ಇಂದಿನ ಇತಿಹಾಸ History Today ಆಗಸ್ಟ್ 13
ಇಂದು ವಿಶ್ವ ಎಡಚರ ದಿನ.
2018: ಕೋಲ್ಕತ: ಮಾಜಿ ಲೋಕಸಭಾಧ್ಯಕ್ಷ
ಸೋಮನಾಥ ಚಟರ್ಜಿ ಅವರು ಬಹು ಅಂಗಾಂಗ ವೈಫಲ್ಯದ ಪರಿಣಾಮವಾಗಿ
ಈದಿನ ಬೆಳಗ್ಗೆ ಕೋಲ್ಕತದ ಖಾಸಗಿ ಆಸ್ಪತ್ರೆಯೊಂದರಲ್ಲಿ ನಿಧನರಾದರು. ಚಟರ್ಜಿ ಅವರಿಗೆ ನಿಧನಕಾಲಕ್ಕೆ
೮೯ ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಒಬ್ಬ ಪುತ್ರ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದರು.
ಹಿಂದಿನ ದಿನ ಲಘು ಹೃದಯಾಘಾತದ ಬಳಿಕ ಸೋಮನಾಥ ಚಟರ್ಜಿ ಅವರ ಆರೋಗ್ಯ ವಿಷಮಿಸಿತ್ತು. ಈದಿನ ಬೆಳಗ್ಗೆ
೮.೧೫ರ ವೇಳೆಗೆ ಅವರು ಕೊನೆಯುಸಿರು ಎಳೆದರು ಎಂದು ಆಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಚಟರ್ಜಿ ಅವರು ಮೂತ್ರಪಿಂಡ ಸಂಬಂಧಿತ ಸಮಸ್ಯೆಯಿಂದ ಬಳಲುತ್ತಿದ್ದು, ಅವರನ್ನು ಮಂಗಳವಾರ ಗಂಭೀರ ಸ್ಥಿತಿಯಲ್ಲಿ
ಆಸ್ಪತ್ರೆಗೆ ದಾಖಲಿಸಲಾಗಿತ್ತು. ‘ಅವರಿಗೆ ಡಯಾಲಿಸಿಸ್
ಮಾಡಲಾಗುತ್ತಿತ್ತು. ಇಂತಹ ಸಂದರ್ಭಗಳಲ್ಲಿ ಕೆಲವೊಮ್ಮೆ ಹೃದಯ ಬೆಂಬಲ ನೀಡುವುದನ್ನು ನಿಲ್ಲಿಸಿಬಿಡುತ್ತದೆ.
ಚಟರ್ಜಿ ಅವರಿಗೆ ನಿನ್ನೆ ಬೆಳಗ್ಗೆ ಲಘು ಹೃದಯಾಘಾತವಾಯಿತು. ಆದರೆ ಮತ್ತೆ ಹೃದಯ ಬಡಿತ ಆರಂಭವಾಗುವಂತೆ
ಮಾಡಲಾಯಿತು. ಬಳಿಕ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆಸಲಾಗಿತ್ತು. ರಾತ್ರಿ ತಡವಾಗಿ
ಅವರು ಬಹು ಅಂಗಾಂಗ ವೈಫಲ್ಯಕ್ಕೆ ಈಡಾದರು. ಬಳಿಕ ಅವರು ಚಿಕಿತ್ಸೆಗೆ ಸ್ಪಂದಿಸಲಿಲ್ಲ’ ಎಂದು ಅಧಿಕಾರಿ ಹೇಳಿದರು. ಮಾಜಿ ಲೋಕಸಭಾಧ್ಯಕ್ಷರು ಕಳೆದ ತಿಂಗಳು ರಕ್ತಸ್ರಾವದ ಜೊತೆಗೆ
ಪಾರ್ಶವಾಯುವಿಗೆ ಈಡಾಗಿದ್ದರು. ‘ಚಟರ್ಜಿ ಅವರು ಕಳೆದ
೪೦ ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಚೇತರಿಸಿದ್ದನ್ನು ಅನುಸರಿಸಿ ನಾಲ್ಕು ಮೂರು
ದಿನಗಳ ಹಿಂದೆ ಅವರನ್ನು ಆಸ್ಪತ್ರೆಯಿಂದ ಮನೆಗೆ ಕಳುಹಿಸಲಾಗಿತ್ತು. ಆದರೆ ಕಳೆದ ಮಂಗಳವಾರ ಅವರ ಆರೋಗ್ಯ
ಸ್ಥಿತಿ ಮತ್ತೆ ಬಿಗಡಾಯಿಸಿತು. ಹೀಗಾಗಿ ಪುನಃ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು’ ಎಂದು
ಅಧಿಕಾರಿ ನುಡಿದರು. ೧೦ ಬಾರಿ ಲೋಕಸಭಾ ಸದಸ್ಯರಾಗಿದ್ದ ಚಟರ್ಜಿ, ೧೯೬೮ರಲ್ಲಿ ತಾವು ಸೇರಿದ್ದ ಸಿಪಿಐ(ಎಂ)
ಪಕ್ಷದ ಕೇಂದ್ರೀಯ ಸಮಿತಿ ಸದಸ್ಯರಾಗಿದ್ದರು. ೨೦೦೪ರಿಂದ ೨೦೦೯ರ ಅವಧಿಯಲ್ಲಿ ಅವರು ಲೋಕಸಭಾಧ್ಯಕ್ಷರಾಗಿದ್ದರು. ಆದರೆ, ೨೦೦೮ರಲ್ಲಿ ಸಿಪಿಐ (ಎಂ) ಯುಪಿಎ -೧ ಸರ್ಕಾರಕ್ಕೆ
ತನ್ನ ಬೆಂಬಲ ಹಿಂಪಡೆದಾಗ ಲೋಕಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರಾಕರಿಸಿದ್ದನ್ನು ಅನುಸರಿಸಿ
ಪಕ್ಷವು ಹಿರಿಯ ನಾಯಕ ಚಟರ್ಜಿ ಅವರನ್ನು ಪಕ್ಷದಿಂದ ಉಚ್ಚಾಟಿಸಿತ್ತು. ೧೯೨೯ರಲ್ಲಿ ಅಸ್ಸಾಮಿನ ತೇಜ್ಪುರದಲ್ಲಿ ನ್ಯಾಯವಾದಿಗಳು ಮತ್ತು
ಸಂಸದೀಯ ಪಟುಗಳ ಕುಟುಂಬದಲ್ಲಿ ಸೋಮನಾಥ ಚಟರ್ಜಿ ಜನಿಸಿದ್ದರು. ಸೋಮನಾಥ ಚಟರ್ಜಿ ಅವರ ತಂದೆ ನಿರ್ಮಲ
ಚಂದ್ರ ಚಟರ್ಜಿ ಅವರು ಬ್ಯಾರಿಸ್ಟರ್, ನ್ಯಾಯಾಧೀಶ ಮತ್ತು ಸಂಸತ್ ಪಟುವಾಗಿದ್ದರು. ಅವರು ಅಖಿಲ ಭಾರತ ಹಿಂದೂ ಮಹಾಸಭಾದ ಅಧ್ಯಕ್ಷರೂ ಆಗಿದ್ದರು.
ತಮ್ಮ ಕಾಲದ ಬಹಳಷ್ಟು ಮಂದಿ ಪ್ರಭಾವಶಾಲಿ ಕಾಂಗ್ರೆಸ್ಸೇತರ ನಾಯಕರ ಜೊತೆಗೆ ಅವರಿಗೆ ಸಂಪರ್ಕವಿತ್ತು.
ಹಿಂದೂ ರಾಷ್ಟ್ರೀಯವಾದಿಯಾಗಿದ್ದ ನಿರ್ಮಲ ಚಂದ್ರ ಚಟರ್ಜಿ ೧೯೫೧-೫೨ರಲ್ಲಿ ದಕ್ಷಿಣ ಬಂಗಾಳದಲ್ಲಿ ತಮ್ಮ
ಮೊತ್ತ ಮೊದಲ ಲೋಕಸಭಾ ಸ್ಥಾನವನ್ನು ತಮ್ಮ ಗೆಳೆಯ ಜನಸಂಘದ ಸ್ಥಾಪಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ
ಬೆಂಬಲದಿಂದ ಗೆದ್ದಿದ್ದರು. ಬಳಿಕ ೧೯೫೯ರಲ್ಲಿ ಅವರು
ಸ್ವತಂತ್ರ ಪಾರ್ಟಿಯ ಒಡನಾಟ ಹೊಂದಿದ್ದರು. ೧೯೬೩ರಲ್ಲಿ ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ)
ಬೆಂಬಲದೊಂದಿಗೆ ಅವರು ಲೋಕಸಭಾ ಚುನಾವಣೆಯಲ್ಲಿ ಜಯಗಳಿಸಿದ್ದರು. ತಂದೆ ನಿರ್ಮಲ ಚಂದ್ರ ಚಟರ್ಜಿ ಅವರಿಗೆ
ಇದ್ದ ವಿಸ್ತೃತ ಮಿತ್ರತ್ವದ ಗುಣವನ್ನು ಸಹಜವಾಗಿಯೇ ರೂಢಿಸಿಕೊಂಡಿದ್ದ ಸೋಮನಾಥ ಚಟರ್ಜಿ ಎಲ್ಲರೊಂದಿಗೂ
ಹೊಂದಿಕೊಳ್ಳಬಲ್ಲವರಾಗಿದ್ದರು. ಎಲ್ಲ ಪಕ್ಷಗಳಲ್ಲೂ ಮಿತ್ರರನ್ನು ಸೋಮನಾಥ ಚಟರ್ಜಿ ಹೊಂದಿದ್ದರು. ಕಲ್ಕತ್ತದಲ್ಲಿ
ಶಾಲಾ ಶಿಕ್ಷಣ ಮುಗಿಸಿದ್ದ ಸೋಮನಾಥ್ ಕಾಲೇಜು ಮತ್ತು ವಿಶ್ವ ವಿದ್ಯಾಲಯ ಶಿಕ್ಷಣವನ್ನು ನಗರದಲ್ಲಿ ಪೂರೈಸಿದ
ಬಳಿಕ ಕೇಂಬ್ರಿಜ್ ನಲ್ಲಿ ಬಿಎ ಶಿಕ್ಷಣ ಪಡೆದರು. ಇಂಗ್ಲೆಂಡಿನಲ್ಲಿ ಕಾನೂನು ಶಿಕ್ಷಣ ಪಡೆದು ಅವರು
ಭಾರತಕ್ಕೆ ವಾಪಸಾದರು. ರಾಜಕೀಯಕ್ಕೆ ಸೇರುವ ಮುನ್ನ ಕಲ್ಕತ್ತ ಹೈಕೋರ್ಟಿನಲ್ಲಿ ಅವರು ವಕಾಲತ್ತು ಪ್ರಾಕ್ಟೀಸ್
ನಡೆಸಿದ್ದರು. ಸಂತಾಪ: ರಾಷ್ಟ್ರಪತಿ ರಾಮನಾಥ್ ಕೋವಿಂದ, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ
ಮನಮೋಹನ್ ಸಿಂಗ್, ಹಾಲಿ ಲೋಕಸಭಾಧ್ಯಕ್ಷೆ ಸುಮಿತ್ರಾ ಮಹಾಜನ್, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ,
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜಿವಾಲ, ಮಾಜಿ
ಹಣಕಾಸು ಸಚಿವ ಪಿ. ಚಿದಂಬರಂ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಗೃಹ ಸಚಿವ ರಾಜನಾಥ್ ಸಿಂಗ್, ಕೇಂದ್ರ
ವಿತ್ತ ಸಚಿವ ಅರುಣ್ ಜೇಟ್ಲಿ, ಸಿಪಿಐ (ಎಂ) ನಾಯಕ ಸೀತಾರಾಂ ಯೆಚೂರಿ ಸೇರಿದಂತೆ ವಿವಿಧ ಗಣ್ಯರು ಸೋಮನಾಥ
ಚಟರ್ಜಿ ನಿಧನಕ್ಕೆ ಸಂತಾಪ ವ್ಯಕ್ತ ಪಡಿಸಿದ್ದಾರೆ.
2018: ನವದೆಹಲಿ: ರಾಷ್ಟ್ರದಲಿ ಏಕಕಾಲಕ್ಕೆ
ಚುನಾವಣೆಗಳನ್ನು ನಡೆಸುವುದರಿಂದ ಇರುವ ವಿವಿಧ ಲಾಭಗಳನ್ನು ವಿವರಿಸಿ ಭಾರತೀಯ ಜನತಾ ಪಕ್ಷದ (ಬಿಜೆಪಿ)
ಅಧ್ಯಕ್ಷ ಅಮಿತ್ ಶಾ ಅವರು ಕಾನೂನು ಆಯೋಗಕ್ಕೆ ಪತ್ರ ಬರೆದರು. ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ
ಬಲವೀರ್ ಚೌಹಾಣ್ ಅವರಿಗೆ ಬರೆದಿರುವ ಪತ್ರದಲ್ಲಿ ಭಾರತೀಯ ಜನತಾ ಪಕ್ಷದ ’ಒಂದು ರಾಷ್ಟ್ರ, ಒಂದು ಚುನಾವಣೆ’ ಗುರಿಗೆ ಸಂಬಂಧಿಸಿದಂತೆ ಎಲ್ಲ ಪಾಲುದಾರರ
ಮಧ್ಯೆ ನಡೆದ ’ಧನಾತ್ಮಕ’ ಚರ್ಚೆಯ ಶಿಫಾರಸು/ ಚರ್ಚೆಯ
ಅಂಶಗಳ ಪ್ರತಿಯೊಂದನ್ನು ಆಯೋಗಕ್ಕೆ ಒಪ್ಪಿಸುವುದಾಗಿಯೂ ಶಾ ತಿಳಿಸಿದರು. ಚುನಾವಣೆಗಳು ಪ್ರಜಾತಾಂತ್ರಿಕ
ವ್ಯವಸ್ಥೆಯ ಮೂಲ ಸ್ಥಂಭಗಳು ಎಂಬುದಾಗಿ ಬಣ್ಣಿಸಿದ ಬಿಜೆಪಿ ನಾಯಕ, ಪ್ರತಿವರ್ಷ ಪ್ರತಿ ತಿಂಗಳು ಒಂದಲ್ಲ
ಒಂದು ಕಡೆ ಚುನಾವಣೆಗಳು ನಡೆಯುತ್ತಲೇ ಇರುವುದರತ್ತ ಬೊಟ್ಟು ಮಾಡಿ, ಒಂದಲ್ಲ ಒಂದು ರಾಜ್ಯದಲ್ಲಿ ನಡೆಯುವ
ಈ ಚುನಾವಣೆಗಳು ಆಡಳಿತ, ಕಾರ್‍ಯ ನಿರ್ವಹಣೆಗಳ ಮೇಲೆ ಪರಿಣಾಮ ಬೀರುತ್ತಿರುತ್ತದೆ ಎಂದು ಹೇಳಿದರು.
ಲೋಕಸಭೆಯ ಐದು ವರ್ಷಗಳ ಕಾಲಾವಧಿಯಲ್ಲಿ ಪ್ರತಿವರ್ಷ ಐದರಿಂದ ಏಳು ವಿಧಾನಸಭೆಗಳಿಗೆ ಚುನಾವಣೆ ನಡೆಯುತ್ತಿರುತ್ತದೆ.
ಜೊತೆಗೇ ವಿವಿಧ ಸ್ಥಳೀಯ ಸಂಸ್ಥೆಗಳಿಗೂ ಚುನಾವಣೆಗಳು ನಡೆಯುತ್ತಿರುತ್ತವೆ. ಹೀಗಾಗಿ ರಾಷ್ಟ್ರವು ಸದಾಕಾಲವು
ಚುನಾವಣಾ ಪ್ರಕ್ರಿಯೆಯ ಗುಂಗಿನಲ್ಲೇ ಇರುತ್ತದೆ ಎಂದು ಅವರು ತಿಳಿಸಿದರು. ಇಂತಹ ಸ್ಥಿತಿಯು, ಸರ್ಕಾರಿ
ಬೊಕ್ಕಸದ ಮೇಲೆ ಒತ್ತಡ ಬೀರುವುದು ಮಾತ್ರವೇ ಅಲ್ಲ ಅಧಿಕಾರಿಗಳ ಗಮನವನ್ನು ಜನರ ಕಲ್ಯಾಣದತ್ತ ಹರಿಸುವ
ಬದಲಿಗೆ ಸುಲಲಿತ ಚುನಾವಣೆಗಳನ್ನು ನಿರ್ವಹಿಸುವತ್ತ ಮಾತ್ರವೇ ಹರಿಯುವಂತೆ ಮಾಡುತ್ತದೆ ಎಂದು ಅವರು
ಹೇಳಿದರು. ವಿವಿಧ ರಾಜಕೀಯ ಪಕ್ಷಗಳು ಚುನಾವಣೆಗಳ ಸಂಭಾವ್ಯ ದಿನಾಂಕಗಳ ಮೇಲೆಯೇ ಕಣ್ಣಿಟ್ಟುಕೊಂಡಿರುತ್ತವೆ
ಮತ್ತು ಅಲ್ಪ ಕಾಲಿಕ ಮತ್ತು ಜನಪ್ರಿಯ ನೀತಿಗಳನ್ನು
ರೂಪಿಸುವತ್ತಲೇ ತಮ್ಮ ಚಿತ್ತ ಹರಿಸುತ್ತಿರುತ್ತವೆ. ಜೊತೆಗೆ ಪ್ರತಿಯೊಂದು ಚುನಾವಣೆಗೂ ಮುನ್ನ ಚುನಾವಣಾ
ಮಾದರಿ ನೀತಿ ಸಂಹಿತೆ ಜಾರಿಯಾಗುವುದರಿಂದ ನೀತಿ ನಿರ್ಧಾರಗಳನ್ನು ಕೈಗೊಳ್ಳುವುದು ಮತ್ತು ಅಭಿವೃದ್ಧಿ
ಕಾರ್‍ಯಗಳನ್ನು ಕೈಗೊಳ್ಳುವುದು ಸ್ಥಗಿತಗೊಳ್ಳುತ್ತಿರುತ್ತದೆ. ಇದು ಆಡಳಿತ ನಿರ್ವಹಣೆ ಮೇಲೆ ಪರಿಣಾಮ
ಬೀರುತ್ತದೆ ಎಂದು ಅಮಿತ್ ಶಾ ವಿವರಿಸಿದರು. ೨೦೧೬-೧೭ರಲ್ಲಿ ಮಹಾರಾಷ್ಟ್ರದಲ್ಲಿ ೩೬೫ ದಿನಗಳಲ್ಲಿ ೩೦೭
ದಿನಗಳ ಕಾಲ ಒಂದಲ್ಲ ಒಂದು ಕಡೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿತ್ತು ಎಂಬುದನ್ನು
ಶಾ ಉದಾಹರಿಸಿದರು. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ರಾಷ್ಟ್ರದಲ್ಲಿ ಏಕಕಾಲಕ್ಕೆ ಚುನಾವಣೆ ನಡೆಸುವ
ಬಗ್ಗೆ ನಿಯಮಿತ, ರಾಷ್ಟ್ರೀಯ ಚರ್ಚೆ ನಡೆಸುವಂತೆ ಮತ್ತು ರಾಜಕೀಯ ಪಕ್ಷಗಳು ಈ ನಿಟ್ಟಿನಲ್ಲಿ ಸಹಮತ
ಸಾಧಿಸುವಂತೆ ಕರೆ ಕೊಟ್ಟಿರುವುದನ್ನು ಅಮಿತ್ ಶಾ ಉಲ್ಲೇಖಿಸಿದರು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ
ಅವರೂ ಈ ಕ್ರಮವನ್ನು ಬೆಂಬಲಿಸಿದ್ದಾರೆ ಎಂದು ಅಮಿತ್ ಶಾ ಗಮನ ಸೆಳೆದರು. ಏಕಕಾಲದ ಚುನಾವಣೆಗಳು ಒಕ್ಕೂಟವನ್ನು ದುರ್ಬಲಗೊಳಿಸುತ್ತವೆ
ಎಂಬ ಟೀಕೆಗಳನ್ನು ತಳ್ಳಿ ಹಾಕಿರುವ ಬಿಜೆಪಿ ಮುಖ್ಯಸ್ಥ ’ವಾಸ್ತವವಾಗಿ ಏಕ ಕಾಲದ ಚುನಾವಣೆಗಳು ಒಕ್ಕೂಟವನ್ನು
ಬಲಗೊಳಿಸುತ್ತವೆ ಮತ್ತು ಹೆಚ್ಚಿನ ಸ್ಥಿರತೆಯನ್ನು ಒದಗಿಸುತ್ತವೆ’ ಎಂದು ಹೇಳಿದರು.
2018: ಕಾಬೂಲ್: ಆಫ್ಘಾನಿಸ್ಥಾನದಲ್ಲಿ
ಆಫ್ಘನ್ ಪಡೆಗಳು ಮತ್ತು ತಾಲಿಬಾನ್ ಉಗ್ರಗಾಮಿಗಳ ಮಧ್ಯೆ ಕಳೆದ ೪ ದಿನಗಳಿಂದ ನಡೆದ ಭೀಕರ ಕದನದ ವಿವರಗಳು
ಇದೇ ಮೊದಲ ಬಾರಿಗೆ ಬಹಿರಂಗಗೊಂಡಿದ್ದು, ಸುಮಾರು ೧೦೦ ಮಂದಿ ಆಫ್ಘನ್ ಭದ್ರತಾ ಸಿಬ್ಬಂದಿ ಮತ್ತು ೨೦
ಮಂದಿ ನಾಗರಿಕರು ಘರ್ಷಣೆಯಲ್ಲಿ ಸಾವನ್ನಪ್ಪಿದ್ದಾರೆ
ಎಂದು ರಕ್ಷಣಾ ಸಚಿವ ಜನರಲ್ ತಾರಿಖ್ ಶಾ ಬಹ್ರಾಮಿ ತಿಳಿಸಿದರು. ಕಾಬೂಲಿನಲ್ಲಿ ಈದಿನ ಪತ್ರಿಕಾಗೋಷ್ಠಿ
ನಡೆಸಿದ ಅವರು ಸಾವನ್ನಪ್ಪಿರುವ ೧೯೪ ಮಂದಿ ಬಂಡುಕೋರರಲ್ಲಿ ೧೨ ಮಂದಿ ಬಂಡುಕೋರ ನಾಯಕರು ಸೇರಿದ್ದಾರೆ.
ಸತ್ತ ಬಂಡುಕೋರರಲ್ಲಿ ಬಹಳಷ್ಟು ಮಂದಿ ಪಾಕಿಸ್ತಾನಿ, ಚೆಚನ್ ಮತ್ತು ಅರಬ್ ವಿದೇಶೀ ಹೋರಾಟಗಾರರಾಗಿದ್ದಾರೆ
ಎಂದು ಹೇಳಿದರು. ಘಜನಿ ಪ್ರಾಂತ್ಯದ ರಾಜಧಾನಿ ಘಜನಿ
ಪಟ್ಟಣದ ಸ್ವಾಧೀನಕ್ಕಾಗಿ ತಾಲೀಬಾನ್ ನಡೆಸಿದ ಭಾರಿ ದಾಳಿಯ ಸಾವು ನೋವಿನ ವಿವರ ಇದೇ ಮೊದಲ ಬಾರಿಗೆ
ಬಹಿರಂಗಗೊಂಡಿದೆ. ಇದು ರಾಷ್ಟ್ರದ ರಾಜಧಾನಿ ಕಾಬೂಲಿನಿಂದ ೧೨೦ ಕಿಮೀ ದೂರದಲ್ಲಿರುವ ಆಯಕಟ್ಟಿನ ನಗರದ
ಮೇಲೆ ತಾಲಿಬಾನ್ ಇತ್ತೀಚೆಗೆ ನಡೆಸಿದ ಉಗ್ರದಾಳಿಯಾಗಿದೆ. ಆಫ್ಘನ್ ಪಡೆಗಳ ನೆರವಿಗಾಗಿ ಅಮೆರಿಕವು ತನ್ನ
ಸೇನಾ ಸಲಹೆಗಾರರನ್ನು ಕಳುಹಿಸಿಕೊಟ್ಟಿದೆ. ೨,೭೦,೦೦೦ ಜನಸಂಖ್ಯೆ ಇರುವ ಘಜನಿ ಪಟ್ಟಣದ ಪತನ ತಾಲಿಬಾನ್
ಗೆ ಮಹತ್ವದ ವಿಜಯವಾಗುವ ಸಾಧ್ಯತೆ ಇದೆ. ಇದು ಕಾಬೂಲಿನಿಂದ ದಕ್ಷಿಣದ ಪ್ರಾಂತ್ಯಗಳನ್ನು ಸಂಪರ್ಕಿಸುವ
ಪ್ರಮುಖ ಹೆದ್ದಾರಿಯ ಸಂಪರ್ಕವನ್ನೂ ಕಡಿತಗೊಳಿಸುತ್ತದೆ.
ಸಾವು ನೋವಿನ ಸಂಖ್ಯೆ ಅಂತಿಮವಲ್ಲ, ಇನ್ನೂ ಬದಲಾಗಬಹುದು, ೧೦೦೦ ದಷ್ಟು ಹೆಚ್ಚುವರಿ ಪಡೆಗಳನ್ನು
ಘಜನಿಗೆ ಕಳುಹಿಸಲಾಗಿದ್ದು, ನಗರವು ತಾಲಿಬಾನ್ ವಶಕ್ಕೆ ಹೋಗದಂತೆ ತಡೆಯಲು ನೆರವಾಗುತ್ತಿವೆ ಎಂದು ಜನರಲ್
ಬಹ್ರಾಮಿ ಹೇಳಿದರು. ಬಂಡುಕೋರರು ಘಜನಿಯಲ್ಲಿ ಜನರ ಮನೆಗಳ ಒಳಕ್ಕೆ ನುಸುಳಿಕೊಂಡಿದ್ದು, ರಾತ್ರಿ ವೇಳೆಯಲ್ಲಿ
ಆಫ್ಘನ್ ಪಡೆಗಳ ಮೇಲೆ ಎರಗುತ್ತಿದ್ದಾರೆ. ಅವರು ನಗರದ ಹೊರವಲಯದ ದೂರ ಸಂಪರ್ಕ ಗೋಪುರವನ್ನೂ ನಾಶ ಪಡಿಸಿದ್ದಾರೆ.
ಪರಿಣಾಮವಾಗಿ ನಗರದ ಎಲ್ಲ ಲ್ಯಾಂಡ್ ಲೈನ್ ಮತ್ತು ಸೆಲ್ ಫೋನ್ ಸಂಪರ್ಕಗಳೂ ಕಡಿತಗೊಂಡಿವೆ. ಹೀಗಾಗಿ
ಕದನದ ವಿವರಗಳನ್ನು ಖಾತರಿ ಪಡಿಸಿಕೊಳ್ಳುವುದೂ ದುಸ್ತರವಾಗಿದೆ. ಪಟ್ಟಣವನ್ನು ತಾಲೀಬಾನ್ ವಶಕ್ಕೆ ಹೋಗದಂತೆ ತಡೆಯಲಾಗಿದೆ.
ಆಫ್ಘನ್ ಪಡೆಗಳು ಪ್ರಮುಖ ಸರ್ಕಾರಿ ಸ್ಥಳಗಳನ್ನು ಮತ್ತು ಇತರ ಸಂಸ್ಥೆಗಳನ್ನು ನಿಯಂತ್ರಣದಲ್ಲಿ ಇಟ್ಟುಕೊಂಡಿವೆ
ಎಂದು ಅಧಿಕಾರಿಗಳು ಪ್ರತಿಪಾದಿಸಿದರು.
2018: ನವದೆಹಲಿ: ದೆಹಲಿಯ ಮುಖ್ಯ ಕಾರ್ಯದರ್ಶಿ
ಅಂಶು ಪ್ರಕಾಶ್ ಅವರ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್,
ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಮತ್ತು ಆಮ್ ಆದ್ಮಿ ಪಕ್ಷದ (ಆಪ್) ಇತರ ೧೧ ಶಾಸಕರ ವಿರುದ್ಧ ದೋಷಾರೋಪ ಹೊರಿಸಲಾಯಿತು. ಕೇಜ್ರಿವಾಲ್ ಮತ್ತು ಸಿಸೋಡಿಯಾ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೧೨೦ ಬಿ
(ಕ್ರಿಮಿನಲ್ ಸಂಚಿಗಾಗಿ ಶಿಕ್ಷೆ), ೩೫೩ (ಹಲ್ಲೆ ಅಥವಾ ಸರ್ಕಾರಿ ಸೇವಕನನ್ನು ತನ್ನ ಕರ್ತವ್ಯ ನಿರ್ವಹಿಸದಂತೆ
ತಡೆಯಲು ಕ್ರಿಮಿನಲ್ ಬಲ ಬಳಸುವುದು) ಮತ್ತು ೫೦೪ (ಶಾಂತಿಗೆ ಭಂಗ ತರುವ ಸಲುವಾಗಿ ಕೆರಳುವಂತೆ ಮಾಡಲು
ಉದ್ದೇಶಪೂರ್ವಕ ಅಪಮಾನ ಮಾಡುವುದು) ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಲಾಯಿತು. ಇದಕ್ಕೆ ಮುನ್ನ ಪೊಲೀಸರು
ಮುಖ್ಯಮಂತ್ರಿಯನ್ನು ಹಲ್ಲೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂರು ಗಂಟೆಗಳಿಗೂ ಹೆಚ್ಚು ಕಾಲ ಪ್ರಶ್ನಿಸಿದ್ದರು.
ಅವರ ಖಾಸಗಿ ಕಾರ್‍ಯದರ್ಶಿ ಬಿಭವ್ ಕುಮಾರ್ ಅವರನ್ನೂ ತನಿಖೆಗೆ ಒಳಪಡಿಸಲಾಗಿತ್ತು. ೧೧
ಮಂದಿ ಶಾಸಕರಾದ ಅಮಾನತುಲ್ಲಾ ಖಾನ್, ಪ್ರಕಾಶ್ ಜರ್ವಾಲ್, ನಿತಿನ್ ತ್ಯಾಗಿ, ರಿತುರಾಜ್ ಗೋವಿಂದ್,
ಸಂಜೀವ್ ಝಾ, ಅಜಯ್ ದತ್, ರಾಜೇಶ್ ರಿಶಿ, ರಾಜೇಶ್ ಗುಪ್ತ, ಮದನ ಲಾಲ್, ಪರ್ವೀನ್ ಕುಮಾರ್ ಮತ್ತು ದಿನೇಶ್
ಮೋಹನಿಯಾ ಅವರನ್ನೂ ಪೊಲೀಸರು ಪ್ರಶ್ನಿಸಿದ್ದರು. ಫೆಬ್ರುವರಿ ೧೯ರ ಸಭೆಯಲ್ಲಿ ಅಂಶು ಪ್ರಕಾಶ್ ಅವರ
ಮೇಲೆ ಆರೋಪಿತ ಹಲ್ಲೆ ನಡೆದಾಗ ಈ ಶಾಸಕರು ಮುಖ್ಯಮಂತ್ರಿಯವರ ನಿವಾಸದಲ್ಲಿ ಹಾಜರಿದ್ದರು. ಅಡಿಷನಲ್
ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸಮರ್ ವಿಶಾಲ್ ಅವರ ನ್ಯಾಯಾಲಯದ ಮುಂದೆ ಅಂತಿಮ ವರದಿಯನ್ನು
ಸಲ್ಲಿಸಲಾಗಿದ್ದು, ಆಗಸ್ಟ್ ೨೫ರಂದು ವಿಷಯವನ್ನು ಪರಿಗಣನೆಗಾಗಿ ನ್ಯಾಯಾಲಯ ಕೈಗೆತ್ತಿಕೊಳ್ಳಲಿದೆ.
ಫೆಬ್ರುವರಿ ೧೯ರಂದು ಕೇಜ್ರಿವಾಲ್ ಅವರ ಅಧಿಕೃತ ನಿವಾಸದಲ್ಲಿ ಸಭೆ ನಡೆಯುತ್ತಿದ್ದಾಗ ಅಂಶು ಪ್ರಕಾಶ್
ಅವರ ಮೇಲೆ ಈ ಹಲ್ಲೆ ನಡೆಯಿತು ಎಂದು ಆಪಾದಿಸಲಾಗಿದೆ. ಆರೋಪಿತ ಹಲ್ಲೆ ಘಟನೆ ಘಟಿಸಿದಾಗ ಮುಖ್ಯಮಂತ್ರಿ
ಹಾಜರಿದ್ದರು ಎಂದು ಪೊಲೀಸರು ಹೇಳಿದರು. ಮುಖ್ಯಮಂತ್ರಿ
ನಿವಾಸದಲ್ಲಿ ಹಾಜರಿದ್ದ ಎಲ್ಲ ೧೧ ಮಂದಿ ಶಾಸಕರನ್ನೂ ಪೊಲೀಸರು ಈಗಾಗಲೇ ಪ್ರಶ್ನಿಸಿದ್ದಾರೆ. ಪಕ್ಷದ
ಇಬ್ಬರು ಶಾಸಕರಾದ ಅಮಾನತುಲ್ಲಾ ಖಾನ್ ಮತ್ತು ಪ್ರಕಾಶ್ ಜರ್ವಾಲ್ ಅವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ
ಬಂಧಿಸಲಾಗಿದೆ. ಮುಖ್ಯ ಕಾರ್ಯದರ್ಶಿ ಮೇಲಿನ ಈ ಹಲ್ಲೆ ಪ್ರಕರಣವು ದೆಹಲಿ ಸರ್ಕಾರ ಮತು ಅಧಿಕಾರಿಗಳ
ಮಧ್ಯೆ ಭಾರಿ ಘರ್ಷಣೆಗೂ ಕಾರಣವಾಗಿತ್ತು. ಅಧಿಕಾರಿಗಳು ಸಭೆಗಳಿಗೆ ಹಾಜರಾಗುತ್ತಿಲ್ಲ ಎಂದು ಆಪಾದಿಸಿ
ಮುಖ್ಯಮಂತ್ರಿ ಕೇಜ್ರಿವಾಲ್ ಸಹಿತ ಸಂಪುಟ ಸದಸ್ಯರು ಲೆಫ್ಟಿನೆಂಟ್ ಗವರ್ನರ್ ಬೈಜಾಲ್ ಅವರ ನಿವಾಸದಲ್ಲಿ
ಧರಣಿಯನ್ನೂ ನಡೆಸಿದ್ದರು.
2018: ನವದೆಹಲಿ: ಕೆಲವು ಅಪರಿಚಿತ ವ್ಯಕ್ತಿಗಳು
ಸಂಸತ್ ಭವನ ಸಮೀಪದ ಕಾನ್‌ಸ್ಟಿಟ್ಯೂಷನ್ ಕ್ಲಬ್‌ನಲ್ಲಿ ಜೆ ಎನ್ ಯು ವಿದ್ಯಾರ್ಥಿ ನಾಯಕ ಉಮರ್ ಖಲೀದ್
ಮೇಲೆ ಗುಂಡು ಹಾರಿಸಿದ ಘಟನೆ ಈದಿನ ಮಧ್ಯಾಹ್ನ ಘಟಿಸಿತು. ಆದರೆ ಖಲೀದ್ ಗಾಯಗೊಳ್ಳದೆ ಪಾರಾಗಿದ್ದಾರೆ ಎಂದು ಪೊಲೀಸರು
ತಿಳಿಸಿದರು. ಕ್ಲಬ್ಬಿನ ಪ್ರವೇಶದ್ವಾರದಲ್ಲಿದ್ದಾಗ
ಖಲೀದ್ ಮೇಲೆ ಎರಡು ಬಾರಿ ಗುಂಡು ಹಾರಿಸಲಾಯಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು. ’ಯುನೈಟೆಡ್ ಅಗೆಯಿನ್‌ಸ್ಟ್ ಹೇಟ್’ (ದ್ವೇಷದ ವಿರುದ್ಧ ಏಕತೆ) ಹೆಸರಿನ ಸಂಘಟನೆಯು ಸಂಘಟಿಸಿದ್ದ
’ಕೌಫ್ ಸೆ ಆಜಾದೀ’ ಎಂಬ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಸಲುವಾಗಿ
ಉಮರ್ ಬಂದಿದ್ದಾಗ ಈ ಘಟನೆ ಘಟಿಸಿತು. ‘ನಾವು ಚಹಾ
ಕುಡಿಯಲು ಹೋಗಿದ್ದೆವು. ಆಗ ಮೂವರು ನಮ್ಮತ್ತ ಬಂದರು. ಅವರಲ್ಲಿ ಒಬ್ಬ ಖಲೀದ್‌ರನ್ನು ಹಿಡಿದುಕೊಂಡ.
ಖಲೀದ್ ಪ್ರತಿಭಟಿಸಿದರು. ಆಗ ಉಂಟಾದ ಗದ್ದದ ಮಧ್ಯೆ
ಗುಂಡು ಹಾರಾಟದ ಸದ್ದು ಕೇಳಿಸಿತು. ಆದರೆ ಖಲೀದ್ ಗಾಯಗೊಂಡಿಲ್ಲ. ಪರಾರಿಯಾಗುತ್ತಿದ್ದ ಆರೋಪಿಗಳು ಓಡುತ್ತಲೇ
ಮತ್ತೂ ಒಮ್ಮೆ ಗುಂಡು ಹಾರಿಸಿದರು’ ಎಂದು ಸೈಫಿ ಹೇಳಿದರು.
‘ದೇಶದಲ್ಲಿ ಭೀತಿಯ ವಾತಾವರಣ ಇದೆ. ಸರ್ಕಾರದ ವಿರುದ್ಧ ಮಾತನಾಡುವ ಯಾರನ್ನೇ ಆದರೂ ಬೆದರಿಸಲಾಗುತ್ತದೆ’ ಎಂದು ಬಳಿಕ ಖಲೀದ್ ನುಡಿದರು. ಪೊಲೀಸರು ಸ್ಥಳಕ್ಕೆ
ಆಗಮಿಸಿ, ಘಟನೆಗೆ ಸಂಬಂಧಿಸಿದಂತೆ ತನಿಖೆ ಆರಂಭಿಸಿದ್ದು, ಓಡಿ ಹೋಗುವಾಗ ಆರೋಪಿಗಳು ಎಸದಿದ್ದ ಆಯುಧವನ್ನು
ಪೊಲೀಸರು ವಶ ಪಡಿಸಿಕೊಂಡರು. ಘಟನೆಯನ್ನು ಖಂಡಿಸಿದ ಜೆಎನ್ ಯು ವಿದ್ಯಾರ್ಥಿ ಸಂಘದ ಮಾಜಿ ಉಪಾಧ್ಯಕ್ಷ
ಶೆಹ್ಲಾ ರಶೀದ್ ’ಆಘಾತಕರ ಮತ್ತು ಖಂಡನಾರ್ಹ. ದೆಹಲಿಯಲಿ ಉಮರ್ ಖಲೀದ್ ಮೇಲೆ ಹಿಂದಿನಿಂದ ದಾಳಿ ನಡೆಸಿದ
ವ್ಯಕ್ತಿಯೊಬ್ಬ ಅವರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾನೆ. ನಾನು ಉಮರ್ ಜೊತೆ ಮಾತನಾಡಿದ್ದೇನೆ.
ಅವರು ಸುರಕ್ಷಿತವಾಗಿದ್ದಾರೆ, ಆದರೆ ನಾವು ಅವರ ಸುರಕ್ಷತೆ ಬಗ್ಗೆ ತೀವ್ರ ಕಾಳಜಿ ವಹಿಸಬೇಕಾಗಿದೆ’ ಎಂದು ಟ್ವೀಟ್ ಮಾಡಿದರು. ೨೦೦೧ರಲ್ಲಿ ಸಂಸತ್ತಿನ
ಮೇಲೆ ನಡೆಸಿದ ದಾಳಿಗಾಗಿ ಆರೋಪಿ ಅಫ್ಜಲ್ ಗುರುವಿಗೆ ಗಲ್ಲು ಶಿಕ್ಷೆ ವಿಧಿಸಿದ್ದರ ವಿರುದ್ಧ ವಿಶ್ವ
ವಿದ್ಯಾಲಯ ಕ್ಯಾಂಪಸ್ಸಿನಲ್ಲಿ ನಡೆಸಿದ ಪ್ರತಿಭಟನೆ ಸಂಬಂಧವಾಗಿ ೨೦೧೬ರ ಫೆಬ್ರುವರಿಯಲ್ಲಿ ಉಮರ್ ಖಲೀದ್,
ಕನ್ನಯ್ಯ ಕುಮಾರ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ಅವರ ವಿರುದ್ಧ ರಾಷ್ಟ್ರದ್ರೋಹದ ಆರೋಪದಲ್ಲಿ ಬಂಧಿಸಲಾಗಿತ್ತು.
2016: ರಿಯೋ ಡಿ ಜನೈರೋ: ಭಾರತದ ಉದಯೋನ್ಮುಖ ಆಟಗಾರ್ತಿ ಲಲಿತಾ ಬಾಬರ್ 3000 ಮೀಟರ್ ಸ್ಟೀಪಲ್ ಚೇಸ್ ಕ್ವಾಲಿಫೈಯಿಂಗ್ ಸುತ್ತಿನಲ್ಲಿ 4ನೇಯವರಾಗಿ ಗುರಿ ಮುಟ್ಟಿ ಫೈನಲ್ಸ್ಗೆ ಲಗ್ಗೆ ಇಟ್ಟ ಭಾರತದ ಪ್ರಥಮ ಮಹಿಳೆ ಎಂಬ ಕೀರ್ತಿಗೆ ಪಾತ್ರರಾದರು. 1984 ರ ಒಲಿಂಪಿಕ್ಸ್ನಲ್ಲಿ ಪಿ ಟಿ ಉಷಾ ಓಟದ ಸ್ಪರ್ಧೆಯಲ್ಲಿ ಫೈನಲ್ ತಲುಪಿ ಸಾಧನೆ ಮಾಡಿದ್ದರು. ಲಲಿತಾ ಬಾಬರ್ ದಕ್ಷಿಣ ಕೊರಿಯಾದಲ್ಲಿ ಎರಡು ವರ್ಷದ ಹಿಂದೆ ನಡೆದ ಏಷಿಯನ್ ಗೇಮ್ಸ್ನಲ್ಲಿ ಕಂಚಿನ ಪದಕದ ಸಾಧನೆ ಮಾಡಿದ್ದರು. ಮೊದಲು ಮೂವರು ಸ್ಪರ್ಧಾಳುಗಳು ಮುಂದಿನ ಸುತ್ತಿಗೆ ಆಯ್ಕೆಯಾದರೆ ಲಲಿತಾ ಹಿಂದಿದ್ದ ಉಳಿದ 6 ಅಥ್ಲಿಟ್ಗಿಂತ ವೇಗವಾಗಿ ಗುರಿ ತಲುಪಿ ಫೈನಲ್ಗೆ ಪ್ರವೇಶ ಗಿಟ್ಟಿಸಿದರು. ಆಟದಲ್ಲಿದ್ದ ಮತ್ತೋರ್ವ ಭಾರತದ ಆಟಗಾರ್ತಿ ಸುಧಾ 9 ನೇ ಯವರಾಗಿ ಗುರಿಮುಟ್ಟಿ ನಿರಾಸೆ ಮೂಡಿಸಿದರು. ಭಾರತದ ಸ್ವಾತಂತ್ರ್ಯ ದಿನ ಆಗಸ್ಟ್ 15 ರಂದು ಸ್ಟೀಪಲ್ ಚೇಸ್ನ ಫೈನಲ್ ನಡೆಯಲಿದೆ.
2016: ವಾಲ್ಬ್ರೆಜ್ಯೆಚ್, ಪೋಲೆಂಡ್: ಚಿನ್ನದ ರೈಲುಗಾಡಿ ಇರುವ ಬಗ್ಗೆ ಯಾವುದೇ ವೈಜ್ಞಾನಿಕ ದಾಖಲೆಗಳು ಇಲ್ಲದೇ ಇದ್ದರೂ, ಕೊಳ್ಳೆ ಹೊಡೆದ ಧನ, ಆಭರಣ ಸಹಿತವಾಗಿ ನೈಋತ್ಯ ಪೋಲೆಂಡ್ನಲ್ಲಿ ನೆಲದಡಿಯಲ್ಲಿ ಹೂತು ಹೋಗಿದೆ ಎಂದು ಶಂಕಿಸಲಾಗಿರುವ ನಾಝಿಗಳ ಚಿನ್ನದ ರೈಲುಗಾಡಿಗಾಗಿ ನಿಧಿ ಶೋಧಕರು ಶೋಧ ಕಾರ್ಯಾಚರಣೆ ಆರಂಭಿಸಿದರು. ‘ರೈಲುಗಾಡಿಯು ಬಣವೆಯೊಳಗಿನ ಸೂಜಿಯೇನಲ್ಲ. ಅದು ಇದ್ದರೆ ನಾವು ಪತ್ತೆ ಹಚ್ಚುತ್ತೇವೆ’ ಎಂದು ಚಿನ್ನದ ರೈಲು ಶೋಧ ಯೋಜನೆಯ ವಕ್ತಾರ ಆಂಡ್ರೆಜ್ ಗೈಕ್ ಹೇಳಿದರು. ವಾಲ್ ಬ್ರೆಜ್ಯೆಚ್ ನಗರದ ಸಮೀಪ ರೇಡಾರ್ ಮೂಲಕ ಸಂಶೋಧನೆ ನಿರತರಾಗಿದ್ದಾಗ ನಾಝಿ ಕಾಲದ ಶಸ್ತ್ರಾಸ್ತ್ರ ಭರಿತ ರೈಲುಗಾಡಿಯೊಂದನ್ನು ತಾವು ಪತ್ತೆ ಹಚ್ಚಿರುವುದಾಗಿ ಇಬ್ಬರು ಕಳೆದ ಆಗಸ್ಟ್ ತಿಂಗಳಲ್ಲಿ ಮಾಡಿದ್ದ ಪ್ರಕಟಣೆ ಮಾಧ್ಯಮಗಳಲ್ಲಿ ಭಾರಿ ಗುಲ್ಲೆಬ್ಬಿಸಿತ್ತು. ಜರ್ಮನಿಯ ಪ್ರಜೆ ಆಂಡ್ರೆಯಾಸ್ ರಿಕ್ಟರ್ ಮತ್ತು ಪೋಲೆಂಡ್ನ ಪಿಯೊಟ್ರ್ ಕೋಪೆರ್ ಅವರು ಸುಮಾರು 98 ಮೀಟರ್ (320 ಅಡಿ) ಉದ್ದದ ಹಲವಾರು ರೈಲು ಬೋಗಿಗಳನ್ನು ತಾವು ಪತ್ತೆ ಹಚ್ಚಿರುವುದಾಗಿ ಹೇಳಿದ್ದರು. ರೈಲು ಗಾಡಿಯ ಬೋಗಿಗಳು ಭೂಮಿಯ ಅಡಿಯಲ್ಲಿ 8ರಿಂದ 9 ಮೀಟರ್ (26ರಿಂದ 28 ಅಡಿಗಳು) ಆಳದಲ್ಲಿ ಹೂತುಹೋಗಿವೆ ಎಂದು ಅವರು ತಿಳಿಸಿದ್ದರು. ದಂತಕತೆಗಳ ಪ್ರಕಾರ ಈ ರೈಲುಗಾಡಿಯಲ್ಲಿ ನಾಝಿಗಳು ಕೊಳ್ಳೆ ಹೊಡೆದ ಚಿನ್ನ, ಕಲಾಕೃತಿಗಳು, ಚಿನ್ನಾಭರಣಗಳು ಇವೆ ಎಂದು ಹೇಳಲಾಗುತ್ತಿದ್ದರೂ, ಈ ರೈಲಿನಲ್ಲಿ ಶಸ್ತ್ರಾಸ್ತ್ರ ಮಾದರಿಗಳಿವೆ ಎಂದು ರಿಕ್ಟರ್ ಮತ್ತು ಕೋಪೆರ್ ಹೇಳಿದ್ದರು. ರಷ್ಯಾದ ಕೆಂಪು ಸೇನೆ ದಾಳಿ ಸಮಯದಲ್ಲಿ ನಾಝಿಗಳು ಕೈದಿಗಳಿಂದ ಸುರಂಗ ಜಾಲ ಕೊರೆಸಿ ಚಿನ್ನಾಭರಣಗಳನ್ನು ಹೂತು ಹಾಕಿದ್ದರು ಎಂದು ಹೇಳಲಾಗಿದೆ.
2016: ನವದೆಹಲಿ: ಬಹುಕೋಟಿ ವಂಚನೆ ಪ್ರಕರಣದ ಘೋಷಿತ ಅಪರಾಧಿಯಾದ ವಿಜಯ್ ಮಲ್ಯ ವಿರುದ್ಧ ಈದಿನ ಎಫ್ಐಆರ್ ದಾಖಲಿಸಿದ ಸಿಬಿಐ ಇದೀಗ ಮಲ್ಯ ಭಾರತದ ‘ವಾಂಟೆಡ್’ ವ್ಯಕ್ತಿ ಎಂದು ಹೇಳಿತು. ಬ್ಯಾಂಕ್ ವಂಚನೆ ಪ್ರಕರಣದ ನಂತರ ದೇಶ ತೊರೆದಿರುವ ಮಲ್ಯ ವಿರುದ್ಧ ಕೆಲ ದಿನಗಳ ಹಿಂದೆ ಜಾಮೀನು ರಹಿತ ಅರೆಸ್ಟ್ ವಾರಂಟ್ ಕೂಡ ಹೊರಡಿಸಲಾಗಿತ್ತು.
ವಿವಿಧ ಬ್ಯಾಂಕುಗಳಿಂದ 8 ಸಾವಿರ ಕೋಟಿ ರೂಪಾಯಿಗೂ ಅಧಿಕ ಸಾಲ ಪಡೆದು ಮರುಪಾವತಿ ಮಾಡದೆ ವಂಚಿಸಿದ ಪ್ರಕರಣದ ಬಗ್ಗೆ ಜಾರಿ ನಿರ್ದೇಶನಾಲಯ (ಎನ್ಫೋರ್ಸ್ಮೆಂಟ್ ಡೈರೆಕ್ಟೊರೆಟ್) ತನಿಖೆಗೆ ಆದೇಶಿಸಿತ್ತು. ನ್ಯಾಯಾಲಯದಿಂದ ಸಮನ್ಸ್ ಪಡೆದರೂ ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ಪಾಸ್ಪೋರ್ಟ್ ರದ್ದುಗೊಳಿಸಿ ಬಂಧನದ ಆದೇಶ ಹೊರಡಿಸಲಾಗಿತ್ತು. ವಂಚನೆ ಮತ್ತು ಕ್ರಿಮಿನಲ್ ಸಂಚು ಆರೋಪಕ್ಕಾಗಿ ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಈಗ ಮಲ್ಯ ವಿರುದ್ಧ ಎಫ್ಐಆರ್ ದಾಖಲಿಸಲಾಯಿತು.
2016: ಬ್ಯೂನಸ್ ಐರಿಸ್: ಅರ್ಜೆಂಟೀನಾ ತಂಡದ ಸ್ಟಾರ್ ಫುಟ್ಬಾಲ್ ಆಟಗಾರ ಲಿಯೋನಲ್ ಮೆಸ್ಸಿ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ರೀ ಎಂಟ್ರಿ ಮಾಡಿದರು. ಅರ್ಜೆಂಟೀನಾ ತಂಡಕ್ಕೆ ಮರಳಿರುವ ಮೆಸ್ಸಿ, ಕೋಪಾ ಅಮೆರಿಕಾ ಕಪ್ ಫೈನಲ್ಸ್ ಸೋಲಿನ ನಂತರ ಅಂತಾರಾಷ್ಟ್ರೀಯ ಫುಟ್ಬಾಲ್ಗೆ ವಿದಾಯ ಘೋಷಿಸಿದ್ದರು. ಮೆಸ್ಸಿ ವಿದಾಯಕ್ಕೆ ವಿಶ್ವಾದ್ಯಂತ ಅಭಿಮಾನಿಗಳು ಬೇಸರಗೊಂಡಿದ್ದರು. ಅರ್ಜೆಂಟೀನಾ ತಂಡಕ್ಕೆ ಸ್ಥೈರ್ಯದ ಅಗತ್ಯವಿದೆ, ಚಿಲಿ ವಿರುದ್ಧ ಕೋಪಾ ಅಮೆರಿಕಾ ಕಪ್ ಫೈನಲ್ಸ್ ಸೋಲು ನನ್ನನ್ನು ಕಂಗೆಡಿಸಿತ್ತು, ಆತುರದಲ್ಲಿ ನಿವೃತ್ತಿ ನಿರ್ಧಾರ ತೆಗೆದುಕೊಂಡಿದ್ದೆ ಆದರೆ ದೀರ್ಘಕಾಲದ ಯೋಚನೆ ಮಾಡಿ ದೇಶಸೇವೆಗಾಗಿ ತಂಡಕ್ಕೆ ಮರಳುತ್ತಿದ್ದೇನೆ ಎಂದು ಮೆಸ್ಸಿ ಹೇಳಿದರು. ದೇಶಾದ್ಯಂತ ಮೆಸ್ಸಿ ವಿದಾಯಕ್ಕೆ ಪ್ರತಿಭಟನೆಗಳು ನಡೆದಿದ್ದವು, ಅಭಿಮಾನಿಗಳ ಸಮೇತ ಅರ್ಜೆಂಟೀನಾ ಫುಟ್ಬಾಲ್ ದಿಗ್ಗಜ ಡಿಗೋ ಮರಡೋನಾ ಮೆಸ್ಸಿಗೆ ಮನವಿ ಮಾಡಿದ್ದರು. ಬಾರ್ಸಿಲೋನಾ ಕ್ಲಬ್ ಪರ ಆಟವಾಡುವ ಮೆಸ್ಸಿ ಫುಟ್ಬಾಲ್ ಜಗತ್ತು ಕಂಡ ಅಪರೂಪದ ಆಟಗಾರ.
2016: ರಿಯೋ ಡಿ ಜನೈರೋ: ಪ್ರಸಕ್ತ ಒಲಿಂಪಿಕ್ ಕ್ರೀಡಾಕೂಡದಲ್ಲಿ ನಾಲ್ಕು ಬಂಗಾರದ ಪದಕಕ್ಕೆ ಮುತ್ತಿಕ್ಕಿ, ಯಶಸ್ಸಿನ ನಾಗಾಲೋಟದಲ್ಲಿದ್ದ ಮೈಕಲ್ ಫೆಲ್ಪ್ಸ್ ಅವರಿಗೆ ಸಿಂಗಾಪುರದ ಈಜು ಪಟು ಜೋಸೆಫ್ ಸ್ಕೂಲಿಂಗ್ ಆಘಾತ ನೀಡಿ, ಬಂಗಾರಕ್ಕೆ ಮುತ್ತಿಕ್ಕಿದರು. ಇದರೊಂದಿಗೆ ಪ್ರಸಕ್ತ ಒಲಿಂಪಿಕ್ ಕ್ರೀಡಾ ಕೂಟದಲ್ಲಿ ಸಿಂಗಾಪುರ ಮೊದಲ ಪದಕ ಜಯಿಸಿತು. ಈದಿನ ಮುಂಜಾನೆ ನಡೆದ 100 ಮೀಟರ್ ಬಟರ್ ಫ್ಲೈ ಸ್ಪರ್ಧೆಯಲ್ಲಿ ಸಿಂಗಾಪುರದ ಜೋಸೆಫ್ ಸ್ಕೂಲಿಂಗ್ 50.39 ಸೆಕೆಂಡ್ಗೆ ಮೊದಲಿಗರಾಗಿ ನಿಗದಿತ ಗುರಿ ತಲುಪಿದರು. ಎರಡನೆಯವರಾಗಿ ಫೆಲ್ಪ್ಸ್ 51.14 ಸೆಕೆಂಡ್ಗೆ ದಡ ತಲುಪಿ ನಿರಾಶೆ ಅನುಭವಿಸಿದರು. ಅಷ್ಟೇ ಅಲ್ಲ 2008ರ ಬೀಜಿಂಗ್ ಒಲಿಂಪಿಕ್ನಲ್ಲಿ ಫೆಲ್ಪ್ಸ್ ನಿರ್ಮಿಸಿದ್ದ 50.58 ಸೆಕೆಂಡ್ ದಾಖಲೆಯನ್ನು ಸ್ಕೂಲಿಂಗ್ ಮುರಿಯುವ ಮೂಲಕ ತಮ್ಮ ಹೆಸರಿಗೆ ನೂತನ ದಾಖಲೆ ಬರೆದುಕೊಂಡರು. ಪುರುಷರ ವಯಕ್ತಿಕ 200 ಮೀ ಮೆಡ್ಲೆಯಲ್ಲಿ ಫೆ ಲ್ಪ್ಸ್ಬ ಬಂಗಾರ ಪದಕ ಜಯಿಸಿ, ಒಲಿಂಪಿಕ್ಸ್ ಕ್ರೀಡಾ ಕೂಡದಲ್ಲಿ ಒಟ್ಟು 22 ಬಂಗಾರದ ಪದಕ ಬೇಟೆಯಾಡಿದ ಐತಿಹಾಸಿಕ ಸಾಧನೆ ಮಾಡಿದ್ದರು. ಇದರಿಂದಾಗಿ ಅಮೆರಿಕ ಅಭಿಮಾನಿಗಳು ಫೆಲ್ಪ್ಸ್ 23ನೇ ಪದಕಕ್ಕೆ ಮುತ್ತಿಡುತ್ತಾರೆ ಎಂಬ ಅತಿಯಾದ ವಿಶ್ವಾಸದಲ್ಲಿದ್ದರು. ಆದರೆ ಸಿಂಗಾಪುರದ ಈಜು ಪಟು ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ. ಈ ಕುರಿತು ಪ್ರತಿಕ್ರಿಯಿಸಿದ ಸ್ಕೂಲಿಂಗ್, ಇದು ಸಾಮಾನ್ಯ ಸಾಧನೆಯಲ್ಲ. ನನಗೆ ಹೆಮ್ಮೆ ಅನಿಸುತ್ತಿದೆ. ಈ ಖುಷಿಯನ್ನು ಯಾವರೀತಿ ಅಭಿವ್ಯಕ್ತಪಡಿಸಬೇಕೆಂದು ತಿಳಿಯುತ್ತಿಲ್ಲ ಎಂದು ಹೇಳಿದರು.
2016: ನವದೆಹಲಿ: ಉತ್ತರ ಪ್ರದೇಶದ ಸಚಿವ ಆಜಮ್ ಖಾನ್ ಮತ್ತು ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್ಐಆರ್) ದಾಖಲಿಸುವಂತೆ ಕೋರಿ ಬುಲಂದಶಹರ್ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆ ಅಪ್ರಾಪ್ತ ಬಾಲಕಿ ಸುಪ್ರೀಂಕೋರ್ಟಿನ ಮೊರೆ ಹೊಕ್ಕಳು. ಸುಪ್ರೀಂಕೋರ್ಟಿನಲ್ಲಿ ಮನವಿ ಸಲ್ಲಿಸಿದ ಆಕೆ ಪ್ರಕರಣವನ್ನು ದೆಹಲಿಗೆ ವರ್ಗಾಯಿಸಬೇಕು ಮತ್ತು ನ್ಯಾಯಾಲಯದ ನಿಗಾದಲ್ಲಿ ತನಿಖೆ ನಡೆಯಬೇಕು, ತನಗೆ ಶಾಲೆಗೆ ಹೋಗಲು ವ್ಯವಸ್ಥೆಯಾಗಬೇಕು ಮತ್ತು ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆಲ್ಲರಿಗೂ ಮರುವಸತಿ ಕಲ್ಪಿಸಬೇಕು ಎಂದು ಕೋರಿದಳು. ಬುಲಂದ ಶಹರ್ನಲ್ಲಿ ಸುಮಾರು 15ಕ್ಕೂ ಹೆಚ್ಚು ಮಂದಿ ದರೋಡೆಕೋರರು ಇಡೀ ಕುಟುಂಬದ ಸದಸ್ಯರನ್ನು ವಾಹನದಲ್ಲಿ ಹೋಗುತ್ತಿದ್ದಾಗ ತಡೆದು ಹೊಲವೊಂದಕ್ಕೆ ಹೋಗುವಂತೆ ಮಾಡಿ ಕುಟುಂಬ ಸದಸ್ಯರ ಕಣ್ಣೆದುರಲ್ಲೇ ತಾಯಿ ಮತ್ತು ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಅವರ ಬಳಿ ಇದ್ದ ಚಿನ್ನಾಭರಣ, ನಗದು ಹಣವೆಲ್ಲವನ್ನೂ ಕಿತ್ತುಕೊಂಡು ಹೋಗಿದ್ದರು. ಅಲಹಾಬಾದ್ ಹೈಕೋರ್ಟ್ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ. ಬುಲಂದಶಹರ್ ಘಟನೆ ‘ರಾಜಕೀಯ ಸಂಚು’ ಇರಬಹುದು ಎಂದು ಹೇಳುವ ಮೂಲಕ ಖಾನ್ ಭಾರಿ ವಿವಾದವನ್ನು ಹುಟ್ಟು ಹಾಕಿದ್ದರು.
2016: ಜೆಮ್ ಶೆಡ್ ಪುರ: ಆಗಸ್ಟ್ 10ರಿಂದ ನಿರಂತರವಾಗಿ ಸುರಿದ ಮಳೆಗೆ ತತ್ತರಿಸಿದ ಜಾರ್ಖಂಡ್ ನಿವಾಸಿಗಳ ಜೀವನ ಇನ್ನಷ್ಟು ಅಸ್ತವ್ಯಸ್ತಗೊಂಡಿತು. ಭಾರಿ ಮಳೆಯಿಂದಾಗಿ ಇಲ್ಲಿನ ಪಲಾಮು ಮತ್ತು ಚತರಾ ಜಿಲ್ಲೆಗಳಲ್ಲಿ ಒಟ್ಟು ನಾಲ್ವರು ಸಾವನ್ನಪ್ಪಿ, ಆರು ಮಂದಿ ನಾಪತ್ತೆಯಾದರು. ಚತರಾದಲ್ಲಿ ಇಬ್ಬರು ಮಕ್ಕಳು ನೀರಿನಲ್ಲಿ ಕೊಚ್ಚಿಹೋಗಿ ನಾಪತ್ತೆಯಾಗಿದ್ದರು. ಅವರ ಮೃತದೇಹ ಪಲಾಮು ಜಿಲ್ಲೆಯಲ್ಲಿ ಪತ್ತೆಯಾಯಿತು. ಈ ಕುರಿತು ಪ್ರತಿಕ್ರಿಯಿಸಿರುವ ಚತರಾದ ಜಿಲ್ಲಾಧಿಕಾರಿ ಸಂದೀಪ್ ಸಿಂಗ್, ಹಂತೇರ್ಗುಂಜ್, ಜೊರಿ ಕಲಾ, ಗಂಧೇರ್ ಪ್ರದೇಶಗಳಲ್ಲಿ ಅಪಾಯಕಾರಿ ಪರಿಸ್ಥಿತಿ ಇದೆ. ಪ್ರಮುಖ ಆರು ಸೇತುವೆಗಳು ಅಪಾಯದ ಸ್ಥಿತಿಯಲ್ಲಿದೆ. ಈ ಮಾರ್ಗವಾಗಿ ಚಲಿಸದಂತೆ ಎಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.
2016: ನವದೆಹಲಿ: ಪಾಕಿಸ್ತಾನಿ ಸೇನೆಯ ದಮನವನ್ನು ವಿರೋಧಿಸಿ ಪಾಕ್ ಆಕ್ರಮಿತ ಗಿಲ್ಗಿಟ್ -ಬಾಲ್ಟಿಸ್ತಾನದಲ್ಲಿ ವ್ಯಾಪಕ ಪ್ರತಿಭಟನೆ ಭುಗಿಲೆದ್ದಿತು. ಪಾಕಿಸ್ತಾನದ ವಿರುದ್ಧ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡಿತು. ಸಾಮಾಜಿಕ ಕಾರ್ಯಕರ್ತ ಬಾಬಾ ಜನ್ ಬಿಡುಗಡೆಗೆ ಒತ್ತಾಯಿಸಿ ಪಾಕ್ ಆಕ್ರಮಿತ ಗಿಲ್ಗಿಟ್-ಬಾಲ್ಟಿಸ್ತಾನದಲ್ಲಿ ವ್ಯಾಪಕ ಪ್ರತಿಭಟನೆಗಳು ನಡೆದವು. ಗಿಲ್ಗಿಟ್ ನೆಲ ಬಿಟ್ಟು ತೊಲಗಿ ಎಂಬುದಾಗಿ ಪಾಕಿಸ್ತಾನಿ ಸೇನೆಗಳನ್ನು ಒತ್ತಾಯಿಸುತ್ತಿರುವುದಕ್ಕಾಗಿ ಪಾಕಿಸ್ತಾನಿ ಸೇನೆ ವ್ಯಾಪಕ ದಮನ ನಡೆಸುತ್ತಿದ್ದು, 500ಕ್ಕೂ ಹೆಚ್ಚು ಯುವಕರನ್ನು ಸೆರೆಮನೆಗೆ ದಬ್ಬಿದೆ ಎಂದು ಉದ್ರಿಕ್ತ ಪ್ರತಿಭಟನಕಾರರು ಆಪಾದಿಸಿದರು.
2016: ನವದೆಹಲಿ: ಭಾರತ ಮತ್ತು ಪಾಕಿಸ್ತಾನ ಭಯೋತ್ಪಾದಕ ದಾಳಿ ಸಾಧ್ಯತೆ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಭಾರಿ ಭದ್ರತೆ ಮಾಡಿಕೊಂಡವು. ಗಡಿಯ ಯಾವುದೇ ಭಾಗದಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಯಬಹುದಾದ ಸಾಧ್ಯತೆ ಇದ್ದು, ಕಟ್ಟೆಚ್ಚರ ವಹಿಸಲಾಯಿತು. ಇಸ್ಲಾಮಾಬಾದ್ ಭಯೋತ್ಪಾದನೆ ನಿಗ್ರಹ ಸಂಸ್ಥೆಯು ದಾಳಿಗೆ ಸಂಬಂಧಿಸಿ ಸುಳಿವು ನೀಡಿದ್ದು, ಈ ಕಾರಣ ವಾಘಾ ಗಡಿಯಲ್ಲಿ ಭದ್ರತಾ ಸಿಬ್ಬಂದಿ ನಿಯೋಜನೆಗೊಳಿಸಲಾಯಿತು. ಕಳೆದ ಎರಡು ದಿನ ಹಿಂದಷ್ಟೇ ದಾಳಿ ಬಗ್ಗೆ ಸುಳಿವು ನೀಡಿದ್ದ ಸಂಸ್ಥೆ ಈದಿನವೂ ಎಚ್ಚರಿಕೆ ನೀಡಿತು. ಯಾವುದೇ ಕ್ಷಣದಲ್ಲಿ ವಾಘಾ ಗಡಿಯಲ್ಲಿ ದಾಳಿ ನಡೆಯಬಹುದು. ಇಬ್ಬರು ತಾಲಿಬಾನ್ ಆತ್ಮಾಹುತಿ ದಾಳಿಕೋರರು ಸಂಚು ರೂಪಿಸಿರುವ ಬಗ್ಗೆ ಸುಳಿವು ಸಿಕ್ಕಿದೆ ಎಂದು ಅದು ಹೇಳಿತು. ಸ್ವಾತಂತ್ರ್ಯೊತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಈಗಾಗಲೇ ಬಿಎಸ್ಎಫ್ ಯೋಧರು ಗಡಿಯಲ್ಲಿ ನಿಯೋಜನೆಗೊಂಡಿದ್ದು, ಈಗ ಇನ್ನಷ್ಟು ಭದ್ರತೆ ಒದಗಿಸುವ ಹಿನ್ನೆಲೆಯಲ್ಲಿ ವಿಶೇಷ ಪಡೆಯನ್ನೂ ನಿಯೋಜನೆಗೊಳಿಸಲಾಯಿತು.
ತೆರೇಕ್-ಇ ತಾಲಿಬಾನ್ ಫಜಲುಲ್ಲಾ ಗುಂಪು ದಾಳಿಗೆ ಸಂಚು ರೂಪಿಸಿದ್ದು, ಆಗಸ್ಟ್ 13,14,15ರಂದು ಯಾವುದೇ ಕ್ಷಣದಲ್ಲಿ ಲಾಹೋರ್ನ ವಾಘಾ ಗಡಿ ಮತ್ತು ಕಸೂರ್ನ ಗಂದಾ ಸಿಂಗ್ ಗಡಿಯಲ್ಲಿ ದಾಳಿ ನಡೆಸುವ ಸಾಧ್ಯತೆ ಎಂದು ಪಾಕ್ ಭಯೋತ್ಪಾದನಾ
ನಿಗ್ರಹ ದಳ ಎಚ್ಚರಿಸಿತ್ತು.
2016: ನವದೆಹಲಿ: ಆಗಸ್ಟ್ 21ರಿಂದ ಬಿಎಸ್ಎನ್ಎಲ್ ಲ್ಯಾಂಡ್ಲೈನ್ ಗ್ರಾಹಕರಿಗೆ ಪ್ರತಿ ಆದಿತ್ಯವಾರ ದೇಶದ ಯಾವುದೇ ಮೂಲೆಗೆ ಅನಿಯಮಿತವಾಗಿ ಉಚಿತ ಕರೆ ಮಾಡಬಹುದು. ಪ್ರತಿ ಭಾನುವಾರ ದೇಶದ ಯಾವುದೇ ಮೂಲೆಗೆ ಲ್ಯಾಂಡ್ಲೈನ್ ಗ್ರಾಹಕರಿಗೆ ಉಚಿತ ಕರೆ ಸೌಲಭ್ಯ ಕಲ್ಪಿಸಲಿದ್ದು ಅಗಸ್ಟ್ 15ರಿಂದ ಈ ಯೋಜನೆ ಜಾರಿಯಾಗಲಿದೆ ಎಂದು ಕೇಂದ್ರ ದೂರ ಸಂಪರ್ಕ ಸಚಿವ ಮನೋಜ್ ಸಿನ್ಹಾ ಟ್ವೀಟ್ ಮೂಲಕ ತಿಳಿಸಿದರು. ಆಗಸ್ಟ್ 21ರಿಂದ ಅಧಿಕೃತವಾಗಿ ಜಾರಿಗೊಳ್ಳಲಿರುವ ಸೇವೆಯ ಸದುಪಯೋಗ ಪಡೆದುಕೊಳ್ಳಲು ಬಿಎಸ್ಎನ್ಎಲ್ ಗ್ರಾಹಕರಿಗೆ ತಿಳಿಸಿತು. ಸದ್ಯ ಬಿಎಸ್ಎನ್ಎಲ್ ಲ್ಯಾಂಡ್ಲೈನ್ನಿಂದ ದೇಶದ ಯಾವುದೇ ಭಾಗಕ್ಕೆ ಪ್ರತಿರಾತ್ರಿ 9 ರಿಂದ ಬೆಳಗ್ಗೆ 7 ಗಂಟೆ ತನಕ ಉಚಿತ ಕರೆ ಮಾಡುವ ಸೌಲಭ್ಯವಿದೆ.
2016: ನವದೆಹಲಿ: ಆಗಸ್ಟ್ 12ರಂದು ನಡೆದ ಸರ್ವಪಕ್ಷ ಸಭೆಯಲ್ಲಿ ಪಾಕಿಸ್ತಾನ ಬಲೂಚಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಓಕೆ) ದಲ್ಲಿ ನಾಗರಿಕರ ಮೇಲೆ ನಡೆಸುತ್ತಿರುವ ದೌರ್ಜನ್ಯಕ್ಕೆ ಪಾಕಿಸ್ತಾನವು ಜಗತ್ತಿಗೆ ಉತ್ತರಿಸಬೇಕಾದ ಕಾಲ ಬಂದಿದೆ ಎಂಬ ಭಾರತದ ಪ್ರಧಾನಿ ಮೋದಿ ಹೇಳಿಕೆಗೆ ಬಲೂಚಿಸ್ತಾನದ ಸಾಮಾಜಿಕ ಕಾರ್ಯಕರ್ತರು ಸಹಮತ ವ್ಯಕ್ತಪಡಿಸಿ ಧನ್ಯವಾದ ಹೇಳಿದರು.
ಬಲೂಚಿಸ್ತಾನ ಮತ್ತು ಪಿಓಕೆ ಜನತೆ ಪಾಕಿಸ್ತಾನದ ದುರಾಡಳಿತದಿಂದ ಬೇಸತ್ತಿದೆ, ಮೋದಿಯವರು ತಮ್ಮ ಪರವಾಗಿ ಧ್ವನಿ ಎತ್ತಿದ್ದಕ್ಕೆ ಬಲೂಚ್ನ ಸಾಮಾಜಿಕ ಕಾರ್ಯಕರ್ತೆ ನೈಲಾ ಕಾದ್ರಿ ಬಲೂಚ್ ಧನ್ಯವಾದ ಅರ್ಪಿಸಿದರು. ಮುಂಬರುವ ವಿಶ್ವಸಂಸ್ಥೆ ಜನರಲ್ ಅಸೆಂಬ್ಲಿಯಲ್ಲಿ ವಿಷಯ ಪ್ರಸ್ತಾಪಿಸುವಂತೆ ಮೋದಿಯರಿಗೆ ಈ ಮೂಲಕ ಮನವಿ ಮಾಡುತ್ತಿರುವುದಾಗಿ ಬಲೂಚ್ ಹೇಳಿದರು. ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಭಾರತದ ಪ್ರಧಾನಿ ಧ್ವನಿ ಎತ್ತಿರುವುದು ಶ್ಲಾಘನಾರ್ಹ ಅವರ ಸಹಕಾರ ಬಲೂಚಿ ಜನತೆ ಮೇಲೆ ಇದ್ದಲ್ಲಿ ಶೀಘ್ರದಲ್ಲೆ ದೌರ್ಜನ್ಯದಿಂದ ಮುಕ್ತಗೊಳ್ಳುವುದಾಗಿ ಇನ್ನೊಬ್ಬ ಕಾರ್ಯಕರ್ತ ಹಮ್ಮಲ್ ಹೈದರ್ ಹೇಳಿದರು. ಭಾರತದ ಜಾತ್ಯತೀತ ಮತ್ತು ಪ್ರಜಾಪ್ರಭುತ್ವ ತತ್ವದ ಅನುಕರಣೆ ಮಾಡುವಲ್ಲಿ ಬಲೂಚಿಸ್ತಾನ ಜನತೆ ಉತ್ಸುಕವಾಗಿದೆ ಎಂದು ಅವರು ನುಡಿದರು. ಪಾಕಿಸ್ತಾನ ಅಂತಾರಾಷ್ಟ್ರೀಯ ನಿಯಮ ಪಾಲನೆಯಲ್ಲಿ ಎಡವಿದ್ದು, ಬಲೂಚಿ ಜನತೆಯನ್ನು ತುಳಿಯುತ್ತಿದ್ದಾರೆ. ಜಾತಿವಾದಿಗಳಿಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನ ಜಗತ್ತಿಗೆ ಕಂಟಕವಾಗುತ್ತಿರುವ ಉಗ್ರರ ಪರ ನಿಂತಿದೆ ಎಂದು ದೂರಿದರು. ಸರ್ವಪಕ್ಷ ಸಭೆಯಲ್ಲಿ ಪಿಓಕೆ ಜಮ್ಮು ಕಾಶ್ಮೀರದ ಅವಿಭಾಜ್ಯ ಅಂಗ ಎಂದಿರುವ ಪ್ರಧಾನಿ ಮೋದಿ, ಗಿಲ್ಗಿಟ್-ಬಾಲ್ಟಿಸ್ತಾನ ಕೂಡ ನೆರೆಹೊರೆಯವರಿದ್ದಂತೆ ಅವರ ರಕ್ಷಣೆಗೆ ನಿಲ್ಲುವುದು ನೈತಿಕ ಮತ್ತು ರಾಷ್ಟ್ರೀಯ ಜವಾಬ್ದಾರಿ ಎಂದು ಹೇಳಿರುವುದಾಗಿ ಪ್ರಧಾನಿ ಸಚಿವಾಲಯದ ಜಿತೇಂದ್ರ ಸಿಂಗ್ ಹೇಳಿದ್ದರು.
2016: ರಿಯೋ ಡಿ ಜನೈರೋ: ತೀವ್ರ ಜ್ವರದಿಂದ ಬಳಲುತ್ತಿದ್ದ ಕುಸ್ತಿಪಟು ಬಬಿತಾ ಕುಮಾರಿ ಅವರು ಚೇತರಿಸಿಕೊಳ್ಳುತ್ತಿದ್ದು, ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಭಾರತೀಯ ಕುಸ್ತಿ ಫೆಡರೇಷನ್ ತಿಳಿಸಿತು. ರಿಯೋ ಒಲಿಂಪಿಕ್ಸ್ ಮೇಲೆ ಜೀಕಾ ವೈರಸ್ ಭೀತಿ ಇರುವಾಗಲೇ ಬಬಿತಾ ಕುಮಾರಿ ಅವರು ಅನಾರೋಗ್ಯಕ್ಕೆ ತುತ್ತಾಗಿದ್ದು, ಭಾರತ ತಂಡವನ್ನು ಚಿಂತೆಗೀಡು ಮಾಡಿತ್ತು. ಆದರೆ ಬಬಿತಾ ಚೇತರಿಸಿಕೊಳ್ಳುತ್ತಿರುವುದಾಗಿ ಕುಸ್ತಿ ಫೆಡರೇಷನ್ ಸ್ಪಷ್ಟನೆ ನೀಡಿತು. 53 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಿರುವ 26 ವರ್ಷದ ಬಬಿತಾ ಕುಮಾರಿ ಅವರು ತೀವ್ರ ಜ್ವರ ಮತ್ತು ಮೈ ಕೈ ನೋವಿನಿಂದ ಬಳಲುತ್ತಿದ್ದರು, ತಕ್ಷಣ ಅವರಿಗೆ ತಂಡದ ವೈದ್ಯರು ಚಿಕಿತ್ಸೆ ನೀಡಿದ್ದರು. ಚಿಕಿತ್ಸೆಗೆ ಬಬಿತಾ ಕುಮಾರಿ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಅವರು ತರಬೇತಿಗೆ ಹಾಜರಾಗುತ್ತಿದ್ದು, ಮುಂದಿನ ವಾರ ನಡೆಯಲಿರುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಭಾರತೀಯ ಕುಸ್ತಿ ಫೆಡರೇಷನ್ನ ಸಹಾಯಕ ಕಾರ್ಯದರ್ಶಿ ವಿನೋದ್ ತೋಮರ್ ತಿಳಿಸಿದರು. ಪೋಗಟ್ ಕುಟುಂಬಕ್ಕೆ ಸೇರಿದ ಬಬಿತಾ ಅವರು ಆಗಸ್ಟ್ 18 ರಂದು ನಡೆಯಲಿರುವ ಪಂದ್ಯಕ್ಕೂ ಮುನ್ನ ಪೂರ್ಣ ಪ್ರಮಾಣದಲ್ಲಿ ಚೇತರಿಸಿಕೊಳ್ಳಲಿದ್ದಾರೆ ಎಂದು ತೋಮರ್ ವಿಶ್ವಾಸ ವ್ಯಕ್ತಪಡಿಸಿದರು.
2016: ನವದೆಹಲಿ: ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಪುತ್ರಿ ಶರ್ವಿುಷ್ಠಾ ಅವರಿಗೆ ವ್ಯಕ್ತಿಯೊಬ್ಬ ಅಶ್ಲೀಲ ಸಂದೇಶ ಕಳುಹಿಸಿದ ಘಟನೆ ಘಟಿಸಿದ್ದು, ಶರ್ವಿುಷ್ಠಾ ಅವರು ಆ ವ್ಯಕ್ತಿಯ ಹೆಸರು ಹಾಗೂ ಚಿತ್ರವನ್ನು ಫೇಸ್ ಬುಕ್ನಲ್ಲಿ ಪ್ರಕಟಿಸಿ ‘ಈ ವಿಕೃತ ಮನೋಭಾವ’ ನಾಚಿಕೆಗೇಡು ಎಂದು ಹೇಳಿ ಖಂಡಿಸಿದರು.
ಅಶ್ಲೀಲ ಸಂದೇಶ ಕಳುಹಿಸಿದ ವ್ಯಕ್ತಿಯ ಫೇಸ್ ಬುಕ್ ಪ್ರೊಫೈಲ್ ಮತ್ತು ಆತ ತನಗೆ ಕಳುಹಿಸಿದ್ದ ಸಂದೇಶಗಳ ಸ್ಕ್ರೀನ್ಶಾಟ್ ತೆಗೆದು ಫೇಸ್ ಬುಕ್ನಲ್ಲಿ ಶರ್ವಿುಷ್ಠಾ ಅವರು ಪ್ರಕಟಿಸಿದರು. “ಪಾರ್ಥ ಮಂಡಲ್ ಎಂಬ ಈ ವ್ಯಕ್ತಿ ನನಗೆ ಕೊಳಕು ಲೈಂಗಿಕ ಸಂದೇಶಗಳನ್ನು ಕಳುಹಿಸುತ್ತಿದ್ದಾನೆ. ಮೊದಲಿಗೆ ಈತನನ್ನು ನಿರ್ಲಕ್ಷಿಸಲು ಮತ್ತು ಈತನ ಸಂದೇಶಗಳನ್ನು ನಿಷೇಧಿಸಲು ಯೋಚಿಸಿದ್ದೆ. ಆದರೆ ನಂತರ ನನ್ನ ಮೌನವು ಈತನಿಗೆ ಇತರ ಬಲಿಪಶುಗಳನ್ನು ಹುಡುಕಲು ಪ್ರೋತ್ಸಾಹವನ್ನು ಕೊಡುತ್ತದೆ ಎಂದು ಯೋಚಿಸಿದೆ. ಆದ್ದರಿಂದ ಆತನ ಹೆಸರು, ಚಿತ್ರಗಳನ್ನು ಬಹಿರಂಗ ಪಡಿಸಲು ತೀರ್ಮಾನಿಸಿದೆ’ ಎಂದು ಬರೆದಿರುವ ಶರ್ವಿುಷ್ಠಾ ಅವರು ‘ಇಂತಹ ವ್ಯಕ್ತಿಗಳನ್ನು ಬಹಿರಂಗ ಪಡಿಸಬೇಕು ಮತ್ತು ಅವಮಾನ ಮಾಡಬೇಕು ಎಂಬುದು ನನ್ನ ಪ್ರಬಲ ಅನಿಸಿಕೆ’ ಎಂದು ಹೇಳಿದರು.
2016: ಮುಂಬೈ: ಆಗಸ್ಟ್ 2 ರಂದು ಮಹಾಡ್ನಲ್ಲಿ ಮುಂಬೈ-ಗೋವಾ ಹೆದ್ದಾರಿಯಲ್ಲಿ ಸಾವಿತ್ರಿ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದ ಸೇತುವೆ ಕುಸಿದ ಪರಿಣಾಮ ಕೊಚ್ಚಿಕೊಂಡು ಹೋಗಿದ್ದ ಮಹಾರಾಷ್ಟ್ರ ಸಾರಿಗೆ ಸಂಸ್ಥೆಗೆ ಸೇರಿದ 2ನೇ ಬಸ್ಸಿನ ಅವಶೇಷ ಪತ್ತೆಯಾಯಿತು. ನಾಪತ್ತೆಯಾಗಿರುವ ವಾಹನಗಳು ಮತ್ತು ಮೃತದೇಹಗಳಿಗಾಗಿ 10ನೇ ದಿನವೂ ಶೋಧ ಕಾರ್ಯಾಚರಣೆ ಮುಂದುವರೆಯಿತು. ನೌಕಾಪಡೆಗೆ ಸೇರಿದ ಮುಳುಗುಕಾರರು ಸೇತುವೆಯಿಂದ ಸುಮಾರು 400 ಮೀಟರ್ ದೂರದಲ್ಲಿ ಬಸ್ಸಿನ ಅವಶೇಷವನ್ನು ಪತ್ತೆ ಹಚ್ಚಿದರು. ಆಗಸ್ಟ್ 11 ರಂದು ಒಂದು ಬಸ್ಸಿನ ಅವಶೇಷ ಪತ್ತೆಯಾಗಿತ್ತು ಮತ್ತು ಅದನ್ನು ಕ್ರೇನ್ ಸಹಾಯದಿಂದ ಹೊರಗೆ ತೆಗೆಯಲಾಗಿತ್ತು. ಬಸ್ಸುಮುಳುಗಿರುವ ಪ್ರದೇಶದಲ್ಲಿ ನೀರಿನ ಸೆಳೆತ ಸಾಕಷ್ಟು ಹೆಚ್ಚಾಗಿದ್ದರೂ ಸಹ ನೌಕಾಪಡೆಯ ಯೋಧರು ಬಸ್ಸಿನ ಅವಶೇಷಗಳಿಗಾಗಿ ಹುಡುಕಾಟ ನಡೆಸಿದ್ದರು, ಈದಿನ ಬಸ್ಸಿನ ಅವಶೇಷ ಪತ್ತೆಯಾಗಿದೆ. ಬಸ್ 5 ಮೀಟರ್ ಆಳದಲ್ಲಿದೆ. ಎನ್ಡಿಆರ್ಎಫ್ ತಂಡಕ್ಕೆ ಮಾಹಿತಿ ನೀಡಲಾಯಿತು. ಎನ್ಡಿಆರ್ಎಫ್ ತಂಡ ಶೀಘ್ರ ಬಸ್ಸನ್ನು ಮೇಲೆತ್ತುವರು ಎಂದು ರಕ್ಷಣಾ ಇಲಾಖೆಯ ವಕ್ತಾರ ಕಮಾಂಡರ್ ರಾಹುಲ್ ಸಿನ್ಹಾ ತಿಳಿಸಿದರು. ಇದುವರೆಗೆ 26 ಮೃತದೇಹಗಳು ಪತ್ತೆಯಾಗಿದೆ, ಇನ್ನೂ 14 ಜನರು ನಾಪತ್ತೆಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ರಾಯ್ಗಢದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಂಜಯ್ ಪಾಟೀಲ್ ತಿಳಿಸಿದರು.
2007: ದೇಶದ ಹಿತಕ್ಕೆ ಮಾರಕವಾಗುವುದೆಂದು ಆತಂಕ ವ್ಯಕ್ತಪಡಿಸಿದ ಪ್ರತಿಪಕ್ಷಗಳು ಈ ಒಪ್ಪಂದವನ್ನು ಕೈಬಿಡಬೇಕೆಂದು ಮತ್ತು ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿರುವ ಎಡಪಕ್ಷಗಳು ಸತತ ಒತ್ತಡ ಹೇರಿದ ಹಿನ್ನೆಲೆಯಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ ಸ್ವಯಂ ಪ್ರೇರಿತ ಹೇಳಿಕೆ ನೀಡಿದ ಪ್ರಧಾನಿ ಮನಮೋಹನ್ ಸಿಂಗ್ ಅವರು ದೇಶದ ಹಿತದೃಷ್ಟಿಯಿಂದ ಪರಮಾಣು ಪರೀಕ್ಷೆ ನಡೆಸುವ ನಮ್ಮ ಪರಮಾಧಿಕಾರವನ್ನು ಯಾವುದೇ ಕಾರಣಕ್ಕೆ ಬಿಟ್ಟು ಕೊಡುವುದಿಲ್ಲ ಎಂದು ಸ್ಪಷ್ಟ ಪಡಿಸಿದರು. ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ಸಮಾಜವಾದಿ ಪಕ್ಷದ ಸದಸ್ಯರು ಈ ಒಪ್ಪಂದ ಕೈ ಬಿಡುವಂತೆ ಒತ್ತಾಯಿಸಿ ಭಾರಿ ಗದ್ದಲ ಎಬ್ಬಿಸಿ, ಸಭಾಧ್ಯಕ್ಷರ ಪೀಠದ ಮುಂದಿನ ಅಂಗಳದತ್ತ ನುಗ್ಗಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಸಭಾಧ್ಯಕ್ಷ ಸೋಮನಾಥ ಚಟರ್ಜಿ ಕಲಾಪವನ್ನು ಅರ್ಧ ಗಂಟೆ ಮುಂದೂಡಿದರು. ಸಮಾಜವಾದಿ ಪಕ್ಷದ ಸದಸ್ಯರೊಂದಿಗೆ ಬಿಜೆಪಿ ಮತ್ತು ಆಳುವ ರಂಗದ ಅಂಗ ಪಕ್ಷವಾದ ಆರ್ ಜೆಡಿಯ ಸದಸ್ಯರೂ ಗದ್ದಲಕ್ಕೆ ಶಕ್ತ್ಯಾನುಸಾರ ಕೊಡುಗೆ ಸಲ್ಲಿಸಿದರು.
2007: ಹೆಸರಾಂತ ಸರೋದ್ ವಾದಕ ಪಂಡಿತ್ ಡಾ. ರಾಜೀವ್ ತಾರಾನಾಥ್ ಅವರನ್ನು ಬೆಂಗಳೂರು ಗಾಯನ ಸಮಾಜದಲ್ಲಿ ನಡೆದ 39ನೇ ಸಂಗೀತ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಪ್ರತಿಷ್ಠಿತ `ಸಂಗೀತ ಕಲಾರತ್ನ' ಬಿರುದು ನೀಡಿ ಸನ್ಮಾನಿಸಲಾಯಿತು. ಕೇಂದ್ರದ ಯೋಜನಾ ಖಾತೆ ರಾಜ್ಯ ಸಚಿವ ಎಂ. ವಿ. ರಾಜಶೇಖರನ್ ಅವರು ರಾಜೀವ ತಾರಾನಾಥ್ ಅವರನ್ನು ಸನ್ಮಾನಿಸಿದರು.
2007: ಮೊಬೈಲಿನಲ್ಲಿ ಚಾರ್ಜ್ ಕಮ್ಮಿ ಇದೆಯೇ ? ಕೂಡಲೇ ಚಾರ್ಜ್ ಆಗಬೇಕೆ, ಕರೆಂಟ್ ಇಲ್ಲವೇ? ಅಯ್ಯೋ ಚಾರ್ಜರ್ರೂ ಇಲ್ಲವೇ ಯೋಚಿಸಬೇಡಿ. ಒಂದೇ ಒಂದು ಅರಳಿ ಎಲೆ ಕಿತ್ತು ತನ್ನಿ. ತತ್ ಕ್ಷಣವೇ ನಿಮ್ಮ ಮೊಬೈಲಿನಲ್ಲಿ ಭರ್ತಿ ಚಾರ್ಜ್ ಕಾಣಬಹುದು. ಕರ್ನಾಟಕದ ಚಿಕ್ಕನಾಯಕನಹಳ್ಳಿಯಲ್ಲಿ ಈದಿನ ಅನೇಕರು ಇದೇ ಕೆಲಸ ಮಾಡಿದರು. ಚಾರ್ಜ್ ಕಮ್ಮಿ ಇರುವ ಮೊಬೈಲುಗಳನ್ನು ಪಡೆದು ಅದರ ಹಿಂದಿನ ಮುಚ್ಚಳ ತೆಗೆದು ಬ್ಯಾಟರಿಯ ಹಿಂಭಾಗದ ಚಾರ್ಜ್ ಆಗುವ ಮಧ್ಯದ ಪಾಂಯಿಂಟಿಗೆ ಆಗಷ್ಟೇ ಕಿತ್ತ ಬಲಿತ ಅರಳಿ ಎಲೆಯ ತುದಿಯನ್ನು ಸಿಕ್ಕಿಸಿ ಬ್ಯಾಟರಿಯನ್ನು ಅದುಮಿದರು. ನಿಮಿಷಕ್ಕೂ ಮುಂಚೆ ನಿಮ್ಮ ಮೊಬೈಲ್ ಭರ್ತಿ ಚಾರ್ಜ್. ಸದ್ಯಕ್ಕೆ ನೋಕಿಯಾ ಕಂಪನಿಯ ಸೆಟ್ಟುಗಳಿಗೆ ಮಾತ್ರ ಇದು ಅನ್ವಯಿಸುತ್ತದೆ ಎಂಬುದು ಚಿಕ್ಕನಾಯಕನ ಹಳ್ಳಿಯ ಚಿತ್ರಕಲಾ ಶಾಲೆಯೊಂದಕ್ಕೆ ಆಂಧ್ರದಿಂದ ಬಂದಿರುವ ಕಲಾವಿದರೊಬ್ಬರ ಹೇಳಿಕೆ. ಅವರ ಪ್ರಯೋಗ ಯಶಸ್ವಿಯಾದದ್ದೇ ಊರಲ್ಲೆಲ್ಲ ಮೊಬೈಲಿಗೆ ಅರಳಿ ಎಲೆ ಶಕ್ತಿ ತುಂಬುವ ಕಾಯಕ ಶುರು.
2007: ಭಾರತ ತಂಡವು 21 ವರ್ಷಗಳ ನಂತರ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಕ್ರಿಕೆಟ್ ಸರಣಿಯನ್ನು ಗೆದ್ದು ಮತ್ತೊಂದು ಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಯಿತು. ಇಂಗ್ಲೆಂಡಿನ ದಿ ಓವೆಲ್ ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಹಾಗೂ ನಿರ್ಣಾಯಕ ಟೆಸ್ಟ್ ಪಂದ್ಯ ಡ್ರಾ ಆಗಿ ಅಂತ್ಯಗೊಳ್ಳುತ್ತಿದ್ದಂತೆಯೇ ಭಾರತವು 1-0 ಗೆಲುವಿನ ಸಾಧನೆಯೊಂದಿಗೆ ಸರಣಿಯನ್ನು ಗೆದ್ದುಕೊಂಡಿತು. ಅನಿಲ್ ಕುಂಬ್ಳೆ ಪಂದ್ಯ ಪುರುಷೋತ್ತಮ ಹೆಗ್ಗಳಿಕೆಗೆ ಪಾತ್ರರಾದರು. ಲಾರ್ಡ್ಸ್ ಟೆಸ್ಟ್ ಡ್ರಾ ಆಗಿ ಅಂತ್ಯಗೊಂಡಿತ್ತು. ಟ್ರೆಂಟ್ ಬ್ರಿಜ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ ಪ್ರವಾಸಿ ಭಾರತ ಜಯಭೇರಿ ಬಾರಿಸಿತ್ತು. 1986ರಲ್ಲಿ ಕಪಿಲ್ ದೇವ್ ನೇತೃತ್ವದ ಭಾರತ ತಂಡ ಇಂಗ್ಲೆಂಡಿನಲ್ಲಿ ಟೆಸ್ಟ್ ಸರಣಿಯೊಂದರಲ್ಲಿ ಗೆದ್ದಿತ್ತು. ಅದಾದ ನಂತರ ಇಲ್ಲಿಯವರೆಗೂ ಇಂತಹ ಸಾಧನೆ ಮಾಡಲು ಭಾರತ ತಂಡಕ್ಕೆ ಆಗಿರಲಿಲ್ಲ. ಈಗ ರಾಹುಲ್ ದ್ರಾವಿಡ್ ನಾಯಕತ್ವದ ತಂಡವು ಅಂಥ ಮಹತ್ವದ ಸರಣಿ ವಿಜಯವನ್ನು ದಾಖಲಿಸಿತು.
2007: ಐದು ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ಮಾರ್ಟಿನಾ ಹಿಂಗಿಸ್ ಅವರನ್ನು ಮಣಿಸಿ ಅಚ್ಚರಿ ಮೂಡಿಸಿದ್ದ ಭಾರತದ ಟೆನಿಸ್ ಕಣ್ಮಣಿ ಸಾನಿಯಾ ಮಿರ್ಜಾ ವಿಶ್ವ ಮಹಿಳಾ ಟೆನಿಸ್ಸಿನಲ್ಲಿ ಮತ್ತೊಂದು ಸ್ಥಾನ ಮೇಲೇರಿದರು. ಈದಿನ ಬಿಡುಗಡೆಯಾದ ಡಬ್ಲ್ಯುಟಿಎ ನೂತನ ರ್ಯಾಂಕಿಂಗ್ ಪಟ್ಟಿಯಲ್ಲಿ ಸಾನಿಯಾ 29ನೇ ಸ್ಥಾನ ಪಡೆದುಕೊಂಡರು. ಕ್ಯಾಲಿಫೋರ್ನಿಯಾದಲ್ಲಿ ನಡೆದ ವೆಸ್ಟ್ ಬ್ಯಾಂಕ್ ಕ್ಲಾಸಿಕ್ ಟೆನಿಸ್ ಟೂರ್ನಿಯಲ್ಲಿ ಸಾನಿಯಾ 12ನೇ ರ್ಯಾಂಕಿನ ಆಟಗಾರ್ತಿ ಹಿಂಗಿಸ್ ಅವರನ್ನು ಸೋಲಿಸಿದ್ದರು.
2007: ಮ್ಯಾರಥಾನ್ ಹುಡುಗ ಬುಧಿಯಾ ಸಿಂಗ್ ಗೆ ಕಿರುಕುಳ ನೀಡಿದ ಆರೋಪದ ಮೇರೆಗೆ ತರಬೇತುದಾರ ಬಿರಾಂಚಿ ದಾಸ್ ಅವರನ್ನು ಒರಿಸ್ಸಾದ ಭುವನೇಶ್ವರ ಪೊಲೀಸರು ಬಂಧಿಸಿದರು. `ತರಬೇತುದಾರ ದಾಸ್ ಬುಧಿಯಾನಿಗೆ ಕಿರುಕುಳ ನೀಡಿದ್ದಾರೆ. ಆತನನ್ನು ಬಳಸಿಕೊಂಡು ಹಣ ಮಾಡಿದ್ದಾರೆ' ಎಂದು ಆರೋಪಿಸಿ ಬುಧಿಯಾನ ತಾಯಿ ಸುಕಂತಿ ಸಿಂಗ್, ದಾಸ್ ವಿರುದ್ಧ ಭುವನೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಸಂಬಂಧ ಭಾರತೀಯ ದಂಡ ಸಂಹಿತೆ ಹಾಗೂ ಮಕ್ಕಳ ಹಕ್ಕು ಕಾಯ್ದೆಯ ಪ್ರಕಾರ ದಾಸ್ ಅವರನ್ನು ಬಂಧಿಸಿ ಮೊಕ್ದದಮೆ ದಾಖಲಿಸಲಾಗಿದೆ' ಎಂದು ಬಾರ್ ಘಡ್ ಪೊಲೀಸ್ ಅಧಿಕಾರಿಗಳು ತಿಳಿಸಿದರು.
2006: ಮೂವತ್ತೆರಡು ದಿನಗಳ ಭೀಕರ ಕದನಕ್ಕೆ ತೆರೆ ಎಳೆಯಲು ಇಸ್ರೇಲ್ ಮತ್ತು ಲೆಬನಾನ್ ಒಪ್ಪಿಕೊಂಡವು. ಯುದ್ಧ ನಿಲ್ಲಿಸುವಂತೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯು ಕೈಗೊಂಡ ನಿರ್ಣಯವನ್ನು ಉಭಯ ದೇಶಗಳು ಅಂಗೀಕರಿಸಿದವು. ಈ ಯುದ್ಧದಲ್ಲಿ ಅಂದಾಜು ಸಾವಿರಕ್ಕೂ ಹೆಚ್ಚು ಜನ ಮೃತರಾಗಿ 200 ಕೋಟಿ ಅಮೆರಿಕನ್ ಡಾಲರುಗಳಿಗೂ ಹೆಚ್ಚಿನ ನಷ್ಟ ಸಂಭವಿಸಿತ್ತು.
2006: ನಕಲಿ ಛಾಪಾ ಕಾಗದ ಹಗರಣದ ರೂವಾರಿ ತೆಲಗಿಯ ಮಂಪರು ಪರೀಕ್ಷಾ ಧ್ವನಿ ಸುರುಳಿಗಳು ಬಹಿರಂಗಗೊಂಡವು. ಮಹಾರಾಷ್ಟ್ರ ಮತ್ತು ಕರ್ನಾಟಕದ ಪ್ರಮುಖ ರಾಜಕಾರಣಿಗಳು ಹಾಗೂ ಹಿರಿಯ ಐಪಿಎಸ್ ಅಧಿಕಾರಿಗಳ ಜೊತೆ ಆತ ನಂಟು ಹೊಂದಿದ್ದುದು ಈ ಮಂಪರು ಪರೀಕ್ಷೆಯಿಂದ ಬೆಳಕಿಗೆ ಬಂತು.
2006: ತಿರುನಲ್ವೇಲಿಯ 15 ವರ್ಷದ ಬಾಲಕ ಎಸ್. ಚಂದ್ರಶೇಖರ್ ಅವರು ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ ಚೆನ್ನೈ) ಎಂ.ಟೆಕ್. ತರಗತಿಗೆ ಪ್ರವೇಶ ಪಡೆದ ಅತ್ಯಂತ ಕಿರಿಯ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಪಾತ್ರನಾದ.
2006: ಕೇರಳದ ಪ್ರಮುಖ ಜವಳಿ ಮಾರಾಟ ಸಂಸ್ಥೆ ಕೊಚ್ಚಿಯ ಸೀಮೆಟ್ಟಿ ಜವಳಿ ಕಂಪೆನಿಯ ವಿಶ್ವದಲ್ಲೇ ಅತಿ ಉದ್ದದ ಸೀರೆ ನಿರ್ಮಿಸುವ ಮೂಲಕ ಗಿನ್ನೆಸ್ ವಿಶ್ವದಾಖಲೆಗೆ ಸೇರ್ಪಡೆಯಾಗಲು ಸಿದ್ಧವಾಯಿತು. 120 ಮಂದಿ ಕಾರ್ಮಿಕರು, 24 ಗಂಟೆಗಳ ಕಾಲವೂ ದುಡಿದು 80 ದಿನಗಳ ಅವಧಿಯಲ್ಲಿ 57.58 ಕಿ.ಗ್ರಾಂ. ತೂಕ, 1585 ಅಡಿ ಉದ್ದ ಮತ್ತು 4.35 ಅಡಿ ಅಗಲದ ಸೀರೆಯನ್ನು ತಯಾರಿಸಲಾಯಿತು. ಸೆಲ್ವನ್ ಎಂಬವರ ನೇತೃತ್ವದಲ್ಲಿ ಈ ಸೀರೆಯನ್ನು ತಯಾರಿಸಲಾಯಿತು ಎಂದು ಸೀಮೆಟ್ಟಿ ಕಂಪೆನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬೀನಾ ಕಣ್ಣನ್ ಪ್ರಕಟಿಸಿದರು. ಈ ಮೊದಲು ಪೊತೀಸ್ ಅವರು ತಯಾರಿಸಿದ್ದ ಸೀರೆ 1276 ಅಡಿ ಉದ್ದವಿತ್ತು.
1963: ಶ್ರೀದೇವಿ ಎಂದೇ ಖ್ಯಾತರಾದ ಹಿಂದಿ ಚಿತ್ರನಟಿ ಶ್ರೀ ಅಮ್ಮಾ ಯಂಗರ್ ಜನ್ಮದಿನ.
1961: ಬರ್ಲಿನ್ ನಗರ ವಿಭಜನೆಗೊಂಡ ದಿನ. ನಿರಾಶ್ರಿತರ ವಲಸೆ ತಡೆಗಟ್ಟುವ ಸಲುವಾಗಿ ಪೂರ್ವ ಜರ್ಮನಿಯು ಬರ್ಲಿನ್ ನಗರದ ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಗಡಿಗಳನ್ನು ಮುಚ್ಚಿತು. ಎರಡು ದಿನಗಳ ಬಳಿಕ `ಬರ್ಲಿನ್ ಗೋಡೆ'ಯ ನಿರ್ಮಾಣ ಕಾರ್ಯ ಆರಂಭಗೊಂಡಿತು.
1956: ರಾಷ್ಟ್ರೀಯ ಹೆದ್ದಾರಿಗಳ ಕಾಯ್ದೆಗೆ ಸಂಸತ್ ಒಪ್ಪಿಗೆ.
1954: ಸಾಹಿತಿ ಸ. ರಘುನಾಥ ಜನನ.
1934: ಸಾಹಿತಿ ಎಂ.ಎನ್. ಸುಮಿತ್ರಾ ಜನನ.
1933: ಭಾರತೀಯ ಚಿತ್ರನಟಿ ವೈಜಯಂತಿ ಮಾಲಾ ಬಾಲಿ ಜನ್ಮದಿನ.
1926: ಫಿಡೆಲ್ ಕ್ಯಾಸ್ಟ್ರೋ ಜನ್ಮದಿನ. 1959ರಿಂದ ಕ್ಯೂಬಾದ ರಾಜಕೀಯ ಧುರೀಣರಾಗಿದ್ದ ಇವರು ತಮ್ಮ ರಾಷ್ಟ್ರವನ್ನು ಜಗತ್ತಿನ ಪಶ್ಚಿಮ ಭಾಗದಲ್ಲಿನ ಮೊತ್ತ ಮೊದಲ ಕಮ್ಯೂನಿಸ್ಟ್ ರಾಷ್ಟ್ರವನ್ನಾಗಿ ಪರಿವರ್ತಿಸಿದರು.
1917: ಖ್ಯಾತ ಸಾಹಿತಿ ಡಾ. ವರದರಾಜ ಹುಯಿಲಗೋಳ ಅವರು ರಾಜೇರಾಯ- ಗೋದಾವರಿ ಬಾಯಿ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ಮುದ್ದೇಬಿಹಾಳದಲ್ಲಿ ಜನಿಸಿದರು.
1866: ಆಟೋಮೋಬೈಲ್ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಫಿಯೆಟ್ (ಫ್ಯಾಬ್ರಿಕಾ ಇಟಲಿಯಾನಾ ಆಟೋಮೊಬೈಲ್ ಟೊರಿನೊ) ಕಾರಿನ ಕಂಪೆನಿಯ ಸಂಸ್ಥಾಪಕ ಜಿಯೊವನಿ ಅಗ್ನೆಲಿ (1866-1945) ಜನನ. ಫಿಯೆಟ್ ಕಂಪೆನಿಯನ್ನು ಕಟ್ಟಿ ಬೆಳೆಸಿದ ಕೀರ್ತಿ ಇವರದು.
1848: ಭಾರತೀಯ ರಾಷ್ಟ್ರೀಯವಾದಿ ನಾಯಕ ಹಾಗೂ ಭಾರತೀಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿದ್ದ ರೊಮೇಶ್ ಚಂದ್ರ ದತ್ (1848-1909) ಜನ್ಮದಿನ. ಇವರು ಬರೆದ `ಇಕನಾಮಿಕ್ ಹಿಸ್ಟರಿ ಆಫ್ ಬ್ರಿಟಿಷ್ ಇಂಡಿಯಾ 1757-1837' ಪುಸ್ತಕವು ಭಾರತದ ಆರ್ಥಿಕ ಅಭಿವೃದ್ಧಿಯನ್ನು ಕುಂಠಿತಗೊಳಿಸಿ ಅದರ ಲಾಭವನ್ನು ಬ್ರಿಟಿಷರು ಪಡೆದುಕೊಂಡದ್ದನ್ನು ದಾಖಲಿಸಿದೆ.
1796: ಇಂದೂರು ರಾಣಿ ಅಹಲ್ಯಾಬಾಯಿ ಹೋಳ್ಕರ್ ಹುತಾತ್ಮದಿನ.
1784: ಬ್ರಿಟಿಷ್ ಸಂಸತ್ತಿನಲ್ಲಿ ಅಂಗೀಕಾರ ಪಡೆದ ಕಾಯ್ದೆಯ ಅಡಿಯಲ್ಲಿ ಭಾರತದಲ್ಲಿ ಕೇಂದ್ರೀಯ ನಿಯಂತ್ರಣ ಪ್ರಾಧಿಕಾರವಾಗಿ ಈಸ್ಟ್ ಇಂಡಿಯಾ ಕಂಪೆನಿಯ ನೇಮಕ.
1704: ಸ್ಪಾನಿಶ್ ಉತ್ತರಾಧಿಕಾರಕ್ಕಾಗಿ ಬ್ಲೆನ್ಹೀಮ್ ಕದನ ನಡೆದು ಮಾರ್ಲ್ಬೊರೋದ ಮೊದಲನೇ ಡ್ಯೂಕ್ ಜಾನ್ ಚರ್ಚಿಲ್ ನೇತೃತ್ವದಲ್ಲಿ ಇಂಗ್ಲಿಷ್ ಮತ್ತು ಆಸ್ಟ್ರಿಯನ್ ಪಡೆಗಳಿಗೆ ಜಯ ಲಭಿಸಿತು. ಐವತ್ತು ವರ್ಷಗಳಿಗೂ ಹೆಚ್ಚಿನ ಅವದಿಯಲ್ಲಿ ಫ್ರೆಂಚ್ ಸೇನೆಗೆ ಆದ ಮೊದಲ ಭಾರೀ ಸೋಲು ಇದು. ಈ ವಿಜಯವು ವಿಯೆನ್ನಾವನ್ನು ಫ್ರಾಂಕೊ-ಬವೇರಿಯನ್ ಸೇನೆಯ ದಾಳಿಯಿಂದ ರಕ್ಷಿಸಿತು.
1655: ಕ್ಲಾರಿನೆಟ್ನ್ನು ಸಂಶೋಧಿಸಿದ ಜರ್ಮನಿಯ ಸಂಗೀತ ಉಪಕರಣಗಳ ತಯಾರಕ ಜೊಹಾನ್ನ್ ಕ್ರಿಸ್ಟೋಫ್ ಡೆನ್ನರ್ (1655-1707) ಜನ್ಮದಿನ.
No comments:
Post a Comment