2018: ನವದಹಲಿ: ಎನ್ ಡಿಎ ಅಭ್ಯರ್ಥಿ ಹಾಗೂ ಜೆಡಿ(ಯು) ಸದಸ್ಯ ಹರಿವಂಶ್ ನಾರಾಯಣ ಸಿಂಗ್ ಅವರು ಜಂಟಿ ವಿರೋಧಿ ಅಭ್ಯರ್ಥಿ ಕಾಂಗ್ರೆಸ್ ಪಕ್ಷದ ಬಿ.ಕೆ. ಹರಿಪ್ರಸಾದ್ ಅವರನ್ನು ಪರಾಭವಗೊಳಿಸುವ ಮೂಲಕ ರಾಜ್ಯಸಭಾ ಉಪ ಸಭಾಪತಿಯಾಗಿ ಆಯ್ಕೆಯಾದರು. ರಾಜ್ಯಸಭೆಯ ಸಭಾಪತಿ ಎಂ. ವೆಂಕಯ್ಯ ನಾಯ್ಡು ಅವರು ಸದನದಲ್ಲಿ ಮತವಿಭಜನೆ ಮೂಲಕ ಚುನಾವಣಾ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. ಹರಿವಂಶ್ ನಾರಾಯಣ ಸಿಂಗ್ ಅವರು ೧೨೫ ಮತಗಳನ್ನು ಪಡೆದರೆ, ಹರಿಪ್ರಸಾದ್ ಅವರಿಗೆ ೧೦೫ ಮತಗಳು ಲಭಿಸಿದವು. ಸಿಂಗ್ ಅವರು ೨೦ ಮತಗಳ ಅಂತರದಲ್ಲಿ ಗೆಲುವು ಸಾಧಿಸಿದರು. ಪಿ.ಜೆ. ಕುರಿಯನ್ ಅವರು ಜುಲೈ ೧ರಂದು ನಿವೃತ್ತಿಯಾದಂದಿನಿಂದ ರಾಜ್ಯಸಭೆಯ ಉಪಸಭಾಪತಿ ಸ್ಥಾನ ಖಾಲಿ ಬಿದ್ದಿತ್ತು. ಮೂತ್ರಪಿಂಡ ಸಮಸ್ಯೆಯ ಬಳಿಕ ಚೇತರಿಸಿಕೊಳ್ಳುತ್ತಿರುವ ಸದನದ ನಾಯಕ ಅರುಣ್ ಜೇಟ್ಲಿ ಅವರು ದೀರ್ಘ ಅಂತರದ ಬಳಿಕ ಈದಿನ ಕಲಾಪದಲ್ಲಿ ಪಾಲ್ಗೊಂಡಿದ್ದರು. ಹೊಸದಾಗಿ ಉಪಸಭಾಪತಿಯಾಗಿ ಆಯ್ಕೆಯಾಗಿರುವ ಹರಿವಂಶ್ ನಾರಾಯಣ ಸಿಂಗ್ ಅವರು ಆರಾಮವಾಗಿ ಇರಬಹುದಾಗಿದ್ದ ಸರ್ಕಾರಿ ಕೆಲಸಕ್ಕೆ ಬದಲಾಗಿ ಪತ್ರಿಕೋದ್ಯಮದ ಹೋರಾಟದ ಹಾದಿ ಆರಿಸಿಕೊಂಡಿದ್ದ ವ್ಯಕ್ತಿ. ರಾಜಕಾರಣಿಗಳೊಂದಿಗೆ ಉತ್ತಮ ಬಾಂಧವ್ಯ ಇಟ್ಟುಕೊಳ್ಳುವ ಮೂಲಕ ತಾವು ಆಯ್ದುಕೊಂಡ ಕ್ಷೇತ್ರದಲ್ಲಿ ದಕ್ಷತೆಯಿಂದ ಕಾರ್‍ಯ ನಿರ್ವಹಿಸಿದ್ದವರು. ನಿತೀಶ್ ಕುಮಾರ್ ನೇತೃತ್ವದ ಜನತಾದಳ (ಯು) ಪಕ್ಷದಿಂದ ಇದೇ ಮೊದಲ ಬಾರಿಗೆ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದ ೬೨ರ ಹರೆಯದ ಹರಿವಂಶ್ ಸಿಂಗ್ ಮಾಜಿ ಪ್ರಧಾನಿ ಚಂದ್ರಶೇಖರ್ ಅವರ ಸಲಹೆಗಾರರಾಗಿದ್ದರು. ಚಂದ್ರಶೇಖರ್ ನೇತೃತ್ವದ ಸರ್ಕಾರ ಪತನಗೊಂಡ ಬಳಕ ಸಿಂಗ್ ಪತ್ರಿಕೋದ್ಯಮಕ್ಕೆ ವಾಪಸಾಗಿದ್ದರು. ಉತ್ತರ ಪ್ರದೇಶದ ಬಲಿಯಾದಲ್ಲಿ ಜನಿಸಿದ ಹರಿವಂಶ್ ಸಿಂಗ್ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪತ್ರಿಕೋದ್ಯಮದಲ್ಲಿ ಡಿಪ್ಲೋಮಾವನ್ನೂ ಕಾಶಿ ಹಿಂದು ವಿಶ್ವ ವಿದ್ಯಾಲಯದಿಂದ ಪಡೆದಿದ್ದರು. ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟ ನಡೆಸಿದ್ದ ಸಮಾಜವಾದಿ ನಾಯಕ ಜಯ ಪ್ರಕಾಶ್ ನಾರಾಯಣ್ ಅವರು ಯಾವ ಪ್ರದೇಶದಲ್ಲಿ ಜನಿಸಿದ್ದರೋ, ಅದೇ ಪ್ರದೇಶಕ್ಕೆ ಸೇರಿದವರು ಹರಿವಂಶ್ ನಾರಾಯಣ್ ಸಿಂಗ್. ಬ್ಯಾಂಕ್ ಅಧಿಕಾರಿಯಾಗಿ ಸರ್ಕಾರಿ ನೌಕರಿ ಪಡೆದಿದ್ದ ಸಿಂಗ್ ಅದನ್ನು ಬಿಟ್ಟು ಪತ್ರಕರ್ತನಾಗಿ ದುಡಿಯಲು ಆರಂಭಿಸಿದ ಬಳಿಕ ಹಿಂದಿ ದಿನ ಪತ್ರಿಕೆ ’ಪ್ರಭಾತ್ ಖಬರ್’ ಪತ್ರಿಕೆಯ ಮುಖ್ಯ ಸಂಪಾದಕ ಹುದ್ದೆಯವರೆಗೂ ಏರಿದ್ದರು. ಬಿಹಾರ ಮತ್ತು ಜಾರ್ಖಂಡ್ ಗೆ ಸಂಬಂಧಿಸಿದ ಹಲವಾರು ಪುಸ್ತಕಗಳನ್ನು ಅವರು ಹಿಂದಿಯಲ್ಲಿ ರಚಿಸಿದ್ದರು ಮತ್ತು ಸಂಪಾದಿಸಿದ್ದರು. ಹಿಂದಿ ಭಾಷೆಗೆ ಸಲ್ಲಿಸಿದ ಅಪ್ರತಿಮ ಕೊಡುಗೆಗಾಗಿ ಅವರನ್ನು ಗೌರವಿಸಲಾಗಿತ್ತು ಎಂದು ರಾಜ್ಯಸಭೆಯ ವೆಬ್ ಸೈಟ್ ಹೇಳುತ್ತದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ನಿಕಟವಾಗಿದ್ದ ಹರಿವಂಶ್ ಅವರನ್ನು ೨೦೧೪ರಲ್ಲಿ ಮೇಲ್ಮನೆಯಲ್ಲಿ ಪಕ್ಷದ ಅಭ್ಯರ್ಥಿಗಳಲ್ಲಿ ಒಬ್ಬರಾಗಿ ಆಯ್ಕೆ ಮಾಡಲಾಗಿತ್ತು. ಆಗ ಆರ್ ಜೆಡಿ ಮತ್ತು ಕಾಂಗ್ರೆಸ್ ಜನತಾದಳ (ಯು) ಮಿತ್ರ ಪಕ್ಷಗಳಾಗಿದ್ದವು.
2018: ತಿರುವನಂತಪುರಂ: ಭೋರ್ಗರೆಯುತ್ತಿರುವ ಕುಂಭದ್ರೋಣ ಮಳೆಗೆ ಕೇರಳ ನಲುಗಿದ್ದು, ಕನಿಷ್ಠ ೨೨
2018: ವಾಷಿಂಗ್ಟನ್: ವಿಶ್ವದ ಅತಿವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದು ಎಂಬ ತನ್ನ ಕೀರ್ತಿಯನ್ನು ಮರಳಿ ಗಳಿಸಿಕೊಳ್ಳುವ ನಿಟ್ಟಿನಲ್ಲಿ ಭಾರತ ಸಾಗುತ್ತಿದ್ದು, ಈ ಹಳಿಯಲ್ಲಿ ತನ್ನ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತಿದೆ, ಅದರ ಸುಧಾರಣಾ ಕ್ರಮಗಳು ಫಲ ನೀಡಲಾರಂಭಿಸಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (ಇಂಟರ್ ನ್ಯಾಷನಲ್ ಮಾನೆಟರಿ ಫಂಡ್ -
ಐಎಂಎಫ್) ಹೇಳಿತು. ಭಾರತದ ೨೬೦೦ ಕೋಟಿ (೨.೬ ಟ್ರಿಲಿಯನ್) ಡಾಲರ್ ಮೊತ್ತದ ಭಾರತದ ಆರ್ಥಿಕತೆಯನ್ನು ಭಾರತದಲ್ಲಿನ ಐಎಂಎಫ್ ಮಿಷನ್ ಮುಖ್ಯಸ್ಥ ರಾನಿಲ್ ಸಲ್ಗಾಡೊ ಅವರು ’ಓಡಲು ಆರಂಭಿಸಿರುವ ಆನೆ’ ಎಂದು ಬಣ್ಣಿಸಿದರು. ೨೦೧೯ರ ಮಾರ್ಚ್ವರೆಗಿನ ಆರ್ಥಿಕ ವರ್ಷದಲ್ಲಿ ಶೇಕಡಾ ೭.೩ರಷ್ಟು ಪ್ರಗತಿ ಸಾಧಿಸಲಿರುವ ಭಾರತದ ಆರ್ಥಿಕತೆ, ನಂತರದ ವರ್ಷ ಶೇಕಡಾ ೭.೫ರ ಪ್ರಗತಿಯನ್ನು ದಾಖಲಿಸಲಿದೆ. ಜಾಗತಿಕ ಬೆಳವಣಿಗೆಯ ಶೇಕಡಾ ೧೫ರಷ್ಟು ಪಾಲನ್ನು ಭಾರತವು ಹೊಂದಿರುತ್ತದೆ ಎಂದೂ ವಾಷಿಂಗ್ಟನ್ ಮೂಲದ ಜಾಗತಿಕ ಸಂಸ್ಥೆ ಹೇಳಿತು. ಐಎಂಎಫ್ ನ ವಾರ್ಷಿಕ ವರದಿಯಲ್ಲಿ ಅತಿಯಾದ ತೈಲಬೆಲೆ, ಬಿಗಿಯಾಗುತ್ತಿರುವ ಜಾಗತಿಕ ಆರ್ಥಿಕ ಸ್ಥಿತಿಗತಿ ಮತ್ತು ತೆರಿಗೆ ಆದಾಯ ಕೊರತೆಗಳನ್ನು ವಿಶ್ಲೇಷಿಸಲಾಗಿದೆ. ಅಧಿಕಾರಿಗಳು ಸಾಲದ ಪ್ರಮಾಣವನ್ನು ಕಡಿಮೆಗೊಳಿಸಲು ಪ್ರಬಲ ಬೆಳವಣಿಗೆಯ ಅನುಕೂಲವನ್ನು ಬಳಸಿಕೊಳ್ಳಬೇಕು, ಬಳಕೆ ತೆರಿಗೆ ವ್ಯವಸ್ಥೆಯನ್ನು ಸರಳಗೊಳಿಸಬೇಕು ಮತ್ತು ಆರ್ಥಿಕ ನೀತಿಯನ್ನು ಕ್ರಮೇಣ ಬಿಗಿಗೊಳಿಸುವುದನ್ನು ಮುಂದುವರೆಸಬೇಕು ಎಂದು ಅದು ಸೂಚಿಸಿತು. ೨೦೧೬ರ ನೋಟು ಅಮಾನ್ಯೀಕರಣ ಮತ್ತು ಕಳೆದ ವರ್ಷದ ರಾಷ್ಟ್ರವ್ಯಾಪಿ ಮಾರಾಟ ತೆರಿಗೆ ವ್ಯವಸ್ಥೆ ಬದಲಾವಣೆ ಬಳಿಕ, ಭಾರತದ ಆರ್ಥಿಕತೆ ಪುನಃ ತನ್ನ ವೇಗವನ್ನು ಪಡೆದುಕೊಳ್ಳಲು ಆರಂಭಿಸಿದೆ. ಜನವರಿ-ಮಾರ್ಚ್ ನಡುವಣ ೭ ತ್ರೈಮಾಸಿಕಗಳಲ್ಲಿ ಬೆಳವಣಿಗೆಯ ವೇಗ ಹೆಚ್ಚಿದೆ ಮತ್ತು ಖರೀದಿ ನಿರ್ವಾಹಕರ ಸಮೀಕ್ಷೆಗಳು ಮತ್ತು ಆಟೋ ಮಾರಾಟ ಮಾಹಿತಿಯು ಭಾರತದ ಆರ್ಥಿಕತೆ ಶೇಕಡಾ ೭ಕ್ಕಿಂತ ಮೇಲಿನ ಪ್ರಗತಿಯನ್ನು ದಾಖಲಿಸುವ ಸಾಧ್ಯತೆಗಳನ್ನು ವ್ಯಕ್ತಪಡಿಸಿವೆ ಎಂದು ಐಎಂಎಫ್ ಹೇಳಿತು. ಸರ್ಕಾರವು ಜೂನ್ ನಲ್ಲಿ ಮುಕ್ತಾಯವಾದ ಮೂರು ತಿಂಗಳ ಆಂತರಿಕ ದೇಶೀ ಉತ್ಪನ್ನ (ಜಿಡಿಪಿ) ಮಾಹಿತಿಯನ್ನು ಆಗಸ್ಟ್ ೩೧ರ ವೇಳೆಗೆ ಪ್ರಕಟಿಸಬೇಕಾಗಿದೆ. ನಿರುದ್ಯೋಗ ಮತ್ತು ರೈತರ ಸಂಕಷ್ಟದಂತಹ ವಿಷಯಗಳು ಇನ್ನೂ ಮುಂದುವರೆದಿರುವುದರಿಂದ ಆರ್ಥಿಕ ಪ್ರಗತಿದರವು ಏರುಗತಿಯಲ್ಲಿದ್ದರೂ ಅದು ಮುಂದಿನ ವರ್ಷದ ಚುನಾವಣೆಗಳಲ್ಲಿ ಮತದಾರರ ಮೇಲೆ ಪರಿಣಾಮ ಬೀರೀತು ಎನ್ನಲಾಗದು ಎನ್ನಲಾಯಿತು. ಇತರ ’ರಿಸ್ಕ್’ಗಳೂ ಇವೆ. ರೂಪಾಯಿಯು ಡಾಲರ್ ಎದುರು ಈ ವರ್ಷ ಶೇಕಡಾ ೭ರಷ್ಟು ಕುಸಿತ ಕಂಡಿದೆ. ಇದು ಹಣದುಬ್ಬರದ ಬೆದರಿಕೆಗೆ ಕಾರಣವಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಕಳೆದ ವಾರ ತನ್ನ ಬಡ್ಡಿದರ ಏರಿಕೆ ತೀರ್ಮಾನವನ್ನು ಪ್ರಕಟಿಸಿದೆ. ನೀತಿ ನಿರೂಪಕರು ಜಾಗತಿಕ ವಾಣಿಜ್ಯ ಉದ್ವಿಗ್ನತೆ ಮತ್ತು ಅತಿಯಾದ ತೈಲಬೆಲೆಗಳ ಹಿನ್ನೆಲೆಯಲ್ಲಿ ಆರ್ಥಿಕ ಸ್ಥಿರತೆ ಕಾಪಾಡಿಕೊಳ್ಳಲು ಯತ್ನಿಸಬೇಕಾಗುತ್ತದೆ. ರಚನಾತ್ಮಕ ಸುಧಾರಣೆಗಳನ್ನು ಮುಂದುವರೆಸುವುದು ಅಧಿಕ ಬೆಳವಣಿಗೆಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಸಲ್ಗಾಡೊ ಅವರು ಕಾನ್ಫರೆನ್ಸ್ ಕಾಲ್ ನಲ್ಲಿ ಮಾತನಾಡುತ್ತಾ ಹೇಳಿದರು. ಸರಕು ಮತ್ತು ಸೇವಾ ತೆರಿಗೆಯನ್ನು ಇನ್ನಷ್ಟು ಸುಧಾರಿಸುವುದರಿಂದ ಗರಿಷ್ಠ ಲಾಭ ಸಾಧ್ಯ. ಕಾರ್ಮಿಕ ಸುಧಾರಣೆಗಳು ಕಂಪೆನಿಗಳ ವಿಸ್ತರಣೆಗೆ ಪ್ರೋತ್ಸಾಹಕವಾಗುತ್ತವೆ ಎಂದು ಅವರು ನುಡಿದರು.
2018: ಮುಂಬೈ: ತಮ್ಮ ಮೀಸಲಾತಿ ಬೇಡಿಕೆಯನ್ನು ಮುಂದಿಟ್ಟು, ರಾಜ್ಯವ್ಯಾಪಿ ಬಂದ್ ಗೆ ಕರೆ ನೀಡಿದ್ದ ಮರಾಠಾ ಸಮುದಾಯಗಳ ಪ್ರತಿಭಟನಕಾರರು ಮಹಾರಾಷ್ಟ್ರದ ಕೆಲವುಭಾಗಗಳಲ್ಲಿ ರಸ್ತೆಗಳನ್ನು ಬಂದ್ ಮಾಡುವುದರ ಜೊತೆಗೆ ಹಲವಡೆಗಳಲ್ಲಿ ಟೈರುಗಳನ್ನು ಸುಟ್ಟು ಹಾಕಿದರು. ಶಾಂತಿ ಕಾಪಾಡಿಕೊಳ್ಳುವಂತೆ ಸಮುದಾಯದ ನಾಯಕರು ಮನವಿ ಮಾಡಿದ್ದರ ಹೊರತಾಗಿಯೂ, ಹಲವಡೆ ಅಹಿತಕರ ಘಟನೆಗಳು ಘಟಿಸಿದವು ಎಂದು ಪೊಲೀಸರು ತಿಳಿಸಿದರು. ಲಾತೂರ್, ಜಲ್ನಾ, ಸೋಲಾಪುರ ಮತ್ತು ಬುಲ್ದಾನ ಜಿಲ್ಲೆಗಳಲ್ಲಿ ಬಸ್ಸುಗಳು ಮತ್ತು ಇತರ ವಾಹನಗಳ ಸಂಚಾರವನ್ನು ಅಡ್ಡ ಗಟ್ಟಿದ ಪ್ರತಿಭಟನಕಾರರು ಸೋಲಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ನಂ.೯ (ಪುಣೆ-ಹೈದರಾಬಾದ್) ಜೊತೆಗೆ ಸಂಪರ್ಕ ಕಲ್ಪಿಸುವ ಮಧಾ-ಶೆತ್ಪಲ್ ರಸ್ತೆಯನ್ನು ಬಂದ್ ಮಾಡಿದರು ಎಂದು ಅಧಿಕಾರಿಗಳು ತಿಳಿಸಿದರು. ಲಾತೂರಿನಲ್ಲಿ ಪ್ರತಿಭಟನಕಾರರು ಹಿಂದಿನ ದಿನ ಮಧ್ಯರಾತ್ರಿಯಿಂದಲೇ ರಸ್ತೆಗಳನ್ನು ಅಡ್ಡಗಟ್ಟಿದರು. ಕೆಲವು ಚಳವಳಿಕಾರರು ಜಲ್ನಾ ಮತ್ತು ಅಹ್ಮದ್ ನಗರ ಜಿಲ್ಲೆಗಳಲ್ಲಿ ರಸ್ತೆಗಳಲ್ಲಿ ಟೈರುಗಳನ್ನು ಸುಟ್ಟು ಹಾಕಿದರು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ಔರಂಗಾಬಾದ್ ಜಿಲ್ಲೆಯ ಕ್ರಾಂತಿ ಚೌಕದಲ್ಲಿ ಕೆಲವರು ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ವಿರುದ್ಧ ಘೋಷಣೆಗಳನ್ನು ಕೂಗಿದಾಗ ಪ್ರತಿಭಟನಕಾರರ ಎರಡು ಗುಂಪುಗಳ ಮಧ್ಯೆ ಘರ್ಷಣೆ ಸಂಭವಿಸಿತು. ಸೇನೆಯ ಜಿಲ್ಲಾ ಮುಖ್ಯಸ್ಥ ಅಂಬಾದಾಸ್ ದಾನ್ವೆ ಅವರು ಘೋಷಣೆಗಳನ್ನು ಆಕ್ಷೇಪಿಸಿದರು. ಬಳಿಕ ಉಭಯ ಗುಂಪುಗಳು ಪರಸ್ಪರ ಹೊಡೆದಾಡಿಕೊಂಡವು ಎಂದು ಅಧಿಕಾರಿ ನುಡಿದರು. ಘರ್ಷಣೆಯಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡರು. ಆದರೆ ನಾವು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದೆವು ಮತ್ತು ಉಭಯ ಗುಂಪುಗಳನ್ನೂ ಪ್ರತ್ಯೇಕಿಸಿ ಚದುರಿಸಿದೆವು ಎಂದು ಅಧಿಕಾರಿ ಹೇಳಿದರು. ಮರಾಠಾ ಕ್ರಾಂತಿ ಮೋರ್ಚಾ (ಎಂಎಂಕೆ) ಹೆಸರಿನ ಒಂದು ಸಮೂಹವು ಬಾಂದ್ರಾದಲ್ಲಿ ಹೊರವಲಯ ಕಲೆಕ್ಟರ್ ಕಚೇರಿಯ ಹೊರಗೆ ಧರಣಿ ನಡೆಸಲು ಕರೆ ನೀಡಿದಾಗ, ಇನ್ನೊಂದು ಬಣವು ಸಮುದಾಯಕ್ಕೆ ಶೇಕಡಾ ೧೬ ಮೀಸಲಾತಿಗೆ ಆಗ್ರಹಿಸಿ ಹರತಾಳ ಆಚರಿಸಬೇಕು ಎಂದು ಪ್ರಕಟಿಸಿತು. ಮರಾಠಾ ಸಮುದಾಯಗಳ ಮುಖ್ಯ ಸಂಸ್ಥೆಯಾದ ಸಕಾಲ್ ಮರಾಠಾ ಸಮಾಜ್ ಹರತಾಳಕ್ಕೆ ಕರೆ ನೀಡಿತ್ತು. ಆದರೆ ನವಿ ಮುಂಬೈಯನ್ನು ಹರತಾಳದಿಂದ ಹೊರತು ಪಡಿಸಲಾಗಿತ್ತು. ಕಳೆದ ತಿಂಗಳು ನವಿ ಮುಂಬೈಯಲ್ಲಿ ಬಂದ್ ಕರೆ ಕೊಟ್ಟಾಗ ವ್ಯಾಪಕ ಹಿಂಸಾಚಾರಗಳು ಸಂಭವಿಸಿದ್ದವು. ಹಿಂಸಾಚಾರ ಸಂಭವಿಸಿಬಹುದು ಎಂಬ ಭೀತಿಯಿಂದ ಅಧಿಕಾರಿಗಳು ಪುಣೆ ಸೇರಿದಂತೆ ಕೆಲವು ನಗರಗಳಲ್ಲಿ ಶಾಲೆ ಮತ್ತು ಕಾಲೇಜುಗಳನ್ನು ಮುಚ್ಚುವಂತೆ ಆಜ್ಞಾಪಿಸಿದ್ದರು. ಪುಣೆಯಲ್ಲಿ ಚಳವಳಿಕಾರರು ಪುಣೆ ಜಿಲ್ಲಾಧಿಕಾರಿ ಕಚೇರಿಯ ದ್ವಾರ ಮತ್ತು ಕ್ಯಾಬಿನ್ ಮೇಲೆ ದಾಳಿ ನಡೆಸಿ ಕೆಲವು ವಿದ್ಯುತ್ ಬಲ್ಪ್ ಗಳನ್ನು ಹಾನಿ ಪಡಿಸಿದರು. ವದಂತಿ ಹರಡುವುದನ್ನು ತಡೆಯಲು ಪುಣೆ ಮತ್ತು ಜಿಲ್ಲೆಯ ೭ ತಹಸಿಲ್ ಗಳಲ್ಲಿ ಇಂಟರ್ ನೆಟ್ ಸೇವೆಗಳನ್ನು ಅಮಾನತುಗೊಳಿಸಲಾಗಿತ್ತು ಎಂದು ಪುಣೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಪಾಟೀಲ್ ಹೇಳಿದರು. ಪುಣೆಯಲ್ಲಿ ಪ್ರತಿಭಟನಕಾರರು ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್ ಸಿಪಿ) ಮುಖ್ಯಸ್ಥ ಶರದ್ ಪವಾರ್ ಅವರ ನಿವಾಸದ ಹೊರಗೆ ಧರಣಿ ನಡೆಸಿದರು. ಮರಾಠಾ ಸಮುದಾಯದ ಮೀಸಲಾತಿ ಬೇಡಿಕೆಗೆ ಬೆಂಬಲವಾಗಿ ಪವಾರ್ ಸಹೋದರ ಸಂಬಂಧಿ ಅಜಿತ್ ಪವಾರ್ ಅವರೂ ಧರಣಿಯಲ್ಲಿ ಪಾಲ್ಗೊಂಡರು. ಮುಂಬೈಯಲ್ಲಿ ವಿಧಾನಭವನ ಪ್ರವೇಶಕ್ಕೆ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಕೊಲ್ಹಾಪುರದ ಶಿವಸೇನಾ ಶಾಸಕ ಪ್ರಕಾಶ್ ಅಬಿಟ್ಕರ್ ಶಾಸಕರ ಸಮುಚ್ಚಯದ ಹೊರಭಾಗದಲ್ಲೇ ಧರಣಿ ಹೂಡಿದರು. ನಗರದಲ್ಲಿ ಬಸ್ಸುಗಳು ಮತ್ತು ರೈಲುಗಳ ಸಂಚಾರ ವಿರಳವಾಗಿತ್ತು. ಹಿಂಸೆಯ ಭೀತಿಯಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ತನ್ನ ಅಂತರ್ ನಗರ ಮಾರ್ಗದ ಬಸ್ಸುಗಳ ಸಂಚಾರವನ್ನು ರದ್ದು ಪಡಿಸಿತ್ತು. ನವೀಮುಂಬೈಯಲ್ಲಿ ಬಂದ್ ಗೆ ವಿನಾಯ್ತಿ ನೀಡಲಾಗಿದ್ದರೂ, ತುರ್ಭೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣ ಮುಚ್ಚಲ್ಪಟ್ಟಿತ್ತು. ನವೀ ಮುಂಬೈಯಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಮುಂಬೈ ಘಾಟ್ಕೋಪರ್ ಮತ್ತು ನೆರೆಯ ಥಾಣೆ ಜಿಲ್ಲೆಯಲ್ಲಿ ಪ್ರದರ್ಶನಕಾರರು ಮೌನ ಮೆರವಣಿಗೆಗಳನ್ನು ನಡೆಸಿದರು.
2018: ನವದೆಹಲಿ: ತಮ್ಮ ಪತ್ನಿಯರಿಗೆ ದಿಢೀರ್ ತ್ರಿವಳಿ ತಲಾಖ್ ನೀಡುವ ಪ್ರಕರಣಗಳಲ್ಲಿ ತಪ್ಪಿತಸ್ಥರಾದ ಪುರುಷರಿಗೆ ಜಾಮೀನು ನೀಡಲು ಅವಕಾಶವನ್ನು ಕಲ್ಪಿಸುವ ವಿಧಿಯನ್ನು ಸೇರ್ಪಡೆ ಮಾಡಲು ಕೇಂದ್ರ ಸಚಿವ ಸಂಪುಟವು ತನ್ನ ಒಪ್ಪಿಗೆ ನೀಡಿತು. ಮಸೂದೆಯ ಪ್ರಕಾರ, ಒಂದೇ ಉಸಿರಿಗೆ ತ್ರಿವಳಿ ತಲಾಖ್ ಹೇಳಿ ವಿಚ್ಛೇದನ ನೀಡುವುದು ಅಕ್ರಮ ಮತ್ತು ಅಸಿಂಧುವಾಗಿದ್ದು ಇಂತಹ ತಪ್ಪೆಸಗಿದ ಪತಿಗೆ ಮೂರು ವರ್ಷಗಳ ಅವಧಿಯ ಸೆರೆವಾಸವನ್ನು ವಿಧಿಸಬಹುದು. ಮುಸ್ಲಿಂ ಮಹಿಳಾ ಮದುವೆ ಹಕ್ಕುಗಳ ಸಂರಕ್ಷಣಾ ಮಸೂದೆಗೆ ಲೋಕಸಭೆಯು ಅನುಮೋದನೆ ನೀಡಿದ್ದು, ರಾಜ್ಯಸಭೆಯಲ್ಲಿ ಅನುಮೋದನೆ ಪಡೆಯಬೇಕಾಗಿದೆ. ರಾಜ್ಯಸಭೆಯಲ್ಲಿ ಸರ್ಕಾರಕ್ಕೆ ಸದಸ್ಯರ ಕೊರತೆ ಇದ್ದು, ತಪ್ಪಿತಸ್ಥ ಪುರುಷರಿಗೆ ಜಾಮೀನು ನೀಡಲು ಮಸೂದೆಯಲ್ಲಿ ಅವಕಾಶ ಕಲ್ಪಿಸಬೇಕು ಎಂಬುದು ವಿರೋಧ ಪಕ್ಷಗಳ ಬೇಡಿಕೆಗಳಲ್ಲಿ ಒಂದಾಗಿದೆ. ಈದಿನ ಕೇಂದ್ರ ಸಂಪುಟವು ಒಪ್ಪಿಗೆ ನೀಡಿರುವ ತಿದ್ದುಪಡಿ ಪ್ರಕಾರ ಮ್ಯಾಜಿಸ್ಟ್ರೇಟರು ಜಾಮೀನು ನೀಡುವ ಅಧಿಕಾರವನ್ನು ಹೊಂದಿರುತ್ತಾರೆ ಎಂದು ಮೂಲಗಳು ಹೇಳಿದವು. ಪ್ರಸ್ತಾಪಿತ ಕಾನೂನು ಒಂದೇ ಉಸಿರಿನ ತ್ರಿವಳಿ ತಲಾಖ್ ಅಥವಾ ’ತಲಾಖ್-ಇ-ಬಿದ್ದತ್’ ಗೆ ಮಾತ್ರ ಅನ್ವಯಿಸುವುದು. ಇದು ಶೋಷಿತ ಮಹಿಳೆಯು ಮ್ಯಾಜಿಸ್ಟ್ರೇಟರನ್ನು ಸಂಪರ್ಕಿಸಿ ತನಗೆ ಮತ್ತು ಅಪ್ರಾಪ್ತ ಮಕ್ಕಳಿಗೆ ಜೀವನಾಧಾರ ಭತ್ಯೆ ಒದಗಿಸುವಂತೆ ಕೋರಲು ಅವಕಾಶ ಕಲ್ಪಿಸುತ್ತದೆ. ಮಹಿಳೆಯು ತನ್ನ ಅಪ್ರಾಪ್ತ ಮಕ್ಕಳನ್ನು ತನ್ನ ವಶಕ್ಕೆ ಒಪ್ಪಿಸುವಂತೆಯೂ ಮ್ಯಾಜಿಸ್ಟ್ರೇಟರನ್ನು ಕೋರಬಹುದು. ಮ್ಯಾಜಿಸ್ಟ್ರೇಟರಿಗೆ ವಿಷಯಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರ ಇರುತ್ತದೆ.
2018: ನವದೆಹಲಿ/ ಜೈಪುರ: ರಾಜಸ್ಥಾನ ಸರ್ಕಾರವು ’ಇಸ್ಲಾಮಿಕ್’ ಹೆಸರಿನಂತೆ ಧ್ವನಿಸುತ್ತಿದ್ದ ಮೂರು ಗ್ರಾಮಗಳ ಹೆಸರುಗಳನ್ನು ಬದಲಾಯಿಸಿ ಹೊಸ ಹೆಸರು ಇಟ್ಟಿತು. ಕೇಂದ್ರ ಸರ್ಕಾರವು ಒಪ್ಪಿಗೆ ಕೊಟ್ಟ ಬಳಿಕ ವಸುಂಧರಾರಾಜೆ ಸರ್ಕಾರವು ಗ್ರಾಮಗಳ ಹೆಸರು ಬದಲಾಯಿಸುವ ನಿರ್ಣಯವನ್ನು ಔಪಚಾರಿಕವಾಗಿ ಅನುಷ್ಠಾನಗೊಳಿಸಿತು. ತಮ್ಮ ಗ್ರಾಮಗಳ ಹೆಸರು ’ಮುಸ್ಲಿಮ್ ಹೆಸರುಗಳಂತೆ’ ಧ್ವನಿಸುತ್ತಿರುವುದಾಗಿ ಈ ಗ್ರಾಮಗಳ ನಿವಾಸಿಗಳು ದೂರು ನೀಡಿದ ಬಳಿಕ ಇಂತಹ ಗ್ರಾಮಗಳ ಹೆಸರು ಬದಲಾಯಿಸುವ ನಿರ್ಣಯವನ್ನು ರಾಜ್ಯ ಸರ್ಕಾರ ತೆಗೆದುಕೊಂಡಿತು ಎಂದು ಮೂಲಗಳು ಹೇಳಿದವು. ‘ಮಿಯೋಂ ಕಾ ಬಾರಾ’ ಗ್ರಾಮವು ಬರ್ಮೇರ್ ಜಿಲ್ಲೆಯ ಗಡಿಯಲ್ಲಿದೆ. ಈ ಗ್ರಾಮವು ೨೦೦೦ ಜನಸಂಖ್ಯೆಯನ್ನು ಹೊಂದಿದ್ದು, ಗ್ರಾಮವು ಹಿಂದು ಬಹುಸಂಖ್ಯಾತ ಗ್ರಾಮವಾಗಿದೆ. ಈ ಗ್ರಾಮದಲ್ಲಿ ಇರುವ ಮುಸ್ಲಿಮ್ ಕುಟುಂಬಗಳು ಕೇವಲ ನಾಲ್ಕು. ‘ಮಿಯೋಂ ಕಾ ಬಾರಾ’ ಗ್ರಾಮದ ಜನರು, ಗ್ರಾಮದ ಹೆಸರು ತಮಗೆ ಮುಜುಗರ ಉಂಟು ಮಾಡುತ್ತಿರುವುದರಿಂದ ಅದನ್ನು ಬದಲಾಯಿಸಬೇಕು ಎಂದು ಜಿಲ್ಲಾ ಆಡಳಿತಕ್ಕೆ ದೂರು ನೀಡಿದ್ದರು. ತಮ್ಮ ಗ್ರಾಮದ ಹೆಸರು ಮುಸ್ಲಿಮ್ ಹೆಸರನ್ನು ಧ್ವನಿಸುತ್ತಿರುವುದರಿಂದ ನೆರೆಹೊರೆಯ ಗ್ರಾಮಸ್ಥರಿಂದ ತಮಗೆ ಮದುವೆ ಪ್ರಸ್ತಾಪಗಳು ಬರುವುದೇ ನಿಂತು ಹೋಗಿದೆ ಎಂದು ಗ್ರಾಮದ ಯುವ ಜನರು ಜಿಲ್ಲಾ ಆಡಳಿತಕ್ಕೆ ದೂರು ನೀಡಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಆಸುಪಾಸಿನ ಇತರ ಗ್ರಾಮಗಳ ಜನರಿಂದಲೂ ಇಂತಹುದೇ ದೂರುಗಳು ಬಂದ ಬಳಿಕ ರಾಜ್ಯ ಸರ್ಕಾರವು ಅಂತಹ ಗ್ರಾಮಗಳ ಹೆಸರು ಬದಲಿಸಲು ತೀರ್ಮಾನಿಸಿತು ಎಂದು ವರದಿಗಳು ಹೇಳಿದವು. ‘ಭವಿಷ್ಯದಲ್ಲಿ ಮಿಯೋಂ ಕಾ ಬಾರಾ ಗ್ರಾಮವನ್ನು ಹೆಸರು ಬದಲಾಯಿಸಲಾಗಿರುವ ಹೊಸ ’ಮಹೇಶ್ ನಗರ’ ಎಂಬುದಾಗಿ ಗುರುತಿಸಲಾಗುವುದು ಮತ್ತು ಕರೆಯಲಾಗುವುದು ಎಂದು ಆಗಸ್ಟ್ ೧ರ ದಿನಾಂಕದ ರಾಜ್ಯ ಸರ್ಕಾರಿ ಸುತ್ತೋಲೆ ತಿಳಿಸಿತು. ಈ ಗ್ರಾಮದ ಜೊತೆಗೆ ಇನ್ನೆರಡು ಗ್ರಾಮಗಳ ಹೆಸರುಗಳನ್ನೂ ಇದೇ ರೀತಿ ಬದಲಾಯಿಸಲಾಯಿತು. ಹಿಂದೆ ’ಇಸ್ಮಾಯಿಲ್ ಪುರ ಗ್ರಾಮ’ ಎಂಬುದಾಗಿ ಗುರುತಿಸಲಾಗುತ್ತಿದ್ದ ಜುಂಜುನು ಜಿಲ್ಲೆಯ ಗ್ರಾಮವನ್ನು ಇನ್ನು ಮುಂದೆ ’ಪಿಚನ್ವಾ ಖುರ್ದ್’ ಎಂಬುದಾಗಿ ಕರೆಯಲಾಗುವುದು. ಹಾಗೆಯೇ ಜಲೋರ್ ಜಿಲ್ಲೆಯ ’ನರಪಾರ’ ಗ್ರಾಮವನ್ನು ಇನ್ನು ಮುಂದೆ ಹೊಸದಾಗಿ ಬದಲಾಯಿಸಲಾಗಿರುವ ’ನರಪುರ’ ಹೆಸರಿನಲ್ಲಿ ಗುರುತಿಸಲಾಗುವುದು ಎಂದು ವರದಿಗಳು ಹೇಳಿದವು.
2008: ಬಂಗಾಳಕೊಲ್ಲಿಯಲ್ಲಿನ ವಾಯುಭಾರ ಕುಸಿತದಿಂದಾಗಿ ಆಂಧ್ರಪ್ರದೇಶ ಮತ್ತು ಒರಿಸ್ಸಾ ರಾಜ್ಯಗಳಲ್ಲಿ ಸುರಿದ ಭಾರಿ ಮಳೆಗೆ ಆಂಧ್ರಪ್ರದೇಶದಲ್ಲಿ 36 ಜನ ಹಾಗೂ ಒರಿಸ್ಸಾದಲ್ಲಿ ಒಬ್ಬರು ಮೃತರಾದರು.
2015: ನವದೆಹಲಿ: ಹೆಚ್ಚಿನ ಬಳಕೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ವರ್ಷ ಮನವಿ ಮಾಡಿದ ಬಳಿಕ ಖಾದಿಯ ಮಾರಾಟ ಹೆಚ್ಚಾಗಿದ್ದು, ಈಗ ಬಾಲಿವುಡ್ ’ಮೆಗಾಸ್ಟಾರ್’ ಅಮಿತಾಭ್ ಬಚ್ಚನ್ ಅದರ ‘ಬ್ರಾಂಡ್ ಅಂಬಾಸಿಡರ್’ ಆಗಲಿದ್ದಾರೆ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಅರುಣ್
ಕುಮಾರ್ ಝಾ ಅವರು ‘ಯಾವುದೇ ಶುಲ್ಕವನ್ನೂ ತೆಗೆದುಕೊಳ್ಳದೆ ಖಾದಿಯ ಬ್ರಾಂಡ್ ಅಂಬಾಸಿಡರ್ ಆಗಲು ಅಮಿತಾಭ್ ಬಚ್ಚನ್ ತಮ್ಮ ಒಪ್ಪಿಗೆ ನೀಡಿದ್ದಾರೆ’ ಎಂದು ಇಲ್ಲಿ ತಿಳಿಸಿದರು. ‘ಅವರು ಕಳೆದ ತಿಂಗಳಲ್ಲೇ ತಮ್ಮ ಒಪ್ಪಿಗೆ ನೀಡಿದ್ದರು. ಇದು ನಮಗೆ ಅತ್ಯಂತ ದೊಡ್ಡ ವಿಷಯ’ ಎಂದು ಝಾ ಹೇಳಿದರು. ಕಳೆದ ವರ್ಷ ಪ್ರಧಾನಿಯವರು ತಮ್ಮ ’ಮನ್ ಕಿ ಬಾತ್’ ಬಾನುಲಿ ಕಾರ್ಯಕ್ರಮದಲ್ಲಿ ಖಾದಿ ಮಾರಾಟ ಹೆಚ್ಚಿಸುವ ಸಲುವಾಗಿ ಹೆಚ್ಚಿನ ಪ್ರಮಾಣದಲ್ಲಿ ಖಾದಿ ಬಳಸುವಂತೆ ಮನವಿ ಮಾಡಿದ್ದರು. ಪ್ರಧಾನಿಯ ಮನವಿ ಬಳಿಕ ಗ್ರಾಹಕ ಗೆಳೆಯರಾಗಿ ಬೆಳೆಯಲು ನಾವು ಹಲವಾರು ಉಪಕ್ರಮಗಳನ್ನು ಕೈಗೊಂಡೆವು. ಹೊಸ ವಿನ್ಯಾಸದ ಉಡುಪುಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆವು. ಕೇಂದ್ರ ದೆಹಲಿಯ ಮಳಿಗೆಯಲ್ಲಿ ನಮ್ಮ ಮಾರಾಟ ಶೇಕಡಾ 60ರಷ್ಟು ಹೆಚ್ಚಿತು ಎಂದು ಝಾ ವಿವರಿಸಿದರು. ಯುವಕರ ಮನ ಗೆಲ್ಲಲು ಜೀನ್ಸ್ನಿಂದ ಹಿಡಿದು ಟೀಶರ್ಟ್ ಮತ್ತು ಜಾಕೆಟ್ವರೆಗೂ ಹಲವಾರು ಬಗೆಯ ವೈವಿಧ್ಯಮಯ ಉಡುಪುಗಳನ್ನು ಕೆವಿಐಸಿ ಜೂನ್ ತಿಂಗಳಲ್ಲಿ ಬಿಡುಗಡೆ ಮಾಡಿತ್ತು.
2015: ಶ್ರೀನಗರ: ಉತ್ತರ ಕಾಶ್ಮೀರದ ಕುಪ್ವಾರ ಜಿಲ್ಲೆಯ ಕೇರನ್ ವಿಭಾಗದ ಗಡಿ ನಿಯಂತ್ರಣ ರೇಖೆಯಲ್ಲಿ ಇಬ್ಬರು
ಉಗ್ರಗಾಮಿಗಳನ್ನು ಕೊಲ್ಲುವ ಮೂಲಕ ನುಸುಳುವಿಕೆ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿತು. ಕೇರನ್ ವಿಭಾಗದ ಜುಮಾಗುಂಡ್ ನರ್ ನಿಯಂತ್ರಣ ರೇಖೆಯಲ್ಲಿ ಗಡಿಯಾಚೆಯಿಂದ ಉಗ್ರಗಾಮಿಗಳು ಗುಂಪೊಂದು ನುಸುಳುವ ಯತ್ನ ನಡೆಸುತ್ತಿದ್ದುದು ಸೇನಾ ಪಡೆಗಳ ಗಮನಕ್ಕೆ ಬಂತು. ಪಡೆಗಳು ಉಗ್ರಗಾಮಿಗಳನ್ನು ಪ್ರಶ್ನಿಸಿದಾಗ, ಅವರಿಂದ ಯದ್ವಾತದ್ವ ಗುಂಡಿನ ದಾಳಿ ಪ್ರಾರಂಭವಾಯಿತು ಎಂದು ಸೇನಾ ಅಧಿಕಾರಿ ತಿಳಿಸಿದರು. ಸೇನಾ ಪಡೆಗಳು ತಕ್ಕ ಉತ್ತರ ನೀಡಿದವು. ಸೇನಾ ಪಡೆಗಳ ಪ್ರತಿದಾಳಿಗೆ ಇಬ್ಬರು ಉಗ್ರಗಾಮಿಗಳು ಸಾವನ್ನಪ್ಪಿದರು ಎಂದು ಅವರು ನುಡಿದರು. 24 ಗಂಟೆಗಳಲ್ಲಿ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಸೇನೆ ಮತ್ತು ಉಗ್ರಗಾಮಿಗಳ ಮಧ್ಯೆ ನಡೆದ 2ನೇ ಘರ್ಷಣೆ ಇದು. ಇದಕ್ಕೆ ಮುನ್ನ ಕುಪ್ಪಾರ ಜಿಲ್ಲೆಯ ತಂಗ್ಧರ್ ವಿಭಾಗದಲ್ಲಿ ಹಿಂದಿನ ರಾತ್ರಿ ನಡೆದ ಗುಂಡಿನ ಘರ್ಷಣೆಯಲ್ಲಿ ಒಬ್ಬ ಯೋಧ ಮೃತನಾಗಿ ಇತರ ಇಬ್ಬರು ಗಾಯಗೊಂಡಿದ್ದರು.2015: ಕಾಸರಗೋಡು: ಸ್ವಾತಂತ್ರ್ಯ ಹೋರಾಟಗಾರ, ಮಹಾಕವಿ, ಕರ್ನಾಟಕ ಏಕೀಕರಣ ಚಳವಳಿಯ ನಾಯಕ, ಬಹುಭಾಷಾ ವಿದ್ವಾಂಸ ಕಯ್ಯಾರ ಕಿಞ್ಞಣ್ಣ ರೈ ಬಡಿಯಡ್ಕದ ತಮ್ಮ ನಿವಾಸದಲ್ಲಿ ಈದಿನ ಮಧ್ಯಾಹ್ನ ವಿಧಿವಶರಾದರು. ನಾಡೋಜ ಬಿರುದಾಂಕಿತರಾಗಿದ್ದ ಅವರಿಗೆ 101 ವರ್ಷ ವಯಸ್ಸಾಗಿತ್ತು. ಇತ್ತೀಚೆಗಷ್ಟೇ ಅವರಿಗೆ ರಾಜ್ಯ ಸರ್ಕಾರ ಪಂಪ ಪ್ರಶಸ್ತಿ ನೀಡಿ ಗೌರವಿಸಿತ್ತು. ಕಾಸರಗೋಡು ವಿಲೀನೀಕರಣ ಕ್ರಿಯಾ ಸಮಿತಿಯ ಪ್ರಧಾನ ಸಂಚಾಲಕರಾಗಿ, ಕಾಸರಗೋಡನ್ನು ಕರ್ನಾಟಕಕ್ಕೆ ಸೇರ್ಪಡೆಗೊಳಿಸಲು ಸಾಕಷ್ಟು ಶ್ರಮಿಸಿದ್ದರು. ಅಲ್ಲದೆ, ಮಂಗಳೂರಿನಲ್ಲಿ ನಡೆದಿದ್ದ 66ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕಯ್ಯಾರ ಕಿಞ್ಞಣ್ಣ ರೈ ಕೇರಳ ರಾಜ್ಯದಲ್ಲಿರುವ ಕಾಸರಗೋಡು ತಾಲೂಕಿನ ಪೆರಡಾಲ ಗ್ರಾಮದಲ್ಲಿ 1915ರ ಜೂನ್ 8 ರಂದು ಜನಿಸಿದರು. ತಂದೆ ದುಗ್ಗಪ್ಪ ರೈ, ತಾಯಿ ದೈಯಕ್ಕೆ. ಕಯ್ಯಾರ ಕಿಞ್ಞಣ್ಣ ರೈ ಅವರು ಉಞ್ಞಕ್ಕ ಅವರೊಂದಿಗೆ ಸಪ್ತಪದಿ ತುಳಿದು, ಬದಿಯಡ್ಕ ಪೆರಡಾಲ ಕವಿತಾ ಕುಟೀರದಲ್ಲಿ 6 ಗಂಡು ಮತ್ತು ಇಬ್ಬರು ಹೆಣ್ಣುಮಕ್ಕಳ ತುಂಬು ಸಂಸಾರ ತೂಗಿಸಿದರು. ಮನೆಮಾತು ತುಳು ಆಗಿದ್ದರೂ, ಕಯ್ಯಾರ ಕಿಞ್ಞಣ್ಣ ರೈ ಕನ್ನಡ ಸಾಹಿತ್ಯ ಕೃಷಿಗೆ ಮುಂದಾಗಿದ್ದರು. ತುಳುವಿನಲ್ಲಿ ಅವರು ಹಲವಾರು ಕವನಗಳು ಹಾಗೂ ಲೇಖನಗಳನ್ನು ಬರೆದಿದ್ದರು. ’ಪರಿವು ಕಟ್ಟುಜಿ, ರಡ್ಡ್ ಕಣ್ಣ್ಡ್’ ’ಸಾರೊ ಎಸಳ್ದ ತಾಮರೆ’ ’ಲೆಪ್ಪುನ್ಯೇರ್?’ ’ಬತ್ತನೊ ಈ ಬರ್ಪನೊ’ - ರೈಗಳ ಕೆಲವು ತುಳು ಕವನಗಳು. ಅವರ ಕನ್ನಡ ಕವಿತೆಗಳಲ್ಲಿ ಹೆಚ್ಚಾಗಿ ಕಾಣಸಿಗದ ಪ್ರಾದೇಶಿಕ ರಂಗು, ಜಾನಪದ ಸ್ಪರ್ಶ ತುಳು ಕವನಗಳಲ್ಲಿ ಅರಳಿಕೊಳ್ಳುತ್ತದೆ. ’ಕನ್ನಡಾಂತರ್ಗತವಾದ ತುಳು ಬದುಕ’ನ್ನು ಒಪ್ಪಿದ ಕವಿ ತುಳು ಭಾಷೆಯ ಸ್ಥಿತಿಗತಿಯ ಬಗ್ಗೆ
ವ್ಯಥೆಪಡುತ್ತಿದ್ದರು. ಶಿಕ್ಷಣ: ಕಯ್ಯಾರರು ಸಂಸ್ಕೃತ ಮತ್ತು ಕನ್ನಡ ಭಾಷೆಗಳಲ್ಲಿ ವಿದ್ವಾನ್ ಪದವಿ ಪಡೆದ ಬಳಿಕ ಬಿ.ಎ.ಪದವಿಯನ್ನು ಪಡೆದು ಅಧ್ಯಾಪಕ ತರಬೇತಿಯನ್ನು ಹೊಂದಿದ್ದರು. ಆನಂತರ ಎಂ.ಎ. ಸ್ನಾತಕೋತ್ತರ ಪದವಿ ವ್ಯಾಸಂಗ ಪೂರೈಸಿ, ಕಾಸರಗೋಡು ಬಳಿಯ ಪೆರಡಾಲ ಗ್ರಾಮದ ನವಜೀವನ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು. ರಾಷ್ಟ್ರದಲ್ಲಿ ಸ್ವಾತಂತ್ರ್ಯ ಹೋರಾಟ ತೀವ್ರವಾಗಿದ್ದ ಸಂದರ್ಭದಲ್ಲಿ ಕಯ್ಯಾರರು ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯರಾಗಿ ಪಾಲ್ಗೊಂಡಿದ್ದರು. ಹರಿಜನ ಸೇವಕ ಸಂಘಟನೆಗಳಲ್ಲಿ ದುಡಿದಿದ್ದರು. ಸ್ಥಳೀಯ ಪಂಚಾಯ್ತಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದ ಅವರು, ಕೇರಳ ಸಂಗೀತ ನಾಟಕ ಆಕಾಡೆಮಿಯ ಸದಸ್ಯರಾಗಿದ್ದರು. ಕಯ್ಯಾರ ಕಿಞ್ಞಣ್ಣ ರೈ ಅವರು ಶ್ರೀಮುಖ, ಐಕ್ಯಗಾನ, ಪುನರ್ನವ, ಚೇತನ, ಕೊರಗ, ಶತಮಾನದ ಗಾನ, ಗಂಧವತಿ, ಪ್ರತಿಭಾ ಪಯಸ್ವಿನಿ, ಮೊದಲಾದ ಕನ್ನಡ ಕವನ ಸಂಕಲನಗಳನ್ನು, ಒಂದು ತುಳು ಕವನ ಸಂಕಲನವನ್ನು ಹೊರತಂದ್ದಿರು. ಕಾರ್ನಾಡ ಸದಾಶಿವರಾವ್, ರತ್ನರಾಜಿ, ಎ.ಬಿ.ಶೆಟ್ಟಿ ಮೊದಲಾದವರ ಜೀವನಚರಿತ್ರೆಗಳನ್ನು ಹಾಗು ಕಥಾಸಂಗ್ರಹಗಳನ್ನು ಬರೆದಿದ್ದಾರೆ. ರಾಷ್ಟ್ರಕವಿ ಗೋವಿಂದ ಪೈ ಅವರ ಬಗ್ಗೆ ಕಯ್ಯಾರರು 3 ಗ್ರಂಥಗಳನ್ನು ಬರೆದಿದ್ದರು. ಪಂಚಮಿ ಮತ್ತು ಆಶಾನ್ರ ಖಂಡಕಾವ್ಯಗಳು ಎನ್ನುವ ಎರಡು ಅನುವಾದ ಕೃತಿಗಳು ಅವರ ಲೇಖನಿಯಲ್ಲಿ ಮೂಡಿ ಬಂದಿವೆ. ಮಕ್ಕಳ ಪದ್ಯಮಂಜರಿ ಎನ್ನುವ ಮಕ್ಕಳ ಕವನ ಸಂಕಲನ ರಚಿಸಿದ್ದಾರೆ. ಭಾರತ ಭಾರತಿ ಪುಸ್ತಕ ಸಂಪದಮಾಲೆಯಲ್ಲಿ ಮಕ್ಕಳಿಗಾಗಿ ’ಪರಶುರಾಮ’ ಕಥೆಯನ್ನು ಬರೆದುಕೊಟ್ಟಿದ್ದರು. ನವೋದಯ ವಾಚನ ಮಾಲೆ ಎನ್ನುವ ಹೆಸರಿನಲ್ಲಿ ವಿದ್ಯಾರ್ಥಿಗಳಿಗೆ ಎಂಟು ಪಠ್ಯಪುಸ್ತಕಗಳನ್ನು, ವ್ಯಾಕರಣ ಮತ್ತು ಪ್ರಬಂಧ ಎನ್ನುವ ನಾಲ್ಕು ಕೃತಿಗಳನ್ನು ಹೊರತಂದಿದ್ದರು. ವಿರಾಗಿಣಿ ಇವರು ಬರೆದಿರುವ ನಾಟಕ. ದುಡಿತವೇ ನನ್ನ ದೇವರು ಎಂಬ ಆತ್ಮಕಥೆಯನ್ನು ರಚಿಸಿದ್ದರು. ಪ್ರಭಾತ, ರಾಷ್ಟ್ರಬಂಧು, ಸ್ವದೇಶಾಭಿಮಾನಿ ಎನ್ನುವ ಕನ್ನಡ ಪತ್ರಿಕೆಗಳ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದರು. 2014 ರ, ಜೂನ್ 8ರಂದು ಕಯ್ಯಾರರು ಜನ್ಮ ಶತಮಾನೋತ್ಸವ ಆಚರಿಸಿಕೊಂಡಿದ್ದರು. ಅಂದೇ ಬದಿಯಡ್ಕದ ಅವರ ಮನೆಗೆ ತೆರಳಿದ್ದ ರಾಜ್ಯ ಸರ್ಕಾರದ ಪ್ರತಿನಿಧಿಗಳು 2013ನೇ ಸಾಲಿನ ಪಂಪ ಪ್ರಶಸ್ತಿ ಪ್ರದಾನ ಮಾಡಿ, ಗೌರವಿಸಿದ್ದರು. ಕಯ್ಯಾರ ಅವರಿಗೆ ಈ ಕೆಳಕಂಡ ಪುರಸ್ಕಾರಗಳು ಸಂದಿದ್ದವು: *1969ರಲ್ಲಿ ಶ್ರೇಷ್ಠ ಅಧ್ಯಾಪಕ ರಾಷ್ಟ್ರಪ್ರಶಸ್ತಿ, *1969ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, *1985ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, *2005 ರಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ, *2006 ರಲ್ಲಿ ಹಂಪಿ ವಿಶ್ವವಿದ್ಯಾಲಯದ, ನಾಡೋಜ ಪ್ರಶಸ್ತಿ, *ಕರ್ನಾಟಕ ಸರಕಾರದ ಸುವರ್ಣ ಕರ್ನಾಟಕ ಏಕೀಕರಣ ಪ್ರಶಸ್ತಿ.
2015: ನವದೆಹಲಿ: ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಲಾಲೂ ಪ್ರಸಾದ್ ಯಾದವ್ ನೇತೃತ್ವದ ಬಿಜೆಪಿಯೇತರ ಮೈತ್ರಿಕೂಟದ ಮೇಲೆ ಇಲ್ಲಿ ಕಟು ಟೀಕಾ ಪ್ರಹಾರ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ‘ಜಂಗಲ್ ರಾಜ್’ ಕೊನೆಗೊಳಿಸಿ, ಆಧುನಿಕ, ಬಲಾಢ್ಯ ಬಿಹಾರ ನಿರ್ಮಾಣಕ್ಕಾಗಿ ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವನ್ನು ಆಯ್ಕೆ ಮಾಡಿ’ ಎಂದು ಜನತೆಗೆ ಮನವಿ ಮಾಡಿದರು. ಅಕ್ಟೋಬರ್ ತಿಂಗಳಲ್ಲಿ ನಡೆಯಲಿರುವ ಬಿಹಾರ ವಿಧಾನಸಭಾ ಚುನಾವಣೆಯ
ಹಿನ್ನೆಲೆಯಲ್ಲಿ ಬಿಹಾರಿನ ಗಯಾದಲ್ಲಿ ತಮ್ಮ ಎರಡನೇ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ‘ಜಂಗಲ್ ರಾಜ್ - ಭಾಗ 2 ಬಂದಲ್ಲಿ ಎಲ್ಲವೂ ಹಾಳಾಗಿಹೋಗಲಿದೆ’ ಎಂದು ಸೂಚ್ಯವಾಗಿ ಮೇವು ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಶಿಕ್ಷಿತರಾಗಿ ಸೆರೆವಾಸ ಅನುಭವಿಸಿದ್ದರತ್ತ ಬೊಟ್ಟು ಮಾಡಿದರು. ‘ಯಾರಾದರೂ ಸೆರೆವಾಸದಲ್ಲಿ ಒಳ್ಳೆ ವಿಷಯಗಳನ್ನು ಕಲಿಯುತ್ತಾರೆಯೇ? ಜಂಗಲ್ ರಾಜ್ ಭಾಗ 1ರಲ್ಲಿ ಯಾರೂ ಸೆರೆವಾಸದ ಅನುಭವ ಪಡೆದಿರಲಿಲ್ಲ. ಜಂಗಲ್ ರಾಜ್ ಭಾಗ 2ರಲ್ಲಿ ಸೆರೆಮನೆವಾಸದ ಅನುಭವ ಇದೆ’ ಎಂದು ಅವರು ನುಡಿದರು. ಮುಜಾಫ್ಪರಪುರ ಸಭೆಯಲ್ಲಿ ಆರ್ಜೆಡಿ ಮೇಲೆ ಮಾಡಿದ್ದ ಪ್ರಬಲ ಟೀಕೆಯನ್ನು ಪುನರುಚ್ಚರಿಸಿದ ಮೋದಿ, ‘ಆರ್ಜೆಡಿ ಅಂದರೆ ರೋಜನಾ ಜಂಗಲ್ ರಾಜ್ ಕಾ ಡರ್ (ಪ್ರತಿದಿನವೂ ಅರಣ್ಯ ಕಾನೂನಿನ ಭಯ)’ ಎಂದು ಹೇಳಿದರು. ಜೆಡಿಯು ಅಂದರೆ ಜನತಾ-ಕಾ ದಾಮನ್ ಅಥವಾ ಉಟ್ಪೀರನ್ (ನಿಗ್ರಹ ಮತ್ತು ಜನತೆಗೆ ಹಿಂಸೆ) ಎಂದು ಹೇಳಿದರು. ರಾಜ್ಯದ ಹಾಲಿ ಆಡಳಿತಾರೂಢ ಮೈತ್ರಿಕೂಟವು ಉದ್ದೇಶಪೂರ್ವಕವಾಗಿ ರಾಜ್ಯವನ್ನು ಹಿಂದುಳಿದ ರಾಜ್ಯವಾಗಿ ಉಳಿಯುವಂತೆ ಮಾಡಿದೆ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿಯಾಗಲು ಅವಕಾಶ ನೀಡುತ್ತಿಲ್ಲ ಎಂದು ಪ್ರಧಾನಿ ನುಡಿದರು. ಗಂಗಾನದಿಯಿಂದ ನೀರು ಹಿಡಿಯುವ ಉದಾಹರಣೆಯೊಂದನ್ನು ನೀಡಿದ ಪ್ರಧಾನಿ, ‘ಗಂಗಾ ಮಾತೆ ಹರಿಯುತ್ತಾಳೆ, ಆದರೆ ನಾವು ಲೋಟವನ್ನು ಉಲ್ಟಾ ಹಿಡಿದುಕೊಂಡರೆ ನಾವು ನೀರು ಹಿಡಿದುಕೊಳ್ಳಲು ಹೇಗೆ ಸಾಧ್ಯ? ನಾವು ಅಭಿವೃದ್ಧಿಯನ್ನು ಹರಿಸುತ್ತಿದ್ದೇವೆ, ಆದರೆ ಇಲ್ಲಿನ ಆಡಳಿತಗಾರರು ಏನನ್ನೂ ಪಡೆದುಕೊಳ್ಳುತ್ತಿಲ್ಲ’ ಎಂದು ಹೇಳಿದರು. ಪ್ರವಾಸೋದ್ಯಮ ರಂಗವು ಇಲ್ಲಿಗೆ ಅಪಾರ ನಿಧಿಯನ್ನು ತಂದುಕೊಡಬಲ್ಲುದು. ಆದರೆ ಅದನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಹೊರದೇಶಗಳಲ್ಲಿ ತಾನು ಪ್ರವಾಸ ಮಾಡಿದಾಗ ತಮ್ಮನ್ನು ಭೇಟಿ ಮಾಡಿದ ಹಲವಾರು ಮಂದಿ ಬೌದ್ಧ ರ್ಸಟ್ ಮಾಡಬಯಸಿರುವುದಾಗಿ ಹೇಳಿದರು. ಆದರೆ ಬೋಧ ಗಯಾದಲ್ಲಿ ಯಾವುದೇ ಅಭಿವೃದ್ಧ ಯೋಜನೆ ರೂಪಿಸಲಾಗಿಲ್ಲ ಎಂದು ಪ್ರಧಾನಿ ಟೀಕಿಸಿದರು. ಇಲ್ಲಿನ ಯುವಕರಿಗೆ ಶಿಕ್ಷಣ ಒದಗಿಸುವ ಮೂಲಕ ಅವರ ಭವಿಷ್ಯ ರೂಪಿಸುವ ನಿಟ್ಟಿನಲ್ಲೂ ಯಾವುದೇ ಪ್ರಯತ್ನವನ್ನೂ ಮಾಡಲಾಗಿಲ್ಲ ಎಂದು ಮೋದಿ ಹೇಳಿದರು. ನಿತೀಶ್ -ಲಾಲು ಅವರ ‘ಸಿಟ್ಟು ಸೆಡವು ಹಾಗೂ ವಂಚನೆಯ’ 25 ವರ್ಷಗಳ ಆಡಳಿತಕ್ಕೆ ಮಂಗಳಹಾಡಲು ವಿಧಾನಸಭಾ ಚುನಾವಣೆಗಳು ಉತ್ತಮ ಅವಕಾಶ ಒದಗಿಸಿವೆ’ ಎಂದು ಪ್ರಧಾನಿ ನುಡಿದರು. ’ಜಂಗಲ್ ರಾಜ್ ಭಾಗ 2ರ ಪುನರಾಡಳಿತಕ್ಕೆ ಅವಕಾಶ ನೀಡಬೇಡಿ’ ಎಂದು ಅವರು ಮನವಿ ಮಾಡಿದರು.
2015: ಮೊಸುಲ್: ಇಸ್ಲಾಮಿಕ್ ಸ್ಟೇಟ್ (ಐಸಿಸ್) ಭಯೋತ್ಪಾದಕ ಗುಂಪಿನ ಹಂತಕ ದಳವು, ಇರಾಕಿ ಸುಪ್ರೀಂ ಚುನಾವಣಾ ಆಯೋಗಕ್ಕಾಗಿ ದುಡಿಯುತ್ತಿದ್ದ ಕನಿಷ್ಠ 300 ಮಂದಿ ನಾಗರಿಕ ಕೆಲಸಗಾರರಿಗೆ ಹಿಂದಿನ ದಿನ (8-8-2015) ಮರಣದಂಡನೆ ವಿಧಿಸಿದೆ ಎಂದು ಸಾಕ್ಷಿಗಳು ಮತ್ತು ಭದ್ರತಾ ಅಧಿಕಾರಿಗಳು ತಿಳಿಸಿದರು. ಅಲ್ ಘಜ್ಲಾನಿ ಶಿಬಿರದಲ್ಲಿ ಗುಂಡಿಟ್ಟು ಸಾಯಿಸಲಾಗಿರುವ ಈ ಘಟನೆಯಲ್ಲಿ ಮೃತರಾದವರ ಪೈಕಿ ಕನಿಷ್ಠ 50 ಮಂದಿ ಮಹಿಳೆಯರು ಎಂದು ಮೊಸುಲ್ ರಾಜಧಾನಿಯಾಗಿರುವ ನಿನೆವೆಹ ಪ್ರಾಂತದ ಸೇನಾ ಪಡೆ ನ್ಯಾಷನಲ್ ಮಲ್ಟಿಟ್ಯೂಡ್ ವಕ್ತಾರರು ಹೇಳಿದರು. ಈ ಮಧ್ಯೆ ಐಎಸ್ ಜಿಹಾದಿಗಗಳು ಇನ್ನೊಂದು ಗುಂಪಿನ ನೌಕರರ ಗಂಟಲುಗಳನ್ನು ಕತ್ತರಿಸಿದ್ದಾರೆ ಎಂದು ಚುನಾವಣಾ ಆಯೋಗದ ರಾಷ್ಟ್ರೀಯ ಕಚೇರಿ ಪ್ರಕಟಣೆ ತಿಳಿಸಿತು. ಇರಾಕಿ ಜನರ ವಿರುದ್ಧ ನಡೆಯುತ್ತಿರುವ ಈ ಹತ್ಯಾಕಾಂಡ ಮತ್ತು ಅಪರಾಧಗಳನ್ನು ಸ್ಥಗಿತಗೊಳಿಸಲು ವಿಶ್ವಸಂಸ್ಥೆ ಮತ್ತು ಮಾನವ ಹಕ್ಕುಗಳ ಸಂಘಟನೆಗಳು ತತ್ ಕ್ಷಣ ಮಧ್ಯಪ್ರವೇಶ ಮಾಡಬೇಕು ಎಂದು ಅದು ಆಗ್ರಹಿಸಿತು. ‘ಉಗ್ರಗಾಮಿಗಳು ಮರಣದಂಡನೆ ಜಾರಿಗೊಳಿಸಿರುವುದನ್ನು ನಮಗೆ ತಿಳಿಸಿದ್ದಾರೆ. ಆದರೆ ಶವಗಳನ್ನು ಹಸ್ತಾಂತರಿಸಿಲ್ಲ’ ಎಂದು ಉಗ್ರ ದಾಳಿಗೆ ಬಲಿಯಾದವರ ಕುಟುಂಬಗಳು ತಿಳಿಸಿದವು. ಕಳೆದ ಜೂನ್ 10ರಂದು ಮೊಸುಲ್ ಮೇಲೆ ನಿಯಂತ್ರಣ ಸಾಧಿಸಿದ ಉಗ್ರಗಾಮಿಗಳು ಉತ್ತರ ಇರಾಕಿನ ಇತರ ನಗರಗಳ ಮೇಲೂ ಪ್ರಾಬಲ್ಯ ಸ್ಥಾಪಿಸುತ್ತಿದ್ದಾರೆ.
2015: ಬೀಜಿಂಗ್: ‘ಸೌಡೆಲಾರ್’ ಚಂಡಮಾರುತಕ್ಕೆ ತೈವಾನ್ ತತ್ತರಿಸಿತು. ಕಳೆದ ಕೆಲವು ಗಂಟೆಗಳಿಂದ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದರಿಂದಾಗಿ ಸಹಸ್ರಾರು ಮನೆಗಳಿಗೆ ಹಾನಿಯಾಯಿತು.. 20ಕ್ಕೂ ಹೆಚ್ಚು ಮಂದಿ ಪ್ರಾಣ ಕಳೆದುಕೊಂಡರು. ಅನೇಕ ಮಂದಿ ನಾಪತ್ತೆಯಾದರು. ಸೌಡೆಲಾರ್ ಚಂಡಮಾರುತದಿಂದಾಗಿ ಫ್ಯೂಜಿಯಾನ್ ಪ್ರಾಂತ್ಯದಲ್ಲಿ ಹಿಂದಿನ ದಿನ ತಡರಾತ್ರಿ ಭೂಕುಸಿತ ಸಂಭವಿಸಿದರೆ, ಅನೇಕ ಕಡೆ ಸಾವಿರಾರು ಮನೆಗಳು, ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿದವು. ಇದರಿಂದಾಗಿ ಅನೇಕ ಕಾಲೋನಿಗಳು, ಊರುಗಳು ವಿದ್ಯುತ್ ಸಂಪರ್ಕವನ್ನು ಕಳೆದುಕೊಂಡವು.. ಝೇಜಿಯಾಂಗ್ ಪ್ರಾಂತ್ಯದ ಪಿಂಗಯಾಂಗ್ನಲ್ಲಿ ಎತ್ತರದ ಪ್ರದೇಶಗಳಿಂದ ಭಾರಿ ಪ್ರಮಾಣದಲ್ಲಿ ಮಣ್ಣುಗಳು ಕೊಚ್ಚಿಕೊಂಡು ತಗ್ಗು ಪ್ರದೇಶಗಳಿಗೆ ಏಕಾಏಕಿ ನುಗ್ಗಿದ್ದರಿಂದಾಗಿ ಅನೇಕ ಮನೆಗಳು, ವಾಹನಗಳು ಮಣ್ಣಿನಲ್ಲಿ ಹೂತಿವೆ ಎಂದು ವರದಿಯಾಗಿದೆ. ಅನೇಕ ಮಂದಿ ನೀರಿನ ರಭಸಕ್ಕೆ ಕೊಚ್ಚಿಹೋದರು. ಈ ಹಿನ್ನೆಲೆಯಲ್ಲಿ ಪರಿಣಾಮ ಬೀರುವ ಪ್ರದೇಶಗಳಿಂದ ನಾಲ್ಕು ಲಕ್ಷ ನಿವಾಸಿಗಳನ್ನು ಸ್ಥಳಾಂತರಿಸಲಾಯಿತು.. ಮೀನುಗಾರಿಕೆಗೆ ತೆರಳಿದ 32 ಸಾವಿರ ಬೋಟುಗಳನ್ನು ಮರಳಿ ಕರೆಯಿಸಿಕೊಳ್ಳಲಾಯಿತು.
2015: ನವದೆಹಲಿ: ಆಪ್ ನಾಯಕಿ, ದೆಹಲಿ ಚಾಂದನಿ ಚೌಕ ಪ್ರದೇಶದ ಶಾಸಕಿ ಅಲ್ಕಾ ಲಂಬಾ ಅವರ ಮೇಲೆ ದೆಹಲಿಯಲ್ಲಿ ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದರು. ಅಪರಿಚಿತ ವ್ಯಕ್ತಿಗಳು ರಾಜಘಾಟ್ ಬಳಿ ಕಲ್ಲುಗಳಿಂದ ದಾಳಿ ನಡೆಸಿದಾಗ ಅಲ್ಕಾ ಅವರ ತಲೆಗೆ ಸಣ್ಣ ಪ್ರಮಾಣದ ಗಾಯವಾಗಿದ್ದು ತತ್ ಕ್ಷಣವೇ ಅವರು ಆಸ್ಪತ್ರೆಗೆ ದಾಖಲಾದರು. ಅಲ್ಕಾ ಅವರ ಮೇಲೆ ಮಾದಕ ದ್ರವ್ಯ ಮಾರಾಟ ಜಾಲದಿಂದ ದಾಳಿ ನಡೆಯಿತು. ಮಾದಕ ದ್ರವ್ಯ ಜಾಲದ ವಿರುದ್ಧ ನಮ್ಮ ಹೋರಾಟ ನಿಲ್ಲುವುದಿಲ್ಲ. ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುತ್ತೇವೆ ಎಂದು ಆಪ್ ಧುರೀಣ ಅಶುತೋಶ್ ಟ್ವೀಟ್ ಮಾಡಿದರು. ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಒಬ್ಬನನ್ನು ಬಂಧಿಸಿದರು. ಮಾದಕ ವ್ಯಸನಗಳಿಗೆ ತುತ್ತಾದರ ಜೊತೆಗೆ ಮಾದಕ ದ್ರವ್ಯ ವಿರೋಧಿ ಅಭಿಯಾನದ ಅಂಗವಾಗಿ ನಾವು ಮಾತುಕತೆಗಳನ್ನು ನಡೆಸುತ್ತಿದ್ದಾಗ ನನ್ನ ಮೇಲೆ ಕಲ್ಲು ದಾಳಿ ನಡೆದಿದೆ ಎಂದು ಅಲ್ಕಾ ಟ್ವೀಟ್ ಮಾಡಿದರು.
2015:ಕಾಬೂಲ್: ಆಫ್ಘಾನಿಸ್ತಾನದಲ್ಲಿ ಕಾರ್ ಬಾಂಬ್ ಸ್ಪೋಟಗೊಂಡ ಪರಿಣಾಮವಾಗಿ ಕನಿಷ್ಠ 22 ಜನ ಮೃತರಾಗಿ ಇತರ ಹಲವರು ಗಾಯಗೊಂಡ ಘಟನೆ ಹಿಂದಿನದಿನ ತಡರಾತ್ರಿಯಲ್ಲಿ ಸಂಭವಿಸಿತು. ಕುಂಡುಜ್ ಪ್ರಾಂತದಲ್ಲಿ ಸ್ಪೋಟ ಸಂಭವಿಸಿತು.ಖಾನ್ ಅಬಾದ್ ಜಿಲ್ಲೆಯಲ್ಲಿ ಸಂಭವಿಸಿದ ಕಾರುಬಾಂಬ್ ಸ್ಪೋಟದಲ್ಲಿ ಕನಿಷ್ಠ 19 ಮಂದಿ ಸರ್ಕಾರಿ ಪರ ಸೇನಾ ಸಿಬ್ಬಂದಿ ಮತ್ತು ಮೂವರು ನಾಗರಿಕರು ಹತರಾದರು.ಮೃತರಲ್ಲಿ ಸರ್ಕಾರಿ ಪರ ನಾಯಕ ಅಬ್ದುಲ್ ಖಾದಿರ್ ಸೇರಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ತಾಲಿಬಾನ್ ಉಗ್ರಗಾಮಿ ಗುಂಪು ಸ್ಪೋಟದ ಹೊಣೆಗಾರಿಕೆ ಹೊತ್ತುಕೊಂಡಿತು.
2015: ಯಂಗೂನ್: ಮ್ಯಾನ್ಮಾರ್ನಲ್ಲಿ ಭೀಕರ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 96ಕ್ಕೆ ಏರಿತು.3,30,000ಕ್ಕೂ ಹೆಚ್ಚು ಮಂದಿ ನಿರ್ವಸಿತರಾದರು. ಅಯೆಯವಾಡ್ಡಿ ಪ್ರದೇಶದಲ್ಲಿ ಭಾರಿ ಮಳೆಯಿಂದಾಗಿ ನದಿ ನೀರಿನ ಮಟ್ಟ ಏರುತ್ತಿದ್ದು, ಇನ್ನಷ್ಟು ಪ್ರದೇಶ ಮುಳುಗಡೆಯಾಗುವ ಭೀತಿ ಇದೆ ಎಂದು ಕ್ಷಿನ್ಹುವಾ ವರದಿ ಮಾಡಿತು. ಅಯೆಯವಾಡ್ಡಿ ಮತ್ತು ನಗಾವುನ್ ನದಿಗಳು ಹಿಂತಾಡ, ನ್ಯಾಯುಂಗ್ಡೋನ್, ಝುಲುನ್ ಮತ್ತಿ ಸೀಖ್ತಾ ಪ್ರದೇಶಗಳಲ್ಲಿ ಅಪಾಯಮಟ್ಟಕ್ಕಿಂತ ಮೇಲೆ ಉಕ್ಕು ಹರಿಯುತ್ತಿದ್ದು, ಕಟ್ಟೆಚ್ಚರ ಘೋಷಿಸಲಾಯಿತು. ಮತ್ತು ಸುರಕ್ಷಿತ ತಾಣಗಳಿಗೆ ತೆರಳುವಂತೆ ಜನರಿಗೆ ಸೂಚಿಸಲಾಯಿತು. ಜೂನ್ ತಿಂಗಳಿನಿಂದೀಚೆಗೆ ತೀವ್ರಗೊಂಡಿರುವ ಭಾರಿ ಮಳೆಯಿಂದಾಗಿ ಮ್ಯಾನ್ಮಾರ್ನಲ್ಲಿ ಭಾರಿ ಪ್ರಮಾಣದಲ್ಲಿ ಮನೆಗಳು, ಕೃಷಿಭೂಮಿ, ರೈಲ್ವೇ ಹಳಿಗಳು, ಸೇತುವೆಗಳು ಮತ್ತು ರಸ್ತೆಗಳು ಹಾನಿಗೊಂಡಿವೆ. ರಾಖಿನೆ, ಚಿನ್, ಸಗಾಯಿಂಗ್ ಮತ್ತು ಮ್ಯಾಗ್ವೇ ಈ ನಾಲ್ಕು ವಲಯಗಳನ್ನು ನಿಸರ್ಗ ಪ್ರಕೋಪ ವಲಯಗಳು ಎಂಬುದಾಗಿ ಮ್ಯಾನ್ಮಾರ್ ಸರ್ಕಾರ ಘೋಷಿಸಿತು. ಇವುಗಳ ಪೈಕಿ ರಾಖಿನೆಯಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಅನಾಹುತಗಳು ಸಂಭವಿಸಿದವು.2007: ಬಾಂಗ್ಲಾದೇಶದ ಖ್ಯಾತ ಕಾದಂಬರಿಗಾರ್ತಿ ತಸ್ಲಿಮಾ ನಸ್ರೀನ್ ಅವರ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಜ್ಲಿಸ್ ಇತ್ತೇಹಾದುಲ್ ಮುಸ್ಲಿಮೀನ್ (ಎಂಐಎಂ) ಕಾರ್ಯಕರ್ತರು ನುಗ್ಗಿ ದಾಂಧಲೆ ನಡೆಸಿದರು. ತಮ್ಮ ಕೃತಿ `ಶೋಧಾ' ತೆಲುಗು ಅವತರಣಿಕೆಯಲ್ಲಿ ಇಸ್ಲಾಂ ಧರ್ಮದ ವಿರುದ್ಧ ಅವಹೇಳನಕಾರಿ ವಿಚಾರ ಪ್ರಕಟಿಸಿದ್ದಾರೆ ಎಂದು ಆರೋಪಿಸಿ ಅಖಿಲ ಭಾರತ ಮಜ್ಲಿಸ್-ಇ-ಇತ್ತೇಹಾದುಲ್ ಮುಸ್ಲಿಮೀನ್ (ಎಂಐಎಂ) ಸಂಘಟನೆಯ ಮೂವರು ಶಾಸಕರು ಹೈದರಾಬಾದಿನ ಪ್ರೆಸ್ ಕ್ಲಬ್ಬಿನಲ್ಲಿ `ಶೋಧ' ಕೃತಿ ಬಿಡುಗಡೆ ಸಮಾರಂಭದಲ್ಲಿ ಬಾಂಗ್ಲಾದ ಖ್ಯಾತ ಕಾದಂಬರಿಗಾರ್ತಿ ತಸ್ಲಿಮಾ ನಸ್ರೀನ್ ಅವರ ಮೇಲೆ ಪುಸ್ತಕ, ಕಾಗದಗಳನ್ನು ಎಸೆದು ಹಲ್ಲೆಗೆ ಯತ್ನಿಸಿದರು. ಶಾಸಕರಾದ ಅಫ್ಸರ್ ಖಾನ್, ಅಹ್ಮದ್ ಪಾಷಾ ಮತ್ತು ಮೊಜುಂ ಖಾನ್ ನೇತೃತ್ವದಲ್ಲಿ ಬಂದ ಸುಮಾರು 20 ಮಂದಿ ಎಂಐಎಂ ಕಾರ್ಯಕರ್ತರು ಲೇಖಕಿ ವಿರುದ್ಧ ಘೋಷಣೆ ಕೂಗಿದರು. ಸಮಾರಂಭ ಮುಕ್ತಾಯದ ಹಂತಕ್ಕೆ ಬಂದಾಗ 'ನಸ್ರೀನ್ ಅವರನ್ನು ಹಿಂದಕ್ಕೆ ಕಳುಹಿಸಬೇಕು' ಎಂದು ಆಗ್ರಹಿಸಿದ ಕಾರ್ಯಕರ್ತರು ಸಭಾಂಗಣಕ್ಕೆ ಏಕಾಏಕಿ ನುಗ್ಗಿ ಮಾಧ್ಯಮಗಳ ಛಾಯಾಗ್ರಾಹಕರ ಮೇಲೆ ಹಲ್ಲೆ ನಡೆಸಿ, ಪೀಠೋಪಕರಣ, ಕಿಟಕಿ ಗಾಜುಗಳಿಗೆ ಹಾನಿಯುಂಟು ಮಾಡಿ, ತಸ್ಲಿಮಾ ನಸ್ರೀನ್ ಜತೆ ಒರಟಾಗಿ ವರ್ತಿಸಿದರು.
2007: ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದ ನಿರ್ಮಾಣ ಕಾರ್ಯ ಮುಂದುವರಿಸುವ ಸಲುವಾಗಿ ಅಮೆರಿಕದ ಎಂಡೆವರ್ ಬಾಹ್ಯಾಕಾಶ ನೌಕೆಯನ್ನು ಈದಿನ ಭಾರತೀಯ ಕಾಲಮಾನ ಬೆಳಗಿನ 4.06ಕ್ಕೆ ಫ್ಲಾರಿಡಾದ ಉಡಾವಣಾ ಕೇಂದ್ರದಿಂದ ಬಾಹ್ಯಾಕಾಶಕ್ಕೆ ಹಾರಿ ಬಿಡಲಾಯಿತು. ಗಗನನೌಕೆಯಲ್ಲಿ 7 ಮಂದಿ ಯಾನಿಗಳು ಪಯಣಿಸಿದರು. ಇವರಲ್ಲಿ ಶಾಲಾ ಶಿಕ್ಷಕಿ ಬಾರ್ಬರಾ ಮಾರ್ಗನ್ ಸೇರಿದ್ದಾರೆ. ಈಕೆ 1986ರಲ್ಲಿ ಉಡಾವಣಾ ಹಂತದಲ್ಲಿಯೇ ದುರಂತಕ್ಕೀಡಾದ ಚಾಲೆಂಜರ್ ಗಗನ ನೌಕೆಯ ಮೀಸಲು ಗಗನ ಯಾನಿಯಾಗಿ ಆಯ್ಕೆಯಾಗಿದ್ದವರು. ಆದರೆ ಕೊನೆ ಘಳಿಗೆಯಲ್ಲಿ ಅವರಿಗೆ ನೌಕೆಯನ್ನು ಏರುವ ಅವಕಾಶ ಸಿಗದೆ ಸಾವಿನ ದವಡೆಯಿಂದ ತಪ್ಪಿಸಿಕೊಂಡಿದ್ದರು. ಇದಾದ ಬಳಿಕ ಎರಡು ಸಲ ಬಾಹ್ಯಾಕಾಶದಲ್ಲಿ ದುರಂತ ನಡೆದರೂ ಬಾರ್ಬರಾ ಎದೆಗುಂದಿರಲಿಲ್ಲ.
2007: ಪ್ರಸ್ತುತ ವರ್ಷ, ಭಾರತದ ಸ್ವಾತಂತ್ರ್ಯ ದಿನವಾದ ಆಗಸ್ಟ್ 15ರಂದು ಬಾಲಿವುಡ್ ನಟಿ ಐಶ್ವರ್ಯ ರೈ ಅವರ ಮೇಣದ ಪ್ರತಿಮೆಯನ್ನು ನ್ಯೂಯಾರ್ಕಿನ ಟೈಮ್ಸ್ ಸ್ಕ್ವೇರ್ ಬಳಿಯ ಮೇಡಮ್ ಟುಸ್ಸಾಡ್ ಶಾಖಾ ವಸ್ತುಸಂಗ್ರಹಾಲಯದಲ್ಲಿ 6 ವಾರದ ಮಟ್ಟಿಗೆ ತಂದಿಡಲಾಗುವುದು ಎಂದು ಈದಿನ ಪ್ರಕಟಿಸಲಾಯಿತು. ಲಂಡನ್ನಿನ ಮೇಡಮ್ ಟುಸ್ಸಾಡ್ ವಸ್ತುಸಂಗ್ರಹಾಲಯದಲ್ಲಿ 2004ರಲ್ಲಿ ಐಶ್ವರ್ಯ ಮೇಣದ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿತ್ತು.
2007: ವಿಶ್ವದ ಬಿಸಿ ಏರುತ್ತಿರುವುದರ ದುಷ್ಪರಿಣಾಮ ಗೋಚರವಾಗುತ್ತಿದ್ದು, 1980ರ ನಂತರ ಇದೇ ಮೊದಲ ಸಲ ಜನವರಿ ಮತ್ತು ಏಪ್ರಿಲ್ ತಿಂಗಳುಗಳಲ್ಲಿ ಭೂಮಿ ವಾಡಿಕೆಗಿಂತಲೂ ಹೆಚ್ಚು ಬಿಸಿಯಾಗಿತ್ತು ಎಂದು ನ್ಯೂಯಾರ್ಕಿನಲ್ಲಿ ವಿಶ್ವ ಸಂಸ್ಥೆ ಹವಾಮಾನ ಸಂಘಟನೆ ಪ್ರಕಟಿಸಿತು. ಜನವರಿಯಲ್ಲಿ ಉಷ್ಣತೆ ಸರಾಸರಿಗಿಂತ 1.89 ಡಿಗ್ರಿ ಸೆಲ್ಷಿಯಸ್ ಮತ್ತು ಏಪ್ರಿಲ್ ತಿಂಗಳಲ್ಲಿ 1.37 ಡಿ.ಸೆಲ್ಷಿಯಸ್ ಹೆಚ್ಚಿತ್ತು. ಈ ಸಲ ಭಾರತೀಯ ಉಪಖಂಡದಲ್ಲಿ ವಾಡಿಕೆಗಿಂತ ಎರಡು ಪಟ್ಟು ಹೆಚ್ಚು ಅಂದರೆ ನಾಲ್ಕು ಸಲ ವಾಯುಭಾರ ಕುಸಿತ ಉಂಟಾದುದರ ಫಲವಾಗಿಯೇ ಭಾರತ ಮತ್ತು ಪಾಕಿಸ್ಥಾನದಲ್ಲಿ ಭಾರಿ ಮಳೆ, ಪ್ರವಾಹದ ಅನಾಹುತ ಉಂಟಾಗಿದೆ ಎಂದು ವರದಿ ಹೇಳಿತು.
2006: ವಿಷಕಾರಕ ರಾಸಾಯನಿಕ ಅಂಶಗಳ ಬಳಕೆ ಸಾಬೀತಾದ ಹಿನ್ನೆಲೆಯಲ್ಲಿ ಕರ್ನಾಟಕದ ಶಾಲೆ, ಕಾಲೇಜು ಹಾಗೂ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕೋಕಾ ಕೋಲಾ, ಪೆಪ್ಸಿ ಸಹಿತ 12 ತಂಪು ಪಾನೀಯಗಳ ಸರಬರಾಜು ಮತ್ತು ಮಾರಾಟವನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿತು. ಕೇರಳ ಸರ್ಕಾರ ಕೂಡಾ ಪೆಪ್ಸಿ ಮತ್ತು ಕೋಕಾ ಕೋಲಾ ಉತ್ಪಾದನೆ ಮತ್ತು ಮಾರಾಟವನ್ನು ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ನಿಷೇಧಿಸಿತು.
2006: ಟ್ರೆನಿಡಾಡ್ ಮತ್ತು ಟೊಬ್ಯಾಗೊ ಕ್ರಿಕೆಟ್ ಮಂಡಳಿಯು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ನಾಯಕ ಬ್ರಯಾನ್ ಲಾರಾ ಅವರಿಗೆ `ವರ್ಷದ ಕ್ರಿಕೆಟಿಗ ` ಪ್ರಶಸ್ತಿ ನೀಡಿ ಗೌರವಿಸಿತು. ಜಿಂಬಾಬ್ವೆ ಮತ್ತು ಭಾರತದ ವಿರುದ್ಧದ ಸರಣಿಗಳಲ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದಕ್ಕೆ ಲಾರಾ ಅವರಿಗೆ ಈ ಗೌರವ ಲಭಿಸಿತು.
2006: ಖ್ಯಾತ ದ್ರುಪದ್ ಗಾಯಕಿ ಅಸ್ಗಾರಿ ಬಾಯಿ (88) ಮಧ್ಯಪ್ರದೇಶದ ಟಿಕಂಗಢದಲ್ಲಿ ನಿಧನರಾದರು. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗಳಿಸಿದ್ದ ಅಸ್ಗಾರಿ ಬಾಯಿ ಅವರಿಗೆ 1990ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
1980: ಅಮೆರಿಕನ್ ಪೈಲಟ್ ಜಾಕ್ ಲಿನ್ ಕೊಚ್ರನ್ (1910-1980) ಅವರು ಕ್ಯಾಲಿಫೋರ್ನಿಯಾದ ಇಂಡಿಯೋದಲ್ಲಿ ಮೃತರಾದರು. ವೇಗ, ದೂರ ಮತ್ತು ಎತ್ತರದಲ್ಲಿ ವಿಮಾನ ಹಾರಾಟ ನಡೆಸುವಲ್ಲಿ ಇತರ ಮಹಿಳಾ ಪೈಲಟ್ ಗಳನ್ನು ಮೀರಿಸುವಂತಹ ದಾಖಲೆಗಳನ್ನು ಆಕೆ ನಿರ್ಮಾಣ ಮಾಡಿದ್ದರು. 1964ರಲ್ಲಿ ಆಕೆ ಗಂಟೆಗೆ 1429 ಮೈಲು ವೇಗದಲ್ಲಿ ವಿಮಾನ ಹಾರಿಸುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಇಷ್ಟು ವೇಗವಾಗಿ ವಿಮಾನ ಹಾರಿಸಿದ ಪ್ರಥಮ ಮಹಿಳಾ ಪೈಲಟ್ ಈಕೆ.
1974: ರಿಚರ್ಡ್ ನಿಕ್ಸನ್ ರಾಜೀನಾಮೆಯ ಹಿನ್ನೆಲೆಯಲ್ಲಿ ಗೆರಾಲ್ಡ್ ಫೋರ್ಡ್ ಅಮೆರಿಕದ 38ನೇ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.
1969: ಸಾಹಿತಿ ವಿಜಯಕಾಂತ ಪಾಟೀಲ ಜನನ.
1953: ಸಾಹಿತಿ ಶಿವರಾಮ ಕಾಡನಕುಪ್ಪೆ ಜನನ.
1945: ಜಪಾನಿನ ಹಿರೋಷಿಮಾದಲ್ಲಿ ಯುರೇನಿಯಂ ಬಾಂಬ್ ದಾಳಿ ನಡೆಸಿದ ಮೂರು ದಿನಗಳ ಬಳಿಕ ನಾಗಾಸಾಕಿಯ ಮೇಲೆ ಅಮೆರಿಕ ಪ್ಲುಟೋನಿಯಂ ಬಾಂಬ್ ಹಾಕಿತು. ಸುಮಾರು 74,000 ಮಂದಿ ಮೃತರಾದರು.
1936: ಬರ್ಲಿನ್ ಒಲಿಂಪಿಕ್ ನಲ್ಲಿ ಅಮೆರಿಕಕ್ಕೆ 400 ಮೀಟರ್ ರಿಲೇಯಲ್ಲಿ ಗೆಲುವು ತರುವುದರೊಂದಿಗೆ ಜೆಸ್ಸಿ ಓವೆನ್ಸ್ ತಮ್ಮ ನಾಲ್ಕನೇ ಸ್ವರ್ಣ ಪದಕವನ್ನು ಗೆದ್ದರು. 100 ಹಾಗೂ 200 ಮೀಟರ್ ರಿಲೇ ಹಾಗೂ ಲಾಂಗ್ ಜಂಪಿನಲ್ಲಿ ಅವರು ಈ ವೇಳೆಗಾಗಲೇ ಸ್ವರ್ಣ ಪದಕಗಳನ್ನು ತಮ್ಮ ಹೆಗಲಿಗೆ ಏರಿಸಿಕೊಂಡಿದ್ದರು.
1925: ರಾಮಪ್ರಸಾದ್ ಬಿಸ್ಮಿಲ್, ಅಶ್ಫಾಕ್- ಉಲ್ಲಾ ಖಾನ್ ಮತ್ತು ಇತರರ ನೇತೃತ್ವದಲ್ಲಿ 10 ಜನ ಭಾರತೀಯ ಕ್ರಾಂತಿಕಾರಿಗಳ ತಂಡವು ಲಖ್ನೊ ಸಮೀಪದ ಕಾಕೋರಿಯಲ್ಲಿ 8- ಡೌನ್ ರೈಲುಗಾಡಿಯನ್ನು ತಡೆ ಹಿಡಿದು ಬ್ರಿಟಷರು ಸಾಗಿಸುತ್ತಿದ್ದ ನಗದು ಹಣವನ್ನು ಲೂಟಿ ಮಾಡಿತು. ಬ್ರಿಟಿಷರ ವಿರುದ್ಧ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದಲ್ಲಿ ಕ್ರಾಂತಿಕಾರಿ ಹೋರಾಟಗಾರರಿಗೆ ಶಸ್ತ್ರಾಸ್ತ್ರ, ತರಬೇತಿ ನೀಡಲು ಬೇಕಾದ ಹಣಕ್ಕಾಗಿ ಈ ಕೃತ್ಯ ಎಸಗಲಾಯಿತು. ಸರ್ಕಾರವು `ಕಾಕೋರಿ ಒಳಸಂಚು' ಆರೋಪದಲ್ಲಿ ಬಿಸ್ಮಿಲ್ ಮತ್ತು ಖಾನರನ್ನು ಬಂಧಿಸಿ ನಂತರ ಗಲ್ಲಿಗೇರಿಸಿತು. ಇತರರಿಗೆ ವಿವಿಧ ಅವಧಿಗಳ ಸೆರೆಮನೆವಾಸ ವಿಧಿಸಲಾಯಿತು.
1904: ಆಧುನಿಕ ಕನ್ನಡ ಸಾಹಿತ್ಯದ ಪ್ರಮುಖ ಕವಿ, ನಾಟಕಕಾರ, ಕಥೆ - ಕಾದಂಬರಿಕಾರ ಕಡೆಂಗೋಡ್ಲು ಶಂಕರಭಟ್ಟರು (9-8-
1904ರಿಂದ 17-5-1968) ಈಶ್ವರ ಭಟ್ಟ- ಗೌರಮ್ಮ ದಂಪತಿಯ ಮಗನಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪೆರುಮಾಯಿ (ಪೆರುವಾಯಿ?) ಗ್ರಾಮದಲ್ಲಿ ಜನಿಸಿದರು. 1930ರಲ್ಲಿ ಧಾರವಾಡ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದ ಅವರು 1965ರಲ್ಲಿ ಕಾರವಾರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
1902: ತಾಯಿ ವಿಕ್ಟೋರಿಯಾಳ ಮರಣದ ನಂತರ ಎಂಟನೇ ಎಡ್ವರ್ಡ್ ಇಂಗ್ಲೆಂಡಿನ ದೊರೆಯಾಗಿ ಸಿಂಹಾಸನ ಏರಿದರು.
No comments:
Post a Comment