ ಮತ್ತು ಗರ್ವಾಲ್ ಪ್ರದೇಶದಲ್ಲಿ ಮನೆ ಮಾಡಿಕೊಂಡಿದ್ದ ಕುಟುಂಬದ ಮೇಲೆ ಮೇಘಸ್ಪೋಟಕ್ಕೆ ಸಿಡಿದ ಬೃಹತ್ ಬಂಡೆಕಲ್ಲು ಹರಿದು ಮನೆ ಧ್ವಂಸಗೊಳಿಸಿತು. ದೀಪಕ್ ಸಿಂಗ್ ಎಂಬುವರ ಕುಟುಂಬ ಇಲ್ಲಿ ನೆಲೆಸಿತ್ತು ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಚಂದ್ರಶೇಖರ್ ಭಟ್ ತಿಳಿಸಿದರು.
2016: ಶಿವಮೊಗ್ಗ: ರಾಜ್ಯದ ಅತ್ಯಂತ ಹಿರಿಯ ಹುಲಿ ಎಂದೇ ಕರೆಯಲಾಗುತ್ತಿದ್ದ ಕೃತಿಕಾ (19) ಈದಿನ ಬೆಳಗ್ಗೆ ಶಿವಮೊಗ್ಗದ ತಾವರೆಕೊಪ್ಪ ಹುಲಿಸಿಂಹಧಾಮದಲ್ಲಿ ಸಾವನ್ನಪ್ಪಿತು. ಕಳೆದ ಕೆಲವು ದಿನಗಳಿಂದ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದರು. ಕೃತಿಕಾ ಹುಲಿಸಿಂಹಧಾಮದ ಸಫಾರಿಯಲ್ಲಿಯೇ ಜನಿಸಿ ಸಾವಿರಾರು ಪ್ರಾಣಿಪ್ರಿಯರ ಮೆಚ್ಚುಗೆಯನ್ನು ಗಳಿಸಿಕೊಂಡಿತ್ತು. ಸಹಸ್ರಾರು ಮಂದಿ ಕೃತಿಕಾ ಫೋಟೊಗಳನ್ನೂ ಸೆರೆಹಿಡಿದುಕೊಂಡಿದ್ದಾರೆ. ತನ್ನ ಜೀವಿತಾವಧಿಯಲ್ಲಿ 10 ಮರಿಗಳಿಗೆ ಜನ್ಮ ನೀಡಿರುವ ಹುಲಿ ಕೃತಿಕಾ ಇನ್ನು ನೆನಪು ಮಾತ್ರ. ಡಿಎಫ್ಒ ಶಿವಶಂಕರ್ ಸ್ಥಳಕ್ಕೆ ಭೇಟಿ ನೀಡಿ, ಪಂಚನಾಮೆ ಮಾಡಿದರು.
2016: ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿನ ಕುಪ್ವಾರ ವಿಭಾಗದ ತಂಗ್ಧರ್ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವಣ ಭಾರಿ ಗುಂಡಿನ ಘರ್ಷಣೆ ಕೊನೆಗೊಂಡಿತು. ಘರ್ಷಣೆಯಲ್ಲಿ ಮೂವರು ಭಯೋತ್ಪಾದಕರು ಸೇನಾ ಯೋಧರ ಗುಂಡಿಗೆ ಬಲಿಯಾದರು. ಸಾವನ್ನಪ್ಪಿದ ಮೂವರು ಭಯೋತ್ಪಾದಕರು ಆಗಸ್ಟ್ 19ರಂದು ಬಿಎಸ್ಎಫ್ ಸಿಬ್ಬಂದಿ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಷಾಮೀಲಾಗಿದ್ದರು ಎನ್ನಲಾಯಿತು. ಈ ದಾಳಿಯಲ್ಲಿ ಮೂವರು ಬಿಎಸ್ಎಫ್ ಸಿಬ್ಬಂದಿ ಗಾಯಗೊಂಡಿದ್ದರು. ಶಸ್ತ್ರಾಸ್ತ್ರಗಳು ಮತ್ತು ಮದ್ದು ಗುಂಡಿನಂತಹ ವಸ್ತುಗಳನ್ನು ದಾಳಿಕೋರರಿಂದ ವಶ ಪಡಿಸಿಕೊಳ್ಳಲಾಗಿತ್ತು. ಮೂವರು ಭಯೋತ್ಪಾದಕರು ಅವಿತುಕೊಂಡು ಭದ್ರತಾ ಪಡೆಗಳ ಜೊತೆಗೆ ಗುಂಡಿನ ಘರ್ಷಣೆಯಲ್ಲಿ ನಡೆಸಿದರು ಎಂದು ವರದಿಗಳು ತಿಳಿಸಿವೆ. ಭಯೋತ್ಪಾದಕರ ಗುಂಡಿನ ದಾಳಿಗೆ ಭಾರತೀಯ ಸೇನೆಯ 4 ಪ್ಯಾರಾ ಕಮಾಂಡೋಗಳು ತಕ್ಕ ಉತ್ತರ ನೀಡಿದರು. ಭಯೋತ್ಪಾದಕರು ತಪ್ಪಿಸಿಕೊಂಡು ಪರಾರಿಯಾಗದಂತೆ ಎಲ್ಲಾ ಕಡೆಯಿಂದಲೂ ಪ್ರದೇಶವನ್ನು ದಿಗ್ಬಂಧನಕ್ಕೆ ಒಳಪಡಿಸಲಾಗಿತ್ತು. ಜೂನ್ ತಿಂಗಳಲ್ಲಿ ನಿಯಂತ್ರಣ ರೇಖೆಯ ಬಳಿ ತಂಗ್ಧರ್ ವಿಭಾಗದಲ್ಲಿ ಇಬ್ಬರು ಉಗ್ರಗಾಮಿಗಳು ನುಸುಳಲು ನಡೆಸಿದ್ದ ಯತ್ನವನ್ನು ಸೇನೆ ವಿಫಲಗೊಳಿಸಿತ್ತು. ಕಳೆದ ಮೂರು ದಿನಗಳ ಅವಧಿಯಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ನಡೆದ ನುಸುಳಿವಿಕೆ ಯತ್ನವನ್ನು ವಿಫಲಗೊಳಿಸಿದ ಎರಡನೇ ಪ್ರಯತ್ನ ಇದಾಗಿತ್ತು.
2016: ಚೆನ್ನೈ: ತಮಿಳು ಚಿತ್ರರಂಗದ ಹಿರಿಯ ನಟ ಕಮಲ್ಹಾಸನ್ ಪ್ರತಿಷ್ಠಿತ ಫ್ರೆಂಚ್ ಗೌರವ ಷೆವಾಲಿಯಾರ್ ಪ್ರಶಸ್ತಿಗೆ ಆಯ್ಕೆಯಾದರು. ಚಿತ್ರ ರಂಗದಲ್ಲಿನ ಅವರ ಅಮೋಘ ಸೇವೆಯನ್ನು ಪರಿಗಣಿಸಿ ಕಮಲ್ ಹಾಸನ್ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಪ್ರಾನ್ಸ್ನ ಸಂಸ್ಕೃತಿ ಮತ್ತು ಸಂವಹನ ಇಲಾಖೆಯಿಂದ ನೀಡಲ್ಪಡುವ ಷೆವಾಲಿಯಾರ್ ಪ್ರಶಸ್ತಿಗೆ ಕಮಲ್ ಹಾಸನ್ ಆಯ್ಕೆಯಾಗಿದ್ದಾರೆ ಎಂದು ಕಮಲ್ ಹಾಸನ್ ಅವರ ವಕ್ತಾರರು ತಿಳಿಸಿದರು. ಪ್ರಶಸ್ತಿಯನ್ನು ಮುಂಬರುವ ವಿಶೇಷ ಸಮಾರಂಭದಲ್ಲಿ ಕಮಲ್ ಸ್ವೀಕರಿಸಲಿದ್ದಾರೆ. ಫ್ರಾನ್ಸ್ ಸರ್ಕಾರದಿಂದ ನೀಡಲಾಗುವ ಈ ಪ್ರಶಸ್ತಿಗೆ ಆಯ್ಕೆಯಾದ ಎರಡನೇ ತಮಿಳು ಚಿತ್ರ ನಟರಾಗಿದ್ದಾರೆ ಕಮಲ್ ಹಾಸನ್. ಈ ಹಿಂದೆ 1995ರಲ್ಲಿ ತಮಿಳು ಚಿತ್ರ ನಟ ಶಿವಾಜಿ ಗಣೇಶನ್ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದರು.
2016: ನವದೆಹಲಿ: ಅಕ್ಷಯ್ ಕುಮಾರ್ ಅಭಿನಯದ ರುಸ್ತುಂ ಚಿತ್ರ ಗಳಿಕೆಯಲ್ಲಿ ಕಮಾಲ್ ಮಾಡಿದ್ದು, ಇದೀಗ 100 ಕೋಟಿ ರೂ. ಕ್ಲಬ್ಗೆ ಸೇರ್ಪಡೆಯಾಗುವ ಮೂಲಕ ಸಿನಿ ಪಂಡಿತರ ಲೆಕ್ಕಾಚಾರವನ್ನು ಬುಡಮೇಲು ಮಾಡಿತು. ಇದೇ ಮೊದಲ ಬಾರಿ ಅಕ್ಷಯ್ ಕುಮಾರ್ ನೌಕಾಧಿಕಾರಿಯಾಗಿ ತೆರೆ ಮೇಲೆ ಕಾಣಿಸಿಕೊಂಡಿರುವುದು ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು. ಕಿಲಾಡಿ ಖ್ಯಾತಿಯ ಅಕ್ಷಯ್ ಅವರಿಗೆ ಇಲಿಯಾನಾ ಡಿಸೋಜಾ ಹಾಗೂ ಇಷಾ ಗುಪ್ತಾ ನಾಯಕಿಯರಾಗಿ ಸಾಥ್ ನೀಡಿದ್ದರು. ಕೇವಲ ಒಂಭತ್ತು ದಿನಗಳಲ್ಲಿ 100 ಕೋಟಿ ರೂ. ಸಂಪಾದಿಸಿದ ಸಾಧನೆಯನ್ನು ಈ ಚಿತ್ರ ಮಾಡಿತು. ಈ ಚಿತ್ರ ಬಿಡುಗಡೆ ಗೊಂಡ ದಿನವೇ ಹೃತಿಕ್ ರೋಷನ್ ಹಾಗೂ ಪೂಜಾ ಹೆಗಡೆ ಅಭಿನಯದ ಮೊಹೆಂಜೊದಾರೊ ಚಿತ್ರ ಕೂಡ ತೆರೆಕಂಡಿತ್ತು. ಈ ವರ್ಷ ಅಕ್ಷಯ್ ಕುಮಾರ್ ಅವರ ಮೂರು ಚಿತ್ರಗಳು ನೂರು ಕೋಟಿ ಕ್ಲಬ್ ಸೇರ್ಪಡೆಯಾದ ಸಾಧನೆ ಮಾಡಿದವು. ಏರ್ಲಿಫ್ಟ್ 231 ಕೋಟಿ ರೂ. ಹಾಗೂ ಹೌಸ್ಫುಲ್ 3 ಚಿತ್ರ 188 ಕೋಟಿ ರೂ. ಸಂಪಾದನೆ ಮಾಡಿತ್ತು.
2016: ನವದೆಹಲಿ: ಉದ್ದೀಪನ ಸೇವನೆ ಪ್ರಕರಣದಲ್ಲಿ ಭಾರತದ ಪೈಲ್ವಾನ್ ನರಸಿಂಗ್ ಯಾದವ್ಗೆ 4 ವರ್ಷ ನಿಷೇಧ ಹೇರಿದ ಕ್ರಮವನ್ನು ಖಂಡಿಸಿದ ಭಾರತೀಯ ರೆಸ್ಲಿಂಗ್ ಫೆಡರೇಶನ್ನ ಅಧ್ಯಕ್ಷ ಬ್ರಜ್ ಭೂಷಣ್ ಶರಣ್ ಸಿಂಗ್ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಲು ಆಗ್ರಹಿಸಿದರು. ಉದ್ದೀಪನ ಸೇವನೆ ಪ್ರಕರಣದಲ್ಲಿ ನರಸಿಂಗ್ ಯಾದವ್ಗೆ ಈ ಹಿಂದೆ ಕ್ಲೀನ್ ಚೀಟ್ ನೀಡಿದ್ದರ ವಿರುದ್ಧ ವಿಶ್ವ ಉದ್ದೀಪನ ನಿಗ್ರಹ ಘಟಕ (ವಾಡಾ) ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಶೀಲಿಸಿದ ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯ (ಸಿಎಎಸ್) ನರಸಿಂಗ್ ಯಾದವ್ಗೆ 4 ವರ್ಷ ನಿಷೇಧ ಶಿಕ್ಷೆ ವಿಧಿಸಿತ್ತು. ಇದರಿಂದ ನರಸಿಂಗ್ ಯಾದವ್ ರಿಯೋ ಒಲಿಂಪಿಕ್ಸ್ನ 75 ಕೆಜಿಯ ಫ್ರಿಸ್ಟೈಲ್ ಕುಸ್ತಿಯಲ್ಲಿ ಸ್ಪರ್ಧಿಸುವ 12 ಗಂಟೆ ಮೊದಲು ಅವಕಾಶವನ್ನು ಕಳೆದುಕೊಂಡಿದ್ದರು.
2016: ನವದೆಹಲಿ: ದೆಹಲಿಯಲ್ಲಿರುವ 320 ಎಕರೆ ವಿಸ್ತೀರ್ಣದ ರಾಷ್ಟ್ರಪತಿ ಭವನದ ಆವರಣ ಸೊಳ್ಳೆಗಳ ಉತ್ಪಾದನಾ ತಾಣವಾಗಿದೆ ಎಂದು ನವದೆಹಲಿ ಮಹಾನಗರ ಪಾಲಿಕೆ ರಾಷ್ಟ್ರಪತಿ ಭವನಕ್ಕೆ ಕಳೆದ ಜನವರಿಯಿಂದ 52 ನೋಟಿಸ್ಗಳನ್ನು ನೀಡಿದದು ಬೆಳಕಿಗೆ
ಬಂತು. ನವದೆಹಲಿಯಲ್ಲಿ ಡೆಂಘೆ ಜ್ವರದ ಪ್ರಕರಣಗಳು ತೀವ್ರವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದೆಹಲಿ ಮಹಾನಗರ ಪಾಲಿಕೆ ಹಲವು ಕಾರ್ಯಕ್ರಮಗಳನ್ನು ರೂಪಿಸಿದೆ. ಅದರ ಭಾಗವಾಗಿ ಸೊಳ್ಳೆಗಳು ಹೆಚ್ಚಾಗಿ ಉತ್ಪತ್ತಿಯಾಗುತ್ತಿರುವ ಸ್ಥಳಗಳನ್ನು ಗುರುತಿಸಿ ಅಲ್ಲಿ ಸ್ವಚ್ಛತಾ ಕಾರ್ಯ ನಡೆಸುವ ಕೆಲಸಕ್ಕೆ ಮಾಡುತ್ತಿದೆ. ರಾಷ್ಟ್ರಪತಿ ಭವನದ ಆವರಣದಲ್ಲಿರುವ ಹಲವು ಕೊಳಗಳಲ್ಲಿ ನೀರು ನಿಂತು ಅಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೊಳ್ಳೆ ಉತ್ಪಾದನೆಯಾಗುತ್ತಿವೆ. ಮಹಾನಗರ ಪಾಲಿಕೆಯ ಸಿಬ್ಬಂದಿ ಕೊಳಗಳ ನೀರನ್ನು ಪರಿಶೀಲನೆ ನಡೆಸಿ ಅದರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸೊಳ್ಳೆಗಳ ಲಾರ್ವ ಇರುವುದನ್ನು ಪತ್ತೆ ಹಚ್ಚಿದರು. ಹಾಗಾಗಿ ಕಳೆದ ಜನವರಿಯಿಂದ ರಾಷ್ಟ್ರಪತಿ ಭವನಕ್ಕೆ 52 ನೋಟಿಸ್ ನೀಡಲಾಗಿದೆ. ಕಳೆದ ವರ್ಷ ಸಹ 125 ನೋಟಿಸ್ ನೀಡಲಾಗಿತ್ತು ಎಂದು ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿ ತಿಳಿಸಿದರು. ಜತೆಯಲ್ಲೇ ನವದೆಹಲಿಯಲ್ಲಿರುವ ವಿವಿಧ ರಾಷ್ಟ್ರಗಳ 50 ರಾಯಭಾರ ಕಚೇರಿಗಳೂ ಸಹ ಸೊಳ್ಳೆಗಳ ಉತ್ಪಾದನಾ ತಾಣವಾಗಿರುವುದನ್ನು ಮಹಾನಗರ ಪಾಲಿಕೆ ಪತ್ತೆ ಹಚ್ಚಿದೆ. ಜತೆಗೆ ಸೊಳ್ಳೆ ನಿಯಂತ್ರಣಕ್ಕೆ ಅಗತ್ಯ ನೆರವು ನೀಡುವುದಾಗಿ ತಿಳಿಸಿದ್ದೇವೆ. ಹಲವಾರು ಸರ್ಕಾರಿ ಕಚೇರಿಗಳ ಕಟ್ಟಡಗಳಲ್ಲೂ ಸಹ ಸೊಳ್ಳೆಗಳು ಯಥೇಚ್ಛ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿವೆ. ಸರ್ಕಾರಿ ಕಟ್ಟಡಗಳಿಗೂ ಸಹ ಸೊಳ್ಳೆ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳುವಂತೆ ಪತ್ರ ಬರೆದು ಕೋರಿದ್ದೇವೆ ಎಂದು ಮಹಾನಗರ ಪಾಲಿಕೆಯ ಅಧಿಕಾರಿ ತಿಳಿಸಿದರು.
2016: ರಿಯೋ ಡಿ ಜನೈರೋ: ಲಂಡನ್ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತದ ಭರವಸೆಯ ಕುಸ್ತಿ ಪಟು ಯೋಗೇಶ್ವರ್ ದತ್ 65 ಕೆ.ಜಿ. ಫ್ರೀಸ್ಟೈಲ್ ಕುಸ್ತಿ ವಿಭಾಗದ ಕ್ವಾಲಿಫೈಯಿಂಗ್ ಸುತ್ತಿನಲ್ಲಿ ಸೋಲನುಭವಿಸಿದರು. ಇದರಿಂದ ಭಾರತದ ಮತ್ತೊಂದು ಪದಕದ ನಿರೀಕ್ಷೆ ಕಮರಿತು. ಯೋಗೇಶ್ವರ್ ದತ್ ಮಂಗೋಲಿಯಾದ ಗಂಜೋರಿಗಿನ್ ಮಂದಾಕನರನ್ ಅವರ ವಿರುದ್ಧ 0-3 ಅಂಕಗಳ ಅಂತರದಿಂದ ಸೋಲು ಕಂಡರು. ಈ ಮೂಲಕ ರಿಯೋದಲ್ಲಿ ಪದಕ ಗೆಲ್ಲಬೇಕೆಂಬ ಯೋಗೇಶ್ವರ್ ಆಸೆ ಈಡೇರಲಿಲ್ಲ. ಮಂಗೋಲಿಯಾದ ಸ್ಪರ್ಧಿ ಫೈನಲ್ ತಲುಪುವಲ್ಲಿ ವಿಫಲರಾದ ಪರಿಣಾಮವಾಗಿ ಯೋಗೇಶ್ವರ್ ದತ್ ರಿಪಿಚೇಜ್ ಸುತ್ತಿನಲ್ಲಿ ಪಾಲ್ಗೊಳ್ಳಲು ಅವಕಾಶ ಲಭಿಸಲಿಲ್ಲ. ನಾಲ್ಕನೇ ಒಲಿಂಪಿಕ್ಸ್ನಲ್ಲಿ ಆಡುತ್ತಿರುವ ಯೋಗೇಶ್ವರ್ ದತ್ ಪೂರ್ವಾರ್ಧದಲ್ಲಿ 0-1 ಅಂಕಗಳಿಂದ ಹಿನ್ನಡೆ ಅನುಭವಿಸಿದ್ದರು. ನಂತರ ಎರಡನೇ ಸುತ್ತಿನಲ್ಲಿ ಮಂಗೋಲಿಯಾದ ಸ್ಪರ್ಧಿ ಯೋಗೇಶ್ವರ್ಗೆ ಮರುಹೋರಾಟ ನಡೆಸಲು ಅವಕಾಶ ನೀಡಲಿಲ್ಲ. ಪಂದ್ಯದ ಕೊನೆಯ ನಿಮಿಷದಲ್ಲಿ ಅಂಕ ಗಳಿಸಲು ಯೋಗೇಶ್ವರ್ ನಡೆಸಿದ ಪ್ರಯತ್ನ ಫಲಿಸಲಿಲ್ಲ. ಅಂತಿಮವಾಗಿ ಯೋಗೇಶ್ವರ್ ದತ್ 0-3 ಅಂಕಗಳ ಅಂತರದಿಂದ ಸೋಲೊಪ್ಪಿಕೊಳ್ಳಬೇಕಾಯಿತು. ಮಂಗೋಲಿಯಾದ ಸ್ಪರ್ಧಿ 2010ರ ಏಷ್ಯನ್ ಗೇಮ್ಸ್ನಲ್ಲಿ ಚಿನ್ನದ ಪದಕ ಜಯಿಸಿದ್ದರೆ, ವಿಶ್ವ ಚಾಂಪಿಯನ್ಷಿಪ್ನಲ್ಲಿ 2 ಬಾರಿ ಕಂಚಿನ ಪದಕ ಗೆದ್ದಿದ್ದರು. ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲಿದ್ದ ಯೋಗೇಶ್ವರ್ ದತ್ ಮಾರ್ಚ್ನಲ್ಲಿ ಒಲಿಂಪಿಕ್ಸ್ಗೆ ಅರ್ಹತೆ ಗಿಟ್ಟಿಸಿದ್ದರು.
2016: ಮುಂಬೈ: ಫ್ಯಾಂಟಮ್ ಮತ್ತು ಉಡ್ತಾ ಪಂಜಾಬ್ ಚಿತ್ರದ ನಂತರ ಇದೀಗ ಹ್ಯಾಪಿ ಭಾಗ್ ಜಾಯೇಗಿ ಚಿತ್ರಕ್ಕೆ ಪಾಕಿಸ್ತಾನ ಸೆನ್ಸಾರ್ ಮಂಡಳಿ ತಡೆಯೊಡ್ಡಿತು. ಪರಿಣಾಮ ಪಾಕ್ನಲ್ಲಿ ಈ ಚಿತ್ರ ತೆರೆ ಕಾಣುವುದು ಕನಸಿನ ಮಾತಾಯಿತು. ಬಾಲಿವುಡ್ನ ಉಡ್ತಾ ಪಂಜಾಬ್ ಹಾಗೂ ಫ್ಯಾಂಟಮ್ ಚಿತ್ರಗಳಲ್ಲಿ ಪಾಕಿಸ್ತಾನವನ್ನು ನಕಾರಾತ್ಮಕವಾಗಿ ಚಿತ್ರಿಸುವ ಅಂಶಗಳು ಇದ್ದವೆಂಬ ಕಾರಣಕ್ಕೆ ಪಾಕ್ ಸೆನ್ಸಾರ್ ಮಂಡಳಿ ನಿಷೇಧ ಹೇರಿತ್ತು. ಇದೀಗ ಈ ಸಾಲಿಗೆ ಹ್ಯಾಪಿ ಭಾಗ್ ಜಾಯೇಗಿ ಚಿತ್ರ ಸೇರಿತು. ಡಾಯನ ಪೆಂಟಿ, ಅಭಯ್ ಡಿಯೋಲ್ ಹಾಗೂ ಜೆಮ್ಮಿ ಶೇರ್ಗಿಲ್ ಅಭಿನಯದ ಈ ಚಿತ್ರದಲ್ಲಿ ಪಾಕಿಸ್ತಾನದ ಪಿತಾಮಹ ಮೊಹಮ್ಮದ್ ಅಲಿ ಜಿನ್ನಾ ಅವರ ಭಾವಚಿತ್ರವನ್ನು ಉಪಯೋಗಿಸಿಕೊಂಡು ಹಾಸ್ಯಮಾಡಲಾಗಿದೆ ಎಂಬ ಕಾರಣಕ್ಕೆ ಸೆನ್ಸಾರ್ ಮಂಡಳಿ ಮುನಿಸಿಕೊಂಡಿತು. ಈ ಕುರಿತು ಚಿತ್ರ ನಿರ್ದೇಶಕ ಆನಂದ್ ಎಲ್. ರೈ ಪ್ರತಿಕ್ರಿಯಿಸಿ, ರಾಜಕೀಯ ಕಾರಣಕ್ಕೆ ಈ ಚಿತ್ರವನ್ನು ಪಾಕಿಸ್ತಾನದಲ್ಲಿ ನಿಷೇಧಿಸಲಾಗಿದೆ. ಪಾಕಿಸ್ತಾನದ ಸೆನ್ಸಾರ್ ಮಂಡಳಿ ಈ ಚಿತ್ರವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿತ್ತು. ಚಿತ್ರದ ಕೆಲವೊಂದು ದೃಶ್ಯಗಳಿಗೆ ಕತ್ತರಿ ಹಾಕಬೇಕೆಂದು ಸೂಚಿಸಿತ್ತು. ಇದಕ್ಕೆ ನಾವು ಕೂಡ ಸಹಮತ ಸೂಚಿಸಿದ್ದೆವು. ಆದರೆ ರಾಜಕೀಯ ತಡೆಗೋಡೆ ಚಿತ್ರಕ್ಕೆ ಅಡ್ಡಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
2016: ಇಂಫಾಲ್: ಭಾರತೀಯ ಜನತಾ ಪಕ್ಷದ ಮಾಜಿ ಉಪಾಧ್ಯಕ್ಷೆ ನಜ್ಮಾ ಹೆಪ್ತುಲ್ಲಾ ಮಣಿಪುರದ ಹದಿನೆಂಟನೇ ರಾಜ್ಯಪಾಲರಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜಭವನದ ದರ್ಬಾರ್ ಹಾಲ್ನಲ್ಲಿ ನಡೆದ ಈ ಅದ್ದೂರಿ ಕಾರ್ಯಕ್ರಮಕ್ಕೆ ಹಲವು ಗಣ್ಯರು ಸಾಕ್ಷಿಯಾದರು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಾಕೇಶ್ ರಾಜನ್ ಪ್ರಸಾದ್ ಅವರು ಹೆಪ್ತುಲ್ಲಾ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಈ ಸಂದರ್ಭದಲ್ಲಿ ರಾಜ್ಯದ ಮುಖ್ಯಮಂತ್ರಿ ವೋಕ್ರಾಮ್ ಇಬೊಬಿ ಸಿಂಗ್, ಮಂತ್ರಿ ಮಂಡಲದ ಸದಸ್ಯರು, ಪೊಲೀಸ್ ವರಿಷ್ಠಾಧಿಕಾರಿಗಳು ಉಪಸ್ಥಿತರಿದ್ದರು. ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಹೆಪ್ತುಲ್ಲಾ, ಮಣಿಪುರದ ಶ್ರೀಮಂತ ಇತಿಹಾಸವನ್ನು ಅಧ್ಯಯನ ಮಾಡುವುದು ನನ್ನ ಮೊದಲು ಕಾರ್ಯ ಎಂದು ತಿಳಿಸಿದರು.
ಮೋದಿ ಕ್ಯಾಬಿನೆಟ್ನಲ್ಲಿ ಅಲ್ಪಸಂಖ್ಯಾತ ವ್ಯವಹಾರ ಖಾತೆ ಸಚಿವರಾಗಿ ಕಾರ್ಯನಿರ್ವಹಿಸಿದ್ದ ನಜ್ಮಾ, ತಮಗೆ 75 ವರ್ಷ ವಯಸ್ಸಾದ ಹಿನ್ನೆಲೆಯಲ್ಲಿ ಹಿನ್ನೆಲೆಯಲ್ಲಿ ಕಳೆದ ಜುಲೈ 12ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
2016: ಮೊಗಾಡಿಶು: ಸೋಮಾಲಿಯಾದ ಗಲ್ಕಾಯೋ ಎಂಬಲ್ಲಿ ಸಂಭವಿಸಿದ ಅವಳಿ ಆತ್ಮಾಹುತಿ ಕಾರು ಬಾಂಬ್ ದಾಳಿ ಮತ್ತು ಯದ್ವಾತದ್ವ ಗುಂಡಿನ ಹಾರಾಟದಲ್ಲಿ ಕನಿಷ್ಠ 15 ಜನರು ಸಾವನ್ನಪ್ಪಿರುವುದಾಗಿ ಅಲ್ಲಿನ ಪೊಲೀಸರು ತಿಳಿಸಿದರು. ಸರ್ಕಾರಿ ಪ್ರಧಾನ ಕಚೇರಿಯನ್ನು ಗುರಿಯಾಗಿಟ್ಟು ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದರು.
ದಾಳಿ ಹೊಣೆಯನ್ನು ಅಲ್-ಖೈದಾದ ಸಂಪರ್ಕ ಹೊಂದಿರುವ ಅಲ್-ಶಬಬ್ ಉಗ್ರ ಸಂಘಟನೆ ಹೊತ್ತಿದ್ದು ಸೈನಿಕರನ್ನು ಕೊಂದಿರುವುದಾಗಿ ಹೇಳಿಕೊಂಡಿತು.
2016: ಜಕಾರ್ತಾ: ಪಶ್ಚಿಮ ಇಂಡೋನೇಷ್ಯಾದಲ್ಲಿ ದೋಣಿ ಮುಳುಗಿ 10 ಜನರು ಸಾವನ್ನಪ್ಪಿ, ಐವರು ಕಾಣೆಯಾಗಿದ್ದಾರೆ ಎಂದು ನೌಕಾಪಡೆ ಅಧಿಕಾರಿಗಳು ತಿಳಿಸಿದರು. 17 ಪ್ರಯಾಣಿಕರನ್ನೊಳಗೊಂಡ ಸಣ್ಣ ದೋಣಿ ದ್ವೀಪವೊಂದಕ್ಕೆ ತೆರಳುತ್ತಿದ್ದಾಗ ಹವಾಮಾನದಲ್ಲಾದ ವೈಪರೀತ್ಯದಿಂದಾಗಿ ಮುಳುಗಿತು ಎಂದು ನೌಕಾ ಪಡೆಯ ವಕ್ತಾರ ಎಡಿ ಸುಸಿಪ್ಟೋ ತಿಳಿಸಿದರು. ದುರಂತದಲ್ಲಿ ಒಟ್ಟು 10 ಜನರ ಮೃತದೇಹ ಪತ್ತೆಯಾಗಿದ್ದು ಐವರು ಕಣ್ಮರೆಯಾದರು.
2016: ಸಿಡ್ನಿ: ಆಗಸ್ಟ್ 7ರಂದು ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡು ಆಗಸ್ಟ್ 12ರಂದು ಸಾವನ್ನಪ್ಪಿದ ಆಸ್ಟ್ರೇಲಿಯಾ ವಿಶ್ವ ಸುಂದರಿ ಫೈನಲಿಸ್ಟ್ ಇಲೈಸ್ ಮಿಲ್ಲರ್ ಕೆನಡಿ ಸಾವಿಗೆ ಸಂಬಂಧಿಸಿದಂತೆ ಪೊಲೀಸರು 24ರ ಹರೆಯದ ಫ್ರೆಂಚ್ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸಿದರು. ಪ್ರವಾಸಿ ಫ್ರೆಂಚ್ ಮಹಿಳೆ ಸಾಗುತ್ತಿದ್ದ ವಾಹನ ಮರೀಬಾ ದಿಂಬುಲಾ ರಸ್ತೆಯಲ್ಲಿ ಕೆನಡಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ತಲೆ ಹಾಗೂ ಮುಖಕ್ಕೆ ತೀವ್ರ ಸ್ವರೂಪದ ಗಾಯಗಳಾಗಿದ್ದ ಇಲೈಸ್ ಮಿಲ್ಲರ್ ಕೆನಡಿ ಅವರನ್ನು ವಿಮಾನದ ಮೂಲಕ ಒಯ್ದು ಕೈರ್ನ್ಸ್ ಬೇಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದರು. ಆಸ್ಟ್ರೇಲಿಯಾ ವಿಶ್ವ ಸುಂದರಿ ಮೇಡ್ಲೈನ್ ಕೌ ಘಟನೆ ಬಗ್ಗೆ ಪ್ರತಿಕ್ರಿಯಿಸಿ, ಈ ಸುದ್ದಿ ನನಗೆ ಆಘಾತ ತರಿಸಿದೆ. ನನ್ನ ಬಾಯಿಯಿಂದ ಮಾತು ಹೊರಡುತ್ತಿಲ್ಲ. ಪ್ರೌಢೆ, ಬುದ್ಧಿವಂತೆ ಹಾಗೂ ವಿನೋದಪ್ರಿಯೆ ಕೆನಡಿ ಕಿರಿಯ ವಯಸ್ಸಿನಲ್ಲಿಯೇ ಸಾವನ್ನಪ್ಪಿರುವುದು ದೇಶಕ್ಕೆ ಬಹುದೊಡ್ಡ ನಷ್ಟ. ಕುಟುಂಬದ ಸದಸ್ಯರು ಹಾಗೂ ಸ್ನೇಹಿತರಿಗೆ ಅವಳ ಸಾವಿನ ನೋವು ಅರಗಿಸಿಕೊಳ್ಳುವ ಶಕ್ತಿಯನ್ನು ದೇವರು ದಯಪಾಲಿಸಿಲಿ ಹಾಗೂ ಆಕೆಯ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸಿದ್ದರು.
2016: ನವದೆಹಲಿ: ತಂತ್ರಜ್ಞಾನ ಆಧಾರಿತ ಸ್ಟಾರ್ಟ್ ಅಪ್ ಉದ್ಯಮದ ಹುಟ್ಟಿನಲ್ಲಿ ವಿಶ್ವದಲ್ಲಿ ಮೂರನೇ ಸ್ಥಾನವನ್ನು ಭಾರತ ಅಲಂಕರಿಸಿತು. ಪ್ರಥಮ ಮತ್ತು ದ್ವಿತೀಯ ಸ್ಥಾನವನ್ನು ಅಮೆರಿಕ ಮತ್ತು ಬ್ರಿಟನ್ ಕ್ರಮವಾಗಿ ಹಂಚಿಕೊಂಡವು. ಅಸ್ಸೋಚಾಮ್ ಅಸೋಷಿಯೇಶನ್ ಅರ್ಬಿಟ್ರೇಜ್ ಸಂಶೋಧನಾ ಸಂಸ್ಥೆ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಕರ್ನಾಟಕದ ಬೆಂಗಳೂರು ದೇಶದ ಅತಿಹೆಚ್ಚು ತಂತ್ರಜ್ಞಾನ ಆಧಾರಿತ ಸ್ಟಾರ್ಟ್ ಅಪ್ ಪ್ರಾರಂಭಕ್ಕೆ ಸಾಕ್ಷಿಯಾಯಿತು. ನಂತರ ದೆಹಲಿ, ಮುಂಬೈ ಹಾಗೂ ಹೈದರಾಬಾದ್ ನಗರಗಳು ಸ್ಟಾರ್ಟ್ ಅಪ್ ಕಂಪನಿಗಳಿಗೆ ಒತ್ತು ನೀಡಿರುವ ಪ್ರದೇಶಗಳೆನೆಸಿದವು. ಅಮೆರಿಕದಲ್ಲಿ 47 ಸಾವಿರ ಸ್ಟಾರ್ಟ್ ಅಪ್ಗಳಿದ್ದರೆ, ಬ್ರಿಟನ್ನಲ್ಲಿ 4,500 ಸ್ಟಾರ್ಟ್ ಅಪ್ಗಳಿವೆ. ತೀವ್ರ ಪೈಪೋಟಿ ನೀಡುತ್ತಿರುವ ಭಾರತದಲ್ಲಿ 4200 ತಾಂತ್ರಿಕ ಉದ್ಯಮದ ಸ್ಟಾರ್ಟ್ ಅಪ್ ಕಂಪನಿಗಳು ಉದಯಿಸಿವೆ. ತಾಂತ್ರಿಕ ಮತ್ತು ತಾಂತ್ರಿಕೇತರ ಸ್ಟಾರ್ಟ್ ಉದ್ಯಮದಲ್ಲಿ ಚೀನಾ ಪಾರುಪತ್ಯ ಹೊಂದಿದ್ದು, ಭಾರತ ಮೊದಲ 5 ದೇಶಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಭಾರತದ ಸ್ಟಾರ್ಟ್ ಅಪ್ ಉದ್ಯಮ ಹೊಸ ಭವಿಷ್ಯಕ್ಕೆ ನಾಂದಿ ಹಾಡಿದೆ, ವಿದೇಶಿ ನೇರ ಬಂಡವಾಳ, ದೇಸಿ ಬಂಡವಾಳ ನಿಧಿಗೆ ಉತ್ತೇಜನದಿಂದ ಉದ್ಯಮಿಗಳು ಭಾರತದಲ್ಲಿ ಸ್ಟಾರ್ಟ್ ಅಪ್ ಸ್ಥಾಪಿಸಲು ತುದಿಗಾಲಲ್ಲಿ ನಿಂತಿದ್ದಾರೆಂದು ಅಸ್ಸೋಚಾಮ್ ಅಧ್ಯಕ್ಷ ಸುನೀಲ್ ಕನೋರಿಯ ತಿಳಿಸಿದರು. ಈ ಸಂಶೋಧನಾ ಸಮೀಕ್ಷೆ ‘ಸ್ಟಾರ್ಟ್ ಅಪ್ ಇಂಡಿಯಾ’, ‘ಡಿಜಿಟಲ್ ಇಂಡಿಯಾ’, ‘ಮೇಕ್ ಇನ್ ಇಂಡಿಯಾ’ ದಿಂದ ಹೊಸ ಹೂಡಿಕೆದಾರರ ಉತ್ತೇಜನ ಕಾರ್ಯಕ್ರಮ ಅಧ್ಯಯನಕ್ಕಾಗಿ ನಡೆಸಿದ್ದು ಎಂದು ಸಂಸ್ಥೆ ತಿಳಿಸಿತು.
2016: ಒಟ್ಟಾವ (ಕೆನಡ): ಭಾರತ ಮೂಲದ ಸಿಖ್ ಮಹಿಳೆ ಕೆನಡ ಸಂಸತ್ ಸದಸ್ಯೆ ಬರ್ದಿಶ್ ಚಗ್ಗರ್ ಅವರು ಕೆನಡದ ಹೌಸ್ ಆಫ್ ಕಾಮನ್ಸ್ನಲ್ಲಿ ಸರ್ಕಾರದ ನೂತನ ನಾಯಕಿಯಾಗಿ ನೇಮಕಗೊಂಡಿದ್ದು, ರಾಷ್ಟ್ರದ ಇತಿಹಾಸದಲ್ಲೇ ಈ ಹುದ್ದೆಗೆ ನೇಮಕಗೊಂಡಿರುವ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ವಾಟರ್ಲೂ ಕ್ಷೇತ್ರದ ಸಂಸತ್ ಸದಸ್ಯೆ ಹಾಗೂ ಸಣ್ಣ ವ್ಯವಹಾರ ಮತ್ತು ಪ್ರವಾಸೋದ್ಯಮ ಸಚಿವೆಯಾಗಿರುವ 36ರ ಹರೆಯದ ಚಗ್ಗರ್ ಕಳೆದ ವರ್ಷ ನಡೆದ ಮಹಾಚುನಾವಣೆಯಲ್ಲಿ ಜಯಗಳಿಸಿದ 19 ಮಂದಿ ಭಾರತೀಯ ಮೂಲದ ಅಭ್ಯರ್ಥಿಗಳ ಪೈಕಿ ಒಬ್ಬರು. ‘ಇದು ಅದ್ಭುತ ಅವಕಾಶ. ಮೂಲತಃ ನಾನು ಜೀವನ ಪೂರ್ತಿ ರಾಜಕೀಯ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿದ್ದೇನೆ’ ಎಂದು ಚಗ್ಗರ್ ಹಿಂದಿನ ದಿನ ಪಾರ್ಲಿಮೆಂಟ್ ಹಿಲ್ನಲ್ಲಿ ಪ್ರಮಾಣವಚನದ ಬಳಿಕ ವರದಿಗಾರರ ಜೊತೆ ಮಾತನಾಡುತ್ತಾ ಪ್ರತಿಕ್ರಿಯಿಸಿದರು. ಡೊಮಿನಿಕ್ ಲೆಬ್ಲಾಂಕ್ ಅವರ ಸ್ಥಾನದಲ್ಲಿ ನೇಮಕಗೊಂಡಿರುವ ಚಗ್ಗರ್ ಶಾಸನ ರೂಪಿಸುವಲ್ಲಿ ಸರ್ಕಾರಕ್ಕೆ ಮಾರ್ಗದರ್ಶನ ಮಾಡಲಿದ್ದಾರೆ. ಚಗ್ಗರ್ ಬಗ್ಗೆ ಅಪಾರ ವಿಶ್ವಾಸವಿದೆ ಎಂದು ಕೆನಡ ಪ್ರಧಾನಿ ಜಸ್ಟಿನ್ ಟ್ರುಡೆಯು ಹೇಳಿದರು.
2008: ಇಸ್ಲಾಮಾಬಾದಿನಿಂದ 30 ಕಿ.ಮೀ. ದೂರದ ಭಾರಿ ಭದ್ರತೆಯ ಸೇನಾ ಶಸ್ತ್ರಾಸ್ತ್ರ ಕಾರ್ಖಾನೆ ಹೊರಗಡೆ ಸಂಜೆ ಸಂಭವಿಸಿದ ಎರಡು ಆತ್ಮಹತ್ಯಾ ಬಾಂಬ್ ಸ್ಫೋಟಗಳಲ್ಲಿ 70ಕ್ಕೂ ಹೆಚ್ಚು ಜನರು ಮೃತರಾಗಿ ಸುಮಾರು 100 ಮಂದಿ ಗಾಯಗೊಂಡರು. ಕಾರ್ಖಾನೆಯ ಕಾರ್ಮಿಕರು ಹಗಲು ಪಾಳಿ ಮುಗಿಸಿ ಗೇಟ್ ಸಂಖ್ಯೆ 3ರಲ್ಲಿ ಹೊರಬರುತ್ತಿದ್ದಾಗ ಮೊದಲ ಸ್ಫೋಟ ಸಂಭವಿಸಿತು. ನಂತರ ಇದನ್ನು ನೋಡಿ ಇತರರು ಸ್ಥಳಕ್ಕೆ ಧಾವಿಸಿದ ಸಂದರ್ಭದಲ್ಲಿ ಎರಡನೇ ಸ್ಫೋಟ ಸಂಭವಿಸಿತು.
2008: ಸ್ಪೇನಿನ ಮ್ಯಾಡ್ರಿಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಗಸ್ಟ್ 19ರಂದು ಸಂಭವಿಸಿದ ವಿಮಾನ ಅವಘಡದಲ್ಲಿ ಸತ್ತವರ ಸಂಖ್ಯೆ 153ಕ್ಕೆ ಏರಿತು. 19 ಮಂದಿ ತೀವ್ರ ಗಾಯಗೊಂಡರು. ಜೆಕೆ 5022 ಎಲ್ ಎಚ್ 2554 ಸಂಖ್ಯೆಯ ವಿಮಾನ ಗ್ರ್ಯಾನ್ ಕನೇರಿಯ ಕಡೆಗೆ ಹೊರಟಿತ್ತು. ಮ್ಯಾಡ್ರಿಡಿನ ಬರಾಜಾಸ್ ವಿಮಾನ ನಿಲ್ದಾಣದಲ್ಲಿ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಅದು ಬೆಂಕಿಗೆ ಆಹುತಿಯಾಯಿತು. 25ವರ್ಷಗಳ ನಂತರ ಸ್ಪೇನಿನಲ್ಲಿ ಟೇಕಾಫ್ ಆದ ತಕ್ಷಣ ಬೆಂಕಿಗೆ ಆಹುತಿಯಾದ ಎರಡನೇ ವಿಮಾನ ಇದು. ಇದಕ್ಕೂ ಮುಂಚೆ ಎಂಡಿ 82 ಎಂಬ ಸಂಖ್ಯೆಯ ವಿಮಾನ ಬೆಂಕಿಗೆ ತುತ್ತಾಗಿತ್ತು.
2007: ಅಂತಾರಾಷ್ಟ್ರೀಯ ಪ್ರಸಾರವುಳ್ಳ ಪ್ರಮುಖ ವಾಣಿಜ್ಯ ನಿಯತಕಾಲಿಕೆ `ಬ್ಯುಸಿನೆಸ್ 2.0' ತಯಾರಿಸಿದ ವಿಶ್ವದ ಪ್ರಭಾವಿ 50 ವ್ಯಕ್ತಿಗಳ ಪಟ್ಟಿಯಲ್ಲಿ ರಿಲಯನ್ಸ್ ಸಮೂಹದ ಮುಖೇಶ್ ಅಂಬಾನಿ ಮತ್ತು ಅನಿಲ್ ಅಂಬಾನಿ ಸೇರ್ಪಡೆಯಾದರು. ದಾಯಾದಿ ಮತ್ಸರದಿಂದ ಬೇರೆ ಬೇರೆಯಾಗಿದ್ದ ಅಂಬಾನಿ ಸಹೋದರರು, ಎದುರಾಳಿ ಕಂಪೆನಿಗಳು ಮೂಗಿನ ಮೇಲೆ ಬೆರಳಿಟ್ಟುಕೊಂಡು ನಿಬ್ಬೆರಗಾಗುವಷ್ಟರ ಮಟ್ಟಿಗೆ, ರಿಲಯನ್ಸ್ ಉದ್ಯಮವನ್ನು ಪ್ರಗತಿಪಥದಲ್ಲಿ ಕೊಂಡೊಯ್ದು ಈಗ `ವಿಶ್ವದ ಪ್ರಭಾವಿ ವ್ಯಕ್ತಿ'ಗಳು ಎನ್ನುವ ಪಟ್ಟಕ್ಕೆ ಅರ್ಹರಾಗುವ ಮೂಲಕ ವಿಶ್ವದ ಉದ್ಯಮ ರಂಗಕ್ಕೆ ಸವಾಲು ಹಾಕಿದಂತಾಗಿದೆ ಎಂದು ಪತ್ರಿಕೆ ಬಣ್ಣಿಸಿತು. `ಭಾರತದವರಾದ ಅಂಬಾನಿ ಸಹೋದರರು ಕೌಟುಂಬಿಕ ವೈಷಮ್ಯದಿಂದ ದೂರಾದರೂ, ತಮ್ಮ ತಂದೆಯ ಪರಂಪರೆಯನ್ನು ಮುನ್ನಡೆಸಿದ್ದಾರೆ. ಚಾಣಾಕ್ಷಮತಿಗಳಾದ ಇಬ್ಬರು ತಮ್ಮ ಉದ್ಯಮವನ್ನು ಸಾಕಷ್ಟು ಅಭಿವೃದ್ಧಿಗೊಳಿಸುತ್ತಿದ್ದಾರೆ. ಹಿರಿಯ ಸಹೋದರ ಮುಖೇಶ್ ಅಂಬಾನಿ, ಭಾರತೀಯ ಕೃಷಿ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಲು ಹೊಸ ಯೋಜನೆ ಜಾರಿ ಮಾಡಿದ್ದಲ್ಲದೆ, ವಿಶ್ವದಲ್ಲೇ ಅತ್ಯಂತ ದೊಡ್ಡದಾದ ತೈಲ ಶುದ್ಧೀಕರಣ ಘಟಕವನ್ನು ಕಟ್ಟುತ್ತಿದ್ದಾರೆ. ಕಿರಿಯ ಸಹೋದರ ಅನಿಲ್ ಅಂಬಾನಿ ವಿಶ್ವದಲ್ಲೇ ಅತ್ಯಂತ ದೊಡ್ಡದಾದ ನೈಸರ್ಗಿಕ ವಿದ್ಯುತ್ ಘಟಕವನ್ನು ಸ್ಥಾಪಿಸುತ್ತಿದ್ದಾರೆ. ಜಗತ್ತಿನಲ್ಲೇ ಹೆಚ್ಚು ಸಿಡಿಎಂಎ ಜಾಲ ವಿಸ್ತರಣೆ ಹೊಂದಿರುವ ರಿಲಯನ್ಸ್ ಕಮ್ಯೂನಿಕೇಷನ್ಸ್ ಮಾಲೀಕರಾಗಿದ್ದಾರೆ' ಎಂದು ಬ್ಯುಸಿನೆಸ್ ಪತ್ರಿಕೆ ಹೇಳಿತು. ವಿಶ್ವದ ಪ್ರಭಾವಿಗಳ 50ರ ಸರಣಿಯಲ್ಲಿ ಅಂಬಾನಿ ಸಹೋದರರದ್ದು 31ನೇ ಸ್ಥಾನ. ಗೂಗಲ್ ಕಂಪೆನಿ ಕಾರ್ಯನಿರ್ವಾಹಕ ಅಧಿಕಾರಿ ಎರಿಕ್ ಸ್ಕಿಮ್ತ್ ಮತ್ತು ಗೂಗಲ್ ಸಂಸ್ಥಾಪಕ ಲಾರಿ ಪೇಜ್ ಅವರದ್ದು ಪ್ರಥಮ ಸ್ಥಾನ. ಆಪಲ್ ಕಂಪ್ಯೂಟರ್ ಕಾರ್ಯನಿರ್ವಾಹಕ ಅಧಿಕಾರಿ ಸ್ಟೀವ್ ಜಾಬ್ಸ್ ಅವರದ್ದು ದ್ವೀತಿಯ ಸ್ಥಾನ. ಕ್ಯಾಲಿಫೋರ್ನಿಯಾ ಗವರ್ನರ್ ಅರ್ನಾಲ್ಡ್ ಸ್ಕ್ವಾರ್ಜ್ ನೆಗರ್ ಅವರದ್ದು ಎಂಟನೇ ಸ್ಥಾನ.
2007: ಭಯೋತ್ಪಾದನೆ ಅಪಾದನೆಯಿಂದ ಮುಕ್ತಿ ಹೊಂದಿದ ನಂತರವೂ ಡಾ. ಮೊಹಮದ್ ಹನೀಫ್ ಅವರ ಉದ್ಯೋಗ ವೀಸಾವನ್ನು ರದ್ದುಪಡಿಸಿರುವ ಆಸ್ಟ್ರೇಲಿಯಾ ಸರ್ಕಾರದ ನಿರ್ಧಾರವನ್ನು ಮೆಲ್ಬೋರ್ನ್ ಫೆಡರಲ್ ನ್ಯಾಯಾಲಯವು ರದ್ದು ಪಡಿಸಿತು. ಹನೀಫ್ ಅವರ ವೀಸಾ ರದ್ದು ಪಡಿಸುವಾಗ ವಲಸೆ ಸಚಿವ ಕೆವಿನ್ ಆಂಡ್ರ್ಯೂ ಅವರು ಅನುಸರಿಸಿದ ಮಾನದಂಡ ತಪ್ಪು ಎಂದು ನ್ಯಾಯಾಧೀಶ ಜೆಫ್ರಿ ಸ್ಪೆಂಡರ್ ಅವರು ತಮ್ಮ ತೀರ್ಪಿನಲ್ಲಿ ಹೇಳಿದರು. ಬೆಂಗಳೂರು ಮೂಲದ ವೈದ್ಯ ಹನೀಫ್ ಗೋಲ್ಡ್ ಕೋಸ್ಟ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಲಂಡನ್ ವಿಮಾನ ನಿಲ್ದಾಣದ ಬಾಂಬ್ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಜುಲೈ 2ರಂದು ಬ್ರಿಸ್ಬೇನ್ ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಭಯೋತ್ಪಾದನೆ ಆಪಾದನೆಯಿಂದ ಮುಕ್ತಿ ಹೊಂದುವವರೆಗೆ ಹನೀಫ್ 25 ದಿನಗಳ ಕಾಲ ಬಂಧನದಲ್ಲಿದ್ದರು. ಬ್ರಿಟನ್ನಿನ ಭಯೋತ್ಪಾದನೆ ನಿಗ್ರಹ ದಳಕ್ಕೆ ಬೇಕಾದ ವ್ಯಕ್ತಿ ಹಾಗೂ ಭಯೋತ್ಪಾದಕ ಸಂಘಟನೆಗಳಿಗೆ ನೆರವು ನೀಡುತ್ತಿದ್ದರೆಂಬ ಎಂಬ ಮಾಹಿತಿಯ ಆಧಾರದ ಮೇಲೆ ವಲಸೆ ಸಚಿವರು ವೀಸಾ ರದ್ದು ಪಡಿಸಿದ್ದರು.
2007: ಖ್ಯಾತ ಉರ್ದು ಲೇಖಕಿ ಮತ್ತು ಜ್ಞಾನಪೀಠ ಪ್ರಶಸ್ತಿ ವಿಜೇತೆ ಖರ್ರತುಲ್ಐನ್ ಹೈದರ್ (80) ಅವರು ದೀರ್ಘ ಕಾಲದ ಅಸ್ವಸ್ಥತೆಯಿಂದ ನೊಯಿಡಾದಲ್ಲಿ ನಿಧನರಾದರು. 12 ಕಾದಂಬರಿಗಳು ಹಾಗೂ ನಾಲ್ಕು ಕಥಾ ಸಂಕಲನಗಳನ್ನು ರಚಿಸಿರುವ ಹೈದರ್ ಅವರನ್ನು 1989ರಲ್ಲಿ ಜ್ಞಾನಪೀಠ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಉರ್ದು ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸಿದ ಗಣನೀಯ ಸೇವೆಗಾಗಿ ಕೇಂದ್ರ ಸರ್ಕಾರ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.
2007: ಕರ್ನಾಟಕದ 15ನೇ ರಾಜ್ಯಪಾಲರಾಗಿ ರಾಮೇಶ್ವರ ಠಾಕೂರ್ ಬೆಂಗಳೂರಿನಲ್ಲಿ ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಅವರು ಠಾಕೂರ್ ಅವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
2007: ಬೆಂಗಳೂರಿನ ಕಮ್ಮನಹಳ್ಳಿ ಮುಖ್ಯರಸ್ತೆಯ ಚೆಮ್ಮನೂರ್ ಜುವೆಲರ್ಸ್ ಮಳಿಗೆಗೆ ಆಗಸ್ಟ್ 11ರಂದು ಕಾರಿನಲ್ಲಿ ಬಂದ ನಾಲ್ವರ ತಂಡ ಹಾಡುಹಗಲೇ 36 ಕೆ.ಜಿ ಬಂಗಾರ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ, ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಎಸ್.ವಿ.ಟಿ ರಸ್ತೆಯ ಮನೆಯೊಂದರಲ್ಲಿ ವಾಸವಾಗಿದ್ದ ಮೂವರನ್ನು ಪೊಲೀಸರು ಬಂಧಿಸಿದರು. ಫ್ರೇಜರ್ ಟೌನ್ ಪೊಲೀಸ್ ವೃತ್ತ ನಿರೀಕ್ಷಕ ನಾಗರಾಜ್ ನೇತೃತ್ವದಲ್ಲಿ ಎಸ್.ವಿ.ಟಿ ರಸ್ತೆಯ ಮನೆಯೊಂದರ ಮೇಲೆ ದಾಳಿ ನಡೆಸಿ ಹೇಮಾ(30), ನಂದೀಶ್(24), ಬಾಲಕೃಷ್ಣ (40) ಅವರನ್ನು ಸೆರೆ ಹಿಡಿಯಲಾಯಿತು. ಗೋಪಾಲಶೆಟ್ಟಿ ಎಂಬಾತ ಹಿಂಬಾಗಿಲಿನಿಂದ ಓಡಿಹೋಗಿ ಮಹಡಿಯಿಂದ ಜಿಗಿದು ಪರಾರಿಯಾದ.
2007: ಭಾರತ ತಂಡದ ಮಾಜಿ ನಾಯಕ ಕಪಿಲ್ ದೇವ್ ಅವರನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಮುಖ್ಯಸ್ಥ ಸ್ಥಾನದಿಂದ ವಜಾ ಮಾಡಿತು. ಭಾರತೀಯ ಕ್ರಿಕೆಟ್ ಲೀಗನ್ನು (ಐಸಿಎಲ್) ಸೇರಿಕೊಂಡಿದ್ದಾರೆ ಎಂಬ ಕಾರಣಕ್ಕಾಗಿಯೇ ಕಪಿಲ್ ವಿರುದ್ಧ ಬಿಸಿಸಿಐ ಈ ರೀತಿಯ ಕ್ರಮವನ್ನು ಕೈಗೊಂಡಿತು. 1983ರಲ್ಲಿ ದೇಶಕ್ಕೆ ವಿಶ್ವಕಪ್ ಗೆದ್ದುಕೊಟ್ಟ ತಂಡದ ನಾಯಕರಾಗಿದ್ದ ಕಪಿಲ್ ಐಸಿಎಲ್ ಕಾರ್ಯಕಾರಿ ಮಂಡಳಿಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದರು.
2007: ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಜಿ.ಟಿ.ಚಂದ್ರಶೇಖರಪ್ಪ ಅವರನ್ನು ರಾಜ್ಯ ಸರ್ಕಾರ ರಾತ್ರೋರಾತ್ರಿ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್ಸಿ) ಸದಸ್ಯರನ್ನಾಗಿ ನೇಮಿಸಿತು. ಇದು ಸಮ್ಮಿಶ್ರ ಸರ್ಕಾರದ ಮಿತ್ರ ಪಕ್ಷವಾದ ಬಿಜೆಪಿಯಲ್ಲಿ ತಳಮಳ ಉಂಟು ಮಾಡಿತು.
2007: ದೇಶದ ಪ್ರಖ್ಯಾತ ಸಂಗೀತಗಾರರಿಗೆ ನೀಡುವ ಗುರುರಾವ್ ದೇಶಪಾಂಡೆ ರಾಷ್ಟ್ರೀಯ ಸಂಗೀತ ಪುರಸ್ಕಾರಕ್ಕೆ ಈ ಬಾರಿ ಖ್ಯಾತ ಹಿಂದೂಸ್ತಾನಿ ಸಂಗೀತ ಕಲಾವಿದೆ ಗಂಗೂಬಾಯಿ ಹಾನಗಲ್ ಅವರನ್ನು ಆಯ್ಕೆ ಮಾಡಲಾಯಿತು. ಜೊತೆಗೆ `ಗುರುಗಂಧರ್ವ' ಬಿರುದು ಸಹ ನೀಡಲು ಗುರುರಾವ್ ದೇಶಪಾಂಡೆ ಸಂಗೀತ ಸಭಾ ತೀರ್ಮಾನಿಸಿತು.
2006: ಸರ್ಕಾರಿ ಅನುದಾನಿತ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಇತರ ಹಿಂದುಳಿದ ವರ್ಗಗಳು (ಒಬಿಸಿ) ಹಾಗೂ ಪರಿಶಿಷ್ಟ ಜಾತಿ- ಪಂಗಡದವರಿಗೆ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲು ಕೇಂದ್ರ ಸಚಿವ ಸಂಪುಟ ಸಮ್ಮತಿ ನೀಡಿತು.
2006: ಭಾರತದ ಚತುರ ಚೆಸ್ ಆಟಗಾರ ವಿಶ್ವನಾಥನ್ ಆನಂದ್ ಅವರು ಜರ್ಮನಿಯ ಮೈಂಜ್ ನಲ್ಲಿ ನಡೆದ `ಮೈಂಜ್ ಕ್ಲಾಸಿಕ್ ಚೆಸ್ ಚಾಂಪಿಯನ್ ಶಿಪ್'ನ ರ್ಯಾಪಿಡ್ ವಿಭಾಗದಲ್ಲಿ ಒಂಬತ್ತನೇ ಬಾರಿ ಪ್ರಶಸ್ತಿ ಗೆದ್ದುಕೊಂಡು ದಾಖಲೆ ಸ್ಥಾಪಿಸಿದರು. ತೈಮೂರ್ ರಜಬೋವ್ ಅವರನ್ನು ಆನಂದ್ ಅವರು ಎರಡೂ ಪಂದ್ಯಗಳಲ್ಲಿ ಸೋಲಿಸುವ ಮೂಲಕ 5-3ರ ಮುನ್ನಡೆಯೊಂದಿಗೆ ಪ್ರಶಸ್ತಿ ಗೆದ್ದರು.
2006: ಭಾರತದ ಹಿರಿಯ ಬ್ಯಾಸ್ಕೆಟ್ಬಾಲ್ ಆಟಗಾರ ಬಿ.ಟಿ. ಸತ್ಯನಾರಾಯಣರಾಜೇ ಅರಸ್ (55) ಅವರು ಮೈಸೂರಿನ ತಮ್ಮ ನಿವಾಸದಲ್ಲಿ ನಿಧನರಾದರು.
2006: ಶಹನಾಯಿ ಮಾಂತ್ರಿಕ, ಭಾರತ ರತ್ನ ಉಸ್ತಾದ್ ಬಿಸ್ಮಿಲ್ಲಾ ಖಾನ್ (1921-2006) ಅವರು ವಾರಣಾಸಿಯಲ್ಲಿ ಈದಿನ ನಸುಕಿನ ವೇಳಯಲ್ಲಿ ಹೃದಯಾಘಾತದಿಂದ ನಿಧನರಾದರು. 1921ರ ಮಾರ್ಚ್ 21ರಂದು ಆಸ್ಥಾನ ಸಂಗೀತಗಾರರ ಕುಟುಂಬದಲ್ಲಿ ಜನಿಸಿದ ಬಿಸ್ಮಿಲ್ಲಾ ಖಾನ್ ಚಿಕ್ಕಪ್ಪ ಅಲಿ ಬಕ್ಷ್ ವಿಲಾಯತ್ ಅವರಿಂದ ಸಂಗೀತ ಕಲಿತು ಮುಂದೆ ಶಹನಾಯಿಯ ಆಳ ಅಗಲಗಳನ್ನು ವಿಸ್ತರಿಸಿದರು. ವಾರಣಾಸಿಯನ್ನೇ ತಮ್ಮ ಸಿದ್ಧಿ ಸಾಧನೆಗಳ ತಪೋ ಭೂಮಿಯನ್ನಾಗಿ ಮಾಡಿಕೊಂಡಿದ್ದರು. 1947ರ ಆಗಸ್ಟ್ 15ರ ಮೊದಲ ಸ್ವಾತಂತ್ರ್ಯ ಉತ್ಸವ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಅವರು ಶಹನಾಯಿ ತರಂಗವನ್ನು ಇಡೀ ದೇಶಕ್ಕೆ ಹರಡಿದ್ದರು. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ತಾನ್ ಸೇನ್ ಪ್ರಶಸ್ತಿ, ಪದ್ಮವಿಭೂಷಣ ಪ್ರಶಸ್ತಿ, ಪದ್ಮಭೂಷಣ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಗಳಿಸಿದ್ದ ಅವರು 2001ರಲ್ಲಿ ಭಾರತ ರತ್ನ ಪ್ರಶಸ್ತಿಗೂ ಭಾಜನರಾಗಿದ್ದರು. ಬಿಹಾರಿನ ದರ್ಭಾಂಗ ಮತ್ತು ಮುಂಬೈಯ (ದೆಹಲಿಯ?) ಇಂಡಿಯಾಗೇಟ್ ನಲ್ಲಿ ಒಂದೊಂದು ಶಹನಾಯಿ ಕಛೇರಿ ನಡೆಸಬೇಕು ಎಂಬ ಅವರ ಅಂತಿಮ ಆಸೆ ಮಾತ್ರ ಈಡೇರಲಿಲ್ಲ.
2006: ಹೈದರಾಬಾದಿನ ಹನ್ನೊಂದು ವರ್ಷದ ಬಾಲಕ ನಿಶ್ಚಲ್ ನಾರಾಯಣಮ್ ಕೇವಲ 12.07 ನಿಮಿಷಗಳಲ್ಲಿ 225 ಯದ್ವಾತದ್ವ ಇಡಲಾಗಿದ್ದ ವಸ್ತುಗಳನ್ನು (ಯಾದೃಚ್ಛಿಕ ದೃಷ್ಟಾಂತ) ಜ್ಞಾಪಿಸಿಕೊಳ್ಳುವ ಮೂಲಕ ತಮ್ಮ ಶಿಕ್ಷಕರು ಸ್ಥಾಪಿಸ್ದಿದ ಗಿನ್ನೆಸ್ ದಾಖಲೆಯನ್ನು ಮುರಿದ. ಆರನೇ ತರಗತಿ ವಿದ್ಯಾರ್ಥಿಯಾಗಿರುವ ನಿಶ್ಚಲನ ಶಿಕ್ಷಕ ಜಯಸಿಂಹ ರವಿರಾಲ ಅವರು 2005ರಲ್ಲಿ 200 ಯಾದೃಚ್ಛಿಕ ದೃಷ್ಟಾಂತಗಳನ್ನು ಜ್ಞಾಪಿಸಿಕೊಂಡು ಗಿನ್ನೆಸ್ ದಾಖಲೆ ಸೇರಿದ್ದರು.
2006: ಎರಡು ರೈಲುಗಾಡಿಗಳು ಪರಸ್ಪರ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ 80 ಮಂದಿ ಮೃತರಾಗಿ 163 ಮಂದಿ ಗಾಯಗೊಂಡ ಕೈರೋದಲ್ಲಿ ಘಟಿಸಿತು. ಈಜಿಪ್ಟ್ ರಾಜಧಾನಿಯಿಂದ 20 ಕಿಲೋಮೀಟರ್ ದೂರದಲ್ಲಿರುವ ಕಾಲ್ಯೂಬ್ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದ್ದು, ದೇಶದ 150 ವರ್ಷಗಳ ರೈಲ್ವೆ ಇತಿಹಾಸದಲ್ಲಿಸಂಭವಿಸಿದ ಭೀಕರ ರೈಲು ಅಪಘಾತಗಳಲ್ಲಿ ಇದೂ ಒಂದು ಎಂದು ಬಣ್ಣಿಸಲಾಯಿತು. 2002ರಲ್ಲಿ ರೈಲು ಬೋಗಿಗಳಿಗೆ ಬೆಂಕಿ ಹೊತ್ತಿಕೊಂಡಿದ್ದರಿಂದ 360 ಮಂದಿ ಮೃತಪಟ್ಟಿದ್ದರು. ಅದರ ಬಳಿಕ ಈಜಿಪ್ಟಿನಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ರೈಲು ಅಪಘಾತ ಸಂಭವಿಸಿರುವುದು ಇದೇ ಮೊದಲು.
2006: ಉತ್ತರ ಶ್ರೀಲಂಕಾದಲ್ಲಿ ಅಪರಿಚಿತ ಬಂದೂಕುಧಾರಿಗಳು ಮಾಜಿ ತಮಿಳು ರಾಜಕಾರಣಿ ಮತ್ತು ಜಾಫ್ನಾದ ತಮಿಳು ದೈನಿಕ `ನಮ್ಮದು ಈಳನಾಡು'ವಿನ ವ್ಯವಸ್ಥಾಪಕ ನಿರ್ದೇಶಕ ಸಿನ್ನತಂಬಿ ಸಿವಮಹಾರಾಜಾ (68) ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದರು. ಉನ್ನತ ಭದ್ರತೆ ಹೊಂದಿರುವ ತೆಲ್ಲಿಪಳ್ಳೈನಲ್ಲಿರುವ ಅವರ ನಿವಾಸದಲ್ಲಿ ಕಳೆದ ರಾತ್ರಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ. ಸಿನ್ನತಂಬಿ ಅವರು ಎಲ್ ಟಿಟಿಇ ಪ್ರಾತಿನಿಧಿಕ ರಾಜಕೀಯ ಪಕ್ಷವೆಂದು ನಂಬಲಾಗಿರುವ ತಮಿಳು ರಾಷ್ಟ್ರೀಯ ಮೈತ್ರಿಕೂಟದ ಸದಸ್ಯರಾಗಿದ್ದರು.
2000: ಅಮೆರಿಕದ ಗಾಲ್ಫ್ ಆಟಗಾರ ಟೈಗರ್ ವುಡ್ಸ್ ಒಂದೇ ಋತುವಿನಲ್ಲಿ ಮೇಜರ್ ಗಳನ್ನು ಗೆದ್ದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1953ರಲ್ಲಿ ಬೆನ್ ಹೊಗನ್ ಈ ಸಾಧನೆ ಮಾಡಿದ್ದರು.
2000: ಲೋಕಸಭಾ ಸದಸ್ಯತ್ವಕ್ಕೆ ಉಮಾ ಭಾರತಿ ರಾಜೀನಾಮೆ.
2000: ಮಹಾತ್ಮ ಗಾಂಧಿ ಅವರ ಸೊಸೆ ನಿರ್ಮಲ ಗಾಂಧಿ ಅವರು ವಾಧರ್ಾದಲ್ಲಿ ನಿಧನರಾದರು.
1997: ಭಾರತದ ಉಪರಾಷ್ಟ್ರಪತಿಯಾಗಿ ಕೃಷ್ಣಕಾಂತ್ ಆಯ್ಕೆಯಾದರು.
1994: ಭಾರತದ ಹನ್ನೆರಡು ವರ್ಷದ ಬಾಲಕಿ ರೂಪಾಲಿ ರಾಮದಾಸ್ ರಿಪೇಲ್ ಅವರು ಇಂಗ್ಲಿಷ್ ಕಡಲ್ಗಾಲುವೆಯನ್ನು ಈಜಿ ದಾಟಿದ ಅತ್ಯಂತ ಕಿರಿಯ ಭಾರತೀಯ ಹಾಗೂ ಕಡಲ್ಗಾಲುವೆ ದಾಟಿದ ಎರಡನೇ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2000ದ ಮಾರ್ಚಿಯಲ್ಲಿ ಈಕೆ ದಕ್ಷಿಣ ಆಫ್ರಿಕಾದ ರೋಬ್ಬೆನ್ ಐಲ್ಯಾಂಡ್ ಕಾಲುವೆಯನ್ನು ಅತ್ತಿಂದ ಇತ್ತ ಇತ್ತಿಂದ ಅತ್ತ ಈಜಿದ ಮೊದಲ ಮಹಿಳೆ ಮತ್ತು ಅತ್ಯಂತ ಕಿರಿಯ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಜಗತ್ತಿನ ಆರು ಕಾಲುವೆಗಳನ್ನು ಈಜಿದ ಕಿರಿಯ ವ್ಯಕ್ತಿ ಎಂಬ ಕೀರ್ತಿ ಕೂಡಾ ಈಕೆಗಿದೆ.
1987: ಭಾರತದ ಉಪ ರಾಷ್ಟ್ರಪತಿಯಾಗಿ ಡಾ. ಶಂಕರ ದಯಾಳ್ ಶರ್ಮಾ ಆಯ್ಕೆಯಾದರು.
1983: ಅಮೆರಿಕದಲ್ಲಿನ ತಮ್ಮ ಸ್ವಘೋಷಿತ ವಿದೇಶವಾಸವನ್ನು ಕೊನೆಗೊಳಿಸಿದ ಫಿಲಿಪ್ಪೀನ್ನ ವಿರೋಧಿ ನಾಯಕ ಬೆನಿಗ್ನೊ ಎಸ್. ಅಕ್ವಿನೊ ಜ್ಯೂನಿಯರ್ ಅವರು ಮನಿಲಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನದಿಂದ ಕೆಳಕ್ಕೆ ಇಳಿಯುತ್ತಿದ್ದಂತೆಯೇ ಗುಂಡೇಟಿಗೆ ಬಲಿಯಾಗಿ ಅಸುನೀಗಿದರು.
1981: ಬೆಂಗಳೂರು ಮತ್ತು ಮೈಸೂರಿನಲ್ಲಿ ಸಂಭವಿಸಿದ ಕಳ್ಳಭಟ್ಟಿ ಸಾರಾಯಿ ದುರಂತಗಳ ವಿಚಾರಣೆಗಾಗಿ ರಚಿಸಲಾದ ವಿಚಾರಣಾ ಆಯೋಗದ ಅಧ್ಯಕ್ಷರನ್ನಾಗಿ ಸರ್ಕಾರವು ನ್ಯಾಯಮೂರ್ತಿ ಆರ್.ಜಿ. ದೇಸಾಯಿ ಅವರನ್ನು ನೇಮಕ ಮಾಡಿತು.
1959: ಅಮೆರಿಕದ 50ನೇ ರಾಜ್ಯವಾಗಿ ಹವಾಯ್ ಸೇರ್ಪಡೆಯಾಯಿತು.
1955: ಜಾನಪದ, ಸಾಂಸ್ಕೃತಿಕ ಅಧ್ಯಯನ, ಯಕ್ಷಗಾನ ಕ್ಷೇತ್ರಗಳಲ್ಲಿ ಖ್ಯಾತಿ ಪಡೆದಿರುವ ಪುರುಷೋತ್ತಮ ಬಿಳಿಮಲೆ ಅವರು ಬಿ. ಶೇಷಪ್ಪ ಗೌಡ- ಗೌರಮ್ಮ ದಂಪತಿಯ ಮಗನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪಂಜದಲ್ಲಿ ಜನಿಸಿದರು. ಗುಂಡ್ಮಿ ಚಂದ್ರಶೇಖರ ಐತಾಳ ಪ್ರಶಸ್ತಿ, ಬಿ.ಎಚ್. ಶ್ರೀಧರ ಪ್ರಶಸ್ತಿ, ಮಲ್ಲಿಕಾರ್ಜುನ ಮನ್ಸೂರ ಪ್ರಶಸ್ತಿ, ಆರ್ಯಭಟ ಪ್ರಶಸ್ತಿ, ಸಾರಂಗಮಠ ಪ್ರಶಸ್ತಿ, ಕು.ಶಿ. ಹರಿದಾಸಭಟ್ಟ ಪ್ರಶಸ್ತಿಗಳು ಅವರ ವಿವಿಧ ಕೃತಿಗಳಿಗೆ ಲಭಿಸಿವೆ.
1955: ಕವಯಿತ್ರಿ, ಲೇಖಕಿ ಇಸ್ಮತ್ ಚುಂಗಾಯ್ತ್ ಜನನ.
1911: ಪ್ಯಾರಿಸ್ಸಿನ ಲೌರೆಯಿಂದ ಲಿಯೋನಾರ್ಡೊ ಡ ವಿಂಚಿ ಅವರ ಕಲಾಕೃತಿ `ಮೋನಾಲಿಸಾ' ಕಳುವಾಯಿತು. 1913ರಲ್ಲಿ ಅದು ಇಟಲಿಯಲ್ಲಿ ಪತ್ತೆಯಾಯಿತು. ವಿನ್ಸೆಂಝೊ ಪೆರುಗಿಯಾ ಮೇಲೆ ಕಳ್ಳತನದ ಆಪಾದನೆ ಹೊರಿಸಲಾಯಿತು. (ಅಚ್ಚರಿಯ ವಿಷಯ ಏನು ಗೊತ್ತೆ? `ಸರ್ರಿಯಲಿಸಂ' ಶಬ್ಧವನ್ನು ಹುಟ್ಟುಹಾಕಿದ ಕವಿ ಗುಯಿಲ್ಯೂಮ್ ಅಪೋಲಿನೈರೀ ಅವರನ್ನು ಕಳ್ಳತನಕ್ಕೆ ಸಂಬಂಧಿಸಿದ ಯಾವುದೇ ಆಧಾರ ಇಲ್ಲದಿದ್ದರೂ ಸೆರೆಮನೆಗೆ ತಳ್ಳಲಾಗಿತ್ತು. ಇದೇ ಅಪರಾಧಕ್ಕೆ ಸಂಬಂಧಿಸಿದಂತೆ ವರ್ಣಚಿತ್ರಗಾರ ಪಾಬ್ಲೊ ಪಿಕಾಸೋ ಅವರ ಮೇಲೂ ಪೊಲೀಸರಿಗೆ ಗುಮಾನಿ ಇತ್ತು)
No comments:
Post a Comment