ನಾನು ಮೆಚ್ಚಿದ ವಾಟ್ಸಪ್

Wednesday, August 15, 2018

ಇಂದಿನ ಇತಿಹಾಸ History Today ಆಗಸ್ಟ್ 15


2018: ತಿರುವನಂತಪುರ: ಎಡೆಬಿಡದೆ ಸುರಿದ ಮಳೆ, ಪ್ರವಾಹ, ಭೂಕುಸಿತಗಳಿಂದಾಗಿ ಕೇರಳದ ಸ್ಥಿತಿ ಇನ್ನಷ್ಟು ಚಿಂತಾಜನಕವಾಯಿತು. ಈದಿನ ಒಂದೇ ದಿನ ೨೯ ಜನ ಅಸು ನೀಗುವುದರೊಂದಿಗೆ ಸಾವಿನ ಸಂಖ್ಯೆ ೭೨ಕ್ಕೇ ಏರಿತು.  ಉತ್ತರದ ಕಾಸರಗೋಡಿನಿಂದ ದಕ್ಷಿಣದ ತಿರುವನಂತಪುರದವರೆಗೆ ಎಲ್ಲ ನದಿಗಳೂ ಭೋರ್ಗರೆದವು. ರಾಜ್ಯದ ಎಲ್ಲ ೧೪ ಜಿಲ್ಲೆಗಳಲ್ಲೂ ಕಟ್ಟೆಚ್ಚರ (ರೆಡ್ ಅಲರ್ಟ್) ಘೋಷಿಸಲಾಯಿತು. ಇತಿಹಾಸದಲ್ಲೇ ಮೊದಲ ಬಾರಿಗೆ ಎಲ್ಲ ೩೫ ಅಣೆಕಟ್ಟುಗಳನ್ನೂ ತೆರೆಯಲಾಯಿತು.  ಪ್ರಧಾನಿ ನರೇಂದ್ರ ಮೋದಿ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಜೊತೆಗೆ ಮಾತನಾಡಿ ಯಾವುದೇ ನೆರವು ನೀಡಲು ಸಿದ್ಧ ಎಂದು ತಿಳಿಸಿದರು. ಮಳೆ, ಪ್ರವಾಹ, ಭೂಕುಸಿತಗಳಿಗೆ ಈದಿನ ಒಂದೇ ದಿನ ಮಲ್ಲಪ್ಪುರಂನಲ್ಲಿ ೧೪, ಇಡುಕ್ಕಿಯಲ್ಲಿ ೧೪ ಮಂದಿ ಸಾವನ್ನಪ್ಪಿದ ವರದಿ ಬಂದಿತು. ಅಲಪ್ಪುಳದಲ್ಲಿ ೭, ಪಟ್ಟಣಂತಿಟ್ಟದಲ್ಲಿ ೩, ತ್ರಿಶ್ಯೂರಿನಲ್ಲಿ ೩, ತಿರುವನಂತಪುರ ಮತ್ತು ಕೋಯಿಕ್ಕೋಡಿನಲ್ಲಿ ತಲಾ ಒಬ್ಬರು ಅಸು ನೀಗಿದರು. ಸಹಸ್ರಾರು ಸಂಖ್ಯೆಯಲ್ಲಿ ಜನರನ್ನು ನದಿ, ಜಲಾಶಯ, ತಗ್ಗು ಪ್ರದೇಶಗಳಿಂದ ತೆರವುಗೊಳಿಸಲಾಗುತ್ತಿದ್ದು ೧.೫ ಲಕ್ಷ ಜನ ನಿರಾಶ್ರಿತ ಶಿಬಿರಗಳಲ್ಲಿ ಇದ್ದಾರೆ ಎಂದು ವರದಿಗಳು ಹೇಳಿದವು. ಕೋಚಿ ವಿಮಾನ ನಿಲ್ದಾಣ ಪ್ರದೇಶಕ್ಕೆ ನೀರು ಪ್ರವೇಶಿಸಿದ ಬಳಿಕ ಕೋಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಬಂದ್ ಮಾಡಲು ನಿರ್ಧರಿಸಲಾಯಿತು. ರಾಜ್ಯದ ಹಲವಡೆಗಳಲ್ಲಿ ರೈಲು ಸೇವೆಗಳೂ ಅಮಾನತುಗೊಂಡವು. ಆಗಸ್ಟ್ ೧೮ರವರೆಗೆ ಕೋಚಿ ವಿಮಾನ ನಿಲ್ದಾಣದಲ್ಲಿನ ಎಲ್ಲ ಚಟುವಟಿಕೆಗಳನ್ನೂ ಅಮಾನತುಗೊಳಿಸಿರುವುದರಿಂದ ಇಲ್ಲಿಗೆ ಬರುವ ವಿಮಾನಗಳೆಲ್ಲವೂ ಇತರ ನಿಲ್ದಾಣಗಳತ್ತ ದೌಡಾಯಿಸಬೇಕಾಯಿತು. ಇಂಡಿಗೋ, ಏರ್ ಇಂಡಿಯಾ ಮತ್ತು ಸ್ಪೈಸ್ ಜೆಟ್ ಕೋಚಿಯಿಂದ ವಿಮಾನಯಾನ ಕಾರ್‍ಯಾಚರಣೆಯನ್ನು ಅಮಾನತುಗೊಳಿಸಿರುವುದಾಗಿ ಪ್ರಕಟಿಸಿದವು. ಕೋಚಿ ವಿಮಾನ ನಿಲ್ದಾಣದ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಿರುವುದು ಇತರ ರಾಜ್ಯಗಳ ವಿಮಾನಯಾನಗಳ ಮೇಲೂ ಪ್ರತಿಫಲಿಸಿತು. ಹೀಗಾಗಿ ತಿರುವನಂತಪುರಂ, ಕೊಯಮತ್ತೂರು ಮತ್ತು ಬೆಂಗಳೂರು ವಿಮಾನ ನಿಲ್ದಾಣಗಳಲ್ಲಿ ರೈಲ್ವೇ ಟಿಕೆಟುಗಳು ಸಂಪೂರ್ಣವಾಗಿ ಮಾರಾಟವಾಗಿ ಹೋಗಿವೆ. ಹಾಗೆಯೇ ಮುಂಬೈಯಲ್ಲಿ ಕೇರಳ ಗಡಿಯ ಸಮೀಪದ ಕೊಯಮತ್ತೂರಿಗೆ ಹೋಗುವ ವಿಮಾನದ 2 ದಿನಗಳ ಟಿಕೆಟುಗಳೂ ಮುಗಿದುಹೋಗಿವೆ ಎಂದು ವರದಿಗಳು ತಿಳಿಸಿದವು. ಇಡುಕ್ಕಿ, ಕೋಯಿಕ್ಕೋಡ್, ವೇನಾಡ್, ಮಲಪ್ಪುರಂ, ಪಟ್ಟಣಂತಿಟ್ಟ ಮತ್ತು ಎರ್ನಾಕುಲಂ ಸೇರಿದಂತೆ ೧೧ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ತ್ರಿಶ್ಯೂರ್, ತಿರುವನಂತಪುರಂ ಮತ್ತು ಕೊಲ್ಲಂ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಯಿತು. ಕುಳಿಥುರೈ ಮತ್ತು ಎರನೀಲ್ ನಿಲ್ದಾಣಗಳ ಮಧ್ಯೆ ಸಂಭವಿಸಿರುವ ಭೂಕುಸಿತದಿಂದಾಗಿ ಗುರುವಾಯೂರು -ಚೆನ್ನೈ ಎಗ್ಮೋರ್ ಎಕ್ಸ್ ಪ್ರೆಸ್, ಕನ್ಯಾಕುಮಾರಿ-ಮುಂಬೈ ಸಿಎಸ್ ಎಚ್‌ಟಿ ಎಕ್ಸ್ ಪ್ರೆಸ್, ದಿಬ್ರುಗಢ- ಕನ್ಯಾಕುಮಾರಿ ವಿವೇಕ ಎಕ್ಸ್ ಪ್ರೆಸ್ ಮತ್ತು ಗಾಂಧಿಗ್ರಾಮ-ತಿರುನಲ್ವೇಲಿ ಹಮ್ ಸಫರ್ ಎಕ್‌ಪ್ರೆಸ್ ಈ ನಾಲ್ಕು ರೈಲುಗಳ ಪಯಣ ವಿಳಂಬಗೊಂಡಿತು. ಕೆಲವು ಪ್ಯಾಸೆಂಜರ್ ರೈಲುಗಳ ಪ್ರಯಾಣಕ್ಕೆ ಭಾಗಶಃ ಧಕ್ಕೆಯಾಗಿದ್ದು, ಕೊಲ್ಲಂ-ಪುನಲೂರ್- ಸೆಂಗತ್ತಾಯಿ ವಿಭಾಗದಲ್ಲಿ ರೈಲು ಸಂಚಾರವನ್ನು ಪ್ರತಿಕೂಲ ಹವಾಮಾನದ ಕಾರಣಕ್ಕಾಗಿ ಅಮಾನತುಗೊಳಿಸಲಾಗಿದೆ. ತಿರುವನಂತಪುರಂ- ತ್ರಿಶ್ಯೂರ್ ವಿಭಾಗದಲ್ಲಿ ನದಿಗಳು ಮತ್ತು ಜಲಾಶಯಗಳಲ್ಲಿ ನೀರಿನ ಮಟ್ಟ ಏರಿದ ಕಾರಣಕ್ಕಾಗಿ ರೈಲು ಪ್ರಯಾಣಗಳನ್ನು ವಿಳಂಬಗೊಳಿಸುವುದರ ಜೊತೆಗೆ ವೇಗಕ್ಕೂ ನಿಯಂತ್ರಣಗಳನ್ನು ವಿಧಿಸಲಾಯಿತು. ಮಳೆಯ ಭರಾಟೆ ಆರಂಭವಾದ ಬಳಿಕ ಇದೇ ಮೊದಲ ಬಾರಿಗೆ ಕೇರಳದ ೩೩ ಅಣೆಕಟ್ಟುಗಳ ಸ್ಲೂಯಿಸ್ ಗೇಟ್‌ಗಳನ್ನು (ಜಲಾಶಯಗಳ ನೀರಿನ ಮಟ್ಟವನ್ನು ನಿಯಂತ್ರಿಸುವ ಬಾಗಿಲುಗಳು) ಹಿಂದಿನ ರಾತ್ರಿಯಿಂದ ಜಡಿ ಮಳೆ ಹೆಚ್ಚುತಲೇ ಇರುವುದನ್ನು ಅನುಸರಿಸಿ ತೆರೆಯಲಾಯಿತು. ಎರ್ನಾಕುಲಂ ಮತ್ತು ತ್ರಿಶ್ಯೂರ್ ಜಿಲ್ಲೆಗಳ ಮೂಲಕ ಹರಿಯುತ್ತಿರುವ ಪೆರಿಯಾರ್ ನದಿ ಮತ್ತು ಅದರ ಉಪನದಿಗಳಲ್ಲಿ ನೀರಿನ ಮಟ್ಟ ಅತಿಯಾದ ಪ್ರಮಾಣದಲ್ಲಿ ಹೆಚ್ಚುತ್ತಿರುವುದನ್ನು ಅನುಸರಿಸಿ ಇಡುಕ್ಕಿ ಅಣೆಕಟ್ಟಿನ ಫ್ಲಡ್ ಗೇಟ್ ಗಳನ್ನು ಪುನಃ ತೆರೆಯಲಾಯಿತು.  ಮುಲ್ಲಪೆರಿಯಾರ್ ಅಣೆಕಟ್ಟಿನ ನೀರಿನ ಮಟ್ಟ ೧೪೦ ಅಡಿ ದಾಟಿದ ಬಳಿಕ ಈದಿನ ನಸುಕಿನ ೨.೩೫ ಗಂಟೆಗೆ ಅಣೆಕಟ್ಟಿನ ತೂಬುಗಳನ್ನು ತೆರೆಯಲಾಯಿತು.  ೬೦ ಕಿಮೀ ವೇಗದಲ್ಲಿ ಬೀಸುತ್ತಿರುವ ಬಿರುಗಾಳಿ ಜೊತೆಗೆ ಭಾರಿ ಮಳೆ ತಿರುವನಂತಪುರಂ, ಕೊಲ್ಲಂ, ಅಲಪ್ಪುಳ, ಪಟ್ಟಣಂತಿಟ್ಟ, ಕೊಟ್ಟಾಯಂ, ಇಡುಕ್ಕಿ, ಎರ್ನಾಕುಲಂ, ತ್ರಿಶ್ಯೂರ್ ಮತ್ತು ಕೋಯಿಕ್ಕೋಡ್ ಜಿಲ್ಲೆಗಳಲ್ಲಿ ಸುರಿಯುವ ನಿರೀಕ್ಷೆ ಇದೆ ಎಂದು ಹವಾಮಾನ ವರದಿ ಹೇಳಿದೆ. ಉತ್ತರದಲ್ಲಿ ಕಾಸರಗೋಡು ಮತ್ತು ದಕ್ಷಿಣದಲ್ಲಿ ತಿರುವನಂತಪುರಂ ನಡುವಣ ಎಲ್ಲ ನದಿಗಳೂ ಭಾರಿ ಪ್ರವಾಹದೊಂದಿಗೆ ಅಬ್ಬರಿಸುತ್ತಿದ್ದು ಮುಲ್ಲಪೆರಿಯಾರ್ ಸೇರಿದಂತೆ ಹಲವಾರು ಅಣೆಕಟ್ಟುಗಳ ತೂಬುಗಳನ್ನು ತೆರೆಯಲಾಯಿತು. ಭಾರಿ ವರ್ಷಧಾರೆಯನ್ನು ಅನುಸರಿಸಿ, ಅಥಿರಾಪಳ್ಳಿ, ಪೊನ್ನಮುಡಿ ಮತ್ತು ಮುನ್ನಾರ್ ಬೆಟ್ಟಧಾಮಗಳನ್ನು ಮುಚ್ಚಲಾಗಿದ್ದು, ಪ್ರವಾಸಿಗರಿಗೆ ನಿರ್ಬಂಧಗಳನ್ನು ವಿಧಿಸಲಾಯಿತು. ಕೇಂದ್ರ ಕೇರಳದಲ್ಲಿ ಪೆರಿಯಾರ್, ಚಲಕ್ಕಿಡಿ ಪುಳ ಮತ್ತು ಪಂಪಾ ನದಿಗಳು ಉಕ್ಕೇರಿ ಹರಿದವು. ಕಿಲ್ಲಿಯಾರ್, ಕರಮನಾಯರ, ವಾಮನಪುರಂ ನದಿಗಳು ಮತ್ತು ತಿರುವನಂತಪುರ ಜಿಲ್ಲೆಯ ಪಾರ್ವತಿ ಪುತನಾರ್ ಕಾಲುವೆಯಲ್ಲಿ ನೀರಿನ ಮಟ್ಟ ತೀವ್ರವಾಗಿ ಏರಿತು. ಗೌರೀಸಪಟ್ಟಂ ಮತ್ತು ಕಣ್ಣನ್ಮೂಲ ಸೇರಿದಂತೆ ರಾಜಧಾನಿ ಪ್ರದೇಶದ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು ಜನ ಜೀವನ ಅಸ್ತವ್ಯಸ್ತಗೊಂಡವು.  ಗೌರೀಸಪಟ್ಟಂನಲ್ಲಿ ಕನಿಷ್ಠ ೧೮ ಕುಟುಂಬಗಳು ನೀರಿನಲ್ಲಿ ಸಿಕ್ಕಿಹಾಕಿಕೊಂಡವು.. ಪೊಲೀಸ್ ಮತ್ತು ಅಗ್ನಿಶಾಮಕ ಸಿಬ್ಬಂದಿಯ ಜಂಟಿ ತಂಡವೊಂದು ಅವರ ರಕ್ಷಣೆಗೆ ಯತ್ನಿಸಿತು.

2018: ನವದೆಹಲಿ: ೨೦೧೯ರ ಲೋಕಸಭಾ ಚುನಾವಣೆಗೆ ಮುನ್ನ ತಮ್ಮ ಪ್ರಸ್ತುತ ಅವಧಿಯ ಕೊನೆಯ ಸ್ವಾತಂತ್ರ್ಯ ದಿನೋತ್ಸವ ಭಾಷಣವನ್ನು ವಸ್ತುಶಃ ತಮ್ಮ ಸರ್ಕಾರದ ಸಾಧನೆಯನ್ನು ಬಿಂಬಿಸಲು ಬಳಸಿಕೊಂಡ ಪ್ರಧಾನಿ ನರೇಂದ್ರ ಮೋದಿ ಅವರು ಕೆಂಪುಕೋಟೆಯ ಮೇಲಿನಿಂದ ಮಾತನಾಡುತ್ತಾ ’ಮಾನವ ಸಹಿತ ಗಗನಯಾನ’ ಮತ್ತು ಜನ ಸಾಮಾನ್ಯರ ಆರೋಗ್ಯ ಕಾಳಜಿ ಸಲುವಾಗಿ ೫೦ ಕೋಟಿ ಭಾರತೀಯರಿಗಾಗಿ ’ಆಯುಷ್ಮಾನ್ ಭಾರತ’ ಯೋಜನೆ ಜಾರಿಯನ್ನು ಘೋಷಿಸಿದರು. ಯುಪಿಎ ಆಡಳಿತದ ಅವಧಿಯ ’ನೀತಿ ಸ್ಥಗಿತ’ ಸ್ಥಿತಿಯಿಂದ ಚೇತರಿಸಿರುವ ಆರ್ಥಿಕತೆ ತಮ್ಮ ಸರ್ಕಾರದ ಅಡಿಯಲ್ಲಿ ಬಹು ಸಹಸ್ರ ಕೋಟಿ  ಡಾಲರುಗಳ ಆರ್ಥಿಕತೆಯಾಗಿ ಬೆಳೆದು ಸುಭದ್ರ ಸ್ಥಿತಿಗೆ ತಲುಪಿದೆ ಎಂದು ನುಡಿದ ಅವರು, ಸಾರ್ವತ್ರಿಕ ಆರೋಗ್ಯ ಕಾಳಜಿ ಯೋಜನೆ, ರೈತರಿಂದ ಆಗುತ್ತಿರುವ ಉತ್ಪಾದನೆಯ ಹೆಚ್ಚಳ ಮತ್ತಿತರ ವಿವರಗಳ ಸಹಿತವಾಗಿ ತಮ್ಮ ೪ ವರ್ಷಗಳ ಆಡಳಿತದ ಸಾಧನೆಗಳನ್ನು ದೇಶದ ಮುಂದಿಟ್ಟರು. ಕಿಸಾನ್ (ರೈತ), ಜವಾನ್ (ಯೋಧ), ಮಹಿಳೆಯರು, ಬಡವರು, ಭ್ರಷ್ಟಾಚಾರ ಇತ್ಯಾದಿ ಪ್ರಮುಖ ಅಂಶಗಳನ್ನು ಪ್ರಸ್ತಾಪಿಸಿದ ಅವರು ’ಭಾರತದ ಆರ್ಥಿಕತೆಯು ಓಡಲು ಆರಂಭಿಸಿರುವ ಆನೆ’ ಎಂಬುದಾಗಿ ಇತ್ತೀಚೆಗೆ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಐಎಂಎಫ್) ಹೇಳಿದ್ದನ್ನು ಉಲ್ಲೇಖಿಸಿದರು. ೭೨ನೇ ಸ್ವಾತ್ರಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ೨೦೧೪ರಲ್ಲಿ ಎನ್ ಡಿಎ ಅಧಿಕಾರಕ್ಕೆ ಬಂದ ಬಳಿಕದ ತಮ್ಮ ಐದನೇ ಭಾಷಣವನ್ನು ಕೆಂಪುಕೋಟೆಯಿಂದ ಮಾಡಿದ ಮೋದಿ ಸಶಸ್ತ್ರ ಪಡೆಗಳಲ್ಲಿ ಮಹಿಳಾ ಯೋಧರಿಗಾಗಿ ಶಾಶ್ವತ ಸೇವಾ ವ್ಯವಸ್ಥೆ ಮತ್ತು ೨೦೨೨ರ ವೇಳೆಗೆ ಪುರುಷ ಅಥವಾ ಮಹಿಳಾ ಭಾರತೀಯ ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಯೋಜನೆಗಳನ್ನು ಪ್ರಕಟಿಸಿದರು.  ’೧೨೫ ಕೋಟಿ ಜನರು ಸಾಧನೆಯ ಗುರಿಯತ್ತ ಸಾಗುವಾಗ, ಘಟಿಸಲಾಗದಂತಹುದು ಯಾವುದೂ ಇರಲು ಸಾಧ್ಯವಿಲ್ಲ. ೨೦೧೪ರಲ್ಲಿ ದೇಶದ ಜನ ಈ ಸರ್ಕಾರವನ್ನು ಸ್ಥಾಪಿಸುವಷ್ಟಕ್ಕೆ  ನಿಂತಿಲ್ಲ. ಅವರು ರಾಷ್ಟ್ರ ನಿರ್ಮಾಣ ಹಾದಿಯಲ್ಲಿ ಮುಂದುವರೆದರು ಮತ್ತು ಇನ್ನೂ ಈ ನಿಟ್ಟಿನಲ್ಲಿ ಸಾಗುತ್ತಲೇ ಇದ್ದಾರೆ’ ಎಂದು ಪ್ರಧಾನಿ ಹೇಳಿದರು. ೮೦ ನಿಮಿಷಗಳ ತಮ್ಮ ಭಾಷಣದ ಬಹುತೇಕ ಭಾಗವನ್ನು ಮೋದಿಯವರು ತಮ್ಮ ಸರ್ಕಾರದ ’ಪ್ರಗತಿ ಪತ್ರ’  ಮುಂದಿಡುವುದಕ್ಕಾಗಿ ಬಳಸಿಕೊಂಡರು. ಜಮ್ಮು ಮತ್ತು ಕಾಶ್ಮೀರ, ಮಹಿಳೆಯರ ವಿರುದ್ಧದ ಅಪರಾಧಗಳು, ಒಂದೇ ಉಸಿರಿನ ದಿಢೀರ್ ತ್ರಿವಳಿ ತಲಾಖ್ ಮತ್ತು ವ್ಯವಸಾಯ ರಂಗದ ಸ್ಥಿತಿಗತಿ ಬಗ್ಗೆ ಮಾತನಾಡಿದರು. ಕೇಂದ್ರ ಸರ್ಕಾರವು ಕೇವಲ ಶ್ರೀಮಂತರ ಪರವಾಗಿ ಕಾರ್‍ಯ ನಿರ್ವಹಿಸುತ್ತಿದೆ ಎಂಬ ವಿರೋಧಿ ಆಪಾದನೆಗೆ ಒಳಗಾಗಿರುವ ಮೋದಿ, ಸಮಾಜದ ಬಡವರು ಮತ್ತು ಹಿಂದುಳಿದ ವರ್ಗಗಳ ಏಳಿಗೆಗಾಗಿ ತಮ್ಮ ಸರ್ಕಾರ ಕೈಗೊಂಡ ಉಪಕ್ರಮಗಳನ್ನು ವಿವರಿಸಿದರು. ಕಳೆದ ಎರಡು ವರ್ಷಗಳ ಅವಧಿಯಲ್ಲಿ ೫ ಕೋಟಿ ಬಡವರನ್ನು ದಾರಿದ್ರ್ಯ ರೇಖೆಯಿಂದ ಮೇಲೆತ್ತಲಾಗಿದೆ ಎಂದು ಅವರು ಪ್ರತಿಪಾದಿಸಿದರು. ಭಾರತದ ಬಗ್ಗೆ ಇದ್ದ ಋಣಾತ್ಮಕ ವರದಿಗಳು, ಸುಧಾರಣೆಯಲ್ಲಿ ಆಗುತ್ತಿದ್ದ ವಿಳಂಬಗಳು, ದುರ್ಬಲ ಆರ್ಥಿಕತೆ ಮತ್ತು ಯುಪಿಎ ಆಡಳಿತದ ಅವಧಿಯಲ್ಲಿ ರಾಷ್ಟ್ರದ ಬಗೆಗಿನ ’ಕೆಂಪು ಪಟ್ಟಿ’ (ರೆಡ್ ಟೇಪ್) ತೊಲಗಿದ್ದು ಭಾರತದ ಆರ್ಥಿಕತೆಯನ್ನು ಈಗ ಜಾಗತಿಕ ಮಟ್ಟದಲ್ಲಿ ’ಬಹು ಸಹಸ್ರ ಡಾಲರ್ ಆರ್ಥಿಕತೆ’ ಎಂಬುದಾಗಿ ಪರಿಗಣಿಸಲಾಗುತ್ತಿದೆ. ಹೂಡಿಕೆದಾರರಿಗೆ ಕೆಂಪುಹಾಸಿನ ಸ್ವಾಗತ ಲಭಿಸುತ್ತಿದೆ ಎಂದು ಪ್ರಧಾನಿ ನುಡಿದರು.  ’ಭಾರತ ಹಿಂದೆ ನಿದ್ರಿಸುತ್ತಿದ್ದ ಆನೆಯಾಗಿತ್ತು, ಈಗ ಎದ್ದಿದ್ದು, ಓಡಲು ಶುರು ಮಾಡಿದೆ’ ಎಂದು ಅವರು ತಲೆಗೆ ಕೇಸರಿ ಮತ್ತು ಕೆಂಪು ಬಣ್ಣದ ರಾಜಸ್ಥಾನ ಶೈಲಿಯ ಪೇಟ ಧರಿಸಿ ಮಾತನಾಡುತ್ತಾ ಹೇಳಿದರು. ಕಾಶ್ಮೀರದ ಬಗ್ಗೆ ಪ್ರಸ್ತಾಪಿಸಿದ ಅವರು ’ಜನರು ಪರಸ್ಪರ ಆಲಿಂಗಿಸುವ ಮೂಲಕ ನಾವು ಮುನ್ನಡೆಯುತ್ತೇವೆ, ಬುಲೆಟ್ ಮತ್ತು ದೋಷಣೆಗಳ ಮೂಲಕ ಅಲ್ಲ’ ಎಂದ ನುಡಿದರು.  ಕಾಂಗ್ರೆಸ್ ಆಡಳಿತಗಳನ್ನು ತರಾಟೆಗೆ ತೆಗೆದುಕೊಂಡ ಪ್ರಧಾನಿ, ಯುಪಿಎ ಸರ್ಕಾರದ ಕೊನೆಯ ವರ್ಷವಾದ ೨೦೧೩ರಲ್ಲಿ ಇದ್ದ ಮಾದರಿಯಲ್ಲಿ ರಾಷ್ಟ್ರ ಮುಂದುವರೆದಿದ್ದರೆ ಕಳೆದ ನಾಲ್ಕು ವರ್ಷಗಳಲ್ಲಿ ಸಾಧಿಸಿದ ಅಭಿವೃದ್ಧಿ ಸಾಧನೆಗೆ ದಶಕಗಳೇ ಬೇಕಾಗುತ್ತಿದ್ದವು ಎಂದು ಹೇಳಿದರು. ತಮಿಳು ರಾಷ್ಟ್ರೀಯವಾದಿ ಸುಬ್ರಮಣ್ಯ ಭಾರತಿ ಅವರ ತಮಿಳು ಮಾತುಗಳನ್ನು ಉಲ್ಲೇಖಿಸಿದ ಮೋದಿ, ’ವಿಶ್ವಕ್ಕೆ ತನ್ನ ಸಮಸ್ಯೆಗಳನ್ನು ನಿವಾರಿಸಿಕೊಳ್ಳಲು ಭಾರತವು ಮಾರ್ಗದರ್ಶನ ಮಾಡುವುದು’ ಎಂದು ನುಡಿದರು. ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಶಾ ಅವರ ಪತ್ನಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿಗಳಾದ ಮನ ಮೋಹನ್ ಸಿಂಗ್, ಎಚ್.ಡಿ.ದೇವೇಗೌಡ, ಕೇಂದ್ರ  ಸಚಿವ ಸಂಪುಟ ಸದಸ್ಯರು, ಮೂರೂ ಪಡೆಗಳ ಮುಖ್ಯಸ್ಥರು, ನ್ಯಾಯಾಂಗದ ಪ್ರಮುಖರು, ನಾಗರಿಕ ಸೇವಕರು, ಸಹಸ್ರಾರು ಸಂಖ್ಯೆಯಲ್ಲಿ ಶಾಲಾ ಮಕ್ಕಳು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ವಿಶ್ವದ ಅತಿದೊಡ್ಡ ಆರೋಗ್ಯ ಕಾಳಜಿ ಯೋಜನೆ: ಮೋದಿ ಅವರು ಮಾಡಿದ ಪ್ರಕಟಣೆಗಳಲ್ಲಿ ಮುಖ್ಯವಾದ ಒಂದು ಪ್ರಕಟಣೆ ಆಯುಷ್ಮಾನ್ ಭಾರತ ರಾಷ್ಟ್ರೀಯ ಆರೋಗ್ಯ ಸಂರಕ್ಷಣಾ ಯೋಜನೆ. ಇದು ವಿಶ್ವದಲ್ಲೇ ಅತ್ಯಂತ ಬೃಹತ್ತಾದ ಆರೋಗ್ಯ ಸಂರಕ್ಷಣಾ ಯೋಜನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಸೆಪ್ಟೆಂಬರ್ ೨೫ರಂದು ಬಿಜೆಪಿ ನಾಯಕ ಪಂಡಿತ ದೀನ ದಯಾಳ್ ಉಪಾಧ್ಯಾಯ ಅವರ ಜನ್ಮದಿನದಂದು ಚಾಲನೆಗೊಳ್ಳಲಿದೆ. ಯೋಜನೆಯು ಪ್ರಾರಂಭದಲ್ಲಿ ೧೦ ಕೋಟಿ ಕುಟುಂಬಗಳ ೫೦ ಕೋಟಿ ಭಾರತೀಯರಿಗೆ ಅನುಕೂಲವಾಗಲಿದೆ. ಸ್ಥಿತಿವಂತರಾಗಿದ್ದರೂ ಮಾರಕ ರೋಗಗಳಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಒಳಗಾಗುವವರಿಗೂ ಅನುಕೂಲವಾಗುವಂತಹ ಅವಕಾಶಗಳನ್ನು ಇದರಲ್ಲಿ ಅಳವಡಿಸುವ ಬಗೆಗೂ ಚಿಂತಿಸಲಾಗುತ್ತಿದೆ ಎಂದು ಪ್ರಧಾನಿ ನುಡಿದರು.  ಸಶಸ್ತ್ರ ಪಡೆಗಳಿಗೆ ಮಹಿಳಾ ಯೋಧರ ನೇಮಕ- ತರಬೇತಿ ಮಾಡಲು ಪುರುಷರಿಗೆ ಇರುವಂತೆಯೇ ಕಾಯಂ ವ್ಯವಸ್ಥೆ ರೂಪಿಸಲಾಗುವುದು. ಅಲ್ಪಾವಧಿಯ ಸೇವಾ ಆಯೋಗದ (ಎಸ್ ಎಸ್ ಸಿ) ಮೂಲಕ ಸೇರ್ಪಡೆಯಾಗುವ ಮಹಿಳಾ ಅಧಿಕಾರಿಗಳು ತಮ್ಮ ಪುರುಷ ಸಹೋದ್ಯೋಗಿಗಳಂತೆಯೇ ಕಾಯಂ ನೇಮಕಾತಿ ಅವಕಾಶ ಪಡೆಯಲಿದ್ದಾರೆ ಎಂದು ಪ್ರಧಾನಿ ಹೇಳಿದರು. ಇತ್ತೀಚಿನ ಅತ್ಯಾಚಾರ ಪ್ರಕರಣಗಳನ್ನು ಪ್ರಸ್ತಾಪಿಸಿದ ಪ್ರಧಾನಿ ’ಕಾನೂನು ಪರಮೋಚ್ಚವಾದುದು. ಸಮಾಜವು ಇಂತಹ ’ರಾಕ್ಷಸೀಯ’ ಮನೋವೃತ್ತಿಯಿಂದ ಮುಕ್ತವಾಗಬೇಕು ಎಂದು ಹೇಳಿದರು. ಮಧ್ಯಪ್ರದೇಶದ ಫಾಸ್ಟ್ ಟ್ರ್ಯಾಕ್ ಕೋರ್ಟ್ ಒಂದು ಅತ್ಯಾಚಾರ ಪ್ರಕರಣದ ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದನ್ನು ಪ್ರಧಾನಿ ಸ್ವಾಗತಿಸಿದರು. ದಲಿತರು ಮತ್ತು ಹಿಂದುಳಿದ ವರ್ಗಗಳ ಹಿತಾಸಕ್ತಿ ರಕ್ಷಣೆಗಾಗಿ ತಮ್ಮ ಸರ್ಕಾರ ನಡೆಸಿರುವ ಪ್ರಯತ್ನಗಳನ್ನು ಮೋದಿ ವಿವರಿಸಿದರು. ಇತ್ತೀಚಿನ ಸಂಸತ್ ಅಧಿವೇಶನವು ಸಂಪೂರ್ಣವಾಗಿ ಸಾಮಾಜಿಕ ನ್ಯಾಯಕ್ಕಾಗಿ ಸಮರ್ಪಣೆಗೊಂಡಿತ್ತು ಎಂದು ಅವರು ನುಡಿದರು. ೨೦೨೨ರ ವೇಳೆಗೆ ಭಾರತವು ರಾಷ್ಟ್ರಧ್ವಜವನ್ನು ಕೈಯಲ್ಲಿ ಹಿಡಿದುಕೊಂಡ ತನ್ನ ’ಪುತ್ರ ಅಥವಾ ಪುತ್ರಿಯನ್ನು’ ಬಾಹ್ಯಾಕಾಶಕ್ಕೆ ಕಳುಹಿಸಿಕೊಡಲಿದೆ ಎಂದು ಪ್ರಧಾನಿ ಹೇಳಿದರು. ಭ್ರಷ್ಟಾಚಾರಿಗಳು ಮತ್ತು ಕಾಳಸಂತೆಕೋರರನ್ನು ಉಳಿಸುವುದಿಲ್ಲ ಎಂದು ಶಪಥಗೈದ ಮೋದಿ, ತಮ್ಮ ಸರ್ಕಾರವು ಮಧ್ಯವರ್ತಿಗಳನ್ನು ಅಧಿಕಾರದ ಮೊಗಸಾಲೆಯಿಂದ ದೂರ ಇಟ್ಟಿದೆ. ತೆರಿಗೆ ಪಾವತಿದಾರರ ಸಂಖ್ಯೆಯನ್ನು ವಿಸ್ತರಿಸಿದೆ ಮತ್ತು ವಿವಿಧ ಯೋಜನೆಗಳ ನಕಲಿ ಫಲಾನುಭವಿಗಳನ್ನು ಕಿತ್ತುಹಾಕುವ ಮೂಲಕ  ಬೊಕ್ಕಸಕ್ಕೆ ೯೦,೦೦೦ ಕೋಟಿ ರೂಪಾಯಿಗಳನ್ನು ಉಳಿತಾಯ ಮಾಡಿದೆ ಎಂದು ಹೇಳಿದರು. ಈಗ ವಿಶ್ವದ ೬ನೆಯ ಅತಿದೊಡ್ಡ ಆರ್ಥಿಕತೆಯಾಗಿರುವ ರಾಷ್ಟ್ರದ ಅಭಿವೃದ್ಧಿಗೆ ತಮ್ಮ ಕಾಣಿಕೆ ಕೊಡುತ್ತಿರುವುದಕ್ಕಾಗಿ ಪ್ರಾಮಾಣಿಕ ತೆರಿಗೆ ಪಾವತಿದಾರರಿಗೆ ಪ್ರಧಾನಿ ಧನ್ಯವಾದಗಳನ್ನು ಸಲ್ಲಿಸಿದರು. ತೆರಿಗೆ ಜಾಲದಿಂದ ಹೊರಗೆ ಇದ್ದವರನ್ನ ತೆರಿಗೆ ಜಾಲದ ವ್ಯಾಪ್ತಿಗೆ ತರಲು ಕೈಗೊಂಡ ಕ್ರಮಗಳನ್ನು ಪಟ್ಟಿ ಮಾಡಿದ ಪ್ರಧಾನಿ, ೨೦೧೪ರಲ್ಲಿ ೩.೫ರಿಂದ ೪ ಕೋಟಿಯಷ್ಟು ಇದ್ದ ತೆರಿಗೆ ಪಾವತಿದಾರರ ಸಂಖ್ಯೆ ಈಗ ೬.೭೫ ಕೋಟಿಗೆ ಏರಿದೆ ಎಂದು ವಿವರಿಸಿದರು. ಒಂದೇ ಉಸಿರಿನ ದಿಢೀರ್ ತ್ರಿವಳಿ ತಲಾಖ್ ಪದ್ಧತಿಯನ್ನು ನಿಷೇಧಿಸಲು ಶಾಸನ ರೂಪಿಸಲು ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದ ಪ್ರಧಾನಿ, ’ಕೆಲವು ವ್ಯಕ್ತಿಗಳು’ ಸಂಸತ್ತಿನಲ್ಲಿ ಅಂಗೀಕಾರಗೊಳ್ಳದಂತೆ ಅದನ್ನು ತಡೆಯುತ್ತಿದ್ದಾರೆ ಎಂದು ವಿಪಕ್ಷಗಳನ್ನು ನೇರವಾಗಿ ಹೆಸರಿಸದೆಯೇ ಆಪಾದಿಸಿದರು. ತಮ್ಮ ಪಕ್ಷವು ಭಾರತದ ಹಣೆಬರಹವನ್ನು ಹೇಗೆ ಬದಲಾಯಿಸುತ್ತಿದೆ ಎಂದು ಬಣ್ಣಿಸಲು ಕವನವೊಂದನ್ನು ಉಲ್ಲೇಖಿಸಿದ ಮೋದಿ, ರಾಷ್ಟ್ರದ ಹಿತಾಸಕ್ತಿ ರಕ್ಷಣೆಗಾಗಿ ಕಠಿಣ ಮತ್ತು ದಿಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳಲು ಸರ್ಕಾರ ಸಮರ್ಥವಾಗಿದೆ ಎಂದು ಹೇಳಿದರು.  ಅಭಿವೃದ್ಧಿಯಲ್ಲಿ ಇತರ ರಾಷ್ಟ್ರಗಳಿಗಿಂತ ಭಾರತ ಮುಂದೆ ಸಾಗುವುದನ್ನು ಕಾಣಲು ತಾವು ತವಕಿಸುತ್ತಿರುವುದಾಗಿ ಅವರು ನುಡಿದರು. ಸರ್ವರಿಗೂ ವಸತಿ, ವಿದ್ಯುತ್, ಅಡುಗೆ ಅನಿಲ, ಸ್ವಚ್ಛತೆ, ಆರೋಗ್ಯ, ರಸ್ತೆ ಸಂಪರ್ಕ ಮತ್ತು ನೀರು ಲಭಿಸಬೇಕು ಮತ್ತು ಈ ನಿಟ್ಟಿನಲ್ಲಿ ತಮ್ಮ ಸರ್ಕಾರ ಶ್ರಮಿಸುತ್ತಿದೆ ಎಂದು ಹೇಳುವ ಮೂಲಕ ಪ್ರಧಾನಿ ತಮ್ಮ ಮಾತುಗಳನ್ನು ಮುಕ್ತಾಯಗೊಳಿಸಿದರು.

2018: ನವದೆಹಲಿ: ಆಮ್ ಆದ್ಮಿ ಪಕ್ಷಕ್ಕೆ (ಆಪ್) ರಾಜೀನಾಮೆ ಸಲ್ಲಿಸಿರುವ ನಾಯಕ ಅಶುತೋಶ್ ಅವರ ರಾಜೀನಾಮೆಯನ್ನು ತಾವು ಅಂಗೀಕರಿಸುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಹೇಳಿದರು. ’ನಾವು ನಿಮ್ಮ ರಾಜೀನಾಮೆಯನ್ನು ಹೇಗೆ ಅಂಗೀಕರಿಸಲು ಸಾಧ್ಯ?’ ಎಂದು ಟ್ಟಿಟ್ಟರಿನಲ್ಲಿ ಬರೆದಿರುವ ಕೇಜ್ರಿವಾಲ್ ಅವರು ’ಈ ಜೀವಮಾನದಲ್ಲಿ ಸಾಧ್ಯವಿಲ್ಲ’ ಎಂದು ಅಶುತೋಶ್ ಅವರು ರಾಜೀನಾಮೆ ಸಲ್ಲಿಸಿರುವುದಾಗಿ ಮಾಡಿದ ಟ್ವೀಟಿಗೆ ಉತ್ತರಿಸಿದರು. ರಾಜಕಾರಣಿಯಾಗಿ ಪರಿವರ್ತನೆಗೊಂಡಿರುವ ಅಶುತೋಶ್ ಅವರು ’ಅತ್ಯಂತ ವೈಯಕ್ತಿಕ ಕಾರಣಕ್ಕಾಗಿ’ ಪಕ್ಷಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಈದಿನ ಬೆಳಗ್ಗೆ ಪ್ರಕಟಿಸಿದ್ದರು.  ’ಪ್ರತಿಯೊಂದು ಪಯಣಕ್ಕೂ ಕೊನೆ ಇರುತ್ತದೆ. ಆಪ್ ಜೊತೆಗಿನ ನನ್ನ ಒಡನಾಟ ಸುಂದರವಾಗಿತ್ತು, ಕ್ರಾಂತಿಕಾರಿಯಾಗಿತ್ತು. ಆದರೂ ಅದಕ್ಕೆ ಕೊನೆ ಇದೆ. ನಾನು ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನೆ/ ಅದನ್ನು ಅಂಗೀಕರಿಸುವಂತೆ ಪಕ್ಷದ ವ್ಯವಹಾರಗಳ ಸಮಿತಿಗೆ (ಪಿಎಸಿ) ಕೋರಿದ್ದೇನೆ’ ಎಂದು ಅಶುತೋಶ್ ಟ್ವೀಟ್ ಮಾಡಿದ್ದರು. ’ಇದು ಸಂಪೂರ್ಣವಾಗಿ ಅತ್ಯಂತ ವೈಯಕ್ತಿಕ ಕಾರಣದ್ದು. ಪಕ್ಷಕ್ಕೆ ಧನ್ಯವಾದಗಳು. ನನಗೆ ನಿರಂತರ ಬೆಂಬಲ ನೀಡಿದ್ದಕ್ಕಾಗಿ ಎಲ್ಲರಿಗೂ ಧನ್ಯವಾದಗಳು’ ಎಂದೂ ಟ್ವೀಟ್ ಮಾಡಿದ ಅಶುತೋಶ್ ತಮ್ಮ ಖಾಸಗಿತನವನ್ನು ಗೌರವಿಸುವಂತೆ ಮಾಧ್ಯಮಗಳಿಗೆ ಮನವಿ ಮಾಡಿದ್ದರು. ’ಮಾಧ್ಯಮ ಮಿತ್ರರೇ ನನ್ನ ಖಾಸಗಿತನವನ್ನು ದಯವಿಟ್ಟು ಗೌರವಿಸಿ. ನಾನು ಟಿವಿ ಚಾನೆಲ್ ಗಳಿಗೆ ಯಾವುದೇ ರೀತಿಯ ಬೈಟ್ ಕೊಡುವುದಿಲ್ಲ. ದಯವಿಟ್ಟು ಸಹಕರಿಸಿ’ ಎಂದು ಅಶುತೋಶ್ ಮಾಧ್ಯಮಗಳನ್ನು ಕೋರಿದ್ದರು.  ರಾಜಕೀಯಕ್ಕೆ ಬರುವ ಮುನ್ನ ಟೆಲಿವಿಷನ್ ಪತ್ರಕರ್ತರಾಗಿ ಸುದೀರ್ಘಕಾಲ ದುಡಿದಿರುವ ಅಶುತೋಶ್ ಅವರು ಅಣ್ಣಾ ಹಜಾರೆ ಅವರ ’ಭ್ರಷ್ಟಾಚಾರದ ವಿರುದ್ಧ ಭಾರತ’ ಆಂದೋಳನದಲ್ಲಿ ಪಾಲ್ಗೊಂಡಿದ್ದರು. ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಚಾಂದನಿ ಚೌಕ ಕ್ಷೇತ್ರದಿಂದ ಆಪ್ ಟಿಕೆಟಿನಲ್ಲಿ ಸ್ಪರ್ಧಿಸಿದ್ದರು. ರಾಜ್ಯಸಭೆಗೆ ಪಕ್ಷದಿಂದ ಮೂವರು ಅಭ್ಯರ್ಥಿಗಳ ಪೈಕಿ ಇಬ್ಬರ ಆಯ್ಕೆ ಬಗ್ಗೆ ಅಶುತೋಶ್ ಅವರು ಅತೃಪ್ತಿ ವ್ಯಕ್ತ ಪಡಿಸಿದ್ದರು. ಒಂದು ಕಾಲದಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೆ ಅತ್ಯಂತ ಆಪ್ತರಂತೆ ಇದ್ದ ಅವರು ಆ ಬಳಿಕ ಪಕ್ಷದ ಚಟುವಟಿಕೆಗಳಿಂದ ದೂರವೇ ಇದ್ದರು. ಆಮ್ ಆದ್ಮಿ ಪಕ್ಷವು ಹಲವಾರು ಪ್ರಾಥಮಿಕ ಸದಸ್ಯರ ಉಚ್ಚಾಟನೆ ಇಲ್ಲವೇ ರಾಜೀನಾಮೆಗಳಿಂದಾಗಿ ಕಳೆದ ಕೆಲವು ವರ್ಷಗಳಿಂದ ಏಳುಬೀಳು ಎದುರಿಸುತ್ತಲೇ ಬಂದಿತ್ತು. ೨೦೧೫ರಲ್ಲಿ ಯೋಗೇಂದ್ರ ಯಾದವ್ ಮತ್ತು ಪ್ರಶಾಂತ ಭೂಷಣ್ ಅವರನ್ನು ’ಪಕ್ಷ ವಿರೋಧಿ’ ಚಟುವಟಿಕೆಗಳಿಗಾಗಿ ಉಚ್ಚಾಟಿಸಲಾಗಿತ್ತು. ಬಳಿಕ ಸಾಮಾಜಿಕ ಕಾರ್‍ಯಕರ್ತೆ ಮೇಧಾ ಪಾಟ್ಕರ್ ಆಪ್ ನಿಂದ ಹೊರಬಂದರು. ರಾಜಕಾರಣಿಯಾಗಿ ಪರಿವರ್ತನೆಗೊಂಡ ಪತ್ರಕರ್ತ ಶಾಜಿಯಾ ಇಲ್ಮಿ ಮತ್ತು ದೆಹಲಿ ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಎಂ.ಎಸ್. ಧಿರ್ ಅವರು ಕೂಡಾ ಪಕ್ಷವನ್ನು ತ್ಯಜಿಸಿ ಬಿಜೆಪಿ ಸೇರಿದ್ದರು. ಅಶುತೋಶ್ ಅವರ ನಿರ್ಧಾರ ದುರದೃಷ್ಟಕರ. ನಾವು ಈ ಬಗ್ಗೆ ಚರ್ಚಿಸಲ ಸಭೆ ಸೇರುತ್ತೇವೆ ಎಂದು ಆಪ್ ದೆಹಲಿ ಸಂಚಾಲಕ ಮತ್ತು ದೆಹಲಿಯ ಸಚಿವ ಗೋಪಾಲ್ ರೈ ಹೇಳಿದರು.

2018: ಲಕ್ನೋ:  ಮಾಜಿ ಮುಖ್ಯಮಂತ್ರಿ ತಮಗೆ ಬೆದರಿಕೆ ಹಾಕಿರುವುದಾಗಿ ಆಪಾದಿಸಿ ಐಪಿಎಸ್ ಅಧಿಕಾರಿ ಅಮಿತಾಭ್ ಥಾಕೂರ್ ಅವರು ಸಲ್ಲಿಸಿರುವ ಧ್ವನಿ ಸುರುಳಿಯಲ್ಲಿ ಇರುವ ಧ್ವನಿ ತಮ್ಮದೇ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಒಪ್ಪಿಕೊಂಡರು. ಆದರೆ ತಮ್ಮ ಧ್ವನಿಯ ಮಾದರಿಯನ್ನು (ವಾಯ್ಸ್ ಸ್ಯಾಂಪಲ್) ನೀಡಲು ಮುಲಾಯಂ ಸಿಂಗ್ ನಿರಾಕರಿಸಿದರು. ೨೦೧೫ರ ಜುಲೈ ೧೦ರಂದು ಸಮಾಜವಾದಿ ಪಕ್ಷವು ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗ ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರು ತಮಗೆ ದೂರವಾಣಿ ಮೂಲಕ ಬೆದರಿಕೆ ಹಾಕಿದರು ಎಂದು ಐಪಿಎಸ್ ಅಧಿಕಾರಿ ಆಪಾದಿಸಿದ್ದರು. ಲಕ್ನೋದ ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ (ಸಿಜೆಎಂ) ನ್ಯಾಯಾಲಯಕ್ಕೆ ಸಲ್ಲಿಸಲಾದ ವರದಿಯಲ್ಲಿ ತನಿಖಾಧಿಕಾರಿ ಅನಿಲ್ ಕುಮಾರ್ ಅವರು ತಾವು ಆಗಸ್ಟ್ ೪ರಂದು ಮಾಜಿ ಮುಖ್ಯಮಂತ್ರಿಯವರ ನಿವಾಸಕ್ಕೆ  ಮಾಜಿ ಮುಖ್ಯಮಂತ್ರಿಯವರ ಧ್ವನಿ ಮಾದರಿ ಪಡೆಯುವ ಸಲುವಾಗಿ ತೆರಳಿದ್ದುದಾಗಿ ತಿಳಿಸಿದ್ದರು. ಮುಲಾಯಂ ಸಿಂಗ್ ಯಾದವ್ ಅವರು ತಮ್ಮ ಧ್ವನಿ ಮಾದರಿಯನ್ನು ನೀಡಲು ನಿರಾಕರಿಸಿದರು, ಆದರೆ ಧ್ವನಿ ಸುರುಳಿಯಲ್ಲಿನ ಧ್ವನಿ ತಮ್ಮದೇ ಎಂದು ಒಪ್ಪಿಕೊಂಡರು ಎಂದು ಅನಿಲ್ ಕುಮಾರ್ ವರದಿಯಲ್ಲಿ ಹೇಳಿದ್ದರು.  ವರದಿಯ ಪ್ರಕಾರ, ಯಾದವ್ ಅವರು ಥಾಕೂರ್ ಅವರಿಗೆ ಕೆಲವು ವಿಷಯಗಳನ್ನು ಅರ್ಥವಾಗುವಂತೆ ಮಾಡುವ ಸಲುವಾಗಿ ಮಾತ್ರ ದೂರವಾಣಿ ಕರೆ ಮಾಡಿದ್ದರು. ಆದರೆ ಐಪಿಎಸ್ ಅಧಿಕಾರಿಯಿಂದ ವಿಷಯ ಅತಿಯಾಗಿ ಬೆಳೆಯಿತು. ಮುಲಾಯಂ ಸಿಂಗ್ ಯಾದವ್ ತಮಗೆ ದೂರವಾಣಿ ಮೂಲಕ ಬೆದರಿಕೆ ಹಾಕಿರುವುದಾಗಿ ಆಪಾದಿಸಿ ಥಾಕೂರ್ ೨೦೧೫ರಲ್ಲಿ ದೂರು ದಾಖಲಿಸಿದ್ದರು. ಇದಕ್ಕೆ ಮುನ್ನ,  ಸಚಿವೆ ಗಾಯತ್ರಿ ಪ್ರಜಾಪತಿ ಅವರು ಅಕ್ರಮ ಆಸ್ತಿ ಸಂಪಾದಿಸಿರುವುದಾಗಿ ಆಪಾದಿಸಿ ಥಾಕೂರ್ ಮತ್ತು ಅವರ ಪತ್ನಿ ನೂತನ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಹಜರತ್ ಗಂಜ್ ಪೊಲೀಸರು ಸಮರ್ಪಕ ತನಿಖೆಯನ್ನೇ ನಡೆಸದೆ ೨೦೧೫ರ ಅಕ್ಟೋಬರ್ ತಿಂಗಳಲ್ಲಿ ತನಿಖೆಯನ್ನು ಸ್ಥಗಿತಗೊಳಿಸಿದ್ದರು. ಏನಿದ್ದರೂ, ಯಾದವ್ ಅವರಿಗೆ ಕ್ಲೀನ್ ಚಿಟ್ ನೀಡಿದ್ದ ಹಜರತ್ ಗಂಜ್ ಪೊಲೀಸರ ಅಂತಿಮ ವರದಿಯನ್ನು ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರು ೨೦೧೬ರ ಆಗಸ್ಟ್ ತಿಂಗಳಲ್ಲಿ ತಿರಸ್ಕರಿಸಿದ್ದರು. ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರು ಪ್ರಕರಣವನ್ನು ಪುನಃ ತನಿಖೆ ನಡೆಸುವಂತೆ ಮತ್ತು ಧ್ವನಿ ಮಾದರಿ ಸಂಗ್ರಹಿಸಿ ವಿಧಿವಿಜ್ಞಾನ ತನಿಖೆಗೆ ಒಪ್ಪಿಸುವಂತೆ ತನಿಖಾಧಿಕಾರಿಗೆ ನಿರ್ದೇಶನ ನೀಡಿದ್ದರು. ಥಾಕೂರ್ ಅವರು ಸಾಕ್ಷ್ಯವಾಗಿ ಸಲ್ಲಿಸಿದ ಸಿಡಿಯಲ್ಲಿನ ಧ್ವನಿಯನ್ನು, ಸಂಗ್ರಹಿಸಿದ ಧ್ವನಿ ಮಾದರಿಯ ಜೊತೆ ಹೋಲಿಸಿ ತನಿಖೆ ನಡೆಸುವಂತೆಯೂ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಆಜ್ಞಾಪಿಸಿದ್ದರು.


2018: ಮುಂಬೈ : ಭಾರತ ಕ್ರಿಕೆಟ್ ತಂಡದ ಮಾಜೀ ಕಪ್ತಾನ ಹಾಗೂ ವಿದೇಶಿ ನೆಲದಲ್ಲಿ ಚೊಚ್ಚಲ ಸರಣಿ ಗೆದ್ದಿದ್ದ ಭಾರತೀಯ ತಂಡವನ್ನು ಮುನ್ನಡೆಸಿದ್ದ ಕಪ್ತಾನನೆಂಬ ಹೆಗ್ಗಳಿಕೆಯನ್ನು ಪಡೆದಿದ್ದ ಅಜಿತ್ ಲಕ್ಷ್ಮಣ್ ವಾಡೇಕರ್ (77) ಅವರು ಮುಂಬೈ ನಗರದ ಜಸ್ ಲೋಕ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಅವರು ದೀರ್ಘಕಾಲೀನ ಅನಾರೋಗ್ಯದಿಂದ ಬಳಲುತ್ತಿದ್ದರು. ಇವರ ನೇತೃತ್ವದ ಭಾರತೀಯ ತಂಡವು 1971ರಲ್ಲಿ ವೆಸ್ಟ್ ವಿಂಡೀಸ್ ಹಾಗೂ ಇಂಗ್ಲಂಡ್ ಪ್ರವಾಸಗಳ ಸಂದರ್ಭಗಳಲ್ಲಿ ಸರಣಿ ಜಯವನ್ನು ತಮ್ಮದಾಗಿಸಿಕೊಂಡಿತ್ತು. ಮಾತ್ರವಲ್ಲದೇ 1972-73 ಅವಧಿಯಲ್ಲಿ ಇವರ ನೇತೃತ್ವದ ಟೀಂ ಇಂಡಿಯಾವು ಇಂಗ್ಲಂಡ್ ತಂಡವನ್ನು 2-1 ಅಂತರದಲ್ಲಿ ಸೋಲಿಸಿ ಸರಣಿ ಜಯಿಸಿತ್ತು. ಮೂಲಕ ವಿದೇಶಿ ನೆಲದಲ್ಲಿ ಮೂರು ಬಾರಿ ಸರಣಿ ಗೆದ್ದ ಯಶಸ್ವೀ ನಾಯಕನಾಗಿ ವಾಡೇಕರ್ ಗುರುತಿಸಿಕೊಂಡಿದ್ದರು. 1966ರಲ್ಲಿ ವಿಂಡೀಸ್ ವಿರುದ್ಧದ ಪಂದ್ಯದಲ್ಲಿ ಟೆಸ್ಟ್ ಕ್ಯಾಪ್ ಧರಿಸಿದ್ದ ವಾಡೇಕರ್ ಅವರು 37 ಪಂದ್ಯಗಳನ್ನು ಆಡಿ 31.07 ಸರಾಸರಿಯಲ್ಲಿ 2113 ರನ್ನುಗಳನ್ನು ಕಲೆ ಹಾಕಿದ್ದರು. ಇವುಗಳಲ್ಲಿ 1 ಶತಕ ಹಾಗೂ 14 ಅರ್ಧಶತಕಗಳನ್ನು ದಾಖಲಿಸಿದ್ದರು. ಇನ್ನು ತನ್ನ ವೃತ್ತಿಜೀವನದಲ್ಲಿ ವಾಡೇಕರ್ ಅವರು ಆಡಿದ್ದು ಕೇವಲ 2 ಏಕದಿನ ಪಂದ್ಯಗಳನ್ನು ಮಾತ್ರ. ಇವರು ತಮ್ಮ ಕೊನೆಯ ಟೆಸ್ಟ್ ಪಂದ್ಯವನ್ನು ಇಂಗ್ಲಂಡ್ ವಿರುದ್ಧ 1974ರಲ್ಲಿ ಆಡಿದ್ದರು.

2016: ಮೂಡುಬಿದಿರೆ: ಎಲ್ಲೆಡೆ ತ್ರಿವರ್ಣಮಯ ಸಮವಸ್ತ್ರಗಳನ್ನು ಧರಿಸಿದ ವಿದ್ಯಾರ್ಥಿಗಳ ಸಮೂಹ. ಕೈಯಲ್ಲಿ ರಾಷ್ಟ್ರಧ್ವಜ. ಚೆಂಡೆ ವಾದನಗಳ ನಿನಾದ, ಮಲ್ಲಕಂಬಗಳ ಪ್ರದರ್ಶನ ಈ ವೈವಿಧ್ಯಗಳೊಂದಿಗೆ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಪುತ್ತಿಗೆಯ ವನಜಾಕ್ಷಿ ಕೆ. ಶ್ರೀಪತಿ ಭಟ್‌ ಸಭಾಂಗಣದಲ್ಲಿ  ಸುಮಾರು 24 ಸಾವಿರ ವಿದ್ಯಾರ್ಥಿಗಳ ಉಪಸ್ಥಿತಿಯಲ್ಲಿ ಈದಿನ 70ನೇ ಸ್ವಾತಂತ್ರ್ಯೋತ್ಸವ ಸಂಭ್ರಮ ನಡೆಯಿತು. ಕೇಸರಿ, ಬಿಳಿ, ಹಸಿರು ಬಣ್ಣದ ಉಡುಗೆ ತೊಟ್ಟು ಮುಖಕ್ಕೆ ತ್ರಿವರ್ಣ ಬಣ್ಣ ಹಚ್ಚಿಕೊಂಡು ಬಂದ ವಿದ್ಯಾರ್ಥಿಗಳು ಶಿಸ್ತುಬದ್ಧವಾಗಿ ಒಂದೆಡೆ ಕಲೆತು ತ್ರಿವರ್ಣದಲ್ಲೆ ‘ಆಳ್ವಾಸ್‌’ ಎಂಬುದನ್ನು ಆಂಗ್ಲ ಪದದಲ್ಲಿ ಮೂಡಿಸಿ ಗಮನ ಸೆಳೆದರು.  ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಮಂಗಳೂರು ಧರ್ಮಪ್ರಾಂತ್ಯದ ಬಿಷಪ್‌ ಡಾ.ಅಲೋಶಿಯಸ್‌ ಪೌಲ್‌ ಡಿಸೋಜ ದೇವಸ್ಥಾನ, ಮಸೀದಿ, ಚರ್ಚ್‌ಗಳಿಗಿಂತ ಶಿಕ್ಷಣ ಸಂಸ್ಥೆಗಳೇ ಶ್ರೇಷ್ಠ. ಭ್ರಾತೃತ್ವ ಮತ್ತು ಏಕತೆಯ ಬದುಕನ್ನು ಶಿಕ್ಷಣ ಸಂಸ್ಥೆಗಳು ಕಲಿಸಿಕೊಡುತ್ತವೆ. ನಮ್ಮ ಹಿರಿಯರ ತ್ಯಾಗ, ಬಲಿದಾನದಿಂದ ದೊರೆತ ಸ್ವಾತಂತ್ರ್ಯವನ್ನು ಉಳಿಸುವ ಮಹತ್ತರ ಜವಬ್ದಾರಿ ದೇಶ ಕಟ್ಟುವ ಯುವಕರ ಮೇಲಿದೆ. ಸ್ವಚ್ಛ ಭಾರತ, ಪರಿಸರ ರಕ್ಷಣೆ, ಜಲ ಸಂರಕ್ಷಣೆ, ರಕ್ತದಾನ, ಭ್ರಷ್ಟಾಚಾರ ನಿರ್ಮೂಲನೆ, ಕಾನೂನಿಗೆ ಗೌರವ, ಸಾರ್ವಜನಿಕ ಆಸ್ತಿ ರಕ್ಷಣೆ, ಕಾನೂನು ಪಾಲನೆ, ಮಹಿಳೆಯರಿಗೆ ಗೌರವ ಹಾಗೂ ಮೇಕ್‌ ಇನ್‌ ಇಂಡಿಯಾ ಈ ಹತ್ತು ಅಂಶಗಳನ್ನು ಮೈಗೂಡಿಸಿಕೊಂಡು ದೇಶದ ಭದ್ರತೆ ಮತ್ತು ಅಖಂಡತೆಯನ್ನು ಎತ್ತಿಹಿಡಿಯಬೇಕಾಗಿದೆ. ಅನಕ್ಷರತೆ, ಬಡತನ ದೂರವಾಗಬೇಕು. ಮೌಲ್ಯಾಧಾರಿತ ಹಾಗೂ ಗುಣಮಟ್ಟದ ಶಿಕ್ಷಣದಿಂದ  ಇದು ಸಾಧ್ಯ ಎಂದರು. ಮೊಳಗಿದ ದೇಶಭಕ್ತಿ: ಪೌಲ್‌ ಡಿಸೋಜ ಅವರು ಧ್ವಜಾರೋಹಣ ನೆರವೇರಿಸಿದಾಗ ಅಳ್ವಾಸ್‌ನ ಸಾಂಸ್ಕೃತಿಕ ವಿದ್ಯಾರ್ಥಿಗಳು ವಂದೇ ಮಾತರಂ ರಾಷ್ಟ್ರಗೀತೆ ಹಾಡಿದರು. ಅತಿಥಿಗಳ ಭಾಷಣ ಮುಗಿದ ಬೆನ್ನಿಗೆ ದೇಶ ಭಕ್ತಿಗೀತೆ ಮೊಳಗಿತು. ಸಹಸ್ರಾರು ವಿದ್ಯಾರ್ಥಿಗಳು ಈ ಹಾಡಿಗೆ ದನಿಗೂಡಿಸಿ ಕೈಯಲ್ಲಿದ್ದ ತ್ರಿವರ್ಣ ಧ್ವಜವನ್ನು ನಿಧಾನವಾಗಿ ಅತ್ತಿಂದಿತ್ತ ಬೀಸಿದರು. ಇನ್ನು ಕೆಲವರು ಕೈಯಲ್ಲಿದ್ದ ಬಣ್ಣದ ಬಲೂನುಗಳನ್ನು ಆಕಾಶದೆತ್ತರಕ್ಕೆ ತೇಲಿ ಬಿಟ್ಟಾಗ ವಿವೇಕಾನಂದ ನಗರ ತ್ರಿವರ್ಣಮಯವಾಗಿ ಕಂಗೊಳಿಸಿತು. ಆಳ್ವಾಸ್‌ನ 24 ಸಾವಿರ ವಿದ್ಯಾರ್ಥಿಗಳು, 4 ಸಾವಿರ ಸಿಬ್ಬಂದಿ, ಸಾರ್ವಜನಿಕರು ಮತ್ತು ಪೋಷಕರ ಸಹಿತ  ಸುಮಾರು 35 ಸಾವಿರ ಮಂದಿ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡರು.
2016: ರಿಯೊ ಡಿ ಜನೈರೊ): ರಿಯೊ ಒಲಿಂಪಿಕ್ಸ್ನಲ್ಲಿ ಭರವಸೆಯ ಪ್ರದರ್ಶನ ನೀಡಿದ ಭಾರತದ ಬ್ಯಾಡ್ಮಿಂಟನ್ಆಟಗಾರ ಕಿಡಂಬಿ ಶ್ರೀಕಾಂತ್ಅವರು ಕ್ವಾರ್ಟರ್ಫೈನಲ್ಪ್ರವೇಶಿಸಿದರು. ಈದಿನ ನಡೆದ ಪುರುಷರ ಸಿಂಗಲ್ಸ್ವಿಭಾಗದ ಪಂದ್ಯದಲ್ಲಿ 42 ನಿಮಿಷ ನಡೆದ ಸೆಣಸಾಟದಲ್ಲಿ ಶ್ರೀಕಾಂತ್‌ 21–19, 21–19 ಗೇಮ್ಗಳಿಂದ ವಿಶ್ವ ಶ್ರೇಯಾಂಕದಲ್ಲಿ 5ನೇ ಸ್ಥಾನದಲ್ಲಿರುವ ಡೆನ್ಮಾರ್ಕ್ ಜಾನ್ಜೋರ್ಗಾನ್ಸೆನ್ವಿರುದ್ಧ ಗೆಲುವು ಸಾಧಿಸಿದರು. ವಿಶ್ವ ಕ್ರಮಾಂಕಪಟ್ಟಿಯಲ್ಲಿ 11ನೇ ಸ್ಥಾನದಲ್ಲಿರುವ ಶ್ರೀಕಾಂತ್ಅವರು ವಿಭಾಗದಲ್ಲಿ ಭಾರತದ ಏಕೈಕ ಭರವಸೆ ಎನಿಸಿದರು.

2016: ಇಸ್ಲಾಮಾಬಾದ್: ಕಾಶ್ಮೀರ ವಿಚಾರವನ್ನು ಮತ್ತೆ ಕೆದಕಿದ ಪಾಕಿಸ್ತಾನವು ವಿವಾದದ ಬಗ್ಗೆ ಮಾತುಕತೆಗಾಗಿ ಭಾರತೀಯ ನಿಯೋಗವನ್ನು ಪಾಕಿಸ್ತಾನಕ್ಕೆ ಕಳುಹಿಸಿಕೊಡುವಂತೆ ಭಾರತಕ್ಕೆ ಪತ್ರ ಬರೆದು ಆಹ್ವಾನ ನೀಡಿತು. ಸಮಕಾಲೀನ ಮತ್ತು ಪ್ರಸ್ತುತ ವಿಷಯಗಳ ಬಗ್ಗೆ ಮಾತ್ರವೇ ಚರ್ಚೆ ನಡೆಸಲು ಭಾರತ ಒತ್ತು ಕೊಟ್ಟಿದ್ದರೂ, ಕಾಶ್ಮೀರ ವಿವಾದದ ಇತ್ಯರ್ಥವು ಉಭಯ ರಾಷ್ಟ್ರಗಳ ಅಂತಾರಾಷ್ಟ್ರೀಯ ಬಾಧ್ಯತೆ ಎಂದು ಪಾಕಿಸ್ತಾನ ಹೇಳಿತು. ಪಾಕಿಸ್ತಾನದ ವಿದೇಶಾಂಗ ಸಚಿವಾಲಯವು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದು ಮಾತುಕತೆಯ ಆಹ್ವಾನ ನೀಡಿತು. ಇಸ್ಲಾಮಾಬಾದ್​ನಲ್ಲಿರುವ ಭಾರತೀಯ ರಾಯಭಾರಿ ಗೌತಮ್ ಬಂಬವಾಲೆ ಅವರಿಗೆ ಪಾಕ್ ವಿದೇಶಾಂಗ ಸಚಿವಾಲಯ ಈದಿನ ಮಧ್ಯಾಹ್ನ ಪತ್ರವನ್ನು ಹಸ್ತಾಂತರಿಸಿತು. ವಿದೇಶಾಂಗ ಕಾರ್ಯದರ್ಶಿ ಭಾರತೀಯ ರಾಯಭಾರಿಗೆ ಆಹ್ವಾನ ಪತ್ರವನ್ನು ನೀಡಿದರು. ಕಾಶ್ಮೀರ ವಿವಾದದ ಕುರಿತು ಮಾತುಕತೆ ನಡೆಸಲು ಭಾರತೀಯ ನಿಯೋಗ ಪಾಕಿಸ್ತಾನಕ್ಕೆ ಭೇಟಿ ನೀಡುವಂತೆ ಪತ್ರದಲ್ಲಿ ತಿಳಿಸಲಾಯಿತು. ಉಭಯ ದೇಶಗಳು ಕಾಶ್ಮೀರ ವಿವಾದದ ಕುರಿತು ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕಾಗಿರುವುದು ಅಂತಾರಾಷ್ಟ್ರೀಯ ಬಾಧ್ಯತೆಯಾಗಿದೆ ಎಂದು ಪಾಕ್ ವಿದೇಶಾಂಗ ಸಚಿವಾಲಯದ ವಕ್ತಾರ ತಿಳಿಸಿದರು. ಪಾಕಿಸ್ತಾನದ ರಾಯಭಾರಿಗಳ ಸಮ್ಮೇಳನದಲ್ಲಿ ಭಾರತದೊಂದಿಗೆ ಕಾಶ್ಮೀರ ವಿಷಯದ ಕುರಿತು ಮಾತುಕತೆ ನಡೆಸುವ ಸಂಬಂಧ ಸರ್ವಾನುಮತದ ಒಪ್ಪಿಗೆ ದೊರೆತಿದೆ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಕಳೆದ ವಾರ ತಿಳಿಸಿದ್ದರು. ಭಾರತ ಕೇವಲ ಪಾಕ್ ಆಕ್ರಮಿತ ಕಾಶ್ಮೀರದ ಕುರಿತು ಮಾತ್ರ ಮಾತುಕತೆ ನಡೆಸಲು ಸಿದ್ಧ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ತಿಳಿಸಿದ ನಂತರ ಪಾಕ್ ಮಾತುಕತೆಗೆ ಆಹ್ವಾನ ನೀಡಿತು.

2016: ಶ್ರೀನಗರ: ಸ್ವಾತಂತ್ರ್ಯೊತ್ಸವದ ದಿನವೇ ಗಡಿನುಸುಳಿ ಬಂದು ದಾಳಿ ನಡೆಸಿದ್ದ ಐವರು ಉಗ್ರರನ್ನು ಭಾರತೀಯ ಯೋಧರು ಹೊಡೆದುರುಳಿಸಿದರು. ಈದಿನ ಬೆಳಗ್ಗೆಯಿಂದ ಇಲ್ಲಿನ ನೌಹಟ್ಟಾದಲ್ಲಿ ಉಗ್ರರ ವಿರುದ್ಧ ಕದನಕ್ಕಿಳಿದಿದ್ದ ಯೋಧರು ಶ್ರೀನಗರದಲ್ಲಿ ನಡೆಯಬಹುದಾದ ಭಾರಿ ದಾಳಿಯನ್ನು ತಪ್ಪಿಸುವಲ್ಲಿ ಯಶಸ್ವಿಯಾದರು. ಅಡಗಿರಬಹುದಾದ ಶಂಕೆ ಇರುವ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆಯನ್ನು ಮುಂದುವರೆಸಿದರು. ಕಾರ್ಯಾಚರಣೆಯಲ್ಲಿ ಸಿಆರ್​ಪಿಎಫ್ ಯೋಧ ಪ್ರಮೋದ್ ಕುಮಾರ್ ಹುತಾತ್ಮರಾದರು. ಐವರು ಯೋಧರು ಗಾಯಗೊಂಡರು ಎಂದು ಪೊಲೀಸರು ತಿಳಿಸಿದರು.   ನೌಹಟ್ಟಾದಲ್ಲಿರುವ ಜಾಮಾ ಮಸೀದಿಗೆ ಸಮೀಪದಲ್ಲಿ ಯೋಧರ ಮೇಲೆ ದಾಳಿ ನಡೆಸಿದ ಉಗ್ರರಿಗೆ ತಿರುಗೇಟು ನೀಡಲು ಕಾರ್ಯಾಚರಣೆಗಿಳಿದ ಯೋಧರು ಸತತ ಕಾರ್ಯಾಚರಣೆ ನಡೆಸಿ ಐವರು ಉಗ್ರರನ್ನು ಹೊಡೆದುರುಳಿಸಿದರು.. ಕಳೆದೊಂದು ತಿಂಗಳಿಂದ ನಿರಂತರ ಗಲಭೆಯಿಂದ ತತ್ತರಿಸಿದ್ದ ಜಮ್ಮು ಕಾಶ್ಮೀರದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ದಿನದಂದೂ ಯೋಧರು ಉಗ್ರರ ವಿರುದ್ಧ ಗುಂಡಿನ ಮಳೆಗರೆಯುವ ಸ್ಥಿತಿ ನಿರ್ಮಾಣವಾಯಿತು. ಬೆಳಗಿನ ಜಾವದಲ್ಲಿ ಗಡಿ ನಿಯಂತ್ರಣ ರೇಖೆ ನುಸುಳಿಬಂದ ಉಗ್ರರು ಸಿಆರ್​ಪಿಎಫ್ ಯೋಧರ ಕ್ಯಾಂಪ್ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಅದೃಷ್ಟವಶಾತ್ ಯೋಧರು ಈ ದಾಳಿಯಿಂದ ತಪ್ಪಿಸಿಕೊಂಡು, ಪ್ರತಿದಾಳಿ ನಡೆಸಿದ್ದರು. ನಾಲ್ಕಾರು ಮಂದಿ ಉಗ್ರರು ಇರುವ ಶಂಕೆ ವ್ಯಕ್ತವಾಗುತ್ತಿದ್ದಂತೆ ಹೆಚ್ಚಿನ ಭದ್ರತಾ ನಿಯೋಜನೆಯೊಂದಿಗೆ ಕಾರ್ಯಾಚರಣೆಗಿಳಿದಿದ್ದರು.

2016: ಶ್ರೀನಗರ: ಸ್ವಾತಂತ್ತ್ರ್ಯೋತ್ಸವದ ದಿನದಂದು ಜಮ್ಮು ಕಾಶ್ಮೀರದ ಮೊಬೈಲ್ ಟವರ್ ಒಂದರ ತುದಿಯಲ್ಲಿ ಪಾಕಿಸ್ತಾನ ಧ್ವಜ ಹಾರುತ್ತಿರುವುದನ್ನು ಗಮನಿಸಿದ ಸಿಆರ್​ಪಿಎಫ್ ಯೋಧರೊಬ್ಬರು ಟವರ್ ಏರಿ ಪಾಕ್ ಧ್ವಜವನ್ನು ಕೆಳಕ್ಕಿಳಿಸಿ ತ್ರಿವರ್ಣ ಧ್ಬಜವನ್ನು ಹಾರಿಸಿದ ಘಟನೆ ದಕ್ಷಿಣ ಕಾಶ್ಮೀರದ ಟ್ರಾಲ್​ನಲ್ಲಿ ಘಟಿಸಿತು. ಯೋಧನ ದೇಶಪ್ರೇಮ ಗಮನಿಸಿದ ಅನೇಕ ಸ್ಥಳೀಯರು ಮೆಚ್ಚುಗೆಯ ಮಾತುಗಳನ್ನಾಡಿದರು. ಕೆಲ ಪ್ರತ್ಯೇಕತಾವಾದಿಗಳು ಈ ದುಷ್ಕೃತ್ಯ ನಡೆಸಿರಬೇಕೆಂದು ಹೇಳಲಾಗುತ್ತಿದ್ದು,  ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿತು.

2016: ಬ್ಯಾಂಕಾಕ್: ಥಾಯ್ಲೆಂಡ್​ನಲ್ಲಿ ಹಿಂದಿನ ದಿನದಿಂದ ಕಣ್ಮರೆಯಾಗಿದ್ದ ಸೇನಾ ಹೆಲಿಕಾಪ್ಟರ್ ಯುಎಚ್-72 ಉತ್ತರ ಥೈಲಾಂಡ್​ನಲ್ಲಿ ಅಪಘಾತಕ್ಕೀಡಾಗಿದ್ದು ಹೆಲಿಕಾಪ್ಟರ್​ನಲ್ಲಿದ್ದ ಐವರು ಯೋಧರು ಸಾವನ್ನಪ್ಪಿರುವುದಾಗಿ ಸೇನೆ ತಿಳಿಸಿತು.  ಮ್ಯಾನ್ಮಾರ್ ಗಡಿ ಸಮೀಪ ಪ್ರವಾಹ ಪ್ರಕೋಪ ಸ್ಥಳಕ್ಕೆ ರಕ್ಷಣಾ ಕಾರ್ಯಕ್ಕೆ ತೆರಳಿದ್ದ ಸೇನಾ ಹೆಲಿಕಾಪ್ಟರ್ ಪಿಟ್ಸನುಕಲೊಕ್ ವಾಯುನೆಲೆಗೆ ಮರಳುತ್ತಿದ್ದಾಗ ಈ ಅವಘಡ ಸಂಭವಿಸಿದೆ ಎಂದು ಥಾಯ್ಲೆಂಡ್​ನ ಉತ್ತರ ವಲಯದ ಕಮಾಂಡರ್ ಸೋಮ್ಸಕ್ ತಿಳಿಸಿದರು. ಹವಾಮಾನ ವೈಪರೀತ್ಯವೇ ಅವಘಡಕ್ಕೆ ಕಾರಣವಾಗಿರಬಹುದು ಎಂದು ಹೇಳಲಾಯಿತು.
2016: ನವದೆಹಲಿ: 30 ವರ್ಷಗಳಿಂದ ನಡೆದು ಬಂದ ಸಂಪ್ರದಾಯವನ್ನು ಬದಿಗೊತ್ತಿ ಬುಲೆಟ್ ಪ್ರೂಫ್ ಗಾಜಿನ (ಗುಂಡು ನಿರೋಧಕ ಗಾಜು) ಹಂಗನ್ನು ತೊರೆದು ಪ್ರಧಾನಿ ನರೇಂದ್ರ ಮೋದಿ 2014ರಲ್ಲಿ ಕೆಂಪು ಕೋಟೆಯಲ್ಲಿ ಭಾಷಣ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಈದಿನ ಸಹ ಮೋದಿ ಸತತ ಮೂರನೇ ವರ್ಷ ಬುಲೆಟ್ ಪ್ರೂಫ್ ಗಾಜನ್ನು ಬಳಸದೆ ಭಾಷಣ ಮಾಡಿ ತಾವು ಜನಸ್ನೇಹಿ ಪ್ರಧಾನಿ ಎಂಬುದನ್ನು ಮತ್ತೊಮ್ಮೆ ಸಾಬೀತು ಪಡಿಸಿದರು.
ಭದ್ರತಾ ಸಿಬ್ಬಂದಿಯ ಎಚ್ಚರಿಕೆಯನ್ನು ಲೆಕ್ಕಿಸದೆ ಮೋದಿ ಅವರು 2014ರಲ್ಲಿ ಬುಲೆಟ್ ಪ್ರೂಫ್ ಗಾಜಿಲ್ಲದ ವೇದಿಕೆಯಲ್ಲಿ ನಿಂತು ಭಾಷಣ ಮಾಡಿದ್ದರು. ಅದೇ ಸಂಪ್ರದಾಯವನ್ನು ಮೋದಿ ಮೂರನೇ ವರ್ಷವೂ ಸಹ ಮುಂದುವರೆಸಿ, ತಮ್ಮ ಎಂದಿನ ಶೈಲಿಯ ಕುರ್ತಾ ಮತ್ತು ಪೇಟ ಧರಿಸಿ ಜನರೊಂದಿಗೆ ಸಂವಾದ ನಡೆಸುವ ರೀತಿಯಲ್ಲಿ ಭಾಷಣ ಮಾಡಿ ಎಲ್ಲರ ಮನಗೆದ್ದರು. ದಿವಂಗತ ಪ್ರಧಾನಿ ಇಂದಿರಾ ಗಾಂಧಿಯವರ ಹತ್ಯೆ ನಡೆದ ನಂತರ ಬುಲೆಟ್ ಪ್ರೂಫ್ ಗಾಜಿನ ಭದ್ರತೆ ಒದಗಿಸುವುದು ಪ್ರಾರಂಭವಾಯಿತು. 1985ರ ಜನವರಿ 26 ರಂದು ಮೊದಲ ಬಾರಿಗೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಬುಲೆಟ್ ಪ್ರೂಫ್ ಗಾಜಿನ ಹಿಂದೆ ನಿಂತು ಭಾಷಣ ಮಾಡಿದ್ದರು. ನಂತರ ಈ ಸಂಪ್ರದಾಯ ಸತತ 30 ವರ್ಷಗಳವರೆಗೆ ಬಳಕೆಯಲ್ಲಿತ್ತು. ಈ ಮಧ್ಯೆ 1990ರಲ್ಲಿ ಮಾತ್ರ ಮಾಜಿ ಪ್ರಧಾನಿ ವಿ.ಪಿ.ಸಿಂಗ್ ಬುಲೆಟ್ ಪ್ರೂಫ್ ಗಾಜನ್ನು ತೊರೆದು ಭಾಷಣ ಮಾಡಿದ್ದರು. ನಂತರ ಬುಲೆಟ್ ಪ್ರೂಫ್ ಗಾಜಿನ ಸಂಪ್ರದಾಯ ಮುಂದುವರೆದಿತ್ತು.

2016: ನವದೆಹಲಿ: ಬಲೂಚಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಬಹಿರಂಗವಾಗಿ ಪ್ರಸ್ತಾಪಿಸಿದ ಬೆನ್ನಲ್ಲೇ ಎಲ್ಲಾ ವಿಷಯಗಳಿಗೆ ಸಂಬಂಧಿಸಿದಂತೆ ಪರಿಹಾರ ಕಂಡು ಹಿಡಿಯುವ ಸಲುವಾಗಿ ಮಾತುಕತೆಗೆ ಬರುವಂತೆ ಸ್ವಯಂ ಗಡೀಪಾರಿನಲ್ಲಿರುವ ಬಲೂಚಿಸ್ತಾನದ ನಾಯಕರಿಗೆ ಪಾಕಿಸ್ತಾನ ಆಹ್ವಾನ ನೀಡಿತು. ಬಲೂಚಿಸ್ತಾನದ ನಾಯಕರ ರಾಷ್ಟ್ರ ಪುನರಾಗಮನವನ್ನು ತಾವು ಸ್ವಾಗತಿಸುವುದಾಗಿ ಬಲೂಚಿಸ್ತಾನದ ಮುಖ್ಯಮಂತ್ರಿ ನವಾಬ್ ಸನಾವುಲ್ಲಾ ಝೆಹ್ರಿ ಮತ್ತು ದಕ್ಷಿಣ ಕಮಾಂಡ್​ನ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಆಮೀರ್ ರಿಯಾಜ್ ಹೇಳಿರುವುದಾಗಿ ‘ಡಾನ್’ ವರದಿ ಮಾಡಿತು. ಪಾಕಿಸ್ತಾನದ 70ನೇ ಸ್ವಾತಂತ್ರ್ಯೊತ್ಸವ ಸಂದರ್ಭದಲ್ಲಿ ಬಲೂಚಿಸ್ತಾನದ ಝೀರತ್ ಜಿಲ್ಲೆಯ ಖ್ವಿಯಾದ್ -ಕಿ-ಆಜಮ್ ರೆಸಿಡೆನ್ಸಿಯಲ್ಲಿ ನಡೆದ ರಾಷ್ಟ್ರಧ್ವಜಾರೋಹಣದ ವೇಳೆಯಲ್ಲಿ ಈ ಆಹ್ವಾನ ನೀಡಲಾಗಿದೆ ಎಂದು ವರದಿ ತಿಳಿಸಿತು. ಸ್ವಯಂ ಗಡೀಪಾರಿನಲ್ಲಿ ಇರುವ ಬಲೂಚಿ ನಾಯಕರಿಗೆ ಪಾಕಿಸ್ತಾನಕ್ಕೆ ವಾಪಸ್ ಬರುವಂತೆಯೂ ಝೆಹ್ರಿ ಆಹ್ವಾನಿಸಿದರು. ರಾಷ್ಟ್ರೀಯ ರಾಜಕೀಯದಲ್ಲಿ ಸೇರಿಕೊಳ್ಳುವುದು ಅಥವಾ ರಾಷ್ಟ್ರವಾದಿ ನೆಲೆಯಲ್ಲಿ ರಾಜಕೀಯ ಮಾಡುವುದು ಅವರಿಗೆ ಬಿಟ್ಟದ್ದು. ಬಲೂಚಿಸ್ತಾನದ ಜನತೆ ನಿಮಗೆ ಜನಾದೇಶ ನೀಡಿದರೆ ನಾವು ಅದನ್ನು ಗೌರವಿಸುತ್ತೇವೆ ಎಂದು ಝೆಹ್ರಿ ಹೇಳಿರುವುದಾಗಿ ‘ಡಾನ್’ ವರದಿ ತಿಳಿಸಿತು.
ಬಲೂಚಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಯುತ್ತಿರುವ ದೌರ್ಜನ್ಯವನ್ನು ಪ್ರಧಾನಿ ಮೋದಿ ಈದಿನದ ತಮ್ಮ ಸ್ವಾತಂತ್ರ್ಯೊತ್ಸವ ಭಾಷಣದಲ್ಲೂ ಪ್ರಸ್ತಾಪಿಸಿದ್ದರು.

2016: ರಿಯೋ ಡಿ ಜನೈರೋ: ಜಿಮ್ನಾಸ್ಟಿಕ್ ಫೈನಲ್ ಹಣಾಹಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿ, ಸ್ವಲ್ಪದರಲ್ಲೇ ಪದಕದಿಂದ ವಂಚಿತರಾದ ದೀಪಾ ಕರ್ಮಾಕರ್ ಮುಂಬರುವ ಟೋಕಿಯೋ ಒಲಿಂಪಿಕ್​ನಲ್ಲಿ ಸ್ವರ್ಣ ಪದಕ ಜಯಿಸುವ ವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ದೀಪಾ, ನಾನು ರಿಯೋ ಒಲಿಂಪಿಕ್​ಗೆ ಯಾವುದೇ ನೀರಿಕ್ಷೆ ಹೊತ್ತು ತೆರಳಿರಲಿಲ್ಲ. ಆದರೆ ಮುಂಬರುವ ಒಲಿಂಪಿಕ್​ನಲ್ಲಿ ಖಂಡಿತ ಬಂಗಾರದ ಪದಕ ಬೇಟೆಯಾಡುವುದೆ ನನ್ನ ಗುರಿಯಾಗಿದೆ. ಪ್ರಸಕ್ತ ಒಲಿಂಪಿಕ್​ನಲ್ಲಿ ನಾಲ್ಕನೇ ಸ್ಥಾನ ಗಳಿಸಿರುವುದು ತೃಪ್ತಿ ತಂದಿದೆ. ಅಲ್ಪದರಲ್ಲೇ ಕಂಚಿನ ಪದಕ ಕೈ ತಪ್ಪಿರುವುದು ನಿರಾಸೆ ತಂದಿರುವುದು ನಿಜ. ಮುಂದಿನ ನಾಲ್ಕು ವರ್ಷದಲ್ಲಿ ಇನ್ನಷ್ಟು ಕಸರತ್ತು ಮಾಡಿ, ದೇಶಕ್ಕೆ ಸ್ವರ್ಣ ಪದಕದೊಂದಿಗೆ ಹಿಂದಿರುಗುವೆ ಎಂದು ತಿಳಿಸಿದರು. ಇದೇ ಮೊದಲ ಬಾರಿ ಭಾರತದ ಜಿಮ್ನಾಸ್ಟಿಕ್ ಪಟು ಒಬ್ಬರು ಒಲಿಂಪಿಕ್ ಫೈನಲ್ ಪ್ರವೇಶಿಸಿದ ಕೀರ್ತಿಗೆ ದೀಪಾ ಪಾತ್ರರಾಗಿದ್ದರು. ಅಂತಿಮ ಸುತ್ತಿನಲ್ಲಿ 15.066 ಅಂಕ ಪಡೆದು 0.156 ಅಂತರದಲ್ಲಿ ಕಂಚಿನ ಪದಕದಿಂದ ದೀಪಾ ವಂಚಿತರಾಗಿದ್ದರು.

2016: ರಿಯೋ ಡಿ ಜನೈರೋ: ಹಾಲಿ ಒಲಿಂಪಿಕ್ ಚಾಂಪಿಯನ್ ಜಮೈಕಾದ ಉಸೇನ್ ಬೋಲ್ಟ್ 100 ಮೀ. ಓಟದ ಫೈನಲ್ ಹಣಾಹಣಿಯಲ್ಲಿ ಮೊದಲಿಗರಾಗಿ ಗುರಿ ತಲುಪುವ ಮೂಲಕ ಸ್ವರ್ಣ ಪದಕಕ್ಕೆ ಮುತ್ತಿಕ್ಕಿದರು. ಈ ಮೂಲಕ ಸತತ ಮೂರು ಒಲಿಂಪಿಕ್​ನಲ್ಲಿ ಬಂಗಾರದ ಪದಕ ಗೆದ್ದ ಸಾಧನೆ ಮಾಡಿದರು. ಈದಿನ  ಮುಂಜಾನೆ ನಡೆದ ಫೈನಲ್ ಪೈಟ್​ನಲ್ಲಿ ಬೋಲ್ಟ್ 9.81 ಸೆಕೆಂಡ್​ಗೆ ನಿಗದಿತ ಗುರಿ ತಲುಪಿದರು. ಅಮೆರಿಕದ ಜಸ್ಟಿನ್ ಗಾಟ್ಲಿನ್ 9.84 ಸೆಕೆಂಡ್​ಗೆ ಗುರಿ ತಲುಪಿ, ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡರು. ಇನ್ನು ಕೆನಡಾದ ಆಂಡ್ರೆ ಡೆ ಗ್ರಾಸೆ 9.91 ಸೆಕೆಂಡ್​ಗೆ ಗುರಿ ತಲುಪಿ, ಕಂಚು ಪದಕ ಜಯಿಸಿದರು. 100 ಮತ್ತು 200 ಮೀಟರ್ ಓಟದಲ್ಲಿ ವಿಶ್ವದಾಖಲೆಯ ಒಡೆಯರಾಗಿರುವ ಬೋಲ್ಟ್ ಲಂಡನ್ ಹಾಗೂ ಬೀಜಿಂಗ್ ಒಲಿಂಪಿಕ್​ನಲ್ಲಿ ಮೂರು ಸ್ವರ್ಣ ಪದಕ ಜಯಿಸಿದ್ದರು. ಪ್ರಸಕ್ತ ಒಲಿಂಪಿಕ್​ನಲ್ಲಿ ಸಹ ಮೂರು ಸ್ವಣ ಪದಕ ಬೇಟೆಯಾಡುವ ಮೂಲಕ ಟ್ರಿಪಲ್ ಸಾಧನೆ ಮಾಡಿದರು.

2008: ನೇಪಾಳದಲ್ಲಿ ದಶಕಗಳ ಕಾಲ ಸಶಸ್ತ್ರ ಹೋರಾಟ ನಡೆಸಿ ಅರಸೊತ್ತಿಗೆ ಕೊನೆಗಾಣಿಸುವಲ್ಲಿ ಯಶಸ್ವಿಯಾದ ಮಾವೋವಾದಿ ನಾಯಕ ಪ್ರಚಂಡ (53) ದೇಶದ ನೂತನ ಪ್ರಧಾನಿಯಾಗಿ ಆಯ್ಕೆಯಾದರು. ಪ್ರಧಾನಿ ಆಯ್ಕೆಗಾಗಿ ಸಂವಿಧಾನ ರಚನಾ ಸಭೆಯಲ್ಲಿ (ಸಂಸತ್ತು) ನಡೆದ ಮತದಾನದಲ್ಲಿ ಸಿಪಿಎನ್-ಮಾವೋವಾದಿ ಪಕ್ಷದ ಪ್ರಚಂಡ ಅಲಿಯಾಸ್ ಪುಷ್ಪ ಕಮಲ್ ದಹಾಲ್ ನೇಪಾಳಿ ಕಾಂಗ್ರೆಸ್ ಅಭ್ಯರ್ಥಿ ಮಾಜಿ ಪ್ರಧಾನಿ ಶೇರ್ ಬಹಾದೂರ್ ದೆವುಬಾ ಅವರನ್ನು 351 ಮತಗಳ ಅಂತರದಿಂದ ಸೋಲಿಸಿದರು.

2007: ವಿಶ್ವದ ಅತ್ಯಂತ ಎತ್ತರ ಪ್ರದೇಶದಲ್ಲಿ ಮೋಟರ್ ಬೈಕ್ ಸಾಹಸಿಗರ ತಂಡವೊಂದು ತ್ರಿವರ್ಣ ಧ್ವಜಾರೋಹಣ ಮಾಡುವ ಮೂಲಕ ದೇಶದ 60ನೇ ಸ್ವಾತಂತ್ರ್ಯೋತ್ಸವಕ್ಕೆ ವಿಶೇಷ ಮೆರುಗು ನೀಡಿತು. ಹಿಮಾಚಲ ಪ್ರದೇಶದ ಲಾಹುಲ್ ಮತ್ತು ಸ್ಪಿಟಿ ಜಿಲ್ಲೆಯ ಕಿಬ್ಬರ್ ಎಂಬ ಹಳ್ಳಿ ಸಮುದ್ರ ಮಟ್ಟದಿಂದ 14,500 ಅಡಿ ಎತ್ತರದಲ್ಲಿದ್ದು ವಿಶ್ವದ ಅತ್ಯಂತ ಎತ್ತರದ ಹಳ್ಳಿ ಎಂಬ ಖ್ಯಾತಿ ಪಡೆದಿದೆ. ದೆಹಲಿ, ಚಂಡಿಗಢ ಮತ್ತು ಶಿಮ್ಲಾಕ್ಕೆ ಸೇರಿದ ನಾಲ್ವರು ಯುವಕರು ಈ ಹಳ್ಳಿಯಲ್ಲಿ ತ್ರಿವರ್ಣ ಧ್ವಜ ಅರಳಿಸಿ ಸ್ವಾತಂತ್ರ್ಯೋತ್ಸವ ಆಚರಿಸಿದರು.

2007: ಉತ್ತರ ಇರಾಕಿನಲ್ಲಿ ಪ್ರಾಚೀನ ಯಾಜಿದಿ ಜನಾಂಗವನ್ನು ಗುರಿಯಾಗಿಸಿ ನಾಲ್ಕು ಆತ್ಮಹತ್ಯಾ ಟ್ರಕ್ ಬಾಂಬ್ ಸ್ಫೋಟಿಸಿ 200ಕ್ಕೂ ಹೆಚ್ಚು ಜನರ ಸಾಮೂಹಿಕ ಹತ್ಯೆ ನಡೆಯಿತು. ಘಟನೆಗಳಲ್ಲಿ ಇತರ 200ಕ್ಕೂ ಅಧಿಕ ಮಂದಿ ಗಾಯಗೊಂಡರು. ಇರಾಕಿನಲ್ಲಿ ನಾಲ್ಕು ವರ್ಷಗಳ ಕದನದ ಅವಧಿಯಲ್ಲಿ ಸಂಭವಿಸಿದ ಅತ್ಯಂತ ದೊಡ್ಡ ರಕ್ತಪಾತದ ದಾಳಿ ಇದು.

2007: ಪೆರು ಸಾಗರ ತೀರದಲ್ಲಿ ಈದಿನ ಸಂಜೆ 6.40ಕ್ಕೆ ಸಂಭವಿಸಿದ ಭೂಕಂಪದಲ್ಲಿ 72 ಜನರು ಮೃತರಾಗಿ ಒಟ್ಟು 700ಕ್ಕೂ ಹೆಚ್ಚು ಜನರು ಗಾಯಗೊಂಡರು. ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ ಸುಮಾರು 7.9 ರಷ್ಟಿತ್ತು. ಸುಮಾರು ಎರಡು ನಿಮಿಷಗಳ ಕಾಲ ಸಂಭವಿಸಿದ ಭೂಕಂಪನದಿಂದ ಜನರು ಭಯಬೀತರಾಗಿ ಮನೆಗಳಿಂದ ಹೊರಗೆ ಓಡಿಬಂದರು. ಸುನಾಮಿ ಉಂಟಾಗಬಹುದೆಂಬ ಭಯದಿಂದ ದಕ್ಷಿಣ ಅಮೆರಿಕದ ಫೆಸಿಪಿಕ್ ಸಾಗರ ತೀರದಲ್ಲಿ ಅನೇಕ ನಗರಗಳನ್ನೇ ತೆರವುಗೊಳಿಸಿದರು.

2007: ಆರು ತಿಂಗಳುಗಳಿಂದ ಅರ್ಜೆಂಟೀನಾದ ವಶದಲ್ಲಿದ್ದ ಬೊಫೋರ್ಸ್ ಹಗರಣದ ಮುಖ್ಯ ಆರೋಪಿ ಒಟ್ಟಾವಿಯೋ ಕ್ವಟ್ರೋಚಿ (69) ಬಿಡುಗಡೆಗೊಂಡು ತನ್ನ ಸ್ವದೇಶ ಇಟಲಿಗೆ ಮರಳಿದ. ಈತನ ಹಸ್ತಾಂತರಕ್ಕೆ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಭಾರತ ವಿಫಲವಾದ ಹಿನ್ನೆಲೆಯಲ್ಲಿ ಕಾನೂನು ಸಮರವೂ ಕೊನೆಗೊಂಡಂತಾಯಿತು. ಅರ್ಜೆಂಟೀನಾ ನ್ಯಾಯಾಲಯದಲ್ಲಿ ಕ್ವಟ್ರೋಚಿ ಪರವಾಗಿ ತೀರ್ಪು ಬಂದ ನಂತರ ಅದರ ವಿರುದ್ಧ ಭಾರತೀಯ ತನಿಖಾ ಸಂಸ್ಥೆ ಸಿಬಿಐ ಯಾವುದೇ ಮೇಲ್ಮನವಿ ಸಲ್ಲಿಸದ ಕಾರಣ ಅಲ್ಲಿನ ಆಡಳಿತವು ವಾರದ ಹಿಂದೆ ಆತನ ಪಾಸ್ ಪೋರ್ಟ್ ಹಿಂತಿರುಗಿಸಿತ್ತು.

2006: ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಅಂತರ್ಜಾಲ ತಾಣ http://www.presidentofindia.nic.in ಗೆ ಈದಿನ ಒಂದೇ ದಿನದಲ್ಲಿ ಒಂದು ಕೋಟಿ ಭೇಟಿ (ಹಿಟ್ಸ್) ದಾಖಲಾಯಿತು. ವಿಶ್ವದಾದ್ಯಂತದಿಂದ ಆಗಸ್ಟ್ ತಿಂಗಳಿನಲ್ಲಿ ಈ ಅಂತರ್ಜಾಲ ತಾಣಕ್ಕೆ ದಾಖಲಾದ ಭೇಟಿ 12 ಕೋಟಿ. ಈ ತಾಣದಲ್ಲಿ ರಾಷ್ಟ್ರಪತಿಗಳ ಸಂದೇಶ, ಭಾಷಣ, ಸಂವಾದದ ವಿವರಗಳ ಜೊತೆಗೆ ವಿದ್ಯಾರ್ಥಿಗಳ ಹಾಗೂ ವಿಜ್ಞಾನಿಗಳ ಪ್ರಶ್ನೆಗೆ ಕಲಾಂ ಅವರು ನೀಡಿದ ಉತ್ತರಗಳು ಲಭಿಸುತ್ತವೆ.

2006: ಭಾರತದ ಸುಪ್ರೀಂಕೋರ್ಟ್ 1950ರಲ್ಲಿ ಅಸ್ತಿತ್ವಕ್ಕೆ ಬಂದಾಗಿನಿಂದ ಇದೇ ಮೊದಲ ಬಾರಿ ಈದಿನ ಸ್ವಾತಂತ್ರ್ಯೋತ್ಸವ ಆಚರಿಸಿತು. ಹಲವು ಗಣ್ಯರ ಸಮ್ಮುಖದಲ್ಲಿ ಮುಖ್ಯ ನ್ಯಾಯಮೂರ್ತಿ ವೈ.ಕೆ. ಸಭರ್ ವಾಲ್ ಧ್ವಜಾರೋಹಣ ಮಾಡುವುದರೊಂದಿಗೆ ಇತಿಹಾಸ ಸೃಷ್ಟಿಯಾಯಿತು. ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಅವರೂ ಈ ಚೊಚ್ಚಲ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

2006: ಇನ್ನೂರು ವರ್ಷಗಳ ಬಳಿಕ ಮೊತ್ತ ಮೊದಲ ಬಾರಿಗೆ ಚಾರಿತ್ರಿಕ ವೆಲ್ಲೂರು ಕೋಟೆಯಲ್ಲಿ 60ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಜಿಲ್ಲಾಧಿಕಾರಿ ಧರ್ಮೇಂದ್ರ್ರ ಪ್ರದೀಪ ಯಾದವ್ ಧ್ವಜಾರೋಹಣ ನೆರವೇರಿಸಿದರು. 1806ರ ಜುಲೈ 10ರಂದು 23ನೇ ಸೈನಿಕ ಪಡೆಯ ಮೂರು ಸೈನಿಕ ತುಕಡಿಗಳು ದಂಗೆ ಎದ್ದು ವೆಲ್ಲೂರು ಕೋಟೆ ಬಳಿ ಬೀಡು ಬಿಟ್ಟಿದ್ದ ಯುರೋಪಿನ ಸೇನಾ ಶಿಬಿರದ ಮೇಲೆ ದಾಳಿ ನಡೆಸಿ ಕೋಟೆ ಮೇಲೆ ಧ್ವಜ ಹಾರಿಸಿದ್ದವು. ಈ ದಂಗೆ ಬ್ರಿಟಿಷ್ ಆಳ್ವಿಕೆ ವಿರುದ್ಧ ಸೈನಿಕರು ನಡೆಸಿದ್ದ ಮೊದಲ ದಂಗೆಯಾಗಿದ್ದು, 1857ರಲ್ಲಿ ಮತ್ತೊಮ್ಮೆ ಸೈನಿಕರು ಬ್ರಿಟಿಷರ ವಿರುದ್ಧ ದಂಗೆ ಎದ್ದರು. ಇದು ಬ್ರಿಟಿಷರ ಪಾಲಿಗೆ ಸಿಪಾಯಿ ದಂಗೆ ಎನಿಸಿಕೊಂಡರೆ, ಭಾರತೀಯರ ಪಾಲಿಗೆ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎನಿಸಿತು.

2006: ವಿದ್ವಾಂಸ ರಾಮಚಂದ್ರ ಉಚ್ಚಿಲ (86) ಅವರು ಸೋಮೇಶ್ವರ ಉಚ್ಚಿಲದಲ್ಲಿ ನಿಧನರಾದರು. ಸ್ವಯಂ ಸಾಧನೆಯಿಂದ ತಮ್ಮನ್ನು ರೂಪಿಸಿಕೊಂಡ ಉಚ್ಚಿಲ ಅವರು ಯಕ್ಷಗಾನ ಹಿತರಕ್ಷಣೆಗಾಗಿ ಅವಿರತ ಹೋರಾಟ ನಡೆಸಿದವರು. ಹಲವು ಪತ್ರಿಕೆಗಳ ಅಂಕಣಕಾರ, ಉತ್ತಮ ಕ್ರೀಡಾಪಟುವಾಗಿದ್ದರು. ಕಡಲಕರೆಯ ಚಿತ್ರಗಳು, ಪದರ, ಯಕ್ಷಗಾನ ನಡೆದು ಬಂದ ದಾರಿ, ಪುನರಪಿ ಜನನಂ, ಮ್ದುದಣ ಕವಿ ಮತ್ತು ಯಕ್ಷಗಾನ ಚರಿತ್ರೆ (ಡಾ. ಶ್ರೀನಿವಾಸ ಹಾವನೂರ ಅವರ ಜೊತೆಗೆ), ಕನ್ನಡ ವ್ಯಾಕರಣ ಮತ್ತು ಛಂದಸ್ಸು, ಸುಲಭ ವ್ಯಾಕರಣ, ನೆನಪಿನ ಬುತ್ತಿ, ಹೊಸ ಗನ್ನಡಿ, ಪಂಪ ರಾಮಾಯಣ ಇತ್ಯಾದಿ ಅವರ ಕೃತಿಗಳು.

2001: ಭಾರತೀಯ ನೌಕಾಪಡೆಯ ಹಡಗುಗಳು ಮತ್ತು ಜಲಾಂತರ್ಗಾಮಿಗಳು ಸೇಂಟ್ ಜಾರ್ಜ್ ನ `ಕ್ರಾಸ್' ಗೆ (ಶಿಲುಬೆ) ಬದಲಾಗಿ ಭಾರತೀಯ ಲಾಂಛನವುಳ್ಳ ಹೊಸ ಧ್ವಜವನ್ನು ಹಾರಿಸಿದವು. ನೌಕೆಯ ತುದಿಯನ್ನು ಒಳಗೊಂಡ ಹೊಸ ಬಿಳಿ ಮತ್ತು ನೀಲಿ ಬಣ್ಣದ ಧ್ವಜವನ್ನು ಸರಳತೆ ಮತ್ತು ಸೇನೆ ಹಾಗೂ ವಾಯುಪಡೆಗಳ ಧ್ವಜಗಳಿಗೆ ಸಾಮ್ಯ ಇರುವಂತೆ ರೂಪಿಸಲಾಗಿದೆ.

1982: ಭಾರತಕ್ಕೆ ಕಲರ್ ಟಿವಿ ಬಂತು. ಪ್ರಧಾನಿ ಇಂದಿರಾಗಾಂಧಿಯವರು ದೆಹಲಿಯ ಕೆಂಪುಕೋಟೆಯ ಮೇಲಿನಿಂದ ರಾಷ್ಟ್ರವನ್ನು ಉದ್ದೇಶಿಸಿ ಮಾಡಿದ ಭಾಷಣದ ವರ್ಣರಂಜಿತ ಪ್ರಸಾರದೊಂದಿಗೆ ಕಲರ್ ಟಿವಿ ಪ್ರಸಾರದ ಉದ್ಘಾಟನೆಯಾಯಿತು.

1981: ಕಾಂಗೈ ಪಕ್ಷವೇ ನಿಜವಾದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಎಂದು ಚುನಾವಣಾ ಆಯೋಗವು ಮನ್ನಣೆ ನೀಡಿತು. ಕಾಂಗ್ಯುಗೆ ರಾಷ್ಟ್ರೀಯ ಪಕ್ಷದ ಮಾನ್ಯ ರದ್ದು ಪಡಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಎರಡು ಅರ್ಜಿಗಳು ಪರಿಶೀಲನೆ ಬಳಿಕ ಸುಪ್ರೀಂಕೋರ್ಟ್ ಅವುಗಳನ್ನು ವಜಾ ಮಾಡಿತು.

1975: ಢಾಕಾದಲ್ಲಿ ನಡೆದ ಕ್ಷಿಪ್ರದಂಗೆಯಲ್ಲಿ ಬಾಂಗ್ಲಾದೇಶದ ಅಧ್ಯಕ್ಷ ಮುಜಿಬುರ್ ರೆಹಮಾನ್ ಅವರನ್ನು ಹತ್ಯೆಗೈಯಲಾಯಿತು.

1975: `ಶೋಲೆ' ಹಿಂದಿ ಚಲನಚಿತ್ರವು ಬಾಂಬೆಯ (ಈಗಿನ ಮುಂಬೈ) ಮಿನರ್ವ ಥಿಯೇಟರಿನಲ್ಲಿ ಬಿಡುಗಡೆಗೊಂಡಿತು. ಇಲ್ಲಿ ಈ ಚಲನಚಿತ್ರವು 3 ವರ್ಷಗಳ ಕಾಲ ನಿಯಮಿತ (ರೆಗ್ಯುಲರ್) ಹಾಗೂ 2 ವರ್ಷಗಳ ಕಾಲ ಮಧ್ಯಾಹ್ನದ (ಮ್ಯಾಟಿನಿ) ಪ್ರದರ್ಶನಗಳನ್ನು ಕಂಡಿತು.

1972: `ಪಿನ್ಕೋಡ್' ಎಂದೇ ಪರಿಚಿತವಾಗಿರುವ ಆರು ಅಂಕಿಗಳ `ಪೋಸ್ಟಲ್ ಇಂಡೆಕ್ಸ್ ಕೋಡ್ ನಂಬರ್' (ಪಿಐಎನ್) ಅನುಷ್ಠಾನಗೊಂಡಿತು.

1969: ಅಣುಶಕ್ತಿ ಇಲಾಖೆಯ ಅಡಿಯಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ರಚಿಸಲಾಯಿತು.

1958: ಸಾಹಿತಿ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ತಿಮ್ಮಶೆಟ್ಟಿಗೌಡರು- ಪಾರ್ವತಮ್ಮ ದಂಪತಿಯ ಮಗನಾಗಿ ನಾಗಮಂಗಲ ತಾಲ್ಲೂಕಿನ ನಾಗತಿಹಳ್ಳಿಯಲ್ಲಿ ಜನಿಸಿದರು.

1956: ಸಾಹಿತಿ ಯಶೋದ ವಿ. ಜನನ.

1955: ಗೋವಾ ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ ಆರಂಭಗೊಂಡಿತು.

1950: ಭಾರತದ ಸಂವಿಧಾನ ಜಾರಿಗೆ ಬಂತು.

1947: ಭಾರತವು ಬ್ರಿಟಿಷ್ ಆಡಳಿತದಿಂದ ಬಿಡುಗಡೆಗೊಂಡು ಸ್ವತಂತ್ರ ರಾಷ್ಟ್ರವಾಯಿತು. ಪಂಡಿತ ಜವಾಹರಲಾಲ್ ನೆಹರೂ ಅವರು ಭಾರತದ ಪ್ರಥಮ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಬ್ರಿಟಿಷ್ ಆಳ್ವಿಕೆ ಕೊನೆಗೊಂಡಿರುವುದರ ಸಂಕೇತವಾಗಿ ನೆಹರೂ ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಿ ದೇಶವನ್ನು ಉದ್ದೇಶಿಸಿ ಭಾಷಣ ಮಾಡಿದರು. ಕೆಂಪುಕೋಟೆಯ ಮೇಲೆ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಪ್ರಧಾನಿ ಧ್ವಜ ಹಾರಿಸುವ ಪರಂಪರೆಗೆ ಇದು ನಾಂದಿಯಾಯಿತು.

1947: `ಜೈಹಿಂದ್' ಬರಹ ಹೊತ್ತ ಸ್ವತಂತ್ರ ಭಾರತದ ಮೊತ್ತ ಮೊದಲ ಅಂಚೆ ಚೀಟಿ ಬಿಡುಗಡೆಗೊಂಡಿತು. 

1946: ಸಾಹಿತಿ ಮಧು ಪಿ. ಹಳ್ಳಿ ಜನನ.

1942: ಮಹಾತ್ಮ ಗಾಂಧಿ ಅವರ ಆಪ್ತ ಕಾರ್ಯದರ್ಶಿ ಮಹಾದೇವ ಹರಿಭಾಯಿ ದೇಸಾಯಿ ನಿಧನ.

1939: `ದಿ ವಿಝಾರ್ಡ್ ಆಫ್ ಓಝ್' ಚಲನಚಿತ್ರವು ಹಾಲಿವುಡ್ಡಿನ ಗ್ರುಮಾನ್ಸ್ ಚೈನೀಸ್ ಥಿಯೇಟರಿನಲ್ಲಿ ಪ್ರದರ್ಶನಗೊಂಡಿತು.

1938: ಸಾಹಿತಿ ಬೆಸಗರಹಳ್ಳಿ ರಾಮಣ್ಣ ಜನನ.

1926: ಸಾಹಿತಿ, ಚಲನಚಿತ್ರ ಸಂಭಾಷಣಕಾರ, ಗೀತ ರಚನಾಕಾರ ಎಂ. ನರೇಂದ್ರ ಬಾಬು (15-8-1926ರಿಂದ 18-10-1999) ಈ ದಿನ ಮೈಸೂರಿನಲ್ಲಿ ಜನಿಸಿದರು. ಸುಮಾರು 10 ಕಾದಂಬರಿಗಳನ್ನು ರಚಿಸಿರುವ ನರೇಂದ್ರಬಾಬು, 85ಕ್ಕೂ ಹೆಚ್ಚು ಕನ್ನಡ ಚಲನ ಚಿತ್ರಗಳಿಗೆ ಸಾಹಿತ್ಯ, 150ಕ್ಕೂ ಹೆಚ್ಚು ಚಲನಚಿತ್ರ ಗೀತೆಗಳನ್ನು ರಚಿಸಿದ್ದಾರೆ.

1921: ಕಾದಂಬರಿಕಾರ, ಅನುವಾದಕಾರ ಅಮೃತರಾಯ್ ಜನನ.

1914: ಪನಾಮಾ ಕಾಲುವೆಯನ್ನು ಅಧಿಕೃತವಾಗಿ ಸಂಚಾರದ ಸಲುವಾಗಿ ತೆರೆಯಲಾಯಿತು.

1910: ಸಾಹಿತಿ ಐರೋಡಿ ಯಜ್ಞ ನಾರಾಯಣ ಉಡುಪ ಜನನ. ಇವರು ಬರೆದಿರುವ 'ಪುರಾನಣ ಭಾರತ ಕೋಶ' ಕೃತಿಯು ಭಾರತದ ವಿವಿಧ ಪುರಾಣಗಳಲ್ಲಿ ಪ್ರಸ್ತಾಪಗೊಂಡಿರುವ ಹೆಸರುಗಳು, ಪದಗಳ ಉಲ್ಲೇಖ ಸಂದರ್ಭ, ಅರ್ಥ ವಿವರಣೆ ಇತ್ಯಾದಿ ಒದಗಿಸುವ ಒಂದು ಸುಂದರ ಶಬ್ಧಕೋಶ. ಕನ್ನಡ ಪುಸ್ತಕ ಪ್ರಾಧಿಕಾರವು ಇದನ್ನು ತನ್ನ ಜನಪ್ರಿಯ ಪುಸ್ತಕಮಾಲೆಯಲ್ಲಿ ಪ್ರಕಟಿಸಿದೆ. ಖ್ಯಾತ ಸಾಹಿತಿ ಶಿವರಾಮ ಕಾರಂತ ಅವರು ಈ ಕೃತಿಗೆ ಮುನ್ನುಡಿ ಬರೆದಿದ್ದಾರೆ.

1872: ಅರವಿಂದರ ಜನ್ಮದಿನ.

1795: ಸಂಗೊಳ್ಳಿ ರಾಯಣ್ಣ ಜನ್ಮದಿನ.

1769: ನೆಪೋಲಿಯನ್ ಬೋನಪಾರ್ಟೆ ಜನ್ಮದಿನ. ಮೊದಲಿಗೆ ಫ್ರೆಂಚ್ ಜನರಲ್ ಆಗಿದ್ದು ನಂತರ ಫ್ರಾನ್ಸಿನ ಚಕ್ರವರ್ತಿಯಾದ ಈತ ಮಾಡಿದ ಹಲವಾರು ಸುಧಾರಣೆಗಳು ಫ್ರಾನ್ಸ್ ಮತ್ತು ಪಶ್ಚಿಮ ಯುರೋಪಿನಲ್ಲಿ ಅಚ್ಚಳಿಯದ ಪರಿಣಾಮ ಬೀರಿವೆ.

1519: ಪನಾಮಾ ನಗರ ಸ್ಥಾಪನೆ.

No comments:

Post a Comment