Monday, August 20, 2018

ಇಂದಿನ ಇತಿಹಾಸ History Today ಆಗಸ್ಟ್ 20

ಇಂದಿನ ಇತಿಹಾಸ History Today ಆಗಸ್ಟ್ 20

2018: ಜಕಾರ್ತ: ಜಕಾರ್ತದಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ ೫೦ ಕಿ.ಗ್ರಾ. ವರ್ಗದಲ್ಲಿ ತನ್ನ ಪ್ರತಿಸ್ಪರ್ಧಿಗಳನ್ನು ಮಣಿಸುವ ಮೂಲಕ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ವಿನೇಶ್ ಪೊಗತ್ ಅವರು ಇತಿಹಾಸ ನಿರ್ಮಿಸಿದರು. ವಿನೇಶ್ ಪೊಗತ್ ಅವರು ಕಠಿಣ ಸ್ಪರ್ಧೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಜಪಾನಿನ ಯೂಕಿ ಇರೀ ಅವರನ್ನು ಫೈನಲ್ ನಲ್ಲಿ - ಅಂತರದಲ್ಲಿ ಪರಾಭವಗೊಳಿಸಿದರು. ೨೩ರ ಹರೆಯದ ಹರಿಯಾಣದ ಫೈರ್ ಬ್ರ್ಯಾಡ್ ಕುಸ್ತಿಪಟು ವಿನೇಶ್ ಪೊಗತ್ ಅವರ ಪಾಲಿಗೆ ಇದು ಬಹುದೊಡ್ಡ ಸಾಧನೆ. ಪೊಗತ್ ಅವರು ಹರಿಯಾಣದ ಖ್ಯಾತ ಡಂಗಲ್ ಖ್ಯಾತಿಯ ಪೊಗತ್ ಕುಟುಂಬಕ್ಕೆ ಸೇರಿದವರು. ಎರಡು ವರ್ಷಗಳ ಹಿಂದೆ ಒಲಿಂಪಿಕ್ಸ್ ನಲ್ಲಿ ಸೋತಾದ ಅತ್ತಿದ್ದ ವಿನೇಶ್ ಪೊಗತ್ ಅವರು ಈದಿನ ಮೊದಲು ಚೀನಾದ  ಯನಾನ್ ಸುನ್ ಅವರನ್ನು ಸೋಲಿಸುವ ಮೂಲಕ ರಿಯೋದಲ್ಲಿ ತಾವು ಅನುಭವಿಸಿದ್ದ ಸೋಲಿನ ಸೇಡು ತೀರಿಸಿಕೊಂಡರು.

2018: ನವದೆಹಲಿ: ಕೇರಳದ ಶತಮಾನದ ಭೀಕರ ಮಳೆ ಹಾಗೂ ಪ್ರವಾಹ ಪರಿಸ್ಥಿತಿಯನ್ನು ಕೇಂದ್ರ ಸರ್ಕಾರವು  ’ಕಠೋರ ಸ್ವರೂಪದ ವಿಪತ್ತುಎಂಬುದಾಗಿ ಘೋಷಿಸಿತು. ಗೃಹ ವ್ಯವಹಾರಗಳ ಸಚಿವಾಲಯದ ಪ್ರಕಟಣೆ ವಿಚಾರವನ್ನು ಬಹಿರಂಗ ಪಡಿಸಿತು. ಸಂಸತ್ತಿನಲ್ಲಿ ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯ ನಾಯ್ಡು ಮತ್ತು ಲೋಕಸಭೆಯ ಅಧ್ಯಕ್ಷೆ ಸುಮಿತ್ರಾ ಮಹಾಜನ್ ಅವರು ತಿಂಗಳ ವೇತನದ ಹೊರತಾಗಿ, ತಮ್ಮ ಸಂಸತ್ ಸದಸ್ಯರ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿ (ಎಂಪಿಲ್ಯಾಡ್ಸ್ ಫಂಡ್) ಹಣವನ್ನು ಉದಾರವಾಗಿ ಕೇರಳದ ಪರಿಹಾರ ಮತ್ತು ಪುನರ್ ವಸತಿ ಕಾರ್ಯಗಳಿಗೆ ನೀಡುವಂತೆ ಸಂಸದರನ್ನು ಒತ್ತಾಯಿಸಿದರು. ತಮ್ಮ ಒಂದು ತಿಂಗಳ ವೇತನವನ್ನು ಕೇರಳದ ಪರಿಹಾರ ಕಾರ್ಯಗಳಿಗೆ ನೀಡುವುದಾಗಿ ಉಭಯರೂ ಘೋಷಿಸಿದರು. ಕೇರಳದ ವಿವಿಧ ಭಾಗಗಳಲ್ಲಿ ಬೃಹತ್ ಪ್ರಮಾಣದಲ್ಲಿ ಸಂಭವಿಸಿರುವ ಪ್ರಾಕೃತಿಕ ವಿಕೋಪದಿಂದ ನೂರಾರು ಮಂದಿ ಪ್ರಾಣಕಳೆದುಕೊಂಡಿದ್ದು, ಸಹಸ್ರರು ಮಂದಿ ನಿರ್ವಸಿತರಾಗಿದ್ದಾರೆ. ಭಾರಿ ಪ್ರಮಾಣದಲ್ಲಿ ಆಸ್ತಿ ಹಾನಿಯಾಗಿದೆ. ಕೇರಳ ಪ್ರವಾಹ ಹಾನಿಯ ಭೀಕರತೆಯನ್ನು ಗಮನದಲ್ಲಿ ಇರಿಸಿಕೊಂಡು ಭಾರತ ಸರ್ಕಾರವು ವಿಪತ್ತನ್ನುಕಠೋರ ಸ್ವರೂಪದ ವಿಪತ್ತುಎಂಬುದಗಿ ಘೋಷಿಸಿದೆ ಎಂದು ಉಭಯ ಸದನಗಳ ಮುಖ್ಯಸ್ಥರೂ ತಮ್ಮ ಹೇಳಿಕೆಯಲ್ಲಿ ತಿಳಿಸಿದರು. ಸಂಸತ್ ಸದಸ್ಯರ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿಗೆ ಸಂಬಂಧಿಸಿದ ಮಾರ್ಗದರ್ಶಿ ಸೂತ್ರದ .೮ನೇ ಪ್ಯಾರಾವುಕಠೋರ ಸ್ವರೂಪದ ವಿಪತ್ತುರಾಷ್ಟ್ರದ ಯಾವುದೇ ಭಾಗದಲ್ಲಿ ಸಂಭವಿಸಿದಾಗ ಸಂಸತ್ ಸದಸ್ಯರು ಗರಿಷ್ಠ ಒಂದು ಕೋಟಿ ರೂಪಾಯಿಗಳ ವರೆಗಿನ ಕಾಮಗಾರಿಗಳ ಹಣವನ್ನು ತೊಂದರೆಗೆ ಒಳಗಾದ ಪ್ರದೇಶಕ್ಕೆ ನೀಡಲು ಶಿಫಾರಸು ಮಾಡಬಹುದುಎಂದು ಹೇಳುತ್ತದೆ. ಆದ್ದರಿಂದ ಎಲ್ಲ ಸಂಸತ್ ಸದಸ್ಯರೂ ತಮ್ಮ ಸ್ಥಳೀಯ ಕ್ಷೇತ್ರಾಭಿವೃದ್ಧಿ ನಿಧಿಯ ಹಣದಿಂದ ಕೇರಳದ ಸಂತ್ರಸ್ಥ ಪ್ರದೇಶಗಳಲ್ಲಿ ಪರಿಹಾರ ಮತ್ತು ಪುನರ್ ವಸತಿ ಕಾರ್ಯಗಳಿಗೆ ನಿಯಮಾವಳಿಗೆ ಅನುಗುಣವಾಗಿಯೇ ಉದಾರವಾಗಿ ನೀಡುವಂತೆ ನಾವು ಎಲ್ಲ ಸಂಸತ್ ಸದಸ್ಯರಿಗೂ ಮನವಿ ಮಾಡುತ್ತೇವೆಎಂದು ಉಪರಾಷ್ಟ್ರಪತಿ ನಾಯ್ಡು ಹೇಳಿದರು. ಮಳೆ ಇಳಿಮುಖ: ಕೇರಳದಲ್ಲಿ ಮಳೆ ಸ್ವಲ್ಪ ಇಳಿಮುಖಗೊಂಡಿದ್ದು, ನಿರ್ವಸಿತರ ಪುನರ್ ವಸತಿ, ಜಲಜನ್ಯ ಸೋಂಕುರೋಗಗಳಿಂದ ಜನರ ರಕ್ಷಣೆಯ ಬೃಹತ್ ಕಾರ್ ಇದೀಗ ಎದುರಾಗಿದೆ. ವಾರದ ಮಳೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ ೨೧೬ಕ್ಕೇ ಏರುವುದರೊಂದಿಗೆ ಮಳೆಗಾಲಕ್ಕೆ ರಾಜ್ಯದಲ್ಲಿ ಬಲಿಯಾದವರ ಸಂಖ್ಯೆ ೩೫೦ನ್ನು ಮೀರಿದೆ ಎಂದು ಅಧಿಕಾರಿಗಳು ತಿಳಿಸಿದರು. ಇದರ ಜೊತೆಗೆ ನಿರ್ವಸಿತರಾದ .೨೪ ಲಕ್ಷ ಮಂದಿಗೆ ,೬೪೫ ಪರಿಹಾರ ಶಿಬಿರಗಳಲ್ಲಿ ಆಶ್ರಯ ನೀಡಲಾಗಿದೆ. ಎರ್ನಾಕುಲಂನಲ್ಲಿ ೫೦,೦೦೦ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ. ಐದು ದಿನಗಳ ಮಹಾಮಳೆ-ಪ್ರವಾಹದ ಬಳಿಕ ಕೇರಳದ ಹಲವಾರು ಭಾಗಗಳಲ್ಲಿ ಭಾನುವಾರ ಮಳೆ ಸ್ವಲ್ಪ ಇಳಿಮುಖಗೊಂಡಿದ್ದು, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಅದರಲ್ಲೂ ಚೆಂಗನ್ನೂರು ಮತ್ತು ಚಲಕುಡಿಯಲ್ಲಿ  ನೀರಿನ ಮಟ್ಟ ಇಳಿಮುಖವಾಗತೊಡಗಿದ್ದು, ಜನರ ಆತಂಕವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿದೆ. ಪ್ರವಾಹ ಇಳಿಮುಖವಾಗುತ್ತಿರುವ ಪ್ರದೇಶಗಳಲ್ಲಿ ಆರೋಗ್ಯ ಸಿಬ್ಬಂದಿ ಇದೀಗ ಬೃಹತ್ ಸ್ವಚ್ಛತಾ ಕಾರ್ಯ ಆರಂಭಿಸಿದರು. ರಾಜ್ಯದ್ಯಂತ ಪರಿಹಾರ ಶಿಬಿರಗಳಲ್ಲಿ ೧೦ ಲಕ್ಷಕ್ಕೂ ಹೆಚ್ಚು ನಿರ್ವಸಿತರು ಇದ್ದು, ಪರಿಹಾರ ಕಾರ್ಯಾಚರಣೆ ಬಹುತೇಕ ಸಮಾಪ್ತಿಯ ಹಂತಕ್ಕೆ ಬರುತ್ತಿದೆ. ಈಗ ಪರಿಹಾರ ಮತ್ತು ಪುನರ್ ವಸತಿಗೆ ಗಮನ ಹರಿಸಬೇಕಾಗಿದೆ ಎಂದು ಕೇಂದ್ರ ಪ್ರವಾಸೋದ್ಯಮ ಸಚಿವ ಕೆ.ಜೆ. ಅಲ್ಫೋನ್ಸ್ ಇಲ್ಲಿ ಹೇಳಿದರು. ವಿಶ್ವ ಆರೋಗ್ಯ ಸಂಸ್ಥೆ ತಂಡ: ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ತತ್ ಕ್ಷಣದ ಸವಾಲು ಸ್ವಚ್ಚತೆ, ಪುನರ್ ವಸತಿ ಮತ್ತು ಜಲಜನ್ಯ ರೋಗಗಳನ್ನು ತಡೆಗಟ್ಟುವುದಾಗಿದ್ದು, ವಿಶ್ವ ಆರೋಗ್ಯ ಸಂಸ್ಥೆ ಕೂಡಾ ರೋಗಗಳು ಹರಡದಂತೆ ತಡೆಯುವ ಯತ್ನಗಳ ಮೇಲ್ವಿಚಾರಣೆ ನೋಡಿಕೊಳ್ಳಲು ೧೩ ಸದಸ್ಯರ ತಂಡವನ್ನು ಕಳುಹಿಸಿತು. ಸಾಂತ್ವನ  ಕಾರ್ಯದಲ್ಲಿ ಡಿಸಿ, ಎಸ್ಪಿಗಳ ಪತ್ನಿಯರು: ಕೇರಳದ ವಿವಿಧೆಡೆಗಳಲ್ಲಿ ಜಿಲ್ಲಾ ಕಲೆಕ್ಟರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಪತ್ನಿಯರು ಪರಿಹಾರ ಶಿಬಿರಗಳಿಗೆ ಸ್ವತಃ ಆಗಮಿಸಿ, ಸಂತ್ರಸ್ತರಿಗೆ ನೆರವಾಗುವ ಕಾರ್ಯ ಆರಂಭಿಸಿದರು. ಜಿಲ್ಲಾಧಿಕಾರಿ ಅಮಿತ್ ಮೀನಾ ಅವರ ಪತ್ನಿ ಸಂಯುಕ್ತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಋಇ ಪ್ರತೀಶ್ ಕುಮಾರ್ ಅವರ ಪತ್ನಿ ರೊಲಿ ಚೌಹಾಣ್ ಅವರು ಜಿಲ್ಲಾ ಪಂಚಾಯತ್ ಕಾನ್ಫರೆನ್ಸ್ ಹಾಲ್ ನಲ್ಲಿ ಸಂತ್ರಸ್ಥ ಮಕ್ಕಳ ಕಾಳಜಿ ಉಸ್ತುವಾರಿ ನೋಡುತ್ತಿದ್ದಾರೆ. ಅವರು ವೈದ್ಯರಂಗಡಿ, ಅರೂರ್ ಮತ್ತು ಚೆರುಮುಟ್ಟಂ ಪರಿಹಾರ ಶಿಬಿರಗಳಿಗೂ ಭೇಟಿ ನೀಡಿದರು.  ಮಲಪ್ಪುರಂ ಜಿಲ್ಲಾಡಳಿತದಿಂದ ವಿಡಿಯೋ: ಮಲಪ್ಪುರಂ ಜಿಲ್ಲಾ ಆಡಳಿತವು ಪ್ರವಾಹ ಸಂತ್ರಸ್ಥರಿಗೆ ಬಾವಿ ಮತ್ತಿತರ ನೀರಿನ ಸೋಂಕು ನಿವಾರಣೆಗೆ ನೆರವಾಗುವ ಸಲುವಾಗಿ ವಿಡಿಯೋ ಒಂದನ್ನು ತಯಾರಿಸಿದೆ. ಸಾಮಾಜಿಕ ಜಾಲತಾಣಗಳು ಮತ್ತು ಜಿಲ್ಲಾ ಆಡಳಿತದ ಅಧಿಕೃತ ಅಂತರ್ಜಾಲ ಪುಟಗಳಲ್ಲಿ ವಿಡಿಯೋ ಪ್ರಸಾರ ಮಾಡಲಾಗುತ್ತಿದೆ. ಮೂರೂವರೆ ನಿಮಿಷಗಳ ವಿಡಿಯೋದಲ್ಲಿ ಜಿಲ್ಲಾ ವೈದ್ಯಾಧಿಕಾರಿ ಕೆ. ಸಕೀನಾ ಅವರು ನೀರನ್ನು ಕ್ಲೋರಿನೇಷನ್ ಮಾಡುವ ವಿಧಾನವನ್ನು ತೋರಿಸುವ ಮಾಹಿತಿ ಇದೆ. ಸೂಪರ್ ಕ್ಲೋರಿನೇಷನ್ ಮಾಡಿದ ನೀರನ್ನು ೨೦ ನಿಮಿಷ ಕಾಲ ಕುದಿಸಿ, ಕುಡಿಯಲು, ಅಡುಗೆಗೆ ಬಳಸಬಹುದು ಎಂದು ಸಕೀನಾ ವಿಡಿಯೋದಲ್ಲಿ ವಿವರಿಸುತ್ತಾರೆಮಾಲೆ ನೆರವು: ಮಾಲ್ದೀವ್ಸ್ ಸರ್ಕಾರ ೫೦,೦೦೦ ಡಾಲರ್ (೩೫ ಲಕ್ಷ ರೂಪಾಯಿ) ನೆರವನ್ನು ನೀಡಿತು. ಬುದ್ದಿಗೇಡಿ ಪೋಸ್ಟ್, ಕೆಲಸಕ್ಕೆ ಕತ್ತರಿ: ಒಮನ್ ನಲ್ಲಿ ಕೆಲಸ ಮಾಡುತ್ತಿದ್ದ ಕೇರಳದ ವ್ಯಕ್ತಿಯೊಬ್ಬ ಕೇರಳ ಪ್ರವಾಹಕ್ಕೆ ಸಂಬಂಧಿಸಿದಂತೆ ಬುದ್ದಿಗೇಡಿ ಪ್ರತಿಕ್ರಿಯೆಯೊಂದನ್ನು ನೀಡಿ ಕೆಲಸ ಕಳೆದುಕೊಂಡ ಘಟನೆ ಘಟಿಸಿತು. ಬೌಶೆರ್ ಲುಲು ಹೈಪರ್ ಮಾರ್ಕೆಟಿನಲ್ಲಿ ಕ್ಯಾಶಿಯರ್ ಆಗಿ ಕೆಲಸ ಮಾಡುತ್ತಿದ್ದ ರಾಹುಲ್ ಸಿ ಪಳಯಟ್ಟು ಎಂಬ ವ್ಯಕ್ತಿಗೆ ಬುದ್ದಿಗೇಡಿ ಪ್ರತಿಕ್ರಿಯೆಗಾಗಿ ಕೆಲಸದಿಂದ ಕಿತ್ತುಹಾಕಿದ ಪತ್ರವನ್ನು ನೀಡಲಾಗಿದೆ. ಸಾಮಾಜಿಕ ಜಾಲತಾಣದ ಪೋಸ್ಟ್ ಒಂದರಲ್ಲಿ ಸ್ಯಾನಿಟರಿ ನ್ಯಾಪ್ಕಿನ್ ಗಳನ್ನು ವಿವಿಧ ಪರಿಹಾರ ಶಿಬಿರಗಳಿಗೆ ಆದಷ್ಟೂ ಶೀಘ್ರವಾಗಿ ತಲುಪಿಸುವಂತೆ ಮನವಿ ಮಾಡಲಾಗಿತ್ತು. ವ್ಯಕ್ತಿ ಅದಕ್ಕೆ ಕಾಂಡೂಮ್ ಗಳನ್ನೂ ಕಳುಹಿಸಬಹುದು ಎಂಬ ಪ್ರತಿಕ್ರಿಯೆ ನೀಡಿದ್ದಪರಿಹಾರವು ರಾಜ್ಯದಲ್ಲಿರುವ ಅಂತಾರಾಜ್ಯ ವಲಸೆ ಕಾರ್ಮಿಕರಿಗೂ ಸಿಗುವಂತೆ ಗಮನ ಹರಿಸಬೇಕು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಈದಿನ ಪುನರ್ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.

2018: ನವದೆಹಲಿ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನದ ನೂತನ ಚುನಾಯಿತ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಅಭಿನಂದನಾ ಪತ್ರವೊಂದನ್ನು ಕಳುಹಿಸಿದ್ದು ಅದರಲ್ಲಿ ಪಾಕಿಸ್ತಾನದ ಜೊತೆಗೆ ಭಾರತವು ರಚನಾತ್ಮಕ ಮತ್ತು ಅರ್ಥಪೂರ್ಣ ಮಾತುಕತೆಯನ್ನು ಎದುರು ನೋಡುತ್ತಿದೆ ಎಂಬುದಾಗಿ ತಿಳಿಸಿದರು. ಭಾರತವು ಪಾಕಿಸ್ತಾನದ ಜೊತೆಗೆ ಶಾಂತಿಯುತ ನೆರೆಹೊರೆಯ ಬಾಂಧವ್ಯಕ್ಕೆ ಬದ್ಧವಾಗಿದೆ ಎಂಬುದಾಗಿ ಪ್ರಧಾನಿ ತಿಳಿಸಿರುವುದಾಗಿ ಪತ್ರವನ್ನು ಉಲ್ಲೇಖಿಸಿದ ಅಧಿಕೃತ ಮೂಲಗಳು ಹೇಳಿದವು. ಭಯೋತ್ಪಾದನೆ ಮುಕ್ತ ದಕ್ಷಿಣ ಏಷ್ಯಾಕ್ಕಾಗಿ ಶ್ರಮಿಸುವ ಅಗತ್ಯ ಇದೆ ಎಂಬುದಾಗಿ ಪ್ರಧಾನಿ ಒತ್ತಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿದವು.  ಖಾನ್ ಅವರು ಶುಕ್ರವಾರ ಪಾಕಿಸ್ತಾನದ ೨೨ನೇ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರುಪಾಕ್ ವಿದೇಶಾಂಗ ಸಚಿವರ ಪ್ರತಿಪಾದನೆ ಸರಿಯಲ್ಲ:   ಮಧ್ಯೆ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಖಾತೆ ನೂತನ ಸಚಿವ ಶಾ ಮೆಹಮೂದ್ ಖುರೇಶಿ ಅವರು ನರೇಂದ್ರ ಮೋದಿ ಅವರು ಇಮ್ರಾನ್ ಖಾನ್ ಅವರಿಗೆ ಪತ್ರವೊಂದನ್ನು ಬರೆದು ಶಾಂತಿ ಪ್ರಕ್ರಿಯೆ ಪುನಾರಂಭಕ್ಕೆ ಆಸಕ್ತಿ ವ್ಯಕ್ತ ಪಡಿಸಿದ್ದಾರೆ ಎಂಬುದಾಗಿ ಪ್ರತಿಪಾದಿಸಿದ್ದನ್ನು ಭಾರತ ನಿರಾಕರಿಸಿತು. ಪ್ರಧಾನಿ ಮೋದಿಯವರು ಪಾಕ್ ಪ್ರದಾನಿಗೆ ಬರೆದ ಪತ್ರವು ಅಭಿನಂದನಾ ಸ್ವರೂಪದ್ದು ಮಾತ್ರ. ಅದರಲ್ಲಿ ಮಾತುಕತೆಯ ಯಾವುದೇ ಕೊಡುಗೆ ಇರಲಿಲ್ಲ ಎಂದು ಮೂಲಗಳು ಸ್ಪಷ್ಟ ಪಡಿಸಿದವು. ಭಾರತವು ಶಾಂತಿಯುತ ನೆರೆಹೊರೆಯ ಬಾಂಧವ್ಯ ಮತ್ತು ಭಯೋತ್ಪಾದನೆ ಮುಕ್ತ ಪ್ರದೇಶಕ್ಕೆ ಬದ್ಧವಾಗಿದೆ. ವಿಚಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದೊಂದಿಗೆ ಧನಾತ್ಮಕವಾಗಿ ತೊಡಗಿಸಿಕೊಳ್ಳಲು ಭಾರತ ಬಯಸಿದೆ ಎಂಬುದಾಗಿ ಪತ್ರ ಹೇಳಿದೆ ಎಂಬುದಾಗಿ ಮೂಲಗಳು ತಿಳಿಸಿದವು. ಈ  ವರ್ಷ ತಮ್ಮ ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿಭಯೋತ್ಪಾದನೆ ಮತ್ತು ಮಾತುಕತೆಜೊತೆ ಜೊತೆಯಾಗಿ ಸಾಗಲು ಸಾಧ್ಯವಿಲ್ಲ. ಆದರೆ ಭಯೋತ್ಪಾದನೆ ಕುರಿತು ಮಾತುಕತೆ ನಡೆಯಬಹುದು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಹೇಳಿದ್ದರು.  ಆದರೆ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೆಹಮೂದ್ ಖುರೇಶಿ ಅವರು ಭಯೋತ್ಪಾದನೆ ಕುರಿತ ಮಾತುಕತೆಯನ್ನು ಸಮಗ್ರ ಮಾತುಕತೆ ಎಂಬುದಾಗಿ ಅರ್ಥ ಮಾಡಿಕೊಂಡಿದ್ದು, ಇದನ್ನು ಭಾರತ ನಿರಾಕರಿಸಿತು.  ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಖುರೇಶಿ ಅವರುಭಾರತ ಮತ್ತು ಪಾಕಿಸ್ತಾನ ವಾಸ್ತವದ ಆಧಾರದಲ್ಲಿ ಹೆಜ್ಜೆ ಮುಂದಿಟ್ಟಿವೆಎಂದು ಹೇಳಿದ್ದರುವಿದೇಶಾಂಗ ವ್ಯವಹಾರ ಸಚಿವರಾಗಿ ಅಧಿಕಾರ ವಹಿಸಿಕೊಂಡ ಒಂದು ಗಂಟೆಯ ಬಳಿಕ, ಮಾತನಾಡಿದ ಅವರುಭಾರತದ ಪ್ರಧಾನಿಯವರು ನಿನ್ನ ಪತ್ರವೊಂದನ್ನು ಕಳುಹಿಸಿದ್ದು ಅದರಲ್ಲಿ ಇಮ್ರಾನ್ ಖಾನ್ ಅವರನ್ನು ಅಭಿನಂದಿಸಿದ್ದಾರೆ ಮತ್ತು ಮಾತುಕತೆಯ ಸಂದೇಶವನ್ನು (ಉಭಯ ರಾಷ್ಟ್ರಗಳ ನಡುವೆ) ಕಳುಹಿಸಿದ್ದಾರೆಎಂದು ಹೇಳಿದ್ದರು.  ಉಭಯ ರಾಷ್ಟ್ರಗಳ ಮಧ್ಯೆ ಮಾತುಕತೆಯ ಅಗತ್ಯವನ್ನು ಒತ್ತಿ ಹೇಳಿದ ಅವರು ಪಾಕಿಸ್ತಾನಕ್ಕೆ ಭಾರತದ ಜೊತೆ ಮಾತುಕತೆ ನಡೆಸದ ಹೊರತು ಬೇರೆ ದಾರಿಯಲ್ಲ. ನಾವು ಸಾಹಸ ಪ್ರವೃತ್ತಿ ತೋರುವಂತಿಲ್ಲ ಎಂದು ಹೇಳಿದ ಅವರು ಭಾರತದ ಜೊತೆಗೆ ಭಿನ್ನ ರೀತಿಯಲ್ಲಿ ವ್ಯವಹರಿಸುವ ಸುಳಿವು ನೀಡಿದ್ದರು.  ‘ನಮ್ಮ ವರ್ತನೆಯನ್ನು ಹೇಗೆ ಬದಲಾಯಿಸಬಹುದು ಎಂದು ನಾವು ಎದುರು ನೋಡುತ್ತಿದ್ದೇವೆಎಂದೂ ಖುರೇಶಿ ಹೇಳಿದ್ದರು.  ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಸುಷ್ಮಾ ಸ್ವರಾಜ್ ಅವರನ್ನು ಉದ್ದೇಶಿಸಿ ಖುರೇಶಿ, ’ನಾವು ನೆರೆಹೊರೆಯವರು ಮತ್ತು ಉಭಯರಿಗೂ ವಿಷಯಗಳ ಬಗ್ಗೆ ಪರಸ್ಪರ ಅರಿವಿದೆ. ನಮಗೆ ಪರಸ್ಪರ ಮಾತನಾಡದೆ ಬೇರೆ ಆಯ್ಕೆ ಇಲ್ಲಎಂದೂ ಅವರು ಹೇಳಿದ್ದರು. ಸಮಸ್ಯೆಗಳು ಸಂಕೀರ್ಣವಾದವುಗಳು ಮತ್ತು ಅವುಗಳ ಪರಿಹಾರವೂ ಸಂಕೀರ್ಣವಾಗಿವೆ. ಇದು ಗೊತ್ತಿದ್ದುಕೊಂಡು ನಾವು ವಿರುದ್ಧ ಮುಖ ಮಾಡಿಕೊಂಡು ಹೋಗುವಂತಿಲ್ಲಎಂದೂ ಅವರು ಹೇಳಿದ್ದರುನಮ್ಮ ಮಧ್ಯೆ ಕೆಲವು ಇತ್ಯರ್ಥವಾಗದ ವಿಷಯಗಳಿವೆ ಎಂದು ನಾವು ಒಪ್ಪಿಕೊಳ್ಳುತ್ತೇವೆ. ನಾವು ಬಯಸಲಿ ಬಿಡಲಿ, ಕಾಶ್ಮೀರವು ವಾಸ್ತವ ಮತ್ತು ಸಮಸ್ಯೆ ಎಂದು ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೂ ತಮ್ಮ ಪಾಕ್ ಪ್ರವಾಸ ಕಾಲದಲ್ಲಿ ಒಪ್ಪಿದ್ದರು ಎಂದು ಖುರೇಶಿ ಹೇಳಿದ್ದರು. ಉಭಯ ರಾಷ್ಟ್ರಗಳ ಮಧ್ಯೆ ನಿರಂತರ, ಅಡಚಣೆ ರಹಿತ ಮಾತುಕತೆ ನಡೆಯಬೇಕು ಎಂದು ಅವರು ಕರೆ ನೀಡಿದ್ದರು.

2018: ಜೆರುಸಲೇಮ್: ಇಸ್ರೇಲಿನ ಶಾಂತಿ ಪ್ರತಿಪಾದಕ ಪತ್ರಕರ್ತ, ಪ್ಯಾಲೆಸ್ತೈನ್ ದೇಶ ರಚನೆ ಬಗ್ಗೆ ಬಹಿರಂಗವಾಗಿ ಪ್ರತಿಪಾದಿಸಿದ ಮೊತ್ತ ಮೊದಲ ವ್ಯಕ್ತಿ ಉರಿ ಅವೆರಿ ಅವರು ತಮ್ಮ ೯೪ನೇ ವಯಸ್ಸಿನಲ್ಲಿ ನಿಧನರಾದರು. ಅವ್ನೆರಿ ಅವರು ಟೆಲ್ ಅವೀವ್ ಆಸ್ಪತ್ರೆಯೊಂದರಲ್ಲಿ ಪಾರ್ಶ್ವವಾಯು ಹೊಡೆತದ ಬಳಿಕ ಅಸ್ವಸ್ಥರಾಗಿ ಅಸು ನೀಗಿದರು. ದಶಕಗಳ ಕಾಲ ಇಸ್ರೇಲಿ ಶಾಂತಿ ಶಿಬಿರದ ಸಂಕೇತವಾಗಿದ್ದ ಅವ್ನೆರಿ ಅವರು ತಮ್ಮ ದಟ್ಟವಾದ ಬಿಳಿ ಗಡ್ಡ ಮತ್ತು ಬಿಳಿ ತಲೆಗೂದಲಿನಿಂದಾಗಿ ಚಿರಪರಿಚಿತ ವ್ಯಕ್ತಿಯಾಗಿದ್ದರು. ಇಸ್ರೇಲಿನ ಸ್ಥಾಪಕ ತಲೆಮಾರಿನ ಸದಸ್ಯರಾಗಿದ್ದ ಅವರು ಇಸ್ರೇಲ್ ಸ್ಥಾಪನೆ ಪೂರ್ವದ ಇರ್ಗುನ್ ಭೂಗತ ಸೇನೆಯ ಸದಸ್ಯರಾಗಿದ್ದರು. ಸ್ವಾತಂತ್ರ್ಯ ಲಭಿಸಿದ ಬಳಿಕ ಅವರು ಪ್ರಕಾಶಕ, ಸಂಸತ್ ಸದಸ್ಯ, ಗ್ರಂಥಕರ್ತ ಹಾಗೂ ಸಾಮಾಜಿಕ ಕಾರ್ಯಕರ್ತರಾಗಿದ್ದರು. ೧೯೮೨ರ ಲೆಬನಾನ್ ಸಮರದ ಸಂದರ್ಭದಲ್ಲಿ ಅವ್ನೆರಿ ಅವರು ಮುತ್ತಿಗೆಗೆ ಒಳಗಾಗಿದ್ದ ಬೈರೂತ್ ಒಳಕ್ಕೆ ನುಸುಳಿ ಇಸ್ರೇಲಿನ ಆಗಿನ ವೈರಿ ಪಿಎಲ್ ಅಧ್ಯಕ್ಷ ಯಾಸೆರ್ ಅರಾಫತ್ ಅವರನ್ನು ಭೇಟಿ ಮಾಡಿದ್ದರುಅವ್ನೆರಿ ಅವರು ಪ್ರಜಾತಾಂತ್ರಿಕ ಇಸ್ರೇಲಿಗೆ ಶಾಂತಿ ಗಳಿಕೆಯ ಏಕೈಕ ಮಾರ್ಗ ಪ್ಯಾಲೆಸ್ತೈನ್ ದೇಶದ ರಚನೆ ಎಂಬುದಾಗಿ ಬಹಿರಂಗವಾಗಿ ಪ್ರತಿಪಾದಿಸುತ್ತಿದ್ದರು.

2018: ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕಿನ ೧೩,೫೭೮ ಕೋಟಿ ರೂಪಾಯಿ ವಂಚನೆ ಹಗರಣದ ಮುಖ್ಯ ಆರೋಪಿ ದೇಶಭ್ರಷ್ಟ ವಜ್ರ ವ್ಯಾಪಾರಿ ನೀರವ್ ಮೋದಿ ಅವರು ತಮ್ಮಲ್ಲಿ ವಾಸ್ತವ್ಯ ಇರುವುದನ್ನು ಇಂಗ್ಲೆಂಡ್ ದೃಢ ಪಡಿಸಿದ್ದು, ಬೆನ್ನಲ್ಲೇ ನೀರವ್ ಮೋದಿ ಗಡೀಪಾರಿಗಾಗಿ ಸಿಬಿಐ ಅರ್ಜಿ ಸಲ್ಲಿಸಿತು. ನೀರವ್ ಮೋದಿ ವಾಸ್ತವ್ಯ ಇರುವ ಸ್ಥಳದ ಬಗ್ಗೆ ಇಂಗ್ಲೆಂಡಿನ ಅಧಿಕಾರಿಗಳು ಮಾಹಿತಿ ನೀಡಿದ ತತ್ ಕ್ಷಣವೇ ಅವರನ್ನು ಗಡೀಪಾರು ಮಾಡುವಂತೆ ಕೋರಿ ಸಿಬಿಐ ಅರ್ಜಿ ಸಲ್ಲಿಸಿತು. ಮನವಿಯನ್ನು ಗೃಹ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯಗಳ ಮೂಲಕ ಕಳುಹಿಸಲಾಗುತ್ತಿದೆನೀರವ್ ಮೋದಿ ವಿರುದ್ಧ ಜಾರಿಗೊಳಿಸಲಾಗಿರುವ ಇಂಟರ್ ಪೋಲ್ ರೆಡ್ ನೋಟಿಸ್ ಪ್ರತಿಯನ್ನು ಕೂಡಾ ನಾವು ಕಳುಹಿಸಿದ್ದು, ತತ್ ಕ್ಷಣ ನೀರವ್ ಮೋದಿಯನ್ನು ಬಂಧಿಸುವಂತೆ ಮತ್ತು ಮಾಹಿತಿ ನೀಡುವಂತೆ ಕೋರಿದ್ದೇವೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.  ಹಗರಣದಲ್ಲಿ ಶಾಮೀಲಾಗಿರುವ ಬಗ್ಗೆ ಯಾರ ಹೆಸರುಗಳು ಕೇಳಿ ಬಂದವೋ ಅಂತಹ ಎಲ್ಲ ನಿಕಟ ಬಂಧುಗಳ ಜೊತೆಗೆ ನೀರವ್ ಮೋದಿ, ಜನವರಿ ಮೊದಲ ವಾರದಲ್ಲಿ ಸಿಬಿಐ ಪ್ರಕರಣ ದಾಖಲಿಸಿಕೊಳ್ಳುವುದಕ್ಕೆ ಕೆಲವು ದಿನ ಮುಂಚಿತವಾಗಿ ದೇಶ ತ್ಯಜಿಸಿದ್ದರು.  ಬಳಿಕ ಹಲವಾರು ರಾಷ್ಟ್ರಗಳಲ್ಲಿ ನೀರವ್ ಮೋದಿ ಕಂಡು ಬಂದಿದ್ದರು. ಆದರೆ ಇಂಗ್ಲೆಂಡ್ ಅವರ ಹಾಲಿ ಸ್ಥಳವನ್ನು ಪತ್ತೆ ಹಚ್ಚುವವರೆಗೂ ಅವರು ಬಂಧನವನ್ನು ತಪ್ಪಿಸಿಕೊಳ್ಳುತ್ತಲೇ ಬಂದಿದ್ದರು. ನೀರವ್ ಮೋದಿ ಅವರ ಮಾವ, ಸಹ ಆರೋಪಿ, ಮೆಹುಲ್ ಚೊಕ್ಸಿ ಆಂಟಿಗುವಾದಲ್ಲಿ ಆಶ್ರಯ ಪಡೆದಿದ್ದು, ಅಲ್ಲಿನ ಪೌರತ್ವಕ್ಕಾಗಿ ೨೦೧೭ರಲ್ಲೇ ಅರ್ಜಿ ಸಲ್ಲಿಸಿದ್ದರು ಮತ್ತು ೨೦೧೭ರ ನವೆಂಬರಿನಲ್ಲಿ ಅಲ್ಲಿನ ಪೌರತ್ವ ಪಡೆದುಕೊಂಡಿದ್ದರು.


2018: ನವದೆಹಲಿ: ಭಾರತದ ಕಾನೂನು ಆಯೋಗದ ಅಧ್ಯಕ್ಷ ಬಿ.ಎಸ್. ಚೌಹಾಣ್ ಅವರು ಆಗಸ್ಟ್ ೩೧ರಂದು ನಿವೃತ್ತರಾಗಲಿದ್ದು, ಬಹು ನಿರೀಕ್ಷಿತ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಅವರು ಯಾವುದೇ ಪ್ರಸ್ತಾಪವನ್ನು ಮುಂದಿಡದ ಕಾರಣ ಅದು ಬಹುತೇಕ ಮೂಲೆಪಾಲಾದಂತಾಯಿತು. ಕಾನೂನು ಆಯೋಗದ ಅಧ್ಯಕ್ಷರ ನಿವೃತ್ತಿಯಿಂದಾಗಿ ಬುಡಕಟ್ಟು ಜನರ ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ವೈಯಕ್ತಿಕ ಕಾನೂನುಗಳಿಗೆ ರಕ್ಷಣೆ ಒದಗಿಸುವ ಆರನೇ ಶೆಡ್ಯೂಲಿಗೂ ಅಡಚಣೆ ಎದುರಾಗಿದೆ. ಆಯೋಗವು ಈಗ ಹಲವಾರು ವೈಯಕ್ತಿಕ ಕಾನೂನುಗಳಿಗೆ ತಿದ್ದುಪಡಿಗಳನ್ನು ಮಾತ್ರವೇ ಮುಂದಿಡುತ್ತಿದೆ. ೨೦೧೭ರಲ್ಲಿ ಕಾನೂನು ಆಯೋಗದ ಅಧ್ಯಕ್ಷ ಬಿ.ಎಸ್. ಚೌಹಾಣ್ ಅವರುಅಸಮತೋಲನವು ಸಂವಿಧಾನದ ತಿರುಳಿಗೇ ಧಕ್ಕೆ ಉಂಟು ಮಾಡಬಹುದಾದ ಕಾರಣ ಸಂವಿಧಾನದಲ್ಲಿ ನೀಡಲಾಗಿರುವ ವಿನಾಯ್ತಿಗಳನ್ನು ಗೌರವಿಸಬೇಕಾಗುತ್ತದೆ  ಎಂದು ಹೇಳಿದ್ದರು. ‘ಬುಡಕಟ್ಟು ಜನರು ಸೇರಿದಂತೆ ಹಲವಾರು ಜನರಿಗೆ ಸಂವಿಧಾನವು ಸ್ವತಃ ಹತ್ತಾರು ವಿನಾಯ್ತಿಗಳನ್ನು ನೀಡಿದೆ. ನಾಗರಿಕ ಪ್ರಕ್ರಿಯಾ ಸಂಹಿತೆ ಮತ್ತು ಅಪರಾಧ ದಂಡ ಸಂಹಿತೆಯಲ್ಲೂ ವಿನಾಯ್ತಿಗಳಿವೆ. ಏಕರೂಪ ನಾಗರಿಕ ಸಂಹಿತೆಯು ಪರಿಹಾರವಲ್ಲ ಮತ್ತು ಸಮಗ್ರ ಕಾಯ್ದೆಯೊಂದನ್ನು ತರುವುದು ಸಾಧ್ಯವೂ ಇಲ್ಲ. ಸಂವಿಧಾನವನ್ನೇ ಮರೆಯಿರಿ ಮತ್ತು ಆರನೇ ಶೆಡ್ಯೂಲನ್ನು ಕಿತ್ತು ಹಾಕಿ ಎಂದು ನೀವು ಹೇಳುವಂತಿಲ್ಲಎಂದು ನ್ಯಾಯಮೂರ್ತಿ ಚೌಹಾಣ್ ಹೇಳಿದ್ದರು. ಕಾನೂನು ಆಯೋಗದ ಮೂಲಗಳ ಪ್ರಕಾರ, ಆಯೋಗದ ಹೊಸ ಅಧ್ಯಕ್ಷರು ಏಕರೂಪ ನಾಗರಿಕ ಸಂಹಿತೆಯ ಪ್ರಸ್ತಾಪ ಮುಂದಿಡಲು ನಿರ್ಧರಿಸಿದರೂ, ಆಗ ಕೂಡಾ ೬ನೇ ಶೆಡ್ಯೂಲಿನ ಅಡಚಣೆ ಬಗ್ಗೆ ಅವರು ವ್ಯವಹರಿಸಲೇಬೇಕಾಗುತ್ತದೆ ಎಂದು ಕಾನೂನು ಆಯೋಗದ ಮೂಲಗಳು ಹೇಳಿದವು. ‘ಆಯೋಗವು ಸಂವಿಧಾನದ ಚೌಕಟ್ಟಿನಲ್ಲೇ ಕಾರ್ಯ ನಿರ್ವಹಿಸಬೇಕಾಗುತ್ತದೆ. ಅದನ್ನು ಉಲ್ಲಂಘಿಸಲಾಗದು. ಆದರೆ ಆಯೋಗದ ಬಳಿ ಕಾಲಾವಕಾಶ ಇಲ್ಲದ ಕಾರಣ, ನಾವು ಈಗ ಏಕರೂಪ ನಾಗರಿಕ ಸಂಹಿತೆಯ ಪ್ರಸ್ತಾಪ ಮಾಡಲು ಸಾಧ್ಯವಿಲ್ಲಎಂದು ಆಯೋಗದ ಮೂಲವೊಂದು ತಿಳಿಸಿತು. ಭಾರತದಲ್ಲಿ ಏಕರೂಪ ನಾಗರಿಕ ಸಂಹಿತೆ ಸಾಧ್ಯವೇ ಎಂಬುದಾಗಿ ಪರಿಶೀಲಿಸುವಂತೆ ಕಾನೂನು ಸಚಿವಾಲಯವು ೨೦೧೬ರಲ್ಲಿ ಕಾನೂನು ಆಯೋಗಕ್ಕೆ ಸೂಚಿಸಿತ್ತು. ೨೦೧೬ರ ಅಕ್ಟೋಬರಿನಲ್ಲಿ ಆಯೋಗವು ಸಂವಿಧಾನದ ೪೪ನೇ ಪರಿಚ್ಛೇದದ ಅಡಿಯಲ್ಲಿ, ಎಲ್ಲ ಧರ್ಮಗಳ ಕೌಟುಂಬಿಕ ಕಾನೂನುಗಳನ್ನು ಪುನರ್ ಪರಿಶೀಲಿಸುವ ಮತ್ತು ಸುಧಾರಿಸುವ ಬಗ್ಗೆ ಸಾರ್ವಜನಿಕರಿಂದ ಅಭಿಪ್ರಾಯಗಳನ್ನು ಆಹ್ವಾನಿಸಿತ್ತು. ಸಂವಿಧಾನದ ೪೪ನೇ ಪರಿಚ್ಛೇದವು ಎಲ್ಲ ಪ್ರಜೆಗಳಿಗೆ ಅನ್ವಯವಾಗುವ ಏಕರೂಪ ನಾಗರಿಕ ಸಂಹಿತೆಯ ಬಗ್ಗೆ ಪ್ರಸ್ತಾಪಿಸುತ್ತದೆತ್ರಿವಳಿ ತಲಾಖ್ ಮತ್ತು ಮಹಿಳಾ ಪೌರರ ಆಸ್ತಿ ಹಕ್ಕು ಸೇರಿದಂತೆ ವ್ಯಾಪಕ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಶ್ನಾವಳಿಗೆ ಉತ್ತರಿಸುವ ಮೂಲಕ ತಮ್ಮ ಅಭಿಪ್ರಾಯಗಳನ್ನು ನೀಡುವಂತೆ ಎಲ್ಲ ಧಾರ್ಮಿಕ, ಅಲ್ಪಸಂಖ್ಯಾತ ಮತ್ತು ಸಾಮಾಜಿಕ ಸಮೂಹಗಳು, ಸರ್ಕಾರೇತರ ಸಂಘಟನೆಗಳು, ರಾಜಕೀಯ ಪಕ್ಷಗಳು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಆಯೋಗವು ಮನವಿ ಮಾಡಿತ್ತು. ಮನವಿ ಮಾಡಿದ ಒಂದು ವರ್ಷದ ಬಳಿಕ ಸುದ್ದಿ ಸಂಸ್ಥೆಯೊಂದರ ಜೊತೆ ಮಾತನಾಡಿದ್ದ ಆಯೋಗದ ಅಧ್ಯಕ್ಷರು ಏಕರೂಪ ನಾಗರಿಕ ಸಂಹಿತೆ ಸಂಭವನೀಯ ಅಲ್ಲ ಎಂದು ಹೇಳಿದ್ದರು. ಏನಿದ್ದರೂ, ಅಭಿಪ್ರಾಯ ಸಂಗ್ರಹ ಕಾರ್ಯವು ೨೦೧೮ರ ಮೇವರೆಗೂ ಮುಂದುವರೆದಿತ್ತು. ಹಲವಾರು ವ್ಯಕ್ತಿಗಳು ಮತ್ತು ಸಂಸ್ಥೆಗಳು ಏಕರೂಪ ನಾಗರಿಕ ಸಂಹಿತೆಯ ಪರ ಹಾಗೂ ವಿರೋಧಿ ಅಭಿಪ್ರಾಯಗಳನ್ನು ನೀಡಿದ್ದವು. ಇಂತಹ ಎಲ್ಲ ಸಲಹೆಗಳು ಮತ್ತು ವೈಯಕ್ತಿನ ಕಾನೂನಿಗೆ ತಿದ್ದು ಪಡಿ ಮಾಡುವ ಕುರಿತ ಪ್ರಸ್ತಾಪ ಪತ್ರವನ್ನು ಆಯೋಗದ ಅವಧಿ ಪೂರ್ಣಗೊಳ್ಳಲಿರುವ ಆಗಸ್ಟ್ ೩೧ಕ್ಕೆ ಮೊದಲೇ ಆಯೋಗದ ವೆಬ್ ಸೈಟಿನಲ್ಲಿ ಪ್ರಕಟಿಸಲಿದೆ. ಸಾರ್ವಜನಿಕರು ಪ್ರಸ್ತಾಪ ಪತ್ರದ ಬಗ್ಗೆ ಚರ್ಚಿಸಬಹುದು೨೦೧೭ರ ಡಿಸೆಂಬರಿನಲ್ಲಿ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಬಲಬೀರ್ ಸಿಂಗ್ ಚೌಹಾಣ್ ಅವರು ಏಕರೂಪ ನಾಗರಿಕ ಸಂಹಿತೆ ಜಾರಿಯ ಬದಲು ವೈಯಕ್ತಿಕ ಕಾನೂನುಗಳಿಗೆ ತಿದ್ದುಪಡಿ ತರುವ ಬಗ್ಗೆ ಒಲವು ವ್ಯಕ್ತ ಪಡಿಸಿದ್ದರು. ಏಕರೂಪ ನಾಗರಿಕ ಸಂಹಿತೆ ಜಾರಿ ಸಾಧ್ಯವಿಲ್ಲ, ಅದೊಂದು ಆಯ್ಕೆ ಕೂಡಾ ಆಗಲಾರದು ಎಂದು ಅವರು ಹೇಳಿದ್ದರು.   ವೈಯಕ್ತಿಕ ಕಾನೂನುಗಳನ್ನು ಕಿತ್ತು ಹಾಕಲು ಸಾಧ್ಯವಿಲ್ಲ, ಏಕೆಂದರೆ ಅವುಗಳಿಗೆ ಸಂವಿಧನದ ರಕ್ಷಣೆ ಇದೆ ಎಂದು ಅವರು ನುಡಿದಿದ್ದರು. ಏಕರೂಪ ನಾಗರಿಕ ಸಂಹಿತೆಯ ಕಲ್ಪನೆಯನ್ನು ಕೈಬಿಟ್ಟು, ಹಲವಾರು ವೈಯಕ್ತಿಕ ಕಾನೂನುಗಳಿಗೆ ನಿರ್ದಿಷ್ಟ ತಿದ್ದುಪಡಿಗಳನ್ನು ತರುವ ಬಗ್ಗೆ ಪ್ರಸ್ತಾಪಿಸಲು ಅವರು ಆಗ ಸಿದ್ಧತೆ ನಡೆಸಿದ್ದರು. ತ್ರಿವಳಿ ತಲಾಖ್ ಕುರಿತ ಸಾರ್ವಜನಿಕ ಚರ್ಚೆಯ ಸಂದರ್ಭದಲ್ಲಿ ವ್ಯಕ್ತವಾದ ಅಭಿಪ್ರಾಯಗಳನ್ನು ಅನುಸರಿಸಿ ಅವರು ಬಗ್ಗೆ ಚಿಂತಿಸಿದ್ದರು. ‘ಏಕರೂಪ ನಾಗರಿಕ ಸಂಹಿತೆ ಸಂಭಾವ್ಯವಲ್ಲ. ಕೌಟುಂಬಿಕ ಕಾಯ್ದೆಗಳಿಗೆ ಆಯಾ ಧರ್ಮಗಳಿಗೆ ಅನುಗುಣವಾಗಿ ತಿದ್ದುಪಡಿಗಳನ್ನು ಮಾಡುವ ಬಗ್ಗೆ ಶಿಫಾರಸು ಮಾಡಲು ನಾವು ಯತ್ನಿಸುತ್ತೇವೆ. ಹಿಂದು ಕಾನೂನು, ಮುಸ್ಲಿಮ್ ಕಾನೂನು, ಕ್ರೈಸ್ತ ಕಾನುನು, ಪಾರ್ಸಿ ಕಾನೂನು ಇತ್ಯಾದಿ ಕಾನೂನುಗಳಿಗೆ ಅಗತ್ಯವಿರುವ ತಿದ್ದುಪಡಿಗಳನ್ನು ಸಲಹೆ ಮಾಡುವ ಬಗ್ಗೆ ಚಿಂತಿಸುತ್ತಿದ್ದೇವೆ. ಪ್ರತಿಯೊಂದು ಧರ್ಮದ ಸಮಸ್ಯೆ ಬಗ್ಗೆ ಗುರಿ ಇಟ್ಟುಕೊಂಡು ಬಗೆ ಹರಿಸಲು ಯತ್ನಿಸುತ್ತೇವೆ. ಸಂವಿಧಾನವನ್ನು ಬಿಟ್ಟು ಕೆಲಸ ಮಾಡಲು ಸಾಧ್ಯವಿಲ್ಲವಾದ್ದರಿಂದ ನಾವು ಸಮಗ್ರ ಏಕರೂಪ ನಾಗರಿಕ ಸಂಹಿತೆ ಬಗ್ಗೆ ಮಾತನಾಡಲು ಸಾಧ್ಯವಾಗದುಎಂದು ಅವರು ಹೇಳಿದ್ದರು.

2016: ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) 24ನೇ ಗವರ್ನರ್ ಆಗಿ ಪ್ರಸ್ತುತ ಆರ್ಬಿಐನ ಉಪ ಗವರ್ನರ್ ಆಗಿರುವ ಉರ್ಜಿತ್ ಪಟೇಲ್ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿತು.  ಸಂಸದೀಯ ಕಾರ್ಯದರ್ಶಿಯ ನೇತೃತ್ವದ ಎಫ್ಎಸ್ಆರ್ಎಎಸ್ಸಿ ಸಮಿತಿಯು ಉರ್ಜಿತ್ ಪಟೇಲ್ ಅವರ ಹೆಸರನ್ನು ಅಂತಿಮಗೊಳಿಸಿತು. ಸಮಿತಿಯು ಹಲವು ದಿನಗಳಿಂದ ಆರ್ಬಿಐ ಗವರ್ನರ್ ನೇಮಕದಕ್ಕೆ ಹಲವು ಹೆಸರುಗಳನ್ನು ಪರಿಶೀಲನೆ ನಡೆಸಿ ಅಂತಿಮವಾಗಿ ಉರ್ಜಿತ್ ಪಟೇಲ್ ಅವರನ್ನು ನೇಮಕ ಮಾಡಿತು. ಉರ್ಜಿತ್ ಪಟೇಲ್ ಉಪ ಗವರ್ನರ್ ಆಗಿ 3 ವರ್ಷದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಆರ್ಬಿಐ ಗವರ್ನರ್ ನೇಮಕದ ಕುರಿತು 4 ಗಂಟೆಗಳಿಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದರು. ಉರ್ಜಿತ್ ಪಟೇಲ್ ಸೆಪ್ಟೆಂಬರ್ 4 ನಂತರ ಅಧಿಕಾರ ಸ್ವೀಕರಿಸಲಿದ್ದಾರೆ. ಉರ್ಜಿತ್ ಯಾಲೆ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಪಿಎಚ್ಡಿ ಪದವಿ ಪಡೆದಿದ್ದಾರೆ. ಇವರು ಲಂಡನ್ ವಿಶ್ವವಿದ್ಯಾಲಯ ಮತ್ತು ಆಕ್ಸ್ಫರ್ಡ್ ವಿಶ್ವವಿದ್ಯಾಲಯಗಳಲ್ಲಿ ಪದವಿ ಪಡೆದಿದ್ದಾರೆ. ಇವರು ಹಣದುಬ್ಬರ ನಿಯಂತ್ರಿಸುವ ಕಾರ್ಯಯೋಜನೆ ರೂಪಿಸುವಲ್ಲಿ ನೈಪುಣ್ಯತೆ ಸಾಧಿಸಿದ್ದಾರೆ.

2016: ನವದೆಹಲಿ: ಹರಾಜಿನಲ್ಲಿ 4 ಕೋಟಿ ರೂಪಾಯಿಗಳಿಗೆ ಮಾರಾಟವಾಗಿದ್ದ ಪ್ರಧಾನಿ ನರೇಂದ್ರ ಮೋದಿಯವರ ನಾಮಮುದ್ರಿತ ಸೂಟ್ ವಿಶ್ವದ ಅತ್ಯಂತದುಬಾರಿ ಸೂಟ್ಎಂಬುದಾಗಿ ಗಿನ್ನೆಸ್ ವಿಶ್ವದಾಖಲೆಗೆ ಸೇರ್ಪಡೆಯಾಯಿತು. ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಭಾರತ ಪ್ರವಾಸದಲ್ಲಿದ್ದಾಗ ಮೋದಿ ಅವರು ಧರಿಸಿದ್ದ ನಾಮಮುದ್ರಿತ ಸೂಟ್ನ್ನು 2015ರಲ್ಲಿ ಹರಾಜಿಗಿಡಲಾಗಿತ್ತುಗುಜರಾತಿನ ಸೂರತ್ ವಜ್ರದ ವ್ಯಾಪಾರಿ ಲಾಲಜಿಭಾಯಿ ತುಳಸಿಭಾಯಿ ಪಟೇಲ್ ಎಂಬುವರು ಹರಾಜಿನಲ್ಲಿ ಭಾಗವಹಿಸಿದ್ದ 47 ಜನರನ್ನು ಹಿಂದಿಕ್ಕಿ ಸೂಟ್ನ್ನು 4, 31, 31,311 (ನಾಲ್ಕು ಕೋಟಿ ಮೂವತ್ತೊಂದು ಲಕ್ಷದ ಮೂವತ್ತೊಂದು ಸಾವಿರ ಮೂರು ನೂರ ಹನ್ನೊಂದು) ರೂಪಾಯಿ ಮೌಲ್ಯಕ್ಕೆ ತಮ್ಮದಾಗಿಸಿಕೊಂಡಿದ್ದರು. ಮೋದಿ ಸೂಟ್ ಧರಿಸಿದ ನಂತರ ವಿಪಕ್ಷದಿಂದ ಸೂಟು ಬೂಟು ಸರ್ಕಾರ ಎಂಬ ಟೀಕೆಗೆ ಗುರಿಯಾಗಿದ್ದರು. ಅನಿವಾಸಿ ಭಾರತೀಯ ಉದ್ಯಮಿ ರಮೇಶ್ ವಿರಾಣಿ 11 ಲಕ್ಷ ಮೌಲ್ಯದ ಸೂಟನ್ನು ತಮ್ಮ ಮಗಳ ಮದುವೆ ಸಮಾರಂಭದ ವೇಳೆ ಮೋದಿಯವರಿಗೆ ಉಡುಗೊರೆಯಾಗಿ ನೀಡಿದ್ದರು.

2016: ನವದೆಹಲಿ/ ಭೋಪಾಲ್ (.ಪ್ರ)/ ಪಟನಾ (ಬಿಹಾರ), ಲಖನೌ (.ಪ್ರ): ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಬಿಹಾರ ಸೇರಿದಂತೆ ಉತ್ತರ ಭಾರತದಲ್ಲಿ ಭಾರಿ ಮಳೆಯ ಪರಿಣಾಮವಾಗಿ ನದಿಗಳು ಉಕ್ಕೇರಿದವು. ಬಿಹಾರದಲ್ಲಿ ಗಂಗಾ ಪ್ರವಾಹಕ್ಕೆ 3 ಮಕ್ಕಳು, ಮಧ್ಯ ಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಕಟ್ಟಡ ಕುಸಿತಗಳಿಗೆ 26  ಮಂದಿ ಬಲಿಯಾಗಿರುವುದು ಸೇರಿ ಒಟ್ಟು 29 ಮಂದಿ ಸಾವನ್ನಪ್ಪಿದರು. ಉತ್ತರ ಪ್ರದೇಶದಲ್ಲಿ ನೂರಾರು ಮಣ್ಣಿನ ಮನೆಗಳು ಈದಿನ ಒಂದೇ ದಿನದಲ್ಲಿ ಕುಸಿದವು.  ಬಿಹಾರದ ಸರಣ್ ಜಿಲ್ಲೆಯ ಸೋನ್ ಪುರ ಬಳಿ ಗಂಗಾನದಿಯ ಪ್ರವಾಹದಲ್ಲಿ ಮೂವರು ಮಕ್ಕಳು ಕೊಚ್ಚಿ ಹೋದರು. ಮಧ್ಯ ಪ್ರದೇಶದ ಮೈಹಾರ್ನಲ್ಲಿ 3 ಅಂತಸ್ತಿನ ಕಟ್ಟಡ ಕುಸಿತದಲ್ಲಿ ಒಬ್ಬ ಸಾವನ್ನಪ್ಪಿದರೆ, ಸಾಗರ ಜಿಲ್ಲೆಯ ರತ್ನಗಢದಲ್ಲಿ ಮನೆ ಕುಸಿದು 7 ಮಂದಿ ಸಾವನ್ನಪ್ಪಿ, ಮೂವರು ಗಾಯಗೊಂಡರು. ಮೈಹಾರ್ ನಲ್ಲಿ ಕುಸಿದ ಕಟ್ಟಡ ಅವಶೇಷದಡಿಯಿಂದ ಮೂವರನ್ನು ಕಟ್ಟಡದ ಅವಶೇಷಗಳ ಅಡಿಯಿಂದ ರಕ್ಷಿಸಲಾಯಿತು. ಇತರ ಹಲವರು ಅವಶೇಷದ ಅಡಿ ಸಿಲುಕಿದ್ದಾರೆ ಎಂದು ವರದಿಗಳು ತಿಳಿಸಿದವು. ಛತ್ತರಪುರದಲ್ಲಿ ಕಾರೊಂದು ಜಲಾಶಯಕ್ಕೆ ಬಿದ್ದು ಅದರಲ್ಲಿದ್ದ ಮೂವರು ಸಾವನ್ನಪ್ಪಿದರು. ಉತ್ತರ ಪ್ರದೇಶದಲ್ಲಿ ಪ್ರವಾಹದ ಪರಿಣಾಮವಾಗಿ ಮಣ್ಣಿನ ಮನೆಗಳು ಕುಸಿದು 11 ಮಂದಿ ಸಾವನ್ನಪ್ಪಿದರು. ಮಳೆಯಿಂದಾಗಿ ಮಧ್ಯ ಪ್ರದೇಶದ ನದಿಗಳಲ್ಲಿ ಪ್ರವಾಹ ಉಕ್ಕೇರುತ್ತಿರುವ ಹಿನ್ನೆಲೆಯಲ್ಲಿ ರೇವಾದಲ್ಲಿ ಸೇನೆ ರಕ್ಷಣಾ ಕಾರ್ಯಾಚರಣೆಗೆ ಇಳಿಯಿತು. ಎಂಜಿನಿಯರಿಂಗ್ ಕಾರ್ಯ ಪಡೆ ಕೂಡಾ ಪ್ರವಾಹ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ವರದಿಗಳು ಹೇಳಿದವು. ಕಳೆದ ಕೆಲ ದಿನಗಳಿಂದ ಎಡೆಬಿಡದೆ ಸುರಿದ ಮಳೆಯಿಂದ ಅಕ್ಷರಶಃ ಜಲಾಶಯಗಳಾಗಿ ಮಾರ್ಪಾಡಾಗಿರುವ ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ಕೆಲ ಜಿಲ್ಲೆಗಳು ನೆರೆಭೀತಿ ಎದುರಿಸಿದವು. 80 ಕ್ಕೂ ಹೆಚ್ಚು ಹಳ್ಳಿಗಳು ಜಲಾವೃತಗೊಂಡಿದ್ದು, ಪ್ರವಾಹ ಪೀಡಿತ ಮಧ್ಯಪ್ರದೇಶದ ರೇವಾ ಮತ್ತು ಸಾತ್ನಾ ಜಿಲ್ಲೆಯಲ್ಲಿ 25 ಸಾವಿರಕ್ಕೂ ಹೆಚ್ಚು ಜನ ನಿರಾಶ್ರಿತರಾದರು. ಉತ್ತರ ಪ್ರದೇಶದ ಮಹೋಮಾದ ಕಾವಲ್ಗಂಜ್, ಬಂಡಾ ಪ್ರದೇಶಗಳಲ್ಲಿ ಮಣ್ಣಿನ ಮನೆಗಳ ಕುಸಿತದಲ್ಲಿ ಐವರು ಸಾವನ್ನಪ್ಪಿದರು. ಕಾನ್ಪುರ ಪ್ರದೇಶದಲ್ಲಿ ಹಿಂದಿನ ದಿನ ಮನೆ ಕುಸಿತದಲ್ಲಿ ಇಬ್ಬರು ಮಕ್ಕಳು ಸೇರಿ ನಾಲ್ವರು ಸಾವನ್ನಪ್ಪಿದ್ದರು.

2016: ಹೈದರಾಬಾದ್: ಒಲಿಂಪಿಕ್ಸ್ನಲ್ಲಿ ಪಿ.ವಿ ಸಿಂಧುವಿನ ಗೆಲುವಿಗೆ ಕಾರಣರಾದ ಕೋಚ್ ಪುಲ್ಲೇಲ ಗೋಪಿಚಂದ್ ಜೀವನ ಚರಿತ್ರೆ ಆಧರಿಸಿರುವ ಚಿತ್ರ ಮುಂದಿನ ವರ್ಷ ತೆರೆಗೆ ಬರಲಿದೆ. ಬ್ಯಾಟ್ಮಿಂಟನ್ ಆಟಗಾರ ಗೋಪಿಚಂದ್ ಅವರು ನೈನಾ ನೆಹ್ವಾಲ್, 21 ಹರೆಯದ ಪಿ.ವಿ ಸಿಂಧು ಮೊದಲಾದವರ ಗೆಲುವಿನ ಹಿಂದಿನ ಶಕ್ತಿಯಾಗಿದ್ದಾರೆ. ತೆಲುಗು ನಟ ಮಹೇಶ್ ಬಾಬು ಅವರ ಮೈದುನ ಸುಧೀರ್ ಬಾಬು ಗೋಪಿ ಚಂದ್ ಅವರ ಪಾತ್ರ ನಿರ್ವಹಿಸಲಿದ್ದಾರೆ. ಗೋಪಿಚಂದ್ ಅವರನ್ನು ತಾನು ಬಹಳ ಹತ್ತಿರದಿಂದ ತಿಳಿದಿದ್ದು ಅವರೊಂದಿಗೆ ಡಬಲ್ಸ್ ಆಟವನ್ನು ಆಡಿದ್ದೇನೆ. ಗೋಪಿಚಂದ್ರಂತಹ ನಿಜವಾದ ಹೀರೋಗಳ ಕತೆ ಜನರು ತಿಳಿಯಬೇಕಾದದ್ದು ಎಂದು ಬಗ್ಗೆ ಸುಧೀರ್ ಬಾಬು ಪ್ರತಿಕ್ರಿಯಿಸಿದರು. ಹಿಂದಿ ಹಾಗೂ ತೆಲುಗಿನಲ್ಲಿ ನಿರ್ಮಾಣವಾಗಲಿರುವ ಚಿತ್ರವನ್ನು ರಾಷ್ಟ್ರೀಯ ಪುರಸ್ಕಾರ ವಿಜೇತ ನಿರ್ದೇಶಕ ಪ್ರವೀಣ್ ಸತ್ತಾರು ನಿರ್ದೇಶನ ಮಾಡಲಿದ್ದು ಅಭಿಶೇಕ್ ನಮ ನಿರ್ಮಾಣ ಮಾಡಲಿದ್ದಾರೆ. ಕಳೆದ 18 ತಿಂಗಳುಗಳಿಂದಲೇ ಚಿತ್ರದ ತಯಾರಿಗಳು ನಡೆದಿದ್ದು ಮುಂದಿನ ನವೆಂಬರ್ನಲ್ಲಿ ಚಿತ್ರ ತೆರೆಗೆ ಬರಲಿದೆ ಎಂದು ಹೇಳಲಾಯಿತು.

2016: ಅಮೃತಸರ: ಆಘಾತಕಾರಿಯಾದ ವರದಿಯೊಂದು ಅಮೃತಸರದಿಂದ ಬಂದಿತು. ವ್ಯಕ್ತಿಯೊಬ್ಬ 40 ಚೂರಿಗಳನ್ನು ಗುಳಂಕರಿಸಿ ತನ್ನ ಕಥೆ ಹೇಳಲು ಇನ್ನು ಬದುಕಿ ಉಳಿದಿದ್ದಾನೆ ಎಂದು ವರದಿ ಹೇಳಿತು.  ಏಕಪ್ಪಾ ಇಷ್ಟೊಂದು ಚೂರಿಗಳನ್ನು ಗುಳುಂಕರಿಸಿದೆ? ಎಂಬ ವೈದ್ಯರ  ಪ್ರಶ್ನೆಗೆ ಮಹಾಶಯಅವುಗಳನ್ನು ಕಂಡೊಡನೆಯೇ ತಿನ್ನಬೇಕು ಅನಿಸಿತು, ತಿಂದು ಬಿಟ್ಟೆಎಂದು ಉತ್ತರಿಸಿದ! ಇದು ದಿಗಿಲು ಹುಟ್ಟಿಸುವ, ನನ್ನ ವೈದ್ಯಕೀಯ ವೃತ್ತಿಯ ಅವಧಿಯಲ್ಲೇ ಎಂದೂ ಕಾಣದ ಘಟನೆಎಂದು ಆತನನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಿ ಚೂರಿಗಳನ್ನು ಹೊರತೆಗೆದ ಸರ್ಜನ್ ಡಾ. ಜಿತೇಂದ್ರ ಮಲ್ಹೋತ್ರ ಹೇಳಿದರು. ಐವರು ಶಸ್ತ್ರ ಚಿಕಿತ್ಸಕರ ತಂಡವು 5 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಆತನ ದೇಹದ ಒಳಗಿದ್ದ ಚೂರಿಗಳನ್ನು ಹೊರತೆಗೆಯಿತು. ಸುಮಾರು ಎರಡು ತಿಂಗಳ ಅವಧಿಯಲ್ಲಿ ಮಹಾನುಭಾವ 40 ಚೂರಿಗಳನ್ನು ಗುಳುಂಕರಿಸಿದ್ದನಂತೆ.

2016: ಮುಂಬೈ: ಮೊಣಕಾಲು ನೋವಿನಿಂದ ಬಳಲುತ್ತಿದ್ದ ವಿಶ್ವ ಮಾಜಿ ನಂ.1ಶೆಟ್ಲರ್ ಸೈನಾ ನೆಹ್ವಾಲ್ ಮುಂಬೈನ ಕೋಕಿಲಾಬೆನ್ ಧೀರೂಬಾಯ್ ಅಂಬಾನಿ ಆಸ್ಪತ್ರೆಯಲ್ಲಿ ಬಲ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾದರು .ಶಸ್ತ್ರಚಿಕಿತ್ಸೆಯ ಬಳಿಕ ‘‘ತಾನು ಈಗ ಆರಾಮವಾಗಿದ್ದೇನೆ’’ ಎಂದು ಬ್ಯಾಂಡೇಜ್ ಮಾಡಿದ ಕಾಲಿನ ಚಿತ್ರದೊಂದಿಗೆ ಸೈನಾ ಟ್ವೀಟ್ಮಾಡಿದರು. ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿರುವ ಕಾರಣ ಆಟದಿಂದ ಕನಿಷ್ಠ ನಾಲ್ಕು ತಿಂಗಳು ವಿಶ್ರಾಂತಿ ಪಡೆಯಬೇಕಾಗುತ್ತದೆ ಎಂದು ಹೇಳಲಾಯಿತು. ಈ ಹಿಂದೆ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ಎಲ್ಲಾ ಭಾರತೀಯರು ನಿಮ್ಮ ಚೇತರಿಕೆಗಾಗಿ ಪ್ರಾರ್ಥಿಸುತ್ತಿದ್ದೇವೆಎಂದು ಸೈನಾಗೆ ಟ್ವೀಟ್ ಮಾಡಿದ್ದರು. ಅದಕ್ಕೆ ಸೈನಾ ಧನ್ಯವಾದ ಹೇಳಿ ಮರುಟ್ವೀಟ್ ಮಾಡಿದ್ದರು.

2016: ನವದೆಹಲಿ: ಭಾರಿ ವಿವಾದದ ಬಳಿಕ ಕೊನೆಗೂ ಖ್ಯಾತ ಸರೋದ್ ವಾದಕ ಉಸ್ತಾದ್ ಅಮ್ಜದ್ ಅಲಿ ಖಾನ್ ಅವರಿಗೆ ಬ್ರಿಟನ್ ವೀಸಾ ನೀಡಿತು. ಕೊನೆಗೂ ನನಗೆ ವೀಸಾ ದೊರಕಿದೆ. ವೀಸಾ ದೊರಯುವಂತೆ ಮಾಡುವ ನಿಟ್ಟಿನಲ್ಲಿ ಸಹಕರಿಸಿದ ಎಲ್ಲರಿಗೂ ನನ್ನ ಕೃತಜ್ಞತೆಗಳುಎಂದು ಅಮ್ಜದ್ ಸಾಮಾಜಿಕ ಜಾಲತಾಣದಲ್ಲಿ ಬರೆದರು. 70 ವರ್ಷದ ಅಮ್ಜದ್ ಅಲಿ ಖಾನ್ ಅವರು ರಾಯಲ್ ಫೆಸ್ಟಿವೆಲ್ ಹಾಲ್ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಲುವಾಗಿ ಮುಂದಿನ ತಿಂಗಳು ಬ್ರಿಟನ್ಗೆ ತೆರಳಲು ಸಲ್ಲಿಸಿದ್ದ ವೀಸಾ ಅರ್ಜಿಯನ್ನು ಸೂಕ್ತ ವಿವರಗಳು ನೀಡಿಲ್ಲ ಎಂಬ ಕಾರಣಕ್ಕೆ ಬ್ರಿಟನ್ ರಾಜತಾಂತ್ರಿಕ ಕಚೇರಿ ತಿರಸ್ಕರಿಸಿತ್ತು. ಬಗ್ಗೆ ಅಮ್ಜದ್ ಖಾನ್ ಅವರು ಸುಷ್ಮಾ ಸ್ವರಾಜ್ಗೆ ಟ್ವೀಟ್ ಮಾಡಿದ್ದರು.

2016: ನವದೆಹಲಿ: ರಿಯೋ ಒಲಿಂಪಿಕ್ ಕ್ರೀಡಾಕೂಟದ ಮಹಿಳಾ ಬ್ಯಾಡ್ಮಿಂಟನ್ ಸಿಂಗಲ್ಸ್ನಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಂಡಿರುವ ಹೈದರಾಬಾದ್ ಪ್ರತಿಭಾನ್ವಿತ ಆಟಗಾರ್ತಿ ಪಿ.ವಿ. ಸಿಂಧು ಅವರಿಗೆ ದೇಶದ ಮೂಲೆ ಮೂಲೆಗಳಿಂದ, ಬಾಲಿವುಡ್ ಸೇರಿ ದೇಶದ ವಿವಿಧ ಚಿತ್ರರಂಗಗಳ ತಾರೆಯರಿಂದ, ವಿವಿಧ ಕಂಪನಿಗಳಿಂದ, ಕೋಟ್ಯಂತರ ಪ್ರೇಮಿಗಳಿಂದ ಶ್ಲಾಘನೆಯ ಮಹಾಪೂರವೇ ಹರಿದುಬಂದಿತು.  ಅಷ್ಟೇ ಅಲ್ಲ ವಿವಿಧ ಸಂಸ್ಥೆಗಳು, ಕಂಪನಿಗಳು ವಿಶೇಷ ಬಹುಮಾನ ಪ್ರಕಟಿಸಿದವು.  ಇವೆಲ್ಲದರ ಜತೆ ಜೊತೆಗೇ ತೆಲಂಗಾಣ ಮತ್ತು ಆಂಧ್ರಪ್ರದೇಶ ಸರ್ಕಾರ, ಇಲ್ಲಿನ ಸಂಘ ಸಂಸ್ಥೆಗಳು, ಉದ್ಯಮಿಗಳು, ವಿವಿಧ ಕಂಪನಿಗಳು, ಆಭರಣ ಮಳಿಗೆಗಳು ಸಿಂಧು ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಸಿದ್ಧತೆ ಮಾಡಿಕೊಂಡರು.  ಬಿಎಂಡಬ್ಲ್ಯೂ ಕಾರು ಬಹುಮಾನ:
2012ರಲ್ಲಿ ಸೈನಾ ನೆಹ್ವಾಲ್ ಒಲಿಂಪಿಕ್ಸ್ ಕಂಚಿನ ಪದಕ ಗೆದ್ದುಕೊಂಡಾಗ ಬಿಎಂಡಬ್ಲ್ಯು ಕಾರನ್ನು ಬಹುಮಾನವಾಗಿ ನೀಡಿದ್ದ ಹೈದರಾಬಾದ್ ಜಿಲ್ಲಾ ಬ್ಯಾಡ್ಮಿಂಟನ್ ಸಂಸ್ಥೆಯ ಅಧ್ಯಕ್ಷ, ಸಚಿನ್ ತೆಂಡುಲ್ಕರ್ ಅವರ ಆಪ್ತ ಸ್ನೇಹಿತರೂ ಆದ ವಿ. ಚಾಮುಂಡೇಶ್ವರನಾಥ ಅವರು ಸಿಂಧು ಅವರಿಗೂ ಬಿಎಂಡಬ್ಲ್ಯು ಕಾರನ್ನು ಬಹುಮಾನ ನೀಡುವುದಾಗಿ ಪ್ರಕಟಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಒಲಿಂಪಿಕ್ಸ್ ಕ್ರೀಡಾಕೂಟಕ್ಕೂ ಮೊದಲೇ ತೆಲಂಗಾಣ ಮತ್ತು ಆಂಧ್ರಪ್ರದೇಶದ ಯಾವುದೇ ಕ್ರೀಡಾಪಟು ಪದಕ ಗೆದ್ದಲ್ಲಿ ಬಿಎಂಡಬ್ಲ್ಯು ಕಾರು ನೀಡುವುದಾಗಿ ಪ್ರಕಟಿಸಿದ್ದೆ. ಅದರ ಪ್ರಕಾರ ಸಿಂಧು ಅವರಿಗೆ ಬಿಎಂಡಬ್ಲ್ಯು ಕಾರನ್ನು ನೀಡುತ್ತಿದ್ದೇನೆ ಎಂದರು. 50 ಲಕ್ಷ ಪ್ರಕಟಿಸಿದ ಬ್ಯಾಡ್ಮಿಂಟನ್ ಸಂಸ್ಥೆ: ಭಾರತೀಯ ಬ್ಯಾಡ್ಮಿಂಟನ್ ಸಂಸ್ಥೆ ಸಿಂಧು ಅವರಿಗೆ 50 ಲಕ್ಷ ರೂ. ಹಾಗೂ ಕೋಚ್ ಪಿ.ಗೋಪಿಚಂದ್ಗೆ 10 ಲಕ್ಷ ರೂ. ಬಹುಮಾನ ನೀಡಿ, ಗೌರವಿಸುವುದಾಗಿ ಪ್ರಕಟಿಸಿತು.  ಸಿಂಧು ಅವರ ಗುಣಗಾನ ಮಾಡಿ, ಅವರ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬಿಎಐ ಅಧ್ಯಕ್ಷ ಡಾ. ಅಖಿಲೇಶ್ ದಾಸ್ ಗುಪ್ತಾ ಸಿಂಧು ಅವರಿಗೆ ಅಭಿನಂದನೆ ಸಲ್ಲಿಸಿದರು. ಅವರ ಸಾಧನೆಯಿಂದ ಭಾರತದಲ್ಲಿ ಇನ್ನಷ್ಟು ಮಂದಿ ಯುವ ಆಟಗಾರರು ಸ್ಪೂರ್ತಿ ಪಡೆದುಕೊಳ್ಳುತ್ತಾರೆನ್ನುವ ವಿಶ್ವಾಸ ತಮಗಿದೆ. ಇದು ದೇಶವೇ ಹೆಮ್ಮೆ ಪಡುವ ಸಂಗತಿಯಾಗಿದೆ. ದೇಶದ ಇತಿಹಾಸದಲ್ಲಿಯೇ ಇದೊಂದು ಮೈಲಿಗಲ್ಲು. ಅಂತೆಯೇ ದೇಶದಲ್ಲಿ ಬ್ಯಾಡ್ಮಿಂಟನ್ ಕ್ರೀಡೆಯನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯುವಲ್ಲಿ ಕೋಚ್ ಗೋಪಿಚಂದ್ ಅವರ ಪಾತ್ರ ಗಮನಾರ್ಹ. ಅವರ ಗರಡಿಯಿಂದ ಇನ್ನಷ್ಟು ಮಂದಿ ದೇಶದ ಕೀರ್ತಿಯ ಪತಾಕೆ ಹಾರಿಸುವಂತವರು ಬೆಳಗಲಿ ಎಂದರು. ಆಂಧ್ರ ಸರ್ಕಾರದಿಂದ 3 ಕೋಟಿ ರೂ: ಸಿಂಧುಗೆ ಆಂಧ್ರಪ್ರದೇಶದಿಂದ 3 ಕೋಟಿ ರೂಪಾಯಿ ನಗದು ಬಹುಮಾನ, ರಾಜಧಾನಿಯಲ್ಲಿ 1000 ಚದರ ಯಾರ್ಡ್ ಮನೆ ನಿವೇಶನ ಮತ್ತು ರಾಜ್ಯ ಸರ್ಕಾರದಲ್ಲಿ ಗ್ರೂಪ್ 1 ನೌಕರಿ, ಕೋಚ್ ಪುಲ್ಲೇಲ ಗೋಪಿ ಚಂದ್ ಅವರಿಗೂ 50 ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ಆಂಧ್ರ ಪ್ರದೇಶ ಸಚಿವ ಸಂಪುಟ ಪ್ರಕಟಿಸಿತು. ದೆಹಲಿ ಸರ್ಕಾರದಿಂದ 2 ಕೋಟಿ ರೂ: ಪಿ.ವಿ. ಸಿಂಧು ಮತ್ತು ಸಾಕ್ಷಿ ಮಲಿಕ್ ಸಾಧನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿಶೇಷ ಬಹುಮಾನ ಪ್ರಕಟಿಸಿದರು. ಬ್ಯಾಡ್ಮಿಂಟನ್ನಲ್ಲಿ ಬೆಳ್ಳಿ ಪದಕ ಗೆದ್ದುಕೊಂಡಿರುವ ಸಿಂಧು ಅವರಿಗೆ ದೆಹಲಿ ಸರ್ಕಾರ 2 ಕೋಟಿ ರೂ. ಪ್ರಕಟಿಸಿತು. ಅಂತೆಯೇ ಕಂಚು ಗೆದ್ದುಕೊಂಡಿರುವ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್ಗೆ ಒಂದು ಕೋಟಿ ರೂ. ಪ್ರಕಟಿಸಿತು. ಅಲ್ಲದೆ ಸಾಕ್ಷಿ ಅವರ ತಂದೆಗೆ ದೆಹಲಿ ಸಾರಿಗೆ ಸಂಸ್ಥೆಯಲ್ಲಿ ಉದ್ಯೋಗಾವಕಾಶ ಒದಗಿಸುವುದಾಗಿ ಭರವಸೆ ನೀಡಿತು. ತೆಲಂಗಾಣ ಸರ್ಕಾರದಿಂದ 1 ಕೋಟಿ ರೂ.: ಪಿ.ವಿ. ಸಿಂಧು ಅವರ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ತೆಲಂಗಾಣ ಸರ್ಕಾರ ಒಂದು ಕೋಟಿ ರೂ. ಬಹುಮಾನ ಪ್ರಕಟಿಸಿತು. ಫುಟ್ಬಾಲ್ ಸಂಸ್ಥೆಯಿಂದ 5ಲಕ್ಷ ರೂ.: ರಿಯೋ ಒಲಿಂಪಿಕ್ಸ್ ಪದಕ ವಿಜೇತರಾದ ಸಿಂಧು ಮತ್ತು ಸಾಕ್ಷಿ ಮಲಿಕ್ಗೆ ತಲಾ ಐದು ಲಕ್ಷ ರೂ. ನೀಡುವುದಾಗಿ ಅಖಿಲ ಭಾರತ} ಫುಟ್ಬಾಲ್ ಸಂಸ್ಥೆ ಪ್ರಕಟಿಸಿತು. ಮಧ್ಯಪ್ರದೇಶ ಸರ್ಕಾರದಿಂದ 50 ಲಕ್ಷ ರೂ.: ಸಿಂಧು ಸಾಧನೆಯನ್ನು ಮೆಚ್ಚಿಕೊಂಡ ಮಧ್ಯಪ್ರದೇಶ ಸರ್ಕಾರ ಕೂಡ 50 ಲಕ್ಷ ರೂ ಬಹುಮಾನ ಪ್ರಕಟಿಸಿತು.
 2016: ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು 72ನೇ ಜನ್ಮದಿನದ ಸಂದರ್ಭದಲ್ಲಿ ಸ್ಮರಿಸಿದರು. ‘ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರನ್ನು ಅವರ ಜನ್ಮದಿನದ ಸಂದರ್ಭದಲ್ಲಿ ಸ್ಮರಿಸಿ ಕೊಳ್ಳುತ್ತಿದ್ದೇನೆಎಂದು ಟ್ವೀಟ್ ಮಾಡುವ ಮೂಲಕ ಮೋದಿ ಅವರು ರಾಜೀವ್ ಗಾಂಧಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ರಾಜೀವ್ ಗಾಂಧಿ ಅವರು 1944 ಆಗಸ್ಟ್ 20ರಂದು ಜನಿಸಿದ್ದರು. 1984ರಿಂದ 1989ರವರೆಗೆ ಅವರು ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. 1984ರಲ್ಲಿ ತಮ್ಮ ತಾಯಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಹತ್ಯೆಯ ಬಳಿಕ ರಾಜೀವ್ ಗಾಂಧಿ ಅವರು ಅಧಿಕಾರ ವಹಿಸಿಕೊಂಡಿದ್ದರು. 1991 ಮೇ 21ರಂದು ತಮಿಳುನಾಡಿನಲ್ಲಿ ಚುನಾವಣಾ ಪ್ರಚಾರ ಕಾಲದಲ್ಲಿ ರಾಜೀವ್ ಗಾಂಧಿ ಅವರನ್ನು ಹತ್ಯೆಗೈಯಲಾಗಿತ್ತು.
2016: ಕೋಲ್ಕತ: ಪಶ್ಚಿಮ ಬಂಗಾಳದ ಕಾಂಗ್ರೆಸ್ ಘಟಕವು 1984 ಸಿಖ್ ಗಲಭೆಗಳ ಬಳಿಕ ರಾಜೀವ್ ಗಾಂಧಿ ಅವರು ನೀಡಿದ್ದ ವಿವಾದಾತ್ಮಕ ಹೇಳಿಕೆಯನ್ನು ಟ್ವೀಟ್ ಮಾಡಿ, ಬಳಿಕ ಕಿತ್ತು ಹಾಕಿದ ಘಟನೆ ಘಟಿಸಿತು.  ಸಿಖ್ ಗಲಭೆಗಳ ಬಳಿಕ ರಾಜೀವ್ ಗಾಂಧಿ ಅವರುದೊಡ್ಡ ಮರ ಬಿದ್ದಾಗ ಭೂಮಿ ಅದುರುತ್ತದೆಎಂದು ಹೇಳಿಕೆ ನೀಡಿದ್ದರು. ದಿವಂಗತ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯ ಬಳಿಕ ವ್ಯಾಪಕವಾಗಿ ಭುಗಿಲೆದ್ದ ಸಿಖ್ ವಿರೋಧಿ ದಂಗೆಗಳ ಬಗ್ಗೆ ರಾಜೀವ್ ಗಾಂಧಿ ಅವರು ರೀತಿ ಪ್ರತಿಕ್ರಿಯಿಸಿದ್ದರು. ಹೇಳಿಕೆಗೆ ವ್ಯಾಪಕ ವಿರೋಧ ವ್ಯಕ್ತವಾಗಿತ್ತು

2016: ನವದೆಹಲಿ: ಬಲೂಚಿಸ್ತಾನ ನಿರಾಶ್ರಿತರು ಮತ್ತು ವಲಸಿಗರು ನಮಗೆ ನಾಯಿ ಎಂದು ಕರೆದರೂ ಪಾಕಿಸ್ತಾನಿಗಳು ಅಂತ ಮಾತ್ರ ಕರೆಯಬೇಡಿ. ಪಾಕಿಸ್ತಾನದವರು ಎನ್ನಲು ನಾಚಿಕೆಯಾಗುತ್ತದೆ ಎಂದು ಹೇಳಿರುವುದು ಬೆಳಕಿಗೆ ಬಂತು. ಕಳೆದ ಕೆಲ ದಿನದ ಹಿಂದೆ ಭಾರತಕ್ಕೆ ಆಗಮಿಸಿದ್ದ ಬಲೂಚಿಸ್ತಾನದ ವಲಸಿಗ ಮಜ್ದಾಕ್ ದಿಲ್ಶಾನ್ ಬಲೂಚ್ ವಿಮಾನ ನಿಲ್ದಾಣ ಅಧಿಕಾರಿಗಳಿಗೆ ನೋವಿನಿಂದ ಹೇಳಿದ್ದರು. ಕೆನಡಾ ಪಾಸ್ಪೋರ್ಟ್ ಹೊಂದಿದ್ದ ಮಜ್ದಾಕ್ ಮೂಲತಃ ಪಾಕಿಸ್ತಾನದ ಕ್ವೆಟ್ಟಾದಲ್ಲಿ ಜನಿಸಿದವರು. ಹೀಗಾಗಿ ನೀವು ಪಾಕಿಸ್ತಾನದವರು ಎಂದು ವಿಮಾನ ನಿಲ್ದಾಣ ಅಧಿಕಾರಿಗಳು ತಡೆದು ಪರೀಕ್ಷೆ ನಡೆಸುತ್ತಿರುವಾಗ ರೀತಿ ಪ್ರತಿಕ್ರಿಯಿಸಿದ್ದರು. ಮಜ್ದಾಕ್ ರೀತಿಯ ಬಹುತೇಕ ನಿರಾಶ್ರಿತರು ಮತ್ತು ವಲಸಿಗರು ಪಾಕ್ ದಬ್ಬಾಳಿಕೆಯಿಂದ ಬೇಸತ್ತು ದೇಶ ತೊರೆದಿದ್ದಾರೆ. ಪಾಕ್ ಆಕ್ರಮಿತ ಬಲೂಚ್ ಮತ್ತು ಪಿಓಕೆ ಪರ ಧ್ವನಿ ಎತ್ತಿರುವ ಪ್ರಧಾನಿ ಮೋದಿಯವರ ನೆರವು ಕೋರಿರುವ ಪ್ರದೇಶದ ಜನ ಪಾಕಿಸ್ತಾನ ಹಲವು ವರ್ಷದಿಂದ ನಡೆಸುತ್ತಿರುವ ದೌರ್ಜನ್ಯಕ್ಕೆ ಇತಿಶ್ರೀ ಹಾಡಲು ಸ್ವಾತಂತ್ರ್ಯ್ಕಾಗಿ ಹೋರಾಟ ನಡೆಸಿವೆ.
ಸ್ವಾತಂತ್ರ್ಯ ದಿನದ ಭಾಷಣದಲ್ಲಿ ಮೋದಿಯವರು ಪಾಕ್ ಆಕ್ರಮಿತ ಕಾಶ್ಮೀರ, ಗಿಲ್ಗಿಟ್ ಮತ್ತು ಬಲೂಚಿಸ್ತಾನ ಜನತೆ ಅನುಭವಿಸುತ್ತಿರುವ ಯಾತನೆ ಮುಕ್ತಿಗೆ ನಮ್ಮ ಸಹಕಾರವಿದೆ ಎಂದು ಘೋಷಿಸಿದ್ದರು.

2016: ನವದೆಹಲಿ: ರಿಯೋ ಒಲಿಂಪಿಕ್ ಕ್ರೀಡಾಕೂಟದ ಜಿಮ್ನಾಸ್ಟಿಕ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿರುವ ದೀಪಾ ಕರ್ಮಾಕರ್ ಈದಿನ ಮುಂಜಾನೆ ತವರಿಗೆ ಆಗಮಿಸಿದರು. ದೀಪಾ ಕರ್ಮಾಕರ್ ಅವರನ್ನು ಸ್ನೇಹಿತರು, ಕುಟುಂಬಸ್ಥರು, ಕ್ರೀಡಾ ಸಚಿವಾಲಯ ಮತ್ತು ಜಿಮ್ನಾಸ್ಟಿಕ್ ಸಂಸ್ಥೆಯ ಅಧಿಕಾರಿಗಳು ಭವ್ಯ ಸ್ವಾಗತ ನೀಡಿ ಬರಮಾಡಿಕೊಂಡರು. ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ದೀಪ ಕರ್ಮಾಕರ್ ತಮಗೆ ಸಿಕ್ಕಿರುವ ಗೌರವ ನೋಡಿ ಆನಂದಿಸಿದರು. ವೇಳೆ ಪ್ರತಿಕ್ರಿಯಿಸಿದ ದೀಪಾ, ‘ಏಳೋ ಅಥವಾ ಎಂಟನೇ ಸ್ಥಾನದಲ್ಲಿ ಇರುತ್ತೇನೆ ಅಂದುಕೊಂಡಿದ್ದೆ. ನಾಲ್ಕನೇ ಸ್ಥಾನದಲ್ಲಿ ನಿಂತಿದ್ದು ಖುಷಿ ಇದೆ. ಮುಂದಿನ ಒಲಿಂಪಿಕ್ಸ್ನಲ್ಲಿ ಸ್ವರ್ಣ ಗೆದ್ದೇ ಗೆದ್ದು ಬರುತ್ತೇನೆಎಂದು ಆತ್ಮವಿಶ್ವಾಸದಿಂದ ನುಡಿದರು. ವೇಳೆ ಪ್ರತಿಕ್ರಿಯಿಸಿದ ದೀಪಾ ಅವರ ಕೋಚ್ ಬಿಶೇಶ್ವರ್ ನಂದಿ, ದೀಪಾ ಅತ್ಯುತ್ತಮ ಪ್ರದರ್ಶನ ನೀಡಿದ್ದಾಳೆ. ಬಗ್ಗೆ ನನಗೆ ತುಂಬಾ ಖುಷಿ ಇದೆ. ಪದಕ ಗೆದ್ದಷ್ಟೇ ಸಂತೋಷವಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ಸಾಧನೆ ಮಾಡುತ್ತಾಳೆನ್ನುವ ವಿಶ್ವಾಸವಿದೆ ಎಂದು ಹೇಳಿದರು.

2008: ಗೆಲ್ಲುವ ನೆಚ್ಚಿನ ಪಟು ಎಂಬ ಪಟ್ಟ ಹೊತ್ತವರೆಲ್ಲರೂ ನೆಲಕಚ್ಚಿದ ವೇಳೆ ಮಿಂಚು ಹರಿಯುವಂತೆ ಮಾಡಿದ ಕುಸ್ತಿ ಸ್ಪರ್ಧಿ ಸುಶೀಲ್ ಕುಮಾರ್ ಐವತ್ತಾರು ವರ್ಷಗಳ ಬಳಿಕ ಬೀಜಿಂಗ್ ಒಲಿಂಪಿಕ್ ಕೂಟದಲ್ಲಿ ಕಂಚಿನ ಪದಕವನ್ನು ಗೆದ್ದು ಭಾರತಕ್ಕೆ ಎರಡನೇ ಪದಕ ತಂದುಕೊಟ್ಟರು.

2007: ಬೆಳಗಾವಿ ಹೊರತುಪಡಿಸಿ ರಾಜ್ಯದ 11 ಪ್ರಮುಖ ನಗರಗಳ ಹೆಸರುಗಳ ಬದಲಾವಣೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಶೀಘ್ರದಲ್ಲಿಯೇ ಇದು ಜಾರಿಗೆ ಬರಲಿದೆ ಎಂದು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಗುಲ್ಬರ್ಗ ಜಿಲ್ಲೆಯ ಹುಣಸಗಿಯಲ್ಲಿ ಪ್ರಕಟಿಸಿದರು. ಬೆಂಗಳೂರು, ಮೈಸೂರು, ವಿಜಾಪುರ, ಗುಲ್ಬರ್ಗ ಸೇರಿದಂತೆ 11 ನಗರಗಳ ಹೆಸರುಗಳನ್ನು ಸಂಪೂರ್ಣವಾಗಿ ಕನ್ನಡೀಕರಿಸಿ ಮಾಡಿರುವ ಬದಲಾವಣೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ ಎಂದು ಅವರು ಹೇಳಿದರು.

2007: ಹಿರಿಯ ಸಾಹಿತಿ ಮತ್ತು ವಿಧಾನ ಪರಿಷತ್ ಸದಸ್ಯ ಡಾ. ಚಂದ್ರಶೇಖರ ಕಂಬಾರ ಅವರಿಗೆ ಮಾಜಿ ಮುಖ್ಯಮಂತ್ರಿ ದಿವಂಗತ ಡಿ.ದೇವರಾಜ ಅರಸು ಹೆಸರಿನಲ್ಲಿ ರಾಜ್ಯ ಸರ್ಕಾರ ನೀಡುವ ರಾಜ್ಯಮಟ್ಟದ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ ಈದಿನ ಪ್ರದಾನ ಮಾಡಲಾಯಿತು. ಉಪ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಕಂಬಾರರಿಗೆ ನಗದು ಬಹುಮಾನ ಒಂದು ಲಕ್ಷ ರೂ. ಮೌಲ್ಯದ ಡಿ.ಡಿ., ಪ್ರಶಂಸಾ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಇದೇ ಮೊದಲ ಬಾರಿಗೆ ನಾಲ್ಕು ವಿಭಾಗೀಯ ಮಟ್ಟದ ಪ್ರಶಸ್ತಿಗಳನ್ನು ಹಿಂದುಳಿದ ವರ್ಗದವರ ಕಲ್ಯಾಣಕ್ಕಾಗಿ ಶ್ರಮಿಸುತ್ತಿರುವ ಶರಣಪ್ಪ ತಳವಾರ (ಗುಲ್ಬರ್ಗ), ಬಿ.ವಿ.ರಾಮಚಂದ್ರ (ಬೆಂಗಳೂರು), ಡಿ.ಕರಿಯಪ್ಪಗೌಡ (ಮೈಸೂರು), ಶರಣಗೌಡ ಶಿ.ಪಾಟೀಲ (ಬೆಳಗಾವಿ) ಅವರಿಗೆ ತಲಾ ಐವತ್ತು ಸಾವಿರ ಮೌಲ್ಯದ ಡಿ.ಡಿ., ಪ್ರಶಂಸಾ ಪತ್ರ ಹಾಗೂ ನೆನಪಿನ ಕಾಣಿಕೆಗಳನ್ನು ನೀಡಿ ಸನ್ಮಾನಿಸಲಾಯಿತು.

2007: ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಡಾ ನ್ಯಾಯಾಲಯದಿಂದ ಆರು ವರ್ಷ ಕಠಿಣ ಕಾರಾಗೃಹ ಶಿಕ್ಷೆಕ್ಕೆ ಒಳಗಾಗಿರುವ ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಸುಪ್ರೀಂಕೋರ್ಟ್ ಮಧ್ಯಂತರ ಜಾಮೀನು ನೀಡಿತು. ಮುಂಬೈ ಸ್ಫೋಟ ಪ್ರಕರಣದಲ್ಲಿ ಭಾಗಿಯಾದವರಿಂದ ಅಕ್ರಮವಾಗಿ ಬಂದೂಕು ಪಡೆದದ್ದಕ್ಕಾಗಿ ಸಂಜಯ್ ದತ್ ಅವರಿಗೆ ಟಾಡಾ ನ್ಯಾಯಾಲಯ ಆರು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿತ್ತು. ಆಗಸ್ಟ್ 2ರಿಂದ ಸಂಜಯ್ ದತ್ ಅವರನ್ನು ಯರವಾಡ ಜೈಲಿನಲ್ಲಿ ಇಡಲಾಗಿತ್ತು.

2007: ಆಹಾರ ಕಲಬೆರಕೆ ನಿಯಂತ್ರಣ ಕಾಯ್ದೆ ಅಡಿ ತಂಬಾಕು ಹಾಗೂ ನಿಕೋಟಿನ್ ಇತ್ಯಾದಿಗಳನ್ನು ಸೇರಿಸಿ ಈ ಕಾಯ್ದೆಗೆ ಮಾಡಲಾದ ತಿದ್ದುಪಡಿಯನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಲಾಯಿತು. ಇವೆರಡು ಪದಾರ್ಥಗಳನ್ನು 1955ರ ಈ ಕಾಯ್ದೆಯ 44 (ಜೆ) ಕಲಮಿನ ಅಡಿ ಸೇರಿಸಿ, ಆಗಸ್ಟ್ 20ರಿಂದ ಜಾರಿಗೆ ಬರುವಂತೆ ಕಳೆದ ಜುಲೈ 31ರಂದು ಹೊರಡಿಸಲಾದ ಅಧಿಸೂಚನೆಯನ್ನು ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ತೋಟಗಾರ ಸಹಕಾರ ಮಾರಾಟ ಸಂಘ, ಕ್ಯಾಂಪ್ಕೊ, ಪುತ್ತೂರಿನ ಭಾರತೀಯ ಕಿಸಾನ್ ಸಂಘ ಸೇರಿದಂತೆ ಅನೇಕ ಸಂಘಗಳು ಪ್ರಶ್ನಿಸಿದವು. ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೆ ಮಾಡಲು ನ್ಯಾಯಮೂರ್ತಿ ಅಜಿತ್ ಗುಂಜಾಳ್ ಆದೇಶ ನೀಡಿದರು. ತಂಬಾಕು ಹಾಗೂ ನಿಕೋಟಿನ್ ಗಳು ತಂಬಾಕು ಕಾಯ್ದೆ ವ್ಯಾಪ್ತಿಗೆ ಒಳಪಡುತ್ತದೆಯೇ ವಿನಾ ಆಹಾರ ಕಲಬೆರಕೆ ನಿಯಂತ್ರಣ ಕಾಯ್ದೆ ಅಡಿ ಅ್ಲಲ ಎಂಬುದು ಅರ್ಜಿದಾರರ ವಾದ. ಈ ತಿದ್ದುಪಡಿಯಿಂದ ಲಕ್ಷಾಂತರ ರೈತಾಪಿ ವರ್ಗದವರಿಗೆ, ತಂಬಾಕು ಬೆಳೆಗಾರರಿಗೆ ಸಮಸ್ಯೆ ಉಂಟಾಗಿದೆ. ಅವರ ಜೀವನ ಬೀದಿ ಪಾಲಾಗುವ ಸಾಧ್ಯತೆಗಳಿವೆ. ಈ ಸಂವಿಧಾನಬಾಹಿರ ತಿದ್ದುಪಡಿ ರದ್ದಿಗೆ ಆದೇಶ ನೀಡಬೇಕು ಎಂದು ಅರ್ಜಿದಾರರ ಪರವಾಗಿ ವಕೀಲ ಕೆ.ಎಂ.ನಟರಾಜ್ ಮನವಿ ಮಾಡಿದರು.

2007: ದಕ್ಷಿಣ ಜಪಾನಿನ ಒಕಿನವಾ ದ್ವೀಪದ ನಹಾ ವಿಮಾನ ನಿಲ್ದಾಣದಲ್ಲಿ ಚೀನಾ ಏರ್ ಲೈನ್ಸ್ ಪ್ರಯಾಣಿಕರ ವಿಮಾನ ಆಕಸ್ಮಿಕ ಬೆಂಕಿಗೆ ಆಹುತಿಯಾದರೂ ಅದರಲ್ಲಿದ್ದ ಎಲ್ಲ 157 ಪ್ರಯಾಣಿಕರು ಸುರಕ್ಷಿತವಾಗಿ ಪಾರಾದರು. ತೈವಾನಿನ ತೈಪೆಯಿಂದ ಹೊರಟಿದ್ದ ಚೀನಾ ಏರ್ ಲೈನ್ಸಿನ ಬೋಯಿಂಗ್ ವಿಮಾನ, ನಹಾ ವಿಮಾನನಿಲ್ದಾಣದಲ್ಲಿ ಭೂಸ್ಪರ್ಶ ಮಾಡಿದ ಕೆಲವೇ ನಿಮಿಷಗಳಲ್ಲಿ ಬೆಂಕಿಯಲ್ಲಿ ಭಸ್ಮವಾಯಿತು. ಪ್ರಯಾಣಿಕರು ವಿಮಾನದಿಂದ ಇಳಿಯುತ್ತಿರುವಾಗಲೇ ಸ್ಫೋಟದ ಸದ್ದು ಕೇಳಿಸಿ, ಎತ್ತರದ ಜ್ವಾಲೆಗಳು ವಿಮಾನವನ್ನು ಆವರಿಸಿದವು. ಘಟನೆಯಲ್ಲಿ ಇಬ್ಬರು ಸಿಬ್ಬಂದಿ ಗಾಯಗೊಂಡರು.

2007: ಮೈಂಜಿನಲ್ಲ್ಲಿ ನಡೆದ ಸ್ಪರ್ಧೆಯಲ್ಲಿ ಭಾರತದ ವಿಶ್ವನಾಥನ್ ಆನಂದ್ ಅರ್ಮೇನಿಯಾದ ಲೆವೊಕ್ ಅರೊನಿಯನ್ ವಿರುದ್ಧ ಸೇಡು ತೀರಿಸಿಕೊಂಡು, 10ನೇ ಸಲ ಗ್ರೆಂಕ್ ಲೀಸಿಂಗ್ ರ್ಯಾಪಿಡ್ ಚೆಸ್ ಚಾಂಪಿಯನ್ ಆದರು. ಅರೊನಿಯನ್ ವಿರುದ್ಧ ನಡೆದ ಅಂತಿಮ ಹಣಾಹಣಿಯಲ್ಲಿ 2.5-1.5 ಪಾಯಿಂಟಿನಿಂದ ಆನಂದ್ ವಿಜಯಿಯಾದರು. ಈ ಟೂರ್ನಿಯಲ್ಲಿ ಆನಂದ್ ಆಡಲು ಪ್ರಾರಂಭಿಸಿದಾಗಿನಿಂದ ಸತತವಾಗಿ ಚಾಂಪಿಯನ್ ಆಗುತ್ತಲೇ ಬಂದದ್ದು ವಿಶೇಷ.

2007: ಸಾನಿಯಾ ಮಿರ್ಜಾ ಅವರು ಈದಿನ ಡಬ್ಲ್ಯುಟಿಎ ಬಿಡುಗಡೆ ಮಾಡಿದ ರ್ಯಾಂಕಿಂಗ್ ಪಟ್ಟಿಯಲ್ಲಿ 28ನೇ ಸ್ಥಾನಕ್ಕೇದರು.

2007: ನೂತನವಾಗಿ ರಚಿಸಿರುವ ರಾಮನಗರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ಮೂಲ ಸೌಕರ್ಯಗಳ ಕಾಮಗಾರಿಯ ಶಂಕುಸ್ಥಾಪನೆಯನ್ನು ಆಗಸ್ಟ್ 23ರಂದು ನೆರವೇರಿಸಲು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ತೀರ್ಮಾನಿಸಿತು.

2007: ಕರ್ನಾಟಕದಲ್ಲಿ ಕೈಗೆತ್ತಿಕೊಳ್ಳುವ ಅಸಂಪ್ರದಾಯಿಕ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಕೇಂದ್ರ ಸರ್ಕಾರಿ ಸ್ವಾಮ್ಯದ ವಿದ್ಯುತ್ ಹಣಕಾಸು ನಿಗಮವು ಇನ್ನು ಮುಂದೆ ಆರ್ಥಿಕ ನೆರವು ನೀಡುವ ಒಪ್ಪಂದವೊಂದಕ್ಕೆ ರಾಜ್ಯ ಸರ್ಕಾರಿ ಸ್ವಾಮ್ಯದ ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮ (ಕ್ರೆಡೆಲ್) ಮತ್ತು ವಿದ್ಯುತ್ ಹಣಕಾಸು ನಿಗಮ ಸಹಿ ಹಾಕಿದವು. ಒಪ್ಪಂದದ ಪ್ರಕಾರ, ಕ್ರೆಡೆಲ್ ಶಿಫಾರಸು ಮಾಡುವ ಎಲ್ಲ ಯೋಜನೆಗಳಿಗೂ ವಿದ್ಯುತ್ ಹಣಕಾಸು ನಿಗಮ, ಆರ್ಥಿಕ ನೆರವು ನೀಡಲಿದೆ. ಒಂದು ಅಂದಾಜಿನ ಪ್ರಕಾರ ನವೀಕರಿಸಬಹುದಾದ ಇಂಧನ ಮೂಲಗಳಿಂದಲೇ ರಾಜ್ಯದಲ್ಲಿ ಸುಮಾರು 11,150 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಅವಕಾಶ ಇದೆ. ಅಸಂಪ್ರದಾಯಿಕ ನವೀಕರಿಸಬಹುದಾದ ಇಂಧನ ಮೂಲಗಳಿಂದ ಪ್ರಸ್ತುತ 1,630 ಮೆಗಾವಾಟ್ ವಿದ್ಯುತ್ ಉತ್ಪಾದಿಸಲಾಗುತ್ತಿದೆ. ಇದೇ ಅಲ್ಲದೆ, 11ನೇ ಪಂಚವಾರ್ಷಿಕ ಯೋಜನೆ ಅಂತ್ಯಗೊಳ್ಳುವ ವೇಳೆಗೆ ಕ್ರೆಡೆಲ್ ಸುಮಾರು 1500 ಮೆಗಾವಾಟ್ ವಿದ್ಯುತ್ ಉತ್ಪಾದಿಸಲು ಯೋಜನೆ ಕೂಡ ಸಿದ್ಧಪಡಿಸಿದೆ.

2007: ಬೆಂಗಳೂರು ರಾಜಭವನ ಸಮೀಪದ ಇಂದಿರಾಗಾಂಧಿ ಸಂಗೀತ ಕಾರಂಜಿ ಉದ್ಯಾನವನದಲ್ಲಿ ನಿರ್ಮಿಸಲಾದ ಇಂಧನ ವನಕ್ಕೆ ಸಚಿವ ರಾಮಚಂದ್ರಗೌಡ ಚಾಲನೆ ನೀಡಿದರು. ಅಸಂಪ್ರದಾಯಿಕ ಇಂಧನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಇಂಧನ ವನ ನಿರ್ಮಾಣ ಮಾಡಲಾಗಿದೆ ಎಂದು ಕ್ರೆಡೆಲ್ ವ್ಯವಸ್ಥಾಪಕ ನಿರ್ದೇಶಕ ಶಿವಲಿಂಗಯ್ಯ ವಿವರಣೆ ನೀಡಿದರು. ಇಂಧನ ವನ ಸುಮಾರು ಎಂಟು ಎಕರೆ ಜಾಗದಲ್ಲಿದೆ. ಸೌರಶಕ್ತಿಯ ಗುಡಿಸಲು; ಸೌರಶಕ್ತಿಯ ಈಜುಕೊಳ; ಸೌರಶಕ್ತಿಯ ನೀರೆತ್ತುವ ಯಂತ್ರ; ಬ್ಯಾಟರಿ ಮೂಲಕ ಚಾಲನೆಗೊಳ್ಳುವ ಕಾರು ಮತ್ತು ಸೈಕಲ್ ಸೇರಿದಂತೆ ಇತರ ನವೀಕರಿಸಬಹುದಾದ ಇಂಧನ ಉಪಕರಣಗಳನ್ನು ಉದ್ಯಾನವನದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

2006: ಬೆಂಗಳೂರಿನ ವಿಧಾನ ಸೌಧದ ಆವರಣದಲ್ಲಿ ಸ್ಥಾಪಿಸಲಾದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರು ನೂತನ ಪ್ರತಿಮೆಯನ್ನು ಅವರ 91ನೇ ಹುಟ್ಟು ಹಬ್ಬದ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅನಾವರಣಗೊಳಿಸಿದರು. 14 ಅಡಿ ಎತ್ತರ, 1740 ಕಿ.ಗ್ರಾಂ. ತೂಕದ ಕಂಚಿನ ಪ್ರತಿಮೆಯನ್ನು ಮುಂಬೈಯ ವಿನಯ್ ವಾಘ್ ನಿರ್ಮಿಸಿದ್ದಾರೆ. 1993ರಲ್ಲಿ ದೇವರಾಜ ಅರಸು ಅವರ 8.5 ಅಡಿ ಎತ್ತರದ ಕಂಚಿನ ಪ್ರತಿಮೆ ಇರಿಸಲಾಗಿದ್ದ ಜಾಗದಲ್ಲೇ ಈ ನೂತನ ಪ್ರತಿಮೆಯನ್ನು ಸ್ಥಾಪಿಸಲಾಯಿತು. ಹಿಂದಿನ ಪ್ರತಿಮೆ ದಿವಂಗತ ನಾಯಕನಿಗೆ ಪೂರ್ಣ ಪ್ರಮಾಣದ ನ್ಯಾಯ ಒದಗಿಸಿಲ್ಲ ಎಂಬುದಾಗಿ ಸಾರ್ವಜನಿಕರು ಮತ್ತು ಕುಟುಂಬ ಸದಸ್ಯರು ಆಕ್ಷೇಪಿಸುತ್ತಿದ್ದ ಹಿನ್ನೆಲೆಯಲ್ಲಿ ನೂತನ ಪ್ರತಿಮೆ ಸ್ಥಾಪಿಸಲು 1999ರಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿತು. ಈ ಕೆಲಸಕ್ಕೆ 2003ರಲ್ಲಿ ಸರ್ಕಾರ ಆದೇಶ ಹೊರಡಿಸಿತು. 2005ರ ಜುಲೈ ವೇಳೆಗೆ ಪ್ರತಿಮೆ ಸಿದ್ಧವಾಗಬೇಕಿತ್ತು. ಆದರೆ ಮುಂಬೈಯಲ್ಲಿ ಸುರಿದ ಮಹಾಮಳೆಯಿಂದ ಈ ಕಾರ್ಯ ವಿಳಂಬಗೊಂಡಿತು.

2006: ಪುತ್ತೂರು ನರಸಿಂಹನಾಯಕ್, ಎ.ಆರ್. ಪುಟ್ಟಾಚಾರ್, ಶ್ರೀಲತಾ, ಬಿ.ಡಿ. ಲಕ್ಷ್ಮಣ್, ಮುದ್ದು ಮೋಹನ್, ಸುಬ್ರಹ್ಮಣ್ಯ ಭಟ್ ಸೇರಿದಂತೆ 16 ಮಂದಿಗೆ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು ಪ್ರಸಕ್ತ ಸಾಲಿನ ಸಂಗೀತ ನೃತ್ಯ ಪ್ರಶಸ್ತಿಗಳನ್ನು ಪ್ರಕಟಿಸಿತು.

2006: ಕರ್ನಾಟಕದ ಮಾಜಿ ರಾಜ್ಯಪಾಲ ಮತ್ತು ಕೇಂದ್ರದ ಮಾಜಿ ಸಚಿವ ಭಾನು ಪ್ರತಾಪ್ ಸಿಂಗ್ (89) ಲಖನೌದ ತ್ರಿವೇಣಿ ನಗರದ ತಮ್ಮ ನಿವಾಸದಲ್ಲಿ ನಿಧನರಾದರು. ಅವರು 1990ರ ಮೇ 8ರಿಂದ 1991ರ ಜನವರಿ 6ರವರೆಗೆ ಕರ್ನಟಕದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದರು. 1917ರ ಆಗಸ್ಟ್ 10ರಂದು ಉತ್ತರ ಪ್ರದೇಶದ ಬುಲಂದಶಹರಿನಲ್ಲಿ ಜನಿಸ್ದಿದ ಸಿಂಗ್ ತುರ್ತು ಪರಿಸ್ಥಿತಿ ಅವಧಿಯಲ್ಲಿ ಜೈಲುವಾಸ ಅನುಭವಿಸಿದ್ದರು. ಕೆಲಕಾಲ ಭಾರತೀಯ ಕ್ರಾಂತಿದಳದ ಪ್ರಧಾನ ಕಾರ್ಯದರ್ಶಿಯಾಗಿದ್ದರು.

1991: ರಾಜೀವ್ ಗಾಂಧಿ ಕೊಲೆ ಪ್ರಕರಣದ ಮುಖ್ಯ ಆರೋಪಿ ಶಿವರಸನ್ ಮತ್ತು ಆತನ ಸಹಚರರು ಬೆಂಗಳೂರಿನ ಕೋಣನಕುಂಟೆಯಲ್ಲಿ ಕಮಾಂಡೋಗಳ ಮುತ್ತಿಗೆಯಿಂದ ತಪ್ಪಿಸಿಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಂಡರು. (ಇದು ರಾಜೀವಗಾಂಧಿ ಜನ್ಮದಿನವೂ ಆಗಿರುವುದು ಕಾಕತಾಳೀಯ.)

1985: ಅಕಾಲಿ ನಾಯಕ ಹರಚರಣ್ ಸಿಂಗ್ ಲೋಂಗೊವಾಲ್ ಅವರು ಪಂಜಾಬಿನ ಶೇರ್ ಪುರದಲ್ಲಿ ಧಾರ್ಮಿಕ ಸಮಾರಂಭವೊಂದರಲ್ಲಿ ಮಾತನಾಡುತ್ತ್ದಿದಾಗ ಹಂತಕಿಗಳ ಗುಂಡಿಗೆ ಬಲಿಯಾಗಿ ಅಸುನೀಗಿದರು.

1977: ಗುರುಗ್ರಹ ಮತ್ತು ಮಂಗಳ ಗ್ರಹಗಳತ್ತ ವಾಯೇಜರ್ 1 ಬಾಹ್ಯಾಕಾಶ ನೌಕೆಯನ್ನು ಹಾರಿ ಬಿಡಲಾಯಿತು. ಸೌರವ್ಯೂಹದಿಂದ ಹೊರಹೋದ ಮೊತ್ತ ಮೊದಲ ಮಾನವ ನಿರ್ಮಿತ ವಸ್ತು ಇದು.

1975: ಮಂಗಳ ಗ್ರಹದ ಬಗ್ಗೆ ಹೆಚ್ಚಿನ ಸಂಶೋಧನೆಗಳನ್ನು ನಡೆಸುವ ಸಲುವಾಗಿ ವೈಕಿಂಗ್ 1 ಬಾಹ್ಯಾಕಾಶ ನೌಕೆಯನ್ನು ಆ ಗ್ರಹದತ್ತ ಹಾರಿ ಬಿಡಲಾಯಿತು.

1964: ಸಾಹಿತಿ ಜಿ. ನಾರಾಯಣ ಸ್ವಾಮಿ ಜನನ.

1960: ರಷ್ಯದಿಂದ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದ್ದ ಎರಡು ನಾಯಿಗಳು ಸುರಕ್ಷಿತವಾಗಿ ವಾಪಸಾದವು.

1949: ಸಾಹಿತಿ ಚಂದ್ರಕಾಂತ ಪೊಕಳೆ ಜನನ.

1946: ಇನ್ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್ ನ ಅಧ್ಯಕ್ಷ ನಾಗವಾರ ರಾಮರಾವ್ ನಾರಾಯಣಮೂರ್ತಿ ಜನ್ಮದಿನ. ಅಮೆರಿಕದ ಸ್ಟಾಕ್ ಎಕ್ಸ್ಚೇಂಜಿನಲ್ಲಿ ದಾಖಲಾದ ಮೊತ್ತ ಮೊದಲ ಭಾರತೀಯ ಕಂಪೆನಿ ಈ ಇನ್ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್.

1944: ಭಾರತದ ಮಾಜಿ ಪ್ರಧಾನಿ ರಾಜೀವಗಾಂಧಿ (1944-1991) ಜನ್ಮದಿನ.

1942: ಖ್ಯಾತ ಕಾದಂಬರಿಗಾರ್ತಿ `ಸಾಯಿಸುತೆ' ಕಾವ್ಯನಾಮದ ರತ್ನ ಅವರು ವೆಂಕಟಪ್ಪ- ಲಕ್ಷ್ಮಮ್ಮ ದಂಪತಿಯ ಮಗಳಾಗಿ ಕೋಲಾರದಲ್ಲಿ ಜನಿಸಿದರು. ಇವರ ಮೊದಲ ಕಾದಂಬರಿ `ಮಿಂಚು'. ನಂತರ 26 ಕಾದಂಬರಿಗಳು ಹೆಸರಾಂತ ಪತ್ರಿಕೆಗಳಲ್ಲಿ ಪ್ರಕಟವಾದವು. ಅವರ 134 ಕಾದಂಬರಿಗಳ ಪೈಕಿ 12 ಕಾದಂಬರಿಗಳು ಚಲನಚಿತ್ರಗಳಾದವು. ಬಾಡದ ಹೂ, ಮಿಡಿದ ಶ್ರುತಿ ಚಲನಚಿತ್ರಗಳಾಗಿ ಶ್ರೇಷ್ಠ ಚಲನಚಿತ್ರ ರಾಜ್ಯ ಪ್ರಶಸ್ತಿ ಗಳಿಸಿದರೆ, ಶ್ವೇತ ಗುಲಾಬಿ, ಪರಭಾಷೆಯಲ್ಲೂ ಚಲನಚಿತ್ರವಾಗಿ ಪ್ರಸಿದ್ಧಿ ಗಳಿಸಿತು.

1940: ಸಾಹಿತಿ ಕೊರಗಲ್ ವಿರೂಪಾಕ್ಷಪ್ಪ ಜನನ.

1932: ಲೇಖಕಿ ವಿದ್ಯಾ ಡಿ. ಮೂರ್ತಿ ಜನನ.

1915: ಕರ್ನಾಟಕದ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಜನ್ಮದಿನ.

1897: ಇದು `ಸೊಳ್ಳೆ ದಿನ' ! ಸರ್ ರೊನಾಲ್ಡ್ ರೋಸ್ ಅವರು ಭಾರತದ ಸಿಕಂದರಾಬಾದ್ನ ಹಳೆ ಬೇಗಮ್ ಪೇಟೆ ಆಸ್ಪತ್ರೆಯಲ್ಲಿ ಮಲೇರಿಯಾ ಹರಡಲು ಕಾರಣವಾದದ್ದು `ಅನಾಫಿಲಿಸ್' ಸೊಳ್ಳೆ ಎಂದು ಕಂಡು ಹಿಡಿದರು. ನಂತರ ಈ ದಿನವನ್ನು ಅವರು `ಸೊಳ್ಳೆ ದಿನ' ಎಂದೇ ಉಲ್ಲೇಖಿಸಿದರು.

1885: ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಸಭೆ.

1828: ರಾಜಾರಾಮ್ ಮೋಹನರಾಯ್ ಅವರು ಕಲ್ಕತದಲ್ಲಿ (ಈಗಿನ ಕೋಲ್ಕತ್ತಾ) ಬ್ರಹ್ಮಸಮಾಜದ ಮೊದಲ ಅಧಿವೇಶನವನ್ನು ಏರ್ಪಡಿಸಿದರು.

1666: ಆಗ್ರಾದಲ್ಲಿ ಔರಂಗಜೇಬನಿಂದ ಬಂಧನಕ್ಕೆ ಒಳಗಾಗಿದ್ದ ಶಿವಾಜಿ ಮತ್ತು ಪುತ್ರ ಸಂಭಾಜಿ ಅವರು ಮಿಠಾಯಿಗಳ ಬುಟ್ಟಿಯೊಳಗೆ ಕುಳಿತುಕೊಂಡು ಅಲ್ಲಿಂದ ಪಾರಾಗಿ ತಪ್ಪಿಸಿಕೊಂಡರು.

No comments:

Post a Comment